ದಶಾವತಾರಕಾ ಕೃಷ್ಣ

ದಶಾವತಾರಕಾ ಕೃಷ್ಣ
ದಶಾವತಾರಕಾ....                                ||ಪ||

ಕೃಷ್ಣಮೂರ್ತಿ ಸೃಷ್ಟಿಪೂರ್ತಿ
ಇಷ್ಟದಾಯಕಾ ಸರ್ವೇಷ್ಟದಾಯಕಾ            ||೧||

ಬಲಿಯ ತುಳಿದು ನೆಲಿಯ ತಿಳಿದು
ಕಲಿವಿಚಾರಕಾ ಮಹಾಬಲದಿ ಪೂರಕಾ         ||೨||

ಬೌದ್ಧ ವಾಮ ಪರಶುರಾಮ ಕ್ಷತ್ರಿನಾಶಕಾ
ಮತ್ಸ್ಯ ಕೂರ್ಮರೂಪಕಾ                          ||೩||

ಭುವನೋದ್ಧಾರ ನಾರಸಿಂಹ ಶೂರರೂಪಕಾ
ಶಿಶುನಾಳೇಶ ವ್ಯಾಪಕಾ                            ||೪||
    *    *    *    *
-ಶಿಶುನಾಳ  ಶರೀಫ್

ಬೋದಹ ಒಂದೇ

ಬೋದಹ ಒಂದೇ
ನಾದ ಒಂದೇ                              ||ಪ||

ಸಾದಹನ ಮಾಧುವ ಹಾದಿ ಒಂದೇ
ಆದಿ ಪದ ಒಂದೇ                        ||ಅ.ಪ||

ಬಿಂದು ಒಂದೇ ನಿಜಾ-
ನಂದ ಒಂದೇ
ತಂದೆ ಸದಗುರು ಒಂದೇ
ಅಂದಿಗಿಂದಿಗೊಂದೇ                          ||೧||

ದೋಶಹ ಒಂದೇ ನಿರ-
ದೋಶಹ ಒಂದೇ
ಸಹಿಸಹುನಾಳದಹೀಸಹನ ಬಹಾಶಹೆ ಒಂದೇ
ಬಹವನಾದ ಒಂದೇ                          ||೨||
***

-ಸಂತ ಶಿಶುನಾಳ ಶರೀಫ್

ಮೈಲಾರ ಮಹದೇವ ಕೈಲಾಸಪತಿಯೆ

ಮೈಲಾರ ಮಹದೇವ ಕೈಲಾಸಪತಿಯೆ                   ||ಪ||

ನಯ ಭಯದಲಿ ಮೈಯಿಕ್ಕುವೆ ಚರಣಕೆ
ಕೈಮುಗಿದೆರುಗುವೆ ಸೈ ಸದ್ಗುರು ರಾಯ                  ||ಅ.ಪ.||

ಸುಂದರ ಮೂರುತಿ ಬಂಧುರ ಕೀರತಿ
ಚಂದಾಸುರನ ವಧಮಾಡಿ ಜಗಕೆ
ಆನಂದ ಬೀರಿದೆ ಮೈಲಾರಲಿಂಗ                            ||೧||

ಘನಕರುಣ ವೀರನೆ ಚಿನುಮಯ ಶೂರನೆ
ಮಣಿಮಲ್ಲಾಸುರನ ಹಣಿದು ದಾನವರ
ಮಣಿಸಿದ ದೇವನೇ ಚಿದ್ಘನ ಲಿಂಗನೆ                        ||೨||

ಅಂಗಜರೂಪನೆ ಶಿಂಗಾರರೂಪನೆ
ಗಂಗಿಮಾಳಿ ಹೃದಯಾಂಗಣದಿ ನೆಲಸಿರ್ಪ
ಮಂಗಳಾತ್ಮ ಶಿಶುನಾಳಧೀಶನೆ                            ||೩||
    *    *    *    *
-ಶಿಶುನಾಳ ಶರೀಫ್

ಅಪ್ಪಯ್ಯನವರ ಪಾದ ಕಂಡೆ

ಅಪ್ಪಯ್ಯನವರ ಪಾದ ಕಂಡೆ ಸ್ವಾಮಿ
ಗುಡಿಪುರ ಗ್ರಾಮದೊಳೇರಿಸಿ ಜಂಡೇ                ||ಪ||

ಉಕ್ಕುತಿಹ ಆನಂದ ಭರದಿ
ಸಕ್ಕರೆಯನೋದಕಿಯ ಮಾಡಿ
ಓಂಕಾರ ಪ್ರಣಮವ ನೋಡಿ
ಬಹುಕಾಲ ಭಕ್ತರ ಕೂಡಿ
ಬಸವಾದಿ ಪ್ರಮಥರು ಹಾಡಿ                            ||೧||

ಅಂಬರಪುರವಿಂಬುಮಾಡಿ
ಸಾಂಬನೂರವಿಲೆ ಬೆಳಿಸ್ಯಾರೊ ಸಾಮಗ್ರಿಗೂಡಿ
ಶಂಭು ಶರಣರು ಸವಿದಾಡಿ
ಹತ್ತುವರ್ಷ ಆದ ಮೇಲೆ
ಸತ್ಯ ಮೆರೆವದು ಮಹಾತ್ಮರಲ್ಲೆ
ಗೊತ್ತುಹಿಡಿ ಗೋವಿಂದರಾಜನ
ಪ್ರಣಮ ಪಂಚಾಕ್ಷರ ಧ್ಯಾನಿಸಿ ನುಡಿ
ಪರಮಾರಾಧ್ಯ ಪಂಚಾಚಾರ್ಯರು ಕೂಡಿ ಆಡವನು ಆಡಿ
ಪರಮೇಶ್ವರ ಪಾರ್ವತಿ ಹಾಡಿ                        ||೨||

