ಉಣ್ಣಾಕ ನೀಡಿದಿ ನಮ್ಮವ್ವಾ

- ಶಿಶುನಾಳ ಶರೀಫ್

ಉಣ್ಣಾಕ ನೀಡಿದಿ ನಮ್ಮವ್ವಾ
ನಿನ್ನ ಹೊಟ್ಟ್ಯಾಗ ಎಳ್ಳಷ್ಟು ವಿಷವಿಲ್ಲೇಳವ್ವಾ                ||ಪ||

ಹೋಳಗಿ ತುಪ್ಪ ನೀಡಿದೆವ್ವಾ
ಹಪ್ಪಳ ಶಂಡೀಗಿ ಉಪ್ಪಿನಕಾಯಿ ಮರತು ನಿಂತೆವ್ವಾ    ||೧|| 

ಆನ್ನ ಆಂಬ್ರಾ ನೀಡಿದೆವ್ವಾ
ತಿನ್ನಲು ಪಲ್ಲೆ ಪಚ್ಚಡಿ ಮರೆತು ನಿಂತೆವ್ವಾ                   ||೨||

ಶಿಶುನಾಳಧೀಶನವ್ವಾ
ಹಿರೇಹಡಗಲಿ ಕಲ್ಮಠದ ಚಂದ್ರವ್ವಾ                          ||೩||
            *****
ಕೀಲಿಕರಣ: ಎಮ್.ಎನ್.ಎಸ್.ರಾವ್

ಜಿಗ್ಗಿನ ಚಕ್ರವ್ಯೂಹ ಮತ್ತು ಸರಳದಾರಿಯ ಕಷ್ಟಗಳು


- ತಾರಿಣಿ ಶುಭದಾಯಿನಿ ಆರ್‍

ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ.  ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ.  ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ್ವಿಕತೆಯನ್ನು ಸಾಮಾನ್ಯೀಕರಿಸಿಕೊಂಡು ಪ್ರತಿಕ್ರಿಯಿಸುವ ಪೊಲೊಮಿಯಸ್ ಇದ್ದಾನೆ.  ದಿನನಿತ್ಯದ ಸುಖದುಃಖಗಳನ್ನು ಅತಿ ತಾತ್ವಿಕತೆಯಿಂದ ನೋಡುತ್ತ ಹುಚ್ಚನಾಗಿರುವ ನಾಯಕ.  ಹುಟ್ಟಾ ಆತುರಗಾರನಾದ ಪೊಲೊನಿಯಸ್ ಪರಿಣಾಮಗಳತ್ತ ಗಮನಹರಿಸುತ್ತಾನೆ.  ಅವನಲ್ಲಿ ಬಹು ಆಯ್ಕೆಗಳಿಲ್ಲ.  ಅವನಿಗಿರುವ ನಾಲ್ಕಾರು ಉತ್ತರಗಳಲ್ಲಿಂದೇ ಎಲ್ಲಾ ಪ್ರಶ್ನೆಗಳಿಗೂ ಪರಿಹಾರ ಹೇಳಬಲ್ಲ.  ಮಗಳ ಪ್ರೇಮ, ಮಗನ ಹರಯ - ಎಲ್ಲದಕ್ಕೂ ಸರಳ ಸೂತ್ರಗಳಿವೆ ಅವನ ಬಳಿ.  ಇವರಿಬ್ಬರ ನಡುವೆ ಕಂದರವೊಂದು ತೆರೆದುಕೊಂಡಿದೆ.  ಅದು ಸಂವಹನದ ಕಂದರ.  ಧ್ರುವಗಳ ತೊಂದರೆಯಿಂದ ದುರಂತ ಆವರಿಸುತ್ತಿದೆ.  ಇವರಿಬ್ಬರೂ ಹೀಗೆ ನನಗೆ ಇಂದಿನ ಓದು, ವಿಮರ್ಶೆಗಳಿಗೆ ರೂಪಕಗಳೇನೋ ಎನ್ನಿಸುವಂತೆ ಭಾಸವಾಗುತ್ತಿದೆ.  ನಮ್ಮ ಇಂದಿನ ಓದು, ವಿಮರ್ಶೆಗಳು ತಾತ್ವಿಕತೆಯ, ಅತಿ ಭಾರದಿಂದಲೂ, ಇನ್ನೊಂದು ಕಡೆ ಸರಳೀಕರಣದ ಹಗುರ ಭಾವದಿಂದಲೂ ಒಂದು ಕಂದರವನ್ನೇ ಸೃಷ್ಟಿಸಿಕೊಂಡಿವೆಯೇನೋ ಅನ್ನಿಸುತ್ತಿದೆ.  ಇಂದು ಪಠ್ಯವೊಂದು ಪಠ್ಯವಾಗಿ ಉಳಿದಿಲ್ಲ.  ಅದು ಪಠ್ಯಾಂತರವಾಗಿ ತಾತ್ವಿಕ ಸ್ವರೂಪದಲ್ಲಿ ಬರುತ್ತಿರುವುದನ್ನು ಗಮನಿಸಬಹುದು.  ಕಲಾತ್ಮಕತೆಯೊಂದೇ ಮಾನದಂಡವಾಗದೇ, ಅನೇಕ ಅನ್ಯಶಿಸ್ತುಗಳ ನೆಲೆಯಲ್ಲಿ ಪಠ್ಯವನ್ನು ಭಾಷೆಯ ಚಟುವಟಿಕೆಯಾಗಿ ಮಾತ್ರ ನೋಡದೆ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳಿರುವುದನ್ನು ಗ್ರಹಿಸುವ ಕ್ರಮವೂ ಆಗಿದೆ.  ಪಠ್ಯದ ಸೃಷ್ಟಿಯು ನಡೆಯುವಾಗಲೇ ಮೇಲೆ ಹೇಳಿದ ನಿಶ್ಚಿತತೆಗಳೆಲ್ಲ ಹೊಕ್ಕು ಬಿಡುವುದರಿಂದ, ಪಠ್ಯವು ಇದರಿಂದ ಮುಕ್ತವಾಗಿಲ್ಲ ಎಂಬುದೇ ಇಲ್ಲಿನ ಗ್ರಹಿಕೆ.  ಆದ್ದರಿಂದ ಇಂದು ಕೃತಿಯೊಂದರ ಪ್ರವೇಶಕ್ಕೆ ಕೃತಿ ಅಥವಾ ಮೀಮಾಂಸೆಯ ತಿಳುವಳಿಕೆಗಳು ಮಾತ್ರ ಸಾಲದು.  ಇಲ್ಲಿ ಒಂದು ಉದಾಹರಣೆಯನ್ನು ಕೊಡುವುದಾದರೆ, ಇತ್ತೀಚೆಗೆ ನಾನು ಕೇಳಿದ ಕಾಳಿದಾಸನ ನಾಟಕ `ಶಾಕುಂತಲ' ಉಪನ್ಯಾಸದಲ್ಲಿ ಕೃತಿಯ ರಸಾನುಭವ ಮುಖ್ಯವಾಗಿರಲೇ ಇಲ್ಲ.  ಅಲ್ಲಿ ಮೂಲ ಮಹಾಭಾರತಕ್ಕಿಂತ ಕಾಳಿದಾಸ ಯಾವ ರೀತಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ ಮತ್ತು ಏಕೆ ಮಾಡಿಕೊಳ್ಳುತ್ತಾನೆ ಎನ್ನುವ ಪ್ರಶ್ನೆಗಳು ಮುಖ್ಯವಾಗಿ ಫೋಕಸ್ ಆಯಿತು.  ಜೊತೆಗೆ ಆ ಕೃತಿ ಬಂದ ಕಾಲದ ರಾಜಕೀಯ ಮತ್ತು ಸಾಮಾಜಿಕ ಸಂವಿಧಾನಗಳನ್ನು ಎತ್ತಿಕೊಳ್ಳಲಾಯಿತು.  ವಾತ್ಸಾಯನನ `ಕಾಮಸೂತ್ರ' ಬಂದ ಕಾಲವಾಗಿದ್ದರಿಂದ ಕಾಮೋದ್ದೀಪನ ಅಂಶಗಳು ಹೆಚ್ಚಾಗಿವೆ;  ಪ್ರಭುತ್ವವು ನೆಲೆಗೊಂಡು ಹಿಂದುಧರ್ಮದ ರೂಪುರೇಷೆಗಳನ್ನು ರೂಪಿಸುತ್ತಿದ್ದುದರಿಂದ ಲಜ್ಜಾವತಿಯಾದ ಶಾಕುಂತಲೆಯ ಆವಿಷ್ಕಾರವಾಯಿತು.... ಹೀಗೆ ಚರ್ಚೆ ಮುಂದುವರೆಯಿತು.  ಇಲ್ಲಿ ರಸದ ಪರಿಣಾಮಗಳಿಗಿಂತ ರಸವನ್ನುಂಟು ಮಾಡು ಮೇಕಿಂಗ್ ಬಗ್ಗೆ ಒತ್ತು ಸಿಕ್ಕಿತು.  ಕೃತಿಯನ್ನು ನಿರಚನಗೊಳಿಸಿಕೊಲ್ಳುವ ರೀತಿಯೂ ಇದಾಗಿತ್ತು.

ಈ ಬಗೆಯ ಓದು ಬೌದ್ಧಿಕತೆಯನ್ನು ಬೇಡುತ್ತದೆ.  ತತ್ವಗಳಿಂದ ಪುಷ್ಟಿಗೊಂಡು ಬೆಳೆಯುತ್ತದೆ.  ಆಗ ಇಂತಹ ಕ್ರಮಗಳನ್ನೇ ಸರಳಗೊಳಿಸಿ ನೋಡುವ ಅಡ್ಡ ಪರಿಣಾಮಗಳು ಸೃಷ್ಟಿಯಾಗುತ್ತದೆ.  ಏಕೆಂದರೆ, ತತ್ವದ ಸಿಕ್ಕು ಒಳಹೊಕ್ಕು ನೋಡಲು ಅಸಾಧ್ಯವಾದಾಗ ಒಂದು ಮಧ್ಯಮ ನೋಟದಿಂದ ಅದನ್ನು ಭೇದಿಸಿಬಿಡುವ ಪ್ರಯತ್ನ ಮಾಡುವುದು ನಿರೀಕ್ಷಿತ.

ಸಾಹಿತ್ಯ ವಿಮರ್ಶೆಯು ಮೊದಲಲ್ಲಿ ಕೃತಿಕಾರನನ್ನು ಕೇಂದ್ರವಾಗಿರಿಸಿಕೊಂಡಿತಲ್ಲದೆ, ನಂತರ ಪಠ್ಯಕೇಂದ್ರಿತವಾಗಿ, ತದನಂತರ ಸಮಾಜ, ಓದುಗ, ಸಂಸ್ಕೃತಿ ಕೇಂದ್ರಿತವಾಗಿ ತನ್ನನ್ನು ವಿಸ್ತರಿಸಿಕೊಂಡಿದೆ.  ಹೊಳೆದಾರಿ ಅಗಲ ವಿಸ್ತಾರಗಳಲ್ಲಿ ಬಿಚ್ಚಿಕೊಳ್ಳುವಂತೆ ವಿಮರ್ಶೆಯು ಅನ್ಯಶಿಸ್ತೀಯ ನೆಲೆಗಳಲ್ಲೂ ತನ್ನ ನೆಲೆಯನ್ನು ಅರಸಿತು.  ಇದರಿಂದ ಅದರ ವ್ಯಾಪ್ತಿ ಹಿರಿದಾಯಿತು.  ಬಹುಮುಖೀ ಚರ್ಚೆಗೆ ದಾರಿಯಾಯಿತು.  ಇದರೊಂದಿಗೆ ವಾದ, ತತ್ವಗಳನ್ನು ಆಧರಿಸಿದ ವಿಮರ್ಶೆಯ ವಿಸ್ತಾರ ಹೆಚ್ಚಾದಂತೆ, ಅದು ಸರಳೀಕರಣದ ಸಂಕಷ್ಟವನ್ನು ತನ್ನ ಮೇಲೆ ತಂದುಕೊಳ್ಳತೊಡಗಿದ್ದು.

ತತ್ವಾಧಾರಿತ ವಿಮರ್ಶಾಕ್ರಮಗಳು ಎದುರಿಸುತ್ತಿರುವ ಕಷ್ಟಗಳು ಹಲವಾರು.  ಅವುಗಳು ಆಧರಿಸಿರುವ ಎಲ್ಲಾ ತಾತ್ವಿಕತೆಗಳಲ್ಲಿಯೂ ಸಾಕಷ್ಟು ಏರಿಳಿತಗಳಾಗಿವೆ.  ಅವುಗಳ ಪ್ರಾಥಮಿಕ ಹಂತಗಳಿಂದ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಬಂದು, ಹೊಸ ಹೊಸ ಸ್ವರೂಪಗಳಲ್ಲಿ ತಲೆದೋರಿವೆ.  ಇವು ಬರುಬರುತ್ತಾ ಒಂದು ಮತ್ತೊಂದಕ್ಕೆ ಅಂಟಿಕೊಂಡು ಹೆಣೆದುಕೊಂಡ ಪರಿಣಾಮ ಜಿಗ್ಗು ನಿರ್ಮಾಣವಾಗಿಬಿಟ್ಟಿದೆ.  ಇದನ್ನು ಇಂದು ಚಾಲನೆಯಲ್ಲಿರುವ ಸ್ತ್ರೀವಾದದ, ಮಾರ್ಕ್ಸ್‌ವಾದ, ರಚನಾವಾದಗಳೇ ಮೊದಲಾಗಿ ಬಹುತೇಕ ಎಲ್ಲಾ ವಾದಗಳಿಗೂ ಅನ್ವಯಿಸಿ ಹೇಳಬಹುದು.  ಇದನ್ನು ಆಧರಿಸಿದ ವಿಮರ್ಶೆಯೂ ಸ್ವಾಭಾವಿಕವಾಗಿ ಜಿಗುಟುತನದಿಂದಲೇ ಕೂಡಿ, ವೈಶಾಲ್ಯದಲ್ಲಿ ಹರಡಿಕೊಂಡು, ಜಿಜ್ಞಾಸೆಯಲ್ಲಿ ಮುಳುಗಿರುತ್ತದೆ.  ಆಗ ಮೇಲ್ಮೈ ಸ್ವರೂಪವನ್ನು ಮಾತ್ರ ಗಣನೆಗೆ ತೆಗೆದುಕೊಂಡು `ಇದು ಇಷ್ಟೇ' ಎಂಬ ತೀರ್ಮಾನಗಳಿಗೆ ಬಂದು ಆತುರಾತುರವಾಗಿ ತತ್ವವೊಂದಕ್ಕೆ ಕೊನೆಯ ಮೊಳೆ ಹೊಡೆದುಬಿಡುವ ಪ್ರವೃತ್ತಿ ಇನ್ನೊಂದು ಕಡೆಯಿಂದ ಕುಡಿಯತೊಡಗುತ್ತದೆ.

ಸ್ತ್ರೀವಾದವನ್ನೇ ಇಲ್ಲಿ ಉದಾಹರಿಸುವುದಾದರೆ ಅದು ಮೂಲತಃ ರಾಜಕೀಯ ಸ್ವರೂಪದಿಂದ ಅವತರಿಸಿ, ಸಾಮಾಜಿಕ ಸಾಧಕ ಬಾಧಕಗಳನ್ನು, ವಿವರಿಸಿಕೊಳ್ಳುತ್ತಲೇ ಮಾನಸಿಕ ಅಸ್ತಿತ್ವದ ಸ್ವರೂಪವನ್ನು ವಿಶದಪಡಿಸಿಕೊಂಡಿತು.  ಆನಂತರವಾದರೂ ಅದು ಅನೇಕ ನಿಶ್ಚಿತತೆಗಳಲ್ಲದೆ, ಆದಿವಾಸಿ, ತೃತೀಯ ರಾಷ್ಟ್ರಗಳ ಮಹಿಳೆಯರ ನಿಶ್ಚಿತತೆಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿತು.  ಹೀಗೆ ಸ್ತ್ರೀವಾದವು ಬೆಳೆಯುತ್ತ ಬಂದಂತೆ, ಅದನ್ನು ಆಧರಿಸಿದ ವಿಮರ್ಶೆ ಸಹ ಇವನ್ನೆಲ್ಲ ಗಮನಿಸಬೇಕಾಯಿತು.  ಈ ಅನಿವಾರ್ಯತೆಗಳಲ್ಲಿ ಅದು ಸಿಕ್ಕಿಕೊಂಡಂತೆಯೆ, ಸ್ತ್ರೀವಾದಿ ವಿಮರ್ಶೆಯು ಲಿಂಗಭೇದದ ಸರಳ ಸಮಸ್ಯೆಗಳ ವಿಶ್ಲೇಷಣೆ ಎಂಬ ಸರಳೀಕರಣದ ಉಪಾಯ ಹುಟ್ಟಿಕೊಂಡು ಬಿಟ್ಟಿದೆ.  ಅಲ್ಲಿಗೆ ಸ್ತ್ರೀವಾದವೆಂದರೆ ಇಷ್ಟೇ ಎಂದು ಅದನ್ನು ನಿರ್ಲಕ್ಷಿಸಿ, ಅದನ್ನು ಓದಿ ಮುಗಿಸಿ ಆಯಿತೆಂಬ ಧೋರಣೆ ಉಂಟಾಗುತ್ತದೆ.  ಇದು ದುರಂತ.  ಇದೇ ಗತಿ ಸಮಾಜವಾದ, ಮಾರ್ಕ್‌ವಾದ ಇತ್ಯಾದಿ ತತ್ವಾಧಾರಿತ ವಿಮರ್ಶೆಗಳಿಗೆ ಒದಗಿದೆ ಎನ್ನಬಹುದು.

ಬೌದ್ಧಿಕ ಜಿಗುಟುತನ ಮತ್ತು ಸಾಮಾನ್ಯೀಕರಣದ ಆತುರ ಎರಡೂ ರೀತಿಗಳೂ ಕೃತಿಯ ಓದಿಗೆ ತೊಡಕನ್ನೇ ಉಂಟು ಮಾಡುತ್ತವೆ.  ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ಎರಡು ಕೃತಿಗಳಿಗೂ ಇದೇ ಸಮಸ್ಯೆ ಎದುರಾಗಿದೆ.

