- ಅಬ್ಬಾಸ್ ಮೇಲಿನಮನಿ
- ೧ -
ನಾಲ್ಕಾರು ದಿನಗಳಿಂದ ಇಮಾನಬಿಯ ಮನಸ್ಸಿಗೆ ಸಮಾಧಾನವಿರಲಿಲ್ಲ. ಅವಳ ಮೊಮ್ಮಗ ಹೈದರನ ಮೈಯೆಂಬೋ ಮೈ ಕೆಂಡಕೆಂಡವಾದರೆ ಮತ್ತೊಮ್ಮೆ ಮಂಜುಗಡ್ಡೆ. ಹಗಲು-ರಾತ್ರಿ ವಿಲಿ ವಿಲಿ ಮೊರೆತ. ತುಂಡು ಬ್ರೆಡ್ಡು ಚೂರು, ಬಿಸ್ಕೀಟು, ವಿಷದ ಬಾಯಿ ಸೇರುತ್ತಿಲ್ಲ ಕುಟುಂಬದ ವೈದ್ಯರು ಕೊಟ್ಟ ಔಷಧಿ, ಗುಳಿಗೆಗಳನ್ನು ರಮಿಸುತ್ತ, ಸಿಟ್ಟು ಮಾಡಿ, ಒತ್ತಾಯದಿಂದ ಮಗನಿಗೆ ನುಂಗಿಸುವ ಸಬಿನಾ ಒಂದೇ ಸಮನೆ ತಹತಹಿಸುತ್ತಿದ್ದಾಳೆ. ಹೈದರನ ಜ್ವರ ಔಷಧಿಗೆ ಬಗ್ಗುತ್ತಿಲ್ಲ. ನಿನ್ನೆ ದವಾಖಾನಗೆ ಹೋದಾಗ ವೈದ್ಯರು ಹುಡುಗನ ರಕ್ತ ಪರೀಕ್ಷಿಸಿಕೊಂಡು ಬರಲು ಹೇಳಿದ್ದರು. ಇಮಾನಬಿ ಮನೆಯಲ್ಲಿದ್ದ ಪುಡಿಗಾಸುಗಳನ್ನು ಹೊಂದಿಸಿಕೊಂಡು ಹೋಗಿ ಹೈದರನ ರಕ್ತ ಪರೀಕ್ಷಿಸಿಕೊಂಡು ಬಂದಿದ್ದಳು. "ನನ್ನ ಆನುಮಾನ ನಿಜಾ ಆತು. ನಿನ್ನ ಮೊಮ್ಮಗ್ಗ ಮಲೇರಿಯಾ. ಆವನ್ನ ಪಾಟೀಲ ಡಾಕ್ಷರ್ ದವಾಖಾನಿಗೆ ಅಡ್ಮಿಟ್ ಮಾಡಿಸಿರಿ" ಎಂದು ರಿಪೋಟ್೯ ನೋಡಿ ಹೇಳಿದ್ದರು ವೈದ್ಯರು. ಆದನ್ನು ಕೇಳಿ ಸಬಿನಾ ಥರಗುಟ್ಟಿದ್ದಳು. ಇಮಾನಬಿಯ ನರನಾಡಿಯಲ್ಲಿನ ರಕ್ತ ನಿಶ್ಚಲಗೊಂಡಂತಾಗಿತ್ತು.
ಗರೀಬಿರಿಗೆ ಖಾಸಗಿ ದವಾಖಾನೆ ಯಂದರೆ ಸುಮ್ಮನೆ ಆದೀತೆ? ಆಲ್ಲಿ ಹಣವೇ ಮಾತಾಡುವುದು. ಆದನ್ನು ನೆನಪಿಸಿಕೊಂಡೆ ಇಮಾನಬಿ "ಸರಕಾರಿ ದಾವಾಖಾನೆಗೆ ಕರ್ಕೊಂಡು ಹೋಗ್ತೀನಿ ಸಾಹೇಬರ" ಎಂದಿದ್ದಳು.
"ಆಲ್ಲಿಯಾರು ದರಕಾರ ಮಾಡ್ತಾರ ನಿನ್ನ ಮೊಮ್ಮಗನ್ನ?" ವೈದ್ಯರು ಪ್ರಶ್ನಿಸಿದ್ದರು. ಆವರು ಹೇಳಿದ್ದರಲ್ಲಿ ಸುಳ್ಳು ಇರಲಿಲ್ಲ ಜೀವದ ಮೇಲೆ ಆಸೆ ಇಲ್ಲದವರು ಸರಕಾರಿ ದವಾಖಾನೆಗೆ ಹೋಗಬೇಕು. ಕಣ್ಣಲ್ಲಿ ರಕ್ತ ಹರಿಸಿದರೂ ಆಲ್ಲಿನ ಶ್ವೇತ ಪಿಶಾಚಿಗಳಿಗೆ ತೊಟ್ಟು ಕರುಣೆ ಹುಟ್ಟುವುದಿಲ್ಲ. ಒಮ್ಮೆ ಬೆಡ್ ಮೇಲೆ ಮಲಗಿದರೆ ಅವರ ಅದ್ವಾನ ಚಿತ್ರಹಿಂಸೆಗಳಿಂದ ಕಫನ್ (ಶವದ ಮೇಲೆ ಹೊದಿಸುವ ಬಟ್ಟೆ) ಹೊದ್ದುಕೊಳ್ಳಬೇಕು ಎಂಬಂಥ ಸಂಗತಿಗಳನ್ನು ಇಮಾನಬಿ ಕೇಳಿದ್ದಳು. ಸರಕಾರಿ ದವಾಖಾನೆಯ ಗೊಡವೆ ಬೇಡವೆಂದು ನಿರ್ಧರಿಸಿದ ಆಕೆ ಸಾಹೇಬರ ದೊಡ್ಡ ದವಾಖಾನ್ಯಾಗ ಖರ್ಚು ಎಷ್ಟು ಬರಬಹುದ್ರಿ?" ಎಂದು ಕೇಳಿದ್ದಳು.
"ಹ್ಯಾಂಗ್ ಹೇಳುದು. ಜಲ್ದಿ ಆರಾಮಾದ್ರ ರೊಕ್ಕ ಕಡ್ಮಿ ಖರ್ಚಾಗಬಹುದು. ಆದ್ರ ನೀವು ರೊಕ್ಕದ ಚಿಂತಿ ಮಾಡ್ಕೊಂತ ಕುಂತ್ರ ಹುಡ್ಗನ್ನ ಕಳ್ಕೊಂತಿರಿ ಮತ್ತ' ಎಂದು ವೈದ್ಯರು ಎಚ್ಚರಿಸಿ ಕಳಿಸಿದ್ದರು.
ಹೈದರ್ ಒಮ್ಮೆ ಥಂಡಿ ಎನ್ನುವನು. ಮತ್ತೊಮ್ಮೆ ಮೈಯಲ್ಲಾ ಕಾದ ಹೆಂಚಾಗಿ ನರಳುವನು. ಹನಿ ನೀರು ಕುಡಿಸಿದರೂ ಹೊಟ್ಟಿಯಿಂದ ಹೊರಗೆ ಬರುವುದು. ಶಾಂತವಾಗಿ ಮಲಗಿದ್ದಾನೆ ಎಂದುಕೂಳ್ಳುವಷ್ಟರಲ್ಲಿ ಗಬಕ್ಕನೆ ಹೆದರಿಕಯಿಂದ ಎದ್ದುಕುಳಿತುಕೊಳ್ಳುವನು. ತಾಯಿ- ಮಗಳು ಅವನೆದುರು ದೃಷ್ಟಿ ನೆಟ್ಟು ಕುಳಿತೆ ಇದ್ದರು. ಅವನ ಬಾಡಿದ ಮುಖ ನೋಡುತ್ತ ಕಳವಳಿಸುವರು. ವೈದ್ಯರ ಮಾತು ಅವರ ಎದೆಯ ಒಳಗೆ ಪ್ರತಿಧ್ವನಿಸುತ್ತಲೇ ಇದ್ದವು.
ಮೊಮ್ಮಗನನ್ನು ದವಾಖಾನೆಗೆ ಸೇರಿಸಲೇಬೇಕು. ಹಣಕ್ಕೇನು ಮಾಡುವುದು? ಇಮಾನಬಿ ಯೋಚಿಸುತ್ತಲೇ ಇದ್ದಳು ಮತ್ತೆ ಧಣಿಯರ ಎದುರು ನಿಂತು ದ್ಯೆನೇಸಿ ಕೈಯೊಡ್ಡಬೇಕು. ನೇಯ್ಗೆಯೂ ಸಮಯಕ್ಕಿಲ್ಲ. ಸರಿಯಾಗಿ ಬಾಕಿ ಮುರಿಯಲು ಸಾಧ್ಯವಾಗಿಲ್ಲ. ಯಾವ ಮುಖವಿಟ್ಟುಕೊಂಡು ಹೋಗಿ ನಿಲ್ಲುವುದು ಧಣಿಯರ ಮುಂದೆ.
ಹೈದರ ಒಮ್ಮಲೆ ಅಳತೊಡಗಿದ.
ಸಬಿನಾ ಅವನ ಹಣೆಯ ಮೇಲೆ ಕೈಯಿಟ್ಟು "ಅಮ್ಮಾ ಮೈಯೊಳಗಿಂದ ಉಗಾ ಬಂದ್ಹಂಗ ಅನಸಾಕ ಹತ್ತೈತಿ. ದವಾಖಾನೆಗ ಕರ್ಕೊಂಡು ಹೋಗುನ್ನಡಿ" ಎಂದು ಗಡಿಬಿಡಿಸಿದಳು.
"ಹ್ವಾದ ಕೂಡ್ಲೆ ಅಲ್ಲಿ ರೊಕ್ಕಾ ಕೊಡಬೇಕು ಬೇಟಿ. ಹ್ಯಾಂಗ್ ಮಾಡುದಂತ ವಿಚಾರ ಮಾಕಾಡಲಿಕ ಹತ್ತೀನಿ."
"ನೀ ಹೀಂಗ ಕುಂತ್ರ ನನ್ನ ಬೇಟಾ ಕಬರಸ್ತಾನ (ಸ್ಮಶಾನ) ಸೇರ್ತಾನ" ಸಬಿನಾ, ಸಂಕಟ, ಸಿಟ್ಟು ವ್ಯಕ್ತಪಡಿಸಿದಳು.
"ಧನೇರ ಹತ್ರ ಹೋಗಿ ಕೇಳಾಕ ನನ್ಗ ನಾಚ್ಗಿ ಬರತೈತಿ ಬೇಟಿ" ಹತಾಶೆಯಿತ್ತು ಇಮಾನಬಿಯ ಧ್ವನಿಯಲ್ಲಿ.
"ಅವರ ಹತ್ರ ಯಾಕ್ ಹೋಗ್ತಿ ಆ ಬೆಳ್ಳಿ ಬಟ್ಲ ಐತಲ್ಲ"
"ಅಂದ್ರ... ಆ ಬೆಳ್ಳಿ ಬಟ್ಲ ಮಾರಂತಿಯೇನು ನೀನು?" ದಿಗಿಲಾಗಿ ಕೇಳಿದಳು ಇಮಾನಬಿ.
