ಕವೀಶ್ ಶೃಂಗೇರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವೀಶ್ ಶೃಂಗೇರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ತುಂತುರು ಸೋನೆಯಲ್ಲೊಂದು ಪ್ರೇಮಕಥೆ..

- ಕವೀಶ್ ಶ್ರಿಂಗೇರಿ

ಚಿತ್ರ: ರಾಂಗೋಪಾಲ್ ರಾಜಾರಾಮ್
ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂಡು.. ಭೂಮಿನ ನೋಡುತ್ತಾ.. ನಿಂತಿದ್ದಾನೆ! ಮೊಗ್ಗು ಹೂವಾಗಿ ತನ್ನ ಕಂಪನ್ನು ಸೂಸುತ್ತಿದೆ...! ಇಬ್ಬನಿಯು ಆ ಹೂವ ಎದೆಯನ್ನು ಚುಂಬಿಸಿ ತೃಪ್ತಿಯಾಗಿದೆ.  ದುಂಬಿಗಳು ಹೂವ ಮಧುವನ್ನು ಹೀರಲು ನಾ ಮುಂದು ತಾ ಮುಂದು ಎಂದು ಹಂಬಲಿಸುತ್ತಿವೆ. ಈ ಸಮಯದಲ್ಲಿ ಹೊಸದಿನಕ್ಕೆ ಸ್ವಾಗತ ಕೋರಲು, "ಶಾಂತಿ" ಮನೆಯ ಶ್ರೀ ತುಳಸಿಯ ಮುಂದೆ ಗುಡಿಸಿ, ಸಗಣಿಯಿಂದ ಸಾರಿಸಿ... ರಂಗವಲ್ಲಿ ಇಡುತ್ತಿದ್ದಾಳೆ! ಒಂದು ಸಂಸ್ಕೃತಿ... ಸಂಸ್ಕಾರ ಇರುವ ಮನೆತನ ಶಾಂತಿಯ ಕುಟುಂಬ. ಹೌದು ಇದು ಪಕ್ಕಾ ಮಲೆನಾಡಿನ ಅಂದರೆ ತೀರ್ಥಹಳ್ಳಿ ಅಂತ.. ಕೂಗಿ ಹೇಳಲೇಬೇಕಾಗಿಲ್ಲ...!

ಪ್ರತಿದಿನ ಬೆಳಗಾದ್ರೆ ಆಕೆಯ ದಿನ ಆರಂಭವಾಗುವುದೇ ಇಲ್ಲಿಂದ..! ಮನೆಮುಂದೆ ಗುಡಿಸಿ-ಸಾರಿಸಿ-ರಂಗವಲ್ಲಿ ಇಡೋದೆಂದ್ರೆ ಶಾಂತಿಗೆ ಎಲ್ಲಿಲ್ಲದ ಸಂಭ್ರಮ.  ಈ ಸಂಭ್ರಮಕ್ಕೆ ಕಾರಣ ಏನು ಗೊತ್ತಾ? ಇನ್ನೂ ೧೬-೧೭ ರ ಹರೆಯದ ಶಾಂತಿ ಮನೆಮುಂದೆ ರಂಗವಲ್ಲಿ ಇಡುವ ಸಮಯದಲ್ಲಿ ಪ್ರತಿ ದಿನವೂ ಹಾಲು ಮಾರುವ ಹುಡುಗ `ರಾಜೇಶ್' ಶಾಂತಿಯ ಮನೆ ಮುಂದೆ ಹಾದು ಹೋಗುವಾಗ ತನ್ನ ಸೈಕಲ್‌ನ ಬೆಲ್ ಅನ್ನು 'ಟ್ರಿಣ್' ಅನ್ನಿಸಿ ಇತ್ತ ಒಂದು ನಗೆ ಬೀರಿ, ಶಾಂತಿಯ ಉದ್ದನೆಯ ಜಡೆಯನ್ನು ನೋಡಿ ಅವಳ ಮಂದಹಾಸ ನಗೆಯನ್ನು ನಿರೀಕ್ಷಿಸಿ ನಂತರ ಆ ನಗೆಯ ದರುಶನ ಸಿಕ್ಕ ನಂತರವೇ ಅವನ ಹಾಲಿನ ಸೈಕಲ್ ಮುಂದೆ ಹೋಗುತ್ತಿತ್ತು.  ಅವನು ನಿರೀಕ್ಷಿಸಿದ ಆ ಮಂದಹಾಸ ನಗೆ ನಿರೀಕ್ಷಿಸಿದಂತೆಯೇ ಅವನಿಗೆ ದೊರೆಯುತ್ತಿತ್ತು ಆಹಾ! ಅದೃಷ್ಟ ಅಂದ್ರೆ ಇದೇ ರೀ...!

