ರೋಜಾ

-ಅಬ್ಬಾಸ್ ಮೇಲಿನಮನಿ

ಅಮಾವಾಸ್ಯೆಯ ಮರುದಿನ ಸಂಜೆಯಷ್ಟು ಹೊತ್ತಿಗೆ ಆಕಾಶದಲ್ಲಿ ಚಂದ್ರ ದರ್ಶನವಾಯಿತು.  ಗಲ್ಲಿಯಲ್ಲಿ ಸಂಭ್ರಮ.  ಸಾರಾಬೂ ಬೀದಿಗೆ ಬಂದು ತನ್ನ ನಾಲ್ಕು ಮಕ್ಕಳಿಗೂ ಚಂದ್ರನನ್ನು ತೋರಿಸಿದಳು.  "ನಾಳೆ ರೋಜಾ ಚಾಲು"  ಎಂದಳು.  ಅವಳ ಮೂರು ಗಂಡು ಮಕ್ಕಳು "ನಾವೂ ನಾಳೆಗೆ ರೋಜಾ ಇರ್ತೀವಿ" ಎಂದರು.

ಮಾತಿನಲ್ಲಿ ಚುರುಕಾಗಿದ್ದ ಎಂಟು ವರ್ಷದ ನಫೀಸಾ "ನಾನೂ ರೋಜಾ ಮಾಡ್ತೀನಿ ಅಮ್ಮಾ" ಎಂದಳು.

"ನಿನಗೆ ಆಗುದಿಲ್ಲ ಬಿಡು" ಎಂದ ಅವಳ ಅಣ್ಣ.

"ನಾನು ರೋಜಾ ಮಾಡ್ತೀನಿ" ನಫೀಸಾ ಹಟದ ಧೋರಣೆಯಲ್ಲಿ ಹೇಳಿದಳು.

"ಬೇಟಿ ರೋಜಾ ಅಂದ್ರ ಬಾಯಲ್ಲಿ ಹನಿ ನೀರೂ ಹಾಕಬಾರ್‍ದು.  ಹಾಗಾದರೆ ರೋಜಾ ಕಬುಲು ಆಗುವುದು.  ನೀನಿನ್ನೂ ಚಿಕ್ಕವಳು, ನಿನಗೆ ತ್ರಾಸಾಗುವುದು" ಸಾರಾಬೂ ಮಗಳನ್ನು ರಮಿಸಿದಳು.

"ನನ್ಗೇನೂ ಆಗುದಿಲ್ಲ ನಾನು ರೋಜಾ ಮಾಡ್ತೀನಿ" ಉತ್ಸಾಹ ತೋರಿದಳು ನಫೀಸಾ.

"ಒಂದು ಕಡ್ಡಿ ಕೂಡಾ ಬಾಯಲ್ಲಿ ಹಾಕಬಾರ್‍ದು.  ಅದೆಲ್ಲ ನಿನ್ನಿಂದ ಆಗುದಿಲ್ಲ.  ಇನ್ನಷ್ಟು ದೊಡ್ಡವಳಾದ ಮೇಲೆ ರೋಜಾ ಹಿಡಿಯುವಂತೆ ಬೇಟಿ" ತಂದೆ ಹುಸೇನಲಿ ಹೇಳಿದ.

"ನಾನು ರೋಜಾಮಾಡ್ತೀನಿ" ನಫೀಸಾ ಹಟ ಬಿಡಲಿಲ್ಲ.

"ಇನ್ ಷಾ ಅಲ್ಲಾ!" ಎಂದು ಸುಮ್ಮನಾದರು ಸಾರಾಬೂ-ಹುಸೇನಲಿ.

ಮಸೀದಿಯ ಮೀನಾರಿನಿಂದ ಸೈರಿಗೆ ಕರೆ ಕೇಳಿಸಿತು.  ಮಕ್ಕಳು ಉತ್ಸಾಹದಿಂದಲೇ ಎದ್ದರು.  ಮನೆಯಲ್ಲಿ ಇದ್ದದ್ದು ಮೂರು ರೊಟ್ಟಿ ಮಾತ್ರ.  ಮಕ್ಕಳು ಹಂಚಿಕೊಂಡು ತಿಂದು ನಿಯತ್ತು ಹೇಳಿ ರೋಜಾ ಹಿಡಿದರು.  ಸಾರಾಬೂ ಕರಿ ಚಹ ಕುಡಿದಳು.  ಹುಸೇನಲಿ ಹಮಾಲಿ ಮಾಡಬೇಕು ಅವನು ರೋಜಾ ಹಿಡಿಯಲಿಲ್ಲ.

ಹೊತ್ತೇರ ತೊಡಗಿದ್ದಂತೆ ಸಾರಾಬೂ ಚಿಂತೆಗೊಳಗಾದಳು.  ಮಗಳ ರೋಜಾ ಪೂರ್ತಿಯಾಗುವುದೋ ಇಲ್ಲವೋ ಎಂಬ ಅನುಮಾನ ಕಾಡಿತು.  "ಹೇ ಅಲ್ಲಾಹುವೆ!  ಮಗು ಉಪವಾಸ ಅರ್ಧಕ್ಕೆ ನಿಲ್ಲಿಸಿದರೆ ತಪ್ಪು ಮನ್ನಿಸು" ಎಂದು ಹತ್ತಾರು ಸಲ ಪ್ರಾರ್ಥಿಸಿದಳು.

ನಫೀಸಾ ಮಾತ್ರ ಲವಲವಿಕೆಯಿಂದಲೇ ಇದ್ದಳು.  ಶಾಲೆಗೂ ಹೋಗಿ ಬಂದಳು.  ಒಂದು ಹನಿ ನೀರೂ ಎನ್ನಲಿಲ್ಲ.  ಮಧ್ಯಾಹ್ನದ ಇಳಿ ಹೊತ್ತಿಗೆ ಆಟದಲ್ಲಿ ಮಗ್ನಳಾದಳು.

ಸೂರ್ಯ ಮುಳುಗಿದ.  ಅಂದಿನ ರೋಜಾದ ವ್ರತ ಮುಗಿಯಿತು.

"ಬೇಟಿ ನಿನಗೆ ಹಸಿವು ಅನಿಸಲಿಲ್ಲವೆ?" ಸಾರಾಬೂ ಕೇಳಿದಳು.

"ಇಲ್ಲಾ ಅಮ್ಮಾ"

"ಸ್ವಲ್ಪೂ ತ್ರಾಸು ಅನಿಸಿಲ್ಲ" ಕೆದಕಿ ಕೇಳಿದ ಹಿರಿಯಣ್ಣ.

"ರೋಜಾ ಅಂದ್ರ ಉಪವಾಸ.  ಅದು ನಮ್ಗ ರೂಢಿ ಐತಲ್ಲ ಭಯ್ಯಾ" ಎಂದು ಗಳಿಬಿಳಿ ಮಾತಾಡಿ ಒಣಚುರುಮುರಿಯನ್ನು ಬಾಯಿ ತುಂಬಿಕೊಂಡಳು ನಫೀಸಾ.  ಸಾರಬೂ ಕಣ್ಣಲ್ಲಿ ಹನಿಯೊಡೆದಿತ್ತು.

            *****

ಕೀಲಿಕರಣ: ಕಿಶೋರ್‍ ಚಂದ್ರ

ಬರಬಾರದೋ ಯೋನಿಯೊಳು ಜನಿಸಿ

- ಶಿಶುನಾಳ ಶರೀಫ್

ಬರಬಾರದೋ ಯೋನಿಯೊಳು ಜನಿಸಿ
ತಿಳಿದು ಒಂದೊಂದು ಎಣ‌ಎಣಿಸಿ                      ||ಪ||

ರಕ್ತದಿ ಬಿದ್ದು ಬಂದಿಯೋ
ಎದ್ದು  ಬಂಧನದೊಳು  ಬಂದು  ಸಂದಿಸಂದಿಗೆ    ||೧||

ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು
ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ               ||೨||

ಧರಿಯೊಳು ನವಲಗುಂದ ನಾಗಲಿಂಗ
ಪರಮಚರಣಕ್ಕೆ  ಹೊಂದಿ  ಪವಿತ್ರನಾಗಿ             ||೩||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಹೋಗುತಿಹುದು ಕಾಯ ವ್ಯರ್ಥ

- ಶಿಶುನಾಳ ಶರೀಫ್

ಹೋಗುತಿಹುದು ಕಾಯ ವ್ಯರ್ಥ
ಇದರ ಲಾಘವ ತಿಳಿದವ ಯೋಗಿ ಸಮರ್ಥ       ||ಪ||

ಏಳು ಜನ್ಮಾಂತರದಿನವು
ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು
ಭೋಗಲಂಪಟ ಸುಖಘನವು ಭವ
ರೋಗದಿ ಮರಣಕ್ಕೆ ಆಯಿತೋ ಅನುವು           ||೧||

ಬದುಕೇನು ಮಾಡಿದಿ ಇಲ್ಲೆ ಸುಳ್ಳೇ
ಮುದುಕ್ಯಾಗಿ ಮೆರದೆಲ್ಲೆ ಛೀ ಹುಚ್ಚು ಮರುಳೇ
ಅದಕೆ ಕೇಳುವ ಯಮನಲ್ಲೇ ಸಧ್ಯ
ನೆದರಿಟ್ಟು ನೋಡಿಕೋ ಉದಿಸಿದ್ಯಾವಲ್ಲೆ          ||೨||

ಇನ್ನಾರ ತಿಳಿ ಕಂಡ್ಯಾ ತಮ್ಮ ನುಡಿ
ಓಂ ನಮ: ಶಿವಯೆಂಬೋ ಮಂತ್ರವು ನಿಮ್ಮ
ಪುಣ್ಯಪಾಪಂಗಳ ಕರ್ಮಾ ಕಳೆದುಳಿದುದೇ
ಚೆನ್ನ ಶಿಶುನಾಳಧೀಶನಧರ್ಮಾ                     ||೩||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಅಪ್ಪ ನೀನಾಗಬೇಡ ದಪ್ಪ

- ಗಿರಿಜಾ ದಿನಕರ ವೈ

ಅಪ್ಪ ಅಪ್ಪ ಅಪ್ಪ
ನೀನಾದೆ ತುಂಬಾ ದಪ್ಪ
ಇನ್ನಾದರೂ ಬಿಡು
ತಿನ್ನೋದನ್ನ ತುಪ್ಪ

ಬೆಳಿಗ್ಗೆ ಎದ್ದು ಓಡು
ಹೊಟ್ಟೆ ಕರಗುತ್ತೆ ನೋಡು
ನಿತ್ಯ ನಡೆದಾಡು
ಸ್ಕೂಟರ್‌ನ್ನ ಷೆಡ್ಡಲ್ಲಿಡು

ತಿನ್ಬೇಡ ನಾನ್ ವೆಜ್ಜು
ವೆಜ್ಜಲ್ಲೆ ಅಡುಗೆ ಸಜ್ಜು
ಅಮ್ಮನ ಕೈಯ ಗೊಜ್ಜು
ಕರಗುತ್ತೆ ಮೈಯ ಬೊಜ್ಜು

ನಿನ್ ಕೆಲ್ಸ ನೀನೆ ಮಾಡು
ಆನಂದ ಆಮೇಲೆ ನೋಡು
ಗಾಂಧಿ ಹೇಳಿದ ಮಾತು
ಒಂದೊಂದು ಒಳ್ಳೆ ಮುತ್ತು.

    *****

ಕೀಲಿಕರಣ: ಕಿಶೋರ್‍ ಚಂದ್ರ

ವಸತಿ ಗೃಹ

- ಮಂಜುನಾಥ ವಿ ಎಂ


ಬೆಂಗಳೂರಿನ ಗಾಳಿಮಳೆಗೆ ಮೈ ಒಡ್ಡಿ ಮಲಗುವುದು

ಸುಖದಾಯಕವೆನಿಸುತ್ತದೆ;


ಎಲ್ಲೋ ಬೇರ್ಪಟ್ಟ ಕನಸುಗಳು ಮತ್ತೊಮ್ಮೆ ಸಾಕಾರಗೊಂಡಂತೆ.

ಈ ವೇಳೆ ವಸತಿಗೃಹಗಳಲ್ಲಿ ಕಾಲ ನೂಕುತ್ತಿರುವ ಜನ

ಕಳ್ಳ ನೋಟಗಳಲ್ಲಿ ತಲ್ಲೀನರಾಗಿರುತ್ತಾರೆ.


ಕೋಣೆ ಬಾಗಿಲು ಎಡತಾಕುವ,

ಊಟ ಮತ್ತು ಮದ್ಯವನ್ನು ಸರಬರಾಜು ಮಾಡುವ

ಅವನ ವಿಕೃತ ಆಲೋಚನೆಗಳೋ ಅವನನ್ನೇ

ತಿಂದು ಹಾಕುತ್ತಿರುತ್ತವೆ.


ರೈಲ್ವೆ ನಿಲ್ದಾಣದ ಹಾದಿಬದಿಯ ಮರಗಿಡಗಳ ಹೂ‌ಎಲೆಗಳಲಿ

ಮಂಜಿನ ಹನಿಗಳಂತೆ ನಿಲ್ಲಲು ನೋಡುವ ಮರಳಿನ ಕಣಗಳು

ಸಣ್ಣಗಾಳಿಗೆ ಬೆದರಿ, ಕುರುಡನ ಕಣ್ಣುಗಳೆದುರಿಗೆ ಹಾದುಹೋಗುತ್ತವೆ.


ಅಲ್ಲಿ-

ವೃತ್ತಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಗೆದ್ದಲಿಡಿದ ಪತ್ತೇದಾರಿ

ಕಾದಂಬರಿಗಳು ಅವರು ಬಿಟ್ಟುಹೋದ ಗೂಢ ಸಂಗತಿಗಳನ್ನು

ಹೇಳಲು ತವಕಿಸುತ್ತಿರುತ್ತವೆ.

*****

ಕಾರ್ಗಿಲ್ ವಿಜಯ

-ರವಿ ಕೋಟಾರಗಸ್ತಿ

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ
ತೊರೆ, ನದಿಗಳ ಹಿಮದ ಜಾರುಂಡೆಗಳಲಿ

ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ
ನರ್ತನ ಗೈಯ್ಯುತಿದ್ದವು ಸಾವು ನೋವುಗಳು

ತಾಂಡವ ರೂಪದ ವೀರಯೋಧರು
ಭಾರತಾಂಬೆಯ ಹೆಮ್ಮೆ ಕುವರರು

ಚಳಿಗಾಳಿ ಹಸಿವೆನ್ನದೆ
ಜೈಹಿಂದ್ ಎನ್ನುತಲಿ ಎದೆಯೊಡ್ಡಿ ನಡೆದರು

ಅಜೇಯ, ಅಹುಜ, ಸೌರವ, ಕಾಲಿಯಾ
ವಿಕ್ರಮ ಬಾತ್ರಾ, ಕರ್ನಲ ವಿಶ್ವನಾಥ

ವಿನೋದ ಪಾಂಡೆ, ಮೇಜರ ಶರವಣನ್
ವಿವೇಕ ಗುಪ್ತ, ಯಶವೀರಂತರನೇಕ

ವೀರಯೋಧ ಸೇನಾನಿ ಅಮರರಾದರು
ತ್ರಿವರ್ಣ ಧ್ವಜ ಹಾರಿಸುತಲಿ

ಕಾರ್ಗಿಲ್ ಕಣಿವೆ ಕಾರ್ಗತ್ತಲಲಿ
ಕಲಿಗಳಾಗಿ ಕಾದಾಡಿದ ವೀರರು

ಕನ್ನಡಾಂಬೆಯ ಕುಡಿಗಳು ಧೊಂಡಿಬಾ, ವೆಂಕಟ,
ಗುರುಬಸಯ್ಯಾ, ದಾವಲಸಾಬ, ಕಾವೇರಪ್ಪ, ಪೋತರಾಜ,
ಸಿದ್ದನಗೌಡ, ಯಶವಂತ, ಮಡಿವಾಳಪ್ಪ, ಮೋಹಿಲನ್,

ಕಾರ್ಗಿಲ್ ವಿಜಯ ಕಾರ್ಯಾಚರಣೆಯ
ಚಿರತೆಗಳಾಗಿ ಸಿಂಹ ಗರ್ಜನೆಗೈದರು

ಕಾರ್ಗಿಲ್, ಕಕ್ಸರ್‍, ಡ್ರಾಸ, ಮುಸ್ಕೋಹಾ
ಬಟಾಲಕ, ಟೋಲೋರಿಂಗ್, ಟೈಗರ ಶಿಖರಗಳಪ್ಪಿದರು

ಶ್ವೇತ ವಸ್ತ್ರಾಧಾರಿ, ಪ್ರಶಾಂತ...
ಶಿಖರಗಳಲ್ಲೆಡೆ ಕಾಲಿಟ್ಟಡಗಿದ ಕಪಿಗಳ
ರಕ್ಕಸ, ರಕ್ತ ಪಿಪಾಶೆಯ ವೈರಿ

ಮುಜಾಹಿದ್ದಿನ, ಜೆಹಾದ ಬಾಡಿಗೆ ಪಡೆ
ಕಾರುವ ಶೆಲ್ ಗುಂಡಿನ ದಾಳಿಗೆ
ಮೈಯೊಡ್ಡುತ ಎದೆ ಸೀಳಿದರು...

ವೈರಿಪಡೆಯ ರಕ್ತ ಚೆಲ್ಲುತ ವೀರಯೋಧರು
ಮಾತೃಭೂಮಿಯ ಮಡಿಲಲಿ ಮಡಿದರು

ಅಮರರಾದರು ವೀರ ಸಹೋದರರು
ಮಾತೃಭೂಮಿಯ ಋಣ ತೀರಿಸುತಲಿ

ತ್ಯಾಗ ಬಲಿದಾನಗಳಿಗೆ ಸಾಟಿಯಿರದೆ
ಪ್ರತಿ ಭಾರತೀಯನ ಮನದಲಿ ಉಳಿದರು

ದೇಶದ ಹೆಮ್ಮೆಯ ವೀರಚೇತನರು
ಕಾರ್ಗಿಲ್‌ದ ವೀರಮರಣದ
ವೀರಯೋಧರು ಹೆಮ್ಮೆಯ ಕುವರರು.

         ***

ಕೀಲಿಕರಣ: ಕಿಶೋರ್‍ ಚಂದ್ರ

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ

- ಶಿಶುನಾಳ ಶರೀಫ್

ಸ್ಥಿರವಲ್ಲಾ  ಕಾಯಾ ಸ್ಥಿರವಲ್ಲಾ   ಈ ಅ-
ಸ್ಥಿರ ಶರೀರವ ನಂಬಲಿಬ್ಯಾಡಾ                    ||ಪ||

ಮರಳಿ ಮರಳಿ  ಬಹು ತ್ವರದಿ ಭವಕೆ ಬಂದು
ಸೊರಗಿ ಸುಖ-ದುಃಖ  ಎರಡರ ಮಧ್ಯದಿ        ||೧||

ಆತ್ಮವಿಚಾರವು ಆತ್ಮದೊಳಗಿರುತಿರೆ
ಆತ್ಮ ಪರಮಾತ್ಮನ  ಪ್ರಮಾಣಿಸಿ  ನೋಡಿದ   ||೨||

ಅಂದಿಗಿಂದಿಗೆ  ಒಂದೆ ತಂದೆ ಗುರುಗೋವಿಂದಾ
ಸುಂದರ ಶಿಶುನಾಳಧೀಶನ ಕಂದಾ              ||೩||

        *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ರೊಟ್ಟಿ

-ಅಬ್ಬಾಸ್ ಮೇಲಿನಮನಿ

ರೈಲು ನಿಲ್ದಾಣದ ಒಂದು ಬೆಂಚಿನ ಮೇಲೆ ಗಂಡ ಹೆಂಡತಿ ಕುಳಿತಿದ್ದರು.  ಗಾಡಿ ಬರುವುದು ತಡವೆಂದು ಪೋರ್ಟರ್‍ ಹೇಳಿದ.  "ರೀ ಕುಡಿಯಲು ನೀರು ತಗೊಂಡು ಬರ್‍ರಿ.  ಇಲ್ಲೇ ಊಟ ಮಾಡೂಣು, ಹ್ಯಾಂಗಿದ್ರೂ ಗಾಡಿ ತಡಾ ಆಗಿ ಬರುವುದು" ಎಂದು ಹೆಂಡತಿಯ ಮಾತಿಗೆ `ಹೂಂ' ಎಂದು ಬಾಟಲಿ ತೆಗೆದುಕೊಂಡು ಹೋಗಿದ್ದ ಗಂಡ.  ಆಕೆ ಚೀಲದಲ್ಲಿದ್ದ ಬುತ್ತಿಯ ಗಂಟನ್ನು ಬಿಚ್ಚಿದ್ದಳು.

ಎದುರು ಬೆಂಚಿನಲ್ಲಿ ಕುಳಿತ ವ್ಯಕ್ತಿಯೊಬ್ಬನ ದೃಷ್ಟಿ ಅವಳತ್ತ ಹರಿದಿತ್ತು.  ಆಕೆಯೂ ಆಕಸ್ಮಿವೆನ್ನುವಂತೆ ಅವನನ್ನು ನೋಡಿದ್ದಳು.  ಬಡಕಲು ಶರೀರದ, ಕುರುಚಲು ಗಡ್ಡದ ಆ ವ್ಯಕ್ತಿಯ ಕಣ್ಣು ತನ್ನ ಮೇಲೆ ಸುಳಿದಾಡುತ್ತಿವೆ ಅನಿಸಿ ಆಕೆ ಮುಖವನ್ನು ಬೇರೆ ಕಡೆ ಹೊರಳಿಸಿದ್ದಳು.  ಪ್ಲಾಟ್‌ಫಾರ್ಮಿನ ಕಂಬಕ್ಕೆ ತೂಗು ಹಾಕಿದ್ದ ಫಲಕ ಕಂಡಿತ್ತು.  "ಕಳ್ಳರಿದ್ದರೆ ಎಚ್ಚರಿಕೆ!"  ಫಲಕದಲ್ಲಿನ ಅಕ್ಷರಗಳು ದಿಗಿಲು ಹುಟ್ಟಿಸಿದವು.  ಮೈತುಂಬ ಸೆರಗು ಹೊದ್ದುಕೊಂಡು ಗಂಡ ಹೋದ ದಾರಿಯತ್ತ ಗಮನ ಹರಿಸಿದಳು.  ತನ್ನ ಕೊರಳಿನಲ್ಲಿದ್ದ ನಾಲ್ಕೆಳೆಯ ಬಂಗಾರದ ಸರದ ಮೇಲೆ ಅವನ ಕಣ್ಣು ಬಿತ್ತು?  ಅನುಮಾನಿಸಿದಳಾಕೆ.  ಮತ್ತೊಮ್ಮೆ ಆ ವ್ಯಕ್ತಿಯತ್ತ ಓರೆ ನೋಟ ಬೀರಿದಳು.  ಅವನು ರೆಪ್ಪೆ ಪಿಳುಕಿಸದೆ ನೋಡುತ್ತಲೇ ಇದ್ದ.  ಒಂದು ಕ್ಷಣ ಭಯವೆನಿಸಿತು.  ಹಾಡು ಹಗಲು, ಜನದಟ್ಟಣೆ ಇದೆ.  ಅವನೇನು ಮಾಡಲು ಸಾಧ್ಯ?  ಮತ್ತೆ ತಾನೇ ಸಮಾಧಾನ ಮಾಡಿಕೊಂಡಳು.

ಗಂಡ ನೀರು ತಂದ.  ಆಕೆ ಅವನ ಕೈಗೆ ರೊಟ್ಟಿ - ಪಲ್ಲೆ ಹಚ್ಚಿಕೊಟ್ಟಳು.  ತಾನೂ ರೊಟ್ಟಿ ಹಿಡಿದುಕೊಂಡಳು.  ಒಂದು ತುತ್ತು ಬಾಯಲ್ಲಿಡುತ್ತಿದ್ದಂತೆ ಅವಳ ಕಣ್ಣು ಎದುರು ಬೆಂಚನ್ನು ದೃಷ್ಟಿಸಿತ್ತು.  ಈಗ ಆಗಂತುಕ ವ್ಯಕ್ತಿ ಆಸೆಗಣ್ಣುಗಳಿಂದ ನೋಡ ತೊಡಗಿದ್ದ.  ಅವಳ ಒಡಲಲ್ಲಿ ತುಮುಲವೆದ್ದಿತು.  ಅವನು ಒಮ್ಮೆಲೆ ಎದ್ದು ನಿಂತಿದ್ದ.  ಆಕ್ರಮಣಕ್ಕೆ ಸಜ್ಜಾಗುತ್ತಿದ್ದಾನೆ ಅನ್ನಿಸಿತು.  ದಿಢೀರೆಂದು ಮೇಲೆ ಬಿದ್ದು ಕೊರಳ ಸರ ಕಿತ್ತು ಓಡಿದರೆ ಏನು ಮಾಡುವುದು?  ಸರ ಹೋದರೆ ಹೋಗಲಿ ಚೂರಿ, ಬ್ಲೇಡು ಹಾಕಿದರೆ ಗತಿಯೇನು?  ಆಕೆ ಆಗಂತುಕನ ಬಗ್ಗೆ ವಿಪರೀತವಾಗಿ ಊಹಿಸಿಕೊಂಡಳು.  ಅವನು ನೋಡುವ ರೀತಿಯೇ ಅಪಾಯಕಾರಿ ಎಂಬ ಭಯ ಆವರಿಸಿತು.  ಮತ್ತೆ ಆ ಆಗಂತುಕ ಕುಳಿತು ನಾಲಗೆಯಿಂದ ತನ್ನ ತುಟಿ ಸವರಿಕೊಳ್ಳತೊಡಗಿದ.  ಭಯವಿಹ್ವಲಳಾದಳಾಕೆ.

"ರಿ, ಆ ಮನುಷ್ಯ ಎಷ್ಟೋ ಹೊತ್ತಾತು ನನ್ನ ಕಡೆಗೆ ನೋಡಾಕ ಹತ್ಯಾನ" ಎಂದಳು.

"ಯಾರವನು?"

"ಅಲ್ಲೆ ಎದುರಿಗೆ ಕುಂತಾನ ನೋಡ್ರಿ" ಕಣ್ಣು ಸಂಜ್ಞೆಯಿಂದಲೇ ತೋರಿಸಿದಳಾಕೆ.

ಗಂಡ ಅತ್ತ ನೋಡಿದ್ದ.

ಆಗಂತುಕನ ದೃಷ್ಟಿ ಬೇರೆ ಕಡೆಗೆ ಹೊರಳಿತ್ತು.  "ಇನ್ನೊಂದ್ಸಲ ಈ ಕಡೆಗೆ ನೋಡ್ಲಿ.  ಅವನ ಕಣ್ಣಗುಡ್ಡೆ ಕಿತ್ತು ಕೈಗೆ ಹಾಕ್ತಿನಿ" ಎಂದು ಊಟ ಮುಗಿಸಿ ನೀರು ಕುಡಿದ ಗಂಡ.  ಆಗಂತುಕನು ಮತ್ತೆ ಮುಖ ಅತ್ತ ತಿರುಗಿಸಿದ್ದ.  ಅದನ್ನು ಕಂಡದ್ದೆ ಗಂಡನ ಮೈಯೆಲ್ಲಾ ಬೆಂಕಿಯಾಗಿತ್ತು.  ಅವನು ಎದ್ದು ಹೋಗಿ ಮುಸುರಿ ಕೈಯಿಂದಲೇ ಕಪಾಳಕ್ಕೆ ರಪ್ಪೆಂದು ಬಾರಿಸಿದ್ದ.  ಆಗಂತುಕ ನೆಲಕ್ಕೆ ಉರುಳಿದ.

ಏಕಾಏಕಿಯಾಗಿ ಸಂಭವಿಸಿದ ಈ ಪ್ರಸಂಗ ಜನರ ಗಮನ ಸೆಳೆಯಿತು.  ಗಬೋ ಎಂದರು ಜನ.  "ಏನಾಯಿತು?  ಏನಾಯಿತು?" ಎಲ್ಲರ ಮುಖದಲ್ಲೂ ಗಾಬರಿ, ಕೌತುಕ.

"ಬದ್ಮಾಶ್, ಅಕ್ಕ-ತಂಗೇರು ಇಲ್ಲೇನು ನಿನ್ಗ?" ಆಕ್ರೋಶದಿಂದ ಕುದಿಯತೊಡಗಿದ್ದ ಗಂಡ.  ಅವನ ಧ್ವನಿಯೊಂದಿಗೆ ಧ್ವನಿ ಬೆರೆಸಿ ಹೆಂಡತಿಯೂ ಬೈಯತೊಡಗಿದಳು.

ಆಗಂತುಕ ಕಿಂಚಿತ್ತೂ ಮಿಸುಗಾಡಲಿಲ್ಲ.  ಸತ್ತು ಹೋದನೆ ಅವನು?  ಜನರ ಗುಂಪಲ್ಲಿ ಗುಸುಗುಸು ಎದ್ದಿತು.  ಅಷ್ಟರಲ್ಲಿ ಪೋಲಿಸರು, ಸ್ಟೇಶನ್ ಮಾಸ್ಟರ್‍ ಬಂದರು.  ಗಂಡ ನಡೆದುದನ್ನು ವಿವರಿಸಿದ.  ಪೋರ್ಟರನೊಬ್ಬ ಅವಸರದಿಂದ ನೀರು ತಂದು ಆಗಂತುಕನ ಮುಖದ ಮೇಲೆ ಸಿಂಪಡಿಸಿದ.  ಪೋಲಿಸ್ ಹೇಳಿದ "ಇವನು ಕಳ್ಳನಲ್ಲ ಇಲ್ಲಿಯ ಖಾಯಂ ಗಿರಾಕಿ"

"ಅವನು ನನ್ನ ಹೆಂಡತಿಯನ್ನು ನೋಡುತ್ತಿದ್ದ" ಆರೋಪಿಸಿದ್ದ ಗಂಡ.

ಸಾವಕಾಶವಾಗಿ ಎದ್ದು ಕುಳಿತ ಆಗಂತುಕನನ್ನು ಸ್ಟೇಶನ್ ಮಾಸ್ಟರ್‍ ಕೇಳಿದರು.

"ಹೀಗೇಕೆ ಮಾಡಿದಿಯೋ ನೀನು?"

ಆಗಂತುಕ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ.

"ಸಾಹೇಬರ... ಎರಡು ದಿನಾ ಆತು ನಾನು ಊಟ ಮಾಡಿಲ್ಲ.  ಹಸಿವು ತಡೀಲಾರದ ಆ ತಾಯಿ ಕಡೆ ನೋಡಿದ್ಯೆ ಒಂದು ರೊಟ್ಟಿ ಸಿಕ್ಕೀತು ಅಂತ".

            *****


ಕೀಲಿಕರಣ: ಕಿಶೋರ್‍ ಚಂದ್ರ

ಕಾಣದೆ ನೀ ಬೊಗಳಬ್ಯಾಡ

- ಶಿಶುನಾಳ ಶರೀಫ್

ಕಾಣದೆ ನೀ ಬೊಗಳಬ್ಯಾಡ  ಕೋಣನಂಥ  ರಂಡೆ
ಜಾಣಜನರು ಕೂಡಿ ನಿಮ್ಮೋಣಿಯಲ್ಲ್ಹಾಯ್ದಿರಲು
ಕೋಣಿಬಾಗಿಲಲಿ  ನಿಂತು ಗೋಣತಿರುವುವ ಮುಂಡೆ                   ||೧||

ನೆಟ್ಟಗಿಲ್ಲ ಮೈಬಣ್ಣ ರೊಟ್ಟಿ  ಹಂಚಿನ ಕರದ
ತಟ್ಟದಲೆ ಬಿಟ್ಟು  ಮೋತಿಮ್ಯಾಲಿನ ಸೆರಗ ಜರದ
ಉಟ್ಟ ಸೀರಿ ನೀರಿಗೆಗಳು  ಕೆಳಗೆ ಬಿದ್ದಾವು ಜ್ವರದ
ಕೆಟ್ಟದೊಂದು ಕೂಸು ಬಗಲಾಗಿಟ್ಟು ಕೊಂಡು  ಮೆರೆದ
ಕಟ್ಟಗಡಕಿ  ಕೊಟ್ಟ ಗಂಡನ ಬಿಟ್ಟು   ಊರೊಳಗೊಬ್ಬ ನೆಂಟ -
ನಿಟ್ಟುಕೊಂಡು  ಎಷ್ಟು  ಪಂಟಪಟ್ಟುಕೊಳ್ಳುವಿ ?                          ||೨||

ಚಲುವನಲ್ಲ ಜೋಲುದುಟಿತೊದಲಗ  ನೀ ಬೆರೆತ
ಹಾಲವಕ್ಕಿಮಾರಿಯವಳು ನೀ ಯಾವ ದೊಡ್ಡ ಗರತೇ ?
ಕೂಲಿ ಹಂಜಿ ನೂತುಕೊಂಡು  ಶಾಲಿ ಕುಬ್ಬಸ ಮಾಡಿಕೊಂಡು
ಕಲ್ಲಾ -ಬಿಲ್ಲಿ  ಕವದಿ  ಹರಕೀ ಗುಲ್ಲಾ-ಗಂಟಿ  ನೀನಲ್ಲವೆ ?             ||೩||

            *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಫಲದ... ಸಾವಯವ ಕೃಷಿಗೆ ಕೊಡುಗೆ ಅಗಾಧ

- ಚಿನ್ಮಯ ಎಂ.ರಾವ್

ಕಾ‍ರ್ಯಕ್ರಮವೊಂದರಲ್ಲಿ ಶಾಸಕರೊಬ್ಬರು "ಸಾಯುವ ಕೃಷಿ.. ಸಾಯುವ ಕೃಷಿ"ಎಂದು ಪದೆ ಪದೇ ಹೇಳುತ್ತಿದ್ದರು. ಪಾಪ ಅವರ ನಾಲಿಗೆ ಹೊರಳುತ್ತಿರಲಿಲ್ಲ ಅದು ಬೇರೆ ವಿಷಯ.  ಆದರೆ ಕೃಷಿಯಂತೂ ಸಾಯುತ್ತಿರುವುದು ನಿಜ. ಅದರಲ್ಲೂ ಸಾವಯವ ಕೃಷಿ ಎಂದರೆ ಕೇಳುವವರೇ ಇಲ್ಲ. ಒತ್ತುವರಿ ಮಾಡುತ್ತಾ, ರಾಸಾಯನಿಕ ಬೀಜ-ಗೊಬ್ಬರ ಹಾಕುತ್ತಾ, ಕಾಡನ್ನೇ ನಾಡಾಗಿಸುತ್ತಾ ಊರು ಉದ್ಧಾರ ಮಾಡುವವರೆ ನಮ್ಮಲ್ಲಿ ಹೆಚ್ಚು. ಬೆಳೆಯಲಿ ಬಿಡಿ, ಆಹಾರೋತ್ಪನ್ನಗಳ ಕೊರತೆ ನೀಗಲಿ ಎಂದು ಸರಕಾರಗಳೂ ಶಾಮೀಲಾಗಿ ವಿಷ ಆಹಾರ ಉಣ್ಣಿಸಿದ್ದು ಇತಿಹಾಸ.  ಆದರೂ ರೈತರೇನು ಆರ್ಥಿಕವಾಗಿ ಸಬಲರಾಗಲಿಲ್ಲ ಇದೇ ಮೋಸ. ರೈತನೂ ಗ್ರಾಹಕನೂ ವಿಷ ರಹಿತ ಆಹಾರ ತಿನ್ನಲಾಗಲಿಲ್ಲ.  ಇವರಿಬ್ಬರ ದಾರಿ ತಪ್ಪಿಸಿದ ಸರಕಾರ ಹಾಗು ಮಧ್ಯವರ್ತಿಗಳಿಗೆ ಹಣ ತಿನ್ನದೆ ತಿಂದ ಅನ್ನ ಜೀರ್ಣವಾಗುತ್ತಿರಲಿಲ್ಲ.

ಆದರೆ ಸಮಾಧಾನಕರ ಸಂಗತಿ ಎಂದರೆ ಈಗಿನ ಕರ್ನಾಟಕ ರಾಜ್ಯ ಸರಕಾರ ಸಾವಯವ ಕೃಷಿ ಮಿಷನ್ ಸ್ಥಾಪಿಸಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಿದೆ.  ಆದರೆ ಈ ಮೊದಲೇ ೧೯೯೯ರಲ್ಲೇ ಸಿ ಎಂ. ನಾರಾಯಣ ಶಾಸ್ತ್ರಿ ಅವರಿಂದ ಸ್ಥಾಪನೆಯಾದ ಫಲದ ಸಂಸೆ ಈ ನಿಟ್ಟಿನಲ್ಲಿ ಹತ್ತಾರು ವರ್ಷಗಳ ಕಾಲ ಶ್ರಮಿಸಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಶೋಭಿಸುತ್ತಿದೆ.

