-ಅಬ್ಬಾಸ್ ಮೇಲಿನಮನಿ
ನಡೆದು ನಡೆದು ಸುಸ್ತಾಗಿ ಇನು ಮುಂದೆ ಹೆಜ್ಜೆ ಕಿತ್ತಿಡಲು ಸಾಧ್ಯವಿಲ್ಲ ಅನಿಸಿದಾಗ ಜಮೀರುಲ್ಲಾ ಬಂಡೆಗಲ್ಲಿನ ಮೇಲೆ ಕುಕ್ಕರಿಸಿದ. ಎದುರಿಗೆ ಅಪರಂಪಾರ ಕಡಲು. ಅದರೊಡಲಿಂದ ತೇಲಿ ಬರುತ್ತಿರುವ ಬೆಡಗಿನ ಅಲೆಗಳು. ಮುಳುಗುವ ಧಾವಂತದಲ್ಲಿರುವ ಕೆಂಪು ಸೂರ್ಯ. ಆ ಮನೋಹರ ದೃಶ್ಯ ನೋಡಲು ತೀರದಲ್ಲಿ ಗಿಜಿ ಗಿಜಿಯೆನ್ನತೊಡಗಿದ್ದ ಜನ. ಜಾತ್ರೆಯ ಬೆರಗು ಹುಟ್ಟಿಸಿದ ತಿನಿಸಿನ ತಳ್ಳು ಗಾಡಿಗಳು. ತುಂಬಿ ತುಳುಕಾಡತೊಡಗಿದ್ದ ಜೀವನೋತ್ಸಾಹ. ಅದೆಲ್ಲವನ್ನು ಅಲಕ್ಷಿಸಿ, ಪ್ರಪಂಚದ ಹಂಗು ಹರಿದುಕೊಂಡಂತೆ ಕುಳಿತಿದ್ದ ಜಮೀರುಲ್ಲಾ.
ಆರು ತಿಂಗಳಿನ ಹಿಂದೆ ಇದೇ ಕಡಲ ತೀರದಲ್ಲಿ ಅದಮ್ಯ ಉತ್ಸಾಹದೊಂದಿಗೆ ಓಡಾಡಿದ್ದ ಅವನು. ಪಕ್ಕದಲ್ಲಿ ಆಗ ಶಬನಮ್ ಇದ್ದಳು. ಜನರ ಗದ್ದಲದಿಂದ ದೂರ ಸರಿದು, ಅವಳ ಕೈಹಿಡಿದು, ಮೈಗೆ ಮೈ ಹಚ್ಚಿ, ಹಸಿ ಮರಳಿನಲ್ಲಿ ಹೆಜ್ಜೆಯೂರಿ ಆನಂದಿಸಿದ್ದ. ನೀರಾಟದಲ್ಲಿ ಖುಷಿ ಅನುಭವಿಸಿದ್ದ. ಹಳ್ಳಿಯ ಹುಡುಗಿ ಶಬನಮ್ ಮೈಚಳಿ ಬಿಟ್ಟು ಗಂಡನೊಂದಿಗೆ ನಲಿದಿದ್ದಳು.
ಅಲೆಯೊಂದು ಅವನು ಕುಳಿತ ಬಂಡೆಗಲ್ಲಿಗೆ ಅಪ್ಪಳಿಸಿ ಬಂದಂತೆ ಹಿಂತಿರುಗಿತು. ಮಾಯೆ ತೋರಿದ ಹಾಗೆ. ಅಲೆಯಲ್ಲ ಅದು ಶಬನಮ್ ಎಂದುಕೊಂಡಿತು ಅವನ ಮನಸ್ಸು. ಹೀಗೆ ಅಲೆಯಂತೆ ಉತ್ಸಾಹದ ನೊರೆ ತುಳುಕಿಸುತ್ತ ಬಂದವಳು, ಪ್ರೀತಿಯ ಹನಿಯಿಂದ ತನ್ನ ಜಿಂದಗಿಯನ್ನು ಮುತ್ತಾಗಿಸುವಳು ಅಂದುಕೊಳ್ಳುತ್ತಿರುವಂತೆ ಮೋಸ ಮಾಡಿ ಹೋದಳು. ಬದ್ಮಾಶ್ ಹೆಂಗಸು! ಜಮೀರುಲ್ಲಾ ಒಳಗೇ ಬೈದಾಡಿಕೊಂಡ.
ಸ್ವಂತ ಊರಲ್ಲಿ ಬದುಕು ದುಸ್ತರ ಎಂದ ಮೌಲಾಲಿಯ ಮಾತಿನ ಪ್ರೇರಣೆಗೊಳಗಾಗಿ ಜಮೀರುಲ್ಲಾ ಗೋವಾಕ್ಕೆ ಹೊರಟು ಬಂದಿದ್ದ. ಅವನ ನಿಕಾಹ್ ಆಗಿ ಪೂರ್ತಿ ತಿಂಗಳು ಗತಿಸಿರಲಿಲ್ಲ. ಶಬನಮ್‌ಳ ಹಸ್ತಗಳಲ್ಲಿನ ಮೆಹಂದಿಯ ರಂಗು ಮಾಸಿರಲಿಲ್ಲ. ಹೊಸ ಬದುಕಿಗಾಗಿ ಅವನ ಕಾತರ ಹೆಚ್ಚಿತು. "ಮೈಮ್ಯಾಲೆ ಬಿದ್ದ ಹಲದಿಪಾನಿ (ಅರಿಷಿಣ ನೀರು) ಇನ್ನು ಆರಿಲ್ಲ. ಹೋಗಬ್ಯಾಡ ಬೇಟಾ" ಎಂದಿದ್ದಳು ಅವನ ಅಮ್ಮಾ. ಮಗ ತನ್ನ ಕಣ್ಣೆದುರಿಗೆ ಇರಬೇಕೆನ್ನುವುದು ಅವಳ ಹಂಬಲ. ಅದರಲ್ಲಿ ಕರುಳಿನ ವಾತ್ಸಲ್ಯವಿದ್ದಿತಾದರೂ ಗಲ್ಲಿಯ ಜನರಿಗೆ ಅದು ಕುರುಡು ಅನಿಸದೇ ಇರಲಿಲ್ಲ. ಕಾಜಾಬಿ ಮಗನನ್ನು ವಿಪರೀತ ಅಚ್ಛೆ ಮಾಡುವಳೆಂದು ಅವರು ಆರೋಪಿಸುತ್ತಿದ್ದರು.
ಜಮೀರುಲ್ಲಾ ಇನ್ನೂ ಗರ್ಭದಲ್ಲಿರುವಾಗಲೇ ಅವನ ಅಬ್ಬಾ (ತಂದೆ)ನ ಸಾವು ಸಂಭವಿಸಿತ್ತು. ತನ್ನ ಕರುಳಿನ ಕೊನೆಯ ಕುಡಿಯೆಂದು ಖಾಜಾಬಿ ಮಗನನ್ನು ಎದೆಗಾನಿಸಿಕೊಂಡೆ ಇರುವಳು. ತೊಡೆಯ ಮೇಲೆ ಕುಳ್ಳಿರಿಸಿ ಅವನ ಬಾಯಿಗೆ ತಿನಿಸನ್ನು ತುರುಕುವಳು. ಮುದ್ದು ಅಂದರೆ ಅಷ್ಟು ಮುದ್ದು. "ಮಗನ ಮುಖದಾಗ ಮೀಸೆ, ಚಿಗಿಯಾಕ ಹತ್ತಿದ್ರೂ ಮೊಲಿ ಚೀಪ್ಸೂದು ಬಿಡವಲ್ಲಿ. ಇದೆಂಥ ಪ್ರೀತೀನ ನಿಂದು. ನಾಳೆ ಅವನ ಬಗಲಾಗ ಜೋರು (ಹೆಂಡತಿ) ಇರೂದು ಮುಸ್ಕಿಲ್ (ತೊಂದರೆ) ಆದೀತು ನೋಡು" ಎಂದು ಪಕ್ಕದ ಮನೆಯ ತಾಜಬಿ ಮಷ್ಕಿರಿ (ತಮಾಷೆ) ಮಾಡಿದ್ದಳು. "ಇಂವಾ ನನ್ನ ರಾಜಾಬೇಟಾ. ಜೋರುಕಾ ಕುಲಾಮ ಆಗಬಾರ್ದು" ಎಂದು ಮಗನ ಹಣೆಗೆ ಮುತ್ತಿಕ್ಕಿ ತನ್ನೆರಡೂ ತೋಳುಗಳಲ್ಲಿ ಬಂಧಿಸಿಟ್ಟು ಕೊಂಡಿದ್ದಳು ಖಾಜಾಬಿ. ಮಗ ಮಾಮಲೇದಾರ ಆಗಬೇಕೆನ್ನುವುದು ಅವಳ ಆಸೆಯಾಗಿತ್ತು. ಜಮೀರುಲ್ಲಾ ಏಳನೆಯ ತರಗತಿಯವರೆಗೆ ಶಾಲೆಯ ಪಾವಟಿಗೆ ಹತ್ತಿದ್ದೆ ಖರೆಯಾಯಿತು. ಖಾಜಾಬಿಯ ಕನಸಿನ ಬೀಜಗಳು ಮಾತ್ರ ಮೊಳಕೆಯೊಡೆಯಲಿಲ್ಲ. ಅವಳ ವ್ಯಾಮೋಹದ ಪರಿಣಾಮದಿಂದ ಜಮೀರುಲ್ಲಾಕೆಟ್ಟ ಗೆಳೆಯರ ಸಂಗದಲ್ಲಿ ಓ.