೧೫-೮-೫೦

- ನರಸಿಂಹಸ್ವಾಮಿ ಕೆ ಎಸ್

ಈ ಧ್ವನಿಯೆ ಬೇರೆ; ಈ ನೋಟ ಚಂದ್ರನ ತೋಟ;
ಇದರ ಕಣಿ ಬೇರೆ; ಇದು ತಾನೊಂದೆ ಸಾರುತಿದೆ
ಯುದ್ಧ ಕೂಡದೆಂದು. ಅತ್ತ ಅಸ್ತ್ರದ ನೋಟ
ಅರ್ಧ ಭೂಮಿಗೆ ಸದಾ ಸರಿಯೆಂದು ತೋರುತಿದೆ.
ಕೊಲೆಮನೆ; ಕಡುಗತ್ತಿ, ಕುರಿಮರಿಯ ಕುಣಿದಾಟ-
ಬೇಕು ಮಾನವನ ದಾನವತೆಗೀ ರಾತ್ರಿಯೂಟ!

ಈ ಧ್ವನಿಯೆ ಬೇರೆ! ಬಾಂಬಿಗೆ ಹೆದರಲಿಲ್ಲ ಇದು;
ಕತ್ತಿಯಲಿ ಕೆತ್ತಿದ ಸ್ವತಂತ್ರತೆಯನರಿಯದಿದು;
ನೆತ್ತರಲಿ ಬರೆದ ನಾಗರಿಕೆತೆಯ ಕುರಿಯದಿದು;
ಶಸ್ತ್ರವನು ನ೦ಬಿ ಶಾ೦ತಿಯ ಸೋಗ ಹಾಡದಿದು.
ಈ ನಾಡು ಬೇರೆ, ಇದು ನಡೆವ ದಾರಿಯೆ ಬೇರೆ;
ಇವರ ನಡೆ, ನೋಟ, ನಂಬಿಕೆ, ಎಲ್ಲ ಬೇರೆ ಬೇರೆ!

‘ಇಂಡಿಯಾ’ ಇಂಪಾದ ಹೆಸರು. ಏಷ್ಯದ ತಾಯಿ
ಬೆಟ್ಟದಲಿ ಹಡೆದು, ನದಿಯಲಿ ತೊಳೆದು, ನಾಕದಲಿ
ತೂಗಿ, ನೆತ್ತಿಗೆ ತಾರೆಗಳನೊತ್ತಿ, ಮುಗಿಲಲಿ ಸುತ್ತಿ,
ಚಳಿಗಾಳಿ ಉರಿಗಾಳಿ ಬೀಸಿ, ಭುಜನನು ತಟ್ಟಿ
ಜಗಜಟ್ಟಿಯಾಗಿಸಿದ ಹಿರಿಯ ಮಗಳೀ ನಾಡು !-
ಆ ತಪೋವನಗಳಲಿ ನರ್ತಿಸುನ ನವಿಲ ನೋಡು.

ದೇವದೂತರು ದಿಕ್ಕ ತೋರಿದರು; ಶಾ೦ತಿಯಲಿ
ಧನ್ಯರ್ಷಿಗಳು ಕಡೆದ ಬ್ರಹ್ಮಜಿಜ್ಞಾಸೆಯಲಿ
ಧವಳಗಿರಿಯಂತೆ ಬೆಳಕಾದ ಸಿರಿಮೊಗವೆತ್ತಿ
ಏಷ್ಯದ ಹಿರಿಮಗಳು, ಭರತನ ಸಾಕು-ತಾಯಿ
ಸಾರುತಿಹಳಿಂದು ಎತ್ತಿದ ಕತ್ತಿಗಳ ತಡೆದು:
ಶಾಂತಿ ಮೂಡದು ರಕ್ತಪಾತದಲಿ. ಶಾಂತಿರಸ್ತು.
     *****

ಆಶಯ

- ವಿದ್ವಾನ್ ಐ ಮಾ ಮುತ್ತಣ್ಣ

ಇಹದ ಸುಖವನು ಬಯಸಿ, ಆತ್ಮಯೋಗದ ಬಲವು
ತನ್ನದೆಂಬುದ ನೆಚ್ಚಿ, ಮುಂಗುರಿಯ ದೃಷ್ಠಿಯನು
ನಂಬಿಕೆಯ ನೇತೃದಲಿ ನೋಡುತಲು, ಜೀವನದ
ಧ್ಯೇಯವನು ದಿಗ್ಭ್ರಾಂತ ತರಂಗದೊಳಾಡಿಸುತ,
ಕೋಟಿಮಾನವರಲ್ಲಿ ತನ್ನ ಪ್ರತಿಭೆಯ ಸಾಕ್ಷ್ಯ
ಸಾರುತಲಿ ಪಾಡುತಲಿ, ಮಾನವನು ತಾನ್ಪಡೆದ
ಜನ್ಮಸಾರ್ಥಕವೆಂದು ಜಡನಂತೆ ಮರುಳಾಗಿ
ವಿಶ್ವನಿಯಮದ ಎದುರು ಪಕ್ಕಮಿಲ್ಲದ ಪಾತೆ-
ಯಂತೆ ಸೇರ್ವನು ಸೋಲ ಸುರಂಗವನ್ನು!

ಕಾಲಪುರುಷನು ತಾಳ್ದ ಅನುಭವವೆ ಅದು ಚಿತ್ರ!
ಎಲ್ಲಿಂದೆಲಿಗೆ ಹಾಯ್ದು ಎಂತೆಂಥಾ ಭೀಕರದ
ನೋಟವನು, ಜನತೆಗಳ ಭಾಗ್ಯ ದೌರ್ಭಾಗ್ಯಗಳ
ಜೀವನವ ನೋಡಿ ಕನಿಕರಗೊಂಡು, ಮನಸಿನಾ
ಭಿತ್ತಿಯಲಿ ಆ ಹಾಳೂಬಾಳಿನಾ ಬೇಗುದಿಯ
ಚಿತ್ರವನು, ಆ ಕಾಲ ಮಹಿಮಾ ಮಹತ್ವವನು
ಒಂದಾಗಿ, ಗುರುಜನರ ನೃಪಜನದ ತತ್ವದಿಂ
ಆಳ್ಕೆಯಿಂ ಬಗೆ ಬಗೆಯ ಸೋಗನ್ನು ಜಗಪಡೆದ
ತೆರವನ್ನು ನೋಡುತೋಡುತ ಸಾರ್ವುದಾಹಾ!

ಎನ್ನೆದೆನ್ನದುವೆಂದು ಔತ್ಕೃಷ್ಟ್ಯವಾದದಲಿ,
ಒಲ್ಮೆ ನಲ್ಮೆಯ ಸುಖನು ಎಂಬ ವಿಚಾರದಲಿ,
ರಸಿಕ ಜೀವನ ತಾಳ್ವ ಮೋಹ ಸಂಘಟನೆಯಲಿ,
ಸಮರನಾದದಿ ಏಳ್ವ ಜನದ ತಳಮಳದಲ್ಲಿ,
ವೈರಾಗ್ಯ ಜೀವನವು ಪಡೆವ ಸಾರ್ಥಕದಲ್ಲಿ,
ಮನಕೆ ತೋರುವವೊಂದು ವಿಸ್ಮಯಾಂತಕವಾದ-
ಧ್ವನಿಯ ಲೋಕಕೆ ಸಾರ್ವ ಮಂಗಲಾಮಂಗಲವೊ
ಹೇಳ ಬಲ್ಲವರಾರು?  ಹೃದಯಾದಾವೇಶವನು
ಅನುಭವವೆ ಒಪ್ಪಿಸುವುದು ಕಾಣ್ಕೆಯಾಗಿ!

ಲೇಖನಿಯನುರುಳಿಸೆನು ಕವಿಯೆಂಬ ಹೆಮ್ಮೆಯಲಿ,
ಪಾಡ್ದನಿಯನೊಪ್ಪಿಸೆನು ಗಮಕಿಯೆಂಬರ್ಥದಲಿ,
ಜಗದಿರವ ಚಿತ್ರಿಸೆನು ಚಿತ್ರಿಕನ ರೀತಿಯಲಿ,
ತತ್ವಗಳ ನೊರೆಯೆನಾ ತಾತ್ವಿಕನ ಸೂಕ್ತಿಯಲಿ,
ಎಮ್ಮೆ ಜೀವದ ಛಾಯೆ ಪರರ ಬಾಳಿನ ಮಾಯೆ
ಹಾಸುಹೊಕ್ಕಾಗಿ ತರಂಗಗಳ ತಲ್ಪದಲಿ
ಬಿದ್ದುರುಳುವುದ ಕಂಡು ಮನವಾರೆ ಸೋಲುತಲಿ
ನೀಳ್ಗತೆಯ ಕಿರಿದಾಗಿ ವಿಷಯಗಳ ಲಘುವಾಗಿ
ಅಂಧ ಸಾಧಕನಂತೊರೆಯಲಿಳಿದೆನೊರ್ವ!

ಬ್ರಹ್ಮಾಂಡ ನೆಲಗಟ್ಟು ಪ್ರೇಮದಾಧಾರದಲಿ
ವಿಶ್ವನಿಯಮದ ಬಲವು ಪ್ರೇಮಸುಧೆ ಧಾರೆಯಲಿ,
ಮಾನವನ ವ್ಯವಹಾರ ಪ್ರೇಮ ಪೋಷಾಕಿನಲಿ,
ಜೀವಿಗಳ ಸ್ವಾತಂತ್ರ್‍ಯ ಪ್ರೇಮಪ್ರಲಾಪದಲಿ-
ಅಡಗಿರಲು, ಈರೇಳು ಲೋಕದಾ ಘಟನೆಯಲಿ
ಪ್ರೇಮಜಾಲದಿ ಏಳ್ವ ಪ್ರಣಯಧೂಮದ ರೂಪ
ಅದೆಂತು ವೈಚಿತ್ರ್‍ಯ!  ಎಂತು ಮನೋಹರವು!!
ಎನ್ನ ಸೊಲ್ಲನು ಇಲ್ಲಿ ತದ್ವಿಶೇಷದಿ ಚೆಲ್ಲಿ
ನೋಟಕರ ಹಾಯೆಣಿಸಲಸದಳವೊ!

ಮನಸಿಜನ ಮಾಯೆಯಲಿ ಜನದಲಿಹ ಮೋಹದಲಿ
ಕವಿಪಾಕವೊಸರುವುದು ಆತ್ಮರಸಬಟ್ಟಲಿಂ!
ಸುಖದ ದುಃಖದ ಬೇರೆ ಪಾಲು ಎರಡನು ಮಾಡಿ
ಸೋಗಿನನುಭವದಲ್ಲಿ ಸವಿದು ಸವಿಕಹಿಯನ್ನು
ನೋಡಿ ಲೋಕದ ಬಗೆಯ ಚಿತ್ರಿಸಿಡುತಲಿ ವಿಧವ-
ಹಾಹಾಕಾರದ ಕಾಣ್ಕೆ ಗುಣದ ದೋಷದ ಪೂಣ್ಕೆ
ಒಂದನೊಂದರಲಿಟ್ಟು, ತನ್ನ ಇರವನು ತನ್ನ
ಬುದ್ಧಿಬಲದಿಂ ಬೆಳಗಿ ಆದರ್ಶ ಜೀವನಕೆ
ಆಧಾರನಾಗಿರಲು ಸಲ್ವುದೆನಿತೊ!
    *****

ಕೊಡಗಿನ ಕರೆ

- ಅನಂತರನಾರಾಯಣ ಎಸ್

ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ
ಮೈಸೂರ ಕಂಕುಳಲಿ ಕೊಡಗ ನಾಡು
ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು
ತೊರೆಯನೀರಿನ ಗೀತ ಸೊಗದ ಬೀಡು!

ಕಾವೇರಿ ಬರುತಿಹಳು ಕೊಡಗಿನಲಿ ಜನಿಸುತ್ತ
ಅಂಕು ಡೊಂಕಿನ ಕೊಂಕು ಬಿಂಕದಿಂದ,
ಸಂದೇಶ ತರುತಿಹಳು ಕೊಡಗ ನಾಡೊಳಗಿಂದ
ಜಗಕೆಲ್ಲ-ಬಂದುದನು ನೋಡಿರೆನುತ!

ಕೊಡಗಸೀಮೆಯ ಬೆಡಗು ಮಲೆಗಳಾ ಮೌನವನು
ಬಾಲೆಯರ ಬಿನ್ನಾಣ, ಬಿಂಕದಾಟ,
ರಮಣಿಯರ ಭೀರುತನ, ಎಲ್ಲವನು ಬಿಂಬಿಸುತ
ಕೊಡಗ ಪುತ್ರಿಯು ಭರದಿ ಹರಿಯುತಿಹಳು!

ಕೊಡಗ ಕಿತ್ತಳೆಹಣ್ಣು ನೋಡಿ ನೆನಪಾಯ್ತೆನಗೆ
ಮಡಿಕೇರಿ ಬಳಿಯಿರುವ ಕೊಡಗ ಕುವರಿ,
-ನೋಡಿದುದು ಒಂದೆ ಚಣ, ಮೂಡಿದಳು ಮನದಲ್ಲಿ
ಮರೆಯಲಾರೆನು ಅವಳ ನಿಲುವ ಚೆಲುವ!

ಬೆಳ್ಳಿಯಂಚಿನ ಕಪ್ಪುಬಣ್ಣ ಸೀರೆಯನುಟ್ಟು
ಸಡಗರದಿ ಒಡನಾಡಿಯೊಡಗೂಡುತ
ಮುಗಿಲ ಬಣ್ಣದ ರವಿಕೆ ತೊಟ್ಟಿಹಳು, ಮಲ್ಲಿಗೆಯ
ಮುಡಿದಿಹಳು, ಜೋಲುತಿದೆ ಜಡೆಯು ಕೆಳಗೆ!

ಕಳಿತ ಕಿತ್ತಳೆ ವರ್ಣ ಮಿದುವಾದ ಕೆನ್ನೆಗಳು,
ತೆಳೆಯಂತೆ ರಸ ತುಂಬಿದಾತುಟಿಗಳು,
ನಿಲುವಿನಲಿ ವೈಯಾರ, ನೋಟದಲಿ ದಿಟ್ಟತನ
ಬಿನ್ನಾಣ ಬೆಡಗುಗಳ ಹಾಸಮಯಿಯು!

ನೋಡಿದುದು ಒಂದೆ ಚಣ ಮೂಡಿದಳು ಮನದಲ್ಲಿ
ನೋಡಬೇಕೆಂಬುವಾ ಬಯಕೆ ಬಹಳ!
ಕನಸಿನಲಿ ಕುಣಿಯುತ್ತ ಕಲೆಯುತ್ತ ಕಾಣುವುದು
ಅವಳ ರೂಪವು-ಅದುವೆ ಕೊಡಗ ಕರೆಯು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಜ್ಞಾನದೇಗುಲ

-ರವಿ ಕೋಟಾರಗಸ್ತಿ

ಬಾಳ ಕನಸು ಕಮರಿ
ದೇಹ ಪರರಿಗೆ ಮಾರಿ
ಹರ್ಷವೆಂಬ ಕರ್ಕಶದಲಿ ನಾರಿ
ಸುಡುತಿಹಳು ಬೆಂಕಿಯಲಿ ಮೈಸಿರಿ

ಯೌವನದ ಕನಸಲಿ
ಆಚಾರ-ರೂಢಿಗಳ ಸವಾರಿಯಲಿ
ಪುರುಷನ ಚಪಲತೆಯಲಿ
ಸಿಲುಕಿ ಹೆಣ್ಣು ಕೊರಗುತಿಹಳು

ಸಮಾಜದ ಕಣ್ಣು ತೆರೆಸಿ
ಕವಿದಿಹ ಕತ್ತಲೆಯ ದೂಡಿ
ಬೆಳಕು ಬೀರುತ...
ಮೌಢ್ಯತೆಯ ಬಿಗಿ ಸಡಿಲಿಸುವ
ನೊಂದುಬಳಲುವ ವನಿತೆಯರಿಗೆ
ಆಸರೆಯ ದೇಗುಲ ‘ವಿಮೋಚನಾ’

ಭೂಮಾತೆಯ ತೂಕದ ಹೆಣ್ಣಿನ
ದಾಸ್ಯ-ಭೋಗದ ಸಂಕೇತವ
ಅಳಿಸುತಲಿ ನಿಸ್ವಾರ್ಥದ ಸಂಗಾತಿ
ದಲಿತ ಶೋಷಿತ ಮಕ್ಕಳ
ನೋವಿನಲಿ ಬೆಂದು ಬಾಡುತಿಹ
ಸ್ತ್ರೀಕುಲಕ್ಕೆ ಜ್ಞಾನ ಮಂದಿರ
"ವಿಮೋಚನೆ" ಜ್ಞಾನ ದೇಗುಲ

         ***

ಕೀಲಿಕರಣ: ಕಿಶೋರ್‍ ಚಂದ್ರ

೨೬-೧-೫೦

- ನರಸಿಂಹಸ್ವಾಮಿ ಕೆ ಎಸ್

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು
ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ,
ಮರಕತ ದ್ವೀಪದಮನೆಗೆ. ದಣಿಗೂ ದಣಿವು!
ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ
ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ!

ತಲೆಯ ಮೇಲಿನ ಹೆಜ್ಜೆ. -ಈ ಮಾತು ಮುಗಿಯಿತು;
‘ಹೆಜ್ಜೆಯೇ ಅಲ್ಲ ಮಕುಟದ ಮುತ್ತು ಅದು,
ಇರಲಿ ರಾಜತ್ವ ನೆಪಮಾತ್ರ’ ಎನುವಂತಿಲ್ಲ,-
ಮಕುಟ ರಹಿತ ಸಾಮ್ರಾಜ್ಞಿ ಭಾರತಲಕ್ಷ್ಮಿ,
ರಾಜತ್ವ ರಹಿತ ರಾಜ್ಯಾಂಗ ಮನೋಮಂದಿರೆ.

ನೆನೆ ನೆನೆ ಓ ಮನನೆ ನಿನ್ನ ಎದೆಗತ್ತಲೆಯೆ
ಬಲಿಗೊಟ್ಟ ತಂದೆ ಬಾಳಿನ ಚಂದ್ರಬಿಂಬವನು.
ಆ ನೋಟ ನಿನ್ನ ಕಣ್ಣಾಗಿ, ಅಮೃತವೆ ತುಂಬಿ,
ಗಾಂಧಿಜಿಯ ಮಂದಹಾಸವೆ ಗುರುವಾಗಲಿ !

ಬಾಂಬಿನ ಅಲಂಕಾರ ನಿನಗಿಲ್ಲ, ತಾಯೆ,
ಶಾಂತಿ ಪ್ರಿಯೆ, ಚಂದ್ರಕಾಂತಿ ಪ್ರಿಯೆ,
ಗಂಗಾ ಯಮುನಾ ನದನದೀ ಸ್ನಾತೆ,
ಉಪನಿಷದ್ವಿಪಿನ ಹೋಮಾಗ್ನಿ ಸಂಜಾತೆ !

ಚಳಿಗಾಲ ಬಂದಿರಲು, ಮುದುಕಿ ಮುಮ್ಮೂಲೆಯಲಿ
ಒಂದು ಕಿಡಿ ಕೆಂಡದೆದುರಿನಲಿ ಮೈ ಹಿಡಿಯಾಗಿ
ಬೆದರಿ ಕುಳಿತಂತೆ, ಚಿಂತೆಗೆ ಆತ್ಮನನು ತೆತ್ತು
ಸಂಗ್ರಾಮ ಭೀತಿಯಲಿ ಸೋತು ಸೊರಗಿ ಜಗತ್ತು
ದೂರ ಸಭೆಗಳಲಿ ಮುಗಿಯುವ ಮುನ್ನ ಎಚ್ಚರಿಸು.
ನಿನ್ನ ಗಂಭೀರವಾಣಿಯ ಪಾರಿವಾಳಗಳ
ಬೆಳ್ಗರಿಯ ಬೀಸಿ ಶಾಂತಿಯ ಶಿಶುವನುಪಚರಿಸು;
ಅದು ಬೆಳೆದು ಲೋಕನಾಯಕನಾಗಿ ರಾರಾಜಿಸಲಿ!

ಜಗಜ್ಜನನಿಯಲ್ಲ ನೀನು; ಜಗನ್ಮೋಹಿನಿಯೂ ಅಲ್ಲ;
ಜಗದ್ಧಾತ್ರಿಯಾಗಿರು ನೀನು; ಅಹಿಂಸಾವತ್ಸಲೆ,
ನಿನ್ನ ಶಾಸನವಿದು (ನಡೆ ನಗಾರಿಯ ಮೇಲೆ;
ಈ ಧರ್ಮ ನಿನ್ನ ಬಾವುಟದ ಇನ್ನೂ ಮೇಲೆ):

"ವಯಂ ಪುನಃ ಏವಂ ಆಚಕ್ಷಾಮಹೇ,
ಏನಂ ಭಾಷಾಮಹೇ, ಏವಂ ಪ್ರರೂಯಾಮಃ,
ಏವಂ ಪ್ರಜ್ಞಾಪಯಾಮಃ,-
ಸರ್ವೇ ಪ್ರಾಣಾಃ, ಸರ್ವೇ ಭೂತಾಃ, ಸರ್ವೇ ಜೀವಾಃ,
ಸರ್ವೇ ಸತ್ವಾಃ,
ನ ಹಂತಾವ್ಯಾಃ
ನ ಆಜ್ಞಾಪರಿಯಿತವ್ಯಾಃ
ನ ಪರಿಗ್ರಹೀತವ್ಯಾಃ
ನ ಪರಿತಾಪಯಿತವ್ಯಾಃ
ನ ಉಪದ್ರೋತವ್ಯಾಃ
  ಆರ್ಯವಚನಮೇತತ್
    ಓಂ ತತ್‍ಸತ್."
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಅವಳು ಯಾರು?

- ವಿದ್ವಾನ್ ಐ ಮಾ ಮುತ್ತಣ್ಣ

ಹಸುರು ಸೀರೆಯನುಟ್ಟು ರಂಗು ಬಳೆಗಳ ತೊಟ್ಟು
ತನ್ನ ಗೆಳತಿಯರೊಡನೆ ನಡೆದವಳು ಯಾರು?
ಅರಳಿಯಾ ಮರದಡೀ ಹೂಬುಟ್ಟಿ ಕೆಳಗಿರಿಸಿ
ಚೆಂಡು ಹೂಗಳ ಕೋದು ಹಾಡಿದಳು-ಯಾರು?