ಫಲದ-ಫಲಪ್ರದ

ಸಾವಯವ ಕೃಷಿ ಉತ್ಪನ್ನಗಳ ರಫ್ತು ಮಾರುಕಟ್ಟೆಯಲ್ಲಿ ಮು೦ಚೂಣಿಯಲ್ಲಿರುವ, ಬೆ೦ಗಳೂರಿನ ಫಲದ ಆಗ್ರೋ ರೀಸರ್ಚ್ ಫೌ೦ಡೇಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕಳೆದ ಒ೦ದು ದಶಕಕ್ಕೂ ಮೇಲ್ಪಟ್ಟ ಅವಧಿಯಲ್ಲ್ಲಿ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸಾವಯವ ಕೃಷಿ ಮಾಡುವುದರಿ೦ದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವ ಬಗ್ಗೆ ರೈತರಿಗೆ ಮಾರ್ಗದರ್ಶನ ಕೊಡುತ್ತ ಬ೦ದಿದೆ. ಸತತವಾಗಿ ಕಳೆದ ಮೂರು ವರ್ಷಗಳಿ೦ದ ಈ ಕ೦ಪೆನಿಯು ಫೆಡರೇಶನ್ ಆಪ್ಹ್ ಕರ್ನಾಟಕ ಚೇ೦ಬರ್ ಆಪ್ಹ್ ಕಾಮರ್ಸ್ ಅ೦ಡ್ ಇ೦ಡಸ್ಟ್ರೀಸ್ ಅವರಿಂದ ಪ್ರಶಸ್ತಿ ಪಡೆಯುತ್ತಾ ಬ೦ದಿದೆ.  ಈ ಬಾರಿಯೂ ಕ೦ಪೆನಿಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಇತ್ತೀಚೆಗೆ ಬೆ೦ಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿತು.

ಸಾವಯವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ಒದಗಿಸುವಲ್ಲಿ ಮತ್ತು ರೈತರಿಗೆ ಹೆಚ್ಚಿನ ಬೆಲೆ ಕೊಡಿಸುವಲ್ಲಿ ಮಹತ್ವಪೂರ್ಣ ಕೆಲಸ ಮಾಡುತ್ತಾ ಪ್ರಗತಿಯಪಥದಲ್ಲಿ ದಾಪುಗಾಲು ಹಾಕುತ್ತಿರುವ ಕ೦ಪೆನಿಗೆ, ಇನ್ನಷ್ಟು ಸಾಧನೆ ಮಾಡಲು ಈ ಪ್ರಶಸ್ತಿಯಿ೦ದ ಪ್ರೋತ್ಸಾಹ ದೊರೆತಿದೆ.

ಸಾವಯವ ಗೊಬ್ಬರ ತಯಾರಿಕೆ ಹಾಗು ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಮೂಲ ಉದ್ದೇಶದಿಂದ ಸ್ಥಾಪಿತವಾದ ಫಲದ ಸಂಸ್ಥೆ ಇಂದು ಕರ್ನಾಟಕ ಹಾಗು ದೇಶದಾದ್ಯಂತ ತನ್ನದೇ ಆದ ರೈತ ಸಮೂಹವನ್ನು ಬೆಳೆಸುತ್ತಿದೆ.

ಭಾರತ ಹಳ್ಳಿಗಳ ದೇಶ, ಅದರಲ್ಲೂ ಸಣ್ಣ ಹಿಡುವಳಿದಾರರೆ ಈ ದೇಶದ ಬೆನ್ನೆಲುಬು, ಹಾಗಾಗಿ ಪುಟ್ಟ ಪುಟ್ಟ ಜಮೀನಿರುವ ರೈತರನ್ನೇ ಕೇಂದ್ರಿಕರಿಸುತ್ತಾ ಬಂದಿದೆ ಫಲದ ಸಂಸ್ಥೆ.

ಆಯ್ದ ಹಳ್ಳಿಗಳಲ್ಲಿ ರೈತರ ಸಭೆ ಸೇರಿಸಿ ಫಲದ ಸಂಸ್ಥೆಯ ಪ್ರತಿನಿಧಿಗಳು ಸಾವಯವ ಕೃಷಿಯ ಬಗ್ಗೆ ಮೊದಲು ಜಾಗೃತಿ ಮೂಡಿಸುತ್ತಾರೆ.  ಜಾಗೃತರಾದ ರೈತರ ಭೂಮಿಗೆ ಭೇಟಿ ನೀಡಿ ಅದು ಸಾವಯವ ಕೃಷಿಗೆ ಸೂಕ್ತವೇ? ಎಂದು ಪರೀಕ್ಷಿಸುತ್ತಾರೆ.  ಅಕ್ಕಪಕ್ಕದ ಜಮೀನಿನಿಂದ ಇವರ ಸಾವಯವ ಕೃಷಿಗೆ ದುಷ್ಪರಿಣಾಮ ಬೀರಬಹುದೆ?  ಎಂದೂ ಗಮನಿಸುತ್ತಾರೆ.  ಕುಟುಂಬದಲ್ಲಿ ಎಲ್ಲರೂ ಸಾವಯವ ಕೃಷಿಗೆ ಸಮಾನ ಮನಸ್ಕರಾಗಿದ್ದಾರೆಯೆ ಎಂದು ಅವರನ್ನೆಲ್ಲಾ ಸಂದರ್ಶಿಸುತ್ತಾರೆ, ಏಕೆಂದರೆ ಅಪ್ಪ ಸಾವಯವ ಮಗ ರಾಸಾಯನಿಕ ಎಂದಾದರೆ ಒಂದೇ ಭೂಮಿಯಲ್ಲಿ ಎರಡು ವಿಧವಾಗುತ್ತದೆ.  ಹೀಗಾದಲ್ಲಿ ಉತ್ಪನ್ನ ಪೂರ್ಣ ಸಾವಯವ ಆಗುವುದಿಲ್ಲ ಎನ್ನುತ್ತಾರೆ ಫಲದ ಸಂಸ್ಥೆಯ ಉಮೇಶ್ ಅಡಿಗರು.  ಹೀಗೆ ಸಂಸ್ಥೆಯ ನಿಯಮಗಳಿಗೆ ಸರಿ ಹೊಂದಿದಲ್ಲಿ ಅವರಿಗೆ ಸಂಸ್ಥೆಯ ಸದಸ್ಯತ್ವ ನೀಡಲಾಗುತ್ತದೆ.

ಫಲದಾಯಕ... ನಿರಾಳ ಸಾವಯವ ಕೃಷಿಕ

ಒಮ್ಮೆ ನೀವು `ಫಲದ' ಸದಸ್ಯರಾದರೆ ಸಂಸ್ಥೆಯೇ ಪ್ರತಿ ಹಂತದಲ್ಲಿಯೂ ನಿಮಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ.  ಬಿತ್ತನೆಬೀಜ ಅಥವಾ ಸಸಿ ವಿತರಣೆ, ಅದಕ್ಕೆ ಸಾವಯವ ಗೊಬ್ಬರ, ಕೃಷಿ ಹಾಗು ಕೊಯ್ಲಿನ ವಿಧಾನ, ಸಂಸ್ಕರಣೆ, ಪರಿಷ್ಕರಣೆ, ಉತ್ಪನ್ನದ ಅಂತಿಮ ಪರೀಕ್ಷೆ ಇಷ್ಟೆಲ್ಲಾ ಆಗಿ ದೃಢೀಕರಣವಾದ ನಂತರ ರಫ್ತಾಗುತ್ತದೆ.

ಅಯ್ಯೋ ನಾವು ಸಾವಯವ ಬೆಳೆಯುವುದೇ ಕಷ್ಟ, ಬೆಳೆದರೂ ಅದನ್ನು ಉತ್ತಮ ಬೆಲೆಗೆ ಯಾರು ತಾನೇ ಖರೀದಿ ಮಾಡಿಯಾರು? ಎಲ್ಲಿ ಕೊಡಬೇಕು?  ಹೆಚ್ಚು ಬೆಳೆ-ಬೆಲೆ ಬರುವುದೋ ಇಲ್ಲವೋ?  ಇಂತಹ ಯಾವುದೇ ಆತಂಕವೂ ರೈತನಿಗೆ ಇರುವುದಿಲ್ಲ.  ಸಂಸ್ಥೆಯೇ ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದು ಕೊಳ್ಳುತ್ತದೆ.  ಅಂದರೆ ಈ ಸರಪಳಿಯಲ್ಲಿ ಬೆಳೆಯನ್ನು ಬೆಳೆದು ಅದನ್ನು ಕೊಡುವವರೆಗೂ ರೈತ ನಿರಾಳವಾಗಿರಬಹುದು.

ವೈಜ್ಞಾನಿಕವಾಗಿ ದೃಢೀಕೃತವಾದ ಸಾವಯವ ಗೊಬ್ಬರದಿಂದ ಅತಿ ಹೆಚ್ಚು ಬೆಳೆ ತೆಗೆದು, ಅತಿ ಹೆಚ್ಚು ಹಣ ತೆಗೆದು ಕೊಳ್ಳುತ್ತಿರುವ ಫಲದಾ ಸಂಸ್ಥೆಯ ದೊಡ್ಡ ರೈತರ ಸಮೂಹವೇ ಇದಕ್ಕೆ ಸಾಕ್ಷಿ.

ರೈತರ ಹಾಗು ಬಳಕೆದಾರರ ನಡುವೆ ನಂಬಿಕೆಯ ಸೇತುವೆಯನ್ನು ನಿರ್ಮಿಸಿರುವ ಫಲದ ಮಧ್ಯವರ್ತಿಗಳ ಮಧ್ಯಸ್ಥಿಕೆಗೆ ಬ್ರೇಕ್ ಹಾಕಿದೆ.  ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಆಗಲೇ ಫಲದ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ.

ಫಲದ ಉತ್ಪನ್ನಗಳನ್ನು ನಮ್ಮ ದೇಶಕ್ಕಿಂತ ವಿದೇಶಿಯರೇ ಮುಗಿಬಿದ್ದು ಖರೀದಿಸುತ್ತಿದ್ದಾರೆಂದರೆ ಫಲದ ಉತ್ಪನ್ನಗಳ ಗುಣಮಟ್ಟವನ್ನು ನೀವೇ ಊಹಿಸಿಕೊಳ್ಳಬಹುದು.

ಫಲ'ದಾರಿ'-ಮಾದರಿ

`ವ್ಯಾಪಾರಂ ದ್ರೋಹ ಚಿಂತನಂ' ಎಂಬ ಮಾತಿದೆ, ಆದರೆ ಇದು ನಾವು ಅನ್ನಪೂರ್ಣೆ ಎಂದು ಪೂಜಿಸುವ ಅನ್ನಕ್ಕೂ, ಆರೋಗ್ಯ ನೀಡುವ ಔಷದಕ್ಕೂ ವಿಸ್ತಾರಗೊಂಡರೆ ವಿಷವನ್ನು ವ್ಯಾಪಾರ ಮಾಡಿದಂತೆ.  ಇದಕ್ಕಿಂತ ವಿನಾಶಕಾರಿ ದೊಡ್ಡ ದ್ರೋಹ ಇನ್ನೊಂದಿಲ್ಲ.  ಜಾಹಿರಾತುಗಳನ್ನು ನೋಡಿ ಮೂಢರಾಗಿ ಮಾರುಕಟ್ಟೆಯಲ್ಲಿ ಅಂದವಾಗಿ ಪ್ಯಾಕಾಗಿರುವುದೇ ಶ್ರೇಷ್ಠವಾದದ್ದೆಂದು ಭಾವಿಸುವ ನಮಗೆ ಅವುಗಳೆಲ್ಲಾ ೧೦೦ ಕ್ಕೆ ೯೫ ರಷ್ಟು ಪರೋಕ್ಷವಾಗಿ ನಮಗೆ ವಿಷ ಉಣಿಸುತ್ತಿದೆ ಎಂಬ ಸತ್ಯ ಮನದಟ್ಟಾದರೆ ಮತ್ತೆ ಸಾವಯವ ಉತ್ಪನ್ನ ಬಯಸುತ್ತೇವೆ.  ಆಗ ಸಾವಯವಕ್ಕೆ ಮತ್ತೆ ಬೇಡಿಕೆ ಬರುತ್ತದೆ.  ಬೇಡಿಕೆ ಹೆಚ್ಚಾದಾಗ ರೈತ ಅದನ್ನೇ ಬೆಳೆಯುತ್ತಾನೆ.  ಯಾರೋ ಹಾಕಿದ ಹಸಿರುಕ್ರಾಂತಿ ಎಂಬ ಭ್ರಮೆಯ ಟೋಪಿಯನ್ನು ತೆಗೆದೆಸೆದು ಭಾರತವನ್ನು ಸಂಪೂರ್ಣ ಸಾವಯವ ಕೃಷಿ ದೇಶವನ್ನಾಗಿಸಿದರೆ ಮಾತ್ರ ಭಾರತದ ರೈತ ವಿಶ್ವಕ್ಕೆ ಮಾದರಿಯಾಗುತ್ತಾನೆ ಅಲ್ಲವೇ?

ಸಾಯುವ ಕೃಷಿ ಸಾವಯವ ಕೃಷಿ ಆಗಲಿ.

            *****
ಚಿನ್ಮಯ ಎಂ.ರಾವ್ ಹೊನಗೋಡು

ಅಕ್ಷಯ ಪಾತ್ರೆ

- ಗಿರಿಜಾಪತಿ ಎಂ. ಎನ್

ಹನಿಹನಿಸೋ ಮುತ್ತ ಮಳೆಗೆ
ಇಳೆಯ ಕಣ್ಣೊಳೆನಿತೊ ಕಾತುರ
ಬಾನ ಇನಿಯನೊಲವಿಗಾಗಿ
ಧರೆಗೆ ನಿತ್ಯ ಸಡಗರ ||

ಬಿರಿದ ಕುಸುಮ ಅರಳು ಸುಮವು
ಒಲಿದ ಹೃದಯದ ಪ್ರೀತಿಗೆ
ಕೆರೆ-ತೊರೆ ಸರೋವರ ನದನದಿಗಳಲ್ಲೂ
ಜೊನ್ನ ಕಿರಣದ ಅಂದುಗೆ ||

ಪ್ರೇಮ ಸಂದೇಶ ಹೊತ್ತ ಹಕ್ಕಿ
ಸಾಲು ನೀಲ ನಭದಲಿ
ಕೊರಳ ಕೊಳಲಿನ ಕೂಗಿನಲ್ಲೂ
ಕವಿಯ ಕಾವ್ಯದ ಚೆಂದುಲಿ ||

ನನ್ನ ಮಿಲನ ನಿನ್ನ ಚಲನ
ಬಾಳ ನಿತ್ಯ ಯಾತ್ರೆಗೆ
ಸ್ವಾರ್ಥವಿರದ ಅಮೃತ ಸಿಂಚನ
ಭಾವದಕ್ಷಯ ಪಾತ್ರೆಗೆ. ||

        *****

ಕೀಲಿಕರಣ: ಕಿಶೋರ್‍ ಚಂದ್ರ

ತಂಗಾಳಿ

-ರವಿ ಕೋಟಾರಗಸ್ತಿ

ತಂಗಾಳಿ... ಬೀಸುತಲಿ
ಮೈ...ಮನ ಅರಳುತ
ತೇಲಿ... ಬರುತಿಹದು
ನಿನ್ನ...ಮಧುರ ನೆನಪು
ಬಾನಂಗಳದಿ ಬಯಕೆ
ಬೇಡುತಿಹ ಸಂಗವು

ಕರಾಳ ರಾತ್ರಿಯಾಗಿ
ಏಕಾಂಗಿತನದ ನೋವು
ಗಾಯಗೊಳಿಸುತಲಿ...
ತರುತಿಹದು ಸವಿನೆನಪು
ಮನವೆಲ್ಲಾ ಅರಳಿಸಿಹದು

ಬಿರುಗಾಳಿಯ ರಭಸದಿ
ಸಿಲುಕಿದ ಮರದಂತೆ
ಒಡನಾಟದ ಕನಸು...
ತೂರಿ-ಬರುತಲಿ
ತನು ಮನ ಜರಿದು
ದಾಹದಿ ತೂರಾಡುತ
ಬೇಯುತ ಬಳಲುತಿಹದು

ಅಗಲಿಕೆಯ ಬೇಗುದಿಯು
ಬೇಸರದಿ ಮುದುಡಿ
ಕಾಯುವ ಕೋಗಿಲೆಯಂತೆ
ವಸಂತ ನೋಡುತಲಿ
ಚಾತಕ-ಪಕ್ಷಿಯಾಗಿ...

         *****

ಕೀಲಿಕರಣ: ಕಿಶೋರ್‍ ಚಂದ್ರ

ಬೆಸುಗೆ-ವಸುಗೆ

- ಗಿರಿಜಾಪತಿ ಎಂ. ಎನ್

ಯಾವ ಶುಭಗಳಿಗೆಯಲಿ
ಪ್ರಕೃತಿ ತಾನುದೆಯಿಸಿತೊ
ಆವ ಶುಭ ವೇಳೆಯಲಿ
ಜೀವ ಕಣ್ ತೆರೆಯಿತೊ
ಅಮೃತ ಸೆಲೆ ನೆಲೆಯಂತೋ ದಯವಲೀಲೆ        ||ಪ||

ಶುಭೋದಯದ ಹಗಲಿರುಳಿನಲಿ
ನವೋದಯದ ಬಾಳ ಬೆಳಕು
ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ     ||ಅ.ಪ||

ಈ ಮಣ್ಣು ಕಣ ಕಣದಿ
ಹರಿವ ತೊರೆ ನದನದಿ ರವದಿ
ಅಲೆಯಲೆಯ ಅನಿಲದಲಿ ದೇವ ನೋಟ
ಚಿಗುರು ತಂಬೆಲರಲ್ಲಿ
ಸುಮ ಚೆಲ್ವರಿದ ಸಿರಿಯಲ್ಲಿ
ಕಣ್ಣ ಕಾಂತಿಗೆ ನಿತ್ಯ ಹಬ್ಬದೂಟ

ಅಂಗಲಂಗುಲದಲ್ಲಿ
ಬಾಂದಳದ ಬಿನ್ನಾಣ
ಕುಣಿ-ಕುಣಿವ ಮನಗಳಲಿ ಹರಿಣಿ ಬಿಂಬ
ಏರು ಜವ್ವನದಲ್ಲಿ
ಶೃಂಗಾರದಂದಣದಿ
ತನ್ನ ತಾ ಮರೆವಂಥೆ ಷೋಡಷ ಬಿಂಬ

ನೆಲ ಮುಗಿಲ ಹರಹಿನಲಿ
ಬಾಳ್ಬಳ್ಳಿ ಹರಡಿರಲು
ಅಂಕು ಡೊಂಕಿನ ಹಾದಿ ಮುಳ್ಳ ಭೀತಿ ಏಕೆ
ತೆರೆದ ಗಣ್ಣಿನ ಮನಕೆ
ನೊರೆಯ ಹಾಲಿನ ಗುಣಕೆ
ಹೆಪ್ಪುಗಟ್ಟಿಸಿದರೂ ನವನೀತವಾಗೋ ಚಣಕೆ.

        *****

ಕೀಲಿಕರಣ: ಕಿಶೋರ್‍ ಚಂದ್ರ

ಆಕ್ರೋಶ

-ರವಿ ಕೋಟಾರಗಸ್ತಿ

ಹೊಸತನವ ಅರಸುತ
ಮನದಿ-ಮುದಡಿ
ಆಕ್ರೋಶದಿ ಅರಚುತ
ಕೊರಗುವ ಕರಳು
ನೋವು ಅರಿಯುವರಾರು

ಹಟ್ಟಿ... ಬೆಟ್ಟಗಳ
ನಡುವಲಿ.. ಹುಟ್ಟಿ
ಬೆಳೆದು ಬಾಳಿದ
ದಶ-ದಶಕಗಳ
ಕಾಲ ಗತಿಸಿದರೂ
ಕಾಣದು-ತಿಳಿಯದ
ಹೊಸ ಬಗೆಯ..
ಹಸನ ಬದುಕು

ಕಾಡು... ಮೋಡಗಳ
ದಟ್ಟ ಕಣಿವೆಯಲಿ
ಕಠಿಣತೆಯ ಕಲ್ಲಾಗಿ
ರಕ್ತ... ದಾಹದಿ...
ಸಾಗುತಿರುವೆವು ನಾವೆಲ್ಲಾ
ಮೃಗಗಳಾಗುತ ಹಗೆತನದಿ

ಅಭಿವೃದ್ಧಿಯ ಅರೆ...
ಭರವಸೆಯಲಿ ಶೋಷಿಸುತ
ಅರೆನಗ್ನ ಜೋಗುತಿಗಳಾಗಿ
ತಿಮಿಂಗಲ ರೂಪದ
ಅಧಿಕಾರಿ-ರಾಜಕೀಯ
ಹೃದಯ-ಹೀನರು
ಕೊಳ್ಳೆ ಹೊಡೆಯುತಿಹರು
ಸರ್ಕಾರಿ ಬೊಕ್ಕಸವಾ

ಇರುವ-ನಮ್ಮಷ್ಟಕ್ಕೆ
ನಾವುಗಳು...
ನಿಸರ್ಗದ ವಾತ್ಸಲ್ಯದ
ಭೂಮಿ-ಆಕಾಶಕೆ...
ಕೈಮುಗಿದು... ಮಣ್ಣಲ್ಲಿ
ಕಣ್ಣಿಟ್ಟು ಬದುಕುವ
ಬಾಳ ಬಳ್ಳಿಯನೆ
ಕಡಿದು ಚೆಲ್ಲುವ
ಗೋಮುಖ ಕಿರಾತರು
ಸುಸಂಸ್ಕೃತ ಸೋಗಿನ
ರೂಪ ತೋರಿಸುತ
ಇರಿತದಿ ದಾಳಿಯಿಡುತ
ನಮ್ಮುಸಿರಿನ ಹಸಿರು
ನೆಲ... ಜಲ... ತಾಣ
ಬರಿದಾಗಿಸುತ ಬರಡು
ಮಾಡುತಿಹರು ಸಭ್ಯರು

ಕಣ್ಣು ಬಿಟ್ಟಾರೇನು ಇವರು
ನಮ್ಮ ಆಕ್ರೋಶದ
ಜನಪದ ದನಿಯ
ಸದ್ದು ಅಪ್ಪಳಿಸುತ
ಎದ್ದೇಳುವ ಮುನ್ನ...

         *****

ಕೀಲಿಕರಣ: ಕಿಶೋರ್‍ ಚಂದ್ರ

ಹುಟ್ಟಗರತಿಯ ಕಾಣಲಿಲ್ಲಾ

- ಶಿಶುನಾಳ ಶರೀಫ್

ಹುಟ್ಟಗರತಿಯ ಕಾಣಲಿಲ್ಲಾ  ಕೊಟ್ಟ್ಯಾದಿಯಲ್ಲಾ
ಹುಟ್ಟಗರತಿಯ ಕಾಣಲಿಲ್ಲಾ                              ||ಪ||

ಹುಟ್ಟಗರತಿಯ ಕಾಣಲಿಲ್ಲಾ
ಪಟ್ಟಗುಡುಮ  ರಂಡೆ ನೀನು
ಪಟ್ಟದಯ್ಯನವರಿಳಿಯ ಬಂದರೆ
ಎಟ್ಟಿ ಮಾತುಗಳಾಡುತೀದಿ                                  ||೧||

ಮಾನವಂತರ ಮನೆಯೊಳ್ಹುಟ್ಟಿ
ಆದೆಲ್ಲ ಕೊಟ್ಟಿ ಅಪಕೀರ್ತಿ ಅವಗ ತಂದಿಟ್ಟಿ
ಮಾನ ಹೋದ ಬಳಿಕ ಇನ್ನು ಏನು ಕೊಟ್ಟರ ಬಂದೀತ್ಹೇಳ
ಜ್ಞಾನವು ಳ್ಳವರಿಳಿಯ ಬಂದರೆ ಹೀನ ಮಾತುಗಳಾಡತೀದಿ     ||೨||

ಹರೆಯದಾಗ ತಿಳಿಯಲಿಲ್ಲಾ ಹರಿದಾಡಿದೆಲ್ಲಾ
ಮುರಕು ಮಾಡಿ ಮೂಳನಾದೆಲ್ಲಾ ಪರಕಾದಿಯೆಲ್ಲಾ
ಗರತಿ ಲಕ್ಷಣ ಹೋದಮ್ಯಾಲಿನ್ನು ತಿರುಗಿ ಗರತ್ಯಾಗಬಹುದೆ ?
ಇರಲಿ ನಿಮ್ಮಯ ಶಾಂತಿಗುಣವು ಸೂಳಿಗೆ ಗರತೆನ್ನಬಹುದೆ?    ||೩||

ಗಂಡ ಪುಂಡನಾಗಲಿಲ್ಲ ಸಂಡನಾದನಲ್ಲಾ
ಕಂಡು ನಿನ್ನಾಳುತಾನಲ್ಲಾ
ಲಂಡ ಬಾಲದ ಮಂಗನಂತೆ ಗಂಡನ ಕುಣಿಸ್ಯಾಡುತೀ
ಕಂಡು ನಾವು ತಿಳಿಯಬಂದರೆ ಬಂಡಮಾತುಗಳಾಡುತೀದಿ         ||೪||

ಸೀಗಿಹಳ್ಳಿಮಠದ ನಾರಿವಳಾ ಬಾಜಾರಿ ಇವಳಾ
ಯಾರು ಮಠಕ ಬಂದರ ಸೇರದವಳಾ
ಊರ ಸರಕಾರಕ್ಕೆ ಹೇಳಿ ಭಾರಿ ದಂಡಾ ಕೊಡಿಸಬೇಕು.
ಧೀರ ಶಿಶುವಿನಾಳಧೀಶನ ನೂರಬಿಸ್ತಿ ಅರಿಯಳಿವಳು        ||೫||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಚಂದನವ ಬೆಳೆದೊಡೆ....

- ಪ್ರತಿಮಾ ಪಾನತ್ತಿಲ

`ಶ್ರೀಗಂಧ ಬೆಳೆದು ಧನಿಕರಾಗಿ, ನಾವು ಶ್ರೀಗಂಧದ ಗಿಡಗಳನ್ನು ಮಾರಾಟ ಮಾಡುತ್ತೇವೆ, ತಕ್ಷಣ ಸಂಪರ್ಕಿಸಿ - ಚಂದನ ನರ್ಸರಿ: ದೂರವಾಣಿ ೬೭೮೩೬೪೧' ಎಂಬ ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ಓದಿ ಶೇಷಪ್ಪ ಗೌಡರು ಧಿಗ್ಗನೆದ್ದು ಕೂತರು.  `ಸ್ವಾಮಿ, ವೆಂಕಟ್ರಮಣಾ, ನಂಗೂ ಒಳ್ಳೆ ಕಾಲ ಬಂದಕಂಡುಟ್ಟಲ್ಲಪ್ಪಾ'.... ಎಂದು ಗೋಡೆಯ ಮೇಲಿದ್ದ ತಿರುಪತಿ ತಿಮ್ಮಪ್ಪನ ಪಟಕ್ಕೆ ಕೈ ಮುಗಿದರು.

ಶೇಷಪ್ಪ ಗೌಡರಿಗೆ ಮೊದಲು ಭತ್ತದ ಗದ್ದೆಯಿತ್ತು.  ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಿದ್ದರು.  ಆಮೇಲೆ ಗದ್ದೆಯಲ್ಲಿ ಸೌತೆ ಮತ್ತು ಬಚ್ಚಂಗಾಯಿ ಬೆಳೆದು ಹೇಗೋ ಜೀವನ ಸಾಗಿಸುತ್ತಿದ್ದರು.

ಆಗ ಬಂತಲ್ಲಾ ಬೀಡಿ ಬ್ರಾಂಚುಗಳು.  ಊರ ಹೆಂಗಸರೆಲ್ಲಾ ಮನೆಯಲ್ಲೇ ಕೂತು ಬೀಡಿ ಕಟ್ಟಿಕೊಂಡು, ಮನೆಕೆಲಸವನ್ನೂ ಸುಧಾರಿಸಿಕೊಂಡು ಒಳ್ಳೊಳ್ಳೆಯ ಸೀರೆ, ಮ್ಯಾಚಿಂಗ್ ಬ್ಲೌಸ್, ಬಳೆ ಮತ್ತು ಚಪ್ಪಲಿ ತೆಗೆದುಕೊಳ್ಳತೊಡಗಿದರು.  ಮುಖಕ್ಕೆ ಪೌಡರ್‍, ಕಣ್ಣಿಗೆ ಕಾಡಿಗೆ, ತುಟಿಗೆ ಕೆಂಪು ಹಚ್ಚತೊಡಗಿದರು.  ಊರ ಕೃಷಿಕರ ಪತ್ತಿನ ಸಹಕಾರ ಸಂಘದಲ್ಲಿ ಉಳಿತಾಯಖಾತೆ ಬ್ಯಾಂಕು ಅಕೌಂಟ್ ಓಪನ್ನು ಮಾಡಿ ಹಣವನ್ನು, ಬೋನಸ್ಸನ್ನು ತುಂಬತೊಡಗಿದರು.

ಅವರ ಜೀವನಮಟ್ಟ ಏರಿತು.  ಶೇಷಪ್ಪ ಗೌಡರ ಭತ್ತದ ಗದ್ದೆಗಳಿಗೆ ಕೂಲಿಗಳು ಸಿಗದೇ ಹೋಯ್ತು.  ಒಂದು ವರ್ಷ ಗೌಡರು ಗದ್ದೆಯನ್ನು ಹಡ್ಲುಬಿಟ್ಟರು.  ಊಟಕ್ಕೇ ಕಷ್ಟ ಎಂದು ಕಂಡು ಬಂದುದರಿಂದ ಮರುವರ್ಷ ತಾವೇ ಎತ್ತು ಹೂಡಿ, ಬೀಜಬಿತ್ತಿ ಹೆಂಡತಿ ಮಕ್ಕಳನ್ನು ಮತ್ತು ಪಕ್ಕದ ಮನೆಯವರನ್ನು ಸೇರಿಸಿ ಬೇಸಾಯ ಮಾಡಿದರು.  ಆ ವರ್ಷ ಕಾಡುಹಂದಿಗಳು ರಾತ್ರೆ, ಮಂಗಗಳು ಹಗಲು, ಬಂಬುಚ್ಚಿಗಳು ತೆನೆ ಕೂಡುವಾಗ ದಾಳಿಯಿಟ್ಟು ಭತ್ತದ ಬೆಳೆ ಕೈಕೊಟ್ಟಿತು.

ಗೌಡರು ತಿರುಪತಿ ತಮ್ಮಪ್ಪನ ಪಟನೋಡಿ `ವೆಂಕಟ್ರಮಣ ಕೈ ಬುಟ್ಟನಾ' ಎಂದು ನಿಡುಸುಯ್ದರು.  ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಸಂಜೆ ಹೊತ್ತು ಅವರು ಕೆಂಪುಬೋರ್ಡಿನ ಕಡೆಗೆ ಹೋಗುವುದೂ ನಿಂತುಹೋಯಿತು.  ಪಕ್ಕದ ಮನೆಯ ಸಣ್ಣಪ್ಪ ಗೌಡ್ರು `ಹಿಂಗಾರೆ ಹೆಂಗೆ ಬಾವಾ, ಸುಮ್ಮನೆ ಕೂತಿದ್ದರೆ ಹುಟ್ಟಿಸಿದ ದೇವ್ರೆ ಹುಲ್ಲು ಮೇಯ್ಸಿಬುಟ್ಟದೆಗಡ, ನಾ ನೋಡಿ, ಭತ್ತ ಕೈ ಕೊಟ್ಟದ್ದಕ್ಕೆ ಅಡಿಕೆ ಹಾಕಿತ್ಲೇನಾ?  ಈಗ ನೋಡಿ ಬಂಗಾರದಂಥಾ ರೇಟು.  ನೀವು ಅದರೆನೆ ಮಾಡಿ' ಎಂದರು.

ಶೇಷಪ್ಪ ಗೌಡರಲ್ಲಿ ಉಳಿತಾಯದ ಹಣವೇನಿರಲಿಲ್ಲ.  ಅವರು ಆಕಾಶ ನೋಡಿದಾಗ ಸಣ್ಣಪ್ಪ ಗೌಡರು `ನೀವೆಂಥದು ಬಾವಾ?  ಕೃಷಿಕರ ಪತ್ತಿನ ಸಹಕಾರಿ ಸಂಘ ಇರ್‍ದು ಯಾರಿಗೇಂತ ನೆನ್ಸಿದಿರಿ?  ನಾ ಈಗ ಅದರ ಮೆಂಬರು.  ನೀವೂನೂ ಮೆಂಬರಾಗಿಬುಡಿ.  ಆಸ್ತೀನ ಒಂದು ಭಾಗ ಅಡವು ಇಸಿದು ಸಾಲ ತಕಣೊಕಲ್ಲಾ, ಜಾಮೀನಿಗೆ ಹೆಬ್ಬೆಟ್ಟು ಒತ್ತಿಕೆ ನಾನೇ ಒಳೆ ಅಲ್ಲಾ?"  ಎಂದು ಧೈರ್ಯ ತುಂಬಿದರು.

ಸಣ್ಣಪ್ಪ ಗೌಡರು ಹೆಬ್ಬೆಟ್ಟು ರುಜು ಒತ್ತಿದ್ದಕ್ಕೆ ಶೇಷಪ್ಪ ಗೌಡರಿಗೆ ಐವತ್ತು ಸಾವಿರ ಸಾಲ ಸಿಕ್ಕಿತು.  `ಭತ್ತದ ಸಹವಾಸಾನೇ ಬೇಡ' ಎಂದು ಶೇಷಪ್ಪ ಗೌಡರು ಗದ್ದೆಗಳಲ್ಲಿ ಗುಂಡಿತೋಡಿ ಅಡಿಕೆ ಸಸಿ ನೆಟ್ಟರು.  `ಬರ್‍ಲಿ ಮಂಗಗನು, ಹಂದಿಗನು.  ಏನು ಮಾಡ್ವೇಂತ ನೋಡಿಯೇ ಬುಟ್ನೆ' ಎಂದು ಯುದ್ಧ ಸನ್ನದ್ಧರಂತೆ ತೊಡೆ ತಟ್ಟಿಕೊಂಡರು.  ಕೆಂಪು ಬೋರ್ಡು ಗಡಂಗಿಗೆ ಹೋಗಲಾಗುವುದಿಲ್ಲ ಎಂಬ ಚಿಂತೆ ಬಿಟ್ಟರೆ ನೆಮ್ಮದಿಯಾಗಿಯೇ ಇದ್ದರು.  ಪಕ್ಕದ ಮನೆ ಸಣ್ಣಪ್ಪಗೌಡರು ತಾವು ಆಗಾಗ ಇಳಿಸುತ್ತಿದ್ದ ಭಟ್ಟಿ ಮಾಲಿನಲ್ಲಿ ಶೇಷಪ್ಪ ಗೌಡರಿಗೂ ಸ್ವಲ್ಪ ಪಾಲು ಕೊಡುತ್ತಿದ್ದರಿಂದ ಅದೊಂದು ದೊಡ್ಡ ಚಿಂತೆಯಾಗಿ ಶೇಷಪ್ಪ ಗೌಡರನ್ನು ಕಾಡಲಿಲ್ಲ.

ಅಡಿಕೆ ಸಸಿಗಳು ಬೆಳೆದು ಫಲಕೊಟ್ಟವು.  ಅಡಿಕೆಗೆ ಕೇಜಿಗೆ ೨೧೦ ಹೋದಾಗ ಶೇಷಪ್ಪ ಗೌಡರು ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿತು.  ಒಂದಷ್ಟು ಕೊಟ್ಟು ಮಗನನ್ನು ಸರಕಾರಿ ಹುದ್ದೆಗೆ ಸೇರಿಸಿದರು.  ಒಂದಷ್ಟು ಚಿನ್ನ ಹಾಕಿ ಮಗಳನ್ನು ಮುಂಡಾಸಿನವನಿಗೆ ಕೊಟ್ಟು ಮದುವೆ ಮಾಡಿಸಿದರು.  ತಿರುಪತಿ ತಿಮ್ಮಪ್ಪನ ಪಟನೋಡಿ `ನಂಗೆ ಗೊತ್ತಿತ್ತ್, ನೀ ಕೈ ಬುಡಿಕಿಲೇಂತ' ಎಂದು ಮೀಸೆಯಡಿಯಲ್ಲಿ ನಕ್ಕರು.  ಕೃಷಿಕರ ಸಹಕಾರಿ ಪತ್ತಿನ ಸಂಘದ ಸಾಲ ತೀರಿಸಿ ಉಳಿತಾಯ ಖಾತೆಯಲ್ಲಿ ಸ್ವಲ್ಪ ನಗದು ಜಮಾ ಮಾಡಿಟ್ಟರು.

ಅಷ್ಟು ಹೊತ್ತಿಗೆ ಬಂತಲ್ಲಾ, ಜಾಗತೀಕರಣ?  ಅಡಿಕೆ ಬೆಳೆಯುವ ಯಾವ್ಯಾವುದೋ ದೇಶಗಳಿಂದ ಇವರ ಊರಿಗೂ ಅಡಿಕೆ ಬರತೊಡಗಿ ಅಡಿಕೆಯ ರೇಟು ಜರ್‍ರನೆ ಪಾತಾಳಕ್ಕೆ ಇಳಿಯತೊಡಗಿತು.  ಏನು ಮಾಡಿದರೂ ಅದು ಮೇಲಕ್ಕೇರಲೇ ಇಲ್ಲ.  ಸರ್ಕಾರ ಬೆಂಬಲ ಬೆಲೆ ಕೊಡುತ್ತದೆಂದು ಆಸೆ ಹುಟ್ಟಿಸಿದ್ದೇ ಬಂತು.  ಅಗತ್ಯಕ್ಕೆ ಇರಲೆಂದು ಗುಡ್ಡದಲ್ಲಿ ಹಾಕಿದ್ದ ರಬ್ಬರು ಗಿಡಗಳಿಂದಲೂ ಪ್ರಯೋಜನವೇನಾಗಲಿಲ್ಲ.  ಮಲೇಶಿಯಾದಿಂದ ರಬ್ರು ಬರತೊಡಗಿ, ಶೇಷಪ್ಪಗೌಡರ ರಬ್ಬರು ಶೀಟುಗಳನ್ನು ಕೇಳುವವರೇ ಇಲ್ಲವೆಂದಾಯಿತು.  ಗೌಡರು ತಿರುಪತಿ ತಮ್ಮಪ್ಪನ ಪಟ ನೋಡಿದರು.  `ಮತ್ತೆ ಕೈ ಕೊಟ್ಟನಾ?  ಮೇಲೆ ತಕೋಂಡೋಗಿ ದಬಾಲ್ಲಂತ ಮತ್ತೆ ಕೆಳ್ಗೆ ಹಾಕುದೇ ನಿನ್ನ ಅಭ್ಯಾಸ' ಎಂದು ನಿಡುಸುಯ್ದರು.

