ಪ್ರೇಯಸಿ


-ರವಿ ಕೋಟಾರಗಸ್ತಿ

ಮಲೆನಾಡ ಸಿರಿಯಲಿ
ಹಸಿರಾದ ಧರೆಯು
ಆ ಕೆರೆಯ ದಡದಲಿ
ಕನಸಿನಾಳದಲಿ-ನಾನಿರುವಾಗ

ನಿನ್ನಾ.. ಸವಿ ನೆನಪು
ಕೆದಕಿ... ಕೆದಕಿ ಬರುತಿರಲು
ತನು-ಮನ ದಾಹದಿ
ನಿನ್ನ ಸಂಗ ಬಯಸಿತು

ಜಿನಗು ಮಳೆಯಲಿ...
ತಂಪಾದ ಸುಳಿ-ಗಾಳಿಯಲಿ
ಮಾಗಿಯ ಚಳಿ ಮುತ್ತುತ...
ನಿನ್ನ ಸೇರುವಾಸೆ ಮೂಡಿತು

ನಮ್ಮ ಪ್ರೀತಿ-ಪ್ರೇಮ
ಅಮರ ಎಂದೆಂದೂ...
ಹೇಳುವಾ... ಸಾರಿ... ಜಗಕ್ಕಿಂದು

         ***

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೨೧

- ಪಟ್ಟಾಭಿ ಎ ಕೆ
ಆತ: ಸಾರ್, ಇಲ್ಲೇ ಹತ್ತಿರದಲ್ಲಿ ‘ನಮ್ಮೂರು ಹೊಟೆಲ್’ ಇದೆಯಂತೆ.  ಎಲ್ಲಿದೆ ಅಂತ ಕೊಂಚ ಹೇಳ್ತೀರಾ?
ಈತ: ನಿಮ್ಮೂರು ಹೊಟೆಲ್ ಇಲ್ಲಿ ಹೇಗೆ ಇರಲು ಸಾಧ್ಯ? ಅದು ನಿಮ್ಮೂರಲ್ಲೇ ಇರುತ್ತದೆ.
ಆತ: ‘ನಮ್ಮೂರು ಹೊಟೆಲ್’ ಇಲ್ಲೇ ಹತ್ತಿರದಲ್ಲಿ ಇದೆ, ಯಾರನ್ನೂ ವಿಚಾರಿಸಿದರೂ ಹೇಳ್ತಾರಂತೆ.
ಈತ: ನಿಮಗೆಲ್ಲೋ ಭ್ರಾಂತು. ಯಾರ್ಯಾರ ಮಾತನ್ನೋ ಕಟ್ಟಿಕೊಂಡು ನಿಮ್ಮೂರ ಹೊಟೆಲ್ ನಮ್ಮೂರಲ್ಲಿ ಹುಡುಕಬೇಡಿ.
****

ಹ್ಯಾಂಗ ಬಳಕಿ ಮಾಡಬೇಕಣ್ಣಾ

- ಶಿಶುನಾಳ ಶರೀಫ್

ಹ್ಯಾಂಗ ಬಳಕಿ ಮಾಡಬೇಕಣ್ಣಾ
ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ     ||ಪ||

ಹ್ಯಾಂಗ ಬಳಕಿ ಮಾಡಬೇಕು
ಹಂಗು ಹರಿದು ನಿಂತ ಮೇಲೆ
ಬಂಗಿ  ತಂಬಾಕ ಸೇದುವ ಮರುಳ
ಮಂಗ್ಯಾಗಂಜಿದ ಮೇಲೆ                     ||೧||

ಪಡೆದ ತಂದೆ ತಾಯಿ ಯಾರಣ್ಣಾ
ದುಡಿದುಡಿದು ಸತ್ತರೆ
ಮಡದಿ ಮಕ್ಕಳ  ಪರವೆ ಇಲ್ಲಣ್ಣಾ
ಮಡದಿ ಮಕ್ಕಳ  ಪರವೆ ಇಲ್ಲ
ಒಡೆದು ಹೇಳುವ ಮಾತು ಅಲ್ಲ
ಬಿಡದೆ ಶರೆಯ ಶೇಂದಿ ತಂದು  
ಸಿಡದ ಬೀಳುವ ಹಾಂಗ ಕುಡಿದು ಬಳಿಕ         ||೨||

ಪುಂಡರಾಗಿ  ತಿರುಗುತಾರಣ್ಣಾ
ಬಂಡಾಟ  ಕೇಳಿನ್ನ ಹೆಂಡ ಹೇಸಿಕಿ ನಾಚಿಕಿಲ್ಲಣ್ಣಾ
 ಹೆಂಡ ಹೇಸಿಕಿ ನಾಚಿಕಿಲ್ಲಾ
ಬಂಡ ಬಂಡರು ಕೂಡಿಕೊಂಡು
ಗಂಡರಿಲ್ಲದ ಮನಿಯೊಳಗೆ
ರಂಡಿಗೂಳು ಉಂಡಮ್ಯಾಲೆ                    ||೩||

ದೇಶದೊಳಗೆ ಹೇಸಿ ಕಾಣಣ್ಣಾ  ತಾ
ಸೋಸಿ ನೋಡಲು ಘಾಸೆಪಾಸೆಗಳಾಗತಾವಣ್ಣಾ
ಘಾಸೆಪಾಸೆಗಳಾಗತಾವ
ಮೋಸ ಮೊದಲಾದಷ್ಟು ಕೇಳುವ
ವಾಸು  ಶಿಶುನಾಳಧೀಶನಲ್ಲೆ
ಘಾಸಿಯಾಗ  ಪಾರನಾಗದೆ                     ||೪||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೨೦

- ಪಟ್ಟಾಭಿ ಎ ಕೆ
ವೈದ್ಯನಿಗೂ ವಕೀಲನಿಗೂ ಏನು ವ್ಯತ್ಯಾಸ? ಹೇಳು ನೋಡೋಣ, ತನ್ನ ಸ್ನೇಹಿತನನ್ನು ಕೇಳಿದ.
ಸ್ನೇಹಿತ: ವಕೀಲ ಕೇಸು ಸೋತರೆ ಕಕ್ಷಿದಾರ ಆರಡಿ ಎತ್ತರದಿಂದ ನೇಣುಹಾಕಿಕೊಂಡು ಸಾಯ್ತಾನೆ.  ಆದರೆ ವೈದ್ಯನ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಆರಡಿ ಗುಂಡಿ ತೋಡಿ ರೋಗಿಯನ್ನು ಹೂಳಬೇಕಾಗುತ್ತದೆ.
***

ಅಂತರಂಗ

- ಪರಿಮಳಾ ರಾವ್ ಜಿ ಆರ್‍
ಹನಿಯ
ಅಂತರಂಗ
ನುಡಿಸುತಿದೆ
ಕಡಲ
ಜಲತರಂಗ
****

ಅಮೃತ ಹಸ್ತ

- ಅಬ್ಬಾಸ್ ಮೇಲಿನಮನಿ

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು.  ಆಗೆಲ್ಲಾ ಅತ್ಯಂತ ಉತ್ಸಾಹದಿಂದ ಬೀಗಿಕೊಂಡಿದ್ದ ಅಡಿಗಲ್ಲುಗಳು ದಿನಗಳೆದಂತೆ ಅನಾಥ ಪ್ರಜ್ಞೆಯಿಂದ ನರಳತೊಡಗಿದ್ದವು.

ಋತುಮಾನದ ವೈಪರೀತ್ಯಗಳಿಗೆ ಸಿಕ್ಕು ಕೆಲವು ಅಡಿಗಲ್ಲಗಳು ಸೊರಗಿದ್ದರೆ ಇನ್ನೂ ಕೆಲವು ವಿಧ್ವಂಸಕರ ದಾಳಿಗೆ ಸಿಕ್ಕು ವಿರೂಪಗೊಂಡಿದ್ದವು.  ಅವುಗಳಿಗೆ ಆಧಾರವಾಗಿದ್ದ ಗೋಡೆಗಳು ಕುಸಿದು ಹೋಗಿದ್ದವು.  ಅಸ್ತಿತ್ವಕ್ಕಾಗಿ ಚಡಪಡಿಸುತ್ತ ಅವಶೇಷಗಳಂತೆ ನಿಂತಿರುವ ಅಡಿಗಲ್ಲುಗಳಿಗೆ ದನಕರುಗಳು ಮೈತಿಕ್ಕಿ ತಮ್ಮ ತುರಿಕೆಯನ್ನು ಶಮನಗೊಳಿಸಿಕೊಳ್ಳುತ್ತಿದ್ದವು.  ನಾಯಿಗಳು ಆರಾಮಾಗಿ ಬಂದು ಉಚ್ಚೆ ಹೊಯ್ದರೆ, ಕಾಗೆಗಳು ಮಲ ವಿಸರ್ಜಿಸುತ್ತಿದ್ದವು.

ಅದನ್ನೆಲ್ಲವನ್ನು ಮೌನವಾಗಿ ಅನುಭವಿಸುತ್ತಿರುವ ಅಡಿಗಲ್ಲುಗಳನ್ನು ಕಂಡು ಭೂಮಿ ಒಂದಿನ "ಅಡಿಗಲ್ಲುಗಳೇ, ಏನಿದು ನಿಮ್ಮ ಅವಸ್ಥೆ?  ನಿಮ್ಮ ಸ್ಥಿತಿ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ" ಎಂದು ಮರುಕ ವ್ಯಕ್ತಪಡಿಸಿತು.

"ನಮ್ಮ ಹಣೆಯ ಬರಹ ಇದು.  ಎನು ಮಾಡುವುದು?"  ಅಡಿಗಲ್ಲು ತಹತಹಿಸಿದ್ದವು.

"ಬಹಳ ವರ್ಷಗಳ ಹಿಂದೆಯೇ ನೀವು ಭವ್ಯ ಕಟ್ಟಡಗಳ ಭಿತ್ತಿಗಳಲ್ಲಿ ಕಂಗೊಳಿಸಬೇಕಾಗಿತ್ತು."

"ದೇವರು ನಮಗೆ ಅಂಥ ಭಾಗ್ಯ ನೀಡಲಿಲ್ಲ."

"ನೀವು ಶಾಸನ ಪ್ರಭುಗಳ ಅಮೃತಹಸ್ತಗಳಿಂದ ಪ್ರತಿಪ್ಠಾಪನೆಗೊಂಡಿದ್ದೀರಿ" ಅಭಿಮಾನ ವ್ಯಕ್ತಪಡಿಸಿತು ಭೂಮಿ.

"ಹೌದು, ನಾವು ಶಾಪಗ್ರಸ್ಥರಾಗಿ ಇಲ್ಲಿ ಬಿದ್ದಿರುವುದಕ್ಕೆ ರಾಜಕಾರಣಿಗಳಮೃತಹಸ್ತಗಳೇ ಕಾರಣ" ನಿಟ್ಟುಸಿರಿದವು ಅಡಿಗಲ್ಲು.

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೯

- ಪಟ್ಟಾಭಿ ಎ ಕೆ
ಹುಲಿಯೊಂದು ಬೋನಿನಲ್ಲಿ ಸಿಕ್ಕಿಕೊಂಡು ಎಲ್ಲರ ಮುಂದೆ ಗುರುಗುಟ್ಟುತ್ತಾ ಆರ್ಭಟಿಸುತ್ತಿತ್ತು.  ಮಲ್ಲ ಬಂದು ಬೋನಿನ ಎದುರು ನಿಂತು ಗಮನಿಸಿದ. ಅದರ ಆರ್ಭಟ ಕಂಡು ಹೇಳಿದ. "ನಿನಗಿಂತ ಹೆಚ್ಚು ಆರ್ಭಟ ನನಗೆ ಬರುತ್ತಿತ್ತು. ಆದರೆ ಏನು ಮಾಡಲಿ? ಈಗ ನನಗೆ ಮದುವೆ ಆಗಿದೆ!"
***

ಮರುಳೆ ಮರೆತಿರಬೇಡ

- ಶಿಶುನಾಳ ಶರೀಫ್

ಮರುಳೆ ಮರೆತಿರಬೇಡ  ಗುರುವಿನ
ಮಾಡೋ ಶ್ರೀ ಶಿವಭಜನ  ನೇಮದಿ
ಮಾಡೋ ಶ್ರೀ ಶಿವಭಜನ              ||ಪ||

ಅಳಿವುದು ಕಾಯ ಉಳಿವುದು ಕೀರ್ತಿ
ತಿಳಿದು ನೋಡೆಲೋ  ರೀತಿ
ಬಿಡು ಅವಿಚಾರ ಮಾಡೋ  ವಿಚಾರ
ಸ್ಥಿರವಲ್ಲೋ  ಈ ಸಂಸಾರ  ಮರುಳೇ
ಮಾಡೋ ಶ್ರೀ ಶಿವಭಜನ              ||೧||

ಎಲ್ಲಿಯ ತನಕ ಹಂಬಲಿಸುವಿ  ನೀ
ನಂದೇಶನ  ಮರೆತು
ಕಂದ ನಿನಗೊಂದಿಲ್ಲ  ಈ ಭವದಿ
ಸುಂದರ ಗುರುವಿನ ಪಾದಕ ಹೊಂದಿ
ಮಾಡೋ ಶ್ರೀ ಶಿವಭಜನ            ||೨||

ಅಡಿಗಡಿಗೆ ಶಿವನಾಮವ  ಸ್ಮರಿಸೋ
ದೃಢಭಕ್ತಿಯ  ನಿಲ್ಲಿಸೋ
ಶಿಶುನಾಳಧೀಶ  ಈಶ ಬಸವೇಶನ
ಮಾಡೋ ಶ್ರೀ ಶಿವಭಜನ              ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೮

- ಪಟ್ಟಾಭಿ ಎ ಕೆ
ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ.
ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ?  ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ.  ಅಂತಹುದ್ದರಲ್ಲಿ ಸೀತೆ ಮೂರು ಜನ ಅತ್ತೆಯರೊಂದಿಗೆ ಹೇಗೆ ಬಾಳ್ಯಾಳು ? ಅದಕ್ಕೇ ಪತಿಯ ಜೊತೆ ವನವಾಸಕ್ಕೆ ತೆರಳಿದಳು.
***

ಬಲುನಾತಾ ಬಲುನಾತಾ

- ಶಿಶುನಾಳ ಶರೀಫ್

ಬಲುನಾತಾ  ಬಲುನಾತಾ  ಮನ
ಮಲಿನ ತೊಳಿಯದಿರೆ ಹೊಲಸಾಯ್ತವ್ವಾ   ನಾತಾ        ||ಪ||

ನಾಯಿ ಸತ್ತು ಕೊಳೆತರೆ  ನಾತಲ್ಲಾ
ಕಾಯಿ ಕೆಟ್ಟು  ಹುಳಿತರೆ  ನಾತಲ್ಲಾ
ಬಾಯಿ ಕಚ್ಚಿ  ಕಂಡ ಹೆಂಡ ತಿಂಬುವಾ
ಪಾಯಗಟ್ಟಿ  ಮನುಜರು ನಾತಲ್ಲಾ             ||೧||

ಉಂಡುಬ್ಬಳಿಸುವದು  ನಾತಲ್ಲಾ
ಕುಂಡ್ಯಾಗ ಬರುವದು ಬಲು  ನಾತಲ್ಲಾ
ಕಂಡ ಕಂಡ ಜನ ಕಾಲ್ಮಡಿದರೆ
ಮಂಡಲ ಮಧ್ಯದೊಳದು  ನಾತಲ್ಲಾ              ||೨||

ಬಂಗಿ ಸೇದಿದರೆ ಬಾಯ್ನಾತಲ್ಲಾ
ನುಂಗಿ ಕಾರಿಕೊಂಡುದು  ನಾತಲ್ಲಾ
ಮಂಗಳಾತ್ಮಕ  ಗುರುಗೋವಿಂದನ
ಸಂಗ  ಮಾಡದಿರುವದು  ನಾತವ್ವಾ            ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೭

- ಪಟ್ಟಾಭಿ ಎ ಕೆ
ಗುರುಗಳು (ತರಗತಿಯಲ್ಲಿ): "ಶ್ಯಾಮಾ ಮಧ್ಯಾನ್ನದ ಟೈಂ ಟೇಬಲ್ ಓದು ಏನೇನಿದೆ ತಿಳಿಯೋಣ." ಅಂದರು.
ಶ್ಯಾಮ: ಗುರುಗಳೇ ೧-೩೦ಕ್ಕೆ ರಾಧಾ, ೨-೦೦ಕ್ಕೆ ಬದುಕು, ೨-೩೦ಕ್ಕೆ ಬೃಂದಾವನ, ೩-೦೦ಕ್ಕೆ ಮತ್ತೆ ಬರುವನು ಚಂದಿರ, ೩-೩೦ಕ್ಕೆ ಮೂಡಲ ಮನೆ, ೪-೦೦ಕ್ಕೆ ಸಿಲ್ಲಿ ಲಲ್ಲಿ,
ಗುರುಗಳು: ಸಾಕು ನಿಲ್ಲಿಸು ನಿನ್ನ ಟೈಂಟೇಬಲ್; ಈ ಟಿವಿ ಪ್ರೋಗ್ರಾಂ ಅಲ್ಲ ನಾನು ಕೇಳಿದ್ದು. ‘ಸಿಲ್ಲಿ ಅಂತೆ ಲಲ್ಲಿ’ ರೇಗಿದರು.
***

ಅಂತರ

- ಪರಿಮಳಾ ರಾವ್ ಜಿ ಆರ್‍
ಅತ್ತೆಮೇರು ಶಿಖರ
ಸುಪ್ಪತ್ತಿಗೆ ಮೇಲೆ
ಮಗಳು ಮೃದು ಬಾಲೆ
ಮಂಚದ ಮೇಲೆ
ಸೊಸೆ ದುಡಿವ ಗಾಣದೆತ್ತಿನ
ನೊಗದ ಕೆಳಗೆ

 *****

ನಗೆ ಡಂಗುರ - ೧೬

- ಪಟ್ಟಾಭಿ ಎ ಕೆ
ಆತ: ರಾಜಕಾರಣಿಗೂ ಜ್ಯೋತಿಷಿಗೂ ಏನು ವ್ಯತ್ಯಾಸ?
ಈತ: ರಾಜಕಾರಣಿ ಹಣ, ಹಣ ಎಂದರೆ ಜ್ಯೋತಿಷಿ ಗ್ರಹಣ, ಗ್ರಹಣ ಎನ್ನುತ್ತಾನೆ.
***

ಸಾಗಿದ ದಾರಿ

- ರವಿ ಕೋಟಾರಗಸ್ತಿ
ಹುಟ್ಟಿದ ಊರು ತೊರೆದು
ಸಾಗಿಹೆನು ದೂರದ ನಾಡಿಗೆ..
ಕಾಡಿನ ಮಡಿಲ ಮಧ್ಯದಿ...
ಬೆರೆತು-ಬಾಳಬೇಕಾಗಿದೆ

ತಂದೆ-ತಾಯಿ-ಬಳಗ
ಪ್ರೀತಿ-ಸೆಲೆಯ-ನೆಲೆಯ
ಒಡನಾಡಿ... ಬಂಧುಗಳೆಲ್ಲಾ
ತೊರೆದು ದೂರ ಬಂದಿಹೆನು
ನೋವಲಿ ಮನ ಕುದಿಯುತಿಹದು

ಹೊಸತನದ ಹರುಷ
ಕಳೆದ ಬಾಲ್ಯದ ನೆನಪು
ಜೀವನದಾಟದ ಗೆಲುವು ಈ ಕಡೆ
ಬದುಕಿನ ನಲಿವು ಆ ಕಡೆ

ನೆಲ-ಭಾಷೆಗಳ ಹೊಸತನದ
ಏಕಾಂತದ-ಬಲೆಯಲಿ
ಹೃದಯದಾಳದಿ ಮೀಟುವ
ನೆನಪಿನಲೆಯು ನೋವಾಗಿ
ತನು-ಮನ ಮಂಕಾಗಿಸುತಿಹದು

ಬದುಕಿನ ದೂರದಲ್ಲೊಂದು
ಮಿನುಗುತಿಹದು ಆಶಾಕಿರಣ
ಎಚ್ಚರಿಸುತಿಹದು ಇದು ಮಂಕಲ್ಲ
ಜೀವನದ ಗೆಲುವು ಎಂದು

         ***

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೫

- ಪಟ್ಟಾಭಿ ಎ ಕೆ
ಮಲ್ಲು ಮನೆಗೆ ಇದ್ದಕ್ಕಿದ್ದಂತೆಯೇ ಒಂದು ದಿನ ಹಾವು ನುಗ್ಗಿತು. ಇದನ್ನು ಕಂಡು ಹೆದರಿದ ಮಲ್ಲು ‘ಲೇ ಹಾವು ಬಂದಿದೆ ಯಾರಾದರೂ ಗಂಡಸರು ಹೊರಗಿದ್ದರೆ ಕರಿಯೇ ಬೇಗ.’
ಹೆಂಡ್ತಿ: ‘ಗಂಡಸರೆ? ಏಕೆ ನೀವು ಗಂಡಸರಲ್ಲವೇ’
ಮಲ್ಲು: ‘ಓಹ್, ಹೌದಲ್ಲವೆ? ಹಾವು ಕಂಡು ಬೆದರಿಬಿಟ್ಟಿದ್ದೆ!’
***

ದಿನವು ಸಂಧಿಸಿ ಹೋಗುತದೆ ಮರುಳೆ


- ಶಿಶುನಾಳ ಶರೀಫ್


ದಿನವು ಸಂಧಿಸಿ ಹೋಗುತದೆ ಮರುಳೆ
ಘನಮೂರ್ತಿನಾಮವನು ನೆನಹಿಕೋ ಮೂರ್ಖಾ
ಕನಸಿನಂತೆ  ಶರೀರ ಮನವೆಂಬ ಆಲಯದಿ
ಅನುದಿನ ಜೀವನೇಶ್ವರನಿರುವತನಕಾ            ||ಪ||

ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು
ಇರುತಿಹುದು  ನೀರಮೇಲಿನ ಗುಳ್ಳೆಯಂತೆ
ಕರಗಿಹೋದರೆ ಬರುವದು ಈ ಪರಿ ಕಷ್ಟ
ಕರುಣಬಲದಿಂದ  ಅರಿತುಕೊಳ್ಳಯ್ಯಾ             ||೧||

ಪೊಡವಿಯೊಳಗೆ  ಛಂದ  ಮೃಡನ ತಂತ್ರದ ಗೊಂಬೆ
ಹಿಡಿದಾಡಿಸುತ್ತಲಿಹ ಗುರುಸೂತ್ರದಿಂದ
ಒಡೆಯನಂತಃಕರುಣ ತಪ್ಪಿದರೆ  ಯಮಗಾಳಿ
ಬಡಿದು ಹೋಗಿಹ ಸೊಡರಿನ ತೆರನಂತೆ            ||೨||

ಕೆಸರೊಳಗೆ ಕಮಲ ಉದ್ಭವಿಸಿ  ಸುವಾಸನೆಯು
ಹಸನಾಗಿ ದೆಸೆದೆಸೆಗೆ ಎಸಗುತಿಹುದು
ಮುಸುಕಿರ್ದ ಮಾಯಾಂಧಕಾರವನು ಬೆಳಗಿಸುವ
ಶಿಶುರೇಶನ  ಹೊಂದಿ ಪರಮಸುಖವ ಬಯಸೋ      ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೪

ಹೆಂಡತಿ: ‘ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ?
ಗಂಡ: ‘ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿ‌ ಇದೆ.  ಸದಾ ನೀರು ಸುರಿಯುತ್ತಿರುತ್ತದೆ- ಅಲ್ಲದೆ ಹಿತ್ತಲಲ್ಲಿ ಸೇದುವ ಬಾವಿ ಸಹ ಇದೆ. ಕಣ್ಣೀರಲ್ಲೇ ಏಕೆ ನೀನು ಕೈತೊಳೆಯ ಬೇಕು?’
***

ನಿಸರ್ಗ ಸ್ವರ್ಗ

- ರವಿ ಕೋಟಾರಗಸ್ತಿ

ಹಚ್ಚ ಹಸಿರಿನ ಉಡುಪುಟ್ಟ
ನಮ್ಮಯ ಕಾನನ ಧಾಮ
ಸ್ವರ್ಗ ಸಮಾನ ನಿಸರ್ಗ
ಸದಾ ಸಂತಸ ಚೆಲ್ಲುವ
ಜೀವನದುಸಿರಿನ ತಾಣ

ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ
ಧರೆಯ ಚುಂಬನಗೈಯುತ
ತರು-ಲತೆಗಳ ಸಿಂಚನಗೈಯುತ
ಧಾವಿಸಿ ಹರಿಯುತಿಹದು

ಜಲಧಾರೆಯ ಜುಳು... ಜುಳು... ಗಾನ
ಭ್ರಮರಗಿಡ-ಮರಗಳ ಝೇಂಕಾರ
ಸುಮಧುರ ಸುಮಗಳ ನಾದ
ಸಂತಸಗೊಳಿಸುತ ಸೆಳೆಯುತಲಿ
ತನು-ಮನ ಉಲ್ಲಾಸದಿ ಕುಣಿಯುತಿಹದು

ಅನುಪಮ... ಆನಂದಮಯ
ರಮ್ಯ-ಸೌಂದರ್ಯದ ನೋಟ
ಚೆಲ್ಲಿಹಳು ಮಡಿಲೆಲ್ಲಾ ಮೈಮಾಟ
ಭೂಸಿರಿಗೆ ಹೊಚ್ಚಿಹಳು ಹೊದಿಕೆಯನು
ವಿರಾಜಿಸಿ... ವಿರಮಿಸಿಹಳು ತಾಯಿ...
ಕೈ ಮಾಡಿ ಕರೆಯುತಿಹಳು
ಪ್ರೀತಿ ಪ್ರೇಮದ ಧಾರೆ ಸುರಿಸುತಿಹಳು

         *****

ಕೀಲಿಕರಣ: ಕಿಶೋರ್‍ ಚಂದ್ರ

ಕೆಂಪು ದೀಪದ ಕೆಳಗೆ

- ಡಾ || ರಾಜಪ್ಪ ದಳವಾಯಿ

ಹಾಡು ೧ :    ಯಾರು ಹಚ್ಚಿದರಣ್ಣ
        ಕೆಂಪಾನೆ ದೀಪಾವ
        ಯಾರು ಮಾಡಿದರಣ್ಣ
        ಬಾಳನ್ನು ರಕ್ತಾವ ||

        ನಗುವ ಹೂಗಳನೆಲ್ಲ
        ಕಾಲಲ್ಲಿ ತುಳಿದು
        ಸುಂದರ ಕನಸುಗಳ
        ಬೆಂಕೀಗೆ ಸುರಿದು ||

        ಮೆರೆಯುವ ಜನರ
        ಗಮ್ಮತ್ತು ಕಾಣಿರಿ
        ಬಲಿಯಾದ ಹೆಣ್ಣೀನ
        ಬದುಕನ್ನು ನೋಡಿರಿ ||

ಹಾಡು ೨ :     ಯಾರು ಹೇಳಿದಯ್ಯಾ
        ಇದೆನೆಲ್ಲ ಮಾಡೆಂದು ||

        ನಿನ್ನೆಂಡತಿ ಮನೆಯಲ್ಲಿ
        ಪತಿಯ ಕನವರಿಕೆಯಲಿ
        ನೀನೊ ಇಲ್ಲಿ ಅಬ್ಬಬ್ಬಾ
        ಪರ ಹೆಣ್ಣ ತೆಕ್ಕೆಯಲಿ ||

        ಏಕೆ ಇಂಥ ದಾಹ
        ಕಡಿಮೆಯಾದರೂ ಏನು
        ಹೆಂಡತಿ ಬಾಳಿಸದೆ ನೀನು
        ಇವೆಲ್ಲಾ ಸರಿಯೇನು ||

        ಪರಹೆಣ್ಣ ಕೂಡುವಾಗ
        ನೆನಪಿರಲಿ ನಿನ್ನ ಮಗಳೂ
        ಇಂಥ ಸ್ಥಿತಿಗೆ ಅವಳನ್ನು
        ತಂದವನು ನೀನಲ್ಲವೇನು ||

ಹಾಡು ೩ :     ದುಡ್ಡು ಕೊಟ್ಟು ಹೆಣ್ಣನ್ನು
        ಮಜಾ ಮಾಡೊ ಅಣ್ಣರಿರಾ
        ನಿಮಗೇಕೆ ಸೆಂಟಿಮೆಂಟು
        ಮನಸೆಲ್ಲಾ ಕಾಂಕ್ರೀಟು ||

        ಒಂದು ಹೆಣ್ಣು ಸಾಲದಲ್ಲ
        ಎಷ್ಟಾದರೂ ಪರವಾಗಿಲ್ಲ
        ಬೇಕು ಕೈ ಕಾಲಿಗೆಲ್ಲ
        ಕೈಲಾಗದಿದ್ರು ಪರವಾಗಿಲ್ಲ ||

