ಚಿತ್ರ: ರಾಂಗೋಪಾಲ್ ರಾಜಾರಾಮ್ |
ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಗರ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವಿದ್ದರೆ ನೀವೊಂದು ಸಂಗತಿಯನ್ನು ಗಮನಿಸಿಯೇ ಇರುತ್ತೀರಿ: ಕಾರ್ಯಕ್ರಮ ಆರಂಭಕ್ಕೆ ಅರ್ಧ ತಾಸು ಮುನ್ನ ಹಾಗೂ ಮುಗಿದ ನಂತರದ ಅರ್ಧ ತಾಸು ಸಭಾಂಗಣದ ಒಳಗೆ-ಹೊರಗೆ ಸಣ್ಣಸಣ್ಣ ಗುಂಪುಗಳು ಮಾತುಕೆಯಲ್ಲಿ ತೊಡಗಿರುತ್ತವೆ. ಕಾರ್ಯಕ್ರಮ ನಡೆಯುವಾಗಲೂ ಕೆಲವರು ಸಭಾಂಗಣದ ಹೊರಗೆ ಹರಟುತ್ತಾ ನಿಲ್ಲುವುದುಂಟು. ಸಮಾರಂಭ ಎನ್ನುವುದು ಅವರ ಪಾಲಿಗೆ ನೆಪ. ಈ ನೆಪದಲ್ಲಿ ಸ್ನೇಹಿತರ ಭೇಟಿ, ಒಂದಷ್ಟು ಹರಟೆ ನಡೆಯುತ್ತದೆ.
`ನಿಮ್ಮನ್ನು ನೋಡಿ ಎಷ್ಟು ದಿನವಾಯ್ತು ಅಲ್ಲವಾ? ಈ ನಗರದ ಟ್ರಾಫಿಕ್ಕಿನ ಕಿರಿಕಿರಿ, ಕೆಲಸದ ಒತ್ತಡದಲ್ಲಿ ಬಿಡುವೇ ಸಿಗೊಲ್ಲ ನೋಡಿ' ಎನ್ನುವ ಆತಂಕ ನಾಲ್ಕಾರು ಜನ ಸೇರಿದಲ್ಲಿ ವ್ಯಕ್ತವಾಗುತ್ತದೆ. ಮಾತು ಕೊನೆಯಾಗುವುದು ಜಾಗತೀಕರಣದ ದೂಷಣೆಯೊಂದಿಗೆ. `ಈ ಜಾಗತೀಕರಣದ ಕೆಡುಕುಗಳು ಒಂದೆರಡಲ್ಲ. ಬಂಡವಾಳ ಹೂಡುವ ಆಟವಾಡಿ ಬಡದೇಶಗಳ ರಕ್ತವನ್ನು ಶ್ರೀಮಂತ ದೇಶಗಳು ಹೀರುತ್ತಿವೆ. ದೇಸೀ ಸಂಸ್ಕೃತಿಯ ಬೇರುಗಳು ಬುಡಮೇಲಾಗುತ್ತಿವೆ. ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಮನುಷ್ಯನಿಗಿಂತ ಮೆಷೀನಿಗೆ ಹೆಚ್ಚು ಕಿಮ್ಮತ್ತು. ಸಂಬಂಧಗಳೂ ಅನುಕೂಲಸಿಂಧು ಅನ್ನಿಸುತ್ತಿವೆ.
ನಿಜ, `ಜಾಗತೀಕರಣ'ದ ಕೆಡುಕುಗಳು ಸಾಕಷ್ಟಿವೆ. ಆದರೆ ಈ ಜಾಗತೀಕರಣದಿಂದ ಒಂದು ಅನುಕೂಲವೂ ಇದೆ. ಇದೊಂದು ಸುಂದರ ಪದ ಇಲ್ಲದ್ದಿದಲ್ಲಿ ನಮ್ಮ ಕಷ್ಟಗಳಿಗೆಲ್ಲ ನಾವು ಯಾರನ್ನು ದೂರಬೇಕಿತ್ತು? `ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ' ಎನ್ನುವ ಗಾದೆಯಂತೆ. ಆಧುನಿಕೆ ಸಂದರ್ಭದಲ್ಲಿ - `ಎಲ್ಲದಕು ಕಾರಣ ಜಾಗತೀಕರಣ' ಎನ್ನಬಹುದು.
