ತಾರಿಣಿ ಶುಭದಾಯಿನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತಾರಿಣಿ ಶುಭದಾಯಿನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

`ಕಾಯಮಾಯದ ಹಾಡು' - ದೇಸಿಯ ಹೊಸ ಭಾಷ್ಯ

- ತಾರಿಣಿ ಶುಭದಾಯಿನಿ

ಎಸ್.ಜಿ.ಸಿದ್ದರಾಮಯ್ಯನವರ ಕಾವ್ಯ ಹುಟ್ಟುವುದು ದೇಸಿದಿಬ್ಬದಲ್ಲಿ. ಅದು ಉಸಿರಾಡುವುದು ಅಲ್ಲಿನ ಗಾಳಿಯನ್ನೆ. ಹೀಗೆ ನೆಲಮೂಲವನ್ನು ನೆಚ್ಚಿಕೊಂಡು ಬರೆಯುವ ಕವಿ ಅವರಾಗಿರುವುದರಿಂದ ತಮ್ಮ ಸಮಕಾಲೀನರಿಗಿಂತ ಭಿನ್ನರಾಗಿ ಕಾಣುತ್ತಾರೆ.  ಮೇಲುನೋಟಕ್ಕೆ ಅವರ ಕಾವ್ಯ ಹಳ್ಳಿಗಾಡಿನ ಕೃಷಿಯ, ಅನುಭಾವದ ಸುತ್ತ ತಿರುಗಾಡುತ್ತಿರುವಂತೆ ಕಾಣಿಸಿದರೂ, ಅದರಲ್ಲಿ ನಿರೂಪಿತವಾಗುವ ನೆಲಮೂಲದ ತಾತ್ತ್ವಿಕತೆಯು ಭಿನ್ನ ಸಾಧ್ಯತೆಗಳ ಇರುವನ್ನು ಸೂಚಿಸುವಂತಿದೆ.

ಸಿದ್ದರಾಮಯ್ಯನವರು ನೆಲಮೂಲಕ್ಕೆ ಕೊಡಮಾಡಿಕೊಂಡಂತೆ ಕಾಣುವಾಗ ಅವರ ಕಾವ್ಯ ಎತ್ತಿಕೊಳ್ಳುವ ನೆಲಸಂಸ್ಕೃತಿಯ ಸಂಗತಿ ಕೆಲವು ಪ್ರಶ್ನೆಗಳನ್ನು ಮುಂದಿಡುತ್ತವೆ.  ಸಮಕಾಲೀನ ಸಂದರ್ಭದಲ್ಲಿ ದೇಸಿಯತೆಯ ಕೂಗು ಜೋರಾಗಿಯೇ ಕೇಳುತ್ತಿರುವಾಗ ಈ ಕವಿ ಯಾವ ನೆಲೆಯಲ್ಲಿ ದೇಸಿಯನ್ನು ಗ್ರಹಿಸುತ್ತಾರೆ ಮತ್ತು ಯಾವ ರೀತಿಯ ತಾತ್ತ್ವಿಕ ನಿಲುವನ್ನು ಪ್ರಕಟಿಸುತ್ತಾರೆ ಎಂಬುದನ್ನು ಮುಖ್ಯವಾಗಿ ಗ್ರಹಿಸಬೇಕಾಗುತ್ತದೆ.

ದೇಸಿಯ ಮಾತು ಕನ್ನಡದ ಸಂದರ್ಭದಲ್ಲಿ ವಿಶೇಷವಾಗಿಯೇ ನಿರ್ವಚನಗೊಳ್ಳುತ್ತ ಬರುತ್ತದೆ ಎಂಬುದು ಕನ್ನಡ ಕಾವ್ಯದ ಓದುಗರಿಗೆ ತಿಳಿದ ವಿಷಯ. ಮಾರ್ಗಕಾವ್ಯಗಳಲ್ಲಿ ಇರುವ ದೇಸಿ ವಚನಕಾರರಲ್ಲಿ ಇನ್ನಷ್ಟು, ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯ ಮಟ್ಟಿಗೆ ಅದು ಗುಪ್ತಗಾಮಿನಿಯಾಗಿ ಚಲನಶೀಲ ಗುಣವನ್ನು ತೋರುತ್ತಲೇ ಬಂದಿದೆ.  ಅಂದರೆ ದೇಸಿಯು ಕ್ರಿಯಾಶೀಲತೆಯ ಸಂಕೇತವೂ, ಅರಿವಿನ ಪ್ರಕ್ರಿಯೆಯೂ ಆಗಿದೆ ಎನ್ನಬಹುದು. ಅರಿವು ಎಂಬುದು ಒಳಗು ಹೊರಗು ಎರಡಕ್ಕು ಸಂಬಂಧಿಸಿದ ಪ್ರಕ್ರಿಯೆ.  ಇನ್ನೂ ಹಿಗ್ಗಿಸಿ ಹೇಳುವುದಾದರೆ, ನಿಜದನೆಲೆಯ ಹುಡುಕಾಟ;  ಸಹಜತೆಯ ಹುಡುಕಾಟ.

ಸಂಸ್ಕೃತಿ, ಪ್ರಭುತ್ವಗಳು ಜಡ್ಡುಗಟ್ಟಿದಾಗಲೆಲ್ಲ ಸಮುದಾಯಗಳಲ್ಲಿ ಒಳದಾರಿಯ ಹುಡುಕಾಟ ನಡೆಯುತ್ತಿರುತ್ತದೆ.  ಅದರಲ್ಲೂ ಸಂಸ್ಕೃತಿ, ಪ್ರಭುತ್ವಗಳ ಪ್ರತಿಗಾಮಿಧೋರಣೆಗಳನ್ನು ತಳೆದಾಗ, ಜೀವವಿರೋಧಿಯಾದಾಗ ಈ ಹುಡುಕಾಟ ಇನ್ನಷ್ಟು ಗಟ್ಟಿಯಾಗುತ್ತದೆ.  ತಂತಮ್ಮ ಜೀವರಕ್ಷಣೆಯ ವಿಷಯದಲ್ಲಿ ಎಲ್ಲ ಜೀವಿಗಳು ಇದು.  ದೇಸಿಯು ಕ್ರಿಯಾಶೀಲವಾಗುವುದೂ ಹೀಗೆಯೇ. ಜನಪದವು ತನ್ನನ್ನು ತಾನು ಕಾಯ್ದುಕೊಳ್ಳಲೆಂದು ಹೂಡವ ಒಳಬಂಡಾಯದ ರಕ್ಷಣಾತಂತ್ರ ಎಂದು ಇದನ್ನು ಕರೆಯಬಹುದು. ಈ ಪ್ರಕಿಯೆಯಾದರೋ ಎದ್ದು ಕಾಣುವಂತದಲ್ಲ.  ವ್ಯವಸ್ಥೆಯ, ಪ್ರಭುತ್ವದ ಅಥವಾ ಸಂಸ್ಕೃತಿಯ ಆಡಂಬರದ ಮಾದರಿಗಳಿಗೆ ಪ್ರತಿಯಾಗಿ ಒಳಗಿನ ಸಾಮಾನ್ಯತಾ ಸತ್ವವನ್ನು ಉದ್ದೀಪಿಸಿಕೊಂಡು ನಿಲ್ಲುವುದನ್ನು ಇಲ್ಲಿ ಗಮನಿಸಬಹುದು.  ಒಂದೆಡೆಯಿಂದ ತನ್ನೊಳಗನ್ನು ನೋಡಿಕೊಳ್ಳುವ ಪರಿಯೂ ಇನ್ನೊಂದೆಡೆ ಸ್ವಾಭಿಮಾನದ ಸಂಕೇತವೂ ಆಗಿ ಕಾಣುವ ದೇಸಿಯು ಸಾಧಾರಣೀಕರಣವನ್ನೇ ತನ್ನ ಹೆಗ್ಗುರುತನ್ನಾಗಿ ಮಾಡಿಕೊಂಡಿರುತ್ತದೆ.  ಸಾಧಾರಣ ಎನಿಸುವ ಸಂಗತಿಗಳ ಅಡಿಯಲ್ಲಿಯೇ ಸ್ವಂತಿಕೆಯನ್ನು ರೂಪಿಸಿಕೊಂಡು ಭಾಷೆ, ಸಂಸ್ಕೃತಿಗಳನ್ನು ಪುನರ್ರಚನೆ ಮಾಡಿಕೊಳ್ಳುವ ಮತ್ತು ಅದರಿಂದ ಸಂರಚನೆಗಳನ್ನು ವಿಭಿನ್ನವಾದ ಒಳನೋಟಗಳಿ೦ದ ಕಂಡುಕೊಳ್ಳುವ ರೀತಿ ಅದು.

ಈ ಬಗೆಯಲ್ಲಿ ಸಹಜವಾಗಿಯೇ ದ್ವಂದ್ವಭಾವವಿರುತ್ತದೆ. ನಾನೆಂಬುದಿದ್ದರೆ ನೀನೆಂಬುದೂ ಇರಲೇಬೇಕು ಎಂಬಂತೆ.  ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಹುಟ್ಟಿದ ಸ್ವದೇಶಿ ಪರಿಕಲ್ಪನೆಯು ವಿದೇಶಿ ಎಂಬುದಕ್ಕೆ ದ್ವಂದ್ವಭಾವವಾಗಿ ಹುಟ್ಟಿದ್ದು.  ಆನಂತರದ ಆಧುನಿಕತೆಯ ಪರಿಕಲ್ಪನೆಯಲ್ಲಿ ಆಧುನಿಕತೆಯೆನ್ನುವುದು ಅರ್ಬನ್‍ಗೆ ಸಂವಾದಿಯಾಗಿ ನಿಂತು ಒಂದು ಹಳ್ಳಗಾಡಿನ ಸಮಾಜಕ್ಕೆ ಎದುರು ನೆಲೆಯಾಗಿರುವುದನ್ನು ಕಾಣಬಹುದು. ಇಂದಿನ ಜಾಗತೀಕರಣದ ಕಾಲದಲ್ಲಿ ದೇಸಿಯ ಭಾವವು ಹುಟ್ಟಿಕೊಳ್ಳುವುದು ಒಂದು ವಿರೋಧಿ ನೆಲೆಯಲ್ಲಿಯೇ.  ಆಧುನಿಕತೆಯ ನೆಲೆ ಪೂರ್ವಪಶ್ಚಿಮವನ್ನು ಇನ್ನಷ್ಟು ಗೆರೆ ಕೊರೆದಂತೆ ಮಾನದ೦ಡಗಳನ್ನು ರೂಪಿಸಿಕೊಳ್ಳುವಂತೆ ಕಾಣುವಾಗ ಸ್ವದೇಶಿ ವಿದೇಶಿ ವಿಂಗಡಣೆಗಳು ಸಹಜವಾಗಿಯೇ ದ್ವಂದ್ವನೆಲೆಗಳಾಗಿ ಬರುತ್ತವೆ.  ಸಿದ್ದರಾಮಯ್ಯನವರಂತಹ ಕವಿ ದೇಸಿಯನ್ನು ಒಪ್ಪುವಾಗ ಇಂಥ ದ್ವಂದ್ವಗಳ ಅಲುಗನ್ನು ಹಾಯಲೇಬೇಕು.  ಇದರಂತೆ ಅವರ ಕವಿತೆಗಳಲ್ಲಿ ಕೆಲವಾದರೂ ಪೂರ್ವ-ಪಶ್ಚಿಮ, ನಗರ-ಹಳ್ಳಿಗಳ ದ್ವಂದ್ವವನ್ನು ವ್ಯಕ್ತಪಡಿಸುತ್ತವೆ.  ಅವುಗಳ ಧೋರಣೆಯು ಕವಿಯ ನಿಲುವಿಗೆ ಬದ್ಧವಾಗಿರುವಂತೆ ಇರುವುದು ಗಮನಾರ್ಹ.

`ಗಿಡುಗ ಮತ್ತು ಎರೆಹುಳ' ಕವಿತೆ `ಕಾಯಮಾಯದ ಹಾಡು' ಸ೦ಕಲನದಲ್ಲಿ ಕಾಣುವ ಕವಿತೆ.  ಅಲ್ಲಿ ಕಾಣುವ ದ್ವಂದ್ವಭಾವ ನೋಡಬೇಕು. ಗಿಡುಗವು ಪಂಚರಂಗಿ ಬಣ್ಣದ್ದು, ಪಶ್ಚಿಮದಿಂದ ಹಾರಿ `ರವರವ್ವನೆ' ಹಾರಿ ಬರುತ್ತಿದೆ.  ಅದಕ್ಕೆ ಎದುರಾಗಿ ಸಾಧಾರಣವೆನಿಸುವ, ಮಣ್ಣನ್ನು ನಂಬಿ ಬದುಕುವ ಎರೆಹುಳ ಇದೆ.  ಅಲ್ಲಿ ಒಂದು ಪ್ರಶ್ನೆಯಿದೆ- ಯಾರಲಾ ಯಾರಲಾ! ನೆಲದ ವಾರಸು ಯಾರಲಾ? ಎಂಬುದು.  ಅದರ ದನಿಯು ಈ ಸಲದ ಹಕ್ಕು, ವಾರಸುದಾರಿಕೆ ಖಂಡಿತವಾಗಿಯೂ ಎರೆಹುಳಕ್ಕೆ ದಕ್ಕಬೇಕೆನ್ನುವ ಪಕ್ಷಪಾತಿ ನಿಲುವನ್ನು ಹೊಂದಿದಂತಿದೆ.  ಅದೇ ಕವನದ ಮುಂದಿನ ಭಾಗದಲ್ಲಿ, `ಬಣ್ಣದ ಬೆಡಗಿನ | ಪೂರ್ವದ ಜೀವಜಾತಗಳೆಲ್ಲ ಮಾತು ಕಳೆದವು' ಎಂದು ಹೇಳಿರುವುದು ಸಹ ಪೂರ್ವದ ಪರವನ್ನೇ ಸೂಚಿಸುವಂತಿದೆ.

ಈ ದ್ವಂದ್ವಗಳ ಇರವನ್ನು ಒಪ್ಪಿಕೊಳ್ಳುತ್ತಲೇ ಅಲ್ಲಿರುವ ಬಿಕ್ಕಟ್ಟನ್ನು ನೋಡಬೇಕು.  ಯಾವುದಾದರೊಂದು ನಿಲುವನ್ನು ಬೆಂಬಲಿಸಿ ನಿಂತರೂ ಅದಕ್ಕೇ ಬಾಧ್ಯಸ್ಥನಾಗಬೇಕಾದ ಅನಿವಾರ್ಯತೆ ಉಂಟಾಗುವುದಲ್ಲದೆ ತನ್ನ ಆಯ್ಕೆಯ ಸತ್ವಶೀಲತೆಯನ್ನು ಪರೀಕ್ಷೆಗೊಡ್ಡಬೇಕಾದ ಪರಿಸ್ಥಿತಿಗೆ ಕವಿ ಸಿಲುಕುತ್ತಾನೆ.  ಇದು ಅವನ ಸವಾಲು ಕೂಡ.

`ಈಗಾಗಲೇ ಹೇಳಿದಂತೆ ಸಿದ್ದರಾಮಯ್ಯನವರ ಕಾವ್ಯವು ಕೇಂದ್ರೀಕೃತವಾಗುವುದು ದೇಸಿದಿಬ್ಬದಲ್ಲಿ- ದೇಸಿಯೆಂದರೆ ಒಂದು ಜೀವನಕ್ರಮವೆಂದು ನಿರ್ವಚನ
ಮಾಡಿಕೊಳ್ಳುವಾಗ ಅದು ರೈತಾಪಿವರ್ಗದ ಜೀವನ ಕ್ರಮವೆಂದು ಅವರು ಭಾವಿಸುತ್ತಾರೆ.  ರೈತಾಪಿ ವರ್ಗವು ಜಾಗತೀಕರಣದ ಅಪಾಯಗಳಿಗೆ ಬದುಕನ್ನು ಒಡ್ಡಿಕೊ೦ಡಿರುವ ಸಂದರ್ಭದಲ್ಲಿ ಅದರ ಅಳಿವು ಕಂಗೆಡಿಸುವ ಅಂಶ.  ಇದನ್ನು ಪರಿಗಣಿಸುತ್ತಲೇ ಜಾಗತೀಕರಣದ ಸವಾಲುಗಳಿಗೆ ದೇಸಿದಿಬ್ಬದ ಸಾಮನ್ಯತಾ ಸತ್ವಗಳನ್ನು ಮುಂದಿಡುತ್ತದೆ ಸಿದ್ದರಾಮಯ್ಯನವರ ಕಾವ್ಯ. ಜಾಗತೀಕರಣ ಪರ್ಯಾಯ ನೆಲೆಗಳಲ್ಲಿ ಉತ್ತರ ಹುಡುಕುವ ಸಂದರ್ಭದಲ್ಲಿ ದೇಸಿಯತೆಯಲ್ಲಿ ಗೋಚರಿಸುವ ಸತ್ವಶೀಲ ಉತ್ತರಗಳು ರಾಜಕೀಯ, ಸಾಂಸ್ಕೃತಿಕ ನೆಲೆಗಳನ್ನು ಪುನರ್ರ್‍ಅಚಿಸಬಹುದೆಂಬ ಆಶಯವನ್ನೂ ಅದು ವ್ಯಕಪಡಿಸುತ್ತದೆ.

ನೆಲಮೂಲದ ಕಲ್ಪನೆಯು ವ್ಯವಸಾಯದ ಬದುಕನ್ನು ಬಿಟ್ಟು ರೂ‌ಪುಗೊಳ್ಳುವಂತದ್ದಲ್ಲ.  ಇಂದು ನಶಿಸುತ್ತಿರುವ ಜೀವಸಂಕುಲಗಳನ್ನು ಜೀವ ವಿಜ್ಞಾನಿಗಳು
ಪಟ್ಟಿ ಮಾಡುತ್ತಿರುತ್ತಾರೆ. ಅದರೊಳಗೆ ರೈತನೆಂಬ ಜೀವಿಯೂ ಸೇರಿಕೊಳ್ಳುವ ಕಾಲ ಬರುತ್ತಿದೆ.  ಈ ಆತಂಕ ಸ್ವಷ್ಟಿಯಾದರೆ ಅವನನ್ನು ನಂಬಿ ಬದುಕುತ್ತಿರುವ ಜೀವ ಸರಪಳಿಯು ಕಳಚಿಕೊಂಡಂತೆ ಎಂಬುದೇ ಸಿದ್ದರಾಮಯ್ಯನವರ ಆತಂಕ.  ರೈತನ ನಾಶವೆಂದರೆ ಒಂದು ಜೀವನಶೈಲಿಯ ಕಣ್ಮರೆಯಾಗುವಿಕೆ.  ಇದು ಬರಿಯ ರಾಜಕೀಯ, ಆರ್ಥಿಕ ಪ್ರಶ್ನೆಗಳನ್ನಷ್ಟೆ ಒಳಗೊಳ್ಳುವಂತಿದ್ದರೆ ಈ ಕುರಿತು ಯೋಚಿಸಬೇಕಾದ ತೀವ್ರತೆ ಅಷ್ಟಾಗಿ ಇರುತ್ತಿರಲಿಲ್ಲವೇನ್ನೋ.  ಇದು ಮೌಲ್ಯದ, ಜೀವ ಸಂಸ್ಕೃತಿಯ ಪ್ರಶ್ನೆಗಳೂ ಆಗಿರುವುದರಿಂದಲೇ ನಮ್ಮನ್ನು ಬಾಧಿಸುತ್ತದೆ.  ಬಂಡವಾಳಶಾಹಿ ಪ್ರಭುತ್ವಗಳು ಸೃಷ್ಟಿಸುವ ಬಿಕ್ಕಟುಗಳು ರೈತನನ್ನು ಮಾತ್ರವಲ್ಲದೆ, ಅವನು ನಂಬಿರುವ ನೀರು, ನೆಲ, ಗಾಳಿಗಳನ್ನೂ ಬಿಡುತ್ತಿಲ್ಲ.  ಹೀಗಿರುವಾಗ ನೆಲದ ವಾರಸುದಾರಿಕೆಯ ಪ್ರಶ್ನೆ ಇಲ್ಲಿ ಎದುರಾಗುವುದು
ಸಹಜ.  `ಈಸಕ್ಕಿಯಾಸೆ ನಿಮಗೇಕಯ್ಯ?' ಎನ್ನುವ ನೈತಿಕ ಸೊಲ್ಲು ಉಡುಗಿಸಿ, ಲಾಭಕೋರತನವನ್ನೇ ಮೌಲ್ಯ ಎಂದು ಬಿಂಬಿಸಿ ಬೆಳೆಸುವ ಜಾಗತೀಕರಣವು ಖಂಡಿತವಾಗಿ ಜೀವವಿರೋಧಿ ನೆಲೆಯದು ಎಂದು ಕವಿ ಗುರುತಿಸಿಕೊಳ್ಳುವುದು ಇಲ್ಲಿ ಕಾಣುತ್ತದೆ.  ತಳಿಗಳ ವಶೀಕರಣ, ಕುಲಾಂತರಿಗಳ ಸೃಷ್ಟಿ ನಿಸರ್ಗನೇಮಕ್ಕೆ ಎರವಾದುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಆಕ್ರಮಣಶೀಲತೆಯ ಸ್ವರೂಪ.  ಇದನ್ನು ಕವಿ ಗುರುತಿಸಿಕೊಳ್ಳುವ ರೀತಿ ಹೀಗಿದೆ:

    ಕುಲಾಂತರಿಗಳ ಕೋಟಲೆಯಲ್ಲಿ
    ಕುಲಾಂತರಿಗಳ ನೆಲೆ ಕಣ್ಮರೆಯಾದುದೋ

ಇಲ್ಲಿ ಕವಿಗೆ ಒಂದು ಮಾದರಿಯ ಕಲ್ಪನೆ ಇರುವುದು ಸ್ಪಷ್ಟ.  ಒಂದು ಜೀವನ ಶೈಲಿಯನ್ನು ಅವರು ಬೆಂಬಲಿಸುತ್ತಿದ್ದಾರೆ.  ಅದರ ಮೇಲಾಗುವ ಅಕ್ರಮವನ್ನು ನೋಡುತ್ತ, ಅದಕ್ಕೆ ಪರಿಹಾರವಾಗಿ ಪರ್ಯಾಯ ಮಾರ್ಗೋಪಾಯಗಳೇನು ಎಂದು ಚಿಂತಿಸುವಲ್ಲಿ ಮತ್ತೆ ಅದರಲ್ಲೇ ಉತ್ತರಗಳಿರಬಹುದಾದ ಸಾಧ್ಯತೆಗಳನ್ನು ಅರಸುತ್ತಾರೆ.

    ಎಲ್ಲಿರುವೆ ನನ್ನವ್ವ | ಮರುಜೇವಣಿಯ ಅಡ್ಡಿಕೆಯೇ  
    ಅಡ್ಡದಾರಿಗೆ ಬಿದ್ದ ಕರುಳ | ಕಾಯುವ ಅರಿವೇ

ಹೀಗೆಂದು ಅವರ ಏಕಲವ್ಯನ ತಾಯಿ ಕೂಗಿ ಕರೆಯುತ್ತಾಳೆ.  ನಗರದ ಮರೆ ಮೋಸಕ್ಕೆ ಬಲಿಯಾದ ಮಗು ಏಕಲವ್ಯನಿಗಾಗಿ ಮರುಗುತ್ತ, ಅವನ ಹೆಬ್ಬೆರಳಿಗಾಗಿ ಶೋಕಿಸುತ್ತ ತಾಯಿ ಸುಮ್ಮನೇ ಇರುವುದಿಲ್ಲ.  ಮುಂದಿನ ಪರಿಹಾರವನ್ನು ಹುಡುಕುವುದರಲ್ಲಿದ್ದಾಳೆ.  `ಬೆಂಕಿಗೋಳದ ರಾಚು' ತುಂಬಿದೆ ಎಂದು ಹೇಳುವ ಸಿಂದಾಬಾದ್‌ನಾವಿಕನೂ ನಿರಾಶನಾಗುವುದಿಲ್ಲ - `ಬೆಂದ ಮಣ್ಣಿನೊಡಲಲ್ಲೇ | ನೊಂದ ಮನಸು ಚಿಗುರುವುದು | ಛಲದ ಬಾಳ್ಗೆ ನೆಲದ ಏಳ್ಗೆ' - ಎನ್ನುತ್ತಾನೆ.  ಇದೆಲ್ಲಕ್ಕಿಂತ ಮಿಗಿಲಾಗಿ `ಜಲದ ಕಣ್ಣಿನ ಶೋಧ' ಎಂಬ ಭರವಸೆಯ ಮಾತು ಅಂತರ್ಗಾಮಿಯಾಗಿರುವ ನೀರಿನ ಶಕ್ತಿಯನ್ನು ನಂಬುವ ನೆಲಮೂಲದ ಅತ್ಯುನ್ನತ ಶಕ್ತಿಯ ನೆಲೆ.  ಈ ದೃಷ್ಟಿಯಿಂದ ಕವಿಯದು ಒಂದು ತೆರನಾದ ಉಗ್ರನಿಷ್ಠೆ ಎನ್ನಬಹುದು.  ಅದು ಅನ್ಯದೈವಕ್ಕೆಳಸದ ಭಕ್ತನ ಛಲದಂತೆ, ಸತತ ನಂಬುಗೆಯಲ್ಲಿ ನಿಂತು ತನ್ನ ಸತ್ವವನ್ನು ಪರೀಕ್ಷಿಸಿಕೊಳ್ಳುವುದಾಗಿದೆ.

`ಕಾಯಮಾಯದ ಹಾಡು' ಸಂಕಲನದ ತುಂಬೆಲ್ಲ ಒಕ್ಕಲು ಮಕ್ಕಳು ಇದ್ದಾರೆ (ಅಪ್ಪ, ಅಜ್ಜಿ, ಅವ್ವ - ಇವರೂ ಇದೇ ಸಾಲಿನಲ್ಲಿ ಬರುತ್ತಾರೆ ಎನ್ನುವುದು ವಿಶೇಷ).  ಜೊತೆಗೆ ಏಕತಾರಿಯ ಜೋಗಿಗಳು ಇದ್ದಾರೆ.  ಸುಮ್ಮನೇ ನೋಡಿದರೆ ಸಂಬಂಧವಿಲ್ಲದ ಚಿತ್ರಗಳಿವು.  ಆದರೆ ಇವರೆಲ್ಲ ಬೆಸೆಯುವುದು ನೆಲಮೂಲದ ಅಂಥಃಸೂತ್ರದಲ್ಲಿ.  ನೆಲಮೂಲದಿಂದಲೇ ಹುಟ್ಟಿಬಂದವರು ಇವರೆಲ್ಲ.  ಪೌರಾಣಿಕ ಪಾತ್ರಗಳಾದ ಅಹಲ್ಯೆ ಇಂದ್ರರು, ಅಮೃತಮತಿ ಬದಗರು ನೆಲಕ್ಕೆ ಸಹಜವಾದ ರೀತಿಯಲ್ಲಿ ಬರುತ್ತಾರೆ.  ಬದಗನನ್ನು `ನೆಲದ ಬಾಳಿನ ನೀತಿ ಸೂತ್ರಧಾರ' ಎಂದು ಕರೆಯುವಲ್ಲಿ ನೆಲಮೂಲದ ನೀತಿ ವಿಭಿನ್ನವಾಗಿರುವುದನ್ನು ಸೂಚಿಸಲಾಗಿದೆ.  ಏಕಲವ್ಯನ ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳಬಹುದು.  ಇವರಂತೆಯೇ ಸಹಜವಾಗಿ ಈ ನೆಲದಿಂದ ಹುಟ್ಟಿಬಂದ ಅಲ್ಲಮ, ಶರೀಫ, ದರವೇಶಿ, ರಾಬಿಯಾ ಮುಂತಾದ ಸತ್ವಶಾಲೀ ಅನುಭಾವಿಗಳು.  ಹಾಗಾಗಿ ಇಲ್ಲಿ ನೆಲಮೂಲವೆಂಬುದು ಸಹಜತೆಯ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಲಿದ್ದು, ಸಹಜತೆಗೆ ತೆರೆಯಾಗಿರುವ ಆವರಣಗಳನ್ನು ಸರಿಸಿ ನೋಡುವ ಕ್ರಮವೊಂದನ್ನು ನೇರ್ಪುಗೊಳಿಸುತ್ತಲಿರುವುದು ಗೋಚರಿಸುತ್ತದೆ.  ಸಹಜ ಬದುಕಿನ ತಡಕಾಟವೇ ನಿಜದ ನೆಲೆಯ ಅರಸುವಿಕೆಯಾಗಿದೆ.

ಮರುಜೇವಣಿಯನ್ನು ಹುಡುಕುವ ಮೂಲಕ ಆವರಣಗಳನ್ನು ಸರಿಸಿ ಸಹಜ ಬದುಕನ್ನು ಮತ್ತೊಮ್ಮೆ ಕಾಣಬಹುದೆಂಬ ಹಂಬಲದಲ್ಲಿರುವ ಕವಿ ಅದಕ್ಕಾಗಿ ಸಮುದಾಯದ ಬದುಕಿನಲ್ಲಿಯೂ, ಜೋಗಿತ್ವದ ಬದುಕಿನ ಸತ್ವದಲ್ಲಿಯೂ ಅರಸುತ್ತಾರೆ.  ಮರುಜೇವಣಿಯ ಸತ್ವವು `ಬಹುಜನಹಿತಾಯ'ವೆಂಬ ತಾತ್ವಿಕತೆಯಲ್ಲಿ ಕಾಣಿಸುತ್ತದೆ.  ಅದರಲ್ಲಿ ಸಮುದಾಯದ ಕಲ್ಪನೆ ಇದ್ದು, ವರ್ತಮಾನದ ಒಂಟಿ, ಒಡಕಲು ಬದುಕುಗಳಿಗೆ ಉತ್ತರವಾಗಬಹುದಾದ ಆಶಯವಿದೆ.

