ಆಶಯ

- ವಿದ್ವಾನ್ ಐ ಮಾ ಮುತ್ತಣ್ಣ

ಇಹದ ಸುಖವನು ಬಯಸಿ, ಆತ್ಮಯೋಗದ ಬಲವು
ತನ್ನದೆಂಬುದ ನೆಚ್ಚಿ, ಮುಂಗುರಿಯ ದೃಷ್ಠಿಯನು
ನಂಬಿಕೆಯ ನೇತೃದಲಿ ನೋಡುತಲು, ಜೀವನದ
ಧ್ಯೇಯವನು ದಿಗ್ಭ್ರಾಂತ ತರಂಗದೊಳಾಡಿಸುತ,
ಕೋಟಿಮಾನವರಲ್ಲಿ ತನ್ನ ಪ್ರತಿಭೆಯ ಸಾಕ್ಷ್ಯ
ಸಾರುತಲಿ ಪಾಡುತಲಿ, ಮಾನವನು ತಾನ್ಪಡೆದ
ಜನ್ಮಸಾರ್ಥಕವೆಂದು ಜಡನಂತೆ ಮರುಳಾಗಿ
ವಿಶ್ವನಿಯಮದ ಎದುರು ಪಕ್ಕಮಿಲ್ಲದ ಪಾತೆ-
ಯಂತೆ ಸೇರ್ವನು ಸೋಲ ಸುರಂಗವನ್ನು!

ಕಾಲಪುರುಷನು ತಾಳ್ದ ಅನುಭವವೆ ಅದು ಚಿತ್ರ!
ಎಲ್ಲಿಂದೆಲಿಗೆ ಹಾಯ್ದು ಎಂತೆಂಥಾ ಭೀಕರದ
ನೋಟವನು, ಜನತೆಗಳ ಭಾಗ್ಯ ದೌರ್ಭಾಗ್ಯಗಳ
ಜೀವನವ ನೋಡಿ ಕನಿಕರಗೊಂಡು, ಮನಸಿನಾ
ಭಿತ್ತಿಯಲಿ ಆ ಹಾಳೂಬಾಳಿನಾ ಬೇಗುದಿಯ
ಚಿತ್ರವನು, ಆ ಕಾಲ ಮಹಿಮಾ ಮಹತ್ವವನು
ಒಂದಾಗಿ, ಗುರುಜನರ ನೃಪಜನದ ತತ್ವದಿಂ
ಆಳ್ಕೆಯಿಂ ಬಗೆ ಬಗೆಯ ಸೋಗನ್ನು ಜಗಪಡೆದ
ತೆರವನ್ನು ನೋಡುತೋಡುತ ಸಾರ್ವುದಾಹಾ!

ಎನ್ನೆದೆನ್ನದುವೆಂದು ಔತ್ಕೃಷ್ಟ್ಯವಾದದಲಿ,
ಒಲ್ಮೆ ನಲ್ಮೆಯ ಸುಖನು ಎಂಬ ವಿಚಾರದಲಿ,
ರಸಿಕ ಜೀವನ ತಾಳ್ವ ಮೋಹ ಸಂಘಟನೆಯಲಿ,
ಸಮರನಾದದಿ ಏಳ್ವ ಜನದ ತಳಮಳದಲ್ಲಿ,
ವೈರಾಗ್ಯ ಜೀವನವು ಪಡೆವ ಸಾರ್ಥಕದಲ್ಲಿ,
ಮನಕೆ ತೋರುವವೊಂದು ವಿಸ್ಮಯಾಂತಕವಾದ-
ಧ್ವನಿಯ ಲೋಕಕೆ ಸಾರ್ವ ಮಂಗಲಾಮಂಗಲವೊ
ಹೇಳ ಬಲ್ಲವರಾರು?  ಹೃದಯಾದಾವೇಶವನು
ಅನುಭವವೆ ಒಪ್ಪಿಸುವುದು ಕಾಣ್ಕೆಯಾಗಿ!

ಲೇಖನಿಯನುರುಳಿಸೆನು ಕವಿಯೆಂಬ ಹೆಮ್ಮೆಯಲಿ,
ಪಾಡ್ದನಿಯನೊಪ್ಪಿಸೆನು ಗಮಕಿಯೆಂಬರ್ಥದಲಿ,
ಜಗದಿರವ ಚಿತ್ರಿಸೆನು ಚಿತ್ರಿಕನ ರೀತಿಯಲಿ,
ತತ್ವಗಳ ನೊರೆಯೆನಾ ತಾತ್ವಿಕನ ಸೂಕ್ತಿಯಲಿ,
ಎಮ್ಮೆ ಜೀವದ ಛಾಯೆ ಪರರ ಬಾಳಿನ ಮಾಯೆ
ಹಾಸುಹೊಕ್ಕಾಗಿ ತರಂಗಗಳ ತಲ್ಪದಲಿ
ಬಿದ್ದುರುಳುವುದ ಕಂಡು ಮನವಾರೆ ಸೋಲುತಲಿ
ನೀಳ್ಗತೆಯ ಕಿರಿದಾಗಿ ವಿಷಯಗಳ ಲಘುವಾಗಿ
ಅಂಧ ಸಾಧಕನಂತೊರೆಯಲಿಳಿದೆನೊರ್ವ!

ಬ್ರಹ್ಮಾಂಡ ನೆಲಗಟ್ಟು ಪ್ರೇಮದಾಧಾರದಲಿ
ವಿಶ್ವನಿಯಮದ ಬಲವು ಪ್ರೇಮಸುಧೆ ಧಾರೆಯಲಿ,
ಮಾನವನ ವ್ಯವಹಾರ ಪ್ರೇಮ ಪೋಷಾಕಿನಲಿ,
ಜೀವಿಗಳ ಸ್ವಾತಂತ್ರ್‍ಯ ಪ್ರೇಮಪ್ರಲಾಪದಲಿ-
ಅಡಗಿರಲು, ಈರೇಳು ಲೋಕದಾ ಘಟನೆಯಲಿ
ಪ್ರೇಮಜಾಲದಿ ಏಳ್ವ ಪ್ರಣಯಧೂಮದ ರೂಪ
ಅದೆಂತು ವೈಚಿತ್ರ್‍ಯ!  ಎಂತು ಮನೋಹರವು!!
ಎನ್ನ ಸೊಲ್ಲನು ಇಲ್ಲಿ ತದ್ವಿಶೇಷದಿ ಚೆಲ್ಲಿ
ನೋಟಕರ ಹಾಯೆಣಿಸಲಸದಳವೊ!

ಮನಸಿಜನ ಮಾಯೆಯಲಿ ಜನದಲಿಹ ಮೋಹದಲಿ
ಕವಿಪಾಕವೊಸರುವುದು ಆತ್ಮರಸಬಟ್ಟಲಿಂ!
ಸುಖದ ದುಃಖದ ಬೇರೆ ಪಾಲು ಎರಡನು ಮಾಡಿ
ಸೋಗಿನನುಭವದಲ್ಲಿ ಸವಿದು ಸವಿಕಹಿಯನ್ನು
ನೋಡಿ ಲೋಕದ ಬಗೆಯ ಚಿತ್ರಿಸಿಡುತಲಿ ವಿಧವ-
ಹಾಹಾಕಾರದ ಕಾಣ್ಕೆ ಗುಣದ ದೋಷದ ಪೂಣ್ಕೆ
ಒಂದನೊಂದರಲಿಟ್ಟು, ತನ್ನ ಇರವನು ತನ್ನ
ಬುದ್ಧಿಬಲದಿಂ ಬೆಳಗಿ ಆದರ್ಶ ಜೀವನಕೆ
ಆಧಾರನಾಗಿರಲು ಸಲ್ವುದೆನಿತೊ!
    *****

ಕೊಡಗಿನ ಕರೆ

- ಅನಂತರನಾರಾಯಣ ಎಸ್

ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ
ಮೈಸೂರ ಕಂಕುಳಲಿ ಕೊಡಗ ನಾಡು
ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು
ತೊರೆಯನೀರಿನ ಗೀತ ಸೊಗದ ಬೀಡು!

ಕಾವೇರಿ ಬರುತಿಹಳು ಕೊಡಗಿನಲಿ ಜನಿಸುತ್ತ
ಅಂಕು ಡೊಂಕಿನ ಕೊಂಕು ಬಿಂಕದಿಂದ,
ಸಂದೇಶ ತರುತಿಹಳು ಕೊಡಗ ನಾಡೊಳಗಿಂದ
ಜಗಕೆಲ್ಲ-ಬಂದುದನು ನೋಡಿರೆನುತ!