ಡಾ. ಬಂಜಗೆರೆ ಜಯಪ್ರಕಾಶರ ಕೃತಿ - `ಅನುದೇವಾ ಹೊರಗಣವನು' ಸಂಶೋಧನೆಯ ಕೃತಿ.  ಸಮಕಾಲೀನ ಸಂಶೋಧನೆಗಳು ಬಹುಮುಖೀ ನೆಲೆಗಳಲ್ಲಿ, ಚರ್ಚೆಗಳನ್ನು ಮಾಡುತ್ತಿವೆ.  ಅದರಂತೆ ಜಯಪ್ರಕಾಶರೂ ಸಹ ಅನ್ಯಶಿಸ್ತೀಯ ನೆಲೆಗಳಿಂದ ವಿಷಯಾವಲೋಕನ ಮಾಡುವ ಪ್ರಯತ್ನದಲ್ಲಿದ್ದಾರೆ.  ಆದರೆ ಅನ್ಯಶಿಸ್ತಿನ ನೆಲೆಗಳು ಮತ್ತು ಕನ್ನಡ ಚಾರಿತ್ರಿಕ ಸಂದರ್ಭಗಳನ್ನು ಅರಿತು ಕೃತಿಯ ವಿವೇಚನೆಯಲ್ಲಿ ತೊಡಗುವುದು ಒಂದು ರೀತಿಯ ಜಿಜ್ಞಾಸೆಯನ್ನು ಹುಟ್ಟುಹಾಕುತ್ತಿದ್ದರೆ, ಇನ್ನೊಂದೆಡೆ ಸರಳೀಕರಣದಿಂದ ಜಾತಿಮೂಲವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.  ಇದು ಕೃತಿಯೊಂದು ತಲುಪಬೇಕಾದ ಸಂವಹನದ ರೀತಿಯನ್ನು ಮೊಟಕುಗೊಳಿಸುವಂತದ್ದು.

ಹಾಗೆಯೇ `ಆವರಣ'ದಲ್ಲಿ ಚರ್ಚೆಯಾಗಿರುವ ವಿಷಯ ಇತಿಹಾಸದ್ದು.  ಅತಿಯಾದ ಆಕರಗಳನ್ನು ಮುಂದಿಟ್ಟು ಓದುಗರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಇಲ್ಲಿ ಕೃತಿಕಾರ ಮಾಡುತ್ತಿದ್ದಾನೆ.  ಬೌದ್ಧಿಕ ಕಸರತ್ತುಗಳಿಂದ ಒಂದು ತರ್ಕವನ್ನು ನಿರೂಪಿಸುತ್ತಾ, ಒಂದು ಭಾರವನ್ನು ಓದುಗರ ತಲೆ ಮೇಲೆ ಹೊರೆಸುತ್ತಾನೆ.  ಇತಿಹಾಸದ ವ್ಯಾಖ್ಯಾನಗಳು ಇಂದು ಹತ್ತು ಹಲವು ದಾರಿಗಳಲ್ಲಿದೆಯಾಗಿ, ಇತಿಹಾಸವನ್ನು ತಾತ್ವಿಕವಾಗಿ ನೋಡುವ ಚರ್ಚೆಗಳು ಒಂದು ಕಡೆ ದಿಕ್ಕು ತಪ್ಪಿಸುತ್ತಿದ್ದರೆ, ಇನ್ನೊಂದೆಡೆ ತಮ್ಮ ವ್ಯಾಸಂಗ ಕಾಲದ ಹಳೆಯ ಚರಿತ್ರೆಯ ನೆನಪುಗಳನ್ನಿಟ್ಟುಕೊಂಡು ಎಂದೋ ಕಲಿತು ಮರೆತ ವಿಷಯವನ್ನು ತಮಗೆ ತಿಳಿಯದಂತೆ ತೆಳುಗೊಳಿಸಿಕೊಳ್ಳುತ್ತಿರುವುದು ಕಾಣುತ್ತದೆ.

ಈ ಕೃತಿಗಳ ಭಿನ್ನಾಭಿಪ್ರಾಯಗಳು ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ತಾತ್ವಿಕ ಜಿಗುಟುತನ ಮತ್ತು ಸರಳಗೊಳಿಸುಕೊಳ್ಳುವಿಕೆಯ ಎರಡು ಅತಿಯ ಪರಿಣಾಮಗಳನ್ನು ಸೂಚಿಸುವಂತೆ ಕಾಣುತ್ತಿವೆ.

ವಿವೇಕ ಶಾನುಭಾಗ, ನಟರಾಜ ಹುಳಿಯಾರ್‍ ಮುಂತಾದವರೆಲ್ಲ ಗುರುತಿಸಿದಂತೆ ಸಾಹಿತ್ಯದಲ್ಲಿ ಸುಗಮ ಸಾಹಿತ್ಯ ಹುಟ್ಟುತ್ತಿದೆ ಮತ್ತು ಸುಗಮ ಓದುಗರು ನಿರ್ಮಣವಾಗುತ್ತಿದ್ದಾರೆ ಎನ್ನುವ ಮಾತನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.  ಸುಗಮ ಸಾಹಿತ್ಯ ಎನ್ನುವುದನ್ನು ಸಾಹಿತ್ಯ ಶ್ರೇಷ್ಠತೆಯ ಆಯ್ಕೆ ಇಟ್ಟುಕೊಂಡು ಹೇಳಿದ ಮಾತು ಎನ್ನುವುದಕ್ಕಿಂತ, ಸರಳೀಕರಣದ ಅಪಾಯಗಳನ್ನೇ ಅವು ಧ್ವನಿಸುತ್ತಿರುವಂತೆ ಕಾಣುತ್ತದೆ.  ಅತ್ಯತಿಷ್ಠ ದಶಾಂಗುಲವಾಗಿ ಬೆಳೆಯುತ್ತಿರುವ ಬೌದ್ಧಿಕತೆ, ಅದನ್ನು ಮುಟ್ಟಲಾರದೇ ತಮ್ಮದೇ ಆದ ಮಾರ್ಗದಲ್ಲಿ ಅರ್ಥೈಸಿಕೊಳ್ಳುತ್ತಿರುವ ಭೋಳೆತನ ಎರಡೂ ಅತಿಗಳಂತೆ ಕಾಣುತ್ತಿವೆ.  ಹಾಗಾಗಿಯೇ ಮತ್ತೆ ಮತ್ತೆ ಪೊಲೊನಿಯಸ್ ಕಾಡುತ್ತಾನೆ.  ತನ್ನ ಮೂಗಿನ ನೇರಕ್ಕೆ ಸರಳ ತರ್ಕಗಳಿಂದ ಬದುಕನ್ನು ಅಳೆಯುವ ಪೊಲೊನಿಯಸ್; ತತ್ವದಲ್ಲಿ ಮುಳುಗೇಳುತ್ತಿರುವ ಹ್ಯಾಮ್ಲೆಟ್ - ಈ ಇಬ್ಬರ ನಡುವಿನ ಸೇತುವೆ ಕುಸಿದಿದೆ.  ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥ ಆಗುತ್ತಿಲ್ಲ;  ಅರ್ಥ ಮಾಡಿಕೊಳ್ಳುವ ಕಾತುರವೂ ಇಲ್ಲ.  ಈ ಇಬ್ಬರೂ ತಮ್ಮನ್ನು ಚತುರರು ಎಂದುಕೊಂಡು ತಮ್ಮ ವೃತ್ತಗಳಲ್ಲಿ ನಿಂತಿದ್ದಾರೆ.  ಆದರೆ ಚತುರತೆ ಹುಟ್ಟಿಸುತ್ತಿರುವ ದುರಂತ ಹಿಮದ ಹೊಗೆಯಂತೆ ಸುತ್ತ ಆವರಿಸಿ, ದೃಷ್ಟಿಗಳನ್ನು ಮಬ್ಬುಗೊಳಿಸುತ್ತದೆ.

                                   *****

ಕೀಲಿಕರಣ: ಕಿಶೋರ್‍ ಚಂದ್ರ

ಹಾರ್ಸ್ ಪವರ್

-    ಕಂನಾಡಿಗಾ ನಾರಾಯಣ

ಫ್ಲೈ‌ಓವರ್ ಮೇಲಿಂದ ಹೋಗುತ್ತಿದ್ದಾಗ ರೇಸ್‌ಕೋರ್ಸಿನ ಅಂಗಳದಲ್ಲಿ ಕುದುರೆಗಳು ಓಡುತ್ತಿದ್ದುದನ್ನು ನೋಡಿದ ಚಂದ್ರಹಾಸ ಕೂಡಲೇ ಬೈಕ್ ನಿಲ್ಲಿಸುವಂತೆ ಡೇವಿಡ್‌ನಿಗೆ ಹೇಳಿದ. ಊರಿನಿಂದ ಬಂದಿದ್ದ ಗೆಳೆಯ ಚಂದ್ರಹಾಸನಿಗೆ ಬೆಂಗಳೂರನ್ನು ತೋರಿಸುತ್ತೇನೆಂದು ಡೇವಿಡ್ ಕರೆದುಕೊಂಡು ಬಂದಿದ್ದ. ಇಲ್ಲಿಯೇ ಅನೇಕ ವರ್ಷಗಳಿಂದ ಸರ್ಕಾರೀ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಡೇವಿಡ್ ಅದೇ ಪ್ಲೈ‌ಓವರ್ ಮೇಲೆಯೇ ಪ್ರತಿದಿನ ಓಡಾಡುತ್ತಿದ್ದರೂ ಅಲ್ಲಿ ನಡೆಯುವ ಕುದುರೆಯ ಓಟ ಕಣ್ಣಿಗೆ ಬಿದ್ದಿರಲಿಲ್ಲ.


ಚಿತ್ರ: ಪ್ರಮೋದ್

    ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕಿಲೋಮೀಟರ್‌ನಷ್ಟಿರುವ ದೂರವನ್ನು ಕ್ರಮಿಸಿ ವಿಶ್ರಮಿಸಿಕೊಳ್ಳಲು ತೊಡಗಿದ ಕುದುರೆಗಳ ಗುಂಪು ಕಣ್ಣಿಗೆ ಬಿತ್ತು. ದೂರದಲ್ಲಿ ನೊಣಗಳು ರೆಕ್ಕೆಮಡಚಿ ಕುಂತಂತಿದ್ದ ಜನಗಳು ಏಕದಂ ಹಾರಾಡುವಂತೆ ಕಂಡುಬಂದರು. ಒಂದು ಕ್ಷಣ ಇಡೀ ಪ್ರಪಂಚದಲ್ಲಿ ಸಂಚಲನ ಉಂಟಾದಂತೆ.. ಅದೆಷ್ಟೋ ಹಣ ಒಂದೇ ಸೆಕೆಂಡಿನಲ್ಲಿ ಯಾರು ಯಾರದೋ ಜೇಬಿನಿಂದ ಇನ್ಯಾರದೋ ಜೇಬಿಗೆ ಸೇರಿಹೋಗಿತ್ತು. ಅದಕ್ಕಾಗಿ ನೂರಾರು ವರ್ಷದಿಂದ ಕಾಯುತ್ತಿದ್ದವರಂತೆ ಜನಗಳು ಕುಣಿದಾಡುತ್ತಿದ್ದರು..

ಮತ್ತೆ ಆ ಕುದುರೆಗಳು ಓಡಿಬರುತ್ತವೇನೋ ಎಂದು ಚಂದ್ರಹಾಸ ನಿರೀಕ್ಷಿಸಿದ್ದು ಯಾಕೋ ಹುಸಿಯಾದಂತೆನಿಸಿತು.. ಅವುಗಳನ್ನು ಹತ್ತಿರದಿಂದ ನೋಡಬೇಕೆಂಬ ಆಸೆಯನ್ನು ಹತ್ತಿಕ್ಕಲಾಗಲಿಲ್ಲ. ಡೇವಿಡ್‌ನಿಗೆ ಗಾಡಿಯನ್ನು ಅದರ ಮುಖ್ಯದ್ವಾರದತ್ತ ಒಯ್ಯುವಂತೆ ಹೇಳಿದ. ಕುದುರೆ ಜೂಜಿನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದ ಡೇವಿಡ್ 'ಅದೆಲ್ಲ ಒಳ್ಳೆಯದಲ್ಲ, ಬೇಡ ಚಂದ್ರು..' ಎಂದರೂ ಕೇಳಲಿಲ್ಲ. 'ನೀನೊಳ್ಳೆ ಗಾಂಧಿ ಆಡ್ದಂಗೆ ಆಡ್ಬೇಡ.. ಅಲ್ಲಿಗೆ ಹೋದ ತಕ್ಷಣ ನಾವೂ ಜೂಜಾಡಲೇಬೇಕು ಅಂತ ಏನಿಲ್ಲ.. ಜಸ್ಟ್ ಫಾರ್ ಕ್ಯೂರಿಯಾಸಿಟಿ.. ಕನಿಷ್ಟ ಎಂತೆಂತಹವರು ಬಂದಿದ್ದಾರೆ ಅಂತಲಾದರೂ ನೋಡಬಹುದು.. ಈ ಸಲದ್ದೇ ಕೊನೇ ರೇಸಂತೆ, ರೇಸ್‌ಕೋರ್ಸ್‌ನ್ನ ಮುಚ್ಚುತಾರೆ ಅಂತ ಪೇಪರ್ರಲ್ಲಿ ಬಂದಿತ್ತು ಗೊತ್ತಾ.. ಈಗ ಬಿಟ್ರೆ, ಮತ್ತೆ ಇನ್ನೆಲ್ಲಿಗೋ ಹೋಗಿ ನೋಡಕ್ಕಾಗುತ್ತಾ..' ಎಂದು ಪುಸಲಾಯಿಸಿದ.

ಎಂಟ್ರೆನ್ಸ್‌ನಲ್ಲಿ ಜನಗಳು ಆಗಲೇ -ಇನ್ನೂ ತಮ್ಮಿಂದ ಕಾಯಲು ಸಾಧ್ಯವಿಲ್ಲವೆನ್ನುವಂತೆ- ಹೊರಗೆ ನುಗ್ಗಿಬರುತ್ತಿದ್ದರು. ಒತ್ತಿಸಿಕೊಳ್ಳುತ್ತ ಜಾಗ ಮಾಡಿಕೊಂಡು ಕೌಂಟರ್‌ನಲ್ಲಿ ಟಿಕೇಟು ಕೇಳಿದ. ಯಾರೋ ಅಡ್ಡಕಸುಬಿ ಇರಬೇಕೆಂದು ಮುಖ ನೋಡಿ ಮುಗುಳ್ನಕ್ಕ ಟಿಕೇಟ್‌ವಾಲಾ, 'ಶೋ ಮುಗಿದುಹೋಗಿದೆ.. ಹಾಗೇ ಹೋಗಿ ನೋಡ್ಕಂಡು ಬನ್ನಿ, ಪರವಾಗಿಲ್ಲ..' ಎಂದು ಅನುಮತಿ ನೀಡಿ ತನ್ನ ಪಾಡಿಗೆ ತಾನು ಲೆಕ್ಕ ಹಾಕುವುದರಲ್ಲಿ ಮಗ್ನನಾದ. ಆದರೂ ರೈಲ್ವೆ ಫ್ಲಾಟ್‌ಫಾರಂನಲ್ಲಿ ಹಿಡಿಯುವಂತೆ ಯಾರು ಎಲ್ಲಿ ಟಿಕೇಟ್ ಕೇಳಿಬಿಡುತ್ತಾರೋ ಎಂಬ ಅನುಮಾನದಿಂದಲೇ ಒಳಗೆ ಹೋದರು. ನಾಯಕನಹಟ್ಟಿ ಜಾತ್ರೆಯಲ್ಲಿ ತುರುಕಿಕೊಂಡಿರುವಂತೆ ಲಕ್ಷಾಂತರ ಜನರು, ಬ್ರಿಟಿಷರ ಕಾಲದ ಹಳೇರೈಲ್ವೆಸ್ಟೇಷನ್ನಿನಂತಹ ಆ ಇಡೀ ಕಟ್ಟಡವನ್ನು ಆವರಿಸಿಕೊಂಡುಬಿಟ್ಟಿದ್ದರು. ಹತ್ತಾರು ಟಿ.ವಿ.ಗಳು, ಕುದುರೆಗಳು ಗೇಟ್ ತೆರೆಯುತ್ತಿದ್ದಂತೆಯೇ -ತುಂಬಿದ ಡ್ಯಾಮಿನಿಂದ ನೀರು ಹೊರನುಗ್ಗುವಂತೆ ನುಗ್ಗಿ- ಒಂದನ್ನೊಂದು ಹಿಂದಿಕ್ಕಿ ಕ್ಷಣಾರ್ಧದಲ್ಲಿ ಗುರಿಮುಟ್ಟಿದುದನ್ನು ಇನ್ನೂ ರಿಲೇ ಮಾಡುತ್ತಲೇ ಇದ್ದವು -ಘಟನೆ ಇದೀಗ ತಾನೇ ನಡೆದು ಅದರ ಬಿಸಿ ಇನ್ನೂ ಆರಿಲ್ಲವೆನ್ನುವಂತೆ, ಅಥವಾ ಸರಿಯಾಗಿ ನೋಡದವರು ಮತ್ತೆ ಮತ್ತೆ ನೋಡಿ ಮನವರಿಕೆ ಮಾಡಿಕೊಳ್ಳಲಿ ಎನ್ನುವಂತೆ..

ಒಳಗೆ ಹತ್ತಾರು ಕೌಂಟರುಗಳು.. ಅದರ ಒಳಗೆಲ್ಲಾ ಬಿಳೀ ಸಮವಸ್ತ್ರ ಧರಿಸಿದ ಕ್ಯಾಷಿಯರ್‌ಗಳು ದುಡ್ಡಿನ ಕಂತೆಕಂತೆಗಳನ್ನು ಬಂಡಲ್ಲು ಮಾಡುತ್ತಿದ್ದರು. ಸಾವಿರಾರು ಜನ ನುಗ್ಗಿದರೂ ತಮಗೆ ಏನೂ ಮಾಡಲಾಗದೆನ್ನುವಂತೆ ಕೋಟೆ ಥರಾ ಬೀಗ ಹಾಕಿಕೊಂಡಿದ್ದರು. ಚಂದ್ರಹಾಸ, 'ನೋಡು, ಗಂಟೆಯ ಹಿಂದೆ ಲಕ್ಷಾಂತರ ಜನರ ಕೈಲಿದ್ದ ಆ ದುಡ್ಡನ್ನೆಲ್ಲಾ ಈಗ ಗೆದ್ದ ಕುದುರೆಯ ಓನರ್ ಹೇಗೆ ಬಾಚಿಬಿಟ್ಟಿರುತ್ತಾನೆ.. ಲಕ್ಷ್ಮಿ ಎಂತಹ ಚಂಚಲೆ ಅಲ್ಲವಾ..' ಎಂದ. ಅದಕ್ಕೆ ಡೇವಿಡ್, 'ಹಿಂದಿನ ಕಾಲದಲ್ಲಿ ಯುದ್ಧ ಮಾಡಿ, ಗೆದ್ದವರು ಸೋತವರಿಂದ ಬಲವಂತವಾಗಿ ದೋಚುತ್ತಿದ್ದರಂತೆ.. ಆದರೆ ಈಗ ಜನ ವಾಲೆಂಟಿಯರ್ ಆಗಿಯೇ ಕೊಡುತ್ತಾರೆ.. ಅಷ್ಟೇ ವ್ಯತ್ಯಾಸ..' ಅಂದ. 'ಕಾಕತಾಳೀಯ ಏನು ಗೊತ್ತಾ.. ಆಗ ಯುದ್ಧಕ್ಕೂ ಕುದುರೆಗಳನ್ನೇ ಬಳಸುತ್ತಿದ್ದರು..' ಎಂದು ಮಾರ್ಮಿಕವಾಗಿ ನಕ್ಕ ಚಂದ್ರಹಾಸ.

