ಪಾರಿವಾಳ ಮತ್ತು ಮನುಷ್ಯ

- ಅಬ್ಬಾಸ್ ಮೇಲಿನಮನಿ

ಆ ಊರು ಪ್ರಕ್ಷುಬ್ಧವಾಗಿತ್ತು.  ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು.  ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು.  ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾಡುತ್ತಿದ್ದವು.  ಒಂದಿಷ್ಟು ದಿನ ಶಾಂತ ವಾತಾವರಣ ನೆಲೆಸಿದ್ದರೆ ಧರ್ಮಾಂಧರ ಮನಸ್ಸುಗಳಿಗೆ ಕಸಿವಿಸಿ ಆಗುವುದು.  ಮೈಗಳ್ಳರು, ಪುಂಡ ಪೋಕರಿಗಳು, ಹರಾಮಿ ಗಬ್ಬು ಗೌಲಿನ ಆಸೆಬುರುಕರು ಆಯಾ ಧರ್ಮಗಳ ಲಾಂಛನ ಧರಿಸಿ ಭಯೋತ್ಪಾದಕ ತಲ್ಲಣ ಹುಟ್ಟಿಸುವುದರಿಂದ ದೇವರು, ಧರ್ಮಗಳೇ ನಡುಗ ತೊಡಗಿದ್ದರಿಂದ ಅಮಾಯಕರ ಆರ್ತತೆಯನ್ನು ಕೇಳುವವರೆ ಇರಲಿಲ್ಲ.

ಉರಿಯುವ ಮನೆಯಂಗಳ ಹಿರಿದುಕೊಳ್ಳುವ ಕ್ಷುದ್ರ ಚಾಳಿಯ ರಾಜಕಾರಣಿಗಳಿಂದ ಸೈತಾನರ ಅಟ್ಟಹಾಸ ಹಗಲೆಂಬೊ ಹಗಲನ್ನು, ರಾತ್ರಿಯೆಂಬೊ ರಾತ್ರಿಯನ್ನು ಭಯಾನಕಗೊಳಿಸಿದ್ದವು.  ಇವರೊಂದಿಗೆ ಕೈಜೋಡಿಸಿದಂತೆ ವದಂತಿ ಎಂಬ ಖೋಜಾ ಮಿಥ್ಯದ ಸಂಗತಿಗಳಿಗೆ ಜೀವದುಂಬಿ, ಬಣ್ಣತುಂಬಿ ಮನುಷ್ಯ ಸಂಬಂಧಗಳ ಮೇಲೆ, ಮಾನವೀಯತೆಯ ಮೇಲೆ ಗದಾ ಪ್ರಹಾರ ಮಾಡುತ್ತಲೇ ಚಾಕು, ಚೂರಿ, ಹತ್ಯಾರ-ತ್ರಿಶೂಲ, ಬಂದೂಕು-ಬಾಂಬು, ಆಸಿಡ್ಡು-ಚೈನು, ಹಿಂದೂ-ಮುಸ್ಲಿಮ, ಜೈನ-ಬೌದ್ಧ, ಕ್ರೈಸ್ತ-ಸಿಖ್, ಪಾರಸಿಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದ್ದವು.  ಧರ್ಮಗಳ ಗುತ್ತಿಗೆದಾರರು ಸತ್ತವರಲ್ಲಿ ಯಾರು ಹೆಚ್ಚುಯೆಂದು ಲೆಕ್ಕವಿಡುತ್ತಲೇ ಮತ್ಸರದ ಕೊಳ್ಳಿ ಉರಿಸುತ್ತಿದ್ದರು.

ಈ ಸಲದ ಗಲಭೆ ಭೀಕರವಾಗಿತ್ತು.  ಊರಿನ ಬೀದಿ ಬೀದಿಗಳಲ್ಲಿ ಪೋಲೀಸರ ಬೂಟು ಗಾಲಿನ ಸದ್ದು ಕೇಳಿಸುತ್ತಿತ್ತು.  ಜನರು ಮುಚ್ಚಿಕೊಂಡ ಬಾಗಿಲು ತೆರೆದು ಹೊರಬರುವ ಧೈರ್ಯ ತೋರಿರಲಿಲ್ಲ.  ಯಾರದೋ ಸ್ವಾರ್ಥಕ್ಕೆ ಅವರ ಬದುಕು ಹಿಂಸೆ ಅನುಭವಿಸತೊಡಗಿತ್ತು.  ಆದರೆ ಅವರೊಂದಿಗೆ ಗೂಡುಗಳಲ್ಲಿ ಬೆಚ್ಚಗಿರುತ್ತಿದ್ದ ಸುಂದರ ಪಾರಿವಾಳಗಳು ಮಾತ್ರ ಪ್ರಳಯಾಂತಕರ ಕ್ರೌರ್ಯ ಲೆಕ್ಕಿಸದೆ, ಪೋಲಿಸರ ಗುಂಡಿನ ಸದ್ದಿಗೆ ಧೈರ್ಯಗೆಡದೆ ಕರ್ಫ್ಯೂವನ್ನು ಉಲ್ಲಂಘಿಸಿ ನೆಲದಿಂದ ಆಕಾಶಕ್ಕೆ ಆಕಾಶದಿಂದ ನೆಲಕ್ಕೆ ಸ್ವಚ್ಛಂದವಾಗಿ ಹಾರಾಡಿಕೊಳ್ಳುತ್ತಿದ್ದವು.

