ಜರ್ಮನಿಯ ರೈತ

- ಮಂಜುನಾಥ ವಿ ಎಂ
 
ಇಂಡಿಯಾದ ಭೂಪಟದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣದಿರುವ ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಎಪ್ಪತ್ತರ ದಶಕದಲ್ಲಿ ಇವನು ಬಂದು ತಳ ಊರಿದ. ನೀರಿನಂತೆ ಜನರ ರಕ್ತ ಹೀರಿದ ಹಿಟ್ಲರ್ ನೆಲದಿಂದ ಬಂದವನಾದರೂ ಇವನು ಗಾಂಧಿಯ ನೆರಳಿನಲ್ಲಿದ್ದ. ಏಳು ಅಡಿಗಿಂತ ಎತ್ತರವಿದ್ದ ಇವನು ಸೇಬಿನ ಬಣ್ಣ ಹೊಂದಿದ್ದ. ಇವನು ಪ್ಯಾಂಟ್ ಹಾಕಿದ್ದನ್ನು ನಾನು ನೋಡಲೇಯಿಲ್ಲ. ಬಣ್ಣಬಣ್ಣದ ಚೆಡ್ಡಿಗಳನ್ನು ಧರಿಸುತ್ತಿದ್ದ, ನಮ್ಮಂತೆ ಮಾಮೂಲಿ ಅಂಗಿ ತೊಡುತ್ತಿದ್ದ. ಕಟ್ಟಿಗೇನಹಳ್ಳಿಯ ತಿಗಳನೊಬ್ಬನಿಂದ ತೋಟ ಖರೀದಿಸಿದ. ಯಲಹಂಕದಿಂದ ಕೇವಲ ಮೂರು ಮೈಲು ದೂರದಲ್ಲಿರುವ ಬಾಗಲೂರು ಕ್ರಾಸ್‌ನಿಂದ ಬಲಕ್ಕೆ ತಿರುಗಿಕೊಂಡು, ಅಲ್ಲಿಂದ ಮೂರು ಮೈಲು ಮುಂದೆ ಸಾಗಿದರೆ ಬಲಕ್ಕೆ ಕಟ್ಟಿಗೇನಹಳ್ಳಿ ಸಿಗುವುದು. ಆ ಗ್ರಾಮದಲ್ಲಿ ಹೇರಳವಾಗಿ ತಿಗಳರೇ ವಾಸಿಸುವುದು, ಅವರನ್ನು ಹೊರತುಪಡಿಸಿದರೆ ದಲಿತರು. ತಮಟೆ ಕಟ್ಟಿಕೊಂಡೋ ಚಪ್ಪಲಿ ಹೊಲೆದುಕೊಂಡು ಇವರು ಜೀವನ ತೂಗಿಸುವರು. ತಿಗಳರು ಕೃಷಿ ಮತ್ತು ಬೇಟೆಯಲ್ಲಿ ಪರಿಣಿತರು. ಒಂದು ಏಡಿಗಾಗಿ ಏಳು ಕೆರೆಗಳ ಕಟ್ಟೆಗಳನ್ನು ಒಡೆದರೆಂದು ನಮ್ಮಲ್ಲಿ ಹೇಳುತ್ತಾರೆ.

ಸಮುದ್ರ ದಂಡೆಯಲ್ಲಿ ತೆಂಗಿನಮರಗಳು ಇರುವಂತೆ, ಹೆದ್ದಾರಿ ತುದಿಗೆ ನನ್ನ ವೆಂಕಟಾಲ ಗ್ರಾಮ ಕಚ್ಚಿಕೊಂಡಿದೆ. ಹಾಗಾಗಿ ಹೆದ್ದಾರಿ ಬದುಕು ನನಗೆ ಅತ್ಯಂತ ಪರಿಚಿತ ಮತ್ತು ಆಪ್ತ. ನನ್ನ ಮನೆಗೆ ಬಾಗಿಲು ಇರಲಿಲ್ಲವಾದ್ದರಿಂದ ಹೆದ್ದಾರಿಯಲ್ಲಿ ಘಟಿಸುವ ಘಟನೆಗಳು, ಸಾಗಿಹೋಗುವ ವಾಹನಗೆಳೆಲ್ಲವೂ ಕಾಣುತ್ತಿದ್ದವು. ಬೆಳಿಗ್ಗೆ ಐದು ಗಂಟೆಗೆ ರಾಯಲ್ ಎನ್‌ಫೀಲ್ಡ್‌ಗಳು ಕಿವಿ ಮೊರೆಯುತ್ತಿದ್ದವು. ಒಂದೋ ಎರಡೋ ಆದರೆ ಸರಿ, ನೂರರಿಂದ ಐನೂರು ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ನನ್ನ ಗ್ರಾಮದಿಂದ ಮೂರ್‍ನಾಲ್ಕು ಮೈಲುಗಳ ದೂರದಲ್ಲಿ ಗಡಿಭದ್ರತಾ ಪಡೆ ಇರುವುದರಿಂದ ಸೈನಿಕರು ಎನ್‌ಫೀಲ್ಡ್ ಮತ್ತು ವಿಲ್ಲೀಸ್ ಜೀಪುಗಳನ್ನು ಓಡಿಸಿಕೊಂಡು ಬರುತ್ತಿದ್ದರು. ತರಬೇತಿಯಲ್ಲಿರುತ್ತಿದ್ದ ಅವರು ಭಯಭೀತಿಯಿಂದ ನಡುಗುತ್ತಾ ಉಚ್ಚೆ ಹೊಯ್ದುಕೊಳ್ಳುತ್ತಿದ್ದರು. ತರಬೇತಿ ಹೇಗೆಂದರೆ, ಅಕ್ಷರಶಃ ಅವರ ಪಾಲಿಗೆ ನರಕವೇ. ಕಾಡಿನಂತೆ ಬೆಳೆದ ಸಾಲುಹುಣಸೆಮರಗಳ ನಡುವೆ ಒಂದೇ ವೇಗದಲ್ಲಿ ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ಆವೊತ್ತು ಪಾಪದ ಸೈನಿಕನೊಬ್ಬ ವೇಗದಲ್ಲಿ ವ್ಯತ್ಯಾಸ ಮಾಡಿದ. ನನ್ನ ಅಣ್ಣ ಎರಡು ಕಂಬಳಿಗಿಡಗಳನ್ನು ಬಳಸಿಕೊಂಡು ದೊಣ್ಣೆಗಳಿಂದ ಸುಖದ ಹಾಸಿಗೆ ಮಾಡಿದ್ದ. ಅದರ ಮೇಲೆ ಮಲಗಿಕೊಂಡು ನೋಡುತ್ತಿದ್ದೆ. ಆ ಸೈನಿಕನ ಹಿಂದೆ ಕುಳಿತಿದ್ದ ತರಬೇತುದಾರ ಏಕಾ‌ಏಕಿ ಹಿಂದಿಯಲ್ಲಿ ಗದರುತ್ತಾ ಅವನನ್ನು ಕೆಡವಿಕೊಂಡ. ಎನ್‌ಫೀಲ್ಡ್ ಹುಣಸೆಮರಕ್ಕೆ ಗುದ್ದಿಕೊಂಡಿತು. ನೆಲದಲ್ಲಿ ಬಿದ್ದ ಸೈನಿಕ ಹಿಂದುಹಿಂದಕ್ಕೆ ತೆವಳಿಕೊಳ್ಳುತ್ತಿದ್ದ. ತರಬೇತುದಾರನ ಬೂಟುಗಳು ಕಬ್ಬಿಣದ ಅಟ್ಟೆಯವು, ನೆಲದಲ್ಲಿ ಬಿದ್ದು ಹಾವಿನಂತೆ ಜಾರಿಕೊಳ್ಳಲೆತ್ನಿಸುತ್ತಿದ್ದ ಸೈನಿಕನ ಮೊಣಕಾಲುಗಳಿಗೆ ಬಲವಾಗಿ ಒದೆಯತೊಡಗಿದ. ನೋವಿನಿಂದ ಸೈನಿಕ ಚೀರಿದಷ್ಟೂ ಒದೆಗಳು ಜಡಿಮಳೆಯಂತೆ ಅವನ ಮೇಲೆ ಬೀಳುತ್ತಿತ್ತು. ಮೊಣಕಾಲಿನ ಬಳಿ ಕಬ್ಬಿಣದ ರೇಖಿನಂಥ ಪ್ಯಾಂಟ್ ಕಿತ್ತುಕೊಂಡು ದೊಳದೊಳನೆ ರಕ್ತ ಸುರಿಯತೊಡಗಿತು. ಆ ಸೈನಿಕನ ‘ಅಕ್ಕತಂಗಿ’ಯರನ್ನು ತನ್ನ ಅಶ್ಲೀಲ ಬೈಗುಳಕ್ಕೆ ಎಳೆದುಕೊಂಡು ಬೈಯುತ್ತಲೇ ಇದ್ದ.