ರಾಜೇಶ್ ಹಾಲು ಮಾರಿ ಮತ್ತೆ ವಾಪಾಸ್ ಅವನ ಮನೆಗೆ ಹಿಂತಿರುಗುತ್ತಿರುವಾಗ ಶಾಂತಿ ಮನೆ ಮುಂದೆಯೇ ಹೋಗಬೇಕಾಗಿತ್ತು.  ಇದು ಅನಿವಾರ್ಯವಾದರೂ ಒಂಥರಾ ಅದೃಷ್ಟ. ಇರಲಿ ಅದರ ಬಗ್ಗೆ ನಮಗೇಕೆ ಹೊಟ್ಟೆ ಕಿಚ್ಚು...!  ಹೀಗೆ ರಾಜೇಶ್ ಶಾಂತಿ ಮನೆಮುಂದೆ ವಾಪಾಸ್ ಹೋಗುವಾಗಲೆಲ್ಲ ಅವನ ಹಾಲಿನ ಸೈಕಲ್ ಬೆಲ್ `ಟ್ರಿಣ್' ಅಂತ ತಪ್ಪದೇ ಹೊಡೆಯುತ್ತಿದ್ದ... ಅದೇ ಸಮಯದಲ್ಲಿ ಶಾಂತಿ ಮನೆಮುಂದೆ ಗಿಡದಿಂದ ಹೂವನ್ನು ಕೊಯುತ್ತಾ ನಿಂತಿರುತ್ತಿದ್ದಳು.  ಇಬ್ಬರ ಮುಖದಲ್ಲೂ ಮಂದಹಾಸ.. ಒಂಥರಾ ಖುಷಿ... ಎಲ್ಲಿ ಯಾರಾದ್ರೂ ನೋಡುತ್ತಾರೋ ಎಂಬ ಭಯ ಬೇರೆ...!  ಆಗ ಶಾಂತಿ ಮನಸಲ್ಲಿ ಅನಿಸಿದ್ದು ಹೀಗೆ...!

ಸುಮ್ಮನೆ.. ಸುಮ್ಮನೆ.. ಎದೆಯ ಒಳಗೇನೋ ಕಚಗುಳಿ.. ಮೆಲ್ಲನೆ ಹಾಗೇನೆ.. ಹೃದಯದೊಳಗೇನೋ ಚಿಲಿಪಿಲಿ..

ಮನಸು ಬಯಸಿದೆ ಹೊಂಗನಸು...
ಹೊಂಗನಸು ಬಯಸಿದೆ ಪಿಸುಮಾತು..
ಈ ವಯಸ್ಸೇ.. ಹೀಗೇನಾ...!
ಆ ರವಿಮಾಮ ದಿನವೂ ಭೂಮಿಯ ನೋಡಲು ಬಂದೇ ಬರುತ್ತಾನೆ...
ಈ ನನ್ನ ಮಾಮ ದಿನ ಬೆಳಗಾಗೋದನ್ನೇ ಕಾಯ್ತಾ ಇರುತಾನೆ...

ನನ್ನ ನೋಡಲು ಅವನಿಗೆ ಆತುರ....!
ಜೊತೆ ಮಾತಾಡಲು ಅವನಿಗೆ ಕಾತುರ....!
ಅನುರಾಗದ ಕಚಗುಳಿಯು ಹೀಗೇನಾ...!

ಪಾಪ ಆಗತಾನೆ ಒಂದು ಸುಂದರ ಪ್ರಪಂಚವನ್ನು ಹಂಬಲಿಸುತ್ತಾ ಆ ಹಾಡನ್ನು ಗುನುಗುವ ಆ ಶಾಂತಿಯ ಹೃದಯದಲ್ಲಿ `ಲಬ್-ಡಬ್' ಸದ್ದಿನ ಜೊತೆಗೆ `ಅನುರಾಗದ ಆಲಾಪನೆಯೂ' ಕೇಳಿ ಬರುತ್ತಿತ್ತು...