ಹಣೆಗೆ ತಿಲಕವನಚ್ಚಿ ಮುಡಿಗೆ ಹೂಗಳ ಮುಚ್ಚಿ
ಮೆಲ್ಲಡಿಯನಿಡುತಿಡುತ ಪೋದವಳು ಯಾರು?
ಜಾರುತಿಹ ಸೆರಗನ್ನು ಎದೆಯಾರೆ ನಿಲ್ಲಿಸುತ
ತನ್ನನ್ನು ತಾನಾಗಿ ನೋಡುವಳು-ಯಾರು?

ಕಡೆಗಣ್ಣು ಉರುಳಿಸುತ ತನುಲತೆಯ ಕೊಂಕಿಸುತ
ನಸುನಾಚುಗೆಯ ತೋರಿ ನಡೆದವಳು ಯಾರು?
ಕೆರೆ ಏರಿ ಕಟ್ಟೆಯಲಿ ಕಾಲ್ತೊಳೆದು ಜಾರಲು
ಬೆರಗಾಗಿ ಆಚೀಚೆ ನೋಡಿದಳು-ಯಾರು?

ಮಣಿಸಾಲು ಕೆಂಪೋಲೆ ಜುಂಜುಮುಕಿ ಕಿವಿಯೋಲೆ
ಮುಂಗುರಿಯ ಮೂಗುತ್ತಿ ಹಾಕಿದಳು-ಯಾರು?
ಕಾವೇರಿ ಜಾತ್ರೆಯಲಿ ಜವ್ವನಿಗ ತಂಡದಲಿ
ತಾನೊಲಿವನಾರೆಂದು ಹುಡುಕಿದಳು-ಯಾರು?

ಫಣಿವೇಣಿ ಆಚೀಚೆ ಒಂಟಿಸರ ಕೊರಳಾಚೆ
ಕಾಲ್ಬಳೆ ಕಿರುಗೆಜ್ಜೆ ಧರಿಸಿದಳು ಯಾರು?
ಕೇರಿ ಹೆಂಗಳ ಸಾಲು ಸರಸವಾಡುತ ತಾನು
ಊರ ಜಾತ್ರೆಗೆ ಅಂದು ಪೋದವಳು ಯಾರು?

ದನಮೇವ ಬಯಲಿನಲಿ ತನ್ನ ತಾಳದ ಹಾಡ
ತೂಗುಯ್ಯಾಲೆ ಹಾಡಿ, ಹಾಡಿದಳು-ಯಾರು?
ಕೆಂಬಕ್ಕಿ ಶುಕ ಪಿಕ ಮಲ್ಲಳಿಯ ಹಾಡುಗಳ
ಕೇಳುತಲೆ ತಾನಾಗಿ ನಲಿದವಳು ಯಾರು?

ಕೊಡಪಾನ ನೀರೊಡನೆ ಘುಳುಗುಳು ಮಾತಾಡಿ
ಮೆಟ್ಟಲಲಿ ರಂಗೋಲಿ ಬಿಡಿಸಿದಳು-ಯಾರು?
ಹಸುರಾಂತ ವನಶೋಭೆ ತಾನುಟ್ಟ ಹಸುರುಡಿಗೆ
ಒಂದಾಗಲಿಲ್ಲೆಂದು ಅಂದವಳು ಯಾರು?

ಪೂರ್ಣಚಂದ್ರನ ಚೆಲುವು ಕಂಡು ತನ್ನಯ ರೂಪು
ಅಂತಾಗಲಿಲ್ಲೆಂದು ಗೊಣಗಿದಳು-ಯಾರು?
ತನ್ನ ಅಪ್ಪನ ಮಾಂವ ಎಂದು ತಾ ಕರೆವವನು
ಯಾರಿರುವನೋ ಎಂದು ನೆನೆಸಿದಳು ಯಾರು?
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೭

ವ್ಯಾಪಾರವ ಬಿಟ್ಟು,
ತಾಪತ್ರಯವನೆ ಹಿಂಗಿ.
ಲೋಕದ ಹಂಗನೆ ಹರಿದು,
ಬೇಕು ಬೇಡೆಂಬುದನೆ ನೂಕಿ,
ತಾ ಸುವಿವೇಕಿಯಾದಲ್ಲದೆ,
ಜ್ಯೋತಿಯ ಬೆಳಗ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
    *****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

- ಅನಂತರನಾರಾಯಣ ಎಸ್

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು?
ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು
ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು
ಕಳೆದ ಕಾಲದಲಳಿದ ಕನಸುಗಳು ಹೊರಬಂದು
ದುಗುಡ ಹರಡುತಲಿಹವು.  ದಡದ ಮೇಲಿನ ಮರಳು
ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು
ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,
ಬಾರೆಂದು ಕರೆಯುತಿದೆ ನಿನಗಾಗಿ ಕಾತರದಿ!

ಹೊಸನೆಲೆಗಳರಸುತಲಿ ಹಳೆಯ ಪಳಕೆಯ ಹರಿದು,
ಒಂದು ಚಣ ಒಂದೆಡೆಗೆ ನಿಲ್ಲದೆಯೆ ಜಾರುತಿಹ
ಮುಗಿಲಮೋಡದ ರೀತಿ ಮೆಲ್ಲಮೆಲ್ಲನೆ ಸರಿದು
ನುಸುಳಿದಳು ನನ್ನಿಂದ-ಅರಸುತ್ತ ಹೊಸಜನರ!
ಹೃದಯಶಾಂತಿಯೆ ಆಕೆ ಎನುವ ಭ್ರಾಂತಿಯಲಾನು
ಹೆಣ್ಣಹುಡುಕುತ ಹೋಗಿ ಮುಳ್ಳ ಮುತ್ತಿಕ್ಕಿದೆನು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಎನ್. ಎಸ್. ಎಫ್

- ರವಿ ಕೋಟಾರಗಸ್ತಿ

ನಾಗಮಣಿಯಾಗಿ ಬೀರುತ
ದಿವ್ಯ ಶಕ್ತಿಯನು,
ಯಕ್ಷಪ್ರಶ್ನೆಯಾಗಿ ಕೇಳಲಿ
ಇತಿಹಾಸ ದೌರ್ಜನ್ಯವನು,
ಕಡಲಭಾರ್ಗವನಾಗಿ ಸದೆ ಬಡಿಯಲಿ
ಶತ-ಶತಮಾನಗಳ ಶೋಷಣೆಯನು

ಸ್ಟುಪಿಡ್ ರಾಜಕೀಯ ಮೆಟ್ಟಿ ನಿಲ್ಲುತ
ಬಾಂಧವ್ಯದ ಬಾಹುಗಳ ಚಾಚುತಲಿ
ಢಂ ಢಂಮಾರ ಡಮರು ಬಾರಿಸಲಿ
ಸ್ನೇಹ ಸೌಹಾರ್ದತೆ ಬೀರುತ
ಟಕ್-ಟಕ್ ಎನ್ನುವ ಹೃದಯ ಭಾರ
ಹಗುರಗೊಳಿಸುತ ಶಮನಗೊಳಿಸಲಿ

ಪೆಟ್ಟು ಹಾಕುತಿಹದು ಜಾಗೃತ ಗಂಟೆಗೆ
ಢಣ-ಢಣ ನಾದ ಮೊಳಗಿಸುತ
ಪ್ರೀತಿ ಸ್ನೇಹ ಬೆಸೆಯುತಲಿ
ರೇಖೆ ಮೂಡಿಸಲಿ ಸತೀಶ ಸಹೋದರರು
ಶಕ್ತಿ-ಯುಕ್ತಿ ನೊಂದವರ ಬಾಳಿಗೆ.
ಶಂಖನಾದ ಗಗನದುಂಬಿಯಾಗುತ
ವಿಜಯ ಕಹಳೆ ಝೇಂಕರಿಸಲಿ
ನರ ನಾಡಿಗಳಲಿ ತುಂಬಿ ಹರಿಸಲಿ
ಅನೇಕತೆಯಲಿ ಏಕತೆಯು

ಕಲಿಯಿರಿ ಕಲಿಸಿರಿ
ವೇದ ಘೋಷದಡಿಯಲಿ
ಶಿಕ್ಷಣ ಸಂಘಟನೆ ಹೋರಾಟ
ಮಂತ್ರ ಮನನದಿ ಶಕ್ತಿ ತುಂಬುತಿಹುದು
ಶೋಷಿತ ನೊಂದವರ ಕುಡಿಗಳರಳಿಸುವ
ಹೆಮ್ಮೆಯ ಎನ್. ಎಸ್. ಎಫ್. ಸಂಸ್ಥೆಯು

         ***

ಕೀಲಿಕರಣ: ಕಿಶೋರ್‍ ಚಂದ್ರ

ಮನಕೆ ಕನ್ನಡಿಯಾದರೆ......

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಪರಿಪೂರ್ಣ ಕವಿತೆಯೊಂದರ ನಿಜವಾದ ಸಾರ್ಥಕತೆ ಇರುವುದೆಲ್ಲಿ? ವಿಮರ್ಶಕನ ಟೀಕೆಯಲ್ಲೋ? ಸಹೃದಯನ ಮೆಚ್ಚುಗೆಯಲ್ಲೋ? ಕವಿಯ ಆತ್ಮ ಸಂತೃಪ್ತಿಯಲ್ಲೋ?  ಎಲ್ಲಾ ಒಂದಕ್ಕಿಂತಾ ಒಂದು ಮಹತ್ವವಾದದ್ದೇ ! ಉತ್ತಮ ಕವನವೊಂದಕ್ಕೆ ವಿಮರ್ಶಕನ ಟೀಕೆಯೂ ಬೇಕು ಸಹೃದಯನ ಮೆಚ್ಚುಗೆಯೂ ಬೇಕು. ಕವಿ ಮನಕ್ಕೆ ಸಂತೃಪ್ತಿಯನ್ನೂ ನೀಡಬೇಕು. ಆದರೆ ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಏನನ್ನುತ್ತಾರೆ ಗೊತ್ತೆ ?

 

ನನ್ನ ಹಾಡಿಗೆ ನಲಿವ ಜನರೇ
ನೀವೆ ನನ್ನ ಗುರಿ
ನಿಮ್ಮ ಚಿತ್ತವ ಕದಿಯುವ
ಮಾತೆ ನನ್ನ ಸಿರಿ
ಇದನು ಒಲ್ಲದ ಕೀಳು ಟೀಕೆಯ
ಪರಿವೆ ನನಗಿಲ್ಲ
ಮನಕೆ ಕನ್ನಡಿಯಾದರೆ
ನನಗೆ ಅದೆ ಎಲ್ಲಾ!

ಇಲ್ಲಿ ಕವಿ ಸಹೃದಯನ ಮೆಚ್ಚುಗೆಗೇ ಪ್ರಥಮ ಸ್ಥಾನ ನೀಡುತ್ತಾರೆ! ವಿಮರ್ಶಕನ ಮಾನದಂಡ ಹೇಗೂ ಇರಬಹುದು, ಅವನು ಕವನ ಹುಟ್ಟುವಾಗ ಇಲ್ಲದಿದ್ದ ಯಾವುದೋ ಸಿದ್ಧಾಂತ, ತರ್ಕಗಳ ಆಧಾರವನ್ನು ಇರಿಸಿ ಕವನವನ್ನು ಮೌಲ್ಯಮಾಪನ ಮಾಡುತ್ತಾನೆ.  ಆ ಚೌಕಟ್ಟಿಗೆ ಕವನ ಹೊಂದಿಕೊಳ್ಳದಿದ್ದಾಗ ನಿಜವಾದ ವಿಮರ್ಶೆ ಬರದೇ ಹೋಗಬಹುದು. ಆದರೆ ಸಹೃದಯ ಹಾಗಲ್ಲ. ಅವನಿಗೆ ರಸಾನುಭೂತಿಯೊಂದೇ ಉದ್ದೇಶ. ಅವನು ತನಗೆ ಸಂತೋಷ ಕೊಡುವ ಯಾವ ಕವನವನ್ನೇ ಆದರೂ ಮನಃಪೂರ್ತಿ ಆಸ್ವಾದಿಸುತ್ತಾನೆ. ಅವನ ಹತ್ತಿರ ತಕ್ಕಡಿಯಿಲ್ಲ! ಮನಸ್ಸಿದೆ! ಆದರೆ ಇದಕ್ಕೂ ಮುಖ್ಯವಾದುದು ಕವಿಯ ಆತ್ಮತೃಪ್ತಿ. ಕವನ ಹೊರಹೊಮ್ಮುವುದು ಲೆಕ್ಕಾಚಾರದಿಂದಲ್ಲ.  ಅದಕ್ಕೆ ಅಳತೆಗಳ ಪರಿಮಿತಿಯೂ ಇರುವುದಿಲ್ಲ. ಕವನ ಮನಸ್ಸಿನ ಅಂತರಾಳದ ವ್ಯವಹಾರ!  ಮನಸ್ಸಿನ ತುಮುಲ, ಒತ್ತಡ, ಭಾವಗಳ ಕನ್ನಡಿಯೇ ಕವನ. ಉಕ್ಕುವ ಭಾವಗಳು ಸಮರ್ಥವಾದ ಭಾಷೆಯ ರೂಪ ತೊಟ್ಟು ಹೊರಹೊಮ್ಮಿದಾಗ ಕವಿ ಅನುಭವಿಸುವ ಧನ್ಯತೆಯ ಭಾವವೇ ಬಹುಶಃ ಎಲ್ಲಕ್ಕಿಂತಾ ಶ್ರೇಷ್ಟವಾದುದು!

ಅದಕ್ಕೆಂದೇ ಕವಿ ಶೆಲ್ಲಿ ಹೇಳುತ್ತಾನೆ. ‘A Poet is a nightingale who sits in darkness and sings to cheer its own solitude with sweet sounds' ಒಬ್ಬ ಕವಿ ಕೋಗಿಲೆಯಂತೆ, ಅವನು ಕತ್ತಲಲ್ಲಿ ಕುಳಿತು ತನ್ನ ಅನಾಥ ಒಂಟಿತನ ನೀಗಲು ಸಿಹಿಯಾದ ದನಿಯಲ್ಲಿ ಹಾಡುತ್ತಾನೆ ಎನ್ನುತ್ತಾನೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಆದ್ದರಿಂದಲೇ .......

ಸಹೃದಯನ ಮೆಚ್ಚುಗೆ, ವಿಮರ್ಶಕನ ಟೀಕೆ ಎಲ್ಲಾ ಬಾಹ್ಯ ಬದುಕಿಗೆ ಸಂಬಂಧಿಸಿದ್ದು, ಆದರೆ ಎಲ್ಲಕ್ಕೂ ಮುಖ್ಯವಾದುದು, ಪ್ರಥಮವಾದುದು ಕವಿಯ ಅಂತರಂಗದ ಆತ್ಮ ಸಂತೋಷ! ಕವಿಗೆ ಆತ್ಮ ಸಂತೃಪ್ತಿಯನ್ನು ನೀಡದ ಕವನ ಎಂದೂ ಗೆಲ್ಲುವುದಿಲ್ಲ ಅಲ್ಲವೇ ಸಖಿ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ನೀರಿಗೆ ಬಿದ್ದ ಹೆಣ್ಣು

- ನರಸಿಂಹಸ್ವಾಮಿ ಕೆ ಎಸ್


ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ
ಹೂವಾಗಲಿಲ್ಲ ಕೆಂಪಾಗಿ.
ಸಾವಿನಲಿ ಶಾಂತಿ ಉರುಳಿತ್ತು ತಲೆಕೆಳಗಾಗಿ
ಆ ಎಲ್ಲ ನೋವು ತಂಪಾಗಿ.

ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ
ಕಂಡಿತ್ತು ಸಾವಿನ ಯುಗಾದಿ.
ಸುತ್ತೆಲ್ಲ ಕಿತ್ತು ಬಿದ್ದಿತ್ತು ಆಸೆಯ ಜೋಲಿ
ತೆರೆದಿತ್ತು ಹುಡಿಮಣ್ಣು ಹಾದಿ.

ನೀರಿಗೆ ಬಿದ್ದ ಹೆಣ್ಣು ಯಾರಿಗೂ ಹೇಳದೆಯೆ
ಆಗಿತ್ತು ಕೆರೆಗೆ ಆಹುತಿ.
ಹಾಲ ಕಾಣದ ಬದುಕು ಕುಡಿದಿತ್ತು ಕೆರೆಯನೆ;
ಅಲ್ಲಿತ್ತು ಅದರ ಸದ್ಗತಿ.

ಗಂಡ ಬಂದನು ಕಡೆಗೆ ನಡೆಬಂದ ಕಂಬದೊಲು;
ಹತ್ತು ಜನ ಅಲ್ಲೆ ಒದಗಿದರು.
ಬೆಂಕಿ ಹೆಣವನು ನುಂಗಿ ಬೆಂಬೂದಿಯಾಗಿರಲು,
ಉಳಿದವರು ಊರ ಸೇರಿದರು.

ನೀರು ಮುಗಿಸಿದ ಕಥೆಗೆ ಬೆಂಕಿ ಮಂಗಳ ಹಾಡಿ
ನಡೆದಿತ್ತು ದೈವ ಸಂಕಲ್ಪ.
ಇಂಥ ಬಾಳಿಗೆ ಸಾವೆ ನಂದನದ ಕೆರೆ-ಕೋಡಿ;
ಮಸಣದಲಿ ಮಾತ್ರ ಸುಖತಲ್ಪ.

ಹೆಣ್ಣು ಸತ್ತಳು ಏಕೆ? ನೆರೆಯ ನಿರ್ಭಾಗ್ಯರಿಗೆ
ಸಂಶಯದ ಮೇಲೆ ಸಂಶಯ.
ಕಾರಣದ ಬಂಗಾರ ಬೇಟೆ ಫಲಿಸದೆ ಕಡೆಗೆ
ಸತ್ತವಳ ಮೇಲೆ ಸಂಶಯ.

ಕಯ್ಯಾರ ಕೆರೆಗೆ ತಳ್ಳಿದನೆ ಮಡೆದಿಯನಿವನು?
ನ್ಯಾಯದಲಿ ತೀರ್ಪು: ನಿರ್ದೋಷಿ.
ಗದ್ದಲದ ಗಡಸು ನಾಲಗೆಯ ಗಂಡಲ್ಲಿವನು;
ಊರು ಕಂಡಂತೆ ಮಿತಭಾಷಿ.

ಸತ್ತವಳ ಮೇಲೆ ಸಂಶಯ -ಊರಿಗಿವನಂಥ
ಮಾದರಿಯ ಗಂಡ ಆಭರಣ.
ಸತ್ತವಳು ಇಳಿದು ಸತ್ಯವನೊದರುವಂತಿಲ್ಲ ;
ಸಂಗತಿಗೆ ಮೌನದಾವರಣ.

ನೀರಿಗೆ ಬಿದ್ದ ಹೆಣ್ಣ ಗಂಡನ ಹಣೆಯ ಮೇಲೆ
ಬಿಡುಗಡೆಯ ನಿರ್ಭಯದ ತಿಲಕ.
ಎದೆಯಲಿ ಏನೊ ಎಂತೊ, ತೋರುವ ಮುಖದ ಮೇಲೆ
ಎಷ್ಟೊಂದು ನೋವು, ನಾಟಕ!

ಸತ್ತಳು ಏಕೆ ಹೆಣ್ಣು (ಊರಿಗೆ ಇಲ್ಲ ಕಣ್ಣು):
ಅಂತು ಕೇಳಿದವನೊಬ್ಬ ಕುಂಟ.
ಸತ್ತರೆ ಏನು ನಷ್ಟ? ಕಾದಿದೆ ಬೇರೆ ಹೆಣ್ಣು;
ಇಂತು ಹೇಳಿದನೊಬ್ಬ ನಂಟ.

ಕನಿಕರದಿಂದ ಬಂದ ಕುರಿಯೊಂದು ನುಡಿದಿತ್ತು :
ಮುಂಗಿದಿತ್ತು ಹೆಣ್ಣ ಹಣೆ-ಬರಹ.
ಮಾನವ ಜನ್ಮಧಾರಿ ನರಿಯೊಂದು ನಕ್ಕಿತ್ತು :
ನೀರಿಗೆ ಜಾರಿ ಬಿದ್ದ ವಿಷಯ.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಒಮ್ಮೆ ಹಾಡಿದ ಹಾಡು

- ಅನಂತರನಾರಾಯಣ ಎಸ್

ಒಮ್ಮೆ ಹಾಡಿದ ಹಾಡು-
ಮತ್ತೊಮ್ಮೆ-ಹಾಡಲೆಂತೋ ಅರಿಯೆ.
ಒಮ್ಮೆ ಕಂಡಾಕನಸು
ಮತ್ತೊಮ್ಮೆ-ಕಾಣಲೆಂತೋ ಅರಿಯೇ!
ಎಲ್ಲ ನಿನ್ನದೆ ಛಾಯೆ
ಹೃದಯದೊಲವೆ!

ಜೀವವೊಂದೇ ಅಹುದು,
ಬದುಕುಗಳು-ಸಾಸಿರವ ಮಿಕ್ಕುವುವು!
ಭಾವವೊಂದೇ ಅಹುದು,
ರೂಪಗಳು-ಎಣಿಕೆಗೇ ಸಿಕ್ಕದವು!
ಎಲ್ಲ ನಿನ್ನದೆ ಮಾಯೆ
ಹೃದಯದೊಲವೆ!
     *****
ಕೀಲಿಕರಣ: ಕಿಶೋರ್‍ ಚಂದ್ರ

ಚಂದ್ರ

- ವಿದ್ವಾನ್ ಐ ಮಾ ಮುತ್ತಣ್ಣ

ತುಂಬಿದ ಚಂದ್ರನೆ ನೀ ಬಾರ
ತುಂಬಿದ ಭಾಗ್ಯವ ನೀ ತಾರ
ನಂಬಿದ ಗತಿಗೆ ನೆಲೆ ತೋರ!

ಅಗಸ ಮಿತ್ರನು ನೀನದಕೊ
ತಂಪನು ಸುರಿಸುತ ನೀ ಮಿನುಗೊ
ಭೂಮಿಯ ಕನ್ನಡಿ ನೀನೆ ಕಣೊ

ನೈದಿಲೆ ನಗುವುದು ನೀ ಬರಲು
ನಲ್ಮೆಯ ಹೂವಿಗೆ ನೀ ಮುಗುಳು
ಸಂತಸವೀಯುತ ನೀ ಬಾಳು!