        ಮನೆ ಬೀದಿ ಊರಲೆಲ್ಲ
        ಮರ್ಯಾದೆಸ್ಥರು ಬರೇ
        ಊರ ಹೊರಗೆ ಬಂದರಂದ್ರೆ
        ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ :     ತಪ್ಪು ಯಾರದು ಇಲ್ಲಿ
        ಹೇಳಣ್ಣ ಹೇಳೊ
        ಒಪ್ಪಿತವೆಲ್ಲವು ಹಣಕೆ
        ಕೇಳಣ್ಣ ಕೇಳೊ ||

        ಹಿಡಿಗೂಳಿಗಾಗಿ ಬೆತ್ತಲಾಗರು
        ಮುಡಿ ಹೂವಾಗಿ ಅರಳುವರು
        ಬಡತನವೊಂದೆ ಮೂಲವಲ್ಲ
        ನಾನಾ ತರದ ಸಿಕ್ಕುಗಳಲ್ಲ ||

        ಆಹಾ ಜಾರಿಸಿ ನಲಿದರು
        ಅಯ್ಯೊ ಜಾರಿ ನರಳಿದರು
        ಜಾರಲೆಂದು ಬಂದವರಿಗೆ
        ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ :     ಹೆಣ್ಣ ಬಯಸಿ ಹೋಗಿ
        ನಲಿಯುವ ಅಣ್ಣರಿರಾ
        ಒಮ್ಮೆ ಚಿಂತನೆ ಮಾಡಿ
        ಬೇಕೆ ನಿಮಗೀ ಮೋಡಿ ||

        ತಾಯಿ ತಂಗಿ ಅಕ್ಕ ಅಮ್ಮ
        ಈ ಪದಗಳ ಅರ್ಥವೇನು
        ಹೇಳಿರಣ್ಣಾ ಹೇಳಿರೊ
        ಇದೆಲ್ಲ ನಿಜದ ಬದುಕೇನು ||

        ಹಣದ ಎಣಿಕೆಯಲ್ಲಿ
        ಸೆರಗ ಸರಿಸಿ ನಲಿಯೋರೆ
        ನಿಮ್ಮದೆಂಥ ಬಾಳು
        ನೋಡಿ ಹೆಣ್ಣಿನ ಗೋಳು ||

ಹಾಡು ೬ :     ಎಂದಿಗೆ ಕೊನೆಯಣ್ಣ
        ಬಟ್ಟೆ ಸುಲಿಗೆಗೆ ಅಣ್ಣಾ ||

        ಹೆಣ್ಣಿಂದ ಹುಟ್ಟಿ ನೀನು
        ಮುಟ್ಟುವೆ ಏನನ್ನ
        ಮುಚ್ಚಿ ಇಂಥ ಬಾಳನ್ನ
        ಗಳಿಸಿದೆ ಏನನ್ನ ||

        ಮಗಳು ತಾಯಿ ತಂಗಿ
        ಹೆಂಡತಿ ಎಂದರೇನರ್ಥ
        ಬಾಳಿಸದೆ ಹೆಣ್ಣ ಬಾಳು
        ಆಯಿತಲ್ಲ ವ್ಯರ್ಥ ||

        *****


ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೩

- ಪಟ್ಟಾಭಿ ಎ ಕೆ
ಒಬ್ಬ ಭಾಷಣಕಾರ ಯಾವುದೇ ಉದಾಹರಣೆ ಕೊಡುವ ಸಂದರ್ಭದಲ್ಲಿ ‘ನನ್ನ ಹೆಂಡತಿ, ನನ್ನ ಹೆಂಡತಿ’ ಎಂದು ಹೇಳುತ್ತಲಿದ್ದನು- ಇದನ್ನು ಪದೇ ಪದೇ ಕೇಳಿಸಿಕೊಳ್ಳುತ್ತಿದ್ದ ಸಭಿಕನೊಬ್ಬನು ಬೇಸರದಿಂದ ‘ನೀವು ಪದೇಪದೇ ನನ್ನ ಹೆಂಡತಿ, ನನ್ನ ಹೆಂಡತಿ ಎಂದು ಒತ್ತಿ ಒತ್ತಿ ಹೇಳುತ್ತಲಿದ್ದೀರಿ’ ಎಂದ.  ಭಾಷಣಗಾರನಿಗೆ ಕೋಪಬಂದು, ‘ಅವಳು ನನ್ನ ಹೆಂಡತಿ; ಎಲ್ಲಿ ಬೇಕಾದರೂ ಎಷ್ಟು ಬೇಕಾದರೂ’ ಒತ್ತುತ್ತೇನೆ. ಆದನ್ನು ಕೇಳಲು ನಿಮಗೆ ಹಕ್ಕಿಲ್ಲ’ ಎಂದನಂತೆ.
***

ಚಿರ ಋಣಿ

- ಗಿರಿಜಾಪತಿ ಎಂ. ಎನ್

ಜನನಿ ಜನ್ಮಭೂಮಿ
ನಿಮ್ಮಯ ಕರುಣೆಗೆ ನಾ ಚಿರ ಋಣಿ
ನಿನ್ನ ಮಡಿಲ ಕಂದನೆಂಬ
ಭಾಗ್ಯ ಬೆಳಕಿನ ಕಣ್ಮಣಿ

ಜನುಮ ಜನುಮ ಬಂದರೂನು
ತಾಯಿ ನಿನ್ನ ರಕ್ಷ ಎನಗಿದೆ
ಕಾಮಧೇನು ಕಲ್ಪತರುವಾಗಿ
ಬಲ ನೀಡೋ ನಿನ್ನ ಕೃಪೆಯಿದೆ

ಅಂಗಳಂಗಳವೆಲ್ಲ ಪಾವನ
ನಿನ್ನೆದೆಯಂಗಳ ವೃಂದಾವನ
ಹಿಮದ ಶೃಂಗದಂದದಿ ಧುಮ್ಮಿಕ್ಕೋ
ಧಾರೆಯ ನಿತ್ಯನೂತನ ಚೇತನ

ಧಮನಿದಮನಿಗೊಳೊಳಗೆ
ಮಿಡಿದಿದೆ ನಿನಗಾಗಿ ದುಡಿವಾ ಹಂಬಲ
ಯಾವವಡೆತಡೆಗಳಿಗೆ ಬಾಗದೆ
ಮಡಿದು ನಿನ್ನ ಸೇರುವ ಹಿರಿಛಲ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೨

- ಪಟ್ಟಾಭಿ ಎ ಕೆ
ಸೇಲ್ಸ್ ಗರ್ಲ್ ಕಾಲಿಂಗ್‌ಬೆಲ್ ಒತ್ತಿದಳು. ಮನೆಯ ಒಡತಿ ಬಾಗಿಲು ತೆರೆದು, ‘ಸೇಲ್ಸ್ ಮೆನ್ ನಾಟ್ ಅಲೋಡ್’ ಎಂಬ ಬೋರ್ಡ್ ಇದೆಯಲ್ಲಾ, ನೀನು ಅದನ್ನು ಓದಲಿಲ್ಲವೆ?
ಸೇಲ್ಸ್‌ ಗರ್ಲ್ : ‘ಓದಿದೆ ‘ಸೇಲ್ಸ್ ಮೆನ್ ನಾಟ್ ಅಲೋಡ್’ ಅಂತ ಇದೆ. ಆದರೆ ನಾನು ಸೇಲ್ಸ್ ಗರ್ಲ್!
***

ಹೆಂಗಸರ ಸುಖ ಬಲ್ಲವನೇ ಬಲ್ಲ

ಹೆಂಗಸರ ಸುಖ ಬಲ್ಲವನೇ ಬಲ್ಲ   ಪರ-ಹೆಂಗಸರ ಸುಖ  ಸವಿ ಕ್ಕರಿ ಬೆಲ್ಲ             ||ಪ||

ಆರಿಗೆ ಬಿಡಲಿಲ್ಲ   ಕಾಮನ ಹೊಯಿಲೆಲ್ಲ
ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ        ||೧||

ಹೆಣ್ಣು  ಜರಿದರೇನು ಬಿಟ್ಟಿಲ್ಲ  ಅದಕೆ
ಮಣ್ಣುಗೂಡಿ ಮೈ ಕೆಟ್ಟಿಲ್ಲ                    ||೨||

ಇಳೆಯೊಳು ಈ ಮಾತು ಸುಳ್ಳಲ್ಲ
ಸುಳ್ಳೆ  ಬಲು ವಿಷಯದೊಳು  ನೀ ಕುಳಿತೆಲ್ಲ        ||೩||

ಶಿಶುನಾಳಧೀಶಗ ಅರಿತಿಲ್ಲ ಬಲು -
ಕಸಿವಿಸಿ ಸೂಳೇರ ಮುರುಕೆಲ್ಲ                        ||೪||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೧

- ಪಟ್ಟಾಭಿ ಎ ಕೆ
ಪ್ರಶ್ನೆ: ‘ಮೂವತ್ತರ ನಂತರ ನಿಮ್ಮ ಮಗಳಿಗೆ ಮಕ್ಕಳಾಗ ಬಹುದೆ?
ಉತ್ತರ: ‘ಬೇಡ ಮೂವತ್ತು ಅತಿಯಾಯಿತು’
***

ಅಕ್ಷರ ಮಾಲೆ

- ಪರಿಮಳಾ ರಾವ್ ಜಿ ಆರ್‍
ಅಕ್ಷರ ಮಾಲೆಯಲಿ
ಸಾಕ್ಷರದ ಮೌಲ್ಯ
ಅಷ್ಟೇ ಕಂಡದ್ದು
ನನ್ನ ಮೌಢ್ಯ
ಎದೆಯ ಕ್ಷಾರವ ತೊಳೆಯೆ
ಅಕ್ಷರದಿ ಪ್ರತ್ಯಕ್ಷ
ಬ್ರಹ್ಮ ಸಾಕ್ಷಾತ್ಕಾರ!

 *****

ನಗೆ ಡಂಗುರ - ೧೦


- ಪಟ್ಟಾಭಿ ಎ ಕೆ

ಹೆಂಡತಿ: ‘ರೀ ನಾನು ಕಾರು ಕಲಿಯಲು ಹೋಗುತ್ತಿದ್ದೇನೆ.  ಕೇಳಿಸಿಕೊಂಡಿರಾ ?’
ಗಂಡ: ‘ಕೇಳಿಸಿಕೊಂಡೆ: ನಾನು ಖಂಡಿತಾ ನಿನ್ನ ದಾರಿಗೆ ಅಡ್ಡ ಬರುವುದಿಲ್ಲ.  ಆಗಬಹುದು ತಾನೆ?’
***

ಜೀವನತೆರೆ

- ರವಿ ಕೋಟಾರಗಸ್ತಿ

ಜೀವನವೆಂಬ ಸಾಗರದಲಿ
ಕಾಣದ ನಾವಿಕನಾಶ್ರಯದಿ
ಪಯಣಿಸುವ ಪಯಣಿಗರು
ಪ್ರಯಾಸ-ಪರಿಶ್ರಮದಲಿ...
ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ
ನಿರ್ಭೀತಿ-ನಿರ್ಲಿಪ್ತತೆ... ಹೊರದೂಡುತ
ಗೆಲುವನು ದೂರದಲಿ ಕಾಣುತ...
ಧೈರ್ಯದ ಸವಾರಿಯಲಿ ನಡೆಯುವಾ

ನಿರಾಶೆಯ ತೆರೆಗಳ ತಳ್ಳುತ...
ಆಶಾ-ಹಕ್ಕಿಗಳಾಗಿ ಹಾರುತ
ಬಯಕೆಯ ಬಾನಲಿ ತೇಲುತ
ಸಾಗೋಣ ದಡ ಸೇರುವ ಗುರಿಯಲಿ

ಜೀವನವು ಸಂಘರ್ಷಗಳ ತಾಣ
ಅವಿರತ ಹೋರಾಟದ ಕಣ
ದಿಟ್ಟತನದ ಬಾಳಲ್ಲಿ...
ಸೋಲು ಸವಾಲಾಗಿಸುತ
ಎದ್ದೇಳುವ ಕಲೆ ರೂಢಿಸುತ
ಸೌಹಾರ್ದತೆಯ ಸಮಬಾಳಲಿ
ಅರಳೋಣ-ಮಿಂದು ಬೆಳಗುತಲಿ

         *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೯

- ಪಟ್ಟಾಭಿ ಎ ಕೆ

ಮನೆಯೊಡತಿ: ‘ತೋಟದ ಆಳಿನ ಮೇಲೆ ಒಂದು ಕಣ್ಣು ಇಟ್ಟಿರು’.
ಕೆಲಸದಾಕೆ: ‘ಒಂದು ಕಣ್ಣೇನಮ್ಮ ಎರಡು ಕಣ್ಣು ಇಟ್ಟಿದ್ದೇನೆ.  ಅವ ಒಪ್ಪಿದರೆ ಮದುವೇನೂ ಆಗುತ್ತೇನೆ’
     ***

ರೈತಹತ್ಯಾ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಹಾಡು - ೧

ಎಲ್ಲಿಹುದೊ ಬಾಳ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಜೀವ ಜಲ ಹನಿಹನಿ ರಾಶಿ
ಸುರಿಯೆ ಧಾರೆ ಹಸಿರು ಕಾಣಿ
ಹೂವರಳಿಸಿ ನಗು ಮಿಂಚಿಸಿ
ಜೀವಕೆಲ್ಲ ಚೇತನವ ಪೂಸಿ ||

ಮುಗಿಲಾಗಿರೆ ಬಟ ಬಯಲು
ನೆಲವೆಲ್ಲ ದ್ವೇಷಾಗ್ನಿ ಬುಗಿಲು
ಎಲ್ಲಿ ನಮ್ಮ ಬೆಳ್ಳಿ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಹಾಡು - ೨

ಯಾರು ಕಾಯುವರಣ್ಣ
ರೈತಾಪಿ ಜನರನ್ನ ||

ತೆಂಗೀಗೆ ಜಂಗಲು ಹಿಡಿದು
ಜುಂಗು ಹತ್ತಿತು ಬದುಕು
ಮಳೆಯಿಲ್ಲ ಬೆಳೆಯಿಲ್ಲ
ದನ ಕರುಗೆ ಮೇವಿಲ್ಲ ||

ಕಣಜದೋರಿಗೆ ಕರುಣೆಯಿಲ್ಲ
ಜಣ್‌ಜಣ್ ಹಣ ಕಾಣಲಿಲ್ಲ
ಕೀಟ ಕಳೆಯ ಔಸದೀಯ
ಭಾಗ್ಯವಲ್ಲ ನಾವೆ ಕುಡಿಯೊ ||

ಹಾಡು - ೩

ದುಡ್ಡು ಕೊಡ್ತಾರೆ ಇವರು
ಜಪ್ತಿ ಮಾಡ್ತಾರೆ ||

ಸಾಲ ಮಾಡಿ ಅಂತಾರೆ
ಸಬ್ಸಿಡಿ ಮಾತ ಹೇಳ್ತಾರೆ
ಸಾಲದ ಶೂಲಕೆ ಹಾಕುತ್ತ
ನಮ್ ಗೋಣು ಮುರಿತಾರೆ ||

ಸಾಲ ಎಣಿಸಿ ಕೊಡುತಾರೆ
ಮೇಲೆ ಬಡ್ಡಿ ಹಾಕ್ತಾರೆ
ಸರ್ವಿಸ್ ಪರ್ವಿಸ್ ಚಾರ್ಜು
ಅಂತ ಟಾರ್ಚರ್‍ ಮಾಡ್ತಾರೆ ||

ಹಾಡು - ೪

ಮಾರುವಾಡಿ ಮುಂದೆ ಬಂದ
ಅಡಮಾನವೆಲ್ಲ ಹರಾಜು ಎಂದ ||

ಬೆಳ್ಳಿ ಬಂಗಾರದ ಅಂಗಡಿ
ಕಾಲೂರಲು ಜಾಗ ಒಂದಡಿ
ಬೆಳೆದ ವಾಮನ ತ್ರಿವಿಕ್ರಮ
ಹಿಡಿಯೋರ್‍ಯಾರವನ ಕ್ರಮ ||

ಬಡ್ಡಿ ಬಡ್ಡಿ ಚಕ್ರ ಬಡ್ಡಿ
ಹೊಟ್ಟೆ ಬೆಳೆದಂತೆ ಅಡ್ಡಾದಿಡ್ಡಿ
ತಕಡಿಗಾಕಿದರೆ ಬಂಗಾರ
ಬಂದಿತಲ್ಲಾ ಸಂಚಕಾರ ||

ಹಾಡು - ೫

ಜಮೀನುದಾರ ಮುರುದಾರ
ಬಡವರ ಭೂಮಿ ಬಕಾಸುರ ||

ಬಡತನ ಭಂಗದ ಪಿತಾಮಹ
ಜೀತ ಬೆವರಿನ ರಣಪಂತ
ಹಸಿಮಾಂಸದ ನರಭಕ್ಷಕ
ಮಾಡೋರ್‍ಯಾರಿವಗೆ ಶಿಕ್ಷಾ ||

ಮೂರಕೆ ಆರು ಲೆಕ್ಕ ಬರೆದು
ಸಾಲಕೆ ಕಟ್ಟಿನ ಗೆರೆಯ ಕೊರೆದು
ಬಿಡದೆ ಮಾಡುವ ವಸೂಲಿಕೋರ
ಊರ ಜುಟ್ಟಿನ ಸೂತ್ರಧಾರ ||

ಹಾಡು - ೬

ಹರಿದೀತು ಕಣ್ಣಗಂಗೆ
ಗಂಗಮ್ಮ ತಾಯಾಗೆ
ಒಡ್ಡು ಕಟ್ಟುವರ್‍ಯಾರು
ಬೋಯಿಗಳು || ಅಣ್ಣಾ ||

ಮುದ್ದೆ ಕೂಡಿಸಲಿಕ್ಕೆ
ಹಿಟ್ಟಿಲ್ಲ ಸೊಪ್ಪಿಲ್ಲ
ಹಿಡಿ ಹಿಟ್ಟು ಆಯಿತೊ
ಹಂಬಲಿಯು || ಅಣ್ಣಾ ||

ತಿನ್ನಲಾರೆವು ಎಂದು
ಅನ್ನ ಚೆಲ್ಲುವ ಮಂದಿ
ಕೊಡಿರಯ್ಯೊ ಹಿಡಿಗೂಳು
ನಿಮ್ಮ ಧರ್ಮ || ಅಣ್ಣಾ ||

ಹಾಡು - ೭

ಕೊಳ್ಳುವಿರಾ ಅಣ್ಣಾ ಕೊಳ್ಳುವಿರಾ
ಜೀವಗಳು ಬಿಕರಿಗಿವೆ ಕೊಳ್ಳುವಿರಾ ||

ಜೀವಾವ ಕೊಂಡು ದುಡ್ಡಾ ಕೊಟ್ಟಾರೆ
ಅದೆ ನಮ್ಮ ಮನೆ ಮಂದಿ ಹೊಟ್ಟಹೊರೆ
ಜೀವ ಉಳಿಸಲು ಜೀವ ಮಾರಾಟವೆ
ಜೀವ ಕೊಂಡು ಜೀವ ಉಳಿಸಿರಣ್ಣಾ ||

ನಮ್ಮ ಹಸಿವು ದುಃಖ ನಿಮ್ಮದಾಗಲಿಲ್ಲ
ಕನಸ ಕೊಂಡು ಮಹಲಲಿ ಕುಣಿದಿರಲ್ಲ
ಹೊಟ್ಟೆ ಕೇಳಲಿಲ್ಲ ಸುಮ್ಮನಿರಲಾಗಿಲಿಲ್ಲ
ಉರಿಬೆಂದು ಬೂದಿ ಆದೆವಲ್ಲ ||

ಹಾಡು - ೮

ಸಹಾಯವ ಮಾಡೀರಣ್ಣ
ನಾವು ಸಾಯಬೇಕ್ರಣ್ಣ ||

ಇದ್ದು ನಾವು ಬದುಕಲಾರೆವು
ನಿಮಗೆ ಏನೂ ಮಾಡಲಾರೆವು
ಬದುಕಿಗಂತೂ ಏನೂ ಇಲ್ಲ
ಸಾವಿಗಾದ್ರೂ ಕೊಡ್ರಿ ಬೆಲ್ಲ ||

ನಮ್ಮ ಸಾವಿಗೆ ನೀವೇ ಸಾಕ್ಷಿ
ಅದುವೆ ಸದ್ಯ ನಮಗೆ ಮೋಕ್ಷ
ಮನಕರಗದವರ ನಡುವೆ
ಸಾವೆ ಪರಮ ಒಡವೆ ||


        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೮

- ಪಟ್ಟಾಭಿ ಎ ಕೆ

ಅವರು: "ಮದುವೆ ಮಂಟಪದಲ್ಲಿ ಗಂಡು ಹೆಣ್ಣಿನ ಕೈ ಹಿಡಿದು ಅಗ್ನಿ ಪ್ರದಕ್ಷಿಣೆ ಮಾಡುತ್ತಾನಲ್ಲಾ ಏಕಿರಬಹುದು?"
ಇವರು: "ಗಂಡನಾದವನು ಮುಂದೆ ಅಗ್ನಿ ಎದುರು ನಿಂತು ಅಡಿಗೆ ಬೇಯಿಸಿ ಹಾಕಬೇಕಲ್ಲಾ- ಆದಕ್ಕೆ!"
***

ಮಲಪ್ರಭೆ

-ರವಿ ಕೋಟಾರಗಸ್ತಿ

ಹಸಿರು ತುಂಬಿದ ವನಸಿರಿಯು
ಚೆಲುವು ಧರೆಯ ಶೃಂಗರಿಸಿಹದು
ಗಿರಿಕಾನನಗಳ ಮೆರಗು
ರಂಗುಸಿರಿಯು ಹೆಚ್ಚಿಹದು

ಮೋಡಗಳಿಗೆ ಮುತ್ತಿಡುತ
ಧರೆಗೆ ಜಲಧಾರೆ ಚೆಲ್ಲುತಲಿ
ರೈತನ ಸಂತಸ ಹೆಚ್ಚಿಸುತ
ನೊಂದ-ಬೆಂದ ಜನಗಳಿಗೆ
ನೀ ಧಾಮ ಕಾಮಧೇನು

ನಿನ್ನಡಿಯಲಿ ಕುಣಿಯುತಿಹಳು
ಮಹಾತಾಯಿ ಮಲಪ್ರಭೆ
ಭೋರ್ಗರೆಯುತ ರಭಸದಿ
ಗಿರಿ ಬೆಟ್ಟ ತಿರುವುಗಳಲಿ
ಕರುನಾಡನು ಸಿರಿಗೊಳಿಸುತ

ಆ ಹಸಿರ ಮಡಿಲ
ಒಲವಿನ ಒಡಲು
ಹಕ್ಕಿಗಳ ಮುರಳಿನಾದವು
ಕಾಡೆಲ್ಲಾ ಝೇಂಕರಿಸುತಿಹದು
ನಿರ್ಭಯದಿ ನಿಸರ್ಗ ಭೂಮಡಿಲು
ಸ್ವರ್ಗಕ್ಕಿಂತಲೂ... ಮಿಗಿಲು

         *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೭

- ಪಟ್ಟಾಭಿ ಎ ಕೆ
ಮಂತ್ರಿ: ಸಹಾಯ ಕೇಳಿಕೊಂಡುಬಂದ ಹಳ್ಳಿಯ ಯುವಕನಿಗೆ "ನಿನಗೆ ಎರಡು ಎಕರೆ ಜಮೀನು ಸರ್ಕಾರದಿಂದ ಕೊಡಿಸುತ್ತೇನೆ, ವ್ಯವಸಾಯ ಮಾಡಿಕೊಂಡು ಬದುಕಿಕೊ".
ಯುವಕ: "ಯಾಕೆ ಬುದ್ದಿ, ಆತ್ಮಹತ್ಯೆ ಮಾಡಿಕೊಂಡು ಸಾಯ ಬೇಕೆಂತಲೋ?" ಪ್ರಶ್ನಿಸಿದ.
        *****

ಕೀಲಿಕರಣ: ಎಮ್ ಎನ್ ಎಸ್ ರಾವ್

ಆಟ

ದೇವಕಣ್ಣು
ಬಿಟ್ಟರೆ
ಬಾಳು
ಹೂದೋಟ
ದಾನವ
ಕಣ್ಣಿಟ್ಟರೆ
ಭಸ್ಮ
ಭವದ
ಆಟ

****

ಟಿಪ್ಸ್ ಸುತ್ತ ಮುತ್ತ

- ಶೇಖರ್‌ಪೂರ್ಣ


"ಕಾಫಿಗೆ ಬರ್‍ತಿಯೇನೊ?"

ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು.

ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ.
"ಕಾಸಿಲ್ಲ ಕೊಡಿಸ್ತೀಯ?"
"ಬಾ ಹೋಗೋಣ..."

-ಹೊರಗಡೆ ಸಣ್ಣದಾಗಿ ಮಳೆ. ಮತ್ತೊಂದು ಸಂಜೆ ಕತ್ತಲೆಗೆ ತಿರುಗುತ್ತಿತ್ತು. ಪ್ರಿನ್ಸಿಪಾಲರ ರೂಮಿನಿಂದ ಹೊರಬಿದ್ದರು. ಅವಳು ಉಪಾಧ್ಯಾಯಿನಿ. ಅವನು ಗುಮಾಸ್ತ. ಅವಳ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ. ಅವನ ಮನೆಯಲ್ಲಿ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ದೊಡ್ಡ ಪರಿವಾರ. ಬೆಳಗಾದರೆ ಕಾಲೇಜು. ಕಾಲೇಜಾದರೆ ಮನೆ. ಮಧ್ಯೆ ಒಂದಷ್ಟು ಜಗಳ. ಮನೆಯಲ್ಲೂ, ಕಾಲೇಜಿನಲ್ಲೂ. ಯಾರಿಗಾದರೂ ಸರಿ-ತನ್ನನ್ನು ತಾನು ತೆರೆದಿಡಲೇ ಬೇಕು ಎಂಬ ಗಳಿಗೆಗಳು ಬಂದೇ ಬರುತ್ತವೆ. ಮಾತನಾಡಲು ತೊಡಗುತ್ತಾರೆ. ಒಳಗೊಂದು- ಹೊರಗೊಂದು. ಆ ಹೊರಗಿಗೂ ಒಂದು ಅರ್ಥವಿರುತ್ತದೆ. ಆ ಆರ್ಥದಲ್ಲೂ ಸಾರ್ಥಕತೆ ಕಾಣುವಾಸೆ... ಹೊರಗಿನದೂ ಕೇಂದ್ರವಾಗುತ್ತಾ ಸಾಂದ್ರವಾಗುತ್ತಾ ಹೋಗುತ್ತದೆ. ಅವರಿಬ್ಬರೂ ಮಾತನಾಡಲು ತೊಡಗುತ್ತಾರೆ. ಹೆಚ್ಚಾಗಿ ಅವಳನ್ನೇ ಅವನು ಮಾತನಾಡಲು ಬಿಡುತ್ತಾನೆ. ಶೋತೃವಾಗುತ್ತಾನೆ-ಪ್ರೇಕ್ಷಕನಾಗುತ್ತಾನೆ. ಗೋಚರಿಸದ್ದನ್ನೆಲ್ಲ ತಬ್ಬಿಕೊಳ್ಳುತ್ತಾನೆ. ಶ್ರದ್ಧೆಯಾಗುತ್ತಾ ಹೋಗುತ್ತದೆ...

ಎಷ್ಟೋ ಬಾರಿ ಅವನು ಅವಳ ಮಾತುಗಳನ್ನು ನಿರಾಕರಿಸಿಬಿಡುತ್ತಿದ್ದ. ಅವನ ನಿಲುವನ್ನೆಲ್ಲ, ನಿರಾಕರಣೆಯನ್ನೆಲ್ಲ ಅವಳು ತಾತ್ಸಾರದಿಂದ ಕಡಿದು ಉಗಿದು ಬಿಡುತ್ತಿದ್ದಳು. ಈ ಆವಾಹನೆ - ವಿಸರ್ಜನೆಗಳ ನಡುವೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ...ಇಲ್ಲದಿದ್ದರೆ ಕುಡಿಯುತ್ತಿದ್ದ ಕಾಫಿಗಾಗಲಿ, ಆಡುವ ಮಾತಿಗಾಗಲಿ ಅರ್ಥವೆಲ್ಲಿಯದು? ಅಪ್ಪಿಕೊಂಡಾಗ ಅವನಿಗಂತು ಅಂತರಂಗ ಸೇರಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಪರಿವರ್ತನೆ.

