ಅಣ್ಣ ನೋಡೋಣು ಬಾರೋ

ಅಣ್ಣ ನೋಡೋಣು ಬಾರೋ
ಬೇಗನೆ ಸಾರೋ                                          ||ಪ||

ಅಣ್ಣ ನೋಡೋಣು ಬಾರೋ
ನುಣ್ಣಗೆ ತೋರುವ
ಸಣ್ಣ ಮಂದಿರದೊಳು
ಕಣ್ಣಿಟ್ಟು ಜ್ಯೋತಿಯ                                      ||೧||             

ಶಾಲು ಮೇಲೆ ಮುಡಿಹೊತ್ತು ಮಸ್ತಕದಿ
ರುಮಾಲು ಚಿಮ್ಮರಿಯ ಸುತ್ತು
ಬಾಳೊಂದು ಚೆಲುವಾದ ಕಾಲು ಹಾವಿಗೆ ಮೆಟ್ಟಿ
ಮೇಲು ಮಾರ್ಗದಿ ನಿಂತು ನಾಳಿನೊಳಿಬ್ಬರು       ||೨||  

ವಾಯು ಬಲಿದೇಕಾಗಿ ನೀವೀರ್ವರು
ನ್ಯಾಯ ನೀಗದವರಾಗಿ
ಸಾವಿನಂಕುರ ಗೆದ್ದು ಜೀವಾತ್ಮರ ಮುದ್ದು
ಭಾವಿಸಿ ಶಿಶುನಾಳಧೀಶನೆ ಗತಿಯೆಂದು            ||೩||
               * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಸದಾನಂದ ಪರಮಾತ್ಮ ಬೋಧಮಯ

ಸದಾನಂದ ಪರಮಾತ್ಮ ಬೋಧಮಯ
ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ    ||ಪ||

ನಿಧಾನದಲಿ ನಿಜ ಹೃದಯ ಕಮಲದಲಿ
ಸುಧಾಕಿರಣ ಗುರುಪದಾಬ್ಜ ಕಂಡರೆ
ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ    ||೧||

ಯೋಗಿಯಾಗಿ ಸಂಭೋಗ ಮಾಡಿ
ರೋಗವಳಿದು ನಿಜರಾಗಿ ಮೆರೆದರೆ
ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ    ||೨||

ವಸುಧಿಯೊಳಗೆ ಶಿಶುನಾಳಧೀಶನ
ಹೆಸರು ಹೊಗಳಿ ಐದಕ್ಷರ ನುಡಿದರೆ
ಇದೇ ಬ್ರಹ್ಮಜ್ಞಾನ ನೋಡಿಕೊ ಇದೇ ಬ್ರಹ್ಮಜ್ಞಾನ    ||೩||  
***

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಇದೇ ಮನಿ ಹೃದಯದೊಳಗೆ ನಲಿದಾಡುವ ಅತ್ಮನಿಗೆ

ಇದೇ ಮನಿ ಇದೇ ಮನಿ
ಹೃದಯದೊಳಗೆ ನಲಿದಾಡುವ  ಅತ್ಮನಿಗೆ
ಇದೇ ಮನಿ ಇದೇ ಮನಿ                       ||ಪ||

ಕುಟ್ಟಿ ಕಣಕದಾ ಹಿಟ್ಟು ಗಂಟಲದೊಳು
ಧರಿಗೆ ಬೆದರಿ ಬಹು ತೆರದಿ ಮರೆಸುವುದು
ಇದೇ ಮನಿ ಇದೇ ಮನಿ                       ||೧||

ಶಿಶುನಾಳಧೀಶನ ಸಖ ಗೋವಿಂದನ
ಹಸನಾಗಿ ಭೋಜನಕೆಸಗಿ ಕೊಂಡಾಡುವುದು
ಇದೇ ಮನಿ ಇದೇ ಮನಿ                       ||೨||
***

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು

ಅದು ನೋಡು ಅದು ನೋಡು
ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು  ||ಪ||

ಸುತ್ತಲೆ ವ್ಯಾಪಿಸಿಕೊಂಡುದ ನೋಡು
ಅತ್ತಲೆಷ್ಟು ದಶಕಾಂಗುಲಿ ನೋಡು             ||೧||

ಅರವಿನ ಜಾಲದಿ ತೊಡಕೆದ ನೋಡು
ಗುರುವಿನ ಕೀಲ ಹಾಕೆದ ನೋಡು             ||೨||  

ನೋಡೆನೆಂದರೆ ಕಾಣಿಸುವುದಿಲ್ಲಾ              
ನೋಡಿದರಾಕ್ಷಣ ಬಿಡುವುದಿಲ್ಲಾ                ||೩||