ಕೊಡಗಸೀಮೆಯ ಬೆಡಗು ಮಲೆಗಳಾ ಮೌನವನು
ಬಾಲೆಯರ ಬಿನ್ನಾಣ, ಬಿಂಕದಾಟ,
ರಮಣಿಯರ ಭೀರುತನ, ಎಲ್ಲವನು ಬಿಂಬಿಸುತ
ಕೊಡಗ ಪುತ್ರಿಯು ಭರದಿ ಹರಿಯುತಿಹಳು!

ಕೊಡಗ ಕಿತ್ತಳೆಹಣ್ಣು ನೋಡಿ ನೆನಪಾಯ್ತೆನಗೆ
ಮಡಿಕೇರಿ ಬಳಿಯಿರುವ ಕೊಡಗ ಕುವರಿ,
-ನೋಡಿದುದು ಒಂದೆ ಚಣ, ಮೂಡಿದಳು ಮನದಲ್ಲಿ
ಮರೆಯಲಾರೆನು ಅವಳ ನಿಲುವ ಚೆಲುವ!

ಬೆಳ್ಳಿಯಂಚಿನ ಕಪ್ಪುಬಣ್ಣ ಸೀರೆಯನುಟ್ಟು
ಸಡಗರದಿ ಒಡನಾಡಿಯೊಡಗೂಡುತ
ಮುಗಿಲ ಬಣ್ಣದ ರವಿಕೆ ತೊಟ್ಟಿಹಳು, ಮಲ್ಲಿಗೆಯ
ಮುಡಿದಿಹಳು, ಜೋಲುತಿದೆ ಜಡೆಯು ಕೆಳಗೆ!

ಕಳಿತ ಕಿತ್ತಳೆ ವರ್ಣ ಮಿದುವಾದ ಕೆನ್ನೆಗಳು,
ತೆಳೆಯಂತೆ ರಸ ತುಂಬಿದಾತುಟಿಗಳು,
ನಿಲುವಿನಲಿ ವೈಯಾರ, ನೋಟದಲಿ ದಿಟ್ಟತನ
ಬಿನ್ನಾಣ ಬೆಡಗುಗಳ ಹಾಸಮಯಿಯು!

ನೋಡಿದುದು ಒಂದೆ ಚಣ ಮೂಡಿದಳು ಮನದಲ್ಲಿ
ನೋಡಬೇಕೆಂಬುವಾ ಬಯಕೆ ಬಹಳ!
ಕನಸಿನಲಿ ಕುಣಿಯುತ್ತ ಕಲೆಯುತ್ತ ಕಾಣುವುದು
ಅವಳ ರೂಪವು-ಅದುವೆ ಕೊಡಗ ಕರೆಯು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಜ್ಞಾನದೇಗುಲ

-ರವಿ ಕೋಟಾರಗಸ್ತಿ

ಬಾಳ ಕನಸು ಕಮರಿ
ದೇಹ ಪರರಿಗೆ ಮಾರಿ
ಹರ್ಷವೆಂಬ ಕರ್ಕಶದಲಿ ನಾರಿ
ಸುಡುತಿಹಳು ಬೆಂಕಿಯಲಿ ಮೈಸಿರಿ

ಯೌವನದ ಕನಸಲಿ
ಆಚಾರ-ರೂಢಿಗಳ ಸವಾರಿಯಲಿ
ಪುರುಷನ ಚಪಲತೆಯಲಿ
ಸಿಲುಕಿ ಹೆಣ್ಣು ಕೊರಗುತಿಹಳು

ಸಮಾಜದ ಕಣ್ಣು ತೆರೆಸಿ
ಕವಿದಿಹ ಕತ್ತಲೆಯ ದೂಡಿ
ಬೆಳಕು ಬೀರುತ...
ಮೌಢ್ಯತೆಯ ಬಿಗಿ ಸಡಿಲಿಸುವ
ನೊಂದುಬಳಲುವ ವನಿತೆಯರಿಗೆ
ಆಸರೆಯ ದೇಗುಲ ‘ವಿಮೋಚನಾ’

ಭೂಮಾತೆಯ ತೂಕದ ಹೆಣ್ಣಿನ
ದಾಸ್ಯ-ಭೋಗದ ಸಂಕೇತವ
ಅಳಿಸುತಲಿ ನಿಸ್ವಾರ್ಥದ ಸಂಗಾತಿ
ದಲಿತ ಶೋಷಿತ ಮಕ್ಕಳ
ನೋವಿನಲಿ ಬೆಂದು ಬಾಡುತಿಹ
ಸ್ತ್ರೀಕುಲಕ್ಕೆ ಜ್ಞಾನ ಮಂದಿರ
"ವಿಮೋಚನೆ" ಜ್ಞಾನ ದೇಗುಲ

         ***

ಕೀಲಿಕರಣ: ಕಿಶೋರ್‍ ಚಂದ್ರ

೨೬-೧-೫೦

- ನರಸಿಂಹಸ್ವಾಮಿ ಕೆ ಎಸ್

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು
ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ,
ಮರಕತ ದ್ವೀಪದಮನೆಗೆ. ದಣಿಗೂ ದಣಿವು!
ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ
ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ!

ತಲೆಯ ಮೇಲಿನ ಹೆಜ್ಜೆ. -ಈ ಮಾತು ಮುಗಿಯಿತು;
‘ಹೆಜ್ಜೆಯೇ ಅಲ್ಲ ಮಕುಟದ ಮುತ್ತು ಅದು,
ಇರಲಿ ರಾಜತ್ವ ನೆಪಮಾತ್ರ’ ಎನುವಂತಿಲ್ಲ,-
ಮಕುಟ ರಹಿತ ಸಾಮ್ರಾಜ್ಞಿ ಭಾರತಲಕ್ಷ್ಮಿ,
ರಾಜತ್ವ ರಹಿತ ರಾಜ್ಯಾಂಗ ಮನೋಮಂದಿರೆ.

ನೆನೆ ನೆನೆ ಓ ಮನನೆ ನಿನ್ನ ಎದೆಗತ್ತಲೆಯೆ
ಬಲಿಗೊಟ್ಟ ತಂದೆ ಬಾಳಿನ ಚಂದ್ರಬಿಂಬವನು.
ಆ ನೋಟ ನಿನ್ನ ಕಣ್ಣಾಗಿ, ಅಮೃತವೆ ತುಂಬಿ,
ಗಾಂಧಿಜಿಯ ಮಂದಹಾಸವೆ ಗುರುವಾಗಲಿ !

ಬಾಂಬಿನ ಅಲಂಕಾರ ನಿನಗಿಲ್ಲ, ತಾಯೆ,
ಶಾಂತಿ ಪ್ರಿಯೆ, ಚಂದ್ರಕಾಂತಿ ಪ್ರಿಯೆ,
ಗಂಗಾ ಯಮುನಾ ನದನದೀ ಸ್ನಾತೆ,
ಉಪನಿಷದ್ವಿಪಿನ ಹೋಮಾಗ್ನಿ ಸಂಜಾತೆ !

ಚಳಿಗಾಲ ಬಂದಿರಲು, ಮುದುಕಿ ಮುಮ್ಮೂಲೆಯಲಿ
ಒಂದು ಕಿಡಿ ಕೆಂಡದೆದುರಿನಲಿ ಮೈ ಹಿಡಿಯಾಗಿ
ಬೆದರಿ ಕುಳಿತಂತೆ, ಚಿಂತೆಗೆ ಆತ್ಮನನು ತೆತ್ತು
ಸಂಗ್ರಾಮ ಭೀತಿಯಲಿ ಸೋತು ಸೊರಗಿ ಜಗತ್ತು
ದೂರ ಸಭೆಗಳಲಿ ಮುಗಿಯುವ ಮುನ್ನ ಎಚ್ಚರಿಸು.
ನಿನ್ನ ಗಂಭೀರವಾಣಿಯ ಪಾರಿವಾಳಗಳ
ಬೆಳ್ಗರಿಯ ಬೀಸಿ ಶಾಂತಿಯ ಶಿಶುವನುಪಚರಿಸು;
ಅದು ಬೆಳೆದು ಲೋಕನಾಯಕನಾಗಿ ರಾರಾಜಿಸಲಿ!