ಒಮ್ಮೆ ಹೀಗೆ ಔಪಚಾರಿಕವಾಗಿ ಏನಾದರೂ ಮಾತನಾಡಲೆಬೇಕಲ್ಲ ಎಂಬ ಧ್ವನಿಯಲ್ಲಿ-
"ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇದೆ..ಚಿಕ್ಕಹುಡುಗ.  ಇನ್ನೂ ಹದಿನೆಂಟು ವರ್ಷ, ನಿರ್ದೇಶಿಸ್ತಾ ಇರೋದು..ಒಳ್ಳೆಯವನು, ಬರ್‍ತಿಯೇನೋ?" ಕೇಳಿದ್ದಳು.
"ಹದಿನೆಂಟು ವರ್ಷ...ದುರಹಂಕಾರ.." ಅವನು ಕೆಂಡ ಕಾರಿದ. ಅವಳ ಅಹ್ವಾನದಲ್ಲಿನ ಔಪಚಾರಿಕತೆಗೋ ಅಥವ..  ಆಹ್ವಾನವನ್ನು ತಿರಸ್ಕರಿಸಿದ್ದಕ್ಕೋ ಅಥವ ಅವನ ತಾತ್ಸಾರಕ್ಕೋ ಅವಳಿಗೂ ರೇಗಿತು. ತಟಕ್ಕನೆ ಕೇಳಿದ್ದಳು:  "ನಿನಗಿರೋ ಕೊಬ್ಬು ನೋಡು.. ಆ ಹುಡುಗನ ಬಗ್ಗೆ ನಿನಗೇನೂ ಗೊತ್ತಿಲ್ಲ. ನಿನಗೇನು ಹಕ್ಕಿದೆ ಮಾತನಾಡೋಕ್ಕೆ?" ಆಹ್ವಾನದ ಹಿಂದಿನ ಔಪಚಾರಿಕ ಭಾವ ಕಳೆದು ಅವಳು ಹೂಡಿದ ವಾದದಲ್ಲಿ : ಹೌದು ನಿಜ- ಎಂದನ್ನಿಸಿ ಬಿಟ್ಟಿತು.

ಸಂಜೆ ಅವನೂ ರವೀಂದ್ರ ಕಲಾಕ್ಷೇತ್ರಕ್ಕೆ ಹೋದ. ಹತ್ತು ರೂ ತೆತ್ತು ನಾಟಕ ಪೂರ್ತಿ ನೋಡಿದ. ನಾಟಕ ಕೆಟ್ಟದಾಗಿತ್ತು. ರವೀಂದ್ರ ಕಲಾಕ್ಷೇತ್ರದ ವಿರುದ್ಧವೇ ಅವನ ಹಠ ಮತ್ತಷ್ಟು ಗಟ್ಟಿಯಾಗಿತ್ತು. ಆದರೆ ಅವನು ಅಂದು ರವೀಂದ್ರ ಕಲಾಕ್ಷೇತ್ರಕ್ಕೆ ಹೋದ ಬಗೆಗೆ ಪಶ್ಚಾತ್ತಾಪವಿರಲಿಲ್ಲ. ಅವನ ಮಟ್ಟಿಗೆ ಅದು ಸಣ್ಣ ಪರಿವರ್ತನೆಯೇನು ಅಲ್ಲ. ಎಲ್ಲವನ್ನೂ ತೆರೆದ ಕಣ್ಣಿನಿಂದ ನೋಡು ನಂತರ ಮಾತನಾಡುವ ಹಾದಿಗೆ ಬಿದ್ದ. ಅವಳನ್ನು ಅವನು ತನ್ನನ್ನೂ ಮೀರಿ ಗುರುಸ್ಥಾನಕ್ಕೇರಿಸಿದ್ದ. ಮೊದಲು ನೋಡು, ನಂತರ ಮಾತನಾಡು- ಇದು ಅವಳ ಥಿಯರಿಯಾಗಿರಲಿಲ್ಲ. ಅವಳ ಸ್ವಭಾವದಲ್ಲೇ ಇತ್ತು, ಇರಲಿಲ್ಲ. ಅದು ಅವನಿಗೆ ಬೇಕಾಗಿರಲಿಲ್ಲ. ಇದೆ - ಅವಳಲ್ಲಿ ಇದೆ ಎಂಬ ನಂಬಿಕೆಯೆ ಅವಳನ್ನು ಅಪ್ಪಿಕೊಳ್ಳುವ ಶ್ರದ್ಧೆಯಾಗಿತ್ತು.  ಆಧಾರವಾಯ್ತು.  ಸಾಕು , ಅರ್ಥಗಳು ಗೋಚರಿಸಲಾರಂಭಿಸಿತು....

ಹೋಟೆಲ್ಲಿಗೆ ಹೋಗುವ ಹಾದಿಯಲ್ಲಿ ಫುಟ್‌ಪಾತಿನ ಮೇಲೆ ರಾಶಿ ರಾಶಿ ಬಟ್ಟೆಗಳು. ಬಳಿಗೆ ಹೋಗಿ ರಾಶಿಯಿಂದ ಒಂದು ಅಂಗಿಯನ್ನು ಆರಿಸಿಕೊಂಡು ಅಳತೆಯನ್ನು ಅಂದಾಜು ನೋಡತೊಡಗಿದಳು. "ಅಣ್ಣನಿಗಾ?" - ಕೇಳಿದ. "ಹೂಂ" ಅಳತೆಯಲ್ಲಿ ಮಗ್ನಳಾದಳು. ಅವನು ಅವಳನ್ನು ಮತ್ಸರದಿಂದ ನೋಡತೊಡಗಿದ. ಅವಳ ಮಗ್ನತೆ ಅವನಿಗೆ ಸಾಧ್ಯವಿರಲಿಲ್ಲ. ಅವಳು ಖರೀದಿಸಲಿಲ್ಲ. ಕಾರಣವೇನೆಂದು ಅವನೇನೂ ಕೇಳಲಿಲ್ಲ. ಸುಮ್ಮನೆ ಮೆಜೆಸ್ಟಿಕ್‌ನ ಫುಟ್‌ಪಾತಿನ ಮೇಲೆ ಇನ್ನೂ ಕಡಿಮೆ ಕಾಸಿಗೆ ಸಿಕ್ಕುತ್ತೆ ಎಂದಷ್ಟೆ ಗೊಣಗಿದ. ಅವಳು ಹೂಂ ಅನ್ನಲಿಲ್ಲ- ಊಹೂಂ ಅನ್ನಲಿಲ್ಲ. ಹೋಟೆಲ್‌ನಲ್ಲಿ ಕಾಫಿಗೆ ಆರ್ಡರ್ ಮಾಡಿ ತಟಕ್ಕನೆ ತಪ್ಪು ಅರಿವಾದವಳಂತೆ "ಏನಾದ್ರೂ ತಿಂತೀಯೇನೋ?" ಪ್ರಶ್ನಿಸಿದಳು. ರೋಟಿ ಆರ್ಡರ್ ಮಾಡಿದ.

ಅವ್ನಿಗೆ ರೋಟಿಯೆಂದರೆ ಬಹಳ ಇಷ್ಟ. ಬಯಸಿ ಬಯಸಿ ತಿನ್ನುತ್ತಿದ್ದ. ಬ್ರೆಡ್ ಬಟರ್ ಜಾಮ್, ಕಟ್ಲೆಟ್, ಸ್ಯಾಂಡ್‌ವಿಚ್, ಸ್ಕ್ರಾಂಬಲ್ಡ್ ಎಗ್, ಫ್ರೆಂಚ್ ಟೋಸ್ಟ್, ಹೀಗೆ ಮೆನುವನ್ನೆ ಮೆತ್ತಿಕೊಂಡು ಬೆಳೆದಿದ್ದ ಹೋಟೆಲ್ಲನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ಶುದ್ಧ ಭಾರತೀಯ ಹೆಮ್ಮೆಯ ಘೋಷಣೆ ಬರಿಯ ಕವಚವಾಗಿದ್ದದ್ದನ್ನು ಕಂಡು ತೀರಾ ಅಸಹ್ಯಿಸಿಕೊಂಡಿದ್ದ. ಆ ರಸ್ತೆಯ ತುಂಬಾ ಅಂತಹ ಹೋಟೆಲ್ಲುಗಳೆ. ಊಳಿದದ್ದು ಪಬ್‌ಗಳು. ಅಲ್ಲೊಂದು ಇಲ್ಲೊಂದು ಪಾನಿಪುರಿ, ಭೇಲ್ ಪುರಿ ಗಾಡಿಗಳು. ಅವುಗಳ ಮುಂದೆ ರಸ್ತೆಯಲ್ಲಿ ಕಾರುಗಳು.

"ನಾನು ಹಳ್ಳಿಗೆ ಹೋದಾಗ ನಮ್ಮತ್ತೆ - ಅಜ್ಜಿ ಹೀಗೆ ಕೆಂಡದ ರೊಟ್ಟಿ ಸುಟ್ಟು ಕೊಡುತ್ತಿದ್ದರು." - ಯಾಕೆ ರೋಟಿಯನ್ನು ಇಷ್ಟ ಪಡುತ್ತೇನೆ ಎಂಬುದಕ್ಕೆ ಕಾರಣ ಅವಳ ಸಮ್ಮುಖದಲ್ಲಿ ಬಯಲಾಗಿ, ಅವನ ಅರಿವಿಗೂ ಗೋಚರವಾದದ್ದು ಅವನಿಗೆ ಆಶ್ಚರ್ಯವಾಯ್ತು- ಆಗಲಿಲ್ಲ.  ಅವಳ ಬಗೆಗೆ ಮತ್ತಷ್ಟು ಗೌರವ.
"ನಾನು ನಿನ್ನನ್ನು ಪ್ರೀತಿಸುತ್ತೇನೆ.." ಒಳಗೆ ಗಟ್ಟಿಯಾದ ಭಾವವನ್ನು ಹೊರಗೆಡವಲು ನಾಲಿಗೆ ತುದಿಗೆ ಬಂದಿದ್ದ ಪದಗಳನ್ನು ಕತ್ತರಿಸಿದ. "ಹಾಗಂದರೆ ಏನು?"- ಅವಳು ಕೇಳೆ ಕೇಳುತ್ತಾಳೆ.  ಒಳಗೆ ತಡಕಿಕೊಂಡಾಗ ಉತ್ತರ ಅವನಿಗೆ ಸ್ಪಷ್ಟವಿರಲಿಲ್ಲ. ಹೀಗೆ ಸ್ಪಷ್ಟವಾಗದ್ದರ ಕುರಿತು ಏನೆ ಹೇಳಿದರೂ ಸುಳ್ಳಾಗುತ್ತದೆ. ಬೇಡವೆಂದು ನಿರ್ಣಯಿಸಿ ಸುಮ್ಮನಾದ. ಹೊರಗಡೆ ಕತ್ತಲು- ಒಳಗೆ ಮಂಕು ಬೆಳಕು. ರೊಟ್ಟಿ ತಿನ್ನುತ್ತಲೇ ಅವಳ ಮುಖವನ್ನು ನೋಡತೊಡಗಿದ.
"ನನಗೆ ಬೆಂಗಳೂರು ಬೇಜಾರಾಗಿ ಹೋಗಿದೆ.  ದೂರ ಹೋಗ್ಬೇಕೂಂತನ್ನಿಸ್ತಿದೆ."  ಅವಳ ಮಾತುಗಳಲ್ಲಿ ಅವನ ಭಾವ ಧ್ವನಿಯೊಡೆದಿತ್ತು.  ವಯಕ್ ಎಂದು ನಾಸಿಯಾ. "ಯಾಕೆ?" ಕಷ್ಟ ಪಟ್ಟು ಕೇಳಿದ.  ಅನುಚಿತವಾದರೆ...ಆತಂಕ.  ತೀರಾ ವೈಯಕ್ತಿಕವಾದದ್ದನ್ನು ಕೇಳಲು ಸಂಕೋಚ.  ಅವಳು: "ಮನೇಲಿ ಮದುವೆ ಮಾಡ್ಕೋಂತ ಹಠ ಹಿಡಿದಿದ್ದಾರೆ...ನನಗೆ ಯಾರೋ ಅಪರಿಚಿತನ ಜೊತೆ ...ಆಗೋಲ್ಲ..."
"ನಿನ್ನ ತಂದೆ ತಾಯಿ ಸಂಕಟಾನ ಅರ್ಥ ಮಾಡಿಕೋಬಲ್ಲೆಯ..?  ತಪ್ಪೂಂತನ್ನಿಸೋಲ್ವ?"
"ಆಯ್ತು- ಅರ್ಥವಾಗುತ್ತೆ...ಆದ್ರೂ ನನಗಾಗೋಲ್ಲ...ಅದಕ್ಕೇ ಈ ಕೆಲಸ ಬಿಟ್ಟು ಬೇರೆ ಕಡೆ ಹೋಗ್ಬೇಕೂಂತನ್ನಿಸ್ತಿದೆ..."

"ಆಗ ಅವರ ಸಂಕಟವೇನೂ ಕಮ್ಮಿಯಾಗೋಲ್ಲ. ನೀನು ನಿನ್ನ ನಿರ್ಣಯ ಏನೂನ್ನೋದನ್ನ ಅವರಿಗೆ ಹೇಳು. ಮನದಟ್ಟು ಮಾಡಿಸು..."

"ಅವರಿಗೆ ಅರ್ಥವಾಗೋಲ್ಲ. ಯಾರನ್ನಾದರೂ ಸರಿ ಮದ್ವೆ ಮಾಡ್ಕೋಂತ ಹಠ ಹಿಡೀತಾರೆ"

"ಈ ಪಲಾಯನದಿಂದ ಯಾರಿಗೂ ಏನೂ ಪರಿಹಾರ ಸಿಕ್ಕೋಲ್ಲ."

"ನಿಜ ಇರಬಹುದು... ಆದರೂ.."

ಅವಳ ಹಠ ಅವಳ ತಳಮಳ ಅವನಿಗೆ ಅರ್ಥವಾಗುತ್ತೆ.  ಆದರೂ ಅವನು ಅವಳ ತಾಯ್ತಂದೆಯರ ಪರವಾಗೇ ವಾದಿಸುತ್ತಾನೆ.  ಹಾಗೆ ವಾದಿಸುವುದೂ ಪ್ರಯೋಜನವಿಲ್ಲ.- ನಿರ್ಣಯ ಅವಳದೇ ಅಲ್ಲವೆ..ಅವನಿಗೆ ಗೊತ್ತು. ಆದರೂ ಒಳಗೇ ಗೊಣಗಿಕೊಳ್ಳುತ್ತಾನೆ- ಅಪ್ಪ ಅಮ್ಮನ ಮಾತುಗಳನ್ನ ಕೇಳಿಕೊಂಡು ಇರೋಕ್ಕೆ ಯಾಕಾದ್ರು ಆಗೋಲ್ಲ?  ಹಾಳಾಗಿ ಹೋಗಲಿ ಒಂದು ನಿರ್ಣಯಕ್ಕಾದರೂ ಬಂದು.. ಆಚೆಗೂ ನಿಲ್ಲದ ಈಚೆಗೂ ನಿಲ್ಲದ... ಹ್ಯಾಗೂ ಕಾಲ ಕಳೀತಿದೆ.  ಜೀವನದಲ್ಲಿ ಮದ್ವೇನೆ ಎಲ್ಲವೂ ಅಲ್ಲ. ಅದು ಅವ್ನಿಗೂ ತಿಳಿದಿದೆ..ಆದರೂ ..ಮತನ್ನಾಡಿದರೆ ಜಗಳವಾಗುತ್ತೆ.

"ಅತಿಯಾಗಾಡ್ಬೇಡ " ಗದರಿಸ್ತಾಳೆ. ಸಹಮತ ಯಾವುದರಲ್ಲೂ ಇಲ್ಲ.  ಸದಾಜಗಳ.  ಒಮ್ಮೊಮ್ಮೆ ಇಬ್ಬರಿಗೂ ಸಿಟ್ಟು ಬರುತ್ತೆ.  ಕಪಾಳಕ್ಕೆ ಹೊಡೆಯುವಷ್ಟು. ಹಾಗಂತ ಅವಳೂ ಹೇಳಿದ್ದಾಳೆ.  ಅವನೂ ಹೇಳಿದ್ದಾನೆ.  ಒಮ್ಮೆ ಹೊಡೆದು ಬಿಡುವಷ್ಟು ಕೋಪ.

"ಹೊಡೀತೀನಿ ಈಗ.."

"ನಮ್ಮಪ್ಪ ಅಮ್ಮನೇ ಹೊಡೆದಿಲ್ಲ" - ತಟಕ್ಕನೆ ಅವಳು ಮಾತುಗಳಲ್ಲಿ ಹೊಡೆದೇ ಬಿಟ್ಟಳು.

ಅವನಿಗೇನೂ ಬೇಸರವಾಗಲಿಲ್ಲ.  ಗೆರೆ ಹಾಕಲೇ ಬೇಕಿತ್ತು.  ಹಾಕಿಯಾಯ್ತು.  ಅವಳಿಗೂ ಬೇಸರವಾಗಲಿಲ್ಲ.

ರೋಟಿ ತಿಂದು ಮುಗಿಸಿದ್ದ. ಕಾಫಿ ಆಯ್ತು. ಬಿಲ್ ಕೊಟ್ಟು ಒಂದು ರೂಪಾಯಿ ಟಿಪ್ಸ್ ಬಿಟ್ಟಳು.

"ಟಿಪ್ಸ್ ಯಾಕೆ ಬಿಡ್ತೀಯ?" ಜಗಳ ಆಡಬಾರದು ಎಂದು ಎಷ್ಟೇ ನಿರ್ಣಯಿಸಿದ್ದರೂ ಒಮ್ಮೊಮ್ಮೆ ಅತಿಯಾಗಿ ಆಡುತ್ತಾನೆ - ಬಫೂನ್.

ಅವಳ ಕಣ್ಣಲ್ಲಿ ಉರಿ ಕಾಣಿಸಿಕೊಂಡಿತು. ಈ ಪ್ರಶ್ನೆಯನ್ನು ಅವನು ನಾಲ್ಕನೆ ಬಾರಿ ಕೇಳುತ್ತಿರುವುದು. ಆದರೂ ಕೇಳಿದ ಪ್ರಶ್ನೆಗೆ ಸಂಕಟದ ಉತ್ತರ.

"ನನಗೆ ಗೊತ್ತಿಲ್ಲ.  ನಮ್ಮಪ್ಪ ಅಮ್ಮನ ಜೊತೆ ಹೋಟೆಲ್‌ಗೆ ಹೋದಾಗ ಟಿಪ್ಸ್ ಬಿಡೋದು ನೋಡಿರಬೇಕು.  ಬಹುಶಃ ಟಿಪ್ಸ್ ಬಿಡೋದು ನಮ್ಮಪ್ಪನಿಂದ ಕಲಿತಿದ್ದಿರಬೇಕು..."

ಅವನಿಗೆ ನಿಜವಾಗಿಯೂ ಕೋಪ ಉಮ್ಮಳಿಸಿಕೊಂಡು ಬಂದಿತ್ತು.  ಕೋಪವನ್ನು ಮುಷ್ಠಿಗೆ ರವಾನಿಸಿ ಬೆರಳುಗಳ ಮೂಲಕ ಹೊರಗೆ ಹಾಕಿದ.  ಆದರೂ ಅದು ಜಿಗುಟು ಸ್ವರದಲ್ಲಿ ಒಡೆದಿತ್ತು.  "ಸುಳ್ಳು.." ಕಿರುಚಿದ.

"ಹೋಗೋ ಎಲ್ಲವನ್ನೂ ಕಾನ್ಶಿಯಸ್ಸಾಗೆ ಮಾಡ್ಬೇಕಾಗಿಲ್ಲ..ಯಾಕೇಂತ ನನಗೆ ಗೊತ್ತಿಲ್ಲ.."- ಅವಳಿಗೂ ಸಿಟ್ಟು-ವಾಕರಿಕೆ-ಅಸಹ್ಯ.

"ನನಗೆ ಗೊತ್ತು ಯಾಕೇಂತ, ನೀನು ಈ ಹ್ಯಾಬಿಟ್ಟನ್ನ ಎಲ್ಲಿ ಪಿಕಪ್ ಮಾಡಿದ್ದೀಯಾನ್ನೋದು.."

ಇದನ್ನು ಈವರೆಗೆ ಅವನು ಕಾಲೇಜಿನ ವಲಯದಲ್ಲಿ ಸಹೋದ್ಯೋಗಿಗಳ ನಡುವೆ ಸಾಕಷ್ಟು ಬಾರಿ ಹೇಳಿದ್ದ.  ಬಹಳ ಜನಕ್ಕೆ ಹೇಳುತ್ತಲೇ ಇರುತ್ತಾನೆ.  ಒಳ್ಗೆ ಮುಷ್ಠಿ ಹಿಡಿದು ಕಟಕಟಿಸಿ, ದ್ರವಿಸಿ...

"ಹೇಳು ಹಾಗಾದೆರೆ.." ಅವಳು ಸವಾಲು ಹಾಕಿದಳು.

"ಈಗಲ್ಲ , ಸಮಯ ಬರಲಿ ಸಾಧ್ಯಾವಾದರೆ ನೀನೆ ಯೋಚಿಸು, ಹೊಳೆದರೆ ಹೇಳು.."

"ಹೀಗೆ ಆಲೋಚಿಸ್ತಾ ಕೂತರೆ ಸಿಗೋ ಸಣ್ಣ ಪುಟ್ಟ ಸಂತೋಷಗಳನ್ನೂ ಕಳ್ಕೋಬೇಕಾಗುತ್ತೆ.  ನಿನ್ನ ತರಹ ಎಲ್ಲವನ್ನೂ ಗಂಭೀರವಾಗಿ ಯೋಚಿಸಬಾರದು.."

ಇಬ್ಬರೂ ಹೋಟೆಲ್ಲಿಂದ ಎದ್ದು ಆಚೆಗೆ ಬಂದರು.  ಸಣ್ಣದಾಗಿ ಮಳೆ ಹನಿಯುತ್ತಿತ್ತು.  ಅಸಹನೆಯನ್ನೂ ಕೋಪವನ್ನು ಮುಚ್ಚಿಟ್ಟುಬಿಡುವಷ್ಟು ನಯಗಾರಿಕೆ ಅವಳಿಗಿಲ್ಲದ್ದು ಅವನಿಗೆ ಮೆಚ್ಚಿಗೆಯಾದ ಅಂಶ. ಕೋಪವನ್ನು ತೋರಿಸಿಕೊಳ್ಳೋದಕ್ಕೂ ಒಳಗಡೆ ಎಲ್ಲೋ ಇಂಟಗ್ರೆಟಿ ಇರಬೇಕು.  ಅಸಲಿ ಗುಣವನ್ನ ಯಾವ ಎಗ್ಗೂ ಇಲ್ಲದೆ, ಅಪರೂಪಕ್ಕೊಮ್ಮೆ ಇಂತಹವರು ಕಾಣ ಸಿಗೋದು...ಕಾಲೇಜಿನ ಒಳಗೆ ಬಂದಿದ್ದರು.

"ಹ್ಯಾಗೆ ಹೋಗ್ತೀಯ?" ಕೇಳಿದ.

"ಬಸ್ ಸ್ಟಾಪಿಗೆ ನಡ್ಕೊಂಡು ಹೋಗ್ತೀನಿ."- ಕಾಲೇಜಿನಿಂದ ಬಸ್ ಸ್ಟಾಪಿಗೆ ಐದು ನಿಮಿಷದ ಹಾದಿ.

"ಜೊತೆಗೆ ಬರಲ?"

"ಬೇಡ ಒಬ್ಬಳೆ ಹೋಗ್ತೀನಿ."

ಕತ್ತಲಲ್ಲಿ ಒಬ್ಬಳೇ ನಡೆಯ ತೊಡಗಿದಳು. ಜನರೊಂದಿಗೆ ಅವಳು ಬೆರೆತರೂ ಅವಳು ಒಬ್ಬಂಟಿ ಎಂದನ್ನಿಸಿತವನಿಗೆ. ನಡೆಯುತ್ತಾ ಹೋಗುತ್ತಿದ್ದವಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತ. ಕ್ರಮೇಣ ಅವನ ದೃಷ್ಟಿಯಾಚೆಗೆ ಕರಗಿದಳು.  ಅವಳಿಗೆ ಗೊತ್ತಿಲ್ಲ.  ಸಣ್ಣ ಸಣ್ಣ ಸಂಗತಿಗಳಲ್ಲಿ ಅವನೂ ಸಂತೋಷಿಸುತ್ತಾನೆಂದು. ಅವನು ಹೇಳುವುದೂ ಇಲ್ಲ- ಅವಳು ಕೇಳುವುದೂ ಇಲ್ಲ. ಇಬ್ಬರಿಗೂ ಗೊತ್ತು.

"ಬೆಳೆಗಾಂ ಡಿಸ್ಟ್ರಿಕ್ಟ್‌ನಲ್ಲಿ ಒಂದು ಅಮೆರಿಕನ್ ಫ್ಯಾಕ್ಟ್ರಿ ಇದೆ. ಅದರ ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡ್ಬೇಕೂಂತಿದ್ದಾರೆ. ಅವರಿಗೆ ಸೋಷಿಯಲ್ ವೆಲ್‌ಫೇರ್ ಆಫಿಸರ್ ಬೇಕಂತೆ. ನನಗೆ ಇಂಟೆರ್‌ವ್ಯೂ ಬಂದಿದೆ, ಹೋಗ್ತೀನಿ. ಯಾರೀಗೂ ಹೇಳ್ಬೇಡ.."

ಒಂದು ದಿನ ದಿಢೀರನೆ ಹೇಳಿದಳು.  ಅವನಿಗೆ ಒಂದು ನಿಮಿಷ ಕಳವಳವಾಯ್ತು. ಆ ಕಳವಳಕ್ಕೆ ಎರಡು ಕಾರಣಗಳು ಅವನಿಗೆ ಸ್ಪಷ್ಟವಾಯ್ತು.  ಒಂದನ್ನು ಹೇಳಿದ ಒಂದನ್ನು ಮುಚ್ಚಿಟ್ಟ.  ಬಹಿರಂಗವಾದರೆ ಅದಕ್ಕೊಂದು ಲೆಜಿಟಿಮಸಿ ಹುಡುಕುವ ಪ್ರಯತ್ನ..ಥೂ ಹೇಳುವುದೇ ಬೇಡ.  ಇನ್ನೊಂದು ಕಾರಣ ಅವನು ಪ್ರಾಮಾಣಿಕವಾಗಿ ಶ್ರದ್ದೇಯಾಧಾರದಲ್ಲಿ ನಂಬಿಕೊಂಡು ಬಂದದ್ದು.  ಅದನ್ನು ಹೇಳಿದ:

"ಅಮೆರಿಕನ್ ಕಂಪನಿ ಅಂತೀಯಾ.  ಅಲ್ಟಿಮೇಟ್ಲಿ ಅದು ಲಾಭಬಡುಕ ಸಂಸ್ಥೆ.  ಆ ಫ್ಯಾಕ್ಟ್ರೀ ಅಲ್ಲಿಲ್ಲದೆ ಹೋಗಿದ್ದರೆ ಅವರು ಯಾವ ಕುಗ್ರಾಮವನ್ನೂ ದತ್ತು ತೊಗೋತಾ ಇರ್‍ಲಿಲ್ಲ.  ಪ್ರಾದೇಶಿಕವಾಗಿ ಯಾವುದೇ ವಿರೋಧ ಬರದೇ ಇರ್‍ಲೀಂತ ಅವರು ಈ ತರಹ ಮಾಡೋದು ಉಂಟು.  ಒಲೈಸ್ತಾರೆ, ಮಣಿಯದೆ ಇದ್ದರೆ ಕರಾಮತ್ತು ಮಾಡ್ತಾರೆ. ಅಂತಹವರ ಮಧ್ಯೆ ನೀನು..?  ಕಲ್ಪಿಸಿಕೊಳ್ಳೋಕ್ಕೂ ಆಗ್ತಿಲ್ಲ.."

" ಅಲ್ಲಿ ಸೇವಾಗ್ರಾಮದಲ್ಲಿ ಎಷ್ಟೊಂದು ಜನ ಮುಂದೆ ನಿಂತು ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ದುಡೀತಿರ್‍ತಾರೆ ಗೊತ್ತಾ?  ಇಲ್ಲಿ ಕೂತ್ಕೊಂಡು ಕಾಫಿ ಕುಡೀತ ಇಂಟಗ್ರಟಿ ಬಗ್ಗೆ ಮಾತಾಡೋದೂದ್ರೆ ಅಸಹ್ಯವಾಗಿಬಿಟ್ಟಿದೆ."
"ಆದರೆ ನೀನು ಅಲ್ಲಿಗೆ ಹೋಗ್ಬೇಕೂಂತಿರೋದಕ್ಕೆ ನಿಜವಾದ ಕಾರಣ ಅದಲ್ಲ."
"ನಿಜ, ಆದ್ರೆ ನಾನು ಹೋದ ಕಡೆ ಪ್ರಾಮಾಣಿಕವಾಗಿರ್‍ತೀನೀಂತ ನನಗನ್ನಿಸುತ್ತೆ.  ಜನಸೇವೆ, ಸಮಾಜಸೇವೆಯ ಮಾತುಗಳನ್ನೇನೂ ಆಡೋದಿಲ್ಲ ಹೆದರ್‍ಕೋಬೇಡ..."

