ಗಣೇಶ ಸಂಘ (ಸಂ.ರಂ)

- ಪಟ್ಟಾಭಿ ಏ ಕೆ

ಮಧ್ಯಾಹ್ನ ಎರಡು ಘಂಟೆಗೆ ಐದು ನಿಮಿಷ ಬಾಕಿ ಇತ್ತು.  ನ್ಯೂಸ್ ಕೇಳೋಣವೆಂದು ಟಿ.ವಿ.  ತಿರುಗಿಸಿದೆ.  ಕಾಲಿಂಗ್ ಬೆಲ್ ಬಾರಿಸಿತು.  ಇದೊಂದು `ನ್ಯೂಸೆನ್ಸ್' ಆಯಿತಲ್ಲಾ ಎಂದುಕೊಂಡು ಬಾಗಿಲು ತೆರೆದೆ.  ಐದಾರು ಹುಡುಗರು ನಾಯಿ ನಮ್ಮ ಮನೆಯಲ್ಲಿ ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು, "ಅಂಕಲ್, ನಾವು ಪ್ರತಿವರ್ಷದಂತೆ ಈ ಸಲವೂ ಗಣೇಶನನ್ನು ನಮ್ಮ ಬಡಾವಣೆಯ ಪಾರ್‍ಕಿನಲ್ಲಿ ಕೂರಿಸುತ್ತಿದ್ದೇವೆ.  ನೀವು ಏನಾದರೂ ಸಹಾಯ ಮಾಡಬೇಕು" ಒಬ್ಬ ವಿನಂತಿಸಿಕೊಂಡ.  ಮತ್ತೊಬ್ಬ ಪ್ಯಾಂಪ್ಲೆಟ್ ಕೈಗೆ ತುರುಕಿದ.  ನಾನು ಪಟ್ಟಿಯನ್ನು ಹಾಗೆಯೇ ಗಮನಿಸುತಾ "ಇದೇನ್ರಯ್ಯಾ, ಗಣೇಶ ಸಂಘ (ಸಂ.ರಂ.)' ಎಂದು ಪ್ರಿಂಟ್ ಮಾಡಿಸಿದ್ದೀರಿ.  ಇದು ಯಾವ ಸಂಘ?  ಮಾಮೂಲು ಇಡುತ್ತಿರುವವರು ನೀವೇ ತಾನೇ?  ಏಕೆಂದರೆ ಈ ಹಬ್ಬದ ಸೀಸನ್‌ನಲ್ಲಿ ಮೂರು ನಾಲ್ಕು ಗುಂಪುಗಳು ಬಂದು ನಮಗೆ ಚಂದಾ ಕೊಡಿ ನಮಗೆ ಚಂದಾ ಕೊಡಿ ಎಂದು ಪೀಡಿಸುತ್ತಾರೆ.  ಯಾರು ಸಾಚಾ, ಯಾರೂ ನೀಚಾ ಒಂದು ತಿಳಿಯುವುದಿಲ್ಲ.  ಅದೂ ಅಲ್ಲದೆ ಗಣೇಶ ಸಂಘ (ಸಂ.ರಂ) ಎಂಬುದನ್ನು ಈಗಲೇ ನಾನು ಕೇಳುತ್ತಿರುವುದು", ಎಂದೆ.  ಗುಂಪಿನ ನಾಯಕ ಮಾತಿಗೆ ಶುರುಮಾಡಿದ:  "ನಿಜ, ಅಂಕಲ್ ನೀವು ಹೇಳೋದು, ಬೀದಿ ಬೀದಿಗೂ ಒಂದೊಂದು ಗಣೇಶ ಸಂಘ ಪ್ರತಿ ಸಲವೂ ಇರುತ್ತಿದ್ದವು.  ಈ ಸಲ ಎಲ್ಲಾ ಸೇರಿ ಸಂಯುಕ್ತ ರಂಗವನ್ನು ರಚಿಸಿಕೊಂಡಿದ್ದೇವೆ".  "ಅಂದರೆ ಕೇಂದ್ರ ಸರ್‍ಕಾರದಲ್ಲಿರುವಂತೆ ಹತ್ತಾರು ರಾಜಕೀಯ ಪಕ್ಷಗಳು ಒಗ್ಗೂಡಿ ಸಂಯುಕ್ತರಂಗವನ್ನು ರಚಿಸಿರುವ ಮಾದರಿಯಲ್ಲಿ ಮಾಡಿಕೊಂಡಿದ್ದೀರಿ ಅಲ್ಲವೇ?"  ನಾನು ಕೇಳಿದೆ.  ಎಲ್ಲರೂ ಒಟ್ಟಾಗಿ "ನೀವು ಹೇಳಿದ್ದು, ಸೆಂಟ್ ಪರ್‌ಸೆಂಟ್ ಕರೆಕ್ಟ್ ಅಂಕಲ್.  ಈ ನಮ್ಮ ಬಡಾಣೆಯಲ್ಲಿ ಎರಡೇ ಸಂಘಗಳು ಗಣೇಶನನ್ನು ಕೂರಿಸಿವುದು.  ಬೇರೆಯ ಸಂಘ ವಿರೋಧ ಪಕ್ಷದವರದು.  ಅಂದರೆ ನಮ್ಮ ಸಂಘಕ್ಕೆ ಸೇರದೇ ಇರುವವರು.  ಅವರೇ ಪ್ರತ್ಯೇಕವಾಗಿ ಇಟ್ಟುಕೊಳ್ಳುತ್ತಾರೆ.  ಅವರೂ ಚಂದಾಕ್ಕೆ ನಿಮ್ಮಲ್ಲಿಗೆ ಬಂದರೂ ಬರಬಹುದು.  ಆದರೆ ನಮಗೇ ಕೊಡಿ ಪ್ಲೀಸ್" ಎಂದ ಅವರಲ್ಲಿ ಒಬ್ಬ.  ಕೇಂದ್ರ ಪರಿಸ್ಥಿತಿಯಂತೆಯೇ ಈ ಸಂಘಗಳು ಎಂದು ಅರಿವಾಯಿತು.

"ಅದೆಲ್ಲಾ ಸರಿ ಎರಡು ಸಂಘಗಳು ಇರುವ ಒಂದೇ ಪಾರ್‍ಕಿನಲ್ಲಿ ಹೇಗೆ ಗಣೇಶನನ್ನು ಇಡುತ್ತೀರಾ?"  "ಅದು ಬಹಳ ಸಿಂಪಲ್ ಅಂಕಲ್", ಒಬ್ಬ ನುಡಿದ.  "ಪಾರ್‍ಕಿನಲ್ಲಿ ಅವರು ಪೂರ್ವಕ್ಕೆ ಎದುರಾಗಿ ಗಣೇಶನನ್ನು ಕೂರಿಸಿದರೆ ನಾವು ಪಶ್ಚಿಮಕ್ಕೆ ಎದುರಾಗಿ ಕೂರಿಸುತ್ತೇವೆ" ಮುಂದುವರಿದು ಹೇಳಿದ.  "ಹೌದಪ್ಪಾ, ಇಬ್ಬಿಬ್ಬರು ಮೈಕ್ ಸೆಟ್‌ಗಳನ್ನು ಹಾಕಿದರೆ ನಮ್ಮ ಗತಿ?" ನಾನು ಕೇಳಿದೆ.  "ಹಾಗೇನಿಲ್ಲ;  ಅವರ ಮೈಕೇ ನಮಗೂ ಅಡ್ಜಸ್ಟ್ ಆಗಿ ಬಿಡುತ್ತೆ.  `ಟು ಇನ್ ಒನ್' ಅಷ್ಟೆ.  ಒಂದೇ ಪೆಂಡಾಲ್, ಲೈಟು ವ್ಯವಸ್ಥೆ ಎಲ್ಲಾ ಕಾಮನ್" ಎಂದೆಲ್ಲಾ ಹೇಳುತ್ತಿದ್ದ.

ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನನ್ನವಳು ದಿಢೀರ್‍ ಎಂದು ಬಂದವಳೇ ನನ್ನ ಕೈಲಿದ್ದ ಪಾಂಪ್ಲೆಟ್ ಕಿತ್ತುಕೊಂಡು ಓದಲು ಶುರು ಮಾಡಿದಳು.  "ಗಣೇಶ ಸಂಘ (ಸಂ.ರಂ) - ಏನ್ರೀ ಇದು ಸಂ.ರಂ.?  ನಿಮಗೆ ಮಾಡಲು ಇನ್ನೇನು ಬದುಕಿಲ್ಲವೆ?  ನಿಮಗೆ ಚಂದಾ ಕೊಡುವುದಿಲ್ಲ ಹೊರಟುಬಿಡಿ" ಎಂದು ಪಕ್ಷದ ಹೈಕಮಾಂಡ್‌ನಂತೆ ಗುಡುಗಿದಳು.  ಕೊನೆಗೆ `ಸಂ.ರಂ' ಅಂದರೆ ಏನು ಎಂದು ವಿವರಿಸಿ ನನ್ನವಳಿಗೆ ನಾನೇ ಹೇಳಬೇಕಾಯಿತು.
         *****

ಕೀಲಿಕರಣ: ಕಿಶೋರ್‍ ಚಂದ್ರ

ಜೀವಯಾನ

- ಗಿರಿಜಾಪತಿ ಎಂ. ಎನ್

ಸುಳಿವ ಗಾಳಿಗೆ
ತಳಿರು ತೂಗಲು
ಹಕ್ಕಿಗೊರಳಲಿ ಇನಿದನಿ......
ಉದಯ ಕಿರಣವು
ಮುದದಿ ಹೊಮ್ಮಲು
ಲತೆಗಳಲ್ಹರಳು ಸುಮದನಿ ಮಣ್ಣನಿ
ಯಾವ ಕೈಗಳು
ಬೆಸೆದ ಮಾಯೆಯೋ
ಲೋಕ ಜೀವಯಾನಕೆ ಮುನ್ನುಡಿ
ಇಂದು ನಿನ್ನೆಗು
ಮುನ್ನ ನಾಳೆಗೂ
ಸಾಗಿ ಬಂದಿದೆ ಜೇನ್ನುಡಿ
ಎಲ್ಲೆ ಮೀರದ ಹೆಜ್ಜೆಗಳಲಿ
ನಿತ್ಯ ಸಾಗುವ ಜೀವನ
ಎಷ್ಟು ಸ್ತುತಿಸಿದರಷ್ಟು ಸಾಲದ
ಸತ್ಯ ಸಗ್ಗವಿದುವೆ ಪಾವನ

        *****

ಕೀಲಿಕರಣ: ಕಿಶೋರ್‍ ಚಂದ್ರ

ಬಾಳು ಕೋಮಲ

- ಡಾ || ರಾಜಪ್ಪ ದಳವಾಯಿ

ಬಾಳು ಕೋಮಲ
ಎಳೆ ಬಾಳೆಯಲೆಯಲ
ಬಾಲೆ ಜೊತೆ ಮಧುರತೆಯಿರೆ
ಹಣ್ಣ ಸವಿ ಮೆದ್ದಂತೆ
ಸಂ - ಬಂಧ ಬಿರಿಯೆ
ದಿಂಡ ರಸಪಾನದಂತೆ
        *****

ನಗೆ ಡಂಗುರ - ೨

- ಪಟ್ಟಾಭಿ ಎ ಕೆ

ಗುರುಗಳು ಆರೋಗ್ಯ ಶಾಸ್ತ್ರಪಾಠ ಮಾಡುತ್ತ ಶಿಷ್ಯನಿಗೆ ಪ್ರಶ್ನೆ ಕೇಳಿದರು:  "ಉಪವಾಸ ಮಾಡುವುದರಿಂದ ಏನೇನು ಪ್ರಯೋಜನ ಆಗುತ್ತದೆ?"
ಶಿಷ್ಯ:  "ಇದರಿಂದ ತುಂಬಾ ಉಳಿತಾಯ ಆಗುತ್ತದೆ;  ತರಕಾರಿ ಬೇಳೆ, ಹಾಲು, ಮೊಸರು, ಯಾವುದನ್ನೂ ಕೊಳ್ಳಬೇಕಿಲ್ಲ ಸರ್‍!"

        *****

ಬೆಳ್ಳಿಯ ಬಟ್ಟಲು

- ಅಬ್ಬಾಸ್ ಮೇಲಿನಮನಿ

        - ೧ -
ನಾಲ್ಕಾರು ದಿನಗಳಿಂದ ಇಮಾನಬಿಯ ಮನಸ್ಸಿಗೆ ಸಮಾಧಾನವಿರಲಿಲ್ಲ.  ಅವಳ ಮೊಮ್ಮಗ ಹೈದರನ ಮೈಯೆಂಬೋ ಮೈ ಕೆಂಡಕೆಂಡವಾದರೆ ಮತ್ತೊಮ್ಮೆ ಮಂಜುಗಡ್ಡೆ.  ಹಗಲು-ರಾತ್ರಿ ವಿಲಿ ವಿಲಿ ಮೊರೆತ.  ತುಂಡು ಬ್ರೆಡ್ಡು ಚೂರು, ಬಿಸ್ಕೀಟು, ವಿಷದ ಬಾಯಿ ಸೇರುತ್ತಿಲ್ಲ ಕುಟುಂಬದ ವೈದ್ಯರು ಕೊಟ್ಟ ಔಷಧಿ, ಗುಳಿಗೆಗಳನ್ನು ರಮಿಸುತ್ತ, ಸಿಟ್ಟು ಮಾಡಿ, ಒತ್ತಾಯದಿಂದ ಮಗನಿಗೆ ನುಂಗಿಸುವ ಸಬಿನಾ ಒಂದೇ ಸಮನೆ ತಹತಹಿಸುತ್ತಿದ್ದಾಳೆ.  ಹೈದರನ ಜ್ವರ ಔಷಧಿಗೆ ಬಗ್ಗುತ್ತಿಲ್ಲ.  ನಿನ್ನೆ ದವಾಖಾನಗೆ ಹೋದಾಗ ವೈದ್ಯರು ಹುಡುಗನ ರಕ್ತ ಪರೀಕ್ಷಿಸಿಕೊಂಡು ಬರಲು ಹೇಳಿದ್ದರು.  ಇಮಾನಬಿ ಮನೆಯಲ್ಲಿದ್ದ ಪುಡಿಗಾಸುಗಳನ್ನು ಹೊಂದಿಸಿಕೊಂಡು ಹೋಗಿ ಹೈದರನ ರಕ್ತ ಪರೀಕ್ಷಿಸಿಕೊಂಡು ಬಂದಿದ್ದಳು.  "ನನ್ನ ಆನುಮಾನ ನಿಜಾ ಆತು.  ನಿನ್ನ ಮೊಮ್ಮಗ್ಗ ಮಲೇರಿಯಾ.  ಆವನ್ನ ಪಾಟೀಲ ಡಾಕ್ಷರ್ ದವಾಖಾನಿಗೆ ಅಡ್ಮಿಟ್ ಮಾಡಿಸಿರಿ" ಎಂದು ರಿಪೋಟ್೯ ನೋಡಿ ಹೇಳಿದ್ದರು ವೈದ್ಯರು.  ಆದನ್ನು ಕೇಳಿ ಸಬಿನಾ ಥರಗುಟ್ಟಿದ್ದಳು.  ಇಮಾನಬಿಯ ನರನಾಡಿಯಲ್ಲಿನ ರಕ್ತ ನಿಶ್ಚಲಗೊಂಡಂತಾಗಿತ್ತು.

ಗರೀಬಿರಿಗೆ ಖಾಸಗಿ ದವಾಖಾನೆ ಯಂದರೆ ಸುಮ್ಮನೆ ಆದೀತೆ? ಆಲ್ಲಿ ಹಣವೇ ಮಾತಾಡುವುದು.  ಆದನ್ನು ನೆನಪಿಸಿಕೊಂಡೆ ಇಮಾನಬಿ "ಸರಕಾರಿ ದಾವಾಖಾನೆಗೆ ಕರ್ಕೊಂಡು ಹೋಗ್ತೀನಿ ಸಾಹೇಬರ" ಎಂದಿದ್ದಳು.

"ಆಲ್ಲಿಯಾರು ದರಕಾರ ಮಾಡ್ತಾರ ನಿನ್ನ ಮೊಮ್ಮಗನ್ನ?" ವೈದ್ಯರು ಪ್ರಶ್ನಿಸಿದ್ದರು.  ಆವರು ಹೇಳಿದ್ದರಲ್ಲಿ ಸುಳ್ಳು ಇರಲಿಲ್ಲ ಜೀವದ ಮೇಲೆ ಆಸೆ ಇಲ್ಲದವರು ಸರಕಾರಿ ದವಾಖಾನೆಗೆ ಹೋಗಬೇಕು.  ಕಣ್ಣಲ್ಲಿ ರಕ್ತ ಹರಿಸಿದರೂ ಆಲ್ಲಿನ ಶ್ವೇತ ಪಿಶಾಚಿಗಳಿಗೆ ತೊಟ್ಟು ಕರುಣೆ ಹುಟ್ಟುವುದಿಲ್ಲ.  ಒಮ್ಮೆ ಬೆಡ್ ಮೇಲೆ ಮಲಗಿದರೆ ಅವರ ಅದ್ವಾನ ಚಿತ್ರಹಿಂಸೆಗಳಿಂದ ಕಫನ್ (ಶವದ ಮೇಲೆ ಹೊದಿಸುವ ಬಟ್ಟೆ) ಹೊದ್ದುಕೊಳ್ಳಬೇಕು ಎಂಬಂಥ ಸಂಗತಿಗಳನ್ನು ಇಮಾನಬಿ ಕೇಳಿದ್ದಳು.  ಸರಕಾರಿ ದವಾಖಾನೆಯ ಗೊಡವೆ ಬೇಡವೆಂದು ನಿರ್ಧರಿಸಿದ ಆಕೆ ಸಾಹೇಬರ ದೊಡ್ಡ ದವಾಖಾನ್ಯಾಗ ಖರ್ಚು ಎಷ್ಟು ಬರಬಹುದ್ರಿ?" ಎಂದು ಕೇಳಿದ್ದಳು.

"ಹ್ಯಾಂಗ್ ಹೇಳುದು.  ಜಲ್ದಿ ಆರಾಮಾದ್ರ ರೊಕ್ಕ ಕಡ್ಮಿ ಖರ್ಚಾಗಬಹುದು.  ಆದ್ರ ನೀವು ರೊಕ್ಕದ ಚಿಂತಿ ಮಾಡ್ಕೊಂತ ಕುಂತ್ರ ಹುಡ್ಗನ್ನ ಕಳ್ಕೊಂತಿರಿ ಮತ್ತ' ಎಂದು ವೈದ್ಯರು ಎಚ್ಚರಿಸಿ ಕಳಿಸಿದ್ದರು.

ಹೈದರ್ ಒಮ್ಮೆ ಥಂಡಿ ಎನ್ನುವನು.  ಮತ್ತೊಮ್ಮೆ ಮೈಯಲ್ಲಾ ಕಾದ ಹೆಂಚಾಗಿ ನರಳುವನು.  ಹನಿ ನೀರು ಕುಡಿಸಿದರೂ ಹೊಟ್ಟಿಯಿಂದ ಹೊರಗೆ ಬರುವುದು.  ಶಾಂತವಾಗಿ ಮಲಗಿದ್ದಾನೆ ಎಂದುಕೂಳ್ಳುವಷ್ಟರಲ್ಲಿ ಗಬಕ್ಕನೆ ಹೆದರಿಕಯಿಂದ ಎದ್ದುಕುಳಿತುಕೊಳ್ಳುವನು.  ತಾಯಿ- ಮಗಳು ಅವನೆದುರು ದೃಷ್ಟಿ ನೆಟ್ಟು ಕುಳಿತೆ ಇದ್ದರು.  ಅವನ ಬಾಡಿದ ಮುಖ ನೋಡುತ್ತ ಕಳವಳಿಸುವರು.  ವೈದ್ಯರ ಮಾತು ಅವರ ಎದೆಯ ಒಳಗೆ ಪ್ರತಿಧ್ವನಿಸುತ್ತಲೇ ಇದ್ದವು.

ಮೊಮ್ಮಗನನ್ನು ದವಾಖಾನೆಗೆ ಸೇರಿಸಲೇಬೇಕು.  ಹಣಕ್ಕೇನು ಮಾಡುವುದು? ಇಮಾನಬಿ ಯೋಚಿಸುತ್ತಲೇ ಇದ್ದಳು ಮತ್ತೆ ಧಣಿಯರ ಎದುರು ನಿಂತು ದ್ಯೆನೇಸಿ ಕೈಯೊಡ್ಡಬೇಕು.  ನೇಯ್ಗೆಯೂ ಸಮಯಕ್ಕಿಲ್ಲ.  ಸರಿಯಾಗಿ ಬಾಕಿ ಮುರಿಯಲು ಸಾಧ್ಯವಾಗಿಲ್ಲ.  ಯಾವ ಮುಖವಿಟ್ಟುಕೊಂಡು ಹೋಗಿ ನಿಲ್ಲುವುದು ಧಣಿಯರ ಮುಂದೆ.

ಹೈದರ ಒಮ್ಮಲೆ ಅಳತೊಡಗಿದ.

ಸಬಿನಾ ಅವನ ಹಣೆಯ ಮೇಲೆ ಕೈಯಿಟ್ಟು "ಅಮ್ಮಾ ಮೈಯೊಳಗಿಂದ ಉಗಾ ಬಂದ್ಹಂಗ ಅನಸಾಕ ಹತ್ತೈತಿ.  ದವಾಖಾನೆಗ ಕರ್ಕೊಂಡು ಹೋಗುನ್ನಡಿ" ಎಂದು ಗಡಿಬಿಡಿಸಿದಳು.

"ಹ್ವಾದ ಕೂಡ್ಲೆ ಅಲ್ಲಿ ರೊಕ್ಕಾ ಕೊಡಬೇಕು ಬೇಟಿ.  ಹ್ಯಾಂಗ್ ಮಾಡುದಂತ ವಿಚಾರ ಮಾಕಾಡಲಿಕ ಹತ್ತೀನಿ."
"ನೀ ಹೀಂಗ ಕುಂತ್ರ ನನ್ನ ಬೇಟಾ ಕಬರಸ್ತಾನ (ಸ್ಮಶಾನ) ಸೇರ್ತಾನ" ಸಬಿನಾ, ಸಂಕಟ, ಸಿಟ್ಟು ವ್ಯಕ್ತಪಡಿಸಿದಳು.
"ಧನೇರ ಹತ್ರ ಹೋಗಿ ಕೇಳಾಕ ನನ್ಗ ನಾಚ್ಗಿ ಬರತೈತಿ ಬೇಟಿ" ಹತಾಶೆಯಿತ್ತು ಇಮಾನಬಿಯ ಧ್ವನಿಯಲ್ಲಿ.
"ಅವರ ಹತ್ರ ಯಾಕ್ ಹೋಗ್ತಿ ಆ ಬೆಳ್ಳಿ ಬಟ್ಲ ಐತಲ್ಲ"
"ಅಂದ್ರ...  ಆ ಬೆಳ್ಳಿ ಬಟ್ಲ ಮಾರಂತಿಯೇನು ನೀನು?" ದಿಗಿಲಾಗಿ ಕೇಳಿದಳು ಇಮಾನಬಿ.
"ಮಾರೇರ ಮಾರು ಇರ್ಲಿಕಂದ ಒತ್ತಿಯರ ಇಡು.  ಮೊದ್ಲ ರೊಕ್ಕಾ ತಗೊಂಡು ಬಾ." ನಿಷ್ಟುರವಾಗಿ ಹೇಳಿದಳು ಸಬಿನಾ.
"ಅದರ ಮ್ಯಾಲೆ ಬಿತ್ತೇನು ನಿನ್ನ ಕಣ್ಣು.  ನೀನೂ ಚಲೋ ಆದಿ ಮತ್ತ.." ಮಗಳ ಮಾತನ್ನು ಧಿಕ್ಕರಿಸುತ್ತ ಇಮಾನಬಿ ನಾಗವಂದಿಗೆಯ ಮೇಲೆ ತನ್ನ ನೋಟ ಹರಿಸಿದ್ದಳು.

         - ೨ -

ಆಲ್ಲಿ ಇದ್ದದ್ದು ಒಂದು ಹಳೆಯ ಟ್ರಂಕು.  ಅದನ್ನು ಅವಳ ಅಬ್ಬಾ ಗುಲಬರ್ಗಾ ಬಂದೇನವಾಜ್ ಉರುಸಿಗೆ (ಜಾತ್ರೆ) ಹೋದಾಗ ತಂದಿದ್ದ.  ಮತ್ತು ಅದನ್ನ ಅವಳ ನಿಕಾಹ್
(ಮದುವೆ)ಯಲ್ಲಿ ಜೀಜಿ (ವಧುವಿನೊಂದಿಗೆ ಕಳುಹಿಸುವ ಪಾತ್ರೆ ಸಾಮಾನುಗಳು)ನ ಸಾಮಾನುಗಳೊಂದಿಗೆ ಕೊಟ್ಟಿದ್ದ ದಪ್ಪ ತಗಡಿನ, ಹಸಿರು ಬಣ್ಣದ, ಹೂಬಳ್ಳಿಗಳಿಂದ ಚಂದವೆನಿಸಿದ ಆ ಟ್ರಂಕಿನಲ್ಲಿ ಅವಳ ಎರಡು ಇಲಕಲ್ಲ ಸೀರೆ, ಗುಳೇದಗುದ್ದದ ಬಣ್ಣದ ಕುಪ್ಪಸಗಳಿದ್ದವು.  ಈದ್ ಸಮಯದಲ್ಲಿ ಇಮಾನಬಿ ಹೀಗೆ ಉಟ್ಟು ಹೀಗೆ ಇಡುವ ಕಾರಣದಿಂದ ಸೀರೆಯ ಮಡಿಕೆ ಕೆಡದಂತಿದ್ದವು.  ಆ ಮಡಿಕೆಗಳಲ್ಲಿ ಜೋಪಾನವಾಗಿ ಇರುವುದೇ ಬೆಳ್ಳಿಯ ಬಟ್ಟಲು.  ಖಾದರಖಾನ್‍ಗೆ ಅದು ನಜರಾನಾ (ಕಾಣಿಕೆ) ರೂಪದಲ್ಲಿ ಸಿಕ್ಕಿದ್ದು ಅವನು ಒಳ್ಳೆಯ ಹಾಡುಗಾರ.  ಉರುಸುಗಳ ಬೈಠಕ್‍ನಲ್ಲಿ ಪಾಲ್ಗೊಳ್ಳುತ್ತಿದ್ದ ಒಂದು ಸಂದರ್ಭದಲ್ಲಿ ಅವನ ಗಾಯನಕ್ಕೆ ತಲೆದೂಗಿ, ಸಂಪ್ರೀತಿಯಿಂದ ಮುರಷಿದ್ (ಧರ್ಮಗುರು)ರೂಬ್ಬರು ಈ ಬಟ್ಟಲನ್ನು ನೀಡಿ ಗೌರವಿಸಿದ್ದರು.  ಈ ಸನ್ಮಾನದಿಂದ ಖಾದರಖಾನ್‍ಗೆ ಅತ್ಯಂತ ಖುಷಿಯೆನಿಸಿತ್ತು.

ಹೈದರಾಬಾದಿನ ನಿಜಾಮನಿಂದಲೋ, ದೆಹಲಿಯ ಬಾದಶಹನೊಬ್ಬನಿಂದಲೋ ಈ ಬೆಳ್ಳಿಯ ಬಟ್ಟಲು ಧರ್ಮ ಗುರುವಿಗೆ ಭಕ್ತಿರೂಪದಲ್ಲಿ‌ಆರ್ಪಿತವಾದುದು ಎಂಬ ಪ್ರತೀತಿಯಿತ್ತು.  ಇಂಥ ವಸ್ತುವಿನ ಮೇಲೆ ವ್ಯಾಮೋಹ ಇಟ್ಟುಕೊಳ್ಳದ ಮುರಷಿದ್‍ರು ಅದನ್ನು ಖಾದರಖಾನಗೆ ನೀಡಿದ್ದರು.  ಬಟ್ಟಲನ್ನು ದೇವರ ಅನುಗ್ರಹವೆಂದು ನಂಬಿದ್ದ ಖಾದರಖಾನ್ ಅದನ್ನು ಉತ್ಸಾಹದಿಂದ ಎಲ್ಲರಿಗೂ ತೋರಿಸಿದ್ದ.

ಅಜಮಾಸು ಇಪ್ಪತ್ತುತೊಲೆಗೂ ಮಿಕ್ಕಿದ ಬೆಳ್ಳಿಯ ಬಟ್ಟಲು ಅತ್ಯಾಕರ್ಷಕವಾಗಿತ್ತು.  ಕೆಲವರು ಆದನ್ನು ಕ್ಕೆಯಲ್ಲಿ ಹಿಡಿದು ಸೂಕ್ಷ್ಮ ನಕ್ಷೆಗಳ ಸೌಂದರ್ಯ ಸವಿದಿದ್ದರು.  ಇನ್ನೂ ಕೆಲವರು ಆ ಬಿಟ್ಟಲು ಬಾದಷಹನಿಗೆ ಸಂಬಂಧಿಸಿದ್ದೆಂದು, ಅದರ ವೈಭವವನ್ನು ತಮಗೆ ಇಷ್ಟವನಿಸಿದಂತೆ ಊಹಿಸಿಕೊಂಡು ಖುಶಿ ಅನುಭವಿಸಿದ್ದರು.  ಮತ್ತೊಂದಿಷ್ಟು ಮಂದಿ ಅದು ಮುರಷಿದ್‍ರ ಹಸ್ತದಿಂದ ಬಂದ ಪುಣ್ಯದ ಸಂಕೇತವೆಂದು ಪರಿಭಾವಿಸಿ ಆ ಬಟ್ಟಲಿಗೆ ದುಡ್ಡು ಹಾಕಿ ಶ್ರದ್ಧಾಭಕ್ತಿ ಪ್ರದರ್ಶಿಸಿದ್ದರು.  ಖಾದರ್ ಖಾನ್ ಆದನ್ನು ಆಚ್ಚರಿಯಿಂದ ಗಮನಿಸಿದ್ದ.  ಆ ದುಡ್ಡು ತಂದು ತಾಯಿಯ ಕೈಗೆ ಕೊಟ್ಟಿದ್ದ.  ಪರವರ್ದಿಗಾರ (ದೇವರು) ಬೆಳ್ಳಿಯ ಬಟ್ಟಲಲ್ಲಿ ಕರಾಮತ್ತು ಇರಿಸಿದ್ದಾನೆಂದು ಆಕೆ ದೃಢವಾಗಿ ನಂಬಿದ್ದರು.  ಆ ಹಣದಿಂದ ಮೊಹರಂ ಹಬ್ಬದಲ್ಲಿ ಹಸೇನ-ಹುಸೇನರಿಗೆ ಕಂದೂರಿ (ದೇವರ ಹೆಸರಲ್ಲಿ ಊಟ ಮಾಡಿಸುವುದು) ಮಾಡಿ ಐದು ಜನ ಫಕೀರರಿಗೆ ಉಣಿಸಿದ್ದಳು.

ಅವಳ ಮರಣಾನಂತರ ಈ ರಿವಾಜು ಖಾದರ್ ಖಾನನಿಂದ ಮುಂದುವರಿದಿತ್ತು.  ಪ್ರತಿವರ್ಷ ಮೊಹರಂ ಆರಂಭದ ಮೊದಲ ಐದು ದಿನಗಳಲ್ಲಿ ಖಾದರ್‌ಖಾನ್ ಬೆಳ್ಳಿ ಬಟ್ಟಲು ತೆಗೆದುಕೂಂಡು ಹಿಂದೂ-ಮುಸ್ಮಿಮರೆಂದು ಭೇದ ಮಾಡದೆ ಕೆಲವು ಮನೆಗಳಿಗೆ ಹೋಗುತ್ತಿದ್ದ.  ಸ್ಥಿತಿವಂತರಾಗಿದ್ದ ಆವರಿಗೆ ಬಟ್ಟಲು ತುಂಬ ಚುರಮರಿ, ಬೆಂಡು, ಬತ್ತಾಸು ಕೊಡುತ್ತಿದ್ದ.  ಅವರು ಖುಶಿ ರೂಪದಲ್ಲಿ ಬಟ್ಟಲಿನಲ್ಲಿ‌ಇರಿಸಿದ ಹಣ ತಂದು ಕತ್ತಲ್ ರಾತ್ರಿಯ (ಇಮಾಮ್ ಹುಸೇನರು ಹುತಾತ್ಮಾರಾದ ದಿನ) ದಿನ ಕಂದೂರಿ ಮಾಡಿ, ಮಣ್ಣಿನ ಪರಿಯಾಣದಲ್ಲಿ ಜೋಳದ ಕಿಚಡಿ ಮತ್ತು ಬಿಂದಿಗೆಯಲ್ಲಿ ಶರಬತ್ತನ್ನು ಮಸೀದಿಗೆ ಒಯ್ದು ಹಸೇನ-ಹುಸೇನರಿಗೆ ಫಾತಿಹಾ (ನೈವೇದ್ಯ) ಕೊಟ್ಟು ಬರುವಾಗ ಫಕೀರರನ್ನು ಕರೆದುಕೊಂಡು ಬಂದು ಊಟ ಮಾಡಿಸುತಿದ್ದ. 

ಅಮ್ಮಾ ......  ಅಮ್ಮಾ ....  ಹೈದರನ ಒಣಗಿದ ತುಟಿಗಳು ಸಂಕಟದ ಧ್ವನಿಯಲ್ಲಿ ತೆರೆದುಕೊಳ್ಳುತ್ತಲೇ ಇದ್ದವು.  ಮಗನ ಸುಡುವ ಹಣೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಬದಲಾಯಿಸುತ್ತಿದ್ದ ಸಬಿನಾ ತುಮುಲ ಅನುಭವಿಸತೊಡಗಿದಳು.  ಮಗಳ ಮುಖ ನೋಡಿದ ಇಮಾನಬಿಯ ವಿಹ್ವಲತೆ ವರ್ಧಿಸತೊಡಗಿತು.  ಮತ್ತೆ ಅವಳ ಕಣ್ಣು ಟ್ರಂಕಿನ ಮೇಲೆ ಹರಿದಾಡಿತು.  ತಂದೆಯ ನೆನಪು ಕಾಡಿತು ಆಕೆಗೆ.

         - ೩ -

ಖಾದರಖಾನ ಸ್ಥಿತಿವಂತನಾಗಿರಲಿಲ್ಲ.  ಹಿರಿಯರು ಗಳಿಸಿದ ಒಂದು ಮನೆ, ಎರಡು ಮಗ್ಗಗಳು ಅವನ ಪಾಲಿಗಿದ್ದವು.  ಅಮರಪ್ಪ ಧಣಿಯರ ಮನೆಯಿಂದ ರೇಷ್ಮೆ ಚಮಕಾ ತಂದು ಅವನು ಸೀರೆ ನೇಯುತ್ತಿದ್ದ.  ಅವನೆದುರು ಮಗ್ಗದಲ್ಲಿ ಜೈರಾಬಿ ನೇಯುತ್ತಿದ್ದಳು.  ಗಾಯನ, ಸಂಗೀತವೆಂದರೆ ಅವನಿಗೆ ಆದಮ್ಯ ಪ್ರೀತಿ.  ಮಗ್ಗದ ನಾದದೊಳಗೆ ತನ್ನ ಸ್ವರ ಮಾಧುರ್ಯ ಸಂಯೋಜಿಸಿ ಅವನು ತನ್ಮಯವಾಗಿ ಹಾಡುತ್ತಿದ್ದ.  ಸಂತ ಶಿಶುನಾಳ ಶರೀಫ್‌ರ ಆನುಭಾವದ ಗೀತೆ, ದಾಸರಪದ, ಶರಣರ ವಚನಗಳನ್ನು ಹಾಡುತ್ತಿದ್ದರೆ ಗಲ್ಲಿಯೆಂಬೊಗಲ್ಲಿ ಗಂಧರ್ವಲೋಕವಾಗುತ್ತಿತ್ತು.  ಜಾತ್ರೆ ಉತ್ಸವ, ಉರುಸು ಸಂದರ್ಭಗಳಲ್ಲಿ ಖಾದರಖಾನನ ಗಾಯನ ಇದೆಯೆಂದರೆ ಜನರಿಗೆ ವಿಶೇಷ ಆಸಕ್ತಿ ಅವರ ಉತ್ಸಾಹದಿಂದ ಅರಳಿಕೊಂಡ ಅವನು ಹಸನಾಗಿ ಹಾಡಿ, ಸಮಿತಿಯವರು ಕೊಟ್ಟಷ್ಟು ಹಣ ಮತ್ತು ಮಾನ ಸನ್ಮಾನದೊಂದಿಗೆ ಹಿಂತಿರುಗುತ್ತಿದ್ದ.

ಆಗೆಲ್ಲ ವಿದ್ಯುತ್ ದೀಪಗಳಿರಲಿಲ್ಲ.  ಹೀಗಾಗಿ ಊರ ಪಂಚಾಯಿತಿಯ ಛೇರಮನ್‌ರು ಹೇಳಿಕಳಿಸಿದರೆ ಹೋಗಿ ಸೂರ್ಯ ಮುಳುಗಿದ ತುಸು ಹೊತ್ತಿಗೆ ರಸ್ತೆಯ ದೀಪಗಳನ್ನು ಹಚ್ಚಿ ಬರುತ್ತಿದ್ದ.  ದೀಪ ಹಚ್ಚುವುದೆಂದರೆ ಹಾಡಿನಷ್ಟೇ ಪ್ರೀತಿ ಅವನಿಗೆ.  ಜೈರಾಬಿ ಗಂಡನಿಗೆ ಎಂದಿಗೂ ಬಂಧನಕಾರಿಯೆನಿಸಲಿಲ್ಲ.  ಅವಳ ತೀವ್ರ ಕಾಳಜಿಯಿಂದಾಗಿ ಇಮಾನಬಿ ನಿಕಾಹ್ ಆಗಿತ್ತು.  ಅಳಿಯ ಸಿರಾಜಲಿ ಜೈರಾಬಿಗೆ ದೂರದ ಸಂಬಂಧಿಯೇ ಆಗಿದ್ದ ಒಬ್ಬಳೆ ಮಗಳನ್ನು ಕಣ್ಣೆದುರಿಗೆ ಇಟ್ಟುಕೊಳ್ಳಲೆಂದು ಖಾದರಖಾನ್ ಸಿರಾಜಲಿಯನ್ನು ಮನೆಯ ಅಳಿಯನನ್ನಾಗಿ ಇಟ್ಟುಕೊಂಡಿದ್ದ.  ಮತ್ತು ಮಗನಂತೆ ಕಾಣುತ್ತಿದ್ದ ಸಿರಾಜಲಿಗೆ ನೇಯ್ಗೆ ಕಲಿಸುವ ಆಸೆಯಿತ್ತು ಜೈರಾಬಿಗೆ.  ಆದರೆ ಅವನು ಬಸ್ ಸ್ಟ್ಯಾಂಡಿನಲ್ಲಿ ಹಮಾಲಿ ಮಾಡಿಕೂಂಡಿದ್ದ.  ಇಮಾನಬಿ ಒಂದು ಹೆಣ್ಣು ಮಗುವಿನ ತಾಯಿಯಾದ ಮೇಲೆ ಜೈರಾಬಿ ಕ್ಷಯದ ಬಾಧೆಯಿಂದ ತೀರಿಕೊಂಡಿದ್ದಳು.  ಅವಳಿಲ್ಲದೆ ಪ್ರತಿಯೊಂದು ಕ್ಷಣಗಳು ಖಾದರಖಾನನನ್ನು ಅನಾಥ ಪ್ರಜ್ಞೆಗೀಡು ಮಾಡಿದ್ದವು.  ಇಮಾನಬಿ ಮಗ್ಗದಲ್ಲಿ ಕುಳಿತಿದ್ದಳು.  ತಂದೆಯ ಮೇಲೆ ಸ್ಫುರಿಸಿದ ಅವಳ ಕಾಳಜಿ ನಿಷ್ಪ್ರಯೋಜಕವಾಗಿತು.  ಜೈರಾಬಿಯನ್ನು ಮನಸು ತುಂಬಿಕೊಂಡು ಕುಳಿತಿದ್ದ ಖಾದರ್‌ಖಾನ್ ಹಾಡು ಹೇಳುತ್ತ ಕುಳಿತಿರುವಾಗಲೇ ತನ್ನುಸಿರು ನಿಲ್ಲಿಸಿದ.


