`ಕಾಯಮಾಯದ ಹಾಡು' - ದೇಸಿಯ ಹೊಸ ಭಾಷ್ಯ

- ತಾರಿಣಿ ಶುಭದಾಯಿನಿ

ಎಸ್.ಜಿ.ಸಿದ್ದರಾಮಯ್ಯನವರ ಕಾವ್ಯ ಹುಟ್ಟುವುದು ದೇಸಿದಿಬ್ಬದಲ್ಲಿ. ಅದು ಉಸಿರಾಡುವುದು ಅಲ್ಲಿನ ಗಾಳಿಯನ್ನೆ. ಹೀಗೆ ನೆಲಮೂಲವನ್ನು ನೆಚ್ಚಿಕೊಂಡು ಬರೆಯುವ ಕವಿ ಅವರಾಗಿರುವುದರಿಂದ ತಮ್ಮ ಸಮಕಾಲೀನರಿಗಿಂತ ಭಿನ್ನರಾಗಿ ಕಾಣುತ್ತಾರೆ.  ಮೇಲುನೋಟಕ್ಕೆ ಅವರ ಕಾವ್ಯ ಹಳ್ಳಿಗಾಡಿನ ಕೃಷಿಯ, ಅನುಭಾವದ ಸುತ್ತ ತಿರುಗಾಡುತ್ತಿರುವಂತೆ ಕಾಣಿಸಿದರೂ, ಅದರಲ್ಲಿ ನಿರೂಪಿತವಾಗುವ ನೆಲಮೂಲದ ತಾತ್ತ್ವಿಕತೆಯು ಭಿನ್ನ ಸಾಧ್ಯತೆಗಳ ಇರುವನ್ನು ಸೂಚಿಸುವಂತಿದೆ.

ಸಿದ್ದರಾಮಯ್ಯನವರು ನೆಲಮೂಲಕ್ಕೆ ಕೊಡಮಾಡಿಕೊಂಡಂತೆ ಕಾಣುವಾಗ ಅವರ ಕಾವ್ಯ ಎತ್ತಿಕೊಳ್ಳುವ ನೆಲಸಂಸ್ಕೃತಿಯ ಸಂಗತಿ ಕೆಲವು ಪ್ರಶ್ನೆಗಳನ್ನು ಮುಂದಿಡುತ್ತವೆ.  ಸಮಕಾಲೀನ ಸಂದರ್ಭದಲ್ಲಿ ದೇಸಿಯತೆಯ ಕೂಗು ಜೋರಾಗಿಯೇ ಕೇಳುತ್ತಿರುವಾಗ ಈ ಕವಿ ಯಾವ ನೆಲೆಯಲ್ಲಿ ದೇಸಿಯನ್ನು ಗ್ರಹಿಸುತ್ತಾರೆ ಮತ್ತು ಯಾವ ರೀತಿಯ ತಾತ್ತ್ವಿಕ ನಿಲುವನ್ನು ಪ್ರಕಟಿಸುತ್ತಾರೆ ಎಂಬುದನ್ನು ಮುಖ್ಯವಾಗಿ ಗ್ರಹಿಸಬೇಕಾಗುತ್ತದೆ.

ದೇಸಿಯ ಮಾತು ಕನ್ನಡದ ಸಂದರ್ಭದಲ್ಲಿ ವಿಶೇಷವಾಗಿಯೇ ನಿರ್ವಚನಗೊಳ್ಳುತ್ತ ಬರುತ್ತದೆ ಎಂಬುದು ಕನ್ನಡ ಕಾವ್ಯದ ಓದುಗರಿಗೆ ತಿಳಿದ ವಿಷಯ. ಮಾರ್ಗಕಾವ್ಯಗಳಲ್ಲಿ ಇರುವ ದೇಸಿ ವಚನಕಾರರಲ್ಲಿ ಇನ್ನಷ್ಟು, ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯ ಮಟ್ಟಿಗೆ ಅದು ಗುಪ್ತಗಾಮಿನಿಯಾಗಿ ಚಲನಶೀಲ ಗುಣವನ್ನು ತೋರುತ್ತಲೇ ಬಂದಿದೆ.  ಅಂದರೆ ದೇಸಿಯು ಕ್ರಿಯಾಶೀಲತೆಯ ಸಂಕೇತವೂ, ಅರಿವಿನ ಪ್ರಕ್ರಿಯೆಯೂ ಆಗಿದೆ ಎನ್ನಬಹುದು. ಅರಿವು ಎಂಬುದು ಒಳಗು ಹೊರಗು ಎರಡಕ್ಕು ಸಂಬಂಧಿಸಿದ ಪ್ರಕ್ರಿಯೆ.  ಇನ್ನೂ ಹಿಗ್ಗಿಸಿ ಹೇಳುವುದಾದರೆ, ನಿಜದನೆಲೆಯ ಹುಡುಕಾಟ;  ಸಹಜತೆಯ ಹುಡುಕಾಟ.