ಅವಳ ಮಾತುಗಳಲ್ಲಿ ಪ್ರಾಮಣಿಕತೆಯಿತ್ತು.  ಅವನು ಸುಮ್ಮನೆ ಅವಳು ತೊಟ್ಟಿದ್ದ ಖಾದಿ ಸೆಲ್ವಾರ್ ಕಮೀಜನ್ನೇ ನೋಡತೊಡಗಿದ್ದ.  ಒಮ್ಮೆ ಅವಳು ಹೇಳಿದ್ದಳು:

" ಖಾದಿ ನನಗೆ ಬಹಳ ಅನುಕೂಲ. ಮೂವತ್ತೊಂಬತ್ತು ರೂಪಾಯಿ ಮೀಟರ್.  ಯಾರು ಕೊಡ್ತಾರೆ ಹೇಳು.  ನಾನು ಅದನ್ನ ಹಾಕಿಕೊಂಡು ದೇಶಭಕ್ತಿಯ ಸೋಗು ಹಾಕ್ತಾ ಇಲ್ಲ. ಆ ಮಾತುಗಳನ್ನ ಆಡ್ತಲೂ ಇಲ್ಲ.  ಅನುಕೂಲವಾಗಿದೆ, ಉಪಯೋಗಿಸ್ತಿದೀನಿ, ಅಷ್ಟೆ."

ಅಮೆರಿಕನ್ ಫ್ಯಾಕ್ಟರಿ, ಸೋಷಿಯಲ್ ವೆಲ್‌ಫೇರ್, ಖಾದಿ, ಮನೆ ಹೀಗೆಲ್ಲ ಅವಳು ಅಂದು ಸುದೀರ್ಘವಾಗಿ ಮಾತನಾಡತೊಡಗಿದಳು. ಅವಳ ಧ್ವನಿಯಲ್ಲಿನ ಮುಗ್ಧತೆ, ಪ್ರಾಮಾಣಿಕತೆ, ಏಕಾಕಿತನವೆಲ್ಲ ಅವನಿಗೆ ಹೊಸ ಅರ್ಥಗಳೊಂದಿಗೆ ಗೋಚರವಾಗತೊಡಗಿ ಗೊಂದಲದಲ್ಲಿ ಅವಳೇ ಹುಟ್ಟಿಹಾಕಿಕೊಂಡಿದ್ದ ವಿಪರ್ಯಾಸಗಳನ್ನೆಲ್ಲ ಬದಿಗೊತ್ತಿ ಅವನು ಭಾವುಕನಾದ.

ಆಗ ಅವನಿಗೆ ಕಾಣಿಸಿದ್ದು- ಶ್ರದ್ಧೆ ಹುಟ್ಟಿಕೊಳ್ಳುವ ಮುನ್ನದ ಪೂರ್ವಾವಸ್ಥೆಯಾದ ಗೊಂದಲಗಳು.. ಆಲೋಚಿಸುತ್ತಲೇ ನಿರ್ಣಯ ಏನಾಗಬಹುದು ಎಂಬ ಕುತೂಹಲಕ್ಕೆ ಸಿಕ್ಕಿಕೊಂಡ.

ಬೆರಗಿನಿಂದ ನೋಡುತ್ತಿದ್ದ ಅವನ ಕಣ್ಣುಗಳಿಗೆ ಅವಳು ಹಿರಿಯವಳಾಗಿ ಅವನು ಕುಗ್ಗತೊಡಗಿದ್ದ.  ಆದರೂ ಅವಳು ಹೋಗದೆ ಇದ್ದರೆ ಎಷ್ಟು ಚೆಂದವಲ್ಲವೆ. ಹೀಗೆಯೆ ಇವಳು ಮಾತನಾಡುತ್ತಿದ್ದರೆ ಎಷ್ಟು ಚೆಂದವಲ್ಲವೆ ಎಂದನ್ನಿಸ ತೊಡಗಿ ಹೋಗಿಯೇ ಬಿಡುತ್ತಾಳೆ ಎಂಬ ಆತಂಕವೂ ಅಧಿಕವಾಗಿ "ಹೋಗ್ಬೇಡಾ" ಎಂದು ಚೀರಬೇಕನ್ನನಿಸಿತು. ಅವನಿಗೆ ಆ ಸ್ವಾತಂತ್ರ್ಯವೂ ಇಲ್ಲ. ಆತ್ಮೀಯತೆ- ಸಲಿಗೆಗಳೂ ಸೋಗಾಗಿಬಿಡುವ ಅಸಹ್ಯ ಚೀರಾಟ, ಒಳಗೇ ಹುತು ಹೋಗಿ ಗೊಗ್ಗರು ಧ್ವನಿ ಹೊರಡತೊಡಗಿ ಜೋಕರ್ ಆದ, ‘ಪಾಪ’ ಎಂದು ಕಣ್ಣು ಆಡತೊಡಗಿದಂತೆ ಭಾಸವಾಗಿ ನಿಲ್ಲಿಸಿ ಎಂದು ಚೀರಬೇಕನ್ನಿಸಿತು. ಸಾಧ್ಯವಾಗದೆ ಹೋಯಿತು.

ಕಾಲೇಜಿಗೆ ಸಣ್ಣ ಬ್ರೀಫ್ ಕೇಸಿನೊಂದಿಗೆ ಬಂದಿದ್ದಳು.  ಅಂದಿನ ಕೆಲಸ ಮುಗಿಸಿ ನೇರ ಸ್ಟೇಷನ್‌ಗೆ ಅಲ್ಲಿಂದ ಬೆಳಗಾಂಗೆ ಪ್ರಯಾಣ.

"ಸ್ಟೇಷನ್‌ಗೆ ನಾನು ಬರಲ..?" - ಕೇಳಿದ.
"ಬೇಡ , ನಾನು ನೇರ ಸ್ಟೇಷನ್‌ಗೆ ಹೋಗ್ತಾ ಇಲ್ಲ"

ಅವಳು ಬ್ರೀಫ್‌ಕೇಸ್ ಹಿಡಿದು ಹೊರಟಾಗ:

"ನನ್ನನ್ನ ಸೀರಿಯಸ್ಸಾಗಿ ತೊಗೋಬೇಡ.."

ಅವಳು ಬೇರೆ ಜನರ ನಡುವೆ ಮರೆಯಾಗುತ್ತಲೆ ಇವನೂ ಬೇರೆಯವರ ತೆಕ್ಕೆಗೆ ಬಿದ್ದ.  ಅಷ್ಟು ಜನರ ನಡುವೆಯೂ ಏಕಸಕಿತನ ಖಾಲಿ ಖಾಲಿ.  ಕಾಫಿ ತಿಂಡಿ ಮಾತುಗಳಲ್ಲಿ ತೊಡಗಿಸಿಕೊಳ್ಳಲಾಗದ ಒಳ ಚೀರಾಟ.

ಸ್ಟೇಷನ್‌ಗೆ ಹೋಗಲೋ ಬೇಡವೋ- ಸಂದಿಗ್ಧದ ನಡುವೆಯೇ ಅಂತೂ ಹೋಗಬೇಕೆಂಬ ಹಠ ಬೆಳೆದು ಜಿಟಿಜಿಟಿ ಮಳೆಯ ನಡುವೆಯೇ ಹೊರಟ.  ಟ್ರೈನು ಹೊರಡುವುದಕ್ಕೆ ಇನ್ನೂ ಬಹಳ ಸಮಯವಿತ್ತು. ಬಂದಿರಲಾರಳೆ?  ಹುಡುಕಿದ.  ಶಬರಿಮಲೈಗೆ ಹೊರಟಿದ್ದ ದೊಡ್ಡ ಗುಂಪೊಂದರ ಮಧ್ಯೆ ಅವಳು ಕಾಣಿಸಲಿಲ್ಲ.  ಬದಲಿಗೆ ಮುರುಗೇಸನ್ ಕಂಡ.  ಮುರುಗೇಸನ್‌ಗೂ ಇವನನ್ನು ಕಂಡು ಸೋಜಿಗ.  ದಡ ದಡ ಹೆಜ್ಜೆ ಹಾಕುತ್ತ ಅದೇ ಹಳೆ ಪ್ರೀತಿಯನ್ನು ಜಿನುಗಿಸಿ-

"ಏನ್ಗುರೂ ಸ್ಟೇಷನ್‌ನಲ್ಲಿ..?" - ತಮಿಳಿನಲ್ಲಿ.
"ಮುರುಗೇಸಾ ಏನೋ ಇದು- ಶಬರಿಮಲೈಗೆ ಹೊರಟಿದ್ದೀಯ..?"
"ಹೂಂ..ಎಂಟನೆ ವರ್ಷ...ನಿನ್ನನ್ನ ನೋಡಿ ಎಷ್ಟು ವರ್ಷಗಳಾಗೋಯ್ತು..!  ನಿನ್ನ ಕತೇನೆಲ್ಲಾ ಒದ್ತಾ ಇರ್‍ತೀನಿ."
"ಅದ್ಸರಿ ಈಗೇನ್ಮಾಡ್ತಾ ಇದ್ದೀಯ?"

"ಬಿನ್ನಿ ಮಿಲ್ಸ್ ಹತ್ತಿರ ಸಣ್ಣ ಹೊಟೆಲ್ ಇಟ್ಟೀದೀನಿ ಹೆಂಡ್ತಿ, ಅವಳ ತಮ್ಮ ಎಲ್ರೂ ಹೋಟೆಲ್ ನಡ್ಸೋಕ್ ಸಹಾಯ ಮಾಡ್ತಾರೆ.  ಊಟ ತಿಂಡಿ ಬಾಡಿಗೆಗೇನೂ ಕೊರತೆ ಇಲ್ಲ. ಅದೇ, ಬೆಂಗಳೂರ್ ಯೂನಿವರ್ಸಿಟಿ ಕ್ಯಾಂಟೀನ್‌ನಲ್ಲಿ ಸಪ್ಲಯರ್ ಆಗಿದ್ದಾಗ ಎಷ್ಟು ಸಂತೋಷವಾಗಿದ್ನೋ ಅಷ್ಟೆ ಸಂತೋಷವಾಗಿದೀನಿ.  ನೀನು ಕಾಮತ್ ಹೋಟ್ಲು ಬಿಟ್ಟು ಸಪ್ಲಯರ್ ಕೆಲಸ ಬಿಟ್ಟು ದೊಡ್ಡೋನಾಗಿದ್ದೀ. ನೀನು ಹ್ಯಾಗಿದ್ದೀ?"
"ಏನೋ ಇದೀನಿ.  ನಾನೂ ನೀನು ಟಿಪ್ಸ್ ಕಾಸೆಲ್ಲಾ ಕೂಡಿಹಾಕಿ ಎಂಜಿ‌ಆರ್ ಸಿನಿಮಾ ನೋಡ್ತಿದ್ದು ಜ್ಞಾಪ್ಕ ಇದ್ಯ?"
"ಇಲ್ದೇ ಏನು ಗುರು, ನಿನ್ನ ಜತೆ ಸಿನಿಮಾ ನೋಡ್ಬೇಕೂಂತ ಆವಾಗಾವಗ್ ಅನ್ಸುತ್ತೆ.  ನಾನು ಮಲೈನಿಂದ ವಾಪಸ್ ಬಂದ್ಮೇಲೆ ತಿರ್‍ಗಾ ಹೋಗೋಣ.  ದರಿದ್ರ ಟಿಪ್ಸ್ ಕಾಸು ಬೇಡ.  ನಂದೆ ಕಾಸು.  ಏನಂತೀಯ?"

- ಮುರುಗೇಸನ ಮಾತುಗಳನ್ನ ಮತ್ಸರದಿಂದ ಕೇಳುತ್ತಾ ನಿಂತಾಗ ಒಳಗೆ ಖಾಲಿ ಖಾಲಿ- ಬಿಕ್ಕಿ ಬಿಕ್ಕಿ ಅಳಬೇಕನ್ನಿಸಿತು.  ಅವಳು ಹೋಗುತ್ತಾಳೆ ಎಂಬ ವ್ಯಥೆಗೋ ಅಥವ ಮುರುಗೇಸನಂತ ಪ್ರೀತಿಯ ಒಡನಾಡಿ ಸಿಕ್ಕಿದ ಸಂತೋಷಕ್ಕೋ?  ಗೊತ್ತಿಲ್ಲ.

"ಸಿಗರೇಟು ಸೇದ್ತೀಯೇನೊ?"
"ಬೀಡಿ ಗುರು, ಆದರೆ ಈಗ ವ್ರತ ಹಿಡಿದ್ದೀನಲ್ಲ....ಆಗಲ್ಲ.  ಗುರುಚಾಮಿ ಕರೀತಾ ಅವ್ರೆ. ಬಂದ್ಮೇಲೆ ಸಿಗ್ತೀನಿ."

ಮುರುಗೇಸ ಹೊರಟ. ಅವನ ಗುಂಪು- ಸ್ಥಳ ಬದಲಾಯಿಸುವುದನ್ನು ಇವನು ನೋಡುತ್ತಾ ನಿಂತ.  ಖಾಲಿ ಖಾಲಿ.  ಸಿಗರೇಟಿನ ಮೇಲೆ ಸಿಗರೇಟನ್ನ ಸುಟ್ಟ.  ಅವಳು ಬಂದಿರುತ್ತಾಳೇನೊ ಎಂದು ಹುಡುಕಲಾರಂಭಿಸಿದ.  ದೊಡ್ಡ ಉದ್ದದ ಟ್ರೈನಿನ ಪ್ರತಿಯೊಂದು ಬೋಗಿಯನ್ನೂ ಜಾಲಾಡಿದ.  ಕಾಣಿಸಲಿಲ್ಲ.  ತಟಕ್ಕನೆ ತಲೆ ಮೇಲೊಂದು ಏಟು ಬಿತ್ತು! ಹಿಂದಕ್ಕೆ ತಿರುಗಿದ- "ಏನೋ" ಎಂದು ಮುಗುಳ್ನಕ್ಕಳು!  ಟ್ರೈನೂ ಹೊರಡುವುದಕ್ಕೆ ಐದು ನಿಮಿಷಗಳಷ್ಟೆ ಇತ್ತು.

"ಒಂದನ್ನು ಹೇಳ್ಬೇಕೂಂತನ್ನಿಸ್ತು. ಬಂದೆ. ಹೇಳದೆ ಹೋಗಿದ್ದಿದ್ದರೆ ನಿದ್ದೆ ಬರ್‍ತಿರಲಿಲ್ಲ."

ತಟಕ್ಕನೆ ಅವನ ಎದುರಿಗೆ ಅರ್ಧ ಅಡಿಯೂ ಇರಲಿಲ್ಲ ಅಷ್ಟು ಸಮೀಪ ಬಂದು ನಿಂತು ಕಣ್ಣುಗಳಲ್ಲಿ ಜೀವಧ್ವನಿಯನ್ನು ತುಂಬಿಕೊಂಡು ಈಗಲಾದರೂ ಹೇಳುತ್ತಾನೆ- "ಏನದು? ಏನು ಹೇಳೋ.." ಎಂದು ಕೇಳಿದಳು.

ಅವಳನ್ನೇ ನೋಡುತ್ತಾ - ಆಕಾರವನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಂಡು ಅದರ ಬೆರಗಿನಲ್ಲಿ ಮೈಮರೆತು-

ಮರೆತು ಹೋದಾತು- ಹೇಳಿಯೇ ಬಿಡಬೇಕು ಎಂದು ಅನ್ನಿಸಿ ರಿಹರ್ಸಲ್ ಮಾಡಿಕೊಂಡು ಬಂದಿದ್ದ ಸಾಲುಗಳನ್ನು ಸಕಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಹೇಳಿದ-

"ನಾನು ಯಾವಾಗ್ಲಾದ್ರೂ ನೀನು ಹೋಗ್ಬೇಡಾ ಅಂತ ಹೇಳಿದ್ರೆ ಮರೆತು ಬಿಡು. ನೀನು ಹೋಗ್ಬೇಕೂಂತಿದ್ರೆ, ನಿರ್ಧಾರ ಅಚಲವಾಗಿದ್ರೆ ಸ್ನೇಹದ ಹೆಸರಿನಲ್ಲಿ ನಿರ್ಧಾರದ ಅಚಲತೆಯ ಶಕ್ತಿಹರಣ ಮಾಡೋದು ತಪ್ಪು.."

ಟ್ರೈನು ಹೊರಡುವ ಸೂಚನೆ ಕಾಣಿಸಿಕೊಡು ಲಗುಬಗೆಯಿಂದ ಅವಳು ಹತ್ತಿ ತನ್ನ ಸೀಟಿನಲ್ಲಿ ಕುಳಿತಿರಬೇಕು. ಕಿಟಕಿಯಲ್ಲೂ ಕಾಣಿಸಲಿಲ್ಲ.

ಕೈ ಬೀಸಲಿಲ್ಲ. ಅವನು ಪೆಚ್ಚು ಮುಖ ಹಾಕಿಕೊಂಡು ಒಂದೆರಡು ಸಿಗರೇಟು ಸುಟ್ಟು ಏನನ್ನೋ ಯೋಚಿಸಿದವನಂತೆ ಕರಿಮುಂಡು ಅಂಗಿಗಳಲ್ಲಿ, ಗುಂಪು ಗುಂಪಾಗಿ ನಿಂತಿದ್ದ ಯಾತ್ರಿಕರ ನಡುವೆ ಕರಗಿದ. ಅವನ ಮನಸ್ಸು ತುಟಿಗಳು ಒಂದಾಗಿ ಹಳೆ ಎಂಜಿ‌ಆರ್ ಚಿತ್ರದ ಹಾಡೊಂದನ್ನು ಗುಣಗುಣಿಸುತ್ತಿತ್ತು.

ವಾಳ್ಕೈ ಎನ್ರೊರು ಪಯಣತ್ತಿಲೆ
ಪಲರ್ ವರುವಾರ್ ಪೋವಾರ್ ಭೂಮಿಯಿಲೆ
ವಾನತ್ತು ನಿಲವಾಯ್ ಸಿಲರಿರುಪ್ಪಾರ್
ಅಂದ ವರಿಸೈಯಿಲ್ ಮುದಲ್ವನ್ ತೊಳಿಲಾಳಿ.

ಜೊತೆಗೆ ಮನಸ್ಸಿನಲ್ಲಿ ಅಚ್ಚಾಗಿ ಹೋಗಿದ್ದ ಆಕಾರ ಮತ್ತಷ್ಟು ತುಂಬಿಬಂದಂತಾಗಿ

ಅವಿದ್ಯಾನಾಮಂತಸ್ತಿಮಿರಮಿಹಿರ ದ್ವೀಪನಗರಿ
ಜಡಾನಾಂ ಚೈತನ್ಯಸ್ತಬಕ ಮಕರಂದ ಸ್ರುತಿಝರಿ
ದರಿದ್ರಾನಾಂ ಚಿಂತಾಮಣಿ ಗುಣನಿಕಾ ಜನ್ಮಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪು ವರಾಹಸ್ಯ ಭವತಿ

ಜೊತೆಗೆ-
ಓಂ-ಹರಿಃ ಓಂ-ಚತುಸ್ಸಾಗರ ಪರ್‍ಯಂತಂ
ಆತ್ರೇಯ ಗೋತ್ರಸ್ಯ ಋಗ್‌ಶಾಖಾಧ್ಯಾಯಿ
ಸೋಮಶೇಖರ ಶರ್ಮನ್
ಅಹಂಬೋ ಅಭಿವಾದಯೇ.."


ಬರುತ್ತಾಳೋ ಬರುವುದಿಲ್ಲವೋ- ಬಂದರೂ ಚೆನ್ನ- ಬರದಿದ್ದರೂ ಚೆನ್ನ
ಅವಳು ಬರದೆ ಇದ್ದರೆ- ಪತ್ರ ಒಂದನ್ನು ಬರೆದ-
ಒಂದೇ ಒಂದು ಸಾಲಿನ ಪತ್ರ:

‘ಕ್ಷಮಿಸು, ನಿನ್ನನ್ನು ತಬ್ಬಿಕೊಂಡದ್ದಕ್ಕೆ-ವಾಸ್ತವವಾಗಿ ತಬ್ಬಿಕೊಳ್ಳದ್ದಕ್ಕೆ’ ಕಂಗಾಲಾದ.
         *****

ಕೀಲಿಕರಣ: ಶೇಖರ್‌ಪೂರ್ಣ
ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ಅಗತ್ಯತೆ

- ಪರಿಮಳಾ ರಾವ್ ಜಿ ಆರ್‍

ದೇಶಕ್ಕೆ ಬೇಕು
ಸ್ವಚ್ಛ ಶೌಚಾಲಯ
ಆಮೇಲೆ ಕಟ್ಟಿರಿ
ನ್ಯಾಯಾಲಯ
ದೇವಾಲಯ

 *****

ಯಲ್ಡಕ್ಕೆ ಹೋಗದೆಲ್ಲಿ?

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಹಾಡು - ೧

ಯಲ್ಡಕ್ಕೆ ಹೋಗದೆಲ್ಲಿ
ಕೇಳೊ ಅಣ್ಣಾ ಕೇಳೊ
ಯಲ್ಲಾ ಕಡೆಯೂ ಇಸ್ಸಿಸ್ಸಿ
ನೋಡೊ ಅಣ್ಣಾ ನೋಡೊ ||

ಊಟವು ಶುದ್ಧ ಅಂತಾದ್ರೆ
ಇದ್ಕೂ ಗಮನ ಬೇಕಲ್ವೆ
ಎಲ್ರಿಗೂ ಆರೋಗ್ಯ ಬೇಕಂದ್ರೆ
ಇದೂನು ಸೈತ ಮುಖ್ಯಲ್ವೆ ||

ಎಲ್ಲೆಲ್ಲೂ ಹೋದ್ರೆ ಅಲ್ಲೆಲ್ಲ
ನೀ ರೋಗ ಹಂಚುತೀಯ
ಒಂದ್ಕಡೆ ಸ್ವಚ್ಚ ಹೋದ್ರೆ
ಜೀವನ ಹರ್ಷ ಇಡ್ತೀಯ ||

ಅಣ್ಣಾ ತಗಿಯೊ ತರವಲ್ಲ
ದರಿದ್ರ ಮೈಲಿಗೆ ಮಡಿನೆಲ್ಲ
ಕಕ್ಕಸ ಜಗದ ಜನಕೆಲ್ಲ
ಮರ್‍ಯಾದಿ ತರೊ ಮಹಲಣ್ಣ ||

ಹಾಡು - ೨

ಬುದ್ಧಿ ಕೊಡಲಿ ದೇವರು
ಊಟ ಮಾಡೊ ಜನಕೆಲ್ಲ ||

ಚೊಂಬು ಹಿಡಿದು ನಿತ್ಯವು
ಪರರ ಬೇಲಿಗೆ ಹೋಗದಂಥ ||

ಹಾಡು - ೩

ಕೇಳ್ರಯ್ಯಾ ಗಂಡಸರೆ
ನಿತ್ಯಗೋಳು ಹೆಂಗಸರ ||

ಮಾನ ಮುಚ್ಚಲು ಬಟ್ಟೆಯು
ಅಂತೇ ಕಕ್ಕಸದಾ ಮನೆಯು ||

ಹಾಡು - ೪

ಬೇಕೊ ಅಣ್ಣಾ ಮರ್‍ವಾದೆ
ಅನ್ನಬಟ್ಟೆಗಿಂತ ಮಿಗಿಲಾದ್ದೆ ||

ಆರು ಮೂರು ದಿನದ ಬದುಕು
ಮಾನದಿಂದ ಕೂಡಿರಬೇಕು ||

ಹಾಡು - ೫

ಅರಿವು ಬೇಕಣ್ಣ
ತಿಳಿವು ಬೇಕಣ್ಣ
ಪಶುವಾಗಿರದ
ಮನುಜನಿಗೆ ||

ಬಾಳೆಲ್ಲ ಬಡಸ್ತನ
ದಿನದಿನ ಅವಮಾನ
ಎಲ್ಲವ ನುಂಗುತ
ಬದುಕಣ್ಣ ನಗುತ ||

ಬಡವನಾದರೇನು
ದರಿದ್ರನಾಗಲ್ಲ
ಸ್ವಚ್ಛ ಬದುಕಿಂದ
ಘನತೆ ಬಂತಲ್ಲ ||

ಬದುಕೆಂಬುದೇ ಮಲ
ಆಗಬೇಕು ನಿರ್ಮಲ
ಮುಂದೆ ಅಬಲರೆಲ್ಲ
ಸಬಲರಾಗುವರಲ್ಲ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಪ್ರೀತಿಗೆ

- ಗಿರಿಜಾಪತಿ ಎಂ. ಎನ್

ಮಾತು ಬಲ್ಲವರಲ್ಲಿ ಕೇಳಿದೆ
ಅರ್ಥವಾವುದು ‘ಪ್ರೀತಿಗೆ’.....
ಮಾತ-ಮಾತಿಗೆ ನಿಲುಕಲಾಗದ
ಮೌನದಳವಿನ ರೀತಿಗೆ
ಬರೆದೆ ಬರೆದರು ‘ಪ್ರೀತಿ’ಸುತ್ತಲು
ಭಾಷೆ-ಭಾಷ್ಯವ ಬಗೆ... ಬಗೆ
ಇನ್ನೂ ಬರೆವರ ಸಾಲ ಕಂಡು
ಮನದಿ ಹೊಮ್ಮಿತು ಚಿರುನಗೆ....
ಎಲ್ಲೆ ಹೋದರು.... ಎಲ್ಲೆ ಕಂಡರು
ಅಲ್ಲಿ ಪ್ರೀತಿಯ ಸೆಲೆ ಇದೆ
ಮರಳುಗಾಡಲೂ ನಗುತ ಬಾಳುವ
ಜೀವ್ಯ ಜಾಲದೆ ಬಲವಿದೆ....
ದಿಗಂತದಲ್ಲಿನ ಪ್ರೀತಿ ಛಾಯೆಯು
ಇಳೆಗೆ, ದಿನವನು ನೀಡಿದೆ.....
ಇಳೆಯ ಕಣದಲಿ ಮೊಳೆವ ಪ್ರೀತಿಯು
ಬಾನ ಮೆರುಗಿಗೆ ಕಾದಿದೆ.....
ಮನ-ಮನದಾಳದರಮನೆ
ಪ್ರೀತಿಯಾ ಸಿರಿ ನಂದನ.....
ಅರ್ಥ ಮೀರಿದ ಸಾರ್ಥಕತೆಯ
ಒಲವಿನೈಸಿರಿ ಚೇತನ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೬

- ಪಟ್ಟಾಭಿ ಎ ಕೆ

ಒಬ್ಬ ದೊಡ್ಡದೊಂದು ಶನಿದೇವರ ಪಟವನ್ನು ಹೆಗಲಿಗೆ ಬಿಗಿದುಕೊಂಡು ಮನೆಮನೆಗೂ ‘ಶನಿದೇವರ ಭಕ್ತಿ’ ಎಂದು ಕೂಗುತ್ತಾ ಭಿಕ್ಷ ಕೇಳುತ್ತಿದ್ದನು.  ಶಾಮಣ್ಣ ನವರ ಮನೆ ಬಾಗಿಲಲ್ಲಿ ಬಂದು ನಿಂತಾಗ "ಏನಪ್ಪಾ, ಶನಿ ನಿನ್ನ ಹೆಗಲೇರಿಬಿಟ್ಟಿದ್ದಾನೆ, ಅಷ್ಟಮ ಶನಿ ಆಂತ ಕಾಣುತ್ತೆ" ಛೇಡಿಸಿದರು.
ಭಿಕ್ಷುಕ: "ಅದಕ್ಕೇ ಅಲ್ಲವೆ ಸಾ, ನಾನು ಭಿಕ್ಷೆ ಪಾತ್ರೆ ಹಿಡಿದಿರೋದು ?" ಮರುತ್ತರ ಕೊಟ್ಟ!