ಮರುದಿನ ಪಕ್ಕದ ಊರಿನ ಚಂದ್ರಣ್ಣ ಮನೆಯಲ್ಲಿ "ಸತ್ಯನಾರಾಯಣ ಪೂಜೆ" ಇತ್ತು.  ಶಾಂತಿ ಅಲ್ಲಿಗೆ ಹೋಗಿದ್ದಳು... ರಾಜೇಶನು ಅಲ್ಲಿಗೆ ಬಂದಿದ್ದ.. ಅಲ್ಲಿಗೆ ಬರುವ ವಿಷಯ ಪರಸ್ಪರರಿಗೂ ತಿಳಿದಿರಲಿಲ್ಲ.  ಇಷ್ಟಕ್ಕೂ ಇವರಿಬ್ಬರೂ ಇದುವರೆಗೂ ಒಂದು ಮಾತನ್ನು ಆಡಿಲ್ಲ.. !

ಅಲ್ಲಿ ಸತ್ಯನಾರಾಯಣ ಪೂಜೆನೂ ಆಯ್ತು.  ನಂತರ ಊಟದ ಸಮಯದಲ್ಲಿ ರಾಜೇಶ್ ಊಟವನ್ನು ಬಡಿಸಲು ತನ್ನ ಗೆಳೆಯರೊಂದಿಗೆ ಮುಂದಾದ.  ಅವನಿಗೆ ಎಲ್ಲಿಲ್ಲದ ಖುಷಿ.  ಶಾಂತಿಯು ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾಳೆ..  ಅವಳ ಜೊತೆಯಲ್ಲಿ ಅವಳ ಗೆಳತಿಯರೂ ಇದ್ದಾರೆ..  ರಾಜೇಶ್ ಊಟ ಬಡಿಸುತ್ತಿದ್ದಾನೆ.  ಅಲ್ಲಿ ನೆರೆದವರೆಲ್ಲರ ಕಣ್ಣು ಶಾಂತಿಯ ಮೇಲೆಯೇ.  ಕಾರಣ ಶಾಂತಿ ನಕ್ಕರೆ ಅವಳ ಮುಖದಲ್ಲಿ ಎಡಗಡೆ `ಗುಳಿಬೀಳುತ್ತಿತ್ತು'.  `ಗುಳಿಬಿದ್ದ' ಕೆನ್ನೆಯ ಹುಡುಗಿ ಶಾಂತಿಯ ನಗುವಿಗಾಗಿ ಹಂಬಲಿಸುತ್ತಿದ್ದವರು ಅದೆಷ್ಟೋ ಜನ...

ಇದೇ ಸಮಯದಲ್ಲಿ ಸಣ್ಣಗೆ ತುಂತುರು ಮಳೆ ಶುರುವಾಯಿತು... ಮಲೆನಾಡಿನ ಆ ಮಣ್ಣ ಕಂಪು... ತಂಗಾಳಿ... ಎಲ್ಲವೂ ಮತ್ತಷ್ಟು ಮೆರಗು ತಂದಂತ್ತಿತ್ತು..! ಶಾಂತಿಗೆ ಮಳೆಯಲ್ಲಿ ನೆನೆಯುವ ಆಸೆ.. ಆ ಮಳೆ ನೀರಿನೊಂದಿಗೆ ಆಟವಾಡುವ ಹಂಬಲ.  ರಾಜೇಶ್‌ಗೂ ಆ ತುಂತುರು ಸೋನೆಯ ಮಳೆಯಲ್ಲಿ ನೆನೆಯಬೇಕೆಂಬ ಆಸೆ... ಜೊತೆಗೆ ಕ್ಷಣ ಕ್ಷಣಕ್ಕೂ ಶಾಂತಿನಾ ನೋಡುತ್ತಾ ತನ್ನ ಕೈಯಲ್ಲಿ ತಲೆ ಬಾಚಿಕೊಳ್ಲುತ್ತಿದ್ದ.  ಅವನಿಗೆ ಆ ಕ್ಷಣದಲ್ಲಿ ಅವನ ಕಾಲುಗಳು ಭೂಮಿ ಮೇಲೆ ನಿಲ್ಲಲಾರದ ಸ್ಥಿತಿಯಲ್ಲಿ ಇದ್ದವು.... ಅಂದರೆ... ಅವನ ಮನಸಿನ ಭಾವನೆಗೆ ಅವನ ದೇಹವು ತಕಧಿಮಿ ಅನ್ನುತ್ತಿತ್ತು.. ಅದೇ ಅಲ್ವಾ ಪ್ರೇಮ ನಿವೇದನೆ...!

