ಸಾಮ್ರಾಜ್ಞಿ

-ರವಿ ಕೋಟಾರಗಸ್ತಿ

ತುಂಬಿದ ಸಿರಿಯ ಸೊಬಗಿನಲಿ
ಗಿರಿವನ ಬೆಟ್ಟಗಳ ಹಸಿರಲಿ
ಕನ್ನಡದ ಗಡಿಯಲಿ
ಕನ್ನಡಮ್ಮನ ಅಳಲು ಆಲಿಸುವವರಿಲ್ಲ

ಮೆರೆಯಬೇಕಿದ್ದ ಸಾಮ್ರಾಜ್ಞಿ
ಬೆಂಡಾಗುತಿಹಳು ಬವಣೆಯಿಂದ
ಜೋಭದ್ರ ನಾಯಕಮಣಿಗಳನು
ಪಡೆದ ಕನ್ನಡನಾಡಿನ ಚಿತ್ರವ ಕಂಡು
ಕಣ್ಣೀರಿನ ಹೊಳೆ ಹರಿಸುತಿಹಳು

ಕಣ್ಣು ತೆರೆಯಿರಿ ಕನ್ನಡ ಕುವರರೆ
ಅಳಿಯುತಿಹ ಕನ್ನಡ ಉಳಿಸಿರಿ
ಪರಭಾಷೆಯ ದಳ್ಳುರಿಯ ಶಮನಗೊಳಿಸಲು
ಕಂಕಣಕಟ್ಟಿ ಸನ್ನದ್ಧರಾಗಿರಿ

ವೀರಾವೇಷದಿ ಬರಿ ಘೋಷಣೆ ಕೂಗುತಾ
ನಾಯಕರ ಪೊಳ್ಳು ಭಾಷಣ ಕೇಳುತಾ
ಮನನೊಂದು ಮಮ್ಮಲ ಮರಗುತಿಹಳು...

ಗಡಿ ನಾಡಿನ ಉದ್ದಕ್ಕೂ
ಝೇಂಕರಿಸುತಿಹುದು ಶೋಕಗೀತೆ
ವೇದನೆಯ ಶಮನಗೊಳಿಸುವಿರಾ
ತಾಯಿ ಎದುರನೋಡುತಿಹಳು
ಕನ್ನಡ ಕುವರರ ಶಕ್ತಿ-ಯುಕ್ತಿಗಳನು

         ***

ಕೀಲಿಕರಣ: ಕಿಶೋರ್‍ ಚಂದ್ರ

ಕೃಷಿ

- ಅಬ್ಬಾಸ್ ಮೇಲಿನಮನಿ

ಅದೊಂದು ಪುಟ್ಟ ಗ್ರಾಮ.  ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  ಸನ್ಮಾನಿತನಾದವನು ಹೆಸರಾಂತ ಕವಿ.  ಅವನೂ ಅದೇ ಹಳ್ಳಿಯವನು.  ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು.  ಮತ್ತು ಸಂಭ್ರಮದಿಂದ ಕವಿಗೆ ಶಾಲು ಹೊದಿಸಿ, ಹಾರ ಹಾಕಿ, ಅಮೂಲ್ಯ ಕಾಣಿಕೆಯೊಂದಿಗೆ ಸನ್ಮಾನಿಸಿದ್ದರು.

ಸಮಾರಂಭದಲ್ಲಿ ಆರಂಭದಿಂದ ಕೊನೆಯತನಕ ಕವಿಯ ಸಾಹಿತ್ಯ ಕೃಷಿಯ ಕುರಿತು ಪ್ರತಿಯೊಬ್ಬರು ಮಾತನಾಡಿದರು.  ಘನವಾದ ಶಬ್ದಗಳಿಂದ ಕವಿಯೂ ತನ್ನ ಕಾವ್ಯಕೃಷಿ ಕುರಿತು ಮಾತನಾಡಿದ.  ಅವನು ವೇದಿಕೆ ಇಳಿದು ಬರುತ್ತಿದ್ದಂತೆ ಕಾತರದಿಂದ ಹತ್ತಿರ ಬಂದ ರೈತನೊಬ್ಬ "ಏ, ಕವಿ ನಂದು ಗುರ್ತು ಹತ್ತೇನೊ?" ಎಂದ.  ಅವನ ಧ್ವನಿಯಲ್ಲಿ ಹುಂಬತನವಿತ್ತು.  ಅದನ್ನು ಯಾವಾಗಲೋ ಕೇಳಿದ, ಅವನನ್ನು ಎಲ್ಲೋ ನೋಡಿದ ನೆನಪು.  ಒಮ್ಮೆ ದಿಟ್ಟಿಸಿ ನೋಡಿ "ನೀವು ಯಾರು?" ಎಂದು ಘನಗಂಭೀರವಾಗಿ ಕೇಳಿದ ಕವಿ.

"ಈಗ ನೀ ದೊಡ್ಡ ಕವಿಯಾಗಿಯಪ್ಪ.  ನನ್ನಂಥ ಹಳ್ಳಿಯಾಂವ ನಿನ್ಗೆ ನೆಪ್ಪ ಹ್ಯಾಂಗಾಗಬೇಕು.  ನಾ ನಿನ್ನ ಕೂಡ ಗೌಂಟಿ ಸಾಲ್ಯಾಗ ಕಲ್ತಾಂವ" ಎಂದ ರೈತನನ್ನು ಒಂದು ಕ್ಷಣ ದಿಟ್ಟಿಸಿದವನೇ ಕವಿ "ನೀನು ಚೆನಮಲ್ಲು" ಎಂದ.  "ಹೌದೋ ವಾಮನ" ಎಂದು ಹಿಗ್ಗಿಕೊಂಡ ರೈತ.

"ಹೌದೋ, ನಿನ್ನ ಮಂಜಾಳ ಹೋಗ್ಲಿ" ಎಂದು ಕವಿಯ ಬೆನ್ನಿಗೆ ಲಘುವಾಗಿ ಗುದ್ದಿ ನಕ್ಕ ರೈತ.  "ನಿನ್ನೋಡಿ ಬಹಳ ದಿನಾ ಆತು" ಎನ್ನುತ್ತ ರೈತನೊಂದಿಗೆ ಹೆಜ್ಜೆ ಹಾಕಿದ ಕವಿ.  ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತ ಹಾದಿ ತುಳಿಯುತ್ತಿದ್ದಂತೆ ರೈತ ಕವಿಯನ್ನು ಕೇಳಿದ.

"ನಿಮ್ಮ ಜಮೀನಿನ್ಯಾಗ ಏನೇನು ಬೆಳೀತಿಯಪಾ ನೀನು?"

"ನಮ್ದು ಜಮೀನಽಽ ಇಲ್ಲ."

"ಮತ್ತ ಕೃಷಿ ಮಾಡ್ತೀನಿ ಅಂತ ಭಾಸನದಾಗ ಹೇಳ್ದಿ.  ನಿನ್ನ ಬಗ್ಗೆ ಮಾತಾಡಿದವರೂ ನಿನ್ನ ಕೃಷಿ ಬಗ್ಗೆ ಹೇಳಿದ್ರು" ಸೋಜಿಗ ವ್ಯಕ್ತಪಡಿಸಿದ ರೈತ.

"ನಂದು ಸಾಹಿತ್ಯ ಕೃಷಿ!" ಎಂದ ಕವಿ.

"ಅಂದ್ರ ಅದಕ್ಕ ಯಾವ ಬೀಜ ಬಿತ್ತಿ, ಯಾವ ಗೊಬ್ಬರ ಹಾಕ್ತಿ?" ಕುತೂಹಲವಿತ್ತು ರೈತನ ದನಿಯಲ್ಲಿ.

"ಬೀಜ ಇಲ್ಲ, ಗೊಬ್ಬರ ಇಲ್ಲ, ನೀರೂ ಇಲ್ಲದ ಕೃಷಿ ನಂದು"

"ಅದೆಂತ ಕೃಷಿನೋ ಮಾರಾಯ?"

"ಕಾವ್ಯ, ಕಥಿ, ಕಾದಂಬರಿ, ನಾಟಕ, ವಿಮರ್ಶೆ ಬರೀತೀನಿ."

"ಅದರಿಂದ ನಿನಗೇನು ಲಾಭ?"

"ಹೆಸರು, ಕೀರ್ತಿ, ಪ್ರತಿಷ್ಠೆ, ಗೌರವ, ಸನ್ಮಾನ."

