ಕುರುಬರ ಕುರಿತು

ನೃತ್ಯ ರೂಪಕ- ಡಾ || ರಾಜಪ್ಪ ದಳವಾಯಿ

        - ೧ -

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

ಜಾತಿವಾದವ ದೂರವಿಟ್ಟು
ಜಾತಿ ಕೀಳರಿಮೆ ಬಿಟ್ಟು
ಲೋಕ ಧೈರ್‍ಯ ಸ್ಥೈರ್‍ಯಕೆ
ಮೂಕರಾದವರ ವಾಕ್ಯಕೆ ||

ನಮ್ಮ ಹಿರಿಮೆಯ ಸ್ಮರಣೆಯು
ಮುಗ್ದ ಜನರ ಕರುಣೆಯು
ಜನದ ನಡತೆಯೆ ಕನ್ನಡಿ
ಜಗದಸ್ವಾಸ್ಥ್ಯದ ಮುನ್ನುಡಿ ||

        - ೨ -

ಕುರುಬರೆನ್ನುತ್ತಾರೆ ನಮಗೆ ಕುರುಬರೆನ್ನುತ್ತಾರೆ
ಕಾಯುವವ ಕೊಲ್ವನಲ್ಲ ಕುರುಬನೆಂದರೆ ||

ಕುರಿ ಕಾಯ್ವ ಕಾರಣಕೆ ನಾವು ಕುರುಬರು
ದಡ್ಡರೆಂದು ನಮಗೆ ಹೇಳಿದವರು ಯಾರು ?
ಅಲ್ಲಣ್ಣ ನಾವು ಅದು ಖರೆ ಅಲ್ಲವಣ್ಣ
ನಮ್ಮ ಬುದ್ದಿ ಜಗದ ಹಿತಕೆ ಬೇಕೆಬೇಕಣ್ಣ ||

ಹಾಲುಮತದವರು ಎನ್ನುತಾರೆ ಹಾಲುಮತ
ಹಾಲಿನಂಥ ಮನಸು ಎಂಬುದು ಅದರರ್ಥ
ಕುರಿ ಹಾಲು ಮಂದೆ ಕಂಬಳಿ ಕೈಕಸುಬು
ಬೆವರು ಬಲ ನ್ಯಾಯ ನೀತಿ ನಮ್ಮ ಕಸುವು ||

        - ೩ -

ಪುರಾಣವುಂಟು ನಮಗೆ
ಭೂಮಿಗೆ ಬಂದೆವ್ಹೇಗೆ ||

ರುದ್ರ ವಿಲಾಸ ಪ್ರೇಮೋಲ್ಲಾಸ
ಗಿರಿಜೆ ಶಂಕರರ ಮಂದಹಾಸ
ತಾಂಡವ ಮೂರುತಿ ಲಯವಂತ
ಪ್ರೇಮ ಕರುಣೆಯ ಗುಣವಂತ ||

ಗಿರಿಜೆ ಶಂಕರರ ಶುಭವಿವಾಹ
ಧಾರೆಗೆ ಕೈಕೈ ಸತಿಪತಿಯ
ನೆರೆದಿಹ ದೇವತಾ ಸಮೂಹ
ಸಾಕ್ಷಿಗೆಲ್ಲ ಕ್ಷೀರ ಸುರಿಯೆ ||

ಮದುವೆಗೆ ಎರೆದ ಹಾಲನು
ಗಿರಿಜೆ ಮೊಗ ನೋಡಿ ಮರೆತನು
ಸುರಿಯಿತು ಧಾರೆ ಭೂಮಿಗೆ
ಕಾರಣವದು ನಮ್ಮ ಹುಟ್ಟಿಗೆ ||

