ಸದಗುರುರಾಥನ್ಹೊರತು ಗತಿ ಬ್ಯಾರಿಹುದೆ?
ಮುಕ್ತಿದಾತನೆನ್ನುತಾ ಶ್ರುತಿ ಸಾರುತಿದೆ ||ಪ.||
ಕೌತಕದಿ ಕಲಿಯೊಳು ಕೂಡಿಸಿದಾ
ರೇತು ರಕ್ತದೊಳು ಮನಿ ಮಾಡಿಸಿದಾ
ಮಾತೆ ಕುಚದೊಳು ಆಮೃತರಸ ನೀಡಿಸಿದಾ ||೧||
ಏನು ಹೇಳಲಿ ಆತನ ದಯದಿಂದಾ
ದೇವ ಶಿಶುನಾಳೇಶನ ವರದಿಂದಾ
ತಾನು ತಾನೇ ಆದನು ಗುರುಗೋವಿಂದಾ ||೨||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಸದಗುರುರಾಥನ್ಹೊರತು ಗತಿ ಬ್ಯಾರಿಹುದೆ?
ನಂಬಿದೆನಯ್ಯಾ ನಿನ್ನ ಸದಗುರುರಾಯಾ
ನಂಬಿದೆನಯ್ಯಾ ನಿನ್ನ ಸದಗುರುರಾಯಾ
ರಕ್ಷಿಸು ಎನ್ನ ಪ್ರೀಯಾ ||ಪ||
ನ೦ಬಿದೆ ನಾ ನಿನ್ನ ಶಂಬು ರಕ್ಷಿಸು ಎನ್ನಾ
ಕುಂಭಿನಿಯಾಳು ಬಿಡದೆ ತುಳುಕುತಿರುವೆ ||ಅ.ಪ.||
ಹರನಾಮ ಧ್ಯಾನದಲಿ ಫ್ರೇಮದಲಿ
ಕರಿಗೊಂಡು ಮನಸಿನಲಿ ವರವ್ಯಸನವನು ಹರಿದು
ನಿರುತ ಪಾಲಿಸು ದೇವಾ
ಧರಿಯೊಳು ಸತ್ಯಶಂಕರ ರೂಪ ನಿನ್ನ ||೧||
ಜಡದೇಹಿ ಜಗದಿ ನಾನು ಪರಂಜ್ಯೋತಿ
ಮೃಡರೂಪ ಮೂರ್ತಿ ನೀನು
ಪೊಡವಿಪ ಶಿಶುನಾಳ ಒಡಿಯನ ಕರುಣಿಸೊ
ಕಡುಮತಿ ಸದ್ಗುರು ಗೋವಿಂದನಾಥನೆ ||೨||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ
ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪ||
ಕರಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರಬೋಧಿಸಿ ಕರವಿಟ್ಟು ಶಿರದೊಳು ||೧||
ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||
ಗುರುವರ ಗೋವಿಂದ ಪರಮಗಾರುಡಿಗ ನಿ-
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಶ್ರೀಗುರು ನಿತ್ಯನಿರಾಲಂಬ
ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ
ಈ ಆತ್ಮಾ ಶಿವಯೋಗಿ ||ಪ||
ಮರಳಿ ತೆರಳದಂತೆ ಭವದೊಳು ಬಾರದೆ
ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ ||ಅ.ಪ.||
ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ
ಪಾರಮರ್ಥದೊಳಿರುವಾ ನಾಲಿ ನಿಲ್ಲಿಸಿ
ಗುರುಸಾಧ್ಯನಾಗುತ ತಾನು
ಬ್ಯಾರೆ ಬೈಲು ಬ್ರಹ್ಮಜ್ಞಾನದೊಳಿರುವನಯ್ಯ ||೧||
ವಸುಧಿಯೊಳು ಶಿಶುನಾಳಧೀಶನ ಸೇವಕ
ಉಸುರಿದ ನುಡಿಕೇಳಿ ಪಸರಿಸುವಾ
ಶಶಿಕಿರಣದೋಳ್ ಗುರುಗೋವಿಂದನಾಥನ
ಶಿಶುವೆಂದಿನಿಸಿದಂಥಾ ಕುಶಲ ಶರೀಫನು ||೨||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಧರೆ ಹೊತ್ತಿ ಉರಿದೊಡೆ
- ಬಸವರಾಜ್ ಡಬ್ಲ್ಯು
* * *
ಕೀಲಿಕರಣ: ಕಿಶೋರ್ ಚಂದ್ರ
ಸದ್ಗುರುವಿನ ವರವು ನಮಗೆ ಇರಲಿ
