ಎಂಥಿಂಥಾದೆಲ್ಲಾನು ಬರಲಿ

-ಶಿಶುನಾಳ ಶರೀಫ್

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ            ||ಪ||

ಪರಾತ್ಪರನಾದ ಗುರುವಿನ
ಅಂತಃಕರುಣ ಒಂದು ಬಿಡದಿರಲಿ               ||ಅ.ಪ.||

ಬಡತಾನೆಂಬುದು ಕಡತನಕಿರಲಿ
ವಡವಿ ವಸ್ತ ಹಾಳಾಗಿಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ                 ||೧|| 

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದಿಯಲಿ
ಬಂಡುಮಾಡಿ ಜನರು ನಗಲಿ                     ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಆಂಬಲಿ ಎನಗ ಸಿಗದೆಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮೇಲೆ ಬೀಳಲಿ  ||೩||

ವ್ಯಾಪಾರುದ್ಯೋಗ ಇಲ್ಲದಾಂತಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದುಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ               ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ     ||೫||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