        *****

ಕದ್ದವರ್‍ಯಾರಣ್ಣ ಬೀಜಗಳ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಆಆ .... ಹೊಹೊ....
ಕದ್ದವರ್‍ಯಾರಣ್ಣ ಬೀಜಗಳ
ಮೆದ್ದವರ್‍ಯಾರಣ್ಣ ಲಾಭಗಳ
ಆಆ... ಹೊ ಹೊ... ||
*****

ನಗೆ ಡಂಗುರ - ೫

- ಪಟ್ಟಾಭಿ ಎ ಕೆ

ಆತ: ಅಪರೂಪಕ್ಕೆ ಸಿಕ್ಕಿದ ತನ್ನ ಸ್ನೇಹಿತನನ್ನು ಮಾತಿಗೆ ಎಳೆದು
         "ನಿನ್ನ ಮಗ ಪೋಲಿ ಅಲೆಯುತ್ತ ಕಾಲ ಕಳೆಯುತ್ತಿದ್ದನಲ್ಲಾ ಈಗಲೂ ಹಾಗಯೇ?"
ಈತ: "ಈಗ ಅವ್ನುMBBS ಕಣಪ್ಪಾ"
ಆತ: "ಪರವಾಗಿಲ್ಲವೆ; ಮೆಡಿಕಲ್ ಓದಿ ಡಾಕ್ಟರ್ ಆದ ಅನ್ನು"
ಈತ: "ಅಯ್ಯೋ ಡಾಕ್ಟರ್ ಆಗೋದು ಎಲ್ಲಿ ಬಂತು? ಅವನು ಡಿಗ್ರಿ ಪಡೆದಿಲ್ಲ. Mನೆ Bಟ್ಟು Bದಿ Sತ್ತೋದು ಮುಂದುವರಿಸುತ್ತಿದ್ದಾನೆ ಅಷ್ಟೆ!"


        *****

ಕೀಲಿಕರಣ: ಎಮ್ ಎನ್ ಎಸ್ ರಾವ್

ಮಗೂ......

- ಚಿಂತಾಮಣಿ ಕೊಡ್ಲೆಕೆರೆ

ಈ ಮೂಗು ಚಂದ ಈ ಬಾಯಿ ಚಂದ
ಈ ಕಣ್ಣು ಈ ಕಾಲು ಈ ಕೈಯ್ಯಿ ಈ ಮೈಯ್ಯಿ
ಚಂದ ನಿನ್ನ ನಗೆ ಚಂದ
ನೀನತ್ತ ಅಳುವೂ ಚಂದ
ನೀನೇ ಚಂದ ಸ್ವಚ್ಚಂದ

ನೀನೇನಾಗಲಿದ್ದಿಯಾ?
ನನಗೆ ಗೊತ್ತಿಲ್ಲ
ಆದರೆ ಇದು ಖಾತ್ರಿ

ಈ ಪುಟ್ಟ ಶರೀರ
ಇಷ್ಟುದ್ದ ಬೆಳೆಯುತ್ತದೆ
ಈ ಬತ್ತಲೆ ಶರೀರ ಹೀಗೇ ಇರುವುದಿಲ್ಲ
ಇದರ ಮೇಲೊಂದು ಅಂಗಿ
ಕೆಳಗೊಂದು ಚಡ್ಡಿ
ಈ ಸ್ತಬ್ದ ಜಗದಿಂದ ಶಬ್ಬ ಲೋಕಕೆ ಪಯಣ
"ಈತ ನಾಳೆಯ ದಿವಸ ಹೀಗಾಗಬಹುದು
ಹಾಗಾಗಬಹುದು ಅಲ್ಲ
ಹೇಗಾಗಬಹುದು ?"

ಒಂದೊಂದ್ಲೆ...ಎರಡೊಂದ್ಲೆ....
ಅ ಆ ಇ ಈ ಉ ಊ
ನಾಲ್ಕು ಗೋಡೆಗಳ ಮಧ್ಯೆ
ಈ ಮೃದು ಬೆನ್ನು ಈ
ಮೃದು ಕೈಯ್ಯಿ
ಗಟ್ಟಿಯಾಗಲೇ ಬೇಕು

ಈ ಮೂಗ ಕೆಳಗೊಂದು
ಮೀಸೆ-ಕರಿಮೀಸೆ
ಈ ಮೃದು ಕಪಾಲದ ಮೇಲೆ
ಗಡ್ಡ
ಗುಡ್ಡವನ್ನೇ ತಂದು ಕೆಳಗಿಡುವ
ಲವಲವಿಕೆ
ಹತ್ತರ ಜತೆ ಹನ್ನೊಂದಾಗುವ
ಚಡಪಡಿಕೆ

ಮಕ್ಕಳು..ಹೆಂಡತಿ...
ಈ ಪುಟ್ಟ ದೇಹಕ್ಕೆ ಯಜಮಾನಿಕೆಯ ಪಟ್ಟ
ಕೆಲಸ...ಹಣ,..ರೂಪಾಯಿ
ಏ ಮಗೂ ಏ ಮಗೂ
ಶಬ್ಬಗಳ ಸಂತೆಯಲಿ ಮಾರಿ ಹೋದೀಯ ಅಪ್ಪಿ
ತಪ್ಪಿ ಕ್ಷುಬ್ಬಗಳ ಚಿಂತೆಯಲಿ ಜಾರಿ ಹೋದೀಯ
ದುಡಿಮೆ ಬದುಕಲ್ಲ
ಮಗನೇ-ಈ ಮಕ್ಕಳೇ
ನಿನ್ನ ಹಿರಿಮೆಯಲ್ಲ-ಗುರಿಯಲ್ಲ
...ನಿನಗರ್ಥವಾಗುವುದೇ ಇಲ್ಲವಲ್ಲ !
ತಾಳ ತಪ್ಪಿದೆ ಮರೀ ನಿನ್ನ ಕುಣಿತ
ಯಾವನಾ ಭಾಗವತ ?
ಎಲ್ಲಿಯದು ಮೃದಂಗ?

ಈ ರೂಪಾಯಿಗಳಲ್ಲಿ ಮುಖವಾಡಗಳಲ್ಲಿ
ನೀನೇ ಕಳೆಯುತ್ತಿದ್ದೀಯಾ
ಕೊನೆಗೊಮ್ಮೆ ಶಬ್ಬಕ್ಕೂ
ನಿಲುಕದ ನಿತ್ರಾಣ
ಆವರಿಸಿ ಉದುರುತ್ತೀಯಾ
ಉದುರಿ ಬರೀ ಉಗುರು
ಹಣ್ಣುಗೂದಲು
ದೊಣ್ಣೆ ಹೀನ
ಅಸ್ಥಿಪಂಜರದ
ಪಠಿಸುತ್ತೀಯ ಪೊಳ್ಳು ವೇದಾಂತ
ಅಥವಾ ವಾಚ್ಯದುರಂತ

ಈಗ ಹೇಳು ನೀನು ಏನಾದೆ?
ಈ ಜಗವನ್ನುದ್ಧರಿಸಿದೆಯಾ?
ಗಾಂಧಿ ಆದೆಯಾ ? ಲೋಹಿಯಾ ಆದೆಯಾ ?
ಆಟ...ನಲಿದಾಟ...ಊಟ
ಮದುವೆ...ಸಂತಾನೋತ್ಪತ್ತಿ..ದುಡಿಮೆ
ಹೇಳು ಇದೇ ಜೀವನವೆ
ಮುಗಿದೇ ಹೋಯಿತೆ ನಿನ್ನ ಕತೆ?

ಬೇಡ ಮಗು
ನಿನಗಿದೆಲ್ಲ ಏಕೆ
ಈ ಕೈಯ್ಯಿ ಈ ಪುಟ್ಟ ಬಾಯಿ
ಹಾಲುಗಲ್ಲ-ಆಹಾ !
ಈಗಿದ್ದಂತೆಯೇ ಖಾಯಂ
ಇದ್ದು ಬಿಡಲಾರೆಯಾ ?

     *****

ಕೀಲಿಕರಣ:ಎಮ್.ಎನ್.ಎಸ್.ರಾವ್

ಆಂತರ್ಯ

- ಪರಿಮಳಾ ರಾವ್ ಜಿ ಆರ್‍

ಹುಳಿಯ
ಹೊಟ್ಟೆ
ಯಲ್ಲಿಟ್ಟು
ಬಂಗಾರ
ಬಣ್ಣದಲಿ
ತೂಗಿದೆ
ನಿಂಬೆ
ಹಣ್ಣು

****

ಕೀಲಿಕರಣ: ಕಿಶೋರ್‍ ಚಂದ್ರ

ದುಡ್ಡು ಕೆಟ್ಟದ್ದೊ ಮನುಜಾ

- ಶಿಶುನಾಳ ಶರೀಫ್

ದುಡ್ಡು ಕೆಟ್ಟದ್ದೊ  ಮನುಜಾ  ಈ ಲೋಕದಿ
ದುಡ್ಡು ಕೆಟ್ಟದ್ದೊ  ಮನುಜಾ                        ||ಪ||
ಹೆಡ್ಡ ಮೂಢಾತ್ಮನೆ  ದೊಡ್ಡ ದೊಡ್ಡವರನು
ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು        ||ಅ.ಪ||

ಹರನ  ಪೂಜೆಯ ಕೆಡಿಸಿ ಸದ್ಗುರುವಿನ
ವರಮಂತ್ರವನು  ಬಿಡಿಸಿ
ಗುರುಶಿಷ್ಯಭಾವವನರುಹಿ  ಲಕ್ಷ್ಮೀಯೆಂಬ
ಕೊರವಿಯು ನರರನು ಅರವುಗೆಡಿಸುವಳು    ||೧||

ಆಸೆಯ  ಮನಗೊನಿಯು
ಸಂಸಾರವು ಕಸಿನ ಘನತೆನಿಯು
ಭಾಸುರ ಶಿಶುನಾಳಧೀಶ ಸದ್ಗುರುವಿಗೆ
ಆಸೆಯ ಕಲಿಸಲು  ಏಸರವಳವ್ವ  ಈಕಿ         ||೨||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಓದುಗರಿಗಾಗಿ ಕಾಯುತ್ತಿರುವ ಕನ್ನಡ ಪುಸ್ತಕಗಳು

-ಕಿಶೋರ್‍ ಚಂದ್ರ

ಹೈದರಬಾದಿನ ಹೃದಯ ಭಾಗದಲ್ಲಿರುವ ಅಫ್ಜಲ್ ಗಂಜ್‌ನ ಬಳಿಯಿರುವ ಆಸ್ಫಿಯ ಸರ್ಕಾರಿ ಕೇಂದ್ರ ಗ್ರಂಥಾಲಯದಲ್ಲಿ ೧೫೦೦೦ ಸಾವಿರ ಕನ್ನಡ ಪುಸ್ತಕಗಳಿದ್ದು ಓದುಗರಿಲ್ಲದೆ ಧೂಳು ಹಿಡಿದಿದೆ.  ಗ್ರಂಥಪಾಲಕರು ಹೇಳುವ ಪ್ರಕಾರ ಮೂರು ನಾಲ್ಕು ವರ್ಷಗಳಿಂದ ಯಾರೊಬ್ಬರೂ ಕನ್ನಡ ಪುಸ್ತಕಗಳನ್ನು ಓದಲು ಬಂದಿಲ್ಲ.  ಆದ ಕಾರಣ ಕನ್ನಡ ವಿಭಾಗ ಒಂದು ಕಸದ ತೊಟ್ಟಿಯಂತಾಗಿದೆ.  ಕನ್ನಡ ವಿಭಾಗವನ್ನು ಹಳೆಯ ವೃತ್ತಪತ್ರಿಕೆಗಳನ್ನು ಇಡಲು ಬಳಸಲಾಗುತ್ತಿದ್ದು ಯಾರೊಬ್ಬರೂ ಈ ಕೋಣೆಯ ಬಳಿ ಸುಳಿಯಲಾರರು.

ಆಸ್ಫಿಯ ಗ್ರಂಥಾಲಯ ನಿಜಾಮರು ಕಟ್ಟಿದ ಒಂದು ಭವ್ಯ ಗ್ರಂಥಾಲಯ ಕಟ್ಟಡ.  ಅದರಲ್ಲಿ ತೆಲುಗು ವಿಭಾಗ ಮತ್ತು ಆಂಗ್ಲ ವಿಭಾಗಗಳು ಸ್ವಚ್ಫವಾಗಿಯೇ ಇವೆ.   ಆದರೆ ಓದುಗರ ಕೊರತೆಯಿಂದಾಗಿ ಕನ್ನಡ ವಿಭಾಗವು ಆಪ್ತಮಿತ್ರ ಚಿತ್ರದಲ್ಲಿನ ಹಳೆಯ ಕೋಣೆಯಂತೆ ಕಂಡುಬರುತ್ತಿದೆ.  ಕನ್ನಡ ವಿಭಾಗದಲ್ಲಿ ಮೈಸೂರು, ಧಾರವಾಡ - ವಿಶ್ವವಿದ್ಯಾಲಯಗಳು ಪ್ರಕಟಿಸಿದ ಪುಸ್ತಕಗಳು, ಕನ್ನಡ-ಆಂಗ್ಲ ನಿಘಂಟುಗಳು, ಸಣ್ಣಕಥೆ, ಕಾದಂಬರಿ ಪುಸ್ತಕಗಳು ಲಭ್ಯ. 

ಕನ್ನಡ ಪುಸ್ತಕಗಳನ್ನು ಹೈದರಾಬಾದಿನ ನಿಜಾಮರ ಕಾಲದಲ್ಲಿನ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತಿತ್ತು, ಆ ಪುಸ್ತಕಗಳೂ ಇಲ್ಲಿ ಲಭ್ಯ.  ಇಲ್ಲಿ ಅಪರೂಪದ "ಹೈದರಾಬಾದ ಸಮಾಚಾರ" ೧೯೪೧-೪೨ ರಲ್ಲಿ ಪ್ರಕಟಗೊಂಡ ಕನ್ನಡ ಪತ್ರಿಕೆಯ ಪ್ರತಿಯೂ ಲಭ್ಯ.

ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ನೀಡುತ್ತಾರೆ.  ನೂರಾಐವತ್ತು ರೂಪಾಯಿ ನೀಡಿ ಸದಸ್ಯರಾಗಿ ಮುಂದಿನ ವರ್ಷದಿಂದ ಐವತ್ತು ರೂಪಾಯಿ ನವೀಕರಣ ಹಣ ನೀಡಬೇಕಾಗುತ್ತದೆ.  ಒಮ್ಮೆ ಎರಡು ಪುಸ್ತಕಗಳನ್ನು ಮಾತ್ರ ನೀಡಲಾಗುವುದು.  ಒಂದು ಪುಸ್ತಕದ ಬೆಲೆ ನೂರಾಐವತ್ತು ರೂಪಾಯಿಗಿಂತ ಹೆಚ್ಚಾದಲ್ಲಿ ಒಂದೇ ಪುಸ್ತಕವನ್ನು ವಿತರಿಸಲಾಗುವುದು.  ಪ್ರತಿ ಪುಸ್ತಕವನ್ನು ಹದಿನೈದು ದಿನಗಳವರೆಗೆ ಓದಲು ನೀಡಲಾಗುವುದು.  ನಂತರ ಮತ್ತೆ ನವೀಕರಿಸಬೇಕು.  ನವೀಕರಣ ತಡವಾದಲ್ಲಿ ದಿನಕ್ಕೆ ಪ್ರತಿ ಪುಸ್ತಕಕ್ಕೆ ೨೫ ಪೈಸೆ ದಂಡ ನೀಡಬೇಕಾಗುವುದು.

ಮಹಾತ್ಮಗಾಂಧಿ ಅಂತರರಾಜ್ಯ ಬಸ್ಸುನಿಲ್ದಾಣದ ಬಳಿ ಮೂಸಿ ನದಿಯ ದಂಡೆಯ ಮೇಲಿರುವ ಈ ಗ್ರಂಥಾಲಯದ ಬಳಿ ಹಲವಾರು ಕರ್ನಾಟಕ ಸಾರಿಗೆಯ ಬಸ್ಸುಗಳು ದಿನಂಪ್ರತಿ ಕನ್ನಡಿಗರನ್ನು ಹೈದರಾಬಾದಿಗೆ ತಲುಪಿಸುತ್ತಿದ್ದರೂ ಹೈದರಾಬಾದಿನ ಕನ್ನಡಿಗರು ಇತ್ತ ಮುಖಮಾಡದಿರುವುದು ಅರಿವಿನ ಕೊರತೆಯಿಂದಲೋ ಆಲಸ್ಯದಿಂದಲೋ ತಿಳಿಯದು.
     *****

ಪಾರಿವಾಳ ಮತ್ತು ಮನುಷ್ಯ

- ಅಬ್ಬಾಸ್ ಮೇಲಿನಮನಿ

ಆ ಊರು ಪ್ರಕ್ಷುಬ್ಧವಾಗಿತ್ತು.  ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು.  ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು.  ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾಡುತ್ತಿದ್ದವು.  ಒಂದಿಷ್ಟು ದಿನ ಶಾಂತ ವಾತಾವರಣ ನೆಲೆಸಿದ್ದರೆ ಧರ್ಮಾಂಧರ ಮನಸ್ಸುಗಳಿಗೆ ಕಸಿವಿಸಿ ಆಗುವುದು.  ಮೈಗಳ್ಳರು, ಪುಂಡ ಪೋಕರಿಗಳು, ಹರಾಮಿ ಗಬ್ಬು ಗೌಲಿನ ಆಸೆಬುರುಕರು ಆಯಾ ಧರ್ಮಗಳ ಲಾಂಛನ ಧರಿಸಿ ಭಯೋತ್ಪಾದಕ ತಲ್ಲಣ ಹುಟ್ಟಿಸುವುದರಿಂದ ದೇವರು, ಧರ್ಮಗಳೇ ನಡುಗ ತೊಡಗಿದ್ದರಿಂದ ಅಮಾಯಕರ ಆರ್ತತೆಯನ್ನು ಕೇಳುವವರೆ ಇರಲಿಲ್ಲ.

ಉರಿಯುವ ಮನೆಯಂಗಳ ಹಿರಿದುಕೊಳ್ಳುವ ಕ್ಷುದ್ರ ಚಾಳಿಯ ರಾಜಕಾರಣಿಗಳಿಂದ ಸೈತಾನರ ಅಟ್ಟಹಾಸ ಹಗಲೆಂಬೊ ಹಗಲನ್ನು, ರಾತ್ರಿಯೆಂಬೊ ರಾತ್ರಿಯನ್ನು ಭಯಾನಕಗೊಳಿಸಿದ್ದವು.  ಇವರೊಂದಿಗೆ ಕೈಜೋಡಿಸಿದಂತೆ ವದಂತಿ ಎಂಬ ಖೋಜಾ ಮಿಥ್ಯದ ಸಂಗತಿಗಳಿಗೆ ಜೀವದುಂಬಿ, ಬಣ್ಣತುಂಬಿ ಮನುಷ್ಯ ಸಂಬಂಧಗಳ ಮೇಲೆ, ಮಾನವೀಯತೆಯ ಮೇಲೆ ಗದಾ ಪ್ರಹಾರ ಮಾಡುತ್ತಲೇ ಚಾಕು, ಚೂರಿ, ಹತ್ಯಾರ-ತ್ರಿಶೂಲ, ಬಂದೂಕು-ಬಾಂಬು, ಆಸಿಡ್ಡು-ಚೈನು, ಹಿಂದೂ-ಮುಸ್ಲಿಮ, ಜೈನ-ಬೌದ್ಧ, ಕ್ರೈಸ್ತ-ಸಿಖ್, ಪಾರಸಿಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದ್ದವು.  ಧರ್ಮಗಳ ಗುತ್ತಿಗೆದಾರರು ಸತ್ತವರಲ್ಲಿ ಯಾರು ಹೆಚ್ಚುಯೆಂದು ಲೆಕ್ಕವಿಡುತ್ತಲೇ ಮತ್ಸರದ ಕೊಳ್ಳಿ ಉರಿಸುತ್ತಿದ್ದರು.

ಈ ಸಲದ ಗಲಭೆ ಭೀಕರವಾಗಿತ್ತು.  ಊರಿನ ಬೀದಿ ಬೀದಿಗಳಲ್ಲಿ ಪೋಲೀಸರ ಬೂಟು ಗಾಲಿನ ಸದ್ದು ಕೇಳಿಸುತ್ತಿತ್ತು.  ಜನರು ಮುಚ್ಚಿಕೊಂಡ ಬಾಗಿಲು ತೆರೆದು ಹೊರಬರುವ ಧೈರ್ಯ ತೋರಿರಲಿಲ್ಲ.  ಯಾರದೋ ಸ್ವಾರ್ಥಕ್ಕೆ ಅವರ ಬದುಕು ಹಿಂಸೆ ಅನುಭವಿಸತೊಡಗಿತ್ತು.  ಆದರೆ ಅವರೊಂದಿಗೆ ಗೂಡುಗಳಲ್ಲಿ ಬೆಚ್ಚಗಿರುತ್ತಿದ್ದ ಸುಂದರ ಪಾರಿವಾಳಗಳು ಮಾತ್ರ ಪ್ರಳಯಾಂತಕರ ಕ್ರೌರ್ಯ ಲೆಕ್ಕಿಸದೆ, ಪೋಲಿಸರ ಗುಂಡಿನ ಸದ್ದಿಗೆ ಧೈರ್ಯಗೆಡದೆ ಕರ್ಫ್ಯೂವನ್ನು ಉಲ್ಲಂಘಿಸಿ ನೆಲದಿಂದ ಆಕಾಶಕ್ಕೆ ಆಕಾಶದಿಂದ ನೆಲಕ್ಕೆ ಸ್ವಚ್ಛಂದವಾಗಿ ಹಾರಾಡಿಕೊಳ್ಳುತ್ತಿದ್ದವು.

ಪಾರಿವಾಳ ಸಾಕಿದ ಮನುಷ್ಯ ಕಿಟಕಿಯೊಳಗಿಂದಲೆ ಕಾಳು ತೂರಿ,

"ಪಾರಿವಾಳಗಳೇ, ಊರಲ್ಲಿ ಕರ್ಫ್ಯೂ ಇದೆ.  ನೀವು ಗೂಡು ಬಿಟ್ಟು ಹೋಗಬೇಡಿರಿ" ಎಂದಿದ್ದ.

"ನಮಗೆ ಬಂಧನ ಹಿಡಿಸುವುದಿಲ್ಲ ಹಾರುವುದು ನಮ್ಮ ಸಹಜ ಸ್ವಭಾವ."

"ಜನರ ಗಲಭೆ, ಗುಂಡಿನ ಸದ್ದು ನಿಮಗೆ ಭಯ ತರುವುದಿಲ್ಲವೆ?"

"ನಾವು ಮನುಷ್ಯರಂತಲ್ಲ."

"ಅಂದರೆ?"

"ಮನುಷ್ಯರು ಅತ್ಮತೃಪ್ತರು.  ಅವರಿಗೆ ಗಲಭೆ ಮುಖ್ಯ.  ನಮಗೆ ಶಾಂತಿ ಮುಖ್ಯ."

"ಊರು ಆತಂಕದಲ್ಲಿರುವಾಗ ನೀವು ಶಾಂತಿಯಿಂದ ಇರಲು ಹೇಗೆ ಸಾಧ್ಯ?"

"ನಮ್ಮಲ್ಲಿ ಮತೀಯ ಭಾವನೆ ಇಲ್ಲ ಅದಕ್ಕೆ."

"ನಾವೂ ನಿಮ್ಮಂತೆ ಇರಲು ಏಕೆ ಸಾಧ್ಯವಾಗುವುದಿಲ್ಲ?"

"ನಮಗೆ ಈ ಜಗತ್ತು ಒಂದೇ.  ಇಲ್ಲಿನ ಗಾಳಿ, ನೀರು, ಬೆಳಕು ಒಂದೆ.  ನಾವು ಅನೇಕ ಸಲ ಮಸೀದಿಯ ಮಿನಾರುಗಳಲ್ಲಿ ಕುಳಿತು ಇಮಾಮನ ಕುರ್‌ಆನ್ ಉಕ್ತಿ ಕೇಳುತ್ತೇವೆ.  ಮತ್ತೆ ಕೆಲವು ಸಲ ಮಂದಿರದ ಗೋಪುರದ ಮೇಲೆ ಕುಳಿತು ವೇದ ಉಪನಿಷತ್ತುಗಳ ಸಾರ ಅರಿಯುತ್ತೇವೆ.  ಇನ್ನೊಮ್ಮೆ ಚರ್ಚಿನ ಗಂಟೆಯ ಬಳಿ ಕುಳಿತು ಫಾದರನ ಪ್ರೀತಿಯ ಸ್ತುತಿ ಆಲಿಸುತ್ತೇವೆ.  ದೇವರು ದಯಾಮಯ.  ನಮಗೆ ಅಂಥ ಭಾಗ್ಯವನ್ನು ಕರುಣಿಸಿದ್ದಾರೆ" ಎಂದು ಪುರ್‍ರನೆ ಆಕಾಶದತ್ತ ಪಾರಿವಾಳ ಹಾರಿ ಹೋದವು.

ಕಿಟಕಿಯ ಸರಳುಗಳ ಹಿಂದೆ ನಿಂತ ಮನಷ್ಯ ಮುಖ ತಗ್ಗಿಸಿದ್ದ.

                        *****

ಕೀಲಿಕರಣ: ಕಿಶೋರ್‍ ಚಂದ್ರ

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ

- ಶಿಶುನಾಳ ಶರೀಫ್

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ
ನೀರೊಳಗೆ ಕರಗಿ ಸುಟ್ಟು  ಹೋಯ್ತು  ಸುಣ್ಣಾ                                   ||ಪ||

ಸತ್ಯವಿದು ಮಿಥ್ಯವಲ್ಲ  ತಿಳಿಯೋ ಕಾಮಣ್ಣಾ                                    ||ಅ.ಪ||

ಹೊನ್ನು ಹೆಣ್ಣು ಮಣ್ಣು  ಈ ಮೂರು  ಸುಳ್ಳಣ್ಣಾ
ತಿಳಿದುನೋಡು  ಗುರುವು ಕೊಟ್ಟ  ಅವು ಮೂರು ಕಣ್ಣಾ                      ||೧||

ಕಳವ ಕಳಕೊಂಡೆಲ್ಲೊ  ಕಾಮಣ್ಣಾ
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ                                   ||೨||

ನೀರೊಳಗಿ ಕರಗಿ ಸುಟ್ಟಂಗಾತೋ ಸುಣ್ಣಾ
ಶಿಶುನಾಳ ಶರೀಫಗೆ ಹಾಲು ಅನ್ನ ತಪ್ಪದೆ ಅರ್ಪಿಸುವೆ  ಮುಕ್ಕಣ್ಣಾ      ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಜಡುಗುಡ್ಡಿ ಜಡ್ಡಿ ನಕ್ಕ
ನನ್ನ ನೋಡಿ ಚಂದ್ರ ನಕ್ಕ ||

"ಯಾಕಪ್ಪೋ" ಅಂದ್ರೆ
ಅಂದ "ಆದೆಲ್ಲೊ ಮೆಂಬ್ರು" ||

ಜಡುಗುಡ್ಡಿ ಜಡ್ಡಿ ನಕ್ಕ
ನನ್ನ ನೋಡಿ ಸೂರ್ಯ ನಕ್ಕ ||

"ಯಾಕಪ್ಪೊ" ಅಂದ್ರೆ
ಅಂದ "ಆದೆಲ್ಲೊ ಮೆಂಬ್ರು" ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಕರುನಾಡು

- ರವಿ ಕೋಟಾರಗಸ್ತಿ

ಕನ್ನಡವೇ.. ನನ್ನ ಉಸಿರು
ಕನ್ನಡವೇ.. ನಮ್ಮ ಹಸಿರು

ಕನ್ನಡದಿ ನಾವುಗಳು
ಏಳ್ಗೆಯನು ಸಾಧಿಸಲು
ಜೀವನವು ಸಾರ್ಥಕವು

ಕನ್ನಡದ ಭೂಮಿಯಲಿ
ಅನ್ನ, ನೀರು, ಕನ್ನಡವಾಗಿಸಿ
ಬೆಳೆದು ಬಾಳುತಿರುವ ಕನ್ನಡಿಗರು

ಪ್ರಾಣವನು ನೀಡಿಯಾದರೂ
ಉಳಿಸಬೇಕು ಕನ್ನಡವಾ...
ಜೀವನ ತೊರೆದಾದರೂ
ಬೆಳೆಸಬೇಕು ಕನ್ನಡವ...