ಪರಲೋಕದವರೆಲ್ಲ ಕೂಡಿ
ಪಂಚಾಗ್ನಿಮಠದೊಳು ಅಡಿಗೆಯ ಮಾಡಿ
ಅನ್ನ ಪ್ರಸಾದವ ನೀಡಿ
ಚೆನ್ನಬಸವೇಶ್ವರರು ಬರುತಿರೆ ಪ್ರಮಥ ಗಣಂಗಳು ಕೂಡಿ
ಕಲ್ಯಾಣಪುರವನು ಮಾಡಿ
ಹರ ಶರಣರ ಲೀಲಾಮೃತ ಪಾಡಿ
ಕಲಿ ಕರ್ಮ ವಿಕಾರಿಗೆ ಜಾಡಿ
ಶಿಶುನಾಳ ಗ್ರಾಮಕ ಕೂಡಿ
ಉಳಿದವರು ಗುರುಪಾದ ಕೂಡಿ                   ||೩||
    *    *    *    *
-ಶಿಶುನಾಳ ಶರೀಫ್

ಆದಿಬಸವ ಅನಾದಿಯಿಂದಲು

ಆದಿಬಸವ ಅನಾದಿಯಿಂದಲು
ಮೇದಿನಿಗಿಳಿದು ಬಂದ ಚೋದ್ಯ                     ||ಪ||

ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ-
ದದಿ ಸಲುಹಿದ ಶಿವನಾರಾಧ್ಯ                        ||೧||

ಸರಳು ಜಪಾಂಗುಲಿ ಕಿರಿಬೆರಳು ನೋಸಲಲಿ
ಧರಿಸಿ ಮರಣ ಗೆಲಿವುದು ಚೋದ್ಯ                  ||೨||

ಕರಚಿತ್ಕಳ ಪಂಚಾಕ್ಷರ ಸ್ತುತಿಸಿದಿ ನೀ
ನೆರಳು ರುದ್ರಾಕ್ಷಿ ವೃಕ್ಷದ ಮಧ್ಯ                     ||೩||

ಪೊಡವಿಯೊಳಧಿಕ ಭಕ್ತರ ಮನಸನ
ಒಲಿಸಿ ನುಡಿದಿಹಮ ಚೋದ್ಯ                        ||೪||

ಒಡೆಯ ಶಿಶುನಾಳಧೀಶನಲ್ಲೆ
ಅಡಗಿರ್ಪ ಗ್ರಾಮ ಸುಖದಿ                           ||೫||
    *    *    *    *
-ಶಿಶುನಾಳ ಶರೀಫ್

ಭಲಿರೆ ಬಾಲದಂಡ ಹನುಮ

ಭಲಿರೆ ಬಾಲದಂಡ ಹನುಮ
ಶಿಲೆಯೊಳಗೆ ಮೂಡಿ ನೆಲಿಸಿದೆಯೋ ಜನರೊಲಿಸಿದೆಯೋ                    ||ಪ||

ಕಲಹ ಕಂಠೀರವನಾಗಿ ಲಂಕೆಯನು ಸುಟ್ಟು
ಬಲದಿ ರಾಮನ ಛಲ ಗೆಲಿಸಿದಿಯೋ
ಸಿಟ್ಟಲೆ ಅಉರರ ಕುಟ್ಟಿ ಧುರದಿ ನಿಂತು
ಘಟ್ಟಿ ಸೀತೆಗೆ ಮುದ್ರಿಯುಂಗುರ ಕೊಟ್ಟಿಯೋ ಜಗಜಟ್ಟಿಯೋ                ||೧||

ರಮನ ಮಾತಿಗೆ ರಜತ ಪರ್ವತದಿ
ಸಂಜೀವಿನಿಯ ತಂದ ಭಾವನವೊ
ಕೋವಿಧ ಲಕ್ಷ್ಮನ ಉಳುಹಿ ಪಾತಾಳಕ್ಕೆ
ಧಾವಿಸಿದಂಥ ಮಜ್ಜನವೋ                                                         ||೨||

ಊರು ಕೇರಿ ಗ್ರಾಮಗಳ ಹೊರಬಾಗಿಲೊಳು
ಸೇರಿದೆಯೋ ಸತ್ಯದೋರಿದೆಯೋ
ಶಿಶುನಾಳ ಸದ್ಗುರುವಿನ ಸೇವಕನಿಗೆ
ವರಸಾರಿದೆಯೋ ಸುಖದೋರಿದೆಯೋ                                         ||೩||
    *    *    *    *
-ಶಿಶುನಾಳ ಶರೀಫ್

ನೀಲಕಂಠನ ದಿವ್ಯ ಆಲಯದೊಳು

ನೀಲಕಂಠನ ದಿವ್ಯ ಆಲಯದೊಳು ಬಂದು
ಸಾಲಿಟ್ಟು ಸಾಧು ಸಮ್ಮುಖ ನೋಡಿದ್ಯಾ                          ||ಪ||