ಇಂಥಾ ನರಕಸದೃಶ ಚಿತ್ರದೊಳಗೆ ಜರ್ಮನಿಯ ರೈತ ಅತ್ಯುತ್ತಮ ಕಲಾಕೃತಿಯಂತೆ ಕಂಡ; ಕಾರ್ಮೋಡದಲ್ಲಿ ಬೆಳ್ಳಕ್ಕಿ ಮೂಡಿದಂತೆ. ಕೆಂಪುಬಣ್ಣದ ರಾಯಲ್ ಎನ್‌ಪೀಲ್ಡ್ ಮೇಲೆ ಬರುತ್ತಿದ್ದ, ಬೀಜದ ಹೋರಿಯನ್ನು ನಿರ್ವಹಿಸಿದಂತೆ. ಹಲ್ಲುಗಳ ಮಧ್ಯೆ ಹಂಚಿಕಡ್ಡಿ ಇರುತ್ತಿತ್ತು. ಎನ್‌ಫೀಲ್ಡ್‌ಅನ್ನು ರಾಕೆಟ್‌ನಂತೆ ಓಡಿಸುತ್ತಿದ್ದ. ಮೋಟಾರ್‌ಸೈಕಲ್ ಬರುವ ಸದ್ದಾಗುತ್ತಿದ್ದಂತೆ ನಾನು ಆಚೆ ಓಡಿಬರುತ್ತಿದ್ದೆ, ಕ್ಷಣಾರ್ಧದಲ್ಲಿ ಅವನು ದೊಡ್ಡಮೋರಿ ಇಳಿಜಾರಿನಲ್ಲಿ ಕರಗಿಬಿಡುತ್ತಿದ್ದ. ಫುಕುವೋಕಾನ ಸಹಜಕೃಷಿ ಮಾದರಿಯನ್ನು ಬಹುವಾಗಿ ಮೆಚ್ಚುತ್ತಿದ್ದ ಇವನು ತೋಟ ಅಭಿವೃದ್ಧಿಪಡಿಸುವಲ್ಲಿ ಜೀವ ತೇಯುತ್ತಿದ್ದ. ಅದರೊಂದಿಗೆ ಆಧುನಿಕ ಕೃಷಿಯೆಡೆಗೂ ಪ್ರಯೋಗ ಕೈಗೊಳ್ಳುತ್ತಿದ್ದ. ಪ್ರತಿ ಭಾನುವಾರ ಸಂಜೆ ನಾನು ನನ್ನ ಅಣ್ಣ ಮತ್ತು ಅಮ್ಮನೊಂದಿಗೆ ಸಂತೆಗೆ ಹೋಗುತ್ತಿದ್ದೆ. ಬಿಡಿಗಾಸಿನಲ್ಲಿ ಅಮ್ಮ ತರಕಾರಿ ಕೊಳ್ಳುವಲ್ಲಿ ಹೆಣಗುತ್ತಿದ್ದರೆ, ನಾವಿಬ್ಬರೂ ಆಟದ ಸಾಮಾನುಗಳನ್ನೇ ಆಸೆಯಿಂದ ದಿಟ್ಟಿಸುತ್ತಿದ್ದೆವು. ನಮ್ಮಿಂದ ಕೆಲದೂರದಲ್ಲಿ ಜೋರು ವ್ಯಾಪಾರ ವಹಿವಾಟಿನ ಗದ್ದಲ ಕೇಳಿಬರತೊಡಗಿತು. ನಾಟಿಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ನನಗೆ ಕಂಡಿದ್ದು ಅಷ್ಟುಜನರಲ್ಲಿ, ಆ ವ್ಯಾಪಾರ ಭರಾಟೆಯಲ್ಲಿ ಆಕಾಶವನ್ನು ತಿವಿಯುವಂತಿದ್ದ ಎತ್ತರದ ಜರ್ಮನಿಯ ಆ ರೈತ. ಹಂಚಿಕಡ್ಡಿಯನ್ನು ಬಾಯಿಯಲ್ಲಿ ಅತ್ತಿಂದಿತ್ತ ಆಡಿಸುತ್ತಾ ನಾಟಿಕೋಳಿಗಳನ್ನು ಪರೀಕ್ಷಿಸುತ್ತಿದ್ದ. ಇಂಡಿಯಾದ ಎಂದಿನ ಚೌಕಾಶಿ, ಕ್ಷುಲ್ಲಕ ಮಾತುಗಾರಿಕೆಯನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದ. ವಿದೇಶದವನೆಂದು ನಾಟಿಕೋಳಿ ವ್ಯಾಪಾರಸ್ಥ ದುರಾಸೆಯ ಬೆಲೆ ಒಡ್ಡಿದರೂ ಪ್ರಯೋಜನ ಕಾಣಲಿಲ್ಲ. ಈ ನೆಲದ ಬೆಲೆಗೆ ಇಳಿದು ಹತ್ತಾರು ನಾಟಿಕೋಳಿಗಳನ್ನು ಕೊಂಡು ಎನ್‌ಫೀಲ್ಡ್ ಮೇಲೆ ಹೊತ್ತು ಹಾಕಿಕೊಂಡು ಭರ್ರನೆ ನುಗ್ಗಿದ. ಆನಂತರ ಅವನೇ ಪೌಲ್ಟ್ರಿ ಫಾರಂ ಆರಂಭಿಸಿದ.

ಎಂದಿನಂತೆ ಹರಿದ ಸ್ಕೂಲು ಯೂನಿಫಾರಮ್ಮನ್ನು ಹೊಲೆದುಕೊಂಡು ಯಲಹಂಕದ ಹೈಸ್ಕೂಲಿಗೆ ನಾನು ಮತ್ತು ಅಣ್ಣ ಹೊರಟೆವು. ಹತ್ತು ಗಂಟೆಗೆ ರೈಲ್ವೆಗೇಟು ಬಿತ್ತು. ರೈಲು ಹಾದು, ಗೇಟು ಮೇಲೇಳುವವರೆಗೂ ನಾವು ಅಲ್ಲೇ ನಿಂತಿರುತ್ತಿದ್ದೆವು. ಎರಡೂ ಬದಿಯಲ್ಲಿ ಎತ್ತಿನಬಂಡಿಗಳು, ಬಸ್ಸು, ಮೋಟಾರ್‌ಸೈಕಲ್, ಸೈಕಲ್ಲುಗಳು ನೆರೆದಿದ್ದವು. ರೈಲು ಹೊರಟು, ಗೇಟು ತೆರೆಯುತ್ತಿದ್ದಂತೆ ಮುನ್ನುಗ್ಗಿ ಹೋಗಲು ಹಾತೊರೆಯುತ್ತಿದ್ದವು. ಸನಿಹದಲ್ಲೇ ಇರಬೇಕು, ರೈಲು ಕೂಗುವ ಸದ್ದು ಕೇಳಿಸಿತು. ಜರ್ಮನಿಯ ರೈತ ಬಹಳ ಹಿಂದೆ ಇದ್ದನೆಂದು ಕಾಣುತ್ತದೆ. ಭೂಗೋಳವನ್ನು ಎತ್ತಿ ಹಿಡಿದುಕೊಂಡಂತೆ ಸೈಕಲ್‌ಅನ್ನು ತಲೆ ಮೇಲಿಟ್ಟುಕೊಂಡು ಜನರು, ವಾಹನಗಳ ಮಧ್ಯೆ ನಡೆದು ಗೇಟು ದಾಟಿಕೊಂಡು, ಸೈಕಲ್‌ಅನ್ನು ಕೆಳಗೆ ಇಟ್ಟು, ಹತ್ತಿಕೊಂಡು ಮುಂದಕ್ಕೆ ಹೊರಟ ದೈತ್ಯ. ಇವನಿಗಿಂತ ಎತ್ತರದ, ದೃಢಕಾಯರು ತಲ್ಲಣಿಸಿಹೋದರು. ದಾರಿಯಿದ್ದರೂ ಮುಂದೆ ಸಾಗದ ಹಿಂಜರಿಕೆಯ, ಡೋಲಾಯಮಾನದ ಜನ ಅವನ ಎದೆಗಾರಿಕೆಗೆ ನಡುಗಿದರು.

