Roopa Haasana ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Roopa Haasana ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮನಕೆ ಕನ್ನಡಿಯಾದರೆ......

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಪರಿಪೂರ್ಣ ಕವಿತೆಯೊಂದರ ನಿಜವಾದ ಸಾರ್ಥಕತೆ ಇರುವುದೆಲ್ಲಿ? ವಿಮರ್ಶಕನ ಟೀಕೆಯಲ್ಲೋ? ಸಹೃದಯನ ಮೆಚ್ಚುಗೆಯಲ್ಲೋ? ಕವಿಯ ಆತ್ಮ ಸಂತೃಪ್ತಿಯಲ್ಲೋ?  ಎಲ್ಲಾ ಒಂದಕ್ಕಿಂತಾ ಒಂದು ಮಹತ್ವವಾದದ್ದೇ ! ಉತ್ತಮ ಕವನವೊಂದಕ್ಕೆ ವಿಮರ್ಶಕನ ಟೀಕೆಯೂ ಬೇಕು ಸಹೃದಯನ ಮೆಚ್ಚುಗೆಯೂ ಬೇಕು. ಕವಿ ಮನಕ್ಕೆ ಸಂತೃಪ್ತಿಯನ್ನೂ ನೀಡಬೇಕು. ಆದರೆ ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಏನನ್ನುತ್ತಾರೆ ಗೊತ್ತೆ ?

 

ನನ್ನ ಹಾಡಿಗೆ ನಲಿವ ಜನರೇ
ನೀವೆ ನನ್ನ ಗುರಿ
ನಿಮ್ಮ ಚಿತ್ತವ ಕದಿಯುವ
ಮಾತೆ ನನ್ನ ಸಿರಿ
ಇದನು ಒಲ್ಲದ ಕೀಳು ಟೀಕೆಯ
ಪರಿವೆ ನನಗಿಲ್ಲ
ಮನಕೆ ಕನ್ನಡಿಯಾದರೆ
ನನಗೆ ಅದೆ ಎಲ್ಲಾ!

ಇಲ್ಲಿ ಕವಿ ಸಹೃದಯನ ಮೆಚ್ಚುಗೆಗೇ ಪ್ರಥಮ ಸ್ಥಾನ ನೀಡುತ್ತಾರೆ! ವಿಮರ್ಶಕನ ಮಾನದಂಡ ಹೇಗೂ ಇರಬಹುದು, ಅವನು ಕವನ ಹುಟ್ಟುವಾಗ ಇಲ್ಲದಿದ್ದ ಯಾವುದೋ ಸಿದ್ಧಾಂತ, ತರ್ಕಗಳ ಆಧಾರವನ್ನು ಇರಿಸಿ ಕವನವನ್ನು ಮೌಲ್ಯಮಾಪನ ಮಾಡುತ್ತಾನೆ.  ಆ ಚೌಕಟ್ಟಿಗೆ ಕವನ ಹೊಂದಿಕೊಳ್ಳದಿದ್ದಾಗ ನಿಜವಾದ ವಿಮರ್ಶೆ ಬರದೇ ಹೋಗಬಹುದು. ಆದರೆ ಸಹೃದಯ ಹಾಗಲ್ಲ. ಅವನಿಗೆ ರಸಾನುಭೂತಿಯೊಂದೇ ಉದ್ದೇಶ. ಅವನು ತನಗೆ ಸಂತೋಷ ಕೊಡುವ ಯಾವ ಕವನವನ್ನೇ ಆದರೂ ಮನಃಪೂರ್ತಿ ಆಸ್ವಾದಿಸುತ್ತಾನೆ. ಅವನ ಹತ್ತಿರ ತಕ್ಕಡಿಯಿಲ್ಲ! ಮನಸ್ಸಿದೆ! ಆದರೆ ಇದಕ್ಕೂ ಮುಖ್ಯವಾದುದು ಕವಿಯ ಆತ್ಮತೃಪ್ತಿ. ಕವನ ಹೊರಹೊಮ್ಮುವುದು ಲೆಕ್ಕಾಚಾರದಿಂದಲ್ಲ.  ಅದಕ್ಕೆ ಅಳತೆಗಳ ಪರಿಮಿತಿಯೂ ಇರುವುದಿಲ್ಲ. ಕವನ ಮನಸ್ಸಿನ ಅಂತರಾಳದ ವ್ಯವಹಾರ!  ಮನಸ್ಸಿನ ತುಮುಲ, ಒತ್ತಡ, ಭಾವಗಳ ಕನ್ನಡಿಯೇ ಕವನ. ಉಕ್ಕುವ ಭಾವಗಳು ಸಮರ್ಥವಾದ ಭಾಷೆಯ ರೂಪ ತೊಟ್ಟು ಹೊರಹೊಮ್ಮಿದಾಗ ಕವಿ ಅನುಭವಿಸುವ ಧನ್ಯತೆಯ ಭಾವವೇ ಬಹುಶಃ ಎಲ್ಲಕ್ಕಿಂತಾ ಶ್ರೇಷ್ಟವಾದುದು!