ಹಾಗೆ ಗೌಡರು ಆಕಾಶ ನೋಡತೊಗಿದಾಗ ಪತ್ರಿಕೆಯಲ್ಲಿ ಆ ಪ್ರಕಟಣೆ ಕಂಡದ್ದು.  ಧಿಗ್ಗನೆದ್ದು ಕೂತದ್ದು.  ೬೭೮೩೬೪೧ಕ್ಕೆ ಫೋನು ಮಾಡಿ ಚಂದನದ ರೇಟು ಕೇಳಿದ್ದು, ಗುಡ್ಡದ ಅಷ್ಟೂ ರಬ್ಬರು ಗಿಡಗಳನ್ನು ಕಡಿದು ಬೇರೆ ಗುಂಡಿ ತೆಗೆದು ಚಂದನದ ಸಸಿಗಳನ್ನು ನೆಟ್ಟದ್ದು, ಮನೆಗೆ ಬಂದು ತಿರುಪತಿ ತಿಮ್ಮಪ್ಪನ ನೋಡಿ `ಇನ್ನು ನೀ ಹೆಂಗೆ ಕೈಕೊಟ್ಟಿಯಾ ನೋಡ್ನೆ.  ಗಂಧದ ಮರಗ ಬೆಳದು ಬರ್‍ಲಿ.  ನಮ್ಮೂರ್‌ಲ್ಲಿ ನಿನ್ನ ಹೆಸ್ರುಲಿ ಒಂದು ಹೈಸ್ಕೂಲು ಕಟ್ಟಸಿನೆ.  ಅದಾಗಿ ನಾ ಸೀದಾ ತಿರುಪತಿಗೇ ಬಂದು ನಿನ್ನ ಕಂಡನೆ' ಎಂದದ್ದು.

ಶೇಷಪ್ಪ ಗೌಡರು ದಿನಾ ಬೆಳಗೆದ್ದು ಗುಡ್ಡದಲ್ಲಿ ಹಾಕಿದ್ದ ಅಷ್ಟೂ ಶ್ರೀಗಂಧದ ಸಸಿಗಳನ್ನು ಮುಟ್ಟಿ ನೋಡಿ ಮಾತಾಡಿಸೋರು.  `ಲಾಯಕ್ ಬೆಳೆದಿಯಾನಾ?  ಬೆಳಿಯದೆ - ಏನ್?  ಬುಡಕ್ಕೆ ಎಂತೆಲ್ಲಾ ಹಾಕಲೇಂತ ನೋಡು:  ತಿನ್ನು, ತಿನ್ನು, ಲಾಯಕ್ ತಿನ್ನು.  ತೋರಾಗಿ ಬೆಳ್ಳೋಕು' ಎನ್ನುತ್ತಿದ್ದರು.  ಚೆನ್ನಾಗಿ ಬೆಳೆಯದ ಸಸಿಗಳಿಗೆ `ನೋಡು ಮಗಾ.  ಈ ಪ್ರಾಯಲಿ ಕೊಟ್ಟದ್ದೆಲ್ಲಾ ತಿನ್ನೊಕು.  ಅದು ಬೇಡ, ಇದು ಬೇಡ ಅಂತ ಹಟ ಮಾಡಿಕಾಗದು.  ತಿನ್ನದೆ ನಿಂಗೆ ಲಾಚಾರು ಕಾಯಿಲೆ ಬಂದುಟು, ಸರಿ ತಿಂದವನ ನೋಡ್ರೆ ಕಾಯಿಲೆನೂ ಓಡಿ ಹೋದೆ' ಎಂದು ಸಂತೈಸುತ್ತಿದ್ದರು.

ಗಿಡಗಳು ಬೆಳೆದು ಮರವಾಗತೊಡಗಿದವು.  ಗೌಡರ ತಲೆಕೂದಲುಗಳೆಲ್ಲಾ ಬೆಳ್ಳಗಾಗಿದ್ದವು.  `ಸದ್ಯ ಉದುರಿಹೋಗಿ ಮಂಡೆ ಬೋಳಾಗದ ಹಾಗೆ ನೀ ನೋಡ್ಕಂಡಲ್ಲಾ?  ಅದೇ ನೀ ನಂಗೆ ಮಾಡಿದ ಉಪಕಾರ.  ದೈಗ ಮರ ಆಗಲಿ, ಊರಿಗೊಂದು ಹೈಸ್ಕೂಲು ಮಾಡಿ ನಿನ್ನ ನೋಡೀಕೆ ಬಂದು ಈ ಬೆಳ್ಳಿ ಕೂದೋಲನ ನಿಂಗೆ ಅರ್ಪಿಸಿ ಬಾದು' ಎಂದು ತಿರುಪತಿ ತಿಮ್ಮಪ್ಪನ ಪಟ ನೋಡಿ ಆಗಾಗ ಹೇಳುತ್ತಿದ್ದರು.

ಒಂದು ದಿನ ಬೆಳಿಗ್ಗೆ ಎಂದಿನಂತೆ ಶೇಷಪ್ಪಗೌಡರು ಶ್ರೀಗಂಧದ ತೋಟಕ್ಕೆ ಹೋಗಿ ಒಂದು ಸುತ್ತು ಹಾಕಿದರು.  ಮಧ್ಯದಲ್ಲಿ ನಾಲ್ಕು ಗಂಧದ ಮರಗಳು ಕಾಣುತ್ತಿಲ್ಲ.  ಅವುಗಳ ಸೊಪ್ಪು ಮತ್ತು ಉಳಿದ ಭಾಗಗಳು ಅಲ್ಲೇ ಇದೆ.  ಕಾಂಡವನ್ನು ಯಾರೋ ಎಗರಿಸಿದ್ದಾರೆ.  `ವೆಂಕಟ್ರಮಣಾ ಇದೊಳ್ಳೆ ಗ್ರಾಚಾರಾ ಆತಲ್ಲಾ?  ನಾ ಉರಿಗೊಂದು ಹೈಸ್ಕೂಲು ಕಟ್ಟಿಸಿ ನಿನ್ನಕ್ಕಲೆ ಬಂದು ಮುಡಿ ಕೊಡಕೂಂತ ನೆನ್ಸಿಕೊಂಡ್ರೆ ಹಿಂಗ್ಯಾರು ಮಾಡ್ದ?  ಇರ್ಲಿ ಮಾಡ್ನೆ ಅವುಕೆ' ಎಂದುಕೊಂಡು ಮೂರು ಸೆಲ್ಲಿನ ಟಾರ್ಚು ಹಿಡಕೊಂಡು ಶ್ರೀಗಂಧ ತೋಟದ ಬಳಿ ಪಾರ ಕಾದರು.

ಮಧ್ಯರಾತ್ರೆ ಕಳೆದಾಗ ಲೈಟಿನ ಬೆಳಕು ಕಾಣಿಇಕೊಂಡು ಕೆಲವು ಆಕೃತಿಗಳು ತೋಟದ ಮಧ್ಯಕ್ಕೆ ಬಂದವು.  `ಕಳ್ಳ ನನ್ಮಕ್ಳೇ.  ಕಾಣಿಸಿನೆ ನಿಮಗೆ ಗತಿ' ಎಂದು ಶೇಷಪ್ಪ ಗೌಡರು ದೊಣ್ಣೆ ಹಿಡಿದು ಮುನ್ನುಗ್ಗಿದರು.  ಬಂದಿದ್ದ ಆಕೃತಿಗಳು ಮುಖಮೂತಿ ನೋಡದೆ ಗೌಡರನ್ನು ಚಚ್ಚಿದವು.  ಗೌಡರು ಮೂರ್ಚೆತಪ್ಪಿ ಬಿದ್ದರು.  ಅವರು ಎದ್ದಾಗ ಬೆಳ್ಳಂಬೆಳಗಾಗಿತ್ತು.  ಮೈಕೈಯಿಡೀ ನೋಯುತ್ತಿತ್ತು.  ಮತ್ತೆ ನಾಲ್ಕು ಶ್ರೀಗಂಧದ ಮರಗಳು ಕಣ್ಮರೆಯಾಗಿದ್ದವು!

ಗೌಡರು ಮನೆಗೆ ಬಂದವರು ತಿರುಪತಿ ತಿಮ್ಮಪ್ಪನ ಪಟ ನೋಡಿದರು.  `ನಗಾಡ್ಬಡ ನಂಗಿನ್ನು ಏನೂ ಬೇಡ.  ಊರಿಗೊಂದು ಹೈಸ್ಕೂಲು ಮತ್ತು ನಿಮಗೆ ಈ ಮುಡಿ ಕೊಟ್ಟರೆ ಮುಗ್ತು.  ನಿನ್ನ ಕಣ್ಣೆದುರೇ ಇದೆಲ್ಲಾ ನಡಕಾಂಡಯಿದ್ದರೆ ನೀ ಸುಮ್ಮನೆ ಕುದ್ದಳಲ್ಲಾ?' ಎಂದು ಗೊಣಗಿಕೊಂಡರು.  ಏನೂ ಮಾಡಲು ತೋಚದೆ ನೇರ ಎದ್ದು ಪೋಲೀಸು ಸ್ಟೇಶನ್ನಿಗೆ ನಡೆದರು.

`ನೋಡಿ ಗೌಡ್ರೆ, ನಮ್ಮೊದು ಸಣ್ಣ ಪೋಲೀಸು ಸ್ಟೇಶನ್ನು.  ಬೇಕಾದಷ್ಟು ಪೀಸಿಗ ಇಲ್ಲೆ.  ಆದರೆ ನಿಮ್ಮ ಜೂವಕ್ಕೆ ತೊಂದರೆ ಉಟ್ಟ ಅಂತ ಹೇಳ್ತಾ ಒಳರಿ.  ಹಂಗಾಗಿ ಎರ್‍ಡು ಜನ ಪೀಸಿಗಳ ರಾತ್ರಿಕಾಯಕೆ ಕಳ್ಸಿನೆ.  ಈ ರಾತ್ರೆ ಮಾತ್ರ.  ಮತ್ತೆ ನೀವು ಫಾರೆಸ್ಟ್ರ್‌ನ ಕಂಡು ಅವರೊಟ್ಟಿಗೆ ಮಾತಾಡಿ.  ಗಂಧದ ಮರಗಳ ಗವರ್‍ನ್‌ಮೆಂಟ್‌ಗೆ ಮಾರೋಕಾದೆ'.  ಎಂದದಕ್ಕೆ ಶೇಷಪ್ಪ ಗೌಡರು ತಲೆಯಾಡಿಸಿದರು.

ಸಂಜೆ ಇಬ್ಬರು ಪೋಲೀಸರು ಶೇಷಪ್ಪ ಗೌಡರ ಮನೆಗೆ ಬಂದರು.  ಭರ್ಜರಿ ರೊಟ್ಟಿ, ಕೋಳಿಸಾರು ಮತ್ತು ಭಟ್ಟಿ ಸಾರಾಯಿ ಏರಿಸಿಕೊಂಡರು.  ಗೌಡರು ಕೊಟ್ಟ ನೂರರ ನೋಟುಗಳನ್ನು ಜೇಬಿಗೆ ತುರಿಕಿಕೊಂಡರು.  ಒಬ್ಬ ಪೋಲೀಸ್ ತೊದುಲುತ್ತಾ `ನೋಡಿ ಗೌಡ್ರೆ, ನನ್ನ ಸರ್ವಿಸ್‌ಲೇ ಇಂಥ ಕೇಸು ಬಾತ್ಲೆ.  ಆ ಕಳ್ಳ ನನ್ಮಕ್ಳ್‌ನ ಹಿಡಿದ ಹಾಕಿ ರಾಷ್ಟ್ರಪತಿ ಪದಕ ಪಡ್ದಬುಟ್ಟವೆ.  ನೀವು ಪಾಪ ನಿನ್ನೆ ತಿಂದೊದ ಸಾಕ್.  ರೆಸ್ಟು ತಕೊಣಿ' ಎಂದ.  ಇನ್ನೊಬ್ಬ `ಅದು ಏನೂಂತ ಗೇನ ಮಾಡ್ಯಳ ಆ ತಂತ್ರಿ ನಾಯಿಮಕ್ಳ, ಅವಕೆ ಒಂದು ಗತಿ ಕಾಣ್ಸುವೆ.  ಇನ್ನು ಮುಂದೆ ಅವು ಇತ್ತ ತಲೆಹಾಕಿ ಮಲ್ಗದಾಂಗೆ ಮಾಡವೆ' ಎಂದು ಗೌಡರಿಗೆ ಭರವಸೆ ನೀಡಿದ.

ಬೆಳಗ್ಗೆ ಎದ್ದು ಶೇಷಪ್ಪ ಗೌಡರು ಶ್ರೀಗಂಧದ ತೋಟದತ್ತ ನಡೆದರು.  ಪೋಲೀಸರಿಬ್ಬರೂ ಕಾಣಿಸುತ್ತಿಲ್ಲ.  ಡ್ಯೂಟಿ ಮುಗಿಸಿ ಪೋಲೀಸು ಸ್ಟೇಶನ್ನಿಗೆ ಹೋಗಿರಬೇಕೆಂದು ಶ್ರೀಗಂಧದ ಮರಗಳನ್ನು ಎಣಿಸುತ್ತಾ ಬಂದರು.  ಮತ್ತೆ ನಾಲ್ಕು ಕಾಣೆಯಾಗಿವೆ!  ಪೋಲೀಸರು ಡ್ಯೂಟಿಯೇ ಮಾಡಲಿಲ್ವೆ?  ಅಥವಾ ಪೋಲೀಸರು ನನ್ನ ಹಾಗೆ ನಾಲ್ಕು ತಿಂದು ಓಡಿಹೋದರೇ ಎಂದು ತೀರ್ಮಾನ ಮಾಡಲಾಗದೆ ಗೌಡರು ಉಟ್ಟಬಟ್ಟೆಯಲ್ಲೇ ಸ್ಟೇಶನ್ನಿಗೆ ನಡೆದರು.  ಎಸ್ಸೈಯವರು ಇರಲಿಲ್ಲ.  ಪೋಲೀಸು ರೈಟರಲ್ಲಿ ನಡೆದ ಸಂಗತಿಯನ್ನು ನಿವೇದಿಸಿದರು.  `ನೋಡಿ ಗೌಡ್ರೆ ನಿನ್ನೆ ಇಬ್ಬರ ಪಾರಕೆ ಕಳ್ಸಿದೇ ಜಾಸ್ತಿ.  ಇನ್ನು ಹಂಗೆ ಆದ್ಲೆ ನೀವು ಬೆಳ್ದದರ ನೀವ್‌ಗೆ ಕಾಪಾಡಿಕೆ ಆದ್ಲೆಂತಾದ್ರೆ ಯಾರಿಗ್ಯಾರೂ ಮಾರಿಬುಡಿ.  ಗಂಧದ ಮರಾಂತ ಹೇಳ್ತಾ ಒಳರಿ.  ಹಾಂಗದ ಮೇಲೆ ನೀವು ಫಾರೆಸ್ಟ್ ಡಿಪಾರ್ಟುಮೆಂಟ್‌ನವರೇ ನೋಡೋಕಷ್ಟೇ', ಎಂದು ಪೋಲೀಸು ರೈಟರು ಶೇಷಪ್ಪ ಗೌಡರನ್ನು ಸಾಗಹಾಕಿದರು.

ಮನೆಯಲ್ಲಿರುವ ತಿರುಪತಿ ತಿಮ್ಮಪ್ಪನ ಪಟವನ್ನು ನೆನೆಯುತ್ತಾ ಶೇಷಪ್ಪ ಗೌಡರು ಫಾರೆಸ್ಟು ಡಿಪಾರ್ಟ್‌‌ಮೆಂಟಿಗೆ ಬಂದರು.  ಪುಣ್ಯಕ್ಕೆ ಫಾರೆಸ್ಟೆರು ಆಫೀಸಲ್ಲೇ ಇದ್ದರು.  ಶೇಷಪ್ಪ ಗೌಡರ ಪರಿಚಯವೂ ಅವರಿಗಿತ್ತು.  `ಏನು ಗೌಡ್ರೆ!  ಇಷ್ಟು ಬೊಳ್ಪಿಗೆ ಬಂದು ಬುಟ್ಟಳರಿ?  ಊರುಲೊಂದು ಹೊಸ ಹೈಸ್ಕೂಲು ಮಾಡಕೂಂತ ಹೊರಟಳರಿಗಡ?  ದೇವ್ರು ಮೆಚ್ಚುವ ಕೆಲ್ಸ.  ಎಲ್ಲೊವೂ ವಿದ್ಯೆವಂತರಾಕು ಮತ್ತು ವಿಚಾರವಂತರಾಕು.  ಆಗ ದೇಶನೂ ಬದಲಾದೆ ಏನ ಹೇಳ್ರೆ ನೀವು?'  ಎಂದುದಕ್ಕೆ ಗೌಡರು ಸಮ್ಮತಿ ಸೂಚಕವಾಗಿ ತಲೆಯಾಡಿಸಿದರು.

"ಅದ್ಕೆಂತಲೇ ಸ್ವಾಮಿ ನಾ ಒಂದ್ನಾಲ್ಕ್ ಶ್ರೀಗಂಧದ ದೈಗಳ ಸಾಕಿದ.  ಆದ್ರೆ ಈಗ ನೋಡಿ, ದಿನಕ್ಕೆ ನಾಲ್ಕರಂಗೆ ಯಾರೋ ಕದ್ದಕಂಡ್ ಹೋಕೋಣೊಳ.  ಪೋಲಿಸ್‌ನೊವಕೆ ಕಳ್ಳಂಗಳ ಹಿಡಿಯಕಾತ್ಲೆ.  ಹಂಗ್ಯಾಗಿ ಆ ಗಂಧದ ಮರಗಳ ಫಾರೆಸ್ಟು ಡಿಪಾರ್ಟುಮೆಂಟ್‌ಗೆ ಮಾರೀಂತ ಪೋಲೀಸು ಎಸ್ಸೈಯವು ಹೇಳ್ದ.  ಹಂಗೆ ನಾ ನಿಮ್ಮ ಕಾಂಬಕೇಂತ ಖಂದೆ" ಎಂದರು.

ಫಾರೆಸ್ಟರು `ಅದ್ ಸರಿ.  ಈ ಊರೂಲಿ ಶ್ರೀಗಂಧ ಬೆಳ್ದು ಮಾರುವವರ್‍ಲಿ ನೀವೇ ಸುರೂನೊವೂ ನೋಡಿ.  ನಾ ಮೇಲಾಫೀಸರಿಗೆ ಇಂದೇ ಪೋನು ಮಾಡಿ ವಿಷಯ ತಿಳ್ಸಿನೆ.  ಎರ್‍ಡು ದಿನ ಕೊಡಿ ಟೈಮು.  ನಾವೇ ಬಂದ್ ಮರ ತುಂಡುಮಾಡಿ, ಇಲ್ಲಿಗೆ ತಕೊಂಡು ಬಂದವೆ.  ವೇಲ್ಯುವೇಶನ್ನು ಮಾಡ್ವೆ.  ನೀವು ಏನೂ ತಲೆಬಿಸಿ ಮಾಡ್ಬೊಡಿ' ಎಂದು ಗೌಡರನ್ನು ಸಾಗಹಾಕಿದರು.

ಅಂದು ಗುರುವಾರ.  ಎರಡು ದಿನವೆಂದರೆ ಶನಿವಾರವಾಗುತ್ತದೆ.  ಇನ್ನೆರಡು ದಿನ ಶ್ರೀಗಂಧದ ಮರ ಕಳ್ಳತನವಾಗದಂತೆ ಏನಪ್ಪಾ ಮಾಡುವುದು ಎಂದು ಶೇಷಪ್ಪ ಗೌಡರು ಯೋಚಿಸಿ ಯೋಚಿಸಿ ಕೊನೆಗೆ ಪಕ್ಕದ ಮನೆಯ ನೆಂಟ ಸಣ್ಣಪ್ಪ ಗೌಡರಿಗೆ ವಿಷಯ ತಿಳಿಸಿದರು.  `ನೀವೆಂತ ಬಾವಾ?  ನನ್ನೊಟ್ಟಿಗೆ ಬೆಡಿ ಇರ್‍ದು ಮತ್ತೆ ಎಂತಕ್ಕೆ?  ನೀವು ಪೋಲೀಸು ಸ್ಟೇಶನ್ನಿಗೆ ಹೋವಬದ್ಲು ನಂಗೆ ವಿಷಯ ತಿಳ್ಸುತ್ತಿದ್ದರೆ ಆ ಕಳ್ಳಂಗಳ ಉಸ್ಕುಡಮ್ಮು ಬಂದ್ ಮಾಡಿ ಬುಡ್ತಿದ್ದೆ.  ನೀವು ಮಂಡೆ ಬೆಚ್ಚ ಬುಡಿ.  ಇಂದು ರಾತ್ರೆ ಪಾರಕ್ಕೆ ನಿಮ್ಮೊಟ್ಟಿಗೆ ನಾ ಮತ್ತು ತೋಟದ ಕೆಲ್ಸದವ ಹೊನ್ನಪ್ಪ ಬಂದವೆ' ಎಂದು ಧೈರ್ಯ ತುಂಬಿದರು.

ಮೂವರೂ ರಾತ್ರಿ ಕಾವಲು ಕಾದರು.  ಮಧ್ಯರಾತ್ರೆ ಲೈಟು ಬೆಳಕಿನೊಡನೆ ಕೆಲವು ಆಕೃತಿಗಳು ಬರುತ್ತಿರುವುದು ಕಾಣಿಸಿದಾಗ ಸಣ್ಣಪ್ಪ ಗೌಡರು `ಕಳ್ಳ ನನ್ಮಕ್ಳಾ, ನೀವಗೆ ಗತಿ ಕಾಣ್ಸಿನೆ ಎಂದು ಬೊಬ್ಬಿಟ್ಟು ಗುಂಡು ಹಾರಿಸಿಯೇ ಬಿಟ್ಟರು.  ಆಕೃತಿಗಳು ನೆಗೆದು ಬಿದ್ದು ಓಡಿಹೋದವು.  `ಇನ್ನು ಅವುಬಾಕೆ ಉಪಾಯನೇ ಇಲ್ಲೆ.  ಮೆನಗೆ ಹೋಗಿ ಬೆಚ್ಚ ಮಲ್ಗಮಾ' ಎಂದು ಸಣ್ಣಪ್ಪಗೌಡರು ಹೇಳಿದ ಮೇಲೆ ಎಲ್ಲರೂ ವಾಪಾಸಾದರು.

ಮತ್ತೆ ಮರ ಕಳ್ಳತನವಾಗಲಿಲ್ಲ.  ಶನಿವಾರ ನಾಲ್ಕು ಲಾರಿಗಳಲ್ಲಿ ಬಂದ ಜನರು ಶ್ರೀಗಂಧದ ಮರಗಳನ್ನು ಕಡಿದು ಲಾರಿಗಳಲ್ಲಿ ತುಂಬತೊಡಗಿದರು.  `ಫಾರೆಸ್ಟ್ರು ಇಂದು ರಜೇಲ್ಲೊಳಾ.  ನೀವು ಸೋಮವಾರ ಆಫೀಸುಗೆ ಬಂದರೆ ಈ ಮರಗಳಿಗೆ ರೇಟು ಹಿಡ್ದ್ ಚೆಕ್ಕು ಕೊಟ್ಟವೆ.  ಅದರ ನೀವು ನಿಮ್ಮ ಪತ್ತಿನ ಸಹಕಾರಿ ಸಂಘಕ್ಕೆ ಕೊಟ್ಟರೆ ದುಡ್ಡು ಸಿಕ್ಕಿದೆ.  ಲಕ್ಷಗಟ್ಲೆ!  ದೊಡ್ಡ ಸಾವ್ಕಾರರಾಗಿ ಬುಟ್ರಲ್ಲಾ ಗೌಡ್ರೇ?' ಎಂದು ಮೇಸ್ತ್ರಿ ಹೇಳಿದ.  ಮನೆಗೆ ಬಂದ ಶೇಷಪ್ಪ ಗೌಡರು ತಿರುಪತಿ ತಿಮ್ಮಪ್ಪನ ಪಟನೋಡಿ `ವೆಂಕಟ್ರಮಣಾ, ಊರಿಗೆ ನಿನ್ನ ಹೆಸ್ರ್‌ಲಿ ಹೈಸ್ಕೂಲು ಮಾಡಮಾ.  ನಿಂಗೆ ನನ್ನ ಮುಡಿ ಕೊಡ್ವ ದಿನ ಹಕ್ಕಲೆ ಬಂದ್‌ಕಂಡ್‌ ಉಟ್ಟು.  ನಾ ಏನೇ ಬೊಯ್ಯಲಿ.  ನೀ ದೊಡ್ಡವ' ಎಂದು ಕೈಮುಗಿದರು.

ಸೋಮವಾರ ಬೆಳಿಗ್ಗೆ ಸ್ನಾನ ಮಾಡಿ.  ತಿರುಪತಿ ತಿಮ್ಮಪ್ಪನ ಪಟಕ್ಕೆ ಕೈಮುಗಿದು, ಶ್ರೀಗಂಧದ ಮೂರು ಉದ್ದನಾಮಗಳನ್ನು ಹಣೆಯಲ್ಲಿ ಎಳೆದು ಗೌಡರು ಫಾರೆಸ್ಟು ಆಫೀಸ್‌ಗೆ ನಡೆದರು.  ಅವರನ್ನು ನೋಡಿ ಫಾರೆಸ್ಟರು `ನೀವು ಬಂದೊದು ಒಳ್ಳದಾತು ಗೌಡ್ರೇ.  ನಾ ಮೇಲಾಫೀಸರಿಗೆ ತಿಳ್ಸ್ಯಳೆ.  ಬುಧವಾರ ಖುದ್ದು ಡೀ ಎಫ್‌ ಓ ನಿಮ್ಮ ತೋಟಕ್ಕೆ ಬಂದ್ ಮರಕ್ಕೆ ವೇಲ್ಯುವೇಶನ್ನು ಮಾಡ್ವೆಗಡ.  ಅದಾದ ಮೇಲೆ ನಮ್ಮ ಡಿಪಾರ್ಟುಮೆಂಟ್‌ನವು ಬಂದ್ ಮರಗಳ ಕಡ್ದು ತಂದವೆ' ಎಂದರು.

ಶೇಷಪ್ಪ ಗೌಡರು ಮಾತು ಕಳಕೊಂಡು ಕಕ್ಕಾಬಿಕ್ಕಿಯಾಗಿ ಫಾರೆಸ್ಟರನ್ನೇ ನೋಡುತ್ತಾ ನಿಂತುಬಿಟ್ಟರು!.

            *****

ಕೀಲಿಕರಣ: ಕಿಶೋರ್‍ ಚಂದ್ರ

ಅವರು

- ಡಾ || ರಾಜಪ್ಪ ದಳವಾಯಿ

ಅವರು ಬದುಕಿರುವಷ್ಟು ಕಾಲಕೂ
ಮನುಷ್ಯರಾಗಿರಲಿಲ್ಲ
ಸಾಯುವ ಮುನ್ನ
ಮನೆಯವರ ಕೈಲಿ
ಹೆಣನೋಡ ಬರಲರ್ಹರ
ಮತ್ತು ವಿಶೇಷ ಅನರ್ಹರ ಯಾದಿ
ಕೆಲವರು ದೊಡ್ಡ ಮನುಷ್ಯರು
ಸತ್ತ ದಿನವೂ ಮನುಷ್ಯರಾಗಲಿಲ್ಲ.

        *****

ನಾನು-ನೀನು

- ಗಿರಿಜಾಪತಿ ಎಂ. ಎನ್

ಭೂಮಿ ನೀನು
ಬಾನು ನಾನು
ಭಾಗ್ಯ ನಮ್ಮಯ ಬದುಕಲಿ
ಯಾವ ಜನುಮದ
ಫಲವು ಬೆಸೆದಿದೆ,
ನನ್ನ-ನಿನ್ನ ಒಲವಿನ ದಲಿ

ಕಡಲು ನೀನು
ನದಿಯು ನಾನು
ಲೋಕ ಯಾನದ ಪಥದಲಿ
ಆದಿ-ಅಂತ್ಯದಿತಿ
ಮಿತಿಯ ಮೀರಿದ
ಋತು-ಕ್ರತುವಿನ ಬಲದಲಿ

ಮೇಘ ನೀನು
ಅನಿಲ ನಾನು
ದೂರ ದೂರದ ಬೆಸುಗೆಗೆ
ದಿಕ್ಕು-ದಿಕ್ಕಿನ
ದಿಕ್ಕು ದೆಸೆಗಳಲ್ಲೂ
ನನ್ನ ನಿನ್ನ ಮಾಟದ ಒಲುಮೆಗೆ

ದೇಹ ನೀನು
ಪ್ರಾಣ ನೀನು
ಆತ್ಮ ನೇಹದ ಗೀತೆಗೆ
ಗಂಡೊ ಹೆಣ್ಣೋ
ಹೆಣ್ಣು - ಗಂಡೋ
ಎಂಬುದೊಲ್ಲದ ಪ್ರೀತಿಗೆ ||
        *****

ಕೀಲಿಕರಣ: ಕಿಶೋರ್‍ ಚಂದ್ರ

ದೇವದಾಸಿ

-ರವಿ ಕೋಟಾರಗಸ್ತಿ

ಅವ್ವಾ... ಅವ್ವಾ... ಹೇಳು
ದೇವದಾಸಿ ಅಂದರೇನು
ನಿನಗೇಕೆ... ಅನ್ನುವರು
ದೇವರ... ದಾಸಿ

ನಿನ್ನ ಹಾಗೆಯೇ...
ಇರುವ ನೆರೆಮನೆಯ
ಸೀನು... ಶೇಖರನ...
ಅವ್ವಂದಿರಿಗೇಕೆ...
ಅನ್ನುವುದಿಲ್ಲ... ದೇವದಾಸಿ

ಬೇಡವೆಂದನೆ...
ಆ ದೇವರು...
ಅವರಿಗೆಲ್ಲಾ, ಇಲ್ಲಾ...
ಅವರೆ ಒಲ್ಲೆಂದರೆ
ದೇವದಾಸಿ...

ನೀನೇಕೆ... ದೇವದಾಸಿ?
ಬೇಡವೆಂದಿದ್ದರೆ....
ನೀ ಬರಿ ನನ್ನವ್ವ ಆಗಿದ್ದಿ
ಅವರ ಹಾಗೆ ಇರುತ್ತಿದ್ದಿ

ನಮ್ಮೆಲ್ಲರ ದೇವರು
ನಮ್ಮೂರಿನ ಪೂಜಾರಿ...
ಗೌಡ-ಕುಲಕರ್ಣಿಗಳವರ
ಮಗಳು-ಮಡದಿಯರನ್ನು
ಮಾಡ್ಯಾನು ದೇವರದಾಸಿ

ನೀನಾಗ... ಅವರಂತೆ
ಮನೆ ಒಡತಿ...
ಮಕ್ಕಳ ತಾಯಿಯಾಗಿಹ
ಪ್ರೀತಿ-ವಾತ್ಸಲ್ಯದ...
ನನ್ನವ್ವ-ನೀನಲ್ಲವೇ.

         *****

ಕೀಲಿಕರಣ: ಕಿಶೋರ್‍ ಚಂದ್ರ

ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

- ರಘುನಾಥ ಚ ಹ

ಬೆಂಗಳೂರಿನ ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯ ವೃತ್ತದಲ್ಲಿ ಬಸ್ಸಿಗೆ ಕಾಯುತ್ತಾ ನಿಂತು, ಒಂದ ನಂತರ ಒಂದು ಎದುರಾಗುವ ಇನ್ಫೋಸಿಸ್, ಐಟಿಪಿಎಲ್, ವಿಪ್ರೋ ಮುಂತಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಬಸ್ಸುಗಳನ್ನು ಕಂಡಾಗಲೆಲ್ಲ ಸಣ್ಣದೊಂದು ರೇಜಿಗೆ ಹುಟ್ಟುತ್ತದೆ.  ದೂರದಿಂದ ನೋಡುವಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಂತೆ ಕಾಣುವ ಈ ಬಸ್ಸುಗಳು ಹತ್ತಿರಾದಾಗ ಅವುಗಳ ಹಣೆಯಲ್ಲಿನ ಐಟಿ ಕಂಪನಿಗಳ ಫಲಕಗಳು ಹಾಗೂ ಬಸ್ಸಿನೊಳಗಿನ ಖಾಲಿ ಸೀಟುಗಳು ಅಣಕಿಸಿದಂತಾಗುತ್ತದೆ.  ತುಸು ಮುಂಚೆಯಷ್ಟೇ ಮಡಿಮೈಲಿಗೆಯಿಲ್ಲದೆ ಸಾರ್ವಜನಿಕರನ್ನು ತುಂಬಿಕೊಂಡು ಓಡುತ್ತಿದ್ದ ನಗರ ಸಾರಿಗೆ ಬಸ್ಸುಗಳು, ಸಂಜೆಪಾಳಿಯಲ್ಲಿ ಐಟಿ ಕಂಪನಿಗಳ ಬಾಡಿಗೆ ಬಸ್ಸುಗಳಾಗಿ ಪರಿವರ್ತನೆಗೊಂಡು ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಅಸೃಶ್ಯರಂತೆ ಕಂಡು ಸೊಕ್ಕಿನಿಂದ ಮುಂದೆ ಹೋಗುವುದನ್ನು ನೋಡುತ್ತ ಮತ್ತೊಂದು ಬಸ್ಸಿಗೆ ಕಾಯತೊಡುತ್ತೇನೆ.  ಮತ್ತೆ ನಿರಾಶೆ.  ಆಸೆ ಹುಟ್ಟಿಸುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಬಸ್ಸುಗಳಿಂದ ಉಂಟಾಗುವ ಈ ನಿರಾಶೆ ಕನ್ನಡದ ಕುರಿತ ನಿರಾಶೆಯಾ ಎಂದು ಅನೇಕ ಸಲ ಅನ್ನಿಸಿದ್ದಿದೆ.

ಕನ್ನಡ ನನ್ನ ಪಾಲಿಗೆ ಭಾಷೆ ಮಾತ್ರವಲ್ಲ;  ಅನ್ನ ನೀಡುತ್ತಿರುವ ಸಾಧನವೂ ಹೌದು.  ಆದರೆ ಐಟಿ ಕಂಪನಿಗಳ ಕಣ್ಣುಕುಕ್ಕುವ ಐಷಾರಾಮಿ ಪರಿಸರ ಹಾಗೂ ದೊಡ್ಡ ದೊಡ್ಡ ಅಂಕಿಗಳ ಸಂಬಳದ ಇಂಗ್ಲಿಷು `ಜೀನ್ಸ್'ನ ಜಾಣಜಾಣೆಯರ ಕಂಡಾಗ ನಾನಗೂ ನನ್ನ ಕನ್ನಡ ಕ್ಷುಲ್ಲಕ ಅನ್ನಿಸಿಬಿಡುತ್ತದೆ.  ನನ್ನ ಗೆಳೆಯರನೇಕರು ಇದೇ ರೀತಿಯ ನಿಟ್ಟುಸಿರು ಬಿಡುವುದನ್ನು ಕಂಡಿದ್ದೇನೆ.  ಸಮಾನದುಃಖಿಗಳು ಸೇರಿದಾಗಲೆಲ್ಲ ಕಡಿಮೆ ಸುತ್ತಳತೆಯ ಕನ್ನಡದ ಬಾವಿಯಲ್ಲಿ ಸಿಕ್ಕುಬಿದ್ದ ನಮ್ಮ ಹಣೇಬರಹದ ಬಗ್ಗೆ ಮತ್ತು ಇಂಗ್ಲಿಷ್‌ನ ಸಾಗರಕ್ಕೆ ಜಿಗಿದ ಗೆಳೆಯರ ಅದೃಷ್ಟವನ್ನು ನೆನೆಸಿಕೊಂಡು ಕನ್ನಡದಲ್ಲೇ ಬಿಕ್ಕುತ್ತೇವೆ.  ಈ ದುಃಖದ ನಡುವೆಯೂ, ಕನ್ನಡದ ಬೇರುಗಳಿಗೆ ಅಂಟಿಕೊಂಡು ಹಳ್ಳಿಗಳಲ್ಲೇ ಉಳಿದ ಮಾಸಿದ ಮುಖದ ಗೆಳೆಯರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಸಮಾಧಾನಗೊಳ್ಳುತ್ತೇವೆ.  ಅಕಸ್ಮಾತ್ ಸಿಗುವ ಚಡ್ಡಿ ಗೆಳೆಯರು ನಮ್ಮೊಂದಿಗೆ ಹಳೆಯ ಸಲುಗೆಯಿಂದ ವರ್ತಿಸಲು ಹಿಂಜರಿಯುವುದೂ ಗಮನಕ್ಕೆ ಬರುತ್ತದೆ.  ಅವರ ಪಾಲಿಗೆ ನಾವು ಇಂಗ್ಲಿಷರಂತೆ ಕಾಣುವುದು ಗೊತ್ತಾದಾಗ ಇನ್ನೂ ಕನ್ನಡಿಗರಾಗಿಯೇ ಉಳಿದ ನಮಗೆ ದಿಗಿಲಾಗುತ್ತದೆ.  ಹೌದು, ನಮ್ಮ ಗೆಳೆಯರ ಗುಂಪನ್ನು ಭಾಷೆ ಮೂರು ಗುಂಪುಗಳಾಗಿ ಒಡೆದಿದೆ.  ಇಂಗ್ಲಿಷು `ಜೀನ್ಸ್‌' ಅರಗಿಸಿಕೊಂಡವರು ಒಂದು ತುದಿಯಲ್ಲಿದ್ದರೆ ಮತ್ತೊಂದು ತುದಿಯಲ್ಲಿ ಇಂಗ್ಲಿಷು ಕೈಗೆಟುಕದೆ ಕನ್ನಡಕ್ಕಂಟಿಕೊಂಡೇ ಉಳಿದವರಿದ್ದಾರೆ.  ನಡುವಿನ ನಾವು ಕನ್ನಡದ ನೆಲದಲ್ಲಿ ನಿಂತು ಇಂಗ್ಲಿಷು ಆಕಾಶವನ್ನು ಎಟುಕಿಸಿಕೊಳ್ಳಲು ಯತ್ನಿಸುವ ಅಂತರಪಿಶಾಚಿಗಳು.