ನಡೆಯುತ್ತ ಮಾತಿನ ಮಧ್ಯೆ ಡೇವಿಡ್, 'ಬರೀ ಗಂಡಸರೇ ಕಾಣಿಸ್ತಾರಲ್ಲ.. ಹೆಂಗಸರು ಬರೋದಿಲ್ವ?..' ಎಂದು ಅನುಮಾನ ವ್ಯಕ್ತಪಡಿಸಿ, ಉತ್ತರಕ್ಕೆ ಕಾಯುವ ಮೊದಲೇ ಮಹಾರಾಣಿಯಂತಹ ಹೆಣ್ಣೊಬ್ಬಳು ಕಾಣಿಸಿಕೊಂಡಳು.. ಹಳದಿ-ಬಿಳೀ ಮಿಶ್ರಿತ ತೊಗಲಿಗೆ ಕಾಂಟ್ರಾಸ್ಟ್ ಕಲರ್ ಎನ್ನುವಂತೆ ಕಪ್ಪು ಬಣ್ಣದ ಚೂಡಿದಾರ.. ಕಣ್ಣಿಗೆ ತಂಪನೆರೆವ ಅಚ್ಚ ಕಪ್ಪು ಕನ್ನಡಕ.. ಬಣ್ಣಗೆಟ್ಟ ಕೂದಲಿಗೆ ಒಂದಷ್ಟು ಬಂಗಾರದ ಬಣ್ಣ ತಂದಿದ್ದ ಮೇಂದಿ ಕೂದಲು.. ರೇಷ್ಮೆಯಂತೆ ಒಂದೊಂದೇ ಎಳೆ ಇಳಿಯುತ್ತಿದ್ದ ಅದನ್ನ ಕಿವಿಯ ಹಿಂದಕ್ಕೆ ತೂಗುಹಾಕುತ್ತ ಹೆಣ್ಣಿನ ಜೀವ ಇಷ್ಟೊಂದು ಸೂಕ್ಷ್ಮವಾ ಎಂಬ ಅನುಮಾನ ಬರುವಂತಹ ನಯಗಾರಿಕೆ ಪ್ರದರ್ಶಿಸುತ್ತ ಅವಳು ನಡೆಯುತ್ತಿದ್ದರೆ, ಅವಳ ಸುತ್ತ ಹತ್ತಾರು ಜನ ಬಾಡಿಗಾರ್ಡುಗಳಂತೆ ಅರೆವೃತ್ತಾಕಾರ ರಚಿಸಿಕೊಂಡು ಬರುತ್ತಾ, ಈಗ ತಾನೇ ಮುಗಿದ ರೇಸಿನ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹೇಳುತ್ತಿದ್ದರು.. ಚಂದ್ರಹಾಸ ಅವಳನ್ನು ಗುರುತಿಸಿ, 'ಚಿತ್ರನಟ ಅಮೋಘವರ್ಷನ ಹೆಂಡತಿ ಆಕೆ.. ಆಕೆಯೂ ಮಾಜಿ ಹೀರೋಯಿನ್..' ಎಂದವನು, ತನಗೆ ಗೊತ್ತಿಲ್ಲದೇ ಬಳಸಿದ ಮಾಜಿ ಹೀರೋಯಿನ್ ಎಂಬ ಪದದ ಅರ್ಥಸಾಧ್ಯತೆಯನ್ನು ವಿವರಿಸಿ ಡೇವಿಡ್‌ನನ್ನು ನಗಿಸಿದ. ನೂರಾರು ಜನರು ಆಕೆಯನ್ನು ಇರಿದು ತಿನ್ನುವಂತೆ ನೋಡುತ್ತಿರುವುದನ್ನು ನೋಡಿದ ಚಂದ್ರಹಾಸ, 'ನಿನಗೆ ವಾತ್ಸಾಯನ ಗೊತ್ತು ಅಲ್ಲವಾ.. ಅವನ ಪ್ರಕಾರ ಹೆಂಗಸರಲ್ಲಿ ಹಸುವಿನಂತಹ, ಕುದುರೆಯಂತಹ, ಚಿಗರೆಯಂತಹ ಚಹರೆಗಳಿರುತ್ತಾವಂತೆ.. ಈಕೆಯಲ್ಲಿ ನೋಡು ಕುದುರೆಯಂತಹದೇ ಲಕ್ಷಣಗಳಿವೆ ಅಲ್ಲವಾ..' ಎಂದು ಆಕೆಯ ಚೂಡಿದಾರದ ಒಳಗೆ ನಿಲ್ಲಲಾರೆನೆನ್ನುವಂತೆ ಹೊರ ಪುಟಿಯುತ್ತಿರುವ ದುಂಡನೆಯ ತೊಡೆಗಳನ್ನು ವರ್ಣಿಸಿದ..

ಆಕೆ ತನ್ನ ಪಾಡಿಗೆ ತಾನೆನ್ನುವಂತೆ ಅತ್ತ ಹೋಗುತ್ತಿದ್ದಂತೆಯೇ, ಇದೇ ಕೊನೇ ಡರ್ಬಿ ಎಂದು ತನ್ನ ಸಮಸ್ತವನ್ನೂ -ಧರ್ಮರಾಯನಂತೆ- ಜೂಜು ಕಟ್ಟಿ ಕಳೆದುಕೊಂಡಿದ್ದ ಅಮಾಯಕನೊಬ್ಬ ಆಕೆಯನ್ನು ಬಾಯಿಗೆ ಬಂದಂತೆ ಬಯ್ದುಕೊಳ್ಳುತ್ತಿದ್ದ. ಜಾಕಿಗಳನ್ನು ಮತ್ತು ಬುಕ್ಕಿಗಳನ್ನು ತನ್ನ ಹಣ ಮತ್ತು ವರ್ಚಸ್ಸಿನಿಂದ ಆಕೆ ಬುಕ್ ಮಾಡಿಕೊಂಡಿದ್ದಳಂತೆ. ಆತನ ಪ್ರಕಾರ ಯಾವ ಕುದುರೆ ಗೆಲ್ಲುತ್ತದೆಂದು ಹೆಚ್ಚು ಜನ ಹಣ ಕಟ್ಟುತ್ತಾರೋ ಅದರ ಜಾಕಿಗೆ ಹಣ ಕೊಟ್ಟು ಸೋಲುವಂತೆ ಬುಕ್ ಮಾಡಿಕೊಳ್ಳುತ್ತಾರಂತೆ. ಹಾಗಾಗಿ ಲಕ್ಷಾಂತರ ರೂಪಾಯಿ ಎಗರಿಸಿಬಿಡುತ್ತಾರಂತೆ.

ಆಕೆಯನ್ನೂ ಮೀರಿಸಿದಂತಹ ನೂರಾರು ಘನ ಶ್ರೀಮಂತರು ಫೀಲ್ಡ್‌ನಲ್ಲಿರುವಾಗ, ಲಕ್ಷಾಂತರ ರೂಪಾಯಿ ಹಾಕಿ ವರ್ಷಗಟ್ಟಲೆ ಕುದುರೆಯನ್ನು ಸಾಕಿ, ಅದರ ಜಾಕಿ ಮತ್ತವನ ಕುಟುಂಬವನ್ನೆಲ್ಲಾ ಸಲಹುತ್ತಿರುವವರಿರುವಾಗ, ಅವರ ನಡುವೆಯೇ ದ್ವೇಷ, ಅಸೂಯೆ, ಈರ್ಷ್ಯೆಗಳಿರುವಾಗ, ಅದು ಹೇಗೆ ಆಕೆಯೊಬ್ಬಳೇ ಅವರನ್ನೆಲ್ಲಾ ಬುಕ್ ಮಾಡಿಕೊಳ್ಳಲು ಸಾಧ್ಯ? ಸುಮ್ಮನೇ ಸೋತು ಹಣ ಕಳೆದುಕೊಂಡು ಹತಾಷನಾಗಿ ಹಾಗೆಲ್ಲ ಹೇಳುತ್ತಿದ್ದಾನೆ ಎಂದುಕೊಂಡು, ಅದನ್ನೆಲ್ಲ ತಮಾಷೆಯೆನ್ನುವಂತೆ ಕೇಳಿಸಿಕೊಂಡು ಲಘುವಾಗಿ ನಕ್ಕು ಸುಮ್ಮನಾದ ಚಂದ್ರಹಾಸ.

'ಹಾಗೆಂದು ನಿಮಗೆ ಗೊತ್ತಿದ್ದ ಮೇಲೆ, ಸೋಲುತ್ತದೆಂದು ಜನ ಹಣ ಕಟ್ಟದೇ ಇರುವ ಕುದುರೆಯ ಮೇಲೆಯೇ ನೀವು ಹಣ ಕಟ್ಟಬಹುದಾಗಿತ್ತಲ್ಲವಾ?' ಎಂಬ ತರ್ಕವನ್ನೆಸೆದ ಡೇವಿಡ್. ಕೈಯ್ಯಲ್ಲಿ ಹಿಡಿದಿದ್ದ ಇಷ್ಟು ದಪ್ಪದ ಪುಸ್ತಕ ತೋರಿಸಿ, 'ಇಪ್ಪತ್ತು ವರ್ಷದಿಂದ ಇದನ್ನು ಓದಿ ಓದಿ, ಅಳೆದು ಸುರಿದು ಲೆಕ್ಕ ಹಾಕಿ ಕಟ್ಟುತ್ತಲೇ ಇದ್ದೇನೆ.. ಆದರೂ, ಇನ್ನೂ ಅದರ ಆಳ ಅಗಲ ಗೊತ್ತಾಗ್ತಾಯಿಲ್ಲ..' ಎಂದು, ಈಗ ತಾನೆ ಇಲ್ಲಿಗೆ ಕಾಲಿಡುತ್ತಿರುವ ಬಚ್ಚಾ ನೀನು ಎನ್ನುವಂತೆ ಕೊಂಕು ನೋಟ ಬೀರಿ ಆ ವಿದ್ಯೆಯ ಅಗಾಧತೆಯ ಪರಿಚಯ ಮಾಡಿಸಿದ.

ಓಡಿ ದಣಿದ ಕುದುರೆಗಳು ತಮ್ಮ ಸ್ಪರ್ಧಿಗಳೊಂದಿಗೆ ತಮ್ಮ ತಮ್ಮ ಅನುಭವ ಅಭಿಪ್ರಾಯಗಳನ್ನು ಹಂಚಿಕೊಂಡು ತಮ್ಮ ತಮ್ಮ ಲಾಯ ಸೇರಿಕೊಂಡ ಮೇಲೆ ಜನರೂ ತಮ್ಮ ತಮ್ಮ ಶಹರಗಳನ್ನು ಸೇರಿಕೊಳ್ಳಲು ದೌಡಾಯಿಸತೊಡಗಿದರು. ಚಂದ್ರಹಾಸ ತನ್ನ ವಾಚಾಳಿತನದಿಂದಾಗಿ ಸೋತು, ತಲೆ ಮೇಲೆ ಕೈಹೊತ್ತು ಕುಕ್ಕರಿಸಿ ಕುಂತವರನ್ನು ಮಾತಾಡಿಸುತ್ತ, ಮುಂದಿನ ಪಂದ್ಯ ಡಾರ್ಜಿಲಿಂಗಲ್ಲಿ, ಅದರ ಮುಂದಿನದು ಪೂನಾದಲ್ಲಿ ಇರುವುದನ್ನು ಕೇಳಿ ತಿಳಿದುಕೊಂಡ. ಡಾರ್ಜಿಲಿಂಗಿನ ಆ ಹಿಮಪರ್ವತದ ಹಿನ್ನೆಲೆಯಲ್ಲಿರುವ ಟ್ರಾಕ್‌ನಲ್ಲ್ಲಿ ಕುದುರೆಗಳು ಓಡುತ್ತಿದ್ದರೆ.. ಜೂಜು ಕಟ್ಟದಿದ್ದರೂ ಅದನ್ನು ನೋಡುವುದೇ ಒಂದು ಅವರ್ಣನೀಯ ಮಜಾ.. ಎಂಬುದನ್ನು ಕೇಳಿಯೇ ತಾನು ಹೇಗಾದರೂ ಮಾಡಿ ಆ ಕುದುರೆಯ ಓಟವನ್ನು ನೊಡಲೇಬೇಕೆಂದು ಬಯಸಲಾರಂಭಿಸಿದ. ಡೇವಿಡ್, 'ನಿನಗೆ ಬುದ್ಧಿಯಿಲ್ಲ.. ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡಿರಬೇಕು' ಎಂದು ಬೈದರೂ, 'ಈ ಜೀವನ ಒಂದು ಕ್ಷಣಿಕನಮ್ಮ.. ಒಂದು ನೀರಿನ ಗುಳ್ಳೆಗಿರುವಷ್ಟೇ ಟೈಮಿರುವುದು.. ಅದು ಒಡೆದುಹೋಗುವುದರೊಳಗೆ ಎಲ್ಲವನ್ನೂ ಎಲ್ಲದನ್ನೂ ಅನುಭವಿಸಿಬಿಡಬೇಕು.. ಜೀವನದಲ್ಲಿ ಏನಿದೆ ಹೇಳು ಗೆಳೆಯಾ..' ಎಂದು ವೇದಾಂತ ಹೇಳಿದ.

ಗಾಡಿ ಹತ್ತುತ್ತ, 'ನಿನ್ನ ಗಾಡಿಯ ಹಾರ್ಸ್ ಪವರ್ ಎಷ್ಟು?' ಎಂದು ಕೇಳಿದ ಚಂದ್ರಹಾಸ. ಒಂದು ಕ್ಷಣ ತಬ್ಬಿಬ್ಬಾದ ಡೇವಿಡ್ 'ಗೊತ್ತಿಲ್ಲ..' ಎಂದ. 'ನೀರು ಎತ್ತುವ ಪಂಪ್‌ಸೆಟ್‌ನ ಕೆಪಾಸಿಟಿಯನ್ನು ಅದು ಎಷ್ಟು ಹಾರ್ಸ್ ಪವರ್ ಎಂಬುದರ ಮೇಲೆ ನಿರ್ಧರಿಸುವುದು ನಿನಗೆ ಗೊತ್ತಲ್ಲವಾ? ಅದೇ ರೀತಿ ಮೆಕ್ಯಾನಿಕಲ್, ಎಲೆಕ್ಟ್ರಕಲ್ ಪವರ್‌ನ ಅಳೆಯೋದು ಹಾರ್ಸ್ ಪವರ್‌ನಿಂದ. ಒಂದು ಕುದುರೆಯ ಪವರ್ ಅಂದರೆ ಒಂದು ಎಚ್.ಪಿ. ಅಂತ. ಹಾಗೆಯೇ ಐದು ಎಚ್.ಪಿ., ಹತ್ತು ಎಚ್.ಪಿ. ಅಂತ ಅಳೀತಾರೆ..' ಎಂದು ಹೇಳುವ ಮೂಲಕ ಜೀವನದ ಎಲ್ಲಾದರಲ್ಲೂ ಹಾರ್ಸ್‌ಪವರ್ ಇದೆಯೆಂಬುದನ್ನು ಮನದಟ್ಟು ಮಾಡಲು ಪ್ರಯತ್ನಿಸಿದ ಚಂದ್ರಹಾಸ. ಗಾಡಿ ಮೊದಲನೇ ಗೇರ್ ಹಾಕಿಕೊಂಡು ಮುನ್ನುಗ್ಗುತ್ತಿದ್ದಂತೆಯೇ ಏನನ್ನೋ ನೆನೆಸಿಕೊಂಡವನಂತೆ ಗಾಡಿ ನಿಲ್ಲಿಸಲು ಹೇಳಿದ ಚಂದ್ರಹಾಸ, ಇಳಿದು ಓಡಿಹೋಗಿ ಒಂದು ಪುಸ್ತಕ ಕೊಂಡುತಂದ. ಅದರಲ್ಲಿ ಯಾವ ಯಾವ ದಿನ ಎಲ್ಲೆಲ್ಲಿ ರೇಸ್‌ಗಳಿವೆ ಎಂಬ ವಿವರವಿತ್ತು. ಆಗಲೇ ರೇಸ್‌ಪ್ರಿಯನೊಬ್ಬ ಹೇಳಿದ ಡಾರ್ಜಿಲಿಂಗ್‌ನ ರೇಸ್ ಯಾವ ದಿನ ಇದೆಯೆಂಬುದನ್ನು ಚಲಿಸುತ್ತಿರುವ ಗಾಡಿಯ ಮೇಲೆ ಕುಳಿತೇ ಹುಡುಕಲಾರಂಭಿಸಿದ.

ಬೈಕು ತಗ್ಗುದಿಣ್ಣೆಗಳಲ್ಲಿ ಇಳಿದು ಹತ್ತುವಾಗ ಕಾಲು ಅಗಲಿಸಿ ಸುಮ್ಮನೆ ಕುಂಡೆಯೂರಿ ಕೂರುವ ಬದಲು ಅದರ ವೈಬ್ರೇಷನ್ನಿಗೆ ತಕ್ಕಂತೆ ಮರ್ಮಾಂಗಕ್ಕೆ ಒತ್ತಡ ಬೀಳುವುದನ್ನು ತಪ್ಪಿಸಿಕೊಳ್ಳಲು ಕಾಲಿನಿಂದಲೇ ಜೀನನ್ನು ಒತ್ತುವಂತೆ ಒತ್ತುತ್ತಾ ಒಂದು ಕ್ಷಣ ಕುದುರೆ ಸವಾರಿಯನ್ನೇ ಮಾಡುತ್ತಿರುವಂತೆ ಕನಸುಕಂಡ. ತನ್ನ ಹಳ್ಳಿಗೂ ಹೀಗೆ ಕುದುರೆ ಸವಾರಿ ಮಾಡುತ್ತ ಹೋದರೆ, ಅಗಸೆ ಬಾಗಿಲಲ್ಲಿ ನಿಂತು ಶಿವಪ್ಪನಾಯಕನಂತೆ ಮೀಸೆ ತಿರುವುತ್ತಿದ್ದರೆ ಊರ ಗೌಡನೂ ನಾಚಿಕೊಳ್ಳಬೇಕೆಂದುಕೊಂಡ. ಮಹಾಭಾರತದಲ್ಲಿ ದ್ರೌಪದಿ-ಧರ್ಮರಾಯನ ಏಕಾಂತವನ್ನು ಕಂಡ ಅರ್ಜುನ ಪಶ್ಚಾತ್ತಾಪಕ್ಕಾಗಿ ಕಾಮದ ಸಂಕೇತವಾದ ಕುದುರೆಯನ್ನೇ ಏರಿ ಹೆಚ್ಚುಕಡಿಮೆ ಇಡೀ ಉತ್ತರ ಭಾರತವನ್ನು ಸಂಚರಿಸಿ ಎರಡು-ಮೂರು ಮದುವೆಯಾದದ್ದು ನೆನಪಾಯಿತು. ತಾನೇನಾದರೂ ಬೈಕನ್ನು ಕೊಳ್ಳಬೇಕಾದಂತಹ ಸಂದರ್ಭ ಬಂದರೆ ಅದರ ಬದಲು ಅದೇ ಬೆಲೆಗೆ ಕುದುರೆಯನ್ನೇ ಕೊಳ್ಳಬೇಕೆಂದುಕೊಂಡ.