        - ೪ -

ಮತ್ತೊಂದು ಕಥೆಯುಂಟು
ಶಿವಶಿವೆಯರ ವನದ ನಂಟು ||

ವನಬಳಲಿಕೆಯಿಂದ
ಶಿವೆಸ್ತನಗಳಿಂದ
ಸುರಿಯಿತು ಎದೆ ಹಾಲು
ಎಲ್ಲದೂ ನೆಲಪಾಲು ||

ಭೂಮಿಯ ಎದೆಹಾಲು
ಆಗದು ಮಣ್ಣಪಾಲು
ಮನ ಚಿಂತೆಯ ಶಂಕರ
ಹಿಡಿ ಮಣ್ಣಿಂದ ಚಿತ್ತಾರ ||

ಮುದ್ದಪ್ಪ ಮುದ್ದವ್ವ
ಗಂಡೆಣ್ಣು ಗೊಂಬೆರಡು
ದಿಟ್ಟಿಯಲಿ ಸೃಷ್ಟಿಸಿದ
ಭುವಿಯತ್ತ ಕಳುಹಿಸಿದ ||

ಶಂಕರ ಲೀಲಾ ವಿಲಾಸ
ನೆಲ ನೆರೆ ಹಾಲ ಮಾನಸ
ಹಾಲಾಹಲ ನುಂಗಿಬಿಟ್ಟ
ಜಗಕಮೃತವನೆ ಕೊಟ್ಟ ||

ಆ ಹಾಲು ಕುಡಿಯಲು ಬಂದೆವು
ಆ ಹಾಲು ಕಡೆಯಲು ಬಂದೆವು
ಆ ಹಾಲು ಬೆಳೆಯಲು ಬಂದೆವು
ಆ ಹಾಲು ಸಲಹಲು ಬಂದೆವು

ಕುರಿ ಕಾಯುವ ಮಂದಿ
ಹಾಲೆರೆಯಲು ಬಂದಿವಿ
ಲೋಕದಾ ಕೋಲಾಹಲ
ಮಾಡುವೆವು ಕೋಮಲ ||

        - ೫ -

ಕುರುಬರೆಂಬುದಕೆ ಪರ್ಯಾಯ ಹಲವುಂಟು
ಹಾಲುಮತೆವೆಂದು ಹೆಚ್ಚು ಚಾಲ್ತಿಯುಂಟು ||

ಕುರಿ ಪಾಲನೆ, ಪಶು ಪಾಲನೆ, ಹಾಲು ಪಾಲನೆ
ಎತ್ತರದ ಬೆಟ್ಟದಲಿ ವಾಸದವನೆಂಬ ಸ್ಪಷ್ಟನೆ
ಹೆಸರುಂಟು ದೇಶ ತುಂಬ ಬೇರೆ ಬೇರೆ
ಕುರುಬರು ಕುರುಬವಾಳು ಕುರುಂಬನ್ ಇರುಳಿಗರ್‍
ಇಡೈಯರ್‍ ಕುರುಂಬರನ್ ಹಟ್ಟಿಕಾರ ಪಾಲ್ ಧನಗರ್‍ ||

ಆರ್ಯ ಪೂರ್ವದ ಜನರು ನಾವು
ಶತಮಾನದವೆರಡರಲಿ ಟಾಲೆಮಿ ಬರೆದ
ಪಾಲಿ ಗ್ರಂಥಗಳಲುಂಟು ಉಲ್ಲೇಖ
ಅಂಧ ಅಂಧಕ ಅಂಡರರೆಂದೆಲ್ಲಾ ||

ಅಂಧಕ ವೃಷ್ಟಿಯೆಂಬೊಂದು ಹೆಸರು
ಟಗರು ಸಾಕುವರೆಂದಿದರ ಬೆಡಗು
ಸಿಲಪ್ಪದಿಕಾರಂನ ಇಡೆಯರ್‍ ಅಂಡರ್‍
ನಾವೆ ನಾವಲ್ಲಿಯ ಕುರುಂಬನ್ ವಡುಗರ್‍ ||

