ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ

ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ
ಚನ್ನಾಗಿ ಕೇಳಿರಣ್ಣಾ                                                ||ಪ|| 

ನೆನ್ನೆ ಮೊನ್ನೆಯೆಂದು
ತನ್ನೊಳಗೆ ತಾ ತಿಳಿದು
ತನ್ನೇಸ್ಹುಣ್ಣಿವಿ ದಿನಾ
ಕನ್ನೆ ಮಾಸಿ ಕೂಡಿ ಬಂದು                                       ||ಅ.ಪ.||

ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ
ಜೀವ ಹೋದಿತು ಸತ್ತಾ
ಮೋಹ ಮದಗಳು ತಾನು
ತಾಯಿಗಂಡನ ಕೂಡಿಕೊಂಡು
ದೇವರ ಮನಿಯಾಗ ಹಾಸಿಗೆ ಮಾಡಿ
ಕ್ಯಾವಿ ಹಚ್ಚಡ ಹೊಚ್ಚಿದ ಮೇಲೆ                                ||೧||

ಆಕಾಶ ನೆಲೆಯಾಗಿ ನಿಂತಲ್ಲೆ ನಿಂತು
ಭೂಕಾಂತೆ ತಲೆದೂಗಿ
ಮೂಕನೊಬ್ಬನ ಕೂಡ
ಹಾಕ್ಯಾಡಿ ತಕ೯ಮಾಡಿ
ಪಾಕದ ಗಡಿಗೆ ವಡಿದು ಜಡಿದು
ಕಾಕೀಗಿಡವ ಕಡಿದ ಮೇಲೆ                                     ||೨||

ಮುತ್ತಲಮರವನೇರಿದೆ ಆದರೊತ್ತಲಿರುವ
ಗೊತ್ತಿನ ಭೂತವ ತಡದೆ
ಅತ್ತ ಇತ್ತ ನೋಡಲಾಗಿ
ಸುತ್ತಲೂ ಭಯವಾಗಿ
ನೆತ್ತಿ ಬಿರಿದು ಬತ್ತಲಾಗಿ
ಸತ್ಯ ಶಿಶುನಾಳಧೀಶನ ಕಂಡೆ                                ||೩||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್ 

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ
ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ||

ಪದುಮ ದಳದ ಮದವು ಬೆಳೆದು
ಸದಮಲಾತ್ಮಯೋಗ ತುದಿಯ-
ಲದನುಯೇರಿ ಮೆರೆಧು ಬೆರಿದು
ಕದಲದಂತೆ ಕರುಣ ರಸದ                                     ||೧||

ಚಂದ್ರ ಸೂಯ೯ರೊಂದುಗೂಡಿಭದಾ ಅಲ್ಲೆ ಮೂಡಿದಾ
ರಂದ್ರದೂಳಗೆ ಹೊಳೆವ ಮಿಂಚು
ಒಂದೇ ದೃಷ್ಟಿಯಿಂದ ನೋಡಿ
ಸಿಂಧುಶುಚಿನಾಥ ತಿಳಿದು ಬಿಂದುವಸ್ತು ಸವಿದು ಪರಮ  ||೨||

ಭೂತ  ಪಂಚಕವನಳಿದು ತೋರುವಾ
ಸುಪ್ರೀತಿಯಿಂದ ಮಾತು ಮಾತಿಗೆ ಮೋಜುಗಾಣುವಾ
ಧಾತ ಪರಬ್ರಹ್ಮನೇ ಈತತನೆಂದು
ಆರಿತು ಪವನಜಾಗದೊಳಗೆ ಜನ್ಮರೀತಿ
ಕೌತುಕದಿ ಕುಳಿತು ಮೆರೆವ                                        ||೩||

ತಾಗುನಾಗುವೆಲ್ಲ ಕಳಿದನು ಆಲ್ಲಿಳಿದನು
ಯೋಗ ಸಾಧನವನ್ನು ಮಾಡಿ
ಭೋಗ ವಿಷಯ ಕೂಗೆದೂಡಿ
ರಾಗದಿಂದ ರಜದ ಕೊನೆಯ
ಮೇಲೆ ನಿಂತು ಚಂದ್ರ ಜ್ಯೋತಿ                                  ||೪||

ಚಾಗು ಸದಾನಂದಜಲದೊಳು ಬೋಧಾ
ಅಗಲತೆಯನೇಕ ಮಂತ್ರ ಮೂಲಕಲೆಗಳಾ
ಏಕನಾಥ ಶಿಶುನಾಳಧೀಶನಲ್ಲಿ ತಾಕಿ ತಾಕಿ
ಜೋಕಿಯಿಂದ ಜನನ ಮರಣ ನೂಕಿ ನಿಲುವಂಥ           ||೫||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್ 

ಶಿವಲೋಕದಿಂದ ಒಬ್ಬ ಸಾಧು ಬಂದಾನು

ಶಿವಲೋಕದಿಂದ ಒಬ್ಬ ಸಾಧು ಬಂದಾನು
ಶಿವನಾಮವನ್ನು ಕೇಳಿ ಅಲ್ಲಿ ನಿಂತಾನು                   ||ಪ||

ಮೈತುಂಬ ಬೂದಿಯನ್ನು ಧರಿಸಿಕೊಂಡಾನು
ಕೊರಳೋಳು ರುದ್ರಾಕ್ಷಿ ಕಟ್ಟಿಕೊಂಡಾನು                ||೧||

ಮೈಯಲ್ಲಿ ಕಪನಿಯ ತೊಟ್ಟುಕೊಂಡಾನು
ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು                    ||೨||

ಊರ ಹೊರಗೆ ಒಂಧು ಮಠ ಕಟ್ಟಿಸ್ಯಾನು
ಮಠದ ಬಾಗಿಲೊಳಗೆ ತಾನೇ ನಿಂತಾನು
ಒಂಭತ್ತು ಬಾಗಿಲ ಮನೆಗೆ ಹಚ್ಚ್ಯಾನು                     ||೩||

ಧರಿಯೊಳು ಮೆರೆಯುವ ಶಿಶುನಾಳಧೀಶನು
ಶಿಷ್ಯ ಶರೀಫನ ಕೂನ ಹಿಡಿದಾನು                 ||೪||
                        * * *-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾ ನೋಡುನು ಭಾಮಿನಿ

ಬಾ ನೋಡುನು ಭಾಮಿನಿ ಈ ನಗರದಿ
ಆ ಮಹಾಮಹಿಮನು ಬಂದಿಹನಮ್ಮಾ
ಮೀನಾಕ್ಷಿಯನುಭವಮಂಟಪ ಮಧ್ಯದಿ
ತಾನೇತಾನಾಗಿ ಕುಳಿತಿಹನಮ್ಮಾ             || ೧ ||

ಎಡ್ಡಿಸುತೆಲಿ ಮನಿ ಮನಿ ತಿರುಗುತ ಘನ
ಕಡ್ಡಿ ಕಸರು ಕಳೆದಿಹನಮ್ಮಾ
ದುಡ್ಡು ಕಾಸಿಗೆ ಕೈಯೊಡ್ಡದೆ ಕಲಿಯೊಳು
ಗುಡ್ಡನೇರಿ ಕುಳಿತಿಹನಮ್ಮಾ                   || ೨ ||

ಶಿಶುನಾಳಧೀಶನ ಸೇವಕನುತಾ
ಅಸಮಗೋವಿಂದನಾಗಿಹನಮ್ಮಾ
ತುಸು ಭೀತಿಯಿಲ್ಲದೆ ಬತ್ತಲೆ ತಿರುಗುವ
ಕತ್ತಲಿಗಂಜದೆ ಇಹನಮ್ಮಾ                     ||೩||   
       ***
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ
ಸಾಧುರಿಗೊಂದಿಸುವೇ                                      ||ಪ||

ಬೇಧವನಳಿಯದಾತ್ಮ ಭೋದವ ತಿಳಿಯಿತಾ
ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ         ||೧||

ಕಾಲಕರ್ಮವ ತುಳಿದು ಕಾಲಿಲೆ ಒದ್ದು
ಮೂಲ ಮಾಯಮನಳಿದು
ಆಲಿಗಳ ಬಲದಲ್ಲಿ ಬ್ರಹ್ಮನ
ಸಾಲು ಜ್ಯೋತಿಯ ಬೆಳಕಿನಿಂದಲಿ
ಮಾಲಿನೊಳಿಹ ಮೇಲು ಮೂರ್ತಿಯ
ಕೀಲವನು ಬಲ್ಲಂಥ ಮಹಿಮದ                            ||೨||

ಕ್ಲೇಶಪಾಶ ಕೆಡಿಸಿ ಮಾಯಾಂಗನೆಯಾ
ಆಸೆ ಎಲ್ಲವ ಬಿಡಿಸಿ
ದೋಷಭವದುರಿತನಾಶಾ
ಶಿಶುನಾಳೇಶನೊಳು ಮನ ಮುಳುಗಿ ನಿತ್ಯದಿ
ರಾಶಿ ತಾಪವ ತೊಳೆದು
ಕರ್ಮ ವಿವಶರೆನಿಸುವ ಭಾಸುರಾಗಿಹ                   ||೩||   
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಒಂದು ನಮ್ಮದು, ಮತ್ತೊಂದು ದೇಶದ್ದು

-ಹರೀಶ್ ಕುಮಾರ್‍

               ಪಾತ್ರಗಳು

೧. ವೆಂಕಟರಾವ್   :  ಮನೆಯ ಯಜಮಾನರು, ವಯಸ್ಸು ೬೦
೨. ಸರೋಜ ಬಾಯಿ   :  ವೆಂಕಟರಾವ್‌ರವರ ಧರ್ಮಪತ್ನಿ, ವಯಸ್ಸು ೫೫
೩. ರವಿಕುಮಾರ್‍   :  ವೆಂಕಟರಾವ್‌ರವರ ಮಗ, ವಯಸ್ಸು ೩೦
೪. ದೇವಿಕ       :  ರವಿಯ ಹೆಂಡತಿ, ವಯಸ್ಸು ೨೬

              ತೆರೆ ಸರಿಯುತ್ತಿದ್ದ ಹಾಗೆ

(ಎದುರುಗಡೆ ಡೈನಿಂಗ್ ಟೇಬಲ್ ಹಾಗೂ ಅದರ ಅಕ್ಕಪಕ್ಕ ನಾಲ್ಕು ಕುರ್ಚಿಗಳೂ ಕಾಣುವುವು.  ಟೇಬಲ್ ಮೇಲೆ ತಿಂಡಿಯ ವಿವಿಧ ಪದಾರ್ಥಗಳನ್ನು ಮುಚ್ಚಿರುವಂಥ ಪಾತ್ರೆಗಳು ಕಂಡು ಬರುವುವು.  ಅವಸರವಾಗಿ ದೇವಿಕ ತಿಂಡಿಯನ್ನು ತಿಂದು ಮುಗಿಸಿ ಪಾತ್ರಗಳನ್ನು ಬಚ್ಚಲು ಮನೆಗೆ ಹಾಕಿದ ಹಾಗೆ ಮಾಡಿ ಕೈಯನ್ನು ಟವಲ್ಲಿಗೆ ಒರೆಸಿಕೊಳ್ಳುತ್ತ ಅವಸರ ಸ್ವರದಲ್ಲಿ ಹೇಳುವಳು)

ದೇವಿಕ     :  ಅತ್ತೆ ತಿಂಡಿ ಎಲ್ಲಾ ಟೇಬಲ್ ಮೇಲಿದೆ.  ನನ್ಗೆ ಆಫೀಸಿಗೆ ಟೈಮಾಯ್ತು, ನಾನು ಬರ್‍ತೀನಿ.
             (ಒಳಗಿಂದ ಸರೋಜಬಾಯಿಯವರ ಧ್ವನಿಯು ಕೇಳುವುದು)
ಸರೋಜ ಬಾಯಿ :  ಆಯ್ತಮ್ಮ ಹೋಗಿಬಾ.

