ಮಾನಿನಿ ಮಾತಾಡಬ್ಯಾಡಮ್ಮಾ

-ಶಿಶುನಾಳ ಶರೀಫ್

ಮಾನಿನಿ  ಮಾತಾಡಬ್ಯಾಡಮ್ಮಾ
ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ                   || ಪ ||

ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು
ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು
                               ಪ್ರತಿ ಕಲಹವಾಯಿತು                         || ಅ. ಪ. ||

ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿರದರಿತು
                             ತಾ ಬ್ಯಾರೊಂದು ಸಂಗತಿಯ
ಕರಸಿದರು ಲಕ್ಷೇಶ್ವರದ ಪೌರಾಣಿಕ ನರಮತಿಯ
ಮೆರೆವ ಬಸವೇಶ್ವರ ಲೀಲಾಮೃತ ಶರಧಿಯೋಳ್ ವಿಷಮಾತ್ರ
                                         ಬೆರಸಿದ
ಮರುಳತನದ ಈ ಊರ ಗೌಡರಿಗೆ ಹಲವರು
                                       ಆರಿಕೆಯಿಲ್ಲದಾಯಿತು                    || ೧ ||

ಓದುವರಕ್ಷರವ ಇದರೊಳಗೆ
ವೇದಾಂತಮಾರ್ಗದ ಹಾದಿ ತಿಳಿಯದು ಶಾಸ್ತ್ರಿಯೆಂಬುವಗೆ
ಸಾಧಿಸಿತು ಇನ್ನು ಕ್ರೋಧ ಆಂದಾನಯ್ಯ ಗದಿಗೆಯ್ಯಗೆ
ಹಾದಿ ತಿಳಿಯದೆ ಹೀಂಗ ಜಂಗಮರವರು ಬೈದಾಡುತಿರೆ
ಬಸವಾದಿ ಪ್ರಮಥರು ಮೆಚ್ಚಲರಿಯರು ಮೇದಿನಿಗೆ
                                       ಮಹಾ ಚೋದ್ಯವಾಯಿತು               || ೨ ||

ಏನನಲಿ ಈ ಗ್ರಾಮದ ಜನರು ಸನ್ಮಾನನರಿಯದ ಕಾನನದ
                                    ಕಪಿ ಹಿಂಡಿನಂತಿಹರು
ಗಾನರಸದ ಮೇಳಕೆ ತಾವು ತಮ್ಮೊಳು ಕುಳಿತು ಕೇಳುವರು
ತಾನು ಶಿಶನಾಳೀಶ ಬಸವನ ಶೂನ್ಯ ಸಿಂಹಾಸನದ ವಿಸ್ತರ
ಹೀನ ಪಾಪಿ ಭವಿಗಳೊಡನೆ ಜ್ಞಾನಿಯಾದರೆ ನೀನು ಉಸುರದಿರು     || ೩ ||

                   ****

ಕೀಲಿಕರಣ: ಎಂ.ಎನ್.ಎಸ್. ರಾವ್

ದೇವರಿಗೆ ಬಿಟ್ಟಿದ್ದು


-ಅಬ್ಬಾಸ್ ಮೇಲಿನಮನಿ

ಬಿರು ಬೇಸಿಗೆ ಒಂದು ಮಧ್ಯಾಹ್ನ ಪಾಟೀಲ್ ಸರ್‍ ಭೇಟಿಯಾದರು.  ಹೊರ ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಅವರು ಕಂಡದ್ದು ಅದೇ ಮೊದಲು.  ಉಭಯಕುಶಲೋಪರಿ ತರುವಾಯ ಹೊಟೇಲಿಗೆ ಹೋಗಿ ಕಾಫಿಗೆ ಆರ್ಡರ್‍ ಕೊಟ್ಟು ಪಾಟೀಲರನ್ನು ಕೇಳಿದೆ:

"ನಿಮ್ಮ ಶಿಕ್ಷಕ ವೃತಿ ಹೇಗೆ ನಡೆದಿದೆ?"
"ಬಹಳ ಆರಾಮಾಗಿದೆ" ಎಂದರು ಪಾಟೀಲ ಸರ್‍.
"ನಿಮ್ಮ ಶಾಲೆಯಲ್ಲಿ ಎಷ್ಟು ತರಗತಿಗಳಿವೆ?"
"ಒಂದರಿಂದ ಐದು"
"ಸ್ಟಾಫ್?"
"ಫುಲ್ ಇದೆ".
"ಕಟ್ಟಡ?"
"ಬಾಗಿಲು, ಕಿಟಕಿ, ಸೂರಿನ ಹಂಚು ಪೂರ್ತಿ ಇಲ್ಲದಿದ್ದರೂ ಸ್ವಂತ ಕಟ್ಟಡ ಇದೆ."
"ಮಕ್ಕಳ ಸಂಖ್ಯೆ?"
"ಸಾಕಷ್ಟಿದೆ."
"ದಾಖಲಾತಿ.... ಹಾಜರಾತಿ?"
"ಹಾಜರಾತಿಯದೇ ಸಮಸ್ಯೆ."
"ಉಚಿತ ಪುಸ್ತಕ, ಬಟ್ಟೆ, ಬಿಸಿಯೂಟ ವ್ಯವಸ್ಥೆ ಇಲ್ಲವೆ?"
"ಎಲ್ಲ ಅನುಕೂಲವೂ ಇದೆ."
"ಹಾಗಾದರೆ ಮಕ್ಕಳ ಹಾಜರಾತಿ ಕಮ್ಮಿ ಏಕೆ?"
"ಊಟದ ವೇಳೆಯಲ್ಲಿ ಹಾಜರಾತಿ ಹೆಚ್ಚಿಗಿರುವುದು."
"ಮಕ್ಕಳ ಕಲಿಕೆಯ ಮಟ್ಟ."
"ಆರಕ್ಕೇರದು ಮೂರಕ್ಕಿಳಿಯದು."
"ಈ ಬಗ್ಗೆ ಸಹೇಬರು ಗಮನ ಹರಿಸುವುದಿಲ್ಲವೆ?"
"ಮಕ್ಕಳು ಶಾಲೆಗೆ ಬರಲಿ ಬಿಡಲಿ ವಾರ್ಷಿಕ ಪರೀಕ್ಷೆಯಲ್ಲಿ ಅವರೆಲ್ಲ ಪಾಸು."
"ಓದು - ಬರಹ ಇಲ್ಲದೆ ಪಾಸಾಗುತ್ತಾರೆಯೇ ಅವರು?"
"ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು.  ಅವರನ್ನು ನಪಾಸೂ ಮಾಡಬಾರದು."
"ಅವರ ಪ್ರಗತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲವೆ ನೀವು?"
"ಹೆಡ್‌ಮಾಸ್ಟರ್‍ ಆ ಕಾಗದ ಈ ಕಾಗದ ಎಂದು ಆಫೀಸಿಗೆ ಅಲೆದಾಡುವರು.  ನಮ್ಮಲ್ಲಿ ಕೆಲವರು ತರಬೇತಿಗೆ ಹೋಗುವರು.  ಕೆಲವರಿಗೆ ಗಣತಿ ಕಾರ್ಯ ಅದು-ಇದು ಎಂದಿರುವುದು ಮಕ್ಕಳಿಗೆ ಕಲಿಸಲು ಪುರುಸೊತ್ತೇ ಸಿಗುವುದಿಲ್ಲ"
"ಸಾಹೇಬರು ನಿಮ್ಮ ಶಾಲೆಯ ತಪಾಸಣೆಗೆ ಬರುವುದಿಲ್ಲವೆ?"
"ಹಿರಿಯ ಸಾಹೇಬರು ವರ್ಷಕ್ಕೊಮ್ಮೆ ಬರುತ್ತಾರೆ, ಕಿರಿಯ ಸಾಹೇಬರು ಬೇಕೆನಿಸಿದಾಗ ದಿಢೀರನೆ ಪ್ರತ್ಯಕ್ಷರಾಗುತ್ತಾರೆ."
"ಅವರಿಗೆ ಸಮಸ್ಯೆ ಅರ್ಥವಾಗುವುದಿಲ್ಲವೆ?"
"ತಮ್ಮ ವೈಯಕ್ತಿಕ ಬೇಡಿಕೆಗಳನ್ನು ಪೂರೈಸಿಕೊಂಡು ಹೋಗುವ ಅವರು ಕಲಿಸುವುದರ ಬಗ್ಗೆ ಚಕಾರವೆತ್ತುವುದಿಲ್ಲ.  ವಿಜಿಟ್ ಪುಸ್ತಕದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ.  ನಮ್ಮ ಶಾಲೆ ಬಹಳ ನೆಮ್ಮದಿಯಾಗಿದೆ."
"ಊರಿನವರು ಲಕ್ಷ್ಯ ಕೊಡುವುದಿಲ್ಲವೆ?"
"ನಮ್ಮದು ಸರಕಾರಿ ಶಾಲೆ, ಅದರ ಮೇಲೆ ಅವರ ಹಕ್ಕು ಇಲ್ಲ."
"ಇದೆಲ್ಲ ವಿಚಿತ್ರವಲ್ಲವೇ?"
"ಅದೆಲ್ಲ ಕವರಿನ ಮಹಿಮೆ!"
"ಕವರು ... ಏನದು?"
"ಸಾಹೇಬರಿಗೆ ನಾವು ಕವರು ಮುಟ್ಟಿಸುತ್ತೇವೆ."
"ಏಕೆ?"
"ಕವರಿನಲ್ಲಿ ನಮ್ಮ ದುಡ್ಡಿರುವುದು."
"ಸಾಹೇಬರಿಗೆ ಹಣ ಏಕೆ?  ಅವರಿಗೆ ಪಗಾರ ಇರುವುದಿಲ್ಲವೆ?"
"ಪಗಾರ ಅವರ ಸಂಸಾರಕ್ಕೆ ನಮ್ಮ ದುಡ್ಡು ಅವರ ಇತರೆ ಖರ್ಚಿಗೆ."
'ಇದೆಂಥ ವ್ಯವಸ್ಥೆ?"
"ನಮ್ಮ ದೋಷಗಳನ್ನು ಸಾಹೇಬರು ಮುಚ್ಚಿಕೊಳ್ಳುತ್ತಾರೆ.  ಸಾಹೇಬರ ದೋಷಗಳನ್ನು ದೊಡ್ಡ ಸಾಹೇಬರು.  ಅವರ ಮೇಲಿನವರ ದೋಷಗಳನ್ನು ಅದಕ್ಕೂ ಮೇಲಿನವರು ಬೇರಿನಿಂದ ಟೊಂಗೆಯ ತುದಿತನಕ ಇದೇ ವ್ಯವಸ್ಥೆ ಇರುವುದು."
"ಶಾಲೆ ಮತ್ತು ಮಕ್ಕಳ ಗತಿ?"
"ದೇವರಿಗೇ ಬಿಟ್ಟದ್ದು!"
                     *****

ಕೀಲಿಕರಣ: ಕಿಶೋರ್‍ ಚಂದ್ರ

ವಿಪರ್ಯಾಸ


- ಗಿರಿಜಾಪತಿ ಎಂ. ಎನ್

ಏನು ಬರೆಯಲಿ ಏನು ಹಾಡಲಿ
ದಿನದ ಕಾವ್ಯಕೆ ಶುಭನುಡಿ,
ನಿತ್ಯದುದಯವು ಬರೆವ ಮುನ್ನುಡಿ
ಪುಟ-ಪುಟಕೂ ನೀಡಲು ಕೆಂಗಿಡಿ,

ನಿಸರ್ಗ ಸಗ್ಗವು ಬೆಂಗಾಡಾಗಿರೆ
ಇನ್ನೆಲ್ಲಿ ಪೂಜೆಯು ಪ್ರಕೃತಿಗೆ,
ಇಂಚರದ ಬಳಗಕೆ ಠಾವೆ ಇರದಿರೆ
ಎಲ್ಲಿನ್ನೆಲ್ಲಿ ಗಾನವು ಕೊಳಲಿಗೆ,

ರಾಯರಳಿದರು ರಾಯತನವು ತಾ ಸಾಗಿರೆ,
ಯಾವ ನೆಲೆಯಿದೆ ಹಸಿವಿನೊಡಲಿಗೆ,
ಧರ್ಮದರ್ಥವು ಅನರ್ಥವಾಗಿರೆ
ಇನ್ನಾವ ಬೆಲೆಯಿದೆ ದೇವ ಪ್ರೀತಿಗೆ....

ಜಗವೆ ಮಾರುವ ಕಟ್ಟೆಯಾಗಿರೆ
ಕೊಡು ಕೊಳ್ಳುವವರೆತ್ತಬಲ್ಲರು ಮಾನ'ವ
ಸರಕು ನೂಪುರ ಗಂಟೆ ಮೊಳಗಿರೆ
ಸುಪ್ರಭಾತವೆಲ್ಲಿಯೋ ಮಾನವ....

        *****

ಕೀಲಿಕರಣ: ಕಿಶೋರ್‍ ಚಂದ್ರ

ಆರಗೊಡವಿನ್ನೇನು ಮಗಳೆ

-ಶಿಶುನಾಳ ಶರೀಫ್

ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮಾ            || ಪ ||

ದಾರಿಕಾರರು ನಿನ್ನ ಮಾರಿನೋಡಲು
ಮಾರಿಯತ್ತಿ ನೋಡ ಬೇಕಮ್ಮಾ           || ಅ. ಪ.||

ಆಸನ ದೊಡ್ಡಾ ಮಣಿಗಳ ಮಾಡಿ
ಅ ಶಶಿ ರವಿಗಳ ಕುಂಭಗಳ್ಹೂಡಿ
ಸೂಸುವ ಚಕ್ರದ ಎಲೆಗಳಮೇಲೆ
ದಶವಾಯುಗಳೆಂಬ ನುಲಿಗಳ ಬಿಗಿದು   || ೧ ||

ಹರಿಯನು ಬ್ರಹ್ಮನಾಳ ಮಾಡಿ
ಕುರುಹು ನಾಶಕ ಬೆನಕವ ಹೂಡಿ
ಪರಶಿವನೆಂಬುವ ದಾರವ ಕಟ್ಟಿ
ವೈರಾಗ್ಯವೆಂಬುವ ಬಿಲ್ಲುಗಳಿಟ್ಟು           || ೨ ||

ಜ್ಞಾನವೆಂಬುವಾ ಕದರನಿಟ್ಟು
ಮಾನವ ಧರ್ಮ ಹಂಜಿಯ ಪಿಡಿದು
ಅನುಭವವೆಂಬುವ ಎಳೆಗಳು ತೆಗೆದು
ಅನುವಿಲಿ ಸುಮ್ಮನೇ ನೂಲಮ್ಮಾ          || ೩ ||

ಕಕುಲಾತಿಯೆಂಬುವ ಕಸರನು ಕಳಿದು
ಸುಖ ದುಃಖೆಂಬುವ ಸಿರದೊಡಕಳಿದು
ಭಕುತಿಯೆಂಬುವಾ ಕೊಳವಿಯನ್ಹಿಡಿದು
ಕುಕ್ಕಡಿನೆಲ್ಲಾ ನೂಲಮ್ಮಾ                   || ೪ ||

ಇಪ್ಪತ್ತೊಂದು ಸಾವಿರದಾ
ಮೇಲಾರನೂರಾ ಎಳಿಗಳ ಹೊಯ್ದು
ತಪ್ಪದೇ ಎಣಕಿಯಮಾಡಿ ನೀನು
ಒಪ್ಪಿಸಿ ಪಟ್ಟೇವ ಸುತ್ತವ್ವಾ                   || ೫ ||

ಪ್ರತ್ಯಕ್ಷ ಪರಮಾತ್ಮನೆಂಬುವ
ಉತ್ತಮವಾದ ಹೊಳಾನೇಯ್ದು
ಕೃತ್ತಿವಾಸ ಶಿಶುನಾಳಧೀಶನಿಗೆ
ಮುಟ್ಟಿಸಿ ಮುಕ್ತಿ ಪಡಿಯವ್ವಾ                || ೬ ||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಕಳೆದುಹೋಗಲ್ಲ ಮಗು...



ವ್ಯಾಕರಣ ದೋಷ ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ.   ಶೀಘ್ರದಲ್ಲೇ ಈ ಕಥೆಯನ್ನು ಮರು ಪ್ರಕಟಿಸಲಾಗುವುದು.  ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ.  - ಚಿಲುಮೆ ತಂಡ

ನೂಪುರ

- ಗಿರಿಜಾಪತಿ ಎಂ. ಎನ್

ಅಲ್ಲಿ - ಇಲ್ಲಿ ಹುಡುಕುವೇತೆಕೆ,
ಪ್ರೀತಿಯ ಬಳ್ಳಿಯ ಚಿಗುರಿಗೆ,
ನಿನ್ನ ಮನದಲೆ ಬೇರು ಬಿಟ್ಟಿಹ
ತರು-ಲತೆ ಸುಮದ ಮಾಟದ ಚೆಲ್ವಿಗೆ  ||

ಅವರ - ಇವರಲಿ ಅರಸುವೇತಕೆ
ನಿನ್ನ - ನೀನು ತಿಳಿಯದೆ,
ಅನ್ಯ ಪ್ರೀತಿಯ ಕಣ್ಣಕೂಟಕೆ
ಮುನ್ನ - ಬಾಳನು ಕಾಣದೆ,

ಪ್ರೀತಿಯೆಂಬುದು ದೇಹಕಲ್ಲವೊ
ಗೇಹದಾಚೆಯ ಪಲ್ಲವಿ,
ತುಂಬು ಜೀವನವೆಲ್ಲ ಪಾವನ
ಶೃತಿಲಯದ ಗೀತಿಕೆ ಜಾಹ್ನವಿ,

ಹೃದಯದಿಂಪು ತಂಪ ಮೋದ ಭಾವವೆ
ದೇವ ಪ್ರೀತಿಯ ಸಾಗರ,
ತಾಯ ತೆರಹದಾ ನೇಹ ಸಗ್ಗವೆ
ಪ್ರೀತಿ ನಿಯತಿಗೆ ನೂಪುರ,

ನಿನ್ನ ನೀನು ಮೊದಲು ಪ್ರೀತಿಸು
ದ್ವೇಷ ದಳ್ಳುರಿ ನಂದಿಸು,
ಚಣದ ಕಾಮನೆ ಹುಚ್ಚನಳಿಸು
ಜಗಕೆ ನಿನ್ನ ಇರವನೆ ತೋರಿಸು.

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ

-ಶಿಶುನಾಳ ಶರೀಫ್

ನಗಬಾರದಮ್ಮ
ಲಗುಬಿಗಿ ಸುಮ್ಮನೆ ಬೀಸಮ್ಮ                ||ಪ||

ಲಗುಬಿಗಿ ಸುಮ್ಮನೆ ಬೀಸಿ
ತಗಿದಾಳೋ ಹಿಟ್ಟಿನ ರಾಶಿ
ಬಿಗಿದ ಪುಟ್ಟಿಯೊಳು ಸೋಸಮ್ಮಾ           ||೧||

ಚಕ್ರದಿ ಕರೆಕಲ್ಲು
ಶುಕ್ರದಿ ಮುಕ್ಕುವ ಕಲ್ಲು
ವಕ್ಕರಿಸಿ ಮುಕ್ಕನ್ಹಾಕಮ್ಮಾ                    ||೨||

ಆಚ್ಚ ನಗಬಾರದು
ಬಾಳ ನಗಬಾರದು
ನಕ್ಕೋತ ಸುಮ್ಮನೆ ಬೀಸಮ್ಮಾ               ||೩||

ಆಸಮ ಗೋದಿಯ ಕಾಳು
ಹಸನಾಗಿ ಬೀಸಮ್ಮಾ
ದೇಶಕೆ ಶಿಶುನಾಳಧೀಶನ ಭಜಿಸಮ್ಮಾ      ||೪|| 
                   *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಹರಕೆಯ ಕುರಿ

-ಅಬ್ಬಾಸ್ ಮೇಲಿನಮನಿ

ಕುಟುಂಬದ ಯಜಮಾನನೊಬ್ಬ ಹರಕೆಯೊಂದನ್ನು ಹೊತ್ತಿದ್ದ.  ಬಹಳ ದಿನದ ಹರಕೆಯದು.  ಮೆನಯ ಕುಲದೇವರಿಗೆ ಕುರಿಯೊಂದನ್ನು ಅವನು ಬಲಿಕೊಡಬೇಕಾಗಿತ್ತು.  ಅದಕ್ಕಾಗಿ ಅವನು ಕುರಿಮರಿಯೊಂದನ್ನು ಸಾಕುತ್ತ ಬಂದಿದ್ದ.  ಕುರಿ ಸೊಪ್ಪು ಮೇಯ್ದು ದಷ್ಟಪುಷ್ಟವಾಗಿತ್ತು.

ಕುಲದೇವರು ನೆಲೆಸಿರುವ ಊರಿಗೆ ಹೊರಡುವ ಸಿದ್ಧತೆಯಾಯಿತು.  ಮಿನಿ ಟ್ರಕ್ಕು ಬಂದು ಮನೆಯ ಮುಂದೆ ನಿಂತಿತು.  ಯಜಮಾನನ ಮನೆಯ ಜನ, ಬಂಧು, ಬಳಗ, ಆಪ್ತವಲಯದವರು ಟ್ರಕ್ಕು ಏರಿದರು.  ಅವರ ನಡುವೆ ಹರಕೆಯ ಕುರಿ, ಕುಳಿತವರು ಅದನ್ನು ಭಕ್ತಿಯಿಂದ ಗಮನಿಸುತ್ತಿದ್ದರು.

ಸಂಭ್ರಮದಿಂದ ಚಲಿಸುತ್ತಿತ್ತು ಗಾಡಿ.  ಕೆಲವರು ಮಾತಿನ ಲಹರಿಯಲ್ಲಿ ಕಳೆದು ಹೋಗಿದ್ದರು.  ಪ್ರಾಯದ ಹುಡುಗ-ಹುಡುಗಿಯರು, ಹಾಡು, ಹಾಸ್ಯ, ಕೇಕೆಯಲ್ಲಿ ತನ್ಮಯರಾಗಿದ್ದರು.  ಆಗಾಗ ದೇವರ ಉಘೇ ಉಘೇ ಉದ್ಘೋಷವೂ ಮೊಳಗುತ್ತಿತ್ತು.

ತವಕ ತಲ್ಲಣದಲ್ಲಿ ಹರಕೆಯ ಕುರಿ ದಟ್ಟ ಮೌನ ಧರಿಸಿ ನಿಂತಿತ್ತು.  ಜನರ ಉತ್ಸಾಹ ನನ್ನ ಬಲಿಯ ದ್ಯೋತಕವೆಂದು ಕುರಿಗೆ ಮನದಟ್ಟಾಗಿತ್ತು.  ಆಗಾಗ ಅದು ಅಸಹಾಯಕವಾಗಿ ನಿಟ್ಟುಸಿರು ಚೆಲ್ಲುತ್ತಿತ್ತು.  ತಮ್ಮ ಹಿತಕ್ಕಾಗಿ ದುರ್ಬಲ ಪ್ರಾಣಿಗಳನ್ನು ಬಲಿಕೊಟ್ಟು ದೇವರು, ಧರ್ಮಗಳನ್ನು ದುರುಪಯೋಗ ಪಡಿಸಿಕೊಳ್ಳುವ ಜನರ ಹುನ್ನಾರಗಳಿಗೆ ಕುರಿ ಮೂಕವಾಗಿ ರೋಧಿಸುತೊಡಗಿತ್ತು.

ಗಾಡಿ ರಸ್ತೆಯುದ್ದಕ್ಕೂ ವೇಗವಾಗಿ ಓಡತೊಡಗಿತ್ತು.  ಅದರೊಂದಿಗೆ ಸ್ಪರ್ಧೆಗಿಳಿದಂತೆ ಜನರ ಹರ್ಷೋದ್ಗಾರ.

ಒಮ್ಮೆಲೆ ಧಡಲ್ ಎಂಬ ಸದ್ದು!

ಎದುರಿಗೆ ಬಂದ ಭೂತಾಕಾರದ ಟ್ರಕ್ಕೊಂದು ಮಿನಿಲಾರಿಗೆ ಭಯಂಕರವಾಗಿ ಡಿಕ್ಕಿ ಹೊಡೆದು ಪಕ್ಕದ ಕಮರಿಗೆ ನೂಕಿತ್ತು.

ಹಾಹಾಕಾರ, ಚೀತ್ಕಾರ, ನರಳಾಟ, ರಕ್ತದ ಕೋಡಿ.

ಲಾರಿ ಪುಡಿಪುಡಿಯಾಯಿತು, ಅದರೊಳಗಿದ್ದವರು ಒಬ್ಬರೂ ಉಳಿಯಲಿಲ್ಲ.

ದಿಬ್ಬದ ಮೇಲೆ ನಿಂತ ಹರಕೆಯ ಕುರಿ ಮಾತ್ರ ಬ್ಯಾ.... ಬ್ಯಾ.... ಎನ್ನತೊಡಗಿತ್ತು.

                       *****

ಕೀಲಿಕರಣ: ಕಿಶೋರ್‍ ಚಂದ್ರ

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ

-ಶಿಶುನಾಳ ಶರೀಫ್

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ
ಬೀಸೋಣ ಬರ್ರೆವ್ವ ಹಾಡ್ಯಾಡಿ                                                                ||ಪ||

ಹಸ್ತಿನಿ ಚತ್ತಿನಿ ಶಂಖಿನಿ ಪದ್ಮಿನಿ
ಕರಿತಾರೆ ಬರ್ರೆವ್ವ ಕೂಡಿ                                                                        ||ಅ.ಪ.||

ದೇಹವೆಂಬುವ ಬೀಸುಕಲ್ಲು ಶಿವಪುರದಾಗ
ಉಪ್ಪಾರನ ಕೈಲೆ ಹೊಡಿಸಿ
ಮೇಲೆ ಗಂಟಲು ಮ್ಯಾಗಿನ ಪಾಳಿಗೆ
ನಡುಮಧ್ಯದಿ ಬಾಯಿ ತೆಗಸಿ
ಕೆಳಗಿನ ಪಾಳಿಗೆ ಮಲಮೂತ್ರ ಬಿಡುತಿಹ
ಆಸವಲ್ಲದೊಂದ ತೂತ ತಗಸಿ
ತಕ್ಕಂಥ ಗೂಟವು ಕಾಯ ಮರದ ಮ್ಯಾಗ
ಸಾಗವಾನಿಯ ಕಟಗಿಯ ತರಿಸಿ
ಸವ್ವಾನೂರು ವರ್ಷ ಬಾಳುವ ಗೂಟಕ್ಕೆ
ಮೇಲೊಂದ ಆಣಸನು ಜಡಿಸಿ
ನಾನು ಬೇಕಾಗಿ ಬೀಸೇನೇ ಕಲ್ಲು ತರಿಸಿದ್ದೆನೇ
ಸೂತ್ರ ಎಂಬುವ ಚಿತ್ರ ತೆಗಸಿದ್ದೇನೇ
ವಾಯು ದೇಹವೆಂಬುವ ಪಿರಿಕಿ ಹಾಕಿದ್ದೇನೇ
ಇಂಥಾ ಕಲ್ಲು ಸಮತೋಲು ನಿಜಮನವೆಂಬ ಜಾಗದಾಗ ನಡಸಿದ್ದೆನೇ
ನಾರಿ ಕರಿಯುವನೇ ನಾರೇರು ಎಲ್ಲಾರು ಬರ್ರೆವ್ವ ಭದ್ರ್ಯಾರು ಕೂಡಿ                    ||೧||

ಆಬ್ಬರೆಂಬುವ ಗೋದಿ ಕಡಲಿಯ ತಂದು
ತನುವೆಂಬಂತಸ್ತದಿ ತೋಯಿಸಿ
ಮನದ ಮೈಲಿಗೆಯೆಂಬ ಮ್ಯಾಗಿನ ತೌಡು
ಅನುವಿಂದ ಒಳ್ಳಾಗ ಕುಟ್ಟಿಸಿ ತೆಗದು
ಸುಜ್ಞಾನವೆಂಬುವ ಧೂಳವ ಕೇರಿಸಿ
ಬುದ್ಧಿಎಂಬುವ ಬುಟ್ಟಿಯನು ತುಂಬಿಸಿ
ಧರ್ಮಯೆಂಬುವಂಥಾ ಬಲಗೈಲೆ
ಒಂದೊಂದೇ ಹಿಡಿ ಹಿಡಿ ಮುಕ್ಕನೆ ನಾ ಹಾಕಿಸಿ
ಕರ್ಮವೆಂಬುವಂಥಾ ಎಡಗೈಲೆ
ತಿರುತಿರುವಿ ಸಣ್ಣಾಗಿ ಮುಕ್ಕನುರಿಸಿ
ತ್ರಿಗುಣೆಂಬ ಹಿಟ್ಟನು ಗೂಡಿಸಿದ್ದೆನೇ
ಒಂಬತ್ತು ತೂತಿನ ಸಾಣಿಗೀಲೆ ಸಾಣಿಸಿದ್ದೆನೇ
ಇಂಥಾ ಹಿಟ್ಟು  ಬಚ್ಚಿಟ್ಟು
ಆತ್ಮವೆಂಬುವ ಆಮೃತದ ಗಡಿಗಿ ತಂಂಬಿಸಿದ್ದೆನೇ
ತಾಯಿ ಮಾಯಿ ತಾಯವ್ವನ ಕರಕೊಂಡು ನಡಿರೆವ್ವ ಆಡಗೀಯ ಮಾಡೀ             ||೨||

ಆನುಭವ ತನುಭವ ಚಿನುಮಯವೆಂಬುವ ಮೂರು ಒಲಿಯ ಗುಂಡು ಹೂಡಿ
ಕಾಮಕ್ರೋಧವೆಂಬ ಕಾಡಕಟ್ಟಿಗಿ ಸುಟ್ಟು ಬೇಗ ಓಲಿಯ ಪುಟಮಾಡಿ
ಪಂಚತತ್ವದಿಂದ ಪಕ್ವಾನ್ನ ಮಾಡಿ
ಗಡಿಗೆ ಇಳುವಿದ್ದೇನ್ರೇ ಪಟ್ಟಿ ತೀಡೀದ್ದೇನ್ರೇ
ಸಪ್ತಭೂತಂಗಳಿಗೆ ಗುಪ್ತ ಆಡಗಿಯ ಮಾಡಿ
ಹೊತ್ತಿದ್ದನ್ನವನು ನೀಡಿ
ಅನ್ನವು ತೀರಿತು ಗಡಿಗೆಯು ಒಡದೀತು
ಒಲಿಗುಂಡು ಬಿತ್ತ್ರೆವ್ವ ಒಂದು ಕಡಿ
ಕಾಳು ಕಡಿಗಾಯಿತು ಕಲ್ಲು ಇಲ್ಲುಳದಿತು
ಇನ್ನೆಲ್ಲಿ ಬಂದೀತು ಭೂಮಿ ಮೂಡಿ ನಾನು
ಕಾಳು ಹೋಂದಿದೆ ಮ್ಯಾಳ ಮುರಿದು ಗೀಳಾದೆ
ಸಾಧು ಸಾಧಕರೊಳು ವ್ಯಾಳಗಳದೆ
ಸುಳ್ಳೇ ಸಂಸಾರದೊಳು ಬಿದ್ದೆ ಪಾಪ ಹೊದ್ದೆ
ಪೊಡವಿಯ ಶಿಶುನಾಳಧೀಶನ ದಯದಿಂದ
ಕಡೆಗೆ ನಾ ಮಕ್ತಿಯ ಕಂಡೇ                                                                   ||೩||
                    *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಕ್ಕಾಂವ ಗೆದ್ದಾಂವ

-ಅಬ್ಬಾಸ್ ಮೇಲಿನಮನಿ

ಪತ್ರಕರ್ತನೊಬ್ಬ ಆ ಕಲಾವಿದನನ್ನು ಸಂದರ್ಶಿಸಲು ಬಂದ.  ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ತನ್ನ ಹಾಸ್ಯ ನಟನೆಯಿಂದ ಪ್ರಖ್ಯಾತಿ ಪಡೆದ ಕಲಾವಿದನ ಎದುರು ಕುಳಿತು ನೇರವಾಗಿ ಮಾತಿಗಿಳಿದ:

"ನಿಮಗೆ ನಗಿಸುವ ಕಲೆ ಹೇಗೆ ಕರಗತವಾಯಿತು?"

