ಕೊಡವ

ಈ ವಿಭಾಗವನ್ನು ಅಭಿವೃದ್ಧಿಪಡಿಸಲು ಆಸಕ್ತರು ಕೈಜೋಡಿಸಬೇಕೆಂದು ಕೋರುತ್ತೇವೆ.
ಸಂಪರ್ಕ ವಿಳಾಸ: chilume001@gmail.com

ವಂದನೆ ಕಲಿಸಿ ಆನಂದದಿ

ವಂದನೆ ಕಲಿಸಿ ಆನಂದದಿ ಬಿಂದು ವರ್ಗ ನಿಲಿಸಿ                    || ಪ ||

ಹೊಂದಿಸಿ ಯಮುನಾತೀರದ ಮಧ್ಯದಲಿ ನಿಂತು
ಎಂದೆಂದಿಗೂ ಯಮದಂದುಗವ ಕಳೆ  ಎಂದು                       || ೧ ||

ಶಿಶುನಾಳಧೀಶನಲ್ಲಿ ಉನ್ಮನಿಯಾಗಿ ಹಸನಾಗಿರುವದು
ವ್ಯಸನಕೆ ವ್ಯಸನಹುದೆ ಕರ್ದುಸಾರನೆಲ್ಲ ಕಳೆಯೆಂದು ಮಂತ್ರದಿ || ೨ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ವನಜಾಕ್ಷಿಯಳೆ ಬಾರೆ

ವನಜಾಕ್ಷಿಯಳೆ ಬಾರೆ ಮನ ಮಾನಿನಿಯೆ ಬಾರೆ
ವನದೊಳಾಡುನು ಕೂಡಿ ಘನ ಹರುಷದಲಿ

ತನುವೆಂಬಾ ಕೊಳದೊಳು ಮನವೆಂಬ ತಾವರಿ
ಘನ ಸುಗಂಧವ ಬೀರುತಿರುವದು ನೀರೆ            ||೧||

ನೋಟಾನಿರುತವೆಂಬ ಜೀರ್ಕೊಳವಿಯನು ಪಿಡಿದು
ನೀಟಾಗಿ ನೀನು ನೀರಾಟಕ್ಕೆ ಬಾರೆ                  ||೨||

ವಿಷಯವೆಂದೆಂಬುವ ಅಸಮ ಜಲದಿ ಸ್ನಾನಾ
ಯೆಸಗಿ ಶಿಶುನಾಳೇಶನಡಿಗೊಂದಿಸುವುನು       ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಒಳ್ಳೇದಲ್ಲ ನಿನ್ನ ಸಲಗಿ

ಒಳ್ಳೇದಲ್ಲ ನಿನ್ನ ಸಲಗೀ
ನಾ ಒಲ್ಲೆನು ಹೋಗ                                             ||ಪ||

ತನುತ್ರಯ ಗುಣವೆಂಬು ಮನಸಿನಾಶೆದೊಳಿಟ್ಟು
ದಿನಗಳ ನೆನಸಿ ನಿಮಗ ಏನೇನು ಬೇಕು                   ||೧||

ಹರಿ ಸುರರು ಪರಿಭವ ಕಟ್ಟಿಸಿದ
ಆರಿಯದವರ್ಯಾರು ನಿಮಗ ಬರದಿರು ಮೈಮಾಗ    ||೨||

ನಡಿ ನಡಿ ಶಿಶುನಾಳದ ಒಡಿಯ ಕಂಡೀಕ್ಷಣ
ನಡಿ ಪೀಡಸದ್ಹಾಂಗ ಎಡಬಲ ಬರದ್ಹಾಂಗ                ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೆಳಗಾಗುವ ತನಕ ಕುಳಿತು ನೋಡೋ

ಬೆಳಗಾಗುವ ತನಕ ಕುಳಿತು ನೋಡೋ
ನಿನ್ನ ತಿಳುವಳಿಕೆ ಜ್ಞಾನವನ್ನು                                 ||ಪ||

ಬಲು ವಿಷಯಗಳಲಿ ಬಳಲಿಸಿ
ತನುತ್ರಯ ವಳಗ ಹೊರಗೆ ಸುಳಿದಾಡಂವ ಮನವೇ   ||೧||

ಕಣ್ಣು ಮುಚ್ಚಿ ಕೈಕಾಲು
ತಣ್ಣಗೆ ಮಾಡುವ ಕುನ್ನಿ ಮನವೇ                            ||೨||

ನಿದ್ರೆ ಹತ್ತಿ ಮಲಗಿರ್ದ ಕನಸಿನೊಳು
ಗದ್ದಲಿಸುವ ಮಣಿಗೇಡಿ ಮನವೇ                           ||೩||

ಘರ ಚಿಂತಾತುರದೊಳಗಾಭವ
ಪಾರಗಾಣದೆ ಛಿಮಾರಿ ಮನವೇ                          ||೪||    

ವಸುಧಿಯೊಳು ಶಿಶುನಾಳಧಿಶನ
ವರಯೋಗಕೆ ಸರಿಯಾಗದ ಮನವೇ                   ||೫||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಹೇಸಬಾರದೆ ಮನಸೆ

ಹೇಸಬಾರದೆ ಮನಸೆ ನೀ ಹೇಸಬಾರದೆ
ಆಸೇಯ ನದಿಯೊಳ್ ಈಶ್ಯಾಡುವುದಕೆ ಹೇಸಬಾರದೆ   ||ಪ||

ಭೂಮಿಗುದಿಸಿ ಭವದಾ ಮಹಾಕರ್ಮದಿ
ಮರಳಿ ಮಾಯಾ ಮೋಹಕೆ ಮೋಹಿಸದೆ                    ||೧||     

ಏಳು ಜನ್ಮಾತರ ಮೇಳೈಸಿದ ಸುಖ
ತಾಳಿ ಇಳೆಗೆ ಬಂದು ಬಾಳುವುದಕೆ ನೀ                     ||೨|| 

ಲೋಕದಿ ಶಿಶುನಾಳಧೀಶನ ಭಜಿಸುತ
ಕಾಕು ವಿಷಯದ ಭೋಗ ಸಾಕು ಸಾಕೆನ್ನೆನ್ನು              ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನವೆಂಬೊ ಹೆಣ್ಣಿನ ಕಣ್ಣ ಸನ್ನೆ

ಮನವೆಂಬೊ ಹೆಣ್ಣಿನ ಕಣ್ಣ ಸನ್ನೆ ಕಾಮ
ತಾನು ದೇಹದೊಳು ಸುಳಿದಾದುತಿರೆ             || ಪ ||

ನಿನಗೆ ವಿಷಯ ಸುಖವಾದಾಕ್ಷಣದೊಳು
ಎನಗೆ ಸುರಿತ ಸುಖಬೋಧವ ಬೇಡುವರೆ       ||ಅ.ಪ.||

ಚದುರಂಗ ಕುಚಕೊಡಾ ತಟದಿ ಇಡಲು ವಾಚಾ
ಸತ್ವ ಚಿತ್ತ ಅಧರಪಾನ ಉಂಡರೆ
ಪ್ರಥಮ ಆವತಾರವ ಕಳೆದು ನಿಂದವಳೆಂದು
ಹಿತದಿ ಹಿಂಭಾಗ ಮಂಟಪವ ಸಾರೆ                ||೧||

ಶಿಶುನಾಳದೀಶಗ ಆಸಮ
ಕುಮಾರಗ ಹಾಡಪೊರೆ
ಪಶುಪಮತಾರಣವ ಕಳೆದು
ನಿಂದವೆಳಂದು ಕ್ಲೇಶವಡಿದು
ಗೋವಿಂದ ಆನ್ನಿರೋ                                 || ೨ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ದುಖಮೆ ಪಧಾ ಮನ

ದುಖಮೆ ಪಧಾ ಮನ ಸುಖ ನಹಿ ಮಾಯಾ
ಥಕತಿ ಮರನ ರಖವಾಲರೆ || ಪ ||

ಖಾತಾ ಪೀತಾ ಸೋತಾ ಸಬದಿನ
ಬಾತ ಯೆ ಗಫಲತ ಖೇಲರೆ || ೧ ||

ತೀನ ರೋಜ ಗುಜರಾನ ಜೀವನಕಾ ಯೇ
ತನ ಮಾಥಹೀ ಮಇಲರೆ   || ೨ ||

ರೋಶನ ಹೋ ಶಿಶುನಾಳ ಜಗತ ಫರ
ದೇಶ ಪಿಯಾಕೆ ಲಾಲರೆ    || ೩ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನಸಿನ ಹರಿದಾಟವನು ನಿಲ್ಲಿಸು

ಮನಸಿನ ಹರಿದಾಟವನು ನಿಲ್ಲಿಸುವದು
ಘನಕಷ್ಟವೇನೋ ಮನುಜಾ                           ||ಪ||       

ತನುತ್ರಯದೊಳು ಕುಳಿತಾಡುವ ಜೀವನ
ಗಣವರಿಯದ ಮಾರ್ಗಬ್ಯಾರೋ ಮನುಜಾ        ||ಅ.ಪ.||

ದಶದಿಕ್ಕಿಗೆ ಹಾರ್ಯಾಡು ಹಕ್ಕಿಗೆ
ಹೊಸಬಲೆ ಹಾಕುವ ಪರಿಬ್ಯಾರೋ
ಗುರುಗೋವಿಂದನ ಚರಕಮಲದೊಳು
ಸ್ವರಗೊಂಬ ಭೃಂಗದ ಪರಿಬ್ಯಾರೋ ಮನುಜಾ    ||೧||    

ವಿಷಯವನರಿತು ಸುಖಬಯಸಿ ಬಲು
ಕಸಿವಿಸಿಗೊಂಬುವಿ ಸತತ ಮನಸೆ
ಧರಿಪತಿ ಶಿಶುನಾಳನರಮನಿ ತಿಳಿದರೆ
ಹೊರಗೊಳಗೊಂದೇ ಪರಿಯಲ್ಲೋ ಮನಸೇ      ||೨||

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ನೋವು ನನ್ನೆದೆಯೊಳಗೆ...

(ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ)
- ಬಸವರಾಜ್ ಡಬ್ಲ್ಯು

ಓ! ಬುದ್ಧ
ಮಸಣಕ್ಕೆ ಹೋಗುವ ಮೊದಲು
ನಿನ್ನ ತತ್ತ್ವಗಳು ನಮಗೆ ಹಿಡಿಸಿದವು

ಇರುವೆಗಳೇ ನೀವೇಕೆ
ಹೋದಿರಿ ಅಲ್ಲಿ  !
ಅದು ಮೇಣವೆಂದು ಗೊತ್ತಿಲ್ಲವೆ ?

ನಿಟ್ಟಿಸುರು ಬಿಟ್ಟರೆ
ಮುಗಿಯಲಿಲ್ಲ ಆತಂಕ
ಹೋಗಿ ಹೂವಿನ ಸುತ್ತ ಸುತ್ತಿರಿ

ನಸುಕಿನಲಿ ಎದ್ದು
ನಗಾಡಿತು ರಂಗೋಲಿ
ಜೋರಾದ ಮಾತುಗಳು ಕೇಳಿ

ಬಂಡೆಯ ಎದೆ ಮೇಲಿನ
ಅಕ್ಷರಗಳು ಮಾತನಾಡಿಸಲು ಬಂದು
ಸುಮ್ಮನಾದವೇಕೆ ?