ಹರಿಯೂ ಅಲ್ಲಾ ಹರನು ತಾನಲ್ಲಾ
ಧರಿಯೊಳು ಶಿಶುನಾಳಧೀಶನೆ ಬಲ್ಲಾ        ||೪||

***

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ದೊರಕುವದ್ಹಾಂಗ ಪರಮಾನಂದ

ದೊರಕುವದ್ಹಾಂಗ ಪರಮಾನಂದಾ
ಅರಿಯದು ಅದರಂದಾ
ದೊರೆಯದು ನಿನಗದು ಗುರುವರ
ಚರಣದ ಸೇವೆಯೊಳಕಾಗಿ ಬೆರೆಯದನಕಾ   ||ಪ||

ಸರಸವಾದಖಿಳ ಭೋಗವನೆಲ್ಲಾ
ತ್ವರಿಸುವುದು ದುರಿತ ಕರ್ಮಗಳೆಲ್ಲಾ
ತೊರೆದು ಜನಕೆಲ್ಲ
ಕರುಣದಿ ಪರಮಸುಖದಾಯಕ ಗುರುವಿನ
ಕರಮಸ್ತಕದಲ್ಲಿ ಬೆರೆಯದಾತನಕ      ||೧||

ಅರುವಿನೊಳ್ ಅಮಲ ಗುರುತವ ತೋರಿ
ಇರುವುದು ಆ ದಾರಿ
ಆರು ಮೂರು ಎರಡರ ದಾರಿ ಮೀರಿ
ನಿರುತದಿ ಸುಖಬೀರಿ
ಭಾರಿಯ ಪ್ರಣಯವು ಬೊರಿಡುತಲಿ ಮನ
ಸ್ಥಿರವಾಗಿಯೋನ್ಮನಿ ಸೇರದತನಕಾ       ||೩||        
***

-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಭೋಧವಾದೀತೆ ಆನಂದ

ಭೋಧವಾದೀತೆ ಆನಂದ ಬಹು ಚಂದಾ
ಭೋಧವಾದೀತೆ ಆನಂದಾ
ಸಾದರಜ್ಞಾನ ಚತುಷ್ಟಿಯ ಕೊನೆಯೊಳು
ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ                   ||೧||

ವೀರಯೋಗಿವರ ಪಾರಪರಾತ್ಪರ ಮೀರಿದ
ದಾರಿಯ ತೋರಿಸುವುದು ಬಹು ಚಂದಾ
ಶಿಶುನಾಳಧೀಶನ ಗೋವಿಂದಕುಮಾರಗೆ ಬಹು ಚಂದಾ   ||೨||
****
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ

ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ
ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ                     ||ಪ||

ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ
ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ
ಮಾಯಾ ನೂಕಿ ಬ್ರಹ್ಮಗುರುಪಾದಾಂಬುಜ ಸೋಂಕಿ ಸೌಖ್ಯವ ಪಡೆದೆ   ||೧||

ಓದು ಅಕ್ಷರ ವೇದ ಶಾಸ್ತ್ರದ ಸೊಲ್ಲಾ
ಸಾಧನವಿದ್ಯ ಸಕಲೈಶ್ವರ್ಯ ಸಂಪದ ಗಾದಿಮಾತುಗಳೆಲ್ಲಾ
ಪಾದದಲಿ ಮೆಟ್ಟೆಂದು ಹೇಳಿದೆನಲ್ಲಾ
ಬೋಧಿಸಿ ನಾದಬಿಂದು ಕಲಹ ತತ್ವದ ಹಾದಿ ತೋರಿಸಬಲ್ಲಾ              ||೨||

ಹೆಣ್ಣು ಹೊಲ ಮನಿ ಕೆಲಸಗಳೆಂಬಾ
ಹೊನ್ನುಗಳಿಸಿ ಬಂಗಾರ ಬೆಳ್ಳಿ ಹಣಗಳನು ಎಣಿಸಿ ಮೆರೆಯುವ ಜಂಬಾ
ತನ್ನೊಳರಿಯದೆ ಅನ್ಯ ಕರ್ಮದ ಡಂಬವ ಬಿಟ್ಟು
ಚನ್ನ ಶಿಶುನಾಳಧೀಶನೋಳ್ ಪಡಿಯೆಂದಾ ಭಾಗ್ಯದ ಕುಂಭಾ            ||೩||
****
-ಶಿಶುನಾಳ ಶರೀಫ

ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು

ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು;
ಪರನಾದದೊಳಗಿದ್ದ ಮೇಲೆ ಮರುಳೆ
ಬೋದವಾದಿಕರು ಬಹುತರದಿ ಬಗಳುವ ಜನರಪ-
ವಾದಕಂಜುವದ್ಯಾಕಲೇ ಮರುಳೆ                           ||೧||

ಗುರುಕರುಣ ತೀರ್ಥ ಪ್ರಸಾದ ತುಂಬಿದ ಪಾತ್ರೆ
ಕರಮುಟ್ಟಿ ಸವಿದು ಸುಖದಿ ಮೆರೆದು ಶರೀರವನು
ಮರೆದು ಮನ ಪರವಶದಿ ತಿರುಗುತಿರೆ
ನರಗುರಿಗಳ ಹಂಗೇನಲೇ ಮರುಳೆ                        ||೨||

ಮಿಥ್ಯಾವಾಸನೆಯನಳಿದು ಮಾಯಾ ಮೋಹವ ತುಳಿದು
ಸಿದ್ಧಜ್ಞಾನ ಮನೆಯೊಳು ಇರುತಿರೆ
ಕದ್ದಡಲಿಬ್ಯಾಡ ಕರ್ಮಿಗಳ ಕಂಡರೆ ಕಾಲಿ-
ಲೊದ್ದು ಮುಂದಕೆ ನಡಿಯಲೋ ಮರುಳೆ                ||೩||

ತಂದೆ ಶಿಶುನಾಳ ಸದ್ಗುರುವರನು ಪಾಲಿಸಿದ
ಬಿಂದು ವಸ್ತುವಿನ ರುಚಿಯಾ ಕೊಂಡು
ಮಂದಮತಿಗಳು ನುಡಿದ ಮಾತಿಗೆ ಅಳುಕದೆ
ಅಂದದಲಿ ನಡಿದಾಡುತಿರೆ ಮರುಳೆ                       ||೪||
****
-ಶಿಶುನಾಳ ಶರೀಫ

ಸರಿಗಾಣೆನು ಧರಣಿಯೊಳಗಮ್ಮ

ಸರಿಗಾಣೆನು ಧರಣಿಯೊಳಗಮ್ಮ ಕರುಣೆ ಎಲ್ಲಮ್ಮ        ||ಪ||

ಏನು ಹೇಳಲಿ ನಿನ್ನ ಕೌತುಕವ ನೀನಾದಿಯಲ್ಲಿ ತುಂಬಿ ತುಳುಕಿದಿ
    ಏಕೆಂಬ ಭಾವ                                                ||ಅ.ಪ.||


ಪ್ರಥಮ ಕೃತಯುಗದಲ್ಲಿ ಪರಶಿವಗೆ ಸತಿಯಾಗಿ ನೀನು
    ನಿತ್ಯ ಮೆರೆದೆ ರಜತಗಿರಿಯೊಳಗೆ
ಕೃತಕ ಮದುಕೈಟಭರ ಪ್ರಾಣ ಹತವ ಮಾಡಿದಿ ಯುದ್ಧ ಮುಖದಲಿ
ಹಿತವು ತೋರಿದಿ ಸುರರ ಸಮೂಹಕೆ ಪ್ರತಿಯು ಉಂಟೆ
    ನಿನ್ನ ಮಹಾತ್ಮೆಗೆ?                                                ||೧||

ತ್ರೇತಾಯುಗದಲ್ಲಿ ಭೂಮಿಯೊಳು ಜನಿಸಿ ರಾಘವನ ಸ್ತ್ರೀಯೆನಿಸಿ
ಕೋತಿ ಬಳಗವ ಕೂಡಿಕೊಂಡು ಸೇತುಬಂಧನ ಕಟ್ಟಿ ಕಲಹದಿ
ಪಾತಕಿ ರಾವಣನ ಕುಲವನು ನಾಶಮಾಡಿಸಿದೆಲ್ಲ ತತ್ವದಿ    ||೨||