ಕಾಲಾನುಕಾಲನ ಕಾಲವಂದನೆ ಗೆದ್ದು
ಮೇಲಾದ ಮಹಿಮೆ ನೋಡಿದ್ಯಾ                                    ||೧||

ಮೂರು ತನುವಿನೊಳು ಏರುವ ಸಮಯಕ್ಕೆ
ಸಾರೋಪ್ಯ ವೃಕ್ಷದ ಸರಮಾಡಿದ್ಯಾ
ಹಾರೈಸಿಕೊಂಡ ವಸ್ತುವಿನಿಲಿ ವೀರಪ್ಪ
ಬ್ಯಾರೆ ಈ ಹಾದಿಯೋಳ್ ಕೂಡಿದ್ಯಾ                              ||೨||

ಹಸಿದು ಬಂದವರಿಗೆ ಅಶನದೋರಲು ಸುಖ
ರಸ ಉಂಡು ರಾಜಯೋಗದಿ ಹಾಡಿದ್ಯಾ
ಶಿಶುನಾಳಧೀಶನ ದಯದಿ ಶಿಗ್ಗಲಿಯೊಳು
ಹಸನಾಗಿ ದುರಿತ ದುರ್ಗುಣ ದೂಡಿದ್ಯಾ                          ||೩||
    *    *    *    *
-ಶಿಶುನಾಳ ಶರೀಫ್

ರಾಮಲಿಂಗಮೂರ್ತಿ ಸದ್ಗುರು

ರಾಮಲಿಂಗಮೂರ್ತಿ ಸದ್ಗುರು
ಸ್ವಾಮಿ ನಿನ್ನ ಕೀರ್ತಿ
ನೇಮದಿ ನಿನ್ನಯ ನಾಮವ ಸ್ಮರಿಸುವೆ
ಆ ಮಹಾ ಶಿಗ್ಗಲಿ ಗ್ರಾಮದೊಳಗೆ....ಶ್ರೀ                        ||೧||

ಛಂದದಿ ನಾ ಬಂದು
ಈ ಕ್ಷಣ ಸೇವೆಯೊಳಗೆ ನಿಂದು
ಅಂದ ವಚನಗಳ ಸಿದ್ಧಿಗೆ ಹೊಂದಿಸು
ಎಂದೆಂದಿಗೂ ನಿನ್ನ ದ್ವಂದ್ವ ಚರಣ ಗತಿ...ಶ್ರೀ                ||೨||

ಶಿಶುನಾಳಪುರಧೀಶ ಉಸುರಿದ
ರಸಿಕರ ಉಲ್ಲಾಸ
ಹಸನಾಗಿ ನಾ ನಿನ್ನ ಅಸಮ ಮಹಿಮೆಯನು
ಉಸುರಲಳವೆ ಕೊಡು ರಸಿಕತನವ....ಶ್ರೀ                    ||೩||
    *    *    *    *
-ಶಿಶುನಾಳ ಶರೀಫ್

ನಂಬಿದೆ ನಾ ನಿನ್ನ ಶಂಭೋ

ನಂಬಿದೆ ನಾ ನಿನ್ನ
ಶಂಭೋ ರಕ್ಷಿಸು ಎನ್ನ                                    ||ಪ||

ಕುಂಬಿನಿಹೊಳು ಬಿಡದೆ
ತುಂಬಿ ತುಳುಕುತಲಿರುವೆ                              ||ಅ.ಪ.||

ಹರನಾಮದಲಿ ಪ್ರೇಮದಲಿ
ಕರೆಗೊಂಡು ಮನಸಿನಲಿ
ವರವ್ಯಸನವನು ಕಳೆದು
ನಿರುತ ಪಾಲಿಸು ದೇವಾ                                    ||೧||

ಜಡದೇಹಿ ಜಗದಿ ನಾನು
ಮೃಡರೂಪ ಮೂರ್ತಿ ನೀನು
ಪೊಡವಿಪ ಶಿಶುನಾಳ ಒಡೆಯ ನೀ ಕರುಣಿಸಿ
ಕೊಡು ಮತಿ ಸದ್ಗುರು ಗೋವಿಂದನಾಥನೆ               ||೨||
    *    *    *    *
-ಶಿಶುನಾಳ ಶರೀಫ್

ಕರುಣ ಬಾರದೇನೋ ಸದಾಶಿವ

ಕರುಣ ಬಾರದೇನೋ ಸದಾಶಿವ
ಕರುಣ ಬಾರದೇನೋ                                        ||ಪ||

ಧರಣಿ ಜನರು ಈ ಪರಿ ಮರಗುದ ಕಂಡು                ||ಅ||

ಹುಟ್ಟಿಸಿದೆಲ್ಲೋ ಭೂಮಿ ಈ ಲೋಕವ
ಕಟ್ಟಿ ಆಳುವ ಸ್ವಾಮಿ
ಕೆಟ್ಟ ಕರ್ಮದ ಕೊಲಿ
ಸುಟ್ಟು ಕೈಲಾಸದಿ
ಪಟ್ಟನಾಳು ಪರಮಾತ್ಮ ಪ್ರಭುವರ                        ||೧||

ಕಿಡಿಗಣ್ಣಿಲೆ ನೋಡಿದ್ಯಾ ಈ ದಕ್ಷಿಣ
ಕಡೆ ಬಾಗಿಲ ಕಾಯ್ದ್ಯಾ
ಬಿಡದೆ ಪೊಡವಿ ಸ್ಥಳಕೆ ಈ ಬರ ಹುಟ್ಟಿಸಿ
ಕಡು ಹರುಷದಿ
ಸುಡುಗಾಡ ಸೇರಿದ್ಯಾ ಸಾಂಬಾ                          ||೨||

