ಬೂದಿ ಬೀಳುತಿತ್ತು

- ಡಾ || ಪ್ರಭಾಕರ ಶಿಶಿಲ

ಆ ಕಟ್ಟಡದ ಕೆಲಸ ಆರಂಭವಾದಂದಿನಿಂದ ಊರಲ್ಲಿ ಅನೇಕ ಬದಲಾವಣೆಗಳಾಗಿದ್ದವು.  ಲಾರಿಗಳ ಓಡಾಟ, ವಿಚಿತ್ರದಾದ ಯಂತ್ರಗಳು ಊರಿಗೆ ಹೊಸ ಆಕರ್ಷಣೆಯನ್ನು ನೀಡಿದ್ದವು.  ಬೇರೆ ಬೇರೆ ಭಾಷೆಗಳನ್ನಾಡುವ ಕಪ್ಪು ಕಪ್ಪು ಜನಗಳು ಕೆಲಸ ಬೇಗ ಮುಗಿಯಲಿಕ್ಕಾಗಿ ಬಿಡುವಿಲ್ಲದೆ ದುಡಿಯುತ್ತಿದ್ದರು. ಗ್ಯಾಸ್ ದೀಪಗಳನ್ನು ಹಚ್ಚಿ ರಾತ್ರಿಯೂ ಒಮ್ಮೊಮ್ಮೆ ಕೆಲಸವನ್ನು ಮುಂದುವರಿಸಬೇಕಾಗಿ ಬರುತ್ತಿತ್ತು. ಊರಲ್ಲಿದ್ದ ಮೂರು ಹೊಟೇಲು, ಎರಡು ಅಂಗಡಿ, ಒಂದು ಕಳ್ಳಿನಂಗಡಿ ಮತ್ತು ಒಂದು ಸಾರಾಯಿ ಆಂಗಡಿಗೆ ಬಿಡುವಿಲ್ಲದೆ ವ್ಯಾಪಾರ. ಪಡ್ಡೆ ತರುಣರ ತಂಡ ಸಂಜೆ ಅಲ್ಲಿ ನೆರೆದು ಕೆಲಸ ಮಾಡುವ ಬೇರೆ ಬೇರೆ ಕಪ್ಪು ಕಪ್ಪು ಹೆಂಗಸರ ಶರೀರ ಸಂಪತ್ತಿನ ಬಗ್ಗೆ ಮಾತಾಡುತ್ತಿದ್ದರು. ಅಷ್ಟು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮೇಸ್ತ್ರಿಯ ಆದೃಷ್ಟದ ಬಗ್ಗೆ ಕರುಬುತ್ತಿದ್ದರು.  ಪುಟಗೋಸಿಯ ವೀರರಂತೂ ದಿನವಿಡೀ ಅಲ್ಲೇ ಓಡಾಡಿಕೊಂಡಿರುತ್ತಿದ್ದರು.

ಬಹಳ ಜನಪ್ರಿಯತೆ ಪಡೆದ ಜೀವಂತ ದೇವರಿಗಾಗಿ ಕಟ್ಟುತ್ತಿದ್ದ, ಆ ಕಟ್ಟಡದ ಕೆಲಸ ಹೆಚ್ಚು ಕಡಿಮೆ ಪೂರ್ತಿಯಾಗುತ್ತಾ ಬಂದಿತ್ತು. ಊರಿನ ಅತೀ ಶ್ರೀಮಂತರಾದ ಭಟ್ಟರ ನೇತೃತ್ವದಲ್ಲಿ ಕಟ್ಟಡದ ಕೆಲಸ ಸಾಗಿತ್ತು. ಅದಕ್ಕೆ ಭಗವಾನ್ ಮಂದಿರ ಎಂದು ಭಟ್ಟರು ಹೆಸರು ಇರಿಸಿದ್ದರು. ಆ ದೇವರು ಇರುವ ಊರಿಗೆ ನಾಲ್ಕೈದು ಬಾರಿ ಭಟ್ಟರು ಹೋಗಿ ದೇವರ ಬಗ್ಗೆ ಊರಿಡೀ ಹೇಳಿಕೊಂಡು ಬಂದಿದ್ದರು. ಎಲ್ಲಾ ಊರುಗಳಲ್ಲಿ ಕಲಿಯುಗ ಅವತಾರನೆನಿಸಿದ ಆ ದೇವರಿಗೆ ಮಂದಿರಗಳಿರುವಾಗ ತಮ್ಮ ಊರು ಹಿಂದುಳಿಯಬಾರದೆಂದು ಮುತುವರ್ಜಿ ವಹಿಸಿದ್ದರು.  ಮಂದಿರದ ಉದ್ಘಾಟನೆ ಆ ದೇವರಿಂದಲೇ ನಡೆಯುವುದೆಂದು ಪ್ರಚಾರವನ್ನೂ ಮಾಡಿದ್ದರು.

ಚಿನ್ನಪ್ಪನಿಗೆ ಮಂದಿರದ ಕೆಲಸ ಶುರುಮಾಡಿದಂದಿನಿಂದಲೂ ಅಲ್ಲಿನ ಮಾಹಿತಿ ಸಂಗ್ರಹಿಸುವುದು ಅತ್ಯಂತ ಇಷ್ಟದ ಕೆಲಸ.  ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಮತ್ತು ಸಂಜೆ ಶಾಲೆ ಬಿಟ್ಟ ಮೇಲೆ ಅಲ್ಲೇ ಅವನ ಠಿಕಾಣಿ.  ಅವನ ಮನೆಯ ಆಕ್ಕಪಕ್ಕದ ಕೂಸಪ್ಪ, ಬಾಳಣ್ಣ, ಗೋಪಾಲರಿಗೂ ಅವನದ್ದೇ ಕೆಲಸ. ಅಲ್ಲಿ ನಡೆಯುತ್ತಿದ್ದ ಸಂಗತಿಗಳ ಬಗ್ಗೆ ಅವರವರೇ ಮಾತಾಡಿಕೊಂಡು ಒಂದು ತೀರ್ಮಾನಕ್ಕೆ ಬಂದ ಮೇಲೆ ಮನೆಯಲ್ಲಿ ವರದಿ ಒಪ್ಪಿಸುತ್ತಿದ್ದರು.  ಭಟ್ಟರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಅವನ ಅಪ್ಪ ದೂಮಣ್ಣನಿಗೆ ಚಿನ್ನಪ್ಪನ ಮಾತುಗಳನ್ನು ಕೇಳುವ ಆಸಕ್ತಿ ಏನಿರಲಿಲ್ಲ. ಮನೆಯೇ ಪ್ರಪಂಚವಾದ ತಾಯಿ ವೆಂಕಮ್ಮ ಮಾತ್ರ ಬೀಡಿ ಕಟ್ಟುತ್ತಾ ಅವನ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೂಳ್ಳುತ್ತಿದ್ದಳು. ಚಿನ್ನಪ್ಪನೆಂದರೆ ತಾಯಿಗೆ ವೃತ್ತ ಪತ್ತಿಕೆ ಇದ್ದ ಹಾಗೆ.

ಚಿನ್ನಪ್ಪ ಅಂದು ತಂದ ವಾರ್ತೆ ವೆಂಕಮ್ಮನಿಗೆ ಆಶ್ಚರ್ಯದೊಂದಿಗೆ ಸಂತೋಷವನ್ನೂ ಉಂಟುಮಾಡಿತ್ತು. ಚಿನ್ನಪ್ಪ ನೋಟೀಸು ತಂದು ಓದಿ ಹೇಳದಿರುತ್ತಿದ್ದರೆ ಅವಳಿಗೆ ನಂಬಿಕೆ ಉಂಟಾಗುತ್ತಿತ್ತೋ ಇಲ್ಲವೋ? ಮಂದಿರಕ್ಕಾಗಿ ಎಲ್ಲರೂ ಉದಾರ ದಾನ ನೀಡಬೇಕೆಂದೂ, ಉದ್ಘಾಟನೆಗೆ ದೇವರು ಬರುವ ದಿನ ತಳಿರು ತೋರಣಗಳಿಂದ ಊರನ್ನು ಅಲಂಕರಿಸಬೇಕೆಂದೂ, ಮನೆ ಎದುರು ರಂಗೋಲಿ ಹಾಕಿರಬೇಕೆಂದೂ, ಸ್ನಾನ ಮಾಡಿ ಸಾಮೂಹಿಕ ಭಜನೆಗಾಗಿ ಮಂದಿರಕ್ಕೆ ಬರಬೇಕೆಂದೂ ಅದರಲ್ಲಿ ನಮೂದಿಸಲಾಗಿತ್ತು.

