Shekarpoorna ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Shekarpoorna ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಟಿಪ್ಸ್ ಸುತ್ತ ಮುತ್ತ

- ಶೇಖರ್‌ಪೂರ್ಣ


"ಕಾಫಿಗೆ ಬರ್‍ತಿಯೇನೊ?"

ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು.

ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ.
"ಕಾಸಿಲ್ಲ ಕೊಡಿಸ್ತೀಯ?"
"ಬಾ ಹೋಗೋಣ..."

-ಹೊರಗಡೆ ಸಣ್ಣದಾಗಿ ಮಳೆ. ಮತ್ತೊಂದು ಸಂಜೆ ಕತ್ತಲೆಗೆ ತಿರುಗುತ್ತಿತ್ತು. ಪ್ರಿನ್ಸಿಪಾಲರ ರೂಮಿನಿಂದ ಹೊರಬಿದ್ದರು. ಅವಳು ಉಪಾಧ್ಯಾಯಿನಿ. ಅವನು ಗುಮಾಸ್ತ. ಅವಳ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ. ಅವನ ಮನೆಯಲ್ಲಿ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ದೊಡ್ಡ ಪರಿವಾರ. ಬೆಳಗಾದರೆ ಕಾಲೇಜು. ಕಾಲೇಜಾದರೆ ಮನೆ. ಮಧ್ಯೆ ಒಂದಷ್ಟು ಜಗಳ. ಮನೆಯಲ್ಲೂ, ಕಾಲೇಜಿನಲ್ಲೂ. ಯಾರಿಗಾದರೂ ಸರಿ-ತನ್ನನ್ನು ತಾನು ತೆರೆದಿಡಲೇ ಬೇಕು ಎಂಬ ಗಳಿಗೆಗಳು ಬಂದೇ ಬರುತ್ತವೆ. ಮಾತನಾಡಲು ತೊಡಗುತ್ತಾರೆ. ಒಳಗೊಂದು- ಹೊರಗೊಂದು. ಆ ಹೊರಗಿಗೂ ಒಂದು ಅರ್ಥವಿರುತ್ತದೆ. ಆ ಆರ್ಥದಲ್ಲೂ ಸಾರ್ಥಕತೆ ಕಾಣುವಾಸೆ... ಹೊರಗಿನದೂ ಕೇಂದ್ರವಾಗುತ್ತಾ ಸಾಂದ್ರವಾಗುತ್ತಾ ಹೋಗುತ್ತದೆ. ಅವರಿಬ್ಬರೂ ಮಾತನಾಡಲು ತೊಡಗುತ್ತಾರೆ. ಹೆಚ್ಚಾಗಿ ಅವಳನ್ನೇ ಅವನು ಮಾತನಾಡಲು ಬಿಡುತ್ತಾನೆ. ಶೋತೃವಾಗುತ್ತಾನೆ-ಪ್ರೇಕ್ಷಕನಾಗುತ್ತಾನೆ. ಗೋಚರಿಸದ್ದನ್ನೆಲ್ಲ ತಬ್ಬಿಕೊಳ್ಳುತ್ತಾನೆ. ಶ್ರದ್ಧೆಯಾಗುತ್ತಾ ಹೋಗುತ್ತದೆ...

ಎಷ್ಟೋ ಬಾರಿ ಅವನು ಅವಳ ಮಾತುಗಳನ್ನು ನಿರಾಕರಿಸಿಬಿಡುತ್ತಿದ್ದ. ಅವನ ನಿಲುವನ್ನೆಲ್ಲ, ನಿರಾಕರಣೆಯನ್ನೆಲ್ಲ ಅವಳು ತಾತ್ಸಾರದಿಂದ ಕಡಿದು ಉಗಿದು ಬಿಡುತ್ತಿದ್ದಳು. ಈ ಆವಾಹನೆ - ವಿಸರ್ಜನೆಗಳ ನಡುವೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ...ಇಲ್ಲದಿದ್ದರೆ ಕುಡಿಯುತ್ತಿದ್ದ ಕಾಫಿಗಾಗಲಿ, ಆಡುವ ಮಾತಿಗಾಗಲಿ ಅರ್ಥವೆಲ್ಲಿಯದು? ಅಪ್ಪಿಕೊಂಡಾಗ ಅವನಿಗಂತು ಅಂತರಂಗ ಸೇರಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಪರಿವರ್ತನೆ.

ಒಮ್ಮೆ ಹೀಗೆ ಔಪಚಾರಿಕವಾಗಿ ಏನಾದರೂ ಮಾತನಾಡಲೆಬೇಕಲ್ಲ ಎಂಬ ಧ್ವನಿಯಲ್ಲಿ-
"ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇದೆ..ಚಿಕ್ಕಹುಡುಗ.  ಇನ್ನೂ ಹದಿನೆಂಟು ವರ್ಷ, ನಿರ್ದೇಶಿಸ್ತಾ ಇರೋದು..ಒಳ್ಳೆಯವನು, ಬರ್‍ತಿಯೇನೋ?" ಕೇಳಿದ್ದಳು.
"ಹದಿನೆಂಟು ವರ್ಷ...ದುರಹಂಕಾರ.." ಅವನು ಕೆಂಡ ಕಾರಿದ. ಅವಳ ಅಹ್ವಾನದಲ್ಲಿನ ಔಪಚಾರಿಕತೆಗೋ ಅಥವ..  ಆಹ್ವಾನವನ್ನು ತಿರಸ್ಕರಿಸಿದ್ದಕ್ಕೋ ಅಥವ ಅವನ ತಾತ್ಸಾರಕ್ಕೋ ಅವಳಿಗೂ ರೇಗಿತು. ತಟಕ್ಕನೆ ಕೇಳಿದ್ದಳು:  "ನಿನಗಿರೋ ಕೊಬ್ಬು ನೋಡು.. ಆ ಹುಡುಗನ ಬಗ್ಗೆ ನಿನಗೇನೂ ಗೊತ್ತಿಲ್ಲ. ನಿನಗೇನು ಹಕ್ಕಿದೆ ಮಾತನಾಡೋಕ್ಕೆ?" ಆಹ್ವಾನದ ಹಿಂದಿನ ಔಪಚಾರಿಕ ಭಾವ ಕಳೆದು ಅವಳು ಹೂಡಿದ ವಾದದಲ್ಲಿ : ಹೌದು ನಿಜ- ಎಂದನ್ನಿಸಿ ಬಿಟ್ಟಿತು.

ಸಂಜೆ ಅವನೂ ರವೀಂದ್ರ ಕಲಾಕ್ಷೇತ್ರಕ್ಕೆ ಹೋದ. ಹತ್ತು ರೂ ತೆತ್ತು ನಾಟಕ ಪೂರ್ತಿ ನೋಡಿದ. ನಾಟಕ ಕೆಟ್ಟದಾಗಿತ್ತು. ರವೀಂದ್ರ ಕಲಾಕ್ಷೇತ್ರದ ವಿರುದ್ಧವೇ ಅವನ ಹಠ ಮತ್ತಷ್ಟು ಗಟ್ಟಿಯಾಗಿತ್ತು. ಆದರೆ ಅವನು ಅಂದು ರವೀಂದ್ರ ಕಲಾಕ್ಷೇತ್ರಕ್ಕೆ ಹೋದ ಬಗೆಗೆ ಪಶ್ಚಾತ್ತಾಪವಿರಲಿಲ್ಲ. ಅವನ ಮಟ್ಟಿಗೆ ಅದು ಸಣ್ಣ ಪರಿವರ್ತನೆಯೇನು ಅಲ್ಲ. ಎಲ್ಲವನ್ನೂ ತೆರೆದ ಕಣ್ಣಿನಿಂದ ನೋಡು ನಂತರ ಮಾತನಾಡುವ ಹಾದಿಗೆ ಬಿದ್ದ. ಅವಳನ್ನು ಅವನು ತನ್ನನ್ನೂ ಮೀರಿ ಗುರುಸ್ಥಾನಕ್ಕೇರಿಸಿದ್ದ. ಮೊದಲು ನೋಡು, ನಂತರ ಮಾತನಾಡು- ಇದು ಅವಳ ಥಿಯರಿಯಾಗಿರಲಿಲ್ಲ. ಅವಳ ಸ್ವಭಾವದಲ್ಲೇ ಇತ್ತು, ಇರಲಿಲ್ಲ. ಅದು ಅವನಿಗೆ ಬೇಕಾಗಿರಲಿಲ್ಲ. ಇದೆ - ಅವಳಲ್ಲಿ ಇದೆ ಎಂಬ ನಂಬಿಕೆಯೆ ಅವಳನ್ನು ಅಪ್ಪಿಕೊಳ್ಳುವ ಶ್ರದ್ಧೆಯಾಗಿತ್ತು.  ಆಧಾರವಾಯ್ತು.  ಸಾಕು , ಅರ್ಥಗಳು ಗೋಚರಿಸಲಾರಂಭಿಸಿತು....

ಹೋಟೆಲ್ಲಿಗೆ ಹೋಗುವ ಹಾದಿಯಲ್ಲಿ ಫುಟ್‌ಪಾತಿನ ಮೇಲೆ ರಾಶಿ ರಾಶಿ ಬಟ್ಟೆಗಳು. ಬಳಿಗೆ ಹೋಗಿ ರಾಶಿಯಿಂದ ಒಂದು ಅಂಗಿಯನ್ನು ಆರಿಸಿಕೊಂಡು ಅಳತೆಯನ್ನು ಅಂದಾಜು ನೋಡತೊಡಗಿದಳು. "ಅಣ್ಣನಿಗಾ?" - ಕೇಳಿದ. "ಹೂಂ" ಅಳತೆಯಲ್ಲಿ ಮಗ್ನಳಾದಳು. ಅವನು ಅವಳನ್ನು ಮತ್ಸರದಿಂದ ನೋಡತೊಡಗಿದ. ಅವಳ ಮಗ್ನತೆ ಅವನಿಗೆ ಸಾಧ್ಯವಿರಲಿಲ್ಲ. ಅವಳು ಖರೀದಿಸಲಿಲ್ಲ. ಕಾರಣವೇನೆಂದು ಅವನೇನೂ ಕೇಳಲಿಲ್ಲ. ಸುಮ್ಮನೆ ಮೆಜೆಸ್ಟಿಕ್‌ನ ಫುಟ್‌ಪಾತಿನ ಮೇಲೆ ಇನ್ನೂ ಕಡಿಮೆ ಕಾಸಿಗೆ ಸಿಕ್ಕುತ್ತೆ ಎಂದಷ್ಟೆ ಗೊಣಗಿದ. ಅವಳು ಹೂಂ ಅನ್ನಲಿಲ್ಲ- ಊಹೂಂ ಅನ್ನಲಿಲ್ಲ. ಹೋಟೆಲ್‌ನಲ್ಲಿ ಕಾಫಿಗೆ ಆರ್ಡರ್ ಮಾಡಿ ತಟಕ್ಕನೆ ತಪ್ಪು ಅರಿವಾದವಳಂತೆ "ಏನಾದ್ರೂ ತಿಂತೀಯೇನೋ?" ಪ್ರಶ್ನಿಸಿದಳು. ರೋಟಿ ಆರ್ಡರ್ ಮಾಡಿದ.

ಅವ್ನಿಗೆ ರೋಟಿಯೆಂದರೆ ಬಹಳ ಇಷ್ಟ. ಬಯಸಿ ಬಯಸಿ ತಿನ್ನುತ್ತಿದ್ದ. ಬ್ರೆಡ್ ಬಟರ್ ಜಾಮ್, ಕಟ್ಲೆಟ್, ಸ್ಯಾಂಡ್‌ವಿಚ್, ಸ್ಕ್ರಾಂಬಲ್ಡ್ ಎಗ್, ಫ್ರೆಂಚ್ ಟೋಸ್ಟ್, ಹೀಗೆ ಮೆನುವನ್ನೆ ಮೆತ್ತಿಕೊಂಡು ಬೆಳೆದಿದ್ದ ಹೋಟೆಲ್ಲನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ಶುದ್ಧ ಭಾರತೀಯ ಹೆಮ್ಮೆಯ ಘೋಷಣೆ ಬರಿಯ ಕವಚವಾಗಿದ್ದದ್ದನ್ನು ಕಂಡು ತೀರಾ ಅಸಹ್ಯಿಸಿಕೊಂಡಿದ್ದ. ಆ ರಸ್ತೆಯ ತುಂಬಾ ಅಂತಹ ಹೋಟೆಲ್ಲುಗಳೆ. ಊಳಿದದ್ದು ಪಬ್‌ಗಳು. ಅಲ್ಲೊಂದು ಇಲ್ಲೊಂದು ಪಾನಿಪುರಿ, ಭೇಲ್ ಪುರಿ ಗಾಡಿಗಳು. ಅವುಗಳ ಮುಂದೆ ರಸ್ತೆಯಲ್ಲಿ ಕಾರುಗಳು.