ಐದಾರು ವರ್ಷಗಳ ಹಿಂದೆ ನಡೆದ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆನಪಿಗೆ ಬರುತ್ತಿದೆ. ಆ ಕಾರ್ಯಕ್ರಮದಲ್ಲಿ ಕನ್ನಡದ ಮಹತ್ವದ ಲೇಖಕರೊಬ್ಬರು ಜಾಗತೀಕರಣವನ್ನು ದೂಷಿಸಿದ್ದರು. ಅವರು `ದಿವ್ಯ' ಲಹರಿಯಲ್ಲಿದ್ದರು. ಆ ಲಹರಿಯಲ್ಲೇ, ತಮ್ಮ ಯೌವನದ ದಿನಗಳನ್ನು ಚಪ್ಪರಿಸಿದರು. ಸಹ ಲೇಖಕರೊಂದಿಗೆ ಯಾವುದೋ ಊರಿನ ಯಾವುದೋ ಹೋಟೆಲ್‌ನಲ್ಲಿ ಕೂತು, ಕಾಫಿ ಹೀರುತ್ತಾ, ಕಾವ್ಯದ ಬಗ್ಗೆ ಚರ್ಚಿಸುತ್ತಿದ್ದುದನ್ನು ನೆನಪಿಸಿಕೊಂಡರು. ಆ ಕಾಫಿಸಂಜೆಯಗಳಲ್ಲಿ ನಡೆಯುತ್ತಿದ್ದ ಕೂಟಗಳಲ್ಲಿ ಓದುತ್ತಿದ್ದ ಅಪ್ರಕಟಿತ ಪದ್ಯಗಳು ಹತ್ತು, ನೂರು ಬಾಯಿಗಳಿಗೆ ಜನಪದದಂತೆ ತಲುಪುತ್ತಿದ್ದ ಮಾಯೆಯೆನ್ನು ನೆನಪಿಸಿಕೊಂಡು ಪುಳಕಿತರಾದರು. ಆದರೆ ಈಚಿನ ದಿನಗಳಲ್ಲಿ ಒಂದೇ ಊರಿನಲ್ಲಿ ಇರುವ ಲೇಖಕರು ಒಂದೆಡೆ ಸೇರುವುದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ ಅವರು, ಕನಿಷ್ಠ ತಿಂಗಳಿಗೊಮ್ಮೆಯಾದರೂ ಮುಖಗಳನ್ನು ನೋಡಿಕೊಳ್ಳುವುದು, ಕೂತು ಮಾತನಾಡುವುದು ಸಾಧ್ಯವಾದರೆ ಒಳ್ಳೆಯದು ಎಂದರು. ಹಿರಿಯ ಸಾಹಿತಿಯ ನೆನಪುಗಳು ಯುವ ಲೇಖಕರ ಹೊಟ್ಟೆ ಉರಿಸುವಂತಿದ್ದವು. ಸಮಾಧಾನದ ಸಂಗತಿಯೆಂದರೆ, ಲೇಖಕರು ದ್ವೀಪಗಳಾಗುತ್ತಿರುವುದಕ್ಕೆ ಜಾಗತೀಕರಣವೇ ಕಾರಣ ಎನ್ನುವುದನ್ನು ಆ ಹಿರಿಯರು ರೂಪಕಗಳ ಮೂಲಕ ಸಾಧಿಸಿ ಹೇಳಿದ್ದರು. ತಮ್ಮೆಲ್ಲ ತವಕತಲ್ಲಣಗಳಿಗೆ ಹಿರಿಯ ಲೇಖಕರು ಒಂದು ರೂಪಕ ಒದಗಿಸಿದ್ದನ್ನು ನೋಡಿ ಅನೇಕ ಕಿರಿಯ ಲೇಖಕರು ಸಮಾಧಾನಗೊಂಡಿದ್ದರು.
ಜಾಗತೀಕರಣದ ಬಗ್ಗೆ ಮಾತನಾಡಿದ ಹಿರಿಯ ಲೇಖಕರ ಮನೆಗೆ ಅನಿವಾರ್ಯವಾಗಿ ಹೋಗಲೇಬೇಕಾದ ಸಂದರ್ಭ ಕಿರಿಯ ಲೇಖಕನೊಬ್ಬನಿಗೆ ಒದಗಿತು. ಭೇಟಿಯ ನಂತರ ಆ ಯುವಲೇಖಕ ಆಘಾತಗೊಂಡಿದ್ದ. ಹಿರಿಯ ಲೇಖಕರ ಮನೆಯಲ್ಲಿ ಮೂರ್‍ನಾಲ್ಕು ತಾಸು ಕಳೆದಿದ್ದರೂ ಆತನಿಗೊಂದು ಲೋಟ ನೀರೂ ಸಿಕ್ಕಿರಲಿಲ್ಲ. `ಏನ ಬಂದಿರಿ, ಹದುಳವಿದ್ದಿರೇನು?' ಎಂದು ಅವರು ಕೇಳಲೂ ಇಲ್ಲ. ಮಾತಿಗೂ ಕೃತಿಗೂ ಸಂಬಂಧ ಇರಬೇಕಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ.
`ಏನ ಬಂದಿರಿ, ಹದುಳವಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೆ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ?'
