ಅಬ್ಬಾಸ್ ಮೇಲಿನಮನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಬ್ಬಾಸ್ ಮೇಲಿನಮನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅಮೃತ ಹಸ್ತ

- ಅಬ್ಬಾಸ್ ಮೇಲಿನಮನಿ

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು.  ಆಗೆಲ್ಲಾ ಅತ್ಯಂತ ಉತ್ಸಾಹದಿಂದ ಬೀಗಿಕೊಂಡಿದ್ದ ಅಡಿಗಲ್ಲುಗಳು ದಿನಗಳೆದಂತೆ ಅನಾಥ ಪ್ರಜ್ಞೆಯಿಂದ ನರಳತೊಡಗಿದ್ದವು.

ಋತುಮಾನದ ವೈಪರೀತ್ಯಗಳಿಗೆ ಸಿಕ್ಕು ಕೆಲವು ಅಡಿಗಲ್ಲಗಳು ಸೊರಗಿದ್ದರೆ ಇನ್ನೂ ಕೆಲವು ವಿಧ್ವಂಸಕರ ದಾಳಿಗೆ ಸಿಕ್ಕು ವಿರೂಪಗೊಂಡಿದ್ದವು.  ಅವುಗಳಿಗೆ ಆಧಾರವಾಗಿದ್ದ ಗೋಡೆಗಳು ಕುಸಿದು ಹೋಗಿದ್ದವು.  ಅಸ್ತಿತ್ವಕ್ಕಾಗಿ ಚಡಪಡಿಸುತ್ತ ಅವಶೇಷಗಳಂತೆ ನಿಂತಿರುವ ಅಡಿಗಲ್ಲುಗಳಿಗೆ ದನಕರುಗಳು ಮೈತಿಕ್ಕಿ ತಮ್ಮ ತುರಿಕೆಯನ್ನು ಶಮನಗೊಳಿಸಿಕೊಳ್ಳುತ್ತಿದ್ದವು.  ನಾಯಿಗಳು ಆರಾಮಾಗಿ ಬಂದು ಉಚ್ಚೆ ಹೊಯ್ದರೆ, ಕಾಗೆಗಳು ಮಲ ವಿಸರ್ಜಿಸುತ್ತಿದ್ದವು.

ಅದನ್ನೆಲ್ಲವನ್ನು ಮೌನವಾಗಿ ಅನುಭವಿಸುತ್ತಿರುವ ಅಡಿಗಲ್ಲುಗಳನ್ನು ಕಂಡು ಭೂಮಿ ಒಂದಿನ "ಅಡಿಗಲ್ಲುಗಳೇ, ಏನಿದು ನಿಮ್ಮ ಅವಸ್ಥೆ?  ನಿಮ್ಮ ಸ್ಥಿತಿ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ" ಎಂದು ಮರುಕ ವ್ಯಕ್ತಪಡಿಸಿತು.

"ನಮ್ಮ ಹಣೆಯ ಬರಹ ಇದು.  ಎನು ಮಾಡುವುದು?"  ಅಡಿಗಲ್ಲು ತಹತಹಿಸಿದ್ದವು.

"ಬಹಳ ವರ್ಷಗಳ ಹಿಂದೆಯೇ ನೀವು ಭವ್ಯ ಕಟ್ಟಡಗಳ ಭಿತ್ತಿಗಳಲ್ಲಿ ಕಂಗೊಳಿಸಬೇಕಾಗಿತ್ತು."

"ದೇವರು ನಮಗೆ ಅಂಥ ಭಾಗ್ಯ ನೀಡಲಿಲ್ಲ."

"ನೀವು ಶಾಸನ ಪ್ರಭುಗಳ ಅಮೃತಹಸ್ತಗಳಿಂದ ಪ್ರತಿಪ್ಠಾಪನೆಗೊಂಡಿದ್ದೀರಿ" ಅಭಿಮಾನ ವ್ಯಕ್ತಪಡಿಸಿತು ಭೂಮಿ.

"ಹೌದು, ನಾವು ಶಾಪಗ್ರಸ್ಥರಾಗಿ ಇಲ್ಲಿ ಬಿದ್ದಿರುವುದಕ್ಕೆ ರಾಜಕಾರಣಿಗಳಮೃತಹಸ್ತಗಳೇ ಕಾರಣ" ನಿಟ್ಟುಸಿರಿದವು ಅಡಿಗಲ್ಲು.

        *****

ಕೀಲಿಕರಣ: ಕಿಶೋರ್‍ ಚಂದ್ರ

ಪಾರಿವಾಳ ಮತ್ತು ಮನುಷ್ಯ

- ಅಬ್ಬಾಸ್ ಮೇಲಿನಮನಿ

ಆ ಊರು ಪ್ರಕ್ಷುಬ್ಧವಾಗಿತ್ತು.  ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು.  ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು.  ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾಡುತ್ತಿದ್ದವು.  ಒಂದಿಷ್ಟು ದಿನ ಶಾಂತ ವಾತಾವರಣ ನೆಲೆಸಿದ್ದರೆ ಧರ್ಮಾಂಧರ ಮನಸ್ಸುಗಳಿಗೆ ಕಸಿವಿಸಿ ಆಗುವುದು.  ಮೈಗಳ್ಳರು, ಪುಂಡ ಪೋಕರಿಗಳು, ಹರಾಮಿ ಗಬ್ಬು ಗೌಲಿನ ಆಸೆಬುರುಕರು ಆಯಾ ಧರ್ಮಗಳ ಲಾಂಛನ ಧರಿಸಿ ಭಯೋತ್ಪಾದಕ ತಲ್ಲಣ ಹುಟ್ಟಿಸುವುದರಿಂದ ದೇವರು, ಧರ್ಮಗಳೇ ನಡುಗ ತೊಡಗಿದ್ದರಿಂದ ಅಮಾಯಕರ ಆರ್ತತೆಯನ್ನು ಕೇಳುವವರೆ ಇರಲಿಲ್ಲ.

ಉರಿಯುವ ಮನೆಯಂಗಳ ಹಿರಿದುಕೊಳ್ಳುವ ಕ್ಷುದ್ರ ಚಾಳಿಯ ರಾಜಕಾರಣಿಗಳಿಂದ ಸೈತಾನರ ಅಟ್ಟಹಾಸ ಹಗಲೆಂಬೊ ಹಗಲನ್ನು, ರಾತ್ರಿಯೆಂಬೊ ರಾತ್ರಿಯನ್ನು ಭಯಾನಕಗೊಳಿಸಿದ್ದವು.  ಇವರೊಂದಿಗೆ ಕೈಜೋಡಿಸಿದಂತೆ ವದಂತಿ ಎಂಬ ಖೋಜಾ ಮಿಥ್ಯದ ಸಂಗತಿಗಳಿಗೆ ಜೀವದುಂಬಿ, ಬಣ್ಣತುಂಬಿ ಮನುಷ್ಯ ಸಂಬಂಧಗಳ ಮೇಲೆ, ಮಾನವೀಯತೆಯ ಮೇಲೆ ಗದಾ ಪ್ರಹಾರ ಮಾಡುತ್ತಲೇ ಚಾಕು, ಚೂರಿ, ಹತ್ಯಾರ-ತ್ರಿಶೂಲ, ಬಂದೂಕು-ಬಾಂಬು, ಆಸಿಡ್ಡು-ಚೈನು, ಹಿಂದೂ-ಮುಸ್ಲಿಮ, ಜೈನ-ಬೌದ್ಧ, ಕ್ರೈಸ್ತ-ಸಿಖ್, ಪಾರಸಿಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದ್ದವು.  ಧರ್ಮಗಳ ಗುತ್ತಿಗೆದಾರರು ಸತ್ತವರಲ್ಲಿ ಯಾರು ಹೆಚ್ಚುಯೆಂದು ಲೆಕ್ಕವಿಡುತ್ತಲೇ ಮತ್ಸರದ ಕೊಳ್ಳಿ ಉರಿಸುತ್ತಿದ್ದರು.

ಈ ಸಲದ ಗಲಭೆ ಭೀಕರವಾಗಿತ್ತು.  ಊರಿನ ಬೀದಿ ಬೀದಿಗಳಲ್ಲಿ ಪೋಲೀಸರ ಬೂಟು ಗಾಲಿನ ಸದ್ದು ಕೇಳಿಸುತ್ತಿತ್ತು.  ಜನರು ಮುಚ್ಚಿಕೊಂಡ ಬಾಗಿಲು ತೆರೆದು ಹೊರಬರುವ ಧೈರ್ಯ ತೋರಿರಲಿಲ್ಲ.  ಯಾರದೋ ಸ್ವಾರ್ಥಕ್ಕೆ ಅವರ ಬದುಕು ಹಿಂಸೆ ಅನುಭವಿಸತೊಡಗಿತ್ತು.  ಆದರೆ ಅವರೊಂದಿಗೆ ಗೂಡುಗಳಲ್ಲಿ ಬೆಚ್ಚಗಿರುತ್ತಿದ್ದ ಸುಂದರ ಪಾರಿವಾಳಗಳು ಮಾತ್ರ ಪ್ರಳಯಾಂತಕರ ಕ್ರೌರ್ಯ ಲೆಕ್ಕಿಸದೆ, ಪೋಲಿಸರ ಗುಂಡಿನ ಸದ್ದಿಗೆ ಧೈರ್ಯಗೆಡದೆ ಕರ್ಫ್ಯೂವನ್ನು ಉಲ್ಲಂಘಿಸಿ ನೆಲದಿಂದ ಆಕಾಶಕ್ಕೆ ಆಕಾಶದಿಂದ ನೆಲಕ್ಕೆ ಸ್ವಚ್ಛಂದವಾಗಿ ಹಾರಾಡಿಕೊಳ್ಳುತ್ತಿದ್ದವು.

ಪಾರಿವಾಳ ಸಾಕಿದ ಮನುಷ್ಯ ಕಿಟಕಿಯೊಳಗಿಂದಲೆ ಕಾಳು ತೂರಿ,

"ಪಾರಿವಾಳಗಳೇ, ಊರಲ್ಲಿ ಕರ್ಫ್ಯೂ ಇದೆ.  ನೀವು ಗೂಡು ಬಿಟ್ಟು ಹೋಗಬೇಡಿರಿ" ಎಂದಿದ್ದ.

"ನಮಗೆ ಬಂಧನ ಹಿಡಿಸುವುದಿಲ್ಲ ಹಾರುವುದು ನಮ್ಮ ಸಹಜ ಸ್ವಭಾವ."

"ಜನರ ಗಲಭೆ, ಗುಂಡಿನ ಸದ್ದು ನಿಮಗೆ ಭಯ ತರುವುದಿಲ್ಲವೆ?"

"ನಾವು ಮನುಷ್ಯರಂತಲ್ಲ."

"ಅಂದರೆ?"

"ಮನುಷ್ಯರು ಅತ್ಮತೃಪ್ತರು.  ಅವರಿಗೆ ಗಲಭೆ ಮುಖ್ಯ.  ನಮಗೆ ಶಾಂತಿ ಮುಖ್ಯ."

"ಊರು ಆತಂಕದಲ್ಲಿರುವಾಗ ನೀವು ಶಾಂತಿಯಿಂದ ಇರಲು ಹೇಗೆ ಸಾಧ್ಯ?"

"ನಮ್ಮಲ್ಲಿ ಮತೀಯ ಭಾವನೆ ಇಲ್ಲ ಅದಕ್ಕೆ."

"ನಾವೂ ನಿಮ್ಮಂತೆ ಇರಲು ಏಕೆ ಸಾಧ್ಯವಾಗುವುದಿಲ್ಲ?"

"ನಮಗೆ ಈ ಜಗತ್ತು ಒಂದೇ.  ಇಲ್ಲಿನ ಗಾಳಿ, ನೀರು, ಬೆಳಕು ಒಂದೆ.  ನಾವು ಅನೇಕ ಸಲ ಮಸೀದಿಯ ಮಿನಾರುಗಳಲ್ಲಿ ಕುಳಿತು ಇಮಾಮನ ಕುರ್‌ಆನ್ ಉಕ್ತಿ ಕೇಳುತ್ತೇವೆ.  ಮತ್ತೆ ಕೆಲವು ಸಲ ಮಂದಿರದ ಗೋಪುರದ ಮೇಲೆ ಕುಳಿತು ವೇದ ಉಪನಿಷತ್ತುಗಳ ಸಾರ ಅರಿಯುತ್ತೇವೆ.  ಇನ್ನೊಮ್ಮೆ ಚರ್ಚಿನ ಗಂಟೆಯ ಬಳಿ ಕುಳಿತು ಫಾದರನ ಪ್ರೀತಿಯ ಸ್ತುತಿ ಆಲಿಸುತ್ತೇವೆ.  ದೇವರು ದಯಾಮಯ.  ನಮಗೆ ಅಂಥ ಭಾಗ್ಯವನ್ನು ಕರುಣಿಸಿದ್ದಾರೆ" ಎಂದು ಪುರ್‍ರನೆ ಆಕಾಶದತ್ತ ಪಾರಿವಾಳ ಹಾರಿ ಹೋದವು.

ಕಿಟಕಿಯ ಸರಳುಗಳ ಹಿಂದೆ ನಿಂತ ಮನಷ್ಯ ಮುಖ ತಗ್ಗಿಸಿದ್ದ.

                        *****

ಕೀಲಿಕರಣ: ಕಿಶೋರ್‍ ಚಂದ್ರ

ಕೃಷಿ

- ಅಬ್ಬಾಸ್ ಮೇಲಿನಮನಿ

ಅದೊಂದು ಪುಟ್ಟ ಗ್ರಾಮ.  ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  ಸನ್ಮಾನಿತನಾದವನು ಹೆಸರಾಂತ ಕವಿ.  ಅವನೂ ಅದೇ ಹಳ್ಳಿಯವನು.  ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು.  ಮತ್ತು ಸಂಭ್ರಮದಿಂದ ಕವಿಗೆ ಶಾಲು ಹೊದಿಸಿ, ಹಾರ ಹಾಕಿ, ಅಮೂಲ್ಯ ಕಾಣಿಕೆಯೊಂದಿಗೆ ಸನ್ಮಾನಿಸಿದ್ದರು.

ಸಮಾರಂಭದಲ್ಲಿ ಆರಂಭದಿಂದ ಕೊನೆಯತನಕ ಕವಿಯ ಸಾಹಿತ್ಯ ಕೃಷಿಯ ಕುರಿತು ಪ್ರತಿಯೊಬ್ಬರು ಮಾತನಾಡಿದರು.  ಘನವಾದ ಶಬ್ದಗಳಿಂದ ಕವಿಯೂ ತನ್ನ ಕಾವ್ಯಕೃಷಿ ಕುರಿತು ಮಾತನಾಡಿದ.  ಅವನು ವೇದಿಕೆ ಇಳಿದು ಬರುತ್ತಿದ್ದಂತೆ ಕಾತರದಿಂದ ಹತ್ತಿರ ಬಂದ ರೈತನೊಬ್ಬ "ಏ, ಕವಿ ನಂದು ಗುರ್ತು ಹತ್ತೇನೊ?" ಎಂದ.  ಅವನ ಧ್ವನಿಯಲ್ಲಿ ಹುಂಬತನವಿತ್ತು.  ಅದನ್ನು ಯಾವಾಗಲೋ ಕೇಳಿದ, ಅವನನ್ನು ಎಲ್ಲೋ ನೋಡಿದ ನೆನಪು.  ಒಮ್ಮೆ ದಿಟ್ಟಿಸಿ ನೋಡಿ "ನೀವು ಯಾರು?" ಎಂದು ಘನಗಂಭೀರವಾಗಿ ಕೇಳಿದ ಕವಿ.

"ಈಗ ನೀ ದೊಡ್ಡ ಕವಿಯಾಗಿಯಪ್ಪ.  ನನ್ನಂಥ ಹಳ್ಳಿಯಾಂವ ನಿನ್ಗೆ ನೆಪ್ಪ ಹ್ಯಾಂಗಾಗಬೇಕು.  ನಾ ನಿನ್ನ ಕೂಡ ಗೌಂಟಿ ಸಾಲ್ಯಾಗ ಕಲ್ತಾಂವ" ಎಂದ ರೈತನನ್ನು ಒಂದು ಕ್ಷಣ ದಿಟ್ಟಿಸಿದವನೇ ಕವಿ "ನೀನು ಚೆನಮಲ್ಲು" ಎಂದ.  "ಹೌದೋ ವಾಮನ" ಎಂದು ಹಿಗ್ಗಿಕೊಂಡ ರೈತ.

"ಹೌದೋ, ನಿನ್ನ ಮಂಜಾಳ ಹೋಗ್ಲಿ" ಎಂದು ಕವಿಯ ಬೆನ್ನಿಗೆ ಲಘುವಾಗಿ ಗುದ್ದಿ ನಕ್ಕ ರೈತ.  "ನಿನ್ನೋಡಿ ಬಹಳ ದಿನಾ ಆತು" ಎನ್ನುತ್ತ ರೈತನೊಂದಿಗೆ ಹೆಜ್ಜೆ ಹಾಕಿದ ಕವಿ.  ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತ ಹಾದಿ ತುಳಿಯುತ್ತಿದ್ದಂತೆ ರೈತ ಕವಿಯನ್ನು ಕೇಳಿದ.

"ನಿಮ್ಮ ಜಮೀನಿನ್ಯಾಗ ಏನೇನು ಬೆಳೀತಿಯಪಾ ನೀನು?"

"ನಮ್ದು ಜಮೀನಽಽ ಇಲ್ಲ."

"ಮತ್ತ ಕೃಷಿ ಮಾಡ್ತೀನಿ ಅಂತ ಭಾಸನದಾಗ ಹೇಳ್ದಿ.  ನಿನ್ನ ಬಗ್ಗೆ ಮಾತಾಡಿದವರೂ ನಿನ್ನ ಕೃಷಿ ಬಗ್ಗೆ ಹೇಳಿದ್ರು" ಸೋಜಿಗ ವ್ಯಕ್ತಪಡಿಸಿದ ರೈತ.

"ನಂದು ಸಾಹಿತ್ಯ ಕೃಷಿ!" ಎಂದ ಕವಿ.

"ಅಂದ್ರ ಅದಕ್ಕ ಯಾವ ಬೀಜ ಬಿತ್ತಿ, ಯಾವ ಗೊಬ್ಬರ ಹಾಕ್ತಿ?" ಕುತೂಹಲವಿತ್ತು ರೈತನ ದನಿಯಲ್ಲಿ.

"ಬೀಜ ಇಲ್ಲ, ಗೊಬ್ಬರ ಇಲ್ಲ, ನೀರೂ ಇಲ್ಲದ ಕೃಷಿ ನಂದು"

"ಅದೆಂತ ಕೃಷಿನೋ ಮಾರಾಯ?"

"ಕಾವ್ಯ, ಕಥಿ, ಕಾದಂಬರಿ, ನಾಟಕ, ವಿಮರ್ಶೆ ಬರೀತೀನಿ."

"ಅದರಿಂದ ನಿನಗೇನು ಲಾಭ?"

"ಹೆಸರು, ಕೀರ್ತಿ, ಪ್ರತಿಷ್ಠೆ, ಗೌರವ, ಸನ್ಮಾನ."

"ಮತ್ತೆ ನಿನ್ನ ಸಂಸಾರಕ ಏನು ಮಾಡ್ತಿ?"

"ನಾನು ಕಾಲೇಜಿನ್ಯಾಗ ರೀಡರ್‍ ಇದ್ದೀನಿ."

"ಅಂದ್ರ ದೊಡ್ಡ ಪಗಾರನಽಽ ಇರಬೇಕಲ್ಲ."

"ಹೌದು."

"ಬಂಗ್ಲೇನೂ ಕಟ್ಟಿಸಿರಬೇಕಲ್ಲ."

"ಹೂಂ."

"ಬಂಗ್ಲೆದಾಗ ಕುಂತು ಕಥಿ, ಕವನ ಬರೀತಿ ಅನ್ನು."

"ಹೂಂ."

"ಅದರಿಂದ ಉಪಯೋಗವೇನು?"

"ಜನರ ಮನಸ್ಸಿಗೆ ಆನಂದ, ಹಿತ."

ಹೊಲ, ಬೀಜ, ಬೆವರು, ಫಲದ ತನ್ನ ಕೃಷಿಯನ್ನು ರೈತ ಕವಿ ಕೃಷಿಯೊಂದಿಗೆ ಸಮೀಕರಿಸಿಕೊಂಡು ಯೋಚಿಸಿದ.  ಕೊನೆಗೆ ಕೇಳಿದ "ನಿನ್ನ ಕೃಷಿಯಿಂದ ಹಸಿದ ಹೊಟ್ಟೆಗೆ, ಕಷ್ಟದ ಜೀವನಕ್ಕೆ ಎಂತ ಉಪಯೋಗ ಆಗತ್ತೊ ವಾಮನ?"

ಕವಿ ದಿಙ್ಮೂಡನಾದ.
         *****
ಕೀಲಿಕರಣ: ಕಿಶೋರ್‍ ಚಂದ್ರ

ಲಂಚದ ಮನೆ

- ಅಬ್ಬಾಸ್ ಮೇಲಿನಮನಿ

ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ.  ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ.  ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು.

ಆನಂದಪ್ಪ ಒಬ್ಬ ಇಂಜಿನಿಯರ್‍.  ಸರಕಾರಿ ಹುದ್ದೆಯಲ್ಲಿದ್ದ.  ತಾನು ಕಟ್ಟಿಸುವ ಮನೆ ಭೂಮಿಯ ಮೇಲಿನ ಸ್ವರ್ಗಧಾಮದಂತಿರಬೇಕೆಂದು ಕನಸು ಕಂಡಿದ್ದ.  ಅವನ ಕೈ ಕೆಳಗಿನ ನಾಲ್ಕಾರು ಜನ ಇಂಜಿನಿಯರ್‌ಗಳು ಆ ಕನಸಿನ ಸಾಕಾರಕ್ಕಾಗಿ ಸತತವಾಗಿ ಪರಿಶ್ರಮಿಸತೊಡಗಿದ್ದರು.

ಕೆಲವು ಕಂಟ್ರಾಕ್ಟರರು ಆನಂದಪ್ಪ ಹೇಳದಿದ್ದರೂ ಮನೆಯ ಕಟ್ಟಡಕ್ಕೆ ಬೇಕಾಗುವಷ್ಟು ಕಬ್ಬಿಣ, ಸಿಮೆಂಟು, ಕಲ್ಲು, ಉಸುಕು, ಕಿಟಕಿ, ಬಾಗಿಲು ಪೂರೈಸಿದ್ದರು.  ಗೌಂಡಿಗಳು ತಮ್ಮ ಶ್ರಮದ ಬೆವರನ್ನು ಕಟ್ಟಡಕ್ಕೆ ಹನಿಸುತ್ತ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.

ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ.  ಮನೆ ಮಾತ್ರ ಸುಂದರವಾಗಿರಬೇಕೆಂದು ಇಂಜಿನಿಯರ್‍ ಪತ್ನಿ ಪದೆ ಪದೆ ಹೇಳುತ್ತಿದ್ದಳು.  ಅವಳ ಮನಸ್ಸಿಗೆ ಬೇಸರವೆನಿಸಿದರೆ ಕಟ್ಟಡವನ್ನು ಕೆಡವಿ ಹಾಕಲಾಗುತ್ತಿತ್ತು.  ಇಂಜಿನಿಯರಿಂದ ಶುಕ್ರದೆಸೆ ಅನುಭವಿಸಿದ್ದ ಕಾಂಟ್ರಾಕ್ಟರರು ಒಂದು ಚಕಾರ ಶಬ್ದ ಆಡದೇ ಅವಳ ನಿರ್ದೇಶನಗಳನ್ನು ಪಾಲಿಸುತ್ತಿದ್ದರು.

ಕೊನಗೂ ಮನೆ ತಯಾರಾಯಿತು.  ಎಂಥ ಅಪರೂಪದ ಮನೆ ಅದು!

ಒಳ-ಹೊರ ಗೋಡೆಗಳಿಗೆ ಸಂಗಮವರಿ ಕಲ್ಲುಗಳನ್ನು ಹೊರಿಸಲಾಗಿತ್ತು.  ನೆಲದ ಹಾಸುಗಲ್ಲುಗಳಲ್ಲಿ ನಡೆದಾಡುವವರ ಪ್ರತಿಬಿಂಬ ಕಾಣಿಸುತ್ತಿತು.  ತೇಗ-ಗಂಧದ ಕಿಟಕಿ, ಬಾಗಿಲುಗಳು ಹೊಸ ವಿನ್ಯಾಸದೊಂದಿಗೆ ಮನಮೋಹಕವಾಗಿದ್ದವು.  ಮನೆ ನೋಡಿದವರೆಲ್ಲ ಬೆರಗುಗೊಂಡು ಅದ್ಭುತ! ಎಂದು ಬಣ್ಣಿಸುವರು.

ಅಂತೂ ಆ ಮನೆ ಗೃಹ ಪ್ರವೇಶಕ್ಕೆ ಸಿದ್ಧಗೊಂಡಿತು.

ಇಂಜಿನಿಯರ್‍ ಪತ್ನಿ ಮೂಹೂರ್ತ ಗೊತ್ತುಪಡಿಸಲು ಕಾರು ಹತ್ತಿ ಜೋಯಿಸರ ಮನೆಗೆ ಹೋದಳು.  ತಿರುಗಿ ಬರುವಾಗ ರಸ್ತೆಯ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲಿಯೇ ಅಸುನೀಗಿದ್ದಳು.  ಹೆಂಡತಿಯ ಸಾವಿನ ಸುದ್ದಿ ಕೇಳಿದ್ದೆ ತಡ ಇಂಜಿನಿಯರ್‍ ಸಾಹೇಬರು ಹಠಾತ್ತನೆ ಹೃದಯಾಘಾತಕ್ಕೆ ಕುಸಿದು ಬಿದ್ದರು.

ಆ ಚೆಂದದ ಮನೆಯಲ್ಲಿ ಬದುಕುವ ತೀವ್ರ ತುಡಿತವಿದ್ದ ಗಂಡ-ಹೆಂಡತಿ ತಣ್ಣಗೆ ಸ್ಮಶಾನದ ಮಣ್ಣಲ್ಲಿ ಮಲಗಿದರು.  ಮನೆಯನ್ನು ಹೊಗಳಿದ ಜನರೆ "ಇದು ಗೃಹದೋಷದ ಪ್ರಭಾವ!" ಎಂದರು.
      *****
ಕೀಲಿಕರಣ: ಕಿಶೋರ್‍ ಚಂದ್ರ

ಬೆಳ್ಳಿಯ ಬಟ್ಟಲು

- ಅಬ್ಬಾಸ್ ಮೇಲಿನಮನಿ

        - ೧ -
ನಾಲ್ಕಾರು ದಿನಗಳಿಂದ ಇಮಾನಬಿಯ ಮನಸ್ಸಿಗೆ ಸಮಾಧಾನವಿರಲಿಲ್ಲ.  ಅವಳ ಮೊಮ್ಮಗ ಹೈದರನ ಮೈಯೆಂಬೋ ಮೈ ಕೆಂಡಕೆಂಡವಾದರೆ ಮತ್ತೊಮ್ಮೆ ಮಂಜುಗಡ್ಡೆ.  ಹಗಲು-ರಾತ್ರಿ ವಿಲಿ ವಿಲಿ ಮೊರೆತ.  ತುಂಡು ಬ್ರೆಡ್ಡು ಚೂರು, ಬಿಸ್ಕೀಟು, ವಿಷದ ಬಾಯಿ ಸೇರುತ್ತಿಲ್ಲ ಕುಟುಂಬದ ವೈದ್ಯರು ಕೊಟ್ಟ ಔಷಧಿ, ಗುಳಿಗೆಗಳನ್ನು ರಮಿಸುತ್ತ, ಸಿಟ್ಟು ಮಾಡಿ, ಒತ್ತಾಯದಿಂದ ಮಗನಿಗೆ ನುಂಗಿಸುವ ಸಬಿನಾ ಒಂದೇ ಸಮನೆ ತಹತಹಿಸುತ್ತಿದ್ದಾಳೆ.  ಹೈದರನ ಜ್ವರ ಔಷಧಿಗೆ ಬಗ್ಗುತ್ತಿಲ್ಲ.  ನಿನ್ನೆ ದವಾಖಾನಗೆ ಹೋದಾಗ ವೈದ್ಯರು ಹುಡುಗನ ರಕ್ತ ಪರೀಕ್ಷಿಸಿಕೊಂಡು ಬರಲು ಹೇಳಿದ್ದರು.  ಇಮಾನಬಿ ಮನೆಯಲ್ಲಿದ್ದ ಪುಡಿಗಾಸುಗಳನ್ನು ಹೊಂದಿಸಿಕೊಂಡು ಹೋಗಿ ಹೈದರನ ರಕ್ತ ಪರೀಕ್ಷಿಸಿಕೊಂಡು ಬಂದಿದ್ದಳು.  "ನನ್ನ ಆನುಮಾನ ನಿಜಾ ಆತು.  ನಿನ್ನ ಮೊಮ್ಮಗ್ಗ ಮಲೇರಿಯಾ.  ಆವನ್ನ ಪಾಟೀಲ ಡಾಕ್ಷರ್ ದವಾಖಾನಿಗೆ ಅಡ್ಮಿಟ್ ಮಾಡಿಸಿರಿ" ಎಂದು ರಿಪೋಟ್೯ ನೋಡಿ ಹೇಳಿದ್ದರು ವೈದ್ಯರು.  ಆದನ್ನು ಕೇಳಿ ಸಬಿನಾ ಥರಗುಟ್ಟಿದ್ದಳು.  ಇಮಾನಬಿಯ ನರನಾಡಿಯಲ್ಲಿನ ರಕ್ತ ನಿಶ್ಚಲಗೊಂಡಂತಾಗಿತ್ತು.

ಗರೀಬಿರಿಗೆ ಖಾಸಗಿ ದವಾಖಾನೆ ಯಂದರೆ ಸುಮ್ಮನೆ ಆದೀತೆ? ಆಲ್ಲಿ ಹಣವೇ ಮಾತಾಡುವುದು.  ಆದನ್ನು ನೆನಪಿಸಿಕೊಂಡೆ ಇಮಾನಬಿ "ಸರಕಾರಿ ದಾವಾಖಾನೆಗೆ ಕರ್ಕೊಂಡು ಹೋಗ್ತೀನಿ ಸಾಹೇಬರ" ಎಂದಿದ್ದಳು.

"ಆಲ್ಲಿಯಾರು ದರಕಾರ ಮಾಡ್ತಾರ ನಿನ್ನ ಮೊಮ್ಮಗನ್ನ?" ವೈದ್ಯರು ಪ್ರಶ್ನಿಸಿದ್ದರು.  ಆವರು ಹೇಳಿದ್ದರಲ್ಲಿ ಸುಳ್ಳು ಇರಲಿಲ್ಲ ಜೀವದ ಮೇಲೆ ಆಸೆ ಇಲ್ಲದವರು ಸರಕಾರಿ ದವಾಖಾನೆಗೆ ಹೋಗಬೇಕು.  ಕಣ್ಣಲ್ಲಿ ರಕ್ತ ಹರಿಸಿದರೂ ಆಲ್ಲಿನ ಶ್ವೇತ ಪಿಶಾಚಿಗಳಿಗೆ ತೊಟ್ಟು ಕರುಣೆ ಹುಟ್ಟುವುದಿಲ್ಲ.  ಒಮ್ಮೆ ಬೆಡ್ ಮೇಲೆ ಮಲಗಿದರೆ ಅವರ ಅದ್ವಾನ ಚಿತ್ರಹಿಂಸೆಗಳಿಂದ ಕಫನ್ (ಶವದ ಮೇಲೆ ಹೊದಿಸುವ ಬಟ್ಟೆ) ಹೊದ್ದುಕೊಳ್ಳಬೇಕು ಎಂಬಂಥ ಸಂಗತಿಗಳನ್ನು ಇಮಾನಬಿ ಕೇಳಿದ್ದಳು.  ಸರಕಾರಿ ದವಾಖಾನೆಯ ಗೊಡವೆ ಬೇಡವೆಂದು ನಿರ್ಧರಿಸಿದ ಆಕೆ ಸಾಹೇಬರ ದೊಡ್ಡ ದವಾಖಾನ್ಯಾಗ ಖರ್ಚು ಎಷ್ಟು ಬರಬಹುದ್ರಿ?" ಎಂದು ಕೇಳಿದ್ದಳು.

"ಹ್ಯಾಂಗ್ ಹೇಳುದು.  ಜಲ್ದಿ ಆರಾಮಾದ್ರ ರೊಕ್ಕ ಕಡ್ಮಿ ಖರ್ಚಾಗಬಹುದು.  ಆದ್ರ ನೀವು ರೊಕ್ಕದ ಚಿಂತಿ ಮಾಡ್ಕೊಂತ ಕುಂತ್ರ ಹುಡ್ಗನ್ನ ಕಳ್ಕೊಂತಿರಿ ಮತ್ತ' ಎಂದು ವೈದ್ಯರು ಎಚ್ಚರಿಸಿ ಕಳಿಸಿದ್ದರು.

ಹೈದರ್ ಒಮ್ಮೆ ಥಂಡಿ ಎನ್ನುವನು.  ಮತ್ತೊಮ್ಮೆ ಮೈಯಲ್ಲಾ ಕಾದ ಹೆಂಚಾಗಿ ನರಳುವನು.  ಹನಿ ನೀರು ಕುಡಿಸಿದರೂ ಹೊಟ್ಟಿಯಿಂದ ಹೊರಗೆ ಬರುವುದು.  ಶಾಂತವಾಗಿ ಮಲಗಿದ್ದಾನೆ ಎಂದುಕೂಳ್ಳುವಷ್ಟರಲ್ಲಿ ಗಬಕ್ಕನೆ ಹೆದರಿಕಯಿಂದ ಎದ್ದುಕುಳಿತುಕೊಳ್ಳುವನು.  ತಾಯಿ- ಮಗಳು ಅವನೆದುರು ದೃಷ್ಟಿ ನೆಟ್ಟು ಕುಳಿತೆ ಇದ್ದರು.  ಅವನ ಬಾಡಿದ ಮುಖ ನೋಡುತ್ತ ಕಳವಳಿಸುವರು.  ವೈದ್ಯರ ಮಾತು ಅವರ ಎದೆಯ ಒಳಗೆ ಪ್ರತಿಧ್ವನಿಸುತ್ತಲೇ ಇದ್ದವು.

ಮೊಮ್ಮಗನನ್ನು ದವಾಖಾನೆಗೆ ಸೇರಿಸಲೇಬೇಕು.  ಹಣಕ್ಕೇನು ಮಾಡುವುದು? ಇಮಾನಬಿ ಯೋಚಿಸುತ್ತಲೇ ಇದ್ದಳು ಮತ್ತೆ ಧಣಿಯರ ಎದುರು ನಿಂತು ದ್ಯೆನೇಸಿ ಕೈಯೊಡ್ಡಬೇಕು.  ನೇಯ್ಗೆಯೂ ಸಮಯಕ್ಕಿಲ್ಲ.  ಸರಿಯಾಗಿ ಬಾಕಿ ಮುರಿಯಲು ಸಾಧ್ಯವಾಗಿಲ್ಲ.  ಯಾವ ಮುಖವಿಟ್ಟುಕೊಂಡು ಹೋಗಿ ನಿಲ್ಲುವುದು ಧಣಿಯರ ಮುಂದೆ.

ಹೈದರ ಒಮ್ಮಲೆ ಅಳತೊಡಗಿದ.

ಸಬಿನಾ ಅವನ ಹಣೆಯ ಮೇಲೆ ಕೈಯಿಟ್ಟು "ಅಮ್ಮಾ ಮೈಯೊಳಗಿಂದ ಉಗಾ ಬಂದ್ಹಂಗ ಅನಸಾಕ ಹತ್ತೈತಿ.  ದವಾಖಾನೆಗ ಕರ್ಕೊಂಡು ಹೋಗುನ್ನಡಿ" ಎಂದು ಗಡಿಬಿಡಿಸಿದಳು.

"ಹ್ವಾದ ಕೂಡ್ಲೆ ಅಲ್ಲಿ ರೊಕ್ಕಾ ಕೊಡಬೇಕು ಬೇಟಿ.  ಹ್ಯಾಂಗ್ ಮಾಡುದಂತ ವಿಚಾರ ಮಾಕಾಡಲಿಕ ಹತ್ತೀನಿ."
"ನೀ ಹೀಂಗ ಕುಂತ್ರ ನನ್ನ ಬೇಟಾ ಕಬರಸ್ತಾನ (ಸ್ಮಶಾನ) ಸೇರ್ತಾನ" ಸಬಿನಾ, ಸಂಕಟ, ಸಿಟ್ಟು ವ್ಯಕ್ತಪಡಿಸಿದಳು.
"ಧನೇರ ಹತ್ರ ಹೋಗಿ ಕೇಳಾಕ ನನ್ಗ ನಾಚ್ಗಿ ಬರತೈತಿ ಬೇಟಿ" ಹತಾಶೆಯಿತ್ತು ಇಮಾನಬಿಯ ಧ್ವನಿಯಲ್ಲಿ.
"ಅವರ ಹತ್ರ ಯಾಕ್ ಹೋಗ್ತಿ ಆ ಬೆಳ್ಳಿ ಬಟ್ಲ ಐತಲ್ಲ"
"ಅಂದ್ರ...  ಆ ಬೆಳ್ಳಿ ಬಟ್ಲ ಮಾರಂತಿಯೇನು ನೀನು?" ದಿಗಿಲಾಗಿ ಕೇಳಿದಳು ಇಮಾನಬಿ.
"ಮಾರೇರ ಮಾರು ಇರ್ಲಿಕಂದ ಒತ್ತಿಯರ ಇಡು.  ಮೊದ್ಲ ರೊಕ್ಕಾ ತಗೊಂಡು ಬಾ." ನಿಷ್ಟುರವಾಗಿ ಹೇಳಿದಳು ಸಬಿನಾ.
"ಅದರ ಮ್ಯಾಲೆ ಬಿತ್ತೇನು ನಿನ್ನ ಕಣ್ಣು.  ನೀನೂ ಚಲೋ ಆದಿ ಮತ್ತ.." ಮಗಳ ಮಾತನ್ನು ಧಿಕ್ಕರಿಸುತ್ತ ಇಮಾನಬಿ ನಾಗವಂದಿಗೆಯ ಮೇಲೆ ತನ್ನ ನೋಟ ಹರಿಸಿದ್ದಳು.

         - ೨ -

ಆಲ್ಲಿ ಇದ್ದದ್ದು ಒಂದು ಹಳೆಯ ಟ್ರಂಕು.  ಅದನ್ನು ಅವಳ ಅಬ್ಬಾ ಗುಲಬರ್ಗಾ ಬಂದೇನವಾಜ್ ಉರುಸಿಗೆ (ಜಾತ್ರೆ) ಹೋದಾಗ ತಂದಿದ್ದ.  ಮತ್ತು ಅದನ್ನ ಅವಳ ನಿಕಾಹ್
(ಮದುವೆ)ಯಲ್ಲಿ ಜೀಜಿ (ವಧುವಿನೊಂದಿಗೆ ಕಳುಹಿಸುವ ಪಾತ್ರೆ ಸಾಮಾನುಗಳು)ನ ಸಾಮಾನುಗಳೊಂದಿಗೆ ಕೊಟ್ಟಿದ್ದ ದಪ್ಪ ತಗಡಿನ, ಹಸಿರು ಬಣ್ಣದ, ಹೂಬಳ್ಳಿಗಳಿಂದ ಚಂದವೆನಿಸಿದ ಆ ಟ್ರಂಕಿನಲ್ಲಿ ಅವಳ ಎರಡು ಇಲಕಲ್ಲ ಸೀರೆ, ಗುಳೇದಗುದ್ದದ ಬಣ್ಣದ ಕುಪ್ಪಸಗಳಿದ್ದವು.  ಈದ್ ಸಮಯದಲ್ಲಿ ಇಮಾನಬಿ ಹೀಗೆ ಉಟ್ಟು ಹೀಗೆ ಇಡುವ ಕಾರಣದಿಂದ ಸೀರೆಯ ಮಡಿಕೆ ಕೆಡದಂತಿದ್ದವು.  ಆ ಮಡಿಕೆಗಳಲ್ಲಿ ಜೋಪಾನವಾಗಿ ಇರುವುದೇ ಬೆಳ್ಳಿಯ ಬಟ್ಟಲು.  ಖಾದರಖಾನ್‍ಗೆ ಅದು ನಜರಾನಾ (ಕಾಣಿಕೆ) ರೂಪದಲ್ಲಿ ಸಿಕ್ಕಿದ್ದು ಅವನು ಒಳ್ಳೆಯ ಹಾಡುಗಾರ.  ಉರುಸುಗಳ ಬೈಠಕ್‍ನಲ್ಲಿ ಪಾಲ್ಗೊಳ್ಳುತ್ತಿದ್ದ ಒಂದು ಸಂದರ್ಭದಲ್ಲಿ ಅವನ ಗಾಯನಕ್ಕೆ ತಲೆದೂಗಿ, ಸಂಪ್ರೀತಿಯಿಂದ ಮುರಷಿದ್ (ಧರ್ಮಗುರು)ರೂಬ್ಬರು ಈ ಬಟ್ಟಲನ್ನು ನೀಡಿ ಗೌರವಿಸಿದ್ದರು.  ಈ ಸನ್ಮಾನದಿಂದ ಖಾದರಖಾನ್‍ಗೆ ಅತ್ಯಂತ ಖುಷಿಯೆನಿಸಿತ್ತು.

ಹೈದರಾಬಾದಿನ ನಿಜಾಮನಿಂದಲೋ, ದೆಹಲಿಯ ಬಾದಶಹನೊಬ್ಬನಿಂದಲೋ ಈ ಬೆಳ್ಳಿಯ ಬಟ್ಟಲು ಧರ್ಮ ಗುರುವಿಗೆ ಭಕ್ತಿರೂಪದಲ್ಲಿ‌ಆರ್ಪಿತವಾದುದು ಎಂಬ ಪ್ರತೀತಿಯಿತ್ತು.  ಇಂಥ ವಸ್ತುವಿನ ಮೇಲೆ ವ್ಯಾಮೋಹ ಇಟ್ಟುಕೊಳ್ಳದ ಮುರಷಿದ್‍ರು ಅದನ್ನು ಖಾದರಖಾನಗೆ ನೀಡಿದ್ದರು.  ಬಟ್ಟಲನ್ನು ದೇವರ ಅನುಗ್ರಹವೆಂದು ನಂಬಿದ್ದ ಖಾದರಖಾನ್ ಅದನ್ನು ಉತ್ಸಾಹದಿಂದ ಎಲ್ಲರಿಗೂ ತೋರಿಸಿದ್ದ.