         - ೪ -

ಆಘಾತ ಸಹಿಸಿಕೂಂಡಿದ್ದಳು ಇಮಾನಬಿ.

ತನ್ನ ಬಾಬಾನ ನೆನಪು ತೀವ್ರವಾದಾಗಲೆಲ್ಲ ಆಕೆ ಟ್ರಂಕಿನ ಕೀಲಿ ತೆರೆದು ಬೆಳ್ಳಿಯ ಬಟ್ಟಲಿನೊಳಗೆ ಮನಸು ನೆಟ್ಟು ಕುಳಿತುಕೊಳ್ಳುತ್ತಿದ್ದಳು.  ಸಾಯುವ ಮುಂಚಿನ ದಿನ ಖಾದರಖಾನ್ ಮಗಳನ್ನು ಹತ್ತಿರ ಕುಳ್ಳಿರಿಸಿಕೊಂಡು "ಹಿರ್ಯಾರು ಗಳಿಸಿದ ಈ ಮನಿ ಬಿಟ್ಟು, ನಿನ್ನ ಜೀವಕ್ಕ ಮತ್ತೊಂದಾಧಾರ ಮಾಡಾಕ ನನ್ನಿಂದೇನೂ ಸಾಧ್ಯ ಆಗಲಿಲ್ಲ ಬೇಟಿ.  ನನ್ನ ಗರೀಬಿ ನಿನ್ನ ಕೂಡ ಹಂಗ ಉಳಿತು.  ನನ್ನ ಮಾಫ್ (ಕ್ಷಮೆ) ಮಾಡು.  ಈ ಬೆಳ್ಳಿ ಬಟ್ಲಾ ನಿನ್ನ ಹಂತೇಕನ ಇರಲಿ.  ನಿನ್ನ ದಾದಿ ಹರಕಿ ಈಡೇರಿತು.  ಯಾವ ಪ್ರಸಂಗದಾಗೂ ಈ ಬಟ್ಲಾ ಹೊರಗ ಹೋಗಾಕ ಕೊಡಬ್ಯಾಡ" ಎಂದಿದ್ದ.

ಏಕಾ‌ಏಕಿ ಗೋಣನ್ನು ಅತ್ತಿತ್ತ ಹೊರಳಾಡಿಸಿದ ಹೈದರನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ನೇವರಿಸತೊಡಗಿದಳು ಸಬಿನಾ.  ಅಮ್ಮಾ...ದಾದಿ....  ಅಮ್ಮಾ....  ದಾದಿ.....  ಎಂದು ತನಗರಿವಿಲ್ಲದಂತೆ ಬಡಬಡಿಸತೊಡಗಿದ ಮೊಮ್ಮಗನ ಕೈಹಿಡಿದುಕೊಂಡಳು ಇಮಾನಬಿ.  "ಸುಡುಗಾಡು ಜ್ವರ.  ಕೂಸಿನ ದೇಹಾನ್ನ ಪಿಶಾಚಿ ಹಂಗ ಹಿಡ್ಕೊಂಡು ಬಿಟ್ಟಿತಲ್ಲ" ಒಳಗೇ ಕಳವಳಿಸಿದಳು ಆಕೆ.

ನೋವಿಗೆ ಸಾವಿಗೆ ಆಯಾಸ ಪಡಬೇಡ
ದೇವ ಗಂಗಾಧರನು ಭಾವದೊಳಿರಲು
............................
ವಸುಧಿಯೊಳ್ ಶಿಶುನಾಳಧೀಶನ ಹಸುಳನೆ
ಕಸಿವಿಸಿ ಹೊಂದುವದು ಹಸನಲ್ಲ ನಿನಗೆ

ಖಾದರಖಾನ್ ನೇಯುತ್ತಿದ್ದ ಮಗ್ಗದ ಕಡೆಯಿಂದ ಅಲೆ ಅಲೆಯಾಗಿ ತೇಲಿ ಬಂದಿತ್ತು ಹಾಡು.  ಇಮಾನಬಿಯ ಮನಸ್ತು ಮತ್ತ ಹಿಂದಿನದನ್ನು ಜ್ಞಾಪಿಸಿಕೊಂಡಿತ್ತು.

         - ೫ -

ಅವತ್ತು ಆಕಾಶದಲ್ಲಿ ಚಂದ್ರ ಕಾಣಿಸಿಕೂಂಡಿದ್ದ.  ಮಸೀದೆಯ ಮುಂದೆ ಕುದಾಲಿ (ಮೊಹರಂ ಹಬ್ಬದ ಮೊದಲನೇ ದಿನ ದೇವರ ಎದುರು ತೋಡುವ ಗುಂಡಿ) ಹಾಕಲಾಗಿತ್ತು.

ಇಮಾನಬಿಯ ಕಣ್ಣು ಒದ್ದೆಯಾಗಿದ್ದವು.  ತನ್ನ ಅಬ್ಬಾ ಇಲ್ಲದ ಮೊದಲ ಮೊಹರಮ್‌ದ ಆ ಕ್ಷಣಗಳಲ್ಲಿ ಆಕೆಯ ಹೃದಯ ಹೆಪ್ಪುಗಟ್ಟಿತ್ತು.  ಅವಳ ಸಂವೇದನೆಗಳಿಗೂ ತನಗೂ ಸಂಬಂಧವಿಲ್ಲದವನಂತಿದ್ದ ಸಿರಾಜಲಿ, ತನ್ನನ್ನು ತಾನೇ ಸಂಬಾಳಿಸಿಕೊಂಡಿದ್ದಳು ಇಮಾನಬಿ.  ಸ್ನಾನಮಾಡಿ ಟ್ರಂಕಿನೊಳಗಿಂದ ಬೆಳ್ಳಿಯ ಬಟ್ಟಲು ತೆಗೆದು, ಅದನ್ನು ಮೀಸಲು ನೀರಿನಿಂದ ತೊಳೆದು, ಗಂಧ ಲೇಪಿಸಿ, ಊದು ಹಾಕಿ ಸಕ್ಕರೆ ಫಾತಿಹಾ ಕೊಟ್ಟದ್ದಳು.  ಖಾದರಖಾನ್ ಒಯ್ಯುತ್ತಿದ್ದ ಒಂದು ಚಿಕ್ಕ ಪಿಸ್ವಿ (ಚೀಲ)ಯಲ್ಲಿ ಚುರುಮರಿ, ಬೆಂಡು-ಬತ್ತಾಸು ತುಂಬಿಕೊಂಡು, ಅದರಲ್ಲಿ ಬಟ್ಟಲು ಹುದುಗಿಸಿಟ್ಟು ಆಕೆ ಹೊಸಿಲು ದಾಟಿದ್ದಳು.

ಅವಳ ಚಟುವಟಿಕೆಗಳನ್ನು ಗಮನಿಸಿದ್ದ ಸಿರಾಜಲಿ ತುಟಿ ಎರಡು ಮಾಡಿರಲಿಲ್ಲ. 

ಕೋಲಾಹಲವಿತ್ತು ಅವನೆದೆಯೊಳಗೆ.  ತನ್ನ ತಂದೆಯ ರೀತಿ-ರಿವಾಜುಗಳನ್ನು ಅನುಸರಿಸುತ್ತಿರುವ ಇಮಾನಬಿಯ ಧೋರಣೆಗಳ ಬಗ್ಗೆ ಅವನಿಗೆ ಸಿಟ್ಟು ಬರತೊಡಗಿತ್ತು.  ಹೆಣ್ಣುಹೆಂಗಸು ಹೀಗೆ ಹೊರಗೆ ಹೋಗಿ, ಮನೆ ಮನೆ ತಿರುಪೆಯೆತ್ತಿತಂದ ಹಣದಿಂದ ಕಂದೂರಿ ಮಾಡುವುದರಿಂದ ಬರುವ ಭಾಗ್ಯವೇನು ? ಎಂದು ಅವನು ತೀವ್ರವಾಗಿ ಚಿಂತಿಸಿದ್ದ.  ಹೋದಲ್ಲೆಲ್ಲ ಇಮಾನಬಿಗೆ ಗೌರವಾದರಗಳು ಪ್ರಾಪ್ತವಾಗಿದ್ದವು.  ಜನರು ಅವಳನ್ನು ಕುಳ್ಳಿರಿಸಿಕೊಂಡು ಪ್ರೀತಿಯಿಂದ ಮಾತಾಡಿಸಿದ್ದರು.  ಖಾದರಖಾನನ ಹೃದಯ ಮತ್ತು ಗಾಯನದ ಬಗ್ಗೆ ಮೆಚ್ಚುಗೆ ನುಡಿದಿದ್ದರು.  ಅವಳಿಂದ ಚುರುಮರಿ, ಬೆಂಡು ಬತ್ತಾಸು ಸ್ವೀಕರಿಸಿ ತಮ್ಮ ಶ್ರದ್ಧೆತೋರಿಸಿದ್ದರು.  ಖಾದರಖಾನ್‌ಗೆ ತಕ್ಕ ಮಗಳೆಂದು ಅವಳನ್ನು ಹೊಗಳಿದ ಕೆಲವರು ಸೀರೆ ಕುಪ್ಪಸದ ಉಡುಗೊರೆ ನೀಡಿದ್ದರು.

ಮನೆಗೆ ಬಂದು ಗಂಡನನ್ನು ಎದುರಿಗೆ ಕುಳ್ಳಿರಿಸಿಕೊಂಡು ಹಣದ ಲೆಕ್ಕ ಮಾಡಿದ್ದಳು ಇಮಾನಬಿ.  ಈ ಸಲ ಹೆಚ್ಚು ಹಣ ಸಿಕ್ಕಿತ್ತು.  ಹತ್ತು ಜನ ಫಕೀರರಿಗೆ ಊಟ ಮಾಡಿಸೋಣ ಎಂದಿದ್ದಳು ಆಕೆ.  ಸಿರಾಜಲಿ ಉದಾಸೀನ ವ್ಯಕ್ತಪಡಿಸಿದ್ದ.  ಇಷ್ಟೊಂದು ಹಣವನ್ನು ಸುಮ್ಮನೆ ಕೊಡುತ್ತಾರೆಯೇ ಜನ ? ಅನುಮಾನ ಕಾಡಿತ್ತು ಅವನಿಗೆ.  ಅದೇ ನೋಟದಲ್ಲಿ ಹೆಂಡತಿಯ ತುಂಬು ಮೈಯನ್ನು ಅವಲೋಕಿಸಿದ್ದ ಅವನು.

ಇಮಾನಬಿಯದು ಪಾಕ್ ಪಾಕಿಜಾ ಮನಸ್ಸು! ತನ್ನ ಬಾಬಾನ ಹರಕೆಯನ್ನು ಪರಿಪಾಲಿಸುವ ನಿಷ್ಟೆಯಿಂದ ಆಕೆ ಕತ್ತಲ್ ರಾತ್ರಿಯ ದಿವಸ ಉಪವಾಸ ಮಾಡಿದ್ದಳು.  ಸಂಜೆಯ ಹೊತ್ತಿಗೆ ಮಗಳು ಮತ್ತು ನೆರೆಮನೆಯವರೊಂದಿಗೆ ಹಸೇನ-ಹುಸೇನರಿಗೆ ಎಡೆ ಕೊಟ್ಟು ಬಂದಿದ್ದಳು.  ಪರಿಯಾಣದಲ್ಲಿನ ತಬರ್ರುಕ್‍ದ (ಪ್ರಸಾದ) ಒಂದು ತುತ್ತು ಬಾಯಲ್ಲಿ ಹಾಕಿಕೊಂಡು ನೀರು ಕುಡಿದಿದ್ದಳು.  ಬಂದ ಫಕೀರರಿಗೆ ಉಣ್ಣಿಸಿ ಬೀಳ್ಕೊಟ್ಟಿದ್ದಳು.  ಗಲ್ಲಿಯ ಜನರಿಗೆ ಶರಬತ್ ಕುಡಿಸಿದ್ದಳು. 

ದೇವರಿಗೆ ಅಲ್ವಿದಾ (ವಿದಾಯ) ಹೇಳಿದ ರಾತ್ರಿ ಚೊಂಗಾ (ಒಂದು ರೀತಿಯ ತಿಂಡಿ) ಮಾಡಿ ಅಕ್ಕ- ಪಕ್ಕದ ಹಿಂದೂಗಳಿಗೆ ಹಂಚಿದ್ದಳು.  ಇದೆಲ್ಲ ಜನ್ನತ್ನಲ್ಲಿರುವ ಖಾದರಖಾನನಿಗೆ ತೃಪ್ತಿ ತಂದಿರಬೇಕು.  ಆದರೆ ಸಿರಾಜಲಿಗೆ ಮಾತ್ರ ಎಳ್ಳಷ್ಟೂ ಹಿಡಿಸಿರಲಿಲ್ಲ.  ಅದರ ಒಳಗುದಿ ಇಮಾನಬಿಗೆ ತಾಕಿರಲಿಲ್ಲ.  ಬೆಳ್ಳಿಯ ಬಟ್ಟಲು ಟ್ರಂಕು ಸೇರಿತ್ತು.  ಸಿರಾಜಲಿಯ ಕುದಿವ ಮನಸ್ಸು ತಣ್ಣಗಾಗಿತ್ತು.

ದಿನಗಳು ಉರುಳಿದ್ದವು.  ಮತ್ತೆ ಬಂದಿತ್ತು ಮೊಹರಮ್.

        - ೬ -
ಮೋಡಗಳ ಮರೆಯಿಂದ ಚಂದ್ರ ನಸುವಾಗಿ ಗೋಚರಿಸಿದ್ದ. 

ಸಿರಾಜಲಿಯ ಎದೆಯೊಳಗೆ ರಾಹುಕೇತು ಸೇರಿಕೊಂಡು ಕತ್ತಲು ಹರಡಿ ಕುಳಿತಿದ್ದರು.

ಇಮಾನಬಿ ನಾಗವಂದಿಗೆಯ ಮೇಲಿನ ಟ್ರಂಕು ಕೆಳಗೆ ಇಳಿಸಿಕೊಂಡು ಬೆಳ್ಳಿಯ ಬಟ್ಟಲನ್ನು ಹೊರಗೆ ತೆಗೆದಿದ್ದಳು.  ಅದೇ ಹೊತ್ತಿಗೆ ಮನೆಯ ಮುಂದೆ ಹಾದು ಹೋದ ಮಾಜಾನ್ (ಮಸೀದಿಯ ಕೆಲಸ ನೋಡುವವ) ಕುದಾಲಿ (ಗುದ್ದಲಿ) ಬಿತ್ತು ಎಂದು ಸಾರುತ್ತ ನಡೆದಿದ್ದ ಇದನ್ನು ಕೇಳಿಸಿಕೊಂಡ ಸಿರಾಜಲಿಯ ಮುಖ ದುಮು ದುಮು ಎಂದಿತ್ತು.  ಕುದಾಲಿ ಬಿದ್ದದ್ದು ಆಶುರಖಾನಾದ ಮುಂದೆಯಲ್ಲ ತನ್ನ ಎದೆಯೊಳಗ ಎನ್ನುವ ಭಾವನೆ ಮೂಡಿ, "ಇಮ್ಮು ಆ ಕಟೋರಾ (ಬಟ್ಟಲು) ಹಿಡ್ಕೊಂಡು ಭಿಕಾರಿ ಹಾಂಗ ಮನಿ ಮನಿ ತಿರುಗಾಡಬ್ಯಾಡ ನೀನು" ಎಂದು ಅಸಹನೆಯನ್ನು ಹೊರಹಾಕಿದ್ದ. 

ಗಂಡನನ್ನು ಅಚ್ಚರಿಯಿಂದ ನೋಡಿದ್ದಳು ಇಮಾನಬಿ.  ಇದೂವರೆಗೂ ಅವನಿಂದ ಇಂಥ ಮಾತುಗಳನ್ನು ಆಕೆ ಕೇಳಿಸಿಕೂಂಡಿರಲಿಲ್ಲ.  "ಇಲ್ಲಿ ತನಕ ನಿನ್ನ ವರ್ತನಾ ಸೈರಿಸಿಕೊಂಡಿನಿ ನಾನು" ಸಿರಾಜಲಿಯ ಧ್ವನಿಯಲ್ಲಿ ಸಿಟ್ಟು, ಅಸಹನೆ ಎರಡೂ ಬೆರೆತಿದ್ದವು.
"ಯಾಕ್ರಿ ಅಂಥದ್ದೇನಾಗೇತಿ?" ಕೇಳಿದ್ದಳಾಕೆ.
"ಹೆಂಗಸ್ಸಾಗಿ ಮಂದಿಮನಿಗೆ ಕಟೋರಾ ಹಿಡ್ಕೊಂಡು ತಿರ್ಕೊಂಡು ಬರುದು ನನ್ಗೆ ಲಾಯಕ್ಕಿಲ್ಲ."
"ಹಿಂದೆ ಈ ಮಾತು ಹೇಳಿಲ್ಲ ನೀವು"
"ನಿಮ್ಮಪ್ಪನ ವಿರುದ್ಧ ಮಾತಾಡ್ತಿ ಅಂತ ತಿಳ್ಕೊಂತಿದ್ದಿ ನೀನು"
"ಈಗ ತಿಳ್ಕೊಳ್ಳಂಗಿಲ್ಲೇನು ನಾನು ?"
"ನಾನೂ ತಿಳೀಲಂತ ಹೇಳಾಕ ಹತ್ತೀನಿ"
"ನಮ್ಮ ಮನಿನ್ ರಿವಾಜು ಬಿಟ್ಟಬಿಡು ಅಂತಿರೇನು ನೀವು ?"
"ಇದು ಕೆಟ್ಟ ರಿವಾಜು"
"ಇದರಾಗ ಬಾಬಾನ ಸ್ವಾರ್ಥ ಇರಲಿಲ್ಲ"
"ಏನಿದ್ರೂ ಅದು ಅವನ ಕಾಲಕ್ಕ ಮುಗೀತು"
"ನಾನು ಬಾಬಾನ ಹರಕಿ ಈಡೇರಿಸುವಾಕಿ"
"ಹಠಾ ಸಾಧಿಸ್ತಿಯೇನ್ ನೀನು?"
"ಹಠಾ ಯಾಕಂತೀರಿ? ಬಾಬಾನ ಮನಸ್ಸಿಗೆ ಸಮಾಧಾನ ತರು ಮಾತು ಹೇಳಿದ್ಯಾ"
"ನನ್ನ ಮಾನಾ ಕಳೀತಿ ನೀನು ?"
"ನನ್ನ ಹತ್ರ ಅಂಥ ಕೆಟ್ಟ ಚಾಳಿ ಏನ್ ಕಂಡ್ರಿ ?"
"ಜನಾ ನನ್ನ ಬೆನ್ನ ಹಿಂದೆ ಆಡಿಕೊಂಡು ನಗ್ತಾರ"
"ಯಾಕಂತ ಅವರನ್ನ ಹಿಡ್ದು ಕೇಳ್ರಲ್ಲ"
"ಮೊದ್ಲ ನೀನು ಈ ಪದ್ಧತಿ ಬಿಡು"
"ಇದು ನನ್ನ ಜೀವದ ಕೂಡ ಹೋಗತೈತಿ"
"ಇವತ್ತಽಽ ಈ ಕಟೋರಾ ಒಯ್ದು ಮಾರಿ ಬರ್ತೀನಿ ನಾನು"
"ಅದನ್ನು ಮುಟ್ಟಾಕ ಕೊಡಂಗಿಲ್ಲ ನಾನು"
"ಕರೋಡ ರೂಪಾಯಿ ಕಿಮ್ಮತ್ತಿಂದು ಐತಲ್ಲ ಅದು ?"
"ಅದರ ಬೆಲೆ ಕಟ್ಟಾಕ ಆಗುದಿಲ್ಲ"
"ಅದಕ್ಕಽಽ ನಿಮ್ಮಪ್ಪ ತಿರ್ಕೊಂಡು ತಿನ್ನಿ‌ಅಂತ ಈ ಬಟ್ಲಾಕೊಟ್ಟಾನ" ಸಿರಾಜಲಿಯ ಮಾತು ಡಬಗಳ್ಳಿಯ ಮುಳ್ಳಿನಂತಿತ್ತು.
"ನಮ್ಮ ಬಾಬಾಗ ಏನೂ ಅನಬ್ಯಾಡ್ರಿ, ನನ್ಗ ಬೇಷ್ ಅನಿಸುದಿಲ್ಲ"
"ದುಗ್ಗಾಣಿ ಮನಿ, ಇದೊಂದು ಚಿಲ್ಲರ ಬಟ್ಲಾ ಕೊಟ್ಟು ಹ್ವಾದಂತ ಅವನ ಮ್ಯಾಲೆ ಪ್ರೀತಿಯೇನ್ ನಿನ್ಗ ?"
"ನಮ್ಮ ಬಾಬಾ ಅಷ್ಟರ ಬಿಟ್ಟು ಹ್ವಾದ ನನ್ನ ಪಾಲಿಗೆ.  ನಿಮ್ಮಿಂದ ಯಾ ಭಾಗ್ಯ ಕಂಡೆ ನಾನು" ಇಮಾನಬಿಯ ಮಾತು ಸಿರಾಜಲಿಯ ಎದೆ ಉರಿಸಿತ್ತು.
"ನಾನು ಪರದೇಶಿ ಸೂಳೇಮಗ, ತುತ್ತು ಕೂಳಿಗೆ ಬಂದು ಬಿದ್ದಾಂವ ಇಲ್ಲಿ" ತನ್ನ ನಸೀಬು ಹಳಿದುಕೂಂಡಿದ್ದ ಅವನು.
"ಬಾಬಾ, ನಿಮ್ಮನ್ನ ಸ್ವಂತ ಮಗನ್ಹಂಗ ನೋಡ್ತಿದ್ರು"
"ಅದಕಽಽ ನನ್ಗೊಂದು ಮಾತು ಹೇಳ್ದ ಈ ಮನೀನ್ನ ನಿನ್ನ ಹೆಸರಿಗೆ ಬರಿಸಿಬಿಟ್ಟ.  ಯಾಕಂದರ ನಾನು ನಿಮ್ಮ ಮನಿ ಚಾಕರಿಗೆ ಇದ್ದವನಲ್ಲ"
"ಅಂಥ ಭಾವನಾ ಬಾಬಾಗ ಇರ್ಲಿಲ್ಲಬಿಡ್ರಿ.  ಈಗರ ಏನಾತು ಈ ಮನೀನ ನಿಮ್ಮ ಹೆಸರಿಗೇ ಮಾಡ್ಕೋರಿ"
"ಅತ್ತೂಕರ್ದೂ ಔತಣ ಹೇಳಿಸಿಕೊಳ್ಳೋ ಜಾತಿ ಅಲ್ಲ ನಮ್ದು.  ನೀನು ಮನಿ ಮಾಲಕಿ; ಎಷ್ಟಿದ್ರೂ ನಾನು ಹೊರಗಿನಂವಾ"
"ನನ್ನ ಮ್ಯಾಲೆ ಇದ್ದಾಂಗ ನಿಮ್ಗ ಈ ಮನಿ ಮೇಲೇನೂ ಹಕ್ಕು ಐತಿ"
"ಇಲ್ಲೆ ನನ್ಮಾತು ನಡಿಯೂದಿಲ್ಲ"
"ಅಂಥದ್ದು ಇಲ್ಲೇನೂ ನಡಿದಿಲ್ಲ"
"ಹಾಂಗರ ನಾನು ಈ ಮನಿಯಾಗ ಇರಬೇಕಂದ್ರ ಆ ಬಟ್ಲಾ ಹಿಡ್ಕೊಂಡು ಹೊರಗ ಹೋಗಬ್ಯಾಡ ನೀನು" ನಿಷ್ಟುರನಾಗಿ ಹೇಳಿದ್ದ ಅವನು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಅವನ ವರ್ತನೆ ಇಮಾನಬಿಗೆ ವಿಚಿತ್ರ ಅನಿಸತೊಡಗಿತ್ತು.  ಆವನು ಬಾಬಾನ ಮೇಲಿನ ಮತ್ಸರದಿಂದ ಇಂಥ ಮಾತು ಹೇಳುತ್ತಿರುವನೋ ? ಬೆಳ್ಳಿಯ ಬಟ್ಟಲಿನ ಮೇಲೆ ಅವನಿಗೇಕೆ ಈ ಪರಿ ಸಿಟ್ಟು ? ಪ್ರೀತಿ ಅಭಿವ್ಯಕ್ತಿಸುವ, ಒಂದಿನವೂ ಸರಿದು ಕುಳಿತುಕೋ ಎನ್ನದ ಸಿರಾಜಲಿಗೆ ಏಕಾ‌ಏಕಿ ತನ್ನ ಮೇಲೆ ಗುಮಾನಿ ಏಕೆ ಹುಟ್ಟುತು? ತಾನು ಬಟ್ಟಲು ಹಿಡಿದು ಹೋಗುವುದು ವರ್ಷದಲ್ಲಿ ಒಂದು ದಿನ ಮಾತ್ರ.  ಅದು ದೇವರ ಹರಕೆಯ ಸಲುವಾಗಿ.  ಫಕೀರರಿಗೆ ಉಣ್ಣಿಸುವುದು ಪುಣ್ಯದ ಕೆಲಸವಲ್ಲವೆ? ಇದರಲ್ಲಿ ಸಿರಾಜಿಗೆ ಯಾವ ದೋಷ ಕಂಡಿತು? ಅವನು ಮನೆಯಲ್ಲಿ ಇರಬೇಕೆಂದರೆ ತಾನು ಈ ರಿವಾಜು ಬಿಡಬೇಕು ಎನ್ನುತ್ತಾನೆ.  ಹೀಗಾದರೆ ಬಾಬಾನ ಆತ್ಮಕ್ಕೆ ತಳಮಳವಾಗದೇ ಇದ್ದೀತೆ? ಹಾಗಾಗಲು ತಾನು ಅವಕಾಶ ಕೊಡಬಾರದು.  ಅವನು ತನ್ನನ್ನು ಹೆದರಿಸಲು ನೋಡುತ್ತಿದ್ದಾನೆ.  ಹೆಣ್ಣನ್ನು ದಮನಿಸುವುದು ಗಂಡಸರ ಕೆಟ್ಟ ಚಾಳಿ.  ತನ್ನ ಮನಸ್ಸು ಪರಿಶುದ್ಧವಾಗಿಯೇ ಇದೆ ಭಯವೇನು? ಹೀಗೆ ಆಲೋಚಿಸಿದ ಇಮಾನಬಿ "ನಾಳೆ ನಾನು ಬಟ್ಟಲು ಹಿಡ್ಕೊಂಡು ಹೋಗ್ತೀನಿ" ಎಂದಿದ್ದಳು.  ರಪ್ಪನೆ ಮುಖದ ಮೇಲೆ ಹೊಡೆತ ಬಿದ್ದಂತೆ ತತ್ತರಿಸಿದ್ದ ಸಿರಾಜಲಿ.  ಅವನ ರಕ್ತ ಒಮ್ಮೆಲೆ ಕುದ್ದಿತ್ತು.  `ಈ ಬಟ್ಟಲ ಕೂಡ ನೀನು ಸಾಯಿ' ಎಂದು ಬಿರುಗಾಳಿಯಂತೆ ಹೊರಗೆ ಹೋಗಿದ್ದ.

ರಾತ್ರಿಯೆಲ್ಲ ಬಾಗಿಲು ತೆಗೆದು ಕುಳಿತೆ ಇದ್ದಳು ಇಮಾನಬಿ.

ಸಿರಾಜಲಿ ಬರಲಿಲ್ಲ.

ತಲ್ಲಣದ ನಡುವೆಯೂ ಆಕೆ ರಿವಾಜು (ಪದ್ಧತಿ) ಬಿಡಲಿಲ್ಲ.  ಕಂದೂರಿ ಮಾಡಿ ಫಕೀರರಿಗೆ ಉಣ್ಣಿಸಿದ್ದಳು. 

ದೇವರ ಸವಾರಿ ಹೊರಟಿದ್ದವು.

ಊರಿನ ಎಲ್ಲ ಆಶುರಖಾನಾ ( ಪಂಜಾ ಕುಳಿತುಕೊಳ್ಳುವ ಸ್ಥಳ )ಗಳ ಆಲಮ್ ( ದೇವರು ) ಗಳು ಭೇಟಿ ಮಾಡುವ ಬಜಾರಿನ ಚೌಕದಲ್ಲಿ ಜನಜಾತ್ರೆ.  ಇಮನಬಿ ಮಗಳೊಂದಿಗೆ ಬಂದು ಎತ್ತರದ ಕಟ್ಟೆಯ ಮೇಲೆ ನಿಂತಿದ್ದಳು.  ಅಲ್ಲಿ ಎರಡು ಹೆಜ್ಜೆ ಮೇಳಗಳು ( ಮೊಹರಂದಲ್ಲಿ ಹೆಜ್ಜೆಯಾಡುವ ಗುಂಪುಗಳು ) ಸ್ಪರ್ಧೆಗಿಳಿದಂತೆ ತೋರಿದ್ದವು.  ಜನರ ಕಣ್ಣಲ್ಲಿ ಕುತೂಹಲವಿತ್ತು.  ಮನಸ್ಸಿನಲ್ಲಿ ತುಂಬ ಉತ್ಸಾಹ.  ಹಲಗೆಯ ತಾಳಬದ್ಧ ನಾದಕ್ಕೆ ಸನಾದಿಯ ಸ್ವರ ಮಾಧುರ್ಯಕ್ಕೆ ಸಂಗತ್ಯಗೊಂಡು ಹೆಜ್ಜೆಯಾದುವವರನ್ನು ಹುರುಪುಗೊಳಿಸಿತ್ತು.  ಕುಣಿಯುವ ಜನರನ್ನು ನೋಡುತ್ತಿದ್ದಂತೆ ಇಮಾನಬಿಗೆ ಸಿರಾಜಲಿ ನೆನಪಾಗಿದ್ದ.

ಹೆಜ್ಜೆಯಾಡುವುದರಲ್ಲಿ ಅವನು ನಿಸ್ಸೀಮ.  ತಲೆಗೆ ಹಸಿರು ಪಟ್ಟಿ ಕಟ್ಟಿಸಿಕೊಂಡು, ಕಣ್ಣಿಗೆ ಸುರುಮಾ, ಹಣೆಗೆ ಪಕ್ಕದ ಮಲಕುಗಳಿಗೆ ಸುನೇರಿ ಬಣ್ಣದ ಮುದ್ರೆ ಹಾಕಿಕೊಂಡು, ಪೈಜಾಮ ಎತ್ತಿಕಟ್ಟಿ, ಕೈಯಲ್ಲಿ ದಸ್ತಿ ಹಿಡಿದುಕೊಂಡು ಹೋಯ್ಯಽಽ...  ಎಂದು ಹೆಜ್ಜೆ ಹಾಕುತ್ತಿದ್ದರೆ ಇಮಾನಬಿ ನವಿಲಾಗುತ್ತಿದ್ದಳು.  ಅವನು ಮನೆಗೆ ಬಂದಿದ್ದೆ ತಡ ಆಕೆ ಅವನ ಮೇಲೆ ಲಿಂಬೆಹಣ್ಣು ಇಳಿಸಿ ಒಗೆಯುತ್ತಿದ್ದಳು.  ಉಪ್ಪು ಇಳಿಸಿ ಉರಿಯುವ ಒಲೆಗೆ ಹಾಕುವಳು.  ಕೆಂಡದ ಮೇಲಿನ ಉಪ್ಪು ಚಿಟ್ ಚಿಟ್ ಎಂದರೆ ಕೆಟ್ಟ ನೆದರಾಗಿದೆ ಎನ್ನುವಳು. 
ಸಿರಾಜಲಿ ಆವಳ ಮಾತಿಗ ನಕ್ಕು "ನನ್ಗನಿಂದಽಽ ನೆದರು ಹತ್ತದು" ಎಂದು ರೇಗಿಸುವನು.  "ನಂದು ಒಳ್ಳೆ ನಜರು" ಎಂದು ಆಕಿ ಅವನ ಎದೆಯೊಳಗೆ ಹುದುಗಿಕೊಳ್ಳುತ್ತಿದ್ದಳು. 

ಸಿರಾಜಲಿ ಇಲ್ಲದ ಹೆಜ್ಜೆ ನೋಡಲು ಆಕಗೆ ಕಾತರ ಹುಟ್ಟಿರಲಿಲ್ಲ.

ಮೂರು ದಿನದ ಜಾರತಾ (ಮರಣದ ಮೂರನೆ ದಿನ ಮಾಡುವ ದಿನಕರ್ಮ) ಆದ ಮೇಲೆ ಸಿರಾಜಲಿ ಸೊಲ್ಲಾಪುರ ಸೇರಿಕೂಂಡಿದ್ದರ ವಿಚಾರ ತಿಳಿದಿತ್ತು.  ಇಮಾನಬಿ ಬಿಕ್ಕಿ ಬಿಕ್ಕಿ ಅತ್ತಿದ್ದಳು.  ಬೆಳದ ಮಗಳನ್ನು ನೋಡುತ್ತಿದ್ದಂತೆ ಅವಳ ಕಣ್ಣೀರು ನಿಂತಿತ್ತು.  ಸಿರಾಜಲಿ ಹೊಣೆಗಾರಿಕೆಯನ್ನು ತಪ್ಪಿಸಿಕೂಳ್ಳಲು ಈ ನಾಟಕ ಹೂಡಿದನೆ ? ಯೋಚಿಸುತ್ತ ಹೋದಂತೆ ಆಕೆಗೆ ಗಂಡ ಮೇಲೆ ಸಿಟ್ಟು ಬಂದಿತ್ತು.  ಆದರೆ ರಕ್ತಕುದ್ದರೆ ತನಗೇ ನಷ್ಟ ಎಂದು ಸದೃಢಗೊಂಡಿದ್ದಳು ಇಮಾನಬಿ.  ಪಲಾಯನವಾದ ಗಂಡಸಿಗೆ ಸುಲಭ ; ಹೆಂಗಸಿಗೆ ಅದು ಹೇಗೆ ಸಾಧ್ಯ ? ಎಂದು ಆಕೆ ಮಗ್ಗದಲ್ಲಿಕುಳಿತಿದ್ದಳು.  ನೂಲಿನೆಳೆಗಳನ್ನು ಚೂಕ್ಕವಾಗಿ ನೆಯ್ಯತೊಡಗಿದ್ದಳು.

ಬೆಳ್ಳಿಯ ಬಟ್ಟಲು ಅವಳ ಪುಟ್ಟ ಟ್ರಂಕಿನಲ್ಲಿ ಬೆಚ್ಚಗೆ ಉಳಿದಿತ್ತು.

         - ೭ -

ಮುಂದಿನ ದಿನಗಳಲ್ಲಿ ಕಿವಿ ಸೇರಿದ್ದ ಸುದ್ದೀ ಅವಳ ಮನಸ್ಪನ್ನು ಘಾಸಿಗೊಳಿಸಿತ್ತು.  ಸೊಲ್ಲಾಪೂರ ಸೇರಿಕೊಂಡಿದ್ದ ಸಿರಾಜಲಿ ಹಮಾಲಿ ಮಾಡಿಕೂಂಡು, ಯಾವಳೋ ಒಬ್ಬಳ ಕೂಡ ಅವನ ಕೂಡಾವಳಿ ಆಗಿದೆಯಂದು ಅವನನ್ನು ಮಾತಾಡಿಸಿಕೂಂಡು ಬಂದವರು ಹೇಳಿದ್ದರು.  ಬಟ್ಟಲಿನ ನೆಪದಲ್ಲಿ ಅವನು ತನ್ನನ್ನು ವಂಚಿಸಿದನೆಂದು ಆಕೆ ಮನದಟ್ಟು ಮಾಡಿಕೊಂಡಳು.  ಜಮಾತಿನವರು ಸಿರಾಜಲಿಯನ್ನು ಬೈದುಕೊಂಡು ಇಮಾನಬಿಗೆ ಧೈರ್ಯ ಹೇಳಿದ್ದರು.

ಮಗಳಿಗೆ ನಿಕಾಹ್ ಮಾಡಿಕೂಡುವ ಜವಾಬುದಾರಿಯಿಂದ ಆಕೆ ಮಗ್ಗದ ಕಾಲ್ವಿಡಿ ತುಳಿಯತೂಡಗಿದ್ದಳು.

ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮ
ಜ್ಞಾನವೆಂಬುವಾ ಕದರನು ಇಟ್ಟು
ಮಾನವ ಧರ್ಮದ ಹಂಜಿಯ ಪಿಡಿದು
ಆನುಭವವೆಂಬುವ ಎಳೆಗಳ ತೆಗೆದು
ಅನುವಿಲೆ ಸುಮ್ಮನೆ ನೂಲಮ್ಮ

ಶರೀಫರ ಜೀವತಂತುವನ್ನು ಆಗಾಧವಾಗಿ ಮೀಟುವ ಖಾದರಖಾನನ ಹಾಡು ಇಮಾನಬಿಗೆ ಧೈರ್ಯ ನೀಡತೊಡಗಿತ್ತು.  ಬದುಕನ್ನು ನಾಜೂಕಾಗಿ ನೇಯುತ್ತಿದ್ದವಳ ಕಣ್ಣೀಗೀಗ ಚಸ್ಮಾ ಬಂದಿತ್ತು.  ನೇಯ್ಗೆಯ ಚಕ್ರದ ಹೊರಳಿನಲ್ಲಿ ಆಕೆ ಕಷ್ಟದಿಂದ ಮೊಹರಂನ ರಿವಾಜನ್ನು ನೆರವೇರಿಸಿಕೂಂಡು ಬರುತ್ತಲೇ ಇದ್ದಳು.

ಆದರೆ ಬಟ್ಟಲು ಹಿಡಿದು ಹೋದರೆ ಖುಶಿ ಕೊಡುವವರು ಅವಳಿಗೆ ಮೊದಲಿನಷ್ಟು ಆಸ್ಥೆ ತೋರಿಸುತ್ತಿರಲಿಲ್ಲ.  ಎರಡು ಮನೆಯ ಯಜಮಾನರು ಮೃತರಾಗಿದ್ದರು.  ಮತ್ತೆರಡು ಮನೆಯ ಸಾಹುಕಾರರು ವಯಸ್ಸಿನ ಕಾರಣದಿಂದ ತಮ್ಮ ವ್ಯವಹಾರಗಳನ್ನು ಮಕ್ಕಳಿಗೊಪ್ಪಿಸಿದ್ದರು.  ಕೆಲವು ಕಡೆಗೆ ಇಮಾನಬಿ ಮುಜುಗರ ಅನುಭವಿಸುತ್ತಿದ್ದಳು.  ಆಕಿ ಬಟ್ಟಲಲ್ಲಿ ಬೆಂಡು ಬತ್ತಾಸ ತುಂಬಿ ಕೊಟ್ಟು ಹಣದ ನಿರೀಕ್ಷೆಯಲ್ಲಿ ಕುಳಿತು ಕೊಳ್ಳುತ್ತಿದ್ದಳು.  ಒಬ್ಬರು, "ಇದೊಂದ್ಸಲ ಒಯ್ದು ಬಿಡವ್ವ" ಎಂದರೆ ಮತ್ತೊಬ್ಬರು "ಕಾಲಮಾನ ಸೂಕ್ಷ್ಮ ಆಗ್ಯಾವ ಇಮಾನವ್ವ, ಮಕ್ಕಳು ಕೊಟ್ಟಷ್ಟು ಒಯ್ದು ಬಿಡು" ಎನ್ನುವರು.