ಕನ್ನಡ ಬಾವಿಯ ಪರಿಧಿಯನ್ನು ಅರ್ಥ ಮಾಡಿಕೊಂಡಿರುವ ಗೆಳೆಯರದೀಗ ಒಂದೇ ಕನಸು, ಕನಿಷ್ಠ ನಮ್ಮ ಮಕ್ಕಳನ್ನಾದರೂ ಇಂಗ್ಲಿಷ್ ದಡ ಮುಟ್ಟಿಸಬೇಕೆನ್ನುವುದು.  ಇದು ಕನಸು ಮಾತ್ರವಲ್ಲ, ಜೀವನದ ಮಹತ್ವಾಕಾಂಕ್ಷೆಯೂ ಹೌದು.  ಹಾಗಾಗಿ ದುಡಿತದ ಬಹುಭಾಗವನ್ನು ಕಾನ್ವೆಂಟ್‌ಗಳಿಗೆ ಸುರಿಯಲು ಕನ್ನಡದ ಅಪ್ಪಮ್ಮಂದಿರು ಹಿಂಜರಿಯುತ್ತಿಲ್ಲ.  ಇಡೀ ಕನ್ನಡದ ಮಧ್ಯಮವರ್ಗವೇ ಇಂದು ಇಂಗ್ಲಿಷ್‌ನ ಹಿಂದೆ ಬಿದ್ದಿದೆ.  ಕನ್ನಡ ಹಿಂದೆ ಬದ್ದಿದೆ.  ನಮಗೆ ಕನ್ನಡ ಯಾಕೆ ಬೇಕು?  ಹೀಗೆಂದು ಆ ಅಪ್ಪಮ್ಮಂದಿರು ಕೇಳುತ್ತಿದ್ದಾರೆ.  ವಾದ ಮಾಡಿ ಗೆಲ್ಲುವುದು ಕಷ್ಟ.  ಏಕೆಂದರೆ ಅವರ ಪಾಲಿಗೆ ಇಂಗ್ಲಿಷು ಹಾಗೂ ಕನ್ನಡದ ಆಯ್ಕೆ ಭವಿಷ್ಯದ ಆಯ್ಕೆಯಾಗಿ ಪರಿಣಮಿಸಿದೆ.  ಕನ್ನಡವನ್ನು ಅಪ್ಪಿಕೊಂಡರೆ ದುರ್ಗತಿ, ಇಂಗ್ಲಿಷ್ ಒಪ್ಪಿಕೊಂಡರೆ ಸದ್ಗತಿ ಎನ್ನುವ ಭಾವನೆ ಬಲಿತುಬಿಟ್ಟಿದೆ.  ಇದಕ್ಕೆ ಸರಿಯಾಗಿ ಐಟಿ-ಬಿಟಿ ಕಂಪನಿಗಳ ಝಣಝಣ ಬಣ್ಣಗಳು ಬೆಂಗಳೂರು ತುಂಬಿ ಉಪನಗರ ಹಳ್ಳಿಗಳಲ್ಲೂ ತುಳುಕುತ್ತಿವೆ.

ಕನ್ನಡಕ್ಕೆ ಒಂದೂವರೆ ಸಾವಿರ ವರ್ಷಗಳ ಸಾಹಿತ್ಯವಿದೆ.  ಪರಂಪರೆ ದೊಡ್ಡದು.  ಜ್ಞಾನಪೀಠಗಳ ಹುಲುಸುಬೆಳೆಯ ನುಡಿ ಕನ್ನಡ.  ಇವೆಲ್ಲವೂ ನಿಜ.  ಹಾಗೆಯೇ ಕನ್ನಡವಿಂದು ಅನ್ನ ಹುಟ್ಟಿಸುವ ಭಾಷೆಯಾಗಿಲ್ಲ ಎನ್ನುವುದೂ ನಿಜ.  ಭಾಷೆ ಅಂದರೆ ಸಂಸ್ಕೃತಿ.  ಭಾಷೆ ಎಂದರೆ ತಾಯಿ ಎಂದು ರೋಮಾಂಚನಗೊಳ್ಳುವ ದಿನಗಳೀಗ ಮುಗಿದುಹೋಗಿವೆ.  ಈಗೇನಿದ್ದರೂ ಭಾಷೆ ಮುಖ್ಯವಾಗುವುದು ಆ ಭಾಷೆಯಿಂದ ಸಾಧ್ಯವಾಗುವ ಉದ್ಯೋಗ ವಾಣಿಜ್ಯ ಅವಕಾಶಗಳಿಂದಾಗಿ ಮಾತ್ರ.  ಈ ಚೌಕಟ್ಟಿನಲ್ಲಿ ಕನ್ನಡವನ್ನು ಕೂರಿಸಿ ನೋಡಿದಾಗ ಕನ್ನಡದ ಮಿತಿಗಳು ಅಗತ್ಯಕ್ಕಿಂಥ ಹೆಚ್ಚು ಕಣ್ಣಿಗೆ ರಾಚುತ್ತವೆ.  ನನ್ನಂಥ ಅಸಂಖ್ಯರಿಗೆ ಅನ್ನ ನೀಡುತ್ತಿರುವ ಕನ್ನಡ ನನ್ನ ಮುಂದಿನ ಪೀಳಿಗೆಯನ್ನೂ ಕೈ ಹಿಡಿದು ನಡೆಸುತ್ತದೆಯಾ?  ಆ ಶಕ್ತಿ ಕನ್ನಡಕ್ಕಿದೆಯಾ?  ಆವರೆಗೂ ಕನ್ನಡ ಉಳಿಯುತ್ತದೆಯಾ?  ಎಂದು ಪ್ರಶ್ನೆಗಳು ಕಾಡುತ್ತವೆ.  ಕನ್ನಡ ಉಳಿಯುತ್ತದಾ ಅನ್ನುವ ಪ್ರಶ್ನೆಯಲ್ಲಿ ಕನ್ನಡ ಉಳಿಯಬೇಕು ಎನ್ನುವ ಆಶಯವೂ ಇದೆ.  ತಾನು ಬೆಳೆದ, ತನ್ನನ್ನು ರೂಪಿಸಿದ ತುಂಬು ಸಂಸಾರವೊಂದು ತನ್ನ ನಂತರವೂ ಒಡೆಯದೆ ಉಳಿಯುತ್ತದೆಯಾ ಎನ್ನುವ ವ್ಯಕ್ತಿಯ ದುಗುಡದಂತೆ ಕನ್ನಡದ ಈ ಯೋಚನೆ ಕಾಣುತ್ತದೆ.

        *    *    *

ಕನ್ನಡ ಏಕೆ ಬೇಕು ಎನ್ನುವ ತರ್ಕಕ್ಕೆ ಪ್ರತಿತರ್ಕ ಹೂಡುವುದರಲ್ಲಿ ಯಾವ ಅರ್ಥವೂ ಇಲ್ಲ.  ಡಾಲರ್‍ ಎದುರಿನ ಮುಖಾಮುಖಿಯಲ್ಲಿ ಇಂಗ್ಲಿಷ್ ಲಕಲಕಿಸುತ್ತ ಕೈಕುಲುಕಿದರೆ ಕನ್ನಡ ಮಂಕುಮುಖದಿಂದ ಪಕ್ಕಕ್ಕೆ ಸರಿದು ನಿಲ್ಲುವ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳದೆ ವಿಧಿಯಿಲ್ಲ.  ಹಾಗಿದ್ದರೆ ನಮಗೆ ಕನ್ನಡ ಬೇಡವೇ?  ಬೇಕು.  ಕನ್ನಡ ನಮಗೆ ಬೇಕು, ಯಾಕೆಂದರೆ ಅದು ನಮ್ಮನುಡಿ.  ಹಾಗಾಗಿ ಕನ್ನಡ ನಮಗೆ ಬೇಕು.  ಅಮ್ಮಅಪ್ಪ ಸೋದರ ಸೋದರಿಯರು, ಗೆಳೆಯರು, ನೀರುನೆಲದಂತೆ ಕನ್ನಡವೂ ನಮ್ಮದು.  ಇವುಗಳಿಂದಲೇ ರೂಪುಗೊಂಡಿರುವ ದೇಹ-ವ್ಯಕ್ತಿತ್ವ ಪ್ರತ್ಯೇಕತೆಯನ್ನು ಬಯಸುವುದು ಅಥವಾ ಆತ್ಮದ ಬದಲಾವಣೆಯನ್ನು ಬಯಸುವುದು ಪ್ರಕೃತಿ ವಿರುದ್ಧ (ಇಂದಿನ ಬಹುತೇಕ ಸಂಗತಿಗಳು ಪ್ರಕೃತಿ ವಿರುದ್ಧವಾಗಿಯೇ ಇವೆ ಎನ್ನುವುದು ಬೇರೆ ಮಾತು).

ನಮ್ಮನುಡಿ ಎನ್ನುವ ಕಾರಣಕ್ಕಾಗಿ ಕನ್ನಡ ಬೇಕೆನ್ನುವುದು ಕೇವಲ ಭಾವುಕತೆಯ ಪ್ರಶ್ನೆಯಷ್ಟೇ ಅಲ್ಲ;  ಅನುಕೂಲದ ಮಾತೂ ಹೌದು.  ಭಾವುಕತೆಯಿಂದ ಭಾಷೆ ಬದುಕುವುದಿಲ್ಲ.  ಹಾಗೆ ನೋಡಿದರೆ ಭಾವುಕತೆಗಿದು ಕಾಲವೂ ಅಲ್ಲ.  ಉಳಿವಿಗಾಗಿ ಒಂದು ಇನ್ನೊಂದನ್ನು ನುಂಗಿ ನೊಣೆಯುವ ಪ್ರಕೃತಿಸಹಜ ಕ್ರಿಯೆಗೆ ಭಾಷೆಯೂ ಹೊರತಾದುದಲ್ಲ.  ಪ್ರತಿಯೊಂದು ಭಾಷೆಯೂ ಕಾಲಕಾಲಕ್ಕೆ ಅಗ್ನಿದಿವ್ಯ ಪರೀಕ್ಷೆಗೆ ಒಳಪಡಲೇಬೇಕು.  ಆದರೆ ಭಾಷೆಗಳು ಸರಕಾಗಿ ಈಪಾಟಿ ಚಲಾವಣೆಯಾದ ಕಾಲ ಇನ್ನೊಂದಿರಲಿಕ್ಕಿಲ್ಲ.  ಅಶಕ್ತರೆಂದು ಹೆತ್ತವರ ಆಶ್ರಮಗಳಿಗಟ್ಟುವ, ಉತ್ಪನ್ನವಿಲ್ಲವೆಂದು ಜಾನುವಾರುಗಳ ಕಸಾಯಿಖಾನೆಗಟ್ಟುವ ಸಂದರ್ಭವಿದು.  ಈ ಹೊತ್ತಿನಲ್ಲಿ ಭಾಷೆ ಕರೆಯುವ ಹಸುವಾಗಬೇಕು.  ಹಾಗಾದರಷ್ಟೇ ಕನ್ನಡಕ್ಕೆ ಉಳಿಗಾಲ.  ಭಾವುಕತೆ ಇದ್ದೇ ಇರುತ್ತದೆ;  ಅನುಕೂಲದ ಮಾತಿಗೆ ಬರೋಣ.

ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದ ಅನುಕೂಲಗಳು ತುಂಬಾ ಚಿಕ್ಕವು.  ದುಡ್ಡಿನಿಂದ ಅಳೆಯತೊಡಗಿದರೆ ಈ ಪ್ರಯೋಜನಗಳು ಕ್ಷುಲ್ಲಕವೂ ಹೌದು.  ಹೀಗೆಂದು ನಾವು ನಿರಾಶರಾಗಬೇಕಿಲ್ಲ.  ಇಂಗ್ಲಿಷು ಉಂಟುಮಾಡುತ್ತಿರುವ ಅಡ್ಡ ಪರಿಣಾಮಗಳನ್ನು ಮರೆಯಬಾರದು.  ಒಮ್ಮೆ ನಮ್ಮ ಗ್ರಾಮೀಣ ಹುಡುಗ ಹುಡುಗಿಯರ ಕೀಳರಿಮೆಯನ್ನು ನೆನಪಿಸಿಕೊಂಡರೆ ಇಂಗ್ಲಿಷ್‌ನ ಕ್ರೌರ್ಯ ಅರ್ಥವಾಗುತ್ತದೆ.  ಪಠ್ಯಗಳನ್ನು ಇಂಗ್ಲಿಷಿನಲ್ಲಿರುವ ಕಾರಣದಿಂದಲೇ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳು ಪದವಿ ಪೂರ್ವ ಪರೀಕ್ಷೆಗಳಲ್ಲಿ ವಿಜ್ಞಾನವನ್ನು ಅರಗಿಸಿಕೊಳ್ಳಲಾಗದೆ ಸೋಲುತ್ತಿದ್ದಾರೆ, ನಗರ ಹಾಗೂ ಗ್ರಾಮೀಣರ ನಡುವೆ ಇಂಗ್ಲಿಷು ಅಸಮಾನತೆಯನ್ನು ಉಂಟು ಮಾಡಿದೆ.  ದೊಡ್ಡದೊಂದು ಸಾಮಾಜಿಕ ಕಂದಕವನ್ನು ಸೃಷ್ಟಿಸಿದೆ, ಸೃಷ್ಟಿಸುತ್ತಲೇ ಇದೆ.  ಇಂಥ ಅಸಮಾನತೆಯನ್ನು ಹೋಗಲಾಡಿಸುವ ಸವಾಲನ್ನು ಎದುರಿಗಿಟ್ಟುಕೊಂಡು ನಾವು ಇಂಗ್ಲಿಷು ಅಥವಾ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಒಂದು ಸಾಧ್ಯತೆಯನ್ನು ಊಹಿಸಿಕೊಳ್ಳೋಣ:  ಕುರುಬನ ನಾಲಗೆಯ ಮೇಲೆ ಓಂಕಾರ ಬರೆದ ಕಾಳಿ ಎಲ್ಲರಿಗೂ ಒಲಿದು, ಇಡೀ ಕನ್ನಡ ಸಮುದಾಯ ಇಂಗ್ಲೀಷ್ ಆಗಿ ಬದಲಾಗಿದೆ.  ಆಗ ಪ್ರತಿಯೊಬ್ಬರಿಗೂ ಐಷಾರಾಮಿ ಸವಲತ್ತುಗಳು ದೊರೆಯುತ್ತವೆಯಾ?  ಸಾಧ್ಯವೇ ಇಲ್ಲ.  ಇಂದಿನ ಅಸಮಾನತೆ ಅಂದಿಗೂ ಉಳಿಯುತ್ತದೆ.  ಎಲ್ಲರೂ ಇಂಗ್ಲಿಷರಾದಾಗ `ಆಧುನಿಕ ಇಂಗ್ಲಿಷ್ ಪ್ರಭೇದ' ಹುಟ್ಟಿಕೊಂಡು ಅಯ್ಕೆಯ ಮಾನದಂಡಗಳು ಬದಲಾಗಿಬಿಡುತ್ತವೆ.  ಈ ಹಿನ್ನೆಲೆಯಲ್ಲಿ `ಇಂಗ್ಲಿಷು ಸುಳ್ಳಾಡುವ ಭಾಷೆ' ಎನ್ನುವ ಯು.ಆರ್‍. ಅನಂತಮೂರ್ತಿ ಅವರ ಮಾತು ಹೆಚ್ಚು ಅರ್ಥಪೂರ್ಣವಾಗಿ ಕೇಳಿಸುತ್ತದೆ.  ಒಂದಂತೂ ನಿಜ, ಎಲ್ಲರೂ ಇಂಗ್ಲಿಷರಾಗುವುದು ಹೇಗೆ ಅಸಂಭವವೋ ಇಂಗ್ಲಿಷ್‌ ಸಮಾನತೆಯನ್ನು ಸೃಷ್ಟಿಸುತ್ತದೆ ಎನ್ನುವ ಮಾತು ಒಂದು ಸುಂದರ ಸುಳ್ಳು ಮಾತ್ರ.  ಹಾಗಾದರೆ ನಾವು ಕನ್ನಡವನ್ನಿಟ್ಟುಕೊಂಡು ಇಂಗ್ಲಿಷಿನಿಂದ ದೂರಿರಬೇಕಾ?  ಇದೂ ಸರಿಯಲ್ಲ.  ಲೋಕ ತಿಳಿಯಲಿಕ್ಕಾಗಿ ಇಂಗ್ಲಿಷು ಸಾಕು;  ಸ್ವಂತಿಕೆಯ ಬದುಕಿಗಾಗಿ ಕನ್ನಡ ಬೇಕು.

ರಕ್ತ ಮಾಂಸದಿಂದಷ್ಟೇ ಬದುಕು ರೂಪುಗೊಳ್ಳುವುದಿಲ್ಲ.  ನೆಲ, ನೀರು, ಗಾಳಿ, ನಂಬಿಕೆಗಳು, ಸಂಸ್ಕೃತಿ, ಇವೆಲ್ಲವುಗಳೂ ಸೇರಿ ಬದುಕನ್ನು ರೂಪಿಸಿ ಹಸನುಗೊಳಿಸುತ್ತವೆ.  ಹಾಗಾಗಿ ಒಂದು ಬದುಕು ಆ ನೆಲದ ಭಾಷೆಯಿಂದಲೇ ರುಚಿಗಟ್ಟಬೇಕು.  ಕನ್ನಡಿಗನ ಭಾವನೆಗಳನ್ನು ಇಂಗ್ಲಿಷ್ ಅಥವಾ ಇನ್ನೊಂದು ಭಾಷೆ ಅಭಿವ್ಯಕ್ತಗೊಳಿಸಲಾರದು.  ಕನ್ನಡದ ತಾಯ್ತನ ಹಾಗೂ ಇಂಗ್ಲಿಷ್‌ನ ಮದರ್‌ಹುಡ್‌ನ ವಾಚ್ಯಾರ್ಥ ಒಂದೇ ಆದರೂ, ಧ್ವನಿವಿಸ್ತಾರಗಳು ಅನುಭವಗಳೇ ಬೇರೆ.  `ಕನ್ನಡಿಗರಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ' ಎನ್ನುವ ಬಿಎಂಶ್ರೀ ಮಾತು, `ಭಾವನೆಗಳು ಪ್ರವಹಿಸುವ ಮತ್ತು ಅಭಿವ್ಯಕ್ತಗೊಳ್ಳುವ ಆತ್ಮದ ರಕ್ತವೇ ಭಾಷೆ' ಎನ್ನುವ ಆಲಿವರ್‍ ವೆಂಡೆಲ್ ಹೋಮ್ಸ್ ಮಾತುಗಳು ಮಾತೃಭಾಷೆಯ ಅಗತ್ಯ ಹಾಗೂ ಅನನ್ಯತೆಯ ಕುರಿತು ಹೇಳುತ್ತವೆ.

ಭಾಷೆಯ ಬಹುಮುಖಿ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೂಡ ಕನ್ನಡದ ಅನಿವಾರ್ಯತೆಯನ್ನು ತಿಳಿಯಬಹುದು.  ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾಗಿ ಭಾಷೆ ಅನುವುಗೊಂಡ ಬಗೆ ಅಚ್ಚರಿಹುಟ್ಟಿಸುವಂತದ್ದು.  ಅಲ್ಲಮನಿಗೆ ಜ್ಯೋತಿರ್ಲಿಂಗವಾದ ಕನ್ನಡ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯನಿಗೂ ಲಿಂಗರೂಪಿಯಾಯಿತು.  ಕಲ್ಯಾಣದ ಸಾಮಾಜಿಕ ಕ್ರಾಂತಿಗೆ ಅನುಭವ ಮಂಟಪದಲ್ಲಿ ತಳಪಾಯ ಸಿದ್ಧಪಡಿಸಿದ್ದೇ ಈ ಲಿಂಗರೂಪಿ ಕನ್ನಡ.  ದಾಸರಿಗೆ ಕೂಡ ಕನ್ನಡ ಇದೇ ರೀತಿಯಲ್ಲಿ ಒಲಿಯಿತು;  ಆದರೆ ಇಂಗ್ಲಿಷಿನ ಮಟ್ಟಿಗೆ ಸಾಮಾಜಿಕ ಸಂಚಲನೆ ಹುಟ್ಟಿಸುವ ಇಂಥ ಸಂಗತಿಗಳನ್ನು ಕಾಣಲಾರೆವು.  ಏಕೆಂದರೆ ಇಂಗ್ಲಿಷು ಸಂವಹನದ ಭಾಷೆಯೇ ಹೊರತು ಸಂವೇದನೆಯ ಭಾಷೆಯಲ್ಲ.  ಕನ್ನಡ ಏಕೆ ಬೇಕು ಎಂದು ಕೇಳುವವರಿಗೆ ಇಷ್ಟು ಉತ್ತರ ಸಾಕು.

        *    *    *

ಲೇಖನದಲ್ಲಿ ಕನ್ನಡವನ್ನು ಇಂಗ್ಲಿಷ್‌ನೊಂದಿಗೆ ಹೋಲಿಸುತ್ತಾ ಬಂದಿರುವುದಕ್ಕೆ ಕಾರಣವಿದೆ.  ಕನ್ನಡದ ರಕ್ಷಣೆಯ ಬಗ್ಗೆ ಮಾತನಾಡುವವರು ತಮಿಳು ಹಾಗು ತೆಲುಗನ್ನು ಕನ್ನಡದ ಎದುರಾಳಿಗಳಂತೆ ಚಿತ್ರಿಸುವುದು ಸಂಪ್ರದಾಯವಾಗಿಯೇ ಹೋಗಿದೆ.  ಆದರೆ ಕನ್ನಡದ ಎರುದಾಳಿ ತಮಿಳಲ್ಲ;  ತೆಲುಗೂ ಅಲ್ಲ.  ಹಿಂದಿಯ ಬಗ್ಗೆಯೂ ಭಯಬೇಕಿಲ್ಲ.  ಕನ್ನಡದ ಬುಡ ಅಲ್ಲಾಡುತ್ತಿರುವ ಹೊತ್ತು ಕೊಂಚ ಬೇರು ಭದ್ರವಿರುವ ತಮಿಳು ತೆಲುಗು ನಮಗೆ ಅಸೂಯೆ ಹುಟ್ಟಿಸುತ್ತಿವೆ ಅಷ್ಟೇ.  ತಮಿಳುನಾಡು, ಆಂಧ್ರಗಳೊಂದಿಗೆ ನಮಗಿರುವ ಕೆಲವು ತಕರಾರುಗಳು ಕೂಡ ಭಾಷಾ ವಿರಸಕ್ಕೆ ಕಾರಣವಾಗಿದ್ದರೂ ಇರಬಹುದು.  ಹಾಗೆ ನೋಡಿದರೆ ಕರ್ನಾಟಕ ಚರಿತ್ರೆಯುದ್ದಕ್ಕೂ ಉರ್ದು ತೆಲುಗು ತಮಿಳು ಮರಾಠಿಗಳು ಕೆಲ ಕನ್ನಡ ಪ್ರದೇಶಗಳಲ್ಲಿ ತಮ್ಮ ದಟ್ಟ ಪ್ರಭಾವ ಬೀರಿದುದನ್ನು ಕಾಣುತ್ತೇವೆ.  ಅದರೆ ಅವುಗಳಿಂದಾಗಿ ಕನ್ನಡದ ಅಸ್ತಿತ್ವದ ಪ್ರಶ್ನೆ ಉಂಟಾಗಿಲ್ಲ.  ಕೃಷ್ಣದೇವರಾಯನನ್ನು ಕನ್ನಡ ಹಾಗೂ ತೆಲುಗು ಭಾಷೆಗಳೆರಡೂ ಇವ ನಮ್ಮವನೆಂದು ಸ್ವೀಕರಿಸಿದ ವಾತ್ಸಲ್ಯದ ಉದಾಹರಣೆಯೂ ಇದೆ.  ಈಗಲೂ ಅಷ್ಟೇ, ಕನ್ನಡದ ರಕ್ಷಣೆಯ ದೃಷ್ಟಿಯಿಂದ ನಾವೇನಿದ್ದರೂ ಇಂಗ್ಲಿಷ್ ಭಾಷೆಯ ಬಗ್ಗೆ ಭಯಬೀಳಬೇಕು.  ಕನ್ನಡಕ್ಕೆ ಹೋಲಿಸಿದರೆ ತೆಲುಗು ಹಾಗೂ ತಮಿಳು ಸದ್ಯದ ಮಟ್ಟಿಗೆ ಹೆಚ್ಚಿನ ಸುರಕ್ಷಿತ ಭಾಷೆಗಳಾಗಿರಬಹುದು.  ಆದರೆ ಮುಂದೊಂದು ದಿನ ಆ ಭಾಷೆಗಳು ಕೂಡ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಲೇಬೇಕು.  ಒಂದು ಭಾಷೆಯನ್ನು ನುಂಗಿದ ನಂತರ ಇನ್ನೊಂದು ಭಾಷೆಗೆ ಕೈಚಾಚುವ ಭಸ್ಮಾಸುರನಂತದ್ದು ಇಂಗ್ಲಿಷು.  ಒಂದು ದೇಶದ ನಂತರ ಇನ್ನೊಂದು ದೇಶ್ವನ್ನು ನುಂಗಿ ನೊಣೆಯಲು ಸದಾ ಹೊಂಚುಹಾಕುವ ಅಮೆರಿಕದ ದುಷ್ಟತನ ಇಂಗ್ಲಿಷ್‌ಗೆ ಕೂಡ ಬಂದುಬಿಟ್ಟಿದೆ.  ಇಂಗ್ಲಿಷ್ ಬಗ್ಗೆ ವಾದಿಸುವವರು ಬದಲಾಗುತ್ತಿರು ಇಂಗ್ಲಿಷ್‌ನ ಮುಖಗಳನ್ನು ಗಮನಿಸಬೇಕು.  ಬ್ರಿಟೀಷರ ಮೂಲಕ ಭಾರತಕ್ಕೆ ಕಾಲಿಟ್ಟ ಇಂಗ್ಲಿಷು ಜ್ಞಾನರೂಪಿಯಾಗಿತ್ತು.  ಭಾರತದಲ್ಲಿ ಸ್ವಾತಂತ್ರ್‍ಯದ ಜಾಗೃತಿಗೆ ಆ ಜ್ಞಾನರೂಪಿ ಇಂಗ್ಲಿಷು ಕೂಡ ಕಾರಣವಾಗಿತ್ತು.  ಆದರೆ ಇವತ್ತಿನ ಇಂಗ್ಲಿಷು ಹದಿನಾರಾಣೆ ಧನರೂಪಿ ಭಾಷೆ;  ದಾಳಿಕೋರ ಭಾಷೆ.  ಅಮರಿಕನ್ ಇಂಗ್ಲಿಷು ಎನ್ನುವ ಈ ಬಕಾಸುರನದು ಹಿಂಗದ ಹಸಿವು.  ಇಂದು ಕನ್ನಡ, ನಾಳೆ ತೆಲುಗು, ನಾಳಿದ್ದು ತಮಿಳು, ಗುಜರಾತಿ, ಬಂಗಾಲಿ- ಹೀಗೆ ಪಟ್ಟಿ ಬೆಳೆಯುತ್ತದೆ.  ಆ ಕಾರಣದಿಂದಲೇ ನಮ್ಮ ಯೋಚನೆಗಳು ಇಂಗ್ಲಿಷ್ ಹಾಗೂ ದೇಶೀಯ ಭಾಷೆಗಳನ್ನು ಮುಖಾಮುಖಿಯಾಗಿಸುತ್ತ ಸಾಗಬೇಕು.

ಅತ್ಯಂತ ನೋವಿನ ಸಂಗತಿಯೆಂದರೆ ನಮ್ಮ ಸಾಂಸ್ಕೃತಿಕ ಲೋಕದ ಕೆಲವು ಹಿರಿಯರು ಇಂಗ್ಲಿಷ್ ಮೋಹಿನಿಯ ಸೆರಗಿನಲ್ಲಿ ಮುಖ ಹುದುಗಿಸಿ ಸುಖಿಸುತ್ತಿರುವುದು.  ಇವರ ಚಿಂತನೆಗಳೆಲ್ಲ ಇಂಗ್ಲಿಷ್‌ನಲ್ಲೇ ಹುಟ್ಟುತ್ತಿವೆ.  ಕನ್ನಡ ನೆಲದಲ್ಲಿದ್ದೂ ಇಂಗ್ಲಿಷ್ ಮೂಲಕವೇ ಕನ್ನಡದ ಜಗತ್ತನನ್ನು ಕಾಣುತ್ತಿರುವ ಈ `ಇ-ಚಿಂತಕ'ರ ಮಾತುಗಳು ಹಳ್ಳಿಯ ರಾಮಣ್ಣನಿಗೆ ಅರ್ಥವಾಗುವುದಿಲ್ಲ.  ಬ್ರಾಹ್ಮಣ್ಯದ ವಿರೋಧದ ಭರದಲ್ಲಿ ಕನ್ನಡಕ್ಕೆ ಸಂಸ್ಕೃತ ಪದದ ಎರವಲನ್ನು ವಿರೋದಿಸುವ ಈ ಬುದ್ಧಿಜೀವಿಗಳು ಇಂಗ್ಲಿಷ್ ಪದಗಳ ಆಮದು ಸರಿಯೆನ್ನುತ್ತಾರೆ.  ಇಂಗ್ಲಿಷು ಜನರಿಗೆ ಅರ್ಥವಾಗುವ ಹಾಗು ಬಹುಜನಬಳಕೆಯಲ್ಲಿರುವ ಸರಳ ಭಾಷೆ ಎನ್ನುವ ವಾದ ಅವರದು.  ಅದು ಒಂದರ್ಥದಲ್ಲಿ ನಿಜ ಕೂಡಾ.  ಆದರೆ, ಈಗಾಗಲೇ ಸತ್ತ ಭಾಷೆಗಳ ಪಟ್ಟಿಯಲ್ಲಿ ಮಿಂಚುತ್ತಿರುವ ಸಂಸ್ಕೃತದಿಂದ ಎರವಲು ಪಡೆದರೆ ಕನ್ನಡಕ್ಕೆ ಉಂಟಗುವ ಅಪಾಯ ಎಂತಹುದೆನ್ನುವುದನ್ನು ಪಾಮರರಿಗೆ ಅರ್ಥವಾಗುವಂತೆ ಇವರು ಹೇಳುತ್ತಿಲ್ಲ.  ಒಂದು ಕಾಲದಲ್ಲಿ ಸಂಸ್ಕೃತ ಬ್ರಾಹ್ಮಣ್ಯದ ರೂಪವಾಗಿತ್ತು.  ಆದರಿಂದು ಇಂಗ್ಲಿಷು ಬ್ರಾಹ್ಮಣ್ಯದ ಆಧುನಿಕ ರೂಪವಾಗಿ ಸಂಸ್ಕೃತದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.  ಇಂಗ್ಲಿಷ್‌ನಿಂದ ಸ್ವೀಕರಣ ಹೆಚ್ಚಿದಷ್ಟೂ ನಮ್ಮ ಕನ್ನಡ ಬಡವಾಗತೊಡಗಿ, ಮುಂದೊಂದು ದಿನ `ಇಂಗ್ಲಿಷ್‌ನಿಂದ ಒಡೆದು ಬಂದ ಭಾಷೆ ಅಥವಾ ಇಂಗ್ಲಿಷ್ ಜನ್ಯ ಭಾಷೆ' ಎನ್ನುವ ಪಟ್ಟ ಕನ್ನಡಕ್ಕೆ ಬಂದರೂ ಅಚ್ಚರಿಯಿಲ್ಲ.  ಹಾಗಾಗಿ ಇಂಗ್ಲಿಷ್‌ಗಿಂತ ಸಂಸ್ಕೃತವೇ ಕನ್ನಡದ ಜಾಯಮಾನಕ್ಕೆ ಹೆಚ್ಚು ಸಹ್ಯವಾದುದು.

        *    *    *

ಕನ್ನಡವನ್ನು ಉಳಿಸಿಕೊಳ್ಳುವುದು ಹೇಗೆ?

ಕನ್ನಡದ ಉಳಿವಿಗಾಗಿ ಮಾಡಬಹುದಾದ ವಿಷಯಗಳನ್ನು ಪಟ್ಟಿ ಮಾಡುತ್ಥಾ ಹೋಗಬಹುದು:

* ಸರ್ಕಾರಿ ಕಛೇರಿಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡುವುದು.

* ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಯವಾಗಿಸುವುದು.

* ನೆರೆಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡುವ ಮೂಲಕ ಅವರು ಕನ್ನಡ ಕಲಿಯುವಂತೆ ಒತ್ತಡ ಹೇರುವುದು.

* ಕನ್ನಡದ ಪುಸ್ತಕಗಳನ್ನು ಕೊಂಡು ಓದುವುದು.

* ಕನ್ನಡ ಸಿನಿಮಾಗಳನ್ನು ಥಿಯೇಟರ್‌ಗೆ ಹೋಗಿ ನೋಡುವುದು.

* ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡದ ಬಳಕೆಗೆ ಶಾಸನ ರೂಪಿಸುವುದು.

* ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸುವುದು.

* ಕನ್ನಡ ಅಂಕಿಗಳನ್ನು ಬಳಸುವುದು ಹಾಗೂ ಕನ್ನಡ ಫಲಕಗಳನ್ನು ಬರೆಸುವುದು.

* ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವುದು, ರಸ್ತೆ ಓಣಿ ಊರುಗಳನ್ನು ಕನ್ನಡದ ಪ್ರಾತಃಸ್ಮರಣೀಯರ ಹೆಸರುಗಳಿಂದ ಗುರ್ತಿಸುವುದು.

* ನವೆಂಬರ್‌ನಿಂದ ಅಕ್ಟೋಬರ್‌ವರೆಗೆ ರಾಜ್ಯೋತ್ಸವವನ್ನು ಆಚರಿಸುವುದು.

.... ಹೀಗೆ.

ಮೇಲಿನ ಪ್ರತಿಯೊಂದೂ ಕನ್ನಡದ ಏಳಿಗೆಗೆ ಪೂರಕವಾದುದು ಎನ್ನುವುದರಲ್ಲಿ ಅನುಮಾನವಿಲ್ಲ.  ಆದರೆ ಇವುಗಳಿಂದಲೇ ಕನ್ನಡ ಬಲಗೊಳ್ಳುವುದಿಲ್ಲ.  ಬಲವಂತದಿಂದ ಯಾವುದನ್ನೂ ಸಿದ್ಧಿಸಿಕೊಳ್ಳಲಾಗುವುದಿಲ್ಲ;  ಒಂದುವೇಳೆ ಸಾಧ್ಯವಾದರೂ ಅದು ಅಲ್ಪಾಯುಷಿ.  ಆ ಕಾರಣದಿಂದಲೇ ಕನ್ನಡದ ತೇರು ಸಿಂಗರಿಸುವ ಬಾಹ್ಯ ಕೆಲಸಕ್ಕಿಂಥ ಬುನಾದಿಯನ್ನು ಗಟ್ಟಿಗೊಳಿಸುವ ಒಳಕೆಲಸ ನಡೆಯಬೇಕಿದೆ.

ಕನ್ನಡದ ಉಳಿವಿನ ದೃಷ್ಟಿಯಿಂದ ತ್ವರಿತ ಬದಲಾವಣೆ ಕಾಣಬೇಕಾದ ಕ್ಷೇತ್ರ ಶಿಕ್ಷಣ.  ಪ್ರಾಥಮಿಕ ಶಿಕ್ಷಣ ಕನ್ನಡಮುಖಿಯಾಗಬೇಕು.  ನಾಳಿನ ಯುವಜನತೆಯಲ್ಲಿ ಇಂದು ಕನ್ನಡದ ಬೀಜಗಳ ಬಿತ್ತುವುದು ಸಾಧ್ಯವಾದರೆ ಕನ್ನಡದ ಭವಿಷ್ಯ ನಿರಾತಂಕ.  ವಿಜ್ಞಾನ, ಕಾನೂನು ಮುಂತಾದ ಕ್ಷೇತ್ರಗಳನ್ನು ಕನ್ನಡಕ್ಕೆ ಒಗ್ಗಿಸಿಕೊಂಡು, ಕನ್ನಡ ಪಠ್ಯಗಳನ್ನು ರೂಪಿಸಬೇಕಾಗಿದೆ.  ಇದು ಸಾಧ್ಯವಾಗಿ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಕನ್ನಡದಲ್ಲೇ ದೊರಕುವಂತಾದರೆ ಅನೇಕ ಗ್ರಾಮೀಣ ಪ್ರತಿಭೆಗಳು ಬದುಕಿಕೊಂಡಾವು;  ಆ ಮೂಲಕ ಕನ್ನಡವೂ.

