ಅನಂತರನಾರಾಯಣ ಎಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅನಂತರನಾರಾಯಣ ಎಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕೊಡಗಿನ ಕರೆ

- ಅನಂತರನಾರಾಯಣ ಎಸ್

ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ
ಮೈಸೂರ ಕಂಕುಳಲಿ ಕೊಡಗ ನಾಡು
ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು
ತೊರೆಯನೀರಿನ ಗೀತ ಸೊಗದ ಬೀಡು!

ಕಾವೇರಿ ಬರುತಿಹಳು ಕೊಡಗಿನಲಿ ಜನಿಸುತ್ತ
ಅಂಕು ಡೊಂಕಿನ ಕೊಂಕು ಬಿಂಕದಿಂದ,
ಸಂದೇಶ ತರುತಿಹಳು ಕೊಡಗ ನಾಡೊಳಗಿಂದ
ಜಗಕೆಲ್ಲ-ಬಂದುದನು ನೋಡಿರೆನುತ!

ಕೊಡಗಸೀಮೆಯ ಬೆಡಗು ಮಲೆಗಳಾ ಮೌನವನು
ಬಾಲೆಯರ ಬಿನ್ನಾಣ, ಬಿಂಕದಾಟ,
ರಮಣಿಯರ ಭೀರುತನ, ಎಲ್ಲವನು ಬಿಂಬಿಸುತ
ಕೊಡಗ ಪುತ್ರಿಯು ಭರದಿ ಹರಿಯುತಿಹಳು!

ಕೊಡಗ ಕಿತ್ತಳೆಹಣ್ಣು ನೋಡಿ ನೆನಪಾಯ್ತೆನಗೆ
ಮಡಿಕೇರಿ ಬಳಿಯಿರುವ ಕೊಡಗ ಕುವರಿ,
-ನೋಡಿದುದು ಒಂದೆ ಚಣ, ಮೂಡಿದಳು ಮನದಲ್ಲಿ
ಮರೆಯಲಾರೆನು ಅವಳ ನಿಲುವ ಚೆಲುವ!

ಬೆಳ್ಳಿಯಂಚಿನ ಕಪ್ಪುಬಣ್ಣ ಸೀರೆಯನುಟ್ಟು
ಸಡಗರದಿ ಒಡನಾಡಿಯೊಡಗೂಡುತ
ಮುಗಿಲ ಬಣ್ಣದ ರವಿಕೆ ತೊಟ್ಟಿಹಳು, ಮಲ್ಲಿಗೆಯ
ಮುಡಿದಿಹಳು, ಜೋಲುತಿದೆ ಜಡೆಯು ಕೆಳಗೆ!

ಕಳಿತ ಕಿತ್ತಳೆ ವರ್ಣ ಮಿದುವಾದ ಕೆನ್ನೆಗಳು,
ತೆಳೆಯಂತೆ ರಸ ತುಂಬಿದಾತುಟಿಗಳು,
ನಿಲುವಿನಲಿ ವೈಯಾರ, ನೋಟದಲಿ ದಿಟ್ಟತನ
ಬಿನ್ನಾಣ ಬೆಡಗುಗಳ ಹಾಸಮಯಿಯು!

ನೋಡಿದುದು ಒಂದೆ ಚಣ ಮೂಡಿದಳು ಮನದಲ್ಲಿ
ನೋಡಬೇಕೆಂಬುವಾ ಬಯಕೆ ಬಹಳ!
ಕನಸಿನಲಿ ಕುಣಿಯುತ್ತ ಕಲೆಯುತ್ತ ಕಾಣುವುದು
ಅವಳ ರೂಪವು-ಅದುವೆ ಕೊಡಗ ಕರೆಯು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

- ಅನಂತರನಾರಾಯಣ ಎಸ್

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು?
ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು
ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು
ಕಳೆದ ಕಾಲದಲಳಿದ ಕನಸುಗಳು ಹೊರಬಂದು
ದುಗುಡ ಹರಡುತಲಿಹವು.  ದಡದ ಮೇಲಿನ ಮರಳು
ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು
ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,
ಬಾರೆಂದು ಕರೆಯುತಿದೆ ನಿನಗಾಗಿ ಕಾತರದಿ!

ಹೊಸನೆಲೆಗಳರಸುತಲಿ ಹಳೆಯ ಪಳಕೆಯ ಹರಿದು,
ಒಂದು ಚಣ ಒಂದೆಡೆಗೆ ನಿಲ್ಲದೆಯೆ ಜಾರುತಿಹ
ಮುಗಿಲಮೋಡದ ರೀತಿ ಮೆಲ್ಲಮೆಲ್ಲನೆ ಸರಿದು
ನುಸುಳಿದಳು ನನ್ನಿಂದ-ಅರಸುತ್ತ ಹೊಸಜನರ!
ಹೃದಯಶಾಂತಿಯೆ ಆಕೆ ಎನುವ ಭ್ರಾಂತಿಯಲಾನು
ಹೆಣ್ಣಹುಡುಕುತ ಹೋಗಿ ಮುಳ್ಳ ಮುತ್ತಿಕ್ಕಿದೆನು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಒಮ್ಮೆ ಹಾಡಿದ ಹಾಡು

- ಅನಂತರನಾರಾಯಣ ಎಸ್

ಒಮ್ಮೆ ಹಾಡಿದ ಹಾಡು-
ಮತ್ತೊಮ್ಮೆ-ಹಾಡಲೆಂತೋ ಅರಿಯೆ.
ಒಮ್ಮೆ ಕಂಡಾಕನಸು
ಮತ್ತೊಮ್ಮೆ-ಕಾಣಲೆಂತೋ ಅರಿಯೇ!
ಎಲ್ಲ ನಿನ್ನದೆ ಛಾಯೆ
ಹೃದಯದೊಲವೆ!