ಅಜಮಾಸು ಇಪ್ಪತ್ತುತೊಲೆಗೂ ಮಿಕ್ಕಿದ ಬೆಳ್ಳಿಯ ಬಟ್ಟಲು ಅತ್ಯಾಕರ್ಷಕವಾಗಿತ್ತು.  ಕೆಲವರು ಆದನ್ನು ಕ್ಕೆಯಲ್ಲಿ ಹಿಡಿದು ಸೂಕ್ಷ್ಮ ನಕ್ಷೆಗಳ ಸೌಂದರ್ಯ ಸವಿದಿದ್ದರು.  ಇನ್ನೂ ಕೆಲವರು ಆ ಬಿಟ್ಟಲು ಬಾದಷಹನಿಗೆ ಸಂಬಂಧಿಸಿದ್ದೆಂದು, ಅದರ ವೈಭವವನ್ನು ತಮಗೆ ಇಷ್ಟವನಿಸಿದಂತೆ ಊಹಿಸಿಕೊಂಡು ಖುಶಿ ಅನುಭವಿಸಿದ್ದರು.  ಮತ್ತೊಂದಿಷ್ಟು ಮಂದಿ ಅದು ಮುರಷಿದ್‍ರ ಹಸ್ತದಿಂದ ಬಂದ ಪುಣ್ಯದ ಸಂಕೇತವೆಂದು ಪರಿಭಾವಿಸಿ ಆ ಬಟ್ಟಲಿಗೆ ದುಡ್ಡು ಹಾಕಿ ಶ್ರದ್ಧಾಭಕ್ತಿ ಪ್ರದರ್ಶಿಸಿದ್ದರು.  ಖಾದರ್ ಖಾನ್ ಆದನ್ನು ಆಚ್ಚರಿಯಿಂದ ಗಮನಿಸಿದ್ದ.  ಆ ದುಡ್ಡು ತಂದು ತಾಯಿಯ ಕೈಗೆ ಕೊಟ್ಟಿದ್ದ.  ಪರವರ್ದಿಗಾರ (ದೇವರು) ಬೆಳ್ಳಿಯ ಬಟ್ಟಲಲ್ಲಿ ಕರಾಮತ್ತು ಇರಿಸಿದ್ದಾನೆಂದು ಆಕೆ ದೃಢವಾಗಿ ನಂಬಿದ್ದರು.  ಆ ಹಣದಿಂದ ಮೊಹರಂ ಹಬ್ಬದಲ್ಲಿ ಹಸೇನ-ಹುಸೇನರಿಗೆ ಕಂದೂರಿ (ದೇವರ ಹೆಸರಲ್ಲಿ ಊಟ ಮಾಡಿಸುವುದು) ಮಾಡಿ ಐದು ಜನ ಫಕೀರರಿಗೆ ಉಣಿಸಿದ್ದಳು.

ಅವಳ ಮರಣಾನಂತರ ಈ ರಿವಾಜು ಖಾದರ್ ಖಾನನಿಂದ ಮುಂದುವರಿದಿತ್ತು.  ಪ್ರತಿವರ್ಷ ಮೊಹರಂ ಆರಂಭದ ಮೊದಲ ಐದು ದಿನಗಳಲ್ಲಿ ಖಾದರ್‌ಖಾನ್ ಬೆಳ್ಳಿ ಬಟ್ಟಲು ತೆಗೆದುಕೂಂಡು ಹಿಂದೂ-ಮುಸ್ಮಿಮರೆಂದು ಭೇದ ಮಾಡದೆ ಕೆಲವು ಮನೆಗಳಿಗೆ ಹೋಗುತ್ತಿದ್ದ.  ಸ್ಥಿತಿವಂತರಾಗಿದ್ದ ಆವರಿಗೆ ಬಟ್ಟಲು ತುಂಬ ಚುರಮರಿ, ಬೆಂಡು, ಬತ್ತಾಸು ಕೊಡುತ್ತಿದ್ದ.  ಅವರು ಖುಶಿ ರೂಪದಲ್ಲಿ ಬಟ್ಟಲಿನಲ್ಲಿ‌ಇರಿಸಿದ ಹಣ ತಂದು ಕತ್ತಲ್ ರಾತ್ರಿಯ (ಇಮಾಮ್ ಹುಸೇನರು ಹುತಾತ್ಮಾರಾದ ದಿನ) ದಿನ ಕಂದೂರಿ ಮಾಡಿ, ಮಣ್ಣಿನ ಪರಿಯಾಣದಲ್ಲಿ ಜೋಳದ ಕಿಚಡಿ ಮತ್ತು ಬಿಂದಿಗೆಯಲ್ಲಿ ಶರಬತ್ತನ್ನು ಮಸೀದಿಗೆ ಒಯ್ದು ಹಸೇನ-ಹುಸೇನರಿಗೆ ಫಾತಿಹಾ (ನೈವೇದ್ಯ) ಕೊಟ್ಟು ಬರುವಾಗ ಫಕೀರರನ್ನು ಕರೆದುಕೊಂಡು ಬಂದು ಊಟ ಮಾಡಿಸುತಿದ್ದ. 

ಅಮ್ಮಾ ......  ಅಮ್ಮಾ ....  ಹೈದರನ ಒಣಗಿದ ತುಟಿಗಳು ಸಂಕಟದ ಧ್ವನಿಯಲ್ಲಿ ತೆರೆದುಕೊಳ್ಳುತ್ತಲೇ ಇದ್ದವು.  ಮಗನ ಸುಡುವ ಹಣೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಬದಲಾಯಿಸುತ್ತಿದ್ದ ಸಬಿನಾ ತುಮುಲ ಅನುಭವಿಸತೊಡಗಿದಳು.  ಮಗಳ ಮುಖ ನೋಡಿದ ಇಮಾನಬಿಯ ವಿಹ್ವಲತೆ ವರ್ಧಿಸತೊಡಗಿತು.  ಮತ್ತೆ ಅವಳ ಕಣ್ಣು ಟ್ರಂಕಿನ ಮೇಲೆ ಹರಿದಾಡಿತು.  ತಂದೆಯ ನೆನಪು ಕಾಡಿತು ಆಕೆಗೆ.

         - ೩ -

ಖಾದರಖಾನ ಸ್ಥಿತಿವಂತನಾಗಿರಲಿಲ್ಲ.  ಹಿರಿಯರು ಗಳಿಸಿದ ಒಂದು ಮನೆ, ಎರಡು ಮಗ್ಗಗಳು ಅವನ ಪಾಲಿಗಿದ್ದವು.  ಅಮರಪ್ಪ ಧಣಿಯರ ಮನೆಯಿಂದ ರೇಷ್ಮೆ ಚಮಕಾ ತಂದು ಅವನು ಸೀರೆ ನೇಯುತ್ತಿದ್ದ.  ಅವನೆದುರು ಮಗ್ಗದಲ್ಲಿ ಜೈರಾಬಿ ನೇಯುತ್ತಿದ್ದಳು.  ಗಾಯನ, ಸಂಗೀತವೆಂದರೆ ಅವನಿಗೆ ಆದಮ್ಯ ಪ್ರೀತಿ.  ಮಗ್ಗದ ನಾದದೊಳಗೆ ತನ್ನ ಸ್ವರ ಮಾಧುರ್ಯ ಸಂಯೋಜಿಸಿ ಅವನು ತನ್ಮಯವಾಗಿ ಹಾಡುತ್ತಿದ್ದ.  ಸಂತ ಶಿಶುನಾಳ ಶರೀಫ್‌ರ ಆನುಭಾವದ ಗೀತೆ, ದಾಸರಪದ, ಶರಣರ ವಚನಗಳನ್ನು ಹಾಡುತ್ತಿದ್ದರೆ ಗಲ್ಲಿಯೆಂಬೊಗಲ್ಲಿ ಗಂಧರ್ವಲೋಕವಾಗುತ್ತಿತ್ತು.  ಜಾತ್ರೆ ಉತ್ಸವ, ಉರುಸು ಸಂದರ್ಭಗಳಲ್ಲಿ ಖಾದರಖಾನನ ಗಾಯನ ಇದೆಯೆಂದರೆ ಜನರಿಗೆ ವಿಶೇಷ ಆಸಕ್ತಿ ಅವರ ಉತ್ಸಾಹದಿಂದ ಅರಳಿಕೊಂಡ ಅವನು ಹಸನಾಗಿ ಹಾಡಿ, ಸಮಿತಿಯವರು ಕೊಟ್ಟಷ್ಟು ಹಣ ಮತ್ತು ಮಾನ ಸನ್ಮಾನದೊಂದಿಗೆ ಹಿಂತಿರುಗುತ್ತಿದ್ದ.

ಆಗೆಲ್ಲ ವಿದ್ಯುತ್ ದೀಪಗಳಿರಲಿಲ್ಲ.  ಹೀಗಾಗಿ ಊರ ಪಂಚಾಯಿತಿಯ ಛೇರಮನ್‌ರು ಹೇಳಿಕಳಿಸಿದರೆ ಹೋಗಿ ಸೂರ್ಯ ಮುಳುಗಿದ ತುಸು ಹೊತ್ತಿಗೆ ರಸ್ತೆಯ ದೀಪಗಳನ್ನು ಹಚ್ಚಿ ಬರುತ್ತಿದ್ದ.  ದೀಪ ಹಚ್ಚುವುದೆಂದರೆ ಹಾಡಿನಷ್ಟೇ ಪ್ರೀತಿ ಅವನಿಗೆ.  ಜೈರಾಬಿ ಗಂಡನಿಗೆ ಎಂದಿಗೂ ಬಂಧನಕಾರಿಯೆನಿಸಲಿಲ್ಲ.  ಅವಳ ತೀವ್ರ ಕಾಳಜಿಯಿಂದಾಗಿ ಇಮಾನಬಿ ನಿಕಾಹ್ ಆಗಿತ್ತು.  ಅಳಿಯ ಸಿರಾಜಲಿ ಜೈರಾಬಿಗೆ ದೂರದ ಸಂಬಂಧಿಯೇ ಆಗಿದ್ದ ಒಬ್ಬಳೆ ಮಗಳನ್ನು ಕಣ್ಣೆದುರಿಗೆ ಇಟ್ಟುಕೊಳ್ಳಲೆಂದು ಖಾದರಖಾನ್ ಸಿರಾಜಲಿಯನ್ನು ಮನೆಯ ಅಳಿಯನನ್ನಾಗಿ ಇಟ್ಟುಕೊಂಡಿದ್ದ.  ಮತ್ತು ಮಗನಂತೆ ಕಾಣುತ್ತಿದ್ದ ಸಿರಾಜಲಿಗೆ ನೇಯ್ಗೆ ಕಲಿಸುವ ಆಸೆಯಿತ್ತು ಜೈರಾಬಿಗೆ.  ಆದರೆ ಅವನು ಬಸ್ ಸ್ಟ್ಯಾಂಡಿನಲ್ಲಿ ಹಮಾಲಿ ಮಾಡಿಕೂಂಡಿದ್ದ.  ಇಮಾನಬಿ ಒಂದು ಹೆಣ್ಣು ಮಗುವಿನ ತಾಯಿಯಾದ ಮೇಲೆ ಜೈರಾಬಿ ಕ್ಷಯದ ಬಾಧೆಯಿಂದ ತೀರಿಕೊಂಡಿದ್ದಳು.  ಅವಳಿಲ್ಲದೆ ಪ್ರತಿಯೊಂದು ಕ್ಷಣಗಳು ಖಾದರಖಾನನನ್ನು ಅನಾಥ ಪ್ರಜ್ಞೆಗೀಡು ಮಾಡಿದ್ದವು.  ಇಮಾನಬಿ ಮಗ್ಗದಲ್ಲಿ ಕುಳಿತಿದ್ದಳು.  ತಂದೆಯ ಮೇಲೆ ಸ್ಫುರಿಸಿದ ಅವಳ ಕಾಳಜಿ ನಿಷ್ಪ್ರಯೋಜಕವಾಗಿತು.  ಜೈರಾಬಿಯನ್ನು ಮನಸು ತುಂಬಿಕೊಂಡು ಕುಳಿತಿದ್ದ ಖಾದರ್‌ಖಾನ್ ಹಾಡು ಹೇಳುತ್ತ ಕುಳಿತಿರುವಾಗಲೇ ತನ್ನುಸಿರು ನಿಲ್ಲಿಸಿದ.


         - ೪ -

ಆಘಾತ ಸಹಿಸಿಕೂಂಡಿದ್ದಳು ಇಮಾನಬಿ.

ತನ್ನ ಬಾಬಾನ ನೆನಪು ತೀವ್ರವಾದಾಗಲೆಲ್ಲ ಆಕೆ ಟ್ರಂಕಿನ ಕೀಲಿ ತೆರೆದು ಬೆಳ್ಳಿಯ ಬಟ್ಟಲಿನೊಳಗೆ ಮನಸು ನೆಟ್ಟು ಕುಳಿತುಕೊಳ್ಳುತ್ತಿದ್ದಳು.  ಸಾಯುವ ಮುಂಚಿನ ದಿನ ಖಾದರಖಾನ್ ಮಗಳನ್ನು ಹತ್ತಿರ ಕುಳ್ಳಿರಿಸಿಕೊಂಡು "ಹಿರ್ಯಾರು ಗಳಿಸಿದ ಈ ಮನಿ ಬಿಟ್ಟು, ನಿನ್ನ ಜೀವಕ್ಕ ಮತ್ತೊಂದಾಧಾರ ಮಾಡಾಕ ನನ್ನಿಂದೇನೂ ಸಾಧ್ಯ ಆಗಲಿಲ್ಲ ಬೇಟಿ.  ನನ್ನ ಗರೀಬಿ ನಿನ್ನ ಕೂಡ ಹಂಗ ಉಳಿತು.  ನನ್ನ ಮಾಫ್ (ಕ್ಷಮೆ) ಮಾಡು.  ಈ ಬೆಳ್ಳಿ ಬಟ್ಲಾ ನಿನ್ನ ಹಂತೇಕನ ಇರಲಿ.  ನಿನ್ನ ದಾದಿ ಹರಕಿ ಈಡೇರಿತು.  ಯಾವ ಪ್ರಸಂಗದಾಗೂ ಈ ಬಟ್ಲಾ ಹೊರಗ ಹೋಗಾಕ ಕೊಡಬ್ಯಾಡ" ಎಂದಿದ್ದ.

ಏಕಾ‌ಏಕಿ ಗೋಣನ್ನು ಅತ್ತಿತ್ತ ಹೊರಳಾಡಿಸಿದ ಹೈದರನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ನೇವರಿಸತೊಡಗಿದಳು ಸಬಿನಾ.  ಅಮ್ಮಾ...ದಾದಿ....  ಅಮ್ಮಾ....  ದಾದಿ.....  ಎಂದು ತನಗರಿವಿಲ್ಲದಂತೆ ಬಡಬಡಿಸತೊಡಗಿದ ಮೊಮ್ಮಗನ ಕೈಹಿಡಿದುಕೊಂಡಳು ಇಮಾನಬಿ.  "ಸುಡುಗಾಡು ಜ್ವರ.  ಕೂಸಿನ ದೇಹಾನ್ನ ಪಿಶಾಚಿ ಹಂಗ ಹಿಡ್ಕೊಂಡು ಬಿಟ್ಟಿತಲ್ಲ" ಒಳಗೇ ಕಳವಳಿಸಿದಳು ಆಕೆ.

ನೋವಿಗೆ ಸಾವಿಗೆ ಆಯಾಸ ಪಡಬೇಡ
ದೇವ ಗಂಗಾಧರನು ಭಾವದೊಳಿರಲು
............................
ವಸುಧಿಯೊಳ್ ಶಿಶುನಾಳಧೀಶನ ಹಸುಳನೆ
ಕಸಿವಿಸಿ ಹೊಂದುವದು ಹಸನಲ್ಲ ನಿನಗೆ

ಖಾದರಖಾನ್ ನೇಯುತ್ತಿದ್ದ ಮಗ್ಗದ ಕಡೆಯಿಂದ ಅಲೆ ಅಲೆಯಾಗಿ ತೇಲಿ ಬಂದಿತ್ತು ಹಾಡು.  ಇಮಾನಬಿಯ ಮನಸ್ತು ಮತ್ತ ಹಿಂದಿನದನ್ನು ಜ್ಞಾಪಿಸಿಕೊಂಡಿತ್ತು.

         - ೫ -

ಅವತ್ತು ಆಕಾಶದಲ್ಲಿ ಚಂದ್ರ ಕಾಣಿಸಿಕೂಂಡಿದ್ದ.  ಮಸೀದೆಯ ಮುಂದೆ ಕುದಾಲಿ (ಮೊಹರಂ ಹಬ್ಬದ ಮೊದಲನೇ ದಿನ ದೇವರ ಎದುರು ತೋಡುವ ಗುಂಡಿ) ಹಾಕಲಾಗಿತ್ತು.

ಇಮಾನಬಿಯ ಕಣ್ಣು ಒದ್ದೆಯಾಗಿದ್ದವು.  ತನ್ನ ಅಬ್ಬಾ ಇಲ್ಲದ ಮೊದಲ ಮೊಹರಮ್‌ದ ಆ ಕ್ಷಣಗಳಲ್ಲಿ ಆಕೆಯ ಹೃದಯ ಹೆಪ್ಪುಗಟ್ಟಿತ್ತು.  ಅವಳ ಸಂವೇದನೆಗಳಿಗೂ ತನಗೂ ಸಂಬಂಧವಿಲ್ಲದವನಂತಿದ್ದ ಸಿರಾಜಲಿ, ತನ್ನನ್ನು ತಾನೇ ಸಂಬಾಳಿಸಿಕೊಂಡಿದ್ದಳು ಇಮಾನಬಿ.  ಸ್ನಾನಮಾಡಿ ಟ್ರಂಕಿನೊಳಗಿಂದ ಬೆಳ್ಳಿಯ ಬಟ್ಟಲು ತೆಗೆದು, ಅದನ್ನು ಮೀಸಲು ನೀರಿನಿಂದ ತೊಳೆದು, ಗಂಧ ಲೇಪಿಸಿ, ಊದು ಹಾಕಿ ಸಕ್ಕರೆ ಫಾತಿಹಾ ಕೊಟ್ಟದ್ದಳು.  ಖಾದರಖಾನ್ ಒಯ್ಯುತ್ತಿದ್ದ ಒಂದು ಚಿಕ್ಕ ಪಿಸ್ವಿ (ಚೀಲ)ಯಲ್ಲಿ ಚುರುಮರಿ, ಬೆಂಡು-ಬತ್ತಾಸು ತುಂಬಿಕೊಂಡು, ಅದರಲ್ಲಿ ಬಟ್ಟಲು ಹುದುಗಿಸಿಟ್ಟು ಆಕೆ ಹೊಸಿಲು ದಾಟಿದ್ದಳು.

ಅವಳ ಚಟುವಟಿಕೆಗಳನ್ನು ಗಮನಿಸಿದ್ದ ಸಿರಾಜಲಿ ತುಟಿ ಎರಡು ಮಾಡಿರಲಿಲ್ಲ. 

ಕೋಲಾಹಲವಿತ್ತು ಅವನೆದೆಯೊಳಗೆ.  ತನ್ನ ತಂದೆಯ ರೀತಿ-ರಿವಾಜುಗಳನ್ನು ಅನುಸರಿಸುತ್ತಿರುವ ಇಮಾನಬಿಯ ಧೋರಣೆಗಳ ಬಗ್ಗೆ ಅವನಿಗೆ ಸಿಟ್ಟು ಬರತೊಡಗಿತ್ತು.  ಹೆಣ್ಣುಹೆಂಗಸು ಹೀಗೆ ಹೊರಗೆ ಹೋಗಿ, ಮನೆ ಮನೆ ತಿರುಪೆಯೆತ್ತಿತಂದ ಹಣದಿಂದ ಕಂದೂರಿ ಮಾಡುವುದರಿಂದ ಬರುವ ಭಾಗ್ಯವೇನು ? ಎಂದು ಅವನು ತೀವ್ರವಾಗಿ ಚಿಂತಿಸಿದ್ದ.  ಹೋದಲ್ಲೆಲ್ಲ ಇಮಾನಬಿಗೆ ಗೌರವಾದರಗಳು ಪ್ರಾಪ್ತವಾಗಿದ್ದವು.  ಜನರು ಅವಳನ್ನು ಕುಳ್ಳಿರಿಸಿಕೊಂಡು ಪ್ರೀತಿಯಿಂದ ಮಾತಾಡಿಸಿದ್ದರು.  ಖಾದರಖಾನನ ಹೃದಯ ಮತ್ತು ಗಾಯನದ ಬಗ್ಗೆ ಮೆಚ್ಚುಗೆ ನುಡಿದಿದ್ದರು.  ಅವಳಿಂದ ಚುರುಮರಿ, ಬೆಂಡು ಬತ್ತಾಸು ಸ್ವೀಕರಿಸಿ ತಮ್ಮ ಶ್ರದ್ಧೆತೋರಿಸಿದ್ದರು.  ಖಾದರಖಾನ್‌ಗೆ ತಕ್ಕ ಮಗಳೆಂದು ಅವಳನ್ನು ಹೊಗಳಿದ ಕೆಲವರು ಸೀರೆ ಕುಪ್ಪಸದ ಉಡುಗೊರೆ ನೀಡಿದ್ದರು.

ಮನೆಗೆ ಬಂದು ಗಂಡನನ್ನು ಎದುರಿಗೆ ಕುಳ್ಳಿರಿಸಿಕೊಂಡು ಹಣದ ಲೆಕ್ಕ ಮಾಡಿದ್ದಳು ಇಮಾನಬಿ.  ಈ ಸಲ ಹೆಚ್ಚು ಹಣ ಸಿಕ್ಕಿತ್ತು.  ಹತ್ತು ಜನ ಫಕೀರರಿಗೆ ಊಟ ಮಾಡಿಸೋಣ ಎಂದಿದ್ದಳು ಆಕೆ.  ಸಿರಾಜಲಿ ಉದಾಸೀನ ವ್ಯಕ್ತಪಡಿಸಿದ್ದ.  ಇಷ್ಟೊಂದು ಹಣವನ್ನು ಸುಮ್ಮನೆ ಕೊಡುತ್ತಾರೆಯೇ ಜನ ? ಅನುಮಾನ ಕಾಡಿತ್ತು ಅವನಿಗೆ.  ಅದೇ ನೋಟದಲ್ಲಿ ಹೆಂಡತಿಯ ತುಂಬು ಮೈಯನ್ನು ಅವಲೋಕಿಸಿದ್ದ ಅವನು.

ಇಮಾನಬಿಯದು ಪಾಕ್ ಪಾಕಿಜಾ ಮನಸ್ಸು! ತನ್ನ ಬಾಬಾನ ಹರಕೆಯನ್ನು ಪರಿಪಾಲಿಸುವ ನಿಷ್ಟೆಯಿಂದ ಆಕೆ ಕತ್ತಲ್ ರಾತ್ರಿಯ ದಿವಸ ಉಪವಾಸ ಮಾಡಿದ್ದಳು.  ಸಂಜೆಯ ಹೊತ್ತಿಗೆ ಮಗಳು ಮತ್ತು ನೆರೆಮನೆಯವರೊಂದಿಗೆ ಹಸೇನ-ಹುಸೇನರಿಗೆ ಎಡೆ ಕೊಟ್ಟು ಬಂದಿದ್ದಳು.  ಪರಿಯಾಣದಲ್ಲಿನ ತಬರ್ರುಕ್‍ದ (ಪ್ರಸಾದ) ಒಂದು ತುತ್ತು ಬಾಯಲ್ಲಿ ಹಾಕಿಕೊಂಡು ನೀರು ಕುಡಿದಿದ್ದಳು.  ಬಂದ ಫಕೀರರಿಗೆ ಉಣ್ಣಿಸಿ ಬೀಳ್ಕೊಟ್ಟಿದ್ದಳು.  ಗಲ್ಲಿಯ ಜನರಿಗೆ ಶರಬತ್ ಕುಡಿಸಿದ್ದಳು. 

ದೇವರಿಗೆ ಅಲ್ವಿದಾ (ವಿದಾಯ) ಹೇಳಿದ ರಾತ್ರಿ ಚೊಂಗಾ (ಒಂದು ರೀತಿಯ ತಿಂಡಿ) ಮಾಡಿ ಅಕ್ಕ- ಪಕ್ಕದ ಹಿಂದೂಗಳಿಗೆ ಹಂಚಿದ್ದಳು.  ಇದೆಲ್ಲ ಜನ್ನತ್ನಲ್ಲಿರುವ ಖಾದರಖಾನನಿಗೆ ತೃಪ್ತಿ ತಂದಿರಬೇಕು.  ಆದರೆ ಸಿರಾಜಲಿಗೆ ಮಾತ್ರ ಎಳ್ಳಷ್ಟೂ ಹಿಡಿಸಿರಲಿಲ್ಲ.  ಅದರ ಒಳಗುದಿ ಇಮಾನಬಿಗೆ ತಾಕಿರಲಿಲ್ಲ.  ಬೆಳ್ಳಿಯ ಬಟ್ಟಲು ಟ್ರಂಕು ಸೇರಿತ್ತು.  ಸಿರಾಜಲಿಯ ಕುದಿವ ಮನಸ್ಸು ತಣ್ಣಗಾಗಿತ್ತು.

ದಿನಗಳು ಉರುಳಿದ್ದವು.  ಮತ್ತೆ ಬಂದಿತ್ತು ಮೊಹರಮ್.

        - ೬ -
ಮೋಡಗಳ ಮರೆಯಿಂದ ಚಂದ್ರ ನಸುವಾಗಿ ಗೋಚರಿಸಿದ್ದ. 

ಸಿರಾಜಲಿಯ ಎದೆಯೊಳಗೆ ರಾಹುಕೇತು ಸೇರಿಕೊಂಡು ಕತ್ತಲು ಹರಡಿ ಕುಳಿತಿದ್ದರು.

ಇಮಾನಬಿ ನಾಗವಂದಿಗೆಯ ಮೇಲಿನ ಟ್ರಂಕು ಕೆಳಗೆ ಇಳಿಸಿಕೊಂಡು ಬೆಳ್ಳಿಯ ಬಟ್ಟಲನ್ನು ಹೊರಗೆ ತೆಗೆದಿದ್ದಳು.  ಅದೇ ಹೊತ್ತಿಗೆ ಮನೆಯ ಮುಂದೆ ಹಾದು ಹೋದ ಮಾಜಾನ್ (ಮಸೀದಿಯ ಕೆಲಸ ನೋಡುವವ) ಕುದಾಲಿ (ಗುದ್ದಲಿ) ಬಿತ್ತು ಎಂದು ಸಾರುತ್ತ ನಡೆದಿದ್ದ ಇದನ್ನು ಕೇಳಿಸಿಕೊಂಡ ಸಿರಾಜಲಿಯ ಮುಖ ದುಮು ದುಮು ಎಂದಿತ್ತು.  ಕುದಾಲಿ ಬಿದ್ದದ್ದು ಆಶುರಖಾನಾದ ಮುಂದೆಯಲ್ಲ ತನ್ನ ಎದೆಯೊಳಗ ಎನ್ನುವ ಭಾವನೆ ಮೂಡಿ, "ಇಮ್ಮು ಆ ಕಟೋರಾ (ಬಟ್ಟಲು) ಹಿಡ್ಕೊಂಡು ಭಿಕಾರಿ ಹಾಂಗ ಮನಿ ಮನಿ ತಿರುಗಾಡಬ್ಯಾಡ ನೀನು" ಎಂದು ಅಸಹನೆಯನ್ನು ಹೊರಹಾಕಿದ್ದ. 

ಗಂಡನನ್ನು ಅಚ್ಚರಿಯಿಂದ ನೋಡಿದ್ದಳು ಇಮಾನಬಿ.  ಇದೂವರೆಗೂ ಅವನಿಂದ ಇಂಥ ಮಾತುಗಳನ್ನು ಆಕೆ ಕೇಳಿಸಿಕೂಂಡಿರಲಿಲ್ಲ.  "ಇಲ್ಲಿ ತನಕ ನಿನ್ನ ವರ್ತನಾ ಸೈರಿಸಿಕೊಂಡಿನಿ ನಾನು" ಸಿರಾಜಲಿಯ ಧ್ವನಿಯಲ್ಲಿ ಸಿಟ್ಟು, ಅಸಹನೆ ಎರಡೂ ಬೆರೆತಿದ್ದವು.
"ಯಾಕ್ರಿ ಅಂಥದ್ದೇನಾಗೇತಿ?" ಕೇಳಿದ್ದಳಾಕೆ.
"ಹೆಂಗಸ್ಸಾಗಿ ಮಂದಿಮನಿಗೆ ಕಟೋರಾ ಹಿಡ್ಕೊಂಡು ತಿರ್ಕೊಂಡು ಬರುದು ನನ್ಗೆ ಲಾಯಕ್ಕಿಲ್ಲ."
"ಹಿಂದೆ ಈ ಮಾತು ಹೇಳಿಲ್ಲ ನೀವು"
"ನಿಮ್ಮಪ್ಪನ ವಿರುದ್ಧ ಮಾತಾಡ್ತಿ ಅಂತ ತಿಳ್ಕೊಂತಿದ್ದಿ ನೀನು"
"ಈಗ ತಿಳ್ಕೊಳ್ಳಂಗಿಲ್ಲೇನು ನಾನು ?"
"ನಾನೂ ತಿಳೀಲಂತ ಹೇಳಾಕ ಹತ್ತೀನಿ"
"ನಮ್ಮ ಮನಿನ್ ರಿವಾಜು ಬಿಟ್ಟಬಿಡು ಅಂತಿರೇನು ನೀವು ?"
"ಇದು ಕೆಟ್ಟ ರಿವಾಜು"
"ಇದರಾಗ ಬಾಬಾನ ಸ್ವಾರ್ಥ ಇರಲಿಲ್ಲ"
"ಏನಿದ್ರೂ ಅದು ಅವನ ಕಾಲಕ್ಕ ಮುಗೀತು"
"ನಾನು ಬಾಬಾನ ಹರಕಿ ಈಡೇರಿಸುವಾಕಿ"
"ಹಠಾ ಸಾಧಿಸ್ತಿಯೇನ್ ನೀನು?"
"ಹಠಾ ಯಾಕಂತೀರಿ? ಬಾಬಾನ ಮನಸ್ಸಿಗೆ ಸಮಾಧಾನ ತರು ಮಾತು ಹೇಳಿದ್ಯಾ"
"ನನ್ನ ಮಾನಾ ಕಳೀತಿ ನೀನು ?"
"ನನ್ನ ಹತ್ರ ಅಂಥ ಕೆಟ್ಟ ಚಾಳಿ ಏನ್ ಕಂಡ್ರಿ ?"
"ಜನಾ ನನ್ನ ಬೆನ್ನ ಹಿಂದೆ ಆಡಿಕೊಂಡು ನಗ್ತಾರ"
"ಯಾಕಂತ ಅವರನ್ನ ಹಿಡ್ದು ಕೇಳ್ರಲ್ಲ"
"ಮೊದ್ಲ ನೀನು ಈ ಪದ್ಧತಿ ಬಿಡು"
"ಇದು ನನ್ನ ಜೀವದ ಕೂಡ ಹೋಗತೈತಿ"
"ಇವತ್ತಽಽ ಈ ಕಟೋರಾ ಒಯ್ದು ಮಾರಿ ಬರ್ತೀನಿ ನಾನು"
"ಅದನ್ನು ಮುಟ್ಟಾಕ ಕೊಡಂಗಿಲ್ಲ ನಾನು"
"ಕರೋಡ ರೂಪಾಯಿ ಕಿಮ್ಮತ್ತಿಂದು ಐತಲ್ಲ ಅದು ?"
"ಅದರ ಬೆಲೆ ಕಟ್ಟಾಕ ಆಗುದಿಲ್ಲ"
"ಅದಕ್ಕಽಽ ನಿಮ್ಮಪ್ಪ ತಿರ್ಕೊಂಡು ತಿನ್ನಿ‌ಅಂತ ಈ ಬಟ್ಲಾಕೊಟ್ಟಾನ" ಸಿರಾಜಲಿಯ ಮಾತು ಡಬಗಳ್ಳಿಯ ಮುಳ್ಳಿನಂತಿತ್ತು.
"ನಮ್ಮ ಬಾಬಾಗ ಏನೂ ಅನಬ್ಯಾಡ್ರಿ, ನನ್ಗ ಬೇಷ್ ಅನಿಸುದಿಲ್ಲ"
"ದುಗ್ಗಾಣಿ ಮನಿ, ಇದೊಂದು ಚಿಲ್ಲರ ಬಟ್ಲಾ ಕೊಟ್ಟು ಹ್ವಾದಂತ ಅವನ ಮ್ಯಾಲೆ ಪ್ರೀತಿಯೇನ್ ನಿನ್ಗ ?"
"ನಮ್ಮ ಬಾಬಾ ಅಷ್ಟರ ಬಿಟ್ಟು ಹ್ವಾದ ನನ್ನ ಪಾಲಿಗೆ.  ನಿಮ್ಮಿಂದ ಯಾ ಭಾಗ್ಯ ಕಂಡೆ ನಾನು" ಇಮಾನಬಿಯ ಮಾತು ಸಿರಾಜಲಿಯ ಎದೆ ಉರಿಸಿತ್ತು.
"ನಾನು ಪರದೇಶಿ ಸೂಳೇಮಗ, ತುತ್ತು ಕೂಳಿಗೆ ಬಂದು ಬಿದ್ದಾಂವ ಇಲ್ಲಿ" ತನ್ನ ನಸೀಬು ಹಳಿದುಕೂಂಡಿದ್ದ ಅವನು.
"ಬಾಬಾ, ನಿಮ್ಮನ್ನ ಸ್ವಂತ ಮಗನ್ಹಂಗ ನೋಡ್ತಿದ್ರು"
"ಅದಕಽಽ ನನ್ಗೊಂದು ಮಾತು ಹೇಳ್ದ ಈ ಮನೀನ್ನ ನಿನ್ನ ಹೆಸರಿಗೆ ಬರಿಸಿಬಿಟ್ಟ.  ಯಾಕಂದರ ನಾನು ನಿಮ್ಮ ಮನಿ ಚಾಕರಿಗೆ ಇದ್ದವನಲ್ಲ"
"ಅಂಥ ಭಾವನಾ ಬಾಬಾಗ ಇರ್ಲಿಲ್ಲಬಿಡ್ರಿ.  ಈಗರ ಏನಾತು ಈ ಮನೀನ ನಿಮ್ಮ ಹೆಸರಿಗೇ ಮಾಡ್ಕೋರಿ"
"ಅತ್ತೂಕರ್ದೂ ಔತಣ ಹೇಳಿಸಿಕೊಳ್ಳೋ ಜಾತಿ ಅಲ್ಲ ನಮ್ದು.  ನೀನು ಮನಿ ಮಾಲಕಿ; ಎಷ್ಟಿದ್ರೂ ನಾನು ಹೊರಗಿನಂವಾ"
"ನನ್ನ ಮ್ಯಾಲೆ ಇದ್ದಾಂಗ ನಿಮ್ಗ ಈ ಮನಿ ಮೇಲೇನೂ ಹಕ್ಕು ಐತಿ"
"ಇಲ್ಲೆ ನನ್ಮಾತು ನಡಿಯೂದಿಲ್ಲ"
"ಅಂಥದ್ದು ಇಲ್ಲೇನೂ ನಡಿದಿಲ್ಲ"
"ಹಾಂಗರ ನಾನು ಈ ಮನಿಯಾಗ ಇರಬೇಕಂದ್ರ ಆ ಬಟ್ಲಾ ಹಿಡ್ಕೊಂಡು ಹೊರಗ ಹೋಗಬ್ಯಾಡ ನೀನು" ನಿಷ್ಟುರನಾಗಿ ಹೇಳಿದ್ದ ಅವನು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಅವನ ವರ್ತನೆ ಇಮಾನಬಿಗೆ ವಿಚಿತ್ರ ಅನಿಸತೊಡಗಿತ್ತು.  ಆವನು ಬಾಬಾನ ಮೇಲಿನ ಮತ್ಸರದಿಂದ ಇಂಥ ಮಾತು ಹೇಳುತ್ತಿರುವನೋ ? ಬೆಳ್ಳಿಯ ಬಟ್ಟಲಿನ ಮೇಲೆ ಅವನಿಗೇಕೆ ಈ ಪರಿ ಸಿಟ್ಟು ? ಪ್ರೀತಿ ಅಭಿವ್ಯಕ್ತಿಸುವ, ಒಂದಿನವೂ ಸರಿದು ಕುಳಿತುಕೋ ಎನ್ನದ ಸಿರಾಜಲಿಗೆ ಏಕಾ‌ಏಕಿ ತನ್ನ ಮೇಲೆ ಗುಮಾನಿ ಏಕೆ ಹುಟ್ಟುತು? ತಾನು ಬಟ್ಟಲು ಹಿಡಿದು ಹೋಗುವುದು ವರ್ಷದಲ್ಲಿ ಒಂದು ದಿನ ಮಾತ್ರ.  ಅದು ದೇವರ ಹರಕೆಯ ಸಲುವಾಗಿ.  ಫಕೀರರಿಗೆ ಉಣ್ಣಿಸುವುದು ಪುಣ್ಯದ ಕೆಲಸವಲ್ಲವೆ? ಇದರಲ್ಲಿ ಸಿರಾಜಿಗೆ ಯಾವ ದೋಷ ಕಂಡಿತು? ಅವನು ಮನೆಯಲ್ಲಿ ಇರಬೇಕೆಂದರೆ ತಾನು ಈ ರಿವಾಜು ಬಿಡಬೇಕು ಎನ್ನುತ್ತಾನೆ.  ಹೀಗಾದರೆ ಬಾಬಾನ ಆತ್ಮಕ್ಕೆ ತಳಮಳವಾಗದೇ ಇದ್ದೀತೆ? ಹಾಗಾಗಲು ತಾನು ಅವಕಾಶ ಕೊಡಬಾರದು.  ಅವನು ತನ್ನನ್ನು ಹೆದರಿಸಲು ನೋಡುತ್ತಿದ್ದಾನೆ.  ಹೆಣ್ಣನ್ನು ದಮನಿಸುವುದು ಗಂಡಸರ ಕೆಟ್ಟ ಚಾಳಿ.  ತನ್ನ ಮನಸ್ಸು ಪರಿಶುದ್ಧವಾಗಿಯೇ ಇದೆ ಭಯವೇನು? ಹೀಗೆ ಆಲೋಚಿಸಿದ ಇಮಾನಬಿ "ನಾಳೆ ನಾನು ಬಟ್ಟಲು ಹಿಡ್ಕೊಂಡು ಹೋಗ್ತೀನಿ" ಎಂದಿದ್ದಳು.  ರಪ್ಪನೆ ಮುಖದ ಮೇಲೆ ಹೊಡೆತ ಬಿದ್ದಂತೆ ತತ್ತರಿಸಿದ್ದ ಸಿರಾಜಲಿ.  ಅವನ ರಕ್ತ ಒಮ್ಮೆಲೆ ಕುದ್ದಿತ್ತು.  `ಈ ಬಟ್ಟಲ ಕೂಡ ನೀನು ಸಾಯಿ' ಎಂದು ಬಿರುಗಾಳಿಯಂತೆ ಹೊರಗೆ ಹೋಗಿದ್ದ.

ರಾತ್ರಿಯೆಲ್ಲ ಬಾಗಿಲು ತೆಗೆದು ಕುಳಿತೆ ಇದ್ದಳು ಇಮಾನಬಿ.

ಸಿರಾಜಲಿ ಬರಲಿಲ್ಲ.

ತಲ್ಲಣದ ನಡುವೆಯೂ ಆಕೆ ರಿವಾಜು (ಪದ್ಧತಿ) ಬಿಡಲಿಲ್ಲ.  ಕಂದೂರಿ ಮಾಡಿ ಫಕೀರರಿಗೆ ಉಣ್ಣಿಸಿದ್ದಳು. 

ದೇವರ ಸವಾರಿ ಹೊರಟಿದ್ದವು.

ಊರಿನ ಎಲ್ಲ ಆಶುರಖಾನಾ ( ಪಂಜಾ ಕುಳಿತುಕೊಳ್ಳುವ ಸ್ಥಳ )ಗಳ ಆಲಮ್ ( ದೇವರು ) ಗಳು ಭೇಟಿ ಮಾಡುವ ಬಜಾರಿನ ಚೌಕದಲ್ಲಿ ಜನಜಾತ್ರೆ.  ಇಮನಬಿ ಮಗಳೊಂದಿಗೆ ಬಂದು ಎತ್ತರದ ಕಟ್ಟೆಯ ಮೇಲೆ ನಿಂತಿದ್ದಳು.  ಅಲ್ಲಿ ಎರಡು ಹೆಜ್ಜೆ ಮೇಳಗಳು ( ಮೊಹರಂದಲ್ಲಿ ಹೆಜ್ಜೆಯಾಡುವ ಗುಂಪುಗಳು ) ಸ್ಪರ್ಧೆಗಿಳಿದಂತೆ ತೋರಿದ್ದವು.  ಜನರ ಕಣ್ಣಲ್ಲಿ ಕುತೂಹಲವಿತ್ತು.  ಮನಸ್ಸಿನಲ್ಲಿ ತುಂಬ ಉತ್ಸಾಹ.  ಹಲಗೆಯ ತಾಳಬದ್ಧ ನಾದಕ್ಕೆ ಸನಾದಿಯ ಸ್ವರ ಮಾಧುರ್ಯಕ್ಕೆ ಸಂಗತ್ಯಗೊಂಡು ಹೆಜ್ಜೆಯಾದುವವರನ್ನು ಹುರುಪುಗೊಳಿಸಿತ್ತು.  ಕುಣಿಯುವ ಜನರನ್ನು ನೋಡುತ್ತಿದ್ದಂತೆ ಇಮಾನಬಿಗೆ ಸಿರಾಜಲಿ ನೆನಪಾಗಿದ್ದ.