ಅದಕ್ಕೆಂದೇ ಕವಿ ಶೆಲ್ಲಿ ಹೇಳುತ್ತಾನೆ. ‘A Poet is a nightingale who sits in darkness and sings to cheer its own solitude with sweet sounds' ಒಬ್ಬ ಕವಿ ಕೋಗಿಲೆಯಂತೆ, ಅವನು ಕತ್ತಲಲ್ಲಿ ಕುಳಿತು ತನ್ನ ಅನಾಥ ಒಂಟಿತನ ನೀಗಲು ಸಿಹಿಯಾದ ದನಿಯಲ್ಲಿ ಹಾಡುತ್ತಾನೆ ಎನ್ನುತ್ತಾನೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಆದ್ದರಿಂದಲೇ .......

ಸಹೃದಯನ ಮೆಚ್ಚುಗೆ, ವಿಮರ್ಶಕನ ಟೀಕೆ ಎಲ್ಲಾ ಬಾಹ್ಯ ಬದುಕಿಗೆ ಸಂಬಂಧಿಸಿದ್ದು, ಆದರೆ ಎಲ್ಲಕ್ಕೂ ಮುಖ್ಯವಾದುದು, ಪ್ರಥಮವಾದುದು ಕವಿಯ ಅಂತರಂಗದ ಆತ್ಮ ಸಂತೋಷ! ಕವಿಗೆ ಆತ್ಮ ಸಂತೃಪ್ತಿಯನ್ನು ನೀಡದ ಕವನ ಎಂದೂ ಗೆಲ್ಲುವುದಿಲ್ಲ ಅಲ್ಲವೇ ಸಖಿ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಬಂಡಾಯ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ
 
ಪ್ರಿಯ ಸಖಿ,
ಯಾವ ತಂಟೆ ತಕರಾರುಗಳಿಲ್ಲದೇ ಎಲ್ಲವನ್ನೂ ಒಪ್ಪಿಕೊಂಡು ಸದ್ದಿಲ್ಲದೇ ಜೀವನವನ್ನು ಸಾಗಿಸುವವರು ಹಲವಾರು ಮಂದಿ. ಆದರೆ ತಮ್ಮ ಸಿದ್ಧಾಂತಗಳಿಗಾಗಿ, ವ್ಯವಸ್ಥೆಯೆದುರು ಸದಾ ಬಂಡೆದ್ದು ಹೋರಾಟವನ್ನೇ ಬದುಕಾಗಿಸಿಕೊಂಡವರು ಕೆಲಮಂದಿ. ಆದರೆ ಕವಿ ಗೋಪಾಲಕೃಷ್ಣ ಅಡಿಗರು ‘ಬಂಡಾಯ’ ಎಂಬ ತಮ್ಮ ಕವನದಲ್ಲಿ ಹೀಗೆ ಹೇಳುತ್ತಾರೆ.

ದಂಗೆಯೇಳುತ್ತಲೇ ಇರಬೇಕಾಗುತ್ತದೆ
ಇಲ್ಲಿ ಪ್ರತಿಯೊಬ್ಬನೂ ತನ್ನ ತನ್ನ
ಚಿನ್ನದ್ದೋ, ರನ್ನದ್ದೋ, ಕಬ್ಬಿಣದ್ದೋ, ಮರದ್ದೋ
ಅಥವಾ ಬರಿ ಮಣ್ಣಿನದೋ ಸಿಂಹಾಸನವ
ಹುಡುಕಿ ತೆಗೆದು ಗುರುತಿಸಿ ಅಲ್ಲಿ
ಆಸನಾರೂಢನಾಗುವವರೆಗೆ

ವ್ಯಕ್ತಿಯೊಬ್ಬ ತನ್ನ ದಾರಿಯನ್ನ ಕಂಡುಕೊಂಡ ನಂತರ ಗುರಿಸೇರುವ ತನಕ, ಹಾದಿಯಲ್ಲಿ ಎದುರಾಗುವ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ನಿಲ್ಲಬೇಕು. ಎಷ್ಟೋ ಬಾರಿ ವ್ಯವಸ್ಥೆಯೆದುರು ದಂಗೆಯೇಳಬೇಕು. ಎಲ್ಲಿಯವರೆಗೂ ಈ ಹೋರಾಟ ಎನ್ನುವುದನ್ನು ಹೇಳುತ್ತಾ ಕವಿ.

ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ
ತನ್ನ ವ್ಯಕ್ತಿತ್ವಕೆ ಚಹರೆಯ ಪಟ್ಟಿ ಸಿದ್ಧವಾಗುವವರೆಗೆ
ತನ್ನ ಪರಿಮಿತಿಯೊಳಗೆ ಶಾಖೋಪಶಾಖೆಗಳು
ಹುಟ್ಟಿ ಹಬ್ಬುವವರೆಗೆ

ಎನ್ನುತ್ತಾರೆ. ಈ ರೀತಿಯ ಹೋರಾಟದಿಂದಲೇ ವ್ಯಕ್ತಿಯೊಬ್ಬ ಗಟ್ಟಿಯಾಗುತ್ತಾ ಹೋಗುತ್ತಾನೆ. ತನ್ನ ಪರಿಮಿತಿಯನ್ನು ಕಂಡುಕೊಳ್ಳುತ್ತಲೇ ಅದನ್ನು ಮೀರಲು ಯತ್ನಿಸುತ್ತಾನೆ. ಹೊರಗಿನ ವ್ಯವಸ್ಥೆಗೆದುರಾಗಿ ಹೀಗೆ ಬಂಡಾಯವೇಳುವುದು ಸುಲಭವಾದರೆ ಮನದೊಳಗಿನ ವೈರಿಗಳ ವಿರುದ್ಧ ದಂಗೆಯೇಳುವುದು ತುಂಬಾ ಕಷ್ಟ! ಹೀಗೆ ಮನದೊಂದಿಗೆ ಹೋರಾಡಿ ಗೆದ್ದವನು ವಿಶಿಷ್ಟ ವ್ಯಕ್ತಿತ್ವದವನಾಗುತ್ತಾನೆ. ಸಮಾಜಕ್ಕೇ ಮಾನವತೆಯ ಸಂಕೇತವಾಗುತ್ತಾನೆ ಎನ್ನುತ್ತಾರೆ ಕವಿ.
ಕವನವಮ್ನ ಮುಂದುವರೆಸುತ್ತಾ,

ಬಂಡಾಯದ ಘೋಷ ಮೊಳಗುತ್ತಲೇ ಇರಬೇಕು.
ಗೊಂಚಲು ಗೊಂಚಲಾಗಿ ಸಿಹಿಸಿಹಿ ಹಣ್ಣು
ಪಕ್ವವಾಗುವವರೆಗೆ; ತಿರುಳ ಸಿಹಿ ಅನ್ಯರಿಗೆ
ಬಿತ್ತು ಭವಿಷ್ಯಕ್ಕೆ; ಮಾನವತ್ವದ ಬುನಾದಿಗಿನ್ನೊಂದು ಕಲ್ಲು
................................

ಎನ್ನುತ್ತಾರೆ. ಮನದ ವಿಕಾರಗಳನ್ನೆಲ್ಲಾ ಗೆಲ್ಲುವುದು ಸುಲಭ ಸಾಧ್ಯವಲ್ಲವಾದರೂ ಆ ವಿಕಾರಗಳ ವಿರುದ್ಧ ದಂಗೆಯೇಳುತ್ತಲೇ ಇರಬೇಕು. ಯಾರಿಗೆ ಗೊತ್ತು ನಾಳೆಗೆ ಗೆಲುವೂ ಸಿಕ್ಕಬಹುದಲ್ಲವೇ ಸಖಿ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ನಿಮ್ಮೊಡನಿದ್ದೂ ನಿಮ್ಮಂತಾಗದೇ ?

- ರೂಪಾ ಹಾಸನ
 
ಪ್ರಿಯ ಸಖಿ,
ಬಾಹ್ಯಶಕ್ತಿಗಳು ಪ್ರಬಲ ವ್ಯಕ್ತಿತ್ವಗಳನ್ನು ತಮ್ಮದಾಗಿಸಿಕೊಳ್ಳಲು ಹೆಣಗುವಾಗಲೆಲ್ಲಾ ನನಗೆ ನೆನಪಾಗುವುದು ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೇ’ ಎಂಬ ಕವನದ ಸಾಲುಗಳು.

ನಿಮ್ಮೊಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೇ ಬೇರೂತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.