ವೆಂಕಟಾಲದ ಬಸ್‌ನಿಲ್ದಾಣದಲ್ಲಿ ಗೋಣಿಮರದ ನೆರಳಿನಲ್ಲಿ ಮಾರಮ್ಮನ ದೇವಸ್ಥಾನವಿತ್ತು. ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಪೂಜೆ. ಹುಸಿನುಡಿಯುವವನು ಬೆಸ್ತರ ಜನಾಂಗದ ಪೂಜಾರಿ. ಮಲಯಾಳಿಗಳು, ಮುಸ್ಲಿಮರು ಮತ್ತು ಕೊಡವರು ಇವನನ್ನು ಅರಸಿಕೊಂಡು ಬರುತ್ತಿದ್ದವರು. ಏರ್‌ಫೋರ್ಸ್‌ನಲ್ಲಿ ಪಿಯುಸಿ ಓದುತ್ತಿದ್ದ ಜೀವನೇಶನ್ ಗೆಳೆಯರೊಂದಿಗೆ ಪೂಜಾರಿ ಹತ್ತಿರ ತನ್ನ ಫಲಿತಾಂಶ ಕೇಳಲು ಬಂದ. ‘ಹೋಗು ಮಗ್ನೆ, ನೀನು ಫಸ್ಟ್‌ಕ್ಲಾಸ್ನಲ್ಲಿ ಪಾಸಾಗ್ತೀಯ’ ಭವಿಷ್ಯ ನುಡಿದ. ಜೀವನೇಶನ್ ಪಿಯುಸಿಯಲ್ಲಿ ಅತ್ಯಂತ ಕೆಳದರ್ಜೆಯಲ್ಲಿ ಅನುತ್ತೀರ್ಣನಾಗಿ ವಾರವೇ ಕಳೆದಿತ್ತು. ಹಾಗಾಗಿ ಗ್ರಾಮದವರ್‍ಯಾರೂ ಕೂಡ ಅವನ ಬಳಿ ಸುಳಿಯುತ್ತಿರಲಿಲ್ಲ. ನಾನು ಗೆಳೆಯರೊಂದಿಗೆ ಗೋಣಿಮರದ ಬುಡದಲ್ಲಿ ನಿಂತುಕೊಂಡು ಈ ಹುಸಿಪೂಜಾರಿಯ ಅವತಾರಗಳನ್ನು ಗಮನಿಸುತ್ತಿದ್ದೆ. ಬದುಕಿನ ಸಂಕಷ್ಟದಲ್ಲಿ ನೊಂದಹೆಣ್ಣು ಅವನ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ದೇವರು ಬಂದಂತೆ ನಾಟಕವಾಡಿ ನೆಲದಲ್ಲಿ ಬಿದ್ದು, ‘ತಾಯೇ...’ ಎಂದು ಹೊರಳಾಡುತ್ತಿದ್ದ. ತನ್ನ ಸುತ್ತಲೂ ಕೆಂಪುಬಣ್ಣದ್ದೋ, ಅರಿಶಿಣವರ್ಣದ ಸೀರೆಯನ್ನೋ ಕಟ್ಟಿಕೊಳ್ಳುತ್ತಿದ್ದ. ಆ ಮರೆಯಲ್ಲೇ ದೇವರನ್ನು ಆವಾಹಿಸಿಕೊಳ್ಳುವುದು ಮಾಡುತ್ತಿದ್ದ. ‘ನನ್ನ ಸವತಿ, ಆ ಮೂಲೆಗ್ಯಾಕೆ ನಿಂತಿದ್ದೀಯ, ಮುಂದೆ ಬಾರೆ’ ಎಂದು ಹೆಣ್ಣಿನ ದನಿಯಲ್ಲಿ ಕರೆಯುತ್ತಿದ್ದ. ಅವಳು ಓಡಿಬಂದವಳೇ ಕೈಮುಗಿಯುತ್ತಾ ಉದ್ದಕ್ಕೆ ಮಲಗಿಕೊಳ್ಳುತ್ತಿದ್ದಳು. ಪೂಜಾರಿ ಎದ್ದು ನಿಂತು ಅವಳ ಅಂಕುಡೊಂಕಿನ ದೇಹದ ಭಾಗಗಳನ್ನು ತುಳಿದು ನೀರು ಮಾಡುತ್ತಿದ್ದ. ನಂತರ ನಿಂಬೆಹಣ್ಣುಗಳನ್ನು ನೀಡಿ, ‘ತಗಳೇ, ಈ ನಿಂಬೆಕಾಯಿಗಳನ್ನ. ಮೂರು ದಾರಿ ಕೂಡ ಕಡೆ ತುಳಿಯೇ, ಪೀಡೆ ತೊಲಗ್ತದೆ’ ಚೀರುತ್ತಿದ್ದ. ಜರ್ಮನಿಯ ರೈತ ಎನ್‌ಫೀಲ್ಡ್‌ನಲ್ಲಿ ಬಂದು ಮಾರಮ್ಮನ ಗುಡಿಯ ಮುಂದೆ ನಿಂತ. ಇವನು ಹುಸಿ ಪೂಜಾರಿಯ ಬೂಟಾಟಿಕೆಯನ್ನು ಖಂಡಿಸುವನೆಂದು ಎಣಿಸಿದ್ದು ತಪ್ಪಾಯಿತು. ಈ ಪೂಜಾರಿಯೋ ಇವನನ್ನು ಕಂಡಿದ್ದೇ ಎದ್ದು ಕುಣಿದಾಡಿದ. ರೈತ ಎದೆಗುಂದಲಿಲ್ಲ, ಬಲಿಗಂಬದ ಮೇಲೆ ನೀರಿನಂತೆ ಸುರಿದಿದ್ದ ಕುಂಕುಮವನ್ನು ತನ್ನ ಹಣೆಗೆ ಇಟ್ಟುಕೊಂಡು, ಮಾರಮ್ಮನಿಗೆ ಕೈಮುಗಿದು ಎನ್‌ಫೀಲ್ಡ್ ಹತ್ತಿದ. ಜರ್ಮನಿಯ ರೈತ ಈ ನಾಡಿನ ದೇವರನ್ನು ಗೌರವಿಸುತ್ತಿದ್ದ ಬಗೆ ನನ್ನಲ್ಲಿ ಇವೊತ್ತಿಗೂ ನಿಗೂಢವಾಗಿ ಉಳಿದಿದೆಯಾದರೂ ಅವನು ನೆಲದೊಂದಿಗೆ ತನ್ನ ದೇಹವನ್ನು ಹೆಣೆದುಕೊಂಡಿದ್ದ.   