ಹೆಜ್ಜೆಯಾಡುವುದರಲ್ಲಿ ಅವನು ನಿಸ್ಸೀಮ.  ತಲೆಗೆ ಹಸಿರು ಪಟ್ಟಿ ಕಟ್ಟಿಸಿಕೊಂಡು, ಕಣ್ಣಿಗೆ ಸುರುಮಾ, ಹಣೆಗೆ ಪಕ್ಕದ ಮಲಕುಗಳಿಗೆ ಸುನೇರಿ ಬಣ್ಣದ ಮುದ್ರೆ ಹಾಕಿಕೊಂಡು, ಪೈಜಾಮ ಎತ್ತಿಕಟ್ಟಿ, ಕೈಯಲ್ಲಿ ದಸ್ತಿ ಹಿಡಿದುಕೊಂಡು ಹೋಯ್ಯಽಽ...  ಎಂದು ಹೆಜ್ಜೆ ಹಾಕುತ್ತಿದ್ದರೆ ಇಮಾನಬಿ ನವಿಲಾಗುತ್ತಿದ್ದಳು.  ಅವನು ಮನೆಗೆ ಬಂದಿದ್ದೆ ತಡ ಆಕೆ ಅವನ ಮೇಲೆ ಲಿಂಬೆಹಣ್ಣು ಇಳಿಸಿ ಒಗೆಯುತ್ತಿದ್ದಳು.  ಉಪ್ಪು ಇಳಿಸಿ ಉರಿಯುವ ಒಲೆಗೆ ಹಾಕುವಳು.  ಕೆಂಡದ ಮೇಲಿನ ಉಪ್ಪು ಚಿಟ್ ಚಿಟ್ ಎಂದರೆ ಕೆಟ್ಟ ನೆದರಾಗಿದೆ ಎನ್ನುವಳು. 
ಸಿರಾಜಲಿ ಆವಳ ಮಾತಿಗ ನಕ್ಕು "ನನ್ಗನಿಂದಽಽ ನೆದರು ಹತ್ತದು" ಎಂದು ರೇಗಿಸುವನು.  "ನಂದು ಒಳ್ಳೆ ನಜರು" ಎಂದು ಆಕಿ ಅವನ ಎದೆಯೊಳಗೆ ಹುದುಗಿಕೊಳ್ಳುತ್ತಿದ್ದಳು. 

ಸಿರಾಜಲಿ ಇಲ್ಲದ ಹೆಜ್ಜೆ ನೋಡಲು ಆಕಗೆ ಕಾತರ ಹುಟ್ಟಿರಲಿಲ್ಲ.

ಮೂರು ದಿನದ ಜಾರತಾ (ಮರಣದ ಮೂರನೆ ದಿನ ಮಾಡುವ ದಿನಕರ್ಮ) ಆದ ಮೇಲೆ ಸಿರಾಜಲಿ ಸೊಲ್ಲಾಪುರ ಸೇರಿಕೂಂಡಿದ್ದರ ವಿಚಾರ ತಿಳಿದಿತ್ತು.  ಇಮಾನಬಿ ಬಿಕ್ಕಿ ಬಿಕ್ಕಿ ಅತ್ತಿದ್ದಳು.  ಬೆಳದ ಮಗಳನ್ನು ನೋಡುತ್ತಿದ್ದಂತೆ ಅವಳ ಕಣ್ಣೀರು ನಿಂತಿತ್ತು.  ಸಿರಾಜಲಿ ಹೊಣೆಗಾರಿಕೆಯನ್ನು ತಪ್ಪಿಸಿಕೂಳ್ಳಲು ಈ ನಾಟಕ ಹೂಡಿದನೆ ? ಯೋಚಿಸುತ್ತ ಹೋದಂತೆ ಆಕೆಗೆ ಗಂಡ ಮೇಲೆ ಸಿಟ್ಟು ಬಂದಿತ್ತು.  ಆದರೆ ರಕ್ತಕುದ್ದರೆ ತನಗೇ ನಷ್ಟ ಎಂದು ಸದೃಢಗೊಂಡಿದ್ದಳು ಇಮಾನಬಿ.  ಪಲಾಯನವಾದ ಗಂಡಸಿಗೆ ಸುಲಭ ; ಹೆಂಗಸಿಗೆ ಅದು ಹೇಗೆ ಸಾಧ್ಯ ? ಎಂದು ಆಕೆ ಮಗ್ಗದಲ್ಲಿಕುಳಿತಿದ್ದಳು.  ನೂಲಿನೆಳೆಗಳನ್ನು ಚೂಕ್ಕವಾಗಿ ನೆಯ್ಯತೊಡಗಿದ್ದಳು.

ಬೆಳ್ಳಿಯ ಬಟ್ಟಲು ಅವಳ ಪುಟ್ಟ ಟ್ರಂಕಿನಲ್ಲಿ ಬೆಚ್ಚಗೆ ಉಳಿದಿತ್ತು.

         - ೭ -

ಮುಂದಿನ ದಿನಗಳಲ್ಲಿ ಕಿವಿ ಸೇರಿದ್ದ ಸುದ್ದೀ ಅವಳ ಮನಸ್ಪನ್ನು ಘಾಸಿಗೊಳಿಸಿತ್ತು.  ಸೊಲ್ಲಾಪೂರ ಸೇರಿಕೊಂಡಿದ್ದ ಸಿರಾಜಲಿ ಹಮಾಲಿ ಮಾಡಿಕೂಂಡು, ಯಾವಳೋ ಒಬ್ಬಳ ಕೂಡ ಅವನ ಕೂಡಾವಳಿ ಆಗಿದೆಯಂದು ಅವನನ್ನು ಮಾತಾಡಿಸಿಕೂಂಡು ಬಂದವರು ಹೇಳಿದ್ದರು.  ಬಟ್ಟಲಿನ ನೆಪದಲ್ಲಿ ಅವನು ತನ್ನನ್ನು ವಂಚಿಸಿದನೆಂದು ಆಕೆ ಮನದಟ್ಟು ಮಾಡಿಕೊಂಡಳು.  ಜಮಾತಿನವರು ಸಿರಾಜಲಿಯನ್ನು ಬೈದುಕೊಂಡು ಇಮಾನಬಿಗೆ ಧೈರ್ಯ ಹೇಳಿದ್ದರು.

ಮಗಳಿಗೆ ನಿಕಾಹ್ ಮಾಡಿಕೂಡುವ ಜವಾಬುದಾರಿಯಿಂದ ಆಕೆ ಮಗ್ಗದ ಕಾಲ್ವಿಡಿ ತುಳಿಯತೂಡಗಿದ್ದಳು.

ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮ
ಜ್ಞಾನವೆಂಬುವಾ ಕದರನು ಇಟ್ಟು
ಮಾನವ ಧರ್ಮದ ಹಂಜಿಯ ಪಿಡಿದು
ಆನುಭವವೆಂಬುವ ಎಳೆಗಳ ತೆಗೆದು
ಅನುವಿಲೆ ಸುಮ್ಮನೆ ನೂಲಮ್ಮ

ಶರೀಫರ ಜೀವತಂತುವನ್ನು ಆಗಾಧವಾಗಿ ಮೀಟುವ ಖಾದರಖಾನನ ಹಾಡು ಇಮಾನಬಿಗೆ ಧೈರ್ಯ ನೀಡತೊಡಗಿತ್ತು.  ಬದುಕನ್ನು ನಾಜೂಕಾಗಿ ನೇಯುತ್ತಿದ್ದವಳ ಕಣ್ಣೀಗೀಗ ಚಸ್ಮಾ ಬಂದಿತ್ತು.  ನೇಯ್ಗೆಯ ಚಕ್ರದ ಹೊರಳಿನಲ್ಲಿ ಆಕೆ ಕಷ್ಟದಿಂದ ಮೊಹರಂನ ರಿವಾಜನ್ನು ನೆರವೇರಿಸಿಕೂಂಡು ಬರುತ್ತಲೇ ಇದ್ದಳು.

ಆದರೆ ಬಟ್ಟಲು ಹಿಡಿದು ಹೋದರೆ ಖುಶಿ ಕೊಡುವವರು ಅವಳಿಗೆ ಮೊದಲಿನಷ್ಟು ಆಸ್ಥೆ ತೋರಿಸುತ್ತಿರಲಿಲ್ಲ.  ಎರಡು ಮನೆಯ ಯಜಮಾನರು ಮೃತರಾಗಿದ್ದರು.  ಮತ್ತೆರಡು ಮನೆಯ ಸಾಹುಕಾರರು ವಯಸ್ಸಿನ ಕಾರಣದಿಂದ ತಮ್ಮ ವ್ಯವಹಾರಗಳನ್ನು ಮಕ್ಕಳಿಗೊಪ್ಪಿಸಿದ್ದರು.  ಕೆಲವು ಕಡೆಗೆ ಇಮಾನಬಿ ಮುಜುಗರ ಅನುಭವಿಸುತ್ತಿದ್ದಳು.  ಆಕಿ ಬಟ್ಟಲಲ್ಲಿ ಬೆಂಡು ಬತ್ತಾಸ ತುಂಬಿ ಕೊಟ್ಟು ಹಣದ ನಿರೀಕ್ಷೆಯಲ್ಲಿ ಕುಳಿತು ಕೊಳ್ಳುತ್ತಿದ್ದಳು.  ಒಬ್ಬರು, "ಇದೊಂದ್ಸಲ ಒಯ್ದು ಬಿಡವ್ವ" ಎಂದರೆ ಮತ್ತೊಬ್ಬರು "ಕಾಲಮಾನ ಸೂಕ್ಷ್ಮ ಆಗ್ಯಾವ ಇಮಾನವ್ವ, ಮಕ್ಕಳು ಕೊಟ್ಟಷ್ಟು ಒಯ್ದು ಬಿಡು" ಎನ್ನುವರು.

ಇಷ್ಟಾದರೂ ಜಹಾಂಗೀರ್ ಕೊಲ್ಲಾಪುರೆ, ಬಾಬಣ್ಣ ದೇಸಾಯಿ ಮೊದಲಿನಂತೆ ಬಟ್ಟಲಿಗೆ ಹಣ ಹಾಕುತ್ತಿದ್ದರು.  ಶೋಕಿ, ಪ್ರತಿಷ್ಟೆಯಲ್ಲಿ ಅವರಿಬ್ಬರೂ ಸಮಾನರು.  ಹಿಂದೊಮ್ಮೆ ಖಾದರಖಾನನಿಂದ ಬೆಳ್ಳಿಯ ಬಟ್ಟಲನ್ನು ಪಡೆದುಕೊಳ್ಳಲು ಅವರಿಬ್ಬರೂ ಪ್ರಯತ್ನಿಸಿದ್ದರು.  "ನನ್ನೆದಿ ಗುಂಡಿಗೀನ ಕೇಳಾಕ ಹತ್ತೀರಿ ನೀವು" ಎಂದು ನಗೆಯಾಡಿ ಬಟ್ಟಲ ಮೇಲಿನ ಅವರ ಆಸೆಯನ್ನು ಛಿದ್ರಗೊಳಿಸಿದ್ದ ಖಾದರಖಾನ್.

ಅವನು ಸತ್ತು ಇಮಾನಬಿ ಬೆಳ್ಳಿಯ ಬಟ್ಟಲು ಹಿಡಿದು ತಮ್ಮಮುಂದೆ ಯಾವಾಗ ನಿಂತಳೋ ಜಹಾಂಗೀರ ಮತ್ತು ಬಾಬಣ್ಣರ ಆಸೆಗಳು ಮತ್ತೆ ಕೊನರಿದ್ದವು.  "ಈ ಬಟ್ಲಾ ಕೊಟ್ರ ಎರಡು ಸಾವಿರ ರೂಪಾಯಿ ಕೊಡ್ತೀನಿ" ಅಂದಿದ್ದ ಜಹಾಂಗೀರ್.  ಅದನ್ನು ಕೇಳಿಸಿ ಕೊಂಡವನಂತೆ ಬಾಬಣ್ಣ ದೇಸಾಯಿ "ಇಂಥ ಬಟ್ಟಲು ನಮ್ಮಂಥವರ ಮನತನದ್ದಾಗಿರಬೇಕು.  ನೀ ಕೇಳಿದಷ್ಟು, ರೊಕ್ಕಾ ಕೂಡ್ತೀನಿ ಕೊಟ್ಟು ಬಿಡು ಇಮಾನವ್ವ" ಎಂದು ಉತ್ತೇಜಿಸಿದ್ದ.  "ಇದು ಗುರುಗಳ ಕಾಣ್ಕಿ, ಇದರಾಗ ನಮ್ಮ ಬಾಬಾನ ಜೀವಾನ ಐತ್ತಿ.  ಹ್ಯಾಂಗ್ ಮಾರಬೇಕ್ರಿ ಧಣೇರ ?" ಎಂದು ನಿಷ್ಟುರವಾಗಿ ತಿರಸ್ಕರಿದ್ದಳು ಇಮಾನಬಿ.

         - ೮ -

ಬಾಬಾಽಽ.....  ಬಾಬಾಽಽ....  ಹೈದರ್ ತನ್ನ ತಂದೆಯನ್ನು ನನಪಿಸಿಕೊಂಡು ನರಳಿದ.  ವಿಹ್ವಲತೆಯ ಕಿಚ್ಚಿನಲ್ಲಿದ್ದರೂ ಸಬಿನಾ "ಆ ಕುರುಸಾಲ್ಯಾನ್ನ ಯಾಕ್ ನೆನಸ್ಕೋತಿಯೋ ಬೇಟಾ ?" ಎಂದು ಅಸಹನೆ ವ್ಯಕ್ತ ಪಡಿಸಿದಳು.  ಅವನೂ ಒಬ್ಬ ತಂದೆ.  ತನ್ನದೇ ರಕ್ತ ಹಂಚಿಕೊಂಡು ಬಂದ ಕೂಸಿಗೆ ಚೂರು ಪ್ರೀತಿ, ವಾತ್ಸಲ್ಯ ದರ್ಶನ ಮಾಡಿಸಲಿಲ್ಲ.  ಕರುಳ ಬಳ್ಳಿಯ ಸಂಬಂಧದ ಗಂಧ ಇಲ್ಲದವನು.  ಜೀವಂತಿದ್ದಾನೋ, ಸತ್ತಿದ್ದಾನೊ....  ಎಂಥ ಹಣೆಬರಹ ಅವನದು! ರೊಟ್ಟಿ-ಚಟ್ನಿ ತಿಂದು ಆರಾಮಿರು ಅಂದರೆ ಶೆಗಣಿ ಹುಳುವಾದ.  ಬದುಕು ಕೊಟ್ಟ ಖುದಾ (ದೇವರು)ನಿಗೂ ವಂಚಿಸುವ ಸ್ಯೆತಾನ (ರಾಕ್ಷಸ) ಎಂದು ಇಮಾನಬಿ ಸ್ವಗತದಲ್ಲಿಯೇ ಬೈದುಕೊಂಡಳು.

ಸಬಿನಾಳ ಶಾದಿಗೆ ಅಮರಪ್ಪ ಧಣಿ ಸಾಲ ಕೊಟ್ಟಿದ್ದರು.

ಆಕೆಯ ಗಂಡ ನಿಜಾಮುದೀನ ಇಲಕಲ್ಲಿನಲ್ಲಿ ಟೇಲರಿಂಗ್ ದಂಧೆ ಮಾಡುತಿದ್ದ.  ಮದುವೆಯಾದ ೬ ತಿಂಗಳಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿಕೂಂಡು ಬಂದು ಅತ್ತೆಯ ಮನೆಯಲ್ಲಿ ಠಿಕಾಣಿ ಹೂಡಿದ್ದ.  ತಾನೂ ಒಬ್ಬಂಟಿ.  ಮಗಳು ಜೊತೆಗಿದ್ದರೆ ಸಂತೋಷವೆಂದು ಅಳಿಯನ ಮೇಲೆ ಕಾಳಜಿ ಸ್ಪುರಿಸಿದ್ದಳು.  ಪರಿಚಯದ ಟೇಲರಿಂಗ್ ಅಂಗಡಿಯಲ್ಲಿ ಅವನ ಹೊಲಿಗೆ ಕೆಲಸಕ್ಕೂ ಅನುಕೂಲ ಮಾಡಿಕೂಟ್ಟಿದ್ದಳು. 

ಸಬಿನಾಳ ಬಸಿರು, ಬಯಕೆ, ಬಾಣಂತನ ಶುರುವಾಗಿ ಮೂರು ಹೊಟ್ಟೆ ಇಳಿದಿದ್ದವು.

ಚಿಂತೆ ಇಲ್ಲದವನು ಸಂತೆಯಲ್ಲಿ ಮೆಲಕಾಡಿಸುವವನಂತಿದ್ದ ನಿಜಾಮುದ್ದೀನ್ ಜಬರ್ದಸ್ತಾಗಿ ಮೂರು ಹೊತ್ತು ಕೂಳು ತಿಂದು, ನಿದ್ದೆಮಾಡಿ ಮೈ ಉಬ್ಬಿಸಿಕೂಂಡಿದ್ದ.  ಮಾಲೀಕನೂಂದಿಗೆ ಮನಸ್ತಾಪ ಮಾಡಿಕೊಂಡು ಹೆಂಡತಿ ಮತ್ತು ಅತ್ತೆಯನ್ನು ಕಾಡಿ ಡಬ್ಬಿ ಆಂಗಡಿಯಲ್ಲಿ ಹಳೆಯದೊಂದು ಹೊಲಿಗೆ ಮಿಷನ್ ಇಟ್ಟುಕೂಂಡಿದ್ದ.  ಹಣ ಬೇಕು ಅನಿಸಿದರೆ ಕುಳಿತು ಬಟ್ಟೆ ಹೊಲಿಯುತ್ತಿದ್ದ.  ಊರು, ಹೋಟೇಲ್, ಸಿನಿಮಾ ಎಂದು ದುಡಿದದ್ದನ್ನೆಲ್ಲ ಹಾಳು ಮಾಡುತಿದ್ದ.

ಸಬಿನಾಳಿಗೆ ನಾಲ್ಕನೆಯ ಗರ್ಭ ನಿಂತಾಗ ಅವನು ಟ್ರಂಕಿನೊಳಗಿನ ಬೆಳ್ಳಿಯ ಬಟ್ಟಲು ಕದ್ದು ಊರು ಬಿಟ್ಟಿದ್ದ.  ಬೀಗ ಮುರಿದ ಟ್ರಂಕು ನೋಡಿ ಇಮಾನಬಿ ದಿಗ್ಭ್ರಮೆಗೊಂಡಿದ್ದಳು.  ಬಸಿರಿಯಾದ ಸಬಿನಾ ತಾಯಿಯ ಅವಸ್ಥೆಯಿಂದ ಮೈಯೆಲ್ಲಾ ನೀರೊಡೆದಿದ್ದಳು.

"ಕಳ್ಳ, ಕೊರಮ ನಮ್ಮ ಮನಿ ನಾಶ ಮಾಡಕ್ಕಽಽ ಬಂದಾನ" ಇಮಾನಬಿ ಅಳಿಯನನ್ನು ವಾಚಾಮಗೋಚರವಾಗಿ ಶಪಿಸಿದ್ದಳು.  ಬೆಳ್ಳಿಯ ಬಟ್ಟಲನ್ನು ಹೊರಗೆ ಹೋಗಲು ಬಿಡಬಾರದು ಎಂದಿದ್ದ ಬಾಬಾ.  ಈಗೇನು ಕುತ್ತು ಬರುವುದೊ ಎಂದು ಕಳವಳಸಿದ್ದಳು.  ಬಟ್ಟಲು ಇಲ್ಲದೆ ತನಗೆ ಜಿಂದಗೀನೆ ಇಲ್ಲ ಎನ್ನುವಂತೆ ಆಕೆ ಅನ್ನ ನೀರು ಬಿಟ್ಟು ಕುಳಿತಿದ್ದಳು.

ಮೂರನೆಯ ದಿನ ಬೆಳಿಗ್ಗೆ ಪತ್ತಾರ ಗಂಗಪ್ಪ ಬಂದು ಬಟ್ಟಲು ತೋರಿಸಿದಾಗಲೇ ಇಮಾನಬಿ ನಿಶ್ಚಿಂತಳಾಗಿದ್ದಳು.  ಈ ಬಟ್ಟಲು ಇಮಾನಬಿಯದು ಎಂದು ಗಂಗಪ್ಪನಿಗೆ ಗೊತ್ತು.  ನಿಜಾಮುದ್ದೀನ ಅವನಿಲ್ಲದ ವೇಳೆಯಲ್ಲಿ ಬಟ್ಟಲು ಮಾರಿ ಅವನ ಮಗನ ಕಡೆಯಿಂದ ನೂರು ರೂಪಾಯಿ ಇಸಿದುಕೂಂಡು ಹೋಗಿದ್ದ.  ಅದರ ಸತ್ಯ ತಿಳಿಯಲು ಗಂಗಪ್ಪ ಬಂದಿದ್ದ.  ಇಮಾನಬಿ ಅರ್ಧದಷ್ಟು ಹಣ ಕೊಟ್ಟು ಇನ್ನರ್ಧ ಹಣವನ್ನು ನಂತರ ಕೊಡುವುದಾಗಿ ಹೇಳಿ ಗಂಗಪ್ಪನಿಂದ ಬಟ್ಟಲು ಪಡೆದುಕೂಂಡು "ನಿನ್ಗ ಆಲ್ಲಾಹ ಒಳ್ಳೇದು ಮಾಡಲಿ !" ಎಂದು ಹಾರೈಸಿದ್ದಳು.  ತಡ ಮಾಡದೆ ಜೋಗೇರ ಹತ್ತಿರ ಹೋಗಿ ಟ್ರಂಕಿನ ಬೀಗವನ್ನು ಸರಿಮಾಡಿಸಿ ಎಂದಿನಂತೆ ಸೀರೆಯ ಮಡಿಕೆಯಲ್ಲಿ ಬಟ್ಟಲು ಇಟ್ಟು ನಿರಾಳತೆ ಅನುಭವಿಸಿದ್ದಳು.

ಸಬಿನಾ ಗಂಡುಮಗುವಿಗೆ ಜನ್ಮಕೊಟ್ಟ ವೇಳೆಯಲ್ಲಿ ನಿಜಾಮುದ್ದೀನ್ ಬಂದಿದ್ದ.  ಇಮಾನಬಿ ಅವನಿಗೆ ಏನೂ ಅನ್ನಲಿಲ್ಲ.  ಅವನೆ ಅತ್ತೂ ಕರೆದು ಮಾಫ್ ಬೇಡಿದ್ದ.  ಇಮಾನಬಿ ಮೊಮ್ಮಗನಿಗೆ ಹೈದರ್ ಎಂದು ನಾಮಕರಣ ಮಾಡಿದ್ದಳು.  ತನ್ನ ಬಾಬಾ ಮತ್ತೆ ಹುಟ್ಟಿ ಬಂದಿದ್ದಾನೆಂದು ನೆಮ್ಮದಿಯನಿಸಿತ್ತು ಆಕೆಗೆ.

ಹುಡುಗ ಬೆಳಯುತ್ತಿದ್ದಂತೆ ನಿಜಾಮುದ್ದೀನ್‍ನ ಹವ್ಯಾಸಗಳು ಆತಿರೇಕವಾಗಿದ್ದವು.  ಈಗವನು ಸಾರಾಯಿ ಕುಡಿದು ಬರಲು ಶುರು ಮಾಡಿದ್ದ.  ಸಬಿನಾಳನ್ನು ಹಣಕ್ಕಾಗಿ ಪೀಡಿಸಿ ಬಡಿಯುತ್ತಿದ್ದ.  ಮನೆಯಲ್ಲಿನ ಸಾಮಾನು ಕದ್ದೊಯ್ದು ಮಾರುತ್ತಿದ್ದ.  ಇಮಾನಬಿ ಅವನ ದಬ್ಬಾಳಿಕೆಗೆ ಪ್ರತಿರೋಧವೊಡ್ಡುತ್ತಿದ್ದಳು.  ದಪ್ಪ ಚರ್ಮದ ಅವನಿಗೆ ನಾಚಿಕೆ, ಮರ್ಯಾದೆಯ ಹಂಗು ಇರಲಿಲ್ಲ.  ಒಮ್ಮೊಮ್ಮೆ ಕಾಲ ಮೇಲೆ ಬಿದ್ದು ಢೋಕಾರಿತನ ಮಾಡುತ್ತಿದ್ದ.  ಕೊನೆಗೊಮ್ಮೆ ಹೊಲಿಗೆ ಮಿಶನ್ ಮತ್ತು ಜನರ ಬಟ್ಟೆಗಳೊಂದಿಗೆ ಅವನು ಊರನ್ನು ಬಿಟ್ಟು ಹೋಗಿದ್ದ.  ತಾಯಿ-ಮಗಳು ಪೀಡೆ ತೊಲಗಿತೆಂದು ನಿರುಮ್ಮಳಾಗಿದ್ದರು. 

ಸಾಲ ಎದೆಯ ಮೇಲಿನ ಬಂಡೆಗಲ್ಲಿನಂತಿದ್ದರೂ ಇಮಾನಬಿ ಮಗ್ಗದಲ್ಲಿ ಕುಳಿತೇ ಇದ್ದಳು.  ಉಪನಾಸ ವನವಾಸದ ಕ್ಷಣಗಳು ಹಗಲು ರಾತ್ರಿಗಳನ್ನು ತ್ರಸ್ತಗೊಳಿಸುತ್ತಿದ್ದರೂ ತನ್ನ ಬದುಕಿನ ಹೋರಾಟದಲ್ಲಿ ಜಿಗುಟತನವನ್ನು ಕಳೆದುಕೊಳ್ಳದಂತಿದ್ದಳು ಆಕೆ.

         - ೯ -

ಹೈದರ್ ದಿಗ್ಗನೆ ಎದ್ದು ಕುಳಿತುಕೊಳ್ಳಲು ನೋಡಿದ.  ಸಬಿನಾ ಅವನ ಬೆನ್ನಿಗೆ ಕೈಯಾಸರೆ ನೀಡಿ "ಏನಾತು ಬೇಟಾ ?" ಎಂದು ಗಾಬರಿಗೊಂಡಳು.  ಮೊಮ್ಮಗನ ನಿಸ್ತೇಜ ಕಣ್ಣು, ಜೋತು ಬಿದ್ದಿರುವ ಮುಖ ಕಂಡು ಇಮಾನಬಿ ಕಂಗಾಲಾದಳು.  "ಸ್ವಲ್ಪ ನೀರರ ಕುಡಿಸು ಕೂಸಿಗೆ" ಎಂದಳು.

"ಗುಟುಕು ನೀರು ಕುಡದ್ರ ಕರುಳು ಹೊರಗ ಬಂದಂಗ ಹೊರಗ ಹಾಕ್ತಾನ.  ಏನ್ಮಾಡ್ಲಿ? ಅದರ ನಸೀಬದಾಗ ಇದ್ದಾಂಗಾಗ್ಲಿ, ಬೇಶರ್ಮ (ನಾಚಿಕೆ ಮರ್ಯಾದೆ ಇಲ್ಲದವನು)ನ ಕೂಡ ಗಂಟ್ಹಾಕಿ ನನ್ನ ಜಿಂದಗೀನ ಹಾಳ್ಮಾಡ್ದಿ.  ಈಗ ಎಂಥ ಹೊತ್ತುಬಂತು ನೋಡು.  ನನ್ನ ಕೂಸಿಗ ದವಾಖಾನಿಗೆ ಕರ್ಕೊಂಡು ಹೋಗಿ ತೋರ್ಸುವ ಗತಿ ಇಲ್ಲಂಗಾತು"
ತನ್ನ ನಸೀಬು ಜರಿದುಕೂಳ್ಳುತ್ತ ಮುಖಮುಖ ಬಡಿದುಕೂಂಡಳು ಸಬಿನಾ.

ಹೈದರ್ ಇದ್ದಕ್ಕಿದ್ದಂತೆ ನಡುಗತೊಡಗಿದ.  ಅವನ ಮೈಯೆಂಬೋ ಮೈ ಬರ್ಫಿನಂತೆ ಜುನುಗತೊಡಗಿತು.  ಇಮಾನಬಿ ದಪ್ಪನೆಯ ಕೌದಿಯನ್ನು ಅವನ ಮೈಮೇಲೆ ಹರಡಿದಳು.  ಹೈದರ್ ಎತ್ತರಕ್ಕೆ ಪುಟಿಯತೊಡಗಿದ.  ಹೆದರಿಕೆಯಿಂದ ತಾಯಿ ಮಗಳು ಅವನ ಕೈಕಾಲು ತಿಕ್ಕತೊಡಗಿದರು. 

ಸ್ವಲ್ಪ ಹೊತ್ತಿಗೆ ತಣ್ಣಗಿನ ಮೈ ಕಾದ ಹೆಂಚಾಯಿತು.  "ಜ್ವರ ಮತ್ತ ಬಂದು" ಸಬಿನಾ ಚಡಪಡಿಸಿದಳು.  ಮಗನ ಒಳಗಿನ ಕೆಂಡ ತನ್ನ ಒಡಲಲ್ಲಿ ಬಿದ್ದು ಸುಡುವಂತೆ "ಯಾ ಆಲ್ಲಾಹ್ ! ಪಾಕ್ ಪರವರ್ಧಿಗಾರ ನನ್ನ ಕೂಸಿನ ಮ್ಯಾಲೆ ಕರುಣಾ ತೋರ್ಸು.  ಜಲ್ದೀನ ಬೆಳಗು ಹರಿಸು ನಾಳೆ ಎಲ್ಲೇರ ನನ್ನ ಜೀವಾ ಒತ್ತಯಿಟ್ಟು ಮಗನ್ನ ದವಾಖಾನಿಗೆ ಸೇರಿಸ್ತೀನಿ.  ಸತ್ತಂದ್ರ ಮಣ್ಣಿಗರ ಇಡ್ತೀನಿ" ಎಂದು ಹಲುಬಿದಳು.

ಮಗಳ ಮಾತು ಇಮಾನಬಿಯ ಎದೆ ಬಗೆಯತೊಡಗಿತು.

ಇಮಾನಬಿ ತೀರ್ಮಾನಕ್ಕೆ ಬರುವ ಹೊತ್ತಿಗೆ ಕತ್ತಲು ಸರಿದಿತ್ತು.  ಜೀವಪ್ರೀತಿಯ ಬೆಳಕು ಅವಳ ಆಂತಃಕರಣವನ್ನು ತುಂಬಿ ನಿಂತಿತ್ತು.  "ಸಬಿನಾ ನೀನು ಹೈದರನನ್ನು ಕರ್ಕೊಂಡು ದವಾಖಾನಿಗೆ ನಡಿ.  ನಾ ಬಾಬಣ್ಣದೇಸಾಯರ ಮನಿಗೆ ಹೋಗಿ ಬರ್ತ್ತೀನಿ" ಎಂದು ನಾಗವಂದಿಗೆಯ ಮೇಲಿಂದ ಟ್ರಂಕು ಇಳಿಸಿ, ಕೀಲಿ ತೆಗೆದು, ಬೆಳ್ಳಿಯ ಬಿಟ್ಟಲನ್ನು ಸೀರೆಯ ಸೆರಗಿನೊಳಗೆ ಮರೆಮಾಡಿಕೂಂಡು ಹೊಸ್ತಿಲು ದಾಟಿದಳು ಇಮಾನಬಿ.  ತೆರೆದ ಬಾಗಿಲಿನಿಂದ ತೂರಿ ಬಂದ ತಂಗಾಳಿ ಸಬಿನಾಳಿಗೆ ಹಿತವೆನಿಸಿತು.
 *****

ಕೀಲಿಕರಣ: ಎಂ. ಎನ್. ಎಸ್. ರಾವ್ 

ರೋಜಾ

-ಅಬ್ಬಾಸ್ ಮೇಲಿನಮನಿ

ಅಮಾವಾಸ್ಯೆಯ ಮರುದಿನ ಸಂಜೆಯಷ್ಟು ಹೊತ್ತಿಗೆ ಆಕಾಶದಲ್ಲಿ ಚಂದ್ರ ದರ್ಶನವಾಯಿತು.  ಗಲ್ಲಿಯಲ್ಲಿ ಸಂಭ್ರಮ.  ಸಾರಾಬೂ ಬೀದಿಗೆ ಬಂದು ತನ್ನ ನಾಲ್ಕು ಮಕ್ಕಳಿಗೂ ಚಂದ್ರನನ್ನು ತೋರಿಸಿದಳು.  "ನಾಳೆ ರೋಜಾ ಚಾಲು"  ಎಂದಳು.  ಅವಳ ಮೂರು ಗಂಡು ಮಕ್ಕಳು "ನಾವೂ ನಾಳೆಗೆ ರೋಜಾ ಇರ್ತೀವಿ" ಎಂದರು.

ಮಾತಿನಲ್ಲಿ ಚುರುಕಾಗಿದ್ದ ಎಂಟು ವರ್ಷದ ನಫೀಸಾ "ನಾನೂ ರೋಜಾ ಮಾಡ್ತೀನಿ ಅಮ್ಮಾ" ಎಂದಳು.

"ನಿನಗೆ ಆಗುದಿಲ್ಲ ಬಿಡು" ಎಂದ ಅವಳ ಅಣ್ಣ.

"ನಾನು ರೋಜಾ ಮಾಡ್ತೀನಿ" ನಫೀಸಾ ಹಟದ ಧೋರಣೆಯಲ್ಲಿ ಹೇಳಿದಳು.

"ಬೇಟಿ ರೋಜಾ ಅಂದ್ರ ಬಾಯಲ್ಲಿ ಹನಿ ನೀರೂ ಹಾಕಬಾರ್‍ದು.  ಹಾಗಾದರೆ ರೋಜಾ ಕಬುಲು ಆಗುವುದು.  ನೀನಿನ್ನೂ ಚಿಕ್ಕವಳು, ನಿನಗೆ ತ್ರಾಸಾಗುವುದು" ಸಾರಾಬೂ ಮಗಳನ್ನು ರಮಿಸಿದಳು.

"ನನ್ಗೇನೂ ಆಗುದಿಲ್ಲ ನಾನು ರೋಜಾ ಮಾಡ್ತೀನಿ" ಉತ್ಸಾಹ ತೋರಿದಳು ನಫೀಸಾ.

"ಒಂದು ಕಡ್ಡಿ ಕೂಡಾ ಬಾಯಲ್ಲಿ ಹಾಕಬಾರ್‍ದು.  ಅದೆಲ್ಲ ನಿನ್ನಿಂದ ಆಗುದಿಲ್ಲ.  ಇನ್ನಷ್ಟು ದೊಡ್ಡವಳಾದ ಮೇಲೆ ರೋಜಾ ಹಿಡಿಯುವಂತೆ ಬೇಟಿ" ತಂದೆ ಹುಸೇನಲಿ ಹೇಳಿದ.

"ನಾನು ರೋಜಾಮಾಡ್ತೀನಿ" ನಫೀಸಾ ಹಟ ಬಿಡಲಿಲ್ಲ.

"ಇನ್ ಷಾ ಅಲ್ಲಾ!" ಎಂದು ಸುಮ್ಮನಾದರು ಸಾರಾಬೂ-ಹುಸೇನಲಿ.

ಮಸೀದಿಯ ಮೀನಾರಿನಿಂದ ಸೈರಿಗೆ ಕರೆ ಕೇಳಿಸಿತು.  ಮಕ್ಕಳು ಉತ್ಸಾಹದಿಂದಲೇ ಎದ್ದರು.  ಮನೆಯಲ್ಲಿ ಇದ್ದದ್ದು ಮೂರು ರೊಟ್ಟಿ ಮಾತ್ರ.  ಮಕ್ಕಳು ಹಂಚಿಕೊಂಡು ತಿಂದು ನಿಯತ್ತು ಹೇಳಿ ರೋಜಾ ಹಿಡಿದರು.  ಸಾರಾಬೂ ಕರಿ ಚಹ ಕುಡಿದಳು.  ಹುಸೇನಲಿ ಹಮಾಲಿ ಮಾಡಬೇಕು ಅವನು ರೋಜಾ ಹಿಡಿಯಲಿಲ್ಲ.

ಹೊತ್ತೇರ ತೊಡಗಿದ್ದಂತೆ ಸಾರಾಬೂ ಚಿಂತೆಗೊಳಗಾದಳು.  ಮಗಳ ರೋಜಾ ಪೂರ್ತಿಯಾಗುವುದೋ ಇಲ್ಲವೋ ಎಂಬ ಅನುಮಾನ ಕಾಡಿತು.  "ಹೇ ಅಲ್ಲಾಹುವೆ!  ಮಗು ಉಪವಾಸ ಅರ್ಧಕ್ಕೆ ನಿಲ್ಲಿಸಿದರೆ ತಪ್ಪು ಮನ್ನಿಸು" ಎಂದು ಹತ್ತಾರು ಸಲ ಪ್ರಾರ್ಥಿಸಿದಳು.

ನಫೀಸಾ ಮಾತ್ರ ಲವಲವಿಕೆಯಿಂದಲೇ ಇದ್ದಳು.  ಶಾಲೆಗೂ ಹೋಗಿ ಬಂದಳು.  ಒಂದು ಹನಿ ನೀರೂ ಎನ್ನಲಿಲ್ಲ.  ಮಧ್ಯಾಹ್ನದ ಇಳಿ ಹೊತ್ತಿಗೆ ಆಟದಲ್ಲಿ ಮಗ್ನಳಾದಳು.

ಸೂರ್ಯ ಮುಳುಗಿದ.  ಅಂದಿನ ರೋಜಾದ ವ್ರತ ಮುಗಿಯಿತು.

"ಬೇಟಿ ನಿನಗೆ ಹಸಿವು ಅನಿಸಲಿಲ್ಲವೆ?" ಸಾರಾಬೂ ಕೇಳಿದಳು.

"ಇಲ್ಲಾ ಅಮ್ಮಾ"

"ಸ್ವಲ್ಪೂ ತ್ರಾಸು ಅನಿಸಿಲ್ಲ" ಕೆದಕಿ ಕೇಳಿದ ಹಿರಿಯಣ್ಣ.

"ರೋಜಾ ಅಂದ್ರ ಉಪವಾಸ.  ಅದು ನಮ್ಗ ರೂಢಿ ಐತಲ್ಲ ಭಯ್ಯಾ" ಎಂದು ಗಳಿಬಿಳಿ ಮಾತಾಡಿ ಒಣಚುರುಮುರಿಯನ್ನು ಬಾಯಿ ತುಂಬಿಕೊಂಡಳು ನಫೀಸಾ.  ಸಾರಬೂ ಕಣ್ಣಲ್ಲಿ ಹನಿಯೊಡೆದಿತ್ತು.

            *****

ಕೀಲಿಕರಣ: ಕಿಶೋರ್‍ ಚಂದ್ರ

ರೊಟ್ಟಿ

-ಅಬ್ಬಾಸ್ ಮೇಲಿನಮನಿ

ರೈಲು ನಿಲ್ದಾಣದ ಒಂದು ಬೆಂಚಿನ ಮೇಲೆ ಗಂಡ ಹೆಂಡತಿ ಕುಳಿತಿದ್ದರು.  ಗಾಡಿ ಬರುವುದು ತಡವೆಂದು ಪೋರ್ಟರ್‍ ಹೇಳಿದ.  "ರೀ ಕುಡಿಯಲು ನೀರು ತಗೊಂಡು ಬರ್‍ರಿ.  ಇಲ್ಲೇ ಊಟ ಮಾಡೂಣು, ಹ್ಯಾಂಗಿದ್ರೂ ಗಾಡಿ ತಡಾ ಆಗಿ ಬರುವುದು" ಎಂದು ಹೆಂಡತಿಯ ಮಾತಿಗೆ `ಹೂಂ' ಎಂದು ಬಾಟಲಿ ತೆಗೆದುಕೊಂಡು ಹೋಗಿದ್ದ ಗಂಡ.  ಆಕೆ ಚೀಲದಲ್ಲಿದ್ದ ಬುತ್ತಿಯ ಗಂಟನ್ನು ಬಿಚ್ಚಿದ್ದಳು.

ಎದುರು ಬೆಂಚಿನಲ್ಲಿ ಕುಳಿತ ವ್ಯಕ್ತಿಯೊಬ್ಬನ ದೃಷ್ಟಿ ಅವಳತ್ತ ಹರಿದಿತ್ತು.  ಆಕೆಯೂ ಆಕಸ್ಮಿವೆನ್ನುವಂತೆ ಅವನನ್ನು ನೋಡಿದ್ದಳು.  ಬಡಕಲು ಶರೀರದ, ಕುರುಚಲು ಗಡ್ಡದ ಆ ವ್ಯಕ್ತಿಯ ಕಣ್ಣು ತನ್ನ ಮೇಲೆ ಸುಳಿದಾಡುತ್ತಿವೆ ಅನಿಸಿ ಆಕೆ ಮುಖವನ್ನು ಬೇರೆ ಕಡೆ ಹೊರಳಿಸಿದ್ದಳು.  ಪ್ಲಾಟ್‌ಫಾರ್ಮಿನ ಕಂಬಕ್ಕೆ ತೂಗು ಹಾಕಿದ್ದ ಫಲಕ ಕಂಡಿತ್ತು.  "ಕಳ್ಳರಿದ್ದರೆ ಎಚ್ಚರಿಕೆ!"  ಫಲಕದಲ್ಲಿನ ಅಕ್ಷರಗಳು ದಿಗಿಲು ಹುಟ್ಟಿಸಿದವು.  ಮೈತುಂಬ ಸೆರಗು ಹೊದ್ದುಕೊಂಡು ಗಂಡ ಹೋದ ದಾರಿಯತ್ತ ಗಮನ ಹರಿಸಿದಳು.  ತನ್ನ ಕೊರಳಿನಲ್ಲಿದ್ದ ನಾಲ್ಕೆಳೆಯ ಬಂಗಾರದ ಸರದ ಮೇಲೆ ಅವನ ಕಣ್ಣು ಬಿತ್ತು?  ಅನುಮಾನಿಸಿದಳಾಕೆ.  ಮತ್ತೊಮ್ಮೆ ಆ ವ್ಯಕ್ತಿಯತ್ತ ಓರೆ ನೋಟ ಬೀರಿದಳು.  ಅವನು ರೆಪ್ಪೆ ಪಿಳುಕಿಸದೆ ನೋಡುತ್ತಲೇ ಇದ್ದ.  ಒಂದು ಕ್ಷಣ ಭಯವೆನಿಸಿತು.  ಹಾಡು ಹಗಲು, ಜನದಟ್ಟಣೆ ಇದೆ.  ಅವನೇನು ಮಾಡಲು ಸಾಧ್ಯ?  ಮತ್ತೆ ತಾನೇ ಸಮಾಧಾನ ಮಾಡಿಕೊಂಡಳು.