ಸಿ., ಇಸ್ಪೇಟ್ ನಚ್ಚಿಕೊಂಡು ಮನೆಯ ವ್ಯವಸ್ಥೆಯನ್ನು ತಾರುಮಾರುಗೀಡು ಮಾಡಿದ್ದ. ಆದರೆ ಯಾವ ಫರಕೂ ಕಾಣಿಸಲಿಲ್ಲ. ಅವನು ಶುದ್ಧ ಕೊರಡು ಎಂದು ತೀರ್ಮಾನಿಸಿದ ಹಸೀನ ತವರು ಮನೆ ಸೇರಿಕೊಂಡಿದ್ದಳು. ವರ್ಷೊಪ್ಪತ್ತಿನಲ್ಲಿ ಖಾಜಾಬಿ ಜಿದ್ದಿಗೆ ಬಿದ್ದವಳಂತೆ ತನ್ನ ದೂರದ ಸಂಬಂಧಿಗಳಲ್ಲಿ ಹೆಣ್ಣು ಹುಡುಕಿ ತಂದು, ಹಿರಿಯ ಮಗನ ತಲೆಯ ಮೇಲೆ ಸಾಲದ ಹೊರೆ ಹೇರಿ ಜಮೀರುಲ್ಲಾನ ನಿಕಾಹ್ ನೆರವೇರಿಸಿದ್ದಳು. ಹಸಿ ಹಸಿ ತುಡಿತದ ಹೊಂಗನಸ್ಸಿನಲ್ಲಿದ್ದಳು ಬೇಗಂ. ಒಣ ಮನಸ್ಸಿನ ಜಮೀರುಲ್ಲಾನಿಗೋ ಬರೀ ಇಸ್ಪೇಟಿನ ಧ್ಯಾನ. ಒಮ್ಮೊಮ್ಮೆ ನಿದ್ದೆ, ನೀರಡಿಕೆ, ಮನೆ-ಹೆಂಡತಿ ನೆನಪಿಲ್ಲದಂತೆ ಆಡುತ್ತಿದ್ದ. ಪದೇ ಪದೇ ಸೋತು ಬಂದು ಮನೆಯವರನ್ನು ಬೈದಾಡುತ್ತಿದ್ದ. ಅವನ ಚಟಕ್ಕೆ ಬೇಗಂಳ ಲಚ್ಚಾ (ತಾಳಿ), ಕಿವಿಯಲ್ಲಿನ ಆಲಿಖತ್ತು (ಆಭರಣ), ಆಕೆ ಮದುವೆಯಲ್ಲಿ ತಂದಿದ್ದ ಜೇಜಿನ ಸಾಮಾನು ಎಲ್ಲ ಬಿಕರಿಯಾಗಿದ್ದವು. ಬೇಗಂ ಸಂಕಟ ಅನುಭವಿಸಿದ್ದಳು. "ನಿನ್ನ ಚಟಕ್ಕೆ ನನ್ನೂ ಒಯ್ದು ಮಾರಾಟ ಮಾಡತ್ತಿಯೇನು ನೋಡು" ಎಂದಿದ್ದಳು ಒಂದು ದಿನ. ಅವನ ತಲೆಯೊಳಗಿನ ಹುಳು ಕೆರಳಿದ್ದವು. ಹೆಂಡತಿಯನ್ನು ಬಡಿದು ಹಾಡುಗಲೇ ಅವಳನ್ನು ಲಂಗದ ಮೇಲೆ ಮನೆಯಿಂದ ಓಡಿಸಿದ್ದ.
ಮನೆಯನ್ನು ಕ್ಷುದ್ರವಾಗಿಸುವ ಅವನ ಸ್ವಭಾವಕ್ಕೆ ಬೇಸತ್ತು ಹುಸೇನಮಿಯ್ಯಾ ಬೇರೆ ಮನೆಮಾಡಿಕೊಂಡು ಹೋಗಿದ್ದ. ಖಾಜಾಬಿ ಮಗನೊಂದಿಗೆ ಉಳಿದಿದ್ದಳು. ಒಂದೆರಡು ಮನೆಗಳ ಚಾಕರಿ ಮಾಡಿ ಜೀವನ ನಿರ್ವಹಿಸುತ್ತ ತನ್ನ ಬಗ್ಗೆ ಕಾಳಜಿ ಅಭಿವ್ಯಕ್ತಿಸುವ ಅಮ್ಮಾನನ್ನೆ ಹಣಕ್ಕಾಗಿ ಪೀಡಿಸುತ್ತ ಗೋಳು ಹೊಯ್ದುಕೊಳ್ಳುತ್ತಿದ್ದ. ಹಿರಿಯ ಮಗನ ಪಾಲಿಗೆ ನಿಷ್ಕರುಣವಾಗಿದ್ದ ಅವಳ ಅಂತರಾಳ ಜಮೀರುಲ್ಲಾನ ಉದ್ಧಟತನಗಳನ್ನು ಸಹಿಸಿಕೊಳ್ಳುವುದು ಗಲ್ಲಿಗೆ ಸೋಜಿಗವೆನಿಸಿತ್ತು.
ಅವನಿಗೊಂದು ಜಿಂದಗಿ ಕಲ್ಪಿಸಿಕೊಡುವ ಇರದೆಯೋ, ಮೊಂಡು ಹಠವೋ ಮತ್ತೆ ಆಕೆ ಹೊಸ ಸೊಸೆಗಾಗಿ ಹುಡುಕಾಟ ನಡೆಸಿದ್ದಳು. "ನಿನ್ನ ಬೇಟಾನ ನಸೀಬು ಮಟಮಟ ಮಧ್ಯಾಹ್ನ ಇದ್ದಂಗೈತಿ. ಮತ್ತೊಂದು ಶಾದಿ ಮಾಡಿ ಹುಡುಗಿ ಜಿಂದಗಿ ಯಾಕ್ ಬರ್ಬಾದು ಮಾಡ್ತಿ?" ಎಂದು ನೇರವಾಗಿಯೇ ಹೇಳಿದ್ದಳು ತಾಜಬಿ. ಆಕೆ ಮಾಡುತ್ತಿರುವುದು ಮಷ್ಕರಿಯಲ್ಲ; ಅಪಮಾನ ಎಂದು, ಅವಳಿಗೆ ಸವಾಲು ಎನ್ನುವಂತೆ ಖಾಜಾಬಿ ನಿಕಾಹ್ ಮಾಡಿದ್ದಳು. ಸೊಸೆ ಶಬನಮ್ ಅವರೆಯ ಹೂವಿನಂತಿದ್ದಳು. ಕಾರಂಜಿಯಂತೆ ಪುಟಿಯುತ್ತಿದ್ದ ಅವಳ ಯೌವನ ಜಮೀರುಲ್ಲಾನ ಕಣ್ಣು ಕುಕ್ಕಿತ್ತು.
ಅವಳಿಗೂ ಇದು ಎರಡನೆಯ ಮದುವೆ. ಅವಳ ದುರಾದೃಷ್ಟವೆಂದರೆ ನಿಕಾಹ್ ಜರುಗಿದ ಒಂದೇ ತಿಂಗಳಲ್ಲಿ ಆಕೆಯ ಗಂಡ ಲಿವರ್ ಒಡೆದು ಸತ್ತಿದ್ದ. ಅತ್ತೆ-ಮಾವ ತಮ್ಮ ಪ್ರಮಾದವನ್ನು ಮರೆಮಾಚಿ, ಸೊಸೆಯ ಕಾಲ್ಗುಣವನ್ನು ದೂಷಿಸಿ ತಿರಸ್ಕರಿಸಿದ್ದರು. ಕತ್ತಲ ಗೂಡಲ್ಲಿ ಬಂಧಿಯಾಗಿ ವಿಲಿವಿಲಿಸಿದ್ದಳು ಶಬನಮ್. ಯಾವಾಗ ಜಮೀರುಲ್ಲಾ ಬಂದು ಒಂದೇ ನೋಟದಲ್ಲಿ ತನ್ನನ್ನು ಒಪ್ಪಿಕೊಂಡನೋ ಅವಳಿಗೆ ಬದುಕು ಇಷ್ಟವೆನಿಸಿತ್ತು.