"ದುಃಖದ ಕಡಲಲ್ಲಿ ಮುಳುಮುಳುಗಿ ಎದ್ದಿದ್ದರಿಂದ" ಕಲಾವಿದ ಉತ್ತರಿಸಿದ.

"ನೀವು ಅಳುವ ಪಾತ್ರಗಳನ್ನು ಮಾಡಲೇ ಇಲ್ಲ."

"ಅಳುವವರನ್ನು ಈ ಜಗತ್ತು ಇಷ್ಟ ಪಡುವುದಿಲ್ಲ."

"ನಿಮ್ಮ ನಗೆಯ ಹಿಂದೆ ನೋವು ಅಡಗಿರುವುದೆಂದು ಅನುಮಾನ ನನಗೆ."

"ಆ ನೋವು ನನ್ನದು.  ಅದು ನನ್ನೊಂದಿಗೆ ಕೊನೆಯಾಗುವುದು."

"ದುಃಖವನ್ನು ಪ್ರಪಂಚದೊಂದಿಗೆ ಹಂಚಿಕೊಂಡರೆ ನೆಮ್ಮದಿ ಅನಿಸುವುದು."

"ಜನರು ಯಾವಾಗಲೂ ಸಂತೋಷದ ಸಂಗತಿಗಳನ್ನು ಬಯಸುತ್ತಾರೆ.  ಅವರೆದೆಗೆ ಸಂಕಟದ ಕಣ್ಣೀರು ಬಸಿದು ತಳಮಳಿಸುವ ಇಚ್ಛೆ ಇಲ್ಲ."

"ನಿಮ್ಮ ಮಗನೊಬ್ಬ ಕಾರು ಅಪಘಾತದಲ್ಲಿ ತೀರಿಕೊಂಡನೆಂದು ಕೇಳಿದೆ."

"ವಯಸ್ಸಿಗೆ ಬಂದ ಒಬ್ಬನೇ ಮಗನಿಗೆ ಕಿಚ್ಚು ಇಟ್ಟೆ.  ಒಬ್ಬ ಮಗಳು ಅಳಿಯನಿಂದ ಸುಡಿಸಿಕೊಂಡು ಬೂದಿಯಾದಳು.  ಎರಡನೆಯ ಮಗಳು ಕಾರು ಡ್ರೈವರ್‌ನೊಂದಿಗೆ ಓಡಿಹೋದಳು.  ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ಸತ್ತಳು.  ನನ್ನನ್ನೇ ಪ್ರೀಮಿಸುವ ನಾಟಕವಾಡಿ ಬಂದ ಸತಿ ಶಿರೋಮಣಿ ನನ್ನ ಸಂಪತ್ತು ದೋಚಿಕೊಂಡು ಪರಾರಿಯಾದಳು.  ಕೆಲವು ನಿರ್ಮಾಪಕರು ನನಗೆ ಹಣ ಕೊಡದೆ ವಂಚಿಸಿದರು.  ಆದರೂ ದೇವರು ನನ್ನನ್ನು ಉಳಿಸಿದ್ದಾನೆ.  ಬಹುಶಃ ಲೋಕದ ದುಃಖಿತರನ್ನು ನಗಿಸಲೆಂದೇ ಇರಬೇಕು" ಪಕಪಕನೆ ನಕ್ಕ ಕಲಾವಿದ.

"ನಿಮ್ಮ ಸಹನೆ ಅದ್ಭುತ"

"ಬದುಕಿನ ಪ್ರೀತಿ ಇದ್ದವರಿಗೆ ಸಮಾಧಾನವೂ ಇರಬೇಕು.  ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.  ರಂಗಭೂಮಿಯಲ್ಲಿ ದುಡಿದಿದ್ದೇನೆ.  ಜನರು ನನ್ನ ನಗೆಯಿಂದ ಸಂತೋಷ ಪಡುತ್ತಾರೆ.  ಅವರಿಂದ ನನಗೆ ತೃಪ್ತಿಯಿದೆ".

"ಕೊನೆಗೊಂದು ಪ್ರಶ್ನೆ.  ನಾಡಿಗೆ ನಿಮ್ಮ ಸಂದೇಶವೇನು?"

"ನಾನು ಮಹಾತ್ಮನಲ್ಲ, ಪವಾಡಪುರುಷನೂ ಅಲ್ಲ, ದೇವರು ನನಗೆ ನಗಿಸುವ ಕಲೆ ಕೊಟ್ಟಿದ್ದಾನೆ.  ಈ ಜೀವ ಇರುವತನಕ ಅಳುವವರನ್ನು ನಾನು ನಗಿಸುತ್ತಲೇ ಇರುತ್ತೇನೆ.  ಕವಿಯೊಬ್ಬರು ಹೇಳಿದ್ದಾರೆ ನಕ್ಕಾವ ಗೆದ್ದಾಂವ ಅಂತ.  ಅಳುವವರಿಗೆ ಇಲ್ಲಿ ಬದುಕಿಲ್ಲ" ಮತ್ತೆ ನಕ್ಕ ಕಲಾವಿದ.

                                *****

ಕೀಲಿಕರಣ: ಕಿಶೋರ್‍ ಚಂದ್ರ

ಕನ್ನಡಕ್ಕಿದೆಯೇ ಕಾಯಕಲ್ಪ?

- ರಾಮಸ್ವಾಮಿ ಡಿ.ಎಸ್

ಕನ್ನಡ ಸಮುದಾಯದ ಬಹುಮುಖೀ ಕನಸಾಗಿದ್ದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸಂಪನ್ನಗೊಂಡು ವಾರ ಕಳೆದಿದೆ. ಆಳುತ್ತಿರುವ ಸರ್ಕಾರವಂತೂ ಇದನ್ನೊಂದು ಅಭೂತ ಪೂರ್ವಸಾಧನೆಯೆಂದು ಬಿಂಬಿಸಲು ಮತ್ತು ಅದನ್ನು ನಂಬಿಸಲು ಮತ್ತೆ ಮತ್ತೆ ಜಾಹೀರಾತು ನೀಡಿ ಜನಸಮುದಾಯಕ್ಕೆ ಸಮ್ಮೇಳನ ನಡೆದುದನ್ನು ನೆನಪಿಸಿದೆ. ಇಪ್ಪತ್ತೈದು ವರ್ಷಗಳ ಅಂತರದಲ್ಲಿ ನಡೆದ ಈ ಸಮ್ಮೇಳನ ಸಾಧಿಸಿದ್ದಾದರೂ ಏನನ್ನು? ಎಷ್ಟೆಲ್ಲ ಪ್ರಚಾರ ಮತ್ತು ಸಂಪನ್ಮೂಲಗಳನ್ನು ಒಳಗೊಂಡಿದ್ದ ಸಮ್ಮೇಳನ ಒಟ್ಟೂ ನಿಟ್ಟಿನಲ್ಲಿ ಕನ್ನಡಕ್ಕೆ ಕೊಟ್ಟುದಾದರೂ ಏನು ಎಂದಿಲ್ಲಿ ಯೋಚಿಸಬೇಕಾದ ಅಗತ್ಯತೆ ಇದೆ.

ಏಕೆಂದರೆ ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿಗೂ ಕಳೆದೆರಡು ತಿಂಗಳ ಹಿಂದೆ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕಾರ್ಯಕ್ರಮ ಪಟ್ಟಿಗೂ ಯಾವ ವ್ಯತ್ಯಾಸಗಳೂ ಇರಲಿಲ್ಲ. ಸಾಹಿತ್ಯಸಮ್ಮೇಳನಕ್ಕೆ ಅಧ್ಯಕ್ಷರೊಬ್ಬರಿದ್ದುದನ್ನು ಬಿಟ್ಟರೆ ಉಳಿದಂತೆ ಎರಡೂ ಸಮ್ಮೇಳನಗಳಲ್ಲಿ ಚರ್ಚಿಸಲ್ಪಟ್ಟ ವಿಚಾರಗಳೂ ಭಾಗವಹಿಸಿದವರ ಹೆಸರುಗಳಲ್ಲೂ ಹೆಚ್ಚಿನ ವ್ಯತ್ಯಾಸಗಳೇನೂ ಇರಲಿಲ್ಲ. ಮತ್ತದೇ ಹಳೆಯ ವಿಚಾರಗಳ ಮೇಲಿನ ಒಣಚರ್ಚೆ, ವಿಚಾರಮಂಡಿಸುವ ಅದೇ ಅದೇ ಹಳೆಯ ಮುಖಗಳು, ವರ್ತಮಾನದ ತವಕ ಮತ್ತು ತಲ್ಲಣಗಳ ಗುಂಗಿರದ ನಿವೃತ್ತರ ಹಳೆ ಹಳೆ ಮಾತುಗಳ ಪುನರುಚ್ಛಾರ. ವರ್ಷಕ್ಕೊಮ್ಮೆ ತಪ್ಪದೇ ನಡೆಯುತ್ತಿರುವ ಸಾಹಿತ್ಯಸಮ್ಮೇಳನದ ಬಗ್ಗೆಯೇ ಸಾಕಷ್ಟು ಮಾತುಗಳಿರುವಾಗ ಅಂಥದೇ ಪರಿಶೆಯ ಮೂಲಕ ಸರಾಸರಿ ವೆಚ್ಚ ಮಾಡಿದ ಮೂವತ್ತು ಕೋಟಿರೂಪಾಯಿಗಳ ಲೆಕ್ಕ ಯಾವ ಪುರುಷಾರ್ಥ ಸಾಧನೆ ಮಾಡಿದೆ ಅಂತ ಕೇಳಿದರೆ ಅದು ಕನ್ನಡದ ದ್ರೋಹವೆಂದು ಆಯೋಜಕರೂ ಭಾಗವಹಿಸಿ ಭತ್ಯೆ ಪಡೆದವರೂ ಕರೆದಾರು.

ಉದ್ಘಾಟಕರ ಕನ್ನಡ ಪ್ರೀತಿ ಎಷ್ಟಿದೆಯೆಂದರೆ ಇನ್ಫೋಸಿಸ್ ಕಂಪನಿಗಿಂತಲೂ ವಿಪ್ರೋದಲ್ಲಿ ಕೆಲಸ ಮಾಡುವ ಕನ್ನಡಿಗರು ಹೆಚ್ಚಿದ್ದಾರೆ. ಬರಹ ಸೃಷ್ಜ್ಟಿಸಿದ ಶೇಷಾದ್ರಿ ವಾಸು ಸೇರಿದಂತೆ ಕನ್ನಡಕ್ಕೆ ತಂತ್ರಾಶವನ್ನು ಅಭಿವೃದ್ಧಿ ಪಡಿಸಲು ಇನ್ನೂ ಶ್ರಮಿಸುತ್ತಿರುವ ಹಲವರನ್ನು ಮರೆತದ್ದು ಏಕೆ? ಕವಿಗೋಷ್ಠಿ, ಸಿನಿಮಾಮಂದಿಯ ಮೆರವಣಿಗೆ, ಸಿನಿಮಾಹಾಡು, ವಿಚಾರ ಸಂಕಿರಣ, ಹಾಸ್ಯ ಇಷ್ಟರಲ್ಲೇ ವಿಶ್ವ ಕನ್ನಡ ಸಮ್ಮೇಳನ ಮುಗಿಯಿತೆಂದರೆ ಇದು ಕನ್ನಡಕ್ಕೆ ಕೊಟ್ಟ ಬಹುಮಾನವಾದರೂ ಏನು? ಈಗಾಗಲೇ ಸವೆದು ಹೋಗಿರುವ ಪ್ಲೇಟನ್ನೇ ಮತ್ತೆ ತಿರುಗಿಸಿ ಬರೋಬ್ಬರಿ ಮೂರುತಾಸುಗಳಷ್ಟು ದೀರ್ಘಕಾಲ ನಡೆದ ಹಾಸ್ಯೋತ್ಸವ ನಡೆಸಲು ವಿಶ್ವ ಕನ್ನಡಸಮ್ಮೇಳದ ಅಂಗಳ ಬೇಕಾಗಿತ್ತೆ? ವಿಶ್ವ ಸಮುದಾಯದಲ್ಲಿ ಕನ್ನಡದ ಬೆಳಕನ್ನು ಹಿಡಿದಿಡಲು ಮತ್ತು ಕನ್ನಡ ನೆಲೆಯಲ್ಲಿ ವಿಶ್ವವನ್ನು ನೋಡಿರುವ ಬಗೆಯನ್ನು ಅರಿಯಲು ಈ ಸಮ್ಮೇಳನ ಯಾವ ಕಿಡಕಿಯನ್ನು ತೆರೆಯಿತು ಅಂತ ಕೇಳಿದರೆ ನಿರಾಸೆಯಾಗುತ್ತದೆ. ಬರಿಯ ಸಾಹಿತಿಗಳ ಬುದ್ಧಿಜೀವಿಗಳ ಮಾಧ್ಯಮದ ದೈತ್ಯರ ಪ್ರದರ್ಶನಕ್ಕಷ್ಟೇ ಅವಕಾಶ ಸಿಕ್ಕಿದ್ದರ ಬಗೆಯಾದರೂ ಏನು?

ಮೂರುವರ್ಷಗಳಷ್ಟು ದೀರ್ಘಕಾಲದ ತಯಾರಿ ಮತ್ತೊಂದು ಜನಜಾತ್ರೆಯನ್ನಷ್ಟೇ ನಡೆಸಿತೆಂದರೆ ಅತಿಶಯ ಅಲ್ಲ. ಮೊದಲ ಸಮ್ಮೇಳನ ನಡೆದ ಕಾಲದ ಸಮಸ್ಯೆಗಳಿಗೂ ಈ ಕಾಲದ ಅವಶ್ಯಕತೆಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದೇ ಇದ್ದುದನ್ನು ಯಾಕೆ ಆಯೋಜಕರು ಗಮನಿಸಲಿಲ್ಲ? ಇವತ್ತು ಕನ್ನಡ ಅನ್ನುವುದು ಬರಿಯ ಭಾಷೆಯಾಗಿ ಮಾತ್ರವಲ್ಲ ಕನ್ನಡತನವೆನ್ನುವುದೇ ಜಾಗತೀಕರಣದ ಮುಂದೆ ಅಬ್ಬೇಪಾರಿಯಾಗಿ ನಿಂತಿದೆ. ಕನ್ನಡ ಶಾಲೆಗಳ ಹಾಜರಾತಿ ಗಮನಿಸಿದವರು ಯಾರಾದರೂ ಈ ಮಾತು ಧಾರಾಳವಾಗಿ ಹೇಳಬಹುದು. ದುಕಿಗೆ ಯಾವ ಭದ್ರತೆಯನ್ನೂ ಒದಗಿಸದ ಇಂಥ ಸಮ್ಮೇಳನಗಳು ಹೊಟ್ಟೆಗಿಲ್ಲದವರ ಜುಟ್ಟಿಗೆ ಕಟ್ಟಿದ ಮಲಿಗೆಯಲ್ಲವೇ? ಗಡಿವಿವಾದ, ಜಲವಿವಾದಗಳ ಬಗ್ಗೆ ಪುಂಖಾನುಪುಂಖ ಭಾಷಣ ಹೊಡೆಯುವವರಿಗೆ ಯುವ ಜನತೆ ಅನುಭವಿಸುತ್ತಿರುವ ಸಮಸ್ಯೆಗಳ ಸ್ವರೂಪವಾದರೂ ಗೊತ್ತೆ? ಕನ್ನಡದ ಹಿತ ಕಾಯದ, ವಿದೇಶದಲ್ಲಿರುವ ಕನ್ನಡಿಗನ ಆತ್ಮಸ್ಥೈರ್ಯ ಹೆಚ್ಚಿಸದ, ಕನ್ನಡಿಗರಿಗೆ ಬದುಕು ಕಟ್ಟಿಕೊಳ್ಳಲು ಹೊಸದೇನನ್ನೂ ಸೂಚಿಸದ ಈ ಸಮ್ಮೇಳನ ಯಶಸ್ವಿ ಅಂತ ಬೊಂಬಡ ಬಜಾಯಿಸುತ್ತಿರುವವರಿಗೆ ತಿಳುವಳಿಕೆ ಕೊಡುವವರಾದರೂ ಯಾರು?

         *****

ಕೀಲಿಕರಣ: ರಾಮಸ್ವಾಮಿ ಡಿ.ಎಸ್

ಅಳಬೇಡ ತಂಗಿ ಅಳಬೇಡ

-ಶಿಶುನಾಳ ಶರೀಫ್

ಆಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ         ||ಪ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕೆ ನೂಕಿದರವ್ವಾ
ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ           ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂತು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ               ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತ
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುವಾಳಧೀಶನ
ಆಂಗಳಕ ನೀ ಹೊರತಾದೆವ್ವ ಗೌರಿ                  ||೩||

                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಸೂರ್ಯನುರಿದ ಭೂಮಿಗೆ ತಂಪನೆರೆದ ಚಂದಿರ


-ಅಬ್ಬಾಸ್ ಮೇಲಿನಮನಿ

ಚಿತ್ರ: ರಾಂಗೋಪಾಲ್ ರಾಜಾರಾಮ್
ಮೂರು ದಿನಗಳಿಂದ ಅಮೀನೂರು ಜೀವಶವದಂತೆ ಉಸಿರಾಡತೊಡಗಿತ್ತು. ಗಾಳಿಗೆ ಬೀಸಲೋ ಬೇಡವೋ ಎನ್ನುವ ಸಂಧಿಗ್ಧತೆ. ಧಗಧಗ ಎನ್ನುವ ಸೂರ್ಯ ಭೂಮಿಯನ್ನು ಕಾದಹಂಚಿನಂತೆ ಮಾಡಿದ್ದ. ರಸ್ತೆಗಳಲ್ಲಿ ಮನುಷ್ಯರನ್ನು ಕಾಣದೆ ಬಿಡಾಡಿ ನಾಯಿ, ದನ ಮತ್ತು ಹಂದಿಗಳು ದಿಗಿಲುಗೊಂಡಿದ್ದವು. ಹಗಲೆಂಬೋ ಹಗಲು ಪೋಲೀಸರ ಲಾಟಿ ಮತ್ತು ಬೂಟುಗಳ ಸದ್ದಿಗೆ ಹೆದರಿಕೊಂಡಿತ್ತು. ಗೂಡು ಬಿಟ್ಟು ಹೊರಗೆ ಬರದ ಹಕ್ಕಿಗಳ ಎದೆ ತುಂಬ ತಲ್ಲಣ. ಕಿಟಕಿ, ಬಾಗಿಲು ಮುಚ್ಚಿದ ಮನೆಯೊಳಗೆ ಹೆಪ್ಪುಗಟ್ಟಿದ ಆತಂಕ.

ರಹೀಮ್ ಗಲ್ಲಿಯ ತನ್ನ ಪುಟ್ಟ ಗುಡಿಸಲಿನಲ್ಲಿ ಕ್ಕೆಕಾಲು ಕಟ್ಟಿ ಹಾಕಿದಂತೆ ಕುಳಿತಿದ್ದ. ಚಾಂದಬಿ ನಿರಂತರ ಹೊಯ್ದಾಡತೊಡಗಿದ್ದಳು. ಊರು ಆನುಭವಿಸುತ್ತಿರುವ ಆನಾಥ ಪ್ರಜ್ಞೆಯ ತಹತಹಿಕೆ ಆವಳೊಡಲಲ್ಲಿ ಸಂಕಟವನ್ನು ಸೃಜಿಸಿತ್ತು. "ಆ ಸ್ಯೆತಾನ್ ಬೇಟಾಗಳಿಗೆ ಹೇಳೋರು, ಕೇಳೋರು ಯಾರೂ ಇಲ್ಲೇನಂತೀನಿ. ಇಡೀ ಊರss   ಕಬರಸ್ತಾನ ಮಾಡಿ ಕುಂತಾವು ಬಾಡ್ಯಾಗೋಳು, ಧರ್ಮ, ದೇವರಂತ ಬದುಕೋರ ಜೀವಾ ಹಿಂಡಾಕ ಹತ್ತ್ಯಾವು. ಬಾಯಾಗ ಮಣ್ಣುಹಾಕ್ಲಿ ಹಿಂದಿನ ಕಾಲ್ದಾಗ ಇಂಥ ಹುಳಾ ನಾಶಾ ಮಾಡಾಕ ದೇವರು ಅವತಾರ ಎತ್ತಿ ಬರ್ತಿದ್ದನಂತ, ಈಗೆಲ್ಲಿ ಕಣ್ಮುಚ್ಚಿ ಕುಂತಾನೋ ಆಂವಾ ..... .." ಆಕೆ ಮಾತಾಡುತ್ತಲೇ ಇದ್ದಳು.

ಒಂದು ಸಂಜೆ, ಹುಡಗನೊಬ್ಬ, ಗಿರಣಿಯಲ್ಲಿ ಜೋಳ ಬೀಸಿಕೊಂಡು ಮನೆಗೆ ಹೊರಟ ಹುಡುಗಿಯೊಬ್ಬಳ ಜಡೆ ಎಳೆದು ಓಡಿ ಹೋದ ಪ್ರಸಂಗ, ಮಾತುಮಾತಲ್ಲಿ ಹಲವಾರು ತಿರುವುಗಳನ್ನು ಪಡೆದುಕೊಂಡು, ಊರನ್ನು ಪ್ರಕ್ಷುಬ್ಧಗೊಳಿಸಿ, ಕೋಮು ಗಲಭೆಯಾಗಿ ಮಾರ್ಪಟ್ಟು ಬೆಳಗು ಹರಿಯುವುದರೊಳಗೆ, ಹಾಲು ಮಾರುವ ಹಿಂದೂ ಹುಡುಗ, ಪೇಪರ್ ಹಂಚುವ ಮುಸ್ಲಿಮ ಹುಡುಗರನ್ನು ಬಲಿತೆಗೆದುಕೊಂಡಿತ್ತು. ನಿಪೇಧಾಜ್ಞೆ ಜಾರಿಯಾಗಿ, ವಾಹನಗಳಲ್ಲಿ ಬಂದ ಹಿಂಡುಹಿಂಡು ಪೋಲೀಸರು
ಗಾಳಿಯಲ್ಲಿ ಗುಂಡು ಹಾರಿಸುತ್ತ ಬೀದಿಬೀದಿಗಳಲ್ಲಿ ತಿರುಗಾಡಿಕೊಂಡ ಮೇಲೆ ದೊಂಬಿಯ ಸದ್ದು ಅಡಗಿತ್ತು.

ಆದರೆ ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿ ಸೋಕಿದ್ದೆ ನಿಗಿನಿಗಿಸುತ್ತಿತ್ತು. ಕರ್ಫೂವನ್ನು ಧಿಕ್ಕರಿಸಿಯೂ ಅಲ್ಲಲಿ ಬೆಂಕಿ ಹಚ್ಚಿದ, ಆಂಗಡಿಗಳನ್ನು ಲೂಟಿ ಮಾಡಿದ ಪ್ರಕರಣಗಳು ಸಂಭವಿಸಿ ಜನರ ತಲ್ಲಣ ಹೆಚ್ಚಿಸದೇ ಇರಲಿಲ್ಲ. ಕಂಡಲ್ಲಿ ಗುಂಡು ಹಾರಿಸುವ ಆಜ್ಞೆಯಿಂದ ಪೋಲೀಸರ ಕ್ಕೆಯಲ್ಲಿನ ಬಂದೂಕುಗಳು ಮನುಷ್ಯರ ಬೇಟೆಗೆ ಕಾತರಿಸುತ್ತಲೆ ಇದ್ದವು.