"ಮಾರೇರ ಮಾರು ಇರ್ಲಿಕಂದ ಒತ್ತಿಯರ ಇಡು. ಮೊದ್ಲ ರೊಕ್ಕಾ ತಗೊಂಡು ಬಾ." ನಿಷ್ಟುರವಾಗಿ ಹೇಳಿದಳು ಸಬಿನಾ.
"ಅದರ ಮ್ಯಾಲೆ ಬಿತ್ತೇನು ನಿನ್ನ ಕಣ್ಣು. ನೀನೂ ಚಲೋ ಆದಿ ಮತ್ತ.." ಮಗಳ ಮಾತನ್ನು ಧಿಕ್ಕರಿಸುತ್ತ ಇಮಾನಬಿ ನಾಗವಂದಿಗೆಯ ಮೇಲೆ ತನ್ನ ನೋಟ ಹರಿಸಿದ್ದಳು.
- ೨ -
ಆಲ್ಲಿ ಇದ್ದದ್ದು ಒಂದು ಹಳೆಯ ಟ್ರಂಕು. ಅದನ್ನು ಅವಳ ಅಬ್ಬಾ ಗುಲಬರ್ಗಾ ಬಂದೇನವಾಜ್ ಉರುಸಿಗೆ (ಜಾತ್ರೆ) ಹೋದಾಗ ತಂದಿದ್ದ. ಮತ್ತು ಅದನ್ನ ಅವಳ ನಿಕಾಹ್
(ಮದುವೆ)ಯಲ್ಲಿ ಜೀಜಿ (ವಧುವಿನೊಂದಿಗೆ ಕಳುಹಿಸುವ ಪಾತ್ರೆ ಸಾಮಾನುಗಳು)ನ ಸಾಮಾನುಗಳೊಂದಿಗೆ ಕೊಟ್ಟಿದ್ದ ದಪ್ಪ ತಗಡಿನ, ಹಸಿರು ಬಣ್ಣದ, ಹೂಬಳ್ಳಿಗಳಿಂದ ಚಂದವೆನಿಸಿದ ಆ ಟ್ರಂಕಿನಲ್ಲಿ ಅವಳ ಎರಡು ಇಲಕಲ್ಲ ಸೀರೆ, ಗುಳೇದಗುದ್ದದ ಬಣ್ಣದ ಕುಪ್ಪಸಗಳಿದ್ದವು. ಈದ್ ಸಮಯದಲ್ಲಿ ಇಮಾನಬಿ ಹೀಗೆ ಉಟ್ಟು ಹೀಗೆ ಇಡುವ ಕಾರಣದಿಂದ ಸೀರೆಯ ಮಡಿಕೆ ಕೆಡದಂತಿದ್ದವು. ಆ ಮಡಿಕೆಗಳಲ್ಲಿ ಜೋಪಾನವಾಗಿ ಇರುವುದೇ ಬೆಳ್ಳಿಯ ಬಟ್ಟಲು. ಖಾದರಖಾನ್‍ಗೆ ಅದು ನಜರಾನಾ (ಕಾಣಿಕೆ) ರೂಪದಲ್ಲಿ ಸಿಕ್ಕಿದ್ದು ಅವನು ಒಳ್ಳೆಯ ಹಾಡುಗಾರ. ಉರುಸುಗಳ ಬೈಠಕ್‍ನಲ್ಲಿ ಪಾಲ್ಗೊಳ್ಳುತ್ತಿದ್ದ ಒಂದು ಸಂದರ್ಭದಲ್ಲಿ ಅವನ ಗಾಯನಕ್ಕೆ ತಲೆದೂಗಿ, ಸಂಪ್ರೀತಿಯಿಂದ ಮುರಷಿದ್ (ಧರ್ಮಗುರು)ರೂಬ್ಬರು ಈ ಬಟ್ಟಲನ್ನು ನೀಡಿ ಗೌರವಿಸಿದ್ದರು. ಈ ಸನ್ಮಾನದಿಂದ ಖಾದರಖಾನ್‍ಗೆ ಅತ್ಯಂತ ಖುಷಿಯೆನಿಸಿತ್ತು.
ಹೈದರಾಬಾದಿನ ನಿಜಾಮನಿಂದಲೋ, ದೆಹಲಿಯ ಬಾದಶಹನೊಬ್ಬನಿಂದಲೋ ಈ ಬೆಳ್ಳಿಯ ಬಟ್ಟಲು ಧರ್ಮ ಗುರುವಿಗೆ ಭಕ್ತಿರೂಪದಲ್ಲಿಆರ್ಪಿತವಾದುದು ಎಂಬ ಪ್ರತೀತಿಯಿತ್ತು. ಇಂಥ ವಸ್ತುವಿನ ಮೇಲೆ ವ್ಯಾಮೋಹ ಇಟ್ಟುಕೊಳ್ಳದ ಮುರಷಿದ್‍ರು ಅದನ್ನು ಖಾದರಖಾನಗೆ ನೀಡಿದ್ದರು. ಬಟ್ಟಲನ್ನು ದೇವರ ಅನುಗ್ರಹವೆಂದು ನಂಬಿದ್ದ ಖಾದರಖಾನ್ ಅದನ್ನು ಉತ್ಸಾಹದಿಂದ ಎಲ್ಲರಿಗೂ ತೋರಿಸಿದ್ದ.
ಅಜಮಾಸು ಇಪ್ಪತ್ತುತೊಲೆಗೂ ಮಿಕ್ಕಿದ ಬೆಳ್ಳಿಯ ಬಟ್ಟಲು ಅತ್ಯಾಕರ್ಷಕವಾಗಿತ್ತು. ಕೆಲವರು ಆದನ್ನು ಕ್ಕೆಯಲ್ಲಿ ಹಿಡಿದು ಸೂಕ್ಷ್ಮ ನಕ್ಷೆಗಳ ಸೌಂದರ್ಯ ಸವಿದಿದ್ದರು. ಇನ್ನೂ ಕೆಲವರು ಆ ಬಿಟ್ಟಲು ಬಾದಷಹನಿಗೆ ಸಂಬಂಧಿಸಿದ್ದೆಂದು, ಅದರ ವೈಭವವನ್ನು ತಮಗೆ ಇಷ್ಟವನಿಸಿದಂತೆ ಊಹಿಸಿಕೊಂಡು ಖುಶಿ ಅನುಭವಿಸಿದ್ದರು. ಮತ್ತೊಂದಿಷ್ಟು ಮಂದಿ ಅದು ಮುರಷಿದ್‍ರ ಹಸ್ತದಿಂದ ಬಂದ ಪುಣ್ಯದ ಸಂಕೇತವೆಂದು ಪರಿಭಾವಿಸಿ ಆ ಬಟ್ಟಲಿಗೆ ದುಡ್ಡು ಹಾಕಿ ಶ್ರದ್ಧಾಭಕ್ತಿ ಪ್ರದರ್ಶಿಸಿದ್ದರು. ಖಾದರ್ ಖಾನ್ ಆದನ್ನು ಆಚ್ಚರಿಯಿಂದ ಗಮನಿಸಿದ್ದ. ಆ ದುಡ್ಡು ತಂದು ತಾಯಿಯ ಕೈಗೆ ಕೊಟ್ಟಿದ್ದ. ಪರವರ್ದಿಗಾರ (ದೇವರು) ಬೆಳ್ಳಿಯ ಬಟ್ಟಲಲ್ಲಿ ಕರಾಮತ್ತು ಇರಿಸಿದ್ದಾನೆಂದು ಆಕೆ ದೃಢವಾಗಿ ನಂಬಿದ್ದರು. ಆ ಹಣದಿಂದ ಮೊಹರಂ ಹಬ್ಬದಲ್ಲಿ ಹಸೇನ-ಹುಸೇನರಿಗೆ ಕಂದೂರಿ (ದೇವರ ಹೆಸರಲ್ಲಿ ಊಟ ಮಾಡಿಸುವುದು) ಮಾಡಿ ಐದು ಜನ ಫಕೀರರಿಗೆ ಉಣಿಸಿದ್ದಳು.
ಅವಳ ಮರಣಾನಂತರ ಈ ರಿವಾಜು ಖಾದರ್ ಖಾನನಿಂದ ಮುಂದುವರಿದಿತ್ತು. ಪ್ರತಿವರ್ಷ ಮೊಹರಂ ಆರಂಭದ ಮೊದಲ ಐದು ದಿನಗಳಲ್ಲಿ ಖಾದರ್‌ಖಾನ್ ಬೆಳ್ಳಿ ಬಟ್ಟಲು ತೆಗೆದುಕೂಂಡು ಹಿಂದೂ-ಮುಸ್ಮಿಮರೆಂದು ಭೇದ ಮಾಡದೆ ಕೆಲವು ಮನೆಗಳಿಗೆ ಹೋಗುತ್ತಿದ್ದ. ಸ್ಥಿತಿವಂತರಾಗಿದ್ದ ಆವರಿಗೆ ಬಟ್ಟಲು ತುಂಬ ಚುರಮರಿ, ಬೆಂಡು, ಬತ್ತಾಸು ಕೊಡುತ್ತಿದ್ದ. ಅವರು ಖುಶಿ ರೂಪದಲ್ಲಿ ಬಟ್ಟಲಿನಲ್ಲಿಇರಿಸಿದ ಹಣ ತಂದು ಕತ್ತಲ್ ರಾತ್ರಿಯ (ಇಮಾಮ್ ಹುಸೇನರು ಹುತಾತ್ಮಾರಾದ ದಿನ) ದಿನ ಕಂದೂರಿ ಮಾಡಿ, ಮಣ್ಣಿನ ಪರಿಯಾಣದಲ್ಲಿ ಜೋಳದ ಕಿಚಡಿ ಮತ್ತು ಬಿಂದಿಗೆಯಲ್ಲಿ ಶರಬತ್ತನ್ನು ಮಸೀದಿಗೆ ಒಯ್ದು ಹಸೇನ-ಹುಸೇನರಿಗೆ ಫಾತಿಹಾ (ನೈವೇದ್ಯ) ಕೊಟ್ಟು ಬರುವಾಗ ಫಕೀರರನ್ನು ಕರೆದುಕೊಂಡು ಬಂದು ಊಟ ಮಾಡಿಸುತಿದ್ದ.
ಅಮ್ಮಾ ...... ಅಮ್ಮಾ .... ಹೈದರನ ಒಣಗಿದ ತುಟಿಗಳು ಸಂಕಟದ ಧ್ವನಿಯಲ್ಲಿ ತೆರೆದುಕೊಳ್ಳುತ್ತಲೇ ಇದ್ದವು. ಮಗನ ಸುಡುವ ಹಣೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಬದಲಾಯಿಸುತ್ತಿದ್ದ ಸಬಿನಾ ತುಮುಲ ಅನುಭವಿಸತೊಡಗಿದಳು. ಮಗಳ ಮುಖ ನೋಡಿದ ಇಮಾನಬಿಯ ವಿಹ್ವಲತೆ ವರ್ಧಿಸತೊಡಗಿತು. ಮತ್ತೆ ಅವಳ ಕಣ್ಣು ಟ್ರಂಕಿನ ಮೇಲೆ ಹರಿದಾಡಿತು. ತಂದೆಯ ನೆನಪು ಕಾಡಿತು ಆಕೆಗೆ.