* * *
ಗೋವಾದಲ್ಲಿ ಬಾರ್ ಬಿಲ್ಡಿಂಗ್, ಸೆಂಟರಿಂಗ್ ಕಾಂಟ್ರಾಕ್ಟ್ ಮಾಡಿಕೊಂಡಿದ್ದ ಮೌಲಾಲಿ. ಊರಿಗೆ ಬಂದನೋ ಸೋಮಾರಿಯಾಗಿ ತಿರುಗುತ್ತಿದ್ದ ಹುಡುಗರನ್ನು ಕರೆದುಕೊಂಡು ಹೋಗಿ ಕೆಲಸಕ್ಕೆ ತೊಡಗಿಸುತ್ತಿದ್ದ. ಹೆಂಡತಿಯೊಂದಿಗೆ ಬಂದ ಜಮೀರುಲ್ಲಾನಿಗೆ ಶೆಡ್ಡಿನ ವ್ಯವಸ್ಥೆ ಮಾಡಿಕೊಟ್ಟು ಕಾಳಜಿಯಿಂದ ಗಮನಿಸಿಕೊಂಡಿದ್ದ. ಬಾರ್ ಬಿಲ್ಡಿಂಗ್ ಕೆಲಸ ಜಮೀರುಲ್ಲಾನಿಗೆ ಹೊಸದು. ಕಲಿತರೆ ಬರುವಂತಹದ್ದೆ. ಆದರೆ ಮೈಗಳ್ಳ ಜಮೀರುಲ್ಲಾನಿಗೆ ಕೆಲಸವೆಂದರೆ ಒಗ್ಗದು. ದುಡಿಯುವವರನ್ನು ಕಂಡರೆ ಮೌಲಾಲಿಗೆ ಪ್ರೀತಿ. ಅಲ್ಲದೆ ಕಾರಾರುವಾಕ್ ಮನುಷ್ಯ ಅವನು. ಕೊಡುವ ಸಂಬಳಕ್ಕೆ ಸರಿದೂಗುವ ಶ್ರಮ ಕಲಸಗಾರರಿಮದ ಅಪೇಕ್ಷಿಸುವನು. ಅವರ ಮೈಯ ಬೆವರು ಆರುವ ಮೊದಲೇ ಹಣ ಕೊಡುವುದು ಅವನ ಪದ್ಧತಿ. ದುಡಿಯುವವರು ಹಗಲೆಂದರೆ ಹಗಲು, ರಾತ್ರಿಯೆಂದರೆ ರಾತ್ರಿ ಕೆಲಸ ಮಾಡಲೇಬೇಕು. ಜಮೀರುಲ್ಲಾನಿಗೆ ಹದಿನೈದು ದಿನಗಳಲ್ಲಿ ಜಹೆನ್ನಮ್ (ನರಕ)ದ ಕಠೋರ ಶಿಕ್ಷೆಯನ್ನು ಅನುಭವಿಸಿದಂತಾಗಿತ್ತು. ತಿರುಗಿ ಊರಿಗೆ ಹೋಗೋಣವೆಂದು ಮನೆ ಹಿಡಿದು ಕುಳಿತಿದ್ದ. ಗಂಡನ ನಿರ್ಧಾರವನ್ನು ಶಬನಮ್ ಬಿಲ್‌ಕುಲ್ ನಿರಾಕರಿಸಿ, ಬೇರೆ ಕೆಲಸ ಹುಡುಕಲು ಹಚ್ಚಿದ್ದಳು. ನಾಲ್ಕು ದಿನ ಊರು ತಿರುಗಾಡಿ ಬಂದು ಕಾಲು ಚಾಚಿ, ತಲೆಯ ಮೇಲೆ ಕೈಹೊತ್ತು ಕುಳಿತ ಗಂಡ ಶತ ದಡ್ಡನೆಂದು ತಿಳಿದುಕೊಂಡಿದ್ದಳು ಶಬನಮ್. ತನ್ನ ಹೊಸ ಜಿಂದಗಿ ಕನಸು ಮತ್ತೆ ಕಫನ್ ಹೊದ್ದುಕೊಳ್ಳುವುದೆ? ಅವಳ ಒಳಮನಸ್ಸು ತೀವ್ರ ಚಡಪಡಿಸಿತ್ತು. ಅದರ ಹಸಿಹಸಿಯಲ್ಲಿ ಮೌಲಾಲಿಯ ಹತ್ತಿರ ಹೋಗಿ ಗಂಡನಿಗೆ ಬುದ್ಧಿ ಹೇಳಲು ನಿವೇದಿಸಿಕೊಂಡಿದ್ದಳು. "ನಾಯಿ ಬಾಲ ನೆಟ್ಟಗ ಮಾಡಾಕ ಬರೂದಿಲ್ಲ. ಅವನನ್ನು ಕರ್‍ಕೊಂಡು ನೀನು ಊರಿಗೆ ಹೋಗುದು ಚಲೋ" ಎಂದು ಸಾಫ್ ಸಾಫ್ ಹೇಳಿದ್ದ ಮೌಲಾಲಿ. ಗಂಡನಿಗೆ ತಾನೇ ದುಡಿದು ಹಾಕಿದರೂ ಚಿಂತೆಯಿಲ್ಲ, ಊರಿಗೆ ಮಾತ್ರ ಹೋಗಬಾರದೆಂದು ನಿರ್ಧರಿಸಿಕೊಂಡ ಶಬನಮ್ ಒಂದೆರಡು ದಿನಗಳಲ್ಲಿ ಬೃಹತ್ ಕಟ್ಟಡದ ಕೆಲಸ ನಡೆಯುತ್ತಿರುವಲ್ಲಿ ಹೋಗಿ ನಿಂತಿದ್ದಳು. ಕಟ್ಟಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದವನು ಚಂದ್ರಕಾಂತರೆಡ್ಡಿ. ಅವನ ಔದಾರ್ಯದಿಂದ ಆಕೆಗೆ ಕೂಡಲೇ ಕೆಲಸ ಸಿಕ್ಕಿತ್ತು. ಅವನ ಸಹಾಯವನ್ನು ಶಬನಮ್ ಗಂಡನೆದುರು ಬಣ್ಣಿಸಿ ಹೇಳಿದ್ದಳು. ಊರಿಗೆ ಹೋಗಿ ಗಲ್ಲಿಯ ಜನರೆದುರು ಮುಖಭಂಗ ಅನುಭವಿಸುವುದನ್ನು ತಪ್ಪಿಸಿದ ಹೆಂಡತಿಯ ಬಗ್ಗೆ ಜಮೀರುಲ್ಲಾನಿಗೆ ಅಭಿಮಾನ ಮೂಡಿತ್ತು.
ಮಧ್ಯ ವಯಸ್ಸಿನ ಮನುಷ್ಯ ಚಂದ್ರಕಾಂತರೆಡ್ಡಿ ಶಬನಮ್‌ಳ ಮೇಲೆ ವಿಶೇಷ ಒಲವು ಅಭಿವ್ಯಕ್ತಿಸುತ್ತಿದ್ದ. ಅದರ ಪರಿಣಾಮದಿಂದ ಜಮೀರುಲ್ಲಾನ ಸಂಸಾರ ಶೆಡ್ಡಿನಿಂದ ಹೆಂಚಿನಮನೆಗೆ ಸ್ಥಳಾಂತರಗೊಂಡಿತ್ತು. ಅವನಿಗೆ ವಾಚ್‌ಮನ್ ಕೆಲಸ ದೊರಕಿತ್ತು. ದೇಹ ದಂಡಿಸುವ ಕೆಲಸವೇ ಅದು? ಆರಾಮೆನಿಸಿತ್ತು ಜಮೀರುಲ್ಲಾನಿಗೆ. ರೆಡ್ಡಿ ತನ್ನ ಉಲನ್ ಸ್ವೇಟರ್, ತಲೆಗೆ ಮಂಕಿ ಕ್ಯಾಪ್ ಕೊಟ್ಟಿದ್ದ. ಕೈಯಲ್ಲಿ ಬ್ಯಾಟರಿ ಹಿಡಿದು, ಖುರ್ಚಿಯ ಮೇಲೆ ಕುಳಿತನೆಂದರೆ ಜಮೀರುಲ್ಲಾನ ಕೆಲಸ ಮುಗಿಯಿತು. ಅಲ್ಲಿಯೇ ಸಖತ್ ನಿದ್ದೆ. ಬೆಳಿಗ್ಗೆ ಕೆಲಸಗಾರರು ಬರಲಾರಂಭಿಸಿದರೆ ಮನೆಗೆ ಬಂದು ಸ್ನಾನ ಮಾಡುತ್ತಿದ್ದ. ಊಟಕ್ಕೆ ಫಿಶ್‌ಫ್ರಾಯ್, ಅಂಡಾಕರಿ ಒಂದಿಲ್ಲೊಂದು ಇರುತ್ತಿತ್ತು. ಗಂಡನಿಗೆ ಪ್ರೀತಿಯಿಂದ ಊಟ ಮಾಡಿಸಿ ಕೆಲಸಕ್ಕೆ ಹೊರಡುತ್ತಿದ್ದಳು ಶಬನಮ್. ಗಂಡಹೆಂಡರು ಸುಖವಾಗಿರಬೇಕೆಂದು ಚಂದ್ರಕಾಂತರೆಡ್ಡಿ ಹೇಳುತ್ತಿದ್ದ. ಸತ್ತ ಮೇಲೆ ಮನುಷ್ಯನಿಗೆ ಸ್ವರ್ಗ ಸಿಗುವುದೆಂದು ಷೇಕ್ ಇಮಾಮರು ಮಸೀದಿಯಲ್ಲಿ ಖುತ್ಬಾ (ಪ್ರವಚನ) ಓದುವಾಗ ಹೇಳಿದ್ದು ಕೇಳಿದ್ದ ಜಮೀರುಲ್ಲಾ. ಆದರೆ ಈಗದು ತನಗೆ ಇರುವಾಗಲೇ ದಕ್ಕಿತಲ್ಲ ಎಂಬ ಅದಮ್ಯ ಖುಷಿಯಲ್ಲಿ ಅವನು ಬೀಗಿಕೊಂಡಿದ್ದ.