(ದೇವಿಕ ಹೊರಟುಹೋದ ಮೇಲೆ ವಾತಾವರಣದಲ್ಲಿ ಸ್ವಲ್ಪ ಹೊತ್ತು ನಿಶ್ಯಬ್ಧತೆ ನೆಲೆಸುವುದು.  ನಂತರ ಡೈನಿಂಗ್ ಟೇಬಲ್ಲಿಗೆ ಸರೋಜ ಬಾಯಿ ಹಾಗೂ ವೆಂಕಟರಾವ್‌ರವರು ಬಂದು ಕೂರುವರು.  ಸರೋಜ ಬಾಯಿಯವರು ಪತಿಗೆ ತಿಂಡಿಯನ್ನು ಬಡಿಸಿ ತಾವು ಬಡಿಸಿಕೊಂಡು ತಿನ್ನುತ್ತ ಮಾತಿಗಾರಂಭಿಸುವರು)

ಬಾಯಿ  :  "ಏನೂಂದ್ರೆ"
ರಾವ್  :  (ಸುಮ್ಮನಿರುವರು)
ಬಾಯಿ  :  ಏನ್ರೀ ನಾನು ಮಾತಾಡೋದು ಕೇಳಿಸ್ತಾ ಇದೆ ತಾನೆ? (ಕೊಂಚ ಕೋಪದಿಂದ ಕೇಳುವರು)
ರಾವ್  :  "ಹೂಂ"
ಬಾಯಿ  :  ಹೂಂ, ಅಂದ್ರೆ ಏನೂಂತ ಕೇಳ್ಬಾರ್‍ದಾ?
ರಾವ್  :  ಕೇಳ್ತಾ ಇದ್ದೀನಲ್ಲೇ ೩೨ ವರ್ಷಗಳಿಂದ (ಕೊಂಚ ರಾಗವಾಗಿ)
ಬಾಯಿ  :  ಏನು ಕೇಳ್ತಾ ಇದ್ದೀರಾ?  (ಕೋಪದಿಂದ)
ರಾವ್  :  ನೀನು ಹೇಳ್ತಾ ಇದೋದ್ನೆಲ್ಲ
ಬಾಯಿ  :  "ಕರ್ಮ, ಕರ್ಮ"
ರಾವ್  :  (ಆಶ್ಚರ್ಯದಿಂದ) ಯಾಕೇ ಏನಾಯ್ತೇ!!?
ಬಾಯಿ  :  ಏನೂ ಆಗಿಲ್ಲ.  ನಿಮ್ಮನ್ನ ಕಟ್ಕೊಂಡಿದ್ದು ನನ್ನ ಕರ್ಮ ಅಂದೆ. (ಕೋಪದಿಂದ ಹೇಳುವರು)
ರಾವ್  :  (ತುಂಟಧ್ವನಿಯಲ್ಲಿ)  ಯಕೇ ನಾನೇನೇ ಮಾಡ್ದೆ ನಿನಗೆ, ನನ್ನನ್ನ ಕಟ್ಕೊಂಡಿದ್ದಕ್ಕೆ.  ನಿನ್ನನ್ನೇನ್ ಚೆನ್ನಾಗಿ ನೋಡ್ಕೊಂಡಿಲ್ವ.  ಒಬ್ಬ ಮಗನ್ನ ಕೊಟ್ಟು ಅವನನ್ನು ಚೆನ್ನಾಗಿ ಓದಿಸಿಬೆಳೆಸಿಲ್ವ.  ಅವನಿಗೆ ಒಪ್ಪುವಂಥ, ನಿನಗೆ ತಕ್ಕವಳಾದ ಸೊಸೇನ ಹುಡುಕಿ ತರ್‍ಲಿಲ್ವ?  ಯಾವುದ್ರಲ್ಲಿ ತಪ್ಪು ಮಾಡಿದ್ದೀನಿ ಅಂಥ ನನ್ನನ್ನ ಬಯ್ತಾಯಿದ್ದೀಯಾ!!?
ಬಾಯಿ  :  ಹೌದ್ಹೌದು ನನಗೆ ತಕ್ಕವಳಾದ ಸೊಸೇನೇನೋ ತಂದಿದ್ದೀರ ಆದ್ರೆ ಮಗನಿಗೆ ಒಪ್ಪುವಂಥ ಹೆಂಡತಿಯನ್ನು ಮಾತ್ರ ತರಲಿಲ್ಲ.
ರಾವ್  :  ಯಾಕೇ ಯಾವುದ್ರಲ್ಲಿ ಕಡಿಮೆಯಿದ್ದಾಳೆ ಅವ್ಳು ನಿನ್ನ ಮಗನಿಗೆ (ಆಶ್ಚರ್ಯದಿಂದ ಕೇಳುವರು)
ಬಾಯಿ  :  ಯಾವುದ್ರಲ್ಲೂ ಕಡಿಮೆಯಿಲ್ಲ ಎಲ್ಲದ್ರಲ್ಲೂ ಜಾಸ್ತೀನೇ ಇದ್ದಾಳೆ.  ಅದೇ ತಲೇನೋವು.
ರಾವ್  :  (ಅಸಹನೆಯಿಂದ)  ಏ ಅದೇನ್ ಗೋಳಂತ ಸರಿಯಾಗಿ ಹೇಳ್ಬಾರ್‍ದಾ.
ಬಾಯಿ  :  ಅಲ್ರೀ, ಅವ್ಳು ತಾನು ಗಂಡನ್ಗಿಂತ ಸ್ವಲ್ಪ ಒಳ್ಳೇ ಪೋಸ್ಟಲ್ಲಿದ್ದೀನಂತ, ಗಂಡನಿಗಿಂತ ಒಂದೈನೂರು ರೂಪಾಯಿ ಜಾಸ್ತಿ ತರ್‍ತೀನಂತ, ಮನೇಲೆಲ್ಲ ತನ್ನ ಗಂಡನ ಕೈಯಿಂದಲೇ ಕೆಲ್ಸ ಮಾಡ್ಸೋದೇ?
ರಾವ್  :  ಅಂಥದೇನ್ ಮಾಡ್ಸಿದ್ಲೂಂತ ಈಗ?
ಬಾಯಿ  :  ಅಲ್ರೀ ಬೆಳಿಗ್ಗೆ ಸಂಜೆ ಅವ್ನೇ ನೀರ್‍ಹಿಡೀಬೇಕು, ಸಂಜೆ ಅವ್ನೇ ತರ್‍ಕಾರಿ ತರ್‍ಬೇಕು, ಬಟ್ಟೆಗಳಿಗೆಲ್ಲ ಅವ್ನೇ ಐರನ್ ಹಾಕ್ಬೇಕು ಇದ್ನೆಲ್ಲ ನೋಡ್ಕೊಂಡು ಸಹಿಸ್ಕೊಂಡಿರೋಕ್ಕಾಗಲ್ಲ.
ರಾವ್  :  ಅಲ್ವೇ ಅದೇನ್ಮಾಡ್ದಾಂತ ಹಾಗಾಡ್ತೀದ್ದೀಯ?

ಅಲ್ಲ ನೀನು ಮಡಿ ಮಡೀಂತ ಹೇಳೋದಕ್ಕೆ ನಿನ್ ಬಟ್ಟೆಗಳನ್ನು ನಮ್ಮ ಬಟ್ಟೆಗಳ ಜೊತೆ ಮೆಶೀನ್‌ನಲ್ಲಿ ಒಗೆಯದೆ ಸ್ವತಃ ತಾನೇ ನಿಂತು ಒಗೆದು ಕೊಡೋಲ್ವೇನೆ?  ನಿನ್ನ ಮಡೀಗೆ ಚಕಾರವೆತ್ತದೆ, ಅಡಿಗೆಯವರನ್ನು ಇಡಿಸ್ದೆ ತಾನೇ ನಿಂತು ಎಲ್ಲಾ ಅಡಿಗೇನ್ನ ಮಾಡಿ, ಸಂಜೆ ಬಂದ್ಮೇಲೆ ಮತ್ತೆ ಬಿಸಿಬಿಸಿಯಾಗಿ ಮಾಡಿ ಹಾಕೋದಿಲ್ವೇನೆ ಇದಲ್ಲದೆ ನಿನ್ನ ಬೆಳಗಿನ ಪೂಜೆಗೆ ಬೇಕಾಗೋ ಎಲ್ಲಾ ಕೆಲಸಗಳನ್ನೂ ನೀನು ಪೂಜೆ ಕೋಣೆಗೆ ಬರೋದ್ರೊಳಗೆ ಮಾಡಿರೊಲ್ವೇನೆ?  ಇಂಥ ಸಮಯದಲ್ಲಿ ನಿನ್ನ ಮಗ ಸಂಜೆ ಡ್ಯೂಟಿಯಿಂದ ಬರ್‍ತಾ ಮಾರ್ಕೆಟ್‌ನಿಂದ ತರ್‍ಕಾರಿ ತಂದ್ರೆ ಏನಾಗ್ಹೋಗುತ್ತೆ.  ಬಂದು ನೀರ್‍ಹಿಡಿದ್ರೇನಾಗುತ್ತೆ?  ತನ್ನ ಬಟ್ಟೆ ಜೊತೆ ಎಲ್ರ ಬಟ್ಟೇನೂ ಐರನ್ ಹಾಕಿದ್ರೆ ಅವ್ನ ಕೈಯೇನ್ ಸಣ್ಣಗಾಗಿ ಬಿಡುತ್ತೇನೆ?  ಅಥ್ವಾ ನಿನ್ನ ಮಗ ಏನಾದ್ರೂ ಇದರ್‍ಬಗ್ಗೆ ದೂರು ಕೊಟ್ನೇನು?

ಬಾಯಿ  :  ಅವನ್ಯಾಕೆ ದೂರ್‍ತಾನೆ,  ನಾನೇ ಅವನ್ಮಾಡೋದ್ನೆಲ್ಲ ನೋಡ್ಲಾರ್‍ದೆ ಹೇಳ್ದೆ.
ರಾವ್  :  ಚ್ಚ ಚ್ಚ ಚ್ಚ (ವಟಗುಟ್ಟಿ ವ್ಯಂಗ್ಯವಾಗಿ)  ಪಾಪ ಮಗ ಮನೇಲಿ ಕೆಲ್ಸ ಮಾಡೋದ್ನ ನೋಡಿ ಕರುಳು ಚುರುಕ್ ಎಂದಿರಬೇಕಲ್ಲ.  ಅಲ್ವೇ ನಿನ್ನ ಸೊಸೆ ಮಾಡೋದನ್ನ ನೋಡಿ ಏನೂ ಅನ್ಸೋದಿಲ್ವೇನೇ?
         (ಇಷ್ಟು ಹೊತ್ತಿಗೆ ತಿಂಡಿ ತಿಂದು ಮುಗಿಸಿ ಇಬ್ಬರೂ ಕೈ ತೊಳೆಯುವರು)