"ಮತ್ತೆ ನಿನ್ನ ಸಂಸಾರಕ ಏನು ಮಾಡ್ತಿ?"

"ನಾನು ಕಾಲೇಜಿನ್ಯಾಗ ರೀಡರ್‍ ಇದ್ದೀನಿ."

"ಅಂದ್ರ ದೊಡ್ಡ ಪಗಾರನಽಽ ಇರಬೇಕಲ್ಲ."

"ಹೌದು."

"ಬಂಗ್ಲೇನೂ ಕಟ್ಟಿಸಿರಬೇಕಲ್ಲ."

"ಹೂಂ."

"ಬಂಗ್ಲೆದಾಗ ಕುಂತು ಕಥಿ, ಕವನ ಬರೀತಿ ಅನ್ನು."

"ಹೂಂ."

"ಅದರಿಂದ ಉಪಯೋಗವೇನು?"

"ಜನರ ಮನಸ್ಸಿಗೆ ಆನಂದ, ಹಿತ."

ಹೊಲ, ಬೀಜ, ಬೆವರು, ಫಲದ ತನ್ನ ಕೃಷಿಯನ್ನು ರೈತ ಕವಿ ಕೃಷಿಯೊಂದಿಗೆ ಸಮೀಕರಿಸಿಕೊಂಡು ಯೋಚಿಸಿದ.  ಕೊನೆಗೆ ಕೇಳಿದ "ನಿನ್ನ ಕೃಷಿಯಿಂದ ಹಸಿದ ಹೊಟ್ಟೆಗೆ, ಕಷ್ಟದ ಜೀವನಕ್ಕೆ ಎಂತ ಉಪಯೋಗ ಆಗತ್ತೊ ವಾಮನ?"

ಕವಿ ದಿಙ್ಮೂಡನಾದ.
         *****
ಕೀಲಿಕರಣ: ಕಿಶೋರ್‍ ಚಂದ್ರ

ಲಂಚದ ಮನೆ

- ಅಬ್ಬಾಸ್ ಮೇಲಿನಮನಿ

ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ.  ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ.  ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು.

ಆನಂದಪ್ಪ ಒಬ್ಬ ಇಂಜಿನಿಯರ್‍.  ಸರಕಾರಿ ಹುದ್ದೆಯಲ್ಲಿದ್ದ.  ತಾನು ಕಟ್ಟಿಸುವ ಮನೆ ಭೂಮಿಯ ಮೇಲಿನ ಸ್ವರ್ಗಧಾಮದಂತಿರಬೇಕೆಂದು ಕನಸು ಕಂಡಿದ್ದ.  ಅವನ ಕೈ ಕೆಳಗಿನ ನಾಲ್ಕಾರು ಜನ ಇಂಜಿನಿಯರ್‌ಗಳು ಆ ಕನಸಿನ ಸಾಕಾರಕ್ಕಾಗಿ ಸತತವಾಗಿ ಪರಿಶ್ರಮಿಸತೊಡಗಿದ್ದರು.

ಕೆಲವು ಕಂಟ್ರಾಕ್ಟರರು ಆನಂದಪ್ಪ ಹೇಳದಿದ್ದರೂ ಮನೆಯ ಕಟ್ಟಡಕ್ಕೆ ಬೇಕಾಗುವಷ್ಟು ಕಬ್ಬಿಣ, ಸಿಮೆಂಟು, ಕಲ್ಲು, ಉಸುಕು, ಕಿಟಕಿ, ಬಾಗಿಲು ಪೂರೈಸಿದ್ದರು.  ಗೌಂಡಿಗಳು ತಮ್ಮ ಶ್ರಮದ ಬೆವರನ್ನು ಕಟ್ಟಡಕ್ಕೆ ಹನಿಸುತ್ತ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.

ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ.  ಮನೆ ಮಾತ್ರ ಸುಂದರವಾಗಿರಬೇಕೆಂದು ಇಂಜಿನಿಯರ್‍ ಪತ್ನಿ ಪದೆ ಪದೆ ಹೇಳುತ್ತಿದ್ದಳು.  ಅವಳ ಮನಸ್ಸಿಗೆ ಬೇಸರವೆನಿಸಿದರೆ ಕಟ್ಟಡವನ್ನು ಕೆಡವಿ ಹಾಕಲಾಗುತ್ತಿತ್ತು.  ಇಂಜಿನಿಯರಿಂದ ಶುಕ್ರದೆಸೆ ಅನುಭವಿಸಿದ್ದ ಕಾಂಟ್ರಾಕ್ಟರರು ಒಂದು ಚಕಾರ ಶಬ್ದ ಆಡದೇ ಅವಳ ನಿರ್ದೇಶನಗಳನ್ನು ಪಾಲಿಸುತ್ತಿದ್ದರು.

ಕೊನಗೂ ಮನೆ ತಯಾರಾಯಿತು.  ಎಂಥ ಅಪರೂಪದ ಮನೆ ಅದು!

ಒಳ-ಹೊರ ಗೋಡೆಗಳಿಗೆ ಸಂಗಮವರಿ ಕಲ್ಲುಗಳನ್ನು ಹೊರಿಸಲಾಗಿತ್ತು.  ನೆಲದ ಹಾಸುಗಲ್ಲುಗಳಲ್ಲಿ ನಡೆದಾಡುವವರ ಪ್ರತಿಬಿಂಬ ಕಾಣಿಸುತ್ತಿತು.  ತೇಗ-ಗಂಧದ ಕಿಟಕಿ, ಬಾಗಿಲುಗಳು ಹೊಸ ವಿನ್ಯಾಸದೊಂದಿಗೆ ಮನಮೋಹಕವಾಗಿದ್ದವು.  ಮನೆ ನೋಡಿದವರೆಲ್ಲ ಬೆರಗುಗೊಂಡು ಅದ್ಭುತ! ಎಂದು ಬಣ್ಣಿಸುವರು.

ಅಂತೂ ಆ ಮನೆ ಗೃಹ ಪ್ರವೇಶಕ್ಕೆ ಸಿದ್ಧಗೊಂಡಿತು.

ಇಂಜಿನಿಯರ್‍ ಪತ್ನಿ ಮೂಹೂರ್ತ ಗೊತ್ತುಪಡಿಸಲು ಕಾರು ಹತ್ತಿ ಜೋಯಿಸರ ಮನೆಗೆ ಹೋದಳು.  ತಿರುಗಿ ಬರುವಾಗ ರಸ್ತೆಯ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲಿಯೇ ಅಸುನೀಗಿದ್ದಳು.  ಹೆಂಡತಿಯ ಸಾವಿನ ಸುದ್ದಿ ಕೇಳಿದ್ದೆ ತಡ ಇಂಜಿನಿಯರ್‍ ಸಾಹೇಬರು ಹಠಾತ್ತನೆ ಹೃದಯಾಘಾತಕ್ಕೆ ಕುಸಿದು ಬಿದ್ದರು.

ಆ ಚೆಂದದ ಮನೆಯಲ್ಲಿ ಬದುಕುವ ತೀವ್ರ ತುಡಿತವಿದ್ದ ಗಂಡ-ಹೆಂಡತಿ ತಣ್ಣಗೆ ಸ್ಮಶಾನದ ಮಣ್ಣಲ್ಲಿ ಮಲಗಿದರು.  ಮನೆಯನ್ನು ಹೊಗಳಿದ ಜನರೆ "ಇದು ಗೃಹದೋಷದ ಪ್ರಭಾವ!" ಎಂದರು.
      *****
ಕೀಲಿಕರಣ: ಕಿಶೋರ್‍ ಚಂದ್ರ

ಗೆಳೆಯ

-ರವಿ ಕೋಟಾರಗಸ್ತಿ

ಮುಂಜಾವಿನಮಂಜಿನಂತೆ
ತುಂತುರ ಮಳೆ ಹನಿಯಂತೆ
ನೈದಿಲೆಯ ಚಲುವಿನಂತೆ
ಒಲವು ಸೂಸುತಾ ಮರೆಯಾದೆ

ಸ್ನೇಹ-ಪ್ರೀತಿಗಳ
ಸಂಗಮದ ಸಾಕಾರದಲಿ
ಫಲಾಪೇಕ್ಷ ಬಯಸದ
ನಿರ್‍ಮಲ ಸ್ನೇಹ ಸೇತುವೆ

ಬದುಕು-ಬವಣೆಗಳೆನ್ನದೆ
ಜನಸ್ಪಂದನೆಯಲಿ ಸಂತಸ ಕಾಣುತ
ನಂಬಿಗೆಯ ಬಂಧನದ
ಬಾಂಧವ್ಯದ ಕ್ಷೀರ... ಧಾರೆ...

