ದುಡ್ಡು ಕೆಟ್ಟದ್ದೊ ಮನುಜಾ

- ಶಿಶುನಾಳ ಶರೀಫ್

ದುಡ್ಡು ಕೆಟ್ಟದ್ದೊ  ಮನುಜಾ  ಈ ಲೋಕದಿ
ದುಡ್ಡು ಕೆಟ್ಟದ್ದೊ  ಮನುಜಾ                        ||ಪ||
ಹೆಡ್ಡ ಮೂಢಾತ್ಮನೆ  ದೊಡ್ಡ ದೊಡ್ಡವರನು
ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು        ||ಅ.ಪ||

ಹರನ  ಪೂಜೆಯ ಕೆಡಿಸಿ ಸದ್ಗುರುವಿನ
ವರಮಂತ್ರವನು  ಬಿಡಿಸಿ
ಗುರುಶಿಷ್ಯಭಾವವನರುಹಿ  ಲಕ್ಷ್ಮೀಯೆಂಬ
ಕೊರವಿಯು ನರರನು ಅರವುಗೆಡಿಸುವಳು    ||೧||

ಆಸೆಯ  ಮನಗೊನಿಯು
ಸಂಸಾರವು ಕಸಿನ ಘನತೆನಿಯು
ಭಾಸುರ ಶಿಶುನಾಳಧೀಶ ಸದ್ಗುರುವಿಗೆ
ಆಸೆಯ ಕಲಿಸಲು  ಏಸರವಳವ್ವ  ಈಕಿ         ||೨||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಓದುಗರಿಗಾಗಿ ಕಾಯುತ್ತಿರುವ ಕನ್ನಡ ಪುಸ್ತಕಗಳು

-ಕಿಶೋರ್‍ ಚಂದ್ರ

ಹೈದರಬಾದಿನ ಹೃದಯ ಭಾಗದಲ್ಲಿರುವ ಅಫ್ಜಲ್ ಗಂಜ್‌ನ ಬಳಿಯಿರುವ ಆಸ್ಫಿಯ ಸರ್ಕಾರಿ ಕೇಂದ್ರ ಗ್ರಂಥಾಲಯದಲ್ಲಿ ೧೫೦೦೦ ಸಾವಿರ ಕನ್ನಡ ಪುಸ್ತಕಗಳಿದ್ದು ಓದುಗರಿಲ್ಲದೆ ಧೂಳು ಹಿಡಿದಿದೆ.  ಗ್ರಂಥಪಾಲಕರು ಹೇಳುವ ಪ್ರಕಾರ ಮೂರು ನಾಲ್ಕು ವರ್ಷಗಳಿಂದ ಯಾರೊಬ್ಬರೂ ಕನ್ನಡ ಪುಸ್ತಕಗಳನ್ನು ಓದಲು ಬಂದಿಲ್ಲ.  ಆದ ಕಾರಣ ಕನ್ನಡ ವಿಭಾಗ ಒಂದು ಕಸದ ತೊಟ್ಟಿಯಂತಾಗಿದೆ.  ಕನ್ನಡ ವಿಭಾಗವನ್ನು ಹಳೆಯ ವೃತ್ತಪತ್ರಿಕೆಗಳನ್ನು ಇಡಲು ಬಳಸಲಾಗುತ್ತಿದ್ದು ಯಾರೊಬ್ಬರೂ ಈ ಕೋಣೆಯ ಬಳಿ ಸುಳಿಯಲಾರರು.

ಆಸ್ಫಿಯ ಗ್ರಂಥಾಲಯ ನಿಜಾಮರು ಕಟ್ಟಿದ ಒಂದು ಭವ್ಯ ಗ್ರಂಥಾಲಯ ಕಟ್ಟಡ.  ಅದರಲ್ಲಿ ತೆಲುಗು ವಿಭಾಗ ಮತ್ತು ಆಂಗ್ಲ ವಿಭಾಗಗಳು ಸ್ವಚ್ಫವಾಗಿಯೇ ಇವೆ.   ಆದರೆ ಓದುಗರ ಕೊರತೆಯಿಂದಾಗಿ ಕನ್ನಡ ವಿಭಾಗವು ಆಪ್ತಮಿತ್ರ ಚಿತ್ರದಲ್ಲಿನ ಹಳೆಯ ಕೋಣೆಯಂತೆ ಕಂಡುಬರುತ್ತಿದೆ.  ಕನ್ನಡ ವಿಭಾಗದಲ್ಲಿ ಮೈಸೂರು, ಧಾರವಾಡ - ವಿಶ್ವವಿದ್ಯಾಲಯಗಳು ಪ್ರಕಟಿಸಿದ ಪುಸ್ತಕಗಳು, ಕನ್ನಡ-ಆಂಗ್ಲ ನಿಘಂಟುಗಳು, ಸಣ್ಣಕಥೆ, ಕಾದಂಬರಿ ಪುಸ್ತಕಗಳು ಲಭ್ಯ. 

ಕನ್ನಡ ಪುಸ್ತಕಗಳನ್ನು ಹೈದರಾಬಾದಿನ ನಿಜಾಮರ ಕಾಲದಲ್ಲಿನ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತಿತ್ತು, ಆ ಪುಸ್ತಕಗಳೂ ಇಲ್ಲಿ ಲಭ್ಯ.  ಇಲ್ಲಿ ಅಪರೂಪದ "ಹೈದರಾಬಾದ ಸಮಾಚಾರ" ೧೯೪೧-೪೨ ರಲ್ಲಿ ಪ್ರಕಟಗೊಂಡ ಕನ್ನಡ ಪತ್ರಿಕೆಯ ಪ್ರತಿಯೂ ಲಭ್ಯ.

ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ನೀಡುತ್ತಾರೆ.  ನೂರಾಐವತ್ತು ರೂಪಾಯಿ ನೀಡಿ ಸದಸ್ಯರಾಗಿ ಮುಂದಿನ ವರ್ಷದಿಂದ ಐವತ್ತು ರೂಪಾಯಿ ನವೀಕರಣ ಹಣ ನೀಡಬೇಕಾಗುತ್ತದೆ.  ಒಮ್ಮೆ ಎರಡು ಪುಸ್ತಕಗಳನ್ನು ಮಾತ್ರ ನೀಡಲಾಗುವುದು.  ಒಂದು ಪುಸ್ತಕದ ಬೆಲೆ ನೂರಾಐವತ್ತು ರೂಪಾಯಿಗಿಂತ ಹೆಚ್ಚಾದಲ್ಲಿ ಒಂದೇ ಪುಸ್ತಕವನ್ನು ವಿತರಿಸಲಾಗುವುದು.  ಪ್ರತಿ ಪುಸ್ತಕವನ್ನು ಹದಿನೈದು ದಿನಗಳವರೆಗೆ ಓದಲು ನೀಡಲಾಗುವುದು.  ನಂತರ ಮತ್ತೆ ನವೀಕರಿಸಬೇಕು.  ನವೀಕರಣ ತಡವಾದಲ್ಲಿ ದಿನಕ್ಕೆ ಪ್ರತಿ ಪುಸ್ತಕಕ್ಕೆ ೨೫ ಪೈಸೆ ದಂಡ ನೀಡಬೇಕಾಗುವುದು.

ಮಹಾತ್ಮಗಾಂಧಿ ಅಂತರರಾಜ್ಯ ಬಸ್ಸುನಿಲ್ದಾಣದ ಬಳಿ ಮೂಸಿ ನದಿಯ ದಂಡೆಯ ಮೇಲಿರುವ ಈ ಗ್ರಂಥಾಲಯದ ಬಳಿ ಹಲವಾರು ಕರ್ನಾಟಕ ಸಾರಿಗೆಯ ಬಸ್ಸುಗಳು ದಿನಂಪ್ರತಿ ಕನ್ನಡಿಗರನ್ನು ಹೈದರಾಬಾದಿಗೆ ತಲುಪಿಸುತ್ತಿದ್ದರೂ ಹೈದರಾಬಾದಿನ ಕನ್ನಡಿಗರು ಇತ್ತ ಮುಖಮಾಡದಿರುವುದು ಅರಿವಿನ ಕೊರತೆಯಿಂದಲೋ ಆಲಸ್ಯದಿಂದಲೋ ತಿಳಿಯದು.
     *****

ಪಾರಿವಾಳ ಮತ್ತು ಮನುಷ್ಯ

- ಅಬ್ಬಾಸ್ ಮೇಲಿನಮನಿ

ಆ ಊರು ಪ್ರಕ್ಷುಬ್ಧವಾಗಿತ್ತು.  ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು.  ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು.  ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾಡುತ್ತಿದ್ದವು.  ಒಂದಿಷ್ಟು ದಿನ ಶಾಂತ ವಾತಾವರಣ ನೆಲೆಸಿದ್ದರೆ ಧರ್ಮಾಂಧರ ಮನಸ್ಸುಗಳಿಗೆ ಕಸಿವಿಸಿ ಆಗುವುದು.  ಮೈಗಳ್ಳರು, ಪುಂಡ ಪೋಕರಿಗಳು, ಹರಾಮಿ ಗಬ್ಬು ಗೌಲಿನ ಆಸೆಬುರುಕರು ಆಯಾ ಧರ್ಮಗಳ ಲಾಂಛನ ಧರಿಸಿ ಭಯೋತ್ಪಾದಕ ತಲ್ಲಣ ಹುಟ್ಟಿಸುವುದರಿಂದ ದೇವರು, ಧರ್ಮಗಳೇ ನಡುಗ ತೊಡಗಿದ್ದರಿಂದ ಅಮಾಯಕರ ಆರ್ತತೆಯನ್ನು ಕೇಳುವವರೆ ಇರಲಿಲ್ಲ.

ಉರಿಯುವ ಮನೆಯಂಗಳ ಹಿರಿದುಕೊಳ್ಳುವ ಕ್ಷುದ್ರ ಚಾಳಿಯ ರಾಜಕಾರಣಿಗಳಿಂದ ಸೈತಾನರ ಅಟ್ಟಹಾಸ ಹಗಲೆಂಬೊ ಹಗಲನ್ನು, ರಾತ್ರಿಯೆಂಬೊ ರಾತ್ರಿಯನ್ನು ಭಯಾನಕಗೊಳಿಸಿದ್ದವು.  ಇವರೊಂದಿಗೆ ಕೈಜೋಡಿಸಿದಂತೆ ವದಂತಿ ಎಂಬ ಖೋಜಾ ಮಿಥ್ಯದ ಸಂಗತಿಗಳಿಗೆ ಜೀವದುಂಬಿ, ಬಣ್ಣತುಂಬಿ ಮನುಷ್ಯ ಸಂಬಂಧಗಳ ಮೇಲೆ, ಮಾನವೀಯತೆಯ ಮೇಲೆ ಗದಾ ಪ್ರಹಾರ ಮಾಡುತ್ತಲೇ ಚಾಕು, ಚೂರಿ, ಹತ್ಯಾರ-ತ್ರಿಶೂಲ, ಬಂದೂಕು-ಬಾಂಬು, ಆಸಿಡ್ಡು-ಚೈನು, ಹಿಂದೂ-ಮುಸ್ಲಿಮ, ಜೈನ-ಬೌದ್ಧ, ಕ್ರೈಸ್ತ-ಸಿಖ್, ಪಾರಸಿಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದ್ದವು.  ಧರ್ಮಗಳ ಗುತ್ತಿಗೆದಾರರು ಸತ್ತವರಲ್ಲಿ ಯಾರು ಹೆಚ್ಚುಯೆಂದು ಲೆಕ್ಕವಿಡುತ್ತಲೇ ಮತ್ಸರದ ಕೊಳ್ಳಿ ಉರಿಸುತ್ತಿದ್ದರು.

ಈ ಸಲದ ಗಲಭೆ ಭೀಕರವಾಗಿತ್ತು.  ಊರಿನ ಬೀದಿ ಬೀದಿಗಳಲ್ಲಿ ಪೋಲೀಸರ ಬೂಟು ಗಾಲಿನ ಸದ್ದು ಕೇಳಿಸುತ್ತಿತ್ತು.  ಜನರು ಮುಚ್ಚಿಕೊಂಡ ಬಾಗಿಲು ತೆರೆದು ಹೊರಬರುವ ಧೈರ್ಯ ತೋರಿರಲಿಲ್ಲ.  ಯಾರದೋ ಸ್ವಾರ್ಥಕ್ಕೆ ಅವರ ಬದುಕು ಹಿಂಸೆ ಅನುಭವಿಸತೊಡಗಿತ್ತು.  ಆದರೆ ಅವರೊಂದಿಗೆ ಗೂಡುಗಳಲ್ಲಿ ಬೆಚ್ಚಗಿರುತ್ತಿದ್ದ ಸುಂದರ ಪಾರಿವಾಳಗಳು ಮಾತ್ರ ಪ್ರಳಯಾಂತಕರ ಕ್ರೌರ್ಯ ಲೆಕ್ಕಿಸದೆ, ಪೋಲಿಸರ ಗುಂಡಿನ ಸದ್ದಿಗೆ ಧೈರ್ಯಗೆಡದೆ ಕರ್ಫ್ಯೂವನ್ನು ಉಲ್ಲಂಘಿಸಿ ನೆಲದಿಂದ ಆಕಾಶಕ್ಕೆ ಆಕಾಶದಿಂದ ನೆಲಕ್ಕೆ ಸ್ವಚ್ಛಂದವಾಗಿ ಹಾರಾಡಿಕೊಳ್ಳುತ್ತಿದ್ದವು.

