ಧರೆ ಹೊತ್ತಿ ಉರಿದೊಡೆ


- ಬಸವರಾಜ್ ಡಬ್ಲ್ಯು

ಲೇ... ಬರ್‍ರೋ.. ಏನ್ ನೋಡಾಕ್ಹತ್ತೀರಿ... ಅಲ್ನೋಡು ಮಲ್ಲಣ್ಣ ತಾತ ಐದಾನ... ಲೇ ಎಲೈದನಪಾ... ಆಯಾ... ಆಗ!... ಅಲ್ಲಿ ಮಾರಕ್ಕನ ಹೋಟ್ಲಾಗ ಚಾ ಕುಡ್ಕಂತ ಕುಂತಾನ ಜಲ್ದಿ ಬರ್‍ರೋ... ಜಂಬ, ನಾಗ, ಕೆಂಚ ಎಂದು ಕೂಗುತ್ತ ಹೋಟೆಲ್ ಒಳಗೆ ಹೋದ ಚನ್ನಪ್ಪ.

ತಾತ... ತಾತ... 'ಯಾಕಲೇ ಚನ್ನ ಅದ್ಯಾಕ್ಹಂಗ ಓಡ್ಕಂತ ಬಂದಿ'.  ಇಲ್ಲಪೋ ಮತ್ತೆ ನೀಯಲ್ಲಿ ಓಗಿಬುಡ್ತಿಯಂತ ಬಂದೆ.  ಟೇಬಲ್ ಮೇಲಿದ್ದ ನೀರನ್ನು ಕುಡಿದು ಸ್ವಲ್ಪ ದಣಿವಾರಿಸಿಕೊಂಡ.  ಏನು ತಾತ ಬೇಸೈದಿಯಾ...  ಭಾಳ ದಿವ್ಸ ಆತ್ನೋಡು ನಿನ್ನ ನೋಡ್ಲಾರ್‍ದ.  ಹೌದು ನೋಡಾ... ನೀನೇ ಬರಂಗಿಲ್ಲ ಈಕಡಿ.  ಏನ್ಮಾಡದು ತಾತ ಹೊಲ, ಮನೆ ಅನ್ಕಂಡು ಹೊರಕ ಬರಕ ಆಗಂಗಿಲ್ಲ ನೋಡು.  ಅಲ್ಲೇ ನಿಂತಿದ್ದ ಗೆಳೆಯರನ್ನು ನೋಡಿ,  ಏ... ಬರ್‍ರ್‍ಯಾ, ಅಂಗ್ಯಾಕ ನಿಂತೀರಿ.  `ಅವ್ರು ನಾನು ಬೈದು ಬುಡ್ತೀನಂತ ಎದ್ರಿಕಂಡು ನಿಂತಾರ ಕಳ್ ಸೂಳೇ ಮಕ್ಳು... ಎಂಗೈದಾರ್‍ ನೋಡು ಒಬ್ಬೊಬ್ರನ ಕಡದ್ರೆ ನಾಕ್ ತುಂಡಾಕ್ತಾರ.  ದುಡಿಯಂಗಿಲ್ಲ ದುಃಖ್ ಪಡಂಗಿಲ್ಲ.  ಅಪ್ಪಾ ಮಾಡಿದ್ದ ಆಸ್ತಿ ಕರಗ್ಸೋದ್ಹೆಂಗಂತ ನೋಡ್ತಾರ... ಅದ್ರಾಗ ಲಗ್ಣ ಬ್ಯಾರೆ ಕೇಡು ಈ ನನ್ ಮಕ್ಳಿಗೆ... ಎನ್ ಸುಮ್ನೆ ನೋಡ್ತಿರಿ ಬರ್‍ರಿ' ಎಂದ ಮಲ್ಲಣ್ಣ ತಾತ.  ಅಂಜುತ್ತ ಕಳ್ಳರಂತೆ ಬಂದು ಕುಳಿತರು ಜಂಬ, ನಾಗ, ಕೆಂಚ.

ಮಾರಕ್ಕ... ರವಟು ಚಾ ಕೊಡಂಗೆ ಈ ಉಡ್ರಿಗೆ.  ಅಲ್ಲಪೋ ತಾತ ಇದೇನು ಅಂತೀನಿ.  ಏ... ಕುಡಿರಾ ಇರ್‍ಲಿ.  ಮತ್ತೆ ನಾ ನಿಮಿಗ್ಯಾವಾಗ ಸಿಗಬೇಕು ಕುಡ್ರಿ ಕುಡಿರಿ.  `ಅದ್ರ ಜತಿಗೆ ಒಂದೊಂದು ಮಿರ್ಚಿ ಕೊಟ್ಬುಡು ಮಾರಕ್ಕ' ಎಂದ ಚನ್ನ.

ಲೇ ಚನ್ನ ಮಿಚಿð ಅಂದ್ರೆ ನಿಮ್ಮಪ್ಪ ನೆಪ್ಪಾಗ್ತಾನ ನೋಡು.  ಅವಾಗ ಮಧ್ಯಾದ್ಹೊತ್ತು ಉಂಡು ಬಂದು ವಗ್ಗಣ್ಣಿ ಮೆಣಸಿಕಾಯಿ ತಿಮ್ತಿತಿದ್ವಿ.  ಆಗಿನ ಕಾಲ ಬೇಸಿತ್ನೋಡು.  ಈಗ್ನೋಡು... ಅನೌನ ರೇಟೆಲ್ಲ ಮ್ಯಾಕೇರ್‍ಯಾವು.  ಸುಡುಗಾಡ್ ಸೂಳೇಮಗನ ಗೌರ್‍ಮೆಂಟ್.  ಏನಾನ ಗಬಕಂಥ ತಿಂಬಂಗಿಲ್ಲ ಉಂಬಂಗಿಲ್ಲ ಎಂದು ಮೀಸೆ ಮೇಲೆ ಕೈಯಾಡಿಸುತ್ತಾ ಕುಳಿತ.

ಊರಿನಲ್ಲಿ ಮಲ್ಲಣ್ಣ ತಾತ ಅಂದ್ರೆ ಎಲ್ಲರಿಗೂ ಇಷ್ಟ.  ಈತನ ಸಾಮಾಜಿಕ ಕಳಕಳಿ ಎಂಥವರಿಗೂ ಬೆಚ್ಚು ಬೀಳಿಸುತ್ತಿತ್ತು.  ಈತ ನಮ್ಮೂರಿನ ನ್ಯೂಸ್ ಪೇಪರ್‍ ಎಂದೇ ಕಂಪ್ಲಿ ಜನ ಕರೆಯುತ್ತಿದ್ದರು.  ಪ್ರಾಮಾಣಿಕ ವ್ಯಕ್ತಿಯಾಗಿದ್ದ ಈತ ಊರಿನ ನ್ಯಾಯ ಬಗೆಹರಿಸುತ್ತಿದ್ದ.  ಈತನ ಮಾತು ಯಾರೂ ತೆಗೆದು ಹಾಕುತ್ತಿರಲಿಲ್ಲ.  ಊರಿನ ಉಸಾಬರಿ ನಿನಗ್ಯಾಕಂತ ಮಕ್ಕಳು ಬೈಯುತ್ತಿರಲಿಲ್ಲ.