ಕನ್ನಡ ಮಂತ್ರವರಿಯದೇ
ನಾವಾಗಲಾರೆವು
ಕರುನಾಡಿನ ಕಲಿಗಳು...
ಉಳಿಸಲಾರೆವು ನಾಡು-ನುಡಿ ಸಂಸ್ಕೃತಿಯ
ಈ ಸತ್ಯ ಅರಿತಾಗಲೆ...
ಈ ನಾಡು ಕರುನಾಡು

         ***

ಕೀಲಿಕರಣ: ಕಿಶೋರ್‍ ಚಂದ್ರ

ಸಾಮ್ರಾಜ್ಞಿ

-ರವಿ ಕೋಟಾರಗಸ್ತಿ

ತುಂಬಿದ ಸಿರಿಯ ಸೊಬಗಿನಲಿ
ಗಿರಿವನ ಬೆಟ್ಟಗಳ ಹಸಿರಲಿ
ಕನ್ನಡದ ಗಡಿಯಲಿ
ಕನ್ನಡಮ್ಮನ ಅಳಲು ಆಲಿಸುವವರಿಲ್ಲ

ಮೆರೆಯಬೇಕಿದ್ದ ಸಾಮ್ರಾಜ್ಞಿ
ಬೆಂಡಾಗುತಿಹಳು ಬವಣೆಯಿಂದ
ಜೋಭದ್ರ ನಾಯಕಮಣಿಗಳನು
ಪಡೆದ ಕನ್ನಡನಾಡಿನ ಚಿತ್ರವ ಕಂಡು
ಕಣ್ಣೀರಿನ ಹೊಳೆ ಹರಿಸುತಿಹಳು

ಕಣ್ಣು ತೆರೆಯಿರಿ ಕನ್ನಡ ಕುವರರೆ
ಅಳಿಯುತಿಹ ಕನ್ನಡ ಉಳಿಸಿರಿ
ಪರಭಾಷೆಯ ದಳ್ಳುರಿಯ ಶಮನಗೊಳಿಸಲು
ಕಂಕಣಕಟ್ಟಿ ಸನ್ನದ್ಧರಾಗಿರಿ

ವೀರಾವೇಷದಿ ಬರಿ ಘೋಷಣೆ ಕೂಗುತಾ
ನಾಯಕರ ಪೊಳ್ಳು ಭಾಷಣ ಕೇಳುತಾ
ಮನನೊಂದು ಮಮ್ಮಲ ಮರಗುತಿಹಳು...

ಗಡಿ ನಾಡಿನ ಉದ್ದಕ್ಕೂ
ಝೇಂಕರಿಸುತಿಹುದು ಶೋಕಗೀತೆ
ವೇದನೆಯ ಶಮನಗೊಳಿಸುವಿರಾ
ತಾಯಿ ಎದುರನೋಡುತಿಹಳು
ಕನ್ನಡ ಕುವರರ ಶಕ್ತಿ-ಯುಕ್ತಿಗಳನು

         ***

ಕೀಲಿಕರಣ: ಕಿಶೋರ್‍ ಚಂದ್ರ

ಕೃಷಿ

- ಅಬ್ಬಾಸ್ ಮೇಲಿನಮನಿ

ಅದೊಂದು ಪುಟ್ಟ ಗ್ರಾಮ.  ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  ಸನ್ಮಾನಿತನಾದವನು ಹೆಸರಾಂತ ಕವಿ.  ಅವನೂ ಅದೇ ಹಳ್ಳಿಯವನು.  ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು.  ಮತ್ತು ಸಂಭ್ರಮದಿಂದ ಕವಿಗೆ ಶಾಲು ಹೊದಿಸಿ, ಹಾರ ಹಾಕಿ, ಅಮೂಲ್ಯ ಕಾಣಿಕೆಯೊಂದಿಗೆ ಸನ್ಮಾನಿಸಿದ್ದರು.

ಸಮಾರಂಭದಲ್ಲಿ ಆರಂಭದಿಂದ ಕೊನೆಯತನಕ ಕವಿಯ ಸಾಹಿತ್ಯ ಕೃಷಿಯ ಕುರಿತು ಪ್ರತಿಯೊಬ್ಬರು ಮಾತನಾಡಿದರು.  ಘನವಾದ ಶಬ್ದಗಳಿಂದ ಕವಿಯೂ ತನ್ನ ಕಾವ್ಯಕೃಷಿ ಕುರಿತು ಮಾತನಾಡಿದ.  ಅವನು ವೇದಿಕೆ ಇಳಿದು ಬರುತ್ತಿದ್ದಂತೆ ಕಾತರದಿಂದ ಹತ್ತಿರ ಬಂದ ರೈತನೊಬ್ಬ "ಏ, ಕವಿ ನಂದು ಗುರ್ತು ಹತ್ತೇನೊ?" ಎಂದ.  ಅವನ ಧ್ವನಿಯಲ್ಲಿ ಹುಂಬತನವಿತ್ತು.  ಅದನ್ನು ಯಾವಾಗಲೋ ಕೇಳಿದ, ಅವನನ್ನು ಎಲ್ಲೋ ನೋಡಿದ ನೆನಪು.  ಒಮ್ಮೆ ದಿಟ್ಟಿಸಿ ನೋಡಿ "ನೀವು ಯಾರು?" ಎಂದು ಘನಗಂಭೀರವಾಗಿ ಕೇಳಿದ ಕವಿ.

"ಈಗ ನೀ ದೊಡ್ಡ ಕವಿಯಾಗಿಯಪ್ಪ.  ನನ್ನಂಥ ಹಳ್ಳಿಯಾಂವ ನಿನ್ಗೆ ನೆಪ್ಪ ಹ್ಯಾಂಗಾಗಬೇಕು.  ನಾ ನಿನ್ನ ಕೂಡ ಗೌಂಟಿ ಸಾಲ್ಯಾಗ ಕಲ್ತಾಂವ" ಎಂದ ರೈತನನ್ನು ಒಂದು ಕ್ಷಣ ದಿಟ್ಟಿಸಿದವನೇ ಕವಿ "ನೀನು ಚೆನಮಲ್ಲು" ಎಂದ.  "ಹೌದೋ ವಾಮನ" ಎಂದು ಹಿಗ್ಗಿಕೊಂಡ ರೈತ.

"ಹೌದೋ, ನಿನ್ನ ಮಂಜಾಳ ಹೋಗ್ಲಿ" ಎಂದು ಕವಿಯ ಬೆನ್ನಿಗೆ ಲಘುವಾಗಿ ಗುದ್ದಿ ನಕ್ಕ ರೈತ.  "ನಿನ್ನೋಡಿ ಬಹಳ ದಿನಾ ಆತು" ಎನ್ನುತ್ತ ರೈತನೊಂದಿಗೆ ಹೆಜ್ಜೆ ಹಾಕಿದ ಕವಿ.  ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತ ಹಾದಿ ತುಳಿಯುತ್ತಿದ್ದಂತೆ ರೈತ ಕವಿಯನ್ನು ಕೇಳಿದ.

"ನಿಮ್ಮ ಜಮೀನಿನ್ಯಾಗ ಏನೇನು ಬೆಳೀತಿಯಪಾ ನೀನು?"

"ನಮ್ದು ಜಮೀನಽಽ ಇಲ್ಲ."

"ಮತ್ತ ಕೃಷಿ ಮಾಡ್ತೀನಿ ಅಂತ ಭಾಸನದಾಗ ಹೇಳ್ದಿ.  ನಿನ್ನ ಬಗ್ಗೆ ಮಾತಾಡಿದವರೂ ನಿನ್ನ ಕೃಷಿ ಬಗ್ಗೆ ಹೇಳಿದ್ರು" ಸೋಜಿಗ ವ್ಯಕ್ತಪಡಿಸಿದ ರೈತ.

"ನಂದು ಸಾಹಿತ್ಯ ಕೃಷಿ!" ಎಂದ ಕವಿ.

"ಅಂದ್ರ ಅದಕ್ಕ ಯಾವ ಬೀಜ ಬಿತ್ತಿ, ಯಾವ ಗೊಬ್ಬರ ಹಾಕ್ತಿ?" ಕುತೂಹಲವಿತ್ತು ರೈತನ ದನಿಯಲ್ಲಿ.

"ಬೀಜ ಇಲ್ಲ, ಗೊಬ್ಬರ ಇಲ್ಲ, ನೀರೂ ಇಲ್ಲದ ಕೃಷಿ ನಂದು"

"ಅದೆಂತ ಕೃಷಿನೋ ಮಾರಾಯ?"

"ಕಾವ್ಯ, ಕಥಿ, ಕಾದಂಬರಿ, ನಾಟಕ, ವಿಮರ್ಶೆ ಬರೀತೀನಿ."

"ಅದರಿಂದ ನಿನಗೇನು ಲಾಭ?"

"ಹೆಸರು, ಕೀರ್ತಿ, ಪ್ರತಿಷ್ಠೆ, ಗೌರವ, ಸನ್ಮಾನ."

"ಮತ್ತೆ ನಿನ್ನ ಸಂಸಾರಕ ಏನು ಮಾಡ್ತಿ?"

"ನಾನು ಕಾಲೇಜಿನ್ಯಾಗ ರೀಡರ್‍ ಇದ್ದೀನಿ."

"ಅಂದ್ರ ದೊಡ್ಡ ಪಗಾರನಽಽ ಇರಬೇಕಲ್ಲ."

"ಹೌದು."

"ಬಂಗ್ಲೇನೂ ಕಟ್ಟಿಸಿರಬೇಕಲ್ಲ."

"ಹೂಂ."

"ಬಂಗ್ಲೆದಾಗ ಕುಂತು ಕಥಿ, ಕವನ ಬರೀತಿ ಅನ್ನು."

"ಹೂಂ."

"ಅದರಿಂದ ಉಪಯೋಗವೇನು?"

"ಜನರ ಮನಸ್ಸಿಗೆ ಆನಂದ, ಹಿತ."

ಹೊಲ, ಬೀಜ, ಬೆವರು, ಫಲದ ತನ್ನ ಕೃಷಿಯನ್ನು ರೈತ ಕವಿ ಕೃಷಿಯೊಂದಿಗೆ ಸಮೀಕರಿಸಿಕೊಂಡು ಯೋಚಿಸಿದ.  ಕೊನೆಗೆ ಕೇಳಿದ "ನಿನ್ನ ಕೃಷಿಯಿಂದ ಹಸಿದ ಹೊಟ್ಟೆಗೆ, ಕಷ್ಟದ ಜೀವನಕ್ಕೆ ಎಂತ ಉಪಯೋಗ ಆಗತ್ತೊ ವಾಮನ?"

ಕವಿ ದಿಙ್ಮೂಡನಾದ.
         *****
ಕೀಲಿಕರಣ: ಕಿಶೋರ್‍ ಚಂದ್ರ

ಲಂಚದ ಮನೆ

- ಅಬ್ಬಾಸ್ ಮೇಲಿನಮನಿ

ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ.  ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ.  ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು.

ಆನಂದಪ್ಪ ಒಬ್ಬ ಇಂಜಿನಿಯರ್‍.  ಸರಕಾರಿ ಹುದ್ದೆಯಲ್ಲಿದ್ದ.  ತಾನು ಕಟ್ಟಿಸುವ ಮನೆ ಭೂಮಿಯ ಮೇಲಿನ ಸ್ವರ್ಗಧಾಮದಂತಿರಬೇಕೆಂದು ಕನಸು ಕಂಡಿದ್ದ.  ಅವನ ಕೈ ಕೆಳಗಿನ ನಾಲ್ಕಾರು ಜನ ಇಂಜಿನಿಯರ್‌ಗಳು ಆ ಕನಸಿನ ಸಾಕಾರಕ್ಕಾಗಿ ಸತತವಾಗಿ ಪರಿಶ್ರಮಿಸತೊಡಗಿದ್ದರು.

ಕೆಲವು ಕಂಟ್ರಾಕ್ಟರರು ಆನಂದಪ್ಪ ಹೇಳದಿದ್ದರೂ ಮನೆಯ ಕಟ್ಟಡಕ್ಕೆ ಬೇಕಾಗುವಷ್ಟು ಕಬ್ಬಿಣ, ಸಿಮೆಂಟು, ಕಲ್ಲು, ಉಸುಕು, ಕಿಟಕಿ, ಬಾಗಿಲು ಪೂರೈಸಿದ್ದರು.  ಗೌಂಡಿಗಳು ತಮ್ಮ ಶ್ರಮದ ಬೆವರನ್ನು ಕಟ್ಟಡಕ್ಕೆ ಹನಿಸುತ್ತ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.

ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ.  ಮನೆ ಮಾತ್ರ ಸುಂದರವಾಗಿರಬೇಕೆಂದು ಇಂಜಿನಿಯರ್‍ ಪತ್ನಿ ಪದೆ ಪದೆ ಹೇಳುತ್ತಿದ್ದಳು.  ಅವಳ ಮನಸ್ಸಿಗೆ ಬೇಸರವೆನಿಸಿದರೆ ಕಟ್ಟಡವನ್ನು ಕೆಡವಿ ಹಾಕಲಾಗುತ್ತಿತ್ತು.  ಇಂಜಿನಿಯರಿಂದ ಶುಕ್ರದೆಸೆ ಅನುಭವಿಸಿದ್ದ ಕಾಂಟ್ರಾಕ್ಟರರು ಒಂದು ಚಕಾರ ಶಬ್ದ ಆಡದೇ ಅವಳ ನಿರ್ದೇಶನಗಳನ್ನು ಪಾಲಿಸುತ್ತಿದ್ದರು.

ಕೊನಗೂ ಮನೆ ತಯಾರಾಯಿತು.  ಎಂಥ ಅಪರೂಪದ ಮನೆ ಅದು!

ಒಳ-ಹೊರ ಗೋಡೆಗಳಿಗೆ ಸಂಗಮವರಿ ಕಲ್ಲುಗಳನ್ನು ಹೊರಿಸಲಾಗಿತ್ತು.  ನೆಲದ ಹಾಸುಗಲ್ಲುಗಳಲ್ಲಿ ನಡೆದಾಡುವವರ ಪ್ರತಿಬಿಂಬ ಕಾಣಿಸುತ್ತಿತು.  ತೇಗ-ಗಂಧದ ಕಿಟಕಿ, ಬಾಗಿಲುಗಳು ಹೊಸ ವಿನ್ಯಾಸದೊಂದಿಗೆ ಮನಮೋಹಕವಾಗಿದ್ದವು.  ಮನೆ ನೋಡಿದವರೆಲ್ಲ ಬೆರಗುಗೊಂಡು ಅದ್ಭುತ! ಎಂದು ಬಣ್ಣಿಸುವರು.

ಅಂತೂ ಆ ಮನೆ ಗೃಹ ಪ್ರವೇಶಕ್ಕೆ ಸಿದ್ಧಗೊಂಡಿತು.

ಇಂಜಿನಿಯರ್‍ ಪತ್ನಿ ಮೂಹೂರ್ತ ಗೊತ್ತುಪಡಿಸಲು ಕಾರು ಹತ್ತಿ ಜೋಯಿಸರ ಮನೆಗೆ ಹೋದಳು.  ತಿರುಗಿ ಬರುವಾಗ ರಸ್ತೆಯ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲಿಯೇ ಅಸುನೀಗಿದ್ದಳು.  ಹೆಂಡತಿಯ ಸಾವಿನ ಸುದ್ದಿ ಕೇಳಿದ್ದೆ ತಡ ಇಂಜಿನಿಯರ್‍ ಸಾಹೇಬರು ಹಠಾತ್ತನೆ ಹೃದಯಾಘಾತಕ್ಕೆ ಕುಸಿದು ಬಿದ್ದರು.

ಆ ಚೆಂದದ ಮನೆಯಲ್ಲಿ ಬದುಕುವ ತೀವ್ರ ತುಡಿತವಿದ್ದ ಗಂಡ-ಹೆಂಡತಿ ತಣ್ಣಗೆ ಸ್ಮಶಾನದ ಮಣ್ಣಲ್ಲಿ ಮಲಗಿದರು.  ಮನೆಯನ್ನು ಹೊಗಳಿದ ಜನರೆ "ಇದು ಗೃಹದೋಷದ ಪ್ರಭಾವ!" ಎಂದರು.
      *****
ಕೀಲಿಕರಣ: ಕಿಶೋರ್‍ ಚಂದ್ರ

ಗೆಳೆಯ

-ರವಿ ಕೋಟಾರಗಸ್ತಿ

ಮುಂಜಾವಿನಮಂಜಿನಂತೆ
ತುಂತುರ ಮಳೆ ಹನಿಯಂತೆ
ನೈದಿಲೆಯ ಚಲುವಿನಂತೆ
ಒಲವು ಸೂಸುತಾ ಮರೆಯಾದೆ

ಸ್ನೇಹ-ಪ್ರೀತಿಗಳ
ಸಂಗಮದ ಸಾಕಾರದಲಿ
ಫಲಾಪೇಕ್ಷ ಬಯಸದ
ನಿರ್‍ಮಲ ಸ್ನೇಹ ಸೇತುವೆ

ಬದುಕು-ಬವಣೆಗಳೆನ್ನದೆ
ಜನಸ್ಪಂದನೆಯಲಿ ಸಂತಸ ಕಾಣುತ
ನಂಬಿಗೆಯ ಬಂಧನದ
ಬಾಂಧವ್ಯದ ಕ್ಷೀರ... ಧಾರೆ...

ನಗುತ ಬೆರೆಯುತಲೆ
ಜತೆ ಜತೆ ಸಾಗುತ..
ಸಂತಸದ ಸಂಭ್ರಮದಿ
ಮರೆಯಾದ ಕಾಣದ ಸೆಳೆತಕೆ

ಹಲವು ಹತ್ತು ಕನಸುಗಳ
 ಕನ್ನಡ ಮರಾಠಿಗರ ಮನಗೆದ್ದ
ಗರಿ ಮುಡಿಸುವ ಗೆಳೆತನದ
ಸುಧಾಮ-ಸಂಕಷ್ಟದ... ಚಾಣಕ್ಯ

ಪಂಚಭೂತದಲಿ ಲೀನವಾಗಿ
ಬದುಕು ಭವ ಗೆದ್ದವ
ಅಮರ ಸಂಜೀವಿನಿಯಾದೆ
ಸದಾ ಸ್ನೇಹದ ಸಾಕಾರದಲಿ

ಉದಯಿಸುವ ರವಿಯಾಗಿ
ಬಾಳಿದ ಕೊನೆಗಳಿಗೆ ತನಕ
ಕತ್ತಲೆದೂಡುತ ಬೆಳಗುತಲೆ
ಮರಳದ ನಾಡಿಗೆ ನಡೆದೆ

ಸುಳಿದಾಡುತ ನೆನಪು
ಅಗಲಿಕೆಯ ನೋವಲಿ
ಅಂತರಾಳದ ಆತ್ಮೀಯತೆಗೆ
ಇರಿಯುತ ಕೆದುಕುತಿಹದು

         *****

ಕೀಲಿಕರಣ: ಕಿಶೋರ್‍ ಚಂದ್ರ

ನಡೆನುಡಿಯಿಂದ ನಾವು ನಡೆಯಬೇಕಣ್ಣಾ

- ಶಿಶುನಾಳ ಶರೀಫ್


ನಡೆನುಡಿಯಿಂದ  ನಾವು  ನಡೆಯಬೇಕಣ್ಣಾ
ದೇಹವಿದು  ತಮ ನಡುವೆ  ಬಿದ್ದು  ಹೋಗತೈತಣ್ಣಾ            ||ಪ||

ಭಜನೆಯ  ಮಾಡ್ವಾಗ   ಭೇದಭಾವ  ಬಿಟ್ಟು   ಭಜಿಸಬೇಕಣ್ಣಾ 
ಅಣ್ಣತಮ್ಮರೆಂದು ತಿಳಿಯಬೇಕಣ್ಣಾ                        ||೧||

ಪರ ಹೆಣ್ಣು ಮಕ್ಕಳು ಎದುರಿಗೆ ಬಂದರೆ ನಜರಿಡಬೇಕಣ್ಣಾ
ನಿನ್ನ  ಭಗಿನಿಯರೆಂದು ತಿಳಿಯಬೇಕಣ್ಣಾ                    ||೨||

ವಸುಧಿಯಲಿ  ಶಿಶುನಾಳಧೀಶನ ದಯವ ಗಳಿಸಬೇಕಣ್ಣಾ
ಗುರುಗೋವಿಂದನ ಧ್ಯಾನಮಾಡಣ್ಣಾ                        ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಕುರುಬರ ಕುರಿತು

ನೃತ್ಯ ರೂಪಕ- ಡಾ || ರಾಜಪ್ಪ ದಳವಾಯಿ

        - ೧ -

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

ಜಾತಿವಾದವ ದೂರವಿಟ್ಟು
ಜಾತಿ ಕೀಳರಿಮೆ ಬಿಟ್ಟು
ಲೋಕ ಧೈರ್‍ಯ ಸ್ಥೈರ್‍ಯಕೆ
ಮೂಕರಾದವರ ವಾಕ್ಯಕೆ ||

ನಮ್ಮ ಹಿರಿಮೆಯ ಸ್ಮರಣೆಯು
ಮುಗ್ದ ಜನರ ಕರುಣೆಯು
ಜನದ ನಡತೆಯೆ ಕನ್ನಡಿ
ಜಗದಸ್ವಾಸ್ಥ್ಯದ ಮುನ್ನುಡಿ ||

        - ೨ -

ಕುರುಬರೆನ್ನುತ್ತಾರೆ ನಮಗೆ ಕುರುಬರೆನ್ನುತ್ತಾರೆ
ಕಾಯುವವ ಕೊಲ್ವನಲ್ಲ ಕುರುಬನೆಂದರೆ ||

ಕುರಿ ಕಾಯ್ವ ಕಾರಣಕೆ ನಾವು ಕುರುಬರು
ದಡ್ಡರೆಂದು ನಮಗೆ ಹೇಳಿದವರು ಯಾರು ?
ಅಲ್ಲಣ್ಣ ನಾವು ಅದು ಖರೆ ಅಲ್ಲವಣ್ಣ
ನಮ್ಮ ಬುದ್ದಿ ಜಗದ ಹಿತಕೆ ಬೇಕೆಬೇಕಣ್ಣ ||

ಹಾಲುಮತದವರು ಎನ್ನುತಾರೆ ಹಾಲುಮತ
ಹಾಲಿನಂಥ ಮನಸು ಎಂಬುದು ಅದರರ್ಥ
ಕುರಿ ಹಾಲು ಮಂದೆ ಕಂಬಳಿ ಕೈಕಸುಬು
ಬೆವರು ಬಲ ನ್ಯಾಯ ನೀತಿ ನಮ್ಮ ಕಸುವು ||

        - ೩ -

ಪುರಾಣವುಂಟು ನಮಗೆ
ಭೂಮಿಗೆ ಬಂದೆವ್ಹೇಗೆ ||

ರುದ್ರ ವಿಲಾಸ ಪ್ರೇಮೋಲ್ಲಾಸ
ಗಿರಿಜೆ ಶಂಕರರ ಮಂದಹಾಸ
ತಾಂಡವ ಮೂರುತಿ ಲಯವಂತ
ಪ್ರೇಮ ಕರುಣೆಯ ಗುಣವಂತ ||

ಗಿರಿಜೆ ಶಂಕರರ ಶುಭವಿವಾಹ
ಧಾರೆಗೆ ಕೈಕೈ ಸತಿಪತಿಯ
ನೆರೆದಿಹ ದೇವತಾ ಸಮೂಹ
ಸಾಕ್ಷಿಗೆಲ್ಲ ಕ್ಷೀರ ಸುರಿಯೆ ||

ಮದುವೆಗೆ ಎರೆದ ಹಾಲನು
ಗಿರಿಜೆ ಮೊಗ ನೋಡಿ ಮರೆತನು
ಸುರಿಯಿತು ಧಾರೆ ಭೂಮಿಗೆ
ಕಾರಣವದು ನಮ್ಮ ಹುಟ್ಟಿಗೆ ||

        - ೪ -

ಮತ್ತೊಂದು ಕಥೆಯುಂಟು
ಶಿವಶಿವೆಯರ ವನದ ನಂಟು ||

ವನಬಳಲಿಕೆಯಿಂದ
ಶಿವೆಸ್ತನಗಳಿಂದ
ಸುರಿಯಿತು ಎದೆ ಹಾಲು
ಎಲ್ಲದೂ ನೆಲಪಾಲು ||

ಭೂಮಿಯ ಎದೆಹಾಲು
ಆಗದು ಮಣ್ಣಪಾಲು
ಮನ ಚಿಂತೆಯ ಶಂಕರ
ಹಿಡಿ ಮಣ್ಣಿಂದ ಚಿತ್ತಾರ ||

ಮುದ್ದಪ್ಪ ಮುದ್ದವ್ವ
ಗಂಡೆಣ್ಣು ಗೊಂಬೆರಡು
ದಿಟ್ಟಿಯಲಿ ಸೃಷ್ಟಿಸಿದ
ಭುವಿಯತ್ತ ಕಳುಹಿಸಿದ ||

ಶಂಕರ ಲೀಲಾ ವಿಲಾಸ
ನೆಲ ನೆರೆ ಹಾಲ ಮಾನಸ
ಹಾಲಾಹಲ ನುಂಗಿಬಿಟ್ಟ
ಜಗಕಮೃತವನೆ ಕೊಟ್ಟ ||

ಆ ಹಾಲು ಕುಡಿಯಲು ಬಂದೆವು
ಆ ಹಾಲು ಕಡೆಯಲು ಬಂದೆವು
ಆ ಹಾಲು ಬೆಳೆಯಲು ಬಂದೆವು
ಆ ಹಾಲು ಸಲಹಲು ಬಂದೆವು

ಕುರಿ ಕಾಯುವ ಮಂದಿ
ಹಾಲೆರೆಯಲು ಬಂದಿವಿ
ಲೋಕದಾ ಕೋಲಾಹಲ
ಮಾಡುವೆವು ಕೋಮಲ ||

        - ೫ -

ಕುರುಬರೆಂಬುದಕೆ ಪರ್ಯಾಯ ಹಲವುಂಟು
ಹಾಲುಮತೆವೆಂದು ಹೆಚ್ಚು ಚಾಲ್ತಿಯುಂಟು ||

ಕುರಿ ಪಾಲನೆ, ಪಶು ಪಾಲನೆ, ಹಾಲು ಪಾಲನೆ
ಎತ್ತರದ ಬೆಟ್ಟದಲಿ ವಾಸದವನೆಂಬ ಸ್ಪಷ್ಟನೆ
ಹೆಸರುಂಟು ದೇಶ ತುಂಬ ಬೇರೆ ಬೇರೆ
ಕುರುಬರು ಕುರುಬವಾಳು ಕುರುಂಬನ್ ಇರುಳಿಗರ್‍
ಇಡೈಯರ್‍ ಕುರುಂಬರನ್ ಹಟ್ಟಿಕಾರ ಪಾಲ್ ಧನಗರ್‍ ||

ಆರ್ಯ ಪೂರ್ವದ ಜನರು ನಾವು
ಶತಮಾನದವೆರಡರಲಿ ಟಾಲೆಮಿ ಬರೆದ
ಪಾಲಿ ಗ್ರಂಥಗಳಲುಂಟು ಉಲ್ಲೇಖ
ಅಂಧ ಅಂಧಕ ಅಂಡರರೆಂದೆಲ್ಲಾ ||

ಅಂಧಕ ವೃಷ್ಟಿಯೆಂಬೊಂದು ಹೆಸರು
ಟಗರು ಸಾಕುವರೆಂದಿದರ ಬೆಡಗು
ಸಿಲಪ್ಪದಿಕಾರಂನ ಇಡೆಯರ್‍ ಅಂಡರ್‍
ನಾವೆ ನಾವಲ್ಲಿಯ ಕುರುಂಬನ್ ವಡುಗರ್‍ ||

ಶತಮಾನ ಮೂರರಲಿ ತಮಿಳು ಕಾವ್ಯಗಳ
ಹಟ್ಟಿಕಾರ ಕುಲನಿಲಮನ್ನೆಯರ್‌ಗಳು
ಇವರು ಟಂಕಿಪ ನಾಣ್ಯಗಳೆ ಪ್ರಾಚೀನವು
ದಕ್ಷಿಣದ ನಾಡವರು ಆಳರಸರವು ||

ಉತ್ತರದಿ ಆಹೀರರು ಯಾದವರು
ಗಢರಿಯಾ ಪಾಲರು ರಾಜ್ಯವಾಳಿದರು
ಪಂಜಾಬ ಬಂಗಾಲ ರಾಜಾಸ್ತಾನ
ಇಂದ್ರಪ್ರಸ್ಥ ಕನೂಜ ಹಿಂದೂಸ್ತಾನ ||

ಕನ್ನಡ ಸಿರಿ ಮುಕುಟ ವಿಜಯನಗರ
ಮೂಲ ವಂಶಜರಲ್ಲಿ ಹಕ್ಕಬುಕ್ಕರು
ಮುಂದೆ ಆಳಿದ ರಾಜರಿಗೆ ಲೆಕ್ಕವಿಲ್ಲ
ಇವರ ಬಗೆಗೆ ಖಚಿತ ಚರಿತ್ರೆಯಿಲ್ಲ ||

ಆಳರಸರ ಚರಿತೆ ಕವಿ ಕೋಗಿಲೆ
ವಿಚಾರತೆಯಲ್ಲಿ ಕುದಿ ಬಾಂಡಲೆ
ಕಾಳಿದಾಸ ಕನಕದಾಸರೀರ್ವರು
ನಮ್ಮ ಬುದ್ದಿಶಕ್ತಿಯ ಧಾತರು ||

