Girijapati MN ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Girijapati MN ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಪ್ರೀತಿಗೆ

- ಗಿರಿಜಾಪತಿ ಎಂ. ಎನ್

ಮಾತು ಬಲ್ಲವರಲ್ಲಿ ಕೇಳಿದೆ
ಅರ್ಥವಾವುದು ‘ಪ್ರೀತಿಗೆ’.....
ಮಾತ-ಮಾತಿಗೆ ನಿಲುಕಲಾಗದ
ಮೌನದಳವಿನ ರೀತಿಗೆ
ಬರೆದೆ ಬರೆದರು ‘ಪ್ರೀತಿ’ಸುತ್ತಲು
ಭಾಷೆ-ಭಾಷ್ಯವ ಬಗೆ... ಬಗೆ
ಇನ್ನೂ ಬರೆವರ ಸಾಲ ಕಂಡು
ಮನದಿ ಹೊಮ್ಮಿತು ಚಿರುನಗೆ....
ಎಲ್ಲೆ ಹೋದರು.... ಎಲ್ಲೆ ಕಂಡರು
ಅಲ್ಲಿ ಪ್ರೀತಿಯ ಸೆಲೆ ಇದೆ
ಮರಳುಗಾಡಲೂ ನಗುತ ಬಾಳುವ
ಜೀವ್ಯ ಜಾಲದೆ ಬಲವಿದೆ....
ದಿಗಂತದಲ್ಲಿನ ಪ್ರೀತಿ ಛಾಯೆಯು
ಇಳೆಗೆ, ದಿನವನು ನೀಡಿದೆ.....
ಇಳೆಯ ಕಣದಲಿ ಮೊಳೆವ ಪ್ರೀತಿಯು
ಬಾನ ಮೆರುಗಿಗೆ ಕಾದಿದೆ.....
ಮನ-ಮನದಾಳದರಮನೆ
ಪ್ರೀತಿಯಾ ಸಿರಿ ನಂದನ.....
ಅರ್ಥ ಮೀರಿದ ಸಾರ್ಥಕತೆಯ
ಒಲವಿನೈಸಿರಿ ಚೇತನ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ಇಳೆದಾಯಿ

- ಗಿರಿಜಾಪತಿ ಎಂ. ಎನ್
ಮಣಿದಿದೆ ವಿಶ್ವವು ನಿನ್ನ ಚರಣಕೆ
ಇಳೆದಾಯಿ ಶುಭದಾಯಿನಿ
ಮಣ್ಣ ಕಣಕಣ ರಮ್ಯ ತೋರಣ
ನಾಕದಂದಣ ಜಗ ಕಾರಣ.....

ಆದಿ ಅಂತ್ಯದಗೊಡವೆ ಸಲ್ಲದು
ಜೀವದೊಡವೆಯ ಶ್ರೀನಿಧಿ
ಮುನ್ನ ಬಾಳಿಗೆ ಭೀತಿ ಒಲ್ಲದು.....
ಭಾವದಕ್ಷಯ ತವನಿಧಿ......

ತಮದ ಬಸಿರಿಗೆ ಬೆಳಕಿನೌತಣ
ಬೆಳಕಿಗೆನಿತೋ ನವ್ಯದ ರಿಂಗಣ
ನವೋದಯದ ಶುಭೋದಯದಲೂ
ನಿತ್ಯ ಸಾಗಿದೆ ಕಾಲನ ಚಾರಣ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಿತ್ಯ ಚೈತ್ರ

- ಗಿರಿಜಾಪತಿ ಎಂ. ಎನ್

ಹರಿವ ನದಿಗೆ ಹಾದಿ
ಯಾವುದೆಂಬ ನಿಯತಿಯಲದೆಲ್ಲಿದೆ?
ಮೊಳೆವ ಪ್ರೀತಿ-ಪ್ರೇಮಕೆಲ್ಲಿ
ಭಿನ್ನ-ಭೇದವೆಣಿಸಬೇಕಿದೆ?