ತಾತ... ತಾತ... ಏನಲೇ ಚನ್ನ... ಆಗ ಮತೆ... ಏನನ ಹೊಸ ಸುದ್ದಿ ಇದ್ರೆ ಹೇಳಪೋ ರವಟು ಕೇಳ್ತೀವಿ.  ಅಂಗಾ...  ಹೇಳ್ತಿನಿ ಕೇಳು... ಮನ್ನೆ ಎಪಿಎಂಸಿ ಎಲೆಕ್ಸನ್ ಆತಲ್ಲ ಅವಗೊಂದು ಮಜಾ ಆತ್ನೋಡು.  ಊಂ... ಆ ಭೀಮ ಐದಾನಲಾ... ಯಾರ್‍ ತಾತ... ಅದೇಲೇ ನಮ್ ಮೂಲಿಮನಿ ಭೀಮ ಊಂ... ಊಂ... ಹೌದೌದು... ಎಂದು ತಲೆ ಅಲ್ಲಡಿಸಿದ ಚನ್ನ.

ಅವ್ನು ಎಂಥ ದಡ್‌ಸೂಳೇಮಗ ಅಂದ್ರೆ ಎಲೆಕ್ಸನ್ನಾಗ ನಿತ್ಗಂಡಿದ್ದ.  ಎಲ್ಲಿ ಸೋಲ್ತೀನಂತ ತಿಳ್ಕಂಡು ತನ್ ಓಟು ಆ ಪರಮೇಸಿಗೆ ಹಾಕ್ಬಿಟ್ಟ ಇಂಥನ್ರ ಕಟ್ಗಂಡು ನಾವು ಊರಕ ಐದೀವಿ ನೋಡು ಎಂದಾಗ ಹೋಟೆಲ್ನಲ್ಲಿರುವವರೆಲ್ಲ ನಗತೊಡಗಿದರು.

ಆ ಪರಮೇಸಿ ರೊಕ್ಕ ಇದ್ದಾತ.  ಮೆಂಬರ್‍ಸಿಗೆಲ್ಲ ರೊಕ್ಕ ಕೊಟ್ಟು ತಾನು ಅಧ್ಯಕ್ಷ ಆದ.  ಈ ಭಂಡ ಭೀಮ ಎಲೆಕ್ಸನ್ ಎದುಸ್ರಾಕ ಆಗ್ಲಾರ್‍ದೆ ಈ ಪರಿಸ್ಥಿತಿ ತದ್ಕಂಡಾನ ನೋಡು.  ಆಮ್ಯಾಕ ಇನ್ನೊಂದು ಸುದ್ದಿ ಕೇಳು.  ಎಂದು ಕುಂಡಿ ತುರಿಸಿಕೊಳ್ಳೂತ್ತ ಮಾತು ಶುರುಮಾಡಿದ.

ನಿನ್ನೆ ಆ ಮೇಸ್ಟ್ರು ಮಲ್ಲೇಸಿ ಸತ್ತ.  ಎಂಗ ಸತ್ತಂತ ಕೇಳು ಸ್ವಲುಪು.  ಅವ್ನು ಮೊದ್ದಲೆ ಕುಡ್ಕ.  ಬರೇ ಓಸಿ, ಇಸ್ಪೇಟು, ಸೋಳೇರಂತ ಬಂದ ಸಂಬ್ಳ ಎಲ್ಲಾ ಖರ್ಚು ಮಾಡ್ತಿದ್ದ.  ಮೈಯಾಗ ಆರಾಮಿಲ್ದಂಗಾತು ಬಳ್ಳಾರಿ ಓಪಿಡಿ ಆಸ್ಪತ್ರಿಗ್ಹೋಗಿ ತೋರಿಸ್ಕಂಡು ಬಂದ.  ಆದ್ರೆ... ಅಲ್ಲಿ ಡಾಕ್ಟ್ರು ಅವನಿಗೆ ಕ್ಯಾನ್ಸರ್‍ ಐತಂತ ಹೇಳ್ಬಿಟ್ರು.  ಎದಿನೇ ಹೊಡ್ಕಂಡ್ಹಂಗ ಮಾಡ್ದ.  ಮನ್ಯಾಗ ಏನೂ ಹೇಳ್ದೆ ನನ್ಮುಂದ ಬಂದು ಹೇಳ್ದ.  ನಾವು ಸೀದಾ ಹುಬ್ಬಳ್ಳಿ ಕ್ಯಾನ್ಸರ್‍ ಆಸ್ಪತ್ರಿಗ್ಹೋಗಿ ಸ್ವಲುಪು ದಿನ ಇದ್ವಿ.  ಅಲ್ಲಿ ಡಾಕ್ಟ್ರು ಹೇಳಿದ್ರು `ಇದು ಆಗ್ಲೆ ಬಡ್ಡಿಗೆ ಬಂದೈತಿ ನೀವು ಮನಿಗೆ ಕರ್‍ಕಂಡ್ಹೋಗ್ರಿ.  ಇರಷ್ಟದಿನ ಇರಲ್ಲಿ' ಅಂದ್ರು.  ಅಲ್ಲಿಂದ ಸೀದಾ ಊರಿಗೆ ಬಂದ್ವಿ ಎನ್ನುತ್ತ ಕಿವಿಯೊಳಗೆ ಕಡ್ಡಿ ಹಾಕಿ ಕೂಕಣಿ ತೆಗೆದುಕೊಂಡು ಮತ್ತೆ ಮಾತಿಗಿಳಿದ.

ಮನ್ನೆ ಅವ್ನ ಮನಿ ಹತ್ರ ಹೋಗಿದ್ದೆ ಪಾಪ... ಮಾತಾಡಕ ಬರ್‍ಲಾರ್‍ದಂಗಾಗಿತ್ತು.  ನನ್ನ ನೋಡಿದ್ಕೂಡ್ಲೆ ಅಳಾಕ ಸುರುಮಾಡ್ದ.  ಕೈ ಹಿಡ್ದು ನೋಡ್ದೆ ಆಗ್ಲೆ ತಣ್ಣಗ ಆಗಕ್ಹತ್ತಿದ್ವು...  ಅವ್ನ ಹೆಣ್ತಿಗ್ಹೇಳಿ ಗಂಗೆ ಕೊಡಂಗೆ ಸ್ವಲುಪು... ಅಂದ್ಕೂಡ್ಲೆ ಪಾಪ ಆ ಹುಡ್ಗಿ ಅತ್ಗಂತ ನೀರು ಕೊಟ್ಲು.  ಅಷ್ಟ್ ಜಲ್ದಿ ಸಾಯ್ಲಿಲ್ಲ.  ಅಲ್ಲೇ ಇದ್ದ ಬಗಲ್ಮನಿ ಸಾಂಬಯ್ಯ ಓಡ್ಹೋಗಿ ಸಾರಾಯಿ ಪಾಕೀಟು ತಂದು ಅವ್ನ ಬಾಯಾಗ ಸುರ್‍ದ.  ಸ್ವಲುಪಹೊತ್ತಿಗೆ ಸತ್ತ ನೋಡು ಎನ್ನುತ್ತ ಕುಂಡಿ ಮೇಲೆತ್ತಿ ಢಂ!  ಅಂತ ಹೂಸು ಬಿಟ್ಟ.  ಅಲ್ಲಿರುವವರೆಲ್ಲ ಗಹಗಹಿಸಿ ನಗ ತೊಡಗಿದರು.