ಗಂಡ ನೀರು ತಂದ.  ಆಕೆ ಅವನ ಕೈಗೆ ರೊಟ್ಟಿ - ಪಲ್ಲೆ ಹಚ್ಚಿಕೊಟ್ಟಳು.  ತಾನೂ ರೊಟ್ಟಿ ಹಿಡಿದುಕೊಂಡಳು.  ಒಂದು ತುತ್ತು ಬಾಯಲ್ಲಿಡುತ್ತಿದ್ದಂತೆ ಅವಳ ಕಣ್ಣು ಎದುರು ಬೆಂಚನ್ನು ದೃಷ್ಟಿಸಿತ್ತು.  ಈಗ ಆಗಂತುಕ ವ್ಯಕ್ತಿ ಆಸೆಗಣ್ಣುಗಳಿಂದ ನೋಡ ತೊಡಗಿದ್ದ.  ಅವಳ ಒಡಲಲ್ಲಿ ತುಮುಲವೆದ್ದಿತು.  ಅವನು ಒಮ್ಮೆಲೆ ಎದ್ದು ನಿಂತಿದ್ದ.  ಆಕ್ರಮಣಕ್ಕೆ ಸಜ್ಜಾಗುತ್ತಿದ್ದಾನೆ ಅನ್ನಿಸಿತು.  ದಿಢೀರೆಂದು ಮೇಲೆ ಬಿದ್ದು ಕೊರಳ ಸರ ಕಿತ್ತು ಓಡಿದರೆ ಏನು ಮಾಡುವುದು?  ಸರ ಹೋದರೆ ಹೋಗಲಿ ಚೂರಿ, ಬ್ಲೇಡು ಹಾಕಿದರೆ ಗತಿಯೇನು?  ಆಕೆ ಆಗಂತುಕನ ಬಗ್ಗೆ ವಿಪರೀತವಾಗಿ ಊಹಿಸಿಕೊಂಡಳು.  ಅವನು ನೋಡುವ ರೀತಿಯೇ ಅಪಾಯಕಾರಿ ಎಂಬ ಭಯ ಆವರಿಸಿತು.  ಮತ್ತೆ ಆ ಆಗಂತುಕ ಕುಳಿತು ನಾಲಗೆಯಿಂದ ತನ್ನ ತುಟಿ ಸವರಿಕೊಳ್ಳತೊಡಗಿದ.  ಭಯವಿಹ್ವಲಳಾದಳಾಕೆ.

"ರಿ, ಆ ಮನುಷ್ಯ ಎಷ್ಟೋ ಹೊತ್ತಾತು ನನ್ನ ಕಡೆಗೆ ನೋಡಾಕ ಹತ್ಯಾನ" ಎಂದಳು.

"ಯಾರವನು?"

"ಅಲ್ಲೆ ಎದುರಿಗೆ ಕುಂತಾನ ನೋಡ್ರಿ" ಕಣ್ಣು ಸಂಜ್ಞೆಯಿಂದಲೇ ತೋರಿಸಿದಳಾಕೆ.

ಗಂಡ ಅತ್ತ ನೋಡಿದ್ದ.

ಆಗಂತುಕನ ದೃಷ್ಟಿ ಬೇರೆ ಕಡೆಗೆ ಹೊರಳಿತ್ತು.  "ಇನ್ನೊಂದ್ಸಲ ಈ ಕಡೆಗೆ ನೋಡ್ಲಿ.  ಅವನ ಕಣ್ಣಗುಡ್ಡೆ ಕಿತ್ತು ಕೈಗೆ ಹಾಕ್ತಿನಿ" ಎಂದು ಊಟ ಮುಗಿಸಿ ನೀರು ಕುಡಿದ ಗಂಡ.  ಆಗಂತುಕನು ಮತ್ತೆ ಮುಖ ಅತ್ತ ತಿರುಗಿಸಿದ್ದ.  ಅದನ್ನು ಕಂಡದ್ದೆ ಗಂಡನ ಮೈಯೆಲ್ಲಾ ಬೆಂಕಿಯಾಗಿತ್ತು.  ಅವನು ಎದ್ದು ಹೋಗಿ ಮುಸುರಿ ಕೈಯಿಂದಲೇ ಕಪಾಳಕ್ಕೆ ರಪ್ಪೆಂದು ಬಾರಿಸಿದ್ದ.  ಆಗಂತುಕ ನೆಲಕ್ಕೆ ಉರುಳಿದ.

ಏಕಾಏಕಿಯಾಗಿ ಸಂಭವಿಸಿದ ಈ ಪ್ರಸಂಗ ಜನರ ಗಮನ ಸೆಳೆಯಿತು.  ಗಬೋ ಎಂದರು ಜನ.  "ಏನಾಯಿತು?  ಏನಾಯಿತು?" ಎಲ್ಲರ ಮುಖದಲ್ಲೂ ಗಾಬರಿ, ಕೌತುಕ.

"ಬದ್ಮಾಶ್, ಅಕ್ಕ-ತಂಗೇರು ಇಲ್ಲೇನು ನಿನ್ಗ?" ಆಕ್ರೋಶದಿಂದ ಕುದಿಯತೊಡಗಿದ್ದ ಗಂಡ.  ಅವನ ಧ್ವನಿಯೊಂದಿಗೆ ಧ್ವನಿ ಬೆರೆಸಿ ಹೆಂಡತಿಯೂ ಬೈಯತೊಡಗಿದಳು.

ಆಗಂತುಕ ಕಿಂಚಿತ್ತೂ ಮಿಸುಗಾಡಲಿಲ್ಲ.  ಸತ್ತು ಹೋದನೆ ಅವನು?  ಜನರ ಗುಂಪಲ್ಲಿ ಗುಸುಗುಸು ಎದ್ದಿತು.  ಅಷ್ಟರಲ್ಲಿ ಪೋಲಿಸರು, ಸ್ಟೇಶನ್ ಮಾಸ್ಟರ್‍ ಬಂದರು.  ಗಂಡ ನಡೆದುದನ್ನು ವಿವರಿಸಿದ.  ಪೋರ್ಟರನೊಬ್ಬ ಅವಸರದಿಂದ ನೀರು ತಂದು ಆಗಂತುಕನ ಮುಖದ ಮೇಲೆ ಸಿಂಪಡಿಸಿದ.  ಪೋಲಿಸ್ ಹೇಳಿದ "ಇವನು ಕಳ್ಳನಲ್ಲ ಇಲ್ಲಿಯ ಖಾಯಂ ಗಿರಾಕಿ"

"ಅವನು ನನ್ನ ಹೆಂಡತಿಯನ್ನು ನೋಡುತ್ತಿದ್ದ" ಆರೋಪಿಸಿದ್ದ ಗಂಡ.

ಸಾವಕಾಶವಾಗಿ ಎದ್ದು ಕುಳಿತ ಆಗಂತುಕನನ್ನು ಸ್ಟೇಶನ್ ಮಾಸ್ಟರ್‍ ಕೇಳಿದರು.

"ಹೀಗೇಕೆ ಮಾಡಿದಿಯೋ ನೀನು?"

ಆಗಂತುಕ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ.

"ಸಾಹೇಬರ... ಎರಡು ದಿನಾ ಆತು ನಾನು ಊಟ ಮಾಡಿಲ್ಲ.  ಹಸಿವು ತಡೀಲಾರದ ಆ ತಾಯಿ ಕಡೆ ನೋಡಿದ್ಯೆ ಒಂದು ರೊಟ್ಟಿ ಸಿಕ್ಕೀತು ಅಂತ".

            *****


ಕೀಲಿಕರಣ: ಕಿಶೋರ್‍ ಚಂದ್ರ

ಮನದೊಳಗಣ ಕಿಚ್ಚು

- ಅಬ್ಬಾಸ್ ಮೇಲಿನಮನಿ

ಕರೀಮ ಆ ಕತ್ತಲನ್ನು ಸೀಳಿಕೂಂಡು ಬಂದ. ಪೆಡಸುಪಡಸಾದ ಮೈ.... ಅಗಲಿಸಿದ ಕಣ್ಣುಗಳಲ್ಲಿ ದ್ವೇಷಾಗ್ನಿ. ಕೈಯಲ್ಲಿ ಹರಿತವಾದ ಕುಡಗೋಲು...."ಲೇss ಅಬಿದಾಲಿ. ಇವತ್ತ ನಿನ್ನ ಕತಲ್‍ರಾತ್ರಿ !" ಕತ್ತಲನ್ನು ಬೆಚ್ಚಿಬೀಳಿಸುವ ಆಸ್ಪೋಟದ ಧ್ವನಿ ...... ತೋಟದ ಅಂಗಳದ ತುಂಬಾ ಒಣಗಲು ಹರವಿದ್ದ ಶೇಂಗಾ.... ಪಕ್ಕದಲ್ಲಿ ಮಲಗಿದ್ದ ಅಬಿದಾಲಿ.... ಅವನ ಎದೆಯ ಮೇಲೆ ಒಂದೇ ನೆಗೆತಕ್ಕೆ ಹಾರಿ ಕುಳಿತ ಕರೀಮ. ಉಸಿರಾಡಲು ಹೆಣಗಾಡಿದ ಅಬಿದಾಲಿಯ ಕತ್ತು ಕತ್ತರಿಸಿತ್ತು ಅವನ ಕೈಯ ಕುಡುಗೋಲು. ಮುಲ್ಲಾನ ಚೂರಿಯಿಂದ ಕೊರಳು ಕತ್ತರಿಸಿಕೊಂಡ ಕೋಳಿಯಂತೆ ಅಬಿದಾಲಿ ವಿಲಿವಿಲಿಸಿದ. ಧಾರೆಧಾರೆ ರಕ್ತ. ಸೈತಾನ  ಹೊಕ್ಕಂತೆ ಅಬಿದಾಲಿಯ ರುಂಡ, ಮುಂಡ, ಕ್ಕೆಕಾಲು ಕೊಚ್ಚಿ "ಈ ತ್ವಾಟ ನಮಗ....  ಗೋರಿ ನಿನಗ" ಎಂದು ವಿಕಾರವಾಗಿ ಕೂಗಿದ ಕರೀಮ. ಅವನ ಕೇಕೆಗೆ ಹುಚ್ಚು ನಗೆಯ  ಆವೇಶ ತುಂಬಿತ್ತು.

ದಿಗ್ಗನೆದ್ದು ಕುಳಿತಳು ಹಮೀದಾ. ತಲ್ಲಣದ ಮೈತುಂಬಾ ಬೆವರು. ಕರುಳಲ್ಲಿ ಸಂಕಟ. ಸಾವರಿಸಿಕೊಂಡು ಎದ್ದು ಅಬಿದಾಲಿಯ ಕೋಣೆಯತ್ತ ಧಾವಿಸಿ "ಬೇಟಾ" ಎಂದು ಕರೆದಳು. "ಏನು ಅಮ್ಮಾ?" ನಿದ್ದೆಗಣ್ಣಲ್ಲೇ ಕೇಳಿದ್ದ ಅಬಿದಾಲಿ. ಮಗನ ಧ್ವನಿ ಕೇಳಿ ಹಮೀದಾಳ ಕಳವಳದ ಮನಸ್ಸು ಸಮಾಧಾನಗೊಂಡಿತು. "ಏನಿಲ್ಲ ಮಲಗು ಬೇಟಾ" ಎಂದು ಹಿಂತಿರುಗಿ ಬಂದು ಹಾಸಿಗಯಲ್ಲಿ ಕುಳಿತಳು. ಕಂಡದ್ದು  ಕನಸು ಎಂಬುದು ಅವಳ ಅರಿವಿಗೆ ಬಾರದಿರಲಿಲ್ಲ. ಆದರೆ ಅದೆಂಥ ಖರಾಬ್ ಕನಸು !

ಕರೀಮನ ಮತ್ಸರಾವತಾರ ಅವಳ ತೆರೆದ ಕಣ್ಣೆದುರು ಮತ್ತೆ ಪ್ರತ್ಯಕ್ಷವಾಗಿತ್ತು. "ಆ ಹರಾಮಜಾದೆಯನ್ನು ಕಡಿದು ಚೂರುಚೂರು ಮಾಡಿ ತ್ವಾಟದ ತುಂಬ ಚರಾಗ ಚಲ್ತಿನಿ" ಅಂದ ಅವನ ಮಾತು ಅವಳ ಎದೆಯ ಗಹ್ವರದಲ್ಲಿ ಪ್ರತಿಧ್ವನಿಸಿತು. ಒಂದೇ ರಕ್ತಕ್ಕೆ ಹುಟ್ಟಿದ ಮಕ್ಕಳು ಪರಸ್ಪರ ವೈರಿಗಳಾದರು ! ಮುಂದೆ ಎಂಥ ದುರಂತ ಸಂಭವಿಸುವುದೋ ? ತಹತಹಿಸಿದಳು ಹಮೀದಾ. ಕನಸು ವಿಜೃಂಭಿಸಿದ ಕಣ್ಣುಗಳು ಹನಿಯೊಡೆದವು.

***

ಅಬಿದಾಲಿಯ ಮೇಲೆ ಕರೀಮನಿಗೆ ವಿಪರೀತ ಸಿಟ್ಟಿದೆ ಎಂಬುದು ಅವಳಿಗೆ ಚನ್ನಾಗಿ ಗೊತ್ತಿದೆ. ತೋಟದಲ್ಲಿಪಾಲು ಸಿಗಲಿಲ್ಲ‌ಎನ್ನುವ ಕಾರಣ ಅವನ  ಮನಸ್ಸಿನೊಳಗೆ ಆಸೂಯೆಯ ಲಾವಾವನ್ನು ಕುದಿಸುತ್ತಿರುವುದು ಕೂಡಾ ಗೊತ್ತು.  ಊರಿಗೆ ತೀರಾ ಹತ್ತಿರದಲ್ಲಿರುವ ತೋಟ ಎಲ್ಲರ ಕಣ್ಣು ಕುಕ್ಕಿಸುವುದು. ಅದರ  ಮಣ್ಣ ಚಿನ್ನವೇ ! ಕಾಸೀಮಸಾಹೇಬರಿಗೆ ಅದು ಅದೃಷ್ಟ ಎನ್ನುವಂತೆ ಸಿಕ್ಕಿತ್ತು.  ಕಿರಾಣಿ ವ್ಯಾಪಾರಿಗಳಾದ ಅವರು ಹಾಳುಬಿದ್ದ ಆ ಹೊಲವನ್ನು ನಂದನವನವಾಗಿ  ಪರಿವರ್ತಿಸುವಲ್ಲಿ ಸಫಲರಾದರು. ಆ ವೇಳೆಗೆ ಅಲೆಮಾರಿಯಾಗಿ ಬಂದು ಅವರ ಜೊತೆಗೂಡಿದ ಚಲುವಜ್ಜ ತನ್ನೂಡೊಲ ಪ್ರೀತಿಯನ್ನು ತೋಟದ ಮಣ್ಣಿಗೆ ಬಸಿದ.

ಮದುವೆಯಾಗಿ ಹನ್ನೆರಡು ವಷ೯ವಾದರೂ ಮಕ್ಕಳಾಗದ ಹಮೀದಾ, ಮತ್ತೊಂದು  ನಿಕಾಹ್ ಮಾಡಿಕೊಳ್ಳಲು ಗಂಡನಿಗೆ ಒತ್ತಾಯಿಸಿದ್ದಳು. ಕಾಸೀಮಸಾಹೇಬರು ಬಿಲ್ಕುಲ್ ಆಗದೆಂದು ನಿರಾಕರಿಸಿದ್ದರು. ಹೆಂಡತಿಯ ಮೇಲಿನ ಸಾಂದ್ರವಾದ ಪ್ರೀತಿ ಆ ದಿಸೆಯಲ್ಲಿ ಅವರನ್ನು ಗಟ್ಟಿಗೊಳಿಸಿತ್ತು. ಆದರೆ ಹಮೀದಾ ಹಠ ಹಿಡಿದು, ಅನ್ನ-ನೀರು ತ್ಯಜಿಸಿ ಕುಳಿತಳು. ಸೋತ ಕಾಸೀಮಸಾಹೇಬರು ಜುಬೇದಾಳೊಂದಿಗೆ  ನಿಕಾಹ್ ಮಾಡಿಕೊಂಡರು. ಅಂಥ ಸಂಭ್ರಮದ ಕ್ಷಣದಲ್ಲಿ ಅಚ್ಚರಿ ಎನ್ನುವಂತೆ
ಜುಬೇದಾ ಮನೆ ತುಂಬಿದ ಮೂರು ತಿಂಗಳಿಗೆ ಹಮೀದಾಳ ಗರ್ಭ ಬೀಜಾಂಕುರದ ಪುಳಕ ಅನುಭವಿಸಿತ್ತು. ಆಕೆ ಅಬಿದಾಲಿಗೆ ಜನ್ಮನೀಡಿದ ಬಳಿಕ ಜುಬೇದಾ, ಶರೀಫ್,ರಹಮತ್, ಕರೀಮ್ ಹಾಗೂ ತಸ್ರಿಫಾ ಅವರಿಗೆ ತಾಯಿಯಾಗಿದ್ದಳು.

ಮಕ್ಕಳಿಗೆ ಓದಿಸಬೇಕೆಂಬ ಮಹತ್ವಾಕಾಂಕ್ಷೆ ಸಾಹೇಬರದಾಗಿತ್ತು ಆದರೆ ಮಕ್ಕಳಿಗೆ ವ್ಯವಹಾರದ ಕಡೆಗೆ ಆಸಕ್ತಿ. ರಹಮತ್, ಕರೀಮ್ ಆ ಸೆಳೆತದಿಂದ ಕಿರಾಣಿ ಅಂಗಡಿ ಹಿಡಿದು ಕುಳಿತರು. ವಸ್ತುಗಳ ಖರೀದಿಯ ಜವಾಬ್ದಾರಿಯನ್ನು ಶರೀಫ್  ವಹಿಸಿಕೊಂಡರೆ ಅಬಿದಾಲಿ ತೋಟದ ಉಸ್ತುವಾರಿಗೆ ನಿಂತ. ತೋಟದ ತೆಂಗು, ಬಾಳೆ, ದಾಳಂಬರಿ, ದ್ರಾಕ್ಷಿ, ಸೇಂಗಾ, ತರಕಾರಿ, ಧಾನ್ಯಗಳ ಮಾರ್ಕೆಟ್ ವ್ಯವಹಾರವನ್ನು  ಅವನೇ ನೋಡಿ ಕೊಂಡಿದ್ದ. ಮಕ್ಕಳ ಪರಿಶ್ರಮ, ವ್ಯವಹಾರ ಚತುರತೆ ಕಾಸೀಮ  ಸಾಹೇಬರಿಗೆ ನೆಮ್ಮದಿ ತಂದಿತ್ತು. ತಸ್ರಿಫಾ ಒಳ್ಳೆಯ ಮನೆ ಸೇರಿಕೊಂಡ ಮೇಲೆ  ಅಬಿದಾಲಿ ಮತ್ತು ಶರೀಫ್‍ರ ನಿಕಾಹ್ ಜರುಗಿದ್ದವು. ಹಮೀದಾ-ಜುಬೇದಾ ತನುವೆರಡಾದರೂ ಮನಸ್ಸೊಂದಾಗಿ ಅನ್ಯನ್ಯತೆಯ ಗಂಧ ತೀಡಿದ್ದರು.  ಕಾಸೀಮಸಾಹೇಬರ ಬದುಕು ಘಮ-ಘಮಿಸತೊಡಗಿತ್ತು.

ಅದರಲ್ಲಿ ಕೊಳಕು ಸ್ರವಿಸುವ ಇರಾದೆಯೋ ಎಂಬಂತೆ ದಾವೂದನ ಪ್ರವೇಶವಾಗಿತ್ತು. ಅಬಿದಾಲಿಗೆ ಹೆಣ್ಣುಕೊಟ್ಟ ಮಾವ ಅವನು. ನೆಂಟಸ್ತನದ ನೆಪದಲ್ಲಿ ಆಗಾಗ ಮುಖ ತೋರಿಸಿ ಹೋಗುತ್ತಿದ್ದವನು ವಷಾ೯ರು ತಿಂಗಳು ಕಳೆದ ಮೇಲೆ ಅಳಿಯನ  ಮನೆಯಲ್ಲಿತನ್ನ ಮನಸ್ಸೋ ಇಚ್ಚೆ ತಳವೂರತೊಡಗಿದ್ದ. ಕಾಸೀಮಸಾಹೇಬರು ಊರಿನಲ್ಲಿ ನಾಲ್ಕು ಉಪ್ಪರಿಗೆಯ ಮನೆ ಮತ್ತು ಆದಕ್ಕೆ ಹೊಂದಿಕೊಂಡಂತೆ ದೊಡ್ಡ ಕಿರಾಣಿ ಅಂಗಡಿಯನ್ನು ಕಟ್ಟಿಸಿದರು. ಆಲ್ಲಿ ಜುಬೇದಾ ಮತು ತೋಟದ ಮನೆಯಲ್ಲಿ ಹಮೀದಾ ಇದ್ದರು. ಇದೆಲ್ಲ ಕೌಟುಂಬಿಕ ವ್ಯವಹಾರವನ್ನು ಸರಿದೂಗಿಸುವ ಕಾಸೀಮಸಾಹೇಬರ ಕ್ರಮವಾಗಿತ್ತು. ದಾವೂದನೂ ಅದನ್ನು ತಿಳಿದವನಾಗಿದ್ದ. ಆದರೆ ಅವನ ಅಕ್ರಮ ಬುದ್ದಿ ಇದನ್ನು ಸಹ್ಯವೆಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಲಿನಲ್ಲಿ ಹುಳಿ ಹಿಂಡುವುದು ಅವನ ನೀಚ ಪ್ರವೃತ್ತಿ. ಆದರೆ ಅದು ದಿಢೀರೆಂದು ಕಾಯಾ೯ಚರಣೆಗೆ ತೊಡಗುವಂಥದ್ದಲ್ಲ. ಅಂತಸ್ತು ಮತ್ತು ಆರ್ಥಿಕ ಸಾಮಥ್ಯ೯ದಿಂದ ಆವನು ಪ್ರಬಲನಾಗಿರಲಿಲ್ಲ. ಸಮೃದ್ಧ ಮಾತುಗಾರಿಕೆಯ ಜಂಭದಲ್ಲಿ ಏನೆಲ್ಲವನ್ನು ತನ್ನ ಸುಪರ್ದಿಗೆ ಒಪ್ಪಿಸಿಕೊಂಡುಬಿಡುವ ಚಾಲಾಕುತನದಿಂದ ಮುಗ್ದ  ಅಬಿದಾಲಿಯನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ್ದ. ಅವನಿಗೆ ಸಾಲುಸಾಲಾಗಿ  ಆರು ಜನ ಹೆಣ್ಣಮಕ್ಕಳು, ಅವರನ್ನು ಒಳ್ಳೆಯ ಮನೆತನಕ್ಕೆ ಕೊಟ್ಟಿದ್ದ. ಅಬಿದಾಲಿಯ ಹೆಂಡತಿ ನಸೀಮಾ ಅವನ ಕೊನೆಯ ಮಗಳು. ಚಲುವಿನ ಚಿತ್ತಾರದಂತಿದ್ದ ಆಕೆಯೆಂದರೆ  ಅವನಿಗೆ ವಿಶೇಷ ಮಮತೆ. ಅಬಿದಾಲಿ ಜೋರುಕಾ ಗುಲಾಮನಾಗಿ ಮಾಪ೯ಡುವಲ್ಲಿ  ನಸೀಮಾಳ ಲಾವಣ್ಯವೂ, ದಾವೂದನ ಕಾರಸ್ಥಾನವೂ ಯಶಸ್ಸು ಕಂಡಿದ್ದವು.

ಕಾಸೀಮಸಾಹೇಬರ ಆವಿಭಕ್ತ ಕುಟುಂಬದಲ್ಲಿ ಕಳ್ಳಿಯಹಾಲು ಸುರಿಯಲು ಅವನ ಒಳತೋಟಿ ಕಾತರಿಸಿತ್ತು ಅವನ ಆದೃಷ್ಟ ಎನ್ನುವಂತೆ ಕಾಸೀಮಸಾಹೇಬರು ಅಚಾನಕ್ಕಾಗಿ ಲಕ್ವಾ ಪೀಡಿತರಾದರು. ಕೊಡಿಸಿದ ಯಾವ ಚಿಕಿತ್ಸೆಯೂ ಫಲಕಾರಿಯಾಗದೇ ಅವರು ಬದುಕು ಸಾವಿನ ಹೋರಾಟದೊಂದಿಗೆ  ಹಾಸಿಗೆಯಲ್ಲಿ ಸ್ಥಿರವಾದರು. ದಾವೂದ ಕ್ಷಿಪ್ರವಾಗಿ ಮಗಳ ಮೂಲಕ ಅಳಿಯನ ಆಂತರಾಳದಲ್ಲಿ  ಸುನಾಮಿಯ ಅಲೆಯೆಬ್ಬಿಸಿದ್ದ. ತನಗೂ ಎಷ್ಟು ಸಾಧ್ಯವೋ ಅಷ್ಟು ಪಿತೂರಿಯ  ಗೊಬ್ಬರವನ್ನು ಅವನ ತಲೆಯಲ್ಲಿ ತುಂಬಿಸಿದ್ದ. ಅಬಿದಾಲಿ ಆ ಗೊಬ್ಬರದೊಳಗೆ ಹುಳುವಾಗಿ ಹರಿದಾಡಿದ.

***

ಕಾಸೀಮಸಾಹೇಬರು ಬರಿ ಕಣ್ಣು ಪಿಳುಕಿಸುತ್ತಿದ್ದರು. ಆವರ ತೊದಲು ಮಾತು ದುಸ್ತರವೆನಿಸಿತ್ತು. ಆವತ್ತು ಅವರು ಅಬಿದಾಲಿಗೆ ಏನನ್ನೋ ಹೇಳಲು  ಹಾತೊರೆದಿದ್ದರು. ದಾವೂದ ಆದರ ಹೊಳವು ಗ್ರಹಿಸಿಕೊಂಡವನಂತೆ ತುತಾ೯ಗಿ  ಹೋಗಿ ತನಗೆ ಪರಿಚಿತವಿರುವ ವಕೀಲರೊಬ್ಬರನ್ನು ಕರೆದುಕೊಂಡು ಬಂದಿದ್ದ.  ವಕೀಲರನ್ನು ಕಂಡ ಸಾಹೇಬರು ಕಣ್ಣರಳಿಸಿದ್ದರು. ವಕೀಲರು ಆವರ ಭಾವನೆಗಳನ್ನು  ತಿಳಿದುಕೊಳೃಲು ಬಹಳ ಹೆಣಗಾಡಿದ್ದರು. ಆದರೂ ಆವರಿಂದ ಉಯಿಲು  ಸಿದ್ದಗೊಂಡಿತ್ತು. ತಂದೆಯ ಜಡ ಹಸ್ತವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು  ಅಬಿದಾಲಿ ಅವರಂತೆ ಉಯಿಲಿನಲ್ಲಿಸಹಿ ಹಾಕಿದ್ದ.  ಇಂಥ ಕೃತ್ಯಕ್ಕೆ ಪ್ರಚೋದನೆ  ನೀಡುವ ಮೂಲಕ ಪಾಪದ ಹೊರೆಯೊಂದನ್ನು ಅಳಿಯನ ತಲೆಯ ಮೇಲೆ ಹೊರಿಸಿದ್ದ ದಾವೂದ. ಅದು ನಿಕೃಷ್ಟ ಹೊರೆಯೆಂದು ಅಬಿದಾಲಿಗೆ ತಿಳಿಯಲಿಲ್ಲ. ಸ್ಯೆತಾನ ದಾವೂದನ ಮನಸ್ಸಿಚ್ಛೆ ಸಂಭ್ರಮವೆಂದರೆ ಅತೀ ಸಂಭ್ರಮವಾಗಿ ಅನಾವರಣಗೊಂಡಿತ್ತು.

ಉಯಿಲಿನಲ್ಲಿ ಬರೆದಿರುವ ವಿಷಯವನ್ನು ಅರಿತುಕೊಳ್ಳುವ ಧಾವಂತವಿತ್ತೇನೋ.... ಕಾಸೀಮಸಾಹೇಬರು ಒಂದೇ ಸಮನೆ ತೊದಲಿದ್ದರು. ದಾವೂದ ಅದನ್ನು ನಿಲ೯ಕ್ಷಿಸಿ ವಕೀಲರನ್ನು ಕರೆದುಕೊಂಡು ಹೋಗಿದ್ದ.

ಉಯಿಲು ಆದ ನಾಲ್ಕನೆಯ ದಿನಕ್ಕೆ ಕಾಸೀಮಸಾಹೇಬರು ಕಬರ್ ಸೇರಿದ್ದರು. ಅವರ ದಿನಕಮ೯ಗಳು ಮುಗಿದ ಮೇಲೆ ಜಮಾತಿನ ಕೆಲವು ಹಿರಿಯರ ಸಮ್ಮುಖದಲ್ಲಿ ಲಕೋಟೆ ಒಡೆಯಲಾಗಿತ್ತು. ಲಾಯರ್ ಅದರೊಳಗಿನ ವಿಷಯವನ್ನು ಓದಿ  ಹೇಳಿದ್ದರು. ಊರಿನಲ್ಲಿರುವ ನಾಲ್ಕುಮನೆ, ಕಿರಾಣಿ ಆಂಗಡಿ ಜುಬೇದಾ ಮತ್ತು ಅವಳ ಮಕ್ಕಳಿಗೆ, ತೋಟ, ಅಲ್ಲಿನ ಮನೆ ಹಮೀದಾ ಮತ್ತು ಅಬಿದಾಲಿಗೆ ಪಾಲಾಗಿರುವುದೆಂದು ನಿಣ೯ಯಿಸಲಾಗಿತ್ತು.

ಕರೀಮನ ಒಡಲಲ್ಲಿ ಆಸಮಾಧಾನದ ಹೊಗೆ ಎದ್ದಿತ್ತು. ಮನೆಗೆ ಬಂದವನೇ "ಭಯ್ಯಾ ನಮಗೆ ಮೋಸ ಮಾಡಿದ" ಎಂದು ಹುಯಿಲೆಬ್ಬಿಸಿದ್ದ.
"ಉಯಿಲು ಬರಿಸಿದ್ದು ನಿಮ್ಮ ಬಾಬಾ, ಅದರಾಗೇನು ಮೋಸಾ?" ಮೋಸದ ಒಳಸುಳಿ ಗೊತ್ತಿದರೂ ಜುಬೇದಾ ಆದನ್ನು ತೇಲಿಸಿದ್ದಳು.
"ಉಯಿಲು ಬರೆಸಿದ್ದು ಬಾಬಾ ಅಲ್ಲ, ಆ ದುಷ್ಮನ್ ದಾವೂದ" ಕರೀಮನ
ಬಿಸಿರಕ್ತದ ಆಕ್ರೋಶ ಜುಬೇದಾಳ ಬಾಯಿಕಟ್ಟಿಸಿತ್ತು.

"ನಮ್ಮ ಮನೆ ವಿಚಾರದಾಗ ಆ ನಸಲಿ ಹರಾಮ್ ಯಾಕ್ ಮೂಗು
ತೂರಿಸಬೇಕು?" ಕರೀಮ ಕೇಳಿದ್ದರಲ್ಲಿ ನ್ಯಾಯವಿತ್ತು.

"ಅಲ್ಲಾಹ್ ಎಲ್ಲಾನೂ ನೋಡ್ತಾನೆ ಬಿಡು" ಮಗನನ್ನು ಸಮಾಧಾನ ಮಾಡಲು ನೋಡಿದ್ದಳು ಜುಬೇದಾ.

"ಭಯ್ಯಾನಿಗಾದರೂ ಇದು ತಿಳಿಬೇಕಿತ್ತು' ಎಂದಿದ್ದ ರಹಮತ್.

"ದಾವೂದನ ಬಗಲ ಬಚ್ಚಾ, ಬೇಶರಮ್  ಅವನು !" ಕರೀಮನ ಮಾತು ತುಚ್ಛವಾಗಿತ್ತು.

"ಅಬಿದಾಲಿ ನಿನಗಿಂತಲೂ ದೊಡ್ಡಾಂವ. ಹಂಗೆಲ್ಲಾ ಅನ್ನಬೇಡ" ಹಗುರಾಗಿ ಗದರಿದ್ದಳು ಜುಬೇದಾ.

" ಅದಕ್ಕೇ ನಮಗ ಮೋಸ ಮಾಡಿ ತನ್ನ ದೊಡ್ಡಸ್ತಿಕೆ ತೋರಿಸಿದ ಅಂವಾ. ನಮಗೂ ಆ ತೋಟದ ಮೇಲೆ ಹಕ್ಕು ಐತಿ. ಅದರಾಗ ಪಾಲು ಸಿಗುತನಕ ನಾನು ಬಿಡೂದss ಇಲ್ಲ"  ಕರೀಮನ ಧೋರಣೆ ಸವಾಲಿನಂತಿತ್ತು.

ಮಗನ ಒಡಲಲ್ಲಿ ಹುಟ್ಟಿಕೂಂಡ ಮತ್ಸರದ ಕಿಚ್ಚಿನಿಂದ ಜುಬೇದಾ ಆತಂಕ ಅನುಭವಿಸಿದ್ದಳು. ಆ ಕಿಚ್ಚು ಹೊತ್ತಿ‌ಉರಿಯಬಾರದೆನ್ನುವ ತಹತಹಿಕೆ ಕೂಡ ಅವಳಲ್ಲಿ ಹೆಚ್ಚಿತ್ತು. ತಂದೆಯ ಆಸ್ತಿಯನ್ನು ಮಕ್ಕಳು ಹೆಚ್ಚುಕಡಿಮೆ ಪಾಲುಮಾಡಿಕೊಂಡಿರಬಹುದು. ಸಂಬಂಧವನ್ನು ಪಾಲುಮಾಡಿಕೊಳ್ಳಲು ಸಾಧ್ಯವಿಲ್ಲ  ಅಂದುಕೊಂಡಿದ್ದಳಾಕೆ.

****

ತೋಟದ ಮೇಲೆ ಅಬಿದಾಲಿಗೆ ಸಹಜ ಪ್ರೀತಿ ಇತ್ತು.  ಆದರೆ ಕೆಟ್ಟ ದಾಹ ಇದ್ದದ್ದು  ದಾವೂದನಿಗೆ. ಅದರ ಫಲದ ಎಷ್ಟೋ ಭಾಗ ಈ ದಾಹದ ಉದರ ಸೇರುತ್ತಿರುವುದರ ಕಲ್ಪನೆ ಕೂಡಾ ಇರದಂತಿದ್ದ ಅಬಿದಾಲಿ. ಚಲುವಜ್ಜನಿಗೆ ತನ್ನ ಕಣ್ಣಗಾವಲು ನಿರಥ೯ಕ ಎನ್ನುವ ಸ್ಥಿತಿ. ಒಂದೆರಡು ಸಲ ದಾವೂದನ ಕಬಳಿಕೆಯ ಬಗ್ಗೆ ಅಬಿದಾಲಿಯ ಎದುರು ಪ್ರಸ್ತಾಪಿಸಿದ್ದು ವ್ಯಥ೯ವೆನಿಸಿತ್ತು. ದಾವೂದನಿಗೆ ಚಲುವಜ್ಜನೆಂದರೆ ಆಷ್ಟಕಷ್ಟೆ. ಕಾಸೀಮಸಾಹೇಬರ ಮೈತ ಆದ ಮೇಲೆ ಅವನನ್ನು ತೋಟದಿಂದ ಓಡಿಸಲು ದಾವೂದ ಹಾಕಿದ ಪ್ಲಾನನ್ನು ಹಮೀದಾ ಹುಸಿಗೊಳಿಸಿದ್ದಳು. "ಚಲುವಜ್ಜ ತೋಟದ ಜೀವಾಳ" ಎಂದಾಕೆ ಸ್ಪಷ್ಟವಾಗಿ  ಹೇಳಿದ್ದಳು.

ತೋಟದ ದಾಳಂಬರಿ ತುಂಬಿಕೊಂಡು ಲಾರಿ ಹೈದರಾಬಾದಿಗೆ ಹೋಗುವಾಗ, ಟ್ರ್ಯಾಕ್ಟರ ದ್ರಾಕ್ಷಿ, ತೆಂಗು, ಧಾನ್ಯ, ತರಕಾರಿಗಳನ್ನು ಮಾರ್ಕೆಟ್‌ಗೆ ಒಯ್ಯುವಾಗ ಕರೀಮನ ರಕ್ತ ಕಳಕಳ ಎನ್ನುವದು. ಅವನು ಒಳ್ಳೆಯ ಹುಡುಗನಾದರೂ ಸ್ವಭಾವ ನಿಷ್ಠುರ. ಆವೇಶವೂ ಹೆಚ್ಚು. ಜುಬೇದಾಳಿಗೆ ಆದೇ ಭಯ.

ಅವತ್ತು ತನ್ನನ್ನು ಕುರಿತು ಅಬಿದಾಲಿ ಕ್ಷುಲಕ ಮಾತನಾಡಿದನೆಂದು ಕೇಳಿಸಿಕೊಂಡು ಮನೆಗೆ ಬಂದು ಕೈಯಲ್ಲಿಕುಡುಗೋಲು ಹಿಡಿದುಕೊಂಡು ಬಿರುಗಾಳಿಯಂತೆ ತೋಟದ ಕಡೆಗೆ ಹೊರಟವನನ್ನು ಜುಬೇದಾ ಅಡ್ಡಗಟ್ಟಿದ್ದಳು. ಈ ಪ್ರಸಂಗ ಕೇಳಿದ ಹಮೀದಾ ಎದೆ ಒಡೆದು ಹೋದಂತೆ, ಮಗನ ಕಣ್ಣುತಪ್ಪಿಸಿ ತಂಗಿಯ ಮನೆಗೆ ಬಂದು, ಕರೀಮನ ಕೈ ಹಿಡಿದು "ಬೇಟಾ, ನಿಮ್ಮ ಭಯ್ಯಾಗ ಅಕಲು ಕಮ್ಮಿ. ದಾವೂದನ ಮಾತು ಕೇಳಿ ನಮಗ ಅನ್ಯಾಯ ಮಾಡಿದ್ದು ಖರೆ. ನೀವು ನನ್ನ ಪಾಲಿನ ಆಸ್ತಿನss ತಗೋರಿ. ಭಯ್ಯಾಗ ಮಾಫ್ ಮಾಡ್ರಿ" ಎಂದು ಗೋಗರೆದಿದ್ದಳು. ಆಕೆ ದೊಡ್ಡಮ್ಮ ಎಂಬ ಸಂಬಂಧ ಲೆಕ್ಕಿಸದೆ "ಆ ನಾಲಾಯಕನಿಗ ಮಾಫ್ ಇಲ್ಲ ನೀನು ಪಂಚರಂಗಿ ಅಟ ಆಡಬ್ಯಾಡ" ಎಂದು ಹಮೀದಾಳನ್ನು ದೂರಕ್ಕೆ ತಳ್ಳಿದ್ದ. ಜುಬೇದಾ ಮಗನ  ಕಪಾಳಕ್ಕೆ ಹೊಡೆದು ಅಕ್ಕನ ಕ್ಷಮೆ ಕೇಳಿದ್ದಳು. ಅಪಮಾನದಿಂದ ಅಳುತ್ತ ಮನೆಗೆ ಹಿಂತಿರುಗಿದ್ದಳು ಹಮೀದಾ.

ನಾ ಇನ್ಸಾಫಿ ಹಕೀಕತ್‍ನೊಂದಿಗೆ ರಾಜಿಮಾಡಿಕೊಳ್ಳುವ ಇರಾದೆ ಕರೀಮನದಲ್ಲ. ತೋಟದಲ್ಲಿ ಸಮಪಾಲು ದೊರಕಿಸಿಕೊಳ್ಳುವ ಹಸಿಹಸಿ ತುಡಿತದಲ್ಲಿ ಅವನು ಕೋಟಿ೯ನ ಮೆಟ್ಟಲೇರಲು ನಿಧ೯ರಿಸಿದ್ದ. ಲಾಯರ್ ಹತ್ತಿರಕ್ಕೂ ಹೋಗಿ  ಮಾತನಾಡಿದ್ದ. ಈ ವಿಷಯದಲ್ಲಿ ಜುಬೇದಾ ಮಗನನ್ನು ವಿರೋಧಿಸಿದ್ದಳು.  ಅಷ್ಟಲ್ಲದೇ ಜಮಾತಿನ ಚೇರ್ಮನ್ ಫಕ್ರುದ್ದೀನಸಾಹೇಬರನ್ನು ಕರೆಯಿಸಿ ಮಗನಿಗೆ  ಬುದ್ಧಿ ಹೇಳಿಸಿದ್ದಳು. ಕೋರ್ಟು-ಕಚೇರಿಯ ಸಂಗತಿ ಸುಖದ್ದಲ್ಲ  ಎಂದು  ಫಕ್ರುದ್ದೀನರು ಕರೀಮನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಅವನ ಮನದೊಳಗಣ ಕಿಚ್ಚಿನ್ನು ತಣ್ಣಗಾಗಿಸಲು ಅವರಿಂದ ಸಾಧ್ಯವಾಗಲಿಲ್ಲ.