ಸದ್ಗುರುವಿನ ವರವು ನಮಗೆ ಇರಲಿ
ಸರಸಿಜ ಮುಖಿಯೆ ||ಪ||
ಪರಮ ನಿತ್ಯಾನಂದ ಸುಖವು
ಆರವು ಹಿಡಿದು ನುಡಿಯುತಿರಲು
ಸ್ಮರನ ಮತ್ಸರವನ್ನು ಗೆದ್ದು
ಮರಣ ಬಾಧೆ ಮಾಯೆ ತುಳಿದು ||೧||
ದೇವ ಶಿಶುನಾಳಧೀಶನ
ಜೀವ ದಣಿದು ಉಸುರಿದ೦ತೆ
ಕೇವಲಾದ ಬ್ರಹ್ಮ ತಾನು
ಠಾವಿನೊಳಗೆ ನಿಂತ ಬಳಿಕ ||೨||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ
ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಎನಗೊಂದು
ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ
ಪ್ರಣಮ ಪಂಚಾಕ್ಷರಿಯ ಎಣಿಸಿ ಜಪಮಾಡೆಂದು
ಹನ್ನೊದುಮಣಿ ಮೇಲೆ ಇನ್ನೊಂದು ಸಣ್ಣರುದ್ರಾಕ್ಷಿ ||ಅ. ಪ||
ಆದರೊಳುನ್ನತಾಮೃತದ ಶಿಲೆಮಾನ ರತ್ನದ ಹರಳಿನೊಳು
ಚಿನ್ನದ ಎಳಿಯ ಪೊಣಿಸಿ ಎಣಿಸಿ ಜಪಮಾಡೆಂದು ||೧||
ಕಸುಗ್ರಾಮದ ಕಡಕೊಳ್ಳ ಕಡೆಗಿಟ್ಟು
ಹೊಸಗ್ರಾಮ ಸ್ಥಳಕಿಳಿದು
ಬಸವನಾಮಾಮೃತದ ರುಚಿ ಕಂಠಮಾಲೆಯನು ಕೊಟ್ಟಾತನೋ ತಾನು ||೨||
ಕರದಿ ಕೈದಂಡ ಕೋಲು ಪಾರಮಾಡಿದ ವಿರಚಿಸಲು
ವರವೀರಯೋಗಿ ಧರೆಗೆ ಮೇಲೆ ಶಿಶುನಾಳಢೀಶ
ತರಲಘಟ್ಟದ ಪೀರ ಫಕೀರನಾಗೆನುತ ಮಣಿಮಾಲಿಕವ ಕೊಟ್ಟನೋ ||೩||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಗುರುನಾಥನಂತಃಕರಣವಾಯಿತು
ಗುರುನಾಥನಂತಃಕರಣವಾಯಿತು ಆತ್ಮರಾಮನಿಗೆ
ನಿನ್ನಂತರ೦ಗದಿ ಮರಳಿ ತೆರಳದಂತೆ ಇಹದೊಳಗೆ ||ಪ||
ಸಾಧು ಸಂತತಿ ಸಿದ್ಧ ಆರೂಢಗೆ ತಾನೇಕದೋಳ್
ಆರನಳಿಯುತ ಮೂರು ಮೀರುವನೆ ಬ್ಯಾರೊಂದು ತತ್ವಾಧಾರದಲಿ
ಗುರುಬೋಧ ಪಡದವಗೆ ಪಾರಮಾರ್ಥದ
ನೆಲೆಯನೇರುವಗೆ ಘನತೂರ್ಯದೋಳ್ ||೧||
ವಸುಧಿಯೊಳ್ ಶಿಶುನಾಳಧೀಶನ ಆಸಮಸೇವಕರಿಗೆ
ಪಶುಪತಿಯ ವಶವಾಗಿ ಗುರುಗೋವಿಂದನಾಥನಿಗೆ
ಕಸಮಳದಿ ಗುರುಕೊಟ್ಟ ಮಂತ್ರವ ಜಪಿಸುತಿರುವವಗೆ || ೨ ||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಹೋಗೋಣ ನಡಿಯೋ ಬೇಗನೆ ಎದ್ದು
ಹೋಗೋಣ ನಡಿಯೋ ಬೇಗನೆ ಎದ್ದು
ಸಾಗಿ ಸದ್ಗುರುವಿನ ಯೋಗ್ಯ ಮಂದಿರಕೆದ್ದು ||ಪ||
ಮೃಡನ ಆಕಾರಾ ಪೊಡವಿಯೊಳು ಬಡವರಾಧಾರಾ
ಬಿಡದೆ ಭಕ್ತ ಜನರ ಉದ್ಧಾರಾ ಮಾಡುತಲಿಹ
ಆಡವಿ ಪಾಚ್ಛಾನೆಂಬೋ ಒಡಿಯನಾ ಮಠಕೆದ್ದು ||೧||
ಕಿಂಕರರಾಗಿ ನಾವಿಬ್ಬರು
ಭೊಂಕರನೆ ಸಾಗಿ ಭಜಿಸಿ ಕರುಣಾಹಂಕಾರ ಪೋಗಿ
ಪಂಕಜಮುಖಿ ಶಂಕರನೆನಿಸಿದ ಆಂಕಲಿಸ್ಥಳಕೆದ್ದು ||೨||
ಪರಮ ವಿಶಾಲಾ ಪಾವನ ಶುಭ
ಚರಿತನಿರಾಲಾ ನಿರಂಜನ ನಿರುಪಮಶಾಲಾ ದಯಾಪರ
ಪರಲೋಕ್ಕೋದ್ಧರಿಸಿದ ಚರಣಕಮಲಕೆದ್ದು ||೩||
ಚರರೂಪಧರಿಸಿ ಚೆನ್ನಾಗಿ ಸಾಧು