ವಸಂತ ಲಕ್ಷ್ಮಿಯ ಕಾಲ್ಚೆಂಡು
ಆಡುವ ಮಕ್ಕಳ ಮನವುಂಡು
ತೋರುವೆ ತೇಲುವೆ ನೀ ದುಂಡು!

ತಂಪನು ಚೆಲ್ಲುವೆ ನೀ ಚಂದ್ರ
ಮೋಹವ ಬೀರುವೆ ನೀನಿಂದ್ರ
ರಸಿಕರ ಬಾಳಿಗೆ ನೀ ಕೇಂದ್ರ!

ಏರುವೆ ಮಿನುಗುವೆ ನೀನೆಲ್ಲಿ?
ಮುಗಿಲೊಳು ತೇಲುವೆ ಪೋಪೆಲ್ಲಿ?
ನಾಚುಗೆಯೇ ಹೇಳು ನಿನಗಲ್ಲಿ?

ರಾಮನು ಅತ್ತದು ನಿನಗಾಗೊ?
ಹನುಮನು ಹಾರಿದು ನಿನಗಾಗೊ?
ಗಣಪತಿ ಶಾಪವು ನಿನಗಾಗೊ?

ಈಶ್ವರ ಶಿರವನು ಮುಡಿಸಿರುವೆ
ನೀರಲಿ ಬಾನಲಿ ತೋರಿರುವೆ
ಪ್ರಣಯಿಯ ನೋಟದ ಮುಗುಳಿರುವೆ!

ಹುಣ್ಣಿಮೆ ದಿನವೇ ನಿನಚೆಲುವು
ಕಣ್ಣಿನ ಭಾಗ್ಯವೆ ಆ ಬರವು
ಸ್ವಪ್ನದ ಸುಖವೇ ನಿನ್ನೊಲವು!

ಪೋಗದಿರೆನ್ನೀ ಚಂದಿರನೆ
ತೆಂಗದಿರೆನ್ನೇ ಸುಖವೀಣೇ
ಭುವಿಯನು ಬೆಳಗೊ ಮಮಪ್ರಾಣೇ!
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೬

ನಿಮ್ಮ ಪಾದವಿಡಿದು,
ಮನ ನಿರ್ಮಳವಾಯಿತು.
ನನ್ನ ತನು ಶುದ್ಧವಾಯಿತು.
ಕಾಯ ಗುಣವಳಿಯಿತು.
ಕರಣಗುಣ ಸುಟ್ಟು
ಭಾವಳಿದು ಬಯಕೆ ಸವೆದು,
ಮಹಾದೇವನಾದ ಶರಣರ ಪಾದವಿಡಿದು,
ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಸೂಟ್‌ಕೇಸ್ ಸ್ಟೆಟಲಾನಾ

- ಡಾ || ಲತಾ ಗುತ್ತಿ

ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ)
ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ)
ನೂರಾರು ಮಕ್ಕಳ ಗರ್ಭ
ಧರಿಸುವ ಸಡಗರ
ವರ್ಷವಿಡೀ bedrest
ಮೇಲಂತಸ್ತಿನ shelf ದಿಂದೆದ್ದು
ಮೈ ಕೊಡವಿಕೊಂಡು ರಜೆ ಬಂದನೆಂದು
ಬಸಿರಾಗಲು ಇಳಿದು ಬರುತ್ತಾಳೆ.
ಒದ್ದೆ ಬಟ್ಟೆಯ ಸ್ನಾನ
ಗರಿಗರಿಯಾದ ಪೇಪರ ಸೀರೆ
ಸುತ್ತಿಕೊಂಡು ಖುಷಿ ಪಡುವಳು
ದಿನ ದಿನಕ್ಕೆ ಹೊಸ ಹೊಸ ತಿಂಡಿ ತಿನಿಸುಗಳು
ಪೇಟೆಯ ಫ್ಯಾನ್ಸಿ ವಸ್ತುಗಳೆಲ್ಲ
ಬೇಕು ಬೇಕೆಂದು ಹೊಟ್ಟೆಗೆ ಹಾಕುತ್ತ
ಉಬ್ಬುಬ್ಬುತ್ತಾ ಖುಷಿಪಟ್ಟು ವಿಮಾನವೇರಿ
ಹೊರಡುತ್ತಾಳೆ ತವರಿಗೆ ಪ್ರಸವಿಸಲು.
ನಮ್ಮ ಸ್ಪೆಟಲಾನಾ ಈಗ ತುಂಬು ಬಸುರಿ
ಹೆಚ್ಚು ನಡೆಯಲಾರಳು
ಟ್ರಾಲಿ ಮೇಲೆಯೇ ಕುಳಿತು
ಮೆತ್ತಗೆ ವಿಮಾನ ಏರಿಳಿಯುವಳು
ಬಾಂಬೆ ಕಸ್ಟಮ್‌ ಚೆಕ್ಕಿಂಗದಲ್ಲಿ
ಬಾಡಿ ಸ್ಕ್ಯಾನಿಂಗ
ಸ್ಕ್ರೀನ್ ಮೇಲೆ ನೂರಾರು ಮಕ್ಕಳು
ಅಧಿಕಾರಿ ಬರೆಯುತ್ತಾನೆ ಕೇಳುತ್ತಾನೆ
Mini operationಮಾಡೋಣವೇ ?
ಬೇಡ, Natural ಆಗಿಯೇ delivery
ಆಗಬೇಕೆನ್ನುತ್ತೇವೆ.
ಒಂದಿಷ್ಟು ಔಷಧ ಕೊಡಿ duty bill ಬರುತ್ತದೆ
ಡಾಕ್ಟರ್ ಬಿಲ್ ಕೊಡುತ್ತೇವೆ.
ಸ್ಪೆಟಲಾನಾ ಜೊತೆ ನಾವೂ ಸುಸ್ತಾಗಿ
ಮನೆ ಸೇರುತ್ತಿದ್ದಂತೆಯೇ,
ನಮಗಿಂತಲೂ ಬಸುರಿಯ ಮೇಲೆಯೇ
ಎಲ್ಲರ ಕಣ್ಣು
ದುಡು ದುಡು ಓಡಿ ಬಂದು
ಮೆತ್ತಗೆ ಅವಳನ್ನು ಇಳಿಸಿ
ಕೈಭುಜ ಹಿಡಿದು ಒಳಗೊಯ್ಯುವರು
ಅವಳ ಹೊಟ್ಟೆಯ ಮೇಲೆಲ್ಲ ಕೈಯಾಡಿಸಿ
ಗಂಡು ಮಗುವೋ, ಹೆಣ್ಣುಮಗುವೋ
8- 10 ಮಕ್ಕಳ ಮಹಾತಾಯಿಯೋ
ಎಲ್ಲರೂ ನಗೆಯಾಡುವರು
ಕಾಫಿ ಕುಡಿಯುತ್ತಿದ್ದಂತೆಯೇ
ಪ್ರವಾಸದ ಆಯಾಸ ಸೂಟ್‌ಕೇಸ್‌ಗೆ
ಬೇನೆ
ಪ್ರಸವವೇದನೆ Operationಗೆ ತಯಾರಿ -
ಚೆಂದದ ಹೆಸರಿನ (National, Philips, Rado, Rolex,
canon, Minolta, ಪ್ಯಾರಿಸ್ ಪರಫ್ಯೂಮ್ಸ್
ಅರೇಬಿಯನ್ dry fruits, ಸಿಂಗಪೂರ Toys,
U.S.A.Cosmetics. Japanesees ಬಟ್ಟೆಗಳು)
ಅಂದದ ಮಕ್ಕಳು ಕಿಲಕಿಲನೆ ಹುಟ್ಟುತ್ತವೆ
ಎಲ್ಲರೂ ಎತ್ತಿಕೊಳ್ಳುವವರೇ, ಮುದ್ದಿಸುವವರೇ,
ಈ ಮುದ್ದಿನ ಮರಿಗಳನ್ನು
ತನಗೆ ನನಗೆಂದು ಎತ್ತಿಕೊಂಡು ಹೊರಟೇ ಬಿಡುವರು
ಸೂಟ್‌ಕೇಸ್ ಸ್ಟೆಟಲಾನಾ ಸುಸ್ತು ಹೊಡೆದು
ಬೀಳುತ್ತಾಳೆ
ಕೊನೆ ಪಕ್ಷ ಒಂದು ವರ್ಷವಾದರೂ
bedrest ಬೇಕೆಂದು ಮೇಲಂತಸ್ತಿನ
Shelf roomಗೇ ಸೇರಿಬಿಡುತ್ತಾಳೆ.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಎಲ್ಲಿ ಮಾಯವಾದ

- ಶ್ರೀನಿವಾಸ ಕೆ ಹೆಚ್

ಹದಿನೈದು ದಿನದಿಂದ ಕೊರಗಿ ಕೊರಗಿ
ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ
ಎಲ್ಲಿ ಮಂಗಮಾಯವಾದ?
ತಾರೆಗಳಿಗೆ ದಿಗಿಲು
ಪಾಪ ಹೋಗಿ ಹುಡುಕೋಣ ಅಂದರೆ
ಅಮವಾಸ್ಯೆ ಕತ್ತಲು.
     *****
ಕೀಲಿಕರಣ: ಕಿಶೋರ್‍ ಚಂದ್ರ

ಬಂಡಾಯ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ
 
ಪ್ರಿಯ ಸಖಿ,
ಯಾವ ತಂಟೆ ತಕರಾರುಗಳಿಲ್ಲದೇ ಎಲ್ಲವನ್ನೂ ಒಪ್ಪಿಕೊಂಡು ಸದ್ದಿಲ್ಲದೇ ಜೀವನವನ್ನು ಸಾಗಿಸುವವರು ಹಲವಾರು ಮಂದಿ. ಆದರೆ ತಮ್ಮ ಸಿದ್ಧಾಂತಗಳಿಗಾಗಿ, ವ್ಯವಸ್ಥೆಯೆದುರು ಸದಾ ಬಂಡೆದ್ದು ಹೋರಾಟವನ್ನೇ ಬದುಕಾಗಿಸಿಕೊಂಡವರು ಕೆಲಮಂದಿ. ಆದರೆ ಕವಿ ಗೋಪಾಲಕೃಷ್ಣ ಅಡಿಗರು ‘ಬಂಡಾಯ’ ಎಂಬ ತಮ್ಮ ಕವನದಲ್ಲಿ ಹೀಗೆ ಹೇಳುತ್ತಾರೆ.

ದಂಗೆಯೇಳುತ್ತಲೇ ಇರಬೇಕಾಗುತ್ತದೆ
ಇಲ್ಲಿ ಪ್ರತಿಯೊಬ್ಬನೂ ತನ್ನ ತನ್ನ
ಚಿನ್ನದ್ದೋ, ರನ್ನದ್ದೋ, ಕಬ್ಬಿಣದ್ದೋ, ಮರದ್ದೋ
ಅಥವಾ ಬರಿ ಮಣ್ಣಿನದೋ ಸಿಂಹಾಸನವ
ಹುಡುಕಿ ತೆಗೆದು ಗುರುತಿಸಿ ಅಲ್ಲಿ
ಆಸನಾರೂಢನಾಗುವವರೆಗೆ

ವ್ಯಕ್ತಿಯೊಬ್ಬ ತನ್ನ ದಾರಿಯನ್ನ ಕಂಡುಕೊಂಡ ನಂತರ ಗುರಿಸೇರುವ ತನಕ, ಹಾದಿಯಲ್ಲಿ ಎದುರಾಗುವ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ನಿಲ್ಲಬೇಕು. ಎಷ್ಟೋ ಬಾರಿ ವ್ಯವಸ್ಥೆಯೆದುರು ದಂಗೆಯೇಳಬೇಕು. ಎಲ್ಲಿಯವರೆಗೂ ಈ ಹೋರಾಟ ಎನ್ನುವುದನ್ನು ಹೇಳುತ್ತಾ ಕವಿ.

ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ
ತನ್ನ ವ್ಯಕ್ತಿತ್ವಕೆ ಚಹರೆಯ ಪಟ್ಟಿ ಸಿದ್ಧವಾಗುವವರೆಗೆ
ತನ್ನ ಪರಿಮಿತಿಯೊಳಗೆ ಶಾಖೋಪಶಾಖೆಗಳು
ಹುಟ್ಟಿ ಹಬ್ಬುವವರೆಗೆ

ಎನ್ನುತ್ತಾರೆ. ಈ ರೀತಿಯ ಹೋರಾಟದಿಂದಲೇ ವ್ಯಕ್ತಿಯೊಬ್ಬ ಗಟ್ಟಿಯಾಗುತ್ತಾ ಹೋಗುತ್ತಾನೆ. ತನ್ನ ಪರಿಮಿತಿಯನ್ನು ಕಂಡುಕೊಳ್ಳುತ್ತಲೇ ಅದನ್ನು ಮೀರಲು ಯತ್ನಿಸುತ್ತಾನೆ. ಹೊರಗಿನ ವ್ಯವಸ್ಥೆಗೆದುರಾಗಿ ಹೀಗೆ ಬಂಡಾಯವೇಳುವುದು ಸುಲಭವಾದರೆ ಮನದೊಳಗಿನ ವೈರಿಗಳ ವಿರುದ್ಧ ದಂಗೆಯೇಳುವುದು ತುಂಬಾ ಕಷ್ಟ! ಹೀಗೆ ಮನದೊಂದಿಗೆ ಹೋರಾಡಿ ಗೆದ್ದವನು ವಿಶಿಷ್ಟ ವ್ಯಕ್ತಿತ್ವದವನಾಗುತ್ತಾನೆ. ಸಮಾಜಕ್ಕೇ ಮಾನವತೆಯ ಸಂಕೇತವಾಗುತ್ತಾನೆ ಎನ್ನುತ್ತಾರೆ ಕವಿ.
ಕವನವಮ್ನ ಮುಂದುವರೆಸುತ್ತಾ,

ಬಂಡಾಯದ ಘೋಷ ಮೊಳಗುತ್ತಲೇ ಇರಬೇಕು.
ಗೊಂಚಲು ಗೊಂಚಲಾಗಿ ಸಿಹಿಸಿಹಿ ಹಣ್ಣು
ಪಕ್ವವಾಗುವವರೆಗೆ; ತಿರುಳ ಸಿಹಿ ಅನ್ಯರಿಗೆ
ಬಿತ್ತು ಭವಿಷ್ಯಕ್ಕೆ; ಮಾನವತ್ವದ ಬುನಾದಿಗಿನ್ನೊಂದು ಕಲ್ಲು
................................

ಎನ್ನುತ್ತಾರೆ. ಮನದ ವಿಕಾರಗಳನ್ನೆಲ್ಲಾ ಗೆಲ್ಲುವುದು ಸುಲಭ ಸಾಧ್ಯವಲ್ಲವಾದರೂ ಆ ವಿಕಾರಗಳ ವಿರುದ್ಧ ದಂಗೆಯೇಳುತ್ತಲೇ ಇರಬೇಕು. ಯಾರಿಗೆ ಗೊತ್ತು ನಾಳೆಗೆ ಗೆಲುವೂ ಸಿಕ್ಕಬಹುದಲ್ಲವೇ ಸಖಿ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಚಿಂತೆಗೆ ಕಣ್ಣತೆತ್ತವಳೆ!!

- ನರಸಿಂಹಸ್ವಾಮಿ ಕೆ ಎಸ್

ಚಿಂತೆಗೆ ಕಣ್ಣ ತೆತ್ತವಳೆ,  ಚಿಲುಕದಮೇಲೆ
ಮುಂಗೈಯನೂರಿ ನಿಂತವಳೆ,
ಬಿಂದಿಗೆ ಹೊರದೆ ಸೋತವಳೆ, ಸಣ್ಣಗೆ ಒಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ತುರುಬಿನ ತುದಿಗೆ
ಒಂದೆ ಹೂವನು ಮುಡಿದವಳೆ,
ಒಂದೊಂದೆ ಬಳೆಯ ತೊಟ್ಟವಳೆ, ಈ ಮನೆಯೊಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ಹತ್ತಿದ ದೀಪ
ಮಂಕಾಗಿ ತೋರಿ ನಿಂತವಳೆ,
ಸಂತೆಗೆ ಹೋಗಿ ಬರಿಗೈಲೆ ಬಂದೆಯ, ಪಾಪ !-
ಚಿಂತೆ, ಏತರ ಚಿಂತೆ, ನಿನಗೆ?

ನಿನಗಾವ ಚಿಂತೆ ಚಿಕ್ಕವಳೆ, ಚಿನ್ನದ ಬಳೆಗೆ
ಒಪ್ಪುವ ತುಂಬುಗೈಯವಳೆ !
ಗಾಳಿಯ ಸುಳಿಗೆ ಹೂವಾದ ಮಲ್ಲಿಗೆಯರಳೆ,
ಬಂಡಿಯ ದನಿಗೆ ಬೆಚ್ಚುವಳೆ !-

ನಿನಗಾವ ಚಿಂತೆ, ಚಿಕ್ಕವಳೆ, ತುಂಬಿದ ಮನೆಗೆ
ಘನವಾಗಿ ಬಂದ ಗುಣದವಳೆ,
ನುಡಿದೊಂದು ಮಾತು ಸಾಕೆನುವ ಇನಿದನಿಯವಳೆ,
ತಲೆತಗ್ಗಿ ನಾಚಿ ನಡೆಯುವಳೆ?

ಮಳೆ ಬಿದ್ದು, ಕೆರೆ ತುಂಬಿ ನೀರು! ಮಿಂಚುವ ನೀರು,
ಬರಿ ನೀರೆ? ಥೇಟು ಪನ್ನೀರು !
ಅತ್ತಿತ್ತ ನೆಲ ಹೂವ ತೇರು; ಅಲ್ಲಿಗೆ ಬಾನು
ಇದ್ದೀತು ಒಂದೆರಡು ಮಾರು !

ಮನೆಗಿಂತ ಬಾನು ಎತ್ತರವೆ? ಆದರೆ ಏನು?
ಬಾನಿಗೆ ತಾರೆ ಹತ್ತಿರವೆ?
ಏನಂಥ ಬೆಟ್ಟ ಹೊತ್ತಿರುವೆ? ಸುಮ್ಮನೆ ನೀನು
ಸೊಂಪಾಗಿ ನಿಲುವುದುತ್ತರವೆ ?

ತೋಟದ ಮೇಲೆಲ್ಲ ತೆಂಗು; ತೆಂಗಿನ ಮೇಲೆ
ತೆರೆದ ಹೊಂಬಾಳೆಯ ರಂಗು!
ಗೊನೆ ಬಿಟ್ಟ ರಸಬಾಳೆ ಕಂದು; ಹಣ್ಣಿನ ಮೇಲೆ
ಹುದುಗಿತ್ತು ಗಿಣಿಯೊಂದು ಬಂದು.

ವೀಣೆಗೆ ತಂತಿಯ ಚೆಂತೆ; ತಂತಿಗೆ ತನ್ನ
ಹುಡುಕುವ ಬೆರಳಿನ ಚಿಂತೆ ;
ಬೆರಳಿಗೆ ಉಂಗುರದ ಚಿಂತೆ ; ಚಿಂತೆಗೆ ತನ್ನ
ಮಡಿಲ ತುಂಬುವುದೊಂದೆ ಚಿಂತೆ.

ಇಲ್ಲದ ಸಲ್ಲದ ಚಿಂತೆ ; ಅದು ಬಂದಂತೆ
ಹೋದೀತು ಇರಲೊಂದು ಗಳಿಗೆ !
ಸಂಶಯ ನನಗಿಲ್ಲ, ಚೆಲುವೆ; ಚೆಲುವಿಗೆ ಚಿಂತೆ;
ಚಿಂತೆಯಿಲ್ಲದ ಚೆಲುವು ಚೆಲುವೆ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಭಾವ ಜೀವ

- ಅನಂತರನಾರಾಯಣ ಎಸ್

ಭೋರ್ಗರೆದು ಬರಸೆಳೆದು ಬಿರುಸಿನಲಿ ಚಿಮ್ಮೆಸೆದು
ಗಿರಗಿರನೆ ಸುರುಳಿಯಲಿ ಸೊರಗಿಸುವ ಸುಳಿಗಳಲಿ
ಸಿಕ್ಕಿದಂತೊಮ್ಮೊಮ್ಮೆ ಹೃದಯ ಬಲು ತಪಿಸುವುದು!
ನಭಕೇರಿ ಕೆಳಗುರುಳಿ ಭಾವಗಳ ಕಡಲಿನಲಿ
ಮಿಂದು ಮೈ ಬೆಂಡಾಗಿ ಬಸವಳಿದು ಬೀಳುವುದು!
ಮರು ನಿಮಿಷ ಮೆಲ್ಲೆಲರು ಮೃದು ಮಧುರ ನುಡಿಗಳಲಿ
ಮೆಲ್ಲಮೆಲ್ಲನೆ ಕರೆದು ಬೇರೊಂದ ತೋರುವುದು!
ಶಾಂತಿಯುಂಟೇನಿಲ್ಲಿ ಬರಿ ಭಾವ ಜೀವದಲಿ?