ಬದುಕು ನುಚ್ಚುನೂರಾಯಿತೆ
ಇರಲಿ, ಬಣ್ಣತುಂಬಿ
ಹೊಳಪಿಸಿದರಾಯಿತು ಬಿಡು

ಬಸವನ ಹುಳುವೆ ಏಲ್ಲಿರುವೆ ?
ಕಣ್ಣೀರ ಹನಿಗಳು ಬಂದಿವೆ
ನಿನ್ನ ಎಚ್ಚರಿಸಲು

ಸಾಯುತ್ತಿರುವ ಪ್ರಶ್ನೆಗಳು
ಹೇಳಿದವು
ನಮ್ಮನ್ನು ಮಣ್ಣು ಮಾಡಬೇಡಿ ಎಂದು

ಆಲಿಕಲ್ಲುಗಳೇ ! ಸಾಕು ಮಾಡಿ ಕುಣಿತ
ನಿಮ್ಮ ನೋಡಿ
ಝಂಕ್ ಶೀಟ್ ಹೆದರುತ್ತಿದೆ

ಪಟ್ಟಣದ ಈ ಕಟ್ಟಡಕೆ ಇಲ್ಲ
ಮೆಟ್ಟಿಲುಗಳು, ಏಣಿಹತ್ತಿ
ಎಲ್ಲರೂ ಮೇಲೆ ಬರಬಹುದು

 ಯಾರದು ವಟರ್ ವಟರ್ ಅಂಥ !
ಕಪ್ಪೆ ! ಒದರಬ್ಯಾಡ ಹಂಗೆ
ಹಾವೈತೆ ಮುಂದಿನ ಹಾದ್ಯಾಗ

ಸೂರ್ಯನೊಡನೆ ರಮಿಸಿಕೊಂಡವು
ಮಿನುಗು ತಾರೆಗಳು
ಇನ್ನೂ ಚಂದಿರ ಬರಲಿಲ್ಲವೆಂದು

ನನ್ನ ಪುಟ್ಟ ಕಾಗದ ದೋಣಿ
ತೇಲಿ ಬಿಟ್ಟರೂ ನೆನೆಯಲಿಲ್ಲ
ದಡಕ್ಕೆಬಂದು ಸೇರಿತು

ಮತ್ತೆ ಕೆಂಪು ಡಬ್ಬಿ ಸೇರಿದವು
ಕಾಯಂ ವಿಳಾಸವಿಲ್ಲದ ಪತ್ರಗಳು
ಸೊಕ್ಕಿನಿಂದ ಹಿಂತಿರುಗಿ ನೋಡದೆ

ಬಡಕಲು ದೇಹವನು
ಹುಬ್ಬೇರಿಸಿ ನೋಡಿದವು
ಸೋಡಾ ಚಶ್ಮದೊಳಗಿನ ಕಣ್ಣುಗಳು

ಚಿತ್ರದ ನೆರಳು ನೋಡಿ
ಬಣ್ಣಗಳು ಹೆದರಿ
ಮೂಲೆ ಹಿಡಿದವು

ಬೆರಳು ಕಚ್ಚಿದ ಕಾಲುಂಗುರ
ಹರಿಶಿಣ ಮೆತ್ತಿದ ಮುಖನೋಡಿ
ಹೆಜ್ಜೆ ಹಾಕಿತು ಸರಸರನೆ

ಕಂಬಳಿಯ ಘಾಟು
ಹಿತವೆನಿಸಿ ಬೆಚ್ಚಗೆ ಮಲಗಿದವು
ಕುರಿಮರಿಗಳು

ದಾರಿ ದೂರವಿದೆ
ಹಾರಲು ಇನ್ನೂ ರೆಕ್ಕೆ ಬಲಿತಿಲ್ಲ
ನಡೆಯಲು ನಾಚಿಕೆ ಬೇರೆ

ನಿಲ್ಲದ ಮಳೆ
ಚಳಿಯಿರದ ಉಲ್ಲಾಸ
ಅಲ್ಲಲ್ಲಿ ಹೂ ಬಿಸಿಲು

ಹಸಿರು ಹುಲ್ಲಿನ ಚಾದಾರ ಮೇಲೆ
ಮಲಗಿದ್ದ ಮುತ್ತಿನ ಮಣಿಗಳು
ಸೂರ್ಯನಿಗಾಗಿ ಕಾದು ಸುಸ್ತಾದವು

ಕೆಂಪು ಮೋಡಗಳೇ !
ನೀವೇಕೆ ಬೆಟ್ಟ ಹತ್ತಿದಿರಿ ?
ನಾಚಿಕೆ ಬಿಟ್ಟು ಕೆಳಗೆ ಇಳಿಯಿರಿ

ನೀರಿನ ಗುಳ್ಳೆ ಮೇಲೆ
ಪಿಸುಮಾತುಗಳು
ಮಡುಗಟ್ಟಿವೆ

ಸಿಡಿಲಿನ ಆರ್ಭಟಕ್ಕೆ
ಕೊಳಲಿನ ನಿನಾದ
ಸುಮ್ಮನಾಯಿತು

ಹೆಣದ ಮುಂದೆ ಹಣ
ದಿಕ್ಕು ತಪ್ಪಿದವು ಮನಗಳು
ಅನಾಥವಾಗಿ ಬಿದ್ದಿತು ಹೆಣ

ನಗುವ ಬುದ್ಧನ ನೋಡಿ
ಅದೃಷ್ಟ ಖುಲಾಯಿಸಿತು
ನೊಂದ ಜೀವಗಳಿಗೆ

ಕಿಟಕಿಯಿಂದ ತೂರಿಬಂದ ಬೆಳಕು
ಪ್ರe ಪೂರ್ವಕ
ಈಗ ಕೊಂಚ ನೆಮ್ಮದಿ

ಮೀನಿನ ಹೆಜ್ಜೆ ಗುರುತು
ಹುಡುಕುತಿವೆ ಮನಗಳು
ಕನಸಿನಲಿ

ಹಸಿದ ಹೊಟ್ಟೆಗಳು
ಮಣ್ಣು ಮುಕ್ಕಿದವು
ಅವನನ್ನು ನಂಬಿ

ಸುಂಟರಗಾಳಿ ಬಂದರೂ
 ಜಂಭದಿಂದ ಹಾರುತ್ತಿದೆ ಪಟ
ಕೆಳಗೆ ಬೀಳುವೆನೆಂಬ ಪರಿವಿಲ್ಲದೆ

ಗೋರಿಯೊಳಗಿನ ಮಾತು ಕೇಳಿ
ಹೃದಯ ಗೊಣಗಿ ಗೊಣಗಿ
ಕೊನೆಗೆ ಅಳತೊಡಗಿತು

ಬುದ್ಧನ ಕಣ್ಣುಗಳು
ನಮ್ಮನ್ನು  ಕ್ಷಮಿಸಿವೆ
ನಾವಿನೆಂದೂ ತಪ್ಪು ಮಾಡುವುದಿಲ್ಲ

ಬದುಕು ಸಾವಿನ ನಡುವೆ
ಬಿದ್ದಿವೆ ಚಿಂತೆಗಳು
ಮಡಿಸಲಾರದಷ್ಟು

ದೇಹಕ್ಕೆ ಚುಚ್ಚುವ ಕಂಬಳಿ
ಚಳಿಯ ತಡೆದಿದೆ
ನಿರಾಳತೆ ಕೃತಕವೆನಿಸಿದೆ

ನಿರ್ಧಾರಗಳು ಅಡಗಿವೆ ಕಪ್ಪೆಚಿಪ್ಪಿನೊಳಗೆ
ಹೊರ ಬರಲು ಕಾಯುತ್ತಿವೆ
ಸೂರ್ಯಾಸ್ತವನ್ನು

ಭೋಧಿ  ವೃಕ್ಷ ಆಶ್ರಯಿಸಿತು
ಬದುಕಿನ ಏಳು - ಬೀಳುಗಳ ನೋಡಿ
ಒಂದಷ್ಟು ನೆಮ್ಮದಿ ಮನಸ್ಸಿಗೀಗ

ಮೋಡದ ಕುಲಾವಿ
ಹಾಕಿಕೊಂಡು ಮಲಗಿತ್ತು ಬೆಟ್ಟ
ಹೊಂಗಿರಣಗಳು ಬಂದು ಎಚ್ಚರಿಸಿದವು

ನಿಶೆ ಮೌನವಾಗಿದೆ
ಒಣಗಿದ ಮರದಲಿ
ಇಬ್ಬನಿ ತೊಟ್ಟಿಕ್ಕುವಾಗ

ಎಲುಬಿನ ಗೋರಿಯೊಳಗೆ
ವೃದ್ಧೆಯ ಭಾವನೆಗಳು
ಹಣ್ಣುಹಣ್ಣಾಗಿವೆ

ಮಣ್ಣು ಮುಕ್ಕಿಸಿಬಿಟ್ಟವು
ಸುಡುಗಾಡು ಚಿಂತೆಗಳು
ಅವರಿಬ್ಬರನು ನೆನೆದು

ಝೆನ್ ಝೇಕಾರ ಮೊಳಗಿತು
ಹೃದಯದೊಳಗಿನ ಕಿಚ್ಚು ಆರಿತು
ಇದು ಕಟ್ಟುಕತೆಯಲ್ಲ ವಾಸ್ತವ

ಗೋರಿಯಮೇಲೆ ಕುಳಿತಾಗ
ಕಮರಿದ್ದವು ಆಸೆಗಳು
ಸುಕ್ಕುಗಟ್ಟಿದ್ದ ಮುಖದಲಿ

ಅವರ ಭಾವನೆಗಳು
ಶರ ಶಯ್ಯೆದ ಮೇಲೆ ಕುಳಿತು
ಅಳುತ್ತಿವೆ

ಮರಳಲ್ಲಿ ಅವಿತ ಶಂಖುಗಳು
ಗಾಢವಾಗಿ ನಿದ್ರಿಸುತ್ತಿವೆ
ಯಾವುದೇ ನಿನಾದವಿಲ್ಲದೆ

ನರಕದ ಹಾದಿ ಹಿಡಿದಾಗ
ಹೆಗಲೇರಿದ್ದವು ತಪ್ಪುಗಳು
ಗುಂಪುಗುಂಪಾಗಿ

ದೂರವಾಗುತಿವೆ ಬಯಕೆಗಳು
ಸದ್ದುಗದ್ದಲವಿಲ್ಲದೆ
ತನ್ನ ನೆಲೆ ಅರಿಯಲು

ಬೆಳಕಿನಲ್ಲಿರುವುದು
ಬೆಳಕಿನೊಳಗಿನ ಬೆಳಕು
ಮುತ್ತಿನಂಥ ಬೆಳಕು

ಏಕಾಂತದಲ್ಲಿರುವಾಗ
ಹೆಬ್ಬಾಗಿಲು ಸ್ವಾಗತಿಸಿತು
ಮೌನಕ್ಕೆ ಶರಣಾದ ದುಃಖಗಳನ್ನು

ತಲ್ಲಣಿಸುತ್ತಿವೆ ಕಣ್ಣೀರು
ತಡೆಹಾಕು ಸ್ವರ್ಥ
ಆಸೆಗಳ ಮುಗಿಸು

ಮನಸ್ಸಿಟ್ಟಾಗಲೂ ಈಡೇರದ ಆಸೆ
ನಿರಾಸೆಯಾಗಿತ್ತು
ನೋಡಿಯೂ ನೋಡದ ಹಾಗೆ

ಮಿಗಿಲೆಂದೆನಿಸಿದರೆ
ಕ್ರೋಧ ತಳೆದುಬಿಡು
ಘೀಳಿಡುವಮುನ್ನ

ಹಗಲೂ ಇರುಳೂ
ನಿದ್ರಿಸುವ ಮುಗ್ಧ ಬಯಕೆಗಳು
ನೆಮ್ಮದಿ ಕಾಣಲಿಲ್ಲ

ಕುಣಿಕೆ ಬಿಚ್ಚಿದ ಹಗ್ಗ
ಅಗಳಿ ತೆಗೆದ ಬಾಗಿಲಂತೆ
ಬಾಯಿ ತೆರೆದವು ಮನದ ಮಾತುಗಳು

ಅಡಗಿ ಕುಳಿತ ಚಿಂತೆಗಳು
ದುಗುಡ ಬಿಟ್ಟು ಹೊರ ಬಂದವು
ಸಾಲುಸಾಲಾಗಿ

ದುಗುಡ ದುಮ್ಮಾನಗಳ ನಡುವೆ
ಅಡ್ಡ ಹಾಕಿದವು ಶಸ್ತ್ರಗಳು ಸಾವಿಗೆ
ಹಿಂದೂಮುಂದು ನೋಡದೆ

ನವಿರಾಗಿ ಬಳುಕುವವು
ಹಸುರ ಎಲೆಗಳು
ಇಬ್ಬನಿ ಬಿದ್ದಾಗ

ಸೆಟೆದು ನಿಂತಿದ್ದವು ಮರಣಸಂಗಾತಿಗಳು
ಮಸಣದ ಹಾದಿಯತ್ತ
ಕರುಣೆಯನು ಗಾಳಿಗೆ ತೂರಿ

ದುಃಖ ಬಂದರೂ
ಸುಖ ಹೋದರೂ
ಹೃದಯ ಸಾಮ್ರಾಜ್ಯ ನಿರಂತರ