ತುಸು ದಯವಿರಬೇಕೋ ಈ ಮನುಜರ
ಹಸನಾಗಿ ಸಲಹುದಕೋ
ವಸುಧಿಯೊಳು ಶಿಶುನಾಳ
ಪಶುಪತಿ ಸೇವಕ
ಉಸುರಿದ ನುಡಿಗೆ ನಸುನಗೆಯಿಂದಲಿ                  ||೩||
    *    *    *    *
-ಶಿಶುನಾಳ ಶರೀಫ್

ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ                    ||ಪ||


ನಾ ನಿನ್ನ ಮಗನು ಅಹುದೆನ್ನುವ ಮಾತಿದು

ಎನ್ನ ಗುರುವಿನುಪದೇಶ ವಚನದಿಂ

ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ

ಕುನ್ನಿ ಜನರ ಹಂಗಿನ್ನಾಯತಕ ಭಯ ಚೆನ್ನ ಶ್ರೀಗುರುವೆ                      ||೧||


ತಾಯಿ ತಂದೆಗಳ ಇಂದ್ರಿ ವಿಕಾರದಿ

ಕಾಯ ಜನಿಸಿ ಅದರೋಳ್ ಮನಮೋಹಿಸಿ

ನೋವು ಬ್ಯಾನಿಯಿಂದಾಯಾಸಪಡುತಿರೆ

ಸಾವಿಗಂಜಿ ಬಾಯಾರಿ ಬಳಲುತಿರೆ

ಜೀವದ ಪರವಿಯ ಬಿಟ್ಟಾಚರಿಸುವೆ ನೀ ರಕ್ಷಿಸು ಮಹಾದೇವ ದಯಾನಿಧೆ   ||೨||


ಸಾರಲೇನು ಸಂಸಾರ ವಿಷಯ ಸುಖ

ಮೂರು ದೇಹದೊಳು ಹೇರಿ ಕಳುಹಿದ ಜೀವದ್ಯಾವಾರ

ಮರತು ವರಪಾರಮಾರ್ಥಲೊಳು ನಾ ಬ್ಯಾರಿರುತಿರೆ

ಧಾರುಣಿಯೊಳು ಶಿಶುನಾಳಧೀಶನ

ಆಧಾರ ಹಿಡಿದು ಆನಂದವಾದೆ                                                       ||೩||


* * * *
-ಶಿಶುನಾಳ ಶರೀಫ್

ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ

ತ್ರಾಹಿ ಎನುತ ಪಾದಕೆರಗಿದ ಜನರಿಗೆ

ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ

ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ                    ||ಪ||


ಶೂರ ಪರಮ ಗಂಭೀರ ಅತಿ ಸುಂದರ ಮಾರುತಿ

ಶೌರ್ಯ ವಿಚಾರ ಪರಾಕ್ರಮ ಕಾರುಣ್ಯ ಕಪಿವರ ಮಾತುತಿ

ಬಾರಿ ಬಾರಿಗೂ ನುತಿಪ ಭಕುತರ ಮಾರುತಿ

ವಜ್ರ ಶರೀರ ನಿರಾಮಯ ವೀರ ನರನ ಧ್ವಜ ಸಾರಥಿ

ಮೀರಿದ ಉಗ್ರ ಅವತಾರದಿ ಪೂರ್ಣ

ವಾರಿಧಿಯೊಳು ಘನ ಸಾರವ ನಿರ್ಮಿಸಿ

ಧರಣಿಯಾತ್ಮಜ ಇದ್ದ ವನವನು ಸೇರುತ

ಹಾರಿ ಮುದ್ರಿಕೆಯ ತೋರಿದ ಮಾರುತಿ                                            ||೧||


ಕುಸುಮಶರಪಿತನುಸುರಿದ ನುಡಿಯನು ಲಾಲಿಸಿ

ಮುಸುಕಿದ ಅಸುರರ ಪಡೆಯನಾವರಿಸಿ ಬಲವನು ತೋರಿಸಿ

ಅಸಮನು ಶಕ್ತಿಲೆ ಕುಂಭಕರ್ಣನನು ಸೋಲಿಸಿ ಲಂಕಾದೇಶಗೆಡಿಸಿದಿ

ವಾಲಾಗ್ರದ ಕೊನೆಯ ಜ್ವಲನದಿ ದಶಶಿರನಾಥನ ಮರ್ದಿಸಿ

ವಸುಧೆಯಾಳು ಹೊಸಪಟ್ಟ ವಿಭೀಷಣ ಶರಣಿಗೆ ನೀ-

