ಬೆಳ್ಳಿ ಕಡಗ

-ಬಸವರಾಜ್ ಡಬ್ಲ್ಯೂ

ಒಂದು ಕುಗ್ರಾಮದಲ್ಲಿ ಮುದುಕ ಮುದುಕಿ ಇದ್ದರು.  ಅವರಿಗೆ ಒಬ್ಬ ಮಗನಿದ್ದ.  ಆತ ಹೇಳಿದ್ದನ್ನು ತಿಳಿದುಕೊಳ್ಳಲಾರದಷ್ಟು ದಡ್ಡನಾಗಿದ್ದ.  ಮಗನ ಈ ವರ್ತನೆಯಿಂದ ಬೇಸತ್ತ ಅವನ ತಂದೆ-ತಾಯಿ ಪಕ್ಕದ ಆಶ್ರಮದ ಋಷಿಯ ಬಳಿ ಹೋಗಿ `ಸ್ವಾಮೀಜಿ, ಇವನು ನಮ್ಮ ಮಗ ಧನವಂತ.  ಇವನು ದಡ್ಡ.  ಹೇಗಾದರೂ ಮಾಡಿ ಇವನನ್ನು ಬುದ್ಧವಂತನನ್ನಾಗಿ ಮಾಡಿ.  ನಮ್ಮ ಬಳಿ ಇರುವ ಆಸ್ತಿ, ಹಣವನ್ನು ಆಶ್ರಮಕ್ಕೆ ಒಪ್ಪಿಸಿ ನಾವೂ ಇಲ್ಲಿಯೇ ಕೆಲಸ ಮಾಡಿಕೊಮಡು ಇರುತ್ತೇವೆ' ಎಂದು ಬೇಡಿಕೊಂಡರು.  ಧನವಂತನನ್ನೊಮ್ಮೆ ನೋಡಿದ ಋಷಿ `ಆಯಿತು' ಎಂದರು.

`ಧನವಂತಾ, ನೀನು ಸ್ವಲ್ಪ ದಿನಗಳವರೆಗೆ ಸ್ವಚ್ಛಂದವಾಗಿ ಆಶ್ರಮದಲ್ಲಿ ಸುತ್ತಾಡಿಕೊಂಡಿರು.  ಇಲ್ಲಿ ನಿನಗಾಗಿ ಈಜುಕೊಳ, ಪ್ರಾಣಿ, ಪಕ್ಷಿಗಳಿವೆ' ಎಂದರು.  ಸಂತಸಗೊಂಡ ಧನವಂತ `ಆಗಲಿ' ಎಂದು ಕುಣಿಯುತ್ತ ಹೋದ.

ಸ್ವಲ್ಪ ದಿನಗಳ ನಂತರ ಋಷಿಗಳು ತಾವು ಕಲಿತ ಎಲ್ಲ ವಿದ್ಯೆಗಳನ್ನೂ ಕಲಿಸಿ ಧನವಂತನನ್ನು ಬುದ್ಧವಂತನನ್ನಾಗಿ ಮಾಡಿದರು.  ನಂತರ `ನಾನು ಕಲಿತ ವಿದ್ಯೆಯನ್ನೆಲ್ಲ ನಿನಗೆ ಧಾರೆ ಎರೆದಿದ್ದೇನೆ.  ನಿನಗೆ ರಾಜನಾಗುವ ಲಕ್ಷಣಗಳಿವೆ.  ನಿನಗೊಂದು ಬೆಳ್ಳಿ ಕಡಗ ಕೊಡುವೆ.  ಇದು ಸಾಮಾನ್ಯವಾದುದಲ್ಲ.  ನೀನು ಕೇಳಿದ್ದನ್ನೆಲ್ಲ ಕೊಡುತ್ತದೆ.  ಆದರೆ, ಒಳ್ಳೆಯ ಕಾರ್ಯಗಳಿಗೆ ಮಾತ್ರ ಉಪಯೋಗಿಸು' ಎಂದು ಹೇಳಿ ಬೆಳ್ಳಿ ಕಡಗವನ್ನು ಧನವಂತನಿಗೆ ಕೊಟ್ಟರು.