ಇಷ್ಟಾದರೂ ಜಹಾಂಗೀರ್ ಕೊಲ್ಲಾಪುರೆ, ಬಾಬಣ್ಣ ದೇಸಾಯಿ ಮೊದಲಿನಂತೆ ಬಟ್ಟಲಿಗೆ ಹಣ ಹಾಕುತ್ತಿದ್ದರು.  ಶೋಕಿ, ಪ್ರತಿಷ್ಟೆಯಲ್ಲಿ ಅವರಿಬ್ಬರೂ ಸಮಾನರು.  ಹಿಂದೊಮ್ಮೆ ಖಾದರಖಾನನಿಂದ ಬೆಳ್ಳಿಯ ಬಟ್ಟಲನ್ನು ಪಡೆದುಕೊಳ್ಳಲು ಅವರಿಬ್ಬರೂ ಪ್ರಯತ್ನಿಸಿದ್ದರು.  "ನನ್ನೆದಿ ಗುಂಡಿಗೀನ ಕೇಳಾಕ ಹತ್ತೀರಿ ನೀವು" ಎಂದು ನಗೆಯಾಡಿ ಬಟ್ಟಲ ಮೇಲಿನ ಅವರ ಆಸೆಯನ್ನು ಛಿದ್ರಗೊಳಿಸಿದ್ದ ಖಾದರಖಾನ್.

ಅವನು ಸತ್ತು ಇಮಾನಬಿ ಬೆಳ್ಳಿಯ ಬಟ್ಟಲು ಹಿಡಿದು ತಮ್ಮಮುಂದೆ ಯಾವಾಗ ನಿಂತಳೋ ಜಹಾಂಗೀರ ಮತ್ತು ಬಾಬಣ್ಣರ ಆಸೆಗಳು ಮತ್ತೆ ಕೊನರಿದ್ದವು.  "ಈ ಬಟ್ಲಾ ಕೊಟ್ರ ಎರಡು ಸಾವಿರ ರೂಪಾಯಿ ಕೊಡ್ತೀನಿ" ಅಂದಿದ್ದ ಜಹಾಂಗೀರ್.  ಅದನ್ನು ಕೇಳಿಸಿ ಕೊಂಡವನಂತೆ ಬಾಬಣ್ಣ ದೇಸಾಯಿ "ಇಂಥ ಬಟ್ಟಲು ನಮ್ಮಂಥವರ ಮನತನದ್ದಾಗಿರಬೇಕು.  ನೀ ಕೇಳಿದಷ್ಟು, ರೊಕ್ಕಾ ಕೂಡ್ತೀನಿ ಕೊಟ್ಟು ಬಿಡು ಇಮಾನವ್ವ" ಎಂದು ಉತ್ತೇಜಿಸಿದ್ದ.  "ಇದು ಗುರುಗಳ ಕಾಣ್ಕಿ, ಇದರಾಗ ನಮ್ಮ ಬಾಬಾನ ಜೀವಾನ ಐತ್ತಿ.  ಹ್ಯಾಂಗ್ ಮಾರಬೇಕ್ರಿ ಧಣೇರ ?" ಎಂದು ನಿಷ್ಟುರವಾಗಿ ತಿರಸ್ಕರಿದ್ದಳು ಇಮಾನಬಿ.

         - ೮ -

ಬಾಬಾಽಽ.....  ಬಾಬಾಽಽ....  ಹೈದರ್ ತನ್ನ ತಂದೆಯನ್ನು ನನಪಿಸಿಕೊಂಡು ನರಳಿದ.  ವಿಹ್ವಲತೆಯ ಕಿಚ್ಚಿನಲ್ಲಿದ್ದರೂ ಸಬಿನಾ "ಆ ಕುರುಸಾಲ್ಯಾನ್ನ ಯಾಕ್ ನೆನಸ್ಕೋತಿಯೋ ಬೇಟಾ ?" ಎಂದು ಅಸಹನೆ ವ್ಯಕ್ತ ಪಡಿಸಿದಳು.  ಅವನೂ ಒಬ್ಬ ತಂದೆ.  ತನ್ನದೇ ರಕ್ತ ಹಂಚಿಕೊಂಡು ಬಂದ ಕೂಸಿಗೆ ಚೂರು ಪ್ರೀತಿ, ವಾತ್ಸಲ್ಯ ದರ್ಶನ ಮಾಡಿಸಲಿಲ್ಲ.  ಕರುಳ ಬಳ್ಳಿಯ ಸಂಬಂಧದ ಗಂಧ ಇಲ್ಲದವನು.  ಜೀವಂತಿದ್ದಾನೋ, ಸತ್ತಿದ್ದಾನೊ....  ಎಂಥ ಹಣೆಬರಹ ಅವನದು! ರೊಟ್ಟಿ-ಚಟ್ನಿ ತಿಂದು ಆರಾಮಿರು ಅಂದರೆ ಶೆಗಣಿ ಹುಳುವಾದ.  ಬದುಕು ಕೊಟ್ಟ ಖುದಾ (ದೇವರು)ನಿಗೂ ವಂಚಿಸುವ ಸ್ಯೆತಾನ (ರಾಕ್ಷಸ) ಎಂದು ಇಮಾನಬಿ ಸ್ವಗತದಲ್ಲಿಯೇ ಬೈದುಕೊಂಡಳು.

ಸಬಿನಾಳ ಶಾದಿಗೆ ಅಮರಪ್ಪ ಧಣಿ ಸಾಲ ಕೊಟ್ಟಿದ್ದರು.

ಆಕೆಯ ಗಂಡ ನಿಜಾಮುದೀನ ಇಲಕಲ್ಲಿನಲ್ಲಿ ಟೇಲರಿಂಗ್ ದಂಧೆ ಮಾಡುತಿದ್ದ.  ಮದುವೆಯಾದ ೬ ತಿಂಗಳಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿಕೂಂಡು ಬಂದು ಅತ್ತೆಯ ಮನೆಯಲ್ಲಿ ಠಿಕಾಣಿ ಹೂಡಿದ್ದ.  ತಾನೂ ಒಬ್ಬಂಟಿ.  ಮಗಳು ಜೊತೆಗಿದ್ದರೆ ಸಂತೋಷವೆಂದು ಅಳಿಯನ ಮೇಲೆ ಕಾಳಜಿ ಸ್ಪುರಿಸಿದ್ದಳು.  ಪರಿಚಯದ ಟೇಲರಿಂಗ್ ಅಂಗಡಿಯಲ್ಲಿ ಅವನ ಹೊಲಿಗೆ ಕೆಲಸಕ್ಕೂ ಅನುಕೂಲ ಮಾಡಿಕೂಟ್ಟಿದ್ದಳು. 

ಸಬಿನಾಳ ಬಸಿರು, ಬಯಕೆ, ಬಾಣಂತನ ಶುರುವಾಗಿ ಮೂರು ಹೊಟ್ಟೆ ಇಳಿದಿದ್ದವು.

ಚಿಂತೆ ಇಲ್ಲದವನು ಸಂತೆಯಲ್ಲಿ ಮೆಲಕಾಡಿಸುವವನಂತಿದ್ದ ನಿಜಾಮುದ್ದೀನ್ ಜಬರ್ದಸ್ತಾಗಿ ಮೂರು ಹೊತ್ತು ಕೂಳು ತಿಂದು, ನಿದ್ದೆಮಾಡಿ ಮೈ ಉಬ್ಬಿಸಿಕೂಂಡಿದ್ದ.  ಮಾಲೀಕನೂಂದಿಗೆ ಮನಸ್ತಾಪ ಮಾಡಿಕೊಂಡು ಹೆಂಡತಿ ಮತ್ತು ಅತ್ತೆಯನ್ನು ಕಾಡಿ ಡಬ್ಬಿ ಆಂಗಡಿಯಲ್ಲಿ ಹಳೆಯದೊಂದು ಹೊಲಿಗೆ ಮಿಷನ್ ಇಟ್ಟುಕೂಂಡಿದ್ದ.  ಹಣ ಬೇಕು ಅನಿಸಿದರೆ ಕುಳಿತು ಬಟ್ಟೆ ಹೊಲಿಯುತ್ತಿದ್ದ.  ಊರು, ಹೋಟೇಲ್, ಸಿನಿಮಾ ಎಂದು ದುಡಿದದ್ದನ್ನೆಲ್ಲ ಹಾಳು ಮಾಡುತಿದ್ದ.

ಸಬಿನಾಳಿಗೆ ನಾಲ್ಕನೆಯ ಗರ್ಭ ನಿಂತಾಗ ಅವನು ಟ್ರಂಕಿನೊಳಗಿನ ಬೆಳ್ಳಿಯ ಬಟ್ಟಲು ಕದ್ದು ಊರು ಬಿಟ್ಟಿದ್ದ.  ಬೀಗ ಮುರಿದ ಟ್ರಂಕು ನೋಡಿ ಇಮಾನಬಿ ದಿಗ್ಭ್ರಮೆಗೊಂಡಿದ್ದಳು.  ಬಸಿರಿಯಾದ ಸಬಿನಾ ತಾಯಿಯ ಅವಸ್ಥೆಯಿಂದ ಮೈಯೆಲ್ಲಾ ನೀರೊಡೆದಿದ್ದಳು.

"ಕಳ್ಳ, ಕೊರಮ ನಮ್ಮ ಮನಿ ನಾಶ ಮಾಡಕ್ಕಽಽ ಬಂದಾನ" ಇಮಾನಬಿ ಅಳಿಯನನ್ನು ವಾಚಾಮಗೋಚರವಾಗಿ ಶಪಿಸಿದ್ದಳು.  ಬೆಳ್ಳಿಯ ಬಟ್ಟಲನ್ನು ಹೊರಗೆ ಹೋಗಲು ಬಿಡಬಾರದು ಎಂದಿದ್ದ ಬಾಬಾ.  ಈಗೇನು ಕುತ್ತು ಬರುವುದೊ ಎಂದು ಕಳವಳಸಿದ್ದಳು.  ಬಟ್ಟಲು ಇಲ್ಲದೆ ತನಗೆ ಜಿಂದಗೀನೆ ಇಲ್ಲ ಎನ್ನುವಂತೆ ಆಕೆ ಅನ್ನ ನೀರು ಬಿಟ್ಟು ಕುಳಿತಿದ್ದಳು.

ಮೂರನೆಯ ದಿನ ಬೆಳಿಗ್ಗೆ ಪತ್ತಾರ ಗಂಗಪ್ಪ ಬಂದು ಬಟ್ಟಲು ತೋರಿಸಿದಾಗಲೇ ಇಮಾನಬಿ ನಿಶ್ಚಿಂತಳಾಗಿದ್ದಳು.  ಈ ಬಟ್ಟಲು ಇಮಾನಬಿಯದು ಎಂದು ಗಂಗಪ್ಪನಿಗೆ ಗೊತ್ತು.  ನಿಜಾಮುದ್ದೀನ ಅವನಿಲ್ಲದ ವೇಳೆಯಲ್ಲಿ ಬಟ್ಟಲು ಮಾರಿ ಅವನ ಮಗನ ಕಡೆಯಿಂದ ನೂರು ರೂಪಾಯಿ ಇಸಿದುಕೂಂಡು ಹೋಗಿದ್ದ.  ಅದರ ಸತ್ಯ ತಿಳಿಯಲು ಗಂಗಪ್ಪ ಬಂದಿದ್ದ.  ಇಮಾನಬಿ ಅರ್ಧದಷ್ಟು ಹಣ ಕೊಟ್ಟು ಇನ್ನರ್ಧ ಹಣವನ್ನು ನಂತರ ಕೊಡುವುದಾಗಿ ಹೇಳಿ ಗಂಗಪ್ಪನಿಂದ ಬಟ್ಟಲು ಪಡೆದುಕೂಂಡು "ನಿನ್ಗ ಆಲ್ಲಾಹ ಒಳ್ಳೇದು ಮಾಡಲಿ !" ಎಂದು ಹಾರೈಸಿದ್ದಳು.  ತಡ ಮಾಡದೆ ಜೋಗೇರ ಹತ್ತಿರ ಹೋಗಿ ಟ್ರಂಕಿನ ಬೀಗವನ್ನು ಸರಿಮಾಡಿಸಿ ಎಂದಿನಂತೆ ಸೀರೆಯ ಮಡಿಕೆಯಲ್ಲಿ ಬಟ್ಟಲು ಇಟ್ಟು ನಿರಾಳತೆ ಅನುಭವಿಸಿದ್ದಳು.

ಸಬಿನಾ ಗಂಡುಮಗುವಿಗೆ ಜನ್ಮಕೊಟ್ಟ ವೇಳೆಯಲ್ಲಿ ನಿಜಾಮುದ್ದೀನ್ ಬಂದಿದ್ದ.  ಇಮಾನಬಿ ಅವನಿಗೆ ಏನೂ ಅನ್ನಲಿಲ್ಲ.  ಅವನೆ ಅತ್ತೂ ಕರೆದು ಮಾಫ್ ಬೇಡಿದ್ದ.  ಇಮಾನಬಿ ಮೊಮ್ಮಗನಿಗೆ ಹೈದರ್ ಎಂದು ನಾಮಕರಣ ಮಾಡಿದ್ದಳು.  ತನ್ನ ಬಾಬಾ ಮತ್ತೆ ಹುಟ್ಟಿ ಬಂದಿದ್ದಾನೆಂದು ನೆಮ್ಮದಿಯನಿಸಿತ್ತು ಆಕೆಗೆ.

ಹುಡುಗ ಬೆಳಯುತ್ತಿದ್ದಂತೆ ನಿಜಾಮುದ್ದೀನ್‍ನ ಹವ್ಯಾಸಗಳು ಆತಿರೇಕವಾಗಿದ್ದವು.  ಈಗವನು ಸಾರಾಯಿ ಕುಡಿದು ಬರಲು ಶುರು ಮಾಡಿದ್ದ.  ಸಬಿನಾಳನ್ನು ಹಣಕ್ಕಾಗಿ ಪೀಡಿಸಿ ಬಡಿಯುತ್ತಿದ್ದ.  ಮನೆಯಲ್ಲಿನ ಸಾಮಾನು ಕದ್ದೊಯ್ದು ಮಾರುತ್ತಿದ್ದ.  ಇಮಾನಬಿ ಅವನ ದಬ್ಬಾಳಿಕೆಗೆ ಪ್ರತಿರೋಧವೊಡ್ಡುತ್ತಿದ್ದಳು.  ದಪ್ಪ ಚರ್ಮದ ಅವನಿಗೆ ನಾಚಿಕೆ, ಮರ್ಯಾದೆಯ ಹಂಗು ಇರಲಿಲ್ಲ.  ಒಮ್ಮೊಮ್ಮೆ ಕಾಲ ಮೇಲೆ ಬಿದ್ದು ಢೋಕಾರಿತನ ಮಾಡುತ್ತಿದ್ದ.  ಕೊನೆಗೊಮ್ಮೆ ಹೊಲಿಗೆ ಮಿಶನ್ ಮತ್ತು ಜನರ ಬಟ್ಟೆಗಳೊಂದಿಗೆ ಅವನು ಊರನ್ನು ಬಿಟ್ಟು ಹೋಗಿದ್ದ.  ತಾಯಿ-ಮಗಳು ಪೀಡೆ ತೊಲಗಿತೆಂದು ನಿರುಮ್ಮಳಾಗಿದ್ದರು. 

ಸಾಲ ಎದೆಯ ಮೇಲಿನ ಬಂಡೆಗಲ್ಲಿನಂತಿದ್ದರೂ ಇಮಾನಬಿ ಮಗ್ಗದಲ್ಲಿ ಕುಳಿತೇ ಇದ್ದಳು.  ಉಪನಾಸ ವನವಾಸದ ಕ್ಷಣಗಳು ಹಗಲು ರಾತ್ರಿಗಳನ್ನು ತ್ರಸ್ತಗೊಳಿಸುತ್ತಿದ್ದರೂ ತನ್ನ ಬದುಕಿನ ಹೋರಾಟದಲ್ಲಿ ಜಿಗುಟತನವನ್ನು ಕಳೆದುಕೊಳ್ಳದಂತಿದ್ದಳು ಆಕೆ.

         - ೯ -

ಹೈದರ್ ದಿಗ್ಗನೆ ಎದ್ದು ಕುಳಿತುಕೊಳ್ಳಲು ನೋಡಿದ.  ಸಬಿನಾ ಅವನ ಬೆನ್ನಿಗೆ ಕೈಯಾಸರೆ ನೀಡಿ "ಏನಾತು ಬೇಟಾ ?" ಎಂದು ಗಾಬರಿಗೊಂಡಳು.  ಮೊಮ್ಮಗನ ನಿಸ್ತೇಜ ಕಣ್ಣು, ಜೋತು ಬಿದ್ದಿರುವ ಮುಖ ಕಂಡು ಇಮಾನಬಿ ಕಂಗಾಲಾದಳು.  "ಸ್ವಲ್ಪ ನೀರರ ಕುಡಿಸು ಕೂಸಿಗೆ" ಎಂದಳು.

"ಗುಟುಕು ನೀರು ಕುಡದ್ರ ಕರುಳು ಹೊರಗ ಬಂದಂಗ ಹೊರಗ ಹಾಕ್ತಾನ.  ಏನ್ಮಾಡ್ಲಿ? ಅದರ ನಸೀಬದಾಗ ಇದ್ದಾಂಗಾಗ್ಲಿ, ಬೇಶರ್ಮ (ನಾಚಿಕೆ ಮರ್ಯಾದೆ ಇಲ್ಲದವನು)ನ ಕೂಡ ಗಂಟ್ಹಾಕಿ ನನ್ನ ಜಿಂದಗೀನ ಹಾಳ್ಮಾಡ್ದಿ.  ಈಗ ಎಂಥ ಹೊತ್ತುಬಂತು ನೋಡು.  ನನ್ನ ಕೂಸಿಗ ದವಾಖಾನಿಗೆ ಕರ್ಕೊಂಡು ಹೋಗಿ ತೋರ್ಸುವ ಗತಿ ಇಲ್ಲಂಗಾತು"
ತನ್ನ ನಸೀಬು ಜರಿದುಕೂಳ್ಳುತ್ತ ಮುಖಮುಖ ಬಡಿದುಕೂಂಡಳು ಸಬಿನಾ.

ಹೈದರ್ ಇದ್ದಕ್ಕಿದ್ದಂತೆ ನಡುಗತೊಡಗಿದ.  ಅವನ ಮೈಯೆಂಬೋ ಮೈ ಬರ್ಫಿನಂತೆ ಜುನುಗತೊಡಗಿತು.  ಇಮಾನಬಿ ದಪ್ಪನೆಯ ಕೌದಿಯನ್ನು ಅವನ ಮೈಮೇಲೆ ಹರಡಿದಳು.  ಹೈದರ್ ಎತ್ತರಕ್ಕೆ ಪುಟಿಯತೊಡಗಿದ.  ಹೆದರಿಕೆಯಿಂದ ತಾಯಿ ಮಗಳು ಅವನ ಕೈಕಾಲು ತಿಕ್ಕತೊಡಗಿದರು. 

ಸ್ವಲ್ಪ ಹೊತ್ತಿಗೆ ತಣ್ಣಗಿನ ಮೈ ಕಾದ ಹೆಂಚಾಯಿತು.  "ಜ್ವರ ಮತ್ತ ಬಂದು" ಸಬಿನಾ ಚಡಪಡಿಸಿದಳು.  ಮಗನ ಒಳಗಿನ ಕೆಂಡ ತನ್ನ ಒಡಲಲ್ಲಿ ಬಿದ್ದು ಸುಡುವಂತೆ "ಯಾ ಆಲ್ಲಾಹ್ ! ಪಾಕ್ ಪರವರ್ಧಿಗಾರ ನನ್ನ ಕೂಸಿನ ಮ್ಯಾಲೆ ಕರುಣಾ ತೋರ್ಸು.  ಜಲ್ದೀನ ಬೆಳಗು ಹರಿಸು ನಾಳೆ ಎಲ್ಲೇರ ನನ್ನ ಜೀವಾ ಒತ್ತಯಿಟ್ಟು ಮಗನ್ನ ದವಾಖಾನಿಗೆ ಸೇರಿಸ್ತೀನಿ.  ಸತ್ತಂದ್ರ ಮಣ್ಣಿಗರ ಇಡ್ತೀನಿ" ಎಂದು ಹಲುಬಿದಳು.

ಮಗಳ ಮಾತು ಇಮಾನಬಿಯ ಎದೆ ಬಗೆಯತೊಡಗಿತು.

ಇಮಾನಬಿ ತೀರ್ಮಾನಕ್ಕೆ ಬರುವ ಹೊತ್ತಿಗೆ ಕತ್ತಲು ಸರಿದಿತ್ತು.  ಜೀವಪ್ರೀತಿಯ ಬೆಳಕು ಅವಳ ಆಂತಃಕರಣವನ್ನು ತುಂಬಿ ನಿಂತಿತ್ತು.  "ಸಬಿನಾ ನೀನು ಹೈದರನನ್ನು ಕರ್ಕೊಂಡು ದವಾಖಾನಿಗೆ ನಡಿ.  ನಾ ಬಾಬಣ್ಣದೇಸಾಯರ ಮನಿಗೆ ಹೋಗಿ ಬರ್ತ್ತೀನಿ" ಎಂದು ನಾಗವಂದಿಗೆಯ ಮೇಲಿಂದ ಟ್ರಂಕು ಇಳಿಸಿ, ಕೀಲಿ ತೆಗೆದು, ಬೆಳ್ಳಿಯ ಬಿಟ್ಟಲನ್ನು ಸೀರೆಯ ಸೆರಗಿನೊಳಗೆ ಮರೆಮಾಡಿಕೂಂಡು ಹೊಸ್ತಿಲು ದಾಟಿದಳು ಇಮಾನಬಿ.  ತೆರೆದ ಬಾಗಿಲಿನಿಂದ ತೂರಿ ಬಂದ ತಂಗಾಳಿ ಸಬಿನಾಳಿಗೆ ಹಿತವೆನಿಸಿತು.
 *****

ಕೀಲಿಕರಣ: ಎಂ. ಎನ್. ಎಸ್. ರಾವ್ 

ಯಾತಕೆ ಬೇಕು ಸಂಸಾರ ಸುಖ

- ಶಿಶುನಾಳ ಶರೀಫ್

ಯಾತಕೆ ಯಾರಿಗೆ ಬೇಕು
ಈ ಸಂಸಾರಸುಖ ಇನ್ನು ಸಾಕು                                                               ||೧||

ನೀ ಸತ್ತು ನಾನಿರಬೇಕು
ನಾನು ನೀನು ಒಂದಾದಮೇಲೆ                                                                ||೨||

ಆನಂದಸ್ಥಲದ ಮಾಲಿಂಗನೋಳ್  ಬೆರಿಯಲಿಬೇಕ
ಇಂತಾದಮೇಲೆ  ಗುರುಗೋವಿಂದನ ಮರಿ  ಶರೀಫನ ಗುರುತು ನಿನಗ್ಯಾಕ    ||೩||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ನಗೆ ಡಂಗುರ - ೧

- ಪಟ್ಟಾಭಿ ಎ ಕೆ

ಅವರು: "ನಿನ್ನನ್ನು ಎಲ್ಲೋ ನೋಡಿದ ಹಾಗೆ ಇದೆಯಲ್ಲಾ, ನೀನು ಅನ್ನದಾನಪ್ಪ ಅಲ್ಲವೇ?"
ಇವರು: "ನನ್ನ ಈಗಿನ ಹೆಸರು ಅನ್ನ ಮಾರಪ್ಪ ಅಂತ.  ಆಗ ನಾನು ಅನ್ನವನ್ನು ದಾನಮಾಡುತ್ತಿದ್ದೆ, ಆದರೆ ಈಗ ಅನ್ನವನ್ನು ಮಾರುತ್ತಿದ್ದೇನೆ.  ಹೊಟೆಲ್ ನಡೆಸುತ್ತಿದ್ದೇನೆ.  ಹಾಗಾಗಿ ಈಗ ನಾನು ಅನ್ನಮಾರಪ್ಪ!".....

        *****

ಪೀಠಿಕೆ

- ಗಿರಿಜಾಪತಿ ಎಂ. ಎನ್

ನಿನಗು ನನಗು ನೆಲ-ಮುಗಿಲಿನಂತರ
ವೆಂದನಲ್ಲನ ಮೊಗದಲಿ.....
ಮೊಗವಿಟ್ಟು ನುಡಿದಳು
ಇನಿದು ದನಿಯಲಿ..
ನಿಜದ ಬದುಕಿದೆ ನೆಲದಲಿ

ಭರದಿ ಸುರಿವಾ ಮಳೆಯಬ್ಬರ
ಸುವ ಕೋಪದುರಿಯ ನೇಸರ.....
ಗೊತ್ತು-ಗುರಿಯು ಇಲ್ಲದಲೆಯೋ.....
ಬೀಸುಗಾಳಿಯ ಬರ್ಬರ
ಎಲ್ಲ ಕಂಡು, ಎಲ್ಲ ಉಂಡು.....
ಬಸಿರ ಜೀವಕೆ ಬಾಳ ಬೆಸೆವಾ.....
ಇಳೆಯೇ ಜೀವಕೆ ಕಂಗಳು.....

ಇಂದು-ನಾಳೆಗೆ ನಾಳೆ-ಮುಂದಕೆ
ಕಣ್ಣ ಕನಸಿನ ಪೀಠಿಕೆ
ಬರುವುದೆಲ್ಲವ ಬರಸೆಳೆದು ಒಪ್ಪುತೆ
ಮಣ್ಣ ಹಾಡಿನ ಚರಣಕೆ
ಎಲ್ಲ ನಮ್ಮದು, ಎಲ್ಲೆ ಮೀರದು
ಉಸಿರುಸಿರ ಹಸಿರನಲಿ
ಸ್ಪುರಿಸೋ ಭಾವಕೆ ಪಥಗಳು.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ

- ಶಿಶುನಾಳ ಶರೀಫ್
ನಾನಾ  ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ
ನಾ ಸತ್ತು ನೀನಾಗುವದಿನ್ನೆಂದಿಗೆ      ||ಪ||

ನಾ ಬಂದು ನಾನಿನ್ನು ನಾನೇನು ಮಾಡಿದ್ದೆ
ನಾ ಸುಳ್ಳು   ನೀನಾಗುವದಿನ್ನೆಂದಿಗೆ    ||ಅ.ಪ||

ನಾ ಬ್ರಹ್ಮ ನಾ ವಿಷ್ಣು ನಾ ರುದ್ರ ನೆಂಬಂತೆ
ನಾನಾದಳಿಸುವದಿನ್ನೆಂದಿಗೆ  
ನಾ ಧರ್ಮ ನಾ ಕರ್ಮ ನಾ ಪಾಪ
ನಾ ರೂಪ  ಅಳಿಸುವದಿನ್ನೆಂದಿಗೆ       ||೧||

ನಾ ಹುಟ್ಟಿ  ನಾ ಖೊಟ್ಟಿ   ನಾ ಯಟ್ಟಿ
ನಾ ಮುಟ್ಟಮುರಿಸುವದಿನ್ನೆಂದಿಗೆ
ನಾ ಬಿಟ್ಟು ನಾ ಸುಟ್ಟು ನಾ ಶಿಶುನಾಳಧೀಶನ
ನಾ ಹೊಗಿ ಹೊಂದುವದಿನ್ನೆಂದಿಗೆ        ||೨||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ನೀರು ಮಾಯಾ ವಸ್ತುವಲ್ಲ

- ಡಾ || ರಾಜಪ್ಪ ದಳವಾಯಿ

ನೀರೆಂಬುದು ಬಯಸಿದಾಗಲೆಲ್ಲ
ಸಿಗುವ ಮಾಯಾ ವಸ್ತುವಲ್ಲ ||

ಬೇಕಾಬಿಟ್ಟಿ ಬಳಸಿದರೆ
ಕುಡಿಯಲು ನೀರಿರದೆ
ಮಣ್ಣಾಗಿ ಹೋಗುವೆ ಅಣ್ಣಾ ||
    ನೀನು ಮಣ್ಣಾಗಿ ಹೋಗುವೆ ಅಣ್ಣಾ ||

ಭೂ ತಾಯಿಯ ಕೊರೆದು
ಜಲದ ಕಣ್ಣ ಸೆಳೆದು
ಒಣಭೂಮಿ ನೆನದರೇನಣ್ಣಾ ||
    ಕೇಳು ಒಣಭೂಮಿ ನೆನದರೇನಣ್ಣಾ ||

ಮುಗಿಲಿಂದ ಬಂದ ಭಾಗ್ಯ
ಕೂಡಿಡಲಿಲ್ಲ ನೀನು ಯೋಗ್ಯ
ಕೆರೆ ಬಾವಿ ಕಟ್ಟೆಗಳ ಮರೆತೆಯಣ್ಣಾ ||
    ನೀನು ಕೆರೆ ಬಾವಿ ಕಟ್ಟೆಗಳ ಮರೆತೆಯಣ್ಣಾ ||

ಕೈಲಿದ್ದ ಜಲವ
ಜಂಭ ಮಾಡಿ ಕಳೆದೆ
ನೀರಿರದೆ ಹೊಲ ಉತ್ತರೇನಣ್ಣಾ
    ನೀನು ನೀರಿರದೆ ಹೊಲ ಉತ್ತರೇನಣ್ಣಾ ||

ಬಿದ್ದ ಜಲವ ಹಿಂಗಿಸು
ಅದ ಮಿತದಿಂದ ಬಳಸು
ಕೆರೆ ಬಾವಿಕಟ್ಟೆಗಳೆ ಸಂಪತ್ತಣ್ಣಾ ||
    ನಿನಗೆ ಕೆರೆ ಬಾವಿ ಕಟ್ಟೆಗಳೆ ಸಂಪತ್ತಣ್ಣಾ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ನಿಜವೇ ಇದು ನಿಜವೇ


- ಶಿಶುನಾಳ ಶರೀಫ್

ನಿಜವೇ ಇದು ನಿಜವೇ ನಿಜವಲ್ಲಾ
ಅಜ ಹರಿ ಸುರರಿಗಲ್ಲದ ಮಾತು                           ||ಪ||

ನರಜನ್ಮ ಸ್ಥಿರವೆಂದು ಧರೆಗೆ ಉದಿಸಿಬಂದು
ಸಿರಿಯು ಸಂಪತ್ತು ಸೌಭಾಗ್ಯ  ಲೋಲ್ಯಾಡುವದು    ||೧||

ಅಂಗಲಿಂಗದ ಸಮರಸನರಿಯದೆ
ಮಂಗನ ತೆರದಲ್ಲಿ  ಪೂಜಿಸುವದು                        ||೨||

ವಸುಧಿಯೊಳು ಶಿಶುನಾಳಧೀಶನಲ್ಲದೆ  ಬ್ಯಾರೆ
ತುಸು ಜ್ಞಾನ ಅರಿಯದೆ  ಶಾಸ್ತ್ರಪುರಾಣವು             ||೩||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಒಂಟಿ ಬ್ಯಾರಿಯೂ ಅವಭೃತ ಉತ್ಸವವೂ

- ಪ್ರಭಾಕರ ಶಿಶಿಲ

ಬಿದಿರ ಮೆಳೆಗಳು ಹೂಬಿಟ್ಟು ಬಿದಿರಕ್ಕಿ ರಾಜಂದರಿಯನ್ನು ಕೊಡಲು ಶುರುಮಾಡಿದ್ದು ಮತ್ತು ಕಪಿಲಳ್ಳಿಯ ಇತಿಹಾಸದ ಪುಟಗಳಲ್ಲಿ ಏಕಮೇವಾದ್ವಿತೀಯನಾದ ಒಂಟಿ ಬ್ಯಾರಿಯ ಹೆಸರು ದಾಖಲಾದದ್ದು ಒಂದೇ ವರ್ಷದ ಅಪೂರ್ವ ಯೋಗಾಯೋಗವೆಂದು ಕಪಿಲಳ್ಳಿಯ ಜನರು ಹೇಳುತ್ತಿರುತ್ತಾರೆ. ಅರುವತ್ತು ವರ್ಷಗಳಿಗೊಮ್ಮೆ ಬಿದಿರ ಮೆಳೆಗಳು ಹೂಬಿಟ್ಟು ರಾಜಂದರಿ ಕೊಟ್ಟು ಒಣಗಿ ನಶಿಸಿಹೋಗುತ್ತವೆ.  ಅದು ಅಪಶಕುನವಾದರೆ ಬೇಕೆಂದರೂ ಒಬ್ಬನೇ ಒಬ್ಬ ಇಸ್ಲಾಮು ಕಾಣಸಿಗದ ಕಪಿಲಳ್ಳಿಗೆ ಒಂಟಿ ಬ್ಯಾರಿಯ ಪ್ರವೇಶವಾದದ್ದು ಶುಭಶಕುನ. ಅಪಶಕುನಕ್ಕೆ ಪ್ರತಿಯಾಗಿ ಶುಭಶಕುನವಾದುದರಿಂದ ಅಲ್ಲಿಗಲ್ಲಿಗೆ ಆದು ಸರಿಯಾಗಿ ಊರಿಗೇನೂ ತೊಂದರೆ ಬಾರದಂತೆ ಆ ಕಪಿಲೇಶ್ವರ ನೋಡಿಕೊಂಡ ಎಂದು ಕಪಿಲಳ್ಳಿಯ ಜನ ಸಮಾಧಾನ ಪಟ್ಟುಕೊಂಡು ನೆಮ್ಮದಿಯಿಂದ ಭೋಜನ, ನಿದ್ರಾ, ಮೈಥುನಾದಿ ಕ್ರಿಯೆಗಳಲ್ಲಿ ಎಂದಿನಂತೆ ತಮ್ಮ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.

ವಾಸ್ತವವಾಗಿ ಕಪಿಲಳ್ಳಿಯ ಪರಿಸ್ಥಿತಿ ತೀರಾ ಹದಗೆಡತೊಡಗಿತ್ತು. ಕಪಿಲಳ್ಳಿಯನ್ನು ಸಮೃದ್ದಗೊಳಿಸುತ್ತಾ ಹರಿಯುವ ತೇಜಸ್ವಿನಿಯ ದಡದುದ್ದಕ್ಕೂ ಇದ್ದ ಭತ್ತದ ಗದ್ದೆಗಳನ್ನು ಅಡಿಕೆ ತೋಟಗಳನ್ನಾಗಿ ಮಾಡಿದ್ದೇ ಊರಲ್ಲಿ ಅಕ್ಕಿ ಸಾಕಷ್ಟು ಸಿಗದ ಪರಿಸ್ಥಿತಿ ಉಂಟಾಯಿತು. ಊಟಕ್ಕೆ ತತ್ವಾರವಾದಾಗ ಬಡ ಶೂದ್ರರು ಮತ್ತು ಆತಿಶೂದ್ರರು ಕಾಡು ನುಗ್ಗಿ ನೆರೆ, ಕುರ್ಡು ಮತ್ತು ಕಾಡಗೆಣಸುಗಳನ್ನು ಅಗೆದು ತಂದು ಬೇಯಿಸಿ ತಿನ್ನತೊಡಗಿದರು. ಅದನ್ನು ಮೂರು ಹೊತ್ತು ತಿಂದವರಿಗೆ ವಾಂತಿ, ಬೇಧಿ ಹತ್ತಿ ಫಜೀತಿಯಾಗಿತ್ತು.  ಅದೇ ಕಾಲಕ್ಕೆ ಘನ ಸರಕಾರವು ಅಂತರ ಜಿಲ್ಲಾ ಆಹಾರ ಸಾಮಾನು ಸಾಗಾಟ ನಿರ್ಬಂಧ ಕಾಯಿದೆ ಜಾರಿ ಮಾಡಿ ಕಪಿಲಳ್ಳಿಯ ಗಾಯದ ಮೇಲೆ ಬರೆ ಎಳೆದುಬಿಟ್ಟಿತು.  ಅದೇ ವರ್ಷ ಕಪಿಲಳ್ಳಿಯಲ್ಲಿ ಬಿದಿರ ಮೆಳೆಗಳು ಹೂಬಿಟ್ಟು ರಾಜಂದರಿ ಕೊಡತೊಡಗಿದ್ದು.  ಆಗಲೇ ಒಂಟಿ ಬ್ಯಾರಿಯು ತನ್ನ ಏಕೈಕ ಮಡದಿ ಉಮ್ಮ ಮತ್ತು ಮೂವರು ಮಕ್ಕಳೊಡನೆ ಕಪಿಲಳ್ಳಿಗೆ ಬಂದು ಖಾಯಮ್ಮಾಗಿ ತಳವೂರಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡದ್ದು.

ಅವನದು ಕಪಿಲಳ್ಳಿಯ ಏಕೈಕ ಇಸ್ಲಾಮು ಕುಟು೦ಬವಾದುದರಿಂದ ಊರಿಗೊಂದೇ ಮದ್ದಿನ ಕೊಂಬಿನಂತಿರುವ ಕುಟುಂಬ ಮುಖ್ಯಸ್ಥನ ಶುಭನಾಮಧೇಯವೇನೆಂದು ಕೇಳದೆ ಜನರು ಅವನಿಗೆ ಒಂಟಿ ಬ್ಯಾರಿಯೆಂಬ ರೂಢನಾಮವನ್ನು ಯಾವ ತಕರಾರೂ ಇಲ್ಲದೆ ಅತ್ಯಂತ ಉದಾರತೆಯಿಂದ ದಯಪಾಲಿಸಿ ಬಿಟ್ಟಿದ್ದರು. ಇಸ್ಲಾಮು ಗಂಡಸರಲ್ಲಿ ಕಿವಿ ಚುಚ್ಚುವ ಕ್ರಮ ಇಲ್ಲದಿದ್ದರೂ ಈ ಬ್ಯಾರಿಯ ಎಡ ಕಿವಿಯಲ್ಲಿ ಚಿನ್ನದ ಟಿಕ್ಕಿಯೊಂದು ಕಪಿಲೇಶ್ವರನ ಜಟೆಯ ಮೇಲಣ ಅಷ್ಟಮಿ ಚಂದ್ರನಂತೆ ರಾರಾಜಿಸುತ್ತಿದ್ದುದು ಒಂಟಿ ಬ್ಯಾರಿಯೆಂಬ ಹೆಸರನ್ನು ಅನ್ವರ್ಥ ನಾಮವಾಗಿ ಪರಿವರ್ತಿಸಿಬಿಟ್ಟಿತು.  ಒಂಟಿ ಬ್ಯಾರಿಯ ಸಂಕೋಚ ಸ್ವಭಾವದ ಮಡದಿ ಉಮ್ಮ ಅಡ್ಡ ಕಂಬಾಯಿ ಉಟ್ಟು, ಮುಕ್ಕಾಲು ಕೈಯ ರವಿಕೆ ತೊಟ್ಟು ತಲೆಗೊ೦ದು ಬಟ್ಟೆ ಕಟ್ಟಿ ನಗುನಗುತ್ತಾ ಮಾತಾಡಲು ತೊಡಗಿದ್ದೇ, ಕಪಿಲಳ್ಳಿಯ ನಾರೀಮಣಿಯರು ಒಂಟಿ ಬ್ಯಾರಿಯ ಮಡದಿ ಉಮ್ಮನ ಸ್ನೇಹ ಬೆಳೆಸಿಕೊಂಡು ಬಿಟ್ಟರು.