ಕಂಬಿಯ ಎಣಿಸುತ
ಕನಸುಗಳ ಹಿಡಿದು
ಮಲಗಿಬಿಡು ಸುಮ್ಮನೆ

ಎಳೆದ ರೇಖೆಗಳು
ಚಿತ್ತಾರವಾಯಿತು
ರಂಗು ರಂಗೇರಿ

ಮುರಿದು ಬೀಳುವ ಊರುಗೋಲು
ನಕ್ಕು ನಲಿವ ಅಂಬೆಗಾಲು
ಏಳುಬೀಳುವ ಬದುಕು

ಹೆಗಲೇರಿವೆ ಕಷ್ಟಗಳು
ಎಗ್ಗಿಲ್ಲದೆ ಬಂದ ದುಃಖಗಳು
ಬಿಗಿದಪ್ಪಿವೆ ಪ್ರಾಣ ಸಂಗಾತಿಗಳಾಗಿ

ದ್ವೇಷ ಅಸೂಯೆಗಳನ್ಹೊತ್ತು ಬಂದರು
ಕತ್ತಿ ಗುರಾಣೆಗಳಿದ್ದರೂ
ಕದನಕ್ಕೆ ವಿರಾಮ ಹಾಕಿದರು

ಎಷ್ಟೇ ಸಾರಿ ಕೆಳಗೆ ಬಿದ್ದರೂ
ಮತ್ತೆ ಗೂಡು ಕಟ್ಟಲು ಯತ್ನ
ಬುದ್ಧನ ಪ್ರೇರಣೆಯಿಂದ

ಹಾರುವ ಗಾಳಿಪಟ
ಜೀಕುವ ಜೋಕಾಲಿ
ಜತೆಗೂಡಿದೆ ತಂಗಾಳಿ

ಬರಿದಾದ ಭಾವನೆಗಳು
ಹೊತ್ತಿ ಉರಿಯುತಿವೆ ಕಾಳ್ಗಿಚ್ಚಿನಂತೆ
ಅತ್ತ ಸಾಯಲೂ ಇಲ್ಲ ಇತ್ತ ಬದುಕಲೂ ಇಲ್ಲ

ಮೂಡಿಬಂದ ವಕ್ರರೇಖೆಗಳು
ವಿಹರಿಸಲಿಲ್ಲ ದೋಣಿಯ ಮೇಲೆ
ಮಲಗಿದವು ಕಪ್ಪು ನೀರಿನೊಳಗೆ

ಬಂದಿಯಾದವು ಕನಸುಗಳು
ಇರುಳ ಸಾಮ್ರಾಜ್ಯದೊಳಗೆ
ತಮಗೇ ಅರಿವಿಲ್ಲದೆ

ಹಿಗ್ಗದ ಪ್ರತಿಬಿಂಬ
ಬಗ್ಗದ ಬಡಿಗೆ
ಮೌನಿಯಾದ ಬುದ್ಧ

ಸತ್ತು ನಾರುತಿದೆ ದೇಹ
ಹೂಳುವುದಿರಲ್ಲಿ
ಬಂದು ನೋಡುವವರೂ ಇಲ್ಲ

ಮೈತುಂಬ ಗಾಯಗಳು
ಔಷಧ ಹಚ್ಚಿದರೂ
ಹಾಗೇ ಉಳಿದವು ಕಲೆಗಳು

ಹಾಯ್ಕುಗಳ ಸಾಲು ಬಿಚ್ಚಲು
ಓಡಿಬಂದು ಮಲಗಿದವು
ಮನದ ಬಯಕೆಗಳು

ಬಿಡಲೊಲ್ಲವು
ತಟ್ಟಿದ ಭರಣೆ
ಮಣ್ಣಿನ ಗೋಡೆ ಬಿಟ್ಟು

ಮಾಗಿದ ಮಾವು
ತೆರೆದಿಟ್ಟ ಹಲಸು
ಬಗೆದು ತಿಂದವು ಕಾಗೆಗಳು

ಕರಕಲಾದ ಬತ್ತಿ
ಮುಗಿದ ಎಣ್ಣೆ
ಆರಿದವು ಆಕಾಂಕ್ಷೆಗಳು

ಅತ್ತ ಬಂಜರು
ಇತ್ತ ನೇಗಿಲು
ಬಿತ್ತುವುದಾದರೂ ಹೇಗೆ

ಕೆಂಪು ಅಡರಿತು
ಹಸುರ ನಾಡಿಗೆ
ಬೆಟ್ಟ ಕಾಡು ಮೇಡು ದಾಟಿ

ಅಂದದ ಅರಮನೆಯೊಳಗೆ
ಕಠೋರ ನಿರ್ಧಾರಗಳು
ಕುರೂಪಗೊಳಿಸಿದವು ಚೆಲುವನ್ನು

ಸುರಿವ ಮುಂಗಾರು
ಜಿನುಗುವ ಜೇನು
ಹೀರಲಿಲ್ಲ ಏಕೆ ?

ಸಮನಾಗಿ ತೂಗಲಿಲ್ಲ ತಕಡಿ
ಒಂದು ಮೇಲೆ ಮತ್ತೊಂದು ಕೆಳಗೆ
ನ್ಯಾಯ ಕುಸಿಯಿತು ಎರಡರ ನಡುವೆ

ಬುದ್ಧನ ಆಶ್ರಮದಲಿ
ಹಸುರು ಹುಲ್ಲು ತಿಂದು
ಅಂಡಲೆದವು ದನಗಳು

ಜಾಡುತಪ್ಪದ ಜೇಡ
ಮತ್ತೆ ಹೆಣೆಯತೊಡಗಿತು
ಏಳುತ್ತ ಬೀಳುತ್ತ

ನೆರಳು ಹರಡಿದ ವೃಕ್ಷ
ಇರುಳ ಕಂಡರೂ
ತುಸು ಗಾಳಿ ಬೀಸಲಿಲ್ಲ

ಹೆಚ್ಚುತಿದೆ ಬೆಳಕು
ಜರಿಯುತ್ತಿದೆ ನೆರಳು
ಚಿತ್ತ ಮರೆತು

ಜಂಭದ ಜೂಜು
ಕಳೆದರೂ ಮನೆಮಠ
ಬಿಡದ ದಟ್ಟದರಿದ್ರ

ಬೋಧಿಸುವರು ನಮಗೆ
ಅರಿವಿನ ಕಥನ
ಹರಿವ ನೀರಿನಂತೆ ನಿರಂತರ

ಅವಳ ಸತ್ತದೇಹಕ್ಕೆ
ಬೆನ್ನು ಹತ್ತಿದವು ಹದ್ದುಗಳು
ಕೊನೆ ಗಿರಾಕಿಗಳಾಗಿ

ಚಪ್ಪಲಿ ಕಳಚಿ
ಪಾದ ಹಿಡಿದರೂ
ಕ್ಷಮಿಸಲಿಲ್ಲ

ಮುರುಟುಗೊಂಡ ನಾಲಗೆ
ಮೌನ ವಹಿಸಿದ ಮಾತುಗಳು
ಅರಿವಿನ ಪರಿವೇ ಉಳಿಸಲಿಲ್ಲ

ಮರಳುಗಾಡು ಬಿಟ್ಟು
ಓಯಾಸಿಸ್‌ಗೆ ಬಂದರೂ
ತಲ್ಲಣ ನಿಲ್ಲಲಿಲ್ಲ

ಅದೆಷ್ಟೋ ರಾತ್ರಿ ಕಳೆದರೂ
ಹೊತ್ತಿ ಉರಿಯುತ್ತಿತ್ತು ವಿರಹದ ದೀಪ
ಎಣ್ಣೆಯಿಲ್ಲದೆ

ಬೆನ್ನು ತೋರಿದರೂ
ದೂರವಾಗಲಿಲ್ಲ ಅಳು
ಸುಮ್ಮನೆ ಬತ್ತಿದವು ಕಣ್ಣೀರು

ಸಾವಿನ ಹಂಗು ಬಿಟ್ಟು
ಬದುಕಿನ ದಾರಿ ಹಿಡಿದು
ಬವಣೆಗಳ ಮೇಲೆ ಮಲಗಿದರು

ಅಡ್ಡದಾರಿ ಹಿಡಿದ ಯೌವನ
ಚಿತ್ತ ಚಾಂಚಲ್ಯದ ಮನಸು
ಜತೆಗೂಡಿ ಚಿರ ನಿದ್ರೆಗೆ ಜಾರಿದವು

ನೆರಳಲ್ಲಿ ನೆಲೆನಿಂತ ಶಾಂತಿ
ಸ್ತಬ್ಧವಾಗಿ ಮಲಗಿದ ವೇದನೆ
ಬುದ್ಧನ ಪಿಸುಮಾತು ಕೇಳಿರಬೇಕು

ಎರೆಹುಳುವಿನ ಸ್ವಚ್ಛಂದ ಓಡಾಟ
ಹದಗೊಂಡ ಮಣ್ಣು
ಕಂಗೊಳಿಸಿತು ಹಸುರು ನೋಟ

ಬೋಳು ಮರದ ಗಾಳಿ
ತೂಕಡಿಸಿದ ಸೂರ್ಯ
ರಂಗಸ್ಥಳವಾಗಿತ್ತು ಆಗಸ

ಹಸೆ ಚಿತ್ತಾರ ಬುಟ್ಟಿಗಳು
ನೆಲದ ಮೇಲೆ ಚರಗ ಚೆಲ್ಲಿ
ಹಸಿರುನೋಡಿ ನಕ್ಕು ನಲಿದವು

ಅರ್ಥೈಸದೆ ಓಡಿದವು
ಗಿಲೀಟು ಮಾತುಗಳು
ಹೆಸರು ಹೇಳದೆ

ಮಸಿ ಕಾಗದವನು ಸ್ಪರ್ಶಿಸಲಿಲ್ಲ
ಒಲವಲಿರಿಸಿ ಚೆಲ್ಲಿತು ಎದೆಯೊಳಗೆ
ಅಳಿಸಲಾರದ ಕಲೆಯಾಗಿ

ಮುದುಡಿದ ಮನೋವಿಕಾರ
ದಾಪುಗಾಲು ಹಾಕಿದ ನಗು
ನೆನೆದು ಉಮ್ಮಳಿಸಿತು ಅಳು

ಲಜ್ಜೆಗೆಟ್ಟ ನಡತೆ
ಕುಹಕವಾಡಿದ ಪಿಸುಮಾತು
ಒಣ ದಿಮಾಕು ತೋರಿಸಿದವು

ಸ್ನೇಹ ಮುರಿದುಕೊಂಡ ಸೂರ್ಯ- ಚಂದ್ರರು
ಭುವಿಗೆ ಬೆಳಕ ಚೆಲ್ಲಿ
ಹ್ಯಾಪುಮೋರೆ ಹಾಕಿಕೊಂಡರು

ಜಿನುಗುವ ಜೇನು ಬಿಟ್ಟು
ಹಾರಿದವು ರಾಣಿಜೇನು ಪರಿವಾರ
ಹೊಗೆಯ ನೋಡಿ

ಬಣ್ಣ ಹಚ್ಚಿದರೂ
ಬದುಕಿನ ಗುಟ್ಟನರಿಯಲಿಲ್ಲ
ಬರೀ ನಟನೆಯಲ್ಲೇ ಕಳೆದರು ಜೀವನಪೂರ್ತಿ

ದೂರವಾದ ಒಲವು
ಸನಿಹ ಬಂದ ವಿರಹ
ಮೈಮುರಿದು ನಿಂತವು ಮನದೊಳಗೆ

ಇಬ್ಬನಿಯೊಳಗೆ ಕಾಣುತ್ತಿತ್ತು
ರಂಗು ಎರಚಿ ಮಿನುಗಿದ ನಲಿವು
ಹಸುರನುಟ್ಟ ಬನದ ಚೆಲುವು

ಒಡೆದ ಕನ್ನಡಿಯೊಳಗಿನ ಛಿದ್ರ ಮುಖಗಳು
ಮೋಜುಮಾಡಿ ಮುಗಿಸಿದರೂ
ಬೀಡು ಬಿಡಲಿಲ್ಲ

ಕೊನೆಯ ಪಯಣದ ಹಾದಿಯಲ್ಲಿ
ಬೆನ್ನುಹತ್ತಿದವು ನೆನಪುಗಳು
ಗುಂಪು ಗುಂಪುಗಳಾಗಿ

ಆಸೆಗಳ ಹೊದ್ದು ಮಲಗಿದರೂ ಕನಸು ಬೀಳಲಿಲ್ಲ
ಭಾರ ಹೆಜ್ಜೆಗಳನ್ನಿಟ್ಟು ನಡೆದರೂ ಹೆಜ್ಜೆ ಮೂಡಲಿಲ್ಲ
ನುಡಿದಂತೆ ನಡೆದರೂ ಸತ್ಯ ತಿಳಿಯಲಿಲ್ಲ

ಮುಪ್ಪಾದರೂ ಯೌವನದ ಗುಂಗು ಬಿಡಲಿಲ್ಲ
ನೀರ್‍ಗುಳ್ಳೆ ಒಡೆದರೂ
ಮತ್ತೆ ಹುಟ್ಟುತ್ತಲೆ ಇವೆ ಮರೆವ ಮುನ್ನ