ಮೀನಮೇಷಗಳೆಣಿಸಿ, ಕಾಲಕಾರ್ಯವ ಗುಣಿಸಿ
ಕಾರ್ಖಾನೆಯಚ್ಚಂತೆ ಮಾಡಿ ಜೀವನವೆಲ್ಲ
ಕಾಣದಂತೆಯೆ ಮತ್ತೆ ಸಾಗಿಹೋಗುವರೆಲ್ಲ!
ಹೊಸತಿಲ್ಲ-ಹಳತಿಲ್ಲ-ಜೀವ ನಿತ್ಯದ ದಿನಸಿ!
ಇಂಥ ಬಾಳದು ಬಾಳೆ?-ಭಾವಜೀವವೆ ಮೇಲು!
ಕಹಿಸಿಹಿಗಳೆಲ್ಲವಿದೆ! ಅದಕಿಂತ ಬೇರೇನು?
     *****
ಕೀಲಿಕರಣ: ಕಿಶೋರ್‍ ಚಂದ್ರ

ಸ್ವತಂತ್ರ ಭಾರತ

- ವಿದ್ವಾನ್ ಐ ಮಾ ಮುತ್ತಣ್ಣ

(ಆಗಸ್ಟ್ ೧೫-೧೯೪೭)
ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ||

ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ
ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ||

ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ,
ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ;
ತನ್ನ ತಾನು ಮರೆತು ಜೊಳ್ಳು ಪುತ್ರರನ್ನು ನಂಬಿರೆ,
ಆತ್ಮಖ್ಯಾತಿ ಘನತೆಗಳನು ಕಳೆದು ತಾಯಿ ನೊಂದಳೊ!  ||ಭಾ||

ಬಡತನದಿ ಬೇನೆಯಿಂದ ಬೆಂದು ಬಳಲಿ ಬಾಡಿತು
ದೇಶದಲ್ಲಿ ಶಾಂತಿ ಕಾಂತಿ ಕಳೆದು ಭ್ರಾಂತಿ ತುಂಬಿತು,
ಹಿಂದೂದೇಶ ಕರ್ಮಭೂಮಿ ಧರ್ಮಕ್ಷೇತ್ರ ಖ್ಯಾತಿಯು
ಶೂರ ಆರ್ಯಜನರ ಸ್ಥೈರ್ಯ ಶೂನ್ಯವಾಗಿ ಪೋದುವೊ!  ||ಭಾ||

ಒಲಿದು ನಲಿದು ಮುಗುಳು ನಗೆಯ ತೋರಿ ಹಾಡಿ ಬರುವಳು
ಹೂವ ಮುಡಿದು ತಿಲಕ ಹಚ್ಚಿ ಧ್ವಜವ ಹಾರ್‍ಸಿ ಮೆರೆವಳು,
ಕಾಲಗೆಜ್ಜೆ ಝಣಽ ಝಣರೆಂದೆನಿಸಿ ಕುಣಿದು ಕರೆವಳು
ನಲಿದಳೀ ನಲ್ವತ್ತು ಕೋಟಿ ಕುರವರರೊಡನೆ ಹರುಷದಿ!  ||ಭಾ||

ಅಹೋ ಏನು ಧಣಿದರವಳ ವೀರ ತ್ಯಾಗಿ ಪುತ್ರರು,
ದೇಶಬಂಧು ಲೋಕಮಾನ್ಯ ಮೋತಿಲಾಲ ಶಿಷ್ಟರು;
ಆ ನೇತಾಜಿ ನೆಹುರು ವಲ್ಲಭಾದಿ ಗೋಕಲೇಯರು,
ದಣಿದು ಕಾದು ಸತ್ತ ಹಿರಿಯ ಕಿರಿಯ ಹಲವು ವೀರರು!  ||ಭಾ||

ರಕ್ತ ಹರಿಸಿ ತನುವ ಸವೆಸಿ ಧಣಿದರಲವು ಜನಗಳು
ಏಸು ಕಾಲ ಪಾರತಂತ್ರ್‍ಯದಿಂದ ಇರ್ದ ದೇಶದೊಳ್;
ಶೂರಗಾಂಧಿ ರಾಜಋಷಿಯು ಬಡವಗೊಲಿದ ದೇವನು
ಸತ್ಯಾಗ್ರಹಾದಾಯುಧವೇ ದೇಶ ವಿಜಯಕಾಯ್ದನು!  ||ಭಾ||

ಬಂದಳದೋ ವಿಜಯಭೇರಿಯನ್ನು ಮೊಳಗಿ ಮಾನಸಿ,
ಗಳಿಸಿದೊಂದು ಕೀರ್ತಿಯನ್ನು ಕಂದರೊಳಗೆ ಹಬ್ಬಿಸಿ;
ಧರೆಯ ರಾಷ್ಟ್ರಗಳಲಿ ನಮ್ಮ ಪ್ರಭೆಯು ಇನ್ನು ಬೀರ್ವುದು,
ಧವಳ ಕೇತು ಹಾರ್‍ಸಿ ತಂದಳದೋ ಭಾರತೀವಧು!  ||ಭಾ||
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೫

ನೆನವುತ್ತಿದೆ ಮನ.
ದುರ್ವಾಸನೆಗೆ ಹರಿವುತ್ತಿದೆ.
ಕೊನೆಕೊಂಬೆಗೆ ಎಳೆವುತ್ತಿದೆ.
ಕಟ್ಟಿಗೆ ನಿಲ್ಲದು- ಬಿಟ್ಟರೆ ಹೋಗದು.
ತನ್ನ ಇಚ್ಫೆಯಲಾಡುವ
ಮನವ ಕಟ್ಟಿಗೆ ತಂದು,
ಗೊತ್ತಿಗೆ ನಿಲ್ಲಿಸಿ,
ಬಚ್ಚಬರಿಯ ಬೆಳಗಿನೊಳಗೆ
ಓಲಾಡುವ ಶರಣರ ಪಾದದಲ್ಲಿ
ನಾ ಬೆಚ್ಚಂತಿದ್ದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಸಂಲಗ್ನ

- ಡಾ || ಲತಾ ಗುತ್ತಿ

ಸಮುದ್ರದಾಳಕ್ಕೆ ಇಳಿಯುತ್ತಿದ್ದಾಗಲೆಲ್ಲ
ನನ್ನ ಆದರ್ಶದ ಮೌಲ್ಯಗಳು
ಗಹಗಹಿಸಿ ನಕ್ಕು
ತರಗೆಲೆಗಳಂತೆ ಮೇಲೆಯೇ
ತೇಲುತ್ತವೆ.
ಕೋರಲ್‌ಗಳಿಂದ ತರಚಿದ ಕಾಲು
ಮಾಂಸ ರಕ್ತದ ಹನಿಗಳ ಸುತ್ತ
ಸುತ್ತುತಲಿರುವ ಭಾವನೆಗಳ
ಸೌಧದೊಳಗೆ ಕುಸಿದು
ತಿರುಗಣಿಯ ಗುಂಡಿಯ
ಸೆಳೆತಕ್ಕೆ ಸಿಗುವಾಗ
ನನ್ನ ನಾ ವಿಮರ್ಶಿಸಿಕೊಳ್ಳುತ್ತೇನೆ
ಬದುಕಿನನ್ವೇಷಣೆಯಲ್ಲಿ
ಏನಾದರೂ ಒಂದಿಷ್ಟು ಕಂಡುಕೊಂಡಿದ್ದೇನೆಂದಾದರೆ
ಸೂರ್ಯನಾಚೆಯ
ಭ್ರಮೆಯ ಆಕಾಶ
ನೆಲದಾಳದೊಳಗಿನ
ಉಪ್ಪು ನೀರಿನ ಏರಿಳಿತಗಳ
ಸಂಲಗ್ನ.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ದಾರಿ ಬಿಡಿ

- ಶ್ರೀನಿವಾಸ ಕೆ ಹೆಚ್

ಚಂದ್ರಪ್ನೋರೇ ಚಂದ್ರಪ್ನೋರೇ
ದಾರಿ ಬಿಡಿ.
ಇಂದ್ರಪ್ನೋರು ಹೇಳಿದಾರೆ
ಭೂಮಿ ದೇವಿಗೆ ಸ್ನಾನ ಮಾಡ್ಸೋಕೆ
ಸ್ನಾನ ಮುಗಿಯೋವರೆಗೂ
ಮೋಡದ ಪರದೆ ಸರಿಸಿ ಇಲ್ಲಿ ಹಣಕಿ ನೋಡದೆ
ಬೇರೆ ಎಲ್ಲಿಗಾದರೂ ಸ್ವಲ್ಪ
ಗಾಡಿ ಬಿಡಿ.
     *****
ಕೀಲಿಕರಣ: ಕಿಶೋರ್‍ ಚಂದ್ರ

ನಿಮ್ಮೊಡನಿದ್ದೂ ನಿಮ್ಮಂತಾಗದೇ ?

- ರೂಪಾ ಹಾಸನ
 
ಪ್ರಿಯ ಸಖಿ,
ಬಾಹ್ಯಶಕ್ತಿಗಳು ಪ್ರಬಲ ವ್ಯಕ್ತಿತ್ವಗಳನ್ನು ತಮ್ಮದಾಗಿಸಿಕೊಳ್ಳಲು ಹೆಣಗುವಾಗಲೆಲ್ಲಾ ನನಗೆ ನೆನಪಾಗುವುದು ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೇ’ ಎಂಬ ಕವನದ ಸಾಲುಗಳು.

ನಿಮ್ಮೊಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೇ ಬೇರೂತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.

ಹೌದಲ್ಲವೇ ಸಖೀ, ವ್ಯಕ್ತಿತ್ವಗಳಿಗೆ ಪ್ರಲೋಭನೆಗಳನ್ನೊಡ್ಡುವವು ಸಮಾಜ, ಧರ್ಮ, ಸರ್ಕಾರ, ಸಿದ್ಧಾಂತಗಳು, ತರ್ಕಗಳು ......... ಇತ್ಯಾದಿ ಹಲವಾರು.  ಅವುಗಳಿಲ್ಲದಿದ್ದರೆ ಬದುಕು ಸಾಗದಿದ್ದರೂ, ಅವುಗಳ ಜೊತೆಯೇ ಬದುಕಬೇಕಿರುವುದು ಅನಿವಾರ್ಯವಾದರೂ ಅವುಗಳೆಲ್ಲದರ ಹಿಡಿತದಿಂದ ಬಿಡಿಸಿಕೊಂಡು ತಮ್ಮದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅಲ್ಲವೇ?  ಆದರೆ ಅಸಾಧ್ಯವೇನಲ್ಲ!

ಆಂಗ್ಲ ಕವಿ ಬ್ರೌನಿಂಗ್ ಹೀಗೆ ಹೇಳುತ್ತಾನೆ "Best be yourself, imperial. Plain and true' ನಿನಗೆ ನೀನಾಗಿರುವುದು ನೀನೇ ಸಾರ್ವಭೌಮನಾಗಿರುವುದು, ನಿನಗೆ ನೀನು ಸತ್ಯವಾಗಿರುವುದು, ನಿಷ್ಕಪಟವಾಗಿರುವುದು ಉತ್ತಮವಾದುದು
ಎಂದು.  ಹಾಗಾದಾಗ ಯಾವ ಪ್ರಲೋಭನೆಗೆ ಏಕೆ ಮಣಿಯಬೇಕು?

ತಾವರೆಯ ಎಲೆಗೆ ನೀರಿನಲ್ಲಿರುವುದು ಅನಿವಾರ್ಯ. ಆದರೆ ಬೇರುಗಳು, ಎಲ್ಲಾ ಸಾರ ಇರುವುದೂ ನೀರಿನಲ್ಲೇ, ಆದರೆ ಸಾರ ಹೀರಿಯೇ ಬೆಳೆದರೂ ತಾವರೆಯ ಎಲೆ
ತನ್ನದೇ ಸಮರ್ಥ, ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡು ಬೆಳೆದು ತನ್ನ ಮೇಲೆ ಬಿದ್ದ ನೀರಹನಿಯ ಒತ್ತಡಕ್ಕೆ ಮಣಿಯದೇ ಅಂದರೆ ಒದ್ದೆಯೂ ಆಗದೇ, ಮುಳುಗಿಯೂ ಹೋಗದೆ ‘ಇದ್ದೂ ಇಲ್ಲದಂತೆ’ ಇದ್ದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವಂತೆ ನಾವಾಗಬೇಕು. ಎಲ್ಲ ಪ್ರಲೋಭನೆಗಳಿಗೆ ಒಡ್ಡಿಕೊಂಡರೂ, ಅದರ ಸಾರವಷ್ಟೇ ಹೀರಿ ಇದರಲ್ಲೇ (ವ್ಯವಸ್ಥೆಯಲ್ಲೇ) ಇದ್ದೂ, ಇದರಲ್ಲೇ ಬೆಳೆದು, ನಮ್ಮೆದೇ ಪ್ರತ್ಯೇಕ ವ್ಯಕ್ತಿತ್ವ ರೂಪಿಸಿಕೊಳ್ಳುವುದು ನಿಜಕ್ಕೂ ಒಂದು ಚಾಲೆಂಜ್ ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ನಿನ್ನೊಲುಮೆ

- ನರಸಿಂಹಸ್ವಾಮಿ ಕೆ ಎಸ್

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚೆಂದ್ರಮುಖಿ ನೀನೆನಲು ತಪ್ಪೇನೆ ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿಸೂಸುವ ಅಮೃತ ನೀನೇನೆ !
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ !

ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ!
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಹಳೆಯ ಹಾಡು

- ಅನಂತರನಾರಾಯಣ ಎಸ್

ಯಾವುದಾದರು ಒಂದು
ಹಳೆಯ ಹಾಡೇ ಸಾಕು!
ಹೊಸ ರಾಗ-ಹೊಸ ತಾಳ
ಹೊಸಭಾವಗಳ ಮೇಳ
ಯಾವುದೊಂದೂ ಬೇಡ.
ಹೃದಯದೊಲವನು ಮೀಟಿ
ಒಲವ ನೀರನ್ನು ತರಿಸಿ
ಹೊಸ ರಾಗ-ಹೊಸ ತಾಳ
ಹೊಸ ಭಾವಗಳ ಮೇಳ
ಹಿಗ್ಗಿ ಹರಿಸುವ ಒಂದು
ಹಳೆಯ ಹಾಡು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಜ್ಞಾನದ ಮೊರೆ

- ವಿದ್ವಾನ್ ಐ ಮಾ ಮುತ್ತಣ್ಣ

ತಾರೆಗಳು ಶತಕೋಟಿ ಉದಿಸಿದರು ಬಾನಿನಲಿ,
ಮೀರಿ ತೆರೆಗಳ ಧೀರ್ಘ ಆರ್ಭಟವೆ ಹೆಚ್ಚಿರಲಿ,
ಶೂರ ಪುರುಷರು ಕಾಯದೊಳವಧಿಯನು ಮುಟ್ಟಿರಲಿ,
ಸಾರ ಸಗ್ಗವು ತೋರ್ಪ ಸ್ತುತಿಹಲವು ಘೂರ್ಮಿಸಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಧಾರೆಧಾರೆಗಳಾಗಿ ಜಗದಿ ನೆತ್ತರವೆ ಪ್ರಹಿಸಲಿ,
ನೀರೆಯರ ಕುಡಿನೋಟದಿಂ ಬಲವೆ ತಗ್ಗಿರಲಿ,
ಭಾರವದು ಧರೆಗೀವ ಅಜ್ಞಾನ ನಾಟಿರಲಿ,
ಚೋರತಂತ್ರಗಳಲವು ನಿರ್ಭಯದಿ ಹಬ್ಬಿರಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಬಡತನದ ಬೇನೆಯಲಿ ಶತವರ್ಷ ಬಳಲಿರಲಿ,
ನಡುನೆಟ್ಟನಿಡಿಕಿಲದೆ ಶತಮಾಸ ಬಾಲಿರಲಿ,
ನಿಡುಮರವು ಕಾನನದಿ ನಿಬಿಡಾಗಿ ಹಬ್ಬಿರಲಿ,
ಜಡದೇಹವದರಂತೆ ನೀರಸದಿ ಇರಲಿರಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಗತಕಾಲ ಸಾಹಿತ್ಯ ಸಮಗ್ರವನು ಜಯಿಸಿರಲಿ,
ಗತವೀರ ಚಾರಿತ್ರ್‍ಯ ಶಾಸನವ ಪಠಿಸಿರಲಿ,
ಗತಲೋಕ ವೈರಾಗ್ಯ ಸಂಪದವ ಬಿಂಬಿಸಲಿ,
ಗತಜೀವ ನಿರ್ವಾಣ ಸಾಯುಜ್ಯ ನೆನೆದಿರಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಕ್ರಿಮಿಯದುವೆ ಸತ್ಕರ್ಮಿ, ಅದರಂತೆ ನಾನೆಲ್ಲಿ?
ನಿಮಿಸಿದ ಬಾಳಿದುವೆ, ಮಾಭೋಗ ಇನ್ನೆಲ್ಲಿ?
ಧರ್ಮಿಧರ್ಮಗಳ ಬಾಳೆಲ್ಲ ಅಂದಾಯ್ತು-ಈಗೆಲ್ಲಿ?
ನಿಮಿಷ ನಿಮಿಷದ ಚಿಂತೆ ಇಂತಲ್ಲದಿನ್ನಿಲ್ಲಿ,
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ.
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೪

ಆಸೆಯನಳಿದು, ರೋಷವ ನಿಲ್ಲಿಸಿ,
ಜಗದ ಪಾಶವನರಿದು,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತ ಬಲ್ಲರೊ
ಅಪ್ಪಣಪ್ರಿಯ ಚನ್ನಬಸವಣ್ಣಾ?
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಒಂಟೆಗಳಿಗೆ ನಗುವೋ ನಗು

- ಡಾ || ಲತಾ ಗುತ್ತಿ

ಉದ್ದಗಲ ಮರುಭೂಮಿ ಕೊರೆಯುವ ಬಿಸಿಲು
ದಿನಗಳೇ ರಣ ರಣ ಮಟ ಮಟ ಮಧ್ಯಾನ್ಹ
ಕೊನೆ ಇರದ ದಾರಿ ಸತ್ತು ಹೋದ ಮಣ್ಣು
ತಂಪು ಇಂಪಿಲ್ಲದ ಸಂಜೆಗೆ
ಡೇರಿ ಹೂಡುವ ಯಾತ್ರಿಕರ
ಬಿಡುಗಡೆಯಾಗುವ ಒಂಟೆಗಳ ಸಂಭ್ರಮ.
ಗುಂಪು ಗುಂಪುಗಳ ಎಷ್ಟೊಂದು ಒಂಟೆಗಳು
ಮಾತುಕತೆ ಇನ್ನೂ ಎಷ್ಣು ದೂರ
ಮೆಲುಕುತ್ತ ಮೈಲೇಜ್ ಎನಿಸುತ್ತವೇನೋ!
ಓಯಸಿಸ್ ಇಲ್ಲ
ನೀರಿಲ್ಲದ ಊಟವಿಲ್ಲದ ದಂಡಿಗೆ ಸುಸ್ತು
ಆರಿಸಿ ದಷ್ಟಪುಷ್ಟದ ಒಂಟೆ ಎಳೆದು
ಆಯಿತಲ್ಲ ಎರಡೂ
ರುಂಡ ಸಿಡಿಸಿ ಹೊಟ್ಟೆಯೊಡೆದು
ನೀರೆಳೆದು ಬೆಂಕಿಗೆ ತಳ್ಳಿ ಸುಟ್ಟು
ತಿಂದಿದ್ದೇನು ಮಜ ಅವರಿಗೆ
ಕರುಳು ಕಳೆದುಕೊಂಡಿದ್ದೇನು ದುಃಖ
ಇವುಗಳಿಗೆ.
ಶತ ಶತಮಾನದ ದಲಿತಗಳಿವು
ಇದ್ದರೂ ಶಕ್ತಿ ಎದುರಿಸಲಾರದ ಶೋಷಿತಗಳಿವು
ಧ್ವನಿ ಇಲ್ಲದ ಗುಂಪುಗಳಿವು
ಸ್ವತಂತ್ರವಿಲ್ಲದ ದೇಸಿಗಳು
ಅಬ್ಬಬ್ಬಾ ಎಷ್ಟೊಂದು ಸಹನೆ,
ಆದರೂ ಒಳಗೊಳಗೆ ಕೊರಗುವ ದುಃಖ ದುಮ್ಮಾನ
ಈಗೀಗ ಪಾತ್ರವಾಗಿವೆ
ಅಲ್ಲಾನ ನಾಡಿನ ಅಲ್ಲಾನ ಕೃಪೆಗೆ
ಮರುಹುಟ್ಟು ಪಡೆದಿವೆ.

ಈಗ ಉದ್ದಗಲದ ಮರುಭೂಮಿಗೆ
ವಿದೇಶಿ ಕಾರು ವಿಮಾನಗಳ ದಾಳಿ
ಯಾರೊಬ್ಬ ಅರಬ್ ನೋಡುತ್ತಿಲ್ಲ ಮಾತಾಡಿಸುತ್ತಿಲ್ಲ
ಒಂಟೆಗಳೊಂದಿಗೆ
ಕಟ್ಟಿ ಹಾಕುವ ಮಾಲೀಕರಿಲ್ಲ
ಹೊಟ್ಟೆಯೊಡೆದು ನೀರೆಳೆಯುವ ದರೋಡೆ ಕೋರರಿಲ್ಲ
ದಂಡೆಗೆ ಸರಿದಿವೆ ಮರುಭೂಮಿ
ಮುದಿ ಹಡಗುಗಳು
ಕಲಿಸುತಿವೆ ಮರಿಗಳಿಗೆ
ಎಲ್ಲೆಂದರಲ್ಲಿ ಮರ್ಸಿಡಿಸ್ ಬೆಂಜ್‌ನಂತೆ
ಫ್ರೀಯಾಗಿ ಓಡಾಡಲು
ಈಗೀಗ ಶಕ್ತಿ ಬಂದಿದೆ ಬೆಂಜ್
ಡಿಕ್ಕಿ ಹೊಡೆದುರುಳಿಸುವ
ಸ್ವಾತಂತ್ರ್ಯಸಿಕ್ಕಿದೆ ಅಲೆಯುವ
ವಿದೇಶಿ ತೌಡು ತಿಂದು ಮೆಲಕುಹಾಕುತ್ತ
ನಗುತ್ತವೇನೋ!
ಒಂಟೆಗಳಿಗೀಗೀಗ ರಾಯಲ್ ಟ್ರೀಟ್‍ಮೆಂಟ್
ಮಾಲೀಷ್, ವಾಕಿಂಗ್‌ಮಾಡಿಸಲು
ಬಂಗ್ಲಾ ಮಕ್ಕಳು ಬರುತ್ತಿವೆಯಂತೆ
ಒಂಟೆಗಳಿಗೆ ಒಳಗೊಳಗೊ ನಗುವೋ ನಗು.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಪ್ರತ್ಯಕ್ಷ ದೇವರು

- ಶ್ರೀನಿವಾಸ ಕೆ ಹೆಚ್

ಮುಸ್ಲಿಂರಿಗೆ ಹಿಂದೂಗಳಿಬ್ಬರಿಗೂ ಪ್ರತ್ಯಕ್ಷ ದೇವರೆಂಬುವವನೊಬ್ಬನೆ
ಅವನೇ ನಮ್ಮ ಜತೆಗಿರುವ ಚಾಂದ್ ಯಾನೆ ಚಂದಿರ
ಮೊಹರಂಯಿರಲಿ ಯುಗಾದಿಯಿರಲಿ ಅವನ ಬೆಳ್ಳಿಯ
ಮುಳ್ನಗುವಿನ
ದರ್ಶನಕ್ಕಾಗಿ ಎಲ್ಲೆಡೆ ಕಾತರ
ಮತ್ತೇಕೆ ದೇವರು ಧರ್ಮದ ಹೆಸರಿನಲ್ಲಿ
ಬಾಂಬು ದೊಂಬಿ ದಾಂದಲೆ ಹಿಂಸೆ ಕೊಲೆ ಮುಗಿಯದ ಅವಾಂತರ
ದಿನಬೆಳಗಾದರೆ ಪತ್ರಿಕೆಯ ತುಂಬಾ ಸದಾ ವಾದ, ವಿವಾದ, ಮಸೀದಿ
ಮತ್ತು ಮಂದಿರ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಕಂದರಗಳು ತೆರೆದಿವೆ!ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಇತ್ತೀಚಿನ ಮಾಧ್ಯಮಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅವು ಪ್ರಪಂಚವನ್ನು ಹತ್ತಿರವಾಗಿಸಿವೆ ಎನ್ನುತ್ತಾರೆ. ಇದು ವ್ಯವಹಾರದ ಮಾತಾಯ್ತು. ಆದರೆ ಮಾನವನ ಮನಸ್ಸು? ಮನಸ್ಸುಗಳು ಹತ್ತಿರವಾಗಿವೆಯೆ ? ಕವಿ ಜಿ. ಎಸ್. ಶಿವರುದ್ರಪ್ಪನವರು ವಿಷಾದದಿಂದ ಹೀಗೆ ಹೇಳುತ್ತಾರೆ.
          ಎದೆ ಎದೆಗಳ
         ನಡುವೆ ಇರುವ
    ಸೇತುವೆಗಳು ಮುರಿದಿವೆ
  ಭಯ, ಸಂಶಯ, ತಲ್ಲಣಗಳ
       ಕಂದರಗಳು ತೆರೆದಿವೆ!