        - ೬ -

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದಿ ಸಾಹಿತ್ಯಶ್ರೀ ||

ಹೊಸದೃಷ್ಟಿ ಶಿವಶಕ್ತಿ ಬೆಸೆದ ಪ್ರತಿಭೆ
ಕಾಣದ್ದ ಕಂಡಂತೆ ಶಿವನ ಪ್ರಭೆ
ನವ ನೋನ್ಮೇಷ ಜಗದ ಬೆಳಕು
ಕಾವ್ಯ ಸೂರ್ಯನವನು ಎಲ್ಲ ದಿನಕು ||

ಹೂವು ಬೆಂಕಿಯ ಮಾಲೆಯ ಮಾಡಿ
ಪ್ರೀತಿ ಬಿತ್ತಿದ ಜಗಕೆ ನೋಡಿ
ಅಗ್ನಿಮಿತ್ರನು ಒಲಿದ ಮಾಲವಿಕೆಗೆ
ಮೋಹವೇ ಗೆದ್ದ ಕತೆಯು ಕೊನೆಗೆ ||

ದೇವತಾಶ್ರೀ ಊರ್ವಶಿ ಸುರಸುಂದರಿ
ಸಗ್ಗಕೇ ಹುಚ್ಚಿಡಿಸಿದ ಕಲಾಮಂಜರಿ ||

ಮುಗಿಲ ಕನ್ಯೆ ಪ್ರೇಮಿಸಿದಳು ಅಬ್ಬಬ್ಬಾ
ಮನುಜೇಂದ್ರ ಪುರೂವನ್ನು ಮನದಬ್ಬ
ನೆಲಮುಗಿಲ ಪ್ರೇಮದಲೆ ಬೆಸೆದನಲ್ಲ
ಇಂಥ ಕವಿಗೆ ಮತ್ತೊಬ್ಬ ಸಾಟಿಯಿಲ್ಲ ||

ಜಗದ ಮೇರು ಕೃತಿ ಶಾಕುಂತಲ
ಕಣ್ವಾಶ್ರಮದ ಮುಗುದೆಯಲ ||

ಬಂದನರಸ ದುಶ್ಯಂತ ಬೇಟೆಗೆಂದು
ಬೇಟವೇ ಬೆಸೆಯಿತು ಅವರನಂದು
ಕೊಟ್ಟನವನು ಆಹಾ! ನೆನಪಿನುಂಗುರ
ಬಾಲೆಯ ಎದೆಯೆಲ್ಲ ಕನಸಿನಂಬರ ||

ಮುನಿ ಮುನಿದ ಕಾರಣ
ಪ್ರಿಯನಲ್ಲಿ ರಾಜಕಾರಣ
ಮರೆತು ಮುಗುದೆಗೆ ಹಿಂಸೆ
ಶಾಪ ಕೂಪದಲಿ ನರಳಿಸೆ ||

ಅಮರ ಪ್ರೇಮದ ಕಾವ್ಯ
ಇಂದಿಗೂ ನವ ನವ್ಯ
ಪ್ರೇಮ ಪರಿಕಿಪ ಚಾಪ
ವಿರಹಾಗ್ನಿ ಎಸೆದ ಧೂಪ ||

ಸಕಲ ರಾಮಾಯಣದ ಮೊರೆ
ರಘುವಂಶ ಚರಿತದ ತಾರೆ
ಹಲವು ರಾಜರ ವರ್ಣನ
ಕಾವ್ಯ ಮಹತಿನ ಕರ್ಷಣ

ಸನ್ಯಾಸಿ ಶಿವನು ಸಂಸಾರಿಯಾದ
ಕಾರಣವದಕೆ ಕುಮಾರ ಸಂಭವಂ
ಮೋಹಿತರು ಶಿವ ಪಾರ್ವತಿ
ಸೃಷ್ಟಿಲಯ ಉದಯ ಜಗಕೆ ||

ತಪ್ಪು ಮಾಡಿದ ಯಕ್ಷ ಶಾಪಕೆ
ಕುಬೇರನ ತೊರೆದು ಬಹುದೂರಕೆ
ವಿರಹಿ ಯಕ್ಷ ಕಳಿಸಿ ಸಂದೇಶವ
ಮೇಘಗಳ ಕೈಲಿ ವಿರಹೋತ್ಸವ ||

ಪ್ರೇಮಿಗೆ ಕಾಮಿಗೆ ಮತ್ತೆ ವಿರಹಿಗೆ
ಋತು ಸಂಹಾರ ಚಿತ್ತ ಕೇಡ ಬಗೆ
ಸ್ತ್ರೀರೂಪವೇ ರೂಪ ಭೋಗ ಬಾಳು
ಕುಣಿದು ನಲಿದವೆಲ್ಲಾ ಋತುಗಳು ||

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದೀ ಸಾಹಿತ್ಯಶ್ರೀ ||

        - ೭ -

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

ಗುರುವಿನ ಮೊದಲೆ ಮುಕ್ತಿಪ್ರಾಪ್ತರು
ಗುರುವಂದಿತ ಶಿಷ್ಯ ಮಹಾಮಹಿಮರು
ಸಜ್ಜನಿಕೆ ಸರಳತೆ ಯುದ್ಧತ್ಯಾಗದಿಂದ
ಕಲಿತ ಪಾಠವೆಲ್ಲ ಬಾಳ ಶಾಲೆಯಿಂದ ||

ವೇದವನೋದಿ ಜ್ಞಾನಿಯಾಗಿ
ಪುರಾಣಗಳ ಐರಾವತವನೇರಿ
ಹರಿಭಕ್ತನಾಗಿ ಊರೂರನಲೆದು
ಕಾಗಿನೆಲೆಯಾದಿಕೇಶವನೊಲಿದು ||

ವ್ಯಾಸಕೂಟದಲ್ಲೆ ದಾಸಶ್ರೇಷ್ಠ
ಉಡುಪಿ ಕೃಷ್ಣಗೆ ಪವಾಡಪುರುಷ
ತಿರುಪತಿಯಲ್ಲೇ ವೈಕುಂಠ ಕಂಡ
ಕುಲ ಕುಲಕುವೆಂದವರ ಮಿಂಡ ||

ದಾಸರಲ್ಲೆ ಮಹಿಮ ಕವಿ ತಿಲಕ
ಲೇಖನಿ ಚಿತ್ರಿಸಿತು ಸಾರ ಹರಿಭಕ್ತಿ
ಕೃಷ್ಣಮಹಿಮೆ ಮೋಹನ ತರಂಗಿಣಿ
ನಳ ಚರಿತ್ರೆಯ ಪ್ರೇಮದ ದೋಣಿ ||

ಮಹಾಕೃತಿ ರಾಮಧಾನ್ಯ ಚರಿತದೊಳು
ರಾಗಿ ಭತ್ತಗಳ ಕಸುವಿನ ಜಗಳ
ಬಡವರನುರಾಗಿ ಬಲ್ಲಿದರ ನಿಲ ಹೋಗಿ
ರಾಮ ನೀಡಿದ ಪದವಿ ರಾಗಿ ಯೋಗಿ ||

ಮತಿಗೆ ನಿಶಿತ ಕೀರುತನೆ ತಂಬೂರಿ
ಲೋಕದ ಡೊಂಕನು ತೋರಿದ ದಾರಿ
ಕನಕ ಕನಕ ಅಯ್ಯಾ ಕನಕಯ್ಯ
ಇಂದಿಗು ಕುಲ ಕುಲವೆನ್ನುತಿಹರಯ್ಯ ||

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

        - ೮ -

ಬಿಳಿಯರ ವಿರುದ್ಧ ತಮ್ಮ ಉಳಿವಿಗೆ
ಹೋರಾಡಿ ಮಡಿದರಲ್ಲ ತಮ್ಮ ಇಂದೂರಿಗೆ ||

ಧನಗರ ರಾಜವಂಶವು ಮಧ್ಯ ಭಾರತದಿ
ಮಲಾರಿರಾವು ಅಹಲ್ಯಬಾಯಿ ಹೋಳ್ಕರ್‍ ಛಲದಿ
ದತ್ತಕ ಸಂಬಂಧಿ ಕಾನೂನು ವಿರೋಧಿ
ಬಂಡಾಯವೆದ್ದರು ಬಿಳಿಯರ ವಿರುದ್ಧದಿ ||

ಇತಿಹಾಸ ಪುಟಗಳಲಿ ಮಡಿದ ಧ್ರುವತಾರೆಗಳು
ಕರಣಿಕರ ಬರಹವಿರದ ಹಲ ಘಟನೆಗಳು
ಹೋರಾಟವನೆ ಮಾಡಿ ಜೀವ ಬಲಿ ಕೊಟ್ಟರು
ಅವರಿವರ ವಂಚನೆಗೆ ಹರಕೆ ಕುರಿಯಾದವರು ||

        - ೯ -

ವೀರ ಸಂಗೊಳ್ಳಿ ರಾಯಣ್ಣನೆಂಬ ಸರದಾರ
ಅವನ ಧೀರತೆಗೆ ಬೆಚ್ಚಿತೊ ಬಿಳಿ ಸರಕಾರ ||

ಕಿತ್ತೂರ ವಶಮಾಡಿ ಕಿರಿದೊರೆಯ ಪಟ್ಟ
ಮಾಡೆ ತೀರುವೆನೆಂದು ರಾಯಣ್ಣನ ಪಟ್ಟು
ಅದಕೆ ಅವ ಮೆರೆದ ಧೀರ ಸಾಹಸವ
ರಾಯಣ್ಣನೆಂಥಾ ಶೂರ ಸಿಂಹ ಶಕ್ತಿಯವ ||

ಗೆಳೆಯ ಗಜವೀರ ಸಿದ್ಧಿ ಸೈತನಾಗಿ
ಬಿಡಿ ತಾಲ್ಲೂಕ ಖಾನಾಪುರ ಸಂಪಗಾವಿಗೆ
ಬಿಚ್ಚುಗತ್ತಿ ಚನಬಸಯ್ಯ ಜತೆಗೂಡಿ
ಮುತ್ತಿಗೆ ಹಾಕು ಸುಟ್ಟರಲ್ಲ ಕಛೇರಿ ನೋಡಿ ||

ರಾಯಣ್ಣನ ಹಿಡಿದವರಿಗೆ ಮುನ್ನೂರು ರೂಪೈ
ಮೇಜರ್‍ ಪಿಕರಿಂಗ್ನ ಘೋಷಣ ಜನಕೆ ದುರಾಸೈ
ಅಮಲ್ದಾರ ಕೃಷ್ಣರಾಯ ಮಾಡಿ ಕುತಂತ್ರ
ಪಟೇಲ ಲಿಂಗನ ವೆಂಕನ ಗೌಡರಹತ್ರ ||

ಪಟೇಲರಿಬ್ಬರೂ ನಿಷ್ಠದಿನೈದು ದಿನ ರಾಯಣ್ಣಗ
ಅಣ್ಣನ ಬಂಟ ಲಖ್ಯಾನ ಮೂಲ್ಕ ಹಿಕ್ಮತ್ತಿಗ
ಹೊಳೇಲಿ ಸ್ನಾನ ಮಾಡುವಾಗ ಹಿಡಕೊಟ್ರೊ ಹುಲಿಯ
ಪಡೆದರಲ್ಲೊ ಘನಕಾರ್‍ಯಕ್ಕೆ ಮುನ್ನೂರುಪಾಯ ||

ಹಗ್ಗದ ಮಂಚಕೆ ಧೀರನ್ನ ಕಟ್ಟಿ ಹೊಯ್ದರ
ಧಾರ್‍ವಾಡಕೆ ನಿಸ್ಬತೆಂಬ ಕಲೆಕ್ಟರ್‍ ಹತ್ತಿರ
ಕಿತ್ತೂರ ನಾಡ ಬಿಡುಗಡೆಗೆ ತೊಡಗಿದಕೆ
ರಾಯಣನ ಅಪರಾಧೀನ ಮಾಡಿದರಾ ||

ಇಂಥಾ ಸೊರಗೆ ಸಂಪಗಾವಿಲಿ ನೇಣು
ಸರಕಾರಕ್ಯಾರೂ ಎದುರಾಡದಂತೆ ಗೋಣು
ಎಚ್ಚರಿಕೆ ಕೊಟ್ಟರೊ ಜನಕೆ ಅಣ್ಣಾ
ಕಿತ್ತೂರಿನ ಸಂಸ್ಥಾನ ಆಯಿತೊ ಮಣ್ಣಾ ||

ರಾಯಣ್ಣನಂಥ ಕಲಿ ಅದೆಂಥಾ ತಲಿ
ಐರಾಣವಾತು ಬಾಳು ಕಿತ್ತೂರಿಗಾಗಲ್ರಿ
ನಮಕ್ಕ ಹರಾಮರ ಸಪೋರ್ಟದಿಂದಲಿ
ಆದಾನಲ್ಲ ಬಲಿ!  ಅವನೆಂಥ ಕಲಿ ||

ವೀರ ರಾಯಣ್ಣನೆಂಥಾ ಸರದಾರ
ಮೆಚ್ಚಿ ಮಂದಿ ಹರಕೆ ಹೊರತಾರ
ಹುಟ್ಟೊ ಕಂದ ರಾಯಣನಾಗಲೆಂದು
ನಂಬೋದೆಂಗಣ್ಣ ಧೀರಾ ಸತ್ತನೆಂದು ||

        - ೧೦ -

ಗಾಂಧಿ ಕಾಲಕೆ ಮತ್ತೊಬ್ಬನಿದ್ದನಣ್ಣ
ತಳ ಹಾವೇರಿ ತಾಲುಕ ಸಂಗೂರಣ್ಣ
ಹೆಸರು ಕರಿಯಪ್ಪ ಸಂಗೂರನಂತಾ
ಕೇಳಿ ಮಂದಿ ಅವನ ಕಥಾನ ಕುಂತಾ ||

ಮೂಲ್ಕಿ ಪರೀಕ್ಷೆ ಪಾಸಾದ ಯುವಕ
ಓದಹತ್ತಿದ ಪತ್ರಿಕೆ ಗಾಂಧಿ ತಿಲಕ
ಇಪ್ಪತ್ತಾರನೆ ಇಸವಿಗೆ ತೊಟ್ಟ ಖಾದಿ
ಗುಮಾಸ್ತಗಿರಿ ಬಿಟ್ಟ ಕರೆಗೆ ಗಾಂಧಿ ||

ಸಿರಸಿ ಸಿದ್ಧಾಪುರ ಕರನಿರಾಕರಣದಾಗೆ
ಸಜೆ ಬಿದ್ದ ಮೂವತ್ತು ತಿಂಗಳ ಭಾಗಿ
ಕಾರವಾರ ವಿಸಾಪುರ ಜೈಲಿನೊಳಗ
ಗಾಂಧಿ ತರ ಮಾಡಿದ ಕೆಲಸ ಭಂಗಿ ||

ಮುವತ್ನಾಲ್ಕನೆ ಇಸವಿ ಬಿಡುಗಡೆಯಾದ
ಹುಬ್ಬಳ್ಳಿ ಶಹರದ ಬಾಲಿಕಾಶ್ರಮದ
ಹರಿಜನ ಕುಂಟು ಕನ್ಯೆ ಮದಿವ್ಯಾದ
ಗಾಂಧಿ ಸನಿಹ ಹೊಂಟರಿಬ್ಬರೂ ವಾರ್ಧಾ ||

ಗಾಂಧಿ ಸಹಚರ್ಯ ಸಿಕ್ಕ ಅದೃಷ್ಟ
"ಮೂಕ ಸೇವಕ"ರೆಂದಿವರು ಗಾಂಧಿಗಿಷ್ಟ
ಜೊತೆಗೆ ಜೇಸಿ ಕುಮಾರಪ್ಪ
ಗ್ರಾಮ ಸೇವಾ ನಿರತರಾದಲ್ಲಪ್ಪ ||

ಬಂದಿತಲ್ಲ ಕ್ವಿಟ್ ಇಂಡಿಯಾ ಚಳವಳಿ
ಮಾಡು ಇಲ್ಲವೇ ಮಡಿ ಎಂಬ ಬಳುವಳಿ
ಮೈಲಾರ ಮಹಾದೇವ ತಿಮ್ಮನಗೌಡ
ಹಂಸಭಾವಿ ರಾಮಣ್ಣರ ಜೊತೆಗೂಡಿ ||

ಕಾಡುಮೇಡು ನದಿ ತೀರದಡವಿ
ಧ್ವಂಸಮಾಡಿ ಸರಕಾರವ ಕೊಡವಿ
ನಿಗದಿ ನೆಲೆ ನೆಮ್ಮದಿಲ್ಲ ಊಟ
ದಿನಬೆಳಗಾದರೆ ಪೋಲೀಸ ಕಾಟ ||

ಕರಿಯಪ್ಪ ಕೊಟ್ಟ ಬೆಲೆ ಗಾಂಧಿಗೆ
ಗ್ರಾಮೋದ್ಧಾರದ ಪಾಠದ ಮತಿಗೆ
ಮಾಡಿ ಮಡಿಯುವಾ ಉಗ್ರತೆಗೆ
ಕರಿಯಪ್ಪನಂದೆಂಥ ತ್ಯಾಗ ಜತಿಗೆ ||

ಶಾಂತಿ ಶಿಸ್ತಿನ ಸಿಪಾಯಿಗೆ
ನಿತ್ಯ ಗ್ರಾಮದ ಸಫಾಯಿಗೆ
ಸಿಟ್ಟಿಗೆ ಬಾಂಬು ಮಾಡಲೋಗಿ
ಮುಂಗೈಯೇ ಹಾರಿ ಹೋಗಿ ||

        - ೧೧ -

ಸಹಕಾರ ಚಳವಳಿ ಕತೆಯು
ಕಾರಣವದಕೆ ಕಂಬಳಿಯು
ಮೊದಲಿಗೆ ಗದಗಾದಲ್ಲಿ
ಮಾದರಿಯದು ದೇಶದಲ್ಲಿ ||

ಸಿದ್ದನಗೌಡ ಪಾಟೀಲಜ್ಜ
ಸಹಕಾರಿ ಪಿತನಾದನಲ್ಲ
ಸಿರಿವಂತ ತಿಳಿದು ಬಾಳುವ
ತತ್ವವೊಂದ ಕೊಟ್ಟನಲ್ಲ ||

ಇದಕೆ ಬೇಕು ದೊಡ್ಡ ಗುಣವು
ಹಂಚಿ ಉಂಡ ಜನರು ನಾವು
ಕೂಡಿಟ್ಟು ಏನ ಒಯ್ದೆವು
ಬಡತನಕೆ ಸಾವು ತಂದೆವು ||

        - ೧೨ -

ಚರಿತೆಯ ಪುಟದಾ ಹೆಮ್ಮೆಗೆ
ಬದುಕುವ ಸಂಸ್ಕೃತಿ ಹಿರಿಮೆಗೆ
ಘನತೆ ಗೌರವದ ಬಾಳಿಗೆ
ಹೆಸರಾಗಿದೆ ನಮ್ಮಯ ಒಳಿತಿಗೆ ||

ನಮ್ಮ ಜನಗಳ ಚಾರಿತ್ರ್‍ಯ
ಬದುಕಿ ಮಾದರಿ ಪಾವಿತ್ರ್‍ಯ
ಹಾಲು ಕೆಟ್ಟರೂ ಹಾಲುಮತ
ಕೆಡದೆಂಬುದು ನೋಡ ಜನಮತ ||

ಬಿತ್ತಲಿ ಬೆಳೆಯಲಿ ಕೊಯ್ಲಿಗೆ
ಕರೆದರು ಜನರೆಲ್ಲ ಬೋಣಿಗೆ
ಮೊದಲ ಪೂಜೆ ಲಾಭ ವ್ಯಾಪಾರಿಗೆ
ಎಲ್ಲೆಲ್ಲೂ ಮಾನ್ಯತೆ ಕುರುಬರಿಗೆ ||

ಮುಗ್ಧತೆ ಇದ್ದಂಥೆ ಅಂಧಶ್ರದ್ಧೆ
ಹೊಸದನು ಕಾಣದ ಮಾಯಾನಿದ್ದೆ
ಕವಿದಿದೆ ನಮ್ಮಯ ಜನರನ್ನ
ಹುಡುಕಬೇಕು ಹೊಸ ಸೂರ್ಯನ್ನ ||

ನಮ್ಮಲ್ಲೂ ಇಹರು ಕೆಟ್ಟವರು
ಕೊಳ್ಳೆ ಲೂಟಿಯಿಂದ ದೊಡ್ಡವರು
ನಮಗಿಂದು ಬೇಕು ಒಳಿತು ಕೇಡು
ಅರಿತಾಗ ಬದುಕು ಹಸನೋಡು ||

ಬೆವರಿಗೆ ಬೆಲೆಯು ಸಿಗಬೇಕು
ಸರುವರ ಸಮನಾಗಿ ನಿಲಬೇಕು
ಕುರುಬರೆಂದರೆ ದಡ್ಡರಲ್ಲ
ಮಾನ್ಯರವರು ಸಮಾಜದಲ್ಲೆಲ್ಲ ||

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಇಳೆದಾಯಿ

- ಗಿರಿಜಾಪತಿ ಎಂ. ಎನ್
ಮಣಿದಿದೆ ವಿಶ್ವವು ನಿನ್ನ ಚರಣಕೆ
ಇಳೆದಾಯಿ ಶುಭದಾಯಿನಿ
ಮಣ್ಣ ಕಣಕಣ ರಮ್ಯ ತೋರಣ
ನಾಕದಂದಣ ಜಗ ಕಾರಣ.....

ಆದಿ ಅಂತ್ಯದಗೊಡವೆ ಸಲ್ಲದು
ಜೀವದೊಡವೆಯ ಶ್ರೀನಿಧಿ
ಮುನ್ನ ಬಾಳಿಗೆ ಭೀತಿ ಒಲ್ಲದು.....
ಭಾವದಕ್ಷಯ ತವನಿಧಿ......

ತಮದ ಬಸಿರಿಗೆ ಬೆಳಕಿನೌತಣ
ಬೆಳಕಿಗೆನಿತೋ ನವ್ಯದ ರಿಂಗಣ
ನವೋದಯದ ಶುಭೋದಯದಲೂ
ನಿತ್ಯ ಸಾಗಿದೆ ಕಾಲನ ಚಾರಣ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಮ್ಮ ನಿಜನೆಂಟ

- ಹಾರಾಸನಾ

ಬಹಳ ದಿನಗಳ ಪ್ರಯತ್ನದ ಫಲವಾಗಿ ಅದೊಂದು ಭಾನುವಾರ ಜೀನ ಮನೆಗೆ ತನ್ನ ಆರು ಸ್ನೇಹಿತರು ಬರುವರಿದ್ದರು. ಅವರೆಲ್ಲರು ‘ಜೀ’ ಮನೆಯಲ್ಲಿ ಸೇರಿ, ಅಲ್ಲಿಂದ ಸುತ್ತಾಡಲು ಹೋಗುವುದೆಂದು ನಿರ್ಧಾರವಾಗಿತ್ತು. ನಮ್ಮಲ್ಲಿ ಕೆಲವರಿಗೆ ಹೆಸರಿಸುವ ಬದಲು ವಾಕ್ಯೈಸುವುದೂ ಉಂಟು. ಉದಾಹರಣೆಗೆ ‘ಜೀ’ ಸ್ನೇಹಿತರಲ್ಲಿ ಒಬ್ಬನ ಹೆಸರು ಕಲಿಕಲ್ಮಷನಾಶಕಾಗ್ರಜಾನುಜ-ಪಾದಸೇವಾನುಗ್ರಹಾನುಸಂಜಾತ. ಹಾಗಾಗಿ ಅವರೆಲ್ಲರ ಪೂರ್ಣ ಹೆಸರುಗಳನ್ನು ಕರೆಯುವುದು ಕಷ್ಟಸಾಧ್ಯವಾದ್ದರಿಂದ, ಮೊದಲ ಅಕ್ಷರವನ್ನು ಮಾತ್ರ ಪರಿಗಣಿಸಿದರೆ, ಆ ಆರ್ವರು ಕ, ಕಿ, ನಾ, ಮೂ, ಚ ಹಾಗು ಮ ಎಂದಾಗುತ್ತಾರೆ.

ನಮ್ಮ ದೇಶದ ಆದರ್ಶ ಅತಿಥಿ ದೇವೋಭವದಂತೆ ಸ್ನೇಹಿತರನ್ನು ಔತಣಿಸಲು ಜೀನು ಸಜ್ಜಾದ.  ನಿಗದಿತ ವೇಳೆಗೆ ಗೆಳೆಯರು ಆಗಮಿಸಿ, ಉಭಯಕುಶಲೋಪರಿಗಳು ಮುಗಿದು, ಹಳೆಕಥಾಲಾಪಗಳೂ ಕಳೆದು ನಂತರ ಊಟದ ರಜ್ಜಾಟವೂ ಮುಗಿದ ಮೇಲೆ, ಎಲ್ಲರೂ ಹೊರ-ಹೊರಡಲನುವಾದರು. ಆ ವೇಳೆಗೆ ಜೀನ ಕುಟುಂಬಕ್ಕೆ ಹತ್ತಿರರಾದ ನೆಂಟರೊಬ್ಬರು ಆಗಮಿಸಿದರು. ಎಲ್ಲರೂ ಕಕ್ಕಾಬಿಕ್ಕಿ.  ಸಾವರಿಸಿಕೊಂಡು, ಅವರೊಡನೆ ಮಾತಿಗಿಳಿದರು. ಸ್ವಲ್ಪಕಾಲ ಹರಟೆಯಾದಮೇಲೆ, ಬಂದ ನೆಂಟರು ತಾವು ಸ್ವಲ್ಪ ವಿಶ್ರಮಿಸುವುದಾಗಿ ಹೇಳಿ, ಎಲ್ಲರಿಗೂ ಹೊರಗೆ ಸುತ್ತಾಡಿಬರುವಂತೆ ಸೂಚಿಸಿದರು. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಆದಂತೆ ಹುಡುಗರು ಸಂತೋಷದಿಂದ ಹೊರ ನಡೆದರು.

ಕ’ನು ಎಲ್ಲರನ್ನೂ ಸಿನೆಮಾ ನೋಡಲು ಕರೆದುಕೊಂಡುಹೋದರೆ, ಕಿ’ನು ಮನ ಸೆಳೆಯುವ ಅರ್ಕೆಶ್ಟ್ರಾ ಕೇಳಲು ಕರೆದೊಯ್ದನು. ನಾ’ನು ಹೊಟ್ಟೆ ಬಿರಿಯುವಂತೆ ರುಚಿ ರುಚಿಯಾದ ಚಾಟ್ಸ್ ತಿನ್ನಲು ಕೊಡಿಸಿದರೆ, ಮೂ’ನು ವಿಧ-ವಿಧವಾದ ಸುವಾಸನೆ ಹೀರಲು ಸೆಂಟ್ಸ್ ತೆಗೆಸಿಕೊಟ್ಟನು. ಇಷ್ಟೆಲ್ಲಾ ಸಾಲದೆಂಬಂತೆ ಚ’ನು ಮೈಗೆ ಸ್ಪರ್ಶಹಿತ ಕೊಡುವ ಅತ್ಯಂತ ನವಿರಾದ ಬಟ್ಟೆ ಕೊಡಿಸುವದಲ್ಲದೆ, ಮ’ನು ಮನ ತಣಿಸುವ ಅನೇಕ ಮೋಜಾಟಗಳಲ್ಲಿ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿದನು.

ಆರ್ವರೂ ಅತ್ಯಂತ ಸುಖವಾಗಿ ಸಮಯ ಕಳೆದರಲ್ಲದೇ, ನಿಧಾನವಾಗಿ ತಮ್ಮ ತಮ್ಮ ಕಿಸೆಗಳು ಖಾಲಿಯಾಗಿರುವದನ್ನು ತಿಳಿದು ಖಿನ್ನರಾಗುತ್ತಾ ಒಬ್ಬರನ್ನೊಬ್ಬರು ಹಳಿಯಲಾರಂಬಿಸಿದರು. ಅವರಲ್ಲಿ ಉತ್ಸಾಹ ಕುಂದಿ ಆಯಾಸ ಮನೆ ಮಾಡಿತು. ಕತ್ತಲಾಗುತ್ತಾ ಬಂದದ್ದರಿಂದ, ಜೀನಿಗೆ ಮನೆಯ ನೆನಪು ಕಾಡತೊಡಗಿತು. ಉಳಿದ ಚಿಲ್ಲರೆಯಲ್ಲಿ ಮನೆ ಸೇರುವ ಚಿಂತೆಯಲ್ಲಿ ತನ್ನ ಜೇಬಿಗೆ ಕೈ ಹಾಕಿದಾಗ ಸಿಕ್ಕ ಕೀಲಿಯಿಂದ ಮನೆಯಲ್ಲಿ ವಿಶ್ರಮಿಸಿದ ನೆಂಟರ ಬಗ್ಗೆ ನೆನಪಾಯ್ತು. ಮನೆಯಿಂದ ಹೊರಡುವಾಗ ಆ ನೆಂಟರನ್ನು ಮನೆಯೊಳಗೆ ಬಿಟ್ಟು ಮನೆಗೆ ಬೀಗ ಹಾಕಿ ಬಂದದ್ದು ಗೊತ್ತಾಯ್ತು. ಜೀನಿಗೆ ಉದ್ಯೋಗ ಕೊಡಿಸಲು ಒಂದು ಸಂದರ್ಶನಕ್ಕಾಗಿ ಕರೆದು ಕೊಂಡು ಹೋಗಲು ಬಂದಿದ್ದ ನೆಂಟರನ್ನು ನೆನೆದು, ಜೀನು ತನ್ನಿಂದಾದ ತಪ್ಪಿಗಾಗಿ ಪರಿತಪಿಸಿದನು.

