೧೫-೮-೫೦

- ನರಸಿಂಹಸ್ವಾಮಿ ಕೆ ಎಸ್

ಈ ಧ್ವನಿಯೆ ಬೇರೆ; ಈ ನೋಟ ಚಂದ್ರನ ತೋಟ;
ಇದರ ಕಣಿ ಬೇರೆ; ಇದು ತಾನೊಂದೆ ಸಾರುತಿದೆ
ಯುದ್ಧ ಕೂಡದೆಂದು. ಅತ್ತ ಅಸ್ತ್ರದ ನೋಟ
ಅರ್ಧ ಭೂಮಿಗೆ ಸದಾ ಸರಿಯೆಂದು ತೋರುತಿದೆ.
ಕೊಲೆಮನೆ; ಕಡುಗತ್ತಿ, ಕುರಿಮರಿಯ ಕುಣಿದಾಟ-
ಬೇಕು ಮಾನವನ ದಾನವತೆಗೀ ರಾತ್ರಿಯೂಟ!

ಈ ಧ್ವನಿಯೆ ಬೇರೆ! ಬಾಂಬಿಗೆ ಹೆದರಲಿಲ್ಲ ಇದು;
ಕತ್ತಿಯಲಿ ಕೆತ್ತಿದ ಸ್ವತಂತ್ರತೆಯನರಿಯದಿದು;
ನೆತ್ತರಲಿ ಬರೆದ ನಾಗರಿಕೆತೆಯ ಕುರಿಯದಿದು;
ಶಸ್ತ್ರವನು ನ೦ಬಿ ಶಾ೦ತಿಯ ಸೋಗ ಹಾಡದಿದು.
ಈ ನಾಡು ಬೇರೆ, ಇದು ನಡೆವ ದಾರಿಯೆ ಬೇರೆ;
ಇವರ ನಡೆ, ನೋಟ, ನಂಬಿಕೆ, ಎಲ್ಲ ಬೇರೆ ಬೇರೆ!

‘ಇಂಡಿಯಾ’ ಇಂಪಾದ ಹೆಸರು. ಏಷ್ಯದ ತಾಯಿ
ಬೆಟ್ಟದಲಿ ಹಡೆದು, ನದಿಯಲಿ ತೊಳೆದು, ನಾಕದಲಿ
ತೂಗಿ, ನೆತ್ತಿಗೆ ತಾರೆಗಳನೊತ್ತಿ, ಮುಗಿಲಲಿ ಸುತ್ತಿ,
ಚಳಿಗಾಳಿ ಉರಿಗಾಳಿ ಬೀಸಿ, ಭುಜನನು ತಟ್ಟಿ
ಜಗಜಟ್ಟಿಯಾಗಿಸಿದ ಹಿರಿಯ ಮಗಳೀ ನಾಡು !-
ಆ ತಪೋವನಗಳಲಿ ನರ್ತಿಸುನ ನವಿಲ ನೋಡು.

ದೇವದೂತರು ದಿಕ್ಕ ತೋರಿದರು; ಶಾ೦ತಿಯಲಿ
ಧನ್ಯರ್ಷಿಗಳು ಕಡೆದ ಬ್ರಹ್ಮಜಿಜ್ಞಾಸೆಯಲಿ
ಧವಳಗಿರಿಯಂತೆ ಬೆಳಕಾದ ಸಿರಿಮೊಗವೆತ್ತಿ
ಏಷ್ಯದ ಹಿರಿಮಗಳು, ಭರತನ ಸಾಕು-ತಾಯಿ
ಸಾರುತಿಹಳಿಂದು ಎತ್ತಿದ ಕತ್ತಿಗಳ ತಡೆದು:
ಶಾಂತಿ ಮೂಡದು ರಕ್ತಪಾತದಲಿ. ಶಾಂತಿರಸ್ತು.
     *****