"ನಾನು ಹಳ್ಳಿಗೆ ಹೋದಾಗ ನಮ್ಮತ್ತೆ - ಅಜ್ಜಿ ಹೀಗೆ ಕೆಂಡದ ರೊಟ್ಟಿ ಸುಟ್ಟು ಕೊಡುತ್ತಿದ್ದರು." - ಯಾಕೆ ರೋಟಿಯನ್ನು ಇಷ್ಟ ಪಡುತ್ತೇನೆ ಎಂಬುದಕ್ಕೆ ಕಾರಣ ಅವಳ ಸಮ್ಮುಖದಲ್ಲಿ ಬಯಲಾಗಿ, ಅವನ ಅರಿವಿಗೂ ಗೋಚರವಾದದ್ದು ಅವನಿಗೆ ಆಶ್ಚರ್ಯವಾಯ್ತು- ಆಗಲಿಲ್ಲ.  ಅವಳ ಬಗೆಗೆ ಮತ್ತಷ್ಟು ಗೌರವ.
"ನಾನು ನಿನ್ನನ್ನು ಪ್ರೀತಿಸುತ್ತೇನೆ.." ಒಳಗೆ ಗಟ್ಟಿಯಾದ ಭಾವವನ್ನು ಹೊರಗೆಡವಲು ನಾಲಿಗೆ ತುದಿಗೆ ಬಂದಿದ್ದ ಪದಗಳನ್ನು ಕತ್ತರಿಸಿದ. "ಹಾಗಂದರೆ ಏನು?"- ಅವಳು ಕೇಳೆ ಕೇಳುತ್ತಾಳೆ.  ಒಳಗೆ ತಡಕಿಕೊಂಡಾಗ ಉತ್ತರ ಅವನಿಗೆ ಸ್ಪಷ್ಟವಿರಲಿಲ್ಲ. ಹೀಗೆ ಸ್ಪಷ್ಟವಾಗದ್ದರ ಕುರಿತು ಏನೆ ಹೇಳಿದರೂ ಸುಳ್ಳಾಗುತ್ತದೆ. ಬೇಡವೆಂದು ನಿರ್ಣಯಿಸಿ ಸುಮ್ಮನಾದ. ಹೊರಗಡೆ ಕತ್ತಲು- ಒಳಗೆ ಮಂಕು ಬೆಳಕು. ರೊಟ್ಟಿ ತಿನ್ನುತ್ತಲೇ ಅವಳ ಮುಖವನ್ನು ನೋಡತೊಡಗಿದ.
"ನನಗೆ ಬೆಂಗಳೂರು ಬೇಜಾರಾಗಿ ಹೋಗಿದೆ.  ದೂರ ಹೋಗ್ಬೇಕೂಂತನ್ನಿಸ್ತಿದೆ."  ಅವಳ ಮಾತುಗಳಲ್ಲಿ ಅವನ ಭಾವ ಧ್ವನಿಯೊಡೆದಿತ್ತು.  ವಯಕ್ ಎಂದು ನಾಸಿಯಾ. "ಯಾಕೆ?" ಕಷ್ಟ ಪಟ್ಟು ಕೇಳಿದ.  ಅನುಚಿತವಾದರೆ...ಆತಂಕ.  ತೀರಾ ವೈಯಕ್ತಿಕವಾದದ್ದನ್ನು ಕೇಳಲು ಸಂಕೋಚ.  ಅವಳು: "ಮನೇಲಿ ಮದುವೆ ಮಾಡ್ಕೋಂತ ಹಠ ಹಿಡಿದಿದ್ದಾರೆ...ನನಗೆ ಯಾರೋ ಅಪರಿಚಿತನ ಜೊತೆ ...ಆಗೋಲ್ಲ..."
"ನಿನ್ನ ತಂದೆ ತಾಯಿ ಸಂಕಟಾನ ಅರ್ಥ ಮಾಡಿಕೋಬಲ್ಲೆಯ..?  ತಪ್ಪೂಂತನ್ನಿಸೋಲ್ವ?"
"ಆಯ್ತು- ಅರ್ಥವಾಗುತ್ತೆ...ಆದ್ರೂ ನನಗಾಗೋಲ್ಲ...ಅದಕ್ಕೇ ಈ ಕೆಲಸ ಬಿಟ್ಟು ಬೇರೆ ಕಡೆ ಹೋಗ್ಬೇಕೂಂತನ್ನಿಸ್ತಿದೆ..."

"ಆಗ ಅವರ ಸಂಕಟವೇನೂ ಕಮ್ಮಿಯಾಗೋಲ್ಲ. ನೀನು ನಿನ್ನ ನಿರ್ಣಯ ಏನೂನ್ನೋದನ್ನ ಅವರಿಗೆ ಹೇಳು. ಮನದಟ್ಟು ಮಾಡಿಸು..."

"ಅವರಿಗೆ ಅರ್ಥವಾಗೋಲ್ಲ. ಯಾರನ್ನಾದರೂ ಸರಿ ಮದ್ವೆ ಮಾಡ್ಕೋಂತ ಹಠ ಹಿಡೀತಾರೆ"

"ಈ ಪಲಾಯನದಿಂದ ಯಾರಿಗೂ ಏನೂ ಪರಿಹಾರ ಸಿಕ್ಕೋಲ್ಲ."

"ನಿಜ ಇರಬಹುದು... ಆದರೂ.."

ಅವಳ ಹಠ ಅವಳ ತಳಮಳ ಅವನಿಗೆ ಅರ್ಥವಾಗುತ್ತೆ.  ಆದರೂ ಅವನು ಅವಳ ತಾಯ್ತಂದೆಯರ ಪರವಾಗೇ ವಾದಿಸುತ್ತಾನೆ.  ಹಾಗೆ ವಾದಿಸುವುದೂ ಪ್ರಯೋಜನವಿಲ್ಲ.- ನಿರ್ಣಯ ಅವಳದೇ ಅಲ್ಲವೆ..ಅವನಿಗೆ ಗೊತ್ತು. ಆದರೂ ಒಳಗೇ ಗೊಣಗಿಕೊಳ್ಳುತ್ತಾನೆ- ಅಪ್ಪ ಅಮ್ಮನ ಮಾತುಗಳನ್ನ ಕೇಳಿಕೊಂಡು ಇರೋಕ್ಕೆ ಯಾಕಾದ್ರು ಆಗೋಲ್ಲ?  ಹಾಳಾಗಿ ಹೋಗಲಿ ಒಂದು ನಿರ್ಣಯಕ್ಕಾದರೂ ಬಂದು.. ಆಚೆಗೂ ನಿಲ್ಲದ ಈಚೆಗೂ ನಿಲ್ಲದ... ಹ್ಯಾಗೂ ಕಾಲ ಕಳೀತಿದೆ.  ಜೀವನದಲ್ಲಿ ಮದ್ವೇನೆ ಎಲ್ಲವೂ ಅಲ್ಲ. ಅದು ಅವ್ನಿಗೂ ತಿಳಿದಿದೆ..ಆದರೂ ..ಮತನ್ನಾಡಿದರೆ ಜಗಳವಾಗುತ್ತೆ.

"ಅತಿಯಾಗಾಡ್ಬೇಡ " ಗದರಿಸ್ತಾಳೆ. ಸಹಮತ ಯಾವುದರಲ್ಲೂ ಇಲ್ಲ.  ಸದಾಜಗಳ.  ಒಮ್ಮೊಮ್ಮೆ ಇಬ್ಬರಿಗೂ ಸಿಟ್ಟು ಬರುತ್ತೆ.  ಕಪಾಳಕ್ಕೆ ಹೊಡೆಯುವಷ್ಟು. ಹಾಗಂತ ಅವಳೂ ಹೇಳಿದ್ದಾಳೆ.  ಅವನೂ ಹೇಳಿದ್ದಾನೆ.  ಒಮ್ಮೆ ಹೊಡೆದು ಬಿಡುವಷ್ಟು ಕೋಪ.

"ಹೊಡೀತೀನಿ ಈಗ.."

"ನಮ್ಮಪ್ಪ ಅಮ್ಮನೇ ಹೊಡೆದಿಲ್ಲ" - ತಟಕ್ಕನೆ ಅವಳು ಮಾತುಗಳಲ್ಲಿ ಹೊಡೆದೇ ಬಿಟ್ಟಳು.

ಅವನಿಗೇನೂ ಬೇಸರವಾಗಲಿಲ್ಲ.  ಗೆರೆ ಹಾಕಲೇ ಬೇಕಿತ್ತು.  ಹಾಕಿಯಾಯ್ತು.  ಅವಳಿಗೂ ಬೇಸರವಾಗಲಿಲ್ಲ.

ರೋಟಿ ತಿಂದು ಮುಗಿಸಿದ್ದ. ಕಾಫಿ ಆಯ್ತು. ಬಿಲ್ ಕೊಟ್ಟು ಒಂದು ರೂಪಾಯಿ ಟಿಪ್ಸ್ ಬಿಟ್ಟಳು.

"ಟಿಪ್ಸ್ ಯಾಕೆ ಬಿಡ್ತೀಯ?" ಜಗಳ ಆಡಬಾರದು ಎಂದು ಎಷ್ಟೇ ನಿರ್ಣಯಿಸಿದ್ದರೂ ಒಮ್ಮೊಮ್ಮೆ ಅತಿಯಾಗಿ ಆಡುತ್ತಾನೆ - ಬಫೂನ್.

ಅವಳ ಕಣ್ಣಲ್ಲಿ ಉರಿ ಕಾಣಿಸಿಕೊಂಡಿತು. ಈ ಪ್ರಶ್ನೆಯನ್ನು ಅವನು ನಾಲ್ಕನೆ ಬಾರಿ ಕೇಳುತ್ತಿರುವುದು. ಆದರೂ ಕೇಳಿದ ಪ್ರಶ್ನೆಗೆ ಸಂಕಟದ ಉತ್ತರ.

"ನನಗೆ ಗೊತ್ತಿಲ್ಲ.  ನಮ್ಮಪ್ಪ ಅಮ್ಮನ ಜೊತೆ ಹೋಟೆಲ್‌ಗೆ ಹೋದಾಗ ಟಿಪ್ಸ್ ಬಿಡೋದು ನೋಡಿರಬೇಕು.  ಬಹುಶಃ ಟಿಪ್ಸ್ ಬಿಡೋದು ನಮ್ಮಪ್ಪನಿಂದ ಕಲಿತಿದ್ದಿರಬೇಕು..."

ಅವನಿಗೆ ನಿಜವಾಗಿಯೂ ಕೋಪ ಉಮ್ಮಳಿಸಿಕೊಂಡು ಬಂದಿತ್ತು.  ಕೋಪವನ್ನು ಮುಷ್ಠಿಗೆ ರವಾನಿಸಿ ಬೆರಳುಗಳ ಮೂಲಕ ಹೊರಗೆ ಹಾಕಿದ.  ಆದರೂ ಅದು ಜಿಗುಟು ಸ್ವರದಲ್ಲಿ ಒಡೆದಿತ್ತು.  "ಸುಳ್ಳು.." ಕಿರುಚಿದ.

"ಹೋಗೋ ಎಲ್ಲವನ್ನೂ ಕಾನ್ಶಿಯಸ್ಸಾಗೆ ಮಾಡ್ಬೇಕಾಗಿಲ್ಲ..ಯಾಕೇಂತ ನನಗೆ ಗೊತ್ತಿಲ್ಲ.."- ಅವಳಿಗೂ ಸಿಟ್ಟು-ವಾಕರಿಕೆ-ಅಸಹ್ಯ.

"ನನಗೆ ಗೊತ್ತು ಯಾಕೇಂತ, ನೀನು ಈ ಹ್ಯಾಬಿಟ್ಟನ್ನ ಎಲ್ಲಿ ಪಿಕಪ್ ಮಾಡಿದ್ದೀಯಾನ್ನೋದು.."

ಇದನ್ನು ಈವರೆಗೆ ಅವನು ಕಾಲೇಜಿನ ವಲಯದಲ್ಲಿ ಸಹೋದ್ಯೋಗಿಗಳ ನಡುವೆ ಸಾಕಷ್ಟು ಬಾರಿ ಹೇಳಿದ್ದ.  ಬಹಳ ಜನಕ್ಕೆ ಹೇಳುತ್ತಲೇ ಇರುತ್ತಾನೆ.  ಒಳ್ಗೆ ಮುಷ್ಠಿ ಹಿಡಿದು ಕಟಕಟಿಸಿ, ದ್ರವಿಸಿ...

"ಹೇಳು ಹಾಗಾದೆರೆ.." ಅವಳು ಸವಾಲು ಹಾಕಿದಳು.

"ಈಗಲ್ಲ , ಸಮಯ ಬರಲಿ ಸಾಧ್ಯಾವಾದರೆ ನೀನೆ ಯೋಚಿಸು, ಹೊಳೆದರೆ ಹೇಳು.."

"ಹೀಗೆ ಆಲೋಚಿಸ್ತಾ ಕೂತರೆ ಸಿಗೋ ಸಣ್ಣ ಪುಟ್ಟ ಸಂತೋಷಗಳನ್ನೂ ಕಳ್ಕೋಬೇಕಾಗುತ್ತೆ.  ನಿನ್ನ ತರಹ ಎಲ್ಲವನ್ನೂ ಗಂಭೀರವಾಗಿ ಯೋಚಿಸಬಾರದು.."

ಇಬ್ಬರೂ ಹೋಟೆಲ್ಲಿಂದ ಎದ್ದು ಆಚೆಗೆ ಬಂದರು.  ಸಣ್ಣದಾಗಿ ಮಳೆ ಹನಿಯುತ್ತಿತ್ತು.  ಅಸಹನೆಯನ್ನೂ ಕೋಪವನ್ನು ಮುಚ್ಚಿಟ್ಟುಬಿಡುವಷ್ಟು ನಯಗಾರಿಕೆ ಅವಳಿಗಿಲ್ಲದ್ದು ಅವನಿಗೆ ಮೆಚ್ಚಿಗೆಯಾದ ಅಂಶ. ಕೋಪವನ್ನು ತೋರಿಸಿಕೊಳ್ಳೋದಕ್ಕೂ ಒಳಗಡೆ ಎಲ್ಲೋ ಇಂಟಗ್ರೆಟಿ ಇರಬೇಕು.  ಅಸಲಿ ಗುಣವನ್ನ ಯಾವ ಎಗ್ಗೂ ಇಲ್ಲದೆ, ಅಪರೂಪಕ್ಕೊಮ್ಮೆ ಇಂತಹವರು ಕಾಣ ಸಿಗೋದು...ಕಾಲೇಜಿನ ಒಳಗೆ ಬಂದಿದ್ದರು.

"ಹ್ಯಾಗೆ ಹೋಗ್ತೀಯ?" ಕೇಳಿದ.

"ಬಸ್ ಸ್ಟಾಪಿಗೆ ನಡ್ಕೊಂಡು ಹೋಗ್ತೀನಿ."- ಕಾಲೇಜಿನಿಂದ ಬಸ್ ಸ್ಟಾಪಿಗೆ ಐದು ನಿಮಿಷದ ಹಾದಿ.

"ಜೊತೆಗೆ ಬರಲ?"

"ಬೇಡ ಒಬ್ಬಳೆ ಹೋಗ್ತೀನಿ."

ಕತ್ತಲಲ್ಲಿ ಒಬ್ಬಳೇ ನಡೆಯ ತೊಡಗಿದಳು. ಜನರೊಂದಿಗೆ ಅವಳು ಬೆರೆತರೂ ಅವಳು ಒಬ್ಬಂಟಿ ಎಂದನ್ನಿಸಿತವನಿಗೆ. ನಡೆಯುತ್ತಾ ಹೋಗುತ್ತಿದ್ದವಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತ. ಕ್ರಮೇಣ ಅವನ ದೃಷ್ಟಿಯಾಚೆಗೆ ಕರಗಿದಳು.  ಅವಳಿಗೆ ಗೊತ್ತಿಲ್ಲ.  ಸಣ್ಣ ಸಣ್ಣ ಸಂಗತಿಗಳಲ್ಲಿ ಅವನೂ ಸಂತೋಷಿಸುತ್ತಾನೆಂದು. ಅವನು ಹೇಳುವುದೂ ಇಲ್ಲ- ಅವಳು ಕೇಳುವುದೂ ಇಲ್ಲ. ಇಬ್ಬರಿಗೂ ಗೊತ್ತು.

