ಅದ್ವೈತ

- ಶೇಖರ್‌ಪೂರ್ಣ

        ಭಾಗ-೧
ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ.  ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ.  ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು.  ಸಾಹಸಿಸಿದರೆ ಎಡವುವುದು ಸಹಜ.  ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ] ನಡುವೆ ಸಂವಹನ ಕುಸಿದು ಬೀಳುತ್ತದೆ.  ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ - ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ.  ಶಂಕೆಯಂತೂ ಇದ್ದೇ ಇದೆ.  ನಾನು ಹೇಳಿದ ರೀತಿಯಲ್ಲೆ ಆಗಿರಬಹುದು.  ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ.

ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ-
"ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ.  ಸಿಂಗಲ್ ಹ್ಯಾಂಡ್.  ಬೇರೆ ಯಾರ ಕೈಗೂ ಕೊಡೋಲ್ಲ."
ನನ್ನ ಬಳಿಯೂ ಒಂದು ಮೊಪೆಡ್ ಇದೆ.  ೧೯೮೫ರ ಮಾಡೆಲ್‌ನದು.  ಎಲ್ಲರೂ ಉಪಯೋಗಿಸುತ್ತಾರೆ!
ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ.  ಈಗೀಗ ಬಹಳ ಜನ ಹೇಳುತ್ತಾರೆ- "ಗುಜರಿಗಾಕೋ".  "ಬೀಗ ಬೇರೆ ಯಾಕಾಕ್ತೀಯ?  ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ" -
"ಸ್ಕ್ರಾಪ್ ಇಟ್, ಸೆಂಡ್ ಇಟ್ ಟು ಸಾಲ್ವೇಜ್" - ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ.  ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ.  ಅವಮಾನವೂ ಇಲ್ಲ.  ನಕ್ಕುಬಿಡುತ್ತೇನೆ.  ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ, "ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ..." ಇವಳಿಗೂ ಅರ್ಥವಾಗುವುದಿಲ್ಲ.  ಕ್ಷಮೆ ಇರಲಿ!
ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ.  ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ.  ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ.  ಖಾತ್ರಿಯೂ ಇಲ್ಲ.  ಷುಡ್ ಐ ಕೇರ್?  ಉದ್ಧಟತನಕ್ಕೆ ಕ್ಷಮೆ ಇರಲಿ. 

ಒಂದ್ಸಾರಿ ಏನಾಯ್ತೂಂದರೆ:
ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು.  ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು.  - ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು.  ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ;
"ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ."
ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ.  ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ.  ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ.  ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್.  ಸುಮಾರು ೧೩೦ ಕಿ.ಮೀ ಇಬ್ಬರನ್ನು ಹೊತ್ತು ತಂದಿತ್ತು!

ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು.  ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು.  ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು.  ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ.  ಒಳ್ಳೆಯ ಹಿಡಿತವೂ ಇತ್ತು.  ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ’ ಗೆ ಹುಡುಕಿದೆ.  ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ.  ಸುಬ್ಬ ಸ್ವಲ್ಪ ದೂರ ಓಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. 

ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ.  ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು.

ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ.  ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ.  ಇಳುಕಲಿನ ತಿರುವು ಹಾದಿ.  ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ.  ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು.  ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ.  ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦ ಕಿ.ಮೀ. ವೇಗ.  ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು.  ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ!

ಮತ್ತೆ ಇಳುಕಲಿನಲ್ಲಿ ಹೊರಟೆವು.  ವೇಗವೋ ವೇಗ.  ಬ್ರೇಕ್ ಹಾಕಿದೆ.  ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು.  ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು.  ಬಲಗಡೆಗೆ ಆಳವಾದ ಕಮರಿ.  ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ- "ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು" - ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು.  ಕೂತೆ ಇದ್ದ.  ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ.  ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ.ಮೀ ವೇಗದಲ್ಲಿ ೧೭೦ ಕೆ.ಜಿ ತೂಕದ ನಾವುಗಳು ಬಿದ್ದೆವು.  ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ.  ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ.  ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು.  ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. 

ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ - ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು "ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ" ಬೇಡಿದ.  ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ.  ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು.  ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು.  ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. 

ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ.  ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು.  ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ.  ಅರ್ಥವಾಗುತ್ತಾ, ನಿಮಗೆ?

        ಭಾಗ-೨
ಶಿವಾ.  .  .  .  .
ನೀವು ಅವನನ್ನು ನೋಡಬೇಕು.  ಕಪ್ಪು ಬಣ್ಣದ ತಮಿಳಿನವ.  ಕಪ್ಪಾದ ಮೈಗೆಲ್ಲಾ ಗ್ರೀಸು.  ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ.  ೧೮-೨೦ ವರ್ಷದವ.  ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ.  ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು.  ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು.  ಸ್ಪಾನರ್, ಸ್ಕ್ರೂ ಡ್ರೈವರ್, ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು.  ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು..  ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ! "ಏನಯ್ಯ?"  ಎಂದರೆ "ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ." ಎಂದು ಹಲ್ಕಿರಿದಿದ್ದ.  ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ.  ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ.  ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ.  ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್’ ಎಂಬಂತೆ ಗಾಯ ಮಾಗಿಹೋಗಿತ್ತು!

ಕೆಲಸದಲ್ಲಿ ಅವನಿಗೆ ಎಂತದೋ ಖುಶಿ.  ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ.  ಬೇರೇನೋ ತೆರೆನಾದ ಖುಷಿ.  ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ.  ಅದರಲ್ಲೇ ಮಗ್ನಗೊಂಡ ಖುಷಿ.  ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ.  ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು.  ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ.  ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ.  ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. 

ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. 

ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. 

ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು.  ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ.  ಗಾಡಿ - ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ "ತನ್ರಿ ಹಾಕ್ಕೊಡ್ತೀನಿ".  ಶಿವ ಎಂದೂ ಹಾಗೆ ಇರುತ್ತಿರಲಿಲ್ಲ.  ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ.  ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ.  ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. 

ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ.  ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ.  ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು.  ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ.  ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ.  ಖಿನ್ನನಾಗಿರುತ್ತಿದ್ದ ಆಷ್ಟೆ.  ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ.  ಒಳಗೆ ಎಂಥದೋ ಖುಷಿಯಾಗುತ್ತಿತ್ತು.  ಆದರೆ ಅವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ.... 
*
*
*
ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು.  ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ.  ನಿತ್ರಾಣವಾಗಿಹೋಗಿತ್ತು.  ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ.  ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. 

ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ.  ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. 

ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲು ತೀರ್ಮಾನಿಸಿದ್ದೆ.  ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ!

ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು.  ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. 

ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು.  ಹೊರಟೆ. 
*
*
*
ಮುರುಕಲು ಕುರ್ಚಿ ಮೇಲೆ ಕೂತಿದ್ದ.  ಸಪ್ಪಗಿದ್ದ.  ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. 
"ಏನಣ್ಣಾ.." - ಅದೇ ವಿನಯ. 
"ಗಾಡಿ ಪಿಕಪ್ ಇಲ್ಲ.  ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು.  ಡೀಕಾರ್ಬನ್ ಮಾಡಿಸಿಯಾಯ್ತು.  ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ..."
"ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ.. 
"ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ." ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ...."
ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ.  ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು.  ಆದರೂ ಶಿವನ ಮೇಲೆ ನಂಬಿಕೆಯಿತ್ತು. 

ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ.  ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು!
"ಏನೋ ಅದು?"
"ಕಲ್ಲೇಟು ಬಿತ್ತು ಸಾರ್.  ಜೊತೆಗೆ ಕೀವು ರಕ್ತ."
"ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ.  ನಾನು ಬಹಳ ಹೊತ್ತು ಜೊತೆಗಿದ್ದೆ.  ಏನೋ ಖುಷಿ ಖುಷಿ.  ಅವನಿಗೂ ಹಾಗೆಯೇ ಇರಬೇಕು. 
"ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?"
- ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. 
"ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ.."
ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು.  ನನ್ನ ಕಣ್ಣುಗಳು ಸಹ ಅರಳಿದ್ದವು. 
*
*
*
ಮಾರನೆ ದಿನ ಗಾಡಿ ತಯಾರಾಗಿತ್ತು.  ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ
"ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ"- ಎಂದ. 
ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು.  ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. 
"ಪ್ಯಾಂಟು ಮೇಲೆತ್ತು." ಎಂದೆ.  ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ.  ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು.  ಕೊಳಕೊಳ ಬಿಗಿದುಕೊಂಡಂತೆ.  ಶವದ ಕಾಲಿನಂತೆ.  ನೋಡಿ ದಂಗಾದೆ. 
"ವಿಪರೀತ ನೋಯುತ್ತೆ, ಸಾರ್."
"ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ..."
ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ.  ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು.  ನನಗೋ ಖುಷಿಯಾಯಾಯಿತು.  ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ.  ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ.  ಏನನ್ನೋ ಸಾಧಿಸಿದ ತೃಪ್ತಿ ಇತ್ತು. 
ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. 
ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. 
*
*
*
ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು, ಸುಖದಲ್ಲಿದ್ದೆ.  ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. 

ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು.  ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ.  ಸಂದರ್ಭವೂ ದೊರೆಯಲಿಲ್ಲ. 

ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ.  ನಿರಿಕ್ಷಿಸಿಯೇ ಇರಲಿಲ್ಲ.  ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ.  ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ.  ಆದರೂ ಕೇಳಿದಾಗ:
"ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ.  ಅಡ್ಮಿಟ್ ಮಾಡ್ಕೊಂಡ್ರು.  ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು.  ಇವತ್ತೇನೆ ಬಂದಿದ್ದು.  ಬಂದೋನು ಇಲ್ಲಿಗೆ ಬಂದ್ಬಿಟ್ಟೆ.  ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ.  ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ..."
- ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ.  ನೀರಿರಲಿಲ್ಲ.  ಬದಲಿಗೆ ಮಿನುಗುತ್ತಿದ್ದವು. 
*
*
*
ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು.  ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ-
"ಏನ್ಸಾರ್, ನಡ್ಕೊಂಡು ಬರ್ತಿದೀರ..?"
"ಗಾಡಿ ಮಾರ್ಬಿಟ್ಟೆ ಕಣೋ...." ಅವನಿಗೆ ಅರ್ಥವಾಗಿತ್ತು.  ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ.
"ಎಷ್ಟಕ್ಕೆ ಮಾರಿದ್ರಿ ಸಾರ್?"
"ಒಂದೂ ಕಾಲು ಸಾವಿರಕ್ಕೆ.."
"ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್..."
"ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು."
"ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್"- ನನಗೂ ಅರ್ಥವಾಯಿತು!
ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. 
ಬಸ್ಸು ಬಂತು.  ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವನನ್ನು ನೋಡಿ ಕೂಗಿಕೊಂಡೆ-
"ಬರ್ತೀನೊ ಶಿವಾ, ಸಿಕ್ತೀನಿ..."
ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ!
              *****

ಕೀಲಿಕರಣ: ಶೇಖರ್‌ಪೂರ್ಣ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