ಸಿದ್ಧರಾಮಯ್ಯನವರು ನೆಚ್ಚುವ ಸಮುದಾಯದ ಬದುಕು ವ್ಯವಸಾಯ ಮೂಲದ್ದು.  ಬೇಸಾಯಕ್ಕೆ ಮೂಲಾಧಾರವಾಗಿ ತಾಳ್ಮೆ, ಪರಿಶ್ರಮಗಳಿರುತ್ತವೆ.  ಫಲಾನುಭವದ ಸಂತೃಪ್ತಿ ಸಿಕ್ಕಿದರೂ ಅದು ಒಬ್ಬನದಲ್ಲ, ಸಮುದಾಯದ್ದು.  ಈ ತತ್ವವನ್ನು ಬಿಂಬಿಸುವಂತೆ ಅವರ ಕಾವ್ಯದಲ್ಲಿ ಇರುವೆ ಮತ್ತು ಇರುವೆಗೂಡಿನ ಚಿತ್ರಗಳಿವೆ.  ಕಾಯಕತತ್ವಕ್ಕೆ ಹೆಸರಾದ ಇರುವೆಗಳು ಆಹಾರವನ್ನು ಸಂಗ್ರಹಿಸಿ, ಅದನ್ನು ಹೊತ್ತುಕೊಂಡು ಹೋಗುವುದರಿಂದ ಹಿಡಿದು ಅದನ್ನು ವರ್ಷದ ಕೂಳಾಗಿ ಕಾಪಾಡಿಕೊಂಡು, ಹಂಚಿ ತಿನ್ನುವುದರ ತನಕ ಸಮುದಾಯದ ಬದುಕಿಗೆ ರೂಪಕವಾಗಿ ನಿಲ್ಲುತ್ತದೆ.  ಇದಲ್ಲದೆ ಕವಿ ಕೊಡುವ ಜಿಡ್ಡು ಕದಡಿರುವ ಮಜ್ಜಿಗೆಯ ಚಿತ್ರವು ಇದೇ ಆಶಯವನ್ನು ವ್ಯಕ್ತಪಡಿಸುತ್ತದೆ.  ಜಿಡ್ಡು ಒಟ್ಟುಗೂಡಿದಲ್ಲದೇ ಬೆಣ್ಣೆಮುದ್ದೆಯಾಗದು;  ಒಟ್ಟಾಗದೇ ಜಿಡ್ಡಿನ ಶಕ್ತಿಯಾಗದು ಎಂದು ಸೂಚಿಸುತ್ತದೆ.  ಇದಕ್ಕೆ ಪೂರಕವಾಗಿ ಇನ್ನೂ ಸ್ಪಷ್ಟವಾದ ಸಾಲುಗಳನ್ನು ಕವಿಯೆ ಬರೆಯುತ್ತಾರೆ:

    ಒಂಟೆತ್ತಿನಾರಂಬ | ಸೊಂಟ ಮುರಿದಾ ಬದುಕು
    ಮುರಿದ ಮನಸುಗಳಿಂದ | ಬಿತ್ತೋ ಹೊಲ ಬರೀ ಬೀಳು

ಈ ಸಂಯೋಜಕ ಶಕ್ತಿಯು ಅವರ ಇನ್ನೊಂದು ಪರಿಕಲ್ಪನೆಯಲ್ಲಿ ವಿವರಿಸುವುದಾದರೆ, `ಕಳ್ಳುಬಳ್ಳಿಯ ಬಂಧ' ಎನ್ನಬಹುದು.  ಕುಲಮೂಲ ಎಂಬುದು ಕುಲಾಂತರಿಗಳಿಗೆ ಎದುರು ನಿಲ್ಲುವ ತಾಯಿಬೇರಿನ ಚೇತನವಾದರೆ ಕುಲ, ಕಳ್ಳುಬಳ್ಳಿಯ ಬಂಧವು ಒಟ್ಟು ಸಮುದಾಯದ ಸ್ವರೂಪವನ್ನು ಸೂಚಿಸುತ್ತ ಪ್ರೇರಕ ಶಕ್ತಿಗಳಾಗುವುದನ್ನು ಕವಿ ಕಾಣುತ್ತಾರೆ.

ಇದಕ್ಕೆ ಜೊತೆಗೂಡುವುದು ಏಕತಾರಿಯ ನಿಶ್ಶಬ್ದದ ನಾದ.  ಜೋಗಿತ್ವದ ನೆಲೆಯೆಂದರೆ ಸ್ಥಾವರವಲ್ಲ, ಜಂಗಮವು.  ನಿರಂತರ `ಆಗುವಿಕೆ'ಯಲ್ಲಿ ಜಂಗಮದ ಶಕ್ತಿಯಿದೆ.  ತನ್ನ ತಾನು ಕಳೆದುಕೊಳ್ಳುತ್ತ ಆಗುವಿಕೆಯನ್ನು ಸಾಧಿಸುವ ಪ್ರಕ್ರಿಯೆ ಅದು.  ಇದನ್ನು `ಜನುಮವೆಂಬುದು ಜಂಗಮ' ಎಂಬ ಕವಿ ಸಾಲು ವಿವರಿಸುತ್ತದೆ.  ಗತಿಶೀಲತೆಯ ಕುರುಹಾಗಿ ಬರುವ ಜೋಗಿ ಎಲ್ಲಿಯೂ ನಿಲ್ಲದೆ ನಿರಂತತೆಯ ಸಂಕೇತವಾಗಿ, ಆವರಣಗಳನ್ನು ಸರಿಸುತ್ತ ನಿಜದ ನೆಲೆಯನ್ನು ಅರಸಿ ಹೋಗುವ ಶಕ್ತಿಯಾಗಿ ಕಾಣುತ್ತಾನೆ.  ಈ ನಿರಂತರತೆಯ ಸೃಜನಾತ್ಮಕ ಧಾತುವನ್ನು ದೇಸಿಯಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದನ್ನು ಬಿಡುಗಡೆಯ ಉಪಾಯವಾಗಿ ಕಾಣುವುದು ಮಹತ್ವದ ನಿಲುವು.

ಸುತ್ತಲಿನ ಬದುಕು ಹೊದ್ದುಕೊಂಡ ಆವರಣಗಳನ್ನು ಸರಿಸಿ ನೋಡುವ ಒಳದೃಷ್ಟಿಯ ಪಡೆದ ಜೋಗಿಗಳು `ಕಾಯಮಾಯದ ಹಾಡು' ಸಂಕಲನದಲ್ಲಿ ಕಾಣುತ್ತಾರೆ.  ರಾಬಿಯಾ ಎಂಬ ಸೂಫಿ ಒಂದು ಕೈಯಲ್ಲಿ ಬೆಂಕಿ ಇನ್ನೊಂದು ಕೈಯಲ್ಲಿ ನೀರು ಹಿಡಿದು ಸ್ವರ್ಗನರಕಗಳನ್ನು ಎದುರಿಸ ಹೊರಡುತ್ತೇನೆ ಎನ್ನುತ್ತಾಳೆ.  ಸ್ವರ್ಗನರಕಗಳು ಎರಡು ಅತಿಗಳು, ಇವನ್ನು ನಿರಾಕರಿಸಿ ಒಂದು ಮಧ್ಯಮ ಮಾರ್ಗವನ್ನು ಹುಡುಕುವ ಅವಳ ರೀತಿ ಮರುಜೇವಣಿಯ ಭರವಸೆಯಲ್ಲಿ ಕಾಣುತ್ತದೆ.  ಅಮರಿಕಾ ಎಂಬ ಸ್ವರ್ಗ, ಇರಾಕೆಂಬ ನರಕಗಳನ್ನು ಕಾಣುವ ಸಮಕಾಲೀನ ಪ್ರಪಂಚಕ್ಕು ಮಧ್ಯಮ ಮಾರ್ಗದ ಅವಶ್ಯಕತೆಯಿದೆ ಎಂಬುದು ಕವಿ ಜೋಗಿತ್ವದ ನೆಲೆಯಲ್ಲಿ ಸೂಚಿಸುವ ಪರಿಹಾರ ಮಾರ್ಗ.

ಜೋಗಿತ್ವದ ಅರಿವು ವಿಕಾಸಗೊಂಡಂತೆಲ್ಲ `ಮರೆಮಾಚಿದ' ಬದುಕಿನ ಆವರಣಗಳು ಸರಿಸಿ ನೋಡುವ ದೃಷ್ಟಿ ಬಲವಾಗುತ್ತದೆ.  ಸಾರ್ವಜನಿಕ ಬದುಕಿಗೆ ಸಂಪರ್ಕಕೊಂಡಿಯಾದ ಮಾತು ನಿಜವಲ್ಲದೆ ಸೂತಕವೆನಿಸುವುದು, ಜೀವಪಾತಕವೆನಿಸುವುದು ಇಲ್ಲಿನ ಕವಿತೆಗಳು ಬಿಚ್ಚಿಡುವ ಅಂಶ.  `ಸೊಲ್ಲುಫಲವಾಗಿ' ಎಂಬ ಕನವರಿಕೆಯಲ್ಲಿರುವ ಅವು ನಡೆನುಡಿಯ ಪಾರದರ್ಶಕತೆಯನ್ನು ಎತ್ತಿಹಿಡಿಯುತ್ತವೆ.  `ನೆತ್ತರ ಪಾತಕದಲ್ಲಿ ಉರಿಯುವ ನೆಲ', `ಮನೆಯೆಂಬೋ ಮನೆ ಮಸಣವಾಟಿಯಾಗುವುದು ಮಾತಿನ ಸೂತಕದ ಫಲಗಳೆಂಬುದು `ನುಡಿ ಜ್ಯೋರ್ತಿಲಿಂಗ' ಎಂಬ ತಾತ್ವಿಕ ತಿಳಿವಳಿಕೆಯಿಂದ ಕಂಡುಕೊಂಡ ಸತ್ಯ.  ಇದು ಜೋಗಿತ್ವದ ತಿಳುವಳಿಕೆಯ ಮಾದರಿ.

ಜೋಗಿತ್ವದ ಇನ್ನೊಂದು ಮುಖ್ಯ ಕಾಣ್ಕೆ ಎಂದರೆ ನಾನು ಎಂಬ ಅಹಂಕಾರವನ್ನು ಕಳೆದುಕೊಳ್ಳುವುದು.  ಸಮಷ್ಟಿಯಲ್ಲಿ ಬಿಂದುವಾಗಿ ಸೇರುವುದು.  ಇದೊಂದು ಅನುಭಾವದ ದರ್ಶನವಷ್ಟೇ ಅಲ್ಲದೆ, ಸಮುದಾಯದ ಬದುಕಿನ ಮೂಲಾಧಾರ ತಿಳುವಳಿಕೆಯೂ ಆಗಿದೆ.  ಇದನ್ನು ಕವಿ `ನನ್ನದೆನ್ನುವ ಸೊಲ್ಲು ಕರಕರಗಿ ಕರ್ಪೂರ' ಎಂಬ ಮಾತುಗಳ ಮೂಲಕ ವ್ಯಕ್ತಪಡಿಸುತ್ತಾರೆ.  ಸಮುದಾಯದ ಬದುಕಿಗೆ ಕನಸುವುದಾದರೆ ಜೋಗಿತ್ವದ ಅರಿವು ತಂದುಕೊಡುವ ಅಹಂಕಾರ ನಿರಸನದ ತತ್ವವು ಅಗತ್ಯ ಎಂಬುದನ್ನು ಧ್ವನಿಸುವುದರಿಂದಲೇ ಇಲ್ಲಿನ ಕವಿತೆಗಳು ರೈತರನ್ನು ಜೋಗಿಗಳನ್ನು ಒಟ್ಟು ದೃಷ್ಟಿಯಲ್ಲಿ ನೋಡಲು ಬಯಸುವುದು.  ಇದನ್ನೇ ಕವಿ ಅರಿವಿನಕ್ಕರದಲಿ ಊರಿನೊಕ್ಕಲ ಗೆಲುವು' ಎನ್ನುವುದು;  ಇದನ್ನೇ ಅವರು `ಗುರುವು ಹಚ್ಚಿದ ಅರಿವು' ಎನ್ನುವುದು.  ಹಳೆಯ ಹೊನ್ನನ್ನು ಪುಟಕ್ಕಿಟ್ಟು ಮತ್ತೆ ಬಳಸುವಂತೆ ದೇಸಿಯ ಅರಿವಿನ ಮಾರ್ಗಗಳನ್ನು ಕವಿ ಯಾವ ಕಾರಣಕ್ಕೂ ಅಪ್ರಸ್ತುತ ಎಂದು ಭಾವಿಸುವುದಿಲ್ಲ.  ಅದನ್ನು ತಾತ್ವಿಕವಾಗಿ ಹೇಗೆ ಪ್ರಸ್ತುತಗೊಳಿಸಬಹುದೆಂದು ಚಿಂತಿಸುತ್ತಾರೆ.  ಹೀಗೆ ಸಿದ್ಧರಾಮಯ್ಯನವರ ಕಾವ್ಯ ಅರಿವಿನ ಮಾರ್ಗದಲ್ಲಿ ಬಂದು ನಿಲ್ಲುವುದು, ತಾತ್ವಕವಾಗಿ ನೆಲೆಮುಟ್ಟುವುದು ಅದಕ್ಕೆ ಸಂದ ಜಯ.  ಆದರೆ ಇದೇ ಸಂದರ್ಭದಲ್ಲಿ ಅವರ ತಾತ್ವಿಕ ನಿಲುವನ್ನು ಪ್ರಶ್ನಿಸುವ ಅವಕಾಶಗಳು ಇದ್ದೇ ಇವೆ.  ಈ ಲೇಖನದ ಮೊದಲ ಭಾಗದಲ್ಲಿ ಚರ್ಚಿಸಿದಂತೆ ದೇಸಿಯೆಂಬ ಇರ್ಬಾಯ ಖಡ್ಗದ ಅಲುಗು ಸಿದ್ಧರಾಮಯ್ಯನವರ ಕಾವ್ಯವನ್ನೂ ಮುಟ್ಟದೇ ಇರದು.  ದೇಸಿದಿಬ್ಬ ಸೃಷ್ಟಿಸುವ ಪರಿಹಾರಗಳೆಡೆಯಲ್ಲೇ ಇಣುಕುವ ರಮ್ಯತೆಯ ಛಾಯೆಯು ಕಾಡುತ್ತದೆ.  ಅವರ ಸಮುದಾಯ ಶಕ್ತಿಯ ಭರವಸೆಯ ಬಗ್ಗೆ ಹೇಳುವುದಾದರೆ, ಆ ಆಶಯಗಳು ಒಂದು ಟ್ರೈಬಲ್ ಸಮಾಜವನ್ನೂ, ಅದರ ಸ್ವಯಂಪೂರ್ಣಶಕ್ತಿಯನ್ನು ನಿರ್ದೇಶಿಸಿದಂತೆ ತೋರುತ್ತವೆ ಎಂಬ ಸಂದೇಹ ನನ್ನದು.  ಸಮುದಾಯಗಳ ಶಕ್ತಿ ಛಿದ್ರವಾಗುತ್ತಿರುವ ಆತಂಕ ವ್ಯಕ್ತಪಡಿಸುವ ಅವರ ಕಾವ್ಯವನ್ನು ಓದುತ್ತಿರುವಾಗ ಸಮುದಾಯಗಳ ಶಕ್ತಿಯ ಪ್ರದರ್ಶನವನ್ನು ಮಾಡಿ, ಅಹಂಕಾರದಿಂದ ಸ್ವಾರ್ಥಿಗಳಾಗುತ್ತಿರುವ ಸಮುದಾಯಗಳನ್ನು ಸಮಕಾಲೀನ ಜಗತ್ತಿನಲ್ಲಿ ಕಾಣುತ್ತಿದ್ದೇವೆ ಎಂಬ ವಿಪರ್ಯಾಸದ ಭಾವನೆಗಳು ಮೂಡುತ್ತವೆ.  ಕುಲಮೂಲವನ್ನು ಅರಸುವುದರಲ್ಲಿಯೇ ಒಂದು ರೀತಿಯ ಅನ್ಯತೆಯನ್ನು ಸಾಧಿಸುವ ಸಮುದಾಯಗಳು ತಮ್ಮ ಪರಿಧಿಯಿಂದ ಆಚೆಗೆ ವಿಶಾಲ ದೃಷ್ಟಿಕೋನದಿಂದ ನೋಡುವುದೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆಯಲ್ಲವೆ?  ಎಂಬುದು ನನ್ನ ಇನ್ನೊಂದು ಸಂದೇಹ.  ಇಂದಿನ ವಸಾಹತೋತ್ತರ ಸಮಾಜಗಳಲ್ಲಿ ಕಾಣುವ ಸಮುದಾಯಗಳ ಶಕ್ತಿ ಪ್ರದರ್ಶನವು ಇನ್ನೊಂದು ಸಮುದಾಯವನ್ನು ಅಳಿಸಿ ಹಾಕುವ ಕ್ರಿಯೆಯಲ್ಲಿ ತೊಡಗಿರುವುದನ್ನು ನಮ್ಮ ಅರಿವಿಗೆ ಬರುತ್ತಿದೆ.  ಹೀಗಿರುವಾಗ ದೇಸಿದಿಬ್ಬವನ್ನು ನೆಚ್ಚಿ ಬದುಕುವ ಬದುಕಿಗೆ ತಮ್ಮದೇ ಆದ ಅಗ್ನಿ ಪರೀಕ್ಷೆಗಳಿವೆ.  ಒಂದು ರೀತಿಯಲ್ಲಿ `ಕಾಯಮಾಯದ ಹಾಡು' - ಸಂಕಲನವು ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳ ತಲ್ಲಣಗಳನ್ನು ಕಂಡು ತೀವ್ರವಾಗಿ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ.  ಒಳಬಂಡಾಯದ ದನಿಗಳಿಂದ ಪರ್‍ಯಾಯ ಸಾಧ್ಯತೆಗಳನ್ನು ಸೂಚಿಸುತ್ತ, ಜೀವಪರ ನಿಲುವನ್ನು ಹೊಂದಿದೆ.  ಇದನ್ನು ನಿಷ್ಠೆಯ ದಾರಿ ಎಂದು ಕರೆಯೋಣ.  ಆದರೆ ಅದನ್ನು ಸಹ ಪ್ರಶ್ನಿಸುವ, ಪುನರ್ವಿಮರ್ಶಿಸುವ ಅವಕಾಶಗಳಿವೆ ಎಂಬುದನ್ನು ಮರೆಯದಿರೋಣ.
        *****
ಕೀಲಿಕರಣ: ಎಂ.ಎನ್.ಎಸ್. ರಾವ್

ಜಿ.ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳು

- ತಾರಿಣಿ ಶುಭದಾಯಿನಿ ಆರ್

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕ್ಕೆಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್ರಮಗಳು ಚಾಲ್ತಿಗೆ ಬಂದಂತೆ ಕಾಣುತ್ತಿವೆ. ಸಾಹಿತಿಯೊಬ್ಬನ ಜೀವನ ಚರಿತ್ರೆಯ ವಿವರಗಳು, ಆವನ ಸಾಧನೆಗಳು, ಪಡೆದ ಪುರಸ್ಕಾರಗಳು-ಇವೆಲ್ಲವನ್ನು ಮಾಹಿತಿಯಾಗಿ ಸಂಗ್ರಹಿಸಿ, ನಮಗೆ ಬೇಕಾದ ವಾದಗಳಿಗಾಗಿ ಅವನ ಸಾಹಿತ್ಯವನ್ನು ವಿಭಜಿಸಿ ನೋಡುತ್ತಿದ್ದೇವೇನೋ ಎಂಬ ಆನುಮಾನ ಕಾಡುತ್ತದೆ. ಜಿ‌ಎಸ್‌ಎಸ್ ಆವರೇ ಒಂದು ಕಡೆ ಬರೆಯುವಂತೆ,
  ತುಂಬಿದ
  ಮೈಮಾಂಸರಕ್ತ
  ಎಲ್ಲವನ್ನು ಹೀರಿ
  ಬರಿಯ ಮೂಳೆಯನ್ನಷ್ಟನ್ನೇ
  ಉಳಿಸಿ ಪಟ್ಟಿ ಹಾಕಿದ್ದೀರಿ.
  ಕವಿಯನ್ನು ಸಲೀಸಾಗಿ ಜೀರ್ಣಿಸಿಕೊಂಡು

  ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದೇ ಕವಿತೆಯ ಎನ್ನುವ ಮಾತಿದೆ. ಅವನು ಹೊಳೆಯಿಸುವ ವಿಚಾರಗಳಾಗಲಿ, ಭಾವಗಳಾಗಲಿ ಒಂದು ಮೂಲದ ವೈಚಾರಿಕ, ಭಾವುಕ ವಿಸ್ತರಣೆಯೂ ಆಗಿರುತ್ತದೆ. ಈ ಮಾತಿನ ಹಿನ್ನೆಲೆಯಲ್ಲಿ ಜಿ‌ಎಸ್‌ಎಸ್ ಕವಿತೆಗಳನ್ನು ಸಾಮಾಜಿಕ ಕವಿತೆ, ಪ್ರಕೃತಿ ಕವಿತೆ ಎಂದೆಲ್ಲ ವಿಭಜಿಸಿ ನೋಡುವುದಕಿಂತ ಅವನ್ನೆಲ್ಲ ಕವಿ ತನ್ನ ತಾತ್ವಿಕ ನೆಲೆಗಟ್ಟಾಗಿ ರೂಪಿಸಿಕೊಳ್ಳುವುದರ ಬಗ್ಗೆ ನನಗೆ ಆಸಕ್ತಿಯಿದೆ.  ಪ್ರಕೃತಿ, ಸಾಮಾಜಿಕತೆ, ವೈಯಕ್ತಿಕತೆ, ತತ್ವ- ಇವುಗಳೆಲ್ಲವನ್ನು ಅವರು ಮೇಳವಿಸಿಕೊಂಡು ಆಭಿವ್ಯಕ್ತಿಗೆ ಕ೦ಡುಕೊಳ್ಳುವ ಕ್ರಮಗಳು, ವಿವೇಚಿಸುವ ಸಂದರ್ಭಗಳು ಯಾವ ರೀತಿಯದು ಎಂದು ವಿವೇಚಿಸುವ ಪ್ರಯತ್ನವನ್ನು ಇಲ್ಲಿ ಮಾಡಲು ಯತ್ನಿಸಿದ್ದೇನೆ.

೧೯೫೧ ರಿಂದ ತೀರಾ ಇತ್ತೀಚಿನವರೆಗು ಕಾವ್ಯರಚನೆಯಲ್ಲಿ ಆಸಕ್ತಿ ಉಳಿಸಿಕೊಂಡು ಆದರಲ್ಲಿ ತೊಡಗಿಸಿಕೊಂಡ ಕವಿ ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯವು ಕಾಲಕ್ಕೆ ತಕ್ಕ ಸಂವೇದನೆಗಳನ್ನು ರೂಪಿಸಿಕೊಳ್ಳುತ್ತ ನಿರಂತರವಾಗಿ ಪ್ರಯೋಗಶೀಲತೆಯಿಂದ ಕೂಡಿದೆ.  ವಿಮರ್ಶಕರಾದ ಕೆ. ಜಿ. ನಾಗರಾಜಪ್ಪನವರು ಗುರುತಿಸುವಂತೆ, "ಆವರ ಸಾಹಿತ್ಯ ಬದುಕು ಪ್ರಜ್ಞಾಪೂರ್ವಕವಾಗಿ ಸಂವೇದನಾತ್ಮಕವಾದುದು ಮತ್ತು ಪ್ರತಿಕ್ರಿಯಾತ್ಮಕವಾದುದು".  ಸಂವೇದನೆಗಳನ್ನು ಬದಲಾಯಿಸಿಕೊಳ್ಳುವುದು ಕಷ್ಟ ಎಂದು ಟಿ. ಎಸ್. ಎಲಿಯಟ್ ಯೇಟ್ಸ್, ಕವಿಯ ಬಗ್ಗೆ ಬರೆಯುವಾಗ ಹೇಳುತ್ತಾನೆ.  ಸಂವೇದನೆಗಳು ಕಾಲಕ್ಕೆ ತಕ್ಕಂತೆ  ರೂಪುಗೊಳ್ಳುವಂತಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರಮ್ಯಸಂವೇದನೆಯಿಂದ ಕಾವ್ಯ ಬರೆಯಲಾರಂಭಿಸಿದ ಕವಿ ಜಿ‌ಎಸ್‌ಎಸ್ ಆನಂತರ ತಮ್ಮ ಸಂವೇದನೆಗಳನ್ನು ಬದಲಾಯಿಸಿಕೊಳ್ಳುವಂತೆ ಕಾಣುತ್ತಾರೆ.  ಆದರೆ ಅವರಲ್ಲಿ ರಮ್ಯಕನಸುಗಾರಿಕೆಯು ಉಳಿದಿದೆ.  ಕಾಲಕ್ಕೆ ತಕ್ಕ ಪ್ರತಿಸ್ಪಂದನ ನೀಡುತ್ತಲೇ  ತಮ್ಮ ತಾತ್ವಿಕ ನಿಲುವುಗಳಿಗೆ ಆವನ್ನು ಒಗ್ಗಸಿಕೊಳ್ಳುವುದು ಜಿ‌ಎಸ್‌ಎಸ್ ಆವರ ರೀತಿ.

(ಅ)

ಜಿ‌ಎಸ್‌ಎಸ್ ಆವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳೆಂಬ ವಿಷಯವನ್ನು ನೆನೆಯುವಾಗ ಕನ್ನಡ ಕಾವ್ಯ ಸಂದರ್ಭದಲ್ಲಿ ಸಾಮಾಜಿಕ  ಸಾಮರಸ್ಯವನ್ನು ಪ್ರತಿಪಾದಿಸುವ ಎರಡು ಕವಿ-ಪರಂಪರೆಗಳ ನೆನಪಾಗುತ್ತದೆ.  ಅವರೇ ಬಸವಣ್ಣ ಮತ್ತು ಕುವೆಂಪು. ಈ ಇಬ್ಬರ ಸಾಮಾಜಿಕ ಕಾಳಜಿಯ ಸತ್ವಗಳನ್ನು ಜಿ‌ಎಸ್‌ಎಸ್ ತಮ್ಮ ಕಾವ್ಯದಲ್ಲಿ ಬಲಗೊಳಿಸಿ ಪ್ರತಿಪಾದಿಸುತ್ತಾರೆ ಎನ್ನಬಹುದು.

ಬಸವಣ್ಣನವರ ಸಾಮಾಜಿಕ ಕಾಳಜಿಯು ಭಕ್ತಿಯಿಂದ ಪ್ರೇರೇಪಿತವಾಗಿದೆ.  ಇಹವು ಸರಿಯಾಗಿದ್ದರೆ ಪರವೂ ಸರಿಯಾಗಿದ್ದೀತು ಎನ್ನುವ ಆಶಯಗಳು  ಬಸವಣ್ಣನವರದು. ಇದಕ್ಕಾಗಿ ಬಸವಣ್ಣನದು ಸುಧಾರಣಾವಾದಿ ನೆಲೆಯಲ್ಲಿ ನಿಲ್ಲುತ್ತಾರೆ. ಆದೇ ಪಾತಳಿಯಲ್ಲಿ ಸಾಮಾಜಿಕ ಕಳಕಳಿಯು ಹುಟ್ಟುತ್ತದೆ. ಬಸವಣ್ಣ ಕೂಡಲ ಸಂಗಮನನ್ನು ಎಷ್ಟು ಆದ್ರತೆಯಿಂದ ನಿರ್ವಚಿಸಿಕೊಳ್ಳುತ್ತಾರೋ ಆಷ್ಟೇ ಭಾವದಲ್ಲಿ ಸಮಾಜದ ಕ್ಕೆಂಕರ್ಯವನ್ನು ಮಾಡಬಲ್ಲರು. ಭಕ್ತಿಯೆಂಬುದು ಶ್ರದ್ದೆಯ ಉನ್ನತ ಸ್ಥಿತಿ. ಈ ಜಗತ್ತಿನ ಆಗುಹೋಗಳ ಬಗ್ಗೆ ಶ್ರದ್ಧೆಯಿರುವ, ಅದರ ಉನ್ನತಿಗಾಗಿ ಬಯಸುವ ಭಾವವನ್ನೇ ಜಿ‌ಎಸ್‌ಎಸ್ ಕಾವ್ಯವು ತೋರುತ್ತದೆ.

ಬಸವಣ್ಣನವರ ಸಾಮಾಜಿಕ ಕಳಕಳಿಯು ಭಕ್ತಿಯ ಬಲದಿಂದ ಬಂದರೆ,  ಕುವೆಂಪು ಆವರಲ್ಲಿ ಆದು ಬೇರೆ ಸ್ವರೂಪದ್ದಾಗಿದೆ. ಆವರ ಸಾಮಾಜಿಕ ಸಾಮರಸ್ಯದ ಆಶಯಗಳು ಸ್ಪೂರ್ತಿ ಪಡೆದುಕೊಂಡಿದ್ದು ಇಪ್ಪತ್ತನೆಯ ಶತಮಾನದ ಆರಂಭಕಾಲದಲ್ಲಿ ರೂಪುಗೊಳ್ಳುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಬಂದ ಸುಧಾರಣಾವಾದಿ ತತ್ವಗಳಿಂದ.  ಆ ತತ್ವಗಳು ಜ್ಞಾನೋದಯದ ದರ್ಶನಗಳೂ ಆಗಿದ್ದವು. ಈ ಹಿನ್ನೆಲೆಯಲ್ಲಿ ಕುವೆಂಪು ಪಡೆದುಕೊಂಡ ಪರಂಪರೆಯ ಕಲ್ಪನೆಗಳಾದ `ಶಿವ' `ಅಶಿವ'ಗಳು ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಿಕೊಳ್ಳುವ ಬಲ ಅವರಿಗೆ ತಂದುಕೊಡುತ್ತವೆ.  ಪರಿಷ್ಕರಣೆಯ ಮಾರ್ಗದ ವಿವೇಕಾನಂದರ೦ತಹ ವ್ಯಕ್ತಿತ್ವಗಳು ಕುವೆಂಪು ಸಾಮಾಜಿಕ ಕಲ್ಪನೆಯ ಆಧಾರಗಳು.  ಈ ಇಬ್ಬರು ಕವಿಪರಂಪರೆಗಳನ್ನು ಸಂಚಯನ ಮಾಡಿಕೊಂಡು ಜಿ.ಎಸ್.ಎಸ್ ಕಾವ್ಯ ತನ್ನ ಹಾದಿಯನ್ನು ನಿರ್ಮಿಸುತ್ತದೆ.  ಒಂದು ಆಧ್ಯಾತ್ಮಿಕ ಒಳನೋಟವೇ ಅವರ ಕಾವ್ಯದ ಆದಿಯಿಂದ ಅಂತ್ಯದವರೆಗು ಮುಂದುವರೆಯುತ್ತದೆ.  ಬಹುಷಃ `ತೀರ್ಥವಾಣಿ'ಯಂತಹ ಸಂಕಲನವು ಬಂದಿದ್ದು ಈ ಆಳದ ಶ್ರದ್ಧಯಿಂದಲೇ ಇರಬಹುದು.  ಅವರ ಮೊದಲ ಪ್ರಕೃತಿ ಕವಿತೆಗಳಲ್ಲಿ ಕಾಣುವ ಮೆಟಫಿಸಿಕಲ್ ಅಂಶವು ಸಾಮಾಜಿಕ ಆಶಯಗಳಲ್ಲಿಯೂ ಸಾಮಾಜಿಕ ಗುಪ್ತಗಾಮಿನಿಯಾಗಿ ಚಲಿಸುವುದನ್ನು ಗುರುತಿಸಬಹುದು.