ತಾತ ನೀನು ಏನೇ ಅನ್ನು ಬಲೇಟ ಮುದೇತ ನೋಡು... ಯಾಕಲೇ ಚನ್ನ ಅಂಗಮ್ತಿ.  ನಾನು ಹೇಳಿದ್ದು ಎಂಗ್‌ಕಾಮ್ತೈತಿ... ಅಂಗಲ್ಲಪೋ ತಾತ ನಾನು ಅಂಗೆ ಸುಮ್ಕೆ ಕೋಡ ಮಾಡ್ದೆ.  ಅಂದ್ಹಂಗೆ ಈ ವರ್ಸ ಎಂಗೈತಲೇ ನೆಲ್ಲಿನ(ಭತ್ತ) ರೇಟು.  ಏ... ಅಂಥ ರೇಟೇನಿಲ್ಲಪೋ... ಮಮೂಲೈತೆ.  ಎಂಗಾನ ಆಗ್ಲಿ ನೀನೊಬ್ಬತನ ಬುದ್ಧಿವಂತ ಅದೆಲ್ಲ ಸರಿ ಬಿಡು.  ಎಲ್ಲ ನಿನ್ನ ಆಸೀರ್ವಾದಪೋ ತಾತ.  ಲೇ... ನಂದೇನೈತೋ ಎಲ್ಲ ಆ ಸಿವ್ನಾಟ.

ಮಲ್ಲಣ್ಣ ತಾತ ಬೀಡಿ ಸೇದುತ್ತ ಕುಳಿತಿದ್ದ.  ಹೋಟೆಲಿನ ಮುಂದುಗಡೆಯಿಂದ ಹೆಂಗಸು ಹಾದು ಹೋಗುವುದನ್ನು ನೋಡಿದ.  ಕಣ್ಣುಸ್ವಲ್ಪ ಮಂಜಾಗಿದ್ದರೂ ನಿಖರವಾಗಿ ಇಂಥವರೇ ಎಂದು ಗುರುತಿಸುತ್ತಿದ್ದ.  `ಏನಂಗೆ ದ್ಯಾಮವ್ವ... ಅಂಗೇ ವಂಟೆಲಾ...' ಹಿಂತಿರುಗಿ ನೋಡಿದ ದ್ಯಾಮವ್ವ.  ಇಲ್ಲಪೋ ತಾತ... ನಾ ನೋಡ್ಲಿಲ್ಲ ಎಂಗೈದಿಯಪ.  ಆರಮೈದಿಗಿಲ್ಲ...  ಏನ್ ಆರಾಮಂಗೆ `ನಾಡು ಓಗಂತೈತೆ... ಸುಡುಗಾಡು ಬಾ ಅಂತೈತಿ... ನನ್ನ ಕುಣಿ ನೀನೇ ತೋಡ್ಬುಡಂಗೆ'  ಏ... ಅಂಗ್ಯಕಮ್ತಿ ತಾತ.  ನೀ ಇನ್ನೂ ಬಾಳಿ ಬದುಕ್ಬೇಕು.  ನಾಕು ಜನ್ರಿಗೆ ಉಪಕಾರ ಮಾಡಾತ ನೀನು.  ಅದಿರ್‍ಲಿ ನೀನ್ ಎಂಗೈದಿಯಂಗೆ.  ಆಯಾ... ನಂದೇನಪೋ ಅದೇ ಸುಡಗಾಡ ಬದ್ಕು.  ಅಂದ್ಹಂಗ ನಿನ್ ಮಕ್ಳು ಏನಾರ... ಥೂ ಅವ್ರೆಸ್ರು ಎತ್ಬಾಡ.  ಅವು ಇದ್ರೂ ಒಂದೇ... ಸತ್ರೂ ಒಂದೇ.  ಅಂಗ್ಯಾಕಮ್ತ್ಯವಾ.   ಮತ್ತಿನ್ನೇನು ತಾತ... ಅಲಾ ಅವ್ವ ಅಂಥ ನಾನೊಬ್ಬಕೈದೀನಿ ಅಂಬ ಗ್ಯಾನ ಬ್ಯಾಡ ಆ ಕೋಡಿಗಳಿಗೆ.  ಹೆಂಡ್ರು ಬಂದ್ಮೇಲೆ ಯಾ ಅಪ್ಪ... ಯಾ ಅವ್ವ... ನೀನ್ಹೇಳದು ಖರೆವೈತೆ ಬುಡು.  ಅಗಾ... ಎಲ್ಲಿಗ್ಹೊಂಟೆವಾ.  ಇಲ್ಲೇ ಕಿರಾಣಿ ಸಾಮಾನು ತಗಂಬರಾಕ ವಂಟೀನಿ.  ಇಲ್ನೋಡು... ಆ ಕಾಕನ ಅಂಗಡ್ಯಾಗ ತಗಂಬಾ ಮಾಲು ಬೇಸಿರ್‍ತೈತೆ.  ಅಂಗೇ ರೇಟು ಕಮ್ಮಿ ಕೊಡ್ತಾನಾ.  ಆಗ್ಲಿ ತಾತ ಎಂದು ಹೊರಟಳು.

ಲೇ... ನಾಗ, ಜಂಬ, ಕೆಂಚ ನೋಡ್ರಲೋ ಆ ಯಮ್ಮ ಎಂಗ ಕಷ್ಟಪಟ್ಟು ದುಡಿತಾಳ.  ನೀವೂ ಐದೀರಿ... ದರಿದ್ರಗತಿ ತಿಂದು ತಿರ್‍ಗದು ಆತ್ನೋಡು, ಅದು ಸಾಲ್ದಂತ ನಿಮ್ಗೆ ಹೆಂಡ್ರು ಮಕ್ಳು ಬ್ಯಾರೆ ಕೇಡು ಎಂದು ಎಗ್ಗಿಲ್ಲದೆ ಬೈದ ತಾತ.

ತಾತ... ಆಯಮ್ಮ ಸುಡುಗಾಡ್ನಗ ಕುಣಿ ತೋಡ್ತಾಳಲ ದ್ಯಾಮವ್ವ ಅಲಾ.  ಹೌದಪಾ... ಅದೊಂದು ದೊಡ್ಡ ಕತಿ ಐತಿ ಕೇಳು.  ಇಪ್ಪತ್ತೈದೊಸ್ರದ ಹಿಂದೆ ಎಮ್ಮಿಗ್ನೂರಾಗ ಇದ್ಲು.  ಅಲ್ಲಿ ಭಾಳ ಕಷ್ಟ ಅನುಭವಿಸಿದ್ಲು.  ದ್ಯಾಮವ್ವನ ಅಪ್ಪ ಇಲ್ಲೇ ಕಂಪ್ಲಿಗೆ ಗಂಡನ್ನ ಕರ್‍ಕಂಡ್ ಬಂದ್ಬುಡು.  ಇಲ್ಲಿ ಕೂಲಿ ಕೆಲ್ಸ ಸಿಗ್ತಾವು ಅಂತ್ಹೇಳಿ ಕರ್‍ಕಂಡು ಬಂದ.  ಊರೆಲ್ಲ ಸುತ್ತಾಡಿದ್ರೂ ಕೆಲ್ಸ ಸಿಗ್ಲಿಲ್ಲ.  ಕೊನಿಗೆ ನನ್ಕಡೆ ಬಂದು ಕೇಳ್ಕಂಡ್ರು.  ಹೊಸ್ದಾಗಿ ಊರಿಗೆ ಬಂದರ್‍ನ ನಮ್ಮೂರಗಿನ ಜನ ನಂಬಂಗಿಲ್ಲ ಅದ್ಕೆ ನಿಂಗ ಕೆಲ್ಸ ಸಿಕ್ಕಿಲ್ಲ.  ನಾನು ಕೊಡುಸ್ತಿನಿ ನಡಿ ಅಂತ್ಹೇಳಿ ವೀರಣ್ಣ ಗೌಡ್ರ ಮನ್ಯಾಗ ಕೆಲ್ಸಕ್ಕೆ ಸೇರ್‍ಸಿದೆ ದ್ಯಾಮವ್ವನ ಗಂಡ ಲಚಮ್ಯಾನ.