ಬೀಸುಗಾಳಿಗೆ ಹೂವು ಅರಳಲು
ಸುಮದ ಕಂಪಿನ ಘಮ..... ಘಮ.....
ಹಾರಿಬರುವ ದುಂಬಿ ಮನದಲಿ
ಬಗೆ ಬಗೆಯ ಸಂಭ್ರಮ..... ||

ಬೆಸೆದ ಬೆಳಕಿಗೆ ಹೊಸತು ಹೊಸತಿನ
ನಿತ್ಯ ನೂತನ ನಂದನ
ಬುವಿಯ ಬಾನಿನ ಬಾಳ ಹಾದಿಗೆ
ಹಾಸಿ ಬೀಸಿದ ಚಂದನ

ಉರಿವ ಧಗೆಯಲಿ ದಿನವು ಮುಗಿದರೂ
ಮತ್ತೆ ಅರಳಿದೆ ಸುಮಬನ
ಅಂದಿನುಗಮವೇ ಅರಿದಿನಳೆವುದೆಂದರೂ
ನೆಗೆಯ ಸೂಸುವ ಬಂಧನ

        *****

ಕೀಲಿಕರಣ: ಕಿಶೋರ್‍ ಚಂದ್ರ

ಜೀವಯಾನ

- ಗಿರಿಜಾಪತಿ ಎಂ. ಎನ್

ಸುಳಿವ ಗಾಳಿಗೆ
ತಳಿರು ತೂಗಲು
ಹಕ್ಕಿಗೊರಳಲಿ ಇನಿದನಿ......
ಉದಯ ಕಿರಣವು
ಮುದದಿ ಹೊಮ್ಮಲು
ಲತೆಗಳಲ್ಹರಳು ಸುಮದನಿ ಮಣ್ಣನಿ
ಯಾವ ಕೈಗಳು
ಬೆಸೆದ ಮಾಯೆಯೋ
ಲೋಕ ಜೀವಯಾನಕೆ ಮುನ್ನುಡಿ
ಇಂದು ನಿನ್ನೆಗು
ಮುನ್ನ ನಾಳೆಗೂ
ಸಾಗಿ ಬಂದಿದೆ ಜೇನ್ನುಡಿ
ಎಲ್ಲೆ ಮೀರದ ಹೆಜ್ಜೆಗಳಲಿ
ನಿತ್ಯ ಸಾಗುವ ಜೀವನ
ಎಷ್ಟು ಸ್ತುತಿಸಿದರಷ್ಟು ಸಾಲದ
ಸತ್ಯ ಸಗ್ಗವಿದುವೆ ಪಾವನ

        *****

ಕೀಲಿಕರಣ: ಕಿಶೋರ್‍ ಚಂದ್ರ

ಪೀಠಿಕೆ

- ಗಿರಿಜಾಪತಿ ಎಂ. ಎನ್

ನಿನಗು ನನಗು ನೆಲ-ಮುಗಿಲಿನಂತರ
ವೆಂದನಲ್ಲನ ಮೊಗದಲಿ.....
ಮೊಗವಿಟ್ಟು ನುಡಿದಳು
ಇನಿದು ದನಿಯಲಿ..
ನಿಜದ ಬದುಕಿದೆ ನೆಲದಲಿ

ಭರದಿ ಸುರಿವಾ ಮಳೆಯಬ್ಬರ
ಸುವ ಕೋಪದುರಿಯ ನೇಸರ.....
ಗೊತ್ತು-ಗುರಿಯು ಇಲ್ಲದಲೆಯೋ.....
ಬೀಸುಗಾಳಿಯ ಬರ್ಬರ
ಎಲ್ಲ ಕಂಡು, ಎಲ್ಲ ಉಂಡು.....
ಬಸಿರ ಜೀವಕೆ ಬಾಳ ಬೆಸೆವಾ.....
ಇಳೆಯೇ ಜೀವಕೆ ಕಂಗಳು.....

ಇಂದು-ನಾಳೆಗೆ ನಾಳೆ-ಮುಂದಕೆ
ಕಣ್ಣ ಕನಸಿನ ಪೀಠಿಕೆ
ಬರುವುದೆಲ್ಲವ ಬರಸೆಳೆದು ಒಪ್ಪುತೆ
ಮಣ್ಣ ಹಾಡಿನ ಚರಣಕೆ
ಎಲ್ಲ ನಮ್ಮದು, ಎಲ್ಲೆ ಮೀರದು
ಉಸಿರುಸಿರ ಹಸಿರನಲಿ
ಸ್ಪುರಿಸೋ ಭಾವಕೆ ಪಥಗಳು.....