ಬ್ರಿಟಿಷರ ಕಾಲದಲ್ಲಿದ್ದಂತೆ ಈ ಬೆಂಗಳೂರಲ್ಲಿ ಕುದುರೆ ಸವಾರಿ ಮಾಡುತ್ತಾ ಸಿಗ್ನಲ್‌ನ್ನು ದಾಟುವುದು ಹೇಗೆಂದು ಲೆಕ್ಕಾಚಾರ ಹಾಕಿ ಎಲ್ಲೆಲ್ಲಿ ಹೇಗೆ ಹೇಗೆ ಓಡಿಸಬೇಕೆಂದು ಕನಸು ಕಂಡವನು, ಬೇರೆಯವರಿಗೆ ಅದರ ಬಗ್ಗೆಯೇ ತರಬೇತಿ ಕೊಡಲು ತರಗತಿ ತೆರೆದರೆ ಒಳ್ಳೆ ದುಡ್ಡು ಮಾಡಬಹುದಲ್ಲವಾ ಎಂದುಕೊಂಡ.. ಬೆಂಗಳೂರಲ್ಲಿ ಏನು ಬೇಕಾದರೂ ಮಾಡಿ ಜೀವಿಸಬಹುದು.. ಎಷ್ಟೆಲ್ಲಾ ಸಾಧ್ಯತೆಗಳಿರುವ ಊರಲ್ಲವೇ ಬೆಂಗಳೂರು ಎಂದುಕೊಂಡ.. ಡೇವಿಡ್ ಮಾತ್ರ ಹೆಲ್ಮೆಟ್ ಹಾಕಿಕೊಂಡು, ಕಣ್ಣು ಕಟ್ಟಿದ ಜಟಕ ಗಾಡಿಯ ಕುದುರೆಯಂತೆ, ಅಕ್ಕಪಕ್ಕದ ಏನೂ ಕಾಣಿಸದೆನ್ನುವಂತೆ ಗಾಡಿ ಓಡಿಸುತ್ತಲೇ ಇದ್ದ.. ಚಂದ್ರಹಾಸ, ನಾಳೆ ಒಂದು ಕಾಲಕ್ಕೆ ಈ ಬೈಕುಗಳೆಲ್ಲ ನೆಲಕಚ್ಚಿ ಕುದುರೆಗಳೇ ರಸ್ತೆಗಿಳಿದರೂ ಸರ್ಕಾರ ಹೆಲ್ಮೆಟ್ ಕಡ್ಡಾಯಗೊಳಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲವೆನಿಸಿ ಒಳಗೊಳಗೇ ನಕ್ಕ.

ಸಂಜೆ ರೂಮಿಗೆ ಬಂದ ಚಂದ್ರಹಾಸ ಸುಮ್ಮನೇ ಕೂರದಾದ.. ನಿದ್ದೆ ಮಾಡದಾದ.. ತಾನು ಹಳ್ಳಿಯಿಂದ ಬಂದಿದ್ದರೂ ಬೆಂಗಳೂರಿನ ಎಲ್ಲೆಲ್ಲಿ ಏನೇನಿದೆ ಎಂದು ಗೊತ್ತಿತ್ತು. ಆದರೆ ಅಲ್ಲಿಗೆ ಏಕಾಂಗಿಯಾಗಿ ಹೋಗಲು ಗೊತ್ತಾಗುತ್ತಿರಲಿಲ್ಲ ಅಷ್ಟೇ. ಸಂಜೆ ವೇಳೆಗೆ ಎಂ.ಜಿ.ರಸ್ತೆಗೆ, ಬ್ರಿಗೇಡ್ ರಸ್ತೆಗೆ ಹೋಗಬೇಕೆಂದು ಬಯಸಲಾರಂಭಿಸಿದ.. ಅಲ್ಲಿ ಅಡ್ಡಾಡುವ ತೆರೆದೆದೆಯ ಹುಡುಗಿಯರನ್ನು ನೋಡಬೇಕೆಂದ.. ಪಬ್‌ನಲ್ಲಿ ಕುಳಿತು ಬೀರನ್ನು ಹೀರಬೇಕೆಂದ.. ಆದರೆ ಅದಕ್ಕೆಲ್ಲ ತನ್ನಲ್ಲಿ ಹಣವಿಲ್ಲ, ಖರ್ಚು ಮಾಡುವುದಾದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಡೇವಿಡ್ ಹೇಳಿ ಅವನ ಬೇಡಿಕೆಯನ್ನು ಒಂದೇ ಮಾತಿನಲ್ಲಿ ನಿರಾಕರಿಸಿಬಿಟ್ಟ.

ಹತ್ತಿರದ ಖಾನಾವಳಿಯಲ್ಲಿ ಧಾರವಾಡ ಕಡೆಯ ರೊಟ್ಟಿ ಊಟ ಮಾಡಿಕೊಂಡು ಬಂದು ಮಲಗಿದವನಿಗೆ ನಿದ್ದೆ ಬರಲೇಯಿಲ್ಲ. ಡಾರ್ಜಿಲಿಂಗಿಗೆ ಹೋಗಿ ಬರೋಣ ಎಂದು ಪೀಡಿಸಲಾರಂಭಿಸಿದ. ತಾನು ಸಣ್ಣದೊಂದು ಕೆಲಸದಲ್ಲಿರುವುದರಿಂದ ಸುಲಭವಾಗಿ ರಜೆ ಸಿಗುವುದಿಲ್ಲ ಬರಲಾಗುವುದಿಲ್ಲ ಎಂದ ಡೇವಿಡ್. ಹಾಗಾದರೆ ತಾನೊಬ್ಬನೇ ಹೋಗಿ ಬರುತ್ತೇನೆ, ತನಗೆ ಒಂದು ಲಕ್ಷ ಸಾಲ ಕೊಡೆಂದ. ಒಂದು ಲಕ್ಷ!? ತನ್ನ ಜೀವಮಾನವಿಡೀ ದುಡಿದರೂ ಅಷ್ಟನ್ನು ಉಳಿಸಲು ಆಗದೆಂದ. ಹಾಗಾದರೆ ಯಾರ ಹತ್ತಿರವಾದರೂ ಸಾಲ ಕೊಡಿಸೆಂದ. ಕಂತಿನ ಮೇಲೆ ತೆಗೆದುಕೊಂಡ ಈ ಬೈಕು ಬಿಟ್ಟರೆ ಅಡ ಇಡಲೂ ತನ್ನ ಬಳಿ ಏನೂ ಇಲ್ಲ ಎಂದುಬಿಟ್ಟ..

ನಿರಾಶನಾದ ಚಂದ್ರಹಾಸ ಜೂಜಿನ ಕುದುರೆಯ ಮೋಜಿಗೆ ಬಿದ್ದು ಚಡಪಡಿಸಲಾರಂಭಿಸಿದ..

ಬೆಳಗ್ಗೆ ಎದ್ದ ಡೇವಿಡ್ ತನ್ನ ಪಕ್ಕ ಚಂದ್ರಹಾಸ ಇಲ್ಲದುದನ್ನು ಗಮನಿಸಿ ಬೆಳಗಿನ ವಾಕಿಂಗ್ ಹೋಗಿರಬಹುದೆಂದುಕೊಂಡ. ಸ್ನಾನ ಮಾಡಿ ಆಫೀಸಿಗೆ ಹೋಗಲು ಬೈಕ್‌ನ ಕೀ ಹುಡುಕಿದ. ಕಾಣದಾದಾಗ ಆತಂಕದಿಂದ ಆಚೆ ನಿಲ್ಲಿಸಿದ್ದ ಬೈಕನ್ನು ಹುಡುಕಾಡಿದ. ಇಲ್ಲೇ ಎಲ್ಲೋ ಹೋಗಿರಬಹುದೆಂದು ನಿರಾಳನಾಗಲು ಪ್ರಯತ್ನಿಸಿದ.. ಇವತ್ತು ಒಂದು ದಿನ ನೋಡಿ ನಾಳೆ ಬೆಳಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡುವುದೆಂದು ನಿರ್ಧರಿಸಿದ.

    ಬಸ್‌ನಲ್ಲಿ ಆಫೀಸಿಗೆ ಹೋದ ಡೇವಿಡ್ ಸಂಜೆ ಮನೆಗೆ ಬರುವ ವೇಳೆಗೆ ಸರಿಯಾಗಿ ಚಂದ್ರಹಾಸನ ಸವಾರಿಯೂ ರೂಮಿನ ಮುಂದೆ ಬಂದು ನಿಂತಿತು. ಕುದುರೆಯ ಜೀನನ್ನು ಜೀಕುತ್ತಾ ಬಂದ ಚಂದ್ರಹಾಸ ತನ್ನನ್ನು ತಾನು ಹಳೇ ಕಾಲದ ರಾಜಕುಮಾರನೆಂದುಕೊಂಡುಬಿಟ್ಟಿದ್ದ. ಮೀಸೆ ಮೇಲೆ ಕೈಯ್ಯಾಡಿಸುತ್ತ, ತನ್ನ ಸರಿಸಮಾನ ಯಾರೂ ಓಡಲು ಸಾಧ್ಯವಿಲ್ಲವೆಂಬಂತೆ ಬೀಗಿದ. ಜೀವವಿರದ ನಿನ್ನ ಬೈಕಿಗಿಂತ ಇದು ಶ್ರೇಷ್ಠ ಎಂಬಂತೆ, ನಿನ್ನ ಬೈಕಿಗೆ ಹಾಕುವ ಪೆಟ್ರೋಲಿಗಿಂತ ಇದಕ್ಕೆ ಹಾಕುವ ಹುಲ್ಲು ಹಿಂಡಿಯ ಬೆಲೆಯೇ ಕಡಿಮೆ ಎಂಬಂತೆ ಹುಬ್ಬು ಹಾರಿಸಿ 'ಹೆಂಗೆ?' ಎಂದಂದು ಹೆಗಲು ಕುಣಿಸಿದ. ಬಡಕಲು ದೇಹದ ಆ ಕುದುರೆಯನ್ನು ಗುಟ್ಟಹಳ್ಳಿ ಸರ್ಕಲ್ಲಿನ ಜಟಕಗಾಡಿಯವನ ಬಳಿ ಬೈಕಿಗೆ ಸಾಟಿ ಮಾಡಿಕೊಂಡು ಬಂದಿರುವುದಾಗಿಯೂ, ಒಂದೆರಡು ತಿಂಗಳಲ್ಲಿ ಇದಕ್ಕೆ ಚೆನ್ನಾಗಿ ಮೇವು ಹಾಕಿ ಕೊಬ್ಬಿಸಿ, ರೇಸಿಗೆ ಬಿಡುವುದಾಗಿಯೂ ಹಾಗೂ ಕೆಲವೇ ದಿನಗಳಲ್ಲಿ ಬೈಕನ್ನು ಬಿಡಿಸಿಕೊಡುವುದಾಗಿಯೂ, ಬೇಡವೆಂದರೆ ವರುಷದೊಳಗೆ ಬೈಕಿಗೆ ಬದಲಾಗಿ ಕಾರನ್ನೇ ಉಡುಗೊರೆಯಾಗಿ ಕೊಡಿಸುವುದಾಗಿ ಒಳ್ಳೆ ಪ್ರೊಫೆಷನಲ್ ರಾಜಕಾರಣಿಯಂತೆ ಕೇಳದೆಯೇ ಆಶ್ವಾಸನೆ ಕೊಡಲಾರಂಭಿಸಿದ.

    'ನೀನು ಯಾಕೆ ಸಿಟ್ಟಾಗಿದ್ದೀಯಾ ಅಂತ ಗೊತ್ತು ಮಾರಾಯ... ನಾನು ಜೂಜಾಟಕ್ಕೆ ಹೋಗಿ ಹಣ ಕಳಕೊಂಡು ಬರ್‍ತೀನಿ ಅಂತ ಅಲ್ವಾ?... ನಾನು ಬೇರೆಯವರ ಥರಾ ಅಲ್ಲ... ನಾನೇ ಬೇರೆ, ನನ್ನ ಸ್ಟೈಲೇ ಬೇರೆ... ' ಅಂತಂದು ಒಂದು ಕ್ಷಣ ಸುಮ್ಮನಾದವನು, ಹೇಳದೇ ಕೇಳದೇ ಕುದುರೆಯನ್ನು ಓಡಿಸಿಕೊಂಡು ಹೊರಟೇಬಿಟ್ಟ. ಕಂಪ್ಲೆಂಟ್ ಕೊಡಬೇಕೆಂದುಕೊಂಡಿದ್ದ ಡೇವಿಡ್‌ನಿಗೆ, ಅವನು ಬಂದುಹೋಗದೇ ಇದ್ದಿದ್ದರೇ ಚೆನ್ನಾಗಿತ್ತು ಅನ್ನಿಸಿ, ಮುಂದೆ ಏನು ಮಾಡಬೇಕೆಂದು ತೋಚದೇ ಪರಿತಪಿಸಿದ.

ಕುದುರೆ ಓಡಿಸಿಕೊಂಡು ಊರಿಗೆ ಹೋದ ಚಂದ್ರಹಾಸ ಅದಕ್ಕೆ ರಾಜಮರ್ಯಾದೆ ನೀಡುವಂತೆ ಕೆರೆಯಲ್ಲಿ ಶಾಂಪೂ ಹಾಕಿ ಮಿರಮಿರನೇ ಮಿಂಚುವಂತೆ ಸ್ನಾನ ಮಾಡಿಸಿದ. ಬ್ಯೂಟಿ ಪಾರ್ಲರಿನಲ್ಲಿ ಹುಡುಗಿಯರು ಜುಟ್ಟು ಕತ್ತರಿಸಿಕೊಳ್ಳುವಂತೆ ಅದರ ಬಾಲದ ಕೂದಲನ್ನು ಕತ್ತರಿಸಿ ಟ್ರಿಮ್ ಮಾಡಿದ. ಕೆಂಪುದೇಹದ ಅದರ ಕುತ್ತಿಗೆಯ ಮೇಲಿನ ಕಪ್ಪುಕೂದಲನ್ನು ಸಿನಿಮಾ ಹೀರೋನ ಹಿಪ್ಪಿ ಕಟಿಂಗ್‌ನಂತೆ ಗಾಳಿಗೆ ಆಕರ್ಷಕವಾಗಿ ಹಾರುವಂತೆ ರೂಪಿಸಿದ. ಅಸ್ಥಿಪಂಜರವಾಗಿದ್ದ ಅದರ ಮೈತುಂಬಾ ಬಿಗಿದ ಮಾಂಸಖಂಡಗಳು ಸ್ಫರಿಸುವಂತೆ ಬರೀ ಹಸೀಹುಲ್ಲು, ಶೇಂಗಾಹಿಂಡಿಯನ್ನು ಹಾಕಿ ತಿನ್ನಿಸಿ ಕೊಬ್ಬಿಸಿದ. ತಿಂಗಳೊಳಗೆ ಬಡಕಲು ಕುದುರೆಯನ್ನೂ ರಾಜಠೀವಿಯ ಕುದುರೆಯನ್ನಾಗಿ ಪರಿವರ್ತಿಸಿದ.

ಎಂಟು ಹತ್ತು ಸಾವಿರ ಬಾಳುವ ಕುದುರೆಯನ್ನು ರೇಸ್‌ಕೋರ್ಸ್ ಬಳಿಗೆ ಹೊಡೆದುಕೊಂಡು ಹೋದ. ಅದನ್ನು ಅಕಸ್ಮಾತ್ತ್ತಾಗಿ ಕಂಡ ಸಾಹುಕಾರನೊಬ್ಬ ಹತ್ತು ಲಕ್ಷ ಕೊಡುತ್ತೇನೆ ಕೊಡು ಎಂದರೂ ಕೊಡುವುದಿಲ್ಲವೆಂದುಬಿಟ್ಟ!

ಜಾಕಿಯೊಬ್ಬನನ್ನು ಪರಿಚಯ ಮಾಡಿಕೊಂಡ. ಆ ಟ್ರಾಕ್‌ನಲ್ಲಿ ಪ್ರಾಕ್ಟೀಸು ಮಾಡಲು ಅವಕಾಶ ಕೊಡುವುದಿಲ್ಲವೆಂದು ತಿಳಿದು, ಊರಾಚೆಯ ಬಯಲಿಗೆ ಡಬಲ್ ರೈಡಿಂಗ್‌ನಲ್ಲಿ ಅವನನ್ನು ಕರೆದುಕೊಂಡು ಹೋಗಿ ಕುದುರೆ ಓಟಕ್ಕೆ ಸಂಬಂಧಿಸಿದ ಪಟ್ಟುಗಳನ್ನೆಲ್ಲ ಕಲಿತುಕೊಂಡ. ತಮ್ಮ ಹಳ್ಳಿಯಲ್ಲಿ ದೀಪಾವಳಿಗೆ ಕುದುರೆ ಓಡಿಸುವ ಹಾಗೂ ಜಟಕಾಗಾಡಿ ಓಡಿಸುವ ಸ್ಪರ್ಧೆ ಇರುವುದರಿಂದ ಕಲಿಯುತ್ತಿರುವುದಾಗಿ ಅವನಿಗೆ ಸಮಯಕ್ಕೊಂದು ಸುಳ್ಳು ಹೇಳಿದ.

ರಾಜಕಾರಿಣಿಯೊಬ್ಬರನ್ನು ಹಿಡಿದು ಕುದುರೆ ಮುಖ್ಯವಲ್ಲ, ಅದನ್ನು ಓಡಿಸುವ ಜಾಕಿ ಮುಖ್ಯ ಎಂದು ಅವರನ್ನು ಪ್ರಚೋದಿಸಿದ. ಕುದುರೆಯೂ ನನ್ನದು, ಜಾಕಿಯೂ ನಾನೇ, ರೇಸಿನಲ್ಲಿ ಅವಕಾಶ ಕೊಡಿಸುವುದು ಮಾತ್ರ ನಿಮ್ಮದು ಎಂಬ ಷರತ್ತಿನ ಮೇಲೆ ಬಂದ ಲಾಭದಲ್ಲಿ ೫೦:೫೦ ಸೂತ್ರದಂತೆ ಪಾರ್ಟ್‌ನರ್ ಮಾಡಿಕೊಂಡು ಅವರ ಶಿಫಾರಸ್ಸಿನಿಂದ ರೇಸಿನ ಒಳಸೇರಲು ಒಂದು ದಾರಿ ಮಾಡಿಕೊಂಡ. ಆ ಕೆಂಪುಕುದುರೆಗೆ ಒಂದು ಆಕರ್ಷಕ ಹೆಸರು ಬೇಕೆಂದು ಅನ್ನಿಸಿ ಮೂಲ ಬಂಡವಾಳ ಹೂಡಿದ ಡೇವಿಡ್‌ನ ನೆನಪಿನಲ್ಲಿ ನೆಪೋಲಿಯನ್ ಎಂದು ಹೆಸರಿಟ್ಟ.