ಧರಿಯೊಳವತರಿಸಿ ದಾಸೋಹದ ಸಿರಿಯನ್ನೇ ಮೆರಸಿ
ಸಾರುವೆ ದೇವಾ ಹರಲೀಲೆ ನಟಿಸಿದ ಶರಣ ಪಾದಕೆದ್ದು ||೪||
ಶಿವಯೋಗಿ ಕಾಣ ಸಂಕಟ ಮಾಯಾ
ಭವ ಜೈಸಿದನೆ ದಯಾಪರಭವದ ಜೀವನನೇ ಸಿದ್ಧೇಶನೆ
ಹರಲೀಲ ಧರಿಸಿಪ ಮಹಿಮನ ಪಾದಕ್ಕೆ ||೫||
ವಸುಧಿಪಾಲಿಪನೆ ಶ್ರೀ ಬಸವಾದಿ ಪ್ರಮಥರೋಳ್ ಇಹನೆ
ಶಿಶುವಿನಾಳಧೀಶ ಸಾಖನೆ ಸದ್ಗುರುದಯ
ಅಸಮ ಸದ್ಗುರು ಗೋವಿಂದನ ದಯದಿಂದ ||೬||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಗುರುಸೇವಾ ಮಾಡೋ
ಗುರುಸೇವಾ ಮಾಡೋ ನೀನು
ಪಾಮರ ಮೂಢಾ ||ಪ||
ಗುರುಸೇವೆ ಮಾಡದೆ
ನರಸೇವೆ ಮಾಡುವಿ
ತಾರಿಸುವವರ ಕಾಣೆ ತಾಮಸ ನಿನ್ನೊಳು ||ಅ.ಪ.||
ಬಂಧನ ಇಲ್ಲೆ ಕಂಡಿ
ಇಂದಿನ ಕರ್ಮಫಲವೆಲ್ಲ ಇಲ್ಲೆ ಉಂಡಿ
ಮುಂದಿನ ಮಾಗ ತಿಳಕೋಳೋ ಹುಚ್ಚುಮುಂಡೆ
ಎಚ್ಚರಿಕಿಲ್ಲದೆ ಹುಚ್ಚನ ತೆರದಂತೆ
ಬೆಟ್ಟನ ಮರದಂತ ಕೆಟ್ಟನಾಗಲಿಬೇಡ ||೧||
ಸಾಧುಗಳ ಸಂಗವ ಬಿಟ್ಟು
ವಾದಮಾಡಿ ಕಾದುವದ್ಯಾಕೋ ಖೊಟ್ಟಿ
ವೇದವನೋದಿ ಆದೆಲ್ಲೋ ಮುರಾಬಟ್ಟಿ
ಬೋಧನ ಮಾರ್ಗವ ಸಾಧಿಸಿ ಸದ್ಗುರು
ಪಾದಸೇವೆಯೋಳ್ ನಿರತನಾಗಿ ಬೇಗನೆ ||೨||
ಮದ್ಯಪಾನ ಮಾಡಿದಿಯೆಲ್ಲೋ
ಮದವೇರಿದಾನಿಯೆಂತಾದಿಯಲ್ಲೋ
ಕದನದೊಳ್ ಕಾಲ ಯಮನಾದಿಯಲ್ಲೋ
ಸದಮಲ ಶಿಶುನಾಳಧೀಶನ ಕಾಣದೆ
ಕಾಲನ ವಶವಾಗಿ ಕೈಸೆರೆ ಸಿಗುವಿಯಲ್ಲೋ ||೩||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಶ್ರೀಗುರು ಮಂತ್ರ
ಶ್ರೀಗುರು ಮಂತ್ರವ
ರಾಗದಿ ನುತಿಸಲು
ಬೋಧ ಸಂಪದ ಸುಖವಾಗುವದೋ ||ಪ||
ಮಾಜದೆ ಮಂತ್ರದ
ಮೊದಲಕ್ಷರವ
ತೇಜಿಸುತಲಿ ನಿತ್ಯ ಜಪಿಸುವದೋ ||೧||
ಬಿಡದೆರಕ್ಷರ
ನಡುವಿನ ಶೂನ್ಯದಿ
ದೃಧವಿಡಿದಾತ್ಮದಿ ನುತಿಸುವದೋ ||೨||
ಬರೆದು ಮೂರಕ್ಷರ
ಕರುಣ ಸೇವಿಸಿದರೆ
ಜನನ ಮರಣ ಭಯ ನೀಗುವದೋ ||೩||
ನೀ ಕಲಿ ಸುಮ್ಮನೆ
ನಾಲ್ಕು ಅಕ್ಷರಗಳ
ಬೇಕೆನಿಸಿದ ವಸ್ತು ಸಿಗುರಿತಿಹುದೋ ||೪||
ಶಿಶುನಾಳಧೀಶನ
ಹೆಸರಿನೈದಕ್ಷರ
ಹಸನಾಗಿ ಭಜಿಸಲಹುದೆನಿಸುವದೋ ||೫||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ದಯಾಳು ಶ್ರೀಮಂತ
ಒಂದು ಊರಿನಲ್ಲಿ ಜಯಶೀಲ ಎಂಬ ದಯಾಳು, ಶ್ರೀಮಂತ ಯುವಕನಿದ್ದ. ಒಮ್ಮೆ ಪಕ್ಕದ ಊರಿಗೆ ವ್ಯಾಪಾರಕ್ಕೆಂದು ಹೊರಟಿದ್ದ. ದಾರಿಯಲ್ಲಿ ಕೋಳಿಯನ್ನು ಬಲಿ ಕೊಡುವುದನ್ನು ನೋಡಿ ಆಲ್ಲಿಯ ಜನರಿಗೆ ಹೇಳಿದ: `ಅನ್ಯಾಯವಾಗಿ ಆ ಕೋಳಿಯನ್ನು ಕೊಲ್ಲಬೇಡಿ' ಎಂದ. ಆದಕ್ಕೆ ಜನರು `ಅದರ ಪ್ರಾಣ ಉಳಿಸಬೇಕೆಂದರೆ ಸಾವಿರ ಬಂಗಾರದ ನಾಣ್ಯ ಕೊಡು' ಎಂದರು. ಜಯಶೀಲ ಆವರಿಗೆ ಸಾವಿರ ಕೊಟ್ಟು ಕೋಳಿಯನ್ನು ತೆಗೆದುಕೊಂಡು ಹೊರಟ.