ನಗುತ ಬೆರೆಯುತಲೆ
ಜತೆ ಜತೆ ಸಾಗುತ..
ಸಂತಸದ ಸಂಭ್ರಮದಿ
ಮರೆಯಾದ ಕಾಣದ ಸೆಳೆತಕೆ

ಹಲವು ಹತ್ತು ಕನಸುಗಳ
 ಕನ್ನಡ ಮರಾಠಿಗರ ಮನಗೆದ್ದ
ಗರಿ ಮುಡಿಸುವ ಗೆಳೆತನದ
ಸುಧಾಮ-ಸಂಕಷ್ಟದ... ಚಾಣಕ್ಯ

ಪಂಚಭೂತದಲಿ ಲೀನವಾಗಿ
ಬದುಕು ಭವ ಗೆದ್ದವ
ಅಮರ ಸಂಜೀವಿನಿಯಾದೆ
ಸದಾ ಸ್ನೇಹದ ಸಾಕಾರದಲಿ

ಉದಯಿಸುವ ರವಿಯಾಗಿ
ಬಾಳಿದ ಕೊನೆಗಳಿಗೆ ತನಕ
ಕತ್ತಲೆದೂಡುತ ಬೆಳಗುತಲೆ
ಮರಳದ ನಾಡಿಗೆ ನಡೆದೆ

ಸುಳಿದಾಡುತ ನೆನಪು
ಅಗಲಿಕೆಯ ನೋವಲಿ
ಅಂತರಾಳದ ಆತ್ಮೀಯತೆಗೆ
ಇರಿಯುತ ಕೆದುಕುತಿಹದು

         *****

ಕೀಲಿಕರಣ: ಕಿಶೋರ್‍ ಚಂದ್ರ

ನಡೆನುಡಿಯಿಂದ ನಾವು ನಡೆಯಬೇಕಣ್ಣಾ

- ಶಿಶುನಾಳ ಶರೀಫ್


ನಡೆನುಡಿಯಿಂದ  ನಾವು  ನಡೆಯಬೇಕಣ್ಣಾ
ದೇಹವಿದು  ತಮ ನಡುವೆ  ಬಿದ್ದು  ಹೋಗತೈತಣ್ಣಾ            ||ಪ||

ಭಜನೆಯ  ಮಾಡ್ವಾಗ   ಭೇದಭಾವ  ಬಿಟ್ಟು   ಭಜಿಸಬೇಕಣ್ಣಾ 
ಅಣ್ಣತಮ್ಮರೆಂದು ತಿಳಿಯಬೇಕಣ್ಣಾ                        ||೧||

ಪರ ಹೆಣ್ಣು ಮಕ್ಕಳು ಎದುರಿಗೆ ಬಂದರೆ ನಜರಿಡಬೇಕಣ್ಣಾ
ನಿನ್ನ  ಭಗಿನಿಯರೆಂದು ತಿಳಿಯಬೇಕಣ್ಣಾ                    ||೨||

ವಸುಧಿಯಲಿ  ಶಿಶುನಾಳಧೀಶನ ದಯವ ಗಳಿಸಬೇಕಣ್ಣಾ
ಗುರುಗೋವಿಂದನ ಧ್ಯಾನಮಾಡಣ್ಣಾ                        ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಕುರುಬರ ಕುರಿತು

ನೃತ್ಯ ರೂಪಕ- ಡಾ || ರಾಜಪ್ಪ ದಳವಾಯಿ

        - ೧ -

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

ಜಾತಿವಾದವ ದೂರವಿಟ್ಟು
ಜಾತಿ ಕೀಳರಿಮೆ ಬಿಟ್ಟು
ಲೋಕ ಧೈರ್‍ಯ ಸ್ಥೈರ್‍ಯಕೆ
ಮೂಕರಾದವರ ವಾಕ್ಯಕೆ ||

ನಮ್ಮ ಹಿರಿಮೆಯ ಸ್ಮರಣೆಯು
ಮುಗ್ದ ಜನರ ಕರುಣೆಯು
ಜನದ ನಡತೆಯೆ ಕನ್ನಡಿ
ಜಗದಸ್ವಾಸ್ಥ್ಯದ ಮುನ್ನುಡಿ ||

        - ೨ -

ಕುರುಬರೆನ್ನುತ್ತಾರೆ ನಮಗೆ ಕುರುಬರೆನ್ನುತ್ತಾರೆ
ಕಾಯುವವ ಕೊಲ್ವನಲ್ಲ ಕುರುಬನೆಂದರೆ ||

ಕುರಿ ಕಾಯ್ವ ಕಾರಣಕೆ ನಾವು ಕುರುಬರು
ದಡ್ಡರೆಂದು ನಮಗೆ ಹೇಳಿದವರು ಯಾರು ?
ಅಲ್ಲಣ್ಣ ನಾವು ಅದು ಖರೆ ಅಲ್ಲವಣ್ಣ
ನಮ್ಮ ಬುದ್ದಿ ಜಗದ ಹಿತಕೆ ಬೇಕೆಬೇಕಣ್ಣ ||

ಹಾಲುಮತದವರು ಎನ್ನುತಾರೆ ಹಾಲುಮತ
ಹಾಲಿನಂಥ ಮನಸು ಎಂಬುದು ಅದರರ್ಥ
ಕುರಿ ಹಾಲು ಮಂದೆ ಕಂಬಳಿ ಕೈಕಸುಬು
ಬೆವರು ಬಲ ನ್ಯಾಯ ನೀತಿ ನಮ್ಮ ಕಸುವು ||

        - ೩ -

ಪುರಾಣವುಂಟು ನಮಗೆ
ಭೂಮಿಗೆ ಬಂದೆವ್ಹೇಗೆ ||

ರುದ್ರ ವಿಲಾಸ ಪ್ರೇಮೋಲ್ಲಾಸ
ಗಿರಿಜೆ ಶಂಕರರ ಮಂದಹಾಸ
ತಾಂಡವ ಮೂರುತಿ ಲಯವಂತ
ಪ್ರೇಮ ಕರುಣೆಯ ಗುಣವಂತ ||

ಗಿರಿಜೆ ಶಂಕರರ ಶುಭವಿವಾಹ
ಧಾರೆಗೆ ಕೈಕೈ ಸತಿಪತಿಯ
ನೆರೆದಿಹ ದೇವತಾ ಸಮೂಹ
ಸಾಕ್ಷಿಗೆಲ್ಲ ಕ್ಷೀರ ಸುರಿಯೆ ||

ಮದುವೆಗೆ ಎರೆದ ಹಾಲನು
ಗಿರಿಜೆ ಮೊಗ ನೋಡಿ ಮರೆತನು
ಸುರಿಯಿತು ಧಾರೆ ಭೂಮಿಗೆ
ಕಾರಣವದು ನಮ್ಮ ಹುಟ್ಟಿಗೆ ||

        - ೪ -

ಮತ್ತೊಂದು ಕಥೆಯುಂಟು
ಶಿವಶಿವೆಯರ ವನದ ನಂಟು ||

ವನಬಳಲಿಕೆಯಿಂದ
ಶಿವೆಸ್ತನಗಳಿಂದ
ಸುರಿಯಿತು ಎದೆ ಹಾಲು
ಎಲ್ಲದೂ ನೆಲಪಾಲು ||

ಭೂಮಿಯ ಎದೆಹಾಲು
ಆಗದು ಮಣ್ಣಪಾಲು
ಮನ ಚಿಂತೆಯ ಶಂಕರ
ಹಿಡಿ ಮಣ್ಣಿಂದ ಚಿತ್ತಾರ ||

ಮುದ್ದಪ್ಪ ಮುದ್ದವ್ವ
ಗಂಡೆಣ್ಣು ಗೊಂಬೆರಡು
ದಿಟ್ಟಿಯಲಿ ಸೃಷ್ಟಿಸಿದ
ಭುವಿಯತ್ತ ಕಳುಹಿಸಿದ ||

ಶಂಕರ ಲೀಲಾ ವಿಲಾಸ
ನೆಲ ನೆರೆ ಹಾಲ ಮಾನಸ
ಹಾಲಾಹಲ ನುಂಗಿಬಿಟ್ಟ
ಜಗಕಮೃತವನೆ ಕೊಟ್ಟ ||

ಆ ಹಾಲು ಕುಡಿಯಲು ಬಂದೆವು
ಆ ಹಾಲು ಕಡೆಯಲು ಬಂದೆವು
ಆ ಹಾಲು ಬೆಳೆಯಲು ಬಂದೆವು
ಆ ಹಾಲು ಸಲಹಲು ಬಂದೆವು