ಚಿನ್ನಪ್ಪ ತಾಯಿಯನ್ನು ಕಾಡಿದ. ಅವಳು ಎಲ್ಲೆಲ್ಲ ತಡಕಾಡಿ ಮೂರುಕಾಲು ರೂ. ಒಟ್ಟು ಮಾಡಿ ಅವನಿಗಿತ್ತಳು.  ಚಿನ್ನಪ್ಪ ಆ ಹಣವನ್ನು ತೆಗೆದುಕೊಂಡು ತನ್ನ ಚೀಲದಲ್ಲಿ ಹಾಕಿಕೊಂಡ. ನಾಳೆ ಸಂಜೆ ಭಟ್ಟರ ಆಧ್ಯಕ್ಷತೆಯ ಭಗವಾನ್ ಸಮಿತಿಗೆ ದಾನವಾಗಿ ಆದನ್ನು ನೀಡಬೇಕೆಂದುಕೊಂಡ.

ದೂಮಣ್ಣ ಕೆಲಸ ಮುಗಿಸಿ ಬರುವಾಗ ಮಬ್ಬುಗತ್ತಲು ಹಬ್ಬಿತ್ತು.  ಅವನು ಮನೆಯಲ್ಲಿ ಮಾತನಾಡುವುದೇ ಕಡಿಮೆ. ಗಡಂಗಿನಲ್ಲಿ ಹಾಕಿ ಬಂದಾಪತ್ತು ಅವನ ಮಾತು ಊರಿಡೀ ಕೇಳಿಸುತ್ತದೆ. ಅಂದು ಹಾಕಿ ಬಂದು ಖುಷಿಯಲ್ಲಿದ್ದ. "ಎಂಕೂ ಕೇಳ್ದೇನೆಯಾ ನೀ. ದೇವ್ರು ಬಂದವೆಗಡ ನಮ್ಮ ಊರಿಗೆ" ಅಂದ.  ವೆಂಕಮ್ಮ ಬಿರಡೆಯಿಂದ ನಶ್ಶ ಮೂಗಿಗೇರಿಸುತ್ತಾ ಕೇಳಿದಳು: "ಯಾರ್ ಬಂದ್ರ ನಾವುಗೇನ್? ನಾವು ಗೈಯೆದು ತಪ್ಪಿದೆನಾ?"  ಅದಲ್ಲನೆ?  "ದನಿಗಳ ಮನೆಲಿ ದೇವ್ರ ಪಟನೋಡ್ದೆ.  ಉದ್ದೋಕ್ಕು ಕೆಂಪು ಅಂಗಿ ಹಾಕಿಯೊಳೊ. ತಲೆ ಕೂದ್ಲು ಗುಂಗ್ರು.  ಗುಂಗ್ರಾಗುಟ್ಟು.  ಕೆಂಪು ಕೆಂಪಾಗಿ ಕಂಡವೆ. ಕೃಷ್ಣ ದೇವರ ಅವ್‍ತಾರಾಂತ ಹೇಳ್ದೋ ದನಿಗೊ."

ಅವಳು ಇದನ್ನು ಕೇಳಿದ್ದಳು.  ದೇವರು ಮನುಷ್ಯನಾಗಿ ಅವತಾರ ತಾಳಿದ್ದಾರೆ.  ಮಕ್ಕಳಿಲ್ಲದವರಿಗೆ ಮಕ್ಕಳಾಗುವ ಹಾಗೆ ಮಾಡ್ತಾರೆ. ಕಾಯಿಲೆ ಗುಣ ಮಾಡ್ತಾರೆ. ದೊಡ್ಡವರಿಗೆ ವಾಚು, ವಜ್ರ ಸೃಷ್ಟಿಸಿಕೊಡ್ತಾರೆ. ಉಳಿದ ಭಕ್ತರಿಗೆ ಗಾಳಿಯಲ್ಲಿ ಕೈಯಾಡಿಸಿ ಬೂದಿ ಸೃಷ್ಟಿಸಿ ನೀಡುತ್ತಾರೆ. ನೀರನ್ನು ಪೆಟ್ರೋಲ್ ಮಾಡುತ್ತಾರೆ -ಎಂದೆಲ್ಲಾ ಊರು ಸುದ್ದಿಗಳಲ್ಲಿ ಮುಳುಗಿದ್ದಾಗ ಅವಳಿಗೆ ಅನಿಸುತ್ತಿದ್ದುದುಂಟು. ಎಲ್ಲಿಗೋ ಓಡಿಹೋದ ತನ್ನ ಹೆಣ್ಣ ಮಕ್ಕಳು ವಾಪಾಸಾಗುವಂತೆ, ತನ್ನ ವಾತ ಗುಣವಾಗುವಂತೆ, ಸ್ವಾಮಿ ಮಾಡಿದರೆ! ಆದರೆ ಅಷ್ಟು ದೂರದಲ್ಲಿರುದ ಸ್ವಾಮಿಯಲ್ಲಿಗೆ ಹೋಗುವುದು ಹೇಗೆ ಎನ್ನುವುದು ಅವಳ ಚಿಂತೆಯಾಗಿತ್ತು. ಈಗ ದೇವರು ಊರಿಗೇ ಬರ್ತಿದ್ದಾರೆ.  ಅವಳೆಂದಳು: "ದೇವು ಬಂದ್ರ ಮಕ್ಕ ಬಾವಾಂಗೆ ಮಾಡ್ವೆನೋ ಏನೋ?"

ದೂಮಣ್ಣ ಪುಸಕ್ಕನೆ ನಕ್ಕ. "ನಿಂಗೇನೂ ಹುಚ್ಚು ಎಂಕು. ಆವು ಸೊಕ್ಕು ತುಂಬಿ ಊರು ಬುಟ್ಟೋಳೊ. ಇನ್ನ್ ಬಂದವೆನ?"  ಅದಲ್ಲ. ದನಿಗಳ ಮನೆಲಿ ನಡ್ದ ವಿಶೇಷ ಕೇಳಿಯೊಳನಾ?"

"ಎಂತಗಡ?"  ವೆಂಕಮ್ಮನ ಕಿವಿ ನಿಮಿರಿತು.

"ಅಲ್ಲಿ ಪಟ ನೋಡ್ದೆಂತ ಹೇಳ್ದೆ ಅಲ್ಲ? ಆ ಪಟಂದಬೂದಿ ಬಿದ್ದದೆ ಗಡ. ದನಿಗಳ ಮಂಙನ ಮೈಮೇಲೆ ದೇವ್ರು ಬಂದವೆಗಡ. ಆ ಬೂದಿ ಎಷ್ಟ್ ಪರಿಮಳ ಗೊತ್ತುಟ್ಟಾ? ಈಗ ದನಿಗಳ ಮಂಙನೂ ದೇವರ ಹಂಗೆ ಆಗಿಬುಟ್ಟುಟು."

ಚಿನ್ನಪ್ಪನಿಗೆ ಉಸಿರು ಸಿಕ್ಕಿಕೊಂಡ ಹಾಗಾಯಿತು. ದನಿಗಳ ಮಗ ಲಕ್ಷ್ಮಿನಾರಾಯಣ ತನ್ನ ಕ್ಲಾಸಿನವ. ಒಂದು ವಾರದಿಂದ ಅವನು ಶಾಲೆಗೆ ಬಂದಿರಲಿಲ್ಲ. ಎಂತಹ ಭಾಗ್ಯ ಅವನದು! ತನ್ನ ಮೈಮೇಲೂ ದೇವರು ಬರುತ್ತಿದ್ದರೆ? ಚಿನ್ನಪ್ಪನ ದೃಷ್ಟಿ ತನ್ನ ದೇಹದ ಮೇಲೆ ಹೋಯಿತು. ಹರಕಲು ಬಟ್ಟೆ ಮಣ್ಣು ಮಣ್ಣಾಗಿತ್ತು. ಕಪ್ಪು ಪೀಚಲು ಮೈಯಿಂದ ಬೆವರಿನ ಗಬ್ಬು ಬರುತ್ತಿತ್ತು.  ದೇವರು ಬರಬೇಕಾದರೆ ಬಿಳಿ ಬಿಳಿ ಮೈ ಇರಬೇಕು. ಸದಾ ಮಡಿಯಲ್ಲಿರಬೇಕು. ಮಾಂಸ ಮಡ್ಡಿ ತಿನ್ನಬಾರದು. ಮೇಲು ಜಾತಿಯವರೇ ಆಗಿರಬೇಕೇನೋ? ತನ್ನಂತವನ ಮೈಮೇಲೆ ದೇವರು ಬರಲಾರರು ಎಂದು ಕೊಳ್ಳುತ್ತಲೇ ಅವನಿಗೆ ನಿರಾಶೆ ಉಂಟಾಯಿತು|

ತಲೆ ತುರಿಸಿಕೊಳ್ಳುತ್ತಾ ಕೂತಿದ್ದ ಮಗನನ್ನು ನೋಡಿ ದೂಮಣ್ಣನೆಂದ. "ನೀ ಒಳ ನೋಡು ಪೆದ್ದು ಮುಂಡೇದು. ದನಿಗಳ ಮಂಙನ ಮೈಮೇಲಿ ದೇವ್ರು ಬಂದವೆ. ನಿನ್ನ ಮೈಲಿ ಎಲ್ಲಿಯಾದರ್ ದೇವ್ರು ಬರ್ತಿದ್ರೆ ಒಳ್ಳೆ ದುಡ್ಡು ಮಾಡೋಕ್ಕಿತ್."