ಮುಂದಿನ ಊರಿನಲ್ಲಿ ಮತ್ತೊಂದು ದೃಶ್ಯ ನೋಡಿದ ಅಲ್ಲಿಯ ಜನ ಕುರಿಯನ್ನು ಬಲಿ ಕೊಡುತ್ತಿದ್ದರು. `ಇದನ್ನು ಸಾಯಿಸಬೇಡಿ ನೀವು ಕೇಳಿದಷ್ಟು ಹಣ ಕೊಡುವೆ' ಎಂದ. ಈ ಕುರಿಗೆ ಐದು ಸಾವಿರ ನಾಣ್ಯ ಕೊಟ್ಟರೆ ಬಿಟ್ಟುಬಿಡುವೆವು ಎಂದರು ಜನ. ಆವರಿಗೆ ಐದು ಸಾವಿರ ನಾಣ್ಯ ಕೊಟ್ಟು ಕುರಿಯನ್ನು ಕೊಂಡು ತನ್ನ ಊರಿಗೆ ಮರಳಿದ.
ಹೀಗೆ ಎಲ್ಲರಿಗೂ ದಾನ ಮಾಡಿ ಎಲ್ಲ ಆಸ್ತಿಯನ್ನೂ ಜಯಶೀಲ ಕಳೆದುಕೊಂಡ. ಇದನ್ನು ನೋಡಿದ ಕೋಳಿ ಮರುಗಿತು. `ಒಡೆಯಾ ನೀನೇನು ಯೋಚಿಸಬೇಡ. ಕಾಡಿನಲ್ಲಿ ನಮ್ಮ ಕೋಳಿಗಳಿಗೆ ಒಬ್ಬ ರಾಜನಿದ್ದಾನೆ. ಅವನು ನಿನಗೆ ಸಹಾಯ ಮಾಡುವನು ನಡೆ' ಎಂದು ತಮ್ಮ ರಾಜನ ಬಳಿಗೆ ಕರೆದುಕೊಂಡು ಹೋಯಿತು.
ಜಯಶೀಲನ ಪೂರ್ವಾಪರ ಏನೆಲ್ಲ ತಿಳಿದ ಕೋಳಿರಾಜ. `ನಾನು ನಿನಗೊಂದು ಬಂಗಾರದ ಮೊಟ್ಟೆ ಇಡುವ ಕೋಳಿ ಕೊಡುವೆ ತೆಗೆದುಕೋ' ಎಂದಿತು. ಜಯಶೀಲ ಆ ಕೋಳಿಯನ್ನು ತೆಗೆದುಕೊಂಡು ತಮ್ಮೂರಿಗೆ ಹಿಂದಿರುಗಿದ.
ಕೋಳಿ ಬಂಗಾರದ ಮೊಟ್ಟೆ ಇಡತೊಡಗಿತು. ಇದರಿಂದ ಜಯಶೀಲ ಶ್ರೀಮಂತನಾದ. ಒಮ್ಮೆ ಕುರಿ `ನಾನೂ ನಿನಗೆ ಏನಾದರೂ ಉಪಕಾರ ಮಾಡಬೇಕೆಂದಿರುವೆ. ಆದಕ್ಕೆ ನಮ್ಮ ಕುರಿ ಹಟ್ಟಿಗೆ ಹೋಗೋಣ. ಆಲ್ಲಿ ನಮ್ಮ ಕುರಿನಾಯಕ ಇದ್ದಾನೆ ಅವನು ನಿನಗೆ ಸಹಾಯ ಮಾಡುತ್ತಾನೆ' ಎಂದು ಹೇಳಿ ಜಯಶೀಲನನ್ನು ಕರೆದುಕೂಂಡು ಹೋಯಿತು. ಅಲ್ಲಿ ಕುರಿ ನಾಯಕ ಆಪರೂಪದ ಬಂಗಾರದ ಉಣ್ಣೆ ಕೊಡುವ ಕುರಿಯನ್ನು ಕೊಟ್ಟಿತು. ಆದನ್ನು ತೆಗೆದುಕೊಂಡು ಬಂದನು. ಜಯಶೀಲ ಎಲ್ಲರಿಗೆ ದಾನ ಮಾಡಿ ಹೆಸರುವಾಸಿಯಾದನು.