ನತಿಶಯದಲಿ ಪಾಲಿಸಿದಿ ಪರಾತ್ಪರ ಹಸುಳನಾಗಿ ಹರಿಚರಣಕೆರಗಿದಿ      ||೨||


ಮಂದಹಾಸ ಆನಂದಯೋಗ ದುರಂಧತಾ ಕರುಣಿಸು ಇಂದು

ಮುನೀಂದ್ರ ಮೌನವ್ರತ ಮಂತ್ರದಲಿ ಬಂಧುರ

ಇಂದ್ರಜಿತುಹರ ಚಂದ್ರರೂಪದಲಿ ಚಂದಿರಾ

ಅಂಜನಿ ಕಂದಾ ಮಣಿಯಮುಕುಟದಿ ಶೋಭಿಸುವ ಸುಂದರಾ

ಇಂದು ನಿಮ್ಮಯ ಪಾದಾರವಿಂದಗಳಿಗೆ ಕರ-

ಹೊಂದಿಸೆನ್ನ ಮನಮಂದಿರದೊಳು ಮುದದಿಂದ ಪೇಳೆ

ಗೋವಿಂದರಾಜ ಗುರುವಿಂದ ಪಡೆದ ಉಪದೇಶ ಬಲದಿ ನುತಿಪೆ          ||೩||

* * * *
-ಶಿಶುನಾಳ ಶರೀಫ್

ರಾಮ ರಾವೇಣ ಹರಿ

ರಾಮ ರಾವೇಣ ಹರಿ

ರಾಜಿತ ಪರಾತ್ಪರವಾದ ನಾಮದೊರಿ

ರಾಮ ರಾವೇಣ ಹರಿ                               ||ಪ||


ವಾಮ ಭಾಗದಿ ಶಿತಭವಾನಿ

ಪ್ರೇಮ ಸದ್ಗುರು ಮಲ್ಲಿಕಾರ್ಜುನ

ಕಾಮಿತಾರ್ಥ ಫಲದಾಯಕ

ರಾಮ ರಾವೇಣ ಹರಿ                              ||ಅ.ಪ.||


ಕಮಲದಿ ಕಾತ್ಯಾಯಿನಿ

ಕಾಮಿತಫಲ ಕರುಣ ಕೃಪಾಳು ನೀ

ಸಮರಮುಖದಲಿ ಗೆಲಿದು ಶುಂಭ

ನಿಶುಂಭ ಈರ್ವರನು ಸವರಿ ಶಾಶ್ವತ

ಕಾಂಬುಕಂದರಿ ಎನಿಸಿ ಲೋಕದಿ

ತುಂಬಿಕೊಂಡಿದೆ ತರುಣಿಮಣಿಯಳೆ

ರಾಮ ರಾವೇಣ ಹರಿ                                ||೧||


ಅಸಮ ಸುಗಂಧಿಯಳೆ

ಶಿಶುವಿನಾಳ ವಸುಧಿಗೆ ಬಂದಿಹಳೆ

ಹಸನವಾಹಿಹ ಪಾದಕಮಲಕೆ

ಬೆಸನ ಬೇಡುವೆ ಭವದುರಾತ್ಮಳೆ

ನಿಶಿಕಿರಣ ನಿಜಾನಂದ ಮೂರುತಿ

ಉಸುರುವೆನು ಆನಂದದಲಿ ಸದಾ

ರಾಮ ರಾವೇಣ ಹರಿ                                  ||೨||

* * * *
-ಶಿಶುನಾಳ ಶರೀಫ್

ಹನುಮಂತ ಹಾರಿದ ಲಂಕಾ

ಹನುಮಂತ ಹಾರಿದ ಲಂಕಾ

ಸುಟ್ಟು ಬಿಟ್ಟಾನೋ ಬಿಡು ನಿನ್ನ ಬಿಂಕಾ                               ||ಪ||


ರಾಮ ರಘುಪತಿ ಭಕ್ತಾ

ಒಂದು ನಿಮಿಷದೊಳಗೆ ತಂದುಕೊಟ್ಟಾನೋ ಸೀತಾ

ಹೌಹೌದು ರಾಮರವದೂತಾ                                           ||೧||


ರಾಮ ಲಕ್ಷ್ಮಣರ ಮಾತು

ಮಾರುತಿಗೆ ಹೇಳಿದ್ದು ಗೊತ್ತಿಲ್ಲದಾಯ್ತು

ಉಂಗುರ ಕೊಟ್ಟದ್ದು ಗೊತ್ತು                                             ||೨||


ಶಿಶುನಾಳಧೀಶನ ಸ್ಮರಣಿ ಮರೆಯಬ್ಯಾಡ್ಯಾವತ್ತು

ರಾಮಾಯಣ ಇಲ್ಲಿಗೆ ಮುಗಿದಿತ್ತು

ಗುರುನಾಥ ಗೋವಿಂದನ ಪಾದ ಹಿಡೆಬೇಕೋ ತುರ್ತು          ||೩||

* * * *
-ಶಿಶುನಾಳ ಶರೀಫ್

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ                             ||ಪ||