ಸಂಸ್ಕೃತಿ, ಪ್ರಭುತ್ವಗಳು ಜಡ್ಡುಗಟ್ಟಿದಾಗಲೆಲ್ಲ ಸಮುದಾಯಗಳಲ್ಲಿ ಒಳದಾರಿಯ ಹುಡುಕಾಟ ನಡೆಯುತ್ತಿರುತ್ತದೆ.  ಅದರಲ್ಲೂ ಸಂಸ್ಕೃತಿ, ಪ್ರಭುತ್ವಗಳ ಪ್ರತಿಗಾಮಿಧೋರಣೆಗಳನ್ನು ತಳೆದಾಗ, ಜೀವವಿರೋಧಿಯಾದಾಗ ಈ ಹುಡುಕಾಟ ಇನ್ನಷ್ಟು ಗಟ್ಟಿಯಾಗುತ್ತದೆ.  ತಂತಮ್ಮ ಜೀವರಕ್ಷಣೆಯ ವಿಷಯದಲ್ಲಿ ಎಲ್ಲ ಜೀವಿಗಳು ಇದು.  ದೇಸಿಯು ಕ್ರಿಯಾಶೀಲವಾಗುವುದೂ ಹೀಗೆಯೇ. ಜನಪದವು ತನ್ನನ್ನು ತಾನು ಕಾಯ್ದುಕೊಳ್ಳಲೆಂದು ಹೂಡವ ಒಳಬಂಡಾಯದ ರಕ್ಷಣಾತಂತ್ರ ಎಂದು ಇದನ್ನು ಕರೆಯಬಹುದು. ಈ ಪ್ರಕಿಯೆಯಾದರೋ ಎದ್ದು ಕಾಣುವಂತದಲ್ಲ.  ವ್ಯವಸ್ಥೆಯ, ಪ್ರಭುತ್ವದ ಅಥವಾ ಸಂಸ್ಕೃತಿಯ ಆಡಂಬರದ ಮಾದರಿಗಳಿಗೆ ಪ್ರತಿಯಾಗಿ ಒಳಗಿನ ಸಾಮಾನ್ಯತಾ ಸತ್ವವನ್ನು ಉದ್ದೀಪಿಸಿಕೊಂಡು ನಿಲ್ಲುವುದನ್ನು ಇಲ್ಲಿ ಗಮನಿಸಬಹುದು.  ಒಂದೆಡೆಯಿಂದ ತನ್ನೊಳಗನ್ನು ನೋಡಿಕೊಳ್ಳುವ ಪರಿಯೂ ಇನ್ನೊಂದೆಡೆ ಸ್ವಾಭಿಮಾನದ ಸಂಕೇತವೂ ಆಗಿ ಕಾಣುವ ದೇಸಿಯು ಸಾಧಾರಣೀಕರಣವನ್ನೇ ತನ್ನ ಹೆಗ್ಗುರುತನ್ನಾಗಿ ಮಾಡಿಕೊಂಡಿರುತ್ತದೆ.  ಸಾಧಾರಣ ಎನಿಸುವ ಸಂಗತಿಗಳ ಅಡಿಯಲ್ಲಿಯೇ ಸ್ವಂತಿಕೆಯನ್ನು ರೂಪಿಸಿಕೊಂಡು ಭಾಷೆ, ಸಂಸ್ಕೃತಿಗಳನ್ನು ಪುನರ್ರಚನೆ ಮಾಡಿಕೊಳ್ಳುವ ಮತ್ತು ಅದರಿಂದ ಸಂರಚನೆಗಳನ್ನು ವಿಭಿನ್ನವಾದ ಒಳನೋಟಗಳಿ೦ದ ಕಂಡುಕೊಳ್ಳುವ ರೀತಿ ಅದು.

ಈ ಬಗೆಯಲ್ಲಿ ಸಹಜವಾಗಿಯೇ ದ್ವಂದ್ವಭಾವವಿರುತ್ತದೆ. ನಾನೆಂಬುದಿದ್ದರೆ ನೀನೆಂಬುದೂ ಇರಲೇಬೇಕು ಎಂಬಂತೆ.  ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಹುಟ್ಟಿದ ಸ್ವದೇಶಿ ಪರಿಕಲ್ಪನೆಯು ವಿದೇಶಿ ಎಂಬುದಕ್ಕೆ ದ್ವಂದ್ವಭಾವವಾಗಿ ಹುಟ್ಟಿದ್ದು.  ಆನಂತರದ ಆಧುನಿಕತೆಯ ಪರಿಕಲ್ಪನೆಯಲ್ಲಿ ಆಧುನಿಕತೆಯೆನ್ನುವುದು ಅರ್ಬನ್‍ಗೆ ಸಂವಾದಿಯಾಗಿ ನಿಂತು ಒಂದು ಹಳ್ಳಗಾಡಿನ ಸಮಾಜಕ್ಕೆ ಎದುರು ನೆಲೆಯಾಗಿರುವುದನ್ನು ಕಾಣಬಹುದು. ಇಂದಿನ ಜಾಗತೀಕರಣದ ಕಾಲದಲ್ಲಿ ದೇಸಿಯ ಭಾವವು ಹುಟ್ಟಿಕೊಳ್ಳುವುದು ಒಂದು ವಿರೋಧಿ ನೆಲೆಯಲ್ಲಿಯೇ.  ಆಧುನಿಕತೆಯ ನೆಲೆ ಪೂರ್ವಪಶ್ಚಿಮವನ್ನು ಇನ್ನಷ್ಟು ಗೆರೆ ಕೊರೆದಂತೆ ಮಾನದ೦ಡಗಳನ್ನು ರೂಪಿಸಿಕೊಳ್ಳುವಂತೆ ಕಾಣುವಾಗ ಸ್ವದೇಶಿ ವಿದೇಶಿ ವಿಂಗಡಣೆಗಳು ಸಹಜವಾಗಿಯೇ ದ್ವಂದ್ವನೆಲೆಗಳಾಗಿ ಬರುತ್ತವೆ.  ಸಿದ್ದರಾಮಯ್ಯನವರಂತಹ ಕವಿ ದೇಸಿಯನ್ನು ಒಪ್ಪುವಾಗ ಇಂಥ ದ್ವಂದ್ವಗಳ ಅಲುಗನ್ನು ಹಾಯಲೇಬೇಕು.  ಇದರಂತೆ ಅವರ ಕವಿತೆಗಳಲ್ಲಿ ಕೆಲವಾದರೂ ಪೂರ್ವ-ಪಶ್ಚಿಮ, ನಗರ-ಹಳ್ಳಿಗಳ ದ್ವಂದ್ವವನ್ನು ವ್ಯಕ್ತಪಡಿಸುತ್ತವೆ.  ಅವುಗಳ ಧೋರಣೆಯು ಕವಿಯ ನಿಲುವಿಗೆ ಬದ್ಧವಾಗಿರುವಂತೆ ಇರುವುದು ಗಮನಾರ್ಹ.