ಪಾರಿವಾಳ ಸಾಕಿದ ಮನುಷ್ಯ ಕಿಟಕಿಯೊಳಗಿಂದಲೆ ಕಾಳು ತೂರಿ,

"ಪಾರಿವಾಳಗಳೇ, ಊರಲ್ಲಿ ಕರ್ಫ್ಯೂ ಇದೆ.  ನೀವು ಗೂಡು ಬಿಟ್ಟು ಹೋಗಬೇಡಿರಿ" ಎಂದಿದ್ದ.

"ನಮಗೆ ಬಂಧನ ಹಿಡಿಸುವುದಿಲ್ಲ ಹಾರುವುದು ನಮ್ಮ ಸಹಜ ಸ್ವಭಾವ."

"ಜನರ ಗಲಭೆ, ಗುಂಡಿನ ಸದ್ದು ನಿಮಗೆ ಭಯ ತರುವುದಿಲ್ಲವೆ?"

"ನಾವು ಮನುಷ್ಯರಂತಲ್ಲ."

"ಅಂದರೆ?"

"ಮನುಷ್ಯರು ಅತ್ಮತೃಪ್ತರು.  ಅವರಿಗೆ ಗಲಭೆ ಮುಖ್ಯ.  ನಮಗೆ ಶಾಂತಿ ಮುಖ್ಯ."

"ಊರು ಆತಂಕದಲ್ಲಿರುವಾಗ ನೀವು ಶಾಂತಿಯಿಂದ ಇರಲು ಹೇಗೆ ಸಾಧ್ಯ?"

"ನಮ್ಮಲ್ಲಿ ಮತೀಯ ಭಾವನೆ ಇಲ್ಲ ಅದಕ್ಕೆ."

"ನಾವೂ ನಿಮ್ಮಂತೆ ಇರಲು ಏಕೆ ಸಾಧ್ಯವಾಗುವುದಿಲ್ಲ?"

"ನಮಗೆ ಈ ಜಗತ್ತು ಒಂದೇ.  ಇಲ್ಲಿನ ಗಾಳಿ, ನೀರು, ಬೆಳಕು ಒಂದೆ.  ನಾವು ಅನೇಕ ಸಲ ಮಸೀದಿಯ ಮಿನಾರುಗಳಲ್ಲಿ ಕುಳಿತು ಇಮಾಮನ ಕುರ್‌ಆನ್ ಉಕ್ತಿ ಕೇಳುತ್ತೇವೆ.  ಮತ್ತೆ ಕೆಲವು ಸಲ ಮಂದಿರದ ಗೋಪುರದ ಮೇಲೆ ಕುಳಿತು ವೇದ ಉಪನಿಷತ್ತುಗಳ ಸಾರ ಅರಿಯುತ್ತೇವೆ.  ಇನ್ನೊಮ್ಮೆ ಚರ್ಚಿನ ಗಂಟೆಯ ಬಳಿ ಕುಳಿತು ಫಾದರನ ಪ್ರೀತಿಯ ಸ್ತುತಿ ಆಲಿಸುತ್ತೇವೆ.  ದೇವರು ದಯಾಮಯ.  ನಮಗೆ ಅಂಥ ಭಾಗ್ಯವನ್ನು ಕರುಣಿಸಿದ್ದಾರೆ" ಎಂದು ಪುರ್‍ರನೆ ಆಕಾಶದತ್ತ ಪಾರಿವಾಳ ಹಾರಿ ಹೋದವು.

ಕಿಟಕಿಯ ಸರಳುಗಳ ಹಿಂದೆ ನಿಂತ ಮನಷ್ಯ ಮುಖ ತಗ್ಗಿಸಿದ್ದ.

                        *****

ಕೀಲಿಕರಣ: ಕಿಶೋರ್‍ ಚಂದ್ರ

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ

- ಶಿಶುನಾಳ ಶರೀಫ್

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ
ನೀರೊಳಗೆ ಕರಗಿ ಸುಟ್ಟು  ಹೋಯ್ತು  ಸುಣ್ಣಾ                                   ||ಪ||

ಸತ್ಯವಿದು ಮಿಥ್ಯವಲ್ಲ  ತಿಳಿಯೋ ಕಾಮಣ್ಣಾ                                    ||ಅ.ಪ||

ಹೊನ್ನು ಹೆಣ್ಣು ಮಣ್ಣು  ಈ ಮೂರು  ಸುಳ್ಳಣ್ಣಾ
ತಿಳಿದುನೋಡು  ಗುರುವು ಕೊಟ್ಟ  ಅವು ಮೂರು ಕಣ್ಣಾ                      ||೧||

ಕಳವ ಕಳಕೊಂಡೆಲ್ಲೊ  ಕಾಮಣ್ಣಾ
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ                                   ||೨||

ನೀರೊಳಗಿ ಕರಗಿ ಸುಟ್ಟಂಗಾತೋ ಸುಣ್ಣಾ
ಶಿಶುನಾಳ ಶರೀಫಗೆ ಹಾಲು ಅನ್ನ ತಪ್ಪದೆ ಅರ್ಪಿಸುವೆ  ಮುಕ್ಕಣ್ಣಾ      ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಜಡುಗುಡ್ಡಿ ಜಡ್ಡಿ ನಕ್ಕ
ನನ್ನ ನೋಡಿ ಚಂದ್ರ ನಕ್ಕ ||

"ಯಾಕಪ್ಪೋ" ಅಂದ್ರೆ
ಅಂದ "ಆದೆಲ್ಲೊ ಮೆಂಬ್ರು" ||

ಜಡುಗುಡ್ಡಿ ಜಡ್ಡಿ ನಕ್ಕ
ನನ್ನ ನೋಡಿ ಸೂರ್ಯ ನಕ್ಕ ||

"ಯಾಕಪ್ಪೊ" ಅಂದ್ರೆ
ಅಂದ "ಆದೆಲ್ಲೊ ಮೆಂಬ್ರು" ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಕರುನಾಡು

- ರವಿ ಕೋಟಾರಗಸ್ತಿ

ಕನ್ನಡವೇ.. ನನ್ನ ಉಸಿರು
ಕನ್ನಡವೇ.. ನಮ್ಮ ಹಸಿರು

ಕನ್ನಡದಿ ನಾವುಗಳು
ಏಳ್ಗೆಯನು ಸಾಧಿಸಲು
ಜೀವನವು ಸಾರ್ಥಕವು

ಕನ್ನಡದ ಭೂಮಿಯಲಿ
ಅನ್ನ, ನೀರು, ಕನ್ನಡವಾಗಿಸಿ
ಬೆಳೆದು ಬಾಳುತಿರುವ ಕನ್ನಡಿಗರು

ಪ್ರಾಣವನು ನೀಡಿಯಾದರೂ
ಉಳಿಸಬೇಕು ಕನ್ನಡವಾ...
ಜೀವನ ತೊರೆದಾದರೂ
ಬೆಳೆಸಬೇಕು ಕನ್ನಡವ...

ಕನ್ನಡ ಮಂತ್ರವರಿಯದೇ
ನಾವಾಗಲಾರೆವು
ಕರುನಾಡಿನ ಕಲಿಗಳು...
ಉಳಿಸಲಾರೆವು ನಾಡು-ನುಡಿ ಸಂಸ್ಕೃತಿಯ
ಈ ಸತ್ಯ ಅರಿತಾಗಲೆ...
ಈ ನಾಡು ಕರುನಾಡು

         ***

ಕೀಲಿಕರಣ: ಕಿಶೋರ್‍ ಚಂದ್ರ

ಸಾಮ್ರಾಜ್ಞಿ

-ರವಿ ಕೋಟಾರಗಸ್ತಿ

ತುಂಬಿದ ಸಿರಿಯ ಸೊಬಗಿನಲಿ
ಗಿರಿವನ ಬೆಟ್ಟಗಳ ಹಸಿರಲಿ
ಕನ್ನಡದ ಗಡಿಯಲಿ
ಕನ್ನಡಮ್ಮನ ಅಳಲು ಆಲಿಸುವವರಿಲ್ಲ

ಮೆರೆಯಬೇಕಿದ್ದ ಸಾಮ್ರಾಜ್ಞಿ
ಬೆಂಡಾಗುತಿಹಳು ಬವಣೆಯಿಂದ
ಜೋಭದ್ರ ನಾಯಕಮಣಿಗಳನು
ಪಡೆದ ಕನ್ನಡನಾಡಿನ ಚಿತ್ರವ ಕಂಡು
ಕಣ್ಣೀರಿನ ಹೊಳೆ ಹರಿಸುತಿಹಳು

ಕಣ್ಣು ತೆರೆಯಿರಿ ಕನ್ನಡ ಕುವರರೆ
ಅಳಿಯುತಿಹ ಕನ್ನಡ ಉಳಿಸಿರಿ
ಪರಭಾಷೆಯ ದಳ್ಳುರಿಯ ಶಮನಗೊಳಿಸಲು
ಕಂಕಣಕಟ್ಟಿ ಸನ್ನದ್ಧರಾಗಿರಿ

ವೀರಾವೇಷದಿ ಬರಿ ಘೋಷಣೆ ಕೂಗುತಾ
ನಾಯಕರ ಪೊಳ್ಳು ಭಾಷಣ ಕೇಳುತಾ
ಮನನೊಂದು ಮಮ್ಮಲ ಮರಗುತಿಹಳು...

ಗಡಿ ನಾಡಿನ ಉದ್ದಕ್ಕೂ
ಝೇಂಕರಿಸುತಿಹುದು ಶೋಕಗೀತೆ
ವೇದನೆಯ ಶಮನಗೊಳಿಸುವಿರಾ
ತಾಯಿ ಎದುರನೋಡುತಿಹಳು
ಕನ್ನಡ ಕುವರರ ಶಕ್ತಿ-ಯುಕ್ತಿಗಳನು

         ***

ಕೀಲಿಕರಣ: ಕಿಶೋರ್‍ ಚಂದ್ರ

ಕೃಷಿ

- ಅಬ್ಬಾಸ್ ಮೇಲಿನಮನಿ

ಅದೊಂದು ಪುಟ್ಟ ಗ್ರಾಮ.  ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  ಸನ್ಮಾನಿತನಾದವನು ಹೆಸರಾಂತ ಕವಿ.  ಅವನೂ ಅದೇ ಹಳ್ಳಿಯವನು.  ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು.  ಮತ್ತು ಸಂಭ್ರಮದಿಂದ ಕವಿಗೆ ಶಾಲು ಹೊದಿಸಿ, ಹಾರ ಹಾಕಿ, ಅಮೂಲ್ಯ ಕಾಣಿಕೆಯೊಂದಿಗೆ ಸನ್ಮಾನಿಸಿದ್ದರು.

ಸಮಾರಂಭದಲ್ಲಿ ಆರಂಭದಿಂದ ಕೊನೆಯತನಕ ಕವಿಯ ಸಾಹಿತ್ಯ ಕೃಷಿಯ ಕುರಿತು ಪ್ರತಿಯೊಬ್ಬರು ಮಾತನಾಡಿದರು.  ಘನವಾದ ಶಬ್ದಗಳಿಂದ ಕವಿಯೂ ತನ್ನ ಕಾವ್ಯಕೃಷಿ ಕುರಿತು ಮಾತನಾಡಿದ.  ಅವನು ವೇದಿಕೆ ಇಳಿದು ಬರುತ್ತಿದ್ದಂತೆ ಕಾತರದಿಂದ ಹತ್ತಿರ ಬಂದ ರೈತನೊಬ್ಬ "ಏ, ಕವಿ ನಂದು ಗುರ್ತು ಹತ್ತೇನೊ?" ಎಂದ.  ಅವನ ಧ್ವನಿಯಲ್ಲಿ ಹುಂಬತನವಿತ್ತು.  ಅದನ್ನು ಯಾವಾಗಲೋ ಕೇಳಿದ, ಅವನನ್ನು ಎಲ್ಲೋ ನೋಡಿದ ನೆನಪು.  ಒಮ್ಮೆ ದಿಟ್ಟಿಸಿ ನೋಡಿ "ನೀವು ಯಾರು?" ಎಂದು ಘನಗಂಭೀರವಾಗಿ ಕೇಳಿದ ಕವಿ.

"ಈಗ ನೀ ದೊಡ್ಡ ಕವಿಯಾಗಿಯಪ್ಪ.  ನನ್ನಂಥ ಹಳ್ಳಿಯಾಂವ ನಿನ್ಗೆ ನೆಪ್ಪ ಹ್ಯಾಂಗಾಗಬೇಕು.  ನಾ ನಿನ್ನ ಕೂಡ ಗೌಂಟಿ ಸಾಲ್ಯಾಗ ಕಲ್ತಾಂವ" ಎಂದ ರೈತನನ್ನು ಒಂದು ಕ್ಷಣ ದಿಟ್ಟಿಸಿದವನೇ ಕವಿ "ನೀನು ಚೆನಮಲ್ಲು" ಎಂದ.  "ಹೌದೋ ವಾಮನ" ಎಂದು ಹಿಗ್ಗಿಕೊಂಡ ರೈತ.

