ಬದುಕು ಎಂದರೆ ಇಷ್ಟ

-ಅಬ್ಬಾಸ್ ಮೇಲಿನಮನಿ

ನಡೆದು ನಡೆದು ಸುಸ್ತಾಗಿ ಇನು ಮುಂದೆ ಹೆಜ್ಜೆ ಕಿತ್ತಿಡಲು ಸಾಧ್ಯವಿಲ್ಲ ಅನಿಸಿದಾಗ ಜಮೀರುಲ್ಲಾ ಬಂಡೆಗಲ್ಲಿನ ಮೇಲೆ ಕುಕ್ಕರಿಸಿದ.  ಎದುರಿಗೆ ಅಪರಂಪಾರ ಕಡಲು.  ಅದರೊಡಲಿಂದ ತೇಲಿ ಬರುತ್ತಿರುವ ಬೆಡಗಿನ ಅಲೆಗಳು.  ಮುಳುಗುವ ಧಾವಂತದಲ್ಲಿರುವ ಕೆಂಪು ಸೂರ್ಯ.  ಆ ಮನೋಹರ ದೃಶ್ಯ ನೋಡಲು ತೀರದಲ್ಲಿ ಗಿಜಿ ಗಿಜಿಯೆನ್ನತೊಡಗಿದ್ದ ಜನ.  ಜಾತ್ರೆಯ ಬೆರಗು ಹುಟ್ಟಿಸಿದ ತಿನಿಸಿನ ತಳ್ಳು ಗಾಡಿಗಳು.  ತುಂಬಿ ತುಳುಕಾಡತೊಡಗಿದ್ದ ಜೀವನೋತ್ಸಾಹ.  ಅದೆಲ್ಲವನ್ನು ಅಲಕ್ಷಿಸಿ, ಪ್ರಪಂಚದ ಹಂಗು ಹರಿದುಕೊಂಡಂತೆ ಕುಳಿತಿದ್ದ ಜಮೀರುಲ್ಲಾ.



ಆರು ತಿಂಗಳಿನ ಹಿಂದೆ ಇದೇ ಕಡಲ ತೀರದಲ್ಲಿ ಅದಮ್ಯ ಉತ್ಸಾಹದೊಂದಿಗೆ ಓಡಾಡಿದ್ದ ಅವನು.  ಪಕ್ಕದಲ್ಲಿ ಆಗ ಶಬನಮ್ ಇದ್ದಳು.  ಜನರ ಗದ್ದಲದಿಂದ ದೂರ ಸರಿದು, ಅವಳ ಕೈಹಿಡಿದು, ಮೈಗೆ ಮೈ ಹಚ್ಚಿ, ಹಸಿ ಮರಳಿನಲ್ಲಿ ಹೆಜ್ಜೆಯೂರಿ ಆನಂದಿಸಿದ್ದ.  ನೀರಾಟದಲ್ಲಿ ಖುಷಿ ಅನುಭವಿಸಿದ್ದ.  ಹಳ್ಳಿಯ ಹುಡುಗಿ ಶಬನಮ್ ಮೈಚಳಿ ಬಿಟ್ಟು ಗಂಡನೊಂದಿಗೆ ನಲಿದಿದ್ದಳು.

ಅಲೆಯೊಂದು ಅವನು ಕುಳಿತ ಬಂಡೆಗಲ್ಲಿಗೆ ಅಪ್ಪಳಿಸಿ ಬಂದಂತೆ ಹಿಂತಿರುಗಿತು.  ಮಾಯೆ ತೋರಿದ ಹಾಗೆ.  ಅಲೆಯಲ್ಲ ಅದು ಶಬನಮ್ ಎಂದುಕೊಂಡಿತು ಅವನ ಮನಸ್ಸು.  ಹೀಗೆ ಅಲೆಯಂತೆ ಉತ್ಸಾಹದ ನೊರೆ ತುಳುಕಿಸುತ್ತ ಬಂದವಳು, ಪ್ರೀತಿಯ ಹನಿಯಿಂದ ತನ್ನ ಜಿಂದಗಿಯನ್ನು ಮುತ್ತಾಗಿಸುವಳು ಅಂದುಕೊಳ್ಳುತ್ತಿರುವಂತೆ ಮೋಸ ಮಾಡಿ ಹೋದಳು.  ಬದ್ಮಾಶ್ ಹೆಂಗಸು!  ಜಮೀರುಲ್ಲಾ ಒಳಗೇ ಬೈದಾಡಿಕೊಂಡ.

ಸ್ವಂತ ಊರಲ್ಲಿ ಬದುಕು ದುಸ್ತರ ಎಂದ ಮೌಲಾಲಿಯ ಮಾತಿನ ಪ್ರೇರಣೆಗೊಳಗಾಗಿ ಜಮೀರುಲ್ಲಾ ಗೋವಾಕ್ಕೆ ಹೊರಟು ಬಂದಿದ್ದ.  ಅವನ ನಿಕಾಹ್ ಆಗಿ ಪೂರ್ತಿ ತಿಂಗಳು ಗತಿಸಿರಲಿಲ್ಲ.  ಶಬನಮ್‌ಳ ಹಸ್ತಗಳಲ್ಲಿನ ಮೆಹಂದಿಯ ರಂಗು ಮಾಸಿರಲಿಲ್ಲ.  ಹೊಸ ಬದುಕಿಗಾಗಿ ಅವನ ಕಾತರ ಹೆಚ್ಚಿತು.  "ಮೈಮ್ಯಾಲೆ ಬಿದ್ದ ಹಲದಿಪಾನಿ (ಅರಿಷಿಣ ನೀರು) ಇನ್ನು ಆರಿಲ್ಲ.  ಹೋಗಬ್ಯಾಡ ಬೇಟಾ" ಎಂದಿದ್ದಳು ಅವನ ಅಮ್ಮಾ.  ಮಗ ತನ್ನ ಕಣ್ಣೆದುರಿಗೆ ಇರಬೇಕೆನ್ನುವುದು ಅವಳ ಹಂಬಲ.  ಅದರಲ್ಲಿ ಕರುಳಿನ ವಾತ್ಸಲ್ಯವಿದ್ದಿತಾದರೂ ಗಲ್ಲಿಯ ಜನರಿಗೆ ಅದು ಕುರುಡು ಅನಿಸದೇ ಇರಲಿಲ್ಲ.  ಕಾಜಾಬಿ ಮಗನನ್ನು ವಿಪರೀತ ಅಚ್ಛೆ ಮಾಡುವಳೆಂದು ಅವರು ಆರೋಪಿಸುತ್ತಿದ್ದರು.

ಜಮೀರುಲ್ಲಾ ಇನ್ನೂ ಗರ್ಭದಲ್ಲಿರುವಾಗಲೇ ಅವನ ಅಬ್ಬಾ (ತಂದೆ)ನ ಸಾವು ಸಂಭವಿಸಿತ್ತು.  ತನ್ನ ಕರುಳಿನ ಕೊನೆಯ ಕುಡಿಯೆಂದು ಖಾಜಾಬಿ ಮಗನನ್ನು ಎದೆಗಾನಿಸಿಕೊಂಡೆ ಇರುವಳು.  ತೊಡೆಯ ಮೇಲೆ ಕುಳ್ಳಿರಿಸಿ ಅವನ ಬಾಯಿಗೆ ತಿನಿಸನ್ನು ತುರುಕುವಳು.  ಮುದ್ದು ಅಂದರೆ ಅಷ್ಟು ಮುದ್ದು.  "ಮಗನ ಮುಖದಾಗ ಮೀಸೆ, ಚಿಗಿಯಾಕ ಹತ್ತಿದ್ರೂ ಮೊಲಿ ಚೀಪ್ಸೂದು ಬಿಡವಲ್ಲಿ.  ಇದೆಂಥ ಪ್ರೀತೀನ ನಿಂದು.  ನಾಳೆ ಅವನ ಬಗಲಾಗ ಜೋರು (ಹೆಂಡತಿ) ಇರೂದು ಮುಸ್ಕಿಲ್ (ತೊಂದರೆ) ಆದೀತು ನೋಡು" ಎಂದು ಪಕ್ಕದ ಮನೆಯ ತಾಜಬಿ ಮಷ್ಕಿರಿ (ತಮಾಷೆ) ಮಾಡಿದ್ದಳು.  "ಇಂವಾ ನನ್ನ ರಾಜಾಬೇಟಾ.  ಜೋರುಕಾ ಕುಲಾಮ ಆಗಬಾರ್ದು" ಎಂದು ಮಗನ ಹಣೆಗೆ ಮುತ್ತಿಕ್ಕಿ ತನ್ನೆರಡೂ ತೋಳುಗಳಲ್ಲಿ ಬಂಧಿಸಿಟ್ಟು ಕೊಂಡಿದ್ದಳು ಖಾಜಾಬಿ.  ಮಗ ಮಾಮಲೇದಾರ ಆಗಬೇಕೆನ್ನುವುದು ಅವಳ ಆಸೆಯಾಗಿತ್ತು.  ಜಮೀರುಲ್ಲಾ ಏಳನೆಯ ತರಗತಿಯವರೆಗೆ ಶಾಲೆಯ ಪಾವಟಿಗೆ ಹತ್ತಿದ್ದೆ ಖರೆಯಾಯಿತು.  ಖಾಜಾಬಿಯ ಕನಸಿನ ಬೀಜಗಳು ಮಾತ್ರ ಮೊಳಕೆಯೊಡೆಯಲಿಲ್ಲ.  ಅವಳ ವ್ಯಾಮೋಹದ ಪರಿಣಾಮದಿಂದ ಜಮೀರುಲ್ಲಾಕೆಟ್ಟ ಗೆಳೆಯರ ಸಂಗದಲ್ಲಿ ಓ.ಸಿ., ಇಸ್ಪೇಟ್ ನಚ್ಚಿಕೊಂಡು ಮನೆಯ ವ್ಯವಸ್ಥೆಯನ್ನು ತಾರುಮಾರುಗೀಡು ಮಾಡಿದ್ದ.  ಆದರೆ ಯಾವ ಫರಕೂ ಕಾಣಿಸಲಿಲ್ಲ.  ಅವನು ಶುದ್ಧ ಕೊರಡು ಎಂದು ತೀರ್ಮಾನಿಸಿದ ಹಸೀನ ತವರು ಮನೆ ಸೇರಿಕೊಂಡಿದ್ದಳು.  ವರ್ಷೊಪ್ಪತ್ತಿನಲ್ಲಿ ಖಾಜಾಬಿ ಜಿದ್ದಿಗೆ ಬಿದ್ದವಳಂತೆ ತನ್ನ ದೂರದ ಸಂಬಂಧಿಗಳಲ್ಲಿ ಹೆಣ್ಣು ಹುಡುಕಿ ತಂದು, ಹಿರಿಯ ಮಗನ ತಲೆಯ ಮೇಲೆ ಸಾಲದ ಹೊರೆ ಹೇರಿ ಜಮೀರುಲ್ಲಾನ ನಿಕಾಹ್ ನೆರವೇರಿಸಿದ್ದಳು.  ಹಸಿ ಹಸಿ ತುಡಿತದ ಹೊಂಗನಸ್ಸಿನಲ್ಲಿದ್ದಳು ಬೇಗಂ.  ಒಣ ಮನಸ್ಸಿನ ಜಮೀರುಲ್ಲಾನಿಗೋ ಬರೀ ಇಸ್ಪೇಟಿನ ಧ್ಯಾನ.  ಒಮ್ಮೊಮ್ಮೆ ನಿದ್ದೆ, ನೀರಡಿಕೆ, ಮನೆ-ಹೆಂಡತಿ ನೆನಪಿಲ್ಲದಂತೆ ಆಡುತ್ತಿದ್ದ.  ಪದೇ ಪದೇ ಸೋತು ಬಂದು ಮನೆಯವರನ್ನು ಬೈದಾಡುತ್ತಿದ್ದ.  ಅವನ ಚಟಕ್ಕೆ ಬೇಗಂಳ ಲಚ್ಚಾ (ತಾಳಿ), ಕಿವಿಯಲ್ಲಿನ ಆಲಿಖತ್ತು (ಆಭರಣ), ಆಕೆ ಮದುವೆಯಲ್ಲಿ ತಂದಿದ್ದ ಜೇಜಿನ ಸಾಮಾನು ಎಲ್ಲ ಬಿಕರಿಯಾಗಿದ್ದವು.  ಬೇಗಂ ಸಂಕಟ ಅನುಭವಿಸಿದ್ದಳು.  "ನಿನ್ನ ಚಟಕ್ಕೆ ನನ್ನೂ ಒಯ್ದು ಮಾರಾಟ ಮಾಡತ್ತಿಯೇನು ನೋಡು" ಎಂದಿದ್ದಳು ಒಂದು ದಿನ.  ಅವನ ತಲೆಯೊಳಗಿನ ಹುಳು ಕೆರಳಿದ್ದವು.  ಹೆಂಡತಿಯನ್ನು ಬಡಿದು ಹಾಡುಗಲೇ ಅವಳನ್ನು ಲಂಗದ ಮೇಲೆ ಮನೆಯಿಂದ ಓಡಿಸಿದ್ದ.

ಮನೆಯನ್ನು ಕ್ಷುದ್ರವಾಗಿಸುವ ಅವನ ಸ್ವಭಾವಕ್ಕೆ ಬೇಸತ್ತು ಹುಸೇನಮಿಯ್ಯಾ ಬೇರೆ ಮನೆಮಾಡಿಕೊಂಡು ಹೋಗಿದ್ದ.  ಖಾಜಾಬಿ ಮಗನೊಂದಿಗೆ ಉಳಿದಿದ್ದಳು.  ಒಂದೆರಡು ಮನೆಗಳ ಚಾಕರಿ ಮಾಡಿ ಜೀವನ ನಿರ್ವಹಿಸುತ್ತ ತನ್ನ ಬಗ್ಗೆ ಕಾಳಜಿ ಅಭಿವ್ಯಕ್ತಿಸುವ ಅಮ್ಮಾನನ್ನೆ ಹಣಕ್ಕಾಗಿ ಪೀಡಿಸುತ್ತ ಗೋಳು ಹೊಯ್ದುಕೊಳ್ಳುತ್ತಿದ್ದ.  ಹಿರಿಯ ಮಗನ ಪಾಲಿಗೆ ನಿಷ್ಕರುಣವಾಗಿದ್ದ ಅವಳ ಅಂತರಾಳ ಜಮೀರುಲ್ಲಾನ ಉದ್ಧಟತನಗಳನ್ನು ಸಹಿಸಿಕೊಳ್ಳುವುದು ಗಲ್ಲಿಗೆ ಸೋಜಿಗವೆನಿಸಿತ್ತು.

ಅವನಿಗೊಂದು ಜಿಂದಗಿ ಕಲ್ಪಿಸಿಕೊಡುವ ಇರದೆಯೋ, ಮೊಂಡು ಹಠವೋ ಮತ್ತೆ ಆಕೆ ಹೊಸ ಸೊಸೆಗಾಗಿ ಹುಡುಕಾಟ ನಡೆಸಿದ್ದಳು.  "ನಿನ್ನ ಬೇಟಾನ ನಸೀಬು ಮಟಮಟ ಮಧ್ಯಾಹ್ನ ಇದ್ದಂಗೈತಿ.  ಮತ್ತೊಂದು ಶಾದಿ ಮಾಡಿ ಹುಡುಗಿ ಜಿಂದಗಿ ಯಾಕ್ ಬರ್ಬಾದು ಮಾಡ್ತಿ?" ಎಂದು ನೇರವಾಗಿಯೇ ಹೇಳಿದ್ದಳು ತಾಜಬಿ.  ಆಕೆ ಮಾಡುತ್ತಿರುವುದು ಮಷ್ಕರಿಯಲ್ಲ;  ಅಪಮಾನ ಎಂದು, ಅವಳಿಗೆ ಸವಾಲು ಎನ್ನುವಂತೆ ಖಾಜಾಬಿ ನಿಕಾಹ್ ಮಾಡಿದ್ದಳು.  ಸೊಸೆ ಶಬನಮ್ ಅವರೆಯ ಹೂವಿನಂತಿದ್ದಳು.  ಕಾರಂಜಿಯಂತೆ ಪುಟಿಯುತ್ತಿದ್ದ ಅವಳ ಯೌವನ ಜಮೀರುಲ್ಲಾನ ಕಣ್ಣು ಕುಕ್ಕಿತ್ತು.

ಅವಳಿಗೂ ಇದು ಎರಡನೆಯ ಮದುವೆ.  ಅವಳ ದುರಾದೃಷ್ಟವೆಂದರೆ ನಿಕಾಹ್ ಜರುಗಿದ ಒಂದೇ ತಿಂಗಳಲ್ಲಿ ಆಕೆಯ ಗಂಡ ಲಿವರ್‍ ಒಡೆದು ಸತ್ತಿದ್ದ.  ಅತ್ತೆ-ಮಾವ ತಮ್ಮ ಪ್ರಮಾದವನ್ನು ಮರೆಮಾಚಿ, ಸೊಸೆಯ ಕಾಲ್ಗುಣವನ್ನು ದೂಷಿಸಿ ತಿರಸ್ಕರಿಸಿದ್ದರು.  ಕತ್ತಲ ಗೂಡಲ್ಲಿ ಬಂಧಿಯಾಗಿ ವಿಲಿವಿಲಿಸಿದ್ದಳು ಶಬನಮ್.  ಯಾವಾಗ ಜಮೀರುಲ್ಲಾ ಬಂದು ಒಂದೇ ನೋಟದಲ್ಲಿ ತನ್ನನ್ನು ಒಪ್ಪಿಕೊಂಡನೋ ಅವಳಿಗೆ ಬದುಕು ಇಷ್ಟವೆನಿಸಿತ್ತು.

                *        *        *

ಗೋವಾದಲ್ಲಿ ಬಾರ್‍ ಬಿಲ್ಡಿಂಗ್, ಸೆಂಟರಿಂಗ್ ಕಾಂಟ್ರಾಕ್ಟ್ ಮಾಡಿಕೊಂಡಿದ್ದ ಮೌಲಾಲಿ.  ಊರಿಗೆ ಬಂದನೋ ಸೋಮಾರಿಯಾಗಿ ತಿರುಗುತ್ತಿದ್ದ ಹುಡುಗರನ್ನು ಕರೆದುಕೊಂಡು ಹೋಗಿ ಕೆಲಸಕ್ಕೆ ತೊಡಗಿಸುತ್ತಿದ್ದ.  ಹೆಂಡತಿಯೊಂದಿಗೆ ಬಂದ ಜಮೀರುಲ್ಲಾನಿಗೆ ಶೆಡ್ಡಿನ ವ್ಯವಸ್ಥೆ ಮಾಡಿಕೊಟ್ಟು ಕಾಳಜಿಯಿಂದ ಗಮನಿಸಿಕೊಂಡಿದ್ದ.  ಬಾರ್‍ ಬಿಲ್ಡಿಂಗ್ ಕೆಲಸ ಜಮೀರುಲ್ಲಾನಿಗೆ ಹೊಸದು.  ಕಲಿತರೆ ಬರುವಂತಹದ್ದೆ.  ಆದರೆ ಮೈಗಳ್ಳ ಜಮೀರುಲ್ಲಾನಿಗೆ ಕೆಲಸವೆಂದರೆ ಒಗ್ಗದು.  ದುಡಿಯುವವರನ್ನು ಕಂಡರೆ ಮೌಲಾಲಿಗೆ ಪ್ರೀತಿ.  ಅಲ್ಲದೆ ಕಾರಾರುವಾಕ್ ಮನುಷ್ಯ ಅವನು.  ಕೊಡುವ ಸಂಬಳಕ್ಕೆ ಸರಿದೂಗುವ ಶ್ರಮ ಕಲಸಗಾರರಿಮದ ಅಪೇಕ್ಷಿಸುವನು.  ಅವರ ಮೈಯ ಬೆವರು ಆರುವ ಮೊದಲೇ ಹಣ ಕೊಡುವುದು ಅವನ ಪದ್ಧತಿ.  ದುಡಿಯುವವರು ಹಗಲೆಂದರೆ ಹಗಲು, ರಾತ್ರಿಯೆಂದರೆ ರಾತ್ರಿ ಕೆಲಸ ಮಾಡಲೇಬೇಕು.  ಜಮೀರುಲ್ಲಾನಿಗೆ ಹದಿನೈದು ದಿನಗಳಲ್ಲಿ ಜಹೆನ್ನಮ್ (ನರಕ)ದ ಕಠೋರ ಶಿಕ್ಷೆಯನ್ನು ಅನುಭವಿಸಿದಂತಾಗಿತ್ತು.  ತಿರುಗಿ ಊರಿಗೆ ಹೋಗೋಣವೆಂದು ಮನೆ ಹಿಡಿದು ಕುಳಿತಿದ್ದ.  ಗಂಡನ ನಿರ್ಧಾರವನ್ನು ಶಬನಮ್ ಬಿಲ್‌ಕುಲ್ ನಿರಾಕರಿಸಿ, ಬೇರೆ ಕೆಲಸ ಹುಡುಕಲು ಹಚ್ಚಿದ್ದಳು.  ನಾಲ್ಕು ದಿನ ಊರು ತಿರುಗಾಡಿ ಬಂದು ಕಾಲು ಚಾಚಿ, ತಲೆಯ ಮೇಲೆ ಕೈಹೊತ್ತು ಕುಳಿತ ಗಂಡ ಶತ ದಡ್ಡನೆಂದು ತಿಳಿದುಕೊಂಡಿದ್ದಳು ಶಬನಮ್.  ತನ್ನ ಹೊಸ ಜಿಂದಗಿ ಕನಸು ಮತ್ತೆ ಕಫನ್ ಹೊದ್ದುಕೊಳ್ಳುವುದೆ?  ಅವಳ ಒಳಮನಸ್ಸು ತೀವ್ರ ಚಡಪಡಿಸಿತ್ತು.  ಅದರ ಹಸಿಹಸಿಯಲ್ಲಿ ಮೌಲಾಲಿಯ ಹತ್ತಿರ ಹೋಗಿ ಗಂಡನಿಗೆ ಬುದ್ಧಿ ಹೇಳಲು ನಿವೇದಿಸಿಕೊಂಡಿದ್ದಳು.  "ನಾಯಿ ಬಾಲ ನೆಟ್ಟಗ ಮಾಡಾಕ ಬರೂದಿಲ್ಲ.  ಅವನನ್ನು ಕರ್‍ಕೊಂಡು ನೀನು ಊರಿಗೆ ಹೋಗುದು ಚಲೋ" ಎಂದು ಸಾಫ್ ಸಾಫ್ ಹೇಳಿದ್ದ ಮೌಲಾಲಿ.  ಗಂಡನಿಗೆ ತಾನೇ ದುಡಿದು ಹಾಕಿದರೂ ಚಿಂತೆಯಿಲ್ಲ, ಊರಿಗೆ ಮಾತ್ರ ಹೋಗಬಾರದೆಂದು ನಿರ್ಧರಿಸಿಕೊಂಡ ಶಬನಮ್ ಒಂದೆರಡು ದಿನಗಳಲ್ಲಿ ಬೃಹತ್ ಕಟ್ಟಡದ ಕೆಲಸ ನಡೆಯುತ್ತಿರುವಲ್ಲಿ ಹೋಗಿ ನಿಂತಿದ್ದಳು.  ಕಟ್ಟಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದವನು ಚಂದ್ರಕಾಂತರೆಡ್ಡಿ.  ಅವನ ಔದಾರ್ಯದಿಂದ ಆಕೆಗೆ ಕೂಡಲೇ ಕೆಲಸ ಸಿಕ್ಕಿತ್ತು.  ಅವನ ಸಹಾಯವನ್ನು ಶಬನಮ್ ಗಂಡನೆದುರು ಬಣ್ಣಿಸಿ ಹೇಳಿದ್ದಳು.  ಊರಿಗೆ ಹೋಗಿ ಗಲ್ಲಿಯ ಜನರೆದುರು ಮುಖಭಂಗ ಅನುಭವಿಸುವುದನ್ನು ತಪ್ಪಿಸಿದ ಹೆಂಡತಿಯ ಬಗ್ಗೆ ಜಮೀರುಲ್ಲಾನಿಗೆ ಅಭಿಮಾನ ಮೂಡಿತ್ತು.

ಮಧ್ಯ ವಯಸ್ಸಿನ ಮನುಷ್ಯ ಚಂದ್ರಕಾಂತರೆಡ್ಡಿ ಶಬನಮ್‌ಳ ಮೇಲೆ ವಿಶೇಷ ಒಲವು ಅಭಿವ್ಯಕ್ತಿಸುತ್ತಿದ್ದ.  ಅದರ ಪರಿಣಾಮದಿಂದ ಜಮೀರುಲ್ಲಾನ ಸಂಸಾರ ಶೆಡ್ಡಿನಿಂದ ಹೆಂಚಿನಮನೆಗೆ ಸ್ಥಳಾಂತರಗೊಂಡಿತ್ತು.  ಅವನಿಗೆ ವಾಚ್‌ಮನ್ ಕೆಲಸ ದೊರಕಿತ್ತು.  ದೇಹ ದಂಡಿಸುವ ಕೆಲಸವೇ ಅದು?  ಆರಾಮೆನಿಸಿತ್ತು ಜಮೀರುಲ್ಲಾನಿಗೆ.  ರೆಡ್ಡಿ ತನ್ನ ಉಲನ್ ಸ್ವೇಟರ್‍, ತಲೆಗೆ ಮಂಕಿ ಕ್ಯಾಪ್ ಕೊಟ್ಟಿದ್ದ.  ಕೈಯಲ್ಲಿ ಬ್ಯಾಟರಿ ಹಿಡಿದು, ಖುರ್ಚಿಯ ಮೇಲೆ ಕುಳಿತನೆಂದರೆ ಜಮೀರುಲ್ಲಾನ ಕೆಲಸ ಮುಗಿಯಿತು.  ಅಲ್ಲಿಯೇ ಸಖತ್ ನಿದ್ದೆ.  ಬೆಳಿಗ್ಗೆ ಕೆಲಸಗಾರರು ಬರಲಾರಂಭಿಸಿದರೆ ಮನೆಗೆ ಬಂದು ಸ್ನಾನ ಮಾಡುತ್ತಿದ್ದ.  ಊಟಕ್ಕೆ ಫಿಶ್‌ಫ್ರಾಯ್, ಅಂಡಾಕರಿ ಒಂದಿಲ್ಲೊಂದು ಇರುತ್ತಿತ್ತು.  ಗಂಡನಿಗೆ ಪ್ರೀತಿಯಿಂದ ಊಟ ಮಾಡಿಸಿ ಕೆಲಸಕ್ಕೆ ಹೊರಡುತ್ತಿದ್ದಳು ಶಬನಮ್.  ಗಂಡಹೆಂಡರು ಸುಖವಾಗಿರಬೇಕೆಂದು ಚಂದ್ರಕಾಂತರೆಡ್ಡಿ ಹೇಳುತ್ತಿದ್ದ.  ಸತ್ತ ಮೇಲೆ ಮನುಷ್ಯನಿಗೆ ಸ್ವರ್ಗ ಸಿಗುವುದೆಂದು ಷೇಕ್ ಇಮಾಮರು ಮಸೀದಿಯಲ್ಲಿ ಖುತ್ಬಾ (ಪ್ರವಚನ) ಓದುವಾಗ ಹೇಳಿದ್ದು ಕೇಳಿದ್ದ ಜಮೀರುಲ್ಲಾ.  ಆದರೆ ಈಗದು ತನಗೆ ಇರುವಾಗಲೇ ದಕ್ಕಿತಲ್ಲ ಎಂಬ ಅದಮ್ಯ ಖುಷಿಯಲ್ಲಿ ಅವನು ಬೀಗಿಕೊಂಡಿದ್ದ.

ಹಣ ಕೈಯಲ್ಲಿ ಓಡಾಡಲಾರಂಭಿಸಿತ್ತು.  ಇಸ್ಪೇಟ್ ಎಲೆಗಳು ಕಣ್ಣೆದುರು ಕುಣಿಯತೊಡಗಿದ್ದವು.  ಶಬನಮ್ ಕೆಲಸಕ್ಕೆ ಹೋದ ಮೇಲೆ, ಬಾಗಿಲಿಗೆ ಕೀಲಿ ಜಡಿದು ಇಸ್ಪೇಟ್ ಆಟದ ಜಾಗ ಹುಡುಕುತ್ತ ಹೊರಡುತ್ತಿದ್ದ ಜಮೀರುಲ್ಲಾ.  ಅವನ ಬದುಕು ತರಗೆಲೆಯಾದದ್ದೆ ಈ ಆಟದಿಂದ.  ಜನರು ಅವನನ್ನು ರಾಜಾ, ರಾಣಿ, ಜೋಕರ್‍... ಎಂದು ಅಡ್ಡಹೆಸರಿನಿಂದ ಕೂಗುತ್ತಿದ್ದರು.  ಅಂದರ್‌ಬಾಹರ್‍ ಆಟವೆಂದರೆ ಅವನಿಗೆ ಇಷ್ಟ ಒಮ್ಮೆಲೆ ಅದೃಷ್ಟ ಖುಲಾಯಿಸಿಕೊಳ್ಳುವ ತವಕ.  ಅವನಿಗೆ ಇಸ್ಪೇಟ್ ಗೆಳೆಯರು ಕೂಡಲೇ ಸಿಕ್ಕಿದರು.  ಚಟದ ಸಂಬಂಧವೆ ಹಾಗೆಯೆನ್ನುವಂತೆ ಆ ದೋಸ್ತರು ಅವನನ್ನು ಹುಡುಕಿಕೊಂಡು ಬರುವರು.  ಸ್ಟೋರ್‍ ರೂಮಿನ ಎದುರು ರಾತ್ರಿಯಿಡೀ ಆಟ.  ಜಮೀರುಲ್ಲಾನ ವಾಚಮನ್ ಕೆಲಸಕ್ಕೆ ರಂಗೋ ರಂಗು.  ಇಸ್ಪೇಟ್ ಎಲೆಗಳನ್ನು ಕಲಿಸುವಲ್ಲಿನ ಅವನ ಆಸ್ಥೆ ಬೆರಗು ಹುಟ್ಟಿಸುತ್ತಿತ್ತು.  ಆದರೆ ಗೆಲ್ಲುತ್ತಿದ್ದುದು ಅಪರೂಪಕ್ಕೊಮ್ಮೆ ಮಾತ್ರ.  ಹಗಲಿನಲ್ಲಿ ಅವನು ಜನ್ಮಾಂತರದ ನಿದ್ದೆ ಮಾಡುವ ಬಗೆಯಿಂದ ಶಬನಮ್‌ಳಿಗೆ ಬೇಸರ ಅನಿಸುತ್ತಿತ್ತು.  ಕೂಡಿಸಿಟ್ಟ ಹಣ ಕರಗುತ್ತಿರುವ ಬಗ್ಗೆ ಕಂಗೆಡತೊಡಗಿದ್ದ ಆಕೆ ಅವನ ಚಟದ ಬಗ್ಗೆಯೂ ಎಚ್ಚರಿಸಿದ್ದಳು.

ಅವತ್ತು ಮಧ್ಯರಾತ್ರಿಯವರೆಗೂ ಇಸ್ಪೇಟ್ ಎಲೆಗಳನ್ನು ತಿರುವಿ, ಸೋತು ಬೇಸರ ಮಾಡಿಕೊಂಡು ಮಲಗಿದ್ದ ಜಮೀರುಲ್ಲಾನ ನಸೀಬು ಕೆಟ್ಟದ್ದಾಗಿತ್ತು.  ಬೆಳಗಾಗುವಷ್ಟರಲ್ಲಿ ಸ್ಟೋರ್‍ ರೂಮಿನ ಬಾಗಿಲು ಮುರಿದು ಅಲ್ಲಿನ ಸಿಮೆಂಟು ಚೀಲಗಳನ್ನು ಕದ್ದೊಯ್ಯಲಾಗಿತ್ತು.  ಬಯಲಲ್ಲಿ ಇದ್ದ ಒಂದಿಷ್ಟು ಕಬ್ಬಿಣವೂ ಮಾಯವಾಗಿತ್ತು.  ಜಮೀರುಲ್ಲಾನನ್ನು ವಾಚಮನ್ ಕೆಲಸದಿಂದ ತೆಗೆದುಹಾಕಿದ್ದ ಚಂದ್ರಕಾಂತ ರೆಡ್ಡಿ.  ಗಂಡನ ಬೇಜವಾಬ್ದಾರಿ ನಡವಳಿಕೆ ಬಗ್ಗೆ ಸಿಟ್ಟು ಮಾಡಿಕೊಂಡ ಶಬನಮ್ ಅವನನ್ನು ನಾಲಾಯಕ್ ಎನ್ನುವ ಧಾಟಿಯಲ್ಲಿ ಖಂಡಿಸಿದ್ದಳು.  ಮನಸು ಮುದುಡಿಸಿಕೊಂಡು ಹೊರಟು ಹೋಗಿದ್ದ ಜಮೀರುಲ್ಲಾ.  ಸಮಾಧಾನವೆನ್ನಿಸಿ ತಿರುಗಿ ಬಂದವನಿಗೆ ಅದು ತನ್ನ ಮನೆ, ಶಬನಮ್ ತನ್ನ ಹೆಂಡತಿ ಎಂದು ತಿಳಿಯಲಾರದ ಸನ್ನಿವೇಶ.  ಆಕೆ ಚಂದ್ರಕಾಂತರೆಡ್ಡಿಯ ಎದೆಯೊಳಗೆ ಹುದುಗಿರುವುದನ್ನು ಕಣ್ಣುಜ್ಜಿಕೊಂಡು ನೋಡಿದ್ದವನ ಒಡಲಲ್ಲಿ ಲಾವಾ ಕುದ್ದಿತ್ತು.  ಮನೆಯ ಮೇಲಿನ ಹಂಚು ಹಾರಿಬೀಳುವಂತೆ ಹಾರಾಡಿದ್ದ ಅವನು.  "ಜಿಂದಗಿ ಮಾಡಾಕ ಬರದಿ‌ದ್ರೂ ಚೀರಾಟಕ್ಕೇನೂ ಕಮ್ಮಿಯಿಲ್ಲ" ಎಂದು ಶಬನಮ್ ಉರಿಯ ಮೇಲೆ ಉಪ್ಪೆರಚಿದ್ದಳು.  "ಈ ನಸಲಿ ಹರಾಮ್ ನಿನ್ನ ತಲಿ ಖರಾಬ್ ಮಾಡ್ಯಾನ" ಎಂದು ಜಮೀರುಲ್ಲಾ ಚಂದ್ರಕಾಂತರೆಡ್ಡಿಯ ಮೈಮೇಲೇ ಬಿದ್ದಿದ್ದ.  ಅವನ ಕಪಾಳಕ್ಕೆ ರೆಡ್ಡಿ ಬಿಗಿದಿದ್ದು ಒಂದು ಏಟು.  ಕಣ್ಣಿಗೆ ಕತ್ತಲು ಆವರಿಸಿ ಜಮೀರುಲ್ಲಾ ನೆಲಕ್ಕೆ ಕುಸಿದಿದ್ದ.  ಅವನ ಅವಸ್ಥೆ ನೋಡಿ ರೆಡ್ಡಿ ಬಿದ್ದು ಬಿದ್ದು ನಕ್ಕಿದ್ದ.  ಶಬನಮ್ ಅವನ ನಗೆಗೆ ಚಪ್ಪಾಳೆ ತಟ್ಟಿದಂತಿತ್ತು.