`ಗಿಡುಗ ಮತ್ತು ಎರೆಹುಳ' ಕವಿತೆ `ಕಾಯಮಾಯದ ಹಾಡು' ಸ೦ಕಲನದಲ್ಲಿ ಕಾಣುವ ಕವಿತೆ.  ಅಲ್ಲಿ ಕಾಣುವ ದ್ವಂದ್ವಭಾವ ನೋಡಬೇಕು. ಗಿಡುಗವು ಪಂಚರಂಗಿ ಬಣ್ಣದ್ದು, ಪಶ್ಚಿಮದಿಂದ ಹಾರಿ `ರವರವ್ವನೆ' ಹಾರಿ ಬರುತ್ತಿದೆ.  ಅದಕ್ಕೆ ಎದುರಾಗಿ ಸಾಧಾರಣವೆನಿಸುವ, ಮಣ್ಣನ್ನು ನಂಬಿ ಬದುಕುವ ಎರೆಹುಳ ಇದೆ.  ಅಲ್ಲಿ ಒಂದು ಪ್ರಶ್ನೆಯಿದೆ- ಯಾರಲಾ ಯಾರಲಾ! ನೆಲದ ವಾರಸು ಯಾರಲಾ? ಎಂಬುದು.  ಅದರ ದನಿಯು ಈ ಸಲದ ಹಕ್ಕು, ವಾರಸುದಾರಿಕೆ ಖಂಡಿತವಾಗಿಯೂ ಎರೆಹುಳಕ್ಕೆ ದಕ್ಕಬೇಕೆನ್ನುವ ಪಕ್ಷಪಾತಿ ನಿಲುವನ್ನು ಹೊಂದಿದಂತಿದೆ.  ಅದೇ ಕವನದ ಮುಂದಿನ ಭಾಗದಲ್ಲಿ, `ಬಣ್ಣದ ಬೆಡಗಿನ | ಪೂರ್ವದ ಜೀವಜಾತಗಳೆಲ್ಲ ಮಾತು ಕಳೆದವು' ಎಂದು ಹೇಳಿರುವುದು ಸಹ ಪೂರ್ವದ ಪರವನ್ನೇ ಸೂಚಿಸುವಂತಿದೆ.

ಈ ದ್ವಂದ್ವಗಳ ಇರವನ್ನು ಒಪ್ಪಿಕೊಳ್ಳುತ್ತಲೇ ಅಲ್ಲಿರುವ ಬಿಕ್ಕಟ್ಟನ್ನು ನೋಡಬೇಕು.  ಯಾವುದಾದರೊಂದು ನಿಲುವನ್ನು ಬೆಂಬಲಿಸಿ ನಿಂತರೂ ಅದಕ್ಕೇ ಬಾಧ್ಯಸ್ಥನಾಗಬೇಕಾದ ಅನಿವಾರ್ಯತೆ ಉಂಟಾಗುವುದಲ್ಲದೆ ತನ್ನ ಆಯ್ಕೆಯ ಸತ್ವಶೀಲತೆಯನ್ನು ಪರೀಕ್ಷೆಗೊಡ್ಡಬೇಕಾದ ಪರಿಸ್ಥಿತಿಗೆ ಕವಿ ಸಿಲುಕುತ್ತಾನೆ.  ಇದು ಅವನ ಸವಾಲು ಕೂಡ.

`ಈಗಾಗಲೇ ಹೇಳಿದಂತೆ ಸಿದ್ದರಾಮಯ್ಯನವರ ಕಾವ್ಯವು ಕೇಂದ್ರೀಕೃತವಾಗುವುದು ದೇಸಿದಿಬ್ಬದಲ್ಲಿ- ದೇಸಿಯೆಂದರೆ ಒಂದು ಜೀವನಕ್ರಮವೆಂದು ನಿರ್ವಚನ
ಮಾಡಿಕೊಳ್ಳುವಾಗ ಅದು ರೈತಾಪಿವರ್ಗದ ಜೀವನ ಕ್ರಮವೆಂದು ಅವರು ಭಾವಿಸುತ್ತಾರೆ.  ರೈತಾಪಿ ವರ್ಗವು ಜಾಗತೀಕರಣದ ಅಪಾಯಗಳಿಗೆ ಬದುಕನ್ನು ಒಡ್ಡಿಕೊ೦ಡಿರುವ ಸಂದರ್ಭದಲ್ಲಿ ಅದರ ಅಳಿವು ಕಂಗೆಡಿಸುವ ಅಂಶ.  ಇದನ್ನು ಪರಿಗಣಿಸುತ್ತಲೇ ಜಾಗತೀಕರಣದ ಸವಾಲುಗಳಿಗೆ ದೇಸಿದಿಬ್ಬದ ಸಾಮನ್ಯತಾ ಸತ್ವಗಳನ್ನು ಮುಂದಿಡುತ್ತದೆ ಸಿದ್ದರಾಮಯ್ಯನವರ ಕಾವ್ಯ. ಜಾಗತೀಕರಣ ಪರ್ಯಾಯ ನೆಲೆಗಳಲ್ಲಿ ಉತ್ತರ ಹುಡುಕುವ ಸಂದರ್ಭದಲ್ಲಿ ದೇಸಿಯತೆಯಲ್ಲಿ ಗೋಚರಿಸುವ ಸತ್ವಶೀಲ ಉತ್ತರಗಳು ರಾಜಕೀಯ, ಸಾಂಸ್ಕೃತಿಕ ನೆಲೆಗಳನ್ನು ಪುನರ್ರ್‍ಅಚಿಸಬಹುದೆಂಬ ಆಶಯವನ್ನೂ ಅದು ವ್ಯಕಪಡಿಸುತ್ತದೆ.