ಊರೆಂಬ ಊರು ಬರೀ ಜಗ, ದ್ವೇಷ, ಅಸೂಯೆಯಿಂದ ಕೂಡಿದ್ದು, ಅಲ್ಲಿ ಜಾತಿ ಲೆಕ್ಕಾಚಾರವೇ ಹೆಚ್ಚಾಗಿತ್ತು.  ಅದ್ರಲ್ಲೂ ಕೆಲವರು ಬುದ್ಧಿವಂತರೂ ಐದಾರಂತ ಒಮ್ಮೆ ಮಲ್ಲಣ್ಣ ತಾತನ ಹತ್ತಿರ ಹೊಸದಾಗಿ ಬಂದ ಇನ್ಸ್‌ಪೆಕ್ಟರ್‍ ಮಾತಾಡಿದ್ರು.  ಇದ್ನೆಲ್ಲ ನೆನೆಸಿಕೊಳ್ಳತ್ತ ಹೇಳತೊಡಗಿದ ತಾತ.  `ತಾತ ಆಯಮ್ಮನ ಕತೆ ಹೇಳದ್ಬಿಟ್ಟು ಏನನ ನೆಪ್ಪಮಾಡ್ಕೆಂತಿಯಲಾ.'  `ರವಟು ತಡ್ಕಳಲೇ... ವೀರಣ್ಣ ಗೌಡ್ರ ಕಣ್ಣು ದ್ಯಾಮವ್ವನ ಮ್ಯಾಲೆ ಬಿತ್ತು.  ಆಕಿನ ಕೆಡ್ಸಾಕ ಪ್ರಯತ್ನಮಾಡಿದ್ದ.  ಅಷ್ಟ್ರಾಗ ಲಚಮ್ಯಾ ಬಂದು ಬುಡುಸ್ಕಂಡು ಗೌಡ್ರಿಗೆ ನವ್ವರ್‍ಹೆಂಗ ಒದ್ದು ಕೆಲ್ಸ ಬುಟ್ಟು ಬಂದ.'

ಒಂದ್ಸಾತಿ ಊರಾಕ ಹೊಸ ರುದ್ರಭೂಮಿ ಬೇಕಂಥ ಹೇಳಿ ಕೆರಿ ಬಗಲಾಗಿನ ಸೋಮಪ್ಪನ ಗುಡ್ಯಾಗ  ಮೀಟಿಂಗ್ ಸೇರಿದ್ವಿ.  ಅವಾಗ ಹೊಸ್ದಾಗಿ ಬಂದ ಇನ್ಸ್‌ಪೆಕ್ಟ್ರು, ಮಠದ ಸ್ವಾಮೇರು, ಊರಿನ ಗೌಡ್ರು, ನಾನು ಮತ್ತೆ ದೈವ ಎಲ್ಲರೂ ಬಂದಿದ್ರು.  ಕೆರೆ ಬಗಲಾಗಿನ ಎರ್‍ಡು ಎಕ್ರಿ ಗದ್ದಿನ ನಾನೇ ದಾನವಾಗಿ ಕೊಟ್ಟೆ ಅಪ್ಷ್ರಾಗ ದ್ಯಾಮವ್ವ ಲಚಮ್ಯಾ ಮತ್ತೆ ಚಲುವಾದಿ ತಾಯಪ್ಪ ಬಂದ್ರು.  ಅಲ್ಲಿದ್ದ ದೈವ `ಏ... ನೀವ್ಯಾಕ ಬಂದ್ರಿ' ಎಂದು ಗದ್ರಿಸಿದ್ರು.  ಅದಕ್ಕೆ `ಏ... ರವಟು ತಡ್ಕಳ್ರಿ ನಾನೇ ಇಲ್ಲಿಗೆ ಬಾ ಅಂತ ಹೇಳಿದ್ದೆ'.  ಅಂದ್ಕೊಡ್ಲೆ ಎಲ್ಲಾ ಸುಮ್ಯಾದ್ರು.  ಅವ್ರು ಒಂದು ಮೂಲ್ಯಾಗ ಕುತ್ಕಣಕ ಹೋದ್ರು.  ಅವಾಗ ನಾನು ತಡುದು `ಏ... ಅಲ್ಯಾಕ ಕುತ್ಕಂತೀರಿ ಇಲ್ಲಿ ಬರ್‍ರಿ, ಮುಂದೆ' ಎಂದಾಗ ಎಲ್ಲಾ ನನ್ ಮಕ ಮಕ ನೋಡಿದ್ರು.  `ಏನ್ಹಂಗ ನೋಡ್ತೀರಿ ಸುಮ್ನಿರಿ.  ಅವ್ರು ನಮ್ಮಂಗ ಮನಸ್ಯಾರ...' ಅಂದ್ಕೂಡ್ಲೆ ಮನಸ್ನ್ಯಾಗ ಬೈಕಮತ ಸುಮ್ನಾದ್ರು.

ಹೊಸ ರುದ್ರ ಭೂಮ್ಯಾಗ ಈಶ್ವರ ಗುಡಿ ಕಟ್ಟಬೇಕಂಥ ತೀರ್‍ಮಾನ ಮಾಡಿದ್ರು ದೈವದವ್ರು.  ಈಶ್ವರ ಗುಡ್ಯಾಗ ಪೂಜಿ ಮಾಡಾಕ ಯಾರಂತ ಮಠದ ಸ್ವಾಮೇರು ಪ್ರಶ್ನೆ ಎತಿದ್ರು.  ಆಗ ಎಲ್ಲರೂ ಸುಮ್ನಾದ್ರು.  ಯಾರಾದ್ರು ಮಾಡ್ತೀರಂತ ಮತ್ತೆ ಕೇಳಿದ್ರು.  ಎಲ್ಲರೂ ಗುಸು ಗುಸಂತ ಮಾತಾಡಾಕ ಸುರುಮಾಡಿದ್ರು.  ನಾನೊಲ್ಲೆ... ನೀನೊಲ್ಲೆ... ಅನ್ನಕ್ಹತಿದ್ರು.  ಅಂಗಾರೆ ಎಂಗಪಾ ಅನ್ಕಂತ ನಾನೇ ಎದ್ದು ಕೇಳ್ದೆ.  ನಂದೊಂದು ಮನ್ವಿ ಐತೆ... ದೈವ ಕೇಳ್ಬೇಕು ಅಂದೆ.