ಒಮ್ಮೆ ಇವನ ದಾನ, ಧರ್ಮ, ಒಳ್ಳೆಯತನ ಪಕ್ಕದ ರಾಜ್ಯದ ರಾಜಕುಮಾರಿಗೂ ಗೊತ್ತಾಗಿ ಜಯಶೀಲನನ್ನು ನೋಡಲು ಬಂದಳು. ಅವನನ್ನು ನೋಡಿದೊಡನೆ ಮೋಹಗೊಂಡು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಳು. ಜಯತೀಲ ಒಪ್ಪಿ ಮದುವೆಯಾದ. ಈ ವಿಷಯ ತಿಳಿದ ರಾಜಕುಮಾರಿಯ ತಂದೆ ಇವಳನ್ನು ಕರೆತಂದು ಸೆರೆಮನೆಗೆ ಅಟ್ಟಿದ. ವಿಷಯ ತಿಳಿದ ಜಯಶೀಲ ದುಃಖಿತನಾದ. ಆಗ ಕೋಳಿ ಮತ್ತು ಕುರಿ `ನೀನೇನು ಚಿಂತಿಸಬೇಡ, ರಾಜಕುಮಾರಿಯನ್ನು ನಾವು ಕರೆತರುತ್ತೇವೆ' ಎಂದು ಹೇಳಿ ಅರಮನೆಯತ್ತ ಹೊರಟವು.
ಅಲ್ಲಿ ಸೇವಕಿಯರ ವೇಷ ಧರಿಸಿದವು. ಸೆರೆಮನೆಯಲ್ಲಿ ಅಳುತ್ತ ಕುಳಿತಿರುವ ರಾಜಕುಮಾರಿಯನ್ನು ನೋಡಿ, ನೀನು ಅಳಬೇಡ ಜಯಶೀಲನ ಬಳಿ ಕರೆದೊಯ್ಯುತ್ತೇವೆ ಎಂದು ಹೇಳಿ ತಮ್ಮ ನಿಜ ರೂಪ ತಳೆದವು. ಅದನ್ನು ನೋಡಿ ಹೆದರಿದಳು ರಾಜಕುಮಾರಿ. `ಹೆದರಬೇಡ ನಾವು ನಿನಗೆ ಸಹಾಯ ಮಾಡುವೆವು. ನನ್ನ ಬೆನ್ನ ಮೇಲೆ ಕುಳಿತುಕೊ' ಎಂದಿತು ಕುರಿ. ರಾಜಕುಮಾರಿ ಜತೆಗೆ ಕೋಳಿಯೊಂದಿಗೆ ಕುರಿಯ ಬೆನ್ನ ಮೇಲೆ ಕುಳಿತು ಬಂದಳು. ಇದನ್ನು ನೋಡಿದ ಜಯಶೀಲ ಸಂತೋಷಗೊಂಡ. ರಾಜಕುವಕಾರಿ, ಕೋಳಿ ಮತ್ತು ಕುರಿಯೊಂದಿಗೆ ನೆಮ್ಮದಿಯಿಂದ ಬಾಳಿದ ಜಯಶೀಲ.
ಕೀಲಿಕರಣ : ಎಂ ಎನ್ ಎಸ್ ರಾವ್
ದೊರಕಿದಾ ಗುರು
ದೊರಕಿದಾ ಗುರು
ದೊರಕಿದಾ || ಪ ||
ಪರಮಾನಂದ ಬೋಧ
ಆರವಿನೊಳಗ ಬಂದು
ದೊರಕಿದಾ ಗುರು
ದೊರಕಿದಾ ||ಅ.ಪ.||
ಕರಪಾತ್ರೆ ಹಿಡಿದು ಈ
ನರ ಶರೀರದಿ ತನ್ನ
ಅರುವ ತನಗೆ ತೋರಿ
ಪರಮ ನಂಬುಗೆಯಲಿ
ದೊರಕಿದಾ ಗುರು
ದೊರಕಿದಾ ||೧||
ಹಿಂದೆ ಜನ್ಮಾಂತರ
ಒಂದು ಉಳಿಯದಂತೆ
ಒಂದು ವಸ್ತುವಿನೊಳು
ಚಂದದಿಂದಲಿ ಬಂದು
ದೊರಕಿದಾ ಗುರು
ದೊರಕಿದಾ ||೨||
ಶಿಶುನಾಳಧೀಶ ಪ್ರ-
ಕಾಶ ಗೋವಿಂದನ
ಆಸಮ ತೇಜೋರೂಪ
ಕಿರಣದಿಂದಲೆ ಬಂದು
ದೊರಕಿದಾ ಗುರು
ದೊರಕಿದಾ ||೩||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಎಂಥಾ ಬೇಗನೆ ಯವ್ವನ ಬಂತೆ