ಆ ಮಳೆಯಲ್ಲೆ ರಾಜೇಶ್ ಶಾಂತಿಯ ನೋಡಲೆಂದೇ ಕೆಲವು ಕೆಲಸಗಳನ್ನು ನೆನೆಯುತ್ತಲೇ ಮಾಡುತ್ತಿದ್ದ.  ಶಾಂತಿಗೂ ಅವನ ತಳಮಳ ಅರ್ಥವಾಗುತ್ತಿತ್ತು.  ಒಮ್ಮೊಮ್ಮೆ ಮುಗುಳ್ ನಗುತ್ತಿದ್ದಳು.. ಹಾಗೇ ತನ್ನನ್ನು ಯಾರಾದ್ರೂ ನೋಡುತ್ತಿದ್ದಾರಾ ಎಂದು ಒಮ್ಮೆ ಗಮನಿಸುತ್ತಿದ್ದಳು.  ಎಷ್ಟಾದ್ರೂ ಮಲೆನಾಡಿನ ಹೆಣ್ಣು ಮಕ್ಕಳಿಗೆ ಅವರ ಸೌಂದರ್ಯ ಪ್ರಜ್ಞೆಯ ಜೊತೆಗೆ ತಮ್ಮ ಇಮೇಜಿಗೆ ಎಲ್ಲಿ ತೊಂದರೆ ಆದೀತೋ ಎಂಬ ಭಯ ಮತ್ತು ಕಾಳಜಿಯೂ ಇರುತ್ತದೆ.

ಮಳೆ ಸ್ವಲ್ಪ ಕಡಿಮೆ ಆಯಿತು.. ಅಲ್ಲಿ ನೆರೆದವರೆಲ್ಲ ಹೊರಟಿದ್ದಾರೆ.  ಆದರೆ ರಾಜೇಶ್‌ಗೆ ಶಾಂತಿಯನ್ನು ಬಿಟ್ಟು ಹೊರಡಲು ಮನಸ್ಸೇ ಬರ್ತಿಲ್ಲ..! "ವೈದ್ಯರು ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು-ಅನ್ನ" ಎಂಬಂತೆ ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಮಳೆ ಶುರುವಾಯಿತು.  ತಥ್ ತೇರಿಕಿ..! ಅಲ್ಲಿ ಸತ್ಯ ನಾರಾಯಣ ಪೂಜೆಗೆ ಬಂದವರ ಪೈಕಿ ಉಳಿದವರು ಶಾಂತಿ ಮತ್ತು ರಾಜೇಶ್ ಹಾಗೂ ಶಾಂತಿಯ ಗೆಳತಿಯರು... ಇಲ್ಲಿದೆ ನೋಡಿ ತಳಮಳ.. ಕನ್‌ಫ್ಯೂಷನ್.. ಟೆನ್ ಷನ್... ಹಂಬಲ... ಎಲ್ಲ ಮಿಕ್ಸ್ ಆಗಿ ಇವರಿಬ್ಬರ ಅಂತರಂಗದ ಮೃದಂಗ.." ಧೀಂ ತಕಿಟ.. ತಕಿಟ....ಧೀಂ.. ತಕಿಟ ಎಂದಿತು.

ಹಿಂದಿನಿಂದ ಯಾರೋ ಕೂಗಿದರು. "ರಾಜೇಶ್ ಎಲ್ಲರಿಗೂ ಕಾಫಿಕೊಡು ಬಾ" ಅವರ್ಯಾರೋ ಮಾತಿನಂತೆ ರಾಜೇಶ್ ಎಲ್ಲರಿಗೂ ಕಾಫಿ ಕೊಡಲು ಮುಂದಾದ.  ಹಾಗೆಯೇ ಶಾಂತಿಯ ಬಳಿ ಹೋದಾಗ ಅವಳು ನಾಚುತ್ತ ಕಾಫಿ ಲೋಟ ತೆಗೆದುಕೊಂಡಳು.  ಇವನು ಶಾಂತಿಯ ಕಣ್ಣುಗಳನ್ನು ಅಲ್ಲೇ ಹತ್ತಿರದಿಂದ ಆಗಲೇ ನೋಡಿದ್ದು.  ಆಗಲೇ ಅಂದುಕೊಂಡ `ಹೆಣ್ಣೆ ನಿನ್ನ ಕಣ್ಣಿನಲ್ಲಿ ಅನುರಾಗದ ಆಲಾಪನೆ.. ಕಂಡೆನಾ" ಹಾಗಂತ ಆ ಕ್ಷಣದಲ್ಲಿ ತುಂಟತನದಿಂದ ಹಾಡಿದನು...!