ಹನ್ನೆರಡನೇ ಶತಮಾನದ ಬಸವಣ್ಣನವರ ವಚನವನ್ನು ಇಂದಿನ ನಗರ ಜೀವನಕ್ಕೆ ಅನ್ವಯಿಸುವುದು ಹೇಗೆ? ಕಾಲು ತೊಳೆಯಲು ನೀರು ಕೊಡುವುದು, ನೀರನ್ನೋ ನೀರುಮಜ್ಜಿಗೆಯನ್ನೋ ನೀಡಿ ದಣಿವು ತಣಿಸುವುದು, ಕುಶಲ ವಿಚಾರಿಸಿ ಆಪ್ತ ವಾತಾವರಣ ಮೂಡಿಸುವುದು - ಇವೆಲ್ಲವನ್ನು ಆಧುನಿಕ ಸಂದರ್ಭದಲ್ಲಿ ಆತಿಥೇಯರಿಂದ ನಿರೀಕ್ಷಿಸುವುದು ಮರುಳುತನವೇ ಇರಬಹುದೇನೊ? ಆದರೆ ಒಳ್ಳೆಯ ಮಾತಿಗೂ ಬರ ಒದಗಿದರೆ ಹೇಗೆ?
ಹಳ್ಳಿಗಳಲ್ಲೂ ಪಟ್ಟಣದ ಬಣ್ಣಗಳು ದಟ್ಟವಾಗುತ್ತಿವೆ. ಹಾಗಾಗಿ ಗ್ರಾಮೀಣ ಬದುಕಿನಲ್ಲೂ ಮಾನವೀಯ ಸಂಬಂಧಗಳು ತೆಳುವಾಗುತ್ತಿವೆ ಎಂದು ಹೇಳುವ ಮೂಲಕ ನಗರ ಜೀವನದಲ್ಲಿ ಸಂಬಂಧಗಳು ತೆಳುವಾಗುತ್ತಿವೆ ಎನ್ನುವ ಆತಂಕವನ್ನು ತಳ್ಳಿಹಾಕುವುದು ಸುಲಭ. ಆದರೆ, ಯಾವುದೇ ಹಳ್ಳಿಗೆ ಹೋಗಿ. ಅಲ್ಲಿ ಯಾರೊಬ್ಬರ ಮನೆಯ ಬಾಗಿಲನ್ನು ಸುಲಭವಾಗಿ ತಟ್ಟಬಹುದು. ಪರಿಚಯವೇ ಇಲ್ಲದ ಹಾದಿಹೋಕನನ್ನು ಮಾತಿಗೆಳೆದು ನಿಲ್ಲಿಸಬಹುದು. ಆದರೆ, ನಗರವೊಂದರ ಮನೆಯನ್ನು ಸಲೀಸಾಗಿ ಹೋಗಿ ತಟ್ಟಲು ಸಾಧ್ಯವೇ? ನಿಂತ ರಸ್ತೆಗೂ ಎದುರಿನ ಮನೆಗೂ ಐದಾರು ಅಡಿಯಷ್ಟೇ ದೂರವಿದ್ದರೂ, ಬಾಗಿಲು ತಟ್ಟಲು ಹಿಂಜರಿಯುತ್ತೇವೆ. `ನಾಯಿ ಇದೆ ಎಚ್ಚರಿಕೆ' ಎನ್ನುವ ಫಲಕವನ್ನು ಕಣ್ಣುಗಳು ಹುಡುಕುತ್ತವೆ. ಅನೇಕ ಮನೆಗಳಲ್ಲಿ ನಾಯಿ ಇರುವುದಿಲ್ಲ, ಎಚ್ಚರಿಕೆಯ ಫಲಕಗಳಿರುತ್ತವೆ. ಗೇಟು ದಾಟಿ, ಬಾಗಿಲ ಬಳಿ ನಿಂತೆವೆನ್ನಿ. ಅಲ್ಲೊಂದು ಕಾಲಿಂಗ್ ಬೆಲ್ ಇರುತ್ತದೆ. ಒತ್ತುತ್ತೇವೆ. ಬಾಗಿಲು ತೆರೆಯುವುದಿಲ್ಲ. ಬಾಗಿಲಿನ ಸಣ್ಣಕಿಂಡಿಗೆ ಕಣ್ಣುಮೂಡುತ್ತದೆ. ಯಾರು? ಎನ್ನುವ ಪ್ರಶ್ನೆ ಮುಖಕಕ್ಕೆ ರಾಚುತ್ತದೆ. ಈ ಎಲ್ಲ ಪ್ರಶ್ನೋತ್ತರದ ನಡುವೆ ಆತ್ಮೀಯತೆಗೆ ಜಾಗವಾದರೂ ಎಲ್ಲಿ? ಮುಚ್ಚಿದ ಬಾಗಿಲುಗಳ, ಕರ್ಟನ್‌ಗಳಿಂದ ಅಲಂಕರಿಸಿದ ಕಿಟಕಿಗಳ, ಮಕ್ಕಳ ಕಲರವ ಅಡಗಿಸುವ ಟೀವಿಯ ಅಬ್ಬರದ ಹಾಗೂ ವಿದ್ಯುದ್ದೀಪಗಳು ಸದಾ ಉರಿಯುವ ಮನೆಗಳಿಂದ ಸೂರ್ಯ ದೂರವಾಗುತ್ತಿದ್ದಾನೆ. ಇಂಥ ಆಧುನಿಕ ಮನೆಗಳಲ್ಲಿ ಕ್ಷುಲ್ಲಕ ಔಪಚಾರಿಕತೆಗೆ ತಾವಾದರೂ ಎಲ್ಲಿ!?