ಭಾಷಣ ಮಾಡುವುದು, ಪುಸ್ತಕ ಬರೆಯುವುದರಿಂದ ಮಾತ್ರ ಕನ್ನಡ ಉಳಿಯುವುದಿಲ್ಲ.  ಕನ್ನಡಪರ ಚಟುವಟಿಕೆಗಳನ್ನು ಹೆಚ್ಚಿಸಬೇಕು.  ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವಗಳು ಹೆಚ್ಚುಹೆಚ್ಚು ನಡೆಯಬೇಕು.  ರಾಜ್ಯದ ಎಲ್ಲ ಭಾಗಗಳಲ್ಲೂ ಈ ಉತ್ಸವಗಳು ನಡೆಯಬೇಕು.  ಕನ್ನಡ ದೇಸೀ ಕಲಾಪ್ರಕಾರಗಳು ಪುನರುಜ್ಜೀವನಗೊಳ್ಳಬೇಕು.  ದೃಶ್ಯ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.  ಭೂಗತಲೋಕದ ವ್ಯಕ್ತಿಗಳನ್ನು ಚಿತ್ರಿಸುವ ನಮಗೆ ಕುಮಾರ ರಾಮ, ಮದಕರಿ ನಾಯಕ, ಶಿವಪ್ಪ ನಾಯಕರ ಚಿತ್ರಿಸಲು ಸಾಧ್ಯವಾಗದಿರುವ ಬಗ್ಗೆ ಚಿಂತಿಸಬೇಕು.  ಮಿಗಿಲಾಗಿ ಕನ್ನಡಿಗರೆದೆಯಲ್ಲಿ ಕನ್ನಡ ಪ್ರೀತಿಯ ಬಿತ್ತನೆ ನಡೆಯಬೇಕು.

ಮುಕ್ಕಾಲು ಪಾಲು ಪದವೀಧರ ಕನ್ನಡಿಗರಿಗೆ ತಪ್ಪಿಲ್ಲದ ಕನ್ನಡ ಬರವಣಿಗೆ ಸಾಧ್ಯವೇ ಇಲ್ಲ.  ನಗರ ಪ್ರದೇಶದವರಿಗಂತೂ ಕನ್ನಡ ತ್ರಾಸು;  ಇಂಗ್ಲಿಷು ಸಲೀಸು.  ಈ ಬಗ್ಗೆ ಅವರಿಗೆ ನಾಚಿಕೆಯೂ ಇಲ್ಲ.  ಎಲ್ಲಕ್ಕಿಂತ ದುಃಖದ ವಿಷಯವೆಂದರೆ ನಮ್ಮ ಹೆಣ್ಣುಮಕ್ಕಳ ಇಂಗ್ಲಿಷ್ ಮೋಹ.  ತಾಯಿ ಮೊಲೆಹಾಲಿನಿಂದ ಬಂದ ನುಡಿ ಕನ್ನಡ ಎನ್ನುತ್ತಾನೆ ಕವಿ.  ಆದರೆ ಆಧುನಿಕ ಹೆಣ್ಣುಮಕ್ಕಳ ನೋಡಿದರೆ ಅವರ ಚರ್ಮ ಹಾಗೂ ನಾಲಗೆ ಕನ್ನಡದ ಗಂಧಗಾಳಿಯಿಂದ ದೂರವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.  ಅಮ್ಮಂದಿರ ಕಾನ್ವೆಂಟ್ ಮೋಹ ಆತಂಕ ಹುಟ್ಟಿಸುವಂತಿದೆ.  ಹಳ್ಳಿಯ ಹೆಣ್ಣುಮಗಳು ಕೂಡ ತನ್ನ ಕಂದಮ್ಮನ ಜೊತೆ ಇಂಗ್ಲಿಷಿನಲ್ಲಿ ತೊದಲಿ ಧನ್ಯತೆ ಅನುಭವಿಸುತ್ತಾಳೆ.  ಈ ಹೆಣ್ಣುಮಕ್ಕಳ ಇಂಗ್ಲಿಷ್ ವ್ಯಾಧಿಗೆ ಜರೂರಾಗಿ ಮದ್ದು ನೀಡಬೇಕಾಗಿದೆ.  ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ.  ಭಾಷೆಯ ವೈಭವ ವಿದ್ವಜ್ಜನರಿಂದ ಸಾಧ್ಯ.  ಆದರೆ ಭಾಷೆಯ ಉಸಿರು ನಿಂತಿರುವುದು ಮಾತ್ರ ಕೂಸುಕಂದಮ್ಮಗಳಿಗೆ ಮೊಲೆಯುಣಿಸುವ ಹೆಣ್ಣುಗಳ ಬಾಯಲ್ಲಿ, ಜೋಗುಳದಲ್ಲಿ.

ಕನ್ನಡದ ದೀನಸ್ಥಿತಿಯ ಕುರಿತು ಮಾತುಬಂದಾಗಲೆಲ್ಲ ಪ್ರಸ್ತಾಪವಾಗಿವ ವಿಷಯ `ಇಚ್ಫಾಶಕ್ತಿ' ಕುರಿತಾದದ್ದು.  ಕನ್ನಡಿಗರು ನಿರಭಿಮಾನಿಗಳು, ಕನ್ನಡಿಗರು ಪರಭಾಷಾ ಪ್ರಿಯರು ಎನ್ನುವ ಮಾತು ರೇಜಿಗೆ ಹುಟ್ಟಿಸುವಷ್ಟು ಬಳಕೆಯಾಗುತ್ತಿದೆ.  ವೈಯಕ್ತಿಕ ನೆಲೆಯಲ್ಲಿ ಈ ಮಾತು ಪೂರ್ಣ ಸತ್ಯವಲ್ಲದಿದ್ದರೂ ಕನ್ನಡದ ನಾಯಕರ ಮಟ್ಟಿಗೆ ಮಾತ್ರ ಈ ಮಾತು ಬಹುತೇಕ ಸತ್ಯ.  ಪ್ರದೇಶಿಕ ಪಕ್ಷವೊಂದು ರಾಜ್ಯದಲ್ಲಿ ಬಲಗೊಂಡು ಅಡಳಿತದ ಚುಕ್ಕಾಣಿ ಹಿಡಿದರೆ ಕನ್ನಡದ ರಕ್ಷಣೆ ಸಾಧ್ಯವಾದೀತು ಎನ್ನುವ ಮಾತಿದೆ.  ಆದರೆ ಜನತಾದಳದ ಬಣಗಳ ಸ್ವರೂಪ ಪ್ರಾದೇಶಿಕವಾಗಿದ್ದರೂ ಕನ್ನಡದ ಮಟ್ಟಿಗೆ ಅವುಗಳ ನಡವಳಿಕೆ ರಾಷ್ಟ್ರೀಯ ಸ್ವರೂಪದಲ್ಲಿರುವುದನ್ನು ಗಮನಿಸಬೇಕು.  ಅಂದರೆ ದೋಷವಿರುವುದು ಪಕ್ಷಗಳಲ್ಲಲ್ಲ;  ನಾಯಕರ ಧೋರಣೆಗಳಲ್ಲಿ.  ನೆರೆರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ತಂತಮ್ಮ ಭಾಷೆಗಳಲ್ಲಿ ಸುದ್ದಿಗೋಷ್ಠಿ ನಡೆಸಿದರೆ, ಕನ್ನಡದ ಮಂತ್ರಿಮಹೋದಯರು ತಮ್ಮ ಇಂಗ್ಲಿಷು ಪ್ರಾವೀಣ್ಯ ಮೆರೆಯುತ್ತಾರೆ.  ರಾಜ್ಯದೊಳಗಿನ ಸುದ್ದಿಗೋಷ್ಠಿಗಳಲ್ಲೂ ಇಂಗ್ಲಿಷು ಬಳಕೆಯಾಗುತ್ತದೆ.  ಪ್ರಧಾನಿ ಸ್ಥಾನಕ್ಕೇರುವ ಮಣ್ಣಿನ ಮಗ ತನ್ನ ಮಣ್ಣಿನ ಭಾಷೆಯನ್ನು ಮೆರೆಸುವ ಬದಲು, ಪ್ರಧಾನಿ ಆದುದರಿಂದ ದೇವೇಗೌಡರು ಹಿಂದಿ ಕಲಿತದ್ದು ಅವರ ಇಂಗ್ಲಿಷ್ ಸುಧಾರಣೆಯಾದದ್ದು ನಿಜ;  ಕನ್ನಡದ ಸುಧಾರಣೆಯಂತೂ ಚಿಕ್ಕಾಸಿನಷ್ಟೂ ಆಗಲಿಲ್ಲ.  ಕನ್ನಡಗರ ಇಚ್ಫಾಶಕ್ತಿಯ ಕೊರತೆಗೆ ದೇವೇಗೌಡರೊಂದು ಉದಾಹರಣೆ ಮಾತ್ರ.  ಯಾಕಾಗಿ ಹೀಗೆ?  ಒಮ್ಮೆ ಡಾ. ಎಂ. ಚಿದಾನಂದ ಮೂರ್ತಿ ಹೇಳಿದ ಮಾತಿದು:  `ರಕ್ಕಸತಂಗಡಿ ಯುದ್ಧದಲ್ಲಿ ಪೆಟ್ಟುಬಿದ್ದುದು ವಿಜಯನಗರ ಸಾಮ್ರಾಜ್ಯದ ಅಸ್ತಿತ್ವಕ್ಕೆ ಮಾತ್ರವಲ್ಲ, ಕನ್ನಡದ ಮನಸ್ಸುಗಳ ಮೇಲೂ ಆ ಪಟ್ಟು ಬಿದ್ದಿದೆ.  ಆ ನೋವು ಕನ್ನಡಿಗರ ಮನಸ್ಸಿನ ಯಾವುದೋ ಮೂಲೆಯಲ್ಲಿ ನೂರಾರು ವರ್ಷಗಳಿಂದಲೂ ಅಚ್ಚಳಿಯದೆ ಉಳಿದುಬಂದುಬಿಟ್ಟಿದೆ.  ಕನ್ನಡಿಗರ ಇಚ್ಛಾಶಕ್ತಿಯ ಕೊರತೆಗೆ ಇದೂ ಒಂದು ಕಾರಣವಿರಬಹುದು'.  ಚಿದಾನಂದಮೂರ್ತಿಯವರ ಮಾತು ನಿಜ.  ಮನಸ್ಸಿನ ಗಾಯ ಮಾಯಲು ಮದ್ದು ಬೇಕಾಗಿದೆ.  ಆ ಮದ್ದು ಕನ್ನಡದ ಮೂಲಕ ಕನ್ನಡ ಮನಸ್ಸುಗಳಲ್ಲೇ ಮೂಡಬೇಕಿದೆ.  ಇಂಗ್ಲಿಷು ಎಂಬ ರಕ್ಕಸನ ವಿರುದ್ಧ ಬಲಗೊಳ್ಳಲು `ಅಮೃತ ಮಥನ' ನಡೆಸುವ ಕಾಲ ಸನ್ನಿಹಿತವಾಗಿದೆ.  ಈ ಯತ್ನದ ಜೊತೆಗಾರರಾಗಿ ಕಡೆಗೋಲುಗಳಾಗಿ ನಿಲ್ಲುವಂತೆ ದೇಸೀಭಾಷೆಗಳ ಮನ ಒಲಿಸಬೇಕು.

ಉಳಿವಿನ ದೃಷ್ಟಿಯಿಂದ ಕನ್ನಡವನ್ನು ಆಧುನಿಕಗೊಳಿಸಬೇಕು ಎನ್ನುವ ಮಾತು ಆಗಾಗ ಕೇಳಿಬುರತ್ತದೆ.  ಕನ್ನಡಕ್ಕೆ ಮಡಿವಂತಿಕೆ ಬೇಡ;  ಭಾಷೆಗೆ ಬೊಜ್ಜು ಬೇಡ ಎಂದು ಅನೇಕ ಭಾಷಾ ಚಿಂತಕರು ಹೇಳುತ್ತಲೇ ಇದ್ದಾರೆ.  ಸರಳವಾದಷ್ಟೂ ಭಾಷೆ ಹೆಚ್ಚು ಜನರನ್ನು ತಲುಪುತ್ತದೆ.  ಆ ಮೂಲಕ ಬಾಳಿಕೆ ಹೆಚ್ಚುತ್ತದೆ ಎನ್ನುವುದು ಅವರುಗಳ ಮಾತಿನ ಇಂಗಿತ.  ಅದರೆ ಭಾಷೆಯನ್ನು ಸರಳಗೊಳಿಸುವುದು ಎಂದರೆ ಏನು?  ಸರಳಗೊಳಿಸುವುದಾದರೆ ಅದರ ಪ್ರಮಾಣವೆಷ್ಟು?  ಎನ್ನುವ ಕುರಿತು ಚಿಂತನೆ ನೆಡಯಬೇಕಾಗಿದೆ.  ಭಾಷೆ ಸುಲಭಗ್ರಹ್ಯವಾಗಿರಬೇಕು ಎನ್ನುವ ಮಾತಿಗೆ ತಕರಾರಿಲ್ಲ.  ಆದರೆ ಸರಳತೆಯ ಹೆಸರಿನಲ್ಲಿ ಕನ್ನಡ ಬಡವಾಗಬಾರದು.  ಈ ಬಡವಾಗಿಸುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ.  ಈ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ದೊಡ್ಡದು.  ಓದುಗರನ್ನು ಮಂಕುದಿನ್ನೆಗಳೆಂದು ಭಾವಿಸಿರುವ ಕೆಲ ಪತ್ರಕರ್ತರು ಸರಳತೆಯ ಹೆಸರಿನಲ್ಲಿ ಭಾಷೆಯನ್ನು ಬತ್ತಲಾಗಿಸುತ್ತಿದ್ದಾರೆ.  ಕಠಿಣ ಎನ್ನುವ ಪದಗಳನ್ನು ಬಳಸದೇ ಇರುವುದು ಹಾಗೂ ನಾಲಗೆಗೆ ಒಗ್ಗಿಕೊಂಡಿರುವ ಇಂಗ್ಲಿಷು ಪದಗಳನ್ನು ಕನ್ನಡದ ನಡುವೆ ಬಳಸುವ ಪರಿಪಾಠ ಹೆಚ್ಚುತ್ತಿದೆ.  ಇದರಿಂದಾಗಿ ಕನ್ನಡದ ಸೊಗಡು ಕ್ಷೀಣವಾಗುತ್ತದೆ.  ಕನ್ನಡ ಪ್ರಾಥಮಿಕ ಮಟ್ಟದಲ್ಲೇ ಉಳಿಯುತ್ತದೆ.  ಭಾಷಿಗರ ಪದಸಂಪತ್ತು ಸೊರಗತೊಡಗುತ್ತದೆ.  ಕಲಿಕೆಯ ಅವಕಾಶಗಳು ಕಡಿಮೆಯಾಗುತ್ತವೆ.  ಕೆಲವೊಂದು ಪದಗಳು ಬಳಕೆಯ ಬೆಳಕಿನಿಂದ ದಿನೇದಿನೇ ದೂರವಾಗಿಬಿಡುತ್ತವೆ.  ಈ ಪರಿಸ್ಥಿತಿ ಮುಂದುವರಿದಲ್ಲಿ, ಪ್ರೊ. ಜಿ. ವೆಂಕಟಸುಬ್ಬಯ್ಯನವರಂಥ ಹಿರೀಕರ ನಂತರ ಕನ್ನಡ ಶಬ್ದಗಳು ನಿಘಂಟಿನಿಂದಲೂ ಕಣ್ಮರೆಯಾಗಿಬಿಡುತ್ತದೆ.  ಈ ಅಪಾಯವನ್ನು `ಭಾಷಾ ಉದಾರವಾದಿಗಳು' ಗಮನಿಸಬೇಕು.  ಶೈಲಿ ಹಾಗೂ ಹೂರಣ ಸಮರ್ಥವಾಗಿದ್ದಲ್ಲಿ ಸರಳ ಅಥವಾ ಸಂಕೀರ್ಣ ಎನ್ನುವ ವಿಷಯಗಳು ಭಾಷೆಗೆ ಮುಖ್ಯವೇ ಅಲ್ಲ.  ಹಾಗೆ ನೋಡಿದರೆ `ಸರಳತೆ'ಯ ಅರ್ಥ ಭಾಷೆಯ ಮಟ್ಟಿಗೆ ನಮ್ಮ ಉದಾರವಾದಿಗಳು ತಿಳಿದಷ್ಟು ಸಂಕುಚಿತವಾದುದಲ್ಲ.  ಭಾಷೆ ಒಂದೇ ಆಗಿರುವಾಗಲೂ, ಒಂದು ಪ್ರದೇಶದ ಜನತೆಗೆ ಸರಳವಾದ ನುಡಿಗಟ್ಟು ಮತ್ತೊಂದು ಪ್ರದೇಶದ ಜನತೆಗೆ ಕಬ್ಬಿಣದ ಕಡಲೆಯಾಗಬಹುದು.  ಭಾಷೆಯ ಶೈಲಿ ಹಾಗೂ ಪದಸಂಪತ್ತು ಕನ್ನಡದ ಜಾಯಮಾನಕ್ಕೆ ಪರಿಸರದಿಂದ ಪರಿಸರಕ್ಕೆ ಬದಲಾಗುತ್ತಲೇ ಇರುತ್ತದೆ.  ಹಾಗಾಗಿ ಸರಳತೆ ಎನ್ನುವುದಕ್ಕೆ ಚೌಕಟ್ಟು ಹಾಕುವುದು ಕಷ್ಟ.
            *    *    *

ಕನ್ನಡದ ಸಮಸ್ಯೆಗಳು ಕೇವಲ ಭಾಷೆಗಷ್ಟೇ ಸೀಮಿತವಲ್ಲ.  ನೀರು, ನೆಲ, ಉದ್ಯೋಗ, ಕೈಗಾರಿಕೆ, ಇತ್ಯಾದಿ ರೂಪಗಳಲ್ಲೂ ಕನ್ನಡ ಹಾಗೂ ಕನ್ನಡಿಗ ಅವಜ್ಞೆಗೆ ಗುರಿಯಾಗುತ್ತಲೇ ಇದ್ದಾನೆ.  ಆದರೆ ಇವುಗಳಲ್ಲಿ ಬಹುತೇಕ ಸಮಸ್ಯೆಗಳು ರಾಜಕೀಯ ಕಲ್ಪಿತವಾದವು ಹಾಗೂ ಬೇರೆಬೇರೆ ರೂಪನಾಮಗಳಲ್ಲಿ ಯಾವಕಾಲಕ್ಕೂ ಇರುವಂತವು.  ಹಾಗಾಗಿ ನಮ್ಮ ನಿಜವಾದ ಪ್ರಯತ್ನ ನುಡಿಯ ಉಳಿವಿನತ್ತ ಕೇಂದ್ರೀಕೃತಗೊಳ್ಳಬೇಕು.

ಒಂದು ಭಾಷೆಗೆ `ಗರ್ವ' ತುಂಬುವವರು, ಭಾಷೆಯ ಊರುಭಂಗ ಮಡುವವರೂ ಆಯಾ ಭಾಷಿಗರೇ.  ನುಡಿಯಲ್ಲಾಗಲೀ ನಡೆಯಲ್ಲಾಗಲೀ ಬರಹದಲ್ಲಾಗಲೀ ಕನ್ನಡವನ್ನು ಪ್ರೀತಿಯಿಂದ ಬಳಸುವುದನ್ನು ಹಾಗೂ ಈ ಬಳಕೆಯ ಬಗ್ಗೆ ಹೆಮ್ಮೆ ಪಡುವುದನ್ನು ರೂಢಿಸಿಕೊಳ್ಳಬೇಕಾಗಿದೆ.  ಆ ಪ್ರೀತಿ ಕನ್ನಡವನ್ನು ಕಾಯುತ್ತದೆ.  ಕನ್ನಡ ತನ್ನ ಒಕ್ಕಲನ್ನು ಪೋಷಿಸಿ ಉಳಿಸುತ್ತದೆ.

            *****

ಕೀಲಿಕರಣ: ಕಿಶೋರ್‍ ಚಂದ್ರ

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ

- ಶಿಶುನಾಳ ಶರೀಫ್

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ
ಎದ್ದು ಹೋಗುತೇನಿ ತಾಳೆಲೋ                                   ||ಪ||

ಎದ್ದು ಹೋಗುತೇನಿ ತಾಳೆಲೋ
ಇದ್ದು ಇಲ್ಲೇ ಭವಕೆ ಬೀಳೊ
ಸಧ್ಯ ಸದ್ಗುರು ಶಾಪ ನಿನಗೆ
ಸಿದ್ಧಲಿಂಗನ ಪಾದಸಾಕ್ಷಿ                               ||ಅ.ಪ||

ಹಟದಿ ನಮ್ಮನ್ನ್ಯಾಕ ನೋಡುತಿ ಒಣ
ಕಟಗಿಯಂತೆ ಸೆಟೆದುಕೊಂಡು ಮಾತನಾಡುತಿ
ಚಟಕಿ ಹೊಡೆದು ಬಟ್ಟ ಕುಣಿಸಿ
ಕಠಿಣ ಕಲಹ ಗುಣಗುಣಗಳೆಣಿಸಿ
ಕಟಕಿದೋಷವು ತಟ್ಟಿತೋ ಹಿರಿಯ ಮಠದ ಪಾದಸಾಕ್ಷಿ        ||೧||  

ನಿಂದೆನಾಡಿ ನೀಚನಾದೆಯೋ‌ಇದ-
ರಿಂದ ದಂದುಗಕ್ಕೆ ಬಂದು ಬಿದ್ದಿಯೋ
ತಂದೆ ಗುರುಗೋವಿಂದರಾಜನ
ದ್ವಂದ್ವಪಾದವ ನಂಬಿದವರಿಗೆ
ಕುಂದನಿಟ್ಟ  ಮಂದಮನುಜ
ಹಂದಿಜಲ್ಮಕ  ಬಿದ್ದಿ  ತಮ್ಮಾ                                           ||೨||

ಮಂಡಲಕ ಮಹಿಮಾಸಾಗರ ಬ್ರಹ್ಮೋತ್ರಕಾಂಡ
ಪಂಡಿತರಿಗೆ  ಪಾರಮಾರ್ಥದಾಗರಾ ಇದರೊಳಗೆ ನೀನು
ಬಂಡು ಬರಿದೆ ಬೊಗಳು ಅಕ್ಷರ ನಾ ಕಂಡಿದ್ದಿಲ್ಲಾ
ಪುಂಡ ಶಿಶುನಾಳಧೀಶನ ದಂಡಕೋಲು ಕೈಯಲಿ ಪಿಡಿದು
ದಿಂಡುತನವ ಮುರಿದು ನಿನ್ನ ಚಂಡಿತನವ ಬಿಡಿಸಿ ಮೌಜಿಲೆ    ||೩||

           *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಬಿಡತೇನಿ ದೇಹ ಬಿಡತೇನಿ

- ಶಿಶುನಾಳ ಶರೀಫ್

ಬಿಡತೇನಿ ದೇಹ ಬಿಡತೇನಿ                                     ||ಪ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ            ||೧||

ಪಾವಕಗಾಹುತಿ ಮಾಡಿ ಜೀವನದಸು
ನಾ  ಬೇರೆ  ಬೈಲು ಬ್ರಹ್ಮದೊಳಾಡುತಲಿ ದೇಹಾ          ||೨||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನ ಬಾಧೆ ಗೆದ್ದು ಶಿವಲೋಕದೊಳು ದೇಹ ಬಿಡತೇನಿ  ||೩||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಮುಗಿಲ ಮಲ್ಲಿಗೆ

- ಡಾ || ರಾಜಪ್ಪ ದಳವಾಯಿ

ಮುಗಿಲ ಮಲ್ಲಿಗೆ
ಅರಳು ಮೆಲ್ಲಗೆ
ಹೊಳಪು ಹೊಳಪು
ಬದುಕ ಮುಳುಗು
ಕಹಿಸಿಹಿಯೊಳಗು
ನಲವು ಒಲವು

        *****

ನಗೆಯು ಬರುತಿದೆ ಜಗದಾಟ ನೋಡಿ

- ಶಿಶುನಾಳ ಶರೀಫ್

 ನಗೆಯು ಬರುತಿದೆ ಜಗದಾಟ ನೋಡಿ
ಸುಗುಣನಾಗಿ ಸುಮ್ಮನೆ ಸುಜ್ಞಾನದಿ
ಅಗಣಿತ ಮಹಿಮೆಯ ಆಡಿದ ಪುರುಷನಿಗೆ            ||೧||

ಕಲ್ಲು ಬಾಯೊಳಗೆ ಹುಟ್ಟಿದ ನಗೆಯು
ಕಳ್ಳನಾಗಿ ಕದ್ದಡಗಿದ ಮನೆಯು
ತಳ್ಳಿಕೋರ ತಗಲ್ಹಚ್ಚಿದ ಕಂಡು                         ||೨||

ಪ್ರಿಯತನುತ್ರಯರು ಹೊರ‌ಒಳಗೆಲ್ಲಾ
ಶ್ರೀ ಸದ್ಗುರು ಶ್ರೀ ಶಿಶುನಾಳಧೀಶನೇ ಬಲ್ಲ
ಬಾಯಿಲೆ ಬ್ರಹ್ಮವ ನುಡಿವಾತನು ಮುಂದು
ಮಾಯದ ಮನೆಯೊಳು ಮಲಗಿದವನ ಕಂಡು    ||೩||

     *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಬೆಟ್ಟದಾ ಮೇಲೊಂದು

- ಪ್ರಭಾಕರ ಶಿಶಿಲ

ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ.  ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ್ನು ಹತ್ತಿಸಿಕೊಂಡು ಮುಂದಕ್ಕೆ ಓಡಿತು.  ಅವನು ಕಾಲೆಳೆದುಕೊಂಡು ಎದುರಲ್ಲಿ ಕಾಣುವ ಹೋಟೆಲಿಗೆ ಹೋಗಬೇಕು ಎನ್ನುವಾಗ ಆವನಿಗೆ ಕಂಡದ್ದು ಅವಳು.

ಆವಳು ಇದ್ದದ್ದು ದೊಡ್ಡದೊಂದು ಫ್ಯಾನ್ಸಿ ಸ್ಟೋರಿನಲ್ಲಿ. ಅವನನ್ನು ದೂರದಿಂದಲೇ ನೋಡಿದ ಅವಳ ಮುಖ ಆರಳಿತು.  ಈಗ ಆವನ ಕಾಲುಗಳು ದಾರಿ ತಪ್ಪಿಸಿ ಅವನನ್ನು ಫ್ಯಾನ್ಸಿ ಸ್ಟೋರಿನತ್ತ ಒಯ್ದುವು.  ಅವಳು ಸಂಭ್ರಮದಿಂದ ಹೊರಬಂದಳು.  ಜತೆಗೆ ಎರಡು ಬದಿಗಳಲ್ಲಿ ಜೋತು ಬಿದ್ದಂತೆ ಇಬ್ಬರು ಹೆಣ್ಣುಮಕ್ಕಳು.  ಅವುಗಳ ಮುಖದಲ್ಲಿ ಪೆದ್ದು ಕಳೆ.  ನಿರಾಸಕ್ತಿಯ ನೋಟ.  ಒಂದು ಕ್ಷಣ ಗಲಿಬಿಲಿಗೊಳಗಾದ ಅವನನ್ನು ಕಂಡು ಅವಳು ನಗುತ್ತಾ ನಮಸ್ಕಾರ ಮಾಡಿದಳು.  ಅದರಲ್ಲಿ ಗೌರವಕ್ಕಿಂತ ಹೆಚ್ಚಾಗಿ ಹುಡುಗಾಟ ಇದ್ದುದನ್ನು ಗಮನಿಸಿ ಆವನು  ನಕ್ಕು ಕೇಳಿದ, "ಏನಮ್ಮಾ... ಹೇಗಿದ್ದೀಯಾ?

ಈಗವಳು ಗಟ್ಟಿಯಾಗಿ ನಕ್ಕಳು. ಫ್ಯಾನ್ಸಿ ಸ್ಟೋರಿನಲ್ಲಿದ್ದವರೆಲ್ಲಾ ಆವರತ್ತ ನೋಡುತ್ತಿರುವುದನ್ನು ಕಂಡು ಅವನಿಗೆ ಕಸಿವಿಸಿಯಾಯಿತು.  ಅವಳಿಗೆ ಆರ್ಥವಾಯಿತು. ಅವನ ಕ್ಕೆಯಲ್ಲಿದ್ದ ಬ್ಯಾಗು ಎತ್ತಿಕೊಳ್ಳುತ್ತಾ "ನಡೀರಿ ಗಾಬರಿ ಬೇಡ. ಇದು ನಮ್ಮದೇ ಅಂಗಡಿ" ಎಂದು ಮು೦ದಕ್ಕೆ ನಡೆದಳು.  ನಡೆಯುತ್ತಾ "ನೆನಪಿದ್ಯಾ ಸಾ.. ನೀವೇ ಹೇಳ್ತಿದ್ರಿ. ಹೇಗಿದ್ದೀರಿ ಆಂತ ಕೇಳುವುದು ಇನ್ನೇನೂ ತೋಚದೆ ಇರುವಾಗ ಆಂತ.  ಅದಕ್ಕೆ ನಗು ಬಂತು" ಆಂದಳು.

ಆವನಿಗೂ ನಗು ಬಂತು.  ಸ್ಟೋರಿನ ಒಳ ಹೊಕ್ಕಾಗ ಅವನಿಗೆ ದಂಗು ಬಡಿದಂತಾಯಿತು.  ಫಾನ್ಸಿ ಎಂದರೆ ಬಳೆ, ಪೌಡರ್, ಲಿಪ್‍ಸ್ಟಿಕ್ ಎಂದೇ ತಿಳಿದಿದ್ದ ಅವನಿಗೆ  ಅವುಗಳೊಂದಿಗೆ ಬಟ್ಟೆ , ಸ್ಟೇಶನರಿ, ಆಟದ ಸಾಮಾನು ಮತ್ತು ವಿಧವಿಧದ ಪಾದರಕ್ಷೆ ಕಂಡು ಆಶ್ಚರ್ಯ.  ವಿಶಾಲವಾದ ಅಂಗಡಿಯಲ್ಲಿ ನಾಲ್ಕೈದು ಮಂದಿ  ಸೇಲ್ಸ್‍ಮನ್‍ಗಳಿದ್ದರು.  ಜತೆಗೆ ಫೋನು, ಟಿ. ವಿ., ಫ್ಯಾನು ಎಲ್ಲವೂ.

"ನಮ್ದೇಸಾ ಹೇಗಿದೆ ?  ಅವ್ರನ್ನು ನೀವು ನೊಡಿಲ್ಲ ಅಲ್ವಾ?  ಬಾಂಬೆಗೆ ಹೋಗಿದ್ದಾರೆ ನಾಲ್ಕು ದಿನ ಬಿಟ್ಟು ಬರ್ತಾರೆ."  ಅವನ ಕಣ್ಣಲ್ಲಿನ ಶಂಕೆಗೆ ಅವಳು ಉತ್ತರಿಸಿದಳು.

"ಕೂತ್ಕೊಳ್ಳಿ, ಏನ್ ಕುಡೀತಿರಿ" ಎಂದವಳೇ, ಅವನ ಉತ್ತರಕ್ಕೆ ಕಾಯದೆ" ನೋಡಪಾ ಎರಡು ಲೆಮನ್ ಸೋಡಾ ತಗೊಂಬಾ" ಎಂದು ಸೇಲ್ಸ್‍ ಮ್ಯಾನ್ ಒಬ್ಬನನ್ನು ಓಡಿಸಿದಳು. "ಸೆಕೆಗೆ ಅದೇ ವಾಸಿ ಅಲ್ವೇ?" ಎಂದು ಸೇರಿಸಿದಳು.

ಅವನು ಕೂತುಕೊಂಡ.  "ಇಲ್ಲಿಗೇನ್ ಬಂದ್ರಿ ಸಾ?" ಈಗವನು ಬಿಚ್ಚಿಕೊಂಡ.  ಅವನು ರಿಸರ್ಚ್ ಮಾಡಲು ತೊಡಗಿರುವುದು, ಇದೀಗ ಅವಳ ಊರಿನ ಪಶುಪತಿ ದೇವಾಲಯದ ಬಗ್ಗೆ ಆಧ್ಯಯನ ಮಾಡಲು ಬಂದಿರುವುದು ಹೀಗೆ.

"ಅಯ್ಯೋ ಅಲ್ಲಿಗೆ ನಮ್ಮ ಮನೆ ಮುಂದ್ಲಿಂದ್ಲೇ ಹೋಗಬೇಕು ನೀವು. ಅಲ್ಲಿಂದ ಆರೇ ಫರ್ಲಾಂಗು.  ಅಂದ್ಹಾಗೆ ಎಷ್ಟು ದಿನ ಉಳ್ಕೊಳ್ತೀರಿ ಸಾ ಇಲ್ಲಿ?"

"ಸ್ಟಡಿ ಅಂದ್ಮೇಲೆ ಇಷ್ಟೇ ದಿನಾಂತ ಹೇಳೋಕಾಗಲ್ಲ.  ಮೊದ್ಲು ದೇವಸ್ಥಾನ ನೋಡ್ಬೇಕು.  ಶಿಲ್ಪಗಳ ಬಗ್ಗೆ ಆಧ್ಯಯನ ಮಾಡಬೇಕು.  ಅರ್ಚಕರನ್ನು ಕಾಣಬೇಕು.  ಊರ ಹಳಬ್ರನ್ನು ಭೇಟಿಯಾಗಬೇಕು.  ಕೆಲವು ಪೋಟೋ ತೆಗೀಬೇಕು.  ಅದ್ರಿಂದ ನಾಲ್ಕೈದು ದಿನಾ ಇರ್ಬೇಕಾಗಿ ಬರ್ಬೋದು.  ಎಲ್ಲಾದ್ರೂ ಹೋಟ್ಲಲ್ಲಿ ರೂಮು ಸಿಗುತ್ತೋ ನೋಡಬೇಕು."

ಆವಳ ಕಣ್ಣುಗಳು ಆರಳಿದವು.  "ಹೋಟೆಲ್ಲಿಗ್ಯಾಸಾ ದುಡ್ಡು ಸುರೀತೀರಿ? ನಮ್ಮನೇಲೇ ಇರಿ.  ಮನೇಲಿ ಮಾವ ಇದ್ದಾರೆ.  ಈ ಊರ ಬಗ್ಗೆ ಅವರೆಷ್ಟು ತಿಳುಕೊಂಡಿರೋರು ಯಾರೂ ಇಲ್ಲ.  ಅದೇನೋ ಎನ್‍ಸೈಕ್ಲೋಪೇಡಿಯಾ ಅಂತಾರಲ್ಲಾ ಹಾಗೆ.  ದೇವಸ್ಥಾನ ಇಂದೇ ಒಮ್ಮೆ ನೋಡ್ಕಂಬನ್ನಿ.  ಅಲ್ಲಿಂದ ನೇರ ನಮ್ಮನೇಗೆ.  ಇವ್ನೆ ನಿಮ್ಗೆ ಕಂಪನಿ." ಆಗ ತಾನೆ ಜ್ಯೂಸ್ ತಂದುಕೊಟ್ಟವನನ್ನು ತೋರಿಸಿದಳು.

ಜ್ಯೂಸ್ ಕುಡಿದು ಅವನು ಎದ್ದು ಬ್ಯಾಗು ಕೈಗೆತ್ತಿಕೊಂಡ.  ಅವಳು ತಡೆದಳು.  "ಆದೆಲ್ಲಾ ಇಲ್ಲೇ ಇರ್ಲಿ.  ಬೇಕಿದ್ರೆ ಪೆನ್ನು, ಬುಕ್ಕು, ಕ್ಯಾಮರಾ ತಗಳ್ಳಿ.  ಬ್ಯಾಗು ನಮ್ಮನೆಗೆ ಹೋಗುತ್ತೆ.  ನಿಮ್ಮ ಜವಾಬ್ದಾರಿಯೆಲ್ಲಾ ಸದ್ಯಕ್ಕೆ ಇವಂದು."

ಆವನು ಸುಧಾರಿಸಿಕೊಂಡ. ಅವಳ ಮಕ್ಕಳಿಗೆ ಏನನ್ನೂ ಕೊಡದ್ದು ನೆನಪಾಗಿ ಜೇಬಿಗೆ ಕ್ಕೆ ಹಾಕಿ ಸಿಕ್ಕಿದ ಎರಡು ನೋಟು ತೆಗೆದು ಮಕ್ಕಳ ಕ್ಕೆಯಲ್ಲಿ ಇರಿಸಹೋದ. ಆವಳು ತಡೆದಳು. "ನಿಮ್ಗೇನಾಗಿದೆ ಸಾ?  ನಮ್ಗೇನ್ಸಾ ಕಡಿಮೆಯಾಗಿರೋದು?  ಒಳ್ಳೇ ಸಂಪ್ರದಾಯವಾದಿ ಆಗ್ಬಿಟ್ರಲ್ಲಾ?"