ಹಣ ಕೈಯಲ್ಲಿ ಓಡಾಡಲಾರಂಭಿಸಿತ್ತು. ಇಸ್ಪೇಟ್ ಎಲೆಗಳು ಕಣ್ಣೆದುರು ಕುಣಿಯತೊಡಗಿದ್ದವು. ಶಬನಮ್ ಕೆಲಸಕ್ಕೆ ಹೋದ ಮೇಲೆ, ಬಾಗಿಲಿಗೆ ಕೀಲಿ ಜಡಿದು ಇಸ್ಪೇಟ್ ಆಟದ ಜಾಗ ಹುಡುಕುತ್ತ ಹೊರಡುತ್ತಿದ್ದ ಜಮೀರುಲ್ಲಾ. ಅವನ ಬದುಕು ತರಗೆಲೆಯಾದದ್ದೆ ಈ ಆಟದಿಂದ. ಜನರು ಅವನನ್ನು ರಾಜಾ, ರಾಣಿ, ಜೋಕರ್... ಎಂದು ಅಡ್ಡಹೆಸರಿನಿಂದ ಕೂಗುತ್ತಿದ್ದರು. ಅಂದರ್‌ಬಾಹರ್ ಆಟವೆಂದರೆ ಅವನಿಗೆ ಇಷ್ಟ ಒಮ್ಮೆಲೆ ಅದೃಷ್ಟ ಖುಲಾಯಿಸಿಕೊಳ್ಳುವ ತವಕ. ಅವನಿಗೆ ಇಸ್ಪೇಟ್ ಗೆಳೆಯರು ಕೂಡಲೇ ಸಿಕ್ಕಿದರು. ಚಟದ ಸಂಬಂಧವೆ ಹಾಗೆಯೆನ್ನುವಂತೆ ಆ ದೋಸ್ತರು ಅವನನ್ನು ಹುಡುಕಿಕೊಂಡು ಬರುವರು. ಸ್ಟೋರ್ ರೂಮಿನ ಎದುರು ರಾತ್ರಿಯಿಡೀ ಆಟ. ಜಮೀರುಲ್ಲಾನ ವಾಚಮನ್ ಕೆಲಸಕ್ಕೆ ರಂಗೋ ರಂಗು. ಇಸ್ಪೇಟ್ ಎಲೆಗಳನ್ನು ಕಲಿಸುವಲ್ಲಿನ ಅವನ ಆಸ್ಥೆ ಬೆರಗು ಹುಟ್ಟಿಸುತ್ತಿತ್ತು. ಆದರೆ ಗೆಲ್ಲುತ್ತಿದ್ದುದು ಅಪರೂಪಕ್ಕೊಮ್ಮೆ ಮಾತ್ರ. ಹಗಲಿನಲ್ಲಿ ಅವನು ಜನ್ಮಾಂತರದ ನಿದ್ದೆ ಮಾಡುವ ಬಗೆಯಿಂದ ಶಬನಮ್‌ಳಿಗೆ ಬೇಸರ ಅನಿಸುತ್ತಿತ್ತು. ಕೂಡಿಸಿಟ್ಟ ಹಣ ಕರಗುತ್ತಿರುವ ಬಗ್ಗೆ ಕಂಗೆಡತೊಡಗಿದ್ದ ಆಕೆ ಅವನ ಚಟದ ಬಗ್ಗೆಯೂ ಎಚ್ಚರಿಸಿದ್ದಳು.
ಅವತ್ತು ಮಧ್ಯರಾತ್ರಿಯವರೆಗೂ ಇಸ್ಪೇಟ್ ಎಲೆಗಳನ್ನು ತಿರುವಿ, ಸೋತು ಬೇಸರ ಮಾಡಿಕೊಂಡು ಮಲಗಿದ್ದ ಜಮೀರುಲ್ಲಾನ ನಸೀಬು ಕೆಟ್ಟದ್ದಾಗಿತ್ತು. ಬೆಳಗಾಗುವಷ್ಟರಲ್ಲಿ ಸ್ಟೋರ್ ರೂಮಿನ ಬಾಗಿಲು ಮುರಿದು ಅಲ್ಲಿನ ಸಿಮೆಂಟು ಚೀಲಗಳನ್ನು ಕದ್ದೊಯ್ಯಲಾಗಿತ್ತು. ಬಯಲಲ್ಲಿ ಇದ್ದ ಒಂದಿಷ್ಟು ಕಬ್ಬಿಣವೂ ಮಾಯವಾಗಿತ್ತು. ಜಮೀರುಲ್ಲಾನನ್ನು ವಾಚಮನ್ ಕೆಲಸದಿಂದ ತೆಗೆದುಹಾಕಿದ್ದ ಚಂದ್ರಕಾಂತ ರೆಡ್ಡಿ. ಗಂಡನ ಬೇಜವಾಬ್ದಾರಿ ನಡವಳಿಕೆ ಬಗ್ಗೆ ಸಿಟ್ಟು ಮಾಡಿಕೊಂಡ ಶಬನಮ್ ಅವನನ್ನು ನಾಲಾಯಕ್ ಎನ್ನುವ ಧಾಟಿಯಲ್ಲಿ ಖಂಡಿಸಿದ್ದಳು. ಮನಸು ಮುದುಡಿಸಿಕೊಂಡು ಹೊರಟು ಹೋಗಿದ್ದ ಜಮೀರುಲ್ಲಾ. ಸಮಾಧಾನವೆನ್ನಿಸಿ ತಿರುಗಿ ಬಂದವನಿಗೆ ಅದು ತನ್ನ ಮನೆ, ಶಬನಮ್ ತನ್ನ ಹೆಂಡತಿ ಎಂದು ತಿಳಿಯಲಾರದ ಸನ್ನಿವೇಶ. ಆಕೆ ಚಂದ್ರಕಾಂತರೆಡ್ಡಿಯ ಎದೆಯೊಳಗೆ ಹುದುಗಿರುವುದನ್ನು ಕಣ್ಣುಜ್ಜಿಕೊಂಡು ನೋಡಿದ್ದವನ ಒಡಲಲ್ಲಿ ಲಾವಾ ಕುದ್ದಿತ್ತು. ಮನೆಯ ಮೇಲಿನ ಹಂಚು ಹಾರಿಬೀಳುವಂತೆ ಹಾರಾಡಿದ್ದ ಅವನು. "ಜಿಂದಗಿ ಮಾಡಾಕ ಬರದಿದ್ರೂ ಚೀರಾಟಕ್ಕೇನೂ ಕಮ್ಮಿಯಿಲ್ಲ" ಎಂದು ಶಬನಮ್ ಉರಿಯ ಮೇಲೆ ಉಪ್ಪೆರಚಿದ್ದಳು. "ಈ ನಸಲಿ ಹರಾಮ್ ನಿನ್ನ ತಲಿ ಖರಾಬ್ ಮಾಡ್ಯಾನ" ಎಂದು ಜಮೀರುಲ್ಲಾ ಚಂದ್ರಕಾಂತರೆಡ್ಡಿಯ ಮೈಮೇಲೇ ಬಿದ್ದಿದ್ದ. ಅವನ ಕಪಾಳಕ್ಕೆ ರೆಡ್ಡಿ ಬಿಗಿದಿದ್ದು ಒಂದು ಏಟು. ಕಣ್ಣಿಗೆ ಕತ್ತಲು ಆವರಿಸಿ ಜಮೀರುಲ್ಲಾ ನೆಲಕ್ಕೆ ಕುಸಿದಿದ್ದ. ಅವನ ಅವಸ್ಥೆ ನೋಡಿ ರೆಡ್ಡಿ ಬಿದ್ದು ಬಿದ್ದು ನಕ್ಕಿದ್ದ. ಶಬನಮ್ ಅವನ ನಗೆಗೆ ಚಪ್ಪಾಳೆ ತಟ್ಟಿದಂತಿತ್ತು.
ಕುದಿದ ಲಾವಾಕ್ಕೆ ಸ್ಫೋಟಗೊಳ್ಳುವ ಧಾವಂತ ಎನ್ನುವಂತೆ ಮರುದಿನ ಜಮೀರುಲ್ಲಾ ಒಂದಿಬ್ಬರು ಇಸ್ಪೇಟ್ ಗೆಳೆಯರನ್ನು ಕರೆದುಕೊಂಡು ಹಾಡುಹಗಲೇ ಚಂದ್ರಕಾಂತರೆಡ್ಡಿಯ ಎದುರು ಚಾಕು ಹಿಡಿದು ನಿಂತಿದ್ದ. ತಕ್ಷಣ ಅಲ್ಲಿದ್ದ ಕೆಲಸಗಾರರು ಅವನ ಕೈಯಲ್ಲಿನ ಚಾಕು ಕಿತ್ತುಕೊಂಡು ಮುರಿದು ಬೀಸಾಡಿ ಅವನ ಮೂಳೆ ಸಡಿಲಾಗುವಂತೆ ತದುಕಿದ್ದರು. ಶಬನಮ್ ಈ ಪ್ರಸಂಗವನ್ನು ದಿವ್ಯ ನಿರ್ಲಕ್ಷದಿಂದಲೇ ಗಮನಿಸಿದ್ದಳು. ಅವಳ ಬಗ್ಗೆ ರೋಷ, ಬೇಸರ ಒಟ್ಟಿಗೆ ಹುಟ್ಟಿಕೊಂಡಿದ್ದವು ಜಮೀರುಲ್ಲಾನಿಗೆ. ಅವಳು ತನಗೆ ಸಂಬಂಧಿಸಿದವಳಲ್ಲ ಎಂಬ ತಿಳಿವಳಿಕೆ ದಟ್ಟಗೊಳ್ಳುತ್ತಿರುವಂತೆ ಅವನು ಅಲ್ಲಿಂದ ತೆವಳುತ್ತ ನಡೆದು ಹೋಗಿದ್ದ. ನೆಲ, ತಲೆಯ ಮೇಲಿನ ಆಕಾಶ, ಮುಖಾಮುಖಿ ಯಾಗುತ್ತಿರುವ ಜನರ ನಡುವೆ ತಾನು ಒಬ್ಬಂಟಿ ಅನಿಸತೊಡಗಿತ್ತು.