ಕುರಿ ಕಾಯುವ ಮಂದಿ
ಹಾಲೆರೆಯಲು ಬಂದಿವಿ
ಲೋಕದಾ ಕೋಲಾಹಲ
ಮಾಡುವೆವು ಕೋಮಲ ||

        - ೫ -

ಕುರುಬರೆಂಬುದಕೆ ಪರ್ಯಾಯ ಹಲವುಂಟು
ಹಾಲುಮತೆವೆಂದು ಹೆಚ್ಚು ಚಾಲ್ತಿಯುಂಟು ||

ಕುರಿ ಪಾಲನೆ, ಪಶು ಪಾಲನೆ, ಹಾಲು ಪಾಲನೆ
ಎತ್ತರದ ಬೆಟ್ಟದಲಿ ವಾಸದವನೆಂಬ ಸ್ಪಷ್ಟನೆ
ಹೆಸರುಂಟು ದೇಶ ತುಂಬ ಬೇರೆ ಬೇರೆ
ಕುರುಬರು ಕುರುಬವಾಳು ಕುರುಂಬನ್ ಇರುಳಿಗರ್‍
ಇಡೈಯರ್‍ ಕುರುಂಬರನ್ ಹಟ್ಟಿಕಾರ ಪಾಲ್ ಧನಗರ್‍ ||

ಆರ್ಯ ಪೂರ್ವದ ಜನರು ನಾವು
ಶತಮಾನದವೆರಡರಲಿ ಟಾಲೆಮಿ ಬರೆದ
ಪಾಲಿ ಗ್ರಂಥಗಳಲುಂಟು ಉಲ್ಲೇಖ
ಅಂಧ ಅಂಧಕ ಅಂಡರರೆಂದೆಲ್ಲಾ ||

ಅಂಧಕ ವೃಷ್ಟಿಯೆಂಬೊಂದು ಹೆಸರು
ಟಗರು ಸಾಕುವರೆಂದಿದರ ಬೆಡಗು
ಸಿಲಪ್ಪದಿಕಾರಂನ ಇಡೆಯರ್‍ ಅಂಡರ್‍
ನಾವೆ ನಾವಲ್ಲಿಯ ಕುರುಂಬನ್ ವಡುಗರ್‍ ||

ಶತಮಾನ ಮೂರರಲಿ ತಮಿಳು ಕಾವ್ಯಗಳ
ಹಟ್ಟಿಕಾರ ಕುಲನಿಲಮನ್ನೆಯರ್‌ಗಳು
ಇವರು ಟಂಕಿಪ ನಾಣ್ಯಗಳೆ ಪ್ರಾಚೀನವು
ದಕ್ಷಿಣದ ನಾಡವರು ಆಳರಸರವು ||

ಉತ್ತರದಿ ಆಹೀರರು ಯಾದವರು
ಗಢರಿಯಾ ಪಾಲರು ರಾಜ್ಯವಾಳಿದರು
ಪಂಜಾಬ ಬಂಗಾಲ ರಾಜಾಸ್ತಾನ
ಇಂದ್ರಪ್ರಸ್ಥ ಕನೂಜ ಹಿಂದೂಸ್ತಾನ ||

ಕನ್ನಡ ಸಿರಿ ಮುಕುಟ ವಿಜಯನಗರ
ಮೂಲ ವಂಶಜರಲ್ಲಿ ಹಕ್ಕಬುಕ್ಕರು
ಮುಂದೆ ಆಳಿದ ರಾಜರಿಗೆ ಲೆಕ್ಕವಿಲ್ಲ
ಇವರ ಬಗೆಗೆ ಖಚಿತ ಚರಿತ್ರೆಯಿಲ್ಲ ||

ಆಳರಸರ ಚರಿತೆ ಕವಿ ಕೋಗಿಲೆ
ವಿಚಾರತೆಯಲ್ಲಿ ಕುದಿ ಬಾಂಡಲೆ
ಕಾಳಿದಾಸ ಕನಕದಾಸರೀರ್ವರು
ನಮ್ಮ ಬುದ್ದಿಶಕ್ತಿಯ ಧಾತರು ||

        - ೬ -

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದಿ ಸಾಹಿತ್ಯಶ್ರೀ ||

ಹೊಸದೃಷ್ಟಿ ಶಿವಶಕ್ತಿ ಬೆಸೆದ ಪ್ರತಿಭೆ
ಕಾಣದ್ದ ಕಂಡಂತೆ ಶಿವನ ಪ್ರಭೆ
ನವ ನೋನ್ಮೇಷ ಜಗದ ಬೆಳಕು
ಕಾವ್ಯ ಸೂರ್ಯನವನು ಎಲ್ಲ ದಿನಕು ||

ಹೂವು ಬೆಂಕಿಯ ಮಾಲೆಯ ಮಾಡಿ
ಪ್ರೀತಿ ಬಿತ್ತಿದ ಜಗಕೆ ನೋಡಿ
ಅಗ್ನಿಮಿತ್ರನು ಒಲಿದ ಮಾಲವಿಕೆಗೆ
ಮೋಹವೇ ಗೆದ್ದ ಕತೆಯು ಕೊನೆಗೆ ||

ದೇವತಾಶ್ರೀ ಊರ್ವಶಿ ಸುರಸುಂದರಿ
ಸಗ್ಗಕೇ ಹುಚ್ಚಿಡಿಸಿದ ಕಲಾಮಂಜರಿ ||

ಮುಗಿಲ ಕನ್ಯೆ ಪ್ರೇಮಿಸಿದಳು ಅಬ್ಬಬ್ಬಾ
ಮನುಜೇಂದ್ರ ಪುರೂವನ್ನು ಮನದಬ್ಬ
ನೆಲಮುಗಿಲ ಪ್ರೇಮದಲೆ ಬೆಸೆದನಲ್ಲ
ಇಂಥ ಕವಿಗೆ ಮತ್ತೊಬ್ಬ ಸಾಟಿಯಿಲ್ಲ ||

ಜಗದ ಮೇರು ಕೃತಿ ಶಾಕುಂತಲ
ಕಣ್ವಾಶ್ರಮದ ಮುಗುದೆಯಲ ||

ಬಂದನರಸ ದುಶ್ಯಂತ ಬೇಟೆಗೆಂದು
ಬೇಟವೇ ಬೆಸೆಯಿತು ಅವರನಂದು
ಕೊಟ್ಟನವನು ಆಹಾ! ನೆನಪಿನುಂಗುರ
ಬಾಲೆಯ ಎದೆಯೆಲ್ಲ ಕನಸಿನಂಬರ ||

ಮುನಿ ಮುನಿದ ಕಾರಣ
ಪ್ರಿಯನಲ್ಲಿ ರಾಜಕಾರಣ
ಮರೆತು ಮುಗುದೆಗೆ ಹಿಂಸೆ
ಶಾಪ ಕೂಪದಲಿ ನರಳಿಸೆ ||

ಅಮರ ಪ್ರೇಮದ ಕಾವ್ಯ
ಇಂದಿಗೂ ನವ ನವ್ಯ
ಪ್ರೇಮ ಪರಿಕಿಪ ಚಾಪ
ವಿರಹಾಗ್ನಿ ಎಸೆದ ಧೂಪ ||

ಸಕಲ ರಾಮಾಯಣದ ಮೊರೆ
ರಘುವಂಶ ಚರಿತದ ತಾರೆ
ಹಲವು ರಾಜರ ವರ್ಣನ
ಕಾವ್ಯ ಮಹತಿನ ಕರ್ಷಣ

ಸನ್ಯಾಸಿ ಶಿವನು ಸಂಸಾರಿಯಾದ
ಕಾರಣವದಕೆ ಕುಮಾರ ಸಂಭವಂ
ಮೋಹಿತರು ಶಿವ ಪಾರ್ವತಿ
ಸೃಷ್ಟಿಲಯ ಉದಯ ಜಗಕೆ ||