ಸತ್‍ ಶಕ್ತಿಯನ್ನು ಆಶಿಸುವ ಕವನಗಳನ್ನು ತಮ್ಮ ಆರಂಭದ ಕಾವ್ಯದಲ್ಲಿ ಬರೆದಿರುವ ಜಿ‌ಎಸ್‌ಎಸ್ ಅವರಿಗೆ ಆತೀವವಾಗಿ ಕಾಡುವುದು ಕೃಷ್ಣಶಕ್ತಿ ಎಂಬ ಸಂಕೇತ. ಗಾಢಾಂಧಕಾರದಲ್ಲಿ ಕಾಯುವ, ಪೊರೆಯುವ ಶಕ್ತಿಯಾಗಿ ಅದನ್ನು ಅವರು ಪರಿಭಾವಿಸುತ್ತಾರೆ.
  ಕತ್ತಲ ಗೋವರ್ಧನವನ್ನೆತ್ತುವ
  ಸಾಸಿರ ಶ್ರೀಕೃಷ್ಣನ ಬೆರಳು
                (ದೀಪಾಪಳಿ)
`ಕೃಷ್ಣಶಕ್ತಿ'ಯ ಸಾಲುಗಳನ್ನು ಇಲ್ಲಿ ಉಲ್ಲೇಖಿಸಬಹುದು:
  ಸುತ್ತಮುತ್ತ ಅಂಧಕಾರ
  ಮಳೆಹನಿಗಳ ಪಂಜರ
  ದೈತ್ಯಸೆರೆಯ ಕಂಬಿಯೊಳಗೆ
  ಬಂತು ದೇವಕು೦ಜರ
             (ಕೃಷ್ಣಶಕ್ತಿ)
ಕೊಳಲು ಕೂಡ ಈ ವಿಶಾಲಶಕ್ತಿಯ ಸಂಕೇತವಾಗಿಯೇ ಬರುತ್ತದೆ.

ಹಾಗೆಯೇ ಕತ್ತಲು-ಬೆಳಕು ಆವರ ಕಾವ್ಯದಲ್ಲಿ ಬರುವ ಎರಡು ಆಂಶಗಳು. ಅವು ಪರಸ್ಪರ ವಿರೋಧಿ ಗುಣವುಳ್ಳವು.  ಬೆಳಕಿನ ಎದುರಿಗೆ `ಕಡುಮೌನದ ಇರುಳಿದೆ'.  ಬೆಳಕು ಚೈತನ್ಯಶಾಲಿಯಾದಾದರೆ ಕತ್ತಲೆ ಜಡ ಎಂಬ ನಿಲುವು ಇದೆ :
  ಜೀವಜೀವಾಳದಲಿ
  ಬಾಳಿನೊಳ್ಪನೆ ಬಗೆದು
  ಉದ್ಧಾರ ಯೋಗದಲಿ ತೊಡಗಿರುವ ಬೆಳಕೇ
             (ಆಹ್ವಾನ)
ಈ ರೀತಿ ಹೇಳುವಾಗ `ಜೀವ ಕತ್ತಲೊಳಿದೆ ! ಜಡದ ವೋಲದು ಬಿದ್ದಿದೆ' ಎನ್ನುವ ಸ್ಥಿತಿಯನ್ನು ವಿವರಿಸಲಾಗಿದೆ.  ಇದರ ಜೊತೆಯಲ್ಲಿಯೇ ಆಗಾಧವಾಗಿ ಹರಡಿದ ಕತ್ತಲಿನಂತೆ ಕಾಡುವ ಬಿರುಗಾಳಿಯೂ ಇದೆ (`ಬಿರುಗಾಳಿಯಬ್ಬರ' ಎನ್ನುವುದು ಆವರ ಕಾವ್ಯದಲ್ಲಿ ಸಾಧಾರಣವಾಗಿ ಬಳಕೆಯಾಗುವ ಪದಪುಂಜ) ಆದರೆ ಇವುಗಳಲ್ಲಿ ಯಾವುದೇ ಸತ್‍ಶಕ್ತಿಯ ಮೇಲಿನ ಆವರ ನಂಬಿಕೆಯನ್ನು ಕುಂದಿಸುವಂತವಲ್ಲ. ಕೇಡು (evil) ಕೊನೆ ಮುಗಿಯುವಂತದ್ದಲ್ಲ ಎಂದು ತಿಳಿದರೂ ಅದನ್ನು ಬೆಳಕಿನ ಮೂಲಕ ದೂರಸರಿಸಬಹುದೆಂಬ ನಂಬಿಕೆ, ಶ್ರದ್ಧೆಗಳು ಕವಿಗಿದೆ.  ಆದ್ದರಿಂದಲೇ ಬೆಳಕನ್ನು ಆವರು `ಮುದ್ದು ಬೆಳಕೇ', `ಸ್ವರ್ಣಬೆಳಕೇ' ಎಂದು ಕರೆಯುತ್ತಾರೆ. ಅಷ್ಟೇ ಆಲ್ಲದೆ ಬೆಳಕು ಒಂದು ಸಣ್ಣ ಹಣತೆಯ ರೂಪದಲ್ಲಿ ಒದಗಿ ಬಂದರು ಸರಿ ಅದು ಕೇಡನ್ನು ಅಷ್ಟರ ಮಟ್ಟಿಗೆ ದೂರಸರಿಸುವ ಶಕ್ತಿಯೆನ್ನುವ ನಂಬಿಕೆ ಅವರದ್ದು.  ಈ ತಾತ್ವಿಕತೆಯೇ ಅವರ ಮುಂದಿನ ಕಾವ್ಯಕ್ಕೆ ಮೂಲಾಧಾರವಾಗಿ ಉಳಿಯುತ್ತದೆ. ಹಣತೆಯೆನ್ನುವುದು ಈ ದೃಷ್ಪಿಯಲ್ಲಿ ಒಂದು ಆಶಯದ ರೂಪಕವೂ ಆಗಿ ಉಳಿಯುತ್ತದೆ.

(೪)
ಜಿ‌ಎಸ್‌ಎಸ್ ಆವರ ಕಾವ್ಯದಲ್ಲಿ ಕಾಣಿಸುವ ನಾನು, ನೀನು ಎಂಬ ಪದ ಗಮನಿಸಬೇಕು. `ನಾನು' ಎಂಬುದಲ್ಲಿ ತನ್ನೊಳಗನ್ನು ಕಂಡುಕೊಳ್ಳುವ ಆತ್ಮನಿರೀಕ್ಷಣೆ ಕ್ರಿಯಾಚೇತನ, `ನೀನು' ಎಂಬುದು ಸ್ವಯಂಪೂರ್ಣವಾದ ಎದುರು ಚೇತನ.  ನಾನು ಎಂಬ ಭಾವವು ಇದರ ಜೊತೆ ಸಾಮರಸ್ಯವನ್ನು ಸಾಧಿಸುವ ಪ್ರಕ್ರಿಯೆಯನ್ನು ನಿರೀಕ್ಷಿಸುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಾನು ಎಂಬುದು ಸ್ವಯಂಪೂರ್ಣವಾಗಿ ಬೆಳೆದು ಮಹತ್ತಿನೊಡನೆ ಗುರುತಿಸಿಕೊಳ್ಳುವ ಅಸ್ತಿತ್ವ. ಇದನ್ನೇ ಡಿ. ಆರ್. ನಾಗರಾಜ್ ಆವರು ಜಿ.ಎಸ್.ಎಸ್.ಕುರಿತ ತಮ್ಮ ಲೇಖನದಲ್ಲಿ ಜಿ‌ಎಸ್‌ಎಸ್ ಕಾವ್ಯದ ಮೊದಲಘಟ್ಟ ಸೌಂದರ್ಯಾತ್ಮಕ, ಅನಂತರದ್ದು ಮೆಟಫಿಸಿಕಲ್ ಮತ್ತು ಕೊನೆಯಲ್ಲಿ ಅದು ರುದ್ರತಿಳಿವಿನದಾಗಿರುತ್ತದೆ ಎಂದು ಗುರುತಿಸಿದ್ದಾರೆ.

ಶಿವರುದ್ದಪ್ಪನವರ ಪ್ರಕೃತಿ ಕವನದಲ್ಲಿ ಕಾಣುವ ಆಧ್ಯಾತ್ಮಿಕ ಭಾವದ ನಾನು ಕ್ರಮೇಣ ಆತ್ಮನಿರೀಕ್ಷಣೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಂದರೆ ಇದು ಬಸವಣ್ಣನವರ ವಚನಗಳಲ್ಲಿ ಎದ್ದುಕಾಣುವ ಆತ್ಮನಿರೀಕ್ಷಣೆಯ ಗುಣಕ್ಕೆ ಹತ್ತಿರವಿದೆ.  ಆಗಿದೆ.  ಸುತ್ತಲ ಪ್ರಪಂಚದ ಆಸ್ತವ್ಯಸ್ತಗಳನ್ನು ಕಾಣುವ ಕವಿಗೆ ನಾನು ಎಂಬುದು ಶುದ್ಧಭಾವದಿಂದ ಒದಗದಿದ್ದರೆ ಆತ್ಮನಿರೀಕ್ಷಣೆ ಸಾಧ್ಯವಿಲ್ಲ. ಈ ಪ್ರೇರಣೆಯಿಂದಲೇ ಆತ್ಮನಿರೀಕ್ಷಣೆಯಲ್ಲಿ ತೊಡಗುವ ಕವಿ ಸಾಮಾಜಿಕ ಆವಸ್ಥೆಯ ಪಾಲುದಾರಿಕೆಯ ಹೊಣೆಯನ್ನು ಹೊರುತ್ತಾರೆ.  `ಅವಸ್ಥೆ' ಕವನವನ್ನೇ ಗಮನಿಸಿದರೆ, `ಚಳಿಗೆ ಗಡಗಡ ನಡುಗಿ ಮುದುರಿ ಮೂಲೆಗೆ ಕೂತ ಹರಕು ಚಿಂದಿಯ ಪುಟ್ಟ ಹುಡುಗ', `ಗೇಟಿನಾಚೆ ತಿರುಪೆಯ ಮುದುಕಿ ಆನ್ನಕ್ಕೆ ಅರಚುವುದು',  `ಕೊಳೆಗೇರಿಯಲ್ಲಿ ಚಿಂದಿಛಾವಣಿಯಲ್ಲಿ ಬದುಕಿರುವಸಂಖ್ಯರು'- ಇವರೆಲ್ಲಾ ಹೀಗಿರೋದಕ್ಕೆ ನಾನೂ ಕಾರಣ ಆನ್ನಿಸುತ್ತೆ.  ಬೆಚ್ಚನೆ ಮನೆಯಲ್ಲಿ ನಾ ಹೇಗೆ ತೆಪ್ಪಗಿರಲಿ?  ಎಂದು ಕೇಳಿಕೊಳ್ಳುವ ಕವಿ ಇಲ್ಲಿದ್ದಾರೆ.  ಹಾಗೆಯೇ ಈ ತಳಮಳ ಇದೆ :
  ಈ ಕೂಗುಗಳು, ನೋವುಗಳು
  ಈಟಿಯ ಹಾಗೆ ನಾಟಿ ನುಗ್ಗುತ್ತವೆ
  ಮನೆಯೊಳಕ್ಕೆ, ಮನದೊಳಕ್ಕೆ
  ನಿದ್ದೆಯೊಳಕ್ಕೆ ಕನಸಿನೊಳಕ್ಕೆ
  ನಾನೇನೂ ಮಾಡಲಾರದ ಆಸಹಾಯತನಕ್ಕೆ
  ತಿವಿದು ನನ್ನೆಲ್ಲವನ್ನೂ
  ಗಾಯಗೊಳಿಸುತ್ತದೆ.
             (ಅವಸ್ಥೆ)

   (ಈ)
ಆತ್ಮ ನಿರೀಕ್ಷಣೆಯ ಭಾವದ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ಸಿಟ್ಟು, ಸಾತ್ವಿಕ ರೋಷಗಳು ಜಿ‌ಎಸ್‌ಎಸ್ ಕಾವ್ಯದಲ್ಲಿ ಇರದೇ ಇಲ್ಲ- ವ್ಯವಸ್ಥೆಯ ಬಗ್ಗೆ 'ಅವಸ್ಥೆ' ಕವಿತೆಯಲ್ಲಿ ಅವರು ಬರೆಯುವಂತೆ,
  ರೇಗುತ್ತೇನೆ ನನ್ನ ಮೇಲೆ
  ನನ್ನಂಥವರ ಮೇಲೆ
  ನನ್ನಂಥವರ ಒಳಗೊಂಡ ಈ
  ಸಮಾಜದ ಮೇಲೆ
  ಇದರ ಪ್ರತಿನಿಧಿಯಾದ ವ್ಯವಸ್ಥೆಯ ಮೇಲೆ
  ಆದು ನಿರಂತರವಾಗಿ ಉಳಿಸಿರುವ ಈ
  ಅವಸ್ಥೆಯ ಮೇಲೆ.
            (ಆವಸ್ಥೆ)

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಆದೆಂದರೆ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದಿದ್ದರೆ, ಆದರ ಮೇಲೆ ಸಿಟ್ಟು, ಆಕ್ರೋಶಗಳು ಹುಟ್ಟುವುದಿಲ್ಲ. ಈ ದೃಷ್ಟಿಯಲ್ಲಿ ಜಿ‌ಎಸ್‌ಎಸ್ ಆದರ ಕಾವ್ಯ ಚಿಕಿತ್ಸಕ ನೆಲೆಯದ್ದಾಗುತ್ತದೆ.

ವ್ಯವಸ್ಥೆಯಲ್ಲಿ ಉಂಟಾದ ಏರುಪೇರುಗಳು ಒ೦ದು body politicsನ ಸ್ವರೂಪವನ್ನು ಕೆಡಿಸಿ, ಸಾಮರಸ್ಯಕ್ಕೆ ತಡೆಯೊಡ್ಡುತ್ತವೆ ಎನ್ನುವುದು ಕವಿಯ ಗ್ರಹಿಕೆ.  ಆ ಏರುಪೇರುಗಳಲ್ಲಿ ನಗರೀಕರಣ ಆಥವಾ ಜಾಗತೀಕರಣ ಇರಬಹುದು ;  ಸ್ವಾತಂತ್ರ್ಯೋತ್ತರ ಕಾಲದಲ್ಲಿ ಉಂಟಾದ ರಾಜಕೀಯ ಸ್ಥಿತ್ಯಂತರಗಳಿಂದ ಆಥವಾ ಮೌಲ್ಯಪಲ್ಲಟಗಳಿಂದ ಸಾಮರಸ್ಯಕ್ಕೆ ಆಡ್ಡಿಯುಂಟಾಗುತ್ತದೆ ಎಂಬುದೇ ಇಲ್ಲಿನ ಗ್ರಹಿಕೆ.

ನಗರಪ್ರಜ್ಞೆ ಉದಯಿಸಿದಂತೆಲ್ಲ ಅಸ್ತಿತ್ವವಿಲ್ಲದ ಜನ ಸಮೂಹ ಸೃಷ್ಟಿಯಾಗಿ ಬೇರುಗಳಿಲ್ಲದೆ ಬದುಕುವುದನ್ನು ಕಾಣುವ ಕವಿಗೆ ಅದರ ಬಗೆ ಹೇವರಿಕೆಯಿದೆ.  ಜನರನ್ನು ಎಬ್ಬಿಸಲು ಕೋಳಿಯ ಆವಶ್ಶಕತೆಯಿಲ್ಲವೆಂದೂ, ಇಲ್ಲಿಯ `ಕಪ್ಪು ಹೊಗೆಯನ್ನು ಬಳಿದ ಮಿಲ್ಲುಗಳ ಜೀವವ ಸೇದಿಕೊಲ್ಲುವ ಕೂಗು' ಎಬ್ಬಿಸುತ್ತದೆ ಎಂದು ಆವರ ಕವನ `ಕೋಳಿಕೂಗಿತು' ಹೇಳುತ್ತದೆ. `ಮುಂಬೈಜಾತಕ' ಕವನವಂತು ನಗರೀಕರಣದ ಬಗ್ಗೆ ಆನಾದರವನ್ನೇ ತೋರುವಂತಿದೆ. ಇದು ಆಧುನಿಕವಾದದ ಕಾಣ್ಕೆ ಆಷ್ಟೇ ಅಲ್ಲ, ರೊಮ್ಯಾಂಟಿಕ್ ಭಾವವೂ ಹೌದು.

ಎಂಭತ್ತರ ದಶಕದ ರಾಜಕೀಯವನ್ನು ನವ್ಯರು ಸಿನಿಕತೆಯಿಂದ ನೋಡುವುದುಂಟು. ಆಧುನಿಕವಾದದ ಪರಿಣಾಮದಿಂದ ಉಂಟಾದ ಭ್ರಮನಿರಸನವು (disillusionment)  ಅವರಲ್ಲಿ ಕಾಣಿಸಿಕೊಳ್ಳುತ್ತದೆ. ಜಿ‌ಎಸ್‌ಎಸ್ ಅವರು ಗಾಂಧಿ ವಿನೋಬಾ ಕಾಲದ ಸತ್ವಶಾಲೀ ವ್ಯಕ್ತಿತ್ವಗಳನ್ನು ಕಂಡಂತೆಯೇ ನೆಹರೂ ಕಾಲದ ಆಷಾಡಭೂತಿ ರಾಜಕೀಯ ವ್ಯಕ್ತಿತ್ವಗಳನ್ನೂ ಕಂಡವರು.  ಆಧುನಿಕವಾದವು ಬಿಂಬಿಸಿದ ಭ್ರಮನಿರಸನದ ಅಂಶವು ಆವರಲ್ಲಿ ಕ೦ಡು ಬರುವಂತಿದ್ದರೂ ಆದು ನೇತ್ಯಾತ್ಮಕವಾಗಿ ತೋರುವುದಿಲ್ಲ. ರಾಜಕೀಯ ಪಲ್ಲಟಗಳಂತೆ ವ್ಯಕ್ತಿತ್ವಗಳಲ್ಲಿ ಉಂಟಾದ ಮೌಲ್ಯಪಲ್ಲಟಗಳಿಂದ ನೊಂದ ಕವಿಗೆ ಸಿಟ್ಟು, ಆಕ್ರೋಶಗಳು ಹುಟ್ಟುತ್ತವೆ. ವ್ಯವಸ್ಥೆಯ ಮೇಲಿನ ನಂಬಿಕೆ ಅವರಿಗಿದೆ.  ಆದ್ದರಿಂದ ಸ್ವಾರ್ಥಸಾಧಕತನ, ಆಸೆಬುರುಕತನ ಇತ್ಯಾದಿಗಳು ಸಾಮರಸ್ಯವನ್ನು ಕದಡುವ ದುಷ್ಟತನವು ಎಂದು ಆವರಿಗೆ ಕಾಣುತ್ತದೆ.  ವ್ಯವಸ್ಥೆ ಆವರಿಗೆ `ಹದ್ದು ನರಿ ತೋಳ ರಾಕ್ಷಸ ರಾಜ್ಯ'.  ಹೀಗೆಂದು ಬಣ್ಣಿಸುವಾಗ ಆವರಿಗೆ ಬದಲಾದ ವರ್ತಮಾನದ ಆರಿವು ಇದೆ :
  ಒಳಪದರ ತಕ್ಕಷ್ಟು ಸವೆದಿದೆ
  ವರ್ತಮಾನದ ಮತ್ತೆ
  ವಾಸ್ತವದ ಕಣ್ಣು ತೆರದಿದೆ.
     (ಕುಟುಂಬ ಯೋಜನೆಯ ವಿಚಾರ)

ಈ ಆಶಾಭಂಗವು `ಭೀಮಾಲಾಪ'ದಂತಹ ಕವಿತೆಗಳಲ್ಲಿ ಇನ್ನಷ್ಟು ಸ್ಫುಟವಾಗಿದೆ. ಒಂದೆಡೆ ಪ್ರಭುತ್ವದ ನಿರಂಕುಶತೆಯು ಕವಿಗೆ ಸೋಲಿನ ಹಾಡುಗಳನ್ನು ನಿರೂಪಿಸುವಂತೆ ಮಾಡಿದೆ :
  ಕಂಡ ಕಂಡ ಕಡೆ ಸೊಂಡಿಲ ಚಾಚುವ
  ಆನೆಗೆ ಆಂಕುಶವಿಲ್ಲ
    (ಸೋಲಿನ ಹಾಡು)
  ಕಾಡು ಕುದುರೆಗಳ ಹೂಡಿದ ರಥಕ್ಕೆ
  ದಾರಿಯ ಹಂಗಿಲ್ಲ
    (ಸೋಲಿನ ಹಾಡು)
  `ಸಾಕು ನಿಲ್ಲಿಸು ಸಾಮಗಾನ' ಕವಿತೆಯನ್ನು ಬರೆಯುವಾಗ `ಸಾಮಗಾನ' ಎಂದು ಮಧುರ ಧ್ವನಿಯ ಹೊರಡಿಸಿದ್ದ ಕವಿ ಸಿಟ್ಟಿಗೇಳಲು ಕಾರಣವಿದೆ.  ಪ್ರಭುತ್ವದ ಸೋಲು ಅವರ ಸತ್ವಹೀನ ಸಾಧನೆಗಳಲ್ಲಿದೆ :
  ದೇಶಾದ್ಯಂತ ಆಣೆಕಟ್ಟುಗಳ ಕಟ್ಟಿ ನಾವು
  ಬೆಳೆದಿದ್ದೇನು ಬರೀ ಹಸಿವೆ?
  ಹೊಲಗದ್ದೆಗಳ ತುಂಬ ತೆನೆಯೆತ್ತಿ ತೂಗುವುದೇನು?
  ಹಸಿರೆ ಆಥವಾ ನಿಟ್ಟುಸಿರೆ?
     (ಸಾಕು ನಿಲ್ಲಿಸು ಸಾಮಗಾನ)

ಇದರ ಜೊತೆಗೆ ಈ ಸಾಲುಗಳನ್ನು ನೋಡಬೇಕು :
  ಇದುವರೆಗು ಬಿತ್ತಿದ್ದು ಬೆಳೆಯಾಗಿ ತೆನೆದೂಗಲಿಲ್ಲ
  ಬೀಜವೇ ಐಬೋ, ನೆಲದಲ್ಲಿ ಹದವಿಲ್ಲವೊ
  ಗಿಡವಾಗಿ ಪುಟಿದೇಳಲೇ ಇಲ್ಲ.
                    (ವಿಫಲ)
ಇಲ್ಲೆಲ್ಲಾ ಆತ್ಮನಿರೀಕ್ಷಣೆಯ ಅಂಶವು ಸಾಮೂಹಿಕ ಸ್ವರೂಪದಲ್ಲೇ ಬರುತ್ತಿರುವುದನ್ನು ಗಮನಿಸಬಹುದಾಗಿದೆ.

(ಉ)
ಈಗಾಗಲೇ ಹೇಳಿದಂತೆ ಜಿ‌ಎಸ್‌ಎಸ್ ಅವರ ಕಾವ್ಯವು ಚಿಕಿತ್ಸಕ ನೆಲೆಗಳಿಂದ ಹುಟ್ಟುತ್ತವೆ.  ಆದರಿಂದಲೇ ವ್ಯವಸ್ಥೆಯ ಮೇಲಿನ ಸಿಟ್ಟು, ಆಕ್ರೋಶಗಳು ನಿಧಾನವಾಗಿ ವ್ಯಂಗ್ಯದ ಸ್ವರೂಪ ತಳೆಯುತ್ತವೆ.  ವ್ಯಂಗ್ಯವು ಎಂಭತ್ತರ ದಶಕದಲ್ಲಿ ಬಳಕೆಯಾಗುತ್ತಿದ್ದ ಅಸ್ತ್ರವೇ ಆಗಿದೆ.  ಆದರೆ ಜಿ‌ಎಸ್‌ಎಸ್ ಅವರ ವ್ಯಂಗ್ಯವು ನಿರಾಶೆಯಿಂದಾಗಲೀ, ಸಿನಿಕತೆಯಿಂದಾಗಲೀ ಕೂಡಿದುದಲ್ಲ ಎಂದು ನನ್ನ ಭಾವನೆ.  ಆತ್ಮ ನಿರೀಕ್ಷಣೆಯ ಉಗ್ರರೂಪದಂತೆ ಕಾಣುವ ವ್ಯಂಗ್ಯವು ಇಲ್ಲಿ ಕಾಣುತ್ತದೆ- `ನಮ್ಮತನವೆಲ್ಲವನು ಹರಾಜಿಗಿಟ್ಟು ನಿಂತಿದ್ದೇವೆ ಸ್ವಾಮಿ, ನಾವು ಗುಲಾಮರು, ಸೆಂಟ್‍ಪರ್ಸೆಂಟ್ ಗುಲಾಮರು' ಎಂದು ಹೇಳಿ ಹಳಿದುಕೊಳ್ಳುವ ವ್ಯಂಗ್ಯ ಇದೆ. ಅದರೊಳಗಿನ  ಒಳವ್ಯಂಗ್ಯವು ಪರಿಣಾಮಕಾರಿಯಾಗಿ ಬರುತ್ತದೆ-. ಉದಾಹರಣೆಗೆ,
  ಈ ದೇಶದಲ್ಲಿ ಎಲ್ಲವೂ
  ಆಮೂಲಾಗ್ರವಾಗಿ ಬದಲಾಗಬೇಕು.  ಆದರೆ
  ನಾನು ಕೂತ ಕುರ್ಚಿ, ಅದರ ಕೆಳಗಿನದೊಂದಿಷ್ಟಗಲ ನೆಲ
  ಇದ್ದಂತೆಯೇ ಇರಬೇಕು
                           (ಈ ದೇಶದಲ್ಲಿ)

ಇಷ್ಟೆಲ್ಲಾ ಪ್ರಕಟಗೊಳ್ಳುವ ವ್ಯಂಗ್ಯವು ಚಿಕಿತ್ಸಕ ನೆಲೆಯಿಂದಲೇ ಹುಟ್ಟುತ್ತದೆ.  ಇದು ಪರೋಕ್ಷವಾಗಿ ಶುದ್ಧೀಕರಣದ ಆಶಯವುಳ್ಳುದ್ದು.  ಅವರ `ಕಸಪೊರಕೆ' ಕವಿತೆಯ ಸಾಲುಗಳನ್ನು ಇಲ್ಲಿ ಉಲ್ಲೇಖಿಸುವುದಾದರೆ.
  ಈ ಮನೆಯ
  ಶುದ್ಧೀಕರಣವೆ ನಮ್ಮ ಕಸುಪೊರಕೆಗಿರುವ ಗುರಿ
  ಕಸಪೊರಕೆಯೆನಗೆ ಗುರು ; ಮತ್ತೆನ್ನ ಬಾಳಗುರಿ
                        (ಕಸಪೊರಕೆ)

  (ಊ)
`ಕುವೆಂಪು ಪರಂಪರೆಯ ಕವಿ ನಾನು' ಜಿ.ಎಸ್. ಶಿವರುದ್ದಪ್ಪನವರೇ ಆಗಾಗ್ಗೆ ಹೇಳುವುದುಂಟು.  ಕುವೆಂಪು ಪ್ರತಿಪಾದಿಸಿದ ಸರ್ವೋದಯ ತತ್ವ ಆಥವಾ ಸರ್ವರಿಗೆ ಸಮಬಾಳು ಎಂಬುದು ಜಿ‌ಎಸ್‌ಎಸ್ ಅವರು ಹುಡುಕಾಡುವ ಸಮಾನತಾ ಆಶಯಗಳಿಗೆ ಹತ್ತಿರವಿದೆ.  ಅವರು ಕುವೆಂಪು ಸರ್ವೋದಯತತ್ವವನ್ನು ರೂಢಿಸಿಕೊಳ್ಳುವುದು ಎರಡು ನೆಲೆಗಳಿಂದ.  ಒಂದು ಸಾಮಾನ್ಯತೆಯ ದರ್ಶನದಿಂದ ; ಇನ್ನೊಂದು ಸರ್ವರಿಗು ಸಮಬಾಳು ಎನ್ನುವ ತತ್ವವನ್ನು ವಿಶಾಲಾರ್ಥದಲ್ಲಿ ನಿರೂಪಿಸುವುದರಿಂದ.

ಜಿ‌ಎಸ್‌ಎಸ್ ಕಾವ್ಯವು ಸಾಮಾನ್ಯತೆಯ ದರ್ಶನದಲ್ಲೇ ರೂಪುಗೊಂಡಿರುವಂತದ್ದು.  `ಶ್ರೀಸಾಮಾನ್ಯವೇ ಭಗವದ್ಮಾನ್ಯ' ಎನ್ನುವ ಒಳನೋಟ ಮತ್ತು ವಿಕಾಸತತ್ವದ ಅರಿವುಗಳೇ ಅವರ ಕಾವ್ಯವನ್ನು ಮುನ್ನಡೆಸಿವೆ ಮತ್ತು ಅವು ಅವರ ಸಾಮಾಜಿಕ ಸಾಮಾರಸ್ಯದ ಆಶಯಗಳೂ ಆಗಿವೆ.  `ಸಮಾನ್ಯತಾ ರೀತಿ ಅದರ ಪ್ರೀತಿ' (ಗೊಂಬೆಯಾಟ) ಎಂದು ಗುರುತಿಸಿಕೊಳ್ಳುವ ಕವಿ,
  ಬಹುದೊಡ್ಡ ಮಾತನಾಡುತ್ತ
  ದಿನದಿನದ ಸರಳ ಸಾಧಾರಣ ಬದುಕಿ
  ಗವಮಾನ ಮಾಡುವವರನ್ನು ಕಂಡರೆ
  ನನಗಾಗುವುದಿಲ್ಲ.
                          (ನಿಲುವು)

ಹೀಗೆ ಅವರು ಸಾಮಾನ್ಯರ ಬದುಕಿಗೆ ಹೊರಳಿ ನಿಲ್ಲುತ್ತಾರೆ. ಅವರ ಹಣತೆಯ ರೂಪಕವನ್ನು ಇಲ್ಲಿಯೂ ಹಿಂಜಬಹುದಾದರೆ, ಅದೂ ಸಹ ಅವರ ಸಾಮಾನ್ಯತೆಯ ದರ್ಶನಾ ರೂಪಕವೇ ಆಗಿದೆ ಎನ್ನಬಹುದು.