ನಗರದ ನಾಗರಿಕರ ಆತಂಕಗಳು ಅರ್ಥಹೀನವೇನೂ ಅಲ್ಲ. ಬಾಗಿಲು ತಟಟುವ ವ್ಯಕ್ತಿ ಹಂತಕನಿರಬಹುದು, ಕಳ್ಳನಾಗಿರಬಹುದು, ವೃಥಾ ಪೀಡಿಸುವ ಸೇಲ್ಸ್‌ಮ್ಯಾನ್ ಆಗಿರಬಹುದು. ಮಾಧ್ಯಮಗಳಿಗೆ ರಜೆಯಿದ್ದ ದಿನವೂ ನಗರಗಳಲ್ಲಿ ಅಪರಾಧಗಳು ಸಂಭವಿಸುತ್ತವೆ! ಇದು ನಾವೇ ಕಟ್ಟಿಕೊಂಡ ವಿಷವೃತ್ತ. ಒಂದು ಮನೆಗೆ ಕಳ್ಳ ನುಗ್ಗಿದ ಅನ್ನಿ; ಪಕ್ಕದ ಮನೆಯವರನ್ನು ಸಹಾಯಕ್ಕೆ ಕೂಗಿ ಪ್ರಯೋಜನವಿಲ್ಲ. ನೆರವು ನೀಡುವುದು ನೆರೆಹೊರೆಯವರ ಕೆಲಸವಲ್ಲ; ಅದಕ್ಕಾಗಿಯೇ ಪೊಲೀಸರಿದ್ದಾರೆ! ಹಳ್ಳಿಗಳಲ್ಲಿ ಹಾಗಲ್ಲ. ಮೆನಯೊಂದರಲ್ಲಿ ಸಂಭವಿಸುವ ಅನಾಹುತಕ್ಕೆ ಊರು ಕಣ್ಣೀರಾಗುತ್ತದೆ. ಪಕ್ಕದ ಮನೆಯ ದುಃಖ ನಮ್ಮ ಮನೆಯದೂ ಆಗಿರುತ್ತದೆ.
ಎರಡು ಘಟನೆಗಳನ್ನು ಹೇಳಬೇಕು. ಆತ ಹಣ್ಣುಹಣ್ಣು ಮುದುಕ. ಆಟೋದಲ್ಲಿ ಕುಳಿತು ವಿಳಾಸ ಹುಡುಕುತ್ತಿದ್ದ. ವಿಳಾಸವೇನೋ ಸಿಕ್ಕಿತು. ಆದರೆ ತಟ್ಟಿದ ಮನೆಯ ಬಾಗಿಲು ತೆರೆಯಲಿಲ್ಲ. ಗುಂಪುಗೂಡಿತು. `ಹೆಂಡತಿಗೆ ಹುಷಾರಿಲ್ಲ. ಆಸ್ಪತ್ರೆಯಲ್ಲಿದ್ದಾಳೆ' ಎಂದು ವೃದ್ಧ ಗುಂಪಿಗೆ ಹೇಳುತ್ತಿದ್ದ. ಸೊಸೆ ಬಾಗಿಲು ತೆರೆಯಲಿಲ್ಲ. ಮೊಮ್ಮಕ್ಕಳು ಕ್ಯಾರೆ ಅನ್ನಲಿಲ್ಲ. ಅ ವೃದ್ಧನ ಮಗ ಮನೆಯಲ್ಲಿ ಇರಲಿಲ್ಲ. ಆಟೋದವನ ಸಹನೆ ತೀರಿತು. ಗುಂಪೂ ಕರಗಿತು. ವೃದ್ಧ ವಾಪಸ್ಸಾದ. ಆತನ ಮಗ ಮೆನಯಲ್ಲಿ ಇದ್ದಿದ್ದರೆ ಸನ್ನಿವೇಶ ಬೇರೆಯಾಗುತ್ತಿತ್ತಾ? ಗೊತ್ತಿಲ್ಲ. ಆದರೆ ಯಾವಯಾವುದೋ ನೆನಪು-ನೆಪಗಳನ್ನು ಮುಂದಿರಿಸಿ ವೃದ್ಧನನ್ನು ನಿರಾಕರಿಸಿದ ಸೊಸೆಯ ನಡವಳಿಕೆ ಅಮಾನವೀಯತೆ ಎಂಬುದು ಮಾತ್ರ ನಿಜ. ಈ ಘಟನೆ ಹಳ್ಳಿಯಲ್ಲಿ ನಡೆದಿದ್ದರೆ ಏನಾಗುತ್ತಿತ್ತು? ಆ ಹಠಮಾರಿ ಸೊಸೆಗೆ ಯಾರಾದರೂ ತಿಳಿ ಹೇಳುತ್ತಿದ್ದರಾ? ವೃದ್ಧನ ಉಪಚರಿಸುತ್ತಿದ್ದರಾ? ಉತ್ತರ ನಿಮ್ಮ ಅನುಭವಗಳನ್ನು ಆಧರಿಸಿದ್ದು.