"ಹೌದೋ, ನಿನ್ನ ಮಂಜಾಳ ಹೋಗ್ಲಿ" ಎಂದು ಕವಿಯ ಬೆನ್ನಿಗೆ ಲಘುವಾಗಿ ಗುದ್ದಿ ನಕ್ಕ ರೈತ.  "ನಿನ್ನೋಡಿ ಬಹಳ ದಿನಾ ಆತು" ಎನ್ನುತ್ತ ರೈತನೊಂದಿಗೆ ಹೆಜ್ಜೆ ಹಾಕಿದ ಕವಿ.  ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತ ಹಾದಿ ತುಳಿಯುತ್ತಿದ್ದಂತೆ ರೈತ ಕವಿಯನ್ನು ಕೇಳಿದ.

"ನಿಮ್ಮ ಜಮೀನಿನ್ಯಾಗ ಏನೇನು ಬೆಳೀತಿಯಪಾ ನೀನು?"

"ನಮ್ದು ಜಮೀನಽಽ ಇಲ್ಲ."

"ಮತ್ತ ಕೃಷಿ ಮಾಡ್ತೀನಿ ಅಂತ ಭಾಸನದಾಗ ಹೇಳ್ದಿ.  ನಿನ್ನ ಬಗ್ಗೆ ಮಾತಾಡಿದವರೂ ನಿನ್ನ ಕೃಷಿ ಬಗ್ಗೆ ಹೇಳಿದ್ರು" ಸೋಜಿಗ ವ್ಯಕ್ತಪಡಿಸಿದ ರೈತ.

"ನಂದು ಸಾಹಿತ್ಯ ಕೃಷಿ!" ಎಂದ ಕವಿ.

"ಅಂದ್ರ ಅದಕ್ಕ ಯಾವ ಬೀಜ ಬಿತ್ತಿ, ಯಾವ ಗೊಬ್ಬರ ಹಾಕ್ತಿ?" ಕುತೂಹಲವಿತ್ತು ರೈತನ ದನಿಯಲ್ಲಿ.

"ಬೀಜ ಇಲ್ಲ, ಗೊಬ್ಬರ ಇಲ್ಲ, ನೀರೂ ಇಲ್ಲದ ಕೃಷಿ ನಂದು"

"ಅದೆಂತ ಕೃಷಿನೋ ಮಾರಾಯ?"

"ಕಾವ್ಯ, ಕಥಿ, ಕಾದಂಬರಿ, ನಾಟಕ, ವಿಮರ್ಶೆ ಬರೀತೀನಿ."

"ಅದರಿಂದ ನಿನಗೇನು ಲಾಭ?"

"ಹೆಸರು, ಕೀರ್ತಿ, ಪ್ರತಿಷ್ಠೆ, ಗೌರವ, ಸನ್ಮಾನ."

"ಮತ್ತೆ ನಿನ್ನ ಸಂಸಾರಕ ಏನು ಮಾಡ್ತಿ?"

"ನಾನು ಕಾಲೇಜಿನ್ಯಾಗ ರೀಡರ್‍ ಇದ್ದೀನಿ."

"ಅಂದ್ರ ದೊಡ್ಡ ಪಗಾರನಽಽ ಇರಬೇಕಲ್ಲ."

"ಹೌದು."

"ಬಂಗ್ಲೇನೂ ಕಟ್ಟಿಸಿರಬೇಕಲ್ಲ."

"ಹೂಂ."

"ಬಂಗ್ಲೆದಾಗ ಕುಂತು ಕಥಿ, ಕವನ ಬರೀತಿ ಅನ್ನು."

"ಹೂಂ."

"ಅದರಿಂದ ಉಪಯೋಗವೇನು?"

"ಜನರ ಮನಸ್ಸಿಗೆ ಆನಂದ, ಹಿತ."

ಹೊಲ, ಬೀಜ, ಬೆವರು, ಫಲದ ತನ್ನ ಕೃಷಿಯನ್ನು ರೈತ ಕವಿ ಕೃಷಿಯೊಂದಿಗೆ ಸಮೀಕರಿಸಿಕೊಂಡು ಯೋಚಿಸಿದ.  ಕೊನೆಗೆ ಕೇಳಿದ "ನಿನ್ನ ಕೃಷಿಯಿಂದ ಹಸಿದ ಹೊಟ್ಟೆಗೆ, ಕಷ್ಟದ ಜೀವನಕ್ಕೆ ಎಂತ ಉಪಯೋಗ ಆಗತ್ತೊ ವಾಮನ?"

ಕವಿ ದಿಙ್ಮೂಡನಾದ.
         *****
ಕೀಲಿಕರಣ: ಕಿಶೋರ್‍ ಚಂದ್ರ

ಲಂಚದ ಮನೆ

- ಅಬ್ಬಾಸ್ ಮೇಲಿನಮನಿ

ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ.  ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ.  ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು.

ಆನಂದಪ್ಪ ಒಬ್ಬ ಇಂಜಿನಿಯರ್‍.  ಸರಕಾರಿ ಹುದ್ದೆಯಲ್ಲಿದ್ದ.  ತಾನು ಕಟ್ಟಿಸುವ ಮನೆ ಭೂಮಿಯ ಮೇಲಿನ ಸ್ವರ್ಗಧಾಮದಂತಿರಬೇಕೆಂದು ಕನಸು ಕಂಡಿದ್ದ.  ಅವನ ಕೈ ಕೆಳಗಿನ ನಾಲ್ಕಾರು ಜನ ಇಂಜಿನಿಯರ್‌ಗಳು ಆ ಕನಸಿನ ಸಾಕಾರಕ್ಕಾಗಿ ಸತತವಾಗಿ ಪರಿಶ್ರಮಿಸತೊಡಗಿದ್ದರು.

ಕೆಲವು ಕಂಟ್ರಾಕ್ಟರರು ಆನಂದಪ್ಪ ಹೇಳದಿದ್ದರೂ ಮನೆಯ ಕಟ್ಟಡಕ್ಕೆ ಬೇಕಾಗುವಷ್ಟು ಕಬ್ಬಿಣ, ಸಿಮೆಂಟು, ಕಲ್ಲು, ಉಸುಕು, ಕಿಟಕಿ, ಬಾಗಿಲು ಪೂರೈಸಿದ್ದರು.  ಗೌಂಡಿಗಳು ತಮ್ಮ ಶ್ರಮದ ಬೆವರನ್ನು ಕಟ್ಟಡಕ್ಕೆ ಹನಿಸುತ್ತ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.

ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ.  ಮನೆ ಮಾತ್ರ ಸುಂದರವಾಗಿರಬೇಕೆಂದು ಇಂಜಿನಿಯರ್‍ ಪತ್ನಿ ಪದೆ ಪದೆ ಹೇಳುತ್ತಿದ್ದಳು.  ಅವಳ ಮನಸ್ಸಿಗೆ ಬೇಸರವೆನಿಸಿದರೆ ಕಟ್ಟಡವನ್ನು ಕೆಡವಿ ಹಾಕಲಾಗುತ್ತಿತ್ತು.  ಇಂಜಿನಿಯರಿಂದ ಶುಕ್ರದೆಸೆ ಅನುಭವಿಸಿದ್ದ ಕಾಂಟ್ರಾಕ್ಟರರು ಒಂದು ಚಕಾರ ಶಬ್ದ ಆಡದೇ ಅವಳ ನಿರ್ದೇಶನಗಳನ್ನು ಪಾಲಿಸುತ್ತಿದ್ದರು.

ಕೊನಗೂ ಮನೆ ತಯಾರಾಯಿತು.  ಎಂಥ ಅಪರೂಪದ ಮನೆ ಅದು!

ಒಳ-ಹೊರ ಗೋಡೆಗಳಿಗೆ ಸಂಗಮವರಿ ಕಲ್ಲುಗಳನ್ನು ಹೊರಿಸಲಾಗಿತ್ತು.  ನೆಲದ ಹಾಸುಗಲ್ಲುಗಳಲ್ಲಿ ನಡೆದಾಡುವವರ ಪ್ರತಿಬಿಂಬ ಕಾಣಿಸುತ್ತಿತು.  ತೇಗ-ಗಂಧದ ಕಿಟಕಿ, ಬಾಗಿಲುಗಳು ಹೊಸ ವಿನ್ಯಾಸದೊಂದಿಗೆ ಮನಮೋಹಕವಾಗಿದ್ದವು.  ಮನೆ ನೋಡಿದವರೆಲ್ಲ ಬೆರಗುಗೊಂಡು ಅದ್ಭುತ! ಎಂದು ಬಣ್ಣಿಸುವರು.

ಅಂತೂ ಆ ಮನೆ ಗೃಹ ಪ್ರವೇಶಕ್ಕೆ ಸಿದ್ಧಗೊಂಡಿತು.

ಇಂಜಿನಿಯರ್‍ ಪತ್ನಿ ಮೂಹೂರ್ತ ಗೊತ್ತುಪಡಿಸಲು ಕಾರು ಹತ್ತಿ ಜೋಯಿಸರ ಮನೆಗೆ ಹೋದಳು.  ತಿರುಗಿ ಬರುವಾಗ ರಸ್ತೆಯ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲಿಯೇ ಅಸುನೀಗಿದ್ದಳು.  ಹೆಂಡತಿಯ ಸಾವಿನ ಸುದ್ದಿ ಕೇಳಿದ್ದೆ ತಡ ಇಂಜಿನಿಯರ್‍ ಸಾಹೇಬರು ಹಠಾತ್ತನೆ ಹೃದಯಾಘಾತಕ್ಕೆ ಕುಸಿದು ಬಿದ್ದರು.

ಆ ಚೆಂದದ ಮನೆಯಲ್ಲಿ ಬದುಕುವ ತೀವ್ರ ತುಡಿತವಿದ್ದ ಗಂಡ-ಹೆಂಡತಿ ತಣ್ಣಗೆ ಸ್ಮಶಾನದ ಮಣ್ಣಲ್ಲಿ ಮಲಗಿದರು.  ಮನೆಯನ್ನು ಹೊಗಳಿದ ಜನರೆ "ಇದು ಗೃಹದೋಷದ ಪ್ರಭಾವ!" ಎಂದರು.
      *****
ಕೀಲಿಕರಣ: ಕಿಶೋರ್‍ ಚಂದ್ರ

ಗೆಳೆಯ

-ರವಿ ಕೋಟಾರಗಸ್ತಿ

ಮುಂಜಾವಿನಮಂಜಿನಂತೆ
ತುಂತುರ ಮಳೆ ಹನಿಯಂತೆ
ನೈದಿಲೆಯ ಚಲುವಿನಂತೆ
ಒಲವು ಸೂಸುತಾ ಮರೆಯಾದೆ

ಸ್ನೇಹ-ಪ್ರೀತಿಗಳ
ಸಂಗಮದ ಸಾಕಾರದಲಿ
ಫಲಾಪೇಕ್ಷ ಬಯಸದ
ನಿರ್‍ಮಲ ಸ್ನೇಹ ಸೇತುವೆ

ಬದುಕು-ಬವಣೆಗಳೆನ್ನದೆ
ಜನಸ್ಪಂದನೆಯಲಿ ಸಂತಸ ಕಾಣುತ
ನಂಬಿಗೆಯ ಬಂಧನದ
ಬಾಂಧವ್ಯದ ಕ್ಷೀರ... ಧಾರೆ...

ನಗುತ ಬೆರೆಯುತಲೆ
ಜತೆ ಜತೆ ಸಾಗುತ..
ಸಂತಸದ ಸಂಭ್ರಮದಿ
ಮರೆಯಾದ ಕಾಣದ ಸೆಳೆತಕೆ

ಹಲವು ಹತ್ತು ಕನಸುಗಳ
 ಕನ್ನಡ ಮರಾಠಿಗರ ಮನಗೆದ್ದ
ಗರಿ ಮುಡಿಸುವ ಗೆಳೆತನದ
ಸುಧಾಮ-ಸಂಕಷ್ಟದ... ಚಾಣಕ್ಯ

ಪಂಚಭೂತದಲಿ ಲೀನವಾಗಿ
ಬದುಕು ಭವ ಗೆದ್ದವ
ಅಮರ ಸಂಜೀವಿನಿಯಾದೆ
ಸದಾ ಸ್ನೇಹದ ಸಾಕಾರದಲಿ

ಉದಯಿಸುವ ರವಿಯಾಗಿ
ಬಾಳಿದ ಕೊನೆಗಳಿಗೆ ತನಕ
ಕತ್ತಲೆದೂಡುತ ಬೆಳಗುತಲೆ
ಮರಳದ ನಾಡಿಗೆ ನಡೆದೆ

ಸುಳಿದಾಡುತ ನೆನಪು
ಅಗಲಿಕೆಯ ನೋವಲಿ
ಅಂತರಾಳದ ಆತ್ಮೀಯತೆಗೆ
ಇರಿಯುತ ಕೆದುಕುತಿಹದು

         *****

ಕೀಲಿಕರಣ: ಕಿಶೋರ್‍ ಚಂದ್ರ

ನಡೆನುಡಿಯಿಂದ ನಾವು ನಡೆಯಬೇಕಣ್ಣಾ

- ಶಿಶುನಾಳ ಶರೀಫ್


ನಡೆನುಡಿಯಿಂದ  ನಾವು  ನಡೆಯಬೇಕಣ್ಣಾ
ದೇಹವಿದು  ತಮ ನಡುವೆ  ಬಿದ್ದು  ಹೋಗತೈತಣ್ಣಾ            ||ಪ||