ಕುದಿದ ಲಾವಾಕ್ಕೆ ಸ್ಫೋಟಗೊಳ್ಳುವ ಧಾವಂತ ಎನ್ನುವಂತೆ ಮರುದಿನ ಜಮೀರುಲ್ಲಾ ಒಂದಿಬ್ಬರು ಇಸ್ಪೇಟ್ ಗೆಳೆಯರನ್ನು ಕರೆದುಕೊಂಡು ಹಾಡುಹಗಲೇ ಚಂದ್ರಕಾಂತರೆಡ್ಡಿಯ ಎದುರು ಚಾಕು ಹಿಡಿದು ನಿಂತಿದ್ದ.  ತಕ್ಷಣ ಅಲ್ಲಿದ್ದ ಕೆಲಸಗಾರರು ಅವನ ಕೈಯಲ್ಲಿನ ಚಾಕು ಕಿತ್ತುಕೊಂಡು ಮುರಿದು ಬೀಸಾಡಿ ಅವನ ಮೂಳೆ ಸಡಿಲಾಗುವಂತೆ ತದುಕಿದ್ದರು.  ಶಬನಮ್ ಈ ಪ್ರಸಂಗವನ್ನು ದಿವ್ಯ ನಿರ್ಲಕ್ಷದಿಂದಲೇ ಗಮನಿಸಿದ್ದಳು.  ಅವಳ ಬಗ್ಗೆ ರೋಷ, ಬೇಸರ ಒಟ್ಟಿಗೆ ಹುಟ್ಟಿಕೊಂಡಿದ್ದವು ಜಮೀರುಲ್ಲಾನಿಗೆ.  ಅವಳು ತನಗೆ ಸಂಬಂಧಿಸಿದವಳಲ್ಲ ಎಂಬ ತಿಳಿವಳಿಕೆ ದಟ್ಟಗೊಳ್ಳುತ್ತಿರುವಂತೆ ಅವನು ಅಲ್ಲಿಂದ ತೆವಳುತ್ತ ನಡೆದು ಹೋಗಿದ್ದ.  ನೆಲ, ತಲೆಯ ಮೇಲಿನ ಆಕಾಶ, ಮುಖಾಮುಖಿ ಯಾಗುತ್ತಿರುವ ಜನರ ನಡುವೆ ತಾನು ಒಬ್ಬಂಟಿ ಅನಿಸತೊಡಗಿತ್ತು.

        *        *        *

ಆರ್ಭಟದ ಅಲೆಯೊಂದು ಬಂಡೆಗಲ್ಲಿಗೆ ಬಡಿದು, ಹಿಂತಿರುಗುವಾಗ ತನ್ನ ಕಾಲನ್ನು ಹಿಡಿದು ಎಳೆಯುತ್ತಿರುವಂತೆ ಅನಿಸಿ ನೆನಪಿನಾಳದಿಂದ ಫಕ್ಕನೆ ಎಚ್ಚತ್ತುಕೊಂಡಿದ್ದ ಜಮೀರುಲ್ಲಾ.  ಅಗಲೇ ಸೂರ್ಯ ಅಸ್ತಮಿಸಿ ಕತ್ತಲು ಆವರಿಸತೊಡಗಿತ್ತು.  ಜನರು ಒಬ್ಬರೂ ಕಾಣಿಸಲಿಲ್ಲ.  ತಳ್ಳುಗಾಡಿಗಳೂ ಇಲ್ಲ.  ಬರಿದು ಬರಿದಾಗಿ ತೋರಿದ ಕಡಲತೀರ ಅವನ ಮನಸ್ಸನ್ನು ಇನ್ನಷ್ಟು ಶೂನ್ಯಗೊಳಿಸಿತು.  ನಿರ್ಜನ ಪ್ರದೇಶವನ್ನು ಭೀತಿಗೊಳಪಡಿಸುವಂತಿತ್ತು ಕಡಲಿನ ಮೊರೆತ.  ಅದರೊಂದಿಗೆ ಬೆರೆತುಕೊಂಡಂತೆ ಚಂದ್ರಕಾಂತರೆಡ್ಡಿಯ ಅಟ್ಟಹಾಸದ ನಗು ಜಮೀರುಲ್ಲಾನ ಎದೆಯಲ್ಲಿ ಅಗ್ನಿಯನ್ನು ಹೊತ್ತಿಸತೊಡಗಿತ್ತು.  ತನ್ನ ಬದುಕನ್ನು ನುಂಗಿದ ತಿಮಿಂಗಿಲು ಅವನು.  "ಏ, ಹರಾಮ್ ಜಾದೆಽಽ..."  ಜಮೀರುಲ್ಲಾ ಎದ್ದು ನಿಂತು ಕೂಗಾಡಿದ.  ರೆಡ್ಡಿಯ ಅಟ್ಟಹಾಸ ಇನ್ನೂ ವರ್ಧಿಸಿತ್ತು ಶಬನಮ್ ಅದರಿಂದ ಪುಳಕಗೊಂಡಂತೆ ಕಿಲಕಿಲ ನಗತೊಡಗಿದ್ದಳು.  "ದೋಖಾ (ಮೋಸ) ಹೆಂಗಸ್ಸೆ.... ಚಿನಾಲ್ ರಾಂಡ್ಽಽ..." ಜಮೀರುಲ್ಲಾ ಆವೇಶಕ್ಕೊಳಗಾದವನಂತೆ ಜೋರಾಗಿ ಕೂಗುತ್ತ ನೀರಿಗಿಳಿದ.  ಸೊಂಟ ದಾಟಿತ್ತು ನೀರು.  ಮೈಮೇಲೆ ಖಬರು ಇಲ್ಲದವನಂತೆ ಅವನ ಹೆಜ್ಜೆಗಳು ಕೀಳುತ್ತಲೇ ಇದ್ದವು.  ಅಷ್ಟು ದೂರದಲ್ಲಿ ಕಡಲಗರ್ಭದಿಂದ ಮೈದುಂಬಿಕೊಂಡು ಅಲೆಯೊಂದು ಬರತೊಡಗಿತ್ತು.

"ಏ.... ಯಾರು ನೀನು?  ಸಾಯಬೇಕು ಅಂದಿದ್ದಿಯೇನು?"  ಅವನ ರಟ್ಟೆಯನ್ನು ಬಲವಾಗಿ ಹಿಡಿದು ಅವಸರವಸರವಾಗಿ ಎಳೆದು ತಂದು ದಂಡೆಯ ಮೇಲೆ ನಿಲ್ಲಿಸಿದ್ದ ಆ ಮನುಷ್ಯ.  ಆ ಹೊತ್ತಿಗೆ ಅವರ ಮೇಲೆ ಎರಗಿದ ಅಲೆ ಬಂದಂತೆ ಹಿಂದೆ ಸರಿದಿತ್ತು.  ಕುಸಿದು ಕುಳಿತ ಜಮೀರುಲ್ಲಾ ರೊಂಯ್ಽಽ ಎಂದು ಅಳತೊಡಗಿದ.

"ಏನಾಗಿದೆ ನಿನಗೆ?  ಹೀಗೇಕೆ ಅಳುತ್ತಿ ಹೆಂಗಸರ ಹಾಗೆ?"  ಆ ಮನುಷ್ಯ ಜಮೀರುಲ್ಲಾನ ಮೈ ತಿವಿದು ಕೇಳಿದ.  "ನನ್ನ ಜಿಂದಗಿ ಸಮುದ್ರ ಪಾಲಾತು"  ಜಮೀರುಲ್ಲಾ ಮತ್ತೆ ಬಿಕ್ಕಿದ್ದ.

"ಅದಕ್ಕೆ ಸಮುದ್ರಕ್ಕೆ ಬಿದ್ದು ಸಾಯಲು ಹೊರಟಿದ್ದಿಯೇನು"?

"ನನ್ನ ಶಬನಮ್ ಮೋಸಾ ಮಾಡಿದ್ಲು"  ಜಮೀರುಲ್ಲಾ ನಡೆದ ಘಟನೆಯನ್ನು ವಿವರಿಸಿದ.  ಅವನೆದುರು ಕುಳಿತ ಆ ಮನುಷ್ಯ "ಹೆಂಡತೀನ ಆಳಲಿಕ್ಕೆ ಬರಲಾರದವನಿಗೆ ಅಳುವೇ ಗತಿ ನೋಡು" ಎಂದು ಪಕಪಕನೆ ನಕ್ಕ.

"ನಾನು ಆಕಿಮ್ಯಾಲೆ ಭರೋಸಾ ಇಟ್ಟು ಈ ಊರಿಗೆ ಬಂದೆ"

"ಹೆಂಗಸರು ಅಂದರೆ ಈ ಸಮುದ್ರ ಇದ್ದ ಹಾಗೆ.  ನೋಡಲು ಸುಂದರ, ಒಳಗೆ ಭಯಂಕರ! ಅಪಾಯಕಾರಿ!!"  ಉದ್ಗರಿಸಿದ ಆ ಮನುಷ್ಯ.  ಅವನು ಹೇಳುವುದರಲ್ಲಿ ವಾಸ್ತವ ಇದೆಯೆನ್ನಿಸಿತು.  ಶಬನಮ್‌ಳ ಸೋಗಲಾಡಿತನ ಜಮೀರುಲ್ಲಾನ ಕಣ್ಮುಂದೆ ಸುಳಿದಾಡಿತು.

"ಹೆಂಗಸರ ಪುಕ್ಕ ಬೆಳೆಯಲು ಅವಕಾಶ ಕೊಡಬಾರದು.  ಪುಕ್ಕ ಬೆಳೆದರೆ ಅವರ ಹಾರಾಟ ಜೋರಾಗುವುದು.  ಹಾರಿ, ಆಕಾಶಕ್ಕೆ ನೆಗೆದು, ನಮ್ಮ ನೆತ್ತಿ ಕುಕ್ಕುವರು".  ಹೆಂಗಸರ ಬಗೆಗಿನ ಆ ಮನುಷ್ಯನ ಅಭಿಪ್ರಯ ಕಠೋರವಾಗಿತ್ತು.  ಜಮೀರುಲ್ಲಾ ಅವನ ಮುಖ ದಿಟ್ಟಿಸುತ್ತ ಕೇಳಿದ "ನನ್ನ ಹೆಂಡ್ತಿ ಹಾಂಗ ನಿನ್ನ ಹೆಂಡ್ತೀನೂ...?"

ಅವನ ಪ್ರಶ್ನೆ ಪೂರ್ತಿಯಾಗುವ ಮೊದಲೇ ಆ ಮನುಷ್ಯನ ಧ್ವನಿ ಗಡುಸಾಗಿತ್ತು.

"ಏಽಽ ಪಾಗಲ್ ಬುದ್ಧಿಯವನೆ.  ನನ್ನ ನೋಡಿದರೆ ನಿನಗೆ ಅಂಥ ಗುಮಾನಿ ಬರುವುದೇನು?  ಮರ್ದ್ ಇದ್ದೇನೆ ನಾನು.  ನನ್ನಾಕೆಯ ಪುಕ್ಕಗಳನ್ನು ಬೇರು ಸಹಿತ ಕತ್ತರಿಸಿ ಹಾಕಿದ್ದೇನೆ.  ನನ್ನ ಆವಾಜು ಕೇಳಿದರೆ ಪ್ರಾಣ ಹೋದವರಂತೆ ಒದ್ದಾಡುತ್ತಾಳೆ ಆಕೆ"  ಹೆಮ್ಮೆ ವ್ಯಕ್ತಪಡಿಸಿದ ಅವನು.

ಈ ಮನುಷ್ಯನ ಗಡಸುತನ ತನ್ನಲ್ಲಿಯೂ ಇದ್ದಿದ್ದರೆ ಶಬನಮ್‌ಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ತಾನೂ ಜಬರಾಗಿ ಇರಬಹುದಾಗಿತ್ತು ಎಂದುಕೊಂಡ ಜಮೀರುಲ್ಲಾ.

ಆಕಾಶದಲ್ಲಿ ನಕ್ಷತ್ರಗಳು ಹೊಳೆದಿದ್ದವು.

"ನಿನ್ನ ಹೆಸರೇನು?" ಕೇಳಿದ್ದ ಆ ಮನುಷ್ಯ.

"ಜಮೀರುಲ್ಲಾ"

"ನನ್ನ ಹೆಸರು ಮುನೀರ್‍.  ನಿನ್ನ ಮುಖದಲ್ಲಿ ಕಣ್ಣೀರು ಬತ್ತಿದೆ.  ಹೋಗಿ ತೊಳೆದುಕೊಂಡು ಬಾ.  ನಿನಗೆ ಪೆನ್ನಿ ಕೊಡುತ್ತೇನೆ"

"ಪೆನ್ನಿ...!  ಏನದು?"

"ನೀನು ಸಾರಾಯಿ ಕುಡಿಯುದಿಲ್ಲವೆ?"

"ಇಲ್ಲ"

"ಅದಕ್ಕೆ ನೀನು ಜಡವಾಗಿದ್ದಿ.  ಹೆಂಗಸರ ಹಾಗೆ ಅಳುತ್ತಿ.  ಈ ಪೆನ್ನಿ ಕುಡಿದರೆ ನೋವು ಅನ್ನುವುದೇ ಇರೋದಿಲ್ಲ.  ಇದು ಎಲ್ಲ ದುಃಖಕ್ಕೆ ರಾಮಬಾಣ."

"ನಿನ್ಗ ದುಃಖ ಐತೇನು?"

"ಇದೆಯೆಂದರೆ ಇದೆ,  ಇಲ್ಲವೆಂದರೆ ಇಲ್ಲ.  ಅದರ ಕಡೆಗೆ ನಾನು ಲಕ್ಷ್ಯ ಕೊಡುದಿಲ್ಲ.  ನನಗೆ ಜಿಂದಗಿ ಬೇಕು.  ಪೆನ್ನಿ ನನ್ನ ಜಿಂದಗಿ ಕಾಪಾಡುವುದು.  ನಿನಗೆ ಯಾವ ಚಟವೂ ಇಲ್ಲವೆ?"

"ಊರಲ್ಲಿ ಓ.ಸಿ. .... ಆಡ್ತಿದ್ದ್ಯಾ.  ಇಸ್ಪೇಟು ಅಂದ್ರ ನನಗ ಪಂಚಪ್ರಾಣ".

"ಹಾಗಾದರೆ ನೀನು ನನ್ನ ದೋಸ್ತ್.  ಈಗ ಇನ್ನೊಂದಿಷ್ಟು ಪೆನ್ನಿ ಕುಡಿ.  ಮನೆಗೆ ಹೋಗೋಣ.  ಜರೀನಾ ಮೀನಿನ ಸಾರು ಮಸ್ತಮಾಡ್ತಾಳೆ.  ಊಟ ಮಾಡಿ ಮಲಗು.  ನೀನು ನಾಳೆಗೆ ಹೊಸ ಮನುಷ್ಯ ಆಗಬೇಕು.  ನಿನ್ನ ರಾಂಡ್ ಶಬನಮ್‌ಳನ್ನು ಆ ದಗಾಖೋರ ರೆಡ್ಡಿಯನ್ನು ಮರೆಯಬೇಕು.  ಮನುಷ್ಯನಿಗೆ ಜಿಂದಗಿ ಒಂದೇ ಸಲ ಇರುವುದು" ದಾರ್ಶನಿಕನಂತೆ ಮಾತಾಡಿದ ಮುನೀರ.  ಜಮೀರುಲ್ಲಾ ಎದ್ದು ಹೋಗಿ ಕಡಲ ನೀರಲ್ಲಿ ಮುಖ ತೊಳೆದುಕೊಂಡು ಬಂದ.  ತಣ್ಣಗೆ ಬೀಸುತ್ತಿದ್ದ ಗಾಳಿ ಅವನ ಮೈಗೆ ಹಿತವನ್ನುಂಟು ಮಾಡಿತ್ತು.  ಗಾಜಿನ ಸೀಸೆಯೊಂದರ ಮುಚ್ಚಳಿಕೆ ತೆಗೆದು "ಕುಡಿ" ಎಂದು ಮುನೀರ."

"ಇದು ಪೆನ್ನಿ ಏನು?"

"ಹೂಂ"

"ನನಗೆ ರೂಢಿ ಇಲ್ಲ"

"ರೂಢಿ ಮಾಡಿಕೊ.  ಜಿಂದಗಿ ಬೇಕು ಅಂದರೆ" ಆಸೆ ಹುಟ್ಟಿಸಿದ ಮುನೀರ.

ಜಮೀರುಲ್ಲಾ ಸೀಸೆಯೆತ್ತಿ ಒಂದು ಗುಟುಕು ಗಂಟಲಿಗೆ ಸುರವಿಕೊಂಡ.  ಹೊಟ್ಟೆಯೊಳಗೆ ಕೆಂಡ ಸುರಿದ ಅನುಭವವಾಗಿ ಸಂಕಟದಿಂದ ಮುಖ ಕಿವುಚಿದ ಜಮೀರುಲ್ಲಾನನ್ನು ಕಂಡು ಮತ್ತೆ ಫಕ ಫಕ ನಕ್ಕ ಮುನೀರ ಸಾವಧಾನವಾಗಿ ಉಲಿದ "ಗುಟುಕಿನ ಮೇಲೆ ಗುಟುಕು ಇಳಿದರೆ ಪೆನ್ನಿ ಅಮೃತ ಅನ್ನಿಸುವುದು"

"ನನ್ಗ ಇದಽ ಒಂದು ಗುಟುಕು ಸಾಕು" ಎಂದ ಜಮೀರುಲ್ಲಾ.

"ನಾನು ನಿನಗೆ ಒಮ್ಮೆಲೆ ಒತ್ತಾಯ ಮಾಡೋದಿಲ್ಲ" ಎಂದು ಮುನೀರ ಸೀಸೆಯನ್ನು ಇಸಿದುಕೊಂಡು ತನ್ನ ಗಂಟಲಿಗೆ ಗಟಗಟನೇ ಸುರುವಿಕೊಂಡ.  ಜಮೀರುಲ್ಲಾಗೆ ಅವನ ಸಾಮರ್ಥ್ಯ ಅಗಾಧವೆನ್ನಿಸಿತು.

            *    *    *

ಜರೀನಾ ಚಂದದ ಹೆಂಗಸು.  ಫಳ ಫಳ ಹೊಳೆವ ಕಣ್ಣು.  ಚಂದ್ರನ ಮುಖಕ್ಕೆ ಒಪ್ಪುವ ಮಾಟವಾದ ಮೂಗು, ಕೆಂಪು ತುಟಿ.  ತಲೆಯನ್ನು ಸಿಂಗರಿಸಿದ ದಟ್ಟ ಕಪ್ಪು ಕೂದಲು, ಲವಲವಿಕೆಯನ್ನು ಪುಟಿಸುವೆ ದೇಹಸಿರಿ.  ಮುನೀರ ಆ ಚೆಲುವೆಗೆ ಗುಂಜಿಯಷ್ಟು ಸರಿದೂಗುವವನಲ್ಲ ಎಂದುಕೊಂಡ ಜಮೀರುಲ್ಲಾ.

"ಇವನು ಜಮೀರುಲ್ಲಾ.  ನನ್ನ ಹೊಸ ದೋಸ್ತ್.  ಪಾಪ, ಜೀವನದಲ್ಲಿ ನೊಂದಿದ್ದಾನೆ.  ಸಮುದ್ರಕ್ಕೆ ಬೀಳಲು ಹೋಗಿದ್ದ.  ನಾನೇ ರಕ್ಷಿಸಿದೆ.  ಮೀನಿನ ಸಾರು ಮಾಡು.  ಅದನ್ನು ಕುಡಿದರೆ ಇವನಿಗೆ ಜಿಂದಗಿ ಮೇಲೆ ಆಸೆ ಹುಟ್ಟಿರಬೇಕು.  ತಿಳಿತೋ..." ಜಬರು ಧ್ವನಿಯಲ್ಲಿ ಹೇಳಿದ ಮುನೀರ.  ಬಾಗಿಲಲ್ಲಿಯೆ ನಿಂತಿದ್ದ ಜರೀನಾ ತೆಳ್ಳಗಿನ ಸ್ವರದಲ್ಲಿ ಹೂಂಗುಟ್ಟಿ ಒಳಗೆ ಸರಿದು ಹೋದಳು.

ಗುಡಿಸಲಿನ ಹೊರಗೆ ಹಾಕಿದ ಹಗ್ಗದ ಮಂಚದ ಮೇಲೆ ಜಮೀರುಲ್ಲಾನೊಂದಿಗೆ ಕುಳಿತುಕೊಂಡ ಮುನೀರ ಮತ್ತೊಂದು ಸೀಸೆಯ ಮುಚ್ಚಳಿಕೆ ತೆರೆದ.  ಪಕ್ಕದ ಮಂಚದಲ್ಲಿ ಕುಳಿತಿದ್ದ ಮುದುಕ "ನಿನಗೆ ಮನೆಯ ಖಬರು ಇಲ್ಲಾ.  ಮುಸಾಫಿರ್‍ (ಪ್ರವಾಸಿಗ) ಬಂಗ್ಲೆ ಮಾಡಿದ್ದಿ ನೀನು" ಎಂದು ಗೊಣಗಿಕೊಂಡು ಕೆಮ್ಮತೊಡಗಿದ.

ಎರಡು ಗುಟುಕು ಪೆನ್ನಿಯನ್ನು ಬಾಯಿಗೆ ಹಾಕಿಕೊಂಡು "ಈ ಗೂರಲು ಮುದುಕನ ಕಿರಿಕಿರಿ ದಿನಾಲೂ ಇದ್ದದ್ದೆ" ಎಂದು ಉದಾಸೀನದ ಮಾತಾಡಿ ಸೀಸೆಯನ್ನು ಮುದುಕನ ಎದುರು ಹಿಡಿದು "ಗೋರಿಗೆ ಹೋಗಲು ಬಂದಿ, ಗೂರುವುದು ನಿಲ್ಲಿಸಲಿಲ್ಲ.  ಈಗಲಾದ್ರೂ ಈ ಪೆನ್ನಿ ಕುಡಿ.  ಜನ್ನತ್(ಸ್ವರ್ಗ) ಆದ್ರೂ ಸಿಕ್ಕೀತು" ಎಂದು ನಕ್ಕ.  ಅವನ ತಮಾಷೆಯಲ್ಲಿನ ವ್ಯಂಗ್ಯವನ್ನು ಗ್ರಹಿಸಿಕೊಂಡ ಮುದುಕನ ಮೂಗಿನ ಹೊರಳೆ ಹಿಗ್ಗಿತ್ತು.  "ಬೇಶರ್ಮ್‌ನಿಗೆ ಮಾತೊಂದು ಕೇಡು" ಎಂದು ಜೋರಾಗಿ ಹೇಳಿ ಅಸಾಧ್ಯವಾಗಿ ಕೆಮ್ಮತೊಡಗಿದ.

"ಯಾರವರು?" ಜಮೀರುಲ್ಲಾ ಕೇಳಿದ.

"ಅವನು ನನ್ನ ಸಸುರಾ (ಮಾವ) ನನ್ನ ಅಮ್ಮನ ಭೈ ಇವನು.  ಜರೀನಾ ಇವನ ಮಗಳು.  ನನ್ನ ಅಮ್ಮಾನಿಂದ ಜರೀನಾಳ ಅಮ್ಮಾ ಸಾಯುವಾಗ ಮಾತು ತೆಗೆದುಕೊಂಡಿದ್ದಳಂತೆ.  ಜರೀನಾಳೊಂದಿಗೆ ನನ್ನ ಶಾದಿ ಆಯಿತು.  ಈ ಮುದುಕನಿಗೆ ನಾನು ಮನೆಯ ಅಳಿಯನಾಗುವುದು ಬೇಕಾಗಿರಲಿಲ್ಲ.  ಈಗಲೂ ನನ್ನನ್ನು ಕಂಡರೆ ಮುಖ ಉಬ್ಬಿಸುತ್ತಾನೆ.  ನಾನು ಸೊಪ್ಪು ಹಾಕೋದಿಲ್ಲ" ಎನ್ನುತ್ತ ಮತ್ತೆ ಸೀಸೆಯನ್ನು ಬಾಯಿಗಿಟ್ಟುಕೊಂಡ ಮುನೀರ.

ಮುನೀರನ ವ್ಯಕ್ತಿತ್ವದ ಪರಿಚಯ ಜಮೀರುಲ್ಲಾನಿಗೆ ನಾಲ್ಕು ದಿನದಲ್ಲೇ ಆಯಿತು.  ಅವನು ಯಾವ ಕೆಲಸವನ್ನು ಮಾಡುತ್ತಿರಲಿಲ್ಲ.  ಮಾತು ಸೊಗಸಿದಾದರೆ, ನಡವಳಿಕೆ ದಬ್ಬಾಳಿಕೆಯದು.  ಮಾವ ಒಣ ಮೀನುಗಳ ವ್ಯಾಪಾರ ಮಾರುತ್ತಿದ್ದ ಮಾರ್ಕೆಟಿನಲ್ಲಿ ಅವನದೊಂದು ದುಖಾನ್ ಇತ್ತು ಶಾದಿಯಾದ ಹೊಸದರಲ್ಲಿ.  ದುಖಾನ್‌ದ ಜವಾಬ್ದಾರಿ ಮುನೀರನದಾಗಿತ್ತು.  ಮಾವನ ಕಣ್ಣು ತಪ್ಪಿಸಿ ಅವನು ಪೆಟ್ಟಿಗೆಯಿಂದ ಹಣ ಕದಿಯುತ್ತಿದ್ದ.  ಇಸ್ಪೆಟಿನ ಮೂರೆಲೆಯ ಆಟವಾಡುತ್ತಿದ್ದ.  ಹಾಗೆಯೇ ಪೆನ್ನಿಯ ಚಟವೂ ಅಂಟಿಕೊಂಡಿತ್ತು.  ಮಾವನಿಗೆ ಅದು ಇಷ್ಟವಾಗಿರಲಿಲ್ಲ.  ಅವನು ದುಖಾನನ್ನು ದಿವಾಳಿ ಮಾಡುತ್ತಾನೆಂದು, ಅಲ್ಲಿಗೆ ಬರುವುದಕ್ಕೆ ನಿರ್ದಾಕ್ಷಿಣ್ಯವಾಗಿ ನಿಷೇಧಿಸಿದ್ದ.  ತಂದೆಗೆ ಆರಾಮ ಇಲ್ಲ ಅನಿಸಿದಾಗ ಜರೀನಾ ದುಖಾನಲ್ಲಿ ಕುಳಿತು ಬೇಪಾರ ಮಾಡುತ್ತಿದ್ದಳು.  ಹಣ ಬೇಕೆಂದಾಗ ದುಖಾನ್ ಮುಂದೆ ಬಂದು ರಾದ್ಧಾಂತ ಮಾಡುತ್ತಿದ್ದ ಮುನೀರ.  ಮಾವ ರೇಗಿ, ಬೈದಾಡುವನು.  ಮುನೀರ ಅವನ ಮೇಲೆ ಬೀಳುವನು.  ತಂದೆಯನ್ನು ರಕ್ಷಿಸಲು ಹೋಗಿ ಜರೀನಾ ಗಂಡನಿಂದ ಹೊಡೆತ ತಿನ್ನುವಳು.  ತಂದೆ, ಮಗಳನ್ನು ವಾಚಮಗೋಚರವಾಗಿ ಬೈದು, ಹಿಂಸಿಸಿ "ದುಖಾನಿಗೆ ಬೆಂಕಿ ಹಚ್ಚಿ ನಿಮ್ಮನ್ನು ಸುಟ್ಟು, ನಾನು ಮೀನು ಬೇಯಿಸಿಕೊಂಡು ತಿನ್ನುತ್ತೇನೆ" ಎಂದು ಹೆದರಿಸುತ್ತಿದ್ದ ಮುನೀರ.

ಜರೀನಾ ಗಂಡನ ಅಬ್ಬರಕ್ಕೆ ಥರಗುಟ್ಟುತ್ತಿದ್ದಳಾದರೂ ಆವೇಶದ ರಭಸದಲ್ಲಿ "ನೀನು ಕಡಲಿಗೆ ಬಿದ್ದು ಸಾಯಿ" ಎನ್ನುತ್ತಿದ್ದಳು.  "ನಾನು ಸತ್ತರೆ ನಿನಗೆ ಹೊಸ ಮಿಂಡ ಸಿಗುತ್ತಾನೇನು?" ಎಂದು ಅವನು ಗಟ್ಟಿ ಗಟ್ಟಿಯಾಗಿ ಚೀರಿ ಜನರನ್ನು ಸೇರಿಸುವನು.  ಅವರೆದುರಿಗೆ ಆಕೆ ಹಾದರದವಳೆಂದು ದೂಷಿಸುವನು.  ತನಗೆ ತಿನ್ನಲು ಅನ್ನ ಕೊಡುವುದಿಲ್ಲ.  ಕುಡಿಯಲು ಮೀನಿನ ಸಾರು ಕೊಡುವುದಿಲ್ಲ.  ಪೆನ್ನಿ ಕುಡಿಯಲು ದುಡ್ಡು ಕೊಡುವುದಿಲ್ಲ ಎಂದು ಆರೋಪಿಸುವನು.  ಜರೀನಾಳ ಕೂದಲು ಹಿಡಿದು, ನೆಲಕ್ಕೆ ಕುಕ್ಕಿ, ಪೆಕಪೆಕನೆ ಒದೆಯುವನು.

ಜಮೀರುಲ್ಲಾ ಅವನ ನಡತೆಯನ್ನು ಅಸಹನೆಯಿಂದ ನೋಡುತ್ತಿದ್ದ.

ಒಳಗೊಳಗೆ ನೋವು ಅನುಭವಿಸುತ್ತ ಮುಖದಲ್ಲಿ ಯಾವಾಗಲೂ ನಗೆ ಅರಳಿಸಿ ಕೊಂಡಿರುತ್ತಿದ್ದ ಜರೀನಾ ದಿಟ್ಟೆಯೆನಿಸಿತ್ತು ಅವನಿಗೆ.  ಗಂಡನ ಆಕ್ರಮಣವನ್ನು, ಹಿಂಸೆಯನ್ನು ತನ್ನ ತಂದೆಯ ಸಲುವಾಗಿ ಆಕೆ ಸಹಿಸಿಕೊಂಡಿದ್ದಾಳೆಂದು ಅವನು ಗ್ರಹಿಸಿಕೊಂಡಿದ್ದ.

ಆ ದಿನ ಮೀನಿನ ಸಾರು ಮಾಡಲಿಲ್ಲವೆಂಬ ಕಾರಣಕ್ಕೆ ಜರೀನಾಳ ಮೈ, ಮುಖ ಎನ್ನದೆ ಥಳಿಸಿತೊಡಗಿದ ಮುನೀರ.  ಆಕೆ ಸಂಕಟದಿಂದ ಚೀತ್ಕರಿಸಲಾರಂಭಿಸಿದಳು.  ಜಮೀರುಲ್ಲಾ ಮುನೀರನಿಗೆ ಸಮಾಧಾನ ಮಾಡಲು ಯತ್ನಿಸಿದ್ದು ವ್ಯರ್ಥವೆನಿಸಿತು.  ಹೊಟ್ಟೆಗೆ ಬಿದ್ದ ಪೆಟ್ಟಿನಿಂದ ಜರೀನಾ ನೆಲದ ಮೇಲೆ ಬಿದ್ದು ಒದ್ದಾಡ ತೊಡಿಗಿದ್ದಳು.  ಮಗಳ ಹಿಂಸೆಯನ್ನು ನೋಡಲಾರದೆ ಅವಳ ಅಬ್ಬಾಜಾನ್ ಅಳಿಯನನ್ನು ಹೊಡೆಯಲು ಕೈಯೆತ್ತಿದ.  ಮುನೀರ ಮಾವನ ಎದೆಗೆ ಬಿಗಿದ ಮುಷ್ಟಿಯಿಂದ ಬಿರುಸಾಗಿ ಗುದ್ದಿದ.  ಕುಸಿದು ಬಿದ್ದ ಮುದುಕನ ಉಸಿರು ನಿಶ್ಚಲವಾಗಿತ್ತು.  ಜರೀನಾ ಕಡಲು ಭೋರ್ಗರೆಯುವಂತೆ ಭಯಂಕರವಾಗಿ ಆಕ್ರಂದಿಸಿದಳು.  ಈ ಸುದ್ದಿ ಪೊಲೀಸರಿಗೆ ತಿಳಿದು, ಇಬ್ಬರು ಪೇದೆಗಳು ಬಂದು ಮುನೀರನನ್ನು ಸ್ಟೇಶನ್ನಿಗೆ ಕರೆದುಕೊಂಡು ಹೋದರು.

ಪೊಲೀಸರು ಮತ್ತು ಮುನೀರನ ನಡುವೆ ಅದೇನು ಸಂಬಂಧವಿತ್ತೊ ಕೊಲೆಯ ಕೇಸನ್ನು ದಾಖಲಿಸಿಕೊಳ್ಳದೆ ಅವನನ್ನು ನಾಲ್ಕು ದಿನ ಲಾಕಪ್‌ನಲ್ಲಿಟ್ಟಂತೆ ನಾಟಕ ಮಾಡಿ ಹೊರಗೆ ಬಿಟ್ಟಿದ್ದರು.

ಮಾವ ಸತ್ತಿದ್ದರ ದರದು ಇಲ್ಲದಂತೆ ಅವನು ಹೆಂಡತಿಯೆದುರು ಬಂದು ನಿಂತು "ನಾನು ಪೆನ್ನಿ ಕುಡಿಯಬೇಕು ಹಣ ಕೊಡು" ಎಂದು ಕಾಡಿದ.

ಜರೀನಾ ಅವನ ಕಪಾಳಕ್ಕೆ ಬಿರುಸಾಗಿ ಹೊಡೆದು "ನನ್ನ ಉಚ್ಚೆ ಕುಡಿ" ಎಂದಳು.

