ಮಂಜುನಾಥ ವಿ ಎಂ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಂಜುನಾಥ ವಿ ಎಂ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮರಳಿನ ಹಡಗು

- ಮಂಜುನಾಥ ವಿ ಎಂ

ನಾನು ಮರಳಿನಲ್ಲೊಂದು ಹಡಗನ್ನು ಕಟ್ಟಿಕೊಂಡೆ,
ಪ್ರಯಾಣ ಬಹುದೂರದಾದ್ದರಿಂದ.

ಸಮುದ್ರದ ಮಧ್ಯೆ ಬೃಹತ್ ಅಲೆಯೊಂದು ಏರಿ ಬಂದಾಗ
ನಾನು ಧೃತಿಗೆಡಲಿಲ್ಲ;
ತಿಮಿಂಗಿಲವೊಂದು ಢಿಕ್ಕಿಯೊಡೆದು, ರಕ್ತ ಕಾರಿ ಸತ್ತು ಹೋಯಿತು.

ಗಹಗಹಿಸಿ ನಗತೊಡಗಿದೆ, ಆಗ ಮರಳಿನ ಕಣಗಳು ಉದುರತೊಡಗಿದ್ದು
ನನಗೆ ಗೊತ್ತಾಗಲಿಲ್ಲ.

ಹಾಯಿಗಂಬದ ಮೇಲೆ ಮಲಗಿ ಸಮುದ್ರದ ಒಣಗಾಳಿ ಸೇವಿಸುತ್ತಿದ್ದವನು,
ದಡ ಕಂಡಿತೆಂದು ಒಮ್ಮೆಲೇ ಹಾರಿದೆ.

ಅಯ್ಯೋ ನಾನು ಪ್ರೀತಿಯ ಹುಚ್ಚಿನಲ್ಲಿ ಯಾನ ಕೈಗೊಂಡಿದ್ದು
ಅಂತ ಕಾಣುತ್ತೆ, ಕಡಲಿನ ಧೈತ್ಯ ಸುಳಿಗಳಲ್ಲಿ ಗಿರಿಗಿಟ್ಟೆಯಂತೆ ಗಿರಕಿ
ಹೂಡೆಯುತಾ ಪ್ರಪಾತಕ್ಕೆ ಬಿದ್ದೆ.
        *****

ಜರ್ಮನಿಯ ರೈತ

- ಮಂಜುನಾಥ ವಿ ಎಂ
 
ಇಂಡಿಯಾದ ಭೂಪಟದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣದಿರುವ ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಎಪ್ಪತ್ತರ ದಶಕದಲ್ಲಿ ಇವನು ಬಂದು ತಳ ಊರಿದ. ನೀರಿನಂತೆ ಜನರ ರಕ್ತ ಹೀರಿದ ಹಿಟ್ಲರ್ ನೆಲದಿಂದ ಬಂದವನಾದರೂ ಇವನು ಗಾಂಧಿಯ ನೆರಳಿನಲ್ಲಿದ್ದ. ಏಳು ಅಡಿಗಿಂತ ಎತ್ತರವಿದ್ದ ಇವನು ಸೇಬಿನ ಬಣ್ಣ ಹೊಂದಿದ್ದ. ಇವನು ಪ್ಯಾಂಟ್ ಹಾಕಿದ್ದನ್ನು ನಾನು ನೋಡಲೇಯಿಲ್ಲ. ಬಣ್ಣಬಣ್ಣದ ಚೆಡ್ಡಿಗಳನ್ನು ಧರಿಸುತ್ತಿದ್ದ, ನಮ್ಮಂತೆ ಮಾಮೂಲಿ ಅಂಗಿ ತೊಡುತ್ತಿದ್ದ. ಕಟ್ಟಿಗೇನಹಳ್ಳಿಯ ತಿಗಳನೊಬ್ಬನಿಂದ ತೋಟ ಖರೀದಿಸಿದ. ಯಲಹಂಕದಿಂದ ಕೇವಲ ಮೂರು ಮೈಲು ದೂರದಲ್ಲಿರುವ ಬಾಗಲೂರು ಕ್ರಾಸ್‌ನಿಂದ ಬಲಕ್ಕೆ ತಿರುಗಿಕೊಂಡು, ಅಲ್ಲಿಂದ ಮೂರು ಮೈಲು ಮುಂದೆ ಸಾಗಿದರೆ ಬಲಕ್ಕೆ ಕಟ್ಟಿಗೇನಹಳ್ಳಿ ಸಿಗುವುದು. ಆ ಗ್ರಾಮದಲ್ಲಿ ಹೇರಳವಾಗಿ ತಿಗಳರೇ ವಾಸಿಸುವುದು, ಅವರನ್ನು ಹೊರತುಪಡಿಸಿದರೆ ದಲಿತರು. ತಮಟೆ ಕಟ್ಟಿಕೊಂಡೋ ಚಪ್ಪಲಿ ಹೊಲೆದುಕೊಂಡು ಇವರು ಜೀವನ ತೂಗಿಸುವರು. ತಿಗಳರು ಕೃಷಿ ಮತ್ತು ಬೇಟೆಯಲ್ಲಿ ಪರಿಣಿತರು. ಒಂದು ಏಡಿಗಾಗಿ ಏಳು ಕೆರೆಗಳ ಕಟ್ಟೆಗಳನ್ನು ಒಡೆದರೆಂದು ನಮ್ಮಲ್ಲಿ ಹೇಳುತ್ತಾರೆ.

ಸಮುದ್ರ ದಂಡೆಯಲ್ಲಿ ತೆಂಗಿನಮರಗಳು ಇರುವಂತೆ, ಹೆದ್ದಾರಿ ತುದಿಗೆ ನನ್ನ ವೆಂಕಟಾಲ ಗ್ರಾಮ ಕಚ್ಚಿಕೊಂಡಿದೆ. ಹಾಗಾಗಿ ಹೆದ್ದಾರಿ ಬದುಕು ನನಗೆ ಅತ್ಯಂತ ಪರಿಚಿತ ಮತ್ತು ಆಪ್ತ. ನನ್ನ ಮನೆಗೆ ಬಾಗಿಲು ಇರಲಿಲ್ಲವಾದ್ದರಿಂದ ಹೆದ್ದಾರಿಯಲ್ಲಿ ಘಟಿಸುವ ಘಟನೆಗಳು, ಸಾಗಿಹೋಗುವ ವಾಹನಗೆಳೆಲ್ಲವೂ ಕಾಣುತ್ತಿದ್ದವು. ಬೆಳಿಗ್ಗೆ ಐದು ಗಂಟೆಗೆ ರಾಯಲ್ ಎನ್‌ಫೀಲ್ಡ್‌ಗಳು ಕಿವಿ ಮೊರೆಯುತ್ತಿದ್ದವು. ಒಂದೋ ಎರಡೋ ಆದರೆ ಸರಿ, ನೂರರಿಂದ ಐನೂರು ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ನನ್ನ ಗ್ರಾಮದಿಂದ ಮೂರ್‍ನಾಲ್ಕು ಮೈಲುಗಳ ದೂರದಲ್ಲಿ ಗಡಿಭದ್ರತಾ ಪಡೆ ಇರುವುದರಿಂದ ಸೈನಿಕರು ಎನ್‌ಫೀಲ್ಡ್ ಮತ್ತು ವಿಲ್ಲೀಸ್ ಜೀಪುಗಳನ್ನು ಓಡಿಸಿಕೊಂಡು ಬರುತ್ತಿದ್ದರು. ತರಬೇತಿಯಲ್ಲಿರುತ್ತಿದ್ದ ಅವರು ಭಯಭೀತಿಯಿಂದ ನಡುಗುತ್ತಾ ಉಚ್ಚೆ ಹೊಯ್ದುಕೊಳ್ಳುತ್ತಿದ್ದರು. ತರಬೇತಿ ಹೇಗೆಂದರೆ, ಅಕ್ಷರಶಃ ಅವರ ಪಾಲಿಗೆ ನರಕವೇ. ಕಾಡಿನಂತೆ ಬೆಳೆದ ಸಾಲುಹುಣಸೆಮರಗಳ ನಡುವೆ ಒಂದೇ ವೇಗದಲ್ಲಿ ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ಆವೊತ್ತು ಪಾಪದ ಸೈನಿಕನೊಬ್ಬ ವೇಗದಲ್ಲಿ ವ್ಯತ್ಯಾಸ ಮಾಡಿದ. ನನ್ನ ಅಣ್ಣ ಎರಡು ಕಂಬಳಿಗಿಡಗಳನ್ನು ಬಳಸಿಕೊಂಡು ದೊಣ್ಣೆಗಳಿಂದ ಸುಖದ ಹಾಸಿಗೆ ಮಾಡಿದ್ದ. ಅದರ ಮೇಲೆ ಮಲಗಿಕೊಂಡು ನೋಡುತ್ತಿದ್ದೆ. ಆ ಸೈನಿಕನ ಹಿಂದೆ ಕುಳಿತಿದ್ದ ತರಬೇತುದಾರ ಏಕಾ‌ಏಕಿ ಹಿಂದಿಯಲ್ಲಿ ಗದರುತ್ತಾ ಅವನನ್ನು ಕೆಡವಿಕೊಂಡ. ಎನ್‌ಫೀಲ್ಡ್ ಹುಣಸೆಮರಕ್ಕೆ ಗುದ್ದಿಕೊಂಡಿತು. ನೆಲದಲ್ಲಿ ಬಿದ್ದ ಸೈನಿಕ ಹಿಂದುಹಿಂದಕ್ಕೆ ತೆವಳಿಕೊಳ್ಳುತ್ತಿದ್ದ. ತರಬೇತುದಾರನ ಬೂಟುಗಳು ಕಬ್ಬಿಣದ ಅಟ್ಟೆಯವು, ನೆಲದಲ್ಲಿ ಬಿದ್ದು ಹಾವಿನಂತೆ ಜಾರಿಕೊಳ್ಳಲೆತ್ನಿಸುತ್ತಿದ್ದ ಸೈನಿಕನ ಮೊಣಕಾಲುಗಳಿಗೆ ಬಲವಾಗಿ ಒದೆಯತೊಡಗಿದ. ನೋವಿನಿಂದ ಸೈನಿಕ ಚೀರಿದಷ್ಟೂ ಒದೆಗಳು ಜಡಿಮಳೆಯಂತೆ ಅವನ ಮೇಲೆ ಬೀಳುತ್ತಿತ್ತು. ಮೊಣಕಾಲಿನ ಬಳಿ ಕಬ್ಬಿಣದ ರೇಖಿನಂಥ ಪ್ಯಾಂಟ್ ಕಿತ್ತುಕೊಂಡು ದೊಳದೊಳನೆ ರಕ್ತ ಸುರಿಯತೊಡಗಿತು. ಆ ಸೈನಿಕನ ‘ಅಕ್ಕತಂಗಿ’ಯರನ್ನು ತನ್ನ ಅಶ್ಲೀಲ ಬೈಗುಳಕ್ಕೆ ಎಳೆದುಕೊಂಡು ಬೈಯುತ್ತಲೇ ಇದ್ದ.