ಲಿಸ್ಟ್‌ನಲ್ಲಿ ಹೆಸರೇ ಇಲ್ಲದ ಅದು ಸೋತುಹೋಯಿತು. ಆದರೆ ಸೋತದ್ದು ಅದಲ್ಲ, ತಾನು ಎಂಬ ಛಲ ಮೂಡಿಸಿಕೊಂಡು ಮತ್ತೆ ಮತ್ತೆ ಅಭ್ಯಾಸ ನಡೆಸಿದ. ಎಷ್ಟೋ ದಿನಗಳ ಮೇಲೆ ಮತ್ತೊಂದು ಅವಕಾಶ ಪಡೆದುಕೊಂಡ. ಈ ಬಾರಿ ಅನಿರೀಕ್ಷಿತ ಫಲಿತಾಂಶ ಬಂದು ಜನ ಕೇಕೆ ಹೊಡೆದರು. ಯಾರೂ ಬಿಡ್ ಮಾಡದ ನೆಪೋಲಿಯನ್ ಸಾಕಷ್ಟು ಲಾಭ ಗಳಿಸಿತು. ಲಿಸ್ಟ್‌ನಲ್ಲೂ ಶಾಶ್ವತ ಸ್ಥಾನ ಗಳಿಸಿಕೊಂಡಿತು.

ಮುಂದಿನ ಸಲ ಸಾವಿರಾರು ಜನ ನೆಪೋಲಿಯನ್‌ನ ಹೆಸರಿನಲ್ಲೂ ಲಕ್ಷಾಂತರ ಬಿಡ್ ಕಟ್ಟಿದರು. ನೆಪೋಲಿಯನ್ ಮತ್ತೆ ಮತ್ತೆ ಗೆದ್ದುಬಿಟ್ಟಿತು. ಕುದುರೆಯ ಜೊತೆಗೆ ಜಾಕಿ ಚಂದ್ರಹಾಸನೂ ಜನಪ್ರಿಯತೆ ಗಳಿಸಿಬಿಟ್ಟ. ಕೂಡಲೇ ಪಾರ್ಟ್‌ನರ್‌ಶಿಪ್ ತೊರೆದುಕೊಂಡ ಚಂದ್ರಹಾಸ, ತನ್ನ ಕಂಪೆನಿಗೆ ನೆಪೋಲಿಯನ್‌ನ ಬಣ್ಣದ ನೆಪದಲ್ಲಿ 'ರೆಡ್ ಹಾರ್ಸ್' ಎಂದು ಹೆಸರಿಟ್ಟುಕೊಂಡು, ದಮ್ಮು ಕಟ್ಟಿಕೊಂಡು ಬಾಲ ನಿಗರಿಸಿ ಓಡುವ ಕೆಂಪು ಕುದುರೆಯ ಲಾಂಛನ ಮಾಡಿಕೊಂಡು, ಬಂದ ಲಾಭದಲ್ಲಿ ಇನ್ನೊಂದು, ಮತ್ತೊಂದು ಎನ್ನುವಂತೆ ಕುದುರೆಗಳನ್ನು ಕೊಂಡು ರೇಸಿಗೆ ಬಿಟ್ಟ. ಜಾಕಿಯರನ್ನು ನೇಮಿಸಿಕೊಂಡು ಅದನ್ನೇ ದಂಧೆಯಂತೆ ನಡೆಸಲಾರಂಭಿಸಿದ..