ಕುವೆಂಪು ಅವರ ಸಾಹಿತ್ಯದಲ್ಲಿ ಬರುವ ಶ್ರೀಸಾಮಾನ್ಯನ ಪಾತ್ರವು ಬಂಡಾಯ ಸಾಹಿತ್ಯ ಮತ್ತು ವಿಮರ್ಶೆಗಳಲ್ಲಿ ಮತ್ತಷ್ಟು ಸ್ಫುಟವಾಯಿತು. ಅಲ್ಲದೆ ತಾತ್ವಿಕ ಬೆಂಬಲವನ್ನೂ ಪಡೆದುಕೊಂಡಿತು.  ಜಿ.ಎಸ್.ಶಿವರುದ್ರಪ್ಪನವರ ಕಾವ್ಯದಲ್ಲಿ ಅಂಚಿನಲ್ಲಿರುವವರನ್ನು ಕೇಂದ್ರಕ್ಕೆ ತರುವ ಪಲ್ಲಟಗಳ ಸೂಚನೆಯಿದೆ. ಬಂಡಾಯವು ಇದನ್ನು ಪ್ರತಿಪಾದಿಸಿತು.  ಪುರೋಹಿತಶಾಹಿಯನ್ನು ಖಂಡಿಸುವ, ಮಠಾಧಿಪತಿಗಳನ್ನು ಟೀಕಿಸುವ ಪ್ರವೃತ್ತಿಯೂ ಅವರ ಹಲವಾರು ಕವನಗಳಲ್ಲಿ ಕಾಣುತ್ತದೆ.  ಶೂದ್ರಸಮೂಹದ ಈ ವ್ಯವಸ್ಥೆಯಲ್ಲಿ ನರಳುತ್ತಿರುವುದನ್ನು ಗುರುತಿಸುವ `ಶೂದ್ರನಿಗೊಂದು ಪತ್ರ' ಕವನ ಮುಖ್ಯವೆನಿಸುತ್ತದೆ.  ಶೂದ್ರನ ಅಸ್ತಿತ್ವವು ಇನ್ನಿಲ್ಲದಂತೆ ಅಂಚಿಗೆ ತಳ್ಳಲ್ಪಟ್ಟಿದೆಯೆನ್ನುವುದನ್ನು ಖೇದದಿಂದ ಗುರುತಿಸುವ ಕವನ ಆದು :
  ನಾಮಕೆ, ಜುಟ್ಟಿಗೆ, ದಾರ, ವಿಭೂತಿಗೆ
  ಸದಾ ಬಾಗುತ ಕಾಲೊತ್ತುತ್ತವೆ
  ದಿಂಡಿರುಳುತ್ತವೆ
  ಚೂರುಪಾರಿಗೇ ಪರದಾಡುತ್ತವೆ.
  ಹೀಗಿರುವೀ ಮುಂದೆಯ ಕೂಡಿಸಿ
  ಹೊಸಹೊಳೆಯಲ್ಲಿವನೆಲ್ಲವ ಮೀಯಿಸಿ
  ತೊಳೆಯಬಹುದೇ ಶತಮಾನದ ಕೊಳೆಯ?
  ಏನು ಮಾಡುವುದು, ಹೇಳೋ ಗೆಳೆಯ ?
                        (ಶೂದ್ರನಿಗೊಂದು ಪತ್ರ)

  ಹಾಗೇ ಪೂರಕವಾಗಿ ಈ ಸಾಲುಗಳನ್ನು ಗಮನಿಸಬೇಕು :
  ಮುಗ್ಧರೆದೆಯ ಗದ್ದೆಗಳಲ್ಲಿ
  ಮತ-ಮೌಢ್ಯದ ಬೀಜವ
  ಸದಾ ಬಿತ್ತಿಬೆಳೆಯ ತೆಗವ
  ಚಾಣಾಕ್ಷರ ವೈಭವ
  ಇವರ ನಡುವೆ ಪಠಿಸಬಹುದೆ
  ಸರ್ವೋದಯ ಮಂತ್ರವನು
              (ಪ್ರಗತಿ)

ಅವರ ಇತ್ತೀಚಿನ ಪದ್ಯ `ಕಿಷ್ಕಿಂದೆಯ ಕತ್ತಲಲ್ಲಿ' ಕವಿತೆಯಲ್ಲಿ ವೈದಿಕ ಪರಂಪರೆಗೆ ಬಲಿಬೀಳುವ ಶೂದ್ರಸಮುದಾಯದ ಬಗ್ಗೆ ಮರುಕವಿದೆ.  ಹಾಗೂ ಅವರ ಶಕ್ತಿವ್ಯಯವಾಗುತ್ತಿರುವುದನ್ನು ಗುರುತಿಸಿ, ಅವರ ಬಾಳು ಕತ್ತಲಾಗಿರುವುದನ್ನು ಕಾಣಿಸುತ್ತದೆ.
  ವೀರವಾಲಿಯನು ಮರೆಮೋಸದಿಂದಿರಿದ | ವನ
  ಬೆನ್ನ ಹಿಂದೆಯ ಹೋದ ನಮ್ಮವರು ಸುರಕ್ಷಿತವೆ,
  ರಕ್ಕಸ ಪಡೆಯ ರಣರಂಗದಲ್ಲಿ?
                    (`ಕಿಷ್ಕಿಂಧೆಯ ಕತ್ತಲಲ್ಲಿ')

ಆದರೆ ಅದೇ ಪದ್ಯದಲ್ಲಿ ಸುಪ್ತವಾದ ಶೂದ್ರಶಕ್ತಿಯ ಬಗೆಗಿನ ನಂಬಿಕೆಯು ಸಮಾಧಾನದ ಅಂಶವಾಗಿದೆ :
   ....ಯಾವ ನಿಜವಾದ
  ಸತ್ವವೂ ಬತ್ತಿಹೋಗುವುದಿಲ್ಲ ಇದ್ದ
  ಕಿಂದ್ದಂತೆಯೇ ಸುಪ್ತವಾಗಿರುವುದು, ಈ
  ಬೆಳೆವ ಮಕ್ಕಳ ಒಳಗೆ, ಮರವು ಮಲಗಿದ
  ಹಾಗೆ ಬೀಜದೊಳಗೆ.....

ಶೂದ್ರ ಸಂಸ್ಕೃತಿಯ ಬಗೆಗಿನ ಈ ನಂಬಿಕೆ ಸಾಮಾಜಿಕ ಸಾಮರಸ್ಯದ ಕಾಳಜಿಯಿಂದ ಬಂದಿದ್ದು ಎನ್ನಬಹುದು.  ರಹಮತ್ ತರೀಕೆರೆ ಅವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಶ್ರೀರಾಮ, ಲಕ್ಷ್ಮಣ ಸೀತೆಯರ ಮುಂದೆ  ಕೈಮುಗಿದು ಮಂಡಿಯೂರಿ ಕುಳಿತು ಆಂಜನೇಯನನ್ನು ವೈದಿಕಶಾಹಿಯು ಅವೈದಿಕರನ್ನು ಚಿತ್ರಿಸುವ ರೀತಿಯಾಗಿ ಗುರುತಿಸಿದ್ದಾರೆ.  `ವ್ಯಕ್ತಮಧ್ಯ'ದ ಕವನಗಳಲ್ಲಿ ಈ ಅರಿವು ವ್ಯಕ್ತವಾಗುವುದರೊಂದಿಗೆ, ತಮ್ಮ ಕಾಳಜಿಯನ್ನು ಕವಿ ತೋರ್ಪಡಿಕೊಳ್ಳುತ್ತಾರೆ ಎನ್ನಬಹುದು.

ಸ್ತ್ರೀಯರ ಬಗೆಗಿನ ಅವರ ದೃಷ್ಟಿಯು ಘನವೆತ್ತದ್ದಾಗಿದೆ.  ಈ ದೃಷ್ಟಿಗೆ ರಮ್ಯಹಿನ್ನೆಲೆಯಲ್ಲಿ ಸ್ಫೂರ್ತಿ ಒದಗಿದೆ.  ಪ್ರಕೃತಿಯ ಜೊತೆ ಸ್ತ್ರೀಯನ್ನು ಸಮೀಕರಿಸುವ ನವೋದಯದ ಭಾವವು ಇಲ್ಲಿದೆ.  ಸ್ತ್ರೀಕೇಂದ್ರಿತ ಕವನಗಳು ಹಲವಾರು ಜಿ‌ಎಸ್‌ಎಸ್ ಕಾವ್ಯದಲ್ಲಿ ಕಾಣುತ್ತವೆ.  ಮೆಟಫಿಸಿಕಲ್ ಆದ  ದೃಷ್ಟಿಕೋನವೇ ಇಲ್ಲಿಯು ಕೆಲಸ ಮಾಡುತ್ತದೆಯಾಗಿ, ಸ್ತ್ರೀಯ ಔನ್ನತ್ಯವೇ ಹೆಚ್ಚು ಕಾಣುತ್ತವೆ.  ಇದರ ಬಗೆಗಿನ  ತಾತ್ವಿಕ ಜಿಜ್ಞಾಸೆಗಿಂತ ಕವಿಯ ಕಾಳಜಿಯು ಸಾಮಾಜಿಕ ಸಾಮರಸ್ಯದ ಕಡೆಗೆ ತುಡಿಯುವ ಅಂಶವನ್ನು ಇಲ್ಲಿ ಗುರುತಿಸಬಹುದು.

ಈ ಎಲ್ಲಾ ಅಂಶಗಳಲ್ಲಿ ಜಿ‌ಎಸ್‌ಎಸ್ ಅವರ ಕಾವ್ಯವು ಸಬಾಲ್ಟ್ರನ್ ಅಂಶಗಳನ್ನು ಶ್ರೀಮಂತವಾಗಿ ಹೊಂದಿದ ಕಾವ್ಯವಾಗಿ ಕಾಣುತ್ತದೆ.  ಚರಿತ್ರೆಯನ್ನು ಅವರು ಅನುಸಂಧಾನ ಮಾಡುವ ರೀತಿಯೂ ವಿಭಿನ್ನವಾಗಿದ್ದು, ಚರಿತ್ರೆಯ ಪುನರಾವಲೋಕನಕ್ಕೆ ದಾರಿ ಮಾಡಿಕೊಳ್ಳುತ್ತದೆ.  ಇದುವರೆಗು ರಾಜಮಹಾರಾಜರ ಜೀವನ ಕತೆಗಳು, ಆವರ ಧೈರ್ಯಸಾಹಸದ ಕತೆಗಳನ್ನೇ ಚರಿತ್ರೆ ಎಂದು ನಂಬಿಸಲಾಗಿತ್ತು.  ಅದನ್ನು ಕವಿ ಮೊದಲು ಪ್ರಶ್ನಿಸಿಕೊಳ್ಳುತ್ತಾರೆ :
  ಈ ಚರಿತ್ರಯ ಚಕ್ರದಡಿ
  ನುಚ್ಚು ನೂರಾದವರು ಈ ಸಾ
  ಮಾನ್ಯ ಜನರೇ.  ಯಾರು ಬರೆದಿಟ್ಟಿದ್ದಾರೆ
  ಈ ಇವರು ಪಟ್ಟಪಾಡುಗಳನ್ನು?  ಶಾಸನದ ತುಂಬ
  ರಾರಾಜಿಸಿವೆ ಸದಾ ಪಟ್ಟಭದ್ರರ ಹೆಸರೇ.....
                                                  (ಚರಿತ್ರೆ ಅಂದರೆ-....)
ಏಕಲವ್ಯನ ಬೆರಳನ್ನು ಬಲಿತೆಗೆದುಕೊಂಡ ಕತೆಯನ್ನು ಚರಿತ್ರೆಯ ವಿಶ್ಲೇಷಣೆಗೆ ಬಳಸಿಲೊಳ್ಳುವ ಕವಿ ಹೇಳುತ್ತಾರೆ :
  ಬೆರಳಿನ ವಿಚಾರ ಹಾಗಲ್ಲ
  ಶೋಷಣೆಗೆ ಎಷ್ಟು ಮುಖ್ಯ? ಅದು
  ಚರಿತ್ರೆಯ ವಿಷಯ
            (ಚಕ್ರಗತಿ)

ಇಂಥ ಚರಿತ್ರೆಯ ವಿಷಯದ ಬಗ್ಗೆ ಜಾಗೃತರಾಗಿರಬೇಕೆಂಬುದೇ ಕವಿಯ ನಿಲುವು.  ಯಾವ ಕಾರಣಕ್ಕೂ ಚರಿತ್ರೆಯ ವೈಭವೀಕರಣ ಸಲ್ಲದೆಂಬ ಧೋರಣೆಯೂ ಅವರಲ್ಲಿದೆ.
  ಮುಂದಕ್ಕೆ ಚಲಿಸುತ್ತಿದ್ದರೆ ಅದು ಚರಿತ್ರೆ
  ನಿಂತು ಮಡುಗಟ್ಟಿದರೆ ಪುರಾಣ
  ಪರಿಸ್ಥಿತಿ ಹೀಗೆ ಪುರಾಣವಾಗುತ್ತಲೇ
  ಶುರುವಾಗುತ್ತದೆ ಅದರ ಪಾರಾಯಣ
                      (ಚರಿತ್ರೆ-ಪುರಾಣ)

ಚಾರಿತ್ರಿಕ ನಡೆಯನ್ನು ಗತಿಶೀಲತೆಯಿಂದ ಗುರುತಿಸುವ ಕವಿಗೆ, "ಚರಿತ್ರೆ ಎಂದರೆ ನಡೆದುದಷ್ಟೇ ಅಲ್ಲ, ನಡೆಯುತ್ತಿರುವುದೂ ಆಗಿದೆ".  ವಿಕಾಸಕ್ರಮದ ಗತಿಶೀಲತೆಯು ಜಿ‌ಎಸ್‌ಎಸ್ ಕಾವ್ಯದ ಒಳನೋಟ. `ಚಕ್ರ'ದ ಮೂಲಕ ಸಂಕೇತಿಸಿ ಅದನ್ನವರು ಸೂಚಿಸುತ್ತಾರೆ:
  ಈ ಕಾಲ ಮುಗಿತಾಯಕ್ಕೆ ಬಂದಿದೆ
  ಬದಲಾಗುವುದು ಅಗತ್ಯ
  ಚಕ್ರ ತಿರುಗುವುದಕ್ಕೆ
            (ಹೊಸಹುಟ್ಟು)

ಆವರ್ತನ ಗತಿಶೀಲತೆಯನ್ನು ಸೂಚಿಸುವ ನಿಟ್ಟಿನಲ್ಲಿ ಮನ್ವಂತರ ಮತ್ತು ಯುಗಾದಿಯ ಪರಿಕಲ್ಪನೆಗಳು ವ್ಯಕ್ತವಾಗುತ್ತವೆ.

ಜಿ.ಎಸ್.ಶಿವರುದ್ರಪ್ಪನವರ ಕಾವ್ಯವು `ಕಟ್ಟುವ' ರಚನಾತ್ಮಕ ನೆಲೆಯದು. ಸಮಷ್ಟಿಯನ್ನು ಕಟ್ಟಿಕೊಳ್ಳುವ ನೆಲೆಯಲ್ಲಿ ಅದು ವಿಕಾಸವಾಗುತ್ತದೆ.  ಇದಕ್ಕಾಗಿ ಸಮಗ್ರತೆಯ ದೃಷ್ಟಿಯೊಂದನ್ನು ಕವಿ ಹೊಂದಿದ್ದಾರೆ.  ಆ ಕಾರಣದಿಂದಲೇ ಸಾಮಾಜಿಕ ಅಸಮತೋಲನಗಳು ಸಾಮರಸ್ಯವನ್ನು ಹಾಳುಗೆಡಹುವ ಅಂಶಗಳಂತೆ ಅವರಿಗೆ ಕಾಣುತ್ತದೆ.  ವಾಸ್ತವವಾಗಿ ಪರಿಪೂರ್ಣತೆಯನ್ನು ಕಲ್ಪನೆಯು ರಮ್ಯವಾದಿ ನಿಲುವೇ ಹೌದು.  ಒಂದು ಪರಿಪೂರ್ಣ body politic   ನ ಸ್ವರೂಪವನ್ನು ಪರಿಭಾವಿಸುವ ಕವಿ ಅದನ್ನು `ಜನಗಣಮನ ಅಧಿನಾಯಕ' ಎನ್ನುವ ಕಲ್ಪನೆಯಲ್ಲಿ ಕಾಣುತ್ತಾರೆ. ಈ ಕಲ್ಪನೆಯು ಚಲಿಸುವ ಚಕ್ರದಂತೆ ಕಂಡು ವಿಕಾಸಕ್ಕಾಗಿ ಆವರ್ತನೆಗೊಳ್ಳುವಂತದ್ದು.  ಚಕ್ರದಲ್ಲಿನ ಕಡ್ಡಿಗಳು ಭಂಗಗೊಂಡರೆ ವಿಕಾಸದ ಚಲನೆಯು ಹಿಮ್ಮುಖವಾಗಿಬಿಡುತ್ತದೆ. ಜನತಂತ್ರದಲ್ಲಿ ನಂಬಿಕೆಯಿಟ್ಟಿರುವ ಕವಿಗೆ ಅದರ ವಿಕಾಸವು ಮುಖ್ಯವೇ ವಿನಾಶವಲ್ಲ.  ಆದ್ದರಿಂದಲೇ ಅದು ಹಾಳಾಗುತ್ತಿದೆ ಎನ್ನುವ ಸಂದರ್ಭದಲ್ಲೆಲ್ಲ ಅದನ್ನು ಪರಿಶೀಲಿಸುವ, ವ್ಯಂಗ್ಯಮಾಡುವ ಚಿಕಿತ್ಸಕ ಕ್ರಮಗಳಲ್ಲಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಅವರ ಈ ಸಾಲುಗಳನ್ನು ನೋಡಬೇಕು:
  ಜನಗಣಮನ ಅಧಿನಾಯಕ
  ಕೀಲನು ಕಳಚುವ ತಂತ್ರಗಳು
     (ಸ್ವಾತಂತ್ರ್ಯೋತ್ಸವ-೧೯೮೪)

ಕೀಲು ಮುರಿಯದ ಸಮಗ್ರತೆಯ ಕಲ್ಪನೆಯೇ ಇಲ್ಲಿ ಆವರಿಸಿದೆ.  ಹಾಗೆಯೇ ಅವರ `ಒಡೆದ ಕನ್ನಡಿ' ಪದ್ಯವನ್ನು ಉದಾಹರಿಸುವುದಾದರೆ ಅಲ್ಲಿಯೂ ಕನ್ನಡಿ ಪೂರ್ಣದೃಷ್ಟಿಯ ಸಮಗ್ರತೆಯ ಸಂಕೇತ. ಅದರಲ್ಲಿ ಬಿರುಕುಗಳುಂಟಾದರೆ ಪೂರ್ಣನೋಟ ಸಾಧ್ಯವಾಗದು.
ಈ ಅರಿವು ಇರುವುದರಿಂದಲೇ ಕವಿ ಹೇಳುತ್ತಾರೆ ;

  ಒಡೆದಿರುವೀ ಕನ್ನಡಿ ಬಿರುಕಿನ ಗೆರೆಗೆರೆಯೇ
  ಗಡಿರೇಖೆಯೇ ಗುರುತು,
  ಕಾಣುವುದೆಂತೀ ಸಮಗ್ರ ಮಾನವ್ಯದ ಮುಖವಿದರೊಳು
  ಬರಿ ವಿಕೃತಿಯ ಹೊರತು?
                      (ಒಡೆದ ಕನ್ನಡಿ)

ಇದೇ ಪದ್ಯದಲ್ಲಿ ಬರುವ ಪದಪುಂಜ-`ಒಡೆದ ಹಡಗಿನತುಂಡು' ಎನ್ನುವುದೂ ಸಹ ಸಮಗ್ರತೆಯ ದೃಷ್ಟಿಕೋನದಲ್ಲೇ ಹುಟ್ಟಿರುವಂಥದ್ದು.  ಇದೊಂದು ರಮ್ಯಕಲ್ಪನೆಯೇ.  ಸಿನಿಕತೆಯ ಸೋಂಕಿಲ್ಲದೆ ಕವಿ ರಮ್ಯಭಾವದಿಂದಲೇ ಆಶಾವಾದಿಯಾಗಬಲ್ಲರು.  ಹಾಗಾಗಿ ಅವರು ಹೇಳುತ್ತಾರೆ ;
  ಒಂದೇ ಒಂದೇ ನಾವೆಲ್ಲರೂ ಒಂದೇ
  ಈ ದೇಶದೊಳೆಲ್ಲಿದ್ದರು
  ಭಾರತ ನಮಗೊಂದೇ
         (ಐಕ್ಯಗಾನ)
ಅವರ ಆಶಯವು ಧನಾತ್ಮಕವಾಗಿ ವ್ಯಕ್ತವಾಗುತ್ತದೆ :
  ಮೊಳೆವ ಪೈರಿನ ಮೇಲೆ ಬೆ೦ಕಿ
  ಮಳೆಗರೆದು ಹಾಳು ಮಾಡದಿರೋಣ
  ಸಾಧ್ಯವಾದಷ್ಟು ! ನೀರೆರೆದು ಬೆಳೆದು ಇಬ್ಬರೂ
  ಮನೆಯ೦ಗಳದ ಕಣದಲ್ಲಿ ಬಣವೆ ಕಟ್ಟೋಣ
  ತೂರಿಕೊಳ್ಳಲಿ ನಾಳೆ | ಇದರ ಜಳ್ಳು-ಕಾಳುಗಳನ್ನು
  ಈ ನಮ್ಮ ಮಕ್ಕಳೇ
                        (ಒಪ್ಪಂದ)

ಈ ಕಟ್ಟುವಿಕೆಯ ಆಶಯವು ಸಾಮರಸ್ಯವು ಆಶಯವೇ ಆಗಿದೆ.  ಇದೊಂದು ರಮ್ಯಭಾವವೇ ಆದರೂ, ಯಾವುದೇ ಒಂದು ಭೌತಿಕ ನಿರ್ಮಾಣಕ್ಕೂ ಕನಸುಗಳ ತಳಹದಿಯಿರಬೇಕು.  ಕನಸು, ದರ್ಶನಗಳಿಲ್ಲದೆ ಕಟ್ಟುವಿಕೆಯು ಸಂಭವಿಸುವುದಿಲ್ಲ.  ಕವಿಗೆ ಕನಸುಗಳಿವೆ.  ಆದರೆ ತೀರಾ ಭ್ರಮಾತ್ಮಕವಾಗಿಲ್ಲ.. ಈ ಕಾರಣದಿಂದಲೇ ಅವರು ಹೇಳುತ್ತಾರೆ ;
  ಈ ಕತ್ತಲೆಯನು ಗೆದ್ದು
  ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
  ಹಣತೆ ಹಚ್ಚುತ್ತೇನೆ ನಾನು
        (ನನ್ನ ಹಣತೆ)

ಈ ರೀತಿಯ ಕನಿಷ್ಠ ಆಶಾವಾದ, ಕನಸುಗಾರಿಕೆಗಳಿಲ್ಲದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ.

ಕಟ್ಟುವಿಕೆಗೆ ಪರಿಕರವಾಗಿ ಕವಿ ಬಳಸುವುದು ಪ್ರೀತಿಯನ್ನು.  ಕಂಡುಕೊಳ್ಳುವ ಅರಿವು ಮತ್ತು ಸಹಸ್ಪಂದನದ ದಾರಿಗಳನ್ನು ಹೊಳೆಯಿಸುವುದು ಪ್ರೀತಿ. ಹೃದಯಗಳನ್ನು ಬೆಸೆಯಬಲ್ಲ, ಎಲ್ಲೆಗಳನ್ನು ಮೀರಿ ಸಮಷ್ಟಿಯ ಹಿತವನ್ನು ಕಾಣಬಲ್ಲ ಶಕ್ತಿ ಅದಕ್ಕಿದೆ.  ಪ್ರೀತಿಯೆನ್ನುವುದಿಲ್ಲಿ ಸ್ಥಾಯಿಭಾವವಾಗಿ ನಿಲ್ಲುತ್ತದೆ.
  ಪ್ರೀತಿ ಇಲ್ಲದ ಮೇಲೆ
  ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
  ಬೆಳಕು ಮೂಡೀತು ಹೇಗೆ?
  (ಸೆರಮನೆಯ ಕಂಬಿಯ ನಡುವೆ
  ಕಮರುವ ಕನಸು ಕೊನರೀತು ಹೇಗೆ?
  ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕೆ
  ಪದ್ಯವಾದೀತು
  ಹೇಗೆ?
            (ಪ್ರೀತಿ ಇಲ್ಲದ ಮೇಲೆ)

ಪ್ರೀತಿಯೆಂಬುದು ಸಂಯೋಜಕ ಶಕ್ತಿ.  ಇದು ಜಿ. ಎಸ್. ಶಿವರುದ್ರಪ್ಪನವರು ಕಾಣುವ ಸಾಮರಸ್ಯದ ದರ್ಶನ.  `ಅವೈರದಿಂದ ಮಾತ್ರ ವೈರವು ನಾಶವಾಗುತ್ತದೆ.2 ಇದೇ ಸನಾತನ ಧರ್ಮ' ಎನ್ನುತ್ತಾನೆ ಬುದ್ಧ.  ಆ ಧರ್ಮಚಕ್ರ ನಿರಂತರವಾಗಿ ತಿರುಗುತ್ತ ಪ್ರೀತಿಯ ವಿಕಾಸಕ್ರಮವನ್ನು ಕಂಡುಕೊಳ್ಳುವಂತೆ ಜಿ‌ಎಸ್‌ಎಸ್ ಆವರ ಕಾವ್ಯದ ದರ್ಶನ ಇದೆ.  ಅವರ ಸಾಲುಗಳಲೇ ಈ ಲೇಖನವನ್ನು ಕೊನೆಗಾಣಿಸುವುದಾದರೆ,
  ಒಲವಿಗೆ ಒಲವಲ್ಲದೆ
  ಬೇರೇನಿದೆ ಕೊಡುಗೆ
           (ಮಳೆ)
(ಕರ್ನಾಟಕ ಸಾಹಿತ್ಯ ಆಕಾಡೆಮಿ ಫೆಬ್ರವರಿ ೨೦೦೭ ರಲ್ಲಿ ಜಿ‌ಎಸ್‌ಎಸ್ ಅವರ ಮೇಲೆ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧ).
ಆಕರ ಗ್ರಂಥಗಳು
1.  ಜಿ.ಎಸ್-ಶಿವರುಪ್ರಪ್ಪ, ಸಮಗ್ರಕಾವ್ಯ.
2. ಹಣತೆ (ಜಿ.ಎಸ್.ಶಿದರುವುಪ್ಪ ಅಭಿನಂದನ ಗ್ರಂಥ).

                     *****

ಕೀಲಿಕರಣ: ಎಂ. ಎನ್. ಎಸ್. ರಾವ್

ಕೇಳಯಯ್ಯ ಹುಲಿರಾಯ, ನಾನು ಮೆಟ್ಟಿದ ಭೂಮಿ ಬೆಳೆವುದು

- ತಾರಿಣಿ ಶುಭದಾಯಿನಿ

'ಗೋವಿನ ಹಾಡು' ಕನ್ನಡದ ಕಥನಗಳಲ್ಲಿ ಬಹುವಾಗಿ ಓದಿಸಿಕೊಂಡಿರುವಂತದ್ದು.  ಅಲ್ಲಿ ಬರುವ ಪುಣ್ಯಕೋಟಿಯೆಂಬ ಹಸು, ಅರ್ಬುತನೆಂಬ ಹುಲಿಗಳು  ಓದುಗರಿಗೆ ನಿರಂತರವಾಗಿ ಸಂಕೇತಗಳಾಗಿ ಒದಗುತ್ತ ಬಂದಿರುವುದನ್ನು ನೋಡಿದಾಗ ಆದೊಂದು ಉತ್ತಮ ಸಾಂಸ್ಕೃತಿಕ ಪಠ್ಯ ಎಂದು ಒಪ್ಪಬಹುದಾಗಿದೆ.  ಹಸು-ಹುಲಿಗಳು ವೈರುಧ್ಯದ ಅಂಶಗಳನ್ನು ಹೊಂದಿರುವ ಎರಡು ಪ್ರಾಣಿ ಸಂಕೇತಗಳು.  ಆವುಗಳ ದ್ವಂದ್ವಾತ್ಮಕ ಸ್ವರೂಪಗಳ ಕಾರಣದಿಂದಲೇ ಆವು ಕಾಲದ ವಿಶ್ಲೇಷಣೆಗೊಳಪಡುವ ಸಂದರ್ಭದಲ್ಲಿ ನಿರಂತರ ಸಂಕೇತಗಳಾಗುವ ಅವಕಾಶ ಹೊಂದಿವೆ.  ಅಲ್ಲದೆ ಪಠ್ಯದ ನೇಯ್ಗೆಯನ್ನು ನೋಡಿದರೆ, ಎರಡು ಧೃವಗಳ  ಇರುವಿಕೆಯ ಒತ್ತಡವನ್ನು ಸೂಚಿಸುವಂತಿದೆ. ಹೀಗಿರುವಲ್ಲಿ ಕಾಲದೇಶಗಳ ಸಾಂದರ್ಭಿಕ ಒತ್ತಡಗಳು, ಸಂಸ್ಕೃತಿ ಮತ್ತು  ಸಮಾಜದ ಪುನಾರಚನೆಯನ್ನು ಮಾಡುವಂತಹ ಒಳನೋಟಗಳ  ಹುಡುಕಾಟದಲ್ಲಿರುತ್ತ ವೈರುಧ್ಯಗಳ ಸ್ಥಿತಿಯನ್ನು  ತಮ್ಮ ತಮ್ಮ ನೆಲೆಗಟ್ಟಿನಲ್ಲಿ ಅನುಸಂಧಾನ ಮಾಡುವ ಸಾಧ್ಯತೆಗಳಿರುತ್ತವೆ. ಸಂಸ್ಕೃತಿ ಪಠ್ಯಗಳಲ್ಲಿರಬಹುದಾದ  ಬಹುಮುಖತ್ವನ್ನು ಕಡೆಗಣಿಸದೆ, ಬೇರೆ ಬೇರೆ ನೆಲೆಗಳಿಂದ ಪಠ್ಯವನ್ನು ನೋಡುವುದರಿಂದ ಆದರ ಅರ್ಥ ಮತ್ತು ಸಮಕಾಲೀನ ಸಂದರ್ಭಕ್ಕೆ ಒಗ್ಗುವ ಗುಣಗಳನ್ನು ವ್ಯಾಪಕವಾಗಿ ಹಿಗ್ಗೆಸಿಕೊಳ್ಳುವ ಆವಕಾಶಗಳು ಇರುತ್ತವೆ.  ಪುನರ್ ಪರಿಶೀಲನೆಯ ಕ್ರಮಗಳಾದರೋ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳ ಕಾರಣಗಳಿಂದಲೇ ಪ್ರೇರಿತವಾಗುತ್ತವೆಯಲ್ಲವೆ? ಈ ಹಿನ್ನೆಲೆಯಲ್ಲಿ 'ಗೋವಿನ ಹಾಡು' ಕಥನವು ಬೇರೆ ಬೇರೆ ನೆಲೆಗಳಿಂದ ವಿಶ್ಲೇಷಣೆಗೊಳಪಡುತ್ತಾ ಬಂದಿರುವುದು ಗಮನಾರ್ಹ. ಓದುಗರ ಓದು ಕಾಲದೇಶಗಳ ಒತ್ತಡಗಳಿಗೆ ಪಕ್ಕಾಗಿ ತಮ್ಮದೇ ಆದ  ಧೊರಣೆಗಳನ್ನು ಹೊಂದಿರುವ ಸಾಧ್ಯತೆಗಳನ್ನೂ ಈ ಕಥನ ಹೇಳುತ್ತ ಇರುವುದು ಕುತೂಹಲ ಹುಟ್ಟಿಸುತ್ತದೆ.

