ಚಿಂತೆಗೆ ಕಣ್ಣತೆತ್ತವಳೆ!!

- ನರಸಿಂಹಸ್ವಾಮಿ ಕೆ ಎಸ್

ಚಿಂತೆಗೆ ಕಣ್ಣ ತೆತ್ತವಳೆ,  ಚಿಲುಕದಮೇಲೆ
ಮುಂಗೈಯನೂರಿ ನಿಂತವಳೆ,
ಬಿಂದಿಗೆ ಹೊರದೆ ಸೋತವಳೆ, ಸಣ್ಣಗೆ ಒಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ತುರುಬಿನ ತುದಿಗೆ
ಒಂದೆ ಹೂವನು ಮುಡಿದವಳೆ,
ಒಂದೊಂದೆ ಬಳೆಯ ತೊಟ್ಟವಳೆ, ಈ ಮನೆಯೊಳಗೆ
ಚಿಂತೆ, ಏತರ ಚಿಂತೆ, ನಿನಗೆ?

ಚಿಂತೆಗೆ ಕಣ್ಣ ತೆತ್ತವಳೆ, ಹತ್ತಿದ ದೀಪ
ಮಂಕಾಗಿ ತೋರಿ ನಿಂತವಳೆ,
ಸಂತೆಗೆ ಹೋಗಿ ಬರಿಗೈಲೆ ಬಂದೆಯ, ಪಾಪ !-
ಚಿಂತೆ, ಏತರ ಚಿಂತೆ, ನಿನಗೆ?

ನಿನಗಾವ ಚಿಂತೆ ಚಿಕ್ಕವಳೆ, ಚಿನ್ನದ ಬಳೆಗೆ
ಒಪ್ಪುವ ತುಂಬುಗೈಯವಳೆ !
ಗಾಳಿಯ ಸುಳಿಗೆ ಹೂವಾದ ಮಲ್ಲಿಗೆಯರಳೆ,
ಬಂಡಿಯ ದನಿಗೆ ಬೆಚ್ಚುವಳೆ !-

ನಿನಗಾವ ಚಿಂತೆ, ಚಿಕ್ಕವಳೆ, ತುಂಬಿದ ಮನೆಗೆ
ಘನವಾಗಿ ಬಂದ ಗುಣದವಳೆ,
ನುಡಿದೊಂದು ಮಾತು ಸಾಕೆನುವ ಇನಿದನಿಯವಳೆ,
ತಲೆತಗ್ಗಿ ನಾಚಿ ನಡೆಯುವಳೆ?

ಮಳೆ ಬಿದ್ದು, ಕೆರೆ ತುಂಬಿ ನೀರು! ಮಿಂಚುವ ನೀರು,
ಬರಿ ನೀರೆ? ಥೇಟು ಪನ್ನೀರು !
ಅತ್ತಿತ್ತ ನೆಲ ಹೂವ ತೇರು; ಅಲ್ಲಿಗೆ ಬಾನು
ಇದ್ದೀತು ಒಂದೆರಡು ಮಾರು !

ಮನೆಗಿಂತ ಬಾನು ಎತ್ತರವೆ? ಆದರೆ ಏನು?
ಬಾನಿಗೆ ತಾರೆ ಹತ್ತಿರವೆ?
ಏನಂಥ ಬೆಟ್ಟ ಹೊತ್ತಿರುವೆ? ಸುಮ್ಮನೆ ನೀನು
ಸೊಂಪಾಗಿ ನಿಲುವುದುತ್ತರವೆ ?

ತೋಟದ ಮೇಲೆಲ್ಲ ತೆಂಗು; ತೆಂಗಿನ ಮೇಲೆ
ತೆರೆದ ಹೊಂಬಾಳೆಯ ರಂಗು!
ಗೊನೆ ಬಿಟ್ಟ ರಸಬಾಳೆ ಕಂದು; ಹಣ್ಣಿನ ಮೇಲೆ
ಹುದುಗಿತ್ತು ಗಿಣಿಯೊಂದು ಬಂದು.

ವೀಣೆಗೆ ತಂತಿಯ ಚೆಂತೆ; ತಂತಿಗೆ ತನ್ನ
ಹುಡುಕುವ ಬೆರಳಿನ ಚಿಂತೆ ;
ಬೆರಳಿಗೆ ಉಂಗುರದ ಚಿಂತೆ ; ಚಿಂತೆಗೆ ತನ್ನ
ಮಡಿಲ ತುಂಬುವುದೊಂದೆ ಚಿಂತೆ.

ಇಲ್ಲದ ಸಲ್ಲದ ಚಿಂತೆ ; ಅದು ಬಂದಂತೆ
ಹೋದೀತು ಇರಲೊಂದು ಗಳಿಗೆ !
ಸಂಶಯ ನನಗಿಲ್ಲ, ಚೆಲುವೆ; ಚೆಲುವಿಗೆ ಚಿಂತೆ;
ಚಿಂತೆಯಿಲ್ಲದ ಚೆಲುವು ಚೆಲುವೆ ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