ಜಗಜ್ಜನನಿಯಲ್ಲ ನೀನು; ಜಗನ್ಮೋಹಿನಿಯೂ ಅಲ್ಲ;
ಜಗದ್ಧಾತ್ರಿಯಾಗಿರು ನೀನು; ಅಹಿಂಸಾವತ್ಸಲೆ,
ನಿನ್ನ ಶಾಸನವಿದು (ನಡೆ ನಗಾರಿಯ ಮೇಲೆ;
ಈ ಧರ್ಮ ನಿನ್ನ ಬಾವುಟದ ಇನ್ನೂ ಮೇಲೆ):

"ವಯಂ ಪುನಃ ಏವಂ ಆಚಕ್ಷಾಮಹೇ,
ಏನಂ ಭಾಷಾಮಹೇ, ಏವಂ ಪ್ರರೂಯಾಮಃ,
ಏವಂ ಪ್ರಜ್ಞಾಪಯಾಮಃ,-
ಸರ್ವೇ ಪ್ರಾಣಾಃ, ಸರ್ವೇ ಭೂತಾಃ, ಸರ್ವೇ ಜೀವಾಃ,
ಸರ್ವೇ ಸತ್ವಾಃ,
ನ ಹಂತಾವ್ಯಾಃ
ನ ಆಜ್ಞಾಪರಿಯಿತವ್ಯಾಃ
ನ ಪರಿಗ್ರಹೀತವ್ಯಾಃ
ನ ಪರಿತಾಪಯಿತವ್ಯಾಃ
ನ ಉಪದ್ರೋತವ್ಯಾಃ
  ಆರ್ಯವಚನಮೇತತ್
    ಓಂ ತತ್‍ಸತ್."
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಅವಳು ಯಾರು?

- ವಿದ್ವಾನ್ ಐ ಮಾ ಮುತ್ತಣ್ಣ

ಹಸುರು ಸೀರೆಯನುಟ್ಟು ರಂಗು ಬಳೆಗಳ ತೊಟ್ಟು
ತನ್ನ ಗೆಳತಿಯರೊಡನೆ ನಡೆದವಳು ಯಾರು?
ಅರಳಿಯಾ ಮರದಡೀ ಹೂಬುಟ್ಟಿ ಕೆಳಗಿರಿಸಿ
ಚೆಂಡು ಹೂಗಳ ಕೋದು ಹಾಡಿದಳು-ಯಾರು?

ಹಣೆಗೆ ತಿಲಕವನಚ್ಚಿ ಮುಡಿಗೆ ಹೂಗಳ ಮುಚ್ಚಿ
ಮೆಲ್ಲಡಿಯನಿಡುತಿಡುತ ಪೋದವಳು ಯಾರು?
ಜಾರುತಿಹ ಸೆರಗನ್ನು ಎದೆಯಾರೆ ನಿಲ್ಲಿಸುತ
ತನ್ನನ್ನು ತಾನಾಗಿ ನೋಡುವಳು-ಯಾರು?

ಕಡೆಗಣ್ಣು ಉರುಳಿಸುತ ತನುಲತೆಯ ಕೊಂಕಿಸುತ
ನಸುನಾಚುಗೆಯ ತೋರಿ ನಡೆದವಳು ಯಾರು?
ಕೆರೆ ಏರಿ ಕಟ್ಟೆಯಲಿ ಕಾಲ್ತೊಳೆದು ಜಾರಲು
ಬೆರಗಾಗಿ ಆಚೀಚೆ ನೋಡಿದಳು-ಯಾರು?

ಮಣಿಸಾಲು ಕೆಂಪೋಲೆ ಜುಂಜುಮುಕಿ ಕಿವಿಯೋಲೆ
ಮುಂಗುರಿಯ ಮೂಗುತ್ತಿ ಹಾಕಿದಳು-ಯಾರು?
ಕಾವೇರಿ ಜಾತ್ರೆಯಲಿ ಜವ್ವನಿಗ ತಂಡದಲಿ
ತಾನೊಲಿವನಾರೆಂದು ಹುಡುಕಿದಳು-ಯಾರು?

ಫಣಿವೇಣಿ ಆಚೀಚೆ ಒಂಟಿಸರ ಕೊರಳಾಚೆ
ಕಾಲ್ಬಳೆ ಕಿರುಗೆಜ್ಜೆ ಧರಿಸಿದಳು ಯಾರು?
ಕೇರಿ ಹೆಂಗಳ ಸಾಲು ಸರಸವಾಡುತ ತಾನು
ಊರ ಜಾತ್ರೆಗೆ ಅಂದು ಪೋದವಳು ಯಾರು?

ದನಮೇವ ಬಯಲಿನಲಿ ತನ್ನ ತಾಳದ ಹಾಡ
ತೂಗುಯ್ಯಾಲೆ ಹಾಡಿ, ಹಾಡಿದಳು-ಯಾರು?
ಕೆಂಬಕ್ಕಿ ಶುಕ ಪಿಕ ಮಲ್ಲಳಿಯ ಹಾಡುಗಳ
ಕೇಳುತಲೆ ತಾನಾಗಿ ನಲಿದವಳು ಯಾರು?

ಕೊಡಪಾನ ನೀರೊಡನೆ ಘುಳುಗುಳು ಮಾತಾಡಿ
ಮೆಟ್ಟಲಲಿ ರಂಗೋಲಿ ಬಿಡಿಸಿದಳು-ಯಾರು?
ಹಸುರಾಂತ ವನಶೋಭೆ ತಾನುಟ್ಟ ಹಸುರುಡಿಗೆ
ಒಂದಾಗಲಿಲ್ಲೆಂದು ಅಂದವಳು ಯಾರು?

ಪೂರ್ಣಚಂದ್ರನ ಚೆಲುವು ಕಂಡು ತನ್ನಯ ರೂಪು
ಅಂತಾಗಲಿಲ್ಲೆಂದು ಗೊಣಗಿದಳು-ಯಾರು?
ತನ್ನ ಅಪ್ಪನ ಮಾಂವ ಎಂದು ತಾ ಕರೆವವನು
ಯಾರಿರುವನೋ ಎಂದು ನೆನೆಸಿದಳು ಯಾರು?
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೭

ವ್ಯಾಪಾರವ ಬಿಟ್ಟು,
ತಾಪತ್ರಯವನೆ ಹಿಂಗಿ.
ಲೋಕದ ಹಂಗನೆ ಹರಿದು,
ಬೇಕು ಬೇಡೆಂಬುದನೆ ನೂಕಿ,
ತಾ ಸುವಿವೇಕಿಯಾದಲ್ಲದೆ,
ಜ್ಯೋತಿಯ ಬೆಳಗ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
    *****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

- ಅನಂತರನಾರಾಯಣ ಎಸ್

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು?
ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು
ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು
ಕಳೆದ ಕಾಲದಲಳಿದ ಕನಸುಗಳು ಹೊರಬಂದು
ದುಗುಡ ಹರಡುತಲಿಹವು.  ದಡದ ಮೇಲಿನ ಮರಳು
ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು
ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,
ಬಾರೆಂದು ಕರೆಯುತಿದೆ ನಿನಗಾಗಿ ಕಾತರದಿ!

ಹೊಸನೆಲೆಗಳರಸುತಲಿ ಹಳೆಯ ಪಳಕೆಯ ಹರಿದು,
ಒಂದು ಚಣ ಒಂದೆಡೆಗೆ ನಿಲ್ಲದೆಯೆ ಜಾರುತಿಹ
ಮುಗಿಲಮೋಡದ ರೀತಿ ಮೆಲ್ಲಮೆಲ್ಲನೆ ಸರಿದು
ನುಸುಳಿದಳು ನನ್ನಿಂದ-ಅರಸುತ್ತ ಹೊಸಜನರ!
ಹೃದಯಶಾಂತಿಯೆ ಆಕೆ ಎನುವ ಭ್ರಾಂತಿಯಲಾನು
ಹೆಣ್ಣಹುಡುಕುತ ಹೋಗಿ ಮುಳ್ಳ ಮುತ್ತಿಕ್ಕಿದೆನು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಎನ್. ಎಸ್. ಎಫ್

- ರವಿ ಕೋಟಾರಗಸ್ತಿ

ನಾಗಮಣಿಯಾಗಿ ಬೀರುತ
ದಿವ್ಯ ಶಕ್ತಿಯನು,
ಯಕ್ಷಪ್ರಶ್ನೆಯಾಗಿ ಕೇಳಲಿ
ಇತಿಹಾಸ ದೌರ್ಜನ್ಯವನು,
ಕಡಲಭಾರ್ಗವನಾಗಿ ಸದೆ ಬಡಿಯಲಿ
ಶತ-ಶತಮಾನಗಳ ಶೋಷಣೆಯನು

ಸ್ಟುಪಿಡ್ ರಾಜಕೀಯ ಮೆಟ್ಟಿ ನಿಲ್ಲುತ
ಬಾಂಧವ್ಯದ ಬಾಹುಗಳ ಚಾಚುತಲಿ
ಢಂ ಢಂಮಾರ ಡಮರು ಬಾರಿಸಲಿ
ಸ್ನೇಹ ಸೌಹಾರ್ದತೆ ಬೀರುತ
ಟಕ್-ಟಕ್ ಎನ್ನುವ ಹೃದಯ ಭಾರ
ಹಗುರಗೊಳಿಸುತ ಶಮನಗೊಳಿಸಲಿ