ಸುಣ್ಣ ಹೆಚ್ಚಾಯಿತು ತಾಂಬೂಲದಲಿ
ಬಾಯಿ ಒಡೆದು ನೋವಾದರೂ
ಕೆಂಪುತನ ಬಿಡಲಿಲ್ಲ

ಸಂಪತ್ತು ನಾಶವಾದರೂ
ಕವಡೆ ಕಿಮ್ಮತ್ತು ಉಳಿಯಿತು
ನಿರಾಳತೆ ಮನದುಂಬಿಸಿದ ಬುದ್ಧ

ನೋವುಗಳ ಅಟ್ಟಹಾಸ ಮುಗಿಯಿತು
ಒಲವು ಮಂದಹಾಸ ಬೀರಿತು
ಅಳುಕು ಹಾಗೇ ಉಳಿಯಿತು

ಲಜ್ಜೆಗೆಟ್ಟು ಹೆಜ್ಜೆಯಿಡದಿರು
ರೀತಿ ರಿವಾಜುಗಳ ಮರೆತು
ಸಖಾಸುಮ್ಮಾನೆ ಮೌನಿಯಾಗದಿರು

ಉರಿದು ಬೂದಿಯಾದ ಮರ
ಸಿಡಿದು ಬಿದ್ದ ಹೂ ಹಣ್ಣು
ತನ್ನೊಳಗೆ ಕಂಪಿಸಿತು ನಿನಾದ

ಕೀರ್ತಿಗಳಿಸಿದರೂ ಗೌರವಿಸಲಿಲ್ಲ
ಸಂಪತ್ತು ಬಂದರೂ ಕೂಡಿಡಲಿಲ್ಲ
ಅಕ್ಷರ ಕಲಿತರೂ ಓದಲಿಲ್ಲ

ಮುಪ್ಪು ಅಡರಿದ ದೇಹ
ಅಶ್ರು ಸುರಿಸಿದ ನಯನ
ಪೋಣಿಸಿಕೊಂಡವು ಮನದೊಳಗೆ

ಮುರುಟಿದ ಯೌವನ
ವಚನ ಪಾಲಿಸಿತು
ಬುದ್ಧನ ನೆನೆದು

ಸಾವಿನ ಸೂಚನೆ
ಚಿಂತೆಗಳ ಚಿತೆ ಹೊತ್ತಿತು
ಆದರೂ ಧೃತಿಗೆಡಲಿಲ್ಲ

ಮರಗಟ್ಟಿದ ನೋವುಗಳು
ಚಿತೆಯಲ್ಲಿ ಬಿದ್ದು ಬೂದಿಯಾದರೂ
ಒಲವನರಿಸಿ ಮತ್ತೆ ಬಂದವು

ಹೊತ್ತೊಯ್ಯುತಿದೆ ಸಾವು
ತಿರುಗಿ ಬಾರದ ಲೋಕದಲಿ
ದಿಟ್ಟತನ ಮುಂದುವರಿಸಿ

ಮಧುರ ನೋವಿನ ತುಡಿತ
ಹಸಿ ನಗುವಿನ ನೋಟ
ದಿಕ್ಕೆಟ್ಟು ಓಡಿದವು ಮಮ್ಮಲ ಮರಗುತ

ಬೆಳೆದು ಬೆಳಗಿದ ಆಸೆ
ನೀರವ ಮೌನದೊಂದಿಗೆ
ಮಲಿನಗೊಳ್ಳದಿರಲಿ

ಮಾನಿನಿಯ ಮೌನ
ಮರೆತ ಮಾತು
ಶವಯಾತ್ರೆಯೊಂದಿಗೆ ಹೊರಟವು

ಬೆಂಕಿ ತಗುಲಿತು ವಿರಹಗಳಿಗೆ
ಮತ್ತೆ ಚಿಗುರಲಿಲ್ಲ ಬಯಕೆಗಳು
ಒಣಗಿದವು ಹಠಮಾಡದೆ

ಸೋತು ಮಲಗಿದ ಮೌನ
ಬೆಳದಿಂಗಳು ಹರಡಿದ ಚಂದಿರ
ಹಾಯ್ಕುಗಳ ನಿನಾದ ಆಲಿಸಿದರು

ನಗದೆ ಉಳಿದ ಅಳು
ಮುಪ್ಪಾದರೂ ಚೇತರಿಸಲಿಲ್ಲ
ಹಿತೆವೆನಿಸಿದರೂ ಮಿತಿಯಿರಲಿ

ಕಮಟು ವಾಸನೆ ಮಾತುಗಳು
ನಿನ್ನೊಳಗೆ ಇರಲಿ ಬಿಡು
ನಿಲುಕಲಾರದ ಬಾನಿನಂತೆ

ನೋವಿನ ಆಳದೊಳಗೆ
ನೂಕಿ ಬಿಟ್ಟಿತು
ಕಮ್ಮನೆಯ ನಗು

ಉನ್ಮಾತ್ತಗೊಂಡ ವಿಶ್ವಾಸಗಳು
ಸುಟ್ಟು ಕರಕಲಾದವು
ಆಮಿಷಗಳು ಮತ್ತೆ ಸುಮ್ಮನಾದವು

ದೀಪದ ನೆರಳಲ್ಲಿ
ಮಳೆ ಹನಿಗೂ
ಸುಖನಿದ್ರೆ

ಕತ್ತಲ ಕೋಣೆಯಲಿ
ಜಿರಲೆಗೂ ಖುಷಿ
ಹಣತೆ ನೋಡಿ

ಹೆಂಚಿನ ಮೇಲೆ
ಮಳೆ ಹನಿ ಸುರಿದು
ಎಚ್ಚರಿಸಿದವು

ಜಗುಲಿಯಲಿ ಕುಳಿತು
ಜೋರಾಗಿ ನಕ್ಕರೂ
ತಿರುಗಿ ನೋಡಲಿಲ್ಲ

ಹೊಸ ಖದರು
ನಳನಳಿಸುತ್ತಿತ್ತು
ಭತ್ತದ ತೆನೆಯಲ್ಲಿ

ಕತ್ತಲ ನೋಡಿ
ಭಾವಬಿಂಬಗಳು
ಮತ್ತೆ ಒಂದಾದವು

ಸಣ್ಣ ಸಂಗತಿ
ಬಲಿಕೊಟ್ಟು
ಶುಷ್ಕ ಬದುಕು ಸಾಗಹಾಕು

ಸೋಂಬೇರಿ ಮನ
ಎಚ್ಚರಿಸಿದರೂ
ಸುಮ್ಮನೆ ಬಿದ್ದುಕೊಂಡಿದೆ

ಚಿಂತೆಯಿಲ್ಲದೆ
ಬೆಚ್ಚಗೆ ಮಲಗಿವೆ
ಟ್ರಂಕಿನಲಿ ಜರತಾರಸೀರೆಗಳು

ಬರಿದಾದ ಅಂಗೈ ಮೇಲೆ
ಮದರಂಗಿ ಹಾಕಿ
ಚಿತ್ತಾರ ಬಿಡಿಸಿದರು

ಗುಲ್ ಮೊಹರ್‌ನಲ್ಲಿ
ಅಡಗಿ ಕುಳಿತಿದ್ದವು
ವೇದಾಂತಿ ಮಾತುಗಳು

ಮೈ ಮುರಿಯುತ್ತಿವೆ
ಟೊಂಗೆಗಳು
ಬೀಸುವ ಬಿರುಗಾಳಿಗೆ

ಮೌನದ ಬಿಗು
ಸಡಲಿಸಿತು
ಜೀ . . . ಎನುತ ಜೀರಂಗಿ

ಹುಣ್ಣಿಮೆ ದಿನ
ಪೂರ್ಣ ಚಂದಿರ
ನೀರಿನೊಡನೆ ಚಕ್ಕಂದವಾಡುತ್ತಿದ್ದ

ಸುಮ್ಮನೆ ಹೊರಟವು
ಗೆದ್ದಲ ಹುಳಗಳು
ಕಟ್ಟಿದ ಹುತ್ತ ಬಿಟ್ಟು

ರುಚಿಸಿತು ಕೊನೆಹನಿ
ಮರೆತರೂ ಬಿಡಲಿಲ್ಲ
ಬಿಗಿದಪ್ಪುವವರೆಗೂ

ಶಿಶಿರದ ನೋವು
ತಾಳದೆ ಅಡಗಿಕುಳಿತವು
ದುಂಬಿಗಳು ಹೂವಿನೊಳಗೆ

ನೀರು ತುಂಬಿದ ಬಟ್ಟಲೊಳಗೆ
ತಾರೆಯೊಂದಿಗೆ ಮಲಗಿದ ಶಶಿ
ಎಚ್ಚರಿಸಿದರೂ ಏಳಲಿಲ್ಲ

ಇಬ್ಬನಿ ಸ್ನಾನ ಮುಗಿಸಿ
ಮೈ ಒಣಗಿಸಲು ಸೂರ್ಯನಿಗಾಗಿ
ಕಾಯ್ದು ಕುಳಿತವು ಕಂಬಳಿ ಹುಳುಗಳು

ಮುಳ್ಳು ಮೈಗೆ ಚುಚ್ಚದಿದ್ದರೂ
ಕೊಳಕು ಮಾತನಾಡಿ
ಸುಮ್ಮನಾಯಿತು

ಉಢಾಳ ಚಿಟ್ಟೆ
ಹಸುರ ವನದಲ್ಲಿ
ಹೂ ಅರಳುವುದನ್ನೇ ನೋಡುತ್ತಿತ್ತು

ನಕ್ಷತ್ರ ಪುಂಜ
ಚಿತ್ತಾರ ಬರೆಯುವುದೆಂದು
ನೋಡುತ್ತ ಕುಳಿತ ಚಂದಿರ

ಕುಹಕ ನಗೆ ನೋಡಿ
ಬೆಚ್ಚಗೆ ಮಲಗಿತು
ಕೋಗಿಲೆ ತನ್ನ ಗೂಡೊಳಗೆ

ಸೋನೆಮಳೆ ಸುರಿದರೂ
ಎರೆಹುಳು ಕಾಯಕ ಮರೆಯದೆ
ಮಣ್ಣು ಹದಗೊಳಿಸಿತು

ಸುಮ್ಮನೆ ಬೇಡವೆಂದು
ಅಗಲಿದವು
ಕೂಡಿ ಆಡಿದ ನೆನಪುಗಳು

ಅವರ ದುಃಖ ಕಂಡು
ರೋದಿಸಿದವು
ಕಂಬನಿ ಹನಿಗಳು ಬಚ್ಚಿಟ್ಟುಕೊಂಡು

ತಾಂಬೂಲ ಜಗಿದು
ಬಾಯಿ ಕೆಂಪು ಮಾಡಿಕೊಂಡವರು
ಮಾತನಾಡದೆ ಹೊರಟರು

ಚಿಂವ್ ಚಿಂವ್ ಮಾರೆಯಾಗಿ
ಗೂಡುಮಾತ್ರ
ನೇತಾಡುತ್ತಿತ್ತು ಮರದಲಿ

ಒಗರು ಮಾತುಗಳಾಡಿ
ಉದುರಿ ಬಿದ್ದ ಎಲೆಗಳು
ನೆಲದ ಮೇಲೆ ಮಲಗಿದವು

ಮನೆಯೊಳಗಿನ
ಜಗುಲಿಯ ದೀಪ ನೋಡಿ
ಬುದ್ಧ ಖುಷಿಪಟ್ಟ

ಚಿಂತೆಯ ಕಂತೆ ಹೊತ್ತು
ಅಂಗಳದಲ್ಲಿ ಮಲಗಿತ್ತು
ಬಣ್ಣದ ರಂಗೋಲಿ

ಒಣ ನಾಲಗೆಯ ಧಿಮಾಕು ನೋಡಿ
ಪಿಸುಮಾತುಗಳು ಕೋಪಗೊಂಡವು
ಮಾತನಾಡಲು ಹಿಂಜರಿದವು

ಮೇಣದ ಬತ್ತಿ ಬೆಳಕಿಗೆ
ಸುತ್ತುಹಾಕಿತು
ದೀಪದ ಹುಳ

ರಿಂಗಣ ಕುಣಿತಕೆ
ಜುಂ ಎಂದಿತು ನಗಾರಿ
ಮೈ ದಣಿಯುವವರೆಗೆ

ಜೋಗುಳ ಹಾಡು ಕೇಳಿ
ಮುದುಡಿ ಮಲಗಿತು
ಕಂದಮ್ಮ 

ತಣ್ಣನೆ ಕೋಪ
ನೆಟ್ಟಗೆ ನಿಂತು
ಮತ್ತೆ ಜಗಳಕ್ಕೆ ಸಿದ್ಧವಾಯ್ತು

ಚಂದಿರ, ನೀನೇಕೆ ಮಲಗಲಿಲ್ಲ ಇನ್ನೂ ?
ಚಳಿಯಾದರೆ ಮುಗಿಲನ್ನೇ
ಹೊದ್ದು ಮಲಗು ಎಂದಿದ್ದೆ

ಹೂಗಳೇ ಗುಟ್ಟೇಕೆ ರಟ್ಟುಮಾಡಿದಿರಿ
ಗಪ್ಪಂತ ಬಾಯಿ ಮುಚ್ಚಬೇಕಿತ್ತು
ಹೀಗೇಕೆ ಮಾಡಿದಿರಿ

ಕುಲಾವಿ ಹಾಕಿಕೊಂಡು ಮಲಗು
ಹಸುರುತನ ಹಾಗೇ ಉಳಿದೀತು
ಇಲ್ಲವಾದರೆ ಮುದುಡಿ ಬಿದ್ದಿ

ಎಚ್ಚರವಾಗಿಯೇ ಇದ್ದ ಬುದ್ಧ
ಇಡೀ ವಿಶ್ವವನ್ನೇ
ನೋಡುತ್ತ ಕುಳಿತಿದ್ದ

ಹೆದರ ಬೇಡ ಛತ್ರಿ !
ಆ ಗಾಳಿಯ ಬದ್ಧಿನೇ ಅಷ್ಟಲ್ವಾ
ಬೆಂಡಾಗಾದಿರು ನಾ ಹಿಡಿದಿರುವೆ ಗಟ್ಟಿಯಾಗಿ

ನೆನಪುಗಳು ಜಾರಿ ಹೋಗುವುದಿಲ್ಲ
ತಾಜಾ ಹಣ್ಣು, ಹೂ
ಭದ್ರವಾಗಿ ಕುಂತಿವೆ ಫ್ರಿಜ್ ನಲ್ಲಿ

ನನಗಿನ್ನೂ ಅರ್ಥವಾಗುತ್ತಿಲ್ಲ
ನೀವೇ ಹೇಳಿ ಕನಸುಗಳೇ
ಆಕಾಶ ಇಷ್ಷೇಕೆ ಚಿಕ್ಕದಾಯ್ತು ?