ಇಲ್ಲಿರೋ ದೈವ ಯಾರೂ ಪೂಜಿ ಮಾಡಾಕ ಒಪ್ಪಿಗಿಲ್ಲ ಅಂದಾಗ್ಹಾತು.  ನಾನಗ ತಿಳಿದ್ಹಂಗ ಲಚಮ್ಯಾನ ಹೆಂಡ್ತಿ ದ್ಯಾಮವ್ವ ಪೂಜಿ ಮಾಡ್ತಾಳ ಅಂದ್ಕೂಡ್ಲೆ ಜನ್ರೆಲ್ಲಾ ಗಲಾಟೆ ಮಾಡಾಕ ಶುರುಮಾಡಿದ್ರು.  ದೈವದಾಗ ಒಬ್ಬ ಮುಖಂಡ ಶಿವಲಿಂಗಯ್ಯ ಎದ್ದು ನಿಂತು `ಮಲ್ಲಣ್ಣ ತಾತ ನೀನು ಹೇಳೋದು ನಮ್ಗೆ ಒಂದು ಸ್ವಲುಪನೂ ಒಪ್ಪಿಗಿ ಇಲ್ಲ.  ಅಲಾ... ಈ ಜಾತೇರು ನಮ್ಮ ಈಶ್ವರ ಗುಡ್ಯಾಗ ಪೂಜಿ ಮಾಡದಂದ್ರೆ ಏನು' ಎಂದಾಗ, ದೈವ ಹೌದು... ಹೌದು... ಎಂದು ಕುರಿಗಳು ಒದರಿದ್ಹಂಗ ಒದರಿದ್ರು.  ನಂಗೆ ಸಿಟ್ಟು ಬಂದು ಏ ಶಿವಲಿಂಗಯ್ಯ ಸ್ವಾಮಿ... ಓಗ್ಲಿ ನೀನು ಪೂಜಿ ಮಾಡ್ತೀಯಾ... ಇಲ್ಲ ನಿನ್ನ ಮಗನ್ನ ಬಿಡ್ತಿಯಾ ಎಂದು ಗದ್ರಿಸಿದೆ.  ಅದ್ಕೆ ಸುಮ್ನಗಿ ಕುತ್ಕಂಡ್ಬುಟ್ಟ.  `ಏನ್ ಶಿವಲಿಂಗಯ್ಯ ಸ್ವಾಮಿ... ಸುಮ್ಕೆ ಕುತ್ಕಂಡ್ಬುಟ್ಟಿ' ಎಂದು ಇನ್ಸ್ಪೆಕ್ಟ್ರು ಸಾಹೇಬ್ರು ಮತ್ತು ಮಠದ ಸ್ವಾಮೇರು ಕೇಳಿದ್ಕೂಡ್ಲೆ ಯಾವ ಉತ್ರ ಬರ್‍ಲಿಲ್ಲ.  ಇನ್ಸ್‌ಪೆಟ್ರು ಕೆಲ್ವು ಮುಖಂಡ್ರು ದಲಿತ ಮಹಿಳೆಗೆ ಇಂಥ ಸ್ಥಾನ ಕೊಟ್ಟ ಮಲ್ಲಣ್ಣ ತಾತನ ನಿರ್ಣಯ ಸಂತೋಸ ಆಗೈತಂಥ ಹೊಗಳಿದ್ರು.

ಮಲ್ಲಣ್ಣ ತಾತನ ಮಾತುಗಳನ್ನು ಹೋಟೆಲ್ ಮಾರಕ್ಕ ತದೇಕ ಚಿತ್ತದಿಂದ ಕೇಳುತ್ತಿದ್ದಳು.  ಅದ್ಯಾಕ್ಹಂಗ ನೋಡ್ತೆಂಗೆ ಮಾರಕ್ಕ... ಇನ್ನೊಂದಿನ್ನೊಂದು ಚಾ ಕೊಡು.  ಆತು ತಾತ... ಈಗ ಸೋಸಿ ಕೊಟ್ಬುಡ್ತೀನಿ.

ಲೇ ಚನ್ನ ಇನ್ನೊಂದು ಬೀಡಿ ಇದ್ರೆ ತಾಲೇ... ಇಗ ತಗಳಪೋ... ನೀನು ಭಾಳ ಸೇದ್ತಿ ಬುಡು.  ಏನ್ಮಾಡ್ತ್ಯಾ ಹಾಳ ಚಟ... ಹೌದಲ್ಲಾ, ಅದು ಖರೇವು ಅನ್ನು ಎಂದ ಚನ್ನ, ಎಲ್ಲರೂ ಚಹ ಕುಡಿದು ಮಲ್ಲಣ್ಣ ತಾತ ಹೇಳುವ ಕತೆ ಕೇಳಲು ಮುಂದಾದರು.

ಅಲ್ಲಿಗೆ ಮುಗಿಲಿಲ್ಲ ಕೇಳ್ರಿ.  ದ್ಯಾಮವ್ವ ಲಚಮ್ಯಾಗ ಇಬ್ರು ಗಂಡ್ಮಕ್ಳು.  ಅವರ್‍ನಾ ಸಾಲಿ ಬಿಡ್ಸಿ ಕೂಲಿ ಮಾಡಾಕ ಕಳಿಸ್ತೀನಿ ಅಂದ ಲಚಮ್ಯಾ.  ನಾನೇ ಬಯದು ಹುಡುಗ್ರು ಓದ್ಬೇಕು ಇಲ್ದಿದ್ರೆ ಅವು ನಿನ್ನಂಗ ಆಗ್ತಾವ ನೋಡು.  ನೀಸುಮ್ಕಿರು ಅವರ್‍ನಾ ಗೌರ್‍ಮೆಂಟ್ ಹಾಸ್ಟಲ್ನಾಗ ಸೇರಿಸಾಮಂತೆ.  ನಮ್ಮೂರ್‍ನಗಿರೋ ರೆಹಮಾನ್ ಸಾಬ್ ಮೇಷ್ಟ್ರು ಈಗ ಬಳ್ಳಾರ್‍ಯಾಗ ಇಒ ಮತ್ತೆ ಹೊಸಪೇಟ್ಯಾಗ ನಾಗರಾಜ ರೆಡ್ಡಿ ಮೇಷ್ಟ್ರು ಬಿಇಒ ಆಗ್ಯಾರ.  ಇವರಿಬ್ಬರ್‍ನ ಕೇಳ್ಕಂಡು ಕಂಪ್ಲ್ಯಾಗಿರೋ ಹಾಸ್ಟಲ್ನಾಗ ಸೇರ್‍ಸಮಂತೆ ಎಂದು ಗದ್ರಿಸ್ದೆ.  ಒಂದಿನ ರೆಹಮಾನ್ ಸಾಬ್ ಮತ್ತೆ ನಾಗರಾಜ ರೆಡ್ಡಿ ಮೇಷ್ಟ್ರುನ ಕಂಡು ಬಂದ್ವಿ.  ಆಗ ಅವ್ರು ಒಂದೇ ಮಾತ್ನ್ಯಗ ಒಪ್ಪಗಂಡ್ರು.  ಊರಾಕಿರೋ ಸಂತೆ ಮಾರ್ಕೇಟ್ ಬಗಲಾಗಿನ ಸಾಲ್ಯಾಗ ವೀರಣ್ಣ ಮೇಷ್ಟ್ರು ಮತ್ತೆ ಮಾಬಲಪ್ಪ ಮೇಸ್ಟ್ರಗ್ಹೇಳಿ ರವಟು ಹುಡುಗ್ರಿಗೆ ಬೇಸು ಹೇಳಿ ಕೊಡ್ರಿ ಅದ್ವಿ, ಅವ್ರು ಕಾಳ್ಜಿ ಬುಟ್ಬುಡು ತಾತ ಅಂದ್ರು.  ಆಕಳಿಕೆ ಬಂದು ಐದು ನಿಮಿಷ ಸುಮ್ಮನೆ ಕುಳಿತು ಮತ್ತೆ ಹೇಳಲು ಶುರುಮಾಡಿದ.