"ಬೆಳೆಗಾಂ ಡಿಸ್ಟ್ರಿಕ್ಟ್‌ನಲ್ಲಿ ಒಂದು ಅಮೆರಿಕನ್ ಫ್ಯಾಕ್ಟ್ರಿ ಇದೆ. ಅದರ ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡ್ಬೇಕೂಂತಿದ್ದಾರೆ. ಅವರಿಗೆ ಸೋಷಿಯಲ್ ವೆಲ್‌ಫೇರ್ ಆಫಿಸರ್ ಬೇಕಂತೆ. ನನಗೆ ಇಂಟೆರ್‌ವ್ಯೂ ಬಂದಿದೆ, ಹೋಗ್ತೀನಿ. ಯಾರೀಗೂ ಹೇಳ್ಬೇಡ.."

ಒಂದು ದಿನ ದಿಢೀರನೆ ಹೇಳಿದಳು.  ಅವನಿಗೆ ಒಂದು ನಿಮಿಷ ಕಳವಳವಾಯ್ತು. ಆ ಕಳವಳಕ್ಕೆ ಎರಡು ಕಾರಣಗಳು ಅವನಿಗೆ ಸ್ಪಷ್ಟವಾಯ್ತು.  ಒಂದನ್ನು ಹೇಳಿದ ಒಂದನ್ನು ಮುಚ್ಚಿಟ್ಟ.  ಬಹಿರಂಗವಾದರೆ ಅದಕ್ಕೊಂದು ಲೆಜಿಟಿಮಸಿ ಹುಡುಕುವ ಪ್ರಯತ್ನ..ಥೂ ಹೇಳುವುದೇ ಬೇಡ.  ಇನ್ನೊಂದು ಕಾರಣ ಅವನು ಪ್ರಾಮಾಣಿಕವಾಗಿ ಶ್ರದ್ದೇಯಾಧಾರದಲ್ಲಿ ನಂಬಿಕೊಂಡು ಬಂದದ್ದು.  ಅದನ್ನು ಹೇಳಿದ:

"ಅಮೆರಿಕನ್ ಕಂಪನಿ ಅಂತೀಯಾ.  ಅಲ್ಟಿಮೇಟ್ಲಿ ಅದು ಲಾಭಬಡುಕ ಸಂಸ್ಥೆ.  ಆ ಫ್ಯಾಕ್ಟ್ರೀ ಅಲ್ಲಿಲ್ಲದೆ ಹೋಗಿದ್ದರೆ ಅವರು ಯಾವ ಕುಗ್ರಾಮವನ್ನೂ ದತ್ತು ತೊಗೋತಾ ಇರ್‍ಲಿಲ್ಲ.  ಪ್ರಾದೇಶಿಕವಾಗಿ ಯಾವುದೇ ವಿರೋಧ ಬರದೇ ಇರ್‍ಲೀಂತ ಅವರು ಈ ತರಹ ಮಾಡೋದು ಉಂಟು.  ಒಲೈಸ್ತಾರೆ, ಮಣಿಯದೆ ಇದ್ದರೆ ಕರಾಮತ್ತು ಮಾಡ್ತಾರೆ. ಅಂತಹವರ ಮಧ್ಯೆ ನೀನು..?  ಕಲ್ಪಿಸಿಕೊಳ್ಳೋಕ್ಕೂ ಆಗ್ತಿಲ್ಲ.."

" ಅಲ್ಲಿ ಸೇವಾಗ್ರಾಮದಲ್ಲಿ ಎಷ್ಟೊಂದು ಜನ ಮುಂದೆ ನಿಂತು ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ದುಡೀತಿರ್‍ತಾರೆ ಗೊತ್ತಾ?  ಇಲ್ಲಿ ಕೂತ್ಕೊಂಡು ಕಾಫಿ ಕುಡೀತ ಇಂಟಗ್ರಟಿ ಬಗ್ಗೆ ಮಾತಾಡೋದೂದ್ರೆ ಅಸಹ್ಯವಾಗಿಬಿಟ್ಟಿದೆ."
"ಆದರೆ ನೀನು ಅಲ್ಲಿಗೆ ಹೋಗ್ಬೇಕೂಂತಿರೋದಕ್ಕೆ ನಿಜವಾದ ಕಾರಣ ಅದಲ್ಲ."
"ನಿಜ, ಆದ್ರೆ ನಾನು ಹೋದ ಕಡೆ ಪ್ರಾಮಾಣಿಕವಾಗಿರ್‍ತೀನೀಂತ ನನಗನ್ನಿಸುತ್ತೆ.  ಜನಸೇವೆ, ಸಮಾಜಸೇವೆಯ ಮಾತುಗಳನ್ನೇನೂ ಆಡೋದಿಲ್ಲ ಹೆದರ್‍ಕೋಬೇಡ..."

ಅವಳ ಮಾತುಗಳಲ್ಲಿ ಪ್ರಾಮಣಿಕತೆಯಿತ್ತು.  ಅವನು ಸುಮ್ಮನೆ ಅವಳು ತೊಟ್ಟಿದ್ದ ಖಾದಿ ಸೆಲ್ವಾರ್ ಕಮೀಜನ್ನೇ ನೋಡತೊಡಗಿದ್ದ.  ಒಮ್ಮೆ ಅವಳು ಹೇಳಿದ್ದಳು:

" ಖಾದಿ ನನಗೆ ಬಹಳ ಅನುಕೂಲ. ಮೂವತ್ತೊಂಬತ್ತು ರೂಪಾಯಿ ಮೀಟರ್.  ಯಾರು ಕೊಡ್ತಾರೆ ಹೇಳು.  ನಾನು ಅದನ್ನ ಹಾಕಿಕೊಂಡು ದೇಶಭಕ್ತಿಯ ಸೋಗು ಹಾಕ್ತಾ ಇಲ್ಲ. ಆ ಮಾತುಗಳನ್ನ ಆಡ್ತಲೂ ಇಲ್ಲ.  ಅನುಕೂಲವಾಗಿದೆ, ಉಪಯೋಗಿಸ್ತಿದೀನಿ, ಅಷ್ಟೆ."

ಅಮೆರಿಕನ್ ಫ್ಯಾಕ್ಟರಿ, ಸೋಷಿಯಲ್ ವೆಲ್‌ಫೇರ್, ಖಾದಿ, ಮನೆ ಹೀಗೆಲ್ಲ ಅವಳು ಅಂದು ಸುದೀರ್ಘವಾಗಿ ಮಾತನಾಡತೊಡಗಿದಳು. ಅವಳ ಧ್ವನಿಯಲ್ಲಿನ ಮುಗ್ಧತೆ, ಪ್ರಾಮಾಣಿಕತೆ, ಏಕಾಕಿತನವೆಲ್ಲ ಅವನಿಗೆ ಹೊಸ ಅರ್ಥಗಳೊಂದಿಗೆ ಗೋಚರವಾಗತೊಡಗಿ ಗೊಂದಲದಲ್ಲಿ ಅವಳೇ ಹುಟ್ಟಿಹಾಕಿಕೊಂಡಿದ್ದ ವಿಪರ್ಯಾಸಗಳನ್ನೆಲ್ಲ ಬದಿಗೊತ್ತಿ ಅವನು ಭಾವುಕನಾದ.

ಆಗ ಅವನಿಗೆ ಕಾಣಿಸಿದ್ದು- ಶ್ರದ್ಧೆ ಹುಟ್ಟಿಕೊಳ್ಳುವ ಮುನ್ನದ ಪೂರ್ವಾವಸ್ಥೆಯಾದ ಗೊಂದಲಗಳು.. ಆಲೋಚಿಸುತ್ತಲೇ ನಿರ್ಣಯ ಏನಾಗಬಹುದು ಎಂಬ ಕುತೂಹಲಕ್ಕೆ ಸಿಕ್ಕಿಕೊಂಡ.

ಬೆರಗಿನಿಂದ ನೋಡುತ್ತಿದ್ದ ಅವನ ಕಣ್ಣುಗಳಿಗೆ ಅವಳು ಹಿರಿಯವಳಾಗಿ ಅವನು ಕುಗ್ಗತೊಡಗಿದ್ದ.  ಆದರೂ ಅವಳು ಹೋಗದೆ ಇದ್ದರೆ ಎಷ್ಟು ಚೆಂದವಲ್ಲವೆ. ಹೀಗೆಯೆ ಇವಳು ಮಾತನಾಡುತ್ತಿದ್ದರೆ ಎಷ್ಟು ಚೆಂದವಲ್ಲವೆ ಎಂದನ್ನಿಸ ತೊಡಗಿ ಹೋಗಿಯೇ ಬಿಡುತ್ತಾಳೆ ಎಂಬ ಆತಂಕವೂ ಅಧಿಕವಾಗಿ "ಹೋಗ್ಬೇಡಾ" ಎಂದು ಚೀರಬೇಕನ್ನನಿಸಿತು. ಅವನಿಗೆ ಆ ಸ್ವಾತಂತ್ರ್ಯವೂ ಇಲ್ಲ. ಆತ್ಮೀಯತೆ- ಸಲಿಗೆಗಳೂ ಸೋಗಾಗಿಬಿಡುವ ಅಸಹ್ಯ ಚೀರಾಟ, ಒಳಗೇ ಹುತು ಹೋಗಿ ಗೊಗ್ಗರು ಧ್ವನಿ ಹೊರಡತೊಡಗಿ ಜೋಕರ್ ಆದ, ‘ಪಾಪ’ ಎಂದು ಕಣ್ಣು ಆಡತೊಡಗಿದಂತೆ ಭಾಸವಾಗಿ ನಿಲ್ಲಿಸಿ ಎಂದು ಚೀರಬೇಕನ್ನಿಸಿತು. ಸಾಧ್ಯವಾಗದೆ ಹೋಯಿತು.

ಕಾಲೇಜಿಗೆ ಸಣ್ಣ ಬ್ರೀಫ್ ಕೇಸಿನೊಂದಿಗೆ ಬಂದಿದ್ದಳು.  ಅಂದಿನ ಕೆಲಸ ಮುಗಿಸಿ ನೇರ ಸ್ಟೇಷನ್‌ಗೆ ಅಲ್ಲಿಂದ ಬೆಳಗಾಂಗೆ ಪ್ರಯಾಣ.

"ಸ್ಟೇಷನ್‌ಗೆ ನಾನು ಬರಲ..?" - ಕೇಳಿದ.
"ಬೇಡ , ನಾನು ನೇರ ಸ್ಟೇಷನ್‌ಗೆ ಹೋಗ್ತಾ ಇಲ್ಲ"

ಅವಳು ಬ್ರೀಫ್‌ಕೇಸ್ ಹಿಡಿದು ಹೊರಟಾಗ:

"ನನ್ನನ್ನ ಸೀರಿಯಸ್ಸಾಗಿ ತೊಗೋಬೇಡ.."

ಅವಳು ಬೇರೆ ಜನರ ನಡುವೆ ಮರೆಯಾಗುತ್ತಲೆ ಇವನೂ ಬೇರೆಯವರ ತೆಕ್ಕೆಗೆ ಬಿದ್ದ.  ಅಷ್ಟು ಜನರ ನಡುವೆಯೂ ಏಕಸಕಿತನ ಖಾಲಿ ಖಾಲಿ.  ಕಾಫಿ ತಿಂಡಿ ಮಾತುಗಳಲ್ಲಿ ತೊಡಗಿಸಿಕೊಳ್ಳಲಾಗದ ಒಳ ಚೀರಾಟ.

ಸ್ಟೇಷನ್‌ಗೆ ಹೋಗಲೋ ಬೇಡವೋ- ಸಂದಿಗ್ಧದ ನಡುವೆಯೇ ಅಂತೂ ಹೋಗಬೇಕೆಂಬ ಹಠ ಬೆಳೆದು ಜಿಟಿಜಿಟಿ ಮಳೆಯ ನಡುವೆಯೇ ಹೊರಟ.  ಟ್ರೈನು ಹೊರಡುವುದಕ್ಕೆ ಇನ್ನೂ ಬಹಳ ಸಮಯವಿತ್ತು. ಬಂದಿರಲಾರಳೆ?  ಹುಡುಕಿದ.  ಶಬರಿಮಲೈಗೆ ಹೊರಟಿದ್ದ ದೊಡ್ಡ ಗುಂಪೊಂದರ ಮಧ್ಯೆ ಅವಳು ಕಾಣಿಸಲಿಲ್ಲ.  ಬದಲಿಗೆ ಮುರುಗೇಸನ್ ಕಂಡ.  ಮುರುಗೇಸನ್‌ಗೂ ಇವನನ್ನು ಕಂಡು ಸೋಜಿಗ.  ದಡ ದಡ ಹೆಜ್ಜೆ ಹಾಕುತ್ತ ಅದೇ ಹಳೆ ಪ್ರೀತಿಯನ್ನು ಜಿನುಗಿಸಿ-

"ಏನ್ಗುರೂ ಸ್ಟೇಷನ್‌ನಲ್ಲಿ..?" - ತಮಿಳಿನಲ್ಲಿ.
"ಮುರುಗೇಸಾ ಏನೋ ಇದು- ಶಬರಿಮಲೈಗೆ ಹೊರಟಿದ್ದೀಯ..?"
"ಹೂಂ..ಎಂಟನೆ ವರ್ಷ...ನಿನ್ನನ್ನ ನೋಡಿ ಎಷ್ಟು ವರ್ಷಗಳಾಗೋಯ್ತು..!  ನಿನ್ನ ಕತೇನೆಲ್ಲಾ ಒದ್ತಾ ಇರ್‍ತೀನಿ."
"ಅದ್ಸರಿ ಈಗೇನ್ಮಾಡ್ತಾ ಇದ್ದೀಯ?"

"ಬಿನ್ನಿ ಮಿಲ್ಸ್ ಹತ್ತಿರ ಸಣ್ಣ ಹೊಟೆಲ್ ಇಟ್ಟೀದೀನಿ ಹೆಂಡ್ತಿ, ಅವಳ ತಮ್ಮ ಎಲ್ರೂ ಹೋಟೆಲ್ ನಡ್ಸೋಕ್ ಸಹಾಯ ಮಾಡ್ತಾರೆ.  ಊಟ ತಿಂಡಿ ಬಾಡಿಗೆಗೇನೂ ಕೊರತೆ ಇಲ್ಲ. ಅದೇ, ಬೆಂಗಳೂರ್ ಯೂನಿವರ್ಸಿಟಿ ಕ್ಯಾಂಟೀನ್‌ನಲ್ಲಿ ಸಪ್ಲಯರ್ ಆಗಿದ್ದಾಗ ಎಷ್ಟು ಸಂತೋಷವಾಗಿದ್ನೋ ಅಷ್ಟೆ ಸಂತೋಷವಾಗಿದೀನಿ.  ನೀನು ಕಾಮತ್ ಹೋಟ್ಲು ಬಿಟ್ಟು ಸಪ್ಲಯರ್ ಕೆಲಸ ಬಿಟ್ಟು ದೊಡ್ಡೋನಾಗಿದ್ದೀ. ನೀನು ಹ್ಯಾಗಿದ್ದೀ?"
"ಏನೋ ಇದೀನಿ.  ನಾನೂ ನೀನು ಟಿಪ್ಸ್ ಕಾಸೆಲ್ಲಾ ಕೂಡಿಹಾಕಿ ಎಂಜಿ‌ಆರ್ ಸಿನಿಮಾ ನೋಡ್ತಿದ್ದು ಜ್ಞಾಪ್ಕ ಇದ್ಯ?"
"ಇಲ್ದೇ ಏನು ಗುರು, ನಿನ್ನ ಜತೆ ಸಿನಿಮಾ ನೋಡ್ಬೇಕೂಂತ ಆವಾಗಾವಗ್ ಅನ್ಸುತ್ತೆ.  ನಾನು ಮಲೈನಿಂದ ವಾಪಸ್ ಬಂದ್ಮೇಲೆ ತಿರ್‍ಗಾ ಹೋಗೋಣ.  ದರಿದ್ರ ಟಿಪ್ಸ್ ಕಾಸು ಬೇಡ.  ನಂದೆ ಕಾಸು.  ಏನಂತೀಯ?"