ತಪ್ಪು ಮಾಡಿದ ಯಕ್ಷ ಶಾಪಕೆ
ಕುಬೇರನ ತೊರೆದು ಬಹುದೂರಕೆ
ವಿರಹಿ ಯಕ್ಷ ಕಳಿಸಿ ಸಂದೇಶವ
ಮೇಘಗಳ ಕೈಲಿ ವಿರಹೋತ್ಸವ ||

ಪ್ರೇಮಿಗೆ ಕಾಮಿಗೆ ಮತ್ತೆ ವಿರಹಿಗೆ
ಋತು ಸಂಹಾರ ಚಿತ್ತ ಕೇಡ ಬಗೆ
ಸ್ತ್ರೀರೂಪವೇ ರೂಪ ಭೋಗ ಬಾಳು
ಕುಣಿದು ನಲಿದವೆಲ್ಲಾ ಋತುಗಳು ||

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದೀ ಸಾಹಿತ್ಯಶ್ರೀ ||

        - ೭ -

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

ಗುರುವಿನ ಮೊದಲೆ ಮುಕ್ತಿಪ್ರಾಪ್ತರು
ಗುರುವಂದಿತ ಶಿಷ್ಯ ಮಹಾಮಹಿಮರು
ಸಜ್ಜನಿಕೆ ಸರಳತೆ ಯುದ್ಧತ್ಯಾಗದಿಂದ
ಕಲಿತ ಪಾಠವೆಲ್ಲ ಬಾಳ ಶಾಲೆಯಿಂದ ||

ವೇದವನೋದಿ ಜ್ಞಾನಿಯಾಗಿ
ಪುರಾಣಗಳ ಐರಾವತವನೇರಿ
ಹರಿಭಕ್ತನಾಗಿ ಊರೂರನಲೆದು
ಕಾಗಿನೆಲೆಯಾದಿಕೇಶವನೊಲಿದು ||

ವ್ಯಾಸಕೂಟದಲ್ಲೆ ದಾಸಶ್ರೇಷ್ಠ
ಉಡುಪಿ ಕೃಷ್ಣಗೆ ಪವಾಡಪುರುಷ
ತಿರುಪತಿಯಲ್ಲೇ ವೈಕುಂಠ ಕಂಡ
ಕುಲ ಕುಲಕುವೆಂದವರ ಮಿಂಡ ||

ದಾಸರಲ್ಲೆ ಮಹಿಮ ಕವಿ ತಿಲಕ
ಲೇಖನಿ ಚಿತ್ರಿಸಿತು ಸಾರ ಹರಿಭಕ್ತಿ
ಕೃಷ್ಣಮಹಿಮೆ ಮೋಹನ ತರಂಗಿಣಿ
ನಳ ಚರಿತ್ರೆಯ ಪ್ರೇಮದ ದೋಣಿ ||

ಮಹಾಕೃತಿ ರಾಮಧಾನ್ಯ ಚರಿತದೊಳು
ರಾಗಿ ಭತ್ತಗಳ ಕಸುವಿನ ಜಗಳ
ಬಡವರನುರಾಗಿ ಬಲ್ಲಿದರ ನಿಲ ಹೋಗಿ
ರಾಮ ನೀಡಿದ ಪದವಿ ರಾಗಿ ಯೋಗಿ ||

ಮತಿಗೆ ನಿಶಿತ ಕೀರುತನೆ ತಂಬೂರಿ
ಲೋಕದ ಡೊಂಕನು ತೋರಿದ ದಾರಿ
ಕನಕ ಕನಕ ಅಯ್ಯಾ ಕನಕಯ್ಯ
ಇಂದಿಗು ಕುಲ ಕುಲವೆನ್ನುತಿಹರಯ್ಯ ||

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

        - ೮ -

ಬಿಳಿಯರ ವಿರುದ್ಧ ತಮ್ಮ ಉಳಿವಿಗೆ
ಹೋರಾಡಿ ಮಡಿದರಲ್ಲ ತಮ್ಮ ಇಂದೂರಿಗೆ ||

ಧನಗರ ರಾಜವಂಶವು ಮಧ್ಯ ಭಾರತದಿ
ಮಲಾರಿರಾವು ಅಹಲ್ಯಬಾಯಿ ಹೋಳ್ಕರ್‍ ಛಲದಿ
ದತ್ತಕ ಸಂಬಂಧಿ ಕಾನೂನು ವಿರೋಧಿ
ಬಂಡಾಯವೆದ್ದರು ಬಿಳಿಯರ ವಿರುದ್ಧದಿ ||

ಇತಿಹಾಸ ಪುಟಗಳಲಿ ಮಡಿದ ಧ್ರುವತಾರೆಗಳು
ಕರಣಿಕರ ಬರಹವಿರದ ಹಲ ಘಟನೆಗಳು
ಹೋರಾಟವನೆ ಮಾಡಿ ಜೀವ ಬಲಿ ಕೊಟ್ಟರು
ಅವರಿವರ ವಂಚನೆಗೆ ಹರಕೆ ಕುರಿಯಾದವರು ||

        - ೯ -

ವೀರ ಸಂಗೊಳ್ಳಿ ರಾಯಣ್ಣನೆಂಬ ಸರದಾರ
ಅವನ ಧೀರತೆಗೆ ಬೆಚ್ಚಿತೊ ಬಿಳಿ ಸರಕಾರ ||

ಕಿತ್ತೂರ ವಶಮಾಡಿ ಕಿರಿದೊರೆಯ ಪಟ್ಟ
ಮಾಡೆ ತೀರುವೆನೆಂದು ರಾಯಣ್ಣನ ಪಟ್ಟು
ಅದಕೆ ಅವ ಮೆರೆದ ಧೀರ ಸಾಹಸವ
ರಾಯಣ್ಣನೆಂಥಾ ಶೂರ ಸಿಂಹ ಶಕ್ತಿಯವ ||

ಗೆಳೆಯ ಗಜವೀರ ಸಿದ್ಧಿ ಸೈತನಾಗಿ
ಬಿಡಿ ತಾಲ್ಲೂಕ ಖಾನಾಪುರ ಸಂಪಗಾವಿಗೆ
ಬಿಚ್ಚುಗತ್ತಿ ಚನಬಸಯ್ಯ ಜತೆಗೂಡಿ
ಮುತ್ತಿಗೆ ಹಾಕು ಸುಟ್ಟರಲ್ಲ ಕಛೇರಿ ನೋಡಿ ||

ರಾಯಣ್ಣನ ಹಿಡಿದವರಿಗೆ ಮುನ್ನೂರು ರೂಪೈ
ಮೇಜರ್‍ ಪಿಕರಿಂಗ್ನ ಘೋಷಣ ಜನಕೆ ದುರಾಸೈ
ಅಮಲ್ದಾರ ಕೃಷ್ಣರಾಯ ಮಾಡಿ ಕುತಂತ್ರ
ಪಟೇಲ ಲಿಂಗನ ವೆಂಕನ ಗೌಡರಹತ್ರ ||

ಪಟೇಲರಿಬ್ಬರೂ ನಿಷ್ಠದಿನೈದು ದಿನ ರಾಯಣ್ಣಗ
ಅಣ್ಣನ ಬಂಟ ಲಖ್ಯಾನ ಮೂಲ್ಕ ಹಿಕ್ಮತ್ತಿಗ
ಹೊಳೇಲಿ ಸ್ನಾನ ಮಾಡುವಾಗ ಹಿಡಕೊಟ್ರೊ ಹುಲಿಯ
ಪಡೆದರಲ್ಲೊ ಘನಕಾರ್‍ಯಕ್ಕೆ ಮುನ್ನೂರುಪಾಯ ||

ಹಗ್ಗದ ಮಂಚಕೆ ಧೀರನ್ನ ಕಟ್ಟಿ ಹೊಯ್ದರ
ಧಾರ್‍ವಾಡಕೆ ನಿಸ್ಬತೆಂಬ ಕಲೆಕ್ಟರ್‍ ಹತ್ತಿರ
ಕಿತ್ತೂರ ನಾಡ ಬಿಡುಗಡೆಗೆ ತೊಡಗಿದಕೆ
ರಾಯಣನ ಅಪರಾಧೀನ ಮಾಡಿದರಾ ||