ಊರಿನ ಬಸ್ ನಿಲ್ಲಾಣದ ಹಿಂದುಗಡೆಗೆ ವ್ಯಾಪಿಸಿಕೊಂಡಿದ್ದ ರಹೀಮಗಲ್ಲಿ ಗುಬ್ಬಿ ಮರಿಯಂತೆ ಥರಗುಟ್ಟತೊಡಗಿತ್ತು. ಚಾಂದಬಿಯ ಮಾತುಗಳನ್ನು ಗಂಡ ಮುಷ್ತಾಕ್ ಕೇಳಿಯೂ ಕೇಳದಂತೆ ಕುಳಿತುಕೊಂಡಿದ್ದ. ಊರು ಭೀತಿಯೊಳಗಾದ ಹಿನ್ನಲೆಯಲ್ಲಿ ಎರಡು ವರ್ಷದ ಹಿಂದಿನ ಘಟನೆ ಆವನನ್ನು ಆವರಿಸಿಕೊಂಡಿತ್ತು. ಕಂಪನಿಯೊಂದರ ಟ್ರಕ್ಕು ನಡೆಸುತ್ತಿದ್ದ ಅವನು ಆಹಮದಾಬಾದಿಗೆ ಮಾಲು ತುಂಬಿಕೊಂಡು ಹೋದಾಗ ಕೋಮು ಗಲಭೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ದುರುಳರು ಆವನ ತಲೆಯ ಮೇಲಿನ ಟೋಪಿ ನೋಡಿ, ಸ್ಟೇರಿಂಗ್ ಮೇಲಿರಿಸಿದ್ದ ಆವನ ಎರಡೂ ಕೈಗಳನ್ನು ತಲವಾರಿನಿಂದ ತುಂಡರಿಸಿ ಟ್ರಕ್ಕಿಗೆ ಬೆಂಕಿ ಹಚ್ಚಿ ಹೋಗಿದ್ದರು. ಮುಷ್ತಾಕ್ ಆಲ್ಲಿಂದ ಜೀವ ಉಳಿಸಿಕೊಂಡು ಬಂದದ್ದು ಪವಾಡವನಿಸಿತ್ತು. ಒಂದು ಹೆಣ್ಣು ಎರಡು ಗಂಡು ಮಕ್ಕಳು. ಗಂಡ-ಹೆಂಡತಿ. ಎಂಥ ಸೊಗಸಾಗಿತ್ತು. ಬದುಕು! ಆಲ್ಲಾಹನಿಗದು ಮನಸ್ಸಿಗೆ ಬರಲಿಲ್ಲ. ದುಡಿಯುವ ಹುಮ್ಮಸ್ಸಿನ ಮುಷ್ತಾಕ್ ಕ್ಕೆಕಳೆದುಕೊಂಡು ಮನೆ ಹಿಡಿದು ಕುಳಿತಿದ್ದ. ಚಾಂದಬಿ ದಿಟ್ಟ ಹೆಂಗಸು, ಹತ್ತಾರು ಮನೆಗಳ ಕಸ-ಮುಸುರೆಗೆ ಹೋಗಿ ಬರುತ್ತ ಸಂಸಾರವನ್ನು ನಿಭಾಯಿಸಿತೊಡಗಿದ್ದಳು. ಅವಳ ಹಿರಿಯ ಮಗ ನೌಷಾದ್ ಬುದ್ಧಿವಂತ ಹುಡುಗ.  ಏಳನೆಯ ತರಗತಿಯವರೆಗೆ ಉರ್ದು ಕಲಿತು, ಎಸ್‌ಎಸ್‌ಎಲ್ಸಿ ಪರೀಕೆಯನ್ನು ಕನ್ನಡದಲ್ಲಿ ಬರೆದು ಹೈಸ್ಕೂಲಿಗೆ ಪ್ರಥಮ ಸ್ಥಾನಗಳಿಸಿದ್ದ. ಹಿಂದೂ ಹುಡುಗರ ಜೊತೆಗೆ ಅವನದು ಹೆಚ್ಚಿನ ದೋಸ್ತಿ. ಗಲ್ಲಿಯಲ್ಲಿ ಎಲ್ಲರಿಗೂ ಬೇಕಾದ ಹುಡಗ. ಮಗನನ್ನು ಹೊಗಳುವುದುದೆಂದರೆ ಚಾಂದಬಿಗೆ ಸಂಭ್ರಮ. ಮುಷ್ತಾಕನಿಗೆ ಮಗನ ಬಗ್ಗೆ  ಕನಸುಗಳಿದ್ದವು. ಅವನು ತಮ್ಮ ಭವಿಷ್ಯದ ಬೆಳಕು ಎಂದು ಭಾವಿಸಿದ್ದ. ಆದರೆ ಆ ದಿನದ ಕತ್ತಲು ಈ ಬೆಳಕನ್ನು ನುಂಗಿತ್ತು.

ದೇಶದ ಎಲ್ಲೋಒಂದು ಕಡೆಗೆ ಪ್ರತಿಮೆಗಾದ ಆಪಮಾನವನ್ನು ಫ್ರತಿಭಟಿಸಲು ಒಂದು ಕೋಮಿನವರು ಬಂದ್ ಆಚರಿಸಿದ್ದರು. ದುಷ್ಕರ್ಮಿಗಳು ಆ ಸಂದರ್ಭವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡು ಊರಲ್ಲಿ ದಂಗೆ ಸೃಷ್ಟಿಸಿದ್ದರು. ಮಸೀದೆಯಿಂದ ಇಷಾ ನಮಾಜು ಮುಗಿಸಿಕೂಂಡು ಮನೆಯತ್ತ ಧಾವಿಸಿದ್ದ ನಷಾದ್ ಮಂತಾಂಧನೊಬ್ಬನ ಚೂರಿ ಇರಿತಕ್ಕೆ ಸಿಕ್ಕು ನೆಲಕ್ಕುರುಳಿದ್ದ. ಆವನ ಹೊಟ್ಟಿಯೊಳಗಿಂದ ಹೊರಬಿದ್ದಕರುಳು
ಕಂಡ ಚಾಂದಬಿ ಮುಗಿಲು ಹರಿದು ಬೀಳುವಂತೆ ಆಕ್ರಂದಿಸಿದ್ದಳು.

ಚಾಂದಬಿಗೆ ಈಗ ಮಗನ ನೆನಪು ಕಾಡದೆ ಇರಲಿಲ್ಲ. ಆ ನೆನಪಿನ ತುಂಬ ತಳಮಳ. ಆದರ ತೆಕ್ಕೆಯಲ್ಲಿ ಸಿಲುಕಿಕೊಂಡರೆ ಆಕೆ ಎರಡು-ಮೂರು ದಿನ ಹಾಸಿಗೆ ಬಿಟ್ಟು ಏಳುವುದಿಲ್ಲವೆಂದು ಮುಷ್ತಾಕ್‍ನಿಗೆ ಗೊತ್ತು. ಅದಕ್ಕಾಗಿ ಅವನು ಅವಳ ಮಾತುಗಳಿಗೆ ಫ್ರತಿಕ್ರಿಯಿಸದೆ ಕುಳಿತಿದ್ದ.
 *****

ಮೊನ್ನೆಯೇ ತಿಂಗಳ ಕೊನೆ. ಆವಳಿಗೆ ನಾಲ್ಕು ಮನೆಯವರು ಪಗಾರಕೊಡಬೇಕು. ಗಾಂಧಿನಗರ ಬಡಾವಣೆಯಲ್ಲಿರುವ ಆ ಮನೆಯವರಿಗೆ ಚಾಂದಬಿಯ ಮೇಲೆ ವಿಶೇಷ ಆನ್ನುವಂಥ ಪ್ರೀತಿ. ಆವರು ಆಕೆಯನ್ನು ಕೆಲಸದಾಳು ಎಂದು ಗಮನಿಸಿದ್ದಿಲ್ಲ. ಎದೆಯಲಿ ಬ್ರಹ್ಮಾಂಡದಷ್ಟು ದುಮ್ಮಾನವನ್ನು ಹತ್ತಿಕ್ಕಿಕೊಂಡು ಆಕೆ ಚೊಕ್ಕಟವಾಗಿ ಕೆಲಸ
ನಿರ್ವಹಿಸುವ, ಮನುಷ್ಯ ಸಂಬಂಧದ ಗಂಧ ತೀಡುವ ಪರಿಯಿಂದ ಸಂಪ್ರೀತರಾದವರು. ಆವಳ ಮನಸ್ಸು ಸ್ವಚ್ಚ-ಮಾತು ನೇರ. ಮೈಗಳೃತನದಿಂದ ಹಣ ಪಡೆದುಕೊಳ್ಳುವ ತಕರಾರಿನವಳಲ್ಲ. "ಬೆವರು ಸುರಿಸಲಾರ್‍ದತಿಂದ ಆನ್ನ ಮೈಯಾಗ  ರಕ್ತಾ ಆಗುದಿಲ್ರಿ" ಎನ್ನುವ ಸ್ವಭಾವ. ಲಂಚ ತಿನ್ನುವ ಸಾಹೇಬರುಗಳ ಅಂತರಂಗವನ್ನು ಕಲಕದೇ ಬಿಡುತ್ತಿರಲಿಲ್ಲ ಆವಳ ಮಾತು. ತನ್ನ ತಾಪತ್ರಯಗಳ ಬಗ್ಗೆ ಚೂರೂ ಹೇಳಿಕೊಳ್ಳು-
ವವಳಲ್ಲ ಆದರೆ ನೌಷಾದನ ವಯಸ್ಸಿನ ಹುಡುಗರನ್ನು ನೋಡಿದರೆ ಆವಳ ಕಣ್ಣಂಚಿನಲ್ಲಿ ನೀರು ತುಳುಕುತ್ತಿತ್ತು. ಕೈಗೆ ಬಂದ ಮಗ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಸತ್ತುಬಿದ್ದ ದೃಶ್ಯ ಆವಳ ಕಣ್ಣೆದುರು ಕಟ್ಟಿ ಹೃದಯವನ್ನು ಫಾಸಿಗೊಳಿಸುತ್ತಿತ್ತು. ಚೂರಿ ರೂಪದಲ್ಲಿ ಬಂದು ಮಗನನ್ನು ನುಂಗಿ ಹಾಕಿದ ವಿಧಿಯನ್ನು ಆಕೆ ಒಳಗೇ ಶಪಿಸುತ್ತಿದ್ದಳು. ಎಳೆಯ ಮಗುವಿನ ರಕ್ತಕುಡಿದ ಧರ್ಮಾಂಧ ಹುಳುವನ್ನು ಜನ ಬೈದಾಡಿಕೊಂಡಿದ್ದರು.  ಆದರೆ ಆ ಹುಳುಗಳ ಪತ್ತೆ ಮಾತ್ರ ಆಗಿರಲಿಲ್ಲ.

ಈಗ ಆಂಥವೇ ಹುಳಗಳು ಊರಲ್ಲಿ ಗುಲ್ಲೆಟ್ಟಸಿ ಇಬ್ಬರು ಹಿಂದೂ-ಮುಸ್ಲಿಮ ಹುಡುಗರ ಮೇಲೆ ರಣಹದ್ದುಗಳಂತೆ ಎಗರಿ ಕುಕ್ಕಿದ್ದು ಕೇಳಿ ಚಾಂದಬಿಯ ಲಾವಾ ಕುದ್ದಿತ್ತು "ಯಾವ ರಾಕ್ಷಸಗೊಳು ಆ ಹುಡುಗರ ಜೀವಾ ನುಂಗಿದವೋ. ಆವರ ಕಟಬಾಯಿ ಹರೀಲಿ. ಆವರ ವಂಶ ನಿರ್ವಂಶ ಆಗ್ಲಿ ಆವರ ಉರುವಣಿಗ್ಯಾಗ ಉಪ್ಪು ತುಂಬಲಿ" ಎಂಬಿತ್ಯಾದಿಯಾಗಿ ಶಾಪದ ಕಿಡಿಗಳನ್ನು ಸಿಡಿಸಿದ್ದಳಾಕೆ. ಕೋಮು ಎನ್ನುವ ಕಾಳಿಂಗ ಸರ್ಪವನ್ನು ಕೆರಳಿಸುವ ನೀಚರ ಸೂಕ್ಷ್ಮಗಳು  ಚಾಂದಬಿಯ ಗ್ರಹಿಕೆಗೆ ನಿಲುಕುವಂತಿರಲಿಲ್ಲ.

ಚಾಂದಬಿ ಒಟ್ಟಳೇ ಎಷ್ಟು ಮಾತಾಡಿಯಾಳು. ಮುಷ್ತಾಕ್ ಕಿಮಿಕ್ ಎನ್ನದೇ ಕುಳಿತಿದ್ದ. ಮಕ್ಕಳಿಬ್ಬರು ಪುಸ್ತಕದಲ್ಲಿ ಮಗ್ಲರಾಗಿದ್ದರು. ಚಾಂದಬಿ ಬೇಸರದಿಂದ ಮೈಮುರಿದಳು. ತಟ್ಟನೆ ಆವಳಿಗೆ ಪದ್ಮಾ ಹೇಳಿದ ಮಾತು ನೆನಪಾದವು. ಪದ್ಮಾ ಆಫೀಸರೊಬ್ಬನ ಹೆಂಡತಿ. ಗಲಭೆಯ ಹಿಂದಿನ ದಿನ ಆಕೆ ಸ್ಪಷ್ಟವಾಗಿ "ನಮ್ಮ ರೂಪಾಗ ದಿನ ತುಂಬ್ಯಾವು. ಇವತ್ತ, ನಾಳೆ ಆವಳ ಹೆರಿಗೆ ಆಗತ್ತ. ಆಕಿ ಬಾಣಂತನಕ ನೀನು ಆಸರ ಆಗಬೇಕು. ಬೇಕಾದ್ರ ನೀನು ಕೆಲಸ ಮಾಡೋ ಮನಿ ಕಮ್ಮಿ ಮಾಡ್ಕೋ. ನಮ್ಮ ಮಾನಿಯಾಗ ಖಾಯಂ ಇರು. ನಿನ್ಗ ಬೇಡಿದಷ್ಟು ಪಗಾರ ಕೊಡ್ತೀನಿ" ಎಂದಿದ್ದಳು. ಆವಳ  ಗಂಡ ಚಂದ್ರಪ್ಪ ಊರಲ್ಲಿ ಇರುವುದೇ ಅಪರೂಪ. ಯಾವಾಗಲೂ ಟೂರ್ ಮೇಲೆ ಹೋಗುವವರು. ಹಿರಿಯ ಮಗ ಮೈಸೂರಲ್ಲಿ  ಓದುತ್ತಿದ್ದ. ಇನ್ನೂಬ್ಬ ಮಗ ಚಿಕ್ಕವನು. ರೂಪಾಳ ಬಾಣಂತನಕ್ಕೆ ಕಷ್ಟವಾಗಬಾರದು ಎಂಬ ಕಾರಣದಿಂದ ಚಂದ್ರಪ್ಪ "ನೀನು ಹಣದ ಬಗ್ಗೆ ಚಿಂತೆ ಮಾಡಬೇಡ" ಎಂದು ಚಾಂದಬಿಯನ್ನು ಕೇಳಿಕೊಂಡಿದ್ದರು.  "ರೊಕ್ಕದ ಮಾತು ಹೇಳಬ್ಯಾಡ್ರಿ ಸಾಹೇಬರ. ನಾಯೇನು ಆಸೇದಾಕಿ ಆಲ್ಲ. ರೂಪಾ ನನ್ನ ಬೇಟಿ ಸಮಾನ. ಅವಳ ಬಾಣಂತನ ನಾನss  ಮಾಡ್ತೀನಿ" ಎಂದಿದ್ದಳಾಕೆ.

"ಪಾಪ, ಆ ಹುಡುಗಿ ಹೆರಿಗಿ ಆತೊ ಏನೋ?" ಚಾಂದಬಿ ಈಗ ತೀವ್ರ ಚಡಪಡಿಸತೊಡಗಿದಳು. ಪದ್ಮಾನ ಮಾತು ಎದೆಯಲ್ಲಿ ಪ್ರತಿಧ್ವನಿಸಿದಂತಾಗಿ ಆಕೆ ಎದ್ದೂನಿಂತು "ನಾನು ಪದ್ಮಕ್ಕರ ಮಾನೆಗೆ ಹೋಗಿ ಬರ್ತೀನ್ರಿ" ಎಂದಳು.

"ನಿನ್ನ ತಲಿ ಖರಾಬ್ ಆಗೇತೇನು ? ಊರಾಗ ಒ೦ದು ನರಪಿಳ್ಳಿನೂ ತಿರಗಾಡಕ ಹತಿಲ್ಲ. ಹೋಗಿ ಬಂದೂಕಿನ ಬಾಯಿಗೆ ಬೀಳಬೇಕಂತಿಯೇನು ? ಸುಮ್ನ ಮಾನೆಯಾಗ ಕೂಡ್ರು"  ಮುಷ್ಟಾಕ್ ಹಗುರಾಗಿ ಗದರಿಸಿದ.

"ಪದ್ಮಕ್ಕ ಬಹಳ ಹೇಳ್ಯಾರ. ಊರಾಗ ಇಂಥ ಪರಿಸ್ಥಿತಿ. ಪಾಪ, ಆವರು ಏನು ಮಾಡ್ತಾರೋ ಏನೋ?" ಚಾಂದಬಿಯ ಮನಸ್ಸು ಆತ್ತಕಡೆ ಧ್ಯಾನಿಸಿತ್ತು.

"ಗದ್ದಲ ಎಬ್ಬಿಸುವ ಹರಾಮ್‌ಖೋರರಿಗೆ ಮನಷ್ಯಾರ ಸಂಕಟ ಆರ್ಥಾಗುದಿಲ್ಲ' ಮುಷ್ಟಾಕ್‍ನ ಧ್ವನಿಯಲ್ಲಿ ವ್ಯಥೆ, ಸಿಟ್ಟು ಎರಡೂ ಕಾಣಿಸಿದ್ದವು.

"ಆ ಸೂವರ್‌ಗಳ ತಗೊಂಡು ಏನು ಮಾಡೋದೈತಿ. ರೂಪಾ ಬೇಟಿಗೆ ಇದು ಪೈಲಾ ಹೆರಿಗೆ. ನಾನು ಹೋಗಿ ಬರ್‍ತೀನಿ" ಎಂದು ಚಪ್ಪಲಿ ಮೆಟ್ಟಿಕೊಂಡಳು ಚಾಂದಬಿ.

"ನಿಂದೂ ಹಠಾ ಬಹಳಾತು, ಪೋಲೀಸರ ಬಂದೂಕಿಗೆ ಮರುಕ ಇರುದಿಲ್ಲ!"
ಹೆಂಡತಿಯನ್ನು ತಡೆಯಲು ನೋಡಿದ ಮುಷ್ಟಾಕ್,

"ಬಸವಣ್ಣ ದೇವರ ಗುಡಿ ಸಂದಿ ಹಿಡಿದು ಹೋಗಿ ಬರ್‍ತೀನಿ. ನೀವೇನು ಚಿಂತಿ ಮಾಡಬೇಡ್ರಿ" ಎನ್ನುತ್ತ ಆಕೆ ಹೊಸಲು ದಾಟಿದಳು. ಅಂತಃಕರಣ ಹೃದಯ ಅವಳದು. ಆದರೆ ಪೋಲೀಸರ ಗುಂಡಿಗೋ, ಧರ್ಮಾಂಧರ ಕೈಗೋ; ಸಿಕ್ಕು ಬಿಟ್ಟರೆ ಆಕೆಯ ಗತಿಯೇನು ?  ಮುಷ್ಟಾಕವ ಚಿಂತಿಸಿದ.

ಚಾಂದಬಿ ತನಗೆ ಪರಿಚಿತವಾಗಿದ್ದ ಸಂದಿಗಳನ್ನು ಆತಂಕದ ಹೆಜ್ಜೆಗಳಿಂದಲೇ ಕ್ರಮಿಸಿದ್ದಳು. ಅವಳನ್ನು ನೋಡುತ್ತಲೇ ಪದ್ಮಾ, ಸಮಾಧಾನ ಅನುಭವಿಸುತ್ತ ಹೇಳಿದಳು. "ಬಾ, ಒಳಗ. ದೇವರು ಬಂದಂಗ ಬಂದಿ ನಮ್ಮವ್ವ, ರೂಪಾಗ ಹೆರಿಗೆ ಬ್ಯಾನಿ ಶುರು ಆದಂಗ ಕಾಣಸ್ತಾವು. ಇವರು ಬ್ಯಾರೆ ಮುಂಬೈಗೆ ಹೋಗ್ಯಾರ, ಸುಧಾ ಡಾಕ್ಟರು, ದವಾಖಾನಿಯಲ್ಲಿರ್‍ತೀನಿ ಕರ್‍ಕೊಂಡು ಬರ್ರಿ ಅಂದ್ರು. ನನ್ಗ ದಿಕ್ಕು ತಿಳಿದಂಗಾಗಿತ್ತು'.

"ರಸ್ತಾದಾಗ ರಿಕ್ಷಾ ಟಾಂಗಾ ಒಂದೂ ತಿರುಗಾಡವಲ್ಲುವು, ರೂಪಾನ್ನ ದವಾಖಾನಿಗೆ ಕರ್ಕೊಂಡು ಹೋಗುದು ಹ್ಯಾಂಗರಿ ಅಕ್ಕಾ? ಹೆರಿಗೆ ಇಲ್ಲೆ ಆಗ್ಲಿ ಬಿಡ್ರಿ, ನಾನು ರೂಪಾನ ಮುಂದss  ಇದ್ದೇನಿ. ನೀವೇನು ಗಾಬರಿ ಆಗಬ್ಯಾಡ್ರಿ" ಹೆರಿಗೆ ಮಾಡಿಸಿದ ಆನುಭವದ ಧೈರ್ಯದಿಂದಲೇ ಹೇಳಿದ್ದಳು ಚಾಂದಬಿ.

"ರೂಪಾಗ ಇದ ಬೊಚ್ಚಲ ಹೆರಿಗೆ, ಇವರು ದವಾಖಾನಿಯಾಗ ಆಗ್ಲಿ ಆಂದಾರ, ಆವಳತ್ತಿ ರೂಪಾ, ಗಂಡನ ಆಭಿಪ್ರಾಯನೂ ಅದss  ಐತಿ" ಎನ್ನುತ್ತ ಪದ್ಮಾ ಒಳಗೆ ಹೋದಳು. ಜಾಂದಬಿ ಆವಳನ್ನು ಹಿಂಬಾಲಿಸಿದಳು.

ಕುಳಿತಿದ್ದ ರೂಪಾ ತುಟಿ ಕಚ್ಚುತ್ತ ಎರಡೂ ಕೈಗಳನ್ನು ಚಲ್ಲಾಡತೊಡಗಿದ್ದಳು. ಪದ್ಮಾಳ ಮುಖದಲ್ಲಿ ಗಾಬರಿ ಒಡೆದು ಕಾಣಿಸಿತು. ಚಾಂದಬಿ, ರೂಪಾನ ಹತ್ತಿರ ಕುಳಿತು "ಬೇಟಿ, ನೀನು ಚಂದದ ಮಗನ ತಾಯಿ ಆಗ್ತಿ ತ್ರಾಸು ತಡಕೋರವ್ವ" ಎಂದು ತಲೆ ನೇವರಿಸಿದಳು, ಒಡಲಾಳದ ಆಸಾಧ್ಯ ನೋವಿಗೆ ತಾನು ಆಳಲ್ಲ ಎನ್ನುವಂತೆ ರೂಪಾ ತೀವ್ರವಾಗಿ ಒದ್ದಾಡತೊಡಗಿದಳು.

ಆರು ವರ್ಷಗಳ ಹಿಂದೆಯೇ ಅವಳ ಮದುವೆಯಾದದ್ದು. ಗಂಡ ಶ್ರೀಕಾಂತ ಕೆ‌ಇಬಿಯಲ್ಲಿ ಜೆ.ಇ. ಆಗಿದ್ದ ದಾಂಪತ್ಯದಲ್ಲಿ ಆನೂನ ಪ್ರೀತಿಯಿತ್ತು ತಂದೆಯನ್ನಿಸಿ ಕೊಳ್ಳುವ ಉಮೇದು ಇತ್ತಾದರೂ ಆದನ್ನು ಗಂಭೀರವಾಗಿ ಪರಿಗಣಿಸುವ ಪ್ರವೃತ್ತಿ ಅವನದಾಗಿರಲಿಲ್ಲ. ಈ ಬಗೆಗೆ ಧಾವಂತ ಇದ್ದುದು ರೂಪಾಳ ಆತ್ತೆ-ಮಾವಂದರಿಗೆ. ಮೊಮ್ಮಗ ಆಥವಾ ಮೊಮ್ಮಗಳ ಕಾಣುವ ಆಸೆ ಆವರಿಗೆ. ಶ್ರೀಕಾಂತ-ರೂಪಾ ವೈದ್ಯರಲ್ಲಿ ಪರೀಕ್ಷಿಸಿಕೊಂಡದ್ದು ಆವರ ಒತ್ತಾಸೆಗೆನೇ. ಇಬ್ಬರಲ್ಲೂ ದೋಷವಿರಲಿಲ್ಲ. ರೂಪಾಳಿಗೆ ಮಕ್ಕಳಾಗುತ್ತವೆಯೆಂದು ಡಾಕ್ಟರ್ ಭರವಸೆ ನೀಡಿದ್ದರು. ಆವಳತ್ತ್ರ್ಗೆ ಸಮಾಧಾನವಾಗಿತ್ತು. ಆದೇ ಉತ್ಯಾಹದಲ್ಲಿ ದೇವರು ದಿಂಡರು, ಹರಕೆಯೆಂದು ಆಕೆ ಸೂಸೆಯೊಂದಿಗೆ ಓಡಾಡಿದ್ದಳು. ಫಲವಂತಿಕೆ ಶೂನ್ಯವೆನಿಸಿತ್ತು. ಸಹನೆ ಕಳೆದುಕೊಂಡ ಆವಳು "ಸೊಸೆ ಗೊಡ್ಡು" ಎಂದು ತೀರ್ಮಾನಿಸಿದ್ದಳು. ರೂಪಾಳಿಗೆ ಕಿರಿಕಿರಿ ಶುರೂವಿಟ್ಟುಕೊಂಡದ್ದು ಆಗಲೇ. ಆದು ವಿಪರೀತ ಆನಿಸಿದಾಗ ಶ್ರೀಕಾಂತ  "ನಮಗ ಮಕ್ಕಳಾಗದಿದ್ರೂ ಚಿಂತೆ ಇಲ್ಲ, ಅನಾಧಾಶ್ರಮದ ಒಂದು ಮಗೂನ್ನ ತಂದು ನಾವೇ ಅದಕ್ಕೆ ತಾಯಿ-ತಂದೆ ಆಗ್ತೀವಿ. ನೀನು ರಾಮಾಯಣ-ಮಹಾಭಾರತ ಮಾಡಬ್ಯಾಡ" ಎಂದು ತಾಯಿಗೆ ಸ್ಪಷ್ಟವಾಗಿಯೇ ಹೇಳಿದ್ದ.

"ಅನಾಥ ಆತ್ತಮದ ಕೂಸು ನಮ್ಮ ರಕ್ತದ್ದು ಹ್ಯಾಂಗಾಗತ್ತೋ? ಬೇಕಾದ್ರ ಇನ್ನೊಂದು ಕನ್ಯಾ ಹುಡುಕಿ ಮದುವಿ ಮಾಡ್ತೀನಿ"
ತಾಯಿ ತನ್ನ ನಿರ್ಧಾರ ತಿಳಿಸಿದ್ದಳು.

"ಮದುವಿ ಅನ್ನೋದು ಸಣ್ಣ ಹುಡುಗರ ಆಟಲ್ಲ ರೂಪಾ ನನ್ನ ಹೆಂಡತಿ. ಕೊನೆತನಕ ಆಕೀನ ನನ್ನ ಹೆಂಡತಿ ಆಗಿದ್ದಾಳೆ" ಶ್ರೀಕಾಂತ ತನ್ನ ಆಖ್ಯೆರು ಆಭಿಪ್ರಾಯ ತಿಳಿಸಿದ್ದ.

ಮಗನ ಮಾತಿನಿಂದ ಸಿಟ್ಟುಗೊಂಡ ಆಕೆ "ಈ ಗೊಡ್ಡಿ ನಿನ್ನ ಮಾಟಾ ಮಾಡಿಸ್ಯಾಳ" ಎಂದು ಹಾರಾಡಿದ್ದಳು. ಅತ್ತೆಯ ಕೂರಲಗಿನ ಮಾತಿನಿಂದ ರೂಪಾ ಚಿತ್ತಹಿಂಸಯನ್ನು ನಿತ್ಯವೂ ಆನುಭವಂತಾಗಿತ್ತು. ಮನಸ್ಸು ದೇಹಗಳನ್ನು ನಿಸ್ತೇಜಿಸಿಕೊಂಡ ಮಗಳ ಬಗ್ಗೆ ತಾಯಿ ತಂದೆಗೂ ಚಿಂತೆ ಕಾಡತೊಡಗಿತ್ತು.

ವೈದ್ಯರ ನಂಬುಗೆ ನಿಜವೆನ್ನುವಂತೆ ರೂಪಾ ಗರ್ಭ ಧರಿಸಿದ್ದಳು. ಅವಳತ್ತೆ ಆವರಿಹೂವಾಗಿದ್ದಳು. ಸೊಸೆಯನ್ನು ನಾಜೂಕಾಗಿ ನೋಡಿಕೊಂಡಿದ್ದಳು. ಸೀಮಂತನ ಕೂಡಾ ಸಂಛ್ರಮದಿಂದಲೇ ಜರುಗಿತ್ತು. ಎಲ್ಲರೂ ಆವಳ ಹೆರಿಗೆ ಸುದ್ದಿಗಾಗಿ ಕಾತರಿಸುತ್ತಿದ್ದರು.

* * *

ಚಾಂದಬಿಗೆ ಈ ಹಕಿಕತ್ತು ಎಲ್ಲಾ ಗೊತ್ತು.
"ಯಾ ಪಾಕ್ ಪರವರ್ದಿಗಾರ್, ರೂಪಾ ಬೇಟಿಗೆ ಕರುಣಾ ತೋರ್‍ಸು. ಆವಳ ಹೆರಿಗೆ ಸುಸೂತ್ರ ಆಗ್ಲಿ" ಎಂದು ಮನಸ್ಸಿನಲ್ಲಿಯೇ ಬೇಡಿದಳು ಆಕೆ. ಮಗಳು ತಳಮಳಿಸುವುದನ್ನು ನೋಡಲಾಗದೆ ಪದ್ಮಾ "ಚಾಂದಬಿ, ಹ್ಯಾಂಗರ ಮಾಡಿ ರೂಪಾನ್ನ ದವಾಖಾನಿಗೆ ಕರ್‍ಕೊಂಡು ಹೋಗಬೇಕು" ಎಂದು ಗಡಬಡಿಸಿದಳು.  ಆವಳ ತುಮುಲವನ್ನು ಅರ್ಥಮಾಡಿಕೋಡ ಚಾಂದಬಿ "ರಸ್ತಾದಾಗ ಯಾವುದರ ಗಾಡಿ ಬರ್ತಾವೇನೋ ನೋಡಿ ಬರ್‍ತೀನಿ" ಎಂದು ಹೊರ ಬಂದಳು. ವಾಹನ ಸಿಗದಿದ್ದರೆ ಹೇಗೆ? ಪದ್ಮ ತಹತಹಿಸತೊಡಗಿದಳು.