ಇಂಥಾ ನರಕಸದೃಶ ಚಿತ್ರದೊಳಗೆ ಜರ್ಮನಿಯ ರೈತ ಅತ್ಯುತ್ತಮ ಕಲಾಕೃತಿಯಂತೆ ಕಂಡ; ಕಾರ್ಮೋಡದಲ್ಲಿ ಬೆಳ್ಳಕ್ಕಿ ಮೂಡಿದಂತೆ. ಕೆಂಪುಬಣ್ಣದ ರಾಯಲ್ ಎನ್‌ಪೀಲ್ಡ್ ಮೇಲೆ ಬರುತ್ತಿದ್ದ, ಬೀಜದ ಹೋರಿಯನ್ನು ನಿರ್ವಹಿಸಿದಂತೆ. ಹಲ್ಲುಗಳ ಮಧ್ಯೆ ಹಂಚಿಕಡ್ಡಿ ಇರುತ್ತಿತ್ತು. ಎನ್‌ಫೀಲ್ಡ್‌ಅನ್ನು ರಾಕೆಟ್‌ನಂತೆ ಓಡಿಸುತ್ತಿದ್ದ. ಮೋಟಾರ್‌ಸೈಕಲ್ ಬರುವ ಸದ್ದಾಗುತ್ತಿದ್ದಂತೆ ನಾನು ಆಚೆ ಓಡಿಬರುತ್ತಿದ್ದೆ, ಕ್ಷಣಾರ್ಧದಲ್ಲಿ ಅವನು ದೊಡ್ಡಮೋರಿ ಇಳಿಜಾರಿನಲ್ಲಿ ಕರಗಿಬಿಡುತ್ತಿದ್ದ. ಫುಕುವೋಕಾನ ಸಹಜಕೃಷಿ ಮಾದರಿಯನ್ನು ಬಹುವಾಗಿ ಮೆಚ್ಚುತ್ತಿದ್ದ ಇವನು ತೋಟ ಅಭಿವೃದ್ಧಿಪಡಿಸುವಲ್ಲಿ ಜೀವ ತೇಯುತ್ತಿದ್ದ. ಅದರೊಂದಿಗೆ ಆಧುನಿಕ ಕೃಷಿಯೆಡೆಗೂ ಪ್ರಯೋಗ ಕೈಗೊಳ್ಳುತ್ತಿದ್ದ. ಪ್ರತಿ ಭಾನುವಾರ ಸಂಜೆ ನಾನು ನನ್ನ ಅಣ್ಣ ಮತ್ತು ಅಮ್ಮನೊಂದಿಗೆ ಸಂತೆಗೆ ಹೋಗುತ್ತಿದ್ದೆ. ಬಿಡಿಗಾಸಿನಲ್ಲಿ ಅಮ್ಮ ತರಕಾರಿ ಕೊಳ್ಳುವಲ್ಲಿ ಹೆಣಗುತ್ತಿದ್ದರೆ, ನಾವಿಬ್ಬರೂ ಆಟದ ಸಾಮಾನುಗಳನ್ನೇ ಆಸೆಯಿಂದ ದಿಟ್ಟಿಸುತ್ತಿದ್ದೆವು. ನಮ್ಮಿಂದ ಕೆಲದೂರದಲ್ಲಿ ಜೋರು ವ್ಯಾಪಾರ ವಹಿವಾಟಿನ ಗದ್ದಲ ಕೇಳಿಬರತೊಡಗಿತು. ನಾಟಿಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ನನಗೆ ಕಂಡಿದ್ದು ಅಷ್ಟುಜನರಲ್ಲಿ, ಆ ವ್ಯಾಪಾರ ಭರಾಟೆಯಲ್ಲಿ ಆಕಾಶವನ್ನು ತಿವಿಯುವಂತಿದ್ದ ಎತ್ತರದ ಜರ್ಮನಿಯ ಆ ರೈತ. ಹಂಚಿಕಡ್ಡಿಯನ್ನು ಬಾಯಿಯಲ್ಲಿ ಅತ್ತಿಂದಿತ್ತ ಆಡಿಸುತ್ತಾ ನಾಟಿಕೋಳಿಗಳನ್ನು ಪರೀಕ್ಷಿಸುತ್ತಿದ್ದ. ಇಂಡಿಯಾದ ಎಂದಿನ ಚೌಕಾಶಿ, ಕ್ಷುಲ್ಲಕ ಮಾತುಗಾರಿಕೆಯನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದ. ವಿದೇಶದವನೆಂದು ನಾಟಿಕೋಳಿ ವ್ಯಾಪಾರಸ್ಥ ದುರಾಸೆಯ ಬೆಲೆ ಒಡ್ಡಿದರೂ ಪ್ರಯೋಜನ ಕಾಣಲಿಲ್ಲ. ಈ ನೆಲದ ಬೆಲೆಗೆ ಇಳಿದು ಹತ್ತಾರು ನಾಟಿಕೋಳಿಗಳನ್ನು ಕೊಂಡು ಎನ್‌ಫೀಲ್ಡ್ ಮೇಲೆ ಹೊತ್ತು ಹಾಕಿಕೊಂಡು ಭರ್ರನೆ ನುಗ್ಗಿದ. ಆನಂತರ ಅವನೇ ಪೌಲ್ಟ್ರಿ ಫಾರಂ ಆರಂಭಿಸಿದ.