ಇಷ್ಟು ಹೊತ್ತು ತನಗೆ ಮೋಜು ಕೊಟ್ಟವಾವುವೂ ಜೀನಿಗೆ ಬೇಡವೆನಿಸಿದುವು. ಬೇಜವಾಬ್ದಾರಿ ಗೆಳೆಯರ ಸಂಗವೇ ಈ ಅನಾಹುತಕ್ಕೆ ಕಾರಣವೆಂದು ತಿಳಿದು, ತನ್ನ ವಿಷಯ ಲಂಪಟತನದ ಬಗ್ಗೆ ಅತ್ಯಂತ ಜುಗುಪ್ಸೆ ಪಟ್ಟನು. ತನ್ನ ಕರ್ತವ್ಯವನ್ನು ಮರೆತದ್ದಕಾಗಿ ದು:ಖತಪ್ತನಾದನು. ಮೊದಲು ಮನೆಗೆ ಹಿಂತಿರುಗಿ ನೆಂಟರನ್ನು ಸಮಾಧಾನಗೊಳಿಸಿ, ಅವರ ವಿಶ್ವಾಸಗಳಿಸುವ ಸಂಕಲ್ಪ ತೊಟ್ಟು, ಅವರ ದರ್ಶನಕ್ಕಾಗಿ ವ್ಯಾಕುಲನಾಗಿ ಮನೆಯೆಡೆಗೆ ಜೀನು ಸಾಗಿದನು. ತನ್ನ ಗೆಳೆಯರಾರು ಈಗ ಅವನಿಗೆ ಬೇಕೆನಿಸಲಿಲ್ಲ. ತನ್ನ ಏಕಮಾತ್ರ ಗುರಿ ಮನೆ ಸೇರಿ, ನೆಂಟರನ್ನು ಸಮಾಧಾನಗೊಳಿಸುವುದಾಗಿತ್ತು.

ತನ್ನ ಸ್ನೇಹಿತರೆನ್ನೆಲ್ಲ ಅಲ್ಲೇ ಬಿಟ್ಟು ಮನೆ ಸೇರಿದನು. ಆ ನೆಂಟರು ಈ ಹುಡುಗನ ದುಮ್ಮಾನವನ್ನು ತಿಳಿದು, ಅವನು ಮಾಡಿದ ತಪ್ಪಿಗಾಗಿ ಪಟ್ಟ ಪಶ್ಚಾತ್ತಾಪದ ಬೆಗ್ಗೆ ಸರಿಯಾಗಿ ಅರಿತು, ಜೀನಿಗೆ ಭರವಸೆಯ ಮಾತುಗಳನ್ನಾಡಿದರು. ಅವನ ತಪ್ಪನ್ನು ಕ್ಷಮಿಸುವುದಲ್ಲದೇ, ಅವನಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದರಲ್ಲಿ ಸಹಾಯಕರಾದರು.

ಈ ದೃಷ್ಟಾಂತದ ಒಳಾರ್ಥವನ್ನು ಗಮನಿಸೋಣ. ಸಾಮಾನ್ಯವಾಗಿ ನಮ್ಮಲ್ಲಿರುವ ಜೀವಾತ್ಮನ ಪರಿಸ್ಥಿತಿಯೂ ದೃಷ್ಟಾಂತದಲ್ಲಿನ ಜೀಗೆ ಹೋಲಿತ್ತದೆ. ದೃಷ್ಟಾಂತದ ಕ ಇತ್ಯಾದಿ ಆರು ಸ್ನೇಹಿತರು ನಮ್ಮ ಪಂಚೇಂದ್ರಿಯಗಳು ಹಾಗೂ ನಮ್ಮ ಮನಸ್ಸು. ಮನೆಗೆ ಬಂದ ನೆಂಟನೇ ನಮ್ಮ ಹೃದಯದೊಳಗಿರುವ ಪರಮಾತ್ಮ. ಕಠೋಪನಿಷತ್ ಹೇಳುವಂತೆ ಪರಾಂಚಿಖಾನಿ ವ್ಯತೃಣತ್ ಪರಾನ್ ಪಶ್ಯಂತಿ ನಾಂತರಾತ್ಮನ್ ಎಂದರೆ ನಮ್ಮ ಮನಸ್ಸು ಹಾಗು ಇಂದ್ರಿಯಗಳು ಸ್ವಾಭಾವಿಕವಾಗಿ ಹೊರಕ್ಕೇ ಹರಿಯುವುದು. ಅವುಗಳು ನಮ್ಮಲ್ಲಿರುವ ಅಂತರಾತ್ಮವನ್ನು ನೋಡುವುದಿಲ್ಲ. ಒಂದೊಂದು ಇಂದ್ರಿಯವೂ ಮನಸ್ಸಿನ ಸಹಾಯದಿಂದ ಜೀವಾತ್ಮನನ್ನು ವಿಷಯ ಭೋಗದಲ್ಲಿ ಮುಳುಗಿ ನಾಶವಾಗುವಂತೆ ಪ್ರೇರೇಪಿಸುವುದೇ ಅಲ್ಲದೆ ತನ್ನ ನಿಜಸ್ವರೂಪವನ್ನೇ ಮರೆತು ಬಿಡುವಂತೆ ಮಾಡುತ್ತವೆ.

ಈ ಜಗದ ಜಂಜಾಟದಲ್ಲಿ ತೊಳಲಿ ಬೆಂಡಾಗಿ ನಮ್ಮೆಲ್ಲ ಶಕ್ತಿಯು ಉಡುಗಿ ಹೋದ ಮೇಲೆ ಜೀವನದ ನಿಸ್ಸಾರತ್ವ ತಿಳಿಯುತ್ತದೆ. ಆದರೆ ಆ ವೇಳೆಗೆ ನಮ್ಮ ದೇಹ-ಮನಸುಗಳು ಮತ್ತಿನ್ನೇನೂ ಸಾಧಿಸಲಾಗದಂತಾಗಿ, ಜೀವನವನ್ನು ವ್ಯರ್ಥವಾಗಿ ಕಳೆದುದಕ್ಕೆ ಪರಿತಪಿಸುವಂತಾಗಿರುತ್ತದೆ. ಹಾಗಾಗದಂತೆ ನಮ್ಮಲ್ಲಿ ಶಕ್ತಿಯಿರುವಾಗಲೇ ನಮ್ಮ ನಿಜನೆಂಟನಾದ ಭಗವಂತನೆಡೆಗೆ ನಮ್ಮ ಜೀವನ ಸಾಗುವಂತೆ ಇಂದ್ರಿಯ ಮನಸ್ಸುಗಳನ್ನು ತಯಾರಿಗೊಳಿಸಿಕೊಂಡು ಜೀವನ ಪಾವನ ಮಾಡಿಕೊಳ್ಳುವುದು ಸೂಕ್ತ.
     *****

ನಗೆ ಡಂಗುರ - ೪

- ಪಟ್ಟಾಭಿ ಎ ಕೆ

ಗುರು :  "ನರ ಎಂಬ ಶಬ್ದಕ್ಕೆ ಸ್ತ್ರೀಲಿಂಗ ಏನು?"
ಶಿಷ್ಯ:  "`ನರಿ' ಸಾರ್‍!"

        *****

ಅದ್ವೈತ

- ಶೇಖರ್‌ಪೂರ್ಣ

        ಭಾಗ-೧
ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ.  ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ.  ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು.  ಸಾಹಸಿಸಿದರೆ ಎಡವುವುದು ಸಹಜ.  ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ] ನಡುವೆ ಸಂವಹನ ಕುಸಿದು ಬೀಳುತ್ತದೆ.  ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ - ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ.  ಶಂಕೆಯಂತೂ ಇದ್ದೇ ಇದೆ.  ನಾನು ಹೇಳಿದ ರೀತಿಯಲ್ಲೆ ಆಗಿರಬಹುದು.  ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ.

ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ-
"ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ.  ಸಿಂಗಲ್ ಹ್ಯಾಂಡ್.  ಬೇರೆ ಯಾರ ಕೈಗೂ ಕೊಡೋಲ್ಲ."
ನನ್ನ ಬಳಿಯೂ ಒಂದು ಮೊಪೆಡ್ ಇದೆ.  ೧೯೮೫ರ ಮಾಡೆಲ್‌ನದು.  ಎಲ್ಲರೂ ಉಪಯೋಗಿಸುತ್ತಾರೆ!
ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ.  ಈಗೀಗ ಬಹಳ ಜನ ಹೇಳುತ್ತಾರೆ- "ಗುಜರಿಗಾಕೋ".  "ಬೀಗ ಬೇರೆ ಯಾಕಾಕ್ತೀಯ?  ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ" -
"ಸ್ಕ್ರಾಪ್ ಇಟ್, ಸೆಂಡ್ ಇಟ್ ಟು ಸಾಲ್ವೇಜ್" - ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ.  ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ.  ಅವಮಾನವೂ ಇಲ್ಲ.  ನಕ್ಕುಬಿಡುತ್ತೇನೆ.  ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ, "ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ..." ಇವಳಿಗೂ ಅರ್ಥವಾಗುವುದಿಲ್ಲ.  ಕ್ಷಮೆ ಇರಲಿ!
ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ.  ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ.  ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ.  ಖಾತ್ರಿಯೂ ಇಲ್ಲ.  ಷುಡ್ ಐ ಕೇರ್?  ಉದ್ಧಟತನಕ್ಕೆ ಕ್ಷಮೆ ಇರಲಿ. 

ಒಂದ್ಸಾರಿ ಏನಾಯ್ತೂಂದರೆ:
ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು.  ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು.  - ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು.  ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ;
"ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ."
ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ.  ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ.  ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ.  ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್.  ಸುಮಾರು ೧೩೦ ಕಿ.ಮೀ ಇಬ್ಬರನ್ನು ಹೊತ್ತು ತಂದಿತ್ತು!

ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು.  ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು.  ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು.  ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ.  ಒಳ್ಳೆಯ ಹಿಡಿತವೂ ಇತ್ತು.  ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ’ ಗೆ ಹುಡುಕಿದೆ.  ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ.  ಸುಬ್ಬ ಸ್ವಲ್ಪ ದೂರ ಓಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. 

ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ.  ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು.

ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ.  ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ.  ಇಳುಕಲಿನ ತಿರುವು ಹಾದಿ.  ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ.  ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು.  ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ.  ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦ ಕಿ.ಮೀ. ವೇಗ.  ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು.  ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ!

ಮತ್ತೆ ಇಳುಕಲಿನಲ್ಲಿ ಹೊರಟೆವು.  ವೇಗವೋ ವೇಗ.  ಬ್ರೇಕ್ ಹಾಕಿದೆ.  ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು.  ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು.  ಬಲಗಡೆಗೆ ಆಳವಾದ ಕಮರಿ.  ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ- "ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು" - ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು.  ಕೂತೆ ಇದ್ದ.  ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ.  ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ.ಮೀ ವೇಗದಲ್ಲಿ ೧೭೦ ಕೆ.ಜಿ ತೂಕದ ನಾವುಗಳು ಬಿದ್ದೆವು.  ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ.  ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ.  ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು.  ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. 

ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ - ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು "ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ" ಬೇಡಿದ.  ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ.  ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು.  ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು.  ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. 

ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ.  ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು.  ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ.  ಅರ್ಥವಾಗುತ್ತಾ, ನಿಮಗೆ?

        ಭಾಗ-೨
ಶಿವಾ.  .  .  .  .
ನೀವು ಅವನನ್ನು ನೋಡಬೇಕು.  ಕಪ್ಪು ಬಣ್ಣದ ತಮಿಳಿನವ.  ಕಪ್ಪಾದ ಮೈಗೆಲ್ಲಾ ಗ್ರೀಸು.  ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ.  ೧೮-೨೦ ವರ್ಷದವ.  ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ.  ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು.  ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು.  ಸ್ಪಾನರ್, ಸ್ಕ್ರೂ ಡ್ರೈವರ್, ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು.  ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು..  ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ! "ಏನಯ್ಯ?"  ಎಂದರೆ "ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ." ಎಂದು ಹಲ್ಕಿರಿದಿದ್ದ.  ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ.  ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ.  ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ.  ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್’ ಎಂಬಂತೆ ಗಾಯ ಮಾಗಿಹೋಗಿತ್ತು!

ಕೆಲಸದಲ್ಲಿ ಅವನಿಗೆ ಎಂತದೋ ಖುಶಿ.  ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ.  ಬೇರೇನೋ ತೆರೆನಾದ ಖುಷಿ.  ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ.  ಅದರಲ್ಲೇ ಮಗ್ನಗೊಂಡ ಖುಷಿ.  ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ.  ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು.  ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ.  ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ.  ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. 

ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. 

ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. 

ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು.  ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ.  ಗಾಡಿ - ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ "ತನ್ರಿ ಹಾಕ್ಕೊಡ್ತೀನಿ".  ಶಿವ ಎಂದೂ ಹಾಗೆ ಇರುತ್ತಿರಲಿಲ್ಲ.  ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ.  ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ.  ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. 

ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ.  ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ.  ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು.  ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ.  ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ.  ಖಿನ್ನನಾಗಿರುತ್ತಿದ್ದ ಆಷ್ಟೆ.  ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ.  ಒಳಗೆ ಎಂಥದೋ ಖುಷಿಯಾಗುತ್ತಿತ್ತು.  ಆದರೆ ಅವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ.... 
*
*
*
ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು.  ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ.  ನಿತ್ರಾಣವಾಗಿಹೋಗಿತ್ತು.  ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ.  ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. 

ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ.  ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. 

ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲು ತೀರ್ಮಾನಿಸಿದ್ದೆ.  ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ!

ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು.  ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. 

ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು.  ಹೊರಟೆ. 
*
*
*
ಮುರುಕಲು ಕುರ್ಚಿ ಮೇಲೆ ಕೂತಿದ್ದ.  ಸಪ್ಪಗಿದ್ದ.  ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. 
"ಏನಣ್ಣಾ.." - ಅದೇ ವಿನಯ. 
"ಗಾಡಿ ಪಿಕಪ್ ಇಲ್ಲ.  ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು.  ಡೀಕಾರ್ಬನ್ ಮಾಡಿಸಿಯಾಯ್ತು.  ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ..."
"ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ.. 
"ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ." ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ...."
ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ.  ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು.  ಆದರೂ ಶಿವನ ಮೇಲೆ ನಂಬಿಕೆಯಿತ್ತು. 

ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ.  ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು!
"ಏನೋ ಅದು?"
"ಕಲ್ಲೇಟು ಬಿತ್ತು ಸಾರ್.  ಜೊತೆಗೆ ಕೀವು ರಕ್ತ."
"ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ.  ನಾನು ಬಹಳ ಹೊತ್ತು ಜೊತೆಗಿದ್ದೆ.  ಏನೋ ಖುಷಿ ಖುಷಿ.  ಅವನಿಗೂ ಹಾಗೆಯೇ ಇರಬೇಕು. 
"ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?"
- ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. 
"ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ.."
ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು.  ನನ್ನ ಕಣ್ಣುಗಳು ಸಹ ಅರಳಿದ್ದವು. 
*
*
*
ಮಾರನೆ ದಿನ ಗಾಡಿ ತಯಾರಾಗಿತ್ತು.  ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ
"ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ"- ಎಂದ. 
ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು.  ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. 
"ಪ್ಯಾಂಟು ಮೇಲೆತ್ತು." ಎಂದೆ.  ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ.  ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು.  ಕೊಳಕೊಳ ಬಿಗಿದುಕೊಂಡಂತೆ.  ಶವದ ಕಾಲಿನಂತೆ.  ನೋಡಿ ದಂಗಾದೆ. 
"ವಿಪರೀತ ನೋಯುತ್ತೆ, ಸಾರ್."
"ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ..."
ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ.  ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು.  ನನಗೋ ಖುಷಿಯಾಯಾಯಿತು.  ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ.  ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ.  ಏನನ್ನೋ ಸಾಧಿಸಿದ ತೃಪ್ತಿ ಇತ್ತು. 
ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. 
ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. 
*
*
*
ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು, ಸುಖದಲ್ಲಿದ್ದೆ.  ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. 

ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು.  ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ.  ಸಂದರ್ಭವೂ ದೊರೆಯಲಿಲ್ಲ. 

ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ.  ನಿರಿಕ್ಷಿಸಿಯೇ ಇರಲಿಲ್ಲ.  ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ.  ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ.  ಆದರೂ ಕೇಳಿದಾಗ:
"ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ.  ಅಡ್ಮಿಟ್ ಮಾಡ್ಕೊಂಡ್ರು.  ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು.  ಇವತ್ತೇನೆ ಬಂದಿದ್ದು.  ಬಂದೋನು ಇಲ್ಲಿಗೆ ಬಂದ್ಬಿಟ್ಟೆ.  ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ.  ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ..."
- ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ.  ನೀರಿರಲಿಲ್ಲ.  ಬದಲಿಗೆ ಮಿನುಗುತ್ತಿದ್ದವು. 
*
*
*
ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು.  ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ-
"ಏನ್ಸಾರ್, ನಡ್ಕೊಂಡು ಬರ್ತಿದೀರ..?"
"ಗಾಡಿ ಮಾರ್ಬಿಟ್ಟೆ ಕಣೋ...." ಅವನಿಗೆ ಅರ್ಥವಾಗಿತ್ತು.  ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ.
"ಎಷ್ಟಕ್ಕೆ ಮಾರಿದ್ರಿ ಸಾರ್?"
"ಒಂದೂ ಕಾಲು ಸಾವಿರಕ್ಕೆ.."
"ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್..."
"ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು."
"ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್"- ನನಗೂ ಅರ್ಥವಾಯಿತು!
ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. 
ಬಸ್ಸು ಬಂತು.  ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವನನ್ನು ನೋಡಿ ಕೂಗಿಕೊಂಡೆ-
"ಬರ್ತೀನೊ ಶಿವಾ, ಸಿಕ್ತೀನಿ..."
ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ!
              *****

ಕೀಲಿಕರಣ: ಶೇಖರ್‌ಪೂರ್ಣ

ನಗೆ ಡಂಗುರ - ೩

- ಪಟ್ಟಾಭಿ ಎ ಕೆ

ಈತ:  "ಮದುವೆ ಮತ್ತು ಮೊಬೈಲ್ ಇವೆರಡರ ವ್ಯತ್ಯಾಸ?"
ಆತ:  "ಎರಡೂ ಒಂದೆ;  ಕಟ್ಟಿಕೊಂಡ ಹೆಂಡತಿ, ಹಿಡಿದುಕೊಂಡ ಮೊಬೈಲ್ ಎರಡೂ ಮಾತಿನ ಗಣಿಗಳು.  ಬಗೆದಷ್ಟೂ ಮಾತು!"....

        *****

ಕಾಡು ಕುದುರೆಗೆ ಕೋಡು ಬಂತು

ಚಿತ್ರಕೃಪೆ: ಎ ಆರ್ ಮಣಿಕಾಂತರ ಬ್ಲಾಗು
ಭಾರತೀಯ ಸಾಹಿತ್ಯ ರಂಗ ಹೆಮ್ಮೆ ಪಡುವಂತೆ ಜಾನಪದ ಸೊಗಡಿನ ಸಾಹಿತಿ ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕನ್ನಡಿಗರ  ಸಂಭ್ರಮಕ್ಕೆ ದೊಡ್ಡ ಕಾರಣ. ಕಂಬಾರರಿಗೆ ಅಭಿನಂದನೆಗಳು.

ನಾಟಕಕಾರ, ಕವಿ, ಜಾನಪದ ತಜ್ಞ,  ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ಅಧ್ಯಾಪಕ ಹೀಗೆ ಎಲ್ಲ ರಂಗಗಳಲ್ಲೂ  ಜಾನಪದದ ಛಾಪು ಮೂಡಿಸಿದ ದೈತ್ಯ ಪ್ರತಿಭೆ. "ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಸಂಗೀತ, ಸಾಹಿತ್ಯ ನೀಡಿದ ಕಂಬಾರರೂ ಜಾನಪದದ ಮೂಲದೊಂದಿಗೆ ಮನೆಮಾತಾದವರು. ಅವರು ನೆನಪಾಗೋದು ಈ ಹಾಡಿನ ಮೂಲಕವೇ.

ಎಂಟನೆ ಜ್ಞಾನಪೀಠ ಪಡೆದ ಕಂಬಾರರ ಚಿತ್ರವನ್ನೂ ಎಲ್ಲಾ ಶಾಲೆಗಳಲ್ಲೂ ಸೇರಿಸುವ ಕಂತ್ರಾತು ಹಿಡಿಯಲು ವೃತ್ತಿನಿರತ ಚಿತ್ರ ಕಲಾವಿದರು ಈಗಾಗಲೇ ಪ್ರಯತ್ನಿಸುತ್ತಿರುವ ಸುದ್ಧಿಯಿದೆ.

ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರಗೀತೆ
ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ ||ಪ||
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ ||೧||
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ ||೨||
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||೩||


ವೀಕಿಪೀಡಿಯ ಕಂಬಾರರ ಮೇಲೆ ಕೊಡುವ ವಿವರಗಳು ಇಲ್ಲಿವೆ:
ಡಾ. ಚಂದ್ರಶೇಖರ ಕಂಬಾರ (ಜನನ- ೨ ಜನವರಿ ೧೯೩೭) ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಇತ್ಯಾದಿ.

ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೩೭ ಜನವರಿ ೨ರಂದು ಕಂಬಾರರು ಬೆಳಗಾವಿ ಜಿಲ್ಲೆ ಘೋಡಗೇರಿಯಲ್ಲಿ ಜನಿಸಿದರು. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಧಾರವಾಡದ ಗಂಡುಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ. ರಾ. ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡವರಲ್ಲಿ ಕಂಬಾರರು ಒಬ್ಬರು.

ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಗೆ ಜನಪ್ರಿಯರು. ತಾವೇ ಸ್ವತಃ ಹಾಡುಗರೂ ಸಹಾ.

ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಬೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಇವರ ಪ್ರಮುಖ ಕೃತಿಗಳು. ಮಹಾಮಾಯಿ ಅವರ ಇತ್ತೀಚಿನ ಹೊಸ ನಾಟಕ ಕೃತಿ.ಶಿಖರ ಸೂರ್ಯ ೨೬ ವರ್ಷಗಳ ನಂತರ ಹೊರಬಂದ ಕಾದಂಬರಿ;ಡಿಸೆಂಬರ ೨೦೦೬ರಲ್ಲಿ ಬಿಡುಗಡೆಯಾಯಿತು. ಕನ್ನಡ ಜಾನಪದ ವಿಶ್ವಕೋಶ ಸಂಪಾದಿತ ಕೃತಿ. ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಾರರು ೧೯೯೧ರಲ್ಲಿ ತಮ್ಮ `ಸಿರಿಸಂಪಿಗೆ' ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.ಮೂಕನಾಗಿರಬೇಕೋ ಜಗದೊಳು

- ಶಿಶುನಾಳ ಶರೀಫ್

 ಮೂಕನಾಗಿರಬೇಕೋ ಜಗದೊಳು
ಜೋಕ್ಯಾಗಿರಬೇಕೋ                                 ||ಪ||
ಕಾಕು ಕುಹಕರ ಸಂಗ  ನೂಕಿರಬೇಕೋ
ಲೋಕೇಶನೊಳಗೇಕಾಗಿರಬೇಕೋ               ||ಅ.ಪ||

ಕಚ್ಚುವ ನಾಯಿಯಂತೆ  ಬೊಗಳ್ವರೋ
ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ
ಲುಚ್ಚೇರು ನಾಚಿಕಿ ತೊರದಿಹರೋ
ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ
ಕುತ್ಸಿತ ಮನುಜರನಗಲಿರಬೇಕೋ               ||೧||

ಲೋಕನುಡಿಯ ಮಾತಾಡುವರೋ
ಕುಹಕ ಬುದ್ಧಿಯ ಜನರೋ
ತಾಕುತಗಲು ನುಡಿಯನಾಡ್ವರೋ
ತೂಕನರಿಯದವರೋ
ಸೂಕರ ಮನುಜರ ಸಂಗತಿ ಹಿಂಗಿಸಿ
ಶ್ರೀಕರ ಬ್ರಹ್ಮ ತಾನಾಗಿರಬೇಕೋ                 ||೨||

ನಡಿನುಡಿಗೆ ನುಡಿಯಬೇಕೋ  ಗುರುವಿನಾ
ಅಡಿಯ ಪಿಡಿಯಬೇಕೋ
ಕಡುಮದದೊಳಿರಬೇಕೋ
ದುರ್ಜನರಾ ನಡತಿಯ ಬಿಡಬೇಕೋ
ಪೊಡವಿಪ ಶಿಷುನಾಳ ಒಡಿಯನ ಕಂಡು
ಗುಡಿಪುರ ಕಲ್ಮನ ಕೂಡಿರಬೇಕು                  ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ದಿನಮಾನ ಬಲು ಕೆಟ್ಟವೋ

- ಶಿಶುನಾಳ ಶರೀಫ್

ದಿನಮಾನ ಬಲು ಕೆಟ್ಟವೋ  ಸದ್ಗುರುಪುತ್ರ
ನಿನಗಾವು ಬಂದು ತಟ್ಟವೋ               ||ಪ||

ಚಿನುಮಯಾತ್ಮಕವಾದ ಐದಕ್ಷರವು
ತನ್ನೊಳು ಜಪಿಸಿಕೊಂಡಿಹ
ಮನುಜರೂಪವ ಕಳೆದು ಮಹಿಮೆಯ
ತಿಳಿದ ಪುರುಷನಿಗೇನು  ಆಗದು          ||ಅ.ಪ||

ದೇಹದೊಳಿದ್ದರೇನು ಜೀವನ ಕಾಯ
ಲೋಹಕೆ ಬಿದ್ದರೇನು
ಸಾವುನೋವಿನ ಭಾವ ತಿಳಿಯದೆ
ಜಾವಕೊಮ್ಮೆ ಓಂ ನಮಃ  ಶಿವಾಯೆಂದು
ಭಾವದಲಿ ನುಡಿಯೇ ಕಲಿಕರ್ಮದೊಳು ಮಹ-
ದೇವ ಮೆಚ್ಚುವ  ಸತ್ಯ ಮಾತಿದು           ||೧||

ವಿಷಯವಾಡಿದರೇನಾಯ್ತು   ಈ  ಲೋಕವು
ಹುಸಿಯನ್ನುವುದೇ  ಗೊತ್ತು
ವಸುಧಿಯೊಳು ಶಿಶುನಾಳಧೀಶನ
ಎಸೆವ ಸೇವಕನಾಗಿ  ಜಗದಿ
ಮಸಿದ ಪ್ರಣವಶಸ್ತ್ರ   ಕೈಯೊಳು
ಕೊಸರದಂದದಿ  ಹಿಡದು ನುಡಿಯಲು       ||೨||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಾನಾರೆಂಬುದು ನಾನಲ್ಲಾ

- ಶಿಶುನಾಳ ಶರೀಫ್

ನಾನಾರೆಂಬುದು ನಾನಲ್ಲಾ  ಈ
ಮಾನುಷ ಜನ್ಮವು ನಾನಲ್ಲಾ        ||ಪ||
ನಾರಾಯಣ ವರ ಬ್ರಹ್ಮ ಸದಾಶಿವ
ನೀ ಎನಿಸುವ ಗುಣ ನಾನಲ್ಲಾ        ||ಅ.ಪ||

ಮಾತಾ ಪಿತ ಸುತ  ನಾನಲ್ಲಾ
ಭೂನಾಥನಾದವ ನಾನಲ್ಲಾ
ಜಾತಿಗೋತ್ರಗಳು ನಾನಲ್ಲಾ
ಪ್ರೀತಿಯ  ಸತಿ ಸುತ  ನಾನಲ್ಲಾ    ||೧||

ವೇದ ಓದುಗಳು ನಾನಲ್ಲಾ
ವಾದ ಮಾಡಿದವ ನಾನಲ್ಲಾ
ನಾದಬಿಂದುಕಳೆಭೇದ ವಸ್ತು ನಿಜ -
ಬೋಧದಲಿದ್ದವ ನಾನಲ್ಲಾ            ||೨||

ನಾನಾಗಿ ನಡೆದವ ನಾನಲ್ಲಾ
ನಾ ಶಿಶುನಾಳಧೀಶನ  ಬಿಡಲಿಲ್ಲಾ
ನಾ ಅಳಿಯದೆ ನಾ ತಿಳಿಯಲಾರದು
ನೀ ಎನಿಸುವ ಗುಣ ನಾನಲ್ಲಾ        ||೩||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