ಚಾಂದಬಿ ರಸ್ತಗಿಳಿದಾಗ ಆಕಾಶದಲ್ಲಿ ದಟ್ಟದಟ್ಟ ಮೋಡ, ರಣಗುಡುವ ಸೂರ್ಯ ಅದರೊಳಗಿಂದ ಇಣಿಕತೊಡಗಿದ್ದ. ಆವನಿಗೂ ಕರ್ಫೂವಿನ ಆಂಜಿಕೆಯೇನೊ ಎಂದುಕೊಂಡಳಾಕೆ. ತುಸು ದೂರ ರಸ್ತೆ ಕ್ರಮಿಸಿ ವಾಹನಗಳನ್ನು ನಿರೀಕ್ಷಿಸಿದಳು. ದೂರದಲ್ಲಿ ಎಲ್ಲೋ ಪೋಲೀಸ್ ಜೀಪಿನ ಸದ್ದು ಕೇಳಿತ್ತು. ಮರುಕ್ಷಣ ಅದೂ ಸ್ತಬ್ದ. ನಿರಾಶೆಯಿಂದ ಮನೆಯ ಕಡೆಗೆ ಹೆಜ್ಜೆ ಕಿತ್ತಿಡುತ್ತಿರುವಂತೆ ಗಟಾರ್ ಪಕ್ಕದ ಬೇವಿನ ಮರಕ್ಕೆ ತಾಗಿಕೊಡು ತಳ್ಳೆಗಾಡಿ ಆಡಿ ಮೇಲಾಗಿ ನಿಂತಿತ್ತು. ಒಂದು ಗಾಲಿಯ ಟೈಯರು, ಟ್ಯೂಬು ಮನುಷ್ಯನ ದೇಹದಿಂದ ಹೊರಬಿದ್ದ ಕರುಳಿನಂತೆ ಜೋತಾಡ ತೊಡಗಿದ್ದವು. ಗಾಡಿಯ ಅಕ್ಕಪಕ್ಕ ಬದನೆ, ಮೆಣಸಿನಕಾಯಿ, ಟೊಮೆಟು, ಕೋತಂಬರಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಗಲಭೆ ಖೋರರ ದಾಳಿಗೆ ತಕ್ಕ ತರಕಾರಿ ಗಾಡಿಯದು. ಆದರ ಮಾಲೀಕನ ಸ್ಥಿತಿ ಏನಾಯಿತೋ ? ಚಾಂದಬಿ ಮನನ್ನು ಮರುಗಿತು. ಮತ್ತೊಮ್ಮೆ ಗಾಡಿ ನೋಡುತ್ತಿದ್ದಂತೆ ಆವಳ ಮಿದುಳಿನಲ್ಲಿ ಉಪಾಯವೊಂದು ಹೊಳೆಯಿತು. ಧಾವಿಸಿ ಮನೆಯತ್ತಬಂದು "ಪದ್ಮಕ್ಕ, ರಸ್ತಾದಾಗ ಒಂದೂ ಗಾಡಿ ಇಲ್ರಿ, ಆಲ್ಲೆ ಒಂದು ತಳ್ಳುಗಾಡಿ ಐತಿ, ನೀವು ತಪ್ಪು ತಿಳಿಬ್ಯಾಡ್ರಿ, ನೀವು ಹೂಂ ಆಂದ್ರ ಹೋಗಿ ಗಾಡಿ ತರ್ತೀನಿ. ರೂಪಾ ಬೇಟಿನ್ನ ಆದರ ಮ್ಯಾಲೆ ಮಲಗಿಸಿಕೊಂಡು ದವಾಖಾನಿಗೆ ಹೋಗೂಣು" ಎಂದಳು.

ತಳ್ಳುಗಾಡಿಯಲ್ಲಿ ಮಗಳನ್ನು ಕರೆದುಕೂಂಡು ಹೋಗುವುದೆ? ಎಲ್ಲ ಅನುಕೂಲವಿದ್ದೂ ಇಂಥ ಪರಿಸ್ಥಿತಿ ಬಂದುದಕ್ಕೆ ಪದ್ಮ ಕಸಿವಿಸಿದಳು. ಮಗಳ ನರಳಾಟ ಈ ಕಸಿವಿಸಿಯನ್ನು ನಿಮಿಷಾರ್ಧದಲ್ಲಿ ದೂರ ಮಾಡಿತು. "ಚಾಂದಬಿ, ನಮ್ಮಪುಣ್ಯಕ್ಕ ತಳ್ಳುಗಾಡಿಯರ ಸಿಕ್ತಲ್ಲ. ಲಗೂನ ತಗೊಂಡು ಬಾ" ಎಂದಳು ಪದ್ಮಾ.

ಚಾಂದಬಿ ಆವಸರದಿಂದ ಹೋದಳು. ಗಾಡಿಯನ್ನು ಚಿತ್ತಮಾಡಿ, ರಸ್ತೆಗೆ ತಂದು, ಉರುಳಲು ಮೊಂಡುತನ ಮಾಡಿದ ಗಾಡಿಯನ್ನು ಜೋರಾಗಿ ತಳ್ಳುತ್ತ ಮನೆಯ ಮುಂದೆ ನಿಲ್ಲಿಸಿದಳು. ಗಾಡಿ ಆವಸ್ಥೆಯ ನೋಡಿ ಪದ್ಮ ಚಿಂತೆಗೊಳಗಾದಳು. "ನಾನು ಗಾಲಿ ರಿಪೇರಿ ಮಾಡ್ತೀನಿ, ನೀವು ದಪ್ಪನ ಜಮಖಾನಾ ತಗೊಂಡು ಬರ್ರಿ" ಎಂದ ಚಾಂದಬಿ ಹರಿದ ಟ್ಯೂಬು-ಟೈರನ್ನು ಗಾಲಿಗೆ ಹೊಂದಿಸಿ ಅದರ ಮೇಲೆ ಬಟ್ಟೆ ಸುತ್ತಿ ವಾಯರ್ ಬಿಗಿದಳು. ಗಾಡಿ ಉರುಳಲು ಸಜ್ಜುಗೊಂಡುದು ಪದ್ಮಾಳಿಗೆ ಸಂತೋಷ ತಂದಿತು.

ರೂಪಾಳನ್ನು ಗಾಡಿಯ ಮೇಲೆ ಮಲಗಿಸಿ ಇನ್ನೇನು ಗಾಡಿ ತಳ್ಳಬೇಕೆನ್ನುವಷ್ಟರಲ್ಲಿ "ಚಾ೦ದಬಿ, ನನಗ ಅಂಜಿಕಿ ಸುರುವಾತು ನೋಡು, ಗಲಭೆ ಮಾಡೋರು ನಮ್ಮ ಮೇಲೆ ಬಿದ್ರೆ ಏನ್ ಗತಿ ಆಂತ ?" ಎಂದು ಅನುಮಾನಿಸಿದಳು ಪದ್ಮಾ.

"ಆಕ್ಕಾ, ನಾನೀದ್ದೀನಲ್ಲ ಬರ್ರಿ, ಬೇಟಿ ತ್ರಾಸು ಮಾಡ್ಕೋಳ್ಯಾಕ ಹತ್ಯಾಳ, ವಿಚಾರ ಮಾಡ್ಕೊಂತ ನಿಂದ್ರು ಟೈಂ ಆಲ್ಲ ಇದು. ಯಾವ ಪುಂಡ್ರು ಬರ್‍ತಾರ, ನಮ್ಮನ್ನ ತಡೀತಾರ ನಾನೂ ನೋಡ್ತೀನಿ" ಜಬರ್ದಸ್ತಾಗಿ ಹೇಳಿ ಗಾಡಿಯನ್ನು ತಳ್ಳಿಯೇ ಬಿಟ್ಟಳು ಚಾಂದಬಿ.

* * *

ತಳ್ಳುಗಾಡಿಯ ಸದ್ದು ರಸ್ತಯ ನೀರವತೆಯನ್ನು ಹೆದರಿಸುವಂತೆ ಇತ್ತು.

ಚಾಂದಬಿ ಸೀರೆಯ ಸೆರಗನ್ನು ಸೊಂಟಕ್ಕೆ ಭದ್ರವಾಗಿ ಸಿಕ್ಕಿಸಿಕೊಂಡು ಗಂಡಸಿಗಿಂತಲೂ ದಿಟ್ಟೆಯಾಗಿ ಗಾಡಿ ನೂಕುವುದನ್ನು ಪದ್ಮಾ ಬೆರಗುಗಣ್ಣುಗಳಿಂದ ನೋಡತೊಡಗಿದ್ದಳು.

ಗಾಂಧಿನಗರದ ದವಾಖಾನೆಗೆ ಹೋಗಲು ಒಂದು ತಾಸಾದರೂ ಬೇಕು. ಸಂದಿಗಳನ್ನು ಬಳಸುತ್ತ ಹೋದರೆ ಸಮಯ ತುಸು ಕಡಿಮೆ ಹಿಡಿಯುವುದು. ಆದರೆ ಇಕ್ಕಟ್ಟಾದ ಮಾರ್ಗದಲ್ಲಿ ಗಾಡಿ ತಳ್ಳುವುದು ಪ್ರಯಾಸದ ಕೆಲಸ. ಹೀಗಾಗಿ ಚಾಂದಬಿ
ನೇರ ರಸ್ತಯನ್ನೇ ಹಿಡಿದಿದ್ದಳು.

ಮಧ್ಯೆ ಜುಮ್ಮಾ ಮಸೀದೆ. ತುಸು ದೂರಕ್ಕೆ ಹೋದರೆ ಗಣೇಶ ಮತ್ತು ಹನುಮದೇವರ ಮಂದಿರಗಳು. ಊರಲ್ಲಿ ಕೋಮು ಗಲಭೆ ಶುರುವಾದರೆ ಎಲ್ಲರ ಗಮನ ಈ ಪ್ರದೇಶದ ಮೇಲೆಯೇ ಕೇಂದ್ರಿಕೃತ. ಮತಾಂಧರಿಂದ ದೇವರ ನೆಲೆಗಳಿಗೂ
ಆತಂಕ ಎಂದುಕೊಡಳು ಚಾಂದಬಿ.

ಅವಳ ಮಾತು ಪೊಲಲೀಸರ ಆಂತರಾಳ ತಟ್ಟಿತೇನೋ, ಅವರು ಬಂದೂಕುಗಳನ್ನು ಕೆಳಗಿಳಿಸಿ ರೂಪಾಳತ್ತ ನೋಡಿದರು.

"ಸುಧಾ ಡಾಕ್ಟರು ದವಾಖಾನ್ಯಾಗ ಆದಾರಿ, ಮಗಳನ್ನ ಅವರ ಕರ್‍ಕೊಂಡು ಬಾ ಆಂದ್ರು, ನಮಗ ಒಂದೂ ಗಾಡಿ ಸಿಗಲಿಲ್ಲ ನಮ್ಮ ಯಜಮಾನರೂ ಊರಾಗ ಇಲ್ಲ, ನಮ್ಮ ಚಾಂದಬಿ ಈ ಗಾಡಿ ಹುಡುಕಿ ತಂದ್ಲು" ಇಷ್ಟು ಹೇಳುವುದರೊಳಗೆ ಪದ್ಮಾಳ ಕಣ್ಣಲ್ಲಿ ನೀರೊಡೆದಿತ್ತು.

ಹಿಂದೂ-ಮುಸ್ಲಿಮರಲ್ಲಿ ಮನಸ್ತಾಪ ಹುಟ್ಟಿಸುವ ಹಲಾಲಕೋರ ಮನಸ್ಸುಗಳಿಗೆ ಪದ್ಮಾ-ಚಾಂದಬಿಯರ ಮನುಷ್ಯ ಸಂಬಂಧ, ಒಡಲಾಳಟ ತುಡಿತ ಆರ್ಥವಾಗಲು ಸಾಧ್ಯವೆ ? ಧರ್ಮಾಂಧರಿಗೆ ನಾಗರ ಹಾವಿನಂತೆ ಹೆಡೆ ಬಿಚ್ಚುವುದು, ನಿಷ್ಪಾಪಿಗಳನ್ನು ಕೊಲ್ಲುವುದಷ್ಟೆ ಗೊತ್ತು. ಮತ್ತದಕ್ಕೆ ಧರ್ಮದ ಆಹಮ್ಮಿಕೆ ಬೇರೆ. ಕರುಣೆಯ ಗರ್ಭದಿಂದ ಧಮ೯ ಹುಟ್ಟಿದೆ. ಎಲ್ಲರನ್ನೂ ಬದುಕಿಸಿ ಬಾಳಿಸುವ ಮಾನವೀಯ ಗುಣ ಅದರದು. ಈ ಸತ್ಯವನ್ನು ಆವರಣದೊಳಗೆ ಹುದುಗಿಸಿಟ್ಟು, ತಮ್ಮ ಸ್ವಾರ್ಥಕ್ಕೆ ಆದನ್ನು ವ್ಯಾಖ್ಯಾನಿಸುವ ರಾಕ್ಷಸರಿಗೆ ಮನುಷ್ಯ ಪ್ರೀತಿ ಬೇಕಾಗಿಲ್ಲ ಎಂದೆಲ್ಲಾ ಆಲೋಚನೆಗೆ ತೊಡಗಿದ್ದ ಪಿ.ಎಸ್. ಆಯ್ ವಾಸ್ತವಕ್ಕೆ ಬಂದು,

"ಎರಡೂ ಕಡೆಯ ಸ್ಯೆತಾನರು ಮಾರಕಾಸ್ತ್ರಗಳನ್ನು ಹಿದ್ಕೊಂಡು, ತಲೆಕೆಟ್ಟವರಂಗ ತಿರುಗಾಡಲಿಕ್ಕೆ ಹತ್ಯಾರ. ರಕ್ತದ ರುಚಿ ಹತ್ತಿದ ಮತಾಂಧರಿಗೆ ಮನುಷ್ಯರು ಕಾಣ್ಸುದಿಲ್ಲ. ಊರಾಗ ಹೆಜ್ಜೆಹೆಚ್ಚಿಗೂ ಆಪಾಯ ಐತಿ. ನೀವು ಜಲ್ದಿ ಹೋಗಿ ದವಾಖಾನಿ ಸೇರ್‍ಕೋರಿ. ಆಲ್ಲಿತನಕ ನಮ್ಮ ಪೋಲೀಸರು ನಿಮ್ಮ್ಮ ಕೂಡ ಬತ್ತಾರ, ನಿಜಗುಣ, ಸಮದ್ ನೀವಿಬ್ಬರೂ ಈ ಹೆಣ್ಮಕ್ಕಳನ್ನು ದವಾಖಾನಿವರೆಗೂ ಹೋಗಿ ಬಿಟ್ಟು ಬಿರಿ" ಎಂದು ಆಜ್ಞಾಪಿಸಿದರು.

ಚಾಂದಬಿ, ಪದ್ಮಾಳ ಕಣ್ಣು ಅರಳಸಿಕೂಂಡವು. ಪಿ.ಎಸ್.ಆಯ್. ಆವರ ಕಣ್ಣಲ್ಲಿ ದೇವರಾಗಿ ಏಜ್ಯಂಭಿಸಿದ. ಅವರು ಅವನಿಗೆ ಕೈಮುಗಿದು ಕೃತಜ್ಞತೆ ಸೂಚಿಸಿದರು.

ಚಾಂದಬಿ ಗಾಡಿ ತಳ್ಳಲು ಕ್ಕೆಹಚ್ಚಿದಳು.

ಸಮದ್ ಮತ್ತು ನಿಜಗುಣ ಬಂದೂಕಗಳನ್ನು ಹೆಗಲಿಗೆ ಹಾಕಿಕೊಂಡು "ನೀವು ಸರಿರಿ" ಎಂದು ಗಾಡಿಯನ್ನು ತಳ್ಳತೊಡಗಿದರು.

ಆವರು ದವಾಖಾನೆ ಸೇರುವುದರೊಳಗೆ ಸೂಯ೯ ಅಸ್ತಮಿಸಿದ್ದ.

ವೈದ್ಯರು ತುರ್ತಾಗಿ ರೂಪಾಳನ್ನು ಹೆರಿಗೆ ಕೋಣೆಗೆ ಸಾಗಿಸಿದರು.

ಸಿಜರಿನ್ಗಾಗಿ ಆವರು ಸಿದ್ದತೆ ಮಾಡಿಕೊಂಡಾಗಿತ್ತು. ಆದರೆ ರೂಪಾಳ ಹೆರಿಗೆ ತಡವಾಗಲಿಲ್ಲ ನಾರ್ಮಲ್ಲಾಗಿ ಆಕೆ ಗಂಡುಕೂಸಿಗೆ ಜನ್ಮ ನೀಡಿದಳು. ಆಸ್ಪತ್ತ್ರೆಯ ಆವರಣದಲ್ಲಿದ್ದ ಮರಗಳಲ್ಲಿ ಹಕ್ಕಿಗಳ ಕಲರವ ಕೇಳಿಸಿತು. ಕೂಸಿನ ಅಳುವಿನ ಧ್ಯನಿ ಅದರೊಂದಿಗೆ ಮೇಳೈಯಿಸಿತು.

ಪದ್ಮಾ-ಚಾಂದಬಿ ನಿರಾತಂಕವಾಗಿ ಉಸಿರಾಡಿಸಿದರು. ರೂಪಾಳ ಮುಖದಲ್ಲಿ ಹೂ ನಗು, ಸಂಜೆಯ ಆಕಾಶ ಶುಭ್ರವಾಗಿತ್ತು. ಆಲ್ಲಿನಕ್ಷತ್ತಗಳು ಫಳಫಳಿಸತೊಡಗಿದ್ದವು. ಮಧ್ಯ ಚಂದ್ರ ಚಂದವೆನಿಸಿದ್ದ ಆವನ ತಂಪು ಬೆಳಕು ಸೂಎಯನುರಿದ ಭೂಮಿಯನ್ನು ಮೆಲ್ಲಗೆ ಆವರಿಸಿತೊಡಗಿತು.

           *****

ಕೀಲಿಕರಣ: ಎಂ. ಎನ್. ಎಸ್. ರಾವ್

ಮಂಗ ಹೆಂಗಸಿವಳು

-ಶಿಶುನಾಳ ಶರೀಫ್

ಮಂಗ ಹೆಂಗಸಿವಳಂಗಳದೀ ಎಪ್ಪಾ
ಹಿಂಗದೆ ಬಂದಲ್ಲ್ಹ್ಯಾಂಗಾದಿ                                    ||ಪ||

ಕೊಂಗಿ ಮಾತನಾಡಿ ಹೆಂಗಸರ ಕಂಡರೆ
ಮುಂಗಡಿಯಲಿ ಕೆಟ್ಟವಳಾದಿ
ಮಾಟಗೇಡಿ ಮಡಸಿಯ ಮನಿಯು
ದಾಟಬೇಕು ಮನ್ಮಥ ಬೆಣಿಯು
ರಾಟಿಯ ನೂಲುವ ಪೋಟಿಯ ಹೇಳುತಲಿ
ಸೀಟಕತನಗೊಳಗಾಗಿ                                          ||೧||

ಕೆಟ್ಟ ಹೆಣ್ಣು ಇವಳು ಬೆದಗಡಿಕಿ
ಇಟ್ಟಳಂ ಕೆಟ್ಟ ಗುಣದ ಹಳೆ ಕಟಗಡಕಿ
ಕಿಟ್ಟದಗೊಂಬಿಹಾಂಗ ತೆರೆದು ಕಾಣತಾಳು ಇವಳಂಗದಿ||೨||

ಹುಶಾರಿ ನಡಿಯೋ ಈ ದಾರಿ
ಶವಿವಿಡಿದು ನಡಿಯೋ ತಳವಾರಗೇರಿ
ಕೊಳಕ ಲವಡಿ ನಮ್ಮತ್ತಿವಳಿಕಿ ಆರಿಯದೆ
ಹೊಯ್ಯಿಮಾಲಿಗೆ ಬಂದು ಒಳಗಾಗಿ                          ||೩||

ಬಾಯಿಮುಚ್ಚಿಕೋ ಆಂದರು ನಿಮಗ
ಯಾಕಾರ ಬಂದೆವಪ್ಪ ನಾವೀಗ
ನಾಯಿಹಾಂಗ ಬೊಗಳ್ಯಾಡುವಳಿವಳು
ತಾಯಿ ಹೇಳಿ ಕಲಿಸಿದ ಬುದ್ಧಿ                                  ||೪||

ಶಿಶುನಾಳಧೀಶನ ಕಂದಾ
ಹೊಸದಾಗಿ ಆ ಮಾರ್ಗದಿ ಬಂದಾ
ಕೊಸರಿದರಾಕಿಯು ಹೋಗದಿರು ತಮ್ಮಾ
ಉಸುರುವೆ ಕವಿ ತಾಪದಿ                                      ||೫||
                  *****
ಕೀಲಿಕರಣ: ಎಮ್.ಎನ್.ಎಸ್.ರಾವ್

ನಾನೆಂಬ ಹುಡುಕಾಟ

-ತಾರಿಣಿ ಶುಭದಾಯಿನಿ ಆರ್‍

ರೂಪ ಯೌವನಗಳದೆ
ಮೆರವಣಿಗೆ ಸಾಕು
ಬುದ್ಧಿ ಭಾವಗಳಿಗೆ
ಮನ್ನಣೆಯು ಬೇಕು
          - ಹೇಮ ಪಟ್ಟಣಶೆಟ್ಟಿ


-ಎಂದು ಘೋಷಿಸಿಸಕೊಂಡರೂ ಸಹ ಒಮ್ಮೊಮ್ಮೆ ಹೆಣ್ಣೊಬ್ಬಳ ಕವಿತೆಯ ಅಂತರಂಗ ತೆರೆದುಕೊಲ್ಳುವುದೇ ಇಲ್ಲ!  ಕಾವ್ಯವನ್ನು ಹೆಣ್ಣಿನ ದೇಹದ ಹೊರ ವಿವರಗಳಂತೆ ಗ್ರಹಿಸಿ ಗ್ಲಾಮರ್‍ ಅಂಶಗಳಾಗಿ ಗಣಿಸಿ ಚರ್ಚಿಸುವ ಅಪಾಯವೇ ಹೆಚ್ಚು.  ಸ್ತ್ರೀಲೇಖದ ಚೌಕಟ್ಟು ಸಿದ್ಧಗೊಳಿಸಿ ಅದರ ಮಿತಿಯಲ್ಲಿಯೇ ಓದುವ ಅಭ್ಯಾಸ ಬೆಳೆದದ್ದು ಬಹುಶಃ ಸ್ತ್ರೀವಾದ ಪ್ರಖರಗೊಂಡ ಕಾಲದಲ್ಲಿರಬೇಕು.  ಆಗಿನಿಂದ ಈಗಿನವರೆಗು ಹೆಣ್ಣುಲಕ್ಷಣಗಳನ್ನು ಹುಡುಕುವುದರಾಚೆ ವಿಮರ್ಶೆ ಬೆಳೆದೇ ಇಲ್ಲ.  ಹೇಮಾ ಪಟ್ಟಣಶೆಟ್ಟಿ ಕಾವ್ಯ ಕರ್ಮ ಪ್ರರಂಭಿಸಿದಾಗ ಅವರ ಸೌಭಾಗ್ಯವೋ ದೌರ್ಭಾಗ್ಯವೋ ಸ್ತ್ರೀಯರ ಕಾವ್ಯ ಹುಲುಸಾಗಿ ಬರುತ್ತಿತ್ತು.  ಆ ಗೆಲಾಕ್ಸಿಯಲ್ಲಿ ಇವರೂ ಒಬ್ಬರಂತೆ ಕಂಡು, ಅವರ ಕವಿತೆಗಳ ಗುಣಾವಗುಣಗಳ ಚರ್ಚೆ ಬಿಚ್ಚಿಕೊಂಡಂತೆ ಕಾಣುವುದಿಲ್ಲ.

`ವಿರಹೋತ್ಸವ'ದಿಂದ ಕಾವ್ಯಪ್ರವೇಶ ಪಡೆದ ಹೇಮಾ ಪಟ್ಟಣಶೆಟ್ಟಿ ಈವರೆಗೂ `ಹೊಸಹಾಡು', `ಕಣ್ಣುಗಳಲ್ಲಿ ಕನಸು ತುಂಬಿ'. `ಊಸಿರ ಬದುವಿನ ಗುಂಟ' - ಎಂಬ ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ.  ಒಂದೊಂದು ಸಂಕಲನಕ್ಕೂ ನಡುವ ಸಾಕಷ್ಟು ಅಂತರಗಳಿವೆ.  ಸುಮಾರು ೨೦-೨೫ ವರ್ಷಗಳಿಂದ ಕಾವ್ಯಕರ್ಮದಲ್ಲಿ ಆಸಕ್ತಿಯಿಟ್ಟುಕೊಂಡು, ಅದರಲ್ಲಿ ತೊಡಗಿಸಿಕೊಂಡ ಈ ಕವಯಿತ್ರಿಯ ಕಾವ್ಯ ಅವರ ಕಾಲದ ಕವಿಯಿತ್ರಿಯರ ದನಿಗಳಿಗಿಂತ ಭಿನ್ನವಾಗಿದೆ.  ಆದರೆ ಸಮೂಹಗಾನದ ಆಲಾಪದಲ್ಲಿ ಆ ಭಿನ್ನದನಿಯು ಅಷ್ಟಾಗಿ ಕೇಳದೇ ಹೋಗಿದೆ.

ಹೇಮಾ ಪಟ್ಟಣಶೆಟ್ಟಿಯವರ ಕಾವ್ಯ ಒಂದು ವಿಶೇಷ ಬಗೆಯ ಲಯವನ್ನು ಹೊಂದಿದೆ.  ಅದೆಂದರೆ, ಅಲ್ಲಿ ನಾವು ಕಾಣುವ ಪ್ರಶ್ನಾವಳಿಗಳು. ಕವಿತೆ ಅವರಲ್ಲಿ ಹುಟ್ಟುವುದೇ ಪ್ರಶ್ನೆಗಳನ್ನು ಹಾಕಿಕೊಳ್ಳುವುದರ ಮೂಲಕ.  ಮತ್ತು ನಾನು ಎಂಬ ಆತ್ಮಪ್ರತ್ಯಾಯದಿಂದಲೇ ಅವರ ಕಾವ್ಯ ಉಸಿರಾಡುತ್ತದೆ.  ಸ್ಥೂಲವಾಗಿ ಹೇಳಬಹುದಾದರೆ ಹೇಮಾ ಅವರದು ಆತ್ಮಕೇಂದ್ರಿತ  ಧೋರಣೆಯನ್ನು ಹೇಳುವಂತದ್ದು.