ಹೌದಲ್ಲವೇ ಸಖೀ, ವ್ಯಕ್ತಿತ್ವಗಳಿಗೆ ಪ್ರಲೋಭನೆಗಳನ್ನೊಡ್ಡುವವು ಸಮಾಜ, ಧರ್ಮ, ಸರ್ಕಾರ, ಸಿದ್ಧಾಂತಗಳು, ತರ್ಕಗಳು ......... ಇತ್ಯಾದಿ ಹಲವಾರು.  ಅವುಗಳಿಲ್ಲದಿದ್ದರೆ ಬದುಕು ಸಾಗದಿದ್ದರೂ, ಅವುಗಳ ಜೊತೆಯೇ ಬದುಕಬೇಕಿರುವುದು ಅನಿವಾರ್ಯವಾದರೂ ಅವುಗಳೆಲ್ಲದರ ಹಿಡಿತದಿಂದ ಬಿಡಿಸಿಕೊಂಡು ತಮ್ಮದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅಲ್ಲವೇ?  ಆದರೆ ಅಸಾಧ್ಯವೇನಲ್ಲ!

ಆಂಗ್ಲ ಕವಿ ಬ್ರೌನಿಂಗ್ ಹೀಗೆ ಹೇಳುತ್ತಾನೆ "Best be yourself, imperial. Plain and true' ನಿನಗೆ ನೀನಾಗಿರುವುದು ನೀನೇ ಸಾರ್ವಭೌಮನಾಗಿರುವುದು, ನಿನಗೆ ನೀನು ಸತ್ಯವಾಗಿರುವುದು, ನಿಷ್ಕಪಟವಾಗಿರುವುದು ಉತ್ತಮವಾದುದು
ಎಂದು.  ಹಾಗಾದಾಗ ಯಾವ ಪ್ರಲೋಭನೆಗೆ ಏಕೆ ಮಣಿಯಬೇಕು?

ತಾವರೆಯ ಎಲೆಗೆ ನೀರಿನಲ್ಲಿರುವುದು ಅನಿವಾರ್ಯ. ಆದರೆ ಬೇರುಗಳು, ಎಲ್ಲಾ ಸಾರ ಇರುವುದೂ ನೀರಿನಲ್ಲೇ, ಆದರೆ ಸಾರ ಹೀರಿಯೇ ಬೆಳೆದರೂ ತಾವರೆಯ ಎಲೆ
ತನ್ನದೇ ಸಮರ್ಥ, ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡು ಬೆಳೆದು ತನ್ನ ಮೇಲೆ ಬಿದ್ದ ನೀರಹನಿಯ ಒತ್ತಡಕ್ಕೆ ಮಣಿಯದೇ ಅಂದರೆ ಒದ್ದೆಯೂ ಆಗದೇ, ಮುಳುಗಿಯೂ ಹೋಗದೆ ‘ಇದ್ದೂ ಇಲ್ಲದಂತೆ’ ಇದ್ದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವಂತೆ ನಾವಾಗಬೇಕು. ಎಲ್ಲ ಪ್ರಲೋಭನೆಗಳಿಗೆ ಒಡ್ಡಿಕೊಂಡರೂ, ಅದರ ಸಾರವಷ್ಟೇ ಹೀರಿ ಇದರಲ್ಲೇ (ವ್ಯವಸ್ಥೆಯಲ್ಲೇ) ಇದ್ದೂ, ಇದರಲ್ಲೇ ಬೆಳೆದು, ನಮ್ಮೆದೇ ಪ್ರತ್ಯೇಕ ವ್ಯಕ್ತಿತ್ವ ರೂಪಿಸಿಕೊಳ್ಳುವುದು ನಿಜಕ್ಕೂ ಒಂದು ಚಾಲೆಂಜ್ ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಕಂದರಗಳು ತೆರೆದಿವೆ!



ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಇತ್ತೀಚಿನ ಮಾಧ್ಯಮಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅವು ಪ್ರಪಂಚವನ್ನು ಹತ್ತಿರವಾಗಿಸಿವೆ ಎನ್ನುತ್ತಾರೆ. ಇದು ವ್ಯವಹಾರದ ಮಾತಾಯ್ತು. ಆದರೆ ಮಾನವನ ಮನಸ್ಸು? ಮನಸ್ಸುಗಳು ಹತ್ತಿರವಾಗಿವೆಯೆ ? ಕವಿ ಜಿ. ಎಸ್. ಶಿವರುದ್ರಪ್ಪನವರು ವಿಷಾದದಿಂದ ಹೀಗೆ ಹೇಳುತ್ತಾರೆ.
          ಎದೆ ಎದೆಗಳ
         ನಡುವೆ ಇರುವ
    ಸೇತುವೆಗಳು ಮುರಿದಿವೆ
  ಭಯ, ಸಂಶಯ, ತಲ್ಲಣಗಳ
       ಕಂದರಗಳು ತೆರೆದಿವೆ!