* * *
ಆರ್ಭಟದ ಅಲೆಯೊಂದು ಬಂಡೆಗಲ್ಲಿಗೆ ಬಡಿದು, ಹಿಂತಿರುಗುವಾಗ ತನ್ನ ಕಾಲನ್ನು ಹಿಡಿದು ಎಳೆಯುತ್ತಿರುವಂತೆ ಅನಿಸಿ ನೆನಪಿನಾಳದಿಂದ ಫಕ್ಕನೆ ಎಚ್ಚತ್ತುಕೊಂಡಿದ್ದ ಜಮೀರುಲ್ಲಾ. ಅಗಲೇ ಸೂರ್ಯ ಅಸ್ತಮಿಸಿ ಕತ್ತಲು ಆವರಿಸತೊಡಗಿತ್ತು. ಜನರು ಒಬ್ಬರೂ ಕಾಣಿಸಲಿಲ್ಲ. ತಳ್ಳುಗಾಡಿಗಳೂ ಇಲ್ಲ. ಬರಿದು ಬರಿದಾಗಿ ತೋರಿದ ಕಡಲತೀರ ಅವನ ಮನಸ್ಸನ್ನು ಇನ್ನಷ್ಟು ಶೂನ್ಯಗೊಳಿಸಿತು. ನಿರ್ಜನ ಪ್ರದೇಶವನ್ನು ಭೀತಿಗೊಳಪಡಿಸುವಂತಿತ್ತು ಕಡಲಿನ ಮೊರೆತ. ಅದರೊಂದಿಗೆ ಬೆರೆತುಕೊಂಡಂತೆ ಚಂದ್ರಕಾಂತರೆಡ್ಡಿಯ ಅಟ್ಟಹಾಸದ ನಗು ಜಮೀರುಲ್ಲಾನ ಎದೆಯಲ್ಲಿ ಅಗ್ನಿಯನ್ನು ಹೊತ್ತಿಸತೊಡಗಿತ್ತು. ತನ್ನ ಬದುಕನ್ನು ನುಂಗಿದ ತಿಮಿಂಗಿಲು ಅವನು. "ಏ, ಹರಾಮ್ ಜಾದೆಽಽ..." ಜಮೀರುಲ್ಲಾ ಎದ್ದು ನಿಂತು ಕೂಗಾಡಿದ. ರೆಡ್ಡಿಯ ಅಟ್ಟಹಾಸ ಇನ್ನೂ ವರ್ಧಿಸಿತ್ತು ಶಬನಮ್ ಅದರಿಂದ ಪುಳಕಗೊಂಡಂತೆ ಕಿಲಕಿಲ ನಗತೊಡಗಿದ್ದಳು. "ದೋಖಾ (ಮೋಸ) ಹೆಂಗಸ್ಸೆ.... ಚಿನಾಲ್ ರಾಂಡ್ಽಽ..." ಜಮೀರುಲ್ಲಾ ಆವೇಶಕ್ಕೊಳಗಾದವನಂತೆ ಜೋರಾಗಿ ಕೂಗುತ್ತ ನೀರಿಗಿಳಿದ. ಸೊಂಟ ದಾಟಿತ್ತು ನೀರು. ಮೈಮೇಲೆ ಖಬರು ಇಲ್ಲದವನಂತೆ ಅವನ ಹೆಜ್ಜೆಗಳು ಕೀಳುತ್ತಲೇ ಇದ್ದವು. ಅಷ್ಟು ದೂರದಲ್ಲಿ ಕಡಲಗರ್ಭದಿಂದ ಮೈದುಂಬಿಕೊಂಡು ಅಲೆಯೊಂದು ಬರತೊಡಗಿತ್ತು.
"ಏ.... ಯಾರು ನೀನು? ಸಾಯಬೇಕು ಅಂದಿದ್ದಿಯೇನು?" ಅವನ ರಟ್ಟೆಯನ್ನು ಬಲವಾಗಿ ಹಿಡಿದು ಅವಸರವಸರವಾಗಿ ಎಳೆದು ತಂದು ದಂಡೆಯ ಮೇಲೆ ನಿಲ್ಲಿಸಿದ್ದ ಆ ಮನುಷ್ಯ. ಆ ಹೊತ್ತಿಗೆ ಅವರ ಮೇಲೆ ಎರಗಿದ ಅಲೆ ಬಂದಂತೆ ಹಿಂದೆ ಸರಿದಿತ್ತು. ಕುಸಿದು ಕುಳಿತ ಜಮೀರುಲ್ಲಾ ರೊಂಯ್ಽಽ ಎಂದು ಅಳತೊಡಗಿದ.
"ಏನಾಗಿದೆ ನಿನಗೆ? ಹೀಗೇಕೆ ಅಳುತ್ತಿ ಹೆಂಗಸರ ಹಾಗೆ?" ಆ ಮನುಷ್ಯ ಜಮೀರುಲ್ಲಾನ ಮೈ ತಿವಿದು ಕೇಳಿದ. "ನನ್ನ ಜಿಂದಗಿ ಸಮುದ್ರ ಪಾಲಾತು" ಜಮೀರುಲ್ಲಾ ಮತ್ತೆ ಬಿಕ್ಕಿದ್ದ.
"ಅದಕ್ಕೆ ಸಮುದ್ರಕ್ಕೆ ಬಿದ್ದು ಸಾಯಲು ಹೊರಟಿದ್ದಿಯೇನು"?
"ನನ್ನ ಶಬನಮ್ ಮೋಸಾ ಮಾಡಿದ್ಲು" ಜಮೀರುಲ್ಲಾ ನಡೆದ ಘಟನೆಯನ್ನು ವಿವರಿಸಿದ. ಅವನೆದುರು ಕುಳಿತ ಆ ಮನುಷ್ಯ "ಹೆಂಡತೀನ ಆಳಲಿಕ್ಕೆ ಬರಲಾರದವನಿಗೆ ಅಳುವೇ ಗತಿ ನೋಡು" ಎಂದು ಪಕಪಕನೆ ನಕ್ಕ.
"ನಾನು ಆಕಿಮ್ಯಾಲೆ ಭರೋಸಾ ಇಟ್ಟು ಈ ಊರಿಗೆ ಬಂದೆ"
"ಹೆಂಗಸರು ಅಂದರೆ ಈ ಸಮುದ್ರ ಇದ್ದ ಹಾಗೆ. ನೋಡಲು ಸುಂದರ, ಒಳಗೆ ಭಯಂಕರ! ಅಪಾಯಕಾರಿ!!" ಉದ್ಗರಿಸಿದ ಆ ಮನುಷ್ಯ. ಅವನು ಹೇಳುವುದರಲ್ಲಿ ವಾಸ್ತವ ಇದೆಯೆನ್ನಿಸಿತು. ಶಬನಮ್‌ಳ ಸೋಗಲಾಡಿತನ ಜಮೀರುಲ್ಲಾನ ಕಣ್ಮುಂದೆ ಸುಳಿದಾಡಿತು.
"ಹೆಂಗಸರ ಪುಕ್ಕ ಬೆಳೆಯಲು ಅವಕಾಶ ಕೊಡಬಾರದು. ಪುಕ್ಕ ಬೆಳೆದರೆ ಅವರ ಹಾರಾಟ ಜೋರಾಗುವುದು. ಹಾರಿ, ಆಕಾಶಕ್ಕೆ ನೆಗೆದು, ನಮ್ಮ ನೆತ್ತಿ ಕುಕ್ಕುವರು". ಹೆಂಗಸರ ಬಗೆಗಿನ ಆ ಮನುಷ್ಯನ ಅಭಿಪ್ರಯ ಕಠೋರವಾಗಿತ್ತು. ಜಮೀರುಲ್ಲಾ ಅವನ ಮುಖ ದಿಟ್ಟಿಸುತ್ತ ಕೇಳಿದ "ನನ್ನ ಹೆಂಡ್ತಿ ಹಾಂಗ ನಿನ್ನ ಹೆಂಡ್ತೀನೂ...?"
ಅವನ ಪ್ರಶ್ನೆ ಪೂರ್ತಿಯಾಗುವ ಮೊದಲೇ ಆ ಮನುಷ್ಯನ ಧ್ವನಿ ಗಡುಸಾಗಿತ್ತು.
"ಏಽಽ ಪಾಗಲ್ ಬುದ್ಧಿಯವನೆ. ನನ್ನ ನೋಡಿದರೆ ನಿನಗೆ ಅಂಥ ಗುಮಾನಿ ಬರುವುದೇನು? ಮರ್ದ್ ಇದ್ದೇನೆ ನಾನು. ನನ್ನಾಕೆಯ ಪುಕ್ಕಗಳನ್ನು ಬೇರು ಸಹಿತ ಕತ್ತರಿಸಿ ಹಾಕಿದ್ದೇನೆ. ನನ್ನ ಆವಾಜು ಕೇಳಿದರೆ ಪ್ರಾಣ ಹೋದವರಂತೆ ಒದ್ದಾಡುತ್ತಾಳೆ ಆಕೆ" ಹೆಮ್ಮೆ ವ್ಯಕ್ತಪಡಿಸಿದ ಅವನು.