ಬಂದ ಹೊಸತರಲ್ಲಿ ಒಂಟಿ ಬ್ಯಾರಿಯು ಕಪಿಲಳ್ಳಿಯ ಏಕಮಾತ್ರ ಮುಖ್ಯರಸ್ತೆಯ ಬಳಿಯಲ್ಲೇ ಸರ್ಕಾರಿ ರೆವಿನ್ಯೂ ಹತ್ತು ಸೆಂಟ್ಸ್ ಜಾಗದಲ್ಲಿದ್ದ, ಕಪಿಲಳ್ಳಿ ಜಾತ್ರೆಯಲ್ಲಿ ಗರ್ನಾಲಿಗೆ ಬೆಂಕಿ ಹಚ್ಚಿ ಮೇಲೆಸೆದು ಢಾಂ ಸದ್ದಿನಿಂದ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡುತ್ತಿದ್ದ ಗರ್ನಾಲು ರಾಮಣ್ಣನ ಮನೆಯನ್ನು ನಗದು ಹಣ ಕೊಟ್ಟು ಕೊಂಡುಕೊಂಡನು. ಮನೆಯೆದುರು ಬಿದಿರ ಚಪ್ಪರ ಹಾಕಿ, ಅಲ್ಲಲ್ಲಿ ಬಿದಿರ ತಟ್ಟಿ ಅಡ್ಡ ಕಟ್ಟಿ, ಮುಂಭಾಗದ ಬಿದಿರ ಕಂಬವೊಂದಕ್ಕೆ "ಸ್ಟಾರು ಹೋಟೆಲು ಕಪಿಲಳ್ಳಿ" ಎಂಬ ದೊಡ್ಡ ಅಕ್ಷರದ ಬೋರ್ಡು ತಗಲಿಸಿ ಅದರಲ್ಲಿ ಕೆಳಗಡೆ, "ಇಲ್ಲಿ ಬಿಸಿ ಬಿಸಿ ಚಾ-ಕಾಫಿ, ಸೋಜಿ-ಕಲ್ತಪ್ಪ' ದೊರೆಯುತ್ತದೆ ಎಂದು ಬರೆಸಿ ಹಾಕಿದ್ದನು. ಹೀಗೆ ಹೊಸದೊಂದು ಸಂಪ್ರದಾಯಕ್ಕೆ ಕಾರಣನಾದ ಒಂಟಿ ಬ್ಯಾರಿ ಬಗ್ಗೆ, ಈ ವರೆಗೆ ಬೋರ್ಡೇ ಹಾಕದೆ ವ್ಯವಹಾರ ನಡೆಸುತ್ತಿದ್ದ ಇನ್ನುಳಿದ ಎರಡು ಹೋಟೆಲುಗಳವರು "ಅಬ್ಬಾ ಈ ಒಂಟಿ ಬ್ಯಾರಿಯ ಧಿಮಾಕೇ?  ನಾವೇನು ಥ೦ಡಿ ಕಲ್ತಪ್ಪ, ಚಾ-ಕಾಫಿ ಕೊಡುತ್ತಿದ್ದೇವೆಯೇ?" ಎಂದು ಮಾತಾಡುವಂತಾಗಿ ಬಿಟ್ಟಿತು.

ಕಪಿಲಳ್ಳಿ ಜನರಿಗೆ ಕಲ್ತಪ್ಪ ಹೊಸ ತಿಂಡಿಯೇನಲ್ಲ. ಅಕ್ಕಿಯನ್ನು ನೀರಲ್ಲಿ ನೆನೆಹಾಕಿ ಗಟ್ಟಿಯಾಗಿ ರುಬ್ಬಿ ದೊಡ್ಡ ಬಾಣಲೆಯಂತಹ ಚಟ್ಟೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ನೀರುಳ್ಳಿ, ಹಸಿಮೆಣಸುಗಳ ಹದವಾದ ಒಗ್ಗರಣೆಗೆ ಹಿಟ್ಟುಹಾಕಿ ಕೆಳಗಿನಿಂದ ಧಗಧಗನೆ ಬೆಂಕಿ ಉರಿಸಿ ಪಾತ್ರೆಯ ಮುಚ್ಚಳದ ಮೇಲೆ ನಿಗಿನಿಗಿ ಕೆಂಡ ಹಾಕಿ ಬೇಯಿಸಿದರೆ ಬಾಯಲ್ಲಿ ನೀರೂರುವ ಬಿಸಿ ಬಿಸಿ ಕಲ್ತಪ್ಪ ಸಿದ್ದಗೊಳ್ಳುತ್ತದೆ. ಸ್ಟಾರು ಹೋಟೆಲಲ್ಲಿ ಒಂಟಿ ಬ್ಯಾರಿಯ ಮಡದಿ ಉಮ್ಮ ಮಾಡುವ ಗಮಗಮಿಸುವ ಎಟ್ಟಿ, ಬಲ್ಯಾರು, ನಂಗು ಸಾರಿನೊಡನೆ ಕಲ್ತಪ್ಪ ತಿನ್ನುವುದನ್ನು ಕಪಿಲಳ್ಳಿಯ ಶೂದ್ರರು ಮತ್ತು ಶೂದ್ರಾತಿಶೂದ್ರರು ತಮ್ಮ ದಿನಚರಿಯ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡಿಕೊ೦ಡರು. ಗಂಡಂದಿರ ಕಣ್ಣ ತಪ್ಪಿಸಿ ಕೆಲಸದ ಹೆಂಗಸರು ಒಮ್ಮೊಮ್ಮೆ ಸ್ಟಾರು ಹೋಟೆಲಿಗೆ ಬಂದು ಕಲ್ತಪ್ಪ, ಸಾರು ತಿಂದು, ಬಿಸಿ ಬಿಸಿ ಸೋಜಿ ಕುಡಿದು ಉಮ್ಮನೊಡನೆ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಒಂದು ಸಲ ಉಮ್ಮ ಹಾಗೆ ಬಂದವರನ್ನು ಒಳಗೆ ಕರೆದು ತನ್ನ ತವರುಮನೆಯವರು ಮದುವೆ ಕಾಲದಲ್ಲಿ ಕೊಟ್ಟ ಮೂನೇಟಿ, ಅಲಿಕತ್, ಕೊಂಬತಾಂಙ, ಚಪ್ಪಲೆ, ತಾಮರ, ತಿರ್ಪುಂಡೆ ಪೂ, ಕೋಯಕ್ಕ ಅರಞಣಂ, ಕೊತ್ತಂಬಳೆ ಉರ್ಕುಕಾಯಿ ಮೀನ್ ಸರಪ್ಪಳಿ, ಮಿಸಿರಿ ಮಾಲ, ಮುಡಿಪ್ಪಲೆ, ಕೊಪ್ಪು ಸರಪಳಿ ಎಂಬಿತ್ಯಾದಿ ಆಭರಣ ವೈವಿಧ್ಯಗಳನ್ನು ತೋರಿಸಿ ದಂಗುಬಡಿಸಿದ್ದಳು. ಅಲ್ಲಿಂದ ಹೋದ ಮೇಲೆ ಆಭರಣಗಳು ನೆನಪಾಗಿ ಕಾಡುವಾಗೆಲ್ಲ ಕೆಲಸದ ಹೆಂಗಸರು, "ಒಂಟಿ ಬ್ಯಾರಿ ನಿಜಕ್ಕೂ ಪುಣ್ಯಾತ್ಮ. ಇಷ್ಟೆಲ್ಲಾ ಬಂಗಾರ ಇರುವ ಉಮ್ಮ ಎಷ್ಟು ಚೆನ್ನಾಗಿ ಕಲ್ತಪ್ಪ - ಸಾರು ಮಾಡಿ ಹಾಕುತ್ತಾಳೆ?  ಎಷ್ಟು ಚೆನ್ನಾಗಿ ಬಾಯಿ ತುಂಬಾ ನಗುತ್ತಾ ಮಾತಾಡುತ್ತಾಳೆ?  ಉಮ್ಮನ ಮಾತು ಕೇಳುತ್ತಾ ನಿಂತರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ" ಎಂದು ಗುಣಗಾನಕ್ಕೆ ತೊಡಗಿಬಿಡುವುದುಂಟು.

ಆದರೆ ಕಪಿಲಳ್ಳಿಯ ಧರ್ಮಸಂರಕ್ಷಣಾ ಪರಿಷತ್ತು ಮಾತ್ರ ಒಂಟಿ ಬ್ಯಾರಿಯನ್ನು ಭಯೋತ್ಪಾದಕನೆಂದು ಪರಿಗಣಿಸಿ ಅವನ ವಿರುದ್ದ ಏಕಪಕ್ಷೀಯ ಶೀತಲ ಸಮರ ಸಾರಿಬಿಟ್ಟಿತು.  ಕಡೆಕೊಡಿ ಒಂದೂ ತಿಳಿಯದ ಯಾವುದೋ ಊರಿನ ಮ್ಲೇಂಚ್ಛನೊಬ್ಬ ಹೀಗೆ ದಿಡೀರನೆ ಕಪಿಲಳ್ಳಿಯನ್ನು ಆಕ್ರಮಿಸಿ ಅದೇನೇನೋ ಮಾಡಿ ಹಾಕಿ ಕಪಿಲಳ್ಳಿಯ ಹೆಂಗಸರನ್ನು ಕೂಡಾ ಆಕರ್ಷಿಸುವುದೆಂದರೇನು?  ನಾಳೆ ಇವನು ಸ್ವಾರು ಹೋಟೆಲಲ್ಲಿ ಕೋಣಂದೋ, ಎತ್ತಿದ್ದೋ ಮಾಂಸವನ್ನು ಮಾಡಿ ಹಾಕಿ ಇವರಿಗೆಲ್ಲಾ ತಿನ್ನಿಸುವುದಿಲ್ಲವೆಂದು ಏನು ಗ್ಯಾರಂಟಿ? ಇವನ ಕಲ್ತಪ್ಪ, ನಂಗು ಸಾರು, ಸೋಜಿಗ ಮನಸೋತು ಸಾಲ ಮಾಡಿ ತಿನ್ನುವವರು ನಾಳೆ ಸಾಲ ತೀರಿಸಲಾಗದೆ ಮ್ಲೇಂಚ್ಛರಾಗಿ ಬಿಟ್ಟರೇನು ಗತಿ?  ಇದಕ್ಕೆಲ್ಲಾ ಕಾರಣ ಗರ್ನಾಲು ರಾಮಣ್ಣ ಇನ್ನೂ ರಿಕಾರ್ಡಾಗದ ತನ್ನ ಹತ್ತು ಸೆಂಟ್ಟು ಸರ್ಕಾರೀ ಜಾಗವನ್ನು ಮತ್ತು ಮನೆಯನ್ನು ಒಂಟಿ ಬ್ಯಾರಿಗೆ ಮಾರಾಟ ಮಾಡಿದ್ದು. ಊರಿನ ವಿಪ್ರರು, ಅತಿವಿಪ್ರರು, ಹಿರಿಯರು, ಪಟೇಲರು ಮತ್ತು ದೇವಸ್ಥಾನದ ಮೊಕ್ತೇಸರರನ್ನು ಒಂದು ಮಾತು ಕೇಳದೆ ಎಲ್ಲಿಯವನೋ ಒಬ್ಬ ಬ್ಯಾರಿಗೆ ಹೀಗೆ ಸರಕಾರೀ ಭೂಮಿ ಮಾರಾಟ ಮಾಡಿದ್ದು ತಪ್ಪಲ್ಲವೇ?  ಧರ್ಮ ಸಂರಕ್ಷಣಾ ಪರಿಷತ್ತು ಗರ್ನಾಲು ರಾಮಣ್ಣನನ್ನು ದೇವಸ್ಥಾನಕ್ಕೆ ಕರೆಸಿ ವಿಚಾರಣೆ ನಡೆಸಿ ತಾರಾಮರಾ ಬೈದು ಅಲೆಕ್ಸಾಂಡರನು ಭಾರತವನ್ನು ಆಕ್ರಮಿಸಿದಾಗ ಅವನೊಡನೆ ಸೇರಿಕೊಂಡ ಅಂಬಿಗೆ ಗರ್ನಾಲು ರಾಮಣ್ಣನನ್ನು ಹೋಲಿಸಿ, ಅವನ ಕುಲಗೋತ್ರ ಜಾಲಾಡಿಸಿ ಬಿಟ್ಟದ್ದಲ್ಲದೆ ಒಂಟಿ ಬ್ಯಾರಿಯಿಂದ ಜಾಗ ವಾಪಾಸು ಪಡೆದುಕೊಳ್ಳದಿದ್ದರೆ ಕಪಿಲೇಶ್ವರನ ಜಾತ್ರೋತ್ಸವದಲ್ಲಿ ಗರ್ನಾಲು ಹೊಡಿಸುವ ಅವಕಾಶವನ್ನು ಬೇರೆಯವರಿಗೆ ನೀಡುವುದಾಗಿ ಭಯಾನಕ ಬೆದರಿಕೆ ಒಡ್ಡಿಬಿಟ್ಟಿತು. ಗರ್ನಾಲು ರಾಮಣ್ಣನು ತಾನು ದಿಲ್ ಪುಕಾರು ಬೀಡಿ ಸೇದಿ ಅದರ ಮೂತಿಗೆ ಗರ್ನಾಲಿನ ಬತ್ತಿಯನ್ನು ಇಟ್ಟು, ಅದು ಸುರ್ ಸುರ್ ಎಂದು  ಹತ್ತಿಕೊಂದಾಗ ಆಕಾಶದೆತ್ತರಕ್ಕೆ ಹಾರಿಸಿ ಢಾಂ ಸದ್ದಿನಿಂದ ಎಲ್ಲರನೂ ಬೆಚ್ಚಿಬೀಳಿಸುವ ತನ್ನ ಸಾಹಸಕ್ಕೆ ಸಿಗುವ ಮೆಚ್ಚುಗೆಯ ನೋಟಗಳ ಪುಳಕದಿಂದ ವಂಚಿತನಾಗುವ ದೌರ್ಭಾಗ್ಯದಿಂದ ವಿಚಲಿತನಾದನು. ಕೊನೆಗೆ ಅವನು ತನಗೆ ಆಗಾಗ ಕಾಣಿಸಿಕೊಳ್ಳುವ ಮಲೇರಿಯಾ ವಾಸಿ ಮಾಡಲು ಮಾಡಿದ ಸಾಲದಿಂದಾಗಿ ತಲೆ ಎತ್ತಿ ನಡೆಯಲಾಗದೆ ದೀನಸ್ಥಿತಿ ತನ್ನನ್ನು ಜಾಗ ಮಾರಾಟ ಮಾಡುವಂತೆ ಮಾಡಿಸಿತೆಂದೂ, ಧರ್ಮ ಸಂರಕ್ಷಣಾ ಪರಿಷತ್ತು ಆ ಜಾಗ ಮತ್ತು ಮನೆಗೆ ಒಂಟಿ ಬ್ಯಾರಿ ಕೊಟ್ಟಿದ್ದಕ್ಕಿಂತ ಸ್ವಲ್ಪ ಹೆಚ್ಚು ಹಣ ಕೊಡುವುದಾದರೆ ಒಂಟಿ ಬ್ಯಾರಿಯನ್ನು ಜಾಗ ಮತ್ತು ಮನೆಯಿಂದ ಮಾತ್ರವಲ್ಲದೆ ಊರಿನಿಂದಲೇ ಬಿಡಿಸಿ ಓಡಿಸುತ್ತೇನೆಂದು ಖಡಾಖಂಡಿತವಾಗಿ ಹೇಳಿದಾಗ ಧರ್ಮ ಸಂರಕ್ಷಣಾ ಪರಿಷತ್ತು ಅನ್ಯ ದಾರಿ ಕಾಣದೆ "ನಿನ್ನ ಕರ್ಮ ಅನುಭವಿಸು" ಎಂದು ಹೇಳಿ ತಣ್ಣಗಾಗಿ ಬಿಟ್ಟಿತು.

ಗದ್ದೆಗಳನ್ನು ತೋಟ ಮಾಡಿದ್ದಕ್ಕೆ ಕಪಿಲಳ್ಳಿಯಲ್ಲಿ ಅಕ್ಕಿಯ ಬೆಲೆ ವಿಪರೀತ ಹೆಚ್ಚಾದಾಗ ಸಾಹಸಿಗಳು ಬಹಳ ಕಷ್ಟಪಟ್ಟು ಅಭೇಧ್ಯ ಮಲೆ ಹತ್ತಿ ಘಟ್ಟ ಸೇರಿ ಅಲ್ಲಿನ ಪೋಲಿಸರ ಕಣ್ತಪ್ಪಿಸಿ ಅಲ್ಲಿಂದ ತಲೆಹೊರೆಯಲ್ಲಿ ಹೇಗೋ ಆಕ್ಕಿ ತಂದು ಕಪಿಲಳ್ಳಿಯಲ್ಲಿ ಮಾರುವ ಕಾರ್ಯಕ್ಕೆ ಇಳಿದುಬಿಟ್ಟರು. ತಲೆ ಹೊರೆಯಲ್ಲಿ ಹದಿನೈದು ಮೈಲಿ ಬೆಟ್ಟ ಕಾಡು ಹತ್ತಿ ಇಳಿದು ಅಕ್ಕಿಯನ್ನು ಹೊತ್ತು ತರುವ ಹಾದಿಯುದ್ದಕ್ಕೂ ರಕ್ತಹೀರುವ ಸೊಳ್ಳೆ, ಕುರ್ಡ, ಜಿಗಣೆ, ಭಯಾನಕವಾದ ಕಾಟಿ, ಕಾಡಾನೆ, ಸಿಕ್ಕಿಬಿದ್ದರೆ ಬೆನ್ನ ಚರ್ಮ ಸುಲಿದು ಅಜೀವಪರ್ಯಂತ ಕಂಬಿ ಎಣಿಸುವಂತೆ ಮಾಡಬಹುದಾದ ಪೋಲಿಸರು, ಎಲ್ಲವನ್ನೂ ನಿಭಾಯಿಸಿ ಕಪಿಲಳ್ಳಿಗೆ ತಂದದ್ದನ್ನು ಮರಾಟ ಮಾಡಿದರೆ ಅಸಲಿಗೆ ಮೋಸವಿರಲಿಲ್ಲವಾದರೂ ಹೇಳಿಕೊಳ್ಳುವಂಥ ಲಾಭ ಸಿಗುತ್ತಿರಲಿಲ್ಲ".  ಒಮ್ಮೆ ಘಟ್ಟಕ್ಕೆ ಹೋಗಿ ಬಂದರೆ ಎಣ್ಣೆ ತಿಕ್ಕಿ, ಬಿಸಿ ನೀರ ಸೇಕ ಕೊಟ್ಟು ಕೈಕಾಲು, ಮೈ ಸರಿಪಡಿಸಲು ಒಂದು ವಾರವಾದರೂ ಬೇಕಾಗಿದ್ದುದರಿಂದ ಹಾಗೆ ಹೋಗಿ ಬಂದವರಿಗೆ ವಾರವಿಡೀ ಬೇರೆ ಗಳಿಕೆ ಏನೇನೂ ಇರಲಿಲ್ಲ.

ಇಂಥ ಪರಿಸ್ಥಿತಿಯಲ್ಲಿ ಒಂಟಿ ಬ್ಯಾರಿಯ ಮಡದಿ ಉಮ್ಮ ರಸ್ತೆಯ ಮೇಲ್ಗಡೆಯ ನಾಲ್ಕೈದು ಬಿದಿರ ಮಳೆಗಳ ಸುತ್ತಲಿನ ಒರಟು ನೆಲವನ್ನು ಕತ್ತಿ ಮನೆಯ೦ಗಳದಂತೆ ಸಾಪಾಟಾಗಿ ಮಾಡಿ ಸಗಣಿ ಸಾರಿಸಿ, ಹಗಲಿಡೀ ತನ್ನ ಮಕ್ಕಳನ್ನು ಅಲ್ಲಿ ಕಾವಲಿರಿಸಿ, ದಿನಾ ಬೆಳಗ್ಗೆ ರಾಜಂದರಿಯನ್ನು ಗುಡಿಸಿ ಒಟ್ಟುಮಾಡಿ ತಂದು, ಕಸ ತೆಗದು, ಒನಕೆಯಿಂದ ಕುಟ್ಟಿ, ಡಾಲ್ಡದ ಒಗ್ಗರಣೆ ಹಾಕಿ ಗಮಗಮಿಸುವ ಉಪ್ರಟ್ಟು, ದೋಸೆ ತಯಾರಿಸಿ ಸ್ಟಾರು ಹೋಟಲಲ್ಲಿ ಮಾರಾಟಕ್ಕಿಟ್ಟ ಸಾಹಸ ಮನೆ ಮನೆ ಮಾತಾಗಿ ಬಿಟ್ಟತು. ಈಗ ಕಪಿಲಳ್ಳಿಯ ಕೆಲಸದ ಹೆಂಗಸರು, ಗ೦ಡಸರು ಕಾಡಿಗೆ ನುಗ್ಗಿ ಬಿದಿರ ಮಳೆಗಳನ್ನು ತಮ್ಮೊಳಗೆ ಹ೦ಚಿಕೂಂಡು, ಕಾಡಿಗೆ ಕಾಡನ್ನೇ ಅಲ್ಲಲ್ಲಿ ಗುಡಿಸಿ, ಚೊಕ್ಕಟಮಾಡಿ, ಸಂಗ್ರಹವಾದ ರಾಜಂದರಿಯನ್ನು ಸ್ಟಾರು ಹೋಟೆಲಿಗೆ ಮಾರಿ, ಅದರಿಂದಲೇ ಮಾಡಿದ ಉಪ್ಪಿಟ್ಟು, ದೋಸೆ ಚಪ್ಪರಿಸಿ ಚಪ್ಪರಿಸಿ ತಿನ್ನತೊಡಗಿದರು. ಹೊಸದೊಂದು ಸಾಧ್ಯತೆಯೆನ್ನು ಕಪಿಲಳ್ಳಿಗೆ ತೋರಿಸಿಕೊಟ್ಟ ಒಂಟಿ ಬ್ಯಾರಿಯ ಹೆಂಡತಿ ಉಮ್ಮ ಈಗ ರಾಜಂದರಿ ಉಮ್ಮನಾಗಿ ಊರಲ್ಲಿ ಹೊಸ ಪ್ರಭಾವಳಿಯಿಂದ ಕಂಗೊಳಿಸತೊಡಗಿದಳು. ಕಪಿಲಳ್ಳಿಯ ಕಾಡುಗಳಿಂದ ತಿಂಗಳೂರಿಗೆ ಮರ ಸಾಗಿಸುವ ಲಾರಿಗಳ ಡ್ರೈವರು, ಕ್ಲೀನರು, ರೋಡಿನ ಕೆಲಸದವರು ಮತ್ತು ಮೇಸ್ತ್ರಿಗಳು ಒಂಟಿ ಬ್ಯಾರಿಯ ಸ್ಟಾರು ಹೋಟೆಲನ್ನು ತಮ್ಮ ಖಾಯಂ ತಂಗುದಾಣವನ್ನಾಗಿ ಮಾಡಿಕೊಂಡುದರಿಂದ ಖುಲಾಯಿಸಿದ ಅದೃಷ್ಟದಿಂದಾಗಿ ಒಂಟಿ ಬ್ಯಾರಿಯನ್ನು ಕಪಿಲಳ್ಳಿ ಜನ ಸಾವುಕಾರ್ರೇ; ಎಂದು ಎದುರಿಂದ ಮರ್ಯಾದೆ ಕೊಟ್ಟು ಕರೆಯತೊಡಗಿದರು.

ಎಲ್ಲವೂ ಹೀಗೆ ಸುಸೂತ್ರವಾಗಿ ಸಾಗಲಾಗಿ ಕಪಿಲೇಶ್ವರನ ಸಂಭ್ರಮದ ಏಳು ದಿನಗಳ ಜಾತ್ರೋತ್ಸವ ಆರಂಭವಾಗಿ ಬಿಟ್ಟಿತು. ಏಳು ದಿನವೂ ಮಧ್ಯಾಹ್ನ ಊರವರಿಗೆ ಪುಷ್ಕಳ ಭೋಜನದ ಸ್ವರ್ಗ ಸುಖ. ದೇವಸ್ಥಾನದ ಒಳಾಂಗಣದಲ್ಲಿ ವಿಪ್ರರಿಗೆ ಮತ್ತು ಅತಿವಿಪ್ರರಿಗೆ ಮೊದಲು ಎರಡು ಗಂಟೆಗಳ ಸಮಾರಾಧನೆ. ಅವರ "ಭೋಜನಕಾಲೇ ನಮಃ ಪಾರ್ವತೀ ಪತೇ ಹರಹರಾ ಮಹಾದೇವ" ಎಂಬ ಮುಗಿಲು ಮುಟ್ಟುವ ಸಂತೃಪ್ತ ಸಾಮೂಹಿಕ ಘೋಷಣೆ ಮುಗಿದು ಅವರೆದ್ದ ಮೇಲೆ, ಆ ವರೆಗೆ ಪಲ್ಯ, ಪಳದ್ಯ, ಕಾಯಿಹುಳಿ, ಪಾಯಸಗಳ ಸುವಾಸನೆಯನ್ನು ಹೀರುತ್ತಾ ಹಸಿದು ಕಂಗಾಲಾಗಿ ಕಾಯುತ್ತಿರುವ ಶೂದ್ರರಿಗೆ ದೇವಸ್ಥಾನದ ಹೊರಾ೦ಗಣದಲ್ಲಿ ಊಟವಾಗುವಾಗ ಸಂಜೆ ನಾಲ್ಕಾಗುತ್ತದೆ. ಎಲ್ಲರಿಗೂ ಊಟವಾದ ಮೇಲೆ ಉಳಿದದ್ದೆಲ್ಲವನ್ನೂ ಬುಟ್ಟಿ, ಹಂಡೆ ಸಮೇತ ಹೊರಾಂಗಣದಿಂದ ಸಾಕಷ್ಟು ದೂರದ ಮಜಲಿನಲ್ಲಿ ಅತಿಶೂದ್ರರಿಗೆ ತಂದು ಕೊಡುವದು ಆರ್ಷೇಯ ಸಂಪ್ರದಾಯ. ಆರನೆಯ ದಿನ ರಥೋತ್ಸವವಾಗಿ ಕಪಿಲೇಶ್ವರನ ಉತ್ಸವಮೂರ್ತಿ ಗರ್ಭಗುಡಿ ಸೇರಿದರೆ ಗುಡಿಯ ಬಾಗಿಲು ತರೆಯುವುದು ಮರುದಿನ ಬೆಳಗ್ಗೆ ಹತ್ತು ಗಂಟೆಗೆ. ಅಂದು ಸಂಜೆ ಆರು ಗಂಟೆಗೆ ಕಪಿಲೇಶ್ವರನ ಉತ್ಸವಮೂರ್ತಿ ಪಟ್ಟಣ ಸವಾರಿ ಹೊರಡುವ ಮುನ್ನ ದೇವಸ್ತಾನದ ಬಳಿಯಲ್ಲೆ ಹರಿಯುವ ತಪಸ್ವಿನಿಯ ಮಧ್ಯದಲ್ಲಿರುವ ಗೌರೀಶಿಲೆಗೆ ತೆಪ್ಪದಲ್ಲಿ ಉತ್ಸವಮೂರ್ತಿಯ ಪ್ರದಕ್ಷಿಣೆಯಾಗುತ್ತದೆ. ತೆಪ್ಪೋತ್ಸವ ಮುಗಿದ ಮೇಲೆ ಒಂದೂವರೆ ಮೈಲು ದೂರದ ಜಳಕದ ಗುಂಡಿಗೆ ದೇವರು ಅವಭೃತಕ್ಕೆ ತೆರಳುತ್ತಾರೆ. ಆಗ ಹಾದಿಯುದ್ದಕ್ಕೂ  ಹೋಟೆಲು, ಆಂಗಡಿ, ಮನೆಗಳವರು ದೇವರಿಗೆ ಕಾಯಿ ಒಡೆದು ಆರತಿ ಎತ್ತಿ, ಪಂಚಜ್ಜಾಯ ಹಂಚಿ, ಪಾನಕ ನೀಡಿ ಶ್ರೀ ದೇವರ ಕೃಪಗೆ ಪಾತ್ರರಾಗುತ್ಪಾರೆ.

ಅವಭೃತಕ್ಕೆಂದು ಕಪಿಲೇಶ್ವರನ ಉತ್ಸವಮೂರ್ತಿ ಪಟ್ಟಣ ಸವಾರಿ ಆರಂಭಿಸುವಾಗ ಮೊದಲಿಗೆ ಸಿಗುವುದೇ ಒಂಟಿ ಬ್ಯಾರಿಯ ಸ್ಟಾರ್ ಹೋಟೆಲು. ಕಪಿಲಳ್ಳಿಯಲ್ಲಿ ನೆಲೆನಿಂತು ಎಂಟು ತಿಂಗಳುಗಳಾದರೂ ದೇವಸ್ಥಾನ ಎಲ್ಲಿದೆಯಂದು ತಿರುಗಿಯೂ ನೋಡದ ಒಂಟಿ ಬ್ಯಾರಿ, ಈಗ ತನ್ನ ಸ್ಟಾರು ಹೋಟಿಲಿನ ಎದುರಿನಿಂದಲೇ ಮೆರವಣಿಗೆ ಸಾಗುವಾಗ ಏನು ಮಾಡುತ್ತಾನೆ? ಊರಿನ ಎಲ್ಲಾ ಅಂಗಡಿ ಮನೆಗಳವರು ದೇವರಿಗೆ ಕಾಯಿ ಒಡೆದು ಆರತಿ ಎತ್ತಿ ಗೌರವಿಸುವಾಗ ಆರಂಭದಲ್ಲೇ ಸಿಗುವ ಒಂಟಿ ಬ್ಯಾರಿಯ ಸ್ಟಾರು ಹೋಟೆಲು ದೇವರಿಗೆ ಗೌರವ ತೋರಿಸದಿದ್ದರೆ ಮಂಗಳಕಾರ್ಯಕ್ಕೆ ಆರಂಭ ವಿಘ್ನ ಬಂದಂತಾಗುವುದಿಲ್ಲವೇ? ಆದರೆ ಕಪಿಲೇಶ್ವರನಿಗೆ ಕಾಯಿ ಒಡೆದು ಆರತಿ ಎತ್ತಬೇಕೆಂದು ಒಂಟಿ ಬ್ಯಾರಿಯಲ್ಲಿ ಕೇಳುವುದು ಸರಿಯೇ?  ಒಂಟಿ ಬ್ಯಾರಿ ಕಾಯಿ ಒಡೆದು ಆರತಿ ಎತ್ತದಿದ್ದರೆ ಇಡೀ ಊರು ಒಂದು, ಬ್ಯಾರಿ ಮಾತ್ರ ಬೇರೆ ಎಂದಾಗುವುದಿಲ್ಲವೆ?  ಒಂದು ವೇಳೆ ಒಂಟಿ ಬ್ಯಾರಿ ಆರತಿ ಎತ್ತಿ ಕಾಯಿ ಒಡೆದರೆ ಅದು ಕಪಿಲೇಶ್ವರನಿಗೆ ಮೆಚ್ಚುಗೆ ಯಾದೀತೇ? ದೇವತಾ ಕಾರ್ಯಗಳಲ್ಲಿ ಏನಾದರೂ ದೋಷ ಕಂಡುಬಂದರೇನು ಗತಿ? ಒಂಟಿ ಬ್ಯಾರಿಯ ಮನಸ್ಸೇನೆಂದು ತಿಳಿದುಕೊಳ್ಳಲು ಯಾರನ್ನು ಸಂಧಾನಕ್ಕೆ ಕಳಿಸುವುದು? ಹಾಳಾದ ಗರ್ನಾಲು ರಾಮಣ್ಣ ತನ್ನ ಸರ್ಕಾರೀ ಜಾಗವನ್ನು ರೆಕಾರ್ಡು ಆಗುವ ಮೊದಲೇ ಯಾರಿಗೂ ತಿಳಿಸದೆ ಮಾರಿದ್ದೇ ತಪ್ಪು. ಈಗ ಇಡೀ ಊರಿಗೆ ಊರೇ ಶಿಕ್ಷೆ ಆನುಭವಿಸುತ್ತಿದೆ. ಯೋಚಿಸಿ ಯೋಚಿಸಿ ದೇವಸ್ಯಂ ಟ್ರಸ್ಟು ಎಲ್ಲವನ್ನೂ ಕಪಿಲೇಶ್ವರನಿಗೆ ಬಿಟ್ಟುಬಿಡುವುದು ಎಂದು; ಅವನಿಗೆ ಬೇಕಾದಂತೆ ನಡೆಸಿಕೊಂಡು ಹೋಗಲಿ ಎಂದು ನಿರಾಳವಾಯಿತು. ಊರಿನವರು ಮಾತ್ರ ಅವಭೃತದ ದಿನ ಒಂಟಿ ಬ್ಯಾರಿ ಖಂಡಿತವಾಗಿ ಸ್ಟಾರು ಹೋಟೆಲು ಮುಚ್ಚಿ ಕುಟು೦ಬ ಸಮೇತ ಮಲೆಯಾಳ ದೇಶಕ್ಕೆ ಹೋಗಿ ಬಿಡುತ್ತಾನೆ ಎಂದುಕೊಂಡು ನೆಮ್ಮದಿಯಿಂದಿದ್ದರು.

ಕಾತರದಲ್ಲೇ ಆರಂಭವಾಯಿತು ಅವಭೃತದ ಮೆರವಣಿಗೆ. ಒಳಾಂಗಣದಿಂದ ಹೊರಟ ಕಪಿಲೇಶ್ವರನ ಉತ್ಸವಮೂರ್ತಿ ದೇವಸ್ತಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು ತಪಸ್ವಿನಿಗಿಳಿದು ಪಿಂಡಿ ಹತ್ತಿತು. ಪಿಂಡಿ ಗೌರಿಶಿಲೆಗೆ ಮೂರು ಬಾರಿ ಪ್ರದಕ್ಷಿಣೆ ಬಂದು ಹೊಳೆ ದಾಟಿತು. ಅಲ್ಲಿಂದ ಎರಡು ಫರ್ಲಾಂಗು ಗದ್ದೆಯ ಬದುವಿನಲ್ಲೇ ನಡೆದರೆ ಒಂಟಿ ಬ್ಯಾರಿಯ ಸ್ಟಾರು ಹೋಟೆಲು ಇರುವ ಮುಖ್ಯ ರಸ್ತೆ ಸಿಗುತ್ತದೆ. ಅಲ್ಲಿಗೆ ಮುಟ್ಟುತ್ತಿದ್ದಂತೆ ಮೆರವಣಿಗೆ ನಿಂತುಬಿಟ್ಟಿತು. ಒಂಟಿ ಬ್ಯಾರಿ  ಸ್ಟೂಲೊಂದರಲ್ಲಿ ಕಾಯಿ - ಹಣ್ಣು, ಆರತಿ ತಟ್ಟೆ, ಎಣ್ಣೆ, ಬತ್ತಿ, ಕರ್ಪೂರ, ಆಗರಬತ್ತಿ ಇಟ್ಟು,  ರಾಜಂದರಿ ಉಮ್ಮ ಮತ್ತು ಮೂವರು ಮಕ್ಕಳೊಡನೆ ಕಾಯುತ್ತಿದ್ದಾನೆ!

ಯಾರಿಗೆ ಏನು ಹೇಳಬೇಕೆಂದೇ ತೋಚದ ಸಂದಿಗ್ದತೆ. ಸೂಜಿ ಬಿದ್ದರೂ ಕೇಳಿಸು ವಂತಹ ನಿಶ್ಶಬ್ದ ಮುರಿದು ಒಂಟಿ ಬ್ಯಾರಿ ಕೈ ಜೋಡಿಸಿ ಹೇಳಿದ. "ಈ ದೇವರ ಮುಂದೆ ನಿಂತು ಸತ್ಯ ಹೇಳುತ್ತೇನೆ. ಜಾತ್ರೆ ಶುರುವಾದಂದಿನಿಂದ ನನ್ನ ಹೋಟೆಲಲ್ಲಿ ಕೋಳಿ, ಮೀನು ಮಾಡಿಲ್ಲ. ಇಂದು ಇಡೀ ಮನೆಗೆ, ಅಂಗಳಕ್ಕೆ ಸೆಗಣಿ ಸಾರಿಸಿ, ಬೆಳಗ್ಗೊಮ್ಮೆ, ಈಗೊಮ್ಮೆ ತಪಸ್ವಿನಿಯಲ್ಲಿ ಮಿಂದು ಶುಚಿಯಾಗಿದ್ದೇವೆ. ಈ ಊರು ನನಗೆ ಅನ್ನ ಕಂಡುಕೊಳ್ಳುವ ದಾರಿ ತೋರಿಸಿದೆ.  ಅದಕ್ಕೆ ಕಪಿಲೇಶ್ವರನಿಗೆ ಇದು ನಮ್ಮ ಕೃತಜ್ಞತೆ. ಬೇರೆ ಮಾತಾಡದೆ ನಮ್ಮ ಕಾಣಿಕೆಯನ್ನು ದೇವರಿಗೆ ಒಪ್ಪಿಸಿಕೊಳ್ಳಬೇಕು."

ಅರ್ಚಕರು ಮೊಕ್ತೇಸರರ ಮುಖ ನೋಡಿದರು. ಮೊಕ್ತೇಸರರು ಪಟೇಲರತ್ತ ದೃಷ್ಟಿ ಹಾಯಿಸಿದರು. ಪಟೇಲರತ್ತ ಮೆರವಣಿಗೆಯ ಮು೦ಭಾಗದಲ್ಲಿರುವವರ ಮುಖಗಳನ್ನು  ಓದಿಕೊಂಡವರಂತೆ ಹೇಳಿದರು. "ಒಂಟಿ ಬ್ಯಾರಿಗಳು ಈಗ ನಮ್ಮ ಊರಿನವರು. ನಮ್ಮ ದೇವರನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದು. ಅವರು ಕಪಿಲೇಶ್ವರ ಮೆಚ್ಚುವ ಕೆಲಸ ಮಾದಿದ್ದಾರೆ. ಕಪಿಲೇಶ್ವರ ಅವರ ಸೇವೆಯನ್ನು ಸ್ವೀಕರಿಸಲಿ.  ಅರ್ಚಕರು ಕಾಯಿ ಒಡೆದು ಅದಕ್ಕೆ ಗಂಧ ಹಚ್ಚಿ ಸ್ಟೂಲಿನ ಮೇಲಿಟ್ಟರು. ಆರತಿ ತಟ್ಟೆಯನ್ನು ಕಾಲ್ದೀಪದಲ್ಲಿ ಬೆಳಗಿಸಿ ಮ೦ತ್ರ ಹೇಳುತ್ತಾ ಗಂಟೆಯಾಡಿಸಿಕೊಂಡು ಆರತಿ ಎತ್ತಿದರು.  ಅದನ್ನು ಸ್ಟೂಲಲ್ಲಿಟ್ಟು ಬೊಗಸೆಯೊಡ್ಡಿ ನಿಂತಿದ್ದ ಒಂಟಿ ಬ್ಯಾರಿಗೆ ಗಂಧ ಪ್ರಸಾದ ಮತ್ತು ಹೂ ನೀಡಿದರು. ಪ್ರಸಾದ ಸ್ವೀಕರಿಸುವಾಗ ಒಂಟಿ ಬ್ಯಾರಿ ಹೇಳಿದ. ನಾನು ಯವುದೋ ಕಾಯಿಲೆಯಿಂದಾಗಿ ಸಾಯುವ ಸ್ಥಿತಿಯಲ್ಲಿದ್ದಾಗ ದೇವರಿಗೆ ನೇರ್ಚೆ ಹೇಳಿ ಕಿವಿಗೆ ಬಂಗಾರದ ಒಂಟಿ ಚುಚ್ಚಿದ್ದ ನನ್ನ ಹೆತ್ತುಮ್ಮ ಹಿಂದೆ ಮಾತು ಹೇಳಿದ್ದಳು.  "ದೇವರೆಲ್ಲಾ ಒಂದೇ ಮೋನೇ. ನಮಗೊಂದು ದೇವರು, ಬೇರೆಯವರಿಗೆ ಇನ್ನೊಂದು ದೇವರು ಇರಲು ಸಾಧ್ಯವಿಲ್ಲ" ಎಂದು.  ಕಪಿಲಳ್ಳಿಯಲ್ಲಿ ಬದುಕುವ ನನಗೆ ಕಪಿಲೇಶ್ವರನು ಅಲ್ಲಾಹು."

ಯಕ್ಷಗಾನ ಪ್ರಿಯ ಪಟೇಲರ ಮುಖ ಬಿರಿಯಿತು. ಅವರೆಂದರು. "ಭಗವದ್ಗೀತೆಯಲ್ಲಿ ಕೃಷ್ಣ ಚಾತುವರ್ಣ್ಯಮಯಾಂ ಸೃಷ್ಟಂ ಗುಣ ಕರ್ಮ ವಿಭಾಗಶಃ ಎ೦ದಿದ್ದಾನೆ. ಅ೦ದರೆ ಅವರವರ ಗುಣ ಸ್ವಭಾವಕ್ಕನುಗುಣವಾಗಿ ಜಾತಿ ನಿರ್ಧಾರವಾಗುತ್ತದೆ, ಹುಟ್ಟಿನಿಂದಲ್ಲ. ಜಾತಿ ವರ್ಣಕ್ಕಿಂತ ಮನುಷ್ಯತ್ವ ಮುಖ್ಯ ಎನ್ನುವುದನ್ನು ಒಂಟಿ ಬ್ಯಾರಿಗಳು ತೋರಿಸಿಕೊಟ್ಟಿದ್ದಾರೆ. ಆವರಿಗೆ ಕಪಿಲೇಶ್ವರ ಒಳಿತನ್ನು ಉಂಟು ಮಾಡಲಿ."