ಅದೇ ಟೈಂನಾಗ ರುದ್ರಭೂಮಿ ಕೆಲ್ಸ ಮುಗ್ದು ಈಶ್ವರ ಗುಡಿನೂ ತಯಾರಾಯ್ತು.  ಅದರ ಬಗಲಾಗ ಒಂದು ಸಣ್ಣಗುಡುಸ್ಲು ಹಾಕಿ ದ್ಯಾಮವ್ವ ಲಚಮ್ಯಾಗ ಇರಾಕ ಮಾಡಿದ್ವಿ.  ಈಶ್ವರ ಗುಡಿ ಪೂಜಿ ಮಾಡಾಕ ದ್ಯಾಮವ್ವಗ ತಿಂಗ್ಳಿಗೆ ಮುನ್ನೂರು ರೂಪಾಯಿ ಕೊಡಕ ದೈವ ಒಪಿಗಂತು.  ಆದರೆ ಲಚಮ್ಯಾ ಮತ್ತೆ ತಾಯಪ್ಪ ಅವರಿಷ್ಟದಂಗ ಸುಡುಗಾಡಾಗ ಕುಣಿ ತೋಡಾಕ ಕೇಳ್ಕಂಡ್ರು ಆಯ್ತಂತ ನಾವೂ ಒಪ್ಪಿಗೆಂಡ್ವಿ.  ಹೆಣದ ಕಡೆಯರ್‍ರು ಕೊಟ್ಟ ನೂರು ರೂಪಾಯಿದಾಗ ತಲಾಕ ಅರ್ಧ ತಗಮ್ತಿದ್ರು.  ತಿಂಗಳ್ದಾಗ ನಾಕೋ ಐದೋ ಹೆಣ ಬರ್‍ತಿದ್ವು.  ಬಂದ ರೊಕ್ಕದಾಗ ಸಂಸಾರ ಸಾಗುಸ್ಬೇಕಾಗಿತ್ತು.  ತಾಯಪ್ಪಗ ಅವಾಗವಾಗ ಆರಾಮಿಲ್ದಂಗಾಗಿ ಕುಣಿ ತೋಡಾಕ ಬರ್‍ತಿದ್ದಿಲ್ಲ.  ಅಂಥ ಟೈಮ್ನಾಗ ಲಚಮ್ಯಾಗ ಒಬ್ಬನೇ ಕುಣಿ ತೋಡಾಕಾಗ್ದೆ ದ್ಯಾಮವ್ವನೂ ಆಸ್ರ ಆಗ್ತಿದ್ಲು.  ಒಂದಿನ ತಾಯಪ್ಪಗ ಜಗ್ಗಿ ಜ್ವರ ಬಂದು ಸತ್ತ.  ಕುಣಿತೋಡಾ ಜವಾಬ್ದಾರಿ ಗಂಡ ಹೆಂಡ್ತಿ ಮ್ಯಾಲೆ ಬಿತ್ತು.  ಈ ಸುದ್ದಿ ತಿಳ್ದು ನಂಗೆ ಭಾಳ ಬೇಸ್ರಾತು.  ಪಾಪ... ಆ ಎಣ್ಮಗಳು ಎಂಗಪಾ ಕಷ್ಟ ಪಡ್ತಾಳ ಅಂದ್ಕಂಡು ಲಚಮ್ಯಾನ ಜೊತಿಗೆ ಕೆಲ್ಸ ಮಾಡಾಕ ಬ್ಯಾರೇರ್‍ನ ನೋಡಿದ್ವಿ ಯಾರೂ ಬರ್‍ಲಿಲ್ಲ.  ಇರ್‍ಲಿ ಬುಡಂತ ನಾನು ಸುಮ್ಕೆ ಆಗ್ಬುಟ್ಟೆ ಎನ್ನುತ್ತ ಕಣ್ಣೀರು ಒರೆಸಿಕೊಳ್ಳಲು ಪಂಚೆ ಮೇಲೆತ್ತಿದಾಗ ಮಾರಕ್ಕ ನೋಡಿ ನಾಚಿಗುಂದ ಆಚೆ ತಿರುಗಿದಳು.

ತಾತ... ತಾತ... ಎಂದು ಎಚ್ಚರಿಸಿದ ಚನ್ನ  ಆಂ... ಎನ್ನುತ್ತ... ಲೇ ಚನ್ನ ಇನ್ನೊಂದು ಬೀಡಿ ಇದ್ರೆ ತಾರಲೇ.  ಆವಾಗ ಕೊಟ್ಟೆಲಾ ಬೀಡಿ ಅದ್ಯಾವದ್ಲೆ ಸ್ವಲುಪನ ಸರಿ ಇದ್ದಿಲ್ಲ.  ಗಣೇಶ್ ಬೀಡಿ ಇದ್ರೆ ಕೊಡ್ಲೆ.  ಅನೌನ... ಅದೇ ಬೇಸು.

ಏ... ಇಲ್ಲಪೋ ತಾತ ಅದು.  ಇರ್‍ಲಿತಾ... ಇದ್ದಿದ್ರಾಗ ಸುಧಾರಿಸ್ಯಾಗಮನ ಎನ್ನುತ್ತ ಮೂಗಿನಲ್ಲಿ ಕೈ ಹಾಕಿ ಸಿಂಬಳ ತೆಗೆಯುತ್ತ ಮಾತು ಮುಂದುವರಿಸಿದ.