- ೩ -
ಖಾದರಖಾನ ಸ್ಥಿತಿವಂತನಾಗಿರಲಿಲ್ಲ. ಹಿರಿಯರು ಗಳಿಸಿದ ಒಂದು ಮನೆ, ಎರಡು ಮಗ್ಗಗಳು ಅವನ ಪಾಲಿಗಿದ್ದವು. ಅಮರಪ್ಪ ಧಣಿಯರ ಮನೆಯಿಂದ ರೇಷ್ಮೆ ಚಮಕಾ ತಂದು ಅವನು ಸೀರೆ ನೇಯುತ್ತಿದ್ದ. ಅವನೆದುರು ಮಗ್ಗದಲ್ಲಿ ಜೈರಾಬಿ ನೇಯುತ್ತಿದ್ದಳು. ಗಾಯನ, ಸಂಗೀತವೆಂದರೆ ಅವನಿಗೆ ಆದಮ್ಯ ಪ್ರೀತಿ. ಮಗ್ಗದ ನಾದದೊಳಗೆ ತನ್ನ ಸ್ವರ ಮಾಧುರ್ಯ ಸಂಯೋಜಿಸಿ ಅವನು ತನ್ಮಯವಾಗಿ ಹಾಡುತ್ತಿದ್ದ. ಸಂತ ಶಿಶುನಾಳ ಶರೀಫ್‌ರ ಆನುಭಾವದ ಗೀತೆ, ದಾಸರಪದ, ಶರಣರ ವಚನಗಳನ್ನು ಹಾಡುತ್ತಿದ್ದರೆ ಗಲ್ಲಿಯೆಂಬೊಗಲ್ಲಿ ಗಂಧರ್ವಲೋಕವಾಗುತ್ತಿತ್ತು. ಜಾತ್ರೆ ಉತ್ಸವ, ಉರುಸು ಸಂದರ್ಭಗಳಲ್ಲಿ ಖಾದರಖಾನನ ಗಾಯನ ಇದೆಯೆಂದರೆ ಜನರಿಗೆ ವಿಶೇಷ ಆಸಕ್ತಿ ಅವರ ಉತ್ಸಾಹದಿಂದ ಅರಳಿಕೊಂಡ ಅವನು ಹಸನಾಗಿ ಹಾಡಿ, ಸಮಿತಿಯವರು ಕೊಟ್ಟಷ್ಟು ಹಣ ಮತ್ತು ಮಾನ ಸನ್ಮಾನದೊಂದಿಗೆ ಹಿಂತಿರುಗುತ್ತಿದ್ದ.
ಆಗೆಲ್ಲ ವಿದ್ಯುತ್ ದೀಪಗಳಿರಲಿಲ್ಲ. ಹೀಗಾಗಿ ಊರ ಪಂಚಾಯಿತಿಯ ಛೇರಮನ್‌ರು ಹೇಳಿಕಳಿಸಿದರೆ ಹೋಗಿ ಸೂರ್ಯ ಮುಳುಗಿದ ತುಸು ಹೊತ್ತಿಗೆ ರಸ್ತೆಯ ದೀಪಗಳನ್ನು ಹಚ್ಚಿ ಬರುತ್ತಿದ್ದ. ದೀಪ ಹಚ್ಚುವುದೆಂದರೆ ಹಾಡಿನಷ್ಟೇ ಪ್ರೀತಿ ಅವನಿಗೆ. ಜೈರಾಬಿ ಗಂಡನಿಗೆ ಎಂದಿಗೂ ಬಂಧನಕಾರಿಯೆನಿಸಲಿಲ್ಲ. ಅವಳ ತೀವ್ರ ಕಾಳಜಿಯಿಂದಾಗಿ ಇಮಾನಬಿ ನಿಕಾಹ್ ಆಗಿತ್ತು. ಅಳಿಯ ಸಿರಾಜಲಿ ಜೈರಾಬಿಗೆ ದೂರದ ಸಂಬಂಧಿಯೇ ಆಗಿದ್ದ ಒಬ್ಬಳೆ ಮಗಳನ್ನು ಕಣ್ಣೆದುರಿಗೆ ಇಟ್ಟುಕೊಳ್ಳಲೆಂದು ಖಾದರಖಾನ್ ಸಿರಾಜಲಿಯನ್ನು ಮನೆಯ ಅಳಿಯನನ್ನಾಗಿ ಇಟ್ಟುಕೊಂಡಿದ್ದ. ಮತ್ತು ಮಗನಂತೆ ಕಾಣುತ್ತಿದ್ದ ಸಿರಾಜಲಿಗೆ ನೇಯ್ಗೆ ಕಲಿಸುವ ಆಸೆಯಿತ್ತು ಜೈರಾಬಿಗೆ. ಆದರೆ ಅವನು ಬಸ್ ಸ್ಟ್ಯಾಂಡಿನಲ್ಲಿ ಹಮಾಲಿ ಮಾಡಿಕೂಂಡಿದ್ದ. ಇಮಾನಬಿ ಒಂದು ಹೆಣ್ಣು ಮಗುವಿನ ತಾಯಿಯಾದ ಮೇಲೆ ಜೈರಾಬಿ ಕ್ಷಯದ ಬಾಧೆಯಿಂದ ತೀರಿಕೊಂಡಿದ್ದಳು. ಅವಳಿಲ್ಲದೆ ಪ್ರತಿಯೊಂದು ಕ್ಷಣಗಳು ಖಾದರಖಾನನನ್ನು ಅನಾಥ ಪ್ರಜ್ಞೆಗೀಡು ಮಾಡಿದ್ದವು. ಇಮಾನಬಿ ಮಗ್ಗದಲ್ಲಿ ಕುಳಿತಿದ್ದಳು. ತಂದೆಯ ಮೇಲೆ ಸ್ಫುರಿಸಿದ ಅವಳ ಕಾಳಜಿ ನಿಷ್ಪ್ರಯೋಜಕವಾಗಿತು. ಜೈರಾಬಿಯನ್ನು ಮನಸು ತುಂಬಿಕೊಂಡು ಕುಳಿತಿದ್ದ ಖಾದರ್‌ಖಾನ್ ಹಾಡು ಹೇಳುತ್ತ ಕುಳಿತಿರುವಾಗಲೇ ತನ್ನುಸಿರು ನಿಲ್ಲಿಸಿದ.
- ೪ -
ಆಘಾತ ಸಹಿಸಿಕೂಂಡಿದ್ದಳು ಇಮಾನಬಿ.
ತನ್ನ ಬಾಬಾನ ನೆನಪು ತೀವ್ರವಾದಾಗಲೆಲ್ಲ ಆಕೆ ಟ್ರಂಕಿನ ಕೀಲಿ ತೆರೆದು ಬೆಳ್ಳಿಯ ಬಟ್ಟಲಿನೊಳಗೆ ಮನಸು ನೆಟ್ಟು ಕುಳಿತುಕೊಳ್ಳುತ್ತಿದ್ದಳು. ಸಾಯುವ ಮುಂಚಿನ ದಿನ ಖಾದರಖಾನ್ ಮಗಳನ್ನು ಹತ್ತಿರ ಕುಳ್ಳಿರಿಸಿಕೊಂಡು "ಹಿರ್ಯಾರು ಗಳಿಸಿದ ಈ ಮನಿ ಬಿಟ್ಟು, ನಿನ್ನ ಜೀವಕ್ಕ ಮತ್ತೊಂದಾಧಾರ ಮಾಡಾಕ ನನ್ನಿಂದೇನೂ ಸಾಧ್ಯ ಆಗಲಿಲ್ಲ ಬೇಟಿ. ನನ್ನ ಗರೀಬಿ ನಿನ್ನ ಕೂಡ ಹಂಗ ಉಳಿತು. ನನ್ನ ಮಾಫ್ (ಕ್ಷಮೆ) ಮಾಡು. ಈ ಬೆಳ್ಳಿ ಬಟ್ಲಾ ನಿನ್ನ ಹಂತೇಕನ ಇರಲಿ. ನಿನ್ನ ದಾದಿ ಹರಕಿ ಈಡೇರಿತು. ಯಾವ ಪ್ರಸಂಗದಾಗೂ ಈ ಬಟ್ಲಾ ಹೊರಗ ಹೋಗಾಕ ಕೊಡಬ್ಯಾಡ" ಎಂದಿದ್ದ.
ಏಕಾಏಕಿ ಗೋಣನ್ನು ಅತ್ತಿತ್ತ ಹೊರಳಾಡಿಸಿದ ಹೈದರನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ನೇವರಿಸತೊಡಗಿದಳು ಸಬಿನಾ. ಅಮ್ಮಾ...ದಾದಿ.... ಅಮ್ಮಾ.... ದಾದಿ..... ಎಂದು ತನಗರಿವಿಲ್ಲದಂತೆ ಬಡಬಡಿಸತೊಡಗಿದ ಮೊಮ್ಮಗನ ಕೈಹಿಡಿದುಕೊಂಡಳು ಇಮಾನಬಿ. "ಸುಡುಗಾಡು ಜ್ವರ. ಕೂಸಿನ ದೇಹಾನ್ನ ಪಿಶಾಚಿ ಹಂಗ ಹಿಡ್ಕೊಂಡು ಬಿಟ್ಟಿತಲ್ಲ" ಒಳಗೇ ಕಳವಳಿಸಿದಳು ಆಕೆ.
ನೋವಿಗೆ ಸಾವಿಗೆ ಆಯಾಸ ಪಡಬೇಡ
ದೇವ ಗಂಗಾಧರನು ಭಾವದೊಳಿರಲು
............................
ವಸುಧಿಯೊಳ್ ಶಿಶುನಾಳಧೀಶನ ಹಸುಳನೆ
ಕಸಿವಿಸಿ ಹೊಂದುವದು ಹಸನಲ್ಲ ನಿನಗೆ
ಖಾದರಖಾನ್ ನೇಯುತ್ತಿದ್ದ ಮಗ್ಗದ ಕಡೆಯಿಂದ ಅಲೆ ಅಲೆಯಾಗಿ ತೇಲಿ ಬಂದಿತ್ತು ಹಾಡು. ಇಮಾನಬಿಯ ಮನಸ್ತು ಮತ್ತ ಹಿಂದಿನದನ್ನು ಜ್ಞಾಪಿಸಿಕೊಂಡಿತ್ತು.
- ೫ -
ಅವತ್ತು ಆಕಾಶದಲ್ಲಿ ಚಂದ್ರ ಕಾಣಿಸಿಕೂಂಡಿದ್ದ. ಮಸೀದೆಯ ಮುಂದೆ ಕುದಾಲಿ (ಮೊಹರಂ ಹಬ್ಬದ ಮೊದಲನೇ ದಿನ ದೇವರ ಎದುರು ತೋಡುವ ಗುಂಡಿ) ಹಾಕಲಾಗಿತ್ತು.