ಅವನು ಹಮೀದಾಳನ್ನು ಆವರಿಸಿಕೊಂಡಿದ್ದು  ಇದೇ ಕಾರಣಕ್ಕಾಗಿ. ತನ್ನ ಮಡಿಲಲ್ಲಿ ಕೂಸಾಗಿ ಆಡಿದ ಕರೀಮ ಮೀಸೆ ಬಂದಮೇಲೆ ಎಷ್ಟು ಬದಲಾಗಿದ್ದಾನೆ ಎಂದು ಆಕೆಯ ಹೃದಯ ಚಡಪಡಿಸಿತ್ತು. ಆವನು ತನ್ನನ್ನು ಪಂಚರಂಗಿಯೆಂದು ಲೇವಡಿ ಮಾಡಿ ಕರುಳ
ಮಮತೆ ಕಡೆಗಣಿಸಿ ನೂಕಿದ್ದು ಅಬಿದಾಲಿಯ ಮೇಲಿನ ದ್ವೇಷದ ಪರಿಣಾಮದಿಂದ ಎಂದಾಕೆ ತಿಳಿದಿದ್ದಳು. ಅಬಿದಾಲಿ ಮಾಡಿದ ದ್ರೋಹ ದುಬಾರಿಯದಾಗಿದೆ. ಅದು ಕರೀಮನಿಗೆ ಅಸಹನೆ ಹುಟ್ಟಿಸಿದೆ. ಮಗನ ಬದುಕು ಹೇಗೋ ? ಎಂಬ ಚಿಂತೆಯಿಂದ ಅವಳ ಜೀವ ಸೊಗಸು ಕಳೆಗುಂದಿತ್ತು. ಮೊದಲಿನಂತೆ ಆಕೆ ತೋಟದಲ್ಲಿ  ಸುತ್ತಾಡುವುದನ್ನು ನಿಲ್ಲಿಸಿದ್ದಳು. ಹೊರಗೆ ಬಂದರೆ ಕರೀಮನ ವ್ಯಗ್ರ ಮುಖವೇ  ಅವಳೆದುರು ನಿಲ್ಲುವುದು. ಇಲ್ಲೆಲ್ಲೋ ಆವನು ಜಪ್ಪಿಸಿಕೂಂಡು ಕುಳಿತಿರುವಂತೆ, ಅಬಿದಾಲಿಯ ಬೇಟೆಗೆ ಹೊಂಚುಹಾಕಿ ಸುಳಿದಾಡುತ್ತಿರುವಂತೆ ಗುಮಾನಿ  ಹುಟ್ಟಿಸಿಕೊಂಡ ಆಕೆ "ಯಾರಬ್ಬಾ !" ಎನ್ನುತ್ತಾ ತಸಬಿ ಹಿಡಿದು ಕುಳಿತು  ಬಿಡುತ್ತಿದ್ದಳು.

ಮಕ್ಕಳ ಭವಿಷ್ಯಕಾಗಿ ಹೆತ್ತವರು ದುಡಿದು ಸಣ್ಣಾಗುವರು. ಬಾಯಿಗೆ ಮಣ್ಣು ಹಾಕಿಕೊಂಡು ಸಂಪತ್ತು ಸಂಗ್ರಹಿಸುವರು. ಅವರ ಬೆವರು ವಾಸನೆಯ ಪರಿಮಳವನ್ನು ಆಸ್ವಾವದಿಸುವ ಮಕ್ಕಳು ಮಾತ್ರ ನೀಚರಾಗುವರು. ಸಂಪತ್ತು ಗಳಿಸುವವರಿಗೆ  ನೋವೇ ಗತಿ ! ಅಲ್ಲಿ ಅವರು ಎಂಥ ಯಾತನೆ ಆನುಭವಿಸುತ್ತಿದ್ದಾರೋ ?  ಹಮೀದಾ ಗಂಡನನ್ನು ನೆನಪಿಸಿಕೊಂಡು ಚಡಪಡಿಸುತ್ತಿದ್ದಳು.

****

ರಾತ್ರಿ ಕಂಡ ಭೀಕರ ಕನಸ್ಸಿನಿಂದಾಗಿ ಭೀತಿಗೊಳಗಾದ ಆಕೆ ಇಡೀ ದಿನ ನಮಾಜು  ಮಾಡತೊಡಗಿದ್ದಳು. ಅಬಿದಾಲಿ ಆಮ್ಮಾSS  ಎಂದು ಕೂಗಿದ್ದ . ದು‌ಆ ಬೇಡಿ ಮುಖದ ಮೇಲೆ ಹಸ್ತಗಳನ್ನು ಆಡಿಸಿಕೊಂಡು ಹೊರಬಂದಳು ಹಮೀದಾ.

`ಈ ಸಲ ಸೇಂಗಾ ನೂರು ಚೀಲ ಆಗುವುದು ಅಮ್ಮಾ' ಉತ್ಸಾಹದಿಂದ ಹೇಳಿದ ಅಬಿದಾಲಿ.

"ಎಲ್ಲಾ‌ಆ ದೇವರ ದಯ !" ಪ್ರತಿಕ್ರಿಯಿಸಿದಳು ಹಮೀದಾ.

"ಅಮ್ಮಾ ನಾಳೆ ಅಡತಿಗೆ ಹೋಗಿ ಸೇಂಗಾ ಹಚ್ಚಿ ಬರಬೇಕು" ಅಬಿದಾಲಿ ಹೇಳಿದ.

"ನಾಡದು ಬಡೋಂಕೆ ಈದ್. ಆಮೇಲೆ ಶಬ್ಬೇ ಬಾರಾತ್ ಅದು ಮುಗಿಲಿ ಬೇಟಾ" ಎಂದಳು ಹಮೀದಾ.

ಅವನ ಉಲ್ಲಾಸದ ಕ್ಷಣವನ್ನು ಅವಕಾಶ ಮಾಡಿಕೊಂಡ ಆಕೆ "ನಿಮ್ಮ ಬಾಬಾನ ಮೈಯತ್ತಾಗಿ ನಾಲ್ಕು ವಷ೯ ಆಯ್ತಲ್ಲಬೇಟಾ" ಎಂದು ತನ್ನಂತರಂಗದ ಮಾತಿಗೆ  ಪೀಠಿಕೆ ಹಾಕಿದಳು. ಅಬಿದಾಲಿ ಹೌದು ಎಂದ. ಅವಳ ಕಣ್ಣಲ್ಲಿ ತಟ್ಟನೆ ನೀರು ಜಿನುಗಿತು.

"ನಿಮ್ಮ ಬಾಬಾನ ಆತ್ಮಕ್ಕ ಶಾಂತಿ ಇಲ್ಲಾ ಅನಸ್ತೈತಿ. ಆವರು ಮ್ಯಾಲಿಂದ ಮ್ಯಾಲೆ ಕನಸನ್ಯಾಗ ಬರ್‍ತಾರ. ಒಂದೂ ಮಾತss  ಆಡುದಿಲ್ಲ. ಸುಮ್ಮನ ನಿಂತ್ಕೊಂಡು  ಅಳತಾರ" ಹೊಯ್ದಾಡಿದಳು ಹಮೀದಾ.

"ಬಾಬಾನಿಗೆ ಏರಿಸಲು ನಾನು ಕಪಡಾ ತರ್‍ತೀನಿ ಅಮ್ಮ" ತಾಯಿಗೆ ಸಮಾಧಾನ ಹೇಳಿದ ಅಬಿದಾಲಿ.

"ಅವರ ಮನಸ್ಸಿನ್ಯಾಗ ಏನೋ ಕೊರಗು ಇರುವುದು ಬೇಟಾ" ಎಂದ ತಾಯಿಯ  ಮುಖವನ್ನು ಅದೇನು ಎನ್ನುವಂತೆ ನೋಡಿದ ಅಬಿದಾಲಿ.

"ನಿನ್ನ ತಮ್ಮಂದಿರು ಬ್ಯಾರೆ ಇರುದರ ಸಂಕಟ ಇರಬೇಕು"

"ನಮ್ಮಿಂದ ಅವರೇ ದೂರ ಇದ್ದಾರಲ್ಲ ಅಮ್ಮಾ"

"ಈ ತ್ವಾಟದಾಗ ಪಾಲು ಸಿಗಲಿಲ್ಲ ಅಂತ ಅವರಿಗೆ ಬೇಜಾರು"

"ಅದು ಹೊಟ್ಟಿಕಿಚ್ಚು ಅನ್ನು"

"ಆ ಹುಡುಗರು ಅಂಥವರಲ್ಲ ಬೇಟಾ"

"ನನಗಿಂತ ನಿನಗೆ ಅವರ ಮ್ಯಾಲೆ ನಂಬಿಕಿ ಜಾಸ್ತಿ"

"ನೀವೆಲ್ಲಾರೂ ನನ್ನ ಮಡಿಲಾಗ ಆಡಿ ಬೆಳದೋರು. ನನಗ ಎಲ್ಲಾರೂ ಅಷ್ಟೆ.
ಆದ್ರ ಪಾಲಿನ ವಿಷಯದಾಗ ಜನರು ಆಡಿಕೊಳ್ಳೋ ಮಾತು ನನ್ನೆದಿ ಇರಿತಾವು
ಬೇಟಾ"

"ಜನರ್‍ಯಾಕಂತಿ? ಆ ನಿನ್ನ ಮಕ್ಳss ಊರತುಂಬಾ ಹೇಳ್ಕೊಂತ ತಿರಗತಾರನ್ನು"

"ಎಷ್ಟss ಆಗಲಿ ಆವರು ನಿನಗಿಂತ ಸಣ್ಣವರು"

"ಆ ತಾಯಿ-ಮಕ್ಳು ಭಾರಿ ಜಾಬಾದಿ ಆದಾರ. ಬಾಬಾ ಇರುವಾಗss ಒಳಗಿಂದೊಳಗ ರೊಕ್ಕಾ, ಬಂಗಾರ ಮಾಡ್ಕೊಂಡಾರ. ನಿನಗೇನು ಗೊತ್ತಾಗುದಿಲ್ಲ. ದಾವೂದ ಮಾಮು ನನಗೆಲ್ಲಾ ಹೇಳ್ಯಾನ."

"ನೀನು ಓತಿಕಾಟದ ಮಾತು ನಂಬ್ತಿ. ಬ್ಯಾನಿ ತಿಂದು ಜನ್ಮಕೊಟ್ಟಾಕಿ ಮಾತಿಗೆ  ಕಿಮ್ಮತ್ತಿಲ್ಲ ನಿನ್ನ ಛೋಟಿ ಅಮ್ಮ ಆಗ್ಲಿ ತಮ್ಮಗೋಳಾಗ್ಲಿ ಖರಾಬ್ ಆಲ್ಲ.  ಈ  ತ್ವಾಟಾ ಬೇಕಾದ್ರ ನೀನss ತಗೋ. ಆದ್ರ ಅವರನ್ನ ಹತ್ರ ಕರಕೋ. ದ್ವೇಷಾನ  ಪ್ರೀತಿಯಿಂದ ಗೆಲ್ಲುದರಾಗ ಖುಷಿ ಇರೋದು ಬೇಟಾ. ಹ್ಯಾಂಗು ಈಗ ಮೌಕಾ ಐತಿ. ಅವರನ್ನ ಕರಿಸು. ಎಲ್ಲಾರೂ ಕೂಡಿ ಫಾತಿಹಾ ಕೊಟ್ರ ನಿಮ್ಮ ಬಾಬಾನ ಆತ್ಯಕ್ಕ ಶಾಂತಿ  ಸಿಗತೈತಿ" ಒಳತುಡಿತ ಪ್ರಕಟಿಸಿದಳು ಹಮೀದಾ.

" ಅವರು ಬೇಕಾದ್ರ ಬರಲಿ. ನಾನಂತೂ ಸಲಾಮ್ ಹೊಡೆಯೊದಿಲ್ಲ "

" ಇಂಥಾ ಹಠದ ಮಾತು ನಿನಗೆ ಶೋಭಾ ತರುದಿಲ್ಲ ಬೇಟಾ "

" ಮನಷ್ಟು ಕೆಡಿಸಿಕೊಂಡವರ ಬಗ್ಗೆ ನಾನು ತಲಿ ಕೆಡಿಸಿಕೊಳ್ಳೋದಿಲ್ಲ "

"ಯಾ ರಬ್ಬಾ! ನಾನು ಗೋರಿಗೆ ಹೋಗುತನಕ ಇಂಥ ಮಾತss ಕೇಳಬೇಕಾ?"

ಹಣೆಬಡಿದುಕೊಂಡಳು ಹಮೀದಾ.

***

ಚೆಲುವಜ್ಜನ ಎದುರು ನಿಂತುಕೊಂಡ ಅಬಿದಾಲಿ ಬೇಸರದಿಂದ ಒಟಗುಟ್ಟಿದ "ಅಮ್ಮಾನದೊಂದು ದೊಡ್ಡ -ಕಿರಿಕಿರಿಯಾಯ್ತು"

" ಏನಾಯ್ತು ಮುನ್ನಾ ? " ದ್ರಾ,ಕ್ಷಿಯ ಬಳ್ಳಿಗೆ ಔಷಧಿ ಸಿಂಪಡಿಸುತ್ತಲೇ ಕೇಳಿದ ಚಲುವಜ್ಜ.

" ಈದ್ಗೆ ಅವರನ್ನು ಕರಸು ಅಂತಾಳೆ ಅಮ್ಮಾ"

" ಯಾರನ್ನ? "

" ಛೋಟಿ ಅಮ್ಮಾ ಮತ್ತ ಆಕೆಯ ಮಕ್ಕಳನ್ನ "

" ಭಾಭಿ ಹೇಳಿದ್ದು ಛಲೋ ಮಾತು. ಕರಸಿ ಬಿಡು ಮುನ್ನಾ "

" ಚಾಚಾ, ನಿಂದೂ ಆದೇ ರಾಗ, ಅದೇ ಹಾಡಾತು "

" ಭಾಭಿ ಹೇಳುದ್ರಾಗ ತಪ್ಪಿಲ್ಲ ಮುನ್ನಾ "

" ನಾನು ಸವ೯ನಾಶ ಆಗಬೇಕಂತ ಯೋಚಿಸ್ತಾರ ಆವರು "

" ಹಾಗಾಂತ ಯಾರು ಹೇಳಿದ್ರು ನಿನಗ? "

" ಅದೆಲ್ಲಾ ಬೆನ್ನ ಹಿಂದಿನ ಮಾತು. ಖರೆ ಎಷ್ಟೋ ,ಸುಳ್ಳು ಎಷ್ಟೋ? ಅವರು ಅಂದ್ರಂತ ನೀನು, ನೀನು ಮಾತಾಡದಿ ಅಂತ ಅವರು ಸುಮ್ಮ ಸುಮ್ಮಕ ಮನಸ್ಸಿನ್ಯಾಗ ಕಿಚ್ಚು ಹೊತ್ತಿಸಿಕೊಂಡೀರಿ. ಇಂಥಾ ಕಿಚ್ಚಿಗೇ ಅಲ್ಲೇನು ಮಹಾಭಾರತ  ನಡೆದಿದ್ದು; ಕುರುಕ್ಷೇತ್ರ ಯುದ್ಧ ಆಗಿದ್ದು "

" ಆ ಕಿಚ್ಚು ಅವರ ಹೊಟ್ಯಾಗಿಂದು "

" ನಿಂದೋ, ಅವರದೋ. ಕಿಚ್ಚಿಗೆ ಗಾಳಿ ಊದಾಕಹತ್ತೀರಿ. ಅದು ನಿಮ್ಮನ್ನ ಸುಡತೈತಿ ಅನ್ನೋ ಪ್ರಜ್ಞಾ ಇಲ್ಲಾ"

" ಎಲ್ಲಾರೂ ಒಂದಿನಾ ಸಾಯೋದೈತಿ ಬಿಡು ಚಾಚಾ "

" ಹುಟ್ಟಿದ ಮನುಷ್ಯಾ ಸಾಯೋದು ಖರೆ. ಆದ್ರ ಹೀಂಗ ದ್ವೇಷಾ ಮಾಡಿ ಸಾಯೋದ್ರಾಗ ಅಥ೯ ಇಲ್ಲ. ದೇವರು ನಮಗ ಬದುಕಾಕ ಹುಟ್ಟಿಸ್ಯಾನ. ಒಟ್ಟಿಗೇ ಇರಾಕಂತ ಭೂಮಿ ಕೊಟ್ಟಾನ. ಪ್ರೀತಿ ಹಂಚ್ಗೊಂಡು ಇರುದು ಬಿಟ್ಟು ಸಾಯೋ  ಆಟಾ ಆಡ್ತೀನಂದ್ರ ಇದೇನು ಬುದ್ಧಿನೋ ತಮ್ಮ " ಚಲುವಜ್ಜ ನಿಟ್ಟುಸಿರಿದ. ಮತ್ತೆ ಅವನ ಕಣ್ಣಿಂದ ನೀರು ಉದುರಿತು. "ಚಾಚಾ, ನೀನು ಅಳಾಕ ಹತ್ತಿ ?" ಅಚ್ಚರಿಯಿಂದ ಕೇಳಿದ ಅಬಿದಾಲಿ.

"ಹಳೆದೆಲ್ಲಾ ನೆಪ್ಪಾತು ಮುನ್ನಾ .... .." ಧೋತರದ ಚುಂಗಿನಿಂದ ಕಣ್ಣೊತ್ತಿಕೊಂಡ ಚಲುವಜ್ಜ.

"ನೆನಪಾ.... ಅದೇನು ಚಾಚಾ?" ಅಬಿದಾಲಿ ಕೇಳಿದ.

ಚಲುವಜ್ಜನ ಮುಖದಲ್ಲಿ ಒಮ್ಮೆಲೇ ದುಗುಡ ಆವರಿಸಿಕೊಂಡಿತು. ತಾನು ಇದುವರೆಗೂ ಕಂಡಿರದ ನೋವು ಅಲ್ಲಿ ಹೆಪ್ಪುಗಟ್ಟಿದೆ ಅನಿಸಿ, ಏನೂ ಕೇಳಬಾರದೆಂದು ಅಬಿದಾಲಿ ಮೌನವಹಿಸಿದ. ಆದರೆ ಹೇಳದೇ ಇರಬಾರದೆಂದು ನಿಧ೯ರಿಸಿದವನಂತೆ
ಚಲುವಜ್ಜ ತನ್ನ ಹೆಗಲಿಗೆ ಹಾಕಿಕೊಂಡಿದ್ದ ಪಂಪನ್ನು ಕೆಳಗಿರಿಸಿ, ಸಮೀಪದ ಬದುವಿನ ಮೇಲೆ ಕುಳಿತ. ಬಗಲಗಸಿ ಅಂಗಿಯ ಜೇಬಿನಿಂದ ಬೀಡಿಯೊಂದನ್ನು ತೆಗೆದು ಬಾಯಿಗಿಟ್ಟು ಕಡ್ಡೀಗೀರಿದ. ಉರಿಯುತ್ತಿದ್ದ ಕಡ್ಡಿಯನ್ನು ಅಬಿದಾಲಿಗೆ ತೋರಿಸುತ್ತ  "ಇದss.... ಇದss  ಉರಿ ತಮ್ಮ, ನನ್ನ ಜೀವನಾನ ss ಭಸ್ಮ ಮಾಡ್ತು" ಎಂದು ಬೀಡಿ ಹಚ್ಚಿಕೊಂಡು ಕಡ್ಡಿಯನ್ನು ಮಣ್ಣಿನಲ್ಲಿ ತಿಕ್ಕಿ "ಹೀಂಗ ಉರಿ ಆರಸಾಕ  ನನಗಾಗ ಸಾಧ್ಯ ಆಗಲಿಲ್ಲ " ಎಂದು ನೆನಪಿನ ಸುರುಳಿ ಬಿಚ್ಚಿದ.

"ಹತ್ತು-ಹನ್ನೆರಡರ ವಯಸ್ಸು ನಂದು. ಸಾಲಿ ಕಲ್ಯಾಕಂತ ಅಜ್ಜಿ ಊರಾಗ ಇದ್ಯಾ. ನನಗ ಒಬ್ಬಾಕಿ ತಂಗಿ. ಮೂರು ಮಂದಿ ಅಣ್ಣಂದಿರು. ಅಪ್ಪನ ಕೂಡ ಅವರು ಒಕ್ಕಲತನ ಮಾಡ್ತಿದ್ರು. ನಮ್ಮದು ಹತ್ತು ಎಕರೆ ನಿರಾವರಿ ಜಮೀನು. ಅಜ್ಜ ಗಳಿಸಿದ ಆಸ್ತಿ ಅದು. ಅಂವ ತೀರಿಕೊಂಡ ಮ್ಯಾಲೆ ಅವನ ಅಣ್ಣನ ಮಕ್ಕಳು ತೊಂಟ ನ್ಯಾಯಾ ತಗೆದು ಭೂಮಿ ತಮ್ಮದು ಅಂದ್ರು. ಅವರದೊಂದು ತುಂಡು ಜಮೀನು ನಮ್ಮ ಭೂಮಿಗೆ ಹೊಂದಿಕೊ೦ಡಿತ್ತು. ಅದು ತಲೆಮಾರುಗಳ ಆಸ್ತಿ‌ಎಂದು ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಕೋಟಿನ್ಯಾಗ ದಾವಾ ಹೂಡಿದ್ರು. ಪ್ರತಿ ಹಂತದಾಗೂ ಕೇಸು ನಮ್ಮಂಗ ಆತು. ಸೋತ ಅವರು ರಾಕ್ಷಸರಾದರು. ಅವರ ಮನದಾಗ ದ್ವೇಷದ ಬೆಂಕಿ ಹೊತಗೊಂತು. ಅದು ಪ್ರಳಯಾಗ್ನಿ ಆತು. ಒಂದಿನಾ ರಾತ್ರಿ ಅವರು ನಮ್ಮ ತ್ವಾಟದ ಮನಿಗ ಬೆಂಕಿ ಹಚ್ಚಿದ್ರು. ಒಳಗ ಮಲ್ಕೊಂ೦ಡ ನಮ್ಮಪ್ಪ, ನಮ್ಮವ್ವ, ತಂಗಿ, ಅಣ್ಣಂದಿರು, ಅವರ ಹೆಂಡಿರು - ಮಕ್ಕಳು ಸುಟ್ಟು ಕರಕಲಾದ್ರು...." ಚಲುವಜ್ಜ  ಬಿಕ್ಕಳಿಸಿದ. ತುಸು ಹೊತ್ತಿನ ಬಳಿಕ ಹೇಳಿದ "ಭೂಮಿ ಮ್ಯಾಲೆ ಈ ಪರದೇಶಿ ಜನ್ಮ  ಒಂದss  ಉಳಿತು"

ಅಬಿದಾಲಿ ಕೇಳಿದ "ಚಾಚಾ ನೀನು ಮತ್ತ ಅಲ್ಲಿಗೆ ಹೋಗಲ್ಲಿಲ್ಲೇನು? "

"ಅವರು ಬಹಳ ದುಷ್ಟರು ಅಂತ ನಮ್ಮಜ್ಜಿ ನನ್ನ ಅಲ್ಲಿಗ ಕರಕೊಂಡು ಹೋಗಲಿಲ್ಲ.  ಆಕಿ ಒಬ್ಬಾಕಿ ಹೋಗಿ ಕರಕಲ ದೇಹಕ್ಕ ಮಣ್ಣುಹಾಕಿ ಬಂದ್ಲು"  ಗಂಟಲು ತುಂಬಿಕೊಂಡು ಹೇಳಿದ ಚಲುವಜ್ಜ.

"ಅವರಿಗೆ ಶಿಕ್ಷಾ ಆಗಲಿಲ್ಲೇನು?"

"ಅವರ ವಿರುದ್ದ ಹೋರಾಡೋರು ಯಾರಿದ್ರು? ಕೋರ್ಟ್‌ನ್ಯಾಗ ಸಾಕ್ಷಿ ಇಲ್ಲದ ಪಾರಾದ್ರು. ನಮ್ಮ ಜಮೀನು ನುಂಗಿದ್ರು. ಆದ್ರ ದಿನಾ ಕಳಧಾಂಗ ಅವರವರ ಕಚ್ಚಾಡಿ, ಭೂಮಿ ಮಾರ್ಕೊಂಡು ಒಬ್ಬಿಬ್ಬರ ಬ್ಯಾನಿ ಎಂಬೋ ಬ್ಯಾನಿಯೊಳಗ, ನರಕಾ ಆನ್ನೋ ನರಕದಾಗ ನೆಳ್ಳಾಡಿ ಸತ್ರು. ದೇವರ ಕೋರ್ಟನ್ಯಾಗ ಯಾರು ಪಾರಾಗ್ತಾರೋ ತಮ್ಮ?" ಎಂದು ಮತ್ತೆ ಆರಿದ ಬೀಡಿಗೆ ಕಡ್ಡಿಗೀರಿ ಜುರುಕಿ ಎಳೆದ ಚಲುವಜ್ಜ.  ಮತ್ತೆ ಹೊಗೆಯ ಜೊತೆಗೆ "ನಮ್ಮ ಆಜ್ಜಿನೂ ಸತ್ತು ಹ್ವಾದ್ಲು. ನಾನೂ ಊರೂರು ತಿರುಕೊಂತ ಇಲ್ಲಿ ಬಂದು ಸೇರ್ಕೊಂಡ್ಯಾ. ನಿಮ್ಮ ಬಾಬಾ ನನ್ನ  ತಮ್ಮನಂಗ ನೋಡಕ್ಕೊಂಡ" ಎನ್ನುತ್ತಿರುವಂತೆ ದಾವೂದ ಆವನ ಹತ್ತಿರ ಬಂದು  ನಿಂತಿದ್ದ.

"ಏನ ಕತಿ ಸುರು ಮಾಡಿಯಪ ಚಲುವಜ್ಜ. ನಮ್ಮ ಅಳೀಯ ದಂಗಾಗಿ ಕುಂತು ಬಿಟ್ಟಾನ ?" ಎಂದು ಕೇಳಿದ ಆವನ ಪ್ರಶ್ನೆಗೆ ಉತ್ತರಿಸದೇ ಆಲ್ಲಿಂದ ಎದ್ದು ಹೋದ ಚಲುವಜ್ಜ .

"ನಾಳೆ ನಾನು ಊರಿಗೆ ಹೋಗಿ ಬತ್ತೀನಿ " ಎಂದ ದಾವೂದ. ಕೂಡಲೆ ತಾಯಿ ಆಡಿದ ಮಾತುಗಳನ್ನು ಮಾವನೆದುರು ಪ್ರಸ್ತಾಪಿಸಿದ ಅಬಿದಾಲಿ.

"ಅವರನ್ನು ಕರಿಬ್ಯಾಡ. ನಿನ್ನ ಅಮ್ಮಾನಿಗೆ ಏನೂ ಗೊತ್ತಾಗುದಿಲ್ಲ. ದೂರ ಇರುವ ಇಬ್ಲೀಸಗಳನ್ನು ಮತ್ತ ಒಳಗ ಕರಕೋಬ್ಯಾಡ ನೀನು. ಅದರಿಂದ ನಿನಗ ss  ಲುಕ್ಸಾನು" ದಾವೂದ ಎಚ್ಚರಿಸಿದ.

"ಆದ್ರ ಆಮ್ಮ ಹಠ ಹಿಡಿದಾಳ " ದಿಕ್ಕು ತೋಚದಂತೆ ಹೇಳಿದ ಅಬಿದಾಲಿ.

"ನಿಮ್ಮ ಅಮ್ಮಾಂದು ಸೆರಗಿನ್ಯಾಗ ಕೆಂಡಾ ಕಟಗೊಳ್ಳು ಚಾಳಿ. ಆ ಕರೀಮಾ ಮೊದಲ ಧಗಾಧಗಾ ಉರ್‍ಯಾಕ ಹತ್ಯಾನ. ಮತ್ತ ತ್ವಾಟಕ್ಕ ಬೆಂಕಿನೂ ಹಚ್ಚತೀನಿ ಅಂದಾನ. ನೀನು ಹುಷಾರಿರು"  ಹೆದರಿಸುವ ಮಾತು ಆಡಿದ ದಾವೂದ. ಅಣ್ಣ ತಮ್ಮಂದಿರ ನಡುವೆ ಇದ್ದ ದ್ವೇಷವನ್ನು ಬಲಗೊಳಿಸುವ ಧಾಟಿ ಆವನ  ಮಾತಿನಲ್ಲಿತ್ತು. ಅದನ್ನು ಅರ್ಥ ಮಾಡಿಕೊಳ್ಳದೆ " ಆ ನಾಮರ್ದ ಹೀಂಗ ಹೇಳಕೊಂತ  ಬಂದಾನ ಬಿಡು ಮಾಮು" ಎಂದು ಉದಾಸೀನ ವ್ಯಕ್ತಪಡಿಸಿದ ಅಬಿದಾಲಿ.

***

ಶಬ್ಬೇ ಬಾರಾತದ ನಮಾಜಿಗೆಂದು ಅಬಿದಾಲಿ ಮಸೀದಿಗೆ ಬಂದ. ತಳಮಳದ  ಮನಸ್ಸಿನಿಂದಲೇ ನಮಾಜು ಪೂರೈಸಿದ. ಬೇರೆ ಕಡೆಯಿಂದ ಆಗಮಿಸಿದ ಮೌಲಾನಾ ಆವರು ಶಬ್ಬೇ ಬಾರಾತದ ಮಹತ್ವ ಕುರಿತು ಬಯಾನಾ ಶುರು ಮಾಡಿದರು. ಅಬಿದಾಲಿಯ ಎದುರು ತಾಯಿಯ ಮುಖ ಕಂಡಿತ್ತು. ಅವಳ ಮೌನ ಪ್ರತಿಭಟನೆಯ ನಡುವೆ ತಾನು ಬಾಬಾನಿಗೆ ಫಾತಿಹಾ ಕೊಟ್ಟ ಪ್ರಸಂಗವನ್ನು
ಜ್ಞಾಪಿಸಿಕೊಂಡ. "ಅಲ್ಲಾಹ್ ಈ ರಾತ್ರಿ ಭೂಲೋಕದ ಕಡೆಗೆ ಗಮನ ಕೊಡುವನು " ಮೌಲಾನಾ ಗಂಭೀರವಾಗಿ ಹೇಳಿದರು. ತಾಯಿ ತುತ್ತು ಅನ್ನವನ್ನು ಬಾಯಿಗೆ ಹಾಕಿಕೊಳ್ಳದೆ, ಮುಖ ಬಾಡಿಸಿಕೊಂಡು ಕಣ್ಣೀರು ಉದುರಿಸಿದ ಸನ್ನಿವೇಶ  ಅಬಿದಾಲಿಯ ಕಣ್ಣು ಕಟ್ಟಿತು. " ಅಲ್ಲಾಹ್ ಮನುಷ್ಯನ ಪಾಪ - ಪುಣ್ಯಗಳ ಪ್ರಕಾರ  ಸುಖ - ದುಃಖಗಳನ್ನು ಹಂಚುವನು " ಎತ್ತರದ ಧ್ವನಿಯಲ್ಲಿ ಉಲಿದರು  ಮೌಲಾನಾ. ಅಬಿದಾಲಿಯೆದುರು ಕಾಸೀಮಸಾಹೇಬರ ಆರೆಪ್ರಜ್ಞಾವಸ್ಥೆಯ ನಿತ್ರಾಣ ದೇಹ ತೇಲಿ ಬಂದಿತ್ತು ಬಾಬಾನ ದುಬ೯ಲ ಆವಸ್ಥೆಯೊಂದಿಗೆ ತಾನು ವರ್ತಿಸಿದ ಕ್ಷುದ್ರ ಕ್ರಿಯೆ ನೆನಪಾಗಿ ಒಳಗೆ ಕಂಪಿಸಿದ ಅವನು.

***

ಅಬಿದಾಲಿ ಮನೆ ತಲುಪಿದಾಗ ಮಧ್ಯರಾತ್ರಿ. ಹೆಂಡತಿಯನ್ನು ಎಬ್ಬಿಸದೇ ಮನೆ ಮುಂದಿನ ಕಟ್ಟೆಯ ಮೇಲೆ ಚಾಪೆ ಬಿಡಿಸಿ ಮೈ ಚಲ್ಲಿದ.

ತನ್ನದೆನ್ನುವುದು ಏನಿತ್ತು ಈ ತೋಟದಲ್ಲಿ? ಅದೆಲ್ಲಾ ಬಾಬಾನ ಗಳಿಕೆ. ಅದನ್ನು ಅವನು ತನ್ನೊಂದಿಗೆ ಹೊತ್ತೊಯ್ಯಲಿಲ್ಲ. ತೋಟದ ಮಣ್ಣಾಗಲಿ, ಅದರೊಳಗೆ ಊರಿಕೊಂಡು ಪಲ್ಲವಿಸುವ ಬೀಜವಾಗಲಿ ಯಾವ ಫಲವನ್ನು ಅಪೇಕ್ಷಿಸುವುದಿಲ್ಲ. ತನಗೇಕೆ ಹುಟ್ಟಿತೋ ದುರಾಸೆ ? ಪಕ್ಕ ಬದಲಾಯಿಸಿದ ಅಬಿದಾಲಿ. ಅವನ ಉರಿವ ಕಣ್ಣು ನಿದ್ದೆಯ ಮಾಯೆಗೆ ಒಳಗಾಗಲು ತಡವಾಗಲಿಲ್ಲ.

ಪ್ರಜ್ವಲಿಸುವ ಕೆಂಡ. ಅದರ ಬೆಳಕಿನಲ್ಲಿ ಶರೀಫ್, ರಹಮತ್, ಕರೀಮರ ಮುಖಗಳು ಢಾಳವಾಗಿಯೇ ಗೋಚರಿಸಿದವು. ತನ್ನನ್ನೆ ನುಂಗುವಂತಿರುವ ಅವರ ಕೆಂಪು ಕಣ್ಣುಗಳು ! ಕರೀಮನ ದೇಹ ಎಂಬೋ ದೇಹ ಉರಿಯ ಕೊಳ್ಳಿಯಾಗಿ ತನ್ನ ಹತ್ತಿರ ಧಾವಿಸಿ ಬರುತ್ತಿದೆ. ಚಲುವಜ್ಜನ ವಂಶವನ್ನು ಸುಟ್ಟು ಬೂದಿಮಾಡಿದ  ಬೆಂಕಿಯೇ ಅದು! ಅಬಿದಾಲಿ ದಿಗ್ಗನೆದ್ದು ಕುಳಿತ. ಸಹಸ್ರ ನಾಲಗೆಗಳನ್ನು  ಹೊರಚಾಚಿದ ಆ ಉರಿ ಭಯಂಕರ ಸದ್ದುಮಾಡಿತು. ಎಷ್ಟೋ ಸಮಯದ ದಾಹವೋ  ಎಂಬಂತೆ ಗಾಳಿಯೊಂದಿಗೆ ಕೊಬ್ಬಿ ತನ್ನನ್ನು ಹಿಗ್ಗಿಸಿಕೊಳ್ಳುತ್ತ ಹೋಗಿ ದಾಳಂಬರಿ,  ದ್ರಾಕ್ಷಿ, ತೆಂಗು, ಬಾಳೆಗಿಡಗಳನ್ನು ಕಬಳಿಸಿತು. ಅಷ್ಟು, ಸಾಕಾಗಲಿಲ್ಲವಾಗಿ ಸೇಂಗಾ  ತುಂಬಿದ ಮೂಟೆಗಳನ್ನು ಆಕ್ರಮಿಸಿಕೊಂಡಿತು.

"ಬೆಂಕಿ .... .. ಬೆಂಕಿ .... .. ಮುನ್ನಾ ಬೆಂಕಿ... ಬೆಂಕಿ..." ಚಲುವಜ್ಜನ ಕೂಗಿಗೆ ಇರುಳು ತತ್ತರಿಸಿತು. ಹಮೀದಾ, ನಸೀಮ ಬಾಗಿಲು ತೆರೆದು ಓಡಿಬಂದರು. ರಕ್ಕಸ ಬೆಂಕಿ ಸೇಂಗಾ ಚೀಲಗಳನ್ನು ಹುರಿದು ಮುಕ್ಕತೊಡಗಿತ್ತು "ಬೇಟಾ ಅಬಿದಾಲಿ, ಬೆಂಕಿ...ಚಿಂಕಿ..." ಮಗನ ಹತ್ತಿರ ಬಂದು ಮೈ ಅಲುಗಾಡಿಸಿದಳು ಹಮೀದಾ. " ಆಂ .... .. " ಎಂದು ಮೈ ಮೇಲಿನ ಚಾದರ ಕೊಡವಿ ಎದ್ದು ಬಂದು ನಿಂತವನಿಗೆ ನೆಲದಾಳದಿಂದ ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ಉರಿ ಕಂಡಿತ್ತು. ಕನಸಿನಲ್ಲಿ ಕಂಡ ಉರಿಯೇ ಅದು! ಎದೆ ಝಲ್ ಎಂದಿತು. ತನ್ನ ಶಕ್ತಿಮೀರಿ ಒಮ್ಮೆ ಮಣ್ಣು ತೂರುತ್ತ, ಇನ್ನೊಮ್ಮೆ ನೀರು ಹೊಯ್ಯುತ್ತ ಚಲುವಜ್ಜ ಬೆಂಕಿ ಆರಿಸಲು ಹೋರಾಡುತ್ತಿದ್ದ. ಅಬಿದಾಲಿ, ಹಮೀದಾ, ನಸೀಮಾ  ಬೆಂಕಿಯ ಮೇಲೆ ಬೊಗಸೆ ಬೊಗಸೆ ಮಣ್ಣು ತೂರಿದರು. ಸುತ್ತಮುತ್ತಲಿನ ಜನ ಧಾವಿಸಿ ಬಂದರು. ನಂತರ ಊರಿಗೆ ಊರೇ  ಬಂದಿತು.

ಬೆಂಕಿ ಹೇಗೆ ಬಿತ್ತು? ಅಬಿದಾಲಿ ಯೋಚಿಸಿದ. ದಾವೂದ ಮಾಮು ಹೇಳಿದ್ದೇ ನಿಜವಾಯಿತು. ಇದು ಆ ನಸಲಿ ಹರಾಮ್ ಕರೀಮನದೇ ಕೆಲಸ. ಅವನನ್ನು ಹೆಡಮುರಿಗೆ ಕಟ್ಟಿ ತಂದು ಈ ಬೆಂಕಿಯಲ್ಲಿ‌ಒಗೆಯಬೇಕು ಎಂದು ಹಲ್ಲು  ಕಡಿಯುತ್ತಿರುವಂತೆ ಜನರ ಗುಂಪಿನೊಳಗಿಂದ ಶರೀಫ್, ರಹಮತ್ ಧಾವಿಸಿ ಬಂದರು.  ಅವರೊಂದಿಗೆ ಕರೀಮನೂ ಇದ್ದ. ಜನರ ಜೊತೆಗೆ ಅವರೂ ಬೆಂಕಿ ಆರಿಸಲು  ಹೆಣಗಾಡತೊಡಗಿದರು. ಕರೀಮ ಸೇಂಗಾ ಚೀಲಗಳನ್ನು ಎಳೆದೆಳೆದು ಬಯಲಿಗೆ ಹಾಕಿದ.  ದಿಙ್ಮೂಢನಾಗಿ ನಿಂತ ಅಬಿದಾಲಿ. ಹಾಗೆ ನಿಂತವನ ಪಕ್ಕ ಸೇಂಗಾ ಚೀಲವೊಂದು  ಉರುಳಿ ಬಿತ್ತು. ಕರೀಮ ಅತ್ತ ಚಿಗಿದವನೇ ಅಬಿದಾಲಿಯನ್ನು ಪಕ್ಕಕ್ಕೆ ಸರಿಸಿ,  ಚೀಲವನ್ನು ದೂರಕ್ಕೆ ಒದ್ದು, ಅನಾಹುತ ತಪ್ಪಿಸಿದ. ಸುಮಾರು ಹೊತ್ತಿನ ಬಳಿಕ ಬೆಂಕಿ  ತಹಬಂದಿಗೆ ಬಂದಿತು.

ಚಲುವಜ್ಜ ತೋಟದ ಮಣ್ಣಲ್ಲಿ ಅಚ್ಚೊತ್ತಿದ್ದ ಹೆಜ್ಜೆಗಳನ್ನು ಗಮನಿಸುತ್ತ ಹೋಗಿದ್ದ. ಹೆಜ್ಜೆಗಳು ಅಸ್ಪಷ್ಟವಾಗಿಯೇ ಇದ್ದವು. ದೂರಕ್ಕೆ ಹೋದಂತೆ  ಅಲ್ಲಿಗೊಂದು ಇಲ್ಲಿಗೊಂದರಂತೆ ಎರಡು ಚಪ್ಪಲಿಗಳು ಸಿಕ್ಕವು. ಚಲುವಜ್ಜಂಗೆ ಬೆಂಕಿ  ಹಚ್ಚಿದವರು ಯಾರೆಂದು ಖಾತ್ರಿಯಾಯಿತು. ಆ ಚಪ್ಪಲಿ ತೆಗೆದುಕೂಂಡು ಬಂದು ಅಬಿದಾಲಿಗೆ ತೋರಿಸಿದ. ದಾವೂದ ಧರಿಸುತ್ತಿದ್ದ ಕಾನ್ಪುರಿ ಚಪ್ಪಲಿಗಳು! ತೀವ್ರ  ಆಘಾತಕ್ಕೊಳಗಾದ ಅಬಿದಾಲಿ ತಟ್ಟನೆ ಕುಸಿದು ಕುಳಿತ. ಶರೀಫ್, ರಹಮತ್,  ಕರೀಮರು ಅಣ್ಣನ ಹತ್ತಿರ ಬಂದು ಪ್ರೀತಿಯಿಂದ ಮೈ ದಡವಿದರು. ಕತ್ತಲಿನ ಆಕಾಶ  ಸಾವಕಾಶವಾಗಿ ಶುಭ್ರವಾಗತೊಡಗಿತು.