ದ್ವಾಪರ ಯುಗದಲ್ಲಿ ದೃಪದನಿಗೆ ನೀ ಪುತ್ರಿಯಾಗಿ
    ಪತ್ನಿಯಾದೆ ಪಂಚಪಾಂಡವರಿಗೆ
ಪಾಪಿ ಕೌರವ ಕರ್ಣ ದುಶ್ಯಾಸನರು ತಾಪಕೊಡಲು ನಿನ್ನ ಜನ್ಮಕೆ
ಕೋಪ ಜ್ವಾಲೆಯ ತಾಳಿ ನರಕದ ಕೂಪದೊಳು
    ಕುರುಕುಲವ ಕೆಡುಹಿದಿ                                            ||೩||

ಕಲಿಯುಗದೊಳಗಾದಿ ಎಲ್ಲಮ್ಮ ಸುಲಲಿತದಿ
    ಜಮದಗ್ನಿ ಋಷಿಗೆ ಭಾರ್ಯಳಾದೆಮ್ಮ
ಕಲಹಕಾರಿ ಕಾರ್ತಿವೀರ್ಯನ ತಲೆಯ ಕೊಯ್ಸಿಬಿಟ್ಟಿಯಮ್ಮ
ಖಲಿಂದರ ಶಿಶುನಾಳಧೀಶಗ ಒಲಿದು ಪ್ರಿಯ ಮಾತೆಯಾದೆ
    ಸರಿಗಾಣೆ ಧರಣಿಯೊಳಗಮ್ಮ                                   ||೪||

    *    *    *    *
-ಶಿಶುನಾಳ ಶರೀಫ್

ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ
ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ                   ||ಪ||

ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ
ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ    ||ಅ.ಪ.||

ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ
ಬೇವನುಡಿಸಿ ಮೋಜ ನೋಡಿದಿ
ತಾಳ ಜಾಗುಟೆ ಗೆಜ್ಜೆ ನುಡಿಸಿ
ಕಾಲೊಳು ಕಂಚಿನ ಕೊಳಾ ಹಾಕಿ ಕುಣಿಸ್ಯಾಡಿದಿ
ಮ್ಯಾಳಗೊಂಡು ಭಿಕ್ಷೆ ಬೇಡಿಸಿದಿ
ಜೋಲಿಗೆ ಹಾಕಿ ಜೋಗವ್ವೆಂದು ಜನಕ ಕಾಡಿದಿ
ಕಳ್ಳ ಸುಳ್ಳರಿಗೊಲಿದಿ ಕಾಲ ಕರ್ಮವ ಗೆಲಿದಿ
ಭಲೆರೆ ಭಲೆರೆ ಏಳುಕೊಳ್ಳನಾಳುವ ಶರಣೆ          ||೧||

ಬಲ್ಲಿದವರನೆಲ್ಲ ಹಿಡಿದು ಬೆನ್ನಿಲೆ ಸೀಲಿ
ಬಾಯಿಗೆ ಬೀಗ ಜಡಿದು
ಸಲ್ಲು ಸಲ್ಲಿಗೊಮ್ಮೆ ನುಡಿದು
ಉಧೋ ಎಂಬುದೊಳ್ಳೆದವ್ವ ನಿನ್ನ ಬಿರುದು
ಚಲ್ವ ಹೆಂಗಸರ ಶೀರಿ ಸೆಳೆದು
ಚಲ್ಲಣ ತೊಡಿಸಿ ಬುಲ್ಲಿ ತುಂಬಾ ಅರ್ಲ ಜಡಿದು
ಕೋಲುದೀವಟಿಗಿ ಬತ್ತಿ ಮೇಲೆ ಜಗವ ಹೊತ್ತಿ
ಭೂಲೋಕದೊಳು ನಿನ್ನ ಜಾಲಕಿನ್ನೆಣೆಯುಂಟೆ?    ||೨||

ಮಂಡಲದೊಳು ಮಾಯಕಾರ್ತಿ ಜಮದಗ್ನಿಮುನಿಯ
ಚಂಡಕೊರಸಿದ ಮಾಯಕಾರ್ತಿ
ದಂಡು ತಂದು ಗಿರಿಗೆ ಮುತ್ತಿದಿ ಮುನಿಗಳ ಗವಿಗೆ
ಗುಂಡ ಬಡಿದು ಗುಮರಿ ಹಾಕಿದಿ
ಮಿಂಡೇರಂತೆ ನೀರ ತರತಿ ಮಳಲಿನ ಕೊಡಕೆ
ದುಂಡ ಹಾವಿನ ಸಿಂಬಿ ಸುತ್ತಿದಿ
ಗಂಡ-ಹೆಂಡಿರ ಬಿಡಿಸಿ ಭಂಡಾರ ಚೀಲವ ಹೊರಿಸಿ
ರಂಡೀಹುಣ್ಣಿವೆಗಳಿದು ರಾಜಮುತ್ತೈದಿಯಾದೆವ್ವ    ||೩||

