ಸಣ್ಣ ಸಂಗತಿ

ಚಿತ್ರ: ಪ್ರಮೋದ್ ಪಿ ಟಿ
ಪ್ರಿಯ ಸಖಿ,
 
ಮೊನ್ನೆ ಕೆ. ಎಸ್. ನರಸಿಂಹಸ್ವಾಮಿಗಳ ‘ಸಣ್ಣ ಸಂಗತಿ’ ಎಂಬ ಒಂದು ಸುನೀತ (ಸಾನೆಟ್)ವನ್ನು ಓದುತ್ತಿದ್ದೆ.. ಕವನದ ಹೆಸರೇ ಸೂಚಿಸುವಂತೆ ಕವಿ ಅಲ್ಲಿ ಹಿಡಿದಿಟ್ಟ ಚಿತ್ರ ಅತ್ಯಂತ ಸಣ್ಣ ಸಂಗತಿ. ಆದರೆ ಅದರಲ್ಲಿರುವ ಧ್ವನಿ ಮಾತ್ರ ಮಹತ್ತರ ವಾದುದು. ಕವಿ ಚಿತ್ರಿಸಿರುವ ಆ ಸಣ್ಣ ಸಂಗತಿಯಾದರೋ ಇಷ್ಟೆ ಸೋನೆ ಮಳೆ ಹಿಡಿದ ನಡುರಾತ್ರಿ. ಇತ್ತ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲ್ಲಿ ಅರ್ಧ ಕಣ್ಣು ಮುಚ್ಚಿ ಮಲಗಿದೆ. ಅದೂ ಬರಿಮೈಲಿ. ನಿದ್ದೆಗಣ್ಣಿನಲ್ಲೇ ಪಕ್ಕದಲ್ಲಿರುವ ತಾಯಿ ಕೈನೀಡಿ ಹೊದಿಕೆಯನ್ನು ಸರಿಪಡಿಸಿದ್ದಾಳೆ. ಆದರೆ ಮಗು ಮತ್ತೆ ಹೊದಿಕೆಯನ್ನು ಕಿತ್ತೆಸೆದು ಬರಿ ಮೈಲಿ ಮಲಗುತ್ತದೆ. ಸುನೀತದ ಕೊನೆಯ ಎರಡು ಸಾಲು ಹೀಗಿದೆ.

"ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ
"

ಈ ಎರಡು ಸಾಲುಗಳಲ್ಲಿ ಎಂತಹಾ ಅರ್ಥ ತುಂಬಿದೆ ನೋಡಿದೆಯಾ ಸಖಿ. ತಾಯಿ-ಮಗುವಿನ ಸಂಬಂಧದಲ್ಲಾಗಲಿ ಸೃಷ್ಟಿಯೊಂದಿಗಿನ ಮಾನವನ ಸಂಬಂಧದಲ್ಲಾಗಲಿ ತಾಯಿಯೂ ಸೃಷ್ಟಿಯೂ ಉನ್ನತವಾದ ಸ್ಥಾನದಲ್ಲಿ ನಿಂತು ಮಗುವೂ ಮಾನವನೂ ಅರಿತೂ ಮಾಡಿದ ತಪ್ಪುಗಳನ್ನು ಕ್ಷಮಿಸುತ್ತಲೇ ಇರುತ್ತಾರೆ. ಆದರೆ ಆ ಕ್ಷಮೆಗೆ ಬೆಲೆ ಕೊಡದ ಮಗು ಮಾನವ ತನ್ನ ಅಹಂಕಾರದಿಂದ, ತಾ ಮಾಡಿದ್ದೇ ಸರಿಯೆಂಬ ಗರ್ವದಿಂದ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾನೆ. ಬಹುಶಃ ತಾಯಿಯೂ ಸೃಷ್ಟಿಯೂ ತೋರುವ ಕ್ಷಮೆಗೆ, ಮಗುವಿನ-ಮಾನವನ ತಪ್ಪುಗಳಿಗೆ ಕೊನೆಯೆಂಬುದೇ ಇಲ್ಲ! ಆದರೆ ತಾಯಿಯ ಸೃಷ್ಟಿಯ ಅಖಂಡ ಕ್ಷಮೆಗೂ ಮಿತಿಯೆಂಬುದೊಂದಿದೆ ಎಂದು ಅನ್ನಿಸುವುದಿಲ್ಲವೇ?  ಆ ಕ್ಷಮೆಯನ್ನು ಕಳೆದುಕೊಂಡ ಕೊನೆಯ ದಿನ ಬಹುಶಃ ಇಲ್ಲಿ ಏನೂ ಉಳಿದಿರುವುದಿಲ್ಲ! ಅಂತೂ ಮಾಡುವ ಅಂತಹಾ ಕ್ಷಮೆ ಇಲ್ಲದ ತಪ್ಪನ್ನು ನಾವ್ಯಾರೂ ಮಾಡದಂತೆ ಸಮಯ ಮೀರುವ ಮೊದಲೇ ಎಚ್ಚೆತ್ತುಕೊಳ್ಳಬೇಕಲ್ಲವೇ ಸಖಿ?

ಪೊರೆವ ಕೈಗಳ ದುಡಿಮೆಯನ್ನು ಲೆಕ್ಕಿಸದ ಮಗು ಹೊದಿಕೆಯನು ಮತ್ತೆ ಮತ್ತೆ ಒದೆದು ಮುಂದೊಮ್ಮೆ ಪೊರೆವ ಕೈಗಳ ಪ್ರೇಮವನ್ನೇ ಕಳೆದುಕೊಳ್ಳಬಾರದಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

1 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