ಶತಮಾನ ಮೂರರಲಿ ತಮಿಳು ಕಾವ್ಯಗಳ
ಹಟ್ಟಿಕಾರ ಕುಲನಿಲಮನ್ನೆಯರ್‌ಗಳು
ಇವರು ಟಂಕಿಪ ನಾಣ್ಯಗಳೆ ಪ್ರಾಚೀನವು
ದಕ್ಷಿಣದ ನಾಡವರು ಆಳರಸರವು ||

ಉತ್ತರದಿ ಆಹೀರರು ಯಾದವರು
ಗಢರಿಯಾ ಪಾಲರು ರಾಜ್ಯವಾಳಿದರು
ಪಂಜಾಬ ಬಂಗಾಲ ರಾಜಾಸ್ತಾನ
ಇಂದ್ರಪ್ರಸ್ಥ ಕನೂಜ ಹಿಂದೂಸ್ತಾನ ||

ಕನ್ನಡ ಸಿರಿ ಮುಕುಟ ವಿಜಯನಗರ
ಮೂಲ ವಂಶಜರಲ್ಲಿ ಹಕ್ಕಬುಕ್ಕರು
ಮುಂದೆ ಆಳಿದ ರಾಜರಿಗೆ ಲೆಕ್ಕವಿಲ್ಲ
ಇವರ ಬಗೆಗೆ ಖಚಿತ ಚರಿತ್ರೆಯಿಲ್ಲ ||

ಆಳರಸರ ಚರಿತೆ ಕವಿ ಕೋಗಿಲೆ
ವಿಚಾರತೆಯಲ್ಲಿ ಕುದಿ ಬಾಂಡಲೆ
ಕಾಳಿದಾಸ ಕನಕದಾಸರೀರ್ವರು
ನಮ್ಮ ಬುದ್ದಿಶಕ್ತಿಯ ಧಾತರು ||

        - ೬ -

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದಿ ಸಾಹಿತ್ಯಶ್ರೀ ||

ಹೊಸದೃಷ್ಟಿ ಶಿವಶಕ್ತಿ ಬೆಸೆದ ಪ್ರತಿಭೆ
ಕಾಣದ್ದ ಕಂಡಂತೆ ಶಿವನ ಪ್ರಭೆ
ನವ ನೋನ್ಮೇಷ ಜಗದ ಬೆಳಕು
ಕಾವ್ಯ ಸೂರ್ಯನವನು ಎಲ್ಲ ದಿನಕು ||

ಹೂವು ಬೆಂಕಿಯ ಮಾಲೆಯ ಮಾಡಿ
ಪ್ರೀತಿ ಬಿತ್ತಿದ ಜಗಕೆ ನೋಡಿ
ಅಗ್ನಿಮಿತ್ರನು ಒಲಿದ ಮಾಲವಿಕೆಗೆ
ಮೋಹವೇ ಗೆದ್ದ ಕತೆಯು ಕೊನೆಗೆ ||

ದೇವತಾಶ್ರೀ ಊರ್ವಶಿ ಸುರಸುಂದರಿ
ಸಗ್ಗಕೇ ಹುಚ್ಚಿಡಿಸಿದ ಕಲಾಮಂಜರಿ ||

ಮುಗಿಲ ಕನ್ಯೆ ಪ್ರೇಮಿಸಿದಳು ಅಬ್ಬಬ್ಬಾ
ಮನುಜೇಂದ್ರ ಪುರೂವನ್ನು ಮನದಬ್ಬ
ನೆಲಮುಗಿಲ ಪ್ರೇಮದಲೆ ಬೆಸೆದನಲ್ಲ
ಇಂಥ ಕವಿಗೆ ಮತ್ತೊಬ್ಬ ಸಾಟಿಯಿಲ್ಲ ||

