ಚಿಂತೆಯಾತಕೋ ಯೋಗಿಗೆ

ಚಿಂತೆಯಾತಕೋ ಯೋಗಿಗೆ
ಸದಗುರುವಿನಂತರಂಗದ ಭೋಗಿಗೆ                 ||ಪ||

ಕಂತುವಿನ ಕುಟ್ಟಿ ಕಾಲಮೆಟ್ಟಿ
ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ      ||ಅ.ಪ.||

ಕರಣಗಳ ಕಳಿದಾತಗೆ
ಮರಣ ಮಾಯಾದುರಿತಭವವನ್ನು ಅಳಿದಾತಗೆ
ಶರಣಸೇವೆಯೊಳಿದ್ದು ಹರಣ ಮತ್ಸರಗೆದ್ದು
ಧರಣಿಯೊಳು ಮೆರೆವಾತಗೆ                            ||೧||

ವಿಷಯವನು ಸುಲದಾತಗೆ
ಕಸರು ಕರ್ಮಾ ಸುಲದಾತಗೆ
ಪಸರಿಸುವ ಪರಮಾತ್ಮಬಿಂದು ಬೋಧನ ಮಾತು
ಹಸನಾಗಿ ತಿಳಿದಾತಗೆ ಇವಗೆ                         ||೨||

ಲಕ್ಷವನು ಇಟ್ಟಾತಗೆ
ಸಾಕ್ಷಾತನ ಮೋಕ್ಷ ಕೈ ಕೊಟ್ಟಾತಗೆ
ಈ ಕ್ಷಿತಿಗೆ ಶಿಶುನಾಳಧೀಶನ ಗೊವಿಂದಗುರು
ರಕ್ಷಿಸಿದ ರವಿನೇತ್ರಗೆ ಇವಗೆ                           ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