ಸಾಮಾನ್ಯವಾಗಿ ಮೊದಲ ಓದಿನಲ್ಲಿ 'ಗೋವಿನ ಹಾಡು'  ಒಂದು ಶಿಶು ಕವನವಾಗಿ ಓದಲ್ಪಡುತ್ತದೆ. ಹಸುವಿನ ಮೇಲೆ ಎರಗಲು ಬಂದ ಹುಲಿ ಕ್ರೂರಿಯಾಗಿದ್ದು, ಹಸುವಿನ ಸತ್ಯವೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಬಂಧು ಬಳಗ' ಎಂಬ ನೀತಿಯಿಂದ ಆದರ ಮನಸ್ಸು, ಪರಿವರ್ತನಗೊಂಡು ಸಾಯುತ್ತದೆ. ನೀತಿ ಮತ್ತು ಕಲೆಯು ನೀಡಬಹುದಾದ ರಂಜನೆಯು ಮೊದಲ ಓದಿಗೆ ಸಿಕ್ಕುಬಿಡುತ್ತದೆ.

ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಪುನರ್ ಪರಿಶೀಲನೆಗಳು, ಪುನರ್ ಓದುಗಳು ಕಾವ್ಯದ ಅರ್ಥವನ್ನು ಸದಾ ನಿರಚನೆಗೊಳಿಸುತ್ತಿರುತ್ತವೆ ಮತ್ತು ಹೊಸ ಆರ್ಥಗಳನ್ನು ಸ್ಥಾಪಿಸುತ್ತಾ ಹೋಗುತ್ತವೆ. ಸಾಂಸ್ಕೃತಿಕ ಪಲ್ಲಟಗಳ ಕಾಲದಲ್ಲಿಯಂತೂ ಈ ಪ್ರಕ್ರಿಯೆ ಸ್ಫೋಟಕವೆಂಬಂತೆ ಘಟಿಸುತ್ತಾ ಇರುತ್ತದೆ.  ಸ್ಥೂಲವಾದ ಆರ್ಥ ಆನೇಕ ಸ್ತರಗಳಲ್ಲಿ ಬಿಚ್ಚಿಕೊಳ್ಳಲಾರಂಭಿಸುತ್ತದೆ. ಕಾವ್ಯದ ಸಾಲುಗಳಲ್ಲಿರುವ ಮೌನದ ದನಿ, ನಿರೂಪಣಾ ದನಿಯ ಸೂಕ್ಷ್ಮ ಆಭಿವ್ಯಕ್ತಿಯ ಕಾಕು, ಮತ್ತು ಕೇಂದ್ರಗಳ ಬದಲಾವಣೆ (ಆಂದರೆ ಹುಲಿ- ಹಸು,  ಹಸು-ಹುಲಿ ಹೀಗೆ ಮಾಡಿಕೊಂಡಾಗ) ಇತ್ಯಾದಿಗಳು ಬೇರೆ ಆಯಾಮಗಳನ್ನು ಕೊಡುವ ಸಾಧ್ಯತೆಗಳಿರುತ್ತವೆ. ಆಗ ಕಥೆ ಹೊಸದಾಗಿ ಪ್ರಾರಂಭವಾಗುವಂತೆ ಕಾಣುತ್ತದೆ.

ಗೋವಿನ ಹಾಡನ್ನು ಓದುವ ಹೊತ್ತಿನಲ್ಲೇ ಆದಕ್ಕೆ ಸುದೀರ್ಘವಾದ ಓದಿನ ಇತಿಹಾಸ ಇದೆ ಎನ್ನುವುದನ್ನು ಗಮನಿಸಬೇಕು. ಕನ್ನಡ ಸಂಸ್ಕೃತಿಯ ಪಠ್ಯ ಎಂದು ಪರಿಗಣಿಸಲಾಗಿರುವ ಕಥನ ಇದಾಗಿರುವುದರಿಂದ ಪ್ರತಿಯೊಂದು ಓದಿಗೂ ಆಯಾ ಕಾಲದ ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳಿವೆ.  ಹಸುವನ್ನು ಕೇಂದ್ರವಾಗಿರಿಸಿಕೊಂಡ ಓದುಗಳು, ಹುಲಿಯನ್ನು ಕೇಂದ್ರವಾಗಿರಿಸಿಕೊಂಡ ಓದುಗಳು ಎಂದು ಅವನ್ನು ಸ್ಥೂಲವಾಗಿ ವಿಭಜಿಸಬಹುದಾದರೆ, ಪ್ರತಿಯೊಂದು ಓದಿಗೂ ನಾನು ಮೇಲೆ ಹೇಳಿದ ಕಾರಣಗಳಿರುವುದು ಸ್ಪಷ್ಟ.  ಹುಲಿ-ಹಸುವಿನ ಆದ್ಯತೆಗಳನ್ನು ಮಾಡಿಕೊಳ್ಳುವುದರ ಮೂಲಕವೇ ಒಂದು ತಾತ್ವಿಕ ನಿಲುವನ್ನು ಪ್ರತಿಪಾದಿಸುವ ಯತ್ನಗಳು ನಡೆದಿರುತ್ತವೆ.  ಈ ಕಾರಣದಿಂದಲೇ ಓದುಗಳನ್ನು ಪ್ರಭಾವಿಸಿರುವ ಆಂಶಗಳಲ್ಲಿ ಒತ್ತಾಯ ಮತ್ತು ರಾಜಕೀಯ ಪ್ರೇರಣೆಗಳು ಎದ್ದು ಕಾಣುತ್ತದೆ.

ಪುಣ್ಯಕೋಟಿಯನ್ನು ಕೇಂದ್ರವಾಗಿಟ್ಟುಕೊಂಡು ಓದುವ ಓದಿನಲ್ಲಿ ಪುತಿನ ಆ ಕಥನದ ಮೌಲ್ಯವಿವೇಚನೆ ಮಾಡುತ್ತಾರೆ.  ಆ ಕಥಾಸಂವಿಧಾನದಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಅಂಶಗಳನ್ನು ಗುರುತಿಸಲು ಬಯಸುತ್ತಾರೆ.  ಗಾಂಧೀಜಿ ಬಳಸಿದ ಯಶಸ್ವೀ ಮಾದರಿಗಳಲ್ಲಿ ಅಹಿ೦ಸೆ ಮತು ಸತ್ಯಾಗ್ರಹಗಳು ಮುಖ್ಯವಾದವು. ಹಿಂಸೆಯು ಆಹಿಂಸೆಯ ಪ್ರತಿರೋಧದಿಂದ ದಮನಗೊಳ್ಳುತ್ತದೆ ಹಾಗೂ ತನ್ನನ್ನು ತಾನು ಹಿಂಸೆ ಮಾಡಿಕೊಳ್ಳುವ ಕ್ರಮವು ಹಿಂಸೆಯ ಜಿಗುಟುತನವನ್ನು ಕಡಿಮೆ ಮಾಡುತ್ತದೆ. ಇದನ್ನು ಗಾಂಧಿ ಸೌಮ್ಯ ಮನಃಪರಿವರ್ತನಾ ವಿಧಾನವಾಗಿ ಬಳಸಿದರು.  ಆಧ್ಯಾತ್ಮಿಕ ಮೌಲ್ಯಗಳಾಗಿರುವ ಇವನ್ನು ಅವರು ರಾಜಕೀಯ ಮೌಲ್ಯಗಳನ್ನಾಗಿ ಪರಿವರ್ತಿಸಿಕೊಂಡರು. ಇದರಿಂದ ಅಹಿಂಸೆಯ ಮತ್ತು ಸತ್ಯಾಗ್ರಹದ ಮೌಲ್ಯಗಳು ಸಾಮಾಜಿಕ ಜೀವನದ ಪರಿಧಿಯನ್ನು ಹೆಚ್ಚಿನ ವ್ಯಾಪ್ತಿಯನ್ನು ಪಡೆದುಕೊಂಡವು. ಇಲ್ಲಿ ಒಂದು ಆಂಶ ಗಮನಿಸಬೇಕು. ಅದೆಂದರೆ, ಸ್ವಯಂಹಿಂಸೆ ಮತ್ತು ಸತ್ಯಾಗ್ರಹಗಳ ಅಹಿಂಸಾ  ನಿಲುವುಗಳನ್ನು ಗಾಂಧೀಜಿ ರಾಜಕೀಯ ಶಸ್ತ್ರಗಳಾಗಿ ಬಳಸುತ್ತಿದ್ದ ಸಂದರ್ಭದಲ್ಲಿಯೇ ಅವರ ಸಮಕಾಲೀನರಲ್ಲಿ ಹಲವರು ಉಗ್ರಗಾಮಿ ನಿಲುವುಗಳನ್ನು ಇಟ್ಟುಕೊಂಡು ಹಿಂಸಾತ್ಮಕ  ಧೋರಣೆಗಳಿಂದ ಹಕ್ಕೊತ್ತಾಯ ಮಾಡುತ್ತಿದರು.  ಅವರ ಹೋರಾಟಗಳು ಯಶಸ್ವಿಯಾದುದು ಹಿಂಸೆಯನ್ನು ಅದರ ವಿರೋಧಿ ಭಾವದಿಂದ ಎದುರುಗೊಂಡಿದ್ದರಿಂದಲೇ.  ಪುತಿನ ಆವರಿಗೆ ಈ ಸಾರ್ಥಕತೆಯು ಸೂಕ್ತವಾಗಿದೆ. ಅವರ ಮುಂದೆ ಇದ್ದ ಗಾಂಧೀ ಮಾರ್ಗದ ಸತ್ಯಾಗ್ರಹ ಮತ್ತು ಸಜ್ಜನಿಕೆಯ ವಿಧಾನಗಳು ಪುತಿನ ಆವರಿಗೆ  ಮುಖ್ಯವಾಗಿರುವುದರಿಂದ ಹಸುಕೇಂದ್ರಿತ  ನೋಟವು ಪ್ರಸ್ತುತವಾಗಿದೆ. ಸತ್ಯಕ್ಕಾಗಿ ನಿಲ್ಲುವ ಹಸು, ಹುಲಿಯ ಮನಸ್ಸು ಪರಿವರ್ತನೆ ಮಾಡಬಲ್ಲ ಚೈತನ್ಯ ಹೊಂದಿರುತ್ತದೆಂದು ಆವರು ಭಾವಿಸುತ್ತಾರೆ. ಆಲ್ಲದೆ ಪುನರುಜ್ಜೀವನಕಾಲದ ಮೌಲ್ಯಗಳಿಂದಾದ ಆಧ್ಯಾತ್ಮಿಕ ಶಕ್ತಿಯು ಜೀವವನ್ನು ವಿಶ್ವಪ್ರಜ್ಞೆಗೆ ಮುಟ್ಟಿಸುವ ಸತ್ಯವುಳ್ಳದ್ದು ಎಂದು ಪುತಿನ ಗುರುತಿಸುತ್ತಾರೆ.  ಅ ಮೂಲಕ ರಾಜಕೀಯ ಆಶಯಗಳ ರಾಮರಾಜ್ಯದ ಪರಿಕಲ್ಪನೆಯತ್ತ ಪಠ್ಯದ ಓದನ್ನು ತಂದು ನಿಲ್ಲಿಸುತ್ತಾರೆ. ಅವರ ಮಾತುಗಳಲ್ಲಿ ಹೀಗೆ ವ್ಯಕ್ತವಾಗಿದೆ: "...ಆದು ಅಹಿಂಸೆಯ ಶುದ್ಧ ಮತ್ತು ಆವಿರ್ಭೂತವಾಗಲಿರುವ ಸ್ಥಿತಿ-ಮಾನವ ಇನ್ನೂ ಪಡೆದುಕೊಳ್ಳಬೇಕಾದುದು, ಬಹುಶಃ ಗಾಂಧೀಜಿ ಕನಸು ಕಂಡ ಸ್ಥಿತಿ. ವ್ಯಕ್ತಿ ಪ್ರಜ್ಞೆ ಮತ್ತು ವ್ಯಕ್ತಿತ್ವದ ಪ್ರತಿಭಟನೆಯನ್ನು ದಾಟಿ ವಿಶ್ವಪ್ರಜ್ಞೆಗೆ ಏರಲಿರುವ ದಿವ್ಯಪ್ರಯತ್ನ... ತಮ್ಮನ್ನು ಹಿಂಸಿಸುವುದರ ಬಗೆಗೆ ಇಂತಹ ಸೌಮ್ಯಸುಂದರ ನಡತೆ ಹುತಾತ್ಮರಿಗಿರುವುದು  ಆಪೂರ್ವ... " (ಪುತಿನ ಸಮಗ್ರ ಗದ್ಯ: ಪು೮೬೧-೨)

ಹಸುಕೇಂದ್ರವನ್ನು ಬದಲಾಯಿಸಿ ಹುಲಿಕೇಂದ್ರದ ನೆಲೆಯಲ್ಲಿ ಪಠ್ಯವನ್ನು ಓದುವಾಗ ಧೋರಣೆಗಳು ಭಿನ್ನವಾಗುತ್ತದೆ. ಈ ದೃಷ್ಟಿಕೋನದಿಂದ ಕಾಣುವ ರಾಜಕಾರಣವು ಸಾಂಸ್ಕೃತಿಕವಾದುದು. ಒಂದು ಸಂಸ್ಕೃತಿಯು ಉಜ್ವಲ ಎನ್ನುವಂತೆ ಮಾಡಿ, ಇನ್ನೊಂದು ಸಂಸ್ಕೃತಿಯನ್ನು ಕೀಳುಗಳೆದು ನೋಡುವ ವಿಧಾನ ಎನ್ನಿಸುವಂತೆ ಮಾಡುತ್ತದೆ. ಮೊಗಳ್ಳಿ ಗಣೇಶ ಮತ್ತು ಹಿರೇಮಠ ಆವರುಗಳು ಎತ್ತಿಕೊಳ್ಳುವ ಚರ್ಚೆಯ ವಿಷಯ ಇದು.  ಹಸು ಗುಂಪಿನ ಹಸಿವನ್ನು ಮುಂದು ಮಾಡುವ ವಾದವು ಹುಲಿಯ ಹಸಿವನ್ನು ಪರಿಗಣಿಸುವುದಿಲ್ಲವೇಕೆ?  ಎಂಬುದು ಪ್ರಶ್ನೆಯಾಗುತ್ತದೆ.  ಹುಲಿಯನ್ನು ಹಸುವನ್ನು ತಿನ್ನಲು ಬಯಸಿದ್ದೇ ಆಪರಾಧ ಎನ್ನುವಂತೆ ಕೊನೆಯಲ್ಲಿ ನೆಗೆದು ಬಿದ್ದು ಸಾಯುವಂತೆ ಮಾಡುವುದೇಕೆ?  ಹಸು-ಹುಲಿಗಳೆರಡೂ ದಟ್ಟಕಾನನದಲ್ಲಿ ವಾಸಿಸುವ ಪ್ರಾಣಿಗಳು.  ಹುಲಿಯ ಆಹಾರ ಹಸು.  ಹಸುವಿನ ಸಂತತಿಯನ್ನು ಉಳಿಸುವ ಭರದಲ್ಲಿ ಹುಲಿ ತನ್ನ ಪ್ರಕೃತಿ ಸಹಜ ಆಹಾರದ ಆಯ್ಕೆಯನ್ನು ಬಿಟ್ಟುಕೊಡುವ ಸ್ಥಿತಿ ಉಂಟಾಗುವುದು ಸಾಂಸ್ಕೃತಿಕ ರಾಜಕಾರಣದ ಧೋರಣೆಗಳಿಂದ ಮತ್ತು ರಾಜಕಾರಣದ ಹುನ್ನಾರಗಳು ನ್ಯಾಯ ನಿರ್ಣಯವನ್ನು ಏಕಪಕ್ಷೀಯವಾಗಿ ಮಾಡಲೆತ್ನಿಸುತ್ತಾ ತಮ್ಮದನ್ನು ಹೇರಲು ಬಯಸುತ್ತಿವೆ.  ಅಲ್ಲಿರುವ ನ್ಯಾಯ ನಿರ್ಣಯಕ್ಕೆ ಪ್ರಮಾಣಗಳು ದೊರೆಯುತ್ತಿರುವುದು ಹಸುವಿನ ಕಡೆಯಿಂದ ಹೊರತಾಗಿ ಹುಲಿಯ ಕಡೆಯಿಂದಲ್ಲ. ಹಸುವಿಗೆ ಕರುಣೆ ತೋರಲು ಭೂಮಿಕೆ ಸಜ್ಜಾಗಿರುವಂತೆ ಸತ್ಯದ ಬಗೆಗಿನ ಆದರ ಪ್ರೇಮವನ್ನು ಹೇಳಲಾಗಿದೆ.  ಇದು ಒತ್ತಾಯವೂರ್ವಕವೆನಿಸುತ್ತದೆ.  ಹುಲಿ ಕೇಂದ್ರಿತ ಈ ದೃಷ್ಟಿಕೋನವು ಹೊಳೆಯಿಸುವ ಪ್ರಧಾನ-ಆಧೀನ ಸಂಸೃತಿಗಳ ಸಂಘರ್ಷಮಯ ಸ್ಥಿತಿ ಮತ್ತು ಒಳಗೆ ಹುದುಗಿರುವ ರಾಜಕಾರಣವನ್ನು ಬಯಲು ಮಾಡುವ ಆಶಯ- ಇವು ಗೋವಿನ ಹಾಡು ಕಥನದ ವಿಕಲ್ಪಗಳನ್ನು ಸ್ಪಷ್ಟವಾಗಿಯೇ ಹೊರತೋರುವಂತೆ ಮಾಡುತ್ತಿವೆ.

ಮತ್ತೆ ಹಸುಕೇಂದ್ರಿತ ದೃಷ್ಟಿಕೋಣಕ್ಕೆ ಬರೋಣ. ಹಸು-ಹುಲಿಗಳನ್ನು ಲಿಂಗ ರಾಜಕಾರಣದ ಸಂದರ್ಭ (context)ದಲಿಟ್ಟು ನೋಡುವಾಗ ಹಸುವಿನ ಕಥನ ಒಂದು ಹೆಣ್ಣಿನ ನೆಲೆಯದ್ದಾಗಿ, ಸ್ತ್ರೀತ್ವ ತಾಯ್ತನ ಮತ್ತಿತರ ಸ್ತ್ರೀ ಸಂಬಂಧಿತ ಆಂಶಗಳನ್ನು ಹೊಳೆಯಿಸುವುದಾಗುತ್ತದೆ.  ಪಠ್ಯದ ಓದಿನಲ್ಲಿ ಹೆಣ್ತನವನ್ನು ಕುರಿತ ಪೂರ್ವಾಗ್ರಹಗಳು ಇರುವಂತೆಯೇ ಹೆಣ್ಣಿನ ವಿಶಿಷ್ಟ ಜೈವಿಕತೆಯ ನೆಲೆ ಮತ್ತು ಮನಸ್ಸಿನ ಸಂಕೀರ್ಣಲಯಗಳನ್ನು ಕುರಿತ ದನಿಗಳೂ ಕೇಳುತ್ತವೆ. ಲಿಂಗರಾಜಕಾರಣದ ಸಿಕ್ಕುಗಳನ್ನು ಬಿಡಿಸಿಕೊಂಡು, ಸ್ತ್ರೀತ್ವದ ಬಗೆಗೆ, ಮಾತೃತ್ವದ ಬಗೆಗಿನ ದನಿಗಳನ್ನು ಗುರುತಿಸಿಕೊಳ್ಳಬೇಕು. ಇದು ಕಷ್ಟಸಾಧ್ಯವಾದ ಕೆಲಸ.  ಆದರ ಪ್ರಸ್ತುತ ಸಮಕಾಲೀನ ಸಾಮಾಜಿಕ ಸಂದರ್ಭಗಳ
ಕಾಲದಲ್ಲಿಯೂ ಸ್ತ್ರೀ ಆಸ್ತಿತ್ವವನ್ನು ಮರುಪರಿಶೀಲನೆಗೆ ಬಲಪಡಿಸುತ್ತ, ನಿಜವಾದುದನ್ನು ಸ್ಥಾಪಿಸಬೇಕಾದ ಸವಾಲುಗಳು ನಮ್ಮ ಮುಂದೆ ಇದ್ದೇ ಇರುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಹಾಗಾಗಿ ಗೋವಿನ ಹಾಡು ಕಥನವನ್ನು ಸೂಕ್ಷ್ಮಸ್ತರಗಳುಳ್ಳ ಪಠ್ಯವನ್ನಾಗಿ ನೋಡುವ ಆವಶ್ಶಕತೆ ಇದೆ ಎಂದು ಹೇಳಬಹುದು.  ಈ ಹಿನ್ನೆಲೆಯಲ್ಲಿ ಪಠ್ಯವು ಧ್ವನಿಸುವ ರಾಜಕಾರಣದ ಅಂಶಗಳನ್ನು ಮೊದಲು ಚರ್ಚಿಸಿ, ನಂತರ ಆದರೊಳಗಿರುವ ಮೌನದನಿಗಳಲ್ಲಿ ಅಭಿವ್ಯಕ್ತವಾಗುವ ಸ್ತ್ರೀವಿಶಿಷ್ಟತೆಯನ್ನು ಗಮನಿಸುವ ಯತ್ನವನ್ನಿಲ್ಲಿ ಮಾಡಲಾಗಿದೆ.

ಕಥನವು ಆರಂಭವಾಗುವುದು ದಟ್ಟಕಾನನದ ವರ್ಣನೆಯಿಂದ. ಅದಕ್ಕೂ ಮೊದಲು `ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯ' ಪ್ರಸ್ತಾಪ ಇದೆ. ಹತ್ತಾರು ಪ್ರಾಣಿಗಳು ಸ್ವಚ್ಛಂದವಾಗಿ ಕಾನನದಲ್ಲಿವೆ.  ಈ ಪರಾಧೀನತೆಯನ್ನು ಒಪ್ಪಿಕೊಂಡು ಹೆಣ್ಣ ಹೆಸರುಗಳನ್ನು ಹೊತ್ತ ಗಂಗೆ, ಗೌರಿ, ತುಂಗಭದ್ರೆ, ಅಂಗನಾಮಣಿಯರೆಲ್ಲ ಇದ್ದಾರೆ.  ಈ ವಿರೋಧಾಭಾಸದೊಂದಿಗೆ ಕಥನ ಪ್ರಾರ೦ಭವಾಗುತ್ತದೆ. ಆನಂತರ ಹಾಲು ಕರೆಯುವ ಕ್ರಿಯೆಯ ವರ್ಣನೆ ಇದೆ. ಎಲ್ಲಾ ಹಸುಗಳನ್ನು ಪ್ರೀತಿಯಿಂದ ಕರೆಯುವ ಗೊಲ್ಲನ ಮುಂದೆ ಹಾಲು `ಚೆಲ್ಲಿ ಸೂಸಿ ಆಲ್ಲಿ ತುಂಬಿತು ಬಿಂದಿಗೆ' ಎಂದು ಹಾಲು ತುಳುಕುತ್ತದೆ.  ಹಾಲನ್ನು ಹಕ್ಕಾಗಿ ಮಾಡಿಕೊಳ್ಳುವ ಗೊಲ್ಲನ ಕ್ರಿಯೆ ಶೋಷಣೆಯಂತೆ ಕಾಣಿಸದೇ ಇರುವಂತೆ ಪಠ್ಯದ ಕಥನ ವಿವರಗಳನ್ನು ವಿಜೃಂಭಿಸುವಂತೆ ಮಾಡುತ್ತದೆ.

ಪುತಿನ ತಮ್ಮ ಪ್ರಬಂಧದಲ್ಲಿ ಕಾಣುವಂತೆ ಗೋವಿನ ಕತೆಯು ಹೃದಯಸ್ಪಶಿಯಾಗಿದ್ದು, ಮಾತೃಪ್ರೇಮ ಮತ್ತು ವಾತ್ಸಲ್ಯ ಮುಂತಾದ ಮೂಲಭಾವಗಳಿಂದ ಸೊಗಸಾಗಿ ಚಿತ್ರಿಸಲ್ಪಟ್ಟಿವೆ. ಈ ಗುಣಗಳನ್ನು ಮನುಷ್ಯತ್ವಕ್ಕೇ ಆನ್ವಯಿಸುವ ಗುಣಗಳಾಗಿ ನೋಡದೆ ಹೆಣ್ಣಿನ, ಅವಳ ತಾಯ್ತನದ ಸ್ಥಿತಿಗೆ ಅಂಟಿಸುವುದು ಲಿಂಗರಾಜಕಾರಣದ ಪರಿಯೇ ಆಗುತ್ತದೆ.  ಒಂದು ರೀತಿಯಲ್ಲಿ ಇದೊಂದು ಸೀಮಿತಗೊಳಿಸುವ ಧೋರಣೆ.  ಹೆಣ್ತನ ಎಂದ ಕೂಡಲೇ ಕೆಲವೇ ಕೆಲವು ಗುಣಗಳಿಗೆ ಕಟ್ಟಿಹಾಕುವ ಹುನ್ನಾರವನ್ನು ನೋಡಬೇಕಾಗುತ್ತದೆ.

ಕಥನದ ತುಂಬ ಬರುವ ಜೈವಿಕ ಕುರುಹುಗಳನ್ನು ಸೂಚಿಸುವ ಪದಗಳಿರುವುದು ಗಮನಕ್ಕೆ ಬರುತ್ತದೆ.  ಗೋವು, ತಾಯಿ, ಮೊಲೆ- ಈ ಕುರುಹುಗಳು ಜೈವಿಕ ನಿರ್ದೇಶನಗಳು.  ಕಥನದ ಮೂಲ ಕ್ರೈಸಿಸ್ ನಿಂತಿರುವುದೇ ಪುಣ್ಯಕೋಟಿ ತನ್ನ ಮಗುವಿಗೆ ಹಾಲೂಡಿಸಿ ಬರುವೆ ಎಂದು ಕೇಳಿಕೊಳ್ಳುವ ಅಂಶದಲ್ಲಿ.  ಮಗು ಹಾಲಿಗಾಗಿ ಕಾಯುತ್ತ ಇದೆ.  ಈ ಜೈವಿಕ ಹೊಣೆಗಾರಿಕೆಯು ಹೆಣ್ಣಿನ ಮನಸ್ಸಿನಲ್ಲಿ ಸದಾ ಜಾಗ್ಯತವಾಗಿರುವಂತೆ ಮಾಡುವ ಒತ್ತಡಗಳನ್ನು ನೋಡಬೇಕು.  ಹಾಗೆಯೇ ತಾಯ್ತನದ ವೈಭವೀಕರಣವನ್ನು ಮಾಡುವ ಆಂಶಗಳನ್ನು ಗಮನಿಸಬೇಕು.

ಪುಣ್ಯಕೋಟಿ ಪ್ರವೇಶವಾಗುವುದು ಒಂದು ತೀವ್ರ ಸನ್ನಿವೇಶದಲ್ಲಿ.  ಹಸುಗಳೆಲ್ಲವೂ ಕೈ ತಪ್ಪಿ ಹೋಗಿವೆ ಎಂದು ಹುಲಿಯು ಆತಂಕ ಮತ್ತು ಚಡಪಡಿಕೆಯಲ್ಲಿರುವಾಗ ಪುಣ್ಯಕೋಟಿ ಬರುತ್ತಿದೆ:
ಕನ್ನೆಮಗನ ಪಡೆದ ಪಶುವು
ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಯೆಂಬ ಪಶುವು
ಚೆನ್ನಾಗಿ ತಾ ಬರುತ್ತಿರೆ.

ಹಸಿದ ಹೆಬ್ಬುಲಿಗೆ ಎದುರಾಗಿ ಕಂದನ ಕನಸು ಕಾಣುವ ತಾಯಿಯ ಪ್ರವೇಶವಾಗುವುದೇ ಒಂದು ಸಾಂದರ್ಭಿಕ ಕರುಣೆಯನ್ನು ಹುಟ್ಟಿಹಾಕುವಂತದ್ದು.  ಹಸಿದ ಹುಲಿಯು ಹಾರಿ ಒಯ್ಯನೆ ತಿನ್ನುವೆನೆಂದು ಹೇಳುವಾಗ, ಪುಣ್ಯಕೊಟಿಯ ಕೊನೆಯ ಬೇಡಿಕೆ ಹೀಗಿದೆ:
ಒಂದು ಬಿನ್ನಹ ಹುಲಿಯರಾಯನೆ
ಕಂದನೈದನೆ ಮನೆಯ ಒಳಗೆ
ಒಂದು ನಿಮಿಷದಿ ಮೊಲೆಯಕೊಟ್ಟು
ಬಂದು ನಾನಿಲ್ಲಿ ನಿಲ್ಲುವೆ .....

ಸಾವಿನ ಬಾಗಿಲ ಬಳಿ ನಿಂತ ಸನ್ನಿವೇಶದಲ್ಲಿಯೂ ಹಸುವು ನೆನೆಯುತ್ತಿರುವುದು ತನ್ನ ಹಾಲುಕೊಡುವ ಹೊಣೆಗಾರಿಕೆಯನ್ನು!  ತನ್ನ ಕೊನೆಯ ಕರ್ತವ್ಯ ಅದೆಂದು ಭಾವಿಸಿದಂತೆ ಹುಲಿಯಲ್ಲಿ ಪ್ರಾಣದ ಅನುಮತಿ ಬೇಡುತ್ತಿದೆ.  ಇದಕ್ಕಾಗಿ ಸತ್ಯದ ಮಾತನ್ನೂ ಮುಂದಿಡುತ್ತದೆ. ಇದರೊಂದಿಗೆ ತಾಯ್ತನವನ್ನು ಸತ್ಯದ ಮಾತಿನೊಂದಿಗೆ ಬೆಸೆದು ಸ್ಥಿರಗೊಳಿಸುತ್ತಿದೆ.  ಹಾಲುಕೊಡುವ, ಕಂದನನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಾಯ್ತನಕ್ಕೆ ಬಾಧ್ಯಸ್ತವಾಗಿಸುವುದು ಜೈವಿಕ ಒತ್ತಡ.  ಅದನ್ನು ಮಮತೆ, ಕರುಣೆಯ ಗುಣಗಳಿಂದ ಮಾತೃವಾತ್ಸಲ್ಯವನ್ನು ತೋರಬೇಕಾದ ಒತ್ತಡಗಳಲ್ಲಿ ಇರಿಸುವುದು ಧೋರಣೆಯ ಸಂಕೇತ.  ಪುಣ್ಯಕೋಟಿಯ ಕಂದ ಕೇಳುವ ಪ್ರಶ್ನೆಯನ್ನು ನೋಡಿ, `ಆರ ಮೊಲೆಯನು ಕುಡಿಯಲಮ್ಮ?  ಆರ ಸೇರಿ ಬದುಕಲಮ್ಮ?'  ಎಂದು ತಾಯಿಯನ್ನು ಕರು ಜೈವಿಕ ಪೂರೈಕೆಯ ವಸ್ತುವಾಗಿ ನೋಡುತ್ತಲಿದೆ.