ಬಾಯಿ  :  ಅಲ್ರೀ ಅವ್ನ ಸಂಬ್ಳಾನೇ ನಮ್ಗೆಲ್ಲ ಹೊಟ್ಟೆ ಬಟ್ಟೆಗೆ ಸಾಕಾಗೋವಷ್ಟು ಇರುವಾಗ ಇವ್ಳೇಕೆ ಹೊರಗೆ ದುಡಿಬೇಕು?  ಇವ್ರ ಮಗನಿಗಿಂತ ಇವ್ರ ಸೊಸೇನೇ ಜಾಸ್ತಿ ಸಂಬ್ಳ ತರ್‍ತಾಳೇಂತ ಪಕ್ಕದ್ಮನೆ ಪಂಕಜಮ್ಮ ಮೊನ್ನೆ ಯಾರ್‍ಜೊತೆನೋ ನಮ್ಮ ಮನೆ ಕಡೆ ಬೆರಳು ಮಾಡಿ ಹೇಳ್ತಾ ಇದ್ಲೂರೀ.
ರಾವ್  :  ಅಷ್ಟೇನಾ, ಅಲ್ವೇ ನೀನು ಆಚೆ ಈಚೆ ಮನೆಯವ್ರ ಮಾತುಗಳ್ನ ಯಾಕೇ ಕೇಳೋದ್ಹಿಕ್ಹೋಗ್ತೀಯ.  ಅವ್ಳ ಬುದ್ಧಿ ನಮ್ಗೆಲ್ಲ ಗೊತ್ತಿರೋದೇ.  ಅವಳ್ಹೇಳ್ತಾಳೆ ಅಂತ ನೀನು ನಿನ್ಸೊಸೆ ಬಗ್ಗೆ ದೂರ್‍ತಾ ಇದ್ದೀಯಾ?
ಬಾಯಿ  :  ಅಲ್ರೀ ನಮ್ಮನೆ ಮಾತಾದ್ರೆ ಯಾಕ್ರೀ ಕೇಳ್ಬಾರ್ದು.  ಅಷ್ಟೇ ಆದ್ರೆ ಪರ್‍ವಾಗಿರ್ತಿರಲಿಲ್ಲ.  ಇವ್ರ ಮಗನಿಗೆ ಮದುವೆಯಾಗಿ ಎರಡು ವರ್ಷವಾಯ್ತು ಆದ್ರೂ ನಮ್ಮ ಸರೋಜಮ್ಮನವರ ಕೈಗಳಿಗೆ ಮಕ್ಕಾಳಾಡಿಸೋ ಯೋಗ ಬಂದಿಲ್ಲ ಅಂತ ನಿನ್ನೆ ಸಂಜೆ ಎಲ್ಲರ ಮುಂದೆ ಆ ಪಂಕಜಮ್ಮ ಹೇಳ್ದಾಗ ನನಗೆ ಹ್ಯಾಗಾಗಿರ್‍ಬೇಡ?  ಇದನ್ನೆಲ್ಲ ಕೇಳ್ಕೊಂಡೂ ನನ್ನನ್ನ ಸುಮ್ನಿರು ಅಂತಿರಾ?
ರಾವ್  :  (ಅಸಹನೆಯಿಂದ, ತಮಗೆ ತಾವೇ ಎಂಬಂತೆ)  ಈ ಹೆಂಗಸರ ಬಾಯಿಯಂತೂ ಸುಮ್ನಿರೋದೇ ಇಲ್ಲ (ಪ್ರಕಾಶವಾಗಿ) ಹಾಗಾದ್ರೆ ಈಗೇನ್ಮಾಡ್ಬೇಕೂಂತೀಯ.
ಬಾಯಿ  :  ಸ್ವಲ್ಪ ಕೇಳ್ರೀ "ಇವರ ಸೊಸೆ ಕೆಲ್ಸಕ್ಕೆ ಹೋಗ್ತಿರೋದ್ರಿಂದ, ಮಗುವಾದ್ರೆ ತೊಂದ್ರೆ ಆಗುತ್ತೇಂತ ಮಗುವೇ ಬೇಡಾಂತ ನಿರ್ಧರಿಸಿರೋ ಹಾಗಿದೆ" ಅಂತ ಆಚೆ ಮನೆ ಚಂಚಲಾಕ್ಷಿ ಬೇರೆ ಹೇಳ್ತಿದ್ಲಂತೇರೀ ಇದನ್ನೆಲ್ಲ ಕೇಳ್ಕೊಂಡು ನಾನ್ಹೇಗ್ರೀ ಸುಮ್ನಿರ್‍ಲೀ?
ರಾವ್  :  ಇದು ತುಂಬ ಅತಿರೇಕವಾಯ್ತು.  ಅವ್ರ ಬಾಯಿಗಳ್ಗೆ ಬೀಗ ಹಾಕಿಕೊಳ್ಳೀಂತ ಹೇಳ್ತೀನಿ ತಡಿ.
ಬಾಯಿ  :  ಅವರನ್ನ್ಯಾಕ್ರೀ ಬಯ್ತಿರಾ ಅವರ್‍ಹೇಳೋದ್ರಲ್ಲಿ ತಪ್ಪೇನ್ರೀ ಇದೆ.  ಮೊದ್ಲು ನಿಮ್ಮ ಮಗ ಮತ್ತು ನಿಮ್ಮ ಸೊಸೇನ (ಒತ್ತಿ ಹೇಳುವರು) ವಿಚಾರಿಸ್ಕೊಳ್ಳಿ.
ರಾವ್  :  ಅವ್ರನ್ನೇನೆ ವಿಚಾರ್‍ಸೋದು ಇಬ್ರೂ ಓದಿರೋವ್ರು, ಸಾಕಷ್ಟು ತಿಳುವಳಿಕೆ ಇರೋಂಥವ್ರು, ಅವ್ರಿಗೆ ಅವರವರ ಜೀವನದ ಬಗ್ಗೆ ಸಾಕಷ್ಟು ನಿಗಾ ಇದೆ.  ಅವ್ರ ಬಗ್ಗೆ ನೀನು ಈ ಥರಾ ಮಾತಾಡೋದು ಸರಿ ಅನ್ಸೋಲ್ಲ.
ಬಾಯಿ  :  ಸಾಕ್ ಸುಮ್ನಿರ್‍ರೀ, ಇದೆಲ್ಲ ನಿಮ್ಮ ಸೊಸೇದೇ ಕಿತಾಪತಿ ಇರ್‍ಬೇಕು, ಅವ್ಳು ಮಗು ಬೇಡಾಂತ ಅಂದಿರೋದಿಕ್ಕೆ ನಿಮ್ಮ ಮಗಾನೂ ತೆಪ್ಗೆ ಬಾಯ್ಮುಚ್ಚೊಂಡಿದಾನೆ, ಅದೆಲ್ಲ ಬೇಡ ಇವತ್ಸಂಜೆ ನಿಮ್ಮ ಸೊಸೆ (ಒತ್ತಿ ಹೇಳುವರು) ಮಗ ಬರ್‍ಲಿ ಯಾವ್ದಕ್ಕೂ ತೀರ್ಮಾನ ನಾನೇ ಮಾಡ್ತೀನಿ ನಿಮ್ಕೈಲಾಗ್ದಿದ್ರೆ.
ರಾವ್  :  (ಬೇಡಿಕೆ ಪೂರಿತ ಧ್ವನಿಯಲ್ಲಿ) ಲೇ ಸುಮ್ನೆ ಅವ್ಸರ ಪಡಬೇಡ್ವೆ, ಹೋಗ್ಲೀ ಇವತ್ಸಂಜೆ ಅವರಿಬ್ರೂ ಬರ್‍ಲೀ ನಾನೇ ಏನೂಂತ ವಿಚಾರಿಸ್ತೀನಿ, ಸುಮ್ನೆ ನೀನು ಯಾವ್ದಕ್ಕೂ ಇಷ್ಟು ದಿವ್ಸದಿಂದ ಇಲ್ದಿರೋ ರಂಪ ಈಗ ಮಾಡ್ಬಿಡಬೇಡ ತಿಳೀತಾ.
ಬಾಯಿ  :  ನೋಡ್ತೀನಿ ಅದೇನು ತೀರ್ಮಾನ ಮಾಡ್ತೀರೋ ಅಂತ.

                (ಪರದೆ ಬೀಳುವುದು)

                - ಪರದೆ ಸರಿದಾಗ -

(ರಾತ್ರಿಯ ಊಟದ ಸಮಯದಂತಿರಬೇಕು.  ವೆಂಕಟರಾವ್ ಹಾಗು ಸರೋಜಮ್ಮನವರು ಬೆಳಗ್ಗೆ ಕುಳಿತಂಥ ಕುರ್ಚಿಗಳಲ್ಲೇ ಕುಳಿತಿರುವರು.  ಜೊತೆಗೆ ದೇವಿಕಾಳ ಪತಿ ರವಿಕುಮಾರ್‍ ವೆಂಕಟರಾವ್‌ರವರ ಎದುರುಗಡೆ ಕುಳಿತಿರುವನು.  ದೇವಿಕ ನೈಟಿಯನ್ನು ಧರಿಸಿ ಎಲ್ಲರಿಗೂ ಊಟ ಬಡಿಸುತ್ತಿರುವಳು.  ರವಿ ಸಹ ಟೀ ಶರ್ಟ್ ಮತ್ತು ಪಾಯಿಜಾಮದಲ್ಲಿ ಇರುವನು.  ಸರೋಜಬಾಯಿ ಹಾಗು ವೆಂಕಟರಾವ್‌ರವರು ಬೆಳಿಗ್ಗೆ ಕಂಡಂಥ ಉಡುಗೆಯಲ್ಲೇ ಇದ್ದರೂ ನಡೆಯುತ್ತದೆ)

(ರವಿ ಹಾಗು ದೇವಿಕಾರ ಮುಖಗಳಲ್ಲಿ ಉಲ್ಲಾಸದ ಕಳೆಯಿದೆ.  ಇಬ್ಬರೂ ಏನೋ ಕಣ್ಣಿನಲ್ಲೇ ಮಾತನಾಡಿಕೊಂಡು, ಕಣ್ಣಿನಲ್ಲೇ ನಗುತ್ತಿರುವರು.  ಸರೋಜಮ್ಮನವರು ವೆಂಕಟರಾವ್ ರವರಿಗೆ ಏನೋ ಸಂಜ್ಞೆ ಮಾಡುತ್ತಿರುವರು.  ಇದಕ್ಕೆ ವೆಂಕಟರಾವ್‌ರವರು ಸುಮ್ಮನಿರುವಂತೆ ಸಂಜ್ಞೆ ಮಾಡುತ್ತಿರುವರು.  ಇದನ್ನು ನೋಡಿದ ರವಿ ಊಟ ಮಾಡುತ್ತ ಮಾತಿಗಾರಂಭಿಸುವನು.  ಎಲ್ಲರೂ ಊಟ ಮಾಡತೊಡಗುವರು)

ರವಿ  :  ಏನು, ಅಮ್ಮ ಈವತ್ತು ಕೋಪದಲ್ಲಿರೋ ಹಾಗಿದೆಯಲ್ಲ.
ರಾವ್ :  ಏನೂ ಇಲ್ಲ ರವಿ, ಸುಮ್ನೆ ಹೀಗೆ.  ಅದಿರ್‍ಲಿ ನಿಂದೇನು ಸಮಾಚಾರ ಆಫಿಸ್‌ನಲ್ಲಿ ಕೆಲಸಗಳೆಲ್ಲ ಸರಿಯಾಗಿ ನಡೆಯುತ್ತಿದೆಯಾ.
ರವಿ  :  ಎಲ್ಲ ಸರಿಯಾಗೇ ನಡೀತಿದೇಪ್ಪ (ಎಂದು ಹೆಂಡತಿಯ ಕಡೆ ನೋಡಿ ನಗುವನು ಆಕೆಯೂ ರವಿಯನ್ನು ನೋಡಿ ತುಂಟ ಮಂದಹಾಸ ಬೀರುವಳು)
ರಾವ್ :  (ಸೊಸೆಯ ಕಡೆ ನೋಡಿ) ನಿನ್ನದ್ಹೇಗೆ ನಡೀತಿದೇಮ್ಮ ಏನೂ ವಿಶೇಷವಿಲ್ವೇನಮ್ಮ.
ದೇವಿಕ:  (ಮಾವನ ಕಡೆ ತಿರುಗಿ ಆಶ್ಚರ್ಯದಿಂದ)  ವಿಶೇಷವೆಂದರೆ? (ಅವರ ಮುಖವು ಪ್ರಶಾಂತವಾಗಿರುವುದನ್ನು ನೋಡಿ ಗಂಡನ ಕಡೆ ತಿರುಗಿ ತುಂಟ ಸ್ವರದಲ್ಲಿ ಹೇಳುವಳು) ವಿಶೇಷವೇನೋ ಇದೆ.  (ನಿಧಾನವಾಗಿ ಅತ್ತೆ ಮಾವನವರಿಗೆ ಕೇಳಿಸದಿರಲೆಂಬಂತೆ ಹೇಳುವಳು)

ಸ್ವಲ್ಪ ಹೊತ್ತು ವಾತಾವರಣದಲ್ಲಿ ನಿಶ್ಯಬ್ಧತೆ ನೆಲೆಸುವುದು, ನಂತರ ವೆಂಕಟರಾವ್‌ರವರೇ ಮಾತಿಗಾರಂಭಿಸುವರು