ಅವನಿಗೆ ಪಿಚ್ಚನಿಸಿತು. "ಇದ್ರಲ್ಲಿ ಸಂಪ್ರದಾಯ ಏನ್ಬಂತು ? ನಿನ್ಮಕ್ಳಿಗೆ ಇಷ್ಟಾದ್ರೂ ಕೊಡ್‍ಬೇಡ್ವೇ ನಾನು.  ಅವಳು ಮತ್ತೆ ನಕ್ಕಳು "ಈಗ ನೀವು ಹೋತ್ತಿರೋ ದೇವಾಲಯದ ಅರ್ಚಕರಿಗೆ ತುಂಬಾ ಮಕ್ಳು. ಅವ್ರಲ್ಲಿ ಯಾರಿಗಾದ್ರೂಕೊಟ್ಟು ಪುಣ್ಯ ಕಟ್ಕೊಳ್ಳಿ."

ಆವನು ಮುದುಡಿ ಹೋದ. ನೋಟು ಬುಕ್ಕು, ಪೆನ್ನು, ಕ್ಯಾಮರಾ ಹಿಡ್ಕೊಂಡು ಹೊರ ಬಂದ. ಮುರ್ಳೀ, ದೇವಸ್ಥಾನದಿಂದ ನೇರ ನಮ್ಮನೆಗೇ ಕರ್‍ಕೊಂಬಂದ್ಬಿಡು" ಎಂದು ಅವನ ಮಾರ್ಗದರ್ಶಕನನ್ನು ಎಚ್ಚರಿಸಿದಳು. "ಬೆಟ್ಟಕ್ಕೆ ಕಾರಲ್ಲಿ ಹೋಗ್ತೀರಾ" ಎಂದು ಆವಳು ಕೇಳಿದ್ದಕ್ಕೆ, "ಇಲ್ಲ, ಊರು ನೋಡ್ಬೇಕು" ಅಂದ.

ಮುರ್ಳಿ ಮುಂದಿನಿಂದ, ಅವನು ಹಿಂದೆ.  ಒಳಹಾದಿಯಲ್ಲಿ ಹೋಗುವಾಗ ಊರನ್ನು ವೀಕ್ಷಿಸುತ್ತಾ ನಡೆದ.  ಪೇಟೆ ಸಣ್ಣದು.  ಊರಾಚೆ ಮೈದಾನ.  ಅದರ ತುದಿಯಲ್ಲಿ ಎಡಭಾಗಕ್ಕೆ ಬೆಟ್ಟ.  ಅದರ ಮೇಲೆ ಬಹುದೂರಕ್ಕೆ ಕಾಣುವ ದೇವಾಲಯ.

ಮುರ್ಳಿ ಅವನಿಗೆ ತುಂಬಾ ಗೌರವ ಕೊಡುತ್ತಿದ್ದ.  ದನಿಯ ಹೆಂಡತಿ "ಸಾ" ಎಂದು ಕರೆಯುತ್ತಿದ್ದುದನ್ನು ಅವನು ಕೇಳಿಸಿಕೊಂಡಿದ್ದ.  ಬಿ. ಎ. ವರೆಗೆ ಓದಿದ್ದ ಹುಡುಗ  ಚುರುಕಾಗಿದ್ದ ಮುರ್ಳಿಯನ್ನು ಅವನೇ ಮಾತಿಗೆಳೆಯಬೇಕಾಯಿತು. ಅವಳ ಬಗ್ಗೆ, ಅವಳ ಸಂಸಾರದ ಬಗ್ಗೆ ಕೇಳಿದ್ದಕ್ಕೆ ಮುರ್ಳಿ ಗೌರವದಿಂದ ಉತ್ತರಿಸಿದ.  ದನಿಗಳ ಬಗ್ಗೆಯೂ ಹೇಳಿದ. "ಇಬ್ರೂ ಬಾಳಾ ಒಳ್ಳೇವ್ರು ಸಾ.  ಒಂದು ದಿನಾನೂ ಜಗ್ಳಾ ಆಡಿದ್ದನ್ನು ಯಾರೂ ಕಂಡಿಲ್ಲ.  ಅಮ್ಮ ನಮ್ಗೆ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸ್ತಾರೆ.  ತಿಂಗ್ಳಿಗೊಂದು ಪೂಜೆ ಮಾಡ್ಸಿ ಊಟ ಹಾಕ್ತಾರೆ. ಪ್ರತಿವರ್ಷ ಸಂಬ್ಳಾ ಏರಿಸ್ತಾರೆ.  ಆದ್ರೆ ಸಾ ದೇವ್ರಿಗೆ ಕಣ್ಣಿಲ್ಲ.  ಇರೋ ಇಬ್ಬರು ಮಕ್ಳಿಗೂ ಮಂದ ಬುದ್ದಿ. ರಕ್ತ ಸಂಬಂಧದಲ್ಲೇ ಮದ್ವಿಯಾಗಿರೋದ್ರಿಂದ್ಲೇ ಹಿಂಗಾಯ್ತಂತೆ.  ಅಮ್ಮಾವ್ರ ನಂತ್ರ ಇವ್ರ ಹಣಕ್ಕಾಗಿ ಏನೇನೋ ನಡಿಯೋದೂಂತ ಜನಾ ಆಡ್ಕೋತಾರೆ ಸಾ."

ಮುರ್ಳಿಯ ದನಿಯಲ್ಲಿನ ವಿಷಾದದ ಛಾಯೆ ಅವನನ್ನು ಮುತ್ತಿಕೊಂಡಿತು.  ಅವಳು ಕಾಲೇಜಿನಲ್ಲಿ ಇದ್ದಾಗಿನ ದಿನಗಳನ್ನು ನೆನೆದುಕೊಂಡ.  ಸಾಹಿತ್ಯದ ಬಗ್ಗೆ ಅವನು ಚುರುಕಾಗಿ ಓಡಾಡಲು ಕಾರಣವಾಗಿದ್ದವಳು ಅವಳೇ.  ಅವನ ವಿಚಾರಗಳಿಗೆ ಹೊಸ ದಿಕ್ಕನ್ನು ಕೂಡಾ ಆಕೆ ಒಮ್ಮೊಮ್ಮೆ ತೋರಿಸುತ್ತಿದ್ದಳು.  ಸಂಪ್ರದಾಯಗಳೆಲ್ಲಾ ಸ್ತ್ರೀ ಶೋಷಣೆಯ ಪರಿಕರಗಳೆಂದೂ, ಗಂಡಿನಷ್ಟೇ ಸ್ವಾತಂತ್ರ್ಯ ನೀಡದ ಸಮಾಜ ವೈಜ್ಞಾನಿಕವಾಗಿ ಎಂದಿಗೂ ಮುಂದುವರಿಯದೆಂದೂ ಆಕೆ ಆಗಾಗ ವೇದಿಕೆಗಳಲ್ಲಿ ಹೇಳುತ್ತಿದ್ದುದು ಅವನಿಗೆ ನೆನಪಾಯಿತು.  ಅವಳಿಗೆ ಮಂದ ಬುದ್ದಿಯ ಮಕ್ಕಳು !

ಅವನಿಂದ ಅದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಯಿತು.  ಅವರಾಗ ಮೈದಾನ ದಾಟಿ ಬೆಟ್ಟ ಹತ್ತಲು ತೊಡಗಿದ್ದರು.  ತಂಗಾಳಿ ಮೃದುವಾಗಿ ತೀಡತೊಡಗಿತ್ತು.  ಹತ್ತುತ್ತಿದ್ದಂತೆ ಮುರ್ಳಿ ಹೇಳಿದ.  "ಇದಕ್ಕೆ ತಿಮ್ಮನ ಬೆಟ್ಟ ಅಂತಾರೆ."

ಆವನ ಕಿವಿಗಳು ಚುರುಕಾದವು.  ಎಲ್ಲಿಯ ತಿಮ್ಮ, ಎಲ್ಲಿಯ ಪಶುಪತಿ?  ಅವನು ಕುತೂಹಲದಿಂದ ಕೇಳಿದ. "ಯಾಕೇಂತ ನಿಂಗೆ ಗೊತ್ತಾ ಮುರ್ಳಿ?"  ಮುರ್ಳಿ ಹೇಳುತ್ತಾ ಹೇಳುತ್ತಾ ಹೋದ.  "ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತೆ ಸಾ. ಜಾತ್ರೆಗೆ ಹತ್ತು ದಿನಕ್ಕೆ ಮೊದ್ಲು ಧ್ವಜಾ ಏರಿಸ್ತಾರೆ.  ಇಲ್ಲಿನ ಧ್ವಜಕಂಬ ಭಾಳಾ ಎತ್ರದ್ದು. ಒಂದ್ಸಲಾ ಧ್ವಜಾ ಏರ್ಸೋವಾಗ ಹಗ್ಗ ಸಿಕ್ಕೊಂಬುಡ್ತು.  ಧ್ವಜಾ ಮೇಲೇರ್ಲೇ ಇಲ್ಲ.  ಸೇರಿದ್ದ ಜನ ಅಪಶಕುನ ಆಗೋಯ್ತು ಅಂತಾ ಆಡ್ಕೊಂಡ್ರು.  ಅಷ್ಟೆತ್ರದ ಕಂಬ ಹತ್ತಿ ಹಗ್ಗ ಸರಿ ಮಾಡೋ ಧೈರ್ಯ ಯಾರ್‍ಗೂ ಬರ್ಲಿಲ್ಲ.  ಆಗ ಧೈರ್ಯ ಮಾಡಿ ಹತ್ತಿದೋನು ಈ ತಿಮ್ಮ."

"ಓ ! ಅದ್ಕೇ ಇದು ತಿಮ್ಮನ ಬೆಟ್ಟ ಆಗೋಯ್ತಾ?"

"ಇಲ್ಲಿ ಕೇಳಿ ಸಾ. ತಿಮ್ಮ ಆಷ್ಟೆತ್ರದ ಕಂಬಕ್ಕೆ ಹತ್ತಿ ಹಗ್ಗ ಬಿಡಿಸೋವಾಗ ಆ ಮರದ ಕಂಬ ಲಟಾರ ಮುರಿದೋಯ್ತು. ಆಯತಪ್ಪಿ ತಿಮ್ಮ ಬಿದ್ಬಿಟ್ಟ. ಧ್ವಜಕಂಬದ ಎದ್ರು ಬಲಿಕಲ್ಲೂಂತ ಇದೆಯಲ್ಲಾ ಸಾ.  ಆದ್ಕೆ ತಲೆ ತಾಗಿ ದೇವ್ರಿಗೆ ಕಾಯಿ ಒಡೀತಾರಲ್ಲಾ ಸಾ.  ಹಾಗೆ ಚೂರು ಚೂರು ಆಗೋಯ್ತು."

ಮುರ್ಳಿ ಮುಖ ಕಿವುಚಿಕೊಂಡ.  ಅವನೂ ಒಂದು ಕ್ಷಣ ವಿಷಾದದ ಮೌನದಲ್ಲಿದ್ದ.  ಮತ್ತೆ ನಿಧಾನವಾಗಿ ಕೇಳಿದ.  "ಇದೆಲ್ಲಾ ನೀನು ನೋಡಿದ್ದಾ?"

"ಅಯ್ಯೋ ಎಲ್ಬಂತು ಸಾ?  ಇದು ನಮ್ಮಜ್ಜ ಹೇಳಿದ ಕತೆ.  ಎಷ್ಟು ವರ್ಷ ಹಿಂದ್ಲಿದ್ದೋ !  ಆ ವರ್ಷ ಜಾತ್ರೆ ನಿಂತು ಹೋಯ್ತಂತೆ.  ಕೇರಳದಿಂದ ಯಾರನ್ನೋ ಕರ್‍ಸಿ ಅಷ್ಟಮಂಗ್ಲ ಪ್ರಶ್ನೆ ಕೇಳಿದ್ರಂತೆ.  ದೇವಸ್ಥಾನ ಮೈಲಿಗೆ ಆಯ್ತೂಂತ ಅದ್ರಲ್ಲಿ ಕಂಡುಬಂತಂತೆ.  ಆ ಮೇಲೆ ಕಲ್ಲಿನ ಕಂಬ ಮಾಡ್ಸಿ ಬ್ರಹ್ಮಕಳ್ಸಾ ಅಂತೇನೇನೋ ನಡ್ಸೀ, ಮರುವಷ ಜಾತ್ರೆ ಮಾಡಿದ್ರಂತೆ.  ತಿಮ್ಮ ಹೀರೋ ಆಗ್ಬಿಟ್ಟ.  ಆಲ್ಲೀವರ್ಗೆ ಪಶುಪತಿ ಬೆಟ್ಟ ಆಂತಿದ್ದದ್ದು ಜನ್ರ ಬಾಯಲ್ಲಿ ತಿಮ್ಮನ ಬೆಟ್ಟ ಅಂತಾಗೋಯ್ತು."

"ಒಳ್ಳೆ ಹೆಸ್ರು ಬಿಡು. ಹಾಗಾದ್ರೂ ತಿಮ್ಮ ಉಳ್ಕೊಂಡ್ನಲ್ಲಾ?"

"ಅದೂ ಹೋಗಿ ಬಿಡೋದ್ರಲ್ಲಿತ್ತು ಸಾ.  ಈ ಊರು ಚಿಕ್ಕದಾದ್ರೂ‌ ಇಲ್ಲಿನ ಪಾಲ್ಲಿಟಿಕ್ಸು ತುಂಬಾ ಜೋರು.  ಮೊನ್ನೆ ಮೊನ್ನೆ ಇಲ್ಲಿ ಕೆಲ್ಸಾ ಇಲ್ದ ಪುಂಡ್ರು ಸೇರ್‍ಕೊಂಡು ಬೆಟ್ಟಕ್ಕೆ ವಿಷ್ಣುಗಿರಿ ಆಂತ ಹೆಸರಿಡೋದಕ್ಕೆ ಹೊರಟ್ರು ಆದ್ರೆ ಇಲ್ಲಿ ತಿಮ್ಮನ ಜಾತಿಯವರದ್ದೇ ಮೆಜಾರಿಟಿ.  ಮೇಲಾಗಿ ಇಲ್ಲಿನ ಅರ್ಚಕರು ಶೈವ್ರು.  ವಿಷ್ಣುವಿನ ಹೆಸ್ರಿಡೋದಕ್ಕೆ ಸುತಾರಾಂ ಒಪ್ಪೇ ಇಲ್ಲ.  ಆಗ ದೊಡ್ಡ ಹೊಡ್ದಾಟ ನಡೀತು ಸಾ.  ಸೆಂಟ್ರಲ್ ರಿಸರ್ವು ಬಂದು ಟಿಯರ್ ಗ್ಯಾಸ್ ಬಿಟ್ಟು.  ಒಂದು ವಾರ ಇಲ್ಲೇ ಜಂಡಾ ಹೊಡದ್ರು. ಊರ ಹಿರೀರೆಲ್ಲಾ ಸೇರಿ ಶಾಂತಿ ಸಭೆ ಮಾಡಿ, "ಹೆಸ್ರಿಗೊಂದು ಇತಿಹಾಸ ಇರತ್ತೆ.  ಆದ್ರಿಂದ ಯಾವುದೇ ಹೆಸ್ರನ್ನು ಬದಲಾಯಿಸೋದು ತಪ್ಪು" ಅಂತ ತೀರ್ಮಾನಕ್ಕೆ ಬಂದ್ರು. ಕೊನಿಗೂ ತಿಮ್ಮನ ಬೆಟ್ಟ ಅನ್ನೋ ಹೆಸ್ರೇ ಉಳಿಸಿಕೊಂಡ್ರು. "

ಮಾತಾಡುತ್ತಾ ಆವರು ದೇವಾಲಯದ ಆಂಗಣಕ್ಕೆ ಬಂದು ಮುಟ್ಟಿದರು.  ಅಲ್ಲಿಂದ ಇಡೀ ಊರು ಕಾಣುತ್ತಿತ್ತು.  ಬೆಂಕಿ ಪೊಟ್ಟಣದ ಹಾಗೆ ಮನೆಗಳು.  ಇರುವೆಗಳ ಹಾಗೆ  ಮನುಷ್ಯರು.  ಊರನ್ನು ಸುತ್ತಲೂ ತಬ್ಬಿಕೊಂಡಿರುವ ಹಸಿರು.  ಊರಾಚೆ ವಿಶಾಲವಾದ ಕೆರೆ.  ಅದಕ್ಕೂ ಆಚೆ ಚೌಕಾಕಾರದ ಹೊಲಗಳು.

ಅಂಗಣ ಸಾಕಷ್ಟು ದೊಡ್ಡದಿತ್ತು.  ಬಲಬದಿಯಲ್ಲಿ ಉದ್ದಕ್ಕೊಂದು ಕಟ್ಟಡ.  ಎಡಬದಿಯಲ್ಲೊಂದು ಚಪ್ಪರ.  "ಆಲ್ಲಿ ಬಲಕ್ಕಿರೋದು ಬಾಮಿನ್ಸಿಗೆ ಸಾ. ಎಡಕ್ಕಿರೋದು ಶೂದ್ರರಿಗೆ.  ಮುಟ್ಟಿಸ್ಕೋಬಾರ್ದೋರು ಅಲ್ಲಿ ದೂರ ನಿಂತ್ಕೋತಾರೆ.  ಭಾರಿ ಕಾರ್ಣಿಕದ ದೇವಸ್ಥಾನ ಸಾ ಇದು.  ಅದ್ಕೆ ಮಡಿ ಜಾಸ್ತಿ.  ಜಾತ್ರೆಗೆ ದಿನಾ ಊಟ ಇರತ್ತೆ. ಹತ್ತೂರ ಜನಾ ಸೇರ್ತಾರೆ.  ಭಾರೀ ಮಜಾ ಇರತ್ತೆ ಸಾ.  ನೀವು ಜಾತ್ರೆಗೆ ಬರ್ಬೇಕಿತ್ತು."  ಮುರ್ಳಿ ಮಾತಲ್ಲೇ ಜಾತ್ರೆಯ ಸುಖ ಅನುಭವಿಸಿದ.

ಮುರ್ಳಿ ಹೇಳಿದ್ದಕ್ಕೆಲ್ಲಾ ಅವನು ಹೂಂಗುಟ್ಟುತ್ತಿದ್ದ.  ಪ್ರವೇಶ ದ್ವಾರದ ಬಳಿ ಬಂದಾಗ ಅವನ ದೃಷ್ಟಿ ಧ್ವಜ ಕಂಬದತ್ತ ಹೋಯಿತು. ಅಷ್ಟೆತ್ತರದಿಂದ ಬಿದ್ದು  ಬಲಿಕಲ್ಲಿಗೆ ತಲೆಯನ್ನು ತೆಂಗಿನಕಾಯಿಯಾಗಿಸಿದ ತಿಮ್ಮನ ನೆನಪಾಗಿ ಕಸಿವಿಸಿಯಾಯಿತು.  ಪ್ರವೇಶದ್ವಾರದ ಕೆತ್ತನೆಯ ಕೆಲಸಗಳು ಆಕರ್ಷಕವಾಗಿದ್ದರೂ ಅವುಗಳಲ್ಲಿ ಅವನಿಗೆ ವಿಶೇಷವಾದುದೇನೂ ಕಾಣಿಸಲಿಲ್ಲ.

ಪ್ರವೇಶದ್ವಾರದ ಒಳಬದಿಗೆ ಬಂದು ಮೇಲ್ಭಾಗದತ್ತ ದೃಷ್ಟಿ ಹಾಯಿಸಿದ.  ಎತ್ತರದ ಭಾಗದಲ್ಲಿ ಅವನಿಗೆ ಬೇಕಾದುದು ಕಣ್ಣಿಗೆ ಬಿತ್ತು.  ವಿವಿಧ ಭಂಗಿಯ ಮಿಥುನ ಶಿಲ್ಪಗಳು!  ಅವನು ನೋಡುತ್ತಾ ಹಾಗೇ ನಿಂತುಬಿಟ್ಟ.  ಭುಜಕ್ಕೆ ತೂಗು ಹಾಕಿದ ಕ್ಯಾಮರಾದಿಂದ ನಾಲ್ಕೈದು ಫೋಟೋ ಹೊಡೆದ. ಮುರ್ಳಿ ಇದನ್ನು ನೋಡಿ "ಆಲ್ಲೇನಿದೇಂತ ಪೋಟೋ ಹೊಡೀತೀರಾ ಸಾ?  ಇಲ್ಲಿ ಬನ್ನಿ. ದೇವ್ರು ಇಲ್ಲಿದ್ದಾನೆ" ಎಂದು ಗರ್ಭಗುಡಿಯತ್ತ ಕ್ಕೆ ತೋರಿಸಿದ.

ಅವನು "ನೀನಿವುಗಳನ್ನು ನೋಡಿದ್ದೀಯಾ ಮುರ್ಳಿ" ಎಂದು ಶಿಲ್ಪಗಳನ್ನು ತೋರಿಸಿದ.  ಅದೇನೆಂದು ಮುರ್ಳಿಗೆ ನಿಧಾನವಾಗಿ ಆರ್ಥವಾಗತೊಡಗಿ ಅವನು ಕೆಂಪೇರುತ್ತಾ  ಹೋದ.  "ಥೂ ಪೋಲಿ ಶಿಲ್ಪಗಳು ಸಾ. ಅಸಯ್ಯ" ಎಂದು ಮುಖ ಕಿವುಚಿದ.  "ಇಲ್ಲಿಗೆ ವಾರಕ್ಕೊಮ್ಮೆ ಬರ್ತಿರ್ತೀನಿ ಸಾ ‌ಆದ್ರೆ ಇವನ್ನ ನೋಡೋದು ಇದೇ ಮೊದ್ಲು.  ಇವನ್ನು ನೋಡ್ತಾ ಇದ್ರೆ ದೇವ್ರ ನೆನಪಾಗೋದುಂಟಾ ಬನ್ನಿ ಸಾ ದೇವರತ್ರ ಹೋಗಾನ" ಎಂದು ಕೈ ಹಿಡಿದೆಳೆದ.

ಅಲ್ಲಿದ್ದದ್ದು ಅರ್ಚಕರು ಮಾತ್ರ.  ಅವರಿಬ್ಬರ ಮಾತು ಕೇಳಿ ದೂರದಲ್ಲಿದ್ದ ಅವರು ಕುತೂಹಲದಿಂದ ಹತ್ತಿರ ಬಂದರು.  ದೇವಾಲಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಅವನ ವಿಚಾರ ತಿಳಿದು ಸಂತೋಷಪಟ್ಟರು.  ಅರ್ಚಕರು ಒಂದು ಒಂದು ಫೋಟೋ ತೆಗೆದಾಗ ಅವರು ಖುಷಿಯಿಂದ ಜನಿವಾರ ನೀವಿಕೊಂಡರು. ಮುರ್ಳಿಯೂ ಒಂದು ಪೋಸು ಕೊಟ್ಟ.  ಮುರ್ಳಿ ಅಡ್ಡಬಿದ್ದು ಪ್ರಸಾದ ತೆಗೆದುಕೊಳ್ಳುವಾಗ ಆತ ಇನ್ನೊಂದು ಫೋಟೋ ಹೊಡೆದ.  ಮುರ್ಳಿಗೆ ತುಂಬಾ ಖುಷಿಯಾಯಿತು.

ಒಳಭಾಗದ ಕಲ್ಲು ಹಾಸಿನ ಮೇಲೆ ಮೂವರೂ ಕೂತರು.  ದೇವಾಲಯದ ಇತಿಹಾಸ ಅರ್ಚಕರಿಗೆ ಗೊತ್ತಿರಲಿಲ್ಲ.  ಸ್ಥಳ ಪುರಾಣದ ಬಗ್ಗೆ ತುಂಬಾ ಹೇಳಿದರು.  "ನೀವು ಮುರ್ಳಿಗೆ ತೋರಿಸುತ್ತಿದ್ರಲ್ಲಾ ಆ ಶಿಲ್ಪಗಳು.  ಅವುಗಳನ್ನು ದೇವಸ್ಥಾನದಲ್ಲೇಕೆ ಕೆತ್ತುತ್ತಾರೆ ಆನ್ನೋದು ನನಗೆ ಇನ್ನೂ ಗೊತ್ತಾಗಿಲ್ಲ.  ಮುರ್ಳಿಗೆ ಹೇಳುತ್ತಿದ್ದುದೆಲ್ಲಾ ನನಗೆ ಕೇಳಿಸ್ತು. ಆದ್ರೆ ಸಂಶಯ ಹಾಗೆ ಉಳ್ಕೊಂಬಿಟ್ಟಿದೆ."

ಅವನು ನಕ್ಕ.  "ನಾನು ಓದಿ ತಿಳ್ಕೊಂಡಿರೋದನ್ನ ಹೇಳಬಲ್ಲೆ.  ಬಹಳ ಹಿಂದೆ ದೇವಾಲಯಗಳು ಊರಿನ ಇಡೀ ಸಾಂಸ್ಕೃತಿಕ ಬದುಕನ್ನು ರೂಪಿಸುತ್ತಿದ್ದುವಂತೆ.  ಬರೀ ನಮಸ್ಕಾರ ಮಾಡಲು ಜನ ದೇವಾಲಯಕ್ಕೆ ಬರುತ್ತಿದ್ದುದಲ್ಲ.  ಹುಟ್ಟು, ಮದುವೆ, ಸಾವು, ಹಬ್ಬ ಎಲ್ಲಾ ದೇವಾಲಯಗಳಲ್ಲೇ ಆಚರಿಸಲ್ಪಡುತ್ತಿದ್ದುವಂತೆ.  ಸೃಷ್ಟಿಗೂ ದೇವಾಲಯಗಳು ಮಹತ್ವ ನೀಡುತ್ತಿದ್ದವಂತೆ.  ಅದಕ್ಕೇ ಪೂಜಾಸ್ಥಳಗಳಲ್ಲಿ ಮೈಥುನದ ಶಿಲ್ಪಗಳನ್ನು ಕೆತ್ತಿದರು.  ಸೃಷ್ಟಿ ಕ್ರಿಯೆಯಲ್ಲಿ ದ್ಯೆವತ್ವವನ್ನು ಕಂಡರು.  ಲಿಂಗ ಮತ್ತು ಪಾಣಿ ಪೀಠಗಳ ಸಂಕೇತ ನಿಮಗೆ ಗೊತ್ತಲ್ಲಾ?"

ಅವನ ಪ್ರಶ್ನೆಗೆ ಅರ್ಚಕರು ಗಹಗಹಿಸಿ ನಕ್ಕರು.  ಮುರ್ಳಿ ತನ್ನ ಕೈಯ ಕರವಸ್ತ್ರವನ್ನು ತಿರುಚಿದ ಕೆಳತುಟಿಯನ್ನು ಕಚ್ಚಿಕೂಂಡ.  "ನೀವು ಹೇಳೋದನ್ನು ನಾನು ನಂಬೋಲ್ಲ ಸಾ" ಎಂದು ಕಷ್ಟಪಟ್ಟು ಹೇಳಿದ.

ಅರ್ಚಕರ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು.  "ನಿಮ್ಮ ತರ್ಕ ಸರಿ.  ಇಲ್ಲಿಗೆ ಬರೋ ಜನನ್ನ ನೋಡಿದ್ರೆ ನಂಗೇ ಒಮ್ಮೊಮ್ಮೆ ಬೇಸರ ಆಗುತ್ತೆ.  ಎಲ್ಲಾ ಆಚಾರ ಮತ್ತು ಶೋ ಮಾತ್ರ.  ವಿಚಾರ ಏನೂ ಇರೋದಿಲ್ಲ.  ವಿಚಾರವೇ ಇಲ್ಲದ ಆಚಾರಕ್ಕೆ ಏನು ಆರ್ಥವಿದೆ ಆಲ್ವೆ?"

ಆವನು ತಲೆದೂಗಿದ.  "ನನ್ನ ಆಧ್ಯಯನಕ್ಕೆ ನಿಮ್ಮ ಸಹಾಯ ಬೇಕು.  ಈ ದೇವಾಲಯದ ಇತಿಹಾಸ ನನಗೆ ಎಲ್ಲಿ ಸಿಗಬಹುದು ಹೇಳ್ತೀರಾ?"

"ಓಹೋ ಅದಕ್ಕೇನು? ನೀವು ಇವರ ದೊಡ್ಡ ದನಿಗಳನ್ನು ನೋಡಿದ್ರಾಯ್ತು.  ಪಾಪ ವಯಸ್ಸಾಗಿದೆ.  ಅವರಷ್ಟು ತಿಳ್ಕೊಂಡಿರೋರು ಈ ಫಾಸಲೆಯಲ್ಲಿ ಯಾರೂ ಇಲ್ಲ.  ದೇವಾಲಯದ ಕಲ್ಲು ಕಲ್ಲೂ ಆವರಿಗೆ ಗೊತ್ತು.  ಅವ್ರನ್ನೇ ಕೇಳಿ ತಿಳ್ಕೊಂಡ್ರಾಯ್ತು ಬಿಡಿ" ಎಂದು ಅರ್ಚಕರು ಮುರ್ಳಿಗೆ ಒಂದು ಪೊಟ್ಟಣ ಕೊಟ್ಟು "ಯಜಮಾನ್ರಿಗೆ ಪ್ರಸಾದ" ಎಂದು ಇವನತ್ತ ನೋಡಿ "ನೀವು ನಮಸ್ಕಾರ ಮಾಡಿದ್ದನ್ನ ನೋಡ್ಲಿಲ್ಲ.  ಬಲವಂತತಕ್ಕೆ ಪ್ರಸಾದ ಕೊಡೋವನಲ್ಲ ನಾನು" ಎನ್ನುತ್ತಾ ನಕ್ಕರು.

ಅವನೂ ನಕ್ಕ.  "ಸಾಂಸ್ಕೃತಿಕವಾಗಿ ದೇವಾಲಯಗಳು ಮಹತ್ವ ಪಡೆದರೆ, ಎಲ್ಲಾ ಜಾತಿಗಳ ಜನರನ್ನು ಸಮಾನವಾಗಿ ದೇವಾಲಯಗಳಿಗೆ ನೋಡೋಕ್ಕೆ ಸಾಧ್ಯವಾದರೆ  ಎಷ್ಟು ಒಳ್ಳೆಯದಿತ್ತು ಅಲ್ವಾ?  ಹಣ ಮತ್ತು ಜಾತಿಯೇ ದೇವರಿಗೆ ಮುಖ್ಯ ಎಂದಾಗ ಕೂಡದು ಎನ್ನುವವ ನಾನು.  ಆದುದರಿಂದ ಇನ್ನೂ ನನ್ನ ಕೆಲವು ಸಂಶಯಗಳು ಹಾಗೆ  ಉಳಿದಿವೆ" ಅಂದ.

ಅವನು ನಿಧಾನವಾಗಿ ಎದ್ದ.  "ಪ್ರಯಾಣದ ಸುಸ್ತು.  ನಾಳೆ ಬೆಳಿಗ್ಗೇ ಬಂದ್ಬಿಡ್ತೀನಿ.  ನಿಮ್ಮಿಂದ ತುಂಬಾ ತಿಳ್ಕೋಬೇಕು ನಾನು" ಎಂದದ್ದಕ್ಕೆ ಅರ್ಚಕರು, "ನೀವು  ಎಷ್ಟೊಂದು ಓದ್ಕೊಂಡಿದೀರಿ!  ಬಾಳಾ ಇಂಟ್ರೆಸ್ಟಿಂಗ್ ಇದ್ದೀರಿ ನೀವು!  ನಾಳೆ ಸಂಜೆ ನನಗೆ ಬಿಡುವಿರತ್ತೆ.  ದೇವಾಲಯಗಳ ಬಗ್ಗೆ ನೀವು ಓದಿದ್ದನ್ನು ಹೇಳಿದ್ರೆ ಸಾಕು. ನಂಗೂ ಒಂದು ಚೇಂಜು ಸಿಗುತ್ತೆ" ಎಂದು ಅವನನ್ನು ಬೀಳ್ಕೊಟ್ಟರು.

ವಾಪಸ್ಸು ಬರುವಾಗ ಮುರ್ಳಿ ಮಾತಾಡಲೇ ಇಲ್ಲ.  ಶಿಲ್ಪಗಳನ್ನು ನೋಡಿದ ಶಾಕ್‍ನಿಂದ ಆತ ಹೊರಬಂದಿರಲಿಲ್ಲ.  ಅರ್ಚಕರ ಮಾತು ಆವನನ್ನು ಮತ್ತಷ್ಟು, ಗೊಂದಲಕ್ಕೆ ದೂಡಿತ್ತು.  ಮೌನದಲ್ಲಿ ದಾರಿ ಸಾಗಿತು.

ಅವಳ ಮನೆಗೆ ಮುಟ್ಟುವಾಗ ಮಬ್ಬುಗತ್ತಲು ಕವಿಯುತ್ತಿತ್ತು.  ಮುರ್ಳಿ ಕಂಪೌಂಡು ಗೇಟಿನಿಂದಲೇ ಆವನನ್ನು ಬೀಳ್ಕೊಂಡ.  "ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ  ಬರ್ತಿಯಾ ಮುರ್ಳಿ" ಎಂದು ಕೇಳಿದ್ದಕ್ಕೆ  "ನೋಡೋಣ" ಎಂದು ವಿಶ್ವಾಸವೇ ಇಲ್ಲದ ದನಿಯಲ್ಲಿ ಅವನು ಉತ್ತರಿಸಿದ.

ಅವಳದು ದೊಡ್ಡ ಮನೆ.  ಮಾವನಿಗೆ ಪಾರ್ಶ್ವವಾಯು.  ಅತ್ತೆ ಹಿಂದಿನ ವರ್ಷ ತೀರಿಕೊಂಡಿದ್ದರು.  ಮನೆಯಲ್ಲಿ ಇಬ್ಬರು ಆಳುಗಳು.  ಅವಳು ಮನೆಯನ್ನು ತೋರಿಸುತ್ತಾ ಅವನನ್ನು ದೊಡ್ಡದಾದ ಕೋಣೆಯೊಂದಕ್ಕೆ ಕರೆದುಕೊಂಡು ಹೋದಳು.  ಅಲ್ಲಿ ಆರು ಕಪಾಟು ಭರ್ತಿ ಪುಸ್ತಕಗಳು!  ಇದು ನಿಮ್ದೇ ಪ್ರಭಾವ ಸಾ.  ಈಗ್ಲೂ ಎಷ್ಟೊಂದು ಓದ್‍ತಿರ್ತೀನಿ ಗೊತ್ತಾ?"  ಎಂದು ಹೆಮ್ಮೆಯಿಂದ ಹೇಳಿಕೊಂಡಳು.  ನಿಮಗೆ ಇಲ್ಲಿ ವ್ಯವಸ್ಥೆ ಮಾಡಿದ್ದೀನಿ" ಎಂದು ಮಹಡಿ ತೋರಿಸಿ ಮೇಲಕ್ಕೆ ಹತ್ತಿದಳು.  ಒಂದು ಕೋಣೆಯ ಬಾಗಿಲು ತೆಗೆದು, "ನಿಮ್ಮ ಸ್ಟಡಿ ಮುಗಿಯೋವರ್ಗೂ ಇದು ನಿಮ್ದೇ" ಎಂದಳು.

ಡಬಲ್‍ಕಾಟ್ ಹಾಕಿದ ದೊಡ್ಡ ಕೋಣೆ ಅದು.  ವಾರ್ಡ್ರೋಬ್, ನಿಲುವುಗನ್ನಡಿ, ಬುಕ್‍ರ್‍ಯಾಕ್, ಟೇಬಲ್ಯಾಂಪು, ಸ್ಟೀರಿಯೋ ಉಳ್ಳ ಏರ್ಕಂಡಿಶನ್ಡ್ ರೂಮು.  ಅದಕ್ಕೆ ಅಟ್ಯಾಚ್ಡ್ ಬಾತ್‍ರೂಂ ಮತ್ತು ಟ್ಯಾಲೆಟ್ಟು.  ಅವನ ಬ್ಯಾಗು ಆಲ್ಲೇ ಟೇಬಲ್ ಮೇಲೆ ಅವನನ್ನು ಕಾಯುತ್ತಿತ್ತು.  "ನಲ್ಲಿಯಲ್ಲಿ ಬಿಸಿನೀರು ಬರ್ತದೆ.  ಆರ್ಧ ಗಂಟೆಯಲ್ಲಿ ಎಲ್ಲಾ ಮುಗ್ಸಿ ಊಟಕ್ಕೆ ಕೆಳಕ್ಕೆ ಬಂದ್ಬಿಡಿ. ಮಾವ ಕಾದಿರ್ತಾರೆ" ಎಂದು ಕೆಳಗಿಳಿದು ಹೋದಳು.

ಹಿತವಾದ ಬಿಸಿನೀರು ಸ್ನಾನ ಮುಗಿಸಿ ಅವನು ಕೆಳಗಿಳಿದ.  ಮಾವ ವೀಲ್‍ಚೇರ್ನಲ್ಲಿ ಕೂತು ಟಿ.ವಿ. ನೋಡುತ್ತಿದ್ದರು. ಅವನು ನಮಸ್ಕಾರ ಮಾಡಿದಾಗ ಬಲದ ಕೈ ಎತ್ತಿದರು.  ಅವಳು ಮಾವನ ಪಕ್ಕದ ಚೇರೊಂದರಲ್ಲಿ ಕೂತು ಅವನನ್ನು ಕಾಯುತ್ತಿದ್ದಳು.  ಮಾವ ನಿಧಾನವಾಗಿ "ನಿಮ್ಮ ಬಗ್ಗೆ ಎಲ್ಲಾ ಹೇಳಿದ್ಲು. ನೀವು ದೇವಸ್ಥಾನಗಳ ಬಗ್ಗೆ ಏನೋ ರಿಸಚ್೯ ಮಾಡ್ತೀದ್ದೀರಂತೆ." ಯಾವ ಸಬ್ಜೆಕ್ಟು ಎಂದು ಕೇಳಿದರು.