ಈ ಮನುಷ್ಯನ ಗಡಸುತನ ತನ್ನಲ್ಲಿಯೂ ಇದ್ದಿದ್ದರೆ ಶಬನಮ್‌ಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ತಾನೂ ಜಬರಾಗಿ ಇರಬಹುದಾಗಿತ್ತು ಎಂದುಕೊಂಡ ಜಮೀರುಲ್ಲಾ.
ಆಕಾಶದಲ್ಲಿ ನಕ್ಷತ್ರಗಳು ಹೊಳೆದಿದ್ದವು.
"ನಿನ್ನ ಹೆಸರೇನು?" ಕೇಳಿದ್ದ ಆ ಮನುಷ್ಯ.
"ಜಮೀರುಲ್ಲಾ"
"ನನ್ನ ಹೆಸರು ಮುನೀರ್. ನಿನ್ನ ಮುಖದಲ್ಲಿ ಕಣ್ಣೀರು ಬತ್ತಿದೆ. ಹೋಗಿ ತೊಳೆದುಕೊಂಡು ಬಾ. ನಿನಗೆ ಪೆನ್ನಿ ಕೊಡುತ್ತೇನೆ"
"ಪೆನ್ನಿ...! ಏನದು?"
"ನೀನು ಸಾರಾಯಿ ಕುಡಿಯುದಿಲ್ಲವೆ?"
"ಇಲ್ಲ"
"ಅದಕ್ಕೆ ನೀನು ಜಡವಾಗಿದ್ದಿ. ಹೆಂಗಸರ ಹಾಗೆ ಅಳುತ್ತಿ. ಈ ಪೆನ್ನಿ ಕುಡಿದರೆ ನೋವು ಅನ್ನುವುದೇ ಇರೋದಿಲ್ಲ. ಇದು ಎಲ್ಲ ದುಃಖಕ್ಕೆ ರಾಮಬಾಣ."
"ನಿನ್ಗ ದುಃಖ ಐತೇನು?"
"ಇದೆಯೆಂದರೆ ಇದೆ, ಇಲ್ಲವೆಂದರೆ ಇಲ್ಲ. ಅದರ ಕಡೆಗೆ ನಾನು ಲಕ್ಷ್ಯ ಕೊಡುದಿಲ್ಲ. ನನಗೆ ಜಿಂದಗಿ ಬೇಕು. ಪೆನ್ನಿ ನನ್ನ ಜಿಂದಗಿ ಕಾಪಾಡುವುದು. ನಿನಗೆ ಯಾವ ಚಟವೂ ಇಲ್ಲವೆ?"
"ಊರಲ್ಲಿ ಓ.ಸಿ. .... ಆಡ್ತಿದ್ದ್ಯಾ. ಇಸ್ಪೇಟು ಅಂದ್ರ ನನಗ ಪಂಚಪ್ರಾಣ".
"ಹಾಗಾದರೆ ನೀನು ನನ್ನ ದೋಸ್ತ್. ಈಗ ಇನ್ನೊಂದಿಷ್ಟು ಪೆನ್ನಿ ಕುಡಿ. ಮನೆಗೆ ಹೋಗೋಣ. ಜರೀನಾ ಮೀನಿನ ಸಾರು ಮಸ್ತಮಾಡ್ತಾಳೆ. ಊಟ ಮಾಡಿ ಮಲಗು. ನೀನು ನಾಳೆಗೆ ಹೊಸ ಮನುಷ್ಯ ಆಗಬೇಕು. ನಿನ್ನ ರಾಂಡ್ ಶಬನಮ್‌ಳನ್ನು ಆ ದಗಾಖೋರ ರೆಡ್ಡಿಯನ್ನು ಮರೆಯಬೇಕು. ಮನುಷ್ಯನಿಗೆ ಜಿಂದಗಿ ಒಂದೇ ಸಲ ಇರುವುದು" ದಾರ್ಶನಿಕನಂತೆ ಮಾತಾಡಿದ ಮುನೀರ. ಜಮೀರುಲ್ಲಾ ಎದ್ದು ಹೋಗಿ ಕಡಲ ನೀರಲ್ಲಿ ಮುಖ ತೊಳೆದುಕೊಂಡು ಬಂದ. ತಣ್ಣಗೆ ಬೀಸುತ್ತಿದ್ದ ಗಾಳಿ ಅವನ ಮೈಗೆ ಹಿತವನ್ನುಂಟು ಮಾಡಿತ್ತು. ಗಾಜಿನ ಸೀಸೆಯೊಂದರ ಮುಚ್ಚಳಿಕೆ ತೆಗೆದು "ಕುಡಿ" ಎಂದು ಮುನೀರ."
"ಇದು ಪೆನ್ನಿ ಏನು?"
"ಹೂಂ"
"ನನಗೆ ರೂಢಿ ಇಲ್ಲ"
"ರೂಢಿ ಮಾಡಿಕೊ. ಜಿಂದಗಿ ಬೇಕು ಅಂದರೆ" ಆಸೆ ಹುಟ್ಟಿಸಿದ ಮುನೀರ.
ಜಮೀರುಲ್ಲಾ ಸೀಸೆಯೆತ್ತಿ ಒಂದು ಗುಟುಕು ಗಂಟಲಿಗೆ ಸುರವಿಕೊಂಡ. ಹೊಟ್ಟೆಯೊಳಗೆ ಕೆಂಡ ಸುರಿದ ಅನುಭವವಾಗಿ ಸಂಕಟದಿಂದ ಮುಖ ಕಿವುಚಿದ ಜಮೀರುಲ್ಲಾನನ್ನು ಕಂಡು ಮತ್ತೆ ಫಕ ಫಕ ನಕ್ಕ ಮುನೀರ ಸಾವಧಾನವಾಗಿ ಉಲಿದ "ಗುಟುಕಿನ ಮೇಲೆ ಗುಟುಕು ಇಳಿದರೆ ಪೆನ್ನಿ ಅಮೃತ ಅನ್ನಿಸುವುದು"
"ನನ್ಗ ಇದಽ ಒಂದು ಗುಟುಕು ಸಾಕು" ಎಂದ ಜಮೀರುಲ್ಲಾ.
"ನಾನು ನಿನಗೆ ಒಮ್ಮೆಲೆ ಒತ್ತಾಯ ಮಾಡೋದಿಲ್ಲ" ಎಂದು ಮುನೀರ ಸೀಸೆಯನ್ನು ಇಸಿದುಕೊಂಡು ತನ್ನ ಗಂಟಲಿಗೆ ಗಟಗಟನೇ ಸುರುವಿಕೊಂಡ. ಜಮೀರುಲ್ಲಾಗೆ ಅವನ ಸಾಮರ್ಥ್ಯ ಅಗಾಧವೆನ್ನಿಸಿತು.
* * *
ಜರೀನಾ ಚಂದದ ಹೆಂಗಸು. ಫಳ ಫಳ ಹೊಳೆವ ಕಣ್ಣು. ಚಂದ್ರನ ಮುಖಕ್ಕೆ ಒಪ್ಪುವ ಮಾಟವಾದ ಮೂಗು, ಕೆಂಪು ತುಟಿ. ತಲೆಯನ್ನು ಸಿಂಗರಿಸಿದ ದಟ್ಟ ಕಪ್ಪು ಕೂದಲು, ಲವಲವಿಕೆಯನ್ನು ಪುಟಿಸುವೆ ದೇಹಸಿರಿ. ಮುನೀರ ಆ ಚೆಲುವೆಗೆ ಗುಂಜಿಯಷ್ಟು ಸರಿದೂಗುವವನಲ್ಲ ಎಂದುಕೊಂಡ ಜಮೀರುಲ್ಲಾ.
"ಇವನು ಜಮೀರುಲ್ಲಾ. ನನ್ನ ಹೊಸ ದೋಸ್ತ್. ಪಾಪ, ಜೀವನದಲ್ಲಿ ನೊಂದಿದ್ದಾನೆ. ಸಮುದ್ರಕ್ಕೆ ಬೀಳಲು ಹೋಗಿದ್ದ. ನಾನೇ ರಕ್ಷಿಸಿದೆ. ಮೀನಿನ ಸಾರು ಮಾಡು. ಅದನ್ನು ಕುಡಿದರೆ ಇವನಿಗೆ ಜಿಂದಗಿ ಮೇಲೆ ಆಸೆ ಹುಟ್ಟಿರಬೇಕು. ತಿಳಿತೋ..." ಜಬರು ಧ್ವನಿಯಲ್ಲಿ ಹೇಳಿದ ಮುನೀರ. ಬಾಗಿಲಲ್ಲಿಯೆ ನಿಂತಿದ್ದ ಜರೀನಾ ತೆಳ್ಳಗಿನ ಸ್ವರದಲ್ಲಿ ಹೂಂಗುಟ್ಟಿ ಒಳಗೆ ಸರಿದು ಹೋದಳು.
ಗುಡಿಸಲಿನ ಹೊರಗೆ ಹಾಕಿದ ಹಗ್ಗದ ಮಂಚದ ಮೇಲೆ ಜಮೀರುಲ್ಲಾನೊಂದಿಗೆ ಕುಳಿತುಕೊಂಡ ಮುನೀರ ಮತ್ತೊಂದು ಸೀಸೆಯ ಮುಚ್ಚಳಿಕೆ ತೆರೆದ. ಪಕ್ಕದ ಮಂಚದಲ್ಲಿ ಕುಳಿತಿದ್ದ ಮುದುಕ "ನಿನಗೆ ಮನೆಯ ಖಬರು ಇಲ್ಲಾ. ಮುಸಾಫಿರ್ (ಪ್ರವಾಸಿಗ) ಬಂಗ್ಲೆ ಮಾಡಿದ್ದಿ ನೀನು" ಎಂದು ಗೊಣಗಿಕೊಂಡು ಕೆಮ್ಮತೊಡಗಿದ.