ಈ ಬಗೆಯ ಸ್ಥಿರೀಕರಣಗಳು ಮತ್ತು ಹೊಣೆಗಾರಿಕೆಗಳನ್ನು ರಾಜಕಾರಣದ ಅಂಶಗಳೆಂಬಂತೆಯೇ ನೋಡಬೇಕಾಗುತ್ತದೆ.  ತಾಯ್ತನ ಮತ್ತು ಹೆಣ್ತನಗಳಿಗೆ ಕೆಲವೇ ಕೆಲವು ಸ್ಥಿರಗೊಂಡ ಭಾವಗಳಿಲ್ಲ.  ಅವನ್ನು ಮೀರಿ ಆವು ಕ್ರಿಯಾಶೀಲ ಸತ್ಯಗಳನ್ನು ಹೊಂದಿರುತ್ತವೆ.  ವ್ಯಕ್ತಿ ವಿಶಿಷ್ಟತೆಯು ಚೌಕಟ್ಟುಗಳನ್ನು ಮೀರಿ ಬೆಳೆಯುವುದರಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ.  ಈ ನಿಟ್ಟಿನಲ್ಲಿ ಪಠ್ಯದ ಓದನ್ನು ಸ್ವಲ್ಪ ವಿಸ್ತರಿಸಿಕೊಂಡು ಆವರಣಗಳನ್ನು ಸರಿಸಿ ಓದಿದರೆ, ತಾಯ್ತನದ ಸಂಕೀರ್ಣಲಯಗಳನ್ನು ಕಾಣಬಹುದು.

ಪುಣ್ಯಕೋಟಿಯು ತಾಯಿಯೂ ಹೌದು, ಹೆಣ್ಣೂ ಹೌದು.  ಅದು ಸ್ವಯಂ ಪೂರ್ಣತೆಯನ್ನು ಸಾಧಿಸಿಕೊಳ್ಳುವುದು ಈ ವ್ಯಕ್ತಿತ್ವಗಳಿಂದಲೇ.  ಅದನ್ನು ದುರ್ಬಲ ಶಕ್ತಿಯೆಂದು ತೋರುವ ಕರುಣಾಜನಕ ಪ್ರಸಂಗಗಳನ್ನು ಮೀರಿ ಕಥನದೊಳಗಿನ ಮೌನದನಿಗಳು ಬೇರೇನನ್ನೋ ಸೂಚಿಸುತ್ತಿವೆ.

ಆದಿಮ ಸಮಾಜಗಳಲ್ಲಿ ಪ್ರಚಲಿತವಿತ್ತು ಎಂದು ಹೇಳಲಾದ ಮಾತೃ ಪ್ರಧಾನ ಸಂಸ್ಕೃತಿಯನ್ನು ಪುನಃ ಆಧ್ಯಯನ ಮಾಡಲಾಗುತ್ತಿದ್ದು, ಫಲವಂತಿಕೆಯ ಸಂಕೇತವಾದ ಸಮೃದ್ದಿ ಮತ್ತು ವ್ಯಕ್ತಿತ್ವದ ಸ್ವಯಂಪೂರ್ಣತೆಯನ್ನು ವಿಶೇಷವಾಗಿ ಗುರುತಿಸಲಾಗುತ್ತಿದೆ.  ದೇಬಿಪ್ರಸಾದ್ ಚಟ್ಟೋಪಾಧ್ಯಾಯ, ಕೋಸಾಂಬಿಯಂತಹ ಭೌತವಾದಿ ಚಿಂತಕರು ಚಾರಿತ್ರಿಕವಾಗಿ ಮಹತ್ವ ಪಡೆಯಬಲ್ಲ ಆಂಶಗಳನ್ನು ಈ ನಿಟ್ಟಿನಲ್ಲಿ ತೋರಿಸಿದ್ದಾರೆ.  ಫಲವಂತಿಕೆಯ ಮಿಥಿಕಗಳು ಸಾರುವಂತೆ ಜೈವಿಕ ವಿಶಿಷ್ಟತೆಗಳು ಹೊರಗೆ ಕಾಣುತ್ತವೆ. ಶಕ್ತಿಸಾಮರ್ಥ್ಯಗಳು ಆನೂಹ್ಯವಾಗಿ ಬಲಗೊಂಡು ಗುಪ್ತಗಾಮಿನತ್ವದಿಂದ ಆಮೂರ್ತನೆಲೆಯಲ್ಲಿ ಪ್ರವಹಿಸುತ್ತಿರುತ್ತವೆ. ಹಲವಾರು ಜನಪದ ಕಾವ್ಯಗಳಲ್ಲಿಯೂ ಹೆಣ್ಣಿನ ಮತ್ತು ತಾಯ್ತನಗಳನ್ನು ಸಂಕೀರ್ಣನಿಲಯಗಳ ಸ್ವರೂಪದಲ್ಲಿ ಗ್ರಹಿಸಲಾಗಿದೆ. ಅಂದರೆ ಏಕಶಿಲಾರೂಪದ ಗ್ರಹಿಕೆಯಾಗಿ ಹೆಣ್ಣಿನ ತಾಯ್ತನವನ್ನು ನೋಡದೆ ಇರುವುದು.  ಸಾಕುವ, ಸಲಹುವ ಹೊಣೆಗಾರಿಕೆಗಳು, ಮೃದುತ್ವಗಳ ಆವರಣಗಳನ್ನು ಮೀರಿ ಒಳಗಿನ ವ್ಯಕ್ತಿತ್ವದ ಸತ್ವವನ್ನು ನೋಡುವ ದಿಸೆಯಲ್ಲಿ ಲಂಕೇಶರ `ಅವ್ವ' ಕವನದ ತಾಯಿಯ ಸ್ವರೂಪ ನಮಗೆ ಸಹಾಯ ಮಾಡೀತು.  ಬನದ ಕರಡಿಯಂತಹ, ಕಪ್ಪುನೆಲದಂತಹ ವ್ಯಕ್ತಿತ್ವದ ಚಹರೆಗಳು ತಾಯಿಯಲ್ಲಿ ಇರುವುದು ಸಹಜ ಎನ್ನಿಸುತ್ತದೆ.  ತಾಯ್ತನದಲ್ಲಿ ವಾತ್ಸಲ್ಯವು ಒಂದು ಮುಖ್ಯ ಭಾವವಾದರೆ, ಆದಕ್ಕೆ ಹಲವಾರು ಸಂಚಾರಿ ಭಾವಗಳಿರಬಹುದಾದ ಸಾಧ್ಯತೆಗಳನ್ನು ಹುಡುಕಬೇಕಾಗುತ್ತದೆ. ಈಗಾಗಲೇ ಹೇಳಿದಂತೆ ರಾಜಕಾರಣದ ವಾಸನೆಯುಳ್ಳ ಓದಿಗೆ ಲಭ್ಯವಾಗದ ಆನೇಕ ಮೌನದ ದನಿಗಳು ಪಠ್ಯದಲ್ಲಿ ಕಂಡುಬರುವುದನ್ನು ನಾವು  ಗುರುತಿಸಬಹುದು.

ಪುಣ್ಯಕೋಟಿ ಮೊದಲು ಪ್ರವೇಶವಾಗುವ ಹೊತ್ತಿಗೆ, ಹುಲಿಯ ಕ್ಕೆಯಿಂದ ಎಲ್ಲಾ ಹಸುಗಳು ತಪ್ಪಿಸಿಕೊಂಡು ಬಿಟ್ಟಿರುತ್ತವೆ. ಪುಣ್ಯಕೋಟಿ ಸಿಕ್ಕು ಬೀಳುವುದಕ್ಕೆ ಕಾರಣ ಅದು ತನ್ನ ಕಂದನನ್ನು ನೆನೆದುಕೊಂಡು ಬರುತ್ತಿರುವುದು.  ಹುಲಿಯು ಹಸುವನ್ನು ಅಡ್ಡಗಟ್ಟಿ ಹಸುವನ್ನು `ತಿನ್ನುವೆ' ಎಂದಿತು, ಆದರೆ ತಿಂದೇ ಬಿಡುವುದಿಲ್ಲ.  ಪುಣ್ಯಕೋಟಿ ಆಗ ತನ್ನ ತಾಯ್ತನವನ್ನು ಬಳಸಿ ಹುಲಿಯ ಕ್ಕೆಯಿಂದ ಕ್ಷಣಕಾಲ ಪಾರಾಗಲು ಯತ್ನಿಸುತ್ತದೆ.  ಆದಕ್ಕಿಂತಲು ಮುಂಚೆ ಆದು ತನ್ನ ಉಳಿವನ್ನು ಎಷ್ಟು ಸಮರ್ಥವಾಗಿ ಪ್ರತಿಪಾದಿಸುತ್ತದೆ ಎಂಬುದನ್ನು ಕಾವ್ಯದಲ್ಲಿ ನೋಡಬೇಕು.
ಹಾಳು ಮಾಡುವ ಗರತಿಯಲ್ಲ
ಬೀಳು ಮಾಡುವ ಗೈಮೆಯಲ್ಲ ...
ನಾನು ಮೆಟ್ಟಿದ ಭೂಮಿ ಬೆಳೆವುದು
ಶಾನೆ ಕ್ಷೀರವ ಕೊಡುವೆ ನಿತ್ಯವು ...

ಇಲ್ಲಿರುವ ಪ್ರತಿ ಸಾಲೂ ತನ್ನ ಇರುವಿಕೆಯ ಗೌರವವನ್ನು ಎತ್ತಿ ಹೇಳುತ್ತಿದೆ. ಆದನ್ನು ಹುಲಿಗೆ ಮನದಟ್ಟು ಮಾಡಿ ತನ್ನ ಜೀವದ ಪರ ವಾದ ಮಾಡುವ ಹಸು ಹೇಳುತ್ತದೆ:
ಆಡವಿಯೊಳಗಣ ಹುಲ್ಲ ಮೇಯುವೆ
ಮಡುವಿಯೊಳಗಣ ನೀರ ಕುಡಿಯುವೆ.

ಹೀಗಿರುವಾಗ ನಿನ್ನದೇನು ಹಂಗು ಎಂದು ಹುಲಿಗೆ ಆದು ಪರೋಕ್ಷವಾಗಿ ಸವಾಲು ಹಾಕುತ್ತದೆ.  ಇದಾದ ನಂತರವೂ ಪೀಡಿಸುವ ಹುಲಿಗೆ, ತನ್ನ ತಾಯ್ತನದ ಗುರಾಣಿಯನ್ನೊಡ್ಡಿ ಸ್ವಲ್ಪಕಾಲವಾದರೂ ಪಾರಾಗಲು ಬಯಸುತ್ತಿದೆ.  ಹುಲಿಗೆ ಬೇಕಾದ ತನ್ನ ದೇಹವನ್ನು ತಾಯ್ತನದ ಮುಸುಕಿನಲ್ಲಿ ಮರೆಮಾಡಲು ಪ್ರಯತ್ನಿಸುತ್ತಿದೆ ಹಸು.  ಇದರಿಂದ ಹುಲಿಯ ಆವೇಗಕ್ಕೆ ತಾತ್ಕಾಲಿಕವಾದರೂ ತಡೆಯೊಡ್ಡಿದಂತಾಗಿದೆ.

ಸತ್ಯಾಗ್ರಹವನ್ನಿಟ್ಟುಕೊಂಡ ಹಸುವು ಹುಲಿಯು ಹತ್ತಿರ ಬರುತ್ತದೆ.  ತನ್ನ ದೇಹವನ್ನೊಪ್ಪಿಸಲು ಬಂದನೆಂದು ಹೇಳುತ್ತಾ, ಹುಲಿಯನ್ನು ಕರೆಯುತ್ತದೆ:
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಕೊಬ್ಬುಗಳಿವೆಕೊ
ಉಂಡು ಸಂತಸಗೊಂಡು ನೀ ಭೂ
ಮಂಡಲದೊಳು ಬಾಳಯ್ಯ

ಆರ್ಪಣೆಯ ಮಾತುಗಳೆಂಬಂತೆ ಕಾಣುವ ಈ ಮಾತುಗಳಲ್ಲಿ ದಾಳಿಯ ನೆರಳು ಇಣುಕುತ್ತಿದೆ!  ಹಸು ತನ್ನ ದೇಹವನ್ನು ಮುಂದೊಡ್ಡುತ್ತಾ, ಹುಲಿಯ ಮನಸ್ಸಿಗೆ ನಾಟುವಂತೆ ಹೇಳುತ್ತಿದೆ- 'ನೀನು ಇದಕ್ಕೆ ತಾನೇ ಕಣ್ಣುಹಾಕಿದ್ದು, ಬಾ ತೆಗೆದುಕೋ' ಎಂದು ಪದಗಳಲ್ಲಿ ದೇಹವನ್ನು ವಾಚ್ಯವಾಗಿ ಬಿಡಿಸಿ, ಬಿಡಿಸಿ ಇಡುತ್ತಿದೆ. `ಖಂಡ', `ಕೊಬ್ಬು', `ಮಾಂಸ' ಪದಗಳನ್ನು ಹುಲಿಯ ಸ್ವರೂಪವನ್ನು ಚುಚ್ಚಲೆಂದೇ ಬಳಸುವಂತಿದೆ.  ಹುಲಿಯ ಮನಸ್ಸನ್ನು ಬೇಧಿಸುತ್ತಲೇ ಹುಲಿಯ ಸಾವನ್ನು ನೇತ್ಯಾತ್ಮಕವಾಗಿ ನಿರೀಕ್ಷಿಸುತ್ತಿದೆ, ಹಸು.  ತನ್ನ ಕುಲಕ್ಕೆ ಎರವಾಗಬಲ್ಲ ಹುಲಿಯ ಉಳಿವನ್ನು, ಹಾಗೇ ತನ್ನ ಉಳಿವಿನ ಸಮರ್ಥನೆಯನ್ನು ಏಕಕಾಲಕ್ಕೆ ಮುಂದುಮಾಡುತ್ತಿದೆ. ತಾಯ್ತನವನ್ನೇ ಮುಂದು ಮಾಡಿಕೊಂಡು ಕರ್ಣನಲ್ಲಿ ಜೀವಭಿಕ್ಷೆಗೆ ಬಂದ ಕುಂತಿಯು ಸಂಕೀರ್ಣ ವಕ್ತಿತ್ವವನ್ನು ತೋರುವಂತೆ, ಪುಣ್ಯಕೋಟಿ ತನ್ನ ದೇಹ ಮತ್ತು ತಾಯ್ತನಗಳಿಂದಲೇ ಉಳಿವಿನ ಪ್ರಶ್ನೆಯನ್ನು ಎದುರಿಸುತ್ತಿದೆ. ಆದು ಹುಡುಕುವ ಒಳದಾರಿಗಳಲ್ಲಿ ಆನೂಹ್ಯವಾದರೂ ಪ್ರಯೋಗಿಸಿ ಸವಾಲನ್ನು ಗೆಲ್ಲುವ ಚೈತನ್ಯ ಕಾಣುತ್ತದೆ.

ಹೀಗೆಂದು ಹೇಳುತ್ತಿರುವಾಗಲೇ ಹಸುವು ಒಡ್ಡಿದ ಸತ್ಯದ ಮಾತನ್ನು ಓರೆಗೆ ಹಚ್ಚಬೇಕಾಗುತ್ತದೆ. ತುಂಬ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ನೈತಿಕತೆಯ ಪ್ರಶ್ನೆಯಿದೆ. ತನ್ನ ಕಂದನ ಹಸಿವೆ ತಣಿಸಲೆಂದು ಬರುವ ತಾಯಿಗೆ, ಏಳುದಿನಗಳಿಂದ ಹಸಿವೆಯಿರುವ ಹುಲಿಯ ಹಸಿವೆಯ ಅರಿವಾಗದೇ ಹೋಯಿತೇ?  ಹಸಿವಿನ ಸಮಸ್ಯೆ ಮತ್ತು ಆಳಿವು-ಉಳಿವಿನ ಸಮಸ್ಯೆಗಳು ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಮುಖ್ಯವಾಗಿ ಕಾಡುವಂತವು.  ಇವೆರಡರಿಂದ ಬಿಡುಗಡೆ ಇಲ್ಲ.  ಹುಲಿಯ ಆಹಾರವನ್ನು ತಪ್ಪಿಸಿ, ಹಸು ಜಯಶಾಲಿಯಾಗಿ ನಿಲ್ಲುವುದು ಅಭಾಸ ಎನ್ನಿಸುವುದಿಲ್ಲವೇ?  ಹಸು ಪ್ರತಿಪಾದಿಸುವ ನ್ಯಾಯವು ಯಾವ ಬಗೆಯದು?  ಲೌಕಿಕ ನ್ಯಾಯಗಳು ಕಾಲದೇಶಗಳಿಂದ ಪರಿಮಿತಿಯಲ್ಲಿ ರೂಪು ಗೊಂಡಿರುತ್ತವೆ.  ನ್ಯಾಯಾನ್ಯಾಯಗಳ ಪ್ರಶ್ನೆಯನ್ನು ಸಂಪೂರ್ಣವಾಗಿ ಸಾಪೇಕ್ಷವಾಗಿ ನೋಡಬಹುದಾಗಿದೆ.  ಕಾನೂನುಗಳನ್ನು ಮಾಡುವ ಸಾಂಸ್ಕೃತಿಕ ಶಕ್ತಿಕೇಂದ್ರಗಳು ತಮಗೆ ಬೇಕಾದಂತೆ ನಿರೂಪಿಸಿರುತ್ತವೆ ಎಂಬುದೂ ಪರಿಗಣಿಸುವ ಆಂಶ.  ಲೌಕಿಕ ನ್ಯಾಯ ನಿರ್ಣಯಗಳು ಒಂದು ಪದರದಲ್ಲಿರುವುದಿಲ್ಲ.  ಬಹುವಾಗಿ ಅವು ನಿರ್ಣಯಿಸಲ್ಪಡುವವರ ಮೇಲೆ ನಿಂತಿರುತ್ತವೆ.  ಅರ್ಥೈಸುವಿಕೆಯಿಂದಲೇ ನ್ಯಾಯಗಳ ವ್ಯಾಖ್ಯಾನಗಳು ನಿಲ್ಲುತ್ತವೆ.
ಈ ದೃಷ್ಟಿಯಲ್ಲಿ ಹುಲಿಯು ಹಸಿವಿಗಿಂತ ಕ್ರೂರಿ ಎನ್ನುವುದಕ್ಕಿಂತ ಹುಲಿ ಸ್ವಚ್ಛಂದವಾದುದು.  ತನ್ನದೇ ಇಚ್ಛೆಯಿಂದ ತನ್ನ ಹಸಿವನ್ನು, ಬದುಕನ್ನು ನಿರ್ಧರಿಸುವ ಶಕ್ತಿಯುಳ್ಳದ್ದು.  ಹಬ್ಬಿದಾ ಮಲೆಮಧ್ಯದೊಳಗೆ ಅರ್ಬುತನೆಂದೆಂಬ ವ್ಯಾಘ್ರನು ಎಂಬ ಸಾಲನ್ನು ಉದಾಹರಿಸಬಹುದು.  ಆದರೆ ಹಸುವಿನ ಜೀವ ನಾನಾ ರೀತಿಯ ಹೊಣೆಗಾರಿಕೆಗಳಿಂದ ಕೂಡಿದೆ.  ಗೊಲ್ಲನಿಗೆ ಹಾಲು ಕರೆಯಬೇಕು, ಕಂದನಿಗೆ ಹಾಲುಣಿಸಬೇಕು- ಹೀಗೆ ಪರಾಧೀನವಾಗಿರುವ ಹಸುವಿಗೆ ತನ್ನ ಉಳಿವು, ಅಸ್ಮಿತೆಯ ಸವಾಲನ್ನು ಬಹಳ ಕಷ್ಟದಿಂದ ಸ್ಥಾಪಿಸಬೇಕಾಗಿದೆ. ಆದ್ದರಿಂದ ಅದು ಒಳದಾರಿಗಳಲ್ಲಿ ತನ್ನ ನ್ಯಾಯದ ಬಲವನ್ನು ಹುಡುಕಾಡುತ್ತದೆ.

ಕೆ.ವಿ. ಸುಬ್ಬಣ್ಣ ಗೋವಿನ ಹಾಡನ್ನು ಕುರಿತು ಬರೆಯುವಾಗ ಕೇಡಿನ ಸ್ವರೂಪವನ್ನು ಬ್ಲೇಕ್‍ನ `ಟೈಗರ್' ಪದ್ಯಕ್ಕೆ  ಹೋಲಿಸುತ್ತಾರೆ.  ಬ್ಲೇಕ್‍ನ `ಟೈಗರ್' ಸಂಕೀರ್ಣವೂ, ಸ್ವಯಂಪೂರ್ಣವೂ ಆದಂತೆ ತೋರುವಾಗ, ಆವನಲ್ಲಿ ಮೂಡಿದ ಒಂದು ಪ್ರಶ್ನೆಯೆಂದರೆ ಕುರಿಯನ್ನು ಸೃಷ್ಟಿಸಿದ ಕರ್ತನೇ ಹುಲಿಯನ್ನೂ ಸೃಷ್ಟಿಸಿದನೇ?- ಎಂಬುದು (Did he who made the lamb make thee?) ಸುಬ್ಬಣ್ಣ ಆವರಲ್ಲೂ ನಿರ್ವಿವಾದವಾಗಿ ಹುಲಿ ಕೇಡಿನ ಸಂಕೀರ್ಣ ಸ್ವರೂಪ. ಅದರ ನಾಶ ಪುಣ್ಯಕೋಟಿಯ ಸಾತ್ವಿಕ ಶಕ್ತಿಗೆ ಸಂದ ಜಯ.

ತಾತ್ವಿಕ ಜಿಜ್ಞಾಸೆಯ ಅಮೂರ್ತ ಸ್ವರೂಪದಲ್ಲಿ ನಿಂತು ತಡಕಾಡುವಾಗ ಜನಪದದಲ್ಲಿ ಬರುವ ಪುಣ್ಯಕೋಟಿಯ ಕಥೆ ನ್ಯಾಯ ನಿರ್ಣಯಗಳನ್ನು ಹೊಸದಾಗಿ ವಿಶ್ಲೇಷಿಸುವಂತಿರುವುದು ಆದ್ಭುತವಾಗಿ ಕಾಣುತ್ತದೆ.

ಕಂಬಾರರ `ಶಿಖರ ಸೂರ್ಯ' ಕಾದಂಬರಿಯಲ್ಲಿ ಪುಣ್ಯಕೋಟಿಯ ಕಥೆಯ ಉಲ್ಲೇಖ ಇದೆ.  ಮುಖ್ಯವಾಗಿ ಕಂಬಾರರ ಕಾದಂಬರಿಯು ಮಾತೃಸಂಸ್ಕೃತಿಯ ಪರವಾದ ದೃಷ್ಟಿಕೋನದಲ್ಲಿ ರಚಿತವಾಗಿದೆ.  ಮಾತೃಸಂಸ್ಕೃತಿಯ ಸಮಾಜಗಳು ಬಿಂಬಿಸುವ ಮೌಲ್ಯ ಮತ್ತು ಜೀವನ ದ್ಯಷ್ಟಿಗಳನ್ನು ಅದು ವಿಶ್ಲೇಷಿಸುತ್ತದೆ.  ಅವ್ವ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕೇಳಲಾದ ಪುಣ್ಯಕೋಟಿ ಕಥೆಯು ಹೀಗಿದೆ:  ಪುಣ್ಯಕೋಟಿಯನ್ನು ಹುಲಿಯು ಆಕ್ರಮಿಸಿ ನಿಂತಾಗ ಅದು ಓಡಿ ಬ್ರಹ್ಮನ ಹತ್ತಿರ ಹೋಯಿತಂತೆ.  ಬ್ರಹ್ಮ ವಿಷ್ಣುವಿನ ಹತ್ತಿರ ಹೋಗಲು ತಿಳಿಸಿದ.  ಆವನೂ ಸೋತ, ಶಿವನೂ ಸೋತ.  ಕೊನೆಗೆ ಅಮ್ಮನ ಹತ್ತಿರ ಬಂದಿತು ಹಸು. `ಅಮ್ಮ' ಪುಣ್ಯಕೋಟಿಯನ್ನು ಪೂಜೆಯ ಮನೆಯಲ್ಲಿ ಅಡಗಿಸಿಟ್ಟಳಂತೆ.  ಹುಲಿರಾಯ ಬಂದು, "ಅಮ್ಮಾ, ಪುಣ್ಯಕೋಟಿ ಒಳಗೆ ಅಡಗಿರುವಳೋ" ಎಂದು ಕೇಳಿತಂತೆ.  ಆಗ ಅಮ್ಮ "ಖರೇ ಹೇಳಲೋ, ಖೋಟ್ಟಿ ಹೇಳಲೋ" ಎಂದು ಕೇಳಿದಾಗ, ಹುಲಿ "ಖರೇನೆ ಹೇಳು" ಅಂದಿತಂತೆ.  ಆಗ ಅಮ್ಮ "ಪುಣ್ಯಕೋಟಿ ಇಲ್ಲಿಗೆ ಬಂದಿಲ್ಲವಲ್ಲಪ್ಪ" ಎಂದು ಹೇಳಿದಳಂತೆ.  ಆಗ ಅಲ್ಲಿ ಕೂತವರಿಗೆಲ್ಲ ಜೋಗಿಣಿ ಪ್ರಶ್ನೆ ಹಾಕುತ್ತಾಳೆ.  "ಅಲ್ಲಪ, ಅಮ್ಮಾ ಖರೇನೆ ಅಂದು ಖೊಟ್ಟಿ ಹೇಳಿದಂಗಾಗಲಿಲ್ಲವೇನಪ್ಪ?" ಎಂದು.  ಆಮೇಲೆ ವಿವರಿಸುತ್ತಾಳೆ. ಅಮ್ಮಾ ಖರೇ ಎಂದಿದ್ದು ಯಾಕೆಂದರೆ ಬ್ರಹ್ಮ, ವಿಷ್ಣು, ಶಿವ ಮೂವರೂ ಹೊಣೆಗೇಡಿಗಳು ತಾಯಿಯನ್ನು ತಿಳಿಯದವರು.  ಆದರೆ ಅಮ್ಮನಿಗೆ ಗೊತ್ತಾಯಿತು ಸತ್ಯ ಯಾವುದು? ಕರುವನ್ನು ಪೊರೆಯಲು ತಾಯಿಯ ಜೀವಬೇಕೆಂಬ ತಾಯಿಯ ಖೊಟ್ಟಿಯೇ ಸತ್ಯ.  ತಾಯಿಯ ಜೀವವೇ ಸತ್ಯ.  ಹೀಗಿರುವುದರಿಂದಲೇ ನಾವು ಇಲ್ಲಿದೀವಿ... (ಶಿಖರಸೂರ್ಯ ಪು.೩೨೩)

ಪುಣ್ಯಕೋಟಿಯ ಈ ಕಥೆಯ ನ್ಯಾಯನಿರ್ಣಯವು ಮಾತೃತ್ವದ ಆಧಾರದ ಮೇಲೆ ಪ್ರತಿಪಾದಿಸಲ್ಪಟ್ಟಿವೆ. ತಾಯ್ತನದ ಮೌಲ್ಯಗಳಿಂದ ನಿರ್ಣಯಿಸಲ್ಪಟ್ಟದ್ದಾಗಿದೆ.

ತಾತ್ವಿಕವಾಗಿಯಾದರೂ ಹೆಣ್ಣು-ಗಂಡು, ಹಸು-ಹುಲಿಗಳ ನಡುವೆ ಸಂಘರ್ಷಗಳು ಇದ್ದೇ ಇವೆ.  ಅವುಗಳ ನ್ಯಾಯ ನಿರ್ಣಯವನ್ನು ಪ್ರತಿಪಾದಿಸುವವರು ಯಾರು ಎಂಬುದರ ಮೇಲೆ ಆವುಗಳ ಸತ್ಯಾಸತ್ಯತೆಗಳು ನಿರ್ಧರಿಸಲ್ಪಡುತ್ತವೆ.  ಗೋವಿನ ಹಾಡುವಿನ ಕಥನದೊಳಗೆ ಪುಣ್ಯಕೋಟಿ ತನ್ನ ದೇಹ, ತಾಯ್ತನದ ಬಲದಿಂದಲೇ ತನ್ನ ವಿರೋಧಿ ಜಗತ್ತನ್ನು ಎದುರಿಸುವ ಸಂಕೀರ್ಣ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ.  ಫ್ರೆಂಚ್ ಸ್ತ್ರೀ ವಾದಿಗಳು ನಿರೂಪಿಸುವ ವಾದವನ್ನು ಇಲ್ಲಿ ಬೆಂಬಲಕ್ಕೆ ಪಡೆದುಕೊಳ್ಳುವುದಾದರೆ, ಹೆಣ್ಣಿನ ದೇಹವು ಒಂದು ಇತ್ಯಾತ್ಮಕ ಶಕ್ತಿ ಎಂದು ಒಪ್ಪಿಕೊಳ್ಳುವ ಹಂತವನ್ನು ಈ ಕಥನವು ನಿರೂಪಿಸುತ್ತಿದೆ. ಲೈಂಗಿಕತೆಯ ಯಾವ ಕುರುಹುಗಳಿಂದ ದಮನಗೊಂಡ ಚೈತನ್ಯವಿತ್ತೋ, ಆದನ್ನೇ ಸೃಜನಾತ್ಮಕ, ಸಂಕೀರ್ಣತೆಗಳ ಸ್ತರಕ್ಕೆ ವಿಸ್ತರಿಸಿಕೊಳ್ಳುವ ಮಟ್ಟವನ್ನು ಆದು ತಿಳಿಸಿಕೊಡುವಂತಿದೆ.  ಪುಣ್ಯಕೋಟಿಯ ಕಥನದಲ್ಲಿ ಸ್ವಚ್ಛಂದ ಪರಿಸರವೂ ಇದೆ.  ನಿಯಂತ್ರಣಕ್ಕೊಳಪಟ್ಟ ಪರಿಸರವೂ ಇದೆ.  ಇವೆರಡೂ ಕುತೂಹಲಕಾರಿ ಆಂಶಗಳು.  ಗೋವುಗಳು ಇಲ್ಲಿ ಪರಾಧೀನವಾಗಿವೆ.  ಅದನ್ನು ಮೀರಿ ಪುಣ್ಯಕೊಟಿ ತನ್ನ ಉಳಿವನ್ನು ನಿರೂಪಿಸಲು ಬಯಸುತ್ತಿದೆ.  ವಾಪಸು ಹೋಗಿ ಹುಲಿಯ ಮುಂದೆ ನಿಂತು, ಕ್ರೈಸಿಸ್ ಅನ್ನು ಎದುರಿಸಲು ಮುನ್ನಡೆಯುತ್ತಿದೆ. ಈ ಧೈರ್ಯವು ಹೆಣ್ಣು ದೇಹದ್ದೇ ಆಗಿ, ಆದರ ಮಾನಸಿಕ ಬಲದ ಸಂಕೇತವೂ ಆಗಿ, ಅಂತಿಮವಾಗಿ ನ್ಯಾಯವನ್ನು ತನ್ನ ಪಾಲಿಗೆ ಪಡೆದುಕೊಳ್ಳುವ ಶಕ್ತಿಯಾಗಿರುವುದು ಸಾಮಾನ್ಯ ಸಂಗತಿಯಾಗಿ ಪರಿಗಣಿಸುವುದಲ್ಲ.