ಎಂಥಾ ಬೇಗನೆ ಯವ್ವನ ಬಂತೆ ನಿನಗೆ
ನಿಂತು ನೋಡಿ ಹೋಗದಾಂಗಾಯಿತೆನಗೆ ||ಪ||
ಸಂತಿಗ್ಹೊಗಿ ಸಣ್ಣದೊಂದು
ಚಿಂತಾಕವ ಕದ್ದುಕೊಂಡು
ಹಂತಿಲಿದ್ದವರೆಲ್ಲ ಕಂಡರೆ
ಮೆಂತೇದವನಾ ಹೊಲಾವೂಕ್ಕೆ
ಕಾಂತೆ ಕಬ್ಬಿನ ವನದಿ ಬಂದು
ಕುಂತೆಲ್ಲ ಶೀಗಿಹುಣ್ಣಿವಿಗೆ ||೧||
ದಿನದಲ್ಲಿ ಹುಡೂಗಿ ಸಣ್ಣಾಕಿ ಒಳ್ಳೆ
ಘನ ಹಿರಿಯರಿಗೆ ಕಣ್ಣಾರೆ
ಎಣಕಿಗೆಟ್ಟ್ಹಾದರವ ಮಾಡಿ
ಹಣಜಿ ಹುಲ್ಲೋಳಡಗಿ ನೋಡಿ
ಬಣಜಿಗೇರಣ್ಣಾನ ಕೂಡಿ
ಕಣಜತುಂಬಾ ಹೊನ್ನ ಗಳಸಿ || ೨ ||
ನೊಣವು ಹತ್ತಿಗೆ ಏರಿ ಸಣ್ಣ
ಮಣಕ ಎಮ್ಮಿ ಕೋಣನೀದ್ಹಾಂಗ,
ಶಿಶುನಾಳೇಶನ ಸೇವಕಗೆ ಸುಳ್ಳೇ
ವಿಷಯಕ್ಕೆ ಎಳಸೀದಿ ಹೀಗೆ ||೩||
ಹಸಿಯ ಕಬ್ಬಿನಂತೆ ಶಟದು
ಮಸಿವ ಹಿಂಡಿಯ ಕಲ್ಲು ಕಟದು
ಹೆಸರ ಬಳ್ಳಿಗೆ ಉರುಳಿಬಿದ್ದು
ಕಸದ ಬುಟ್ಟಿ ಹೊತ್ತುಕೊಂಡು
ಬಸರು ಬಯಕಿ ತೋರಲಾಗಿ
ಕೊಸರಿತಲ್ಲೋ ಕರ್ಮ ಕಣ್ಣಿಗೆ ||೪||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಬೆಳ್ಳಿ ಕಡಗ
ಒಂದು ಕುಗ್ರಾಮದಲ್ಲಿ ಮುದುಕ ಮುದುಕಿ ಇದ್ದರು. ಅವರಿಗೆ ಒಬ್ಬ ಮಗನಿದ್ದ. ಆತ ಹೇಳಿದ್ದನ್ನು ತಿಳಿದುಕೊಳ್ಳಲಾರದಷ್ಟು ದಡ್ಡನಾಗಿದ್ದ. ಮಗನ ಈ ವರ್ತನೆಯಿಂದ ಬೇಸತ್ತ ಅವನ ತಂದೆ-ತಾಯಿ ಪಕ್ಕದ ಆಶ್ರಮದ ಋಷಿಯ ಬಳಿ ಹೋಗಿ `ಸ್ವಾಮೀಜಿ, ಇವನು ನಮ್ಮ ಮಗ ಧನವಂತ. ಇವನು ದಡ್ಡ. ಹೇಗಾದರೂ ಮಾಡಿ ಇವನನ್ನು ಬುದ್ಧವಂತನನ್ನಾಗಿ ಮಾಡಿ. ನಮ್ಮ ಬಳಿ ಇರುವ ಆಸ್ತಿ, ಹಣವನ್ನು ಆಶ್ರಮಕ್ಕೆ ಒಪ್ಪಿಸಿ ನಾವೂ ಇಲ್ಲಿಯೇ ಕೆಲಸ ಮಾಡಿಕೊಮಡು ಇರುತ್ತೇವೆ' ಎಂದು ಬೇಡಿಕೊಂಡರು. ಧನವಂತನನ್ನೊಮ್ಮೆ ನೋಡಿದ ಋಷಿ `ಆಯಿತು' ಎಂದರು.
`ಧನವಂತಾ, ನೀನು ಸ್ವಲ್ಪ ದಿನಗಳವರೆಗೆ ಸ್ವಚ್ಛಂದವಾಗಿ ಆಶ್ರಮದಲ್ಲಿ ಸುತ್ತಾಡಿಕೊಂಡಿರು. ಇಲ್ಲಿ ನಿನಗಾಗಿ ಈಜುಕೊಳ, ಪ್ರಾಣಿ, ಪಕ್ಷಿಗಳಿವೆ' ಎಂದರು. ಸಂತಸಗೊಂಡ ಧನವಂತ `ಆಗಲಿ' ಎಂದು ಕುಣಿಯುತ್ತ ಹೋದ.