ಎರಡು ಗುಟುಕು ಪೆನ್ನಿಯನ್ನು ಬಾಯಿಗೆ ಹಾಕಿಕೊಂಡು "ಈ ಗೂರಲು ಮುದುಕನ ಕಿರಿಕಿರಿ ದಿನಾಲೂ ಇದ್ದದ್ದೆ" ಎಂದು ಉದಾಸೀನದ ಮಾತಾಡಿ ಸೀಸೆಯನ್ನು ಮುದುಕನ ಎದುರು ಹಿಡಿದು "ಗೋರಿಗೆ ಹೋಗಲು ಬಂದಿ, ಗೂರುವುದು ನಿಲ್ಲಿಸಲಿಲ್ಲ. ಈಗಲಾದ್ರೂ ಈ ಪೆನ್ನಿ ಕುಡಿ. ಜನ್ನತ್(ಸ್ವರ್ಗ) ಆದ್ರೂ ಸಿಕ್ಕೀತು" ಎಂದು ನಕ್ಕ. ಅವನ ತಮಾಷೆಯಲ್ಲಿನ ವ್ಯಂಗ್ಯವನ್ನು ಗ್ರಹಿಸಿಕೊಂಡ ಮುದುಕನ ಮೂಗಿನ ಹೊರಳೆ ಹಿಗ್ಗಿತ್ತು. "ಬೇಶರ್ಮ್‌ನಿಗೆ ಮಾತೊಂದು ಕೇಡು" ಎಂದು ಜೋರಾಗಿ ಹೇಳಿ ಅಸಾಧ್ಯವಾಗಿ ಕೆಮ್ಮತೊಡಗಿದ.
"ಯಾರವರು?" ಜಮೀರುಲ್ಲಾ ಕೇಳಿದ.
"ಅವನು ನನ್ನ ಸಸುರಾ (ಮಾವ) ನನ್ನ ಅಮ್ಮನ ಭೈ ಇವನು. ಜರೀನಾ ಇವನ ಮಗಳು. ನನ್ನ ಅಮ್ಮಾನಿಂದ ಜರೀನಾಳ ಅಮ್ಮಾ ಸಾಯುವಾಗ ಮಾತು ತೆಗೆದುಕೊಂಡಿದ್ದಳಂತೆ. ಜರೀನಾಳೊಂದಿಗೆ ನನ್ನ ಶಾದಿ ಆಯಿತು. ಈ ಮುದುಕನಿಗೆ ನಾನು ಮನೆಯ ಅಳಿಯನಾಗುವುದು ಬೇಕಾಗಿರಲಿಲ್ಲ. ಈಗಲೂ ನನ್ನನ್ನು ಕಂಡರೆ ಮುಖ ಉಬ್ಬಿಸುತ್ತಾನೆ. ನಾನು ಸೊಪ್ಪು ಹಾಕೋದಿಲ್ಲ" ಎನ್ನುತ್ತ ಮತ್ತೆ ಸೀಸೆಯನ್ನು ಬಾಯಿಗಿಟ್ಟುಕೊಂಡ ಮುನೀರ.
ಮುನೀರನ ವ್ಯಕ್ತಿತ್ವದ ಪರಿಚಯ ಜಮೀರುಲ್ಲಾನಿಗೆ ನಾಲ್ಕು ದಿನದಲ್ಲೇ ಆಯಿತು. ಅವನು ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಮಾತು ಸೊಗಸಿದಾದರೆ, ನಡವಳಿಕೆ ದಬ್ಬಾಳಿಕೆಯದು. ಮಾವ ಒಣ ಮೀನುಗಳ ವ್ಯಾಪಾರ ಮಾರುತ್ತಿದ್ದ ಮಾರ್ಕೆಟಿನಲ್ಲಿ ಅವನದೊಂದು ದುಖಾನ್ ಇತ್ತು ಶಾದಿಯಾದ ಹೊಸದರಲ್ಲಿ. ದುಖಾನ್‌ದ ಜವಾಬ್ದಾರಿ ಮುನೀರನದಾಗಿತ್ತು. ಮಾವನ ಕಣ್ಣು ತಪ್ಪಿಸಿ ಅವನು ಪೆಟ್ಟಿಗೆಯಿಂದ ಹಣ ಕದಿಯುತ್ತಿದ್ದ. ಇಸ್ಪೆಟಿನ ಮೂರೆಲೆಯ ಆಟವಾಡುತ್ತಿದ್ದ. ಹಾಗೆಯೇ ಪೆನ್ನಿಯ ಚಟವೂ ಅಂಟಿಕೊಂಡಿತ್ತು. ಮಾವನಿಗೆ ಅದು ಇಷ್ಟವಾಗಿರಲಿಲ್ಲ. ಅವನು ದುಖಾನನ್ನು ದಿವಾಳಿ ಮಾಡುತ್ತಾನೆಂದು, ಅಲ್ಲಿಗೆ ಬರುವುದಕ್ಕೆ ನಿರ್ದಾಕ್ಷಿಣ್ಯವಾಗಿ ನಿಷೇಧಿಸಿದ್ದ. ತಂದೆಗೆ ಆರಾಮ ಇಲ್ಲ ಅನಿಸಿದಾಗ ಜರೀನಾ ದುಖಾನಲ್ಲಿ ಕುಳಿತು ಬೇಪಾರ ಮಾಡುತ್ತಿದ್ದಳು. ಹಣ ಬೇಕೆಂದಾಗ ದುಖಾನ್ ಮುಂದೆ ಬಂದು ರಾದ್ಧಾಂತ ಮಾಡುತ್ತಿದ್ದ ಮುನೀರ. ಮಾವ ರೇಗಿ, ಬೈದಾಡುವನು. ಮುನೀರ ಅವನ ಮೇಲೆ ಬೀಳುವನು. ತಂದೆಯನ್ನು ರಕ್ಷಿಸಲು ಹೋಗಿ ಜರೀನಾ ಗಂಡನಿಂದ ಹೊಡೆತ ತಿನ್ನುವಳು. ತಂದೆ, ಮಗಳನ್ನು ವಾಚಮಗೋಚರವಾಗಿ ಬೈದು, ಹಿಂಸಿಸಿ "ದುಖಾನಿಗೆ ಬೆಂಕಿ ಹಚ್ಚಿ ನಿಮ್ಮನ್ನು ಸುಟ್ಟು, ನಾನು ಮೀನು ಬೇಯಿಸಿಕೊಂಡು ತಿನ್ನುತ್ತೇನೆ" ಎಂದು ಹೆದರಿಸುತ್ತಿದ್ದ ಮುನೀರ.
ಜರೀನಾ ಗಂಡನ ಅಬ್ಬರಕ್ಕೆ ಥರಗುಟ್ಟುತ್ತಿದ್ದಳಾದರೂ ಆವೇಶದ ರಭಸದಲ್ಲಿ "ನೀನು ಕಡಲಿಗೆ ಬಿದ್ದು ಸಾಯಿ" ಎನ್ನುತ್ತಿದ್ದಳು. "ನಾನು ಸತ್ತರೆ ನಿನಗೆ ಹೊಸ ಮಿಂಡ ಸಿಗುತ್ತಾನೇನು?" ಎಂದು ಅವನು ಗಟ್ಟಿ ಗಟ್ಟಿಯಾಗಿ ಚೀರಿ ಜನರನ್ನು ಸೇರಿಸುವನು. ಅವರೆದುರಿಗೆ ಆಕೆ ಹಾದರದವಳೆಂದು ದೂಷಿಸುವನು. ತನಗೆ ತಿನ್ನಲು ಅನ್ನ ಕೊಡುವುದಿಲ್ಲ. ಕುಡಿಯಲು ಮೀನಿನ ಸಾರು ಕೊಡುವುದಿಲ್ಲ. ಪೆನ್ನಿ ಕುಡಿಯಲು ದುಡ್ಡು ಕೊಡುವುದಿಲ್ಲ ಎಂದು ಆರೋಪಿಸುವನು. ಜರೀನಾಳ ಕೂದಲು ಹಿಡಿದು, ನೆಲಕ್ಕೆ ಕುಕ್ಕಿ, ಪೆಕಪೆಕನೆ ಒದೆಯುವನು.
ಜಮೀರುಲ್ಲಾ ಅವನ ನಡತೆಯನ್ನು ಅಸಹನೆಯಿಂದ ನೋಡುತ್ತಿದ್ದ.
ಒಳಗೊಳಗೆ ನೋವು ಅನುಭವಿಸುತ್ತ ಮುಖದಲ್ಲಿ ಯಾವಾಗಲೂ ನಗೆ ಅರಳಿಸಿ ಕೊಂಡಿರುತ್ತಿದ್ದ ಜರೀನಾ ದಿಟ್ಟೆಯೆನಿಸಿತ್ತು ಅವನಿಗೆ. ಗಂಡನ ಆಕ್ರಮಣವನ್ನು, ಹಿಂಸೆಯನ್ನು ತನ್ನ ತಂದೆಯ ಸಲುವಾಗಿ ಆಕೆ ಸಹಿಸಿಕೊಂಡಿದ್ದಾಳೆಂದು ಅವನು ಗ್ರಹಿಸಿಕೊಂಡಿದ್ದ.