ನೆಲಮೂಲದ ಕಲ್ಪನೆಯು ವ್ಯವಸಾಯದ ಬದುಕನ್ನು ಬಿಟ್ಟು ರೂ‌ಪುಗೊಳ್ಳುವಂತದ್ದಲ್ಲ.  ಇಂದು ನಶಿಸುತ್ತಿರುವ ಜೀವಸಂಕುಲಗಳನ್ನು ಜೀವ ವಿಜ್ಞಾನಿಗಳು
ಪಟ್ಟಿ ಮಾಡುತ್ತಿರುತ್ತಾರೆ. ಅದರೊಳಗೆ ರೈತನೆಂಬ ಜೀವಿಯೂ ಸೇರಿಕೊಳ್ಳುವ ಕಾಲ ಬರುತ್ತಿದೆ.  ಈ ಆತಂಕ ಸ್ವಷ್ಟಿಯಾದರೆ ಅವನನ್ನು ನಂಬಿ ಬದುಕುತ್ತಿರುವ ಜೀವ ಸರಪಳಿಯು ಕಳಚಿಕೊಂಡಂತೆ ಎಂಬುದೇ ಸಿದ್ದರಾಮಯ್ಯನವರ ಆತಂಕ.  ರೈತನ ನಾಶವೆಂದರೆ ಒಂದು ಜೀವನಶೈಲಿಯ ಕಣ್ಮರೆಯಾಗುವಿಕೆ.  ಇದು ಬರಿಯ ರಾಜಕೀಯ, ಆರ್ಥಿಕ ಪ್ರಶ್ನೆಗಳನ್ನಷ್ಟೆ ಒಳಗೊಳ್ಳುವಂತಿದ್ದರೆ ಈ ಕುರಿತು ಯೋಚಿಸಬೇಕಾದ ತೀವ್ರತೆ ಅಷ್ಟಾಗಿ ಇರುತ್ತಿರಲಿಲ್ಲವೇನ್ನೋ.  ಇದು ಮೌಲ್ಯದ, ಜೀವ ಸಂಸ್ಕೃತಿಯ ಪ್ರಶ್ನೆಗಳೂ ಆಗಿರುವುದರಿಂದಲೇ ನಮ್ಮನ್ನು ಬಾಧಿಸುತ್ತದೆ.  ಬಂಡವಾಳಶಾಹಿ ಪ್ರಭುತ್ವಗಳು ಸೃಷ್ಟಿಸುವ ಬಿಕ್ಕಟುಗಳು ರೈತನನ್ನು ಮಾತ್ರವಲ್ಲದೆ, ಅವನು ನಂಬಿರುವ ನೀರು, ನೆಲ, ಗಾಳಿಗಳನ್ನೂ ಬಿಡುತ್ತಿಲ್ಲ.  ಹೀಗಿರುವಾಗ ನೆಲದ ವಾರಸುದಾರಿಕೆಯ ಪ್ರಶ್ನೆ ಇಲ್ಲಿ ಎದುರಾಗುವುದು
ಸಹಜ.  `ಈಸಕ್ಕಿಯಾಸೆ ನಿಮಗೇಕಯ್ಯ?' ಎನ್ನುವ ನೈತಿಕ ಸೊಲ್ಲು ಉಡುಗಿಸಿ, ಲಾಭಕೋರತನವನ್ನೇ ಮೌಲ್ಯ ಎಂದು ಬಿಂಬಿಸಿ ಬೆಳೆಸುವ ಜಾಗತೀಕರಣವು ಖಂಡಿತವಾಗಿ ಜೀವವಿರೋಧಿ ನೆಲೆಯದು ಎಂದು ಕವಿ ಗುರುತಿಸಿಕೊಳ್ಳುವುದು ಇಲ್ಲಿ ಕಾಣುತ್ತದೆ.  ತಳಿಗಳ ವಶೀಕರಣ, ಕುಲಾಂತರಿಗಳ ಸೃಷ್ಟಿ ನಿಸರ್ಗನೇಮಕ್ಕೆ ಎರವಾದುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಆಕ್ರಮಣಶೀಲತೆಯ ಸ್ವರೂಪ.  ಇದನ್ನು ಕವಿ ಗುರುತಿಸಿಕೊಳ್ಳುವ ರೀತಿ ಹೀಗಿದೆ:

    ಕುಲಾಂತರಿಗಳ ಕೋಟಲೆಯಲ್ಲಿ
    ಕುಲಾಂತರಿಗಳ ನೆಲೆ ಕಣ್ಮರೆಯಾದುದೋ

ಇಲ್ಲಿ ಕವಿಗೆ ಒಂದು ಮಾದರಿಯ ಕಲ್ಪನೆ ಇರುವುದು ಸ್ಪಷ್ಟ.  ಒಂದು ಜೀವನ ಶೈಲಿಯನ್ನು ಅವರು ಬೆಂಬಲಿಸುತ್ತಿದ್ದಾರೆ.  ಅದರ ಮೇಲಾಗುವ ಅಕ್ರಮವನ್ನು ನೋಡುತ್ತ, ಅದಕ್ಕೆ ಪರಿಹಾರವಾಗಿ ಪರ್ಯಾಯ ಮಾರ್ಗೋಪಾಯಗಳೇನು ಎಂದು ಚಿಂತಿಸುವಲ್ಲಿ ಮತ್ತೆ ಅದರಲ್ಲೇ ಉತ್ತರಗಳಿರಬಹುದಾದ ಸಾಧ್ಯತೆಗಳನ್ನು ಅರಸುತ್ತಾರೆ.

    ಎಲ್ಲಿರುವೆ ನನ್ನವ್ವ | ಮರುಜೇವಣಿಯ ಅಡ್ಡಿಕೆಯೇ  
    ಅಡ್ಡದಾರಿಗೆ ಬಿದ್ದ ಕರುಳ | ಕಾಯುವ ಅರಿವೇ

ಹೀಗೆಂದು ಅವರ ಏಕಲವ್ಯನ ತಾಯಿ ಕೂಗಿ ಕರೆಯುತ್ತಾಳೆ.  ನಗರದ ಮರೆ ಮೋಸಕ್ಕೆ ಬಲಿಯಾದ ಮಗು ಏಕಲವ್ಯನಿಗಾಗಿ ಮರುಗುತ್ತ, ಅವನ ಹೆಬ್ಬೆರಳಿಗಾಗಿ ಶೋಕಿಸುತ್ತ ತಾಯಿ ಸುಮ್ಮನೇ ಇರುವುದಿಲ್ಲ.  ಮುಂದಿನ ಪರಿಹಾರವನ್ನು ಹುಡುಕುವುದರಲ್ಲಿದ್ದಾಳೆ.  `ಬೆಂಕಿಗೋಳದ ರಾಚು' ತುಂಬಿದೆ ಎಂದು ಹೇಳುವ ಸಿಂದಾಬಾದ್‌ನಾವಿಕನೂ ನಿರಾಶನಾಗುವುದಿಲ್ಲ - `ಬೆಂದ ಮಣ್ಣಿನೊಡಲಲ್ಲೇ | ನೊಂದ ಮನಸು ಚಿಗುರುವುದು | ಛಲದ ಬಾಳ್ಗೆ ನೆಲದ ಏಳ್ಗೆ' - ಎನ್ನುತ್ತಾನೆ.  ಇದೆಲ್ಲಕ್ಕಿಂತ ಮಿಗಿಲಾಗಿ `ಜಲದ ಕಣ್ಣಿನ ಶೋಧ' ಎಂಬ ಭರವಸೆಯ ಮಾತು ಅಂತರ್ಗಾಮಿಯಾಗಿರುವ ನೀರಿನ ಶಕ್ತಿಯನ್ನು ನಂಬುವ ನೆಲಮೂಲದ ಅತ್ಯುನ್ನತ ಶಕ್ತಿಯ ನೆಲೆ.  ಈ ದೃಷ್ಟಿಯಿಂದ ಕವಿಯದು ಒಂದು ತೆರನಾದ ಉಗ್ರನಿಷ್ಠೆ ಎನ್ನಬಹುದು.  ಅದು ಅನ್ಯದೈವಕ್ಕೆಳಸದ ಭಕ್ತನ ಛಲದಂತೆ, ಸತತ ನಂಬುಗೆಯಲ್ಲಿ ನಿಂತು ತನ್ನ ಸತ್ವವನ್ನು ಪರೀಕ್ಷಿಸಿಕೊಳ್ಳುವುದಾಗಿದೆ.