ಈ ನಾಲ್ಕೈದು ವರ್ಷಗಳಲ್ಲಿ, ಮಲಗುವುದನ್ನು ಕಲಿತಿಲ್ಲದ ಆ ಕುದುರೆಯಂತೆಯೇ ಅಡ್ಡಾಡುತ್ತ, ಹತ್ತಾರು ದೇಶಗಳಿಗೆ ರೇಸುಗಳಿಗೆಂದು ಹೋಗಿಬಂದ. ಅವುಗಳನ್ನೆಲ್ಲ ನೋಡಿದ ಮೇಲೆ, ಅವುಗಳಲ್ಲೆಲ್ಲ್ಲ ಭಾಗವಹಿಸಿದ ಮೇಲೆ, ಡಾರ್ಜಿಲಿಂಗ್ ರೇಸು ನೋಡಬೇಕೆಂಬ ಅವತ್ತಿನ ಕನಸು ಇವತ್ತು ಬಾಲಿಶವಾಗಿ ಕಾಣಲಾರಂಭಿಸಿತು.
ಡಾರ್ಜಿಲಿಂಗ್ ನೆನಪಾಗುತ್ತಿದ್ದಂತೆಯೇ ಯಾಕೋ ಡೇವಿಡ್ ನೆನಪಾದ.
ತನ್ನ ಕಾರನ್ನು ಏರಿ, ಡೇವಿಡ್ ಇದ್ದ ಕೊಂಪೆಯತ್ತ ಹೋಗುವಂತೆ ಡ್ರೈವರ್‌ಗೆ ಹೇಳಿದ. ಒಬ್ಬ ಅಪರೂಪದ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇನೆ, ಬಾ ಎಂದು ಹೆಂಡತಿಯನ್ನೂ ಜತೆಗೆ ಕರೆದುಕೊಂಡ. ಯಾಕೋ ತನ್ನ ರೋಲ್ಸ್‌ರಾಯ್ಸ್ ಕಾರಂತಹ ಕೆಂಪು ಕಾರೂ ಅವತ್ತು ಕುದುರೆಯಲ್ಲಿ ಡೇವಿಡ್‌ನ ರೂಮಿಗೆ ಹೋದಾಗ ಕೊಟ್ಟಂತಹ ಖುಷಿಯನ್ನು ಕೊಡಲಿಲ್ಲ.
ಚಂದ್ರಹಾಸ ತನ್ನ ಎಂದಿನ ಶೈಲಿಯಲ್ಲಿ ಏಕವಚನದಲ್ಲಿ ಗೆಳೆಯನನ್ನು ಕರೆದರೂ ಡೇವಿಡ್ ಗುರುತಿಸದಾದ. ಯಾವುದೋ ಶ್ರೀಮಂತ ಮಾರವಾಡಿಯಂತಹ ಬಿಳಿಯ ಶೇರ್ವಾನಿ..., ಮಾಜಿ ಚಿತ್ರನಟಿಯಂತೆ ಮೈಬೆಳೆಸಿಕೊಂಡ ಗುಜರಾತಿ ಹೆಂಡತಿ..., ದೊಡ್ಡ ಕಾರಿನ ಡೋರಿನ ಪಕ್ಕ ಏರ್‌ಇಂಡಿಯಾದ ಲೋಗೋ ನಮ್ರಸೇವಕನ ಥರಾ ಒಡೆಯನ ಆಜ್ಞೆಗಾಗಿ ಬೆನ್ನುಬಾಗಿಸಿ ಕಾದು ನಿಂತಿರುವ ಡ್ರೈವರ್... 
'ಏ.. ನಾನೋ.., ಚಂದ್ರಹಾಸ..' ಎಂದಾಗ ಡೇವಿಡ್‌ಗೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಅವತ್ತು ಕುದುರೆಯ ಬಾಲಕ್ಕೆ ಗಂಟುಬಿದ್ದು ಬೈಕನ್ನ ಕದ್ದುಕೊಂಡು ಹೋದ ಗೆಳೆಯ ಇವನೇನಾ ಅನ್ನಿಸಿಬಿಟ್ಟಿತು. ಅಪಾರ ಆಶ್ಚರ್ಯ, ಅಭಿಮಾನದಿಂದ ಒಳಗೆ ಕರೆದುಕೊಂಡು ಹೋದ. ಅಲ್ಲಿ ಒಂದು ಹಳೇ ನೈಟಿ ಹೊತ್ತ ಹೆಂಡತಿ, ಗೊಣ್ಣೆ ಸುರಿಸುವ ಅಸ್ಥಿಪಂಜರದಂತಹ ಎರಡು ಮಕ್ಕಳು... ಚಂದ್ರಹಾಸನ ಹೆಂಡತಿ ತನ್ನ ಬಾತ್‌ರೂಮಿನಷ್ಟಗಲದ ಆ ಮನೆಯ ಕಮಟು ವಾಸನೆಗೆ ಮೂಗು ಮುರಿದಳು. ಮನುಷ್ಯರು ಇಂತಹ ಮನೆಗಳಲ್ಲೂ ವಾಸಿಸುತ್ತಾರೆಯೇ ಎಂದು ಅತ್ಯಾಶ್ಚರ್ಯಗೊಂಡಳು. ಯಾವುದೋ ದೊಡ್ಡ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇನೆಂದು ಹೇಳಿ ಇಲ್ಲಿಗೆ ಕರೆದುಕೊಂಡು ಬಂದ ಗಂಡನ ವರ್ತನೆ ಬಗ್ಗೆ ಅಸಹ್ಯವೆನಿಸಿತು. ಆತ ಡೇವಿಡ್‌ನೊಂದಿಗೆ ಮೈಮರೆತು ಮಾತಾಡುತ್ತಿದ್ದರೆ ಬೋರು ಹೊಡೆದ ಆಕೆ ಹೋಗಿ ಕಾರಲ್ಲಿ ಡಿ.ವಿ.ಡಿ. ನೋಡಿಕೊಂಡು ಕುಂತಳು.
ಈವರೆಗೂ ಇನ್ನೊಂದು ಬೈಕ್ ಕೊಳ್ಳಲಾಗದೇ ಬಸ್ಸಿನಲ್ಲಿ ಓಡಾಡುತ್ತಿರುವ ಡೇವಿಡ್‌ನ ಅವಸ್ಥೆಗೆ ಕ್ಷಮೆ ಕೇಳಿದ ಚಂದ್ರಹಾಸ. ತನ್ನ ಬಳಿಯಿರುವ ಇನ್ನೊಂದು ಕಾರು ಹಾಗೂ ಡ್ರೈವರ್‌ನನ್ನು ಕಳಿಸಿಕೊಡುವುದಾಗಿ ಎಷ್ಟು ಹೇಳಿದರೂ ಆತ ಒಪ್ಪಲೇಯಿಲ್ಲ. ತಾನು, ತನ್ನ ಮನೆ, ತನ್ನ ಕುಟುಂಬಕ್ಕೆ ಅದೆಲ್ಲ ಮುರುಕಲು ದೇವಸ್ಥಾನಕ್ಕೆ ಚಿನ್ನದ ಲೇಪನ ಮಾಡಿದಂತಾಗುತ್ತದೆಯೆಂದು ಬೇಡವೆಂದ. ಹಳೇ ಕಾರೆಂದು ಬೇಡವೆನ್ನುತ್ತಿದ್ದಾನೆಂದುಕೊಂಡು ಹೊಸ ಕಾರನ್ನೇ ಕೊಡಿಸುತ್ತೇನೆ, ಬಾ ಎಂದು ಬಲವಂತ ಮಾಡಿ ಎಳಕೊಂಡು ಹೋದ. ಆದರೆ ಡೇವಿಡ್ ತನ್ನ ಹಳೇ ಸುಝುಕಿಯಂತದೇ ಹೊಸ ಬೈಕನ್ನು ಮಾತ್ರ ಕೊಡಿಸಿಕೊಂಡ.
?
ದಿನ ಕಳೆದಂತೆ ಚಂದ್ರಹಾಸನ ಕುದುರೆಗಳ ಸಂಖ್ಯೆ ಹದಿನೈದು ಇಪ್ಪತ್ತಕ್ಕೆ ಏರಿತು. ದೊಡ್ಡ ವ್ಯಾಪಾರಿ ಬೇರೆ ಬೇರೆ ಊರುಗಳಲ್ಲಿ ತನ್ನ ಶಾಖೆಗಳನ್ನು ತೆರೆಯುವಂತೆ ಅನೇಕ ಕಡೆ ತನ್ನ ಪಡೆಯನ್ನು ನೇಮಿಸಿಕೊಂಡ. ಒಂದೇ ಹೆಸರಿನಲ್ಲಿದ್ದರೆ ಆದಾಯ ತೆರಿಗೆ, ಅದೂ ಇದೂ ಸಮಸ್ಯೆ ಅಂತ ಹೆಂಡತಿ, ಮಕ್ಕಳ ಹೆಸರಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಆತ್ಮೀಯರ ಹೆಸರಿನಲ್ಲಿ ಕುದುರೆಗಳ ಮಾಲೀಕತ್ವ ತೋರಿಸಿಕೊಂಡ. 
ಒಂದು ಸಲ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರೇಸಿನಲ್ಲಿ ಕಾಕತಾಳೀಯವೆಂಬಂತೆ ಓಡಿದ ಎಂಟೂ ಕುದುರೆಗಳೂ ಇವನವೇ ಆಗಿದ್ದವು. ಇದುವರೆಗೂ ಈತನ ಉನ್ನತಿಯನ್ನು ಅಸಹನೆಯಿಂದಲೇ ಸಹಿಸಿಕೊಂಡಿದ್ದ, ಇತರೆ ಮಾಲೀಕರೆಲ್ಲ ದೊಡ್ಡ ಸ್ಕ್ಯಾಂಡಲ್‌ನ್ನು ಕಂಡುಹಿಡಿದವರಂತೆ ಒಗ್ಗಟ್ಟಾದರು. ಬೇನಾಮಿ ಹೆಸರಿನಲ್ಲಿ ಕುದುರೆಗಳನ್ನು ಹೊಂದಿರುವ ಚಂದ್ರಹಾಸ, ತನ್ನವೇ ಕುದುರೆಗಳನ್ನು ಓಡಿಸಿ, ಕ್ರೀಡಾ ಮನೋಧರ್ಮಕ್ಕೆ ಅಪಚಾರ ಎಸಗುತ್ತಿರುವುದಾಗಿಯೂ, ಅದೇ ವೇಳೆ ಸರ್ಕಾರಕ್ಕೂ ಸಾರ್ವಜನಿಕರಿಗೂ ಏಕಕಾಲಕ್ಕೆ ಮೋಸ ಮಾಡುತ್ತಾ ಎಲ್ಲಾ ಲಾಭವನ್ನೂ ತಾನೊಬ್ಬನೇ ಗಳಿಸುತ್ತಿರುವುದಾಗಿಯೂ ಕ್ಲಬ್ ಮುಂದೆ ದೂರನ್ನು ನೀಡಿದರು. ಚಂದ್ರಹಾಸ ಇದ್ದಾಗ ಅತ್ಯಂತ ಆತ್ಮೀಯರಂತೆ ಫೋಸು ಕೊಡುತ್ತಿದ್ದ ಅವರೆಲ್ಲ, ಅವನಿಲ್ಲದ ಮೀಟಿಂಗ್‌ನಲ್ಲಿ ತಮ್ಮದು ಶತಮಾನಗಳ ಕಾಲದ ವೈರತ್ವವೇನೋ ಎಂಬಂತೆ ಬ್ಲಾಕ್‌ಲೀಸ್ಟ್ ಮಾಡಲು ಕ್ರಮ ತೆಗೆದುಕೊಳ್ಳಲೇಬೇಕೆಂದು ಪಟ್ಟುಹಿಡಿದರು.
ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪತ್ರಿಕೆಯಲ್ಲಿ ಅಪಪ್ರಚಾರ ಮಾಡಲು ಕಾರಣವಾದ ಕಾಣದ ಕೈ ಚಂದ್ರಹಾಸನದೇ ಎಂದು ಕ್ರೀಡಾಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ತಮ್ಮ ವಿರುದ್ಧವೇ ಕತ್ತಿ ಮಸೆಯುತ್ತ, ತಮ್ಮನ್ನೇ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಮಸಲತ್ತು ಮಾಡುತ್ತಿರುವ ಅವನನ್ನು ಸುಮ್ಮನೇ ಬಿಡಬಾರದು ಎಂದು ಪ್ರಚೋದಿಸಿದರು. ಎಂದೂ ಕ್ರೀಡೆಯನ್ನೇ ಆಡಿರದ ಕ್ರೀಡಾಮಂತ್ರಿಯಾದರೋ, ತನ್ನೆಲ್ಲ ವೈಫಲ್ಯಗಳಿಗೆ ಚಂದ್ರಹಾಸನೇ ಕಾರಣವೆಂಬಂತೆ, ಇದೇ ನೆಪ ಇಟ್ಟುಕೊಂಡು ಅವನನ್ನೂ ಹಾಗೂ ಅವನ ಕುದುರೆಗಳನ್ನೂ ರೇಸಿನಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿಬಿಟ್ಟ.
ತನ್ನ ವಿರುದ್ಧ ನಡೆಯುತ್ತಿರುವ ಮಸಲತ್ತಿನ ಬಗ್ಗೆ ಏನೇನೂ ಅರಿಯದ ಚಂದ್ರಹಾಸ ಮಂಕಾಗಿ ಕುಂತ. ಅನೇಕ ದೇವಸ್ಥಾನಗಳು, ತೀರ್ಥಕ್ಷೇತ್ರಗಳಿಗೆಲ್ಲ ಹೋಗಿ ಪೂಜೆ ಮಾಡಿಸಿದ. ಕಾಣದ ದೇವರುಗಳಿಗೆಲ್ಲ ಕಾಯಿ ಒಡೆಸಿದ. ಕಂಡ ಕಂಡ ಜೋತಿಷಿಗಳ ಕಾಲಿಗೆಲ್ಲ ಬಿದ್ದು, ಏಕೆ ಹೀಗಾಯಿತೆಂದು ವಿಚಾರಿಸಿದ. ಗುರು ಮತ್ತು ಶುಕ್ರ ಗ್ರಹಗಳನ್ನು ಶನಿ ಮತ್ತು ರಾಹುಗಳು ದಿಟ್ಟಿಸಿ ನೋಡುತ್ತಿರುವುದರಿಂದ ಹೀಗಾಗಿದೆಯೆಂದು ಏನೋ ಒಂದು ಸಮಜಾಯಿಷಿ ನೀಡಿದ ಅವರು ಏನೆಲ್ಲ ಶಾಂತಿ ಮಾಡಿಸಬೇಕೆಂದು ವಿವರಿಸಿ, ಅದಕ್ಕೆಲ್ಲ ಸಾಕಷ್ಟು ಹಣ ಸುಲಿದು ತಾವು ಮಾತ್ರ ಶ್ರೀಮಂತರಾದರು.
ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಮಂತ್ರಿಗಳಿಗೆ ಯಾರು ಯಾರಿಂದಲೋ ಶಿಫಾರಸ್ಸು ಮಾಡಿಸಿದ. ತಾವು ತಿಳಿದಂತೆ ಪತ್ರಿಕೆಯಲ್ಲಿ ವರದಿಯಾದದ್ದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ. ಹೇಳಿದ ದಿನಗಳಿಗೆಲ್ಲ ಆತನ ಮನೆಬಾಗಿಲಿಗೆ ಅಲೆದು, ನಿರ್ಬಂಧ ತೆರವಿಗೆ ಅಂತ ಆತ ಕೇಳಿದಂತೆ ಕೋಟಿಗಳ ಲೆಕ್ಕದಲ್ಲಿ ದುಡ್ಡು ಹೊಂದಿಸಿಕೊಟ್ಟ. ಎಂತಹವರನ್ನೂ ಮರುಳುಮಾಡಿ ಡೀಲ್ ಮಾಡುವ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದ ಚಂದ್ರಹಾಸನ ಬಗ್ಗೆ ಮನಸ್ಸು ಬದಲಾಯಿಸಿದ ಮಂತ್ರಿಗಳು ಇನ್ನೇನು ಕಡತಕ್ಕೆ ಸಹಿ ಹಾಕಬೇಕು ಎನ್ನುವ ಕಾಲಕ್ಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮರುಕಳಿಸಿ ಸರ್ಕಾರ ಉರುಳಿಬಿತ್ತು!
ಚಂದ್ರಹಾಸ ಕಂಗಾಲಾಗಿ ಹೋದ. ಮತ್ತೆ ಚುನಾವಣೆ ನಡೆದು, ಮುಂದಿನ ಆ ಸರ್ಕಾರ ಅಸ್ಥಿತ್ವಕ್ಕೆ ಬಂದು, ಅದರಲ್ಲಿ ಯಾರು ಕ್ರೀಡಾ ಮಂತ್ರಿಯಾಗುತ್ತಾರೋ ನೋಡಿ, ಅವರಿಗೆ ಹತ್ತಿರವಾದವರನ್ನು ಹಿಡಿದು, ಅವರಿಗೆ ಮತ್ತೆ ಏಳಂಕಿಯ ಹಣ ಹೊಂದಿಸಿಕೊಟ್ಟು... ಅಯ್ಯಯ್ಯಪ್ಪ... ಯಾಕೋ ತನ್ನ ಗ್ರಹಚಾರವೇ ಸರಿಯಿಲ್ಲ ಎಂದು ಅಂತರ್ಮುಖಿಯಾದ.
ಅಲ್ಲಿಯವರೆಗೆ ಬೇರೆ ಏನಾದರೂ ದಂಧೆ ಮಾಡೋಣವೆಂದು ಎಷ್ಟೇ ಯೊಚಿಸಿದರೂ ತನಗೆ ತಿಳಿದ ಬೇರೆ ಯಾವುದೇ ಕೆಲಸವೂ ಹೊಳೆಯಲಿಲ್ಲ. ಅಲ್ಲದೇ ಬೇರೆ ಯಾವುದರಲ್ಲೂ ಈ ಪ್ರಮಾಣದ ಲಾಭ ಬರುವುದಿಲ್ಲವೆಂಬ ಅರಿವೂ ಅವನಿಗಿತ್ತು. ತನಗೆ ಮೋಸ ಮಾಡಿದವರ ಎದುರು ಮೀಸೆ ಮಣ್ಣಾಗಿಸಿಕೊಳ್ಳಬಾರದು ಎಂಬ ಹಠ ಬೇರೆ ಅಡ್ಡಬರುತ್ತಿತ್ತು. ಮತ್ತು ಎಲ್ಲಿ ಕಳೆದುಕೊಂಡಿರುತ್ತೇವೆಯೋ ಅಲ್ಲೇ ಹುಡುಕಬೇಕು ಎಂಬ ಸಿದ್ಧಾಂತ ಹೇಳುವವರ ಉಪದೇಶ ಬೇರೆ. ಈವತ್ತು ಸರಿಹೋಗುತ್ತದೆ, ನಾಳೆ ಸರಿಹೋಗುತ್ತದೆಯೆಂದು ಕುದುರೆಯ ಖರ್ಚೂ, ಜಾಕಿಗಳ ಖರ್ಚೂ ಸರಿದೂಗಿಸುತ್ತಲೇ ಹೋದ. ಕಾದೂ ಕಾದು ತಿಂಗಳು, ವರುಷಗಳು ಉರುಳಿಹೋದವೇ ಹೊರತು ಯಾವುದೇ ಬದಲಾವಣೆಯಿಲ್ಲದೇ ಯಥಾಸ್ಥಿತಿ ಮುಂದುವರೆಯಿತು.
ಕುಂತು ಉಂಡರೆ ಕುಡಿಕೆ ಹೊನ್ನೂ ಸಾಲದು ಎಂಬಂತೆ, ಕುದುರೆ ಮತ್ತು ಜಾಕಿಗಳನ್ನು ಸಾಕುವುದೂ ಮೈಮೇಲೆ ಬರಲಾರಂಭಿಸಿತು. ಒಂದೊಂದೇ ಮಾರಲಾರಂಭಿಸಿದ. ತನ್ನ ಮೂಲದ ನೆಪೋಲಿಯನ್‌ನನ್ನು ಮಾತ್ರ ಲಕ್ಕಿ ಕುದುರೆಯೆಂದು ಇಟ್ಟುಕೊಂಡು ಉಳಿದವನ್ನೆಲ್ಲ ಕ್ರಮೇಣ ಒಂದೊಂದಾಗಿ ಮಾರಲಾರಂಭಿಸಿದ. ಅದಕ್ಕೂ ಕಾಲಕ್ಕೆ ಸರಿಯಾಗಿ ಉತ್ತಮ ಆಹಾರ ಕೊಡಲಾಗದೇ ಕ್ರಮೇಣ ಜಟಕಾಗಾಡಿ ಓಡಿಸುತ್ತಿದ್ದಾಗಿನ ಸ್ಥಿತಿಗೇ ಬಂದಿಳಿಯಿತು. ಸಂಬಳ ಸರಿಯಾಗಿ ಕೊಡುತ್ತಿಲ್ಲವೆಂದು ಅದರ ಜಾಕಿಯೂ ಕೆಲಸ ಬಿಟ್ಟ. ಸರಿಯಾಗಿ ಬಾಡಿಗೆ ಕೊಡುತ್ತಿಲ್ಲವೆಂದು ಲಾಯದವರೂ ಕುದುರೆಯನ್ನು ಹೊರಹಾಕಿದರು. ಟರ್ನ್‌ಓವರ್ ಚೆನ್ನಾಗಿದ್ದಾಗ ಕೋಟಿಗಟ್ಟಲೇ ದುಡ್ಡಿರುತ್ತಿದ್ದ ತಾನೂ, ಇಷ್ಟು ಬೇಗ ಈ ಸ್ಥಿತಿಗೆ ತಲುಪಬಹುದೆಂಬುದನ್ನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ.
ದುಡ್ಡಿರುತ್ತಿದ್ದಾಗ ಬರದ ಆಲೋಚನೆಗಳು ಕೈ ಖಾಲಿಯಾದಾಗ ಬರಲಾರಂಭಿಸಿದವು. ಒಂದು ಕನ್ಸಲ್ಟೇಷನ್ ಆಫೀಸ್ ಮಾಡಿ, ತನ್ನ ಆಲೋಚನೆಗಳನ್ನ ದುಡ್ಡಿಗೆ ಮಾರಬಹುದಲ್ಲ ಎಂದೂ ಅನ್ನಿಸಿತು. ಆದರೆ ಸ್ವಂತ ಜೀವನದಲ್ಲಿ ಫೇಲಾದ ತನ್ನ ಸಲಹೆಗಳನ್ನು ಸ್ವೀಕರಿಸುವರೇ ಎಂಬ ಅನುಮಾನವೂ ಬಂತು. ಈ ಸ್ಥಿತಿಗೆ ತಂದ, ತನ್ನ ವಿರುದ್ಧ ಮಸಲತ್ತು ಮಾಡಿದವರನ್ನೆಲ್ಲ ಹತಾಶೆಯಿಂದ ಕೊಂದುಬಿಡಬೇಕು ಅನ್ನಿಸಿತು. ಅದರಿಂದೇನು ಪ್ರಯೋಜನ -ತಾನು ಜೈಲು ಸೇರಬೇಕಾಗುತ್ತದೆಯಷ್ಟೇ ಎಂದು ಸುಮ್ಮನಾದ. ಅದೇ ವೇಳೆಗೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಇಡೀ ಉದ್ಯಮವೇ ನಷ್ಟ ಅನುಭವಿಸುವಂತಾದ್ದರಿಂದ ವಿಕೃತ ಖುಷಿ ಅನುಭವಿಸಿದ. ಯಾರಿಗೂ ಮೋಸ ಮಾಡದ ತನಗೆ ಮೋಸ ಮಾಡಿದ ಯಾರನ್ನೂ ದೇವರು ಶಿಕ್ಷಿಸದೇಬಿಟ್ಟಿಲ್ಲ ಎಂದು ಸಮಾಧಾನಗೊಂಡ.
ಉಳಿದಿದ್ದ ಆ ಒಂದು ಕುದುರೆಯನ್ನು ಯಾಕೋ ಸಾಯಿಸಲು ಮನಸ್ಸು ಬಾರದೇ ಜಟಕಾಗಾಡಿಯ ಸಾಬಿಗೇ ಹಿಂದಿರುಗಿಸಿಬಿಡೋಣವೆಂದುಕೊಂಡು ಹುಡುಕುತ್ತ ಗುಟ್ಟಹಳ್ಳಿಗೆ ಬಂದ ಚಂದ್ರಹಾಸ. ಬದಲಾದ ಕಾಲಕ್ಕೆ ತಕ್ಕಂತೆ ಅಲ್ಲಿ ಆಗಲೇ ಯಾವುದೇ ಗಾಡಿಗಳಿಗೂ ಬೇಡಿಕೆಯಿಲ್ಲದೇ ಎಲ್ಲವೂ ತೆರವುಗೊಂಡಿದ್ದವು. ಬೇರೆ ದಾರಿ ಕಾಣದೇ ಸೀದಾ ಮನೆಗೇ ಹೊಡೆದುಕೊಂಡು ಹೋಗಿ ಕಟ್ಟಿಕೊಂಡ. ಅದರ ಲದ್ದಿ ವಾಸನೆಗೆ ಅವನ ಹೆಂಡತಿ ರಚ್ಚೆ ಹಿಡಿದಳು. ಇವನೂ ಆವೇಶದಲ್ಲಿ, ನಿನ್ನನ್ನು ಬೇಕಾದರೆ ಬಿಡುತ್ತೇನೆಯೇ ಹೊರತು ಕುದುರೆಯನ್ನು ಬಿಡುವುದಿಲ್ಲ ಎಂದುಬಿಟ್ಟ. ಮುನಿಸಿಕೊಂಡ ಆಕೆ ಗಂಟುಮೂಟೆ ಕಟ್ಟಿಕೊಂಡು ಹೇಳದೇ ಕೇಳದೇ ತವರುಮನೆಯ ದಾರಿ ಹಿಡಿದಳು.
?
ತಿಂಗಳು ನೋಡಿದ. ವರ್ಷ ನೋಡಿದ.. ತನ್ನ ಪರಿಸ್ಥಿತಿ ಇನ್ನೂ ಅಧೋಗತಿಗಿಳಿಯಲಾರಂಭಿಸಿತು... ಕಾರುಲೋನಿನ ಕಂತು ಕಟ್ಟುವುದಾಗಲಿಲ್ಲ.. ಮನೆಸಾಲವೂ ಉಳಿಯುತ್ತಲೇ ಬಂತು... ಮೂರು ನಾಲ್ಕು ತಿಂಗಳು ಯಾವಾಗ ಲೋನು ಕಟ್ಟಲಾಗಲಿಲ್ಲವೋ ಆಗ ಒಂದು ಎರಡು ನೋಟೀಸು ನೀಡಿದ ಬ್ಯಾಂಕಿನವರು, 'ನಿಮ್ಮ ಬಗ್ಗೆ ನಮಗೆ ಅಪಾರ ಗೌರವ, ಆದರೆ ಏನು ಮಾಡುವುದು.. ಕಾನೂನನ್ನು ಪಾಲಿಸಲೇಬೇಕಲ್ಲ...' ಎಂಬ ಸೋಗಲಾಡಿ ಅಸಹಾಯಕತೆಯನ್ನು ತೋರುತ್ತ, ಕಾರನ್ನು ಮುಟ್ಟುಗೋಲು ಹಾಕಿಕೊಂಡು ಬರಲು ತನ್ನ ರೌಡಿಪಡೆಗೆ ನಿರ್ದೇಶನ ನೀಡಿತು; ಮನೆಯನ್ನು ಹರಾಜು ಹಾಕಲು ಪತ್ರಿಕೆಯಲ್ಲಿ ಜಾಹೀರಾತು ಹಾಕಿತು. ಚಂದ್ರಹಾಸನಿಗೆ ತನ್ನ ಮುಂದೆಲ್ಲ ಶೂನ್ಯ ಕವಿದ ಅನುಭವ...
ಯಾಕೋ ಆತ್ಮಹತ್ಯೆಯನ್ನಾದರೂ ಮಾಡಿಕೊಂಡುಬಿಡಬೇಕು ಅನ್ನಿಸಿಬಿಟ್ಟಿತು. ಇಂತಿಂಥವರಿಗೆಲ್ಲ ಇಷ್ಟಿಷ್ಟು ಹಣಕೊಟ್ಟರೂ ತನ್ನ ಕೆಲಸವಾಗದ ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಅವರನ್ನೆಲ್ಲ ಜೈಲಿಗೆ ಹಾಕಬೇಕು ಎಂದು ಬರೆದ. ತಾನೇ ಸತ್ತ ಮೇಲೆ ಅವರಿಗೆ ಶಿಕ್ಷೆ ಕೊಟ್ಟರೇನು, ಬಿಟ್ಟರೇನು... ನನ್ನನ್ನು ನಾನೇ ಕೊಂದುಕೊಳ್ಳುವಂತೆ ಮಾಡಿರುವುದೇ ಅವರು ನನಗೆ ಕೊಟ್ಟಿರುವ ದೊಡ್ಡ ಶಿಕ್ಷೆ. ಅದು ಬೇರೆಯವರು ಕೊಡುವ ಶಿಕ್ಷೆಗಿಂತ ದೊಡ್ಡದು. ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಿದ್ದು ಸರಿಯಾಗಿಯೇ ಇದೆಯಲ್ಲವೇ? ಬಡವನಾಗಿದ್ದ ನಾನು ಏಕದಂ ಶ್ರೀಮಂತನಾಗಲಿಲ್ಲವೇ... ಶ್ರೀಮಂತನಾಗಿದ್ದವನು ಏಕದಂ ಬಡವನಾದರೆ ಏನು ತಪ್ಪು?
ಅಷ್ಟಕ್ಕೂ ಈ ಹಣವನ್ನೇ ಯಾಕೆ ಎಲ್ಲದಕ್ಕೂ ಮಾನದಂಡ ಮಾಡಿಕೊಳ್ಳಬೇಕು. ಹಣವನ್ನು ಯಾರು ಬೇಕಾದರೂ ದುಡಿಯಬಹುದು, ಕಳೆಯಬಹುದು. ಆದರೆ ಹಣದಿಂದಲೇ ಎಲ್ಲ ಸಂಬಂಧಗಳನ್ನು ಅಳೆಯುವುದು ಎಷ್ಟು ಅಸಹ್ಯ ಅಲ್ಲವಾ? ಬೇರೆಯವರಿರಲಿ, ದೇಹ ಹಂಚಿಕೊಂಡ ಹೆಂಡತಿಯೇ ನನ್ನ ನಷ್ಟವನ್ನು -ಹಂಚಿಕೊಳ್ಳುವುದಿರಲಿ- ಸಹಿಸಿಕೊಳ್ಳಲಿಲ್ಲವಲ್ಲ ಅನಿಸಿತು. ಆಕೆಯ ಡೈವರ್ಸ್ ಪೇಪರ್ ಇದ್ದ ಲಾಯರ್ ನೋಟೀಸು ಎದುರು ಟೇಬಲ್ಲಿನ ಮೇಲೆ ಕುಂತು ಕೊಂಕಿಸಿ ನಕ್ಕಂತಾಯಿತು. ಈತನ ವೃತ್ತಿಯಲ್ಲಿ ಆದ ನಷ್ಟವನ್ನೇ ವಿಚ್ಚೇದನಕ್ಕೆ ಕಾರಣ ಎಂದು ಆಕೆ ತಿಳಿಸಿದ್ದಳು.
ಸುಖವನ್ನು ಹಂಚಿಕೊಳ್ಳಲು ಹೆಂಡತಿ ಸಹಿತ ಸಾವಿರಾರು ಜನರಿರುತ್ತಾರೆ. ಆದರೆ ನಷ್ಟವನ್ನು ಹಂಚಿಕೊಳ್ಳಲು? ಆಗ ಕನಿಷ್ಟ ತನ್ನ ದುಃಖಗಳನ್ನಾದರೂ ಹೇಳಿಕೊಳ್ಳಲು ನೆನಪಾದ ಏಕೈಕ ವ್ಯಕ್ತಿ ಡೇವಿಡ್.
ಮೊದಲೆಲ್ಲ, ಯಾರಾದರೂ ಎಲ್ಲಿ ಗುರುತಿಸಿಬಿಡುತ್ತಾರೋ ಎಂಬ ಆತಂಕದಿಂದ ಕಾರಿನ ಎಲ್ಲ ಕಪ್ಪು ಬಣ್ಣದ ಗ್ಲಾಸುಗಳನ್ನು ಏರಿಸಿಕೊಂಡಿರುತ್ತಿದ್ದ ಚಂದ್ರಹಾಸ, ಈಗ ನಡೆಯುತ್ತಲೇ ಡೇವಿಡ್‌ನ ಮನೆ ದಾರಿ ಹಿಡಿದ. ಮಾಸಿದ ಬಟ್ಟೆ, ಕೆದರಿದ ತಲೆ.. ಚಂದ್ರಹಾಸ ಗೆಳೆಯನನ್ನು ಮತ್ತೆ ಗುರುತಿಸದಾದ. ಹಿಂದಿನ ಶೈಲಿಯಲ್ಲೇ 'ಏ.. ನಾನೋ.., ಚಂದ್ರಹಾಸ..' ಎಂದಾಗ ಡೇವಿಡ್‌ಗೆ ಮತ್ತೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಪೊಲೀಸರು ಅಟ್ಟಿಸಿಕೊಂಡು ಬಂದ ಕಳ್ಳನಂತೆ, ಯಾರಾದರೂ ಎಲ್ಲಿ ನೋಡಿಬಿಡುತ್ತಾರೋ ಎಂಬಂತೆ ಸರಸರನೇ ಒಳಗೆಳೆದುಕೊಂಡ.
ಚಂದ್ರಹಾಸ ಗೆಳೆಯನಿಗೆ ತನ್ನ ಪರಿಸ್ಥಿತಿಯನ್ನು ವಿವರಿಸುತ್ತ, ತಾನು ಏರಿದ ಎತ್ತರ ಮತ್ತು ಇಳಿದ ಆಳದ ಕಥೆಯನ್ನು ಹೇಳುತ್ತ, ತಾನು ಎಲ್ಲಿ ಎಡವಿದೆ ಎಂಬುದನ್ನು ತಾನೇ ವಿಮರ್ಶಿಸುತ್ತ ಹೋದ.. ಬೇರೆಯವರಿಗೆ ಹೋಲಿಸಿಕೊಂಡು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ...
ಡೇವಿಡ್ ಅವನ ಸ್ಥಿತಿಗೆ ಮರುಗಿದ. ಆದರೂ ಅವನಾಳದ ಮನಸ್ಸನ್ನ ಪ್ರಚೋದಿಸಲು ಪ್ರಯತ್ನಿಸಿದ. 'ಅವತ್ತು ಬೆಂಗಳೂರು ನೋಡಲೆಂದು ಇದೇ ರೂಮಿಗೆ ಬಂದಿದ್ದಾಗ ನೀನು ಏನನ್ನೂ ತಂದಿರಲಿಲ್ಲ. ಇವತ್ತೂ ಏನನ್ನೂ ತಂದಿಲ್ಲ. ಮತ್ತೆ ವ್ಯತ್ಯಾಸವೇನಾಯಿತು. ಮಧ್ಯೆ ಒಮ್ಮೆ ನೀನು ಹೆಂಡತಿ ಜೊತೆ ದೊಡ್ಡಕಾರಿನಲ್ಲಿ ಬಂದುಹೋದದ್ದು ಇವತ್ತಿಗೂ ನನಗೆ ಕನಸಿನಂತೆಯೇ ಕಾಣುತ್ತಿದೆ... ಜೀವನವೆಂಬ ಹಾವು-ಏಣಿ ಆಟದಲ್ಲಿ ಕೆಳಗಿಳಿಯಲು ಕಾರಣವಿದೆಯೆಂದಾದರೆ, ಮೇಲಕ್ಕೇರಲೂ ಕಾರಣವಿದ್ದೇ ಇರುತ್ತದೆ...
'ಆ ಕಷ್ಟದ ದಿನಗಳನ್ನು ಮರೆತುಬಿಡು. ಫೀನಿಕ್ಸ್‌ನಂತೆ ಪುಟಿದೆದ್ದು ಬಾ... ಬದುಕಲು ಅದೊಂದೇ ಕ್ಷೇತ್ರವೇ ಆಗಬೇಕೆಂದೇನೂ ಇಲ್ಲವಲ್ಲ. ನೂರೆಂಟು ದಾರಿಗಳಿವೆಯಲ್ಲ... ಆದರೂ ನನ್ನಿಂದ ನಿನಗೇನು ಸಹಾಯ ಆದೀತೋ ಗೊತ್ತಿಲ್ಲ. ಹಾಗೇನಾದರೂ ಆಗುವುದಿದ್ದರೆ ಇದನ್ನು ತೆಗೆದುಕೋ, ಮತ್ತೆ ಮೊದಲಿನಿಂದ ಶುರುಮಾಡು..' ಎಂದು ತನಗೇ ಆಶ್ಚರ್ಯವೆನ್ನುವಂತೆ ಆತ್ಮವಿಶ್ವಾಸದ ಮಾತನಾಡಿ ಆತನೇ ಕೊಡಿಸಿದ್ದ ಬೈಕಿನ ಕೀಯನ್ನು ತೆಗೆದುಕೊಟ್ಟ!
ಚಾಚಬೇಕೆಂದುಕೊಂಡ ಚಂದ್ರಹಾಸನ ಕೈ ಅದ್ಯಾಕೋ ಅವನಿಗರಿವಿಲ್ಲದೇ ನಡುಗಲಾರಂಭಿಸಿತು...                                                                                                                                                                                                                                                                                                                                                                                                                                                                                                                                                                                                      
                            ***