ರಾವ್  :  ನೋಡು ರವಿ.  ನನಗೂ ರಿಟೈರ್‍ ಆಗಿ ಎರಡು ವರ್ಷಗಳಾಗುತ್ತ ಬಂತು ಮನೆಯಲ್ಲಿ ಕೂತು ಕೂತು ನನಗೂ ಬೋರಾಗುತ್ತದೆ.  ನಿಮ್ಮಮ್ಮನಿಗೂ ಹಾಗೇ ಅನ್ನಿಸ್ತಿದೆಯಂತೆ ಏನಾದ್ರು ಛೇಂಜ್ ಸಿಕ್ರೆ ಚೆನ್ನಾಗಿರುತ್ತೆ ಅಲ್ವ?
ರವಿ   :  (ತುಂಟತನದಿಂದ)  ಛೇಂಜ್ ಅಂದ್ರೆ.  ಏನು ಇಬ್ರೂ ತೀರ್ಥಯಾತ್ರೆ ಮಾಡಿ ಬರೋ ಯೋಜ್ನೆ ಹಾಕಿದಿರೇನು?
ಬಾಯಿ  :  (ಸಿಡುಕುತ್ತ)  ನಮಗ್ಯಾಕೋ ತೀರ್ಥಯಾತ್ರೆ ಯೋಜ್ನೆ ಈಗ್ಲೇ.  ನಮ್ಗೇನು ಅಷ್ಟೊಂದು ವಯಸ್ಸಾಗಿದೆ ಅಂತ ತಿಳ್ಕೊಂಡಿದಿಯೇನು?
ರವಿ   :  (ಇನ್ನಷ್ಟು ರೇಗಿಸುತ್ತ) ಹಾಗಾದ್ರೇನು ಇಬ್ರೂ ಎಲ್ಲಾದ್ರೂ ಕೆಲ್ಸಕ್ಕೆ ಹೋಗೋ ಪ್ಲಾನ್ ಹಾಕಿದಿರೇನು?  (ನಗುತ್ತಲೇ ಕೇಳುವನು).
ಬಾಯಿ  :  (ಅತ್ಯಂತ ಕೋಪದಿಂದ)  ಯಾಕೆ ನೀವಿಬ್ರೂ ದುಡಿದು ತಂದು ಹಾಕೋದು ಸಾಕಾಗೋದಿಲ್ಲೇನು?  ನಮ್ಮನ್ನೂ ಕೆಲ್ಸಕ್ಕೆ ಕಳ್ಸೋ ಯೋಚ್ನೆ ಮಾಡ್ತಿದ್ದೀಯಲ್ಲ.
ರಾವ್  :  ಸರೋಜ ಸ್ವಲ್ಪ ಸುಮ್ಮನಿರುತ್ತೀಯ?  (ಕೈ ತೊಳೆಯುವರು,  ಅಷ್ಟು ಹೊತ್ತಿಗೆ ಎಲ್ಲರ ಊಟವೂ ಮುಗಿದಿರುವುದು.  ದೇವಿಕ ಎಲ್ಲರ ತಟ್ಟೆಗಳನ್ನು ತೆಗೆದುಕೊಂಡು ಒಳಗೆ ಹೋಗುವಳು.  ವೆಂಕಟರಾವ್‌ರವರು ಇದೇ ಸುಸಮಯವೆಂದು ಸಾಧಿಸಿ)  ವಿಷಯವನ್ನು ಸ್ವಲ್ಪ ಸೀರಿಯಸ್ಸಾಗಿ ತೊಗೊಳ್ಳೋಣವ.
ರವಿ   :  ಹೇಳೀಪ್ಪ.
ರಾವ್  :  ನೋಡು ರವಿ ಯಾವ ಯಾವ ಸಮಯದಲ್ಲಿ ಏನೇನು ಆಗ್ಬೇಕೋ ಅದು ಆದ್ರೇನೇ ಚೆನ್ನ.  ನಮಗೆ ವಯಸ್ಸಾಯ್ತು.  ಬೆಳಗಾದ ಕೂಡ್ಲೆ ನಿಮ್ಮಿಬ್ರನ್ನೂ ಮಾತ್ನಾಡಿಸೋ ಹಾಗೇ ಇಲ್ಲ.  ಇಬ್ಬರೂ ನಿಂಥ ಕಾಲ್ಮೇಲೇ ಕೆಲಸಕ್ಕೆ ಹೋಗುತ್ತೀರ. (ಸ್ವಲ್ಪ ಸುಮ್ಮನಾಗುವರು)
ರವಿ   :  (ಅರ್ಥವಾಗದವನಂತೆ ನಟಿಸುತ್ತ)  ಅಂದ್ರೇ?
ಬಾಯಿ  :  (ಕೋಪದಿಂದ)  ಅಂದ್ರೆ ನಮ್ಮಿಬ್ರಿಗೂ ತುಂಬಾ ಬೋರಾಗುತ್ತೆ ನಮ್ಮ ಜೊತೆ ಮತ್ತೊಬ್ರು ಬೇಕು ಅಂತ.
ರವಿ   :  (ಮತ್ತೆ ತುಂಟತನದಿಂದ) ಹಾಗಾದ್ರೆ ಅಕ್ಕನನ್ನ ಅವ್ಳ ಮಕ್ಕಳನ್ನ ಕರೆಸಿಕೊಳ್ಳಿ.
ಬಾಯಿ  :  (ಕೋಪದಿಂದ)  ಹೌದೋ ಅವ್ಳು ತನ್ನ ಗಂಡನನ್ನ, ಮಕ್ಕಳ ಸ್ಕೂಲ್‌ಗಳನ್ನು ನೋಡೋದ್ಬಿಟ್ಟು ನೀನ್ಹೇಳ್ತಿಯ ಅಂತ ಇಲ್ಬಂದು ಕೂತ್ಬಿಡ್ತಾಳೆ.  ಸುಮ್ನೆ ತಮಾಷೆ ಮಾಡ್ಬೇಡ.  ನಿಮ್ಮಿಬ್ರಿಗೂ ಮದ್ವೆ ಆಗಿ ಎರಡು ವರ್ಷ ಆಗ್ತಾ ಬಂತು.  ನಮ್ಗೆ ನಮ್ಮ ಮನೆಯಲ್ಲೇ ನಮ್ಕಣ್ಣೆದುರಿಗೇ ಬೆಳೆಯೋವಂಥ ಮೊಮ್ಮಕ್ಕಳು ಬೇಕು ತಿಳಿತಾ.
ರವಿ   :  (ನಾಟಕೀಯವಾಗಿ)  ಹೌದಾ!!  ನಿಮ್ಮ ಕಣ್ಣೆದುರಿಗೇ ಬೆಳೆಯೋವಂಥ ಮೊಮ್ಮಕ್ಳು ಬೇಕಾ.  ಹುಂ (ಎಂದು ಸ್ವಲ್ಪ ನಿಲ್ಲಿಸಿ ನಂತರ)  "ದೇವಿಕಾ" (ಹೆಂಡತಿಯನ್ನು ಕರೆಯುವನು).
ದೇವಿಕ :  (ಒಳಗಿನಿಂದ) ಬಂದೇರೀ  (ಕೈಗಳನ್ನು ಟವಲ್ಲಿಗೆ ಒರೆಸಿಕೊಳ್ಳುತ್ತ ಬರುವಳು)
ರವಿ   :  (ತುಂಟತನದಿಂದ ಅವಳ ಕಡೆ ನೋಡುತ್ತ)  ನೋಡು ನಿನ್ನ ಅತ್ತೆ ಮಾವಂದಿರಿಗೆ ಇಲ್ಲೇ ಬೆಳೆಯುವಂಥ ಮೊಮ್ಮಕ್ಕಳು ಬೇಕಂತೆ (ದೇವಿಕ ನಾಚಿಕೊಳ್ಳುವಳು).
ಬಾಯಿ  :  (ಅತ್ಯಂತ ಕೋಪದಿಂದ)  ಹೌದು ಕಣೇ ನಮ್ಗೆ ಇಲ್ಲೇ ಬೆಳೆಯುವಂಥ ಮೊಮ್ಮಕ್ಕಳು ಬೇಕು (ತಮಗೆ ತಾವೇ ಎಂಬಂತೆ ಸ್ವರವನ್ನು ಬದಲಿಸಿ ಮಗ ಮತ್ತು ಸೊಸೆಗೆ ಮೆತ್ತಗೆ ಕೇಳಿಸುವಂತೆ ತಮಗೆ ತಾವೇ ಹೇಳಿಕೊಳ್ಳುವರು) ಎಡರು ವರ್ಷವಾಯ್ತು ಮದ್ವೆ ಆಗಿ ಜನ ಏನಂದಾರು ಅನ್ನೋ ಜ್ಞಾನ ಬೇಡ.
ರವಿ   :  ಕೋಪ ಮಾಡ್ಕೋಬೇಡಮ್ಮ, ತಮಾಷೆ ಮಾಡ್ಡೆ ಅಷ್ಟೇ (ಸ್ವಲ್ಪ ಗಂಭೀರತೆಯನ್ನು ಮುಖದಲ್ಲಿ ತರಿಸಿಕೊಂಡು ಕೊಂಚ ತುಂಟ ಧ್ವನಿಯಲ್ಲಿ) ನೀನು ಕೇಳಿದ ಹಾಗೆ ಇನ್ನಾರು ತಿಂಗಳಲ್ಲೇ ನಿನ್ನ ಮೊಮ್ಮಗು (ಒತ್ತಿ ಹೇಳುವನು) ನಿನ್ನ ಮಡಿಲಲ್ಲಿ ಆಡುವುದು (ಇಷ್ಟು ಹೇಳಿ ತುಂಟತನದಿಂದ ನಗುತ್ತ ಕೂರುವನು)
(ವೆಂಕಟರಾವ್ ಹಾಗೂ ಸರೋಜಬಾಯಿವರಿಗೆ ವಿಷಯ ಅರ್ಥವಾಗದೆ ಕೊಂಚ ಹೊತ್ತು ಕಕ್ಕಾಬಿಕ್ಕಿಯಾಗಿ ಕುಳಿತಿರುವರು.  ವೆಂದಟರಾವ್‌ರವರು ವಿಷಯವನ್ನು ಅರ್ಥಮಾಡಿಕೊಂಡಂತೆ ಅವರ ಮುಖವು ಸಂತೋಷದಿಂದ ಅರಳುವುದು.  ನಂತರ ಸರೋಜಬಾಯಿಯವರು ವಾಸ್ತವಕ್ಕೆ ಬಂದು ಅತ್ಯಂತ ಆಶ್ಚರ್ಯದಿಂದ)