             *****

ಕೀಲಿಕರಣ: ಎಂ. ಎನ್. ಎಸ್. ರಾವ್
ವ್ಯಾಕರಣ ದೋಷ ತಿದ್ದುಪಡಿ: ಶ್ರೀಕಾಂತ್ ಮಿಶ್ರಿಕೋಟಿ

ಪ್ರೀತಿಯ ತಾಜಮಹಲ್

- ಅಬ್ಬಾಸ್ ಮೇಲಿನಮನಿ
                                                               - ೧ -

ಲಖನೌದಿಂದ ಪುಷ್ಪಕ ಎಕ್ಸಪ್ರೆಸ್ ರೈಲಿನಲ್ಲಿ ರಾತ್ರಿಯೆಲ್ಲ ಪ್ರಯಾಣಿಸಿ ನಾವು ಆಗ್ರಾ ತಲುಪಿದಾಗ ಬೆಳಗಿನ ಹೂ ಬಿಸಿಲು. ಜಗದ್ವಿಖ್ಯಾತ ತಾಜಮಹಲು ಇರುವ ಭೂಸ್ಪರ್ಶ,  ಹಿತಕರ ಗಾಳಿಯೊಂದಿಗೆ ಮಿಳಿತಗೊಂಡು ಅದಮ್ಯ ಪುಳಕ ಆನುಭವಿಸುತ್ತಿರುವಂತೆ ಮಹೇಶ ನಮ್ಮನ್ನು ಟ್ರ್ಯಾಕ್ಸಿನಲ್ಲಿ ತುಂಬಿಕೊಂಡು ಹೊರಟರು. ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಖನೌಗೆ ಬಂದಿದ್ದ ನಮಗೆ ಆಗ್ರಾ, ದೆಹಲಿ, ಮಧುರಾ, ಜಯಪುರ ನೋಡಿಕೊಂಡು ಹೋಗಲು ಆಹ್ವಾನ ನೀಡಿದ್ದು ಆವರೆ.

ತಾಜಮಹಲ್ ನೋಡಬೇಕೆನ್ನುವುದು ನನ್ನ ಬಹುದಿನದ ಕನಸು. ಸಂಗಮವರಿ ಕಲ್ಲಿನಲ್ಲಿ ಕೆತ್ತಿದ ತಾಜಮಹಲು ಒಂದು ಆಮರ ಪ್ರೇಮದ ಕಾವ್ಯ. ಪರಿಶುದ್ಧ ಸೌಂದರ್ಯದ ಪ್ರತೀಕ. ಮಾನವೀಯ ಕ್ಕೆಗಳಿಂದ ಸೃಜಿಸಲ್ಪಟ್ಟ ಆದ್ಭುತ ಇಮಾರತು.  ಜಗತ್ತಿನ ಪ್ರೇಮಿಗಳಿಗೆ ಸ್ಪೂರ್ತಿಯ ಸೆಲೆ ಎನ್ನುವುದರ ಬಗ್ಗೆ ಕೇಳಿದ್ದೆ. ಓದಿಯೂ ಇದ್ದೆ.

ಈಗದನ್ನು ಕಣ್ಣಾರೆ ನೋಡುವ ಆವಕಾಶ ಪ್ರಾಪ್ತವಾಗಿರುವ ಕ್ಷಣದಿಂದ ಆತ್ಯಂತ ಖುಷಿ ಆನಿಸಿತ್ತು. ತಾಜಾ ಬೆಳಕಿನಲಿ ತಾಜ್ ಹೇಗೆ ಕಾಣಿಸಬಹುದೆಂದು ವಾಹನದ ಕಿಟಕಿಯಾಚೆಗೆ ಕಣ್ಣುಹರಡಿ ಕುಳಿತೆ.  ರಸ್ತೆಯುದ್ದಕ್ಕೂ ಬರಿ ಕಟ್ಟಡಗಳು. `ತಾಜ್ ಕಾಣಿಸುತ್ತಿಲ್ಲ' ನಾನು ನಿರಾಶೆಯಿಂದ ಹೇಳಿದೆ. "ಆದು ಐದು ಕಿಲೋಮೀಟರ ದೂರದಲ್ಲಿದೆ" ಎಂದರು ಮಹೇಶ.

"ಆಗ್ರಾಕ್ಕೆ ಬಂದೀವಿ ತಾಜಮಹಲ್ ನೋಡದ ಹೋಗ್ತೀವೇನು ? ಸ್ವಲ್ಪ ತಡಕೋರಿ" ಆರ್ಜುನ ತಮಾಷೆ ಮಾಡಿದರು ಹೊರಗಿನ ದೃಷ್ಟಿಯನ್ನು ಕದಲಿಸದೆ ನಾನು ನಕ್ಕೆ.

ನಿತ್ಯದ ಬದುಕಿಗೆ ಸಜ್ಜುಗೊಳ್ಳುತ್ತಿರುವ ಜನರ ಧಾವಂತ. ಓಡಾಡುವ ಜಟಕಾ, ರಿಕ್ಷಾ, ಸ್ಯೆಕಲ್ ರಿಕ್ಷಾ, ಕಾರು, ಸಿಟಿ ಬಸ್ಸು, ಸೆಟರ್ ತೆರೆದುಕೊಳ್ಳುತ್ತಿರುವ ಅಂಗಡಿಗಳು ಕಣ್ಣು ತುಂಬುತ್ತಿರುವ ಹಾಗೆ ನನ್ನ ಮನಸ್ಸು ಮೊಗಲ್ ದೊರೆಗಳ ಗತವೈಭವವನ್ನು ಧ್ಯಾನಿಸತೊಡಗಿತ್ತು.

"ಆರೆ, ಇಸಿ ಮಾಽಽಕಿ, ಮರ್ ಜಾತಿ ಸೂವ್ವರ್!" ಸಡನ್ನಾಗಿ ಬ್ರೇಕ್ ಹಾಕಿ ಜೋರು ಧ್ವನಿಯಲ್ಲಿ ಬೈದಾಡಿಕೊಂಡ ಡ್ರೈವರ್. ಆತ್ತ ಗಾಬರಿಯಿಂದ ನೋಡಿದರೆ,  ಟ್ಯಾಕ್ಸಿಗೆ ಆಡ್ಡವಾಗಿ ಆನೆಮರಿಯಂಥ ಹಂದಿಯೊಂದು ತನ್ನ ಹತ್ತೆಂಟು ಮರಿಗಳೊಂದಿಗೆ ಜಬರದಸ್ತಾಗಿ ಗುರುಗುಟ್ಟುತ್ತ ನಿಂತುಕೊಂಡಿತ್ತು. ಆದರ ಮೈಮೇಲೆ ತೊಪ್ಪೆ ತೊಪ್ಪೆ  ಕೊಳಕು. ಬಾಲ ಆಲ್ಲಾಡಿಸಿ, ಕೊಳಕನ್ನು ವಾಹನಕ್ಕೂ ಸಿಡಿಸಿ ಹಂದಿ ಲೇವಡಿ ಧಿಮಾಕಿನಿಂದ ಬದಿಗೆ ಸರಿದು ಹೋಯಿತು. ಆನೆ, ಕುದುರೆ, ಒಂಟೆಗಳು ಓಡಾಡಿದ ಈ ಬೀದಿಗಳಲ್ಲಿ ಈಗ ಬಿಡಾಡಿ ದನಗಳು, ಹಂದಿ-ನಾಯಿಗಳು ಯಥೇಚ್ಛವಾಗಿ ತಿರುಗಾಡಿ ಕೊಂಡಿರುವುದಕ್ಕೆ ಬೇಸರವೆನಿಸಿತು.

ತೆಗ್ಗು ತವರಿನ ರಸ್ತೆಗಳು ನಮ್ಮನ್ನು ಕುಕ್ಕರಿಸತೊಡಗಿದ್ದವು.  ಆಜುಬಾಜು ಗಟಾರು ತುಂಬಿದ ಕೊಳಚೆ ರಸ್ತೆ ಆವರಿಸಿಕೊಂಡಿದ್ದ ಕಸ. ಬ್ರಹ್ಮಾಂಡದ ಗಲೀಜು! "ಇದು ಆಗ್ರಾನೋ; ಹೊಲಸಿನ ಉಗ್ರಾಣೋ?" ಕೋರಟಕರ ಮೂಗು ಮುಚ್ಚಿಕೊಂಡೇ ಹೇಳಿದರು. "ಸರ್, ನಾವೀಗ ಆಗ್ರಾದ ಸೆಂಟರ್ ಪ್ಲೇಸಿನಲ್ಲಿದ್ದೀವಿ" ಎಂದರು ಮಹೇಶ. "ಊರು ಒಂದೀಟೂ ಸ್ವಚ್ಛ ಇಲ್ಲ" ಹಂಚಾಟೆ  ಮುಖ ಸಿಂಡರಿಸಿದರು  "ನಮ್ಮ ದೇಶದಾಗ ಎಲ್ಲ‌ಊರುಗಳ ಸ್ಥಿತಿ ಹೀಂಗಽಽ ಇರುದು" ಎಂದರು ಬಾಗವಾನ ಸರ್.  "ಇದು ಪ್ರಸಿದ್ಧ ಪ್ರವಾಸಿ ಸ್ಥಳ. ಇಲ್ಲಿನ ಆಡಳಿತ ಸ್ವಚ್ಛತೆಗೆ ಗಮನ ಕೊಡಬೇಕಾಗಿತ್ತು" ಶಿರಹಟ್ಟಿಮಠ ಅವರ ದನಿಯಲ್ಲಿ ಬೇಸರದ ಛಾಯೆಯಿತ್ತು.

"ಆವರು ಏನು ಹೇಳುತ್ತಿದ್ದಾರೆ ?" ಡ್ರೈವರ್ ಸ್ಟೇರಿಂಗ್ ತಿರುಗಿಸುತ್ತಲೇ ಒಮ್ಮೆ ಹಿಂತಿರುಗಿ ನೋಡಿ ಕೇಳಿದ.  ಮಹೇಶ ನಮ್ಮ ಆಭಿಪಪ್ರಾಯಗಳನ್ನು ಸಂಕ್ಷಿಪ್ತವಾಗಿ  ಡ್ರೈವರ್‌ನಿಗೆ ತಿಳಿಸಿದರು.  ತಟ್ಟನೆ ಕಣ್ಣು ಕೆಂಪಗೆ ಮಾಡಿಕೊಂಡ ಡ್ರೈವರ್ "ಸರ್, ಇಲ್ಲಿನ ಆಡಳಿತಕ್ಕೆ ಬಕಾಸುರನ ಹೊಟ್ಟೆ ಇರುವುದು" ಎಂದ.  ವ್ಯವಸ್ಥೆಯ ಭ್ರಷ್ಟತೆಯನ್ನು ಪ್ರತಿಭಟಿಸುವವನ ಮಾತಲ್ಲಿ ವ್ಯಗ್ರತೆಯಿತ್ತು.

ಮಹೇಶ ಇದ್ದದ್ದು ಕ್ವಾಟರ್‍ಸ್‍ನಲ್ಲಿ ಮೂವತ್ತರ ಹರೆಯದ ಮಹೇಶ, ಬಾಗವಾನ ಸರ್ ಮೆಚ್ಚಿನ ಶಿಷ್ಯ.  ಬಿಜಾಪುರದ ಒಂದು ಹಳ್ಳಿಯವರು.  ಡಿಪ್ಲೋಮಾ ಮೆಕ್ಯಾನಿಕಲ್ ಪದವೀಧರ.  ಆಗ್ರಾದ ಏರ್ ಫೋರ್‌ಸ್‌ನ ತಾಂತ್ರಿಕ ವಿಭಾಗದಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದರು.  ಹೆಂಡತಿ ಚೊಚ್ಚಲು ಹೆರಿಗೆಗೆಂದು ತವರಿಗೆ  ಹೋಗಿದ್ದಳು.  ನಮ್ಮನ್ನು ಕ್ವಾಟರ್ಸ್ನಲ್ಲಿ ಇರಿಸಿಕೊಳ್ಳುವ ಆಸೆ ಮಹೇಶಗಿತ್ತು ಆದರೆ ಆಫೀಸ್ ಇನ್‍ಸ್ಪೆಕ್ಷನ್ ಇದ್ದುದ್ದರಿಂದ ಕ್ಯಾಂಪಸ್ನಲ್ಲಿ ಓಡಾಡುವುದು ದುಸ್ತರವೆಂದು ವಿಷಾದಿಸಿದ ಮಹೇಶ ನಮ್ಮನ್ನು ಅರ್ಜುನ ನಗರದ ಕೆ.ಕೆ. ಟೂರ್ ಮತ್ತು ಟ್ರಾವೆಲ್ಸ್‍ನ ರೂಮೊಂದರಲ್ಲಿ ಇರಿಸಿದರು.

ನಾವು ಸ್ನಾನ, ಟೀಫಿನ್ ಮುಗಿಸುವುದರೊಳಗೆ ಮನೆಗೆ ಹೋಗಿ ಬಂದರು ಮಹೇಶ.  ಅವರ ಜೊತೆಗೆ ಈಗ ಮುರುಗನ್ ಇದ್ದರು.  ಮಹೇಶರ ಆತ್ಮೀಯ ಗೆಳೆಯ ಮುರುಗನ್ ಚೆನ್ನೈದವರು ಅವರಿಗೂ ಏರ್ ಫೋರ್ಸ್‍ನ ತಾಂತ್ರಿಕ ವಿಭಾಗದಲ್ಲಿ ಮೇಲುಸ್ತುವಾರಿ ಕೆಲಸ.  ಕನ್ನಡದಲ್ಲಿ ಸೊಗಸಾಗಿ ಮಾತಾಡುತ್ತಿದ್ದರು.  ಬೆಂಗಳೂರನಲ್ಲಿ ಇದ್ದು ಓದಿದವರಂತೆ. ಟ್ರಾಕ್ಸ ಹತ್ತುವ ಮುಂಚೆ "ನಾವು ಮೊದಲು ಸಿಕಂದರ್ ಇಮಾರತು ನೋಡೋಣ" ಎಂದರು ಮುರುಗನ್.

"ತಾಜ್‍ಮಹಲ್ ಬೇಡವೆ?" ನಾನು ಕೇಳಿದೆ.
"ಸಿಕಂದರ ಇಮಾರತು ನೋಡಿ, ಊಟ ಮಾಡಿಕೊಂಡು ತಾಜಮಹಲ್ ನೋಡಲು ಹೋಗೋಣ ಅಲ್ಲಿತನಕ ಬಿಸಿಲು ಕಮ್ಮಿ‌ಆಗಿರುವುದು"  ಮಹೇಶ ಹೇಳಿದರು.

ಆಗ್ರಾದ ಬಿಸಿಲು ತುಸು ಹೆಚ್ಚೆನಿಸಿತು.  ಆದರೆ ಓಡುತ್ತಿರುವ ವಾಹನದೂಳಗೆ ತೂರಿ ಬರುವ ಗಾಳಿ ಬಿಸಿಯ ತಾಪವನ್ನು ತುಸು ತಗ್ಗಿಸಿತು.  ಅಕಬರನ ಸಮಾಧಿ ಇರುವ ಸಿಕಂದರ್ ಮಹಲಿನ ಬೆರಗಿನಲ್ಲಿ ತಾಪ ಇನ್ನೂ ಗೌಣವೆನಿಸಿತ್ತು.

ತಾಜಮಹಲಿನ ದ್ವಾರದಲ್ಲಿ ಇರುವಾಗ ಸೂರ್ಯ ಹಿತವೆನಿಸತೊಡಗಿದ್ದ.  ಮಹೇಶ ಮತ್ತು ಮುರುಗನ್ ಪ್ರವೇಶ ಟಿಕೀಟು ಖರೀದಿಸಿ ತಂದರು.  ಸೆಕ್ಯುರಿಟಿ ಅಧಿಕಾರಿಗಳು ನಮ್ಮನ್ನು ತೀವ್ರವಾಗಿ ತಪಾಸಿಸಿ ಒಳಬಿಟ್ಟರು.  ಪರಿಶುದ್ಧ ಪ್ರೇಮದ ಸಂದೇಶ ಸಾರುವ ಈ ತಾಣಕ್ಕೆ ಆತಂಕವಾದಿಗಳ ಮತ್ತು ಧರ್ಮಾಂಧರ ಕೆಟ್ಟ ನೆದರು ಬಿದ್ದಿರುವುದು ಎಂಥ ವಿಪರ್ಯಾಸ!

ಒಳಗೆ ಕಾಲಿಡುತ್ತಿದ್ದಂತೆ ದೂರದಿಂದಲೇ ಕಂಡಿತು ಹಾಲುಗಲ್ಲಿನ ತಾಜಮಹಲ್!  ಅದರ ಆಪೂರ್ವ ಸೌಂದರ್ಯವನ್ನು ಆಸ್ವಾದಿಸುವಲ್ಲಿ ತನ್ಮಯಗೊಂಡ ಕಿಕ್ಕಿರಿದ ಜನ.  ಫೋಟೋಗ್ರಾಫರ್ಗಳಿಗೆ ಸುಗ್ಗಿಯೆಂದರೆ ಸುಗ್ಗಿ ಎಲ್ಲೆಲ್ಲಿಂದ ಬಂದವರಿಗೆ ತಾಜಯೆದುರು ನಿಂತು ನೆನಪಿನ ಬುತ್ತಿ ಕಟ್ಟಿಕೊಳ್ಳುವ ತವಕ.  ಸುತ್ತ ಹಸಿರು ಹುಲ್ಲಿನ ಮಕಮಲ್ಲಿನಲ್ಲಿ, ಬಳಕುವ ಗಿಡಗಳ ಲಾವಣ್ಯದೊಂದಿಗೆ ಸ್ಪರ್ಧೆಗಿಳಿದಂತೆ ಯುವ ಪ್ರೇಮಿಗಳು ಆಲ್ಲಲ್ಲಿ ಕುಳಿತು, ಕಣ್ಣಭಾಷೆಯಲ್ಲಿ ಒಲವಿನ ಮಾತು ಉಲಿಯುತ್ತಿದ್ದರೆ.  ಗಂಡ-ಹೆಂಡತಿಯರು ಶಾಹಜಹಾನ್-ಮುಮತಾಜ್‌ರನ್ನು ಮೈಯೊಳಗೆ ಆಹ್ವಾನಿಸಿಕೊಂಡವರಂತೆ, ಕ್ಯಾಮರಾ ನೋಟಕ್ಕೆ ಪೋಜು ನೀಡುವಲ್ಲಿ ಆಸಕ್ತರಾಗಿದ್ದರು.

ಸಂಜೆಯ ಸೂರ್ಯನ ಕಿತ್ತಳೆಯ ರಂಗು ತಾಜ್‌ನ ಕಳೆ ಹೆಚ್ಚಿಸಿತ್ತು.  ಸಂಗಮವರಿ ಕಲ್ಲಿನ ಸ್ವರ್ಶ ಹಿತಾನುಭವ ನೀಡುತ್ತಿರುವಂತೆ ನಾನು ತಲೆಯೆತ್ತಿ ನೋಡಿದೆ. ಅಬ್ಬಾ !  ತಾಜಮಹಲೇ, ಏನು ನಿನ್ನ ವೈಭವ ! ಸ್ವಗತವಾಗಿ ಉದ್ದರಿಸಿದ್ದೆ. ಮನಸ್ಸು ಉಲ್ಲಸಿತವೆನಿಸಿತ್ತು.

ಮುಮತಾಜಳ ಕಬರ್ ನೋಡಲು ಗೆಳೆಯರು ಸರದಿಯಲ್ಲಿ ನಿಂತುಕೊಂಡರು.  ಒಳಗೆ ಹೋಗುವಾಗ ನನ್ನನ್ನು ಕರೆಯಿರಿ ಎಂದು ನಾನು ಜನಸಂದಣಿ ಇಲ್ಲದ ಕಡೆಗೆ ನಿಂತುಕೂಂಡು ತಾಜ್‌ನ ಗುಮ್ಮಟದತ್ತ ದೃಷ್ಟಿ ಹರಡಿದೆ.

"ಪ್ರಿಯ ಪ್ರವಾಸಿಗ, ನನ್ನ ಮಹಲಿಗೆ ಬಂದಿರುವ ನಿನಗೆ ಸ್ವಾಗತ ಕೋರುವೆ" ಹೆಣ್ಣು ಧ್ವನಿಯೊಂದು ಕೇಳಿಸಿತು.  ಮಮತಾಜಳದೆ ಆದು?  ಆನುಮಾನ ಕಾಡಿತು. ನನಗೆ.  "ನಾನೇ, ವಿಶ್ವವಿಖ್ಯಾತ ಸಾಮ್ರಾಟ ಶಾಹಜಹಾನನ ಪ್ರಿಯತಮೆ ಅಂಜುಮಂದ್ ಬಾನು ಉರ್ಫ್ ಮುಮತಾಜ.  ಈ ಮಹಲಿನಲ್ಲಿ ಮಲಗಿರುವವಳು" ಮತ್ತೇ ಆದೇ ಉಲಿತ.  ಸತ್ತವರು ಮಾತಾಡುವುದು ಅದ್ಹೇಗೆ ಸಾಧ್ಯ?  ಕಲ್ಪನಾಲೋಕದಿಂದೀಚೆಗೆ ಬಂದು ಇಮಾರತಿನ ಮೇಲೆ ಸೂಕ್ಷ್ಮ ನೋಟ ಬೀರಿದೆ.  ಎಷ್ಟು ನಾಜೂಕಾಗಿದೆ ಇಲ್ಲಿನ ಕುಸುರಿ ಕೆಲಸ. ಇದು ಮನುಷ್ಯ ನಿರ್ಮಿತವೆ ?

"ಪ್ರಿಯ ವೀಕ್ಷಕನೆ, ಯಮುನಾ ತೀರದ ಈ ಮಹಲು ನನ್ನ ಮನದಿಚ್ಛೆಯನ್ನು ಮೂರ್ತಗೊಳಿಸಿದೆ. ಇಂಥದೊಂದು ಮಹಲು ಸ್ವರ್ಗದಲ್ಲೂ ಇಲ್ಲ.  ನನ್ನ ಹೃದಯದೊಡೆಯ ಶಾಹಜಹಾನನಿಗೆ ನಾನು ಕೃತಜ್ಞಳಾಗಿದ್ದೇನೆ.  ನನ್ನ ನೆನಪನ್ನು ಆವನು ಈ ಭೂಮಿಯ ಮೇಲೆ ಆಮರಗೊಳಿಸಿದ್ದಕ್ಕೆ" ಮುಮತಾಜಳ ಅಂತರಂಗದ ಮಾತು ನನ್ನ ಹೃದಯ ತುಂಬಿಕೊಂಡವು.

"ಆತ್ಮೀಯ" ಗಂಡು ಧ್ವನಿ ಕೇಳಿಸಿತು. ಅದು ಶಾಹಜಹಾನನದೇ ಇರಬೇಕನಿಸಿತು.  ಅವನು ಹೇಳಿದ ನನ್ನ ಮುಮತಾಜಳ ಪ್ರೀತಿಯೆದುರು ಈ ಮಹಲು ಏನೂ ಅಲ್ಲ, ಅವಳು ನನ್ನ ಹೃದಯದಲ್ಲಿ ಶಾಶ್ವತಳಾಗಿದ್ದಾಳೆ. ಆದರೆ ಅವಳ ಇಚ್ಛೆಯಂತೆ ನಾನು ಈ ಇಮಾರತು ನಿರ್ಮಿಸಿದ್ದೇನೆ.  ಅವಳು ನನ್ನ ಪ್ರೇಮ ಸಾಮ್ರಾಜ್ಞಿ.  ಆಕೆಯನ್ನು ನಾನು ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದ್ದೇನೆ.  ಮುಮತಾಜ ನಮ್ಮ ಅರಮನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ಹುಡುಗಿ.  ಅವಳ ತಂದೆ ಯಾಮಿನುದ್ದೌಲಾ ಸಾಮ್ರಾಜ್ಞಿ.  ನೂರಜಹಾನಳ ಸಹೋದರ.  ನನ್ನ ತಂದೆ ಜಹಾಂಗೀರನ ದರಬಾರಿನಲ್ಲಿ ಅತ್ಯುಚ್ಛ ಪದವಿಯಲ್ಲಿದ್ದ.  ಅತಿ ಸುಂದರಿ.  ಮುಗ್ದೆಯಾದ ಮಮತಾಜಳನ್ನು ನಾನು ಚಿಕ್ಕಂದಿನಿಂದ ನೋಡುತ್ತ ಬಂದವನು.  ಅವಳ ಯೌವನಕ್ಕೆ ಸೋತವನು.  ನಮ್ಮ ಪ್ರೇಮದ ವಿಷಯ ತಿಳಿದ ನನ್ನ ತಂದೆ ಸಂತೋಷದಿಂದ ನಮ್ಮ ಮದುವೆ ನೆರವೇರಿಸಿದರು. ಮಮತಾಜಳಿಗೆ ರಾಜಮಹಲಿನ ಉತ್ಕೃಷ್ಟತೆ ಪ್ರಾಪ್ತವಾಯಿತು."

ಶಾಹಜಹಾನನ ಧ್ವನಿಯಲ್ಲಿ ಹೆಪ್ಪುಗಟ್ಟಿತ್ತು ಹೆಮ್ಮೆ.

"ನಾನು ಅವರ ಹೃದಯದಲ್ಲಿ ಸ್ಥಾನ ಪಡೆದುಕೂಂಡದ್ದು ನನ್ನ ಅದೃಷ್ಟ.  ನಾವಿಬ್ಬರೂ ಪರಸ್ಪರ ಅಧಿಕವಾಗಿ ಪ್ರೀತಿಸುತ್ತಿದ್ದೆವು.  ಎಂಥ ಸಮಯದಲ್ಲೂ ವಿಚ್ಛಿನ್ನಗೊಳಿಸಲಾರದ ಪ್ರೀತಿಯದು.  ನಾನಂತೂ ಅವರನ್ನು ನೆರಳಿನಂತೆ ಹಿಂಬಾಲಿಸಿಕೊಂಡಿರುತ್ತಿದ್ದೆ.  ಮಹಲಿನಲ್ಲೂ ಆಷ್ಟೆ ದರಬಾರಿನಲ್ಲೂ ಅಷ್ಟೆ.  ರಾಜನೀತಿ ವಿಷಯದಲ್ಲಿ ಅವರ ಮೇಲೆ ನನ್ನ ಒತ್ತಡಗಳಿರಲಿಲ್ಲ. ಅವರು ಸಲಹೆ ಇಚ್ಛಿಸಿದಾಗ ನಾನು ಸಹಕರಿಸುತ್ತಿದ್ದೆ.  ನನ್ನ ದೊರೆಯ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಅವರು ತಮ್ಮ ತಂದೆಯಂತೆ ಹೆಂಡತಿಯ ಕೈಗೊಂಬೆಯಾಗಲಿಲ್ಲ.  ನನ್ನನ್ನು ಎಂದಿಗೂ ಅಗೌರವದಿಂದ ಕಾಣಲಿಲ್ಲ" ಶಾಹಜಹಾನನನ್ನು ಎದೆಯಾಳದಿಂದ ಪ್ರಶಂಸಿದಳು ಮುಮತಾಜ.

"ಮುಮತಾಜಳಿಲ್ಲದ ಕ್ಷಣಗಳು ನನ್ನ ಪಾಲಿಗೆ ನರಕವೆನಿಸಿದ್ದವು.  ಆಕೆ ನನ್ನ ಕಣ್ಣಿದುರಿಗೆ ಸದಾ ಇರಬೇಕೆಂದು ಹಂಬಲಿಸುತ್ತಿದ್ದೆ.  ಅವಳ ನಗುಮೊಗದ ಬೆಳಕು ನನ್ನನ್ನು ಅಪೋಷಿಸಿಬೇಕೆಂದುಕೊಳ್ಳುತ್ತಿದ್ದೆ.  ಹೀಗಿದ್ದಾಗಲೇ ನನ್ನ ಜೀವನದಲ್ಲಿ ಮುಸಿಬತ್ ಎದುರಾಯಿತು.  ನನಗೆ ರಾಜ್ಯಾಭಿಷೇಕವಾದ ಎರಡನೆಯ ವರ್ಷದ ಸಮಯ.  ದಖನ್‍ಲ್ಲಿ ಖಾನ್ ಜಂಹಾ ಲೋದಿಯ ವಿದ್ರೋಹವನ್ನು ಹತ್ತಿಕ್ಕಲು ನಾನು ಹೊರಡಬೇಕಾಯಿತು.  ಮುಮತಾಜ್‍ಳೂ ನನ್ನ ಜೊತೆಗಿದ್ದಳು.  ಆಗ ಆಕೆ ಗರ್ಭವತಿ.  ಹೆಣ್ಣು ಕೂಸಿಗೆ ಜನ್ಮಕೊಡುವ ಸಂದರ್ಭ ಅವಳ ಪ್ರಕೃತಿಯಲ್ಲಿ ಗಡಬಡ ಆಯಿತು.  ಅವಳ ಸ್ಥಿತಿ ನೋಡಿ ನಾನು ಆಘಾತಗೊಂಡೆ.  ಅವಳ ಮುಖವು ಹಳದಿ ವರ್ಣಕ್ಕೆ ತಿರುಗಿತ್ತು" ಶಾಹಜಹಾನನ ಗಂಟಲು ಬಿಗಿದಿತ್ತು.

ಕ್ಷೀಣ ಸ್ವರದಲ್ಲಿ ಉಲಿದಳು ಮಮತಾಜ "ನನ್ನ ದೊರೆಯ ಬಾಡಿದ ಮುಖ ಕಂಡು ಸಂಕಟ ಅನುಭವಿಸಿದೆ.  ಕಣ್ಣಲ್ಲಿ ನೀರು ಒಂದೇ ಸವನೇ ಧುಮ್ಮಿಕ್ಕಿತು. ಅವನನ್ನು ನಾನು ಅಗಲುವ ಹೊತ್ತು ಸಮೀಪಿಸಿತು.  ನನ್ನನ್ನು ಕಳೆದುಕೊಳ್ಳಲು ಅವನಿಗೆ ಬಿಲ್‍ಕುಲ್ ಮನಸ್ಸಿರಲಿಲ್ಲ. ನನಗೂ ಅಷ್ಟೆ ಅದರೆ ಪರವರ್ದಿಗಾರನ ಇಚ್ಛೆ ಬೇರೆ ಇತ್ತೇನೋ !  ನಾನು ಯಾತನೆ ನಡುವೆಯೂ ದೊರೆಯ ಹಸ್ತವನ್ನು ನನ್ನ ಹಸ್ತದ ಮೇಲೆ ಇರಿಸಿಕೊಂಡೆ  ...... ನನ್ನ ಸಾವಿನ ಬಗ್ಗೆ ಅವನಿಗೂ ಮನವರಿಕೆಯಾಯಿತೇನೋ.  ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ಹೇಳಲು ಪದಗಳೇ ಇಲ್ಲ ಎಂದು ಗೋಳಾಡಿದ.  ಸಾವಿನ ಕೊನೆಯಲ್ಲಿ ನಾನು ಪ್ರಾರ್ಥಿಸಿಕೊಂಡೆ ದೊರೆ, ನೀವು ನನ್ನನ್ನು ಪ್ರೀತಿಸುವುದೇ ನಿಜವಾದರೆ ನನ್ನ ಸಾವಿನ ನಂತರ, ನನ್ನ ಮಕ್ಕಳ ಕ್ಷೇಮದ ಸಲುವಾಗಿ ನೀವು ಬೇರೆ ಮದುವೆ ಆಗಬಾರದು.  ನನ್ನ ಹೆಸರು ಈ ಭೂಮಿಯ ಮೇಲೆ ಶಾತ್ವತವಾಗಿ ಉಳಿಯಲು ಭವ್ಯವಾದ ಸ್ಮಾರಕವೊಂದನ್ನು ನಿರ್ಮಿಸಬೇಕು ಎಂದು, ದೊರೆ ನನ್ನ ವಚನವನ್ನು ಹಾರ್ದಿಕವಾಗಿ ಸ್ಟೀಕರಿಸಿದ. ನಾನು ಸಮಾಧಾನದಿಂದ ಕಣ್ಮುಚ್ಚಿಕೊಂಡೆ."

ತೃಪ್ತಿಯಿತ್ತು ಅವಳ ಧ್ವನಿಯಲ್ಲಿ.

"ನನ್ನ ಮುಮತಾಜಳ ಅಮರ ಪ್ರೇಮದ ಕುರುಹು ಇದು. ಅವಳನ್ನು ನಾನು ಇಲ್ಲಿಯೇ ಕಬರ್‍ನಲ್ಲಿ ಮಲಗಿಸಿದ್ದೇನೆ.  ನಾನೂ ಅವಳೊಂದಿಗೆ ಬೆರೆತಿದ್ದೇನೆ.  ಆಗಲೇ ಸೂರ್ಯ ಮುಳುಗಿದ.  ಒಳಗೆ ಮೋಂಬತ್ತಿ ಉರಿಯುತ್ತಿದೆ.  ಅದರ ಬೆಳಕಿನಲ್ಲಿ ಅವಳ ಗೋರಿಯನ್ನು ಒಮ್ಮೆ ನೋಡು ಮುಸಾಫೀರ್" ಶಾಹಜಹಾನನ ಮಾತು ಬಾನುಲಿಯಂತೆ ಕೇಳಿಸಿತ್ತು.

"ಸರ್ ಬನ್ನಿ, ಒಳಗೆ ಹೋಗಲು ನಮ್ಮ ಸರದಿ ಬಂದಿದೆ" ಕೂಗಿ ಕರೆದರು ಮಹೇಶ.  ಜನರಿಗೋ ಕಬರ್ ನೋಡುವ ಜರೂರತೆ.  ನಾನೂ ಅವಸರದ ಹೆಜ್ಜೆ‌ ಇರಿಸಿದೆ. ಒಳಗೆ ಮೊಂಬತ್ತಿ ಢಾಳವಾಗಿ ಬೆಳಗತೊಡಗಿತ್ತು.  ಕಬರ್‍ನ ಮೇಲಿನ ಕಪ್ಪು ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಿದ್ದವು.  ಈ ಗೋರಿ ಅಂಜುಮಂದ ಬಾನು ಬೇಗಂ ಉರ್ಫ್ ಮುಮತಾಜಳದು.  ೧೬೩೧ರಲ್ಲಿ ಅವಳು ಮೃತಳಾದಳು.  ಸ್ವರ್ಗದ ದೇವತೆಗಳು ಅವಳನ್ನು ಭೇಟಿಯಾಗಲು ಬಂದರು ಮತ್ತು ಅವರು ಉಲಿದರು. "ಮುಮತಾಜಳ ವಾಸಸ್ಥಾನ ಸ್ವರ್ಗದಲ್ಲಿ ಶಾಶ್ವತವಿದೆ ! " 

ತಾಜಮಹಲು ಬಿಟ್ಟು ಬರಲು ನನಗೆ ಮನಸ್ಸಾಗಲಿಲ್ಲ.  ಆದರೆ ವೀಕ್ಷಣೆಯ ಸಮಯ ಮುಗಿದಿತ್ತು ಜನರೊಂದಿಗೆ ನಾನು ಭಾರವಾದ ಹೆಜ್ಜೆ ಇರಿಸಿದೆ.

"ಇನ್ನಷ್ಟು ಹೊತ್ತು‌ಇಲ್ಲೆ‌ಇರಬೇಕನಿಸಿತ್ತು ನನ್ಗ ?" ದ್ವಾರ ಬಾಗಿಲು ದಾಟುತ್ತ ಹೇಳಿದೆ ನಾನು. "ನಿಮ್ಗ ತೃಪ್ತಿ ಆಗದಿದ್ರ ಮತ್ತಽಽ ಬರೂಣು ಬರ್‍ರಿ" ಎಂದರು ಶಿರಹಟ್ಟಿಮಠ.

"ನಾಳೆ ಜಯಪುರಕ್ಕೆ ಹೋಗಬೇಕಲ್ಲ" ಬಾಗವಾನ ನೆನಪಿಸಿದರು. 

"ನಾಡದು ಹುಣ್ಣಿಮೆ. ಬೆಳದಿಂಗಳಲ್ಲಿ ತಾಜಮಹಲ್ ನೋಡಲು ಅವಕಾಶ ಇರುವುದು"  ಎಂದರು ಮುರುಗನ್. "ನಾವು ಈ ಅವಕಾಶ ತಪ್ಪಸ್ಗೋಬಾರ್ದು" ಕೂಡಲೇ ಹೇಳಿದೆ ನಾನು. "ನಾವು ತೀಕೀಟಿಗೆ ಪ್ರಯತ್ನಿಸುತ್ತೇವೆ" ಎಂದರು ಮಹೇಶ.

ವ್ಯಾನ್ ಪಾರ್ಕ್ ಮಾಡಿದ ಕಡಗೆ ನಾವು ನಡೆಯುತ್ತಲೇ ಬಂದೆವು.  ಮುರುಗನ್ ನನ್ನ ಪಕ್ಕದಲ್ಲಿಯೇ ಇದ್ದರು.  ತಾಜಮಹಲ್ ಬಗ್ಗೆ ಆವರಿಗೆ ಉತ್ಕಟ ಪ್ರೀತಿಯಿತ್ತು. ಅದರ ನಿರ್ಮಾಣದ ಸಂಗತಿಗಳನ್ನು ಅವರು ರೋಚಕವಾಗಿ ಹೇಳುತ್ತಲೇ ಇದ್ದರು.

ನಮ್ಮನ್ನು ನೋಡಿದ ಡ್ರೈವರ್ ರಸೀದ್ ವ್ಯಾನ್ ತಂದು ರಸ್ತೆಗೆ ನಿಲ್ಲಿಸಿದ.  ಅಲ್ಲಿದ್ದ ಹೋಟೇಲಿನಲ್ಲಿ ಚಹ ಕುಡಿದು ವ್ಯಾನ್ ಹತ್ತಿದೆವು.  ರಸೀದನ ಹತ್ತಿರ ಬಂದ ವ್ಯಕ್ತಿಯೊಬ್ಬ ಸಲಾಂ ಸಾಬ್ ಎಂದ.

"ಕ್ಕಾ ಬೋಲ್ತಾ ಹೈ ಬಾದಶಹಾ? ತುಮ್ಹಾರೆ ಬೇಗಂ ಸಾಹೇಬಾ ಮಿಲ್ ಗಯಿ ನಾ?" ರಸೀದ್ ಕೇಳಿದ.  ಆ ವ್ಯಕ್ತಿ ಮಾತಾಡದೆ ಗಂಭೀರವಾಗಿ ನಿಂತ.  ರಸೀದ್ ಐದು ರೂಪಾಯಿಯ ನಾಣ್ಯವೊಂದನ್ನು ಅವನ ಕ್ಕೆಗೆ ಕೂಟ್ಟು "ಚಲೋ ಭೈ, ಚಾಯ್ ಪೀವೋ" ಎಂದ.  ಖುಷಿಯಾಗಿ ಆ ವ್ಯಕ್ತಿ ಸೆಲ್ಯುಟ್ ಹೊಡೆದು ಪಕ್ಕಕ್ಕೆ ಸರಿದ.  ಅವನ ಮುಖ ನನಗೆ ಅಸ್ಪಷ್ಟ ಕಂಡಿತು.

                    - ೨ -

ಕುದುರೆ ಗಾಡಿಯಲ್ಲಿ ಕುಳಿತು ಆಗ್ರಾದ ಬೀದಿಗಳನ್ನು ಸುತ್ತುವ ಆಸೆಯಿತ್ತು ನನಗೆ.  ಭಾರಿ ಎತ್ತರದ ಕುದುರೆಯ ಜಟಕಾಗಳು ಮೊಗಲ ಬಾದಶಹದ ಕಾಲವನ್ನು  ನೆನಪಿಸಿಕೊಡುವಂತೆ ಓಡಾಡತೊಡಗಿದ್ದವು. "ಲಾಲ್ ಕಿಲ್ಲಾ ನೋಡಲು ಜಟಕಾದಾಗ ಹೋಗುಣು" ಎಂದೆ ನಾನು.  "ನೋಡುವ ಸ್ಥಳಗಳು ದೂರದಲ್ಲಿವೆ.  ಜಟಕಾದಲ್ಲಿ ಹೋದರೆ ಸಮಯ ಸಾಲುದಿಲ್ಲ" ಎಂದರು ಮಹೇಶ.  ನಾನು ಮತ್ತೆ ಟ್ರ್ಯಾಕ್ಸ್ ಹತ್ತಬೇಕಾಯಿತು.  ಆಗ್ರಾದ ಕೋಟೆಯ ಹೆಬ್ಬಾಗಿಲಿನಲ್ಲಿ ಒಳ್ಳೆಯ ಗೈಡ್ ಸಿಕ್ಕ.  ಅವನ ಇತಿಹಾಸ ಪ್ರಜ್ಞೆ ಚುರುಕು ಮತ್ತು ಲವಲವಿಕೆಯದ್ದಾಗಿತ್ತು.  ಬಹಾದ್ಹೂರವ ಮೊಗಲ್ ಬಾದಶಹ ಆಕಬರ್ ನಿರ್ಮಿಸಿದ ಕೆಂಪುಕಲ್ಲಿನ ಕೋಟೆ ಅತ್ಯಂತ ಅದ್ಭುತ, ಅಲ್ಲಿನ ಜಹಾಂಗೀರ್ ಮಹಲ್, ಅಂಗೂರಿಬಾಗ್, ಖಾಸಮಹಲ್, ದಿವಾನ್-ಏ-ಖಾಸ್, ಶೀಶ್ ಮಹಲ್‍ಗಳ ವೈಭವಗಳನ್ನು ಆಸ್ವಾದಿಸುತ್ತ ಸುಮ್ರಾನ್ ಬುರ್ಜ್ ತಲುಪಿದೆವು.  ಪತ್ನಿ ನೂರಜಹಾನ್‍ಳಿಗೆಂದೇ ಜಹಾಂಗೀರ್ ನಿರ್ಮಿಸಿದ ಈ ಇಮಾರತು ಅಮೂಲ್ಯ ಮತ್ತು ಬಣ್ಣ ಬಣ್ಣದ ಕಲ್ಲುಗಳಿಂದ ಆಕರ್ಷಕವೆನಿಸಿತ್ತು.  ಇಲ್ಲಿಯೇ ಶಾಹಜಹಾನ್‍ನ ಅವಸಾನನವಾಗಿದ್ದೆಂದು ಗೈಡ್ ಹೇಳಿದ.  ದೊರೆ ತನ್ನ ಆಕ್ಕರೆಯ ಪುತ್ರಿ ಜಹಾನ್ ಆರಾಳ ತೊಡೆಯ ಮೇಲೆ ಮಲಗಿಕೂಂಡೆ ಕೊನೆಯ ಉಸಿರು ಇರುವವರೆಗೆ ತಾಜಮಹಲ್ ನೋಡುತ್ತಿದ್ದನಂತೆ.  ಇಲ್ಲಿಂದ ಮುಮತಾಜಳ ಸಮಾಧಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೊಳೆವ ಚಂದ್ರ ತುಕಡಿಯೋ, ಸ್ವರ್ಗದಿಂದ ಭೂಮಿಗೆ ಬಿದ್ದ ಒಂದು ಸುಂದರ ಮಹಲೋ ಎಂಬಂತ್ತಿದ್ದ ತಾಜ್‍ಮಹಲ್‍ನ್ನು ನಾನು ಹೃದಯ ತುಂಬಿಕೊಂಡೆ.

