ನಮ್ಮ ನಿಜನೆಂಟ

- ಹಾರಾಸನಾ

ಬಹಳ ದಿನಗಳ ಪ್ರಯತ್ನದ ಫಲವಾಗಿ ಅದೊಂದು ಭಾನುವಾರ ಜೀನ ಮನೆಗೆ ತನ್ನ ಆರು ಸ್ನೇಹಿತರು ಬರುವರಿದ್ದರು. ಅವರೆಲ್ಲರು ‘ಜೀ’ ಮನೆಯಲ್ಲಿ ಸೇರಿ, ಅಲ್ಲಿಂದ ಸುತ್ತಾಡಲು ಹೋಗುವುದೆಂದು ನಿರ್ಧಾರವಾಗಿತ್ತು. ನಮ್ಮಲ್ಲಿ ಕೆಲವರಿಗೆ ಹೆಸರಿಸುವ ಬದಲು ವಾಕ್ಯೈಸುವುದೂ ಉಂಟು. ಉದಾಹರಣೆಗೆ ‘ಜೀ’ ಸ್ನೇಹಿತರಲ್ಲಿ ಒಬ್ಬನ ಹೆಸರು ಕಲಿಕಲ್ಮಷನಾಶಕಾಗ್ರಜಾನುಜ-ಪಾದಸೇವಾನುಗ್ರಹಾನುಸಂಜಾತ. ಹಾಗಾಗಿ ಅವರೆಲ್ಲರ ಪೂರ್ಣ ಹೆಸರುಗಳನ್ನು ಕರೆಯುವುದು ಕಷ್ಟಸಾಧ್ಯವಾದ್ದರಿಂದ, ಮೊದಲ ಅಕ್ಷರವನ್ನು ಮಾತ್ರ ಪರಿಗಣಿಸಿದರೆ, ಆ ಆರ್ವರು ಕ, ಕಿ, ನಾ, ಮೂ, ಚ ಹಾಗು ಮ ಎಂದಾಗುತ್ತಾರೆ.

ನಮ್ಮ ದೇಶದ ಆದರ್ಶ ಅತಿಥಿ ದೇವೋಭವದಂತೆ ಸ್ನೇಹಿತರನ್ನು ಔತಣಿಸಲು ಜೀನು ಸಜ್ಜಾದ.  ನಿಗದಿತ ವೇಳೆಗೆ ಗೆಳೆಯರು ಆಗಮಿಸಿ, ಉಭಯಕುಶಲೋಪರಿಗಳು ಮುಗಿದು, ಹಳೆಕಥಾಲಾಪಗಳೂ ಕಳೆದು ನಂತರ ಊಟದ ರಜ್ಜಾಟವೂ ಮುಗಿದ ಮೇಲೆ, ಎಲ್ಲರೂ ಹೊರ-ಹೊರಡಲನುವಾದರು. ಆ ವೇಳೆಗೆ ಜೀನ ಕುಟುಂಬಕ್ಕೆ ಹತ್ತಿರರಾದ ನೆಂಟರೊಬ್ಬರು ಆಗಮಿಸಿದರು. ಎಲ್ಲರೂ ಕಕ್ಕಾಬಿಕ್ಕಿ.  ಸಾವರಿಸಿಕೊಂಡು, ಅವರೊಡನೆ ಮಾತಿಗಿಳಿದರು. ಸ್ವಲ್ಪಕಾಲ ಹರಟೆಯಾದಮೇಲೆ, ಬಂದ ನೆಂಟರು ತಾವು ಸ್ವಲ್ಪ ವಿಶ್ರಮಿಸುವುದಾಗಿ ಹೇಳಿ, ಎಲ್ಲರಿಗೂ ಹೊರಗೆ ಸುತ್ತಾಡಿಬರುವಂತೆ ಸೂಚಿಸಿದರು. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಆದಂತೆ ಹುಡುಗರು ಸಂತೋಷದಿಂದ ಹೊರ ನಡೆದರು.

ಕ’ನು ಎಲ್ಲರನ್ನೂ ಸಿನೆಮಾ ನೋಡಲು ಕರೆದುಕೊಂಡುಹೋದರೆ, ಕಿ’ನು ಮನ ಸೆಳೆಯುವ ಅರ್ಕೆಶ್ಟ್ರಾ ಕೇಳಲು ಕರೆದೊಯ್ದನು. ನಾ’ನು ಹೊಟ್ಟೆ ಬಿರಿಯುವಂತೆ ರುಚಿ ರುಚಿಯಾದ ಚಾಟ್ಸ್ ತಿನ್ನಲು ಕೊಡಿಸಿದರೆ, ಮೂ’ನು ವಿಧ-ವಿಧವಾದ ಸುವಾಸನೆ ಹೀರಲು ಸೆಂಟ್ಸ್ ತೆಗೆಸಿಕೊಟ್ಟನು. ಇಷ್ಟೆಲ್ಲಾ ಸಾಲದೆಂಬಂತೆ ಚ’ನು ಮೈಗೆ ಸ್ಪರ್ಶಹಿತ ಕೊಡುವ ಅತ್ಯಂತ ನವಿರಾದ ಬಟ್ಟೆ ಕೊಡಿಸುವದಲ್ಲದೆ, ಮ’ನು ಮನ ತಣಿಸುವ ಅನೇಕ ಮೋಜಾಟಗಳಲ್ಲಿ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿದನು.