ಚಿಕ್ಕ ಮಲಕಿನ ದುರದುಂಡಿ ನೀ ಎಂಥಾಕೆವ್ವಾ
ಚಿಕ್ಕ ಮಗನೊಳು ಕಲಹಗೊಂಡಿ
ಎಕ್ಕಯ್ಯನ ಪ್ರಾಣಗೊಂಡಿ
ಕಕ್ಕಯ್ಯ ಶರಣರಿಗೊಪ್ಪುವಂಥ ರಾಜಮಿಂಡಿ
ಸೊಕ್ಕಿದ ಜನರ ಮನಸ ಕಂಡಿ
ಕಾರಿಕ ಕಾಯಿಕ್ಕಿ ಕರ್ಪುರ ಕಾಣಿಕಗೊಂಡಿ
ದಿಕ್ಕಿನೋಳ್ ಶಿಶುನಾಳ ಮುಕ್ಕಣ್ನನೊಳುಕೂಡಿ
ಅಕ್ಕರದಲಿ ಗುರುನಾಥ ಗೋವಿಂದಗೊಲಿದಿ        ||೪||

    *    *    *    *
-ಶಿಶುನಾಳ ಶರೀಫ್

ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ

ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ ನೋಡಿಲಿಬೇಕು
ಅಲ್ಲಮಪ್ರಭುವಿನ ಮೇಲಡಿ ದಟ್ಟಿನ ಚಳ್ಳುಗುರ್ಕೊಳ್ಳದ
ಕಲ್ಲೊಳು ಜನಿಸಿ ಬಲು ಚಲುವೆ ಎನಿಸಿ ಕಲಿಯುಗದೊಳು ಮರೆದ
ಸಲ್ಲಲಿತದಿ ಶರ್ವಾಣಿಯ ಜಾತ್ರೆಗೆ                                  ||೧||

ಏಳುಕೊಳ್ಳ ಸರೋವರ ಒಂದು ಅಲ್ಲಿಳಿದಳೋ ಬಂದು
ತಾಳ ಜಾಗುಟಿ ಗೋಳಿಡುತಲಿ ಚೌಡಿಕೆ
ಮೇಳ ಸಹಿತ ಉಧೋ ಎಂಬುವ ಗಾನಕೆ
ಬಾಳ ವಿಲಾಸದಿ ಮೈಮೇಲೆ ರೋಮಾಂಚನವೇಳುವ ಮಹಾಂ-
ಕಾಳಿಯ ಜಾತ್ರೆಗೆ ಬಲ್ಲವರು ಹೋಗಿ ನೋಡಲಿ ಬೇಕು        ||೨||

ಮಂಡಲ ಹೊತ್ತು ಮೆರದಂಥಾಕಿ ಬ್ರ-
ಹ್ಮಾಂಡಕ ಸೊಕ್ಕಿ ನವಖಂಡ ಅ-
ಜಾಂಡಕ ತಾಕಿ ಜಗತ್ಪಂಡಿತರಿಗೆ ಪಾವನಾತ್ಮಳಾಗಿ ಸುಖ
ತಾಂಡವ ತೇಜ ಕರಂಡಿ ಎನಿಸಿ ತಾ
ಗೊಂಡು ತಾಳಿ ಮುತ್ತೈದಿ ಹುಣ್ಣಿವೆ                                  ||೩||

ರೇಣುಕಾತ್ಮಜೆಯಾಗಿ ಜನಿಸಿ
ತನು ಮನಗಳಿಂದ ತೋಷವ ಪಡಿಸಿ
ಕ್ಷೋಣಿಯೊಳು ಜಮದಗ್ನಿ ವರಿಸಿ
ಗೋಣಕೊಯಿಸಿ ಕುಣಿಸುತ ಲೋಕದಿ
ಮಾಣದೆ ಮುನಿಗಳ ಮೌನಗೊಳಿಸಿದಿ
ಜಾಣಗಳೆಣಿಪ ಜಗದಂಬೆಯ ಜಾತ್ರೆಗೆ                           ||೪||