ಹೊಸ ಉತ್ಸಾಹದಿಂದ ರಾಮಣ್ಣ ಗರ್ನಾಲು ಸಿಡಿಸಿದ. ಮೆರವಣಿಗೆ ಮುಂದಕ್ಕೆ ಸಾಗಿತು.   

                    *****
ಕೀಲಿಕರಣ: ಎಮ್.ಎನ್.ಎಸ್.ರಾವ್ 

ಸಾವಿರಪದ ಸರದಾರ

-ರವಿ ಕೋಟಾರಗಸ್ತಿ

ಸಾವಿರ ಪದ ಸರದಾರ
ಸಾವು ಮುತ್ತಿತೇ ಧೀರಾ
ಮೂಢ ಸಾವು.. ನಿನ್ನ
ಅರಿಯದೆ.. ಅಟ್ಟಹಾಸದಿ
ಒಯ್ಯುತಿಹನೆಂಬ ಭ್ರಮೆಯಲಿ
ಒಪ್ಪಿಸುತಿಹದು ಅಹವಾಲ ಯಮನಿಗೆ

ಇನ್ನ... ನಗುವಿನ ಚೆಲುವು
ಇಂಪಾದ ಕೋಗಿಲೆ ಧ್ವನಿಯು
ಜೀವ ತುಂಬಿ ಜನ್ಮ ನೀಡುತಿಹವು
ಸಾವಿರ ಪದಗಳ ಸಾಲಾಗುತ
ಅಮರನಾದ... ನೀ ಸರದಾರ

ಅನುದಿನ.. ನೀ ಹಾಡಿದಿ
ಜನಪದ ಸಿರಿ ಬೆಳೆಸಿದಿ
ಅತೃಪ್ತ ಮನದಿ... ಸದಾ ನೀ
ಸಂತೃಪ್ತಿಗಾಗಿ ಅಂತರಾತ್ಮದಿ ಸವೆದಿ
ಅಮಾನವೀಯತೆ ಹಳಿಯುತಲಿ
ಜನಪದರ ಜನಮನ ಸೆಳೆದಿ

         ***

ಕೀಲಿಕರಣ: ಕಿಶೋರ್‍ ಚಂದ್ರ

ನೀ ಮಾಡುವಿಯೆಂದರೆ ಮಾಡು ಚಿಂತಿ

- ಶಿಶುನಾಳ ಶರೀಫ್

ನೀ ಮಾಡುವಿಯೆಂದರೆ
ಯಾರ ಬ್ಯಾಡಂತಾರ ಮಾಡಪ್ಪ  ಚಿಂತಿ    ||ಪ||

ನೀ ಮಾಡೋದು ಘಳಿಗಿಸಂತಿ
ಮೇಲ್ ಮಾಳಿಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಎಂಟು ಬಣ್ಣದ ಕೌದಿ ಮರತಿ                   ||೧||

ಬದುಕು ಬಾಳೇವು ನಂದೇ ಅಂತಿ
ಒಳ್ಳೇ  ಒಳ್ಳೇದು  ಮನೆಯ ತುಂಬುತಿ
ಗಂಡಗೈ ಅವಧೂತರು ತಾವ್ ಬಂದು
ತಕ್ಕೊಂಡು ಹೋದರೆ  ಇಲ್ಲೇ ಕುಂತಿ       ||೨||

ಮುದ್ದುಗೋವಿಂದನ ಪಾದದೊಳಗೈತಿ
ಕಳಕೊಂಡು ಹುಡುಕಿದರಿನ್ನೆಲ್ಲೈತಿ
ಶಿಶುನಾಳಧೀಶನ ದಯೆಯೊಳಗೈತಿ
ರಸಿಕನುಸುರಿದ  ಕವಿತೆಯಲ್ಲೈತಿ           ||೩||

            *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಅವಸರ ಬೇಡ

-ರವಿ ಕೋಟಾರಗಸ್ತಿ

ಬವಣೆಯ ಬದುಕು
ಭರವಸೆಯಲಿ ಸವೆಸುತ್ತಾ
ದುಡಿಮೆಯಲಿ ಕಾಲ ಕಳೆಯುತ್ತಾ
ತಿನ್ನುವ ಅನ್ನವ ತೊರೆದು
ಹೊರಟೆಯೇನಣ್ಣ ಆತ್ಮಹತ್ಯೆಗೆ
ಆತುರಬೇಡ... ಅವಸರಬೇಡ
ನಿನ್ನ ಒಡಲ ಕುಡಿಗಳಿಹರು
ಆತಂಕಬೇಡ ನಾವಿರುವೆವು ನಿಮಗಾಗಿ

ಹಸಿವೆ.. ಹರಿ ಹಾಯ್ದರೂ...
ನಾವೆಲ್ಲಾ... ಒಂದೊತ್ತಿನ
ಉಣ್ಣುವ ಊಟವು ಬಿಟ್ಟು
ಮೇಘನ ಮೇಲೆ ಆಣೆಯಿಟ್ಟು
ಬೇಡೋಣ ಭೂತಾಯಿ ಒಲವಿಗೆ
ಆತಂಕಬೇಡ ನಾವಿರುವೆವು ನಿಮಗಾಗಿ

ಹೋಗಿಯೇ... ಬಿಡಲಿ
ಅನುಕಂಪವಿರದೆ ಈ ದೇಹದ
ಆ ಒಂದು ಕ್ಷಣ ಉಸಿರು...
ಆಗಲಿ ಆವಾಗಲಾದರೂ
ಭೂಮಡಿಲ ಒಡಲು ಹಸಿರು
ಆತಂಕಬೇಡ ನಾವಿರುವೆವು ನಿಮಗಾಗಿ

ಬದುಕು ಬರಿ ಬರವಲ್ಲ
ಸುಡು ಬಿಸಿಲಿನಿ ಸಿಡೆಲೆಯಾದರೂ
ಬಿಡಲು-ಕೈಬಿಡಳು ಭೂಮಾತೆ
ತನ್ನ-ಕುಡಿಗಳಾಗಿರುವ...
ನಮ್ಮೆಲ್ಲರನ್ನೂ.... ಪೊರೆದವಳು
ಆತಂಕಬೇಡ... ನಾವಿರುವೆವು ನಿಮಗಾಗಿ

ಬೆಂಕಿ ಉಂಡೆಯ ಝಳದಲ್ಲೂ
ತಂಪನೆಯ ತಂಗಾಳಿ ಕಾಣುತ
ಮೈಕೊರೆವ ಮಾಗಿ ಚಳಿಯಲ್ಲೂ
ಬೆಚ್ಚಗಿನ ಬದುಕು ಅರಸಿದವರು
ಆತಂಕಬೇಡ... ನಾವಿರುವೆವು ನಿಮಗಾಗಿ

ಬಿಸಿಲು-ಗಾಳಿ-ಮಳೆಯೆನ್ನದೆ
ಮೈ-ಕೈ ಒಡ್ಡಿ ಮುದಡದ
ಬೆಳೆದು... ಬಾಳಿದವು...
ನನ್ನೂರಿನ ಹೆಮ್ಮೆಯ ಸಿರಿಯುಳ್ಳ
ನಾಡಿನ ಸಾರ್ವಭೌಮರು ನೀವು
ಆತಂಕಬೇಡ... ನಾವಿರುವೆವು ನಿಮಗಾಗಿ

ಬಿಡುವದಿಲ್ಲ... ನಾವು...
ಶರಣಾಗಲು ಸಾವಿಗೇ ನೀವು
ಬರದ ಬೇಗೆಯ ಹಲವು
ವೃಷ್ಟಿ-ಅನಾವೃಷ್ಟಿಗಳೇ ಮುತ್ತಲಿ
ಆತಂಕಬೇಡ ನಾವಿರುವೆವು ನಿಮಗಾಗಿ

ಬೆಂಕಿ ಉಗುಳುತ ಚೆಲ್ಲಲಿ
ಧರೆಯೆ ದಹಿಸುತಲಿ...
ಎದೆಗುಂದಿ... ತಲೆಬಾಗದೆ
ಧೈರ್ಯ ಒಂದೆ ಸರ್ವಸಾಧನೆ
ಮೇರು ಸವಾಲು ಸ್ವೀಕಾರವಿರಲಿ
ಆತಂಕಬೇಡ ನಾವಿರುವೆವು ನಿಮಗಾಗ....

ಬದುಕು-ಗೆಲ್ಲುತಲಿ
ಜಗವೆಲ್ಲಾ ಗೆಲ್ಲಿರಿ...
ಆತ್ಮಹತ್ಯೆಯ ಆಲಿಂಗನದಿ
ಬಡತನದ ಭೂತಕ್ಕೆ ಬೆದರಿ
ಮರೀಚಿಕೆ ಸವಾರಿಬೇಡ
ಆತಂಕಬೇಡ... ನಾವಿರುವೆವು
ನಿಮಗಾಗಿ ಸದಾ... ನಿಮಗಾಗಿ

         *****

ಕೀಲಿಕರಣ: ಕಿಶೋರ್‍ ಚಂದ್ರ

ಅನುರಾಗ

- ಗಿರಿಜಾಪತಿ ಎಂ. ಎನ್

ಮೊದಲ ಮಾತನು ನುಡಿದವ ತಾ
ಜಗಕೆ ಮೊದಲ ಕಬ್ಬಿಗ
ಇಂಪು ಸ್ವರದಲಿ ಬೆಲ್ವಸದವ ತಾ
ವಿಶ್ವ ವೈಣಿಕ ಕಾಯಕ

ಮಾತ-ಮಾತಲಿ ಕಟ್ಟಿದ ಮಾಲೆಯು
ಬಾನು-ಬುವಿಯ ಲೀಲೆಗೆ
ಶೃತಿ-ಲಯ-ಸ್ವರದ ರಾಗ ಗೀತೆಯು
ಅನುರಾಗ ಬೆರೆತಾ ಬಾಳಿಗೆ

ಹಲವು ಭಾಷೆಗಳೊಲವ ದನಿಯಲಿ
ಭಾವ ಸರಣಿಯ ಬಂಧನ
ಜೀವದೊಡಲಿನಾ ಕರುಳ ಕರೆಯಲಿ
ಯುಗಕೆ ಪ್ರೀತಿಯ ಚಂದನ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಬೀಳಬಾರದೋ ಕೆಸರಿನೊಳು ಜಾರಿ

- ಶಿಶುನಾಳ ಶರೀಫ್

ಬೀಳಬಾರದೋ ಕೆಸರಿನೊಳು ಜಾರಿ
ಬೀಳಬಾರದೋ ಕೆಸರಿನೊಳು ಜಾರಿ                   ||ಪ||

ಬ್ರಹ್ಮನು ಬಿದ್ದಾ ರಾಮನು ಗೆದ್ದಾ
ರುದ್ರ ಒದ್ದಾಡಿದ್ದ ಅದು ತಿಳಿದು                            ||೧||

ಸುರರೆಲ್ಲಾರು ಅರಲಿಗೆ ಮರುಳರು
ಸ್ಥಿರವಲ್ಲ  ಹರಿಹರರುಳಿದರು                               ||೨||

ಕಸ ಮಳಿಗಾಲದಿ ಶಿಶುನಾಳಗ್ರಾಮದಿ
ಪಶುಪತಿಹಾಳದೊಳು ಹಸನಾಗಿ ಬಂದು ನಾವು    ||೩||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ರಾಷ್ಟ್ರಚೇತನ

-ರವಿ ಕೋಟಾರಗಸ್ತಿ

ನಭೋ... ಮಂಡಲದಿ..
ಮಿನುಗು-ತಾರೆಗಳನೇಕ..
ಸೂರ್ಯನ ಪ್ರಕಾಶ ಮೀರುತಲಿ
ಕತ್ತಲೆಯೊಂದಿಗ್ಗೆ - ಹೋರಾಡುತ
ಬೆಳಗು... ಮುನ್ನ ಕರಗುವವು

ರಾಷ್ಟ್ರ... ಮಂಡಲದಿ...
ಮಿಂಚಿದ ದೇಶಪ್ರೇಮಿಗಳನೇಕ
ನೇತಾಜಿ, ಭಗತ್, ಚಂದ್ರಶೇಖರ
ರಾಯಣ್ಣ... ರಾಜಗುರು...

ಝಾಂಸಿ ಲಕ್ಷ್ಮೀಬಾಯಿ... ಕೆಳದಿ...
ಕಿತ್ತೂರ... ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ
ಮಿನುಗಿದ ರಾಷ್ಟ್ರಚೇತನಗಳು

ದೇಶ ಪ್ರೀತಿಸುತ...
ದಾಸ್ಯ-ಸಂಕೋಲೆ ಕಡಿಯಲು
ಬದುಕು... ಪಣವಾಗಿಸಿ...
ಗಗನ ತಾರೆಗಳ-ತರಹ

ಸ್ವಾತಂತ್ರ್‍ಯ ಮೊಳಗುವ ಮುನ್ನ
ಮರೆಯಾದರು ಸಂತಸದ
ಬೆಳಗು ಮುಂಜಾನೆಯಲಿ

ಸ್ವಾತಂತ್ರ್‍ಯದ ಹಗಲಲಿ ನೆನೆಯುತ
ಉತ್ಸವ, ಹರಿ ಹಬ್ಬಗಳಲಿ...
ಕೊಂಡಾಡಿ ಬರಿ ಮಾತಲ್ಲಿ ಮೆರೆದಾಡಿ...
ಮೋಜಿನಲಿ ಮರೆಯುತಿಹೆವು
         ***

ಕೀಲಿಕರಣ: ಕಿಶೋರ್‍ ಚಂದ್ರ

ಮಿಂಜೈಮೇಳ

- ರವಿ ಕೋಟಾರಗಸ್ತಿ

ನವ ಶತಮಾನದಲಿ ಕಾಲಿಡುತಿಹೆವು
ಸ್ವಾತಂತ್ರ್‍ಯದ ಸುವರ್ಣ ಹಬ್ಬದ..
ಸಡಗರದ... ಸಂತಸಗಳಲಿ

ಗತಿಸಿ ಹೋದ ನಲವತ್ತೇಳರ
ಘಟನೆಗಳ ನೆನೆಯುತ
ಬಲಿದಾನದ ವೀರಸೇನಾನಿಗಳ
ತ್ಯಾಗದ ರೂಪ ಕಾಣುತ
ಸಾಗಿಹದು ಸ್ವಾತಂತ್ರ್‍ಯ ಸುವರ್ಣೋತ್ಸವ

ಸೌಂದರ್ಯರಾಣಿ... ಮುಕುಟ ಮಣಿ
 ಶ್ವೇತಧಾರಿಣಿ ಜಮ್ಮು ಕಾಶ್ಮೀರದ
ಗಿರಿ ಕಾನನಗಳ ಮಡಿಲು
ನದಿ ನಲೆಗಳ ನಡುವಲಿ
 ಮಿಂಜೈಮೇಳ... ನಡೆದಿತ್ತು

ಹಸಿರ ಧರೆಯ ಸೊಬಗಿನಲಿ
ಚಂಬಾ, ಟಿಸ್ಸಾ, ದೋಡದ, ಜನಪದರು
ಸಂಪಾಗಿ ಸಂತಸದಿ ನಿದ್ರಾವಶದಲ್ಲಿದ್ದರು
ಮಧ್ಯರಾತ್ರಿಯ ಕಾರ್ಗತ್ತಲಲ್ಲಿ
ಏ.ಕೆ-ನಲವತ್ತೇಳು ಗುಡುಗಿದವು
ಅಟ್ಟಹಾಸದಿ ಜಿಹಾದಿಗಳು ಮೆರೆದವು

ಮಲಗಿದಲ್ಲೆ ನಲುಗಿದ ಜೀವಗಳು
ಸ್ವಾತಂತ್ರ್‍ಯೋತ್ಸವ ಸಡಗರದಲಿ...
ವಿಧಿಯಾಟದ ರೂಪ ಕುಣಿದಿತ್ತು
ನಲವತ್ತೇಳರ ನೆನಪಿನಂಗಳದ
ನೆನಪನ್ನೆ ಅಳಿಸಿದವು - ಏಕ.ಎ.೪೭
ವಿಕಾರದಿ-ವಿಕ್ಷಿಪ್ತದಿ ನಗುತ್ತಿದ್ದವು
೫೦ನೇ ಸ್ವಾತಂತ್ರ್‍ಯದ ಸಂಭ್ರಮವ ಅಣಕಿಸುತ್ತಿದ್ದವು

         ***

ಕೀಲಿಕರಣ: ಕಿಶೋರ್‍ ಚಂದ್ರ

ಬೂದಿ ಬೀಳುತಿತ್ತು

- ಡಾ || ಪ್ರಭಾಕರ ಶಿಶಿಲ

ಆ ಕಟ್ಟಡದ ಕೆಲಸ ಆರಂಭವಾದಂದಿನಿಂದ ಊರಲ್ಲಿ ಅನೇಕ ಬದಲಾವಣೆಗಳಾಗಿದ್ದವು.  ಲಾರಿಗಳ ಓಡಾಟ, ವಿಚಿತ್ರದಾದ ಯಂತ್ರಗಳು ಊರಿಗೆ ಹೊಸ ಆಕರ್ಷಣೆಯನ್ನು ನೀಡಿದ್ದವು.  ಬೇರೆ ಬೇರೆ ಭಾಷೆಗಳನ್ನಾಡುವ ಕಪ್ಪು ಕಪ್ಪು ಜನಗಳು ಕೆಲಸ ಬೇಗ ಮುಗಿಯಲಿಕ್ಕಾಗಿ ಬಿಡುವಿಲ್ಲದೆ ದುಡಿಯುತ್ತಿದ್ದರು. ಗ್ಯಾಸ್ ದೀಪಗಳನ್ನು ಹಚ್ಚಿ ರಾತ್ರಿಯೂ ಒಮ್ಮೊಮ್ಮೆ ಕೆಲಸವನ್ನು ಮುಂದುವರಿಸಬೇಕಾಗಿ ಬರುತ್ತಿತ್ತು. ಊರಲ್ಲಿದ್ದ ಮೂರು ಹೊಟೇಲು, ಎರಡು ಅಂಗಡಿ, ಒಂದು ಕಳ್ಳಿನಂಗಡಿ ಮತ್ತು ಒಂದು ಸಾರಾಯಿ ಆಂಗಡಿಗೆ ಬಿಡುವಿಲ್ಲದೆ ವ್ಯಾಪಾರ. ಪಡ್ಡೆ ತರುಣರ ತಂಡ ಸಂಜೆ ಅಲ್ಲಿ ನೆರೆದು ಕೆಲಸ ಮಾಡುವ ಬೇರೆ ಬೇರೆ ಕಪ್ಪು ಕಪ್ಪು ಹೆಂಗಸರ ಶರೀರ ಸಂಪತ್ತಿನ ಬಗ್ಗೆ ಮಾತಾಡುತ್ತಿದ್ದರು. ಅಷ್ಟು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮೇಸ್ತ್ರಿಯ ಆದೃಷ್ಟದ ಬಗ್ಗೆ ಕರುಬುತ್ತಿದ್ದರು.  ಪುಟಗೋಸಿಯ ವೀರರಂತೂ ದಿನವಿಡೀ ಅಲ್ಲೇ ಓಡಾಡಿಕೊಂಡಿರುತ್ತಿದ್ದರು.

ಬಹಳ ಜನಪ್ರಿಯತೆ ಪಡೆದ ಜೀವಂತ ದೇವರಿಗಾಗಿ ಕಟ್ಟುತ್ತಿದ್ದ, ಆ ಕಟ್ಟಡದ ಕೆಲಸ ಹೆಚ್ಚು ಕಡಿಮೆ ಪೂರ್ತಿಯಾಗುತ್ತಾ ಬಂದಿತ್ತು. ಊರಿನ ಅತೀ ಶ್ರೀಮಂತರಾದ ಭಟ್ಟರ ನೇತೃತ್ವದಲ್ಲಿ ಕಟ್ಟಡದ ಕೆಲಸ ಸಾಗಿತ್ತು. ಅದಕ್ಕೆ ಭಗವಾನ್ ಮಂದಿರ ಎಂದು ಭಟ್ಟರು ಹೆಸರು ಇರಿಸಿದ್ದರು. ಆ ದೇವರು ಇರುವ ಊರಿಗೆ ನಾಲ್ಕೈದು ಬಾರಿ ಭಟ್ಟರು ಹೋಗಿ ದೇವರ ಬಗ್ಗೆ ಊರಿಡೀ ಹೇಳಿಕೊಂಡು ಬಂದಿದ್ದರು. ಎಲ್ಲಾ ಊರುಗಳಲ್ಲಿ ಕಲಿಯುಗ ಅವತಾರನೆನಿಸಿದ ಆ ದೇವರಿಗೆ ಮಂದಿರಗಳಿರುವಾಗ ತಮ್ಮ ಊರು ಹಿಂದುಳಿಯಬಾರದೆಂದು ಮುತುವರ್ಜಿ ವಹಿಸಿದ್ದರು.  ಮಂದಿರದ ಉದ್ಘಾಟನೆ ಆ ದೇವರಿಂದಲೇ ನಡೆಯುವುದೆಂದು ಪ್ರಚಾರವನ್ನೂ ಮಾಡಿದ್ದರು.

ಚಿನ್ನಪ್ಪನಿಗೆ ಮಂದಿರದ ಕೆಲಸ ಶುರುಮಾಡಿದಂದಿನಿಂದಲೂ ಅಲ್ಲಿನ ಮಾಹಿತಿ ಸಂಗ್ರಹಿಸುವುದು ಅತ್ಯಂತ ಇಷ್ಟದ ಕೆಲಸ.  ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಮತ್ತು ಸಂಜೆ ಶಾಲೆ ಬಿಟ್ಟ ಮೇಲೆ ಅಲ್ಲೇ ಅವನ ಠಿಕಾಣಿ.  ಅವನ ಮನೆಯ ಆಕ್ಕಪಕ್ಕದ ಕೂಸಪ್ಪ, ಬಾಳಣ್ಣ, ಗೋಪಾಲರಿಗೂ ಅವನದ್ದೇ ಕೆಲಸ. ಅಲ್ಲಿ ನಡೆಯುತ್ತಿದ್ದ ಸಂಗತಿಗಳ ಬಗ್ಗೆ ಅವರವರೇ ಮಾತಾಡಿಕೊಂಡು ಒಂದು ತೀರ್ಮಾನಕ್ಕೆ ಬಂದ ಮೇಲೆ ಮನೆಯಲ್ಲಿ ವರದಿ ಒಪ್ಪಿಸುತ್ತಿದ್ದರು.  ಭಟ್ಟರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಅವನ ಅಪ್ಪ ದೂಮಣ್ಣನಿಗೆ ಚಿನ್ನಪ್ಪನ ಮಾತುಗಳನ್ನು ಕೇಳುವ ಆಸಕ್ತಿ ಏನಿರಲಿಲ್ಲ. ಮನೆಯೇ ಪ್ರಪಂಚವಾದ ತಾಯಿ ವೆಂಕಮ್ಮ ಮಾತ್ರ ಬೀಡಿ ಕಟ್ಟುತ್ತಾ ಅವನ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೂಳ್ಳುತ್ತಿದ್ದಳು. ಚಿನ್ನಪ್ಪನೆಂದರೆ ತಾಯಿಗೆ ವೃತ್ತ ಪತ್ತಿಕೆ ಇದ್ದ ಹಾಗೆ.

ಚಿನ್ನಪ್ಪ ಅಂದು ತಂದ ವಾರ್ತೆ ವೆಂಕಮ್ಮನಿಗೆ ಆಶ್ಚರ್ಯದೊಂದಿಗೆ ಸಂತೋಷವನ್ನೂ ಉಂಟುಮಾಡಿತ್ತು. ಚಿನ್ನಪ್ಪ ನೋಟೀಸು ತಂದು ಓದಿ ಹೇಳದಿರುತ್ತಿದ್ದರೆ ಅವಳಿಗೆ ನಂಬಿಕೆ ಉಂಟಾಗುತ್ತಿತ್ತೋ ಇಲ್ಲವೋ? ಮಂದಿರಕ್ಕಾಗಿ ಎಲ್ಲರೂ ಉದಾರ ದಾನ ನೀಡಬೇಕೆಂದೂ, ಉದ್ಘಾಟನೆಗೆ ದೇವರು ಬರುವ ದಿನ ತಳಿರು ತೋರಣಗಳಿಂದ ಊರನ್ನು ಅಲಂಕರಿಸಬೇಕೆಂದೂ, ಮನೆ ಎದುರು ರಂಗೋಲಿ ಹಾಕಿರಬೇಕೆಂದೂ, ಸ್ನಾನ ಮಾಡಿ ಸಾಮೂಹಿಕ ಭಜನೆಗಾಗಿ ಮಂದಿರಕ್ಕೆ ಬರಬೇಕೆಂದೂ ಅದರಲ್ಲಿ ನಮೂದಿಸಲಾಗಿತ್ತು.

ಚಿನ್ನಪ್ಪ ತಾಯಿಯನ್ನು ಕಾಡಿದ. ಅವಳು ಎಲ್ಲೆಲ್ಲ ತಡಕಾಡಿ ಮೂರುಕಾಲು ರೂ. ಒಟ್ಟು ಮಾಡಿ ಅವನಿಗಿತ್ತಳು.  ಚಿನ್ನಪ್ಪ ಆ ಹಣವನ್ನು ತೆಗೆದುಕೊಂಡು ತನ್ನ ಚೀಲದಲ್ಲಿ ಹಾಕಿಕೊಂಡ. ನಾಳೆ ಸಂಜೆ ಭಟ್ಟರ ಆಧ್ಯಕ್ಷತೆಯ ಭಗವಾನ್ ಸಮಿತಿಗೆ ದಾನವಾಗಿ ಆದನ್ನು ನೀಡಬೇಕೆಂದುಕೊಂಡ.

ದೂಮಣ್ಣ ಕೆಲಸ ಮುಗಿಸಿ ಬರುವಾಗ ಮಬ್ಬುಗತ್ತಲು ಹಬ್ಬಿತ್ತು.  ಅವನು ಮನೆಯಲ್ಲಿ ಮಾತನಾಡುವುದೇ ಕಡಿಮೆ. ಗಡಂಗಿನಲ್ಲಿ ಹಾಕಿ ಬಂದಾಪತ್ತು ಅವನ ಮಾತು ಊರಿಡೀ ಕೇಳಿಸುತ್ತದೆ. ಅಂದು ಹಾಕಿ ಬಂದು ಖುಷಿಯಲ್ಲಿದ್ದ. "ಎಂಕೂ ಕೇಳ್ದೇನೆಯಾ ನೀ. ದೇವ್ರು ಬಂದವೆಗಡ ನಮ್ಮ ಊರಿಗೆ" ಅಂದ.  ವೆಂಕಮ್ಮ ಬಿರಡೆಯಿಂದ ನಶ್ಶ ಮೂಗಿಗೇರಿಸುತ್ತಾ ಕೇಳಿದಳು: "ಯಾರ್ ಬಂದ್ರ ನಾವುಗೇನ್? ನಾವು ಗೈಯೆದು ತಪ್ಪಿದೆನಾ?"  ಅದಲ್ಲನೆ?  "ದನಿಗಳ ಮನೆಲಿ ದೇವ್ರ ಪಟನೋಡ್ದೆ.  ಉದ್ದೋಕ್ಕು ಕೆಂಪು ಅಂಗಿ ಹಾಕಿಯೊಳೊ. ತಲೆ ಕೂದ್ಲು ಗುಂಗ್ರು.  ಗುಂಗ್ರಾಗುಟ್ಟು.  ಕೆಂಪು ಕೆಂಪಾಗಿ ಕಂಡವೆ. ಕೃಷ್ಣ ದೇವರ ಅವ್‍ತಾರಾಂತ ಹೇಳ್ದೋ ದನಿಗೊ."

ಅವಳು ಇದನ್ನು ಕೇಳಿದ್ದಳು.  ದೇವರು ಮನುಷ್ಯನಾಗಿ ಅವತಾರ ತಾಳಿದ್ದಾರೆ.  ಮಕ್ಕಳಿಲ್ಲದವರಿಗೆ ಮಕ್ಕಳಾಗುವ ಹಾಗೆ ಮಾಡ್ತಾರೆ. ಕಾಯಿಲೆ ಗುಣ ಮಾಡ್ತಾರೆ. ದೊಡ್ಡವರಿಗೆ ವಾಚು, ವಜ್ರ ಸೃಷ್ಟಿಸಿಕೊಡ್ತಾರೆ. ಉಳಿದ ಭಕ್ತರಿಗೆ ಗಾಳಿಯಲ್ಲಿ ಕೈಯಾಡಿಸಿ ಬೂದಿ ಸೃಷ್ಟಿಸಿ ನೀಡುತ್ತಾರೆ. ನೀರನ್ನು ಪೆಟ್ರೋಲ್ ಮಾಡುತ್ತಾರೆ -ಎಂದೆಲ್ಲಾ ಊರು ಸುದ್ದಿಗಳಲ್ಲಿ ಮುಳುಗಿದ್ದಾಗ ಅವಳಿಗೆ ಅನಿಸುತ್ತಿದ್ದುದುಂಟು. ಎಲ್ಲಿಗೋ ಓಡಿಹೋದ ತನ್ನ ಹೆಣ್ಣ ಮಕ್ಕಳು ವಾಪಾಸಾಗುವಂತೆ, ತನ್ನ ವಾತ ಗುಣವಾಗುವಂತೆ, ಸ್ವಾಮಿ ಮಾಡಿದರೆ! ಆದರೆ ಅಷ್ಟು ದೂರದಲ್ಲಿರುದ ಸ್ವಾಮಿಯಲ್ಲಿಗೆ ಹೋಗುವುದು ಹೇಗೆ ಎನ್ನುವುದು ಅವಳ ಚಿಂತೆಯಾಗಿತ್ತು. ಈಗ ದೇವರು ಊರಿಗೇ ಬರ್ತಿದ್ದಾರೆ.  ಅವಳೆಂದಳು: "ದೇವು ಬಂದ್ರ ಮಕ್ಕ ಬಾವಾಂಗೆ ಮಾಡ್ವೆನೋ ಏನೋ?"

ದೂಮಣ್ಣ ಪುಸಕ್ಕನೆ ನಕ್ಕ. "ನಿಂಗೇನೂ ಹುಚ್ಚು ಎಂಕು. ಆವು ಸೊಕ್ಕು ತುಂಬಿ ಊರು ಬುಟ್ಟೋಳೊ. ಇನ್ನ್ ಬಂದವೆನ?"  ಅದಲ್ಲ. ದನಿಗಳ ಮನೆಲಿ ನಡ್ದ ವಿಶೇಷ ಕೇಳಿಯೊಳನಾ?"

"ಎಂತಗಡ?"  ವೆಂಕಮ್ಮನ ಕಿವಿ ನಿಮಿರಿತು.

"ಅಲ್ಲಿ ಪಟ ನೋಡ್ದೆಂತ ಹೇಳ್ದೆ ಅಲ್ಲ? ಆ ಪಟಂದಬೂದಿ ಬಿದ್ದದೆ ಗಡ. ದನಿಗಳ ಮಂಙನ ಮೈಮೇಲೆ ದೇವ್ರು ಬಂದವೆಗಡ. ಆ ಬೂದಿ ಎಷ್ಟ್ ಪರಿಮಳ ಗೊತ್ತುಟ್ಟಾ? ಈಗ ದನಿಗಳ ಮಂಙನೂ ದೇವರ ಹಂಗೆ ಆಗಿಬುಟ್ಟುಟು."

ಚಿನ್ನಪ್ಪನಿಗೆ ಉಸಿರು ಸಿಕ್ಕಿಕೊಂಡ ಹಾಗಾಯಿತು. ದನಿಗಳ ಮಗ ಲಕ್ಷ್ಮಿನಾರಾಯಣ ತನ್ನ ಕ್ಲಾಸಿನವ. ಒಂದು ವಾರದಿಂದ ಅವನು ಶಾಲೆಗೆ ಬಂದಿರಲಿಲ್ಲ. ಎಂತಹ ಭಾಗ್ಯ ಅವನದು! ತನ್ನ ಮೈಮೇಲೂ ದೇವರು ಬರುತ್ತಿದ್ದರೆ? ಚಿನ್ನಪ್ಪನ ದೃಷ್ಟಿ ತನ್ನ ದೇಹದ ಮೇಲೆ ಹೋಯಿತು. ಹರಕಲು ಬಟ್ಟೆ ಮಣ್ಣು ಮಣ್ಣಾಗಿತ್ತು. ಕಪ್ಪು ಪೀಚಲು ಮೈಯಿಂದ ಬೆವರಿನ ಗಬ್ಬು ಬರುತ್ತಿತ್ತು.  ದೇವರು ಬರಬೇಕಾದರೆ ಬಿಳಿ ಬಿಳಿ ಮೈ ಇರಬೇಕು. ಸದಾ ಮಡಿಯಲ್ಲಿರಬೇಕು. ಮಾಂಸ ಮಡ್ಡಿ ತಿನ್ನಬಾರದು. ಮೇಲು ಜಾತಿಯವರೇ ಆಗಿರಬೇಕೇನೋ? ತನ್ನಂತವನ ಮೈಮೇಲೆ ದೇವರು ಬರಲಾರರು ಎಂದು ಕೊಳ್ಳುತ್ತಲೇ ಅವನಿಗೆ ನಿರಾಶೆ ಉಂಟಾಯಿತು|

ತಲೆ ತುರಿಸಿಕೊಳ್ಳುತ್ತಾ ಕೂತಿದ್ದ ಮಗನನ್ನು ನೋಡಿ ದೂಮಣ್ಣನೆಂದ. "ನೀ ಒಳ ನೋಡು ಪೆದ್ದು ಮುಂಡೇದು. ದನಿಗಳ ಮಂಙನ ಮೈಮೇಲಿ ದೇವ್ರು ಬಂದವೆ. ನಿನ್ನ ಮೈಲಿ ಎಲ್ಲಿಯಾದರ್ ದೇವ್ರು ಬರ್ತಿದ್ರೆ ಒಳ್ಳೆ ದುಡ್ಡು ಮಾಡೋಕ್ಕಿತ್."

ಮಗನನ್ನು ಬೈದುದಕ್ಕೆ ವೆಂಕು ಸಿಡಿಮಿಡಿಗೊಂಡಳು. "ಸಾಕ್ ಸುಮ್ಮನಿರಿ. ನೀವು ದನಿಗಳ ಹಾಂಗೆ ಇರ್ತಿದ್ದರೆ ಅವ ಸಹ ದನಿಗಳ ಮಂಙನ ಹಾಂಗೆ ಇರ್ತಿತ್ತ್".

ಮೂದಲಿಕೆಗೆ ದೂಮಣ್ಣ ಸುಮ್ಮನಾದ. ಈಗ ಚಿನ್ನಪ್ಪನೆಂದ. "ಅಪ್ಪಾ ನಂಗೆ ಒಂದ್ ಪಟ ತಂದ್ ಕೊಟ್ಟಿಯನಾ?"

"ಯಾವ ಪಟ?".

"ಅದೇ ದೇವ್ರುದ್. ನಮ್ಮಲ್ಲಿನೂ ಬೂದಿ ಬಿದ್ದದೇನಾಂತ ನೋಡೋಕಾತ್".

ದೂಮಣ್ಣನಿಗೆ ಈಗ ಖುಷಿಯಾಯ್ತು. ಪರವಾಗಿಲ್ಲ ಬೇಕೂಪ ಎಂದ್ಕೊಂಡ ಮಗನಿಗೆ ತಲೆ ಇದೆ "ಆತ್ ಆತ್" ಎ೦ದು ತಲೆದೂಗಿದ. ಕಿಸೆ ತಡಕಾಡಿದಾಗ ನಾಲ್ಕಾಣೆ ಪಾವಲಿ ಸಿಕ್ಕಿತು. ಅದನ್ನು ಚಿನ್ನಪ್ಪನಿಗೆ ಕೊಡುತ್ತಾ "ತೆಕಾ ಪಪ್ಪರು ಮಿಟಾಯಿಗೆ" ಎಂದ.  ಅಮ್ಮ ಕೊಟ್ಟ ಹಣಕ್ಕೆ ಇದನ್ನು ಸೇರಿಸಿ ಮಂದಿರ ನಿಧಿಗೆ ಕೊಡಬೇಕು ಎಂದು ಚಿನ್ನಪ್ಪ ನಿಶ್ಚಯಿಸಿಕೊಂಡ.

ಅಂದು ರಾತ್ರಿಯಿಡೀ ಅವನಿಗೆ ಆ ದೇವರದೇ ಕನಸು. ಉದ್ದಕ್ಕೆ ಗವನು ಹಾಕಿದ ಬಿಡಿ ಬಿಡಿ ಕೂದಲಿನ ಆ ದೇವರ ಪಟ ಮನೆಗೆ ತಂದಂತೆ.  ತಾನು ಅದಕ್ಕೆ ಊದುಬತ್ತಿ ಇಟ್ಟು, ಅದರೆದುರು ಒಂದು ದೀಪ ಹಚ್ಚಿದಂತೆ, ಮತ್ತೆ ಆ ಪಟದಿಂದ ಬೂದಿ ಬೀಳುವಂತೆ, ಜನರೆಲ್ಲಾ ಮನೆಗೆ ಬಂದು ಅಡ್ಡಬಿದ್ದು ಕಾಣಿಕೆ ಕೊಟ್ಟು ತನ್ನನ್ನು ಹೊಗಳಿ ಹೋಗುವಂತೆ.

ಮರುದಿನ ಬೆಳಿಗ್ಗೆ ದೂಮಣ್ಣ ಕೆಲಸಕ್ಕೆ ಹೊರಟಾಗ ವೆಂಕು ನೆನಪಿಸಿದಳು. "ಪಟ ತಂದು ಕೂಡಿಕೆ ಮರಿಬಡಿ"

"ಯಾವ ಪಟನೆ?" ಅಮಲಿನಲ್ಲಿ ನಡೆದ ಮಾತುಕತೆಗಳೊಂದೂ ಅವನ ನೆನಪಲ್ಲಿ ಉಳಿದಿರಲಿಲ್ಲ.

"ಅದೇ ಆ ದೇವ್ರುದ್"

ಈಗ ಚಿನ್ನಪ್ಪ ಬಂದು ಅಮ್ಮನಿಗೆ ಆತುಕೊಂಡು ನಿಂತು ಅಪ್ಪ ಏನನ್ನುತ್ತಾನೋ ಎಂದು ಅವನನ್ನು ಬಿಟ್ಟ ಕಣ್ಣುಗಳಿಂದ ನೋಡಿದ.

"ಈ ದರಿದ್ರ ಮುಂಡೆ ದಕ್ಕೆ ಅದೊಂದ್ ಕೇಡ್. ಹೋಗಿ ಓದಲಿ" ದೂಮಣ್ಣ ಬೀಡಿ ಹಚ್ಚಿಕೊಳ್ಳುತ್ತಾ ನುಡಿದ.

"ಕೂಸು ಪಾಪ ಆಸೆ ಮಾಡಿಕೊಂಡುಟ್ಟು. ನೀವು ದುಡ್ಡು ಕೊಟ್ಟು ತರೋಕುಂತ್ತಿಲ್ಲೆ.  ದನಿಗಳಲ್ಲಿ ಕೇಳಿರೆ ಆತ್.  ನಿಮ್ಮ ಗಂಟೇನ್ ಹೋದೆ?"

ಇನ್ನು ಮಾತಾಡಿದರೆ ತಡವಾಗುತ್ತದೆಂದು ದೂಮಣ್ಣ ತಲೆಯಾಡಿಸುತ್ತಾ ಹೊರಟು ಹೋದ.
"ಅಪ್ಪ ತಾರದಿದ್ರ ನಾವೇ ಜಾತ್ರೆಲಿ ತೆಕೂಳಮ" ಎಂದು ವೆಂಕಮ್ಮ ಚಿನ್ನಪ್ಪನ ತಲೆ ಸವರಿದಳು. "ನೀ ಹೋಗಿ ಕೈ ಕಾಲ್ ತೊಳ್ದ್ ಶಾಲೆಗೆ ಹೋಗ್ ಮಂಙ".