ಕಟ್ಟಿಗೇನಹಳ್ಳಿಯ ತಿಗಳ ಹೆಂಗಸರೆಲ್ಲರೂ ಜರ್ಮನಿಯ ರೈತನ ದೇಹದಾಕಾರಕ್ಕೆ ಕಂಗೆಟ್ಟುಹೋಗಿದ್ದರು. ಅವನು ತನ್ನ ಹಲ್ಲುಗಳ ನಡುವೆ ಹಂಚಿಕಡ್ಡಿ ತೂರಿಸಿಕೊಂಡರೆ ಇವರೊಳಗೆ ವಿಚಿತ್ರ ನರಕ ಯಾತನೆಯ ಸುಖ ಹೊಮ್ಮುತ್ತಿತ್ತು. ಕುಕ್ಕರುಗಾಲಿನಲ್ಲಿ ಕುಳಿತು ಕಳೆ ಕೀಳುವಾಗಲಂತೂ ಅವನ ಆ ಅವಸ್ಥೆ ನೋಡಿ ಮುಸಿಮುಸಿ ನಗುತ್ತಿದ್ದರು. ಇವನ ಕೋಣೆಯ ಹತ್ತಿರ ಒಬ್ಬೊಬ್ಬರೆ ಹೋಗಿ ಬರಿಮೈನಲ್ಲಿ ಹಿಂತಿರುಗುತ್ತಿದ್ದ ಉದಾಹರಣೆಗಳಿಲ್ಲ. ಬಾಗಲೂರು ಜಾತ್ರೆಗೆ ತನ್ನ ಟಿಲ್ಲರ್‌ನಲ್ಲೇ ತೋಟದಲ್ಲಿ ದುಡಿಯುವ ಕೂಲಿಯಾಳುಗಳನ್ನು ಕರೆದುಕೊಂಡು ಹೋಗುತ್ತಿದ್ದ. ಆ ಗುಂಪಿನಲ್ಲಿದ್ದ ಅರ್ಧದಷ್ಟು ಹೆಂಗಸರು ಇವನೊಂದಿಗೆ ಮಲಗೆದ್ದವರೇ ಆಗಿರುತ್ತಿದ್ದರು. ಅವರಿಗೆ ಮಡಕೆ, ಕಡಲೆಪುರಿ, ಬೆಂಡುಬತ್ತಾಸು, ಸೌಟು ಕೊಡಿಸುತ್ತಿದ್ದ. ಹುಲಿವೇಷದ ಕುಣಿತದಲ್ಲಿ ಇವನು ಹೆಜ್ಜೆ ಕಿತ್ತಿಡುವಾಗಿನ ಮೋಜು ಕಂಡು ಜನ ನಿಬ್ಬೆರಗಾಗುತ್ತಿದ್ದರು. ಆಟಿಕೆಯ ತುತ್ತೂರಿ ಕೊಂಡು, ಬರುವಾಗ ಊದಿಕೊಂಡು ಸಂಭ್ರಮಿಸುತ್ತಿದ್ದ. ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ಮಣ್ಣಿನ ಕಾರ್ಯಕ್ಕೆ ಹಣ ನೀಡಿ, ಸಂತಾಪ ವ್ಯಕ್ತಪಡಿಸುತ್ತಿದ್ದ. ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗಲೂ ಚೆಡ್ಡಿಯಲ್ಲೇ ಹೋಗುತ್ತಿದ್ದೆ, ಅವನ ಅಂಗಿಯ ಮೇಲೆ ಮಣ್ಣಿನ ಕಲೆಗಳಿರುತ್ತಿದ್ದವು.

ಇವನ ತೋಟದಲ್ಲಿ ಸಪೋಟ, ಸೀಬೆ, ಹಲಸು, ಮಾವು, ತೆಂಗು ಹುಲುಸಾಗಿ ಮೈನೆರೆದು ನಿಂತಿತ್ತು. ತೋಟದ ಮನೆಯ ಹಿತ್ತಿಲಿನಲ್ಲಿ ಒಂದು ಎಕರೆ ಭತ್ತ ನಾಟಿ ಮಾಡಿದ್ದ. ಜರ್ಮನಿಯಿಂದ ಮೋಟುಕುರಿಯೊಂದನ್ನು ತರಿಸಿ ತಳಿ ಮಾಡಿದ್ದ. ವಾರಕ್ಕೊಮ್ಮೆ ಬೆಳೆದ ತರಕಾರಿಗಳನ್ನು ಟಿಲ್ಲರ್‌ನಲ್ಲಿ ತುಂಬಿಕೊಂಡು ಯಲಹಂಕದ ಸಂತೆಗೆ ಮಾರಲು ಬರುತ್ತಿದ್ದ. ಟಿಲ್ಲರ್ ಬಸ್‌ಸ್ಟ್ಯಾಂಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನಾವು ಹುಡುಗರೆಲ್ಲರೂ ಅವನೆಡೆಗೆ ಓಡುತ್ತಿದ್ದೆವು. ಹಂಚಿಕಡ್ಡಿಯನ್ನು ಅತ್ತಿಂದಿತ್ತ ಆಡಿಸುತ್ತಾ ನಮ್ಮ ಕಡೆ ನೋಡಿ ನಗುತ್ತಿದ್ದ. ಟಿಲ್ಲರ್‌ಅನ್ನು ನಿಧಾನಕ್ಕೆ ಓಡಿಸುತ್ತಿದ್ದದ್ದರಿಂದ ನಮ್ಮ ಕೈ ಕುಲುಕುತ್ತಿದ್ದ, ನಾವು ದೇವಮಾನವನನ್ನು ಸ್ಪರ್ಶಿಸಿದಂತೆ ಆ ದಿನ ಕಳೆಯುತ್ತಿದ್ದೆವು. 

ನಾನು ‘ರಾಯಲ್ ಎನ್‌ಫೀಲ್ಡ್’ ಕಾದಂಬರಿ ಬರೆಯಲು ಪ್ರೇರಣೆ ಈ ಜರ್ಮನಿಯ ರೈತ ಮತ್ತು ಇಬ್ಬರು ಮಿಲಿಟರಿ ಅಧಿಕಾರಿಗಳು. ಈ ನೆಪದಲ್ಲಿ ಇವನ ನೆನಪುಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಾಯಿತು. ಅವನನ್ನು ನಾನು ಮರೆತುಹೋಗಿದ್ದೆ, ಮೃತನಾಗಿದ್ದಾನೋ ಜರ್ಮನಿಗೆ ಹಿಂತಿರುಗಿದ್ದಾನೋ ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ. ಖಲೀಲ ಕೊಟ್ಟ ಮಾಹಿತಿಯಂತೆ ಅವನು ತೀರಿಕೊಂಡಿದ್ದಾನೆ ಎಂಬುದು ತಿಳಿದುಬಂತು. ನಾನು ಅವನನ್ನು ಹೆಣವಾಗಿ ಸಂಭೋದಿಸಲಾರೆ, ಇಂಡಿಯಾದ ಮಣ್ಣಲ್ಲಿ ಮಣ್ಣಾಗಿಹೋದನೋ ಅಥವಾ ತನ್ನ ತಾಯ್ನಾಡು ಜರ್ಮನಿಗೆ ಮರಳಿದನೋ ತಿಳಿದುಬರಲಿಲ್ಲ. ಆಯಾ ನೆಲದಲ್ಲಿ ಹೇಗೆ ಪ್ರಾಮಾಣಿಕವಾಗಿ ಜೀವಿಸಬೇಕೆಂಬುದನ್ನು ಅವನು ಸರಿಯಾಗಿ ಅರಿತುಕೊಂಡಿದ್ದ. ಅವನು ಈ ನೆಲದಲ್ಲಿ ಇಟ್ಟ ಹೆಜ್ಜೆಗಳು ಇವೊತ್ತಿಗೂ ಜೀವಂತವಾಗಿಯೇನೋ ಎಂದೆನಿಸಿದಾಗ ರೋಮಾಂಚನವಾಗುತ್ತದೆ, ಕಣ್ಣು ಒದ್ದೆಯಾಗುತ್ತದೆ. ಅವನಿಗೆ ಅಂದು ತಂಗಾಳಿಯನ್ನೋ, ಬಿರುಗಾಳಿಯನ್ನೋ ಬೀಸಿದ ಮರಗಳು ಇಂದಿಗೂ ಅಲ್ಲಲ್ಲಿ ಉಳಿದುಕೊಂಡಿವೆ.