ಒಡಲಿಗೆ ಬೆಂಕಿ ಬಿತ್ತೊ, ಮುನೀರ ಅವಳ ತುರುಬು ಹಿಡಿದು ಎಳೆದಾಡುತ್ತ "ನನ್ನ ಪೊಲೀಸರಿಗೆ ಹಿಡಿದುಕೊಡಲು ಮಸಲತ್ತು ಮಾಡಿದಿಯಲ್ಲ ಸೊಕ್ಕಿನ ಹೆಂಗಸ್ಸೆ.  ನಿನ್ನಪ್ಪನ ಕೊಂದಂತೆ ನಿನ್ನ ಕೊಂದು ನಾನು ಜೇಲು ಸೇರುತ್ತೇನೆ" ಎಂದು ಹೊಡೆಯಲು ಧಾವಿಸಿದಾಗ ಅವನ ಕಿಬ್ಬೊಟ್ಟೆಗೆ ಜರೀನಾ ತನ್ನ ಮೊಣಕಾಲಿಂದ ತಿವಿದಿದ್ದಳು.  ಹಾಂ ಎಂದವನು ಅಂಗಾತಾಗಿ ನೆಲದ ಮೇಲೆ ಉರುಳಿದ.  ಪೆಟ್ಟು ತಾಗಿದ್ದು ಅವನ ಕಿಬ್ಬೊಟ್ಟೆಗಲ್ಲ, ವೃಷಣಕ್ಕೆ, ಜರೀನಾ ಗಾಬರಿಯಿಂದ ನಡುಗತೊಡಗಿದಳು.  ಜಮೀರುಲ್ಲಾ ಭೀತನಾಗಿ "ಮುನೀರ ಭೈ" ಎಂದು ಮೈದಡವಿದ.  ಅದು ತಣ್ಣಗಾಗತೊಡಗಿತ್ತು.

ಜಮೀರುಲ್ಲಾ ಜರೀನಾಳಿಗೆ ಧೈರ್ಯ ಹೇಳಿದ.  ಅಂಗಳದಲ್ಲಿ ಬಿದ್ದಿದ್ದ ಮುನೀರನ ದೇಹವನ್ನು ಒಳಗೆ ತಂದು ಹಾಕಿದ.  ಮಧ್ಯರಾತ್ರಿ ಹೊತ್ತಿಗೆ ಆ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಕಡಲ ದಂಡೆಯಲ್ಲಿ ಮಲಗಿಸಿ, ಪಕ್ಕದಲ್ಲಿ ಎರಡು ಪೆನ್ನಿ ತುಂಬಿದ ಸೀಸೆಗಳನ್ನು ಇರಿಸಿ ಬಂದ ಜಮೀರುಲ್ಲಾ.

ಸೂರ್ಯನ ಉದಯದೊಂದಿಗೆ ಮುನೀರನ ಸಾವಿನ ಸುದ್ದಿ ಹರಡಿತ್ತು.  ಅವನು ವಿಪರೀತ ಪೆನ್ನಿ ಕುಡಿದು ಸತ್ತಿದ್ದಾನೆಂದು ಜನರು ತಿಳಿದರು.  ಮುನೀರ ತಣ್ಣಗೆ ಕಬರಸ್ತಾನದಲ್ಲಿ ಮಲಗಿಕೊಂಡ.  ಅವನೊಂದಿಗೆ ನಿಜ ಸಂಗತಿ ಕೂಡ.

            *    *    *

ಜಮೀರುಲ್ಲಾ ಈಗ ಶಬನಮ್‌ಳನ್ನು, ದಗಾಖೋರ ಚಂದ್ರಕಾಂತ ರೆಡ್ಡಿಯನ್ನು ಪೂರ್ತಿಯಾಗಿ ಮರೆತಿದ್ದಾನೆ.  ಮುನೀರ ಹೇಳಿದ ಹಾಗೆ ಅವನೀಗ ಹೊಸ ಮನುಷ್ಯನಾಗಿದ್ದಾನೆ.  ಜೀವನ ಪ್ರೀತಿಯಲ್ಲಿ ಧ್ಯಾನಸ್ಥನಾಗಿದ್ದಾನೆ.  ಜರೀನಾ ಅವನಿಗೆ ವ್ಯವಹಾರದ ಕೌಶಲ್ಯವನ್ನು ಕಲಿಸಿದ್ದಾಳೆ.  ಒಣ ಮೀನುಗಳ ವ್ಯಾಪಾರದೊಂದಿಗೆ ಹಸಿ ಮೀನುಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ, ಜರೀನಾ ಅವನ ಪಾಲಿಗೆ ಮೇಮ್‌ಸಾಬ ಅನಿಸಿದ್ದಾಳೆ.  ಊರಿಂದ ತನ್ನ ಅಮ್ಮಾನನ್ನು ಕರೆಯಿಸಿಕೊಂಡ ಅವನು ಚಂದದ ಮನೆ ಕಟ್ಟಿಕೊಂಡಿದ್ದಾನೆ.  ಬಂಗಾರದಂಥ ಇಬ್ಬರು ಗಂಡು ಮಕ್ಕಳಿಗೆ ಅವನು ತಂದೆಯೆನಿಸಿದ್ದಾನೆ.  ಆ ಮಕ್ಕಳ ಅಮ್ಮಾ ಜರೀನಾಳೆ ಆಗಿದ್ದಾಳೆ.  ಮೀನು ಖರೀದಿಸಲು ಬರುವಾಗ ಜಮೀರುಲ್ಲಾ ದಿನಾಲೂ ಹೊಸ ಸೂರ್ಯನನ್ನು ನೋಡಿ ಪುಳಕಗೊಳ್ಳುತ್ತಾನೆ.  ಅವನಿಗೆ ಇಷ್ಟವಾಗುವುದು ಹೊಸ ಸೂರ್ಯ ಮಾತ್ರ.

               ***

ಕೀಲಿಕರಣ: ಕಿಶೋರ್‍ ಚಂದ್ರ

ಶ್ರೀಗುರುನಾಥನ ಆಲಯದೊಳು

ಶ್ರೀಗುರುನಾಥನ ಆಲಯದೊಳು ನಾವ್-
ಈರ್ವರು ನಲಿದಾಡುನು ಬಾ ಬಾ                   ||ಪ||

ಬಾರದಿದ್ದರೆ ನಿನ್ನ ಮಾರಿಗೆ ಹೊಡೆವೆನು
ಸಾರಿ ಈರ್ವರು ನಲಿದಾಡುನು ಬಾ ಬಾ           ||೧||

ಯೋಗದ ಕುದುರೆಯ ಬ್ಯಾಗನೆ ಏರುತ
ಮ್ಯಾಗೇರಿಯವಮಠಕ್ಹೋಗುನು ಬಾ ಬಾ         ||೨||

ನಡಿ ನಡಿ ಶಿಶುನಾಳಧೀಶನ ಗುಡಿಯೊಳು
ಅಡಗಿದ ಪ್ರಣಮವ ನೋಡುನು ಬಾ ಬಾ          ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಸದಗುರುರಾಥ‍ನ್ಹೊರತು ಗತಿ ಬ್ಯಾರಿಹುದೆ?

ಸದಗುರುರಾಥ‍ನ್ಹೊರತು ಗತಿ ಬ್ಯಾರಿಹುದೆ?
ಮುಕ್ತಿದಾತನೆನ್ನುತಾ ಶ್ರುತಿ ಸಾರುತಿದೆ                 ||ಪ.||

ಕೌತಕದಿ ಕಲಿಯೊಳು ಕೂಡಿಸಿದಾ
ರೇತು ರಕ್ತದೊಳು ಮನಿ ಮಾಡಿಸಿದಾ
ಮಾತೆ ಕುಚದೊಳು ಆಮೃತರಸ ನೀಡಿಸಿದಾ          ||೧||

ಏನು ಹೇಳಲಿ ಆತನ ದಯದಿಂದಾ
ದೇವ ಶಿಶುನಾಳೇಶನ ವರದಿಂದಾ
ತಾನು ತಾನೇ ಆದನು ಗುರುಗೋವಿಂದಾ             ||೨||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ನಂಬಿದೆನಯ್ಯಾ ನಿನ್ನ ಸದಗುರುರಾಯಾ

ನಂಬಿದೆನಯ್ಯಾ ನಿನ್ನ ಸದಗುರುರಾಯಾ
ರಕ್ಷಿಸು ಎನ್ನ ಪ್ರೀಯಾ                                   ||ಪ||

ನ೦ಬಿದೆ ನಾ ನಿನ್ನ ಶಂಬು ರಕ್ಷಿಸು ಎನ್ನಾ
ಕುಂಭಿನಿಯಾಳು ಬಿಡದೆ ತುಳುಕುತಿರುವೆ         ||ಅ.ಪ.||

ಹರನಾಮ ಧ್ಯಾನದಲಿ ಫ್ರೇಮದಲಿ
ಕರಿಗೊಂಡು ಮನಸಿನಲಿ ವರವ್ಯಸನವನು ಹರಿದು
ನಿರುತ ಪಾಲಿಸು ದೇವಾ
ಧರಿಯೊಳು ಸತ್ಯಶಂಕರ ರೂಪ ನಿನ್ನ               ||೧||

ಜಡದೇಹಿ ಜಗದಿ ನಾನು ಪರಂಜ್ಯೋತಿ
ಮೃಡರೂಪ ಮೂರ್ತಿ ನೀನು
ಪೊಡವಿಪ ಶಿಶುನಾಳ ಒಡಿಯನ ಕರುಣಿಸೊ
ಕಡುಮತಿ ಸದ್ಗುರು ಗೋವಿಂದನಾಥನೆ             ||೨||  
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ      ||ಪ||

ಕರಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರಬೋಧಿಸಿ ಕರವಿಟ್ಟು ಶಿರದೊಳು      ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ                 ||೨||

ಗುರುವರ ಗೋವಿಂದ ಪರಮಗಾರುಡಿಗ ನಿ-
ನಿರುತಿಹೆ ತಿಳಿಯದು ನರರಿಗೆ ಪರಿಯಿದು        ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಶ್ರೀಗುರು ನಿತ್ಯನಿರಾಲಂಬ

ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ
ಈ ಆತ್ಮಾ ಶಿವಯೋಗಿ                                    ||ಪ||

ಮರಳಿ ತೆರಳದಂತೆ ಭವದೊಳು ಬಾರದೆ
ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ              ||ಅ.ಪ.||

ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ
ಪಾರಮರ್ಥದೊಳಿರುವಾ ನಾಲಿ ನಿಲ್ಲಿಸಿ
ಗುರುಸಾಧ್ಯನಾಗುತ ತಾನು
ಬ್ಯಾರೆ ಬೈಲು ಬ್ರಹ್ಮಜ್ಞಾನದೊಳಿರುವನಯ್ಯ         ||೧||

ವಸುಧಿಯೊಳು ಶಿಶುನಾಳಧೀಶನ ಸೇವಕ
ಉಸುರಿದ ನುಡಿಕೇಳಿ ಪಸರಿಸುವಾ
ಶಶಿಕಿರಣದೋಳ್ ಗುರುಗೋವಿಂದನಾಥನ
ಶಿಶುವೆಂದಿನಿಸಿದಂಥಾ ಕುಶಲ ಶರೀಫನು            ||೨||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಧರೆ ಹೊತ್ತಿ ಉರಿದೊಡೆ


- ಬಸವರಾಜ್ ಡಬ್ಲ್ಯು

ಲೇ... ಬರ್‍ರೋ.. ಏನ್ ನೋಡಾಕ್ಹತ್ತೀರಿ... ಅಲ್ನೋಡು ಮಲ್ಲಣ್ಣ ತಾತ ಐದಾನ... ಲೇ ಎಲೈದನಪಾ... ಆಯಾ... ಆಗ!... ಅಲ್ಲಿ ಮಾರಕ್ಕನ ಹೋಟ್ಲಾಗ ಚಾ ಕುಡ್ಕಂತ ಕುಂತಾನ ಜಲ್ದಿ ಬರ್‍ರೋ... ಜಂಬ, ನಾಗ, ಕೆಂಚ ಎಂದು ಕೂಗುತ್ತ ಹೋಟೆಲ್ ಒಳಗೆ ಹೋದ ಚನ್ನಪ್ಪ.

ತಾತ... ತಾತ... 'ಯಾಕಲೇ ಚನ್ನ ಅದ್ಯಾಕ್ಹಂಗ ಓಡ್ಕಂತ ಬಂದಿ'.  ಇಲ್ಲಪೋ ಮತ್ತೆ ನೀಯಲ್ಲಿ ಓಗಿಬುಡ್ತಿಯಂತ ಬಂದೆ.  ಟೇಬಲ್ ಮೇಲಿದ್ದ ನೀರನ್ನು ಕುಡಿದು ಸ್ವಲ್ಪ ದಣಿವಾರಿಸಿಕೊಂಡ.  ಏನು ತಾತ ಬೇಸೈದಿಯಾ...  ಭಾಳ ದಿವ್ಸ ಆತ್ನೋಡು ನಿನ್ನ ನೋಡ್ಲಾರ್‍ದ.  ಹೌದು ನೋಡಾ... ನೀನೇ ಬರಂಗಿಲ್ಲ ಈಕಡಿ.  ಏನ್ಮಾಡದು ತಾತ ಹೊಲ, ಮನೆ ಅನ್ಕಂಡು ಹೊರಕ ಬರಕ ಆಗಂಗಿಲ್ಲ ನೋಡು.  ಅಲ್ಲೇ ನಿಂತಿದ್ದ ಗೆಳೆಯರನ್ನು ನೋಡಿ,  ಏ... ಬರ್‍ರ್‍ಯಾ, ಅಂಗ್ಯಾಕ ನಿಂತೀರಿ.  `ಅವ್ರು ನಾನು ಬೈದು ಬುಡ್ತೀನಂತ ಎದ್ರಿಕಂಡು ನಿಂತಾರ ಕಳ್ ಸೂಳೇ ಮಕ್ಳು... ಎಂಗೈದಾರ್‍ ನೋಡು ಒಬ್ಬೊಬ್ರನ ಕಡದ್ರೆ ನಾಕ್ ತುಂಡಾಕ್ತಾರ.  ದುಡಿಯಂಗಿಲ್ಲ ದುಃಖ್ ಪಡಂಗಿಲ್ಲ.  ಅಪ್ಪಾ ಮಾಡಿದ್ದ ಆಸ್ತಿ ಕರಗ್ಸೋದ್ಹೆಂಗಂತ ನೋಡ್ತಾರ... ಅದ್ರಾಗ ಲಗ್ಣ ಬ್ಯಾರೆ ಕೇಡು ಈ ನನ್ ಮಕ್ಳಿಗೆ... ಎನ್ ಸುಮ್ನೆ ನೋಡ್ತಿರಿ ಬರ್‍ರಿ' ಎಂದ ಮಲ್ಲಣ್ಣ ತಾತ.  ಅಂಜುತ್ತ ಕಳ್ಳರಂತೆ ಬಂದು ಕುಳಿತರು ಜಂಬ, ನಾಗ, ಕೆಂಚ.

ಮಾರಕ್ಕ... ರವಟು ಚಾ ಕೊಡಂಗೆ ಈ ಉಡ್ರಿಗೆ.  ಅಲ್ಲಪೋ ತಾತ ಇದೇನು ಅಂತೀನಿ.  ಏ... ಕುಡಿರಾ ಇರ್‍ಲಿ.  ಮತ್ತೆ ನಾ ನಿಮಿಗ್ಯಾವಾಗ ಸಿಗಬೇಕು ಕುಡ್ರಿ ಕುಡಿರಿ.  `ಅದ್ರ ಜತಿಗೆ ಒಂದೊಂದು ಮಿರ್ಚಿ ಕೊಟ್ಬುಡು ಮಾರಕ್ಕ' ಎಂದ ಚನ್ನ.

ಲೇ ಚನ್ನ ಮಿಚಿð ಅಂದ್ರೆ ನಿಮ್ಮಪ್ಪ ನೆಪ್ಪಾಗ್ತಾನ ನೋಡು.  ಅವಾಗ ಮಧ್ಯಾದ್ಹೊತ್ತು ಉಂಡು ಬಂದು ವಗ್ಗಣ್ಣಿ ಮೆಣಸಿಕಾಯಿ ತಿಮ್ತಿತಿದ್ವಿ.  ಆಗಿನ ಕಾಲ ಬೇಸಿತ್ನೋಡು.  ಈಗ್ನೋಡು... ಅನೌನ ರೇಟೆಲ್ಲ ಮ್ಯಾಕೇರ್‍ಯಾವು.  ಸುಡುಗಾಡ್ ಸೂಳೇಮಗನ ಗೌರ್‍ಮೆಂಟ್.  ಏನಾನ ಗಬಕಂಥ ತಿಂಬಂಗಿಲ್ಲ ಉಂಬಂಗಿಲ್ಲ ಎಂದು ಮೀಸೆ ಮೇಲೆ ಕೈಯಾಡಿಸುತ್ತಾ ಕುಳಿತ.

ಊರಿನಲ್ಲಿ ಮಲ್ಲಣ್ಣ ತಾತ ಅಂದ್ರೆ ಎಲ್ಲರಿಗೂ ಇಷ್ಟ.  ಈತನ ಸಾಮಾಜಿಕ ಕಳಕಳಿ ಎಂಥವರಿಗೂ ಬೆಚ್ಚು ಬೀಳಿಸುತ್ತಿತ್ತು.  ಈತ ನಮ್ಮೂರಿನ ನ್ಯೂಸ್ ಪೇಪರ್‍ ಎಂದೇ ಕಂಪ್ಲಿ ಜನ ಕರೆಯುತ್ತಿದ್ದರು.  ಪ್ರಾಮಾಣಿಕ ವ್ಯಕ್ತಿಯಾಗಿದ್ದ ಈತ ಊರಿನ ನ್ಯಾಯ ಬಗೆಹರಿಸುತ್ತಿದ್ದ.  ಈತನ ಮಾತು ಯಾರೂ ತೆಗೆದು ಹಾಕುತ್ತಿರಲಿಲ್ಲ.  ಊರಿನ ಉಸಾಬರಿ ನಿನಗ್ಯಾಕಂತ ಮಕ್ಕಳು ಬೈಯುತ್ತಿರಲಿಲ್ಲ.

ತಾತ... ತಾತ... ಏನಲೇ ಚನ್ನ... ಆಗ ಮತೆ... ಏನನ ಹೊಸ ಸುದ್ದಿ ಇದ್ರೆ ಹೇಳಪೋ ರವಟು ಕೇಳ್ತೀವಿ.  ಅಂಗಾ...  ಹೇಳ್ತಿನಿ ಕೇಳು... ಮನ್ನೆ ಎಪಿಎಂಸಿ ಎಲೆಕ್ಸನ್ ಆತಲ್ಲ ಅವಗೊಂದು ಮಜಾ ಆತ್ನೋಡು.  ಊಂ... ಆ ಭೀಮ ಐದಾನಲಾ... ಯಾರ್‍ ತಾತ... ಅದೇಲೇ ನಮ್ ಮೂಲಿಮನಿ ಭೀಮ ಊಂ... ಊಂ... ಹೌದೌದು... ಎಂದು ತಲೆ ಅಲ್ಲಡಿಸಿದ ಚನ್ನ.

ಅವ್ನು ಎಂಥ ದಡ್‌ಸೂಳೇಮಗ ಅಂದ್ರೆ ಎಲೆಕ್ಸನ್ನಾಗ ನಿತ್ಗಂಡಿದ್ದ.  ಎಲ್ಲಿ ಸೋಲ್ತೀನಂತ ತಿಳ್ಕಂಡು ತನ್ ಓಟು ಆ ಪರಮೇಸಿಗೆ ಹಾಕ್ಬಿಟ್ಟ ಇಂಥನ್ರ ಕಟ್ಗಂಡು ನಾವು ಊರಕ ಐದೀವಿ ನೋಡು ಎಂದಾಗ ಹೋಟೆಲ್ನಲ್ಲಿರುವವರೆಲ್ಲ ನಗತೊಡಗಿದರು.

ಆ ಪರಮೇಸಿ ರೊಕ್ಕ ಇದ್ದಾತ.  ಮೆಂಬರ್‍ಸಿಗೆಲ್ಲ ರೊಕ್ಕ ಕೊಟ್ಟು ತಾನು ಅಧ್ಯಕ್ಷ ಆದ.  ಈ ಭಂಡ ಭೀಮ ಎಲೆಕ್ಸನ್ ಎದುಸ್ರಾಕ ಆಗ್ಲಾರ್‍ದೆ ಈ ಪರಿಸ್ಥಿತಿ ತದ್ಕಂಡಾನ ನೋಡು.  ಆಮ್ಯಾಕ ಇನ್ನೊಂದು ಸುದ್ದಿ ಕೇಳು.  ಎಂದು ಕುಂಡಿ ತುರಿಸಿಕೊಳ್ಳೂತ್ತ ಮಾತು ಶುರುಮಾಡಿದ.

ನಿನ್ನೆ ಆ ಮೇಸ್ಟ್ರು ಮಲ್ಲೇಸಿ ಸತ್ತ.  ಎಂಗ ಸತ್ತಂತ ಕೇಳು ಸ್ವಲುಪು.  ಅವ್ನು ಮೊದ್ದಲೆ ಕುಡ್ಕ.  ಬರೇ ಓಸಿ, ಇಸ್ಪೇಟು, ಸೋಳೇರಂತ ಬಂದ ಸಂಬ್ಳ ಎಲ್ಲಾ ಖರ್ಚು ಮಾಡ್ತಿದ್ದ.  ಮೈಯಾಗ ಆರಾಮಿಲ್ದಂಗಾತು ಬಳ್ಳಾರಿ ಓಪಿಡಿ ಆಸ್ಪತ್ರಿಗ್ಹೋಗಿ ತೋರಿಸ್ಕಂಡು ಬಂದ.  ಆದ್ರೆ... ಅಲ್ಲಿ ಡಾಕ್ಟ್ರು ಅವನಿಗೆ ಕ್ಯಾನ್ಸರ್‍ ಐತಂತ ಹೇಳ್ಬಿಟ್ರು.  ಎದಿನೇ ಹೊಡ್ಕಂಡ್ಹಂಗ ಮಾಡ್ದ.  ಮನ್ಯಾಗ ಏನೂ ಹೇಳ್ದೆ ನನ್ಮುಂದ ಬಂದು ಹೇಳ್ದ.  ನಾವು ಸೀದಾ ಹುಬ್ಬಳ್ಳಿ ಕ್ಯಾನ್ಸರ್‍ ಆಸ್ಪತ್ರಿಗ್ಹೋಗಿ ಸ್ವಲುಪು ದಿನ ಇದ್ವಿ.  ಅಲ್ಲಿ ಡಾಕ್ಟ್ರು ಹೇಳಿದ್ರು `ಇದು ಆಗ್ಲೆ ಬಡ್ಡಿಗೆ ಬಂದೈತಿ ನೀವು ಮನಿಗೆ ಕರ್‍ಕಂಡ್ಹೋಗ್ರಿ.  ಇರಷ್ಟದಿನ ಇರಲ್ಲಿ' ಅಂದ್ರು.  ಅಲ್ಲಿಂದ ಸೀದಾ ಊರಿಗೆ ಬಂದ್ವಿ ಎನ್ನುತ್ತ ಕಿವಿಯೊಳಗೆ ಕಡ್ಡಿ ಹಾಕಿ ಕೂಕಣಿ ತೆಗೆದುಕೊಂಡು ಮತ್ತೆ ಮಾತಿಗಿಳಿದ.

ಮನ್ನೆ ಅವ್ನ ಮನಿ ಹತ್ರ ಹೋಗಿದ್ದೆ ಪಾಪ... ಮಾತಾಡಕ ಬರ್‍ಲಾರ್‍ದಂಗಾಗಿತ್ತು.  ನನ್ನ ನೋಡಿದ್ಕೂಡ್ಲೆ ಅಳಾಕ ಸುರುಮಾಡ್ದ.  ಕೈ ಹಿಡ್ದು ನೋಡ್ದೆ ಆಗ್ಲೆ ತಣ್ಣಗ ಆಗಕ್ಹತ್ತಿದ್ವು...  ಅವ್ನ ಹೆಣ್ತಿಗ್ಹೇಳಿ ಗಂಗೆ ಕೊಡಂಗೆ ಸ್ವಲುಪು... ಅಂದ್ಕೂಡ್ಲೆ ಪಾಪ ಆ ಹುಡ್ಗಿ ಅತ್ಗಂತ ನೀರು ಕೊಟ್ಲು.  ಅಷ್ಟ್ ಜಲ್ದಿ ಸಾಯ್ಲಿಲ್ಲ.  ಅಲ್ಲೇ ಇದ್ದ ಬಗಲ್ಮನಿ ಸಾಂಬಯ್ಯ ಓಡ್ಹೋಗಿ ಸಾರಾಯಿ ಪಾಕೀಟು ತಂದು ಅವ್ನ ಬಾಯಾಗ ಸುರ್‍ದ.  ಸ್ವಲುಪಹೊತ್ತಿಗೆ ಸತ್ತ ನೋಡು ಎನ್ನುತ್ತ ಕುಂಡಿ ಮೇಲೆತ್ತಿ ಢಂ!  ಅಂತ ಹೂಸು ಬಿಟ್ಟ.  ಅಲ್ಲಿರುವವರೆಲ್ಲ ಗಹಗಹಿಸಿ ನಗ ತೊಡಗಿದರು.

ತಾತ ನೀನು ಏನೇ ಅನ್ನು ಬಲೇಟ ಮುದೇತ ನೋಡು... ಯಾಕಲೇ ಚನ್ನ ಅಂಗಮ್ತಿ.  ನಾನು ಹೇಳಿದ್ದು ಎಂಗ್‌ಕಾಮ್ತೈತಿ... ಅಂಗಲ್ಲಪೋ ತಾತ ನಾನು ಅಂಗೆ ಸುಮ್ಕೆ ಕೋಡ ಮಾಡ್ದೆ.  ಅಂದ್ಹಂಗೆ ಈ ವರ್ಸ ಎಂಗೈತಲೇ ನೆಲ್ಲಿನ(ಭತ್ತ) ರೇಟು.  ಏ... ಅಂಥ ರೇಟೇನಿಲ್ಲಪೋ... ಮಮೂಲೈತೆ.  ಎಂಗಾನ ಆಗ್ಲಿ ನೀನೊಬ್ಬತನ ಬುದ್ಧಿವಂತ ಅದೆಲ್ಲ ಸರಿ ಬಿಡು.  ಎಲ್ಲ ನಿನ್ನ ಆಸೀರ್ವಾದಪೋ ತಾತ.  ಲೇ... ನಂದೇನೈತೋ ಎಲ್ಲ ಆ ಸಿವ್ನಾಟ.

ಮಲ್ಲಣ್ಣ ತಾತ ಬೀಡಿ ಸೇದುತ್ತ ಕುಳಿತಿದ್ದ.  ಹೋಟೆಲಿನ ಮುಂದುಗಡೆಯಿಂದ ಹೆಂಗಸು ಹಾದು ಹೋಗುವುದನ್ನು ನೋಡಿದ.  ಕಣ್ಣುಸ್ವಲ್ಪ ಮಂಜಾಗಿದ್ದರೂ ನಿಖರವಾಗಿ ಇಂಥವರೇ ಎಂದು ಗುರುತಿಸುತ್ತಿದ್ದ.  `ಏನಂಗೆ ದ್ಯಾಮವ್ವ... ಅಂಗೇ ವಂಟೆಲಾ...' ಹಿಂತಿರುಗಿ ನೋಡಿದ ದ್ಯಾಮವ್ವ.  ಇಲ್ಲಪೋ ತಾತ... ನಾ ನೋಡ್ಲಿಲ್ಲ ಎಂಗೈದಿಯಪ.  ಆರಮೈದಿಗಿಲ್ಲ...  ಏನ್ ಆರಾಮಂಗೆ `ನಾಡು ಓಗಂತೈತೆ... ಸುಡುಗಾಡು ಬಾ ಅಂತೈತಿ... ನನ್ನ ಕುಣಿ ನೀನೇ ತೋಡ್ಬುಡಂಗೆ'  ಏ... ಅಂಗ್ಯಕಮ್ತಿ ತಾತ.  ನೀ ಇನ್ನೂ ಬಾಳಿ ಬದುಕ್ಬೇಕು.  ನಾಕು ಜನ್ರಿಗೆ ಉಪಕಾರ ಮಾಡಾತ ನೀನು.  ಅದಿರ್‍ಲಿ ನೀನ್ ಎಂಗೈದಿಯಂಗೆ.  ಆಯಾ... ನಂದೇನಪೋ ಅದೇ ಸುಡಗಾಡ ಬದ್ಕು.  ಅಂದ್ಹಂಗ ನಿನ್ ಮಕ್ಳು ಏನಾರ... ಥೂ ಅವ್ರೆಸ್ರು ಎತ್ಬಾಡ.  ಅವು ಇದ್ರೂ ಒಂದೇ... ಸತ್ರೂ ಒಂದೇ.  ಅಂಗ್ಯಾಕಮ್ತ್ಯವಾ.   ಮತ್ತಿನ್ನೇನು ತಾತ... ಅಲಾ ಅವ್ವ ಅಂಥ ನಾನೊಬ್ಬಕೈದೀನಿ ಅಂಬ ಗ್ಯಾನ ಬ್ಯಾಡ ಆ ಕೋಡಿಗಳಿಗೆ.  ಹೆಂಡ್ರು ಬಂದ್ಮೇಲೆ ಯಾ ಅಪ್ಪ... ಯಾ ಅವ್ವ... ನೀನ್ಹೇಳದು ಖರೆವೈತೆ ಬುಡು.  ಅಗಾ... ಎಲ್ಲಿಗ್ಹೊಂಟೆವಾ.  ಇಲ್ಲೇ ಕಿರಾಣಿ ಸಾಮಾನು ತಗಂಬರಾಕ ವಂಟೀನಿ.  ಇಲ್ನೋಡು... ಆ ಕಾಕನ ಅಂಗಡ್ಯಾಗ ತಗಂಬಾ ಮಾಲು ಬೇಸಿರ್‍ತೈತೆ.  ಅಂಗೇ ರೇಟು ಕಮ್ಮಿ ಕೊಡ್ತಾನಾ.  ಆಗ್ಲಿ ತಾತ ಎಂದು ಹೊರಟಳು.

ಲೇ... ನಾಗ, ಜಂಬ, ಕೆಂಚ ನೋಡ್ರಲೋ ಆ ಯಮ್ಮ ಎಂಗ ಕಷ್ಟಪಟ್ಟು ದುಡಿತಾಳ.  ನೀವೂ ಐದೀರಿ... ದರಿದ್ರಗತಿ ತಿಂದು ತಿರ್‍ಗದು ಆತ್ನೋಡು, ಅದು ಸಾಲ್ದಂತ ನಿಮ್ಗೆ ಹೆಂಡ್ರು ಮಕ್ಳು ಬ್ಯಾರೆ ಕೇಡು ಎಂದು ಎಗ್ಗಿಲ್ಲದೆ ಬೈದ ತಾತ.

ತಾತ... ಆಯಮ್ಮ ಸುಡುಗಾಡ್ನಗ ಕುಣಿ ತೋಡ್ತಾಳಲ ದ್ಯಾಮವ್ವ ಅಲಾ.  ಹೌದಪಾ... ಅದೊಂದು ದೊಡ್ಡ ಕತಿ ಐತಿ ಕೇಳು.  ಇಪ್ಪತ್ತೈದೊಸ್ರದ ಹಿಂದೆ ಎಮ್ಮಿಗ್ನೂರಾಗ ಇದ್ಲು.  ಅಲ್ಲಿ ಭಾಳ ಕಷ್ಟ ಅನುಭವಿಸಿದ್ಲು.  ದ್ಯಾಮವ್ವನ ಅಪ್ಪ ಇಲ್ಲೇ ಕಂಪ್ಲಿಗೆ ಗಂಡನ್ನ ಕರ್‍ಕಂಡ್ ಬಂದ್ಬುಡು.  ಇಲ್ಲಿ ಕೂಲಿ ಕೆಲ್ಸ ಸಿಗ್ತಾವು ಅಂತ್ಹೇಳಿ ಕರ್‍ಕಂಡು ಬಂದ.  ಊರೆಲ್ಲ ಸುತ್ತಾಡಿದ್ರೂ ಕೆಲ್ಸ ಸಿಗ್ಲಿಲ್ಲ.  ಕೊನಿಗೆ ನನ್ಕಡೆ ಬಂದು ಕೇಳ್ಕಂಡ್ರು.  ಹೊಸ್ದಾಗಿ ಊರಿಗೆ ಬಂದರ್‍ನ ನಮ್ಮೂರಗಿನ ಜನ ನಂಬಂಗಿಲ್ಲ ಅದ್ಕೆ ನಿಂಗ ಕೆಲ್ಸ ಸಿಕ್ಕಿಲ್ಲ.  ನಾನು ಕೊಡುಸ್ತಿನಿ ನಡಿ ಅಂತ್ಹೇಳಿ ವೀರಣ್ಣ ಗೌಡ್ರ ಮನ್ಯಾಗ ಕೆಲ್ಸಕ್ಕೆ ಸೇರ್‍ಸಿದೆ ದ್ಯಾಮವ್ವನ ಗಂಡ ಲಚಮ್ಯಾನ.

ಊರೆಂಬ ಊರು ಬರೀ ಜಗ, ದ್ವೇಷ, ಅಸೂಯೆಯಿಂದ ಕೂಡಿದ್ದು, ಅಲ್ಲಿ ಜಾತಿ ಲೆಕ್ಕಾಚಾರವೇ ಹೆಚ್ಚಾಗಿತ್ತು.  ಅದ್ರಲ್ಲೂ ಕೆಲವರು ಬುದ್ಧಿವಂತರೂ ಐದಾರಂತ ಒಮ್ಮೆ ಮಲ್ಲಣ್ಣ ತಾತನ ಹತ್ತಿರ ಹೊಸದಾಗಿ ಬಂದ ಇನ್ಸ್‌ಪೆಕ್ಟರ್‍ ಮಾತಾಡಿದ್ರು.  ಇದ್ನೆಲ್ಲ ನೆನೆಸಿಕೊಳ್ಳತ್ತ ಹೇಳತೊಡಗಿದ ತಾತ.  `ತಾತ ಆಯಮ್ಮನ ಕತೆ ಹೇಳದ್ಬಿಟ್ಟು ಏನನ ನೆಪ್ಪಮಾಡ್ಕೆಂತಿಯಲಾ.'  `ರವಟು ತಡ್ಕಳಲೇ... ವೀರಣ್ಣ ಗೌಡ್ರ ಕಣ್ಣು ದ್ಯಾಮವ್ವನ ಮ್ಯಾಲೆ ಬಿತ್ತು.  ಆಕಿನ ಕೆಡ್ಸಾಕ ಪ್ರಯತ್ನಮಾಡಿದ್ದ.  ಅಷ್ಟ್ರಾಗ ಲಚಮ್ಯಾ ಬಂದು ಬುಡುಸ್ಕಂಡು ಗೌಡ್ರಿಗೆ ನವ್ವರ್‍ಹೆಂಗ ಒದ್ದು ಕೆಲ್ಸ ಬುಟ್ಟು ಬಂದ.'