        *****

ಕೀಲಿಕರಣ: ಕಿಶೋರ್‍ ಚಂದ್ರ

ಅನುರಾಗ

- ಗಿರಿಜಾಪತಿ ಎಂ. ಎನ್

ಮೊದಲ ಮಾತನು ನುಡಿದವ ತಾ
ಜಗಕೆ ಮೊದಲ ಕಬ್ಬಿಗ
ಇಂಪು ಸ್ವರದಲಿ ಬೆಲ್ವಸದವ ತಾ
ವಿಶ್ವ ವೈಣಿಕ ಕಾಯಕ

ಮಾತ-ಮಾತಲಿ ಕಟ್ಟಿದ ಮಾಲೆಯು
ಬಾನು-ಬುವಿಯ ಲೀಲೆಗೆ
ಶೃತಿ-ಲಯ-ಸ್ವರದ ರಾಗ ಗೀತೆಯು
ಅನುರಾಗ ಬೆರೆತಾ ಬಾಳಿಗೆ

ಹಲವು ಭಾಷೆಗಳೊಲವ ದನಿಯಲಿ
ಭಾವ ಸರಣಿಯ ಬಂಧನ
ಜೀವದೊಡಲಿನಾ ಕರುಳ ಕರೆಯಲಿ
ಯುಗಕೆ ಪ್ರೀತಿಯ ಚಂದನ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ದಾರಿ

- ಗಿರಿಜಾಪತಿ ಎಂ. ಎನ್

ಬೆಳಗು ದೀಪವೆ ಬೆಳಗುತಿರು ನೀ.....
ನಿನ್ನ ಬೆಳಕಲಿ ಗುರಿಯಿದೆ.....
ಅನಂತ ನಿಶೆಯನು ದೂಡೋ ನಿನ್ನಯ
ನಿಯತಿಯಣತಿಗೆ ಗೆಲುವಿದೆ.....

ನಿತ್ಯ ಮೂಡೋ ಸತ್ಯ ನೇಸರ
ತುಂಬಿದಂಬರ ಕೀರ್ತಿಗೆ.....
ಧ್ಯಾನ ಮನನದ ಗಾನ ತುಂಬುರ
ಚಿದಂಬರಗೂಢದ ಹಾದಿಗೆ.....

ನೀನೆ ಗುರುವಿನ ಗುರಿಯು ದಾರಿಯು
ಅಂತರಂಗದರಿವಿನ ಲೀಲೆಗೆ
ಮುನ್ನ ಬಾಳಿನ ಪ್ರತಿಮೆ ರೂಪಿಯು
ನಡೆವ ಹಾದಿಯ ಬಾಳಿಗೆ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ಅಕ್ಷಯ ಪಾತ್ರೆ

- ಗಿರಿಜಾಪತಿ ಎಂ. ಎನ್

ಹನಿಹನಿಸೋ ಮುತ್ತ ಮಳೆಗೆ
ಇಳೆಯ ಕಣ್ಣೊಳೆನಿತೊ ಕಾತುರ
ಬಾನ ಇನಿಯನೊಲವಿಗಾಗಿ
ಧರೆಗೆ ನಿತ್ಯ ಸಡಗರ ||

ಬಿರಿದ ಕುಸುಮ ಅರಳು ಸುಮವು
ಒಲಿದ ಹೃದಯದ ಪ್ರೀತಿಗೆ
ಕೆರೆ-ತೊರೆ ಸರೋವರ ನದನದಿಗಳಲ್ಲೂ
ಜೊನ್ನ ಕಿರಣದ ಅಂದುಗೆ ||

ಪ್ರೇಮ ಸಂದೇಶ ಹೊತ್ತ ಹಕ್ಕಿ
ಸಾಲು ನೀಲ ನಭದಲಿ
ಕೊರಳ ಕೊಳಲಿನ ಕೂಗಿನಲ್ಲೂ
ಕವಿಯ ಕಾವ್ಯದ ಚೆಂದುಲಿ ||

ನನ್ನ ಮಿಲನ ನಿನ್ನ ಚಲನ
ಬಾಳ ನಿತ್ಯ ಯಾತ್ರೆಗೆ
ಸ್ವಾರ್ಥವಿರದ ಅಮೃತ ಸಿಂಚನ
ಭಾವದಕ್ಷಯ ಪಾತ್ರೆಗೆ. ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಬೆಸುಗೆ-ವಸುಗೆ

- ಗಿರಿಜಾಪತಿ ಎಂ. ಎನ್

ಯಾವ ಶುಭಗಳಿಗೆಯಲಿ
ಪ್ರಕೃತಿ ತಾನುದೆಯಿಸಿತೊ
ಆವ ಶುಭ ವೇಳೆಯಲಿ
ಜೀವ ಕಣ್ ತೆರೆಯಿತೊ
ಅಮೃತ ಸೆಲೆ ನೆಲೆಯಂತೋ ದಯವಲೀಲೆ        ||ಪ||