ಗಾಂಧಿ ಮತ್ತು ಫುಕುವೋಕಾನನ್ನು ನೋಡಲಿಲ್ಲ ಎನ್ನುವ ಹತಾಶೆ, ಕೊರಗು ನನ್ನಲ್ಲಿ ಇಂದಿಗೂ ಉಳಿದಿಲ್ಲ.
     *****

ನಗೆ ಡಂಗುರ - ೧೧೯

ಅದೊಂದು ದಿನಸಿ ಅಂಗಡಿ. ‘ಇಲ್ಲಿ ಫ್ರೀ ಡಿಲಿವರಿ ಸೌಲಭ್ಯ ಉಂಟು’ ಎಂದು ದೊಡ್ಡದಾಗಿ ಬೋರ್ಡ್ ಬರೆಸಿ ತಗುಲಿಹಾಕಿತ್ತು. ಇದನ್ನು ಗಮನಿಸಿದ ಹಳ್ಳಿಯ ವ್ಯಕ್ತಿಯೊಬ್ಬ ಹೆರಿಗೆಗೆ ಸಿದ್ಧವಾಗುತ್ತಿದ್ದ ತನ್ನ ಹೆಂಡತಿಯನ್ನು ಈ ಅಂಗಡಿಗೆ ಕರೆತಂದ. "ಬನ್ನೀಮ್ಮಾ, ಕುರ್ಚಿಮೇಲೆ ಕುಳಿತುಕೊಳ್ಳಿ. ನಿಮಗೆ ಬೇಕಾದ ಸಾಮಾನು ಹೇಳುತ್ತಾ ಬಂದರೆ ನಾನೇ ಪ್ಯಾಕ್ ಮಾಡಿ ಕೂಡುತ್ತೇನೆ." ಅಂದ. ಮತ್ತೆ ಬೋರ್ಡ್ ನೋಡಿದರೆ? ಕೇಳಿದ ಹಳ್ಳಿಯವ. "ಅದು ಸಾಮಾನು ನಿಮ್ಮ ಮನೆಗೇ ನಾವೇ ಖರ್ಚಿಲ್ಲದೆ ಸಾಗಿಸಿಕೂಡುತ್ತೇವೆ!" ಹಳ್ಳಿಯವ ದಂಗಾದ!
***
ಕೀಲಿಕರಣ: ಎಮ್ ಎನ್ ಎಸ್ ರಾವ್

ಮುಳ್ಳು

- ನರಸಿಂಹಸ್ವಾಮಿ ಕೆ ಎಸ್

ತೋಟವಿದೆ ತನಗೆ, ಸುಖಿ ತಾನು, ಎಂದನು ಮಾಲಿ;
ಎಳನೀರು, ರಸಬಾಳೆ, ಕಸಿಮಾವು, ಚೆಂಜೇನು!
ಬೇಕು ಬಾಳಿಗೆ ಒಂದು ತೋಟ, ಏನೇ ಇರಲಿ !-
ಚಿಂತೆಯೂ ಒಂದಿದೆ : ಇವನು ಕಾಯುವುದೆಂತು?

ಬೇಲಿಯಿದೆ ಎಂದು ನಂಬಿದೆ ತೋಟ ; ಆ ಬೇಲಿ
ಮುಳ್ಳಿರುವ ತನಕ ಆತಂಕ ತನಗಿಲ್ಲೆಂದು
ನೆರೆ ನಂಬಿ ತಾನು ತುಂಬಿದ ಹೂವ ತೊಟ್ಟಿಹುದು.
ತೋಟಕ್ಕೆ ಮುಳ್ಳು ಕಾವಲು ಎಲ್ಲ ಕಾಲದಲಿ.
ಒಡೆಯನಿಗೆ ಹೇಳಿ ಬಾಗಿಲ ತೆರೆದು ಬರಬಹುದು ;
ಕದ್ದು ಬಂದವರಿಗಿಲ್ಲಿದೆ ಮದ್ದು ; ಮುಳ್ಳಿಹುದು.

ಕಾಯುತಿದೆ ಮುಳ್ಳು ತೋಟವನು. ಈ ಭೂಮಿಯನು
ಕಾಯುತಿದೆ ಒಂದು ಕಾಣದ ಮುಳ್ಳು. ಮುಳ್ಳೆಂದು
ಲಘುವಾಗಿ ನುಡಿದರಾಶಕ್ತಿಗೆಲ್ಲಿದೆ ಹಾನಿ?
ಲೋಕವನು ರಕ್ಷಿಸುವ ಮುಳ್ಳಲ್ಲ ನಿರಭಿಮಾನಿ!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಸೂರ್ಯಕಾಂತಿ


- ವಿದ್ವಾನ್ ಐ ಮಾ ಮುತ್ತಣ್ಣ

ಅಕೊ ಮೂಡ ಬಯಲಿನಲಿ
ಬೆಳ್ನೆರೆಯ ಚೆಲ್ಲಿಹರು
ಅದೋ ಮೂಡ ಬಾನಿನಲಿ
ರವಿ ಕಾರುತಿಹನು!

ಭುವಿಯೆಲ್ಲ ಬೆಳಕಿನಾ
ಮುನ್ನೀರಂತಾದುದು;
ಗಿರಿಯೆಲ್ಲ ನಗುವಂತೆ
ತಲೆಯೆತ್ತಿ ನೋಡುವುದು.

ಚಂದಿರನ ಓಡಿಸಿತು
ಇಬ್ಬನಿಯ ಮಳೆಯು;
ಬಿಳಿವಣ್ಣು ತಾರಕೆಯ
ಹಕ್ಕಿಗಳು ಕುಟುಕಿದುವು.

ಪುಷ್ಪಫಲ ತರುಲತೆಗಳ್
ಪೂತ ತೇಜದಿ ನಕ್ಕು,
ಸೂರ್ಯಕಾಂತಿಯ ಶಾಂತ
ಪ್ರತಿಭೆಯನು ಸಾರುವುದು!

ಕಮಲಗಳು ನಗುನಗುತ
ತಲೆಯೆತ್ತಿ ನೋಡುವುವು,
ಮಿಗವಕ್ಕಿ ಆ ಕಾಂತಿ
ಕ್ಷೀರವನೆ ಕುಟಿಯುವುವು.

ಸೂರ್ಯವಂದನೆ ಮಾಡಿ
ಸೂರ್ಯಸ್ನಾನವ ಮುಗಿಸಿ
ಸೂರ್ಯಕಾಂತಿಯ ಕುಡಿಯೆ
ವಿಶ್ವವೇ ಬಾಯ್ಬಿಟ್ಟುವು.

ಮೂಡದೆಸೆ ಮೂಡಿರಲು
ಹೆಮ್ಮೆಯಿಂ ಬೆಳಗು-
ಆ ಕಾಂತಿ ತೋರಿಯೇ
ಲೋಕಗಳ ಮಿನುಗು!
    *****
ಕೀಲಿಕರಣ: ಕಿಶೋರ್‍ ಚಂದ್ರ

ಇದುವೆ ನನ್ನಯ ಸೇವೆ

- ಅನಂತನಾರಾಯಣ ಎಸ್

ಸಾಹಿತ್ಯ ಸಾಗರದ ದಡದಿ ನಿಲ್ಲುತಲಂದು
ನೋಡಿದೆನು ಆಸೆಯಿಂ ಅಲೆಗಳೆಡೆಗೆ
ಒಳಗೆ ಹುಡುಗಿಹ ಮುತ್ತುರತ್ನಗಳನೊಯ್ಯುವೆನೆ
ಕನ್ನಡಮ್ಮನ ಅಡಿಗೆ ಮಾಲೆಯಾಗಿಡಲು!

ದೂರದಿಂ ಕುಣಿಯುತ್ತ ಹತ್ತಿರಕೆ ಬಂದಿತಲೆ,
ನೋಡುತಲೆ ಧೀಗೆಟ್ಟೆ ರೌದ್ರರೂಪ!
ಸಾಗರದಿ ಮುಳುಗುತ್ತ ಮುತ್ತು ರತ್ನವನಾಯೆ
ಧೈರ್ಯಸಾಲದೆ ಅಂತೆ ನಿಂತ ಭ್ರಮೆಯೊಳಗೆ!