ಮಗನನ್ನು ಬೈದುದಕ್ಕೆ ವೆಂಕು ಸಿಡಿಮಿಡಿಗೊಂಡಳು. "ಸಾಕ್ ಸುಮ್ಮನಿರಿ. ನೀವು ದನಿಗಳ ಹಾಂಗೆ ಇರ್ತಿದ್ದರೆ ಅವ ಸಹ ದನಿಗಳ ಮಂಙನ ಹಾಂಗೆ ಇರ್ತಿತ್ತ್".

ಮೂದಲಿಕೆಗೆ ದೂಮಣ್ಣ ಸುಮ್ಮನಾದ. ಈಗ ಚಿನ್ನಪ್ಪನೆಂದ. "ಅಪ್ಪಾ ನಂಗೆ ಒಂದ್ ಪಟ ತಂದ್ ಕೊಟ್ಟಿಯನಾ?"

"ಯಾವ ಪಟ?".

"ಅದೇ ದೇವ್ರುದ್. ನಮ್ಮಲ್ಲಿನೂ ಬೂದಿ ಬಿದ್ದದೇನಾಂತ ನೋಡೋಕಾತ್".

ದೂಮಣ್ಣನಿಗೆ ಈಗ ಖುಷಿಯಾಯ್ತು. ಪರವಾಗಿಲ್ಲ ಬೇಕೂಪ ಎಂದ್ಕೊಂಡ ಮಗನಿಗೆ ತಲೆ ಇದೆ "ಆತ್ ಆತ್" ಎ೦ದು ತಲೆದೂಗಿದ. ಕಿಸೆ ತಡಕಾಡಿದಾಗ ನಾಲ್ಕಾಣೆ ಪಾವಲಿ ಸಿಕ್ಕಿತು. ಅದನ್ನು ಚಿನ್ನಪ್ಪನಿಗೆ ಕೊಡುತ್ತಾ "ತೆಕಾ ಪಪ್ಪರು ಮಿಟಾಯಿಗೆ" ಎಂದ.  ಅಮ್ಮ ಕೊಟ್ಟ ಹಣಕ್ಕೆ ಇದನ್ನು ಸೇರಿಸಿ ಮಂದಿರ ನಿಧಿಗೆ ಕೊಡಬೇಕು ಎಂದು ಚಿನ್ನಪ್ಪ ನಿಶ್ಚಯಿಸಿಕೊಂಡ.

ಅಂದು ರಾತ್ರಿಯಿಡೀ ಅವನಿಗೆ ಆ ದೇವರದೇ ಕನಸು. ಉದ್ದಕ್ಕೆ ಗವನು ಹಾಕಿದ ಬಿಡಿ ಬಿಡಿ ಕೂದಲಿನ ಆ ದೇವರ ಪಟ ಮನೆಗೆ ತಂದಂತೆ.  ತಾನು ಅದಕ್ಕೆ ಊದುಬತ್ತಿ ಇಟ್ಟು, ಅದರೆದುರು ಒಂದು ದೀಪ ಹಚ್ಚಿದಂತೆ, ಮತ್ತೆ ಆ ಪಟದಿಂದ ಬೂದಿ ಬೀಳುವಂತೆ, ಜನರೆಲ್ಲಾ ಮನೆಗೆ ಬಂದು ಅಡ್ಡಬಿದ್ದು ಕಾಣಿಕೆ ಕೊಟ್ಟು ತನ್ನನ್ನು ಹೊಗಳಿ ಹೋಗುವಂತೆ.

ಮರುದಿನ ಬೆಳಿಗ್ಗೆ ದೂಮಣ್ಣ ಕೆಲಸಕ್ಕೆ ಹೊರಟಾಗ ವೆಂಕು ನೆನಪಿಸಿದಳು. "ಪಟ ತಂದು ಕೂಡಿಕೆ ಮರಿಬಡಿ"

"ಯಾವ ಪಟನೆ?" ಅಮಲಿನಲ್ಲಿ ನಡೆದ ಮಾತುಕತೆಗಳೊಂದೂ ಅವನ ನೆನಪಲ್ಲಿ ಉಳಿದಿರಲಿಲ್ಲ.

"ಅದೇ ಆ ದೇವ್ರುದ್"

ಈಗ ಚಿನ್ನಪ್ಪ ಬಂದು ಅಮ್ಮನಿಗೆ ಆತುಕೊಂಡು ನಿಂತು ಅಪ್ಪ ಏನನ್ನುತ್ತಾನೋ ಎಂದು ಅವನನ್ನು ಬಿಟ್ಟ ಕಣ್ಣುಗಳಿಂದ ನೋಡಿದ.

"ಈ ದರಿದ್ರ ಮುಂಡೆ ದಕ್ಕೆ ಅದೊಂದ್ ಕೇಡ್. ಹೋಗಿ ಓದಲಿ" ದೂಮಣ್ಣ ಬೀಡಿ ಹಚ್ಚಿಕೊಳ್ಳುತ್ತಾ ನುಡಿದ.

"ಕೂಸು ಪಾಪ ಆಸೆ ಮಾಡಿಕೊಂಡುಟ್ಟು. ನೀವು ದುಡ್ಡು ಕೊಟ್ಟು ತರೋಕುಂತ್ತಿಲ್ಲೆ.  ದನಿಗಳಲ್ಲಿ ಕೇಳಿರೆ ಆತ್.  ನಿಮ್ಮ ಗಂಟೇನ್ ಹೋದೆ?"

ಇನ್ನು ಮಾತಾಡಿದರೆ ತಡವಾಗುತ್ತದೆಂದು ದೂಮಣ್ಣ ತಲೆಯಾಡಿಸುತ್ತಾ ಹೊರಟು ಹೋದ.
"ಅಪ್ಪ ತಾರದಿದ್ರ ನಾವೇ ಜಾತ್ರೆಲಿ ತೆಕೂಳಮ" ಎಂದು ವೆಂಕಮ್ಮ ಚಿನ್ನಪ್ಪನ ತಲೆ ಸವರಿದಳು. "ನೀ ಹೋಗಿ ಕೈ ಕಾಲ್ ತೊಳ್ದ್ ಶಾಲೆಗೆ ಹೋಗ್ ಮಂಙ".

ತಾನಿಂದು ಭಗವಾನ್ ಸಮಿತಿಗೆ ಕಾಣಿಕೆ ಕೊಡಲಿಕ್ಕಿದೆ ಎನ್ನುವುದು ನೆನಪಾದಾಗ ಮೈ ಪುಳಕಿತಗೊಂಡು ಚಿನ್ನಪ್ಪ ಡುರ್ರೆಂದು ಬಸ್ಸು ಬಿಡುತ್ತಾ ಕೆರೆಯ ಕಡೆಗೆ ಓಡಿದ.

ಶಾಲೆ ಮುಗಿಸಿ ಸಂಜೆ ನೇರವಾಗಿ ಮಂದಿರದತ್ತ ನಡೆದ.  ಶಾಲೆಯಲ್ಲಿ ಎಲ್ಲರೊಡನೆಯೂ ತಾನಿಂದು ಮಂದಿರಕ್ಕೆ ಕೊಡಲಿರುವ ದೇಣಿಗೆಯ ಬಗ್ಗೆ ಹೆಮ್ಮೆಯಿಂದ ಕೊಚ್ಚಿಕೊ೦ಡಿದ್ದ.  ಚೀಲದಲ್ಲಿರುವ ಹಣವನ್ನು ಎಲ್ಲರಿಗೂ ತೋರಿಸಿದ್ದ.  ಅಪ್ಪ ಪಟ ತರಲಿರುವುದನ್ನು ಹೇಳಿಕೊಂಡು ಬಂದಿದ್ದ ಈ ಖುಷಿಯಿಂದ ಮೊಲದ ಹಾಗೆ ಜಿಗಿಯುತ್ತಾ ಮಂದಿರದತ್ತ ಬಂದ.