ಒಂದ್ಸಾತಿ ಊರಾಕ ಹೊಸ ರುದ್ರಭೂಮಿ ಬೇಕಂಥ ಹೇಳಿ ಕೆರಿ ಬಗಲಾಗಿನ ಸೋಮಪ್ಪನ ಗುಡ್ಯಾಗ  ಮೀಟಿಂಗ್ ಸೇರಿದ್ವಿ.  ಅವಾಗ ಹೊಸ್ದಾಗಿ ಬಂದ ಇನ್ಸ್‌ಪೆಕ್ಟ್ರು, ಮಠದ ಸ್ವಾಮೇರು, ಊರಿನ ಗೌಡ್ರು, ನಾನು ಮತ್ತೆ ದೈವ ಎಲ್ಲರೂ ಬಂದಿದ್ರು.  ಕೆರೆ ಬಗಲಾಗಿನ ಎರ್‍ಡು ಎಕ್ರಿ ಗದ್ದಿನ ನಾನೇ ದಾನವಾಗಿ ಕೊಟ್ಟೆ ಅಪ್ಷ್ರಾಗ ದ್ಯಾಮವ್ವ ಲಚಮ್ಯಾ ಮತ್ತೆ ಚಲುವಾದಿ ತಾಯಪ್ಪ ಬಂದ್ರು.  ಅಲ್ಲಿದ್ದ ದೈವ `ಏ... ನೀವ್ಯಾಕ ಬಂದ್ರಿ' ಎಂದು ಗದ್ರಿಸಿದ್ರು.  ಅದಕ್ಕೆ `ಏ... ರವಟು ತಡ್ಕಳ್ರಿ ನಾನೇ ಇಲ್ಲಿಗೆ ಬಾ ಅಂತ ಹೇಳಿದ್ದೆ'.  ಅಂದ್ಕೊಡ್ಲೆ ಎಲ್ಲಾ ಸುಮ್ಯಾದ್ರು.  ಅವ್ರು ಒಂದು ಮೂಲ್ಯಾಗ ಕುತ್ಕಣಕ ಹೋದ್ರು.  ಅವಾಗ ನಾನು ತಡುದು `ಏ... ಅಲ್ಯಾಕ ಕುತ್ಕಂತೀರಿ ಇಲ್ಲಿ ಬರ್‍ರಿ, ಮುಂದೆ' ಎಂದಾಗ ಎಲ್ಲಾ ನನ್ ಮಕ ಮಕ ನೋಡಿದ್ರು.  `ಏನ್ಹಂಗ ನೋಡ್ತೀರಿ ಸುಮ್ನಿರಿ.  ಅವ್ರು ನಮ್ಮಂಗ ಮನಸ್ಯಾರ...' ಅಂದ್ಕೂಡ್ಲೆ ಮನಸ್ನ್ಯಾಗ ಬೈಕಮತ ಸುಮ್ನಾದ್ರು.

ಹೊಸ ರುದ್ರ ಭೂಮ್ಯಾಗ ಈಶ್ವರ ಗುಡಿ ಕಟ್ಟಬೇಕಂಥ ತೀರ್‍ಮಾನ ಮಾಡಿದ್ರು ದೈವದವ್ರು.  ಈಶ್ವರ ಗುಡ್ಯಾಗ ಪೂಜಿ ಮಾಡಾಕ ಯಾರಂತ ಮಠದ ಸ್ವಾಮೇರು ಪ್ರಶ್ನೆ ಎತಿದ್ರು.  ಆಗ ಎಲ್ಲರೂ ಸುಮ್ನಾದ್ರು.  ಯಾರಾದ್ರು ಮಾಡ್ತೀರಂತ ಮತ್ತೆ ಕೇಳಿದ್ರು.  ಎಲ್ಲರೂ ಗುಸು ಗುಸಂತ ಮಾತಾಡಾಕ ಸುರುಮಾಡಿದ್ರು.  ನಾನೊಲ್ಲೆ... ನೀನೊಲ್ಲೆ... ಅನ್ನಕ್ಹತಿದ್ರು.  ಅಂಗಾರೆ ಎಂಗಪಾ ಅನ್ಕಂತ ನಾನೇ ಎದ್ದು ಕೇಳ್ದೆ.  ನಂದೊಂದು ಮನ್ವಿ ಐತೆ... ದೈವ ಕೇಳ್ಬೇಕು ಅಂದೆ.

ಇಲ್ಲಿರೋ ದೈವ ಯಾರೂ ಪೂಜಿ ಮಾಡಾಕ ಒಪ್ಪಿಗಿಲ್ಲ ಅಂದಾಗ್ಹಾತು.  ನಾನಗ ತಿಳಿದ್ಹಂಗ ಲಚಮ್ಯಾನ ಹೆಂಡ್ತಿ ದ್ಯಾಮವ್ವ ಪೂಜಿ ಮಾಡ್ತಾಳ ಅಂದ್ಕೂಡ್ಲೆ ಜನ್ರೆಲ್ಲಾ ಗಲಾಟೆ ಮಾಡಾಕ ಶುರುಮಾಡಿದ್ರು.  ದೈವದಾಗ ಒಬ್ಬ ಮುಖಂಡ ಶಿವಲಿಂಗಯ್ಯ ಎದ್ದು ನಿಂತು `ಮಲ್ಲಣ್ಣ ತಾತ ನೀನು ಹೇಳೋದು ನಮ್ಗೆ ಒಂದು ಸ್ವಲುಪನೂ ಒಪ್ಪಿಗಿ ಇಲ್ಲ.  ಅಲಾ... ಈ ಜಾತೇರು ನಮ್ಮ ಈಶ್ವರ ಗುಡ್ಯಾಗ ಪೂಜಿ ಮಾಡದಂದ್ರೆ ಏನು' ಎಂದಾಗ, ದೈವ ಹೌದು... ಹೌದು... ಎಂದು ಕುರಿಗಳು ಒದರಿದ್ಹಂಗ ಒದರಿದ್ರು.  ನಂಗೆ ಸಿಟ್ಟು ಬಂದು ಏ ಶಿವಲಿಂಗಯ್ಯ ಸ್ವಾಮಿ... ಓಗ್ಲಿ ನೀನು ಪೂಜಿ ಮಾಡ್ತೀಯಾ... ಇಲ್ಲ ನಿನ್ನ ಮಗನ್ನ ಬಿಡ್ತಿಯಾ ಎಂದು ಗದ್ರಿಸಿದೆ.  ಅದ್ಕೆ ಸುಮ್ನಗಿ ಕುತ್ಕಂಡ್ಬುಟ್ಟ.  `ಏನ್ ಶಿವಲಿಂಗಯ್ಯ ಸ್ವಾಮಿ... ಸುಮ್ಕೆ ಕುತ್ಕಂಡ್ಬುಟ್ಟಿ' ಎಂದು ಇನ್ಸ್ಪೆಕ್ಟ್ರು ಸಾಹೇಬ್ರು ಮತ್ತು ಮಠದ ಸ್ವಾಮೇರು ಕೇಳಿದ್ಕೂಡ್ಲೆ ಯಾವ ಉತ್ರ ಬರ್‍ಲಿಲ್ಲ.  ಇನ್ಸ್‌ಪೆಟ್ರು ಕೆಲ್ವು ಮುಖಂಡ್ರು ದಲಿತ ಮಹಿಳೆಗೆ ಇಂಥ ಸ್ಥಾನ ಕೊಟ್ಟ ಮಲ್ಲಣ್ಣ ತಾತನ ನಿರ್ಣಯ ಸಂತೋಸ ಆಗೈತಂಥ ಹೊಗಳಿದ್ರು.

ಮಲ್ಲಣ್ಣ ತಾತನ ಮಾತುಗಳನ್ನು ಹೋಟೆಲ್ ಮಾರಕ್ಕ ತದೇಕ ಚಿತ್ತದಿಂದ ಕೇಳುತ್ತಿದ್ದಳು.  ಅದ್ಯಾಕ್ಹಂಗ ನೋಡ್ತೆಂಗೆ ಮಾರಕ್ಕ... ಇನ್ನೊಂದಿನ್ನೊಂದು ಚಾ ಕೊಡು.  ಆತು ತಾತ... ಈಗ ಸೋಸಿ ಕೊಟ್ಬುಡ್ತೀನಿ.

ಲೇ ಚನ್ನ ಇನ್ನೊಂದು ಬೀಡಿ ಇದ್ರೆ ತಾಲೇ... ಇಗ ತಗಳಪೋ... ನೀನು ಭಾಳ ಸೇದ್ತಿ ಬುಡು.  ಏನ್ಮಾಡ್ತ್ಯಾ ಹಾಳ ಚಟ... ಹೌದಲ್ಲಾ, ಅದು ಖರೇವು ಅನ್ನು ಎಂದ ಚನ್ನ, ಎಲ್ಲರೂ ಚಹ ಕುಡಿದು ಮಲ್ಲಣ್ಣ ತಾತ ಹೇಳುವ ಕತೆ ಕೇಳಲು ಮುಂದಾದರು.

ಅಲ್ಲಿಗೆ ಮುಗಿಲಿಲ್ಲ ಕೇಳ್ರಿ.  ದ್ಯಾಮವ್ವ ಲಚಮ್ಯಾಗ ಇಬ್ರು ಗಂಡ್ಮಕ್ಳು.  ಅವರ್‍ನಾ ಸಾಲಿ ಬಿಡ್ಸಿ ಕೂಲಿ ಮಾಡಾಕ ಕಳಿಸ್ತೀನಿ ಅಂದ ಲಚಮ್ಯಾ.  ನಾನೇ ಬಯದು ಹುಡುಗ್ರು ಓದ್ಬೇಕು ಇಲ್ದಿದ್ರೆ ಅವು ನಿನ್ನಂಗ ಆಗ್ತಾವ ನೋಡು.  ನೀಸುಮ್ಕಿರು ಅವರ್‍ನಾ ಗೌರ್‍ಮೆಂಟ್ ಹಾಸ್ಟಲ್ನಾಗ ಸೇರಿಸಾಮಂತೆ.  ನಮ್ಮೂರ್‍ನಗಿರೋ ರೆಹಮಾನ್ ಸಾಬ್ ಮೇಷ್ಟ್ರು ಈಗ ಬಳ್ಳಾರ್‍ಯಾಗ ಇಒ ಮತ್ತೆ ಹೊಸಪೇಟ್ಯಾಗ ನಾಗರಾಜ ರೆಡ್ಡಿ ಮೇಷ್ಟ್ರು ಬಿಇಒ ಆಗ್ಯಾರ.  ಇವರಿಬ್ಬರ್‍ನ ಕೇಳ್ಕಂಡು ಕಂಪ್ಲ್ಯಾಗಿರೋ ಹಾಸ್ಟಲ್ನಾಗ ಸೇರ್‍ಸಮಂತೆ ಎಂದು ಗದ್ರಿಸ್ದೆ.  ಒಂದಿನ ರೆಹಮಾನ್ ಸಾಬ್ ಮತ್ತೆ ನಾಗರಾಜ ರೆಡ್ಡಿ ಮೇಷ್ಟ್ರುನ ಕಂಡು ಬಂದ್ವಿ.  ಆಗ ಅವ್ರು ಒಂದೇ ಮಾತ್ನ್ಯಗ ಒಪ್ಪಗಂಡ್ರು.  ಊರಾಕಿರೋ ಸಂತೆ ಮಾರ್ಕೇಟ್ ಬಗಲಾಗಿನ ಸಾಲ್ಯಾಗ ವೀರಣ್ಣ ಮೇಷ್ಟ್ರು ಮತ್ತೆ ಮಾಬಲಪ್ಪ ಮೇಸ್ಟ್ರಗ್ಹೇಳಿ ರವಟು ಹುಡುಗ್ರಿಗೆ ಬೇಸು ಹೇಳಿ ಕೊಡ್ರಿ ಅದ್ವಿ, ಅವ್ರು ಕಾಳ್ಜಿ ಬುಟ್ಬುಡು ತಾತ ಅಂದ್ರು.  ಆಕಳಿಕೆ ಬಂದು ಐದು ನಿಮಿಷ ಸುಮ್ಮನೆ ಕುಳಿತು ಮತ್ತೆ ಹೇಳಲು ಶುರುಮಾಡಿದ.

ಅದೇ ಟೈಂನಾಗ ರುದ್ರಭೂಮಿ ಕೆಲ್ಸ ಮುಗ್ದು ಈಶ್ವರ ಗುಡಿನೂ ತಯಾರಾಯ್ತು.  ಅದರ ಬಗಲಾಗ ಒಂದು ಸಣ್ಣಗುಡುಸ್ಲು ಹಾಕಿ ದ್ಯಾಮವ್ವ ಲಚಮ್ಯಾಗ ಇರಾಕ ಮಾಡಿದ್ವಿ.  ಈಶ್ವರ ಗುಡಿ ಪೂಜಿ ಮಾಡಾಕ ದ್ಯಾಮವ್ವಗ ತಿಂಗ್ಳಿಗೆ ಮುನ್ನೂರು ರೂಪಾಯಿ ಕೊಡಕ ದೈವ ಒಪಿಗಂತು.  ಆದರೆ ಲಚಮ್ಯಾ ಮತ್ತೆ ತಾಯಪ್ಪ ಅವರಿಷ್ಟದಂಗ ಸುಡುಗಾಡಾಗ ಕುಣಿ ತೋಡಾಕ ಕೇಳ್ಕಂಡ್ರು ಆಯ್ತಂತ ನಾವೂ ಒಪ್ಪಿಗೆಂಡ್ವಿ.  ಹೆಣದ ಕಡೆಯರ್‍ರು ಕೊಟ್ಟ ನೂರು ರೂಪಾಯಿದಾಗ ತಲಾಕ ಅರ್ಧ ತಗಮ್ತಿದ್ರು.  ತಿಂಗಳ್ದಾಗ ನಾಕೋ ಐದೋ ಹೆಣ ಬರ್‍ತಿದ್ವು.  ಬಂದ ರೊಕ್ಕದಾಗ ಸಂಸಾರ ಸಾಗುಸ್ಬೇಕಾಗಿತ್ತು.  ತಾಯಪ್ಪಗ ಅವಾಗವಾಗ ಆರಾಮಿಲ್ದಂಗಾಗಿ ಕುಣಿ ತೋಡಾಕ ಬರ್‍ತಿದ್ದಿಲ್ಲ.  ಅಂಥ ಟೈಮ್ನಾಗ ಲಚಮ್ಯಾಗ ಒಬ್ಬನೇ ಕುಣಿ ತೋಡಾಕಾಗ್ದೆ ದ್ಯಾಮವ್ವನೂ ಆಸ್ರ ಆಗ್ತಿದ್ಲು.  ಒಂದಿನ ತಾಯಪ್ಪಗ ಜಗ್ಗಿ ಜ್ವರ ಬಂದು ಸತ್ತ.  ಕುಣಿತೋಡಾ ಜವಾಬ್ದಾರಿ ಗಂಡ ಹೆಂಡ್ತಿ ಮ್ಯಾಲೆ ಬಿತ್ತು.  ಈ ಸುದ್ದಿ ತಿಳ್ದು ನಂಗೆ ಭಾಳ ಬೇಸ್ರಾತು.  ಪಾಪ... ಆ ಎಣ್ಮಗಳು ಎಂಗಪಾ ಕಷ್ಟ ಪಡ್ತಾಳ ಅಂದ್ಕಂಡು ಲಚಮ್ಯಾನ ಜೊತಿಗೆ ಕೆಲ್ಸ ಮಾಡಾಕ ಬ್ಯಾರೇರ್‍ನ ನೋಡಿದ್ವಿ ಯಾರೂ ಬರ್‍ಲಿಲ್ಲ.  ಇರ್‍ಲಿ ಬುಡಂತ ನಾನು ಸುಮ್ಕೆ ಆಗ್ಬುಟ್ಟೆ ಎನ್ನುತ್ತ ಕಣ್ಣೀರು ಒರೆಸಿಕೊಳ್ಳಲು ಪಂಚೆ ಮೇಲೆತ್ತಿದಾಗ ಮಾರಕ್ಕ ನೋಡಿ ನಾಚಿಗುಂದ ಆಚೆ ತಿರುಗಿದಳು.

ತಾತ... ತಾತ... ಎಂದು ಎಚ್ಚರಿಸಿದ ಚನ್ನ  ಆಂ... ಎನ್ನುತ್ತ... ಲೇ ಚನ್ನ ಇನ್ನೊಂದು ಬೀಡಿ ಇದ್ರೆ ತಾರಲೇ.  ಆವಾಗ ಕೊಟ್ಟೆಲಾ ಬೀಡಿ ಅದ್ಯಾವದ್ಲೆ ಸ್ವಲುಪನ ಸರಿ ಇದ್ದಿಲ್ಲ.  ಗಣೇಶ್ ಬೀಡಿ ಇದ್ರೆ ಕೊಡ್ಲೆ.  ಅನೌನ... ಅದೇ ಬೇಸು.

ಏ... ಇಲ್ಲಪೋ ತಾತ ಅದು.  ಇರ್‍ಲಿತಾ... ಇದ್ದಿದ್ರಾಗ ಸುಧಾರಿಸ್ಯಾಗಮನ ಎನ್ನುತ್ತ ಮೂಗಿನಲ್ಲಿ ಕೈ ಹಾಕಿ ಸಿಂಬಳ ತೆಗೆಯುತ್ತ ಮಾತು ಮುಂದುವರಿಸಿದ.

ಅವಾಗವಾಗ ಗಂಡ ಹೆಂಡ್ತಿ ಜಗಳ ಆಡ್ತಿದ್ರು.  ಇತ್ತಿತ್ಲಾಗ ಲಚಮ್ಯಾ ಜಗ್ಗಿ ಕುಡ್ಯಕ ಸುರುಮಾಡಿದ್ದ.  ರೊಕ್ಕ ಸಾಲ್ವಲ್ದಂತ ಒಂದ್ಸಾರಿ ದ್ಯಾಮವ್ವ ಬಂದು ಹೇಳಿ ಅತ್ತಿದ್ಲು.  ಲಚಮ್ಯಾನ ಕರ್‍ದು ಬುದ್ಧಿ ಹೇಳಿದ್ರೂ ಕೇಳ್ತಿದ್ದಿಲ್ಲ.  ಕಣ್ತಪ್ಸಿ ಕುಡಿತ್ತಿದ್ದ.  ನಿನ್ನ ಹಣೆಬರನೇ ಇಷ್ಟೇ ಓಗಂತ ಬೈದು ಕಳ್ಸಿದ್ದೆ.  ಇದ್ಕಿದ್ದಂಗ ಲಚಮ್ಯಾಗ ಪಾರ್ಸಿ (ಲಕ್ವ) ಹೊಡ್ದು ಒಂದು ಕೈ ಒಂದು ಕಾಲು ಬಿದ್ದು ಮನ್ಯಾಗ ಹಾಸ್ಗಿ ಹಿಡಿದು ಮಕ್ಕಂಬುಟ್ಟ ಸುದ್ದಿ ತಿಳ್ದು ನಾನು ಅವ್ನ ಮನಿಗ್ಹೋಗಿ ನೋಡ್ದೆ.  ಲಚಮ್ಯಾ ನನ್ನೋಡಿ ಅಳಾಕ ಸುರುಮಾಡ್ದ.  ಸುಮ್ಕಿರು ಆದಿದಾತು... ಆ ಸಿವಾ ಐದಾನ ಎಲ್ಲಾ ಕಡಿಮಿ ಮಾಡ್ತಾನ ಬುಡು ಅಂತ್ಹೇಳಿ ಸುಧಾರ್‍ಸಿದೆ.  ಆಂ... ಅಂದ್ಹಂಗ ದ್ಯಾಮವ್ವ... ಆ ನಮ್ಮ ಆದ್ವಾನಿ ಮಸೀದಿ ರುಗಿನರು ಐದಾರಲಾ ಅವ್ರಕಡೆ ಓಗಿ ಒಂದು ಅಂತ್ರ ಕಟ್ಟಿಸ್ಗಂಡು ಲಚಮ್ಯಾನ ಕೈಕಾಲಿಗೆ ಕಟ್ಟು ಕಡಿಮಿ ಆದ್ರೂ ಆಗ್ಬೋದು ಅಂತ್ಹೇಳಿದ್ದೆ.  ಆದ್ರಂಗ ಮಾಡಿದ್ಲು ಸ್ವಲುಪು ಉತ್ಮ ಅಂತ ಅಂದಿದ್ಲು... ಪಾಪ... ಆ ಹೆಣ್ಮಗ್ಳನ ನೋಡಿದ್ರೆ ಕಳ್ಳು ಚುರುಕ್ ಅಂತೈತೆ.  ಏನ್ಮಾಡದು ಬದುಕ್ಬೇಕಲಾ.  ಊಂ... ನಡಿಲಿ... ನಡಿಲಿ ಎಲ್ಲಾ ಸಿವ್ನಿಚ್ಛೆ.

ಒಂದಿನ ಲಚಮ್ಯಾ ಸತ್ತ.  ಊರಾಗೆಲ್ಲ ಸುದ್ದಿ ಗೊತ್ತಾತು.  ಅವರ ಜನಕ್ಕಂತ ಬ್ಯಾರೆ ಸುಡುಗಾಡು ಮಾಡ್ಕ್ಯಡಿದ್ರು.  ಅಲ್ಲಿ ಕುಣಿ ತೋಡಾತ ಅವತ್ತು ಊರಾಕಿದ್ದಿಲ್ಲ.  ಯಾರೂ ಕುಣಿ ತೋಡಾಕ ಮುಂದ ಬರಲ್ಲಿಲ್ಲ.  ಅಂಥವತ್ತ್ಯಗೂ ದ್ಯಾಮವ್ವ ಹಿಂದು ಮುಂದು ನೋಡ್ಹಂಗ ತಾನೇ ಸೆಲಿಕಿ ಹಾರಿ ಗುದ್ಲಿ ಇಡ್ಕಂಡು ಇಬ್ರು ಮಕ್ಳನ ಕರ್‍ಕಂಡು ಸುಡುಗಾಡಗ್ಹೋಗಿ ಕುಣಿ ತೋಡಿ ಮಣ್ಣು ಮಾಡಿ ಬಂದ್ಲು.  ಇಂಥ ವತ್ನಾಗ ಊರಿನ ಜನ ಬರ್‍ಲಿಲ್ಲ ನಾನು ಮತ್ತೆ ನನ್ನ ಫ್ರೆಂಡ್ಸು ಓಗಿ ಮಣ್ಣ ಮಾಡಿ ಬಂದ್ವಿ.  ಯಾಕ್ಲೇ... ಈ ಬೀಡಿ ಸಜ್ಜಿಲ್ಲ ಬುಡು.  ಅವು ಅಂಗೇ ನೀ ಮುಂದ್ಹೇಳಂತ ಕೈ ಅಲ್ಲಾಡಿಸಿ ಪೀಡಿಸಿ ಕೇಳತೊಡಗಿದ ಚನ್ನ.

ಆಂ... ಹೇಳ್ತಿನಿ ಕೇಳು.  ಮಾರ್‍ನೆ ದಿನ ದ್ಯಾಮವ್ವನ ಮನಿಗ್ಹೋಗಿ ಸಮಾಧಾನ ಮಾಡ್ದೆ.  ಬ್ಯಾರೆ ಕೆಲ್ಸ ಮಾಡ್ವಂತಿ ತಗಳಂಗೆ ಅಂದೆ.  ಅದ್ಕ ಆ ಯಮ್ಮ ಒಪ್ಲಿಲ್ಲ.  ಇಲ್ಲ ತಾತ ನಾನು ಇಲ್ಲೆ ಪೂಜೆ ಮಾಡ್ಕಂಡು ಇದ್ಬುಡ್ತೀನಿ ಅಂದ್ಲು.  ಆಗ್ಲೆವಾ... ಆದ್ರೆ ಕುಣಿ ತೋಡ ಕೆಲ್ಸ ಮಾಡಬ್ಯಾಡ ನಿನ್ನೊಬಾಕಿ ಕೈಯಾಗ ಆಗಂಗಿಲ್ಲ ಅಂದೆ.  ಅಂಗೇ ಆಗ್ಲಿ ಅಂದಿದ್ಲು.  ಆದ್ರೆ ಅದಾದ ಸ್ವಲುಪೇ ದಿನಕ್ಕ ಗೌಡನ ಮಗ ಸತ್ತ.  ಆ ಹೊತ್ನಾಗ ಕುಣಿ ತೋಡೋರು ಯಾರೂ ಇರ್‍ಲಿಲ್ಲ.  ನಿರ್ವಇಲ್ದೆ ದ್ಯಾಮವ್ವ ಕುಣಿ ತೋಡಿದ್ಲು.  ಮಕ್ಳನ ಸಾಕ ಸಲುವಾಗಿ ಈ ಕೆಲ್ಸ ಮಾಡ್ತೀನಿ ಬ್ಯಾಡ ಅನಬ್ಯಾಡ ತಾತ ಅಂತ್ಹೇಳಿ ಕಣ್ಣೀರು ತಗದ್ಲು.  ಆತ್ಬುಡವಾ ಎಂದು ಗೋಣು ಅಲ್ಲಾಡಿಸಿ ಬಂದೆ.  ಒಂದೊಂದು ಸರ್‍ತಿ ಯಾಕಾನಾ ಪಾಪ... ಆ ಎಣ್ಮಗ್ಳಿಗೆ ಪೂಜಿ ಕೆಲ್ಸ ಮಾಡ್ಸಕ್ಹತ್ಸಿ ಇಂಥ ಪರಿಸ್ಥಿತಿಗೆ ತಂದು ಬುಟ್ನೇನಂತ ನನ್ನ ಕಳ್ಳು ಚುರುಕ್ ಅಂತೈತಿ.  ತಪ್ಪು ಮಾಡ್ಬಿಟ್ನ್ಯಪೋ... ಎಂದು ಏದುಸುರು ಬಿಡುತ್ತಿರುವುದನ್ನು ನೋಡಿ ಸುಧಾರಿಸಿದ ಚನ್ನ.

ಅಂಗೇನಿಲ್ಲ ಕೇಳು... ದುಡ್ದು ಮಕ್ಳನ ಸಾಲಿ ಓದ್ಸದ್ಲು.  ಅವ್ರು ಬೇಸೋದಿ ಬೆಂಗಳೂರ್‍ನಾಗ ಒಬ್ಬಾತ ಇಂಜಿನಿಯರ್‍ ಆಗ್ಯಾನ.  ಇನ್ನೊಬ್ಬಾತ ಬಳ್ಳಾರ್‍ಯಾಗ ಬ್ಯಾಂಕ್ನಾಗ ಕೆಲ್ಸ ಮಾಡ್ತಾನ.  ಇಬ್ರಿಗೂ ಲಗ್ನ ಮಾಡಿದ್ಲು.  ಬಳ್ಳಾರ್‍ಯಾಗ ಇರ ಮಗ ದ್ಯಾಮವ್ವನ ಇಲ್ಲೆ ಇದ್ಬುಡಂತ ಕರ್‍ದ.  ಅದಕ್ಕ ಒಪ್ಲಿಲ್ಲ.  ನಾನೇ ಗದ್ರಿಸಿ ಅಲ್ಲೆ ಇದ್ಬುಡು ಈ ಸುಡುಗಾಡ್ಯಾಗೇನು ಇರ್‍ತಿ ಅಂದು ಕಳ್ಸಿದ್ದೆ.  ಆದ್ರೆ ಸೊಸಿ ಕಾಟ ಕೊಡಾಕ ಸುರುಮಾಡಿದ್ಲಂಥ ಮತ್ತೆ ಸುಡುಗಾಡಿಗೆ ಬಂದು ಸೇರ್‍ಕಂಡ್ಲು.  ಇಂಗಾತು ನೋಡು ತಾತ ಅಂದು ಗೋಳೋಂತ ಅತ್ಲು.  ನಾನೆಲ್ಲಿಗ್ಹೋಗಂಗಿಲ್ಲಪೋ ತಾತ... ಇಲ್ಲೇ ಇದ್ಬುಡ್ತೀನಿ ಅಂದ್ಲು.  ಅಂಗೆ ಮಾಡವಾಗ ನಿನ್ನ ಹಣೆಬರ್‍ದಂಗ ಇದ್ದಂಗೆ ಆಗ್ತೈತಿ ಅಂದು ಕಳ್ಸಿದ್ದೆ.

ಕುಣಿ ತೋಡದಂದ್ರೆ ಸುಮ್ನೆ ಏನ್ಲೆ ಚನ್ನ... ಐದೈದು ತಾಸು.  ಅದು ಈ ಬಿಸ್ಲಾಗ ಪಾಪ... ದ್ಯಾಮವ್ವ ಒಬ್ಬಾಕೆ ಕುಣಿ ತೋಡ್ತಾಳ.  ಹೆಣದ ಕಡೆಯರ್‍ರು ಕೊಡೋ ನೂರೈವತ್ತೋ... ಇನ್ನೂರೋ ತಗಂಡು ಜೀವ್ನ ಮಾಡ್ತಾಳ.  ಜತಿಗೆ ಈಸ್ವರ ದೇವ್ರು ಗುಡಿ ಪೂಜಿ... ಎಂಗೋ ನಡಸ್ತಾಳ ಜೀವ್ನ.  ಅದಲ್ದೆ ಗಂಡ ಮಾಡಿದ ಸಾಲ ತೀರಸ್ತೈದಾಳ.  ದ್ಯಾಮವ್ವನ ಅಪ್ಪ ಮನಿ ಕಟ್ಟಿಸ್ಗ್ಯಾಳಕಂತ ಜಾಗ ಕೊಟ್ಟಿದ್ದ.  ಅದನ್ಕೂಡ ಮಾರ್‍ಕ್ಯಾಂಡು ಬುಟ್ಟಿದ ಆ ಲಚಮ್ಯಾ.  ನನ್ಲಿಂದ ನಿಂಗೆ ಈ ಕಷ್ಟ ಬಂತು ನೋಡಂಗೆ ದ್ಯಾಮವ್ವ ಅಂದಿದ್ಕ ಆಕಿ ಏನಂದಿದ್ಲು ಗೊತ್ತೇನ್ಲೆ.... ಏ ಬುಡಪೋ ತಾತ ನಂಗೇನಾಗೈತಿ ಗುಂಡ್ಕಲ್ಲಿದ್ಹಂಗ ಐದೀನಿ.  ಅಂಗಲ್ಲವಾ ನಿನ್ನ ಮಕ್ಳು... ಥೂ... ಆ ಮಕ್ಳು ಸುದ್ದಿ ಎತ್ತಬ್ಯಾಡ ಅವ್ರು ನನ್ ಪಾಲಿಗೆ ಇಲ್ಲ ಅನ್ಕಮ್ತೀನಿ.  ಅವ್ರೆಸ್ರು ಎತ್ತಬ್ಯಾಡ ಅಂತೇಳಿದ್ಲು.  ಹೇಳ್ತಾ ಹೇಳ್ತಾ ಮಲ್ಲಣ್ಣ ತಾತ ಕುಸಿದ!

ಚನ್ನ ಮತ್ತವನ ಗೆಳೆಯರು ಎಷ್ಟೇ ಎಬ್ಬಿಸಿದರೂ ಏಳಲಿಲ್ಲ.  ಯಪ್ಪೋ... ತಾತ ನಮನ್ನ ಬುಟ್ಟು ಓಗ್ಬಿಟ್ನಲ್ಲಪ್ಪೋ... ಎಂದು ಬಾಯಿ ಬಾಯಿ ಬಡಿದು ಕೊಳ್ಳುತ್ತಿರುವ ಶಬ್ದ ದ್ಯಾಮವ್ವನ ಕಿವಿಗೆ ಬಿತ್ತು.  ಬಂದು ನೊಡಿದರೆ ಮಲ್ಲಣ್ಣ ತಾತ ಸತ್ತಿದ್ದ.  ಗರ ಬಡಿದಂತೆ ನಿಂತಳು.  `ನಾಡು ಓಗಂತೈತೆ... ಸುಡುಗಾಡು ಬಾ ಅಂತೈತಿ... ನನ್ನ ಕುಣಿ ನೀನೇ ತೋಡ್ಬುಡಂಗೆ'  ಎಂದು ಹೇಳದ್ದ ಮಾತುಗಳು ನೆನಪಾದವು.  ಎಂದಿನಂತೆ ಹಾರೆ, ಗುದ್ದಲಿ, ಪಿಕಾಸಿ ಹಿಡಿದು ಕುಣಿ ತೋಡಲು ಅಣಿಯಾದಳು.