ಪರಾಮರ್ಶನ ಗ್ರಂಥಗಳು :
೧. ಗೋವಿನ ಹಾಡು.
೨. ಪುತಿನ ಸಮಗ್ರ ಗದ್ಯ.
೩. ಆದಿಮ- ಮೊಗಳ್ಳಿ ಗಣೇಶ್.
೪. ಹೆಣ್ಣು-ಹೆಂಗಸು, ಎಚ್. ಎಸ್. ಶ್ರೀಮತಿ.
೫.  Lokayukta - Debiprasad Chattopadhaya.
೬. ಕವಿರಾಜಮಾರ್ಗ ಮತ್ತು ಕನ್ನಡ ಕಥನ, ಕೆ.ವಿ. ಸುಬ್ಬಣ್ಣ.
೭. ಸ್ತ್ರೀ ವಾದ - ಬಿ.ಎನ್.ಸುಮಿತ್ರಾಬಾಯಿ.
೮. ಶಿಖರಸೂಯ೯- ಚಂದ್ರಶೇಖರ ಕಂಬಾರ.


            *****

ಕೀಲಿಕರಣ: ಎಂ.ಎನ್.ಎಸ್. ರಾವ್

ನಾನೆಂಬ ಹುಡುಕಾಟ

-ತಾರಿಣಿ ಶುಭದಾಯಿನಿ ಆರ್‍

ರೂಪ ಯೌವನಗಳದೆ
ಮೆರವಣಿಗೆ ಸಾಕು
ಬುದ್ಧಿ ಭಾವಗಳಿಗೆ
ಮನ್ನಣೆಯು ಬೇಕು
          - ಹೇಮ ಪಟ್ಟಣಶೆಟ್ಟಿ


-ಎಂದು ಘೋಷಿಸಿಸಕೊಂಡರೂ ಸಹ ಒಮ್ಮೊಮ್ಮೆ ಹೆಣ್ಣೊಬ್ಬಳ ಕವಿತೆಯ ಅಂತರಂಗ ತೆರೆದುಕೊಲ್ಳುವುದೇ ಇಲ್ಲ!  ಕಾವ್ಯವನ್ನು ಹೆಣ್ಣಿನ ದೇಹದ ಹೊರ ವಿವರಗಳಂತೆ ಗ್ರಹಿಸಿ ಗ್ಲಾಮರ್‍ ಅಂಶಗಳಾಗಿ ಗಣಿಸಿ ಚರ್ಚಿಸುವ ಅಪಾಯವೇ ಹೆಚ್ಚು.  ಸ್ತ್ರೀಲೇಖದ ಚೌಕಟ್ಟು ಸಿದ್ಧಗೊಳಿಸಿ ಅದರ ಮಿತಿಯಲ್ಲಿಯೇ ಓದುವ ಅಭ್ಯಾಸ ಬೆಳೆದದ್ದು ಬಹುಶಃ ಸ್ತ್ರೀವಾದ ಪ್ರಖರಗೊಂಡ ಕಾಲದಲ್ಲಿರಬೇಕು.  ಆಗಿನಿಂದ ಈಗಿನವರೆಗು ಹೆಣ್ಣುಲಕ್ಷಣಗಳನ್ನು ಹುಡುಕುವುದರಾಚೆ ವಿಮರ್ಶೆ ಬೆಳೆದೇ ಇಲ್ಲ.  ಹೇಮಾ ಪಟ್ಟಣಶೆಟ್ಟಿ ಕಾವ್ಯ ಕರ್ಮ ಪ್ರರಂಭಿಸಿದಾಗ ಅವರ ಸೌಭಾಗ್ಯವೋ ದೌರ್ಭಾಗ್ಯವೋ ಸ್ತ್ರೀಯರ ಕಾವ್ಯ ಹುಲುಸಾಗಿ ಬರುತ್ತಿತ್ತು.  ಆ ಗೆಲಾಕ್ಸಿಯಲ್ಲಿ ಇವರೂ ಒಬ್ಬರಂತೆ ಕಂಡು, ಅವರ ಕವಿತೆಗಳ ಗುಣಾವಗುಣಗಳ ಚರ್ಚೆ ಬಿಚ್ಚಿಕೊಂಡಂತೆ ಕಾಣುವುದಿಲ್ಲ.

`ವಿರಹೋತ್ಸವ'ದಿಂದ ಕಾವ್ಯಪ್ರವೇಶ ಪಡೆದ ಹೇಮಾ ಪಟ್ಟಣಶೆಟ್ಟಿ ಈವರೆಗೂ `ಹೊಸಹಾಡು', `ಕಣ್ಣುಗಳಲ್ಲಿ ಕನಸು ತುಂಬಿ'. `ಊಸಿರ ಬದುವಿನ ಗುಂಟ' - ಎಂಬ ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ.  ಒಂದೊಂದು ಸಂಕಲನಕ್ಕೂ ನಡುವ ಸಾಕಷ್ಟು ಅಂತರಗಳಿವೆ.  ಸುಮಾರು ೨೦-೨೫ ವರ್ಷಗಳಿಂದ ಕಾವ್ಯಕರ್ಮದಲ್ಲಿ ಆಸಕ್ತಿಯಿಟ್ಟುಕೊಂಡು, ಅದರಲ್ಲಿ ತೊಡಗಿಸಿಕೊಂಡ ಈ ಕವಯಿತ್ರಿಯ ಕಾವ್ಯ ಅವರ ಕಾಲದ ಕವಿಯಿತ್ರಿಯರ ದನಿಗಳಿಗಿಂತ ಭಿನ್ನವಾಗಿದೆ.  ಆದರೆ ಸಮೂಹಗಾನದ ಆಲಾಪದಲ್ಲಿ ಆ ಭಿನ್ನದನಿಯು ಅಷ್ಟಾಗಿ ಕೇಳದೇ ಹೋಗಿದೆ.

ಹೇಮಾ ಪಟ್ಟಣಶೆಟ್ಟಿಯವರ ಕಾವ್ಯ ಒಂದು ವಿಶೇಷ ಬಗೆಯ ಲಯವನ್ನು ಹೊಂದಿದೆ.  ಅದೆಂದರೆ, ಅಲ್ಲಿ ನಾವು ಕಾಣುವ ಪ್ರಶ್ನಾವಳಿಗಳು. ಕವಿತೆ ಅವರಲ್ಲಿ ಹುಟ್ಟುವುದೇ ಪ್ರಶ್ನೆಗಳನ್ನು ಹಾಕಿಕೊಳ್ಳುವುದರ ಮೂಲಕ.  ಮತ್ತು ನಾನು ಎಂಬ ಆತ್ಮಪ್ರತ್ಯಾಯದಿಂದಲೇ ಅವರ ಕಾವ್ಯ ಉಸಿರಾಡುತ್ತದೆ.  ಸ್ಥೂಲವಾಗಿ ಹೇಳಬಹುದಾದರೆ ಹೇಮಾ ಅವರದು ಆತ್ಮಕೇಂದ್ರಿತ  ಧೋರಣೆಯನ್ನು ಹೇಳುವಂತದ್ದು.

ಡಿ.ಆರ್‍. ನಾಗರಾಜ್ ಗುರುತಿಸುವಂತೆ ಮಹಿಳೆಯರ ಬರವಣಿಗೆಯಲ್ಲಿ `ನಾನು' ಎಂಬುದು ವಿವರಿಸಿಕೊಳ್ಳುವ ಹಂತದಲ್ಲಿ ಊಲಿದಿದೆ.  ಅದು ಬಹುಶಃ ಆ ಕಾಲದ ಎಚ್ಚೆತ್ತ ಪ್ರಜ್ಞೆಯನ್ನು ಇಟ್ಟುಕೊಂಡ ಸ್ತ್ರೀಯ ಬರವಣಿಗೆಗಳಲ್ಲಿ ಕಾಕತಾಳೀಯವೆಂಬಂತೆ ಈ ಸರ್ವನಾಮ ಕಾಣಿಸಿಕೊಳ್ಳುತ್ತ ಬಂದಿರುವುದು ಡಿ.ಆರ್‍. ಅವರ ಮಾತಿಗೆ ತಕ್ಕನಾಗಿ ಕಾಣುತ್ತದೆ.  ಹೇಮಾ ಈ ಅಂಶವನ್ನು ಕೈಬಿಟ್ಟಿಲ್ಲ.  ಮತ್ತು ಪ್ರಶ್ನಾರ್ಥಕ ನೆಲೆಯಲ್ಲಿ ನಿಂತು ಕೇಳಿ ಕೊಳ್ಳುವ, ಹುಡುಕುವ ಅವಕಾಶಗಳನ್ನು ಬಿಟ್ಟುಕೊಡುವುದೂ ಇಲ್ಲ.  ಆದರೆ ಇದರಲ್ಲಿಯೇ ಸಮೂಹನಿಷ್ಠೆಯ ಗುಣವಿರುವ, ಅದಂದರೆ ನಾನು ಎಂಬುದನ್ನು ಸಾರ್ವತ್ರಿಕವಾಗಿ ಗುರುತಿಸಿಕೊಂಡು, ಸ್ತ್ರೀ ಬದುಕಿನ ಗುಣಲಕ್ಷಣಗಳನ್ನು ಒಂದು ಹಂತದಲ್ಲಿ ಸಮೀಕರಿಸಿಕೊಂಡು ನೋಡುವುದನ್ನು ಹೇಮಾ ಅವರ ಕಾವ್ಯದಲ್ಲಿ ಕಾಣಲಾಗುವುದಿಲ್ಲ.  ಅಂದರೆ ಪ್ರತಿಭಾ ನಂದಕುಮಾರರ ಸಾಲು ಹೇಳುವಂತೆ `ನಾವು ಹುಡುಗಿಯರೇ ಹೀಗೆ' ಎಂತಲೋ, ಅಥವಾ ಎಚ್.ಎಸ್. ಮುಕ್ತಾಯಕ್ಕ ಹೇಳುವಂತೆ, `ನಿಮ್ಮ ಮಾನಾಪಮಾನವನು |  ಕಾಪಾಡಲು ನಿಮ್ಮಿಂದಲೇ ಪತಿವ್ರತೆಯರ ಪಟ್ಟಕ್ಕೇರಿ ಎಂದೋ ಹೀಗೆ.  ಆದರೆ ಹೇಮಾ ಈ ರೀತಿ ಸಾರ್ವತ್ರಿಕಗೊಳಿಸುವ ಗೋಜಿಗೆ ಹೋದಂತೆ ಕಾಣುವುದಿಲ್ಲ.  ಅಕಸ್ಮಾತ್ ಇದ್ದರೂ ಅದು ಗೌಣ ಎನಿಸುವುಷ್ಟು ಕಾಣುತ್ತದೆ.  ಸೂಕ್ಷ್ಮಗಳಿಗೆ ಎಡೆಯಿರದ, ಮಿಥ್‌ಗಳಿಗೆ ಹೇರಳವಾಗಿ ಅವಕಾಶ ಇರುವ ಈ ಸ್ತರದಲ್ಲಿ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ.  ಮೇಲಾಗಿ ಈ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ.  ಮೇಲಾಗಿ ಈ ಬಗೆಯ ಕವಿತೆಗಳಲ್ಲಿ ರಾಜಕೀಯ ಹಕ್ಕುಗಳ ಧ್ವನಿ ಸ್ಪಷ್ಟವಾಗಿ ಕೇಳುತ್ತಿರುತ್ತದೆ.  ಅಸಮಾನತೆಯ ಏರುಪೇರುಗಳ ಕುರಿತು ಯಾವುದೇ ಹಂತದಲ್ಲಿ ದನಿ ಎತ್ತುತ್ತಿರುವುದು ಕಾಣುತ್ತದೆ.

ಇದನ್ನು ಬಿಟ್ಟು ವ್ಯಕ್ತಿನಿಷ್ಠತೆಯನ್ನು ನೆಚ್ಚುವ `ನಾನು' ಎಂಬ ವಲಯಕ್ಕೆ ಬಂದರೆ ನಾನು ಎಂಬುದು ಆಧ್ಯಾತ್ಮಿಕ ಸ್ವರೂಪದಲ್ಲಿ, ಆತ್ಮನಿರೀಕ್ಷಣೆಯ ಸ್ವರೂಪದಲ್ಲಿ.  ಮೆಟಫಿಸಿಕಲ್ ಹಂತದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ.  ಕನ್ನಡ ಕಾವ್ಯ ಪರಂಪರೆಯಲ್ಲಿ ಆತ್ಮನಿಷ್ಠವಾದ ಆತ್ಮನಿರೀಕ್ಷಣೆ, ಆಧ್ಯಾತ್ಮಿಕ ಹುಡುಕಾಟವನ್ನು ಹೊಂದಿದ ಸಂಪದ್ಭರಿತ ಕಾವ್ಯಗಳೇ ಇವೆ.  ಆತ್ಮನಿರೀಕ್ಷಣೆಗೆ ಮಾದರಿಯನ್ನು ಹಾಕಿಕೊಟ್ಟ ಬಸವಣ್ಣನಂತಹ ಕವಿಗಳಿದ್ದಾರೆ.  ಬಸವಣ್ಣ ಆತ್ಮ ನಿರೀಕ್ಷಣೆಯ ಮಾಗದಲ್ಲಿ ನಾನು ಎಂಬುದನ್ನು ಬಳಸುವಾಗ ಸೂಕ್ಷ್ಮವಾಗಿ ಅದು ಸಾಮಾಜಿಕವಾದ ಮತ್ತು ವೈಯಕ್ತಿಕವಾದ ವಲಯಗಳೆರಡರಲ್ಲಿಯೂ ವಿಸ್ತರಿಸಿಕೊಳ್ಳುತ್ತಾರೆ.  ನಿಷ್ಠೆ, ಪ್ರಮಾಣಿಕತೆಯ ಸ್ವರೂಪಗಳು ಹೆಚ್ಚಾಗಿ ಸ್ಫಟಿಕದ ಪಾರದರ್ಶಕತೆಯನ್ನು ಸೂಚಿಸುತ್ತವೆಯಲ್ಲದೆ, ಹೊರಗಿನ ಸಾಮಾಜಿಕ ವರ್ತನೆಗಳಿಗೂ, ವೈಯಕ್ತಿಕ ವರ್ತನೆಗಳಿಗೂ ಇರಬಾರದ ಅಡೆತಡೆಗಳ ಬಗ್ಗೆ ಹೇಳುವಂತದ್ದಾಗಿದೆ.  ಆದರೆ ಆ ಪ್ರತೀಕಗಳ ಹಾದಿಯಲ್ಲಿ ಇರುವಂತೆ ಕಾಣುವ ಹೇಮಾ ಒಲವು ಆ ಹಂತದಲ್ಲಿಯೂ ನಿಂತಿಲ್ಲ.  ಇನ್ನು ಆಧ್ಯಾತ್ಮಿಕವಾದ `ನಾನು' ಎನ್ನುವುದು ಇಲ್ಲವಾಗುವ ಕ್ರಿಯೆಯನ್ನು ಸೂಚಿಸುವಂತದ್ದು.  ನಾನು ಎಂದರೆ ಏನು-ಎಂಬ ಪ್ರಶ್ನೆ ಹಾಕಿಕೊಳ್ಳುತ್ತ ಅದನ್ನು ಛೇದಿಸಿಕೊಳ್ಳುತ್ತ ಹೋಗುವುದು ಮತ್ತು ಕೊನೆಗೆ ಏನೂ ಉಳಿಯದೆ ಇರುವ ಒಂದು ಶೂನ್ಯಸ್ಥಿತಿಯಲ್ಲಿ ಕರಗುವ ಕಲ್ಪನೆಯದು.  ಈ ಬಗೆಯ ಹುಡುಕಾಟ ಅನುಭಾವದ ನೆಲೆಯನ್ನೂ ಹೇಮಾ ಕಾವ್ಯ ನಿರಾಕರಿಸುತ್ತದೆ.  ಆಧ್ಯಾತ್ಮಿಕ ಅಥವಾ ಡೈಡಾಕ್ಟಿಕ್ ಅನ್ನಿಸಿಕೊಳ್ಳುವ ಕಾವ್ಯದಲ್ಲಿ ಅತ್ಯಂತಿಕ ಅನ್ನಿಸಿಕೊಳ್ಳುವಂತದ್ದು ಇರತ್ತದೆ.  ಆ ಬಗೆಯ ಕೊನೆಮುಟ್ಟುವ ಆತುರವನ್ನು ಹೇಮಾ ಅವರ ಕಾವ್ಯ ತೋರುವುದಿಲ್ಲ.  ನಿರ್ಬಯಲು, ಬಯಲು, ಬೆತ್ತಲೆ - ಎಂಬ ಶಬ್ದಗಳನ್ನು ಅವರು ತಮ್ಮ ಕಾವ್ಯದಲ್ಲಿ ಆಗ್ಗಿಂದಾಗ್ಗೆ ಬಳಸಿದ್ದಾರೆ.  ಆದರೆ ಅವು ಪೂರ್ಣ ಸ್ವರೂಪದಲ್ಲಿ ಆಧ್ಯಾತ್ಮಿಕ ಆಶಯಗಳನ್ನು ಹೊಮ್ಮಿಸುವಂತೆ ಕಾಣುವುದಿಲ್ಲ.

ಇನ್ನೊಂದು ಬಗೆಯ ಹುಡುಕಾಟದ ಹಾದಿಯನ್ನು ಅವರ ಕಾವ್ಯ ಹುಡುಕುತ್ತಿದೆ:

ನಾನಾ ಎಂದು
ನನಗಿರುವ ಹಸಿರು
ನಾನಾ ಬಗೆ,
ಇದಕೆ ಸಮುದ್ರ ತೃಷೆ ನೆಲದೂಟ
ಆಕಾಶದತಿ ವ್ಯಂಜನ ಮೆಲ್ಲಬೇಕೆನ್ನುವ
                   (ಹಸಿವು: ಕಣ್ಣುಗಳಲ್ಲಿ ಕನಸು ತುಂಬಿ).

`ನಾನು' ಎನ್ನುವ ಸ್ವರೂಪ ದಿನದಿನಕ್ಕು ಬದಲಾಗುತ್ತ ಇರುವಂತಹದ್ದು.  ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣವಿರುವುದಿಲ್ಲ.  ಈ ಬದಲಾವಣೆ ಅಸ್ತಿತ್ವದ ಸೂಕ್ಷ್ಮಸ್ಥಿತಿಯನ್ನು ಸೂಚಿಸುತ್ತಿರುತ್ತದೆ.  ಬದಲಾಗುತ್ತಿರುವ ಸ್ಥಿತಿಗಳ ಸ್ವರೂಪ ಅರಿಯುವ ಪ್ರಯತ್ನ ಮತ್ತು ಅದನ್ನು ಅರಿಯುವ ಶೋಧದಲ್ಲಿ ತೊಡಗುವುದರಿಂದಲೇ ಹೇಮಾ ಅವರ ಕಾವ್ಯ ಪ್ರಶ್ನಾವಳಿಗಳನ್ನು ಹಾಕಿಕೊಳ್ಳುವ ವಿನ್ಯಾಸ ರೂಪಿಸಿಕೊಂಡಿದೆಯೇನೋ.  ನಿತ್ಯ ನೋಯುವ, ಸಾಯುವ, ರಗಳೆಗಳಲ್ಲಿ ಮುಳುಗಿರುವ ಲೋಗರ ಬದುಕಿನ ಅಣು ಕ್ಷಣದ ಸವಾಲಿನ ಪ್ರಶ್ನೆಗಳನ್ನು ಇಲ್ಲಿ ಅವರು ಕಾಣಲು ಬಯಸುತ್ತಾರೆ:

ಹೆಸರಾಗಿ ಹೆಸರಿನಲಿ ಕಳೆದು
ಹೋದಾಗ ಬಯಸಿದ್ದು ಬಂದಾಗ
ಗಳಿಕೆಯೇ ಕಳಯುವಿಕೆಯಾಗಿ
ಎಲ್ಲಿರುವೆ ಏನಾದ
ಬರಿ ತಾಯಿ-
ಪಳೆಯುಳಿಕೆ?
              (ತಲ್ಲಣ: ಉಸಿರ ಬದುವಿನ ಗುಂಟ)

ಹೇಮಾ ಈ ನಿತ್ಯದ ಬದುಕನ್ನು ಅನುಭವಿಸುವ ತಹತಹದಲ್ಲಿರುವ ಲಕ್ಷಣ ತೋರಿದರೂ, ಅದರಲ್ಲಿ ಉತ್ಸಾಹದ ಮೇರೆ ಮೀರುವ ಗುಣವಿಲ್ಲ.  ಆದರೆ ಅವರು ತಮ್ಮಿಂತಾವೆ ಹೇಳಿಕೊಳ್ಳುವಂತೆ ಬರುವ ಸಾಲುಗಳು ತಾನಾಗಿಯೇ ಹುಡುಕಾಟದ ದಾರಿಗೆ ಹೊರಳುವಂತಿವೆ.  ಈ ಸಾಲುಗಳನ್ನು ಗಮನಿಸಬೇಕು:

ನನಗೆ ಬೇಕಾದದ್ದು ಅಲ್ಲ ಕನಸಿನ ಲೋಕ
............................
ನನಗೆ ಭಾವದ ಸತ್ಯ ನಿತ್ಯ ಉಸಿರಿನ ಜೊತೆಗೆ
ಬದುಕಾಗಬೇಕು
               (ಆಯ್ಕೆ: ವಿರಹೋತ್ಸವ)

ಅವರ `ಉಸಿರ ಬದುವಿನ ಗುಂಟ ಸಂಕಲನದಲ್ಲಿ ಅವರು ಅಕ್ಕಮಹಾದೇವಿಯನ್ನು ತಡವಿಕೊಳ್ಳುತ್ತಾರೆ.  ಅನುಭಾವದ ಅಶಯ ಹುಟ್ಟಿಸಿದ ಹೆಣ್ಣಾಗಿ ಪುರುಷ ಪ್ರಧಾನ ಸಮಾಜದಲ್ಲಿ ಮನ್ನಣೆ ಪಡೆದ ಅಕ್ಕ, ಕವಯಿತ್ರಿಯರಿಗೆ ಮನೆ ಬಿಟ್ಟು ಹೋಗುವ, ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಕಾರಣಕ್ಕಾಗಿ ಅವರ ಪ್ರೀತಿ ಗಳಿಸಿದ್ದಾಳೆ.  ಆದರೆ ಹೇಮಾ ಪದ್ಯ ಪ್ರಾರಂಭವಾಗುವುದು ಹೀಗೆ:

ಈ ಬದುಕು ಈಗಲೂ ಗಹನ
ಕದಳೀವನ - ಎಂದು.

ಕದಳೀವನದ ಅನುಭಾವದ ಹೊಂದಿಕೆಗಳನ್ನು ಬದಿಗೆ ಸರಿಸುತ್ತಾ ಹೋಗಿ, ಬಾಳೇ ಬಾಳೇವು ಎಂಬ ಪದಗಳಲ್ಲಿ ಆಟವಾಡುತ್ತಾರೆ.  ಆದರೆ ಅಕ್ಕ ದಾಟಿ, ಮುಟ್ಟಿದ ಕದಳೀವನದ ಬಗ್ಗೆ ಲಕ್ಷ್ಯ ಇಲ್ಲಿ ಕವಯಿತ್ರಿಗಿಲ್ಲ.  ಅವರು ಅಕ್ಕನಿಗೆ ಕೇಳುವುದು ಇಷ್ಟು:

ಬೆಳೆಯಬಹುದಿತ್ತು ಇದೇ ಈ ಕದಳಿಯಲಿ
ಪ್ರತಿ ಉಸಿರ ಬದುವಿನ ಗುಂಟ ಬದುಕ ಬಾಳೆ
....................
ಇಹದ ಗಂಡನ ಕೂಡಿ, ಬದುಕಿ
ಎಲ್ಲ ಬ್ರಹ್ಮಾಂಡಗಳ ತದಕಿ
ಉಳಿಸಿ ನಿನ್ನದೇ ಅಸ್ಮಿತೆ
ಇಲ್ಲಿ ವಿಜೃಂಭಿಸಿದ ತರ್ಕಾತೀತ ಪ್ರಶ್ನೆ ಸವಾಲು
ದಿವ್ಯದಿಬ್ಬಗಳನ್ನು ನೀನೆದುರಿಸಿದ್ದರೆ....

-ಎನ್ನುತ್ತಾರೆ.  `ಇಲ್ಲಿ ಬದುಕುವುದೇ ಪ್ರಶ್ನೆ' ಎನ್ನುವ ಹೇಮಾ, ವಸ್ತುಸಹಜ ಬದುಕಿನ ವ್ಯಮೋಹ, ತಲ್ಲಣಗಳು ಮುಖ್ಯವಾಗುವುದನ್ನು ತಮ್ಮ ಕಾವ್ಯದಲ್ಲಿ ತಂದುಕೊಳ್ಳುತ್ತಾರೆ.

ಹೇಮಾ ಅವರು ಬಳಸುವ `ನಾನು' ಎನ್ನುವುದನ್ನು `ಬಯಲು' ಪದದ ಜೊತೆ ಇಟ್ಟು ನೋಡಬೇಕು ಅನ್ನಿಸುತ್ತದೆ.  ನಾನು ಎನ್ನುವುದು ಆವರಣಗಳಿಂದ ಆವರಿಸಿಕೊಂಡಿದೆ.  ಅದನ್ನು ಬಿಡಿಸಿಕೊಂಡು ಸಹಜತೆಯತ್ತ ತಿರುಗುವ ಮನಸ್ಸು ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ.  ಕದಳೀವನದ ಪರಿಭಾಷೆಯಲ್ಲಿ ವಿವರಿಸಬಹುದಾದರೆ ಹೇಮಾ ಅವರ ನಾನು ಎಂಬ ಸ್ವರೂಪ ಬದಲಾಗುವುದನ್ನೆ ಗುರುತಿಸಬಹುದು.  ಬಾಳೆಗಿಡ ಒಂದು ಕಂದನ್ನು ಹಾಕಿದೊಡನೆ ಸಾಯುತ್ತದೆ.  ಹೀಗೆ ವ್ಯಕ್ತಿತ್ವಗಳು, ಸಾಮಾಜಿಕ ಚಹರೆಗಳು ಬದಲಾಗಬೇಕೆಂದರೆ ಒಂದು ಸತ್ತೆ ಇನ್ನೊಂದಕ್ಕೆ ಅಸ್ತಿತ್ವ ಸಿಗುವಂತದ್ದು.  ಈ ಬದಲಾಗುವ, ನಿರಂತರತೆಯನ್ನೆ ಹೇಮಾ ತಮ್ಮ ಕಾವ್ಯಜೀವನದಲ್ಲಿ ಕಂಡಕೊಳ್ಳಬಯಸುವುದು.

ಹೇಮಾ ಪಟ್ಟಣಶೆಟ್ಟಿಯವರ ಕಾವ್ಯದಲ್ಲಿ ಆಗಿದ್ದಾಂಗೆ ಪ್ರಸ್ತಾಪಿಸಲ್ಪಡುವುದು ಮಗು ಮತ್ತು ಕನಸು.  ಈ ಸಾಲು ನೋಡಿ;

ನನ್ನ ಸಂತಯಿಸುವ ಮಕ್ಕಳು ಕವನಗಳು
                (ಸಂಕರ:  ವಿರಹೋತ್ಸವ).

ಮೊದಲ ಸಂಕಲನದಲ್ಲೇ ಇಂತಹ ಸಾಲುಗಳನ್ನು ಬರೆಯುವ ಹೇಮಾ ಈ ತನಕ ಅದನ್ನು ಉಳಿಸಿಕೊಂಡೇ ಬಂದಿದ್ದಾರೆ.

ನಮಗಾಗಿ ಬರುತ್ತದೆ
ನನ್ನ ಮುಗ್ಧ ಮಗುವಿನ ಹಾಗೆ
..................
ಒಂದು ಚಣ
ತುಟಿಯಂಲಚಿ ನಕ್ಕು!  ಮಗನನ್ನು ಎತ್ತಿಕೊಳ್ಳುತ್ತೇನೆ
               (ಯುಗಾದಿಗೊಂದು ಕನ್ನಡಿ:  ಕಣ್ಣುಗಳಲ್ಲಿ ಕನಸುತುಂಬಿ)

ಈ ಮಗು ಸಹಜ ಮುಗ್ಧತೆ ಅವರು ಬಯಸುವ ಭಾವ. ನಿರ್ಮಲವಾದ ಸಹಜತೆಯ ಸ್ವರೂಪದಲ್ಲಿ ಬರುವ ಮಗು ಅವರು ಸೇರಬಯಸುವ ಗುರಿ.  ಏನಾದೆ, ಏನಾದೆ ಎಂದು ಕೇಳಿಕೊಳ್ಳುತ್ತ ಮಗುವಿನ ಸೂಚನೆಗಳನ್ನು ಕೊಡುವಾಗ ಸ್ಥಿತಿಗೆ ಹಿಂದಿರುಗುವ ಬಯಕೆಯನ್ನು ಕಾಣಬಹುದು.  ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದಾದರೆ ಜೀವನ್ಮುಖಿ ಧೋರಣೆಯನ್ನೆ ಹೇಳುತ್ತದೆ.  ಒಂದಿಲ್ಲೊಂದು ಕಾರಣದಿಂದ ಅವರ ಕವಿತಗೆಳಲ್ಲಿ ಬದುಕಿನ ಪ್ರೇಮವು ಮೇಲುಗೈ ಪಡೆಯುತ್ತದೆ ಎನ್ನುವುದನ್ನು ಅವರ `ಗೆಳತಿ ಡಯಾನಾಗೆ' ಪದ್ಯ ವಿವರಿಸುತ್ತದೆ.