ಪೆಟ್ಟು ಹಾಕುತಿಹದು ಜಾಗೃತ ಗಂಟೆಗೆ
ಢಣ-ಢಣ ನಾದ ಮೊಳಗಿಸುತ
ಪ್ರೀತಿ ಸ್ನೇಹ ಬೆಸೆಯುತಲಿ
ರೇಖೆ ಮೂಡಿಸಲಿ ಸತೀಶ ಸಹೋದರರು
ಶಕ್ತಿ-ಯುಕ್ತಿ ನೊಂದವರ ಬಾಳಿಗೆ.
ಶಂಖನಾದ ಗಗನದುಂಬಿಯಾಗುತ
ವಿಜಯ ಕಹಳೆ ಝೇಂಕರಿಸಲಿ
ನರ ನಾಡಿಗಳಲಿ ತುಂಬಿ ಹರಿಸಲಿ
ಅನೇಕತೆಯಲಿ ಏಕತೆಯು

ಕಲಿಯಿರಿ ಕಲಿಸಿರಿ
ವೇದ ಘೋಷದಡಿಯಲಿ
ಶಿಕ್ಷಣ ಸಂಘಟನೆ ಹೋರಾಟ
ಮಂತ್ರ ಮನನದಿ ಶಕ್ತಿ ತುಂಬುತಿಹುದು
ಶೋಷಿತ ನೊಂದವರ ಕುಡಿಗಳರಳಿಸುವ
ಹೆಮ್ಮೆಯ ಎನ್. ಎಸ್. ಎಫ್. ಸಂಸ್ಥೆಯು

         ***

ಕೀಲಿಕರಣ: ಕಿಶೋರ್‍ ಚಂದ್ರ

ಮನಕೆ ಕನ್ನಡಿಯಾದರೆ......

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಪರಿಪೂರ್ಣ ಕವಿತೆಯೊಂದರ ನಿಜವಾದ ಸಾರ್ಥಕತೆ ಇರುವುದೆಲ್ಲಿ? ವಿಮರ್ಶಕನ ಟೀಕೆಯಲ್ಲೋ? ಸಹೃದಯನ ಮೆಚ್ಚುಗೆಯಲ್ಲೋ? ಕವಿಯ ಆತ್ಮ ಸಂತೃಪ್ತಿಯಲ್ಲೋ?  ಎಲ್ಲಾ ಒಂದಕ್ಕಿಂತಾ ಒಂದು ಮಹತ್ವವಾದದ್ದೇ ! ಉತ್ತಮ ಕವನವೊಂದಕ್ಕೆ ವಿಮರ್ಶಕನ ಟೀಕೆಯೂ ಬೇಕು ಸಹೃದಯನ ಮೆಚ್ಚುಗೆಯೂ ಬೇಕು. ಕವಿ ಮನಕ್ಕೆ ಸಂತೃಪ್ತಿಯನ್ನೂ ನೀಡಬೇಕು. ಆದರೆ ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಏನನ್ನುತ್ತಾರೆ ಗೊತ್ತೆ ?

 

ನನ್ನ ಹಾಡಿಗೆ ನಲಿವ ಜನರೇ
ನೀವೆ ನನ್ನ ಗುರಿ
ನಿಮ್ಮ ಚಿತ್ತವ ಕದಿಯುವ
ಮಾತೆ ನನ್ನ ಸಿರಿ
ಇದನು ಒಲ್ಲದ ಕೀಳು ಟೀಕೆಯ
ಪರಿವೆ ನನಗಿಲ್ಲ
ಮನಕೆ ಕನ್ನಡಿಯಾದರೆ
ನನಗೆ ಅದೆ ಎಲ್ಲಾ!

ಇಲ್ಲಿ ಕವಿ ಸಹೃದಯನ ಮೆಚ್ಚುಗೆಗೇ ಪ್ರಥಮ ಸ್ಥಾನ ನೀಡುತ್ತಾರೆ! ವಿಮರ್ಶಕನ ಮಾನದಂಡ ಹೇಗೂ ಇರಬಹುದು, ಅವನು ಕವನ ಹುಟ್ಟುವಾಗ ಇಲ್ಲದಿದ್ದ ಯಾವುದೋ ಸಿದ್ಧಾಂತ, ತರ್ಕಗಳ ಆಧಾರವನ್ನು ಇರಿಸಿ ಕವನವನ್ನು ಮೌಲ್ಯಮಾಪನ ಮಾಡುತ್ತಾನೆ.  ಆ ಚೌಕಟ್ಟಿಗೆ ಕವನ ಹೊಂದಿಕೊಳ್ಳದಿದ್ದಾಗ ನಿಜವಾದ ವಿಮರ್ಶೆ ಬರದೇ ಹೋಗಬಹುದು. ಆದರೆ ಸಹೃದಯ ಹಾಗಲ್ಲ. ಅವನಿಗೆ ರಸಾನುಭೂತಿಯೊಂದೇ ಉದ್ದೇಶ. ಅವನು ತನಗೆ ಸಂತೋಷ ಕೊಡುವ ಯಾವ ಕವನವನ್ನೇ ಆದರೂ ಮನಃಪೂರ್ತಿ ಆಸ್ವಾದಿಸುತ್ತಾನೆ. ಅವನ ಹತ್ತಿರ ತಕ್ಕಡಿಯಿಲ್ಲ! ಮನಸ್ಸಿದೆ! ಆದರೆ ಇದಕ್ಕೂ ಮುಖ್ಯವಾದುದು ಕವಿಯ ಆತ್ಮತೃಪ್ತಿ. ಕವನ ಹೊರಹೊಮ್ಮುವುದು ಲೆಕ್ಕಾಚಾರದಿಂದಲ್ಲ.  ಅದಕ್ಕೆ ಅಳತೆಗಳ ಪರಿಮಿತಿಯೂ ಇರುವುದಿಲ್ಲ. ಕವನ ಮನಸ್ಸಿನ ಅಂತರಾಳದ ವ್ಯವಹಾರ!  ಮನಸ್ಸಿನ ತುಮುಲ, ಒತ್ತಡ, ಭಾವಗಳ ಕನ್ನಡಿಯೇ ಕವನ. ಉಕ್ಕುವ ಭಾವಗಳು ಸಮರ್ಥವಾದ ಭಾಷೆಯ ರೂಪ ತೊಟ್ಟು ಹೊರಹೊಮ್ಮಿದಾಗ ಕವಿ ಅನುಭವಿಸುವ ಧನ್ಯತೆಯ ಭಾವವೇ ಬಹುಶಃ ಎಲ್ಲಕ್ಕಿಂತಾ ಶ್ರೇಷ್ಟವಾದುದು!

ಅದಕ್ಕೆಂದೇ ಕವಿ ಶೆಲ್ಲಿ ಹೇಳುತ್ತಾನೆ. ‘A Poet is a nightingale who sits in darkness and sings to cheer its own solitude with sweet sounds' ಒಬ್ಬ ಕವಿ ಕೋಗಿಲೆಯಂತೆ, ಅವನು ಕತ್ತಲಲ್ಲಿ ಕುಳಿತು ತನ್ನ ಅನಾಥ ಒಂಟಿತನ ನೀಗಲು ಸಿಹಿಯಾದ ದನಿಯಲ್ಲಿ ಹಾಡುತ್ತಾನೆ ಎನ್ನುತ್ತಾನೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಆದ್ದರಿಂದಲೇ .......

ಸಹೃದಯನ ಮೆಚ್ಚುಗೆ, ವಿಮರ್ಶಕನ ಟೀಕೆ ಎಲ್ಲಾ ಬಾಹ್ಯ ಬದುಕಿಗೆ ಸಂಬಂಧಿಸಿದ್ದು, ಆದರೆ ಎಲ್ಲಕ್ಕೂ ಮುಖ್ಯವಾದುದು, ಪ್ರಥಮವಾದುದು ಕವಿಯ ಅಂತರಂಗದ ಆತ್ಮ ಸಂತೋಷ! ಕವಿಗೆ ಆತ್ಮ ಸಂತೃಪ್ತಿಯನ್ನು ನೀಡದ ಕವನ ಎಂದೂ ಗೆಲ್ಲುವುದಿಲ್ಲ ಅಲ್ಲವೇ ಸಖಿ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ನೀರಿಗೆ ಬಿದ್ದ ಹೆಣ್ಣು

- ನರಸಿಂಹಸ್ವಾಮಿ ಕೆ ಎಸ್


ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ
ಹೂವಾಗಲಿಲ್ಲ ಕೆಂಪಾಗಿ.
ಸಾವಿನಲಿ ಶಾಂತಿ ಉರುಳಿತ್ತು ತಲೆಕೆಳಗಾಗಿ
ಆ ಎಲ್ಲ ನೋವು ತಂಪಾಗಿ.

ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ
ಕಂಡಿತ್ತು ಸಾವಿನ ಯುಗಾದಿ.
ಸುತ್ತೆಲ್ಲ ಕಿತ್ತು ಬಿದ್ದಿತ್ತು ಆಸೆಯ ಜೋಲಿ
ತೆರೆದಿತ್ತು ಹುಡಿಮಣ್ಣು ಹಾದಿ.

ನೀರಿಗೆ ಬಿದ್ದ ಹೆಣ್ಣು ಯಾರಿಗೂ ಹೇಳದೆಯೆ
ಆಗಿತ್ತು ಕೆರೆಗೆ ಆಹುತಿ.
ಹಾಲ ಕಾಣದ ಬದುಕು ಕುಡಿದಿತ್ತು ಕೆರೆಯನೆ;
ಅಲ್ಲಿತ್ತು ಅದರ ಸದ್ಗತಿ.

ಗಂಡ ಬಂದನು ಕಡೆಗೆ ನಡೆಬಂದ ಕಂಬದೊಲು;
ಹತ್ತು ಜನ ಅಲ್ಲೆ ಒದಗಿದರು.
ಬೆಂಕಿ ಹೆಣವನು ನುಂಗಿ ಬೆಂಬೂದಿಯಾಗಿರಲು,
ಉಳಿದವರು ಊರ ಸೇರಿದರು.

ನೀರು ಮುಗಿಸಿದ ಕಥೆಗೆ ಬೆಂಕಿ ಮಂಗಳ ಹಾಡಿ
ನಡೆದಿತ್ತು ದೈವ ಸಂಕಲ್ಪ.
ಇಂಥ ಬಾಳಿಗೆ ಸಾವೆ ನಂದನದ ಕೆರೆ-ಕೋಡಿ;
ಮಸಣದಲಿ ಮಾತ್ರ ಸುಖತಲ್ಪ.

ಹೆಣ್ಣು ಸತ್ತಳು ಏಕೆ? ನೆರೆಯ ನಿರ್ಭಾಗ್ಯರಿಗೆ
ಸಂಶಯದ ಮೇಲೆ ಸಂಶಯ.
ಕಾರಣದ ಬಂಗಾರ ಬೇಟೆ ಫಲಿಸದೆ ಕಡೆಗೆ
ಸತ್ತವಳ ಮೇಲೆ ಸಂಶಯ.

ಕಯ್ಯಾರ ಕೆರೆಗೆ ತಳ್ಳಿದನೆ ಮಡೆದಿಯನಿವನು?
ನ್ಯಾಯದಲಿ ತೀರ್ಪು: ನಿರ್ದೋಷಿ.
ಗದ್ದಲದ ಗಡಸು ನಾಲಗೆಯ ಗಂಡಲ್ಲಿವನು;
ಊರು ಕಂಡಂತೆ ಮಿತಭಾಷಿ.

ಸತ್ತವಳ ಮೇಲೆ ಸಂಶಯ -ಊರಿಗಿವನಂಥ
ಮಾದರಿಯ ಗಂಡ ಆಭರಣ.
ಸತ್ತವಳು ಇಳಿದು ಸತ್ಯವನೊದರುವಂತಿಲ್ಲ ;
ಸಂಗತಿಗೆ ಮೌನದಾವರಣ.

ನೀರಿಗೆ ಬಿದ್ದ ಹೆಣ್ಣ ಗಂಡನ ಹಣೆಯ ಮೇಲೆ
ಬಿಡುಗಡೆಯ ನಿರ್ಭಯದ ತಿಲಕ.
ಎದೆಯಲಿ ಏನೊ ಎಂತೊ, ತೋರುವ ಮುಖದ ಮೇಲೆ
ಎಷ್ಟೊಂದು ನೋವು, ನಾಟಕ!

ಸತ್ತಳು ಏಕೆ ಹೆಣ್ಣು (ಊರಿಗೆ ಇಲ್ಲ ಕಣ್ಣು):
ಅಂತು ಕೇಳಿದವನೊಬ್ಬ ಕುಂಟ.
ಸತ್ತರೆ ಏನು ನಷ್ಟ? ಕಾದಿದೆ ಬೇರೆ ಹೆಣ್ಣು;
ಇಂತು ಹೇಳಿದನೊಬ್ಬ ನಂಟ.

ಕನಿಕರದಿಂದ ಬಂದ ಕುರಿಯೊಂದು ನುಡಿದಿತ್ತು :
ಮುಂಗಿದಿತ್ತು ಹೆಣ್ಣ ಹಣೆ-ಬರಹ.
ಮಾನವ ಜನ್ಮಧಾರಿ ನರಿಯೊಂದು ನಕ್ಕಿತ್ತು :
ನೀರಿಗೆ ಜಾರಿ ಬಿದ್ದ ವಿಷಯ.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಒಮ್ಮೆ ಹಾಡಿದ ಹಾಡು

- ಅನಂತರನಾರಾಯಣ ಎಸ್

ಒಮ್ಮೆ ಹಾಡಿದ ಹಾಡು-
ಮತ್ತೊಮ್ಮೆ-ಹಾಡಲೆಂತೋ ಅರಿಯೆ.
ಒಮ್ಮೆ ಕಂಡಾಕನಸು
ಮತ್ತೊಮ್ಮೆ-ಕಾಣಲೆಂತೋ ಅರಿಯೇ!
ಎಲ್ಲ ನಿನ್ನದೆ ಛಾಯೆ
ಹೃದಯದೊಲವೆ!

ಜೀವವೊಂದೇ ಅಹುದು,
ಬದುಕುಗಳು-ಸಾಸಿರವ ಮಿಕ್ಕುವುವು!
ಭಾವವೊಂದೇ ಅಹುದು,
ರೂಪಗಳು-ಎಣಿಕೆಗೇ ಸಿಕ್ಕದವು!
ಎಲ್ಲ ನಿನ್ನದೆ ಮಾಯೆ
ಹೃದಯದೊಲವೆ!
     *****
ಕೀಲಿಕರಣ: ಕಿಶೋರ್‍ ಚಂದ್ರ

ಚಂದ್ರ

- ವಿದ್ವಾನ್ ಐ ಮಾ ಮುತ್ತಣ್ಣ

ತುಂಬಿದ ಚಂದ್ರನೆ ನೀ ಬಾರ
ತುಂಬಿದ ಭಾಗ್ಯವ ನೀ ತಾರ
ನಂಬಿದ ಗತಿಗೆ ನೆಲೆ ತೋರ!

ಅಗಸ ಮಿತ್ರನು ನೀನದಕೊ
ತಂಪನು ಸುರಿಸುತ ನೀ ಮಿನುಗೊ
ಭೂಮಿಯ ಕನ್ನಡಿ ನೀನೆ ಕಣೊ

ನೈದಿಲೆ ನಗುವುದು ನೀ ಬರಲು
ನಲ್ಮೆಯ ಹೂವಿಗೆ ನೀ ಮುಗುಳು
ಸಂತಸವೀಯುತ ನೀ ಬಾಳು!

ವಸಂತ ಲಕ್ಷ್ಮಿಯ ಕಾಲ್ಚೆಂಡು
ಆಡುವ ಮಕ್ಕಳ ಮನವುಂಡು
ತೋರುವೆ ತೇಲುವೆ ನೀ ದುಂಡು!

ತಂಪನು ಚೆಲ್ಲುವೆ ನೀ ಚಂದ್ರ
ಮೋಹವ ಬೀರುವೆ ನೀನಿಂದ್ರ
ರಸಿಕರ ಬಾಳಿಗೆ ನೀ ಕೇಂದ್ರ!

ಏರುವೆ ಮಿನುಗುವೆ ನೀನೆಲ್ಲಿ?
ಮುಗಿಲೊಳು ತೇಲುವೆ ಪೋಪೆಲ್ಲಿ?
ನಾಚುಗೆಯೇ ಹೇಳು ನಿನಗಲ್ಲಿ?

ರಾಮನು ಅತ್ತದು ನಿನಗಾಗೊ?
ಹನುಮನು ಹಾರಿದು ನಿನಗಾಗೊ?
ಗಣಪತಿ ಶಾಪವು ನಿನಗಾಗೊ?

ಈಶ್ವರ ಶಿರವನು ಮುಡಿಸಿರುವೆ
ನೀರಲಿ ಬಾನಲಿ ತೋರಿರುವೆ
ಪ್ರಣಯಿಯ ನೋಟದ ಮುಗುಳಿರುವೆ!