        *   *   *

ಕೀಲಿಕರಣ: ಕಿಶೋರ್‍ ಚಂದ್ರ

ಸದ್ಗುರುವಿನ ವರವು ನಮಗೆ ಇರಲಿ

ಸದ್ಗುರುವಿನ ವರವು ನಮಗೆ ಇರಲಿ
ಸರಸಿಜ ಮುಖಿಯೆ                        ||ಪ||

ಪರಮ ನಿತ್ಯಾನಂದ ಸುಖವು
ಆರವು ಹಿಡಿದು ನುಡಿಯುತಿರಲು
ಸ್ಮರನ ಮತ್ಸರವನ್ನು ಗೆದ್ದು
ಮರಣ ಬಾಧೆ ಮಾಯೆ ತುಳಿದು       ||೧||

ದೇವ ಶಿಶುನಾಳಧೀಶನ
ಜೀವ ದಣಿದು ಉಸುರಿದ೦ತೆ
ಕೇವಲಾದ ಬ್ರಹ್ಮ ತಾನು
ಠಾವಿನೊಳಗೆ ನಿಂತ ಬಳಿಕ             ||೨||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಎನಗೊಂದು
ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ

ಪ್ರಣಮ ಪಂಚಾಕ್ಷರಿಯ ಎಣಿಸಿ ಜಪಮಾಡೆಂದು
ಹನ್ನೊದುಮಣಿ ಮೇಲೆ ಇನ್ನೊಂದು ಸಣ್ಣರುದ್ರಾಕ್ಷಿ                                ||ಅ. ಪ||

ಆದರೊಳುನ್ನತಾಮೃತದ ಶಿಲೆಮಾನ ರತ್ನದ ಹರಳಿನೊಳು
ಚಿನ್ನದ ಎಳಿಯ ಪೊಣಿಸಿ ಎಣಿಸಿ ಜಪಮಾಡೆಂದು                                 ||೧||

ಕಸುಗ್ರಾಮದ ಕಡಕೊಳ್ಳ ಕಡೆಗಿಟ್ಟು
ಹೊಸಗ್ರಾಮ ಸ್ಥಳಕಿಳಿದು
ಬಸವನಾಮಾಮೃತದ ರುಚಿ ಕಂಠಮಾಲೆಯನು ಕೊಟ್ಟಾತನೋ ತಾನು  ||೨||
ಕರದಿ ಕೈದಂಡ ಕೋಲು ಪಾರಮಾಡಿದ ವಿರಚಿಸಲು
ವರವೀರಯೋಗಿ ಧರೆಗೆ ಮೇಲೆ ಶಿಶುನಾಳಢೀಶ
ತರಲಘಟ್ಟದ ಪೀರ ಫಕೀರನಾಗೆನುತ ಮಣಿಮಾಲಿಕವ ಕೊಟ್ಟನೋ        ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುನಾಥನಂತಃಕರಣವಾಯಿತು

ಗುರುನಾಥನಂತಃಕರಣವಾಯಿತು ಆತ್ಮರಾಮನಿಗೆ
ನಿನ್ನಂತರ೦ಗದಿ ಮರಳಿ ತೆರಳದಂತೆ ಇಹದೊಳಗೆ     ||ಪ||

ಸಾಧು ಸಂತತಿ ಸಿದ್ಧ ಆರೂಢಗೆ ತಾನೇಕದೋಳ್
ಆರನಳಿಯುತ ಮೂರು ಮೀರುವನೆ ಬ್ಯಾರೊಂದು ತತ್ವಾಧಾರದಲಿ
ಗುರುಬೋಧ ಪಡದವಗೆ ಪಾರಮಾರ್ಥದ
ನೆಲೆಯನೇರುವಗೆ ಘನತೂರ್ಯದೋಳ್                 ||೧||

ವಸುಧಿಯೊಳ್ ಶಿಶುನಾಳಧೀಶನ ಆಸಮಸೇವಕರಿಗೆ
ಪಶುಪತಿಯ ವಶವಾಗಿ ಗುರುಗೋವಿಂದನಾಥನಿಗೆ
ಕಸಮಳದಿ ಗುರುಕೊಟ್ಟ ಮಂತ್ರವ ಜಪಿಸುತಿರುವವಗೆ || ೨ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಹೋಗೋಣ ನಡಿಯೋ ಬೇಗನೆ ಎದ್ದು

ಹೋಗೋಣ ನಡಿಯೋ ಬೇಗನೆ ಎದ್ದು
ಸಾಗಿ ಸದ್ಗುರುವಿನ ಯೋಗ್ಯ ಮಂದಿರಕೆದ್ದು                ||ಪ||

ಮೃಡನ ಆಕಾರಾ ಪೊಡವಿಯೊಳು ಬಡವರಾಧಾರಾ
ಬಿಡದೆ ಭಕ್ತ ಜನರ ಉದ್ಧಾರಾ ಮಾಡುತಲಿಹ
ಆಡವಿ ಪಾಚ್ಛಾನೆಂಬೋ ಒಡಿಯನಾ ಮಠಕೆದ್ದು           ||೧||

ಕಿಂಕರರಾಗಿ ನಾವಿಬ್ಬರು
ಭೊಂಕರನೆ ಸಾಗಿ ಭಜಿಸಿ ಕರುಣಾಹಂಕಾರ ಪೋಗಿ
ಪಂಕಜಮುಖಿ ಶಂಕರನೆನಿಸಿದ ಆಂಕಲಿಸ್ಥಳಕೆದ್ದು        ||೨||

ಪರಮ ವಿಶಾಲಾ ಪಾವನ ಶುಭ
ಚರಿತನಿರಾಲಾ ನಿರಂಜನ ನಿರುಪಮಶಾಲಾ ದಯಾಪರ
ಪರಲೋಕ್ಕೋದ್ಧರಿಸಿದ ಚರಣಕಮಲಕೆದ್ದು                ||೩||

ಚರರೂಪಧರಿಸಿ  ಚೆನ್ನಾಗಿ ಸಾಧು
ಧರಿಯೊಳವತರಿಸಿ ದಾಸೋಹದ ಸಿರಿಯನ್ನೇ ಮೆರಸಿ
ಸಾರುವೆ ದೇವಾ ಹರಲೀಲೆ ನಟಿಸಿದ ಶರಣ ಪಾದಕೆದ್ದು  ||೪||

ಶಿವಯೋಗಿ ಕಾಣ ಸಂಕಟ ಮಾಯಾ
ಭವ ಜೈಸಿದನೆ ದಯಾಪರಭವದ ಜೀವನನೇ ಸಿದ್ಧೇಶನೆ
ಹರಲೀಲ ಧರಿಸಿಪ ಮಹಿಮನ ಪಾದಕ್ಕೆ                      ||೫||

ವಸುಧಿಪಾಲಿಪನೆ ಶ್ರೀ ಬಸವಾದಿ ಪ್ರಮಥರೋಳ್ ಇಹನೆ
ಶಿಶುವಿನಾಳಧೀಶ ಸಾಖನೆ ಸದ್ಗುರುದಯ
ಅಸಮ ಸದ್ಗುರು ಗೋವಿಂದನ ದಯದಿಂದ                  ||೬||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುಸೇವಾ ಮಾಡೋ

ಗುರುಸೇವಾ ಮಾಡೋ ನೀನು
ಪಾಮರ ಮೂಢಾ                                       ||ಪ||

ಗುರುಸೇವೆ ಮಾಡದೆ
ನರಸೇವೆ ಮಾಡುವಿ
ತಾರಿಸುವವರ ಕಾಣೆ ತಾಮಸ ನಿನ್ನೊಳು         ||ಅ.ಪ.||

ಬಂಧನ ಇಲ್ಲೆ ಕಂಡಿ
ಇಂದಿನ ಕರ್ಮಫಲವೆಲ್ಲ ಇಲ್ಲೆ ಉಂಡಿ
ಮುಂದಿನ ಮಾಗ ತಿಳಕೋಳೋ ಹುಚ್ಚುಮುಂಡೆ
ಎಚ್ಚರಿಕಿಲ್ಲದೆ ಹುಚ್ಚನ ತೆರದಂತೆ
ಬೆಟ್ಟನ ಮರದಂತ ಕೆಟ್ಟನಾಗಲಿಬೇಡ               ||೧||

ಸಾಧುಗಳ ಸಂಗವ ಬಿಟ್ಟು
ವಾದಮಾಡಿ ಕಾದುವದ್ಯಾಕೋ ಖೊಟ್ಟಿ
ವೇದವನೋದಿ ಆದೆಲ್ಲೋ ಮುರಾಬಟ್ಟಿ
ಬೋಧನ ಮಾರ್ಗವ ಸಾಧಿಸಿ ಸದ್ಗುರು
ಪಾದಸೇವೆಯೋಳ್ ನಿರತನಾಗಿ ಬೇಗನೆ          ||೨||

ಮದ್ಯಪಾನ ಮಾಡಿದಿಯೆಲ್ಲೋ
ಮದವೇರಿದಾನಿಯೆಂತಾದಿಯಲ್ಲೋ
ಕದನದೊಳ್ ಕಾಲ ಯಮನಾದಿಯಲ್ಲೋ
ಸದಮಲ ಶಿಶುನಾಳಧೀಶನ ಕಾಣದೆ
ಕಾಲನ ವಶವಾಗಿ ಕೈಸೆರೆ ಸಿಗುವಿಯಲ್ಲೋ         ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಶ್ರೀಗುರು ಮಂತ್ರ

ಶ್ರೀಗುರು ಮಂತ್ರವ
ರಾಗದಿ ನುತಿಸಲು
ಬೋಧ ಸಂಪದ ಸುಖವಾಗುವದೋ     ||ಪ||

ಮಾಜದೆ ಮಂತ್ರದ
ಮೊದಲಕ್ಷರವ
ತೇಜಿಸುತಲಿ ನಿತ್ಯ ಜಪಿಸುವದೋ       ||೧||

ಬಿಡದೆರಕ್ಷರ
ನಡುವಿನ ಶೂನ್ಯದಿ
ದೃಧವಿಡಿದಾತ್ಮದಿ ನುತಿಸುವದೋ      ||೨||

ಬರೆದು ಮೂರಕ್ಷರ
ಕರುಣ ಸೇವಿಸಿದರೆ
ಜನನ ಮರಣ ಭಯ ನೀಗುವದೋ     ||೩||

ನೀ ಕಲಿ ಸುಮ್ಮನೆ
ನಾಲ್ಕು ಅಕ್ಷರಗಳ
ಬೇಕೆನಿಸಿದ ವಸ್ತು ಸಿಗುರಿತಿಹುದೋ   ||೪||

ಶಿಶುನಾಳಧೀಶನ
ಹೆಸರಿನೈದಕ್ಷರ
ಹಸನಾಗಿ ಭಜಿಸಲಹುದೆನಿಸುವದೋ  ||೫||
                ****


-ಶಿಶುನಾಳ ಶರೀಫ್



ಕೀಲಿಕರಣ: ಎಂ.ಎನ್.ಎಸ್. ರಾವ್

ದಯಾಳು ಶ್ರೀಮಂತ

- ಡಬ್ಲ್ಯು. ಬಸವರಾಜ್

ಒಂದು ಊರಿನಲ್ಲಿ ಜಯಶೀಲ ಎಂಬ ದಯಾಳು, ಶ್ರೀಮಂತ ಯುವಕನಿದ್ದ. ಒಮ್ಮೆ ಪಕ್ಕದ ಊರಿಗೆ ವ್ಯಾಪಾರಕ್ಕೆಂದು ಹೊರಟಿದ್ದ.  ದಾರಿಯಲ್ಲಿ ಕೋಳಿಯನ್ನು ಬಲಿ ಕೊಡುವುದನ್ನು ನೋಡಿ ಆಲ್ಲಿಯ ಜನರಿಗೆ ಹೇಳಿದ: `ಅನ್ಯಾಯವಾಗಿ ಆ ಕೋಳಿಯನ್ನು ಕೊಲ್ಲಬೇಡಿ' ಎಂದ. ಆದಕ್ಕೆ ಜನರು `ಅದರ ಪ್ರಾಣ ಉಳಿಸಬೇಕೆಂದರೆ ಸಾವಿರ ಬಂಗಾರದ ನಾಣ್ಯ ಕೊಡು' ಎಂದರು. ಜಯಶೀಲ ಆವರಿಗೆ ಸಾವಿರ ಕೊಟ್ಟು ಕೋಳಿಯನ್ನು ತೆಗೆದುಕೊಂಡು ಹೊರಟ.
 ಮುಂದಿನ ಊರಿನಲ್ಲಿ ಮತ್ತೊಂದು ದೃಶ್ಯ ನೋಡಿದ ಅಲ್ಲಿಯ ಜನ ಕುರಿಯನ್ನು ಬಲಿ ಕೊಡುತ್ತಿದ್ದರು.  `ಇದನ್ನು ಸಾಯಿಸಬೇಡಿ ನೀವು ಕೇಳಿದಷ್ಟು ಹಣ ಕೊಡುವೆ' ಎಂದ. ಈ ಕುರಿಗೆ ಐದು ಸಾವಿರ ನಾಣ್ಯ ಕೊಟ್ಟರೆ ಬಿಟ್ಟುಬಿಡುವೆವು ಎಂದರು ಜನ. ಆವರಿಗೆ ಐದು ಸಾವಿರ ನಾಣ್ಯ ಕೊಟ್ಟು ಕುರಿಯನ್ನು ಕೊಂಡು ತನ್ನ ಊರಿಗೆ ಮರಳಿದ.
  ಹೀಗೆ ಎಲ್ಲರಿಗೂ ದಾನ ಮಾಡಿ ಎಲ್ಲ ಆಸ್ತಿಯನ್ನೂ ಜಯಶೀಲ ಕಳೆದುಕೊಂಡ. ಇದನ್ನು ನೋಡಿದ ಕೋಳಿ ಮರುಗಿತು. `ಒಡೆಯಾ ನೀನೇನು ಯೋಚಿಸಬೇಡ.  ಕಾಡಿನಲ್ಲಿ ನಮ್ಮ ಕೋಳಿಗಳಿಗೆ ಒಬ್ಬ ರಾಜನಿದ್ದಾನೆ. ಅವನು ನಿನಗೆ ಸಹಾಯ ಮಾಡುವನು ನಡೆ' ಎಂದು ತಮ್ಮ ರಾಜನ ಬಳಿಗೆ ಕರೆದುಕೊಂಡು ಹೋಯಿತು.
  ಜಯಶೀಲನ ಪೂರ್ವಾಪರ ಏನೆಲ್ಲ ತಿಳಿದ ಕೋಳಿರಾಜ. `ನಾನು ನಿನಗೊಂದು ಬಂಗಾರದ ಮೊಟ್ಟೆ ಇಡುವ ಕೋಳಿ ಕೊಡುವೆ ತೆಗೆದುಕೋ' ಎಂದಿತು. ಜಯಶೀಲ ಆ ಕೋಳಿಯನ್ನು ತೆಗೆದುಕೊಂಡು ತಮ್ಮೂರಿಗೆ ಹಿಂದಿರುಗಿದ.
  ಕೋಳಿ ಬಂಗಾರದ ಮೊಟ್ಟೆ ಇಡತೊಡಗಿತು. ಇದರಿಂದ ಜಯಶೀಲ ಶ್ರೀಮಂತನಾದ.  ಒಮ್ಮೆ ಕುರಿ `ನಾನೂ ನಿನಗೆ ಏನಾದರೂ ಉಪಕಾರ ಮಾಡಬೇಕೆಂದಿರುವೆ. ಆದಕ್ಕೆ ನಮ್ಮ ಕುರಿ ಹಟ್ಟಿಗೆ ಹೋಗೋಣ. ಆಲ್ಲಿ ನಮ್ಮ ಕುರಿನಾಯಕ ಇದ್ದಾನೆ ಅವನು ನಿನಗೆ ಸಹಾಯ ಮಾಡುತ್ತಾನೆ' ಎಂದು ಹೇಳಿ ಜಯಶೀಲನನ್ನು ಕರೆದುಕೂಂಡು ಹೋಯಿತು. ಅಲ್ಲಿ ಕುರಿ ನಾಯಕ ಆಪರೂಪದ ಬಂಗಾರದ ಉಣ್ಣೆ ಕೊಡುವ ಕುರಿಯನ್ನು ಕೊಟ್ಟಿತು. ಆದನ್ನು ತೆಗೆದುಕೊಂಡು ಬಂದನು. ಜಯಶೀಲ ಎಲ್ಲರಿಗೆ ದಾನ ಮಾಡಿ ಹೆಸರುವಾಸಿಯಾದನು.
  ಒಮ್ಮೆ ಇವನ ದಾನ, ಧರ್ಮ, ಒಳ್ಳೆಯತನ ಪಕ್ಕದ ರಾಜ್ಯದ ರಾಜಕುಮಾರಿಗೂ ಗೊತ್ತಾಗಿ ಜಯಶೀಲನನ್ನು ನೋಡಲು ಬಂದಳು. ಅವನನ್ನು ನೋಡಿದೊಡನೆ ಮೋಹಗೊಂಡು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಳು. ಜಯತೀಲ ಒಪ್ಪಿ ಮದುವೆಯಾದ. ಈ ವಿಷಯ ತಿಳಿದ ರಾಜಕುಮಾರಿಯ ತಂದೆ ಇವಳನ್ನು ಕರೆತಂದು ಸೆರೆಮನೆಗೆ ಅಟ್ಟಿದ. ವಿಷಯ ತಿಳಿದ ಜಯಶೀಲ ದುಃಖಿತನಾದ. ಆಗ ಕೋಳಿ ಮತ್ತು ಕುರಿ `ನೀನೇನು ಚಿಂತಿಸಬೇಡ, ರಾಜಕುಮಾರಿಯನ್ನು ನಾವು ಕರೆತರುತ್ತೇವೆ' ಎಂದು ಹೇಳಿ ಅರಮನೆಯತ್ತ ಹೊರಟವು.
  ಅಲ್ಲಿ ಸೇವಕಿಯರ ವೇಷ ಧರಿಸಿದವು. ಸೆರೆಮನೆಯಲ್ಲಿ ಅಳುತ್ತ ಕುಳಿತಿರುವ ರಾಜಕುಮಾರಿಯನ್ನು ನೋಡಿ, ನೀನು ಅಳಬೇಡ ಜಯಶೀಲನ ಬಳಿ ಕರೆದೊಯ್ಯುತ್ತೇವೆ ಎಂದು ಹೇಳಿ ತಮ್ಮ ನಿಜ ರೂಪ ತಳೆದವು. ಅದನ್ನು ನೋಡಿ ಹೆದರಿದಳು ರಾಜಕುಮಾರಿ. `ಹೆದರಬೇಡ ನಾವು ನಿನಗೆ ಸಹಾಯ ಮಾಡುವೆವು. ನನ್ನ ಬೆನ್ನ ಮೇಲೆ ಕುಳಿತುಕೊ' ಎಂದಿತು ಕುರಿ. ರಾಜಕುಮಾರಿ ಜತೆಗೆ ಕೋಳಿಯೊಂದಿಗೆ ಕುರಿಯ ಬೆನ್ನ ಮೇಲೆ ಕುಳಿತು ಬಂದಳು. ಇದನ್ನು ನೋಡಿದ ಜಯಶೀಲ ಸಂತೋಷಗೊಂಡ. ರಾಜಕುವಕಾರಿ, ಕೋಳಿ ಮತ್ತು ಕುರಿಯೊಂದಿಗೆ ನೆಮ್ಮದಿಯಿಂದ ಬಾಳಿದ ಜಯಶೀಲ.


ಕೀಲಿಕರಣ : ಎಂ ಎನ್ ಎಸ್ ರಾವ್

ದೊರಕಿದಾ ಗುರು

ದೊರಕಿದಾ ಗುರು
ದೊರಕಿದಾ                        || ಪ ||

ಪರಮಾನಂದ ಬೋಧ
ಆರವಿನೊಳಗ ಬಂದು
ದೊರಕಿದಾ ಗುರು
ದೊರಕಿದಾ                        ||ಅ.ಪ.||

ಕರಪಾತ್ರೆ ಹಿಡಿದು ಈ
ನರ ಶರೀರದಿ ತನ್ನ
ಅರುವ ತನಗೆ ತೋರಿ
ಪರಮ ನಂಬುಗೆಯಲಿ
ದೊರಕಿದಾ ಗುರು
ದೊರಕಿದಾ                        ||೧||

ಹಿಂದೆ ಜನ್ಮಾಂತರ
ಒಂದು ಉಳಿಯದಂತೆ
ಒಂದು ವಸ್ತುವಿನೊಳು
ಚಂದದಿಂದಲಿ ಬಂದು
ದೊರಕಿದಾ ಗುರು
ದೊರಕಿದಾ                        ||೨||

ಶಿಶುನಾಳಧೀಶ ಪ್ರ-
ಕಾಶ ಗೋವಿಂದನ
ಆಸಮ ತೇಜೋರೂಪ
ಕಿರಣದಿಂದಲೆ ಬಂದು
ದೊರಕಿದಾ ಗುರು
ದೊರಕಿದಾ                       ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಎಂಥಾ ಬೇಗನೆ ಯವ್ವನ ಬಂತೆ

ಎಂಥಾ ಬೇಗನೆ ಯವ್ವನ ಬಂತೆ ನಿನಗೆ
ನಿಂತು ನೋಡಿ ಹೋಗದಾಂಗಾಯಿತೆನಗೆ          ||ಪ||

ಸಂತಿಗ್ಹೊಗಿ ಸಣ್ಣದೊಂದು
ಚಿಂತಾಕವ ಕದ್ದುಕೊಂಡು
ಹಂತಿಲಿದ್ದವರೆಲ್ಲ ಕಂಡರೆ
ಮೆಂತೇದವನಾ ಹೊಲಾವೂಕ್ಕೆ
ಕಾಂತೆ ಕಬ್ಬಿನ ವನದಿ ಬಂದು
ಕುಂತೆಲ್ಲ ಶೀಗಿಹುಣ್ಣಿವಿಗೆ                                ||೧||

ದಿನದಲ್ಲಿ ಹುಡೂಗಿ ಸಣ್ಣಾಕಿ ಒಳ್ಳೆ
ಘನ ಹಿರಿಯರಿಗೆ ಕಣ್ಣಾರೆ
ಎಣಕಿಗೆಟ್ಟ್ಹಾದರವ ಮಾಡಿ
ಹಣಜಿ ಹುಲ್ಲೋಳಡಗಿ ನೋಡಿ
ಬಣಜಿಗೇರಣ್ಣಾನ ಕೂಡಿ
ಕಣಜತುಂಬಾ ಹೊನ್ನ ಗಳಸಿ                        || ೨ ||

ನೊಣವು ಹತ್ತಿಗೆ ಏರಿ ಸಣ್ಣ
ಮಣಕ ಎಮ್ಮಿ ಕೋಣನೀದ್ಹಾಂಗ,
ಶಿಶುನಾಳೇಶನ ಸೇವಕಗೆ ಸುಳ್ಳೇ
ವಿಷಯಕ್ಕೆ ಎಳಸೀದಿ ಹೀಗೆ                           ||೩||

ಹಸಿಯ ಕಬ್ಬಿನಂತೆ ಶಟದು
ಮಸಿವ ಹಿಂಡಿಯ ಕಲ್ಲು ಕಟದು
ಹೆಸರ ಬಳ್ಳಿಗೆ ಉರುಳಿಬಿದ್ದು
ಕಸದ ಬುಟ್ಟಿ ಹೊತ್ತುಕೊಂಡು
ಬಸರು ಬಯಕಿ ತೋರಲಾಗಿ
ಕೊಸರಿತಲ್ಲೋ ಕರ್ಮ ಕಣ್ಣಿಗೆ                       ||೪||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೆಳ್ಳಿ ಕಡಗ

-ಬಸವರಾಜ್ ಡಬ್ಲ್ಯೂ

ಒಂದು ಕುಗ್ರಾಮದಲ್ಲಿ ಮುದುಕ ಮುದುಕಿ ಇದ್ದರು.  ಅವರಿಗೆ ಒಬ್ಬ ಮಗನಿದ್ದ.  ಆತ ಹೇಳಿದ್ದನ್ನು ತಿಳಿದುಕೊಳ್ಳಲಾರದಷ್ಟು ದಡ್ಡನಾಗಿದ್ದ.  ಮಗನ ಈ ವರ್ತನೆಯಿಂದ ಬೇಸತ್ತ ಅವನ ತಂದೆ-ತಾಯಿ ಪಕ್ಕದ ಆಶ್ರಮದ ಋಷಿಯ ಬಳಿ ಹೋಗಿ `ಸ್ವಾಮೀಜಿ, ಇವನು ನಮ್ಮ ಮಗ ಧನವಂತ.  ಇವನು ದಡ್ಡ.  ಹೇಗಾದರೂ ಮಾಡಿ ಇವನನ್ನು ಬುದ್ಧವಂತನನ್ನಾಗಿ ಮಾಡಿ.  ನಮ್ಮ ಬಳಿ ಇರುವ ಆಸ್ತಿ, ಹಣವನ್ನು ಆಶ್ರಮಕ್ಕೆ ಒಪ್ಪಿಸಿ ನಾವೂ ಇಲ್ಲಿಯೇ ಕೆಲಸ ಮಾಡಿಕೊಮಡು ಇರುತ್ತೇವೆ' ಎಂದು ಬೇಡಿಕೊಂಡರು.  ಧನವಂತನನ್ನೊಮ್ಮೆ ನೋಡಿದ ಋಷಿ `ಆಯಿತು' ಎಂದರು.

`ಧನವಂತಾ, ನೀನು ಸ್ವಲ್ಪ ದಿನಗಳವರೆಗೆ ಸ್ವಚ್ಛಂದವಾಗಿ ಆಶ್ರಮದಲ್ಲಿ ಸುತ್ತಾಡಿಕೊಂಡಿರು.  ಇಲ್ಲಿ ನಿನಗಾಗಿ ಈಜುಕೊಳ, ಪ್ರಾಣಿ, ಪಕ್ಷಿಗಳಿವೆ' ಎಂದರು.  ಸಂತಸಗೊಂಡ ಧನವಂತ `ಆಗಲಿ' ಎಂದು ಕುಣಿಯುತ್ತ ಹೋದ.

ಸ್ವಲ್ಪ ದಿನಗಳ ನಂತರ ಋಷಿಗಳು ತಾವು ಕಲಿತ ಎಲ್ಲ ವಿದ್ಯೆಗಳನ್ನೂ ಕಲಿಸಿ ಧನವಂತನನ್ನು ಬುದ್ಧವಂತನನ್ನಾಗಿ ಮಾಡಿದರು.  ನಂತರ `ನಾನು ಕಲಿತ ವಿದ್ಯೆಯನ್ನೆಲ್ಲ ನಿನಗೆ ಧಾರೆ ಎರೆದಿದ್ದೇನೆ.  ನಿನಗೆ ರಾಜನಾಗುವ ಲಕ್ಷಣಗಳಿವೆ.  ನಿನಗೊಂದು ಬೆಳ್ಳಿ ಕಡಗ ಕೊಡುವೆ.  ಇದು ಸಾಮಾನ್ಯವಾದುದಲ್ಲ.  ನೀನು ಕೇಳಿದ್ದನ್ನೆಲ್ಲ ಕೊಡುತ್ತದೆ.  ಆದರೆ, ಒಳ್ಳೆಯ ಕಾರ್ಯಗಳಿಗೆ ಮಾತ್ರ ಉಪಯೋಗಿಸು' ಎಂದು ಹೇಳಿ ಬೆಳ್ಳಿ ಕಡಗವನ್ನು ಧನವಂತನಿಗೆ ಕೊಟ್ಟರು.

ರಾತ್ರಿ ಮಲಗಿದ್ದ ಸಮಯದಲ್ಲಿ ಧನವಂತನ ಮನದಲ್ಲಿ ಕೆಟ್ಟ ಯೋಚನೆಗಳು ಸುಳಿದಾಡಿದವು.  ತುಸು ಸಮಯದ ನಂತರ ಆತ ಎದ್ದು ಕುಳಿತು, ಬೆಳ್ಳಿ ಕಡಗವನ್ನು ಕೈಗೆ ಹಾಕಿಕೊಂಡು ನನಗೊಂದು ಅರಮನೆ ಬೇಕೆಂದ.  ಕೂಡಲೇ ಅಲ್ಲೊಂದು ಅರಮನೆ ಸೃಷ್ಟಿಯಾಯಿತು.  ತನಗೊಬ್ಬ ರಾಜಕುಮಾರಿ ಬೇಕೆಂದ.  ಮರುಕ್ಷಣವೇ ಅಲ್ಲಿಗೆ ಒಬ್ಬ ಸುಂದರ ಯುವತಿ ಬಂದಳು.  ಹೀಗೆ ಅರಮನೆಯ ರಾಜನಿಗೆ ಬೇಕಾದ ಬೆಳ್ಳಿ, ಬಂಗಾರ, ವಜ್ರ, ವೈಢೂರ್‍ಯ, ಸೈನಿಕರು, ಸೇವಕರು ಎಲ್ಲವೂ ಬಂದವು.  ಇದನ್ನೆಲ್ಲ ಗಮನಿಸಿದ ಋಷಿಗಳು `ಧನವಂತ, ಏನಿದು ವಿಚಿತ್ರ' ಎಂದು ಕೋಪಗೊಂಡರು.  ಆದರೆ, ಧನವಂತ ಅದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.  ಆತ ಅಹಂಕಾರದಿಂದ `ಏ! ಯಾರು ನೀನು?  ನಡೆ ಇಲ್ಲಿಂದ' ಎಂದು ಗದರಿಸಿದ.

`ಥೂ, ಪಾಪಿ, ನೀನು ಸರ್ವನಾಶವಾಗುತ್ತಿ ಹೋಗು' ಎಂದು ಹೇಳಿ ಋಷಿಗಳು ಅಲ್ಲಿಂದ ಹೊರಟರು.

ಇತ್ತ ಧನವಂತ ತನ್ನ ರಾಜ್ಯದಲ್ಲಿ ದರ್ಪ, ಸೊಕ್ಕಿನಿಮದ ಮೆರೆಯುತ್ತ ಪ್ರಜೆಗಳಿಗೆ ಕಿರುಕುಳ ಕೊಡಲು ಆರಂಭಿಸಿದ.  ಅನ್ಯಾಯವಾಗಿ ಭೂಕಂದಾಯ ವಸೂಲಿ ಮಾಡುವುದು, ಭೂಮಿ ಕಬಳಿಸುವುದು, ಪಕ್ಕದ ರಾಜರನ್ನು ಯುದ್ಧಕ್ಕೆ ಆಹ್ವಾನಿಸಿ ತನ್ನ ಬೆಳ್ಳಿ ಕಡಗದ ಸಹಾಯದಿಂದ ಅವರನ್ನು ಸೋಲಿಸಿ, ಅವರ ಸಮಸ್ತ ರಾಜ್ಯವನ್ನೂ ತೆಗೆದುಕೊಂಡು ಆ ರಾಜರನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವುದೇ ಅವನ ಬದುಕಾಯಿತು.

ಇದನ್ನೆಲ್ಲ ಅರಿತ ಋಷಿಗಳು ಧನವಂತನಿಗೆ ಕೊಟ್ಟ ಬೆಳ್ಳಿ ಕಡಗವನ್ನು ದಿವ್ಯ ಶಕ್ತಿಯಿಂದ ತಮ್ಮ ಬಳಿ ಬರುವಂತೆ ಮಾಡಿದರು.  ಕೂಡಲೇ ಬೆಳ್ಳಿ ಕಡಗ ಋಷಿಗಳ ಹತ್ತಿರ ಬಂತು.  ಅಂದಿನಿಂದ ಧನವಂತ ಹಂತ ಹಂತವಾಗಿ ಎಲ್ಲವನ್ನೂ ಕಳೆದುಕೊಂಡ.  ತನ್ನ ತಪ್ಪಿನ ಅರಿವಾಗಿ ಪುನಃ ಋಷಿಗಳ ಹತ್ತಿರ ಬಂದು ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡ.  ಅವನ ಕೋರಿಕೆ ತಿರಸ್ಕರಿಸಿದ ಋಷಿಗಳು `ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡಿದ್ದೇ ತಪ್ಪು, ನಡೆ ಆಚೆ' ಎಂದರು.  ಧನವಂತನ ಹೆಂಡತಿ ಅಳುತ್ತ `ಸ್ವಾಮೀಜಿ, ನನ್ನ ಗಂಡನದು ತಪ್ಪಾಗಿದೆ.  ಮನ್ನಿಸಿ.  ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಕೊಡಿ' ಎಂದು ಬೇಡಿಕೊಂಡಳು.  ಋಷಿಗಳು ಕಡೆಗೊಮ್ಮೆ ಆ ಮಾತಿಗೆ ಒಪ್ಪಿದರು.  ಮುಂದೆ ಧನವಂತ ಸನ್ಮಾರ್ಗದಲ್ಲಿ ನಡೆದು ತನ್ನ ತಪ್ಪನ್ನು ತಿದ್ದಿಕೊಂಡ.  ಆಶ್ರಮದಲ್ಲೇ ಇದ್ದು ಋಷಿಗಳ ಸೇವೆ ಮಾಡುತ್ತ ಕಾಲ ಕಳೆದ.