ಬಾಯಿ  :  ಹಾಂ!!  ಏನಂದೆ? 
         (ದೇವಿಕ ಕೂಡಲೇ ಎದ್ದು ಒಳಗೆ ಓಡುವಳು)
ರವಿ   :  ಹೌದಮ್ಮ ಇಂದು ಸಂಜೆ ಬರುವಾಗ ಇಬ್ಬರೂ ಕ್ಲಿನಿಕ್‌ಗೆ ಹೋಗಿದ್ದೆವು.  ಕನ್ಫರ್ಮ್ ಮಾಡಿಕೊಂಡು ಬಂದೆವು.
         (ಸರೋಜಮ್ಮನವರು ಈ ಮಾತುಗಳಿಂದ ಇನ್ನು ಚೇತರಿಸಿಕೊಳ್ಳುತ್ತಿರುವರು)
ರಾವ್  :  (ಅತ್ಯಂತ ಸಂತೋಷದಿಂದ)  ಕಾಂಗ್ರಾಚುಲೇಷನ್ಸ್ ರವಿ (ಸರೋಜಮ್ಮನವರನ್ನು ಕುರಿತು) ನೋಡಿದ್ಯೇನೇ, ನಾನು ಹೇಳಿರಲಿಲ್ವಾ ನನ್ನ ಮಗ, ಸೊಸೆ ಅತ್ಯಂತ ತಿಳುವಳಕಸ್ತ್ರು ಅಂತ, ಈಗ್ಹೋಗಿ ಆ ಪಕ್ಕದ್ಮನೆ ಪಂಕಜಮ್ಮ, ಎದುರುಮನೆ ಚಂಚಲಾಕ್ಷಿಗೆ ಹೇಳು, ನಮ್ಮ ಮನೆಯಲ್ಲೂ ಇನ್ನಾರು ತಿಂಗಳಲ್ಲೇ ಮಗುವಿನ ಅಳುದನಿ ಕೇಳುತ್ತೆ ಅಂತ (ವೆಂಕಟರಾವ್‌ರ ಈ ಮಾತುಗಳಿಂದ ರವಿ ಆಶ್ಚರ್ಯಗೊಳ್ಳುವನು).
ಬಾಯಿ  :  (ಅತ್ಯಂತ ಸಂತೋಷದಿಂದ) ಹೌದೇನೋ ರವಿ, ಹಾಗಾದ್ರೆ ಇಷ್ಟು ದಿನ ಯಾಕೆ ನಮ್ಮಿಂದ ಈ ವಿಷ್ಯ ಮುಚ್ಚಿಟ್ಟಿದ್ರೋ ಎನ್ನುತ್ತ ಅಡಿಗೆ ಮನೆಗೆ ಹೋಗಿ ಸೊಸೆಯ ಕಿವಿಯನ್ನು ಪ್ರೀತಿಯಿಂದ ಹಿಡಿದು ಎಳೆದು ತರುವರು.  ನಿನ್ನನ್ನ ಹಿಡಿಯೋದಕ್ಕಿಂತ ಈ ಕಳ್ಳೀನ ಹಿಡ್ಕೋಬೇಕು.  ನನ್ನಿಂದಾನೆ ಈ ವಿಷ್ಯಾನ್ನ ಮುಚ್ಚಿಟ್ಟಿದ್ದಾಳಲ್ಲ.
ರವಿ   :  ಯಾಕಪ್ಪ ಪಕ್ಕದ್ಮನೆ ಪಂಕಜಮ್ಮ, ಎದುರ್‍ಮನೆ ಚಂಚಲಾಕ್ಷೀ ಅವರಿಗೆ ಯಾಕೆ ಹಾಗ್ಹೇಳ್ಬೇಕು.
ರಾವ್  :  ಹೂಂ, ಅವರೇನಪ್ಪ ನಿಮ್ಮಮ್ಮನ್ನ ತಲೆ ಕೆಡ್ಸಿದ್ದಿದ್ದು.  ಈವತ್ತು ಬೆಳಿಗ್ಗೆ ಇವ್ಳ ರಾಮಾಯಣ ಕೇಳ್ಬೇಡ.
ರವಿ   :  ಎನಂತಿದ್ರಮ್ಮ ಅವ್ರು.
ಬಾಯಿ  :  ಇನ್ನೇನಂತಾರಪ್ಪ, ಮದುವೆಯಾಗಿ ಎರಡು ವರ್ಷ ಆದ್ರೂ ಮನೇಲಿ ಮಗು ಆಡ್ದಿದ್ರೆ ಆಡೋ ಮಾತೇ ಆಡಿದ್ರು.  (ಎನ್ನುತ್ತ ಸೊಸೆಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ)  ಅಂತು ಈ ಸಿಹಿ ಸುದ್ದಿ ಹೇಳೋದಿಕ್ಕೆ ಇಷ್ಟು ದಿನ ಕಾಯ್ಸಿದ್ರಿ.  ನಾನು, ನೀವೆಲ್ಲೋ ಮಕ್ಕಳೇ ಬೇಡಾಂತ ಡಿಸೈಡ್ ಮಾಡಿದಿರೇನೋ ಅಂತ ಅಂದ್ಕೊಂಡಿದ್ದೆ.  ಹಾಗೇನಾದ್ರೂ ಆಗಿದ್ರೆ ಇದು ನನ್ಸೊಸೆದೇ ಕಿತಾಪತಿ ಅಂತ ನಿನಗೆ ಬೇರೆ ಮದ್ವೆ ಮಾಡ್ಸೋ ಯೋಚ್ನೇನು ನನ್ಮನ್ಸಲ್ಲಿ ಬಂದಿತ್ತು.
ರಾವ್  :  (ಹಾಸ್ಯ ಭರಿತ ವ್ಯಂಗ್ಯ ಧ್ವನಿಯಲ್ಲಿ)  ಹೌದೇನೇ, ಅಂತೂ ನಿನ್ ತಲೇಲೀ ಭಾರಿ ಯೋಚ್ನೆಗಳೇ ಬರುತ್ವೆ.  ಅಂತೂ ಬೆಳಿಗ್ಗೆ ನನ್ಸೊಸೆ ಆಗಿದ್ದವಳ್ನ ಈಗ ನಿನ್ಸೊಸೆ ಮಾಡ್ಕೊಂಡ್ಬಿಟ್ಯಾ (ದೇವಿಕಾ ನಗುವಳು)
ರವಿ   :  (ಗಂಭೀರವಾಗಿ ತಾಯಿಯನ್ನು ಕುರಿತು)  ಹೌದಮ್ಮ ಈ ಎರಡು ವರ್ಷ ನಾವು ಒಬ್ಬರನ್ನೊಬ್ರು ಅರಿತ್ಕೊಳ್ಳೋದಕ್ಕೆ ಸಾಕಷ್ಟು ಸಮಯ ನೀಡ್ತು.  ಮಕ್ಕಳಾಗೋದು ಅನ್ನೋದು ಸಂತೋಷದ ವಿಷಯದ ಜೊತೆ ಸಮಸ್ಯೆಗಳ ವಿಷಯವೂ ಹೌದು.  ಈ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಯಾವ ಸಮಸ್ಯೆನೂ ಇರಬಾರದು.  ಅದ್ರಿಂದ್ಲೇ ನಾವು ಈ ಎರಡು ವರ್ಷಗಳ ಟೈಂ ತೆಗೆದುಕೊಂಡಿದ್ದು.  ಏನಂತಿರಾಪ್ಪ ನಮ್ಮ ಯೋಚ್ನೆ ಸರೀ ತಾನೆ.
ರಾವ್  :  (ಸರೋಜ ಬಾಯಿಯವರನ್ನು ಕುರಿತು)  ನೋಡಿದ್ಯೇನೆ ನನ್ನ ಮಗನ ವಿಚಾರವನ್ನು ಇವ್ರ ಬಗ್ಗೆ ಬಳಿಗ್ಗೆ ಏನೇನೋ ಹೇಳ್ತಿದ್ಯಲ್ಲೇ.  (ಆನಂದ ತುಂಬಿದ ಧ್ವನಿಯಲ್ಲಿ ಹೇಳುವರು).
ದೇವಿಕ :  ಹೋಗ್ಲೀ ಬಿಡಿ ಮಾವ, ಅವ್ರು ಹೇಳಿದ್ರಲ್ಲೂ ಏನೂ ತಪ್ಪಿಲ್ಲ ಅನ್ಸುತ್ತೆ.
ಬಾಯಿ  :  ಹೂಂ, ಏನೋ ಆಯ್ತು ಈಗ ಒಂದು ಮಗುವನ್ನು ಕೊಡೋದಕ್ಕೆ ಇಷ್ಟು ಲೇಟ್ ಮಾಡಿದ್ರಿ, ಮತ್ತೊಂದು ಯಾವಾಗ್ಬರುತ್ತೋ
ರವಿ   :  ನಂತ್ರ ಎರಡು ವರ್ಷ ಆಗ್ಬೇಕಮ್ಮ (ಗಂಭೀರವಾಗಿ)
ಬಾಯಿ  :  (ಆಶ್ಚರ್ಯದಿಂದ) ಅಂದ್ರೆ ಅದಕ್ಕೂ ನಿಮ್ಮಿಬ್ಬರ ಮಧ್ಯೆ ಅರಿತುಕೊಳ್ಳೋಕೆ ಎರಡು ವರ್ಷ ಬೇಕೇನೋ?
ರವಿ   :  ಇಲ್ಲಮ್ಮ ಹಾಗಲ್ಲ.  ಒಂದು ಮಗುವಿನ ಲಾಲನೆ ಪೋಷಣೆ ಸರಿಯಾಗಿ ಆಗ್ಬೇಕಾದ್ರೆ ಎರಡು ವರ್ಷಗಳ ಅಂತರ ಮುಖ್ಯ, ಆದ್ರೆ ಇಲ್ಲಿ ಇನ್ನೊಂದ್ವಿಷ್ಯ.  ಅ ಎರಡು ವರ್ಷಗಳ ನಂತರ ಬರೋ ಮಗು ನಮ್ಮಿಬ್ರದಾಗೋದಿಲ್ಲ.  ಯಾವುದಾದ್ರು ಅನಾಥಾಶ್ರಮದಿಂದ ಬರುವ ಮಗುವಾಗುತ್ತದೆ (ರವಿಯ ಧ್ವನಿಯಲ್ಲಿ ಅತ್ಯಂತ ಗಂಭೀರತೆ ಕಂಡು ಬರುವುದು.  ಸರೋಜಬಾಯಿ ಹಾಗೂ ವೆಂಕಟರಾವ್‌ರವರು ಆಶ್ಚರ್ಯಚಕಿತರಾಗಿ ರವಿಯಕಡೆ ನೋಡುವರು)
ಬಾಯಿ  :  (ಆಶ್ಚರ್ಯಚಕಿತ ಧ್ವನಿಯಲ್ಲಿ) ಏನೋ ನೀನು ಹೇಳ್ತಿರೋದು.
ರವಿ   :  ಹೌದಮ್ಮ, ಈ ದೇಶದ ಜನಸಂಖ್ಯೆ ನೋಡ್ತಿದ್ರೆ ನನ್ಗೆ ತುಂಬಾ ಬೇಜಾರಾಗುತ್ತಮ್ಮ.  ನಮ್ಮ ದೇಶದ ಪ್ರತಿಯೊಂದು ಸಮಸ್ಯೆಯ ಮೂಲ ಹುಟ್ಟು ತಡೆಯಲಾಗದೆ-ಬೆಳೆಯುತ್ತಿರುವ ಜನಸಂಖ್ಯೆಯೆಂದೇ ನನ್ನ ಅನಿಸಿಕೆ.  ಆದ್ದರಿಂದ ನಾನೂ ದೇಶಕ್ಕೆ ನಮ್ಮ ಎರಡು ಮಕ್ಕಳನ್ನು ಕೊಟ್ಟು ಭಾರ ಹೊರಿಸಲು ಇಷ್ಟ ಪಡುವುದಿಲ್ಲ.
ಬಾಯಿ  :  (ಕೂಡಲೇ ಕೋಪದಿಂದ)  ಸರ್ಕಾರದ ಅನುಮತಿನೇ ಇದೆಯಲ್ಲೋ ಇದಕ್ಕೆ.
ರವಿ   :  ಸರ್ಕಾರವೇನೋ ಅನುಮತಿ ನೀಡಿದೇಮ್ಮ.  ಆದ್ರೆ ಈಗಿನ ಪರಿಸ್ಥಿತಿಯಲ್ಲಿ ನಮ್ಮಂಥ ವಿದ್ಯಾವಂತರು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದ್ರೆ ದೇಶದ ಹೆಚ್ತಿರೋ ಜನಸಂಖ್ಯೆಯಿಂದ ಹುಟ್ತಿರೋ ನೂರಾರು ಸಮಸ್ಯೆಗಳು.  ಇದನ್ನು ತಡೆಯೋದಿಕ್ಕೆ ಮುಖ್ಯ ನಮ್ಮಂತ ವಿದ್ಯಾವಂತರಿಂದ್ಲೇ ಕಾರ್ಯಕ್ರಮಗಳು ಶುರುವಾಗ್ಬೇಕು.  ಆದ್ರಿಂದ ಪ್ರತಿಯೊಂದು ಕುಟುಂಬದಲ್ಲೂ ಒಂದು ಮಗುವನ್ನು ಹೆತ್ತು ಮತ್ತೊಂದು ಮಗುವನ್ನು ದತ್ತು ಪಡೆಯುವ ಪದ್ಧತಿ ರೂಢಿಗೆ ಬರಬೇಕು.  ಹೀಗೆ ಮಾಡೋದ್ರಿಂದ ಜನಸಂಖ್ಯೆಯನ್ನೂ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಜೊತೆಗೆ ದೇಶದ ಮೇಲಿರುವ ಸಾವಿರಾರು ಅನಾಥ ಮಕ್ಕಳ ಭಾರವನ್ನು ಕಡಿಮೆ ಮಾಡಬಹುದು.  ಈಗಿನ ಈ ಪರಿಸ್ಥಿತಿಯಲ್ಲಿ "ಒಂದು ಮಗುವನ್ನು ಹಡೆಯಿರಿ ಮತ್ತೊಂದು ಮಗುವನ್ನು ದತ್ತು ಪಡೆಯಿರಿ" (ಒತ್ತಿ ಹೇಳುವನು) ಎಂಬುದೇ ನಮ್ಮ ಕುಟುಂಬ ಯೋಜನೆಯ ಮೂಲಮಂತ್ರವಾಗಬೇಕು ಎಂಬುದೇ ನನ್ನ ವಾದ.  ಆದ್ರಿಂದ ನಾನು ಅದ್ರ ಪ್ರಕಾರಾನೇ ನಡ್ಕೊಳ್ಳೋದಿಕ್ಕೆ ಇಷ್ಟ ಪಡ್ತೀನಿ.  ಏನ್ ಹೇಳ್ತೀಯಾಮ್ಮ (ಸರೋಜಮ್ಮನವರ ಕಡೆಯಿಂದ ರಾವ್‌ರವರ ಕಡೆ ತಿರುಗಿ)  ನನ್ ವಿಚಾರ ಸರಿಯಿದೆಯಾಪ್ಪ? (ಕೇಳುವನು).
ರಾವ್  :  (ಅತ್ಯಂತ ಸಂತೋಷಭರಿತ ಧ್ವನಿಯಲ್ಲಿ) ರವಿ ನಿನ್ನನ್ನ ತಿಳುವಳಿಕಸ್ಥ ಅಂತ ಅಂದ್ಕೊಂಡಿದ್ದೆ.  ಆದ್ರೆ ಇಂಥ ದೊಡ್ಡ ವಿಚಾರವಾದಿ ಅಂತ ಅಂದ್ಕೊಂಡಿರಲಿಲ್ಲ.
ಬಾಯಿ  :  (ಸೊಸೆಯನ್ನು ಕುರಿತು)  ಇದಕ್ಕೆ ನೀನೂ ಒಪ್ಕೊಂಡ್ಬಿಟ್ಟಿದ್ದಿಯೇನಮ್ಮ (ದೇವಿಕ ಕೊಂಚ ನಾಚಿಕೆ ಬೀರುತ್ತ ಹೌದೆಂದು ತಲೆ ಆಡಿಸುವಳು)  ಹೂಂ, ನೀವ್ನೀವು ಒಪ್ಪಂದ ಮಾಡ್ಕೊಂಡಿದ್ದಾದ್ಮೇಲೆ ನಮ್ದೇನಿದೇಪ್ಪ.  ಏನೋ ಮಾಡಿ ಒಳ್ಳೇ ವಿಚಾರಗಳನ್ನ ಹೇಳ್ತಿದ್ದೀರ ಆಯ್ತು ನೀವ್ಹೇಳಿದ್ಹಾಗೇ ಆಗ್ಲಿ.
ರಾವ್  :  (ಹಾಸ್ಯ ಭರಿತ ವ್ಯಂಗ್ಯ ಧ್ವನಿಯಲ್ಲಿ)  ಇದೋಪ್ಪ ನಿಮ್ಮಮ್ಮನ ಕಡಿಯಿಂದಾನೂ ಥತಾಸ್ತು ಅಂತಾಯ್ತು.
ದೇವಿಕ :  ಈ ಸಮಯ್ದಲ್ಲಿ ಇನ್ನೊಂದು ಸಿಹಿಸುದ್ಧಿ ಹೇಳಿದ್ರೆ ಹ್ಯಾಗಿರುತ್ತೆ.  (ಅತ್ತೆ ಮಾವಂದಿರನ್ನು ನೋಡುತ್ತ ಹೇಳುವಳು ಇಬ್ಬರು ಆಶ್ಚರ್ಯದಿಂದ ಅವಳ ಕಡೆ ನೋಡುವರು).  ಈಗ ನಿಮ್ಮ ಮಗ ಬರೀ ಪ್ರೊಡಕ್ಷನ್ ಮ್ಯಾನೇಜರ್‍ ಅಲ್ಲ, ಜನರಲ್ ಮ್ಯಾನೇಜರ್‍ (ಒತ್ತಿ ಹೇಳುವಳು) ಆಗಿ ಬಡ್ತಿ ಹೊಂದಿದ್ದಾರೆ.
ರಾವ್  :  (ಈ ಆಶ್ಚರ್ಯಕರ ಸುದ್ದಿಯಿಂದ ಎಚ್ಚತ್ತ ವೆಂಕಟರಾವ್ ಸರೋಜ ಬಾಯಿಯವರನ್ನು ಕುರಿತು, ಸಂತೋಷದಿಂದ) ಹೂಂ, ಇನ್ನೇನು ನಿನ್ನ ಮಗ ಬರುವ ತಿಂಗಳಿಂದ ನಿನ್ನ ಸೊಸೆಗಿಂತ ಹೆಚ್ಚು ಸಂಬಳ ತರ್‍ತಾನೆ.
ಬಾಯಿ  :  (ಗದ್ಗದ ಸ್ವರದಲ್ಲಿ) ಹೌದೇನೋ ರವಿ!!  (ಆಕೆಗೆ ಸಂತೋಷ ತಡೆಯಲಾಗುತ್ತಿಲ್ಲ), ಅಂತೂ ದೇವರಿಗೆ ಈಗ ನಮ್ಮ ಮೇಲೆ ಸಂಪೂರ್ಣ ದಯೆ ಬಂತು (ಎನ್ನುವರು ಗದ್ಗದ ಸ್ವರದಲ್ಲಿ, ಆನಂದ ಬಾಷ್ಪದ ಎರಡು ಹನಿ ಆಕೆಯ ಕಣ್ಣುಗಳಿಂದ ಉರುಳುವುದು)

            ತೆರೆ ಬೀಳುವುದು

(ಮುಕ್ತಾಯ)