ಸ್ವಲ್ಪ ದಿನಗಳ ನಂತರ ಋಷಿಗಳು ತಾವು ಕಲಿತ ಎಲ್ಲ ವಿದ್ಯೆಗಳನ್ನೂ ಕಲಿಸಿ ಧನವಂತನನ್ನು ಬುದ್ಧವಂತನನ್ನಾಗಿ ಮಾಡಿದರು. ನಂತರ `ನಾನು ಕಲಿತ ವಿದ್ಯೆಯನ್ನೆಲ್ಲ ನಿನಗೆ ಧಾರೆ ಎರೆದಿದ್ದೇನೆ. ನಿನಗೆ ರಾಜನಾಗುವ ಲಕ್ಷಣಗಳಿವೆ. ನಿನಗೊಂದು ಬೆಳ್ಳಿ ಕಡಗ ಕೊಡುವೆ. ಇದು ಸಾಮಾನ್ಯವಾದುದಲ್ಲ. ನೀನು ಕೇಳಿದ್ದನ್ನೆಲ್ಲ ಕೊಡುತ್ತದೆ. ಆದರೆ, ಒಳ್ಳೆಯ ಕಾರ್ಯಗಳಿಗೆ ಮಾತ್ರ ಉಪಯೋಗಿಸು' ಎಂದು ಹೇಳಿ ಬೆಳ್ಳಿ ಕಡಗವನ್ನು ಧನವಂತನಿಗೆ ಕೊಟ್ಟರು.
ರಾತ್ರಿ ಮಲಗಿದ್ದ ಸಮಯದಲ್ಲಿ ಧನವಂತನ ಮನದಲ್ಲಿ ಕೆಟ್ಟ ಯೋಚನೆಗಳು ಸುಳಿದಾಡಿದವು. ತುಸು ಸಮಯದ ನಂತರ ಆತ ಎದ್ದು ಕುಳಿತು, ಬೆಳ್ಳಿ ಕಡಗವನ್ನು ಕೈಗೆ ಹಾಕಿಕೊಂಡು ನನಗೊಂದು ಅರಮನೆ ಬೇಕೆಂದ. ಕೂಡಲೇ ಅಲ್ಲೊಂದು ಅರಮನೆ ಸೃಷ್ಟಿಯಾಯಿತು. ತನಗೊಬ್ಬ ರಾಜಕುಮಾರಿ ಬೇಕೆಂದ. ಮರುಕ್ಷಣವೇ ಅಲ್ಲಿಗೆ ಒಬ್ಬ ಸುಂದರ ಯುವತಿ ಬಂದಳು. ಹೀಗೆ ಅರಮನೆಯ ರಾಜನಿಗೆ ಬೇಕಾದ ಬೆಳ್ಳಿ, ಬಂಗಾರ, ವಜ್ರ, ವೈಢೂರ್‍ಯ, ಸೈನಿಕರು, ಸೇವಕರು ಎಲ್ಲವೂ ಬಂದವು. ಇದನ್ನೆಲ್ಲ ಗಮನಿಸಿದ ಋಷಿಗಳು `ಧನವಂತ, ಏನಿದು ವಿಚಿತ್ರ' ಎಂದು ಕೋಪಗೊಂಡರು. ಆದರೆ, ಧನವಂತ ಅದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಆತ ಅಹಂಕಾರದಿಂದ `ಏ! ಯಾರು ನೀನು? ನಡೆ ಇಲ್ಲಿಂದ' ಎಂದು ಗದರಿಸಿದ.
`ಥೂ, ಪಾಪಿ, ನೀನು ಸರ್ವನಾಶವಾಗುತ್ತಿ ಹೋಗು' ಎಂದು ಹೇಳಿ ಋಷಿಗಳು ಅಲ್ಲಿಂದ ಹೊರಟರು.
ಇತ್ತ ಧನವಂತ ತನ್ನ ರಾಜ್ಯದಲ್ಲಿ ದರ್ಪ, ಸೊಕ್ಕಿನಿಮದ ಮೆರೆಯುತ್ತ ಪ್ರಜೆಗಳಿಗೆ ಕಿರುಕುಳ ಕೊಡಲು ಆರಂಭಿಸಿದ. ಅನ್ಯಾಯವಾಗಿ ಭೂಕಂದಾಯ ವಸೂಲಿ ಮಾಡುವುದು, ಭೂಮಿ ಕಬಳಿಸುವುದು, ಪಕ್ಕದ ರಾಜರನ್ನು ಯುದ್ಧಕ್ಕೆ ಆಹ್ವಾನಿಸಿ ತನ್ನ ಬೆಳ್ಳಿ ಕಡಗದ ಸಹಾಯದಿಂದ ಅವರನ್ನು ಸೋಲಿಸಿ, ಅವರ ಸಮಸ್ತ ರಾಜ್ಯವನ್ನೂ ತೆಗೆದುಕೊಂಡು ಆ ರಾಜರನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವುದೇ ಅವನ ಬದುಕಾಯಿತು.