ಆಶಾಢ ನಿಬ್ಬಣ ಸೂತ್ಯಾಡಿ ಬಂತು

- ಶಿಶುನಾಳ ಶರೀಫ್

ಆಶಾಢ ನಿಬ್ಬಣ ಸೂತ್ಯಾಡಿ ಬಂತು
ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ              || ಪ ||

ಲೇಸವಾದ ತಾಯಿಯಾಸೆ ಬಿಟ್ಟು
ಈಶಗುರು ಗಂಡಗ ವಾಸವಾಗಮ್ಮಾ                        ||ಅ.ಪ.||

ಮುತ್ತೈದಿ ಮಂದಿ ಕೂಡಿ
ಗೊತ್ತಿಟ್ಟು ಮುದ್ದಾಡಿ
ನಿತ್ಯ ನಿರಂಜನ ತೋರಮ್ಮಾ
ತಾರಕ ಮನೆಯೊಳು ಮೀರಿದ ದಾರಿಯೊಳು
ಆರಿಗೆ ಸಿಗದ ಮೀರಿದ ವುನ್ಮನೀ ಸೇರಿದೆಮ್ಮಾ             ||೧||

ಸತ್ಯದಿ ಶಿಶುವಿನಾಳ
ಉತ್ತಮ ಗೋವಿಂದನ
ನಿತ್ಯ ನಿರಂಜನ ತೋರೆಮ್ಮಾ
ಹಾದಿಯೆಲ್ಲ ಹಿಡಿದು ಮೇದಿನಿಯೊಳು ಬಂದು
ಮೋಹದ ಮುದವಿ ಮಾಡಿಕೊಡೆಮ್ಮಾ                       ||೨||
              ***
ಕೀಲಿಕರಣ: ಎಮ್.ಎನ್.ಎಸ್.ರಾವ್

ಮಳಿ ಬಂತೇ ರಮಣಿ

- ಶಿಶುನಾಳ ಶರೀಫ್

ಮಳಿ ಬಂತೇ ರಮಣಿ ಮಾಯದ್ದೊಂದು  ||ಪ||

ಮಳಿ ಬಂತೇ ರಮಣಿ
ಬೆಳಗು ಮೀರಿತೆ ನಳಿನಲೋಚನೆ
ಮಳಿ ಬಂದಿತು ಛಳಿ ಬಿದ್ದಿತು
ಕಳೆದೋರಿತು ಇಳಿಸ್ಥಳದೊಳು
ಜಲಜಮುಖಿ ಪ್ರಳಯ ಸೂಚನೆ ಇದು      ||೧||

ನಾವು ಬರುವ ಹಾದಿ ತಪ್ಪಿ ಸುವಿಚಾರದೋರದೆ
ತೊಯ್ಯದ ಗೊನಿ ತಪ್ಪಲಮನಿ
ಮಾಯದ ಧ್ವನಿ ನ್ಯಾಯದ ಹನಿ
ಆಯಾಸವ ಪಡುತಿಹ ಪರಿ
ಸುಯೋಗವ  ನೋಡದೆ ಬಲು            ||೨||

ಶಿಶುನಾಳಧೀಶನ ದಯದಿ ಕರಸಿಕೊಂಡಿತೇ
ಭಸಿತ ಋಣವು ನಿಶಿಕಿರಣವು
ದೆಸೆಗೆಡದಾತ್ಮಾನಂದದಿ
ವಿಷಯ ಸಂಭೋಗ ಫಲದಿ
ಹುಸಿಗಾಣದೆ ತುಸು ತುಸು              ||೩||
            ***
ಕೀಲಿಕರಣ: ಎಮ್.ಎನ್.ಎಸ್.ರಾವ್

ಗ್ರಹಣ ಹಿಡಿದುದು ಕಾಣದೆ?

- ಶಿಶುನಾಳ ಶರೀಫ್

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ
ಜಾಣನಾದ ಚಂದ್ರಮನ ಆಳುಕಿಸಿ
ಕೋಣೆಯೊಳಗೆ ಆವಮನಗೊಳಿಸಿತೆ                                   || ೧ ||

ರಾಹು ಸಿಟ್ಟಲೆ ಬಂದು
ಠಾವು ತಿಳಿಯದೆ ನಿಂದು ತೋಯದ ಗೋನಿಯನು
ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ            || ೨ ||

ಮಂಗಳವಾರ ಒಂದಾದಿ ರಂಗುಮಂಟಪದೊಳು
ಸುಮ್ಮನಾಗಿ ಕೇತುವಿನ ಬಲದೆ
ಬಹು ಸಂಗನಾದ ಸಾರಂಗದೊಳು                                     || ೩ ||

ಯಂತ್ರ ಮಂತ್ರಿಕರೆಲ್ಲಾ
ಗೊತ್ತುಗೆಟ್ಟಿದ್ದು ಬಲ್ಹೆ
ನಿಂತು ನೋಡಿ ಶಿಶುನಾಳಧೀಶ ತನ್ನಂತೆ ತಾ ನೋಡಿದನವ್ವಾ || ೪ ||


           ***

ಕೀಲಿಕರಣ: ಎಮ್.ಎನ್.ಎಸ್.ರಾವ್

ಹುಡಕುತ ನಾ ಎಲ್ಲಿ ಹೊಗಲಿ?

- ಶಿಶುನಾಳ ಶರೀಫ್

ಹುಡಕುತ ನಾ ಎಲ್ಲಿ ಹೊಗಲಿ?
ಹುಡುಕಿ ನಾ ಬ್ಯಾಸತ್ತೆ                    ||ಪ||

ಏಳು ಸಮುದ್ರಗಳು ಏಳು ದಿವಸಗಳು
ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ
ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ
ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ   ||೧|| 

ಧರಿಯೆಲ್ಲ ತಿರುಗಿದೆ
ಗಿರಿಯೆಲ್ಲಾ ಚರಿಸಿದೆ
ಸರಸಿಜಸಖಿಯೆ
ಪರಮಾತ್ಮ ಸಿಗಲಿಲ್ಲ                       ||೨||

ಕಡಿಯ ಭಾಗದಿ ನಾನು
ಸುಡುಗಾಡ ಹುದುಕಿದೆ
ನಡು ಊರೊಳು ಬಂದು
ಮಿದಕ್ಯಾದಿ ನೊಡಿದೆ                        ||೩||

ಸಣ್ಣವಳಿರುತಲಿ
ಬಣ್ಣಿಸಿ ಬಹು ಜನ
ಹಣ್ಣು ಸಕ್ಕರೆ ಕೊಟ್ಟು
ಉಣ್ಣಿಸಿದರು ಎನ್ನ                         ||೪||

ಶಿಶುನಾಳಧೀಶನ
ಅಸಮ ಜರಿ ರಾಗವನ್ನು
ಶಶಿಮುಖಿ ಕಾಣದೆ
ಕಸಿವಿಸಿಗೊಳ್ಳುವೆ                         ||೫||
     ***

ಕೀಲಿಕರಣ: ಎಮ್.ಎನ್.ಎಸ್.ರಾವ್

ವಾರಿಜಾಕ್ಷಿ ವನಪಿನೊಯ್ಯಾರೆ

- ಶಿಶುನಾಳ ಶರೀಫ್

ವಾರಿಜಾಕ್ಷಿ ವನಪಿನೊಯ್ಯಾರೆ
ಬಾರೆ ನೀರೆ ನಿನ್ನನಗಲಿರಲಾರೆ            || ಪ ||

ದೀರೆ ಮರೆಯದಿರಲಾರೆ ಬ್ರಹ್ಮದ
ನೀರು ತುಂಬಿದ ಕೆರಿಯ ಮೇಲಿನ
ಏರಿಯೊಳು ನೀ ಬಾರದಿಹೆ ನಾ
ದಾರಿಯೊಳು ತರುಬಿದರೆ ಸುಮ್ಮನೆ       ||ಅ.ಪ.||

ಹರನಾ ಹಿಡಿದೆ ವಿಧಿ ತಲಿಗಡಿದೆ
ಹರಿಯ ಚರಣಾಂಬುಜವನ್ನು ಪಡಿದೆ
ಪರಮನಾರದಋಷಿಯ ಕಲಹದಿ
ಪರಿಯಗೆಡಸಿದಿ ಪಾವನಾತ್ಮಳೆ
ಧರಿಗೆ ಶಂಕರಿಯಾದೇ ಶಿವನಾ
ಶಿರದಿ ಮೆರದೇ ಗಂಗೆಯಾಗಿ                ||೧||

ಹಸಿತ ವದನದ ಕುಸುಮಗಂಧಿಯಳೆ
ವಸುಧಿ ದೆಸೆಗೆಡಿಸುತ್ತ ನಿಂತಿಹಳೆ
ಎಸೆವ ಶಿಶುನಾಳೇಶನ ಹಸುಳೆಗೆ
ಆಸಮ ಹಾದರ ಕಲಿಸಿದ್ಯಾ ಬಿಡು
ರಸಿಕರಾಟ ಗೋವಿಂದ ಸದ್ಗುರು
ಉಸುರಿದಾತ್ಮ ವಿಚಾರ ತಿಳಕೋ          ||೨||
                        ***

ಕೀಲಿಕರಣ: ಎಮ್.ಎನ್.ಎಸ್.ರಾವ್

ಗುಗ್ಗುಳ ಹೊರಟಿತಮ್ಮಾ

- ಶಿಶುನಾಳ ಶರೀಫ್

ಗುಗ್ಗುಳ ಹೊರಟಿತಮ್ಮಾ ಈ ಊರೊಳು
ಗುಗ್ಗುಳ ಹೊರಟಿತಮ್ಮಾ                                || ಪ||

ಗುಗ್ಗುಳ ಹೊರಟಿತು
ವೆಗ್ಗಳಾಯಿತು ಮ್ಯಾಳಾ
ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ           ||ಅ.ಪ.||

ಭೂತ ಪಂಚಕ ರೂಪದಾ ಪುರಂತರು
ಆತುಕೊಂಡಿರುತಿಹರು
ನೂತನವಾಯಿತು ಏ ತರುಣಿ ಕೇಳೆ
ಧಾತ ಶಿವನ ತನುಜಾತನರಿಯದಾಗಿ                ||೧||

ದಕ್ಷನ ವಧಮಾಡಿದೆ ಷಣ್ಮುಖದೇವಾ
ಸಾಕ್ಷಪತನನು ಕೂಡಿದೆ
ಈ ಕ್ಷಿತಿಯೊಳು ಬೂದ್ಯ್ಳ ಗ್ರಾಮದೊಳು ತಾ
ಸಾಕ್ಷತ ಬಸವನಾಲಯದಂಗಳದೊಳು              ||೨||

ಇಳೆಯೋಳ್ ಆಧಿಕವಾಯಿತು ಶಿಶು-
ನಾಳಧೀಶನ ಮನವೆನಿತು
ತಿಳಿದು ನೋಡೆ ಇಂದು ಲಲನಾಮಣಿಯೆ ಕೇಳೆ
ಹೊಳಿವ ಕುಂಭದ ರೂಪಾ ಬೆಳಕಿನ ಉರಿಯಂತೆ  ||೩||

        ***

ಕೀಲಿಕರಣ: ಎಂ.ಎನ್.ಎಸ್.ರಾವ್

ಮುತ್ತು ರನ್ನದ ಕಿಡಿ ಉದುರೀತು

- ಶಿಶುನಾಳ ಶರೀಫ್

ಮುತ್ತು ರನ್ನದ ಕಿಡಿ ಉದುರೀತು
ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು                || ಪ ||

ಆಪ್ಪ ಆಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು
ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಆಸು ಹಾರಿಹೋಯಿತು         ||ಆ.ಪ.||

ದೇಶಕಧಿಕವಾದ ಹುಬ್ಬಳ್ಳಿ ಹುಚ್ಚಯ್ಯಸ್ವಾಮಿ
ಮಠದ ಪಟ್ಟದ ಚರಮೂರ್ತಿ ಆವರ ಕೀರ್ತಿ ಸಾರಿ ಸದ್ಭಕ್ತರಿಗೆ
ದುಃಖವು ಗಾರಗೊಂಡಿತು ಮನದ ಕೊನೆಯೊಳು
ಆರು ಮಾಡುವರೇನು ಇದಕೆ ಹುಟ್ಟಸಿದ ಶಿವ ತಾನೇ ಬಲ್ಲಾ           || ೧ ||

ಏನು ಎಷ್ಟಿದರೊಳು ಎಷ್ಟು ದಿವಸ ಇದ್ದರೆ ಸಾವು ತಪ್ಪದು
ಮೃತ್ಯುಬುದ್ಧಿಯನ್ನು ಬಲ್ಲವರೊಳು ಕೇಳು
ಆಲ್ಲಮ ಮಹಾಪ್ರಭುವಿನ ಸಿರಿಯು ತುಂಬಿ
ಯೋಗಮಂದಿರದೊಳು ಬೆಳಗುವ ಕಳಿವುಳ್ಳ ಬಸವಾದಿ ಪ್ರಮಥರು || ೨ ||

ಕಾಶೀ ಗ್ರಾಮದ ಪುಣ್ಯ ತೀರಿತು ಬೈಲಾಯಿತು
ಬೈಲಿನೊಳಗೆ ಬೈಲು ಆಯಿತು ಕಡಿಗೆ ಆಯಿತು
ಒಡಿಯ ಶಿಶುನಾಳ ಈಶನಡಿಗೆ ಬಿಡದೆ ಭಜಿಸುವ ನಿಮ್ಮ ಧ್ಯಾನದಿ
ನುಡಿದ ಮಾತಿಗೆ ಕಸರು ಇದ್ದರೆ ತಿದ್ದಿ ಹೇಳಿರಿ ರಸಿಕರೆಲ್ಲಾ             || ೩ ||

        ***

ಕೀಲಿಕರಣ: ಎಂ.ಎನ್.ಎಸ್.ರಾವ್

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ

- ಶಿಶುನಾಳ ಶರೀಫ್

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ
ತಿಳಿದು ಬ್ರಹ್ಮದ ಬಯಲೊಳಡೋಣಮ್ಮಾ || ಪ ||

ಬಲು ಸಂಸಾರವೆಂಬುವ ಹಳುವನೆಲ್ಲವ ದಾಟಿ
ಸುಳಿದಾಡಿ ಶರಣರ ಬಳಿವಿಡಿದಾಡುತ      || ಆ. ಪ. ||

ಬ್ರಹ್ಮರಕ್ಕಸಿಯೆಂಬ ಘಟ್ಟವ ದಾಟಿ
ಹಮ್ಮನಳಿದು ದಾರಿ ಸುಮ್ಮನೆ ಹಿಡಿದು
ಒಮ್ಮನದಿಂದಲಿ ಶ್ರೀಚನ್ನಬಸವನ
ರಮ್ಮ್ಯಾದ ವನವನು ಗಮ್ಮನೆ ನೋಡುತ  || ೧ ||

ಆಲ್ಲಿಂದ ಮಹಾಮುನಿ ಕೈಲಾಸದಿ
ನಿಲ್ಲದೆ ಆಕಳಗವಿಯೊಳಗೈದಿ
ಬಲ್ಲಿದ ಶಿಶುನಾಳಧೀಶನ ಭಜಿಸುತ
ಎಲ್ಲ ಜಂಜಡ ಬಿಟ್ಟು ಯಾರಿಗಂಜದಲೆ       || ೨ ||