ಇಮಾನಬಿಯ ಕಣ್ಣು ಒದ್ದೆಯಾಗಿದ್ದವು. ತನ್ನ ಅಬ್ಬಾ ಇಲ್ಲದ ಮೊದಲ ಮೊಹರಮ್‌ದ ಆ ಕ್ಷಣಗಳಲ್ಲಿ ಆಕೆಯ ಹೃದಯ ಹೆಪ್ಪುಗಟ್ಟಿತ್ತು. ಅವಳ ಸಂವೇದನೆಗಳಿಗೂ ತನಗೂ ಸಂಬಂಧವಿಲ್ಲದವನಂತಿದ್ದ ಸಿರಾಜಲಿ, ತನ್ನನ್ನು ತಾನೇ ಸಂಬಾಳಿಸಿಕೊಂಡಿದ್ದಳು ಇಮಾನಬಿ. ಸ್ನಾನಮಾಡಿ ಟ್ರಂಕಿನೊಳಗಿಂದ ಬೆಳ್ಳಿಯ ಬಟ್ಟಲು ತೆಗೆದು, ಅದನ್ನು ಮೀಸಲು ನೀರಿನಿಂದ ತೊಳೆದು, ಗಂಧ ಲೇಪಿಸಿ, ಊದು ಹಾಕಿ ಸಕ್ಕರೆ ಫಾತಿಹಾ ಕೊಟ್ಟದ್ದಳು. ಖಾದರಖಾನ್ ಒಯ್ಯುತ್ತಿದ್ದ ಒಂದು ಚಿಕ್ಕ ಪಿಸ್ವಿ (ಚೀಲ)ಯಲ್ಲಿ ಚುರುಮರಿ, ಬೆಂಡು-ಬತ್ತಾಸು ತುಂಬಿಕೊಂಡು, ಅದರಲ್ಲಿ ಬಟ್ಟಲು ಹುದುಗಿಸಿಟ್ಟು ಆಕೆ ಹೊಸಿಲು ದಾಟಿದ್ದಳು.
ಅವಳ ಚಟುವಟಿಕೆಗಳನ್ನು ಗಮನಿಸಿದ್ದ ಸಿರಾಜಲಿ ತುಟಿ ಎರಡು ಮಾಡಿರಲಿಲ್ಲ.
ಕೋಲಾಹಲವಿತ್ತು ಅವನೆದೆಯೊಳಗೆ. ತನ್ನ ತಂದೆಯ ರೀತಿ-ರಿವಾಜುಗಳನ್ನು ಅನುಸರಿಸುತ್ತಿರುವ ಇಮಾನಬಿಯ ಧೋರಣೆಗಳ ಬಗ್ಗೆ ಅವನಿಗೆ ಸಿಟ್ಟು ಬರತೊಡಗಿತ್ತು. ಹೆಣ್ಣುಹೆಂಗಸು ಹೀಗೆ ಹೊರಗೆ ಹೋಗಿ, ಮನೆ ಮನೆ ತಿರುಪೆಯೆತ್ತಿತಂದ ಹಣದಿಂದ ಕಂದೂರಿ ಮಾಡುವುದರಿಂದ ಬರುವ ಭಾಗ್ಯವೇನು ? ಎಂದು ಅವನು ತೀವ್ರವಾಗಿ ಚಿಂತಿಸಿದ್ದ. ಹೋದಲ್ಲೆಲ್ಲ ಇಮಾನಬಿಗೆ ಗೌರವಾದರಗಳು ಪ್ರಾಪ್ತವಾಗಿದ್ದವು. ಜನರು ಅವಳನ್ನು ಕುಳ್ಳಿರಿಸಿಕೊಂಡು ಪ್ರೀತಿಯಿಂದ ಮಾತಾಡಿಸಿದ್ದರು. ಖಾದರಖಾನನ ಹೃದಯ ಮತ್ತು ಗಾಯನದ ಬಗ್ಗೆ ಮೆಚ್ಚುಗೆ ನುಡಿದಿದ್ದರು. ಅವಳಿಂದ ಚುರುಮರಿ, ಬೆಂಡು ಬತ್ತಾಸು ಸ್ವೀಕರಿಸಿ ತಮ್ಮ ಶ್ರದ್ಧೆತೋರಿಸಿದ್ದರು. ಖಾದರಖಾನ್‌ಗೆ ತಕ್ಕ ಮಗಳೆಂದು ಅವಳನ್ನು ಹೊಗಳಿದ ಕೆಲವರು ಸೀರೆ ಕುಪ್ಪಸದ ಉಡುಗೊರೆ ನೀಡಿದ್ದರು.
ಮನೆಗೆ ಬಂದು ಗಂಡನನ್ನು ಎದುರಿಗೆ ಕುಳ್ಳಿರಿಸಿಕೊಂಡು ಹಣದ ಲೆಕ್ಕ ಮಾಡಿದ್ದಳು ಇಮಾನಬಿ. ಈ ಸಲ ಹೆಚ್ಚು ಹಣ ಸಿಕ್ಕಿತ್ತು. ಹತ್ತು ಜನ ಫಕೀರರಿಗೆ ಊಟ ಮಾಡಿಸೋಣ ಎಂದಿದ್ದಳು ಆಕೆ. ಸಿರಾಜಲಿ ಉದಾಸೀನ ವ್ಯಕ್ತಪಡಿಸಿದ್ದ. ಇಷ್ಟೊಂದು ಹಣವನ್ನು ಸುಮ್ಮನೆ ಕೊಡುತ್ತಾರೆಯೇ ಜನ ? ಅನುಮಾನ ಕಾಡಿತ್ತು ಅವನಿಗೆ. ಅದೇ ನೋಟದಲ್ಲಿ ಹೆಂಡತಿಯ ತುಂಬು ಮೈಯನ್ನು ಅವಲೋಕಿಸಿದ್ದ ಅವನು.
ಇಮಾನಬಿಯದು ಪಾಕ್ ಪಾಕಿಜಾ ಮನಸ್ಸು! ತನ್ನ ಬಾಬಾನ ಹರಕೆಯನ್ನು ಪರಿಪಾಲಿಸುವ ನಿಷ್ಟೆಯಿಂದ ಆಕೆ ಕತ್ತಲ್ ರಾತ್ರಿಯ ದಿವಸ ಉಪವಾಸ ಮಾಡಿದ್ದಳು. ಸಂಜೆಯ ಹೊತ್ತಿಗೆ ಮಗಳು ಮತ್ತು ನೆರೆಮನೆಯವರೊಂದಿಗೆ ಹಸೇನ-ಹುಸೇನರಿಗೆ ಎಡೆ ಕೊಟ್ಟು ಬಂದಿದ್ದಳು. ಪರಿಯಾಣದಲ್ಲಿನ ತಬರ್ರುಕ್‍ದ (ಪ್ರಸಾದ) ಒಂದು ತುತ್ತು ಬಾಯಲ್ಲಿ ಹಾಕಿಕೊಂಡು ನೀರು ಕುಡಿದಿದ್ದಳು. ಬಂದ ಫಕೀರರಿಗೆ ಉಣ್ಣಿಸಿ ಬೀಳ್ಕೊಟ್ಟಿದ್ದಳು. ಗಲ್ಲಿಯ ಜನರಿಗೆ ಶರಬತ್ ಕುಡಿಸಿದ್ದಳು.
ದೇವರಿಗೆ ಅಲ್ವಿದಾ (ವಿದಾಯ) ಹೇಳಿದ ರಾತ್ರಿ ಚೊಂಗಾ (ಒಂದು ರೀತಿಯ ತಿಂಡಿ) ಮಾಡಿ ಅಕ್ಕ- ಪಕ್ಕದ ಹಿಂದೂಗಳಿಗೆ ಹಂಚಿದ್ದಳು. ಇದೆಲ್ಲ ಜನ್ನತ್ನಲ್ಲಿರುವ ಖಾದರಖಾನನಿಗೆ ತೃಪ್ತಿ ತಂದಿರಬೇಕು. ಆದರೆ ಸಿರಾಜಲಿಗೆ ಮಾತ್ರ ಎಳ್ಳಷ್ಟೂ ಹಿಡಿಸಿರಲಿಲ್ಲ. ಅದರ ಒಳಗುದಿ ಇಮಾನಬಿಗೆ ತಾಕಿರಲಿಲ್ಲ. ಬೆಳ್ಳಿಯ ಬಟ್ಟಲು ಟ್ರಂಕು ಸೇರಿತ್ತು. ಸಿರಾಜಲಿಯ ಕುದಿವ ಮನಸ್ಸು ತಣ್ಣಗಾಗಿತ್ತು.
ದಿನಗಳು ಉರುಳಿದ್ದವು. ಮತ್ತೆ ಬಂದಿತ್ತು ಮೊಹರಮ್.
- ೬ -
ಮೋಡಗಳ ಮರೆಯಿಂದ ಚಂದ್ರ ನಸುವಾಗಿ ಗೋಚರಿಸಿದ್ದ.
ಸಿರಾಜಲಿಯ ಎದೆಯೊಳಗೆ ರಾಹುಕೇತು ಸೇರಿಕೊಂಡು ಕತ್ತಲು ಹರಡಿ ಕುಳಿತಿದ್ದರು.
ಇಮಾನಬಿ ನಾಗವಂದಿಗೆಯ ಮೇಲಿನ ಟ್ರಂಕು ಕೆಳಗೆ ಇಳಿಸಿಕೊಂಡು ಬೆಳ್ಳಿಯ ಬಟ್ಟಲನ್ನು ಹೊರಗೆ ತೆಗೆದಿದ್ದಳು. ಅದೇ ಹೊತ್ತಿಗೆ ಮನೆಯ ಮುಂದೆ ಹಾದು ಹೋದ ಮಾಜಾನ್ (ಮಸೀದಿಯ ಕೆಲಸ ನೋಡುವವ) ಕುದಾಲಿ (ಗುದ್ದಲಿ) ಬಿತ್ತು ಎಂದು ಸಾರುತ್ತ ನಡೆದಿದ್ದ ಇದನ್ನು ಕೇಳಿಸಿಕೊಂಡ ಸಿರಾಜಲಿಯ ಮುಖ ದುಮು ದುಮು ಎಂದಿತ್ತು. ಕುದಾಲಿ ಬಿದ್ದದ್ದು ಆಶುರಖಾನಾದ ಮುಂದೆಯಲ್ಲ ತನ್ನ ಎದೆಯೊಳಗ ಎನ್ನುವ ಭಾವನೆ ಮೂಡಿ, "ಇಮ್ಮು ಆ ಕಟೋರಾ (ಬಟ್ಟಲು) ಹಿಡ್ಕೊಂಡು ಭಿಕಾರಿ ಹಾಂಗ ಮನಿ ಮನಿ ತಿರುಗಾಡಬ್ಯಾಡ ನೀನು" ಎಂದು ಅಸಹನೆಯನ್ನು ಹೊರಹಾಕಿದ್ದ.
ಗಂಡನನ್ನು ಅಚ್ಚರಿಯಿಂದ ನೋಡಿದ್ದಳು ಇಮಾನಬಿ. ಇದೂವರೆಗೂ ಅವನಿಂದ ಇಂಥ ಮಾತುಗಳನ್ನು ಆಕೆ ಕೇಳಿಸಿಕೂಂಡಿರಲಿಲ್ಲ. "ಇಲ್ಲಿ ತನಕ ನಿನ್ನ ವರ್ತನಾ ಸೈರಿಸಿಕೊಂಡಿನಿ ನಾನು" ಸಿರಾಜಲಿಯ ಧ್ವನಿಯಲ್ಲಿ ಸಿಟ್ಟು, ಅಸಹನೆ ಎರಡೂ ಬೆರೆತಿದ್ದವು.
"ಯಾಕ್ರಿ ಅಂಥದ್ದೇನಾಗೇತಿ?" ಕೇಳಿದ್ದಳಾಕೆ.