ಭಜನೆಯ  ಮಾಡ್ವಾಗ   ಭೇದಭಾವ  ಬಿಟ್ಟು   ಭಜಿಸಬೇಕಣ್ಣಾ 
ಅಣ್ಣತಮ್ಮರೆಂದು ತಿಳಿಯಬೇಕಣ್ಣಾ                        ||೧||

ಪರ ಹೆಣ್ಣು ಮಕ್ಕಳು ಎದುರಿಗೆ ಬಂದರೆ ನಜರಿಡಬೇಕಣ್ಣಾ
ನಿನ್ನ  ಭಗಿನಿಯರೆಂದು ತಿಳಿಯಬೇಕಣ್ಣಾ                    ||೨||

ವಸುಧಿಯಲಿ  ಶಿಶುನಾಳಧೀಶನ ದಯವ ಗಳಿಸಬೇಕಣ್ಣಾ
ಗುರುಗೋವಿಂದನ ಧ್ಯಾನಮಾಡಣ್ಣಾ                        ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಕುರುಬರ ಕುರಿತು

ನೃತ್ಯ ರೂಪಕ- ಡಾ || ರಾಜಪ್ಪ ದಳವಾಯಿ

        - ೧ -

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

ಜಾತಿವಾದವ ದೂರವಿಟ್ಟು
ಜಾತಿ ಕೀಳರಿಮೆ ಬಿಟ್ಟು
ಲೋಕ ಧೈರ್‍ಯ ಸ್ಥೈರ್‍ಯಕೆ
ಮೂಕರಾದವರ ವಾಕ್ಯಕೆ ||

ನಮ್ಮ ಹಿರಿಮೆಯ ಸ್ಮರಣೆಯು
ಮುಗ್ದ ಜನರ ಕರುಣೆಯು
ಜನದ ನಡತೆಯೆ ಕನ್ನಡಿ
ಜಗದಸ್ವಾಸ್ಥ್ಯದ ಮುನ್ನುಡಿ ||

        - ೨ -

ಕುರುಬರೆನ್ನುತ್ತಾರೆ ನಮಗೆ ಕುರುಬರೆನ್ನುತ್ತಾರೆ
ಕಾಯುವವ ಕೊಲ್ವನಲ್ಲ ಕುರುಬನೆಂದರೆ ||

ಕುರಿ ಕಾಯ್ವ ಕಾರಣಕೆ ನಾವು ಕುರುಬರು
ದಡ್ಡರೆಂದು ನಮಗೆ ಹೇಳಿದವರು ಯಾರು ?
ಅಲ್ಲಣ್ಣ ನಾವು ಅದು ಖರೆ ಅಲ್ಲವಣ್ಣ
ನಮ್ಮ ಬುದ್ದಿ ಜಗದ ಹಿತಕೆ ಬೇಕೆಬೇಕಣ್ಣ ||

ಹಾಲುಮತದವರು ಎನ್ನುತಾರೆ ಹಾಲುಮತ
ಹಾಲಿನಂಥ ಮನಸು ಎಂಬುದು ಅದರರ್ಥ
ಕುರಿ ಹಾಲು ಮಂದೆ ಕಂಬಳಿ ಕೈಕಸುಬು
ಬೆವರು ಬಲ ನ್ಯಾಯ ನೀತಿ ನಮ್ಮ ಕಸುವು ||

        - ೩ -

ಪುರಾಣವುಂಟು ನಮಗೆ
ಭೂಮಿಗೆ ಬಂದೆವ್ಹೇಗೆ ||

ರುದ್ರ ವಿಲಾಸ ಪ್ರೇಮೋಲ್ಲಾಸ
ಗಿರಿಜೆ ಶಂಕರರ ಮಂದಹಾಸ
ತಾಂಡವ ಮೂರುತಿ ಲಯವಂತ
ಪ್ರೇಮ ಕರುಣೆಯ ಗುಣವಂತ ||

ಗಿರಿಜೆ ಶಂಕರರ ಶುಭವಿವಾಹ
ಧಾರೆಗೆ ಕೈಕೈ ಸತಿಪತಿಯ
ನೆರೆದಿಹ ದೇವತಾ ಸಮೂಹ
ಸಾಕ್ಷಿಗೆಲ್ಲ ಕ್ಷೀರ ಸುರಿಯೆ ||

ಮದುವೆಗೆ ಎರೆದ ಹಾಲನು
ಗಿರಿಜೆ ಮೊಗ ನೋಡಿ ಮರೆತನು
ಸುರಿಯಿತು ಧಾರೆ ಭೂಮಿಗೆ
ಕಾರಣವದು ನಮ್ಮ ಹುಟ್ಟಿಗೆ ||

        - ೪ -

ಮತ್ತೊಂದು ಕಥೆಯುಂಟು
ಶಿವಶಿವೆಯರ ವನದ ನಂಟು ||

ವನಬಳಲಿಕೆಯಿಂದ
ಶಿವೆಸ್ತನಗಳಿಂದ
ಸುರಿಯಿತು ಎದೆ ಹಾಲು
ಎಲ್ಲದೂ ನೆಲಪಾಲು ||

ಭೂಮಿಯ ಎದೆಹಾಲು
ಆಗದು ಮಣ್ಣಪಾಲು
ಮನ ಚಿಂತೆಯ ಶಂಕರ
ಹಿಡಿ ಮಣ್ಣಿಂದ ಚಿತ್ತಾರ ||

ಮುದ್ದಪ್ಪ ಮುದ್ದವ್ವ
ಗಂಡೆಣ್ಣು ಗೊಂಬೆರಡು
ದಿಟ್ಟಿಯಲಿ ಸೃಷ್ಟಿಸಿದ
ಭುವಿಯತ್ತ ಕಳುಹಿಸಿದ ||

ಶಂಕರ ಲೀಲಾ ವಿಲಾಸ
ನೆಲ ನೆರೆ ಹಾಲ ಮಾನಸ
ಹಾಲಾಹಲ ನುಂಗಿಬಿಟ್ಟ
ಜಗಕಮೃತವನೆ ಕೊಟ್ಟ ||

ಆ ಹಾಲು ಕುಡಿಯಲು ಬಂದೆವು
ಆ ಹಾಲು ಕಡೆಯಲು ಬಂದೆವು
ಆ ಹಾಲು ಬೆಳೆಯಲು ಬಂದೆವು
ಆ ಹಾಲು ಸಲಹಲು ಬಂದೆವು

ಕುರಿ ಕಾಯುವ ಮಂದಿ
ಹಾಲೆರೆಯಲು ಬಂದಿವಿ
ಲೋಕದಾ ಕೋಲಾಹಲ
ಮಾಡುವೆವು ಕೋಮಲ ||

        - ೫ -

ಕುರುಬರೆಂಬುದಕೆ ಪರ್ಯಾಯ ಹಲವುಂಟು
ಹಾಲುಮತೆವೆಂದು ಹೆಚ್ಚು ಚಾಲ್ತಿಯುಂಟು ||

ಕುರಿ ಪಾಲನೆ, ಪಶು ಪಾಲನೆ, ಹಾಲು ಪಾಲನೆ
ಎತ್ತರದ ಬೆಟ್ಟದಲಿ ವಾಸದವನೆಂಬ ಸ್ಪಷ್ಟನೆ
ಹೆಸರುಂಟು ದೇಶ ತುಂಬ ಬೇರೆ ಬೇರೆ
ಕುರುಬರು ಕುರುಬವಾಳು ಕುರುಂಬನ್ ಇರುಳಿಗರ್‍
ಇಡೈಯರ್‍ ಕುರುಂಬರನ್ ಹಟ್ಟಿಕಾರ ಪಾಲ್ ಧನಗರ್‍ ||

ಆರ್ಯ ಪೂರ್ವದ ಜನರು ನಾವು
ಶತಮಾನದವೆರಡರಲಿ ಟಾಲೆಮಿ ಬರೆದ
ಪಾಲಿ ಗ್ರಂಥಗಳಲುಂಟು ಉಲ್ಲೇಖ
ಅಂಧ ಅಂಧಕ ಅಂಡರರೆಂದೆಲ್ಲಾ ||

ಅಂಧಕ ವೃಷ್ಟಿಯೆಂಬೊಂದು ಹೆಸರು
ಟಗರು ಸಾಕುವರೆಂದಿದರ ಬೆಡಗು
ಸಿಲಪ್ಪದಿಕಾರಂನ ಇಡೆಯರ್‍ ಅಂಡರ್‍
ನಾವೆ ನಾವಲ್ಲಿಯ ಕುರುಂಬನ್ ವಡುಗರ್‍ ||

ಶತಮಾನ ಮೂರರಲಿ ತಮಿಳು ಕಾವ್ಯಗಳ
ಹಟ್ಟಿಕಾರ ಕುಲನಿಲಮನ್ನೆಯರ್‌ಗಳು
ಇವರು ಟಂಕಿಪ ನಾಣ್ಯಗಳೆ ಪ್ರಾಚೀನವು
ದಕ್ಷಿಣದ ನಾಡವರು ಆಳರಸರವು ||

ಉತ್ತರದಿ ಆಹೀರರು ಯಾದವರು
ಗಢರಿಯಾ ಪಾಲರು ರಾಜ್ಯವಾಳಿದರು
ಪಂಜಾಬ ಬಂಗಾಲ ರಾಜಾಸ್ತಾನ
ಇಂದ್ರಪ್ರಸ್ಥ ಕನೂಜ ಹಿಂದೂಸ್ತಾನ ||

ಕನ್ನಡ ಸಿರಿ ಮುಕುಟ ವಿಜಯನಗರ
ಮೂಲ ವಂಶಜರಲ್ಲಿ ಹಕ್ಕಬುಕ್ಕರು
ಮುಂದೆ ಆಳಿದ ರಾಜರಿಗೆ ಲೆಕ್ಕವಿಲ್ಲ
ಇವರ ಬಗೆಗೆ ಖಚಿತ ಚರಿತ್ರೆಯಿಲ್ಲ ||

ಆಳರಸರ ಚರಿತೆ ಕವಿ ಕೋಗಿಲೆ
ವಿಚಾರತೆಯಲ್ಲಿ ಕುದಿ ಬಾಂಡಲೆ
ಕಾಳಿದಾಸ ಕನಕದಾಸರೀರ್ವರು
ನಮ್ಮ ಬುದ್ದಿಶಕ್ತಿಯ ಧಾತರು ||

        - ೬ -

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದಿ ಸಾಹಿತ್ಯಶ್ರೀ ||

ಹೊಸದೃಷ್ಟಿ ಶಿವಶಕ್ತಿ ಬೆಸೆದ ಪ್ರತಿಭೆ
ಕಾಣದ್ದ ಕಂಡಂತೆ ಶಿವನ ಪ್ರಭೆ
ನವ ನೋನ್ಮೇಷ ಜಗದ ಬೆಳಕು
ಕಾವ್ಯ ಸೂರ್ಯನವನು ಎಲ್ಲ ದಿನಕು ||

ಹೂವು ಬೆಂಕಿಯ ಮಾಲೆಯ ಮಾಡಿ
ಪ್ರೀತಿ ಬಿತ್ತಿದ ಜಗಕೆ ನೋಡಿ
ಅಗ್ನಿಮಿತ್ರನು ಒಲಿದ ಮಾಲವಿಕೆಗೆ
ಮೋಹವೇ ಗೆದ್ದ ಕತೆಯು ಕೊನೆಗೆ ||

ದೇವತಾಶ್ರೀ ಊರ್ವಶಿ ಸುರಸುಂದರಿ
ಸಗ್ಗಕೇ ಹುಚ್ಚಿಡಿಸಿದ ಕಲಾಮಂಜರಿ ||

ಮುಗಿಲ ಕನ್ಯೆ ಪ್ರೇಮಿಸಿದಳು ಅಬ್ಬಬ್ಬಾ
ಮನುಜೇಂದ್ರ ಪುರೂವನ್ನು ಮನದಬ್ಬ
ನೆಲಮುಗಿಲ ಪ್ರೇಮದಲೆ ಬೆಸೆದನಲ್ಲ
ಇಂಥ ಕವಿಗೆ ಮತ್ತೊಬ್ಬ ಸಾಟಿಯಿಲ್ಲ ||

ಜಗದ ಮೇರು ಕೃತಿ ಶಾಕುಂತಲ
ಕಣ್ವಾಶ್ರಮದ ಮುಗುದೆಯಲ ||

ಬಂದನರಸ ದುಶ್ಯಂತ ಬೇಟೆಗೆಂದು
ಬೇಟವೇ ಬೆಸೆಯಿತು ಅವರನಂದು
ಕೊಟ್ಟನವನು ಆಹಾ! ನೆನಪಿನುಂಗುರ
ಬಾಲೆಯ ಎದೆಯೆಲ್ಲ ಕನಸಿನಂಬರ ||

ಮುನಿ ಮುನಿದ ಕಾರಣ
ಪ್ರಿಯನಲ್ಲಿ ರಾಜಕಾರಣ
ಮರೆತು ಮುಗುದೆಗೆ ಹಿಂಸೆ
ಶಾಪ ಕೂಪದಲಿ ನರಳಿಸೆ ||

ಅಮರ ಪ್ರೇಮದ ಕಾವ್ಯ
ಇಂದಿಗೂ ನವ ನವ್ಯ
ಪ್ರೇಮ ಪರಿಕಿಪ ಚಾಪ
ವಿರಹಾಗ್ನಿ ಎಸೆದ ಧೂಪ ||

ಸಕಲ ರಾಮಾಯಣದ ಮೊರೆ
ರಘುವಂಶ ಚರಿತದ ತಾರೆ
ಹಲವು ರಾಜರ ವರ್ಣನ
ಕಾವ್ಯ ಮಹತಿನ ಕರ್ಷಣ

ಸನ್ಯಾಸಿ ಶಿವನು ಸಂಸಾರಿಯಾದ
ಕಾರಣವದಕೆ ಕುಮಾರ ಸಂಭವಂ
ಮೋಹಿತರು ಶಿವ ಪಾರ್ವತಿ
ಸೃಷ್ಟಿಲಯ ಉದಯ ಜಗಕೆ ||