ಡಿ.ಆರ್‍. ನಾಗರಾಜ್ ಗುರುತಿಸುವಂತೆ ಮಹಿಳೆಯರ ಬರವಣಿಗೆಯಲ್ಲಿ `ನಾನು' ಎಂಬುದು ವಿವರಿಸಿಕೊಳ್ಳುವ ಹಂತದಲ್ಲಿ ಊಲಿದಿದೆ.  ಅದು ಬಹುಶಃ ಆ ಕಾಲದ ಎಚ್ಚೆತ್ತ ಪ್ರಜ್ಞೆಯನ್ನು ಇಟ್ಟುಕೊಂಡ ಸ್ತ್ರೀಯ ಬರವಣಿಗೆಗಳಲ್ಲಿ ಕಾಕತಾಳೀಯವೆಂಬಂತೆ ಈ ಸರ್ವನಾಮ ಕಾಣಿಸಿಕೊಳ್ಳುತ್ತ ಬಂದಿರುವುದು ಡಿ.ಆರ್‍. ಅವರ ಮಾತಿಗೆ ತಕ್ಕನಾಗಿ ಕಾಣುತ್ತದೆ.  ಹೇಮಾ ಈ ಅಂಶವನ್ನು ಕೈಬಿಟ್ಟಿಲ್ಲ.  ಮತ್ತು ಪ್ರಶ್ನಾರ್ಥಕ ನೆಲೆಯಲ್ಲಿ ನಿಂತು ಕೇಳಿ ಕೊಳ್ಳುವ, ಹುಡುಕುವ ಅವಕಾಶಗಳನ್ನು ಬಿಟ್ಟುಕೊಡುವುದೂ ಇಲ್ಲ.  ಆದರೆ ಇದರಲ್ಲಿಯೇ ಸಮೂಹನಿಷ್ಠೆಯ ಗುಣವಿರುವ, ಅದಂದರೆ ನಾನು ಎಂಬುದನ್ನು ಸಾರ್ವತ್ರಿಕವಾಗಿ ಗುರುತಿಸಿಕೊಂಡು, ಸ್ತ್ರೀ ಬದುಕಿನ ಗುಣಲಕ್ಷಣಗಳನ್ನು ಒಂದು ಹಂತದಲ್ಲಿ ಸಮೀಕರಿಸಿಕೊಂಡು ನೋಡುವುದನ್ನು ಹೇಮಾ ಅವರ ಕಾವ್ಯದಲ್ಲಿ ಕಾಣಲಾಗುವುದಿಲ್ಲ.  ಅಂದರೆ ಪ್ರತಿಭಾ ನಂದಕುಮಾರರ ಸಾಲು ಹೇಳುವಂತೆ `ನಾವು ಹುಡುಗಿಯರೇ ಹೀಗೆ' ಎಂತಲೋ, ಅಥವಾ ಎಚ್.ಎಸ್. ಮುಕ್ತಾಯಕ್ಕ ಹೇಳುವಂತೆ, `ನಿಮ್ಮ ಮಾನಾಪಮಾನವನು |  ಕಾಪಾಡಲು ನಿಮ್ಮಿಂದಲೇ ಪತಿವ್ರತೆಯರ ಪಟ್ಟಕ್ಕೇರಿ ಎಂದೋ ಹೀಗೆ.  ಆದರೆ ಹೇಮಾ ಈ ರೀತಿ ಸಾರ್ವತ್ರಿಕಗೊಳಿಸುವ ಗೋಜಿಗೆ ಹೋದಂತೆ ಕಾಣುವುದಿಲ್ಲ.  ಅಕಸ್ಮಾತ್ ಇದ್ದರೂ ಅದು ಗೌಣ ಎನಿಸುವುಷ್ಟು ಕಾಣುತ್ತದೆ.  ಸೂಕ್ಷ್ಮಗಳಿಗೆ ಎಡೆಯಿರದ, ಮಿಥ್‌ಗಳಿಗೆ ಹೇರಳವಾಗಿ ಅವಕಾಶ ಇರುವ ಈ ಸ್ತರದಲ್ಲಿ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ.  ಮೇಲಾಗಿ ಈ ಹೇಮಾ ತಮ್ಮ ಕಾವ್ಯವನ್ನು ತೆರೆದಿಡುವ ಪ್ರಯತ್ನ ಮಾಡುವುದಿಲ್ಲ.  ಮೇಲಾಗಿ ಈ ಬಗೆಯ ಕವಿತೆಗಳಲ್ಲಿ ರಾಜಕೀಯ ಹಕ್ಕುಗಳ ಧ್ವನಿ ಸ್ಪಷ್ಟವಾಗಿ ಕೇಳುತ್ತಿರುತ್ತದೆ.  ಅಸಮಾನತೆಯ ಏರುಪೇರುಗಳ ಕುರಿತು ಯಾವುದೇ ಹಂತದಲ್ಲಿ ದನಿ ಎತ್ತುತ್ತಿರುವುದು ಕಾಣುತ್ತದೆ.

ಇದನ್ನು ಬಿಟ್ಟು ವ್ಯಕ್ತಿನಿಷ್ಠತೆಯನ್ನು ನೆಚ್ಚುವ `ನಾನು' ಎಂಬ ವಲಯಕ್ಕೆ ಬಂದರೆ ನಾನು ಎಂಬುದು ಆಧ್ಯಾತ್ಮಿಕ ಸ್ವರೂಪದಲ್ಲಿ, ಆತ್ಮನಿರೀಕ್ಷಣೆಯ ಸ್ವರೂಪದಲ್ಲಿ.  ಮೆಟಫಿಸಿಕಲ್ ಹಂತದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ.  ಕನ್ನಡ ಕಾವ್ಯ ಪರಂಪರೆಯಲ್ಲಿ ಆತ್ಮನಿಷ್ಠವಾದ ಆತ್ಮನಿರೀಕ್ಷಣೆ, ಆಧ್ಯಾತ್ಮಿಕ ಹುಡುಕಾಟವನ್ನು ಹೊಂದಿದ ಸಂಪದ್ಭರಿತ ಕಾವ್ಯಗಳೇ ಇವೆ.  ಆತ್ಮನಿರೀಕ್ಷಣೆಗೆ ಮಾದರಿಯನ್ನು ಹಾಕಿಕೊಟ್ಟ ಬಸವಣ್ಣನಂತಹ ಕವಿಗಳಿದ್ದಾರೆ.  ಬಸವಣ್ಣ ಆತ್ಮ ನಿರೀಕ್ಷಣೆಯ ಮಾಗದಲ್ಲಿ ನಾನು ಎಂಬುದನ್ನು ಬಳಸುವಾಗ ಸೂಕ್ಷ್ಮವಾಗಿ ಅದು ಸಾಮಾಜಿಕವಾದ ಮತ್ತು ವೈಯಕ್ತಿಕವಾದ ವಲಯಗಳೆರಡರಲ್ಲಿಯೂ ವಿಸ್ತರಿಸಿಕೊಳ್ಳುತ್ತಾರೆ.  ನಿಷ್ಠೆ, ಪ್ರಮಾಣಿಕತೆಯ ಸ್ವರೂಪಗಳು ಹೆಚ್ಚಾಗಿ ಸ್ಫಟಿಕದ ಪಾರದರ್ಶಕತೆಯನ್ನು ಸೂಚಿಸುತ್ತವೆಯಲ್ಲದೆ, ಹೊರಗಿನ ಸಾಮಾಜಿಕ ವರ್ತನೆಗಳಿಗೂ, ವೈಯಕ್ತಿಕ ವರ್ತನೆಗಳಿಗೂ ಇರಬಾರದ ಅಡೆತಡೆಗಳ ಬಗ್ಗೆ ಹೇಳುವಂತದ್ದಾಗಿದೆ.  ಆದರೆ ಆ ಪ್ರತೀಕಗಳ ಹಾದಿಯಲ್ಲಿ ಇರುವಂತೆ ಕಾಣುವ ಹೇಮಾ ಒಲವು ಆ ಹಂತದಲ್ಲಿಯೂ ನಿಂತಿಲ್ಲ.  ಇನ್ನು ಆಧ್ಯಾತ್ಮಿಕವಾದ `ನಾನು' ಎನ್ನುವುದು ಇಲ್ಲವಾಗುವ ಕ್ರಿಯೆಯನ್ನು ಸೂಚಿಸುವಂತದ್ದು.  ನಾನು ಎಂದರೆ ಏನು-ಎಂಬ ಪ್ರಶ್ನೆ ಹಾಕಿಕೊಳ್ಳುತ್ತ ಅದನ್ನು ಛೇದಿಸಿಕೊಳ್ಳುತ್ತ ಹೋಗುವುದು ಮತ್ತು ಕೊನೆಗೆ ಏನೂ ಉಳಿಯದೆ ಇರುವ ಒಂದು ಶೂನ್ಯಸ್ಥಿತಿಯಲ್ಲಿ ಕರಗುವ ಕಲ್ಪನೆಯದು.  ಈ ಬಗೆಯ ಹುಡುಕಾಟ ಅನುಭಾವದ ನೆಲೆಯನ್ನೂ ಹೇಮಾ ಕಾವ್ಯ ನಿರಾಕರಿಸುತ್ತದೆ.  ಆಧ್ಯಾತ್ಮಿಕ ಅಥವಾ ಡೈಡಾಕ್ಟಿಕ್ ಅನ್ನಿಸಿಕೊಳ್ಳುವ ಕಾವ್ಯದಲ್ಲಿ ಅತ್ಯಂತಿಕ ಅನ್ನಿಸಿಕೊಳ್ಳುವಂತದ್ದು ಇರತ್ತದೆ.  ಆ ಬಗೆಯ ಕೊನೆಮುಟ್ಟುವ ಆತುರವನ್ನು ಹೇಮಾ ಅವರ ಕಾವ್ಯ ತೋರುವುದಿಲ್ಲ.  ನಿರ್ಬಯಲು, ಬಯಲು, ಬೆತ್ತಲೆ - ಎಂಬ ಶಬ್ದಗಳನ್ನು ಅವರು ತಮ್ಮ ಕಾವ್ಯದಲ್ಲಿ ಆಗ್ಗಿಂದಾಗ್ಗೆ ಬಳಸಿದ್ದಾರೆ.  ಆದರೆ ಅವು ಪೂರ್ಣ ಸ್ವರೂಪದಲ್ಲಿ ಆಧ್ಯಾತ್ಮಿಕ ಆಶಯಗಳನ್ನು ಹೊಮ್ಮಿಸುವಂತೆ ಕಾಣುವುದಿಲ್ಲ.

ಇನ್ನೊಂದು ಬಗೆಯ ಹುಡುಕಾಟದ ಹಾದಿಯನ್ನು ಅವರ ಕಾವ್ಯ ಹುಡುಕುತ್ತಿದೆ:

ನಾನಾ ಎಂದು
ನನಗಿರುವ ಹಸಿರು
ನಾನಾ ಬಗೆ,
ಇದಕೆ ಸಮುದ್ರ ತೃಷೆ ನೆಲದೂಟ
ಆಕಾಶದತಿ ವ್ಯಂಜನ ಮೆಲ್ಲಬೇಕೆನ್ನುವ
                   (ಹಸಿವು: ಕಣ್ಣುಗಳಲ್ಲಿ ಕನಸು ತುಂಬಿ).

`ನಾನು' ಎನ್ನುವ ಸ್ವರೂಪ ದಿನದಿನಕ್ಕು ಬದಲಾಗುತ್ತ ಇರುವಂತಹದ್ದು.  ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣವಿರುವುದಿಲ್ಲ.  ಈ ಬದಲಾವಣೆ ಅಸ್ತಿತ್ವದ ಸೂಕ್ಷ್ಮಸ್ಥಿತಿಯನ್ನು ಸೂಚಿಸುತ್ತಿರುತ್ತದೆ.  ಬದಲಾಗುತ್ತಿರುವ ಸ್ಥಿತಿಗಳ ಸ್ವರೂಪ ಅರಿಯುವ ಪ್ರಯತ್ನ ಮತ್ತು ಅದನ್ನು ಅರಿಯುವ ಶೋಧದಲ್ಲಿ ತೊಡಗುವುದರಿಂದಲೇ ಹೇಮಾ ಅವರ ಕಾವ್ಯ ಪ್ರಶ್ನಾವಳಿಗಳನ್ನು ಹಾಕಿಕೊಳ್ಳುವ ವಿನ್ಯಾಸ ರೂಪಿಸಿಕೊಂಡಿದೆಯೇನೋ.  ನಿತ್ಯ ನೋಯುವ, ಸಾಯುವ, ರಗಳೆಗಳಲ್ಲಿ ಮುಳುಗಿರುವ ಲೋಗರ ಬದುಕಿನ ಅಣು ಕ್ಷಣದ ಸವಾಲಿನ ಪ್ರಶ್ನೆಗಳನ್ನು ಇಲ್ಲಿ ಅವರು ಕಾಣಲು ಬಯಸುತ್ತಾರೆ:

ಹೆಸರಾಗಿ ಹೆಸರಿನಲಿ ಕಳೆದು
ಹೋದಾಗ ಬಯಸಿದ್ದು ಬಂದಾಗ
ಗಳಿಕೆಯೇ ಕಳಯುವಿಕೆಯಾಗಿ
ಎಲ್ಲಿರುವೆ ಏನಾದ
ಬರಿ ತಾಯಿ-
ಪಳೆಯುಳಿಕೆ?
              (ತಲ್ಲಣ: ಉಸಿರ ಬದುವಿನ ಗುಂಟ)

ಹೇಮಾ ಈ ನಿತ್ಯದ ಬದುಕನ್ನು ಅನುಭವಿಸುವ ತಹತಹದಲ್ಲಿರುವ ಲಕ್ಷಣ ತೋರಿದರೂ, ಅದರಲ್ಲಿ ಉತ್ಸಾಹದ ಮೇರೆ ಮೀರುವ ಗುಣವಿಲ್ಲ.  ಆದರೆ ಅವರು ತಮ್ಮಿಂತಾವೆ ಹೇಳಿಕೊಳ್ಳುವಂತೆ ಬರುವ ಸಾಲುಗಳು ತಾನಾಗಿಯೇ ಹುಡುಕಾಟದ ದಾರಿಗೆ ಹೊರಳುವಂತಿವೆ.  ಈ ಸಾಲುಗಳನ್ನು ಗಮನಿಸಬೇಕು:

ನನಗೆ ಬೇಕಾದದ್ದು ಅಲ್ಲ ಕನಸಿನ ಲೋಕ
............................
ನನಗೆ ಭಾವದ ಸತ್ಯ ನಿತ್ಯ ಉಸಿರಿನ ಜೊತೆಗೆ
ಬದುಕಾಗಬೇಕು
               (ಆಯ್ಕೆ: ವಿರಹೋತ್ಸವ)

ಅವರ `ಉಸಿರ ಬದುವಿನ ಗುಂಟ ಸಂಕಲನದಲ್ಲಿ ಅವರು ಅಕ್ಕಮಹಾದೇವಿಯನ್ನು ತಡವಿಕೊಳ್ಳುತ್ತಾರೆ.  ಅನುಭಾವದ ಅಶಯ ಹುಟ್ಟಿಸಿದ ಹೆಣ್ಣಾಗಿ ಪುರುಷ ಪ್ರಧಾನ ಸಮಾಜದಲ್ಲಿ ಮನ್ನಣೆ ಪಡೆದ ಅಕ್ಕ, ಕವಯಿತ್ರಿಯರಿಗೆ ಮನೆ ಬಿಟ್ಟು ಹೋಗುವ, ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಕಾರಣಕ್ಕಾಗಿ ಅವರ ಪ್ರೀತಿ ಗಳಿಸಿದ್ದಾಳೆ.  ಆದರೆ ಹೇಮಾ ಪದ್ಯ ಪ್ರಾರಂಭವಾಗುವುದು ಹೀಗೆ:

ಈ ಬದುಕು ಈಗಲೂ ಗಹನ
ಕದಳೀವನ - ಎಂದು.

ಕದಳೀವನದ ಅನುಭಾವದ ಹೊಂದಿಕೆಗಳನ್ನು ಬದಿಗೆ ಸರಿಸುತ್ತಾ ಹೋಗಿ, ಬಾಳೇ ಬಾಳೇವು ಎಂಬ ಪದಗಳಲ್ಲಿ ಆಟವಾಡುತ್ತಾರೆ.  ಆದರೆ ಅಕ್ಕ ದಾಟಿ, ಮುಟ್ಟಿದ ಕದಳೀವನದ ಬಗ್ಗೆ ಲಕ್ಷ್ಯ ಇಲ್ಲಿ ಕವಯಿತ್ರಿಗಿಲ್ಲ.  ಅವರು ಅಕ್ಕನಿಗೆ ಕೇಳುವುದು ಇಷ್ಟು:

ಬೆಳೆಯಬಹುದಿತ್ತು ಇದೇ ಈ ಕದಳಿಯಲಿ
ಪ್ರತಿ ಉಸಿರ ಬದುವಿನ ಗುಂಟ ಬದುಕ ಬಾಳೆ
....................
ಇಹದ ಗಂಡನ ಕೂಡಿ, ಬದುಕಿ
ಎಲ್ಲ ಬ್ರಹ್ಮಾಂಡಗಳ ತದಕಿ
ಉಳಿಸಿ ನಿನ್ನದೇ ಅಸ್ಮಿತೆ
ಇಲ್ಲಿ ವಿಜೃಂಭಿಸಿದ ತರ್ಕಾತೀತ ಪ್ರಶ್ನೆ ಸವಾಲು
ದಿವ್ಯದಿಬ್ಬಗಳನ್ನು ನೀನೆದುರಿಸಿದ್ದರೆ....

-ಎನ್ನುತ್ತಾರೆ.  `ಇಲ್ಲಿ ಬದುಕುವುದೇ ಪ್ರಶ್ನೆ' ಎನ್ನುವ ಹೇಮಾ, ವಸ್ತುಸಹಜ ಬದುಕಿನ ವ್ಯಮೋಹ, ತಲ್ಲಣಗಳು ಮುಖ್ಯವಾಗುವುದನ್ನು ತಮ್ಮ ಕಾವ್ಯದಲ್ಲಿ ತಂದುಕೊಳ್ಳುತ್ತಾರೆ.

ಹೇಮಾ ಅವರು ಬಳಸುವ `ನಾನು' ಎನ್ನುವುದನ್ನು `ಬಯಲು' ಪದದ ಜೊತೆ ಇಟ್ಟು ನೋಡಬೇಕು ಅನ್ನಿಸುತ್ತದೆ.  ನಾನು ಎನ್ನುವುದು ಆವರಣಗಳಿಂದ ಆವರಿಸಿಕೊಂಡಿದೆ.  ಅದನ್ನು ಬಿಡಿಸಿಕೊಂಡು ಸಹಜತೆಯತ್ತ ತಿರುಗುವ ಮನಸ್ಸು ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ.  ಕದಳೀವನದ ಪರಿಭಾಷೆಯಲ್ಲಿ ವಿವರಿಸಬಹುದಾದರೆ ಹೇಮಾ ಅವರ ನಾನು ಎಂಬ ಸ್ವರೂಪ ಬದಲಾಗುವುದನ್ನೆ ಗುರುತಿಸಬಹುದು.  ಬಾಳೆಗಿಡ ಒಂದು ಕಂದನ್ನು ಹಾಕಿದೊಡನೆ ಸಾಯುತ್ತದೆ.  ಹೀಗೆ ವ್ಯಕ್ತಿತ್ವಗಳು, ಸಾಮಾಜಿಕ ಚಹರೆಗಳು ಬದಲಾಗಬೇಕೆಂದರೆ ಒಂದು ಸತ್ತೆ ಇನ್ನೊಂದಕ್ಕೆ ಅಸ್ತಿತ್ವ ಸಿಗುವಂತದ್ದು.  ಈ ಬದಲಾಗುವ, ನಿರಂತರತೆಯನ್ನೆ ಹೇಮಾ ತಮ್ಮ ಕಾವ್ಯಜೀವನದಲ್ಲಿ ಕಂಡಕೊಳ್ಳಬಯಸುವುದು.

ಹೇಮಾ ಪಟ್ಟಣಶೆಟ್ಟಿಯವರ ಕಾವ್ಯದಲ್ಲಿ ಆಗಿದ್ದಾಂಗೆ ಪ್ರಸ್ತಾಪಿಸಲ್ಪಡುವುದು ಮಗು ಮತ್ತು ಕನಸು.  ಈ ಸಾಲು ನೋಡಿ;

ನನ್ನ ಸಂತಯಿಸುವ ಮಕ್ಕಳು ಕವನಗಳು
                (ಸಂಕರ:  ವಿರಹೋತ್ಸವ).

ಮೊದಲ ಸಂಕಲನದಲ್ಲೇ ಇಂತಹ ಸಾಲುಗಳನ್ನು ಬರೆಯುವ ಹೇಮಾ ಈ ತನಕ ಅದನ್ನು ಉಳಿಸಿಕೊಂಡೇ ಬಂದಿದ್ದಾರೆ.

ನಮಗಾಗಿ ಬರುತ್ತದೆ
ನನ್ನ ಮುಗ್ಧ ಮಗುವಿನ ಹಾಗೆ
..................
ಒಂದು ಚಣ
ತುಟಿಯಂಲಚಿ ನಕ್ಕು!  ಮಗನನ್ನು ಎತ್ತಿಕೊಳ್ಳುತ್ತೇನೆ
               (ಯುಗಾದಿಗೊಂದು ಕನ್ನಡಿ:  ಕಣ್ಣುಗಳಲ್ಲಿ ಕನಸುತುಂಬಿ)

ಈ ಮಗು ಸಹಜ ಮುಗ್ಧತೆ ಅವರು ಬಯಸುವ ಭಾವ. ನಿರ್ಮಲವಾದ ಸಹಜತೆಯ ಸ್ವರೂಪದಲ್ಲಿ ಬರುವ ಮಗು ಅವರು ಸೇರಬಯಸುವ ಗುರಿ.  ಏನಾದೆ, ಏನಾದೆ ಎಂದು ಕೇಳಿಕೊಳ್ಳುತ್ತ ಮಗುವಿನ ಸೂಚನೆಗಳನ್ನು ಕೊಡುವಾಗ ಸ್ಥಿತಿಗೆ ಹಿಂದಿರುಗುವ ಬಯಕೆಯನ್ನು ಕಾಣಬಹುದು.  ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದಾದರೆ ಜೀವನ್ಮುಖಿ ಧೋರಣೆಯನ್ನೆ ಹೇಳುತ್ತದೆ.  ಒಂದಿಲ್ಲೊಂದು ಕಾರಣದಿಂದ ಅವರ ಕವಿತಗೆಳಲ್ಲಿ ಬದುಕಿನ ಪ್ರೇಮವು ಮೇಲುಗೈ ಪಡೆಯುತ್ತದೆ ಎನ್ನುವುದನ್ನು ಅವರ `ಗೆಳತಿ ಡಯಾನಾಗೆ' ಪದ್ಯ ವಿವರಿಸುತ್ತದೆ.

ಪ್ರಕೃತಿ ಹೇಮಾ ಕವನಗಳಲ್ಲಿ ಕಾಣಿಸಿಕೊಳ್ಳುವ ಮಹತ್ವ ಅಂಶ.  ಪ್ರಕೃತಿಯನ್ನು ವರ್ಣಿಸುವ ಧಾವಂತದಲ್ಲಿ ಹೇಮಾ ಪ್ರಕೃತಿಯನ್ನು ವಿವರಗಳನ್ನು ಬಯಸುವುದಿಲ್ಲ.  ಬದಲಾಗಿ, ಪ್ರಕೃತಿಯ ಸದಾ ಬದಲಾಗುವ ಸ್ವರೂಪಗಳೆ ಅವರ `ನಾನು' ಶೋಧದ ಭಾಗವಾಗಿದೆ.  ಪ್ರಕೃತಿ ಎನ್ನುವುದು ಮತ್ತೆ ಅಕ್ಕಮಹಾದೇವಿಯಲ್ಲಿ ಆಪ್ತವಾಗಿ ಒದಗುವಂತೆ ಹೇಮಾ ಅವರಿಗೆ ಕಾಣುವುದಿಲ್ಲ.  ಅದು ಅವರಿಗೆ ಅವರ ಸುತ್ತ ಇರುವ ವಾಸ್ತವ.  ಅದನ್ನು ಹುಡುಕಿ ಹೊರಡುವ ಚೈತನ್ಯವನ್ನಾಗಿ ಅವರು ನೋಡುವುದಿಲ್ಲ.

ಪ್ರಕೃತಿಯನ್ನು ಕವನಗಳಲ್ಲಿ ತರುವುದನ್ನೇ ಹೇಮಾ ಕಾಯಕ ಮಾಡಿಕೊಳ್ಳುವುದಿಲ್ಲ.  ಹಾಪ್‌ಕಿನ್ಸ್ ಕವಿ ಪ್ರಕೃತಿಯಲ್ಲಿನ ಅಂಶ ನಮ್ಮೊಳಗು ಚಾರ್ಜ್ ಆಗುವ ಬಗ್ಗೆ ಬರೆಯುತ್ತಾನೆ.  ಈ ಸಾವಯವ ಸ್ಪಂದನದ, ಆಗುವಿಕೆಯ ಕ್ರಿಯೆಯ ಮಧ್ಯೆ ಹೇಮಾ ಓಡಾಡಲು ಬಯಸುತ್ತಾರೆ.  ಈ ಅಂತಃಸತ್ವ ಹೆಣ್ಣಿನ ಕ್ರಿಯಾಶೀಲ ಚೇತನದ ಇನ್ನೊಂದು ಸ್ವರೂಪ.  ಅದನ್ನು ಹೇಮಾ ಹಿಡಿಯಲು ಬಯಸಿದಂತಿದೆ.

ಇನ್ನು ಹೇಮಾ ಅವರ ಆಶಯಗಳಿಗೆ ವಿರುದ್ಧವಾದ ಪದ್ಯಗಳೂ ಅವರ ಸಂಕಲನದಲ್ಲಿ ಸೇರಿಕೊಂಡಿವೆ!  ಅವು ನಾನು ಆಗಲೇ ವಿವರಿಸಿದಂತೆ ಕರೆಕ್ಟ್‌ನೆಸ್ ಅನ್ನು ಸಾಧಿಸ ಬಯಸುವ ಕವನಗಳು.  ಅವುಗಳನ್ನು ಹೇಮಾ ಭಾವಿಸಿ ಬರೆಯುವಂತೆ ಕಾಣುವುದಿಲ್ಲ.  ಹಾಗಾಗಿ ಅಂತಹ ಪದ್ಯಗಳು ಅವರ ಆಶಯಗಳಿಗೆ ಹೊರತಾಗಿಯೇ ನಿಲ್ಲುತ್ತವೆ.  ಜೊತೆಗೆ, ಕೆಲವೆಡೆ ಮಧ್ಯಮವರ್ಗದ ನಿಶ್ಚಿತತೆ ಅವರನ್ನು ಬಾಧಿಸದಂತೆ ಕಾಣುತ್ತದೆ.  ದೇಶಭಕ್ತಿಯ ಕವನಗಳು, ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಲು, ತೊಡಗುವ ಅರಿವು - ಇವು ಆ ವರ್ಗದ ಹೊಸ ಅರಿವಿನ ಪ್ರಕಟ ರೂಪವಾಗಿ ಕಾಣುತ್ತದೆ.  `ಸ್ವಯಂ ಸಿದ್ಧಳಾಗುವುದನ್ನು ಕಲಿಯುತ್ತೇನೆ' ಎನ್ನುವ, `ಹತ್ತರಲಿ ಹನ್ನೊಂದಾಗಿ ಬಾಳಲೊಲ್ಲೆ', ಎನ್ನುವ ಹೇಮಾ ಈ ಜಾಡಿನಲ್ಲಿ ಸಾಗುವುದು ಸ್ವಲ್ಪ ನಿರಾಶೆಯನ್ನೇ ಉಂಟುಮಾಡುತ್ತದೆ.  ನಿತ್ಯ ಉಸಿರಾಟದ ಸಹಜ ಲಯ ಅಂದುಕೊಳ್ಳದೆ, ಅದರ ಬದುವಿನಗುಂಟ ಸಾಗಬಯಸುವ ಸಹಜ ಬದುಕಿನ ಆಶಯದ ಕವಯಿತ್ರಿ ತಮ್ಮ ಹುಡುಕಾಟದ ದಾರಿಗಳನ್ನು ಇನ್ನಷ್ಟು ಆಳಕ್ಕೆ, ಅರಿವಿನ ವಿಸ್ತಾರದಿಂದ ಪಡೆದುಕೊಳ್ಳಲಿ ಎಂದು ಹಾರೈಸುವುದು ಕನ್ನಡ ಕವಯಿತ್ರಿಯರ ಬಗ್ಗೆ ಆಶಾವಾದಿಯಾದ ನನ್ನಂತವರಿಗೆ ಉಳಿದ ಆಯ್ಕೆ.
                               *****

ಕೀಲಿಕರಣ: ಕಿಶೋರ್‍ ಚಂದ್ರ

ಸ್ನೇಹ ಮಾಡಬೇಕಿಂಥವಳಾ

-ಶಿಶುನಾಳ ಶರೀಫ್

ಸ್ನೇಹ ಮಾಡಬೇಕಿಂಥವಳಾ
ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳಾ  ||ಪ||

ಚಂದ್ರಗಾವಿ ಶೀರಿನುಟ್ಟು
ದಿವ್ಯಕೊಮ್ಮೆ ಪಾರಿಜ ಮಗ್ಗಿ ಕುಬ್ಬಸತೊಟ್ಟು
ಬಂದಳು ಮಂದಿರ ಬಿಟ್ಟು
ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು      ||೧||

ಆರಗಿಳಿ ಸಮ ನುಡಿಯು
ಚಲ್ವಸುಳಿನಾಬಿ ಕುಚ ಕುಂಭಗಳ ಹಂಸ ನುಡಿಯು
ಥಳಿಥಳಿಸುವ ತೋಳ್ತೊಡೆಯು
ಒಳ್ಳೆ ಬಳಬಳಕುವ ನಡುವಿನ ತಳಿರಡಿಯು           ||೨||

ಕುಸುಮಲೋಚನೆಯಳ ನೋಡಿ
ಕಾಮ ವಿಷಯ ಸುರತಸುಖ ದಯದಿಂದ ಬೇಡಿ
ವಿನಯ ವಚನದಿ ಮಾತಾಡಿ
ದೇವ ಶಿಶುನಾಳಧೀಶನ ದಯದಿಂದ ಕೂಡಿ          ||೩||
                   *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಭಾವಯಾನ

-ಕವೀಶ್ ಶೃಂಗೇರಿ

ಪ್ರೀತಿಯ ಮಾತು...
ಲವ್ವಲ್ ಹಿಂಗೇನೆ...
ಪ್ರೇಮವೆಂದರೆ ಹೇಳಲು ಬಯಸಿ, ಹೇಳಲು ಆಗದ ಮಧುರ ಭಾವನೆ... ಮಧುರ ಯೋಚನೆ... ಅರ್ಪಣೆ... ಸಮರ್ಪಣೆಯ ಸೂಚನೆ. L..o..v..e.. ಎಂಬುದು A to Z ಕನಸುಗಳ ಸಾಗರವೇ ಆಗಿದೆ.