"ಹೆಂಗಸ್ಸಾಗಿ ಮಂದಿಮನಿಗೆ ಕಟೋರಾ ಹಿಡ್ಕೊಂಡು ತಿರ್ಕೊಂಡು ಬರುದು ನನ್ಗೆ ಲಾಯಕ್ಕಿಲ್ಲ."
"ಹಿಂದೆ ಈ ಮಾತು ಹೇಳಿಲ್ಲ ನೀವು"
"ನಿಮ್ಮಪ್ಪನ ವಿರುದ್ಧ ಮಾತಾಡ್ತಿ ಅಂತ ತಿಳ್ಕೊಂತಿದ್ದಿ ನೀನು"
"ಈಗ ತಿಳ್ಕೊಳ್ಳಂಗಿಲ್ಲೇನು ನಾನು ?"
"ನಾನೂ ತಿಳೀಲಂತ ಹೇಳಾಕ ಹತ್ತೀನಿ"
"ನಮ್ಮ ಮನಿನ್ ರಿವಾಜು ಬಿಟ್ಟಬಿಡು ಅಂತಿರೇನು ನೀವು ?"
"ಇದು ಕೆಟ್ಟ ರಿವಾಜು"
"ಇದರಾಗ ಬಾಬಾನ ಸ್ವಾರ್ಥ ಇರಲಿಲ್ಲ"
"ಏನಿದ್ರೂ ಅದು ಅವನ ಕಾಲಕ್ಕ ಮುಗೀತು"
"ನಾನು ಬಾಬಾನ ಹರಕಿ ಈಡೇರಿಸುವಾಕಿ"
"ಹಠಾ ಸಾಧಿಸ್ತಿಯೇನ್ ನೀನು?"
"ಹಠಾ ಯಾಕಂತೀರಿ? ಬಾಬಾನ ಮನಸ್ಸಿಗೆ ಸಮಾಧಾನ ತರು ಮಾತು ಹೇಳಿದ್ಯಾ"
"ನನ್ನ ಮಾನಾ ಕಳೀತಿ ನೀನು ?"
"ನನ್ನ ಹತ್ರ ಅಂಥ ಕೆಟ್ಟ ಚಾಳಿ ಏನ್ ಕಂಡ್ರಿ ?"
"ಜನಾ ನನ್ನ ಬೆನ್ನ ಹಿಂದೆ ಆಡಿಕೊಂಡು ನಗ್ತಾರ"
"ಯಾಕಂತ ಅವರನ್ನ ಹಿಡ್ದು ಕೇಳ್ರಲ್ಲ"
"ಮೊದ್ಲ ನೀನು ಈ ಪದ್ಧತಿ ಬಿಡು"
"ಇದು ನನ್ನ ಜೀವದ ಕೂಡ ಹೋಗತೈತಿ"
"ಇವತ್ತಽಽ ಈ ಕಟೋರಾ ಒಯ್ದು ಮಾರಿ ಬರ್ತೀನಿ ನಾನು"
"ಅದನ್ನು ಮುಟ್ಟಾಕ ಕೊಡಂಗಿಲ್ಲ ನಾನು"
"ಕರೋಡ ರೂಪಾಯಿ ಕಿಮ್ಮತ್ತಿಂದು ಐತಲ್ಲ ಅದು ?"
"ಅದರ ಬೆಲೆ ಕಟ್ಟಾಕ ಆಗುದಿಲ್ಲ"
"ಅದಕ್ಕಽಽ ನಿಮ್ಮಪ್ಪ ತಿರ್ಕೊಂಡು ತಿನ್ನಿಅಂತ ಈ ಬಟ್ಲಾಕೊಟ್ಟಾನ" ಸಿರಾಜಲಿಯ ಮಾತು ಡಬಗಳ್ಳಿಯ ಮುಳ್ಳಿನಂತಿತ್ತು.
"ನಮ್ಮ ಬಾಬಾಗ ಏನೂ ಅನಬ್ಯಾಡ್ರಿ, ನನ್ಗ ಬೇಷ್ ಅನಿಸುದಿಲ್ಲ"
"ದುಗ್ಗಾಣಿ ಮನಿ, ಇದೊಂದು ಚಿಲ್ಲರ ಬಟ್ಲಾ ಕೊಟ್ಟು ಹ್ವಾದಂತ ಅವನ ಮ್ಯಾಲೆ ಪ್ರೀತಿಯೇನ್ ನಿನ್ಗ ?"
"ನಮ್ಮ ಬಾಬಾ ಅಷ್ಟರ ಬಿಟ್ಟು ಹ್ವಾದ ನನ್ನ ಪಾಲಿಗೆ. ನಿಮ್ಮಿಂದ ಯಾ ಭಾಗ್ಯ ಕಂಡೆ ನಾನು" ಇಮಾನಬಿಯ ಮಾತು ಸಿರಾಜಲಿಯ ಎದೆ ಉರಿಸಿತ್ತು.
"ನಾನು ಪರದೇಶಿ ಸೂಳೇಮಗ, ತುತ್ತು ಕೂಳಿಗೆ ಬಂದು ಬಿದ್ದಾಂವ ಇಲ್ಲಿ" ತನ್ನ ನಸೀಬು ಹಳಿದುಕೂಂಡಿದ್ದ ಅವನು.
"ಬಾಬಾ, ನಿಮ್ಮನ್ನ ಸ್ವಂತ ಮಗನ್ಹಂಗ ನೋಡ್ತಿದ್ರು"
"ಅದಕಽಽ ನನ್ಗೊಂದು ಮಾತು ಹೇಳ್ದ ಈ ಮನೀನ್ನ ನಿನ್ನ ಹೆಸರಿಗೆ ಬರಿಸಿಬಿಟ್ಟ. ಯಾಕಂದರ ನಾನು ನಿಮ್ಮ ಮನಿ ಚಾಕರಿಗೆ ಇದ್ದವನಲ್ಲ"
"ಅಂಥ ಭಾವನಾ ಬಾಬಾಗ ಇರ್ಲಿಲ್ಲಬಿಡ್ರಿ. ಈಗರ ಏನಾತು ಈ ಮನೀನ ನಿಮ್ಮ ಹೆಸರಿಗೇ ಮಾಡ್ಕೋರಿ"
"ಅತ್ತೂಕರ್ದೂ ಔತಣ ಹೇಳಿಸಿಕೊಳ್ಳೋ ಜಾತಿ ಅಲ್ಲ ನಮ್ದು. ನೀನು ಮನಿ ಮಾಲಕಿ; ಎಷ್ಟಿದ್ರೂ ನಾನು ಹೊರಗಿನಂವಾ"
"ನನ್ನ ಮ್ಯಾಲೆ ಇದ್ದಾಂಗ ನಿಮ್ಗ ಈ ಮನಿ ಮೇಲೇನೂ ಹಕ್ಕು ಐತಿ"
"ಇಲ್ಲೆ ನನ್ಮಾತು ನಡಿಯೂದಿಲ್ಲ"
"ಅಂಥದ್ದು ಇಲ್ಲೇನೂ ನಡಿದಿಲ್ಲ"
"ಹಾಂಗರ ನಾನು ಈ ಮನಿಯಾಗ ಇರಬೇಕಂದ್ರ ಆ ಬಟ್ಲಾ ಹಿಡ್ಕೊಂಡು ಹೊರಗ ಹೋಗಬ್ಯಾಡ ನೀನು" ನಿಷ್ಟುರನಾಗಿ ಹೇಳಿದ್ದ ಅವನು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಅವನ ವರ್ತನೆ ಇಮಾನಬಿಗೆ ವಿಚಿತ್ರ ಅನಿಸತೊಡಗಿತ್ತು. ಆವನು ಬಾಬಾನ ಮೇಲಿನ ಮತ್ಸರದಿಂದ ಇಂಥ ಮಾತು ಹೇಳುತ್ತಿರುವನೋ ? ಬೆಳ್ಳಿಯ ಬಟ್ಟಲಿನ ಮೇಲೆ ಅವನಿಗೇಕೆ ಈ ಪರಿ ಸಿಟ್ಟು ? ಪ್ರೀತಿ ಅಭಿವ್ಯಕ್ತಿಸುವ, ಒಂದಿನವೂ ಸರಿದು ಕುಳಿತುಕೋ ಎನ್ನದ ಸಿರಾಜಲಿಗೆ ಏಕಾಏಕಿ ತನ್ನ ಮೇಲೆ ಗುಮಾನಿ ಏಕೆ ಹುಟ್ಟುತು? ತಾನು ಬಟ್ಟಲು ಹಿಡಿದು ಹೋಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಅದು ದೇವರ ಹರಕೆಯ ಸಲುವಾಗಿ. ಫಕೀರರಿಗೆ ಉಣ್ಣಿಸುವುದು ಪುಣ್ಯದ ಕೆಲಸವಲ್ಲವೆ? ಇದರಲ್ಲಿ ಸಿರಾಜಿಗೆ ಯಾವ ದೋಷ ಕಂಡಿತು? ಅವನು ಮನೆಯಲ್ಲಿ ಇರಬೇಕೆಂದರೆ ತಾನು ಈ ರಿವಾಜು ಬಿಡಬೇಕು ಎನ್ನುತ್ತಾನೆ. ಹೀಗಾದರೆ ಬಾಬಾನ ಆತ್ಮಕ್ಕೆ ತಳಮಳವಾಗದೇ ಇದ್ದೀತೆ? ಹಾಗಾಗಲು ತಾನು ಅವಕಾಶ ಕೊಡಬಾರದು. ಅವನು ತನ್ನನ್ನು ಹೆದರಿಸಲು ನೋಡುತ್ತಿದ್ದಾನೆ. ಹೆಣ್ಣನ್ನು ದಮನಿಸುವುದು ಗಂಡಸರ ಕೆಟ್ಟ ಚಾಳಿ. ತನ್ನ ಮನಸ್ಸು ಪರಿಶುದ್ಧವಾಗಿಯೇ ಇದೆ ಭಯವೇನು? ಹೀಗೆ ಆಲೋಚಿಸಿದ ಇಮಾನಬಿ "ನಾಳೆ ನಾನು ಬಟ್ಟಲು ಹಿಡ್ಕೊಂಡು ಹೋಗ್ತೀನಿ" ಎಂದಿದ್ದಳು. ರಪ್ಪನೆ ಮುಖದ ಮೇಲೆ ಹೊಡೆತ ಬಿದ್ದಂತೆ ತತ್ತರಿಸಿದ್ದ ಸಿರಾಜಲಿ. ಅವನ ರಕ್ತ ಒಮ್ಮೆಲೆ ಕುದ್ದಿತ್ತು. `ಈ ಬಟ್ಟಲ ಕೂಡ ನೀನು ಸಾಯಿ' ಎಂದು ಬಿರುಗಾಳಿಯಂತೆ ಹೊರಗೆ ಹೋಗಿದ್ದ.
ರಾತ್ರಿಯೆಲ್ಲ ಬಾಗಿಲು ತೆಗೆದು ಕುಳಿತೆ ಇದ್ದಳು ಇಮಾನಬಿ.
ಸಿರಾಜಲಿ ಬರಲಿಲ್ಲ.
ತಲ್ಲಣದ ನಡುವೆಯೂ ಆಕೆ ರಿವಾಜು (ಪದ್ಧತಿ) ಬಿಡಲಿಲ್ಲ. ಕಂದೂರಿ ಮಾಡಿ ಫಕೀರರಿಗೆ ಉಣ್ಣಿಸಿದ್ದಳು.