ಈ ದಿನ ರಾಜೇಶ್ ಮತ್ತು ಶಾಂತಿ ಒಬ್ಬರನ್ನೊಬ್ಬರು ಪದೇಪದೇ ಕದ್ದು-ಕದ್ದು ನೋಡುತ್ತಿದ್ದುದನ್ನು ಶಾಂತಿಯ ಪಕ್ಕದ ಮನೆಯ ಅಂಕಲ್ ನೋಡಿಯೇ ಬಿಟ್ಟರು.  ಶಾಂತಿಯ ಜೊತೆಯಲ್ಲಿ ಆ ಪೂಜೆಗೆ ಬಂದಿದ್ದ ಗೆಳತಿಯರೆಲ್ಲಾ ಹೊರಡುವ ವೇಳೆಗೆ ಶಾಂತಿಯನ್ನು ಕೂಗಿದರು.  ಆಗ ಸ್ವಲ್ಪ ಮಳೆ ಕಡಿಮೆ ಆಗುತ್ತಿತ್ತು... ಅವರ ಮಾತಿನಂತೆ ಶಾಂತಿಯು ಅವರ ಜೊತೆಯಲ್ಲಿ ಹೊರಟಳು. ರಾಜೇಶ್ ಅಲ್ಲಿಯೇ ಶಾಂತಿಯನ್ನು ನೋಡುತ್ತ ನಿಂತಿದ್ದಾನೆ.

"ಮಳೆ ನಿಂತರೂ.. ಮರದ ಹನಿ ನಿಂತಿರಲಿಲ್ಲ.." ಇವರಿಬ್ಬರೂ ಒಬ್ಬರನ್ನೊಬ್ಬರು ಅಂದು ಕದ್ದು-ಕದ್ದು ನೋಡಿದ್ದು ..ಊಟ ಬಡಿಸಿದ್ದು, ಕಾಫಿ ಕೊಟ್ಟಿದ್ದು, ಹಾಡು ಹೇಳಿದ್ದು ಎಲ್ಲಾ ಈಗ ರಾಜೇಶ್ ಮತ್ತು ಶಾಂತಿ ಎದೆಯಲ್ಲಿ ತಕಧಿಮಿ ಹಾಡಿ ಕುಣಿಯಲು ಶುರುವಾಯಿತು.

-ಇಂತಿ "ಎಳೆಯ ಹೃದಯಗಳಿಗೆ ಪ್ರೀತಿಯ ಅಮೃತ ಉಣಿಸುವ"


"If you miss one issue of my Bhavayaana
You will lose lots of feelings in your life Bhavayaana"
                                                                                                          By Kavish Sringeri
                              *****
ಕೀಲಿಕರಣ: ಕವೀಶ್ ಶ್ರಿಂಗೇರಿ

ಭಾವಯಾನ

-ಕವೀಶ್ ಶೃಂಗೇರಿ

ಪ್ರೀತಿಯ ಮಾತು...
ಲವ್ವಲ್ ಹಿಂಗೇನೆ...
ಪ್ರೇಮವೆಂದರೆ ಹೇಳಲು ಬಯಸಿ, ಹೇಳಲು ಆಗದ ಮಧುರ ಭಾವನೆ... ಮಧುರ ಯೋಚನೆ... ಅರ್ಪಣೆ... ಸಮರ್ಪಣೆಯ ಸೂಚನೆ. L..o..v..e.. ಎಂಬುದು A to Z ಕನಸುಗಳ ಸಾಗರವೇ ಆಗಿದೆ.

ನನಗೆ ಬರುತ್ತಿರುವ ಓದುಗರ ಹಾಗೂ ಸ್ನೇಹಿತರ ದೂರವಾಣಿ ಕರೆಗಳಲ್ಲಿ ಕೇಳುವ ಪ್ರಶ್ನೇ ಒಂದೇ...! “ನೀವ್ ಯಾಕೆ ಪ್ರೀತಿ ಬಗ್ಗೆನೇ ಬರೀತೀರಾ ? ಬೇರೆನೂ ಗೊತ್ತಿಲ್ವ...” ಎಂದು. ಅದಕ್ಕೆ ನನ್ನಿಂದ ಬಂದ ಉತ್ತರ “ಪ್ರೀತಿ ನಿರಂತರ - Love is eternal”. ಪ್ರತಿ ದಿನ, ಪ್ರತಿ ಕ್ಷಣ ಪ್ರೀತಿನ ಬಿಟ್ಟು ಈ ಬದುಕಿಲ್ಲಾ. ಈ ಪ್ರಪಂಚದ ಸೃಷ್ಟಿಯ ಉಸಿರಾಟನೇ ಪ್ರೀತಿ. ಮೊಗ್ಗು ಹೂವಾಗೋದು - ಹೂ ಕಂಪನ್ನು ಸೂಸುವುದು - ಹೂ ದುಂಬಿಯ ಸೆಳೆಯುವುದು - ಹಸು ಕರುವಿಗೆ ಹಾಲುಣಿಸುವುದು - ಚಿಗುರು - ಇಬ್ಬನಿ - ಹಸಿರು - ಗಾಳಿ ಎಲ್ಲವೂ ಪ್ರೀತಿನಾ ಅವಲಂಬಿಸಿ ಬದುಕುತ್ತಿರುವುದು. ಇವೆಲ್ಲದರ ಉಸಿರಾಟನೇ ಪ್ರೀತಿ... So, Love is one of the part of our life.