ತಪ್ಪು ಮಾಡಿದ ಯಕ್ಷ ಶಾಪಕೆ
ಕುಬೇರನ ತೊರೆದು ಬಹುದೂರಕೆ
ವಿರಹಿ ಯಕ್ಷ ಕಳಿಸಿ ಸಂದೇಶವ
ಮೇಘಗಳ ಕೈಲಿ ವಿರಹೋತ್ಸವ ||

ಪ್ರೇಮಿಗೆ ಕಾಮಿಗೆ ಮತ್ತೆ ವಿರಹಿಗೆ
ಋತು ಸಂಹಾರ ಚಿತ್ತ ಕೇಡ ಬಗೆ
ಸ್ತ್ರೀರೂಪವೇ ರೂಪ ಭೋಗ ಬಾಳು
ಕುಣಿದು ನಲಿದವೆಲ್ಲಾ ಋತುಗಳು ||

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದೀ ಸಾಹಿತ್ಯಶ್ರೀ ||

        - ೭ -

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

ಗುರುವಿನ ಮೊದಲೆ ಮುಕ್ತಿಪ್ರಾಪ್ತರು
ಗುರುವಂದಿತ ಶಿಷ್ಯ ಮಹಾಮಹಿಮರು
ಸಜ್ಜನಿಕೆ ಸರಳತೆ ಯುದ್ಧತ್ಯಾಗದಿಂದ
ಕಲಿತ ಪಾಠವೆಲ್ಲ ಬಾಳ ಶಾಲೆಯಿಂದ ||

ವೇದವನೋದಿ ಜ್ಞಾನಿಯಾಗಿ
ಪುರಾಣಗಳ ಐರಾವತವನೇರಿ
ಹರಿಭಕ್ತನಾಗಿ ಊರೂರನಲೆದು
ಕಾಗಿನೆಲೆಯಾದಿಕೇಶವನೊಲಿದು ||

ವ್ಯಾಸಕೂಟದಲ್ಲೆ ದಾಸಶ್ರೇಷ್ಠ
ಉಡುಪಿ ಕೃಷ್ಣಗೆ ಪವಾಡಪುರುಷ
ತಿರುಪತಿಯಲ್ಲೇ ವೈಕುಂಠ ಕಂಡ
ಕುಲ ಕುಲಕುವೆಂದವರ ಮಿಂಡ ||

ದಾಸರಲ್ಲೆ ಮಹಿಮ ಕವಿ ತಿಲಕ
ಲೇಖನಿ ಚಿತ್ರಿಸಿತು ಸಾರ ಹರಿಭಕ್ತಿ
ಕೃಷ್ಣಮಹಿಮೆ ಮೋಹನ ತರಂಗಿಣಿ
ನಳ ಚರಿತ್ರೆಯ ಪ್ರೇಮದ ದೋಣಿ ||

ಮಹಾಕೃತಿ ರಾಮಧಾನ್ಯ ಚರಿತದೊಳು
ರಾಗಿ ಭತ್ತಗಳ ಕಸುವಿನ ಜಗಳ
ಬಡವರನುರಾಗಿ ಬಲ್ಲಿದರ ನಿಲ ಹೋಗಿ
ರಾಮ ನೀಡಿದ ಪದವಿ ರಾಗಿ ಯೋಗಿ ||

ಮತಿಗೆ ನಿಶಿತ ಕೀರುತನೆ ತಂಬೂರಿ
ಲೋಕದ ಡೊಂಕನು ತೋರಿದ ದಾರಿ
ಕನಕ ಕನಕ ಅಯ್ಯಾ ಕನಕಯ್ಯ
ಇಂದಿಗು ಕುಲ ಕುಲವೆನ್ನುತಿಹರಯ್ಯ ||

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

        - ೮ -

ಬಿಳಿಯರ ವಿರುದ್ಧ ತಮ್ಮ ಉಳಿವಿಗೆ
ಹೋರಾಡಿ ಮಡಿದರಲ್ಲ ತಮ್ಮ ಇಂದೂರಿಗೆ ||

ಧನಗರ ರಾಜವಂಶವು ಮಧ್ಯ ಭಾರತದಿ
ಮಲಾರಿರಾವು ಅಹಲ್ಯಬಾಯಿ ಹೋಳ್ಕರ್‍ ಛಲದಿ
ದತ್ತಕ ಸಂಬಂಧಿ ಕಾನೂನು ವಿರೋಧಿ
ಬಂಡಾಯವೆದ್ದರು ಬಿಳಿಯರ ವಿರುದ್ಧದಿ ||

ಇತಿಹಾಸ ಪುಟಗಳಲಿ ಮಡಿದ ಧ್ರುವತಾರೆಗಳು
ಕರಣಿಕರ ಬರಹವಿರದ ಹಲ ಘಟನೆಗಳು
ಹೋರಾಟವನೆ ಮಾಡಿ ಜೀವ ಬಲಿ ಕೊಟ್ಟರು
ಅವರಿವರ ವಂಚನೆಗೆ ಹರಕೆ ಕುರಿಯಾದವರು ||

        - ೯ -

ವೀರ ಸಂಗೊಳ್ಳಿ ರಾಯಣ್ಣನೆಂಬ ಸರದಾರ
ಅವನ ಧೀರತೆಗೆ ಬೆಚ್ಚಿತೊ ಬಿಳಿ ಸರಕಾರ ||

ಕಿತ್ತೂರ ವಶಮಾಡಿ ಕಿರಿದೊರೆಯ ಪಟ್ಟ
ಮಾಡೆ ತೀರುವೆನೆಂದು ರಾಯಣ್ಣನ ಪಟ್ಟು
ಅದಕೆ ಅವ ಮೆರೆದ ಧೀರ ಸಾಹಸವ
ರಾಯಣ್ಣನೆಂಥಾ ಶೂರ ಸಿಂಹ ಶಕ್ತಿಯವ ||

ಗೆಳೆಯ ಗಜವೀರ ಸಿದ್ಧಿ ಸೈತನಾಗಿ
ಬಿಡಿ ತಾಲ್ಲೂಕ ಖಾನಾಪುರ ಸಂಪಗಾವಿಗೆ
ಬಿಚ್ಚುಗತ್ತಿ ಚನಬಸಯ್ಯ ಜತೆಗೂಡಿ
ಮುತ್ತಿಗೆ ಹಾಕು ಸುಟ್ಟರಲ್ಲ ಕಛೇರಿ ನೋಡಿ ||

ರಾಯಣ್ಣನ ಹಿಡಿದವರಿಗೆ ಮುನ್ನೂರು ರೂಪೈ
ಮೇಜರ್‍ ಪಿಕರಿಂಗ್ನ ಘೋಷಣ ಜನಕೆ ದುರಾಸೈ
ಅಮಲ್ದಾರ ಕೃಷ್ಣರಾಯ ಮಾಡಿ ಕುತಂತ್ರ
ಪಟೇಲ ಲಿಂಗನ ವೆಂಕನ ಗೌಡರಹತ್ರ ||

ಪಟೇಲರಿಬ್ಬರೂ ನಿಷ್ಠದಿನೈದು ದಿನ ರಾಯಣ್ಣಗ
ಅಣ್ಣನ ಬಂಟ ಲಖ್ಯಾನ ಮೂಲ್ಕ ಹಿಕ್ಮತ್ತಿಗ
ಹೊಳೇಲಿ ಸ್ನಾನ ಮಾಡುವಾಗ ಹಿಡಕೊಟ್ರೊ ಹುಲಿಯ
ಪಡೆದರಲ್ಲೊ ಘನಕಾರ್‍ಯಕ್ಕೆ ಮುನ್ನೂರುಪಾಯ ||

ಹಗ್ಗದ ಮಂಚಕೆ ಧೀರನ್ನ ಕಟ್ಟಿ ಹೊಯ್ದರ
ಧಾರ್‍ವಾಡಕೆ ನಿಸ್ಬತೆಂಬ ಕಲೆಕ್ಟರ್‍ ಹತ್ತಿರ
ಕಿತ್ತೂರ ನಾಡ ಬಿಡುಗಡೆಗೆ ತೊಡಗಿದಕೆ
ರಾಯಣನ ಅಪರಾಧೀನ ಮಾಡಿದರಾ ||

ಇಂಥಾ ಸೊರಗೆ ಸಂಪಗಾವಿಲಿ ನೇಣು
ಸರಕಾರಕ್ಯಾರೂ ಎದುರಾಡದಂತೆ ಗೋಣು
ಎಚ್ಚರಿಕೆ ಕೊಟ್ಟರೊ ಜನಕೆ ಅಣ್ಣಾ
ಕಿತ್ತೂರಿನ ಸಂಸ್ಥಾನ ಆಯಿತೊ ಮಣ್ಣಾ ||

ರಾಯಣ್ಣನಂಥ ಕಲಿ ಅದೆಂಥಾ ತಲಿ
ಐರಾಣವಾತು ಬಾಳು ಕಿತ್ತೂರಿಗಾಗಲ್ರಿ
ನಮಕ್ಕ ಹರಾಮರ ಸಪೋರ್ಟದಿಂದಲಿ
ಆದಾನಲ್ಲ ಬಲಿ!  ಅವನೆಂಥ ಕಲಿ ||

ವೀರ ರಾಯಣ್ಣನೆಂಥಾ ಸರದಾರ
ಮೆಚ್ಚಿ ಮಂದಿ ಹರಕೆ ಹೊರತಾರ
ಹುಟ್ಟೊ ಕಂದ ರಾಯಣನಾಗಲೆಂದು
ನಂಬೋದೆಂಗಣ್ಣ ಧೀರಾ ಸತ್ತನೆಂದು ||

        - ೧೦ -

ಗಾಂಧಿ ಕಾಲಕೆ ಮತ್ತೊಬ್ಬನಿದ್ದನಣ್ಣ
ತಳ ಹಾವೇರಿ ತಾಲುಕ ಸಂಗೂರಣ್ಣ
ಹೆಸರು ಕರಿಯಪ್ಪ ಸಂಗೂರನಂತಾ
ಕೇಳಿ ಮಂದಿ ಅವನ ಕಥಾನ ಕುಂತಾ ||

ಮೂಲ್ಕಿ ಪರೀಕ್ಷೆ ಪಾಸಾದ ಯುವಕ
ಓದಹತ್ತಿದ ಪತ್ರಿಕೆ ಗಾಂಧಿ ತಿಲಕ
ಇಪ್ಪತ್ತಾರನೆ ಇಸವಿಗೆ ತೊಟ್ಟ ಖಾದಿ
ಗುಮಾಸ್ತಗಿರಿ ಬಿಟ್ಟ ಕರೆಗೆ ಗಾಂಧಿ ||

ಸಿರಸಿ ಸಿದ್ಧಾಪುರ ಕರನಿರಾಕರಣದಾಗೆ
ಸಜೆ ಬಿದ್ದ ಮೂವತ್ತು ತಿಂಗಳ ಭಾಗಿ
ಕಾರವಾರ ವಿಸಾಪುರ ಜೈಲಿನೊಳಗ
ಗಾಂಧಿ ತರ ಮಾಡಿದ ಕೆಲಸ ಭಂಗಿ ||

ಮುವತ್ನಾಲ್ಕನೆ ಇಸವಿ ಬಿಡುಗಡೆಯಾದ
ಹುಬ್ಬಳ್ಳಿ ಶಹರದ ಬಾಲಿಕಾಶ್ರಮದ
ಹರಿಜನ ಕುಂಟು ಕನ್ಯೆ ಮದಿವ್ಯಾದ
ಗಾಂಧಿ ಸನಿಹ ಹೊಂಟರಿಬ್ಬರೂ ವಾರ್ಧಾ ||

ಗಾಂಧಿ ಸಹಚರ್ಯ ಸಿಕ್ಕ ಅದೃಷ್ಟ
"ಮೂಕ ಸೇವಕ"ರೆಂದಿವರು ಗಾಂಧಿಗಿಷ್ಟ
ಜೊತೆಗೆ ಜೇಸಿ ಕುಮಾರಪ್ಪ
ಗ್ರಾಮ ಸೇವಾ ನಿರತರಾದಲ್ಲಪ್ಪ ||

ಬಂದಿತಲ್ಲ ಕ್ವಿಟ್ ಇಂಡಿಯಾ ಚಳವಳಿ
ಮಾಡು ಇಲ್ಲವೇ ಮಡಿ ಎಂಬ ಬಳುವಳಿ
ಮೈಲಾರ ಮಹಾದೇವ ತಿಮ್ಮನಗೌಡ
ಹಂಸಭಾವಿ ರಾಮಣ್ಣರ ಜೊತೆಗೂಡಿ ||