ಹುಣ್ಣಿಮೆ ದಿನವೇ ನಿನಚೆಲುವು
ಕಣ್ಣಿನ ಭಾಗ್ಯವೆ ಆ ಬರವು
ಸ್ವಪ್ನದ ಸುಖವೇ ನಿನ್ನೊಲವು!

ಪೋಗದಿರೆನ್ನೀ ಚಂದಿರನೆ
ತೆಂಗದಿರೆನ್ನೇ ಸುಖವೀಣೇ
ಭುವಿಯನು ಬೆಳಗೊ ಮಮಪ್ರಾಣೇ!
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೬

ನಿಮ್ಮ ಪಾದವಿಡಿದು,
ಮನ ನಿರ್ಮಳವಾಯಿತು.
ನನ್ನ ತನು ಶುದ್ಧವಾಯಿತು.
ಕಾಯ ಗುಣವಳಿಯಿತು.
ಕರಣಗುಣ ಸುಟ್ಟು
ಭಾವಳಿದು ಬಯಕೆ ಸವೆದು,
ಮಹಾದೇವನಾದ ಶರಣರ ಪಾದವಿಡಿದು,
ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಸೂಟ್‌ಕೇಸ್ ಸ್ಟೆಟಲಾನಾ

- ಡಾ || ಲತಾ ಗುತ್ತಿ

ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ)
ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ)
ನೂರಾರು ಮಕ್ಕಳ ಗರ್ಭ
ಧರಿಸುವ ಸಡಗರ
ವರ್ಷವಿಡೀ bedrest
ಮೇಲಂತಸ್ತಿನ shelf ದಿಂದೆದ್ದು
ಮೈ ಕೊಡವಿಕೊಂಡು ರಜೆ ಬಂದನೆಂದು
ಬಸಿರಾಗಲು ಇಳಿದು ಬರುತ್ತಾಳೆ.
ಒದ್ದೆ ಬಟ್ಟೆಯ ಸ್ನಾನ
ಗರಿಗರಿಯಾದ ಪೇಪರ ಸೀರೆ
ಸುತ್ತಿಕೊಂಡು ಖುಷಿ ಪಡುವಳು
ದಿನ ದಿನಕ್ಕೆ ಹೊಸ ಹೊಸ ತಿಂಡಿ ತಿನಿಸುಗಳು
ಪೇಟೆಯ ಫ್ಯಾನ್ಸಿ ವಸ್ತುಗಳೆಲ್ಲ
ಬೇಕು ಬೇಕೆಂದು ಹೊಟ್ಟೆಗೆ ಹಾಕುತ್ತ
ಉಬ್ಬುಬ್ಬುತ್ತಾ ಖುಷಿಪಟ್ಟು ವಿಮಾನವೇರಿ
ಹೊರಡುತ್ತಾಳೆ ತವರಿಗೆ ಪ್ರಸವಿಸಲು.
ನಮ್ಮ ಸ್ಪೆಟಲಾನಾ ಈಗ ತುಂಬು ಬಸುರಿ
ಹೆಚ್ಚು ನಡೆಯಲಾರಳು
ಟ್ರಾಲಿ ಮೇಲೆಯೇ ಕುಳಿತು
ಮೆತ್ತಗೆ ವಿಮಾನ ಏರಿಳಿಯುವಳು
ಬಾಂಬೆ ಕಸ್ಟಮ್‌ ಚೆಕ್ಕಿಂಗದಲ್ಲಿ
ಬಾಡಿ ಸ್ಕ್ಯಾನಿಂಗ
ಸ್ಕ್ರೀನ್ ಮೇಲೆ ನೂರಾರು ಮಕ್ಕಳು
ಅಧಿಕಾರಿ ಬರೆಯುತ್ತಾನೆ ಕೇಳುತ್ತಾನೆ
Mini operationಮಾಡೋಣವೇ ?
ಬೇಡ, Natural ಆಗಿಯೇ delivery
ಆಗಬೇಕೆನ್ನುತ್ತೇವೆ.
ಒಂದಿಷ್ಟು ಔಷಧ ಕೊಡಿ duty bill ಬರುತ್ತದೆ
ಡಾಕ್ಟರ್ ಬಿಲ್ ಕೊಡುತ್ತೇವೆ.
ಸ್ಪೆಟಲಾನಾ ಜೊತೆ ನಾವೂ ಸುಸ್ತಾಗಿ
ಮನೆ ಸೇರುತ್ತಿದ್ದಂತೆಯೇ,
ನಮಗಿಂತಲೂ ಬಸುರಿಯ ಮೇಲೆಯೇ
ಎಲ್ಲರ ಕಣ್ಣು
ದುಡು ದುಡು ಓಡಿ ಬಂದು
ಮೆತ್ತಗೆ ಅವಳನ್ನು ಇಳಿಸಿ
ಕೈಭುಜ ಹಿಡಿದು ಒಳಗೊಯ್ಯುವರು
ಅವಳ ಹೊಟ್ಟೆಯ ಮೇಲೆಲ್ಲ ಕೈಯಾಡಿಸಿ
ಗಂಡು ಮಗುವೋ, ಹೆಣ್ಣುಮಗುವೋ
8- 10 ಮಕ್ಕಳ ಮಹಾತಾಯಿಯೋ
ಎಲ್ಲರೂ ನಗೆಯಾಡುವರು
ಕಾಫಿ ಕುಡಿಯುತ್ತಿದ್ದಂತೆಯೇ
ಪ್ರವಾಸದ ಆಯಾಸ ಸೂಟ್‌ಕೇಸ್‌ಗೆ
ಬೇನೆ
ಪ್ರಸವವೇದನೆ Operationಗೆ ತಯಾರಿ -
ಚೆಂದದ ಹೆಸರಿನ (National, Philips, Rado, Rolex,
canon, Minolta, ಪ್ಯಾರಿಸ್ ಪರಫ್ಯೂಮ್ಸ್
ಅರೇಬಿಯನ್ dry fruits, ಸಿಂಗಪೂರ Toys,
U.S.A.Cosmetics. Japanesees ಬಟ್ಟೆಗಳು)
ಅಂದದ ಮಕ್ಕಳು ಕಿಲಕಿಲನೆ ಹುಟ್ಟುತ್ತವೆ
ಎಲ್ಲರೂ ಎತ್ತಿಕೊಳ್ಳುವವರೇ, ಮುದ್ದಿಸುವವರೇ,
ಈ ಮುದ್ದಿನ ಮರಿಗಳನ್ನು
ತನಗೆ ನನಗೆಂದು ಎತ್ತಿಕೊಂಡು ಹೊರಟೇ ಬಿಡುವರು
ಸೂಟ್‌ಕೇಸ್ ಸ್ಟೆಟಲಾನಾ ಸುಸ್ತು ಹೊಡೆದು
ಬೀಳುತ್ತಾಳೆ
ಕೊನೆ ಪಕ್ಷ ಒಂದು ವರ್ಷವಾದರೂ
bedrest ಬೇಕೆಂದು ಮೇಲಂತಸ್ತಿನ
Shelf roomಗೇ ಸೇರಿಬಿಡುತ್ತಾಳೆ.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಎಲ್ಲಿ ಮಾಯವಾದ

- ಶ್ರೀನಿವಾಸ ಕೆ ಹೆಚ್

ಹದಿನೈದು ದಿನದಿಂದ ಕೊರಗಿ ಕೊರಗಿ
ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ
ಎಲ್ಲಿ ಮಂಗಮಾಯವಾದ?
ತಾರೆಗಳಿಗೆ ದಿಗಿಲು
ಪಾಪ ಹೋಗಿ ಹುಡುಕೋಣ ಅಂದರೆ
ಅಮವಾಸ್ಯೆ ಕತ್ತಲು.
     *****
ಕೀಲಿಕರಣ: ಕಿಶೋರ್‍ ಚಂದ್ರ

ಬಂಡಾಯ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ
 
ಪ್ರಿಯ ಸಖಿ,
ಯಾವ ತಂಟೆ ತಕರಾರುಗಳಿಲ್ಲದೇ ಎಲ್ಲವನ್ನೂ ಒಪ್ಪಿಕೊಂಡು ಸದ್ದಿಲ್ಲದೇ ಜೀವನವನ್ನು ಸಾಗಿಸುವವರು ಹಲವಾರು ಮಂದಿ. ಆದರೆ ತಮ್ಮ ಸಿದ್ಧಾಂತಗಳಿಗಾಗಿ, ವ್ಯವಸ್ಥೆಯೆದುರು ಸದಾ ಬಂಡೆದ್ದು ಹೋರಾಟವನ್ನೇ ಬದುಕಾಗಿಸಿಕೊಂಡವರು ಕೆಲಮಂದಿ. ಆದರೆ ಕವಿ ಗೋಪಾಲಕೃಷ್ಣ ಅಡಿಗರು ‘ಬಂಡಾಯ’ ಎಂಬ ತಮ್ಮ ಕವನದಲ್ಲಿ ಹೀಗೆ ಹೇಳುತ್ತಾರೆ.