ಜಗದ ಮೇರು ಕೃತಿ ಶಾಕುಂತಲ
ಕಣ್ವಾಶ್ರಮದ ಮುಗುದೆಯಲ ||

ಬಂದನರಸ ದುಶ್ಯಂತ ಬೇಟೆಗೆಂದು
ಬೇಟವೇ ಬೆಸೆಯಿತು ಅವರನಂದು
ಕೊಟ್ಟನವನು ಆಹಾ! ನೆನಪಿನುಂಗುರ
ಬಾಲೆಯ ಎದೆಯೆಲ್ಲ ಕನಸಿನಂಬರ ||

ಮುನಿ ಮುನಿದ ಕಾರಣ
ಪ್ರಿಯನಲ್ಲಿ ರಾಜಕಾರಣ
ಮರೆತು ಮುಗುದೆಗೆ ಹಿಂಸೆ
ಶಾಪ ಕೂಪದಲಿ ನರಳಿಸೆ ||

ಅಮರ ಪ್ರೇಮದ ಕಾವ್ಯ
ಇಂದಿಗೂ ನವ ನವ್ಯ
ಪ್ರೇಮ ಪರಿಕಿಪ ಚಾಪ
ವಿರಹಾಗ್ನಿ ಎಸೆದ ಧೂಪ ||

ಸಕಲ ರಾಮಾಯಣದ ಮೊರೆ
ರಘುವಂಶ ಚರಿತದ ತಾರೆ
ಹಲವು ರಾಜರ ವರ್ಣನ
ಕಾವ್ಯ ಮಹತಿನ ಕರ್ಷಣ

ಸನ್ಯಾಸಿ ಶಿವನು ಸಂಸಾರಿಯಾದ
ಕಾರಣವದಕೆ ಕುಮಾರ ಸಂಭವಂ
ಮೋಹಿತರು ಶಿವ ಪಾರ್ವತಿ
ಸೃಷ್ಟಿಲಯ ಉದಯ ಜಗಕೆ ||

ತಪ್ಪು ಮಾಡಿದ ಯಕ್ಷ ಶಾಪಕೆ
ಕುಬೇರನ ತೊರೆದು ಬಹುದೂರಕೆ
ವಿರಹಿ ಯಕ್ಷ ಕಳಿಸಿ ಸಂದೇಶವ
ಮೇಘಗಳ ಕೈಲಿ ವಿರಹೋತ್ಸವ ||

ಪ್ರೇಮಿಗೆ ಕಾಮಿಗೆ ಮತ್ತೆ ವಿರಹಿಗೆ
ಋತು ಸಂಹಾರ ಚಿತ್ತ ಕೇಡ ಬಗೆ
ಸ್ತ್ರೀರೂಪವೇ ರೂಪ ಭೋಗ ಬಾಳು
ಕುಣಿದು ನಲಿದವೆಲ್ಲಾ ಋತುಗಳು ||

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದೀ ಸಾಹಿತ್ಯಶ್ರೀ ||

        - ೭ -

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

ಗುರುವಿನ ಮೊದಲೆ ಮುಕ್ತಿಪ್ರಾಪ್ತರು
ಗುರುವಂದಿತ ಶಿಷ್ಯ ಮಹಾಮಹಿಮರು
ಸಜ್ಜನಿಕೆ ಸರಳತೆ ಯುದ್ಧತ್ಯಾಗದಿಂದ
ಕಲಿತ ಪಾಠವೆಲ್ಲ ಬಾಳ ಶಾಲೆಯಿಂದ ||

ವೇದವನೋದಿ ಜ್ಞಾನಿಯಾಗಿ
ಪುರಾಣಗಳ ಐರಾವತವನೇರಿ
ಹರಿಭಕ್ತನಾಗಿ ಊರೂರನಲೆದು
ಕಾಗಿನೆಲೆಯಾದಿಕೇಶವನೊಲಿದು ||

ವ್ಯಾಸಕೂಟದಲ್ಲೆ ದಾಸಶ್ರೇಷ್ಠ
ಉಡುಪಿ ಕೃಷ್ಣಗೆ ಪವಾಡಪುರುಷ
ತಿರುಪತಿಯಲ್ಲೇ ವೈಕುಂಠ ಕಂಡ
ಕುಲ ಕುಲಕುವೆಂದವರ ಮಿಂಡ ||