- ಮುರುಗೇಸನ ಮಾತುಗಳನ್ನ ಮತ್ಸರದಿಂದ ಕೇಳುತ್ತಾ ನಿಂತಾಗ ಒಳಗೆ ಖಾಲಿ ಖಾಲಿ- ಬಿಕ್ಕಿ ಬಿಕ್ಕಿ ಅಳಬೇಕನ್ನಿಸಿತು.  ಅವಳು ಹೋಗುತ್ತಾಳೆ ಎಂಬ ವ್ಯಥೆಗೋ ಅಥವ ಮುರುಗೇಸನಂತ ಪ್ರೀತಿಯ ಒಡನಾಡಿ ಸಿಕ್ಕಿದ ಸಂತೋಷಕ್ಕೋ?  ಗೊತ್ತಿಲ್ಲ.

"ಸಿಗರೇಟು ಸೇದ್ತೀಯೇನೊ?"
"ಬೀಡಿ ಗುರು, ಆದರೆ ಈಗ ವ್ರತ ಹಿಡಿದ್ದೀನಲ್ಲ....ಆಗಲ್ಲ.  ಗುರುಚಾಮಿ ಕರೀತಾ ಅವ್ರೆ. ಬಂದ್ಮೇಲೆ ಸಿಗ್ತೀನಿ."

ಮುರುಗೇಸ ಹೊರಟ. ಅವನ ಗುಂಪು- ಸ್ಥಳ ಬದಲಾಯಿಸುವುದನ್ನು ಇವನು ನೋಡುತ್ತಾ ನಿಂತ.  ಖಾಲಿ ಖಾಲಿ.  ಸಿಗರೇಟಿನ ಮೇಲೆ ಸಿಗರೇಟನ್ನ ಸುಟ್ಟ.  ಅವಳು ಬಂದಿರುತ್ತಾಳೇನೊ ಎಂದು ಹುಡುಕಲಾರಂಭಿಸಿದ.  ದೊಡ್ಡ ಉದ್ದದ ಟ್ರೈನಿನ ಪ್ರತಿಯೊಂದು ಬೋಗಿಯನ್ನೂ ಜಾಲಾಡಿದ.  ಕಾಣಿಸಲಿಲ್ಲ.  ತಟಕ್ಕನೆ ತಲೆ ಮೇಲೊಂದು ಏಟು ಬಿತ್ತು! ಹಿಂದಕ್ಕೆ ತಿರುಗಿದ- "ಏನೋ" ಎಂದು ಮುಗುಳ್ನಕ್ಕಳು!  ಟ್ರೈನೂ ಹೊರಡುವುದಕ್ಕೆ ಐದು ನಿಮಿಷಗಳಷ್ಟೆ ಇತ್ತು.

"ಒಂದನ್ನು ಹೇಳ್ಬೇಕೂಂತನ್ನಿಸ್ತು. ಬಂದೆ. ಹೇಳದೆ ಹೋಗಿದ್ದಿದ್ದರೆ ನಿದ್ದೆ ಬರ್‍ತಿರಲಿಲ್ಲ."

ತಟಕ್ಕನೆ ಅವನ ಎದುರಿಗೆ ಅರ್ಧ ಅಡಿಯೂ ಇರಲಿಲ್ಲ ಅಷ್ಟು ಸಮೀಪ ಬಂದು ನಿಂತು ಕಣ್ಣುಗಳಲ್ಲಿ ಜೀವಧ್ವನಿಯನ್ನು ತುಂಬಿಕೊಂಡು ಈಗಲಾದರೂ ಹೇಳುತ್ತಾನೆ- "ಏನದು? ಏನು ಹೇಳೋ.." ಎಂದು ಕೇಳಿದಳು.

ಅವಳನ್ನೇ ನೋಡುತ್ತಾ - ಆಕಾರವನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಂಡು ಅದರ ಬೆರಗಿನಲ್ಲಿ ಮೈಮರೆತು-

ಮರೆತು ಹೋದಾತು- ಹೇಳಿಯೇ ಬಿಡಬೇಕು ಎಂದು ಅನ್ನಿಸಿ ರಿಹರ್ಸಲ್ ಮಾಡಿಕೊಂಡು ಬಂದಿದ್ದ ಸಾಲುಗಳನ್ನು ಸಕಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಹೇಳಿದ-

"ನಾನು ಯಾವಾಗ್ಲಾದ್ರೂ ನೀನು ಹೋಗ್ಬೇಡಾ ಅಂತ ಹೇಳಿದ್ರೆ ಮರೆತು ಬಿಡು. ನೀನು ಹೋಗ್ಬೇಕೂಂತಿದ್ರೆ, ನಿರ್ಧಾರ ಅಚಲವಾಗಿದ್ರೆ ಸ್ನೇಹದ ಹೆಸರಿನಲ್ಲಿ ನಿರ್ಧಾರದ ಅಚಲತೆಯ ಶಕ್ತಿಹರಣ ಮಾಡೋದು ತಪ್ಪು.."

ಟ್ರೈನು ಹೊರಡುವ ಸೂಚನೆ ಕಾಣಿಸಿಕೊಡು ಲಗುಬಗೆಯಿಂದ ಅವಳು ಹತ್ತಿ ತನ್ನ ಸೀಟಿನಲ್ಲಿ ಕುಳಿತಿರಬೇಕು. ಕಿಟಕಿಯಲ್ಲೂ ಕಾಣಿಸಲಿಲ್ಲ.

ಕೈ ಬೀಸಲಿಲ್ಲ. ಅವನು ಪೆಚ್ಚು ಮುಖ ಹಾಕಿಕೊಂಡು ಒಂದೆರಡು ಸಿಗರೇಟು ಸುಟ್ಟು ಏನನ್ನೋ ಯೋಚಿಸಿದವನಂತೆ ಕರಿಮುಂಡು ಅಂಗಿಗಳಲ್ಲಿ, ಗುಂಪು ಗುಂಪಾಗಿ ನಿಂತಿದ್ದ ಯಾತ್ರಿಕರ ನಡುವೆ ಕರಗಿದ. ಅವನ ಮನಸ್ಸು ತುಟಿಗಳು ಒಂದಾಗಿ ಹಳೆ ಎಂಜಿ‌ಆರ್ ಚಿತ್ರದ ಹಾಡೊಂದನ್ನು ಗುಣಗುಣಿಸುತ್ತಿತ್ತು.

ವಾಳ್ಕೈ ಎನ್ರೊರು ಪಯಣತ್ತಿಲೆ
ಪಲರ್ ವರುವಾರ್ ಪೋವಾರ್ ಭೂಮಿಯಿಲೆ
ವಾನತ್ತು ನಿಲವಾಯ್ ಸಿಲರಿರುಪ್ಪಾರ್
ಅಂದ ವರಿಸೈಯಿಲ್ ಮುದಲ್ವನ್ ತೊಳಿಲಾಳಿ.

ಜೊತೆಗೆ ಮನಸ್ಸಿನಲ್ಲಿ ಅಚ್ಚಾಗಿ ಹೋಗಿದ್ದ ಆಕಾರ ಮತ್ತಷ್ಟು ತುಂಬಿಬಂದಂತಾಗಿ

ಅವಿದ್ಯಾನಾಮಂತಸ್ತಿಮಿರಮಿಹಿರ ದ್ವೀಪನಗರಿ
ಜಡಾನಾಂ ಚೈತನ್ಯಸ್ತಬಕ ಮಕರಂದ ಸ್ರುತಿಝರಿ
ದರಿದ್ರಾನಾಂ ಚಿಂತಾಮಣಿ ಗುಣನಿಕಾ ಜನ್ಮಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪು ವರಾಹಸ್ಯ ಭವತಿ

ಜೊತೆಗೆ-
ಓಂ-ಹರಿಃ ಓಂ-ಚತುಸ್ಸಾಗರ ಪರ್‍ಯಂತಂ
ಆತ್ರೇಯ ಗೋತ್ರಸ್ಯ ಋಗ್‌ಶಾಖಾಧ್ಯಾಯಿ
ಸೋಮಶೇಖರ ಶರ್ಮನ್
ಅಹಂಬೋ ಅಭಿವಾದಯೇ.."


ಬರುತ್ತಾಳೋ ಬರುವುದಿಲ್ಲವೋ- ಬಂದರೂ ಚೆನ್ನ- ಬರದಿದ್ದರೂ ಚೆನ್ನ
ಅವಳು ಬರದೆ ಇದ್ದರೆ- ಪತ್ರ ಒಂದನ್ನು ಬರೆದ-
ಒಂದೇ ಒಂದು ಸಾಲಿನ ಪತ್ರ:

‘ಕ್ಷಮಿಸು, ನಿನ್ನನ್ನು ತಬ್ಬಿಕೊಂಡದ್ದಕ್ಕೆ-ವಾಸ್ತವವಾಗಿ ತಬ್ಬಿಕೊಳ್ಳದ್ದಕ್ಕೆ’ ಕಂಗಾಲಾದ.
         *****

ಕೀಲಿಕರಣ: ಶೇಖರ್‌ಪೂರ್ಣ
ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ಅದ್ವೈತ

- ಶೇಖರ್‌ಪೂರ್ಣ

        ಭಾಗ-೧
ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ.  ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ.  ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು.  ಸಾಹಸಿಸಿದರೆ ಎಡವುವುದು ಸಹಜ.  ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ] ನಡುವೆ ಸಂವಹನ ಕುಸಿದು ಬೀಳುತ್ತದೆ.  ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ - ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ.  ಶಂಕೆಯಂತೂ ಇದ್ದೇ ಇದೆ.  ನಾನು ಹೇಳಿದ ರೀತಿಯಲ್ಲೆ ಆಗಿರಬಹುದು.  ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ.

ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ-
"ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ.  ಸಿಂಗಲ್ ಹ್ಯಾಂಡ್.  ಬೇರೆ ಯಾರ ಕೈಗೂ ಕೊಡೋಲ್ಲ."
ನನ್ನ ಬಳಿಯೂ ಒಂದು ಮೊಪೆಡ್ ಇದೆ.  ೧೯೮೫ರ ಮಾಡೆಲ್‌ನದು.  ಎಲ್ಲರೂ ಉಪಯೋಗಿಸುತ್ತಾರೆ!
ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ.  ಈಗೀಗ ಬಹಳ ಜನ ಹೇಳುತ್ತಾರೆ- "ಗುಜರಿಗಾಕೋ".  "ಬೀಗ ಬೇರೆ ಯಾಕಾಕ್ತೀಯ?  ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ" -
"ಸ್ಕ್ರಾಪ್ ಇಟ್, ಸೆಂಡ್ ಇಟ್ ಟು ಸಾಲ್ವೇಜ್" - ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ.  ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ.  ಅವಮಾನವೂ ಇಲ್ಲ.  ನಕ್ಕುಬಿಡುತ್ತೇನೆ.  ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ, "ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ..." ಇವಳಿಗೂ ಅರ್ಥವಾಗುವುದಿಲ್ಲ.  ಕ್ಷಮೆ ಇರಲಿ!
ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ.  ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ.  ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ.  ಖಾತ್ರಿಯೂ ಇಲ್ಲ.  ಷುಡ್ ಐ ಕೇರ್?  ಉದ್ಧಟತನಕ್ಕೆ ಕ್ಷಮೆ ಇರಲಿ. 

ಒಂದ್ಸಾರಿ ಏನಾಯ್ತೂಂದರೆ:
ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು.  ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು.  - ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು.  ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ;
"ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ."
ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ.  ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ.  ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ.  ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್.  ಸುಮಾರು ೧೩೦ ಕಿ.ಮೀ ಇಬ್ಬರನ್ನು ಹೊತ್ತು ತಂದಿತ್ತು!

ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು.  ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು.  ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು.  ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ.  ಒಳ್ಳೆಯ ಹಿಡಿತವೂ ಇತ್ತು.  ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ’ ಗೆ ಹುಡುಕಿದೆ.  ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ.  ಸುಬ್ಬ ಸ್ವಲ್ಪ ದೂರ ಓಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. 

ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ.  ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು.

ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ.  ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ.  ಇಳುಕಲಿನ ತಿರುವು ಹಾದಿ.  ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ.  ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು.  ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ.  ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦ ಕಿ.ಮೀ. ವೇಗ.  ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು.  ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ!

ಮತ್ತೆ ಇಳುಕಲಿನಲ್ಲಿ ಹೊರಟೆವು.  ವೇಗವೋ ವೇಗ.  ಬ್ರೇಕ್ ಹಾಕಿದೆ.  ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು.  ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು.  ಬಲಗಡೆಗೆ ಆಳವಾದ ಕಮರಿ.  ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ- "ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು" - ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು.  ಕೂತೆ ಇದ್ದ.  ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ.  ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ.ಮೀ ವೇಗದಲ್ಲಿ ೧೭೦ ಕೆ.ಜಿ ತೂಕದ ನಾವುಗಳು ಬಿದ್ದೆವು.  ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ.  ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ.  ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು.  ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. 

ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ - ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು "ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ" ಬೇಡಿದ.  ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ.  ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು.  ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು.  ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. 

ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ.  ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು.  ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ.  ಅರ್ಥವಾಗುತ್ತಾ, ನಿಮಗೆ?

        ಭಾಗ-೨
ಶಿವಾ.  .  .  .  .
ನೀವು ಅವನನ್ನು ನೋಡಬೇಕು.  ಕಪ್ಪು ಬಣ್ಣದ ತಮಿಳಿನವ.  ಕಪ್ಪಾದ ಮೈಗೆಲ್ಲಾ ಗ್ರೀಸು.  ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ.  ೧೮-೨೦ ವರ್ಷದವ.  ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ.  ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು.  ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು.  ಸ್ಪಾನರ್, ಸ್ಕ್ರೂ ಡ್ರೈವರ್, ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು.  ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು..  ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ! "ಏನಯ್ಯ?"  ಎಂದರೆ "ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ." ಎಂದು ಹಲ್ಕಿರಿದಿದ್ದ.  ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ.  ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ.  ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ.  ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್’ ಎಂಬಂತೆ ಗಾಯ ಮಾಗಿಹೋಗಿತ್ತು!