ಅವರ ನೇರಕ್ರಮ ಅವನಿಗೆ ತುಂಬಾ ಹಿಡಿಸಿತು.  "ದೇವಾಲಯಗಳ ಮಿಥುನ ಶಿಲ್ಪಗಳು ನನ್ನ ಸಬ್ಜೆಕ್ಟು.  ಆರಾಧನಾ ವಿಧಾನಗಳ ವಿಕಾಸದ ಬಗ್ಗೆಯೂ ಟಚ್ಚ್ ಮಾಡ್ತಿದೀನಿ.  ನಿಮ್ಮ ದೇವಾಲಯದಲ್ಲಿ ಕೆಲವು ಹೊಸ ಶಿಲ್ಪಗಳನ್ನು ನೋಡಿದೆ" ಎಂದ.

ಅವರ ಬಲ ಹುಬ್ಬು, ಒಮ್ಮೆ ಮೇಲೇರಿತು.  "ನನಗೆ ಇನ್ನೂ ಅರ್ಥವಾಗಿಲ್ಲ ನೋಡಿ ಸಾಮಾನ್ಯವಾಗಿ ವಿಷ್ಣುವಿನ ದೇವಾಲಯಗಳಲ್ಲಿ ಅಂತಹ ಶಿಲ್ಪಗಳಿರುತ್ತವೆ. ಪಶುಪತಿಯನ್ನು ಲಿಂಗ ರೂಪದಲ್ಲಿ ಆರಾಧಿಸಲಾಗುತ್ತದೆ.  ಶೈವ ದೇವಾಲಯಗಳಲ್ಲಿ ಈ ತೆರನ ಶಿಲ್ಪಗಳಿರೋದನ್ನ ಬೇರೆಲ್ಲೂ ಕಂಡಿಲ್ಲ"

"ಹಾಗೇನೂ ಇಲ್ಲ.  ಮೈಥುನನ್ನು ಅತ್ಯಂತ ಸಹಜ ಅವಸ್ಥೆ ಎಂದು ಸ್ವೀಕರಿಸಿದ ಹಿರಿಯರು ಶೈವ ದೇವಾಲಯಗಳಲ್ಲೂ ಅಂತಹ ಶಿಲ್ಪಗಳಿಗೆ ಅವಕಾಶ  ನೀಡಿದ್ದಾರೆ" ಆವನೆಂದ.

"ಹಾಗೇನು?  ಉರ್ಳಿ ನಿಮ್ಗೆ ಒಂದಷ್ಟು ತಿಳಿಸಿಬೇಕು.  ಇಮ್ಮನ ಬೆಟ್ಟದ ಗಲಾಟೆ ಬಗ್ಗೆ.  ಬೆಟ್ಟಕ್ಕೆ ಆ ಹೆಸರು ಬಂದ ಬಗ್ಗೆ.  "ಅವನು ಹೌದೆಂದು ತಲೆಯಾಡಿಸಿದ.  ಅವರು ಮುಂದುವರಿಸಿದರು.  "ಈಗಿನವರಿಗೆ ಗೊತ್ತಿರದ ವಿಷಯ ಒಂದುಂಟು.  ತಿಮ್ಮನ ಸಾವು ಆಕಸ್ಮಿಕ ಅಲ್ಲ.  ಅದೊಂದು ಯೋಚಿತ ಕೊಲೆ!"

ಅವನು ಸ್ತಬ್ಬನಾದ.  ಅವಳದ್ದೂ ಅದೇ ಅವಸ್ಥೆ.  ಅವರಿಬ್ಬರನ್ನೂ ಗಮನಿಸಿದ ಮಾವ ನಿಧಾನವಾಗಿ ಮಾತು ಮುಂದುವರಿಸಿದರು. "ನಿಮ್ಮ ರಿಸರ್ಚ್ಗೆ ನೆರವಾದೀತು ಎಂದು ಇದನ್ನು ಹೇಳುತ್ತಿದ್ದೇನೆ.  ದೇವಸ್ಥಾನದ ಧ್ವಜ ಕಂಬ ಗೆದ್ದಲು ತಿಂದು ಮುರಿಯುವುದರಲ್ಲಿತ್ತು.  ಅದು ಅರ್ಚಕರಿಗೆ ಚೆನ್ನಾಗಿ ಗೊತ್ತಿತ್ತು.  ತಿಮ್ಮನ ಸಾಹಸದ ಮೇಲೆ ನಂಬಿಕೆಯಿದ್ದುದರಿಂದ ಧ್ಚಜ ಏರಿಸುವಾಗ ಹಗ್ಗದ ಗಂಟು ಬಿಗಿಯುವಂತೆ ಮಾಡಿದ್ದು ಆವರೇ.  ತಿಮ್ಮ ದೇವಸ್ಥಾನದ ಕಾವಲುಗಾರ ನೋಡಿ, ಧೈರ್ಯ ಮಾಡಿ ದ್ವಜಕಂಬಕ್ಕೆ ಹತ್ತಿದ.  ಮುಂದಿನದ್ದು ನಿಮಗೆ ಗೊತ್ತೇ ಇದೆ".

ಅವನಿಗೆ ನಂಬಿಕೆ ಬರಲಿಲ್ಲ.  "ತಿಮ್ಮನನ್ನು ಅವರು ಯಾಕೆ ಕೊಲ್ಲಿಸಬೇಕಿತ್ತು ಅದೂ ಜಾತ್ರೆ ನಿಲ್ಲುತ್ತದೆಂದು ತಿಳಿದೂ?"  ಅವರ ಮುಖದಲ್ಲಿ ಮಂದಹಾಸ ಜಿನುಗಿತು.  ಸ್ವರ ತಗ್ಗಸಿ ನಿಧಾನವಾಗಿ ಹೇಳಿದರು. "ಆಗಿನ ಆರ್ಚಕರಿಗೆ ಸಂತಾನ ಲಕ್ಷ್ಮಿ ಒಲಿದಿರಲಿಲ್ಲ.  ಅವರ ಹೆಂಡತಿ ಹೇಗಿದ್ದರಂತೆ ಗೊತ್ತಾ? ನಮ್ಮ ಸಿನಿಮಾದವರನ್ನು ಅವರ ಮುಂದೆ ನಿವಾಳಿಸಿ ಒಗೆಯಬೇಕು.  ಪಶುಪತಿಯನ್ನು ಏಳುರಾತ್ರಿ ಏಕಾಂತದಲ್ಲಿ ಪ್ರಾರ್ಥಿಸಿ ಒದ್ದೆ ಬಟ್ಟಿಯಲ್ಲಿ ಉರುಳುಸೇವೆ ಮಾಡಿದ್ರೆ ಪಶುಪತಿ ಸಂತಾನಭಾಗ್ಯ ಕರುಣಿಸುತ್ತಾನೆ ಎನ್ನುವುದು ಇಲ್ಲಿನ ನಂಬಿಕೆ ಸೋಡಿ.  ಆ ಅಮ್ಮ ಏಳು ರಾತ್ತಿ ಸೇವೆ ಮಾಡಿದ್ದು.  ಗರ್ಭವತಿಯೂ ಆದ್ಲು."  ಅವರು ಮಾತು ನಿಲ್ಲಿಸಿದರು.

"ಅದಕ್ಕೆ ತಿಮ್ಮನನ್ನು ಯಾಕೆ ಕೊಲ್ಲಿಸಬೇಕಿತ್ತು?"

ಅವನ ಪ್ರಶ್ನೆಗೆ ಅವರು ನಕ್ಕರು.  "ಅಯ್ಯೋ ನಿಮ್ಮ!  ನಿಮಗೆ ಅರ್ಥ ಆಗಲಿಲ್ಲ?  ಆ ಚೆಂದುಳ್ಳಿ ಹಸಿ ಹೆಣ್ಣು ರಾತ್ರೆ ಒದ್ದೆ ಬಟ್ಟೆಯಲ್ಲಿ ಒಂಟಿಯಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಲ್ಲಿರುತ್ತಿದ್ದುದು ತಿಮ್ಮ ಮಾತ್ರ.  ಆಗ ಅವನಿಗೆ ನಲುವತ್ತು ಇರಬಹುದೇನೋ?  ಕಷ್ಟಪಟ್ಟು ಬೆಳೆದ ಗಟ್ಟಿಜೀವ.  ಉಪ್ಪು ಹುಳಿ ತಿಂದ ದೇಹ ನೋಡಿ.  ಅದೂ ಆ ಅಮ್ಮ ಅವಳಾಗಿಯೇ ಬಂದು ಇವನನ್ನು ತಬ್ಬಿಕೊಂಡಾಗ ಏನಾಗಬೇಕೋ ಆದು ಆಯ್ತು.  ಅರ್ಚಕರಿಗೂ ಗೊತ್ತಿತ್ತು.  ಉರುಳುಸೇವೆಯಿಂದ ಮಕ್ಕಳಾಗುವುದಿಲ್ಲ ಎಂದು.  ಹಿಂದಿನ ಅರ್ಚಕರಿಗೆ ಸಂತಾನಭಾಗ್ಯ ನೀಡುವ ಶಕ್ತಿ ಇತ್ತು.  ಇವರಿಗೆ ಅದು ಇರಲಿಲ್ಲ.  ಅರ್ಚಕರಿಗೇ ಮಕ್ಕಳಾಗದಿದ್ದರೆ ಸ್ಥಳದ ಕಾರ್ಣಿಕವನ್ನು ಯಾರು ನಂಬುತ್ತಾರೆ?  ಹೇಗಾದರೂ ಸ್ಥಳದ ಕಾರ್ಣಿಕವನ್ನು ಉಳಿಸಿಕೊಳ್ಳಬೇಕಿತ್ತು.  ಗುಟ್ಟನ್ನೂ ಕಾಪಾಡಿಕೊಳ್ಳಬೇಕಿತ್ತು.  ಸಾಧುಪ್ರಾಣಿ ತಿಮ್ಮ ಅದಕ್ಕೆ ಹೇಳಿಮಾಡಿಸಿದಂತಿದ್ದ.  ಆದರೂ ಎಲ್ಲಾದರೂ ಗುಟ್ಟು ರಟ್ಟಾದೀತೆಂದು ಹೆದರಿ ಅವನನ್ನು ಮುಗಿಸಿಬಿಟ್ಟರು.  ಈಗಲೂ ಇಲ್ಲಿನ ಮುಖ್ಯ ಆಕರ್ಷಣೆ ಈ ಕಾರಣಿಕವೇ".

ಅವರು ಜೋರಾಗಿ ನಕ್ಕರು.  ಅವಳಿಗೂ ನಗು ತಡೆಯಲಾಗಲಿಲ್ಲ.  ಅವನು ಮಾತ್ರ ನಗಲಿಲ್ಲ.  ಮಾವ ಅವನನ್ನು ಗಮನಿಸಿ "ನಿಯೋಗ ಕ್ರಮದಿಂದ ಮಕ್ಕಳನ್ನು ಪಡೆಯುವುದಕ್ಕೆ ಶಾಸ್ತ್ರಾಧಾರವಿದೆಯಲ್ಲಾ?" ಎಂದು ಕೇಳಿದರು.

"ಅದೇನೋ ಸರಿಯೇ.  ಆದರೆ ನಿಯೋಗ ಕ್ರಿಯೆಗೆ ಬುದ್ದಿವಂತರನ್ನು ಮಾತ್ರವೇ ಆರಿಸುತ್ತಿದ್ದರು.  ಪ್ಲೇಟೋನ ರಿಪಬ್ಲಿಕ್ ಓದಿದ್ದೀರೇನೋ?  ಆದರಲ್ಲಿ ಮಕ್ಕಳನ್ನು ಮೇಧಾವಿ ಗಂಡಸಿಂದ ಮಾತ್ರ ಪಡೆಯಬೇಕೆಂದಿದೆ.  ಆದರೆ ನಿಮ್ಮ ತಿಮ್ಮ ಎಂಥ ಮೇಧಾವಿ?"

ಅವಳ ಮಾವ ಮತ್ತೊಮ್ಮೆ ನಕ್ಕರು.  "ಶಾಸ್ತ್ರದಲ್ಲಿ ಆನುಕೂಲ ಶಾಸ್ತ್ರ ಅಂತ ಒಂದಿದೆ ನೋಡಿ.  ಸಂತಾನ ಅಗುವುದು ಇಲ್ಲಿ ಮುಖ್ಯವಾಗಿತ್ತು.  ಎಂತಹ ಬೀಜ ಎಂಬುದಲ್ಲ.  ಕಾರಣಿಕ ಮತ್ತು ಗುಟ್ಟು ಉಳಿಸುವುದಕ್ಕೆ ತಿಮ್ಮನಂತ ವ್ಯಕ್ತಿ ಬೇರೆ ಇರಲಿಲ್ಲ.  ಕೊನೆಗೂ ಮಾತೃತ್ವ ಮಾತ್ರ ವಾಸ್ತವ ಮತ್ತು ಪಿತೃತ್ವ ಕಲ್ಪನೆಯೇ ಅಲ್ಲವೇ?"

ಈಗ ಅವನಿಗೂ ನಗು ಬಂತು. "ಹಾಗಾದರೆ ಈ ಗುಟ್ಟು ಹೊರಬಂದದ್ದು ಹೇಗೆ?"

"ಓ ಅದೋ? ತಿಮ್ಮ ಸತ್ತ ದಿನದಿಂದ್ಲೇ ಆಯಮ್ಮ ಮಂಕಾಗಿದ್ಲಂತೆ.  ಏನೇನೋ ಮಂತ್ರ, ತೀರ್ಥ, ತಾಯಿತ ಯಾವುದೂ ಪ್ರಯೋಜನಕ್ಕೆ ಬರ್ಲಿಲ್ಲ. ದೇವರ ದಯೆಯಿಂದ  ಗರ್ಭಕ್ಕೇನೂ ತೊಂದರೆಯಾಗಲಿಲ್ಲ.  ಮಗು ಕೂಡಾ ಆರೋಗ್ಯವಾಗೇ ಇತ್ತು.  ಆದರೆ ಆಯಮ್ಮ ಮತ್ತೂ ಮಂಕಾಗಿಯೇ ಇದ್ಲಂತೆ.  ಹೆರಿಸಲಿಕ್ಕೆ ಬಂದ ಸೂಲಗಿತ್ತಿಯಲ್ಲಿ ಈ  ಮಗುವಿನ ಅಪ್ಪ ಧ್ವಜಕಂಬದಿಂದ ಬಿದ್ದು ಸತ್ತ ಎಂದದ್ದೇ ಊರಿಗೆಲ್ಲಾ ವಿಷಯ ಗೊತ್ತಾಯಿತು.  ಮಗುವಿಗೆ ಒಂದು ತಿಂಗಳಾಗುವಾಗ ಅಮ್ಮ ನೇಣು ಹಾಕ್ಕೊಂಡ್ಳಂತೆ.  ಅದು ತಿಮ್ಮನ ಪ್ರೇತ ಚೇಷ್ಟೆ ಎಂದು ಅರ್ಚಕರು ಶಾಂತಿ ಹೋಮ ಮಾಡಿಸಿದ್ರಂತೆ.  ಊರವರು ನಂಬಿದ್ರು.  ಕಾಲ ಎಲ್ಲವನ್ನೂ ನುಂಗಿ ಬಿಡುತ್ತೆ ನೋಡಿ."

ಸ್ವಲ್ಪ ಹೊತ್ತು ವಿಷಾದದ ಮೌನ. ಅವನು ಮೌನದ ಚಿಪ್ಪನ್ನೊಡೆದ. "ಮಗುಬೇಕೆಂದು ಹಂಬಲಿಸಿ ವ್ರ್‍ಅತ ಮಾಡಿ ತಿಮ್ಮನಿಂದ ಮಗುವನ್ನು ಪಡೆದ ಆ ಅಮ್ಮ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಾಗಿರಲು ಸಾಧ್ಯವೇ?  ಇಲ್ಲೂ ಒಂದು ಕೊಲೆಯ ಸಂಚು ಇರಲಾರದೇಕೆ?"

ಅವಳ ಮಾವ ಒಂದು ಬಾರಿ ಕೆಮ್ಮಿದರು.  "ನಿಮ್ಮ ತರ್ಕವೇನೋ ಸರಿಯೇ.  ಆ ಅಮ್ಮ ಪಾಪಪ್ರಜ್ಞೆ ಕಾಡಿ ದುರ್ಬಲ ಗಳಿಗೆಯೊಂದರಲ್ಲಿ ಹಗ್ಗ ತಗೊಂಡದ್ದೆಂದು ನನಗನಿಸುವುದಿಲ್ಲ.  ತಿಮ್ಮನನ್ನು ಕೊಂದದ್ದೇ ಅಮ್ಮನ ಮನಸ್ಸು ಅಸ್ವಸ್ಥವಾಗಲು ಕಾರಣವಾಗಿರಬೇಕು.  ಮಗು ಪಡೆದದ್ದು ಗಂಡನ ಸಮ್ಮತಿ ಇದ್ದೇ ಅಲ್ಲವೇ? ಅದು ಪಾಪ ಎಂಬ ಭಾವನೆ ಇದ್ದಿದ್ದರೆ ಅವರು ಉರುಳುಸೇವೆಗೆ ಹೋಗ್ತಾನೇ ಇದ್ದಿರಲಿಲ್ಲ.  ತಿಮ್ಮನ ಕೊಲೆಗೆ ತಾನೇ ಕಾರಣನಾದೆ ಎಂಬ ನೋವಿನಿಂದ ಅವರು ಹಗ್ಗ ತೆಗೊಂಡಿರಬೇಕು."

ಅವನು ತಲೆದೂಗಿದ. "ಇನ್ನೂ ಒಂದು ಸಂಶಯ ಉಳ್ಕೊಂಬಿಡ್ತು ನೋಡಿ. ಗುಡ್ಡೆಗೆ ವಿಷ್ಣು ಅಂತ ಹೆಸರಿಡಲು ಹೋಗಿ ಗಲಾಟೆ ಆಯ್ತೂಂತ ಮುರ್ಳಿ ಹೇಳ್ದ.  ಹೆಸರು ಬದಲಾವಣೆಗೆ ಮುಖ್ಯ ವಿರೋಧ ಅರ್ಚಕರದ್ದೇ ಅಂತೆ!  ಇಲ್ಲಿ ಶೈವ ವೈಷ್ಣವ ಭಾವನೆ ಅಷ್ಟೊಂದು ತೀವ್ರವಾಗಿದ್ಯಾ?"

ಆವಳ ಮಾವ ಗಟ್ಟಿಯಾಗಿ ನಕ್ಕರು.  "ಛೆ!ಛೆ! ಹಾಗೇನಿಲ್ಲ.  ಕತೆ ಆಲ್ಲಿಗೆ ಮುಗೀಲಿಲ್ಲ ಹೀಗೆ ಹುಟ್ಟಿದ ಮಗುವಿಗೆ ಉಪನಯನ, ವೇದಾಧ್ಯಯನ ಎಲ್ಲಾ ನಡೆಯಿತು. ಊರ ಇನ್ನೊಂದು ವೈದಿಕ ಕುಟುಂಬ ಆ ಮಗುವಿನ ಮೂಲವನ್ನು ಪ್ರಶ್ನಿಸಿ ಅರ್ಚಕವೃತ್ತಿ ತನಗೆ ಸಿಗಬೇಕೆಂದು ತಗಾದೆ ತೆಗೆಯಿತು.  ಆದ್ರೆ ಅರ್ಚಕರು ಆದೆಲ್ಲಾ ಆಗದವರ ಮಾತು.  ಅವಳಿಗೆ ವ್ರತ ಮೆಟ್ಟಿ ಏನೇನೋ ಹೇಳಿದ್ದನ್ನು ನಂಬುವವರಿಗೆ ಬುದ್ದಿ ಇಲ್ಲ.  ಗರ್ಭಿಣಿಯರಿಗೆ ಮತ್ತು ಹೆತ್ತವರಿಗೆ ಪ್ರೇತಚೇಷ್ಟೆ ಇರೋದೇ. ಅದಕ್ಕಾಗಿ ಶಾಂತಿ ಹೋಮ ಮಾಡಿ, ಪ್ರೇತ ಉಟ್ಟಾಟನೆ ಆದ ಮೇಲೆ ಇನ್ನೇನು?" ಎಂದು ದಬಾಯಿಸಿದರು.  ಸೂಲಗಿತ್ತಿಗೆ ಸ್ವಲ್ಪ ಕೊಟ್ಟು ಅಮ್ಮ ಹಾಗೆಲ್ಲಾ ಹೇಳಲೇ ಇಲ್ಲ.  ಪ್ರೇತಚೇಷ್ಟೆಯಿಂದ ಹುಚ್ಚು ಹಿಡ್ದು ಏನೇನೋ ಅರ್ಥವಾಗದ್ದು ಬಡಬಡಿಸುತ್ತಿದ್ದುದು ಹೌದು ಎಂದು ಹೇಳಿಸಿದ್ರು.  ಆಗಿನ ಅರ್ಚಕರಲ್ಲಿ ಊರವ್ರಿಗೆ ತುಂಬಾ ವಿಶ್ವಾಸವಿತ್ತು.  ಹಾಗಾಗಿ ಆ ವಿಷಯ ಆಲ್ಲಿಗೇ ಮುಚ್ಚಿಹೋಯ್ತು.  ತಿಮ್ಮನಿಗೆ ಹುಟ್ಟಿದ ಮಗು ಅರ್ಚಕನಾಗಲು ಆ ಮೇಲೆ ಯಾವ ತಕರಾರೂ ಬರ್ಲಿಲ್ಲ.  ಈಗಿನ ಅರ್ಚಕರಿಗೆ ಮಗು ಮುತ್ತಜ್ಜನಾಗಬೇಕು.  ಈಗ ನಿಮಗೆ ಹೆಸರು ಬದಲಾವಣೆಗೆ ಇವ್ರ ವಿರೋಧದ ಕಾರಣ ಗೊತ್ತಾಯ್ತಲ್ಲಾ?"  ಎಂದು ಮತ್ತೊಮ್ಮೆ ನಕ್ಕರು.  ಅವನು ಮತ್ತು ಅವಳು ಆವರ ನಗುವಿನಲ್ಲಿ ಸೇರಿಕೊಂಡರು.

ನಗುತ್ತಲೇ ಅವಳು ಎದ್ದಳು.  ಅವರೆಗೆ ಎಲ್ಲೋ ಒಳಗಿದ್ದ ಅವಳ ಮಕ್ಕಳು ಅವರಿದ್ದಲ್ಲಿಗೆ ಬಂದರು.  ಅವರನ್ನು ನೋಡಿ ಅವಳ ಮಾವನ ಮುಖದಲ್ಲಿ ವಿಷಾದ ಮೂಡಿತು.  ಅವಳು ಆದನ್ನು ಗಮನಿಸಿ, "ನೀವಿನ್ನೂ ಮಲಗಿಲ್ವಾ?  ಬನ್ನಿ" ಎಂದು ಆವರನ್ನು ಕರೆದುಕೊಂಡು ಒಳಹೋದಳು.  ಅದನ್ನೇ ನೋಡುತ್ತಿದ್ದ ಅವಳ ಮಾವ ಅವನೊಡನೆ ಹೇಳಿದರು.  "ನನಗೆ ಇದೊಂದೇ ಚಿಂತೆ ನೋಡಿ. ಎರಡಕ್ಕೂ ಮಂದಬುದ್ಧಿ. ಇವಳದ್ದೇನೂ ತಪ್ಪಿಲ್ಲ. ನಮ್ಮ ಕುಟುಂಬದಲ್ಲಿ ಇದು ಇದ್ದದ್ದೇ.  ಹಾಗಿದ್ದೂ ರಕ್ತಸಂಬಂಧದಲ್ಲೇ ಮದ್ವೆ ಮಾಡಿ ಒಳ್ಳೆ ಹುಡ್ಗಿಗೆ ಅನ್ಯಾಯ ಮಾಡಿಬಿಟ್ಟೆ ಅನ್ನಿಸ್ತದೆ.  ಇವ್ಳು ಮಾಡೋ ಸೇವೆ ನೋಡಿದ್ರೆ, ಇವಳೆಲ್ಲೋ ನಂಗೆ ತಾಯಿಯಾಗಬೇಕಿತ್ತು.  ಆದ್ರೆ ಎಲ್ಲಾ ಇದ್ರೂ ಪಶುಪತಿ ಕಣ್ಣು ಬಿಡ್ಲಿಲ್ಲ."

ಅವನೇನೂ ಮಾತಾಡಲಿಲ್ಲ.  ಈಗ ಮಾತಿಗಿಂತ ಮೌನವೇ ವಾಸಿಯಂದು ಸುಮ್ಮನಿದ್ದ.  ವಿಷಾದದ ಗಳಿಗೆಗಳು ಕಳೆದುಹೋಗುತ್ತಿರುವಾಗ ಅವಳು ಬಂದಳು.  "ಮಲಗಿಸಿ ಬಂದೆ. ನಾವು ಊಟ ಮಾಡೋಣ್ವಾ" ಎಂದು ಅವನನ್ನು ಕೇಳಿದಳು.  ಅವನು ಅವಳ ಮಾವನನ್ನು ನೋಡಿದ.  "ನಾನು ರಾತ್ರಿ ಊಟ ಬಿಟ್ಟು ಅದೆಷ್ಟೋ ವರ್ಷವಾಯ್ತೋ! ಈಗ ತಗೊಳ್ಳೋದು ಎರಡು ಮಾತ್ರೆ ಮಾತ್ರ.  ಅದೂ ನಿದ್ದೆಗಾಗಿ.  ಹೋಗಿ ನೀವು ಊಟ ಮಾಡಿ. ಬೆಳಿಗ್ಗೆ ಮಾತಾಡೋಣ" ಎಂದು ವೀಲ್‌ಚೇರ್ ಬೆಡ್‍ರೂಮಿನತ್ತ ತಿರುಗಿಸಿದರು.

ಅವನು ಪೊಗದಸ್ತಾಗಿ ಊಟ ಮಾಡಿ ಮಹಡಿ ಹತ್ತಿ ಮಂಚದಲ್ಲಿ ಬಿದ್ದುಕೊಂಡ.  ಅವನನ್ನು ಇಡಿಯಾಗೆ ತಿಮ್ಮ ಆವರಿಸಿಕೊಂಡಿದ್ದ.  ತನ್ನ ಸಂಶೋಧನೆಯಲ್ಲಿ ತಿಮ್ಮನಿಗೆ ಎಲ್ಲಿ ಸ್ಥಾನ ಕಲ್ಪಿಸುವುದು ಎನ್ನುವುದು ಅವನಿಗೆ ಹೊಳೆಯಲೇ ಇಲ್ಲ.  ರಾತ್ರೆ ತುಂಬಾ ಹೊತ್ತಾಗಿರಬಹುದು.  ಇನ್ನೇನು ಜೊಂಪು ಹತ್ತಬೇಕು ಅನ್ನುವಷ್ಟರಲ್ಲಿ ಬಾಗಿಲ ಮೇಲೆ  ಮೃದುವಾದ ಬಡಿತ.  ಗಾಬರಿಯಿಂದ ಎದ್ದು ಬಾಗಿಲು ತೆರೆದರೆ ಅವಳು!  ಒಳಗೆ ಬಂದವಳೇ ಬಾಗಿಲು "ಮುಚ್ಚಿ ಅವನನ್ನು ಪೂರ್ತಿಯಾಗಿ ಆವರಿಸಿಕೊಂಡು ನನಗೊಂದು ಬುದ್ಧಿವಂತ ಮಗು ಬೇಕು" ಎಂದು ಕಂಪಿಸುತ್ತಾ ಪಿಸುಗುಟ್ಟಿದಳು.

            *****
೧೯೯೭

ಕೀಲಿಕರಣ: ಎಂ.ಎನ್.ಎಸ್. ರಾವ್

ಒಳ್ಳೇದಲ್ಲೋ ಇದು ಭೂಕಲಿ

- ಶಿಶುನಾಳ ಶರೀಫ್

ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ       ||ಪ||

ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು
ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ              ||೧||

ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು
ಆಣೆ ಹಾಕಿದೆ ಸೈ ಸೇರಿ ಜರಿದಾಡಿ                         ||೨||

ಉತ್ತರ ದಿಕ್ಕಿನಿಂದ ದುರ್ಗಿಯು ಬರುತಾಳೆ
ಕರ್ಮಗಳೆಲ್ಲ ಸಂಹರಿಸಿ ಖಬರಾ                           ||೩||

ಗುರುವಿನ ಮಗ ಹ್ಯಾವಾ ಹಾಕಿ ಹಿಂಬಾಲಿರುತಿರೆ
ಧರೆಯೊಳು ಶಿಶುನಾಳಧೀಶರೆ ಮಹಾಭಾಪುರೆ         ||೪||

             *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಸೂರ್ಯ ಚಂದ್ರರ ಹಾಡು

- ಗಿರಿಜಾಪತಿ ಎಂ. ಎನ್

ನಾವು ಮುಳುಗುವುದಿಲ್ಲ
ಏಳುವವರು ನಾವಲ್ಲ
ಮುಳುಗೇಳು ಬೀಳುಗಳ
ಸಂಕರಗಳೆಮಗೆ ಸಲ್ಲ
ಜಡದ ಸೋಂಕುಗಳಿರದ
ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು
ಸಮಯಾತಿ ಸಮಯಗಳು
ಸಮ ವಿಷಮಾದಿ ನಿಯತಿಗಳು
ನಿಮ್ಮ ಹಾದಿಯ ಹೂ-ಮುಳ್ಳ ಹಾಸು
ಇತಿ-ಮಿತಿಯ ಮತಿಗೀತ
ಸ್ತುತಿ-ನಿಂದೆ ಭೋರ್ಗರೆತ
ಪ್ರೀತ-ಸಂಪ್ರೀತಗಳ ಕವಿ ಸಮಯ ನೀವು
ದೇವರೆ ಮಾಡಿದ ಮಾನವರ ಸಾಲೊ
ಮಾನವರೆ ಮಾಡಿದ ದೇವರಹವಾಲೊ
ನಿಮ್ಮ-ನಿಮ್ಮಯ ಸಮಯ ಶೂಲ-ಜಾಲ
ಅಜ್ಞಾನದಾ ಬಿಲ-ಬಿಲಕೆ
ಜ್ಞಾನ ವರ್ಣಗಳ ಮಾರ್ಜಾಲ
ನಿಮ್ಮ ಹಿಂದೆ-ಮುಂದೆ...
ನಮ್ಮ ಪಥದಲಿ ನಾವು ಮುಂದೆ....
ಮುಂದೆ... ಎಂದೂ ಮುಂದೆ.

        *****

ಕೀಲಿಕರಣ: ಕಿಶೋರ್‍ ಚಂದ್ರ

ಬ್ಯಾರೆಕ್ಸ್ ಹುಡುಗರು

-ಮಂಜುನಾಥ ವಿ ಎಂ

ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ
ಅಸ್ವಾಭಾವಿಕ ವರ್ತನೆಗಳಿಂದ.

ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ;
ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು.

ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ
ಹೊಸ ಹಸಿರನ್ನೇನೊ ಹೊದ್ದು ನಿಂತಂತಿದೆ.

ಕೈ ಬೀಸಿದವರು ಒಬ್ಬೊಬ್ಬರಾಗಿ ಎಡತಾಕುತ್ತಿದ್ದಾರೆ
ಪರೇಡ್ ಮೈದಾನದಲ್ಲಿ;
ಅವರು ಅಲ್ಲಿ, ಹಳ್ಳಿ ತೋಟಗಳಲ್ಲಿ ಬೆರಕೆ ಮಕ್ಕಳನ್ನು ಹೆರುವ
ಇವರ ಹೆಂಡಂದಿರು.

ಅಡ್ಡಗೋಡೆಯ ಮೇಲೆ ಕಾಣುವ ಆ ಹ್ಯಾಟಿನ ತುದಿಗೆ
ಮೂರು ದಿನದ ಹೂವು ಮತ್ತೆ ಚಿಗುರಲಿದೆ.
        *****

ಛೇ ಇದು ಸೂಳಿಗಾರಿಕೆ

- ಶಿಶುನಾಳ ಶರೀಫ್

ಛೇ ಇದು ಸೂಳಿಗಾರಿಕೆ
ಛೇ ಇದು ಸೂಳಿಗಾರಿಕೆ                      ||ಪ||

ಬಾಯೆನುತಲಿ ನೀ ಕರೆದರೆ ಬರಲೋಣ
ನ್ಯಾಯ ಬೆಳಸಿ ನಿಮಗ್ಹೇಳುವದಿದು          ||೧||

ಕೆಟ್ಟ ಹೆಂಗಸನಿಟ್ಟುಕೊಂಡವನೆನ್ನ
ಗುಟ್ಟಿನ ಸ್ನೇಹವಮರಿಸಿಟ್ಟ ಬಳಿಕ ಇದು    ||೨||

ಚಿತ್ತಗಡಕಿ ಎನ್ನ ಜತ್ತಿನವರ ಕೈ
ಕತ್ತಿ ಕೊಟ್ಟು ಕಡಿದಾಟಕ ಹಚ್ಚುವುದಿದು     ||೩||

ಸುಳ್ಳಿನ ಸೂಳೆಯರ ಒಲ್ಲದೆನ್ನ ಮನ
ಮೆಲ್ಲನೆ ಜುಲುಮಿಲೆ ಮೇಲ್ ಬೀಳುವದಿದು ||೪||

ಶಿಶುವಿನಾಳಧೀಶ ಸೇವಕನಾತನ
ರಸಿಕ ಸಖತ್ವದಿ ವಿಷವ ಬೆರಿಸುವುದು    ||೫||

*****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಸಂಬಂಜ ಅನ್ನೋದು ದೊಡ್ಡದು ಕನಾ

ಚಿತ್ರ: ರಾಂಗೋಪಾಲ್ ರಾಜಾರಾಮ್
- ರಘುನಾಥ ಚ ಹ

ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಗರ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವಿದ್ದರೆ ನೀವೊಂದು ಸಂಗತಿಯನ್ನು ಗಮನಿಸಿಯೇ ಇರುತ್ತೀರಿ:  ಕಾರ್ಯಕ್ರಮ ಆರಂಭಕ್ಕೆ ಅರ್ಧ ತಾಸು ಮುನ್ನ ಹಾಗೂ ಮುಗಿದ ನಂತರದ ಅರ್ಧ ತಾಸು ಸಭಾಂಗಣದ ಒಳಗೆ-ಹೊರಗೆ ಸಣ್ಣಸಣ್ಣ ಗುಂಪುಗಳು ಮಾತುಕೆಯಲ್ಲಿ ತೊಡಗಿರುತ್ತವೆ.  ಕಾರ್ಯಕ್ರಮ ನಡೆಯುವಾಗಲೂ ಕೆಲವರು ಸಭಾಂಗಣದ ಹೊರಗೆ ಹರಟುತ್ತಾ ನಿಲ್ಲುವುದುಂಟು.  ಸಮಾರಂಭ ಎನ್ನುವುದು ಅವರ ಪಾಲಿಗೆ ನೆಪ.  ಈ ನೆಪದಲ್ಲಿ ಸ್ನೇಹಿತರ ಭೇಟಿ, ಒಂದಷ್ಟು ಹರಟೆ ನಡೆಯುತ್ತದೆ.

`ನಿಮ್ಮನ್ನು ನೋಡಿ ಎಷ್ಟು ದಿನವಾಯ್ತು ಅಲ್ಲವಾ?  ಈ ನಗರದ ಟ್ರಾಫಿಕ್ಕಿನ ಕಿರಿಕಿರಿ, ಕೆಲಸದ ಒತ್ತಡದಲ್ಲಿ ಬಿಡುವೇ ಸಿಗೊಲ್ಲ ನೋಡಿ' ಎನ್ನುವ ಆತಂಕ ನಾಲ್ಕಾರು ಜನ ಸೇರಿದಲ್ಲಿ ವ್ಯಕ್ತವಾಗುತ್ತದೆ.  ಮಾತು ಕೊನೆಯಾಗುವುದು ಜಾಗತೀಕರಣದ ದೂಷಣೆಯೊಂದಿಗೆ.  `ಈ ಜಾಗತೀಕರಣದ ಕೆಡುಕುಗಳು ಒಂದೆರಡಲ್ಲ.  ಬಂಡವಾಳ ಹೂಡುವ ಆಟವಾಡಿ ಬಡದೇಶಗಳ ರಕ್ತವನ್ನು ಶ್ರೀಮಂತ ದೇಶಗಳು ಹೀರುತ್ತಿವೆ.  ದೇಸೀ ಸಂಸ್ಕೃತಿಯ ಬೇರುಗಳು ಬುಡಮೇಲಾಗುತ್ತಿವೆ.  ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.  ಮನುಷ್ಯನಿಗಿಂತ ಮೆಷೀನಿಗೆ ಹೆಚ್ಚು ಕಿಮ್ಮತ್ತು.  ಸಂಬಂಧಗಳೂ ಅನುಕೂಲಸಿಂಧು ಅನ್ನಿಸುತ್ತಿವೆ.

ನಿಜ, `ಜಾಗತೀಕರಣ'ದ ಕೆಡುಕುಗಳು ಸಾಕಷ್ಟಿವೆ.  ಆದರೆ ಈ ಜಾಗತೀಕರಣದಿಂದ ಒಂದು ಅನುಕೂಲವೂ ಇದೆ.  ಇದೊಂದು ಸುಂದರ ಪದ ಇಲ್ಲದ್ದಿದಲ್ಲಿ ನಮ್ಮ ಕಷ್ಟಗಳಿಗೆಲ್ಲ ನಾವು ಯಾರನ್ನು ದೂರಬೇಕಿತ್ತು?  `ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ' ಎನ್ನುವ ಗಾದೆಯಂತೆ.  ಆಧುನಿಕೆ ಸಂದರ್ಭದಲ್ಲಿ - `ಎಲ್ಲದಕು ಕಾರಣ ಜಾಗತೀಕರಣ' ಎನ್ನಬಹುದು.