ನನಗೆ ಬರುತ್ತಿರುವ ಓದುಗರ ಹಾಗೂ ಸ್ನೇಹಿತರ ದೂರವಾಣಿ ಕರೆಗಳಲ್ಲಿ ಕೇಳುವ ಪ್ರಶ್ನೇ ಒಂದೇ...! “ನೀವ್ ಯಾಕೆ ಪ್ರೀತಿ ಬಗ್ಗೆನೇ ಬರೀತೀರಾ ? ಬೇರೆನೂ ಗೊತ್ತಿಲ್ವ...” ಎಂದು. ಅದಕ್ಕೆ ನನ್ನಿಂದ ಬಂದ ಉತ್ತರ “ಪ್ರೀತಿ ನಿರಂತರ - Love is eternal”. ಪ್ರತಿ ದಿನ, ಪ್ರತಿ ಕ್ಷಣ ಪ್ರೀತಿನ ಬಿಟ್ಟು ಈ ಬದುಕಿಲ್ಲಾ. ಈ ಪ್ರಪಂಚದ ಸೃಷ್ಟಿಯ ಉಸಿರಾಟನೇ ಪ್ರೀತಿ. ಮೊಗ್ಗು ಹೂವಾಗೋದು - ಹೂ ಕಂಪನ್ನು ಸೂಸುವುದು - ಹೂ ದುಂಬಿಯ ಸೆಳೆಯುವುದು - ಹಸು ಕರುವಿಗೆ ಹಾಲುಣಿಸುವುದು - ಚಿಗುರು - ಇಬ್ಬನಿ - ಹಸಿರು - ಗಾಳಿ ಎಲ್ಲವೂ ಪ್ರೀತಿನಾ ಅವಲಂಬಿಸಿ ಬದುಕುತ್ತಿರುವುದು. ಇವೆಲ್ಲದರ ಉಸಿರಾಟನೇ ಪ್ರೀತಿ... So, Love is one of the part of our life.

| ಯುಗ ಯುಗಗಳು ಕಳೆದರೂ |
| ಹಲವು ಜನುಮ ಕಳೆದರೂ
| ಓದಿ ಮುಗಿಸದ ಗ್ರಂಥ ಪ್ರೇಮ |
| ಹಾಡಿ ಮುಗಿಸದ ಗೀತೆ ಪ್ರೇಮ |
| ಎಂದೂ ಮುಗಿಯದ ಪಯಣ ಒಂದು ಗೂಡುವ ತಾಣ ಪ್ರೀತಿ ||

ಹದಿನಾರು ವರ್ಷ ಕಾದುನಿಂತು, ಹದಿನೇಳಕ್ಕೆ ಹೇಳಿ ಬಿಡಬೇಕು ಎಂದುಕೊಳ್ಳುವ ಈ ಪ್ರೀತಿ - ಅದನ್ನು ಎಂದಿಗೂ ಹೇಳಲು ಆಗದೇ, ಅದು ಎಲ್ಲಿ ಹುಟ್ಟಿತೋ- ಅಲ್ಲೇ ಆ ಪ್ರೀತಿ ಕೊರಗಿ ಸಾಯುವ ಸ್ಥಿತಿಯನ್ನು, ನಾನು ಕೆಲವರಲ್ಲಿ ನೋಡಿದ್ದೇನೆ. ಆಗ ಒಳಗೊಳಗೆ ಅಳುವುದು ಆ ಪಾಪಿ ಹೃದಯ..! ಇನ್ನೂ ಕೆಲವು ವ್ಯಕ್ತಿಗಳು ಏನಾದರೂ ಸಾಹಸ ಮಾಡಿ ಇಷ್ಟ ಪಟ್ಟ ಪ್ರೀತಿಯನ್ನು ಪಡೆದುಕೊಳ್ಳಲು ಹೋಗಿ ಯಾವುದಾದರು ಎಡವಟ್ಟುಮಾಡಿಕೊಂಡು ಎಲ್ಲರ ಕಣ್ಣಲ್ಲು ನೀರು ಹಾಕಿಸಿ ಬಿಡುತ್ತಾರೆ. ಪ್ರೀತಿ ಎನ್ನುವ ಈ ಎರಡು ಅಕ್ಷರ ಕೇಳೋಕೆ ಮುದ್ದಾಗಿದ್ದರೂ, ಮುಗ್ಧ ಮನಸ್ಸುಗಳನ್ನು ತನ್ನಿಷ್ಟದಂತೆ ಆಳಿ, ಅಳುವವರೆಗೂ ಬಿಡುವುದಿಲ್ಲ. ನಂತರ ಇದಕ್ಕೆಲ್ಲಾ ಕಾರಣಕೊಟ್ಟು ದೂರುವುದು ವಿಧಿ ಹಣೆಬರಹವನ್ನಾ...

ಹ್ಞೂಂ ॒ಜಗತ್ತೇ ಬೆರಗಾಗುವ ಹಾಗೆ.., ಈ ಕಾಲನೇ ತಿರುಗಿ ನೋಡುವ ಹಾಗೆ, ಇತಿಹಾಸ ಆಗಿ ಹೋಗಿರೊ ಪ್ರೇಮಿಗಳ ಕಥೆ, ಕಣ್ಣಲ್ಲಿ ನೀರೂರಿಸಿದ್ದರು - ಅದೆವು ಸತ್ಯ, ಇಂದಿಗೂ ಜೀವಂತವೇ ॒ಈ ಪ್ರೀತಿನೇ ಹಾಗೆ, ಬೇಡ ಬೇಡ ಅಂತಾನೆ ಪ್ರೀತಿಯ ಅಮೃತ ಸವಿಯುತ್ತೀವಿ, ಆಮೇಲೆ ಬೇಕು ಅಂದರೂ ಬಾರದ ಸಾವನ್ನು ಬೈದುಕೊಂಡು ಸುಮ್ಮನಾಗುವ ಪರಿಯೇ ಹೀಗೆ ॒
ಒಂಥರಾ ಹಿತಕರ ಮಿಡಿತ... ಯಾರು ತಡೆಯದ ತುಡಿತ... ಏನೇನೋ ಹುಡುಕುವ ತವಕ... ಮೈಮನಗಳ ಈ ಪುಳಕ, ಅನುಭವಕ್ಕೆ ಮಾತ್ರ ನಿಲುಕುವ ಕೋಮಲ ಕಲ್ಪನೆ. ಈ ಪ್ರೀತಿಲೀ ಮಾಡಿದ್ದೆಲ್ಲವೂ ಸರಿಯೇ ಅನಿಸುವಷ್ಟು ಭ್ರಮೆಯ ಲೋಕಕ್ಕೆ ನಮ್ಮನ್ನು ಕರೆದೊಯ್ದು, ಆ ಭ್ರಮೆಯ ದಾರಿಯಲ್ಲೇ ಕೊಂಚ ಸಾಗುತ್ತಿರುವಾಗ ಆ ದಾರಿಯು ಬಂದು ಸೇರುವ ತಾಣವೇ ವಾಸ್ತವದ ಪ್ರಪಂಚ.

ಮನಸ್ಸುಗಳ ಮಂಥನ ಮಿಲನದ ಚಿಂತನ ಹೃದಯದ ಸ್ಪಂದನ॒ ಬಿಡಿಸದ ಬಂಧನ ಈ ಪ್ರೇಮ. ಈ ಪ್ರೀತಿಯ ಬಗ್ಗೆ ಬರೆಯುವುದಕ್ಕೂ ಚಂದ... ಓದುವುದಕ್ಕೂ ಚಂದ... ಹಾಡುವುದಕ್ಕೂ ಚಂದ... ಒಬ್ಬರ ಹೆಸರನ್ನು ಮತ್ತೊಬ್ಬರ ಹೆಸರಿಗೆ ಸೇರಿಸಿ ಅಂಗೈಯಲ್ಲಿ ಬರೆಯೋದು ಚಂದ. ಇಲ್ಲಿ ಒಬ್ಬರನ್ನೊಬ್ಬರು ಕದ್ದು ನೋಡುವ ಪರಿಯಂತು ಅಂದವೋ ಆನಂದ. ಒಂದಿಷ್ಟು ಹುಸಿಮುನಿಸುಗಳು ಮತ್ತಷ್ಟು ಹೊಂಗನಸುಗಳು ಇವೆಲ್ಲವು ಪ್ರೀತಿಯ ಭಾವನೆಗಳ ಬಲೆಯ ಒಂದು ಸುಂದರ ಪ್ರಪಂಚ. ಆದರೆ ಆ ಭಾವನೆಯೆಂಬ ಬಲೆಯಿಂದ ಈಚೆಗೆ ಮತ್ತೆ ಬರುವುದು ಕಷ್ಟ ಸಾಧ್ಯ.

ವಯಸ್ಸು ಇದು ಹಾಗೇನೆ, ಇದರ ವರಸೆಗೆ ಪ್ರತಿಯೊಬ್ಬರೂ ಸೋಲುತ್ತಾರೆ. ಒಮ್ಮೆ ಪ್ರೇಮಿ ಪ್ರೀತಿಯಲ್ಲಿ ಬಿದ್ದರೆ ‘ಸಪ್ತಸಾಗರ ದಾಟು’ ಎಂದರೂ ದಾಟುತ್ತಾನೆ ಅಂತ ಕವಿಗಳೇ ನುಡಿದಿದ್ದಾರೆ. ಏನೇ ಆದರೂ ಮನಸ್ಸಲ್ಲಿ ಮೂಡಿದ ಭಾವನೆ ಮಾತಾಗಿ ತುಟಿ ಮೇಲೆ ಬಂದು ನಿಂತಾಗ, ನಾಲಿಗೆಯ ಸಪೋರ್ಟ್ ತಗೊಂಡು “ನೀನಂದ್ರೇ ನನಗೆ ಇಷ್ಟ” ಅಂತ ಹೇಳೋದು ಪ್ರೀತಿಯ ಒಂದು ರೀತಿ...

ಮೊದಲನೇ ಬಾರಿಗೆ ಒಂದು ಹುಡುಗಿ ಫೋನ್ ಮಾಡಿ ‘I Love You’ ಎಂದಾಗ ಆಗುವ ಭಯ..! ಆ ನಡುಕ..! ಒಂದು ವಾರವಾದರೂ ಸುಧಾರಿಸಿಕೊಳ್ಳುವುದು ಕಷ್ಟವೇ ಬಿಡಿ. ನಂತರ ಅವರ ‘I Love You’ ಎಂದಿದಕ್ಕೆ ನಾವು ಉತ್ತರಿಸುವುದೋ... ಅಥವಾ ಬುದ್ಧಿ ಹೇಳುವುದೋ... ಅಥವಾ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವುದೋ... ಅಪ್ಪಿಕೊಳ್ಳುವುದೋ ತಿಳಿಯದೇ ಫೋನ್ ಕಟ್ ಮಾಡುವ ಪರಿಯಂತೊ ಒಂಥರಾ ಬಲವಂತದ ಆತ್ಯಾಚಾರವೇ.

ಚೊಚ್ಚಲ ಪ್ರೇಮದ ಬೆಚ್ಚನೆಯ ಭಾವವು ಎದೆಗೆ ಇಡುವ ಕಚಗುಳಿಯೇ ಹೀಗೆ. ಒಂದ್ಸರಿ ನೋಡ್ಬೇಕು ಮತ್ತೆ ನೋಡ್ಬೇಕು ಮತ್ತೆ ಮತ್ತೆ ಪ್ರೇಯಸಿನ ಮಾತಾಡಿಸಬೇಕು ಅನ್ಸೋದೇ ಚೊಚ್ಚಲ ಪ್ರೇಮಿಯ ಬಯಕೆ. ಈ ಪ್ರೀತಿಯಲ್ಲಿ Jealousy , ನನ್ಗೆ ಬೇಕು ಅನ್ನೋ Possessiveness - ಎಲ್ಲಾನೂ ಇದೆ. ಎಲ್ಲವನ್ನೂ ಸೆಳೆಯುವುದು - ಎಲ್ಲರನ್ನೂ ಗೆಲ್ಲುವುದು ಈ ಪ್ರೀತಿಯ ಹಣೆಬರಹ. ಆದರೆ ಇಲ್ಲಿ ಪ್ರೀತಿಸೋ ಹೊರಟ ಪ್ರೇಮಿಗಳಲ್ಲಿ ಕೆಲವರು ಗೆಲ್ಲುತ್ತಾರೆ ಇನ್ನೂ ಕೆಲವರು ಯಾಮಾರುತ್ತಾರೆ.

ಇಲ್ಲಿ ಪ್ರೀತಿಸುವ ಪ್ರೇಮಿಗಳು ಅದೆಷ್ಟೋ ಜನ, ಕೆಲವರು ಪ್ರಮಾಣಿಕವಾಗಿ, ಕೆಲವರು ಕಾಟಾಚಾರಕ್ಕೆ, ಕೆಲವರು ಕಷ್ಟವಾದರೂ ಪ್ರೀತಿನಾ ಇಷ್ಟ ಪಟ್ಟು ಪಡೆದುಕೊಳ್ಳುತ್ತಾರೆ. ಆದರೆ ಇಲ್ಲಿ ಶೇ.೧೦೦ಕ್ಕೆ ೧೦ ಜನ ಯಶಸ್ಸು ಕಾಣುತ್ತಾರೆ, ಉಳಿದವರ ಪ್ರೇಮಕಥೆಗಳಿಗೆ ಯಾರ್‍ಯಾರೋ ಅಂತ್ಯ ಬರೆಯುತ್ತಾರೆ. ಈ ಜಗತ್ತಿನಲ್ಲಿ ಒಳ್ಳೆಯ ಶಕ್ತಿ ಇದ್ದಷ್ಟೇ ಕೆಟ್ಟ ಶಕ್ತಿಗಳೂ ಇವೆ. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸುವುದನ್ನು ಕಲಿತರೆ “ಒಲವೇ ಜೀವನ ಸಾಕ್ಷಾತ್ಕಾರ ” .
“If you miss one issue of my Bhavayaana
You will lose lots of feelings in your life Bhavayaana”
                                                                       - Kavish Sringeri

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

-ಶಿಶುನಾಳ ಶರೀಫ್

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ                        ||ಪ||

ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು
ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ               ||ಅ.ಪ.||

ಅಡಗಿಮಾಡುವ ಲಕ್ಷ್ಯ ಆಗಿತ್ತು
ಅದರೊಳಗೆ ಇವರು ನೀರಿಗಂದರೆ ನಿಲ್ಲದೆ ಹೋಗುವರು
ಕಲ್ಲಭಾವಿ ಮೆಲ್ಲನೇರಿ ಬಂದು ಹತ್ತಿ ನಿಂತು
ನಾಲ್ವರಿದ್ದ ಠಾವಿನಲ್ಲಿ ನಲಿದು ನಲಿದು ನುಡಿಯುತಿದ್ದರು                        ||೧||

ವಿಟಕರಿದ್ದಲಿ ಚಟದಿ ನೋಡುವಳು ಸಲಿಹಲ್ಲು ಇವಳು
ಹುಬ್ಬು ಕಾಮನಬಿಲ್ಲು ತುಟಿಯವಳು
ರಬ್ಬಿಲೊಂದು ಸೀರೆನುಟ್ಟು ಹುಬ್ಬು ಹಾರಿಸಿ ಮಬ್ಬುಗವಿಸಿ
ಆರಿಯದವರಿಗೆ ಆಳತೆ ಕಲಿಸುವ ಹಿರಿಯ ಹಾದರ ಮರಿಯ ಹೌದಿದು      ||೨||

ಕುಟಿಲಕುಂತಳೆ ನಿಟಿಲನೇತ್ರದಲಿ
ಇವಳಾಟ ನೋಡಿ ದಾಟಲಾರರು ವಿಪಿನದೊಳಗಿನ ತಪದ ಋಷಿಗಳು
ಮುಖವ ನೋಡಿ ತಪವ ಬಿಟ್ಟು ಕಪವ ಇಲ್ಲದೆ ಕ್ಯಾರಿ ಉಗುಳಿ
ನೊಸಲೊಳುಪ್ಪುವ ಕುಚವ ನೋಡಿ ಕಾಸಿ ಕೈಪವ ಸಡಲತಿದ್ದವು            ||೩||

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ
ಜಲದಿಂದ ಕೊಡಗಳ ತುಂಬುತಿದ್ದರು ನಲಿದು
ಜಾರಿಬಿದ್ದು ಊರಿ ಎದ್ದು ಧೀರ ಶರೀಫರು ಸಾರುಸಾರುತ
ಊರ ಆಗಡಿಯ ಗ್ರಾಮದೊಳು ಚಾರುಚರಿತ್ತವ ಸಾರುಸಾರುತ            ||೪||
                 *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಸಖಿ ಬೆಣ್ಣೆಮಾರುವ ನೀನಾರೆ

-ಶಿಶುನಾಳ ಶರೀಫ್

ಸಖಿ ಬೆಣ್ಣೆಮಾರುವ ನೀನಾರೆ
ನಾನು ನಿಂತೇನಿ ಒದರಿ                           ||ಪ||

ಬೆಣ್ಣೆಮಾರುವ ಆರ್ಭಾಟದೊಳಗೆ
ನನ್ನ ಬಿಟ್ಟು ನೀ ವ್ಯಾಪಾರ ಮಾಡತಿ
ನಿಮ್ಮ ವ್ಯವಹಾರವು ಎನಗೆ ಸಾಕೆ
ನಾನು ನಿಂತೇನಿ ಓದರಿ                            ||೧||

ಎಳಗಂದಿನ ಎಮ್ಮೆ ಬೆಣ್ಣೀನ
ಏನ ತುಟ್ಟಿ ಮಾರತಿ ನೀನ
ಆಡಕಿಬೆಟ್ಟದಷ್ಟು ಬೆಣ್ಣೀನ ಹಚ್ಚಿ
ಸೇರು ಪಾವಿನಷ್ಟು ಕಾಣೀ ಕಟ್ಟಿ
ಎಡಗೈ ಮ್ಯಾಲ್ಮಾಡಿ ತೂಗುವ ನಾರಿ
ನಾನು ನಿಂತೇನಿ ಒದರಿ                           ||೨||

ನರಿಯಂತಾಳು ಬಂದಿತು ಬಿರಿ
ನಿಮ್ಮ ರೊಕ್ಕವ ನಾವು ತುಗೋಬಾರದಿತ್ತರಿ
ಶಿಶುನಾಳ ಸದರಿಗೆ ಕೈಮುಗಿದೇವರಿ
ಬಿಟ್ಟುಬಿಡರಿ ಕೈಸೆರಿ                                ||೩||
                  *****

ಕೀಲಿಕರಣ: ಎಮ್.ಎನ್.ಎಸ್.ರಾವ್

ತೂಗುತಿದೆ ನಿಜ ಬೈಲಲಿ ಜೋಕಾಲಿ

-ಶಿಶುನಾಳ ಶರೀಫ್

ತೂಗುತಿದೆ ನಿಜ ಬೈಲಲಿ
ಜೋಕಾಲಿ -ಜೋಲಿ- ಲಾಲಿ                                 ||ಪ||

ಸಾಂಬಲೋಕದ ಮಧ್ಯದಿ ಸವಿಗೊಂಡು
ಕಂಬ ಸೂತ್ರದ ಸಾಧ್ಯದಿ
ಆಂಬರದೊಳವತಾರ ತುಂಬಿ ತುಳುಕುವಂತೆ
ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ           ||೧||

ಪೊಡವಿಗಡಗಿರ್ದ ಜ್ಯೋತಿ
ಮೃಡನಿರ್ದು ತಾನಾಗಿ ಬಿಳಿಯ ಬತ್ತಿ
ಪೊಡವಿ ಆಕಾಶ ತಾನೇಕವಾಗಿ
ಒಡೆಯ ಕರ್ತುಕನ ಜೋಕಾಲಿ -ಜೋಲಿ- ಲಾಲಿ       ||೨||

ಹೊಳೆವ ಮಹಾಬೆಳಕಿನಲ್ಲಿ
ಕಳೆಯುಳ್ಳ ತಿಳಿನೀರ ತೊಟ್ಟಿಲಲ್ಲಿ
ಇಳೆಯೊಳು ಶಿಶುನಾಳಧೀಶನ ಮನದೊಳು
ಹೊಳೆವ ಕೈವಲ್ಯ ಜೋಕಾಲಿ -ಜೋಲಿ- ಲಾಲಿ       ||೩||
                     *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಕೋಲು ಕೋಲಿನ ಕೋಲು

- ಶಿಶುನಾಳ ಶರೀಫ್

ಕೋಲು ಕೋಲಿನ ಕೋಲು
ಮೇಲು ಮುತ್ತಿನ ಕೋಲು                    || ಪ ||

ಕಾಲಕರ್ಮವನು ತಿಳಿದು ವಿಲಾಸದಿ
ಬಾಲಕರಾಡುವ ಬಯಲು ಬ್ರಹ್ಮದ        || ಅ. ಪ. ||

ಗೌರಿಹುಣ್ಣಿವೆಯ ದಿನ ಶೌರಿ ಗೋಪಿಯರು
ಮೂರು ಹೆಜ್ಜೆಯ ಮೆಟ್ಟಿ ಸಾರುತ
ಹಾರುತ ಹರುಷದಿ ಸುವರ್ಣದ ಕೋಲು || ೧ ||

ನಾರಿಯರೆಲ್ಲ ಬಂದು
ಭಾರಿ ಪ್ರಣಮವ ನುಡಿದು ಭದ್ರ
ಕರಗಳ ಪಿಡಿದು ಶಿಶುನಾಳಧೀಶನ ಮುದ್ರಿಸುತ್ತಿನ ಕೋಲು || ೨ ||
                         *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಶ್ರೀಮಂತ ಬಡವರು

-ಅಬ್ಬಾಸ್ ಮೇಲಿನಮನಿ

ಆಗರ್ಭ ಶ್ರೀಮಂತರ ಮಗಳಾಕೆ.  ದಿನಾಲು ಶಾಲೆಗೆ ಕಾರಿನಲ್ಲಿ ಬಂದು ಹೋಗುವಳು.  ಅವಳ ಚೆಂದದ ಪಾದಗಳಿಗೆ ಒಮ್ಮೆಯೂ ಮಣ್ಣು ತಗುಲಿರಲಿಲ್ಲ.  ಮೈ ನೆಲದ ಸ್ಪರ್ಶ ಅನುಭವಿಸಿರಲಿಲ್ಲ.  ಅವಳಿಗೆ ಬೇಕೆನೆಸಿದ್ದೆಲ್ಲ ಕ್ಷಣ ಮಾತ್ರದಲ್ಲಿ ದಕ್ಕುತ್ತಿತ್ತು.  ಮಕಮಲ್ಲಿನ ಬಟ್ಟೆಯಂತಿತ್ತು ಅವಳ ಬದುಕು.

ಶಾಲೆಯಲ್ಲೂ ಅಷ್ಟೆ.  ಅವಳಿಗೆ ಸ್ಪೆಷಲ್ಲಾಗಿ ಅಸನದ ವ್ಯವಸ್ಥೆ.  ಎಲ್ಲರ ನಡವಳಿಕೆಗಳು ಅವಳಿಗೆ ಹಿತವೆನಿಸಿದ್ದವು.  ಗೊಂಬೆಯಂತೆ ಕಾಣುತ್ತಿದ್ದ ಅವಳನ್ನು ಸಹಪಾಟಿಗಳು ಅದ್ಭುತವೆನ್ನುವಂತೆ ನೋಡುತ್ತಿದ್ದರು, ಮಾತನಾಡಲು ತವಕಿಸುತ್ತಿದ್ದರು.

ಒಂದಿನ ಒಬ್ಬ ಅಧ್ಯಾಪಕರು "ನಮ್ಮ ದೇಶದ ಬಡವರು" ಎಂಬ ವಿಷಯ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು.  ಮರುದಿನ ಎಲ್ಲರ ಪ್ರಬಂಧಗಳು ಅಧ್ಯಾಪಕರ ಕೈ ಸೇರಿದ್ದವು.  ಎಲ್ಲ ವಿದ್ಯಾರ್ಥಿಗಳಿಗಿಂತ ಶ್ರೀಮಂತ ಹುಡುಗಿಯ ಪ್ರಬಂಧ ವಿಶೇಷವಾಗಿತ್ತು.

ಆಕೆ ಸುಂದರ ಅಕ್ಷರಗಳಲ್ಲಿ ನೀಟಾಗಿ ಬರೆದಿದ್ದಳು.

"ನಮ್ಮ ದೇಶದ ಬಡವರು ದೊಡ್ಡ ಬಂಗಲೆಗಳಲ್ಲಿ ವಾಸಿಸುವರು.  ಅವರು ಕಾರಿನಲ್ಲಿ ಓಡಾಡುವರು.  ಟಬ್‌ನಲ್ಲಿ ಸ್ನಾನ ಮಾಡುವರು.  ಡೈನಿಂಗ್ ಟೇಬಲ್ ಮೇಲೆ ಕುಳಿತು ಟಿಫಿನ್, ಊಟ ಮಾಡುವರು.  ಬ್ರೆಡ್ ಟೋಸ್ಟ್, ಬೆಣ್ಣೆ ದೋಸೆ, ಸಮೋಸಾ, ಪೇಡೆ, ಬರ್ಫಿ, ಗುಲಾಬ್ ಜಾಮೂನು ತಿನ್ನುವರು.  ಹೋಳಿಗೆ, ತುಪ್ಪ, ಚಪಾತಿ, ಚಿತ್ರಾನ್ನ ಕೆನೆ ಮೊಸರು ಊಟ ಮಾಡುವರು.  ಮುಂಜಾನೆ ಮತ್ತು ಸಂಜೆ ಗಟ್ಟಿಯಾದ ಹಾಲಿನ ಚಹ ಕುಡಿಯುವರು.  ಸೇಬು, ಬಾಳೆಹಣ್ಣು, ದಾಳಂಬರಿ, ಕಿತ್ತಳೆ, ಮೋಸಂಬಿ, ಮಾವಿನ ಹಣ್ಣು, ದ್ರಾಕ್ಷಿ ಹಣ್ಣು ತಿನ್ನುವರು.  ಬಿಸಲೇರಿ ನೀರು ಕುಡಿಯುವರು.  ಟಿ.ವಿ. ನೋಡುವರು, ಮೆತ್ತನೆಯ ಮಂಚದ ಮೇಲೆ ಸೊಳ್ಳೆಪರದೆ ಕಟ್ಟಿಕೊಂಡು ಮಲಗುವರು.  ನಸುಕಿನಲ್ಲೆದ್ದು ವಾಕಿಂಗ್ ಹೋಗುವರು, ಜಾಗಿಂಗ್ ಮಾಡುವರು..... ಇತ್ಯಾದಿ ಇತ್ಯಾದಿಯಾಗಿ ಪ್ರಬಂಧ ಮುಂದುವರಿದಿತ್ತು.

ಅಧ್ಯಾಪಕರಿಗೆ ಸುಸ್ತೋ ಸುಸ್ತು.

            *****

ಕೀಲಿಕರಣ: ಕಿಶೋರ್‍ ಚಂದ್ರ

ಜೋಕಾಲಿ ಆಡೋಣ ಬರ್ರೆ

- ಶಿಶುನಾಳ ಶರೀಫ್

ಜೋಕಾಲಿ ಆಡೋಣ ಬರ್ರೆ
ಬೇಕಾದ ನಾರಿಯರೆಲ್ಲ
ಸಾಕಾಗುವತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||ಪ||

ಖೊಬ್ಬರಿ ತಂಬಿಟ್ಟು
ಇಬ್ಬರು ಉಡಿಯೊಳು ಕಟ್ಟಿ
ಹಬ್ಬಕೊಮ್ಮೆ ಹಾಲ ಹೊಯ್ಯೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                   ||೧||

ಏಕ ನಿಷ್ಠೆಯಿಂದ
ಎಡಬಲ ಹಗ್ಗವ ಪಿಡಿದು
ನೆಟ್ಟಗ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||೨||

ತುತ್ತನ್ನ ತುದಿಯಮ್ಯಾಲೆ
ಕಟ್ಟೇತ್ರಿ ಜೋಕಾಲಿ
ನಟ್ಟನಡುವೆ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||೩||

ಹೊಸಧಿಯೊಳಗ ನಮ್ಮ
ಶಿಶುನಾಳಧೀಶನ
ಆಂತಃಕರಣವಿದ್ದ ಗುರುವಿನ ಕೂಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ                    ||೪||
                     *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಧ್ವಜ


-ಅಬ್ಬಾಸ್ ಮೇಲಿನಮನಿ

ಆ ಊರಿನಲ್ಲಿ ಅನೇಕ ಧರ್ಮಗಳಿಗೆ ಸೇರಿದ ಜನರಿದ್ದರು.  ಅವರೆಲ್ಲರೂ ಮನುಷ್ಯರಾಗಿದ್ದರು.  ಧರ್ಮದ ಆಚರಣೆಗಳನ್ನು ಶ್ರದ್ಧೆಯಿಂದಲೇ ಪಾಲಿಸುತ್ತಿದ್ದರು.  ಅವೆಲ್ಲ ಅವರ ಮನೆಯ ಪರಿಧಿಗೆ ಸೀಮಿತಗೊಂಡಿದ್ದವು.  ಹೊರಗೆ ಅವರೆಲ್ಲರೂ ಪರಸ್ಪರ ಪ್ರೀತಿಯಿಂದ ವ್ಯವಹರಿಸುತ್ತಿದ್ದರು.  ಅವರ ಸಂಬಂಧ ತೀರ ಮಾನವೀಯವಾಗಿತ್ತು.  ಒಂದೇ ಊರಿನವರು ಎಂಬ ಅಭಿಮಾನವಿತ್ತು.  ಊರಿನ ಯಾವುದೇ ಕೆಲಸಗಳಲ್ಲಿ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಪಾಲ್ಗೊಳ್ಳುವರು.  ಒಬ್ಬರಿಗೊಬ್ಬರು ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು.