ಜೀವವೊಂದೇ ಅಹುದು,
ಬದುಕುಗಳು-ಸಾಸಿರವ ಮಿಕ್ಕುವುವು!
ಭಾವವೊಂದೇ ಅಹುದು,
ರೂಪಗಳು-ಎಣಿಕೆಗೇ ಸಿಕ್ಕದವು!
ಎಲ್ಲ ನಿನ್ನದೆ ಮಾಯೆ
ಹೃದಯದೊಲವೆ!
     *****
ಕೀಲಿಕರಣ: ಕಿಶೋರ್‍ ಚಂದ್ರ

ಭಾವ ಜೀವ

- ಅನಂತರನಾರಾಯಣ ಎಸ್

ಭೋರ್ಗರೆದು ಬರಸೆಳೆದು ಬಿರುಸಿನಲಿ ಚಿಮ್ಮೆಸೆದು
ಗಿರಗಿರನೆ ಸುರುಳಿಯಲಿ ಸೊರಗಿಸುವ ಸುಳಿಗಳಲಿ
ಸಿಕ್ಕಿದಂತೊಮ್ಮೊಮ್ಮೆ ಹೃದಯ ಬಲು ತಪಿಸುವುದು!
ನಭಕೇರಿ ಕೆಳಗುರುಳಿ ಭಾವಗಳ ಕಡಲಿನಲಿ
ಮಿಂದು ಮೈ ಬೆಂಡಾಗಿ ಬಸವಳಿದು ಬೀಳುವುದು!
ಮರು ನಿಮಿಷ ಮೆಲ್ಲೆಲರು ಮೃದು ಮಧುರ ನುಡಿಗಳಲಿ
ಮೆಲ್ಲಮೆಲ್ಲನೆ ಕರೆದು ಬೇರೊಂದ ತೋರುವುದು!
ಶಾಂತಿಯುಂಟೇನಿಲ್ಲಿ ಬರಿ ಭಾವ ಜೀವದಲಿ?

ಮೀನಮೇಷಗಳೆಣಿಸಿ, ಕಾಲಕಾರ್ಯವ ಗುಣಿಸಿ
ಕಾರ್ಖಾನೆಯಚ್ಚಂತೆ ಮಾಡಿ ಜೀವನವೆಲ್ಲ
ಕಾಣದಂತೆಯೆ ಮತ್ತೆ ಸಾಗಿಹೋಗುವರೆಲ್ಲ!
ಹೊಸತಿಲ್ಲ-ಹಳತಿಲ್ಲ-ಜೀವ ನಿತ್ಯದ ದಿನಸಿ!
ಇಂಥ ಬಾಳದು ಬಾಳೆ?-ಭಾವಜೀವವೆ ಮೇಲು!
ಕಹಿಸಿಹಿಗಳೆಲ್ಲವಿದೆ! ಅದಕಿಂತ ಬೇರೇನು?
     *****
ಕೀಲಿಕರಣ: ಕಿಶೋರ್‍ ಚಂದ್ರ

ಹಳೆಯ ಹಾಡು

- ಅನಂತರನಾರಾಯಣ ಎಸ್

ಯಾವುದಾದರು ಒಂದು
ಹಳೆಯ ಹಾಡೇ ಸಾಕು!
ಹೊಸ ರಾಗ-ಹೊಸ ತಾಳ
ಹೊಸಭಾವಗಳ ಮೇಳ
ಯಾವುದೊಂದೂ ಬೇಡ.
ಹೃದಯದೊಲವನು ಮೀಟಿ
ಒಲವ ನೀರನ್ನು ತರಿಸಿ
ಹೊಸ ರಾಗ-ಹೊಸ ತಾಳ
ಹೊಸ ಭಾವಗಳ ಮೇಳ
ಹಿಗ್ಗಿ ಹರಿಸುವ ಒಂದು
ಹಳೆಯ ಹಾಡು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಬಾರಯ್ಯ

- ಅನಂತರನಾರಾಯಣ ಎಸ್

ಬಾರಯ್ಯ  ಬಂದುದಕೆ ಏನನಾದರು ಕೊಟ್ಟು
ಕಳುಹಿಸುವೆ.  ಕುಳಿತೆನ್ನ ಬಳಿಗೆ ಬಂದು
ಕೇಳುವೊಡೆ ಹಾಡುವೆನು - ಅದು ಒಂದೆ ಸಂಪದವು
ಬೇಕಾದೊಡದನೀವೆ-ಹಾಡುವೆನು ಕೇಳು!
     *****
ಕೀಲಿಕರಣ: ಕಿಶೋರ್‍ ಚಂದ್ರ