ಅವಾಗವಾಗ ಗಂಡ ಹೆಂಡ್ತಿ ಜಗಳ ಆಡ್ತಿದ್ರು.  ಇತ್ತಿತ್ಲಾಗ ಲಚಮ್ಯಾ ಜಗ್ಗಿ ಕುಡ್ಯಕ ಸುರುಮಾಡಿದ್ದ.  ರೊಕ್ಕ ಸಾಲ್ವಲ್ದಂತ ಒಂದ್ಸಾರಿ ದ್ಯಾಮವ್ವ ಬಂದು ಹೇಳಿ ಅತ್ತಿದ್ಲು.  ಲಚಮ್ಯಾನ ಕರ್‍ದು ಬುದ್ಧಿ ಹೇಳಿದ್ರೂ ಕೇಳ್ತಿದ್ದಿಲ್ಲ.  ಕಣ್ತಪ್ಸಿ ಕುಡಿತ್ತಿದ್ದ.  ನಿನ್ನ ಹಣೆಬರನೇ ಇಷ್ಟೇ ಓಗಂತ ಬೈದು ಕಳ್ಸಿದ್ದೆ.  ಇದ್ಕಿದ್ದಂಗ ಲಚಮ್ಯಾಗ ಪಾರ್ಸಿ (ಲಕ್ವ) ಹೊಡ್ದು ಒಂದು ಕೈ ಒಂದು ಕಾಲು ಬಿದ್ದು ಮನ್ಯಾಗ ಹಾಸ್ಗಿ ಹಿಡಿದು ಮಕ್ಕಂಬುಟ್ಟ ಸುದ್ದಿ ತಿಳ್ದು ನಾನು ಅವ್ನ ಮನಿಗ್ಹೋಗಿ ನೋಡ್ದೆ.  ಲಚಮ್ಯಾ ನನ್ನೋಡಿ ಅಳಾಕ ಸುರುಮಾಡ್ದ.  ಸುಮ್ಕಿರು ಆದಿದಾತು... ಆ ಸಿವಾ ಐದಾನ ಎಲ್ಲಾ ಕಡಿಮಿ ಮಾಡ್ತಾನ ಬುಡು ಅಂತ್ಹೇಳಿ ಸುಧಾರ್‍ಸಿದೆ.  ಆಂ... ಅಂದ್ಹಂಗ ದ್ಯಾಮವ್ವ... ಆ ನಮ್ಮ ಆದ್ವಾನಿ ಮಸೀದಿ ರುಗಿನರು ಐದಾರಲಾ ಅವ್ರಕಡೆ ಓಗಿ ಒಂದು ಅಂತ್ರ ಕಟ್ಟಿಸ್ಗಂಡು ಲಚಮ್ಯಾನ ಕೈಕಾಲಿಗೆ ಕಟ್ಟು ಕಡಿಮಿ ಆದ್ರೂ ಆಗ್ಬೋದು ಅಂತ್ಹೇಳಿದ್ದೆ.  ಆದ್ರಂಗ ಮಾಡಿದ್ಲು ಸ್ವಲುಪು ಉತ್ಮ ಅಂತ ಅಂದಿದ್ಲು... ಪಾಪ... ಆ ಹೆಣ್ಮಗ್ಳನ ನೋಡಿದ್ರೆ ಕಳ್ಳು ಚುರುಕ್ ಅಂತೈತೆ.  ಏನ್ಮಾಡದು ಬದುಕ್ಬೇಕಲಾ.  ಊಂ... ನಡಿಲಿ... ನಡಿಲಿ ಎಲ್ಲಾ ಸಿವ್ನಿಚ್ಛೆ.

ಒಂದಿನ ಲಚಮ್ಯಾ ಸತ್ತ.  ಊರಾಗೆಲ್ಲ ಸುದ್ದಿ ಗೊತ್ತಾತು.  ಅವರ ಜನಕ್ಕಂತ ಬ್ಯಾರೆ ಸುಡುಗಾಡು ಮಾಡ್ಕ್ಯಡಿದ್ರು.  ಅಲ್ಲಿ ಕುಣಿ ತೋಡಾತ ಅವತ್ತು ಊರಾಕಿದ್ದಿಲ್ಲ.  ಯಾರೂ ಕುಣಿ ತೋಡಾಕ ಮುಂದ ಬರಲ್ಲಿಲ್ಲ.  ಅಂಥವತ್ತ್ಯಗೂ ದ್ಯಾಮವ್ವ ಹಿಂದು ಮುಂದು ನೋಡ್ಹಂಗ ತಾನೇ ಸೆಲಿಕಿ ಹಾರಿ ಗುದ್ಲಿ ಇಡ್ಕಂಡು ಇಬ್ರು ಮಕ್ಳನ ಕರ್‍ಕಂಡು ಸುಡುಗಾಡಗ್ಹೋಗಿ ಕುಣಿ ತೋಡಿ ಮಣ್ಣು ಮಾಡಿ ಬಂದ್ಲು.  ಇಂಥ ವತ್ನಾಗ ಊರಿನ ಜನ ಬರ್‍ಲಿಲ್ಲ ನಾನು ಮತ್ತೆ ನನ್ನ ಫ್ರೆಂಡ್ಸು ಓಗಿ ಮಣ್ಣ ಮಾಡಿ ಬಂದ್ವಿ.  ಯಾಕ್ಲೇ... ಈ ಬೀಡಿ ಸಜ್ಜಿಲ್ಲ ಬುಡು.  ಅವು ಅಂಗೇ ನೀ ಮುಂದ್ಹೇಳಂತ ಕೈ ಅಲ್ಲಾಡಿಸಿ ಪೀಡಿಸಿ ಕೇಳತೊಡಗಿದ ಚನ್ನ.

ಆಂ... ಹೇಳ್ತಿನಿ ಕೇಳು.  ಮಾರ್‍ನೆ ದಿನ ದ್ಯಾಮವ್ವನ ಮನಿಗ್ಹೋಗಿ ಸಮಾಧಾನ ಮಾಡ್ದೆ.  ಬ್ಯಾರೆ ಕೆಲ್ಸ ಮಾಡ್ವಂತಿ ತಗಳಂಗೆ ಅಂದೆ.  ಅದ್ಕ ಆ ಯಮ್ಮ ಒಪ್ಲಿಲ್ಲ.  ಇಲ್ಲ ತಾತ ನಾನು ಇಲ್ಲೆ ಪೂಜೆ ಮಾಡ್ಕಂಡು ಇದ್ಬುಡ್ತೀನಿ ಅಂದ್ಲು.  ಆಗ್ಲೆವಾ... ಆದ್ರೆ ಕುಣಿ ತೋಡ ಕೆಲ್ಸ ಮಾಡಬ್ಯಾಡ ನಿನ್ನೊಬಾಕಿ ಕೈಯಾಗ ಆಗಂಗಿಲ್ಲ ಅಂದೆ.  ಅಂಗೇ ಆಗ್ಲಿ ಅಂದಿದ್ಲು.  ಆದ್ರೆ ಅದಾದ ಸ್ವಲುಪೇ ದಿನಕ್ಕ ಗೌಡನ ಮಗ ಸತ್ತ.  ಆ ಹೊತ್ನಾಗ ಕುಣಿ ತೋಡೋರು ಯಾರೂ ಇರ್‍ಲಿಲ್ಲ.  ನಿರ್ವಇಲ್ದೆ ದ್ಯಾಮವ್ವ ಕುಣಿ ತೋಡಿದ್ಲು.  ಮಕ್ಳನ ಸಾಕ ಸಲುವಾಗಿ ಈ ಕೆಲ್ಸ ಮಾಡ್ತೀನಿ ಬ್ಯಾಡ ಅನಬ್ಯಾಡ ತಾತ ಅಂತ್ಹೇಳಿ ಕಣ್ಣೀರು ತಗದ್ಲು.  ಆತ್ಬುಡವಾ ಎಂದು ಗೋಣು ಅಲ್ಲಾಡಿಸಿ ಬಂದೆ.  ಒಂದೊಂದು ಸರ್‍ತಿ ಯಾಕಾನಾ ಪಾಪ... ಆ ಎಣ್ಮಗ್ಳಿಗೆ ಪೂಜಿ ಕೆಲ್ಸ ಮಾಡ್ಸಕ್ಹತ್ಸಿ ಇಂಥ ಪರಿಸ್ಥಿತಿಗೆ ತಂದು ಬುಟ್ನೇನಂತ ನನ್ನ ಕಳ್ಳು ಚುರುಕ್ ಅಂತೈತಿ.  ತಪ್ಪು ಮಾಡ್ಬಿಟ್ನ್ಯಪೋ... ಎಂದು ಏದುಸುರು ಬಿಡುತ್ತಿರುವುದನ್ನು ನೋಡಿ ಸುಧಾರಿಸಿದ ಚನ್ನ.