ದೇವರ ಸವಾರಿ ಹೊರಟಿದ್ದವು.
ಊರಿನ ಎಲ್ಲ ಆಶುರಖಾನಾ ( ಪಂಜಾ ಕುಳಿತುಕೊಳ್ಳುವ ಸ್ಥಳ )ಗಳ ಆಲಮ್ ( ದೇವರು ) ಗಳು ಭೇಟಿ ಮಾಡುವ ಬಜಾರಿನ ಚೌಕದಲ್ಲಿ ಜನಜಾತ್ರೆ. ಇಮನಬಿ ಮಗಳೊಂದಿಗೆ ಬಂದು ಎತ್ತರದ ಕಟ್ಟೆಯ ಮೇಲೆ ನಿಂತಿದ್ದಳು. ಅಲ್ಲಿ ಎರಡು ಹೆಜ್ಜೆ ಮೇಳಗಳು ( ಮೊಹರಂದಲ್ಲಿ ಹೆಜ್ಜೆಯಾಡುವ ಗುಂಪುಗಳು ) ಸ್ಪರ್ಧೆಗಿಳಿದಂತೆ ತೋರಿದ್ದವು. ಜನರ ಕಣ್ಣಲ್ಲಿ ಕುತೂಹಲವಿತ್ತು. ಮನಸ್ಸಿನಲ್ಲಿ ತುಂಬ ಉತ್ಸಾಹ. ಹಲಗೆಯ ತಾಳಬದ್ಧ ನಾದಕ್ಕೆ ಸನಾದಿಯ ಸ್ವರ ಮಾಧುರ್ಯಕ್ಕೆ ಸಂಗತ್ಯಗೊಂಡು ಹೆಜ್ಜೆಯಾದುವವರನ್ನು ಹುರುಪುಗೊಳಿಸಿತ್ತು. ಕುಣಿಯುವ ಜನರನ್ನು ನೋಡುತ್ತಿದ್ದಂತೆ ಇಮಾನಬಿಗೆ ಸಿರಾಜಲಿ ನೆನಪಾಗಿದ್ದ.
ಹೆಜ್ಜೆಯಾಡುವುದರಲ್ಲಿ ಅವನು ನಿಸ್ಸೀಮ. ತಲೆಗೆ ಹಸಿರು ಪಟ್ಟಿ ಕಟ್ಟಿಸಿಕೊಂಡು, ಕಣ್ಣಿಗೆ ಸುರುಮಾ, ಹಣೆಗೆ ಪಕ್ಕದ ಮಲಕುಗಳಿಗೆ ಸುನೇರಿ ಬಣ್ಣದ ಮುದ್ರೆ ಹಾಕಿಕೊಂಡು, ಪೈಜಾಮ ಎತ್ತಿಕಟ್ಟಿ, ಕೈಯಲ್ಲಿ ದಸ್ತಿ ಹಿಡಿದುಕೊಂಡು ಹೋಯ್ಯಽಽ... ಎಂದು ಹೆಜ್ಜೆ ಹಾಕುತ್ತಿದ್ದರೆ ಇಮಾನಬಿ ನವಿಲಾಗುತ್ತಿದ್ದಳು. ಅವನು ಮನೆಗೆ ಬಂದಿದ್ದೆ ತಡ ಆಕೆ ಅವನ ಮೇಲೆ ಲಿಂಬೆಹಣ್ಣು ಇಳಿಸಿ ಒಗೆಯುತ್ತಿದ್ದಳು. ಉಪ್ಪು ಇಳಿಸಿ ಉರಿಯುವ ಒಲೆಗೆ ಹಾಕುವಳು. ಕೆಂಡದ ಮೇಲಿನ ಉಪ್ಪು ಚಿಟ್ ಚಿಟ್ ಎಂದರೆ ಕೆಟ್ಟ ನೆದರಾಗಿದೆ ಎನ್ನುವಳು.
ಸಿರಾಜಲಿ ಆವಳ ಮಾತಿಗ ನಕ್ಕು "ನನ್ಗನಿಂದಽಽ ನೆದರು ಹತ್ತದು" ಎಂದು ರೇಗಿಸುವನು. "ನಂದು ಒಳ್ಳೆ ನಜರು" ಎಂದು ಆಕಿ ಅವನ ಎದೆಯೊಳಗೆ ಹುದುಗಿಕೊಳ್ಳುತ್ತಿದ್ದಳು.
ಸಿರಾಜಲಿ ಇಲ್ಲದ ಹೆಜ್ಜೆ ನೋಡಲು ಆಕಗೆ ಕಾತರ ಹುಟ್ಟಿರಲಿಲ್ಲ.
ಮೂರು ದಿನದ ಜಾರತಾ (ಮರಣದ ಮೂರನೆ ದಿನ ಮಾಡುವ ದಿನಕರ್ಮ) ಆದ ಮೇಲೆ ಸಿರಾಜಲಿ ಸೊಲ್ಲಾಪುರ ಸೇರಿಕೂಂಡಿದ್ದರ ವಿಚಾರ ತಿಳಿದಿತ್ತು. ಇಮಾನಬಿ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಬೆಳದ ಮಗಳನ್ನು ನೋಡುತ್ತಿದ್ದಂತೆ ಅವಳ ಕಣ್ಣೀರು ನಿಂತಿತ್ತು. ಸಿರಾಜಲಿ ಹೊಣೆಗಾರಿಕೆಯನ್ನು ತಪ್ಪಿಸಿಕೂಳ್ಳಲು ಈ ನಾಟಕ ಹೂಡಿದನೆ ? ಯೋಚಿಸುತ್ತ ಹೋದಂತೆ ಆಕೆಗೆ ಗಂಡ ಮೇಲೆ ಸಿಟ್ಟು ಬಂದಿತ್ತು. ಆದರೆ ರಕ್ತಕುದ್ದರೆ ತನಗೇ ನಷ್ಟ ಎಂದು ಸದೃಢಗೊಂಡಿದ್ದಳು ಇಮಾನಬಿ. ಪಲಾಯನವಾದ ಗಂಡಸಿಗೆ ಸುಲಭ ; ಹೆಂಗಸಿಗೆ ಅದು ಹೇಗೆ ಸಾಧ್ಯ ? ಎಂದು ಆಕೆ ಮಗ್ಗದಲ್ಲಿಕುಳಿತಿದ್ದಳು. ನೂಲಿನೆಳೆಗಳನ್ನು ಚೂಕ್ಕವಾಗಿ ನೆಯ್ಯತೊಡಗಿದ್ದಳು.
ಬೆಳ್ಳಿಯ ಬಟ್ಟಲು ಅವಳ ಪುಟ್ಟ ಟ್ರಂಕಿನಲ್ಲಿ ಬೆಚ್ಚಗೆ ಉಳಿದಿತ್ತು.
- ೭ -
ಮುಂದಿನ ದಿನಗಳಲ್ಲಿ ಕಿವಿ ಸೇರಿದ್ದ ಸುದ್ದೀ ಅವಳ ಮನಸ್ಪನ್ನು ಘಾಸಿಗೊಳಿಸಿತ್ತು. ಸೊಲ್ಲಾಪೂರ ಸೇರಿಕೊಂಡಿದ್ದ ಸಿರಾಜಲಿ ಹಮಾಲಿ ಮಾಡಿಕೂಂಡು, ಯಾವಳೋ ಒಬ್ಬಳ ಕೂಡ ಅವನ ಕೂಡಾವಳಿ ಆಗಿದೆಯಂದು ಅವನನ್ನು ಮಾತಾಡಿಸಿಕೂಂಡು ಬಂದವರು ಹೇಳಿದ್ದರು. ಬಟ್ಟಲಿನ ನೆಪದಲ್ಲಿ ಅವನು ತನ್ನನ್ನು ವಂಚಿಸಿದನೆಂದು ಆಕೆ ಮನದಟ್ಟು ಮಾಡಿಕೊಂಡಳು. ಜಮಾತಿನವರು ಸಿರಾಜಲಿಯನ್ನು ಬೈದುಕೊಂಡು ಇಮಾನಬಿಗೆ ಧೈರ್ಯ ಹೇಳಿದ್ದರು.
ಮಗಳಿಗೆ ನಿಕಾಹ್ ಮಾಡಿಕೂಡುವ ಜವಾಬುದಾರಿಯಿಂದ ಆಕೆ ಮಗ್ಗದ ಕಾಲ್ವಿಡಿ ತುಳಿಯತೂಡಗಿದ್ದಳು.
ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮ
ಜ್ಞಾನವೆಂಬುವಾ ಕದರನು ಇಟ್ಟು
ಮಾನವ ಧರ್ಮದ ಹಂಜಿಯ ಪಿಡಿದು
ಆನುಭವವೆಂಬುವ ಎಳೆಗಳ ತೆಗೆದು
ಅನುವಿಲೆ ಸುಮ್ಮನೆ ನೂಲಮ್ಮ
ಶರೀಫರ ಜೀವತಂತುವನ್ನು ಆಗಾಧವಾಗಿ ಮೀಟುವ ಖಾದರಖಾನನ ಹಾಡು ಇಮಾನಬಿಗೆ ಧೈರ್ಯ ನೀಡತೊಡಗಿತ್ತು. ಬದುಕನ್ನು ನಾಜೂಕಾಗಿ ನೇಯುತ್ತಿದ್ದವಳ ಕಣ್ಣೀಗೀಗ ಚಸ್ಮಾ ಬಂದಿತ್ತು. ನೇಯ್ಗೆಯ ಚಕ್ರದ ಹೊರಳಿನಲ್ಲಿ ಆಕೆ ಕಷ್ಟದಿಂದ ಮೊಹರಂನ ರಿವಾಜನ್ನು ನೆರವೇರಿಸಿಕೂಂಡು ಬರುತ್ತಲೇ ಇದ್ದಳು.
ಆದರೆ ಬಟ್ಟಲು ಹಿಡಿದು ಹೋದರೆ ಖುಶಿ ಕೊಡುವವರು ಅವಳಿಗೆ ಮೊದಲಿನಷ್ಟು ಆಸ್ಥೆ ತೋರಿಸುತ್ತಿರಲಿಲ್ಲ. ಎರಡು ಮನೆಯ ಯಜಮಾನರು ಮೃತರಾಗಿದ್ದರು. ಮತ್ತೆರಡು ಮನೆಯ ಸಾಹುಕಾರರು ವಯಸ್ಸಿನ ಕಾರಣದಿಂದ ತಮ್ಮ ವ್ಯವಹಾರಗಳನ್ನು ಮಕ್ಕಳಿಗೊಪ್ಪಿಸಿದ್ದರು. ಕೆಲವು ಕಡೆಗೆ ಇಮಾನಬಿ ಮುಜುಗರ ಅನುಭವಿಸುತ್ತಿದ್ದಳು. ಆಕಿ ಬಟ್ಟಲಲ್ಲಿ ಬೆಂಡು ಬತ್ತಾಸ ತುಂಬಿ ಕೊಟ್ಟು ಹಣದ ನಿರೀಕ್ಷೆಯಲ್ಲಿ ಕುಳಿತು ಕೊಳ್ಳುತ್ತಿದ್ದಳು. ಒಬ್ಬರು, "ಇದೊಂದ್ಸಲ ಒಯ್ದು ಬಿಡವ್ವ" ಎಂದರೆ ಮತ್ತೊಬ್ಬರು "ಕಾಲಮಾನ ಸೂಕ್ಷ್ಮ ಆಗ್ಯಾವ ಇಮಾನವ್ವ, ಮಕ್ಕಳು ಕೊಟ್ಟಷ್ಟು ಒಯ್ದು ಬಿಡು" ಎನ್ನುವರು.