ತಾನಿಂದು ಭಗವಾನ್ ಸಮಿತಿಗೆ ಕಾಣಿಕೆ ಕೊಡಲಿಕ್ಕಿದೆ ಎನ್ನುವುದು ನೆನಪಾದಾಗ ಮೈ ಪುಳಕಿತಗೊಂಡು ಚಿನ್ನಪ್ಪ ಡುರ್ರೆಂದು ಬಸ್ಸು ಬಿಡುತ್ತಾ ಕೆರೆಯ ಕಡೆಗೆ ಓಡಿದ.

ಶಾಲೆ ಮುಗಿಸಿ ಸಂಜೆ ನೇರವಾಗಿ ಮಂದಿರದತ್ತ ನಡೆದ.  ಶಾಲೆಯಲ್ಲಿ ಎಲ್ಲರೊಡನೆಯೂ ತಾನಿಂದು ಮಂದಿರಕ್ಕೆ ಕೊಡಲಿರುವ ದೇಣಿಗೆಯ ಬಗ್ಗೆ ಹೆಮ್ಮೆಯಿಂದ ಕೊಚ್ಚಿಕೊ೦ಡಿದ್ದ.  ಚೀಲದಲ್ಲಿರುವ ಹಣವನ್ನು ಎಲ್ಲರಿಗೂ ತೋರಿಸಿದ್ದ.  ಅಪ್ಪ ಪಟ ತರಲಿರುವುದನ್ನು ಹೇಳಿಕೊಂಡು ಬಂದಿದ್ದ ಈ ಖುಷಿಯಿಂದ ಮೊಲದ ಹಾಗೆ ಜಿಗಿಯುತ್ತಾ ಮಂದಿರದತ್ತ ಬಂದ.

ಮಂದಿರದೆದುರು ಭಟ್ಟರು ಸಂಭ್ರಮದಿಂದ ಒದಾಡುತ್ತಿದ್ದರು.  ಸದಾ ತನ್ನನ್ನು ಕೊಳಕ ಎಂದು ಹಂಗಿಸುತ್ತಿದ್ದ "ಶೂದ್ರ ಮುಂಡೇದ್. ದೂರ ನಿಲ್ಲ್" ಎಂದು ಮಡಿವಂತಿಕೆ ತೋರಿಸುತ್ತಿದ್ದ ಭಟ್ಟರ ಮೆಚ್ಚುಗೆ ಗಳಿಸಲು ತನಗಿಂದು ಸಾಧ್ಯ.  ತಾನು ಕೊಡಲಿರುವ ಕಾಣಿಕೆ ಭಟ್ಟರಲ್ಲಿ ತುಂಬಾ ಮಾರ್ಪಾಡು ಮಾಡಲಿದೆ ಎಂದುಕೊಳ್ಳುತ್ತಾ ಭಟ್ಟರತ್ತ ನಡೆದ.  ದುಡ್ಡು ಹೊರತೆಗೆಯಲು ಚೀಲಕ್ಕೆ ಕ್ಕೆ ಹಾಕಿ ಹುಡುಕಿದ.  ದುಡ್ಡು ಎಲ್ಲಿದೆ?  ಚಿನ್ನಪ್ಪನಿಗೆ ಅಳು ಬರುವಂತಾಯಿತು.  ಶಾಲೆಯಲ್ಲಿ ತಾನು ಎಲ್ಲರಿಗೂ ದುಡ್ಡು ತೋರಿಸಿದುದೇ ತಪ್ಪಾಯಿತು.  ಈಗೇನು ಮಾಡುವುದು?

ಪೆಚ್ಚುಮೋರೆ ಹಾಕಿಕೊಂಡು ಚೀಲ ತಡಕಾಡುತ್ತಾ ಗೊಣಗುತ್ತಿರುವ ಚಿನ್ನಪ್ಪನನ್ನು ಕಂಡು ಭಟ್ಟರು "ಏ ಶೂದ್ರ ಮುಂಡೇ ಗಂಡ. ನಿಂಗೆ ಮಿಂದ್ ಆಗುಟ್ಟಾ? ನಡಿನಡಿ" ಎಂದು ಗದರಿದರು. ಚಿನ್ನಪ್ಪ "ನಾನು....ದುಡ್ಡು.........ನೀವು" ಎಂದು ತೊದಲಿದ.  "ನಿನ್ನಪ್ಪಂಗೆ ದುಡ್ಡು ಕೊಟ್ಟು ನಂಗೆ ಸಾಕಾತ್.  ಇನ್ನ್ ನೀ ಸುರ್ ಮಾಡ್ ಅಪ್ಪನ ಚಾಳಿ. ಬೇಗ ನಡಿ ಇಲ್ಲಿಂದ" ಎಂದು ಭಟ್ತರು ಅಬ್ಬರಿಸಿದಾಗ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ಚಿನ್ನಪ್ಪನನ್ನೇ ನೋಡಿದರು.  ಅಷ್ಟು ಜನರೆದುರು ಅಪಮಾನವಾದಾಗ ಈ ವರೆಗೆ ತಡೆ ಹಿಡಿದಿದ್ದ ಅಳುವಿನ ಕಟ್ಟೆ ಒಡೆಯಿತು.  ಕಣ್ಣಿನಿಂದ ಮೂಗಿನಿಂದ ನೀರು ಇಳಿಯಲಾರಂಭಿಸಿತು.

ಇವನ ಸೊರ್ ಸೊರ್ ಸದ್ದು ಕೇಳಿ ಭಟ್ಟರು ಸ್ವಲ್ಪ ಮೆತ್ತಗಾಗಿ "ನಿಂಗೆ ಒಂದು ಪಟ ಕೊಟ್ಟಳೆ ದೂಮಣ್ಯನ ಕೈಲಿ.  ಹೋಗಿ ಮಿಂದ್ ಪೂಜೆ ಮಾಡ್ ಬಲಾ" ಎ೦ದರು.  ಭಟ್ಟರ ಮೇಲಿದ್ದ ಕೋಪ ಕ್ಷಣ ಮಾತ್ರದಲ್ಲಿಕರಗಿ ಹೋಯಿತು.  ತಕ್ಷಣ ಅಂಗಿಯಿಂದ ಕಣ್ಣು ಮೂಗುಗಳನ್ನು ಒರೆಸಿಕೊಂಡು ಡುರ್ರೆಂದು ಬಸ್ಸು ಬಿಡುತ್ತಾ ಮನೆಯತ್ತ ಓಟಕಿತ್ತ.

ಆಶ್ಚರ್ಯವೆಂಬಂತೆ ಆಪ್ಪ ಮನೆಯಲ್ಲೇ ಇದ್ದ. ಶುಭ್ರವಾಗಿ ಸ್ನಾನ ಮಾಡಿ ಬಿಳಿ ಪಂಚೆ ಉಟ್ಟಿದ್ದ. ಚೆನ್ನಾಗಿ ಹಣೆಗೆ ಬೂದಿ ಬಳಿದಿದ್ದ. ಅಂಗಳಕ್ಕೆ ಸೆಗಣಿ ಸಾರಿಸಲಾಗಿತ್ತು. ಆತ ಇನ್ನೇನು ಮನೆಯೊಳಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಆಪ್ಪ "ಏ ಮಾರಾಯ, ಆ ಬಟ್ಟೆನೆಲ್ಲಾ ಹೊರಗೆ ಬಿಚ್ಚಿ ಇಸಿ ಕೆರೆಲಿ ಮಿಂದ್ ಬಾ. ಯಾರ ಎಲ್ಲಾ ಮುಟ್ಟಿ ಬಂದಳೊನೋ ಏನೋ?" ಎಂದ.

 ಭಟ್ಟರು ಹೇಳಿದ ಮಾತುಗಳೆಲ್ಲಾ ಚಿನ್ನಪ್ಪನಿಗೆ ನೆನಪಾದವು. ಅಲ್ಲೇ ಹೊರಗಡೆ ಕೋಳಿಗೂಡಿನ ಮೇಲೆ ಚೀಲ ಅಂಗಿ ಕಳಚಿಟ್ಟು ನಿರ್ವಾಣ ಸ್ಥಿತಿಯಲ್ಲಿ ಓಡಿ ಕೆರೆಗೆ  ದುಡುಂ ಎಂದು ಹಾರಿದ. ಚೆನ್ನಾಗಿ ಈಜು ಹೊಡೆದ. ಪಟ ಇರುವ ಸಂಗತಿ ನೆನಪಾಗುತ್ತಲೇ ಬೇಗನೆ ಸ್ನಾನ ಮುಗಿಸಿ ಹಾಗೇ ಮನೆಯತ್ತ ಬಂದ.

ಇವತ್ತು ಅಮ್ಮನೂ ತಲೆಗೆ ಸ್ನಾನ ಮಾಡಿ ಬೂದಿ ಹಾಕಿಕೊಂಡಿದ್ದಾಳೆ.  ಮನೆಯ ಒಳಗಡೆ ಸೆಗಣಿ ಸಾರಿಸಿ ಚೆನ್ನಾಗಿ ಕಾಣುವಂತೆ ಮಾಡಿದ್ದಾಳೆ. ಇವನನ್ನು ಕಾಣುತ್ತಲೇ "ಬಾ ಮಂಙ, ಶೀತ ಆದು" ಎಂದು ಅವನನ್ನು ಹತ್ತಿರಕ್ಕೆ ಎಳೆದುಕೊಂಡು ಸೆರಗಿನಿಂದ ತಲೆ ಉಜ್ಜಿದಳು.  ಒಗೆದು ಒಣಗಿಸಿದ ಚಡ್ಡಿಯೊಂದನ್ನು ಅವನಿಗೆ ಕೊಟ್ಟಳು.

ಅಲ್ಲೇ ಗೋಡೆಯಲ್ಲಿ ಪಟ ತೂಗು ಹಾಕಲಾಗಿತ್ತು.  ಆ ನಗುಮುಖದ ದೇವರನ್ನು ಕಾಣುತ್ತಲೇ ಅವನ ನೋವುಗಳೆಲ್ಲ ಮಾಯವಾದಂತಾಯಿತು. ಪಟದ ಮುಂದೆ ಉದ್ದಕ್ಕೆ ಬಿದ್ದು ವಂದನೆ ಸಲ್ಲಿಸಿದ. ಅವನನ್ನು ನೋಡಿ ತಾಯಿಯ ಮುಖ ಊರಗಲವಾಯಿತು. "ಅಮ್ಮಾ ನಂಗೆ ಬೂದಿ" ಎಂದು ಕೇಳಿದ. ಓಳಗೆ ಬರುತ್ತಾ ದೂಮಣ್ಣನೆಂದ. "ಬೂದೀಂತ ಹೇಳಿಕೆ ಬೊತ್ತ್ಂತ ದನಿಗ ಹೇಳಿಯೊಳೊ.  ಇಬೂತೀಂತ ಹೇಳೋಕಡ."

ಚಿನ್ನಷ್ಟನಿಗೆ ವ್ಯತ್ಯಾಸ ಗೊತ್ತಾಗದೆ ಕೇಳಿದ. "ಯಾಕೆ?"

ದೂಮಣ್ಣನಿಗೆ ಈಗ ಸಿಟ್ಟು ಬಂತು. "ಎದ್‍ರ್ ಮಾತಾಡಿಯನಾ?  ಬೂದಿಂತ ಹೇಳ್ರೆ ಆದ್ ಒಲೆಲಿ ಇರ್ದು. ಇದ್ ದೇವ್ರು ಕೊಟ್ಟದ್. ಅದಕ್ಕೇ ಇದ್ ಇಬೂತಿ."

ಚಿನ್ನಪ್ಪನಿಗೆ ವಿಭೂತಿ ಎಂದು ಅಪ್ಪನನ್ನು ತಿದ್ದಬೇಕೆನಿಸಿತು.  ಅಪ್ಪ ಇನ್ನೂ ಬೈದರೆ ಎಂದು ಸುಮ್ಮನಾದ. ಅಪ್ಪ ಒಂದು ಸಣ್ಣ ಕರಡಿಗೆಯ ಮುಚ್ಚಳ ತೆಗೆದು "ಹಾಕಿಕ" ಎಂದು ಮಗನಿಗೆ ಆಜ್ಞಾಪಿಸಿದ. ಗಮ್ಮೆಂದು ಪರಿಮಳ ಮನೆಯಿಡೀ ತುಂಬಿದಂತಾಯಿತು.  ಚಿನ್ನಪ್ಪ ಆತುರದಿಂದ ಡಬ್ಬಿಯೊಳಗೆ ಕ್ಕೆ ಹಾಕಿದಾಗ ಸ್ವಲ್ಪ ವಿಭೂತಿ ಹೊರಗೆ ಚೆಲ್ಲಿತು, ಆಗ ಆಪ್ಪ ಟಕ್ಕೆಂದು ಇವನ ಮಂಡೆಗೆ ಮೊಟಕಿದ. ಕರಡಿಗೆಯ ಮುಚ್ಚಳ ಹಾಕಿ ನೆಲವನ್ನು ತೋರಿಸುತ್ತಾ "ಅದೇ ಇಬೂತಿ ಹಾಕಿಕ" ಎಂದ.

ಚಿನ್ನಪ್ಪ ನೆಲದಲ್ಲಿದ್ದ ವಿಭೂತಿಯನ್ನು ಹಣೆಗೆ ತಿಕ್ಕಿ ಕೊಂಡ. "ಹಾಂಗೆ ಸ್ವಲ್ಪ ಬಾಯಿಗೆನೂ ಹಾಕಿಕ. ದನಿಗ ಹೇಳಿಯೊಳೋ. ಕಾಯಿಲೆ, ಕಸಾಲೆ ಬಂದರೆ ಮೊದ್ದ್ ಬೇಡ. ಇಬೂತಿ ಹಂಞ ತಿಂದರೆ ಸಾಕ್ಂತ".  ದೂಮಣ್ಣನೆಂದಾಗ ವೆಂಕಮ್ಮನೂ ಬಗ್ಗಿ ವಿಭೂತಿಯನ್ನು ಕ್ಕೆ ಬೆರಳಿನಿಂದ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ವಾತ ಗುಣವಾದಂತೆ ತೃಪ್ತಿಪಟ್ಟು ಕೊಂಡಳು.

ಅಂದು ಸಂಜೆ ಅವಲಕ್ಕಿ ಬಾಳೆಹಣ್ಣು ರಸಾಯನದ ಫಳಾರ.  ರಾತ್ರಿ ಉಪವಾಸವೆಂದ ಅಪ್ಪ.  ಪ್ರತಿ ಗುರುವಾರವೂ ಇದೇ ಕ್ರಮ ಮುಂದುವರಿಯುವುದೆಂದು ಅಪ್ಪ ಹೇಳಿದಾಗ ಚಿನ್ನಪ್ಪನಿಗೆ ಸಂತೋಷವಾಯಿತು. ಮಂದಿರದಿಂದ ಭಜನೆ ಕೇಳಿ ಬರುತ್ತಿತ್ತು. ರಾಗಬದ್ದ ಸ್ವರಗಳು ಕಿವಿಗೆ ಬಿದ್ದಾಗ ಚಿನ್ನಪ್ಪನೆಂದ. "ಅಪ್ಪಾ ನಾ ಅಲ್ಲಿಗೆ ಹೋಕಾ?"

ದೂಮಣ್ಣ ಕುಡಿಯದೆಯೂ ಖುಷಿಯಾಗಿದ್ದುದೆಂದರೆ ಅಂದೇ.  ಅವನೆಂದ. "ಹೋಗ್ ಮಂಙ ನೀ ಸಹ ಬಜನೆಲಿ ಸೇರಿಕ. ನಾ ಈಗ ಬನ್ನೆ ಹಿಂದೆಂದ."

ತುಂಬಾ ಖುಶಿಯಿಂದ ಚಿನ್ನಪ್ಪ ಬಸ್ಸು ಸ್ಟಾರ್ಟುಮಾಡುವಾಗ ವೆಂಕಮ್ಮನೆಂದಳು. "ಬಜನೇಂತೇಳಿ ಮಡಿ ಬ್ರಾಂಬ್ರ ಮುಟ್ಟಿ ಮಡಿ ಹಾಳ್ ಮಾಡ್ಬಡ. ಮತ್ತೆ ಹೊಲೆರ ಮುಟ್ಟಿಸಿಕೊಂಬಡ ಆತಾ?" "ಆತ್" ಎಂದು ಎತ್ತರದ ದನಿಯಲ್ಲಿ ಉತ್ತರ ಕೊಟ್ಟು ಚಿನ್ನಪ್ಪ ಡುರ್ರ್ ಎಂದು ಓಡಿದ.

ಮಂದಿರದಲ್ಲಿ ಮುಂದೆ ಮಾಡಬೇಕಾದ ಭಜನೆ, ದೇವರು ಬರುವಾಗ ಊರವರು ನಡೆದುಕೊಳ್ಳಬೇಕಾದ ಕ್ರಮ, ದೇವರಿಗೆ ಪಾದ ನಮಸ್ಕಾರ ಮಾಡುವ ರೀತಿ-ಇವುಗಳನ್ನೆಲ್ಲಾ ಭಟ್ಟರು ಹೇಳಿಕೊಡುತ್ತಿದ್ದರು. ಹಣೆಗೆ ವಿಭೂತಿ ಬಳಕೊಂಡಿದ್ದ ಚಿನ್ನಪ್ಪನನ್ನು ಕಾಣುತ್ತಲೇ ಭಟ್ಟರು, "ಅಲ್ಲಿ ಕೂರ್ಯ ಹೈದ" ಎಂದು ಹಿಂದಿನ ಸಾಲು ತೋರಿಸಿದರು.  ಚಿನ್ನಪ್ಪ ತನ್ನೆದುರು ಕೂತ ಮಡಿ ಮಂದಿಗಳನ್ನು ನೋಡಿದ. ಹೊರಗೆ ದೂರದಲ್ಲಿ ನಿಂತುಕೊಂಡು ಹೊಲೆಯರ ಮಕ್ಕಳು ಇವನ್ನೆಲ್ಲಾ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದರು.  ಇವತ್ತು ಯಾರನ್ನೂ ಮುಟ್ಟಬಾರದು ಎನ್ನುವುದು ನೆನಪಾಗಿ ಭಟ್ಟರತ್ತ ದೃಷ್ಟಿಹರಿಹರಿಸಿದ.

ಭಟ್ಟರು ಭಜನೆಯೊಂದನ್ನು ಹೇಳಿಕೊಡುತ್ತಿದ್ದರು. "ಓಂ ಭಗವಾನ್ ಓಂ ಭಗವಾನ್ ಭಗವಾನ್ ಸತ್ಯನಾಥ ಭಗವಾನ್".  ಹೊಸಭಜನೆಗೆ ಚಿನ್ನಪ್ಪ ತನ್ನ ರಾಗವನ್ನೂ ಸೇರಿಸಿದ. ಅವನ ಶಾಲೆಯ ವಾರದ ಭಜನೆಗಳಲ್ಲಿ "ಎಲ್ಲಿರುವೆ ತ೦ದೆ ಬಾರೋ ಮಾರುತಿ, ಯಮನೆಲ್ಲೂ ಕಾಣೆನೆಂದು ಹೇಳಬೇಡಾ, ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ" ಇತ್ಯಾದಿಗಳನ್ನು ಬಿಟ್ಟರೆ ಹೊಸದೇನೂ ಇರಲಿಲ್ಲ. ಹೊಸ ಹೊಸ ಭಜನೆಗಳನ್ನು ಬಲ್ಲ ಭಟ್ಟರ ಮೇಲೆ ಅವನಿಗೆ ತುಂಬಾ ಗೌರವವುಂಟಾಯಿತು. ಭಜನೆ ಮುಗಿದ ನಂತರ ಎಲ್ಲರೂ ಎದ್ದು ನಿಂತರು.  ಭಟ್ಟರು ಮಂಗಳ ಹೇಳಿಕೊಟ್ಟರು. ಅದು ಶಾಲೆಯ "ಚಲಿಸುವ ಜಲದಲಿ ಮತ್ಸ್ಯನಿಗೆ " ಹಾಗಲ್ಲ. ಒಳ್ಳೆಯ ರಾಗ. ಆದರೆ ಅದರ ಒಂದೆರಡು ಸಾಲು ಬಿಟ್ಟರೆ ಚೆನ್ನಪ್ಪನಿಗೆ ಉಳಿದವುಗಳು ನೆನಪಿನಲ್ಲಿ ಉಳಿಯಲಿಲ್ಲ.

ಮಂಗಳ ಮುಗಿದಾಗ ಪುನಃ ಎಲ್ಲರೂ ಕೂತರು. ಭಟ್ಟರು ಕರಡಿಯೊಂದರಲ್ಲಿ ವಿಭೂತಿ ಹಾಕಿ ಕೂತವರ ಮುಂದೆ ಹಿಡಿಯುತ್ತಾ ಬಂದರು. ಆಗ ಭಟ್ಟರ ಹಿರಿಯ ಮಗ ವಿಭೂತಿ ತೆಗೆದುಕೂಳ್ಳುವ ಶ್ಲೋಕ ಹೇಳತೊಡಗಿದ- "ಪರಮ ಪವಿತ್ರಂ ದೇವ ವಿಭೂತಿಂ, ಪರಮ ವಿಚಿತ್ರಂ ಲೀಲಾ ವಿಭೂತಿಂ, ಪರಮಾರ್ಥ ಇಷ್ಟಾರ್ಥ ಮೋಕ್ಷ ಪ್ರದಾನಂ ದೇವಂ ವಿಭೂತಿಂ ಇದಮಾಶ್ರಯಾಮಿ". ತುಂಬಾ ಸಲ ಇದನ್ನು ಹೇಳಿದುದರಿಂದ ಚಿನ್ನಪ್ಪನಿಗದು ಬಾಯಿಪಾಠ ಬಂದು ಬಿಟ್ಟಿತು.

ವಿಭೂತಿ ತೆಗೆದುಕೊಂಡು ಎಲ್ಲರೂ ಮಾಡುವ ಹಾಗೆ ಸ್ವಲ್ಪ ಬಾಯಿಗೆ ಹಾಕಿಕೊಂಡು, ಉಳಿದುದನ್ನು ಹಣೆಗೆ ತಿಕ್ಕಿದ. ವಿಭೂತಿ ಶ್ಲೋಕದಲ್ಲಿಯೇ ಆತ ಮುಳುಗಿದ್ದಾಗ ಆಪ್ಪನ ದಪ್ಪ ಕೈ ಅವನ ಹೆಗಲ ಮೇಲೆ ಬಿತ್ತು.  "ಆತಲೆ. ಇನ್ನ್ ಪೋಯಿ" ಎಂದ ಆಪ್ಪ. ಆಪ್ಪ ದಿನಾ ಹೀಗಿರುತ್ತಿದ್ದರೆ!  ಎಂದು ಕೊಂಡ ಚಿನ್ನಪ್ಪ. ದೂಮಣ್ಣನನ್ನು ಗಮನಿಸಿದ ಭಟ್ಟರು ಸಂಪ್ರೀತಿಯಿಂದ ತಮ್ಮ ಜನಿವಾರವನ್ನು ನೀವಿಕೊಳ್ಳುತ್ತಾ ಹೇಳಿದರು. "ಪೂಜೆ ಮಾಡಾ ಗುಟ್ಟಯಾ?"

ದೂಮಣ್ಣ ವಿನಯದಿಂದ ಬಗ್ಗಿದ. "ಉಂ ಊದುಬತ್ತಿ ಹಚ್ಚಿ ಇಸಿಯೋಳೆ".

"ಆದ್ ಸಾಲದ್.  ಒಂದು ದೀಪ ತಕಣೋಕುಯಾ.  ಮೊಣ್ಣುನ ಚಿಬಿಲೆ ಅದು. ಅದರ್‍ಲಿ ಬತ್ತಿ ಇಸೋಕು. ಎಣ್ಣೆ ಹಾಕೋಕು. ದಿನಾ ಭಜನೆ ಮಾಡೋಕುಯಾ" ಎಂದವರೇ ಚಿನ್ನಪ್ಪನನ್ನುದ್ದೇಶಿಸಿ "ಹೈದ ಮುಂಡೇದು, ಪೆದ್ದು, ದಿನಾ ಇಲ್ಲಿ ಬರೋಕು. ಭಜನೆ ಕಲಿಯೋಕು. ಕಲ್ತ್ ಮನೇಲಿ ಹೇಳೋಕು" ಎಂದರು. ಚಿನ್ನಪ್ಪ ಸಂತೋಷದಿ೦ದ ತಲೆಯಾಡಿಸಿದ.

ಮನೆಗೆ ಬರುತ್ತಾ ದೂಮಣ್ಣನೆಂದ. "ನಾವು ಬ್ರಾಂಬ್ರ ಹಾಂಗೆ ಆದವೆ. ದಿನಾ ಪೂಜೆ, ಬಜನೆ, ಇಬೂತಿ . ಈ ದೇವ್ರ್‌ಂದ ಇಷ್ಟಲ್ಲಾ ಆತಲೆ. ಇನ್ನಾ ಗುರುವಾರ, ಗುರುವಾರ ಮೀನ್ ಮಾಂಸ ಇಲ್ಲೆ. ನಾ ಕುಡಿಯೋದ್ಲೆ. ನಮ್ಮ ಪಟಲಿ ಇಬೂತಿ ಬೀಳುವ ಹಾಂಗೆ ಆದರೆ ಸಾಕ್.  ಕೆಲ್ಸಕ್ಕೆ ಹೋತಿಲ್ಲಾದರೂ ಬೋದ್ಕಕ್.  ಅಲ್ಲೇನಾ?"

ಚಿನ್ನಪ್ಪ ಅದನ್ನೇ ಯೋಚಿಸುತ್ತಾ ಮನೆಗೆ ಬಂದ.  ವೆಂಕಮ್ಮ ಬೀಡಿ ಕಟ್ಟುತ್ತಾ ತಾನು ಚಿಕ್ಕಂದಿನಲ್ಲಿ ಕಲಿತಿದ್ದ ಯಾವುದೋ ಭಜನೆಯನ್ನು ಸಣ್ಣನೆ ಹಾಡುತ್ತಿದ್ದಳು. ಚಿನ್ನಪ್ಪ ಮಂದಿರದಲ್ಲಿ ನಡೆದುದನ್ನಲ್ಲಾ ಹೇಳಿದ.  ತನಗೆ ನೆನಪು ಉಳಿದ ಭಜನೆಗಳ ಒಂದೆರಡು ಸಾಲು ಹಾಡಿದ. "ಆ ಇಬೂತಿ ಭಜನೆ ಹೇಳ್ ಮಂಙ"  ಎಂದು ದೂಮಣ್ಣ ಹೇಳಿದಾಗ ಎರಡು ಸಾಲು ನೆನಪಾಗಿ ತಡವರಿಸಿದ. "ಬುಡ್. ನಾಳೆ ಕಲ್ತು ಕೋಮೋ" ಎಂದು ಮಗನನ್ನು ಸಂತೈಸಿದ.

"ದೀಪಕ್ಕೆ ಈಗ ಎಂತೊದ್ ಮಾಡ್ದು" ಎಂದು ದೂಮಣ್ಣ ಕೇಳಿದಾಗ "ಮಣ್ಣ್‍ನ ಚಿಬಿಲೆ ಉಟ್ಟು ನಿಲ್ಲಿ ನಾ ಈಗ ತನ್ನೆ" ಎಂದು ವೆಂಕಮ್ಮ ಎದ್ದಳು. ಒಳಗೆಲ್ಲೋ ತಡಕಾಡಿ ಚಿಬಿಲೆಯನ್ನು ತಂದು ಎಣ್ಣೆ ಹಾಕಿದಳು. "ಬತ್ತಿಗೆ ಹತ್ತಿ ಇಲ್ಲೆಲೆ"  ದೂಮಣ್ಣ ಚಡಪಡಿಸಿದ. ವೆಂಕಮ್ಮ ತನ್ನ ಪೆಟ್ಟಿಗೆ ತೆರೆದು ಹರಕಾದ ಬಿಳಿಬಟ್ಟಿಯ ತುಂಡನ್ನು ತೆಗೆದಳು. ಅದನ್ನು ಕೈಯಲ್ಲಿ ತಿರುಚಿ ಉದ್ದಕ್ಕೆ ಬತ್ತಿಯ ಹಾಗೆ ಮಾಡಿ ಹಾಕಿದಳು. ದೂಮಣ್ಣ ಕಡ್ಡಿ ಗೀರಿ ದೀಪ ಹಚ್ಚಿದ.

ಆದರೆ ಪಟ ಗೋಡೆಯ ಮೇಲಿದೆ. ಅಲ್ಲಿ ದೀಪವನ್ನು ನಿಲ್ಲಿಸುವುದು ಹೇಗೆ ಎಂದು ದೂಮಣ್ಣ ಯೋಚಿಸಿದ. ಮತ್ತೆ ಎದ್ದು ಒಳ ಹೋದ. ಕೆಲವು ದಿನಗಳ ಹಿಂದೆ ಅಂಗಡಿಯಿಂದ ತಂದಿದ್ದ ರಟ್ಟಿನ ಖಾಲಿ ಪೆಟ್ಟಿಗೆಯೊಂದಿತ್ತು. ಅದರ ಒಂದು ಭಾಗವನ್ನು ಹರಿದು ಪಟದ ಕೆಳಗೆ ಆ ತುಂಡನ್ನು ಸರಿಹೊಂದಿಸಿ ಮೂರು ಮೊಳೆ ಹೊಡೆದು ಅದನ್ನು ನಿಲ್ಲಿಸಿದ.  ಅದರ ಮೇಲೆ ಚಿಬಿಲೆ ಇರಿಸಿದಾಗ ಪಟಕ್ಕೆ ಬೆಳಕು ಬಿತ್ತು.  ವೆಂಕಮ್ಮ ಕೈ ಮುಗಿದಳು.  ಚಿನ್ನಪ್ಪ ಆನುಕರಿಸಿದ.

ಬೆಳಿಗ್ಗೆ ಚಿನ್ನಪ್ಪ ಎದ್ದಾಗ ವೆಂಕಮ್ಮ ಮಲಗಿದ್ದಲ್ಲಿಂದಲೇ ನರಳುತ್ತಿದ್ದಳು. ಅಪ್ಪ ಅಡುಗೆ ಎಂದು ಓಡಾಡುತ್ತಿದ್ದ. ಒಂದು ಲೋಟದಲ್ಲಿ ನೀರಲ್ಲಿ ಹಾಕಿ ಕಲಸಿ ಅಪ್ಪ ಅಮ್ಮನಿಗೆ ಕುಡಿಸಿದ.  ಅವಳ ನೋವು ಕಡಿಮೆಯಾಗದ್ದನ್ನು ಕಂಡು ದೂಮಣ್ಣ "ಮಂಙ. ನೀ ಇಂದ್ ಸಾಲೆಗೆ ಹೋಕೆ ಬೋತ್ತ್. ನಾ ನಿನ್ನ ಅಮ್ಮನ ಕರ್‌ಕೊಂಡ್ ಚಾತು ಪಂಡಿತರ ಹಕ್ಕಲೆ ಹೋಗಿ ಬನ್ನೆ" ಎಂದ.  ಚಿನ್ನಪ್ಪನಿಗೆ ಶಾಲೆ ತಪ್ಪಿದ್ದಕ್ಕೆ ಬೇಸರವಾಯಿತು.  ಮರುಕ್ಷಣದಲ್ಲಿ ಪಟದ ನೆನಪಾಗಿ ಬೇಸರಿಕೆ ನೀಗಿತು.

ಅಪ್ಪ ಅಮ್ಮ ಬರುವಾಗ ಮಧ್ಯಾಹ್ನ ಆಗಬಹುದು.  ಅಷ್ಟು ಹೊತ್ತಿನವರೆಗೆ ಏನು ಮಾಡುವುದು ಎಂದು ಚಿನ್ನಪ್ಪ ಯೋಚಿಸಿದ. ಹನ್ನೆರಡೊಂದ್ಲ ಮಗ್ಗಿ ಹೇಳಿದ. ಗೊತ್ತಿರುವ ಹಾಡುಗಳನ್ನೆಲ್ಲಾ ಗಟ್ಟಿಯಾಗೆ ಹಾಡಿದ. ಮತ್ತೆ ಒಂದು ಬಟ್ಟೆ ತೆಗೆದುಕೊಂಡು ಕೆರೆಗೆ ಹೋಗಿ ನಾಲ್ಕು ಮುಳುಗು ಹಾಕಿ ಓಡಿಕೊಂಡು ಬಂದ. ಪಟದ ಎದುರು ಕೂತು ನೆನಪಾದ ಭಜನೆಗಳ ಸಾಲುಗಳನ್ನು ಹೇಳಿದ. ಹಸಿವೆಯಾದಾಗ ಉಪ್ಪು ಹಾಕಿ ಗಂಜಿ ಊಟ ಮಾಡಿದ.

ಪುನಃ ಪಟದ ಎದುರು ಬಂದು ನಿಂತ. ಪಟದ ಎದುರಿದ್ದ ಚಿಬಿಲೆಯಲ್ಲಿನ ಬತ್ತಿ ಹೊರಕ್ಕೆ ಚಾಚಿಕೊಂಡಿತ್ತು. ಅಪ್ಪ ದೀಪ ಹೊತ್ತಿಸಲು ಮರೆತಿದ್ದಾನೆ. ತಾನು ಹೊತ್ತಿಸಿ ದೇವರನ್ನು ಪ್ರಾರ್ಥಿಸಬೇಕು. ಪಟದಿಂದ ಬೂದಿ ಬೀಳಬೇಕು ಎಂದುಕೊಳ್ಳುತ್ತಾ ಅಂಗಳಕ್ಕೆ ಓಡಿದ. ಅಲ್ಲಿ ತೆಂಗಿನಗರಿಗಳಿದ್ದವು. ಕೆಲವನ್ನು ಕಿತ್ತುಕೊಂಡು ಬಂದು ಆಡಿಗೆ ಮನೆಗೆ ಹೋದ. ಒಲೆಯಲ್ಲಿ ಸ್ವಲ್ಪ ಕೆಂಡ ಇತ್ತು. ಆದಕ್ಕೆ ಗರಿಗಳ ತುದಿಯನ್ನು ತಾಗಿಸಿ `ಉಥ್ ಉಥ್' ಎಂದು ಊದಿದ. ಸ್ವಲ್ಪ ಹೊತ್ತಲ್ಲಿ ಗರಿಗಳ ತುದಿಗೆ ಬೆಂಕಿ ಹಿಡಿಯಿತು. ಅವನ್ನು ಹಾಗೇ ಹಿಡಿದುಕೊಂಡು ಪಟದ ಹತ್ತಿರ ತಂದ. ದೀಪದ ಬತ್ತಿಗೆ ಅವನ್ನು ತಗಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ.

ಗೋಡೆಯ ಎದುರುಭಾಗದಲ್ಲಿ ಬಿದಿರ ಅಡ್ಡವೊಂದಿತ್ತು. ಬತ್ತಿಮಾಡಿ ಉಳಿದಿದ್ದ  ಬಿಳಿಯ ಬಟ್ಟೆಯನ್ನು ಅಪ್ಪ ಆ ಅಡ್ಡಕ್ಕೆ ಕಟ್ಟಿದ್ದ. ಗರಿಗಳ ತುದಿ ಚಿಬಿಲಿಯ ಬತ್ತಿಗೆ ತಾಗುವ ಬದಲು ಚಿನ್ನಪ್ಪನ ಕಸರತ್ತಿನಿಂದಾಗಿ ಅಡ್ಡಕ್ಕೆ ಕಟ್ಟಿದ ಬಟ್ಟೆಗೆ ಬೆಂಕಿ ಹಿಡಿಯಿತು. ಬಿದಿರು ಅಡ್ಡಗಳ ನಡುವೆ ಮಾಡಿಗೆ ಮುಳಿಹುಲ್ಲು  ಹೊದಿಸುವಾಗ ಕಟ್ಟಲೆಂದು ತಂದಿರಿಸಿದ್ದ ತೆಂಗಿನ ಮಡಲುಗಳಿದ್ದವು. ಬಟ್ಟೆಯಿಂದ ಬೆಂಕಿ ಮಡಲುಗಳಿಗೆ ಹಬ್ಬಿತು. ಈಗ ಚಿನ್ನಪ್ಪ ಹೆದರಿ ಕಂಗಾಲಾದ:  "ದೇವ್ರೆ ದೇವ್ರೆ ಕಿಚ್ಚಿ ನಿಲ್ಸ್" ಎಂದು ಪಟಕ್ಕೆ ಕೈ ಮುಗಿದ. ಉರಿಯುವ ಮಡಲೊಂದು ಕೆಳಗೆ ಬಿದ್ದು ಪಟದ ಎದುರು ದೀಪ ಇದ್ದ ರಟ್ಟನ್ನು ಸುಡಲು ಆರಂಭಿಸಿತು. ಬೆಂಕಿ ಮಾಡಿಗೂ ಏರಿತು. ಚಿನ್ನಪ್ಪ ಮನೆಯ ಹೊರಗೆ ಓಡಿಬಂದ. "ಆಯ್ಯೋ ಅಯ್ಯೋ ಕಿಚ್ಚಿ" ಎಂದು ಬೊಬ್ಬಿಟ್ಟ. ಗಂಡಸರೆಲ್ಲಾ ಕೆಲಸಕ್ಕೆ ಹೋಗಿದ್ದರು. ಅಲ್ಲಲ್ಲಿನ
ಮನೆಗಳಲ್ಲಿದ್ದ ಹೆಂಗಸರು, ಚಿಲಿಪಿಲಿ ಮಕ್ಕಳು ಓಡಿಕೊಂಡು ಬಂದರು. ಅವರಿಗೂ ಏನು ಮಾಡುವುದೆಂದು ತಿಳಿಯಲಿಲ್ಲ. ಬೆಂಕಿಯ ನಾಲಗೆ ನಾಲ್ದೆಸೆಗೂ ಹಬ್ಬಿ ಮನೆಯ ಬಿದಿರ ಆಡ್ಡಗಳನ್ನು ಚಟಲ್ ಚಟಲ್ ಎಂದು ದಹಿಸತೊಡಗಿದಾಗ ಹೆಂಗಸರು, ಮಕ್ಕಳು ಅಯ್ಯೋ ಎಂದು ಬೊಬ್ಬಿಡಲಾರಂಭಿಸಿದರು.

ಬೊಬ್ಬೆ ಕೇಳಿ, ಬೆಂಕಿ ಕಂಡು ಮಂದಿರದಲ್ಲಿ ಭಟ್ಟರ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಓಡೋಡಿ ಬಂದರು. `ನೀರು ನೀರು' ಎಂದು ಬೊಬ್ಬೆ ಹಾಕಿದರು. ಕೊಡ, ಮಡಿಕೆಗಳಲ್ಲಿ ನೀರು ಬಂತು. ಅದನ್ನು ಮಾಡಿಗೆ ಚೆಲ್ಲಿದರು.  ತುಂಬಾ ಹೊತ್ತಾದ ಬಳಿಕ ಬೆಂಕಿ ನಿಂತಾಗ ಕರಟಿ ಹೋದ ಮನೆ, ಕಪ್ಪಾದ ಗೋಡೆಗಳು ಬೀಭತ್ಸವಾಗಿ ಕಾಣತೊಡಗಿದವು.

ಮನೆಗೆ ವಾಪಾಸಾಗುತ್ತಿದ್ದ ದೂಮಣ್ಣ ದೂರದಿಂದಲೇ ಬೊಬ್ಬೆ ಕೇಳಿ ವೆಂಕಮ್ಮನನ್ನು ಹಿಂದೆ ಬಿಟ್ಟು ಓಡೋಡಿ ಬಂದ. ಮನೆಯನ್ನು ನೋಡಿದ ಮೇಲೆ ಯಾರಲ್ಲೂ ಏನನ್ನೂ ಅವ ಕೇಳಬೇಕಾಗಿರಲಿಲ್ಲ. ಹೆದರಿ ಕಂಗಾಲಾಗಿದ್ದ ಚಿನ್ನಪ್ಪನನ್ನು ಕಾಣುತ್ತಲೇ ದೂಮಣ್ಣನಿಗೆ ಜೀವ ಬಂದಂತಾಯಿತು. ಅವನನ್ನು ಬಳಿಗೆ ಎಳೆದುಕೊಂಡು ತಲೆ ಸವರುತ್ತಾ ಕೇಳಿದ:  "ಎಂತಾತ್ ಮಂಙ?"  ಚಿನ್ನಪ್ಪ ನಡುಗಿದ. ನಿಜ ಹೇಳಿಬಿಟ್ಟರೆ ಅಪ್ಪ ತನ್ನ ಚರ್ಮ ಸುಲಿದುಬಿಟ್ಟಾನೆಂದು ಅಳ ತೊಡಗಿದ.
ನಿಧಾನವಾಗಿ ಬಿಕ್ಕುತ್ತಾ ಹೇಳಿದ. "ನಂಗೆ ಗೊತ್ಲೆ."