ಹಡೆದ ಮಗನೊಳು ಹಗೆಯವ ತಾಳಿ
ಕಡು ಹರುಷದಿ ಎಕ್ಕಯ್ಯಗ ಪೇಳಿ
ಒಡಗೂಡಿದ ಋಷಿಗಳಿಗೆಲ್ಲ ಬಂಗಿ
ಪುಡಿ ರಸವನು ಕುಡಿಸಿ ಜಗವನು ಸಲುಹಿದ
ಒಡೆಯ ಶಿಶುನಾಳಧೀಶನ ಮಡದಿಯ ಜಾತ್ರೆಗೆ                ||೫||


    *    *    *    *
-ಶಿಶುನಾಳ ಶರೀಫ್

ಪಾಲಿಸಯ್ಯ ಪಾರ್ವತಿಪತಿ

ಪಾಲಿಸಯ್ಯಾ ಪಾರ್ವತಿಪತಿ
ತ್ರಿಲೋಕದೋಳ್ ವಿರತಿ            ||ಪ||

ಗಂಗಾಧರನ ಸ್ತುತಿ
ಧ್ಯಾನಿಸುವ ಆತ್ಮಾಭಿರತಿ
ಕರುಣಿ ಕೈಲಾಸಕಧಿಪತಿ             ||೧||

ಗಿರಿಜಾರಮಣನ ಸ್ತುತಿ
ಭಜಿಸಿ ಶಿವಯೋಗ ಸ್ಥಿತಿ
ಸಿದ್ಧಶಿವಯೋಗಿ ಸುಮತಿ            ||೨||

ಬೇಗನೆ ಹೊಂದಿಸು ಸದ್ಗತಿ
ಶಿಶುನಾಳಧೀಶನೇ ಗತಿ
ಕೊಡು ಬೇಗನೆ  ಮುಕುತಿ          ||೩||

    *    *    *    *
-ಶಿಶುನಾಳ ಶರೀಫ್

ಏನಿದು ಪೇಳು ಆತ್ಮಗೆ ಪರಮಾತ್ಮಗೆ

ಏನಿದು ಪೇಳು ಆತ್ಮಗೆ ಪರಮಾತ್ಮಗೆ          ||ಪ||

ನಿನ್ನ ನಿಜವನು ತಿಳಿಯದೆ ಭವದೊಳು
ಮುಳು ಮುಳುಗಿ ಶುಭ ಉಳಿಯದೆ ನೀ        ||೧||

ಪರಮಸಾಗರ ಜೀವನ ಧರೆಗಾಳ್ದ ಈ ಘನ
ಅರಿಯದವಗೆ ಬರೆ ಉಸುರಿದರೇನಿದು
ಸುರ ಅಜ ಭವ ರುದ್ರಾದಿಗಳಿಗೆ ನೀ             ||೨||

ಕುವಲಯರೂಪನಾತನು ಶಿವ ಪ್ರೀತನು
ಭವಸಾಗತರವನು ದಾಂಟಿ
ತವ ಶಿಶುನಾಳಧೀಶನ ಸೇವಕನಿಗೆ  ನೀ      ||೩||

    *    *    *    *
-ಶಿಶುನಾಳ ಶರೀಫ್

ಪಾಪ ರಹಿತ ಪರಮಾತ್ಮ ಸರ್ವೋತ್ತಮ

ಪಾಪ ರಹಿತ ಪರಮಾತ್ಮ ಸರ್ವೋತ್ತಮ
ತಾಪಸಂಹರ ಪರಾತ್ಪರಾ                                ||ಪ||

ನೋಡಿ ಏನು ಭಜಿಸಲಿ ನಾನು
ಕಾಡಿದರೆ ಸಿಗುವದು ಏನು
ರೂಢಿಗೈವನೇ ಕಾಲಕೂಟವಿಷ
ಕೇಡಿಗ ಶೇಷಾಭರಣ                                     ||ಅ.ಪ.||

ಧನಿಕನೆಂದು ನಾನನ್ನುವೆನೆ
ಮನಕೆ ಸಂಶಯವು ಬರುತಲಿದೆ
ತಿರಿದುಣ್ಣುತ ನೀ ತಿರುಗುತಿಹೆ
ಪುಂಡನೆಂಬೆನೇ ಬಂಡುಮಾಡಿದಾ ಮಧ್ಯ
ಪಾಂಡವಾ ಮಲ್ಲಯುದ್ಧದಿ
ಕಂಡು ಕಂಡು ನಾನೆಂತು ಭಜಿಸಲಿ
ಕಂತುಹರನೆ ಗೌರಿಕಾಂತನೆ                           ||೧||