ಶುಭೋದಯದ ಹಗಲಿರುಳಿನಲಿ
ನವೋದಯದ ಬಾಳ ಬೆಳಕು
ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ     ||ಅ.ಪ||

ಈ ಮಣ್ಣು ಕಣ ಕಣದಿ
ಹರಿವ ತೊರೆ ನದನದಿ ರವದಿ
ಅಲೆಯಲೆಯ ಅನಿಲದಲಿ ದೇವ ನೋಟ
ಚಿಗುರು ತಂಬೆಲರಲ್ಲಿ
ಸುಮ ಚೆಲ್ವರಿದ ಸಿರಿಯಲ್ಲಿ
ಕಣ್ಣ ಕಾಂತಿಗೆ ನಿತ್ಯ ಹಬ್ಬದೂಟ

ಅಂಗಲಂಗುಲದಲ್ಲಿ
ಬಾಂದಳದ ಬಿನ್ನಾಣ
ಕುಣಿ-ಕುಣಿವ ಮನಗಳಲಿ ಹರಿಣಿ ಬಿಂಬ
ಏರು ಜವ್ವನದಲ್ಲಿ
ಶೃಂಗಾರದಂದಣದಿ
ತನ್ನ ತಾ ಮರೆವಂಥೆ ಷೋಡಷ ಬಿಂಬ

ನೆಲ ಮುಗಿಲ ಹರಹಿನಲಿ
ಬಾಳ್ಬಳ್ಳಿ ಹರಡಿರಲು
ಅಂಕು ಡೊಂಕಿನ ಹಾದಿ ಮುಳ್ಳ ಭೀತಿ ಏಕೆ
ತೆರೆದ ಗಣ್ಣಿನ ಮನಕೆ
ನೊರೆಯ ಹಾಲಿನ ಗುಣಕೆ
ಹೆಪ್ಪುಗಟ್ಟಿಸಿದರೂ ನವನೀತವಾಗೋ ಚಣಕೆ.

        *****

ಕೀಲಿಕರಣ: ಕಿಶೋರ್‍ ಚಂದ್ರ

ನಾನು-ನೀನು

- ಗಿರಿಜಾಪತಿ ಎಂ. ಎನ್

ಭೂಮಿ ನೀನು
ಬಾನು ನಾನು
ಭಾಗ್ಯ ನಮ್ಮಯ ಬದುಕಲಿ
ಯಾವ ಜನುಮದ
ಫಲವು ಬೆಸೆದಿದೆ,
ನನ್ನ-ನಿನ್ನ ಒಲವಿನ ದಲಿ

ಕಡಲು ನೀನು
ನದಿಯು ನಾನು
ಲೋಕ ಯಾನದ ಪಥದಲಿ
ಆದಿ-ಅಂತ್ಯದಿತಿ
ಮಿತಿಯ ಮೀರಿದ
ಋತು-ಕ್ರತುವಿನ ಬಲದಲಿ

ಮೇಘ ನೀನು
ಅನಿಲ ನಾನು
ದೂರ ದೂರದ ಬೆಸುಗೆಗೆ
ದಿಕ್ಕು-ದಿಕ್ಕಿನ
ದಿಕ್ಕು ದೆಸೆಗಳಲ್ಲೂ
ನನ್ನ ನಿನ್ನ ಮಾಟದ ಒಲುಮೆಗೆ

ದೇಹ ನೀನು
ಪ್ರಾಣ ನೀನು
ಆತ್ಮ ನೇಹದ ಗೀತೆಗೆ
ಗಂಡೊ ಹೆಣ್ಣೋ
ಹೆಣ್ಣು - ಗಂಡೋ
ಎಂಬುದೊಲ್ಲದ ಪ್ರೀತಿಗೆ ||
        *****