ಹೂಗಳ ಹೆಕ್ಕುವಾಗ
ನನ್ನ ನೋಡಿ ಹಗುರಾಗಿ ನಕ್ಕವು
ಯಾಕೆಂದು ಈಗಲೂ ತಿಳಿಯುತ್ತಿಲ್ಲ

ಯಾರಲ್ಲಿ ? ಓ
ಬಿಳಿ ಕೂದಲು ! ಸಂಕೋಚವೇಕೆ
ನಿನಗಿನ್ನೂ ವಯಸ್ಸಾಗಿಲ್ಲ ಬಿಡು

ಕತ್ತಲಲಿ ಜಿನುಗುವ ಮಳೆ
ತುಸು ದೂರ ಸರಿಯಿತು
ಬೆಳಕ ನೋಡಿ

ಹಠ ಹಿಡಿದ ಕಂಬನಿಗಳು
ಒಳಗೂ ಇರದೆ ಹೊರಗೂ ಬರದೆ
ಸುಮ್ಮನೆ ರೋದಿಸಿದವು

ಬೆದರುಗೊಂಬೆ ನೋಡಿ ಹೆದರದೆ
ತಮ್ಮಷ್ಟಕ್ಕೆ ತಾವು ಆಟವಾಡುತ್ತಿವೆ
ಗಿಡಮರಗಳು ಎಂದಿನಂತೆ

ಪಿರಿಪಿರಿ ಮಳೆ ಹನಿಗಳೇ
ಬಿಟ್ಟೂ ಬಿಡದೆ ಕುಣಿಯುವಿರೇಕೆ
ಬೀದಿ ಲಾಂದ್ರದ ಬೆಳಕ ನೋಡಿ

ಮರು ಮಾತನಾಡದೇ
ಹಾಡ ಹಗಲೇ ಓಡಿದವು
ಒದ್ದೆಯಾದ ಬಯಕೆಗಳು

ಮುಸುಕು ನೆನಪುಗಳು
ತಾಜಾ ಇರಲಿಲ್ಲ
ಒಣಗಿದ ಮೀನಿನಂತಿದ್ದವು

ಉಳಿದ ಮಾತುಗಳು
ಎಲ್ಲೆಂದು ಕೇಳಬೇಡ
ಅವು ಗುಬ್ಬಚ್ಚಿ ಗೂಡಲ್ಲಿ ಕುಣಿಯುತಿವೆ

ನೀವೇಕೆ ಮೂಲೆ ಹಿಡಿದು ಕುಂತಿರಿ
ಎದ್ದು ಬಂದು ಒಮ್ಮೆ ಮಾತಾಡಿಸಿ
ಇಲ್ಲವೆ ಅಲ್ಲೇ ಹುದುಗಿಕೊಳ್ಳಿ

ಪುಟ್ಟ ರೆಕ್ಕೆ ಬಿಚ್ಚಿ
ಪಟಪಟ ಬಡಿದು
ಪೊಟರಿಯೊಳಗೆ ಓಡಿತು

ಅವರು ಹಾಕಿಸಿದ
ಹಚ್ಚೆಯ ಗುರುತು
ಇನ್ನೂ ಹಸುರಾಗಿದೆ

ಹುಚ್ಚುಗಾಳಿ
ಶಿಳ್ಳೆ ಹಾಕುತ
ಧೂಳೆಬ್ಬಿಸಿ ಕಣ್ಣು ಮುಚ್ಚಿಸಿತು

ಮೈಯ ನೋವುಂಡು
ಗಿರಕಿ ಹೊಡೆದು
ತೆಪ್ಪಗಾದವು ಬಾಸುಂಡೆ

ಮಳೆ ನಿಂತ ಮೇಲೆ
ಸುಮ್ಮನೆ ಮಲಗಿತು
ಕುಣಿದು ಕುಪ್ಪಳಿಸಿದ ಮಿಂಚು

ಜೊಳ್ಳು ಹಡಗು
ಹಣಕಿಹಾಕಿ ನಕ್ಕಿತು
ಸಾಗರದ ಆರ್ಭಟ ನೋಡಿ

ಮಳೆ ಬಂದರೂ
ಪುಚ್ಚದ ಬಣ್ಣ
ಮಾಸಲಿಲ್ಲ

ತೊಡಕುಗಾಲು ಹಾಕಿ
ಮುಂದೆ ನಡೆದರೂ
ದಾರಿ ಸವೆಸಲಿಲ್ಲ

ನೂರಾರು ತಿಗಣಿಗಳು
ಗಾದಿಯೊಳಗೆ
ಎಚ್ಚರದಿಂದಿದ್ದವು

ಅಡಗಿಕೊಳ್ಳಲು ಹೋದ ಚಿಗುರು
ಟಗರುಗಳ ನೋಡಿ
ಸುಮ್ಮನೆ ನಿಂತವು

ಜನಪದರನ್ನು
ಬೆರಗುಗೊಳಿಸಿದವು
ಚಾವಡಿಯ ಚಿತ್ತಾರಗಳು

ಪುಟ್ಟ ಶಾಲೆಯಲ್ಲಿ
ಅವನು ಓದುವುದನು ನೋಡು
ಪುಸ್ತಕದಲ್ಲಿದ್ದ ಗೆದ್ದಲು ಹುಳಗಳು ಓಡಿದವು

ತಲೆ ಮರೆಸಿಕೊಂಡಿದ್ದ ಮುಂಜಾವು
ಹಕ್ಕಿಗಳ ಕಲರವ ಕೇಳಿ
ಎಚ್ಚೆತ್ತು ಬೆಳಕ ನೀಡಿತು

 ಮುರುಕು ಡೋಣಿಯಲಿ
ಪಯಣಕೆ ಸಿದ್ಧ
ಮುಂದೆ ಹೋಗುವುದೇ ಚಿಂತೆ

ನೀರಿನ ಗುಳ್ಳೆಗಳು
ಒಡೆದರೂ
ಬಣ್ಣ ಕಾಣಲಿಲ್ಲ

ಎದುರು ಗೋಡೆ
ಹಲ್ಕಿರಿದು ನಕ್ಕಿತು
ಬಣ್ಣ ಹಚ್ಚಿದ್ದು ನೋಡಿ

ಊದಿದರೂ
ಅಲುಗಾಡಲಿಲ್ಲ
ಜೋತುಬಿದ್ದ ನೆರಳು

ಕತ್ತಲು  ಬರುವುದನು
ಬೀದಿ ದೀಪಗಳು
ದುರುಗುಟ್ಟಿ ನೋಡಿದವು

ಅವರ ಮೇಲೆ ಮಲಗಿ
ಅಂದ ಹೆಚ್ಚಿಸಿಕೊಂಡಿತು
ಹಳೇ ಒಡವೆ

ಮಣ್ಣು ವಾಸನೆ ಹಿಡಿದು
ತೆವಳುತ್ತ ಬಂತು
ಬಸವನಹುಳು

ಅವಳ ಪ್ರಬುದ್ಧತೆ ತೋರಿದವು
ಗುಳಿ ಬಿದ್ದ ಗಲ್ಲ
ನರೆತ ಕೂದಲು

ಕುಕ್ಕರುಗಾಲು ಹಾಕಿ
ಮಿಕಿಮಿಕಿ ನೋಡಿದವು
ನಕ್ಷತ್ರಗಳು

ಎಲೆ ಮೇಲೆ ಮಲಗಿದ
ತಂಗಾಳಿಗೆ
ಇಬ್ಬನಿ ಎಚ್ಚರಿಸಿದವು

ಹಸಿ ಬೆಳಕನ್ನು
ನಿರಾಳವಾಗಿ ನುಂಗಿಹಾಕಿತು
ಒಣ ನೆರಳು

ಮಕರಂದದ ಒಳ ಮೌನಕೆ
ಝೇಂಕರಿಸಿದವು
ಬಣ್ಣದ ದುಂಬಿಗಳು

ರೇಷಿಮೆ ಹುಳು
ಕಾಯಕ ಮಾಡುತಲಿತ್ತು
ಬುದ್ಧನ ಚಿತ್ತದಿಂದ

ಹಸೀ ಮಣ್ಣಲಿ
ಮೂಡಿದ ಹೆಜ್ಜೆಗಳಿಗೆ
ಎರಕ ಹೊಯ್ದರು

ಕೊನೆಯ ಕಂತು ಕಟ್ಟಿ
ಒಂಟಿತನಕ್ಕೆ
ವಿದಾಯ ಹೇಳಿದರು

ಎಷ್ಟೋ ಸಂಗತಿಗಳು ಮಲಗಿವೆ
ಗಟ್ಟಿಯಾಗಿ ಉಚ್ಚರಿಸಿದರೂ
ಮೇಲೇಳಲೇ ಇಲ್ಲ

ತಬ್ಬಿ ಮಲಗಿವೆ
ಕಾಗದಗಳೆಲ್ಲ
ಒಂದನ್ನೊದು

ಬಂಡೆಗಳ ನಡುವೆ
ಬೆಳೆದು ನಿಂತ
ಮರದ ಎಲೆಗಳು ಇನ್ನೂ ಬಾಡಿಲ್ಲ

ಬೊಚ್ಚು ಬಾಯಿ ನಗು
ಪ್ರಾಣವಂದಷ್ಟನ್ನು
ಹುದುಗಿಸಿಟ್ಟುಕೊಂಡಿದೆ

ಸಾವಿನ ಸೂಚನೆ ಕಂಡು
ಹಾಸ್ಯ ತೋರಿತು
ಮುದಿತನದ ಬಾಳು

ಸುಕ್ಕುಗಟ್ಟಿದ ಮುಖದಲಿ
ಸಾವಿರಾರು ಗೆರೆಗಳು
ಗುರುತುಹಿಡಿದವು

ಮನೆಯೊಳಗೆ
ಗಂಧದ ಮೃದು ಕಂಪು
ಮೂಲೆ ಹಿಡಿದು ಕುಳಿತಿದೆ

ಗಾಢವಾಗಿ ತಟ್ಟಿ
ಛಾಪು ಒತ್ತಿದವು
ಸುಮಧುರ ಕ್ಷಣಗಳು

ಕತ್ತಲ ಓಡಿಸಿ
ಮಿಂಚಿನ ದಾಳಿ ಮಾಡಿದವು
ಚಿಗುರು ಕಿರಣಗಳು

ಓಡಿ ಬಂದು
ಮರವನೇರಿ ಕುಳಿತು
ಕಣ್ಣು ಪಿಳಕಿಸಿತು ಬೆಳಕು

ಬೇಸ್ತು ಬಿದ್ದ ಚಿಗುರೆಲೆಗಳು
ಆಗ ತಾನೇ ಎದ್ದು ಕುಳಿತ್ತಿದ್ದವು
ಹಗ್ಗದ ಮಂಚದ ಮೇಲೆ

ಎಳೆತನ ಮಾಗಿ
ಬೆರಗುಗೊಳಿಸಿದರು
ಘನೋದ್ದೇಶ ಈಡೇರಿಸಿ

ಚಿಗುರುರೆಲೆ ಜತೆ
ಕೂಗಾಡಿ, ಗುದ್ದಾಡಿ
ಸಿಟ್ಟು ತೀರಿಸಿಕೊಂಡಿತು ಅಳಿಲು

ತೋಳ ತೆಕ್ಕೆಯಲಿ
ಬಿದ್ದು ಒದ್ದಾಡುತಿರುವ ಮನಸುಗಳೇ
ನೀವೇಕೆ ಬಂದು ಸಿಕ್ಕಿಕೊಂಡಿರಿಲ್ಲಿ

ನಾಲಿಗೆ ತುದಿಯಲಿ ನೂರಾರು ಕವಿತೆ
ಹಾಡಲಿಲ್ಲ ಮನಸ ಬಿಚ್ಚಿ
ಅವಿತುಕೊಂಡು ಸುಮ್ಮನೆ ರೋದಿಸಿದವು

ಬಿಕರಿಗಿಟ್ಟ ಮಾತುಗಳೂ ಕೇಳಿದವು
ನಮ್ಮನೇಕೆ ತಂದಿರಿ ಮಾರುಕಟ್ಟಗೆ
ನಾವಿಲ್ಲಿ ಬಂದು ಹೋಗಿದ್ದೇವೆ

ಅವಳ ಗೋರಿಯ ಮೇಲೆ ಕುಳಿತು
ಇವನ ಹಣೆಬರಹ ಬರೆದರೂ
ಮನಸು ಬದಲಿಸಲಿಲ್ಲ

ಹೈಮಾಸ್ಟ್ ದೀಪದ ಕೆಳಗೆ
ಒಗರು ಧ್ವನಿಯ ಹುಡುಗಿ
ಮಾತನಾಡಿಸಿದರೂ ಸುಮ್ಮನಿದ್ದಳು

ಕಣ್ಣೀರ ಹನಿಗಳೇ
ಉರಿವ ಮುಖದ ಮೇಲೆ  ಬಿದ್ದರೂ
ಭಾವನೆಗಳೇಕೆ ಬದಲಾಗಲಿಲ್ಲ ?