ಶಾಂತಮೂರ್ತಿ ನೀ ಎಂಬೆನೆ ನಾನು
ಭ್ರಾಂತಿಯಿಂದ ತ್ರಿಶೂಲವ ಪಿಡಿದೆ
ಉರಿಗಣ್ಣು ಉರಿಹಸ್ತ ಹಿರಿಯ ದೇವರೊಳು
ನಿರುತ ಬೇಡಿ ಕಾಡುತಿಹುದು ಖೋಡಿ ಮನ        ||೨||

ವಾಹನ ಬೇಡಲು ಮತ್ತೇನು
ಆದಿ ಅನಾದಿ ಮುದಿಎತ್ತು ತಾನು
ಆವ ಆಶೆಯಿರುವದು ಇನ್ನು
ದೇವ ಭವದ ಪಾಶಹರಿ ನೀನು
ಕಾವ ಕರುಣಿ ಶಿಶುನಾಳಧೀಶ
ಮುಕ್ತಿಯೊಂದು ಕೊಡು  ಪರಮೇಶ                  ||೩||
    *    *    *    *
-ಶಿಶುನಾಳ ಶರೀಫ್

ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ

ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ
ಮಾನವ ಜನ್ಮಕೆ ಬಂದು ಏನೇನು ತಿಳಿಯಲಿಲ್ಲೋ ಶಂಭೋಲಿಂಗಾ   ||ಪ||

ಹಾವು ಹರಿದಾಡಿತು ಚೇಳು ಕುಣಿದಾಡಿತು ಶಂಭೋಲಿಂಗಾ
ಹಾವು ಚೇಳಿನ ನುಂಗಿ ಕೋಳಿ ಕೂಗುವದು ಶಂಭೋಲಿಂಗಾ            ||೧||

ಪಕ್ಕವಿಲ್ಲದ ಪಕ್ಷಿಗಗನದೊಳಾಡಿತು ಶಂಭೋಲಿಂಗಾ
ಅಕ್ಕರದಲಿ ಶಿವಾ ನೋಡಿತಾ ನಗುತಿಹನು ಶಂಭೋಲಿಂಗಾ            ||೨||

ಮಾಯವೆಂಬುದು ಮನಿಮಾಡಿತು ದೇಹದೊಳು ಶಂಭೋಲಿಂಗಾ
ಆವ ಕಾಲಕೆ ಇದು ಪರಿಹಾರವಾಗುವದು ಶಂಭೋಲಿಂಗಾ                ||೩||

ಹರಸಿ ದೇವತೆಗಳಿಗೆ ಬ್ರಹ್ಮನ ಕಾವಲ ಶಂಭೋಲಿಂಗಾ
ಗುರುಮಂತ್ರ ಬಲದಿಂದ ಈ ಭವ ನೀಗುವದು ಶಂಭೋಲಿಂಗಾ         ||೪||

ಕಲ್ಲುದೇವರು ಕಣ್ಣು ಮುಚ್ಚಿ ಕಾಪಾಡಿದವು ಶಂಭೋಲಿಂಗಾ
ಬಲ್ಲಿದ ಶಿಶುನಾಶಧೀಶನ ದಯದಿಂದ ಶಂಭೋಲಿಂಗಾ                   ||೫||
    *    *    *    *
-ಶಿಶುನಾಳ ಶರೀಫ್

ಹಮ್ ತೋ ದೇಖಾ ಮೊಹಮ್ಮದ

ಹಮ್ ತೋ ದೇಖಾ ಮೊಹಮ್ಮದ ನೂರೆಗಂವರ್‍
ರಮ್ತೇ ಜಾಕರ್‍ ಆತಸೆ ತವಾಫ್ ಕರ್‍                       ||೧||

