ಹನಿಗವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನಿಗವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಎಲ್ಲಿ ಮಾಯವಾದ

- ಶ್ರೀನಿವಾಸ ಕೆ ಹೆಚ್

ಹದಿನೈದು ದಿನದಿಂದ ಕೊರಗಿ ಕೊರಗಿ
ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ
ಎಲ್ಲಿ ಮಂಗಮಾಯವಾದ?
ತಾರೆಗಳಿಗೆ ದಿಗಿಲು
ಪಾಪ ಹೋಗಿ ಹುಡುಕೋಣ ಅಂದರೆ
ಅಮವಾಸ್ಯೆ ಕತ್ತಲು.
     *****
ಕೀಲಿಕರಣ: ಕಿಶೋರ್‍ ಚಂದ್ರ

ಬಾರಯ್ಯ

- ಅನಂತರನಾರಾಯಣ ಎಸ್

ಬಾರಯ್ಯ  ಬಂದುದಕೆ ಏನನಾದರು ಕೊಟ್ಟು
ಕಳುಹಿಸುವೆ.  ಕುಳಿತೆನ್ನ ಬಳಿಗೆ ಬಂದು
ಕೇಳುವೊಡೆ ಹಾಡುವೆನು - ಅದು ಒಂದೆ ಸಂಪದವು
ಬೇಕಾದೊಡದನೀವೆ-ಹಾಡುವೆನು ಕೇಳು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಅಂತರಂಗ

- ಪರಿಮಳಾ ರಾವ್ ಜಿ ಆರ್‍
ಹನಿಯ
ಅಂತರಂಗ
ನುಡಿಸುತಿದೆ
ಕಡಲ
ಜಲತರಂಗ
****

ಅಕ್ಷರ ಮಾಲೆ

- ಪರಿಮಳಾ ರಾವ್ ಜಿ ಆರ್‍
ಅಕ್ಷರ ಮಾಲೆಯಲಿ
ಸಾಕ್ಷರದ ಮೌಲ್ಯ
ಅಷ್ಟೇ ಕಂಡದ್ದು
ನನ್ನ ಮೌಢ್ಯ
ಎದೆಯ ಕ್ಷಾರವ ತೊಳೆಯೆ
ಅಕ್ಷರದಿ ಪ್ರತ್ಯಕ್ಷ
ಬ್ರಹ್ಮ ಸಾಕ್ಷಾತ್ಕಾರ!

 *****

ಆಟ

ದೇವಕಣ್ಣು
ಬಿಟ್ಟರೆ
ಬಾಳು
ಹೂದೋಟ
ದಾನವ
ಕಣ್ಣಿಟ್ಟರೆ
ಭಸ್ಮ
ಭವದ
ಆಟ

****

ಅಗತ್ಯತೆ

- ಪರಿಮಳಾ ರಾವ್ ಜಿ ಆರ್‍

ದೇಶಕ್ಕೆ ಬೇಕು
ಸ್ವಚ್ಛ ಶೌಚಾಲಯ
ಆಮೇಲೆ ಕಟ್ಟಿರಿ
ನ್ಯಾಯಾಲಯ
ದೇವಾಲಯ

 *****

ಕದ್ದವರ್‍ಯಾರಣ್ಣ ಬೀಜಗಳ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಆಆ .... ಹೊಹೊ....
ಕದ್ದವರ್‍ಯಾರಣ್ಣ ಬೀಜಗಳ
ಮೆದ್ದವರ್‍ಯಾರಣ್ಣ ಲಾಭಗಳ
ಆಆ... ಹೊ ಹೊ... ||
*****

ಆಂತರ್ಯ

- ಪರಿಮಳಾ ರಾವ್ ಜಿ ಆರ್‍

ಹುಳಿಯ
ಹೊಟ್ಟೆ
ಯಲ್ಲಿಟ್ಟು
ಬಂಗಾರ
ಬಣ್ಣದಲಿ
ತೂಗಿದೆ
ನಿಂಬೆ
ಹಣ್ಣು

****

ಕೀಲಿಕರಣ: ಕಿಶೋರ್‍ ಚಂದ್ರ

ಬಾಳು ಕೋಮಲ

- ಡಾ || ರಾಜಪ್ಪ ದಳವಾಯಿ

ಬಾಳು ಕೋಮಲ
ಎಳೆ ಬಾಳೆಯಲೆಯಲ
ಬಾಲೆ ಜೊತೆ ಮಧುರತೆಯಿರೆ
ಹಣ್ಣ ಸವಿ ಮೆದ್ದಂತೆ
ಸಂ - ಬಂಧ ಬಿರಿಯೆ
ದಿಂಡ ರಸಪಾನದಂತೆ
        *****

ಮುಗಿಲ ಮಲ್ಲಿಗೆ

- ಡಾ || ರಾಜಪ್ಪ ದಳವಾಯಿ

ಮುಗಿಲ ಮಲ್ಲಿಗೆ
ಅರಳು ಮೆಲ್ಲಗೆ
ಹೊಳಪು ಹೊಳಪು
ಬದುಕ ಮುಳುಗು
ಕಹಿಸಿಹಿಯೊಳಗು
ನಲವು ಒಲವು

        *****

ನಾಯಿಯ ಸಾಕಿದರು

- ಡಾ || ರಾಜಪ್ಪ ದಳವಾಯಿ

ನಾಯಿ ಸಾಕಿದರು
ಶೋಕಿ ಮಾಡಿದರು
ಇದ್ದವರು;  ಕದ್ದವರು
ಬಾಯಿ ಬಿಟ್ಟರು
ಬೇಗೆ ನುಂಗಿದರು
ಇಲ್ಲದವರು; ಮನಷ್ಯರು

        *****

ಅಸೂಯೆ

- ಮಂಜುನಾಥ ವಿ ಎಂ

ನನ್ನ ಹಾಸಿಗೆಯ ಹೊದಿಕೆಯಲಿ ಆ ರಾತ್ರೆಗಳಲಿ
ಮಿಡತೆಯಂತೆ ತುಂಡರಿಸಿ ಬಿದ್ದ ಅವಳ ಚಿತ್ರಣವಿದೆ.
          *****