ಆರ್ವರೂ ಅತ್ಯಂತ ಸುಖವಾಗಿ ಸಮಯ ಕಳೆದರಲ್ಲದೇ, ನಿಧಾನವಾಗಿ ತಮ್ಮ ತಮ್ಮ ಕಿಸೆಗಳು ಖಾಲಿಯಾಗಿರುವದನ್ನು ತಿಳಿದು ಖಿನ್ನರಾಗುತ್ತಾ ಒಬ್ಬರನ್ನೊಬ್ಬರು ಹಳಿಯಲಾರಂಬಿಸಿದರು. ಅವರಲ್ಲಿ ಉತ್ಸಾಹ ಕುಂದಿ ಆಯಾಸ ಮನೆ ಮಾಡಿತು. ಕತ್ತಲಾಗುತ್ತಾ ಬಂದದ್ದರಿಂದ, ಜೀನಿಗೆ ಮನೆಯ ನೆನಪು ಕಾಡತೊಡಗಿತು. ಉಳಿದ ಚಿಲ್ಲರೆಯಲ್ಲಿ ಮನೆ ಸೇರುವ ಚಿಂತೆಯಲ್ಲಿ ತನ್ನ ಜೇಬಿಗೆ ಕೈ ಹಾಕಿದಾಗ ಸಿಕ್ಕ ಕೀಲಿಯಿಂದ ಮನೆಯಲ್ಲಿ ವಿಶ್ರಮಿಸಿದ ನೆಂಟರ ಬಗ್ಗೆ ನೆನಪಾಯ್ತು. ಮನೆಯಿಂದ ಹೊರಡುವಾಗ ಆ ನೆಂಟರನ್ನು ಮನೆಯೊಳಗೆ ಬಿಟ್ಟು ಮನೆಗೆ ಬೀಗ ಹಾಕಿ ಬಂದದ್ದು ಗೊತ್ತಾಯ್ತು. ಜೀನಿಗೆ ಉದ್ಯೋಗ ಕೊಡಿಸಲು ಒಂದು ಸಂದರ್ಶನಕ್ಕಾಗಿ ಕರೆದು ಕೊಂಡು ಹೋಗಲು ಬಂದಿದ್ದ ನೆಂಟರನ್ನು ನೆನೆದು, ಜೀನು ತನ್ನಿಂದಾದ ತಪ್ಪಿಗಾಗಿ ಪರಿತಪಿಸಿದನು.

ಇಷ್ಟು ಹೊತ್ತು ತನಗೆ ಮೋಜು ಕೊಟ್ಟವಾವುವೂ ಜೀನಿಗೆ ಬೇಡವೆನಿಸಿದುವು. ಬೇಜವಾಬ್ದಾರಿ ಗೆಳೆಯರ ಸಂಗವೇ ಈ ಅನಾಹುತಕ್ಕೆ ಕಾರಣವೆಂದು ತಿಳಿದು, ತನ್ನ ವಿಷಯ ಲಂಪಟತನದ ಬಗ್ಗೆ ಅತ್ಯಂತ ಜುಗುಪ್ಸೆ ಪಟ್ಟನು. ತನ್ನ ಕರ್ತವ್ಯವನ್ನು ಮರೆತದ್ದಕಾಗಿ ದು:ಖತಪ್ತನಾದನು. ಮೊದಲು ಮನೆಗೆ ಹಿಂತಿರುಗಿ ನೆಂಟರನ್ನು ಸಮಾಧಾನಗೊಳಿಸಿ, ಅವರ ವಿಶ್ವಾಸಗಳಿಸುವ ಸಂಕಲ್ಪ ತೊಟ್ಟು, ಅವರ ದರ್ಶನಕ್ಕಾಗಿ ವ್ಯಾಕುಲನಾಗಿ ಮನೆಯೆಡೆಗೆ ಜೀನು ಸಾಗಿದನು. ತನ್ನ ಗೆಳೆಯರಾರು ಈಗ ಅವನಿಗೆ ಬೇಕೆನಿಸಲಿಲ್ಲ. ತನ್ನ ಏಕಮಾತ್ರ ಗುರಿ ಮನೆ ಸೇರಿ, ನೆಂಟರನ್ನು ಸಮಾಧಾನಗೊಳಿಸುವುದಾಗಿತ್ತು.