ಆ ದಿನ ಮೀನಿನ ಸಾರು ಮಾಡಲಿಲ್ಲವೆಂಬ ಕಾರಣಕ್ಕೆ ಜರೀನಾಳ ಮೈ, ಮುಖ ಎನ್ನದೆ ಥಳಿಸಿತೊಡಗಿದ ಮುನೀರ. ಆಕೆ ಸಂಕಟದಿಂದ ಚೀತ್ಕರಿಸಲಾರಂಭಿಸಿದಳು. ಜಮೀರುಲ್ಲಾ ಮುನೀರನಿಗೆ ಸಮಾಧಾನ ಮಾಡಲು ಯತ್ನಿಸಿದ್ದು ವ್ಯರ್ಥವೆನಿಸಿತು. ಹೊಟ್ಟೆಗೆ ಬಿದ್ದ ಪೆಟ್ಟಿನಿಂದ ಜರೀನಾ ನೆಲದ ಮೇಲೆ ಬಿದ್ದು ಒದ್ದಾಡ ತೊಡಿಗಿದ್ದಳು. ಮಗಳ ಹಿಂಸೆಯನ್ನು ನೋಡಲಾರದೆ ಅವಳ ಅಬ್ಬಾಜಾನ್ ಅಳಿಯನನ್ನು ಹೊಡೆಯಲು ಕೈಯೆತ್ತಿದ. ಮುನೀರ ಮಾವನ ಎದೆಗೆ ಬಿಗಿದ ಮುಷ್ಟಿಯಿಂದ ಬಿರುಸಾಗಿ ಗುದ್ದಿದ. ಕುಸಿದು ಬಿದ್ದ ಮುದುಕನ ಉಸಿರು ನಿಶ್ಚಲವಾಗಿತ್ತು. ಜರೀನಾ ಕಡಲು ಭೋರ್ಗರೆಯುವಂತೆ ಭಯಂಕರವಾಗಿ ಆಕ್ರಂದಿಸಿದಳು. ಈ ಸುದ್ದಿ ಪೊಲೀಸರಿಗೆ ತಿಳಿದು, ಇಬ್ಬರು ಪೇದೆಗಳು ಬಂದು ಮುನೀರನನ್ನು ಸ್ಟೇಶನ್ನಿಗೆ ಕರೆದುಕೊಂಡು ಹೋದರು.
ಪೊಲೀಸರು ಮತ್ತು ಮುನೀರನ ನಡುವೆ ಅದೇನು ಸಂಬಂಧವಿತ್ತೊ ಕೊಲೆಯ ಕೇಸನ್ನು ದಾಖಲಿಸಿಕೊಳ್ಳದೆ ಅವನನ್ನು ನಾಲ್ಕು ದಿನ ಲಾಕಪ್‌ನಲ್ಲಿಟ್ಟಂತೆ ನಾಟಕ ಮಾಡಿ ಹೊರಗೆ ಬಿಟ್ಟಿದ್ದರು.
ಮಾವ ಸತ್ತಿದ್ದರ ದರದು ಇಲ್ಲದಂತೆ ಅವನು ಹೆಂಡತಿಯೆದುರು ಬಂದು ನಿಂತು "ನಾನು ಪೆನ್ನಿ ಕುಡಿಯಬೇಕು ಹಣ ಕೊಡು" ಎಂದು ಕಾಡಿದ.
ಜರೀನಾ ಅವನ ಕಪಾಳಕ್ಕೆ ಬಿರುಸಾಗಿ ಹೊಡೆದು "ನನ್ನ ಉಚ್ಚೆ ಕುಡಿ" ಎಂದಳು.
ಒಡಲಿಗೆ ಬೆಂಕಿ ಬಿತ್ತೊ, ಮುನೀರ ಅವಳ ತುರುಬು ಹಿಡಿದು ಎಳೆದಾಡುತ್ತ "ನನ್ನ ಪೊಲೀಸರಿಗೆ ಹಿಡಿದುಕೊಡಲು ಮಸಲತ್ತು ಮಾಡಿದಿಯಲ್ಲ ಸೊಕ್ಕಿನ ಹೆಂಗಸ್ಸೆ. ನಿನ್ನಪ್ಪನ ಕೊಂದಂತೆ ನಿನ್ನ ಕೊಂದು ನಾನು ಜೇಲು ಸೇರುತ್ತೇನೆ" ಎಂದು ಹೊಡೆಯಲು ಧಾವಿಸಿದಾಗ ಅವನ ಕಿಬ್ಬೊಟ್ಟೆಗೆ ಜರೀನಾ ತನ್ನ ಮೊಣಕಾಲಿಂದ ತಿವಿದಿದ್ದಳು. ಹಾಂ ಎಂದವನು ಅಂಗಾತಾಗಿ ನೆಲದ ಮೇಲೆ ಉರುಳಿದ. ಪೆಟ್ಟು ತಾಗಿದ್ದು ಅವನ ಕಿಬ್ಬೊಟ್ಟೆಗಲ್ಲ, ವೃಷಣಕ್ಕೆ, ಜರೀನಾ ಗಾಬರಿಯಿಂದ ನಡುಗತೊಡಗಿದಳು. ಜಮೀರುಲ್ಲಾ ಭೀತನಾಗಿ "ಮುನೀರ ಭೈ" ಎಂದು ಮೈದಡವಿದ. ಅದು ತಣ್ಣಗಾಗತೊಡಗಿತ್ತು.
ಜಮೀರುಲ್ಲಾ ಜರೀನಾಳಿಗೆ ಧೈರ್ಯ ಹೇಳಿದ. ಅಂಗಳದಲ್ಲಿ ಬಿದ್ದಿದ್ದ ಮುನೀರನ ದೇಹವನ್ನು ಒಳಗೆ ತಂದು ಹಾಕಿದ. ಮಧ್ಯರಾತ್ರಿ ಹೊತ್ತಿಗೆ ಆ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಕಡಲ ದಂಡೆಯಲ್ಲಿ ಮಲಗಿಸಿ, ಪಕ್ಕದಲ್ಲಿ ಎರಡು ಪೆನ್ನಿ ತುಂಬಿದ ಸೀಸೆಗಳನ್ನು ಇರಿಸಿ ಬಂದ ಜಮೀರುಲ್ಲಾ.
ಸೂರ್ಯನ ಉದಯದೊಂದಿಗೆ ಮುನೀರನ ಸಾವಿನ ಸುದ್ದಿ ಹರಡಿತ್ತು. ಅವನು ವಿಪರೀತ ಪೆನ್ನಿ ಕುಡಿದು ಸತ್ತಿದ್ದಾನೆಂದು ಜನರು ತಿಳಿದರು. ಮುನೀರ ತಣ್ಣಗೆ ಕಬರಸ್ತಾನದಲ್ಲಿ ಮಲಗಿಕೊಂಡ. ಅವನೊಂದಿಗೆ ನಿಜ ಸಂಗತಿ ಕೂಡ.
* * *
ಜಮೀರುಲ್ಲಾ ಈಗ ಶಬನಮ್‌ಳನ್ನು, ದಗಾಖೋರ ಚಂದ್ರಕಾಂತ ರೆಡ್ಡಿಯನ್ನು ಪೂರ್ತಿಯಾಗಿ ಮರೆತಿದ್ದಾನೆ. ಮುನೀರ ಹೇಳಿದ ಹಾಗೆ ಅವನೀಗ ಹೊಸ ಮನುಷ್ಯನಾಗಿದ್ದಾನೆ. ಜೀವನ ಪ್ರೀತಿಯಲ್ಲಿ ಧ್ಯಾನಸ್ಥನಾಗಿದ್ದಾನೆ. ಜರೀನಾ ಅವನಿಗೆ ವ್ಯವಹಾರದ ಕೌಶಲ್ಯವನ್ನು ಕಲಿಸಿದ್ದಾಳೆ. ಒಣ ಮೀನುಗಳ ವ್ಯಾಪಾರದೊಂದಿಗೆ ಹಸಿ ಮೀನುಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ, ಜರೀನಾ ಅವನ ಪಾಲಿಗೆ ಮೇಮ್‌ಸಾಬ ಅನಿಸಿದ್ದಾಳೆ. ಊರಿಂದ ತನ್ನ ಅಮ್ಮಾನನ್ನು ಕರೆಯಿಸಿಕೊಂಡ ಅವನು ಚಂದದ ಮನೆ ಕಟ್ಟಿಕೊಂಡಿದ್ದಾನೆ. ಬಂಗಾರದಂಥ ಇಬ್ಬರು ಗಂಡು ಮಕ್ಕಳಿಗೆ ಅವನು ತಂದೆಯೆನಿಸಿದ್ದಾನೆ. ಆ ಮಕ್ಕಳ ಅಮ್ಮಾ ಜರೀನಾಳೆ ಆಗಿದ್ದಾಳೆ. ಮೀನು ಖರೀದಿಸಲು ಬರುವಾಗ ಜಮೀರುಲ್ಲಾ ದಿನಾಲೂ ಹೊಸ ಸೂರ್ಯನನ್ನು ನೋಡಿ ಪುಳಕಗೊಳ್ಳುತ್ತಾನೆ. ಅವನಿಗೆ ಇಷ್ಟವಾಗುವುದು ಹೊಸ ಸೂರ್ಯ ಮಾತ್ರ.
***
ಕೀಲಿಕರಣ: ಕಿಶೋರ್ ಚಂದ್ರ