        ***

ಕೀಲಿಕರಣ: ಎಂ.ಎನ್.ಎಸ್.ರಾವ್

ಏ ಸಖರಿಯೆ ನಾ ಸಖರಿಯೆ

- ಶಿಶುನಾಳ ಶರೀಫ್

ಏ ಸಖರಿಯೆ ನಾ ಸಖರಿಯೆ
ಬ್ಯಾಸರಾದೀತು ಮನವ ಆಸರಿಸಿ ತೈಯ್ಯ    ||ಪ||

ಪರಸತಿಗೆ ಒಲಿದು ವಿಸ್ತರದಿ ತಿಳಿದು
ಜರಿದು ಪಾದ ಪೊಗಿರಿ ರತಿಸತಿಯ            ||೧||

ಬಾರದೆ ನಿಂತು ತೋರಿತು ಪಂಥ
ಜಾರಿದ ಪಾದ ಪೋಗಿ ವಿರಚಿಸಲೆನ್ನ          ||೨||

ಶಿಶುವಿನ ಈಶ ಅಸಮ ಪ್ರಕಾಶ
ರಸಿಕ ಗೋವಿಂದನ ಸೇವಕ ತಾನು           ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಒಳ್ಳೇ ನಾರಿ ಕಂಡೆ ಈಗಲೇ

- ಶಿಶುನಾಳ ಶರೀಫ್

ಒಳ್ಳೇ ನಾರಿ ಕಂಡೆ ಈಗಲೇ
ಒಳ್ಳೇ ನಾರಿ ಕಂಡೆ                           ||ಪ||

ಇಳೆಯ ತಳದಿ ಕಳವರ ಭಲೆ
ಋಷಿಗಳ ಮರುಳು ಮಾಡಂವ           ||ಅ.ಪ.||

ಕೈಯು ಕಾಲು ಇಲಾ
ಮೈಯೊಳು ಉಸುರು ಆಡಗಿತಲ್ಲಾ
ವಿಷಯಸುಖದ ಪರಮಾತ್ಮ ಬ್ರಹ್ಮೋದಯ
ನಿಶಿಕರದೊಳು ನಲಿದಾಡುತಿಹಳೋ       ||೧||

ಮುಟ್ಟಲು ಕೊಲ್ಲುವಳೋ ಕಾಮನ
ಕಟ್ಟಿ ಆಳುತಿಹಳೋ
ಬಟ್ಟ ಕುಚಕ ಬರದಿಟ್ಟ ಕುಪ್ಪಸಕ
ನಟ್ಟ ಮನಸು ನಡೆಗೆಟ್ಟು ನಿಂತಿತು          ||೨||

ವಸುಧೆಯೊಳಗೆ ಇವಳು
ಶಿಶರಿನಾಳಧೀಶನ ಒಲಿಸಿದಳೋ
ಪಸರಿಸಿ ಗುಡಿಪುರ
ಆಸಮ ರಸಿಕರಿಗೆ ಗುರುಗೋವಿಂದನ      ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ತೇರು ಸಾಗಿತು ನೋಡೆಲೆ ನೀರೆ

- ಶಿಶುನಾಳ ಶರೀಫ್

ತೇರು ಸಾಗಿತು ನೋಡೆಲೆ ನೀರೆ
ಸರಸಿಜಮುಖಿ ಬಾರೆ                           ||ಪ.||

ಚಾರುತರದ ಚೌಗಾಲಿರಲು ಸ್ತವ
ಮೀರಿದ ಮಹಾಪಕಿ ದಾರಿಗೆ ಪೋಗುವ    ||ಅ.ಪ.||

ಕಳಸದ ಕೆಳಗೆ ಮಾರು ಪಟಾಕ್ಷಿ
ಥಳಥಳಿಸುವ ಮಿಂಚಿನ ನಿಟಲಾಕ್ಷಿ
ಬಲಿದು ಬ್ರಹ್ಮನ ನೆಲೆಯೊಳೊಪ್ಪುವ
ಬಲು ಸುಳಿಗಾಳಿಗೆ ನಲಿ ನಲಿದಾಡುವ      ||೧||

ಶಿಶುನಾಳಧೀಶನ ಹೊಸ ರಥವಿದು ತಿಳಿ
ರಸಿಕರಾಜ ಗೋವಿಂದನ ಸೇವಕ
ಪಸರಿಸಿ ನೋಡಲು ಜಸವಡದಿರುವದು
ಅಸಮಾಕ್ಷನು ಮೆಲೇರಿ ಕುಳಿತಿರುವ        ||೨||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ನೋಡಿ ತಡೆಯಲಾರದೆ ಕೇಳಿದೆ

- ಶಿಶುನಾಳ ಶರೀಫ್

ನೋಡಿ ತಡೆಯಲಾರದೆ ಕೇಳಿದೆ
ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ       ||ಪ||

ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ
ಚಾರುತನದಲಿ ಶ್ರುತಿ ಸಾರುತಿದೆ ನೋಡಿ               ||೧||

ಮೂರುಗಿರಿ ಮೇಲಕೆ ಏರಿನೊಳು ವರ್ಣಿಸಿ
ನೀರಿಗ್ಹೋಗೋ ದಾರಿಯೊಳು ಜೇರುಗಿಂಡಿಯೊಳು
ಮಾರಿನೋಡು                                                ||೨||

ಮೋದಿನಿಗೆ ಸದ್ಗುರು ಆದಿ ಶಿಶುವಿನಾಳಧೀಶ
ನಾದ ಬ್ರಹ್ಮದೊಳು ಬೈಲಾದ ಮೇಲೆ ಹಾದಿನೋಡಿ   ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಹೇಮರೆಡ್ಡಿ ಮಲ್ಲಮ್ಮ

- ಶಿಶುನಾಳ ಶರೀಫ್

ಹೇಮರೆಡ್ಡಿ ಮಲ್ಲಮ್ಮ
ರೆಡ್ಡಿಕುಲಧರ್ಮ ಉದ್ಧಾರಮಾಡಿದೆಯಮ್ಮಾ   || ಪ ||

ನಿನ್ನ ಭಕ್ತಿಭಾಗ್ಯದ ನೇಮ
ಮಲ್ಲಯ್ಯನ ಕಟ್ಟಿದ ಪ್ರೇಮ
ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ
ಶ್ರೀಶೈಲ ನಿನಗಾಗಿದೆ ಕಾಯಮ               ||ಅ.ಪ.||

ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲಿ ಸಿಗಲಿಲ್ಲವಮ್ಮ
ಮನ್ನು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ          ||೧||

ನೀ ಬೀಸುದು ನೇಮ ದಿನ ದಿನ ಕಾಯಮ
ಕೈಯಲ್ಲಿ ಗುರುಳೆಮ್ಮ
ಬೀಸಿಹೋದ ಭಕ್ತಳಮ್ಮ
ಭಕ್ತಿಗೊಲಿದು ಬಂದನು ಜಂಗಮ
ಭಿಕ್ಷೆ ಬೇಡಿ ನಿಂತ ನೋಡಮ್ಮ
ಬಿಡದ ನಚ್ಚುನೇಗರನಮ್ಮ                      ||೨||

ನಿನ್ನ ಮೂಗುತಿ ಮರ್ಮ
ತಿಳಿಲಿಲ್ಲ ಹೇಮ ಬೇಡಿ ಒಯ್ದನಮ್ಮ
ಶಿಶುನಾಳ ಊರು ಗ್ರಾಮ
ಗುರುಗೋವಿಂದನ ನಾಮ
ಆತನ ಪಾದಸೇವೆ
ನಂಬಿ ನಾನು ಮಾಡಿದೆನಮ್ಮ               ||೩|| 

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ನಳಿನಾಕ್ಷಿಯ ಕಂಡೆ ನಾ

- ಶಿಶುನಾಳ ಶರೀಫ್

ನಳಿನಾಕ್ಷಿಯ ಕಂಡೆ ನಾ
ತಿಳವಳ್ಳಿಯ ಕಳ್ಳಿಯುಳ್ಳ ಮೋಜಿನ್ಹೆಣ್ಣ
ಹೋಳಿವ ಚಂದುಟಿ ಎಳಿವ ಮುಡಿ
ಥಳ ಥಳ ಪದಕ ಒಪ್ಪಿನ ಜಾಣೆ
ತನ್ನ ಕಲಶ ಕುಚಯುಗದಲಿ
ಸರಿಯ ಗರತಿಯರೋಳು ಮೇಲ್             ||೧||

ಕುಸುಮಶರನ ರಾಣಿಯೋ
ಕೊರಳೆಸವ ಪಲ್ಲವ ಪಾಣಿಯೋ
ಬಿಸಿಜಿಕೊರಕ ಸ್ಥಾನವೋ
ಯೋಚಿಸಿ ರೂಪ ಮಧುರ ಪಲ್ಲವ ಪಾಣಿಯೋ
ವಸುಧಿಯೊಳು ಕಡುಜಾಣ ರೀತಿಯ
ಕುಶಲ ರತಿಯಲೆ ಕೂಡಿದ್ಹೇಳ್
ಆಸು ನೀಗದೆ ಬಿಡರು ಎಮ್ಮನು
ಮಸಣಿಸಿ ಮುಂದೆ ಹೋಗಲೊಲ್ಲದು        ||೨||

ಸರಳ ಬೈತಲಿ ಮರನ ಸಿಂಗಾಡಿಯು
ತೀಡಿ ಪೊರ್ಬಿನ ಕೊರಳೊಳ್
ಹಾರ ಮುತ್ತಿನ ರತ್ನಗಳಿಂದ  ಮೆರೆಯುತಿಹುದು ಒದ್ಯಾಣ
ತರುಣಿ ಕರ್ಣದೊಳಿಟ್ಟು ಆಭರಣ
ಆಪರಿಮಿತ ಇನ್ನೆಷ್ಟು ಹೇಳಲಿ
ನೆರದ ಜನರ್ಬಾಯ್ದೆರೆವರೀಕೆಯ
ತುರುಬ ಚಲ್ವಿಕೆಗೆ ಮರುಳಗೊಂಡರು   ||೩||
ಹವಳದುಟಿಯ ಬಾವಲಿಯು
ಕುವಲನೇತ್ರ ದಿವಿಜಲೋಕದ ಸ್ತ್ರೀ
ಆಯ್ಯಯ್ಯೋ ನವಮೋಹನದ ನಿಧಿಯುಂ
ಭವದ ಅಜನ ಪಟ್ಟದ ರಾಣಿಯು
ಶಿವಶಿವಾ ಹೆಣ್ಣಿವಳ ರೂಪಕ
ಆವನೀಪತಿ ಕಡೆಯಿಲ್ಲ ದೇವರು
ಪವನಸುತ ಘನರೂಪ ಮಾರುತಿ
ಆವನ ಬಲದಿಂದುಳಿದೆನು ಜವದಿ          ||೪||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಓದುವವ್ಗ ಎಚ್ಚರ ಇರಬೇಕು

- ಶಿಶುನಾಳ ಶರೀಫ್

ಓದುವವ್ಗ ಎಚ್ಚರ ಇರಬೇಕು

ಆಭವ ಮೆಚ್ಚುವ ತೆರದಿ
ಆರ್ಥವ ಪೇಳಿ ಸದ್ಭಕ್ತರಿಗೆ ಶುಭ
ಈ ಭವಬೇಧವಳಿದು ಸ್ವರ್ಗದ
ಸಭೆಯು ಹೌದೆನ್ನುವಂದದಿ

ಭಕ್ತಿಭೂಮಿ ಬೆಳೆಯದವರಿಗೆ ಬಹು
ಯುಕ್ತಿಯಿಂದಲಿ ಮುಕ್ತಿಲಲನೆ ಒಲಿಸಿ ತಿಳಿದವರಿಗೆ
ಯುಕ್ತವಾಗಿ ವಿರಕ್ತಿಮಾರ್ಗದಿ
ತತ್ವಜ್ಞಾನದಿಂದ ಮೆರವ ಮಹಿಮರಿಗೆ
ಐಕ್ಯವುಳ್ಳ ಶಿವೈಕ್ಯಭಾವದಿ
ಲಕ್ಷ್ಯವುಳ್ಳ ನಿಜಲಕ್ಷ್ಯವನಿಡುತಲಿ

ಸಾಧುಗಳು ಸೈಯೆಂಬ ಪರಿಯಿಂದಾ
ಸದ್ಗುರು ಕಟಾಕ್ಷದಿ
ನಾದ ಸ್ವರ ಸಂಗೀತ ಹಿತದಿಂ
ಮೇದಿನಿಗೆ ಶಿಶುನಾಳಧೀಶಾನ
ಮೋದದಿಂದಲಿ ಆಲ್ಲಮನ ಪಾದ ಸಂಪಾದಿಸಿ


         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಕೇಳು ಕೇಳಿಂದ್ರಜಾತಾ

- ಶಿಶುನಾಳ ಶರೀಫ್

ಕೇಳು ಕೇಳಿಂದ್ರಜಾತಾ ಚಂದ್ರಹಾಸಾ
ಏಳು ವರುಷದಾತಾ                                                         || ಪ ||

ಸಾಲಿಬರಿಯಲ್ಹೋಗಿ ಕಲಿತನಕ್ಷರವ
ಸಾಲಿಗ್ರಮದ ಶಿಲೆಯು ಬಾಲಕನೀತಾ                                  || ೧ ||

ಆಷ್ಟೆರಡು ವರುಷವಾಗಿ ಪಟ್ಟವ ಕಟ್ಟಿ
ಕೊಟ್ಟ ಕಾರ್ಯವನು ಬೇಗ ದಿಟ್ಟ ಕಲಿಂಗನ ಸಂತಾನ ಕೀರ್ತಿಗಳನೆಲ್ಲಾ
ದುಷ್ಟಬುದ್ದಿಗೆ ಸುದ್ದಿ ಮುಟ್ಟಿದಾಕ್ಷಣದಲಿ                                  || ೨ ||

ಕುಂತಳಪುರದಿಂದಲಿ ತನ್ನ ಚಾರರ ಕಳುಹಿ
ಚಿಂತೆಯೊಳಿರಲು ಸಂತೋಷದಿಂದ ಶಿಶರಿನಾಳಧೀಶನ
ಆಂತಃಕರುಣದಿ ಬಾಲಕರು ಕಂಡರು ಬಂದು                          || ೩ ||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಅಸಲ್ ವಲಿ ಬಹು ಕುಶಲದಲಿ

- ಶಿಶುನಾಳ ಶರೀಫ್

ಅಸಲ್ ವಲಿ ಬಹು ಕುಶಲದಲಿ
ದೇಹಬಿಟ್ಟಾರೋ ಬಸನಾಳ ಗ್ರಾಮದಲಿ
ಹಸನಾಗಿ ಭಜಿಸುವೆ ರಸಿಕರು ಕೇಳರಿ
ಕಸರಿಲ್ಲೇ ಕವಿತಾದಲ್ಲೇ                 ||೧||

ಶಶಿಧರ ಶಂಕರ ಸೂರ್ಯನ ಕಿರಣ
ವರ್ಣಿಸುವೆ ನಿಮ್ಮ ಮಹಾತ್ಮದಲಿ
ಮಹಾತ್ಮದಲಿ ಮಾತೀನ ಕಲಿ
ಬೈಲಾದ ವಲಿ                             ||೨||

ನಾದ ಮೋದ ಹೈದ್ರಾಬಾದದ
ಲೆಖ್ಖ ತೀರಿತೋ ಪೀರ ವಲಿ
ಸಾಧನ ಸಾಧುರ ಸದರಿಗೆ ಒಪ್ಪುವ
ಇಂಥಾವಲಿ ಕಾಣೇ ಜಗದಲಿ           ||೩||



ಲಾಲಧೀನ ಆಲ್ಲಾಉದ್ದೀನ ಶಾ ಖಾದರಿ
ತಾನೇ ಬೆಳಗುವ ತಾನೇ ವಲಿ
ಮಾನಹೀನ ಬಹುಜ್ಞಾನ ಮೌನದಿ
ಬಂಕಾಪುರದ ಪಟ್ಟದ ವಲಿ            ||೪||

ಸಿದ್ದಭಕ್ತ ಈರಭದ್ರಪ್ಪ ಅವನಿಗೆ
ಮುಕ್ತಿ ದೊರಕಿತೋ ಸ್ವರ್ಗದಲಿ
ಸ್ವರ್ಗದಲಿ ಮಾತೀನ ಕಲಿ
ಬೈಲಾದ ವಲಿ                           ||೫||

ಲಕ್ಷಕೆ ಮೋಕ್ಷ ಕಪೇಕ್ಷ
ಲಕ್ಷ ಇಟ್ಟು ಮೆರಿದಂತಾ ವಲಿ
ಈ ಕ್ಷಿತಿಯೊಳು ಶಿಶನಾಳಧೀಶನ
ದಯಾಪರಾತ್ಪರ ಪರದಲ್ಲಿ           ||೬||


         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ

- ಶಿಶುನಾಳ ಶರೀಫ್

ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ             ||ಪ||

ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು
ಸುಂಟರಗಾಳಿಗೆ ಸಿಗದ ಮಹಾತ್ಮನೆ                      ||೧||

ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ
ದಯದ ಯೋಗಿಯ ವಂನಕೆ ಒಲಿಸಿದ ಮಹಿಮನೆ      ||೨||

ವಸುಧಿಪ ಶಿಶುನಾಳಧೀಶನ ಮಗನಿಗೆ
ರಸಬಿಂದು ಕೊಟ್ಟಂಥಾ ಅಸಮ ಸದ್ಗುರುನಾಥಾ       ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ದಾಸರೋ ಹರಿದಾಸರೋ

-ಶಿಶುನಾಳ ಶರೀಫ್

ದಾಸರೋ ಹರಿದಾಸರೋ             ||ಪ||

ದಾಸರೆನಿಸಿ ಧರ್ಮ ಹಿಡಿದು
ಆಸೆ ಕಡಿದು ತೂರ್ಯದಲ್ಲಿ
ಕಾಸು ಕವಡಿ ಕಾಲಿಲೊದ್ದು
ಈಶನೊಲಿಸಿಕೊಂಬುವಂಥಾ          ||೧||

ಸ್ವಾಮಿ ಕೇಶವ ಆಚ್ಯುತ
ಗೋಕುಲದ ಗೋವಿಂದ
ರಾಮ ಕೃಷ್ಣ ಎಂಥ ಪಂಚ-
ನಾಮ ನಿತ್ಯ ಪಠಿಸುವಂಥ             ||೨|| 

ತನುವ ತಂಬೂರಿ ಮಾಡಿ
ಪ್ರಣವನಾದ ಸ್ವರದಿ ಹಾಡಿ
ಚಿನುಮಯಾತ್ಮನೊಲವಿಲೈದು
ಮನೆಯ ಭಿಕ್ಷೆ ಬೇಡುವಂಥಾ      ||೩||

ವರಶ್ರೀಮುಖಮುದ್ರೆ ಎನಗೆ
ಬರಸಿಕೊಟ್ಟ ಶಿರದ ಮೇಲೆ
ಕರವನಿಟ್ಟು ಸಲಹಿದಂಥಾ
ಶಿಶುವಿನಾಳಧೀಶನ ಹರಿ         ||೪||

              ****

ಕೀಲಿಕರಣ: ಎಂ.ಎನ್.ಎಸ್. ರಾವ್