ಎದೆಯ ಕಂಬನಿ ಸುರಿಸಿ, ದಡದಿ ಮರಳಿನ ಮೇಲೆ
ಬಿದ್ದಿರುವ ಚಿಪ್ಪುಗಳನಾಯ್ದು ತಂದು
ಅಮ್ಮನಡಿಗಳಲಿಡುವೆ!  ಇದುವೆ ನನ್ನಯ ಸೇವೆ!
ತಪ್ಪುನಡೆದರು ಅಪ್ಪಿ ಮುದ್ದಿಪುದು ಮಮತೆ!
     *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೨

- ಲಿಂಗಮ್ಮ

ಮದ ಮತ್ಸರ ಬಿಡದು.
ಮನದ ಕನಲು ನಿಲ್ಲದು.
ಒಡಲ ಗುಣ ಹಿಂಗದು.
ಇವ ಮೂರನು ಬಿಡದೆ ನಡಿಸುವನ್ನಕ್ಕ,
ಘನವ ಕಾಣಬಾರದು.
ಘನವ ಕಾಂಬುದಕ್ಕೆ,
ಮದಮತ್ಸರವನೆ ಬಿಟ್ಟು,
ಮನದ ಕನಲ ನಿಲಿಸಿ,
ಒಡಲ ಗುಣವನೆ ಹಿಂಗಿಸಿ,
ತಾ ಮೃಡರೂಪಾದಲ್ಲದೆ,
ಘನವ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಚಂದ್ರ ನೀನೊಬ್ಬನೆ

- ಶ್ರೀನಿವಾಸ ಕೆ ಹೆಚ್

ಉರಿಯಿಲ್ಲ ಬಿಸಿಯಿಲ್ಲ
ಉರಿಬಿಸಿಲ ಬೇಗೆ ಬವಣೆಗಳಿಲ್ಲ
ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ
ಅಸ್ತಕ್ಕೆ ರಕ್ತದೋಕುಳಿಯಿಲ್ಲ
ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ
ಠಳಾಯಿಸಲೆಂಬ ಠೇಂಕಾರದವನಲ್ಲ.
ಏನಾದರೂ ಹೋದರು ಲೆಖ್ಖಿಸದೆ ಬೆಳಗು ಬೈಗಿನ ಕಾಲಚಕ್ರದ
ನಿಷ್ಠುರಕ್ಕೆ ನಿಷ್ಠನಾಗಿ ಸದಾ ಹೊತ್ತಿಕೊಂಡುರಿವ ಅಮಾನುಷನಲ್ಲ
ಅಹರ್ನಿಶಿ ನಮ್ಮ ಸುತ್ತ ಪ್ರೀತಿಯಲಿ ಸುತ್ತುತ್ತಲೇ ಇರುವ
ಪರಿವೀಕ್ಷಕ ನಿರಂತರ ಪರಿಕ್ರಮದ ಸಜೀವ ಮಾನುಷ್ಯಕಾಯ
ಈ ಇಳೆಯ ನಿಜಗೆಳೆಯ ಅಜಾತ ಶತ್ರು; ಲಕ್ಷ ನಕ್ಷತ್ರಗಳ
ರಾಜಾಧಿರಾಜ.

ಓ ಮನಃಕಾರಕನೇ
ಮನುಜನೊಳಗಿನ ಮನಸು
ನೂರಾರು ಕನಸು ಪ್ರೀತಿ ಪ್ರೇಮ

ನಿನ್ನದೇ ಸೋಮ, ನಮ್ಮೊಳಗಿನೆಲ್ಲ ಚಿತ್ರ ವಿಚಿತ್ರ ಬಯಕೆ ಕಾಮ.
ಧೀಶಕ್ತಿ, ಚಿತ್ತ ವೃತ್ತಿ, ಅನುರಕ್ತಿ ತೃಪ್ತಿ ಸಂತುಷ್ಟಿ
ಭಾಗ ರಾಗ ಅನುರಾಗ ಭಾವಾವೇಶ
ಅನ್ಯೊನ್ಯದನುಬಂಧ, ಆತ್ಮೀಯದೊಲುಮೆ ಮೈತ್ರಿಬಾಂಧವ್ಯ

ಭೂಮಿಯೊಳಗಣ ನೀರು
ಸಸ್ಯ ಔಷಧ ವನಸ್ಪತಿ
ಜ್ಞಾನ, ವಿಜ್ಞಾನ ರಸ ರಸಾಯನ ಋತುಮಾನದಧಿಪತಿ
ಎಂದೆಂದೂ ಆರದಂತಮೃತದೆಣ್ಣೆಯನೆರೆದು
ಬೆಣ್ಣೆಮುದ್ದೆಯ ಒಳಗೆ ಯಾರೋ ಹಚ್ಚಿ ಬಚ್ಚಿಟ್ಟ
ಆಕಾಶದದ್ಭುತ ದೀಪ, ನೀನು ಓ ತಿಂಗಳು
ತಂಗಳು ಕೈತುತ್ತಿನನ್ನಕ್ಕು ಇನ್ನಿರದ ರುಚಿಕೊಡುವ
ನಿನ್ನ ಬೆಳ್ಳಿ ಬೆಳದಿಂಗಳು.

ಮಧು ನಿನ್ನದು; ಮುದ ನಿನ್ನದು
ನಿನ್ನದೇ ಅದು; ಗಂಡು ಹೆಣ್ಣುಗಳ ಹೃದಯ
ಕವಾಟಗಳ ಕದ ತೆಗೆವ ಮಧುಚಂದ್ರ.

ವೃದ್ಧಿ ಕ್ಷಯ, ಭರತ ಕುಸಿತ, ಏರಿಳಿತ
ಎಲ್ಲ ನಮ್ಮಂತೆಯೇ ಅನ್ನು;
ಎಂದ ಮಾತ್ರಕ್ಕೆ ಓ ಚಗಚ್ಚಕ್ಷುವೇ
ದೇವರಲ್ಲವೆನ್ನುವರುಂಟೇ ನಿನ್ನನ್ನು
ಇರಬಹುದು ಬಿಡು ಸೂರ್ಯ ಅವನೊಬ್ಬನೆ
ಆದರೆ ಓ ಇಂದುವೇ, ಪೃಥ್ವಿಗತಿಸನಿಹದ ಬಂಧುವೇ
ಇಂದು, ಮುಂದು, ಎಂದೆಂದೂ,
ನಮಗೆ ನಮ್ಮ ಪೃಥ್ವಿಗತಿಸನಿಹದ ಬಂಧುವೇ
ಇಂದು, ಮುಂದು, ಎಂದೆಂದೂ,
ನಮಗೆ ನಮ್ಮ ಪ್ರೀತಿಯ ಚಂದ್ರ ನೀನೊಬ್ಬನೆ
ಚಂದ್ರನೆಂಬುವನೊಬ್ಬನೆ
ಚಂದ್ರ ನೀನೊಬ್ಬನೆ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಸಾವು

- ರೂಪಾ ಹಾಸನ

ಪ್ರಿಯ ಸಖಿ,
ಅಸಹಜ ಸಾವನ್ನು ಕಂಡು ಮನಕರಗದವರುಂಟೇ? ಸಾವು ಎಲ್ಲ ಜೀವಿಗೂ ಸಹಜವೇ. ಬೇಕಾದುದೇ. ಕವಿ ಪೇಜಾವರ ಸದಾಶಿವರಾಯರು ತಮ್ಮ ‘ಸಾವು’ ಎಂಬ ಸುನೀತದಲ್ಲಿ
(ಸಾನೆಟ್)

ಸಾವು ಸಹಜವು ನಿಜವೆ. ಸಾವಿಲ್ಲದೊಡೆ ಬಾಳು
ನೋವಿನೋಲುಗ ಜೀವದಾಧಿಕ್ಯಗೋಳು

ಎನ್ನುತ್ತಾರೆ. ತುಂಬು ಬಾಳನು ಬಾಳಿ ಸಾವಿಗೀಡಾದ ವ್ಯಕ್ತಿಯ ಬಗೆಗೆ ನಮಗಾಗುವ ದುಃಖದ ನೂರರಷ್ಟು ಪಾಲು ದುಃಖ ಕೊಲೆಯಾದ, ವೀರಮರಣದ ಹೆಸರಲ್ಲಿ ಸತ್ತ, ಆತ್ಮಹತ್ಯೆಗೊಳಗಾದ, ಅಪಘಾತದಿಂದ ಸತ್ತ ವ್ಯಕ್ತಿಯ ಇಂತಹ ಅಸಹಜ ಸಾವಿಗಾಗಿ ಆಗುತ್ತದೆ. ಇಂತಹ ಸಾವಿಗಾಗಿ ಮರುಗುತ್ತಾ ಕವಿ,

ಯಾರ ಹಸಿವಿಂಗಿಸಲು, ಯಾರ ಮದ ಭಂಗಿಸಲು
ಕೂರಲಗ ಕತ್ತಿಯಲಿ ನೆತ್ತರಿನ ಭುಗಿಲು?