ಕೆಲಸದಲ್ಲಿ ಅವನಿಗೆ ಎಂತದೋ ಖುಶಿ.  ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ.  ಬೇರೇನೋ ತೆರೆನಾದ ಖುಷಿ.  ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ.  ಅದರಲ್ಲೇ ಮಗ್ನಗೊಂಡ ಖುಷಿ.  ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ.  ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು.  ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ.  ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ.  ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. 

ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. 

ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. 

ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು.  ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ.  ಗಾಡಿ - ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ "ತನ್ರಿ ಹಾಕ್ಕೊಡ್ತೀನಿ".  ಶಿವ ಎಂದೂ ಹಾಗೆ ಇರುತ್ತಿರಲಿಲ್ಲ.  ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ.  ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ.  ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. 

ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ.  ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ.  ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು.  ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ.  ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ.  ಖಿನ್ನನಾಗಿರುತ್ತಿದ್ದ ಆಷ್ಟೆ.  ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ.  ಒಳಗೆ ಎಂಥದೋ ಖುಷಿಯಾಗುತ್ತಿತ್ತು.  ಆದರೆ ಅವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ.... 
*
*
*
ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು.  ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ.  ನಿತ್ರಾಣವಾಗಿಹೋಗಿತ್ತು.  ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ.  ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. 

ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ.  ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. 

ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲು ತೀರ್ಮಾನಿಸಿದ್ದೆ.  ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ!

ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು.  ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. 

ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು.  ಹೊರಟೆ. 
*
*
*
ಮುರುಕಲು ಕುರ್ಚಿ ಮೇಲೆ ಕೂತಿದ್ದ.  ಸಪ್ಪಗಿದ್ದ.  ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. 
"ಏನಣ್ಣಾ.." - ಅದೇ ವಿನಯ. 
"ಗಾಡಿ ಪಿಕಪ್ ಇಲ್ಲ.  ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು.  ಡೀಕಾರ್ಬನ್ ಮಾಡಿಸಿಯಾಯ್ತು.  ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ..."
"ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ.. 
"ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ." ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ...."
ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ.  ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು.  ಆದರೂ ಶಿವನ ಮೇಲೆ ನಂಬಿಕೆಯಿತ್ತು. 

ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ.  ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು!
"ಏನೋ ಅದು?"
"ಕಲ್ಲೇಟು ಬಿತ್ತು ಸಾರ್.  ಜೊತೆಗೆ ಕೀವು ರಕ್ತ."
"ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ.  ನಾನು ಬಹಳ ಹೊತ್ತು ಜೊತೆಗಿದ್ದೆ.  ಏನೋ ಖುಷಿ ಖುಷಿ.  ಅವನಿಗೂ ಹಾಗೆಯೇ ಇರಬೇಕು. 
"ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?"
- ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. 
"ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ.."
ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು.  ನನ್ನ ಕಣ್ಣುಗಳು ಸಹ ಅರಳಿದ್ದವು. 
*
*
*
ಮಾರನೆ ದಿನ ಗಾಡಿ ತಯಾರಾಗಿತ್ತು.  ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ
"ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ"- ಎಂದ. 
ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು.  ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. 
"ಪ್ಯಾಂಟು ಮೇಲೆತ್ತು." ಎಂದೆ.  ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ.  ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು.  ಕೊಳಕೊಳ ಬಿಗಿದುಕೊಂಡಂತೆ.  ಶವದ ಕಾಲಿನಂತೆ.  ನೋಡಿ ದಂಗಾದೆ. 
"ವಿಪರೀತ ನೋಯುತ್ತೆ, ಸಾರ್."
"ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ..."
ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ.  ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು.  ನನಗೋ ಖುಷಿಯಾಯಾಯಿತು.  ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ.  ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ.  ಏನನ್ನೋ ಸಾಧಿಸಿದ ತೃಪ್ತಿ ಇತ್ತು. 
ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. 
ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. 
*
*
*
ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು, ಸುಖದಲ್ಲಿದ್ದೆ.  ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. 

ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು.  ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ.  ಸಂದರ್ಭವೂ ದೊರೆಯಲಿಲ್ಲ. 

ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ.  ನಿರಿಕ್ಷಿಸಿಯೇ ಇರಲಿಲ್ಲ.  ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ.  ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ.  ಆದರೂ ಕೇಳಿದಾಗ:
"ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ.  ಅಡ್ಮಿಟ್ ಮಾಡ್ಕೊಂಡ್ರು.  ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು.  ಇವತ್ತೇನೆ ಬಂದಿದ್ದು.  ಬಂದೋನು ಇಲ್ಲಿಗೆ ಬಂದ್ಬಿಟ್ಟೆ.  ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ.  ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ..."
- ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ.  ನೀರಿರಲಿಲ್ಲ.  ಬದಲಿಗೆ ಮಿನುಗುತ್ತಿದ್ದವು. 
*
*
*
ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು.  ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ-
"ಏನ್ಸಾರ್, ನಡ್ಕೊಂಡು ಬರ್ತಿದೀರ..?"
"ಗಾಡಿ ಮಾರ್ಬಿಟ್ಟೆ ಕಣೋ...." ಅವನಿಗೆ ಅರ್ಥವಾಗಿತ್ತು.  ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ.
"ಎಷ್ಟಕ್ಕೆ ಮಾರಿದ್ರಿ ಸಾರ್?"
"ಒಂದೂ ಕಾಲು ಸಾವಿರಕ್ಕೆ.."
"ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್..."
"ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು."
"ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್"- ನನಗೂ ಅರ್ಥವಾಯಿತು!
ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. 
ಬಸ್ಸು ಬಂತು.  ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವನನ್ನು ನೋಡಿ ಕೂಗಿಕೊಂಡೆ-
"ಬರ್ತೀನೊ ಶಿವಾ, ಸಿಕ್ತೀನಿ..."
ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ!
              *****

ಕೀಲಿಕರಣ: ಶೇಖರ್‌ಪೂರ್ಣ

ಮನ್ನಿ

- ಶೇಖರ್‌ಪೂರ್ಣ

ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ ಸಂದರ್ಭದಲ್ಲಿ ನಮ್ಮೆಲ್ಲಾ ಸಂವೇದನೆಗಳು ಕನ್ನಡೀಕರಣಗೊಂಡಿರಬೇಕೆ ಹೊರತು ಅನ್ಯಭಾಷಾ ಲಕ್ಷಣದ ಉದ್ಗಾರಕ್ಕೂ ಅವಕಾಶವಿಲ್ಲ.

ಆ ಕಿಟಕೀನ ತೆಗೆಯೋ ಅವಕಾಶವೇ ಬಹಳ ಕಡಿಮೆ. ರಾಮನವಮಿ, ಗಣೇಶೋತ್ಸವ, ತಿರುಪ್ಪಾವೈ, ಕನ್ನಡ ರಾಜ್ಯೋತ್ಸವ ಇತರೆ ಸಾರ್ವಜನಿಕ ಮೈಕಾಸುರರ ಹಾವಳಿಯಿಂದಾಗಿ ಅದನ್ನು ತೆಗೆಯೋದು ಅಪರೂಪ.ಅಪರೂಪಕ್ಕೊಮ್ಮೆ ತನ್ನನ್ನು ಬಿಚ್ಚಿಕೊಂಡು ಅಷ್ಟೋ ಇಷ್ಟೋ ಬಾಹ್ಯ ಸಂಪರ್ಕ ಕಲ್ಪಿಸೋ, ತಂಪುಗಾಳಿಯನ್ನು ಒಳಕ್ಕೆ ನೂಕುವ ಅದನ್ನು ನಾನು ಪ್ರೀತಿಸೋದು ಅಸಹಜವೇನೂ ಅಲ್ಲ. ಜಸ್ಟ್ ಸಿಂಪ್ಲಿ ಐ ಲವ್ ಇಟ್.

ಕಿಟಕಿ ತೆಗೆದೊಡನೆ ಕಣ್ಣಿಗೆ ಪಚ್ಚೆಂದು ಹೊಡೆಯುವುದು :

೧. ರಸ್ತೆ.
೨ . ರಸ್ತೆಗಂಟಿಕೊಂಡಿರುವ ವಠಾರ.
೩. ವಠಾರಕ್ಕೆ ಅಂಟಿಕೊಂಡಿರುವ ಪೆಟ್ಟಿಗೆ ಅಂಗಡಿ.



ವಠಾರದಲ್ಲಿ ಒಟ್ಟು ಹದಿನೆಂಟು ಮನೆಗಳಿವೆ. ಬಹುತೇಕ ವಿವಿಧ ಪ್ರಬೇಧಗಳು ಅಂದರೆ ಮಧ್ವ, ಮುರುಕನಾಡು, ಅಯ್ಯಂಗಾರ್, ಅಯ್ಯರ್ ಹೀಗೆ ಅನೇಕ ಪ್ರಬೇಧ ಸೇರಿದ ಬ್ರಾಹ್ಮಣ ಮತಸ್ಥರೆ ಜಾಸ್ತಿ. ನಾನು ಈ ವಠಾರದ ಎದುರಿಗಿನ ಮಾಡಿ ಮೇಲಿನ ಇಪ್ಪತ್ತು ಇಂಟೂ ಹದಿನೈದು ಕೋಣೆ ಹಿಡಿದಿದ್ದೀನಿ. ಹಿಡಿದೊಡನೆಯೆ ನನಗು ಆ ಕಿಟಕಿಗೂ ಲವ್. ಬೇರೇನೂ ಮಾಡಲಾಗದಂತೆ ಸೆಳೆದಿಟ್ಟಿರುವ ಆ ಕಿಟಕಿಯಿಂದ ನೋಡಿದರೆ , ಆ ಹದಿನೆಂಟು ಮನೆಗಳ ಇತಿಹಾಸ ಬರೆಯುವಷ್ಟು ಮಾಹಿತಿಯೇನೊ ದಕ್ಕುತ್ತದೆ. ಆದರೇನು ಮಾಡಲಿ, ನಾನು ಆ ಕಿಟಕಿ ತೆಗೆಯೋಕ್ಕೆ ಹಾವಳಿಮುಕ್ತವಾಗಿ ಇರೋ ಅವಕಾಶವೇ ಬಹಳ ಕಡಿಮೆ.ಹೋಗಲೀಂದ್ರೆ ನನಗೂ ಬಾಹ್ಯ ಪ್ರಪಂಚಕ್ಕೂ ಸಂಪರ್ಕ ಇಲ್ಲವೆ ಇಲ್ಲಾನ್ನಬಹುದು. ಬ್ರಹ್ಮಚಾರಿ ಶತಮರ್ಕಟ. ಮಾತನಾಡಿದರೆ ಎಲ್ಲಿ ಏನಂಟಿಕೊಳ್ಳುತ್ತದೋ ಏನಾಗಿ ಹೋಗುತ್ತದೊ ಎಂಬಂತ ಅಂಜುಕುಳಿ ಸ್ವಭಾವದ ಮಂದಿಯೇ ಹೆಚ್ಚು. ಆದ್ದರಿಂದಲೇ ನಾನು ಮನುಷ್ಯ ಮುಟ್ಟಿದ ಗುಬ್ಬಿ.

ದಿಟ ಗುಬ್ಬಿಯಂತೆಯೆ ನಾನು ಅಂಜಿಕೊಂಡಿದ್ದೇನೆ. ಗಾಬರಿಯಾಗಿದ್ದೇನೆ. ಸಂಪರ್ಕ, ಸಹವಾಸವಾಗಲಿ ಏನೊಂದೂ ಬೇಡವೇ ಬೇಡ ಎಂಬ ನಿರ್ಧಾರ ಬಹಳ ಗಟ್ಟಿಯಾಗಿದೆ. ಆಫೀಸಾಯ್ತು- ರೂಮಾಯ್ತು-ಕಿಟಕಿಯಾಯ್ತು. ಕಿಟಕಿ ಇಲ್ಲದಿದ್ದರೆ ಹಾಸಿಗೆ - ಪುಸ್ತಕಗಳಾಯ್ತು. ಅಪರೂಪಕ್ಕೊಮ್ಮೆ ಕಾಫಿ ತಿಂಡಿ ಮಾಡಿಕೊಳ್ಳಲು ಬೇಸರವಾಗಿ ವಠಾರದ ಹುಡುಗರನ್ನು ಕರೆದು ಫ್ಲಾಸ್ಕು ಕೊಟ್ಟು ಹೋಟೆಲ್ಲಿಗೆ ಅಟ್ಟುತ್ತೇನೆ. ಆ ಹುಡುಗರೂ ಸಹ " ಮಾಮ" ಕೇಳಿದ್ದನ್ನು ಸಲೀಸಾಗಿ ಮಾಡಿಕೊಡುತ್ತವೆ. ಹಾಗೆ ಮಾಡಿ ಕೊಡೋದಕ್ಕೂ ಆ ಹುಡುಗರ ತಾಯ್ತಂದೆಯರ ವಿರೋಧ. " ಆ ರೂಮಿಗೆ ಹೋಗ್ಬೇಡಾಂತ ನಿನಗೆ ಎಷ್ಟು ಸಲ ಹೇಳೋದು?"ಅಂತ ಮಕ್ಕಳನ್ನ ದಂಡಿಸಿದ ವರದೀನ ಹುಡುಗರೇ ಬಹಳ ಪ್ರಾಂಪ್ಟಾಗಿ ತರ್‍ತಾರೆ. ಹಾಳಾಗಿ ಹೋಗಲೀಂತ ಬಾಹ್ಯ ಸಂಪರ್ಕ ಬೇಡಾಂತ ನಾನು ನನ್ನ ರೂಂನಲ್ಲಿರೋ ವಸ್ತುಗಳನ್ನೆ- ನಿರ್ಜೀವ ವಸ್ತುಗಳನ್ನೇ ಪ್ರೀತಿಸಲಾ‌ಅರಂಭಿಸಿದ್ದೇನೆ. ಅದರಲ್ಲೂ ಐ ಪ್ರಿಫರ್ ಜಸ್ಟ್ ದಿ ಬ್ಲಡಿ ವಿಂಡೋ.