ಇಷ್ಟಾದರೂ ಜಹಾಂಗೀರ್ ಕೊಲ್ಲಾಪುರೆ, ಬಾಬಣ್ಣ ದೇಸಾಯಿ ಮೊದಲಿನಂತೆ ಬಟ್ಟಲಿಗೆ ಹಣ ಹಾಕುತ್ತಿದ್ದರು. ಶೋಕಿ, ಪ್ರತಿಷ್ಟೆಯಲ್ಲಿ ಅವರಿಬ್ಬರೂ ಸಮಾನರು. ಹಿಂದೊಮ್ಮೆ ಖಾದರಖಾನನಿಂದ ಬೆಳ್ಳಿಯ ಬಟ್ಟಲನ್ನು ಪಡೆದುಕೊಳ್ಳಲು ಅವರಿಬ್ಬರೂ ಪ್ರಯತ್ನಿಸಿದ್ದರು. "ನನ್ನೆದಿ ಗುಂಡಿಗೀನ ಕೇಳಾಕ ಹತ್ತೀರಿ ನೀವು" ಎಂದು ನಗೆಯಾಡಿ ಬಟ್ಟಲ ಮೇಲಿನ ಅವರ ಆಸೆಯನ್ನು ಛಿದ್ರಗೊಳಿಸಿದ್ದ ಖಾದರಖಾನ್.
ಅವನು ಸತ್ತು ಇಮಾನಬಿ ಬೆಳ್ಳಿಯ ಬಟ್ಟಲು ಹಿಡಿದು ತಮ್ಮಮುಂದೆ ಯಾವಾಗ ನಿಂತಳೋ ಜಹಾಂಗೀರ ಮತ್ತು ಬಾಬಣ್ಣರ ಆಸೆಗಳು ಮತ್ತೆ ಕೊನರಿದ್ದವು. "ಈ ಬಟ್ಲಾ ಕೊಟ್ರ ಎರಡು ಸಾವಿರ ರೂಪಾಯಿ ಕೊಡ್ತೀನಿ" ಅಂದಿದ್ದ ಜಹಾಂಗೀರ್. ಅದನ್ನು ಕೇಳಿಸಿ ಕೊಂಡವನಂತೆ ಬಾಬಣ್ಣ ದೇಸಾಯಿ "ಇಂಥ ಬಟ್ಟಲು ನಮ್ಮಂಥವರ ಮನತನದ್ದಾಗಿರಬೇಕು. ನೀ ಕೇಳಿದಷ್ಟು, ರೊಕ್ಕಾ ಕೂಡ್ತೀನಿ ಕೊಟ್ಟು ಬಿಡು ಇಮಾನವ್ವ" ಎಂದು ಉತ್ತೇಜಿಸಿದ್ದ. "ಇದು ಗುರುಗಳ ಕಾಣ್ಕಿ, ಇದರಾಗ ನಮ್ಮ ಬಾಬಾನ ಜೀವಾನ ಐತ್ತಿ. ಹ್ಯಾಂಗ್ ಮಾರಬೇಕ್ರಿ ಧಣೇರ ?" ಎಂದು ನಿಷ್ಟುರವಾಗಿ ತಿರಸ್ಕರಿದ್ದಳು ಇಮಾನಬಿ.
- ೮ -
ಬಾಬಾಽಽ..... ಬಾಬಾಽಽ.... ಹೈದರ್ ತನ್ನ ತಂದೆಯನ್ನು ನನಪಿಸಿಕೊಂಡು ನರಳಿದ. ವಿಹ್ವಲತೆಯ ಕಿಚ್ಚಿನಲ್ಲಿದ್ದರೂ ಸಬಿನಾ "ಆ ಕುರುಸಾಲ್ಯಾನ್ನ ಯಾಕ್ ನೆನಸ್ಕೋತಿಯೋ ಬೇಟಾ ?" ಎಂದು ಅಸಹನೆ ವ್ಯಕ್ತ ಪಡಿಸಿದಳು. ಅವನೂ ಒಬ್ಬ ತಂದೆ. ತನ್ನದೇ ರಕ್ತ ಹಂಚಿಕೊಂಡು ಬಂದ ಕೂಸಿಗೆ ಚೂರು ಪ್ರೀತಿ, ವಾತ್ಸಲ್ಯ ದರ್ಶನ ಮಾಡಿಸಲಿಲ್ಲ. ಕರುಳ ಬಳ್ಳಿಯ ಸಂಬಂಧದ ಗಂಧ ಇಲ್ಲದವನು. ಜೀವಂತಿದ್ದಾನೋ, ಸತ್ತಿದ್ದಾನೊ.... ಎಂಥ ಹಣೆಬರಹ ಅವನದು! ರೊಟ್ಟಿ-ಚಟ್ನಿ ತಿಂದು ಆರಾಮಿರು ಅಂದರೆ ಶೆಗಣಿ ಹುಳುವಾದ. ಬದುಕು ಕೊಟ್ಟ ಖುದಾ (ದೇವರು)ನಿಗೂ ವಂಚಿಸುವ ಸ್ಯೆತಾನ (ರಾಕ್ಷಸ) ಎಂದು ಇಮಾನಬಿ ಸ್ವಗತದಲ್ಲಿಯೇ ಬೈದುಕೊಂಡಳು.
ಸಬಿನಾಳ ಶಾದಿಗೆ ಅಮರಪ್ಪ ಧಣಿ ಸಾಲ ಕೊಟ್ಟಿದ್ದರು.
ಆಕೆಯ ಗಂಡ ನಿಜಾಮುದೀನ ಇಲಕಲ್ಲಿನಲ್ಲಿ ಟೇಲರಿಂಗ್ ದಂಧೆ ಮಾಡುತಿದ್ದ. ಮದುವೆಯಾದ ೬ ತಿಂಗಳಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿಕೂಂಡು ಬಂದು ಅತ್ತೆಯ ಮನೆಯಲ್ಲಿ ಠಿಕಾಣಿ ಹೂಡಿದ್ದ. ತಾನೂ ಒಬ್ಬಂಟಿ. ಮಗಳು ಜೊತೆಗಿದ್ದರೆ ಸಂತೋಷವೆಂದು ಅಳಿಯನ ಮೇಲೆ ಕಾಳಜಿ ಸ್ಪುರಿಸಿದ್ದಳು. ಪರಿಚಯದ ಟೇಲರಿಂಗ್ ಅಂಗಡಿಯಲ್ಲಿ ಅವನ ಹೊಲಿಗೆ ಕೆಲಸಕ್ಕೂ ಅನುಕೂಲ ಮಾಡಿಕೂಟ್ಟಿದ್ದಳು.
ಸಬಿನಾಳ ಬಸಿರು, ಬಯಕೆ, ಬಾಣಂತನ ಶುರುವಾಗಿ ಮೂರು ಹೊಟ್ಟೆ ಇಳಿದಿದ್ದವು.
ಚಿಂತೆ ಇಲ್ಲದವನು ಸಂತೆಯಲ್ಲಿ ಮೆಲಕಾಡಿಸುವವನಂತಿದ್ದ ನಿಜಾಮುದ್ದೀನ್ ಜಬರ್ದಸ್ತಾಗಿ ಮೂರು ಹೊತ್ತು ಕೂಳು ತಿಂದು, ನಿದ್ದೆಮಾಡಿ ಮೈ ಉಬ್ಬಿಸಿಕೂಂಡಿದ್ದ. ಮಾಲೀಕನೂಂದಿಗೆ ಮನಸ್ತಾಪ ಮಾಡಿಕೊಂಡು ಹೆಂಡತಿ ಮತ್ತು ಅತ್ತೆಯನ್ನು ಕಾಡಿ ಡಬ್ಬಿ ಆಂಗಡಿಯಲ್ಲಿ ಹಳೆಯದೊಂದು ಹೊಲಿಗೆ ಮಿಷನ್ ಇಟ್ಟುಕೂಂಡಿದ್ದ. ಹಣ ಬೇಕು ಅನಿಸಿದರೆ ಕುಳಿತು ಬಟ್ಟೆ ಹೊಲಿಯುತ್ತಿದ್ದ. ಊರು, ಹೋಟೇಲ್, ಸಿನಿಮಾ ಎಂದು ದುಡಿದದ್ದನ್ನೆಲ್ಲ ಹಾಳು ಮಾಡುತಿದ್ದ.
ಸಬಿನಾಳಿಗೆ ನಾಲ್ಕನೆಯ ಗರ್ಭ ನಿಂತಾಗ ಅವನು ಟ್ರಂಕಿನೊಳಗಿನ ಬೆಳ್ಳಿಯ ಬಟ್ಟಲು ಕದ್ದು ಊರು ಬಿಟ್ಟಿದ್ದ. ಬೀಗ ಮುರಿದ ಟ್ರಂಕು ನೋಡಿ ಇಮಾನಬಿ ದಿಗ್ಭ್ರಮೆಗೊಂಡಿದ್ದಳು. ಬಸಿರಿಯಾದ ಸಬಿನಾ ತಾಯಿಯ ಅವಸ್ಥೆಯಿಂದ ಮೈಯೆಲ್ಲಾ ನೀರೊಡೆದಿದ್ದಳು.
"ಕಳ್ಳ, ಕೊರಮ ನಮ್ಮ ಮನಿ ನಾಶ ಮಾಡಕ್ಕಽಽ ಬಂದಾನ" ಇಮಾನಬಿ ಅಳಿಯನನ್ನು ವಾಚಾಮಗೋಚರವಾಗಿ ಶಪಿಸಿದ್ದಳು. ಬೆಳ್ಳಿಯ ಬಟ್ಟಲನ್ನು ಹೊರಗೆ ಹೋಗಲು ಬಿಡಬಾರದು ಎಂದಿದ್ದ ಬಾಬಾ. ಈಗೇನು ಕುತ್ತು ಬರುವುದೊ ಎಂದು ಕಳವಳಸಿದ್ದಳು. ಬಟ್ಟಲು ಇಲ್ಲದೆ ತನಗೆ ಜಿಂದಗೀನೆ ಇಲ್ಲ ಎನ್ನುವಂತೆ ಆಕೆ ಅನ್ನ ನೀರು ಬಿಟ್ಟು ಕುಳಿತಿದ್ದಳು.