ಶಾಂತಿ, ನೆಮ್ಮದಿಯ ಆ ಊರಿನ ದುರಾದೃಷ್ಟವೊ ಎಂಬಂತೆ ಒಂದಿನ ಅಲ್ಲಿ ಯಾರೋ ಬಂದು ಕೇಸರಿ ಧ್ವಜ ನೆಟ್ಟರು.  ಸ್ವಲ್ಪ ದಿನಕ್ಕೆ ಹಸಿರು ಧ್ವಜ ಹಾರಾಡಿತು.  ಮತ್ತೆ ಎಂಟು ದಿನಕ್ಕೆ ಬಿಳಿ ಧ್ವಜ ಕಂಡಿತು.  ಜನರು ಧ್ವಜಗಳನ್ನು ಅಚ್ಚರಿಯಿಂದ ನೋಡಿದರೆ ಹೊರತು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.  ಆದರೆ ಧ್ವಜ ನೆಟ್ಟವರು ಸುಮ್ಮನೆ ಕೂಡಲಿಲ್ಲ.  ಹಗಲೆಂಬೊ ಹಗಲು, ರಾತ್ರಿಯೊಂಬೊ ರಾತ್ರಿ ಊರಿನ ಮನೆ, ಮಠ, ಮಂದಿರ, ಮಸೀದಿ, ಚರ್ಚು, ಬಸದಿ, ವಿಹಾರ, ಮರ, ಗೋಪುರ, ಅಂಗಡಿ, ಗಲ್ಲಿಗಲ್ಲಿ ರಸ್ತೆಗಳ ಚೌಕುಗಳಲ್ಲಿ ಹಸಿರು, ಕೇಸರಿ, ಬಿಳಿ ಧ್ವಜಗಳು ಪೈಪೋಟಿಯಲ್ಲಿ ಹಾರತೊಡಗಿದವು.

ಸಾವಕಾಶವಾಗಿ ಅವುಗಳ ಹೆಸರಲ್ಲಿ ವಾದ-ವಿವಾದ ಶುರುಗೊಂಡವು.  ಅಂಥದ್ದನ್ನೇ ತಮ್ಮ ಜೀವನಕ್ಕೆ ಆಧಾರ ಮಾಡಿಕೊಂಡ ದರಿದ್ರ ಜನ ಸಮಸ್ಯೆಗಳನ್ನು ಹುಟ್ಟುಹಾಕಿ ಕೋಮುಕೋಮುಗಳ ನಡುವೆ ಬಿರುಕು ಮೂಡಿಸಿದರು.  ಕಾಲು ಕೆದರಿ ಜಗಳ ತೆಗೆಯುವಂತೆ ಉತ್ಸವ, ಮೆರವಣಿಗೆ, ಜುಲೂಸು ಹೊರಡಿಸಿ ಪರಸ್ಪರ ಜಿಂದಾಬಾದ್, ಮುರ್ದಾಬಾದ್ ಎಂದು ಗಂಟಲು ಹರಿದುಕೊಳ್ಳುತ್ತ ಕಿಡಿಗೇಡಿಗಳು ಕಲ್ಲು ಎಸೆದಾಡಿದರು.  ಮಂದಿರದಲ್ಲಿ ಆಕಳ ಮಾಂಸ, ಮಸೀದಿಯಲ್ಲಿ ಹಂದಿಯ ಮಾಂಸ ಬಿದ್ದಿರುವುದೆಂದು ಗುಲ್ಲು ಎಬ್ಬಿಸಿದರು.  ಗೋಡೆಗಳ ಮೇಲೆ ರಕ್ತ ಕುದಿಸುವ, ಕಿಚ್ಚು ಹಬ್ಬಿಸುವ ಬರಹಗಳನ್ನು ಬರೆಸಿದರು.  ಮಾರಕಾಸ್ತ್ರಗಳು ಜನರ ಕೈಗಳಿಗೆ ಬಂದವು.  ಊರೆಂಬೊ ಊರು ರಣರಂಗವಾಗುತ್ತಿದ್ದಂತೆ ಹಿಂಡುಗಟ್ಟಲೇ ಪೋಲಿಸರು ವ್ಯಾನ್ ಇಳಿದರು.  ಕರ್ಫ್ಯೂ ಸಾರಿದರು.  ಓಡಾಡುವ ಜನರಿಗೆ ಲಾಠಿಯ ರುಚಿ ತೋರಿಸಿದರು.  ಗಾಳಿಯಲ್ಲಿ ಗುಂಡು ಹಾರಿಸಿದರು.

ಜನಜೀವನ ಅಸ್ತವ್ಯಸ್ತಗೊಮಡಿತು, ತಮ್ಮ ಊರು ಹೀಗೇಕೆ ರಾಕ್ಷಸವಾಯಿತು?  ಮನೆಯೊಳಗೆ ಕುಳಿತು ತಹತಹಿಸಿದರು ಪ್ರಜ್ಞಾವಂತ ಜನ.  ಅವರಿಗೆ ಕೇಸರಿ, ಹಸಿರು, ಬಿಳಿಯ ಧ್ವಜಗಳು ನೆನಪಾದವು.

ನಾಲ್ಕಾರು ದಿನಗಳ ಬಳಿಕ ಕರ್ಫ್ಯೂ ಸಡಿಲುಗೊಂಡಿತು.

ಒಬ್ಬೊಬ್ಬರಾಗಿ ಜನ ಹೊರಗೆ ಬಂದರು.

ಸ್ಮಶಾನದಂತೆ ಗೋಚರಿಸುತ್ತಿದ್ದ ಊರನ್ನು ನೋಡಲಾಗಲಿಲ್ಲ ಅವರಿಗೆ.

ಎತ್ತರೆತ್ತರವಾಗಿ ಹಾರಾಡುತ್ತಿರುವ ಧ್ವಜಗಳು ಅನಾಥಪ್ರಜ್ಞೆಯ ಸಂಕೇತದಂತೆ, ಜನರ ಬದುಕನ್ನು ನಾಶ ಮಾಡುವ ಪ್ರತೀಕದಂತೆ ಕಂಡವು.

ಮೊದಲಿನಂತೆ ಸುಮ್ಮನೆ ಕೂಡಲಿಲ್ಲ ಜನ.  ಗುಂಪುಗುಂಪಾಗಿ ನೆರೆದು ಹಾರುತ್ತಿರುವ ಧ್ವಜಗಳನ್ನು ನಿರ್ಭಾವುಕರಾಗಿ ಇಳಿಸಿದರು.  "ನಮಗೆ ಬೇಕಾಗಿದ್ದು ಬರಿ ಕೇಸರಿ ಧ್ವಜವಲ್ಲ, ಹಸಿರು, ಬಿಳಿ ಧ್ವಜಗಳಲ್ಲ.  ಈ ಮೂರು ಬಣ್ಣಗಳ ಸಂಗಮದ ನಡುವೆ ಅಶೋಕ ಚಕ್ರದ ರಾಷ್ಟ್ರಧ್ವಜ ಬೇಕು.  ಅದು ಯಾವಾಗಲೂ ಅರಳಿ ಕೊಂಡಿರಬೆಕು.  ಮುಗಿಲೆತ್ತರಕ್ಕೆ ಹಾರಬೇಕು.  ನಮ್ಮ ಅಭಿಮಾನದ, ಪ್ರೀತಿ, ಸಂತೋಷದ ಸಂದೇಶ ಸಾರಬೇಕು" ಎಂದು ಒಕ್ಕೊರಲಲ್ಲಿ ಉಲಿದರು.

"ಭಾರತ ಮಾತಾಕಿ ಜೈ"  "ಮೇರಾ ಭಾರತ್ ಮಹಾನ್" ಅವರ ಜಯಘೋಷ ಆಕಾಶದಲ್ಲಿ ಮೊಳಗಿತ್ತು.  ಧ್ವಜ ನೆಟ್ಟವರು ಅಲ್ಲಿಂದ ಕಿಮಿಕ್ ಎನ್ನದೆ ಕಾಲ್ದೆಗೆದಿದ್ದರು.

                                     *****
ಕೀಲಿಕರಣ: ಕಿಶೋರ್‍ ಚಂದ್ರ

ಪಂಚಮಿ ಹಬ್ಬಾ ಬಂದೀತು ಗೆಳತಿ

- ಶಿಶುನಾಳ ಶರೀಫ್

ಪಂಚಮಿ ಹಬ್ಬಾ ಬಂದೀತು ಗೆಳತಿ
ಇನ್ನಾರಿಗ್ಹೇಳಲಿ                                                         || ಪ||

ಆವಕ್ಕ ನಾರಿ ಜೋಕಾಲಿ ಏರಿ
ಕೈಬೀಸಿ ಕರಿಯಾಲೀ                                                 || ೧ ||

ಆರಳಿಟ್ಟು ತಂಬಿಟ್ಟು ನಾಗಪ್ಪಗ್ಹಾಲ ಹೊಯ್ಯಲಿ
ಆಣ್ಣನಪಾಲು ತಮ್ಮನಪಾಲು ಆಕ್ಕನಪಾಲು ಮುತ್ತಾಗಲಿ    || ೨ ||

ಮಾವನಪಾಲು ಮೈದುನಪಾಲು ಗಂಡನಪಾಲು ಮನದಲ್ಲೆ
ಊರಪಾಲು ದೇವರಪಾಲು ಗುರುವಿನಪಾಲು ಆತ್ಮದಲ್ಲೆ    || ೩ ||

ವಸುಧಿಯೊಳು ಶಿಶುನಾಳಧೀಶನಪಾಲು             
ಬಸವಗೆ ಮುಟ್ಟಲಿ                                                     ||೪ ||
                   *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಕೆರೆ ಕೊಟ್ಟ ಕರೆ....

- ರಾಮಸ್ವಾಮಿ ಡಿ ಎಸ್

ನನ್ನ ಹುಟ್ಟೂರು ತರೀಕೆರೆ.  ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.

ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.

ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್‌ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.

ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.

ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರ‌ಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ. 

ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.

ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?

ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.

ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?
                        *****
ಕೀಲಿಕರಣ: ರಾಮಸ್ವಾಮಿ ಡಿ ಎಸ್

ನನ್ನ ಹೇಣ್ತೆ ನನ್ನ ಹೇಣ್ತೆ

- ಶಿಶುನಾಳ ಶರೀಫ್

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ                || ಪ ||

ಘನ ಪ್ರೀತಿಲೆ ಈ ತನುತ್ರಯದೊಳು
ದಿನ ಆನುಗೂನು ಬಾ ಗುಣವಂತೆ               ||ಅ.ಪ.||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನವ್ರ ಹೇಣ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ                     ||೧||

ಆತ್ತಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡೀಯೆ ನನ್ನ ಹೇಣ್ತೆ
ತತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕೆವಳನಿಸಿದೆ ನನ್ನ ಹೇಣ್ತೆ                        ||೨||

ಆಕಕರದಲ್ಲಿ ಆನಂತಕಾಲಾ ನಮ್ಮ
ಆಕಾಕಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದನಿಸಿದೆ ನನ್ನ ಹೇಣ್ತೆ                   || ೩||

ಮಂಗಳರೂಪಳೆ ನನ್ನ ಹೇಣ್ತೆ
ಆರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಂತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ               || ೪ ||
              *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಸುಗ್ಗಿ ಮಾಡೋಣು ಬಾರವ್ವ ಗೆಳತಿ

- ಶಿಶುನಾಳ ಶರೀಫ್

ಸುಗ್ಗಿ ಮಾಡೋಣು ಬಾರವ್ವ ಗೆಳತಿ
ಸುಮ್ಮನಾಕ ಕುಳತಿ                                           || ಪ ||

ಆಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದವ-
ರೊಗ್ಗಿಲೆ ಕರೆದರ ಹಿಗಲಿ ಹೋಗಿ                            ||ಅ.ಪ.||

ಹೊಲದವ ಕರೆದರೆ ಹೋಗಲಿಬೇಕು
ನೆಲೆಯನು ತಿಳಿಯಬೇಕು
ಕುಲದವರೊಂದು ಸಲಗಿಯ ಸಾಕು
ಬಲು ಜೋಕಿರಬೇಕು
ಹೊಲದೊಳು ಬೆಳದಿಹ ಹುಳ್ಳಿ ಮಿಕ್ಕಿ ಕಸ
ತಳದ ಕೋಲಿಯ ದಾಟಿ ಕೊಯ್ಯೋಣಮ್ಮಾ             ||೧ ||

ಏಳೆಂಟು ಆಕ್ಕಡಿಯ ಎಣಿಸಿ
ಬಾಳದರೋಳು ದಣಿಸಿ
ಕಾಳಕೂಟದ ವಿಷವೆಣಿಸಿ ಎಲ್ಲವೆಲ್ಲವ ಗಣಸಿ
ಬಾಳೊಂದು ರಾಗಿ ನವಣಿ ಸಾವಿ ಸಜ್ಜಿಯ
ಓಲ್ಯಾಡುತ ಬಹು ರಾಗದಿ ಕೊಯ್ಯುತ್ತಾ                 ||೨||

ಶಿಶುನಾಳಧೀಶ ತಾನೀಗ ಅವ ಕರಿಯುವದ್ಹ್ಯಾಂಗ
ವಸುಧಿಯೊಳ್ ಬೆಳಸಿದ ಬೇಗಾ
ಕರಿದರೆ ಗಡ ಹೋಗ
ಕಸವ ಕಳಿದು ಕೈ ಕುಡಗೋಲ ಹಿಡಿಯುತ
ಹಸನಾಗಿ ಹಲವರು ಹರಿವ ಮನವ ಸುಟ್ಟು             ||೩||
                                *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಮೋಹದ ಹೆಂಡತಿ ಸತ್ತ ಬಳಿಕ

- ಶಿಶುನಾಳ ಶರೀಫ್

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ಯಾಕೋ                 || ಪ ||

ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ                   ||ಅ.ಪ.||            

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾದುವುದ್ಯಾಕೋ              || ೧ ||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ           ||. ೨ ||
                      *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಹತ್ತಿಬಿಡಿಸಲಿಕ್ಕೆ ಹೋಗೋಣು ಬಾರೆ

- ಶಿಶುನಾಳ ಶರೀಫ್

ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ
ಆಲಸ್ಯಮಾಡದೆ ಹೋಗುಣ ಬಾರೆ                                     || ಪ ||

ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ
ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು
ಗಾಳಿ ಮಳೆಗೆ ಉದುರುತಿಹವು
ಪೇಳುವೆ ಸುತ್ತಲು ಸಣ್ಣ
ಮಳಲಿನೊಳು ಸೀಮಿಕಲ್ಲು ನಟ್ಟಿರ್ಪುದು
ನಿಳಯದ ಕರಕಿ ಹುಲ್ಲು ಕಪಟ ಭೂಮಿ
ತಿಳಿಯ ಮಣ್ಣು ಕರ್ಲಿನಲಿ ಕೆಲವರೆಲ್ಲರು ಮಮ್ಮಾಯಿ
ಕಾಳು ಬಿತ್ತಿ ಹೊನ್ಗಳ ಫಳಿಸಿ ಗರ್ವದಿ                                   || ೧ ||

ಊರ ಜನರೊಳೆವರಲ್ಲ
ಒಬ್ಬರೊಬ್ಬರ ಹೊಲಕೆ ಹೋಗದಿರೆ ಎಲ್ಲೆಲ್ಲಿ
ನೋಡಿದರು ಹೆಚ್ಚಿನ ಧಡೆಗಲ್ಲು
ಮೂವತ್ತು ಸೇರಿನ ದಂಡಿಗಿ ಇವರು ತೂಗುವರೋ ಬ್ಯಾರೆ
ಭಾರಿ ಭಾರಿ ಜಡಿ ಜಡಿಯ ತೂಕದ
ಮೂರುವರಿ ದುಡ್ಡುಗಳು ಕೋಡುತಿಹರು
ಆರಗೊಡವಿನ್ನೇನು ನಮಗೆ
ನಾರಿಮಣಿ ನಮ್ಮ ಹೊಲಕೆ ನಡಿಯೇ                                  || ೨ ||

ಸೃಷ್ರ್‍ಇಯೊಳು ನಾವೀರ್ವರು ಹುಟ್ಟಿ ಬೆಳೆಯುವರು
ಕಟ್ಟಳತೆ ಇಲ್ಲದ ಭವದ ಕೂಳಿನೊಳು
ಮುಟ್ಟು ಮೈಲಿಗೆಯ ಜಲಹತ್ತಿ
ಬಿಟ್ಟಿದ್ದರೆ ಫಲ ಬೆಳಸಬಾರದ ರೀತಿ
ಎಷ್ಟು ಹೇಳಬೇಕರಿ ಪಾಪದ
ಮಟ್ಟಿನಲ್ಲಿ ಹಣ ಕಟ್ಟಿಕೊಂಬರು
ಬಿಟ್ಟು ಬಾ ಶಿಶುನಾಳಧೀಶನ
ಬಟ್ಟಬೈಲಿಯ ಹೊಲಕ ನಡಿಯೇ                                        || ೩ ||
      *****
ಕೀಲಿಕರಣ: ಎಮ್.ಎನ್.ಎಸ್.ರಾವ್

ದಲಿತ

-ಅಬ್ಬಾಸ್ ಮೇಲಿನಮನಿ

ವ್ಯವಸ್ಥೆಯ ವಿರುದ್ಧ ತನ್ನದು ನಿರಂತರ ಹೋರಾಟವೆಂದು ಆ ಹೋರಾಟಕ್ಕಾಗಿ ತನ್ನ ಜನರನ್ನು ಸಜ್ಜುಗೊಳಿಸುವೆನೆಂದು ಹೇಳುತ್ತಲೇ ಪ್ರಸಿದ್ಧಿಗೆ ಬಂದ ತಿಪ್ಪೇಶಿಯ ಸೃಜನಶೀಲತೆ ಲೋಕವನ್ನು ಬೆರಗುಗೊಳಿಸಿತ್ತು.  ಅವನ ಕಾವ್ಯ ನಾಟಕಗಳು ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ತೀವ್ರ ಧಾಟಿಯಲ್ಲಿದ್ದು ಜನರನ್ನು ಚಿಂತನೆಗೆ ತೊಡಗಿಸುತ್ತಲೆ ಕನಸುಗಳ ಅದಮ್ಯ ತುಡಿತಕ್ಕೆ, ಜೀವೋಲ್ಲಾಸಕ್ಕೆ ಪ್ರೇರೇಪಿಸುತ್ತಿದ್ದವು.

ಒಬ್ಬ ನಿಜವಾದ ಸೃಜನಶೀಲ ಕವಿ, ಲೇಖಕ ಹೀಗಿರಬೇಕು ಎನ್ನುವುದಕ್ಕೆ ತಿಪ್ಪೇಶಿ ಸಾಕ್ಷಿಯಾಗಿದ್ದನ್ನು ಅವನ ವೈರಿಗಳೂ ಮೆಚ್ಚಿಕೊಂಡಿದ್ದರು.  ಪ್ರತಿಭೆ ಗುಡಿಸಲಲ್ಲಿ ಜನ್ಮ ತಾಳುವುದು ಎಂಬಂತೆ ತಿಪ್ಪೇಶಿ ಕೆಳಸ್ತರದ ಬವಣೆಗಳ ಬೆಂಕಿಯಲ್ಲಿ ಬೇಯುತ್ತ ಶುದ್ಧ ಬಂಗಾರವಾದವನು.  ಹಾಗೆಯೇ ಜನರ ಕಣ್ಣು ಕುಕ್ಕುವಂತೆ ಬೆಳೆದವನು.

ಗೋಷ್ಠಿಯಲ್ಲಿ ಅವನು ಕವಿತೆಯೋದಿದರೆ, ರಂಗಭೂಮಿಯ ಮೇಲೆ ನಾಟಕ ಪ್ರದರ್ಶಿಸಿದರೆ, ಸಮಾರಂಭದಲ್ಲಿ ಮಾತಾಡತೊಡಗಿದರೆ ಶತಶತಮಾನದಿಂದ ದಲಿತರ ಕೈಕಾಲು ಬಿಗಿದ ಶೃಂಖಲೆಗಳು ತಮ್ಮಷ್ಟಕ್ಕೆ ತಾವೇ ಕಳಚಿಕೊಳ್ಳುತ್ತಿದ್ದವು.  ಮೂಕಧ್ವನಿಗೆ ಮಾತು ಬರುತ್ತಿತ್ತು.  ಮುದುಡಿದ ಮೈಮನಸ್ಸಿಗೆ ಚೈತ್ರದ ಚೈತನ್ಯ ತುಂಬುತ್ತಿತ್ತು.  ಕಂಬನಿ ಸುರಿಸುವ ಕಣ್ಣುಗಳಲ್ಲಿ ಸಾವಿರ ನಕ್ಷತ್ರಗಳು ಪಳಪಳ ಹೊಳೆಯುತ್ತಿದ್ದವು.  ಮೇಲುಸ್ತರದ ವಾಮನರಿಂದ ತುಳಿಸಿಕೊಳ್ಳುತ್ತಿದ್ದ ದೇಹಕ್ಕೆ ಒಮ್ಮೆಲೆ ಉಕ್ಕಿನ ತಾಕತ್ತು ಬರುತ್ತಿತ್ತು.

ಶೋಷಿತ ಸಮುದಾಯದ ಕಣ್ಣು ತೆರೆಸಿದ ಕವಿ.  ಹೊಸ ಬದುಕಿನ ಆನ್ವೇಷಕ.  ಮಾನವೀಯತೆಯ ದೃಷ್ಟಾರ ಎಂಬಿತ್ಯಾದಿ ಬಿರುದು-ಬಾವಲಿಗಳಿಗೆ, ಪ್ರೀತಿ-ಅಭಿಮಾನಕ್ಕೆ ಪಾತ್ರನಾದ ತಿಪ್ಪೇಶಿ ಆಕಾಶದೆತ್ತರಕ್ಕೆ ಬೆಳೆದ.  ಅಕೆಡೆಮಿ, ಸಂಸ್ಕೃತಿ ಇಲಾಖೆ, ಸರಕಾರ ಅವನಿಗೆ ಮನ್ನಣೆ ನೀಡಿದವು.  ಊರ್ಧ್ವಗೊಂಡಿತು ಅವನ ವ್ಯಕ್ತಿತ್ವ.  ತಾನು ಎಲ್ಲಿರಿಗಿಂಥ ಭಿನ್ನವೆಂದು ಗುರುತಿಸಿಕೊಳ್ಳುವಲ್ಲಿ ಮುತುವರ್ಜಿ ವಹಿಸಿದ.  ತನ್ನ ಬದುಕು ಮತ್ತು ಬರಹ ಒಂದೇ ಎಂದ.  ಅನ್ಯ ವಿಚಾರಗಳೊಂದಿಗೆ ರಾಜಿಯಾಗಲು ತನ್ನಿಂದ ಸಾಧ್ಯವೇ ಇಲ್ಲವೆಂದು ಡಂಗುರ ಸಾರಿದ.  ಹೀಗೆ ಬಡಬಡಿಸುತ್ತಲೇ ಅಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರು ಇವರ ನೆರಳಲ್ಲೇ ಸದಾ ಸುಖಿಗಳಾಗಿರುವ ನಿರ್ಲಜ್ಜರ ನಡುವೆ ಸಿಕ್ಕಿ ಹಾಕಿಕೊಂಡ.  ಕೊನಗೆ ಅವನ ಸ್ಥಿತಿ ಎಣ್ಣೆ ಪಾತ್ರೆಯಲ್ಲಿ ಅಸ್ತಿತ್ವಕ್ಕಾಗಿ ಪರದಾಡುವ ನೊಣದ ಗತಿಯೇ ಆಯಿತು.

ತನ್ನ ಸಿದ್ಧಾಂತಗಳಿಗೆ ಬದ್ಧನಾಗಿ ತಮ್ಮ ಬದುಕಿಗೆ ಬುದ್ಧನಾಗಿ ಅನೂನವಾಗಿರುವನೆಂಬ ವಿಶ್ವಾಸದಲ್ಲಿದ್ದ ದಲಿತರು ಅವನ ರೀತಿಗೆ ಮರುಗುತ್ತಿರಬೇಕಾದರೆ, ಮೇಲುಸ್ತರದವರಿಗೋ ಹಿಗ್ಗೋ ಹಿಗ್ಗು.  ಅವನ ವೀರಾವೇಶದ ಧ್ವನಿಯನ್ನು ಅಡಗಿಸಿದ ಬಗ್ಗೆ, ಬಂಡಾಯ ಮನೋಧರ್ಮದ ಬೀಜಗಳನ್ನು ಹುರಿದು ಮುಕ್ಕಿದ ಬಗ್ಗೆ, ಅವನನ್ನು ಪೂರ್ತಿ ಆವರಿಸಿಕೊಂಡಿರುವ ತೆವಲುಗಳ ಬಗ್ಗೆ ಹೆಮ್ಮೆ ಪಡುತ್ತಲೇ ಹೋದರು.  ಕೊನೆಗೂ ಅವರ ಉದ್ದೇಶ ಈಡೇರಿತ್ತು.  ತಿಪ್ಪೇಶಿ ಅವರ ದಾಸಾನುದಾಸನಾದ.  ತನ್ನ ಮೇಲಿನ ಅವರ ಸವಾರಿಯನ್ನು ಅವನು ಉದಾರತೆಯೆಂದು ಬಗೆದ.  ಒಂದು ಸಮಯಕ್ಕೆ ತನ್ನ ನೆರಳು ಕಂಡರೆ ಅಸಹ್ಯ ಪಡುತ್ತಿದ್ದವರು ಈಗ ಆತ್ಮೀಯತೆಯಿಂದ ಸ್ಪರ್ಶಿಸುತ್ತ ಮಹತ್ವ ಕೊಡುವ ಪರಿಯಿಂದ ತೃಪ್ತಿಗೊಂಡ.  ಅವರ ಬ್ರಿಟಿಷ್ ತಂತ್ರಗಳ ಸೂಕ್ಷ್ಮ ತಿಳಿಯದೆ ಹೋಯಿತವನಿಗೆ.  ಅವರ ಮುಖವಾಡಗಳೇ ಚಂದವೆನಿಸಿ ಅವನು ಅವರಿಂದ ಮೆಲ್ಲಗೆ ಹತ್ತಿಕ್ಕಿಸಿಕೊಂಡ.  ಅವರ ಕ್ರೌರ್ಯ ದಬ್ಬಾಳಿಕೆಗಳಿಗೆಲ್ಲ ಹರಕೆಯ ಕುರಿಯಾಗಿ ತಣ್ಣಗುಳಿದ.  ಅವನೊಳಗಿನ ಬುದ್ಧ ಅನಾಥ ಪ್ರಜ್ಞೆಯಿಂದ ನರಳಿ ನರಳಿ ಒಂದಿನ ಸತ್ತು ಹೋದ.  ದಲಿತರು ತೀವ್ರ ವೇದನೆ ಅನುಭವಿಸುತ್ತ ಕಣ್ಣೀರು ಹಾಕಿದರು.

ಅವರನ್ನು ತಿಪ್ಪೇಶಿ "ಅಳುಬರುಕಿಗಳು ಎಂದೂ ಉದ್ಧಾರ ಆಗೋದಿಲ್ಲ.  ನನ್ನಂತೆ ನಿಮಗೆ ಗರಿಗಳು ಮೂಡೋದಿಲ್ಲ ನೀವು ಆಕಾಶಕ್ಕೆ ಹಾರೋದಿಲ್ಲ" ಎಂದು ಮೂದಲಿಸಿದ.