ಮಂದಿರದೆದುರು ಭಟ್ಟರು ಸಂಭ್ರಮದಿಂದ ಒದಾಡುತ್ತಿದ್ದರು.  ಸದಾ ತನ್ನನ್ನು ಕೊಳಕ ಎಂದು ಹಂಗಿಸುತ್ತಿದ್ದ "ಶೂದ್ರ ಮುಂಡೇದ್. ದೂರ ನಿಲ್ಲ್" ಎಂದು ಮಡಿವಂತಿಕೆ ತೋರಿಸುತ್ತಿದ್ದ ಭಟ್ಟರ ಮೆಚ್ಚುಗೆ ಗಳಿಸಲು ತನಗಿಂದು ಸಾಧ್ಯ.  ತಾನು ಕೊಡಲಿರುವ ಕಾಣಿಕೆ ಭಟ್ಟರಲ್ಲಿ ತುಂಬಾ ಮಾರ್ಪಾಡು ಮಾಡಲಿದೆ ಎಂದುಕೊಳ್ಳುತ್ತಾ ಭಟ್ಟರತ್ತ ನಡೆದ.  ದುಡ್ಡು ಹೊರತೆಗೆಯಲು ಚೀಲಕ್ಕೆ ಕ್ಕೆ ಹಾಕಿ ಹುಡುಕಿದ.  ದುಡ್ಡು ಎಲ್ಲಿದೆ?  ಚಿನ್ನಪ್ಪನಿಗೆ ಅಳು ಬರುವಂತಾಯಿತು.  ಶಾಲೆಯಲ್ಲಿ ತಾನು ಎಲ್ಲರಿಗೂ ದುಡ್ಡು ತೋರಿಸಿದುದೇ ತಪ್ಪಾಯಿತು.  ಈಗೇನು ಮಾಡುವುದು?

ಪೆಚ್ಚುಮೋರೆ ಹಾಕಿಕೊಂಡು ಚೀಲ ತಡಕಾಡುತ್ತಾ ಗೊಣಗುತ್ತಿರುವ ಚಿನ್ನಪ್ಪನನ್ನು ಕಂಡು ಭಟ್ಟರು "ಏ ಶೂದ್ರ ಮುಂಡೇ ಗಂಡ. ನಿಂಗೆ ಮಿಂದ್ ಆಗುಟ್ಟಾ? ನಡಿನಡಿ" ಎಂದು ಗದರಿದರು. ಚಿನ್ನಪ್ಪ "ನಾನು....ದುಡ್ಡು.........ನೀವು" ಎಂದು ತೊದಲಿದ.  "ನಿನ್ನಪ್ಪಂಗೆ ದುಡ್ಡು ಕೊಟ್ಟು ನಂಗೆ ಸಾಕಾತ್.  ಇನ್ನ್ ನೀ ಸುರ್ ಮಾಡ್ ಅಪ್ಪನ ಚಾಳಿ. ಬೇಗ ನಡಿ ಇಲ್ಲಿಂದ" ಎಂದು ಭಟ್ತರು ಅಬ್ಬರಿಸಿದಾಗ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ಚಿನ್ನಪ್ಪನನ್ನೇ ನೋಡಿದರು.  ಅಷ್ಟು ಜನರೆದುರು ಅಪಮಾನವಾದಾಗ ಈ ವರೆಗೆ ತಡೆ ಹಿಡಿದಿದ್ದ ಅಳುವಿನ ಕಟ್ಟೆ ಒಡೆಯಿತು.  ಕಣ್ಣಿನಿಂದ ಮೂಗಿನಿಂದ ನೀರು ಇಳಿಯಲಾರಂಭಿಸಿತು.

ಇವನ ಸೊರ್ ಸೊರ್ ಸದ್ದು ಕೇಳಿ ಭಟ್ಟರು ಸ್ವಲ್ಪ ಮೆತ್ತಗಾಗಿ "ನಿಂಗೆ ಒಂದು ಪಟ ಕೊಟ್ಟಳೆ ದೂಮಣ್ಯನ ಕೈಲಿ.  ಹೋಗಿ ಮಿಂದ್ ಪೂಜೆ ಮಾಡ್ ಬಲಾ" ಎ೦ದರು.  ಭಟ್ಟರ ಮೇಲಿದ್ದ ಕೋಪ ಕ್ಷಣ ಮಾತ್ರದಲ್ಲಿಕರಗಿ ಹೋಯಿತು.  ತಕ್ಷಣ ಅಂಗಿಯಿಂದ ಕಣ್ಣು ಮೂಗುಗಳನ್ನು ಒರೆಸಿಕೊಂಡು ಡುರ್ರೆಂದು ಬಸ್ಸು ಬಿಡುತ್ತಾ ಮನೆಯತ್ತ ಓಟಕಿತ್ತ.

ಆಶ್ಚರ್ಯವೆಂಬಂತೆ ಆಪ್ಪ ಮನೆಯಲ್ಲೇ ಇದ್ದ. ಶುಭ್ರವಾಗಿ ಸ್ನಾನ ಮಾಡಿ ಬಿಳಿ ಪಂಚೆ ಉಟ್ಟಿದ್ದ. ಚೆನ್ನಾಗಿ ಹಣೆಗೆ ಬೂದಿ ಬಳಿದಿದ್ದ. ಅಂಗಳಕ್ಕೆ ಸೆಗಣಿ ಸಾರಿಸಲಾಗಿತ್ತು. ಆತ ಇನ್ನೇನು ಮನೆಯೊಳಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಆಪ್ಪ "ಏ ಮಾರಾಯ, ಆ ಬಟ್ಟೆನೆಲ್ಲಾ ಹೊರಗೆ ಬಿಚ್ಚಿ ಇಸಿ ಕೆರೆಲಿ ಮಿಂದ್ ಬಾ. ಯಾರ ಎಲ್ಲಾ ಮುಟ್ಟಿ ಬಂದಳೊನೋ ಏನೋ?" ಎಂದ.

 ಭಟ್ಟರು ಹೇಳಿದ ಮಾತುಗಳೆಲ್ಲಾ ಚಿನ್ನಪ್ಪನಿಗೆ ನೆನಪಾದವು. ಅಲ್ಲೇ ಹೊರಗಡೆ ಕೋಳಿಗೂಡಿನ ಮೇಲೆ ಚೀಲ ಅಂಗಿ ಕಳಚಿಟ್ಟು ನಿರ್ವಾಣ ಸ್ಥಿತಿಯಲ್ಲಿ ಓಡಿ ಕೆರೆಗೆ  ದುಡುಂ ಎಂದು ಹಾರಿದ. ಚೆನ್ನಾಗಿ ಈಜು ಹೊಡೆದ. ಪಟ ಇರುವ ಸಂಗತಿ ನೆನಪಾಗುತ್ತಲೇ ಬೇಗನೆ ಸ್ನಾನ ಮುಗಿಸಿ ಹಾಗೇ ಮನೆಯತ್ತ ಬಂದ.

ಇವತ್ತು ಅಮ್ಮನೂ ತಲೆಗೆ ಸ್ನಾನ ಮಾಡಿ ಬೂದಿ ಹಾಕಿಕೊಂಡಿದ್ದಾಳೆ.  ಮನೆಯ ಒಳಗಡೆ ಸೆಗಣಿ ಸಾರಿಸಿ ಚೆನ್ನಾಗಿ ಕಾಣುವಂತೆ ಮಾಡಿದ್ದಾಳೆ. ಇವನನ್ನು ಕಾಣುತ್ತಲೇ "ಬಾ ಮಂಙ, ಶೀತ ಆದು" ಎಂದು ಅವನನ್ನು ಹತ್ತಿರಕ್ಕೆ ಎಳೆದುಕೊಂಡು ಸೆರಗಿನಿಂದ ತಲೆ ಉಜ್ಜಿದಳು.  ಒಗೆದು ಒಣಗಿಸಿದ ಚಡ್ಡಿಯೊಂದನ್ನು ಅವನಿಗೆ ಕೊಟ್ಟಳು.

ಅಲ್ಲೇ ಗೋಡೆಯಲ್ಲಿ ಪಟ ತೂಗು ಹಾಕಲಾಗಿತ್ತು.  ಆ ನಗುಮುಖದ ದೇವರನ್ನು ಕಾಣುತ್ತಲೇ ಅವನ ನೋವುಗಳೆಲ್ಲ ಮಾಯವಾದಂತಾಯಿತು. ಪಟದ ಮುಂದೆ ಉದ್ದಕ್ಕೆ ಬಿದ್ದು ವಂದನೆ ಸಲ್ಲಿಸಿದ. ಅವನನ್ನು ನೋಡಿ ತಾಯಿಯ ಮುಖ ಊರಗಲವಾಯಿತು. "ಅಮ್ಮಾ ನಂಗೆ ಬೂದಿ" ಎಂದು ಕೇಳಿದ. ಓಳಗೆ ಬರುತ್ತಾ ದೂಮಣ್ಣನೆಂದ. "ಬೂದೀಂತ ಹೇಳಿಕೆ ಬೊತ್ತ್ಂತ ದನಿಗ ಹೇಳಿಯೊಳೊ.  ಇಬೂತೀಂತ ಹೇಳೋಕಡ."