ಅಗಝಹರ ಪ್ರೀತೆ ಸುಗುಣ ಪ್ರಖ್ಯಾತೆ

ನಿಗಮಾಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ           ||೧||


ಬಲ್ಲಿದ ಯಾತ್ರೆ ಚಲ್ವ ಸುಗಾತ್ರೆ

ಅಲ್ಲಮಹಾಪುರಿ ಶ್ರೀಬೊಗಳಾಂಬಿಕೆದೇವಿ ಪಾಹಿಮಾಂ                  ||೨||


ಶಿಶುನಾಳವಾಸ ದೋಷ ವಿನಾಶ

ಅಸಮಸದ್ಗುರು ಗೋವಿಂದವಿಲಾಸಿ ದೇವಿ ಪಾಹಿಮಾಂ                 ||೩||

* * * *
-ಶಿಶುನಾಳ ಶರೀಫ್

ನಿನ್ನ ನೋಡಿ ತಡೆಯಲಾರದೆ ಕೇಳಿದೆ

ನಿನ್ನ ನೋಡಿ ತಡೆಯಲಾರದೆ ಕೇಳಿದೆ

ಕೂಡಿ ಗಡ ಕಾಡಬ್ಯಾಡ ಬೇಡಿದ್ದು ಕೊಡುವೆ              ||ಪ||


ಮೂರಗಿರಿಮ್ಯಾಲಕ ಏರಿ

ಶಿಖರದೋಳ್ ನಿಂತು ಜೀರಗಿಂಡಿಯೊಳು

ಮಾರಿ ತೋರ್ವ ಬಾಲಿ                                        ||೧||


ಹರಿ ಹರ ಸುರರಿಗೆ

ಕ್ಷೀರವನ್ನಿತ್ತು ಸಲುಹಿದಿ

ಚಾರುತನದಲಿ ಶ್ರುತಿ ಸಾರಿತಿದೆ                            ||೨||


ವಸುಧಿಯೊಳು ಶಿಶುನಾಳ

ಆದಿ ಸದ್ಗುರುವಿನ

ನಾದ ಬ್ರಹ್ಮದೋಳ್ ಬೈಲಾದ ಮ್ಯಾಲೆ                   ||೩||

* * * *
-ಶಿಶುನಾಳ ಶರೀಫ್

ಹೌದೆ ನಮ್ಮವ್ವ ನೀನು ಹೌದೆ

ಹೌದೆ ನಮ್ಮವ್ವ ನೀನು ಹೌದೆ

ಹೌದೆ ಭವದ ಗೊನಿ ಕೊಯ್ದೆ

ಮುಕ್ತಿಯ ಮುನಿಗೊಯ್ದೆ ನಮ್ಮವ್ವ ನೀನು ಹೌದೆ                    ||೧||


ಹಿಡಿದೆ ಧರ್ಮದ ಮಾರ್ಗ

ಹಿಡಿದು ಕರ್ಮದ ಬೇರು

ಕಡೆದೆ ನಮ್ಮವ್ವಾ ನೀನು ಹೌದೆ                                        ||೨||


ಹೌದೆ ಸ್ವಾಮಿಗೆ ಹೊಚ್ಚೆ

ಕೌದಿ ಅವ್ವನ ಗುಡಿ-

ಗೊಯ್ದೆ ನಮ್ಮವ್ವಾ ನೀನು ಹೌದೆ                                       ||೩||


ಶಿಶುನಾಳಧೀಶನ ತಿಳದೆ

ಪಾಪವನ್ನೆಲ್ಲ ಕಳದೆ

ನಮ್ಮವ್ವಾ ನೀನು ಹೌದೆ                                                 ||೪||

* * * *
-ಶಿಶುನಾಳ ಶರೀಫ್

ದೇವಿ ನಿನ್ನ ಸೇವಕನೆಂದು

ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು

ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು

ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ

ಕಂದನೆಂದು ಸಲಹು ಇಂದು                                           ||ಪ||


ಮಂಗಲಾಂಗಿ ಕುಂಡಲಾಭರಣಿ

ಪುಂಡ ದೈತ್ಯರನ ಖಂಡಿಸಿ

ಕಡಿದು ತುಂಡ ಮಾಡುತ

ಬಂಡ ಬರಿದೋಡ್ಯಾಡುತಿರೆ

ಡಿಂಡರನು ಚಂಡಾಡುತಿರೆ

ಮಂಡಲದಿ ಮಾನವರು ಮರುಳಾಗಿರೆ                               ||೧||


ದಶ ಎರಡು ಕರದೊಳು ಪಿಡಿದು

ಶೇಷ ಶಂಖ ಚಕ್ರಾಯುಧಗಳ ಹಿಡಿದು

ಅಷ್ಟದಶದಿಸೆದೊಳಗೆ ಮರೆದು

ಖಡ್ಗ ಕಠಾರಿ ನೀಟಾಗಿ ಹಿಡಿದು

ದಿಗ್ಗಿಲಿಂದ ಬರುವದು ಕಣ್ಣಿನ

ನಡ್ಗಿಗೆ ಮಡ್ಗವಿಸಿದೆ ಯಡ್ಗದರಸಿಗೆ

ಮಡ್ಗದಿ ಬಹು ಚೆಡ್ಗಿನ ಜ್ಙಾನ ನಿಡ್ಗದು                                  ||೨||


ಅಷ್ಟದಿಕ್ಪಾಲಕರು ಎಲ್ಲಾ ನಿಂದು

ಶ್ರೇಷ್ಠದಧಿಪತಿ ನಾಂಟಿನೋಳ್ ನಿಂದು

ಕರಿಯ ಸಿಂಹಗ ವಿಘ್ನಯಷ್ಟೆಂದು

ಎಷ್ಟು ತಾಳಲಿ ದುಷ್ಟ ಮನುಜರ

ದೃಷ್ಟಿ ತೆರೆದು ನೋಡಲು ಇಂದು

ಸೃಷ್ಟಿಯೊಳು ಶಿಶುನಾಳಧೀಶನ

ಪುರದಿ ಮೆರೆಯುವ ಶ್ರೇಷ್ಠದೇವಿ                                        ||೩||

* * * *
-ಶಿಶುನಾಳ ಶರೀಫ್

ನಾ ಕಂಡೆನೀಗ ಶಾಕಾಂಬರಿಯಾ

ನಾ ಕಂಡನೀಗ ಶಾಕಂಬರಿಯಾ

ಶಾಂಬವಿ ಶಂಕರಿಯಾ                               ||ಪ||



ನಾಕದಿಂದಿಳಿದು ಭೂತಳದಿ ಭಕ್ತರನು

ನೀ ಕಾಯಬೇಕೆಂದೆನುತ ವಿಲಾಸದಿ

ಲೋಕಮಾತೆ ಜಗನ್ಮಾತೆ

ಚಾಕಲಬ್ಬಿ ಕೆರೆ ಪೂರ್ವಭಾಗದಲಿ                 ||೧||


ಸಿಂಹನೇರಿ ಗಮಿಸುವ ದೇವ

ವಾಹವ್ವರೆ ಮಮ್ಮಾಯಿ ಕ್ಲಿಂಬಿ

ಜಲಕ್ಷರಿ ಹಂಮಳೆ ಮಹಾಂಕಾಳಿ                 ||೨||


ಶುಂಭ ನಿಶುಂಭರ ಕುಲಸಂಹರಳೆ

ಅಂಬಿಕೇಶ ತ್ರಿಯಂಬಕನರಸಿಯೆ

ಇಂಬುಗೊಡದೆ ಎನ್ನಾತ್ಮ ತನುವಿನೊಳು      ||೩||



ಶಿಶುನಾಳಧೀಶನ ಸೇವಕನಿಂದು ನಿನ್ನ ಸೇವೆಗೆ ಬಂದೆ

ಹಸಿತವಚನದಿಂ ಉಸುರುವೆ ಕವಿತವ

ಅಸಮಗಾತ್ರಿ ಶಶಿನೇತ್ರಿ ದಯಾನಿಧಿ

ರಸಿಕರಾಜಗೋವಿಂದನವನೊಡನೆ

ಹುಸಿ ಎಲ್ಲವು ನಿಜಬೋಧದಿ ಸ್ತುತಿಸುವೆ          ||೪||
* * * *
-ಶಿಶುನಾಳ ಶರೀಫ್

ಪಾಹಿ ಪರಬ್ರಹ್ಮಣಿ ತ್ರಾಣಿ

ಪಾಹಿ ಪರಬ್ರಹ್ಂಣಿ ತ್ರಾಣಿ

ಪಾಹಿ ಪರಬ್ರಹ್ಮಣಿ                                                                 ||ಪ||