ಕೀಲಿಕರಣ: ಕಿಶೋರ್‍ ಚಂದ್ರ

ಪ್ರಾಯ ಹೋಗುತ ಬಂತು

ಪ್ರಾಯ ಹೋಗುತ ಬಂತು ದೇಹ ಒಣಗಿ ನಿಂತು
ಜೀವದ ಬಡಿವಾರವೇನೆಂಬೆ                          ||ಪ||

ಕೋವಿಧನಾದರೆ ಸಾವಿಗಂಜದೆ ಆ
ಮಹಾದೇವರ ನುತಿಸಲೆಂಬೆ                        || ೧ ||

ಆಸ್ತಿ ಚರ್ಮದ ಘಟವಿಸ್ತರಣದಲಿ ಕೂಟ
ಮಸ್ತಕ ಮನ ಬುದ್ಧಿಯೆಂತೆಂಬೆ                     || ೨ ||

ಮಸ್ತಿ ಮಸ್ತಕರ ಕಾಮ ರಸ್ತೆಯೊಳಿರುವಂತೆ
ಆಸ್ಥಿರ ಮಾತಿದು ಮೊದಲು ಕಾಂಬೆ               || ೩ ||

ಶಿಶುನಾಳೇಶನ ಎಸವ ಪಾದಕ ನೀನು
ಮುಸುಗು ತೆಗದು ಪೂಜಿಪೊಡಲೇನೆಂಬೆ        || ೪ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮುತ್ತಿನಂಥಾ ಮಾತಿದು ಕೇಳೇ ಗೆಳತಿ

ಮುತ್ತಿನಂಥಾ ಮಾತಿದು ಕೇಳೇ ಗೆಳತಿ
ನಿಮ್ಮತ್ತಿಮಾವಗಳಿಗುತ್ತರ ಏನ ಹೇಳತಿ           ||ಪ||

ಗೊತ್ತುಗೇಡಿ ಮಗಳೆ ವ್ಯರ್ಥ
ಹೊತ್ತುಗಳಿಯುತ್ತೀ
ಆತ್ತ ಇತ್ತ ತಿರುಗಿ ಭವದೊಳ್ ಬೀಳತೀ
ಛೀ ಛೀ ಕೆಡತೀ                                         ||೧||

ನಾದುನಿ ಮೈದುನ ಭಾವಗೇನ ಹೇಳತೀ
ಒಬ್ಬ ಮಾದರವನ ಸ್ನೇಹಮಾಡಿ ಮತಿಗೆಡತೀ
ಬಿಡು ಬಿಡು ತರವಲ್ಲಾ ಈ ನಡತೀ
ಸುಳ್ಳೇ ಬಾಯ್ಬಿಡತೀ                                 ||೨||

ಮುಟ್ಟದಿರು ಎನ್ನ ಎಂದು ದೂರ ಹೋಗತೀ
ನಿಲ್ಲೋ ಖೊಟ್ಟಿಗಂಡಾ ಎಂದು ಬಾಯಿಲೆ ಆಡತೀ
ಬಿಟ್ಟು ಬಿಟ್ಟು ಊರ ಕಡೆ ಓಡಿ ಹೋಗತೀ
ಜಾರತನ ತೋರತೀ                                 ||೩||

ಶಿಶುನಾಳಧೀಶನ ಕಸಾ ಬಳಿದು
ಹಸನಾಗಿ ನೀ ಕಾಲಕಳಿದು
ಆಲ್ಲೇ ಹುಸಿ ಮಾತನಾಡದೆ ಇರು ತಿಳಿದು
ಒಳ್ಳೇ ಮಾತಿದು                                       ||೪||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಕೊಡವ

ಈ ವಿಭಾಗವನ್ನು ಅಭಿವೃದ್ಧಿಪಡಿಸಲು ಆಸಕ್ತರು ಕೈಜೋಡಿಸಬೇಕೆಂದು ಕೋರುತ್ತೇವೆ.
ಸಂಪರ್ಕ ವಿಳಾಸ: chilume001@gmail.com

ವಂದನೆ ಕಲಿಸಿ ಆನಂದದಿ

ವಂದನೆ ಕಲಿಸಿ ಆನಂದದಿ ಬಿಂದು ವರ್ಗ ನಿಲಿಸಿ                    || ಪ ||

ಹೊಂದಿಸಿ ಯಮುನಾತೀರದ ಮಧ್ಯದಲಿ ನಿಂತು
ಎಂದೆಂದಿಗೂ ಯಮದಂದುಗವ ಕಳೆ  ಎಂದು                       || ೧ ||

ಶಿಶುನಾಳಧೀಶನಲ್ಲಿ ಉನ್ಮನಿಯಾಗಿ ಹಸನಾಗಿರುವದು
ವ್ಯಸನಕೆ ವ್ಯಸನಹುದೆ ಕರ್ದುಸಾರನೆಲ್ಲ ಕಳೆಯೆಂದು ಮಂತ್ರದಿ || ೨ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ವನಜಾಕ್ಷಿಯಳೆ ಬಾರೆ

ವನಜಾಕ್ಷಿಯಳೆ ಬಾರೆ ಮನ ಮಾನಿನಿಯೆ ಬಾರೆ
ವನದೊಳಾಡುನು ಕೂಡಿ ಘನ ಹರುಷದಲಿ

ತನುವೆಂಬಾ ಕೊಳದೊಳು ಮನವೆಂಬ ತಾವರಿ
ಘನ ಸುಗಂಧವ ಬೀರುತಿರುವದು ನೀರೆ            ||೧||

ನೋಟಾನಿರುತವೆಂಬ ಜೀರ್ಕೊಳವಿಯನು ಪಿಡಿದು
ನೀಟಾಗಿ ನೀನು ನೀರಾಟಕ್ಕೆ ಬಾರೆ                  ||೨||

ವಿಷಯವೆಂದೆಂಬುವ ಅಸಮ ಜಲದಿ ಸ್ನಾನಾ
ಯೆಸಗಿ ಶಿಶುನಾಳೇಶನಡಿಗೊಂದಿಸುವುನು       ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಒಳ್ಳೇದಲ್ಲ ನಿನ್ನ ಸಲಗಿ

ಒಳ್ಳೇದಲ್ಲ ನಿನ್ನ ಸಲಗೀ
ನಾ ಒಲ್ಲೆನು ಹೋಗ                                             ||ಪ||

ತನುತ್ರಯ ಗುಣವೆಂಬು ಮನಸಿನಾಶೆದೊಳಿಟ್ಟು
ದಿನಗಳ ನೆನಸಿ ನಿಮಗ ಏನೇನು ಬೇಕು                   ||೧||

ಹರಿ ಸುರರು ಪರಿಭವ ಕಟ್ಟಿಸಿದ
ಆರಿಯದವರ್ಯಾರು ನಿಮಗ ಬರದಿರು ಮೈಮಾಗ    ||೨||

ನಡಿ ನಡಿ ಶಿಶುನಾಳದ ಒಡಿಯ ಕಂಡೀಕ್ಷಣ
ನಡಿ ಪೀಡಸದ್ಹಾಂಗ ಎಡಬಲ ಬರದ್ಹಾಂಗ                ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೆಳಗಾಗುವ ತನಕ ಕುಳಿತು ನೋಡೋ

ಬೆಳಗಾಗುವ ತನಕ ಕುಳಿತು ನೋಡೋ
ನಿನ್ನ ತಿಳುವಳಿಕೆ ಜ್ಞಾನವನ್ನು                                 ||ಪ||

ಬಲು ವಿಷಯಗಳಲಿ ಬಳಲಿಸಿ
ತನುತ್ರಯ ವಳಗ ಹೊರಗೆ ಸುಳಿದಾಡಂವ ಮನವೇ   ||೧||

ಕಣ್ಣು ಮುಚ್ಚಿ ಕೈಕಾಲು
ತಣ್ಣಗೆ ಮಾಡುವ ಕುನ್ನಿ ಮನವೇ                            ||೨||

ನಿದ್ರೆ ಹತ್ತಿ ಮಲಗಿರ್ದ ಕನಸಿನೊಳು
ಗದ್ದಲಿಸುವ ಮಣಿಗೇಡಿ ಮನವೇ                           ||೩||

ಘರ ಚಿಂತಾತುರದೊಳಗಾಭವ
ಪಾರಗಾಣದೆ ಛಿಮಾರಿ ಮನವೇ                          ||೪||    

ವಸುಧಿಯೊಳು ಶಿಶುನಾಳಧಿಶನ
ವರಯೋಗಕೆ ಸರಿಯಾಗದ ಮನವೇ                   ||೫||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಹೇಸಬಾರದೆ ಮನಸೆ

ಹೇಸಬಾರದೆ ಮನಸೆ ನೀ ಹೇಸಬಾರದೆ
ಆಸೇಯ ನದಿಯೊಳ್ ಈಶ್ಯಾಡುವುದಕೆ ಹೇಸಬಾರದೆ   ||ಪ||

ಭೂಮಿಗುದಿಸಿ ಭವದಾ ಮಹಾಕರ್ಮದಿ
ಮರಳಿ ಮಾಯಾ ಮೋಹಕೆ ಮೋಹಿಸದೆ                    ||೧||     

ಏಳು ಜನ್ಮಾತರ ಮೇಳೈಸಿದ ಸುಖ
ತಾಳಿ ಇಳೆಗೆ ಬಂದು ಬಾಳುವುದಕೆ ನೀ                     ||೨|| 

ಲೋಕದಿ ಶಿಶುನಾಳಧೀಶನ ಭಜಿಸುತ
ಕಾಕು ವಿಷಯದ ಭೋಗ ಸಾಕು ಸಾಕೆನ್ನೆನ್ನು              ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನವೆಂಬೊ ಹೆಣ್ಣಿನ ಕಣ್ಣ ಸನ್ನೆ

ಮನವೆಂಬೊ ಹೆಣ್ಣಿನ ಕಣ್ಣ ಸನ್ನೆ ಕಾಮ
ತಾನು ದೇಹದೊಳು ಸುಳಿದಾದುತಿರೆ             || ಪ ||

ನಿನಗೆ ವಿಷಯ ಸುಖವಾದಾಕ್ಷಣದೊಳು
ಎನಗೆ ಸುರಿತ ಸುಖಬೋಧವ ಬೇಡುವರೆ       ||ಅ.ಪ.||

ಚದುರಂಗ ಕುಚಕೊಡಾ ತಟದಿ ಇಡಲು ವಾಚಾ
ಸತ್ವ ಚಿತ್ತ ಅಧರಪಾನ ಉಂಡರೆ
ಪ್ರಥಮ ಆವತಾರವ ಕಳೆದು ನಿಂದವಳೆಂದು
ಹಿತದಿ ಹಿಂಭಾಗ ಮಂಟಪವ ಸಾರೆ                ||೧||

ಶಿಶುನಾಳದೀಶಗ ಆಸಮ
ಕುಮಾರಗ ಹಾಡಪೊರೆ
ಪಶುಪಮತಾರಣವ ಕಳೆದು
ನಿಂದವೆಳಂದು ಕ್ಲೇಶವಡಿದು
ಗೋವಿಂದ ಆನ್ನಿರೋ                                 || ೨ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ದುಖಮೆ ಪಧಾ ಮನ

ದುಖಮೆ ಪಧಾ ಮನ ಸುಖ ನಹಿ ಮಾಯಾ
ಥಕತಿ ಮರನ ರಖವಾಲರೆ || ಪ ||

ಖಾತಾ ಪೀತಾ ಸೋತಾ ಸಬದಿನ
ಬಾತ ಯೆ ಗಫಲತ ಖೇಲರೆ || ೧ ||

ತೀನ ರೋಜ ಗುಜರಾನ ಜೀವನಕಾ ಯೇ
ತನ ಮಾಥಹೀ ಮಇಲರೆ   || ೨ ||

ರೋಶನ ಹೋ ಶಿಶುನಾಳ ಜಗತ ಫರ
ದೇಶ ಪಿಯಾಕೆ ಲಾಲರೆ    || ೩ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನಸಿನ ಹರಿದಾಟವನು ನಿಲ್ಲಿಸು

ಮನಸಿನ ಹರಿದಾಟವನು ನಿಲ್ಲಿಸುವದು
ಘನಕಷ್ಟವೇನೋ ಮನುಜಾ                           ||ಪ||       

ತನುತ್ರಯದೊಳು ಕುಳಿತಾಡುವ ಜೀವನ
ಗಣವರಿಯದ ಮಾರ್ಗಬ್ಯಾರೋ ಮನುಜಾ        ||ಅ.ಪ.||

ದಶದಿಕ್ಕಿಗೆ ಹಾರ್ಯಾಡು ಹಕ್ಕಿಗೆ
ಹೊಸಬಲೆ ಹಾಕುವ ಪರಿಬ್ಯಾರೋ
ಗುರುಗೋವಿಂದನ ಚರಕಮಲದೊಳು
ಸ್ವರಗೊಂಬ ಭೃಂಗದ ಪರಿಬ್ಯಾರೋ ಮನುಜಾ    ||೧||    

ವಿಷಯವನರಿತು ಸುಖಬಯಸಿ ಬಲು
ಕಸಿವಿಸಿಗೊಂಬುವಿ ಸತತ ಮನಸೆ
ಧರಿಪತಿ ಶಿಶುನಾಳನರಮನಿ ತಿಳಿದರೆ
ಹೊರಗೊಳಗೊಂದೇ ಪರಿಯಲ್ಲೋ ಮನಸೇ      ||೨||

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ನೋವು ನನ್ನೆದೆಯೊಳಗೆ...

(ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ)
- ಬಸವರಾಜ್ ಡಬ್ಲ್ಯು

ಓ! ಬುದ್ಧ
ಮಸಣಕ್ಕೆ ಹೋಗುವ ಮೊದಲು
ನಿನ್ನ ತತ್ತ್ವಗಳು ನಮಗೆ ಹಿಡಿಸಿದವು

ಇರುವೆಗಳೇ ನೀವೇಕೆ
ಹೋದಿರಿ ಅಲ್ಲಿ  !
ಅದು ಮೇಣವೆಂದು ಗೊತ್ತಿಲ್ಲವೆ ?

ನಿಟ್ಟಿಸುರು ಬಿಟ್ಟರೆ
ಮುಗಿಯಲಿಲ್ಲ ಆತಂಕ
ಹೋಗಿ ಹೂವಿನ ಸುತ್ತ ಸುತ್ತಿರಿ

ನಸುಕಿನಲಿ ಎದ್ದು
ನಗಾಡಿತು ರಂಗೋಲಿ
ಜೋರಾದ ಮಾತುಗಳು ಕೇಳಿ

ಬಂಡೆಯ ಎದೆ ಮೇಲಿನ
ಅಕ್ಷರಗಳು ಮಾತನಾಡಿಸಲು ಬಂದು
ಸುಮ್ಮನಾದವೇಕೆ ?

ಬದುಕು ನುಚ್ಚುನೂರಾಯಿತೆ
ಇರಲಿ, ಬಣ್ಣತುಂಬಿ
ಹೊಳಪಿಸಿದರಾಯಿತು ಬಿಡು

ಬಸವನ ಹುಳುವೆ ಏಲ್ಲಿರುವೆ ?
ಕಣ್ಣೀರ ಹನಿಗಳು ಬಂದಿವೆ
ನಿನ್ನ ಎಚ್ಚರಿಸಲು

ಸಾಯುತ್ತಿರುವ ಪ್ರಶ್ನೆಗಳು
ಹೇಳಿದವು
ನಮ್ಮನ್ನು ಮಣ್ಣು ಮಾಡಬೇಡಿ ಎಂದು

ಆಲಿಕಲ್ಲುಗಳೇ ! ಸಾಕು ಮಾಡಿ ಕುಣಿತ
ನಿಮ್ಮ ನೋಡಿ
ಝಂಕ್ ಶೀಟ್ ಹೆದರುತ್ತಿದೆ

ಪಟ್ಟಣದ ಈ ಕಟ್ಟಡಕೆ ಇಲ್ಲ
ಮೆಟ್ಟಿಲುಗಳು, ಏಣಿಹತ್ತಿ
ಎಲ್ಲರೂ ಮೇಲೆ ಬರಬಹುದು

 ಯಾರದು ವಟರ್ ವಟರ್ ಅಂಥ !
ಕಪ್ಪೆ ! ಒದರಬ್ಯಾಡ ಹಂಗೆ
ಹಾವೈತೆ ಮುಂದಿನ ಹಾದ್ಯಾಗ

ಸೂರ್ಯನೊಡನೆ ರಮಿಸಿಕೊಂಡವು
ಮಿನುಗು ತಾರೆಗಳು
ಇನ್ನೂ ಚಂದಿರ ಬರಲಿಲ್ಲವೆಂದು

ನನ್ನ ಪುಟ್ಟ ಕಾಗದ ದೋಣಿ
ತೇಲಿ ಬಿಟ್ಟರೂ ನೆನೆಯಲಿಲ್ಲ
ದಡಕ್ಕೆಬಂದು ಸೇರಿತು

ಮತ್ತೆ ಕೆಂಪು ಡಬ್ಬಿ ಸೇರಿದವು
ಕಾಯಂ ವಿಳಾಸವಿಲ್ಲದ ಪತ್ರಗಳು
ಸೊಕ್ಕಿನಿಂದ ಹಿಂತಿರುಗಿ ನೋಡದೆ

ಬಡಕಲು ದೇಹವನು
ಹುಬ್ಬೇರಿಸಿ ನೋಡಿದವು
ಸೋಡಾ ಚಶ್ಮದೊಳಗಿನ ಕಣ್ಣುಗಳು

ಚಿತ್ರದ ನೆರಳು ನೋಡಿ
ಬಣ್ಣಗಳು ಹೆದರಿ
ಮೂಲೆ ಹಿಡಿದವು

ಬೆರಳು ಕಚ್ಚಿದ ಕಾಲುಂಗುರ
ಹರಿಶಿಣ ಮೆತ್ತಿದ ಮುಖನೋಡಿ
ಹೆಜ್ಜೆ ಹಾಕಿತು ಸರಸರನೆ

ಕಂಬಳಿಯ ಘಾಟು
ಹಿತವೆನಿಸಿ ಬೆಚ್ಚಗೆ ಮಲಗಿದವು
ಕುರಿಮರಿಗಳು

ದಾರಿ ದೂರವಿದೆ
ಹಾರಲು ಇನ್ನೂ ರೆಕ್ಕೆ ಬಲಿತಿಲ್ಲ
ನಡೆಯಲು ನಾಚಿಕೆ ಬೇರೆ

ನಿಲ್ಲದ ಮಳೆ
ಚಳಿಯಿರದ ಉಲ್ಲಾಸ
ಅಲ್ಲಲ್ಲಿ ಹೂ ಬಿಸಿಲು

ಹಸಿರು ಹುಲ್ಲಿನ ಚಾದಾರ ಮೇಲೆ
ಮಲಗಿದ್ದ ಮುತ್ತಿನ ಮಣಿಗಳು
ಸೂರ್ಯನಿಗಾಗಿ ಕಾದು ಸುಸ್ತಾದವು

ಕೆಂಪು ಮೋಡಗಳೇ !
ನೀವೇಕೆ ಬೆಟ್ಟ ಹತ್ತಿದಿರಿ ?
ನಾಚಿಕೆ ಬಿಟ್ಟು ಕೆಳಗೆ ಇಳಿಯಿರಿ

ನೀರಿನ ಗುಳ್ಳೆ ಮೇಲೆ
ಪಿಸುಮಾತುಗಳು
ಮಡುಗಟ್ಟಿವೆ

ಸಿಡಿಲಿನ ಆರ್ಭಟಕ್ಕೆ
ಕೊಳಲಿನ ನಿನಾದ
ಸುಮ್ಮನಾಯಿತು

ಹೆಣದ ಮುಂದೆ ಹಣ
ದಿಕ್ಕು ತಪ್ಪಿದವು ಮನಗಳು
ಅನಾಥವಾಗಿ ಬಿದ್ದಿತು ಹೆಣ

ನಗುವ ಬುದ್ಧನ ನೋಡಿ
ಅದೃಷ್ಟ ಖುಲಾಯಿಸಿತು
ನೊಂದ ಜೀವಗಳಿಗೆ

ಕಿಟಕಿಯಿಂದ ತೂರಿಬಂದ ಬೆಳಕು
ಪ್ರe ಪೂರ್ವಕ
ಈಗ ಕೊಂಚ ನೆಮ್ಮದಿ

ಮೀನಿನ ಹೆಜ್ಜೆ ಗುರುತು
ಹುಡುಕುತಿವೆ ಮನಗಳು
ಕನಸಿನಲಿ

ಹಸಿದ ಹೊಟ್ಟೆಗಳು
ಮಣ್ಣು ಮುಕ್ಕಿದವು
ಅವನನ್ನು ನಂಬಿ

ಸುಂಟರಗಾಳಿ ಬಂದರೂ
 ಜಂಭದಿಂದ ಹಾರುತ್ತಿದೆ ಪಟ
ಕೆಳಗೆ ಬೀಳುವೆನೆಂಬ ಪರಿವಿಲ್ಲದೆ

ಗೋರಿಯೊಳಗಿನ ಮಾತು ಕೇಳಿ
ಹೃದಯ ಗೊಣಗಿ ಗೊಣಗಿ
ಕೊನೆಗೆ ಅಳತೊಡಗಿತು

ಬುದ್ಧನ ಕಣ್ಣುಗಳು
ನಮ್ಮನ್ನು  ಕ್ಷಮಿಸಿವೆ
ನಾವಿನೆಂದೂ ತಪ್ಪು ಮಾಡುವುದಿಲ್ಲ

ಬದುಕು ಸಾವಿನ ನಡುವೆ
ಬಿದ್ದಿವೆ ಚಿಂತೆಗಳು
ಮಡಿಸಲಾರದಷ್ಟು

ದೇಹಕ್ಕೆ ಚುಚ್ಚುವ ಕಂಬಳಿ
ಚಳಿಯ ತಡೆದಿದೆ
ನಿರಾಳತೆ ಕೃತಕವೆನಿಸಿದೆ

ನಿರ್ಧಾರಗಳು ಅಡಗಿವೆ ಕಪ್ಪೆಚಿಪ್ಪಿನೊಳಗೆ
ಹೊರ ಬರಲು ಕಾಯುತ್ತಿವೆ
ಸೂರ್ಯಾಸ್ತವನ್ನು

ಭೋಧಿ  ವೃಕ್ಷ ಆಶ್ರಯಿಸಿತು
ಬದುಕಿನ ಏಳು - ಬೀಳುಗಳ ನೋಡಿ
ಒಂದಷ್ಟು ನೆಮ್ಮದಿ ಮನಸ್ಸಿಗೀಗ

ಮೋಡದ ಕುಲಾವಿ
ಹಾಕಿಕೊಂಡು ಮಲಗಿತ್ತು ಬೆಟ್ಟ
ಹೊಂಗಿರಣಗಳು ಬಂದು ಎಚ್ಚರಿಸಿದವು

ನಿಶೆ ಮೌನವಾಗಿದೆ
ಒಣಗಿದ ಮರದಲಿ
ಇಬ್ಬನಿ ತೊಟ್ಟಿಕ್ಕುವಾಗ

ಎಲುಬಿನ ಗೋರಿಯೊಳಗೆ
ವೃದ್ಧೆಯ ಭಾವನೆಗಳು
ಹಣ್ಣುಹಣ್ಣಾಗಿವೆ

ಮಣ್ಣು ಮುಕ್ಕಿಸಿಬಿಟ್ಟವು
ಸುಡುಗಾಡು ಚಿಂತೆಗಳು
ಅವರಿಬ್ಬರನು ನೆನೆದು

ಝೆನ್ ಝೇಕಾರ ಮೊಳಗಿತು
ಹೃದಯದೊಳಗಿನ ಕಿಚ್ಚು ಆರಿತು
ಇದು ಕಟ್ಟುಕತೆಯಲ್ಲ ವಾಸ್ತವ

ಗೋರಿಯಮೇಲೆ ಕುಳಿತಾಗ
ಕಮರಿದ್ದವು ಆಸೆಗಳು
ಸುಕ್ಕುಗಟ್ಟಿದ್ದ ಮುಖದಲಿ

ಅವರ ಭಾವನೆಗಳು
ಶರ ಶಯ್ಯೆದ ಮೇಲೆ ಕುಳಿತು
ಅಳುತ್ತಿವೆ

ಮರಳಲ್ಲಿ ಅವಿತ ಶಂಖುಗಳು
ಗಾಢವಾಗಿ ನಿದ್ರಿಸುತ್ತಿವೆ
ಯಾವುದೇ ನಿನಾದವಿಲ್ಲದೆ

ನರಕದ ಹಾದಿ ಹಿಡಿದಾಗ
ಹೆಗಲೇರಿದ್ದವು ತಪ್ಪುಗಳು
ಗುಂಪುಗುಂಪಾಗಿ

ದೂರವಾಗುತಿವೆ ಬಯಕೆಗಳು
ಸದ್ದುಗದ್ದಲವಿಲ್ಲದೆ
ತನ್ನ ನೆಲೆ ಅರಿಯಲು

ಬೆಳಕಿನಲ್ಲಿರುವುದು
ಬೆಳಕಿನೊಳಗಿನ ಬೆಳಕು
ಮುತ್ತಿನಂಥ ಬೆಳಕು

ಏಕಾಂತದಲ್ಲಿರುವಾಗ
ಹೆಬ್ಬಾಗಿಲು ಸ್ವಾಗತಿಸಿತು
ಮೌನಕ್ಕೆ ಶರಣಾದ ದುಃಖಗಳನ್ನು

ತಲ್ಲಣಿಸುತ್ತಿವೆ ಕಣ್ಣೀರು
ತಡೆಹಾಕು ಸ್ವರ್ಥ
ಆಸೆಗಳ ಮುಗಿಸು

ಮನಸ್ಸಿಟ್ಟಾಗಲೂ ಈಡೇರದ ಆಸೆ
ನಿರಾಸೆಯಾಗಿತ್ತು
ನೋಡಿಯೂ ನೋಡದ ಹಾಗೆ

ಮಿಗಿಲೆಂದೆನಿಸಿದರೆ
ಕ್ರೋಧ ತಳೆದುಬಿಡು
ಘೀಳಿಡುವಮುನ್ನ

ಹಗಲೂ ಇರುಳೂ
ನಿದ್ರಿಸುವ ಮುಗ್ಧ ಬಯಕೆಗಳು
ನೆಮ್ಮದಿ ಕಾಣಲಿಲ್ಲ

ಕುಣಿಕೆ ಬಿಚ್ಚಿದ ಹಗ್ಗ
ಅಗಳಿ ತೆಗೆದ ಬಾಗಿಲಂತೆ
ಬಾಯಿ ತೆರೆದವು ಮನದ ಮಾತುಗಳು

ಅಡಗಿ ಕುಳಿತ ಚಿಂತೆಗಳು
ದುಗುಡ ಬಿಟ್ಟು ಹೊರ ಬಂದವು
ಸಾಲುಸಾಲಾಗಿ

ದುಗುಡ ದುಮ್ಮಾನಗಳ ನಡುವೆ
ಅಡ್ಡ ಹಾಕಿದವು ಶಸ್ತ್ರಗಳು ಸಾವಿಗೆ
ಹಿಂದೂಮುಂದು ನೋಡದೆ

ನವಿರಾಗಿ ಬಳುಕುವವು
ಹಸುರ ಎಲೆಗಳು
ಇಬ್ಬನಿ ಬಿದ್ದಾಗ

ಸೆಟೆದು ನಿಂತಿದ್ದವು ಮರಣಸಂಗಾತಿಗಳು
ಮಸಣದ ಹಾದಿಯತ್ತ
ಕರುಣೆಯನು ಗಾಳಿಗೆ ತೂರಿ

ದುಃಖ ಬಂದರೂ
ಸುಖ ಹೋದರೂ
ಹೃದಯ ಸಾಮ್ರಾಜ್ಯ ನಿರಂತರ

ಕಂಬಿಯ ಎಣಿಸುತ
ಕನಸುಗಳ ಹಿಡಿದು
ಮಲಗಿಬಿಡು ಸುಮ್ಮನೆ

ಎಳೆದ ರೇಖೆಗಳು
ಚಿತ್ತಾರವಾಯಿತು
ರಂಗು ರಂಗೇರಿ

ಮುರಿದು ಬೀಳುವ ಊರುಗೋಲು
ನಕ್ಕು ನಲಿವ ಅಂಬೆಗಾಲು
ಏಳುಬೀಳುವ ಬದುಕು

ಹೆಗಲೇರಿವೆ ಕಷ್ಟಗಳು
ಎಗ್ಗಿಲ್ಲದೆ ಬಂದ ದುಃಖಗಳು
ಬಿಗಿದಪ್ಪಿವೆ ಪ್ರಾಣ ಸಂಗಾತಿಗಳಾಗಿ

ದ್ವೇಷ ಅಸೂಯೆಗಳನ್ಹೊತ್ತು ಬಂದರು
ಕತ್ತಿ ಗುರಾಣೆಗಳಿದ್ದರೂ
ಕದನಕ್ಕೆ ವಿರಾಮ ಹಾಕಿದರು

ಎಷ್ಟೇ ಸಾರಿ ಕೆಳಗೆ ಬಿದ್ದರೂ
ಮತ್ತೆ ಗೂಡು ಕಟ್ಟಲು ಯತ್ನ
ಬುದ್ಧನ ಪ್ರೇರಣೆಯಿಂದ

ಹಾರುವ ಗಾಳಿಪಟ
ಜೀಕುವ ಜೋಕಾಲಿ
ಜತೆಗೂಡಿದೆ ತಂಗಾಳಿ

ಬರಿದಾದ ಭಾವನೆಗಳು
ಹೊತ್ತಿ ಉರಿಯುತಿವೆ ಕಾಳ್ಗಿಚ್ಚಿನಂತೆ
ಅತ್ತ ಸಾಯಲೂ ಇಲ್ಲ ಇತ್ತ ಬದುಕಲೂ ಇಲ್ಲ

ಮೂಡಿಬಂದ ವಕ್ರರೇಖೆಗಳು
ವಿಹರಿಸಲಿಲ್ಲ ದೋಣಿಯ ಮೇಲೆ
ಮಲಗಿದವು ಕಪ್ಪು ನೀರಿನೊಳಗೆ

ಬಂದಿಯಾದವು ಕನಸುಗಳು
ಇರುಳ ಸಾಮ್ರಾಜ್ಯದೊಳಗೆ
ತಮಗೇ ಅರಿವಿಲ್ಲದೆ

ಹಿಗ್ಗದ ಪ್ರತಿಬಿಂಬ
ಬಗ್ಗದ ಬಡಿಗೆ
ಮೌನಿಯಾದ ಬುದ್ಧ

ಸತ್ತು ನಾರುತಿದೆ ದೇಹ
ಹೂಳುವುದಿರಲ್ಲಿ
ಬಂದು ನೋಡುವವರೂ ಇಲ್ಲ

ಮೈತುಂಬ ಗಾಯಗಳು
ಔಷಧ ಹಚ್ಚಿದರೂ
ಹಾಗೇ ಉಳಿದವು ಕಲೆಗಳು

ಹಾಯ್ಕುಗಳ ಸಾಲು ಬಿಚ್ಚಲು
ಓಡಿಬಂದು ಮಲಗಿದವು
ಮನದ ಬಯಕೆಗಳು

ಬಿಡಲೊಲ್ಲವು
ತಟ್ಟಿದ ಭರಣೆ
ಮಣ್ಣಿನ ಗೋಡೆ ಬಿಟ್ಟು

ಮಾಗಿದ ಮಾವು
ತೆರೆದಿಟ್ಟ ಹಲಸು
ಬಗೆದು ತಿಂದವು ಕಾಗೆಗಳು

ಕರಕಲಾದ ಬತ್ತಿ
ಮುಗಿದ ಎಣ್ಣೆ
ಆರಿದವು ಆಕಾಂಕ್ಷೆಗಳು

ಅತ್ತ ಬಂಜರು
ಇತ್ತ ನೇಗಿಲು
ಬಿತ್ತುವುದಾದರೂ ಹೇಗೆ

ಕೆಂಪು ಅಡರಿತು
ಹಸುರ ನಾಡಿಗೆ
ಬೆಟ್ಟ ಕಾಡು ಮೇಡು ದಾಟಿ

ಅಂದದ ಅರಮನೆಯೊಳಗೆ
ಕಠೋರ ನಿರ್ಧಾರಗಳು
ಕುರೂಪಗೊಳಿಸಿದವು ಚೆಲುವನ್ನು

ಸುರಿವ ಮುಂಗಾರು
ಜಿನುಗುವ ಜೇನು
ಹೀರಲಿಲ್ಲ ಏಕೆ ?

ಸಮನಾಗಿ ತೂಗಲಿಲ್ಲ ತಕಡಿ
ಒಂದು ಮೇಲೆ ಮತ್ತೊಂದು ಕೆಳಗೆ
ನ್ಯಾಯ ಕುಸಿಯಿತು ಎರಡರ ನಡುವೆ

ಬುದ್ಧನ ಆಶ್ರಮದಲಿ
ಹಸುರು ಹುಲ್ಲು ತಿಂದು
ಅಂಡಲೆದವು ದನಗಳು

ಜಾಡುತಪ್ಪದ ಜೇಡ
ಮತ್ತೆ ಹೆಣೆಯತೊಡಗಿತು
ಏಳುತ್ತ ಬೀಳುತ್ತ

ನೆರಳು ಹರಡಿದ ವೃಕ್ಷ
ಇರುಳ ಕಂಡರೂ
ತುಸು ಗಾಳಿ ಬೀಸಲಿಲ್ಲ

ಹೆಚ್ಚುತಿದೆ ಬೆಳಕು
ಜರಿಯುತ್ತಿದೆ ನೆರಳು
ಚಿತ್ತ ಮರೆತು

ಜಂಭದ ಜೂಜು
ಕಳೆದರೂ ಮನೆಮಠ
ಬಿಡದ ದಟ್ಟದರಿದ್ರ

ಬೋಧಿಸುವರು ನಮಗೆ
ಅರಿವಿನ ಕಥನ
ಹರಿವ ನೀರಿನಂತೆ ನಿರಂತರ

ಅವಳ ಸತ್ತದೇಹಕ್ಕೆ
ಬೆನ್ನು ಹತ್ತಿದವು ಹದ್ದುಗಳು
ಕೊನೆ ಗಿರಾಕಿಗಳಾಗಿ

ಚಪ್ಪಲಿ ಕಳಚಿ
ಪಾದ ಹಿಡಿದರೂ
ಕ್ಷಮಿಸಲಿಲ್ಲ

ಮುರುಟುಗೊಂಡ ನಾಲಗೆ
ಮೌನ ವಹಿಸಿದ ಮಾತುಗಳು
ಅರಿವಿನ ಪರಿವೇ ಉಳಿಸಲಿಲ್ಲ

ಮರಳುಗಾಡು ಬಿಟ್ಟು
ಓಯಾಸಿಸ್‌ಗೆ ಬಂದರೂ
ತಲ್ಲಣ ನಿಲ್ಲಲಿಲ್ಲ

ಅದೆಷ್ಟೋ ರಾತ್ರಿ ಕಳೆದರೂ
ಹೊತ್ತಿ ಉರಿಯುತ್ತಿತ್ತು ವಿರಹದ ದೀಪ
ಎಣ್ಣೆಯಿಲ್ಲದೆ

ಬೆನ್ನು ತೋರಿದರೂ
ದೂರವಾಗಲಿಲ್ಲ ಅಳು
ಸುಮ್ಮನೆ ಬತ್ತಿದವು ಕಣ್ಣೀರು

ಸಾವಿನ ಹಂಗು ಬಿಟ್ಟು
ಬದುಕಿನ ದಾರಿ ಹಿಡಿದು
ಬವಣೆಗಳ ಮೇಲೆ ಮಲಗಿದರು

ಅಡ್ಡದಾರಿ ಹಿಡಿದ ಯೌವನ
ಚಿತ್ತ ಚಾಂಚಲ್ಯದ ಮನಸು
ಜತೆಗೂಡಿ ಚಿರ ನಿದ್ರೆಗೆ ಜಾರಿದವು

ನೆರಳಲ್ಲಿ ನೆಲೆನಿಂತ ಶಾಂತಿ
ಸ್ತಬ್ಧವಾಗಿ ಮಲಗಿದ ವೇದನೆ
ಬುದ್ಧನ ಪಿಸುಮಾತು ಕೇಳಿರಬೇಕು

ಎರೆಹುಳುವಿನ ಸ್ವಚ್ಛಂದ ಓಡಾಟ
ಹದಗೊಂಡ ಮಣ್ಣು
ಕಂಗೊಳಿಸಿತು ಹಸುರು ನೋಟ

ಬೋಳು ಮರದ ಗಾಳಿ
ತೂಕಡಿಸಿದ ಸೂರ್ಯ
ರಂಗಸ್ಥಳವಾಗಿತ್ತು ಆಗಸ

ಹಸೆ ಚಿತ್ತಾರ ಬುಟ್ಟಿಗಳು
ನೆಲದ ಮೇಲೆ ಚರಗ ಚೆಲ್ಲಿ
ಹಸಿರುನೋಡಿ ನಕ್ಕು ನಲಿದವು

ಅರ್ಥೈಸದೆ ಓಡಿದವು
ಗಿಲೀಟು ಮಾತುಗಳು
ಹೆಸರು ಹೇಳದೆ

ಮಸಿ ಕಾಗದವನು ಸ್ಪರ್ಶಿಸಲಿಲ್ಲ
ಒಲವಲಿರಿಸಿ ಚೆಲ್ಲಿತು ಎದೆಯೊಳಗೆ
ಅಳಿಸಲಾರದ ಕಲೆಯಾಗಿ

ಮುದುಡಿದ ಮನೋವಿಕಾರ
ದಾಪುಗಾಲು ಹಾಕಿದ ನಗು
ನೆನೆದು ಉಮ್ಮಳಿಸಿತು ಅಳು

ಲಜ್ಜೆಗೆಟ್ಟ ನಡತೆ
ಕುಹಕವಾಡಿದ ಪಿಸುಮಾತು
ಒಣ ದಿಮಾಕು ತೋರಿಸಿದವು

ಸ್ನೇಹ ಮುರಿದುಕೊಂಡ ಸೂರ್ಯ- ಚಂದ್ರರು
ಭುವಿಗೆ ಬೆಳಕ ಚೆಲ್ಲಿ
ಹ್ಯಾಪುಮೋರೆ ಹಾಕಿಕೊಂಡರು

ಜಿನುಗುವ ಜೇನು ಬಿಟ್ಟು
ಹಾರಿದವು ರಾಣಿಜೇನು ಪರಿವಾರ
ಹೊಗೆಯ ನೋಡಿ

ಬಣ್ಣ ಹಚ್ಚಿದರೂ
ಬದುಕಿನ ಗುಟ್ಟನರಿಯಲಿಲ್ಲ
ಬರೀ ನಟನೆಯಲ್ಲೇ ಕಳೆದರು ಜೀವನಪೂರ್ತಿ

ದೂರವಾದ ಒಲವು
ಸನಿಹ ಬಂದ ವಿರಹ
ಮೈಮುರಿದು ನಿಂತವು ಮನದೊಳಗೆ

ಇಬ್ಬನಿಯೊಳಗೆ ಕಾಣುತ್ತಿತ್ತು
ರಂಗು ಎರಚಿ ಮಿನುಗಿದ ನಲಿವು
ಹಸುರನುಟ್ಟ ಬನದ ಚೆಲುವು

ಒಡೆದ ಕನ್ನಡಿಯೊಳಗಿನ ಛಿದ್ರ ಮುಖಗಳು
ಮೋಜುಮಾಡಿ ಮುಗಿಸಿದರೂ
ಬೀಡು ಬಿಡಲಿಲ್ಲ

ಕೊನೆಯ ಪಯಣದ ಹಾದಿಯಲ್ಲಿ
ಬೆನ್ನುಹತ್ತಿದವು ನೆನಪುಗಳು
ಗುಂಪು ಗುಂಪುಗಳಾಗಿ

ಆಸೆಗಳ ಹೊದ್ದು ಮಲಗಿದರೂ ಕನಸು ಬೀಳಲಿಲ್ಲ
ಭಾರ ಹೆಜ್ಜೆಗಳನ್ನಿಟ್ಟು ನಡೆದರೂ ಹೆಜ್ಜೆ ಮೂಡಲಿಲ್ಲ
ನುಡಿದಂತೆ ನಡೆದರೂ ಸತ್ಯ ತಿಳಿಯಲಿಲ್ಲ