ಹಾಗೆ ಹೇಳೋಕ್ಕೋದರೆ ಈ ಗುಬ್ಬೀನ ಮನುಷ್ಯ ಮುಟ್ಟೇ ಇಲ್ಲ.ಮುಟ್ಟೋಕಿದ್ದಾಗಲೇ ಮುದುಡಿ ಹೋದದ್ದು. ಒಮ್ಮೆ ಏನಾಯ್ತೂಂದರೆ , ಆಫೀಸಿನಿಂದ ಹೀಗೆ ಬರ್‍ತಿದ್ದಾಗ ಈ ವಠಾರದಲ್ಲಿ ಅರವತ್ತು ವರ್ಷಗಳಿಂದ ಸಂಸಾರ ಹೂಡಿರೋ ಚೂಡನಾಥಯ್ಯರ್ ನನ್ನನ್ನು ನೋಡಿದೊಡನೆಯೆ ಕೈಬೀಸಿ ಎತ್ತರದ ಧ್ವನಿಯಲ್ಲಿ " ಬಾರಯ್ಯ ಇಲ್ಲಿ.." ಎಂದು ಕೂಗಿದರು. ಕೂಗಿದ ಧಾಟಿಗೆ ನಾನು ದಿಗ್ಭ್ರಮಿಸಿ ಹೋದೆನಾದರೂ ಮರ್ಯಾದೆಯಿಂದ ಅವರ ಬಳಿ ಹೋಗಿ ನಿಂತೆ.ಎಷ್ಟೇ ಆಗಲಿ ವಯೋವೃದ್ಧರು. ಕನ್ನಡದಲ್ಲಿ ಕಥೆಗಳನ್ನು ಒಂದಾನೊಂದು ಕಾಲದಲ್ಲಿ ಬರೆದು ಅಲ್ಲೊಂದು ಇಲ್ಲೊಂದು ಪ್ರಕಟಿಸಿರೋ ಕಥೆಗಾರರು ಬೇರೆ. ನನ್ನನ್ನು ನಖಶೀಖಾಂತ ನೋಡಿದ ಆತ "ನೀನೆಯೋ ಆ ಮಲಯಾಳಿಗಳ ಮನೆ ಮೇಲಿರೋ ರೂಮಿನಲ್ಲಿರೋನು?" ಎಂದು ಕೇಳಿ ನಾನು ಮತ್ತಷ್ಟು ದಿಗ್ಭ್ರಮಿಸಿ ಹೋಗುವಂತೆ ಮಾಡಿದ್ಡರು. ತಮ್ಮ ಜನಿವಾರದಿಂದ ಬೆನ್ನ ತುರಿಕೆಯನ್ನು ಕಡಿಯುತ್ತಾ, ನಾನು ಹೌದೆಂದ್ದಷ್ಟೇ ಹೇಳಿ ಅಲ್ಲಿ ನಿಲ್ಲದೆ ಹೊರಟು ಬಂದೆ. ಬೆನ್ನ ಹಿಂದೆಯೇ " ಈಗಿನ ಕಾಲದ ಹುಡುಗರು . ಹಿರಿಯರೂಂದರೆ ಭಯ ಭಕ್ತೀನ್ನೋದೆ ಇಲ್ಲ. ಒಬ್ಬಂಟಿ, ಕರೆದು ಮಾತಾಡ್ಸೋಣ ಅಂದರೆ ಧಿಮಾಕು" ಎಂದು ಗೊಣಗಿಕೊಂಡ ಟೀಕೆ ಬಂದಿತ್ತು.

ಹೀಗೆ ಇದೆ ರೀತಿ ಒಬ್ಬರ ಕಾಲನ್ನು ಮತ್ತೊಬ್ಬರು ಕಡಿಯುತ್ತಾ ಕುಳಿತಿರೋದೊ ಅಥವ ಯಾರಾದರೂ ಹೆಂಗಸರು ಬಟ್ಟೆ ಒಗೆಯುತ್ತಲೋ, ಆರ ಹಾಕುತ್ತಲೋ ಅಥವ ಯಾವುದಾದ್ರೂ ಮನೆ ಮಾಮಿಗಳು ಸಂಡಿಗೆ ಒಣ ಹಾಕುತ್ತಲೋ, ಇನ್ನಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಇಲ್ಲವೆ ಮದುವೆ ಮುಂಜಿ ಸಂಭ್ರಮ ಇರುವ ಮಾಮೂಲಿ ದೃಶ್ಯಗಳು ನನ್ನ ಕಿಟಕಿಯಾಚೆ. ದರಿದ್ರ ಎಲ್ಲಾ ಮಾಮೂಲೆ. ಈ ಜಗತ್ತಿನಲ್ಲಿ ಬೇರೇನಾದರೂ ಜರುಗಲು ಸಾಧ್ಯವೆ ಎಂಬ ಉದಾಸೀನದಿಂದಲೂ ನಾನು ಕಿಟಕಿಯನ್ನು ತೆಗೆಯಲು ನಿರಾಕರಿಸಿದ್ದೂ ಉಂಟು.

ನಾನಿರುವ ರೂಮಿನ ಕೇಳಗಡೆ ಮನೆಯಲ್ಲಿರುವಾಕೆ ಒಂದು ದೊಡ್ಡ ಫ್ಯಾಕ್ಟರಿ ಆಸ್ಪತ್ರೆಯಲ್ಲಿ ಡಾಕ್ಟರಾಗಿದ್ದಾರೆ. ಕೇರಳದವರು. ಜೊತೆಯಲ್ಲಿ ಐದು ವರ್ಷದ ಮಗ. ತಾಯಿ-ತಂದೆ ಅಷ್ಟೆ. ಗಂಡ ಇಸ್ರೋದ ವಿಜ್ಞಾನಿ. ಕೊಚ್ಚಿನ್‌ನಲ್ಲಿದ್ದಾರಂತೆ. ವಾರಕ್ಕೊಮ್ಮೆ-ತಿಂಗಳಿಗೊಮ್ಮೆ ಬರುತ್ತಿರುತ್ತಾರಂತೆ. ಆತ ಬಂದಾಗ ಮಾತ್ರ ಆಕೆ ಕಾಣ ಸಿಗುವುದು. ಗಂಡನೊಂದಿಗೆ ಸಿನಿಮಾಕ್ಕೋ ಮತ್ತೊಂದಕ್ಕೋ ಹೋಗುತ್ತಿರುತ್ತಾರೆ. ನಾನು ಅವರನ್ನು ನೋಡಿದೊಡನೆಯೆ ತಲೆ ತಗ್ಗಿಸಿ ಹೊರಟು ಹೋಗುತ್ತಿರುತ್ತೇನೆ. ಎಂದೂ ಅದರ ಬಗೆಗೆ ತಲೆ ಕೆಡಿಸಿಕೊಳ್ಳೋಕ್ಕೆ ಹೋಗಿಲ್ಲ.ಅವರೂ ಅಷ್ಟೆ. ಇದೇ ಬೀದಿಲಿರೋ ನನ್ನ ಸಹೊದ್ಯೋಗಿ ಮಿತ್ರನ ಹೆಂಡತಿಗೂ ಈಕೆಗೂ ಸ್ವಲ್ಪ ಸಂಪರ್ಕ.ಅವರಿಬ್ಬರ ಭೇಟಿಯ ವಿವರಗಳನ್ನು ನನ್ನ ಸಹೊದ್ಯೋಗಿಮಿತ್ರ ಸಂದರ್ಭಾನುಸಾರ ಹೇಳುತ್ತಿರುತ್ತಾನೆ. ಹಾಗೆ ತಿಳಿದು ಬಂದ ವಿವರಗಳೆ ಈಗ ನಾನು ಇಲ್ಲಿ ದಾಖಲಿಸಿರುವುದು. ಸಹೊದ್ಯೋಗಿಮಿತ್ರನ ಹೆಂಡತಿಗೂ ಈಕೆಗೂ ಆಗಾಗ್ಗೆ ಜಗಳವಾದದ್ದೂ ಉಂಟು-ಮನಸ್ತಾಪ ಬೆಳೆದದ್ದೂ ಉಂಟು.

ಈ ಬಾರಿ ಬಹಳ ದಿನಗಳವರೆಗೆ ಕಿಟಕಿಯನ್ನು ಮುಚ್ಚೇ ಇದ್ದೆ. ಒಂದು ದಿನ ಎಲ್ಲವೂ ಶಾಂತವಾಗಿದ್ದಾಗ ಬೆಳ್ಳಂಬೆಳಿಗ್ಗೆ ಚುಮುಚುಮು ಬೆಳಕಿನಲ್ಲಿ ಬಿಸಿ ಬಿಸಿ ಕಾಫಿ ಮಾಡಿ ಕಿಟಕಿ ತೆಗೆದಾಗ ಆಶ್ಚರ್ಯ ಕಾದಿತ್ತು.ಆ ಕತ್ತಲೆಯ ಬೆಳಕಿನಲ್ಲೂ ಸ್ಪಷ್ಟವಿತ್ತು.ಇನ್ನೂ ಬೀದಿ ದೀಪ ಉರಿಯುತ್ತಿತ್ತು.ನಾನಾಕೇನ ಇಲ್ಲಿಯವರೆಗೂ ಕಂಡೇ ಇರಲಿಲ್ಲ. ಆ ಕ್ಷಣ ಯಾರಿರಬಹುದು ಎಂಬ ಕುತೂಹಲ ಹುಟ್ಟಿ ತಕ್ಷಣವೆ ಯಾರಾದರೇನಂತೆ ಎಂಬ ಉದಾಸೀನವೂ ಹುಟ್ಟಿ ಕುತೂಹಲ ಕ್ಷೀಣಿಸಿಹೋಯ್ತು.ಅದರ ಹಿನ್ನೆಲೆಯಲ್ಲಿ ಆಕೆ ಚೂಡನಾಥಯ್ಯರ್‌ರ ಮನೆ ಮುಂದಿನ ಅಂಗೈ ಅಗಲದ ಅಂಗಳವನ್ನು ತೊಳೆದು ರಂಗೋಲಿ ಹಾಕುತ್ತಿದ್ದುದರಿಂದ ಆಕೆ ಚೂಡನಾಥಯ್ಯರ್ ಮನೆಗೆ ಬಂದಿರುವಾಕೆ ಇರಬಹುದೆನ್ನುವ ಅಲ್ಪ ಸಮಾಧಾನಕರ ತೀರ್ಮಾನವೂ ಮೂಡಿಬಂತು.

ಯಾರಿರಬಹುದು?- ಕುತೂಹಲವನ್ನು ಉಪೇಕ್ಷಿಸಿದ ಮಾತ್ರಕ್ಕೆ ಸಾಯುತ್ತದೆಯೆ? ಅಂದು ಸಂಜೆಯೆ ವಠಾರದ ಹುಡುಗರನ್ನ ಹೋಟೆಲ್ಲಿಗೆ ಅಟ್ಟುವ ಮುನ್ನ ಕೇಳಿದೆ:

" ಲೋ, ಚೂಡನಾಥಯ್ಯರ್ ಮನೆಗೆ ಹೊಸದಾಗಿ ಬಂದಿದ್ದಾರಲ್ಲ, ಯಾರೋ ಅದು?"

" ಅಂದರೆ ..?"- ಮುಗ್ಧವಾದ ಪ್ರತಿ ಪ್ರಶ್ನೆ.

"ಹೆಂಗಸು..ಹೊಸದಾಗಿ ಬಂದಿದ್ದಾರಲ್ಲ.."

" ಅವರಾ..ಅವರು ಮನ್ನಿ.."

"ಮನ್ನಿ ಅಂದರೆ?"

"ಮನ್ನಿ ಅಂದರೆ ಮನ್ನಿ. ಅವರು ಆಗಲೆ ಬಂದು ಬಹಳ ದಿನಗಳಾದವು...."

- ಇನ್ನೂ ಹೆಚ್ಚಿಗೆ ತೋಡಿದರೆ ಹುಡುಗನಿಗೆ ಅವನ ತಾಯ್ತಂದೆಯರು ನನ್ನ ವಿರುದ್ಧ ನೀಡಿರುವ ಎಚ್ಚರಿಕೆಯನ್ನ ತೀವ್ರಗೊಳಿಸಿದಂತಾಗುತ್ತದೆ ಎಂದು ನಾನು ಸುಮ್ಮನಾಗಿ ಹುಡುಗನನ್ನು ಹೋಟೆಲ್ಲಿಗೆ ಅಟ್ಟಿದೆ.

ಇನ್ನೊಂದು ದಿನ, ಇನ್ನೂ ಚಿಕ್ಕ ಹುಡುಗನಿಗೆ ಕಾಫಿ ಯಾತ್ರೆಗೆ ಕಳಿಸುವ ಮುನ್ನ ಇನ್ನಷ್ಟು ಮಾಹಿತಿ ಗಿಟ್ಟಿಸಿದ್ದರಲ್ಲಿ- ಆಕೆ ಚೂಡನಾಥಯ್ಯರ್‌ರ ಸೊಸೆ ಎಂದು ತಿಳಿದು ಬಂತು. ಚೂಡನಾಥಯ್ಯರ್‌ರ ಮಗ ವೈದ್ಯನಾಥನ್ ಸಹ ಅಪ್ಪನಷ್ಟಲ್ಲದಿದ್ದರೂ ಸ್ವಲ್ಪ ಅಹಂಕಾರಿಯೇ ಎಂದನ್ನಬಹುದು. ಯಾವುದೋ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಅವನು ಸ್ಕೂಟರಿನಲ್ಲಿ ಹೋಗುವಾಗ ನಾನು ಎದುರಾದರೆ ಕಡೇಪಕ್ಷ ಮುಗುಳ್ನಗೆಯಾದರೂ ನಗುತ್ತಿದ್ದ. ಆಪ್ಪನಂತೆ ಗಂಟು ಮುಖದವನಲ್ಲ. ನನ್ನ ಅವನ ಸಂಬಂಧ ಆ ಮುಗುಳ್ನಗೆಯ ಮಿತಿಯಾಚೆ ಬೆಳೆಯಲೇ ಇಲ್ಲ.

ಒಂದು ದಿನ ವಠಾರದ ತಲೆ ಬಾಗಿಲಿನಲ್ಲಿ ಆಕೆ ಬೇರೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದುದ್ಡು, ನಾನು ಲಬ್ಬೆಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಳ್ಳುತ್ತಿದ್ದಾಗ ಕಾಣಿಸಿತು. ಸ್ವಲ್ಪ ಹತ್ತಿರದಿಂದ ನೋಡುವ ಎಂದು ಹೆಜ್ಜೆ ಹಾಕುತ್ತಿದ್ದಂತೆಯೆ, ನನಗೆ ಹೆಸರು ಗೊತ್ತಿರದ ನಮ್ಮ ಡಾಕ್ಟರ್ ಹೆಂಗಸು ಬರುತ್ತಿದ್ದುದನ್ನ ಗಮನಿಸಿದ ಪೆಟ್ಟಿಗೆ ಅಂಗಡಿ ಮುಂದೆ ಸಿಗರೇಟ್ ಹಚ್ಚಿದ ಪಟಾಲಂನವನೊಬ್ಬ ಇನ್ನೊಬ್ಬನಿಗೆ:

"ನೋಡೊ ಒಳ್ಳೆ ಮಲಯಾಳಿ ಫಿಗರ್ ಬರ್‍ತಾ‌ಇದೆ..." ಎಂದು ಹುಸಿ ನಕ್ಕದ್ದನ್ನನುಸರಿಸಿ ಕಿಸಕ್ಕೆಂದು ಪ್ರತಿಕ್ರಿಯಿಸಿದ್ದ ಇನ್ನೊಬ್ಬ "ಮಲಯಾಳಿ ಹೆಂಗಸೆಂದರೆ ಒಳ್ಳೆ ಖುಷಿ ಕೊಡ್ತಾರಂತೆ ಕಣೊ. ಅವರ ರಾಜ್ಯದಲ್ಲಿ ಎಲ್ಲಾ ತಳಕಬಳಕ. ಗಂಡು ಹೆಣ್ಣು ಸಹ, ಐ ಮೀನ್ ಹಾಸಿಗೇಲಿ.." ಎಂದಿದ್ದ. ಈ ಮಾಮೂಲಿ ಪಟಾಲಂಗೆ ಬೇರೇನೂ ಕೆಲಸವಿಲ್ಲ, ಹೋಗಿ ಬರೋರ್‍ನ ಚುಡಾಯಿಸೋದು ಬಿಟ್ಟರೆ.