ದಾಸರಲ್ಲೆ ಮಹಿಮ ಕವಿ ತಿಲಕ
ಲೇಖನಿ ಚಿತ್ರಿಸಿತು ಸಾರ ಹರಿಭಕ್ತಿ
ಕೃಷ್ಣಮಹಿಮೆ ಮೋಹನ ತರಂಗಿಣಿ
ನಳ ಚರಿತ್ರೆಯ ಪ್ರೇಮದ ದೋಣಿ ||

ಮಹಾಕೃತಿ ರಾಮಧಾನ್ಯ ಚರಿತದೊಳು
ರಾಗಿ ಭತ್ತಗಳ ಕಸುವಿನ ಜಗಳ
ಬಡವರನುರಾಗಿ ಬಲ್ಲಿದರ ನಿಲ ಹೋಗಿ
ರಾಮ ನೀಡಿದ ಪದವಿ ರಾಗಿ ಯೋಗಿ ||

ಮತಿಗೆ ನಿಶಿತ ಕೀರುತನೆ ತಂಬೂರಿ
ಲೋಕದ ಡೊಂಕನು ತೋರಿದ ದಾರಿ
ಕನಕ ಕನಕ ಅಯ್ಯಾ ಕನಕಯ್ಯ
ಇಂದಿಗು ಕುಲ ಕುಲವೆನ್ನುತಿಹರಯ್ಯ ||

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

        - ೮ -

ಬಿಳಿಯರ ವಿರುದ್ಧ ತಮ್ಮ ಉಳಿವಿಗೆ
ಹೋರಾಡಿ ಮಡಿದರಲ್ಲ ತಮ್ಮ ಇಂದೂರಿಗೆ ||

ಧನಗರ ರಾಜವಂಶವು ಮಧ್ಯ ಭಾರತದಿ
ಮಲಾರಿರಾವು ಅಹಲ್ಯಬಾಯಿ ಹೋಳ್ಕರ್‍ ಛಲದಿ
ದತ್ತಕ ಸಂಬಂಧಿ ಕಾನೂನು ವಿರೋಧಿ
ಬಂಡಾಯವೆದ್ದರು ಬಿಳಿಯರ ವಿರುದ್ಧದಿ ||

ಇತಿಹಾಸ ಪುಟಗಳಲಿ ಮಡಿದ ಧ್ರುವತಾರೆಗಳು
ಕರಣಿಕರ ಬರಹವಿರದ ಹಲ ಘಟನೆಗಳು
ಹೋರಾಟವನೆ ಮಾಡಿ ಜೀವ ಬಲಿ ಕೊಟ್ಟರು
ಅವರಿವರ ವಂಚನೆಗೆ ಹರಕೆ ಕುರಿಯಾದವರು ||

        - ೯ -

ವೀರ ಸಂಗೊಳ್ಳಿ ರಾಯಣ್ಣನೆಂಬ ಸರದಾರ
ಅವನ ಧೀರತೆಗೆ ಬೆಚ್ಚಿತೊ ಬಿಳಿ ಸರಕಾರ ||

ಕಿತ್ತೂರ ವಶಮಾಡಿ ಕಿರಿದೊರೆಯ ಪಟ್ಟ
ಮಾಡೆ ತೀರುವೆನೆಂದು ರಾಯಣ್ಣನ ಪಟ್ಟು
ಅದಕೆ ಅವ ಮೆರೆದ ಧೀರ ಸಾಹಸವ
ರಾಯಣ್ಣನೆಂಥಾ ಶೂರ ಸಿಂಹ ಶಕ್ತಿಯವ ||