ಚಿಂತೆಗಳ ಕಚ್ಚಲು
ನಿಟ್ಟುಸಿರು ಹೆದರಲಿಲ್ಲ
ನಿದ್ರೆಯ ಮಗ್ಗಲು ಬದಲಿಸಿತು

ಬೋಳಾದ ಬುದ್ಧಿಗೆ
ಬುದ್ಧನ ಹಿತ ನುಡಿಗಳು
ಮಾರ್ಗದರ್ಶನವಾದವು

ಭದ್ರವಾಗಿ ಮುಚ್ಚಿದ್ದವು
ಸಾವಿನ ಮನೆಯ ಕದಗಳು
ಒಳಗೆ ಬರುವೆನೆಂದರೂ ಕೇಳದೆ

ಪಾಟಿಯ ಮೇಲೆ ಬರೆದ
ಮಗನ ಅಕ್ಷರಗಳು
ಪೂರ್ವಕ್ಕೊಂದಿಷ್ಟು ಪಶ್ಚಿಮಕ್ಕೊಂದಿಷ್ಟು ಮಲಗಿದ್ದವು

ಉರಿದು ತಣ್ಣಗಾದ ಮನಸು
ಕುಬ್ಜವಾಗದ ಬಯಕೆಗಳು
ಮತ್ತೆ ಬಯಸಿವೆ ಬೆಂಕಿಯ ಸಂಗ

ಮೈಮುರಿದು ಎದ್ದ ಮುಂಜಾವು
ಬಿಸಿಲೊಡನೆ ಜಗಳವಾಡಿ
ಚಳಿ ಎಂದು ಹೆದರುತ್ತಿದೆ

ಬತ್ತದ ಭಾವನೆಗಳು
ಮಹಡಿಯ ಮೇಲ್ಹೋಗಿ
ಜಿನುಗುವ ಮಳೆ ಹನಿಗಳ ಮೇಲೆ ಕುಳಿತಿವೆ

ಬಣ್ಣ ಹಚ್ಚಿ ಕೊಂಡವು
ರಂಗಿನ ಮಾತುಗಳು
ಆದರೂ ಕುಣಿದು ಕುಪ್ಪಳಿಸಲಿಲ್ಲ

ಬೋಧಿ ಮರ ಹಸಿರು ನೀಡಿತು
ಬುದ್ಧ ಹೇಳಿದ
ಬೆಳಕು ನಗುವುದಿನ್ನು ಸದಾ ಹೀಗೆ

ವಿಕಾರಗಳ ಪ್ರತಿರೂಪವೇ
ನೀನೇಕೆ ಗೋರಿಯ ಬಳಿ ಬಂದೆ
ನಾನೇ ಕರಿಯಲು ಬರುತ್ತಿದ್ದೆ

ಶರಣೆಂಬೆವು ಬುದ್ಧ
ದುಃಖ ದುಮ್ಮಾನಗಳ ಅರಿವಾಯಿತು
ಆಸೆಗಳ ಬಿಟ್ಟು ನಿನ್ನೊಂದಿಗೆ ಬರುವೆವು

ನನ್ನ ಹೃದಯ ಬಡಿತ ನಿಂತರೆ
ಆಗ ನನಗೆ ನೆಮ್ಮದಿ ಸಿಗುತ್ತದೆ
ಕನಸುಗಳು ನನ್ನಿಂದ ದೂರವಾಗುತ್ತವೆ

ಓಹ್ ! ಎಂತಹ ಹೋಲಿಕೆ
ಅಂದು ವಿಶಾಲವಾಗಿ ಬೆಳಕು ಹರಡಿದ್ದೆ
ಅದಕೆ ಮಗನಿಗೆ ವಿಶಾಲಚಂದ್ರನೆಂದು ಹೆಸರಿಟ್ಟೆ

ಸಾವು ನನ್ನೊಳಗಿದೆ
ಮತ್ತೇಕೆ ಹುಡುಕಲಿ ಅಲ್ಲಿಲ್ಲಿ
ಬುದ್ಧ ನಾನ್ಹೇಳಿದ್ದು ಸರಿಯೆ ?

ಅಂಬಿಗ ಗಣೆ ಹಾಕಿದರೂ
ಮುಂದೆ ಸಾಗಲಿಲ್ಲ ದೋಣಿ
ಅಲೆಗಳು ಸುತ್ತುವರಿದು ನಿಲ್ಲಿಸಿದವು

ಮಗ್ಗುಲು ಬದಲಿಸಿದ ರಾತ್ರಿಗಳು
ಯಾರ ಮಾತನೂ ಕೇಳದೆ
ಗಿರಕಿಯೂ ಹೊಡೆಸಲಿಲ್ಲ ನಿದ್ದೆಯೂ ಬರಸಲಿಲ್ಲ

ಕುಡಿದು ಜೋಲಿಹೊಡೆದ ಚಂದ್ರನ ನೋಡಿ
ನಶೆ ಏರಿಸಿಕೊಂಡ ಮೊಗ್ಗುಗಳು
ಅರಳದೆ ಸುಮ್ಮನೆ ಮಲಗಿದವು

ಗಾಯದ ಮಾತುಗಳು ನಂಜಾದವು
ಉಮ್ಮಳಿಸಿ ಅಳುತಿರಲು
ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ

ಆಗ ಅಜ್ಜಿ ಹಾಕಿದ ಸುಟಕಿ ಕಲೆ ನೆನಪಾಗಲಿಲ್ಲ
ಈಗ ಸಮಾಧಿ ಮುಂದೆ ಬಂದು ಅಳುವೆಯಾಕೆ
ನೀ ಇನ್ನು ಬಾಳು ಇಲ್ಲಿ ಬರಬೇಡ

ತಂಗಾಳಿ ಹೊಡೆತಕ್ಕೆ
ಮೋಡ ಮತ್ತೆ ಹೇಳಿತು ನಿಲ್ಲಿ
ಮಳೆ ಹನಿಗಳೆಲ್ಲಿ !

ಮೌನದ ಮೇಲೆ ಬಿದ್ದ ಹಿಮ
ನೆರಳಿನ ಮಾತುಗಳು
ಕೈ ಹಿಡಿದು ಕರೆತಂದವು

ಹಂಬಲದ ಬೆಳಕು
ಧುಮ್ಮಿಕ್ಕಿ ಹರಡುತಿದೆ
ಅನಾಥ ಶವಗಳ ಮೇಲೆ

ಗುಹೆಯ ಬಾಗಿಲಲಿ ನಿಂತು
ಕೈಸನ್ನೆ ಮಾಡಿ ಕರೆದವು
ಮುಖವಿಲ್ಲದ ಕನಸುಗಳು

ನನ್ನ ಪುಟ್ಟ ಗುಡಿಸಲಲ್ಲಿ
ತಾರೆಗಳು ಅಂಬೆಗಾಲಿಟ್ಟು ಬರಲಿಲ್ಲ
ನಾನಿನ್ನೂ ದೊಡವನೆಂದು ತಿಳಿದು

ಕಪ್ಪು ಕಲೆಗಳ ಇಟ್ಟು ಕೊಂಡು
ಹಾಲ ಬೆಳಕ ಬೀರಿ
ನೀನೇಕೆ ಕುಣಿಯುತಿರುವೆ ?

ಬೇನಾಮಿ ಟೋಪಿ
ಕತ್ತಲಲಿ ಬಿಕ್ಕಳಿಸಿ
ನನಗೂ ಹೆಸರಿಡಿ ಎನ್ನುತಿದೆ

ಹರುಕು ಮುರುಕು ಮಾತುಗಳು
ತೇಪೆ ಹಚ್ಚಿಕೊಂಡು ಬಂದರೂ
ಮಾತನಾಡದೇ ಸುಮ್ಮನಾದವು

ಜೋಪಡಿ ಮೇಲೆ
ಜಡಿಮಳೆ ಕುಣಿದು ಕುಪ್ಪಳಿಸಿ
ಸುಸ್ತಾಗಿ ಮಣ್ಣು ಸೇರಿತು

ಸೂರ್ಯ ಚಂದಿರರು
ನಮ್ಮೊಡನೆ ಇರುವರಂತೆ
ಮತ್ತೇಕೆ ಆಕಾಶಕ್ಕೊಂದು ಏಣಿ ?

ರೀತಿ _ ರಿವಾಜು ಇಲ್ಲದ ಗುರಿಗಳೇ
ತೇಪೆ ಹಚ್ಚಿದ ರಸ್ತೆಯ ಮೇಲೆ
ನಡುಗುತ್ತ ನಿಂತಿರೇಕೆ

ಕೊನೆಯ ಮಾತ್ತೇ ಕುಹಕವಾಡಿ
ಸುಮ್ಮನಾಗಲಿಲ್ಲ
ಬೆಚ್ಚಿಸುತ್ತ ಮುನ್ನಡೆದವು

ನನ್ನೊಳಗಿನ ನೋವು
ಮಾತ್ರ ಹೇಳಬಲ್ಲವು
ಬುದ್ಧನ ಸಲಹೆ ಬೇಕೆಂದು

ನೇತಾಡುವ ನೆರಳ
ಸಪ್ಪಳ ಕೇಳಿ ಕವಿತೆ
ಮೌನ ಮುರಿದು ಹಾಡಿತು

ನಾನೇನು ಮಾಡಲಿ
ಹಾಳಾದ ಯೋಚನೆಗಳೇ
ನಿಮ್ಮನು ಝಾಡಿಸಿ ಒದ್ದು ಬಿಡು ಎಂದ ಬುದ್ಧ

ಆಲಿಕಲ್ಲುಗಳು
ನುಚ್ಚು ನೂರಾಗಿ ಬಿದ್ದುಕೊಂಡಿರುವಾಗ
ಕಣ್ಣು ಪಿಳುಕಿಸಿ ನೋಡಲಿಲ್ಲ

ಬಿನ್ನಾಣದ ಬದುಕು
ಬಣ್ಣ ಬಳಿದುಕೊಂಡು
ನೆಗೆಯತೊಡಗಿತು

ಹಗಲು ರಾತ್ರಿ ತಿರುಗಿ
ಕಂಗೆಟ್ಟ ಮನಸ್ಸು
ಗೋರಿಯ ಮೇಲೆ ಕುಣಿಯ ತೊಡಗಿತು

ಹಾದಿ ತಪ್ಪಿಸಿದವು
ಬಳೆಗಳ ಸದ್ದು
ಸ್ಮಶಾನದತ್ತ ಹೋಗುವರನ್ನು

ಅರಿಷಿನ ಕೆನ್ನೆಗಳು
ಗುಳಿ ತೋಡಿ ನಕ್ಕವು
ಮರಿವ ಮುನ್ನ

ಪುಟ್ಟ ಹಣತೆ ಹೇಳಿತು
ಜಗುಲಿ ಏರಿಸಿ ಬಿಡು ಒಮ್ಮೆ
ಆಗ ನೆಮ್ಮದಿಯಿಂದ ಇರುವೆ

ನಶೆಯಿನ್ನೂ ದೂರ
ಮುಂದೆ ಬಂದವು ನೆನಿಕೆಗಳು
ನೀನೇಕೆ ಬೆರಸಿ ಕುಡಿಯಲಿಲ್ಲ

ಬುದ್ಧನ ಪುಟ್ಟ ಹಕ್ಕಿಗಳಿವು
ನೆನಪಿಲ್ಲ ತಾವು ಎಷ್ಟು ಹಾಡಿದೆವೆಂದು
ಎಲ್ಲರ ಮನ ತಣಿಸುವುದೊಂದೇ ಗೊತ್ತು

ಮಳೆಯಲಿ ತೊಯ್ಸಿಕೊಂಡ ಪೋರ
ನೀನೇಕೆ ಮೂಲೆ ಹಿಡಿದು ಕುಳಿತೆ
ಇನ್ನಷ್ಟು ಕುಣಿಯೋಣ ಬಾ
          ***

ಈಸಲಾಗದು ಮನಸೆ ಆಸೆಯ ನದಿಯೊಳು

ಈಸಲಾಗದು ಮನಸೆ ಆಸೆಯ ನದಿಯೊಳು                  ||ಪ||

ಈಶ್ಯಾಡು ನೀ ಏಳು ಜನ್ಮಾಂತರ
ಮೇಳವಿಸಿ ಸುಖತಾಳಿ ಇಳೆಗೆ ಬಂದು ಬಾಳುವುದೇಕೆ ನೀ ||೧||

ಭೂಮಿಗುದಿಸಿ ಭವದ ಕರ್ಮದಿ
ಏ ಮರುಳೆ ಮಾಯ ಮೋಹಿಸುವುದೇಕೇ                     ||೨||

ಲೋಕದಿ ಶಿಶುನಾಳಧೀಶರ ಭಜಿಸುವುದೇ
ಕಾಕು ವಿಷಯಕೆಂದೋ ಸಾಗೆನಿಸದೆ ನೀ                     ||೩||

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾಯಿಲೆ ಬ್ರಹ್ಮವ ಬೊಗಳಿದರೇನೋ

ಬಾಯಿಲೆ ಬ್ರಹ್ಮವ ಬೊಗಳಿದರೇನೋ
ನಾಯಿ ಜನ್ಮಕೆ ಬಿದ್ದು ಹೊರಳುವ ಮನಸೇ          || ಪ ||

ಕಾಯ ಜೀವದೊಳು ನ್ಯಾಯವ ಬೆಳೆಸಿ
ಮಾಯದೊಳಗೆ ಮುಳುಗೇಳುವ ಮನಸೇ          ||ಅ.ಪ ||

ಪರಸ್ತ್ರೀ ಪರಧನ ಪರನಿಂದ್ಯದಿ ನೀನು
ಪರಸ್ತುತಿಯಲಿ ದಿನಗಳಿಯುತ ಮನಸೇ
ವರಶಾಸ್ತ್ರಗಳೋದಿ ಅರಗಿಳಿಯಂದದಿ
ನೆರೆಸಂಸಾರ ಪಂಜರದಿ ತೊಳಲುವ ಮನಸೇ      ||೧||