ತನ್ನ ಸ್ನೇಹಿತರೆನ್ನೆಲ್ಲ ಅಲ್ಲೇ ಬಿಟ್ಟು ಮನೆ ಸೇರಿದನು. ಆ ನೆಂಟರು ಈ ಹುಡುಗನ ದುಮ್ಮಾನವನ್ನು ತಿಳಿದು, ಅವನು ಮಾಡಿದ ತಪ್ಪಿಗಾಗಿ ಪಟ್ಟ ಪಶ್ಚಾತ್ತಾಪದ ಬೆಗ್ಗೆ ಸರಿಯಾಗಿ ಅರಿತು, ಜೀನಿಗೆ ಭರವಸೆಯ ಮಾತುಗಳನ್ನಾಡಿದರು. ಅವನ ತಪ್ಪನ್ನು ಕ್ಷಮಿಸುವುದಲ್ಲದೇ, ಅವನಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದರಲ್ಲಿ ಸಹಾಯಕರಾದರು.

ಈ ದೃಷ್ಟಾಂತದ ಒಳಾರ್ಥವನ್ನು ಗಮನಿಸೋಣ. ಸಾಮಾನ್ಯವಾಗಿ ನಮ್ಮಲ್ಲಿರುವ ಜೀವಾತ್ಮನ ಪರಿಸ್ಥಿತಿಯೂ ದೃಷ್ಟಾಂತದಲ್ಲಿನ ಜೀಗೆ ಹೋಲಿತ್ತದೆ. ದೃಷ್ಟಾಂತದ ಕ ಇತ್ಯಾದಿ ಆರು ಸ್ನೇಹಿತರು ನಮ್ಮ ಪಂಚೇಂದ್ರಿಯಗಳು ಹಾಗೂ ನಮ್ಮ ಮನಸ್ಸು. ಮನೆಗೆ ಬಂದ ನೆಂಟನೇ ನಮ್ಮ ಹೃದಯದೊಳಗಿರುವ ಪರಮಾತ್ಮ. ಕಠೋಪನಿಷತ್ ಹೇಳುವಂತೆ ಪರಾಂಚಿಖಾನಿ ವ್ಯತೃಣತ್ ಪರಾನ್ ಪಶ್ಯಂತಿ ನಾಂತರಾತ್ಮನ್ ಎಂದರೆ ನಮ್ಮ ಮನಸ್ಸು ಹಾಗು ಇಂದ್ರಿಯಗಳು ಸ್ವಾಭಾವಿಕವಾಗಿ ಹೊರಕ್ಕೇ ಹರಿಯುವುದು. ಅವುಗಳು ನಮ್ಮಲ್ಲಿರುವ ಅಂತರಾತ್ಮವನ್ನು ನೋಡುವುದಿಲ್ಲ. ಒಂದೊಂದು ಇಂದ್ರಿಯವೂ ಮನಸ್ಸಿನ ಸಹಾಯದಿಂದ ಜೀವಾತ್ಮನನ್ನು ವಿಷಯ ಭೋಗದಲ್ಲಿ ಮುಳುಗಿ ನಾಶವಾಗುವಂತೆ ಪ್ರೇರೇಪಿಸುವುದೇ ಅಲ್ಲದೆ ತನ್ನ ನಿಜಸ್ವರೂಪವನ್ನೇ ಮರೆತು ಬಿಡುವಂತೆ ಮಾಡುತ್ತವೆ.

ಈ ಜಗದ ಜಂಜಾಟದಲ್ಲಿ ತೊಳಲಿ ಬೆಂಡಾಗಿ ನಮ್ಮೆಲ್ಲ ಶಕ್ತಿಯು ಉಡುಗಿ ಹೋದ ಮೇಲೆ ಜೀವನದ ನಿಸ್ಸಾರತ್ವ ತಿಳಿಯುತ್ತದೆ. ಆದರೆ ಆ ವೇಳೆಗೆ ನಮ್ಮ ದೇಹ-ಮನಸುಗಳು ಮತ್ತಿನ್ನೇನೂ ಸಾಧಿಸಲಾಗದಂತಾಗಿ, ಜೀವನವನ್ನು ವ್ಯರ್ಥವಾಗಿ ಕಳೆದುದಕ್ಕೆ ಪರಿತಪಿಸುವಂತಾಗಿರುತ್ತದೆ. ಹಾಗಾಗದಂತೆ ನಮ್ಮಲ್ಲಿ ಶಕ್ತಿಯಿರುವಾಗಲೇ ನಮ್ಮ ನಿಜನೆಂಟನಾದ ಭಗವಂತನೆಡೆಗೆ ನಮ್ಮ ಜೀವನ ಸಾಗುವಂತೆ ಇಂದ್ರಿಯ ಮನಸ್ಸುಗಳನ್ನು ತಯಾರಿಗೊಳಿಸಿಕೊಂಡು ಜೀವನ ಪಾವನ ಮಾಡಿಕೊಳ್ಳುವುದು ಸೂಕ್ತ.
     *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