ಚಿನ್ನಷ್ಟನಿಗೆ ವ್ಯತ್ಯಾಸ ಗೊತ್ತಾಗದೆ ಕೇಳಿದ. "ಯಾಕೆ?"

ದೂಮಣ್ಣನಿಗೆ ಈಗ ಸಿಟ್ಟು ಬಂತು. "ಎದ್‍ರ್ ಮಾತಾಡಿಯನಾ?  ಬೂದಿಂತ ಹೇಳ್ರೆ ಆದ್ ಒಲೆಲಿ ಇರ್ದು. ಇದ್ ದೇವ್ರು ಕೊಟ್ಟದ್. ಅದಕ್ಕೇ ಇದ್ ಇಬೂತಿ."

ಚಿನ್ನಪ್ಪನಿಗೆ ವಿಭೂತಿ ಎಂದು ಅಪ್ಪನನ್ನು ತಿದ್ದಬೇಕೆನಿಸಿತು.  ಅಪ್ಪ ಇನ್ನೂ ಬೈದರೆ ಎಂದು ಸುಮ್ಮನಾದ. ಅಪ್ಪ ಒಂದು ಸಣ್ಣ ಕರಡಿಗೆಯ ಮುಚ್ಚಳ ತೆಗೆದು "ಹಾಕಿಕ" ಎಂದು ಮಗನಿಗೆ ಆಜ್ಞಾಪಿಸಿದ. ಗಮ್ಮೆಂದು ಪರಿಮಳ ಮನೆಯಿಡೀ ತುಂಬಿದಂತಾಯಿತು.  ಚಿನ್ನಪ್ಪ ಆತುರದಿಂದ ಡಬ್ಬಿಯೊಳಗೆ ಕ್ಕೆ ಹಾಕಿದಾಗ ಸ್ವಲ್ಪ ವಿಭೂತಿ ಹೊರಗೆ ಚೆಲ್ಲಿತು, ಆಗ ಆಪ್ಪ ಟಕ್ಕೆಂದು ಇವನ ಮಂಡೆಗೆ ಮೊಟಕಿದ. ಕರಡಿಗೆಯ ಮುಚ್ಚಳ ಹಾಕಿ ನೆಲವನ್ನು ತೋರಿಸುತ್ತಾ "ಅದೇ ಇಬೂತಿ ಹಾಕಿಕ" ಎಂದ.

ಚಿನ್ನಪ್ಪ ನೆಲದಲ್ಲಿದ್ದ ವಿಭೂತಿಯನ್ನು ಹಣೆಗೆ ತಿಕ್ಕಿ ಕೊಂಡ. "ಹಾಂಗೆ ಸ್ವಲ್ಪ ಬಾಯಿಗೆನೂ ಹಾಕಿಕ. ದನಿಗ ಹೇಳಿಯೊಳೋ. ಕಾಯಿಲೆ, ಕಸಾಲೆ ಬಂದರೆ ಮೊದ್ದ್ ಬೇಡ. ಇಬೂತಿ ಹಂಞ ತಿಂದರೆ ಸಾಕ್ಂತ".  ದೂಮಣ್ಣನೆಂದಾಗ ವೆಂಕಮ್ಮನೂ ಬಗ್ಗಿ ವಿಭೂತಿಯನ್ನು ಕ್ಕೆ ಬೆರಳಿನಿಂದ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ವಾತ ಗುಣವಾದಂತೆ ತೃಪ್ತಿಪಟ್ಟು ಕೊಂಡಳು.

ಅಂದು ಸಂಜೆ ಅವಲಕ್ಕಿ ಬಾಳೆಹಣ್ಣು ರಸಾಯನದ ಫಳಾರ.  ರಾತ್ರಿ ಉಪವಾಸವೆಂದ ಅಪ್ಪ.  ಪ್ರತಿ ಗುರುವಾರವೂ ಇದೇ ಕ್ರಮ ಮುಂದುವರಿಯುವುದೆಂದು ಅಪ್ಪ ಹೇಳಿದಾಗ ಚಿನ್ನಪ್ಪನಿಗೆ ಸಂತೋಷವಾಯಿತು. ಮಂದಿರದಿಂದ ಭಜನೆ ಕೇಳಿ ಬರುತ್ತಿತ್ತು. ರಾಗಬದ್ದ ಸ್ವರಗಳು ಕಿವಿಗೆ ಬಿದ್ದಾಗ ಚಿನ್ನಪ್ಪನೆಂದ. "ಅಪ್ಪಾ ನಾ ಅಲ್ಲಿಗೆ ಹೋಕಾ?"

ದೂಮಣ್ಣ ಕುಡಿಯದೆಯೂ ಖುಷಿಯಾಗಿದ್ದುದೆಂದರೆ ಅಂದೇ.  ಅವನೆಂದ. "ಹೋಗ್ ಮಂಙ ನೀ ಸಹ ಬಜನೆಲಿ ಸೇರಿಕ. ನಾ ಈಗ ಬನ್ನೆ ಹಿಂದೆಂದ."

ತುಂಬಾ ಖುಶಿಯಿಂದ ಚಿನ್ನಪ್ಪ ಬಸ್ಸು ಸ್ಟಾರ್ಟುಮಾಡುವಾಗ ವೆಂಕಮ್ಮನೆಂದಳು. "ಬಜನೇಂತೇಳಿ ಮಡಿ ಬ್ರಾಂಬ್ರ ಮುಟ್ಟಿ ಮಡಿ ಹಾಳ್ ಮಾಡ್ಬಡ. ಮತ್ತೆ ಹೊಲೆರ ಮುಟ್ಟಿಸಿಕೊಂಬಡ ಆತಾ?" "ಆತ್" ಎಂದು ಎತ್ತರದ ದನಿಯಲ್ಲಿ ಉತ್ತರ ಕೊಟ್ಟು ಚಿನ್ನಪ್ಪ ಡುರ್ರ್ ಎಂದು ಓಡಿದ.

ಮಂದಿರದಲ್ಲಿ ಮುಂದೆ ಮಾಡಬೇಕಾದ ಭಜನೆ, ದೇವರು ಬರುವಾಗ ಊರವರು ನಡೆದುಕೊಳ್ಳಬೇಕಾದ ಕ್ರಮ, ದೇವರಿಗೆ ಪಾದ ನಮಸ್ಕಾರ ಮಾಡುವ ರೀತಿ-ಇವುಗಳನ್ನೆಲ್ಲಾ ಭಟ್ಟರು ಹೇಳಿಕೊಡುತ್ತಿದ್ದರು. ಹಣೆಗೆ ವಿಭೂತಿ ಬಳಕೊಂಡಿದ್ದ ಚಿನ್ನಪ್ಪನನ್ನು ಕಾಣುತ್ತಲೇ ಭಟ್ಟರು, "ಅಲ್ಲಿ ಕೂರ್ಯ ಹೈದ" ಎಂದು ಹಿಂದಿನ ಸಾಲು ತೋರಿಸಿದರು.  ಚಿನ್ನಪ್ಪ ತನ್ನೆದುರು ಕೂತ ಮಡಿ ಮಂದಿಗಳನ್ನು ನೋಡಿದ. ಹೊರಗೆ ದೂರದಲ್ಲಿ ನಿಂತುಕೊಂಡು ಹೊಲೆಯರ ಮಕ್ಕಳು ಇವನ್ನೆಲ್ಲಾ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದರು.  ಇವತ್ತು ಯಾರನ್ನೂ ಮುಟ್ಟಬಾರದು ಎನ್ನುವುದು ನೆನಪಾಗಿ ಭಟ್ಟರತ್ತ ದೃಷ್ಟಿಹರಿಹರಿಸಿದ.

ಭಟ್ಟರು ಭಜನೆಯೊಂದನ್ನು ಹೇಳಿಕೊಡುತ್ತಿದ್ದರು. "ಓಂ ಭಗವಾನ್ ಓಂ ಭಗವಾನ್ ಭಗವಾನ್ ಸತ್ಯನಾಥ ಭಗವಾನ್".  ಹೊಸಭಜನೆಗೆ ಚಿನ್ನಪ್ಪ ತನ್ನ ರಾಗವನ್ನೂ ಸೇರಿಸಿದ. ಅವನ ಶಾಲೆಯ ವಾರದ ಭಜನೆಗಳಲ್ಲಿ "ಎಲ್ಲಿರುವೆ ತ೦ದೆ ಬಾರೋ ಮಾರುತಿ, ಯಮನೆಲ್ಲೂ ಕಾಣೆನೆಂದು ಹೇಳಬೇಡಾ, ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ" ಇತ್ಯಾದಿಗಳನ್ನು ಬಿಟ್ಟರೆ ಹೊಸದೇನೂ ಇರಲಿಲ್ಲ. ಹೊಸ ಹೊಸ ಭಜನೆಗಳನ್ನು ಬಲ್ಲ ಭಟ್ಟರ ಮೇಲೆ ಅವನಿಗೆ ತುಂಬಾ ಗೌರವವುಂಟಾಯಿತು. ಭಜನೆ ಮುಗಿದ ನಂತರ ಎಲ್ಲರೂ ಎದ್ದು ನಿಂತರು.  ಭಟ್ಟರು ಮಂಗಳ ಹೇಳಿಕೊಟ್ಟರು. ಅದು ಶಾಲೆಯ "ಚಲಿಸುವ ಜಲದಲಿ ಮತ್ಸ್ಯನಿಗೆ " ಹಾಗಲ್ಲ. ಒಳ್ಳೆಯ ರಾಗ. ಆದರೆ ಅದರ ಒಂದೆರಡು ಸಾಲು ಬಿಟ್ಟರೆ ಚೆನ್ನಪ್ಪನಿಗೆ ಉಳಿದವುಗಳು ನೆನಪಿನಲ್ಲಿ ಉಳಿಯಲಿಲ್ಲ.