ಹೊಲಸಿನ ಸುಂಬಳ ಸೇವಿಪ ನೊಣದಂತೆ
ತಿಳಿಯದೆ ವಿಷಯದಿ ಬೀಳುವಿ ಮನಸೆ
ಬಿಸಳಂಕ‌ಎಳವಿ ಶಿಸುನಾಳಧೀಶನ ಒಲಿಸದೆ
ಬಲು ಕರ್ಮವ ಗಳಿಸುವಿಯೋ ಮನಸೇ              ||೨||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನಸಿನ ಭ್ರಮೆ ತೀರಿಸಬಾರೆ

ಮನಸಿನ ಭ್ರಮೆ ತೀರಿಸಬಾರೆ ನೀರೆ                      ||ಪ||

ತೀರಿಸದಿದ್ದರೆ ಆರಿಗ್ಹೇಳಲಿ ನಾನು
ವಾರಿನೋಟದಿ ಬಂದು ಕೂಡೇ ಬೇಗ ಒಡಗೂಡೆ      ||ಅ.ಪ.||

ಹಿಂದಕ್ಕೆ ಮೂವರ ಹಿರಿಯರ ಸಲುಹಿದಿ
ಇಂದಾರಿಗುಸುರಲಿ ಚಂದಿರಮುಖಿಯೇ                  ||೧||

ಬಾ ಬಾ ಅಂದರೆ ಬಾರಿ ಬಾರದೆ ನಿಂತಲ್ಲೆ
ಏ ನಾರಿ ಎರಡಿಲ್ಲ ಈ ಮಾತು ಸುಳ್ಳಲ್ಲ                   ||೨||

ವಸುಧೀಶ ಶಿಶುನಾಳ ವಸತಿಯೊಳಿರುತಿಹ
ಕುಸುಮಲೋಚನೆಯನ್ನು ಕಸಿವಿಸಿಗೊಳಿಸದೆ          ||೩|| 
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೆಳಗಾಗುವ ತನಕ ಕುಳಿತುನೋಡು

ಬೆಳಗಾಗುವ ತನಕ ಕುಳಿತುನೋಡು ನಿನ್ನೊಳಗೆ        ||ಪ||

ಬಲು ವಿಷಯಗಳಾ ಬಲಿಸೆ ತನುತ್ರಂರಯದೊಳಗೆ
ಹೊರಗೆ ಸುಳ್ಪ್ದಾಡುವ ಮನವೆ                ||೧||

ಕನ್ನು ಮುಚ್ಚಿ ಕೈ ಕಾಲುಗಳಾಡದೆ
ತಣ್ಣಗೆ ಪವಡಿಸಿ ಕುನ್ನಿಯ ಮನವೆ             ||೨||

ನಿದ್ರೆ ಹತ್ತಿ ಮಲಗಿರ್ದು ಕನಸಿನೊಳು
ಗದ್ದಲಿಸುವ ಗುಣನೋಡಿ ಮನವೆ              ||೩||

ಘೋರ ಚಿಂತಾಸಾಗರದೊಳು ಮುಳುಗಿ
ಪಾರಗಾಣದ ಛೀಮಾರಿ ಮನವೆ               ||೪||

ವಸುಧಿಪ ಶಿಶುನಾಳಧೀಶನ ಸ್ಮರಣೆಯ
ಎಸಗದೆ ಬಲು ಹರಿದಾಡುವ ಮನವೆ         ||೫||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ನಿಶ್ಚಿಂತನಾಗಬೇಕಂತೀ

ನಿಶ್ಚಿಂತನಾಗಬೇಕಂತೀ ಬಹು
ದುಶ್ಚಿಂತಿಯೊಳಗೇ ನೀ ಕುಂತೀ
ಯಾಕೋ ಎಲೋ ನಿನಗಿ ಭ್ರಾಂತೀ
ನಾಳಿಗಾಗುವದೀಗಂತೀ                ||ಪ||

ಆಶಪಾಶಗಳ ಬ್ಯಾಡಂತಿ ವಳೆ
ಮೀಸಲ ನುಡಿ ಮಾತಾಡಂತೀ
ಭಾಷೆಕೊಟ್ಟು ತಪ್ಪಬ್ಯಾಡಂತೀ
ಹರಿದಾಸರೊಳಗೆ ಮನನೀಡಂತೀ        ||೧||

ಅವರನು ಕಂಡರೆ ಅವರಂತೆ
ಮತ್ತವರನು ಕಂಡರೆ ಇವರಂತೆ
ಅವರವರರಿಯದೆ ತನಗೂ ತಿಳಿಯದೆ
ಮೂಡನಾಗಿ ಸುಮ್ಮನೆ ಕುಂತೀ            ||೨||

ಪೊಡವಿಯೊಳಗೆ ಶಿಶುನಾಳಂತೀ
ದೃಡಗೋವಿಂದಯೋಗಿಯ ಚಿಂತೀ
ಬಿಡದಾತನ ಸೇವೆ ಮಾಡಂತೀ
ಭಯವಿಲ್ಲದ ಗುರುವಿನ ಕೂಡಂತೀ      ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಲಿಂಗದೊಳಗೆ ಮನವಿಧದಿನನಾ

ಲಿಂಗದೊಳಗೆ ಮನವಿಧದಿನನಾ ವರದ
ಇಂಗಿತ ತಿಳಿಯದವಗೇನು ಪಹಲ?
ಜಂಗಮ ಜಂಗುಕಥಥಿ ಹಿಂಗದೆ ತಿರುಗಲು
ಸಂಗನ ಶರಣರಿಗೇನು ಫಲ?                         ||ಪ||             

ಮೂರ ಮನಿಯ ಭಿಕಶಹ ಬೇಧದಲೇ ಮ-
ತತಾರ ಭಕತರೊಧನಾಧದಲೇ
ಚಅರು ತರದ ಪಂಚಾಕಶಹರಿ ಜಪವನು
ಬಾರಿ ಬಾರಿಗೆ ಮಾಧದಲೇ                            ||೧||

ಭಂಧ ಭವಿಗಳನು ಖಂಧಿಸದೇ ಸುಳಳೇ
ಹಿಂಧುಗಥಥಿ ತಿರುಗೇನು ಫಲ?
ತುಂಧುಗಂಬಳಿಯ ಹೊತತು ಹೆಗಲಿನೊಳು
ಮಂಧಿಬೊಳಿಸಿದರೇನು ಪಹಲ?                     ||೨||

ಪೊಧವಿಯೊಳಗೆ ಶಿಶುನಾಳದಹೀಶನ
ಅಧಿಯ ಪೂಜಿಸದಲೇನು ಪಹಲ?
ಕಧುತರದಾಸೆಯ ಸುಧದೆ ವಿರಕತಿಯ
ಪಧೆದು ಮಥಹದೊಳಲಿರಲೇನು ಪಹಲ?         ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಹರಿದಾಡುವ ಮನಸಿಗೆ

ಹರಿದಾಡುವ ಮನಸಿಗೆ ಮಚ್ಚಿಮಚ್ಚಿಲ್ಹೊಡೆದು ನಿಲ್ಲಿಸು ಜಾಣ                        ||ಪ||

ಕಡು ವಿಷಯದಿ ಸಂಸಾರಕ ಮರುಗುತ           
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ ಮಚ್ಚಿ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ                        ||೧||

ಸಿರಿ ಸಂಪತ್ತು ಸೌಭಾಗ್ಯ ತನಗೆ ಬಲು         
ಪಿರಿದಾಗಲಿ ಬೇಕೆಂಬುವ ಮನಸಿಗೆ ಮಚ್ಚಿ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ                        ||೨||

ವಸುಧಿಯೊಳಗೆ ಶಿಶುನಾಳಧೀಶನ
ಹೆಸರು ಮರೆತು ಕೊಸರ್ಯಾಡುವ ಮನಸಿಗೆ ಮಚ್ಚಿ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ                       ||೩||

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮನಸೇ ಮನಸಿನ ಮನಸ ನಿಲ್ಲಿಸುವುದು

ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳಿಯುವ ಮನಬ್ಯಾರೆಲೋ ಮನಸೇ  ||ಪ||

ತನುತ್ರಯದೊಳು ಸುಳಿದಾಡುವ ಜೀವನ
ಗುಣವಂತರೆ ನಿಜಬಾರಲೋ ಮನಸೇ         ||೧||

ದಶದಿಕ್ಕಿಗೆ ಹಾರಾಡುವ ಹಕ್ಕಿಯು
ಸಿಕ್ಕು ತಪ್ಪಿಸೋಪರಿ ಬ್ಯಾರಲೋ ಮನಸೇ   ||೨||

ಗುರುಗೋವಿಂದನ ಚರಣಕಮಲದೊಳು
ಸ್ವರಗೊಂಬುವ ಭ್ರಮರಾಳಿಯ ಮನಸೇ       ||೩||

ವಿಷಯಗಳಲ್ಲಿ ಸುಖ ಬಯಕೆ ಬಯಸಿ ಭವ
ನಿಶೆಜೋತಿ ಪ್ರಕಾಶವು ಮನಸೇ                 ||೪||

ಇಳೆಯೊಳು ಶಿಶುನಾಳಧೀಶ ನಿರ್ಮಲನು
ತಿಳಿದರೆ ಒಳಹೊರಗೊಂದು ಮನಸೇ           ||೫||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಹೊತ್ತುಗಳಿಯದಿರೆಲೋ ಮನವೆ

ಹೊತ್ತುಗಳಿಯದಿರೆಲೋ ಮನವೆ          ||ಪ||

ಗೊತ್ತು ಇಲ್ಲ ನೀನು ಬರಿದೆ
ಚಿತ್ತಚಂಚಲನಾಗಿ ಚರಿಸ್ಯಾಡುತ್ತ
ನಾನಾ ವಿಷಯಗಳನು ಹೊತ್ತು ಶ್ರಮದೊಳಾಡಬೇಡ  ||ಅ.ಪ.||

ವ್ಯರ್ಥಒಂದಿನವಾಗಿ ತೊಲಗಿದಿ
ಅತ್ತುಅಬಿ ಯಮನ ದೂತರೊಯ್ಯೆ
ಚಿತ್ರಗುಪ್ತರು ಲೆಖ್ಖ ತೋರಿಸಿ
ಲತ್ತಿಯನ್ನು ಹಾಕುತಿಹರೋ                       ||೧||

ನಾನಾ ಜನ್ಮಗಳನ್ನು ತಿರುಗಿ
ನಾನಾ ಯೋನಿಗಳಲ್ಲಿ ಜನಿಸಿ
ನಾನಾ ಕುಲದ ಹೆಸರು ಹೇಳಿ
ಹಾನಿ ಹೊಂದಿದರೇನು ಪಳವು                   ||೨||

ಪೊಡವಿಯಲ್ಲಿ ಸುಖ ಸೌಭಾಗ್ಯ
ಮಡುವಿನಲ್ಲಿ ತೇಲಿ
ಒಡಿಯ ಶಿಶುನಾಳೇಶನಡಿಯ
ಬಿಡದೆ ಧ್ಯಾನ ಮಾಡುತಿರ್ದು                     ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಎಂತು ಮರಿಯಲಮ್ಮಾ ಇವನಾ

ಎಂತು ಮರಿಯಲಮ್ಮಾ ಇವನಾ
ಶಾಂತ ಶರೀಫನಾ
ಅಂತರಂಗದಲ್ಲೇ ಬಂದು
ಚಿಂತೆ ದೂರ ಮಾಡಿದನವ್ವಾ   ||೧||

ಕಾಲ ಕರ್ಮವ ಗೆದ್ದು
ಲೀಲೆಯಾಡಿದನೆ
ಮೇಲುಗಿರಿಯ ಮೇಲಕ್ಕೆ ಹತ್ತಿ
ಅಲಕ್ಕನೆ ಹಾರಿದನೆ               ||೨||

ಜನನ ಮರಣವಗೆದ್ದು ತಾನು
ಶಿವನಲೋಕ ಕಂಡನೆ
ಭುವನದೊಳು ಶಿಶುವಿನಾಳ-
ಧೀಶನನ್ನು ಹಾದಿದನೆ             ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಯೋಗಿಯ ಕಂಡೆನು

ಯೋಗಿಯ ಕಂಡೆನು ಹುಚ್ಚೇಂದ್ರ
ಯೋಗಿಯ ಕಂಡೆನು ನಾನು                                           ||ಪ||

ಭೋಗವಿಷಯವ ತ್ಯಾಗ ಮಾಡಿದ
ಆಗಮವ ತಿಳಿದಂಥ ಮಹಾಗುರು
ಲಾಗದಿ ಲಕ್ಷಣವ ಬಿಂದುವಿನೊಳಗೆ
ತೋರಿದ ಈಗ ನೋಡಿದೆ                                               ||೧||

ಸ್ಥೂಲದೇಹವ ತಾಳಿದ ಜನರ ಬಿಟ್ಟು
ಮೂಲ ಬ್ರಹ್ಮವ ಪೇಳಿದ
ಕಾಲ ಕರ್ಮವ ಗೆಲಿದು ತನ್ನೊಳು
ತಾಳಿ ಸದ್ಗುರು ಲಿಂಗ ಲೀಲೆಯ
ಮ್ಯಾಳದೊಲು ಮೆರೆವಂಥ ಪರಮಾನಂದ ಲೋಲ ನಿಷ್ಕಳಂಕ ||೨||