ಇಂಥಾ ಸೊರಗೆ ಸಂಪಗಾವಿಲಿ ನೇಣು
ಸರಕಾರಕ್ಯಾರೂ ಎದುರಾಡದಂತೆ ಗೋಣು
ಎಚ್ಚರಿಕೆ ಕೊಟ್ಟರೊ ಜನಕೆ ಅಣ್ಣಾ
ಕಿತ್ತೂರಿನ ಸಂಸ್ಥಾನ ಆಯಿತೊ ಮಣ್ಣಾ ||

ರಾಯಣ್ಣನಂಥ ಕಲಿ ಅದೆಂಥಾ ತಲಿ
ಐರಾಣವಾತು ಬಾಳು ಕಿತ್ತೂರಿಗಾಗಲ್ರಿ
ನಮಕ್ಕ ಹರಾಮರ ಸಪೋರ್ಟದಿಂದಲಿ
ಆದಾನಲ್ಲ ಬಲಿ!  ಅವನೆಂಥ ಕಲಿ ||

ವೀರ ರಾಯಣ್ಣನೆಂಥಾ ಸರದಾರ
ಮೆಚ್ಚಿ ಮಂದಿ ಹರಕೆ ಹೊರತಾರ
ಹುಟ್ಟೊ ಕಂದ ರಾಯಣನಾಗಲೆಂದು
ನಂಬೋದೆಂಗಣ್ಣ ಧೀರಾ ಸತ್ತನೆಂದು ||

        - ೧೦ -

ಗಾಂಧಿ ಕಾಲಕೆ ಮತ್ತೊಬ್ಬನಿದ್ದನಣ್ಣ
ತಳ ಹಾವೇರಿ ತಾಲುಕ ಸಂಗೂರಣ್ಣ
ಹೆಸರು ಕರಿಯಪ್ಪ ಸಂಗೂರನಂತಾ
ಕೇಳಿ ಮಂದಿ ಅವನ ಕಥಾನ ಕುಂತಾ ||

ಮೂಲ್ಕಿ ಪರೀಕ್ಷೆ ಪಾಸಾದ ಯುವಕ
ಓದಹತ್ತಿದ ಪತ್ರಿಕೆ ಗಾಂಧಿ ತಿಲಕ
ಇಪ್ಪತ್ತಾರನೆ ಇಸವಿಗೆ ತೊಟ್ಟ ಖಾದಿ
ಗುಮಾಸ್ತಗಿರಿ ಬಿಟ್ಟ ಕರೆಗೆ ಗಾಂಧಿ ||

ಸಿರಸಿ ಸಿದ್ಧಾಪುರ ಕರನಿರಾಕರಣದಾಗೆ
ಸಜೆ ಬಿದ್ದ ಮೂವತ್ತು ತಿಂಗಳ ಭಾಗಿ
ಕಾರವಾರ ವಿಸಾಪುರ ಜೈಲಿನೊಳಗ
ಗಾಂಧಿ ತರ ಮಾಡಿದ ಕೆಲಸ ಭಂಗಿ ||

ಮುವತ್ನಾಲ್ಕನೆ ಇಸವಿ ಬಿಡುಗಡೆಯಾದ
ಹುಬ್ಬಳ್ಳಿ ಶಹರದ ಬಾಲಿಕಾಶ್ರಮದ
ಹರಿಜನ ಕುಂಟು ಕನ್ಯೆ ಮದಿವ್ಯಾದ
ಗಾಂಧಿ ಸನಿಹ ಹೊಂಟರಿಬ್ಬರೂ ವಾರ್ಧಾ ||

ಗಾಂಧಿ ಸಹಚರ್ಯ ಸಿಕ್ಕ ಅದೃಷ್ಟ
"ಮೂಕ ಸೇವಕ"ರೆಂದಿವರು ಗಾಂಧಿಗಿಷ್ಟ
ಜೊತೆಗೆ ಜೇಸಿ ಕುಮಾರಪ್ಪ
ಗ್ರಾಮ ಸೇವಾ ನಿರತರಾದಲ್ಲಪ್ಪ ||

ಬಂದಿತಲ್ಲ ಕ್ವಿಟ್ ಇಂಡಿಯಾ ಚಳವಳಿ
ಮಾಡು ಇಲ್ಲವೇ ಮಡಿ ಎಂಬ ಬಳುವಳಿ
ಮೈಲಾರ ಮಹಾದೇವ ತಿಮ್ಮನಗೌಡ
ಹಂಸಭಾವಿ ರಾಮಣ್ಣರ ಜೊತೆಗೂಡಿ ||

ಕಾಡುಮೇಡು ನದಿ ತೀರದಡವಿ
ಧ್ವಂಸಮಾಡಿ ಸರಕಾರವ ಕೊಡವಿ
ನಿಗದಿ ನೆಲೆ ನೆಮ್ಮದಿಲ್ಲ ಊಟ
ದಿನಬೆಳಗಾದರೆ ಪೋಲೀಸ ಕಾಟ ||

ಕರಿಯಪ್ಪ ಕೊಟ್ಟ ಬೆಲೆ ಗಾಂಧಿಗೆ
ಗ್ರಾಮೋದ್ಧಾರದ ಪಾಠದ ಮತಿಗೆ
ಮಾಡಿ ಮಡಿಯುವಾ ಉಗ್ರತೆಗೆ
ಕರಿಯಪ್ಪನಂದೆಂಥ ತ್ಯಾಗ ಜತಿಗೆ ||

ಶಾಂತಿ ಶಿಸ್ತಿನ ಸಿಪಾಯಿಗೆ
ನಿತ್ಯ ಗ್ರಾಮದ ಸಫಾಯಿಗೆ
ಸಿಟ್ಟಿಗೆ ಬಾಂಬು ಮಾಡಲೋಗಿ
ಮುಂಗೈಯೇ ಹಾರಿ ಹೋಗಿ ||

        - ೧೧ -

ಸಹಕಾರ ಚಳವಳಿ ಕತೆಯು
ಕಾರಣವದಕೆ ಕಂಬಳಿಯು
ಮೊದಲಿಗೆ ಗದಗಾದಲ್ಲಿ
ಮಾದರಿಯದು ದೇಶದಲ್ಲಿ ||

ಸಿದ್ದನಗೌಡ ಪಾಟೀಲಜ್ಜ
ಸಹಕಾರಿ ಪಿತನಾದನಲ್ಲ
ಸಿರಿವಂತ ತಿಳಿದು ಬಾಳುವ
ತತ್ವವೊಂದ ಕೊಟ್ಟನಲ್ಲ ||

ಇದಕೆ ಬೇಕು ದೊಡ್ಡ ಗುಣವು
ಹಂಚಿ ಉಂಡ ಜನರು ನಾವು
ಕೂಡಿಟ್ಟು ಏನ ಒಯ್ದೆವು
ಬಡತನಕೆ ಸಾವು ತಂದೆವು ||

        - ೧೨ -

ಚರಿತೆಯ ಪುಟದಾ ಹೆಮ್ಮೆಗೆ
ಬದುಕುವ ಸಂಸ್ಕೃತಿ ಹಿರಿಮೆಗೆ
ಘನತೆ ಗೌರವದ ಬಾಳಿಗೆ
ಹೆಸರಾಗಿದೆ ನಮ್ಮಯ ಒಳಿತಿಗೆ ||

ನಮ್ಮ ಜನಗಳ ಚಾರಿತ್ರ್‍ಯ
ಬದುಕಿ ಮಾದರಿ ಪಾವಿತ್ರ್‍ಯ
ಹಾಲು ಕೆಟ್ಟರೂ ಹಾಲುಮತ
ಕೆಡದೆಂಬುದು ನೋಡ ಜನಮತ ||

ಬಿತ್ತಲಿ ಬೆಳೆಯಲಿ ಕೊಯ್ಲಿಗೆ
ಕರೆದರು ಜನರೆಲ್ಲ ಬೋಣಿಗೆ
ಮೊದಲ ಪೂಜೆ ಲಾಭ ವ್ಯಾಪಾರಿಗೆ
ಎಲ್ಲೆಲ್ಲೂ ಮಾನ್ಯತೆ ಕುರುಬರಿಗೆ ||

ಮುಗ್ಧತೆ ಇದ್ದಂಥೆ ಅಂಧಶ್ರದ್ಧೆ
ಹೊಸದನು ಕಾಣದ ಮಾಯಾನಿದ್ದೆ
ಕವಿದಿದೆ ನಮ್ಮಯ ಜನರನ್ನ
ಹುಡುಕಬೇಕು ಹೊಸ ಸೂರ್ಯನ್ನ ||