ಎಂದಿನಂತೆ ಹರಿದ ಸ್ಕೂಲು ಯೂನಿಫಾರಮ್ಮನ್ನು ಹೊಲೆದುಕೊಂಡು ಯಲಹಂಕದ ಹೈಸ್ಕೂಲಿಗೆ ನಾನು ಮತ್ತು ಅಣ್ಣ ಹೊರಟೆವು. ಹತ್ತು ಗಂಟೆಗೆ ರೈಲ್ವೆಗೇಟು ಬಿತ್ತು. ರೈಲು ಹಾದು, ಗೇಟು ಮೇಲೇಳುವವರೆಗೂ ನಾವು ಅಲ್ಲೇ ನಿಂತಿರುತ್ತಿದ್ದೆವು. ಎರಡೂ ಬದಿಯಲ್ಲಿ ಎತ್ತಿನಬಂಡಿಗಳು, ಬಸ್ಸು, ಮೋಟಾರ್‌ಸೈಕಲ್, ಸೈಕಲ್ಲುಗಳು ನೆರೆದಿದ್ದವು. ರೈಲು ಹೊರಟು, ಗೇಟು ತೆರೆಯುತ್ತಿದ್ದಂತೆ ಮುನ್ನುಗ್ಗಿ ಹೋಗಲು ಹಾತೊರೆಯುತ್ತಿದ್ದವು. ಸನಿಹದಲ್ಲೇ ಇರಬೇಕು, ರೈಲು ಕೂಗುವ ಸದ್ದು ಕೇಳಿಸಿತು. ಜರ್ಮನಿಯ ರೈತ ಬಹಳ ಹಿಂದೆ ಇದ್ದನೆಂದು ಕಾಣುತ್ತದೆ. ಭೂಗೋಳವನ್ನು ಎತ್ತಿ ಹಿಡಿದುಕೊಂಡಂತೆ ಸೈಕಲ್‌ಅನ್ನು ತಲೆ ಮೇಲಿಟ್ಟುಕೊಂಡು ಜನರು, ವಾಹನಗಳ ಮಧ್ಯೆ ನಡೆದು ಗೇಟು ದಾಟಿಕೊಂಡು, ಸೈಕಲ್‌ಅನ್ನು ಕೆಳಗೆ ಇಟ್ಟು, ಹತ್ತಿಕೊಂಡು ಮುಂದಕ್ಕೆ ಹೊರಟ ದೈತ್ಯ. ಇವನಿಗಿಂತ ಎತ್ತರದ, ದೃಢಕಾಯರು ತಲ್ಲಣಿಸಿಹೋದರು. ದಾರಿಯಿದ್ದರೂ ಮುಂದೆ ಸಾಗದ ಹಿಂಜರಿಕೆಯ, ಡೋಲಾಯಮಾನದ ಜನ ಅವನ ಎದೆಗಾರಿಕೆಗೆ ನಡುಗಿದರು.

ವೆಂಕಟಾಲದ ಬಸ್‌ನಿಲ್ದಾಣದಲ್ಲಿ ಗೋಣಿಮರದ ನೆರಳಿನಲ್ಲಿ ಮಾರಮ್ಮನ ದೇವಸ್ಥಾನವಿತ್ತು. ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಪೂಜೆ. ಹುಸಿನುಡಿಯುವವನು ಬೆಸ್ತರ ಜನಾಂಗದ ಪೂಜಾರಿ. ಮಲಯಾಳಿಗಳು, ಮುಸ್ಲಿಮರು ಮತ್ತು ಕೊಡವರು ಇವನನ್ನು ಅರಸಿಕೊಂಡು ಬರುತ್ತಿದ್ದವರು. ಏರ್‌ಫೋರ್ಸ್‌ನಲ್ಲಿ ಪಿಯುಸಿ ಓದುತ್ತಿದ್ದ ಜೀವನೇಶನ್ ಗೆಳೆಯರೊಂದಿಗೆ ಪೂಜಾರಿ ಹತ್ತಿರ ತನ್ನ ಫಲಿತಾಂಶ ಕೇಳಲು ಬಂದ. ‘ಹೋಗು ಮಗ್ನೆ, ನೀನು ಫಸ್ಟ್‌ಕ್ಲಾಸ್ನಲ್ಲಿ ಪಾಸಾಗ್ತೀಯ’ ಭವಿಷ್ಯ ನುಡಿದ. ಜೀವನೇಶನ್ ಪಿಯುಸಿಯಲ್ಲಿ ಅತ್ಯಂತ ಕೆಳದರ್ಜೆಯಲ್ಲಿ ಅನುತ್ತೀರ್ಣನಾಗಿ ವಾರವೇ ಕಳೆದಿತ್ತು. ಹಾಗಾಗಿ ಗ್ರಾಮದವರ್‍ಯಾರೂ ಕೂಡ ಅವನ ಬಳಿ ಸುಳಿಯುತ್ತಿರಲಿಲ್ಲ. ನಾನು ಗೆಳೆಯರೊಂದಿಗೆ ಗೋಣಿಮರದ ಬುಡದಲ್ಲಿ ನಿಂತುಕೊಂಡು ಈ ಹುಸಿಪೂಜಾರಿಯ ಅವತಾರಗಳನ್ನು ಗಮನಿಸುತ್ತಿದ್ದೆ. ಬದುಕಿನ ಸಂಕಷ್ಟದಲ್ಲಿ ನೊಂದಹೆಣ್ಣು ಅವನ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ದೇವರು ಬಂದಂತೆ ನಾಟಕವಾಡಿ ನೆಲದಲ್ಲಿ ಬಿದ್ದು, ‘ತಾಯೇ...’ ಎಂದು ಹೊರಳಾಡುತ್ತಿದ್ದ. ತನ್ನ ಸುತ್ತಲೂ ಕೆಂಪುಬಣ್ಣದ್ದೋ, ಅರಿಶಿಣವರ್ಣದ ಸೀರೆಯನ್ನೋ ಕಟ್ಟಿಕೊಳ್ಳುತ್ತಿದ್ದ. ಆ ಮರೆಯಲ್ಲೇ ದೇವರನ್ನು ಆವಾಹಿಸಿಕೊಳ್ಳುವುದು ಮಾಡುತ್ತಿದ್ದ. ‘ನನ್ನ ಸವತಿ, ಆ ಮೂಲೆಗ್ಯಾಕೆ ನಿಂತಿದ್ದೀಯ, ಮುಂದೆ ಬಾರೆ’ ಎಂದು ಹೆಣ್ಣಿನ ದನಿಯಲ್ಲಿ ಕರೆಯುತ್ತಿದ್ದ. ಅವಳು ಓಡಿಬಂದವಳೇ ಕೈಮುಗಿಯುತ್ತಾ ಉದ್ದಕ್ಕೆ ಮಲಗಿಕೊಳ್ಳುತ್ತಿದ್ದಳು. ಪೂಜಾರಿ ಎದ್ದು ನಿಂತು ಅವಳ ಅಂಕುಡೊಂಕಿನ ದೇಹದ ಭಾಗಗಳನ್ನು ತುಳಿದು ನೀರು ಮಾಡುತ್ತಿದ್ದ. ನಂತರ ನಿಂಬೆಹಣ್ಣುಗಳನ್ನು ನೀಡಿ, ‘ತಗಳೇ, ಈ ನಿಂಬೆಕಾಯಿಗಳನ್ನ. ಮೂರು ದಾರಿ ಕೂಡ ಕಡೆ ತುಳಿಯೇ, ಪೀಡೆ ತೊಲಗ್ತದೆ’ ಚೀರುತ್ತಿದ್ದ. ಜರ್ಮನಿಯ ರೈತ ಎನ್‌ಫೀಲ್ಡ್‌ನಲ್ಲಿ ಬಂದು ಮಾರಮ್ಮನ ಗುಡಿಯ ಮುಂದೆ ನಿಂತ. ಇವನು ಹುಸಿ ಪೂಜಾರಿಯ ಬೂಟಾಟಿಕೆಯನ್ನು ಖಂಡಿಸುವನೆಂದು ಎಣಿಸಿದ್ದು ತಪ್ಪಾಯಿತು. ಈ ಪೂಜಾರಿಯೋ ಇವನನ್ನು ಕಂಡಿದ್ದೇ ಎದ್ದು ಕುಣಿದಾಡಿದ. ರೈತ ಎದೆಗುಂದಲಿಲ್ಲ, ಬಲಿಗಂಬದ ಮೇಲೆ ನೀರಿನಂತೆ ಸುರಿದಿದ್ದ ಕುಂಕುಮವನ್ನು ತನ್ನ ಹಣೆಗೆ ಇಟ್ಟುಕೊಂಡು, ಮಾರಮ್ಮನಿಗೆ ಕೈಮುಗಿದು ಎನ್‌ಫೀಲ್ಡ್ ಹತ್ತಿದ. ಜರ್ಮನಿಯ ರೈತ ಈ ನಾಡಿನ ದೇವರನ್ನು ಗೌರವಿಸುತ್ತಿದ್ದ ಬಗೆ ನನ್ನಲ್ಲಿ ಇವೊತ್ತಿಗೂ ನಿಗೂಢವಾಗಿ ಉಳಿದಿದೆಯಾದರೂ ಅವನು ನೆಲದೊಂದಿಗೆ ತನ್ನ ದೇಹವನ್ನು ಹೆಣೆದುಕೊಂಡಿದ್ದ.   