ಪ್ರಕೃತಿ ಹೇಮಾ ಕವನಗಳಲ್ಲಿ ಕಾಣಿಸಿಕೊಳ್ಳುವ ಮಹತ್ವ ಅಂಶ.  ಪ್ರಕೃತಿಯನ್ನು ವರ್ಣಿಸುವ ಧಾವಂತದಲ್ಲಿ ಹೇಮಾ ಪ್ರಕೃತಿಯನ್ನು ವಿವರಗಳನ್ನು ಬಯಸುವುದಿಲ್ಲ.  ಬದಲಾಗಿ, ಪ್ರಕೃತಿಯ ಸದಾ ಬದಲಾಗುವ ಸ್ವರೂಪಗಳೆ ಅವರ `ನಾನು' ಶೋಧದ ಭಾಗವಾಗಿದೆ.  ಪ್ರಕೃತಿ ಎನ್ನುವುದು ಮತ್ತೆ ಅಕ್ಕಮಹಾದೇವಿಯಲ್ಲಿ ಆಪ್ತವಾಗಿ ಒದಗುವಂತೆ ಹೇಮಾ ಅವರಿಗೆ ಕಾಣುವುದಿಲ್ಲ.  ಅದು ಅವರಿಗೆ ಅವರ ಸುತ್ತ ಇರುವ ವಾಸ್ತವ.  ಅದನ್ನು ಹುಡುಕಿ ಹೊರಡುವ ಚೈತನ್ಯವನ್ನಾಗಿ ಅವರು ನೋಡುವುದಿಲ್ಲ.

ಪ್ರಕೃತಿಯನ್ನು ಕವನಗಳಲ್ಲಿ ತರುವುದನ್ನೇ ಹೇಮಾ ಕಾಯಕ ಮಾಡಿಕೊಳ್ಳುವುದಿಲ್ಲ.  ಹಾಪ್‌ಕಿನ್ಸ್ ಕವಿ ಪ್ರಕೃತಿಯಲ್ಲಿನ ಅಂಶ ನಮ್ಮೊಳಗು ಚಾರ್ಜ್ ಆಗುವ ಬಗ್ಗೆ ಬರೆಯುತ್ತಾನೆ.  ಈ ಸಾವಯವ ಸ್ಪಂದನದ, ಆಗುವಿಕೆಯ ಕ್ರಿಯೆಯ ಮಧ್ಯೆ ಹೇಮಾ ಓಡಾಡಲು ಬಯಸುತ್ತಾರೆ.  ಈ ಅಂತಃಸತ್ವ ಹೆಣ್ಣಿನ ಕ್ರಿಯಾಶೀಲ ಚೇತನದ ಇನ್ನೊಂದು ಸ್ವರೂಪ.  ಅದನ್ನು ಹೇಮಾ ಹಿಡಿಯಲು ಬಯಸಿದಂತಿದೆ.

ಇನ್ನು ಹೇಮಾ ಅವರ ಆಶಯಗಳಿಗೆ ವಿರುದ್ಧವಾದ ಪದ್ಯಗಳೂ ಅವರ ಸಂಕಲನದಲ್ಲಿ ಸೇರಿಕೊಂಡಿವೆ!  ಅವು ನಾನು ಆಗಲೇ ವಿವರಿಸಿದಂತೆ ಕರೆಕ್ಟ್‌ನೆಸ್ ಅನ್ನು ಸಾಧಿಸ ಬಯಸುವ ಕವನಗಳು.  ಅವುಗಳನ್ನು ಹೇಮಾ ಭಾವಿಸಿ ಬರೆಯುವಂತೆ ಕಾಣುವುದಿಲ್ಲ.  ಹಾಗಾಗಿ ಅಂತಹ ಪದ್ಯಗಳು ಅವರ ಆಶಯಗಳಿಗೆ ಹೊರತಾಗಿಯೇ ನಿಲ್ಲುತ್ತವೆ.  ಜೊತೆಗೆ, ಕೆಲವೆಡೆ ಮಧ್ಯಮವರ್ಗದ ನಿಶ್ಚಿತತೆ ಅವರನ್ನು ಬಾಧಿಸದಂತೆ ಕಾಣುತ್ತದೆ.  ದೇಶಭಕ್ತಿಯ ಕವನಗಳು, ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಲು, ತೊಡಗುವ ಅರಿವು - ಇವು ಆ ವರ್ಗದ ಹೊಸ ಅರಿವಿನ ಪ್ರಕಟ ರೂಪವಾಗಿ ಕಾಣುತ್ತದೆ.  `ಸ್ವಯಂ ಸಿದ್ಧಳಾಗುವುದನ್ನು ಕಲಿಯುತ್ತೇನೆ' ಎನ್ನುವ, `ಹತ್ತರಲಿ ಹನ್ನೊಂದಾಗಿ ಬಾಳಲೊಲ್ಲೆ', ಎನ್ನುವ ಹೇಮಾ ಈ ಜಾಡಿನಲ್ಲಿ ಸಾಗುವುದು ಸ್ವಲ್ಪ ನಿರಾಶೆಯನ್ನೇ ಉಂಟುಮಾಡುತ್ತದೆ.  ನಿತ್ಯ ಉಸಿರಾಟದ ಸಹಜ ಲಯ ಅಂದುಕೊಳ್ಳದೆ, ಅದರ ಬದುವಿನಗುಂಟ ಸಾಗಬಯಸುವ ಸಹಜ ಬದುಕಿನ ಆಶಯದ ಕವಯಿತ್ರಿ ತಮ್ಮ ಹುಡುಕಾಟದ ದಾರಿಗಳನ್ನು ಇನ್ನಷ್ಟು ಆಳಕ್ಕೆ, ಅರಿವಿನ ವಿಸ್ತಾರದಿಂದ ಪಡೆದುಕೊಳ್ಳಲಿ ಎಂದು ಹಾರೈಸುವುದು ಕನ್ನಡ ಕವಯಿತ್ರಿಯರ ಬಗ್ಗೆ ಆಶಾವಾದಿಯಾದ ನನ್ನಂತವರಿಗೆ ಉಳಿದ ಆಯ್ಕೆ.
                               *****

ಕೀಲಿಕರಣ: ಕಿಶೋರ್‍ ಚಂದ್ರ

ಜಿಗ್ಗಿನ ಚಕ್ರವ್ಯೂಹ ಮತ್ತು ಸರಳದಾರಿಯ ಕಷ್ಟಗಳು


- ತಾರಿಣಿ ಶುಭದಾಯಿನಿ ಆರ್‍

ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ.  ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ.  ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ್ವಿಕತೆಯನ್ನು ಸಾಮಾನ್ಯೀಕರಿಸಿಕೊಂಡು ಪ್ರತಿಕ್ರಿಯಿಸುವ ಪೊಲೊಮಿಯಸ್ ಇದ್ದಾನೆ.  ದಿನನಿತ್ಯದ ಸುಖದುಃಖಗಳನ್ನು ಅತಿ ತಾತ್ವಿಕತೆಯಿಂದ ನೋಡುತ್ತ ಹುಚ್ಚನಾಗಿರುವ ನಾಯಕ.  ಹುಟ್ಟಾ ಆತುರಗಾರನಾದ ಪೊಲೊನಿಯಸ್ ಪರಿಣಾಮಗಳತ್ತ ಗಮನಹರಿಸುತ್ತಾನೆ.  ಅವನಲ್ಲಿ ಬಹು ಆಯ್ಕೆಗಳಿಲ್ಲ.  ಅವನಿಗಿರುವ ನಾಲ್ಕಾರು ಉತ್ತರಗಳಲ್ಲಿಂದೇ ಎಲ್ಲಾ ಪ್ರಶ್ನೆಗಳಿಗೂ ಪರಿಹಾರ ಹೇಳಬಲ್ಲ.  ಮಗಳ ಪ್ರೇಮ, ಮಗನ ಹರಯ - ಎಲ್ಲದಕ್ಕೂ ಸರಳ ಸೂತ್ರಗಳಿವೆ ಅವನ ಬಳಿ.  ಇವರಿಬ್ಬರ ನಡುವೆ ಕಂದರವೊಂದು ತೆರೆದುಕೊಂಡಿದೆ.  ಅದು ಸಂವಹನದ ಕಂದರ.  ಧ್ರುವಗಳ ತೊಂದರೆಯಿಂದ ದುರಂತ ಆವರಿಸುತ್ತಿದೆ.  ಇವರಿಬ್ಬರೂ ಹೀಗೆ ನನಗೆ ಇಂದಿನ ಓದು, ವಿಮರ್ಶೆಗಳಿಗೆ ರೂಪಕಗಳೇನೋ ಎನ್ನಿಸುವಂತೆ ಭಾಸವಾಗುತ್ತಿದೆ.  ನಮ್ಮ ಇಂದಿನ ಓದು, ವಿಮರ್ಶೆಗಳು ತಾತ್ವಿಕತೆಯ, ಅತಿ ಭಾರದಿಂದಲೂ, ಇನ್ನೊಂದು ಕಡೆ ಸರಳೀಕರಣದ ಹಗುರ ಭಾವದಿಂದಲೂ ಒಂದು ಕಂದರವನ್ನೇ ಸೃಷ್ಟಿಸಿಕೊಂಡಿವೆಯೇನೋ ಅನ್ನಿಸುತ್ತಿದೆ.  ಇಂದು ಪಠ್ಯವೊಂದು ಪಠ್ಯವಾಗಿ ಉಳಿದಿಲ್ಲ.  ಅದು ಪಠ್ಯಾಂತರವಾಗಿ ತಾತ್ವಿಕ ಸ್ವರೂಪದಲ್ಲಿ ಬರುತ್ತಿರುವುದನ್ನು ಗಮನಿಸಬಹುದು.  ಕಲಾತ್ಮಕತೆಯೊಂದೇ ಮಾನದಂಡವಾಗದೇ, ಅನೇಕ ಅನ್ಯಶಿಸ್ತುಗಳ ನೆಲೆಯಲ್ಲಿ ಪಠ್ಯವನ್ನು ಭಾಷೆಯ ಚಟುವಟಿಕೆಯಾಗಿ ಮಾತ್ರ ನೋಡದೆ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳಿರುವುದನ್ನು ಗ್ರಹಿಸುವ ಕ್ರಮವೂ ಆಗಿದೆ.  ಪಠ್ಯದ ಸೃಷ್ಟಿಯು ನಡೆಯುವಾಗಲೇ ಮೇಲೆ ಹೇಳಿದ ನಿಶ್ಚಿತತೆಗಳೆಲ್ಲ ಹೊಕ್ಕು ಬಿಡುವುದರಿಂದ, ಪಠ್ಯವು ಇದರಿಂದ ಮುಕ್ತವಾಗಿಲ್ಲ ಎಂಬುದೇ ಇಲ್ಲಿನ ಗ್ರಹಿಕೆ.  ಆದ್ದರಿಂದ ಇಂದು ಕೃತಿಯೊಂದರ ಪ್ರವೇಶಕ್ಕೆ ಕೃತಿ ಅಥವಾ ಮೀಮಾಂಸೆಯ ತಿಳುವಳಿಕೆಗಳು ಮಾತ್ರ ಸಾಲದು.  ಇಲ್ಲಿ ಒಂದು ಉದಾಹರಣೆಯನ್ನು ಕೊಡುವುದಾದರೆ, ಇತ್ತೀಚೆಗೆ ನಾನು ಕೇಳಿದ ಕಾಳಿದಾಸನ ನಾಟಕ `ಶಾಕುಂತಲ' ಉಪನ್ಯಾಸದಲ್ಲಿ ಕೃತಿಯ ರಸಾನುಭವ ಮುಖ್ಯವಾಗಿರಲೇ ಇಲ್ಲ.  ಅಲ್ಲಿ ಮೂಲ ಮಹಾಭಾರತಕ್ಕಿಂತ ಕಾಳಿದಾಸ ಯಾವ ರೀತಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ ಮತ್ತು ಏಕೆ ಮಾಡಿಕೊಳ್ಳುತ್ತಾನೆ ಎನ್ನುವ ಪ್ರಶ್ನೆಗಳು ಮುಖ್ಯವಾಗಿ ಫೋಕಸ್ ಆಯಿತು.  ಜೊತೆಗೆ ಆ ಕೃತಿ ಬಂದ ಕಾಲದ ರಾಜಕೀಯ ಮತ್ತು ಸಾಮಾಜಿಕ ಸಂವಿಧಾನಗಳನ್ನು ಎತ್ತಿಕೊಳ್ಳಲಾಯಿತು.  ವಾತ್ಸಾಯನನ `ಕಾಮಸೂತ್ರ' ಬಂದ ಕಾಲವಾಗಿದ್ದರಿಂದ ಕಾಮೋದ್ದೀಪನ ಅಂಶಗಳು ಹೆಚ್ಚಾಗಿವೆ;  ಪ್ರಭುತ್ವವು ನೆಲೆಗೊಂಡು ಹಿಂದುಧರ್ಮದ ರೂಪುರೇಷೆಗಳನ್ನು ರೂಪಿಸುತ್ತಿದ್ದುದರಿಂದ ಲಜ್ಜಾವತಿಯಾದ ಶಾಕುಂತಲೆಯ ಆವಿಷ್ಕಾರವಾಯಿತು.... ಹೀಗೆ ಚರ್ಚೆ ಮುಂದುವರೆಯಿತು.  ಇಲ್ಲಿ ರಸದ ಪರಿಣಾಮಗಳಿಗಿಂತ ರಸವನ್ನುಂಟು ಮಾಡು ಮೇಕಿಂಗ್ ಬಗ್ಗೆ ಒತ್ತು ಸಿಕ್ಕಿತು.  ಕೃತಿಯನ್ನು ನಿರಚನಗೊಳಿಸಿಕೊಲ್ಳುವ ರೀತಿಯೂ ಇದಾಗಿತ್ತು.

ಈ ಬಗೆಯ ಓದು ಬೌದ್ಧಿಕತೆಯನ್ನು ಬೇಡುತ್ತದೆ.  ತತ್ವಗಳಿಂದ ಪುಷ್ಟಿಗೊಂಡು ಬೆಳೆಯುತ್ತದೆ.  ಆಗ ಇಂತಹ ಕ್ರಮಗಳನ್ನೇ ಸರಳಗೊಳಿಸಿ ನೋಡುವ ಅಡ್ಡ ಪರಿಣಾಮಗಳು ಸೃಷ್ಟಿಯಾಗುತ್ತದೆ.  ಏಕೆಂದರೆ, ತತ್ವದ ಸಿಕ್ಕು ಒಳಹೊಕ್ಕು ನೋಡಲು ಅಸಾಧ್ಯವಾದಾಗ ಒಂದು ಮಧ್ಯಮ ನೋಟದಿಂದ ಅದನ್ನು ಭೇದಿಸಿಬಿಡುವ ಪ್ರಯತ್ನ ಮಾಡುವುದು ನಿರೀಕ್ಷಿತ.

ಸಾಹಿತ್ಯ ವಿಮರ್ಶೆಯು ಮೊದಲಲ್ಲಿ ಕೃತಿಕಾರನನ್ನು ಕೇಂದ್ರವಾಗಿರಿಸಿಕೊಂಡಿತಲ್ಲದೆ, ನಂತರ ಪಠ್ಯಕೇಂದ್ರಿತವಾಗಿ, ತದನಂತರ ಸಮಾಜ, ಓದುಗ, ಸಂಸ್ಕೃತಿ ಕೇಂದ್ರಿತವಾಗಿ ತನ್ನನ್ನು ವಿಸ್ತರಿಸಿಕೊಂಡಿದೆ.  ಹೊಳೆದಾರಿ ಅಗಲ ವಿಸ್ತಾರಗಳಲ್ಲಿ ಬಿಚ್ಚಿಕೊಳ್ಳುವಂತೆ ವಿಮರ್ಶೆಯು ಅನ್ಯಶಿಸ್ತೀಯ ನೆಲೆಗಳಲ್ಲೂ ತನ್ನ ನೆಲೆಯನ್ನು ಅರಸಿತು.  ಇದರಿಂದ ಅದರ ವ್ಯಾಪ್ತಿ ಹಿರಿದಾಯಿತು.  ಬಹುಮುಖೀ ಚರ್ಚೆಗೆ ದಾರಿಯಾಯಿತು.  ಇದರೊಂದಿಗೆ ವಾದ, ತತ್ವಗಳನ್ನು ಆಧರಿಸಿದ ವಿಮರ್ಶೆಯ ವಿಸ್ತಾರ ಹೆಚ್ಚಾದಂತೆ, ಅದು ಸರಳೀಕರಣದ ಸಂಕಷ್ಟವನ್ನು ತನ್ನ ಮೇಲೆ ತಂದುಕೊಳ್ಳತೊಡಗಿದ್ದು.

ತತ್ವಾಧಾರಿತ ವಿಮರ್ಶಾಕ್ರಮಗಳು ಎದುರಿಸುತ್ತಿರುವ ಕಷ್ಟಗಳು ಹಲವಾರು.  ಅವುಗಳು ಆಧರಿಸಿರುವ ಎಲ್ಲಾ ತಾತ್ವಿಕತೆಗಳಲ್ಲಿಯೂ ಸಾಕಷ್ಟು ಏರಿಳಿತಗಳಾಗಿವೆ.  ಅವುಗಳ ಪ್ರಾಥಮಿಕ ಹಂತಗಳಿಂದ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಬಂದು, ಹೊಸ ಹೊಸ ಸ್ವರೂಪಗಳಲ್ಲಿ ತಲೆದೋರಿವೆ.  ಇವು ಬರುಬರುತ್ತಾ ಒಂದು ಮತ್ತೊಂದಕ್ಕೆ ಅಂಟಿಕೊಂಡು ಹೆಣೆದುಕೊಂಡ ಪರಿಣಾಮ ಜಿಗ್ಗು ನಿರ್ಮಾಣವಾಗಿಬಿಟ್ಟಿದೆ.  ಇದನ್ನು ಇಂದು ಚಾಲನೆಯಲ್ಲಿರುವ ಸ್ತ್ರೀವಾದದ, ಮಾರ್ಕ್ಸ್‌ವಾದ, ರಚನಾವಾದಗಳೇ ಮೊದಲಾಗಿ ಬಹುತೇಕ ಎಲ್ಲಾ ವಾದಗಳಿಗೂ ಅನ್ವಯಿಸಿ ಹೇಳಬಹುದು.  ಇದನ್ನು ಆಧರಿಸಿದ ವಿಮರ್ಶೆಯೂ ಸ್ವಾಭಾವಿಕವಾಗಿ ಜಿಗುಟುತನದಿಂದಲೇ ಕೂಡಿ, ವೈಶಾಲ್ಯದಲ್ಲಿ ಹರಡಿಕೊಂಡು, ಜಿಜ್ಞಾಸೆಯಲ್ಲಿ ಮುಳುಗಿರುತ್ತದೆ.  ಆಗ ಮೇಲ್ಮೈ ಸ್ವರೂಪವನ್ನು ಮಾತ್ರ ಗಣನೆಗೆ ತೆಗೆದುಕೊಂಡು `ಇದು ಇಷ್ಟೇ' ಎಂಬ ತೀರ್ಮಾನಗಳಿಗೆ ಬಂದು ಆತುರಾತುರವಾಗಿ ತತ್ವವೊಂದಕ್ಕೆ ಕೊನೆಯ ಮೊಳೆ ಹೊಡೆದುಬಿಡುವ ಪ್ರವೃತ್ತಿ ಇನ್ನೊಂದು ಕಡೆಯಿಂದ ಕುಡಿಯತೊಡಗುತ್ತದೆ.

ಸ್ತ್ರೀವಾದವನ್ನೇ ಇಲ್ಲಿ ಉದಾಹರಿಸುವುದಾದರೆ ಅದು ಮೂಲತಃ ರಾಜಕೀಯ ಸ್ವರೂಪದಿಂದ ಅವತರಿಸಿ, ಸಾಮಾಜಿಕ ಸಾಧಕ ಬಾಧಕಗಳನ್ನು, ವಿವರಿಸಿಕೊಳ್ಳುತ್ತಲೇ ಮಾನಸಿಕ ಅಸ್ತಿತ್ವದ ಸ್ವರೂಪವನ್ನು ವಿಶದಪಡಿಸಿಕೊಂಡಿತು.  ಆನಂತರವಾದರೂ ಅದು ಅನೇಕ ನಿಶ್ಚಿತತೆಗಳಲ್ಲದೆ, ಆದಿವಾಸಿ, ತೃತೀಯ ರಾಷ್ಟ್ರಗಳ ಮಹಿಳೆಯರ ನಿಶ್ಚಿತತೆಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿತು.  ಹೀಗೆ ಸ್ತ್ರೀವಾದವು ಬೆಳೆಯುತ್ತ ಬಂದಂತೆ, ಅದನ್ನು ಆಧರಿಸಿದ ವಿಮರ್ಶೆ ಸಹ ಇವನ್ನೆಲ್ಲ ಗಮನಿಸಬೇಕಾಯಿತು.  ಈ ಅನಿವಾರ್ಯತೆಗಳಲ್ಲಿ ಅದು ಸಿಕ್ಕಿಕೊಂಡಂತೆಯೆ, ಸ್ತ್ರೀವಾದಿ ವಿಮರ್ಶೆಯು ಲಿಂಗಭೇದದ ಸರಳ ಸಮಸ್ಯೆಗಳ ವಿಶ್ಲೇಷಣೆ ಎಂಬ ಸರಳೀಕರಣದ ಉಪಾಯ ಹುಟ್ಟಿಕೊಂಡು ಬಿಟ್ಟಿದೆ.  ಅಲ್ಲಿಗೆ ಸ್ತ್ರೀವಾದವೆಂದರೆ ಇಷ್ಟೇ ಎಂದು ಅದನ್ನು ನಿರ್ಲಕ್ಷಿಸಿ, ಅದನ್ನು ಓದಿ ಮುಗಿಸಿ ಆಯಿತೆಂಬ ಧೋರಣೆ ಉಂಟಾಗುತ್ತದೆ.  ಇದು ದುರಂತ.  ಇದೇ ಗತಿ ಸಮಾಜವಾದ, ಮಾರ್ಕ್‌ವಾದ ಇತ್ಯಾದಿ ತತ್ವಾಧಾರಿತ ವಿಮರ್ಶೆಗಳಿಗೆ ಒದಗಿದೆ ಎನ್ನಬಹುದು.

ಬೌದ್ಧಿಕ ಜಿಗುಟುತನ ಮತ್ತು ಸಾಮಾನ್ಯೀಕರಣದ ಆತುರ ಎರಡೂ ರೀತಿಗಳೂ ಕೃತಿಯ ಓದಿಗೆ ತೊಡಕನ್ನೇ ಉಂಟು ಮಾಡುತ್ತವೆ.  ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ಎರಡು ಕೃತಿಗಳಿಗೂ ಇದೇ ಸಮಸ್ಯೆ ಎದುರಾಗಿದೆ.

ಡಾ. ಬಂಜಗೆರೆ ಜಯಪ್ರಕಾಶರ ಕೃತಿ - `ಅನುದೇವಾ ಹೊರಗಣವನು' ಸಂಶೋಧನೆಯ ಕೃತಿ.  ಸಮಕಾಲೀನ ಸಂಶೋಧನೆಗಳು ಬಹುಮುಖೀ ನೆಲೆಗಳಲ್ಲಿ, ಚರ್ಚೆಗಳನ್ನು ಮಾಡುತ್ತಿವೆ.  ಅದರಂತೆ ಜಯಪ್ರಕಾಶರೂ ಸಹ ಅನ್ಯಶಿಸ್ತೀಯ ನೆಲೆಗಳಿಂದ ವಿಷಯಾವಲೋಕನ ಮಾಡುವ ಪ್ರಯತ್ನದಲ್ಲಿದ್ದಾರೆ.  ಆದರೆ ಅನ್ಯಶಿಸ್ತಿನ ನೆಲೆಗಳು ಮತ್ತು ಕನ್ನಡ ಚಾರಿತ್ರಿಕ ಸಂದರ್ಭಗಳನ್ನು ಅರಿತು ಕೃತಿಯ ವಿವೇಚನೆಯಲ್ಲಿ ತೊಡಗುವುದು ಒಂದು ರೀತಿಯ ಜಿಜ್ಞಾಸೆಯನ್ನು ಹುಟ್ಟುಹಾಕುತ್ತಿದ್ದರೆ, ಇನ್ನೊಂದೆಡೆ ಸರಳೀಕರಣದಿಂದ ಜಾತಿಮೂಲವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.  ಇದು ಕೃತಿಯೊಂದು ತಲುಪಬೇಕಾದ ಸಂವಹನದ ರೀತಿಯನ್ನು ಮೊಟಕುಗೊಳಿಸುವಂತದ್ದು.

ಹಾಗೆಯೇ `ಆವರಣ'ದಲ್ಲಿ ಚರ್ಚೆಯಾಗಿರುವ ವಿಷಯ ಇತಿಹಾಸದ್ದು.  ಅತಿಯಾದ ಆಕರಗಳನ್ನು ಮುಂದಿಟ್ಟು ಓದುಗರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಇಲ್ಲಿ ಕೃತಿಕಾರ ಮಾಡುತ್ತಿದ್ದಾನೆ.  ಬೌದ್ಧಿಕ ಕಸರತ್ತುಗಳಿಂದ ಒಂದು ತರ್ಕವನ್ನು ನಿರೂಪಿಸುತ್ತಾ, ಒಂದು ಭಾರವನ್ನು ಓದುಗರ ತಲೆ ಮೇಲೆ ಹೊರೆಸುತ್ತಾನೆ.  ಇತಿಹಾಸದ ವ್ಯಾಖ್ಯಾನಗಳು ಇಂದು ಹತ್ತು ಹಲವು ದಾರಿಗಳಲ್ಲಿದೆಯಾಗಿ, ಇತಿಹಾಸವನ್ನು ತಾತ್ವಿಕವಾಗಿ ನೋಡುವ ಚರ್ಚೆಗಳು ಒಂದು ಕಡೆ ದಿಕ್ಕು ತಪ್ಪಿಸುತ್ತಿದ್ದರೆ, ಇನ್ನೊಂದೆಡೆ ತಮ್ಮ ವ್ಯಾಸಂಗ ಕಾಲದ ಹಳೆಯ ಚರಿತ್ರೆಯ ನೆನಪುಗಳನ್ನಿಟ್ಟುಕೊಂಡು ಎಂದೋ ಕಲಿತು ಮರೆತ ವಿಷಯವನ್ನು ತಮಗೆ ತಿಳಿಯದಂತೆ ತೆಳುಗೊಳಿಸಿಕೊಳ್ಳುತ್ತಿರುವುದು ಕಾಣುತ್ತದೆ.

ಈ ಕೃತಿಗಳ ಭಿನ್ನಾಭಿಪ್ರಾಯಗಳು ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ತಾತ್ವಿಕ ಜಿಗುಟುತನ ಮತ್ತು ಸರಳಗೊಳಿಸುಕೊಳ್ಳುವಿಕೆಯ ಎರಡು ಅತಿಯ ಪರಿಣಾಮಗಳನ್ನು ಸೂಚಿಸುವಂತೆ ಕಾಣುತ್ತಿವೆ.

ವಿವೇಕ ಶಾನುಭಾಗ, ನಟರಾಜ ಹುಳಿಯಾರ್‍ ಮುಂತಾದವರೆಲ್ಲ ಗುರುತಿಸಿದಂತೆ ಸಾಹಿತ್ಯದಲ್ಲಿ ಸುಗಮ ಸಾಹಿತ್ಯ ಹುಟ್ಟುತ್ತಿದೆ ಮತ್ತು ಸುಗಮ ಓದುಗರು ನಿರ್ಮಣವಾಗುತ್ತಿದ್ದಾರೆ ಎನ್ನುವ ಮಾತನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.  ಸುಗಮ ಸಾಹಿತ್ಯ ಎನ್ನುವುದನ್ನು ಸಾಹಿತ್ಯ ಶ್ರೇಷ್ಠತೆಯ ಆಯ್ಕೆ ಇಟ್ಟುಕೊಂಡು ಹೇಳಿದ ಮಾತು ಎನ್ನುವುದಕ್ಕಿಂತ, ಸರಳೀಕರಣದ ಅಪಾಯಗಳನ್ನೇ ಅವು ಧ್ವನಿಸುತ್ತಿರುವಂತೆ ಕಾಣುತ್ತದೆ.  ಅತ್ಯತಿಷ್ಠ ದಶಾಂಗುಲವಾಗಿ ಬೆಳೆಯುತ್ತಿರುವ ಬೌದ್ಧಿಕತೆ, ಅದನ್ನು ಮುಟ್ಟಲಾರದೇ ತಮ್ಮದೇ ಆದ ಮಾರ್ಗದಲ್ಲಿ ಅರ್ಥೈಸಿಕೊಳ್ಳುತ್ತಿರುವ ಭೋಳೆತನ ಎರಡೂ ಅತಿಗಳಂತೆ ಕಾಣುತ್ತಿವೆ.  ಹಾಗಾಗಿಯೇ ಮತ್ತೆ ಮತ್ತೆ ಪೊಲೊನಿಯಸ್ ಕಾಡುತ್ತಾನೆ.  ತನ್ನ ಮೂಗಿನ ನೇರಕ್ಕೆ ಸರಳ ತರ್ಕಗಳಿಂದ ಬದುಕನ್ನು ಅಳೆಯುವ ಪೊಲೊನಿಯಸ್; ತತ್ವದಲ್ಲಿ ಮುಳುಗೇಳುತ್ತಿರುವ ಹ್ಯಾಮ್ಲೆಟ್ - ಈ ಇಬ್ಬರ ನಡುವಿನ ಸೇತುವೆ ಕುಸಿದಿದೆ.  ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥ ಆಗುತ್ತಿಲ್ಲ;  ಅರ್ಥ ಮಾಡಿಕೊಳ್ಳುವ ಕಾತುರವೂ ಇಲ್ಲ.  ಈ ಇಬ್ಬರೂ ತಮ್ಮನ್ನು ಚತುರರು ಎಂದುಕೊಂಡು ತಮ್ಮ ವೃತ್ತಗಳಲ್ಲಿ ನಿಂತಿದ್ದಾರೆ.  ಆದರೆ ಚತುರತೆ ಹುಟ್ಟಿಸುತ್ತಿರುವ ದುರಂತ ಹಿಮದ ಹೊಗೆಯಂತೆ ಸುತ್ತ ಆವರಿಸಿ, ದೃಷ್ಟಿಗಳನ್ನು ಮಬ್ಬುಗೊಳಿಸುತ್ತದೆ.

                                   *****

ಕೀಲಿಕರಣ: ಕಿಶೋರ್‍ ಚಂದ್ರ