ಹೌದಲ್ಲವೇ ಸಖೀ ಇತ್ತೀಚೆಗೆ ಎಲ್ಲಾ ಸಂಬಂಧಗಳಲ್ಲೂ ಎಂತದೋ ಒಂದು ನಾಟಕೀಯತೆಯನ್ನು ಕಾಣುತ್ತಿದ್ದೇವೆ. ಇದು ಭಾವಪೂರ್ಣ, ಹೃದಯದಾಳದಿಂದ
ಬಂದ ಸಂವೇದನೆ ಎನ್ನಿಸುವುದೇ ಇಲ್ಲ. ಎಲ್ಲದರಲ್ಲಿಯೂ ಕೃತ್ರಿಮತೆ, ತೋರಿಕೆಯ ಆತ್ಮೀಯತೆ ಎದ್ದುಕಾಣುತ್ತದೆ. ಮನಸ್ಸು ಗೊಂದಲದಲ್ಲಿ ಸಿಲುಕಿ ಎಷ್ಟು
ಭಯಭೀತಗೊಂಡಿದೆಯೆಂದರೆ ಅದರಲ್ಲಿ ಸದಾ ಸಂಶಯ, ತಲ್ಲಣಗಳು ಧವಧವಿಸುತ್ತಿರುತ್ತವೆ. ಯಾರಮೇಲೆಯೂ ನಂಬಿಕೆ ಇಲ್ಲ. ಸ್ವತಹ ತನ್ನ ಮೇಲೂ ನ೦ಬಿಕೆ ಇಲ್ಲ. ಕವನವನ್ನು ಮು೦ದುವರೆಸುತ್ತಾ ಕವಿ
       ಮುಖ ಮುಖವೂ
        ಮುಖವಾಡವ
     ತೊಟ್ಟುನಿಂತ ಹಾಗಿವೆ
   ಆಡುತಿರುವ ಮಾತಿನೊಳಗೆ
     ಹೃದಯ ಕಾಣದಾಗಿದೆ !

ಎನ್ನುತ್ತಾರೆ, ಇದೆಲ್ಲಾ ಪ್ರಾರಂಭವಾದದ್ದಾದರೂ ಎಲ್ಲಿಂದಾ ? ಮನಸ್ಸುಗಳ ಮಧ್ಯೆ ಮುರಿದು ಬಿದ್ದಿರುವ ಸೇತುವೆಗಳನ್ನು ಇನ್ನಾದರೂ ಸರಿಪಡಿಸಬೇಕಲ್ಲವೇ ಸಖಿ ? ವ್ಯಕ್ತಿ - ವ್ಯಕ್ತಿಯ ನಡುವಿನ ನಂಬಿಕೆಗಳು ಉಳಿಯಬೇಕಾದರೆ, ಉಳಿದು ಬೆಳೆಯಬೇಕಾದರೆ ವ್ಯಕ್ತಿ ಮೊದಲು ಪ್ರಾಮಾಣಿಕನಾಗಬೇಕು. ಅವನು ತೊಟ್ಟ ಎಲ್ಲ ಮುಖವಾಡಗಳನ್ನೂ ಕಿತ್ತೂಗೆದು, ನಿಜದ ಮುಖದೊಂದಿಗೆ ಮುಖಾಮುಖಿ ನಿಲ್ಲಬೇಕು. ಗೆಲ್ಲಬೇಕು. ಆಗಲೇ ಇತರರ ಮೇಲೆಯೂ ನಂಬಿಕೆ ಮೂಡೀತು! ಸೇತುವೆಗಳು ಎದ್ದೀತು! ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಉಭಯ ಸಂಕಟ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,

ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು
ಹೇಳದಿರೆ ತಾಳಲಾರನೋ ಕವಿಯು!

ಕುವೆಂಪು ಅವರು ‘ಉಭಯ ಸಂಕಟ’ ಕವನದ ಈ ಸಾಲುಗಳು ಎಷ್ಟೊಂದು ಮಾರ್ಮಿಕ ವಾಗಿವೆಯಲ್ಲವೇ?’