`ಕಾಯಮಾಯದ ಹಾಡು' ಸಂಕಲನದ ತುಂಬೆಲ್ಲ ಒಕ್ಕಲು ಮಕ್ಕಳು ಇದ್ದಾರೆ (ಅಪ್ಪ, ಅಜ್ಜಿ, ಅವ್ವ - ಇವರೂ ಇದೇ ಸಾಲಿನಲ್ಲಿ ಬರುತ್ತಾರೆ ಎನ್ನುವುದು ವಿಶೇಷ).  ಜೊತೆಗೆ ಏಕತಾರಿಯ ಜೋಗಿಗಳು ಇದ್ದಾರೆ.  ಸುಮ್ಮನೇ ನೋಡಿದರೆ ಸಂಬಂಧವಿಲ್ಲದ ಚಿತ್ರಗಳಿವು.  ಆದರೆ ಇವರೆಲ್ಲ ಬೆಸೆಯುವುದು ನೆಲಮೂಲದ ಅಂಥಃಸೂತ್ರದಲ್ಲಿ.  ನೆಲಮೂಲದಿಂದಲೇ ಹುಟ್ಟಿಬಂದವರು ಇವರೆಲ್ಲ.  ಪೌರಾಣಿಕ ಪಾತ್ರಗಳಾದ ಅಹಲ್ಯೆ ಇಂದ್ರರು, ಅಮೃತಮತಿ ಬದಗರು ನೆಲಕ್ಕೆ ಸಹಜವಾದ ರೀತಿಯಲ್ಲಿ ಬರುತ್ತಾರೆ.  ಬದಗನನ್ನು `ನೆಲದ ಬಾಳಿನ ನೀತಿ ಸೂತ್ರಧಾರ' ಎಂದು ಕರೆಯುವಲ್ಲಿ ನೆಲಮೂಲದ ನೀತಿ ವಿಭಿನ್ನವಾಗಿರುವುದನ್ನು ಸೂಚಿಸಲಾಗಿದೆ.  ಏಕಲವ್ಯನ ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳಬಹುದು.  ಇವರಂತೆಯೇ ಸಹಜವಾಗಿ ಈ ನೆಲದಿಂದ ಹುಟ್ಟಿಬಂದ ಅಲ್ಲಮ, ಶರೀಫ, ದರವೇಶಿ, ರಾಬಿಯಾ ಮುಂತಾದ ಸತ್ವಶಾಲೀ ಅನುಭಾವಿಗಳು.  ಹಾಗಾಗಿ ಇಲ್ಲಿ ನೆಲಮೂಲವೆಂಬುದು ಸಹಜತೆಯ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಲಿದ್ದು, ಸಹಜತೆಗೆ ತೆರೆಯಾಗಿರುವ ಆವರಣಗಳನ್ನು ಸರಿಸಿ ನೋಡುವ ಕ್ರಮವೊಂದನ್ನು ನೇರ್ಪುಗೊಳಿಸುತ್ತಲಿರುವುದು ಗೋಚರಿಸುತ್ತದೆ.  ಸಹಜ ಬದುಕಿನ ತಡಕಾಟವೇ ನಿಜದ ನೆಲೆಯ ಅರಸುವಿಕೆಯಾಗಿದೆ.

ಮರುಜೇವಣಿಯನ್ನು ಹುಡುಕುವ ಮೂಲಕ ಆವರಣಗಳನ್ನು ಸರಿಸಿ ಸಹಜ ಬದುಕನ್ನು ಮತ್ತೊಮ್ಮೆ ಕಾಣಬಹುದೆಂಬ ಹಂಬಲದಲ್ಲಿರುವ ಕವಿ ಅದಕ್ಕಾಗಿ ಸಮುದಾಯದ ಬದುಕಿನಲ್ಲಿಯೂ, ಜೋಗಿತ್ವದ ಬದುಕಿನ ಸತ್ವದಲ್ಲಿಯೂ ಅರಸುತ್ತಾರೆ.  ಮರುಜೇವಣಿಯ ಸತ್ವವು `ಬಹುಜನಹಿತಾಯ'ವೆಂಬ ತಾತ್ವಿಕತೆಯಲ್ಲಿ ಕಾಣಿಸುತ್ತದೆ.  ಅದರಲ್ಲಿ ಸಮುದಾಯದ ಕಲ್ಪನೆ ಇದ್ದು, ವರ್ತಮಾನದ ಒಂಟಿ, ಒಡಕಲು ಬದುಕುಗಳಿಗೆ ಉತ್ತರವಾಗಬಹುದಾದ ಆಶಯವಿದೆ.