ಕಾಡುಮೇಡು ನದಿ ತೀರದಡವಿ
ಧ್ವಂಸಮಾಡಿ ಸರಕಾರವ ಕೊಡವಿ
ನಿಗದಿ ನೆಲೆ ನೆಮ್ಮದಿಲ್ಲ ಊಟ
ದಿನಬೆಳಗಾದರೆ ಪೋಲೀಸ ಕಾಟ ||

ಕರಿಯಪ್ಪ ಕೊಟ್ಟ ಬೆಲೆ ಗಾಂಧಿಗೆ
ಗ್ರಾಮೋದ್ಧಾರದ ಪಾಠದ ಮತಿಗೆ
ಮಾಡಿ ಮಡಿಯುವಾ ಉಗ್ರತೆಗೆ
ಕರಿಯಪ್ಪನಂದೆಂಥ ತ್ಯಾಗ ಜತಿಗೆ ||

ಶಾಂತಿ ಶಿಸ್ತಿನ ಸಿಪಾಯಿಗೆ
ನಿತ್ಯ ಗ್ರಾಮದ ಸಫಾಯಿಗೆ
ಸಿಟ್ಟಿಗೆ ಬಾಂಬು ಮಾಡಲೋಗಿ
ಮುಂಗೈಯೇ ಹಾರಿ ಹೋಗಿ ||

        - ೧೧ -

ಸಹಕಾರ ಚಳವಳಿ ಕತೆಯು
ಕಾರಣವದಕೆ ಕಂಬಳಿಯು
ಮೊದಲಿಗೆ ಗದಗಾದಲ್ಲಿ
ಮಾದರಿಯದು ದೇಶದಲ್ಲಿ ||

ಸಿದ್ದನಗೌಡ ಪಾಟೀಲಜ್ಜ
ಸಹಕಾರಿ ಪಿತನಾದನಲ್ಲ
ಸಿರಿವಂತ ತಿಳಿದು ಬಾಳುವ
ತತ್ವವೊಂದ ಕೊಟ್ಟನಲ್ಲ ||

ಇದಕೆ ಬೇಕು ದೊಡ್ಡ ಗುಣವು
ಹಂಚಿ ಉಂಡ ಜನರು ನಾವು
ಕೂಡಿಟ್ಟು ಏನ ಒಯ್ದೆವು
ಬಡತನಕೆ ಸಾವು ತಂದೆವು ||

        - ೧೨ -

ಚರಿತೆಯ ಪುಟದಾ ಹೆಮ್ಮೆಗೆ
ಬದುಕುವ ಸಂಸ್ಕೃತಿ ಹಿರಿಮೆಗೆ
ಘನತೆ ಗೌರವದ ಬಾಳಿಗೆ
ಹೆಸರಾಗಿದೆ ನಮ್ಮಯ ಒಳಿತಿಗೆ ||

ನಮ್ಮ ಜನಗಳ ಚಾರಿತ್ರ್‍ಯ
ಬದುಕಿ ಮಾದರಿ ಪಾವಿತ್ರ್‍ಯ
ಹಾಲು ಕೆಟ್ಟರೂ ಹಾಲುಮತ
ಕೆಡದೆಂಬುದು ನೋಡ ಜನಮತ ||

ಬಿತ್ತಲಿ ಬೆಳೆಯಲಿ ಕೊಯ್ಲಿಗೆ
ಕರೆದರು ಜನರೆಲ್ಲ ಬೋಣಿಗೆ
ಮೊದಲ ಪೂಜೆ ಲಾಭ ವ್ಯಾಪಾರಿಗೆ
ಎಲ್ಲೆಲ್ಲೂ ಮಾನ್ಯತೆ ಕುರುಬರಿಗೆ ||

ಮುಗ್ಧತೆ ಇದ್ದಂಥೆ ಅಂಧಶ್ರದ್ಧೆ
ಹೊಸದನು ಕಾಣದ ಮಾಯಾನಿದ್ದೆ
ಕವಿದಿದೆ ನಮ್ಮಯ ಜನರನ್ನ
ಹುಡುಕಬೇಕು ಹೊಸ ಸೂರ್ಯನ್ನ ||

ನಮ್ಮಲ್ಲೂ ಇಹರು ಕೆಟ್ಟವರು
ಕೊಳ್ಳೆ ಲೂಟಿಯಿಂದ ದೊಡ್ಡವರು
ನಮಗಿಂದು ಬೇಕು ಒಳಿತು ಕೇಡು
ಅರಿತಾಗ ಬದುಕು ಹಸನೋಡು ||

ಬೆವರಿಗೆ ಬೆಲೆಯು ಸಿಗಬೇಕು
ಸರುವರ ಸಮನಾಗಿ ನಿಲಬೇಕು
ಕುರುಬರೆಂದರೆ ದಡ್ಡರಲ್ಲ
ಮಾನ್ಯರವರು ಸಮಾಜದಲ್ಲೆಲ್ಲ ||

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಇಳೆದಾಯಿ

- ಗಿರಿಜಾಪತಿ ಎಂ. ಎನ್
ಮಣಿದಿದೆ ವಿಶ್ವವು ನಿನ್ನ ಚರಣಕೆ
ಇಳೆದಾಯಿ ಶುಭದಾಯಿನಿ
ಮಣ್ಣ ಕಣಕಣ ರಮ್ಯ ತೋರಣ
ನಾಕದಂದಣ ಜಗ ಕಾರಣ.....

ಆದಿ ಅಂತ್ಯದಗೊಡವೆ ಸಲ್ಲದು
ಜೀವದೊಡವೆಯ ಶ್ರೀನಿಧಿ
ಮುನ್ನ ಬಾಳಿಗೆ ಭೀತಿ ಒಲ್ಲದು.....
ಭಾವದಕ್ಷಯ ತವನಿಧಿ......

ತಮದ ಬಸಿರಿಗೆ ಬೆಳಕಿನೌತಣ
ಬೆಳಕಿಗೆನಿತೋ ನವ್ಯದ ರಿಂಗಣ
ನವೋದಯದ ಶುಭೋದಯದಲೂ
ನಿತ್ಯ ಸಾಗಿದೆ ಕಾಲನ ಚಾರಣ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಮ್ಮ ನಿಜನೆಂಟ

- ಹಾರಾಸನಾ

ಬಹಳ ದಿನಗಳ ಪ್ರಯತ್ನದ ಫಲವಾಗಿ ಅದೊಂದು ಭಾನುವಾರ ಜೀನ ಮನೆಗೆ ತನ್ನ ಆರು ಸ್ನೇಹಿತರು ಬರುವರಿದ್ದರು. ಅವರೆಲ್ಲರು ‘ಜೀ’ ಮನೆಯಲ್ಲಿ ಸೇರಿ, ಅಲ್ಲಿಂದ ಸುತ್ತಾಡಲು ಹೋಗುವುದೆಂದು ನಿರ್ಧಾರವಾಗಿತ್ತು. ನಮ್ಮಲ್ಲಿ ಕೆಲವರಿಗೆ ಹೆಸರಿಸುವ ಬದಲು ವಾಕ್ಯೈಸುವುದೂ ಉಂಟು. ಉದಾಹರಣೆಗೆ ‘ಜೀ’ ಸ್ನೇಹಿತರಲ್ಲಿ ಒಬ್ಬನ ಹೆಸರು ಕಲಿಕಲ್ಮಷನಾಶಕಾಗ್ರಜಾನುಜ-ಪಾದಸೇವಾನುಗ್ರಹಾನುಸಂಜಾತ. ಹಾಗಾಗಿ ಅವರೆಲ್ಲರ ಪೂರ್ಣ ಹೆಸರುಗಳನ್ನು ಕರೆಯುವುದು ಕಷ್ಟಸಾಧ್ಯವಾದ್ದರಿಂದ, ಮೊದಲ ಅಕ್ಷರವನ್ನು ಮಾತ್ರ ಪರಿಗಣಿಸಿದರೆ, ಆ ಆರ್ವರು ಕ, ಕಿ, ನಾ, ಮೂ, ಚ ಹಾಗು ಮ ಎಂದಾಗುತ್ತಾರೆ.

ನಮ್ಮ ದೇಶದ ಆದರ್ಶ ಅತಿಥಿ ದೇವೋಭವದಂತೆ ಸ್ನೇಹಿತರನ್ನು ಔತಣಿಸಲು ಜೀನು ಸಜ್ಜಾದ.  ನಿಗದಿತ ವೇಳೆಗೆ ಗೆಳೆಯರು ಆಗಮಿಸಿ, ಉಭಯಕುಶಲೋಪರಿಗಳು ಮುಗಿದು, ಹಳೆಕಥಾಲಾಪಗಳೂ ಕಳೆದು ನಂತರ ಊಟದ ರಜ್ಜಾಟವೂ ಮುಗಿದ ಮೇಲೆ, ಎಲ್ಲರೂ ಹೊರ-ಹೊರಡಲನುವಾದರು. ಆ ವೇಳೆಗೆ ಜೀನ ಕುಟುಂಬಕ್ಕೆ ಹತ್ತಿರರಾದ ನೆಂಟರೊಬ್ಬರು ಆಗಮಿಸಿದರು. ಎಲ್ಲರೂ ಕಕ್ಕಾಬಿಕ್ಕಿ.  ಸಾವರಿಸಿಕೊಂಡು, ಅವರೊಡನೆ ಮಾತಿಗಿಳಿದರು. ಸ್ವಲ್ಪಕಾಲ ಹರಟೆಯಾದಮೇಲೆ, ಬಂದ ನೆಂಟರು ತಾವು ಸ್ವಲ್ಪ ವಿಶ್ರಮಿಸುವುದಾಗಿ ಹೇಳಿ, ಎಲ್ಲರಿಗೂ ಹೊರಗೆ ಸುತ್ತಾಡಿಬರುವಂತೆ ಸೂಚಿಸಿದರು. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಆದಂತೆ ಹುಡುಗರು ಸಂತೋಷದಿಂದ ಹೊರ ನಡೆದರು.

ಕ’ನು ಎಲ್ಲರನ್ನೂ ಸಿನೆಮಾ ನೋಡಲು ಕರೆದುಕೊಂಡುಹೋದರೆ, ಕಿ’ನು ಮನ ಸೆಳೆಯುವ ಅರ್ಕೆಶ್ಟ್ರಾ ಕೇಳಲು ಕರೆದೊಯ್ದನು. ನಾ’ನು ಹೊಟ್ಟೆ ಬಿರಿಯುವಂತೆ ರುಚಿ ರುಚಿಯಾದ ಚಾಟ್ಸ್ ತಿನ್ನಲು ಕೊಡಿಸಿದರೆ, ಮೂ’ನು ವಿಧ-ವಿಧವಾದ ಸುವಾಸನೆ ಹೀರಲು ಸೆಂಟ್ಸ್ ತೆಗೆಸಿಕೊಟ್ಟನು. ಇಷ್ಟೆಲ್ಲಾ ಸಾಲದೆಂಬಂತೆ ಚ’ನು ಮೈಗೆ ಸ್ಪರ್ಶಹಿತ ಕೊಡುವ ಅತ್ಯಂತ ನವಿರಾದ ಬಟ್ಟೆ ಕೊಡಿಸುವದಲ್ಲದೆ, ಮ’ನು ಮನ ತಣಿಸುವ ಅನೇಕ ಮೋಜಾಟಗಳಲ್ಲಿ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿದನು.

ಆರ್ವರೂ ಅತ್ಯಂತ ಸುಖವಾಗಿ ಸಮಯ ಕಳೆದರಲ್ಲದೇ, ನಿಧಾನವಾಗಿ ತಮ್ಮ ತಮ್ಮ ಕಿಸೆಗಳು ಖಾಲಿಯಾಗಿರುವದನ್ನು ತಿಳಿದು ಖಿನ್ನರಾಗುತ್ತಾ ಒಬ್ಬರನ್ನೊಬ್ಬರು ಹಳಿಯಲಾರಂಬಿಸಿದರು. ಅವರಲ್ಲಿ ಉತ್ಸಾಹ ಕುಂದಿ ಆಯಾಸ ಮನೆ ಮಾಡಿತು. ಕತ್ತಲಾಗುತ್ತಾ ಬಂದದ್ದರಿಂದ, ಜೀನಿಗೆ ಮನೆಯ ನೆನಪು ಕಾಡತೊಡಗಿತು. ಉಳಿದ ಚಿಲ್ಲರೆಯಲ್ಲಿ ಮನೆ ಸೇರುವ ಚಿಂತೆಯಲ್ಲಿ ತನ್ನ ಜೇಬಿಗೆ ಕೈ ಹಾಕಿದಾಗ ಸಿಕ್ಕ ಕೀಲಿಯಿಂದ ಮನೆಯಲ್ಲಿ ವಿಶ್ರಮಿಸಿದ ನೆಂಟರ ಬಗ್ಗೆ ನೆನಪಾಯ್ತು. ಮನೆಯಿಂದ ಹೊರಡುವಾಗ ಆ ನೆಂಟರನ್ನು ಮನೆಯೊಳಗೆ ಬಿಟ್ಟು ಮನೆಗೆ ಬೀಗ ಹಾಕಿ ಬಂದದ್ದು ಗೊತ್ತಾಯ್ತು. ಜೀನಿಗೆ ಉದ್ಯೋಗ ಕೊಡಿಸಲು ಒಂದು ಸಂದರ್ಶನಕ್ಕಾಗಿ ಕರೆದು ಕೊಂಡು ಹೋಗಲು ಬಂದಿದ್ದ ನೆಂಟರನ್ನು ನೆನೆದು, ಜೀನು ತನ್ನಿಂದಾದ ತಪ್ಪಿಗಾಗಿ ಪರಿತಪಿಸಿದನು.