ಎದೆಯೊಳಗೆ ಅವ್ಯಕ್ತವಾಗಿರುವ ಭಾವಗಳು ತಕ್ಕ ಮೂರ್ತರೂಪ ಪಡೆಯುವುದು ಎಂತಾ ಕಷ್ಟದ ಕೆಲಸ! ಆ ಕಷ್ಟ ಕವಿಯೊಬ್ಬಗೇ ಗೊತ್ತು! ಅನುಭವದ ಸವಿಯನ್ನು ಎಂತಾ ತಕ್ಕ ಪದಗಳಿಂದಲೂ ವರ್ಣಿಸಲು ಅಸಾಧ್ಯ. ಇದು ಭಾಷೆಯ ಸೋಲೋ? ಕವಿಯ ಸೋಲೋ? ಯಾವುದೇ ವ್ಯಕ್ತ ಭಾವಗಳೂ ಅವು ಅವ್ಯಕ್ತವಾಗಿದ್ದಾಗಲೆ ಸುಂದರವಾಗಿತ್ತು ಎನ್ನಿಸಿದರೆ ಅಂದೊಂದು ಸೋಲೇ ತಾನೇ? ಬಹುಶಃ ಕವಿಯೊಬ್ಬನ ಮಿತಿಯೂ ಇದೇ ಏನೋ?

ಆದರೆ ಹೇಳದಿದ್ದರೆ ತಾಳಲಾಗುವುದೂ ಇಲ್ಲವೆಂಬ ತುಡಿತ ಕವಿಗೆ ಮೂಡಿದಾಗ ಆತ ಏನು ಮಾಡಬೇಕು ? ಎದೆಯೊಳಗಿಂದಾ ಭಾವಗಳು ಒತ್ತಿ ಬಂದಾಗ ಆತ ಬರೆಯದೆಯೂ ಉಳಿಯಲಾರ! ಸಮರ್ಥ ಕವಿಯೊಬ್ಬ ತನ್ನ ಅಮೂರ್ತ ಭಾವಗಳಿಗೆ ತನ್ನ ಮಿತಿಯಲ್ಲೆ ಸಮರ್ಥ ಮೂರ್ತರೂಪ ಕೊಡಬಲ್ಲನಲ್ಲವೇ?

ಆದರೆ ಇಂಥಾ ಯಾವ ಒತ್ತಡಗಳೂ ಇಲ್ಲದೇ ಬಲವಂತವಾಗಿ ಹುಟ್ಟಿಸಿದ ಕವನ, ಕಷ್ಟಪಟ್ಟು ಪದ ಪದಗಳನ್ನು ಜೋಡಿಸಿ ಮಾಡಿದ ಜಾಳು ಪದ್ಯ. ಇತ್ತ ಭಾವಗಳ ಸಮರ್ಥ ಅಭಿವ್ಯಕ್ತಿಯೂ ಆಗುವುದಿಲ್ಲ. ಅತ್ತ ಸುಂದರ ಕವನ ಎನ್ನಿಸಿಕೊಳ್ಳುವುದೂ ಇಲ್ಲ.

ಹೇಳಿಬಿಟ್ಟಿರೆ ಅನುಭವದ ಸವಿ ಹಾಳಾಗಿ ಬಿಟ್ಟೀತೆಂಬ ಚಡಪಡಿಕೆ ಹೇಳದೇ ಉಳಿದರೆ ತಾಳಲಾಗದಂತಹ ಒತ್ತಡ, ಇಂತಹ ಉಭಯಸಂಕಟದ ಮೂಸೆಯಲ್ಲಿ ಪ್ರತಿಯೊಬ್ಬ ಕವಿಯೂ ಹದವಾಗಿ ಬೇಯಬೇಕು. ಆಗಲೇ ಉತ್ತಮ ಕವನ, ಸಮರ್ಥ ಅಭಿವ್ಯಕ್ತಿ ಹೊರಬೀಳಬಹುದಲ್ಲವೇ? ನೀನೇನನ್ನುತ್ತೀ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಸಾವು

- ರೂಪಾ ಹಾಸನ

ಪ್ರಿಯ ಸಖಿ,
ಅಸಹಜ ಸಾವನ್ನು ಕಂಡು ಮನಕರಗದವರುಂಟೇ? ಸಾವು ಎಲ್ಲ ಜೀವಿಗೂ ಸಹಜವೇ. ಬೇಕಾದುದೇ. ಕವಿ ಪೇಜಾವರ ಸದಾಶಿವರಾಯರು ತಮ್ಮ ‘ಸಾವು’ ಎಂಬ ಸುನೀತದಲ್ಲಿ
(ಸಾನೆಟ್)