ಕೀಲಿಕರಣ: ಕಿಶೋರ್‍ ಚಂದ್ರ

ಸೂರ್ಯ ಚಂದ್ರರ ಹಾಡು

- ಗಿರಿಜಾಪತಿ ಎಂ. ಎನ್

ನಾವು ಮುಳುಗುವುದಿಲ್ಲ
ಏಳುವವರು ನಾವಲ್ಲ
ಮುಳುಗೇಳು ಬೀಳುಗಳ
ಸಂಕರಗಳೆಮಗೆ ಸಲ್ಲ
ಜಡದ ಸೋಂಕುಗಳಿರದ
ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು
ಸಮಯಾತಿ ಸಮಯಗಳು
ಸಮ ವಿಷಮಾದಿ ನಿಯತಿಗಳು
ನಿಮ್ಮ ಹಾದಿಯ ಹೂ-ಮುಳ್ಳ ಹಾಸು
ಇತಿ-ಮಿತಿಯ ಮತಿಗೀತ
ಸ್ತುತಿ-ನಿಂದೆ ಭೋರ್ಗರೆತ
ಪ್ರೀತ-ಸಂಪ್ರೀತಗಳ ಕವಿ ಸಮಯ ನೀವು
ದೇವರೆ ಮಾಡಿದ ಮಾನವರ ಸಾಲೊ
ಮಾನವರೆ ಮಾಡಿದ ದೇವರಹವಾಲೊ
ನಿಮ್ಮ-ನಿಮ್ಮಯ ಸಮಯ ಶೂಲ-ಜಾಲ
ಅಜ್ಞಾನದಾ ಬಿಲ-ಬಿಲಕೆ
ಜ್ಞಾನ ವರ್ಣಗಳ ಮಾರ್ಜಾಲ
ನಿಮ್ಮ ಹಿಂದೆ-ಮುಂದೆ...
ನಮ್ಮ ಪಥದಲಿ ನಾವು ಮುಂದೆ....
ಮುಂದೆ... ಎಂದೂ ಮುಂದೆ.

        *****

ಕೀಲಿಕರಣ: ಕಿಶೋರ್‍ ಚಂದ್ರ

ಪಯಣ

- ಗಿರಿಜಾಪತಿ ಎಂ. ಎನ್

ಸಾಗುತಿರಲಿ ಜೀವನ ಯಾತ್ರೆ
ಎಚ್ಚರೆಚ್ಚರ ಸಿರಿ ಬೆಳಕಲಿ
ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ
ಮನ - `ಮನ'ವ ಕೈಯ ಹಿಡಿಯಲಿ ||

ನೀನೆ ನಿನ್ನಯ ದಾರಿ ಬೆಳಕು
ಸಾಗು ಒಳ ಬೆಳಕಿನ ಪಥದಲಿ
ನಿನ್ನರಿವೆ ತಾನದು ಹೊನ್ನ ದೀವಿಗೆ
ಮರವೆ ತಾರದೆ ಜೊತೆ ಸೇರಲಿ ||

ದೇವ ದೇವರಿರವಿನರಿವಿಗೆ
ನೀನೆ ನಿನ್ನಯ ಆಲಯ
ಸಮತೆ ಸಮರಸ ಶಾಂತ ಕ್ಷಮತೆಗೆ
ನಡೆ ನುಡಿಯೇ ಶೃತಿಲಯ ||

ಮೇಲು ಕೀಳಿನ ಸೋಂಕ ಕಾಣದೆ
ಸ್ವಸ್ಥವಿರಲೆದೆ ಬಾಂದಳ
ಸ್ವಾರ್ಥ, ಕ್ರೌರ್ಯ, ದ್ವೇಷದೆದೆಗೂ
ಕಣ್ಣ ತೆರೆಸಲಿ ಪ್ರೀತಿ ಜೋಗುಳ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಚಿನ್ಮಯಿ

- ಗಿರಿಜಾಪತಿ ಎಂ. ಎನ್

ದಾರಿ ತೋರುವವರಾರು ನಿನಗೆ
ಚಿನ್ಮಯಾನಂದದ ಶಿವ ಬೆಳಕಿನೆಡೆಗೆ ||

ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ
ಪೊಳ್ಳು-ಜೊಳ್ಳು ಭರವಸೆ ಗೋಪುರ
ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು
ಹಗಲುಗನಸಿನ ಡಂಗುರ ||

ಎನು ನೆಚ್ಚುವೆ ಯಾರ ಮೆಚ್ಚುವೆ
ಹುಚ್ಚು-ಪೆಚ್ಚು ಸಂತೆ ಸಂದಣಿಯಲಿ
ಪೆಚ್ಚು ಮನಸಿಗೆ ಹಿಡಿದ ಗ್ರಹಣವ
ಬಿಡಿಸಲಾಗದು ಬರಿಗೈಯಲಿ ||

ಬರಿ ನರರಿಲ್ಲಿಲ್ಲವೋ ನಾಕಗೆಡಿಸೊ
ಮೃಗ ಮೊಗಜರ ರಣ ಭೀಕರ
ಗೆದ್ದ ಕಟ್ಟಿದ ಹುತ್ತ ಕಬಳಿಸೋ
ಉರಗ ಲೋಕದ ಕರಿ ನಾಗರ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಭಾಷ್ಯ ಬರೆಯುವುದೆಂತು