ಎಂದು ಪ್ರಶ್ನಿಸುತ್ತಾರೆ. ಇಂತಹ ಅಸಹಜ ಸಾವುಗಳಿಗೆ ಕಾರಣವಾದರೂ ಏನು? ಎನ್ನುತ್ತಾ,

ಕಾವ ಕರುಣೆಯ ನಯದ ತೋಳ ತೊಂಗಲಿನಲ್ಲಿ
ಜೀವ ದುಂಬಿಯ ಆಟ

ಎಂದು ವಿಷಾದಿಸುತ್ತಾರೆ. ಕಾಯುವ ಕರುಣೆಯನ್ನು ನಂಬಿ ನೆಮ್ಮದಿಯಾಗಿರುವಾಗ ಕೊಲ್ಲುವಾಟವ ಆಡುವ ಈ ಆಳ್ವಿಕೆಗೆ ಉತ್ತರವೆಲ್ಲಿದೆ ? ಎನ್ನುತ್ತಾ, ಪದ್ಯದ ಕೊನೆಯಲ್ಲಿ

ಕೊಲೆಯು ಜೀವದ ಕೊನೆಯೆ! ಬಾಳು ಸಾವಿನ ಆಳೆ!
ಜಗದ ಸೌಂದರ್ಯದಂತಕನ ಸೂಳೆ!

ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ವಿಶೇಷ ಮಾನವ ಜನ್ಮ ಪಡೆದು ತನ್ನ ಜೀವನದ ಅಲ್ಪ ಭಾಗವನ್ನು, ಅನುಭವಿಸಿರದಾಗ ಕೊಲೆಯೇ ಜೀವದ ಕೊನೆಯಾಗಬೇಕೆ? ಈ ಬಾಳೆಂಬುದು ಸಾವು ಹೇಳಿದಂತೆ ಕೇಳುವ ಆಳಾಗಬೇಕೆ? ಎನ್ನುತ್ತಾ ಜಗತ್ತಿನ ಸೌಂದರ್ಯವೆನ್ನುವುದು ಅಂತಕ ಬೇಕೆನ್ನುವಂತೆ ಕುಣಿಸುವ, ಕೊನೆಗಾಣಿಸುವ ಸೂಳೆಯೆ? ಎಂದು ಪ್ರಶ್ನಿಸುತ್ತಾರೆ. ಹೌದು ಅಸಹಜ ಸಾವನ್ನು ತಡೆಯಲು ಇಲ್ಲಿ ಯಾರಿಗೂ ಸಾಧ್ಯವಿಲ್ಲ. ಇಂತಹ ಅಸಹಜ ಸಾವಿಗೆ ಆ ಅಂತಕ
ಉತ್ತರ ಕೊಡಬಲ್ಲನೇ ಸಖಿ?
     *****
ಕೀಲಿಕರಣ: ಎಂ ಎನ್ ಎಸ್ ರಾವ್

ನಗೆ ಡಂಗುರ - ೧೧೮

- ಪಟ್ಟಾಭಿ ಎ ಕೆ

ಮದುವೆ ಸಂದರ್ಶನ ನಡೆಯುತ್ತಿತ್ತು. ಭಾವಿ ಮಾವ ಹುಡುಗನನ್ನು ಮಾತನಾಡಿಸತೊಡಗಿದ:
ಭಾ.ಮ: "ನಿಮ್ಮ ವಿದ್ಯಾಭ್ಯಾಸ?" ಹುಡುಗ ತುಟಿಪಿಟಿಕ್ ಎನ್ನಲಿಲ್ಲ.
ಭಾ.ಮ: "ನಿಮ್ಮ ಕೆಲಸುಮಾಡುವ ಕಂಪನಿ ಹೆಸರು?" ಹುಡುಗ ತುಟಿ ಬಿಚ್ಚಲಿಲ್ಲ.
ಭಾ.ಮ: "ಹೋಗಲಿ, ನಿಮ ಕಂಪನಿಯಲ್ಲಿ ವರ್ಗಾವಣೆ ಪದ್ಧತಿ ಉಂಟುತಾನೆ?"
ಹುಡುಗ ತುಟಿ ಎರಡು ಮಾಡಲೇ ಇಲ್ಲ- ಮಗಳು ಇದನ್ನೆಲ್ಲಾ ಕೇಳಿಸಿಕೊಂಡು, "ಅಪ್ಪಾ, ಸಂದರ್ಶನ ಸಾಕು, ನಾನು ಈ ಹುಡುಗನನ್ನು ಒಪ್ಪಿದ್ದೇನೆ" ಎಂದಳು!
***
ಕೀಲಿಕರಣ: ಎಮ್ ಎನ್ ಎಸ್ ರಾವ್

ಅಕ್ಕಿಯಾರಿಸುವಾಗ

- ನರಸಿಂಹಸ್ವಾಮಿ ಕೆ ಎಸ್

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು;
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು;

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು;
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ, ಮುಂಗಾರಿನುರುಳು;

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು;
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿದ್ದು,

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು.
ಬೀಸಿರಿಯ ಕಿರುಮುತ್ತು ನುಚ್ಚಿನಲಿ ಮುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಬಂದೆನೊ - ಇದೊ ಬಂದೆ

- ವಿದ್ವಾನ್ ಐ ಮಾ ಮುತ್ತಣ್ಣ

ಕರೆಕರೆದು ಬರುವೆನೊ ಬಂದೆನೊ ಇದೊ ಬಂದೆ,
ಕರ್ಣಾಟ ಸಾಗರ ಸೇರಽಲು;
ತಿಳಿನೀರ ತಳವನ್ನು ಸೇರಲು!  ||ಕರೆ||

ಕೊಡಗಿನ ಮಲೆನಾಡ ಶಿಖರದೊಳುದಯಿಸಿ
ಹರಿಹರಿದೆ ಕನ್ನಡ ರಾಜ್ಯದೊಳ್;
ಕವಿರಸದ ಹನಿಯಾಗಿ ಸೇರಽಲು!

ಕಾಂತಿಯೊ ಇದು ಒಂದು ಕ್ರಾಂತಿಗೆ ಸಮನಾಗಿ
ಕರ್ಣಾಟ ಬಯಲೊಳು-ಈ ಕಾಂತಿ,
ದೇವಸೂರ್ಯನು ತೋರಿದೀಕಾಂತಿ!  ||ಕರೆ||

ಸೂರ್ಯಕಾಂತಿಯ ನಾನು ಕರ್ಣಾಟ ಸಾಗರ
ತೆರೆ ಮೇಲೆ ಥಳಥಳನೆ ತೇಲಿಽಸಿ;
ಸಹ್ಯಾದ್ರಿ ಏರಿದೆ ನೋಡಽಲು!

ವಜ್ರಪ್ರಕಾಶವು ಕರಿಮಣ್ಣು ಕರ್ಣಾಟ!
ಗೋದೆ ಕೃಷ್ಣಾ ತುಂಗಾ ಕಾವೇರೀ,
ತಾಯ್ಮಣಿಯರು ಮೀಸಿ ಮುದವೇರಿ!  ||ಕರೆ||

ನೂರಾರು ಜನಕುಽಲ ಹತ್ತಾರು ರಾಜ್ಯದೊಳ್
ನಾನೊರ್ವ ಕುಡುಪುತ್ರನದರೊಽಳು,
ಮುಳೂಗಿದೆ ಕರ್ಣಾಟ ತೆರೆಯೊಽಳು!