ಕಟ್ಟಿಗೇನಹಳ್ಳಿಯ ತಿಗಳ ಹೆಂಗಸರೆಲ್ಲರೂ ಜರ್ಮನಿಯ ರೈತನ ದೇಹದಾಕಾರಕ್ಕೆ ಕಂಗೆಟ್ಟುಹೋಗಿದ್ದರು. ಅವನು ತನ್ನ ಹಲ್ಲುಗಳ ನಡುವೆ ಹಂಚಿಕಡ್ಡಿ ತೂರಿಸಿಕೊಂಡರೆ ಇವರೊಳಗೆ ವಿಚಿತ್ರ ನರಕ ಯಾತನೆಯ ಸುಖ ಹೊಮ್ಮುತ್ತಿತ್ತು. ಕುಕ್ಕರುಗಾಲಿನಲ್ಲಿ ಕುಳಿತು ಕಳೆ ಕೀಳುವಾಗಲಂತೂ ಅವನ ಆ ಅವಸ್ಥೆ ನೋಡಿ ಮುಸಿಮುಸಿ ನಗುತ್ತಿದ್ದರು. ಇವನ ಕೋಣೆಯ ಹತ್ತಿರ ಒಬ್ಬೊಬ್ಬರೆ ಹೋಗಿ ಬರಿಮೈನಲ್ಲಿ ಹಿಂತಿರುಗುತ್ತಿದ್ದ ಉದಾಹರಣೆಗಳಿಲ್ಲ. ಬಾಗಲೂರು ಜಾತ್ರೆಗೆ ತನ್ನ ಟಿಲ್ಲರ್‌ನಲ್ಲೇ ತೋಟದಲ್ಲಿ ದುಡಿಯುವ ಕೂಲಿಯಾಳುಗಳನ್ನು ಕರೆದುಕೊಂಡು ಹೋಗುತ್ತಿದ್ದ. ಆ ಗುಂಪಿನಲ್ಲಿದ್ದ ಅರ್ಧದಷ್ಟು ಹೆಂಗಸರು ಇವನೊಂದಿಗೆ ಮಲಗೆದ್ದವರೇ ಆಗಿರುತ್ತಿದ್ದರು. ಅವರಿಗೆ ಮಡಕೆ, ಕಡಲೆಪುರಿ, ಬೆಂಡುಬತ್ತಾಸು, ಸೌಟು ಕೊಡಿಸುತ್ತಿದ್ದ. ಹುಲಿವೇಷದ ಕುಣಿತದಲ್ಲಿ ಇವನು ಹೆಜ್ಜೆ ಕಿತ್ತಿಡುವಾಗಿನ ಮೋಜು ಕಂಡು ಜನ ನಿಬ್ಬೆರಗಾಗುತ್ತಿದ್ದರು. ಆಟಿಕೆಯ ತುತ್ತೂರಿ ಕೊಂಡು, ಬರುವಾಗ ಊದಿಕೊಂಡು ಸಂಭ್ರಮಿಸುತ್ತಿದ್ದ. ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ಮಣ್ಣಿನ ಕಾರ್ಯಕ್ಕೆ ಹಣ ನೀಡಿ, ಸಂತಾಪ ವ್ಯಕ್ತಪಡಿಸುತ್ತಿದ್ದ. ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗಲೂ ಚೆಡ್ಡಿಯಲ್ಲೇ ಹೋಗುತ್ತಿದ್ದೆ, ಅವನ ಅಂಗಿಯ ಮೇಲೆ ಮಣ್ಣಿನ ಕಲೆಗಳಿರುತ್ತಿದ್ದವು.

ಇವನ ತೋಟದಲ್ಲಿ ಸಪೋಟ, ಸೀಬೆ, ಹಲಸು, ಮಾವು, ತೆಂಗು ಹುಲುಸಾಗಿ ಮೈನೆರೆದು ನಿಂತಿತ್ತು. ತೋಟದ ಮನೆಯ ಹಿತ್ತಿಲಿನಲ್ಲಿ ಒಂದು ಎಕರೆ ಭತ್ತ ನಾಟಿ ಮಾಡಿದ್ದ. ಜರ್ಮನಿಯಿಂದ ಮೋಟುಕುರಿಯೊಂದನ್ನು ತರಿಸಿ ತಳಿ ಮಾಡಿದ್ದ. ವಾರಕ್ಕೊಮ್ಮೆ ಬೆಳೆದ ತರಕಾರಿಗಳನ್ನು ಟಿಲ್ಲರ್‌ನಲ್ಲಿ ತುಂಬಿಕೊಂಡು ಯಲಹಂಕದ ಸಂತೆಗೆ ಮಾರಲು ಬರುತ್ತಿದ್ದ. ಟಿಲ್ಲರ್ ಬಸ್‌ಸ್ಟ್ಯಾಂಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನಾವು ಹುಡುಗರೆಲ್ಲರೂ ಅವನೆಡೆಗೆ ಓಡುತ್ತಿದ್ದೆವು. ಹಂಚಿಕಡ್ಡಿಯನ್ನು ಅತ್ತಿಂದಿತ್ತ ಆಡಿಸುತ್ತಾ ನಮ್ಮ ಕಡೆ ನೋಡಿ ನಗುತ್ತಿದ್ದ. ಟಿಲ್ಲರ್‌ಅನ್ನು ನಿಧಾನಕ್ಕೆ ಓಡಿಸುತ್ತಿದ್ದದ್ದರಿಂದ ನಮ್ಮ ಕೈ ಕುಲುಕುತ್ತಿದ್ದ, ನಾವು ದೇವಮಾನವನನ್ನು ಸ್ಪರ್ಶಿಸಿದಂತೆ ಆ ದಿನ ಕಳೆಯುತ್ತಿದ್ದೆವು. 

ನಾನು ‘ರಾಯಲ್ ಎನ್‌ಫೀಲ್ಡ್’ ಕಾದಂಬರಿ ಬರೆಯಲು ಪ್ರೇರಣೆ ಈ ಜರ್ಮನಿಯ ರೈತ ಮತ್ತು ಇಬ್ಬರು ಮಿಲಿಟರಿ ಅಧಿಕಾರಿಗಳು. ಈ ನೆಪದಲ್ಲಿ ಇವನ ನೆನಪುಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಾಯಿತು. ಅವನನ್ನು ನಾನು ಮರೆತುಹೋಗಿದ್ದೆ, ಮೃತನಾಗಿದ್ದಾನೋ ಜರ್ಮನಿಗೆ ಹಿಂತಿರುಗಿದ್ದಾನೋ ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ. ಖಲೀಲ ಕೊಟ್ಟ ಮಾಹಿತಿಯಂತೆ ಅವನು ತೀರಿಕೊಂಡಿದ್ದಾನೆ ಎಂಬುದು ತಿಳಿದುಬಂತು. ನಾನು ಅವನನ್ನು ಹೆಣವಾಗಿ ಸಂಭೋದಿಸಲಾರೆ, ಇಂಡಿಯಾದ ಮಣ್ಣಲ್ಲಿ ಮಣ್ಣಾಗಿಹೋದನೋ ಅಥವಾ ತನ್ನ ತಾಯ್ನಾಡು ಜರ್ಮನಿಗೆ ಮರಳಿದನೋ ತಿಳಿದುಬರಲಿಲ್ಲ. ಆಯಾ ನೆಲದಲ್ಲಿ ಹೇಗೆ ಪ್ರಾಮಾಣಿಕವಾಗಿ ಜೀವಿಸಬೇಕೆಂಬುದನ್ನು ಅವನು ಸರಿಯಾಗಿ ಅರಿತುಕೊಂಡಿದ್ದ. ಅವನು ಈ ನೆಲದಲ್ಲಿ ಇಟ್ಟ ಹೆಜ್ಜೆಗಳು ಇವೊತ್ತಿಗೂ ಜೀವಂತವಾಗಿಯೇನೋ ಎಂದೆನಿಸಿದಾಗ ರೋಮಾಂಚನವಾಗುತ್ತದೆ, ಕಣ್ಣು ಒದ್ದೆಯಾಗುತ್ತದೆ. ಅವನಿಗೆ ಅಂದು ತಂಗಾಳಿಯನ್ನೋ, ಬಿರುಗಾಳಿಯನ್ನೋ ಬೀಸಿದ ಮರಗಳು ಇಂದಿಗೂ ಅಲ್ಲಲ್ಲಿ ಉಳಿದುಕೊಂಡಿವೆ.