ಆ ಜಾಗೆಯಿಂದ ಕದಲುವಷ್ಟರಲ್ಲಿ `ಸಲಾಂ ಸಾಹೇಬ್' ಎಂಬ ಧ್ವನಿ ಕೇಳಿಸಿತು.
"ಸಲಾಂ ಅಮರಬಾಬು, ಠೀಕ್ ಹೈನಾ ?' ಗೈಡ್ ಕೇಳಿದ.  ನಾನತ್ತ ಹೊರಳಿದೆ.  ನಿನ್ನೆ ತಾಜ್‍ನ ಬಳಿ ಕಂಡ ವ್ಯಕ್ತಿ ಕುತೂಹಲ ಹುಟ್ಟಿಸಿದ.  ಮುಂದೆ ಬರುತ್ತಿದ್ದಂತೆ ಗೈಡನನ್ನು ಕೇಳಿದೆ ನಾನು "ಆ ಅಮರಬಾಬು ಯಾರು ?"

"ಇದೇ ಊರಿನವನು. ಬಹಳ ದಿನಗಳಿಂದ ಈ ಕಿಲ್ಲಾ ತಾಜಮಹಲ್ ಎಂದು ಸುತ್ತಮುತ್ತ ಓಡಾಡಿಕೊಡಿರುತ್ತಾನೆ.  ಎಷ್ಟೋಜನ ಆವನನ್ನು ಪಾಗಲ್ ಎನ್ನುತ್ತಾರೆ.  ಆದರೆ ಆವನು ಹಾಗೆ ವರ್ತಿಸುವುದಿಲ್ಲ ನನ್ನ ನೋಡಿದಾಗಲೆಲ್ಲ ಸಲಾಂ ಹೇಳುತ್ತಾನೆ.  ಪಾಪ, ಆವನು ಪ್ರೇಮಿಸಿದ ಹುಡುಗಿ ಪ್ರೀತಿ, ನೀಚರಿಗೆ ಬಲಿಯಾದಳು.  ಇವನು ಆಕೆಯನ್ನು ಹುಡುಕುತ್ತ ಈಗಲೂ ಆಲೆದಾಡುತ್ತಿದ್ದಾನೆ." ಗೈಡ್ ಇಷ್ಟು ಹೇಳಿ ಮುಖ್ಯ ದ್ವಾರದಲ್ಲಿ ನಮ್ಮನ್ನು ಬೀಳ್ಕೊಟ್ಟು ಬೇರೆ ಪ್ರವಾಸಿಗರತ್ತ ಸರಿದು ಹೋದ.

"ನಾವೀಗ ಊಟಕ್ಕೆ ಹೋಗೋಣ" ಎಂದರು ಮಹೇಶ.
"ಸಾಸಿವೆ ಎಣ್ಣಿ ಊಟ ಬ್ಯಾಡ. ಗಂಟಲು ಕೆರಿತೈತಿ" ಹಂಚಾಟೆ ಹೇಳಿದರು.
"ತುಸು ದೂರದಲ್ಲಿ ಉಡುಪಿ ಹೋಟೆಲು ಇದೆ. ನಮ್ಮ ಕಡೆಗಿನ ಊಟ ಸಿಗುವುದು" ಎಂದರು ಮುರುಗನ್.  ಅರ್ಜುನ ಕೂಡಲೇ ಸಮ್ಮತಿಸಿದರು.  ವ್ಯಾನು ಏರಿ ಕುಳಿತೆವು.

ಕೆಂಪು ಕಿಲ್ಲಾದ ಗುಂಗಿನಲ್ಲಿದ್ದ ಕೋರಟಕರ "ಮೊಗಲ್ ಬಾದಶಹರು ಸೌಂದರ್ಯ ಆರಾಧಕರು!" ಎಂದು ಸಂತಸ ವ್ಯಕ್ತಪಡಿಸಿದರು.

"ಅದಕ್ಕೆಽಽ ಆವರಿಗೆ ತಾಜಮಹಲ್‍ನಂಥ ಸುಂದರ ಇಮಾರತಿ ಕಟ್ಟಾಕ ಸಾಧ್ಯ ಆತು"  ಶಿರಹಟ್ಟಿಮಠ ಸಾಕ್ಷಿಯೊದಗಿಸಿದರು.

ತಾಜ್ ಮತ್ತೆ ನನ್ನ ಕಣ್ಣಿದುರಿಗೆ ಬಂದು ನಿಂತಿತು. ಜೂತೆಗೆ ಅಮರ ಬಾಬು ಕೂಡ.  ಏನವನ ಕಥೆ ? ಕುತೂಹಲ ನನ್ನೊಳಗ ಹೆಪ್ಪುಗಟ್ಟಿತ್ತು.

"ನಾನು ತಾಜಮಹಲ್ ಖರೀದಿಸಬೇಕು" ಊಟದ ನಡುವೆ ಹೇಳಿದೆ ನಾನು.

"ಆಗ್ರಾನ ಖರೀದಿ ಮಾಡ್ಕೊಂಡು ಹೋಗ್ರಲ್ಲಾ" ಕೋರಟಕರ ತಟ್ಟನೆ ಜೋಕ್ ಮಾಡಿದರು.

"ಹತ್ತಾರು ಗೆಳೆಯರು ಹಣಾ ಕೊಟ್ಟಾರ ಅವರಿಗೆ ಸಂಗಮವರಿ ಕಲ್ಲಿನ ತಾಜ್, ಮಾದರಿಗಳನ್ನ ಒಯ್ಯಬೇಕು" ಎಲ್ಲರ ನಗುವಿನ ಮಧ್ಯೆ ಹೇಳಿದೆ ನಾನು.

"ನಾಳೆ ನಿಮ್ಮನ್ನು ಹ್ಯಾಂಡಿಕ್ರಾಫ್ಟ್ ಅಂಗಡಿಗೆ ಕರೆದುಕೂಂಡು ಹೋಗ್ತೇನೆ. ಅಲ್ಲಿ ನಿಮಗೆ ಬೇಕಾದ ಮಾದರಿಗಳು ಸಿಗ್ತಾವೆ" ಮುರುಗನ್ ಹೇಳಿದರು.

                - ೩ -

ಹುಣ್ಣಿಮೆಯ ಬೆಳದಿಂಗಳಲ್ಲಿ ತಾಜ್ ನೋಡುವ ಅತ್ಯಾಸಕ್ತಿಯಿಂದ ಜನಸಂದಣಿ ವಿಪರೀತವಾಗಿತ್ತು.  ಸೌಂದರ್ಯಾನುಭೂತಿಗಾಗಿ ತವಕಿಸುವ ಮನುಷ್ಯನ ನಿತಾಂತ ಆಸ್ಥೆ ಕಂಡು ಸಂತಸವೆನಿಸತು ನನಗೆ.  ಪ್ರಪಂಚ ಕ್ರೂರವಾಗುತ್ತ ನಡೆದಿದೆ.  ಜೀವ ಪ್ರೀತಿಯ ಅಮಾಯಕರನ್ನು ಚಾಕೂ, ಮಚ್ಚು, ಖಡ್ಗ ತ್ರಿಶೂಲಗಳಿಂದ ಇರಿದಿರಿದು ಕೊಲ್ಲಲಾಗುತ್ತಿದೆ.  ಬಾಂಬು ಸ್ಪೋಟಿಸಿ ಛಿದ್ರಿಸಲಾಗುತ್ತಿದೆ.  ಬದುಕಿಸುವ ಪ್ರಕೃತಿಯನ್ನು ಅದರ ಚೆಲುವನ್ನು ನಿರ್ದಾಕ್ಷಿಣ್ಯವಾಗಿ ವಿಕಾರಗೊಳಿಸುವ, ಅಧಮವಾಗಿ ಉಡಾಯಿಸುವ ರಾಕ್ಷಸಿ ಪ್ರವೃತ್ತಿಯವರಿಗೆ ಎಲ್ಲವನ್ನೂ ಸುಡಗಾಡು ಮಾಡುವ ತವಕ. ಚಿಂತಿತನಾಗಿದ್ದ ನಾನು.  ಕೋರಟಕರ ಬಾಳೆಹಣ್ಣು ಹುಡುಕಿಕೂಂಡು ಹೋಗಿದ್ದರು.  ಅವರ ಜೊತೆಯಲ್ಲಿ ಶಿರಹಟ್ಟಿಮಠ ಇದ್ದರು ಬಾಗವಾನ, ಮಹೇಶ, ಮುರುಗನ್ ತಿಕೀಟು ಕೌಂಟರ್‍ನ ಸರದಿಯಲ್ಲಿದ್ದರು.

ಅಮರಬಾಬು ದೂರದಿಂದ ಬರುವುದು ಕಾಣಿಸಿತು. "ಸರ್, ಆ ವ್ಯಕ್ತಿ ಈ ಕಡೆಗೆ ಬರಾಕ ಹತ್ಯಾನ" ನಾನು ಹಂಚಾಟೆಯವರಿಗೆ ಹೇಳಿದೆ. "ಅವನ ಬಗ್ಗೆ ನಿಮಗೊಳ್ಳೆ ಆಸಕ್ತಿ ಹುಟ್ಟಿಕೊಂಡೈತಿ" ಎಂದರವರು.  ಅವನು ನಮ್ಮ ವ್ಯಾನ್ ಸಮೀಪ ಬಂದ.  ತುಸು ದೂರದಲ್ಲಿ ನಿಂತು ಸಿಗರೇಟು ಸೇದುತ್ತಿದ್ದ ರಸೀದನಿಗೆ ಮಾಮೂಲಿಯಾಗಿ `ಸಲಾಂ' ಹೇಳಿದ. ಹೊಗೆ ಉಗುಳುತ್ತ ರಸೀದ್ "ಕಲ್ ಪಾಂಚ್ ರುಪೆ ದೇದಿಯಾ ನಾ ?" ಎಂದ.

"ಜೀ..ಸಾಬ್" ಸೆಲ್ಯೂಟ್ ಮಾಡಿದ ಕೈಯನ್ನು ಹಣೆಯ ಮೇಲಿಂದ ತೆಗೆಯದೆ ಹೇಳಿದ ಆಮರಬಾಬು.  "ಫಿರ್..ಕ್ಯಾ ಚಾಯಿಯೆ?" ಧ್ವನಿಯೆತ್ತರಿಸಿದ ರಸೀದ್.  ಈಗ ಅಮರಬಾಬು ಮಾತಾಡಲಿಲ್ಲ. ಮೈಮೇಲಿನ ಹರಕು ಶರ್ಟು ಬಿಚ್ಚಿ ಮೌನವಾಗಿ ವ್ಯಾನ್ ಮೇಲಿನ ಧೂಳು ಒರೆಸತೊಡಗಿದ.  ಅವನದು ಮೂವತ್ತು ಮೂವತ್ತೈದರ ಪ್ರಾಯ ಇರಬಹುದು. ಎತ್ತರದ ಸಪೂರ ದೇಹ.  ಮುಖದ ಕಾಂತಿಯನ್ನು ಮರೆಮಾಚಿದ ಕುರುಚಲು ಗಡ್ಡ-ಮೀಸೆ.  ತಲೆತುಂಬ ದಟ್ಟ ಜಿದ್ದುಗಟ್ಟಿದ ಗುಂಗುರು ಕೂದಲು.  ದಿಟ್ಟಿಸುವ ಕಣ್ಣುಗಳಲ್ಲಿ ಮಡುಗಟ್ಟಿದ ನೈರಾಶ್ಯ.  ವ್ಯಾನ್ ಮೇಲಿನ ಧೂಳು ಕೂಡವಿ, ಶರ್ಟನ್ನು ಮುದ್ದೆಮಾಡಿ ಬಗಲನಲ್ಲಿಟ್ಟುಕೊಂಡು ನಿಂತ ಆಮರಬಾಬು. ಅವನ ವಿಶಾಲ ಎದೆಯಲ್ಲಿದ್ದ ಹಚ್ಚೆಯಲ್ಲಿ ತಾಜಮಹಲ ಚಿತ್ತಾರ ಕಂಡಿತು.  ಅದರ ಮಧ್ಯೆ ಪ್ರೀತಿ ಎಂಬ ಹಿಂದಿ ಲಿಪಿ.  ಅದಮ್ಯ ವಿಸ್ಮಯ ನನಗೆ.  ಅದನ್ನು ಗಮನಿಸಿದವನಂತೆ ರಸೀದ್ ಹೇಳಿದ.  "ಶಾಹಜಹಾನ್ ಬೇಗಮ್‍ಳಿಗೆ ನೆಲದ ಮೇಲೆ ತಾಜಮಹಲ್ ಕಟ್ಟಿಸಿದ.  ಅಮರಬಾಬು ತನ್ನ ಹುಡುಗಿಗಾಗಿ ಎದೆಯ ಮೇಲೆ ತಾಜ್‍ನ ಹಚ್ಚೆ ಹಾಕಿಸಿಕೂಂಡಿದ್ದಾನೆ."

ಅಪಹಾಸ್ಯದ ಧಾಟಿಯಿರಲಿಲ್ಲ ಅವನ ಮಾತಿನಲ್ಲಿ.

"ಅಮರಬಾಬು ನೀನು ಪ್ರೇಮಿಸಿದ ಹುಡುಗಿ ಯಾರು?" ಹಿಂದಿಯಲ್ಲಿ ಕೇಳಿದ ನಾನು.
"ಪ್ರೀತಿ" ಉತ್ಸಾಹದಿಂದ ಹೇಳಿದ ಅವನು.
"ತುಮ್ ಪ್ರೀತಿಕೊ ಬಹುತ್ ಪ್ಯಾರ್ ಕರತೆ ಥೆ ನಾ?" ರಸೀದ್ ಕೇಳಿದ.
"ಆಜ್‍ಬಿ ಕರತಾ ಹೂಂ. ಆಖರಿ ದಮ್‍ತಕ್ ಕರತಾ ರಹುಂಗಾ" ಅಮರಬಾಬುವಿನ ಅಂತರಾಳ ಉಸುರಿತ್ತು.  ಅದರ ಜಾಡಿನಲ್ಲಿಯೇ ಕೇಳಿದೆ ನಾನು "ಫಿರ್ ಓ ಕಹಾನಿ ಕ್ಯಾ ಹೈ?"

ಆಮರಬಾಬು ನನ್ನತ್ತ ಮುಖ ತಿರುಗಿಸಿದ.  ಅವನ ಕಣ್ಣು ಒದ್ದೆಯಾಗಿದ್ದವು.

ಕಸಿವಿಸಿಯೆನಿಸಿತು ನನಗೆ "ಚಾಯ್ ಪೀವೋಗೆ?" ಕೇಳಿದೆ ನಾನು.  ಅವನು ಶರ್ಟಿನಿಂದ ಕಣ್ಣೀರು ಒರೆಸಿಕೊಳ್ಳುತ್ತ `ಹೂಂ' ಎನ್ನುವಂತೆ ಕತ್ತು ಅಲ್ಲಾಡಿಸಿದ.  "ಠೀಕ್ ಹೈ ಚಲೋ" ರಸೀದ್ ಅವನನ್ನು ಮುಂದೆ ಹಾಕಿಕೊಂಡು ನಡೆದ.  ನಾನು ಹಿಂಬಾಲಿಸಿದೆ.

ಚಹದ ಗಾಡಿಯೆದುರು ನಿಂತಾಗ "ಕುಚ್ ತೊ ಖಾಲೇನಾ ?" ಎಂದೆ. ಆಮರಬಾಬು ಎರಡು ಕಚೋರಾಗಳನ್ನು ಗಬಗಬನೆ ತಿಂದು, ಚಹ ಕುಡಿದ.  ಹಸಿವು ಹಿಂಗಿತೇನೋ, ಕಣ್ಣಿನಿಂದಲೇ ಕೃತಜ್ಞತೆ ಸೂಚಿಸಿದ ಆವನು.  ನಾವೂ ಚಹಾ ಕುಡಿದೆವು.  ಹಣ ಇಸಿದುಕೂಳ್ಳುವಾಗ ಹೊಟೇಲಿನವನು ಕೇಳಿದ "ಆಮರಬಾಬುನ ಕಥೆ ಕೇಳಿದಿರಾ?"

"ನಿಮಗೂ ಗೊತ್ತು ಅವನ ಕಥೆ ?" ಪ್ರತಿಯಾಗಿ ಕೇಳಿದೆ ನಾನು.

"ಅವನದು ಮುಗಿಯದ ಕಥೆ" ಎಂದು ನಕ್ಕ ಆವನು.

ಈಚೆಗೆ ಬಂದಾಗ ರಸೀದ್ ಹೇಳಿದ "ಅಮರಬಾಬು, ತಾಜಮಹಲ್‍ನತ್ತ ದೃಷ್ಟಿ ಹೊರಳಿಸಿ `ಏಕ್ ಶಾಹಜಹಾನ್ ಬನವಾ ಕೆ ಹಸಿ ತಾಜಮಹಲ್ | ಹಮ್ ಗರಿಬೋಂಕಿ ಮೊಹಬತ್ ಕಾ ಉಡಾಯಾ ಹೈ ಮಜಾಕ್ ||" ಸಾಹಿಲ್‍ನ ಕವಿತೆಯ ಸಾಲೊಂದನ್ನು ಉಲಿಯುತ್ತ ತಲೆಯ ಮೇಲೆ ಶರ್ಟನ್ನು ಬೀಸುತ್ತ ಹೊರಟೇ ಹೋದ.

ರಸೀದ್ ನಕ್ಕ. ನನಗೆ ನಿರಾಶೆಯೆನಿಸಿತು. ವ್ಯಾನ್ ಹತ್ತಿರಕ್ಕೆ ಬಂದಾಗ ರಸೀದನೆ ಆಮರಬಾಬುವಿನ ಕಥೆ ಹೇಳಿದ.

            - ೪ -

ಆಗ್ರಾ ಶಹರದ ಕೊಳಗೇರಿ ಪ್ರದೇಶದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಆಮರಬಾಬು.  ಸೈಕಲ್ ರಿಕ್ಷಾ ತುಳಿಯುತ್ತಿದ್ದ, ಅವನ ತಂದೆ ಎದೆನೋವಿನಿಂದ ಆಸುನೀಗಿದಾಗ ಅವನಿಗಿನ್ನು ಚಿಕ್ಕ ವಯಸ್ಸು.  ತಾಯಿ ತಾಜ್‍ಮಹಲ್ ಬಗೀಚನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಅರಮಬಾಬು ಪ್ರೇಮಿಸಿದ ಹುಡುಗಿ ಪ್ರೀತಿ.  ಅವಳ ತಂದೆ ಆಲ್ಲಿ ಕೂಲಿಯಾಗಿದ್ದ.  ತಾಯಿಗೂ ಕೂಲಿಯ ಕೆಲಸವಿತ್ತು ಅವರ ಝೊಪಡಿಗಳು ಕೂಡ ಎದುರು-ಬದುರಾಗಿದ್ದವು.  ಪರಸ್ಪರರಲ್ಲಿ ಸಂಬಂಧವೂ ಅನ್ಯೋನ್ಯವಾಗಿತ್ತು.  ತಾಜಮಹಲಿನ ಪರಿಸರದಲ್ಲಿಯೇ ಅಮರಬಾಬು-ಪ್ರೀತಿ ಆಡಿಕೊಂಡು ಬೆಳೆದಿದ್ದರು.

ಅವನು ಮೆಟ್ರಿಕ್ಯುಲೇಶನ್ ಓದುತ್ತಿರುವಾಗ ಪ್ರೀತಿ ಏಳನೆಯ ತರಗತಿಯಲ್ಲಿ ಆಭ್ಯಸಿಸುತ್ತಿದ್ದಳು.  ಓದಿನ ಹಂಬಲದ ನಡುವೆಯೂ ಆವನು ಸ್ಯೆಕಲ್ ರಿಕ್ಷಾ ನಡೆಸುತ್ತಿದ್ದ.  ಪ್ರೀತಿಯನ್ನು ಶಾಲೆಗೆ ಬಿಟ್ಟು ಮತ್ತೆ ಕರದು ತರುವ ಜವಾದ್ದಾರಿಯೂ ಅವನದೇ ಆಗಿತ್ತು.  ಆಕೆ ಹೈಸ್ಕೂಲಿಗೆ ಸೇರಿಕೊಂಡ ಮೇಲೆ ಅಮರಬಾಬು ಪಗಾರದ ಮೇಲೆ ರಿಕ್ಷಾ ಓಡಿಸಲಾರಂಭಿಸಿದ್ದ.  ಆದೇ ಹೊತ್ತಿಗೆ ಪ್ರೀತಿ ಮೈನೆರೆದಿದಳು.  ಅವಳ ದೇಹದಲ್ಲಿ ಬದಲಾವಣೆ ಕಂಡಿತ್ತು.  ಪರಿಮಳ ಸೂಸುವ ಹೂವಿನಂತಿದ್ದ ಆಕೆಯ ಮಾತಿನಲ್ಲಿ ನೋಟದಲ್ಲಿ ಲಜ್ಜೆ ಅಪೂರ್ವವೆನಿಸಿತ್ತು.  ಅಮರಬಾಬು ಅವಳಿಗೆ ತೀವ್ರ ಆಕರ್ಷಿತನಾಗಿದ್ದ.

ತಾಜಮಹಲ್ ಅವರಿಬ್ಬರಲ್ಲಿ ಮೊಹಬತ್ ಸೃಜಸಿತ್ತು.  ಯಮುನೆಯ ತೀರ, ಕೆಂಪುಕಿಲ್ಲಾ ಅವರ ಕನಸುಗಳಿಗೆ ರಂಗು ತುಂಬಿದ್ದವು. ಅವರ ಪ್ರೇಮದ ಒಡನಾಟದಿಂದ ಹಿರಿಯರಿಗೆ ಸಂತೋಷ ಅನಿಸಿತ್ತು.  ಪ್ರೀತಿ ಮೆಟ್ರಿಕ್ ಮುಗಿಸುತ್ತಿರುವಂತೆ ಅಮರಬಾಬು ರಿಜರ್ವ್ ಪೋಲೀಸ್ ಹುದ್ದೆಗೆ ಆಯ್ಕೆಯಾಗಿದ್ದ.  ತರಬೇತಿಗೆ ಹೋಗುವ ಮೊದಲು ಮದುವೆಯಾಗಲು ಪ್ರೀತಿ ಅವನನ್ನು ಒತ್ತಾಯಿಸಿದ್ದಳು.  ತನ್ನ ಮೇಲೆ ವಿಶ್ವಾಸವಿಡು ಎಂದಿದ್ದ ಅಮರಬಾಬು. "ನೌಕರಿ ಮಾಡುವವರಿಗೆ ವರದಕ್ಷಿಣೆ ಆಸೆ ಹೆಚ್ಚು" ಎಂದಾಕೆ ಕೆಣಕಿದ್ದಳು.  "ನಾನು ನೌಕರಿ ಮಾಡುವುದು ನಿನ್ನ ಸಲುವಾಗಿ. ನಿನ್ನನ್ನು ರಾಣಿಯಂತೆ ಇಡುವ ಆಸೆ ನನಗೆ" ಅಮರಬಾಬು ಒಡಲ ಮಾತು ಹೇಳಿದ್ದ.

"ನಾನು ಬಡವರ ಹುಡುಗಿ" ವಾಸ್ತವ ನೆನೆಪಿಸಿ ಕೊಟ್ಟಿದ್ದಳಾಕೆ.

"ನಾನೇನು ಅಮೀರನೆ ?" ಅವನು ಕೇಳಿದ್ದ.

"ನೌಕರಿ ಬಂದ ಮೇಲೆ ನೀನು ಆಮೀರನಾಗುತ್ತಿ" ಆಕೆ ಗಂಭೀರವಾಗಿ ಹೇಳಿದ್ದಳು. "ನೀನೂ ಆಮೀರಳಾಗುತ್ತಿ" ಎಂದು ಅವಳನ್ನು ತನ್ನ ಎದೆಯಲ್ಲಿ ಹುದುಗಿಸಿಕೂಂಡಿದ್ದ ಅಮರಬಾಬು.

"ನನ್ನ ಮೇಲೆ ಅಷ್ಟು ಪ್ರೀತಿಯೆ ನಿನಗೆ ?" ಪರೀಕ್ಷಿಸುವಂತೆ ಕೇಳಿದ್ದಳು ಪ್ರೀತಿ.

"ನೀನಿಲ್ಲದಿದ್ದರೆ ಈ ಎದೆಗೆ ಉಸಿರಾಟವೇ ಇಲ್ಲ" ತಟ್ಟನೆ ಹೇಳಿದ್ದ ಆಮರಬಾಬು.

"ಬಾದಶಾಹ ಶಾಹಜಹಾನ ಮುಮತಾಜ್‍ಳನ್ನು ಹೀಗೆ ಪ್ರೀತಿಸುತ್ತಿದ್ದ"

"ಹೂಂ"

"ಅವಳ ಪ್ರೀತಿಗಾಗಿ ಈ ತಾಜ್‍ಮಹಲ್ ಕಟ್ಟಿಸಿದ"

"ಹೂಂ"

"ನನ್ನ ಸಲುವಾಗಿ ನೀನೇನು ಮಾಡುತ್ತಿ?" ಹುಡುಗಾಟ ಮಾಡಿದ್ದಳಾಕೆ
.
"ನಾನಂತೂ ಶಾಹಜಹಾನ ಅಲ್ಲ ಆದರೆ ನನ್ನದೆಯ ಮಹಲಿನೊಳಗೆ ನಿನ್ನನ್ನು ತುಂಬಿಕೂಂಡಿರುತ್ತೇನೆ" ಗಾಢವಾಗಿ ಉಲಿದಿದ್ದ ಆವನು.

ಮರುದಿನ ನೋಡಿದರೆ ಅವನು ಎಂಥ ಸಂಕಟ ಆನುಭವಿಸತೊಡಗಿದ್ದ.  ತನ್ನ ಎದೆಯ ತುಂಬ ತಾಜಮಹಲ್‍ನ ಹಚ್ಚೆ ಹಾಕಿಸಿಕೊಂಡು ಆವಳೆದುರು ನಿಂತಿದ್ದ.
ಹೆಪ್ಪುಗಟ್ಟಿದ ರಕ್ತಕಣಗಳಲ್ಲಿ ಅಸಾಧ್ಯ ಯಾತನೆ.  ಅದು ಪ್ರೀತಿಗಾಗಿಯೇ ಅಂದಿದ್ದ.  ಅವನ ತಾಯಿ, ಆತ್ತೆ-ಮಾವ ಗಾಬರಿಯಾಗಿದ್ದರು.  ಅವನ ಹುಚ್ಚಾಟ ಕಂಡು ನಕ್ಕಿದ್ದರು ಕೂಡಾ. ಪ್ರೀತಿ ತನ್ನೊಡಲ ಉಸಿರಿನಿಂದ ಅವನೆದೆಯ ಗಾಯ ಮಾಯಿಸಿದ್ದಳು.  ಪೋಲೀಸ್ ತರಬೇತಿಗೆ ಸಂತೋಷದಿಂದ ಬೀಳ್ಕೊಟ್ಟಳು.

ಯಮುನೆ ಹರಿಯುತ್ತಿದ್ದಳು. ಸೂರ್ಯ-ಚಂದ್ರ ಬೆಳಗುತ್ತಿದ್ದರು.  ತಾಜಮಹಲ್ ನೋಡುವ ಜನರ ಧಾವಂತದಲ್ಲಿ ಸಡಗರವಿತ್ತು ಒಮ್ಮೆಯಾದರೂ ಪ್ರೀತಿ ಆ ಕಡೆಗೆ ಸುಳಿದಾಡಲಿಲ್ಲ.  ಅಮರಬಾಬು ಅವಳಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದ.

ಆ ದಿನ ಬೆಳಗಿನ ಹೊತ್ತು ಒಲೆಯ ಮುಂದೆ ಕುಳಿತ ಪ್ರೀತಿ ಪರೋಟ ಬೇಯಿಸುತ್ತಿದ್ದಳು.  ಅವಳ ತಾಯಿ-ತಂದೆ ಮನೆಯಲ್ಲಿಯೇ ಇದ್ದರು.  ಇದ್ದಕ್ಕಿದ್ದಂತೆ ಆ ಏರಿಯಾದ ಕಾರ್ಪೋರೇಟರ್ ಸಂಜಯಗುಪ್ತಾ ತನ್ನ ಹೆಂಡತಿ, ಮಗನನೊಂದಿಗೆ ಕಾರಿಳಿದು ಝೊಪಡಿ ಹೊಕ್ಕಿದ್ದ.  ಸುತ್ತುಬಳಸಿ ಮಾತಾಡದೆ ಪರಸ್ಪರ ಬೀಗರಾಗೋಣ ಅಂದಿದ್ದ.  ಅವನ ಮಗ ರಾಜೇಂದ್ರನ ಕಣ್ಣು ಪ್ರೀತಿ ಮೇಲೆ ನೆಟ್ಟಿತ್ತು ಅವಳ ರೂಪಕ್ಕೆ ತಲೆಕೆಡಿಸಿಕೊಂಡಿದ್ದ ಅವನು.  ಅವಳನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ತನ್ನ ವರ್ಚಸ್ಸಿನ ಪ್ರಭಾವದಲ್ಲಿ ಉಡಾಳರ ಗ್ಯಾಂಗ್ ಲೀಡರಾಗಿ ಅಧ್ವಾನಗಳನ್ನು ಎಸಗುತ್ತಿದ್ದ ಮಗನನ್ನು ನಿಯಂತ್ರಿಸಲು ಗುಪ್ತಾನಿಗೆ ಈ ಸಂಬಂಧ ಆನಿವಾರ್ಯವೆನಿಸಿತ್ತು.  ಪ್ರೀತಿಯನ್ನು ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಲು ಅವನು ತೀರ್ಮಾನಿಸಿದ್ದ.  ಪ್ರೀತಿ ಅವನ ನಿರ್ಧಾರವನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಳು.  ಅಮರಬಾಬುನೊಂದಿಗೆ ಆಕೆಯ ನಿಶ್ಚಿತಾರ್ಥ ಆಗಿದೆಯೆಂದು ತಂದೆ-ತಾಯಿ ಸ್ಪಷ್ಟಪಡಿಸಿದ್ದರು. "ಪ್ರೀತಿ ನನ್ನ ಹೆಂಡತಿಯಾಗದಿದ್ದರೆ ನಾನು ವಿಷ ಕುಡಿಯುತ್ತೇನೆ.  ಯಮುನೆಗೆ ಹಾರಿಕೂಳ್ಳುತ್ತೇನೆ" ಎಂದು ರಾಜೇಂದ್ರ ಹೆದರಿಸಿದ್ದ.

"ನೀನು ಸತ್ತರೆ ನನಗೇನು? ನಾನು ಅಮರಬಾಬುನ ಹೆಂಡತಿ" ಪ್ರೀತಿ ದೃಢಪಡಿಸಿದ್ದಳು.  ಅವಮಾನದ ಮುಖ ಹೊತ್ತು ಹೋಗಿದ್ದ ರಾಜೇಂದ್ರ.  ಈ ಸಂಗತಿಯನ್ನು ಯಾರು ಆಮರಬಾಬುವಿನ ಕಿವಿಗೆ ತಾಕಿಸಲಿಲ್ಲ.  ಪ್ರೀತಿ ಅವನಿಗೆ ಬರೆದ ಕಾಗದದಲ್ಲಿ "ನೀನು ಬಂದ ಕೂಡಲೇ ಮದುವೆ" ಎಂದು ತಿಳಿಸಿದ್ದಳು.

ಅದರ ನಂತರದ ನಾಲ್ಕಾರು ದಿನಗಳಲ್ಲಿ ಆಘಾತಕರ ಸುದ್ದಿ ಆಮರಬಾಬುವಿನ ಎದೆಯೊಡೆಸಿತ್ತು.  ಪ್ರೀತಿ ಯಮುನಾ ನದಿಯಲ್ಲಿ ಮುಳುಗಿ ಸತ್ತಳು.  ಧಾವಿಸಿ ಬಂದ ಅಮರಬಾಬು ಆವಳ ಮುಖ ನೋಡಲಿಲ್ಲ.  ಅವಳ ಬೆತ್ತಲೆಯ ಶರೀರ ನೀರಲ್ಲಿ ನೆನೆದು ಮುಟ್ಟಲು ಆಸಾಧ್ಯವೆನಿಸಿತ್ತು.  ಪೋಲೀಸರು ಗಡಿಬಿಡಿಯಲ್ಲಿ ಮಹಜರು ನಡೆಸಿ ನದಿಯ ದಡದಲ್ಲಿಯೇ ಹೂಳುವ ವ್ಯವಸ್ಥೆ ಮಾಡಿದ್ದರು.

ಅಮರಬಾಬು ಅಲ್ಲಿ ಕುಳಿತು ಇಡೀ ದಿನ ರೋಧಿಸಿದ್ದ.

ರಾಜೇಂದ್ರನ ರಾಕ್ಷಸಿಯೊಡಲಲ್ಲಿ ಅವಮಾನದ ಕೆಂಡ ಪ್ರಜ್ವಲಿಸಿತ್ತು.  ಅವನು ಆ ನಡುಹಗಲಲ್ಲಿ ಗುಡಿಸಲು ಹೊಕ್ಕು ಪ್ರೀತಿಯನ್ನು ಕಾರಿನೊಳಕ್ಕೆ ಹಾಕಿಕೊಂಡು  ಹೋಗಿದ್ದ ಅವನೊಂದಿಗೆ ಇನ್ನೂ ನಾಲ್ಕು ಹುಡುಗರಿದ್ದರು.  ಅವಳ ತಲೆಯ ಮತ್ತು ದೇಹದ ಮೇಲೆ ಪರಚಿದ ಗಾಯಗಳಿದ್ದವು.  ಸಾಮೂಹಿಕ ಅತ್ಯಾಚಾರಕ್ಕೆ ಪ್ರೀತಿ ಒಳಗಾಗಿದ್ದಳು.  ಆದರೆ ಪೋಲೀಸರು ತಮ್ಮ ಮಹಜರಿನ ವರದಿಯಲ್ಲಿ ಗಾಯದ ಗುರುತುಗಳನ್ನು ದಾಖಲಿಸಲಿಲ್ಲ.  ವೈದ್ಯರ ಸರ್ಟಿಫಿಕೇಟ್ ಅವಳ ಮೇಲೆ ಆತ್ಯಾಚಾರ ಸಂಭವಿಸಿಲ್ಲವೆಂದು ಖಚಿತಗೊಳಿಸಿತ್ತು. ಪತ್ರಿಕೆಗಳು ಅವಳದ್ದು ಆತ್ಯಹತ್ಯ ಪ್ರಕರಣ ಎಂದು ಹೂತು ಹಾಕಿದ್ದವು.  ರಾಜೇಂದ್ರ ಮತ್ತು‌ ಅವನ ಗೆಳೆಯರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದರು.  ಪ್ರೀತಿಯ ತಾಯಿ-ತಂದೆಗಳ ಸಂಕಟ, ಹೋರಾಟಗಳು ಗುಪ್ತಾನ ಹಣ ಮತ್ತು ಅಧಿಕಾರಗಳೆದುರು ನಪುಂಸಕವೆನಿಸಿದ್ದವು.  "ನನ್ನ ಪ್ರೀತಿಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು" ಎಂದು ಆಮರಬಾಬು ರಸ್ತೆಗಿಳಿದು ಕೂಗಿಕೂಂಡ.  ಅವನನ್ನು ಪಾಪ ಎನ್ನುವಂತೆ ನೋಡಿದರು ಜನ.  ಬೂರ್ಜ್ವಾ ವ್ಯವಸ್ಥೆಯಿಂದ ಬೇಸತ್ತ ಅಮರಬಾಬು ಕೆರಳಿದ.  ತಲೆ ಕೆದರಿಕೊಂಡ.  ಅಂಗಿ ಹರಿದುಕೊಂಡ.  ಆಮೇಲೆ ಗಹಗಹಿಸಿ ನಕ್ಕ. ಕೆಲವರು ಆವನನ್ನು ಹುಚ್ಚ ಎಂದರು. ಆ ಅವಸ್ಥೆಯಲ್ಲಿ ಅವನು ಆಗ್ರಾದ ಕಿಲ್ಲಾ, ತಾಜಮಹಲು, ಯಮುನಾ ತೀರಗಳಲ್ಲಿ ಪಿರಿಪಿರಿ ತಿರಿಗಿದ, ಪ್ರೀತಿ
ಸತ್ತಿಲ್ಲ ಎನ್ನುವಂತೆ.

ಹೀಗೆ ತಿರುಗಾಡಿಕೂಂಡು ಬಂದು ಪ್ರೀತಿಯನ್ನು ಹೂಳಿದ ಜಾಗೆಯಲ್ಲಿ ಕುಳಿತುಕೊಳ್ಳುತ್ತಿದ್ದ.  ಅವನ ಅವಸ್ಥೆ ತಾಯಿಯ ಸಂಕಟ ಹೆಚ್ಚಿಸಿತ್ತು.  ಅದು ಕೊರಗಾಗಿ ಅವಳನ್ನು ಬಲಿ ತೆಗೆದುಕೊಂಡಿತ್ತು.  ಅತ್ತೆ ಮಾವ ಅವನನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡರೂ ಪ್ರೀತಿ.... ಪ್ರೀತಿಯೆಂದು ಕನವರಿಸುತ್ತಿದ್ದ ಅಮರಬಾಬು ಮತ್ತೆಮತ್ತೆ ತಾಜಮಹಲ್ ಪರಿಸರಕ್ಕೆ ಬಂದು ಬಿಡುವನು.  ಪ್ರೀತಿಗೊಂದು ಸಮಾಧಿ ಕಟ್ಟುವ ವಾಂಛೆಯಿಂದ ಏನೋ ಅವನು ಅಲ್ಲಿ ಇಲ್ಲಿಂದ ಕಲ್ಲು ಹೊತ್ತು ತರುವನು. ಆಸ್ಥೆಯಿಂದ ಎಂಬಂತೆ ಸಮಾಧಿ ಕಟ್ಟುವನು.  ಮುಮ್ತಾಜಳ ಭಾಗ್ಯ ಪ್ರೀತಿಗಿರಲಿಲ್ಲ.  ಶಹಜಹಾನನ ದೌಲತ್ತು ಅಧಿಕಾರ ಅಮರಬಾಬುಗಿರಲಿಲ್ಲ.  ತಾಜಮಹಲಿನ ಪಕ್ಕ ತನ್ನ ಪ್ರೀತಿಯ ಹುಡುಗಿಯ ಸಮಾಧಿಯನ್ನು ಸ್ಥಿರಗೊಳಿಸಬೇಕೆನ್ನುವ ಅವನ ಉತ್ಕಟ ಹಂಬಲ ಕ್ಕೆಗೂಡಲಿಲ್ಲ.  ದುರಾದೃಷ್ಟವೆನ್ನುವಂತೆ ವರ್ಷಕ್ಕೊಮ್ಮೆ ಉಕ್ಕಿ ಬರುವ ಯಮುನೆ ಈ ಸಮಾಧಿಯನ್ನು ಕೊಚ್ಚಿಕೊಂಡುಹೋಗಿಬಿಡುತ್ತಾಳೆ.  ಬಡವರ ಪ್ರೀತಿಗೆ ಯಾವ ಕುರುಹುಗಳು ಇರಬಾರದೆನ್ನುವಂತೆ.

ಕಥೆಯನ್ನು ಹೇಳಿ ಮುಗಿಸಿದ ರಸೀದನ ಧ್ವನಿಯಲ್ಲಿ ವಿಷಾದವಿತ್ತು.

ಆಮರಬಾಬುವಿನ ಎದೆಯ ಮೇಲಿನ ತಾಜಮಹಲ್ ಚಿತ್ತಾರ ನನ್ನ ಕಣ್ಣುಕಟ್ಟಿತ್ತು. ಒಳಗೆ ತಳಮಳ, ಮಿಡಿತ.  ಮಹೇಶ ಮತ್ತು ಮುರುಗನ್ ನಮ್ಮೆದುರು ಬಂದು ನಿಂತರು.  ಹುಣ್ಣಿಮೆ ಬೆಳಕಲ್ಲಿ ತಾಜಮಹಲ್ ನೋಡುವ ಜನಸಂದಣಿಯಲ್ಲಿ ತಾವು ಪ್ರವೇಶ ತಿಕೀಟು ದೊರಕಿಸಿಕೊಳ್ಳಲು ಹೋರಾಟ ಮಾಡಿದ ಸಾಹಸಗಾಥೆಯನ್ನು ಉತ್ಸಾಹದಿಂದ ವಿವರಿಸಿದರು.  ನನಗದು ಅಗಾಧವೆನಿಸಲಿಲ್ಲ.  ಆಕಾಶದಲ್ಲಿ ಪೂರ್ಣ ಚಂದಿರ ಆಪೂರ್ವವೆನಿಸತೊಡಗಿದ್ದ.  ತನಗೆ ತಾಜ್ ನೋಡಬೇಕೆನಿಸಲಿಲ್ಲ.

            *****

ಕೀಲಿಕರಣ: ಎಂ.ಎನ್.ಎಸ್. ರಾವ್

ಉತ್ತರಾಧಿಕಾರಿ

- ಅಬ್ಬಾಸ್ ಮೇಲಿನಮನಿ

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನಕ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು.