ಎರಡನೆಯ ಘಟನೆ ಹೀಗಿದೆ. ಜ್ವರದ ತೀವ್ರತೆಯಿಂದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ ಆ ಹಿರಿಯ ಹೆಣ್ಣುಮಗಳು ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ. ಮೂಗಿಗೊಂದು ಕೊಳವೆ. ಮುಂಗೈಗೆ ಚುಚ್ಚಿದ ಸೂಜಿಗೊಳವೆಯ ಮೂಲಕ ತೊಟ್ಟುತೊಟ್ಟಾಗಿ ದೇಹ ಸೇರುತ್ತಿದ್ದ ಪುಷ್ಟಿದ್ರವ. ಸೂಜಿ ಚುಚ್ಚಿ ಚುಚ್ಚಿ ಗಾಯಗೊಂಡು ಬ್ಯಾಂಡೇಜ್ ಮಾಡಿದ ಮತ್ತೊಂದು ಕೈ ಮಂಚದ ಒಂದು ಬದಿಗೆ ಮೂತ್ರಸಂಗ್ರಹ ಚೀಲ. ಆಕೆ ಒದ್ದಾಡುತ್ತಿದ್ದಳೂ. `ಸ್ವಾಸ್ಥ್ಯ ಸುಧಾರಿಸಲು ಮೂರ್‍ನಾಲ್ಕು ದಿನ ಬೇಕು. ಆವರೆಗೆ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ' ಎಂದು ಸಲಹೆ ನೀಡಿದ ವೈದ್ಯರು ಕೈತೊಳೆದುಕೊಂಡಿದ್ದರು. ಆದರೆ ಕೈಕಾಲು ಕಟ್ಟುವುದು ಹೇಗೆ? ಬಲೆಗೆ ಬಿದ್ದ ಮಿಕದಂತೆ ಒದ್ದಾಡುವ ಆಕೆಯ ಚಿತ್ರವನ್ನು ಕಲ್ಪಿಸಿಕೊಳ್ಳುವುದೇ ಅಸಹನೀಯ. ಕೈಕಾಲು ಹಿಡಿದು ಒದ್ದಾಡುವ ದೇಹವನ್ನು ತಲಾ ನಾಲ್ಕು ಜನ ಎರಡು ಹಗಲು ಎರಡು ರಾತ್ರಿ ಪಾಳಿಗಳಲ್ಲಿ ಒತ್ತಿಹಿಡಿದಿದ್ದರು. ಒಂದು ಮೊದಲ ಜಾವದಲ್ಲಿ ಆಕೆಗೆ ಇದ್ದಕ್ಕಿದ್ದಂತೆ ತಿಳಿವಳಿಕೆ ಬಂತು. ಆದಿನ ಬೆಳಗ್ಗೆ ಆಸ್ಪತ್ರೆಗೆ ಬಂದವರಿಗೆ ತಮ್ಮ ಕಣ್ಣನ್ನೇ ನಂಬಲಾರದಷ್ಟು ಅಚ್ಚರಿ. ಅವರ ಅಚ್ಚರಿಗೆ ಕಾರಣ ಆಕೆಯ ಆರೋಗ್ಯ ಸುಧಾರಣೆ ಅಲ್ಲ; ಮಂಚದ ಮೇಲೆ ಮಲಗಿಯೇ ಆಕೆ ಉಪಚರಿಸಿದ ರೀತಿ. ಬಂದವರಿಗೆ ಹೋಟೆಲ್‌ನಿಂದ ಕಾಫಿ ತಂದುಕೊಡುವಂತೆ ಆಕೆ ಒತ್ತಯಿಸತೊಡಗಿದಳು. ಎಳನೀರಾರದರೂ ಕುಡಿದುಹೋಗಿ ಎಂದು ಎಳನೀರು ತಂದವರನ್ನೇ ಒತ್ತಾಯಿಸಿದಳು. ಆ ಹಳ್ಳಿಯ ಹೆಣ್ಣುಮಗಳ ಉಪಚಾರ ಕಂಡು ಎದುರಿಗೆ ಕುಳಿತಿದ್ದವರು ಮುದುಡಿಹೋಗಿದ್ದರು. ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ನೋವನುಭವಿಸುತ್ತಿದ್ದರೂ, ಎದ್ದು ಕೂರಲು ಆಗದೆ ಹೋದರೂ ಆಕೆ ಅತಿಥಿಗಳನ್ನು ಉಪಚರಿಸಲು ಮರೆತಿರಲಿಲ್ಲ. ಅದು ಯಾರೋ ಹೇಳಿಕೊಟ್ಟ ಪಾಠವಲ್ಲ; ಹಳ್ಳಿಯ ಬದುಕು ಕಲಿಸಿಕೊಟ್ಟ ಸಂಸ್ಕಾರ.