- ಗಿರಿಜಾಪತಿ ಎಂ. ಎನ್

ಭೂರಮೆಯ ಭೌಮದನಿಕೇತನಕೆ
ಭಾಷ್ಯ ಬರೆಯುವುದೆಂತು ಬರಿ ಮಾತು ||
ಮೌನ ತವಸಿಯ ತಪದಾ ನೆಲೆಯಲಿ
ಮಾತಿಗೆಲ್ಲಿಯ ಕಾಲ ಸಂದಲಹುದು ||

ಎತ್ತರೆತ್ತರ ಶೃಂಗಾರನಂಗವು ಮೌನ
ಹಿಮದ ಪಾದಾದಿಯಲು ಮತ್ತೆ ಮೌನ ||
ಕಂದರಂದ್ಹರದಾಳದಳದಲೂ ನಿಃಶಬ್ದ
ನೀರವ ಉಷೆಗೆ ಸಂಧ್ಯಾ ಧ್ಯಾನ ಯಾನ ||

ಅಮರ ಸಮೀರದಿ ಗಾನ ದೌಘನ
ಮೇಘ ಮಂಡಲದ ತಾಳವಾದನ ||
ಸೃಷ್ಟಿ ಸಮಾಧಿಸ್ಥ ಸ್ಥಿತಿ ಯತಿ ಧ್ಯಾನ
ಋಕ್ಕುಗಳಾ ನಾದದಾ ಬ್ರಹ್ಮ ಬಿಂದು ||

ಕರ್ಮದಾಚೆಯ ವೇದಾಂತ ಸಾರದಲಿ
ಜೀವ ರೂಹಿರೂಪಿನೊಳಗಾತ್ಮ ಸಿಂಧು ||
ಅಂಗಾನಂಗವು ರಂಗ ಬಿನ್ನಪಮಾಟವು
ಅನಂಗ ಸಂಗ-ಸಾಂಗತ್ಯದ ನೋಟವು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಹೊಂಬೆಳಕು

- ಗಿರಿಜಾಪತಿ ಎಂ. ಎನ್

ಬಾಽ....... ಬಾಽ....... ಬೆಳಕೆ....... ಬಾಽ
ಮನೆಯ ಬೆಳಗು ಬಾ, ಮನವ ತೊಳೆಯು ಬಾ
ಜ್ಞಾನದ ಹೊಂಬೆಳಕೆ,
ಧ್ಯಾನದ ಸಿರಿಬೆಳಕೆ ಬಾಽ..... ಬಾಽ ||

ಮೂಡಲ ಸಂಸ್ಕೃತಿ ಹಿಮಗಿರಿ ಸಾಲಲಿ,
ಸಾಮಗಾನವನು ನುಡಿಸುತ ಬಾ
ಪಡುವಲದುತ್ಕೃತಿ ನೀಲಧಿ ಮಿಂಚಲಿ
ರಜನಿ ತಾರಾ ತೋಟವ ಸುತ್ತುತ ಬಾ ||

ನನ್ನೊಳು ನೀನಾಗಿ, ನಿನ್ನೊಳು ನಾನಾಗಿ
ಒಳಗಿನೊಳಗುಳ ಪಲ್ಲವಿಸಲು ಬಾ
ವಿಭೇದ ಭೇದದ ಮನ ಸರಿಸುತ ದೂರಕೆ
ವಸುದೈವ ಕುಟುಂಬವೆನ್ನಲು ಬಾ ||

ರಸಿಕ ರಸಾಂಬುಧಿ ರಸ ಸರಸಿಜೆ ಶಾರದೆ
ಅನುರಾಗ ವೀಣೆಯ ರಾಗಿಸು ಬಾ
ಹಗೆಯ ತಿಮಿರತನ ದೂಡುತ ದೂರಕೆ
ದಿನಕರ ಗಿರಿಯನು ತೋರಿಸು ಬಾ ||

ಮನಸಿಜನಾಭನ ಮಾನಸದಾಲಯ
ಮತಿ ಸನ್ಮತಿಯನು ಕರುಣಿಸು ಬಾ
ಮಾರಣ ಹೋಮದ ಬಲಿ ಪೀಠವ ಕೀಳಿಸಿ
ಸ್ಮುರ ಸುಂದರ ಸತ್ಯವ ಸ್ಥಾಪಿಸು ಬಾ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಕಕ್ಷೆ