| ಯುಗ ಯುಗಗಳು ಕಳೆದರೂ |
| ಹಲವು ಜನುಮ ಕಳೆದರೂ
| ಓದಿ ಮುಗಿಸದ ಗ್ರಂಥ ಪ್ರೇಮ |
| ಹಾಡಿ ಮುಗಿಸದ ಗೀತೆ ಪ್ರೇಮ |
| ಎಂದೂ ಮುಗಿಯದ ಪಯಣ ಒಂದು ಗೂಡುವ ತಾಣ ಪ್ರೀತಿ ||

ಹದಿನಾರು ವರ್ಷ ಕಾದುನಿಂತು, ಹದಿನೇಳಕ್ಕೆ ಹೇಳಿ ಬಿಡಬೇಕು ಎಂದುಕೊಳ್ಳುವ ಈ ಪ್ರೀತಿ - ಅದನ್ನು ಎಂದಿಗೂ ಹೇಳಲು ಆಗದೇ, ಅದು ಎಲ್ಲಿ ಹುಟ್ಟಿತೋ- ಅಲ್ಲೇ ಆ ಪ್ರೀತಿ ಕೊರಗಿ ಸಾಯುವ ಸ್ಥಿತಿಯನ್ನು, ನಾನು ಕೆಲವರಲ್ಲಿ ನೋಡಿದ್ದೇನೆ. ಆಗ ಒಳಗೊಳಗೆ ಅಳುವುದು ಆ ಪಾಪಿ ಹೃದಯ..! ಇನ್ನೂ ಕೆಲವು ವ್ಯಕ್ತಿಗಳು ಏನಾದರೂ ಸಾಹಸ ಮಾಡಿ ಇಷ್ಟ ಪಟ್ಟ ಪ್ರೀತಿಯನ್ನು ಪಡೆದುಕೊಳ್ಳಲು ಹೋಗಿ ಯಾವುದಾದರು ಎಡವಟ್ಟುಮಾಡಿಕೊಂಡು ಎಲ್ಲರ ಕಣ್ಣಲ್ಲು ನೀರು ಹಾಕಿಸಿ ಬಿಡುತ್ತಾರೆ. ಪ್ರೀತಿ ಎನ್ನುವ ಈ ಎರಡು ಅಕ್ಷರ ಕೇಳೋಕೆ ಮುದ್ದಾಗಿದ್ದರೂ, ಮುಗ್ಧ ಮನಸ್ಸುಗಳನ್ನು ತನ್ನಿಷ್ಟದಂತೆ ಆಳಿ, ಅಳುವವರೆಗೂ ಬಿಡುವುದಿಲ್ಲ. ನಂತರ ಇದಕ್ಕೆಲ್ಲಾ ಕಾರಣಕೊಟ್ಟು ದೂರುವುದು ವಿಧಿ ಹಣೆಬರಹವನ್ನಾ...