ದೂಮಣ್ಣನನ್ನು ಕಂಡ ಮೇಲೆ ಆಲ್ಲಿ ಸೇರಿದ್ದ ಜನ ಒಬ್ಬೊಬ್ಬರಾಗಿ ಕರಗತೊಡಗಿದರು. ದೂಮಣ್ಣ ಸ್ವಲ್ಪ ಹೊತ್ತು ಮನೆಯನ್ನೇ ನೋಡುತ್ತಾ ನಿಂತುಬಿಟ್ಟ. ವೆಂಕಮ್ಮ ನಿಧಾನವಾಗಿ ಕಾಲೆಳೆದುಕೊಂಡು ಬಂದು "ಉಸ್ಪಪ್ಪ" ಎಂದು ಆಂಗಳದಲ್ಲಿ ಕಾಲು ಚಾಚಿ ಕುಳಿತುಬಿಟ್ಟಳು. ದೂಮಣ್ಣ ಉರಿದು ಹೋದ ಮನೆಯೊಳಗೆ ಮೆಲ್ಲನೆ ಕಾಲಿರಿಸಿದ. ಚಿನ್ನಪ್ಪನಿಗೆ ಪಟದ ನೆನಪಾಯಿತು. ದೇವರ ಪಟವಾದುದರಿಂದ ಆದು ಸುಟ್ಟಿರಲಾರದು ಎಂದು ಕೊಂಡು ಆಪ್ಪನ ಹಿಂದಿನಿಂದಲೇ ಹೋದ. ವೆಂಕಮ್ಮ "ಮೆಲ್ಲ ಮಂಙ. ಕೆಂಡ ಗಿಂಡ ಇರ್ದು" ಎಂದು ಎಚ್ಚರಿಸಿದಳು. ಚಿನ್ನಪ್ಪ ಜಾಗ್ರತೆಯಿಂದ ಒಂದೊಂದೇ ಹೆಜ್ಜೆ ಎತ್ತಿ ಇರಿಸುತ್ತಾ ಒಳಹೋದ. ಪಟ ತೂಗುಹಾಕುವಲ್ಲಿ ಮೊಳೆಗಳು ಮಾತ್ರ  ಉಳಿದಿದ್ದವು. ಕೆಳಗೆ ನೋಡಿದರೆ ಪಟ ಇರಲಿಲ್ಲ. ಬೂದಿಯ ರಾಶಿಯಲ್ಲಿ ಅಲ್ಲಲ್ಲಿ ಸಿಡಿದು ಬಿದ್ದಿದ್ದ ಗಾಜಿನ ಚೂರುಗಳು ಮಾತ್ರ ಕಂಡು ಬಂದವು. ಚಿನ್ನಪ್ಪನಿಗೆ ಅಪ್ಪ ಇನ್ನು ಪಟ ತರಲಾರ, ಮನೆಯಲ್ಲಿ ಬೂದಿ ಬೀಳಲಾರದು ಎಂದನಿಸಿ ಅಳು ಬರುವಂತಾಯಿತು.

ಮಾಡಿಲ್ಲದ ಮನೆಯೊಳಗೆ ಸೂರ್ಯನ ಪ್ರಖರವಾದ ಬಿಸಿಲು ಬೀಳುತ್ತಿತ್ತು. ಬೆಂಕಿ ಅಷ್ಟೆಲ್ಲಾ ಅನಾಹುತ ಮಾಡಿದ್ದರೂ ಗೋಡೆಗೆ ಅಡ್ಡಲಾಗಿ ಹಾಕಿದ್ದ ಬಿದಿರೊಂದು ಪೂರ್ತಿ ಸುಟ್ಟಿರಲಿಲ್ಲ. ನೀರು ಚೆಲ್ಲಿದುದರಿಂದ ಅದು ಕರಟಿ ಹೋಗಿತ್ತಾದರೂ ಅದರಲ್ಲಿದ್ದ ಸ್ವಲ್ಪವೇ ಬೆಂಕಿಯಿಂದಾಗಿ ಇನ್ನೂ ಹೊಗೆ ಹೊರಡುತ್ತಿತ್ತು. ಚಿನ್ನಪ್ಪ ಅದನ್ನೇ ನೋಡಿದ. ಸುಟ್ಟು ಹೋದ ಭಾಗದಿಂದ ಸ್ವಲ್ಪ ಸ್ವಲ್ಪವೇ ಬೂದಿ ಬೀಳುತ್ತಿತ್ತು.!
                                    *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಹೌದಪ್ಪ ಹೌದೋ ನೀನೇ ದೇವರಾ


- ಶಿಶುನಾಳ ಶರೀಫ್

ಹೌದಪ್ಪ ಹೌದೋ ನೀನೇ ದೇವರಾ
ನಿಂದ ನೀ ತಿಳಿದರ ನಿನಗಿಲ್ಲೋ  ದೂರಾ                              ||ಪ||

ನೀರಿಲ್ಲದ ಜಳಕ ಮಾಡಿರಬೇಕೋ
ಅರಿವೆಯಿಲ್ಲದ ಮಡಿಯ  ಉಟ್ಟಿರಬೇಕೋ
ಊಟಯಿಲ್ಲದ ಹೊಟ್ಟೆ ತುಂಬಿರಬೇಕೋ                               ||೧||

ನಿದ್ದೆಯೊಳಗೆ ಸದಾ  ಎಚ್ಚರವಿರಬೇಕೋ
ತಂಬಾಕಿಲ್ಲದ ಬತ್ತಿ  ವಳೆ ಸೇದಿರಬೇಕೋ                             ||೨||

ಶರೆ ಕುಡಿಯದೇ ನಿಸೆಯಾಗಿರಬೇಕೋ
ಎಬಡಾತಬಡಾ ನಾಲಿಗೆ ಬಿದ್ದಿರಬೇಕೋ
ಮೋಜಿಲಿ ಹೋಗಿ ಶಿಶುನಾಳಧೀಶನ ಪಾದಕೆ ಬಿದ್ದಿರಬೇಕೋ  ||೩||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಬಿರುಗಾಳಿ

-ರವಿ ಕೋಟಾರಗಸ್ತಿ

ನೋವಿನ ಬಿರುಗಾಳಿ
ಬಾಳಲಿ ಬೀಸುತಲಿ
ಬರೆ ನೀಡುತ...
ಬಡಿದು-ನೋಯಿಸುತ
ತನು-ಮನ ಕಲುಕುತಿಹದು
ಪ್ರತಿಭೆ-ಪ್ರಸನ್ನತೆಗಳ
ಭ್ರಮನಿರಸನದ ಆದರ್ಶ
ಬವಣೆಯಲಿ ಬಳಲುತಿಹದು

ಅನಾಚಾರ... ಕಂದಾಚಾರ
ರಾರಾಜಿಸುತ... ರಂಜನೆಯಲಿ
ಎಲ್ಲೆಡೆ ಹರಡಿಹವು
ಏಕನಾದದಿ ಮಿಡಿಯುತ
ಮಾರಕ ಯಾತನೆಯಲಿ
ಗಹ... ಗಹಿಸುತಿಹವು

ಸುಪ್ತ ಮನಸ್ಸುಗಳ
ಆಳದಿ ತುಂಬಿ...
ಬದುಕಿನ ಪ್ರಶ್ನೆಗಳೇ...
ಕೇಳುತಲಿ ಹಲವು
ಜೀವಂತ ಹೆಣವಾಗಿಸುವ
ಹುನ್ನಾರದಿ ಆತ್ಮ ಸ್ಥೈರ್ಯ
ಅಂತರಾಳದಿ ಎಚ್ಚರಗೊಳಿಸುತಿಹವು

ಏಳಬೇಕು... ಎಚ್ಚರದಿ
ಎದ್ದೇಳಬೇಕು... ಮನಸ್ಸು
ಆತ್ಮ - ಗುಂಡಾಗಿಸಿ...
ಸಿಡಿಯುತಲಿ ಉರುಳಬೇಕು
ಕತ್ತಲೆ ಸೀಳುವ ಮಿಂಚಾಗಿ
ದೀವಿಗೆಯ ಬೆಂಕಿ ಬೆಳಕಾಗುತ

         *****

ಕೀಲಿಕರಣ: ಕಿಶೋರ್‍ ಚಂದ್ರ

ನೀರೆಂದರೆ

- ಡಾ || ರಾಜಪ್ಪ ದಳವಾಯಿ

ನೀರು ನೀರೆಂದರೆ
ಏನೆಂದು ತಿಳಿದಿರಿ |  ಜನರೆ ||

ನೆಲಮುಗಿಲ ಸಂಗಮ
ತಿಳಿ ಇದರ ಮರ್ಮ
ಮನುಷ್ಯ ತಯ್ಯಾರು
ಮಾಡಲಾಗದು ನೀರು ||

ಭೂಮಿ ಮ್ಯಾಲಿನ ನೀರು
ಆವಿಯಾಗಿ ಮುಗಿಲೂರು
ತಲುಪಿ ಮೋಡಗಳಾಗಿ
ನೆಲ ಶಾಖದಿ ಮಳೆಯಾಗಿ ||

ಸೂರ್ಯ ಕಾರಣಿಭೂತ
ಕೇಳೊ ಜ್ಞಾನದ ಮಾತ
ಅದ್ಭುತ ಚಕ್ರವಿದು
ಭೂ ಜೀವ ಉಳಿಸೋದು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಹಲವು ಯೋಚನೆಯಿಂದ ಬಳಲಿದರೇನಿದು

- ಶಿಶುನಾಳ ಶರೀಫ್

ಹಲವು ಯೋಚನೆಯಿಂದ  ಬಳಲಿದರೇನಿದು
ಸುಲಭದಿ ಸದ್ಗುರುಸೇವೆಯೊಳಿರದೆ                    ||ಪ||

ತಿಳಿದು ಪರಮ ಜೀವರೊಂದುಗೂಡಿಸಿ ತತ್ವ-
ಗಳ ಅರಿತು ಮಾಯಾ ಅಳಿಯೆ ಮುರಿಯದೆ          ||೧||

ನರಜನ್ಮ ಸ್ಥಿರವೆಂದು ಜರೆಮರಣದೊಳು ನೊಂದು
ಮರಳಿ ಮರಳಿ ಭವಕೆ ಬರಬಹುದೆ                      ||೨||

ಧರೆಯೊಳುದಿದಿ ಧರ್ಮ ಗಳಸದೆ ನಾರಿಗೆ
ಮರುಳುಗೊಂಡು  ಹರಣ ಚರಣ ಸ್ಮರಿಸದೆ         ||೩||

ಕಾಯಕರಣಂಗಳಾ ನ್ಯಾಯ ತೀರದ ಮುಂಚೆ
ಮಾಯದೊಳುಬಿದ್ದು   ಹರಿದಾಡಗೊಡದೆ          ||೪||

ಮಾಯ ಬಲಿದು ಭಕ್ತಿಭಾವದೊಳು ಶಿಶುನಾಳ
ದೇವನೊಲಿಸಿಕೊಂಡು ಮುಕ್ತಿ ಪಡೆಯದೆ          ||೫||

              *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ದಾರಿ

- ಗಿರಿಜಾಪತಿ ಎಂ. ಎನ್

ಬೆಳಗು ದೀಪವೆ ಬೆಳಗುತಿರು ನೀ.....
ನಿನ್ನ ಬೆಳಕಲಿ ಗುರಿಯಿದೆ.....
ಅನಂತ ನಿಶೆಯನು ದೂಡೋ ನಿನ್ನಯ
ನಿಯತಿಯಣತಿಗೆ ಗೆಲುವಿದೆ.....

ನಿತ್ಯ ಮೂಡೋ ಸತ್ಯ ನೇಸರ
ತುಂಬಿದಂಬರ ಕೀರ್ತಿಗೆ.....
ಧ್ಯಾನ ಮನನದ ಗಾನ ತುಂಬುರ
ಚಿದಂಬರಗೂಢದ ಹಾದಿಗೆ.....

ನೀನೆ ಗುರುವಿನ ಗುರಿಯು ದಾರಿಯು
ಅಂತರಂಗದರಿವಿನ ಲೀಲೆಗೆ
ಮುನ್ನ ಬಾಳಿನ ಪ್ರತಿಮೆ ರೂಪಿಯು
ನಡೆವ ಹಾದಿಯ ಬಾಳಿಗೆ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ಸಂಸಾರದ ಗೊಡವಿ ಇನ್ನ್ಯಾಕೆ

- ಶಿಶುನಾಳ ಶರೀಫ್

ಸಂಸಾರದ  ಗೊಡವಿ ಇನ್ನ್ಯಾಕೆ  ಇನ್ನ್ಯಾರಿಗೆ ಬೇಕೆ    ||ಪ||

ಭವಸಾಗರದೊಳು ಮುಳುಗಿ ಮುಳುಗುತಿರೆ
ನವಿದು ನವಿದು ಯಮರಾಜನು ಕೊಲುವಾ              ||ಅ. ಪ||

ಒಂಟೆಯ ಮೇಲೆ ಹತ್ತಿದೆನವ್ವಾ
ಗಂಟೆಯ ನುಡಿಸಿದೆ ತಾಯವ್ವ
ಕಂಟಕ ಹರಿಸಿ  ಸೊಂಟರಗಾಳಿಯ
ದಾಂಟಿನಡಿದು ಮತ್ತೆಂಟುಕೋಟಿಯ  ಗೆದ್ದೆ            ||೧||

ಮಂದಿಯೋಳ್ಮಾನಕಂಜದಲೀ  ಸಂದಿಯೊಳು ಸುಳಿದಾಡಲಿ
ಬಂಧುರ ಶಿಶುನಾಳ ತಂದೆಯ ಕಾಣಲು
ಹೊಂದಿದೆನಾತನ ದ್ವಂದ್ವಚರಣಕೆ                        ||೨||

            *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಮನ್ನಿ

- ಶೇಖರ್‌ಪೂರ್ಣ

ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ ಸಂದರ್ಭದಲ್ಲಿ ನಮ್ಮೆಲ್ಲಾ ಸಂವೇದನೆಗಳು ಕನ್ನಡೀಕರಣಗೊಂಡಿರಬೇಕೆ ಹೊರತು ಅನ್ಯಭಾಷಾ ಲಕ್ಷಣದ ಉದ್ಗಾರಕ್ಕೂ ಅವಕಾಶವಿಲ್ಲ.

ಆ ಕಿಟಕೀನ ತೆಗೆಯೋ ಅವಕಾಶವೇ ಬಹಳ ಕಡಿಮೆ. ರಾಮನವಮಿ, ಗಣೇಶೋತ್ಸವ, ತಿರುಪ್ಪಾವೈ, ಕನ್ನಡ ರಾಜ್ಯೋತ್ಸವ ಇತರೆ ಸಾರ್ವಜನಿಕ ಮೈಕಾಸುರರ ಹಾವಳಿಯಿಂದಾಗಿ ಅದನ್ನು ತೆಗೆಯೋದು ಅಪರೂಪ.ಅಪರೂಪಕ್ಕೊಮ್ಮೆ ತನ್ನನ್ನು ಬಿಚ್ಚಿಕೊಂಡು ಅಷ್ಟೋ ಇಷ್ಟೋ ಬಾಹ್ಯ ಸಂಪರ್ಕ ಕಲ್ಪಿಸೋ, ತಂಪುಗಾಳಿಯನ್ನು ಒಳಕ್ಕೆ ನೂಕುವ ಅದನ್ನು ನಾನು ಪ್ರೀತಿಸೋದು ಅಸಹಜವೇನೂ ಅಲ್ಲ. ಜಸ್ಟ್ ಸಿಂಪ್ಲಿ ಐ ಲವ್ ಇಟ್.

ಕಿಟಕಿ ತೆಗೆದೊಡನೆ ಕಣ್ಣಿಗೆ ಪಚ್ಚೆಂದು ಹೊಡೆಯುವುದು :

೧. ರಸ್ತೆ.
೨ . ರಸ್ತೆಗಂಟಿಕೊಂಡಿರುವ ವಠಾರ.
೩. ವಠಾರಕ್ಕೆ ಅಂಟಿಕೊಂಡಿರುವ ಪೆಟ್ಟಿಗೆ ಅಂಗಡಿ.ವಠಾರದಲ್ಲಿ ಒಟ್ಟು ಹದಿನೆಂಟು ಮನೆಗಳಿವೆ. ಬಹುತೇಕ ವಿವಿಧ ಪ್ರಬೇಧಗಳು ಅಂದರೆ ಮಧ್ವ, ಮುರುಕನಾಡು, ಅಯ್ಯಂಗಾರ್, ಅಯ್ಯರ್ ಹೀಗೆ ಅನೇಕ ಪ್ರಬೇಧ ಸೇರಿದ ಬ್ರಾಹ್ಮಣ ಮತಸ್ಥರೆ ಜಾಸ್ತಿ. ನಾನು ಈ ವಠಾರದ ಎದುರಿಗಿನ ಮಾಡಿ ಮೇಲಿನ ಇಪ್ಪತ್ತು ಇಂಟೂ ಹದಿನೈದು ಕೋಣೆ ಹಿಡಿದಿದ್ದೀನಿ. ಹಿಡಿದೊಡನೆಯೆ ನನಗು ಆ ಕಿಟಕಿಗೂ ಲವ್. ಬೇರೇನೂ ಮಾಡಲಾಗದಂತೆ ಸೆಳೆದಿಟ್ಟಿರುವ ಆ ಕಿಟಕಿಯಿಂದ ನೋಡಿದರೆ , ಆ ಹದಿನೆಂಟು ಮನೆಗಳ ಇತಿಹಾಸ ಬರೆಯುವಷ್ಟು ಮಾಹಿತಿಯೇನೊ ದಕ್ಕುತ್ತದೆ. ಆದರೇನು ಮಾಡಲಿ, ನಾನು ಆ ಕಿಟಕಿ ತೆಗೆಯೋಕ್ಕೆ ಹಾವಳಿಮುಕ್ತವಾಗಿ ಇರೋ ಅವಕಾಶವೇ ಬಹಳ ಕಡಿಮೆ.ಹೋಗಲೀಂದ್ರೆ ನನಗೂ ಬಾಹ್ಯ ಪ್ರಪಂಚಕ್ಕೂ ಸಂಪರ್ಕ ಇಲ್ಲವೆ ಇಲ್ಲಾನ್ನಬಹುದು. ಬ್ರಹ್ಮಚಾರಿ ಶತಮರ್ಕಟ. ಮಾತನಾಡಿದರೆ ಎಲ್ಲಿ ಏನಂಟಿಕೊಳ್ಳುತ್ತದೋ ಏನಾಗಿ ಹೋಗುತ್ತದೊ ಎಂಬಂತ ಅಂಜುಕುಳಿ ಸ್ವಭಾವದ ಮಂದಿಯೇ ಹೆಚ್ಚು. ಆದ್ದರಿಂದಲೇ ನಾನು ಮನುಷ್ಯ ಮುಟ್ಟಿದ ಗುಬ್ಬಿ.

ದಿಟ ಗುಬ್ಬಿಯಂತೆಯೆ ನಾನು ಅಂಜಿಕೊಂಡಿದ್ದೇನೆ. ಗಾಬರಿಯಾಗಿದ್ದೇನೆ. ಸಂಪರ್ಕ, ಸಹವಾಸವಾಗಲಿ ಏನೊಂದೂ ಬೇಡವೇ ಬೇಡ ಎಂಬ ನಿರ್ಧಾರ ಬಹಳ ಗಟ್ಟಿಯಾಗಿದೆ. ಆಫೀಸಾಯ್ತು- ರೂಮಾಯ್ತು-ಕಿಟಕಿಯಾಯ್ತು. ಕಿಟಕಿ ಇಲ್ಲದಿದ್ದರೆ ಹಾಸಿಗೆ - ಪುಸ್ತಕಗಳಾಯ್ತು. ಅಪರೂಪಕ್ಕೊಮ್ಮೆ ಕಾಫಿ ತಿಂಡಿ ಮಾಡಿಕೊಳ್ಳಲು ಬೇಸರವಾಗಿ ವಠಾರದ ಹುಡುಗರನ್ನು ಕರೆದು ಫ್ಲಾಸ್ಕು ಕೊಟ್ಟು ಹೋಟೆಲ್ಲಿಗೆ ಅಟ್ಟುತ್ತೇನೆ. ಆ ಹುಡುಗರೂ ಸಹ " ಮಾಮ" ಕೇಳಿದ್ದನ್ನು ಸಲೀಸಾಗಿ ಮಾಡಿಕೊಡುತ್ತವೆ. ಹಾಗೆ ಮಾಡಿ ಕೊಡೋದಕ್ಕೂ ಆ ಹುಡುಗರ ತಾಯ್ತಂದೆಯರ ವಿರೋಧ. " ಆ ರೂಮಿಗೆ ಹೋಗ್ಬೇಡಾಂತ ನಿನಗೆ ಎಷ್ಟು ಸಲ ಹೇಳೋದು?"ಅಂತ ಮಕ್ಕಳನ್ನ ದಂಡಿಸಿದ ವರದೀನ ಹುಡುಗರೇ ಬಹಳ ಪ್ರಾಂಪ್ಟಾಗಿ ತರ್‍ತಾರೆ. ಹಾಳಾಗಿ ಹೋಗಲೀಂತ ಬಾಹ್ಯ ಸಂಪರ್ಕ ಬೇಡಾಂತ ನಾನು ನನ್ನ ರೂಂನಲ್ಲಿರೋ ವಸ್ತುಗಳನ್ನೆ- ನಿರ್ಜೀವ ವಸ್ತುಗಳನ್ನೇ ಪ್ರೀತಿಸಲಾ‌ಅರಂಭಿಸಿದ್ದೇನೆ. ಅದರಲ್ಲೂ ಐ ಪ್ರಿಫರ್ ಜಸ್ಟ್ ದಿ ಬ್ಲಡಿ ವಿಂಡೋ.

ಹಾಗೆ ಹೇಳೋಕ್ಕೋದರೆ ಈ ಗುಬ್ಬೀನ ಮನುಷ್ಯ ಮುಟ್ಟೇ ಇಲ್ಲ.ಮುಟ್ಟೋಕಿದ್ದಾಗಲೇ ಮುದುಡಿ ಹೋದದ್ದು. ಒಮ್ಮೆ ಏನಾಯ್ತೂಂದರೆ , ಆಫೀಸಿನಿಂದ ಹೀಗೆ ಬರ್‍ತಿದ್ದಾಗ ಈ ವಠಾರದಲ್ಲಿ ಅರವತ್ತು ವರ್ಷಗಳಿಂದ ಸಂಸಾರ ಹೂಡಿರೋ ಚೂಡನಾಥಯ್ಯರ್ ನನ್ನನ್ನು ನೋಡಿದೊಡನೆಯೆ ಕೈಬೀಸಿ ಎತ್ತರದ ಧ್ವನಿಯಲ್ಲಿ " ಬಾರಯ್ಯ ಇಲ್ಲಿ.." ಎಂದು ಕೂಗಿದರು. ಕೂಗಿದ ಧಾಟಿಗೆ ನಾನು ದಿಗ್ಭ್ರಮಿಸಿ ಹೋದೆನಾದರೂ ಮರ್ಯಾದೆಯಿಂದ ಅವರ ಬಳಿ ಹೋಗಿ ನಿಂತೆ.ಎಷ್ಟೇ ಆಗಲಿ ವಯೋವೃದ್ಧರು. ಕನ್ನಡದಲ್ಲಿ ಕಥೆಗಳನ್ನು ಒಂದಾನೊಂದು ಕಾಲದಲ್ಲಿ ಬರೆದು ಅಲ್ಲೊಂದು ಇಲ್ಲೊಂದು ಪ್ರಕಟಿಸಿರೋ ಕಥೆಗಾರರು ಬೇರೆ. ನನ್ನನ್ನು ನಖಶೀಖಾಂತ ನೋಡಿದ ಆತ "ನೀನೆಯೋ ಆ ಮಲಯಾಳಿಗಳ ಮನೆ ಮೇಲಿರೋ ರೂಮಿನಲ್ಲಿರೋನು?" ಎಂದು ಕೇಳಿ ನಾನು ಮತ್ತಷ್ಟು ದಿಗ್ಭ್ರಮಿಸಿ ಹೋಗುವಂತೆ ಮಾಡಿದ್ಡರು. ತಮ್ಮ ಜನಿವಾರದಿಂದ ಬೆನ್ನ ತುರಿಕೆಯನ್ನು ಕಡಿಯುತ್ತಾ, ನಾನು ಹೌದೆಂದ್ದಷ್ಟೇ ಹೇಳಿ ಅಲ್ಲಿ ನಿಲ್ಲದೆ ಹೊರಟು ಬಂದೆ. ಬೆನ್ನ ಹಿಂದೆಯೇ " ಈಗಿನ ಕಾಲದ ಹುಡುಗರು . ಹಿರಿಯರೂಂದರೆ ಭಯ ಭಕ್ತೀನ್ನೋದೆ ಇಲ್ಲ. ಒಬ್ಬಂಟಿ, ಕರೆದು ಮಾತಾಡ್ಸೋಣ ಅಂದರೆ ಧಿಮಾಕು" ಎಂದು ಗೊಣಗಿಕೊಂಡ ಟೀಕೆ ಬಂದಿತ್ತು.

ಹೀಗೆ ಇದೆ ರೀತಿ ಒಬ್ಬರ ಕಾಲನ್ನು ಮತ್ತೊಬ್ಬರು ಕಡಿಯುತ್ತಾ ಕುಳಿತಿರೋದೊ ಅಥವ ಯಾರಾದರೂ ಹೆಂಗಸರು ಬಟ್ಟೆ ಒಗೆಯುತ್ತಲೋ, ಆರ ಹಾಕುತ್ತಲೋ ಅಥವ ಯಾವುದಾದ್ರೂ ಮನೆ ಮಾಮಿಗಳು ಸಂಡಿಗೆ ಒಣ ಹಾಕುತ್ತಲೋ, ಇನ್ನಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಇಲ್ಲವೆ ಮದುವೆ ಮುಂಜಿ ಸಂಭ್ರಮ ಇರುವ ಮಾಮೂಲಿ ದೃಶ್ಯಗಳು ನನ್ನ ಕಿಟಕಿಯಾಚೆ. ದರಿದ್ರ ಎಲ್ಲಾ ಮಾಮೂಲೆ. ಈ ಜಗತ್ತಿನಲ್ಲಿ ಬೇರೇನಾದರೂ ಜರುಗಲು ಸಾಧ್ಯವೆ ಎಂಬ ಉದಾಸೀನದಿಂದಲೂ ನಾನು ಕಿಟಕಿಯನ್ನು ತೆಗೆಯಲು ನಿರಾಕರಿಸಿದ್ದೂ ಉಂಟು.

ನಾನಿರುವ ರೂಮಿನ ಕೇಳಗಡೆ ಮನೆಯಲ್ಲಿರುವಾಕೆ ಒಂದು ದೊಡ್ಡ ಫ್ಯಾಕ್ಟರಿ ಆಸ್ಪತ್ರೆಯಲ್ಲಿ ಡಾಕ್ಟರಾಗಿದ್ದಾರೆ. ಕೇರಳದವರು. ಜೊತೆಯಲ್ಲಿ ಐದು ವರ್ಷದ ಮಗ. ತಾಯಿ-ತಂದೆ ಅಷ್ಟೆ. ಗಂಡ ಇಸ್ರೋದ ವಿಜ್ಞಾನಿ. ಕೊಚ್ಚಿನ್‌ನಲ್ಲಿದ್ದಾರಂತೆ. ವಾರಕ್ಕೊಮ್ಮೆ-ತಿಂಗಳಿಗೊಮ್ಮೆ ಬರುತ್ತಿರುತ್ತಾರಂತೆ. ಆತ ಬಂದಾಗ ಮಾತ್ರ ಆಕೆ ಕಾಣ ಸಿಗುವುದು. ಗಂಡನೊಂದಿಗೆ ಸಿನಿಮಾಕ್ಕೋ ಮತ್ತೊಂದಕ್ಕೋ ಹೋಗುತ್ತಿರುತ್ತಾರೆ. ನಾನು ಅವರನ್ನು ನೋಡಿದೊಡನೆಯೆ ತಲೆ ತಗ್ಗಿಸಿ ಹೊರಟು ಹೋಗುತ್ತಿರುತ್ತೇನೆ. ಎಂದೂ ಅದರ ಬಗೆಗೆ ತಲೆ ಕೆಡಿಸಿಕೊಳ್ಳೋಕ್ಕೆ ಹೋಗಿಲ್ಲ.ಅವರೂ ಅಷ್ಟೆ. ಇದೇ ಬೀದಿಲಿರೋ ನನ್ನ ಸಹೊದ್ಯೋಗಿ ಮಿತ್ರನ ಹೆಂಡತಿಗೂ ಈಕೆಗೂ ಸ್ವಲ್ಪ ಸಂಪರ್ಕ.ಅವರಿಬ್ಬರ ಭೇಟಿಯ ವಿವರಗಳನ್ನು ನನ್ನ ಸಹೊದ್ಯೋಗಿಮಿತ್ರ ಸಂದರ್ಭಾನುಸಾರ ಹೇಳುತ್ತಿರುತ್ತಾನೆ. ಹಾಗೆ ತಿಳಿದು ಬಂದ ವಿವರಗಳೆ ಈಗ ನಾನು ಇಲ್ಲಿ ದಾಖಲಿಸಿರುವುದು. ಸಹೊದ್ಯೋಗಿಮಿತ್ರನ ಹೆಂಡತಿಗೂ ಈಕೆಗೂ ಆಗಾಗ್ಗೆ ಜಗಳವಾದದ್ದೂ ಉಂಟು-ಮನಸ್ತಾಪ ಬೆಳೆದದ್ದೂ ಉಂಟು.

ಈ ಬಾರಿ ಬಹಳ ದಿನಗಳವರೆಗೆ ಕಿಟಕಿಯನ್ನು ಮುಚ್ಚೇ ಇದ್ದೆ. ಒಂದು ದಿನ ಎಲ್ಲವೂ ಶಾಂತವಾಗಿದ್ದಾಗ ಬೆಳ್ಳಂಬೆಳಿಗ್ಗೆ ಚುಮುಚುಮು ಬೆಳಕಿನಲ್ಲಿ ಬಿಸಿ ಬಿಸಿ ಕಾಫಿ ಮಾಡಿ ಕಿಟಕಿ ತೆಗೆದಾಗ ಆಶ್ಚರ್ಯ ಕಾದಿತ್ತು.ಆ ಕತ್ತಲೆಯ ಬೆಳಕಿನಲ್ಲೂ ಸ್ಪಷ್ಟವಿತ್ತು.ಇನ್ನೂ ಬೀದಿ ದೀಪ ಉರಿಯುತ್ತಿತ್ತು.ನಾನಾಕೇನ ಇಲ್ಲಿಯವರೆಗೂ ಕಂಡೇ ಇರಲಿಲ್ಲ. ಆ ಕ್ಷಣ ಯಾರಿರಬಹುದು ಎಂಬ ಕುತೂಹಲ ಹುಟ್ಟಿ ತಕ್ಷಣವೆ ಯಾರಾದರೇನಂತೆ ಎಂಬ ಉದಾಸೀನವೂ ಹುಟ್ಟಿ ಕುತೂಹಲ ಕ್ಷೀಣಿಸಿಹೋಯ್ತು.ಅದರ ಹಿನ್ನೆಲೆಯಲ್ಲಿ ಆಕೆ ಚೂಡನಾಥಯ್ಯರ್‌ರ ಮನೆ ಮುಂದಿನ ಅಂಗೈ ಅಗಲದ ಅಂಗಳವನ್ನು ತೊಳೆದು ರಂಗೋಲಿ ಹಾಕುತ್ತಿದ್ದುದರಿಂದ ಆಕೆ ಚೂಡನಾಥಯ್ಯರ್ ಮನೆಗೆ ಬಂದಿರುವಾಕೆ ಇರಬಹುದೆನ್ನುವ ಅಲ್ಪ ಸಮಾಧಾನಕರ ತೀರ್ಮಾನವೂ ಮೂಡಿಬಂತು.

ಯಾರಿರಬಹುದು?- ಕುತೂಹಲವನ್ನು ಉಪೇಕ್ಷಿಸಿದ ಮಾತ್ರಕ್ಕೆ ಸಾಯುತ್ತದೆಯೆ? ಅಂದು ಸಂಜೆಯೆ ವಠಾರದ ಹುಡುಗರನ್ನ ಹೋಟೆಲ್ಲಿಗೆ ಅಟ್ಟುವ ಮುನ್ನ ಕೇಳಿದೆ:

" ಲೋ, ಚೂಡನಾಥಯ್ಯರ್ ಮನೆಗೆ ಹೊಸದಾಗಿ ಬಂದಿದ್ದಾರಲ್ಲ, ಯಾರೋ ಅದು?"

" ಅಂದರೆ ..?"- ಮುಗ್ಧವಾದ ಪ್ರತಿ ಪ್ರಶ್ನೆ.

"ಹೆಂಗಸು..ಹೊಸದಾಗಿ ಬಂದಿದ್ದಾರಲ್ಲ.."

" ಅವರಾ..ಅವರು ಮನ್ನಿ.."

"ಮನ್ನಿ ಅಂದರೆ?"

"ಮನ್ನಿ ಅಂದರೆ ಮನ್ನಿ. ಅವರು ಆಗಲೆ ಬಂದು ಬಹಳ ದಿನಗಳಾದವು...."

- ಇನ್ನೂ ಹೆಚ್ಚಿಗೆ ತೋಡಿದರೆ ಹುಡುಗನಿಗೆ ಅವನ ತಾಯ್ತಂದೆಯರು ನನ್ನ ವಿರುದ್ಧ ನೀಡಿರುವ ಎಚ್ಚರಿಕೆಯನ್ನ ತೀವ್ರಗೊಳಿಸಿದಂತಾಗುತ್ತದೆ ಎಂದು ನಾನು ಸುಮ್ಮನಾಗಿ ಹುಡುಗನನ್ನು ಹೋಟೆಲ್ಲಿಗೆ ಅಟ್ಟಿದೆ.

ಇನ್ನೊಂದು ದಿನ, ಇನ್ನೂ ಚಿಕ್ಕ ಹುಡುಗನಿಗೆ ಕಾಫಿ ಯಾತ್ರೆಗೆ ಕಳಿಸುವ ಮುನ್ನ ಇನ್ನಷ್ಟು ಮಾಹಿತಿ ಗಿಟ್ಟಿಸಿದ್ದರಲ್ಲಿ- ಆಕೆ ಚೂಡನಾಥಯ್ಯರ್‌ರ ಸೊಸೆ ಎಂದು ತಿಳಿದು ಬಂತು. ಚೂಡನಾಥಯ್ಯರ್‌ರ ಮಗ ವೈದ್ಯನಾಥನ್ ಸಹ ಅಪ್ಪನಷ್ಟಲ್ಲದಿದ್ದರೂ ಸ್ವಲ್ಪ ಅಹಂಕಾರಿಯೇ ಎಂದನ್ನಬಹುದು. ಯಾವುದೋ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಅವನು ಸ್ಕೂಟರಿನಲ್ಲಿ ಹೋಗುವಾಗ ನಾನು ಎದುರಾದರೆ ಕಡೇಪಕ್ಷ ಮುಗುಳ್ನಗೆಯಾದರೂ ನಗುತ್ತಿದ್ದ. ಆಪ್ಪನಂತೆ ಗಂಟು ಮುಖದವನಲ್ಲ. ನನ್ನ ಅವನ ಸಂಬಂಧ ಆ ಮುಗುಳ್ನಗೆಯ ಮಿತಿಯಾಚೆ ಬೆಳೆಯಲೇ ಇಲ್ಲ.

ಒಂದು ದಿನ ವಠಾರದ ತಲೆ ಬಾಗಿಲಿನಲ್ಲಿ ಆಕೆ ಬೇರೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದುದ್ಡು, ನಾನು ಲಬ್ಬೆಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಳ್ಳುತ್ತಿದ್ದಾಗ ಕಾಣಿಸಿತು. ಸ್ವಲ್ಪ ಹತ್ತಿರದಿಂದ ನೋಡುವ ಎಂದು ಹೆಜ್ಜೆ ಹಾಕುತ್ತಿದ್ದಂತೆಯೆ, ನನಗೆ ಹೆಸರು ಗೊತ್ತಿರದ ನಮ್ಮ ಡಾಕ್ಟರ್ ಹೆಂಗಸು ಬರುತ್ತಿದ್ದುದನ್ನ ಗಮನಿಸಿದ ಪೆಟ್ಟಿಗೆ ಅಂಗಡಿ ಮುಂದೆ ಸಿಗರೇಟ್ ಹಚ್ಚಿದ ಪಟಾಲಂನವನೊಬ್ಬ ಇನ್ನೊಬ್ಬನಿಗೆ:

"ನೋಡೊ ಒಳ್ಳೆ ಮಲಯಾಳಿ ಫಿಗರ್ ಬರ್‍ತಾ‌ಇದೆ..." ಎಂದು ಹುಸಿ ನಕ್ಕದ್ದನ್ನನುಸರಿಸಿ ಕಿಸಕ್ಕೆಂದು ಪ್ರತಿಕ್ರಿಯಿಸಿದ್ದ ಇನ್ನೊಬ್ಬ "ಮಲಯಾಳಿ ಹೆಂಗಸೆಂದರೆ ಒಳ್ಳೆ ಖುಷಿ ಕೊಡ್ತಾರಂತೆ ಕಣೊ. ಅವರ ರಾಜ್ಯದಲ್ಲಿ ಎಲ್ಲಾ ತಳಕಬಳಕ. ಗಂಡು ಹೆಣ್ಣು ಸಹ, ಐ ಮೀನ್ ಹಾಸಿಗೇಲಿ.." ಎಂದಿದ್ದ. ಈ ಮಾಮೂಲಿ ಪಟಾಲಂಗೆ ಬೇರೇನೂ ಕೆಲಸವಿಲ್ಲ, ಹೋಗಿ ಬರೋರ್‍ನ ಚುಡಾಯಿಸೋದು ಬಿಟ್ಟರೆ.