ಮುಪ್ಪಾದರೂ ಯೌವನದ ಗುಂಗು ಬಿಡಲಿಲ್ಲ
ನೀರ್‍ಗುಳ್ಳೆ ಒಡೆದರೂ
ಮತ್ತೆ ಹುಟ್ಟುತ್ತಲೆ ಇವೆ ಮರೆವ ಮುನ್ನ

ಸುಣ್ಣ ಹೆಚ್ಚಾಯಿತು ತಾಂಬೂಲದಲಿ
ಬಾಯಿ ಒಡೆದು ನೋವಾದರೂ
ಕೆಂಪುತನ ಬಿಡಲಿಲ್ಲ

ಸಂಪತ್ತು ನಾಶವಾದರೂ
ಕವಡೆ ಕಿಮ್ಮತ್ತು ಉಳಿಯಿತು
ನಿರಾಳತೆ ಮನದುಂಬಿಸಿದ ಬುದ್ಧ

ನೋವುಗಳ ಅಟ್ಟಹಾಸ ಮುಗಿಯಿತು
ಒಲವು ಮಂದಹಾಸ ಬೀರಿತು
ಅಳುಕು ಹಾಗೇ ಉಳಿಯಿತು

ಲಜ್ಜೆಗೆಟ್ಟು ಹೆಜ್ಜೆಯಿಡದಿರು
ರೀತಿ ರಿವಾಜುಗಳ ಮರೆತು
ಸಖಾಸುಮ್ಮಾನೆ ಮೌನಿಯಾಗದಿರು

ಉರಿದು ಬೂದಿಯಾದ ಮರ
ಸಿಡಿದು ಬಿದ್ದ ಹೂ ಹಣ್ಣು
ತನ್ನೊಳಗೆ ಕಂಪಿಸಿತು ನಿನಾದ

ಕೀರ್ತಿಗಳಿಸಿದರೂ ಗೌರವಿಸಲಿಲ್ಲ
ಸಂಪತ್ತು ಬಂದರೂ ಕೂಡಿಡಲಿಲ್ಲ
ಅಕ್ಷರ ಕಲಿತರೂ ಓದಲಿಲ್ಲ

ಮುಪ್ಪು ಅಡರಿದ ದೇಹ
ಅಶ್ರು ಸುರಿಸಿದ ನಯನ
ಪೋಣಿಸಿಕೊಂಡವು ಮನದೊಳಗೆ

ಮುರುಟಿದ ಯೌವನ
ವಚನ ಪಾಲಿಸಿತು
ಬುದ್ಧನ ನೆನೆದು

ಸಾವಿನ ಸೂಚನೆ
ಚಿಂತೆಗಳ ಚಿತೆ ಹೊತ್ತಿತು
ಆದರೂ ಧೃತಿಗೆಡಲಿಲ್ಲ

ಮರಗಟ್ಟಿದ ನೋವುಗಳು
ಚಿತೆಯಲ್ಲಿ ಬಿದ್ದು ಬೂದಿಯಾದರೂ
ಒಲವನರಿಸಿ ಮತ್ತೆ ಬಂದವು

ಹೊತ್ತೊಯ್ಯುತಿದೆ ಸಾವು
ತಿರುಗಿ ಬಾರದ ಲೋಕದಲಿ
ದಿಟ್ಟತನ ಮುಂದುವರಿಸಿ

ಮಧುರ ನೋವಿನ ತುಡಿತ
ಹಸಿ ನಗುವಿನ ನೋಟ
ದಿಕ್ಕೆಟ್ಟು ಓಡಿದವು ಮಮ್ಮಲ ಮರಗುತ

ಬೆಳೆದು ಬೆಳಗಿದ ಆಸೆ
ನೀರವ ಮೌನದೊಂದಿಗೆ
ಮಲಿನಗೊಳ್ಳದಿರಲಿ

ಮಾನಿನಿಯ ಮೌನ
ಮರೆತ ಮಾತು
ಶವಯಾತ್ರೆಯೊಂದಿಗೆ ಹೊರಟವು

ಬೆಂಕಿ ತಗುಲಿತು ವಿರಹಗಳಿಗೆ
ಮತ್ತೆ ಚಿಗುರಲಿಲ್ಲ ಬಯಕೆಗಳು
ಒಣಗಿದವು ಹಠಮಾಡದೆ

ಸೋತು ಮಲಗಿದ ಮೌನ
ಬೆಳದಿಂಗಳು ಹರಡಿದ ಚಂದಿರ
ಹಾಯ್ಕುಗಳ ನಿನಾದ ಆಲಿಸಿದರು

ನಗದೆ ಉಳಿದ ಅಳು
ಮುಪ್ಪಾದರೂ ಚೇತರಿಸಲಿಲ್ಲ
ಹಿತೆವೆನಿಸಿದರೂ ಮಿತಿಯಿರಲಿ

ಕಮಟು ವಾಸನೆ ಮಾತುಗಳು
ನಿನ್ನೊಳಗೆ ಇರಲಿ ಬಿಡು
ನಿಲುಕಲಾರದ ಬಾನಿನಂತೆ

ನೋವಿನ ಆಳದೊಳಗೆ
ನೂಕಿ ಬಿಟ್ಟಿತು
ಕಮ್ಮನೆಯ ನಗು

ಉನ್ಮಾತ್ತಗೊಂಡ ವಿಶ್ವಾಸಗಳು
ಸುಟ್ಟು ಕರಕಲಾದವು
ಆಮಿಷಗಳು ಮತ್ತೆ ಸುಮ್ಮನಾದವು

ದೀಪದ ನೆರಳಲ್ಲಿ
ಮಳೆ ಹನಿಗೂ
ಸುಖನಿದ್ರೆ

ಕತ್ತಲ ಕೋಣೆಯಲಿ
ಜಿರಲೆಗೂ ಖುಷಿ
ಹಣತೆ ನೋಡಿ

ಹೆಂಚಿನ ಮೇಲೆ
ಮಳೆ ಹನಿ ಸುರಿದು
ಎಚ್ಚರಿಸಿದವು

ಜಗುಲಿಯಲಿ ಕುಳಿತು
ಜೋರಾಗಿ ನಕ್ಕರೂ
ತಿರುಗಿ ನೋಡಲಿಲ್ಲ

ಹೊಸ ಖದರು
ನಳನಳಿಸುತ್ತಿತ್ತು
ಭತ್ತದ ತೆನೆಯಲ್ಲಿ

ಕತ್ತಲ ನೋಡಿ
ಭಾವಬಿಂಬಗಳು
ಮತ್ತೆ ಒಂದಾದವು

ಸಣ್ಣ ಸಂಗತಿ
ಬಲಿಕೊಟ್ಟು
ಶುಷ್ಕ ಬದುಕು ಸಾಗಹಾಕು

ಸೋಂಬೇರಿ ಮನ
ಎಚ್ಚರಿಸಿದರೂ
ಸುಮ್ಮನೆ ಬಿದ್ದುಕೊಂಡಿದೆ

ಚಿಂತೆಯಿಲ್ಲದೆ
ಬೆಚ್ಚಗೆ ಮಲಗಿವೆ
ಟ್ರಂಕಿನಲಿ ಜರತಾರಸೀರೆಗಳು

ಬರಿದಾದ ಅಂಗೈ ಮೇಲೆ
ಮದರಂಗಿ ಹಾಕಿ
ಚಿತ್ತಾರ ಬಿಡಿಸಿದರು

ಗುಲ್ ಮೊಹರ್‌ನಲ್ಲಿ
ಅಡಗಿ ಕುಳಿತಿದ್ದವು
ವೇದಾಂತಿ ಮಾತುಗಳು

ಮೈ ಮುರಿಯುತ್ತಿವೆ
ಟೊಂಗೆಗಳು
ಬೀಸುವ ಬಿರುಗಾಳಿಗೆ

ಮೌನದ ಬಿಗು
ಸಡಲಿಸಿತು
ಜೀ . . . ಎನುತ ಜೀರಂಗಿ

ಹುಣ್ಣಿಮೆ ದಿನ
ಪೂರ್ಣ ಚಂದಿರ
ನೀರಿನೊಡನೆ ಚಕ್ಕಂದವಾಡುತ್ತಿದ್ದ

ಸುಮ್ಮನೆ ಹೊರಟವು
ಗೆದ್ದಲ ಹುಳಗಳು
ಕಟ್ಟಿದ ಹುತ್ತ ಬಿಟ್ಟು

ರುಚಿಸಿತು ಕೊನೆಹನಿ
ಮರೆತರೂ ಬಿಡಲಿಲ್ಲ
ಬಿಗಿದಪ್ಪುವವರೆಗೂ

ಶಿಶಿರದ ನೋವು
ತಾಳದೆ ಅಡಗಿಕುಳಿತವು
ದುಂಬಿಗಳು ಹೂವಿನೊಳಗೆ

ನೀರು ತುಂಬಿದ ಬಟ್ಟಲೊಳಗೆ
ತಾರೆಯೊಂದಿಗೆ ಮಲಗಿದ ಶಶಿ
ಎಚ್ಚರಿಸಿದರೂ ಏಳಲಿಲ್ಲ

ಇಬ್ಬನಿ ಸ್ನಾನ ಮುಗಿಸಿ
ಮೈ ಒಣಗಿಸಲು ಸೂರ್ಯನಿಗಾಗಿ
ಕಾಯ್ದು ಕುಳಿತವು ಕಂಬಳಿ ಹುಳುಗಳು

ಮುಳ್ಳು ಮೈಗೆ ಚುಚ್ಚದಿದ್ದರೂ
ಕೊಳಕು ಮಾತನಾಡಿ
ಸುಮ್ಮನಾಯಿತು

ಉಢಾಳ ಚಿಟ್ಟೆ
ಹಸುರ ವನದಲ್ಲಿ
ಹೂ ಅರಳುವುದನ್ನೇ ನೋಡುತ್ತಿತ್ತು

ನಕ್ಷತ್ರ ಪುಂಜ
ಚಿತ್ತಾರ ಬರೆಯುವುದೆಂದು
ನೋಡುತ್ತ ಕುಳಿತ ಚಂದಿರ

ಕುಹಕ ನಗೆ ನೋಡಿ
ಬೆಚ್ಚಗೆ ಮಲಗಿತು
ಕೋಗಿಲೆ ತನ್ನ ಗೂಡೊಳಗೆ

ಸೋನೆಮಳೆ ಸುರಿದರೂ
ಎರೆಹುಳು ಕಾಯಕ ಮರೆಯದೆ
ಮಣ್ಣು ಹದಗೊಳಿಸಿತು

ಸುಮ್ಮನೆ ಬೇಡವೆಂದು
ಅಗಲಿದವು
ಕೂಡಿ ಆಡಿದ ನೆನಪುಗಳು

ಅವರ ದುಃಖ ಕಂಡು
ರೋದಿಸಿದವು
ಕಂಬನಿ ಹನಿಗಳು ಬಚ್ಚಿಟ್ಟುಕೊಂಡು

ತಾಂಬೂಲ ಜಗಿದು
ಬಾಯಿ ಕೆಂಪು ಮಾಡಿಕೊಂಡವರು
ಮಾತನಾಡದೆ ಹೊರಟರು

ಚಿಂವ್ ಚಿಂವ್ ಮಾರೆಯಾಗಿ
ಗೂಡುಮಾತ್ರ
ನೇತಾಡುತ್ತಿತ್ತು ಮರದಲಿ

ಒಗರು ಮಾತುಗಳಾಡಿ
ಉದುರಿ ಬಿದ್ದ ಎಲೆಗಳು
ನೆಲದ ಮೇಲೆ ಮಲಗಿದವು

ಮನೆಯೊಳಗಿನ
ಜಗುಲಿಯ ದೀಪ ನೋಡಿ
ಬುದ್ಧ ಖುಷಿಪಟ್ಟ

ಚಿಂತೆಯ ಕಂತೆ ಹೊತ್ತು
ಅಂಗಳದಲ್ಲಿ ಮಲಗಿತ್ತು
ಬಣ್ಣದ ರಂಗೋಲಿ

ಒಣ ನಾಲಗೆಯ ಧಿಮಾಕು ನೋಡಿ
ಪಿಸುಮಾತುಗಳು ಕೋಪಗೊಂಡವು
ಮಾತನಾಡಲು ಹಿಂಜರಿದವು

ಮೇಣದ ಬತ್ತಿ ಬೆಳಕಿಗೆ
ಸುತ್ತುಹಾಕಿತು
ದೀಪದ ಹುಳ

ರಿಂಗಣ ಕುಣಿತಕೆ
ಜುಂ ಎಂದಿತು ನಗಾರಿ
ಮೈ ದಣಿಯುವವರೆಗೆ

ಜೋಗುಳ ಹಾಡು ಕೇಳಿ
ಮುದುಡಿ ಮಲಗಿತು
ಕಂದಮ್ಮ 

ತಣ್ಣನೆ ಕೋಪ
ನೆಟ್ಟಗೆ ನಿಂತು
ಮತ್ತೆ ಜಗಳಕ್ಕೆ ಸಿದ್ಧವಾಯ್ತು

ಚಂದಿರ, ನೀನೇಕೆ ಮಲಗಲಿಲ್ಲ ಇನ್ನೂ ?
ಚಳಿಯಾದರೆ ಮುಗಿಲನ್ನೇ
ಹೊದ್ದು ಮಲಗು ಎಂದಿದ್ದೆ

ಹೂಗಳೇ ಗುಟ್ಟೇಕೆ ರಟ್ಟುಮಾಡಿದಿರಿ
ಗಪ್ಪಂತ ಬಾಯಿ ಮುಚ್ಚಬೇಕಿತ್ತು
ಹೀಗೇಕೆ ಮಾಡಿದಿರಿ

ಕುಲಾವಿ ಹಾಕಿಕೊಂಡು ಮಲಗು
ಹಸುರುತನ ಹಾಗೇ ಉಳಿದೀತು
ಇಲ್ಲವಾದರೆ ಮುದುಡಿ ಬಿದ್ದಿ

ಎಚ್ಚರವಾಗಿಯೇ ಇದ್ದ ಬುದ್ಧ
ಇಡೀ ವಿಶ್ವವನ್ನೇ
ನೋಡುತ್ತ ಕುಳಿತಿದ್ದ

ಹೆದರ ಬೇಡ ಛತ್ರಿ !
ಆ ಗಾಳಿಯ ಬದ್ಧಿನೇ ಅಷ್ಟಲ್ವಾ
ಬೆಂಡಾಗಾದಿರು ನಾ ಹಿಡಿದಿರುವೆ ಗಟ್ಟಿಯಾಗಿ

ನೆನಪುಗಳು ಜಾರಿ ಹೋಗುವುದಿಲ್ಲ
ತಾಜಾ ಹಣ್ಣು, ಹೂ
ಭದ್ರವಾಗಿ ಕುಂತಿವೆ ಫ್ರಿಜ್ ನಲ್ಲಿ

ನನಗಿನ್ನೂ ಅರ್ಥವಾಗುತ್ತಿಲ್ಲ
ನೀವೇ ಹೇಳಿ ಕನಸುಗಳೇ
ಆಕಾಶ ಇಷ್ಷೇಕೆ ಚಿಕ್ಕದಾಯ್ತು ?

ಹೂಗಳ ಹೆಕ್ಕುವಾಗ
ನನ್ನ ನೋಡಿ ಹಗುರಾಗಿ ನಕ್ಕವು
ಯಾಕೆಂದು ಈಗಲೂ ತಿಳಿಯುತ್ತಿಲ್ಲ

ಯಾರಲ್ಲಿ ? ಓ
ಬಿಳಿ ಕೂದಲು ! ಸಂಕೋಚವೇಕೆ
ನಿನಗಿನ್ನೂ ವಯಸ್ಸಾಗಿಲ್ಲ ಬಿಡು

ಕತ್ತಲಲಿ ಜಿನುಗುವ ಮಳೆ
ತುಸು ದೂರ ಸರಿಯಿತು
ಬೆಳಕ ನೋಡಿ

ಹಠ ಹಿಡಿದ ಕಂಬನಿಗಳು
ಒಳಗೂ ಇರದೆ ಹೊರಗೂ ಬರದೆ
ಸುಮ್ಮನೆ ರೋದಿಸಿದವು

ಬೆದರುಗೊಂಬೆ ನೋಡಿ ಹೆದರದೆ
ತಮ್ಮಷ್ಟಕ್ಕೆ ತಾವು ಆಟವಾಡುತ್ತಿವೆ
ಗಿಡಮರಗಳು ಎಂದಿನಂತೆ

ಪಿರಿಪಿರಿ ಮಳೆ ಹನಿಗಳೇ
ಬಿಟ್ಟೂ ಬಿಡದೆ ಕುಣಿಯುವಿರೇಕೆ
ಬೀದಿ ಲಾಂದ್ರದ ಬೆಳಕ ನೋಡಿ

ಮರು ಮಾತನಾಡದೇ
ಹಾಡ ಹಗಲೇ ಓಡಿದವು
ಒದ್ದೆಯಾದ ಬಯಕೆಗಳು

ಮುಸುಕು ನೆನಪುಗಳು
ತಾಜಾ ಇರಲಿಲ್ಲ
ಒಣಗಿದ ಮೀನಿನಂತಿದ್ದವು

ಉಳಿದ ಮಾತುಗಳು
ಎಲ್ಲೆಂದು ಕೇಳಬೇಡ
ಅವು ಗುಬ್ಬಚ್ಚಿ ಗೂಡಲ್ಲಿ ಕುಣಿಯುತಿವೆ

ನೀವೇಕೆ ಮೂಲೆ ಹಿಡಿದು ಕುಂತಿರಿ
ಎದ್ದು ಬಂದು ಒಮ್ಮೆ ಮಾತಾಡಿಸಿ
ಇಲ್ಲವೆ ಅಲ್ಲೇ ಹುದುಗಿಕೊಳ್ಳಿ

ಪುಟ್ಟ ರೆಕ್ಕೆ ಬಿಚ್ಚಿ
ಪಟಪಟ ಬಡಿದು
ಪೊಟರಿಯೊಳಗೆ ಓಡಿತು

ಅವರು ಹಾಕಿಸಿದ
ಹಚ್ಚೆಯ ಗುರುತು
ಇನ್ನೂ ಹಸುರಾಗಿದೆ

ಹುಚ್ಚುಗಾಳಿ
ಶಿಳ್ಳೆ ಹಾಕುತ
ಧೂಳೆಬ್ಬಿಸಿ ಕಣ್ಣು ಮುಚ್ಚಿಸಿತು

ಮೈಯ ನೋವುಂಡು
ಗಿರಕಿ ಹೊಡೆದು
ತೆಪ್ಪಗಾದವು ಬಾಸುಂಡೆ

ಮಳೆ ನಿಂತ ಮೇಲೆ
ಸುಮ್ಮನೆ ಮಲಗಿತು
ಕುಣಿದು ಕುಪ್ಪಳಿಸಿದ ಮಿಂಚು

ಜೊಳ್ಳು ಹಡಗು
ಹಣಕಿಹಾಕಿ ನಕ್ಕಿತು
ಸಾಗರದ ಆರ್ಭಟ ನೋಡಿ

ಮಳೆ ಬಂದರೂ
ಪುಚ್ಚದ ಬಣ್ಣ
ಮಾಸಲಿಲ್ಲ

ತೊಡಕುಗಾಲು ಹಾಕಿ
ಮುಂದೆ ನಡೆದರೂ
ದಾರಿ ಸವೆಸಲಿಲ್ಲ

ನೂರಾರು ತಿಗಣಿಗಳು
ಗಾದಿಯೊಳಗೆ
ಎಚ್ಚರದಿಂದಿದ್ದವು

ಅಡಗಿಕೊಳ್ಳಲು ಹೋದ ಚಿಗುರು
ಟಗರುಗಳ ನೋಡಿ
ಸುಮ್ಮನೆ ನಿಂತವು

ಜನಪದರನ್ನು
ಬೆರಗುಗೊಳಿಸಿದವು
ಚಾವಡಿಯ ಚಿತ್ತಾರಗಳು

ಪುಟ್ಟ ಶಾಲೆಯಲ್ಲಿ
ಅವನು ಓದುವುದನು ನೋಡು
ಪುಸ್ತಕದಲ್ಲಿದ್ದ ಗೆದ್ದಲು ಹುಳಗಳು ಓಡಿದವು

ತಲೆ ಮರೆಸಿಕೊಂಡಿದ್ದ ಮುಂಜಾವು
ಹಕ್ಕಿಗಳ ಕಲರವ ಕೇಳಿ
ಎಚ್ಚೆತ್ತು ಬೆಳಕ ನೀಡಿತು

 ಮುರುಕು ಡೋಣಿಯಲಿ
ಪಯಣಕೆ ಸಿದ್ಧ
ಮುಂದೆ ಹೋಗುವುದೇ ಚಿಂತೆ

ನೀರಿನ ಗುಳ್ಳೆಗಳು
ಒಡೆದರೂ
ಬಣ್ಣ ಕಾಣಲಿಲ್ಲ

ಎದುರು ಗೋಡೆ
ಹಲ್ಕಿರಿದು ನಕ್ಕಿತು
ಬಣ್ಣ ಹಚ್ಚಿದ್ದು ನೋಡಿ

ಊದಿದರೂ
ಅಲುಗಾಡಲಿಲ್ಲ
ಜೋತುಬಿದ್ದ ನೆರಳು

ಕತ್ತಲು  ಬರುವುದನು
ಬೀದಿ ದೀಪಗಳು
ದುರುಗುಟ್ಟಿ ನೋಡಿದವು

ಅವರ ಮೇಲೆ ಮಲಗಿ
ಅಂದ ಹೆಚ್ಚಿಸಿಕೊಂಡಿತು
ಹಳೇ ಒಡವೆ

ಮಣ್ಣು ವಾಸನೆ ಹಿಡಿದು
ತೆವಳುತ್ತ ಬಂತು
ಬಸವನಹುಳು

ಅವಳ ಪ್ರಬುದ್ಧತೆ ತೋರಿದವು
ಗುಳಿ ಬಿದ್ದ ಗಲ್ಲ
ನರೆತ ಕೂದಲು

ಕುಕ್ಕರುಗಾಲು ಹಾಕಿ
ಮಿಕಿಮಿಕಿ ನೋಡಿದವು
ನಕ್ಷತ್ರಗಳು

ಎಲೆ ಮೇಲೆ ಮಲಗಿದ
ತಂಗಾಳಿಗೆ
ಇಬ್ಬನಿ ಎಚ್ಚರಿಸಿದವು

ಹಸಿ ಬೆಳಕನ್ನು
ನಿರಾಳವಾಗಿ ನುಂಗಿಹಾಕಿತು
ಒಣ ನೆರಳು

ಮಕರಂದದ ಒಳ ಮೌನಕೆ
ಝೇಂಕರಿಸಿದವು
ಬಣ್ಣದ ದುಂಬಿಗಳು

ರೇಷಿಮೆ ಹುಳು
ಕಾಯಕ ಮಾಡುತಲಿತ್ತು
ಬುದ್ಧನ ಚಿತ್ತದಿಂದ

ಹಸೀ ಮಣ್ಣಲಿ
ಮೂಡಿದ ಹೆಜ್ಜೆಗಳಿಗೆ
ಎರಕ ಹೊಯ್ದರು

ಕೊನೆಯ ಕಂತು ಕಟ್ಟಿ
ಒಂಟಿತನಕ್ಕೆ
ವಿದಾಯ ಹೇಳಿದರು

ಎಷ್ಟೋ ಸಂಗತಿಗಳು ಮಲಗಿವೆ
ಗಟ್ಟಿಯಾಗಿ ಉಚ್ಚರಿಸಿದರೂ
ಮೇಲೇಳಲೇ ಇಲ್ಲ

ತಬ್ಬಿ ಮಲಗಿವೆ
ಕಾಗದಗಳೆಲ್ಲ
ಒಂದನ್ನೊದು

ಬಂಡೆಗಳ ನಡುವೆ
ಬೆಳೆದು ನಿಂತ
ಮರದ ಎಲೆಗಳು ಇನ್ನೂ ಬಾಡಿಲ್ಲ

ಬೊಚ್ಚು ಬಾಯಿ ನಗು
ಪ್ರಾಣವಂದಷ್ಟನ್ನು
ಹುದುಗಿಸಿಟ್ಟುಕೊಂಡಿದೆ

ಸಾವಿನ ಸೂಚನೆ ಕಂಡು
ಹಾಸ್ಯ ತೋರಿತು
ಮುದಿತನದ ಬಾಳು

ಸುಕ್ಕುಗಟ್ಟಿದ ಮುಖದಲಿ
ಸಾವಿರಾರು ಗೆರೆಗಳು
ಗುರುತುಹಿಡಿದವು

ಮನೆಯೊಳಗೆ
ಗಂಧದ ಮೃದು ಕಂಪು
ಮೂಲೆ ಹಿಡಿದು ಕುಳಿತಿದೆ

ಗಾಢವಾಗಿ ತಟ್ಟಿ
ಛಾಪು ಒತ್ತಿದವು
ಸುಮಧುರ ಕ್ಷಣಗಳು

ಕತ್ತಲ ಓಡಿಸಿ
ಮಿಂಚಿನ ದಾಳಿ ಮಾಡಿದವು
ಚಿಗುರು ಕಿರಣಗಳು

ಓಡಿ ಬಂದು
ಮರವನೇರಿ ಕುಳಿತು
ಕಣ್ಣು ಪಿಳಕಿಸಿತು ಬೆಳಕು

ಬೇಸ್ತು ಬಿದ್ದ ಚಿಗುರೆಲೆಗಳು
ಆಗ ತಾನೇ ಎದ್ದು ಕುಳಿತ್ತಿದ್ದವು
ಹಗ್ಗದ ಮಂಚದ ಮೇಲೆ

ಎಳೆತನ ಮಾಗಿ
ಬೆರಗುಗೊಳಿಸಿದರು
ಘನೋದ್ದೇಶ ಈಡೇರಿಸಿ

ಚಿಗುರುರೆಲೆ ಜತೆ
ಕೂಗಾಡಿ, ಗುದ್ದಾಡಿ
ಸಿಟ್ಟು ತೀರಿಸಿಕೊಂಡಿತು ಅಳಿಲು

ತೋಳ ತೆಕ್ಕೆಯಲಿ
ಬಿದ್ದು ಒದ್ದಾಡುತಿರುವ ಮನಸುಗಳೇ
ನೀವೇಕೆ ಬಂದು ಸಿಕ್ಕಿಕೊಂಡಿರಿಲ್ಲಿ

ನಾಲಿಗೆ ತುದಿಯಲಿ ನೂರಾರು ಕವಿತೆ
ಹಾಡಲಿಲ್ಲ ಮನಸ ಬಿಚ್ಚಿ
ಅವಿತುಕೊಂಡು ಸುಮ್ಮನೆ ರೋದಿಸಿದವು

ಬಿಕರಿಗಿಟ್ಟ ಮಾತುಗಳೂ ಕೇಳಿದವು
ನಮ್ಮನೇಕೆ ತಂದಿರಿ ಮಾರುಕಟ್ಟಗೆ
ನಾವಿಲ್ಲಿ ಬಂದು ಹೋಗಿದ್ದೇವೆ

ಅವಳ ಗೋರಿಯ ಮೇಲೆ ಕುಳಿತು
ಇವನ ಹಣೆಬರಹ ಬರೆದರೂ
ಮನಸು ಬದಲಿಸಲಿಲ್ಲ

ಹೈಮಾಸ್ಟ್ ದೀಪದ ಕೆಳಗೆ
ಒಗರು ಧ್ವನಿಯ ಹುಡುಗಿ
ಮಾತನಾಡಿಸಿದರೂ ಸುಮ್ಮನಿದ್ದಳು

ಕಣ್ಣೀರ ಹನಿಗಳೇ
ಉರಿವ ಮುಖದ ಮೇಲೆ  ಬಿದ್ದರೂ
ಭಾವನೆಗಳೇಕೆ ಬದಲಾಗಲಿಲ್ಲ ?

ಚಿಂತೆಗಳ ಕಚ್ಚಲು
ನಿಟ್ಟುಸಿರು ಹೆದರಲಿಲ್ಲ
ನಿದ್ರೆಯ ಮಗ್ಗಲು ಬದಲಿಸಿತು

ಬೋಳಾದ ಬುದ್ಧಿಗೆ
ಬುದ್ಧನ ಹಿತ ನುಡಿಗಳು
ಮಾರ್ಗದರ್ಶನವಾದವು

ಭದ್ರವಾಗಿ ಮುಚ್ಚಿದ್ದವು
ಸಾವಿನ ಮನೆಯ ಕದಗಳು
ಒಳಗೆ ಬರುವೆನೆಂದರೂ ಕೇಳದೆ

ಪಾಟಿಯ ಮೇಲೆ ಬರೆದ
ಮಗನ ಅಕ್ಷರಗಳು
ಪೂರ್ವಕ್ಕೊಂದಿಷ್ಟು ಪಶ್ಚಿಮಕ್ಕೊಂದಿಷ್ಟು ಮಲಗಿದ್ದವು

ಉರಿದು ತಣ್ಣಗಾದ ಮನಸು
ಕುಬ್ಜವಾಗದ ಬಯಕೆಗಳು
ಮತ್ತೆ ಬಯಸಿವೆ ಬೆಂಕಿಯ ಸಂಗ

ಮೈಮುರಿದು ಎದ್ದ ಮುಂಜಾವು
ಬಿಸಿಲೊಡನೆ ಜಗಳವಾಡಿ
ಚಳಿ ಎಂದು ಹೆದರುತ್ತಿದೆ

ಬತ್ತದ ಭಾವನೆಗಳು
ಮಹಡಿಯ ಮೇಲ್ಹೋಗಿ
ಜಿನುಗುವ ಮಳೆ ಹನಿಗಳ ಮೇಲೆ ಕುಳಿತಿವೆ

ಬಣ್ಣ ಹಚ್ಚಿ ಕೊಂಡವು
ರಂಗಿನ ಮಾತುಗಳು
ಆದರೂ ಕುಣಿದು ಕುಪ್ಪಳಿಸಲಿಲ್ಲ

ಬೋಧಿ ಮರ ಹಸಿರು ನೀಡಿತು
ಬುದ್ಧ ಹೇಳಿದ
ಬೆಳಕು ನಗುವುದಿನ್ನು ಸದಾ ಹೀಗೆ

ವಿಕಾರಗಳ ಪ್ರತಿರೂಪವೇ
ನೀನೇಕೆ ಗೋರಿಯ ಬಳಿ ಬಂದೆ
ನಾನೇ ಕರಿಯಲು ಬರುತ್ತಿದ್ದೆ

ಶರಣೆಂಬೆವು ಬುದ್ಧ
ದುಃಖ ದುಮ್ಮಾನಗಳ ಅರಿವಾಯಿತು
ಆಸೆಗಳ ಬಿಟ್ಟು ನಿನ್ನೊಂದಿಗೆ ಬರುವೆವು

ನನ್ನ ಹೃದಯ ಬಡಿತ ನಿಂತರೆ
ಆಗ ನನಗೆ ನೆಮ್ಮದಿ ಸಿಗುತ್ತದೆ
ಕನಸುಗಳು ನನ್ನಿಂದ ದೂರವಾಗುತ್ತವೆ

ಓಹ್ ! ಎಂತಹ ಹೋಲಿಕೆ
ಅಂದು ವಿಶಾಲವಾಗಿ ಬೆಳಕು ಹರಡಿದ್ದೆ
ಅದಕೆ ಮಗನಿಗೆ ವಿಶಾಲಚಂದ್ರನೆಂದು ಹೆಸರಿಟ್ಟೆ

ಸಾವು ನನ್ನೊಳಗಿದೆ
ಮತ್ತೇಕೆ ಹುಡುಕಲಿ ಅಲ್ಲಿಲ್ಲಿ
ಬುದ್ಧ ನಾನ್ಹೇಳಿದ್ದು ಸರಿಯೆ ?

ಅಂಬಿಗ ಗಣೆ ಹಾಕಿದರೂ
ಮುಂದೆ ಸಾಗಲಿಲ್ಲ ದೋಣಿ
ಅಲೆಗಳು ಸುತ್ತುವರಿದು ನಿಲ್ಲಿಸಿದವು

ಮಗ್ಗುಲು ಬದಲಿಸಿದ ರಾತ್ರಿಗಳು
ಯಾರ ಮಾತನೂ ಕೇಳದೆ
ಗಿರಕಿಯೂ ಹೊಡೆಸಲಿಲ್ಲ ನಿದ್ದೆಯೂ ಬರಸಲಿಲ್ಲ

ಕುಡಿದು ಜೋಲಿಹೊಡೆದ ಚಂದ್ರನ ನೋಡಿ
ನಶೆ ಏರಿಸಿಕೊಂಡ ಮೊಗ್ಗುಗಳು
ಅರಳದೆ ಸುಮ್ಮನೆ ಮಲಗಿದವು

ಗಾಯದ ಮಾತುಗಳು ನಂಜಾದವು
ಉಮ್ಮಳಿಸಿ ಅಳುತಿರಲು
ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ

ಆಗ ಅಜ್ಜಿ ಹಾಕಿದ ಸುಟಕಿ ಕಲೆ ನೆನಪಾಗಲಿಲ್ಲ
ಈಗ ಸಮಾಧಿ ಮುಂದೆ ಬಂದು ಅಳುವೆಯಾಕೆ
ನೀ ಇನ್ನು ಬಾಳು ಇಲ್ಲಿ ಬರಬೇಡ

ತಂಗಾಳಿ ಹೊಡೆತಕ್ಕೆ
ಮೋಡ ಮತ್ತೆ ಹೇಳಿತು ನಿಲ್ಲಿ
ಮಳೆ ಹನಿಗಳೆಲ್ಲಿ !