ಶಿಶುನಾಳಧೀಶನಿಂದ ಪಡೆದ ಉಪದೇಶ ಎನಗೆ ಛಂದ
ಉಸುರುವೆನು ಸಾಕ್ಷಾತನ ಕರುಣದಿ
ವಿಷಯ ಇದರೊಳೇನು ಇಲ್ಲವು
ರಸಿಕರಾದವರೆಲ್ಲ ಕೇಳ್ವದು
ಹೊಸ ಕವಿತಾ ಭೋಧ ಅನಂದದಿ                                     ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಚಿಂತೆಯಾತಕೋ ಯೋಗಿಗೆ

ಚಿಂತೆಯಾತಕೋ ಯೋಗಿಗೆ
ಸದಗುರುವಿನಂತರಂಗದ ಭೋಗಿಗೆ                 ||ಪ||

ಕಂತುವಿನ ಕುಟ್ಟಿ ಕಾಲಮೆಟ್ಟಿ
ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ      ||ಅ.ಪ.||

ಕರಣಗಳ ಕಳಿದಾತಗೆ
ಮರಣ ಮಾಯಾದುರಿತಭವವನ್ನು ಅಳಿದಾತಗೆ
ಶರಣಸೇವೆಯೊಳಿದ್ದು ಹರಣ ಮತ್ಸರಗೆದ್ದು
ಧರಣಿಯೊಳು ಮೆರೆವಾತಗೆ                            ||೧||

ವಿಷಯವನು ಸುಲದಾತಗೆ
ಕಸರು ಕರ್ಮಾ ಸುಲದಾತಗೆ
ಪಸರಿಸುವ ಪರಮಾತ್ಮಬಿಂದು ಬೋಧನ ಮಾತು
ಹಸನಾಗಿ ತಿಳಿದಾತಗೆ ಇವಗೆ                         ||೨||

ಲಕ್ಷವನು ಇಟ್ಟಾತಗೆ
ಸಾಕ್ಷಾತನ ಮೋಕ್ಷ ಕೈ ಕೊಟ್ಟಾತಗೆ
ಈ ಕ್ಷಿತಿಗೆ ಶಿಶುನಾಳಧೀಶನ ಗೊವಿಂದಗುರು
ರಕ್ಷಿಸಿದ ರವಿನೇತ್ರಗೆ ಇವಗೆ                           ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಯೊಗಮುದ್ರಿ ಬಲಿದವನೆಂಬೋ

ಯೊಗಮುದ್ರಿ ಬಲಿದವನೆಂಬೋ
ಅಗ ಮೂಲದಿ ನಿನಗೆ
ಭೋಗ ವಿಷಯ ಲಂಪಟಂಗಳನರಿಯದೆ
ಲಾಗವನರಿಯದೆ ಹೀಗಾಗುವರೆ        ||೧||

ವಿಷಯದೊಳಗ ಮನಸನಿಟ್ಟು
ಹುಸಿಯ ಬಿಳುವರೇನೋ ಮರುಳೆ
ಅಸಮ ತೇಜವನು ತನ್ನೊಳು ಕಾಣುತ
ಶಶಿಕಿರಣದ ರಸವನರಿಯದೆ            ||೨||

ಬಗಿದುನೋಡಿ ಬ್ರಹ್ಮಜ್ಞಾನ
ಸಿಗದೆ ಮಿಡುಕುವರೇನೋ ಮರುಳೆ
ಜಿಗಿಯಲಜಾಂಡಕೆ ಝಗ ಝಗಿಸುವೆ ನೀ
ಜಿಗಹಳ್ಳಿಗೆ ಶಿಶುನಾಳಧೀಶ ನೀವು     ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಸಂಸಾರದಿಂದ ಸದ್ಗತಿಹೊಂದಿ

ಸಂಸಾರದಿಂದ ಸದ್ಗತಿಹೊಂದಿ
ಹವಣವರಿತು ಮಾಯೆಯ ಜಯಸಿ
ಮರಣ ಗೆಲಿದವನೇ ಶಿವಯೋಗಿ                                 ||ಪ||

ಭವಭಾರ ಜಾಯ ಕರ್ಮಗಳನು
ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು
ಬ್ರಹ್ಮಜ್ಞಾನ ದೊರೆವುತನಕ
ತ್ರಿನಯನ ಆಶ್ರಯ ಹಿಡಿದು
ಆವುದನರಿಯದೆ ಮುನ್ನಾ
ಆನುವರಿತು ಸವಿಗರಿದು
ಸಕಲ ವಿಷಯಗಳನ್ನು ನಿರಾಕರಿಸಿ
ಜಪವ ಕೈಯೊಳು ಸಿಗದೆ ನಡೆದವೆನೇ ಶಿವಯೋಗಿ          ||೧||

ನಿತ್ಯ ಮಾಡುವ ಕೆಟ್ಟ
ಕೃತ್ಯ ಕಾರಣಕ್ಕೆ ಸಾಕ್ಷಿ
ಹತ್ತು ಇಂದ್ರಿಯ ಮನಸ್ಸು ಹರಿದು
ಚಿತ್ತಮದ ಮತ್ಸರಕೆ
ಮತ್ತೆ ಅಸ್ಥಿರದ ಘಟದ ಚೇಷ್ಟೆಯನು
ಹೊತ್ತುಕೊಂಡು ಚಿತ್ರಗುಪ್ತರ ಲೆಖ್ಖದೊಳು ಬೆರೆಸಿಹುದಾಗಿ ||೨||

ಹಿಂದೆ ಮಾಡಿದ ಪುಣ್ಯದಿಂದ
ಪೊಡವಿಸ್ಥಲಕೆ ಬಂದು
ಶಿಶುನಾಳಗ್ರಾಮದಿ ನಿಂದು
ದಿನಗಳಿದು ದಂದುಗಕ್ಕೆ ದಣಿದು
ಸುಂದರ ಶರೀರದೊಳು ಸೇರಿ
ಚಂದದಲಿ ಮೆರೆದನು ಆನಂದಭೋಗಿ                         ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಪರಮಾನುಬೋಧೆಯೊ

ಪರಮಾನುಬೋಧೆಯೋ  ಈ          ||ಪ||

ಸರಸಿಜ ಭವಗಿದು ಅರಕಿಲ್ಲದ
ಪರಮಾನುಬೋಧೆಯೊ                 ||೧||

ಕಲಶಜಾಕೃತವನೆ ಈ
ಬಲಯುತ ಛಲದಿ ನಿಲಯರೂಪ      ||೨||

ಶಿಶುನಾಳಧೀಶನ ತಾ ಈ
ಅಸಮ ಸ್ವರೂಪದ ಶಶಿಕಿರಣವೋ    ||೩|| 

                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೋಧವಾದ ಮೇಲೆ ಜನರಪವಾದಕಂಜುವರೆ?

ಬೋಧವಾದ ಮೇಲೆ ಜನರಪವಾದಕಂಜುವರೆ?
ಆದಿ ಅಂತ್ಯ ಆತ್ಮ ಆತ್ಮರುಭಯ ಬೇಧವಳಿದು ಸಾಧುಯೆನಿಸಿ ||ಪ್||

ಕಾಲ ಕರ್ಮ ತುಳಿದು ತೂರ್ಯ ಜೋಲಿಯೊಳಗೆ ನುಡಿಯುತಿರಲು
ಖೂಳಜನರು ಕೇಳಿ ಸಪ್ಪ ಕೀಳೋಣಾಗದೆನುತಿರಲು           ||೧||

ಪರಮಗುರು ನಿರಾಲಹಸ್ತಾ ಶಿರದಮ್ಯಾಲ ಹರಿಯುತಿರಲು
ನರರು ತನ್ನ ಜರಿದು ಸಪ್ಪ ಹರಿಯೋಣಾಗದೆನುತಿರಲು        ||೨||

ತಂದೆ ಶಿಶುನಾಳಧೀಶನೆ ಇಂದು ಎಮಗೆ ಪಾಲಿಸೆಂದು
ಬಿಂದು ವಸ್ತು ಸವಿದು ಪರಮಾನಂದದೊಳಗೆ ಮೆರೆಯುತಿರಲು  ||೩||

                       ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಸಾಧುಗಳ ಸಹಜ ಪಥ

ಸಾಧುಗಳ ಸಹಜ ಪಥವಿದು
ಆನಂದದಿಂದಿರುವುದು                 || ಪ ||

ಬೇಕು ಬ್ಯಾಡಾಯೆಂಬುದೆಲ್ಲಾ
ಸಾಕುಮಾಡಿ ವಿಷಯ ನೂಕಿ
ಲೋಕದೊಳು ಏಕವಾಗೆ
ಮೂಕರಂತೆ ಚರಿಸುತಿಹರೋ        || ೧ ||

ಎಲ್ಲಿ ಕುಳಿತರಲ್ಲೆ ದೃಷ್ಟಿ
ಎಲ್ಲಿ ನಿಂತರಲ್ಲಿ ಲಕ್ಷ
ಆಲ್ಲೆ ಇಲ್ಲೆಯೆಂಬೋದಳಿದು
ಎಲ್ಲ ತಾವೇ ಚರುಸುತಿಹರು          || ೨ ||

ದೇಹಧರಿಸಿ
ದೇಹ ಭೋಗನೀಗಿ ನಿತ್ಯ
ನಿರ್ಮಲಾತ್ಮ ಶಿಶುನಾಳೇಶನ
ಬೆಳಕಿನೊಳು ಬೆಳಗುತಿಹುದು       || ೩ ||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಆರೂಢಾ ಈರೂಢಾ ಆರೂಢಾ ಯಾ ಆಲಿ

ಆರೂಢಾ ಈರೂಢಾ ಆರೂಢಾ ಯಾ ಆಲಿ
ಪ್ರೌಢತನದಿ ಗುಂಡಾಡು ಹುಡುಗರೊಳು
ಮೃಡ ನೀ ಪ್ರಭು ಆಡೋ ನಿರಂಜನ                              ||೧||

ಹಣುಮಂತಾ ಯೋಗಸಾ ಗುಣವಂತಾ
ರಾಮಸಾ ಕಡಿದು ಕತ್ತಲದಿ ನಾ
ಬಹಳ ವಿಚಾರದಿ ದಣಿದು ದಣಿದು ನಾ ನೋಡಬಂದೆ         ||೨||

ಲಂಗೋಟಿ ಹಾಕಿದಿ ಕಂಗೆಟ್ಟು ಶೋಕದಿ
ತುಂಗ ಶಿಶುನಾಳಧೀಶನ ಸೇವಕಾ
ಇಂತಾತ್ಮ ಆದರ ಇಂಗಿತ ತಿಳಿದವನೇ ಆರೂಢ             ||೩||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್  

ಜಯ ಭಾರತ ಜನನಿಯ ತನುಜಾತೆ


ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೆ |
ಜಯ ಹೇ ರಸಋಷಿಗಳ ಬೀಡೆ |
ಭೂದೇವಿಯ ಮುಕುಟದ ನವ ಮಣಿಯೆ |
ಗಂಧದ ಚಂದದ ಹೊನ್ನಿನ ಗಣಿಯೆ |
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಜನನಿಯ ಜೋಗುಳ ವೇದದ ಘೋಷ |
ಜನನಿಗೆ ಜೀವವು ನಿನ್ನಾವೇಶ |
ಹಸುರಿನ ಗಿರಿಗಳ ಸಾಲೆ |
ನಿನ್ನಯ ಕೊರಳಿನ ಮಾಲೆ |
ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಶಂಕರ ರಾಮಾನುಜ ವಿದ್ಯಾರಣ್ಯ |
ಬಸವೇಶ್ವರರಿಹ ದಿವ್ಯಾರಣ್ಯ |
ರನ್ನ ಷಡಕ್ಷರಿ ಪೊನ್ನ |
ಪಂಪ ಲಕುಮಿಪತಿ ಜನ್ನ |
ಕಬ್ಬಿಗರುದಿಸಿದ ಮಂಗಳ ಧಾಮ |
ಕವಿ ಕೋಗಿಲೆಗಳ ಪುಣ್ಯಾರಾಮ |
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ತೈಲಪ ಹೊಯ್ಸಳರಾಳಿದ ನಾಡೆ |
ಡಂಕಣ ಜಕಣರ ನೆಚ್ಚಿನ ಬೀಡೆ |
ಕೃಷ್ಣ ಶರಾವತಿ ತುಂಗಾ |
ಕಾವೇರಿಯ ವರ ರಂಗಾ |
ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಸರ್ವಜನಾಂಗದ ಶಾಂತಿಯ ತೋಟ |
ರಸಿಕರ ಕಂಗಳ ಸೆಳೆಯುವ ನೋಟ |
ಹಿಂದೂ ಕ್ರೈಸ್ತ ಮುಸಲ್ಮಾನ |
ಪಾರಸಿಕ ಜೈನರುದ್ಯಾನ |
ಜನಕನ ಹೋಲುವ ದೊರೆಗಳ ಧಾಮ |
ಗಾಯಕ ವೈಣಿಕರಾರಾಮ |
ಕನ್ನಡ ನುಡಿ ಕುಣಿದಾಡುವ ದೇಹ |
ಕನ್ನಡ ತಾಯಿಯ ಮಕ್ಕಳ ಗೇಹ |

ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
        ***
- ಕುವೆಂಪು

 ಕೀಲಿಕರಣ : ಅರೇಹಳ್ಳಿ ರವಿ