೧೨-೦೧-೧೯೯೩


ಕೀಲಿಕರಣ:  ಕಿಶೋರ್‍ ಚಂದ್ರ

ಸಾಧು ನೋಡಲೋ ಇವನು

ಸಾಧು ನೋಡಲೋ ಇವನು ಸಾಧು ನೋಡಲೋ
ಭೋಧಾನಂದದಿ ಮೆರೆವ ಮಹಾತ್ಮರು                ||ಪ||

ಎಂಟು ಗುಣಗಳ ಆಳಿದು ಕುಂಟನಾದನೋ
ಸೊಂಟರಗಾಳಿಗೆ ಶಿಲ್ಕಿದೀಲೋಕದಿ
ಕಂಠದಲಿ ಕಪ್ಪವನು ಧರಿಸಿದವ                         ||೧||

ಆಸೆ ಅಳಿದನು ಕರ್ನ ಪಾಶ ಕಳೆದವನು
ವಸುಮತಿಗೆ ನೆಲಗುಡ್ಡದಿ ನೆಲಸಿಹ
ಭಾಸುರ ಶಿಶುನಾಳಧೀಶಗೊಲಿದು                     ||೨||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಸಾಧುವಿಗೊಂದಿಸುವೆ ಸತ್ಯದಿ

ಸಾಧುವಿಗೊಂದಿಸುವೆ ಸತ್ಯದಿ                             ||ಪ||  

ಬೇಧ ಕ್ರೋಧ ಭೇದಿಸಿ
ಮೋದದಿ ಸದ್ಗುರುಪದಕ್ಹೊಂದಿದಾ                        ||೧||

ಆಲಿಗಳ ಬಲದಲ್ಲಿ ಬ್ರಹ್ಮದ
ಸಾಲು ಜ್ಯೋತಿಯ ಮಾಲಿನೊಳಗಿರುವ                ||೨||

ದೋಷಭವದುರಿತನಾಶ
ಶಿಶುನಾಳಧೀಶನೊಳು ಮಹೇಶನೊಲಿಸಿದಂಥಾ     ||೩||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಸಾಧುಗಳಿಗೆ ಶಿವನ ಚಿಂತೆ

ಸಾಧುಗಳಿಗೆ ಶಿವನ ಚಿಂತೆಯು ಆನಂತವು             ||ಪ||

ಬೇಧಭಾವವಳಿದು ಮಾಯಾ ಭ್ರಾಂತಿ ಕಳೆದು
ಭವನ ತುಳಿದು ಶಾಂತರೂಪದಿಂದ ಮೆರೆಯುವ      ||ಅ.ಪ.||

ದುಡ್ಡು ಹಣವು ಹೆಡ್ಡತನವನು ಜಡದೊತ್ತೆ
ಗುಡ್ಡನೇರಿ ತೋಪ೯ ಫನವನು
ಅಡ್ಡಬರುವ ಆಖಿಲ ವಿಷಯ
ಜಡ್ಡುಗಳಿದು ಜನನ ಮರಣ
ಕಡ್ಡಿಮುರಿದು ಕಮ೯ ಹಿಡಿದು
ಮಡ್ಡರಂತೆ ಮಾತನಾಡುವ                                ||೧||          

ತಂದೆ ಶಿಶುನಾಳಧೀಶನ ವಂದಿಸುವ ಗುರುಗೋ-
ವಿಂದರಾಜಾನಂದ ತೋಷನ
ಒಂದೇ ಲಕ್ಷ್ಯವಿಟ್ಟು ಸದಾ
ಬಿಂದುವಸ್ತು ಸವಿದು ಪರಮಾನಂದ ವನದೊಳಗಿಪ೯
ಚಂದದಿಂದ ಮಾತನಾಡುವ                             ||೨||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಬುಡುಬುಡಿಕ್ಯಾ

ಓಂ ದೇವದೇವರ ದೇವರ ಮಗನ
ದೇವಲೋಕದ ಬುಡುಬುಡಿಕ್ಯಾ ನಾ
ಭಾವಶುದ್ದವಾಗಿ ಕೇಳಿರಿ ಸುಮ್ಮನ
ದೇವಲೋಕದ ಸತ್ವಾಧೀನ                 ||೧||

ಪಡುವಣ ದಿಕ್ಕಿನ ಬುಡುಬುಡಿಕ್ಯಾ ನಾ
ಮೂಡಣ ದೇಶವ ನೋಡುತ ಬಂದೆ
ಬೇಡಿ ಬೇಡಿದ್ದನು ಹೇಳುವ ಕೇಳೆ
ರೂಢಿಯೊಳಗೆ ನಾ ನುಡಿಯುಪವೆ ತಾಯಿ  ||೨||

ದೇಹದ ಮಮ೯ವನೆಲ್ಲವ ಬಲ್ಲೆ
ಕಾಯದೊಳಗೆ ಒಂದು ದೇವರುಂಟು
ಮೋಹ ಮಾಯಗಳು ತೊಲಗಲು ತಾಯಿ
ಶ್ರೇಯಸ ಸಾಧನ ತಿಳಿವದು ಕೇಳೆ           ||೩||

ಹತ್ತು ಮಂದಿ ದಿಕ್‍ಪಾಲಕರಮ್ಮ
ಹಂತೇಲೆ ಇರುವರು ನೋಡಮ್ಮ
ಚಿತ್ತಶುದ್ಧವಾಗಿ ಕೇಳವ್ವ ತಂಗಿ
ಸತ್ಯವಾಗಿ ನಾ ನುಡಿಯುವೆ ತಾಯಿ        ||೪||

ಸ್ಥೂಲ ಸೂಕ್ಷ್ಮ ಕಾರಣ ದೇಹ
ಮೂಲ ಪ್ರಣಮವು ನಿನದವ್ವ ಮಗಳೆ
ಮೂಲೋಂಕಾರದ ನೆಲೆಯನು ತಿಳಿಯೆ
ಕೀಲ ತಿಳಿದುಕೂಂಡಿಬೇಕಮ್ಮ              ||೫||

ಉಪಾಯ ನಿನಗೊಂದು ಹೇಳುವೆನಮ್ಮ
ಜಪ ಶಪದಾಚಾರ ಸಾಧಿಸಲಮ್ಮ
ಭಕ್ತಿ ಮೆಚ್ಚಲು ಶಿಶುನಾಳೇಶ
ಮುಕ್ತಿಯ ಸಂಪದ ಕೊಡುವನು ಈಶ      ||೬||

ಜಾಗ್ರ ಸುಷುಪ್ತಿ ಸ್ವಪ್ನದೊಳಗೆ
ಶಿಘ್ರದಿಂದ ಶಿವಾ ಇರುತಾನ ತಂಗಿ
ಜಾಗ್ರತಿಯಿಂದ ತಿಳಕೋಳವ್ವ
ಮಹಾಜ್ಞಾನಿ ಗುರು ಬಂದಿರುವನನು        ||೭||

ತೈಲವಿಲ್ಲದೊಂದು ಜ್ಯೋತಿಯು ಉಂಟು
ತೆಲಿಯೊಳಗೆ ತಾ ಬೆಳಗುತದವ್ವಾ
ನಯನ ಹಿಡಿದು ನೀ ನೋಡದ್ವ ತಂಗಿ
ಚೈಲಿಗ ಬಯಲಾಗಿ ಹೋಯಿತು ಮಗಳೆ    ||೮||

ಸಾಂಖ್ಯ ತಾರಕಾ ಮನಸುಗಳು ಕೂಡಿ
ಬಹು ಕಿಂಕರ ವೃತ್ತಿಯೊಳು ಇರಬೇಕಮ್ಮ
ಆಹಂಕಾರ ಗುಣಗಳು ಆಳಿಬೇಕಮ್ಮ
ಶಂಕರ ಮಗಳು ನೀನಾಗಿರಬೇಕಮ್ಮ        ||೯||

ಕಲ್ಯಾಣದಲಿ ಹುಟ್ಟಿದ ಮಗಳೆ
ಕಲ್ಲದೇವರನು ಕಟ್ಟುತ ಬಂದಿ
ಎಲ್ಲ ಶಾಸ್ರವ ಕಟ್ಟಿಡು ತಂಗಿ
ಆಲ್ಲಮದೇದರ ದೇವರ ಮಗ ನಾನು       ||೧೦||

ಆಕಾಶದೊಳು ಇದ್ದೆನು ತಂಗಿ
ಯಶದೆಸೆಗ ನಿಂತಿಹ ತಾಯಿ
ನೂಕ್ಯಾಡಿದರೆ ದಿನವಿಲ್ಲವ್ವಾ
ಯಾಕಬೇಕು ಸಂಸಾರ ತಾಯಿ                ||೧೧||        

ಎಡಮುರಿ ಶಾಸ್ರವ ತಂದೇನಿ ಮಗಳ
ಡೃಢದಿಂದ ಲಾಲಿಸಿ ಕೇಳವ್ವ ತಂಗಿ
ಸೆಡಗರದೊಡಯ ಕೊಡು ಬಂದಿಹನು
ಮೃಡನ ಮಗನು ನಾನು ಬುಡುಬುಡಿಕ್ಯಾನು  ||೧೨||

ಬ್ರಹ್ಮ ವಿಷ್ಣು ರುದ್ರ ಸದಾಶಿವರ
ಮಮ೯ವ ನಾ ಹೇಳುವೆನಮ್ಮ
ಕರ್ಮದೇಹಗಳು ಆಮರೇ ತಾಯಿ
ಧಮ೯ದ ಮರ್ಮವ ಆರಿಯರು ಮಗಳೆ        ||೧೩||

ಮರಣದ ಬಾಗಿಲ ತರದಿಹ ಮಗಳೆ
ಪ್ರಮಾಣ ಇತ್ತೋ ನಿನಗವ್ವ ತಾಯಿ
ಪರಕಾಯ ಇದನೆಳೆದೊಯ್ಯುವರು ತಾಯಿ
ತಿರಗಿ ತಿರಗಿ ನೀ ಬರಬೇಕಮ್ಮ                 ||೧೪||

ಹದಿಮೂರು ಮುತ್ತು ನಿನ್ನೊಳಗವ್ವ
ಆದರೊಳಗೊಂದು ರತ್ನ ಇರುವುದದ್ವ
ಕದಲದೆ ಮನದೊಳು ನೋಡವ್ವ ತಂಗಿ
ಚದುರತನದಿ ನೀ ಧರಿಸವ್ವ ತಾಯಿ           ||೧೫||

ಯಾವ ದೇವರು ದೇವರಲ್ಲ
ವಾಯುದೇವನೇ ದೇವನಮ್ಮ
ಜೀವ ಆದರೊಳು ಇರುವದು ತಂಗಿ
ಸಾವು ಇಲ್ಲದೊಂದು ಗಿಡ ಉಂಟಮ್ಮ      ||೧೬||

ಹುಟ್ಟು ಮಾಗ೯ದಲಿ ಹೋಗುವಿ ತಂಗಿ
ಹುಟ್ಟಿನ ಗಿಡದಲಿ ಮಲಗುವಿ ಮಗಳೆ
ಬೆಟ್ಟದ ಎಲೆ ಆರಿಸಿ ತರಬೇಕಮ್ಮ
ಮುಟ್ಟಿದ ಲಿಂಗಕೆ ನೀಡಬೇಕಮ್ಮ            ||೧೭||

ಲೋಕದಂಥ ಬುಡುಬುಡಿಕ್ಯಾನಲ್ಲ
ಏಕಾಂಗಿ ನಾ ಬುಡುಬುಡಿಕ್ಯಾ ನಾ
ಜೋಕಿಲೆ ತಿಳಿಸಿ ಕೊಡುವೆನು ಬಾರವ್ವ
ಮೂಕಳಗಿ ನೀನಿರಬೇಕಮ್ಮ                   ||೧೮|| 

ತಂದಿಲೆ ಹತ್ತು ತಾಯಿಲೆ ಹನ್ನೊಂದು
ಬಂಧು ಬಳಗ ಮತ್ತಿಪ್ಪತ್ತೊಂದು
ಸಂದೇಹವಿಲ್ಲದೆ ಕೊಡಲಿಕೆ ಬಂದೇನಿ
ಕಂದುಗೊರಳಿನ ಕರುಣವೇ ತಾಯಿ           ||೧೯||

ನೂರೊಂದು ಸ್ಥಳದವ ಬಂದೇನಿ ಮಗಳೆ
ಮೂರು ಲಿಂಗದ ನೆಲಿಯೇನು ಬಲ್ಲೆ
ಮೀರಿದುನ್ಮನಿ ಇರಬೇಕಮ್ಮ
ಸೂಯ೯ ಚಂದ್ರರ ಹಾದದಿಯ ಹಿಡಿದು      ||೨೦||

ಸಾಧುರ ಸಂಗವ ಮಾಡಬೇಕು ಮಗಳೆ
ದೇವಪ್ರಪಂಚ ಹಿಡಿಬೇಕು ತಂಗಿ
ನಾದ ಬ್ರಹ್ಮವ ಕೂಡಬೇಕಮ್ಮ
ಸಾಧಿಸಿ ಕೂಡಿಕೋ ಸಾಂಬನ ತಾಯಿ         ||೨೧||

ಜೀವಪ್ರಪಂಚ ಬಿಡಬೇಕು ಮಗಳೆ
ದೇವಪ್ರಪಂಚ ಹಿಡೀಬೇಕು ತಂಗಿ
ಸಾವಪ್ರಪಂಚ ಸಡಿಲೀತಮ್ಮ
ಭಾವಪ್ರಪಂಚ ದೃಢವಿರಲೆಮ್ಮ              ||೨೨||