ಗಾಂಧಿ ಮತ್ತು ಫುಕುವೋಕಾನನ್ನು ನೋಡಲಿಲ್ಲ ಎನ್ನುವ ಹತಾಶೆ, ಕೊರಗು ನನ್ನಲ್ಲಿ ಇಂದಿಗೂ ಉಳಿದಿಲ್ಲ.
     *****

ಸೆಪ್ಟೆಂಬರ್ ತಿಂಗಳಿನ ಹುಡುಗಿಯರು

- ಮಂಜುನಾಥ ವಿ ಎಂ

ಮಧ್ಯಾಹ್ನ ಬಿಯರ್ ಕುಡಿದದ್ದು ತಲೆ ಸುತ್ತುತ್ತಿದೆ;
ಈಗ ನನ್ನೊಂದಿಗಿಲ್ಲದ, ಮಠಕ್ಕೆ ಓದಲು ಬರುವ
ಅವರ ನೆನಪು ಜೀವ ಹಿಂಡುತ್ತಿದೆ.

ಹೆಣ ತಿನ್ನುವ ರಾತ್ರೆಯ ಹುಳುಗಳು ಸುಳಿದಾಡಲಾರಂಭಿಸಿವೆ.

ಅವರ ಮುಗ್ಧತೆ, ಸೆಡವು, ಕುಗ್ರಾಮದ ಲಾವಣಿಗಳು-
ಒಂದರಿಂದೊಂದು ಹಳಸಲಾರಂಭಿಸಿವೆ.

ಪ್ರೇಮದಿಂದೊದಗುವ ಚುಂಬನ, ಆಲಿಂಗನದೂರದ
ಬೆಟ್ಟದಂತೆ ಅವರ ಮನಸ್ಸಿನಾಳದಲ್ಲಿ ಹುದುಗಿಕೊಂಡಿದೆ.

ನಾನು ಎಚ್ಚರ ತಪ್ಪುವುದು ನನಗೆ ಗೊತ್ತಾಗುತ್ತಿದೆ, ಕ್ಷಮಿಸಿ.

        *****

ಸಂಗೀತ ಸಂಜೆ

- ಮಂಜುನಾಥ ವಿ ಎಂ

ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ,
ಅವನು ಬೆಚ್ಚಗೆ ಅವಳನ್ನೊದ್ದುಕೊಂಡು.

ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ
ಹೊರಗಿನ ಗಾಳಿ ಅಲೆ‌ಅಲೆಯಾಗಿ ಅಪ್ಪಳಿಸಿದೆ.
ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ಪ್ರೇಮಪಾಠ
ಅವನ ತೋಳ್ಬಂಧನದ ವಶವಾಗಿದೆ.
ಲಾಟೀನಿನ ಬೆಳಕು ಕೋಣೆಗೆ ಕವಿದ ಮಬ್ಬನ್ನು ಸೀಳಿಹಾಕುತ್ತಿದ್ದಂತೆ,
ತನ್ನ ಜಾನಪದ ವಾದ್ಯದ ಕೀಲಿಗಳನ್ನು ಸರಿಹೊಂದಿಸುವ ದುಶ್ಚಟದಲಿ
ಅವಳು ಬೀಳುತ್ತಾಳೆ.

ಹೊಲದಿನ್ನೆಗಳಿಗೆ ಗೇಯಲೋಗಿದ್ದವರೆಲ್ಲರೂ ತಮ್ಮತಮ್ಮ ಮನೆಗಳಿಗೆ
ಹಿಂದಿರುಗುತ್ತಿದ್ದಂತೆ-ಕೀಲಿ ತಿರುಗಿದ ಹೀನಸ್ವರ ಅವರೆಲ್ಲರನ್ನೂ
ತಡೆದು ನಿಲ್ಲಿಸುವುದು. ಅದು ಸತ್ತ ನಂತರ ಏರ್ಪಾಡಾಗುವ ಶ್ರದ್ಧಾಂಜಲಿಯ
ಸಂಗೀತ ಸ್ವರದಂತೆಯೂ, ಸಾಯುವ ಮೊದಲಿನ ನೆನಪುಗಳಂತೆಯೂ
ಕೇಳಿಸಿದೆ. ಘೋರಗಾಳಿ ಅವನು  ಉರಿಸಿದ  ಸಣ್ಣ ಪ್ರಮಣದ ಬೆಂಕಿಯನ್ನು,
ಈಗಾಗಲೇ ಉರಿಯಗೊಟ್ಟ ಅವಳ ಮನಸ್ಸಿನ ಜ್ವಾಲೆಗಳಲ್ಲಿ
ವಿಶ್ರಾಂತಿ ಬಯಸಹೋಗಿದೆ.

ಕೀಲಿ ಬಿಗಿಯಾಗಿ ಸುಶ್ರಾವ್ಯ ಸ್ವರ ಎಬ್ಬಿಸಿ,
ಅಲ್ಲಿನ ಎಲ್ಲವನ್ನೂ ದಾಟಿಕೊಂಡು ಹೂಗಳಿರುವ ಕಪ್ಪುಗೋಡೆಗಳಲಿ
ಅಪರಾಧವನ್ನು ಬಿಟ್ಟು, ನಿಷ್ಟಾವಂತ ಪ್ರೇಮವನ್ನು ಕದ್ದೊಯ್ದಿದೆ.
        *****

ವಸತಿ ಗೃಹ

- ಮಂಜುನಾಥ ವಿ ಎಂ


ಬೆಂಗಳೂರಿನ ಗಾಳಿಮಳೆಗೆ ಮೈ ಒಡ್ಡಿ ಮಲಗುವುದು

ಸುಖದಾಯಕವೆನಿಸುತ್ತದೆ;


ಎಲ್ಲೋ ಬೇರ್ಪಟ್ಟ ಕನಸುಗಳು ಮತ್ತೊಮ್ಮೆ ಸಾಕಾರಗೊಂಡಂತೆ.

ಈ ವೇಳೆ ವಸತಿಗೃಹಗಳಲ್ಲಿ ಕಾಲ ನೂಕುತ್ತಿರುವ ಜನ

ಕಳ್ಳ ನೋಟಗಳಲ್ಲಿ ತಲ್ಲೀನರಾಗಿರುತ್ತಾರೆ.


ಕೋಣೆ ಬಾಗಿಲು ಎಡತಾಕುವ,

ಊಟ ಮತ್ತು ಮದ್ಯವನ್ನು ಸರಬರಾಜು ಮಾಡುವ

ಅವನ ವಿಕೃತ ಆಲೋಚನೆಗಳೋ ಅವನನ್ನೇ

ತಿಂದು ಹಾಕುತ್ತಿರುತ್ತವೆ.


ರೈಲ್ವೆ ನಿಲ್ದಾಣದ ಹಾದಿಬದಿಯ ಮರಗಿಡಗಳ ಹೂ‌ಎಲೆಗಳಲಿ

ಮಂಜಿನ ಹನಿಗಳಂತೆ ನಿಲ್ಲಲು ನೋಡುವ ಮರಳಿನ ಕಣಗಳು

ಸಣ್ಣಗಾಳಿಗೆ ಬೆದರಿ, ಕುರುಡನ ಕಣ್ಣುಗಳೆದುರಿಗೆ ಹಾದುಹೋಗುತ್ತವೆ.


ಅಲ್ಲಿ-

ವೃತ್ತಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಗೆದ್ದಲಿಡಿದ ಪತ್ತೇದಾರಿ

ಕಾದಂಬರಿಗಳು ಅವರು ಬಿಟ್ಟುಹೋದ ಗೂಢ ಸಂಗತಿಗಳನ್ನು

ಹೇಳಲು ತವಕಿಸುತ್ತಿರುತ್ತವೆ.

*****

ಬ್ಯಾರೆಕ್ಸ್ ಹುಡುಗರು

-ಮಂಜುನಾಥ ವಿ ಎಂ

ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ
ಅಸ್ವಾಭಾವಿಕ ವರ್ತನೆಗಳಿಂದ.

ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ;
ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು.

ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ
ಹೊಸ ಹಸಿರನ್ನೇನೊ ಹೊದ್ದು ನಿಂತಂತಿದೆ.

ಕೈ ಬೀಸಿದವರು ಒಬ್ಬೊಬ್ಬರಾಗಿ ಎಡತಾಕುತ್ತಿದ್ದಾರೆ
ಪರೇಡ್ ಮೈದಾನದಲ್ಲಿ;
ಅವರು ಅಲ್ಲಿ, ಹಳ್ಳಿ ತೋಟಗಳಲ್ಲಿ ಬೆರಕೆ ಮಕ್ಕಳನ್ನು ಹೆರುವ
ಇವರ ಹೆಂಡಂದಿರು.