ಸಿದ್ಧರಾಮಯ್ಯನವರು ನೆಚ್ಚುವ ಸಮುದಾಯದ ಬದುಕು ವ್ಯವಸಾಯ ಮೂಲದ್ದು.  ಬೇಸಾಯಕ್ಕೆ ಮೂಲಾಧಾರವಾಗಿ ತಾಳ್ಮೆ, ಪರಿಶ್ರಮಗಳಿರುತ್ತವೆ.  ಫಲಾನುಭವದ ಸಂತೃಪ್ತಿ ಸಿಕ್ಕಿದರೂ ಅದು ಒಬ್ಬನದಲ್ಲ, ಸಮುದಾಯದ್ದು.  ಈ ತತ್ವವನ್ನು ಬಿಂಬಿಸುವಂತೆ ಅವರ ಕಾವ್ಯದಲ್ಲಿ ಇರುವೆ ಮತ್ತು ಇರುವೆಗೂಡಿನ ಚಿತ್ರಗಳಿವೆ.  ಕಾಯಕತತ್ವಕ್ಕೆ ಹೆಸರಾದ ಇರುವೆಗಳು ಆಹಾರವನ್ನು ಸಂಗ್ರಹಿಸಿ, ಅದನ್ನು ಹೊತ್ತುಕೊಂಡು ಹೋಗುವುದರಿಂದ ಹಿಡಿದು ಅದನ್ನು ವರ್ಷದ ಕೂಳಾಗಿ ಕಾಪಾಡಿಕೊಂಡು, ಹಂಚಿ ತಿನ್ನುವುದರ ತನಕ ಸಮುದಾಯದ ಬದುಕಿಗೆ ರೂಪಕವಾಗಿ ನಿಲ್ಲುತ್ತದೆ.  ಇದಲ್ಲದೆ ಕವಿ ಕೊಡುವ ಜಿಡ್ಡು ಕದಡಿರುವ ಮಜ್ಜಿಗೆಯ ಚಿತ್ರವು ಇದೇ ಆಶಯವನ್ನು ವ್ಯಕ್ತಪಡಿಸುತ್ತದೆ.  ಜಿಡ್ಡು ಒಟ್ಟುಗೂಡಿದಲ್ಲದೇ ಬೆಣ್ಣೆಮುದ್ದೆಯಾಗದು;  ಒಟ್ಟಾಗದೇ ಜಿಡ್ಡಿನ ಶಕ್ತಿಯಾಗದು ಎಂದು ಸೂಚಿಸುತ್ತದೆ.  ಇದಕ್ಕೆ ಪೂರಕವಾಗಿ ಇನ್ನೂ ಸ್ಪಷ್ಟವಾದ ಸಾಲುಗಳನ್ನು ಕವಿಯೆ ಬರೆಯುತ್ತಾರೆ:

    ಒಂಟೆತ್ತಿನಾರಂಬ | ಸೊಂಟ ಮುರಿದಾ ಬದುಕು
    ಮುರಿದ ಮನಸುಗಳಿಂದ | ಬಿತ್ತೋ ಹೊಲ ಬರೀ ಬೀಳು

ಈ ಸಂಯೋಜಕ ಶಕ್ತಿಯು ಅವರ ಇನ್ನೊಂದು ಪರಿಕಲ್ಪನೆಯಲ್ಲಿ ವಿವರಿಸುವುದಾದರೆ, `ಕಳ್ಳುಬಳ್ಳಿಯ ಬಂಧ' ಎನ್ನಬಹುದು.  ಕುಲಮೂಲ ಎಂಬುದು ಕುಲಾಂತರಿಗಳಿಗೆ ಎದುರು ನಿಲ್ಲುವ ತಾಯಿಬೇರಿನ ಚೇತನವಾದರೆ ಕುಲ, ಕಳ್ಳುಬಳ್ಳಿಯ ಬಂಧವು ಒಟ್ಟು ಸಮುದಾಯದ ಸ್ವರೂಪವನ್ನು ಸೂಚಿಸುತ್ತ ಪ್ರೇರಕ ಶಕ್ತಿಗಳಾಗುವುದನ್ನು ಕವಿ ಕಾಣುತ್ತಾರೆ.

ಇದಕ್ಕೆ ಜೊತೆಗೂಡುವುದು ಏಕತಾರಿಯ ನಿಶ್ಶಬ್ದದ ನಾದ.  ಜೋಗಿತ್ವದ ನೆಲೆಯೆಂದರೆ ಸ್ಥಾವರವಲ್ಲ, ಜಂಗಮವು.  ನಿರಂತರ `ಆಗುವಿಕೆ'ಯಲ್ಲಿ ಜಂಗಮದ ಶಕ್ತಿಯಿದೆ.  ತನ್ನ ತಾನು ಕಳೆದುಕೊಳ್ಳುತ್ತ ಆಗುವಿಕೆಯನ್ನು ಸಾಧಿಸುವ ಪ್ರಕ್ರಿಯೆ ಅದು.  ಇದನ್ನು `ಜನುಮವೆಂಬುದು ಜಂಗಮ' ಎಂಬ ಕವಿ ಸಾಲು ವಿವರಿಸುತ್ತದೆ.  ಗತಿಶೀಲತೆಯ ಕುರುಹಾಗಿ ಬರುವ ಜೋಗಿ ಎಲ್ಲಿಯೂ ನಿಲ್ಲದೆ ನಿರಂತತೆಯ ಸಂಕೇತವಾಗಿ, ಆವರಣಗಳನ್ನು ಸರಿಸುತ್ತ ನಿಜದ ನೆಲೆಯನ್ನು ಅರಸಿ ಹೋಗುವ ಶಕ್ತಿಯಾಗಿ ಕಾಣುತ್ತಾನೆ.  ಈ ನಿರಂತರತೆಯ ಸೃಜನಾತ್ಮಕ ಧಾತುವನ್ನು ದೇಸಿಯಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದನ್ನು ಬಿಡುಗಡೆಯ ಉಪಾಯವಾಗಿ ಕಾಣುವುದು ಮಹತ್ವದ ನಿಲುವು.

