ಶ್ರೀಗುರು ಮಂತ್ರ

ಶ್ರೀಗುರು ಮಂತ್ರವ
ರಾಗದಿ ನುತಿಸಲು
ಬೋಧ ಸಂಪದ ಸುಖವಾಗುವದೋ     ||ಪ||

ಮಾಜದೆ ಮಂತ್ರದ
ಮೊದಲಕ್ಷರವ
ತೇಜಿಸುತಲಿ ನಿತ್ಯ ಜಪಿಸುವದೋ       ||೧||

ಬಿಡದೆರಕ್ಷರ
ನಡುವಿನ ಶೂನ್ಯದಿ
ದೃಧವಿಡಿದಾತ್ಮದಿ ನುತಿಸುವದೋ      ||೨||

ಬರೆದು ಮೂರಕ್ಷರ
ಕರುಣ ಸೇವಿಸಿದರೆ
ಜನನ ಮರಣ ಭಯ ನೀಗುವದೋ     ||೩||

ನೀ ಕಲಿ ಸುಮ್ಮನೆ
ನಾಲ್ಕು ಅಕ್ಷರಗಳ
ಬೇಕೆನಿಸಿದ ವಸ್ತು ಸಿಗುರಿತಿಹುದೋ   ||೪||

ಶಿಶುನಾಳಧೀಶನ
ಹೆಸರಿನೈದಕ್ಷರ
ಹಸನಾಗಿ ಭಜಿಸಲಹುದೆನಿಸುವದೋ  ||೫||
                ****


-ಶಿಶುನಾಳ ಶರೀಫ್



ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