ಇಷ್ಟು ಹೊತ್ತು ತನಗೆ ಮೋಜು ಕೊಟ್ಟವಾವುವೂ ಜೀನಿಗೆ ಬೇಡವೆನಿಸಿದುವು. ಬೇಜವಾಬ್ದಾರಿ ಗೆಳೆಯರ ಸಂಗವೇ ಈ ಅನಾಹುತಕ್ಕೆ ಕಾರಣವೆಂದು ತಿಳಿದು, ತನ್ನ ವಿಷಯ ಲಂಪಟತನದ ಬಗ್ಗೆ ಅತ್ಯಂತ ಜುಗುಪ್ಸೆ ಪಟ್ಟನು. ತನ್ನ ಕರ್ತವ್ಯವನ್ನು ಮರೆತದ್ದಕಾಗಿ ದು:ಖತಪ್ತನಾದನು. ಮೊದಲು ಮನೆಗೆ ಹಿಂತಿರುಗಿ ನೆಂಟರನ್ನು ಸಮಾಧಾನಗೊಳಿಸಿ, ಅವರ ವಿಶ್ವಾಸಗಳಿಸುವ ಸಂಕಲ್ಪ ತೊಟ್ಟು, ಅವರ ದರ್ಶನಕ್ಕಾಗಿ ವ್ಯಾಕುಲನಾಗಿ ಮನೆಯೆಡೆಗೆ ಜೀನು ಸಾಗಿದನು. ತನ್ನ ಗೆಳೆಯರಾರು ಈಗ ಅವನಿಗೆ ಬೇಕೆನಿಸಲಿಲ್ಲ. ತನ್ನ ಏಕಮಾತ್ರ ಗುರಿ ಮನೆ ಸೇರಿ, ನೆಂಟರನ್ನು ಸಮಾಧಾನಗೊಳಿಸುವುದಾಗಿತ್ತು.

ತನ್ನ ಸ್ನೇಹಿತರೆನ್ನೆಲ್ಲ ಅಲ್ಲೇ ಬಿಟ್ಟು ಮನೆ ಸೇರಿದನು. ಆ ನೆಂಟರು ಈ ಹುಡುಗನ ದುಮ್ಮಾನವನ್ನು ತಿಳಿದು, ಅವನು ಮಾಡಿದ ತಪ್ಪಿಗಾಗಿ ಪಟ್ಟ ಪಶ್ಚಾತ್ತಾಪದ ಬೆಗ್ಗೆ ಸರಿಯಾಗಿ ಅರಿತು, ಜೀನಿಗೆ ಭರವಸೆಯ ಮಾತುಗಳನ್ನಾಡಿದರು. ಅವನ ತಪ್ಪನ್ನು ಕ್ಷಮಿಸುವುದಲ್ಲದೇ, ಅವನಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದರಲ್ಲಿ ಸಹಾಯಕರಾದರು.

ಈ ದೃಷ್ಟಾಂತದ ಒಳಾರ್ಥವನ್ನು ಗಮನಿಸೋಣ. ಸಾಮಾನ್ಯವಾಗಿ ನಮ್ಮಲ್ಲಿರುವ ಜೀವಾತ್ಮನ ಪರಿಸ್ಥಿತಿಯೂ ದೃಷ್ಟಾಂತದಲ್ಲಿನ ಜೀಗೆ ಹೋಲಿತ್ತದೆ. ದೃಷ್ಟಾಂತದ ಕ ಇತ್ಯಾದಿ ಆರು ಸ್ನೇಹಿತರು ನಮ್ಮ ಪಂಚೇಂದ್ರಿಯಗಳು ಹಾಗೂ ನಮ್ಮ ಮನಸ್ಸು. ಮನೆಗೆ ಬಂದ ನೆಂಟನೇ ನಮ್ಮ ಹೃದಯದೊಳಗಿರುವ ಪರಮಾತ್ಮ. ಕಠೋಪನಿಷತ್ ಹೇಳುವಂತೆ ಪರಾಂಚಿಖಾನಿ ವ್ಯತೃಣತ್ ಪರಾನ್ ಪಶ್ಯಂತಿ ನಾಂತರಾತ್ಮನ್ ಎಂದರೆ ನಮ್ಮ ಮನಸ್ಸು ಹಾಗು ಇಂದ್ರಿಯಗಳು ಸ್ವಾಭಾವಿಕವಾಗಿ ಹೊರಕ್ಕೇ ಹರಿಯುವುದು. ಅವುಗಳು ನಮ್ಮಲ್ಲಿರುವ ಅಂತರಾತ್ಮವನ್ನು ನೋಡುವುದಿಲ್ಲ. ಒಂದೊಂದು ಇಂದ್ರಿಯವೂ ಮನಸ್ಸಿನ ಸಹಾಯದಿಂದ ಜೀವಾತ್ಮನನ್ನು ವಿಷಯ ಭೋಗದಲ್ಲಿ ಮುಳುಗಿ ನಾಶವಾಗುವಂತೆ ಪ್ರೇರೇಪಿಸುವುದೇ ಅಲ್ಲದೆ ತನ್ನ ನಿಜಸ್ವರೂಪವನ್ನೇ ಮರೆತು ಬಿಡುವಂತೆ ಮಾಡುತ್ತವೆ.

ಈ ಜಗದ ಜಂಜಾಟದಲ್ಲಿ ತೊಳಲಿ ಬೆಂಡಾಗಿ ನಮ್ಮೆಲ್ಲ ಶಕ್ತಿಯು ಉಡುಗಿ ಹೋದ ಮೇಲೆ ಜೀವನದ ನಿಸ್ಸಾರತ್ವ ತಿಳಿಯುತ್ತದೆ. ಆದರೆ ಆ ವೇಳೆಗೆ ನಮ್ಮ ದೇಹ-ಮನಸುಗಳು ಮತ್ತಿನ್ನೇನೂ ಸಾಧಿಸಲಾಗದಂತಾಗಿ, ಜೀವನವನ್ನು ವ್ಯರ್ಥವಾಗಿ ಕಳೆದುದಕ್ಕೆ ಪರಿತಪಿಸುವಂತಾಗಿರುತ್ತದೆ. ಹಾಗಾಗದಂತೆ ನಮ್ಮಲ್ಲಿ ಶಕ್ತಿಯಿರುವಾಗಲೇ ನಮ್ಮ ನಿಜನೆಂಟನಾದ ಭಗವಂತನೆಡೆಗೆ ನಮ್ಮ ಜೀವನ ಸಾಗುವಂತೆ ಇಂದ್ರಿಯ ಮನಸ್ಸುಗಳನ್ನು ತಯಾರಿಗೊಳಿಸಿಕೊಂಡು ಜೀವನ ಪಾವನ ಮಾಡಿಕೊಳ್ಳುವುದು ಸೂಕ್ತ.
     *****

ನಗೆ ಡಂಗುರ - ೪

- ಪಟ್ಟಾಭಿ ಎ ಕೆ

ಗುರು :  "ನರ ಎಂಬ ಶಬ್ದಕ್ಕೆ ಸ್ತ್ರೀಲಿಂಗ ಏನು?"
ಶಿಷ್ಯ:  "`ನರಿ' ಸಾರ್‍!"

        *****

ಅದ್ವೈತ

- ಶೇಖರ್‌ಪೂರ್ಣ

        ಭಾಗ-೧
ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ.  ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ.  ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು.  ಸಾಹಸಿಸಿದರೆ ಎಡವುವುದು ಸಹಜ.  ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ] ನಡುವೆ ಸಂವಹನ ಕುಸಿದು ಬೀಳುತ್ತದೆ.  ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ - ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ.  ಶಂಕೆಯಂತೂ ಇದ್ದೇ ಇದೆ.  ನಾನು ಹೇಳಿದ ರೀತಿಯಲ್ಲೆ ಆಗಿರಬಹುದು.  ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ.

ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ-
"ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ.  ಸಿಂಗಲ್ ಹ್ಯಾಂಡ್.  ಬೇರೆ ಯಾರ ಕೈಗೂ ಕೊಡೋಲ್ಲ."
ನನ್ನ ಬಳಿಯೂ ಒಂದು ಮೊಪೆಡ್ ಇದೆ.  ೧೯೮೫ರ ಮಾಡೆಲ್‌ನದು.  ಎಲ್ಲರೂ ಉಪಯೋಗಿಸುತ್ತಾರೆ!
ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ.  ಈಗೀಗ ಬಹಳ ಜನ ಹೇಳುತ್ತಾರೆ- "ಗುಜರಿಗಾಕೋ".  "ಬೀಗ ಬೇರೆ ಯಾಕಾಕ್ತೀಯ?  ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ" -
"ಸ್ಕ್ರಾಪ್ ಇಟ್, ಸೆಂಡ್ ಇಟ್ ಟು ಸಾಲ್ವೇಜ್" - ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ.  ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ.  ಅವಮಾನವೂ ಇಲ್ಲ.  ನಕ್ಕುಬಿಡುತ್ತೇನೆ.  ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ, "ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ..." ಇವಳಿಗೂ ಅರ್ಥವಾಗುವುದಿಲ್ಲ.  ಕ್ಷಮೆ ಇರಲಿ!
ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ.  ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ.  ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ.  ಖಾತ್ರಿಯೂ ಇಲ್ಲ.  ಷುಡ್ ಐ ಕೇರ್?  ಉದ್ಧಟತನಕ್ಕೆ ಕ್ಷಮೆ ಇರಲಿ. 

ಒಂದ್ಸಾರಿ ಏನಾಯ್ತೂಂದರೆ:
ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು.  ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು.  - ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು.  ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ;
"ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ."
ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ.  ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ.  ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ.  ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್.  ಸುಮಾರು ೧೩೦ ಕಿ.ಮೀ ಇಬ್ಬರನ್ನು ಹೊತ್ತು ತಂದಿತ್ತು!

ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು.  ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು.  ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು.  ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ.  ಒಳ್ಳೆಯ ಹಿಡಿತವೂ ಇತ್ತು.  ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ’ ಗೆ ಹುಡುಕಿದೆ.  ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ.  ಸುಬ್ಬ ಸ್ವಲ್ಪ ದೂರ ಓಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. 

ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ.  ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು.

ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ.  ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ.  ಇಳುಕಲಿನ ತಿರುವು ಹಾದಿ.  ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ.  ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು.  ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ.  ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦ ಕಿ.ಮೀ. ವೇಗ.  ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು.  ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ!

ಮತ್ತೆ ಇಳುಕಲಿನಲ್ಲಿ ಹೊರಟೆವು.  ವೇಗವೋ ವೇಗ.  ಬ್ರೇಕ್ ಹಾಕಿದೆ.  ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು.  ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು.  ಬಲಗಡೆಗೆ ಆಳವಾದ ಕಮರಿ.  ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ- "ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು" - ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು.  ಕೂತೆ ಇದ್ದ.  ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ.  ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ.ಮೀ ವೇಗದಲ್ಲಿ ೧೭೦ ಕೆ.ಜಿ ತೂಕದ ನಾವುಗಳು ಬಿದ್ದೆವು.  ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ.  ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ.  ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು.  ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. 

ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ - ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು "ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ" ಬೇಡಿದ.  ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ.  ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು.  ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು.  ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. 

ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ.  ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು.  ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ.  ಅರ್ಥವಾಗುತ್ತಾ, ನಿಮಗೆ?

        ಭಾಗ-೨
ಶಿವಾ.  .  .  .  .
ನೀವು ಅವನನ್ನು ನೋಡಬೇಕು.  ಕಪ್ಪು ಬಣ್ಣದ ತಮಿಳಿನವ.  ಕಪ್ಪಾದ ಮೈಗೆಲ್ಲಾ ಗ್ರೀಸು.  ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ.  ೧೮-೨೦ ವರ್ಷದವ.  ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ.  ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು.  ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು.  ಸ್ಪಾನರ್, ಸ್ಕ್ರೂ ಡ್ರೈವರ್, ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು.  ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು..  ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ! "ಏನಯ್ಯ?"  ಎಂದರೆ "ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ." ಎಂದು ಹಲ್ಕಿರಿದಿದ್ದ.  ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ.  ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ.  ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ.  ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್’ ಎಂಬಂತೆ ಗಾಯ ಮಾಗಿಹೋಗಿತ್ತು!

ಕೆಲಸದಲ್ಲಿ ಅವನಿಗೆ ಎಂತದೋ ಖುಶಿ.  ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ.  ಬೇರೇನೋ ತೆರೆನಾದ ಖುಷಿ.  ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ.  ಅದರಲ್ಲೇ ಮಗ್ನಗೊಂಡ ಖುಷಿ.  ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ.  ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು.  ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ.  ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ.  ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. 

ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. 

ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. 

ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು.  ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ.  ಗಾಡಿ - ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ "ತನ್ರಿ ಹಾಕ್ಕೊಡ್ತೀನಿ".  ಶಿವ ಎಂದೂ ಹಾಗೆ ಇರುತ್ತಿರಲಿಲ್ಲ.  ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ.  ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ.  ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. 

ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ.  ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ.  ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು.  ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ.  ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ.  ಖಿನ್ನನಾಗಿರುತ್ತಿದ್ದ ಆಷ್ಟೆ.  ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ.  ಒಳಗೆ ಎಂಥದೋ ಖುಷಿಯಾಗುತ್ತಿತ್ತು.  ಆದರೆ ಅವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ.... 
*
*
*
ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು.  ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ.  ನಿತ್ರಾಣವಾಗಿಹೋಗಿತ್ತು.  ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ.  ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. 

ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ.  ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. 

ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲು ತೀರ್ಮಾನಿಸಿದ್ದೆ.  ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ!

ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು.  ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. 

ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು.  ಹೊರಟೆ. 
*
*
*
ಮುರುಕಲು ಕುರ್ಚಿ ಮೇಲೆ ಕೂತಿದ್ದ.  ಸಪ್ಪಗಿದ್ದ.  ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. 
"ಏನಣ್ಣಾ.." - ಅದೇ ವಿನಯ. 
"ಗಾಡಿ ಪಿಕಪ್ ಇಲ್ಲ.  ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು.  ಡೀಕಾರ್ಬನ್ ಮಾಡಿಸಿಯಾಯ್ತು.  ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ..."
"ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ.. 
"ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ." ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ...."
ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ.  ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು.  ಆದರೂ ಶಿವನ ಮೇಲೆ ನಂಬಿಕೆಯಿತ್ತು. 

ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ.  ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು!
"ಏನೋ ಅದು?"
"ಕಲ್ಲೇಟು ಬಿತ್ತು ಸಾರ್.  ಜೊತೆಗೆ ಕೀವು ರಕ್ತ."
"ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ.  ನಾನು ಬಹಳ ಹೊತ್ತು ಜೊತೆಗಿದ್ದೆ.  ಏನೋ ಖುಷಿ ಖುಷಿ.  ಅವನಿಗೂ ಹಾಗೆಯೇ ಇರಬೇಕು. 
"ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?"
- ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. 
"ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ.."
ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು.  ನನ್ನ ಕಣ್ಣುಗಳು ಸಹ ಅರಳಿದ್ದವು. 
*
*
*
ಮಾರನೆ ದಿನ ಗಾಡಿ ತಯಾರಾಗಿತ್ತು.  ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ
"ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ"- ಎಂದ. 
ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು.  ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. 
"ಪ್ಯಾಂಟು ಮೇಲೆತ್ತು." ಎಂದೆ.  ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ.  ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು.  ಕೊಳಕೊಳ ಬಿಗಿದುಕೊಂಡಂತೆ.  ಶವದ ಕಾಲಿನಂತೆ.  ನೋಡಿ ದಂಗಾದೆ. 
"ವಿಪರೀತ ನೋಯುತ್ತೆ, ಸಾರ್."
"ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ..."
ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ.  ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು.  ನನಗೋ ಖುಷಿಯಾಯಾಯಿತು.  ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ.  ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ.  ಏನನ್ನೋ ಸಾಧಿಸಿದ ತೃಪ್ತಿ ಇತ್ತು. 
ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. 
ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. 
*
*
*
ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು, ಸುಖದಲ್ಲಿದ್ದೆ.  ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. 

ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು.  ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ.  ಸಂದರ್ಭವೂ ದೊರೆಯಲಿಲ್ಲ. 

ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ.  ನಿರಿಕ್ಷಿಸಿಯೇ ಇರಲಿಲ್ಲ.  ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ.  ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ.  ಆದರೂ ಕೇಳಿದಾಗ:
"ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ.  ಅಡ್ಮಿಟ್ ಮಾಡ್ಕೊಂಡ್ರು.  ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು.  ಇವತ್ತೇನೆ ಬಂದಿದ್ದು.  ಬಂದೋನು ಇಲ್ಲಿಗೆ ಬಂದ್ಬಿಟ್ಟೆ.  ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ.  ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ..."
- ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ.  ನೀರಿರಲಿಲ್ಲ.  ಬದಲಿಗೆ ಮಿನುಗುತ್ತಿದ್ದವು. 
*
*
*
ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು.  ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ-
"ಏನ್ಸಾರ್, ನಡ್ಕೊಂಡು ಬರ್ತಿದೀರ..?"
"ಗಾಡಿ ಮಾರ್ಬಿಟ್ಟೆ ಕಣೋ...." ಅವನಿಗೆ ಅರ್ಥವಾಗಿತ್ತು.  ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ.
"ಎಷ್ಟಕ್ಕೆ ಮಾರಿದ್ರಿ ಸಾರ್?"
"ಒಂದೂ ಕಾಲು ಸಾವಿರಕ್ಕೆ.."
"ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್..."
"ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು."
"ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್"- ನನಗೂ ಅರ್ಥವಾಯಿತು!
ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. 
ಬಸ್ಸು ಬಂತು.  ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವನನ್ನು ನೋಡಿ ಕೂಗಿಕೊಂಡೆ-
"ಬರ್ತೀನೊ ಶಿವಾ, ಸಿಕ್ತೀನಿ..."
ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ!
              *****

ಕೀಲಿಕರಣ: ಶೇಖರ್‌ಪೂರ್ಣ

ನಗೆ ಡಂಗುರ - ೩

- ಪಟ್ಟಾಭಿ ಎ ಕೆ

ಈತ:  "ಮದುವೆ ಮತ್ತು ಮೊಬೈಲ್ ಇವೆರಡರ ವ್ಯತ್ಯಾಸ?"
ಆತ:  "ಎರಡೂ ಒಂದೆ;  ಕಟ್ಟಿಕೊಂಡ ಹೆಂಡತಿ, ಹಿಡಿದುಕೊಂಡ ಮೊಬೈಲ್ ಎರಡೂ ಮಾತಿನ ಗಣಿಗಳು.  ಬಗೆದಷ್ಟೂ ಮಾತು!"....

        *****

ಕಾಡು ಕುದುರೆಗೆ ಕೋಡು ಬಂತು

ಚಿತ್ರಕೃಪೆ: ಎ ಆರ್ ಮಣಿಕಾಂತರ ಬ್ಲಾಗು
ಭಾರತೀಯ ಸಾಹಿತ್ಯ ರಂಗ ಹೆಮ್ಮೆ ಪಡುವಂತೆ ಜಾನಪದ ಸೊಗಡಿನ ಸಾಹಿತಿ ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕನ್ನಡಿಗರ  ಸಂಭ್ರಮಕ್ಕೆ ದೊಡ್ಡ ಕಾರಣ. ಕಂಬಾರರಿಗೆ ಅಭಿನಂದನೆಗಳು.

ನಾಟಕಕಾರ, ಕವಿ, ಜಾನಪದ ತಜ್ಞ,  ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ಅಧ್ಯಾಪಕ ಹೀಗೆ ಎಲ್ಲ ರಂಗಗಳಲ್ಲೂ  ಜಾನಪದದ ಛಾಪು ಮೂಡಿಸಿದ ದೈತ್ಯ ಪ್ರತಿಭೆ. "ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಸಂಗೀತ, ಸಾಹಿತ್ಯ ನೀಡಿದ ಕಂಬಾರರೂ ಜಾನಪದದ ಮೂಲದೊಂದಿಗೆ ಮನೆಮಾತಾದವರು. ಅವರು ನೆನಪಾಗೋದು ಈ ಹಾಡಿನ ಮೂಲಕವೇ.

ಎಂಟನೆ ಜ್ಞಾನಪೀಠ ಪಡೆದ ಕಂಬಾರರ ಚಿತ್ರವನ್ನೂ ಎಲ್ಲಾ ಶಾಲೆಗಳಲ್ಲೂ ಸೇರಿಸುವ ಕಂತ್ರಾತು ಹಿಡಿಯಲು ವೃತ್ತಿನಿರತ ಚಿತ್ರ ಕಲಾವಿದರು ಈಗಾಗಲೇ ಪ್ರಯತ್ನಿಸುತ್ತಿರುವ ಸುದ್ಧಿಯಿದೆ.

ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರಗೀತೆ
ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ ||ಪ||
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ ||೧||
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ ||೨||
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||೩||


ವೀಕಿಪೀಡಿಯ ಕಂಬಾರರ ಮೇಲೆ ಕೊಡುವ ವಿವರಗಳು ಇಲ್ಲಿವೆ:
ಡಾ. ಚಂದ್ರಶೇಖರ ಕಂಬಾರ (ಜನನ- ೨ ಜನವರಿ ೧೯೩೭) ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಇತ್ಯಾದಿ.

ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೩೭ ಜನವರಿ ೨ರಂದು ಕಂಬಾರರು ಬೆಳಗಾವಿ ಜಿಲ್ಲೆ ಘೋಡಗೇರಿಯಲ್ಲಿ ಜನಿಸಿದರು. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಧಾರವಾಡದ ಗಂಡುಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ. ರಾ. ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡವರಲ್ಲಿ ಕಂಬಾರರು ಒಬ್ಬರು.

ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಗೆ ಜನಪ್ರಿಯರು. ತಾವೇ ಸ್ವತಃ ಹಾಡುಗರೂ ಸಹಾ.

ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಬೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಇವರ ಪ್ರಮುಖ ಕೃತಿಗಳು. ಮಹಾಮಾಯಿ ಅವರ ಇತ್ತೀಚಿನ ಹೊಸ ನಾಟಕ ಕೃತಿ.ಶಿಖರ ಸೂರ್ಯ ೨೬ ವರ್ಷಗಳ ನಂತರ ಹೊರಬಂದ ಕಾದಂಬರಿ;ಡಿಸೆಂಬರ ೨೦೦೬ರಲ್ಲಿ ಬಿಡುಗಡೆಯಾಯಿತು. ಕನ್ನಡ ಜಾನಪದ ವಿಶ್ವಕೋಶ ಸಂಪಾದಿತ ಕೃತಿ. ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಾರರು ೧೯೯೧ರಲ್ಲಿ ತಮ್ಮ `ಸಿರಿಸಂಪಿಗೆ' ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.



ಮೂಕನಾಗಿರಬೇಕೋ ಜಗದೊಳು

- ಶಿಶುನಾಳ ಶರೀಫ್

 ಮೂಕನಾಗಿರಬೇಕೋ ಜಗದೊಳು
ಜೋಕ್ಯಾಗಿರಬೇಕೋ                                 ||ಪ||
ಕಾಕು ಕುಹಕರ ಸಂಗ  ನೂಕಿರಬೇಕೋ
ಲೋಕೇಶನೊಳಗೇಕಾಗಿರಬೇಕೋ               ||ಅ.ಪ||

ಕಚ್ಚುವ ನಾಯಿಯಂತೆ  ಬೊಗಳ್ವರೋ
ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ
ಲುಚ್ಚೇರು ನಾಚಿಕಿ ತೊರದಿಹರೋ
ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ
ಕುತ್ಸಿತ ಮನುಜರನಗಲಿರಬೇಕೋ               ||೧||

ಲೋಕನುಡಿಯ ಮಾತಾಡುವರೋ
ಕುಹಕ ಬುದ್ಧಿಯ ಜನರೋ
ತಾಕುತಗಲು ನುಡಿಯನಾಡ್ವರೋ
ತೂಕನರಿಯದವರೋ
ಸೂಕರ ಮನುಜರ ಸಂಗತಿ ಹಿಂಗಿಸಿ
ಶ್ರೀಕರ ಬ್ರಹ್ಮ ತಾನಾಗಿರಬೇಕೋ                 ||೨||

ನಡಿನುಡಿಗೆ ನುಡಿಯಬೇಕೋ  ಗುರುವಿನಾ
ಅಡಿಯ ಪಿಡಿಯಬೇಕೋ
ಕಡುಮದದೊಳಿರಬೇಕೋ
ದುರ್ಜನರಾ ನಡತಿಯ ಬಿಡಬೇಕೋ
ಪೊಡವಿಪ ಶಿಷುನಾಳ ಒಡಿಯನ ಕಂಡು
ಗುಡಿಪುರ ಕಲ್ಮನ ಕೂಡಿರಬೇಕು                  ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ದಿನಮಾನ ಬಲು ಕೆಟ್ಟವೋ

- ಶಿಶುನಾಳ ಶರೀಫ್

ದಿನಮಾನ ಬಲು ಕೆಟ್ಟವೋ  ಸದ್ಗುರುಪುತ್ರ
ನಿನಗಾವು ಬಂದು ತಟ್ಟವೋ               ||ಪ||

ಚಿನುಮಯಾತ್ಮಕವಾದ ಐದಕ್ಷರವು
ತನ್ನೊಳು ಜಪಿಸಿಕೊಂಡಿಹ
ಮನುಜರೂಪವ ಕಳೆದು ಮಹಿಮೆಯ
ತಿಳಿದ ಪುರುಷನಿಗೇನು  ಆಗದು          ||ಅ.ಪ||

ದೇಹದೊಳಿದ್ದರೇನು ಜೀವನ ಕಾಯ
ಲೋಹಕೆ ಬಿದ್ದರೇನು
ಸಾವುನೋವಿನ ಭಾವ ತಿಳಿಯದೆ
ಜಾವಕೊಮ್ಮೆ ಓಂ ನಮಃ  ಶಿವಾಯೆಂದು
ಭಾವದಲಿ ನುಡಿಯೇ ಕಲಿಕರ್ಮದೊಳು ಮಹ-
ದೇವ ಮೆಚ್ಚುವ  ಸತ್ಯ ಮಾತಿದು           ||೧||

ವಿಷಯವಾಡಿದರೇನಾಯ್ತು   ಈ  ಲೋಕವು
ಹುಸಿಯನ್ನುವುದೇ  ಗೊತ್ತು
ವಸುಧಿಯೊಳು ಶಿಶುನಾಳಧೀಶನ
ಎಸೆವ ಸೇವಕನಾಗಿ  ಜಗದಿ
ಮಸಿದ ಪ್ರಣವಶಸ್ತ್ರ   ಕೈಯೊಳು
ಕೊಸರದಂದದಿ  ಹಿಡದು ನುಡಿಯಲು       ||೨||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್