ಇದನ್ನೆಲ್ಲ ಅರಿತ ಋಷಿಗಳು ಧನವಂತನಿಗೆ ಕೊಟ್ಟ ಬೆಳ್ಳಿ ಕಡಗವನ್ನು ದಿವ್ಯ ಶಕ್ತಿಯಿಂದ ತಮ್ಮ ಬಳಿ ಬರುವಂತೆ ಮಾಡಿದರು. ಕೂಡಲೇ ಬೆಳ್ಳಿ ಕಡಗ ಋಷಿಗಳ ಹತ್ತಿರ ಬಂತು. ಅಂದಿನಿಂದ ಧನವಂತ ಹಂತ ಹಂತವಾಗಿ ಎಲ್ಲವನ್ನೂ ಕಳೆದುಕೊಂಡ. ತನ್ನ ತಪ್ಪಿನ ಅರಿವಾಗಿ ಪುನಃ ಋಷಿಗಳ ಹತ್ತಿರ ಬಂದು ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡ. ಅವನ ಕೋರಿಕೆ ತಿರಸ್ಕರಿಸಿದ ಋಷಿಗಳು `ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡಿದ್ದೇ ತಪ್ಪು, ನಡೆ ಆಚೆ' ಎಂದರು. ಧನವಂತನ ಹೆಂಡತಿ ಅಳುತ್ತ `ಸ್ವಾಮೀಜಿ, ನನ್ನ ಗಂಡನದು ತಪ್ಪಾಗಿದೆ. ಮನ್ನಿಸಿ. ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಕೊಡಿ' ಎಂದು ಬೇಡಿಕೊಂಡಳು. ಋಷಿಗಳು ಕಡೆಗೊಮ್ಮೆ ಆ ಮಾತಿಗೆ ಒಪ್ಪಿದರು. ಮುಂದೆ ಧನವಂತ ಸನ್ಮಾರ್ಗದಲ್ಲಿ ನಡೆದು ತನ್ನ ತಪ್ಪನ್ನು ತಿದ್ದಿಕೊಂಡ. ಆಶ್ರಮದಲ್ಲೇ ಇದ್ದು ಋಷಿಗಳ ಸೇವೆ ಮಾಡುತ್ತ ಕಾಲ ಕಳೆದ.
ಕೀಲಿಕರಣ: ಕಿಶೋರ್ ಚಂದ್ರ
ಪ್ರಾಯ ಹೋಗುತ ಬಂತು
ಪ್ರಾಯ ಹೋಗುತ ಬಂತು ದೇಹ ಒಣಗಿ ನಿಂತು
ಜೀವದ ಬಡಿವಾರವೇನೆಂಬೆ ||ಪ||
ಕೋವಿಧನಾದರೆ ಸಾವಿಗಂಜದೆ ಆ
ಮಹಾದೇವರ ನುತಿಸಲೆಂಬೆ || ೧ ||
ಆಸ್ತಿ ಚರ್ಮದ ಘಟವಿಸ್ತರಣದಲಿ ಕೂಟ
ಮಸ್ತಕ ಮನ ಬುದ್ಧಿಯೆಂತೆಂಬೆ || ೨ ||
ಮಸ್ತಿ ಮಸ್ತಕರ ಕಾಮ ರಸ್ತೆಯೊಳಿರುವಂತೆ
ಆಸ್ಥಿರ ಮಾತಿದು ಮೊದಲು ಕಾಂಬೆ || ೩ ||
ಶಿಶುನಾಳೇಶನ ಎಸವ ಪಾದಕ ನೀನು
ಮುಸುಗು ತೆಗದು ಪೂಜಿಪೊಡಲೇನೆಂಬೆ || ೪ ||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್
ಮುತ್ತಿನಂಥಾ ಮಾತಿದು ಕೇಳೇ ಗೆಳತಿ
ಮುತ್ತಿನಂಥಾ ಮಾತಿದು ಕೇಳೇ ಗೆಳತಿ
ನಿಮ್ಮತ್ತಿಮಾವಗಳಿಗುತ್ತರ ಏನ ಹೇಳತಿ ||ಪ||
ಗೊತ್ತುಗೇಡಿ ಮಗಳೆ ವ್ಯರ್ಥ
ಹೊತ್ತುಗಳಿಯುತ್ತೀ
ಆತ್ತ ಇತ್ತ ತಿರುಗಿ ಭವದೊಳ್ ಬೀಳತೀ
ಛೀ ಛೀ ಕೆಡತೀ ||೧||
ನಾದುನಿ ಮೈದುನ ಭಾವಗೇನ ಹೇಳತೀ
ಒಬ್ಬ ಮಾದರವನ ಸ್ನೇಹಮಾಡಿ ಮತಿಗೆಡತೀ
ಬಿಡು ಬಿಡು ತರವಲ್ಲಾ ಈ ನಡತೀ
ಸುಳ್ಳೇ ಬಾಯ್ಬಿಡತೀ ||೨||
ಮುಟ್ಟದಿರು ಎನ್ನ ಎಂದು ದೂರ ಹೋಗತೀ
ನಿಲ್ಲೋ ಖೊಟ್ಟಿಗಂಡಾ ಎಂದು ಬಾಯಿಲೆ ಆಡತೀ
ಬಿಟ್ಟು ಬಿಟ್ಟು ಊರ ಕಡೆ ಓಡಿ ಹೋಗತೀ
ಜಾರತನ ತೋರತೀ ||೩||
ಶಿಶುನಾಳಧೀಶನ ಕಸಾ ಬಳಿದು
ಹಸನಾಗಿ ನೀ ಕಾಲಕಳಿದು
ಆಲ್ಲೇ ಹುಸಿ ಮಾತನಾಡದೆ ಇರು ತಿಳಿದು
ಒಳ್ಳೇ ಮಾತಿದು ||೪||
****
-ಶಿಶುನಾಳ ಶರೀಫ್
ಕೀಲಿಕರಣ: ಎಂ.ಎನ್.ಎಸ್. ರಾವ್