ಹೌದಲ್ಲವೇ ಸಖೀ ಇತ್ತೀಚೆಗೆ ಎಲ್ಲಾ ಸಂಬಂಧಗಳಲ್ಲೂ ಎಂತದೋ ಒಂದು ನಾಟಕೀಯತೆಯನ್ನು ಕಾಣುತ್ತಿದ್ದೇವೆ. ಇದು ಭಾವಪೂರ್ಣ, ಹೃದಯದಾಳದಿಂದ
ಬಂದ ಸಂವೇದನೆ ಎನ್ನಿಸುವುದೇ ಇಲ್ಲ. ಎಲ್ಲದರಲ್ಲಿಯೂ ಕೃತ್ರಿಮತೆ, ತೋರಿಕೆಯ ಆತ್ಮೀಯತೆ ಎದ್ದುಕಾಣುತ್ತದೆ. ಮನಸ್ಸು ಗೊಂದಲದಲ್ಲಿ ಸಿಲುಕಿ ಎಷ್ಟು
ಭಯಭೀತಗೊಂಡಿದೆಯೆಂದರೆ ಅದರಲ್ಲಿ ಸದಾ ಸಂಶಯ, ತಲ್ಲಣಗಳು ಧವಧವಿಸುತ್ತಿರುತ್ತವೆ. ಯಾರಮೇಲೆಯೂ ನಂಬಿಕೆ ಇಲ್ಲ. ಸ್ವತಹ ತನ್ನ ಮೇಲೂ ನ೦ಬಿಕೆ ಇಲ್ಲ. ಕವನವನ್ನು ಮು೦ದುವರೆಸುತ್ತಾ ಕವಿ
       ಮುಖ ಮುಖವೂ
        ಮುಖವಾಡವ
     ತೊಟ್ಟುನಿಂತ ಹಾಗಿವೆ
   ಆಡುತಿರುವ ಮಾತಿನೊಳಗೆ
     ಹೃದಯ ಕಾಣದಾಗಿದೆ !

ಎನ್ನುತ್ತಾರೆ, ಇದೆಲ್ಲಾ ಪ್ರಾರಂಭವಾದದ್ದಾದರೂ ಎಲ್ಲಿಂದಾ ? ಮನಸ್ಸುಗಳ ಮಧ್ಯೆ ಮುರಿದು ಬಿದ್ದಿರುವ ಸೇತುವೆಗಳನ್ನು ಇನ್ನಾದರೂ ಸರಿಪಡಿಸಬೇಕಲ್ಲವೇ ಸಖಿ ? ವ್ಯಕ್ತಿ - ವ್ಯಕ್ತಿಯ ನಡುವಿನ ನಂಬಿಕೆಗಳು ಉಳಿಯಬೇಕಾದರೆ, ಉಳಿದು ಬೆಳೆಯಬೇಕಾದರೆ ವ್ಯಕ್ತಿ ಮೊದಲು ಪ್ರಾಮಾಣಿಕನಾಗಬೇಕು. ಅವನು ತೊಟ್ಟ ಎಲ್ಲ ಮುಖವಾಡಗಳನ್ನೂ ಕಿತ್ತೂಗೆದು, ನಿಜದ ಮುಖದೊಂದಿಗೆ ಮುಖಾಮುಖಿ ನಿಲ್ಲಬೇಕು. ಗೆಲ್ಲಬೇಕು. ಆಗಲೇ ಇತರರ ಮೇಲೆಯೂ ನಂಬಿಕೆ ಮೂಡೀತು! ಸೇತುವೆಗಳು ಎದ್ದೀತು! ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಬಾರಯ್ಯ

- ಅನಂತರನಾರಾಯಣ ಎಸ್

ಬಾರಯ್ಯ  ಬಂದುದಕೆ ಏನನಾದರು ಕೊಟ್ಟು
ಕಳುಹಿಸುವೆ.  ಕುಳಿತೆನ್ನ ಬಳಿಗೆ ಬಂದು
ಕೇಳುವೊಡೆ ಹಾಡುವೆನು - ಅದು ಒಂದೆ ಸಂಪದವು
ಬೇಕಾದೊಡದನೀವೆ-ಹಾಡುವೆನು ಕೇಳು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಶ್ರೀಮತಿಯಾದೆ

- ರವಿ ಕೋಟಾರಗಸ್ತಿ

ಅರಿಯದ ಜೀವಕೆ ಸಂಗಾತಿಯಾದೆ
ಕಾಣದ ವಾಸಕ್ಕೆ ಅಣಿಯಾದೆ
ಪ್ರೀತಿಯ ಮಡಿಲಿಗೆ ಸೊಸೆಯಾದೆ

ಒಲುಮೆಯ ಕಣ್ಣಾದೆ
ಅಮೃತದ ಹಣ್ಣಾದೆ
ಕತ್ತಲೆಯ ಬಾಳಿಗೆ ಜ್ಯೋತಿಯಾದೆ
ಕೈ ಹಿಡಿದವನ ಬದುಕಿಗೆ ನೆರಳಾದೆ
ಬಾಳ ಕುಡಿಗೆ ತಾಯಿಯಾದೆ

ಜೀವಕೆ ಗತಿಯಾದೆ
ಜೀವನ ರತಿಯಾದೆ
ಪ್ರೇಮದ ಸತಿಯಾದೆ
ಬಾಳ ಗೆಳತಿಯಾದೆ
ಶ್ರೀಮತಿಯಾದೆ.
         ***

ಕೀಲಿಕರಣ: ಕಿಶೋರ್‍ ಚಂದ್ರ

ಮರಳಿನ ಹಡಗು

- ಮಂಜುನಾಥ ವಿ ಎಂ

ನಾನು ಮರಳಿನಲ್ಲೊಂದು ಹಡಗನ್ನು ಕಟ್ಟಿಕೊಂಡೆ,
ಪ್ರಯಾಣ ಬಹುದೂರದಾದ್ದರಿಂದ.

ಸಮುದ್ರದ ಮಧ್ಯೆ ಬೃಹತ್ ಅಲೆಯೊಂದು ಏರಿ ಬಂದಾಗ
ನಾನು ಧೃತಿಗೆಡಲಿಲ್ಲ;
ತಿಮಿಂಗಿಲವೊಂದು ಢಿಕ್ಕಿಯೊಡೆದು, ರಕ್ತ ಕಾರಿ ಸತ್ತು ಹೋಯಿತು.

ಗಹಗಹಿಸಿ ನಗತೊಡಗಿದೆ, ಆಗ ಮರಳಿನ ಕಣಗಳು ಉದುರತೊಡಗಿದ್ದು
ನನಗೆ ಗೊತ್ತಾಗಲಿಲ್ಲ.

ಹಾಯಿಗಂಬದ ಮೇಲೆ ಮಲಗಿ ಸಮುದ್ರದ ಒಣಗಾಳಿ ಸೇವಿಸುತ್ತಿದ್ದವನು,
ದಡ ಕಂಡಿತೆಂದು ಒಮ್ಮೆಲೇ ಹಾರಿದೆ.

ಅಯ್ಯೋ ನಾನು ಪ್ರೀತಿಯ ಹುಚ್ಚಿನಲ್ಲಿ ಯಾನ ಕೈಗೊಂಡಿದ್ದು
ಅಂತ ಕಾಣುತ್ತೆ, ಕಡಲಿನ ಧೈತ್ಯ ಸುಳಿಗಳಲ್ಲಿ ಗಿರಿಗಿಟ್ಟೆಯಂತೆ ಗಿರಕಿ
ಹೂಡೆಯುತಾ ಪ್ರಪಾತಕ್ಕೆ ಬಿದ್ದೆ.
        *****

ಲಿಂಗಮ್ಮನ ವಚನಗಳು - ೩

ಮನ ಮರವೆಗೆ ಮುಂದುಮಾಡಿತ್ತು.
ತನು ಕಳವಳಕ್ಕೆ ಮುಂದುಮಾಡಿತ್ತು.
ಆಸೆರೋಷವೆಂಬವು ಅಡ್ಡಗಟ್ಟಿದವು.
ಕೋಪ ಕ್ರೋಧವೆಂಬವು ಮುಂದುವರಿದವು.
ಇದರೊಳಗೆ ಜಗದೀಶ್ವರನೆನಿಸಿಕೊಂಬವರ
ನುಡಿಯ ಓಸರಿಸುವದು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
    *****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಚೈತ್ರ

- ಡಾ || ಲತಾ ಗುತ್ತಿ

ಯಾವ ಋತು, ಮಾಸ ಪಕ್ಷಗಳಿಲ್ಲ ಇಲ್ಲಿ
ಆಷಾಡದ ಮಳೆ ನೋಡುವ
ಶ್ರಾವಣ ಭಕ್ತರೊಳಗೊಂದಾಗುವ
ಚೈತ್ರ ವಸಂತದೊಳಗೆ ಚಿಗುರುವಾಸೆ.
ಶ್ರಾವಣದ ಜೋಕಾಲಿಗೆ ನಿಟ್ಟುಸಿರಿಡುತ್ತೇನೆ.....
ಹಳ್ಳ ಹೊಳೆ ಕೊಳ್ಳ ನೆನಪಾದಾಗೆಲ್ಲ
ನಾನೇ ತೇಲಿಬಿಡಲೇನೋ ಎಂದು
ಚಡಪಡಿಸುತ್ತೇನೆ.
ಈ ಉರಿಬಸಿಲಿನ ಮರುಭೂಮಿಯಲ್ಲೂ
ನನ್ನ ನಾಡು ಹಸಿರು ಹೊಲಗದ್ದೆ,
ಹೂವುಗಳ ಮಂದಾರ ನೆನಪಿಸಿಕೊಂಡಾಗೆಲ್ಲ
ಚೈತನ್ಯ ಮೂಡಿ ಚೈತ್ರವಾಗುತ್ತೇನೆ
ನೆನಪುಗಳು ಬಸಿರಾಗುತ್ತವೆ
ವೇದನೆಗೆ ಸಿಕ್ಕು ಕವನಗಳು ಕುದಿಯುತ್ತವೆ.
ಆಷಾಢದ ಮುಸಲಧಾರೆಯಂತೆ
ಕವನಗಳು ಪ್ರಸವಿಸುವಾಗ
ನಾನು ವಸಂತಿಸುತ್ತೇನೆ
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಸಣ್ಣ ಸಂಗತಿ

ಚಿತ್ರ: ಪ್ರಮೋದ್ ಪಿ ಟಿ
ಪ್ರಿಯ ಸಖಿ,
 
ಮೊನ್ನೆ ಕೆ. ಎಸ್. ನರಸಿಂಹಸ್ವಾಮಿಗಳ ‘ಸಣ್ಣ ಸಂಗತಿ’ ಎಂಬ ಒಂದು ಸುನೀತ (ಸಾನೆಟ್)ವನ್ನು ಓದುತ್ತಿದ್ದೆ.. ಕವನದ ಹೆಸರೇ ಸೂಚಿಸುವಂತೆ ಕವಿ ಅಲ್ಲಿ ಹಿಡಿದಿಟ್ಟ ಚಿತ್ರ ಅತ್ಯಂತ ಸಣ್ಣ ಸಂಗತಿ. ಆದರೆ ಅದರಲ್ಲಿರುವ ಧ್ವನಿ ಮಾತ್ರ ಮಹತ್ತರ ವಾದುದು. ಕವಿ ಚಿತ್ರಿಸಿರುವ ಆ ಸಣ್ಣ ಸಂಗತಿಯಾದರೋ ಇಷ್ಟೆ ಸೋನೆ ಮಳೆ ಹಿಡಿದ ನಡುರಾತ್ರಿ. ಇತ್ತ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲ್ಲಿ ಅರ್ಧ ಕಣ್ಣು ಮುಚ್ಚಿ ಮಲಗಿದೆ. ಅದೂ ಬರಿಮೈಲಿ. ನಿದ್ದೆಗಣ್ಣಿನಲ್ಲೇ ಪಕ್ಕದಲ್ಲಿರುವ ತಾಯಿ ಕೈನೀಡಿ ಹೊದಿಕೆಯನ್ನು ಸರಿಪಡಿಸಿದ್ದಾಳೆ. ಆದರೆ ಮಗು ಮತ್ತೆ ಹೊದಿಕೆಯನ್ನು ಕಿತ್ತೆಸೆದು ಬರಿ ಮೈಲಿ ಮಲಗುತ್ತದೆ. ಸುನೀತದ ಕೊನೆಯ ಎರಡು ಸಾಲು ಹೀಗಿದೆ.

"ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ
"

ಈ ಎರಡು ಸಾಲುಗಳಲ್ಲಿ ಎಂತಹಾ ಅರ್ಥ ತುಂಬಿದೆ ನೋಡಿದೆಯಾ ಸಖಿ. ತಾಯಿ-ಮಗುವಿನ ಸಂಬಂಧದಲ್ಲಾಗಲಿ ಸೃಷ್ಟಿಯೊಂದಿಗಿನ ಮಾನವನ ಸಂಬಂಧದಲ್ಲಾಗಲಿ ತಾಯಿಯೂ ಸೃಷ್ಟಿಯೂ ಉನ್ನತವಾದ ಸ್ಥಾನದಲ್ಲಿ ನಿಂತು ಮಗುವೂ ಮಾನವನೂ ಅರಿತೂ ಮಾಡಿದ ತಪ್ಪುಗಳನ್ನು ಕ್ಷಮಿಸುತ್ತಲೇ ಇರುತ್ತಾರೆ. ಆದರೆ ಆ ಕ್ಷಮೆಗೆ ಬೆಲೆ ಕೊಡದ ಮಗು ಮಾನವ ತನ್ನ ಅಹಂಕಾರದಿಂದ, ತಾ ಮಾಡಿದ್ದೇ ಸರಿಯೆಂಬ ಗರ್ವದಿಂದ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾನೆ. ಬಹುಶಃ ತಾಯಿಯೂ ಸೃಷ್ಟಿಯೂ ತೋರುವ ಕ್ಷಮೆಗೆ, ಮಗುವಿನ-ಮಾನವನ ತಪ್ಪುಗಳಿಗೆ ಕೊನೆಯೆಂಬುದೇ ಇಲ್ಲ! ಆದರೆ ತಾಯಿಯ ಸೃಷ್ಟಿಯ ಅಖಂಡ ಕ್ಷಮೆಗೂ ಮಿತಿಯೆಂಬುದೊಂದಿದೆ ಎಂದು ಅನ್ನಿಸುವುದಿಲ್ಲವೇ?  ಆ ಕ್ಷಮೆಯನ್ನು ಕಳೆದುಕೊಂಡ ಕೊನೆಯ ದಿನ ಬಹುಶಃ ಇಲ್ಲಿ ಏನೂ ಉಳಿದಿರುವುದಿಲ್ಲ! ಅಂತೂ ಮಾಡುವ ಅಂತಹಾ ಕ್ಷಮೆ ಇಲ್ಲದ ತಪ್ಪನ್ನು ನಾವ್ಯಾರೂ ಮಾಡದಂತೆ ಸಮಯ ಮೀರುವ ಮೊದಲೇ ಎಚ್ಚೆತ್ತುಕೊಳ್ಳಬೇಕಲ್ಲವೇ ಸಖಿ?

ಪೊರೆವ ಕೈಗಳ ದುಡಿಮೆಯನ್ನು ಲೆಕ್ಕಿಸದ ಮಗು ಹೊದಿಕೆಯನು ಮತ್ತೆ ಮತ್ತೆ ಒದೆದು ಮುಂದೊಮ್ಮೆ ಪೊರೆವ ಕೈಗಳ ಪ್ರೇಮವನ್ನೇ ಕಳೆದುಕೊಳ್ಳಬಾರದಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಕಾರಣ ಯಾರಿಗೆ ಗೊತ್ತು ?

- ನರಸಿಂಹಸ್ವಾಮಿ ಕೆ ಎಸ್

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರೆಳಲ್ಲಿ ; ಮಾತಿಲ್ಲ; ಉಸಿರು.

ಥಳ ಥಳಿಸುನ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡುಬೆರಳ
ಉಂಗುರದ ನಡುಹರಳ ಜ್ವಲಿಸಿ,

ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟ ತುಂಬುದಿಂಬಿನ ಮೇಲೆ ಹಣೆಗಿಟ್ಟ
ಕುಂಕುಮದ ಒತ್ತನು ಕುರಿತು,

ಏನೇನೊ ಮಾತು- ದೇವರು ಬಲ್ಲ !- ಮಾತೆಲ್ಲ
ಹೊಂದದೆ ಒಡೆದ ಕಿರುಮುತ್ತು;
ಮನಸಿನ ಮೇಲುಮಾಳಿಗೆಯಲ್ಲಿ ಬೆಳೆಕಿಲ್ಲ.
ಕಾರಣ ಯಾರಿಗೆ ಗೊತ್ತು?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಚಂದ್ರನ ಸವಾಲು

-
 
ನಾನು ಹಾಡಹಗಲೇ ರಾಜಾರೋಷಾಗಿ
ಆಕಾಶದಲ್ಲಿ ತಿರುಗಾಡಿದ್ದನ್ನು ನೀವೇ
ಎಷ್ಟೋ ಸಾರಿ ನೋಡೀದೀರೋ ಇಲ್ಲವೋ ಸತ್ಯ ಹೇಳಿ.
ಸೂರ್ಯ. ಸೂರ್ಯ. ಸೂರ್ಯ ಇವನೊಬ್ಬನೇ ಅಂತ ದೊಡ್ಡದಾಗಿ
ಹೇಳ್ತೀರಲ್ಲ
ಒಂದು ದಿನವಾದರೂ ರಾತ್ರಿ ಹೊತ್ತಿನಲ್ಲಿ ಆಕಾಶದಲ್ಲಿ
ಕಾಲಿಡೋ ಧೈರ್ಯ ಅವನಿಗಿದಿಯಾ?
ಬೇಕಿದ್ದರೆ ಏನು ಬೇಕಾದರೂ ಪಂಥ ಕಟ್ಟಿ ಸವಾಲು ಹಾಕ್ತೇನೆ
ಒಪ್ಕೋತಾನಾ ನೋಡೋಣ ಅವನನ್ನ ಕೇಳಿ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಉಭಯ ಸಂಕಟ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,

ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು
ಹೇಳದಿರೆ ತಾಳಲಾರನೋ ಕವಿಯು!

ಕುವೆಂಪು ಅವರು ‘ಉಭಯ ಸಂಕಟ’ ಕವನದ ಈ ಸಾಲುಗಳು ಎಷ್ಟೊಂದು ಮಾರ್ಮಿಕ ವಾಗಿವೆಯಲ್ಲವೇ?’

ಎದೆಯೊಳಗೆ ಅವ್ಯಕ್ತವಾಗಿರುವ ಭಾವಗಳು ತಕ್ಕ ಮೂರ್ತರೂಪ ಪಡೆಯುವುದು ಎಂತಾ ಕಷ್ಟದ ಕೆಲಸ! ಆ ಕಷ್ಟ ಕವಿಯೊಬ್ಬಗೇ ಗೊತ್ತು! ಅನುಭವದ ಸವಿಯನ್ನು ಎಂತಾ ತಕ್ಕ ಪದಗಳಿಂದಲೂ ವರ್ಣಿಸಲು ಅಸಾಧ್ಯ. ಇದು ಭಾಷೆಯ ಸೋಲೋ? ಕವಿಯ ಸೋಲೋ? ಯಾವುದೇ ವ್ಯಕ್ತ ಭಾವಗಳೂ ಅವು ಅವ್ಯಕ್ತವಾಗಿದ್ದಾಗಲೆ ಸುಂದರವಾಗಿತ್ತು ಎನ್ನಿಸಿದರೆ ಅಂದೊಂದು ಸೋಲೇ ತಾನೇ? ಬಹುಶಃ ಕವಿಯೊಬ್ಬನ ಮಿತಿಯೂ ಇದೇ ಏನೋ?

ಆದರೆ ಹೇಳದಿದ್ದರೆ ತಾಳಲಾಗುವುದೂ ಇಲ್ಲವೆಂಬ ತುಡಿತ ಕವಿಗೆ ಮೂಡಿದಾಗ ಆತ ಏನು ಮಾಡಬೇಕು ? ಎದೆಯೊಳಗಿಂದಾ ಭಾವಗಳು ಒತ್ತಿ ಬಂದಾಗ ಆತ ಬರೆಯದೆಯೂ ಉಳಿಯಲಾರ! ಸಮರ್ಥ ಕವಿಯೊಬ್ಬ ತನ್ನ ಅಮೂರ್ತ ಭಾವಗಳಿಗೆ ತನ್ನ ಮಿತಿಯಲ್ಲೆ ಸಮರ್ಥ ಮೂರ್ತರೂಪ ಕೊಡಬಲ್ಲನಲ್ಲವೇ?