ದೇಶದ ರಾಜಕಾರಣಕ್ಕೆ ಅನಿವಾರ್ಯವೆನ್ನುವಂತಿದ್ದ ಅವರಿಗೆ ಇತ್ತಿತ್ತಲಾಗಿ ಸಕ್ಕೆ ಕಾಯಿಲೆ, ಹೃದಯ ಬೇನೆ, ಬೆನ್ನು ನೋವು, ಮಂಡಿ ಬೇನೆ, ಉಬ್ಬನ, ಗಂಟಲು ಬೇನೆ ಹೀಗೆ ವಿವಿಧ ಕಾಯಿಲೆಗಳು ಒಮ್ಮೆಲೆ ಅಕ್ರಮಿಸಿಕೊಂಡು ಅವರ ಜೀವದ ಸೊಗಸನ್ನೇ ಹಿಂಡಿ ಹಾಕಿದ್ದವು.  ಬೆನ್ನುವ ನೋವು, ಗಂಟಲು ನೋವಿನ ಚಿಕಿತ್ಸೆಗೆಂದು ಅವರು ಸರಕಾರಿ ಖರ್ಚಿನಲ್ಲಿ ವಿದೇಶಕ್ಕೂ ಹೋಗಿ ಬಂದಿದ್ದರು.  ವೈದ್ಯರು ಅವರಿಗೆ ಹಚ್ಚು ಮಾತಾಡದಿರಲು ಎಚ್ಚರಿಸಿದ್ದರು.  ತೆವಲುಗಳಿಂದ ದೂರವಿರಲು, ಆಹಾರದ ಬಗ್ಗೆ ಕಟ್ಟುನಿಟ್ಟು ಪಲಿಸಲು, ಹೇಳಿದ್ದೂ ಅಲ್ಲದೆ ಆವೇಶಕ್ಕೆ ಅವಕಾಶ ನೀಡಬಾರದೆಂದು ಸ್ಪಷ್ಟವಾಗಿ ಹೇಳಿದ್ದರು.  ಅಮರಪ್ಪನವರು ತಮ್ಮ ಹತವೈಭವವನ್ನು ನೆನಪು ಮಾಡಿಕೊಳ್ಳುತ್ತ ಇರಬೇಕಾದ ಪರಿಸ್ಥಿತಿ ಒದಗಿತು.

ಕೊನೆಗೂ ತಮ್ಮ ಅಭಿಮಾನಿಗಳ ಸಮಾವೇಶವನ್ನು ನಡೆಸಿ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಘೋಷಿಸಿದರು.  ಕೂಡಿದ ಜನ ಬೇಸರದಿಂದ "ನಾವು ಅದಕ್ಕೆ ಅವಕಾಸ ನೀಡುವುದಿಲ್ಲ" ಎಂದರು.  "ನೀವೇ ನಮಗೆ ದಿಕ್ಕು ದೆಸೆ ನಮ್ಮನ್ನು ಅನಾಥರನ್ನಾಗಿ ಮಾಡಬೇಡಿರಿ" ಎಂದು ಗೋಳಾಡಿದರು.  ತಮ್ಮ ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಮಾರು ಹೋದ ಅಮರಪ್ಪನವರು "ನಾನು ನಿಮ್ಮೊಂದಿಗೆ ಇರುತ್ತೇನೆ.  ನಿಮ್ಮೆಲ್ಲರ ಅನುಕೂಲಕ್ಕಾಗಿ ನನ್ನ ಉತ್ತರಾಧಿಕಾರಿಯೊಬ್ಬ ಇರುತ್ತಾನೆ.  ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಿಷ್ಠೆ, ಗೌರವ, ಅಭಿಮಾನದ ಬೆಂಬಲವನ್ನು ನೀವು ಅವನಿಗೂ ಕೊಡಬೇಕು.  ನಾನೆಂದರೆ ಅವನು;  ಅವನೆಂದರೆ ನಾನು ಎಂದು ತಿಳಿಯಬೇಕು" ಎಂದರು.

ಅವರು ಹಾಗೆ ಹೇಳುತ್ತಿರುವಂತೆ ವೇದಿಕೆಯ ಮೆಲಿದ್ದ ಐದಾರು ಯುವಕರ ಮುಖ ಅರಳಿಕೊಂಡವು.  ಅವರೆಲ್ಲ ಅಮರಪ್ಪನವರ ಖಾಸಾ ಆದ್ಮಿಗಳಾಗಿದ್ದರು.  ಹಗಲಿರುಳು ಅವರ ಏಳ್ಗೆಗಾಗಿ, ಪ್ರತಿಷ್ಠೆಗಾಗಿ ರಕ್ತ ಸುಟ್ಟುಕೊಂಡಿದ್ದರು.  ನಿಷ್ಠೆಯಿಂದ ಶ್ರಮಿಸಿದ್ದರು.  ಬದುಕು ಸವೆಸಿದ್ದರು.  ಅನೇಕ ಸಂದರ್ಭಗಳಲ್ಲಿ ಅಮರಪ್ಪ ಆ ತರುಣರ ಬಗ್ಗೆ ಮೆಚ್ಚುಗೆ ಮಾತು ಆಡುತ್ತ ನಾಯಕರನ್ನಾಗಿಸುವ ಆಸೆ ತೋರುತ್ತಲೇ ಬಂದಿದ್ದರು.  ಈಗ ಅಂಥ ಅವಕಶ ಬಂದೀತೆಂದು ತರುಣರು ಹಿಗ್ಗಿಕೊಂಡು ತಮ್ಮ ಗರಿಗರಿ ಅಂಗಿ ತೀಡಿಕೊಂಡು ಮೈಯೆಲ್ಲಾ ಕಿವಿಯಾಗಿ ಕುಳಿತರು.  ಅಮರಪ್ಪ ಅವರತ್ತ ದೃಷ್ಟಿ ಚೆಲ್ಲಿ ತಮ್ಮ ಉತ್ತರಾಧಿಆರಯಿನ್ನು ಸಾರಿಯೇ ಬಿಟ್ಟು "ಮಹಾಜನಗಳೆ, ನಿಮಗೆಲ್ಲರಿಗೂ ಇನ್ನು ಮುಂದೆ ನನ್ನ ಮಗನೆ ನಾಯಕ!"

            *****

ಕೀಲಿಕರಣ: ಕಿಶೋರ್‍ ಚಂದ್ರ

ಸ್ವಂತದ್ದಲ್ಲ

-ಅಬ್ಬಾಸ್ ಮೇಲಿನಮನಿ

ಅದು ಮದುವೆ ಮನೆ.  ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು.  ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು.  ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು.  ಊಟದ ರುಚಿಯನ್ನು ಪ್ರೀತಿಯಿಂದ ಸವಿಯತೊಡಗಿದ್ದರು ಜನ.  ಬಡಿಸುವವರು ಲವಲವಿಕೆಯಿಂದ ಊಟದೆಲೆಯ ಕಡೆಗೆ ಗಮನ ಹರಿಸಿದ್ದರು.

ಊಟಕ್ಕೆ ಬಡಿಸುವವರಲ್ಲಿ ಒಬ್ಬ ಕೆಲವರ ಹತ್ತಿರಕ್ಕೆ ಬಂದು ಅತಿಯಾದ ಕಾಳಜಿ ವ್ಯಕ್ತಪಡಿಸಿ "ಹೊಟ್ಟೆ ತುಂಬಾ ಊಟ ಮಾಡಿರಿ,  ನಾಚಿಕೆ ಮಾಡಿಕೊಳ್ಳಬೇಡಿರಿ" ಎನ್ನುವನು.  "ಈ ವಯಸ್ಸಿನಲ್ಲಿ ಉಣ್ಣದಿದ್ದರೆ ಹೇಗೆ... ಇನ್ನಷ್ಟು ತಗೋರಿ" ಎಂದು ಬಡಿಸುವನು.  "ನಿಮ್ಮ ಪಾಲಿನದು ಹಾಕಿದೆ... ಇದು ನನ್ನ ಪಾಲಿನದು.  ಮದುವೆ ಊಟ ಇದು ಹೊಟ್ಟೆ ಬಿರಿವಂತೆ ಉಣ್ಣಬೇಕು" ಎಂದು ಅವರು ಅಡ್ಡಾಗಿಟ್ಟ ಕೈಕೊಸರಾಡಿ ಎಲೆಗೆ ಪದಾರ್ಥ ಹಾಕುವನು.  "ನನ್ನ ಒತ್ತಾಯಕ್ಕಾದರೂ ಇಷ್ಟು ನೀಡಿಸಿಕೊಳ್ಳಬೇಕು", "ನಾನು ಪ್ರೀತಿಯಿಂದ ಬಡಿಸುತ್ತೇನೆ ತಗೊಳ್ಳಿರಿ".  "ಇದು ನಿಮ್ಮನೆ ಅಂತ ತಿಳ್ಕೊಳ್ಳಿರಿ" ಇಂಥವೇ ಮಾತುಗಳಿಂದ ಜಬರದಸ್ತಾಗಿ ಸಾಲುಗಳ ನಡುವೆ ಓಡಾಡುತ್ತಿದ್ದ.

ಊಟ ಮಾಡುವವರು ಬೇಡ... ಬೇಡ... ಸಾಕು... ಸಾಕು... ಎಂದು ಎಲೆಯನ್ನು ಪಕ್ಕಕ್ಕೆ ಎತ್ತಿಕೊಂಡರು.  ಅದರ ಮೇಲೆ ಅಡ್ಡ ಬಿದ್ದರೂ ಅವನು ಹಟ ಮಾಡಿ ನೀಡುತ್ತಿದ್ದ.  ಯಾರಾದರೂ ಹೊಟ್ಟೆ ಹಿಡಿದಷ್ಟು ತಿಂದಾರು.  ಅವನು ಒತ್ತಾಯ ಮಾಡಿ ನೀಡಿದ್ದೆಲ್ಲ ಎಂಜಲಾಗಿ ಎಲೆ ತುಂಬಿದ್ದನ್ನು ಕಂಡು ಒಬ್ಬ "ಬೇಡ ಅಂದ್ರೂ ಜುಲಾಮಿ ಮಾಡಿ ಇಷ್ಟು ಅನ್ನ ಆಹಾರ ಕೆಡಿಸುತ್ತಿದ್ದಾನಲ್ಲ ಈ ಮನುಷ್ಯ!" ಎಂದು ವಿಷಾದದಿಂದ ಪೇಚಾಡಿಕೊಂಡ.  ಅವನ ಪಕ್ಕದಲ್ಲಿದ್ದವನು ತಟ್ಟನೆ ಉದ್ಗರಿಸಿದ "ಹಾಳು ಮಾಡದೆ ಏನು ಮಾಡಿಯಾನು?  ಅದು ಅವನ ಸ್ವಂತದ್ದಲ್ಲ!"

            *****

ಕೀಲಿಕರಣ: ಕಿಶೋರ್‍ ಚಂದ್ರ

ನಾನು ಬದುಕುತ್ತೇನೆ

- ಅಬ್ಬಾಸ್ ಮೇಲಿನಮನಿ

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ.  ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ.  ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು.  ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು.

ಎರಡೂ ಕಡೆಯ ಹಿರಿಯರು ಮಾತುಕತೆ ಆರಂಭಿಸಿಯೇಬಿಟ್ಟರು.

"ನಮ್ಮ ಮಗನಿಗೆ ಒಂದು ಲಕ್ಷ ವರದಕ್ಷಿಣೆ ಕೊಡಬೇಕು" ಹುಡುಗನ ತಾಯಿ ಮೊದಲು ಬೇಡಿಕೆ ಇತ್ತಳು.

"ಕಿಮ್ಮತ್ತಿನ ಎರಡು ಜತೆ ಬಟ್ಟೆ, ಉಂಗುರ, ಚೈನು, ವಾಚು ಕೊಡಬೇಕು" ಸಂಬಂಧಿಕರಲ್ಲಿ ಒಬ್ಬರು ತಮ್ಮ ಅಹವಾಲು ಸಲ್ಲಿಸಿದರು.

"ನನಗೆ ಓಡಾಡಲು ಇಂಡಿಕಾ ಕಾರು ಬೇಕು" ಹುಡುಗ ತನ್ನ ಡಿಮ್ಯಾಂಡ್ ಮುಂದಿಟ್ಟ.

"ನಮ್ಮ ಹುಡುಗ ದೊಡ್ಡ ಸ್ಥಾನದಲ್ಲಿದ್ದವನು.  ಅವನ ಮದುವೆಯನ್ನು ನಾವು ಹೇಳಿದ ಕಲ್ಯಾಣ ಮಂಟಪದಲ್ಲಿಯೇ ಮಾಡಿಕೊಡಬೇಕು" ಎಂದು ಕರಾರು ಹಾಕಿದರು ಹುಡುಗನ ತಂದೆ.

ಇದುವರೆವಿಗೂ ಸುಮ್ಮನೆ ಕುಳಿತಿದ್ದ ಹುಡುಗಿಯ ಕಡೆಯ ಹಿರಿಯರೊಬ್ಬರು:  "ವರೋಪಚಾರದಲ್ಲಿ ಕೊರತೆ ಇರುವುದಿಲ್ಲ.  ನಿಮ್ಮ ಮರ್ಯಾದೆಗೆ ಕುಂದು ಬಾರದಂತೆ ನಾವು ಮದುವೆ ಮಾಡಿಕೊಡುತ್ತೇವೆ.  ಆದರೆ ಇಂಥದ್ದೆ ಬೇಕು.  ಇಷ್ಟು ಬೇಕು ಎಂದು ಗೆರೆಕೊರೆದು ಹೇಳಬೇಡಿರಿ" ಎಂದರು.

ಅವರು ಮಾತಿನಿಂದ ವ್ಯಗ್ರಗೊಂಡ ಹುಡುಗನ ತಾಯಿ "ನಾವೇನು ಭಿಕಾರಿಗಳಲ್ಲ" ಎಂದಳು.

"ಅಂಥವರಾಗಿದ್ದರೆ ಎಷ್ಟೊ ಒಳ್ಳೆಯದಿತ್ತು.  ಕನಿಷ್ಟ ಪಕ್ಷ ಅವರಿಗೆ ಮನುಷ್ಯತ್ವವಾದರೂ ಇರುತ್ತಿತ್ತು.  ನೀವು ದರೋಡೆಕೋರರು!" ಬಾಗಿಲಲ್ಲಿ ನಿಂತು ಹೇಳಿದಳು ಹುಡುಗಿ.

ಅವಳ ಮಾತಿನಿಂದ ಅಪಮಾನಿತರಾದ ಹುಡುಗನ ಕಡೆಯವರ ಮೂಗಿನ ಹೊರಳೆ ಹಿಗ್ಗಿದವು.  "ಹುಡುಗಿ ಮದುವೆ ಮೊದಲೆ ಹೀಗೆ.  ನಾಳೆ ಏನು ಗತಿ?" ಅವರ ಜತೆಗೆ ಬಂದ ಮುದುಕ ಮುಖದ ಮೇಲೆ ಹೊಡೆದಂತೆ ಹೇಳಿದ.

"ಹುಡುಗಿ ಒಳ್ಳೆಯವಳು.  ಆದರೆ ನೇರ"  ಮೊಮ್ಮಗಳನ್ನು ಸಮರ್ಥಿಸಿಕೊಂಡಳು ಅಜ್ಜಿ.

"ನೀವು ನ್ಯಾಯವಾಗಿ ಮಾತಾಡಿರಿ" ಎಂದರು ಹುಡುಗಿಯ ತಂದೆ.

"ಅಪ್ಪ ಇವರೊಂದಿಗೆ ಚೌಕಾಸಿ ವ್ಯವಹಾರ ಬೇಡ" ನಿಷ್ಠುರವಾಗಿ ಹೇಳಿದಳು ಹುಡುಗಿ.

ಹುಡುಗನ ಕಡೆಯವರು ಎದ್ದು ಬಿರುಗಾಳಿಯಂತೆ ಹೊರಟರು.  ಹುಡುಗನ ತಾಯಿ ಹೊಸ್ತಿಲು ದಾಡುವಾಗ "ಈ ಜನ್ಮದಲ್ಲೇ ನಿನಗೆ ಮದುವೆ ಆಗುವುದಿಲ್ಲ" ಎಂದು ಶಪಿಸಿದಳು.

"ಆಗದಿದ್ದರು ಚಿಂತೆಯಿಲ್ಲ.  ನಾನು ಬದುಕುತ್ತೇನೆ" ಗಟ್ಟಿಯಾಗಿ ಹೇಳಿದಳು ಹುಡುಗಿ.

            *****
ಕೀಲಿಕರಣ: ಕಿಶೋರ್‍ ಚಂದ್ರ

ಸಿದ್ಧಾಂತ

-ಅಬ್ಬಾಸ್ ಮೇಲಿನಮನಿ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ.  ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು.  ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು.

ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ "ನೀವು ಕೂದಲೆಳೆಯಲ್ಲಿ ಸೋಲು ತಪ್ಪಸಿಕೊಂಡಿರಿ" ಎಂದ.

"ನಾನು ಸೋಲಿಲ್ಲದ ಸರದಾರ" ಅತ್ಯುತ್ಸಾಹದಿಂದ ಉದ್ಗರಿಸಿದ ಉಗ್ರಪ್ಪ.

"ನಿಮ್ಮ ಅಧಿಕಾರದ ಅವಧಿಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ರಾಜಮಾರ್ಗಗಳನ್ನಾಗಿ ರೂಪಿಸುತ್ತೇನೆ ಎಂದಿದ್ದೀರಿ" ಪರ್ತಕರ್ತ ಹೇಳಿದ.

"ಹೌದು" ಚುಟುಕಾಗಿ ಉಲಿದ ಉಗ್ರಪ್ಪ.

"ಉದ್ದಿಮೆ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಭವಿಷ್ಯ ನೀಡುತ್ತೇನೆಂದು ಪ್ರಮಾಣ ಮಾಡಿದ್ದೀರಿ".

"ಅದು ನಿಜ"

"ರೈತರಿಗೆ ಉಚಿತ ವಿದ್ಯುತ್, ಪಂಪ್‌ಸೆಟ್ಟು, ಬೀಜ, ಗೊಬ್ಬರ ಪೂರೈಸಿ ಅನ್ನದಾತರನ್ನು ಬದುಕಿಸುತ್ತೇನೆ ಎಂದು ಘೋಷಿಸಿದ್ದೀರಿ".

"ಹೌದು".

"ಕುಡಿಯುವ ನೀರಿಗೆ ತೊಂದರೆ ಬಾರದಂತೆ ನೋಡಿಕೊಳ್ಳುತ್ತೇನೆ.  ಹಸಿವಿನ ಸಂಕಟದಿಂದ ಜನರು ಸಾಯದಂತೆ ಎಚ್ಚರಿಕೆ ವಹಿಸುತ್ತೇನೆ.  ನೂರಕ್ಕೆ ನೂರರಷ್ಟು ಜನರನ್ನು ಸಾಕ್ಷರರನ್ನಾಗಿಸಲು ಹೋರಾಡುತ್ತೇನೆ.  ರೋಗ-ರುಜಿನಗಳಿಂದ ಜನರು ಸತ್ತು ಹೋಗದಂತೆ ಅಮೃತ ಕುಡಿಸುತ್ತೇನೆ ಎಂದು ನೂರಾರು ಸಭೆಗಳಲ್ಲಿ ಹೇಳುತ್ತಿದ್ದಿರಿ."

"ಹೌದು... ಹೌದು... ಹೌದು."

"ಆದರೆ ನೀವು ಏನನ್ನೂ ಮಾಡಲಿಲ್ಲ"  ವಿಷಾದ ವ್ಯಕ್ತಪಡಿಸಿದ ಪತ್ರಕರ್ತ.

"ನನ್ನ ಗೆಲುವಿಗೆ ಅದೇ ಆಧಾರವಲ್ಲವೆ?"  ನಗುತ್ತ ಕೇಳಿದ ಉಗ್ರಪ್ಪ.

ಅವನ ಪ್ರಶ್ನೆಗೆ ದಿಗಿಲುಗೊಂಡ ಪತ್ರಕರ್ತ ತುಸು ಏರುಧ್ವನಿಯಲ್ಲಿ ಹೇಳಿದ "ನೀವು ರಾಜಕಾರಣಿಗಳು ಬರಿ ಸುಳ್ಳು ಹೇಳುತ್ತೀರಿ.  ಭರವಸೆಯ ಗಾಳಿ ಊದಿ ಜನರನ್ನು ರಬ್ಬರಿನ ಬಲೂನ್ ಆಗಿಸುತ್ತೀರಿ."

"ಎಷ್ಟೇ ಆಗಲಿ ನೀವೂ ಪತ್ರಕರ್ತರು.  ರಾಜಕಾರಣದ ಸಿದ್ಧಾಂತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ"  ಹ್ಹ ಹ್ಹ ಹ್ಹ.... ಎಂದು ಹಗುರಾಗಿ ನಕ್ಕ ಉಗ್ರಪ್ಪ.  ಆ ಲಜ್ಜೆಗೇಡಿ ನಗೆ ಕಂಡು ಕೋಪಿಸಿಕೊಂಡ ಪತ್ರಕರ್ತ "ಇಂಥ ರಾಜಕಾರಣದಿಂದ ದೇಶಕ್ಕೇನು ಲಾಭ?" ಎಂದು ವ್ಯಂಗ್ಯದ ಬಾಣ ಎಸೆದ.

"ದೇಶಕ್ಕೇನೋ ಗೊತ್ತಿಲ್ಲ.  ನನಗಂತೂ ಇದೆ.  ನನ್ನ ನಂಬಿಕೊಂಡವರಿಗೂ ಅನುಕೂಲವಿದೆ" ಯಾವ ಮುಜುಗರವಿಲ್ಲದೆ ಹೇಳಿದ ಉಗ್ರಪ್ಪ.

"ಒಂದಿಲ್ಲ ಒಂದಿನ ಜನ ನಿಮ್ಮ ಸ್ವಾರ್ಥದ ಎದುರು ನಿಂತರೆ?"

"ಬಲೂನಿಗೆ ಗಾಳಿ ತುಂಬುವುದರಲ್ಲಿ ನಾನು ಚಾಣಾಕ್ಷ.  ಹಾಗೆಯೇ ಉಬ್ಬಿದ ಬಲೂನುಗಳ ಗಾಳಿ ತೆಗೆಯುವ ತಂತ್ರದಲ್ಲಿ ನಾನು ಎಕ್ಸ್‌ಪರ್ಟು ಮಾರಾಯರೆ!"  ಆತ್ಮವಿಶ್ವಾಸ ವ್ಯಕ್ತಪಡಿಸಿದ ಉಗ್ರಪ್ಪ.

ಪತ್ರಕರ್ತ ತುಟಿ ಹೊಲಿದುಕೊಂಡಂತೆ ಕುಳಿತ.

            *****

ಕೀಲಿಕರಣ: ಕಿಶೋರ್‍ ಚಂದ್ರ

ಡಿಸೆಲ್ ಭಾಗ್ಯ

-ಅಬ್ಬಾಸ್ ಮೇಲಿನಮನಿ

ದೊಡ್ಡ ಟ್ರಾನ್ಸ್‌ಪೋರ್ಟ್ ಕಂಪನಿಯ ಟ್ರಕ್ ಡ್ರೈವರನೊಬ್ಬ ಮನೆ ಕಟ್ಟಿಸಿದ.  ಗೃಹ ಪ್ರವೇಶಕ್ಕೆ ಬಹಳಷ್ಟು ಜನ ಬಂದಿದ್ದರು.  ಮಧ್ಯಾಹ್ನ ಬಂದವರಿಗೆಲ್ಲ ಸುಗ್ರಾಸ ಭೋಜನ.  ಮತ್ತೆ ರಾತ್ರಿ ತನ್ನ ಖಾಸಾ ಜನರಿಗೆ ಭಾರೀ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಿದ್ದ ಡ್ರೈವರ್‍.

ಇಬ್ಬರು ಡ್ರೈವರುಗಳು ಊಟ ಮಾಡಿಕೊಂಡು ದಾರಿಯುದ್ದಕ್ಕೂ ಮಾತಾಡುತ್ತ ಹೊರಟರು.

"ರಾಮುದಾದಾನ ಮನೆ ಬಹಳ ಸುಂದರವಾಗಿದೆ" ಎಂದ ಒಬ್ಬ.

"ಕಿಟಕಿ, ಬಾಗಿಲು ಎಲ್ಲಾ ಸಾಗವಾಣಿಯದಂತೆ" ಮತ್ತೊಬ್ಬನೆಂದ.

"ಗೋಡೆಗಳಿಗೆ, ನೆಲಕ್ಕೆ ಹಾಕಿಸಿದ ಗ್ರಾನೈಟ್ ಕಲ್ಲಿಗೆ ಲಕ್ಷ ರೂಪಾಯಿಗಳಂತೆ."

"ರಾಮುದಾದಾ ನಮ್ಮ ಗಾಡಿಯಲ್ಲಿ ಕ್ಲೀನರ್‍ ಆಗಿದ್ದ.  ಅವನು ಡ್ರೈವರ್‍ ಆಗಿದ್ದೆ ನಾಲ್ಕು ವರ್ಷದ ಹಿಂದೆ."

"ಅವನು ಕಷ್ಟಪಟ್ಟು ದುಡಿದಿದ್ದಾನೆ."

"ನಾನೂ ಅವನಂತೆ ಇಪ್ಪತ್ತು ವರ್ಷ ದುಡಿದಿದ್ದೇನೆ.  ನಮಗೊಂದು ಸ್ವಂತ ಜಾಗಾ ಮಾಡಿಕೊಳ್ಳಲು ಆಗಿಲ್ಲ.  ನಮ್ಮಂತೆ ಗುಡಿಸಲಲ್ಲಿ ಇದ್ದ ರಾಮುದಾದಾ ಈಗ ಭವ್ಯ ಬಂಗಲೆ ಕಟ್ಟಿಸಿದ."

"ಅದೆಲ್ಲ ಅವನ ಭಾಗ್ಯ!"

"ಅಲ್ಲ;  ಅದು ಡಿಸೆಲ್ ಭಾಗ್ಯ!"

"ಅಂದರೆ.....?"

"ನೀನು ರಾಮುದಾದಾನ ಮನೆಯ ಗೋಡೆಗಳನ್ನು ಮೂಸಿ ನೋಡಲಿಲ್ಲವೆ?  ಅಲ್ಲಿ ಡಿಸೆಲ್ ವಾಸನೆಯೇ ತುಂಬಿತ್ತು".

            *****

ಕೀಲಿಕರಣ: ಕಿಶೋರ್‍ ಚಂದ್ರ

ರಾಜಕೀಯ ಬಿಸಿನೆಸ್ಸು

-ಅಬ್ಬಾಸ್ ಮೇಲಿನಮನಿ

ಅವರು ಕೋಟ್ಯಾಧೀಶ ಮನುಷ್ಯ.  ಹತ್ತಾರು ಬಿಸಿನೆಸ್ಸುಗಳಿಂದ ಭಾರಿ ವರ್ಚಸ್ಸು ಗಳಿಸಿದ್ದರು.  ದುಡ್ಡು ಅವರಲ್ಲಿ ಕೊಳೆಯಾಗಿ ಬಿದ್ದಿದೆಯೆಂದು ಜನ ಮಾತಾಡಿಕೊಳ್ಳುತ್ತಿದ್ದರು.  ಆ ವ್ಯಕ್ತಿಯದು ತುಂಬು ಸಂಸಾರ.  ನಾಲ್ಕು ಜನ ಗಂಡು ಮಕ್ಕಳು.  ನಲ್ಕು ಜನ ಹೆಣ್ಣನು ಮಕ್ಕಳು.  ಗಂಡು ಮಕ್ಕಳಿಗೆ ಮತ್ತು ನಾಲ್ಕು ಜನ ಅಳಿಯಂದಿರೂ ಒಂದೊಂದು ಬಿಸಿನೆಸ್ಸಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.  ಆ ವ್ಯಕ್ತಿಯನ್ನು ಮೊದಲ್ಗೊಂಡು ಪ್ರತಿಯೊಬ್ಬರು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿದ್ದರು.  ಚುನಾವಣಾ ಸಮಯದಲ್ಲಿ ತಮ್ಮ ತಮ್ಮ ಪಕ್ಷಗಳಿಗೆ ಅಭ್ಯರ್ಥಿಗಳಿಗೆ ಅವರು ಸಹಾಯ ಮಾಡುತ್ತಿದ್ದರು.  ಆದರೆ ಅವರೆಂದೂ ರಾಜಕೀಯ ಅಧಿಕಾರಕ್ಕಾಗಿ ಹಾತೊರೆಯಲಿಲ್ಲ.  ಇದನ್ನು ಗಮನಿಸುತ್ತ ಬಂದಿದ್ದ ಪತ್ರಕರ್ತನೊಬ್ಬ ಕೋಟ್ಯಾಧೀಶರನ್ನು ಸಂದರ್ಶಿಸಿದ.

"ನೀವು ಬಹಳ ದಿನಗಳಿಂದಲೂ ಈ ರಾಜಕೀಯ ಪಕ್ಷದಲ್ಲಿದ್ದೀರಿ.  ಯಾಕೆ ಎಂ.ಎಲ್.ಎ ಅಥವಾ ಎಂ.ಪಿ. ಆಗುವ ಮನಸ್ಸು ಮಾಡಿಲ್ಲ?"  ಕುತೂಹಲದಿಂದ ಕೇಳಿದ ಪತ್ರಕರ್ತ.

"ರಾಜಕೀಯ ಅಧಿಕಾರದಲ್ಲಿ ನನಗೆ ಚೂರು ಆಸಕ್ತಿಯಿಲ್ಲ"  ಕೋಟ್ಯಾಧೀಶರು ಸ್ಪಷ್ಟವಾಗಿಯೇ ಹೇಳಿದರು.

"ಆದರೆ ನೀವು, ನಿಮ್ಮ ಮಕ್ಕಳು, ಅಳಿಯಂದಿರು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಇದ್ದೀರಲ್ಲ."

"ಪಕ್ಷದಲ್ಲಿದ್ದರೆ ಅಧಿಕಾರದಲ್ಲಿರಬೇಕಂತ ಎಲ್ಲಿದೆ?"

"ಬೇರೆ ಬೇರೆ ಪಕ್ಷಗಳಲ್ಲಿರುವುದರಿಂದ ನಿಮ್ಮ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟುವುದಿಲ್ಲವೆ?"

"ಖಂಡಿತವಾಗಿಯೂ ಇಲ್ಲ"

"ಒಂದೇ ಪಕ್ಷದಲ್ಲಿರುವವರ ನಡುವೆ ಸಹಮತ ಇರುವುದಿಲ್ಲ ಇದು ನಿಮಗೆ ಹೇಗೆ ಸಾಧ್ಯ?"

"ಸಾಧ್ಯವಿದೆ.  ನಮಗೆ ಬಿಸಿನೆಸ್ಸು ಮುಖ್ಯ.  ರಾಜಕೀಯ ಮುಖ್ಯವಲ್ಲ.  ನಮ್ಮ ವ್ಯವಹಾರಕ್ಕೆ ಆಡಳಿತ ಪಕ್ಷ, ವಿರೋಧ ಪಕ್ಷ, ಎರಡೂ ಬೇಕು, ಅವುಗಳ ತತ್ವ ಸಿದ್ಧಾಂತಗಳಲ್ಲ.  ರಾಜಕೀಯ ಅಧಿಕಾರ ತಾತ್ಕಾಲಿಕ.  ಬಿಸಿನೆಸ್ಸು ನಿರಂತರ, ನಾವು ಎಲ್ಲ ಪಕ್ಷಗಳಲ್ಲಿರುವುದರಿಂದ ನಮಗೆ ಆತಂಕವಿಲ್ಲ" ಒಳಸತ್ಯವನ್ನು ಬಹಿರಂಗಗೊಳಿಸಿದರು ಕೋಟ್ಯಾಧೀಶರು.

ಪತ್ರಕರ್ತ ಅವರನ್ನು ಅದ್ಭುತ ಎಂಬಂತೆ ದೃಷ್ಟಿಸುತ್ತ ಕುಳಿತ.

            *****

ಕೀಲಿಕರಣ: ಕಿಶೋರ್‍ ಚಂದ್ರ

ನಾನು ನಿನ್ನನ್ನು ಪ್ರೀತಿಸುತ್ತೇನೆ

-ಅಬ್ಬಾಸ್ ಮೇಲಿನಮನಿ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು.  ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು.  ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ ಅಹಂ ಎಳ್ಳಷ್ಟು ಇರದಿರುವುದು ಅಚ್ಚರಿಯ ಸಂಗತಿಯಾಗಿತ್ತು.  ಹುಡುಗಿಯರಿಗಂತೂ ಸರಿ, ಹುಡುಗರೆದುರಾದರೂ ಅವಳು ಯಾವ ಸಂಕೋಚವಿಲ್ಲದೆ ಮಾತನಾಡಿಸುವಳು.  ಯಾವಾಗಲೂ ತರಗತಿಯ ಕಡೆಗೆ ಆಲಕ್ಷಿಸಿ ಲೇಡೀಸ್ ರೂಮಿನೆದುರು ಅಣಕು, ತಮಾಷೆ, ಪೊಗರಿನ ಮಾತುಗಳಿಂದ ಸಿನಿಮಾ ಹಿರೋಗಳ ಸ್ಟೈಲ್‌ನಲ್ಲಿ ಕಣ್ಣುಗಳಿಂದಲೇ ಹುಡುಗಿಯರ ಬೇಟೆಯಾಡುತ್ತಿದ್ದ ಹುಡುಗರು ಅವಳ ದೆಸೆಯಿಂದಾಗಿ ತರಗತಿಗಳಿಗೆ ಚಕ್ಕರೆ ಹೊಡೆಯುವುದನ್ನು ನಿಲ್ಲಿಸಿದ್ದರು.  ಒಂದೊಂದು ಸಲ ಅವಳ ಸಲಿಗೆಯ ಮಾತುಗಳಿಂದ ಹುಡುಗರೆ ಮುಜುಗರಕ್ಕೊಳಪಡುವ ಪರಿಸ್ಥಿತಿ ನಿರ್ಮಾಣವಾಯಿತು.

ಚೆಲ್ಲು ಚೆಲ್ಲಾಗಿದ್ದ ಹುಡುಗಿ ಸಹಜವಾಗಿಯೇ ಆ ಶ್ರೀಮಂತ ಹುಡುಗನೊಂದಿಗೆ ಮಾತಾಡಿದ್ದಳು.  ಸ್ಫುರದ್ರೂಪಿಯಾಗಿದ್ದ ಅವನು ಹಿಂಡುಗಟ್ಟಲೆ ಗೆಳೆಯರನ್ನು ಬೆನ್ನಿಗೆ ಕಟ್ಟಿಕೊಂಡು ಉಡಾಫೆಯಿಂದಲೇ ವತಿðಸುತ್ತಿದ್ದ.  ಕ್ಲಾಸಿನಲ್ಲೂ ಅದೇ ಚಾಳಿ, ಅವನಿಂದ ಪ್ರಧ್ಯಾಪಕರಿಗೂ ತಲೆನೋವು.  ಅವನ ಕೀಟಲೆ, ಪೊಗರಿನ ವರ್ತನೆ, ಲೇವಡಿ ಮಾತುಗಳಿಂದ ಹುಡುಗಿಯರು ಕಪ್ಪೆಚಿಪ್ಪಿನೊಳಗೆ ಮುದುಡಿಕೊಂಡಂತಿರುತ್ತಿದ್ದರು.

ಇಡೀ ಕ್ಯಾಂಪಸ್ಸು ಅವನನ್ನು ಸಹಿಸಿಕೊಂಡಿತ್ತು.

ಆ ಹುಡುಗಿಯ ಬಗ್ಗೆ ಅವನಿಗೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು.  ಆದರೆ ಅದನ್ನು ಅವಳೆದುರು ಪ್ರಸ್ತಾಪಿಸುವ ಧಾರ್ಷ್ಟ್ಯವನ್ನು ತೋರಿಸಲಿಲ್ಲ.  ಗೆಳೆಯರೊಂದಿಗೆ ಹೇಳಿಕೊಂಡಿದ್ದ.  ಅವರು ಅವಳ ಮೇಲಿನ ಅವನ ಹುಚ್ಚಿನ ಕಿಚ್ಚಿಗೆ ಗಾಳಿಯೂದಿದ್ದರು.  ಅವನು ಚಿತ್ತಾರದ ಕನಸುಗಳಲ್ಲಿ ಮೀಯುತ್ತ ಪೂರ್ತಿ ಅವಳ ಹಂಬಲದಲ್ಲಿ ಚಡಪಡಿಸುತ್ತಿದ್ದ.  ಆಸೆ ಉಕ್ಕೇರುತ್ತಿದ್ದಂತೆ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಒಂದು ಸಾಲಿನ ಒಕ್ಕಣಿಕೆಯ ಕಾಗದವನ್ನು ಅವಳಿಗೆ ತಲುಪಿಸಿದ.

ಆ ಹುಡುಗಿ ಮಾತ್ರ ಸಹಜವಾಗಿದ್ದಳು.

ಅವನು ಆಕಾಶಕ್ಕೆ ನೆಗೆದಿದ್ದ.  ಅಂತ ಚೆಂದದ ಚೆಲುವೆಯನ್ನು ದಕ್ಕಿಸಿಕೊಂಡ ಸಂಭ್ರಮದಲ್ಲಿ ಗೆಳೆಯರು ಅವನಿಂದ ಜಬರದಸ್ತಾದ ಪಾರ್ಟಿ ಮಾಡಿಸಿದ್ದರು.  ಅವರಿಬ್ಬರ ಪ್ರಣಯದ ವಿಷಯವನ್ನು ಅವರೇ ಹರಡಿ ವರ್ಣರಂಜಿತಗೊಳಿಸಿದ್ದರು.  ಹುಡುಗನಿಗೆ ದಿನದ ಇಪ್ಪತ್ನಾಲ್ಕು ಗಂಟೆ ಅವಳದೇ ಧ್ಯಾನವಾಯಿತು.

ಪ್ರೀತಿಯೆಂದರೆ ಏನು?  ಹೆಣ್ಣು-ಗಂಡು ತೀರ ಹತ್ತಿರ ಹತ್ತಿರ ಬರಬೇಕು.  ಮನಸ್ಸು ಮನಸ್ಸು ಕೂಡಬೇಕು.  ಭಾವನೆಗಳು ಎರಕಗೊಳ್ಳಬೇಕು.  ಹೃದಯಗಳು ಮಾತಾಡಬೇಕು.  ಜೊತೆ ಜೊತೆಯಾಗಿ ಹೋಟ್ಲು ಸಿನಿಮಾ, ಪಿಕ್‌ನಿಕ್ಕು ಪಾರ್ಕು ಒತ್ತಾಯಿಸಿದರೂ ಅವಳು ಹೊಟೇಲಿಗೆ ಬರಲಿಲ್ಲ.  ಏಕಾಂತದಲ್ಲಿ ಮಾತಾಡಬೇಕೆಂದರೆ ಪಾರ್ಕಿಗೂ ಬರಲಿಲ್ಲ.  ಎದುರಾದರೆ ಮಾತಾಡುವಳು.  ನಗುವಳು, ಬರೆದುಕೊಳ್ಳಲು ನೋಟ್ಸ್ ಕೊಡುವಳು.  ಪ್ರೀತಿಯ ವಿಷಯ ಮಾತಾಡಬೇಕೆನ್ನುವಷ್ಟರಲ್ಲಿ ಮಾಯೆಯಾಗಿ ಬಿಡುವಳು.  ಅಂತರಂಗದ ವಿಚಾರವಾದರೂ ಏನು!

ಒಂದಿನ ಅವನು ಅವಳನ್ನು ಹಿಡಿದು ನಿಲ್ಲಿಸಿಯೇ ಬಿಟ್ಟ.  ಎದೆ ಒಡೆದು ಕೊಳ್ಳುತ್ತಿದ್ದರೂ, ಮೈ ಬೆವರುತ್ತಿದ್ದರೂ ಧೈರ್ಯದಿಂದ "ಐ ಲವ್ ಯು" ಎಂದುಬಿಟ್ಟ.  ಆಕೆ ಪಕಪಕನೆ ನಕ್ಕು ಬಿಟ್ಟಳು.  "ಪ್ಲೀಸ್ ನೀವು ನಗಬೇಡಿ, ನಿಮ್ಮ ಅಭಿಪ್ರಾಯ ಹೇಳಿರಿ" ಗೋಗರೆದ ಅವನು.

"ನಾನೇಕೆ ಹೇಳಬೇಕು?"
"ನಾನು ನಿಮ್ಮನ್ನು ಪ್ರೀತಿಸುತ್ತೇನೆ."
"ಪ್ರೀತಿಸು ಅಂತ ಯಾರು ಹೇಳಿದರು?"

ವಿಚಲಿತನಾದರೂ ಹುಡುಗ ಸಾವರಿಸಿಕೊಂಡ:  "ಹೇಳಿಕೆಯಿಂದ ಪ್ರೀತಿ ಹುಟ್ಟುವುದಿಲ್ಲ.  ಅದು ಹೃದಯದ ಸೆಲೆ, ನಾನು ಮನಸಾರೆ ಪ್ರೀತಿಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ" ಎಂದ.

"ಅಂದರೆ ನನ್ನ ಜೀವನವನ್ನು ಹಾಳು ಮಾಡುವ ವಿಚಾರವೋ?" ಅವನ ಮೇಲಿನ ದೃಷ್ಟಿ ಹೊರಳಿಸದೆ ಕೇಳಿದಳು ಹುಡುಗಿ.

"ನೀವು ನನ್ನನ್ನು ಪ್ರೀತಿಸುವುದಿಲ್ಲವೆ?" ಗಲಿಬಿಲಿಗೊಳಗಾದ ಹುಡುಗ.

"ಹುಡುಗಿ ಸ್ಪಷ್ಟವಾಗಿ ಹೇಳಿದಳು"  "ರೀ ಮಿಸ್ಟರ್‍, ನಾನು ಕಾಲೇಜಿಗೆ ಬಂದದ್ದು ಕಲಿಯಲಿಕ್ಕೆ, ಭವಿಷ್ಯ ರೂಪಿಸಿಕೊಳ್ಳುವುದಕ್ಕೆ - ಪ್ರೀತಿ, ಪ್ರೇಮದ ಹುಡುಗಾಟಕ್ಕಲ್ಲ."

ಹುಡುಗನ ಮುಖದಲ್ಲಿ ಭ್ರಮೆಗಳ ಗುರುತು ಒಂದೂ ಕಾಣಿಸಲಿಲ್ಲ.

              *****

ಕೀಲಿಕರಣ: ಕಿಶೋರ್‍ ಚಂದ್ರ