ನಾನು ವಠಾರದ ತಲೆ ಬಾಗಿಲನ್ನ ಹಾದು ಅವರ ಕಣ್ಣಿಗೆ ಬೀಳದೆ ಅವರ ಸಂಭಾಷಣೆ ಕೇಳುವಂತೆ ಮರೆಯಾಗಿ ನಿಂತೆ. ಮನ್ನಿಯ ಸಂಭಾಷಣೆಯಲ್ಲಿ ಹೆಚ್ಚು ತಮಿಳು- ಅಲ್ಲಲ್ಲಿ ಒಳ್ಳೆ ಪ್ರೌಢಿಮೆಯ ಇಂಗ್ಲೀಷ್ ನುಸುಳುತ್ತಿತ್ತು. ಅದು ದೊಡ್ಡ ಸಂಭಾಷಣೆಯೇನೂ ಅಲ್ಲ. ಹರಕು ಮುರುಕು ತಮಿಳು ನನಗೂ ಗೊತ್ತಿದ್ದರಿಂದ ಸಂಗ್ರಹಿಸಲಾದ ವಿವರಗಳೆಂದರೆ:

ಆಕೆ ಸೊಸೆಯಾಗಿ ಬಂದ ಹೊಸತರಲ್ಲಿ ಮಾವನವರ ಮನೆಯಲ್ಲಿ ಹೆಚ್ಚಾಗಿ ಕನ್ನಡ ಬಳಕೆಯಲ್ಲಿದ್ದನ್ನ, ತತ್‌ಕ್ಷಣ ಆ ಬಳಕೆಗೆ ಒಗ್ಗದೆ ಇರೋದು, ತಾನು ತನ್ನ ತವರಿನಲ್ಲಿ ಮಾಡುತ್ತಿದ್ದ ಅಡಿಗೆಗೆ ಮನೆಯವರು ಒಗ್ಗದೆ ಇರೋದು, ಅವರ ಅಡಿಗೆಯನ್ನ ತಾನು ಎಷ್ಟೇ ಚೆನ್ನಾಗಿ ಮಾಡಿದರೂ ಮನೆಯವರ ಮೂದಲಿಕೆ, ತಾನು ಇಂಗ್ಲೀಷಿನಲ್ಲಿ ಬರೆದ ಕತೇನ ಓದಿ- " ನೀನು ಏನೇ ಬರೆದರೂ ಕನ್ನಡದಲ್ಲಿ ಬರೆ, ಬರದಿದ್ದರೆ ಕಲಿತುಕೋ, ಆ ದರಿದ್ರ ಕೊಂಗಾಟವನ್ನ ಬಿಟ್ಟು ಬಿಡು. ಆಗಲೇ ನಮಗೆ ಹೆಮ್ಮೆ." ಎಂದು ಅತ್ತೆ, ಮಾವ, ಗಂಡ ಎಲ್ಲರೂ ಛೇಡಿಸಿದ್ದು, ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡಿದ್ದ ಮಾಮಿ- ಮನ್ನಿಯ ಮದ್ರಾಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ಗರ್ವವನ್ನ ಮುರಿಯೋ ನಿರ್ಧಾರದ ಧಾಟೀಲಿ- " ಹೌದಮ್ಮ ನೀನು ನಿನ್ನ ಗಂಡನ ಮನೆಗೆ ಬಂದ್ಮೇಲೆ ಗಂಡನ ಮನೆಯ ಆಚಾರ ವಿಚಾರಗಳಿಗೆ ಹೊಂದ್ಕೋ ಬೇಕು.ಆಗಲೆ ತವರಿಗೂ ಕೀರ್ತಿ. ನಿನ್ನ ಮಾವ- ಅತ್ತೆ - ಗಂಡ ಹೇಳೋದನ್ನ ಕೇಳು...ಅದೇ ನ್ಯಾಯ..." ಎಂದು ತೀರ್ಪಿತ್ತಿದ್ದರು.


ಅದೇನಾಯ್ತೋ ಏನೋ ಮೊಟ್ಟ ಮೊದಲ ಬಾರಿಗೆ ನನ್ನ ಆತ್ಮೀಯ ಕೋಣೆ ಅಸಹ್ಯವಾಯಿತು. ರಾತ್ರಿ ಮಲಗಿದಾಗ ಕಣ್ಮುಚ್ಚಿದೊಡನೆ ಮನ್ನಿಯ ಮುಖ, ಎಂ.ಎ ಇಂಗ್ಲೀಷ್ ಮನ್ನಿಯ ಮುಖ, ಇಲ್ಲಿಗೆ ಬಂದಾಗ‌ಎಷ್ಟೊಂದು ಕ್ಯೂಟ್ ಆಗಿದ್ದಳು. ಈಗ ಸಣ್ಣಗೆ ಬಡಕಲು - ಬಡಕಲಾಗಿ...ಇದರೊಂದಿಗೆ ಯಾರ ಮೇಲೋ ದ್ವೇಷ, ಚೂಡನಾಥಯ್ಯರ್ ಮೇಲೆ? ಉಹೂಂ. ಮನ್ನಿ ಅತ್ತೆ- ಗಂಡನ ಮೇಲೆ? ಊಹುಂ. ಹಾಗಾದರೆ ಯಾರ ಮೇಲೆ? ಅರ್ಥವಾಗದ ತಳಮಳ. ಎಷ್ಟೇ ಸೂಕ್ಷ್ಮವಾದರೂ ತಳಮಳದ - ದ್ವೇಷದ ಹಿನ್ನೆಲೆ ಅರ್ಥವಾಗುವ - ಸ್ಫುಟವಾಗುವ ಲಕ್ಷಣ ಕಾಣಲಿಲ್ಲ. ಎಂದೋ ಯಾರೋ ಬಿಟ್ಟಿ ಕೊಟ್ಟಿದ್ದರೆಂದು ತಂದು ಬಿಸಾಕಿದ್ದ ಬಹಳ ದಿನಗಳು ಓದದೆ ಇದ್ದ ಗೋಕಾಕ್ ಸಮಿತಿ ವರದಿಯ ಪೂರ್ಣ ಪಾಠ ಅದಾಗಿತ್ತು. ಅದರಲ್ಲಿ ಮನಸ್ಸನ್ನು ತೊಡಗಿಸಲಿಕ್ಕೇ ಆಗಿರಲಿಲ್ಲ. ಬೇರೆ ಯಾವುದೇ ಪುಸ್ತಕ ಇರಲಿಲ್ಲ. ಬಹಳ ಬೇಗನೆ ಹಾಸಿಗೆ ಹಾಸಿ ಉರುಳಿಕೊಂಡಿದ್ದೆ, ನಿದ್ದೆ ಬಾ ಎಂದರೂ ಎಲ್ಲಿಂದ ಬಂದಾತು?

ಮೆಲ್ಲನೆದ್ದು ಕಿಟಕಿ ತೆಗೆದಾಗ ಮನ್ನಿ ವಠಾರದ ತಲೆ ಬಾಗಿಲ ಜಗಲಿ ಮೇಲೆ ಮೂರ್‍ನಾಲ್ಕು ಪುಡಿ ಹುಡುಗರೊಂದಿಗೆ ಕುಳಿತಿದ್ದುದು ಕಾಣಿಸಿತು. ಕತೆ ಹೇಳುತ್ತಿದ್ದಳೆನೊ. ಹುಡುಗರಿಗೆ ತಮಿಳು ಅರ್ಥವಾಗುತ್ತಿತ್ತೋ ಅಥವ ಹರಕು ಮುರುಕು ಕನ್ನಡದಲ್ಲೇ ಹೇಳುತ್ತಿದ್ದಳೇನೊ. ಒಂದೆರಡು ನಿಮಿಷ ಹಾಗೆ ನೋಡುತ್ತಿದ್ದಾಗ ಆಕೆಯ ಗಂಡ ಬಂದು ಏನನ್ನೋ ಹೇಳುತ್ತಿದ್ದ. ಅವನು ಹಾವಭಾವ ನೋಡಿದರೆ ಸಿಟ್ಟಾಗಿದ್ದನೆಂದು ಕಾಣುತ್ತದೆ. ಆಕೆ ಎದ್ದು ಒಳ ಹೊರಟು ಹೋದಳು. ಪಾಪ ಮನ್ನಿ.

ಮನ್ನಿ,ಎಂಥಾ ಹೆಸರು? ಮುದ್ದಾಗಿ ಕರೆಯುವ ರೀತಿಯೋ ಅದು? ಹಾಗಾದರೆ ನಿಜವಾದ ಹೆಸರೇನೊ? ನಿಜವಾಗಿಯೂ ಒಬ್ಬ ವ್ಯಕ್ತಿಯ ಹೆಸರು ತಿಳಿದು ಕೊಳ್ಳಬೇಕೆನ್ನಿಸಿದ್ದು ಆಗಲೆ!

ಒಂದು ನಿಮಿಷ ಕಿಟಕಿಯಾಚೆ ನೋಡುತ್ತಿದ್ದೆ. ನಿರ್ಜನವಾದ ನಿರ್ಜೀವವಾದ ಬೀದಿ. ಮಂಕು ವಿದ್ಯುತ್ ಬೆಳಕಲ್ಲಿ ಖಾಲಿಖಾಲಿಯಾದ ಆ ಬೀದಿಯನ್ನ ಕಾಣಲಾಗದೆ ಕಿಟಕಿಯನ್ನ ರೋಷದಿಂದ ಪಟ್ಟೆಂದು ಶಬ್ಧ ಬರುವ ಹಾಗೆ ಮುಚ್ಚಿದೆ. ಪ್ರಥಮ ಬಾರಿಗೆ ಆ ಕಿಟಕಿಯ ಬಗೆಗೆ ದ್ವೇಷ ಉಮ್ಮಳಿಸಿಕೊಂಡು ಬಂದಿತ್ತು.

ಮಲಗಿದಾಗ ಕನಸಿನಲ್ಲಿ ತನ್ನ ಸಹೋದ್ಯೋಗಿಮಿತ್ರನ ಹೆಂಡತಿ ಅಬ್ಬರಿಸಿ " ನಿಮ್ಮ ರೂಮು ಕೆಳಗಿದಾಳಲ್ಲ, ಆ ಮಲೆಯಾಳದ ಮಿಟಕಲಾಡಿ, ಆಕೆಗೇನು ಗರ್ವಾರೀ, ಯುಗಾದಿ ಹಬ್ಬ , ಬಂದು ಅರಿಶಿನ ಕುಂಕುಮ ಇಟ್ಟುಕೊಡು ಹೋಗೂಂತ ಕರೆದರೆ ಬರಲೇ ಇಲ್ಲ. ಇನ್ನೊಂದು ದಿನ ಓಣಂ ಹಬ್ಬ- ನಮ್ಮ ಮನೆಗೆ ಊಟಕ್ಕೆ ಬನ್ನೀಂತ ಕರೀತಾಳಲ್ರಿ . ನಾಚಿಕೆ ಇಲ್ಲದೋಳು. ನಾನು ಹೋಗ್ತೀನ...ಹುಡುಗರ ಮೇಲೆ ಅದೆಂತಾ ಮೋಡಿ ಮಾಡಿದ್ದಾಳೊ, ಹೋಗ್ತೀವೀಂತ ಹಠ ಹಿಡಿದರು, ನಾಲ್ಕು ತದುಕಿ ಸುಮ್‌ನಾಗಿಸ್ದೆ. ಎಂಥಾ ಧಿಮಾಕೂ ರೀ ಆಕೇದು..." ಎಂದು ಕೂಗಡಿದಳು. ಎಲ್ಲೋ ಇದೆ ಮಾತು ಕೇಳಿದ್ದೆ ಈಗಾಗಲೆ.

ಬೆಳಗಿನ ತನಕ ಅದೇ ರೀತಿಯ ಅಬ್ಬರ. ಕೆಟ್ಟಕೆಟ್ಟದಾಗಿ ನನ್ನ ಕನಸಿನಲ್ಲಿ ನಡೆದೇ ಇತ್ತು. ಬೆಳಿಗ್ಗೆ ಸಂಪೂರ್ಣ ಎಚ್ಚರಾದಾಗ ನಾನು ಉಗಾದಿ ಹಬ್ಬದೂಟಕ್ಕೆ ಸಹೋದ್ಯೋಗಿಮಿತ್ರನ ಮನೆಗೆ ಹೋಗಿದ್ದಾಗ ಆಕೆ ಆಡಿದ್ದ ಮಾತುಗಳೇ ಕನಸಿನಲ್ಲಿ ಬಂದದ್ದೆಂದು ಖಚಿತವಾಗಿತ್ತು. ಇದ್ಯಾಕೆ ಹೀಗೆ ಕನಸಿನಲ್ಲಿ ಪುನರಾವರ್ತನೆಯಾಯಿತೋ ತಿಳಿಯದು. ಎದ್ಡು ಹೊರಗಡೆ ಬಾಗಿಲ ಬಳಿ ಬಿದ್ದಿದ್ದ ಪೇಪರ್ ತಂದು ಬಿಡಿಸಿದೆ. ಕನ್ನಡವನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂಬ ಮುಖ್ಯಮಂತ್ರಿಗಳ ಮಾಮೂಲಿ ಹೇಳಿಕೆ ಶೀರ್ಷಿಕೆಯಾಗಿ ಪ್ರಕಟಗೊಂಡಿದ್ದುದು ನನ್ನ ಕಣ್ಣಿಗೆ ಪ್ರಪ್ರಥಮವಾಗಿ ಬಡಿದು- ಪೇಪರನ್ನ ಓದದೆ ಹಾಗೇ ಬಿಸಾಕಿದೆ.

ಕಿಟಕಿಯ ಮೇಲಿನ ದ್ವೇಷ, ತೀವ್ರವಾಗಿದ್ದರೂ ಚಟ ಸುಮ್ಮನೆ ಬಿಟ್ಟಾತೆ. ಬಹಳ ದಿನಗಳ ನಂತರ ಒಂದು ಬೆಳಿಗ್ಗೆ ತೆಗೆದಾಗ ಮೊದಲು ಗಮನ ಸೆಳೆದದ್ದು ಬೀಗ ತೆಗೆಯದೆ ಬಿಮ್ಮೆಂದು ಇದ್ದ ಲಬ್ಬೆಯ ಪೆಟ್ಟಿಗೆ ಅಂಗಡಿ. ಒಂದು ದಿನವೂ ಮುದುಕ , ಸಮಯಕ್ಕೆ ಸರಿಯಾಗಿ ತೆಗೆವುದು ತಪ್ಪಿಸದಿದ್ದವ ಇಂದೇಕೆ ತೆಗೆಯಲಿಲ್ಲ? ಆರೋಗ್ಯ ಸರಿ ಇಲ್ಲದಿರಬಹುದು ಎಂದು ಸುಮ್ಮನಾದೆ. ಐದಾರು ದಿನಗಳಾದರೂ ತೆಗೆಯಲೇ ಇಲ್ಲ. ಆಮೇಲೊಂದು ದಿನ ಅವನ ಅಂಗಡಿಯ ಬೆಂಚುಗಳನ್ನೆ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮಾಮೂಲಿ ಪಟಾಲಂ ಸಿಕ್ಕಿದಾಗ ವಿಚಾರಿಸಿದೆ. ಅವರು ಹೇಳಿದಷ್ಟನ್ನ ಇಲ್ಲಿ ದಾಖಲಿಸುತ್ತಿದ್ದೇನೆ:

" ಆ ಲಬ್ಬೆ ನನ್ಮಗನಿಗೆ ಬಹಳ ಗಾಂಚಾಲಿ ಸಾರ್, ಕನ್ನಡದಲ್ಲಿ ಮಾತೋಡೋಂದರೆ ಬರಾಕಿಲ್ಲ ಅಂತಾನೆ. ಅದಕ್ಕೆ ಯದ್ವಾ ತದ್ವ ದಬಾಯಿಸಿದ್ದಕ್ಕೆ, ಬಂದು ಗಲಾಟೆ ಮಾಡ್ತಾರೇಂತ ಪೊಲೀಸ್ ಕಂಪ್ಲೇಂಟ್ ಮಾಡ್ದಾಂತ ಗೊತ್ತಾಯ್ತು., ಅಷ್ಟೆ , ಅಂಗಡೀನೆಲ್ಲ ಉಡೀಸ್ ಮಾಡ್ಬಿಟ್ವಿ. ಊರಿಗೆ ಓಡಿಹೋದ ಆ ಕಂಜಿವೆಳ್ಳಂ ನನ್ಮಗ..." ಎಂದು ಕೇಕೆ ಹಾಕಿದರು.

ಪೊಲೀಸ್ನೋರ್‍ದು ಒಂದು ವರ್ಶನ್ ಇದೆ: " ಈ ತುಡುಗು ಮುಂಡೇವು ಸಿಗರೇಟು, ಬಾಳೆ ಹಣ್ಣು, ಟೀ ಅದೂ ಇದೂಂತ ಆಗ ಕೊಡ್ತೀವಿ ಈಗ ಕೊಡ್ತೀವೀಂತ ಮುನ್ನೂರ್ ರೂಪಾಯಿ ಸಾಲ ಉಳಿಸಿಕೊಂಡರಂತೆ. ಒಂದು ದಿನ ಜಬರ್ದಸ್ಥ್‌ನಲ್ಲೇ ಕೇಳಿದ್ನಂತೆ. ಇವ್ರೆಲ್ಲ ಸೇರ್ಕೊಂಡು ಮುಂಡೇ ಮಗನೆ ನಮ್ ದೇಶ್ದಲ್ಲಿ ಬಂದು ಕೆರಕೊಂಡು ತಿಂತೀಯಾಂತ ಅಂಗಡೀನೆಲ್ಲ ಲೂಟಿ ಮಾಡವ್ರೆ..."

ನಾನು ಏನನ್ನು ಪ್ರತಿಕ್ರಿಯಿಸಲಿಲ್ಲ. ಇದರ ಹಿನ್ನೆಲೆಗೆ ಈ ಹುಡುಗರಿಗೆ ಪ್ರೋತ್ಸಾಹವಾಗಿ ಚೂಡನಾಥಯ್ಯರ್ ಇದ್ದರೂನ್ನೋದು ನಿಜ. ಯಾಕಂದ್ರೆ ಅವರು ಆ ಹುಡುಗರನ್ನ ಗುಂಪು ಕಟ್ಟಿಕೊಂಡು ಆಗಾಗೆ ಮಾತಾಡುತ್ತಿದ್ದುದನ್ನು ನಾನೇ ನೋಡಿದ್ದೀನಿ.

ಇನ್ನೂ ಒಂದು ದಿನ , ಡಾಕ್ಟರಮ್ಮನೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗಂಡನ್ನ ಹೋಗಿ ಸೇರಿಕೊಂಡರಂತೆ. ಅದಕ್ಕೂ ಚೂಡನಾಥಯ್ಯರ್‌ರವರ ವ್ಯಂಗ್ಯ ಇಲ್ಲದಿಲ್ಲ: " ಪಾಪ ಎಷ್ಟು ದಿನಾಂತ ತಾನೆ ಗಂಡನ್ನ ಬಿಟ್ಟಿರ್‍ತಾಳೆ ಹೇಳಿ.." ಆಕೆ ಬೆಂಗಳೂರು ಬಿಡುವುದಕ್ಕೆ ಚೂಡನಾಥಯ್ಯರ್ ಕಲ್ಪಿಸುವ ಕಾರಣ ಇಷ್ಟು. ಮೇಲ್ನೋಟಕ್ಕೆ ಅದಷ್ಟೆ - ಅದರಷ್ಟೆ ನಿಜ ಅನ್ನಿಸುವುದು ಬೇರೊಂದಿಲ್ಲ. ಒಳಕ್ಕೆ ಇಳಿದರೆ ಆ ಮಲಯಾಳಿ ಹೆಂಗಸು ಎಷ್ಟು ಪಾಡು ಪಟ್ಟಿದ್ದಳೋ....

ನಾನು ಕಿಟಕೀನ ಮತ್ತೆ ಪುನಃ ಬಹಳ ದಿನಗಳು ತೆಗೆಯಲೇ ಇಲ್ಲ. ಅಸಲಿಗೆ ರೂಮೆ ಸೇರುತ್ತಿರಲಿಲ್ಲ. ಬೆಳೆಗ್ಗೆ ಹೋದರೆ ಇನ್ಯಾವಾಗಲೋ ಬಂದು ರೂಮು ಸೇರಿಕೊಳ್ಳುತ್ತಿದ್ದೆ. ಇದ್ದಷ್ಟು ಗಳಿಗೆಯೂ ಆ ರೂಮು ನನ್ನ ಕೊರಳು ಹಿಚುಕುತ್ತಿದ್ದ ಅನುಭವ, ಥೂ ಅಂತ ಉಗೀಬೇಕೂನ್ನಿಸುತ್ತೆ.

ಎಷ್ಟೇ ಅಸಹ್ಯವಾದರೂ ಕಿಟಕೀನ ಇತ್ತಿಚೆಗೆ ತೆಗೆದೇ ಇರ್‍ತೀನಿ. ಅದೂ ಇಲ್ಲದಿದ್ದರೆ ಒಳಗಿನ ಧಗೆಗೆ ಸುಟ್ಟು ಹೋದೇನೋ ಎಂಬ ಭಯ. ಆಗೊಮ್ಮೆ ಈಗೊಮ್ಮೆ ತಂಪು ಗಾಳಿಯಾದರೂ ಬೀಸುತ್ತಿರಲಿ ಅನ್ನೋ ಆಸೆ.

ಆಗೊಮ್ಮೆ ಈಗೊಮ್ಮೆ ಮನ್ನಿ ಕಾಣಿಸ್ತಾ ಇರ್‍ತಾಳೆ. ಆದರೆ ಅವಳು ಹುಡುಗರ ಜೊತೆ ಮಾತಾಡಿದ್ದು ಕಾಣಿಸಲೇ ಇಲ್ಲ. ಆ ಹುಡುಗರೂ ಅಷ್ಟೆ. ಆಕೇನ ನೋಡಿದೊಡನೆ ಓಡಿ ಹೋಗಿ ಕಾಲುಗಳನ್ನ ತಬ್ಬಿಕೊಂಡು ಮನ್ನಿ ಮನ್ನೀಂತ ಲಲ್ಲೆಗರೆಯೋಲ್ಲ. ಇನ್ನೂ ಸಣ್ಣಗಾಗಿದ್ದಾಳೆ. ಆಗಾಗ ತನ್ನ ಮನೇಲಿ ಯಾರೂ ಇಲ್ಲದಾಗ ಹುಚ್ಚು ಹಿಡಿದ ಹಾಗೆ ಕೈಯಲ್ಲಿ ಯಾವುದೋ ಪುಸ್ತಕ ಹಿಡಿದುಕೊಂಡು ಹಾಲ್‌ನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತ ಜೋರಾಗಿ ಒದುತ್ತಾ ಇರುತ್ತಾಳೆ. ಬಹುಶಃ ` ಲರ್ನ್ ಕನ್ನಡ ಬಯ್ ಯುವರ್ ಸೆಲ್ಫ್ ' ಇರಬೇಕು. ಮದ್ರಾಸ್ ಯೂನಿವರ್ಸಿಟಿಯ ಎಂ.ಎ ಇಂಗ್ಲೀಶ್ ಮಾಡಿದ್ದಾಳೇನ್ನೊದರ ಲಕ್ಷಣ ಈಗಂತೂ ಕೊಂಚವೂ ಇಲ್ಲ. ಬಂದ ಹೊಸತರಲ್ಲಿ ಕಪ್ಪಗಿದ್ದರೂ ಎಷ್ಟೊಂದು ಲಕ್ಷಣವಾಗಿದ್ದಳು...

ಒಂದೆರಡು ದಿನ ನಾನು ಊರಲ್ಲಿರಲಿಲ್ಲ. ಪತ್ರಿಕೇಲಿ ಬಂದ ಸುದ್ಧಿಯನ್ನು ನಿರ್ಭಾವುಕನಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.:

ಮೈಸೂರು,ಏ.೨೪- ಶಂಕರಪುರಂ ಬಡಾವಣೆಯ ವಠಾರವೊಂದರಲ್ಲಿ ಗೃಹಿಣಿಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ತಾನೆ ಮದುವೆಯಾಗಿದ್ದ ಆಕೆಗೆ ಆಕೆಯ ಅತ್ತೆ, ಮಾವ, ಗಂಡ ವರದಕ್ಷಿಣೆಯ ತಗಾದೆ ತೆಗೆದು ಅವಳನ್ನು ಪ್ರತಿನಿತ್ಯ ಹಿಂಸಿಸಿದ್ದಾರೆಂದು ಕೋಲಾರದಲ್ಲಿರುವ ಆಕೆಯ ತಂದೆ ಹಾಗು ಮದ್ರಾಸಿನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿರುವ ಆಕೆಯ ಅಣ್ಣ ಆರೋಪಿಸಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ನಾನು ಪುನಃ ಎಂದಿಗೂ ಆ ಕಿಟಕೀನ ತೆಗೀಲೆ ಇಲ್ಲ. ಮನ್ನಿ ಎಂದರೆ ತಮಿಳಿನಲ್ಲಿ ` ಅತ್ತಿಗೆ' ಎಂದರ್ಥ ಎಂಬುದನ್ನು ಇತ್ತೀಚೆಗೆ ತಾನೆ ತಿಳಿದುಕೊಂಡೆ. ಹಾಗೆಯೇ ಆಕೆಯ ಹೆಸರನ್ನೂ ಪತ್ರಿಕೆಗಳ ವರದಿಗಳ ಮುಖಾಂತರವೇ ತಿಳಿದುಕೊಂಡದ್ದು. ಬಹಳ ಮುದ್ದಾದ ಅಂದವಾದ ಹೆಸರು- ಇಳಂಗೊಡಿ. ಇಳಂಗೊಡಿ ಎಂದರೆ ಎಳೆಯ ಬಳ್ಳಿಯಂತೆ.

ನಾನು ಕಿಟಕಿ ತೆಗೀಲೆ ಇಲ್ಲ ಅಂತೆ ಹೇಳಿದೆನಲ್ಲವೆ? ಯಾಕೆಂದರೆ ನಾನು ಒಂದಾನೊಮ್ಮೆ ಗಾಢವಾಗಿ ಪ್ರೀತಿಸಿದ್ದ ಆ ರೂಮು ಬಿಟ್ಟು ಬಹಳ ದೂರದಲ್ಲಿ ಬೇರೊಂದು ರೂಮು ಹಿಡಿದಿದ್ದೀನಿ.!

ಈ ರೂಮಲ್ಲಿ ಕಿಟಕಿಗಳೆ ಇಲ್ಲ. ಗವಾಕ್ಷಿಯಂತದೇ ಎಂಥದೋ ಒಂದು ಇದೆ, ಬಹಳ ಎತ್ತರದಲ್ಲಿರೋ ಅದನ್ನು ನಾನು ತೆಗೆಯೋ ಸಂದರ್ಭವೇ ಇಲ್ಲ.

ಈ ರೂಮಂತೂ ನನ್ನ ಕೊರಳನ್ನ ಹಿಚುಕುತ್ತಾ ಇದೆ. ನಾನು ಇಲ್ಲೇ ಸತ್ತೋಗ್ತೀನೇನೋ ಅಂತನ್ನಿಸ್ತಿದೆ.
ಮನ್ನಿ ಆತಹತ್ಯೆಗೆ ಅವರಪ್ಪ ಹೇಳಿದ ಹಾಗೆ ಬರೀ ವರದಕ್ಷಿಣೆ ಬಾಕಿ ಮಾತ್ರ ಕಾರಣವೋ ಅಥವ ಬೇರಿನ್ನೇನಾದರು ಇತ್ತೆ? ನನಗಂತೂ ಸ್ಪಷ್ಟವಾಗಿಲ್ಲ. ಅದರ ಬಗೆಗಿನ ಪ್ರಶ್ನೆಗಳೂ ಈ ರೂಮಿನೊಂದಿಗೆ ಕೂಡಿಕೊಂಡು ಕೊರಳನ್ನು ಹಿಚುಕುತ್ತಲೇ ಇದೆ.

        *****

ಸಂಗೀತ ಸಂಜೆ

- ಮಂಜುನಾಥ ವಿ ಎಂ

ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ,
ಅವನು ಬೆಚ್ಚಗೆ ಅವಳನ್ನೊದ್ದುಕೊಂಡು.

ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ
ಹೊರಗಿನ ಗಾಳಿ ಅಲೆ‌ಅಲೆಯಾಗಿ ಅಪ್ಪಳಿಸಿದೆ.
ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ಪ್ರೇಮಪಾಠ
ಅವನ ತೋಳ್ಬಂಧನದ ವಶವಾಗಿದೆ.
ಲಾಟೀನಿನ ಬೆಳಕು ಕೋಣೆಗೆ ಕವಿದ ಮಬ್ಬನ್ನು ಸೀಳಿಹಾಕುತ್ತಿದ್ದಂತೆ,
ತನ್ನ ಜಾನಪದ ವಾದ್ಯದ ಕೀಲಿಗಳನ್ನು ಸರಿಹೊಂದಿಸುವ ದುಶ್ಚಟದಲಿ
ಅವಳು ಬೀಳುತ್ತಾಳೆ.

ಹೊಲದಿನ್ನೆಗಳಿಗೆ ಗೇಯಲೋಗಿದ್ದವರೆಲ್ಲರೂ ತಮ್ಮತಮ್ಮ ಮನೆಗಳಿಗೆ
ಹಿಂದಿರುಗುತ್ತಿದ್ದಂತೆ-ಕೀಲಿ ತಿರುಗಿದ ಹೀನಸ್ವರ ಅವರೆಲ್ಲರನ್ನೂ
ತಡೆದು ನಿಲ್ಲಿಸುವುದು. ಅದು ಸತ್ತ ನಂತರ ಏರ್ಪಾಡಾಗುವ ಶ್ರದ್ಧಾಂಜಲಿಯ
ಸಂಗೀತ ಸ್ವರದಂತೆಯೂ, ಸಾಯುವ ಮೊದಲಿನ ನೆನಪುಗಳಂತೆಯೂ
ಕೇಳಿಸಿದೆ. ಘೋರಗಾಳಿ ಅವನು  ಉರಿಸಿದ  ಸಣ್ಣ ಪ್ರಮಣದ ಬೆಂಕಿಯನ್ನು,
ಈಗಾಗಲೇ ಉರಿಯಗೊಟ್ಟ ಅವಳ ಮನಸ್ಸಿನ ಜ್ವಾಲೆಗಳಲ್ಲಿ
ವಿಶ್ರಾಂತಿ ಬಯಸಹೋಗಿದೆ.

ಕೀಲಿ ಬಿಗಿಯಾಗಿ ಸುಶ್ರಾವ್ಯ ಸ್ವರ ಎಬ್ಬಿಸಿ,
ಅಲ್ಲಿನ ಎಲ್ಲವನ್ನೂ ದಾಟಿಕೊಂಡು ಹೂಗಳಿರುವ ಕಪ್ಪುಗೋಡೆಗಳಲಿ
ಅಪರಾಧವನ್ನು ಬಿಟ್ಟು, ನಿಷ್ಟಾವಂತ ಪ್ರೇಮವನ್ನು ಕದ್ದೊಯ್ದಿದೆ.
        *****

ಝೇಂಕಾರ ಪಲ್ಲವಿ

- ಪರಿಮಳಾರಾವ್ ಜಿ ಆರ್‍

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ
ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ
ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ.

ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ
ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ
ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತಾರ.

ಭೂಮಿಯ ಬಿರುಕಲಿ, ನೋವಿನ ನಂಜಲಿ
ಕಣ್ಣಿನ ಕುರುಡಲಿ, ಮಣ್ಣಿನ ಮನದಲಿ
ಬಾ!  ಬುದ್ಧನೆ ಕಾರುಣ್ಯಕೆ ಕಾಮಧೇನುವಾಗಿ.

ಬಿದಿರಿನ ಕೊಳಲಲಿ, ಉಸಿರಿನ ಹಸಿರಲಿ
ಪದರಿನ ಒಳ ಆಳದಿ, ಗರಿಗೆದರಿದ ಎದೆಯಲಿ
ಬುದ್ಧ!  ನಿನ್ನ ಕಠಿಣ ಉಯ್ಯಾಲೆ ತೂಗುತಿದೆ.

ಮನ ಜೋಕಾಲಿ ಯಾಡುತ್ತಿದೆ
ಸಿದ್ಧ ನಿನ್ನ ಪ್ರಣವ ಲೀಲೆಯಲಿ
ಹೃದಯ ವಿಹಾರದ, ಭಿಕ್ಷು ಸುಳಿದಾಟದಲಿ.

ಬದ್ಧತ್ವದ ಒಲವಲಿ ಅದ್ದುತ ಲೇಖನಿ
ಬರೆದಿರುವೆ ಝೆನ್ ಝೇಂಕಾರವಾಗಿ
ಕಾಡು ಹೂ ಹೃದಯದ ಸತ್ಯ ಸಾಕಾರವಾಗಿ

ಬೇಡೆನೆಗೆ ರಂಗಿನ ಕಮಲದ ಶತದಳವು
ಮನಸ್ಥಿತವಾಗಿದೆ ಶುಭ್ರ ಶ್ವೇತ ಕಮಲದಲಿ
ಸಿದ್ಧ ಬುದ್ಧನ ವಿಮಲ ಮಂದಸ್ಮಿತದಲಿ.

ಮೊಗ್ಗಿನ ಮನದಲಿ, ಬುದ್ಧನ ಪ್ರತಿಮೆ
ಅರಳಿದ ಹೂವಲಿ, ಬುದ್ಧತ್ವದ ಪ್ರಜ್ಞೆ
ಫಲದಲಿರಿಸಿ ಭೋಧಿಸತ್ವದ ಸವಿ ರುಚಿ
ಒಲವಲಿರಿಸಿ ಬೌದ್ಧ ತತ್ವದ ಸವಿ ಶುಚಿ.
ಹೊಮ್ಮಿಸಿದೆ ಝೆನ್ ಝೇಂಕಾರದ ರುಚಿ.

        *****

ಕೀಲಿಕರಣ: ಕಿಶೋರ್‍ ಚಂದ್ರ

ಮರಣಕ್ಕೆ ಒಳಗಾಗೊ ನರಕುರಿಗಳೆ

- ಶಿಶುನಾಳ ಶರೀಫ್

ಮರಣಕ್ಕೆ ಒಳಗಾಗೊ ನರಕುರಿಗಳೆ
ಅರುವಿರಲಿ ಸಾರವೆ ಕೇಳಿರಿ                                    ||ಪ||

ಮರೆಯದೆ ಶ್ರೀಗುರುಮಂತ್ರ  ಬರದೋದಿ ಜಪಿಸುತ
ಸ್ಮರಣೆದಪ್ಪಲಾಗದಲೆ  ತಕ್ಕೊಳ್ಳಿರಿ                            ||೧||

ದೇಹದೊಳಗೆ ಇದ್ದು ಮಾಯೆ ನೋವಿಗೆ ಬಿದ್ದು
ಸಾವಿಗಂಜುತ ಬಾಯಿಬಿಡಬೇಡಿರಿ ಆಯತೀರದ ಮುನ್ನ
ಜೀವಪರಮರೊಂದು  ಠಾವು ಕೂಡಿಸಿ ದೇವರೊಡಗೂಡಿ    ||೨||

ಹಸು ತೃಷೆ ವಿಷಯ ವ್ಯಸನ ಮಾಡುವ ಮನದ
ಕಸುರು ಕಳೆದು ಕಾಮದೂಡಿರಿ                               ||೩||

ವಸುಧಯೊಳು  ಶಿಶುನಾಳಧೀಶನೇ ಗತಿಯೊಂದು
ತಾಮಸವಳಿದು  ಹಸನಾಗಿ ಹಾಡಿರಿ                        ||೪||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಎದೆ ಹಾಲು ನೀಡಿರಮ್ಮ


- ಡಾ || ರಾಜಪ್ಪ ದಳವಾಯಿ
(ತೊಗಲುಬೊಂಬೆಯಾಟ)

ನೀಡಿರಮ್ಮ ಎದೆಯ ಹಾಲ
ನಿಮ್ಮ ಕೂಸಿನ ಜೀವ ಪಾಲು
ನೀಡಿ ಅಕ್ಕ ನೀಡಿ ತಂಗಿ
ನೀಡಿ ತಾಯಿ ಎದೆಯ ಹಾಲು ||

ಜೀವದಮೃತ ಎದೆಯ ಹಾಲು
ಸಾಟಿಯೆಲ್ಲಿದೆ ಮಗುವ ಪಾಲು
ಜೀವ ಜೀವವ ಧಾರೆ ಎರೆದು
ಒಕ್ಕಳ ಬಳ್ಳಿ ಕಿತ್ತು ಬಂದಿದೆ ||

ನಿಮ್ಮ ಬದುಕಿನ ಕುಡಿಯನು
ನರಳಿಸದಿರಿ ಕೊಡದೆ ಹಾಲನು
ಕಂದ ಅಳುತಿದೆ ಕೇಳು ತಾಯಿ
ನಿನ್ನ ಹಾಲೆ ಜೀವ ಕಾಯಿ ||

ಚೌಕಾಸಿ ಹಾಲಿಗೆ ಬೇಡ ತಂಗಿ
ರೂಪ ಕೆಟ್ಟಿತೆಂಬ ಭಾವ ತಗ್ಗಿ
ತಾಯಿ ತಾಯಿ ತಾಯಿ ಆಗು
ಜೀವ ನೀಡು ಮಗುವಿಗಾಗಿ ||

ಎದೆ ಹಾಲೆ ಔಷಧಿ ಕೇಳಮ್ಮ
ನಿನ್ನ ಮಗುವಿಗೆ ಡಾಕ್ಟರ್‍ಯಾಕಮ್ಮ
ನಿನ್ನೆದೆ ಹಾಲೆ ಪೂರ್ಣ ಆಹಾರ
ನಿನ್ನ ವಂಶದ ಬೆಳೆಗೆ ಆಧಾರ ||

ಹಾಡು ೧ :    ಶೋಕಿ ಯಾಕವ್ವ ತಾಯಿ ನಿನಗೆ
        ಕಂದ ಬೇಡವೆ ನಿನ್ನ ಮನೆಗೆ ||

        ಎದೆ ಹಾಲ ನೀಡದೆ ನೀನು
        ಮಗುವಿಗಾಗಿ ಮಾಡಿದ್ದೇನು
        ಜೀವ ಕುಡಿ ಬೆಳೆಯದಂಗೆ
        ತುತ್ತಾ ಮಣ್ಣಿಗಾದಂಗೆ ||

ಹಾಡು ೨ :     ಹಾಲಿಗ್ಯಾವ ಬಣ್ಣ ಅಣ್ಣಾ
        ಬೆಳ್ಳಗಿವುದಲ್ಲಾ ಸುಣ್ಣಾ ||

        ಹಾಲು ಯಾವುದಾದರೇನು
        ತಾಯ ಹಾಲಿಗೆ ಸಮವೇನು
        ಹಾಲು ನೀರು ಸೇರಿದರೆ
        ಮನುಷ ಮಾಯವಾಗಿರೆ ||

ಹಾಡು ೩ :     ತಾಯ ಎದೆಹಾಲು ಬತ್ತಿದರೆ
        ಮಗುವಿನ ಗತಿಯೇನು ಜನರೆ ||

        ಹಣವಂತರ ಮನೆಯಲ್ಲಾದರೆ
        ಬಡವರ ಎದೆಹಾಲ ಕೊಳ್ಳುತಾರೆ
        ಬಡ ಹೆಣ್ಣು ಮಗಳಾದರೆ
        ಮಗುವಿಗೇನು ಕುಡಿಸುತಾರೆ ||

        ಕೇಳಿರಣ್ಣ ಕೇಳಿರೊ ಕೇಳಿರಿ
        ಎದೆಹಾಲು ಕೊಳ್ಳುವುದಲ್ಲ
        ಎದೆಹಾಲು ಮಾರುವುದಲ್ಲ
        ನೆನಪಿರಲಿ ಮಾತು ನಿಮ್ಮಲ್ಲಿ ||

ಹಾಡು ೪ :     ಕೇಳಿರಿ ಜನರೆ ಕೇಳಿರಿ
        ತಾಯ್ತನದ ಶಾಯರಿ ||

        ತಾಯಿ ಮಗುವಿನ ಜೀವ
        ತಿಳಿ ಎದೆಹಾಲಿನ ಮಹತ್ವ
        ಜೀವ ಉಳಿಸುವ ಬಗೆಯು
        ಪಾಲು ಹಾಲ ಮಹಿಮೆಯು ||

        *****

ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ

ಹುಟ್ಟಿದ್ದು ಹೊಲಿಮನಿ

- ಶಿಶುನಾಳ ಶರೀಫ್

ಹುಟ್ಟಿದ್ದು  ಹೊಲಿಮನಿ
ಬಿಟ್ಹೊಂಟ್ಯೋ ಕಾಯ್ಮನಿ
ಎಷ್ಟಿದ್ದರೇನು ಖಾಲಿಮನಿ             ||ಪ||

ವಸ್ತಿ ಇರುವ ಮನಿ
ಗಸ್ತಿ ಇರುವ ಮನಿ
ಶಿಸ್ತಿಲೆ ಕಾಣೂವ ಶಿವನ ಮನಿ       ||೧||

ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ     ||೨||

ಒಂಭತ್ತು ಬಾಗಿಲ ದಾಟಿ
ಹೊರಟು ಹೋಗುವಾಗ
ಗಂಟಿ  ಬಾರಿಸಿದಂತೆ ಗಾಳಿ ಮನಿ  ||೩||

ವಸುಧಿಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ  ಮನಿ  ||೪||

        *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