ಸಾವು ಸಹಜವು ನಿಜವೆ. ಸಾವಿಲ್ಲದೊಡೆ ಬಾಳು
ನೋವಿನೋಲುಗ ಜೀವದಾಧಿಕ್ಯಗೋಳು

ಎನ್ನುತ್ತಾರೆ. ತುಂಬು ಬಾಳನು ಬಾಳಿ ಸಾವಿಗೀಡಾದ ವ್ಯಕ್ತಿಯ ಬಗೆಗೆ ನಮಗಾಗುವ ದುಃಖದ ನೂರರಷ್ಟು ಪಾಲು ದುಃಖ ಕೊಲೆಯಾದ, ವೀರಮರಣದ ಹೆಸರಲ್ಲಿ ಸತ್ತ, ಆತ್ಮಹತ್ಯೆಗೊಳಗಾದ, ಅಪಘಾತದಿಂದ ಸತ್ತ ವ್ಯಕ್ತಿಯ ಇಂತಹ ಅಸಹಜ ಸಾವಿಗಾಗಿ ಆಗುತ್ತದೆ. ಇಂತಹ ಸಾವಿಗಾಗಿ ಮರುಗುತ್ತಾ ಕವಿ,

ಯಾರ ಹಸಿವಿಂಗಿಸಲು, ಯಾರ ಮದ ಭಂಗಿಸಲು
ಕೂರಲಗ ಕತ್ತಿಯಲಿ ನೆತ್ತರಿನ ಭುಗಿಲು?

ಎಂದು ಪ್ರಶ್ನಿಸುತ್ತಾರೆ. ಇಂತಹ ಅಸಹಜ ಸಾವುಗಳಿಗೆ ಕಾರಣವಾದರೂ ಏನು? ಎನ್ನುತ್ತಾ,

ಕಾವ ಕರುಣೆಯ ನಯದ ತೋಳ ತೊಂಗಲಿನಲ್ಲಿ
ಜೀವ ದುಂಬಿಯ ಆಟ

ಎಂದು ವಿಷಾದಿಸುತ್ತಾರೆ. ಕಾಯುವ ಕರುಣೆಯನ್ನು ನಂಬಿ ನೆಮ್ಮದಿಯಾಗಿರುವಾಗ ಕೊಲ್ಲುವಾಟವ ಆಡುವ ಈ ಆಳ್ವಿಕೆಗೆ ಉತ್ತರವೆಲ್ಲಿದೆ ? ಎನ್ನುತ್ತಾ, ಪದ್ಯದ ಕೊನೆಯಲ್ಲಿ

ಕೊಲೆಯು ಜೀವದ ಕೊನೆಯೆ! ಬಾಳು ಸಾವಿನ ಆಳೆ!
ಜಗದ ಸೌಂದರ್ಯದಂತಕನ ಸೂಳೆ!

ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ವಿಶೇಷ ಮಾನವ ಜನ್ಮ ಪಡೆದು ತನ್ನ ಜೀವನದ ಅಲ್ಪ ಭಾಗವನ್ನು, ಅನುಭವಿಸಿರದಾಗ ಕೊಲೆಯೇ ಜೀವದ ಕೊನೆಯಾಗಬೇಕೆ? ಈ ಬಾಳೆಂಬುದು ಸಾವು ಹೇಳಿದಂತೆ ಕೇಳುವ ಆಳಾಗಬೇಕೆ? ಎನ್ನುತ್ತಾ ಜಗತ್ತಿನ ಸೌಂದರ್ಯವೆನ್ನುವುದು ಅಂತಕ ಬೇಕೆನ್ನುವಂತೆ ಕುಣಿಸುವ, ಕೊನೆಗಾಣಿಸುವ ಸೂಳೆಯೆ? ಎಂದು ಪ್ರಶ್ನಿಸುತ್ತಾರೆ. ಹೌದು ಅಸಹಜ ಸಾವನ್ನು ತಡೆಯಲು ಇಲ್ಲಿ ಯಾರಿಗೂ ಸಾಧ್ಯವಿಲ್ಲ. ಇಂತಹ ಅಸಹಜ ಸಾವಿಗೆ ಆ ಅಂತಕ
ಉತ್ತರ ಕೊಡಬಲ್ಲನೇ ಸಖಿ?
     *****
ಕೀಲಿಕರಣ: ಎಂ ಎನ್ ಎಸ್ ರಾವ್

ಪ್ರಶ್ನೆಯಿಲ್ಲದ ಬದುಕೊಂದು ಬದುಕೆ

- ರೂಪಾ ಹಾಸನ

ಪ್ರಿಯ ಸಖಿ,

ಜಿ.ಎಸ್. ಶಿವರುದ್ರಪ್ಪನವರ ಕವನದ ಕೆಲ ಸಾಲುಗಳು ನೆನಪಾಗುತ್ತಿದೆ.
ಪ್ರಶ್ನೆಯಿಲ್ಲದ ಬದುಕೊಂದು
               ಬದುಕೆ ?
ನನಗಿಲ್ಲ ಪೂರ್ಣ ವಿರಾಮವನ್ನರಸಿ
               ನಡೆಯುವ ಬಯಕೆ,
ಈ ಪ್ರಶ್ನೆಯ ಕೆಳಗೆ ಮಡಿಸಿರುವ
               ಸಂಶಯದ ನೆರಳ
ಬಿಚ್ಚಿ ನಡೆಯುವುದು ನನಗಿಷ್ಟ