ಗೆಳೆಯ ಗಜವೀರ ಸಿದ್ಧಿ ಸೈತನಾಗಿ
ಬಿಡಿ ತಾಲ್ಲೂಕ ಖಾನಾಪುರ ಸಂಪಗಾವಿಗೆ
ಬಿಚ್ಚುಗತ್ತಿ ಚನಬಸಯ್ಯ ಜತೆಗೂಡಿ
ಮುತ್ತಿಗೆ ಹಾಕು ಸುಟ್ಟರಲ್ಲ ಕಛೇರಿ ನೋಡಿ ||

ರಾಯಣ್ಣನ ಹಿಡಿದವರಿಗೆ ಮುನ್ನೂರು ರೂಪೈ
ಮೇಜರ್‍ ಪಿಕರಿಂಗ್ನ ಘೋಷಣ ಜನಕೆ ದುರಾಸೈ
ಅಮಲ್ದಾರ ಕೃಷ್ಣರಾಯ ಮಾಡಿ ಕುತಂತ್ರ
ಪಟೇಲ ಲಿಂಗನ ವೆಂಕನ ಗೌಡರಹತ್ರ ||

ಪಟೇಲರಿಬ್ಬರೂ ನಿಷ್ಠದಿನೈದು ದಿನ ರಾಯಣ್ಣಗ
ಅಣ್ಣನ ಬಂಟ ಲಖ್ಯಾನ ಮೂಲ್ಕ ಹಿಕ್ಮತ್ತಿಗ
ಹೊಳೇಲಿ ಸ್ನಾನ ಮಾಡುವಾಗ ಹಿಡಕೊಟ್ರೊ ಹುಲಿಯ
ಪಡೆದರಲ್ಲೊ ಘನಕಾರ್‍ಯಕ್ಕೆ ಮುನ್ನೂರುಪಾಯ ||

ಹಗ್ಗದ ಮಂಚಕೆ ಧೀರನ್ನ ಕಟ್ಟಿ ಹೊಯ್ದರ
ಧಾರ್‍ವಾಡಕೆ ನಿಸ್ಬತೆಂಬ ಕಲೆಕ್ಟರ್‍ ಹತ್ತಿರ
ಕಿತ್ತೂರ ನಾಡ ಬಿಡುಗಡೆಗೆ ತೊಡಗಿದಕೆ
ರಾಯಣನ ಅಪರಾಧೀನ ಮಾಡಿದರಾ ||

ಇಂಥಾ ಸೊರಗೆ ಸಂಪಗಾವಿಲಿ ನೇಣು
ಸರಕಾರಕ್ಯಾರೂ ಎದುರಾಡದಂತೆ ಗೋಣು
ಎಚ್ಚರಿಕೆ ಕೊಟ್ಟರೊ ಜನಕೆ ಅಣ್ಣಾ
ಕಿತ್ತೂರಿನ ಸಂಸ್ಥಾನ ಆಯಿತೊ ಮಣ್ಣಾ ||

ರಾಯಣ್ಣನಂಥ ಕಲಿ ಅದೆಂಥಾ ತಲಿ
ಐರಾಣವಾತು ಬಾಳು ಕಿತ್ತೂರಿಗಾಗಲ್ರಿ
ನಮಕ್ಕ ಹರಾಮರ ಸಪೋರ್ಟದಿಂದಲಿ
ಆದಾನಲ್ಲ ಬಲಿ!  ಅವನೆಂಥ ಕಲಿ ||

ವೀರ ರಾಯಣ್ಣನೆಂಥಾ ಸರದಾರ
ಮೆಚ್ಚಿ ಮಂದಿ ಹರಕೆ ಹೊರತಾರ
ಹುಟ್ಟೊ ಕಂದ ರಾಯಣನಾಗಲೆಂದು
ನಂಬೋದೆಂಗಣ್ಣ ಧೀರಾ ಸತ್ತನೆಂದು ||