- ಗಿರಿಜಾಪತಿ ಎಂ. ಎನ್

ಹಕ್ಕಿ ಬಳಗ ಮೇಲೇರುತ ಸಾಗಿದೆ
ಹರುಷ-ಹರುಷ ಹೊತ್ತು
ಮಣ್ಣಿನಣುಗ ತಾ ಸೋತು ಸೊರಗುತಿಹ
ಬದುಕಲು ಪಡೆಯಲೊಂದು ತತ್ತು ||

ಜ್ಞಾನ ವಿಜ್ಞಾನದಾಗಸದೆತ್ತರ
ಮಿಂಚು ಹುಳದ ಮಿಣುಕು
ಬಾಳ ಬಾಂದಳಕೆ ತಿಂಗಳ ಬೆಳಕನು
ಕೊಡ ಬಲದೆ, ಯಾವ ಕ್ಷಣಕುಽ ||

ಏರಿ-ಏರುತಲಿ ಹಾರಿ ಸಾಗುತಿರೆ
ಸಿರಿ ವೈಮಾನದ ಯಾನ
ಅಂಬಲಿಗ್ಹವಣಿಸೋ ಕಂದಗಳಿಗೆಂತೋ
ಹಸಿವ್ಹಸಿವಿನ ತೋಂತನನ ||

ಇರುವುದನುಣ್ಣದ ನಿರದನು ಬಯಸೊ
ಸಿರಿಗರ ಬಡಿದು ನಿಂತ ಜನರೊ
ಇರುವಿಕೆಗಾಗಿಯುಽ ಉಣ್ಣಲಿರದೆ
ಹಪ ಹಪಿಸಿ ತಪಿಸೊ ಜನರು ||

ತಂತ್ರ-ತಂತ್ರಗಳು-ಪಾರತಂತ್ರ್‍ಯ
ಬಲೆ ನೇಯುವ ಬಿನ್ನಾಣ
ವಿಭ್ರಾಂತಿ-ಭ್ರಾಂತಿ ಮುಸುಕಿನಲಿ
ಸ್ವಾತಂತ್ರ್‍ಯವಾಗುತಿದೆ ನಿತ್ಯ ಹರಣ ||

ಬಣ್ಣ ಬಣ್ಣದಿ ತೋರಿದರೇನು
ಬೆಳೆ ಬೆಳೆದ ನೀಲ ನಕ್ಷೆ
ಬಣ್ಣಿಪ ಬಾಯ್ಗಳು ತುಂಬಬಹುದೆ
ಹಸಿದೊಡಲ ಚೀಲ ಕಕ್ಷೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಸ್ವರ್ಣಪಂಜರ

- ಗಿರಿಜಾಪತಿ ಎಂ. ಎನ್

ನಾನು ಹಕ್ಕಿ ಆದರೂಽನು
ಹಾರಲಾರೆ ಇನ್ನುಽ ನಾಽನು ||

ಪುಕ್ಕ ಬಿಗಿದ ಕ್ರೂರಗಣ್ಣು
ಯಾವ ಯುಗದ ಮಾಯೆಯೋ
ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ
ಸ್ವತಂತ್ರ ಬರೀ ಛಾಯೆಯೋ ||

ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ
ಶಂಕೆಯಲೆಯಲೆ ಭೀತಿಯು
ಅನಿಲನಿಲದ ಕೊರಳ ರವದಲಿ
ಕಣ್ಣ ಬಯಕೆಯ ಗೀತೆಯು ||

ಆವ ಮೊಟ್ಟೆಯೊಡೆದು ಬಂದ
ಶೂಲ ಶೃಂಖಲೆ ಪಂಜರಿ
ಯಾವ ಮತಿಯೊಳ್ಮಥಿಸಿ ಬಂದ
ನಿಯತಿ ಯತಿಯ ಕಣ್ಣುರಿ ||

ಗ್ರಹ ತಾರೆ ಕಾಯ ಪಥಗಳಲ್ಲೂ
ಕರಿನೆರಳ ಸರಳ ಬಂಧನ
ಶತ ಶತಮಾನಗಳ ಹೆರಿಗೆಯಲ್ಲೂ
ವಿಪಿನ ವಿಪನದ ರೋದನ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಕಾವ್ಯವೆಂದರೆ

- ಗಿರಿಜಾಪತಿ ಎಂ. ಎನ್

ಏನೆನ್ನಲಿ ಏನೆನ್ನಲಿ ಎನ್ನ
ಮನದಮನ್ವಂತರದ ಧಾರೆಗಿನ್ನು ನಾನು
ಬರಿದೆ ಬರೆವರ ಪದದಿ
ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು ||