ಎಷ್ಟು ಸೊಗಸಾದ ಸಾಲುಗಳಲ್ಲವೇ ? ನಿಜಕ್ಕೂ ಪ್ರಶ್ನೆಯಿಲ್ಲದ ಬದುಕು ಬದುಕೆ? ಉತ್ತರಗಳಿಲ್ಲದೆಯೂ ಬದುಕಬಹುದು. ಆದರೆ ನಿರಂತರ ಪ್ರಶ್ನೆ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಲಿ ಬಿಡಲಿ, ಉತ್ತರಗಳನ್ನು ಹುಡುಕುವ ಪ್ರಶ್ನೆಗಳನ್ನು ಕೆದಕುತ್ತಾ ಸಾಗುವ ದಿಟ್ಟತನ ನಮಗೆ ಬೇಕು.

ನಮ್ಮಲ್ಲಿ ಎಷ್ಟೊಂದು ಜನರಿಗೆ ಯಾವುದಕ್ಕೂ ಪುರಸೊತ್ತಿಲ್ಲ. ಆಂಗ್ಲ ಕವಿಯೊಬ್ಬ ಹೇಳುತ್ತಾನೆ, Take time to live. Because the world has so much to give...ಬದುಕಲು ಸಮಯ ಮಾಡಿಕೋ ಏಕೆಂದರೆ ನಿನಗಾಗಿ ನೀಡಲು ಈ ಜಗತ್ತಿಗೆ ಬಹಳಷ್ಟಿದೆ. ನಮ್ಮದೇ ಕಷ್ಟ, ದುಃಖ ಸಮಸ್ಯೆಗಳ ಜಾಲದಲ್ಲಿ ಸುತ್ತಿಕೊಂಡಿರುವ ನಮಗೆ, ಹೃದಯ ತೆರೆದು ಹೀಗೆ ಬದುಕಲು, ಜಗತ್ತಿನ ಆಗು-ಹೋಗುಗಳಿಗೆ ಸ್ಪಂದಿಸಲು ಸಮಯವಿದೆಯೇ? ಅಥವಾ ಆಸಕ್ತಿಯಿದೆಯೇ?

ಒಬ್ಬ ವ್ಯಕ್ತಿ ನಿಜಕ್ಕೂ ಬದುಕಿದ್ದಾನೆಂದು ತಿಳಿಯುವುದೇ ಅವನಲ್ಲಿರುವ ಅದಮ್ಯ ಕುತೂಹಲದಿಂದ. ಎಲ್ಲವನ್ನೂ ಒಳಗೊಂಡ ಬದುಕನ್ನು ತಿಳಿಯಬೇಕೆಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುವ ವ್ಯಕ್ತಿ, ಉತ್ತರಗಳನ್ನು ಅರಸುವ ವ್ಯಕ್ತಿ ಸದಾಕಾಲ ಜೀವಂತವಾಗಿರುತ್ತಾನೆ. ಇಲ್ಲದಿದ್ದವನು ಬದುಕಿದ್ದೂ ಸತ್ತಂತೆ!

ಪ್ರಿಯ ಸಖಿ, ನಾವೂ ಬದುಕಲು ಒಂದಿಷ್ಟು ಸಮಯ ಮಾಡಿಕೊಳ್ಳೋಣ. ಜಗತ್ತು ನಮಗಾಗಿ ನೀಡಲು ಕಾದಿರುವ ಎಲ್ಲವನ್ನೂ ಆಸ್ವಾದಿಸೋಣ. ಪ್ರಶ್ನೆಗಳೂ ನಮ್ಮನ್ನು ಕಾಡಲಿ. ಉತ್ತರಗಳಿಗಾಗಿ ಹುಡುಕಾಡೋಣ. ಎಲ್ಲಕ್ಕೂ ಮೊದಲು ಹೃದಯ ತೆರೆದು ಬದುಕಲು ಪ್ರಯತ್ನಿಸೋಣ. ನೀನೇನನ್ನುತ್ತೀ ಸಖಿ? ಸಮಯ ಮೀರುತ್ತಿದೆ ಇನ್ನು ಬರಲೆ?
     *****
ಕೀಲಿಕರಣ: ಎಂ ಎನ್ ಎಸ್ ರಾವ್