        - ೧೦ -

ಗಾಂಧಿ ಕಾಲಕೆ ಮತ್ತೊಬ್ಬನಿದ್ದನಣ್ಣ
ತಳ ಹಾವೇರಿ ತಾಲುಕ ಸಂಗೂರಣ್ಣ
ಹೆಸರು ಕರಿಯಪ್ಪ ಸಂಗೂರನಂತಾ
ಕೇಳಿ ಮಂದಿ ಅವನ ಕಥಾನ ಕುಂತಾ ||

ಮೂಲ್ಕಿ ಪರೀಕ್ಷೆ ಪಾಸಾದ ಯುವಕ
ಓದಹತ್ತಿದ ಪತ್ರಿಕೆ ಗಾಂಧಿ ತಿಲಕ
ಇಪ್ಪತ್ತಾರನೆ ಇಸವಿಗೆ ತೊಟ್ಟ ಖಾದಿ
ಗುಮಾಸ್ತಗಿರಿ ಬಿಟ್ಟ ಕರೆಗೆ ಗಾಂಧಿ ||

ಸಿರಸಿ ಸಿದ್ಧಾಪುರ ಕರನಿರಾಕರಣದಾಗೆ
ಸಜೆ ಬಿದ್ದ ಮೂವತ್ತು ತಿಂಗಳ ಭಾಗಿ
ಕಾರವಾರ ವಿಸಾಪುರ ಜೈಲಿನೊಳಗ
ಗಾಂಧಿ ತರ ಮಾಡಿದ ಕೆಲಸ ಭಂಗಿ ||

ಮುವತ್ನಾಲ್ಕನೆ ಇಸವಿ ಬಿಡುಗಡೆಯಾದ
ಹುಬ್ಬಳ್ಳಿ ಶಹರದ ಬಾಲಿಕಾಶ್ರಮದ
ಹರಿಜನ ಕುಂಟು ಕನ್ಯೆ ಮದಿವ್ಯಾದ
ಗಾಂಧಿ ಸನಿಹ ಹೊಂಟರಿಬ್ಬರೂ ವಾರ್ಧಾ ||

ಗಾಂಧಿ ಸಹಚರ್ಯ ಸಿಕ್ಕ ಅದೃಷ್ಟ
"ಮೂಕ ಸೇವಕ"ರೆಂದಿವರು ಗಾಂಧಿಗಿಷ್ಟ
ಜೊತೆಗೆ ಜೇಸಿ ಕುಮಾರಪ್ಪ
ಗ್ರಾಮ ಸೇವಾ ನಿರತರಾದಲ್ಲಪ್ಪ ||

ಬಂದಿತಲ್ಲ ಕ್ವಿಟ್ ಇಂಡಿಯಾ ಚಳವಳಿ
ಮಾಡು ಇಲ್ಲವೇ ಮಡಿ ಎಂಬ ಬಳುವಳಿ
ಮೈಲಾರ ಮಹಾದೇವ ತಿಮ್ಮನಗೌಡ
ಹಂಸಭಾವಿ ರಾಮಣ್ಣರ ಜೊತೆಗೂಡಿ ||

ಕಾಡುಮೇಡು ನದಿ ತೀರದಡವಿ
ಧ್ವಂಸಮಾಡಿ ಸರಕಾರವ ಕೊಡವಿ
ನಿಗದಿ ನೆಲೆ ನೆಮ್ಮದಿಲ್ಲ ಊಟ
ದಿನಬೆಳಗಾದರೆ ಪೋಲೀಸ ಕಾಟ ||

ಕರಿಯಪ್ಪ ಕೊಟ್ಟ ಬೆಲೆ ಗಾಂಧಿಗೆ
ಗ್ರಾಮೋದ್ಧಾರದ ಪಾಠದ ಮತಿಗೆ
ಮಾಡಿ ಮಡಿಯುವಾ ಉಗ್ರತೆಗೆ
ಕರಿಯಪ್ಪನಂದೆಂಥ ತ್ಯಾಗ ಜತಿಗೆ ||