ದಂಗೆಯೇಳುತ್ತಲೇ ಇರಬೇಕಾಗುತ್ತದೆ
ಇಲ್ಲಿ ಪ್ರತಿಯೊಬ್ಬನೂ ತನ್ನ ತನ್ನ
ಚಿನ್ನದ್ದೋ, ರನ್ನದ್ದೋ, ಕಬ್ಬಿಣದ್ದೋ, ಮರದ್ದೋ
ಅಥವಾ ಬರಿ ಮಣ್ಣಿನದೋ ಸಿಂಹಾಸನವ
ಹುಡುಕಿ ತೆಗೆದು ಗುರುತಿಸಿ ಅಲ್ಲಿ
ಆಸನಾರೂಢನಾಗುವವರೆಗೆ

ವ್ಯಕ್ತಿಯೊಬ್ಬ ತನ್ನ ದಾರಿಯನ್ನ ಕಂಡುಕೊಂಡ ನಂತರ ಗುರಿಸೇರುವ ತನಕ, ಹಾದಿಯಲ್ಲಿ ಎದುರಾಗುವ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ನಿಲ್ಲಬೇಕು. ಎಷ್ಟೋ ಬಾರಿ ವ್ಯವಸ್ಥೆಯೆದುರು ದಂಗೆಯೇಳಬೇಕು. ಎಲ್ಲಿಯವರೆಗೂ ಈ ಹೋರಾಟ ಎನ್ನುವುದನ್ನು ಹೇಳುತ್ತಾ ಕವಿ.

ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ
ತನ್ನ ವ್ಯಕ್ತಿತ್ವಕೆ ಚಹರೆಯ ಪಟ್ಟಿ ಸಿದ್ಧವಾಗುವವರೆಗೆ
ತನ್ನ ಪರಿಮಿತಿಯೊಳಗೆ ಶಾಖೋಪಶಾಖೆಗಳು
ಹುಟ್ಟಿ ಹಬ್ಬುವವರೆಗೆ

ಎನ್ನುತ್ತಾರೆ. ಈ ರೀತಿಯ ಹೋರಾಟದಿಂದಲೇ ವ್ಯಕ್ತಿಯೊಬ್ಬ ಗಟ್ಟಿಯಾಗುತ್ತಾ ಹೋಗುತ್ತಾನೆ. ತನ್ನ ಪರಿಮಿತಿಯನ್ನು ಕಂಡುಕೊಳ್ಳುತ್ತಲೇ ಅದನ್ನು ಮೀರಲು ಯತ್ನಿಸುತ್ತಾನೆ. ಹೊರಗಿನ ವ್ಯವಸ್ಥೆಗೆದುರಾಗಿ ಹೀಗೆ ಬಂಡಾಯವೇಳುವುದು ಸುಲಭವಾದರೆ ಮನದೊಳಗಿನ ವೈರಿಗಳ ವಿರುದ್ಧ ದಂಗೆಯೇಳುವುದು ತುಂಬಾ ಕಷ್ಟ! ಹೀಗೆ ಮನದೊಂದಿಗೆ ಹೋರಾಡಿ ಗೆದ್ದವನು ವಿಶಿಷ್ಟ ವ್ಯಕ್ತಿತ್ವದವನಾಗುತ್ತಾನೆ. ಸಮಾಜಕ್ಕೇ ಮಾನವತೆಯ ಸಂಕೇತವಾಗುತ್ತಾನೆ ಎನ್ನುತ್ತಾರೆ ಕವಿ.
ಕವನವಮ್ನ ಮುಂದುವರೆಸುತ್ತಾ,

ಬಂಡಾಯದ ಘೋಷ ಮೊಳಗುತ್ತಲೇ ಇರಬೇಕು.
ಗೊಂಚಲು ಗೊಂಚಲಾಗಿ ಸಿಹಿಸಿಹಿ ಹಣ್ಣು
ಪಕ್ವವಾಗುವವರೆಗೆ; ತಿರುಳ ಸಿಹಿ ಅನ್ಯರಿಗೆ
ಬಿತ್ತು ಭವಿಷ್ಯಕ್ಕೆ; ಮಾನವತ್ವದ ಬುನಾದಿಗಿನ್ನೊಂದು ಕಲ್ಲು
................................

ಎನ್ನುತ್ತಾರೆ. ಮನದ ವಿಕಾರಗಳನ್ನೆಲ್ಲಾ ಗೆಲ್ಲುವುದು ಸುಲಭ ಸಾಧ್ಯವಲ್ಲವಾದರೂ ಆ ವಿಕಾರಗಳ ವಿರುದ್ಧ ದಂಗೆಯೇಳುತ್ತಲೇ ಇರಬೇಕು. ಯಾರಿಗೆ ಗೊತ್ತು ನಾಳೆಗೆ ಗೆಲುವೂ ಸಿಕ್ಕಬಹುದಲ್ಲವೇ ಸಖಿ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಚಿಂತೆಗೆ ಕಣ್ಣತೆತ್ತವಳೆ!!

- ನರಸಿಂಹಸ್ವಾಮಿ ಕೆ ಎಸ್

ಚಿಂತೆಗೆ ಕಣ್ಣ ತೆತ್ತವಳೆ,  ಚಿಲುಕದಮೇಲೆ
ಮುಂಗೈಯನೂರಿ ನಿಂತವಳೆ,
ಬಿಂದಿಗೆ ಹೊರದೆ ಸೋತವಳೆ, ಸಣ್ಣಗೆ ಒಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ತುರುಬಿನ ತುದಿಗೆ
ಒಂದೆ ಹೂವನು ಮುಡಿದವಳೆ,
ಒಂದೊಂದೆ ಬಳೆಯ ತೊಟ್ಟವಳೆ, ಈ ಮನೆಯೊಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ಹತ್ತಿದ ದೀಪ
ಮಂಕಾಗಿ ತೋರಿ ನಿಂತವಳೆ,
ಸಂತೆಗೆ ಹೋಗಿ ಬರಿಗೈಲೆ ಬಂದೆಯ, ಪಾಪ !-
ಚಿಂತೆ, ಏತರ ಚಿಂತೆ, ನಿನಗೆ?

ನಿನಗಾವ ಚಿಂತೆ ಚಿಕ್ಕವಳೆ, ಚಿನ್ನದ ಬಳೆಗೆ
ಒಪ್ಪುವ ತುಂಬುಗೈಯವಳೆ !
ಗಾಳಿಯ ಸುಳಿಗೆ ಹೂವಾದ ಮಲ್ಲಿಗೆಯರಳೆ,
ಬಂಡಿಯ ದನಿಗೆ ಬೆಚ್ಚುವಳೆ !-

ನಿನಗಾವ ಚಿಂತೆ, ಚಿಕ್ಕವಳೆ, ತುಂಬಿದ ಮನೆಗೆ
ಘನವಾಗಿ ಬಂದ ಗುಣದವಳೆ,
ನುಡಿದೊಂದು ಮಾತು ಸಾಕೆನುವ ಇನಿದನಿಯವಳೆ,
ತಲೆತಗ್ಗಿ ನಾಚಿ ನಡೆಯುವಳೆ?

ಮಳೆ ಬಿದ್ದು, ಕೆರೆ ತುಂಬಿ ನೀರು! ಮಿಂಚುವ ನೀರು,
ಬರಿ ನೀರೆ? ಥೇಟು ಪನ್ನೀರು !
ಅತ್ತಿತ್ತ ನೆಲ ಹೂವ ತೇರು; ಅಲ್ಲಿಗೆ ಬಾನು
ಇದ್ದೀತು ಒಂದೆರಡು ಮಾರು !

ಮನೆಗಿಂತ ಬಾನು ಎತ್ತರವೆ? ಆದರೆ ಏನು?
ಬಾನಿಗೆ ತಾರೆ ಹತ್ತಿರವೆ?
ಏನಂಥ ಬೆಟ್ಟ ಹೊತ್ತಿರುವೆ? ಸುಮ್ಮನೆ ನೀನು
ಸೊಂಪಾಗಿ ನಿಲುವುದುತ್ತರವೆ ?

