Masanobu Fukuoka ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Masanobu Fukuoka ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶೂನ್ಯ

- ಮಸನೊಬ ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಹುಟ್ಟಿನ ಕಾರಣ ತಿಳಿಯದೇ
ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ
ಅನಂತದಲ್ಲಿ ವಿಲೀನವಾಗುವುದಷ್ಟೇ
ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ
ನೆನಪು - ಮೂಲಭೂತವಾಗಿ ಇರುವುದು
ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು
ಅನಂತ ದಿಕ್ಕುಗಳು.  ಹೌದು, ಮೂಡಣ,
ಪಡುವಣ ಎಲ್ಲಾ ಭ್ರಮೆಗಳು.

ಮೂಡಣ, ಪಡುವಣ
ಅರಿಯದಿರುವುದು ಸತ್ಯಕ್ಕೆ ಹೆಚ್ಚು
ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ
ಎಲ್ಲಿಂದ ಬರುತ್ತಾನೆಂದು ಯಾರಿಗೂ
ಗೊತ್ತಿಲ್ಲ.  ಸಾಕಾರವೇ ನಿರಾಕಾರ,
ನಿರಾಕಾರವೇ ಸಾಕಾರ-ಬುದ್ಧನ
ಬೋಧನೆ ಎಲ್ಲಾ ಅಂಶಗಳನ್ನೂ
ಒಳಗೊಂಡಿದೆ.  ಸ್ಥಾವರ, ಜಂಗಮ
ಎಲ್ಲವೂ ಒಂದೇ.  ಆದರೆ ಎಲ್ಲವೂ
ಶೂನ್ಯ.

ಮನುಷ್ಯನು ಜೀವಿಯೂ
ಅಲ್ಲ.  ನಿರ್ಜೀವಿಯೂ ಅಲ್ಲ.  ಆತ
ಜನಿಸಿಯೂ ಇಲ್ಲ.  ಗತಿಸಿಯೂ ಇಲ್ಲ.  ಆ
ದಿನ ಭತ್ತದ ಕುಯಿಲು ಮಾಡುತ್ತಿದ್ದಾಗ
ಯುವಜನರಿಗೆ ಹೇಳಿದೆ - ವಸಂತದಲ್ಲಿ
ನಾಟಿ ಮಾಡಿದಾಗ ಭತ್ತ
ಮೊಳಕೆಯೊಡೆದು ಜನ್ಮ ಪಡೆಯಿತು.
ಈಗ ಹಣ್ಣಾಗಿದೆ.  ಸತ್ತಂತೆ ಕಾಣುತ್ತಿದೆ.  ಈ
ಹುಟ್ಟುಸಾವಿನ ಆಟ ನಿರಂತರ....

     *****

ಕೀಲಿಕರಣ: ಕಿಶೋರ್‍ ಚಂದ್ರ

ಕೋಟೆ

- ಮಸನೊಬ ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಮನುಷ್ಯರು ಆಕ್ರಮಣ ಮಾಡುವ
ಮತ್ತು ರಕ್ಷಣೆ ಮಾಡುವ ವಿಧಾನವನ್ನು
ಕಲಿತರು.  ಇದರಿಂದಾಗಿ ಆಗುವ
ಪರಿಣಾಮಗಳಿಗೆ ಒಬ್ಬರನ್ನೊಬ್ಬರು
ಅಪಾದಿಸತೊಡಿದರು.  ಆದರೆ ಎರಡೂ
ಕೈಸೇರದೇ ಚಪ್ಪಾಳೆಯಾಗದು
ಕೋಟೆಯನ್ನು ಕಟ್ಟುವುದೇ ಮೊದಲನೇ
ತಪ್ಪು.  ಕೋಟೆ ಕಟ್ಟುವವರು ತಮ್ಮ
ರಕ್ಷಣೆಗಾಗಿ ಎಂಬ ಕಾರಣ ಕೊಟ್ಟರೂ ಅದು
ಆಳುತ್ತಿರುವ ರಾಜನ ಇಚ್ಫೆಯಾಗಿರುತ್ತದೆ.
ಸುತ್ತಲಿನ ಪ್ರದೇಶಗಳ ಮೇಲೆ
ಬಲತ್ಕಾರವಾಗಿ ತನ್ನ ಪ್ರಾಬಲ್ಯ
ಬೀರುತ್ತಿರುತ್ತದೆ.  ಆಕ್ರಮಣಗಳ
ಬೆದರಿಕೆಯಿಂದ ಕೋಟೆ ಕಟ್ಟುತ್ತಿದ್ದೇನೆ
ಎನ್ನುವ ಬಾಯಿ ಬುಡುಕ ಒಳಗೆ ಯುದ್ಧ
ಸಾಮಾಗ್ರಿಗಳನ್ನು ಜಮಾವಣೆ
ಮಾಡುತ್ತಿರುತ್ತಾನೆ.

     *****

ಕೀಲಿಕರಣ: ಕಿಶೋರ್‍ ಚಂದ್ರ

ಜೀವನ ಕಾವ್ಯ

- ಮಸನೊಬು ಫುಕವೊಕ
ಕನ್ನಡಕ್ಕೆ: ಬಂದಗದ್ದೆ ರಾಧಾಕೃಷ್ಣ

ಮನುಷ್ಯರು ಏನನ್ನೋ ಕಂಡು
ಹಿಡಿಯುತ್ತಾರೆ.  ಅದಕ್ಕಾಗಿ ಪ್ರಕೃತಿಯನ್ನು
ಉಪಯೋಗಿಸುತ್ತಾರೆ.  ಈ ಎಲ್ಲಾ ಪ್ರಯತ್ನಗಳು
ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ.
ಇದರ ಪರಿಣಾಮವಾಗಿ ಇಂದು ಪೃಥ್ವಿ
ಮಾಲಿನ್ಯಗೊಂಡಿದೆ.  ಮಾನವನ ಅಭಿವೃದ್ಧಿ
ವಿಚಾರಗಳು ಗೊಂದಲಮಯವಾಗಿದೆ.
ಅಧ್ವಾನದ ಆಧುನಿಕ ದಿನಗಳಿಗೆ
ಆಹ್ವಾನವಿತ್ತಾಗಿದೆ.

ಈ ತೋಟದಲ್ಲಿ ನಾವು ಶ್ರಮ ರಹಿತ
ಕೃಷಿ ಮಾಡುತ್ತಿದ್ದೇವೆ ಪರಿಪೂರ್ಣವಾದ,
ಸ್ವಾದಯುಕ್ತ ಧಾನ್ಯಗಳನ್ನು ಮತ್ತು ಹಣ್ಣುಗಳನ್ನು
ತಿನ್ನುತ್ತೇವೆ.  ಇದರಿಂದ ನಮ್ಮೆಲ್ಲ ಚಟುವಟಿಕೆಗಳ
ಹಿಂದಿರುವ ಜಗತ್ತಿನ ಹೃದಯಕ್ಕೆ ನಾವು
ಹತ್ತಿರವಾಗುತ್ತೇವೆ.  ಬದುಕು
ಅರ್ಥಪೂರ್ಣವಾಗುವುದು.  ಆತ್ಮತೃಪ್ತಿ
ದೊರೆಯುವದು.  ಜೀವನ ಒಂದು ಕಾವ್ಯ.

     *****