ನಮ್ಮಲ್ಲೂ ಇಹರು ಕೆಟ್ಟವರು
ಕೊಳ್ಳೆ ಲೂಟಿಯಿಂದ ದೊಡ್ಡವರು
ನಮಗಿಂದು ಬೇಕು ಒಳಿತು ಕೇಡು
ಅರಿತಾಗ ಬದುಕು ಹಸನೋಡು ||

ಬೆವರಿಗೆ ಬೆಲೆಯು ಸಿಗಬೇಕು
ಸರುವರ ಸಮನಾಗಿ ನಿಲಬೇಕು
ಕುರುಬರೆಂದರೆ ದಡ್ಡರಲ್ಲ
ಮಾನ್ಯರವರು ಸಮಾಜದಲ್ಲೆಲ್ಲ ||

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಇಳೆದಾಯಿ

- ಗಿರಿಜಾಪತಿ ಎಂ. ಎನ್
ಮಣಿದಿದೆ ವಿಶ್ವವು ನಿನ್ನ ಚರಣಕೆ
ಇಳೆದಾಯಿ ಶುಭದಾಯಿನಿ
ಮಣ್ಣ ಕಣಕಣ ರಮ್ಯ ತೋರಣ
ನಾಕದಂದಣ ಜಗ ಕಾರಣ.....

ಆದಿ ಅಂತ್ಯದಗೊಡವೆ ಸಲ್ಲದು
ಜೀವದೊಡವೆಯ ಶ್ರೀನಿಧಿ
ಮುನ್ನ ಬಾಳಿಗೆ ಭೀತಿ ಒಲ್ಲದು.....
ಭಾವದಕ್ಷಯ ತವನಿಧಿ......

ತಮದ ಬಸಿರಿಗೆ ಬೆಳಕಿನೌತಣ
ಬೆಳಕಿಗೆನಿತೋ ನವ್ಯದ ರಿಂಗಣ
ನವೋದಯದ ಶುಭೋದಯದಲೂ
ನಿತ್ಯ ಸಾಗಿದೆ ಕಾಲನ ಚಾರಣ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಮ್ಮ ನಿಜನೆಂಟ

- ಹಾರಾಸನಾ

ಬಹಳ ದಿನಗಳ ಪ್ರಯತ್ನದ ಫಲವಾಗಿ ಅದೊಂದು ಭಾನುವಾರ ಜೀನ ಮನೆಗೆ ತನ್ನ ಆರು ಸ್ನೇಹಿತರು ಬರುವರಿದ್ದರು. ಅವರೆಲ್ಲರು ‘ಜೀ’ ಮನೆಯಲ್ಲಿ ಸೇರಿ, ಅಲ್ಲಿಂದ ಸುತ್ತಾಡಲು ಹೋಗುವುದೆಂದು ನಿರ್ಧಾರವಾಗಿತ್ತು. ನಮ್ಮಲ್ಲಿ ಕೆಲವರಿಗೆ ಹೆಸರಿಸುವ ಬದಲು ವಾಕ್ಯೈಸುವುದೂ ಉಂಟು. ಉದಾಹರಣೆಗೆ ‘ಜೀ’ ಸ್ನೇಹಿತರಲ್ಲಿ ಒಬ್ಬನ ಹೆಸರು ಕಲಿಕಲ್ಮಷನಾಶಕಾಗ್ರಜಾನುಜ-ಪಾದಸೇವಾನುಗ್ರಹಾನುಸಂಜಾತ. ಹಾಗಾಗಿ ಅವರೆಲ್ಲರ ಪೂರ್ಣ ಹೆಸರುಗಳನ್ನು ಕರೆಯುವುದು ಕಷ್ಟಸಾಧ್ಯವಾದ್ದರಿಂದ, ಮೊದಲ ಅಕ್ಷರವನ್ನು ಮಾತ್ರ ಪರಿಗಣಿಸಿದರೆ, ಆ ಆರ್ವರು ಕ, ಕಿ, ನಾ, ಮೂ, ಚ ಹಾಗು ಮ ಎಂದಾಗುತ್ತಾರೆ.

ನಮ್ಮ ದೇಶದ ಆದರ್ಶ ಅತಿಥಿ ದೇವೋಭವದಂತೆ ಸ್ನೇಹಿತರನ್ನು ಔತಣಿಸಲು ಜೀನು ಸಜ್ಜಾದ.  ನಿಗದಿತ ವೇಳೆಗೆ ಗೆಳೆಯರು ಆಗಮಿಸಿ, ಉಭಯಕುಶಲೋಪರಿಗಳು ಮುಗಿದು, ಹಳೆಕಥಾಲಾಪಗಳೂ ಕಳೆದು ನಂತರ ಊಟದ ರಜ್ಜಾಟವೂ ಮುಗಿದ ಮೇಲೆ, ಎಲ್ಲರೂ ಹೊರ-ಹೊರಡಲನುವಾದರು. ಆ ವೇಳೆಗೆ ಜೀನ ಕುಟುಂಬಕ್ಕೆ ಹತ್ತಿರರಾದ ನೆಂಟರೊಬ್ಬರು ಆಗಮಿಸಿದರು. ಎಲ್ಲರೂ ಕಕ್ಕಾಬಿಕ್ಕಿ.  ಸಾವರಿಸಿಕೊಂಡು, ಅವರೊಡನೆ ಮಾತಿಗಿಳಿದರು. ಸ್ವಲ್ಪಕಾಲ ಹರಟೆಯಾದಮೇಲೆ, ಬಂದ ನೆಂಟರು ತಾವು ಸ್ವಲ್ಪ ವಿಶ್ರಮಿಸುವುದಾಗಿ ಹೇಳಿ, ಎಲ್ಲರಿಗೂ ಹೊರಗೆ ಸುತ್ತಾಡಿಬರುವಂತೆ ಸೂಚಿಸಿದರು. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಆದಂತೆ ಹುಡುಗರು ಸಂತೋಷದಿಂದ ಹೊರ ನಡೆದರು.

ಕ’ನು ಎಲ್ಲರನ್ನೂ ಸಿನೆಮಾ ನೋಡಲು ಕರೆದುಕೊಂಡುಹೋದರೆ, ಕಿ’ನು ಮನ ಸೆಳೆಯುವ ಅರ್ಕೆಶ್ಟ್ರಾ ಕೇಳಲು ಕರೆದೊಯ್ದನು. ನಾ’ನು ಹೊಟ್ಟೆ ಬಿರಿಯುವಂತೆ ರುಚಿ ರುಚಿಯಾದ ಚಾಟ್ಸ್ ತಿನ್ನಲು ಕೊಡಿಸಿದರೆ, ಮೂ’ನು ವಿಧ-ವಿಧವಾದ ಸುವಾಸನೆ ಹೀರಲು ಸೆಂಟ್ಸ್ ತೆಗೆಸಿಕೊಟ್ಟನು. ಇಷ್ಟೆಲ್ಲಾ ಸಾಲದೆಂಬಂತೆ ಚ’ನು ಮೈಗೆ ಸ್ಪರ್ಶಹಿತ ಕೊಡುವ ಅತ್ಯಂತ ನವಿರಾದ ಬಟ್ಟೆ ಕೊಡಿಸುವದಲ್ಲದೆ, ಮ’ನು ಮನ ತಣಿಸುವ ಅನೇಕ ಮೋಜಾಟಗಳಲ್ಲಿ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿದನು.