ಹ್ಞೂಂ ॒ಜಗತ್ತೇ ಬೆರಗಾಗುವ ಹಾಗೆ.., ಈ ಕಾಲನೇ ತಿರುಗಿ ನೋಡುವ ಹಾಗೆ, ಇತಿಹಾಸ ಆಗಿ ಹೋಗಿರೊ ಪ್ರೇಮಿಗಳ ಕಥೆ, ಕಣ್ಣಲ್ಲಿ ನೀರೂರಿಸಿದ್ದರು - ಅದೆವು ಸತ್ಯ, ಇಂದಿಗೂ ಜೀವಂತವೇ ॒ಈ ಪ್ರೀತಿನೇ ಹಾಗೆ, ಬೇಡ ಬೇಡ ಅಂತಾನೆ ಪ್ರೀತಿಯ ಅಮೃತ ಸವಿಯುತ್ತೀವಿ, ಆಮೇಲೆ ಬೇಕು ಅಂದರೂ ಬಾರದ ಸಾವನ್ನು ಬೈದುಕೊಂಡು ಸುಮ್ಮನಾಗುವ ಪರಿಯೇ ಹೀಗೆ ॒
ಒಂಥರಾ ಹಿತಕರ ಮಿಡಿತ... ಯಾರು ತಡೆಯದ ತುಡಿತ... ಏನೇನೋ ಹುಡುಕುವ ತವಕ... ಮೈಮನಗಳ ಈ ಪುಳಕ, ಅನುಭವಕ್ಕೆ ಮಾತ್ರ ನಿಲುಕುವ ಕೋಮಲ ಕಲ್ಪನೆ. ಈ ಪ್ರೀತಿಲೀ ಮಾಡಿದ್ದೆಲ್ಲವೂ ಸರಿಯೇ ಅನಿಸುವಷ್ಟು ಭ್ರಮೆಯ ಲೋಕಕ್ಕೆ ನಮ್ಮನ್ನು ಕರೆದೊಯ್ದು, ಆ ಭ್ರಮೆಯ ದಾರಿಯಲ್ಲೇ ಕೊಂಚ ಸಾಗುತ್ತಿರುವಾಗ ಆ ದಾರಿಯು ಬಂದು ಸೇರುವ ತಾಣವೇ ವಾಸ್ತವದ ಪ್ರಪಂಚ.

ಮನಸ್ಸುಗಳ ಮಂಥನ ಮಿಲನದ ಚಿಂತನ ಹೃದಯದ ಸ್ಪಂದನ॒ ಬಿಡಿಸದ ಬಂಧನ ಈ ಪ್ರೇಮ. ಈ ಪ್ರೀತಿಯ ಬಗ್ಗೆ ಬರೆಯುವುದಕ್ಕೂ ಚಂದ... ಓದುವುದಕ್ಕೂ ಚಂದ... ಹಾಡುವುದಕ್ಕೂ ಚಂದ... ಒಬ್ಬರ ಹೆಸರನ್ನು ಮತ್ತೊಬ್ಬರ ಹೆಸರಿಗೆ ಸೇರಿಸಿ ಅಂಗೈಯಲ್ಲಿ ಬರೆಯೋದು ಚಂದ. ಇಲ್ಲಿ ಒಬ್ಬರನ್ನೊಬ್ಬರು ಕದ್ದು ನೋಡುವ ಪರಿಯಂತು ಅಂದವೋ ಆನಂದ. ಒಂದಿಷ್ಟು ಹುಸಿಮುನಿಸುಗಳು ಮತ್ತಷ್ಟು ಹೊಂಗನಸುಗಳು ಇವೆಲ್ಲವು ಪ್ರೀತಿಯ ಭಾವನೆಗಳ ಬಲೆಯ ಒಂದು ಸುಂದರ ಪ್ರಪಂಚ. ಆದರೆ ಆ ಭಾವನೆಯೆಂಬ ಬಲೆಯಿಂದ ಈಚೆಗೆ ಮತ್ತೆ ಬರುವುದು ಕಷ್ಟ ಸಾಧ್ಯ.

ವಯಸ್ಸು ಇದು ಹಾಗೇನೆ, ಇದರ ವರಸೆಗೆ ಪ್ರತಿಯೊಬ್ಬರೂ ಸೋಲುತ್ತಾರೆ. ಒಮ್ಮೆ ಪ್ರೇಮಿ ಪ್ರೀತಿಯಲ್ಲಿ ಬಿದ್ದರೆ ‘ಸಪ್ತಸಾಗರ ದಾಟು’ ಎಂದರೂ ದಾಟುತ್ತಾನೆ ಅಂತ ಕವಿಗಳೇ ನುಡಿದಿದ್ದಾರೆ. ಏನೇ ಆದರೂ ಮನಸ್ಸಲ್ಲಿ ಮೂಡಿದ ಭಾವನೆ ಮಾತಾಗಿ ತುಟಿ ಮೇಲೆ ಬಂದು ನಿಂತಾಗ, ನಾಲಿಗೆಯ ಸಪೋರ್ಟ್ ತಗೊಂಡು “ನೀನಂದ್ರೇ ನನಗೆ ಇಷ್ಟ” ಅಂತ ಹೇಳೋದು ಪ್ರೀತಿಯ ಒಂದು ರೀತಿ...