ಬರೆದುದೆ ಬದುಕಲ್ಲ
ಬದುಕಿದ್ದು ತಾ ನಿಲುಕಲ್ಲ.
ಕಾವ್ಯವೆಂದರೆ ಅದುವೆ
ಜನನಮರಣದಾಚೆ ಈಚೆ ಬಾಳು ||

ಹೇಳುವರು-ಹೇಳಿದ್ದು,
ಕೇಳುವರು-ಕೇಳಿದ್ದು,
ಉಂಡುಂಡು ಮರೆತು ಮಲೆಯುತಲಿರಲು,
ಸಂವಾದವೇತರದು ಶೂನ್ಯದಲ್ಲಿ. ||

ವೇಷಿಗರ ಬಿನ್ನಾಣ,
ಮುಗಿಲಗಲ ಕುಣಿತದಲಿ,
ಮಣ್ಣರಂಗದ ಪಾಡು,
ಪಾಡಾಗದ ಚರಮಗೀತೆ. ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಚಂದನ ಗೀತ

- ಗಿರಿಜಾಪತಿ ಎಂ. ಎನ್

ಇಳಾ ನಿನ್ನ ಮಹಾ ಕಾವ್ಯಕೆ
ಇದುವೆ ನನ್ನಯ ಪಲ್ಲವಿ
ಬಾನುವಿನ ಪ್ರಣಯ ಪರಿಧಿ
ಕಾಣಬಲ್ಲವನೇ ಭವಿ?||

ನಿನ್ನ ಅವನ ಆಂತರ್ಯದ
ಅರಿವಿನರಿವು ದುಸ್ತರ
ಅಂತರಂಗದಂತರಾಳದಾಳ
ಎನಿಎನಿತೊ ಬಿತ್ತರ||

ಅವನ-ನಿನ್ನ ಮೌನ `ವಿಶ್ವ'
ಜಗದ ಜಗಕೆ ಭಾಷ್ಯಿಕೆ
ಮೌನದಳವಿನ ಸಮಾಧಿಯಲ್ಲಿ
ಸೃಷ್ಟಿ ಸತ್ಯದ ಚಂದ್ರಿಕೆ||

ಹೊನಲ ನಂದನ ಭೂಮಿಕೆಯಲಿ
ಭಾವವಲ್ಲರಿ ಚಂದನ
ಹೊನಲೊನಲಿನ ಕಿರಣಗಳಲಿ
ಅಕ್ಕರದಕ್ಷರಗಳ ಕ್ಷಯ ತೋರಣ||

        *****

ಕೀಲಿಕರಣ: ಕಿಶೋರ್‍ ಚಂದ್ರ

ವಿಸ್ಮಯ

- ಗಿರಿಜಾಪತಿ ಎಂ. ಎನ್

ಕಾಣದ ಕೈಗಳ ಲೀಲ ಹಾದಿಯಲಿ
ಸಾಗಿದೆ ವಿಶ್ವದ ತೇರು,
ಮಾಣದ ಶಕುತಿಯ ಮಾಯಾದೋಳಲಿ
ನಡೆದಿದೆ ಸೃಷ್ಟಿಯ ಉಸಿರು.

ನಿನ್ನಯ-ನನ್ನಯ, ನಿನ್ನೆಯ ಇಂದಿನ
ನಾಳೆಗಳಾ ಕತ್ತಲೆ ಬೆಳಕು
ಬೀಳುತಲೇಳುತ ಸಾಗೆ ನಿರಂತರ
ಶೂನ್ಯ ಥಳುಕು ಬಳುಕು.

ಚಿರ-ಸ್ಥಿರ-ಚರ ಚಿರಂತನವಾವುದೋ
ಅಳಿವು-ಉಳಿವು ಹೊಳಪಿನಾ ಸುಳಿಗೆ
ಯಾವ ಕೈಗಳ ಸಾಲುಗಳಿವೆಯೋ
ತೇರ ನೆಳೆಯುವ ದಿನ ಸರದಿಗೆ

ಯಾತ್ರೆ-ಜಾತ್ರೆಯಾ ಸಂದಣಿಯಲ್ಲಿ
ಕೊಟ್ಟು-ಕೊಳ್ಳುವರು ಯಾರೋ
ನೀಲಾಗಸವ ನೋಡುವ ತವಕದಿ
ಮುಗಿ ಬೀಳೆ ನಗದವರು ಯಾರೋ....

        *****
ಕೀಲಿಕರಣ: ಕಿಶೋರ್‍ ಚಂದ್ರ