ನಗರ ಎನ್ನುವುದು ಘಟೋತ್ಕಚ ಸೃಷ್ಟಿಸಿದ ಮಾಯಾಬಜಾರಿನಂತಹುದು. ಈ ಬಜಾರಿನಲ್ಲಿ ಕನಸುಗಳನ್ನು ಕೊಳ್ಳುವವರು ನಾವು. ಈ ಕನಸುಗಳೇನೂ ಸೋವಿಯಲ್ಲ. ಒಂದೊಂದು ಕನಸೂ ವಯಸನ್ನು ಬೇಡುತ್ತದೆ, ರೊಕ್ಕವನ್ನು ಬೇಡುತ್ತದೆ, ಏಕಾಂತವನ್ನು ಬೇಡುತ್ತದೆ. ಇಷ್ಟೆಲ್ಲ ದಂಡ ಕಟ್ಟಿಸಿಕೊಂಡು ದಕ್ಕಿದರೂ ಅದು ಪರಿಪೂರ್ಣವೇನಲ್ಲ. ಅದರ ಪರಿಪೂರ್ಣತೆಗೆ ಮತ್ತೊಂದು ಕನಸನ್ನು ನನಸು ಮಾಡಿಕೊಳ್ಳಬೇಕಿದೆ. ಎಷ್ಟು ಸುತ್ತಿದರೂ ತೀರದ ವೃತ್ತವಿದು. ಈ ಸುತ್ತಾಟದಲ್ಲಿ, ನಟಿಯೊಬ್ಬಳು ತನ್ನ ಮೂಗು ತಿದ್ದಿಕೊಂಡಷ್ಟು ಸಲೀಸಾಗಿ ಮುಖಗಳನ್ನು ಬದಲಿಸಿಕೊಳ್ಳುತ್ತೇವೆ. ಕೊನೆಗೊಮ್ಮೆ ನೈಜ ಮುಖದ ನೆನಪೇ ಅಳಿಸಿಹೋಗುತ್ತದೆ. ನಮ್ಮದಲ್ಲದ ಮುಖವನ್ನು ಹೊತ್ತು ಬದುಕುತ್ತೇವೆ. ಸುಖದ ಅರ್ಥಗಳನ್ನು ಬದಲಿಸಿಕೊಳ್ಳುತ್ತೇವೆ. ಒಂದುದಿನ, ಬಜಾರಿನ ಮಾಯೆ ಹರಿಯುತ್ತದೆ. ಆವೇಳೆಗೆ ಬದುಕೇ ಒಂದು ಬಜಾರಾಗಿರುತ್ತದೆ. ಕೆಲವರು ಮಾಯೆಯ ಪೊರೆಯಲ್ಲೇ ಉಳಿಯುತ್ತಾರೆ.
ಇಪ್ಪತ್ತನಾಲ್ಕು ಗಂಟೆ ನಮಗೆ ಯಾವುದಕ್ಕೂ ಸಾಲದು. ಗೆಳೆಯರೊಂದಿಗೆ ಹರಟೆ ಹೊಡೆಯಲು, ಮಗುವಿಗೆ ಚಂದಮಾಮನ ತೋರಿಸಲು, ಸಂಗಾತಿಯೊಂದಿಗೆ ಸಂಜೆಯ ನೀರವತೆಗೆ ರಂಗೇರಿಸಲು ನಮ್ಮ ಗಡಿಯಾರಗಳಲ್ಲಿ ಸಮಯವಿಲ್ಲ. ಕುಟುಂಬದ ಸದಸ್ಯರು ಪರಸ್ಪರ ಅಪರಿಚಿತರಾಗುವ ಉದಾಹರಣೆಗಳು ಇಲ್ಲದಿಲ್ಲ. `ಅರ್ಧ ನಾರೀಶ್ವರ' ಕಲ್ಪನೆ ನಗರದ ಜಮಾನಕ್ಕೆ ಹೊಂದುತ್ತಿಲ್ಲ. ಇಲ್ಲಿ ಗಂಡ ಒಂದು ದಂಡೆ. ಹೆಂಡತಿ ಇನ್ನೊಂದು ದಂಡೆ. ಮಕ್ಕಳೆಂಬ ನಾವೆ ಎರಡೂ ದಡಗಳನ್ನು ಕೂಡಿಸುವುದಿಲ್ಲ. ಮಕ್ಕಳಿಗೆ ಅವರದೇ ಆದ ಜವಾಬ್ದಾರಿಗಳಿವೆ. ಮುಂದಿನ ಬದುಕಿಗಾಗಿ ಅವರು ಇಂದಿನ ಬಿಡುವು ಹಾಗೂ ಮುಗ್ಧತೆ ಕಳೆದುಕೊಂಡಿದ್ದಾರೆ. ಮಕ್ಕಳ ಅಗತ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಪೋಷಕರ ಪಾತ್ರ ಸೀಮಿತವಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿ ಹಾಗೂ ಸಿರಿಜ್ವರ ಮನುಷ್ಯರ ಭಾವನೆಗಳನ್ನು ಪ್ರಭಾವಿಸಿವೆ. ಮನಃಶಾಂತಿಯೂ ಇಲ್ಲಿ ಕೊಳ್ಳುವ ಸರಕು. ಏಕಾಂತದ ಧ್ಯಾನವೂ ಬಿಕರಿಗಿದೆ.
