ಬಾರೇ ನೀರೆ ತೋರೇ ಮುಖ

-ಶಿಶುನಾಳ ಶರೀಫ್

ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ
ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ        ||ಪ||

ಆರಮುಂದೆ ಹೇಳಿದರೆ ತೀರದೀ ಮಾತು
ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು
ಬರತೀನಂತಾ ಹೇಳಿಹೋದೆಲ್ಲೆ ಮರೆತು ಮನ
ಕಲ್ಲು ಮಾಡಿದರೇನು ಬಂತು                                     || ಆ. ಪ.||

ಸಣ್ಣಾಕಿ ಇರುತಾ ನಾವು ನೀವು ಜತ್ತು
ಕಣ್ಣಿಟ್ಟು ಕಾಡುವುದೇನಿದು ಮಾತು
ಹುಣ್ಣವಿ ದಿವಸ ಆಮವಾಸಿ ಬಂತು
ಹಣ್ಣಾಗಿ ಉದರುವ ಬಳ್ಳಿ ಹಬ್ಬಿತ್ತು
ಇನ್ನ್ಯಾಕ ಕರುಣಾಗುಣವು ಇರಲಿ ಸ್ಥೂಲದ
ಹರವಿ ಸುಖದಲಿ ಹೊತ್ತು                                              ||೧||

ವಸುಧಿಯೊಳು ಶಿಶುನಾಳಧೀಶನ ಹೊರತು
ಮುಸುಕು ತೆಗೆದು ನೋಡೆ ಮಾಯೆ ಬಲವಾಯ್ತು
ಹಸನಾದ ಹಾಲಿನ ಕೆನಿಯು ನೀರಾಯ್ತು
ವ್ಯಸನವೆಂಬೊ ಮಜ್ಜಿಗಿ ಹುಳಿಯಾಯ್ತು
ದೆಸೆ ದೆಸೆಗಳಗೆ ಆಕ್ಷತೆ ಇಟ್ಟು ಮೋಹವ
ತೊಟ್ಟು ಬಂದೆ ನಾ ಸೋತು                                         ||೨||                  

                ****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