ಚಾರ ಅನಾಸಿರ್‍ ಘರ ಪುಕಾರೆ
ಮಾರದಿಯೆ ಮಾಯೇ ಕಿ ಅಸರ್‍                             ||೨||

ರೋಜಾ ನಮಾಜಿ ರಬ್ಬನಾ ರಾಜಿ
ವಾಜಿ ಬತ್ಕೇ ಜಮೀ ಪದರ್‍ ಕುಸರ್‍                        ||೩||

ಶರೀಯತ್ಮೇ ಇಸ್ಲಾಮಕೆ ದರಿಯಾ
ಉಸ್ಮೇ ರೋಶನ್ ಶಿಶುನಾಳ ಸದರ್‍                       ||೪||
    *    *    *    *
-ಶಿಶುನಾಳ ಶರೀಫ್

ನಡಿಯೋ ದೇವರ ಚಾಕರಿಗೆ

ನಡಿಯೋ ದೇವರ ಚಾಕರಿಗೆ ಮುಕ್ತಿ-
ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ                    ||ಪ||

ಎಡಬಲಕೆ ನೋಡುತಲಿ ಷಣ್ಮುಖ
ಒಡಲೊಳಗೆ ತನ್ನ ಮನವ ಸೇರಿಸಿ
ಕಡು ವಿಷಯ ಕರುಣಾಬ್ದಿಗಳ ಕೈ
ಹೊಡೆದು ಮುಂದಕೆ ಒಡುತೋಡುತ                        ||ಅ.ಪ.||

ಬಯಲೊಳು ಬಯಲು ಪುಟ್ಟಿಸಿದಾ ನಿರ್‍-
ಬಯಲಿನೊಳಗೆ ತನ್ನಾಲಯವ ಕಟ್ಟಿಸಿದಾ
ಭವನಿವಾರಣ ಭಕ್ತವತ್ಸಲ
ಅಹುದೆನಿಸಿ ನಿಶ್ಚಯಿಸಿ ಮನದೊಳು
ತವಕ ತೂರ್ಯದ ಲಕ್ಷದಿಂದಲಿ
ಭವಸಮುದ್ರವ ದಾಂಟು ದಾಟುತ                            ||೧||

ಆ ಮಹಾಮಹಿಮ ಪೇಳಿದನು ಈ
ಭೂಮಿಯೋಳ್ ಹುಲಗೂರ ಗ್ರಾಮಕಿಳಿದನು
ನಾಮ ರೂಪ ಕ್ರಿಯಾ ಕಲಾಪದಿ
ಸೀಮೆಯನು ಗೆಲಿದಂಥ ಸ್ವಾಮಿಯ
ನೇಮ ಹಿಡಿದಾತ್ಮನೊಳು ಭಜಿಸುತ
ಕಾಮ ಕ್ರೋಧವ ಕಾಲಿಲೊದೆಯುತ                        ||೨||

ಜೀವ ಪರಮರೊಂದುಗೂಡಿ ಅನು
ಭಾವದಿ ಸಾಯ್ಯುಜ್ಯ ಪದವಿಯ ಬೇಡಿ
ಕಾಯಿ ಸಕ್ಕರಿ ಊದನೀಡುತ
ಜಿವ್ಹೆಯೊಳು ಮಂತ್ರವನು ಜಪಿಸುತ
ಠಾವು ಶಿಶುವಿನಾಳಿಂದ ಹೊರಟು
ಮಾಯಿಯನು ಮುರಿದೊತ್ತಿ ಮೌಜಿಲೆ                        ||೩||
    *    *    *    *

-ಶಿಶುನಾಳ ಶರೀಫ್

ಖಾದರಿ ಸದಾವರಿ

ಖಾದರಿ ಸದಾವರಿ
ನಿತ್ಯ ನಿರಂಜನಾವರಿ                            ||ಪ||

ಪಂಚ ಪ್ರಣಮ ಘೋಷನಾದ
ಮುಂಚೆ ಮೌನ ಖಾದರಿ
ಸಂಚಿತಾರ್ಥ ವಿಷಯ ಕರ್ಮವಿದು
ಪ್ರಪಂಚದೂರ ಖಾದರಿ
ಪದವಿದಾನು ಸದವಿದಾನು
ಪದವಿದೂರ ಖಾದರಿ                             ||೧||

ಆದಿನಾದ ಮೋದನಾದ
ಹಮ್ಮನಳಿದ ಖಾದರಿ
ಮೇದಿನಿ ಸ್ಥಳದಿ ಶಿಶುನಾಶ
ಶಹಾದತ್ ಹಜರೇಶಾ ಖಾದರಿ               ||೨||
    *    *    *    *

-ಶಿಶುನಾಳ ಶರೀಫ್