ಮೊದಲನೇ ಬಾರಿಗೆ ಒಂದು ಹುಡುಗಿ ಫೋನ್ ಮಾಡಿ ‘I Love You’ ಎಂದಾಗ ಆಗುವ ಭಯ..! ಆ ನಡುಕ..! ಒಂದು ವಾರವಾದರೂ ಸುಧಾರಿಸಿಕೊಳ್ಳುವುದು ಕಷ್ಟವೇ ಬಿಡಿ. ನಂತರ ಅವರ ‘I Love You’ ಎಂದಿದಕ್ಕೆ ನಾವು ಉತ್ತರಿಸುವುದೋ... ಅಥವಾ ಬುದ್ಧಿ ಹೇಳುವುದೋ... ಅಥವಾ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವುದೋ... ಅಪ್ಪಿಕೊಳ್ಳುವುದೋ ತಿಳಿಯದೇ ಫೋನ್ ಕಟ್ ಮಾಡುವ ಪರಿಯಂತೊ ಒಂಥರಾ ಬಲವಂತದ ಆತ್ಯಾಚಾರವೇ.

ಚೊಚ್ಚಲ ಪ್ರೇಮದ ಬೆಚ್ಚನೆಯ ಭಾವವು ಎದೆಗೆ ಇಡುವ ಕಚಗುಳಿಯೇ ಹೀಗೆ. ಒಂದ್ಸರಿ ನೋಡ್ಬೇಕು ಮತ್ತೆ ನೋಡ್ಬೇಕು ಮತ್ತೆ ಮತ್ತೆ ಪ್ರೇಯಸಿನ ಮಾತಾಡಿಸಬೇಕು ಅನ್ಸೋದೇ ಚೊಚ್ಚಲ ಪ್ರೇಮಿಯ ಬಯಕೆ. ಈ ಪ್ರೀತಿಯಲ್ಲಿ Jealousy , ನನ್ಗೆ ಬೇಕು ಅನ್ನೋ Possessiveness - ಎಲ್ಲಾನೂ ಇದೆ. ಎಲ್ಲವನ್ನೂ ಸೆಳೆಯುವುದು - ಎಲ್ಲರನ್ನೂ ಗೆಲ್ಲುವುದು ಈ ಪ್ರೀತಿಯ ಹಣೆಬರಹ. ಆದರೆ ಇಲ್ಲಿ ಪ್ರೀತಿಸೋ ಹೊರಟ ಪ್ರೇಮಿಗಳಲ್ಲಿ ಕೆಲವರು ಗೆಲ್ಲುತ್ತಾರೆ ಇನ್ನೂ ಕೆಲವರು ಯಾಮಾರುತ್ತಾರೆ.

ಇಲ್ಲಿ ಪ್ರೀತಿಸುವ ಪ್ರೇಮಿಗಳು ಅದೆಷ್ಟೋ ಜನ, ಕೆಲವರು ಪ್ರಮಾಣಿಕವಾಗಿ, ಕೆಲವರು ಕಾಟಾಚಾರಕ್ಕೆ, ಕೆಲವರು ಕಷ್ಟವಾದರೂ ಪ್ರೀತಿನಾ ಇಷ್ಟ ಪಟ್ಟು ಪಡೆದುಕೊಳ್ಳುತ್ತಾರೆ. ಆದರೆ ಇಲ್ಲಿ ಶೇ.೧೦೦ಕ್ಕೆ ೧೦ ಜನ ಯಶಸ್ಸು ಕಾಣುತ್ತಾರೆ, ಉಳಿದವರ ಪ್ರೇಮಕಥೆಗಳಿಗೆ ಯಾರ್‍ಯಾರೋ ಅಂತ್ಯ ಬರೆಯುತ್ತಾರೆ. ಈ ಜಗತ್ತಿನಲ್ಲಿ ಒಳ್ಳೆಯ ಶಕ್ತಿ ಇದ್ದಷ್ಟೇ ಕೆಟ್ಟ ಶಕ್ತಿಗಳೂ ಇವೆ. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸುವುದನ್ನು ಕಲಿತರೆ “ಒಲವೇ ಜೀವನ ಸಾಕ್ಷಾತ್ಕಾರ ” .
“If you miss one issue of my Bhavayaana
You will lose lots of feelings in your life Bhavayaana”
                                                                       - Kavish Sringeri