ನಾನು ವಠಾರದ ತಲೆ ಬಾಗಿಲನ್ನ ಹಾದು ಅವರ ಕಣ್ಣಿಗೆ ಬೀಳದೆ ಅವರ ಸಂಭಾಷಣೆ ಕೇಳುವಂತೆ ಮರೆಯಾಗಿ ನಿಂತೆ. ಮನ್ನಿಯ ಸಂಭಾಷಣೆಯಲ್ಲಿ ಹೆಚ್ಚು ತಮಿಳು- ಅಲ್ಲಲ್ಲಿ ಒಳ್ಳೆ ಪ್ರೌಢಿಮೆಯ ಇಂಗ್ಲೀಷ್ ನುಸುಳುತ್ತಿತ್ತು. ಅದು ದೊಡ್ಡ ಸಂಭಾಷಣೆಯೇನೂ ಅಲ್ಲ. ಹರಕು ಮುರುಕು ತಮಿಳು ನನಗೂ ಗೊತ್ತಿದ್ದರಿಂದ ಸಂಗ್ರಹಿಸಲಾದ ವಿವರಗಳೆಂದರೆ:

ಆಕೆ ಸೊಸೆಯಾಗಿ ಬಂದ ಹೊಸತರಲ್ಲಿ ಮಾವನವರ ಮನೆಯಲ್ಲಿ ಹೆಚ್ಚಾಗಿ ಕನ್ನಡ ಬಳಕೆಯಲ್ಲಿದ್ದನ್ನ, ತತ್‌ಕ್ಷಣ ಆ ಬಳಕೆಗೆ ಒಗ್ಗದೆ ಇರೋದು, ತಾನು ತನ್ನ ತವರಿನಲ್ಲಿ ಮಾಡುತ್ತಿದ್ದ ಅಡಿಗೆಗೆ ಮನೆಯವರು ಒಗ್ಗದೆ ಇರೋದು, ಅವರ ಅಡಿಗೆಯನ್ನ ತಾನು ಎಷ್ಟೇ ಚೆನ್ನಾಗಿ ಮಾಡಿದರೂ ಮನೆಯವರ ಮೂದಲಿಕೆ, ತಾನು ಇಂಗ್ಲೀಷಿನಲ್ಲಿ ಬರೆದ ಕತೇನ ಓದಿ- " ನೀನು ಏನೇ ಬರೆದರೂ ಕನ್ನಡದಲ್ಲಿ ಬರೆ, ಬರದಿದ್ದರೆ ಕಲಿತುಕೋ, ಆ ದರಿದ್ರ ಕೊಂಗಾಟವನ್ನ ಬಿಟ್ಟು ಬಿಡು. ಆಗಲೇ ನಮಗೆ ಹೆಮ್ಮೆ." ಎಂದು ಅತ್ತೆ, ಮಾವ, ಗಂಡ ಎಲ್ಲರೂ ಛೇಡಿಸಿದ್ದು, ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡಿದ್ದ ಮಾಮಿ- ಮನ್ನಿಯ ಮದ್ರಾಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ಗರ್ವವನ್ನ ಮುರಿಯೋ ನಿರ್ಧಾರದ ಧಾಟೀಲಿ- " ಹೌದಮ್ಮ ನೀನು ನಿನ್ನ ಗಂಡನ ಮನೆಗೆ ಬಂದ್ಮೇಲೆ ಗಂಡನ ಮನೆಯ ಆಚಾರ ವಿಚಾರಗಳಿಗೆ ಹೊಂದ್ಕೋ ಬೇಕು.ಆಗಲೆ ತವರಿಗೂ ಕೀರ್ತಿ. ನಿನ್ನ ಮಾವ- ಅತ್ತೆ - ಗಂಡ ಹೇಳೋದನ್ನ ಕೇಳು...ಅದೇ ನ್ಯಾಯ..." ಎಂದು ತೀರ್ಪಿತ್ತಿದ್ದರು.


ಅದೇನಾಯ್ತೋ ಏನೋ ಮೊಟ್ಟ ಮೊದಲ ಬಾರಿಗೆ ನನ್ನ ಆತ್ಮೀಯ ಕೋಣೆ ಅಸಹ್ಯವಾಯಿತು. ರಾತ್ರಿ ಮಲಗಿದಾಗ ಕಣ್ಮುಚ್ಚಿದೊಡನೆ ಮನ್ನಿಯ ಮುಖ, ಎಂ.ಎ ಇಂಗ್ಲೀಷ್ ಮನ್ನಿಯ ಮುಖ, ಇಲ್ಲಿಗೆ ಬಂದಾಗ‌ಎಷ್ಟೊಂದು ಕ್ಯೂಟ್ ಆಗಿದ್ದಳು. ಈಗ ಸಣ್ಣಗೆ ಬಡಕಲು - ಬಡಕಲಾಗಿ...ಇದರೊಂದಿಗೆ ಯಾರ ಮೇಲೋ ದ್ವೇಷ, ಚೂಡನಾಥಯ್ಯರ್ ಮೇಲೆ? ಉಹೂಂ. ಮನ್ನಿ ಅತ್ತೆ- ಗಂಡನ ಮೇಲೆ? ಊಹುಂ. ಹಾಗಾದರೆ ಯಾರ ಮೇಲೆ? ಅರ್ಥವಾಗದ ತಳಮಳ. ಎಷ್ಟೇ ಸೂಕ್ಷ್ಮವಾದರೂ ತಳಮಳದ - ದ್ವೇಷದ ಹಿನ್ನೆಲೆ ಅರ್ಥವಾಗುವ - ಸ್ಫುಟವಾಗುವ ಲಕ್ಷಣ ಕಾಣಲಿಲ್ಲ. ಎಂದೋ ಯಾರೋ ಬಿಟ್ಟಿ ಕೊಟ್ಟಿದ್ದರೆಂದು ತಂದು ಬಿಸಾಕಿದ್ದ ಬಹಳ ದಿನಗಳು ಓದದೆ ಇದ್ದ ಗೋಕಾಕ್ ಸಮಿತಿ ವರದಿಯ ಪೂರ್ಣ ಪಾಠ ಅದಾಗಿತ್ತು. ಅದರಲ್ಲಿ ಮನಸ್ಸನ್ನು ತೊಡಗಿಸಲಿಕ್ಕೇ ಆಗಿರಲಿಲ್ಲ. ಬೇರೆ ಯಾವುದೇ ಪುಸ್ತಕ ಇರಲಿಲ್ಲ. ಬಹಳ ಬೇಗನೆ ಹಾಸಿಗೆ ಹಾಸಿ ಉರುಳಿಕೊಂಡಿದ್ದೆ, ನಿದ್ದೆ ಬಾ ಎಂದರೂ ಎಲ್ಲಿಂದ ಬಂದಾತು?

ಮೆಲ್ಲನೆದ್ದು ಕಿಟಕಿ ತೆಗೆದಾಗ ಮನ್ನಿ ವಠಾರದ ತಲೆ ಬಾಗಿಲ ಜಗಲಿ ಮೇಲೆ ಮೂರ್‍ನಾಲ್ಕು ಪುಡಿ ಹುಡುಗರೊಂದಿಗೆ ಕುಳಿತಿದ್ದುದು ಕಾಣಿಸಿತು. ಕತೆ ಹೇಳುತ್ತಿದ್ದಳೆನೊ. ಹುಡುಗರಿಗೆ ತಮಿಳು ಅರ್ಥವಾಗುತ್ತಿತ್ತೋ ಅಥವ ಹರಕು ಮುರುಕು ಕನ್ನಡದಲ್ಲೇ ಹೇಳುತ್ತಿದ್ದಳೇನೊ. ಒಂದೆರಡು ನಿಮಿಷ ಹಾಗೆ ನೋಡುತ್ತಿದ್ದಾಗ ಆಕೆಯ ಗಂಡ ಬಂದು ಏನನ್ನೋ ಹೇಳುತ್ತಿದ್ದ. ಅವನು ಹಾವಭಾವ ನೋಡಿದರೆ ಸಿಟ್ಟಾಗಿದ್ದನೆಂದು ಕಾಣುತ್ತದೆ. ಆಕೆ ಎದ್ದು ಒಳ ಹೊರಟು ಹೋದಳು. ಪಾಪ ಮನ್ನಿ.

ಮನ್ನಿ,ಎಂಥಾ ಹೆಸರು? ಮುದ್ದಾಗಿ ಕರೆಯುವ ರೀತಿಯೋ ಅದು? ಹಾಗಾದರೆ ನಿಜವಾದ ಹೆಸರೇನೊ? ನಿಜವಾಗಿಯೂ ಒಬ್ಬ ವ್ಯಕ್ತಿಯ ಹೆಸರು ತಿಳಿದು ಕೊಳ್ಳಬೇಕೆನ್ನಿಸಿದ್ದು ಆಗಲೆ!

ಒಂದು ನಿಮಿಷ ಕಿಟಕಿಯಾಚೆ ನೋಡುತ್ತಿದ್ದೆ. ನಿರ್ಜನವಾದ ನಿರ್ಜೀವವಾದ ಬೀದಿ. ಮಂಕು ವಿದ್ಯುತ್ ಬೆಳಕಲ್ಲಿ ಖಾಲಿಖಾಲಿಯಾದ ಆ ಬೀದಿಯನ್ನ ಕಾಣಲಾಗದೆ ಕಿಟಕಿಯನ್ನ ರೋಷದಿಂದ ಪಟ್ಟೆಂದು ಶಬ್ಧ ಬರುವ ಹಾಗೆ ಮುಚ್ಚಿದೆ. ಪ್ರಥಮ ಬಾರಿಗೆ ಆ ಕಿಟಕಿಯ ಬಗೆಗೆ ದ್ವೇಷ ಉಮ್ಮಳಿಸಿಕೊಂಡು ಬಂದಿತ್ತು.

ಮಲಗಿದಾಗ ಕನಸಿನಲ್ಲಿ ತನ್ನ ಸಹೋದ್ಯೋಗಿಮಿತ್ರನ ಹೆಂಡತಿ ಅಬ್ಬರಿಸಿ " ನಿಮ್ಮ ರೂಮು ಕೆಳಗಿದಾಳಲ್ಲ, ಆ ಮಲೆಯಾಳದ ಮಿಟಕಲಾಡಿ, ಆಕೆಗೇನು ಗರ್ವಾರೀ, ಯುಗಾದಿ ಹಬ್ಬ , ಬಂದು ಅರಿಶಿನ ಕುಂಕುಮ ಇಟ್ಟುಕೊಡು ಹೋಗೂಂತ ಕರೆದರೆ ಬರಲೇ ಇಲ್ಲ. ಇನ್ನೊಂದು ದಿನ ಓಣಂ ಹಬ್ಬ- ನಮ್ಮ ಮನೆಗೆ ಊಟಕ್ಕೆ ಬನ್ನೀಂತ ಕರೀತಾಳಲ್ರಿ . ನಾಚಿಕೆ ಇಲ್ಲದೋಳು. ನಾನು ಹೋಗ್ತೀನ...ಹುಡುಗರ ಮೇಲೆ ಅದೆಂತಾ ಮೋಡಿ ಮಾಡಿದ್ದಾಳೊ, ಹೋಗ್ತೀವೀಂತ ಹಠ ಹಿಡಿದರು, ನಾಲ್ಕು ತದುಕಿ ಸುಮ್‌ನಾಗಿಸ್ದೆ. ಎಂಥಾ ಧಿಮಾಕೂ ರೀ ಆಕೇದು..." ಎಂದು ಕೂಗಡಿದಳು. ಎಲ್ಲೋ ಇದೆ ಮಾತು ಕೇಳಿದ್ದೆ ಈಗಾಗಲೆ.

ಬೆಳಗಿನ ತನಕ ಅದೇ ರೀತಿಯ ಅಬ್ಬರ. ಕೆಟ್ಟಕೆಟ್ಟದಾಗಿ ನನ್ನ ಕನಸಿನಲ್ಲಿ ನಡೆದೇ ಇತ್ತು. ಬೆಳಿಗ್ಗೆ ಸಂಪೂರ್ಣ ಎಚ್ಚರಾದಾಗ ನಾನು ಉಗಾದಿ ಹಬ್ಬದೂಟಕ್ಕೆ ಸಹೋದ್ಯೋಗಿಮಿತ್ರನ ಮನೆಗೆ ಹೋಗಿದ್ದಾಗ ಆಕೆ ಆಡಿದ್ದ ಮಾತುಗಳೇ ಕನಸಿನಲ್ಲಿ ಬಂದದ್ದೆಂದು ಖಚಿತವಾಗಿತ್ತು. ಇದ್ಯಾಕೆ ಹೀಗೆ ಕನಸಿನಲ್ಲಿ ಪುನರಾವರ್ತನೆಯಾಯಿತೋ ತಿಳಿಯದು. ಎದ್ಡು ಹೊರಗಡೆ ಬಾಗಿಲ ಬಳಿ ಬಿದ್ದಿದ್ದ ಪೇಪರ್ ತಂದು ಬಿಡಿಸಿದೆ. ಕನ್ನಡವನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂಬ ಮುಖ್ಯಮಂತ್ರಿಗಳ ಮಾಮೂಲಿ ಹೇಳಿಕೆ ಶೀರ್ಷಿಕೆಯಾಗಿ ಪ್ರಕಟಗೊಂಡಿದ್ದುದು ನನ್ನ ಕಣ್ಣಿಗೆ ಪ್ರಪ್ರಥಮವಾಗಿ ಬಡಿದು- ಪೇಪರನ್ನ ಓದದೆ ಹಾಗೇ ಬಿಸಾಕಿದೆ.