ಅಡ್ಡಗೋಡೆಯ ಮೇಲೆ ಕಾಣುವ ಆ ಹ್ಯಾಟಿನ ತುದಿಗೆ
ಮೂರು ದಿನದ ಹೂವು ಮತ್ತೆ ಚಿಗುರಲಿದೆ.
        *****

ಅಸೂಯೆ

- ಮಂಜುನಾಥ ವಿ ಎಂ

ನನ್ನ ಹಾಸಿಗೆಯ ಹೊದಿಕೆಯಲಿ ಆ ರಾತ್ರೆಗಳಲಿ
ಮಿಡತೆಯಂತೆ ತುಂಡರಿಸಿ ಬಿದ್ದ ಅವಳ ಚಿತ್ರಣವಿದೆ.
          *****

ಉತ್ತಮ ಸೆಳಕಿನಿಂದ ಆರಂಭವಾಗುವ ಜನ

- ಮಂಜುನಾಥ ವಿ ಎಂ

ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ.
ಇನ್ನೇನು ಹೊರಡುತ್ತದೆ;
ಬೋಗಿಗಳು ಅದಲು ಬದಲಾಗಬೇಕಷ್ಟೇ.

ಸೆಪ್ಟೆಂಬರ್‍ ತಿಂಗಳ ಮಳೆಗಾಲದ ನಡುಮಧ್ಯಾಹ್ನ
ಅವರೆಲ್ಲರೂ ಬಂದು ನೆಲೆ ನಿಂತರು.

ಆ ಮರಗಿಡಗಳು ಬೆಳೆಯುತ್ತಲೇ ಇವೆ.
ಕೆಲವರು ನಗಲು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿ.

ಅಳುವುದರ ಸತ್ಯಾಸತ್ಯತೆ ಅವರ ನರನಾಡಿಗಳಲ್ಲಿ
ಪ್ರವಹಿಸುತ್ತಿದೆ.

ಇನ್ನೇನು ಎದ್ದು, ಎಲ್ಲವನ್ನೂ ಹೇಳಿಬಿಡಬೇಕೆಂಬ
ಕಾತರದ ಹುಡುಗನ ಕಣ್ಣುಗಳಲ್ಲಿ-
ಸೀಗಡಿ, ಕರಿಮೀನು ಉರಿಯುವ ಆ ಮೂಲೆಯ
ರೋಗಗ್ರಸ್ತ ಕುಟುಂಬ-
ಅವಳ ಪ್ರೇಮದ ಲೆಕ್ಕಾಚಾರವನ್ನು ಗುಣಿಸಿ ಹಾಕುತ್ತಿರುತ್ತದೆ
           *****

ಹೆಂಡಗಡಂಗಿನ ಚಿತ್ರ

- ಮಂಜುನಾಥ ವಿ ಎಂ

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ
ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು
ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ
ಮನುಷ್ಯನಂತೇ ಆಗಿಹೋಗಿವೆಯೇನೊ.

ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇನ್ನೂ ಮೇಲೆದ್ದಿಲ್ಲ.
ಉಡುಪು ಮಾಸಿಲ್ಲ, ಪ್ರೇಮ ಮಾತ್ರ ಬೆಂಕಿಯಂತೆ ಉರಿದು ಹೋಗುತಿದೆ.
ಮಳೆಗಾಲದ ಬಣ್ಣಬಣ್ಣದ ಚಿಟ್ಟೆಗಳು ಒಳಸುಳಿದು ಹೂದೋಟದತ್ತ ಹಾರಿಹೋಗಲಾರಂಭಿಸಿವೆ.

ಹುಲಿ ಆಡಿಸುವವನು ಈಗಷ್ಟೇ ಪೀಪಾಯಿ ಘಾಟು ಹೆಂಡ ಏರಿಸಿ,
ಜನರ ಮಧ್ಯೆಯೇ ನಡೆದುಹೋಗಿದ್ದಾನೆ.

ವಸಂತಮಾಸದ ಹಿರಿಮೆಯಲಿ ಹಿಗ್ಗುವ ಪ್ರಕೃತಿ ಸೌಂದರ್ಯದ ಮೋಹಕಪ್ರಭೆ - ಹೆಂಡಗಿರಾಕಿಗಳನ್ನು
ಯಥೇಚ್ಛವಾಗಿ ಕರೆತರುತ್ತಿದೆ.
ದಮ್ಮಡಿಯಿಲ್ಲದೆ ಕುಡಿದವನೊಬ್ಬ ಅಡವಿಟ್ಟು ಹೋದ ಸ್ಯಾಕ್ಸಫೋನ್
ಇನ್ನೂ ಅಡ್ಡಗೋಡೆಯ ಮೇಲಿದೆ.

ತಡಿಕೆ ಮರೆಯಲ್ಲಿ ಹಂದಿಬಾಡಿನ ಚಾಕಣ ಉರಿಯುತ್ತಿದ್ದವಳು ಮಾತ್ರ
ಅಂದು ಗೈರು ಹಾಜರು.  ಹಸಿ ನೆಲಗಡಲೆ, ಆಲೂಗಡ್ಡೆ ನಂಜಿಕೊಳ್ಳುವ
ಕುಡುಕರಿಗೆ ಅವಳ ಚಿಂತೆಯೇ ಇಲ್ಲ.

ನಾಲ್ಕೈದು ಬಾತುಕೋಳಿಗಳೊಂದಿಗೆ ಬಂದು ಮೂಲೆ ಸೇರಿದ ಬೇಟೆಗಾರ-
ಅಂದಿನ ಶೌರ್ಯ ಸಾಹಸಗಳ ವರ್ಣನೆ ಮಾಡುತ್ತಲೇ ನೆಲಕ್ಕೆ ಬೀಳುತ್ತಾನೆ.

ಕಾಲವನ್ನೇ ಮೀರಿ ಮುನ್ನಡೆಯುವ ಹೆಂಡಗಡಂಗು-
ಕ್ಷಣಕಾಲ ನಿಂತು ನಡೆದಂತೆಯೂ ಭಾಸವಾಗುತ್ತಿತ್ತು.

          *****

ಧ್ಯಾನಿಸಬಹುದಾದ ದೇವರು

- ಮಂಜುನಾಥ ವಿ ಎಂ

ಆ ದೇವರು ನಮ್ಮನ್ನು ಧ್ಯಾನಿಸುವುದಿಲ್ಲ;
ನಮ್ಮ ಆತ್ಮ ನಿವೇದನೆಗಳು ಪುಟಿದೇಳುವಾಗ ಸ್ವತಃ ನಾವೇ
ಒತ್ತಡಕ್ಕೀಡಾಗುತ್ತೇವೆ.

ಸದಾಕಾಲ ಮೋಜಿನೊಂದಿಗೆ ಬದುಕುವ ಜನ
ಸಾಂತ್ವನ ಹೇಳಲು ಬರುತ್ತಾರೆ;
ನೂರನೆಯ ಸಲ ನಾವು ಸಾಯಲು ಸಿದ್ಧರಾಗಬೇಕಾಗುತ್ತದೆ.

ತುಟಿಗಳಿಂದ ರಕ್ತ ಹನಿಸುತ್ತೇವೆ;
ಅವರು ಬ್ರಾಂಡಿಯ ಜಿಗುಟುತನದಿಂದ ನಮ್ಮನ್ನು ಧೃತಿಗೆಡಿಸುತ್ತಾರೆ.

ನಾವು ನದಿಯಂತೆ ಹರಿದೋಗುವ ಮಂದಿ
ಆದರೆ, ಪಾರ್ಥೇನಿಯಮ್ ಜಾತಿಯ ಇತರೆ ಸಸ್ಯಗಳಂತೆ
ಮರುಹುಟ್ಟು ಪಡೆಯುತ್ತಿರುತ್ತೇವೆ- ಹಳೆ ವಾಸನೆಯೊಂದಿಗೆ.

          *****

ಸರ್ಕಾರಿ ಆಸ್ಪತ್ರೆ

- ಮಂಜುನಾಥ ವಿ ಎಂ

ನಾನು ನೋಡಿದ ಬೇಸಗೆಯ ಅಪರಿಪೂರ್ಣ ಚಿತ್ರವಿದು:

ಒಳರೋಗಿಗಳು ಇನ್ನೆಂದಿಗೂ ಹೊರಬರದಂತೆ ಕಾರಿಡಾರ್‌ನ
ಕತ್ತಲ ಗುಹೆಯಲ್ಲಿ ಹೋದ ಬೇಸಗೆಯ ಹಗಲುಗಳನ್ನು ಕಾಣಲೆತ್ನಿಸುತ್ತಾ,
ಎಣಿಸುತ್ತಾ ತಟಸ್ಥರಾಗಿ ಹೋಗಿದ್ದರು.