ಮಂಗಳ ಮುಗಿದಾಗ ಪುನಃ ಎಲ್ಲರೂ ಕೂತರು. ಭಟ್ಟರು ಕರಡಿಯೊಂದರಲ್ಲಿ ವಿಭೂತಿ ಹಾಕಿ ಕೂತವರ ಮುಂದೆ ಹಿಡಿಯುತ್ತಾ ಬಂದರು. ಆಗ ಭಟ್ಟರ ಹಿರಿಯ ಮಗ ವಿಭೂತಿ ತೆಗೆದುಕೂಳ್ಳುವ ಶ್ಲೋಕ ಹೇಳತೊಡಗಿದ- "ಪರಮ ಪವಿತ್ರಂ ದೇವ ವಿಭೂತಿಂ, ಪರಮ ವಿಚಿತ್ರಂ ಲೀಲಾ ವಿಭೂತಿಂ, ಪರಮಾರ್ಥ ಇಷ್ಟಾರ್ಥ ಮೋಕ್ಷ ಪ್ರದಾನಂ ದೇವಂ ವಿಭೂತಿಂ ಇದಮಾಶ್ರಯಾಮಿ". ತುಂಬಾ ಸಲ ಇದನ್ನು ಹೇಳಿದುದರಿಂದ ಚಿನ್ನಪ್ಪನಿಗದು ಬಾಯಿಪಾಠ ಬಂದು ಬಿಟ್ಟಿತು.

ವಿಭೂತಿ ತೆಗೆದುಕೊಂಡು ಎಲ್ಲರೂ ಮಾಡುವ ಹಾಗೆ ಸ್ವಲ್ಪ ಬಾಯಿಗೆ ಹಾಕಿಕೊಂಡು, ಉಳಿದುದನ್ನು ಹಣೆಗೆ ತಿಕ್ಕಿದ. ವಿಭೂತಿ ಶ್ಲೋಕದಲ್ಲಿಯೇ ಆತ ಮುಳುಗಿದ್ದಾಗ ಆಪ್ಪನ ದಪ್ಪ ಕೈ ಅವನ ಹೆಗಲ ಮೇಲೆ ಬಿತ್ತು.  "ಆತಲೆ. ಇನ್ನ್ ಪೋಯಿ" ಎಂದ ಆಪ್ಪ. ಆಪ್ಪ ದಿನಾ ಹೀಗಿರುತ್ತಿದ್ದರೆ!  ಎಂದು ಕೊಂಡ ಚಿನ್ನಪ್ಪ. ದೂಮಣ್ಣನನ್ನು ಗಮನಿಸಿದ ಭಟ್ಟರು ಸಂಪ್ರೀತಿಯಿಂದ ತಮ್ಮ ಜನಿವಾರವನ್ನು ನೀವಿಕೊಳ್ಳುತ್ತಾ ಹೇಳಿದರು. "ಪೂಜೆ ಮಾಡಾ ಗುಟ್ಟಯಾ?"

ದೂಮಣ್ಣ ವಿನಯದಿಂದ ಬಗ್ಗಿದ. "ಉಂ ಊದುಬತ್ತಿ ಹಚ್ಚಿ ಇಸಿಯೋಳೆ".

"ಆದ್ ಸಾಲದ್.  ಒಂದು ದೀಪ ತಕಣೋಕುಯಾ.  ಮೊಣ್ಣುನ ಚಿಬಿಲೆ ಅದು. ಅದರ್‍ಲಿ ಬತ್ತಿ ಇಸೋಕು. ಎಣ್ಣೆ ಹಾಕೋಕು. ದಿನಾ ಭಜನೆ ಮಾಡೋಕುಯಾ" ಎಂದವರೇ ಚಿನ್ನಪ್ಪನನ್ನುದ್ದೇಶಿಸಿ "ಹೈದ ಮುಂಡೇದು, ಪೆದ್ದು, ದಿನಾ ಇಲ್ಲಿ ಬರೋಕು. ಭಜನೆ ಕಲಿಯೋಕು. ಕಲ್ತ್ ಮನೇಲಿ ಹೇಳೋಕು" ಎಂದರು. ಚಿನ್ನಪ್ಪ ಸಂತೋಷದಿ೦ದ ತಲೆಯಾಡಿಸಿದ.

ಮನೆಗೆ ಬರುತ್ತಾ ದೂಮಣ್ಣನೆಂದ. "ನಾವು ಬ್ರಾಂಬ್ರ ಹಾಂಗೆ ಆದವೆ. ದಿನಾ ಪೂಜೆ, ಬಜನೆ, ಇಬೂತಿ . ಈ ದೇವ್ರ್‌ಂದ ಇಷ್ಟಲ್ಲಾ ಆತಲೆ. ಇನ್ನಾ ಗುರುವಾರ, ಗುರುವಾರ ಮೀನ್ ಮಾಂಸ ಇಲ್ಲೆ. ನಾ ಕುಡಿಯೋದ್ಲೆ. ನಮ್ಮ ಪಟಲಿ ಇಬೂತಿ ಬೀಳುವ ಹಾಂಗೆ ಆದರೆ ಸಾಕ್.  ಕೆಲ್ಸಕ್ಕೆ ಹೋತಿಲ್ಲಾದರೂ ಬೋದ್ಕಕ್.  ಅಲ್ಲೇನಾ?"

ಚಿನ್ನಪ್ಪ ಅದನ್ನೇ ಯೋಚಿಸುತ್ತಾ ಮನೆಗೆ ಬಂದ.  ವೆಂಕಮ್ಮ ಬೀಡಿ ಕಟ್ಟುತ್ತಾ ತಾನು ಚಿಕ್ಕಂದಿನಲ್ಲಿ ಕಲಿತಿದ್ದ ಯಾವುದೋ ಭಜನೆಯನ್ನು ಸಣ್ಣನೆ ಹಾಡುತ್ತಿದ್ದಳು. ಚಿನ್ನಪ್ಪ ಮಂದಿರದಲ್ಲಿ ನಡೆದುದನ್ನಲ್ಲಾ ಹೇಳಿದ.  ತನಗೆ ನೆನಪು ಉಳಿದ ಭಜನೆಗಳ ಒಂದೆರಡು ಸಾಲು ಹಾಡಿದ. "ಆ ಇಬೂತಿ ಭಜನೆ ಹೇಳ್ ಮಂಙ"  ಎಂದು ದೂಮಣ್ಣ ಹೇಳಿದಾಗ ಎರಡು ಸಾಲು ನೆನಪಾಗಿ ತಡವರಿಸಿದ. "ಬುಡ್. ನಾಳೆ ಕಲ್ತು ಕೋಮೋ" ಎಂದು ಮಗನನ್ನು ಸಂತೈಸಿದ.

"ದೀಪಕ್ಕೆ ಈಗ ಎಂತೊದ್ ಮಾಡ್ದು" ಎಂದು ದೂಮಣ್ಣ ಕೇಳಿದಾಗ "ಮಣ್ಣ್‍ನ ಚಿಬಿಲೆ ಉಟ್ಟು ನಿಲ್ಲಿ ನಾ ಈಗ ತನ್ನೆ" ಎಂದು ವೆಂಕಮ್ಮ ಎದ್ದಳು. ಒಳಗೆಲ್ಲೋ ತಡಕಾಡಿ ಚಿಬಿಲೆಯನ್ನು ತಂದು ಎಣ್ಣೆ ಹಾಕಿದಳು. "ಬತ್ತಿಗೆ ಹತ್ತಿ ಇಲ್ಲೆಲೆ"  ದೂಮಣ್ಣ ಚಡಪಡಿಸಿದ. ವೆಂಕಮ್ಮ ತನ್ನ ಪೆಟ್ಟಿಗೆ ತೆರೆದು ಹರಕಾದ ಬಿಳಿಬಟ್ಟಿಯ ತುಂಡನ್ನು ತೆಗೆದಳು. ಅದನ್ನು ಕೈಯಲ್ಲಿ ತಿರುಚಿ ಉದ್ದಕ್ಕೆ ಬತ್ತಿಯ ಹಾಗೆ ಮಾಡಿ ಹಾಕಿದಳು. ದೂಮಣ್ಣ ಕಡ್ಡಿ ಗೀರಿ ದೀಪ ಹಚ್ಚಿದ.