ಆದರೆ ಇಂಥಾ ಯಾವ ಒತ್ತಡಗಳೂ ಇಲ್ಲದೇ ಬಲವಂತವಾಗಿ ಹುಟ್ಟಿಸಿದ ಕವನ, ಕಷ್ಟಪಟ್ಟು ಪದ ಪದಗಳನ್ನು ಜೋಡಿಸಿ ಮಾಡಿದ ಜಾಳು ಪದ್ಯ. ಇತ್ತ ಭಾವಗಳ ಸಮರ್ಥ ಅಭಿವ್ಯಕ್ತಿಯೂ ಆಗುವುದಿಲ್ಲ. ಅತ್ತ ಸುಂದರ ಕವನ ಎನ್ನಿಸಿಕೊಳ್ಳುವುದೂ ಇಲ್ಲ.

ಹೇಳಿಬಿಟ್ಟಿರೆ ಅನುಭವದ ಸವಿ ಹಾಳಾಗಿ ಬಿಟ್ಟೀತೆಂಬ ಚಡಪಡಿಕೆ ಹೇಳದೇ ಉಳಿದರೆ ತಾಳಲಾಗದಂತಹ ಒತ್ತಡ, ಇಂತಹ ಉಭಯಸಂಕಟದ ಮೂಸೆಯಲ್ಲಿ ಪ್ರತಿಯೊಬ್ಬ ಕವಿಯೂ ಹದವಾಗಿ ಬೇಯಬೇಕು. ಆಗಲೇ ಉತ್ತಮ ಕವನ, ಸಮರ್ಥ ಅಭಿವ್ಯಕ್ತಿ ಹೊರಬೀಳಬಹುದಲ್ಲವೇ? ನೀನೇನನ್ನುತ್ತೀ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಚಂದ್ರ ಆಗೋದು ಸಾಧ್ಯವಿಲ್ಲ

- ಶ್ರೀನಿವಾಸ ಕೆ ಹೆಚ್

ನೂರು ಅಶ್ವಮೇಧ ಯಜ್ಞ ಮಾಡಿದರೆ
ಯಾರು ಬೇಕಾದರೂ ಆಗಬಹುದು ಇಂದ್ರ ಹೌದೊ ಅಲ್ಲವೊ?
ಆದರೆ ಸಾವಿರ ಯಜ್ಞ ಮಾಡಿದರೂ ಯಾರೂ ಚಂದ್ರ
ಆಗೋದು ಸಾಧ್ಯವಿಲ್ಲ ಗೊತ್ತು ತಾನೇ?
ಸೂರ್ಯ ಅವನೊಬ್ಬನೇ ಇರಬಹುದು ಆದರೆ
ಚಂದ್ರ ನಾನೊಬ್ಬನೆ.  ಸೂರ್ಯನಿಗೂ
ಚಂದ್ರ ಆಗೋದು ಸಾಧ್ಯವಿಲ್ಲ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಜರ್ಮನಿಯ ರೈತ

- ಮಂಜುನಾಥ ವಿ ಎಂ
 
ಇಂಡಿಯಾದ ಭೂಪಟದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣದಿರುವ ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಎಪ್ಪತ್ತರ ದಶಕದಲ್ಲಿ ಇವನು ಬಂದು ತಳ ಊರಿದ. ನೀರಿನಂತೆ ಜನರ ರಕ್ತ ಹೀರಿದ ಹಿಟ್ಲರ್ ನೆಲದಿಂದ ಬಂದವನಾದರೂ ಇವನು ಗಾಂಧಿಯ ನೆರಳಿನಲ್ಲಿದ್ದ. ಏಳು ಅಡಿಗಿಂತ ಎತ್ತರವಿದ್ದ ಇವನು ಸೇಬಿನ ಬಣ್ಣ ಹೊಂದಿದ್ದ. ಇವನು ಪ್ಯಾಂಟ್ ಹಾಕಿದ್ದನ್ನು ನಾನು ನೋಡಲೇಯಿಲ್ಲ. ಬಣ್ಣಬಣ್ಣದ ಚೆಡ್ಡಿಗಳನ್ನು ಧರಿಸುತ್ತಿದ್ದ, ನಮ್ಮಂತೆ ಮಾಮೂಲಿ ಅಂಗಿ ತೊಡುತ್ತಿದ್ದ. ಕಟ್ಟಿಗೇನಹಳ್ಳಿಯ ತಿಗಳನೊಬ್ಬನಿಂದ ತೋಟ ಖರೀದಿಸಿದ. ಯಲಹಂಕದಿಂದ ಕೇವಲ ಮೂರು ಮೈಲು ದೂರದಲ್ಲಿರುವ ಬಾಗಲೂರು ಕ್ರಾಸ್‌ನಿಂದ ಬಲಕ್ಕೆ ತಿರುಗಿಕೊಂಡು, ಅಲ್ಲಿಂದ ಮೂರು ಮೈಲು ಮುಂದೆ ಸಾಗಿದರೆ ಬಲಕ್ಕೆ ಕಟ್ಟಿಗೇನಹಳ್ಳಿ ಸಿಗುವುದು. ಆ ಗ್ರಾಮದಲ್ಲಿ ಹೇರಳವಾಗಿ ತಿಗಳರೇ ವಾಸಿಸುವುದು, ಅವರನ್ನು ಹೊರತುಪಡಿಸಿದರೆ ದಲಿತರು. ತಮಟೆ ಕಟ್ಟಿಕೊಂಡೋ ಚಪ್ಪಲಿ ಹೊಲೆದುಕೊಂಡು ಇವರು ಜೀವನ ತೂಗಿಸುವರು. ತಿಗಳರು ಕೃಷಿ ಮತ್ತು ಬೇಟೆಯಲ್ಲಿ ಪರಿಣಿತರು. ಒಂದು ಏಡಿಗಾಗಿ ಏಳು ಕೆರೆಗಳ ಕಟ್ಟೆಗಳನ್ನು ಒಡೆದರೆಂದು ನಮ್ಮಲ್ಲಿ ಹೇಳುತ್ತಾರೆ.

ಸಮುದ್ರ ದಂಡೆಯಲ್ಲಿ ತೆಂಗಿನಮರಗಳು ಇರುವಂತೆ, ಹೆದ್ದಾರಿ ತುದಿಗೆ ನನ್ನ ವೆಂಕಟಾಲ ಗ್ರಾಮ ಕಚ್ಚಿಕೊಂಡಿದೆ. ಹಾಗಾಗಿ ಹೆದ್ದಾರಿ ಬದುಕು ನನಗೆ ಅತ್ಯಂತ ಪರಿಚಿತ ಮತ್ತು ಆಪ್ತ. ನನ್ನ ಮನೆಗೆ ಬಾಗಿಲು ಇರಲಿಲ್ಲವಾದ್ದರಿಂದ ಹೆದ್ದಾರಿಯಲ್ಲಿ ಘಟಿಸುವ ಘಟನೆಗಳು, ಸಾಗಿಹೋಗುವ ವಾಹನಗೆಳೆಲ್ಲವೂ ಕಾಣುತ್ತಿದ್ದವು. ಬೆಳಿಗ್ಗೆ ಐದು ಗಂಟೆಗೆ ರಾಯಲ್ ಎನ್‌ಫೀಲ್ಡ್‌ಗಳು ಕಿವಿ ಮೊರೆಯುತ್ತಿದ್ದವು. ಒಂದೋ ಎರಡೋ ಆದರೆ ಸರಿ, ನೂರರಿಂದ ಐನೂರು ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ನನ್ನ ಗ್ರಾಮದಿಂದ ಮೂರ್‍ನಾಲ್ಕು ಮೈಲುಗಳ ದೂರದಲ್ಲಿ ಗಡಿಭದ್ರತಾ ಪಡೆ ಇರುವುದರಿಂದ ಸೈನಿಕರು ಎನ್‌ಫೀಲ್ಡ್ ಮತ್ತು ವಿಲ್ಲೀಸ್ ಜೀಪುಗಳನ್ನು ಓಡಿಸಿಕೊಂಡು ಬರುತ್ತಿದ್ದರು. ತರಬೇತಿಯಲ್ಲಿರುತ್ತಿದ್ದ ಅವರು ಭಯಭೀತಿಯಿಂದ ನಡುಗುತ್ತಾ ಉಚ್ಚೆ ಹೊಯ್ದುಕೊಳ್ಳುತ್ತಿದ್ದರು. ತರಬೇತಿ ಹೇಗೆಂದರೆ, ಅಕ್ಷರಶಃ ಅವರ ಪಾಲಿಗೆ ನರಕವೇ. ಕಾಡಿನಂತೆ ಬೆಳೆದ ಸಾಲುಹುಣಸೆಮರಗಳ ನಡುವೆ ಒಂದೇ ವೇಗದಲ್ಲಿ ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ಆವೊತ್ತು ಪಾಪದ ಸೈನಿಕನೊಬ್ಬ ವೇಗದಲ್ಲಿ ವ್ಯತ್ಯಾಸ ಮಾಡಿದ. ನನ್ನ ಅಣ್ಣ ಎರಡು ಕಂಬಳಿಗಿಡಗಳನ್ನು ಬಳಸಿಕೊಂಡು ದೊಣ್ಣೆಗಳಿಂದ ಸುಖದ ಹಾಸಿಗೆ ಮಾಡಿದ್ದ. ಅದರ ಮೇಲೆ ಮಲಗಿಕೊಂಡು ನೋಡುತ್ತಿದ್ದೆ. ಆ ಸೈನಿಕನ ಹಿಂದೆ ಕುಳಿತಿದ್ದ ತರಬೇತುದಾರ ಏಕಾ‌ಏಕಿ ಹಿಂದಿಯಲ್ಲಿ ಗದರುತ್ತಾ ಅವನನ್ನು ಕೆಡವಿಕೊಂಡ. ಎನ್‌ಫೀಲ್ಡ್ ಹುಣಸೆಮರಕ್ಕೆ ಗುದ್ದಿಕೊಂಡಿತು. ನೆಲದಲ್ಲಿ ಬಿದ್ದ ಸೈನಿಕ ಹಿಂದುಹಿಂದಕ್ಕೆ ತೆವಳಿಕೊಳ್ಳುತ್ತಿದ್ದ. ತರಬೇತುದಾರನ ಬೂಟುಗಳು ಕಬ್ಬಿಣದ ಅಟ್ಟೆಯವು, ನೆಲದಲ್ಲಿ ಬಿದ್ದು ಹಾವಿನಂತೆ ಜಾರಿಕೊಳ್ಳಲೆತ್ನಿಸುತ್ತಿದ್ದ ಸೈನಿಕನ ಮೊಣಕಾಲುಗಳಿಗೆ ಬಲವಾಗಿ ಒದೆಯತೊಡಗಿದ. ನೋವಿನಿಂದ ಸೈನಿಕ ಚೀರಿದಷ್ಟೂ ಒದೆಗಳು ಜಡಿಮಳೆಯಂತೆ ಅವನ ಮೇಲೆ ಬೀಳುತ್ತಿತ್ತು. ಮೊಣಕಾಲಿನ ಬಳಿ ಕಬ್ಬಿಣದ ರೇಖಿನಂಥ ಪ್ಯಾಂಟ್ ಕಿತ್ತುಕೊಂಡು ದೊಳದೊಳನೆ ರಕ್ತ ಸುರಿಯತೊಡಗಿತು. ಆ ಸೈನಿಕನ ‘ಅಕ್ಕತಂಗಿ’ಯರನ್ನು ತನ್ನ ಅಶ್ಲೀಲ ಬೈಗುಳಕ್ಕೆ ಎಳೆದುಕೊಂಡು ಬೈಯುತ್ತಲೇ ಇದ್ದ.

ಇಂಥಾ ನರಕಸದೃಶ ಚಿತ್ರದೊಳಗೆ ಜರ್ಮನಿಯ ರೈತ ಅತ್ಯುತ್ತಮ ಕಲಾಕೃತಿಯಂತೆ ಕಂಡ; ಕಾರ್ಮೋಡದಲ್ಲಿ ಬೆಳ್ಳಕ್ಕಿ ಮೂಡಿದಂತೆ. ಕೆಂಪುಬಣ್ಣದ ರಾಯಲ್ ಎನ್‌ಪೀಲ್ಡ್ ಮೇಲೆ ಬರುತ್ತಿದ್ದ, ಬೀಜದ ಹೋರಿಯನ್ನು ನಿರ್ವಹಿಸಿದಂತೆ. ಹಲ್ಲುಗಳ ಮಧ್ಯೆ ಹಂಚಿಕಡ್ಡಿ ಇರುತ್ತಿತ್ತು. ಎನ್‌ಫೀಲ್ಡ್‌ಅನ್ನು ರಾಕೆಟ್‌ನಂತೆ ಓಡಿಸುತ್ತಿದ್ದ. ಮೋಟಾರ್‌ಸೈಕಲ್ ಬರುವ ಸದ್ದಾಗುತ್ತಿದ್ದಂತೆ ನಾನು ಆಚೆ ಓಡಿಬರುತ್ತಿದ್ದೆ, ಕ್ಷಣಾರ್ಧದಲ್ಲಿ ಅವನು ದೊಡ್ಡಮೋರಿ ಇಳಿಜಾರಿನಲ್ಲಿ ಕರಗಿಬಿಡುತ್ತಿದ್ದ. ಫುಕುವೋಕಾನ ಸಹಜಕೃಷಿ ಮಾದರಿಯನ್ನು ಬಹುವಾಗಿ ಮೆಚ್ಚುತ್ತಿದ್ದ ಇವನು ತೋಟ ಅಭಿವೃದ್ಧಿಪಡಿಸುವಲ್ಲಿ ಜೀವ ತೇಯುತ್ತಿದ್ದ. ಅದರೊಂದಿಗೆ ಆಧುನಿಕ ಕೃಷಿಯೆಡೆಗೂ ಪ್ರಯೋಗ ಕೈಗೊಳ್ಳುತ್ತಿದ್ದ. ಪ್ರತಿ ಭಾನುವಾರ ಸಂಜೆ ನಾನು ನನ್ನ ಅಣ್ಣ ಮತ್ತು ಅಮ್ಮನೊಂದಿಗೆ ಸಂತೆಗೆ ಹೋಗುತ್ತಿದ್ದೆ. ಬಿಡಿಗಾಸಿನಲ್ಲಿ ಅಮ್ಮ ತರಕಾರಿ ಕೊಳ್ಳುವಲ್ಲಿ ಹೆಣಗುತ್ತಿದ್ದರೆ, ನಾವಿಬ್ಬರೂ ಆಟದ ಸಾಮಾನುಗಳನ್ನೇ ಆಸೆಯಿಂದ ದಿಟ್ಟಿಸುತ್ತಿದ್ದೆವು. ನಮ್ಮಿಂದ ಕೆಲದೂರದಲ್ಲಿ ಜೋರು ವ್ಯಾಪಾರ ವಹಿವಾಟಿನ ಗದ್ದಲ ಕೇಳಿಬರತೊಡಗಿತು. ನಾಟಿಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ನನಗೆ ಕಂಡಿದ್ದು ಅಷ್ಟುಜನರಲ್ಲಿ, ಆ ವ್ಯಾಪಾರ ಭರಾಟೆಯಲ್ಲಿ ಆಕಾಶವನ್ನು ತಿವಿಯುವಂತಿದ್ದ ಎತ್ತರದ ಜರ್ಮನಿಯ ಆ ರೈತ. ಹಂಚಿಕಡ್ಡಿಯನ್ನು ಬಾಯಿಯಲ್ಲಿ ಅತ್ತಿಂದಿತ್ತ ಆಡಿಸುತ್ತಾ ನಾಟಿಕೋಳಿಗಳನ್ನು ಪರೀಕ್ಷಿಸುತ್ತಿದ್ದ. ಇಂಡಿಯಾದ ಎಂದಿನ ಚೌಕಾಶಿ, ಕ್ಷುಲ್ಲಕ ಮಾತುಗಾರಿಕೆಯನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದ. ವಿದೇಶದವನೆಂದು ನಾಟಿಕೋಳಿ ವ್ಯಾಪಾರಸ್ಥ ದುರಾಸೆಯ ಬೆಲೆ ಒಡ್ಡಿದರೂ ಪ್ರಯೋಜನ ಕಾಣಲಿಲ್ಲ. ಈ ನೆಲದ ಬೆಲೆಗೆ ಇಳಿದು ಹತ್ತಾರು ನಾಟಿಕೋಳಿಗಳನ್ನು ಕೊಂಡು ಎನ್‌ಫೀಲ್ಡ್ ಮೇಲೆ ಹೊತ್ತು ಹಾಕಿಕೊಂಡು ಭರ್ರನೆ ನುಗ್ಗಿದ. ಆನಂತರ ಅವನೇ ಪೌಲ್ಟ್ರಿ ಫಾರಂ ಆರಂಭಿಸಿದ.

ಎಂದಿನಂತೆ ಹರಿದ ಸ್ಕೂಲು ಯೂನಿಫಾರಮ್ಮನ್ನು ಹೊಲೆದುಕೊಂಡು ಯಲಹಂಕದ ಹೈಸ್ಕೂಲಿಗೆ ನಾನು ಮತ್ತು ಅಣ್ಣ ಹೊರಟೆವು. ಹತ್ತು ಗಂಟೆಗೆ ರೈಲ್ವೆಗೇಟು ಬಿತ್ತು. ರೈಲು ಹಾದು, ಗೇಟು ಮೇಲೇಳುವವರೆಗೂ ನಾವು ಅಲ್ಲೇ ನಿಂತಿರುತ್ತಿದ್ದೆವು. ಎರಡೂ ಬದಿಯಲ್ಲಿ ಎತ್ತಿನಬಂಡಿಗಳು, ಬಸ್ಸು, ಮೋಟಾರ್‌ಸೈಕಲ್, ಸೈಕಲ್ಲುಗಳು ನೆರೆದಿದ್ದವು. ರೈಲು ಹೊರಟು, ಗೇಟು ತೆರೆಯುತ್ತಿದ್ದಂತೆ ಮುನ್ನುಗ್ಗಿ ಹೋಗಲು ಹಾತೊರೆಯುತ್ತಿದ್ದವು. ಸನಿಹದಲ್ಲೇ ಇರಬೇಕು, ರೈಲು ಕೂಗುವ ಸದ್ದು ಕೇಳಿಸಿತು. ಜರ್ಮನಿಯ ರೈತ ಬಹಳ ಹಿಂದೆ ಇದ್ದನೆಂದು ಕಾಣುತ್ತದೆ. ಭೂಗೋಳವನ್ನು ಎತ್ತಿ ಹಿಡಿದುಕೊಂಡಂತೆ ಸೈಕಲ್‌ಅನ್ನು ತಲೆ ಮೇಲಿಟ್ಟುಕೊಂಡು ಜನರು, ವಾಹನಗಳ ಮಧ್ಯೆ ನಡೆದು ಗೇಟು ದಾಟಿಕೊಂಡು, ಸೈಕಲ್‌ಅನ್ನು ಕೆಳಗೆ ಇಟ್ಟು, ಹತ್ತಿಕೊಂಡು ಮುಂದಕ್ಕೆ ಹೊರಟ ದೈತ್ಯ. ಇವನಿಗಿಂತ ಎತ್ತರದ, ದೃಢಕಾಯರು ತಲ್ಲಣಿಸಿಹೋದರು. ದಾರಿಯಿದ್ದರೂ ಮುಂದೆ ಸಾಗದ ಹಿಂಜರಿಕೆಯ, ಡೋಲಾಯಮಾನದ ಜನ ಅವನ ಎದೆಗಾರಿಕೆಗೆ ನಡುಗಿದರು.