ದಗಲ್ಬಾಜಿ ವೈದ್ಯನೊಬ್ಬ ಹೊಸದಾಗಿ ನೇಮಕಗೊಂಡ ನರ್ಸ್ ಅನ್ನು
ಕಕ್ಕಸುಕೋಣೆಯ ಗೋಡೆಗೆ ನಿಲ್ಲಿಸಿಕೊಂಡು ಅವಳ ಶರೀರದ ರಂಧ್ರಗಳಿಗೆ
ಶಾಖ ಊದುತ್ತಿದ್ದ.

ಅನ್ನನಾಳಗಳು ಹೂಮರದಂತೆ ನಗರದ ಗಾಳಿಗೆ ಮಿಡುಕುತ್ತಿರುವಂತೆ,
ಬಲಿತ ಬೀದಿ ನಾಯಿಗಳು ಬಾಗಿಲಲ್ಲಿ ನಾಲಗೆ ಬೀಸುತ್ತಿದ್ದವು.

ಸೆಪ್ಟೆಂಬರ್‌ನ ಒಂದು ರಾತ್ರೆ ಇದೇ ಆಸ್ಪತ್ರೆಯಲ್ಲಿ
ನನ್ನ ತಂದೆಯನ್ನು ಕೊಂದು ಹಾಕಿದ್ದರು.

ಅಲ್ಲಿ ಬಾಲ್ಕನಿಯಲ್ಲಿ ಮುದಿ ದಾದಿಯೊಬ್ಬಳು
ತನ್ನ ಒಳ ಉಡುಪುಗಳನ್ನು ಒಣಗಿಸಿಕೊಳ್ಳುತ್ತಿದ್ದಳು,
ಸರ್ಕಾರಿ ಆಸ್ಪತ್ರೆಯ ಒಳಗಿನ್ ಚಿತ್ರಣದಂತೆ ಅವಳ ಮೈ ಮೇಲೂ ಬಟ್ಟೆಯಿರಲಿಲ್ಲ.

ಅದು ರಂಜನೀಯವೆನಿಸಿದ್ದರಿಂದ ಹಾಡೆಂದು ಭಾವಿಸಿದೆ.
          *****

ದೂರದಲ್ಲಿದ್ದೇನೆ

- ಮಂಜುನಾಥ ವಿ ಎಂ

ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ,
ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು.

ಯಂತ್ರ, ವಾಹನಗಳ ಹೊಗೆ;  ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ,
ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ
ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ.

ಮುರಿದು ಬಿದ್ದಿರುವುದು ನನ್ನ ಮನೆ-
ಆದ್ದರಿಂದ ನಾನೀಗ ದೂರದಲ್ಲೆಲ್ಲೋ ವಾಸವಿದ್ದೇನೆ;

ಅದೊಂದು ಸೂಳೆಯರು ಬಿಟ್ಟುಹೋದ ಕಸಾಯಿಖಾನೆಯಲ್ಲಿ.

        *****

ಮ್ಯಾಸ್ಸೆ ಫರ್ಗ್ಯುಸನ್

- ಮಂಜುನಾಥ ವಿ ಎಂ
ಚಿತ್ರ: ರಾಂಗೋಪಾಲ್ ರಾಜಾರಾಮ್











ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ,
ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ
ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ.

ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕಿರಿಕ್
ಮಾಡಿಕೊಂಡೋ-ಹೀಗೆ ಒಂದಿಲ್ಲೊಂದು ತರಲೆಗಳಲ್ಲಿ
ಸಿಕ್ಕಿಕೊಂಡು ಆ ಟ್ರ್ಯಾಕ್ಟರ್‌ನ ಡ್ರೈವರ್‌ಗಳು ಬದಲಾದರೂ,
ಯಾಕೋ ಗುಟ್ಕಾ ಸವಿಯುವ ಆ ಹೆಣ್ಣು ಮಾತ್ರ ಕದಲಲಾರಳು.

        *****

ಸಿಲ್ವರ್ ಮರಗಳ ದೊಡ್ಡ ಕಾಡು

- ಮಂಜುನಾಥ ವಿ ಎಂ

ಅಲ್ಲಿ-ಚರ್ಚಿನಲ್ಲಿ,
ಸಿಲ್ವರ್ ಮರಗಳ ದೊಡ್ಡ ಕಾಡು ಬೆಳೆದುಕೊಂಡಿದ್ದರಿಂದ
ವರ್ಷಾ ವರ್ಷ ಅವುಗಳನ್ನು ಕಡಿದು, ಸವರಲಾಗುತ್ತಿತ್ತು.

ಆ ಆಶ್ರಮಕ್ಕೆ ನರ ನಾಡಿಗಳೇ ಇಲ್ಲದ ಕ್ರಿಮಿನಲ್‌ಗಳು,
ನಿವೃತ್ತ ಸೂಳೆಯರು, ಎಲ್ಲಾ ವಿಧದ ಅಂಗವೈಕಲ್ಯ,
ಮನೋವೈಕಲ್ಯಗಳಿಂದ ನರಳುವ ದಿಕ್ಕಿಲ್ಲದ ನಿರ್ಗತಿಕರು
ಬಂದು ದಾಖಲಾಗುತ್ತಿದ್ದದ್ದರಿಂದ ಅವರನ್ನು ವಾರಕ್ಕೊಬ್ಬಬ್ಬರಂತೆ
ಕುತ್ತಿಗೆ ಕೊಯ್ದು, ಹೂಳಲಾಗುತ್ತಿತ್ತು.

ನಡು ರಾತ್ರೆಯ ಚೀರಾಟ ಹಗಲಿನ ಸಮಾಧಿಗಳನ್ನು
ಸ್ವರ್ಗ ಶಾಂತಿಯಲ್ಲಿಡುತ್ತಿತ್ತು.
           *****

ಕಣಜ

- ಮಂಜುನಾಥ ವಿ ಎಂ

ಆ ಮನೆಯ ಕಣಜ ನಮಗೆ,
ದಿನಾರಾತ್ರೆ  ಒಂದೊಂದು ನೀತಿಕಥೆಯನ್ನು ಹೇಳು ತ್ತಿತ್ತು;
ಕೇಳಿಸಿಕೊಳ್ಳುತ್ತಿದ್ದದ್ದು ಮಾತ್ರ ಅವರಾಗಿದ್ದರು.

ಅವರೆಕಾಳು, ರಾಗಿ, ಗೋಧಿ, ತೊಗರಿ, ಹೆಂಡ, ಹಳೆಬಟ್ಟೆಗಳು,
ಔಷಧಿ ಬೇರುಗಳೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು,
ದೂರದ ಗ್ರಾಮದ ದಢೂತಿ ಹೆಂಗಸಿನಂತೆ ಕಂಗೊಳಿಸುತ್ತಿತ್ತು.

ಅದನ್ನು ಕಟ್ಟಿದ ಆ ಓಣಿಯ ಅವನೋ,
ಸಂತೆಯಿಂದ ಬಿದಿರುಕಾಡನ್ನು ಬಳಸಿಕೊಂಡು ಇತ್ತ ಬರುತ್ತಿದ್ದಂತೆ-
ಆ ಕಣಜವನ್ನು ಬಾಯಿಗೆ ಬಂದಂತೆ ಬೈಯ್ಯುವುದನ್ನು ರೂಢಿ ಮಾಡಿಕೊಂಡಿದ್ದ.

ನಾವೆಲ್ಲರೂ ಎದ್ದೇಳುವ ಮುಂಚಿತವೇ ಅವನು ತನ್ನದೆಲ್ಲವನ್ನೂ
ಆರಂಭಿಸಿರುತ್ತಿದ್ದನೇನೊ.

ಏಕೆಂದರೆ, ಆಗ ಅವನು ಅಳುತ್ತಾ ನಡೆದುಹೋಗುತ್ತಿದ್ದ.

ಅಪ್ರಾಕೃತ ಸಾವಿನಿಂದ ಅವನು ಸತ್ತರೂ
ಆ ಕಣಜದ ನೀತಿಕಥೆಗಳು ಮಾತ್ರ ಮುಗಿದಿರಲಿಲ್ಲ,
ನಾವು ಬೆಳೆಯುವುದು ಕುಗ್ಗಲಿಲ್ಲ;

ನಮ್ಮ ನಡುವಿನ ಅವರು (ಕತೆ ಕೇಳಿಸಿಕೊಳ್ಳುತ್ತಿದ್ದವರು)
ಸಾಯುವುದೂ ಕಡಿಮೆಯಾಗಲಿಲ್ಲ.
            *****

ಇದ್ದಿಲು ಮಾರುವ ಹೆಂಗಸರು

- ಮಂಜುನಾಥ ವಿ ಎಂ

ನನ್ನ ತಾಯಿ ಕಡೆಯ ಸಂಬಂಧಿಕರಿವರು,
ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು.

ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ
ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು
ಎಷ್ಟೋ ಸಲ ನೋಡಿದ್ದೇನೆ.

ಒಂಟಿಗಿಡದ ಪನ್ನೀರ ಫಲಗಳು ದುರಾಶೆ ತುಂಬಿದ
ಅವರ ತೃಷೆಯನ್ನು ಹೋಗಲಾಡಿಸುತ್ತಿದ್ದವು.

ಊರೂರು ಅಲೆದು ಹೊತ್ತು ತಂದ ಇದ್ದಿಲನ್ನು ಸಂಜೆಗತ್ತಲು ಏರುತ್ತಿದ್ದಂತೆ
ಮಾರಿ, ಗಡಂಗು ಹೊಕ್ಕುಬಿಡುತ್ತಿದ್ದರು ತಾಟಗಿತ್ತಿಯರು.

ಅವರ ಸೊಂಟದ ಬದಿಯ ಕತ್ತಿಗಳು ವಾರಕ್ಕೊಮ್ಮೆಯಾದರೂ
ಕುಲುಮೆಗಾರನಲ್ಲಿಗೆ ಹೋಗಿ ಬರುತ್ತಿದ್ದದ್ದು ನೆನಪಾಗುತ್ತಿರುತ್ತದೆ.

        *****

ಹಗಲುಗನಸು

- ಮಂಜುನಾಥ ವಿ ಎಂ

ಅವ್ವ ರಾತ್ರೆಯೊಂದು ಗಳಿಗೆ ಎದು  ಹಾಡಿಕೊಳ್ಳುತ್ತಾಳೆ;
ಅವರೆ ಹೊಲದಲ್ಲಿ ಗೇಯುವಾಗ ಬಿದ್ದ ಹಗಲುಗನಸೇ,

ಆ ಕ್ಷಣದ ದುಃಸ್ವಪ್ನವನ್ನು ಶಿಕ್ಷಿಸು,
ದಮನಗೊಳಿಸೂ ಅವನ ಕ್ರಾಂತಿಗೀತೆಯನ್ನು,
ಬೂಟಿನಿಂದ ಚಿಮ್ಮುವ ನೋವಿನ ರಕ್ತವನ್ನು,

ನೆಲದ ನೈದಿಲೆಗಳಲಿ ಕಾವ್ಯ ಅರಳಗೊಟ್ಟವನು,
ಕ್ರಾಂತಿ ಕಂಡವನು ಮಿಂದನವನು.

ಎಲುಬುಮೂಳೆಗಳಿಡಿದು ಬರುವವರಿಗೆ
ತನ್ನದೇ ರಕ್ತ ಮಾಂಸದಲಿ ಹೊದಿಸಿ, ಉಸಿರಾಡಿಸಿ
ತಾನು ಬೆತ್ತಲೆ ಮಲಗುವವನು.

ವಸಂತದಲಿ ಮೂಡಿಬರುವ ಹೆಣ್ಣಿಗೆ ಕನಸುಗಳ ತುಂಬುವವನು;
ನಾಳಿನ ದುಃಖ ದುಮ್ಮಾನಗಳನ್ನು ಇಂದೇ ಗಾಳಿಗೆ ತೂರುವವನು.

ನಾಳೆ ಅವನ ಗೋರಿಗೆ ಸಲ್ಲಬಹುದಾದ
ಆ ಗುಲಾಬಿಗಳನ್ನು ಇಂದೇ ಕಿತ್ತೆಸೆದುಬಿಡೂ
ನನ್ನ ಹೃದಯದಲ್ಲಿ ಬೆಳೆಯಲೀ ಹೆಮ್ಮರವಾಗಿ, ಉದುರಲೀ ಹಣ್ಣಾಗಿ.

ಅವರೆ ಹೊಲದಲ್ಲಿ ಗೇಯುವಾಗ ಬಿದ್ದ
ಹಗಲುಗನಸೇ . . . . . . .

ಬೆರಳಚ್ಚು ಯಂತ್ರದಲ್ಲಿ ಮೂಡಿಬರುತ್ತಿದ್ದ
ಬಿಳಿಹಾಳೆಯ ರಕ್ತ ಘೋಷಣೆಯ ಮೇಲೆ
ಈ ಅವ್ವನ ಚಿತ್ರಗಳು ಸರದಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

        *****

ಆ ರಾತ್ರೆಯ ಮೊರೆತ

- ಮಂಜುನಾಥ ವಿ ಎಂ

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು;
ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು.
ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ
ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು
ನಮ್ಮ ತಲೆ ತಿನ್ನುತ್ತಿದ್ದವು. ಅದು ಕನಸುಗಳಲಿ ಮೈ ಮರೆವ
ಹೊತ್ತು-ಶೀತಲ ಗಾಳಿ ಹಾವಿನಂತೆ ಸುಳಿದು ಹೊಗೆಯಾಡುತ್ತಿತ್ತು.
ಮಲಗಿದಲ್ಲೇ ಕಕ್ಕಸು ಮೂತ್ರ ಮಾಡಿಕೊಂಡ.  ರೋಮನ್
ಕ್ಯಾಥೊಲಿಕ್ ಸನ್ಯಾಸಿನಿಯರ ಹಿಂಸೆಯಿಂದ ಪಾರಾಗಿ ಬಂದ ವೃದ್ಧೆ;
ಸುಖವನ್ನು ಬಚ್ಚಿಟ್ಟುಕೊಂಡ ರಕ್ತನಾಳಗಳು ದುಃಖಸೂಚಕ
ರಾತ್ರೆಗಳನ್ನು ತಿರುವಿ ಹಾಕುತ್ತಿದ್ದವು.  ಹಿಂದೊಮ್ಮೆ ಇದೇ ಹಳ್ಳಿಯ
ಹಾದಿ ಬದಿಯ ಹೂರೆಕ್ಕೆಗಳು ನಮ್ಮನ್ನು ಬಡಿದೆಬ್ಬಿಸಿದ್ದವು.

ಆಗ ನಾವು ಮಗ್ಗಲು ಬದಲಿಸಿದೆವು; ಒಬ್ಬೊಬ್ಬರಾಗಿ ಪ್ರೇಮಿಸಲು
ಯತ್ನಿಸಿದೆವು.
      *****

ಲೆವೆಲ್ ಕ್ರಾಸಿಂಗ್

- ಮಂಜುನಾಥ ವಿ ಎಂ

ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ,
ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ.

ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ,
ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂಕಡಿಸುತ್ತಿರುತ್ತಾನೆ.

ಹಳೆ ಸಂಬಂಧಿಕರು ಅವನ ಯೋಗಕ್ಷೇಮ ವಿಚಾರಿಸಿದರೂ,
ಅಷ್ಟುದೂರ ಹೋದ ನಂತರ ಯಾಕೋ ತಿರುಗಿ ನೋಡುತ್ತಾರೆ.

ಸಂಜೆ ರೈಲು ಮರೆಯಾಗುತ್ತಿದ್ದಂತೆ
ಅವನು ಅಲ್ಲೇ ಗೂಟ ಹೊಡೆದುಕೊಂಡು ಬಿದ್ದಿರುವುದಿಲ್ಲ.

ಕರೆದವಳ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸುತ್ತಾನೆ;
ಹಾಲು ಕರೆದು ಆಕಳು ಬಿಡುತ್ತಾನೆ.

ನಡುಮನೆಯ ಸರುವೆಗಳಕ್ಕೆ ಬೆನ್ನು ಮಾಡಿ ಕುಳಿತು ಬಹಳ ಹೊತ್ತು
ಮಾತನಾಡುತ್ತಾರೆ. ಮನೆ ಕಂದಾಯ ಕಟ್ಟಲು ಕೇಳಿಕೊಳ್ಳುತ್ತಾಳೆ;

ನಾಳೆ ಹಂದಿದೊಡ್ಡಿಗೆ ತಡಿಕೆ ಕಟ್ಟಬಹುದೆನ್ನುತ್ತಾಳೆ.
ನಾಯಿಗಳು ಬೊಗಳುವ ಸದ್ದು ಕೇಳಿಸುತ್ತದೆ.

ಸರಿಯೆಂದು ಎದ್ದು, ಓಣಿ ಹಾದಿಗೆ ಬೀಳುತ್ತಿದ್ದಂತೆ-
ಇವನನ್ನು ಕಂಡೊಡನೇ ಉಚ್ಚೆ ಹೊಯ್ಯುವ ಹೆಂಗಸರು ಕಣ್ಣಿಗೆ ಕಟ್ಟಿಕೊಳ್ಳುವರು.

               *****