ಆದರೆ ಪಟ ಗೋಡೆಯ ಮೇಲಿದೆ. ಅಲ್ಲಿ ದೀಪವನ್ನು ನಿಲ್ಲಿಸುವುದು ಹೇಗೆ ಎಂದು ದೂಮಣ್ಣ ಯೋಚಿಸಿದ. ಮತ್ತೆ ಎದ್ದು ಒಳ ಹೋದ. ಕೆಲವು ದಿನಗಳ ಹಿಂದೆ ಅಂಗಡಿಯಿಂದ ತಂದಿದ್ದ ರಟ್ಟಿನ ಖಾಲಿ ಪೆಟ್ಟಿಗೆಯೊಂದಿತ್ತು. ಅದರ ಒಂದು ಭಾಗವನ್ನು ಹರಿದು ಪಟದ ಕೆಳಗೆ ಆ ತುಂಡನ್ನು ಸರಿಹೊಂದಿಸಿ ಮೂರು ಮೊಳೆ ಹೊಡೆದು ಅದನ್ನು ನಿಲ್ಲಿಸಿದ.  ಅದರ ಮೇಲೆ ಚಿಬಿಲೆ ಇರಿಸಿದಾಗ ಪಟಕ್ಕೆ ಬೆಳಕು ಬಿತ್ತು.  ವೆಂಕಮ್ಮ ಕೈ ಮುಗಿದಳು.  ಚಿನ್ನಪ್ಪ ಆನುಕರಿಸಿದ.

ಬೆಳಿಗ್ಗೆ ಚಿನ್ನಪ್ಪ ಎದ್ದಾಗ ವೆಂಕಮ್ಮ ಮಲಗಿದ್ದಲ್ಲಿಂದಲೇ ನರಳುತ್ತಿದ್ದಳು. ಅಪ್ಪ ಅಡುಗೆ ಎಂದು ಓಡಾಡುತ್ತಿದ್ದ. ಒಂದು ಲೋಟದಲ್ಲಿ ನೀರಲ್ಲಿ ಹಾಕಿ ಕಲಸಿ ಅಪ್ಪ ಅಮ್ಮನಿಗೆ ಕುಡಿಸಿದ.  ಅವಳ ನೋವು ಕಡಿಮೆಯಾಗದ್ದನ್ನು ಕಂಡು ದೂಮಣ್ಣ "ಮಂಙ. ನೀ ಇಂದ್ ಸಾಲೆಗೆ ಹೋಕೆ ಬೋತ್ತ್. ನಾ ನಿನ್ನ ಅಮ್ಮನ ಕರ್‌ಕೊಂಡ್ ಚಾತು ಪಂಡಿತರ ಹಕ್ಕಲೆ ಹೋಗಿ ಬನ್ನೆ" ಎಂದ.  ಚಿನ್ನಪ್ಪನಿಗೆ ಶಾಲೆ ತಪ್ಪಿದ್ದಕ್ಕೆ ಬೇಸರವಾಯಿತು.  ಮರುಕ್ಷಣದಲ್ಲಿ ಪಟದ ನೆನಪಾಗಿ ಬೇಸರಿಕೆ ನೀಗಿತು.

ಅಪ್ಪ ಅಮ್ಮ ಬರುವಾಗ ಮಧ್ಯಾಹ್ನ ಆಗಬಹುದು.  ಅಷ್ಟು ಹೊತ್ತಿನವರೆಗೆ ಏನು ಮಾಡುವುದು ಎಂದು ಚಿನ್ನಪ್ಪ ಯೋಚಿಸಿದ. ಹನ್ನೆರಡೊಂದ್ಲ ಮಗ್ಗಿ ಹೇಳಿದ. ಗೊತ್ತಿರುವ ಹಾಡುಗಳನ್ನೆಲ್ಲಾ ಗಟ್ಟಿಯಾಗೆ ಹಾಡಿದ. ಮತ್ತೆ ಒಂದು ಬಟ್ಟೆ ತೆಗೆದುಕೊಂಡು ಕೆರೆಗೆ ಹೋಗಿ ನಾಲ್ಕು ಮುಳುಗು ಹಾಕಿ ಓಡಿಕೊಂಡು ಬಂದ. ಪಟದ ಎದುರು ಕೂತು ನೆನಪಾದ ಭಜನೆಗಳ ಸಾಲುಗಳನ್ನು ಹೇಳಿದ. ಹಸಿವೆಯಾದಾಗ ಉಪ್ಪು ಹಾಕಿ ಗಂಜಿ ಊಟ ಮಾಡಿದ.

ಪುನಃ ಪಟದ ಎದುರು ಬಂದು ನಿಂತ. ಪಟದ ಎದುರಿದ್ದ ಚಿಬಿಲೆಯಲ್ಲಿನ ಬತ್ತಿ ಹೊರಕ್ಕೆ ಚಾಚಿಕೊಂಡಿತ್ತು. ಅಪ್ಪ ದೀಪ ಹೊತ್ತಿಸಲು ಮರೆತಿದ್ದಾನೆ. ತಾನು ಹೊತ್ತಿಸಿ ದೇವರನ್ನು ಪ್ರಾರ್ಥಿಸಬೇಕು. ಪಟದಿಂದ ಬೂದಿ ಬೀಳಬೇಕು ಎಂದುಕೊಳ್ಳುತ್ತಾ ಅಂಗಳಕ್ಕೆ ಓಡಿದ. ಅಲ್ಲಿ ತೆಂಗಿನಗರಿಗಳಿದ್ದವು. ಕೆಲವನ್ನು ಕಿತ್ತುಕೊಂಡು ಬಂದು ಆಡಿಗೆ ಮನೆಗೆ ಹೋದ. ಒಲೆಯಲ್ಲಿ ಸ್ವಲ್ಪ ಕೆಂಡ ಇತ್ತು. ಆದಕ್ಕೆ ಗರಿಗಳ ತುದಿಯನ್ನು ತಾಗಿಸಿ `ಉಥ್ ಉಥ್' ಎಂದು ಊದಿದ. ಸ್ವಲ್ಪ ಹೊತ್ತಲ್ಲಿ ಗರಿಗಳ ತುದಿಗೆ ಬೆಂಕಿ ಹಿಡಿಯಿತು. ಅವನ್ನು ಹಾಗೇ ಹಿಡಿದುಕೊಂಡು ಪಟದ ಹತ್ತಿರ ತಂದ. ದೀಪದ ಬತ್ತಿಗೆ ಅವನ್ನು ತಗಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ.

ಗೋಡೆಯ ಎದುರುಭಾಗದಲ್ಲಿ ಬಿದಿರ ಅಡ್ಡವೊಂದಿತ್ತು. ಬತ್ತಿಮಾಡಿ ಉಳಿದಿದ್ದ  ಬಿಳಿಯ ಬಟ್ಟೆಯನ್ನು ಅಪ್ಪ ಆ ಅಡ್ಡಕ್ಕೆ ಕಟ್ಟಿದ್ದ. ಗರಿಗಳ ತುದಿ ಚಿಬಿಲಿಯ ಬತ್ತಿಗೆ ತಾಗುವ ಬದಲು ಚಿನ್ನಪ್ಪನ ಕಸರತ್ತಿನಿಂದಾಗಿ ಅಡ್ಡಕ್ಕೆ ಕಟ್ಟಿದ ಬಟ್ಟೆಗೆ ಬೆಂಕಿ ಹಿಡಿಯಿತು. ಬಿದಿರು ಅಡ್ಡಗಳ ನಡುವೆ ಮಾಡಿಗೆ ಮುಳಿಹುಲ್ಲು  ಹೊದಿಸುವಾಗ ಕಟ್ಟಲೆಂದು ತಂದಿರಿಸಿದ್ದ ತೆಂಗಿನ ಮಡಲುಗಳಿದ್ದವು. ಬಟ್ಟೆಯಿಂದ ಬೆಂಕಿ ಮಡಲುಗಳಿಗೆ ಹಬ್ಬಿತು. ಈಗ ಚಿನ್ನಪ್ಪ ಹೆದರಿ ಕಂಗಾಲಾದ:  "ದೇವ್ರೆ ದೇವ್ರೆ ಕಿಚ್ಚಿ ನಿಲ್ಸ್" ಎಂದು ಪಟಕ್ಕೆ ಕೈ ಮುಗಿದ. ಉರಿಯುವ ಮಡಲೊಂದು ಕೆಳಗೆ ಬಿದ್ದು ಪಟದ ಎದುರು ದೀಪ ಇದ್ದ ರಟ್ಟನ್ನು ಸುಡಲು ಆರಂಭಿಸಿತು. ಬೆಂಕಿ ಮಾಡಿಗೂ ಏರಿತು. ಚಿನ್ನಪ್ಪ ಮನೆಯ ಹೊರಗೆ ಓಡಿಬಂದ. "ಆಯ್ಯೋ ಅಯ್ಯೋ ಕಿಚ್ಚಿ" ಎಂದು ಬೊಬ್ಬಿಟ್ಟ. ಗಂಡಸರೆಲ್ಲಾ ಕೆಲಸಕ್ಕೆ ಹೋಗಿದ್ದರು. ಅಲ್ಲಲ್ಲಿನ
ಮನೆಗಳಲ್ಲಿದ್ದ ಹೆಂಗಸರು, ಚಿಲಿಪಿಲಿ ಮಕ್ಕಳು ಓಡಿಕೊಂಡು ಬಂದರು. ಅವರಿಗೂ ಏನು ಮಾಡುವುದೆಂದು ತಿಳಿಯಲಿಲ್ಲ. ಬೆಂಕಿಯ ನಾಲಗೆ ನಾಲ್ದೆಸೆಗೂ ಹಬ್ಬಿ ಮನೆಯ ಬಿದಿರ ಆಡ್ಡಗಳನ್ನು ಚಟಲ್ ಚಟಲ್ ಎಂದು ದಹಿಸತೊಡಗಿದಾಗ ಹೆಂಗಸರು, ಮಕ್ಕಳು ಅಯ್ಯೋ ಎಂದು ಬೊಬ್ಬಿಡಲಾರಂಭಿಸಿದರು.