ತೋಟದ ಮೇಲೆಲ್ಲ ತೆಂಗು; ತೆಂಗಿನ ಮೇಲೆ
ತೆರೆದ ಹೊಂಬಾಳೆಯ ರಂಗು!
ಗೊನೆ ಬಿಟ್ಟ ರಸಬಾಳೆ ಕಂದು; ಹಣ್ಣಿನ ಮೇಲೆ
ಹುದುಗಿತ್ತು ಗಿಣಿಯೊಂದು ಬಂದು.

ವೀಣೆಗೆ ತಂತಿಯ ಚೆಂತೆ; ತಂತಿಗೆ ತನ್ನ
ಹುಡುಕುವ ಬೆರಳಿನ ಚಿಂತೆ ;
ಬೆರಳಿಗೆ ಉಂಗುರದ ಚಿಂತೆ ; ಚಿಂತೆಗೆ ತನ್ನ
ಮಡಿಲ ತುಂಬುವುದೊಂದೆ ಚಿಂತೆ.

ಇಲ್ಲದ ಸಲ್ಲದ ಚಿಂತೆ ; ಅದು ಬಂದಂತೆ
ಹೋದೀತು ಇರಲೊಂದು ಗಳಿಗೆ !
ಸಂಶಯ ನನಗಿಲ್ಲ, ಚೆಲುವೆ; ಚೆಲುವಿಗೆ ಚಿಂತೆ;
ಚಿಂತೆಯಿಲ್ಲದ ಚೆಲುವು ಚೆಲುವೆ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಭಾವ ಜೀವ

- ಅನಂತರನಾರಾಯಣ ಎಸ್

ಭೋರ್ಗರೆದು ಬರಸೆಳೆದು ಬಿರುಸಿನಲಿ ಚಿಮ್ಮೆಸೆದು
ಗಿರಗಿರನೆ ಸುರುಳಿಯಲಿ ಸೊರಗಿಸುವ ಸುಳಿಗಳಲಿ
ಸಿಕ್ಕಿದಂತೊಮ್ಮೊಮ್ಮೆ ಹೃದಯ ಬಲು ತಪಿಸುವುದು!
ನಭಕೇರಿ ಕೆಳಗುರುಳಿ ಭಾವಗಳ ಕಡಲಿನಲಿ
ಮಿಂದು ಮೈ ಬೆಂಡಾಗಿ ಬಸವಳಿದು ಬೀಳುವುದು!
ಮರು ನಿಮಿಷ ಮೆಲ್ಲೆಲರು ಮೃದು ಮಧುರ ನುಡಿಗಳಲಿ
ಮೆಲ್ಲಮೆಲ್ಲನೆ ಕರೆದು ಬೇರೊಂದ ತೋರುವುದು!
ಶಾಂತಿಯುಂಟೇನಿಲ್ಲಿ ಬರಿ ಭಾವ ಜೀವದಲಿ?

ಮೀನಮೇಷಗಳೆಣಿಸಿ, ಕಾಲಕಾರ್ಯವ ಗುಣಿಸಿ
ಕಾರ್ಖಾನೆಯಚ್ಚಂತೆ ಮಾಡಿ ಜೀವನವೆಲ್ಲ
ಕಾಣದಂತೆಯೆ ಮತ್ತೆ ಸಾಗಿಹೋಗುವರೆಲ್ಲ!
ಹೊಸತಿಲ್ಲ-ಹಳತಿಲ್ಲ-ಜೀವ ನಿತ್ಯದ ದಿನಸಿ!
ಇಂಥ ಬಾಳದು ಬಾಳೆ?-ಭಾವಜೀವವೆ ಮೇಲು!
ಕಹಿಸಿಹಿಗಳೆಲ್ಲವಿದೆ! ಅದಕಿಂತ ಬೇರೇನು?
     *****
ಕೀಲಿಕರಣ: ಕಿಶೋರ್‍ ಚಂದ್ರ

ಸ್ವತಂತ್ರ ಭಾರತ

- ವಿದ್ವಾನ್ ಐ ಮಾ ಮುತ್ತಣ್ಣ

(ಆಗಸ್ಟ್ ೧೫-೧೯೪೭)
ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ||

ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ
ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ||

ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ,
ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ;
ತನ್ನ ತಾನು ಮರೆತು ಜೊಳ್ಳು ಪುತ್ರರನ್ನು ನಂಬಿರೆ,
ಆತ್ಮಖ್ಯಾತಿ ಘನತೆಗಳನು ಕಳೆದು ತಾಯಿ ನೊಂದಳೊ!  ||ಭಾ||

ಬಡತನದಿ ಬೇನೆಯಿಂದ ಬೆಂದು ಬಳಲಿ ಬಾಡಿತು
ದೇಶದಲ್ಲಿ ಶಾಂತಿ ಕಾಂತಿ ಕಳೆದು ಭ್ರಾಂತಿ ತುಂಬಿತು,
ಹಿಂದೂದೇಶ ಕರ್ಮಭೂಮಿ ಧರ್ಮಕ್ಷೇತ್ರ ಖ್ಯಾತಿಯು
ಶೂರ ಆರ್ಯಜನರ ಸ್ಥೈರ್ಯ ಶೂನ್ಯವಾಗಿ ಪೋದುವೊ!  ||ಭಾ||

ಒಲಿದು ನಲಿದು ಮುಗುಳು ನಗೆಯ ತೋರಿ ಹಾಡಿ ಬರುವಳು
ಹೂವ ಮುಡಿದು ತಿಲಕ ಹಚ್ಚಿ ಧ್ವಜವ ಹಾರ್‍ಸಿ ಮೆರೆವಳು,
ಕಾಲಗೆಜ್ಜೆ ಝಣಽ ಝಣರೆಂದೆನಿಸಿ ಕುಣಿದು ಕರೆವಳು
ನಲಿದಳೀ ನಲ್ವತ್ತು ಕೋಟಿ ಕುರವರರೊಡನೆ ಹರುಷದಿ!  ||ಭಾ||

ಅಹೋ ಏನು ಧಣಿದರವಳ ವೀರ ತ್ಯಾಗಿ ಪುತ್ರರು,
ದೇಶಬಂಧು ಲೋಕಮಾನ್ಯ ಮೋತಿಲಾಲ ಶಿಷ್ಟರು;
ಆ ನೇತಾಜಿ ನೆಹುರು ವಲ್ಲಭಾದಿ ಗೋಕಲೇಯರು,
ದಣಿದು ಕಾದು ಸತ್ತ ಹಿರಿಯ ಕಿರಿಯ ಹಲವು ವೀರರು!  ||ಭಾ||

ರಕ್ತ ಹರಿಸಿ ತನುವ ಸವೆಸಿ ಧಣಿದರಲವು ಜನಗಳು
ಏಸು ಕಾಲ ಪಾರತಂತ್ರ್‍ಯದಿಂದ ಇರ್ದ ದೇಶದೊಳ್;
ಶೂರಗಾಂಧಿ ರಾಜಋಷಿಯು ಬಡವಗೊಲಿದ ದೇವನು
ಸತ್ಯಾಗ್ರಹಾದಾಯುಧವೇ ದೇಶ ವಿಜಯಕಾಯ್ದನು!  ||ಭಾ||

ಬಂದಳದೋ ವಿಜಯಭೇರಿಯನ್ನು ಮೊಳಗಿ ಮಾನಸಿ,
ಗಳಿಸಿದೊಂದು ಕೀರ್ತಿಯನ್ನು ಕಂದರೊಳಗೆ ಹಬ್ಬಿಸಿ;
ಧರೆಯ ರಾಷ್ಟ್ರಗಳಲಿ ನಮ್ಮ ಪ್ರಭೆಯು ಇನ್ನು ಬೀರ್ವುದು,
ಧವಳ ಕೇತು ಹಾರ್‍ಸಿ ತಂದಳದೋ ಭಾರತೀವಧು!  ||ಭಾ||
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೫

ನೆನವುತ್ತಿದೆ ಮನ.
ದುರ್ವಾಸನೆಗೆ ಹರಿವುತ್ತಿದೆ.
ಕೊನೆಕೊಂಬೆಗೆ ಎಳೆವುತ್ತಿದೆ.
ಕಟ್ಟಿಗೆ ನಿಲ್ಲದು- ಬಿಟ್ಟರೆ ಹೋಗದು.
ತನ್ನ ಇಚ್ಫೆಯಲಾಡುವ
ಮನವ ಕಟ್ಟಿಗೆ ತಂದು,
ಗೊತ್ತಿಗೆ ನಿಲ್ಲಿಸಿ,
ಬಚ್ಚಬರಿಯ ಬೆಳಗಿನೊಳಗೆ
ಓಲಾಡುವ ಶರಣರ ಪಾದದಲ್ಲಿ
ನಾ ಬೆಚ್ಚಂತಿದ್ದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