ಆರ್ವರೂ ಅತ್ಯಂತ ಸುಖವಾಗಿ ಸಮಯ ಕಳೆದರಲ್ಲದೇ, ನಿಧಾನವಾಗಿ ತಮ್ಮ ತಮ್ಮ ಕಿಸೆಗಳು ಖಾಲಿಯಾಗಿರುವದನ್ನು ತಿಳಿದು ಖಿನ್ನರಾಗುತ್ತಾ ಒಬ್ಬರನ್ನೊಬ್ಬರು ಹಳಿಯಲಾರಂಬಿಸಿದರು. ಅವರಲ್ಲಿ ಉತ್ಸಾಹ ಕುಂದಿ ಆಯಾಸ ಮನೆ ಮಾಡಿತು. ಕತ್ತಲಾಗುತ್ತಾ ಬಂದದ್ದರಿಂದ, ಜೀನಿಗೆ ಮನೆಯ ನೆನಪು ಕಾಡತೊಡಗಿತು. ಉಳಿದ ಚಿಲ್ಲರೆಯಲ್ಲಿ ಮನೆ ಸೇರುವ ಚಿಂತೆಯಲ್ಲಿ ತನ್ನ ಜೇಬಿಗೆ ಕೈ ಹಾಕಿದಾಗ ಸಿಕ್ಕ ಕೀಲಿಯಿಂದ ಮನೆಯಲ್ಲಿ ವಿಶ್ರಮಿಸಿದ ನೆಂಟರ ಬಗ್ಗೆ ನೆನಪಾಯ್ತು. ಮನೆಯಿಂದ ಹೊರಡುವಾಗ ಆ ನೆಂಟರನ್ನು ಮನೆಯೊಳಗೆ ಬಿಟ್ಟು ಮನೆಗೆ ಬೀಗ ಹಾಕಿ ಬಂದದ್ದು ಗೊತ್ತಾಯ್ತು. ಜೀನಿಗೆ ಉದ್ಯೋಗ ಕೊಡಿಸಲು ಒಂದು ಸಂದರ್ಶನಕ್ಕಾಗಿ ಕರೆದು ಕೊಂಡು ಹೋಗಲು ಬಂದಿದ್ದ ನೆಂಟರನ್ನು ನೆನೆದು, ಜೀನು ತನ್ನಿಂದಾದ ತಪ್ಪಿಗಾಗಿ ಪರಿತಪಿಸಿದನು.

ಇಷ್ಟು ಹೊತ್ತು ತನಗೆ ಮೋಜು ಕೊಟ್ಟವಾವುವೂ ಜೀನಿಗೆ ಬೇಡವೆನಿಸಿದುವು. ಬೇಜವಾಬ್ದಾರಿ ಗೆಳೆಯರ ಸಂಗವೇ ಈ ಅನಾಹುತಕ್ಕೆ ಕಾರಣವೆಂದು ತಿಳಿದು, ತನ್ನ ವಿಷಯ ಲಂಪಟತನದ ಬಗ್ಗೆ ಅತ್ಯಂತ ಜುಗುಪ್ಸೆ ಪಟ್ಟನು. ತನ್ನ ಕರ್ತವ್ಯವನ್ನು ಮರೆತದ್ದಕಾಗಿ ದು:ಖತಪ್ತನಾದನು. ಮೊದಲು ಮನೆಗೆ ಹಿಂತಿರುಗಿ ನೆಂಟರನ್ನು ಸಮಾಧಾನಗೊಳಿಸಿ, ಅವರ ವಿಶ್ವಾಸಗಳಿಸುವ ಸಂಕಲ್ಪ ತೊಟ್ಟು, ಅವರ ದರ್ಶನಕ್ಕಾಗಿ ವ್ಯಾಕುಲನಾಗಿ ಮನೆಯೆಡೆಗೆ ಜೀನು ಸಾಗಿದನು. ತನ್ನ ಗೆಳೆಯರಾರು ಈಗ ಅವನಿಗೆ ಬೇಕೆನಿಸಲಿಲ್ಲ. ತನ್ನ ಏಕಮಾತ್ರ ಗುರಿ ಮನೆ ಸೇರಿ, ನೆಂಟರನ್ನು ಸಮಾಧಾನಗೊಳಿಸುವುದಾಗಿತ್ತು.

ತನ್ನ ಸ್ನೇಹಿತರೆನ್ನೆಲ್ಲ ಅಲ್ಲೇ ಬಿಟ್ಟು ಮನೆ ಸೇರಿದನು. ಆ ನೆಂಟರು ಈ ಹುಡುಗನ ದುಮ್ಮಾನವನ್ನು ತಿಳಿದು, ಅವನು ಮಾಡಿದ ತಪ್ಪಿಗಾಗಿ ಪಟ್ಟ ಪಶ್ಚಾತ್ತಾಪದ ಬೆಗ್ಗೆ ಸರಿಯಾಗಿ ಅರಿತು, ಜೀನಿಗೆ ಭರವಸೆಯ ಮಾತುಗಳನ್ನಾಡಿದರು. ಅವನ ತಪ್ಪನ್ನು ಕ್ಷಮಿಸುವುದಲ್ಲದೇ, ಅವನಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದರಲ್ಲಿ ಸಹಾಯಕರಾದರು.

ಈ ದೃಷ್ಟಾಂತದ ಒಳಾರ್ಥವನ್ನು ಗಮನಿಸೋಣ. ಸಾಮಾನ್ಯವಾಗಿ ನಮ್ಮಲ್ಲಿರುವ ಜೀವಾತ್ಮನ ಪರಿಸ್ಥಿತಿಯೂ ದೃಷ್ಟಾಂತದಲ್ಲಿನ ಜೀಗೆ ಹೋಲಿತ್ತದೆ. ದೃಷ್ಟಾಂತದ ಕ ಇತ್ಯಾದಿ ಆರು ಸ್ನೇಹಿತರು ನಮ್ಮ ಪಂಚೇಂದ್ರಿಯಗಳು ಹಾಗೂ ನಮ್ಮ ಮನಸ್ಸು. ಮನೆಗೆ ಬಂದ ನೆಂಟನೇ ನಮ್ಮ ಹೃದಯದೊಳಗಿರುವ ಪರಮಾತ್ಮ. ಕಠೋಪನಿಷತ್ ಹೇಳುವಂತೆ ಪರಾಂಚಿಖಾನಿ ವ್ಯತೃಣತ್ ಪರಾನ್ ಪಶ್ಯಂತಿ ನಾಂತರಾತ್ಮನ್ ಎಂದರೆ ನಮ್ಮ ಮನಸ್ಸು ಹಾಗು ಇಂದ್ರಿಯಗಳು ಸ್ವಾಭಾವಿಕವಾಗಿ ಹೊರಕ್ಕೇ ಹರಿಯುವುದು. ಅವುಗಳು ನಮ್ಮಲ್ಲಿರುವ ಅಂತರಾತ್ಮವನ್ನು ನೋಡುವುದಿಲ್ಲ. ಒಂದೊಂದು ಇಂದ್ರಿಯವೂ ಮನಸ್ಸಿನ ಸಹಾಯದಿಂದ ಜೀವಾತ್ಮನನ್ನು ವಿಷಯ ಭೋಗದಲ್ಲಿ ಮುಳುಗಿ ನಾಶವಾಗುವಂತೆ ಪ್ರೇರೇಪಿಸುವುದೇ ಅಲ್ಲದೆ ತನ್ನ ನಿಜಸ್ವರೂಪವನ್ನೇ ಮರೆತು ಬಿಡುವಂತೆ ಮಾಡುತ್ತವೆ.

ಈ ಜಗದ ಜಂಜಾಟದಲ್ಲಿ ತೊಳಲಿ ಬೆಂಡಾಗಿ ನಮ್ಮೆಲ್ಲ ಶಕ್ತಿಯು ಉಡುಗಿ ಹೋದ ಮೇಲೆ ಜೀವನದ ನಿಸ್ಸಾರತ್ವ ತಿಳಿಯುತ್ತದೆ. ಆದರೆ ಆ ವೇಳೆಗೆ ನಮ್ಮ ದೇಹ-ಮನಸುಗಳು ಮತ್ತಿನ್ನೇನೂ ಸಾಧಿಸಲಾಗದಂತಾಗಿ, ಜೀವನವನ್ನು ವ್ಯರ್ಥವಾಗಿ ಕಳೆದುದಕ್ಕೆ ಪರಿತಪಿಸುವಂತಾಗಿರುತ್ತದೆ. ಹಾಗಾಗದಂತೆ ನಮ್ಮಲ್ಲಿ ಶಕ್ತಿಯಿರುವಾಗಲೇ ನಮ್ಮ ನಿಜನೆಂಟನಾದ ಭಗವಂತನೆಡೆಗೆ ನಮ್ಮ ಜೀವನ ಸಾಗುವಂತೆ ಇಂದ್ರಿಯ ಮನಸ್ಸುಗಳನ್ನು ತಯಾರಿಗೊಳಿಸಿಕೊಂಡು ಜೀವನ ಪಾವನ ಮಾಡಿಕೊಳ್ಳುವುದು ಸೂಕ್ತ.
     *****