ಮೂರನೆಯ ದಿನ ಬೆಳಿಗ್ಗೆ ಪತ್ತಾರ ಗಂಗಪ್ಪ ಬಂದು ಬಟ್ಟಲು ತೋರಿಸಿದಾಗಲೇ ಇಮಾನಬಿ ನಿಶ್ಚಿಂತಳಾಗಿದ್ದಳು. ಈ ಬಟ್ಟಲು ಇಮಾನಬಿಯದು ಎಂದು ಗಂಗಪ್ಪನಿಗೆ ಗೊತ್ತು. ನಿಜಾಮುದ್ದೀನ ಅವನಿಲ್ಲದ ವೇಳೆಯಲ್ಲಿ ಬಟ್ಟಲು ಮಾರಿ ಅವನ ಮಗನ ಕಡೆಯಿಂದ ನೂರು ರೂಪಾಯಿ ಇಸಿದುಕೂಂಡು ಹೋಗಿದ್ದ. ಅದರ ಸತ್ಯ ತಿಳಿಯಲು ಗಂಗಪ್ಪ ಬಂದಿದ್ದ. ಇಮಾನಬಿ ಅರ್ಧದಷ್ಟು ಹಣ ಕೊಟ್ಟು ಇನ್ನರ್ಧ ಹಣವನ್ನು ನಂತರ ಕೊಡುವುದಾಗಿ ಹೇಳಿ ಗಂಗಪ್ಪನಿಂದ ಬಟ್ಟಲು ಪಡೆದುಕೂಂಡು "ನಿನ್ಗ ಆಲ್ಲಾಹ ಒಳ್ಳೇದು ಮಾಡಲಿ !" ಎಂದು ಹಾರೈಸಿದ್ದಳು. ತಡ ಮಾಡದೆ ಜೋಗೇರ ಹತ್ತಿರ ಹೋಗಿ ಟ್ರಂಕಿನ ಬೀಗವನ್ನು ಸರಿಮಾಡಿಸಿ ಎಂದಿನಂತೆ ಸೀರೆಯ ಮಡಿಕೆಯಲ್ಲಿ ಬಟ್ಟಲು ಇಟ್ಟು ನಿರಾಳತೆ ಅನುಭವಿಸಿದ್ದಳು.
ಸಬಿನಾ ಗಂಡುಮಗುವಿಗೆ ಜನ್ಮಕೊಟ್ಟ ವೇಳೆಯಲ್ಲಿ ನಿಜಾಮುದ್ದೀನ್ ಬಂದಿದ್ದ. ಇಮಾನಬಿ ಅವನಿಗೆ ಏನೂ ಅನ್ನಲಿಲ್ಲ. ಅವನೆ ಅತ್ತೂ ಕರೆದು ಮಾಫ್ ಬೇಡಿದ್ದ. ಇಮಾನಬಿ ಮೊಮ್ಮಗನಿಗೆ ಹೈದರ್ ಎಂದು ನಾಮಕರಣ ಮಾಡಿದ್ದಳು. ತನ್ನ ಬಾಬಾ ಮತ್ತೆ ಹುಟ್ಟಿ ಬಂದಿದ್ದಾನೆಂದು ನೆಮ್ಮದಿಯನಿಸಿತ್ತು ಆಕೆಗೆ.
ಹುಡುಗ ಬೆಳಯುತ್ತಿದ್ದಂತೆ ನಿಜಾಮುದ್ದೀನ್‍ನ ಹವ್ಯಾಸಗಳು ಆತಿರೇಕವಾಗಿದ್ದವು. ಈಗವನು ಸಾರಾಯಿ ಕುಡಿದು ಬರಲು ಶುರು ಮಾಡಿದ್ದ. ಸಬಿನಾಳನ್ನು ಹಣಕ್ಕಾಗಿ ಪೀಡಿಸಿ ಬಡಿಯುತ್ತಿದ್ದ. ಮನೆಯಲ್ಲಿನ ಸಾಮಾನು ಕದ್ದೊಯ್ದು ಮಾರುತ್ತಿದ್ದ. ಇಮಾನಬಿ ಅವನ ದಬ್ಬಾಳಿಕೆಗೆ ಪ್ರತಿರೋಧವೊಡ್ಡುತ್ತಿದ್ದಳು. ದಪ್ಪ ಚರ್ಮದ ಅವನಿಗೆ ನಾಚಿಕೆ, ಮರ್ಯಾದೆಯ ಹಂಗು ಇರಲಿಲ್ಲ. ಒಮ್ಮೊಮ್ಮೆ ಕಾಲ ಮೇಲೆ ಬಿದ್ದು ಢೋಕಾರಿತನ ಮಾಡುತ್ತಿದ್ದ. ಕೊನೆಗೊಮ್ಮೆ ಹೊಲಿಗೆ ಮಿಶನ್ ಮತ್ತು ಜನರ ಬಟ್ಟೆಗಳೊಂದಿಗೆ ಅವನು ಊರನ್ನು ಬಿಟ್ಟು ಹೋಗಿದ್ದ. ತಾಯಿ-ಮಗಳು ಪೀಡೆ ತೊಲಗಿತೆಂದು ನಿರುಮ್ಮಳಾಗಿದ್ದರು.
ಸಾಲ ಎದೆಯ ಮೇಲಿನ ಬಂಡೆಗಲ್ಲಿನಂತಿದ್ದರೂ ಇಮಾನಬಿ ಮಗ್ಗದಲ್ಲಿ ಕುಳಿತೇ ಇದ್ದಳು. ಉಪನಾಸ ವನವಾಸದ ಕ್ಷಣಗಳು ಹಗಲು ರಾತ್ರಿಗಳನ್ನು ತ್ರಸ್ತಗೊಳಿಸುತ್ತಿದ್ದರೂ ತನ್ನ ಬದುಕಿನ ಹೋರಾಟದಲ್ಲಿ ಜಿಗುಟತನವನ್ನು ಕಳೆದುಕೊಳ್ಳದಂತಿದ್ದಳು ಆಕೆ.
- ೯ -
ಹೈದರ್ ದಿಗ್ಗನೆ ಎದ್ದು ಕುಳಿತುಕೊಳ್ಳಲು ನೋಡಿದ. ಸಬಿನಾ ಅವನ ಬೆನ್ನಿಗೆ ಕೈಯಾಸರೆ ನೀಡಿ "ಏನಾತು ಬೇಟಾ ?" ಎಂದು ಗಾಬರಿಗೊಂಡಳು. ಮೊಮ್ಮಗನ ನಿಸ್ತೇಜ ಕಣ್ಣು, ಜೋತು ಬಿದ್ದಿರುವ ಮುಖ ಕಂಡು ಇಮಾನಬಿ ಕಂಗಾಲಾದಳು. "ಸ್ವಲ್ಪ ನೀರರ ಕುಡಿಸು ಕೂಸಿಗೆ" ಎಂದಳು.
"ಗುಟುಕು ನೀರು ಕುಡದ್ರ ಕರುಳು ಹೊರಗ ಬಂದಂಗ ಹೊರಗ ಹಾಕ್ತಾನ. ಏನ್ಮಾಡ್ಲಿ? ಅದರ ನಸೀಬದಾಗ ಇದ್ದಾಂಗಾಗ್ಲಿ, ಬೇಶರ್ಮ (ನಾಚಿಕೆ ಮರ್ಯಾದೆ ಇಲ್ಲದವನು)ನ ಕೂಡ ಗಂಟ್ಹಾಕಿ ನನ್ನ ಜಿಂದಗೀನ ಹಾಳ್ಮಾಡ್ದಿ. ಈಗ ಎಂಥ ಹೊತ್ತುಬಂತು ನೋಡು. ನನ್ನ ಕೂಸಿಗ ದವಾಖಾನಿಗೆ ಕರ್ಕೊಂಡು ಹೋಗಿ ತೋರ್ಸುವ ಗತಿ ಇಲ್ಲಂಗಾತು"
ತನ್ನ ನಸೀಬು ಜರಿದುಕೂಳ್ಳುತ್ತ ಮುಖಮುಖ ಬಡಿದುಕೂಂಡಳು ಸಬಿನಾ.
ಹೈದರ್ ಇದ್ದಕ್ಕಿದ್ದಂತೆ ನಡುಗತೊಡಗಿದ. ಅವನ ಮೈಯೆಂಬೋ ಮೈ ಬರ್ಫಿನಂತೆ ಜುನುಗತೊಡಗಿತು. ಇಮಾನಬಿ ದಪ್ಪನೆಯ ಕೌದಿಯನ್ನು ಅವನ ಮೈಮೇಲೆ ಹರಡಿದಳು. ಹೈದರ್ ಎತ್ತರಕ್ಕೆ ಪುಟಿಯತೊಡಗಿದ. ಹೆದರಿಕೆಯಿಂದ ತಾಯಿ ಮಗಳು ಅವನ ಕೈಕಾಲು ತಿಕ್ಕತೊಡಗಿದರು.
ಸ್ವಲ್ಪ ಹೊತ್ತಿಗೆ ತಣ್ಣಗಿನ ಮೈ ಕಾದ ಹೆಂಚಾಯಿತು. "ಜ್ವರ ಮತ್ತ ಬಂದು" ಸಬಿನಾ ಚಡಪಡಿಸಿದಳು. ಮಗನ ಒಳಗಿನ ಕೆಂಡ ತನ್ನ ಒಡಲಲ್ಲಿ ಬಿದ್ದು ಸುಡುವಂತೆ "ಯಾ ಆಲ್ಲಾಹ್ ! ಪಾಕ್ ಪರವರ್ಧಿಗಾರ ನನ್ನ ಕೂಸಿನ ಮ್ಯಾಲೆ ಕರುಣಾ ತೋರ್ಸು. ಜಲ್ದೀನ ಬೆಳಗು ಹರಿಸು ನಾಳೆ ಎಲ್ಲೇರ ನನ್ನ ಜೀವಾ ಒತ್ತಯಿಟ್ಟು ಮಗನ್ನ ದವಾಖಾನಿಗೆ ಸೇರಿಸ್ತೀನಿ. ಸತ್ತಂದ್ರ ಮಣ್ಣಿಗರ ಇಡ್ತೀನಿ" ಎಂದು ಹಲುಬಿದಳು.
ಮಗಳ ಮಾತು ಇಮಾನಬಿಯ ಎದೆ ಬಗೆಯತೊಡಗಿತು.
ಇಮಾನಬಿ ತೀರ್ಮಾನಕ್ಕೆ ಬರುವ ಹೊತ್ತಿಗೆ ಕತ್ತಲು ಸರಿದಿತ್ತು. ಜೀವಪ್ರೀತಿಯ ಬೆಳಕು ಅವಳ ಆಂತಃಕರಣವನ್ನು ತುಂಬಿ ನಿಂತಿತ್ತು. "ಸಬಿನಾ ನೀನು ಹೈದರನನ್ನು ಕರ್ಕೊಂಡು ದವಾಖಾನಿಗೆ ನಡಿ. ನಾ ಬಾಬಣ್ಣದೇಸಾಯರ ಮನಿಗೆ ಹೋಗಿ ಬರ್ತ್ತೀನಿ" ಎಂದು ನಾಗವಂದಿಗೆಯ ಮೇಲಿಂದ ಟ್ರಂಕು ಇಳಿಸಿ, ಕೀಲಿ ತೆಗೆದು, ಬೆಳ್ಳಿಯ ಬಿಟ್ಟಲನ್ನು ಸೀರೆಯ ಸೆರಗಿನೊಳಗೆ ಮರೆಮಾಡಿಕೂಂಡು ಹೊಸ್ತಿಲು ದಾಟಿದಳು ಇಮಾನಬಿ. ತೆರೆದ ಬಾಗಿಲಿನಿಂದ ತೂರಿ ಬಂದ ತಂಗಾಳಿ ಸಬಿನಾಳಿಗೆ ಹಿತವೆನಿಸಿತು.
*****
ಕೀಲಿಕರಣ: ಎಂ. ಎನ್. ಎಸ್. ರಾವ್