ವೆಂಕಟಾಲದ ಬಸ್‌ನಿಲ್ದಾಣದಲ್ಲಿ ಗೋಣಿಮರದ ನೆರಳಿನಲ್ಲಿ ಮಾರಮ್ಮನ ದೇವಸ್ಥಾನವಿತ್ತು. ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಪೂಜೆ. ಹುಸಿನುಡಿಯುವವನು ಬೆಸ್ತರ ಜನಾಂಗದ ಪೂಜಾರಿ. ಮಲಯಾಳಿಗಳು, ಮುಸ್ಲಿಮರು ಮತ್ತು ಕೊಡವರು ಇವನನ್ನು ಅರಸಿಕೊಂಡು ಬರುತ್ತಿದ್ದವರು. ಏರ್‌ಫೋರ್ಸ್‌ನಲ್ಲಿ ಪಿಯುಸಿ ಓದುತ್ತಿದ್ದ ಜೀವನೇಶನ್ ಗೆಳೆಯರೊಂದಿಗೆ ಪೂಜಾರಿ ಹತ್ತಿರ ತನ್ನ ಫಲಿತಾಂಶ ಕೇಳಲು ಬಂದ. ‘ಹೋಗು ಮಗ್ನೆ, ನೀನು ಫಸ್ಟ್‌ಕ್ಲಾಸ್ನಲ್ಲಿ ಪಾಸಾಗ್ತೀಯ’ ಭವಿಷ್ಯ ನುಡಿದ. ಜೀವನೇಶನ್ ಪಿಯುಸಿಯಲ್ಲಿ ಅತ್ಯಂತ ಕೆಳದರ್ಜೆಯಲ್ಲಿ ಅನುತ್ತೀರ್ಣನಾಗಿ ವಾರವೇ ಕಳೆದಿತ್ತು. ಹಾಗಾಗಿ ಗ್ರಾಮದವರ್‍ಯಾರೂ ಕೂಡ ಅವನ ಬಳಿ ಸುಳಿಯುತ್ತಿರಲಿಲ್ಲ. ನಾನು ಗೆಳೆಯರೊಂದಿಗೆ ಗೋಣಿಮರದ ಬುಡದಲ್ಲಿ ನಿಂತುಕೊಂಡು ಈ ಹುಸಿಪೂಜಾರಿಯ ಅವತಾರಗಳನ್ನು ಗಮನಿಸುತ್ತಿದ್ದೆ. ಬದುಕಿನ ಸಂಕಷ್ಟದಲ್ಲಿ ನೊಂದಹೆಣ್ಣು ಅವನ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ದೇವರು ಬಂದಂತೆ ನಾಟಕವಾಡಿ ನೆಲದಲ್ಲಿ ಬಿದ್ದು, ‘ತಾಯೇ...’ ಎಂದು ಹೊರಳಾಡುತ್ತಿದ್ದ. ತನ್ನ ಸುತ್ತಲೂ ಕೆಂಪುಬಣ್ಣದ್ದೋ, ಅರಿಶಿಣವರ್ಣದ ಸೀರೆಯನ್ನೋ ಕಟ್ಟಿಕೊಳ್ಳುತ್ತಿದ್ದ. ಆ ಮರೆಯಲ್ಲೇ ದೇವರನ್ನು ಆವಾಹಿಸಿಕೊಳ್ಳುವುದು ಮಾಡುತ್ತಿದ್ದ. ‘ನನ್ನ ಸವತಿ, ಆ ಮೂಲೆಗ್ಯಾಕೆ ನಿಂತಿದ್ದೀಯ, ಮುಂದೆ ಬಾರೆ’ ಎಂದು ಹೆಣ್ಣಿನ ದನಿಯಲ್ಲಿ ಕರೆಯುತ್ತಿದ್ದ. ಅವಳು ಓಡಿಬಂದವಳೇ ಕೈಮುಗಿಯುತ್ತಾ ಉದ್ದಕ್ಕೆ ಮಲಗಿಕೊಳ್ಳುತ್ತಿದ್ದಳು. ಪೂಜಾರಿ ಎದ್ದು ನಿಂತು ಅವಳ ಅಂಕುಡೊಂಕಿನ ದೇಹದ ಭಾಗಗಳನ್ನು ತುಳಿದು ನೀರು ಮಾಡುತ್ತಿದ್ದ. ನಂತರ ನಿಂಬೆಹಣ್ಣುಗಳನ್ನು ನೀಡಿ, ‘ತಗಳೇ, ಈ ನಿಂಬೆಕಾಯಿಗಳನ್ನ. ಮೂರು ದಾರಿ ಕೂಡ ಕಡೆ ತುಳಿಯೇ, ಪೀಡೆ ತೊಲಗ್ತದೆ’ ಚೀರುತ್ತಿದ್ದ. ಜರ್ಮನಿಯ ರೈತ ಎನ್‌ಫೀಲ್ಡ್‌ನಲ್ಲಿ ಬಂದು ಮಾರಮ್ಮನ ಗುಡಿಯ ಮುಂದೆ ನಿಂತ. ಇವನು ಹುಸಿ ಪೂಜಾರಿಯ ಬೂಟಾಟಿಕೆಯನ್ನು ಖಂಡಿಸುವನೆಂದು ಎಣಿಸಿದ್ದು ತಪ್ಪಾಯಿತು. ಈ ಪೂಜಾರಿಯೋ ಇವನನ್ನು ಕಂಡಿದ್ದೇ ಎದ್ದು ಕುಣಿದಾಡಿದ. ರೈತ ಎದೆಗುಂದಲಿಲ್ಲ, ಬಲಿಗಂಬದ ಮೇಲೆ ನೀರಿನಂತೆ ಸುರಿದಿದ್ದ ಕುಂಕುಮವನ್ನು ತನ್ನ ಹಣೆಗೆ ಇಟ್ಟುಕೊಂಡು, ಮಾರಮ್ಮನಿಗೆ ಕೈಮುಗಿದು ಎನ್‌ಫೀಲ್ಡ್ ಹತ್ತಿದ. ಜರ್ಮನಿಯ ರೈತ ಈ ನಾಡಿನ ದೇವರನ್ನು ಗೌರವಿಸುತ್ತಿದ್ದ ಬಗೆ ನನ್ನಲ್ಲಿ ಇವೊತ್ತಿಗೂ ನಿಗೂಢವಾಗಿ ಉಳಿದಿದೆಯಾದರೂ ಅವನು ನೆಲದೊಂದಿಗೆ ತನ್ನ ದೇಹವನ್ನು ಹೆಣೆದುಕೊಂಡಿದ್ದ.   

ಕಟ್ಟಿಗೇನಹಳ್ಳಿಯ ತಿಗಳ ಹೆಂಗಸರೆಲ್ಲರೂ ಜರ್ಮನಿಯ ರೈತನ ದೇಹದಾಕಾರಕ್ಕೆ ಕಂಗೆಟ್ಟುಹೋಗಿದ್ದರು. ಅವನು ತನ್ನ ಹಲ್ಲುಗಳ ನಡುವೆ ಹಂಚಿಕಡ್ಡಿ ತೂರಿಸಿಕೊಂಡರೆ ಇವರೊಳಗೆ ವಿಚಿತ್ರ ನರಕ ಯಾತನೆಯ ಸುಖ ಹೊಮ್ಮುತ್ತಿತ್ತು. ಕುಕ್ಕರುಗಾಲಿನಲ್ಲಿ ಕುಳಿತು ಕಳೆ ಕೀಳುವಾಗಲಂತೂ ಅವನ ಆ ಅವಸ್ಥೆ ನೋಡಿ ಮುಸಿಮುಸಿ ನಗುತ್ತಿದ್ದರು. ಇವನ ಕೋಣೆಯ ಹತ್ತಿರ ಒಬ್ಬೊಬ್ಬರೆ ಹೋಗಿ ಬರಿಮೈನಲ್ಲಿ ಹಿಂತಿರುಗುತ್ತಿದ್ದ ಉದಾಹರಣೆಗಳಿಲ್ಲ. ಬಾಗಲೂರು ಜಾತ್ರೆಗೆ ತನ್ನ ಟಿಲ್ಲರ್‌ನಲ್ಲೇ ತೋಟದಲ್ಲಿ ದುಡಿಯುವ ಕೂಲಿಯಾಳುಗಳನ್ನು ಕರೆದುಕೊಂಡು ಹೋಗುತ್ತಿದ್ದ. ಆ ಗುಂಪಿನಲ್ಲಿದ್ದ ಅರ್ಧದಷ್ಟು ಹೆಂಗಸರು ಇವನೊಂದಿಗೆ ಮಲಗೆದ್ದವರೇ ಆಗಿರುತ್ತಿದ್ದರು. ಅವರಿಗೆ ಮಡಕೆ, ಕಡಲೆಪುರಿ, ಬೆಂಡುಬತ್ತಾಸು, ಸೌಟು ಕೊಡಿಸುತ್ತಿದ್ದ. ಹುಲಿವೇಷದ ಕುಣಿತದಲ್ಲಿ ಇವನು ಹೆಜ್ಜೆ ಕಿತ್ತಿಡುವಾಗಿನ ಮೋಜು ಕಂಡು ಜನ ನಿಬ್ಬೆರಗಾಗುತ್ತಿದ್ದರು. ಆಟಿಕೆಯ ತುತ್ತೂರಿ ಕೊಂಡು, ಬರುವಾಗ ಊದಿಕೊಂಡು ಸಂಭ್ರಮಿಸುತ್ತಿದ್ದ. ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ಮಣ್ಣಿನ ಕಾರ್ಯಕ್ಕೆ ಹಣ ನೀಡಿ, ಸಂತಾಪ ವ್ಯಕ್ತಪಡಿಸುತ್ತಿದ್ದ. ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗಲೂ ಚೆಡ್ಡಿಯಲ್ಲೇ ಹೋಗುತ್ತಿದ್ದೆ, ಅವನ ಅಂಗಿಯ ಮೇಲೆ ಮಣ್ಣಿನ ಕಲೆಗಳಿರುತ್ತಿದ್ದವು.

ಇವನ ತೋಟದಲ್ಲಿ ಸಪೋಟ, ಸೀಬೆ, ಹಲಸು, ಮಾವು, ತೆಂಗು ಹುಲುಸಾಗಿ ಮೈನೆರೆದು ನಿಂತಿತ್ತು. ತೋಟದ ಮನೆಯ ಹಿತ್ತಿಲಿನಲ್ಲಿ ಒಂದು ಎಕರೆ ಭತ್ತ ನಾಟಿ ಮಾಡಿದ್ದ. ಜರ್ಮನಿಯಿಂದ ಮೋಟುಕುರಿಯೊಂದನ್ನು ತರಿಸಿ ತಳಿ ಮಾಡಿದ್ದ. ವಾರಕ್ಕೊಮ್ಮೆ ಬೆಳೆದ ತರಕಾರಿಗಳನ್ನು ಟಿಲ್ಲರ್‌ನಲ್ಲಿ ತುಂಬಿಕೊಂಡು ಯಲಹಂಕದ ಸಂತೆಗೆ ಮಾರಲು ಬರುತ್ತಿದ್ದ. ಟಿಲ್ಲರ್ ಬಸ್‌ಸ್ಟ್ಯಾಂಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನಾವು ಹುಡುಗರೆಲ್ಲರೂ ಅವನೆಡೆಗೆ ಓಡುತ್ತಿದ್ದೆವು. ಹಂಚಿಕಡ್ಡಿಯನ್ನು ಅತ್ತಿಂದಿತ್ತ ಆಡಿಸುತ್ತಾ ನಮ್ಮ ಕಡೆ ನೋಡಿ ನಗುತ್ತಿದ್ದ. ಟಿಲ್ಲರ್‌ಅನ್ನು ನಿಧಾನಕ್ಕೆ ಓಡಿಸುತ್ತಿದ್ದದ್ದರಿಂದ ನಮ್ಮ ಕೈ ಕುಲುಕುತ್ತಿದ್ದ, ನಾವು ದೇವಮಾನವನನ್ನು ಸ್ಪರ್ಶಿಸಿದಂತೆ ಆ ದಿನ ಕಳೆಯುತ್ತಿದ್ದೆವು. 

ನಾನು ‘ರಾಯಲ್ ಎನ್‌ಫೀಲ್ಡ್’ ಕಾದಂಬರಿ ಬರೆಯಲು ಪ್ರೇರಣೆ ಈ ಜರ್ಮನಿಯ ರೈತ ಮತ್ತು ಇಬ್ಬರು ಮಿಲಿಟರಿ ಅಧಿಕಾರಿಗಳು. ಈ ನೆಪದಲ್ಲಿ ಇವನ ನೆನಪುಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಾಯಿತು. ಅವನನ್ನು ನಾನು ಮರೆತುಹೋಗಿದ್ದೆ, ಮೃತನಾಗಿದ್ದಾನೋ ಜರ್ಮನಿಗೆ ಹಿಂತಿರುಗಿದ್ದಾನೋ ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ. ಖಲೀಲ ಕೊಟ್ಟ ಮಾಹಿತಿಯಂತೆ ಅವನು ತೀರಿಕೊಂಡಿದ್ದಾನೆ ಎಂಬುದು ತಿಳಿದುಬಂತು. ನಾನು ಅವನನ್ನು ಹೆಣವಾಗಿ ಸಂಭೋದಿಸಲಾರೆ, ಇಂಡಿಯಾದ ಮಣ್ಣಲ್ಲಿ ಮಣ್ಣಾಗಿಹೋದನೋ ಅಥವಾ ತನ್ನ ತಾಯ್ನಾಡು ಜರ್ಮನಿಗೆ ಮರಳಿದನೋ ತಿಳಿದುಬರಲಿಲ್ಲ. ಆಯಾ ನೆಲದಲ್ಲಿ ಹೇಗೆ ಪ್ರಾಮಾಣಿಕವಾಗಿ ಜೀವಿಸಬೇಕೆಂಬುದನ್ನು ಅವನು ಸರಿಯಾಗಿ ಅರಿತುಕೊಂಡಿದ್ದ. ಅವನು ಈ ನೆಲದಲ್ಲಿ ಇಟ್ಟ ಹೆಜ್ಜೆಗಳು ಇವೊತ್ತಿಗೂ ಜೀವಂತವಾಗಿಯೇನೋ ಎಂದೆನಿಸಿದಾಗ ರೋಮಾಂಚನವಾಗುತ್ತದೆ, ಕಣ್ಣು ಒದ್ದೆಯಾಗುತ್ತದೆ. ಅವನಿಗೆ ಅಂದು ತಂಗಾಳಿಯನ್ನೋ, ಬಿರುಗಾಳಿಯನ್ನೋ ಬೀಸಿದ ಮರಗಳು ಇಂದಿಗೂ ಅಲ್ಲಲ್ಲಿ ಉಳಿದುಕೊಂಡಿವೆ.

ಗಾಂಧಿ ಮತ್ತು ಫುಕುವೋಕಾನನ್ನು ನೋಡಲಿಲ್ಲ ಎನ್ನುವ ಹತಾಶೆ, ಕೊರಗು ನನ್ನಲ್ಲಿ ಇಂದಿಗೂ ಉಳಿದಿಲ್ಲ.
     *****

ನಗೆ ಡಂಗುರ - ೧೧೯

ಅದೊಂದು ದಿನಸಿ ಅಂಗಡಿ. ‘ಇಲ್ಲಿ ಫ್ರೀ ಡಿಲಿವರಿ ಸೌಲಭ್ಯ ಉಂಟು’ ಎಂದು ದೊಡ್ಡದಾಗಿ ಬೋರ್ಡ್ ಬರೆಸಿ ತಗುಲಿಹಾಕಿತ್ತು. ಇದನ್ನು ಗಮನಿಸಿದ ಹಳ್ಳಿಯ ವ್ಯಕ್ತಿಯೊಬ್ಬ ಹೆರಿಗೆಗೆ ಸಿದ್ಧವಾಗುತ್ತಿದ್ದ ತನ್ನ ಹೆಂಡತಿಯನ್ನು ಈ ಅಂಗಡಿಗೆ ಕರೆತಂದ. "ಬನ್ನೀಮ್ಮಾ, ಕುರ್ಚಿಮೇಲೆ ಕುಳಿತುಕೊಳ್ಳಿ. ನಿಮಗೆ ಬೇಕಾದ ಸಾಮಾನು ಹೇಳುತ್ತಾ ಬಂದರೆ ನಾನೇ ಪ್ಯಾಕ್ ಮಾಡಿ ಕೂಡುತ್ತೇನೆ." ಅಂದ. ಮತ್ತೆ ಬೋರ್ಡ್ ನೋಡಿದರೆ? ಕೇಳಿದ ಹಳ್ಳಿಯವ. "ಅದು ಸಾಮಾನು ನಿಮ್ಮ ಮನೆಗೇ ನಾವೇ ಖರ್ಚಿಲ್ಲದೆ ಸಾಗಿಸಿಕೂಡುತ್ತೇವೆ!" ಹಳ್ಳಿಯವ ದಂಗಾದ!
***
ಕೀಲಿಕರಣ: ಎಮ್ ಎನ್ ಎಸ್ ರಾವ್

ಮುಳ್ಳು

- ನರಸಿಂಹಸ್ವಾಮಿ ಕೆ ಎಸ್

ತೋಟವಿದೆ ತನಗೆ, ಸುಖಿ ತಾನು, ಎಂದನು ಮಾಲಿ;
ಎಳನೀರು, ರಸಬಾಳೆ, ಕಸಿಮಾವು, ಚೆಂಜೇನು!
ಬೇಕು ಬಾಳಿಗೆ ಒಂದು ತೋಟ, ಏನೇ ಇರಲಿ !-
ಚಿಂತೆಯೂ ಒಂದಿದೆ : ಇವನು ಕಾಯುವುದೆಂತು?

ಬೇಲಿಯಿದೆ ಎಂದು ನಂಬಿದೆ ತೋಟ ; ಆ ಬೇಲಿ
ಮುಳ್ಳಿರುವ ತನಕ ಆತಂಕ ತನಗಿಲ್ಲೆಂದು
ನೆರೆ ನಂಬಿ ತಾನು ತುಂಬಿದ ಹೂವ ತೊಟ್ಟಿಹುದು.
ತೋಟಕ್ಕೆ ಮುಳ್ಳು ಕಾವಲು ಎಲ್ಲ ಕಾಲದಲಿ.
ಒಡೆಯನಿಗೆ ಹೇಳಿ ಬಾಗಿಲ ತೆರೆದು ಬರಬಹುದು ;
ಕದ್ದು ಬಂದವರಿಗಿಲ್ಲಿದೆ ಮದ್ದು ; ಮುಳ್ಳಿಹುದು.

ಕಾಯುತಿದೆ ಮುಳ್ಳು ತೋಟವನು. ಈ ಭೂಮಿಯನು
ಕಾಯುತಿದೆ ಒಂದು ಕಾಣದ ಮುಳ್ಳು. ಮುಳ್ಳೆಂದು
ಲಘುವಾಗಿ ನುಡಿದರಾಶಕ್ತಿಗೆಲ್ಲಿದೆ ಹಾನಿ?
ಲೋಕವನು ರಕ್ಷಿಸುವ ಮುಳ್ಳಲ್ಲ ನಿರಭಿಮಾನಿ!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಸೂರ್ಯಕಾಂತಿ


- ವಿದ್ವಾನ್ ಐ ಮಾ ಮುತ್ತಣ್ಣ

ಅಕೊ ಮೂಡ ಬಯಲಿನಲಿ
ಬೆಳ್ನೆರೆಯ ಚೆಲ್ಲಿಹರು
ಅದೋ ಮೂಡ ಬಾನಿನಲಿ
ರವಿ ಕಾರುತಿಹನು!

ಭುವಿಯೆಲ್ಲ ಬೆಳಕಿನಾ
ಮುನ್ನೀರಂತಾದುದು;
ಗಿರಿಯೆಲ್ಲ ನಗುವಂತೆ
ತಲೆಯೆತ್ತಿ ನೋಡುವುದು.

ಚಂದಿರನ ಓಡಿಸಿತು
ಇಬ್ಬನಿಯ ಮಳೆಯು;
ಬಿಳಿವಣ್ಣು ತಾರಕೆಯ
ಹಕ್ಕಿಗಳು ಕುಟುಕಿದುವು.

ಪುಷ್ಪಫಲ ತರುಲತೆಗಳ್
ಪೂತ ತೇಜದಿ ನಕ್ಕು,
ಸೂರ್ಯಕಾಂತಿಯ ಶಾಂತ
ಪ್ರತಿಭೆಯನು ಸಾರುವುದು!

ಕಮಲಗಳು ನಗುನಗುತ
ತಲೆಯೆತ್ತಿ ನೋಡುವುವು,
ಮಿಗವಕ್ಕಿ ಆ ಕಾಂತಿ
ಕ್ಷೀರವನೆ ಕುಟಿಯುವುವು.

ಸೂರ್ಯವಂದನೆ ಮಾಡಿ
ಸೂರ್ಯಸ್ನಾನವ ಮುಗಿಸಿ
ಸೂರ್ಯಕಾಂತಿಯ ಕುಡಿಯೆ
ವಿಶ್ವವೇ ಬಾಯ್ಬಿಟ್ಟುವು.

ಮೂಡದೆಸೆ ಮೂಡಿರಲು
ಹೆಮ್ಮೆಯಿಂ ಬೆಳಗು-
ಆ ಕಾಂತಿ ತೋರಿಯೇ
ಲೋಕಗಳ ಮಿನುಗು!
    *****
ಕೀಲಿಕರಣ: ಕಿಶೋರ್‍ ಚಂದ್ರ

ಇದುವೆ ನನ್ನಯ ಸೇವೆ

- ಅನಂತನಾರಾಯಣ ಎಸ್

ಸಾಹಿತ್ಯ ಸಾಗರದ ದಡದಿ ನಿಲ್ಲುತಲಂದು
ನೋಡಿದೆನು ಆಸೆಯಿಂ ಅಲೆಗಳೆಡೆಗೆ
ಒಳಗೆ ಹುಡುಗಿಹ ಮುತ್ತುರತ್ನಗಳನೊಯ್ಯುವೆನೆ
ಕನ್ನಡಮ್ಮನ ಅಡಿಗೆ ಮಾಲೆಯಾಗಿಡಲು!

ದೂರದಿಂ ಕುಣಿಯುತ್ತ ಹತ್ತಿರಕೆ ಬಂದಿತಲೆ,
ನೋಡುತಲೆ ಧೀಗೆಟ್ಟೆ ರೌದ್ರರೂಪ!
ಸಾಗರದಿ ಮುಳುಗುತ್ತ ಮುತ್ತು ರತ್ನವನಾಯೆ
ಧೈರ್ಯಸಾಲದೆ ಅಂತೆ ನಿಂತ ಭ್ರಮೆಯೊಳಗೆ!

ಎದೆಯ ಕಂಬನಿ ಸುರಿಸಿ, ದಡದಿ ಮರಳಿನ ಮೇಲೆ
ಬಿದ್ದಿರುವ ಚಿಪ್ಪುಗಳನಾಯ್ದು ತಂದು
ಅಮ್ಮನಡಿಗಳಲಿಡುವೆ!  ಇದುವೆ ನನ್ನಯ ಸೇವೆ!
ತಪ್ಪುನಡೆದರು ಅಪ್ಪಿ ಮುದ್ದಿಪುದು ಮಮತೆ!
     *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೨

- ಲಿಂಗಮ್ಮ

ಮದ ಮತ್ಸರ ಬಿಡದು.
ಮನದ ಕನಲು ನಿಲ್ಲದು.
ಒಡಲ ಗುಣ ಹಿಂಗದು.
ಇವ ಮೂರನು ಬಿಡದೆ ನಡಿಸುವನ್ನಕ್ಕ,
ಘನವ ಕಾಣಬಾರದು.
ಘನವ ಕಾಂಬುದಕ್ಕೆ,
ಮದಮತ್ಸರವನೆ ಬಿಟ್ಟು,
ಮನದ ಕನಲ ನಿಲಿಸಿ,
ಒಡಲ ಗುಣವನೆ ಹಿಂಗಿಸಿ,
ತಾ ಮೃಡರೂಪಾದಲ್ಲದೆ,
ಘನವ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಚಂದ್ರ ನೀನೊಬ್ಬನೆ

- ಶ್ರೀನಿವಾಸ ಕೆ ಹೆಚ್

ಉರಿಯಿಲ್ಲ ಬಿಸಿಯಿಲ್ಲ
ಉರಿಬಿಸಿಲ ಬೇಗೆ ಬವಣೆಗಳಿಲ್ಲ
ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ
ಅಸ್ತಕ್ಕೆ ರಕ್ತದೋಕುಳಿಯಿಲ್ಲ
ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ
ಠಳಾಯಿಸಲೆಂಬ ಠೇಂಕಾರದವನಲ್ಲ.
ಏನಾದರೂ ಹೋದರು ಲೆಖ್ಖಿಸದೆ ಬೆಳಗು ಬೈಗಿನ ಕಾಲಚಕ್ರದ
ನಿಷ್ಠುರಕ್ಕೆ ನಿಷ್ಠನಾಗಿ ಸದಾ ಹೊತ್ತಿಕೊಂಡುರಿವ ಅಮಾನುಷನಲ್ಲ
ಅಹರ್ನಿಶಿ ನಮ್ಮ ಸುತ್ತ ಪ್ರೀತಿಯಲಿ ಸುತ್ತುತ್ತಲೇ ಇರುವ
ಪರಿವೀಕ್ಷಕ ನಿರಂತರ ಪರಿಕ್ರಮದ ಸಜೀವ ಮಾನುಷ್ಯಕಾಯ
ಈ ಇಳೆಯ ನಿಜಗೆಳೆಯ ಅಜಾತ ಶತ್ರು; ಲಕ್ಷ ನಕ್ಷತ್ರಗಳ
ರಾಜಾಧಿರಾಜ.