ಸುತ್ತಲಿನ ಬದುಕು ಹೊದ್ದುಕೊಂಡ ಆವರಣಗಳನ್ನು ಸರಿಸಿ ನೋಡುವ ಒಳದೃಷ್ಟಿಯ ಪಡೆದ ಜೋಗಿಗಳು `ಕಾಯಮಾಯದ ಹಾಡು' ಸಂಕಲನದಲ್ಲಿ ಕಾಣುತ್ತಾರೆ.  ರಾಬಿಯಾ ಎಂಬ ಸೂಫಿ ಒಂದು ಕೈಯಲ್ಲಿ ಬೆಂಕಿ ಇನ್ನೊಂದು ಕೈಯಲ್ಲಿ ನೀರು ಹಿಡಿದು ಸ್ವರ್ಗನರಕಗಳನ್ನು ಎದುರಿಸ ಹೊರಡುತ್ತೇನೆ ಎನ್ನುತ್ತಾಳೆ.  ಸ್ವರ್ಗನರಕಗಳು ಎರಡು ಅತಿಗಳು, ಇವನ್ನು ನಿರಾಕರಿಸಿ ಒಂದು ಮಧ್ಯಮ ಮಾರ್ಗವನ್ನು ಹುಡುಕುವ ಅವಳ ರೀತಿ ಮರುಜೇವಣಿಯ ಭರವಸೆಯಲ್ಲಿ ಕಾಣುತ್ತದೆ.  ಅಮರಿಕಾ ಎಂಬ ಸ್ವರ್ಗ, ಇರಾಕೆಂಬ ನರಕಗಳನ್ನು ಕಾಣುವ ಸಮಕಾಲೀನ ಪ್ರಪಂಚಕ್ಕು ಮಧ್ಯಮ ಮಾರ್ಗದ ಅವಶ್ಯಕತೆಯಿದೆ ಎಂಬುದು ಕವಿ ಜೋಗಿತ್ವದ ನೆಲೆಯಲ್ಲಿ ಸೂಚಿಸುವ ಪರಿಹಾರ ಮಾರ್ಗ.

ಜೋಗಿತ್ವದ ಅರಿವು ವಿಕಾಸಗೊಂಡಂತೆಲ್ಲ `ಮರೆಮಾಚಿದ' ಬದುಕಿನ ಆವರಣಗಳು ಸರಿಸಿ ನೋಡುವ ದೃಷ್ಟಿ ಬಲವಾಗುತ್ತದೆ.  ಸಾರ್ವಜನಿಕ ಬದುಕಿಗೆ ಸಂಪರ್ಕಕೊಂಡಿಯಾದ ಮಾತು ನಿಜವಲ್ಲದೆ ಸೂತಕವೆನಿಸುವುದು, ಜೀವಪಾತಕವೆನಿಸುವುದು ಇಲ್ಲಿನ ಕವಿತೆಗಳು ಬಿಚ್ಚಿಡುವ ಅಂಶ.  `ಸೊಲ್ಲುಫಲವಾಗಿ' ಎಂಬ ಕನವರಿಕೆಯಲ್ಲಿರುವ ಅವು ನಡೆನುಡಿಯ ಪಾರದರ್ಶಕತೆಯನ್ನು ಎತ್ತಿಹಿಡಿಯುತ್ತವೆ.  `ನೆತ್ತರ ಪಾತಕದಲ್ಲಿ ಉರಿಯುವ ನೆಲ', `ಮನೆಯೆಂಬೋ ಮನೆ ಮಸಣವಾಟಿಯಾಗುವುದು ಮಾತಿನ ಸೂತಕದ ಫಲಗಳೆಂಬುದು `ನುಡಿ ಜ್ಯೋರ್ತಿಲಿಂಗ' ಎಂಬ ತಾತ್ವಿಕ ತಿಳಿವಳಿಕೆಯಿಂದ ಕಂಡುಕೊಂಡ ಸತ್ಯ.  ಇದು ಜೋಗಿತ್ವದ ತಿಳುವಳಿಕೆಯ ಮಾದರಿ.