ಶಾಂತಿ ಶಿಸ್ತಿನ ಸಿಪಾಯಿಗೆ
ನಿತ್ಯ ಗ್ರಾಮದ ಸಫಾಯಿಗೆ
ಸಿಟ್ಟಿಗೆ ಬಾಂಬು ಮಾಡಲೋಗಿ
ಮುಂಗೈಯೇ ಹಾರಿ ಹೋಗಿ ||

        - ೧೧ -

ಸಹಕಾರ ಚಳವಳಿ ಕತೆಯು
ಕಾರಣವದಕೆ ಕಂಬಳಿಯು
ಮೊದಲಿಗೆ ಗದಗಾದಲ್ಲಿ
ಮಾದರಿಯದು ದೇಶದಲ್ಲಿ ||

ಸಿದ್ದನಗೌಡ ಪಾಟೀಲಜ್ಜ
ಸಹಕಾರಿ ಪಿತನಾದನಲ್ಲ
ಸಿರಿವಂತ ತಿಳಿದು ಬಾಳುವ
ತತ್ವವೊಂದ ಕೊಟ್ಟನಲ್ಲ ||

ಇದಕೆ ಬೇಕು ದೊಡ್ಡ ಗುಣವು
ಹಂಚಿ ಉಂಡ ಜನರು ನಾವು
ಕೂಡಿಟ್ಟು ಏನ ಒಯ್ದೆವು
ಬಡತನಕೆ ಸಾವು ತಂದೆವು ||

        - ೧೨ -

ಚರಿತೆಯ ಪುಟದಾ ಹೆಮ್ಮೆಗೆ
ಬದುಕುವ ಸಂಸ್ಕೃತಿ ಹಿರಿಮೆಗೆ
ಘನತೆ ಗೌರವದ ಬಾಳಿಗೆ
ಹೆಸರಾಗಿದೆ ನಮ್ಮಯ ಒಳಿತಿಗೆ ||

ನಮ್ಮ ಜನಗಳ ಚಾರಿತ್ರ್‍ಯ
ಬದುಕಿ ಮಾದರಿ ಪಾವಿತ್ರ್‍ಯ
ಹಾಲು ಕೆಟ್ಟರೂ ಹಾಲುಮತ
ಕೆಡದೆಂಬುದು ನೋಡ ಜನಮತ ||

ಬಿತ್ತಲಿ ಬೆಳೆಯಲಿ ಕೊಯ್ಲಿಗೆ
ಕರೆದರು ಜನರೆಲ್ಲ ಬೋಣಿಗೆ
ಮೊದಲ ಪೂಜೆ ಲಾಭ ವ್ಯಾಪಾರಿಗೆ
ಎಲ್ಲೆಲ್ಲೂ ಮಾನ್ಯತೆ ಕುರುಬರಿಗೆ ||

ಮುಗ್ಧತೆ ಇದ್ದಂಥೆ ಅಂಧಶ್ರದ್ಧೆ
ಹೊಸದನು ಕಾಣದ ಮಾಯಾನಿದ್ದೆ
ಕವಿದಿದೆ ನಮ್ಮಯ ಜನರನ್ನ
ಹುಡುಕಬೇಕು ಹೊಸ ಸೂರ್ಯನ್ನ ||

ನಮ್ಮಲ್ಲೂ ಇಹರು ಕೆಟ್ಟವರು
ಕೊಳ್ಳೆ ಲೂಟಿಯಿಂದ ದೊಡ್ಡವರು
ನಮಗಿಂದು ಬೇಕು ಒಳಿತು ಕೇಡು
ಅರಿತಾಗ ಬದುಕು ಹಸನೋಡು ||

ಬೆವರಿಗೆ ಬೆಲೆಯು ಸಿಗಬೇಕು
ಸರುವರ ಸಮನಾಗಿ ನಿಲಬೇಕು
ಕುರುಬರೆಂದರೆ ದಡ್ಡರಲ್ಲ
ಮಾನ್ಯರವರು ಸಮಾಜದಲ್ಲೆಲ್ಲ ||

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