ಓ ಮನಃಕಾರಕನೇ
ಮನುಜನೊಳಗಿನ ಮನಸು
ನೂರಾರು ಕನಸು ಪ್ರೀತಿ ಪ್ರೇಮ

ನಿನ್ನದೇ ಸೋಮ, ನಮ್ಮೊಳಗಿನೆಲ್ಲ ಚಿತ್ರ ವಿಚಿತ್ರ ಬಯಕೆ ಕಾಮ.
ಧೀಶಕ್ತಿ, ಚಿತ್ತ ವೃತ್ತಿ, ಅನುರಕ್ತಿ ತೃಪ್ತಿ ಸಂತುಷ್ಟಿ
ಭಾಗ ರಾಗ ಅನುರಾಗ ಭಾವಾವೇಶ
ಅನ್ಯೊನ್ಯದನುಬಂಧ, ಆತ್ಮೀಯದೊಲುಮೆ ಮೈತ್ರಿಬಾಂಧವ್ಯ

ಭೂಮಿಯೊಳಗಣ ನೀರು
ಸಸ್ಯ ಔಷಧ ವನಸ್ಪತಿ
ಜ್ಞಾನ, ವಿಜ್ಞಾನ ರಸ ರಸಾಯನ ಋತುಮಾನದಧಿಪತಿ
ಎಂದೆಂದೂ ಆರದಂತಮೃತದೆಣ್ಣೆಯನೆರೆದು
ಬೆಣ್ಣೆಮುದ್ದೆಯ ಒಳಗೆ ಯಾರೋ ಹಚ್ಚಿ ಬಚ್ಚಿಟ್ಟ
ಆಕಾಶದದ್ಭುತ ದೀಪ, ನೀನು ಓ ತಿಂಗಳು
ತಂಗಳು ಕೈತುತ್ತಿನನ್ನಕ್ಕು ಇನ್ನಿರದ ರುಚಿಕೊಡುವ
ನಿನ್ನ ಬೆಳ್ಳಿ ಬೆಳದಿಂಗಳು.

ಮಧು ನಿನ್ನದು; ಮುದ ನಿನ್ನದು
ನಿನ್ನದೇ ಅದು; ಗಂಡು ಹೆಣ್ಣುಗಳ ಹೃದಯ
ಕವಾಟಗಳ ಕದ ತೆಗೆವ ಮಧುಚಂದ್ರ.

ವೃದ್ಧಿ ಕ್ಷಯ, ಭರತ ಕುಸಿತ, ಏರಿಳಿತ
ಎಲ್ಲ ನಮ್ಮಂತೆಯೇ ಅನ್ನು;
ಎಂದ ಮಾತ್ರಕ್ಕೆ ಓ ಚಗಚ್ಚಕ್ಷುವೇ
ದೇವರಲ್ಲವೆನ್ನುವರುಂಟೇ ನಿನ್ನನ್ನು
ಇರಬಹುದು ಬಿಡು ಸೂರ್ಯ ಅವನೊಬ್ಬನೆ
ಆದರೆ ಓ ಇಂದುವೇ, ಪೃಥ್ವಿಗತಿಸನಿಹದ ಬಂಧುವೇ
ಇಂದು, ಮುಂದು, ಎಂದೆಂದೂ,
ನಮಗೆ ನಮ್ಮ ಪೃಥ್ವಿಗತಿಸನಿಹದ ಬಂಧುವೇ
ಇಂದು, ಮುಂದು, ಎಂದೆಂದೂ,
ನಮಗೆ ನಮ್ಮ ಪ್ರೀತಿಯ ಚಂದ್ರ ನೀನೊಬ್ಬನೆ
ಚಂದ್ರನೆಂಬುವನೊಬ್ಬನೆ
ಚಂದ್ರ ನೀನೊಬ್ಬನೆ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಸಾವು

- ರೂಪಾ ಹಾಸನ

ಪ್ರಿಯ ಸಖಿ,
ಅಸಹಜ ಸಾವನ್ನು ಕಂಡು ಮನಕರಗದವರುಂಟೇ? ಸಾವು ಎಲ್ಲ ಜೀವಿಗೂ ಸಹಜವೇ. ಬೇಕಾದುದೇ. ಕವಿ ಪೇಜಾವರ ಸದಾಶಿವರಾಯರು ತಮ್ಮ ‘ಸಾವು’ ಎಂಬ ಸುನೀತದಲ್ಲಿ
(ಸಾನೆಟ್)

ಸಾವು ಸಹಜವು ನಿಜವೆ. ಸಾವಿಲ್ಲದೊಡೆ ಬಾಳು
ನೋವಿನೋಲುಗ ಜೀವದಾಧಿಕ್ಯಗೋಳು

ಎನ್ನುತ್ತಾರೆ. ತುಂಬು ಬಾಳನು ಬಾಳಿ ಸಾವಿಗೀಡಾದ ವ್ಯಕ್ತಿಯ ಬಗೆಗೆ ನಮಗಾಗುವ ದುಃಖದ ನೂರರಷ್ಟು ಪಾಲು ದುಃಖ ಕೊಲೆಯಾದ, ವೀರಮರಣದ ಹೆಸರಲ್ಲಿ ಸತ್ತ, ಆತ್ಮಹತ್ಯೆಗೊಳಗಾದ, ಅಪಘಾತದಿಂದ ಸತ್ತ ವ್ಯಕ್ತಿಯ ಇಂತಹ ಅಸಹಜ ಸಾವಿಗಾಗಿ ಆಗುತ್ತದೆ. ಇಂತಹ ಸಾವಿಗಾಗಿ ಮರುಗುತ್ತಾ ಕವಿ,

ಯಾರ ಹಸಿವಿಂಗಿಸಲು, ಯಾರ ಮದ ಭಂಗಿಸಲು
ಕೂರಲಗ ಕತ್ತಿಯಲಿ ನೆತ್ತರಿನ ಭುಗಿಲು?

ಎಂದು ಪ್ರಶ್ನಿಸುತ್ತಾರೆ. ಇಂತಹ ಅಸಹಜ ಸಾವುಗಳಿಗೆ ಕಾರಣವಾದರೂ ಏನು? ಎನ್ನುತ್ತಾ,

ಕಾವ ಕರುಣೆಯ ನಯದ ತೋಳ ತೊಂಗಲಿನಲ್ಲಿ
ಜೀವ ದುಂಬಿಯ ಆಟ

ಎಂದು ವಿಷಾದಿಸುತ್ತಾರೆ. ಕಾಯುವ ಕರುಣೆಯನ್ನು ನಂಬಿ ನೆಮ್ಮದಿಯಾಗಿರುವಾಗ ಕೊಲ್ಲುವಾಟವ ಆಡುವ ಈ ಆಳ್ವಿಕೆಗೆ ಉತ್ತರವೆಲ್ಲಿದೆ ? ಎನ್ನುತ್ತಾ, ಪದ್ಯದ ಕೊನೆಯಲ್ಲಿ

ಕೊಲೆಯು ಜೀವದ ಕೊನೆಯೆ! ಬಾಳು ಸಾವಿನ ಆಳೆ!
ಜಗದ ಸೌಂದರ್ಯದಂತಕನ ಸೂಳೆ!

ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ವಿಶೇಷ ಮಾನವ ಜನ್ಮ ಪಡೆದು ತನ್ನ ಜೀವನದ ಅಲ್ಪ ಭಾಗವನ್ನು, ಅನುಭವಿಸಿರದಾಗ ಕೊಲೆಯೇ ಜೀವದ ಕೊನೆಯಾಗಬೇಕೆ? ಈ ಬಾಳೆಂಬುದು ಸಾವು ಹೇಳಿದಂತೆ ಕೇಳುವ ಆಳಾಗಬೇಕೆ? ಎನ್ನುತ್ತಾ ಜಗತ್ತಿನ ಸೌಂದರ್ಯವೆನ್ನುವುದು ಅಂತಕ ಬೇಕೆನ್ನುವಂತೆ ಕುಣಿಸುವ, ಕೊನೆಗಾಣಿಸುವ ಸೂಳೆಯೆ? ಎಂದು ಪ್ರಶ್ನಿಸುತ್ತಾರೆ. ಹೌದು ಅಸಹಜ ಸಾವನ್ನು ತಡೆಯಲು ಇಲ್ಲಿ ಯಾರಿಗೂ ಸಾಧ್ಯವಿಲ್ಲ. ಇಂತಹ ಅಸಹಜ ಸಾವಿಗೆ ಆ ಅಂತಕ
ಉತ್ತರ ಕೊಡಬಲ್ಲನೇ ಸಖಿ?
     *****
ಕೀಲಿಕರಣ: ಎಂ ಎನ್ ಎಸ್ ರಾವ್

ನಗೆ ಡಂಗುರ - ೧೧೮

- ಪಟ್ಟಾಭಿ ಎ ಕೆ

ಮದುವೆ ಸಂದರ್ಶನ ನಡೆಯುತ್ತಿತ್ತು. ಭಾವಿ ಮಾವ ಹುಡುಗನನ್ನು ಮಾತನಾಡಿಸತೊಡಗಿದ:
ಭಾ.ಮ: "ನಿಮ್ಮ ವಿದ್ಯಾಭ್ಯಾಸ?" ಹುಡುಗ ತುಟಿಪಿಟಿಕ್ ಎನ್ನಲಿಲ್ಲ.
ಭಾ.ಮ: "ನಿಮ್ಮ ಕೆಲಸುಮಾಡುವ ಕಂಪನಿ ಹೆಸರು?" ಹುಡುಗ ತುಟಿ ಬಿಚ್ಚಲಿಲ್ಲ.
ಭಾ.ಮ: "ಹೋಗಲಿ, ನಿಮ ಕಂಪನಿಯಲ್ಲಿ ವರ್ಗಾವಣೆ ಪದ್ಧತಿ ಉಂಟುತಾನೆ?"
ಹುಡುಗ ತುಟಿ ಎರಡು ಮಾಡಲೇ ಇಲ್ಲ- ಮಗಳು ಇದನ್ನೆಲ್ಲಾ ಕೇಳಿಸಿಕೊಂಡು, "ಅಪ್ಪಾ, ಸಂದರ್ಶನ ಸಾಕು, ನಾನು ಈ ಹುಡುಗನನ್ನು ಒಪ್ಪಿದ್ದೇನೆ" ಎಂದಳು!
***
ಕೀಲಿಕರಣ: ಎಮ್ ಎನ್ ಎಸ್ ರಾವ್

ಅಕ್ಕಿಯಾರಿಸುವಾಗ

- ನರಸಿಂಹಸ್ವಾಮಿ ಕೆ ಎಸ್

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು;
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು;

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು;
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ, ಮುಂಗಾರಿನುರುಳು;

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು;
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿದ್ದು,

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು.
ಬೀಸಿರಿಯ ಕಿರುಮುತ್ತು ನುಚ್ಚಿನಲಿ ಮುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಬಂದೆನೊ - ಇದೊ ಬಂದೆ

- ವಿದ್ವಾನ್ ಐ ಮಾ ಮುತ್ತಣ್ಣ

ಕರೆಕರೆದು ಬರುವೆನೊ ಬಂದೆನೊ ಇದೊ ಬಂದೆ,
ಕರ್ಣಾಟ ಸಾಗರ ಸೇರಽಲು;
ತಿಳಿನೀರ ತಳವನ್ನು ಸೇರಲು!  ||ಕರೆ||

ಕೊಡಗಿನ ಮಲೆನಾಡ ಶಿಖರದೊಳುದಯಿಸಿ
ಹರಿಹರಿದೆ ಕನ್ನಡ ರಾಜ್ಯದೊಳ್;
ಕವಿರಸದ ಹನಿಯಾಗಿ ಸೇರಽಲು!

ಕಾಂತಿಯೊ ಇದು ಒಂದು ಕ್ರಾಂತಿಗೆ ಸಮನಾಗಿ
ಕರ್ಣಾಟ ಬಯಲೊಳು-ಈ ಕಾಂತಿ,
ದೇವಸೂರ್ಯನು ತೋರಿದೀಕಾಂತಿ!  ||ಕರೆ||

ಸೂರ್ಯಕಾಂತಿಯ ನಾನು ಕರ್ಣಾಟ ಸಾಗರ
ತೆರೆ ಮೇಲೆ ಥಳಥಳನೆ ತೇಲಿಽಸಿ;
ಸಹ್ಯಾದ್ರಿ ಏರಿದೆ ನೋಡಽಲು!

ವಜ್ರಪ್ರಕಾಶವು ಕರಿಮಣ್ಣು ಕರ್ಣಾಟ!
ಗೋದೆ ಕೃಷ್ಣಾ ತುಂಗಾ ಕಾವೇರೀ,
ತಾಯ್ಮಣಿಯರು ಮೀಸಿ ಮುದವೇರಿ!  ||ಕರೆ||

ನೂರಾರು ಜನಕುಽಲ ಹತ್ತಾರು ರಾಜ್ಯದೊಳ್
ನಾನೊರ್ವ ಕುಡುಪುತ್ರನದರೊಽಳು,
ಮುಳೂಗಿದೆ ಕರ್ಣಾಟ ತೆರೆಯೊಽಳು!

ಹನಿಗೊಂದು ಕವಿಯಾಗಿ ಅಲೆಗೊಂದು ಮುನಿಯಾಗಿ
ಜಲಚರದ ತೆರೆದಲ್ಲಿ ವೀರಽರೊ;
ಶಕ್ತಿಪ್ರಧಾಯಕ ರಾಜ್ಯಽವೊಽ  ||ಕರೆ||

ಸಂಪತ್ತು ಸಾಮ್ರಾಜ್ಯ ಸಂಸ್ಕೃತಿ ಸಾಹಿತ್ಯ
ರಸಿಕ ಕಲೆಗಳ ತವರೂಽರೊ;
ಪಂಪಾದಿ ಕವಿಗಳು ಬಳೆದೂರೊಽ

ಈ ರಾಜ್ಯ ಕರ್ಣಾಟ,- ಬಂದೆನೊ ಇದೊ ಬಂದೆ
ನಾನದಕೆ ನಾನಾಗಿ ಮೀಸಽಲೊ;
ತಾಯ್ನುಡಿ ಹಾಡುತ್ತ ಬಂದೆಽನೊ~  ||ಕರೆ||
    *****
ಕೀಲಿಕರಣ: ಕಿಶೋರ್‍ ಚಂದ್ರ

ಅರ್ಪಣ ಉಷೆಗೆ

ಯುಗಯುಗಗಳೇಕಾಂತ ಗೀತಹಾಡುತನಂತ
ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ!
ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ
ಅರ್ಪಿಸಿದೆ.  ನೀನೊಪ್ಪಿ ಒಲವ ಬಾಳಿಸಿದೆ!

ನಾನು ಕವಿ-ನೀ ಕಾವ್ಯ  ನಾ ಬರೆದ ಗೀತಗಳು
ನಿನ್ನ ಒಲವಿನ ನೂರು ಸೊಗಸು ನೆರಳು.
ನೀ ಬೆಳೆಸಿ ಬಾಳಿಟ್ಟ ನನ್ನ ಕಾವ್ಯದ ಬಳ್ಳಿ
ಹೂವಿಡುವ ಮುನ್ನವೇ ನೀ ಬಾಡಿಹೋದೆ!

ಅಂದು ನೀನಿದ್ದಾಗ ಈ ಕವಿತೆಗಳ ಮಾಲೆ
ಒಲವ ಮಂಗಳ ಸೂತ್ರ ನಿನ್ನ ಕೊರಳಲ್ಲಿ!
ಆ ಅಸೆ ಇಂದೆಲ್ಲಿ-ಇವು ನಿನ್ನ ನೆನಪಿನಲಿ
ಒಲವು ನೀಡುತಲಿರುವ ಭಾವದಶ್ರುಗಳು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೧

ಮಚ್ಚಬೇಡ.  ಮರಳಿ ನರಕಕ್ಕೆರಗಿ,
ಕರ್ಮಕ್ಕೆ ಗುರಿಯಾಗಬೇಡ.
ನಿಶ್ಚಿಂತನಾಗಿ ನಿಜದಲ್ಲಿ
ಚಿತ್ತವ ಸುಯಿಧಾನವ ಮಾಡಿ,
ಲಿಂಗದಲ್ಲಿ ಮನ ಅಚ್ಚೊತ್ತಿದಂತಿರಿಸಿ,
ಕತ್ತಲೆಯನೆಕಳೆದು, ಬಚ್ಚಬರಿಯ ಬೆಳಗಿನೊಳಗೆ
ಓಲಾಡಿ ಸುಖಿಯಾಗೆಂದರು
ನಮ್ಮ ಅಪ್ಪಣ್ಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಪ್ರಶ್ನೆಯಿಲ್ಲದ ಬದುಕೊಂದು ಬದುಕೆ

- ರೂಪಾ ಹಾಸನ

ಪ್ರಿಯ ಸಖಿ,

ಜಿ.ಎಸ್. ಶಿವರುದ್ರಪ್ಪನವರ ಕವನದ ಕೆಲ ಸಾಲುಗಳು ನೆನಪಾಗುತ್ತಿದೆ.
ಪ್ರಶ್ನೆಯಿಲ್ಲದ ಬದುಕೊಂದು
               ಬದುಕೆ ?
ನನಗಿಲ್ಲ ಪೂರ್ಣ ವಿರಾಮವನ್ನರಸಿ
               ನಡೆಯುವ ಬಯಕೆ,
ಈ ಪ್ರಶ್ನೆಯ ಕೆಳಗೆ ಮಡಿಸಿರುವ
               ಸಂಶಯದ ನೆರಳ
ಬಿಚ್ಚಿ ನಡೆಯುವುದು ನನಗಿಷ್ಟ

ಎಷ್ಟು ಸೊಗಸಾದ ಸಾಲುಗಳಲ್ಲವೇ ? ನಿಜಕ್ಕೂ ಪ್ರಶ್ನೆಯಿಲ್ಲದ ಬದುಕು ಬದುಕೆ? ಉತ್ತರಗಳಿಲ್ಲದೆಯೂ ಬದುಕಬಹುದು. ಆದರೆ ನಿರಂತರ ಪ್ರಶ್ನೆ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಲಿ ಬಿಡಲಿ, ಉತ್ತರಗಳನ್ನು ಹುಡುಕುವ ಪ್ರಶ್ನೆಗಳನ್ನು ಕೆದಕುತ್ತಾ ಸಾಗುವ ದಿಟ್ಟತನ ನಮಗೆ ಬೇಕು.

ನಮ್ಮಲ್ಲಿ ಎಷ್ಟೊಂದು ಜನರಿಗೆ ಯಾವುದಕ್ಕೂ ಪುರಸೊತ್ತಿಲ್ಲ. ಆಂಗ್ಲ ಕವಿಯೊಬ್ಬ ಹೇಳುತ್ತಾನೆ, Take time to live. Because the world has so much to give...ಬದುಕಲು ಸಮಯ ಮಾಡಿಕೋ ಏಕೆಂದರೆ ನಿನಗಾಗಿ ನೀಡಲು ಈ ಜಗತ್ತಿಗೆ ಬಹಳಷ್ಟಿದೆ. ನಮ್ಮದೇ ಕಷ್ಟ, ದುಃಖ ಸಮಸ್ಯೆಗಳ ಜಾಲದಲ್ಲಿ ಸುತ್ತಿಕೊಂಡಿರುವ ನಮಗೆ, ಹೃದಯ ತೆರೆದು ಹೀಗೆ ಬದುಕಲು, ಜಗತ್ತಿನ ಆಗು-ಹೋಗುಗಳಿಗೆ ಸ್ಪಂದಿಸಲು ಸಮಯವಿದೆಯೇ? ಅಥವಾ ಆಸಕ್ತಿಯಿದೆಯೇ?

ಒಬ್ಬ ವ್ಯಕ್ತಿ ನಿಜಕ್ಕೂ ಬದುಕಿದ್ದಾನೆಂದು ತಿಳಿಯುವುದೇ ಅವನಲ್ಲಿರುವ ಅದಮ್ಯ ಕುತೂಹಲದಿಂದ. ಎಲ್ಲವನ್ನೂ ಒಳಗೊಂಡ ಬದುಕನ್ನು ತಿಳಿಯಬೇಕೆಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುವ ವ್ಯಕ್ತಿ, ಉತ್ತರಗಳನ್ನು ಅರಸುವ ವ್ಯಕ್ತಿ ಸದಾಕಾಲ ಜೀವಂತವಾಗಿರುತ್ತಾನೆ. ಇಲ್ಲದಿದ್ದವನು ಬದುಕಿದ್ದೂ ಸತ್ತಂತೆ!

ಪ್ರಿಯ ಸಖಿ, ನಾವೂ ಬದುಕಲು ಒಂದಿಷ್ಟು ಸಮಯ ಮಾಡಿಕೊಳ್ಳೋಣ. ಜಗತ್ತು ನಮಗಾಗಿ ನೀಡಲು ಕಾದಿರುವ ಎಲ್ಲವನ್ನೂ ಆಸ್ವಾದಿಸೋಣ. ಪ್ರಶ್ನೆಗಳೂ ನಮ್ಮನ್ನು ಕಾಡಲಿ. ಉತ್ತರಗಳಿಗಾಗಿ ಹುಡುಕಾಡೋಣ. ಎಲ್ಲಕ್ಕೂ ಮೊದಲು ಹೃದಯ ತೆರೆದು ಬದುಕಲು ಪ್ರಯತ್ನಿಸೋಣ. ನೀನೇನನ್ನುತ್ತೀ ಸಖಿ? ಸಮಯ ಮೀರುತ್ತಿದೆ ಇನ್ನು ಬರಲೆ?
     *****
ಕೀಲಿಕರಣ: ಎಂ ಎನ್ ಎಸ್ ರಾವ್