ನಮ್ಮ ಗೆಳೆತನಗಳಾದರೂ ಎಂಥವು? ಕಚೇರಿ ಬೆಸೆಯುವ ಗೆಳೆತನ, ಮಸಾಲೆದೋಸೆ ಗೆಳೆತನ ಅಥವಾ ಯಾವುದೋ ರೀತಿಯಲ್ಲಿ ರೂಪಾಯಿಯೊಂದಿಗೆ ನಂಟು ಹೊಂದಿದ ಗೆಳೆತನ. ಗೆಳೆತನ ಈಗ ಸುವಿಶಾಲ ಆಲವಲ್ಲ; ಹುಲ್ಲು. ನಗರಗಳಲ್ಲಿ ಹುಲ್ಲನ್ನು ಬೆಳೆಯಲಾಗುತ್ತದೆ, ಎಲ್ಲಿಯೋ ಬೆಳೆಸಿದ ಹುಲ್ಲುಮಡಿಗಳನ್ನು ಮತ್ತ್ಯಾವುದೋ ನೆಲಕ್ಕೆ ಕಸಿ ಮಾಡಲಾಗುತ್ತದೆ, ಅಲಂಕಾರಕ್ಕಾಗಿ. ಗೆಳೆತನಗಳನ್ನು ಉಳಿಸಿಕೊಳ್ಳಲಾಗುತ್ತದೆ, ಅಲಂಕಾರಕ್ಕಾಗಿ.
`ಚಿನ್ನಾರಿ ಮುತ್ತ' ಚಿತ್ರದಲ್ಲಿ, ಹಳ್ಳಿಯಿಂದ ನಗರದ ಪಾಲಾದ ಮುತ್ತ ಹಾಡುವ ಹಾಡು ನೆನಪಿದೆಯಾ? `ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು/ ಎಷ್ಟೊಂದು ಮನೆ ಇಲ್ಲಿ ಎಲ್ಲಿ ನನ್ಮನೆ' ಎಂದು ಮುತ್ತ ತನ್ನನ್ನು ತಾನು ಕೇಳಿಕೊಳ್ಳುತ್ತಾನೆ. ಇದು ನಾವು ಕೇಳಿಕೊಳ್ಳಬೇಕಾಧ ಪ್ರಶ್ನೆಯೂ ಹೌದು. ಉತ್ತರ ಸಿಕ್ಕಿದರೆ ನೀವು ಅದೃಷ್ಟವಂತರೇ ಸರಿ.
ಸಣ್ಣಸಣ್ಣ ಕೌಟುಂಬಿಕ ಸಂಗತಿಗಳ ಮೂಲಕವೇ ಬದುಕಿನ ಸುಖ ಕಾಣುವ ಸಂಸ್ಕೃತಿ ನಮ್ಮದು. ನ್ಯೂಕ್ಲಿಯರ್ ಕುಟುಂಬಗಳು ಜನಪ್ರಿಯವಾಗುತ್ತಿರುವ ಸಂದರ್ಭದಲ್ಲೂ ಅವಿಭಕ್ತ ಕುಟುಂಬ ಕಲ್ಪನೆಯನ್ನು ಉಳಿಸಿಕೊಂಡಿರುವ ಸಂಸ್ಕೃತಿ ನಮ್ಮದು. ಆದರೆ ಈ ಹೆಮ್ಮೆಗಳಷ್ಟೇ ನಮ್ಮನ್ನು ಕಾಯುವುದಿಲ್ಲ. ಮಾಯಾಬಜಾರಿನ ಒಳಗಿದ್ದೂ ಹಳ್ಳಿಯ ಬೇರುಗಳ ಆರ್ದ್ರತೆ ಉಳಿಸಿಕೊಳ್ಳದಿದ್ದಲ್ಲಿ ಉಳಿಗಾಲವಿಲ್ಲ.