ಸೇವಿತ ಕಿಂಕರ ಸದಾ ಪರಜೀವ ಸದ್ಗುರು ಭಾವನಾತ್ಮಳೆ

ದೇವಿ ಪರಾತ್ಪರ ಕಾಯ್ವುದೆನ್ನ ಸದಾವಕಾಲದಿ                            ||೧||


ಶುಂಭ ನಿಶುಂಭ ಸಂಹಾರಿಣಿ ನಿಶುಂಭನ ಡಂಬ ಪರಿಹರಿಣಿ

ನಂಬಿ ನಿನ್ನ ಪಾದಾಂಬುಜಕೆ ಕೈ ಇಂಬುಗೊಟ್ಟೆನು ಕರುಣಿಸೆನುತಲಿ ||೨||


ಶುಂಭರಾರಿಯ ಮನಕೆ ಮೈತುಂಬಿ ನಲಿಯುತ ನೊಲುಮೆಯಿಂದಲಿ

ಕಂಬುಕಂದರೆ ಭಕ್ತಪ್ರೇಮಿಯೆ ನಂಬಿದೆನು ಸದಾವ ಕಾಲದಿ            ||೩||


ವಸುಧೆಪಾಲಕಳೆ ನಿನ್ನ ಅಸಮ ಮಹಿಮೆಯ ಪೊಗಳುವೆ

ವಸುಧೆಯೊಳು ಶಿಶುನಾಳಧೀಶನ ಅಸಮ ಪಾದಕೆ ನುತಿಸಿ ಬೇಡುವೆ ||೪||

* * * *
-ಶಿಶುನಾಳ ಶರೀಫ್

ಮಾನಾಪಮಾನ ನಿನ್ನವಮ್ಮಾ

ಮಾನಾಪಮಾನ ನಿನ್ನವಮ್ಮಾ ಎನಗೇನು

ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು    ||ಪ||


ಸದಾ ನಿನ್ನ ಧ್ಯಾನದೊಳಿರಲು

ಮದಾ ಬಂದಿತೆಂಬುವರಿವರು

ಕದನವ ಮಾಡುವರಿವರು

ನಿಧಾನವ ತಿಳಿಯದೆಯವರು

ಇದು ನಿನ್ನ ಮನಸ್ಸಿಗೆ

ಮೃದುವಾದರೊಳಿತಮ್ಮಾ                    ||೧||



ನಿನ್ನ ಚಿಂತೆಯೊಳಿರಲು

ಖಿನ್ನ ಪಡಿಸುವರೆನ್ನ ಖೂಳರು

ಸಣ್ಣ ಮಾತನಾಡುವವರು

ಸೊನ್ನಿ ಸೂಕ್ಷ್ಮವನರಿಯದವರು

ಎನಗೇನು ಕುಂದುವದು

ನಿನಗದು ಹೊಂದುವದು                       ||೨||


ನಿಜಾನಂದ ಬೋಧ ಎನಗೆ

ಕುಜನರ ನಿಂದೆ ನಿನಗೆ

ಸುಜನರ ರಕ್ಷೆಯೊಳಗೆ

ಗಜಿಬಿಜಿ ಬರುವದು ನಿನಗೆ

ಭಜಿಸುವೆ ಗುಡಿಪುರೇಶನ

ನಿಜ ವಿಷಯ ನಾಯಕಿ                       ||೩||
* * * *
-ಶಿಶುನಾಳ ಶರೀಫ್

ತರವಲ್ಲ ತಂಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ


ಸ್ವರ ಬರದೆ ಬಾರಸದಿರು ಬಂಬೂರಿ                  ||ಪ||



ಸರಸ ಸಂಗೀತದ ಕುರುಹುಗಳರಿಯದೆ

ಕರದೊಳ್ಹಿಡಿಬಾಡ ತಂಬೂರಿ                            ||ಅ.ಪ.||



ಮಧ್ಯದೊಳೇಳು ನಾದದ ತಂಬೂರಿ ಅದ್ನ

ತಿದ್ದಿ ನುಡಿಸಬೇಕು ತಂಬೂರಿ

ಸಿದ್ಧ ಸಾಧಕರ ಸುವಿದ್ಯೆಕ್ಕ ಒದಗುವ

ಬುದ್ಧಿವಂತಗೆ ತಕ್ಕ ತಂಬೂರಿ                           ||೧||


ಬಾಳ ಬಲ್ಲವರಿಗೆ ತಂಬೂರಿ ದೇವ-

ಬಾಳಾಕ್ಷ ರಚಿಸಿದ ತಂಬೂರಿ

ಹೇಳಲಿ ಏನಿದರ ಹಂಚಿಕೆಯರಿಯದಂಥ

ತಾಳಗೇಡಿಗೆ ಸಲ್ಲ ತಂಬೂರಿ                           ||೨||


ಸತ್ಯ ಸುಗುಣರಿಗೆ ತಂಬೂರಿ ಇದ

ನಿತ್ಯ ಉತ್ತಮರ್ಹಾಡುವ ತಂಬೂರಿ

ಬತ್ತೀಸರಾಗದ ಬಗೆಯನಯರಿದಂತ

ಕತ್ತೀಗಿನ್ಯಾತಕೆ ತಂಬೂರಿ                              ||೩||



ಅಸಮ ಸುಮ್ಯಾಳಕ ತಂಬೂರಿ ಇದು

ಕುಳಲರಿಗೊಪ್ಪುವ ತಂಬೂರಿ

ಶಿಶುನಾಳ ಗ್ರಾಮದೊಳು ಓದುವ ಪುರಾಣದಿ

ಹಸನಾಗಿ ಬಾರಿಸೋ ತಂಬೂರಿ                    ||೪||



-ಶಿಶುನಾಳ ಶರೀಫ್

ಕೋಡಗನ ಕೋಳಿ ನುಂಗಿತ

ಕೋಡುಗನ ಕೋಳಿ ನುಂಗಿತ ನೋಡವ್ವ ತಂಗಿ ||ಪ||

ಆಡು ಆನೆಯ ನುಂಗಿ

ಗೋಡೆ ಸುಣ್ಣವ ನುಂಗಿ

ಆಡಲು ಬಂದ ಪಾತರದವಳ ಮದ್ದಳೆ ನುಂಗಿತ ||೧||

ಒಳ್ಳು ಮನಕಿಯ ನುಂಗಿ

ಬೀಸುಕಲ್ಲು ಗೂಟವ ನುಂಗಿ

ಕುಟ್ಟಲು ಬಂದ ಮುದಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ

ಮಗ್ಗವ ಲಾಳಿ ನುಂಗಿ

ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿ        ||೩||

ಎತ್ತು ಜತ್ತಗಿ ನಿಂಗಿ

ಬತ್ತ ಬಾನವ ನುಂಗಿ

ಕುಂಟಿ ಹೊಡೆಯೋ ಅಣ್ಣನ ಮೇಳಿ ನುಂಗಿತ    ||೪||

ಗುಡ್ಡ ಗಂವ್ಹರ ನುಂಗಿ

ಗಂವ್ಹರ ಇರುವೆ ನುಂಗಿ

ಗುರುಗೋವಿಂದನ ಪಾದ ಆತ್ಮ ನುಂಗಿತ      ||೫||
 
-ಶಿಶುನಾಳ ಶರೀಫ್

ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮವ,


ಓ ಕರ್ನಾಟಕ ಹೃದಯ ಶಿವ!



ಸತ್ತಂತಿಹರನು ಬಡಿದೆಚ್ಚರಿಸು;

ಕಚ್ಚಾಡುವರನು ಕೂಡಿಸಿ ಒಲಿಸು.

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;

ಒಟ್ಟಿಗೆ ಬಾಳುವ ತೆರದಲಿ ಹರಸು!



ಬಾರಿಸು ಕನ್ನಡ ಡಿಂಡಿಮವ,

ಓ ಕರ್ನಾಟಕ ಹೃದಯ ಶಿವ!



ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿಮತಿಯಲ್ಲಿ;

ಕವಿ ಋಷಿ ಸಂತರ ಆದರ್ಶದಲಿ

ಸರ್ವೋದಯವಾಗಲಿ ಸರ್ವರಲಿ!



ಬಾರಿಸು ಕನ್ನಡ ಡಿಂಡಿಮವ,

ಓ ಕರ್ನಾಟಕ ಹೃದಯ ಶಿವ!



-ಕುವೆಂಪು