ಹನಿಗೊಂದು ಕವಿಯಾಗಿ ಅಲೆಗೊಂದು ಮುನಿಯಾಗಿ
ಜಲಚರದ ತೆರೆದಲ್ಲಿ ವೀರಽರೊ;
ಶಕ್ತಿಪ್ರಧಾಯಕ ರಾಜ್ಯಽವೊಽ  ||ಕರೆ||

ಸಂಪತ್ತು ಸಾಮ್ರಾಜ್ಯ ಸಂಸ್ಕೃತಿ ಸಾಹಿತ್ಯ
ರಸಿಕ ಕಲೆಗಳ ತವರೂಽರೊ;
ಪಂಪಾದಿ ಕವಿಗಳು ಬಳೆದೂರೊಽ

ಈ ರಾಜ್ಯ ಕರ್ಣಾಟ,- ಬಂದೆನೊ ಇದೊ ಬಂದೆ
ನಾನದಕೆ ನಾನಾಗಿ ಮೀಸಽಲೊ;
ತಾಯ್ನುಡಿ ಹಾಡುತ್ತ ಬಂದೆಽನೊ~  ||ಕರೆ||
    *****
ಕೀಲಿಕರಣ: ಕಿಶೋರ್‍ ಚಂದ್ರ

ಅರ್ಪಣ ಉಷೆಗೆ

ಯುಗಯುಗಗಳೇಕಾಂತ ಗೀತಹಾಡುತನಂತ
ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ!
ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ
ಅರ್ಪಿಸಿದೆ.  ನೀನೊಪ್ಪಿ ಒಲವ ಬಾಳಿಸಿದೆ!

ನಾನು ಕವಿ-ನೀ ಕಾವ್ಯ  ನಾ ಬರೆದ ಗೀತಗಳು
ನಿನ್ನ ಒಲವಿನ ನೂರು ಸೊಗಸು ನೆರಳು.
ನೀ ಬೆಳೆಸಿ ಬಾಳಿಟ್ಟ ನನ್ನ ಕಾವ್ಯದ ಬಳ್ಳಿ
ಹೂವಿಡುವ ಮುನ್ನವೇ ನೀ ಬಾಡಿಹೋದೆ!

ಅಂದು ನೀನಿದ್ದಾಗ ಈ ಕವಿತೆಗಳ ಮಾಲೆ
ಒಲವ ಮಂಗಳ ಸೂತ್ರ ನಿನ್ನ ಕೊರಳಲ್ಲಿ!
ಆ ಅಸೆ ಇಂದೆಲ್ಲಿ-ಇವು ನಿನ್ನ ನೆನಪಿನಲಿ
ಒಲವು ನೀಡುತಲಿರುವ ಭಾವದಶ್ರುಗಳು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೧

ಮಚ್ಚಬೇಡ.  ಮರಳಿ ನರಕಕ್ಕೆರಗಿ,
ಕರ್ಮಕ್ಕೆ ಗುರಿಯಾಗಬೇಡ.
ನಿಶ್ಚಿಂತನಾಗಿ ನಿಜದಲ್ಲಿ
ಚಿತ್ತವ ಸುಯಿಧಾನವ ಮಾಡಿ,
ಲಿಂಗದಲ್ಲಿ ಮನ ಅಚ್ಚೊತ್ತಿದಂತಿರಿಸಿ,
ಕತ್ತಲೆಯನೆಕಳೆದು, ಬಚ್ಚಬರಿಯ ಬೆಳಗಿನೊಳಗೆ
ಓಲಾಡಿ ಸುಖಿಯಾಗೆಂದರು
ನಮ್ಮ ಅಪ್ಪಣ್ಣಪ್ರಿಯ ಚನ್ನಬಸವಣ್ಣಾ.
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಪ್ರಶ್ನೆಯಿಲ್ಲದ ಬದುಕೊಂದು ಬದುಕೆ

- ರೂಪಾ ಹಾಸನ

ಪ್ರಿಯ ಸಖಿ,

ಜಿ.ಎಸ್. ಶಿವರುದ್ರಪ್ಪನವರ ಕವನದ ಕೆಲ ಸಾಲುಗಳು ನೆನಪಾಗುತ್ತಿದೆ.
ಪ್ರಶ್ನೆಯಿಲ್ಲದ ಬದುಕೊಂದು
               ಬದುಕೆ ?
ನನಗಿಲ್ಲ ಪೂರ್ಣ ವಿರಾಮವನ್ನರಸಿ
               ನಡೆಯುವ ಬಯಕೆ,
ಈ ಪ್ರಶ್ನೆಯ ಕೆಳಗೆ ಮಡಿಸಿರುವ
               ಸಂಶಯದ ನೆರಳ
ಬಿಚ್ಚಿ ನಡೆಯುವುದು ನನಗಿಷ್ಟ

ಎಷ್ಟು ಸೊಗಸಾದ ಸಾಲುಗಳಲ್ಲವೇ ? ನಿಜಕ್ಕೂ ಪ್ರಶ್ನೆಯಿಲ್ಲದ ಬದುಕು ಬದುಕೆ? ಉತ್ತರಗಳಿಲ್ಲದೆಯೂ ಬದುಕಬಹುದು. ಆದರೆ ನಿರಂತರ ಪ್ರಶ್ನೆ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಲಿ ಬಿಡಲಿ, ಉತ್ತರಗಳನ್ನು ಹುಡುಕುವ ಪ್ರಶ್ನೆಗಳನ್ನು ಕೆದಕುತ್ತಾ ಸಾಗುವ ದಿಟ್ಟತನ ನಮಗೆ ಬೇಕು.

ನಮ್ಮಲ್ಲಿ ಎಷ್ಟೊಂದು ಜನರಿಗೆ ಯಾವುದಕ್ಕೂ ಪುರಸೊತ್ತಿಲ್ಲ. ಆಂಗ್ಲ ಕವಿಯೊಬ್ಬ ಹೇಳುತ್ತಾನೆ, Take time to live. Because the world has so much to give...ಬದುಕಲು ಸಮಯ ಮಾಡಿಕೋ ಏಕೆಂದರೆ ನಿನಗಾಗಿ ನೀಡಲು ಈ ಜಗತ್ತಿಗೆ ಬಹಳಷ್ಟಿದೆ. ನಮ್ಮದೇ ಕಷ್ಟ, ದುಃಖ ಸಮಸ್ಯೆಗಳ ಜಾಲದಲ್ಲಿ ಸುತ್ತಿಕೊಂಡಿರುವ ನಮಗೆ, ಹೃದಯ ತೆರೆದು ಹೀಗೆ ಬದುಕಲು, ಜಗತ್ತಿನ ಆಗು-ಹೋಗುಗಳಿಗೆ ಸ್ಪಂದಿಸಲು ಸಮಯವಿದೆಯೇ? ಅಥವಾ ಆಸಕ್ತಿಯಿದೆಯೇ?

ಒಬ್ಬ ವ್ಯಕ್ತಿ ನಿಜಕ್ಕೂ ಬದುಕಿದ್ದಾನೆಂದು ತಿಳಿಯುವುದೇ ಅವನಲ್ಲಿರುವ ಅದಮ್ಯ ಕುತೂಹಲದಿಂದ. ಎಲ್ಲವನ್ನೂ ಒಳಗೊಂಡ ಬದುಕನ್ನು ತಿಳಿಯಬೇಕೆಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುವ ವ್ಯಕ್ತಿ, ಉತ್ತರಗಳನ್ನು ಅರಸುವ ವ್ಯಕ್ತಿ ಸದಾಕಾಲ ಜೀವಂತವಾಗಿರುತ್ತಾನೆ. ಇಲ್ಲದಿದ್ದವನು ಬದುಕಿದ್ದೂ ಸತ್ತಂತೆ!

ಪ್ರಿಯ ಸಖಿ, ನಾವೂ ಬದುಕಲು ಒಂದಿಷ್ಟು ಸಮಯ ಮಾಡಿಕೊಳ್ಳೋಣ. ಜಗತ್ತು ನಮಗಾಗಿ ನೀಡಲು ಕಾದಿರುವ ಎಲ್ಲವನ್ನೂ ಆಸ್ವಾದಿಸೋಣ. ಪ್ರಶ್ನೆಗಳೂ ನಮ್ಮನ್ನು ಕಾಡಲಿ. ಉತ್ತರಗಳಿಗಾಗಿ ಹುಡುಕಾಡೋಣ. ಎಲ್ಲಕ್ಕೂ ಮೊದಲು ಹೃದಯ ತೆರೆದು ಬದುಕಲು ಪ್ರಯತ್ನಿಸೋಣ. ನೀನೇನನ್ನುತ್ತೀ ಸಖಿ? ಸಮಯ ಮೀರುತ್ತಿದೆ ಇನ್ನು ಬರಲೆ?
     *****
ಕೀಲಿಕರಣ: ಎಂ ಎನ್ ಎಸ್ ರಾವ್