ಹಳ್ಳಿ ಎನ್ನುವುದು ಈಗ ಒಂದು ಊರಾಗಿ ಉಳಿದಿಲ್ಲ. ಹಳ್ಳಿಯ ಹೈಕಳು ನಗರ ಸೇರಿದ್ದಾರೆ. ಅಮೆರಿಕ ಸೇರಿದ್ದಾರೆ. ಅವರ ಮೂಗುಗಳಿಗೆ ಹಳ್ಳಿಯ ಮಣ್ಣಿನ ವಾಸನೆ ಸೇರುವುದಿಲ್ಲ. ಬಾವಿಯ ನೀರು ದೇಹಕ್ಕೆ ಒಗ್ಗುವುದಿಲ್ಲ. ಹೀಗಿರುವಾಗ ಹಳ್ಳಿಯಲ್ಲಿನ ಜನರು ಅವರಿಗೆ ಅಪರಿಚಿತ ಅನ್ನಿಸುವುದು ಸಹಜ ತಾನೆ? ಆ ಜನರಲ್ಲಿ ಅಪ್ಪ ಅಮ್ಮ ಇರುತ್ತಾರೆ. ಸೋದರ ಸೋದರಿ ಇರುತ್ತಾರೆ. ಏನು ಮಾಡುವುದು: ದಾರಿಗಳು ಕವಲೊಡೆದಿವೆ. ನಮ್ಮ ಬದುಕು ನಮ್ಮದು ಎಂದು ಯೋಚಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮನೆಯ ಗೋಡೆಯ ಮೇಲಿನ ಗ್ರೂಪ್ ಫೋಟೊಗಳು ಮಾಯವಾಗಿವೆ. ಷೋಕೇಸ್‌ನಲ್ಲಿ ಗಂಡಹೆಂಡಿತ ಚಿತ್ರ ಸ್ಥಾನ ಪಡೆದಿದೆ. ಬೆಳೆದ ಮಕ್ಕಳು ಗೂಡಿನಿಂದ ಹಾರುತ್ತಿದ್ದಾರೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ.
ಹಳ್ಳಿ ಎನ್ನುವುದು ಒಂದು ಊರಲ್ಲ. ಅದೊಂದು ಅದ್ಭುತ ಕಲ್ಪನೆ; ಎಟುಕಿಸಿಕೊಳ್ಳಬಹುದಾದ ಆದರ್ಶ. ಆ ಆದರ್ಶವನ್ನು ಎಟುಕಿಸಿಕೊಳ್ಳಲಿಕ್ಕಾಗಿ ಹಳ್ಳಿಗಳಲ್ಲೇ ಬದುಕಬೇಕಿಲ್ಲ. ನಗರದಲ್ಲಿದ್ದೂ ಬೇರುಗಳಿಗೆ ಬದ್ಧರಾಗಿರಲು, ಎದೆಯ ತೇವ ಉಳಿಸಿಕೊಳ್ಳಲು ಸಾಧ್ಯವಿದೆ. ಕಾಲದ ಓಟದಲ್ಲಿ ಹಳ್ಳಿಗಳ ಸ್ವರೂಪ ಉಳಿಯುತ್ತದೋ ಇಲ್ಲವೋ ಹೇಳುವುದು ಕಷ್ಟ. ಆದರೆ... ಹಳ್ಳಿಯ ಸ್ವರೂಪವನ್ನು ಹಳ್ಳಿ ಎನ್ನುವ ಆದರ್ಶವನ್ನು ಉಳಿಸಿಕೊಳ್ಳಲು ಸಾಧ್ಯವಿದೆ.
ನಗರದ ಜನರನ್ನು ಟೀಕಿಸುವುದು; ಹಳ್ಳಿಗರನ್ನು ಅಟ್ಟಕ್ಕೇರಿಸುವುದು ಈ ಬರಹದ ಉದ್ದೇಶವಲ್ಲ. ನಗರದ ಒಂದು ಭಾಗವಾಗಿ ನಿಂತು ನಾವು ಕಳೆದುಕೊಳ್ಳುತ್ತಿರುವ ಸುಖಗಳ, ಮೌಲ್ಯಗಳ ಕುರಿತು ಯೋಚಿಸುವುದಷ್ಟೇ ಇಲ್ಲಿನ ಯೋಚನೆಯ ಪ್ರಯತ್ನ. `ಊರು, ಮನೆ, ಅಪ್ಪ ಅಮ್ಮ, ಒಡಹುಟ್ಟಿದವರು- ಇವರೆಲ್ಲ ಸೇರಿ ನಾನು' ಎನ್ನುವವರು ನಮ್ಮ ನಡುವೆ ಇದ್ದಾರೆ. ಈ ಸಮಾಧಾನವೇ, ಇಂಥವರ ಸಂತತಿ ಇನ್ನೂ ಹೆಚ್ಚಲಿ ಎನ್ನುವ ಹಂಬಲವೇ ಈ ಬರಹವನ್ನು ರೂಪಿಸಿದೆ. ಇಂಥ ಹಂಬಲಗಳು ವೈಯಕ್ತಿಕವಾಗಿ ಜಡ್ಡುಗಟ್ಟದೆ ಉಳಿಯಲು ನಡೆಸುವ ಪ್ರಯತ್ನಗಳೂ ಹೌದು.
`ಸಂಬಂಜ ಅನ್ನೋದು ದೊಡ್ಡದು ಕನಾ' ಅನ್ನುತ್ತಾರೆ ದೇವನೂರು ಮಹಾದೇವ. ಇಲ್ಲ ಅಂತೀರಾ?
*****
ಕೀಲಿಕರಣ: ಕಿಶೋರ್ ಚಂದ್ರ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