ರಾತ್ರಿ ಮಲಗಿದ್ದ ಸಮಯದಲ್ಲಿ ಧನವಂತನ ಮನದಲ್ಲಿ ಕೆಟ್ಟ ಯೋಚನೆಗಳು ಸುಳಿದಾಡಿದವು.  ತುಸು ಸಮಯದ ನಂತರ ಆತ ಎದ್ದು ಕುಳಿತು, ಬೆಳ್ಳಿ ಕಡಗವನ್ನು ಕೈಗೆ ಹಾಕಿಕೊಂಡು ನನಗೊಂದು ಅರಮನೆ ಬೇಕೆಂದ.  ಕೂಡಲೇ ಅಲ್ಲೊಂದು ಅರಮನೆ ಸೃಷ್ಟಿಯಾಯಿತು.  ತನಗೊಬ್ಬ ರಾಜಕುಮಾರಿ ಬೇಕೆಂದ.  ಮರುಕ್ಷಣವೇ ಅಲ್ಲಿಗೆ ಒಬ್ಬ ಸುಂದರ ಯುವತಿ ಬಂದಳು.  ಹೀಗೆ ಅರಮನೆಯ ರಾಜನಿಗೆ ಬೇಕಾದ ಬೆಳ್ಳಿ, ಬಂಗಾರ, ವಜ್ರ, ವೈಢೂರ್‍ಯ, ಸೈನಿಕರು, ಸೇವಕರು ಎಲ್ಲವೂ ಬಂದವು.  ಇದನ್ನೆಲ್ಲ ಗಮನಿಸಿದ ಋಷಿಗಳು `ಧನವಂತ, ಏನಿದು ವಿಚಿತ್ರ' ಎಂದು ಕೋಪಗೊಂಡರು.  ಆದರೆ, ಧನವಂತ ಅದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.  ಆತ ಅಹಂಕಾರದಿಂದ `ಏ! ಯಾರು ನೀನು?  ನಡೆ ಇಲ್ಲಿಂದ' ಎಂದು ಗದರಿಸಿದ.

`ಥೂ, ಪಾಪಿ, ನೀನು ಸರ್ವನಾಶವಾಗುತ್ತಿ ಹೋಗು' ಎಂದು ಹೇಳಿ ಋಷಿಗಳು ಅಲ್ಲಿಂದ ಹೊರಟರು.

ಇತ್ತ ಧನವಂತ ತನ್ನ ರಾಜ್ಯದಲ್ಲಿ ದರ್ಪ, ಸೊಕ್ಕಿನಿಮದ ಮೆರೆಯುತ್ತ ಪ್ರಜೆಗಳಿಗೆ ಕಿರುಕುಳ ಕೊಡಲು ಆರಂಭಿಸಿದ.  ಅನ್ಯಾಯವಾಗಿ ಭೂಕಂದಾಯ ವಸೂಲಿ ಮಾಡುವುದು, ಭೂಮಿ ಕಬಳಿಸುವುದು, ಪಕ್ಕದ ರಾಜರನ್ನು ಯುದ್ಧಕ್ಕೆ ಆಹ್ವಾನಿಸಿ ತನ್ನ ಬೆಳ್ಳಿ ಕಡಗದ ಸಹಾಯದಿಂದ ಅವರನ್ನು ಸೋಲಿಸಿ, ಅವರ ಸಮಸ್ತ ರಾಜ್ಯವನ್ನೂ ತೆಗೆದುಕೊಂಡು ಆ ರಾಜರನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವುದೇ ಅವನ ಬದುಕಾಯಿತು.

ಇದನ್ನೆಲ್ಲ ಅರಿತ ಋಷಿಗಳು ಧನವಂತನಿಗೆ ಕೊಟ್ಟ ಬೆಳ್ಳಿ ಕಡಗವನ್ನು ದಿವ್ಯ ಶಕ್ತಿಯಿಂದ ತಮ್ಮ ಬಳಿ ಬರುವಂತೆ ಮಾಡಿದರು.  ಕೂಡಲೇ ಬೆಳ್ಳಿ ಕಡಗ ಋಷಿಗಳ ಹತ್ತಿರ ಬಂತು.  ಅಂದಿನಿಂದ ಧನವಂತ ಹಂತ ಹಂತವಾಗಿ ಎಲ್ಲವನ್ನೂ ಕಳೆದುಕೊಂಡ.  ತನ್ನ ತಪ್ಪಿನ ಅರಿವಾಗಿ ಪುನಃ ಋಷಿಗಳ ಹತ್ತಿರ ಬಂದು ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡ.  ಅವನ ಕೋರಿಕೆ ತಿರಸ್ಕರಿಸಿದ ಋಷಿಗಳು `ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡಿದ್ದೇ ತಪ್ಪು, ನಡೆ ಆಚೆ' ಎಂದರು.  ಧನವಂತನ ಹೆಂಡತಿ ಅಳುತ್ತ `ಸ್ವಾಮೀಜಿ, ನನ್ನ ಗಂಡನದು ತಪ್ಪಾಗಿದೆ.  ಮನ್ನಿಸಿ.  ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಕೊಡಿ' ಎಂದು ಬೇಡಿಕೊಂಡಳು.  ಋಷಿಗಳು ಕಡೆಗೊಮ್ಮೆ ಆ ಮಾತಿಗೆ ಒಪ್ಪಿದರು.  ಮುಂದೆ ಧನವಂತ ಸನ್ಮಾರ್ಗದಲ್ಲಿ ನಡೆದು ತನ್ನ ತಪ್ಪನ್ನು ತಿದ್ದಿಕೊಂಡ.  ಆಶ್ರಮದಲ್ಲೇ ಇದ್ದು ಋಷಿಗಳ ಸೇವೆ ಮಾಡುತ್ತ ಕಾಲ ಕಳೆದ.

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