ಕಿಟಕಿಯ ಮೇಲಿನ ದ್ವೇಷ, ತೀವ್ರವಾಗಿದ್ದರೂ ಚಟ ಸುಮ್ಮನೆ ಬಿಟ್ಟಾತೆ. ಬಹಳ ದಿನಗಳ ನಂತರ ಒಂದು ಬೆಳಿಗ್ಗೆ ತೆಗೆದಾಗ ಮೊದಲು ಗಮನ ಸೆಳೆದದ್ದು ಬೀಗ ತೆಗೆಯದೆ ಬಿಮ್ಮೆಂದು ಇದ್ದ ಲಬ್ಬೆಯ ಪೆಟ್ಟಿಗೆ ಅಂಗಡಿ. ಒಂದು ದಿನವೂ ಮುದುಕ , ಸಮಯಕ್ಕೆ ಸರಿಯಾಗಿ ತೆಗೆವುದು ತಪ್ಪಿಸದಿದ್ದವ ಇಂದೇಕೆ ತೆಗೆಯಲಿಲ್ಲ? ಆರೋಗ್ಯ ಸರಿ ಇಲ್ಲದಿರಬಹುದು ಎಂದು ಸುಮ್ಮನಾದೆ. ಐದಾರು ದಿನಗಳಾದರೂ ತೆಗೆಯಲೇ ಇಲ್ಲ. ಆಮೇಲೊಂದು ದಿನ ಅವನ ಅಂಗಡಿಯ ಬೆಂಚುಗಳನ್ನೆ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮಾಮೂಲಿ ಪಟಾಲಂ ಸಿಕ್ಕಿದಾಗ ವಿಚಾರಿಸಿದೆ. ಅವರು ಹೇಳಿದಷ್ಟನ್ನ ಇಲ್ಲಿ ದಾಖಲಿಸುತ್ತಿದ್ದೇನೆ:

" ಆ ಲಬ್ಬೆ ನನ್ಮಗನಿಗೆ ಬಹಳ ಗಾಂಚಾಲಿ ಸಾರ್, ಕನ್ನಡದಲ್ಲಿ ಮಾತೋಡೋಂದರೆ ಬರಾಕಿಲ್ಲ ಅಂತಾನೆ. ಅದಕ್ಕೆ ಯದ್ವಾ ತದ್ವ ದಬಾಯಿಸಿದ್ದಕ್ಕೆ, ಬಂದು ಗಲಾಟೆ ಮಾಡ್ತಾರೇಂತ ಪೊಲೀಸ್ ಕಂಪ್ಲೇಂಟ್ ಮಾಡ್ದಾಂತ ಗೊತ್ತಾಯ್ತು., ಅಷ್ಟೆ , ಅಂಗಡೀನೆಲ್ಲ ಉಡೀಸ್ ಮಾಡ್ಬಿಟ್ವಿ. ಊರಿಗೆ ಓಡಿಹೋದ ಆ ಕಂಜಿವೆಳ್ಳಂ ನನ್ಮಗ..." ಎಂದು ಕೇಕೆ ಹಾಕಿದರು.

ಪೊಲೀಸ್ನೋರ್‍ದು ಒಂದು ವರ್ಶನ್ ಇದೆ: " ಈ ತುಡುಗು ಮುಂಡೇವು ಸಿಗರೇಟು, ಬಾಳೆ ಹಣ್ಣು, ಟೀ ಅದೂ ಇದೂಂತ ಆಗ ಕೊಡ್ತೀವಿ ಈಗ ಕೊಡ್ತೀವೀಂತ ಮುನ್ನೂರ್ ರೂಪಾಯಿ ಸಾಲ ಉಳಿಸಿಕೊಂಡರಂತೆ. ಒಂದು ದಿನ ಜಬರ್ದಸ್ಥ್‌ನಲ್ಲೇ ಕೇಳಿದ್ನಂತೆ. ಇವ್ರೆಲ್ಲ ಸೇರ್ಕೊಂಡು ಮುಂಡೇ ಮಗನೆ ನಮ್ ದೇಶ್ದಲ್ಲಿ ಬಂದು ಕೆರಕೊಂಡು ತಿಂತೀಯಾಂತ ಅಂಗಡೀನೆಲ್ಲ ಲೂಟಿ ಮಾಡವ್ರೆ..."

ನಾನು ಏನನ್ನು ಪ್ರತಿಕ್ರಿಯಿಸಲಿಲ್ಲ. ಇದರ ಹಿನ್ನೆಲೆಗೆ ಈ ಹುಡುಗರಿಗೆ ಪ್ರೋತ್ಸಾಹವಾಗಿ ಚೂಡನಾಥಯ್ಯರ್ ಇದ್ದರೂನ್ನೋದು ನಿಜ. ಯಾಕಂದ್ರೆ ಅವರು ಆ ಹುಡುಗರನ್ನ ಗುಂಪು ಕಟ್ಟಿಕೊಂಡು ಆಗಾಗೆ ಮಾತಾಡುತ್ತಿದ್ದುದನ್ನು ನಾನೇ ನೋಡಿದ್ದೀನಿ.

ಇನ್ನೂ ಒಂದು ದಿನ , ಡಾಕ್ಟರಮ್ಮನೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗಂಡನ್ನ ಹೋಗಿ ಸೇರಿಕೊಂಡರಂತೆ. ಅದಕ್ಕೂ ಚೂಡನಾಥಯ್ಯರ್‌ರವರ ವ್ಯಂಗ್ಯ ಇಲ್ಲದಿಲ್ಲ: " ಪಾಪ ಎಷ್ಟು ದಿನಾಂತ ತಾನೆ ಗಂಡನ್ನ ಬಿಟ್ಟಿರ್‍ತಾಳೆ ಹೇಳಿ.." ಆಕೆ ಬೆಂಗಳೂರು ಬಿಡುವುದಕ್ಕೆ ಚೂಡನಾಥಯ್ಯರ್ ಕಲ್ಪಿಸುವ ಕಾರಣ ಇಷ್ಟು. ಮೇಲ್ನೋಟಕ್ಕೆ ಅದಷ್ಟೆ - ಅದರಷ್ಟೆ ನಿಜ ಅನ್ನಿಸುವುದು ಬೇರೊಂದಿಲ್ಲ. ಒಳಕ್ಕೆ ಇಳಿದರೆ ಆ ಮಲಯಾಳಿ ಹೆಂಗಸು ಎಷ್ಟು ಪಾಡು ಪಟ್ಟಿದ್ದಳೋ....

ನಾನು ಕಿಟಕೀನ ಮತ್ತೆ ಪುನಃ ಬಹಳ ದಿನಗಳು ತೆಗೆಯಲೇ ಇಲ್ಲ. ಅಸಲಿಗೆ ರೂಮೆ ಸೇರುತ್ತಿರಲಿಲ್ಲ. ಬೆಳೆಗ್ಗೆ ಹೋದರೆ ಇನ್ಯಾವಾಗಲೋ ಬಂದು ರೂಮು ಸೇರಿಕೊಳ್ಳುತ್ತಿದ್ದೆ. ಇದ್ದಷ್ಟು ಗಳಿಗೆಯೂ ಆ ರೂಮು ನನ್ನ ಕೊರಳು ಹಿಚುಕುತ್ತಿದ್ದ ಅನುಭವ, ಥೂ ಅಂತ ಉಗೀಬೇಕೂನ್ನಿಸುತ್ತೆ.

ಎಷ್ಟೇ ಅಸಹ್ಯವಾದರೂ ಕಿಟಕೀನ ಇತ್ತಿಚೆಗೆ ತೆಗೆದೇ ಇರ್‍ತೀನಿ. ಅದೂ ಇಲ್ಲದಿದ್ದರೆ ಒಳಗಿನ ಧಗೆಗೆ ಸುಟ್ಟು ಹೋದೇನೋ ಎಂಬ ಭಯ. ಆಗೊಮ್ಮೆ ಈಗೊಮ್ಮೆ ತಂಪು ಗಾಳಿಯಾದರೂ ಬೀಸುತ್ತಿರಲಿ ಅನ್ನೋ ಆಸೆ.

ಆಗೊಮ್ಮೆ ಈಗೊಮ್ಮೆ ಮನ್ನಿ ಕಾಣಿಸ್ತಾ ಇರ್‍ತಾಳೆ. ಆದರೆ ಅವಳು ಹುಡುಗರ ಜೊತೆ ಮಾತಾಡಿದ್ದು ಕಾಣಿಸಲೇ ಇಲ್ಲ. ಆ ಹುಡುಗರೂ ಅಷ್ಟೆ. ಆಕೇನ ನೋಡಿದೊಡನೆ ಓಡಿ ಹೋಗಿ ಕಾಲುಗಳನ್ನ ತಬ್ಬಿಕೊಂಡು ಮನ್ನಿ ಮನ್ನೀಂತ ಲಲ್ಲೆಗರೆಯೋಲ್ಲ. ಇನ್ನೂ ಸಣ್ಣಗಾಗಿದ್ದಾಳೆ. ಆಗಾಗ ತನ್ನ ಮನೇಲಿ ಯಾರೂ ಇಲ್ಲದಾಗ ಹುಚ್ಚು ಹಿಡಿದ ಹಾಗೆ ಕೈಯಲ್ಲಿ ಯಾವುದೋ ಪುಸ್ತಕ ಹಿಡಿದುಕೊಂಡು ಹಾಲ್‌ನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತ ಜೋರಾಗಿ ಒದುತ್ತಾ ಇರುತ್ತಾಳೆ. ಬಹುಶಃ ` ಲರ್ನ್ ಕನ್ನಡ ಬಯ್ ಯುವರ್ ಸೆಲ್ಫ್ ' ಇರಬೇಕು. ಮದ್ರಾಸ್ ಯೂನಿವರ್ಸಿಟಿಯ ಎಂ.ಎ ಇಂಗ್ಲೀಶ್ ಮಾಡಿದ್ದಾಳೇನ್ನೊದರ ಲಕ್ಷಣ ಈಗಂತೂ ಕೊಂಚವೂ ಇಲ್ಲ. ಬಂದ ಹೊಸತರಲ್ಲಿ ಕಪ್ಪಗಿದ್ದರೂ ಎಷ್ಟೊಂದು ಲಕ್ಷಣವಾಗಿದ್ದಳು...

ಒಂದೆರಡು ದಿನ ನಾನು ಊರಲ್ಲಿರಲಿಲ್ಲ. ಪತ್ರಿಕೇಲಿ ಬಂದ ಸುದ್ಧಿಯನ್ನು ನಿರ್ಭಾವುಕನಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.:

ಮೈಸೂರು,ಏ.೨೪- ಶಂಕರಪುರಂ ಬಡಾವಣೆಯ ವಠಾರವೊಂದರಲ್ಲಿ ಗೃಹಿಣಿಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ತಾನೆ ಮದುವೆಯಾಗಿದ್ದ ಆಕೆಗೆ ಆಕೆಯ ಅತ್ತೆ, ಮಾವ, ಗಂಡ ವರದಕ್ಷಿಣೆಯ ತಗಾದೆ ತೆಗೆದು ಅವಳನ್ನು ಪ್ರತಿನಿತ್ಯ ಹಿಂಸಿಸಿದ್ದಾರೆಂದು ಕೋಲಾರದಲ್ಲಿರುವ ಆಕೆಯ ತಂದೆ ಹಾಗು ಮದ್ರಾಸಿನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿರುವ ಆಕೆಯ ಅಣ್ಣ ಆರೋಪಿಸಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ನಾನು ಪುನಃ ಎಂದಿಗೂ ಆ ಕಿಟಕೀನ ತೆಗೀಲೆ ಇಲ್ಲ. ಮನ್ನಿ ಎಂದರೆ ತಮಿಳಿನಲ್ಲಿ ` ಅತ್ತಿಗೆ' ಎಂದರ್ಥ ಎಂಬುದನ್ನು ಇತ್ತೀಚೆಗೆ ತಾನೆ ತಿಳಿದುಕೊಂಡೆ. ಹಾಗೆಯೇ ಆಕೆಯ ಹೆಸರನ್ನೂ ಪತ್ರಿಕೆಗಳ ವರದಿಗಳ ಮುಖಾಂತರವೇ ತಿಳಿದುಕೊಂಡದ್ದು. ಬಹಳ ಮುದ್ದಾದ ಅಂದವಾದ ಹೆಸರು- ಇಳಂಗೊಡಿ. ಇಳಂಗೊಡಿ ಎಂದರೆ ಎಳೆಯ ಬಳ್ಳಿಯಂತೆ.

ನಾನು ಕಿಟಕಿ ತೆಗೀಲೆ ಇಲ್ಲ ಅಂತೆ ಹೇಳಿದೆನಲ್ಲವೆ? ಯಾಕೆಂದರೆ ನಾನು ಒಂದಾನೊಮ್ಮೆ ಗಾಢವಾಗಿ ಪ್ರೀತಿಸಿದ್ದ ಆ ರೂಮು ಬಿಟ್ಟು ಬಹಳ ದೂರದಲ್ಲಿ ಬೇರೊಂದು ರೂಮು ಹಿಡಿದಿದ್ದೀನಿ.!

ಈ ರೂಮಲ್ಲಿ ಕಿಟಕಿಗಳೆ ಇಲ್ಲ. ಗವಾಕ್ಷಿಯಂತದೇ ಎಂಥದೋ ಒಂದು ಇದೆ, ಬಹಳ ಎತ್ತರದಲ್ಲಿರೋ ಅದನ್ನು ನಾನು ತೆಗೆಯೋ ಸಂದರ್ಭವೇ ಇಲ್ಲ.

ಈ ರೂಮಂತೂ ನನ್ನ ಕೊರಳನ್ನ ಹಿಚುಕುತ್ತಾ ಇದೆ. ನಾನು ಇಲ್ಲೇ ಸತ್ತೋಗ್ತೀನೇನೋ ಅಂತನ್ನಿಸ್ತಿದೆ.
ಮನ್ನಿ ಆತಹತ್ಯೆಗೆ ಅವರಪ್ಪ ಹೇಳಿದ ಹಾಗೆ ಬರೀ ವರದಕ್ಷಿಣೆ ಬಾಕಿ ಮಾತ್ರ ಕಾರಣವೋ ಅಥವ ಬೇರಿನ್ನೇನಾದರು ಇತ್ತೆ? ನನಗಂತೂ ಸ್ಪಷ್ಟವಾಗಿಲ್ಲ. ಅದರ ಬಗೆಗಿನ ಪ್ರಶ್ನೆಗಳೂ ಈ ರೂಮಿನೊಂದಿಗೆ ಕೂಡಿಕೊಂಡು ಕೊರಳನ್ನು ಹಿಚುಕುತ್ತಲೇ ಇದೆ.

        *****