"ನಿನ್ನ ಹಾರಾಟಕ್ಕೆ ನಮ್ಮ ರಕ್ತ-ಮಾಂಸವನ್ನು ಧಾರೆಯೆರೆದಿದ್ದೇವೆ.  ಉಸಿರು ನೀಡಿದ್ದೇವೆ.  ಹೆಸರು ನಮ್ಮದು, ಬಸಿರು ಅವರದೋ?" ಜನ ಪ್ರತಿಭಟಿಸಿದ್ದರು.

"ಹೂವಿನ ಜತೆಗೆ ನಾರು ಸ್ವರ್ಗಕ್ಕೆ ಹೋಗಬೇಕು.  ನಾನು ಆ ಧಾವಂತದಲ್ಲಿದ್ದೇನೆ ನಿಮಗೆಲ್ಲ ಮತ್ಸರ" ಎಂದ ತಿಪ್ಪೇಶಿ.

"ನಿನಗೆ ಧಿಕ್ಕಾರವಿರಲಿ" ಶೋಷಿತರು ಒಂದೇ ಸಮನೆ ಕೂಗಿದರು.

"ನಿಮ್ಮ ಕೂಗಾಟ, ಪ್ರತಿಭಟನೆ ನನಗೆ ಅಮೃತ ಸಮಾನ" ಎಗ್ಗೆಯಿಲ್ಲದೆ ಹೇಳಿದ ತಿಪ್ಪೇಶಿ.

"ಸ್ವರ್ಗದ ಮಾತು ಹೇಳಿ ನಮ್ಮನ್ನು ನರಕಕ್ಕೆ ತಳ್ಳಿದೆ ನೀನು" ಜನ ಆರೋಪಿಸಿದರು.

"ನಿಮ್ಮ ಅಜ್ಞಾನದಿಂದ ನರಕಕ್ಕೆ ಬಿದ್ದಿರಿ".

"ಬಿದ್ದವರನ್ನು ಎಬ್ಬಿಸುವ, ಆಳುವವರ ಕಣ್ಣೀರು ಒರೆಸುವ ಮಾತು ಹೇಳಿದ್ದೆ ನೀನು."

"ನಿಮ್ಮ ಕತ್ತಲಿನ ಪ್ರೀತಿ ಹೋಗಿಲ್ಲ;  ಬೆಳಕಿನ ಕನಸು ಕಾಣುತ್ತಿದ್ದೀರಿ".

"ನಿನ್ನ ಸ್ವಾರ್ಥಕ್ಕೆ ನಮ್ಮನ್ನು ಬಳಸಿಕೊಂಡೆ.  ಮೆಟ್ಟಲು ಮಾಡಿಕೊಂಡು ಎತ್ತರಕ್ಕೇರಿದೆ."

"ಬುದ್ಧಿಗಾಗಿ ನೀವು ಹೆಮ್ಮೆ ಪಡಬೇಕು.  ನನ್ನಿಂದಾಗಿ ನಿಮಗೆ ಬೆಲೆ ಬಂತು."

"ನಿನ್ನ ಹೃದಯ ತಲೆ ಎಲ್ಲ ಕೊಳಕು.  ಬಾನಾಡಿ ಆಗು ಎಂದರೆ ರಣ ಹದ್ದು ಆದೆ ನೀನು.  ನಿನಗೆ ಧಿಕ್ಕಾರವಿರಲಿ.... ನಿನಗೆ ಧಿಕ್ಕಾರವಿರಲಿ"  ಆಕ್ರೋಶ ವ್ಯಕ್ತಪಡಿಸಿದರು ಜನ.

ತಿಪ್ಪೇಶಿ ಅದಕ್ಕೆ ಮುಗುಳ್ನಗೆಯನ್ನು ಪ್ರತಿಕ್ರಿಯಿಸಿದ.

ಕಾಲದ ಹರಳಿನಲ್ಲಿ ಏನೆಲ್ಲ ಆಯಿತು.

ತಿಪ್ಪೇಶಿಗೆ ಅಮೃತ ತೋರಿಸಿದ ಮೇಲುಸ್ತರದ ಜನ ಅದನ್ನು ಅವನಿಗೆ ಕುಡಿಸಲಿಲ್ಲ.

ಅವನನ್ನು ಎದುರಿಗಿಸಿಕೊಂಡೇ ತಮ್ಮ ಪಾರುಪತ್ಯ ನಡೆಸಿದರು, ಪ್ರಚಂಡವಾದರು.

ತಿಪ್ಪೇಶಿ ಕ್ಷೀಣಿಸಿದ್ದ.  ಅವನಿಗೆ ತನ್ನ ತಪ್ಪಿನ ಅರಿವು ಆಗುವುದರೊಳಗೆ ಎಲ್ಲ ಮುಗಿದಿತ್ತು.  ಅವರು ಬೃಂದಾವನವಾಗಿ ಊರೊಳಗೆಲ್ಲ ನಳನಳಿಸುತ್ತಿದ್ದರು.  ಊರ ಹೊರಗೇ ಉಳಿದ ತಿಪ್ಪೇಶಿ ಅನಾಥ ಪ್ರಜ್ಞೆಯಲ್ಲಿ ನರಳುತ್ತಿದ್ದ.
                                 *****
ಕೀಲಿಕರಣ: ಕಿಶೋರ್‍ ಚಂದ್ರ

ಜಾಣೆ ನೋಡುನು ಬಾರೆ ಜಾತಕ ರಂಗದೊಳು

- ಶಿಶುನಾಳ ಶರೀಫ್

ಜಾಣೆ ನೋಡುನು ಬಾರೆ ಜಾತಕ ರಂಗದೊಳು
ಕೋಣ ಬಂದಾಟ ಕೆಡಿಸಿತು ಚದುರೆ                         ||ಪ||

ನಾಲ್ಕು ಕಾಲಿನ ಕೋಣ ನಾಲ್ಕು ವೇದಗಳಿಂದ
ಮಲ್ಕಿ ಆಟದೊಳು ಮಯವಾಯ್ತು ಚದುರೆ                ||೧||

ಮಂಡಲದೊಳಗಿರು ಉದ್ದಂಡ ಮೃಗವಿದು
ಗುಂಡಿ ಆಟದೊಳು ಗಮಕಾಯ್ತು ಚದುರೆ                  ||೨||

ಹೋಗಿ ಜಂಗಮರೆಲ್ಲ ಆಡುವ ಆಟವು
ಸಾಗಿ ಬುದಾಟವ ಸರಸಿ ಸರಸೀತು ಚದುರೆ              ||೩||

ಸಾಧು ಸಜ್ಜನರ ಮುಂದೆ ಆಗಾಧವಾಗುವಂತೆ
ಇದೇ ಜನರ ಮಂಂದೆ ಕೇಳದಾಯ್ತು ಚದುರೆ          ||೪||

ದೇಶಕಧಿಕವಾದ ಶಿಶುನಾಳಧೀಶನ
ರಸಿಕರೊಡನೆ ಜ್ಞಾನ ಶಿಶುವಾಯ್ತು ಚದುರೆ              ||೫||
           *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಬುದ್ಧ ಮತ್ತು ಕಲಾವಿದ


-ಅಬ್ಬಾಸ್ ಮೇಲಿನಮನಿ

ಬುದ್ಧನ ಜೀವನ ಕುರಿತಾದ ಹೊಸ ನಾಟಕದ ತಾಲೀಮು ಶುರುವಾಗಿತ್ತು.  ನಿರ್ದೇಶಕ, ಸಂಗದೊಡೆಯರು, ಸಹಕಲಾವಿದರು ಆ ನಟನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು.  ಯಾಕೆಂದರೆ ಅವನು ಬುದ್ಧನ ಪಾತ್ರವನ್ನು ನಿರ್ವಹಿಸುತ್ತಿದ್ದ.

ಅದ್ಭುತ ಅಭಿನಯಕ್ಕೆ ಹೆಸರಾದ ಕಲಾವಿದ ಅವನು.  ರಂಗಭೂಮಿಯ ಬದುಕಿನಲ್ಲಿ ಪ್ರೀತಿ, ಆಸ್ಥೆ ಇರಿಸಿಕೊಂಡವನು.  ಪಾತ್ರ ಭಿಕಾರಿಯದೊ, ಬಡವ-ಬಲ್ಲಿದನದೊ, ರಾಜ-ಸೇವಕನದೊ, ಖಳ-ವಿದೂಷಕನದೊ ಯಾವುದೇ ಆಗಿದ್ದರೂ ಕಲಾವಿದ ಅದರಲ್ಲಿ ಪರಕಾಯ ಪ್ರವೇಶ ಮಾಡಿದವನಂತೆ ಜೀವದುಂಬುತ್ತಿದ್ದ.  ಜೊತೆಗೆ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಡೈಲಾಗ್ ಸೃಜಿಸಿಕೊಳ್ಳುವ, ಹಾವ-ಭಾವ ಅಭಿವ್ಯಕ್ತಿಸುವ ದಟ್ಟ ಪ್ರತಿಭೆಯಿಂದಾಗಿ ಜನ ಅವನನ್ನು ಅಭಿಜಾತ ಕಲಾವಿದನೆಂದು ಗುರುತಿಸಿದ್ದರು.

ಈ ಅರ್ಹತೆಯ ಆಧಾರದ ಮೇಲೆ ಆ ಕಲಾವಿದನಿಗೆ ಬುದ್ಧನ ಪಾತ್ರ ಸಿಕ್ಕಿತ್ತು.  ಅವನ ಎತ್ತರದ ಸ್ಫುರದ್ರೂಪಿ ನಿಲುವು ಕೂಡ ಆ ಪಾತ್ರಕ್ಕೆ ತಕ್ಕಂತಿತ್ತು.  ನಾಟಕದ ನಿರ್ದೇಶಕ "ನೀನಿಲ್ಲದೆ ಬುದ್ಧನ ಪಾತ್ರವನ್ನು ಯಾರಿಗೂ ನಿರ್ವಹಿಸಲು ಸಾಧ್ಯವಿಲ್ಲ.  ಒಂದಿಷ್ಟು ಕಷ್ಟಪಟ್ಟರೆ ಈ ಪಾತ್ರ ನಿನ್ನನ್ನು ಮೇರು ಕಲಾವಿದನನ್ನಾಗಿ ರೂಪಿಸುವುದು.  ಹಾಗೆಯೇ ನಿನ್ನ ಬದುಕಿಗು ಹೊಸದಿಕ್ಕು ಸಿಗುವುದು" ಎಂದು ಹೃದಯದ ಮಾತು ಆಡಿದ್ದ.  ಅದರಿಂದ ಹೆಚ್ಚು ಪ್ರೇರಿತನಾದ ಕಲಾವಿದ ಸಂಭಾಷಣೆಗಳನ್ನು ಅತ್ಯುತ್ಸಾಹದಿಂದಲೇ ಮನದಟ್ಟು ಮಾಡಿಕೊಂಡಾಗಿತ್ತು.

ಬುದ್ಧನ ಪಾತ್ರ ನಿರ್ವಹಣೆಯ ವಿಷಯದಲ್ಲಿ ಕಲಾವಿದನಿಗೆ ಅತಿಯಾದ ಆತ್ಮ ವಿಶ್ವಾಸವಿತ್ತು.

ನಾಟಕದ ಅರ್ಧಭಾಗ ಸಿದ್ಧಾರ್ಥನದು.  ಉತ್ತರಾರ್ಧ ಬುದ್ಧನ ಅಮೂಲ್ಯ ಬದುಕಿನದು.  ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಕಲಾವಿದ ಸಿದ್ಧಾರ್ಥನಾಗಿ ಗೆಲ್ಲುತ್ತ, ಬುದ್ಧನಾಗಿ ಸೋಲುತ್ತಿರುವುದು ಎಲ್ಲರಿಗೂ ಅಚ್ಚರಿ ಅನಿಸತೊಡಗಿತ್ತು.  ಆದರೆ ಕಲಾವಿದನಲ್ಲಿ ಬುದ್ಧನನ್ನು ಕಾಣುವ ವಾಂಛೆ ನಿರ್ದೇಶಕನದು.  ಅದನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡ ಕಲಾವಿದ ತಾಲೀಮಿನಲ್ಲೂ ಪಾತ್ರದ ವೇಷ-ಭೂಷಣಗಳನ್ನೇ ಧರಿಸಿಕೊಂಡಿದ್ದ.  ಆ ಶ್ವೇತ ಬಟ್ಟೆಯಲ್ಲಿ, ಕುಳಿತುಕೊಳ್ಳುವ ಭಂಗಿಯಲ್ಲಿ ಕಲಾವಿದ ನಿಜಕ್ಕೂ ಬುದ್ಧನನ್ನೇ ಹೋಲುತ್ತಿದ್ದ.  ಬುದ್ಧ ಹೇಳಿದ ಅಂತರಾಳದ ಎಷ್ಟೋ ಮಾತುಗಳು ಕಲಾವಿದನ ಬಾಯಿಯಿಂದ ಸ್ಫುಟವೂ, ಅನನ್ಯವೂ ಆಗಿ ಹೊರ ಹೊಮ್ಮುತ್ತಿದ್ದವು.  ಆದರೆ ಬುದ್ಧನ ಕಣ್ಣುಗಳಲ್ಲಿ ತುಂಬಿದ ಬೆಳಕು ತುಟಿಯಲ್ಲಿ ತುಳುಕಿದ ಮಂದಸ್ಮಿತ ಮಾತ್ರ ಕಲಾವಿದನ ಕಣ್ಣು, ತುಟಿಗಳಲ್ಲಿ ಪ್ರಕಟಗೊಳ್ಳದೆ ಅಲ್ಲಿ ವಿಕಾರ, ವಿಕೃತಗಳೇ ಗೋಚರಿಸತೊಡಗಿದ್ದವು.

"ಕಣ್ಣಲ್ಲಿ ಬೆಳಕು, ತುಟಿಗಳಲ್ಲಿ ಹಾಲುನಗೆ ಬರಲಿ" ನಿರ್ದೇಶಕ ಪದೆಪದೆ ಹೇಳಿದ.  ಕಲಾವಿದ ಪಟ್ಟು ಹಿಡಿದು ಅಭಿನಯಿಸಿದ.  ಅಭಿನಯಿಸುತ್ತ ಅಭಿನಯಿಸುತ್ತ ಬುದ್ಧನ ಕಣ್ಣ ಬೆಳಕು ನಗುವಿನ ನೈಜತೆಯಿಂದ ಕಲಾವಿದ ದೂರಾಗುತ್ತಲೇ ಹೋದ.  ಆತಂಕವೆನಿಸಿತು ನಿರ್ದೇಶಕನಿಗೆ.  ಆ ನಡುವೆಯೂ "ಬುದ್ಧನ ಆ ಕಣ್ಣಿನ ಬೆಳಕು, ತುಟಿಯ ಮೇಲಿನ ನಗುವೇ ಮನುಷ್ಯನ ನೋವು ನೀಗಿಸಿದ್ದು, ಕಣ್ಣೀರು ಒರೆಸಿದ್ದು.  ಲೋಕದ ಕುರೂಪ ಅಳಿಸಿದ್ದು.  ಅಂಥ ಭಾವ ನಿನ್ನ ಕಣ್ಣು, ತುಟಿಗಳಲ್ಲೂ ಬರಲಿ" ಎಂದು ಉತ್ತೇಜಿಸಿದ.

ಮತ್ತೆ ಕಲಾವಿದ ಉತ್ಸುಕನಾಗಿ ನಟಿಸಿದ.  ಅದರಲ್ಲಿ ಕ್ರಿಯೆ ಇತ್ತು;  ಸತ್ವ ಇರಲಿಲ್ಲ.  ಚಡಪಡಿಕೆಯನ್ನು ಹತ್ತಿಕ್ಕಿಕೊಂಡ ನಿರ್ದೇಶಕ "ನೋಟ ವಿಕಾರವೂ, ನಗೆ ವಿಕೃತವೂ ಆಗಿದೆ" ಎಂದು ಮತ್ತೆ ಬುದ್ಧನ ಕಣ್ಣು ಬೆಳಕು, ಮಂದಸ್ಮಿತದ ಬಗ್ಗೆ ಬಣ್ಣಿಸಿ "ಅಂಥ ಜೀವಭಾವ ವ್ಯಕ್ತಪಡಿಸು" ಎಂದು ಒತ್ತಾಯಿಸಿದ.  ಅಷ್ಟೂ ಸಾಲದು ಎಂಬಂತೆ ಬುದ್ಧನ ಭಾವಚಿತ್ರ ಮತ್ತು ಚಿಕ್ಕ ಪ್ರತಿಮೆಗಳನ್ನು ತರಿಸಿ ಕಲಾವಿದನಿಗೆ ತೋರಿಸಿದ.  ಬುದ್ಧನ ನೋಟ, ಆ ನಗು ಎಂಥ ಅದ್ಭುತಮಯ!  ಅದನ್ನು ತಾನು ಅನುಕರಿಸಲೇ ಬೇಕೆಂದುಕೊಂಡ ಕಲಾವಿದ ಎಲ್ಲಿಲ್ಲದ ಚೈತನ್ಯವನ್ನು ದುಡಿಸಿಕೊಳ್ಳಲು ಯತ್ನಿಸಿದ.  ಮತ್ತೆ ಅವನ ಕಣ್ಣಲ್ಲಿ ಅದೇ ವಿಕಾರ ನೋಟ, ತುಟಿಯಲ್ಲಿ ವಿಕೃತ ಲಾಸ್ಯ, "ಛೇ ಛೇ...." ಎಂದು ಹತಾಶನಾಗಿ ನುಡಿದು, ತಲೆಗೆ ಕೈ ಹಚ್ಚಿ ಕುಳಿತ ನಿರ್ದೇಶಕ.

ತಳಮಳಿಸಿದ ಕಲಾವಿದ ಆಚೆಗೆ ಹೋಗಿ ಮತ್ತೆ ಮತ್ತೆ ಅನುಭವಿಸಿದ.  ಆ ಭಾವಕ್ಕಾಗಿ ಕಾತರಿಸಿದ.  "ನನ್ನ ಕಣ್ಣಲ್ಲಿ ಆ ಬೆಳಕು ಬಂತೆ?  ತುಟಿಯಲ್ಲಿ ನಗು ಕಂಡಿತೆ?" ಕಲಾವಿದ ಕೇಳುತ್ತಲೇ ಇದ್ದ.  ಸಹಕಲಾವಿದರು "ಊಂ ಹೂಂ" ಎನ್ನುತ್ತಿದ್ದರು.

ಜೀವಕೋಶ ಹೊಯ್ದಾಡಿದರೂ ತನ್ನ ಪ್ರಯತ್ನವನ್ನು ಬಿಡಲಿಲ್ಲ ಕಲಾವಿದ.  ಸೆಕೆಂಡು, ನಿಮಿಷ, ದಿನ ಎಷ್ಟೋ ಹಗಲು ಕಳೆದವು.  ಅವನ ನೋಟದ ವಿಕಾರ ನಗೆಯ ವಿಕೃತೆ ಮಾಸಲಿಲ್ಲ.  ತಾನು ನಿಜವಾದ ಕಲಾವಿದ ಹೌದೋ, ಅಲ್ಲವೋ?  ಎಂದು ಅನುಮಾನ ಕಾಡಿತು ಅವನಿಗೆ.  ಆದರೆ ಮನಸ್ಸು ಮುದುಡಿಸಿಕೊಳ್ಳಲಿಲ್ಲ.  ಆ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ, ತಾನು ಉತ್ಕೃಷ್ಟ ಕಲಾವಿದನೆಂದು ತೋರಿಸಿಕೊಡುವ ಛಲ ಹುಟ್ಟಿಸಿಕೊಂಡ.

ಮತ್ತೆ ಮತ್ತೆ ಅಭಿನಯಿಸಿದ.  ಎಷ್ಟು ಸಲಕ್ಕೂ ಅದೇ ವಿಕಾರ ನೋಟ.  ವಿಕೃತ ನಗೆ.  `ಛೆ' ಎಂದ.  ಬುದ್ಧನ ಕಣ್ಣಿನ ಬೆಳಕಲ್ಲಿ, ತುಟಿಯ ನಗುವಲ್ಲಿ ಇರುವ ರಹಸ್ಯವಾದರೂ ಏನು?  ಅಂಥ ನೋಟ, ಅಂಥ ನಗು ಬುದ್ಧನ ಮುಖದಲ್ಲಿ ಜೀವದಳೆಯಲು ಹೇಗೆ ಸಾಧ್ಯವಾಯಿತು?

ಚಿಂತಿಸಿದ ಕಲಾವಿದ.  ಆದರೆ ಆಳಕ್ಕಿಳಿಯಲಿಲ್ಲ.  ಆಳಕ್ಕಿಳಿದರೆ ಅದೇನೂ ನಿಗೂಢವಲ್ಲ.  ಬುದ್ಧನ ಬದುಕು ತೆರೆದಿಟ್ಟ ಪುಸ್ತಕದಂತೆ.  ಒಳಗೂ-ಹೊರಗೂ ಒಂದೇ ಬಗೆಯ ಥಳಕು.  ಸಿದ್ಧಾರ್ಥ ಭೋಗಾಭಿಲಾಷೆಗಳಿಗೆ ಎಳ್ಳು ನೀರು ಬಿಟ್ಟ ನಿಸ್ವಾರ್ಥ.  ಆಳಾಳಕ್ಕಿಳಿದು ಬದುಕಿನ ಹುಡುಕಾಟ ನಡೆಸಿದವನು.  ಒಳಕತ್ತಲೆಯನ್ನು ಹೊರದೂಡಿ ಬುದ್ಧನಾದವನು.  ಜಗತ್ತಿನ ಬೆಳಕನ್ನು ತನ್ನಾದಾಗಿಸಿಕೊಂಡವನು.  ಪೂರ್ತಿ ಬೆಳಕೇ ಆದವನು.  ಆಸೆಗೆದ್ದ ಬುದ್ಧ ಕಡಲಾಳ ಮುತ್ತಿನಂತೆ, ತೆಂಗಿನೊಳಗಿನ ಸಿಹಿ ನೀರಿನಂತೆ ಪರಿಶುದ್ಧ.  ನೊಂದವರಿಗೆ ಅಮೃತವ ಉಣಿಸಿದವನು.

ಬುದ್ಧನಿಗೆ ತದ್ವಿರುದ್ಧ ಈ ಕಲಾವಿದನ ಬಗೆ.  ಅವನುಸಿರುಸಿರಿಗೂ ಆಸೆಗಳು.  ಬರಿ ಆಸೆಗಳಲ್ಲ;  ದುರಾಸೆಗಳು.  ಅದು ಖ್ಯಾತಿಯದು, ಖ್ಯಾತಿಯ ಜೊತೆಗಿನ ದುಡ್ಡಿನದು, ದುಡ್ಡಿನೊಂದಿಗಿನ ತೆವಲಿನದು ಅದಕ್ಕೆ ಅವನು ನಂಬಿಗಸ್ತ ಮನುಷ್ಯರನ್ನು ವಂಚಿಸಿದ್ದು, ಪ್ರೀತಿಸಿದ ಹೆಣ್ಣುಗಳನ್ನು ಶೋಷಿಸಿದ್ದು, ಸಾವು ನೋವಿನ ಕಕ್ಷೆಗೆ ತಳ್ಳಿದ್ದು, ಅದೇ ಅವನ ವಿಕಾರ ನೋಟಕ್ಕೂ, ವಿಕೃತ ನಗೆಗೂ ಸಾಕ್ಷಿ.

ಕಲಾವಿದನಿಗೆ ಅದರ ತಿಳಿವು ಇಲ್ಲ.  ಬದುಕಿಗೂ ನಟನೆಗೂ ಅಂತರ ಇದೆಯೆಂಬುದರ ವಾಸ್ತವದ ಪ್ರಜ್ಞೆ ಮೀರಿ ನಟಿಸುವುದು ಅವನಿಗೆ ರೂಢಿಯಾಗಿ ಹೋಗಿದೆ.  ಹೀಗಾಗಿ ಅದ್ಭುತ ನಟನೆಯಿಂದಲೇ ಬುದ್ಧನನ್ನು ಮೈತುಂಬಿಕೊಳ್ಳುವ ಧಾರ್ಷ್ಟ್ಯತನ ಪ್ರದಶಿಸುತ್ತಾನೆ.  ಬುದ್ಧನ ಪ್ರತಿಮೆಯನ್ನು ನೋಡಿ ನೋಡಿ ನಟಿಸುತ್ತಾನೆ, ಅವನನ್ನು ಕಂಡು ಬುದ್ಧ ಪ್ರತಿಮೆಯಲ್ಲೇ ನಗುತ್ತಾನೆ.
                                 *****

ಕೀಲಿಕರಣ: ಕಿಶೋರ್‍ ಚಂದ್ರ

ಬಟ್ಟಿ ಕಟ್ಟಿಸಿದೆ ರುದ್ರವ್ವಾ

- ಶಿಶುನಾಳ ಶರೀಫ್

ಬಟ್ಟಿ ಕಟ್ಟಸಿದೆ ರುದ್ರವ್ವಾ ನಿನ್ನ
ಹೊಟ್ಟಿಯ ಕೂಸಿಗಿನ್ನೆಷ್ಟುಪದ್ರವ್ವಾ               ||ಪ||

ಹೊಕ್ಕಳ ಕೆಳಗೆ ಐತ್ರವ್ವ್ ಎರಡು
ಪಕ್ಕಡಿ ಎಲುಬಿನೊಳು ಮನಿಮಾದ್ಡೀತ್ರವ್ವಾ
ಕುಕ್ಕಿ ಕಾಳಜಕ್ಕೇರೇತ್ರವ್ವಾ ಆದನ
ತಿಕ್ಕಿ ನಿಲ್ಲಿಸ ನನ್ನ ತಾಯವ್ವ                       ||೧||

ಪಿಂಡ ಮಾಂಸದ ಮೂತ್ರೆವ್ವ ನಿನ್ನ
ಪುಂಡ ಗಂಡನಿಂದ್ರಿಯ ಹೊಲಿ ರಕ್ತವ್ವಾ
ಮಂಡಲ ಕೆಳಗೆ ಐತ್ರೆವ್ವಾ ನದುಮಲ-
ಕುಂಡದೊಳ್ ತಾ ಮನಿ ಮಾಡೇತ್ರವ್ವಾ        ||೨||

ಕಸವನು ಕಳದಿಟ್ಟವ್ವಾ
ಹೇಸಿ ವಿಷಯದ ರೋಗಕ್ಕೌಷಧ ಕೊಟ್ಟೆವ್ವಾ
ಮುಸುಕು ಮುಟ್ಟದಿ ಮುಟ್ಟದಿ ಮುಟ್ಟೆದೆವ್ವಾ
ದೇವಶಿಶುನಾಳಧೀಶಗ ಹಸನಾಗಿ ಇತ್ರೆವ್ವಾ   ||೩||
                     *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಅಡಗಿ ಮಾಡುವರೇನೋ ಇಬ್ಬರು ಕೂಡಿ

- ಶಿಶುನಾಳ ಶರೀಫ್

ಅಡಗಿ ಮಾಡುವರೇನೋ ಇಬ್ಬರು ಕೂಡಿ
ಅಡಗಿ ಮಾಡುವರೇನೋ                         ||ಪ||

ಪೊಡವಿ ಪಾಲಿಪ ಗೊಡವಿಯಾಕೆ
ಕೆದುವ ಸಿಟ್ಟಿನ ಕಲಹ ಸಾಕೆ
ಬಲಿಯ ಬೀಳುವ ವಲಿಯ ಗುಂಡು
ಸಲುಹುವದು ಸಾಕ್ಷಾತ ಎನಗೆ                 ||ಅ.ಪ.||

ಪಲ್ಲೆ ಪಚ್ಚಡಿಯ ಮಾಡಿ
ನಮ್ಮ ಗುರುವಿಗೆ ಮುಚ್ಚುತ ತಾ ನೀಡಿ
ಎಅಸರಿನಾಂಬ್ರ ಕೊಸರಿ ಬೆಳೆಸಿ
ಮೊಸರು ಮಜ್ಜಿಗೆ ಬೆಣ್ಣಿ ಕಾಸಿ
ಹಸನಾದದಿದು ಗುಪ್ತ ಮಾತಿದು
ಚಿತ್ತಜಮುಖಿ ಯೆತ್ತಿ ನೋಡಲು                 ||೧||

ಆಣ್ಣ ಜ್ಞಾನಿಗಳ ಕಂಡು ಬಣ್ಣಿಸಲಾರೆ
ಸಣ್ಣ ಶಾವಿಗೆನುಂಡು
ಆನ್ನ ದಾನ ಇನ್ನು ಕೊಡಲು
ಎನ್ನ ಸಿಂಹಾಸನಕೆ ಬಂದು
ಚನ್ನ ಶಿಶುನಾಳೇಶನಡಿಗೆ
ಓಂ ನಮಃ ಶಿವಾಯೆನುತ                       ||೨||
                   *****
ಕೀಲಿಕರಣ: ಎಮ್.ಎನ್.ಎಸ್.ರಾವ್