ಬೊಬ್ಬೆ ಕೇಳಿ, ಬೆಂಕಿ ಕಂಡು ಮಂದಿರದಲ್ಲಿ ಭಟ್ಟರ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಓಡೋಡಿ ಬಂದರು. `ನೀರು ನೀರು' ಎಂದು ಬೊಬ್ಬೆ ಹಾಕಿದರು. ಕೊಡ, ಮಡಿಕೆಗಳಲ್ಲಿ ನೀರು ಬಂತು. ಅದನ್ನು ಮಾಡಿಗೆ ಚೆಲ್ಲಿದರು.  ತುಂಬಾ ಹೊತ್ತಾದ ಬಳಿಕ ಬೆಂಕಿ ನಿಂತಾಗ ಕರಟಿ ಹೋದ ಮನೆ, ಕಪ್ಪಾದ ಗೋಡೆಗಳು ಬೀಭತ್ಸವಾಗಿ ಕಾಣತೊಡಗಿದವು.

ಮನೆಗೆ ವಾಪಾಸಾಗುತ್ತಿದ್ದ ದೂಮಣ್ಣ ದೂರದಿಂದಲೇ ಬೊಬ್ಬೆ ಕೇಳಿ ವೆಂಕಮ್ಮನನ್ನು ಹಿಂದೆ ಬಿಟ್ಟು ಓಡೋಡಿ ಬಂದ. ಮನೆಯನ್ನು ನೋಡಿದ ಮೇಲೆ ಯಾರಲ್ಲೂ ಏನನ್ನೂ ಅವ ಕೇಳಬೇಕಾಗಿರಲಿಲ್ಲ. ಹೆದರಿ ಕಂಗಾಲಾಗಿದ್ದ ಚಿನ್ನಪ್ಪನನ್ನು ಕಾಣುತ್ತಲೇ ದೂಮಣ್ಣನಿಗೆ ಜೀವ ಬಂದಂತಾಯಿತು. ಅವನನ್ನು ಬಳಿಗೆ ಎಳೆದುಕೊಂಡು ತಲೆ ಸವರುತ್ತಾ ಕೇಳಿದ:  "ಎಂತಾತ್ ಮಂಙ?"  ಚಿನ್ನಪ್ಪ ನಡುಗಿದ. ನಿಜ ಹೇಳಿಬಿಟ್ಟರೆ ಅಪ್ಪ ತನ್ನ ಚರ್ಮ ಸುಲಿದುಬಿಟ್ಟಾನೆಂದು ಅಳ ತೊಡಗಿದ.
ನಿಧಾನವಾಗಿ ಬಿಕ್ಕುತ್ತಾ ಹೇಳಿದ. "ನಂಗೆ ಗೊತ್ಲೆ."

ದೂಮಣ್ಣನನ್ನು ಕಂಡ ಮೇಲೆ ಆಲ್ಲಿ ಸೇರಿದ್ದ ಜನ ಒಬ್ಬೊಬ್ಬರಾಗಿ ಕರಗತೊಡಗಿದರು. ದೂಮಣ್ಣ ಸ್ವಲ್ಪ ಹೊತ್ತು ಮನೆಯನ್ನೇ ನೋಡುತ್ತಾ ನಿಂತುಬಿಟ್ಟ. ವೆಂಕಮ್ಮ ನಿಧಾನವಾಗಿ ಕಾಲೆಳೆದುಕೊಂಡು ಬಂದು "ಉಸ್ಪಪ್ಪ" ಎಂದು ಆಂಗಳದಲ್ಲಿ ಕಾಲು ಚಾಚಿ ಕುಳಿತುಬಿಟ್ಟಳು. ದೂಮಣ್ಣ ಉರಿದು ಹೋದ ಮನೆಯೊಳಗೆ ಮೆಲ್ಲನೆ ಕಾಲಿರಿಸಿದ. ಚಿನ್ನಪ್ಪನಿಗೆ ಪಟದ ನೆನಪಾಯಿತು. ದೇವರ ಪಟವಾದುದರಿಂದ ಆದು ಸುಟ್ಟಿರಲಾರದು ಎಂದು ಕೊಂಡು ಆಪ್ಪನ ಹಿಂದಿನಿಂದಲೇ ಹೋದ. ವೆಂಕಮ್ಮ "ಮೆಲ್ಲ ಮಂಙ. ಕೆಂಡ ಗಿಂಡ ಇರ್ದು" ಎಂದು ಎಚ್ಚರಿಸಿದಳು. ಚಿನ್ನಪ್ಪ ಜಾಗ್ರತೆಯಿಂದ ಒಂದೊಂದೇ ಹೆಜ್ಜೆ ಎತ್ತಿ ಇರಿಸುತ್ತಾ ಒಳಹೋದ. ಪಟ ತೂಗುಹಾಕುವಲ್ಲಿ ಮೊಳೆಗಳು ಮಾತ್ರ  ಉಳಿದಿದ್ದವು. ಕೆಳಗೆ ನೋಡಿದರೆ ಪಟ ಇರಲಿಲ್ಲ. ಬೂದಿಯ ರಾಶಿಯಲ್ಲಿ ಅಲ್ಲಲ್ಲಿ ಸಿಡಿದು ಬಿದ್ದಿದ್ದ ಗಾಜಿನ ಚೂರುಗಳು ಮಾತ್ರ ಕಂಡು ಬಂದವು. ಚಿನ್ನಪ್ಪನಿಗೆ ಅಪ್ಪ ಇನ್ನು ಪಟ ತರಲಾರ, ಮನೆಯಲ್ಲಿ ಬೂದಿ ಬೀಳಲಾರದು ಎಂದನಿಸಿ ಅಳು ಬರುವಂತಾಯಿತು.

ಮಾಡಿಲ್ಲದ ಮನೆಯೊಳಗೆ ಸೂರ್ಯನ ಪ್ರಖರವಾದ ಬಿಸಿಲು ಬೀಳುತ್ತಿತ್ತು. ಬೆಂಕಿ ಅಷ್ಟೆಲ್ಲಾ ಅನಾಹುತ ಮಾಡಿದ್ದರೂ ಗೋಡೆಗೆ ಅಡ್ಡಲಾಗಿ ಹಾಕಿದ್ದ ಬಿದಿರೊಂದು ಪೂರ್ತಿ ಸುಟ್ಟಿರಲಿಲ್ಲ. ನೀರು ಚೆಲ್ಲಿದುದರಿಂದ ಅದು ಕರಟಿ ಹೋಗಿತ್ತಾದರೂ ಅದರಲ್ಲಿದ್ದ ಸ್ವಲ್ಪವೇ ಬೆಂಕಿಯಿಂದಾಗಿ ಇನ್ನೂ ಹೊಗೆ ಹೊರಡುತ್ತಿತ್ತು. ಚಿನ್ನಪ್ಪ ಅದನ್ನೇ ನೋಡಿದ. ಸುಟ್ಟು ಹೋದ ಭಾಗದಿಂದ ಸ್ವಲ್ಪ ಸ್ವಲ್ಪವೇ ಬೂದಿ ಬೀಳುತ್ತಿತ್ತು.!
                                    *****

ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