ಪಾರಿವಾಳ ಸಾಕಿದ ಮನುಷ್ಯ ಕಿಟಕಿಯೊಳಗಿಂದಲೆ ಕಾಳು ತೂರಿ,

"ಪಾರಿವಾಳಗಳೇ, ಊರಲ್ಲಿ ಕರ್ಫ್ಯೂ ಇದೆ.  ನೀವು ಗೂಡು ಬಿಟ್ಟು ಹೋಗಬೇಡಿರಿ" ಎಂದಿದ್ದ.

"ನಮಗೆ ಬಂಧನ ಹಿಡಿಸುವುದಿಲ್ಲ ಹಾರುವುದು ನಮ್ಮ ಸಹಜ ಸ್ವಭಾವ."

"ಜನರ ಗಲಭೆ, ಗುಂಡಿನ ಸದ್ದು ನಿಮಗೆ ಭಯ ತರುವುದಿಲ್ಲವೆ?"

"ನಾವು ಮನುಷ್ಯರಂತಲ್ಲ."

"ಅಂದರೆ?"

"ಮನುಷ್ಯರು ಅತ್ಮತೃಪ್ತರು.  ಅವರಿಗೆ ಗಲಭೆ ಮುಖ್ಯ.  ನಮಗೆ ಶಾಂತಿ ಮುಖ್ಯ."

"ಊರು ಆತಂಕದಲ್ಲಿರುವಾಗ ನೀವು ಶಾಂತಿಯಿಂದ ಇರಲು ಹೇಗೆ ಸಾಧ್ಯ?"

"ನಮ್ಮಲ್ಲಿ ಮತೀಯ ಭಾವನೆ ಇಲ್ಲ ಅದಕ್ಕೆ."

"ನಾವೂ ನಿಮ್ಮಂತೆ ಇರಲು ಏಕೆ ಸಾಧ್ಯವಾಗುವುದಿಲ್ಲ?"

"ನಮಗೆ ಈ ಜಗತ್ತು ಒಂದೇ.  ಇಲ್ಲಿನ ಗಾಳಿ, ನೀರು, ಬೆಳಕು ಒಂದೆ.  ನಾವು ಅನೇಕ ಸಲ ಮಸೀದಿಯ ಮಿನಾರುಗಳಲ್ಲಿ ಕುಳಿತು ಇಮಾಮನ ಕುರ್‌ಆನ್ ಉಕ್ತಿ ಕೇಳುತ್ತೇವೆ.  ಮತ್ತೆ ಕೆಲವು ಸಲ ಮಂದಿರದ ಗೋಪುರದ ಮೇಲೆ ಕುಳಿತು ವೇದ ಉಪನಿಷತ್ತುಗಳ ಸಾರ ಅರಿಯುತ್ತೇವೆ.  ಇನ್ನೊಮ್ಮೆ ಚರ್ಚಿನ ಗಂಟೆಯ ಬಳಿ ಕುಳಿತು ಫಾದರನ ಪ್ರೀತಿಯ ಸ್ತುತಿ ಆಲಿಸುತ್ತೇವೆ.  ದೇವರು ದಯಾಮಯ.  ನಮಗೆ ಅಂಥ ಭಾಗ್ಯವನ್ನು ಕರುಣಿಸಿದ್ದಾರೆ" ಎಂದು ಪುರ್‍ರನೆ ಆಕಾಶದತ್ತ ಪಾರಿವಾಳ ಹಾರಿ ಹೋದವು.

ಕಿಟಕಿಯ ಸರಳುಗಳ ಹಿಂದೆ ನಿಂತ ಮನಷ್ಯ ಮುಖ ತಗ್ಗಿಸಿದ್ದ.

                        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