ಅಂಗೇನಿಲ್ಲ ಕೇಳು... ದುಡ್ದು ಮಕ್ಳನ ಸಾಲಿ ಓದ್ಸದ್ಲು.  ಅವ್ರು ಬೇಸೋದಿ ಬೆಂಗಳೂರ್‍ನಾಗ ಒಬ್ಬಾತ ಇಂಜಿನಿಯರ್‍ ಆಗ್ಯಾನ.  ಇನ್ನೊಬ್ಬಾತ ಬಳ್ಳಾರ್‍ಯಾಗ ಬ್ಯಾಂಕ್ನಾಗ ಕೆಲ್ಸ ಮಾಡ್ತಾನ.  ಇಬ್ರಿಗೂ ಲಗ್ನ ಮಾಡಿದ್ಲು.  ಬಳ್ಳಾರ್‍ಯಾಗ ಇರ ಮಗ ದ್ಯಾಮವ್ವನ ಇಲ್ಲೆ ಇದ್ಬುಡಂತ ಕರ್‍ದ.  ಅದಕ್ಕ ಒಪ್ಲಿಲ್ಲ.  ನಾನೇ ಗದ್ರಿಸಿ ಅಲ್ಲೆ ಇದ್ಬುಡು ಈ ಸುಡುಗಾಡ್ಯಾಗೇನು ಇರ್‍ತಿ ಅಂದು ಕಳ್ಸಿದ್ದೆ.  ಆದ್ರೆ ಸೊಸಿ ಕಾಟ ಕೊಡಾಕ ಸುರುಮಾಡಿದ್ಲಂಥ ಮತ್ತೆ ಸುಡುಗಾಡಿಗೆ ಬಂದು ಸೇರ್‍ಕಂಡ್ಲು.  ಇಂಗಾತು ನೋಡು ತಾತ ಅಂದು ಗೋಳೋಂತ ಅತ್ಲು.  ನಾನೆಲ್ಲಿಗ್ಹೋಗಂಗಿಲ್ಲಪೋ ತಾತ... ಇಲ್ಲೇ ಇದ್ಬುಡ್ತೀನಿ ಅಂದ್ಲು.  ಅಂಗೆ ಮಾಡವಾಗ ನಿನ್ನ ಹಣೆಬರ್‍ದಂಗ ಇದ್ದಂಗೆ ಆಗ್ತೈತಿ ಅಂದು ಕಳ್ಸಿದ್ದೆ.

ಕುಣಿ ತೋಡದಂದ್ರೆ ಸುಮ್ನೆ ಏನ್ಲೆ ಚನ್ನ... ಐದೈದು ತಾಸು.  ಅದು ಈ ಬಿಸ್ಲಾಗ ಪಾಪ... ದ್ಯಾಮವ್ವ ಒಬ್ಬಾಕೆ ಕುಣಿ ತೋಡ್ತಾಳ.  ಹೆಣದ ಕಡೆಯರ್‍ರು ಕೊಡೋ ನೂರೈವತ್ತೋ... ಇನ್ನೂರೋ ತಗಂಡು ಜೀವ್ನ ಮಾಡ್ತಾಳ.  ಜತಿಗೆ ಈಸ್ವರ ದೇವ್ರು ಗುಡಿ ಪೂಜಿ... ಎಂಗೋ ನಡಸ್ತಾಳ ಜೀವ್ನ.  ಅದಲ್ದೆ ಗಂಡ ಮಾಡಿದ ಸಾಲ ತೀರಸ್ತೈದಾಳ.  ದ್ಯಾಮವ್ವನ ಅಪ್ಪ ಮನಿ ಕಟ್ಟಿಸ್ಗ್ಯಾಳಕಂತ ಜಾಗ ಕೊಟ್ಟಿದ್ದ.  ಅದನ್ಕೂಡ ಮಾರ್‍ಕ್ಯಾಂಡು ಬುಟ್ಟಿದ ಆ ಲಚಮ್ಯಾ.  ನನ್ಲಿಂದ ನಿಂಗೆ ಈ ಕಷ್ಟ ಬಂತು ನೋಡಂಗೆ ದ್ಯಾಮವ್ವ ಅಂದಿದ್ಕ ಆಕಿ ಏನಂದಿದ್ಲು ಗೊತ್ತೇನ್ಲೆ.... ಏ ಬುಡಪೋ ತಾತ ನಂಗೇನಾಗೈತಿ ಗುಂಡ್ಕಲ್ಲಿದ್ಹಂಗ ಐದೀನಿ.  ಅಂಗಲ್ಲವಾ ನಿನ್ನ ಮಕ್ಳು... ಥೂ... ಆ ಮಕ್ಳು ಸುದ್ದಿ ಎತ್ತಬ್ಯಾಡ ಅವ್ರು ನನ್ ಪಾಲಿಗೆ ಇಲ್ಲ ಅನ್ಕಮ್ತೀನಿ.  ಅವ್ರೆಸ್ರು ಎತ್ತಬ್ಯಾಡ ಅಂತೇಳಿದ್ಲು.  ಹೇಳ್ತಾ ಹೇಳ್ತಾ ಮಲ್ಲಣ್ಣ ತಾತ ಕುಸಿದ!

ಚನ್ನ ಮತ್ತವನ ಗೆಳೆಯರು ಎಷ್ಟೇ ಎಬ್ಬಿಸಿದರೂ ಏಳಲಿಲ್ಲ.  ಯಪ್ಪೋ... ತಾತ ನಮನ್ನ ಬುಟ್ಟು ಓಗ್ಬಿಟ್ನಲ್ಲಪ್ಪೋ... ಎಂದು ಬಾಯಿ ಬಾಯಿ ಬಡಿದು ಕೊಳ್ಳುತ್ತಿರುವ ಶಬ್ದ ದ್ಯಾಮವ್ವನ ಕಿವಿಗೆ ಬಿತ್ತು.  ಬಂದು ನೊಡಿದರೆ ಮಲ್ಲಣ್ಣ ತಾತ ಸತ್ತಿದ್ದ.  ಗರ ಬಡಿದಂತೆ ನಿಂತಳು.  `ನಾಡು ಓಗಂತೈತೆ... ಸುಡುಗಾಡು ಬಾ ಅಂತೈತಿ... ನನ್ನ ಕುಣಿ ನೀನೇ ತೋಡ್ಬುಡಂಗೆ'  ಎಂದು ಹೇಳದ್ದ ಮಾತುಗಳು ನೆನಪಾದವು.  ಎಂದಿನಂತೆ ಹಾರೆ, ಗುದ್ದಲಿ, ಪಿಕಾಸಿ ಹಿಡಿದು ಕುಣಿ ತೋಡಲು ಅಣಿಯಾದಳು.

        *   *   *

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