ಸಿದ್ಧಾರೂಢನ ಮಗನವ್ವ
ನಿದ್ರೆಗೆ  ಸಾಕ್ಷ್ಯಾಗಿರುವೆನು ತಾಯಿ
ಚಿದ್‍ರೂಪನ ಸಂದನ ಹೇಳಲಿಕ್ಕೆ ಬಂದೇನಿ
ತದ್‍ರೂಪಳು ನೀನಾಗಿರಬೇಕವ್ವ            ||೨೩||

ವಿರಾಟ ಸ್ವರಾಟ ವೀರಾಟ ಕೂಡಿ
ಭರಾಟೆಲಿಂದ ಬಂದೇನಿ ಮಗಳ
ನರರಾಟಿಕೆನೆಲ್ಲ  ಮುರಿಲಿಕೆ ತಂಗಿ
ಮರುಳಾಟಿಕೆನೆಲ್ಲ ಮರೀಬೇಕಮ್ಮ          ||೨೪||

ಸ್ರ ದಳ ಕಮಲದೊಳು ಶಿವನು ತಾನು
ಹಾರೈಸಿರುವನು ನೋಡವ್ವ ಮಗಳೆ
ಕಾಶಿ ರಾಮೇಶ್ವರನಲ್ಲಿರುವನು
ಮೀಸಲದಡಗಿ ನೀನುಣಬೇಕಮ್ಮ             ||೨೫||

ಷಣ್ಮುಖ ಪಾಷಾಣ ಮಾಡಬೇಕು ಮಗಳೆ
ಷಣ್ಮುಖಾದ್ರಿಗಳ ಹಿಡಿಬೇಕು ತಂಗಿ
ಕಣ್ಣು ಮೂಗು ಕಿವಿ ಮುಚ್ಚಿರಬೇಕಮ್ಮ
ಷಣ್ಮುಖಿಚಾರಿಸಿ ನೋಡಬೇಕಮ್ಮ           ||೨೬||

ಪಂಚಯೋಗ ಮಾಡಬೇಕು ಮಗಳ
ಪಂಚಲಕ್ಷಣದಿ ನಡಿಬೇಕಮ್ಮ
ಪಂಚಮುದ್ರಿಯ ಬಲಿಬೇಕಮ್ಮ
ಪಂಚಾಕ್ಷರಿ ನುಡಿಬೇಕು ತಾಯಿ                ||೨೭||

ಆಷ್ಟಾಂಗಯೋಗ ಮಾಡಬೇಕು ಮಗಳ
ಆಷ್ಟಸಿದ್ಧಿ ಪಡಿಬೇಕು ತಂಗಿ
ಆಷ್ಟಮೂರುತಿ ಆಗಿರಬೇಕಮ್ಮ
ಆಷ್ಟೈಶ್ವರ್ಯದೊಳು ಕೂಡಬೇಕು ತಾಯಿ   ||೨೮||

ತಾರಕ ಮಂತ್ರ ಹೇಳುವೆ ಮಗಳೆ
ಸಾರಿದ ಸವಾ೯ತ್ಮನು ತಾಯಿ ಬೇರಿಲ್ಲವ್ವ
ಪರಮಾನ್  ಪರ ಆನಂದಕೆ
ನೀ ಮೀರಿದ ಮಗಳೆ                             ||೨೯||    

ದರ್ಪಣಮುಖ ಸ್ವರೂಪದಿ ನೋಡವ್ವ
ಕಪ್ಪುಗೊರಳಿನಲ್ಲಿರುವನು ತಂಗಿ
ಸಪ೯ಭೂಷಣನ ಕೂಡಬೇಕವ್ವ
ಕರ್ಪೂರದಾರತಿ ಬೆಳಗವ್ವ ಮಗಳೆ             ||೩೦||

ಸ್ವಗ೯ದ ಹಾದಿ ಬೇಡಬೇಕು ಮಗಳೆ
ಭಾಗ೯ವದೇವನ ನೆನಿಬೇಕುಕಂ ತಂಗಿ
ನಿಗು೯ಣ ಸಮಾಧಿ ಮಾಡಬೇಕವ್ವ
ದುರಗವ್ವನ ಗುಡಿಗೆ ಹೋಗಬೇಕು ಮಗಳೆ   ||೩೧||

ತಿರುಗುತಲೈವತ್ತೆರಡಕ್ಷರ ತಾಯಿ
ಬರಿವರು ಬ್ರಹ್ಮಾಡದ ಜನರವ್ವ
ಕರಿವರು ನಾಮರೂಪದೊಳು ತಂಗಿ
ಪರಿ ಪರಿ ಷಟ್‍ಕಮ೯ಸ್ಥರು ತಾಯಿ           ||೩೨||

ಸತ್ಯ ಎಂಬುದು ಇರುವದು ಮಗಳೆ
ಚಿತ್ತ ಎಂಬುದು ಆರುವಿದೆ ತಂಗಿ
ಮತ್ತಾನಂದದಿ ಬಹುಸುಖವವ್ವಾ
ನಿತ್ಯಪೂಣ೯ಂಭರಿತಯ್ಯನ ಮಗಳೆ           ||೩೩||

ಭವ ಭವದಲಿ ತಿರುಗುತ ಬಂದೇನಿ
ಭವಣಿಯಿತ್ತಲವ್ವ ನಿನಗವ್ವ ಮಗಳೆ
ಶುಭಮೂತ೯ದಲಿ ಬಂದಿಹೆ ತಾಯಿ
ಆಯನ ತೋ‌ಆರಿಸಿ ಕೊಡುವೆನು ಬಾರೆ         ||೩೪||

ಕೋಟಿ ಎಲವು ನಿನಗುಂಟವ್ವ ಮಗಳೆ
ನಾಟಕ ಒಂದು ತರಬೇಡದ್ವ ತಂಗಿ
ಚಾಟ ವಿದ್ಯ ನಾ ಹೇಳುವವನಲ್ಲ
ಕೂಟಸ್ಥ ಬ್ರಹ್ಮದೊಳು ಏಕ್ಯಾ ಐಕಾಗಮ್ಮ   ||೩೫||

ಕಾಲಜ್ಞಾನದ ಪುರುಷನು ನಾನು
ಮೇಲುಜ್ಞಾನವನು ಹೇಳಲು ಬಂದೆ
ಕಾಲ ಸೂಚನೆಗಳು ಬಂದಾವಮ್ಮಾ
ಹಾಲುಹಕ್ಕಿ ಒಂದು ನುಡಿತೈತಿ ತಾಯಿ          ||೩೬||

ಹಸಿ ಹುಸಿ ಮಾತುಗಳ ಆಡಬೇಡಮ್ಮ
ದಶದಿಕ್ಕು ಹಸನುಮಾಡುತ ಬಂದಿಹನೇ
ಕುಶಲಗಾರ ಕುಂಪನಿಯರಮ್ಮ
ವಾಸುದೇವನ ಆವತಾರ ಜನಿಸಿದರಮ್ಮ
ಹುಶ್ಶಾರಿಕಿರಲಿ ಮನದೊಳು ತಾಯಿ             || ೩೭||

ಒಳಹೊರದಾರಿ ಸುಳಿವ ಸೂಕ್ಷ್ಮದಾರಿ
ಪರಿಮಾದಲಿ ಮಾಡುವನಮ್ಮಾ
ದೋರಿಗಳನೆಲ್ಲಾ ಮುರಿವನು ತಂಗಿ
ಪರಮಪುರುಷ ಪರಂಗಿಯವರು                  ||೩೮||

ಉತ್ತರ ದಿಕ್ಕಿನ ಸತ್ಯವಂತರು
ಮರ್ತ್ಯಕೆ ದಾಳಿ ತರುವರು ತಂಗಿ
ಎತ್ತ ಹೋದರೂ ಬಿಡುವಿಲ್ಲವ್ವಾ
ಮುತ್ತಗಿಹಾಕುತ ಬರುವರು ತಾಯಿ              ||೩೯||

ಕೈಲಾಸ ಹಾಳ್‍ಬಿದ್ದು ಹೋದೀತು ತಾಯಿ
ಭೂ ಕೈಲಾಸಾಯಿತು ಮಗಳೆ
ಬಾಲಚನ್ನಬಸವಣ್ಣವರಿಗ ಪಟೃ
ದೇವದುಗ೯ದಲಿ ಕಟ್ಟುವರಮ್ಮ                  ||೪೦||

ಗುರುಪುತ್ರಾಂಶ ಹೋಳಿಗಳನೆಲ್ಲ
ದೊರಕಿಸಿಕೊಂಡಬೇಕು ಭೂದೇವಿ ತಾಯಿ
ಸ್ಥಿರಕಾಯವನು ಮಾಡುತ
ತಿರಕರ ಆಳಿಕ ಆಳಿವರು ತಂಗಿ                      ||೪೧||

ಬುಡುಬುಡಿಕ್ಯಾನ ಮಾತು ಬುಡತನ ಸುಳ್ಳು
ಬುಡನೋಡ ಕೊಡನೋಡ ಬಧ್ರನೀಗೊಳ್ಳೆ
ಹಿಡಕೊಡುವೆನು ಬಿಡಬೇಡ ಮಗಳ
ಕಡಿವೆನು ಕಮ೯ದ ನೋವನು ತಾಯಿ             ||೪೨||

ಸಾಮದೇವವ ನೋಡಬೇಕು ಮಗಳೆ
ರಾಮನಾಮವ ನೆನಿಬೇಕು ತಂಗಿ
ತಾಮಸ ಗುಣಗಳು ಆಳಿಬೇಕಮ್ಮ
ಪ್ರೇಮಾಬ್ಧಿಬಾಲೆನೊಡಗೂಡುವೆನು ತಾಯೆ     ||೪೩||

ಆರಿತುಕೋ ಶಿಶುನಾಳಧೀಶನಿಂದಲಿ
ವರವನು ಹೊಂದಿ ಬಂದಿಹೆನಮ್ಮ
ಮರುಳಮಾಡುವದೊಂದು ಪುರವುಂಟು
ದೊರಕಿಸಿಕೊಡುವೆ ನಿಜಸುಖ ತಾಯಿ              ||೪೪||

ಶರೀಫಸಾಹೇಬ ಬುಡುಬುಡುಕ್ಯಾನ
ಗುರುವಿನ ವರವಿಲೆ ನುಡಿಯುಪವೆ ಇದನ
ಪರಶಿವ ಬಸವನು ಬರುವನು ಮಗಳೆ
ಶ್ವರಿತದಿ ಗುರುವಿನ ಆರಿತುಕೋ ತಾಯಿ          ||೪೫||

ದೇವದೇವರ ದೇವರ ಮಗನ
ದೇವಲೋಕದ ಬುಡುಬುಡಿಕ್ಯಾನ
ದೇವಗೋವಿಂದನ ಭಕ್ತಾನಮ್ಮ
ಸಂತರಸೇವಿಗೆ ನಿಂತಿಹನಮ್ಮ
ಓಂ ಜಯ ಜಯವಾಗಲೆಮ್ಮ                       ||೪೬|| 
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್ 

ಅಲ್ಲೀಕೇರಿಗೆ ಹೋಗೋನು ಬರ್ತೀರೇನ್ರೇ

ಅಲ್ಲೀಕೇರಿಗೆ ಹೋಗೋನು ಬರ್ತೀರೇನ್ರೇ ನೀವು
ಒಲ್ಲದಿದ್ದರೆ ಇಲ್ಲೆ ಇರತೀರೇನ್ರೇ                                                                             ||ಪ||

ಕಲ್ಲೌ ಮಲ್ಲೌ ಕೂಡಿಕೊಂಡು ದೀವಳಿಗೆ ಹಬ್ಬದಲ್ಲಿ
ಉಲ್ಲಾಸದಿಂದ ಅಲ್ಲಮಪ್ರಭುವಿನ ಮರೆತೀರೇನ್ರೇ ಇಲ್ಲೇ ಇರತೀರೇನ್ರೇ                          ||ಅ.ಪ.||

ಮಡಿಯನುಟ್ಟು ಮೀಸಲದಡಗಿ ಮಾಡಬೇಕ್ರೇ ಅದಕೆ
ತಡವು ಆದರೆ ನಿಮ್ಮ ಗೊಡವಿ ನಮಗೆ ಯಾಕ್ರೇ
ಹುರಕ್ಕಿ ಹೋಳಿಗೆ ಹೂರಣಕಡಬು
ಕಡಲಿ ಪಚ್ಚಡಿ ಕಟ್ಟಿನಾಂಬ್ರಾ
ಚಟಗಿ ಮುಚ್ಚಳ ಬಾನದ ಗಡಗಿ ಹೆಡಗಿ ಜೋಕ್ರೆ ನೀವು
ದೇವರ ಗುಡಿಗೆ ದೃಡದಿ ಹೋಗಿ ಧೂಪ ಹಾಕ್ರೇ                                                           ||೧||

ಊರ ಹೊರಗಿನ ಸಾರಿ ಮೀರಿದ ಸ್ಥಳವ ನೋಡ್ರೆ ಅದಕ
ಸೇರದಿದ್ದರ ನಿಮ್ಮ ಸ್ನೇಹ ನನಗೆ ಬ್ಯಾಡ್ರೇ
ಮೂರು ಗಿರಿಯ ಮರೆಯಲ್ಲಿರುವ
ನೀರು ತರುವ ಕೆರೆಯ ಬದಿಗೆ
ಜಾರುತರದ ಬುರುಜಿನೊಳು ಬಾಜಾರ್ ಹೂಡ್ರೆ ಮುಂದೆ
ಪಾರುಗಾಣುವಂಥ ಸುಸ್ರಿ ತಂದು ಇಡ್ರೇ                                                                   ||೨||