ಜೋಗಿತ್ವದ ಇನ್ನೊಂದು ಮುಖ್ಯ ಕಾಣ್ಕೆ ಎಂದರೆ ನಾನು ಎಂಬ ಅಹಂಕಾರವನ್ನು ಕಳೆದುಕೊಳ್ಳುವುದು.  ಸಮಷ್ಟಿಯಲ್ಲಿ ಬಿಂದುವಾಗಿ ಸೇರುವುದು.  ಇದೊಂದು ಅನುಭಾವದ ದರ್ಶನವಷ್ಟೇ ಅಲ್ಲದೆ, ಸಮುದಾಯದ ಬದುಕಿನ ಮೂಲಾಧಾರ ತಿಳುವಳಿಕೆಯೂ ಆಗಿದೆ.  ಇದನ್ನು ಕವಿ `ನನ್ನದೆನ್ನುವ ಸೊಲ್ಲು ಕರಕರಗಿ ಕರ್ಪೂರ' ಎಂಬ ಮಾತುಗಳ ಮೂಲಕ ವ್ಯಕ್ತಪಡಿಸುತ್ತಾರೆ.  ಸಮುದಾಯದ ಬದುಕಿಗೆ ಕನಸುವುದಾದರೆ ಜೋಗಿತ್ವದ ಅರಿವು ತಂದುಕೊಡುವ ಅಹಂಕಾರ ನಿರಸನದ ತತ್ವವು ಅಗತ್ಯ ಎಂಬುದನ್ನು ಧ್ವನಿಸುವುದರಿಂದಲೇ ಇಲ್ಲಿನ ಕವಿತೆಗಳು ರೈತರನ್ನು ಜೋಗಿಗಳನ್ನು ಒಟ್ಟು ದೃಷ್ಟಿಯಲ್ಲಿ ನೋಡಲು ಬಯಸುವುದು.  ಇದನ್ನೇ ಕವಿ ಅರಿವಿನಕ್ಕರದಲಿ ಊರಿನೊಕ್ಕಲ ಗೆಲುವು' ಎನ್ನುವುದು;  ಇದನ್ನೇ ಅವರು `ಗುರುವು ಹಚ್ಚಿದ ಅರಿವು' ಎನ್ನುವುದು.  ಹಳೆಯ ಹೊನ್ನನ್ನು ಪುಟಕ್ಕಿಟ್ಟು ಮತ್ತೆ ಬಳಸುವಂತೆ ದೇಸಿಯ ಅರಿವಿನ ಮಾರ್ಗಗಳನ್ನು ಕವಿ ಯಾವ ಕಾರಣಕ್ಕೂ ಅಪ್ರಸ್ತುತ ಎಂದು ಭಾವಿಸುವುದಿಲ್ಲ.  ಅದನ್ನು ತಾತ್ವಿಕವಾಗಿ ಹೇಗೆ ಪ್ರಸ್ತುತಗೊಳಿಸಬಹುದೆಂದು ಚಿಂತಿಸುತ್ತಾರೆ.  ಹೀಗೆ ಸಿದ್ಧರಾಮಯ್ಯನವರ ಕಾವ್ಯ ಅರಿವಿನ ಮಾರ್ಗದಲ್ಲಿ ಬಂದು ನಿಲ್ಲುವುದು, ತಾತ್ವಕವಾಗಿ ನೆಲೆಮುಟ್ಟುವುದು ಅದಕ್ಕೆ ಸಂದ ಜಯ.  ಆದರೆ ಇದೇ ಸಂದರ್ಭದಲ್ಲಿ ಅವರ ತಾತ್ವಿಕ ನಿಲುವನ್ನು ಪ್ರಶ್ನಿಸುವ ಅವಕಾಶಗಳು ಇದ್ದೇ ಇವೆ.  ಈ ಲೇಖನದ ಮೊದಲ ಭಾಗದಲ್ಲಿ ಚರ್ಚಿಸಿದಂತೆ ದೇಸಿಯೆಂಬ ಇರ್ಬಾಯ ಖಡ್ಗದ ಅಲುಗು ಸಿದ್ಧರಾಮಯ್ಯನವರ ಕಾವ್ಯವನ್ನೂ ಮುಟ್ಟದೇ ಇರದು.  ದೇಸಿದಿಬ್ಬ ಸೃಷ್ಟಿಸುವ ಪರಿಹಾರಗಳೆಡೆಯಲ್ಲೇ ಇಣುಕುವ ರಮ್ಯತೆಯ ಛಾಯೆಯು ಕಾಡುತ್ತದೆ.  ಅವರ ಸಮುದಾಯ ಶಕ್ತಿಯ ಭರವಸೆಯ ಬಗ್ಗೆ ಹೇಳುವುದಾದರೆ, ಆ ಆಶಯಗಳು ಒಂದು ಟ್ರೈಬಲ್ ಸಮಾಜವನ್ನೂ, ಅದರ ಸ್ವಯಂಪೂರ್ಣಶಕ್ತಿಯನ್ನು ನಿರ್ದೇಶಿಸಿದಂತೆ ತೋರುತ್ತವೆ ಎಂಬ ಸಂದೇಹ ನನ್ನದು.  ಸಮುದಾಯಗಳ ಶಕ್ತಿ ಛಿದ್ರವಾಗುತ್ತಿರುವ ಆತಂಕ ವ್ಯಕ್ತಪಡಿಸುವ ಅವರ ಕಾವ್ಯವನ್ನು ಓದುತ್ತಿರುವಾಗ ಸಮುದಾಯಗಳ ಶಕ್ತಿಯ ಪ್ರದರ್ಶನವನ್ನು ಮಾಡಿ, ಅಹಂಕಾರದಿಂದ ಸ್ವಾರ್ಥಿಗಳಾಗುತ್ತಿರುವ ಸಮುದಾಯಗಳನ್ನು ಸಮಕಾಲೀನ ಜಗತ್ತಿನಲ್ಲಿ ಕಾಣುತ್ತಿದ್ದೇವೆ ಎಂಬ ವಿಪರ್ಯಾಸದ ಭಾವನೆಗಳು ಮೂಡುತ್ತವೆ.  ಕುಲಮೂಲವನ್ನು ಅರಸುವುದರಲ್ಲಿಯೇ ಒಂದು ರೀತಿಯ ಅನ್ಯತೆಯನ್ನು ಸಾಧಿಸುವ ಸಮುದಾಯಗಳು ತಮ್ಮ ಪರಿಧಿಯಿಂದ ಆಚೆಗೆ ವಿಶಾಲ ದೃಷ್ಟಿಕೋನದಿಂದ ನೋಡುವುದೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆಯಲ್ಲವೆ?  ಎಂಬುದು ನನ್ನ ಇನ್ನೊಂದು ಸಂದೇಹ.  ಇಂದಿನ ವಸಾಹತೋತ್ತರ ಸಮಾಜಗಳಲ್ಲಿ ಕಾಣುವ ಸಮುದಾಯಗಳ ಶಕ್ತಿ ಪ್ರದರ್ಶನವು ಇನ್ನೊಂದು ಸಮುದಾಯವನ್ನು ಅಳಿಸಿ ಹಾಕುವ ಕ್ರಿಯೆಯಲ್ಲಿ ತೊಡಗಿರುವುದನ್ನು ನಮ್ಮ ಅರಿವಿಗೆ ಬರುತ್ತಿದೆ.  ಹೀಗಿರುವಾಗ ದೇಸಿದಿಬ್ಬವನ್ನು ನೆಚ್ಚಿ ಬದುಕುವ ಬದುಕಿಗೆ ತಮ್ಮದೇ ಆದ ಅಗ್ನಿ ಪರೀಕ್ಷೆಗಳಿವೆ.  ಒಂದು ರೀತಿಯಲ್ಲಿ `ಕಾಯಮಾಯದ ಹಾಡು' - ಸಂಕಲನವು ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳ ತಲ್ಲಣಗಳನ್ನು ಕಂಡು ತೀವ್ರವಾಗಿ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ.  ಒಳಬಂಡಾಯದ ದನಿಗಳಿಂದ ಪರ್‍ಯಾಯ ಸಾಧ್ಯತೆಗಳನ್ನು ಸೂಚಿಸುತ್ತ, ಜೀವಪರ ನಿಲುವನ್ನು ಹೊಂದಿದೆ.  ಇದನ್ನು ನಿಷ್ಠೆಯ ದಾರಿ ಎಂದು ಕರೆಯೋಣ.  ಆದರೆ ಅದನ್ನು ಸಹ ಪ್ರಶ್ನಿಸುವ, ಪುನರ್ವಿಮರ್ಶಿಸುವ ಅವಕಾಶಗಳಿವೆ ಎಂಬುದನ್ನು ಮರೆಯದಿರೋಣ.
        *****
ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