ಮೌನದ ಮೇಲೆ ಬಿದ್ದ ಹಿಮ
ನೆರಳಿನ ಮಾತುಗಳು
ಕೈ ಹಿಡಿದು ಕರೆತಂದವು

ಹಂಬಲದ ಬೆಳಕು
ಧುಮ್ಮಿಕ್ಕಿ ಹರಡುತಿದೆ
ಅನಾಥ ಶವಗಳ ಮೇಲೆ

ಗುಹೆಯ ಬಾಗಿಲಲಿ ನಿಂತು
ಕೈಸನ್ನೆ ಮಾಡಿ ಕರೆದವು
ಮುಖವಿಲ್ಲದ ಕನಸುಗಳು

ನನ್ನ ಪುಟ್ಟ ಗುಡಿಸಲಲ್ಲಿ
ತಾರೆಗಳು ಅಂಬೆಗಾಲಿಟ್ಟು ಬರಲಿಲ್ಲ
ನಾನಿನ್ನೂ ದೊಡವನೆಂದು ತಿಳಿದು

ಕಪ್ಪು ಕಲೆಗಳ ಇಟ್ಟು ಕೊಂಡು
ಹಾಲ ಬೆಳಕ ಬೀರಿ
ನೀನೇಕೆ ಕುಣಿಯುತಿರುವೆ ?

ಬೇನಾಮಿ ಟೋಪಿ
ಕತ್ತಲಲಿ ಬಿಕ್ಕಳಿಸಿ
ನನಗೂ ಹೆಸರಿಡಿ ಎನ್ನುತಿದೆ

ಹರುಕು ಮುರುಕು ಮಾತುಗಳು
ತೇಪೆ ಹಚ್ಚಿಕೊಂಡು ಬಂದರೂ
ಮಾತನಾಡದೇ ಸುಮ್ಮನಾದವು

ಜೋಪಡಿ ಮೇಲೆ
ಜಡಿಮಳೆ ಕುಣಿದು ಕುಪ್ಪಳಿಸಿ
ಸುಸ್ತಾಗಿ ಮಣ್ಣು ಸೇರಿತು

ಸೂರ್ಯ ಚಂದಿರರು
ನಮ್ಮೊಡನೆ ಇರುವರಂತೆ
ಮತ್ತೇಕೆ ಆಕಾಶಕ್ಕೊಂದು ಏಣಿ ?

ರೀತಿ _ ರಿವಾಜು ಇಲ್ಲದ ಗುರಿಗಳೇ
ತೇಪೆ ಹಚ್ಚಿದ ರಸ್ತೆಯ ಮೇಲೆ
ನಡುಗುತ್ತ ನಿಂತಿರೇಕೆ

ಕೊನೆಯ ಮಾತ್ತೇ ಕುಹಕವಾಡಿ
ಸುಮ್ಮನಾಗಲಿಲ್ಲ
ಬೆಚ್ಚಿಸುತ್ತ ಮುನ್ನಡೆದವು

ನನ್ನೊಳಗಿನ ನೋವು
ಮಾತ್ರ ಹೇಳಬಲ್ಲವು
ಬುದ್ಧನ ಸಲಹೆ ಬೇಕೆಂದು

ನೇತಾಡುವ ನೆರಳ
ಸಪ್ಪಳ ಕೇಳಿ ಕವಿತೆ
ಮೌನ ಮುರಿದು ಹಾಡಿತು

ನಾನೇನು ಮಾಡಲಿ
ಹಾಳಾದ ಯೋಚನೆಗಳೇ
ನಿಮ್ಮನು ಝಾಡಿಸಿ ಒದ್ದು ಬಿಡು ಎಂದ ಬುದ್ಧ

ಆಲಿಕಲ್ಲುಗಳು
ನುಚ್ಚು ನೂರಾಗಿ ಬಿದ್ದುಕೊಂಡಿರುವಾಗ
ಕಣ್ಣು ಪಿಳುಕಿಸಿ ನೋಡಲಿಲ್ಲ

ಬಿನ್ನಾಣದ ಬದುಕು
ಬಣ್ಣ ಬಳಿದುಕೊಂಡು
ನೆಗೆಯತೊಡಗಿತು

ಹಗಲು ರಾತ್ರಿ ತಿರುಗಿ
ಕಂಗೆಟ್ಟ ಮನಸ್ಸು
ಗೋರಿಯ ಮೇಲೆ ಕುಣಿಯ ತೊಡಗಿತು

ಹಾದಿ ತಪ್ಪಿಸಿದವು
ಬಳೆಗಳ ಸದ್ದು
ಸ್ಮಶಾನದತ್ತ ಹೋಗುವರನ್ನು

ಅರಿಷಿನ ಕೆನ್ನೆಗಳು
ಗುಳಿ ತೋಡಿ ನಕ್ಕವು
ಮರಿವ ಮುನ್ನ

ಪುಟ್ಟ ಹಣತೆ ಹೇಳಿತು
ಜಗುಲಿ ಏರಿಸಿ ಬಿಡು ಒಮ್ಮೆ
ಆಗ ನೆಮ್ಮದಿಯಿಂದ ಇರುವೆ

ನಶೆಯಿನ್ನೂ ದೂರ
ಮುಂದೆ ಬಂದವು ನೆನಿಕೆಗಳು
ನೀನೇಕೆ ಬೆರಸಿ ಕುಡಿಯಲಿಲ್ಲ

ಬುದ್ಧನ ಪುಟ್ಟ ಹಕ್ಕಿಗಳಿವು
ನೆನಪಿಲ್ಲ ತಾವು ಎಷ್ಟು ಹಾಡಿದೆವೆಂದು
ಎಲ್ಲರ ಮನ ತಣಿಸುವುದೊಂದೇ ಗೊತ್ತು

ಮಳೆಯಲಿ ತೊಯ್ಸಿಕೊಂಡ ಪೋರ
ನೀನೇಕೆ ಮೂಲೆ ಹಿಡಿದು ಕುಳಿತೆ
ಇನ್ನಷ್ಟು ಕುಣಿಯೋಣ ಬಾ
          ***

ಈಸಲಾಗದು ಮನಸೆ ಆಸೆಯ ನದಿಯೊಳು

ಈಸಲಾಗದು ಮನಸೆ ಆಸೆಯ ನದಿಯೊಳು                  ||ಪ||

ಈಶ್ಯಾಡು ನೀ ಏಳು ಜನ್ಮಾಂತರ
ಮೇಳವಿಸಿ ಸುಖತಾಳಿ ಇಳೆಗೆ ಬಂದು ಬಾಳುವುದೇಕೆ ನೀ ||೧||

ಭೂಮಿಗುದಿಸಿ ಭವದ ಕರ್ಮದಿ
ಏ ಮರುಳೆ ಮಾಯ ಮೋಹಿಸುವುದೇಕೇ                     ||೨||

ಲೋಕದಿ ಶಿಶುನಾಳಧೀಶರ ಭಜಿಸುವುದೇ
ಕಾಕು ವಿಷಯಕೆಂದೋ ಸಾಗೆನಿಸದೆ ನೀ                     ||೩||

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾಯಿಲೆ ಬ್ರಹ್ಮವ ಬೊಗಳಿದರೇನೋ

ಬಾಯಿಲೆ ಬ್ರಹ್ಮವ ಬೊಗಳಿದರೇನೋ
ನಾಯಿ ಜನ್ಮಕೆ ಬಿದ್ದು ಹೊರಳುವ ಮನಸೇ          || ಪ ||

ಕಾಯ ಜೀವದೊಳು ನ್ಯಾಯವ ಬೆಳೆಸಿ
ಮಾಯದೊಳಗೆ ಮುಳುಗೇಳುವ ಮನಸೇ          ||ಅ.ಪ ||

ಪರಸ್ತ್ರೀ ಪರಧನ ಪರನಿಂದ್ಯದಿ ನೀನು
ಪರಸ್ತುತಿಯಲಿ ದಿನಗಳಿಯುತ ಮನಸೇ
ವರಶಾಸ್ತ್ರಗಳೋದಿ ಅರಗಿಳಿಯಂದದಿ
ನೆರೆಸಂಸಾರ ಪಂಜರದಿ ತೊಳಲುವ ಮನಸೇ      ||೧||

ಹೊಲಸಿನ ಸುಂಬಳ ಸೇವಿಪ ನೊಣದಂತೆ
ತಿಳಿಯದೆ ವಿಷಯದಿ ಬೀಳುವಿ ಮನಸೆ
ಬಿಸಳಂಕ‌ಎಳವಿ ಶಿಸುನಾಳಧೀಶನ ಒಲಿಸದೆ
ಬಲು ಕರ್ಮವ ಗಳಿಸುವಿಯೋ ಮನಸೇ              ||೨||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನಸಿನ ಭ್ರಮೆ ತೀರಿಸಬಾರೆ

ಮನಸಿನ ಭ್ರಮೆ ತೀರಿಸಬಾರೆ ನೀರೆ                      ||ಪ||

ತೀರಿಸದಿದ್ದರೆ ಆರಿಗ್ಹೇಳಲಿ ನಾನು
ವಾರಿನೋಟದಿ ಬಂದು ಕೂಡೇ ಬೇಗ ಒಡಗೂಡೆ      ||ಅ.ಪ.||

ಹಿಂದಕ್ಕೆ ಮೂವರ ಹಿರಿಯರ ಸಲುಹಿದಿ
ಇಂದಾರಿಗುಸುರಲಿ ಚಂದಿರಮುಖಿಯೇ                  ||೧||

ಬಾ ಬಾ ಅಂದರೆ ಬಾರಿ ಬಾರದೆ ನಿಂತಲ್ಲೆ
ಏ ನಾರಿ ಎರಡಿಲ್ಲ ಈ ಮಾತು ಸುಳ್ಳಲ್ಲ                   ||೨||

ವಸುಧೀಶ ಶಿಶುನಾಳ ವಸತಿಯೊಳಿರುತಿಹ
ಕುಸುಮಲೋಚನೆಯನ್ನು ಕಸಿವಿಸಿಗೊಳಿಸದೆ          ||೩|| 
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೆಳಗಾಗುವ ತನಕ ಕುಳಿತುನೋಡು

ಬೆಳಗಾಗುವ ತನಕ ಕುಳಿತುನೋಡು ನಿನ್ನೊಳಗೆ        ||ಪ||

ಬಲು ವಿಷಯಗಳಾ ಬಲಿಸೆ ತನುತ್ರಂರಯದೊಳಗೆ
ಹೊರಗೆ ಸುಳ್ಪ್ದಾಡುವ ಮನವೆ                ||೧||

ಕನ್ನು ಮುಚ್ಚಿ ಕೈ ಕಾಲುಗಳಾಡದೆ
ತಣ್ಣಗೆ ಪವಡಿಸಿ ಕುನ್ನಿಯ ಮನವೆ             ||೨||

ನಿದ್ರೆ ಹತ್ತಿ ಮಲಗಿರ್ದು ಕನಸಿನೊಳು
ಗದ್ದಲಿಸುವ ಗುಣನೋಡಿ ಮನವೆ              ||೩||

ಘೋರ ಚಿಂತಾಸಾಗರದೊಳು ಮುಳುಗಿ
ಪಾರಗಾಣದ ಛೀಮಾರಿ ಮನವೆ               ||೪||

ವಸುಧಿಪ ಶಿಶುನಾಳಧೀಶನ ಸ್ಮರಣೆಯ
ಎಸಗದೆ ಬಲು ಹರಿದಾಡುವ ಮನವೆ         ||೫||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ನಿಶ್ಚಿಂತನಾಗಬೇಕಂತೀ

ನಿಶ್ಚಿಂತನಾಗಬೇಕಂತೀ ಬಹು
ದುಶ್ಚಿಂತಿಯೊಳಗೇ ನೀ ಕುಂತೀ
ಯಾಕೋ ಎಲೋ ನಿನಗಿ ಭ್ರಾಂತೀ
ನಾಳಿಗಾಗುವದೀಗಂತೀ                ||ಪ||

ಆಶಪಾಶಗಳ ಬ್ಯಾಡಂತಿ ವಳೆ
ಮೀಸಲ ನುಡಿ ಮಾತಾಡಂತೀ
ಭಾಷೆಕೊಟ್ಟು ತಪ್ಪಬ್ಯಾಡಂತೀ
ಹರಿದಾಸರೊಳಗೆ ಮನನೀಡಂತೀ        ||೧||

ಅವರನು ಕಂಡರೆ ಅವರಂತೆ
ಮತ್ತವರನು ಕಂಡರೆ ಇವರಂತೆ
ಅವರವರರಿಯದೆ ತನಗೂ ತಿಳಿಯದೆ
ಮೂಡನಾಗಿ ಸುಮ್ಮನೆ ಕುಂತೀ            ||೨||

ಪೊಡವಿಯೊಳಗೆ ಶಿಶುನಾಳಂತೀ
ದೃಡಗೋವಿಂದಯೋಗಿಯ ಚಿಂತೀ
ಬಿಡದಾತನ ಸೇವೆ ಮಾಡಂತೀ
ಭಯವಿಲ್ಲದ ಗುರುವಿನ ಕೂಡಂತೀ      ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಲಿಂಗದೊಳಗೆ ಮನವಿಧದಿನನಾ

ಲಿಂಗದೊಳಗೆ ಮನವಿಧದಿನನಾ ವರದ
ಇಂಗಿತ ತಿಳಿಯದವಗೇನು ಪಹಲ?
ಜಂಗಮ ಜಂಗುಕಥಥಿ ಹಿಂಗದೆ ತಿರುಗಲು
ಸಂಗನ ಶರಣರಿಗೇನು ಫಲ?                         ||ಪ||             

ಮೂರ ಮನಿಯ ಭಿಕಶಹ ಬೇಧದಲೇ ಮ-
ತತಾರ ಭಕತರೊಧನಾಧದಲೇ
ಚಅರು ತರದ ಪಂಚಾಕಶಹರಿ ಜಪವನು
ಬಾರಿ ಬಾರಿಗೆ ಮಾಧದಲೇ                            ||೧||

ಭಂಧ ಭವಿಗಳನು ಖಂಧಿಸದೇ ಸುಳಳೇ
ಹಿಂಧುಗಥಥಿ ತಿರುಗೇನು ಫಲ?
ತುಂಧುಗಂಬಳಿಯ ಹೊತತು ಹೆಗಲಿನೊಳು
ಮಂಧಿಬೊಳಿಸಿದರೇನು ಪಹಲ?                     ||೨||

ಪೊಧವಿಯೊಳಗೆ ಶಿಶುನಾಳದಹೀಶನ
ಅಧಿಯ ಪೂಜಿಸದಲೇನು ಪಹಲ?
ಕಧುತರದಾಸೆಯ ಸುಧದೆ ವಿರಕತಿಯ
ಪಧೆದು ಮಥಹದೊಳಲಿರಲೇನು ಪಹಲ?         ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಹರಿದಾಡುವ ಮನಸಿಗೆ

ಹರಿದಾಡುವ ಮನಸಿಗೆ ಮಚ್ಚಿಮಚ್ಚಿಲ್ಹೊಡೆದು ನಿಲ್ಲಿಸು ಜಾಣ                        ||ಪ||

ಕಡು ವಿಷಯದಿ ಸಂಸಾರಕ ಮರುಗುತ           
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ ಮಚ್ಚಿ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ                        ||೧||

ಸಿರಿ ಸಂಪತ್ತು ಸೌಭಾಗ್ಯ ತನಗೆ ಬಲು         
ಪಿರಿದಾಗಲಿ ಬೇಕೆಂಬುವ ಮನಸಿಗೆ ಮಚ್ಚಿ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ                        ||೨||

ವಸುಧಿಯೊಳಗೆ ಶಿಶುನಾಳಧೀಶನ
ಹೆಸರು ಮರೆತು ಕೊಸರ್ಯಾಡುವ ಮನಸಿಗೆ ಮಚ್ಚಿ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ                       ||೩||

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನಸೇ ಮನಸಿನ ಮನಸ ನಿಲ್ಲಿಸುವುದು

ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳಿಯುವ ಮನಬ್ಯಾರೆಲೋ ಮನಸೇ  ||ಪ||

ತನುತ್ರಯದೊಳು ಸುಳಿದಾಡುವ ಜೀವನ
ಗುಣವಂತರೆ ನಿಜಬಾರಲೋ ಮನಸೇ         ||೧||

ದಶದಿಕ್ಕಿಗೆ ಹಾರಾಡುವ ಹಕ್ಕಿಯು
ಸಿಕ್ಕು ತಪ್ಪಿಸೋಪರಿ ಬ್ಯಾರಲೋ ಮನಸೇ   ||೨||

ಗುರುಗೋವಿಂದನ ಚರಣಕಮಲದೊಳು
ಸ್ವರಗೊಂಬುವ ಭ್ರಮರಾಳಿಯ ಮನಸೇ       ||೩||

ವಿಷಯಗಳಲ್ಲಿ ಸುಖ ಬಯಕೆ ಬಯಸಿ ಭವ
ನಿಶೆಜೋತಿ ಪ್ರಕಾಶವು ಮನಸೇ                 ||೪||

ಇಳೆಯೊಳು ಶಿಶುನಾಳಧೀಶ ನಿರ್ಮಲನು
ತಿಳಿದರೆ ಒಳಹೊರಗೊಂದು ಮನಸೇ           ||೫||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಹೊತ್ತುಗಳಿಯದಿರೆಲೋ ಮನವೆ

ಹೊತ್ತುಗಳಿಯದಿರೆಲೋ ಮನವೆ          ||ಪ||

ಗೊತ್ತು ಇಲ್ಲ ನೀನು ಬರಿದೆ
ಚಿತ್ತಚಂಚಲನಾಗಿ ಚರಿಸ್ಯಾಡುತ್ತ
ನಾನಾ ವಿಷಯಗಳನು ಹೊತ್ತು ಶ್ರಮದೊಳಾಡಬೇಡ  ||ಅ.ಪ.||

ವ್ಯರ್ಥಒಂದಿನವಾಗಿ ತೊಲಗಿದಿ
ಅತ್ತುಅಬಿ ಯಮನ ದೂತರೊಯ್ಯೆ
ಚಿತ್ರಗುಪ್ತರು ಲೆಖ್ಖ ತೋರಿಸಿ
ಲತ್ತಿಯನ್ನು ಹಾಕುತಿಹರೋ                       ||೧||

ನಾನಾ ಜನ್ಮಗಳನ್ನು ತಿರುಗಿ
ನಾನಾ ಯೋನಿಗಳಲ್ಲಿ ಜನಿಸಿ
ನಾನಾ ಕುಲದ ಹೆಸರು ಹೇಳಿ
ಹಾನಿ ಹೊಂದಿದರೇನು ಪಳವು                   ||೨||

ಪೊಡವಿಯಲ್ಲಿ ಸುಖ ಸೌಭಾಗ್ಯ
ಮಡುವಿನಲ್ಲಿ ತೇಲಿ
ಒಡಿಯ ಶಿಶುನಾಳೇಶನಡಿಯ
ಬಿಡದೆ ಧ್ಯಾನ ಮಾಡುತಿರ್ದು                     ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಎಂತು ಮರಿಯಲಮ್ಮಾ ಇವನಾ

ಎಂತು ಮರಿಯಲಮ್ಮಾ ಇವನಾ
ಶಾಂತ ಶರೀಫನಾ
ಅಂತರಂಗದಲ್ಲೇ ಬಂದು
ಚಿಂತೆ ದೂರ ಮಾಡಿದನವ್ವಾ   ||೧||

ಕಾಲ ಕರ್ಮವ ಗೆದ್ದು
ಲೀಲೆಯಾಡಿದನೆ
ಮೇಲುಗಿರಿಯ ಮೇಲಕ್ಕೆ ಹತ್ತಿ
ಅಲಕ್ಕನೆ ಹಾರಿದನೆ               ||೨||

ಜನನ ಮರಣವಗೆದ್ದು ತಾನು
ಶಿವನಲೋಕ ಕಂಡನೆ
ಭುವನದೊಳು ಶಿಶುವಿನಾಳ-
ಧೀಶನನ್ನು ಹಾದಿದನೆ             ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಯೋಗಿಯ ಕಂಡೆನು

ಯೋಗಿಯ ಕಂಡೆನು ಹುಚ್ಚೇಂದ್ರ
ಯೋಗಿಯ ಕಂಡೆನು ನಾನು                                           ||ಪ||

ಭೋಗವಿಷಯವ ತ್ಯಾಗ ಮಾಡಿದ
ಆಗಮವ ತಿಳಿದಂಥ ಮಹಾಗುರು
ಲಾಗದಿ ಲಕ್ಷಣವ ಬಿಂದುವಿನೊಳಗೆ
ತೋರಿದ ಈಗ ನೋಡಿದೆ                                               ||೧||

ಸ್ಥೂಲದೇಹವ ತಾಳಿದ ಜನರ ಬಿಟ್ಟು
ಮೂಲ ಬ್ರಹ್ಮವ ಪೇಳಿದ
ಕಾಲ ಕರ್ಮವ ಗೆಲಿದು ತನ್ನೊಳು
ತಾಳಿ ಸದ್ಗುರು ಲಿಂಗ ಲೀಲೆಯ
ಮ್ಯಾಳದೊಲು ಮೆರೆವಂಥ ಪರಮಾನಂದ ಲೋಲ ನಿಷ್ಕಳಂಕ ||೨||

ಶಿಶುನಾಳಧೀಶನಿಂದ ಪಡೆದ ಉಪದೇಶ ಎನಗೆ ಛಂದ
ಉಸುರುವೆನು ಸಾಕ್ಷಾತನ ಕರುಣದಿ
ವಿಷಯ ಇದರೊಳೇನು ಇಲ್ಲವು
ರಸಿಕರಾದವರೆಲ್ಲ ಕೇಳ್ವದು
ಹೊಸ ಕವಿತಾ ಭೋಧ ಅನಂದದಿ                                     ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಚಿಂತೆಯಾತಕೋ ಯೋಗಿಗೆ

ಚಿಂತೆಯಾತಕೋ ಯೋಗಿಗೆ
ಸದಗುರುವಿನಂತರಂಗದ ಭೋಗಿಗೆ                 ||ಪ||

ಕಂತುವಿನ ಕುಟ್ಟಿ ಕಾಲಮೆಟ್ಟಿ
ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ      ||ಅ.ಪ.||

ಕರಣಗಳ ಕಳಿದಾತಗೆ
ಮರಣ ಮಾಯಾದುರಿತಭವವನ್ನು ಅಳಿದಾತಗೆ
ಶರಣಸೇವೆಯೊಳಿದ್ದು ಹರಣ ಮತ್ಸರಗೆದ್ದು
ಧರಣಿಯೊಳು ಮೆರೆವಾತಗೆ                            ||೧||

ವಿಷಯವನು ಸುಲದಾತಗೆ
ಕಸರು ಕರ್ಮಾ ಸುಲದಾತಗೆ
ಪಸರಿಸುವ ಪರಮಾತ್ಮಬಿಂದು ಬೋಧನ ಮಾತು
ಹಸನಾಗಿ ತಿಳಿದಾತಗೆ ಇವಗೆ                         ||೨||

ಲಕ್ಷವನು ಇಟ್ಟಾತಗೆ
ಸಾಕ್ಷಾತನ ಮೋಕ್ಷ ಕೈ ಕೊಟ್ಟಾತಗೆ
ಈ ಕ್ಷಿತಿಗೆ ಶಿಶುನಾಳಧೀಶನ ಗೊವಿಂದಗುರು
ರಕ್ಷಿಸಿದ ರವಿನೇತ್ರಗೆ ಇವಗೆ                           ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಯೊಗಮುದ್ರಿ ಬಲಿದವನೆಂಬೋ

ಯೊಗಮುದ್ರಿ ಬಲಿದವನೆಂಬೋ
ಅಗ ಮೂಲದಿ ನಿನಗೆ
ಭೋಗ ವಿಷಯ ಲಂಪಟಂಗಳನರಿಯದೆ
ಲಾಗವನರಿಯದೆ ಹೀಗಾಗುವರೆ        ||೧||

ವಿಷಯದೊಳಗ ಮನಸನಿಟ್ಟು
ಹುಸಿಯ ಬಿಳುವರೇನೋ ಮರುಳೆ
ಅಸಮ ತೇಜವನು ತನ್ನೊಳು ಕಾಣುತ
ಶಶಿಕಿರಣದ ರಸವನರಿಯದೆ            ||೨||

ಬಗಿದುನೋಡಿ ಬ್ರಹ್ಮಜ್ಞಾನ
ಸಿಗದೆ ಮಿಡುಕುವರೇನೋ ಮರುಳೆ
ಜಿಗಿಯಲಜಾಂಡಕೆ ಝಗ ಝಗಿಸುವೆ ನೀ
ಜಿಗಹಳ್ಳಿಗೆ ಶಿಶುನಾಳಧೀಶ ನೀವು     ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಸಂಸಾರದಿಂದ ಸದ್ಗತಿಹೊಂದಿ

ಸಂಸಾರದಿಂದ ಸದ್ಗತಿಹೊಂದಿ
ಹವಣವರಿತು ಮಾಯೆಯ ಜಯಸಿ
ಮರಣ ಗೆಲಿದವನೇ ಶಿವಯೋಗಿ                                 ||ಪ||

ಭವಭಾರ ಜಾಯ ಕರ್ಮಗಳನು
ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು
ಬ್ರಹ್ಮಜ್ಞಾನ ದೊರೆವುತನಕ
ತ್ರಿನಯನ ಆಶ್ರಯ ಹಿಡಿದು
ಆವುದನರಿಯದೆ ಮುನ್ನಾ
ಆನುವರಿತು ಸವಿಗರಿದು
ಸಕಲ ವಿಷಯಗಳನ್ನು ನಿರಾಕರಿಸಿ
ಜಪವ ಕೈಯೊಳು ಸಿಗದೆ ನಡೆದವೆನೇ ಶಿವಯೋಗಿ          ||೧||

ನಿತ್ಯ ಮಾಡುವ ಕೆಟ್ಟ
ಕೃತ್ಯ ಕಾರಣಕ್ಕೆ ಸಾಕ್ಷಿ
ಹತ್ತು ಇಂದ್ರಿಯ ಮನಸ್ಸು ಹರಿದು
ಚಿತ್ತಮದ ಮತ್ಸರಕೆ
ಮತ್ತೆ ಅಸ್ಥಿರದ ಘಟದ ಚೇಷ್ಟೆಯನು
ಹೊತ್ತುಕೊಂಡು ಚಿತ್ರಗುಪ್ತರ ಲೆಖ್ಖದೊಳು ಬೆರೆಸಿಹುದಾಗಿ ||೨||

ಹಿಂದೆ ಮಾಡಿದ ಪುಣ್ಯದಿಂದ
ಪೊಡವಿಸ್ಥಲಕೆ ಬಂದು
ಶಿಶುನಾಳಗ್ರಾಮದಿ ನಿಂದು
ದಿನಗಳಿದು ದಂದುಗಕ್ಕೆ ದಣಿದು
ಸುಂದರ ಶರೀರದೊಳು ಸೇರಿ
ಚಂದದಲಿ ಮೆರೆದನು ಆನಂದಭೋಗಿ                         ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಪರಮಾನುಬೋಧೆಯೊ

ಪರಮಾನುಬೋಧೆಯೋ  ಈ          ||ಪ||

ಸರಸಿಜ ಭವಗಿದು ಅರಕಿಲ್ಲದ
ಪರಮಾನುಬೋಧೆಯೊ                 ||೧||

ಕಲಶಜಾಕೃತವನೆ ಈ
ಬಲಯುತ ಛಲದಿ ನಿಲಯರೂಪ      ||೨||

ಶಿಶುನಾಳಧೀಶನ ತಾ ಈ
ಅಸಮ ಸ್ವರೂಪದ ಶಶಿಕಿರಣವೋ    ||೩|| 

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೋಧವಾದ ಮೇಲೆ ಜನರಪವಾದಕಂಜುವರೆ?

ಬೋಧವಾದ ಮೇಲೆ ಜನರಪವಾದಕಂಜುವರೆ?
ಆದಿ ಅಂತ್ಯ ಆತ್ಮ ಆತ್ಮರುಭಯ ಬೇಧವಳಿದು ಸಾಧುಯೆನಿಸಿ ||ಪ್||

ಕಾಲ ಕರ್ಮ ತುಳಿದು ತೂರ್ಯ ಜೋಲಿಯೊಳಗೆ ನುಡಿಯುತಿರಲು
ಖೂಳಜನರು ಕೇಳಿ ಸಪ್ಪ ಕೀಳೋಣಾಗದೆನುತಿರಲು           ||೧||

ಪರಮಗುರು ನಿರಾಲಹಸ್ತಾ ಶಿರದಮ್ಯಾಲ ಹರಿಯುತಿರಲು
ನರರು ತನ್ನ ಜರಿದು ಸಪ್ಪ ಹರಿಯೋಣಾಗದೆನುತಿರಲು        ||೨||

ತಂದೆ ಶಿಶುನಾಳಧೀಶನೆ ಇಂದು ಎಮಗೆ ಪಾಲಿಸೆಂದು
ಬಿಂದು ವಸ್ತು ಸವಿದು ಪರಮಾನಂದದೊಳಗೆ ಮೆರೆಯುತಿರಲು  ||೩||

                       ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಸಾಧುಗಳ ಸಹಜ ಪಥ

ಸಾಧುಗಳ ಸಹಜ ಪಥವಿದು
ಆನಂದದಿಂದಿರುವುದು                 || ಪ ||

ಬೇಕು ಬ್ಯಾಡಾಯೆಂಬುದೆಲ್ಲಾ
ಸಾಕುಮಾಡಿ ವಿಷಯ ನೂಕಿ
ಲೋಕದೊಳು ಏಕವಾಗೆ
ಮೂಕರಂತೆ ಚರಿಸುತಿಹರೋ        || ೧ ||

ಎಲ್ಲಿ ಕುಳಿತರಲ್ಲೆ ದೃಷ್ಟಿ
ಎಲ್ಲಿ ನಿಂತರಲ್ಲಿ ಲಕ್ಷ
ಆಲ್ಲೆ ಇಲ್ಲೆಯೆಂಬೋದಳಿದು
ಎಲ್ಲ ತಾವೇ ಚರುಸುತಿಹರು          || ೨ ||

ದೇಹಧರಿಸಿ
ದೇಹ ಭೋಗನೀಗಿ ನಿತ್ಯ
ನಿರ್ಮಲಾತ್ಮ ಶಿಶುನಾಳೇಶನ
ಬೆಳಕಿನೊಳು ಬೆಳಗುತಿಹುದು       || ೩ ||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಆರೂಢಾ ಈರೂಢಾ ಆರೂಢಾ ಯಾ ಆಲಿ

ಆರೂಢಾ ಈರೂಢಾ ಆರೂಢಾ ಯಾ ಆಲಿ
ಪ್ರೌಢತನದಿ ಗುಂಡಾಡು ಹುಡುಗರೊಳು
ಮೃಡ ನೀ ಪ್ರಭು ಆಡೋ ನಿರಂಜನ                              ||೧||

ಹಣುಮಂತಾ ಯೋಗಸಾ ಗುಣವಂತಾ
ರಾಮಸಾ ಕಡಿದು ಕತ್ತಲದಿ ನಾ
ಬಹಳ ವಿಚಾರದಿ ದಣಿದು ದಣಿದು ನಾ ನೋಡಬಂದೆ         ||೨||

ಲಂಗೋಟಿ ಹಾಕಿದಿ ಕಂಗೆಟ್ಟು ಶೋಕದಿ
ತುಂಗ ಶಿಶುನಾಳಧೀಶನ ಸೇವಕಾ
ಇಂತಾತ್ಮ ಆದರ ಇಂಗಿತ ತಿಳಿದವನೇ ಆರೂಢ             ||೩||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್  

ಜಯ ಭಾರತ ಜನನಿಯ ತನುಜಾತೆ


ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೆ |
ಜಯ ಹೇ ರಸಋಷಿಗಳ ಬೀಡೆ |
ಭೂದೇವಿಯ ಮುಕುಟದ ನವ ಮಣಿಯೆ |
ಗಂಧದ ಚಂದದ ಹೊನ್ನಿನ ಗಣಿಯೆ |
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಜನನಿಯ ಜೋಗುಳ ವೇದದ ಘೋಷ |
ಜನನಿಗೆ ಜೀವವು ನಿನ್ನಾವೇಶ |
ಹಸುರಿನ ಗಿರಿಗಳ ಸಾಲೆ |
ನಿನ್ನಯ ಕೊರಳಿನ ಮಾಲೆ |
ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಶಂಕರ ರಾಮಾನುಜ ವಿದ್ಯಾರಣ್ಯ |
ಬಸವೇಶ್ವರರಿಹ ದಿವ್ಯಾರಣ್ಯ |
ರನ್ನ ಷಡಕ್ಷರಿ ಪೊನ್ನ |
ಪಂಪ ಲಕುಮಿಪತಿ ಜನ್ನ |
ಕಬ್ಬಿಗರುದಿಸಿದ ಮಂಗಳ ಧಾಮ |
ಕವಿ ಕೋಗಿಲೆಗಳ ಪುಣ್ಯಾರಾಮ |
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ತೈಲಪ ಹೊಯ್ಸಳರಾಳಿದ ನಾಡೆ |
ಡಂಕಣ ಜಕಣರ ನೆಚ್ಚಿನ ಬೀಡೆ |
ಕೃಷ್ಣ ಶರಾವತಿ ತುಂಗಾ |
ಕಾವೇರಿಯ ವರ ರಂಗಾ |
ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಸರ್ವಜನಾಂಗದ ಶಾಂತಿಯ ತೋಟ |
ರಸಿಕರ ಕಂಗಳ ಸೆಳೆಯುವ ನೋಟ |
ಹಿಂದೂ ಕ್ರೈಸ್ತ ಮುಸಲ್ಮಾನ |
ಪಾರಸಿಕ ಜೈನರುದ್ಯಾನ |
ಜನಕನ ಹೋಲುವ ದೊರೆಗಳ ಧಾಮ |
ಗಾಯಕ ವೈಣಿಕರಾರಾಮ |
ಕನ್ನಡ ನುಡಿ ಕುಣಿದಾಡುವ ದೇಹ |
ಕನ್ನಡ ತಾಯಿಯ ಮಕ್ಕಳ ಗೇಹ |

ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
        ***
- ಕುವೆಂಪು

 ಕೀಲಿಕರಣ : ಅರೇಹಳ್ಳಿ ರವಿ