ಐದಾರು ವರ್ಷಗಳ ಹಿಂದೆ ನಡೆದ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆನಪಿಗೆ ಬರುತ್ತಿದೆ.  ಆ ಕಾರ್ಯಕ್ರಮದಲ್ಲಿ ಕನ್ನಡದ ಮಹತ್ವದ ಲೇಖಕರೊಬ್ಬರು ಜಾಗತೀಕರಣವನ್ನು ದೂಷಿಸಿದ್ದರು.  ಅವರು `ದಿವ್ಯ' ಲಹರಿಯಲ್ಲಿದ್ದರು.  ಆ ಲಹರಿಯಲ್ಲೇ, ತಮ್ಮ ಯೌವನದ ದಿನಗಳನ್ನು ಚಪ್ಪರಿಸಿದರು.  ಸಹ ಲೇಖಕರೊಂದಿಗೆ ಯಾವುದೋ ಊರಿನ ಯಾವುದೋ ಹೋಟೆಲ್‌ನಲ್ಲಿ ಕೂತು, ಕಾಫಿ ಹೀರುತ್ತಾ, ಕಾವ್ಯದ ಬಗ್ಗೆ ಚರ್ಚಿಸುತ್ತಿದ್ದುದನ್ನು ನೆನಪಿಸಿಕೊಂಡರು.  ಆ ಕಾಫಿಸಂಜೆಯಗಳಲ್ಲಿ ನಡೆಯುತ್ತಿದ್ದ ಕೂಟಗಳಲ್ಲಿ ಓದುತ್ತಿದ್ದ ಅಪ್ರಕಟಿತ ಪದ್ಯಗಳು ಹತ್ತು, ನೂರು ಬಾಯಿಗಳಿಗೆ ಜನಪದದಂತೆ ತಲುಪುತ್ತಿದ್ದ ಮಾಯೆಯೆನ್ನು ನೆನಪಿಸಿಕೊಂಡು ಪುಳಕಿತರಾದರು.  ಆದರೆ ಈಚಿನ ದಿನಗಳಲ್ಲಿ ಒಂದೇ ಊರಿನಲ್ಲಿ ಇರುವ ಲೇಖಕರು ಒಂದೆಡೆ ಸೇರುವುದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ ಅವರು, ಕನಿಷ್ಠ ತಿಂಗಳಿಗೊಮ್ಮೆಯಾದರೂ ಮುಖಗಳನ್ನು ನೋಡಿಕೊಳ್ಳುವುದು, ಕೂತು ಮಾತನಾಡುವುದು ಸಾಧ್ಯವಾದರೆ ಒಳ್ಳೆಯದು ಎಂದರು.  ಹಿರಿಯ ಸಾಹಿತಿಯ ನೆನಪುಗಳು ಯುವ ಲೇಖಕರ ಹೊಟ್ಟೆ ಉರಿಸುವಂತಿದ್ದವು.  ಸಮಾಧಾನದ ಸಂಗತಿಯೆಂದರೆ, ಲೇಖಕರು ದ್ವೀಪಗಳಾಗುತ್ತಿರುವುದಕ್ಕೆ ಜಾಗತೀಕರಣವೇ ಕಾರಣ ಎನ್ನುವುದನ್ನು ಆ ಹಿರಿಯರು ರೂಪಕಗಳ ಮೂಲಕ ಸಾಧಿಸಿ ಹೇಳಿದ್ದರು.  ತಮ್ಮೆಲ್ಲ ತವಕತಲ್ಲಣಗಳಿಗೆ ಹಿರಿಯ ಲೇಖಕರು ಒಂದು ರೂಪಕ ಒದಗಿಸಿದ್ದನ್ನು ನೋಡಿ ಅನೇಕ ಕಿರಿಯ ಲೇಖಕರು ಸಮಾಧಾನಗೊಂಡಿದ್ದರು.

ಜಾಗತೀಕರಣದ ಬಗ್ಗೆ ಮಾತನಾಡಿದ ಹಿರಿಯ ಲೇಖಕರ ಮನೆಗೆ ಅನಿವಾರ್ಯವಾಗಿ ಹೋಗಲೇಬೇಕಾದ ಸಂದರ್ಭ ಕಿರಿಯ ಲೇಖಕನೊಬ್ಬನಿಗೆ ಒದಗಿತು.  ಭೇಟಿಯ ನಂತರ ಆ ಯುವಲೇಖಕ ಆಘಾತಗೊಂಡಿದ್ದ.  ಹಿರಿಯ ಲೇಖಕರ ಮನೆಯಲ್ಲಿ ಮೂರ್‍ನಾಲ್ಕು ತಾಸು ಕಳೆದಿದ್ದರೂ ಆತನಿಗೊಂದು ಲೋಟ ನೀರೂ ಸಿಕ್ಕಿರಲಿಲ್ಲ.  `ಏನ ಬಂದಿರಿ, ಹದುಳವಿದ್ದಿರೇನು?' ಎಂದು ಅವರು ಕೇಳಲೂ ಇಲ್ಲ.  ಮಾತಿಗೂ ಕೃತಿಗೂ ಸಂಬಂಧ ಇರಬೇಕಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ.

    `ಏನ ಬಂದಿರಿ, ಹದುಳವಿದ್ದಿರೆಂದರೆ
    ನಿಮ್ಮ ಮೈಸಿರಿ ಹಾರಿಹೋಹುದೆ?
    ಕುಳ್ಳಿರೆಂದರೆ ನೆಲ ಕುಳಿಹೋಹುದೇ
    ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ?'

ಹನ್ನೆರಡನೇ ಶತಮಾನದ ಬಸವಣ್ಣನವರ ವಚನವನ್ನು ಇಂದಿನ ನಗರ ಜೀವನಕ್ಕೆ ಅನ್ವಯಿಸುವುದು ಹೇಗೆ?  ಕಾಲು ತೊಳೆಯಲು ನೀರು ಕೊಡುವುದು, ನೀರನ್ನೋ ನೀರುಮಜ್ಜಿಗೆಯನ್ನೋ ನೀಡಿ ದಣಿವು ತಣಿಸುವುದು, ಕುಶಲ ವಿಚಾರಿಸಿ ಆಪ್ತ ವಾತಾವರಣ ಮೂಡಿಸುವುದು - ಇವೆಲ್ಲವನ್ನು ಆಧುನಿಕ ಸಂದರ್ಭದಲ್ಲಿ ಆತಿಥೇಯರಿಂದ ನಿರೀಕ್ಷಿಸುವುದು ಮರುಳುತನವೇ ಇರಬಹುದೇನೊ?  ಆದರೆ ಒಳ್ಳೆಯ ಮಾತಿಗೂ ಬರ ಒದಗಿದರೆ ಹೇಗೆ?

ಹಳ್ಳಿಗಳಲ್ಲೂ ಪಟ್ಟಣದ ಬಣ್ಣಗಳು ದಟ್ಟವಾಗುತ್ತಿವೆ.  ಹಾಗಾಗಿ ಗ್ರಾಮೀಣ ಬದುಕಿನಲ್ಲೂ ಮಾನವೀಯ ಸಂಬಂಧಗಳು ತೆಳುವಾಗುತ್ತಿವೆ ಎಂದು ಹೇಳುವ ಮೂಲಕ ನಗರ ಜೀವನದಲ್ಲಿ ಸಂಬಂಧಗಳು ತೆಳುವಾಗುತ್ತಿವೆ ಎನ್ನುವ ಆತಂಕವನ್ನು ತಳ್ಳಿಹಾಕುವುದು ಸುಲಭ.  ಆದರೆ, ಯಾವುದೇ ಹಳ್ಳಿಗೆ ಹೋಗಿ.  ಅಲ್ಲಿ ಯಾರೊಬ್ಬರ ಮನೆಯ ಬಾಗಿಲನ್ನು ಸುಲಭವಾಗಿ ತಟ್ಟಬಹುದು.  ಪರಿಚಯವೇ ಇಲ್ಲದ ಹಾದಿಹೋಕನನ್ನು ಮಾತಿಗೆಳೆದು ನಿಲ್ಲಿಸಬಹುದು.  ಆದರೆ, ನಗರವೊಂದರ ಮನೆಯನ್ನು ಸಲೀಸಾಗಿ ಹೋಗಿ ತಟ್ಟಲು ಸಾಧ್ಯವೇ?  ನಿಂತ ರಸ್ತೆಗೂ ಎದುರಿನ ಮನೆಗೂ ಐದಾರು ಅಡಿಯಷ್ಟೇ ದೂರವಿದ್ದರೂ, ಬಾಗಿಲು ತಟ್ಟಲು ಹಿಂಜರಿಯುತ್ತೇವೆ.  `ನಾಯಿ ಇದೆ ಎಚ್ಚರಿಕೆ' ಎನ್ನುವ ಫಲಕವನ್ನು ಕಣ್ಣುಗಳು ಹುಡುಕುತ್ತವೆ.  ಅನೇಕ ಮನೆಗಳಲ್ಲಿ ನಾಯಿ ಇರುವುದಿಲ್ಲ, ಎಚ್ಚರಿಕೆಯ ಫಲಕಗಳಿರುತ್ತವೆ.  ಗೇಟು ದಾಟಿ, ಬಾಗಿಲ ಬಳಿ ನಿಂತೆವೆನ್ನಿ.  ಅಲ್ಲೊಂದು ಕಾಲಿಂಗ್ ಬೆಲ್ ಇರುತ್ತದೆ.  ಒತ್ತುತ್ತೇವೆ.  ಬಾಗಿಲು ತೆರೆಯುವುದಿಲ್ಲ.  ಬಾಗಿಲಿನ ಸಣ್ಣಕಿಂಡಿಗೆ ಕಣ್ಣುಮೂಡುತ್ತದೆ.  ಯಾರು?  ಎನ್ನುವ ಪ್ರಶ್ನೆ ಮುಖಕಕ್ಕೆ ರಾಚುತ್ತದೆ.  ಈ ಎಲ್ಲ ಪ್ರಶ್ನೋತ್ತರದ ನಡುವೆ ಆತ್ಮೀಯತೆಗೆ ಜಾಗವಾದರೂ ಎಲ್ಲಿ?  ಮುಚ್ಚಿದ ಬಾಗಿಲುಗಳ, ಕರ್ಟನ್‌ಗಳಿಂದ ಅಲಂಕರಿಸಿದ ಕಿಟಕಿಗಳ, ಮಕ್ಕಳ ಕಲರವ ಅಡಗಿಸುವ ಟೀವಿಯ ಅಬ್ಬರದ ಹಾಗೂ ವಿದ್ಯುದ್ದೀಪಗಳು ಸದಾ ಉರಿಯುವ ಮನೆಗಳಿಂದ ಸೂರ್ಯ ದೂರವಾಗುತ್ತಿದ್ದಾನೆ.  ಇಂಥ ಆಧುನಿಕ ಮನೆಗಳಲ್ಲಿ ಕ್ಷುಲ್ಲಕ ಔಪಚಾರಿಕತೆಗೆ ತಾವಾದರೂ ಎಲ್ಲಿ!?

ನಗರದ ನಾಗರಿಕರ ಆತಂಕಗಳು ಅರ್ಥಹೀನವೇನೂ ಅಲ್ಲ.  ಬಾಗಿಲು ತಟಟುವ ವ್ಯಕ್ತಿ ಹಂತಕನಿರಬಹುದು, ಕಳ್ಳನಾಗಿರಬಹುದು, ವೃಥಾ ಪೀಡಿಸುವ ಸೇಲ್ಸ್‌ಮ್ಯಾನ್ ಆಗಿರಬಹುದು.  ಮಾಧ್ಯಮಗಳಿಗೆ ರಜೆಯಿದ್ದ ದಿನವೂ ನಗರಗಳಲ್ಲಿ ಅಪರಾಧಗಳು ಸಂಭವಿಸುತ್ತವೆ!  ಇದು ನಾವೇ ಕಟ್ಟಿಕೊಂಡ ವಿಷವೃತ್ತ.  ಒಂದು ಮನೆಗೆ ಕಳ್ಳ ನುಗ್ಗಿದ ಅನ್ನಿ;  ಪಕ್ಕದ ಮನೆಯವರನ್ನು ಸಹಾಯಕ್ಕೆ ಕೂಗಿ ಪ್ರಯೋಜನವಿಲ್ಲ.  ನೆರವು ನೀಡುವುದು ನೆರೆಹೊರೆಯವರ ಕೆಲಸವಲ್ಲ;  ಅದಕ್ಕಾಗಿಯೇ ಪೊಲೀಸರಿದ್ದಾರೆ!  ಹಳ್ಳಿಗಳಲ್ಲಿ ಹಾಗಲ್ಲ.  ಮೆನಯೊಂದರಲ್ಲಿ ಸಂಭವಿಸುವ ಅನಾಹುತಕ್ಕೆ ಊರು ಕಣ್ಣೀರಾಗುತ್ತದೆ.  ಪಕ್ಕದ ಮನೆಯ ದುಃಖ ನಮ್ಮ ಮನೆಯದೂ ಆಗಿರುತ್ತದೆ.

ಎರಡು ಘಟನೆಗಳನ್ನು ಹೇಳಬೇಕು.  ಆತ ಹಣ್ಣುಹಣ್ಣು ಮುದುಕ.  ಆಟೋದಲ್ಲಿ ಕುಳಿತು ವಿಳಾಸ ಹುಡುಕುತ್ತಿದ್ದ.  ವಿಳಾಸವೇನೋ ಸಿಕ್ಕಿತು.  ಆದರೆ ತಟ್ಟಿದ ಮನೆಯ ಬಾಗಿಲು ತೆರೆಯಲಿಲ್ಲ.  ಗುಂಪುಗೂಡಿತು.  `ಹೆಂಡತಿಗೆ ಹುಷಾರಿಲ್ಲ.  ಆಸ್ಪತ್ರೆಯಲ್ಲಿದ್ದಾಳೆ' ಎಂದು ವೃದ್ಧ ಗುಂಪಿಗೆ ಹೇಳುತ್ತಿದ್ದ.  ಸೊಸೆ ಬಾಗಿಲು ತೆರೆಯಲಿಲ್ಲ.  ಮೊಮ್ಮಕ್ಕಳು ಕ್ಯಾರೆ ಅನ್ನಲಿಲ್ಲ.  ಅ ವೃದ್ಧನ ಮಗ ಮನೆಯಲ್ಲಿ ಇರಲಿಲ್ಲ.  ಆಟೋದವನ ಸಹನೆ ತೀರಿತು.  ಗುಂಪೂ ಕರಗಿತು.  ವೃದ್ಧ ವಾಪಸ್ಸಾದ.  ಆತನ ಮಗ ಮೆನಯಲ್ಲಿ ಇದ್ದಿದ್ದರೆ ಸನ್ನಿವೇಶ ಬೇರೆಯಾಗುತ್ತಿತ್ತಾ?  ಗೊತ್ತಿಲ್ಲ.  ಆದರೆ ಯಾವಯಾವುದೋ ನೆನಪು-ನೆಪಗಳನ್ನು ಮುಂದಿರಿಸಿ ವೃದ್ಧನನ್ನು ನಿರಾಕರಿಸಿದ ಸೊಸೆಯ ನಡವಳಿಕೆ ಅಮಾನವೀಯತೆ ಎಂಬುದು ಮಾತ್ರ ನಿಜ.  ಈ ಘಟನೆ ಹಳ್ಳಿಯಲ್ಲಿ ನಡೆದಿದ್ದರೆ ಏನಾಗುತ್ತಿತ್ತು?  ಆ ಹಠಮಾರಿ ಸೊಸೆಗೆ ಯಾರಾದರೂ ತಿಳಿ ಹೇಳುತ್ತಿದ್ದರಾ?  ವೃದ್ಧನ ಉಪಚರಿಸುತ್ತಿದ್ದರಾ?  ಉತ್ತರ ನಿಮ್ಮ ಅನುಭವಗಳನ್ನು ಆಧರಿಸಿದ್ದು.

ಎರಡನೆಯ ಘಟನೆ ಹೀಗಿದೆ.  ಜ್ವರದ ತೀವ್ರತೆಯಿಂದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ ಆ ಹಿರಿಯ ಹೆಣ್ಣುಮಗಳು ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ.  ಮೂಗಿಗೊಂದು ಕೊಳವೆ.  ಮುಂಗೈಗೆ ಚುಚ್ಚಿದ ಸೂಜಿಗೊಳವೆಯ ಮೂಲಕ ತೊಟ್ಟುತೊಟ್ಟಾಗಿ ದೇಹ ಸೇರುತ್ತಿದ್ದ ಪುಷ್ಟಿದ್ರವ.  ಸೂಜಿ ಚುಚ್ಚಿ ಚುಚ್ಚಿ ಗಾಯಗೊಂಡು ಬ್ಯಾಂಡೇಜ್ ಮಾಡಿದ ಮತ್ತೊಂದು ಕೈ ಮಂಚದ ಒಂದು ಬದಿಗೆ ಮೂತ್ರಸಂಗ್ರಹ ಚೀಲ.  ಆಕೆ ಒದ್ದಾಡುತ್ತಿದ್ದಳೂ.  `ಸ್ವಾಸ್ಥ್ಯ ಸುಧಾರಿಸಲು ಮೂರ್‍ನಾಲ್ಕು ದಿನ ಬೇಕು.  ಆವರೆಗೆ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ' ಎಂದು ಸಲಹೆ ನೀಡಿದ ವೈದ್ಯರು ಕೈತೊಳೆದುಕೊಂಡಿದ್ದರು.  ಆದರೆ ಕೈಕಾಲು ಕಟ್ಟುವುದು ಹೇಗೆ?  ಬಲೆಗೆ ಬಿದ್ದ ಮಿಕದಂತೆ ಒದ್ದಾಡುವ ಆಕೆಯ ಚಿತ್ರವನ್ನು ಕಲ್ಪಿಸಿಕೊಳ್ಳುವುದೇ ಅಸಹನೀಯ.  ಕೈಕಾಲು ಹಿಡಿದು ಒದ್ದಾಡುವ ದೇಹವನ್ನು ತಲಾ ನಾಲ್ಕು ಜನ ಎರಡು ಹಗಲು ಎರಡು ರಾತ್ರಿ ಪಾಳಿಗಳಲ್ಲಿ ಒತ್ತಿಹಿಡಿದಿದ್ದರು.  ಒಂದು ಮೊದಲ ಜಾವದಲ್ಲಿ ಆಕೆಗೆ ಇದ್ದಕ್ಕಿದ್ದಂತೆ ತಿಳಿವಳಿಕೆ ಬಂತು.  ಆದಿನ ಬೆಳಗ್ಗೆ ಆಸ್ಪತ್ರೆಗೆ ಬಂದವರಿಗೆ ತಮ್ಮ ಕಣ್ಣನ್ನೇ ನಂಬಲಾರದಷ್ಟು ಅಚ್ಚರಿ.  ಅವರ ಅಚ್ಚರಿಗೆ ಕಾರಣ ಆಕೆಯ ಆರೋಗ್ಯ ಸುಧಾರಣೆ ಅಲ್ಲ;  ಮಂಚದ ಮೇಲೆ ಮಲಗಿಯೇ ಆಕೆ ಉಪಚರಿಸಿದ ರೀತಿ.  ಬಂದವರಿಗೆ ಹೋಟೆಲ್‌ನಿಂದ ಕಾಫಿ ತಂದುಕೊಡುವಂತೆ ಆಕೆ ಒತ್ತಯಿಸತೊಡಗಿದಳು.  ಎಳನೀರಾರದರೂ ಕುಡಿದುಹೋಗಿ ಎಂದು ಎಳನೀರು ತಂದವರನ್ನೇ ಒತ್ತಾಯಿಸಿದಳು.  ಆ ಹಳ್ಳಿಯ ಹೆಣ್ಣುಮಗಳ ಉಪಚಾರ ಕಂಡು ಎದುರಿಗೆ ಕುಳಿತಿದ್ದವರು ಮುದುಡಿಹೋಗಿದ್ದರು.  ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ನೋವನುಭವಿಸುತ್ತಿದ್ದರೂ, ಎದ್ದು ಕೂರಲು ಆಗದೆ ಹೋದರೂ ಆಕೆ ಅತಿಥಿಗಳನ್ನು ಉಪಚರಿಸಲು ಮರೆತಿರಲಿಲ್ಲ.  ಅದು ಯಾರೋ ಹೇಳಿಕೊಟ್ಟ ಪಾಠವಲ್ಲ;  ಹಳ್ಳಿಯ ಬದುಕು ಕಲಿಸಿಕೊಟ್ಟ ಸಂಸ್ಕಾರ.

ನಗರ ಎನ್ನುವುದು ಘಟೋತ್ಕಚ ಸೃಷ್ಟಿಸಿದ ಮಾಯಾಬಜಾರಿನಂತಹುದು.  ಈ ಬಜಾರಿನಲ್ಲಿ ಕನಸುಗಳನ್ನು ಕೊಳ್ಳುವವರು ನಾವು.  ಈ ಕನಸುಗಳೇನೂ ಸೋವಿಯಲ್ಲ.  ಒಂದೊಂದು ಕನಸೂ ವಯಸನ್ನು ಬೇಡುತ್ತದೆ, ರೊಕ್ಕವನ್ನು ಬೇಡುತ್ತದೆ, ಏಕಾಂತವನ್ನು ಬೇಡುತ್ತದೆ.  ಇಷ್ಟೆಲ್ಲ ದಂಡ ಕಟ್ಟಿಸಿಕೊಂಡು ದಕ್ಕಿದರೂ ಅದು ಪರಿಪೂರ್ಣವೇನಲ್ಲ.  ಅದರ ಪರಿಪೂರ್ಣತೆಗೆ ಮತ್ತೊಂದು ಕನಸನ್ನು ನನಸು ಮಾಡಿಕೊಳ್ಳಬೇಕಿದೆ.  ಎಷ್ಟು ಸುತ್ತಿದರೂ ತೀರದ ವೃತ್ತವಿದು.  ಈ ಸುತ್ತಾಟದಲ್ಲಿ, ನಟಿಯೊಬ್ಬಳು ತನ್ನ ಮೂಗು ತಿದ್ದಿಕೊಂಡಷ್ಟು ಸಲೀಸಾಗಿ ಮುಖಗಳನ್ನು ಬದಲಿಸಿಕೊಳ್ಳುತ್ತೇವೆ.  ಕೊನೆಗೊಮ್ಮೆ ನೈಜ ಮುಖದ ನೆನಪೇ ಅಳಿಸಿಹೋಗುತ್ತದೆ.  ನಮ್ಮದಲ್ಲದ ಮುಖವನ್ನು ಹೊತ್ತು ಬದುಕುತ್ತೇವೆ.  ಸುಖದ ಅರ್ಥಗಳನ್ನು ಬದಲಿಸಿಕೊಳ್ಳುತ್ತೇವೆ.  ಒಂದುದಿನ, ಬಜಾರಿನ ಮಾಯೆ ಹರಿಯುತ್ತದೆ.  ಆವೇಳೆಗೆ ಬದುಕೇ ಒಂದು ಬಜಾರಾಗಿರುತ್ತದೆ.  ಕೆಲವರು ಮಾಯೆಯ ಪೊರೆಯಲ್ಲೇ ಉಳಿಯುತ್ತಾರೆ.

ಇಪ್ಪತ್ತನಾಲ್ಕು ಗಂಟೆ ನಮಗೆ ಯಾವುದಕ್ಕೂ ಸಾಲದು.  ಗೆಳೆಯರೊಂದಿಗೆ ಹರಟೆ ಹೊಡೆಯಲು, ಮಗುವಿಗೆ ಚಂದಮಾಮನ ತೋರಿಸಲು, ಸಂಗಾತಿಯೊಂದಿಗೆ ಸಂಜೆಯ ನೀರವತೆಗೆ ರಂಗೇರಿಸಲು ನಮ್ಮ ಗಡಿಯಾರಗಳಲ್ಲಿ ಸಮಯವಿಲ್ಲ.  ಕುಟುಂಬದ ಸದಸ್ಯರು ಪರಸ್ಪರ ಅಪರಿಚಿತರಾಗುವ ಉದಾಹರಣೆಗಳು ಇಲ್ಲದಿಲ್ಲ.  `ಅರ್ಧ ನಾರೀಶ್ವರ' ಕಲ್ಪನೆ ನಗರದ ಜಮಾನಕ್ಕೆ ಹೊಂದುತ್ತಿಲ್ಲ.  ಇಲ್ಲಿ ಗಂಡ ಒಂದು ದಂಡೆ.  ಹೆಂಡತಿ ಇನ್ನೊಂದು ದಂಡೆ.  ಮಕ್ಕಳೆಂಬ ನಾವೆ ಎರಡೂ ದಡಗಳನ್ನು ಕೂಡಿಸುವುದಿಲ್ಲ.  ಮಕ್ಕಳಿಗೆ ಅವರದೇ ಆದ ಜವಾಬ್ದಾರಿಗಳಿವೆ.  ಮುಂದಿನ ಬದುಕಿಗಾಗಿ ಅವರು ಇಂದಿನ ಬಿಡುವು ಹಾಗೂ ಮುಗ್ಧತೆ ಕಳೆದುಕೊಂಡಿದ್ದಾರೆ.  ಮಕ್ಕಳ ಅಗತ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಪೋಷಕರ ಪಾತ್ರ ಸೀಮಿತವಾಗುತ್ತಿದೆ.  ಕೊಳ್ಳುಬಾಕ ಸಂಸ್ಕೃತಿ ಹಾಗೂ ಸಿರಿಜ್ವರ ಮನುಷ್ಯರ ಭಾವನೆಗಳನ್ನು ಪ್ರಭಾವಿಸಿವೆ.  ಮನಃಶಾಂತಿಯೂ ಇಲ್ಲಿ ಕೊಳ್ಳುವ ಸರಕು.  ಏಕಾಂತದ ಧ್ಯಾನವೂ ಬಿಕರಿಗಿದೆ.

ನಮ್ಮ ಗೆಳೆತನಗಳಾದರೂ ಎಂಥವು?  ಕಚೇರಿ ಬೆಸೆಯುವ ಗೆಳೆತನ, ಮಸಾಲೆದೋಸೆ ಗೆಳೆತನ ಅಥವಾ ಯಾವುದೋ ರೀತಿಯಲ್ಲಿ ರೂಪಾಯಿಯೊಂದಿಗೆ ನಂಟು ಹೊಂದಿದ ಗೆಳೆತನ.  ಗೆಳೆತನ ಈಗ ಸುವಿಶಾಲ ಆಲವಲ್ಲ;  ಹುಲ್ಲು.  ನಗರಗಳಲ್ಲಿ ಹುಲ್ಲನ್ನು ಬೆಳೆಯಲಾಗುತ್ತದೆ, ಎಲ್ಲಿಯೋ ಬೆಳೆಸಿದ ಹುಲ್ಲುಮಡಿಗಳನ್ನು ಮತ್ತ್ಯಾವುದೋ ನೆಲಕ್ಕೆ ಕಸಿ ಮಾಡಲಾಗುತ್ತದೆ, ಅಲಂಕಾರಕ್ಕಾಗಿ.  ಗೆಳೆತನಗಳನ್ನು ಉಳಿಸಿಕೊಳ್ಳಲಾಗುತ್ತದೆ, ಅಲಂಕಾರಕ್ಕಾಗಿ.

`ಚಿನ್ನಾರಿ ಮುತ್ತ' ಚಿತ್ರದಲ್ಲಿ, ಹಳ್ಳಿಯಿಂದ ನಗರದ ಪಾಲಾದ ಮುತ್ತ ಹಾಡುವ ಹಾಡು ನೆನಪಿದೆಯಾ?  `ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು/ ಎಷ್ಟೊಂದು ಮನೆ ಇಲ್ಲಿ ಎಲ್ಲಿ ನನ್ಮನೆ' ಎಂದು ಮುತ್ತ ತನ್ನನ್ನು ತಾನು ಕೇಳಿಕೊಳ್ಳುತ್ತಾನೆ.  ಇದು ನಾವು ಕೇಳಿಕೊಳ್ಳಬೇಕಾಧ ಪ್ರಶ್ನೆಯೂ ಹೌದು.  ಉತ್ತರ ಸಿಕ್ಕಿದರೆ ನೀವು ಅದೃಷ್ಟವಂತರೇ ಸರಿ.

ಸಣ್ಣಸಣ್ಣ ಕೌಟುಂಬಿಕ ಸಂಗತಿಗಳ ಮೂಲಕವೇ ಬದುಕಿನ ಸುಖ ಕಾಣುವ ಸಂಸ್ಕೃತಿ ನಮ್ಮದು.  ನ್ಯೂಕ್ಲಿಯರ್‍ ಕುಟುಂಬಗಳು ಜನಪ್ರಿಯವಾಗುತ್ತಿರುವ ಸಂದರ್ಭದಲ್ಲೂ ಅವಿಭಕ್ತ ಕುಟುಂಬ ಕಲ್ಪನೆಯನ್ನು ಉಳಿಸಿಕೊಂಡಿರುವ ಸಂಸ್ಕೃತಿ ನಮ್ಮದು.  ಆದರೆ ಈ ಹೆಮ್ಮೆಗಳಷ್ಟೇ ನಮ್ಮನ್ನು ಕಾಯುವುದಿಲ್ಲ.  ಮಾಯಾಬಜಾರಿನ ಒಳಗಿದ್ದೂ ಹಳ್ಳಿಯ ಬೇರುಗಳ ಆರ್ದ್ರತೆ ಉಳಿಸಿಕೊಳ್ಳದಿದ್ದಲ್ಲಿ ಉಳಿಗಾಲವಿಲ್ಲ.

ಹಳ್ಳಿ ಎನ್ನುವುದು ಈಗ ಒಂದು ಊರಾಗಿ ಉಳಿದಿಲ್ಲ.  ಹಳ್ಳಿಯ ಹೈಕಳು ನಗರ ಸೇರಿದ್ದಾರೆ.  ಅಮೆರಿಕ ಸೇರಿದ್ದಾರೆ.  ಅವರ ಮೂಗುಗಳಿಗೆ ಹಳ್ಳಿಯ ಮಣ್ಣಿನ ವಾಸನೆ ಸೇರುವುದಿಲ್ಲ.  ಬಾವಿಯ ನೀರು ದೇಹಕ್ಕೆ ಒಗ್ಗುವುದಿಲ್ಲ.  ಹೀಗಿರುವಾಗ ಹಳ್ಳಿಯಲ್ಲಿನ ಜನರು ಅವರಿಗೆ ಅಪರಿಚಿತ ಅನ್ನಿಸುವುದು ಸಹಜ ತಾನೆ?  ಆ ಜನರಲ್ಲಿ ಅಪ್ಪ ಅಮ್ಮ ಇರುತ್ತಾರೆ.  ಸೋದರ ಸೋದರಿ ಇರುತ್ತಾರೆ.  ಏನು ಮಾಡುವುದು:  ದಾರಿಗಳು ಕವಲೊಡೆದಿವೆ.  ನಮ್ಮ ಬದುಕು ನಮ್ಮದು ಎಂದು ಯೋಚಿಸುವವರ ಸಂಖ್ಯೆ ಹೆಚ್ಚುತ್ತಿದೆ.  ಮನೆಯ ಗೋಡೆಯ ಮೇಲಿನ ಗ್ರೂಪ್ ಫೋಟೊಗಳು ಮಾಯವಾಗಿವೆ.  ಷೋಕೇಸ್‌ನಲ್ಲಿ ಗಂಡಹೆಂಡಿತ ಚಿತ್ರ ಸ್ಥಾನ ಪಡೆದಿದೆ.  ಬೆಳೆದ ಮಕ್ಕಳು ಗೂಡಿನಿಂದ ಹಾರುತ್ತಿದ್ದಾರೆ.  ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ.

ಹಳ್ಳಿ ಎನ್ನುವುದು ಒಂದು ಊರಲ್ಲ.  ಅದೊಂದು ಅದ್ಭುತ ಕಲ್ಪನೆ;  ಎಟುಕಿಸಿಕೊಳ್ಳಬಹುದಾದ ಆದರ್ಶ.  ಆ ಆದರ್ಶವನ್ನು ಎಟುಕಿಸಿಕೊಳ್ಳಲಿಕ್ಕಾಗಿ ಹಳ್ಳಿಗಳಲ್ಲೇ ಬದುಕಬೇಕಿಲ್ಲ.  ನಗರದಲ್ಲಿದ್ದೂ ಬೇರುಗಳಿಗೆ ಬದ್ಧರಾಗಿರಲು, ಎದೆಯ ತೇವ ಉಳಿಸಿಕೊಳ್ಳಲು ಸಾಧ್ಯವಿದೆ.  ಕಾಲದ ಓಟದಲ್ಲಿ ಹಳ್ಳಿಗಳ ಸ್ವರೂಪ ಉಳಿಯುತ್ತದೋ ಇಲ್ಲವೋ ಹೇಳುವುದು ಕಷ್ಟ.  ಆದರೆ... ಹಳ್ಳಿಯ ಸ್ವರೂಪವನ್ನು ಹಳ್ಳಿ ಎನ್ನುವ ಆದರ್ಶವನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ನಗರದ ಜನರನ್ನು ಟೀಕಿಸುವುದು;  ಹಳ್ಳಿಗರನ್ನು ಅಟ್ಟಕ್ಕೇರಿಸುವುದು ಈ ಬರಹದ ಉದ್ದೇಶವಲ್ಲ.  ನಗರದ ಒಂದು ಭಾಗವಾಗಿ ನಿಂತು ನಾವು ಕಳೆದುಕೊಳ್ಳುತ್ತಿರುವ ಸುಖಗಳ, ಮೌಲ್ಯಗಳ ಕುರಿತು ಯೋಚಿಸುವುದಷ್ಟೇ ಇಲ್ಲಿನ ಯೋಚನೆಯ ಪ್ರಯತ್ನ.  `ಊರು, ಮನೆ, ಅಪ್ಪ ಅಮ್ಮ, ಒಡಹುಟ್ಟಿದವರು- ಇವರೆಲ್ಲ ಸೇರಿ ನಾನು' ಎನ್ನುವವರು ನಮ್ಮ ನಡುವೆ ಇದ್ದಾರೆ.  ಈ ಸಮಾಧಾನವೇ, ಇಂಥವರ ಸಂತತಿ ಇನ್ನೂ ಹೆಚ್ಚಲಿ ಎನ್ನುವ ಹಂಬಲವೇ ಈ ಬರಹವನ್ನು ರೂಪಿಸಿದೆ.  ಇಂಥ ಹಂಬಲಗಳು ವೈಯಕ್ತಿಕವಾಗಿ ಜಡ್ಡುಗಟ್ಟದೆ ಉಳಿಯಲು ನಡೆಸುವ ಪ್ರಯತ್ನಗಳೂ ಹೌದು.

`ಸಂಬಂಜ ಅನ್ನೋದು ದೊಡ್ಡದು ಕನಾ' ಅನ್ನುತ್ತಾರೆ ದೇವನೂರು ಮಹಾದೇವ.  ಇಲ್ಲ ಅಂತೀರಾ?

            *****

ಕೀಲಿಕರಣ: ಕಿಶೋರ್‍ ಚಂದ್ರ

ಬಿಡು ಬಿಡು ಈ ನಡತಿ

- ಶಿಶುನಾಳ ಶರೀಫ್

ಬಿಡು ಬಿಡು ನಿಮ್ಮಯ ಈ ನಡತಿ
ಛೇ   ಸಲ್ಲದು ಈ ರೀತಿ                                    ||ಪ||

ಪೊಡವಿಯೊಳಗೆ ನಮ್ಮ ಗೊಡವಿಯಾತಕೆ ನಿಮಗೆ
ನುಡಿಯದೊಂದನು ನೀನು ನಡಿನಡಿಮನೆಗೆ         ||೧||

ಭೋಗವಿಷಯಸುಖ ನೀಗಿ ಯೋಗದೊಳಗೆ
ಆಗದಾಗದು ಸ್ನೇಹ ನಡಿ ನಮಗೀಗ                   ||೨||

ಧರೆಯೊಳು ಶಿಶುನಾಳಧೀಶನು ಕಂಡರೆ
ಮರುಳೆ ಒಪ್ಪನು ಇದಕೆ ತರವಲ್ಲವು ಕಂಡ್ಯಾ        ||೩||
*****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ನಾಯಿಯ ಸಾಕಿದರು

- ಡಾ || ರಾಜಪ್ಪ ದಳವಾಯಿ

ನಾಯಿ ಸಾಕಿದರು
ಶೋಕಿ ಮಾಡಿದರು
ಇದ್ದವರು;  ಕದ್ದವರು
ಬಾಯಿ ಬಿಟ್ಟರು
ಬೇಗೆ ನುಂಗಿದರು
ಇಲ್ಲದವರು; ಮನಷ್ಯರು

        *****

ಸೋರುತಿಹುದು ಮನೆಯಮಾಳಿಗಿ

- ಶಿಶುನಾಳ ಶರೀಫ್

ಸೋರುತಿಹುದು ಮನೆಯಮಾಳಿಗಿ ಅಜ್ಞಾನದಿಂದ
ಸೋರುತಿಹುದು ಮನೆಯಮಾಳಿಗಿ    ||ಪ||

ಸೋರುತಿಹುದು ಮನೆಯಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ                   ||೧||

ಮುರುಕು ತೊಲೆಯು ಹರಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ                   ||೨||

ಕರಕಿಹುಲ್ಲು ಕಸವು ಹತ್ತಿ
ದುರಿತಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯಮಣ್ಣು
ಒಳಗೆ ಹೊರಗೆ ಏಕವಾಗಿ                ||೩||

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳಿಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ              ||೪||
          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