ವಸುಧೆಯೊಳು ಶಿಶುನಾಳಧೀಶನ ಹೆಸರು ಹೇಳ್ರೇ ಹೇಸಿ
ವ್ಯಸನಿಕರಾದವರೆಲ್ಲ ಇದಕ ಬರಲೇ ಬೇಡ್ರೇ
ಕುಶಲದಿಂದ ಕೋಲ ಪಿಡಿದು
ಹಸನಾಗಿ ಪದ ನುಡಿದು
ರಸಿಕರಾದವರೆಲ್ಲ ನೀವು ಕೂತು ಕೇಳ್ರೇ ತುಸು
ಕಸರು ಇದ್ದರೆ ಇಲ್ಲಿ ಅದನ್ ತಿದ್ದಿ ಹೇಳ್ರೇ                                                                  ||೩||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಗುಜಗುಜಮಾಪೂರ ಆಡೋಣ

ಗುಜಗುಜಮಾಪೂರ ಆಡೋಣ
ಸಜ್ಜನರೆಲ್ಲರು ಕೂಡೋಣ                          || ಪ||

ಗಜಿಬಿಜಿ ಸಂಸಾರ ದೂಡೋಣ ಸಾ-
ಯುಜ್ಯ ಮುಕ್ತಿಯ ಹೊಂದೋಣ                 ||ಅ.ಪ.||

ಹಸ್ತಿನಿ ಛಿತ್ತಿನಿ ಶಂಖಿನಿ, ಪದ್ಮಿನಿ
ಉತ್ತಮರೆಲ್ಲರು ಆಡೋಣ
ಕುರುಡ ಕುಂಟರೆಲ್ಲ ಹೋಗೋಣ
ರಂಟಿ ಕುಂಟಿ ಹೊಡೆಯೋಣ                     ||೧||

ಕೆಂಫು ಹಸಿರು ಹಳದಿ ಕಾಳ್ಗಳನು
ಸೊಂಪಿನಿಂದ ಬಿತ್ತೋಣ
ಯೋಗಿ ಜಂಗಮರಿಗೆ ನೀಡೋಣ
ಶಿಶುನಾಳಧೀಶನಿಗೆ ನಮಿಸೋಣ              ||೨||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಣ್ಣಾ ದೇಹದ         
ಗುಡಿಯ ನೋಡಿರಣ್ಣಾ                               ||ಪ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು 
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ                               ||ಅ.ಪ.||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ                                 ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು  ಘಟ್ಟ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ                               ||೨||   

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ-
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ                              ||೩||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಹಾದರ ಮಾಡಿದೆನೇ !

ಹಾದರ ಮಾಡಿದೆನೇ ನಾನೊಂದು ಹಾದರಮಾಡಿದನೇ                ||ಪ||


ಹಾದರ ಮಾಡಿದೆ ಹಗಲಿರುಳೆನ್ನದೆ

ಸಾಧು ಸತ್ಪುರುಷರ ಪದರಿನೊಳಗೆ ನಾ ಹಾದರಮಾದಿದೆನೇ         ||ಅ.ಪ.||


ಮಳ್ಳಿಯ ತೆರದಲ್ಲಿ ಮಾತುಗಳ ಆಡುತೆ

ಕಳ್ಳರೊಳಗೆ ಸುಳದೆ ಹಳ್ಳಕೊಳ್ಳ ಹಾಳಗ್ವಾಡಿ ಮಳಗಿಯೊಳು

ಉಳ್ಳಾಡಿ ಬ್ಯಾಸತ್ತು ಒಳ್ಳೇಕಿ ಆನಿಸುವ                                       ||೧||


ಆರು ಮೂರು ವರಗೇಡಿ ಪುರುಷರೋಳು

ದಾದಿತಪ್ಪಿ ನಿಂತೆ ದೂರಿಲೆ ಕಣ್ಣಿಟ್ಟವರನ್ನು ಬಿಡಲಿಲ್ಲ

ವಾರಿಗೆ ಹುಡುಗರೊಳು ಕ್ಯಾರಿ ಉಗುಳುತಲಿ                                ||೨||


ಪ್ಯಾಟಿ ಪಟ್ಟಣ ಹಳ್ಳಿ ದಿಲ್ಲಿಯೊಳು ಕೋಟಿ ಜನರ ಕೂಡಿದೆ

ದಾಟಿದೆ ಈ ಜಾರತನದಲ್ಲಿ ಜನ್ಮ

ಘಟದೋರಿತು ಶಿಶುನಾಳಧೀಶನೊಳಗೆ ನಾ                                ||೩||

                        * * *

-ಶಿಶುನಾಳ ಶರೀಫ


ಕೀಲಿಕರಣ: ಎಂ.ಎನ್.ಎಸ್. ರಾವ್

ಮೈ ಜಂಗಮ್ ಹೋಕರ ಗಲ್ಲಿ ಗಲ್ಲಿ ಫಿರಿಯಾ

ಮೈ ಜಂಗಮ್ ಹೋಕರ ಗಲ್ಲಿ ಗಲ್ಲಿ ಫಿರಿಯಾ ||ಪ||


ಅಂಗಬಹುತವು ಲಿಂಗ ಪಾವುಮೆ

ಕೋರಾಣ ಭಿಕ್ಷಾ ಬೋಲಿಯಾ                    ||೧||


ತೀಸಗಾಂಟಿಕೆ ಊಪರ್ ಜ್ಞಾನಕಿ ಜ್ಯೋಲಿ

ಸಂಗಸೇರಕು ಬೋಲಿಯಾ                       ||೨||


ದೇಖತಾ ಶಿಶುನಾಳಸ್ಥಾವರ ಮೇರಾ

ಜೀರಕೇರನ್ಕು ಬೋಲಿಯಾ                       ||೩||

          * * *
-ಶಿಶುನಾಳ ಶರೀಫ


ಕೀಲಿಕರಣ: ಎಂ.ಎನ್.ಎಸ್. ರಾವ್

ಕುರುಬರೋ ನಾವು ಕುರುಬರೋ

ಕುರುಬರೋ ನಾವು ಕುರುಬರೋ

ಏನು ಬಲ್ಲೇವರಿ ಆತ್ಮದ ಅನುಭವವೋ                    ||ಪ||


ಮುನ್ನೂರು ಅರವತ್ತು ಕುರಿ ಮೇಯಿಸಿಕೊಂಡು

ಸುಮ್ಮನೆ ಬರುವಂಥಾ                                         ||ಅ.ಪ.||


ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ

ನಮ್ಮ ಕುರಿಗಳಿಟ್ಟೇವ್ರಿ ಬಚ್ಚಿ

ಈಡೆಂಬ ಬಾಗಿಲ ಹಾಕೇವಿರಿ ಗಟ್ಟಿ

ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ                        ||೧||


ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ

ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ

ಗುರು ಹೇಳಿದ ವಾಖ್ಯವು ಹಾಲಿನ ಗಡಗಿ

ನಮ್ಮ ಕೈಯಲ್ಲಿ ಇರುವುದೇ ಮುಕ್ತಿ ಎಂಬ ಬಡಗಿ      ||೨||


ಸ್ಮಶಾನಭೂಮಿ ಇದು ಖರೆ

ನಾವು ಮೇಸಾಕ ಬಂದೇವರಿ ಕುರಿಯೇ

ತೋಳ ಮುರಿದು ಹತ್ತು ಕುರಿಯೇ

ನಾಗಲಿಂಗ ಅಜ್ಜ ಹೇಳಿದ ಪರಿಯೇ                       ||೩||


               * * *

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಕಪಟರೂಪವಲ್ಲ ಕೇಳಿದೋ

ಕಪಟರೂಪವಲ್ಲ ಕೇಳಿದೋ

ಪರಮಾತ್ಮನ ಬೋದವೌ                                        ||ಪ||


ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ          ||ಅ.ಪ.||


ಎಂದೆಂದಿಗೂ ಬಂದು ನಿಲ್ಲುವಿಯೋ

ಒಂದನಾದದೊಳಗೆ ಸುಳಿವುದೋ                             ||೧||


ಹೃದಯ ಹೃದಯ ಸದನ ಕಾಂಬುವುದೋ

ಸುಂದರ ಶಿಶುನಾಳಧೀಶನದೋ                              ||೨||

                  * * *


-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಗುಣವೇ ಇದು ಗುಣವೇ

ಗುಣವೇ ಇದು ಗುಣವೇ                ||ಪ ||


ಗುಣವಲ್ಲಾ ವಿಭೂತಿ

ಫಣಿಯೊಳಿಲ್ಲದ ಮೇಲೆ ಗುಣವೇ      ||ಅ.ಪ.||
 

ಸುರಮುನಿ ಹರಗಣ ವರನಂದನಾಥರು

ಧರಿಸಿದಾಕ್ಷಣದೊಳು ಮರಣವಿಜಯರಾಗಿ              ||೧||


ಎರಡೊಂದಕ್ಷರ ಪ್ರಣಮದಿ ಭಶಿತವು

ಶಿರದೊಳೂರಿದ ಮೇಲೆ ಹರಗಣ ಪದವೀಯುವುದು ||೨||


ಏ ಶಿವ ಶ್ರೀ ಅಂಗುಲ ಭಸಿತ ರೇಖೆಗಳಿಡಲು

ವಸಧಿಯೊಳು ಶಿಶುನಾಳಧೀಶನಗಲಿದ ಮೇಲೆ        ||೩||
                          * * *

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಕಷ್ಟವ ಮಾಡಿದಿಯಾ

ಕಷ್ಟವ ಮಾಡಿದೆಯಾ ಈ ಶರೀರದ
ಕಷ್ಟವ ಮಾಡಿದೆಯಾ                                  || ಪ. ||

ಕಷ್ಟವ ಮಾಡಿದಿ ಶ್ರೇಷ್ಠ ಮಹಿಮ ಋಷಿ
ಪಟ್ಟದ ಬ್ರಹ್ಮನ ವಿಷ್ಣು ರುದ್ರರ                       || ಅ .ಪ .||

ಶರೀರದ ಕಲಶದೊಳು ಜಲವ ಸುರಿಸಿ
ಹಿರದನೋ ರೋಮಗಳು ಸುರಚಿರದನ್ನವನೆರೆದು
ಪರಿಹರಿಸಲು ವರಕೆಲಸಕ್ಕೆ ತಾ ಕೆಲಶ್ಯಾನಾಗಿ  || ೧ ||

ಹೃದಯದ ಕಲಶದೊಳು ಮುದುಕನಾಗಿ
ಹದವಗೊಳಿಸಿದನು ಇರುವೆ ಶಿಶುನಾಳಧೀಶನ
ಕರುಣದಿ ಉಸುರುವೆ ಗುರುಗೋವಿಂದರಾಜನಾ || ೨ ||
               * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ರಾಜಪಲಂಗ ಪರ ಖೇಲೂಂಗಿ

ರಾಜಪಲಂಗ ಪರ ಖೇಲೂಂಗಿ
ಸಾಜನ ಸೋಬತಿ ಬೋಲೂಂಗಿ               ||ಪ||

ಮೈನೆ ಬೈಠಕರ ಮದನ ಪೀಠಪರ
ಸದನಮೆ ಸೋಬರಲೆಂಜ್ಯಾಲೂಂಗಿ          ||ಅ.ಪ.||

ಸಾತು ಮಾಲುಮೆ ಬೈಟಿಯೆ ಕೇಳಿ
ಜವತ ಆವತ ಖೇಲೂಂಗಿ
ಚುನು ಚುನು ಸಖಿಯಾ ಬೋಲೂಂಗಿ
ಸಾಜ ಪಲಂಗ ಪರ ಖೇಲೂಂಗಿ                ||೧||

ಸಬ್ಬ ಪರಿ ಹೈ ಯಿನಾವ ಹರಮಾ
ಅಬ್ಬರಕೇಸೇಕು ಬೋಲೂಂಗಿ
ಶಿಶುನಾಳ ಬೇಸಮೆ ಖೇಲೂಂಗಿ
ತಾನೇ ಜಗತ್ಪರ ಲೋಲೂಂಗಿ                ||೨||
               * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಆನಂದವೆಂಬೋ ಮಂಟಪದೊಳ್

ಆನಂದವೆಂಬೋ ಮಂಟಪದೊಳ್
ವಿಲಾಸ ಮಾಡುನು ಬಾರೆ                                          ||ಪ||

ಹೇವೋರಿ ತೂರ್ಯಾತೀತದಿ ಬೆಂದು ಮನ-
ಹರಿದು ಸಹಜಾನಂದದಿ ಹೊಳೆದು ನೀನಲಿದ
ಸರಸದಿ ಸುಮ್ಮನೆ ಸುಂದರ ಸ್ಥಳದೊಳ್ ವಿಲಾಸ              ||೧||

ಮೂರೆರಡು ಕ್ಲೇಶವ ಕಳೆದು ಏಳ್‍ಮಡಿದು
ಈರೇಳು ಮೀರಿದ ಗುಡಿಪುರ ಶಿಶುನಾಳೇಶನೊಳು ವಿಲಾಸ ||೨||
               * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್