ಪಾಪ ರಹಿತ ಪರಮಾತ್ಮ ಸರ್ವೋತ್ತಮ
ತಾಪಸಂಹರ ಪರಾತ್ಪರಾ ||ಪ||
ನೋಡಿ ಏನು ಭಜಿಸಲಿ ನಾನು
ಕಾಡಿದರೆ ಸಿಗುವದು ಏನು
ರೂಢಿಗೈವನೇ ಕಾಲಕೂಟವಿಷ
ಕೇಡಿಗ ಶೇಷಾಭರಣ ||ಅ.ಪ.||
ಧನಿಕನೆಂದು ನಾನನ್ನುವೆನೆ
ಮನಕೆ ಸಂಶಯವು ಬರುತಲಿದೆ
ತಿರಿದುಣ್ಣುತ ನೀ ತಿರುಗುತಿಹೆ
ಪುಂಡನೆಂಬೆನೇ ಬಂಡುಮಾಡಿದಾ ಮಧ್ಯ
ಪಾಂಡವಾ ಮಲ್ಲಯುದ್ಧದಿ
ಕಂಡು ಕಂಡು ನಾನೆಂತು ಭಜಿಸಲಿ
ಕಂತುಹರನೆ ಗೌರಿಕಾಂತನೆ ||೧||
ಶಾಂತಮೂರ್ತಿ ನೀ ಎಂಬೆನೆ ನಾನು
ಭ್ರಾಂತಿಯಿಂದ ತ್ರಿಶೂಲವ ಪಿಡಿದೆ
ಉರಿಗಣ್ಣು ಉರಿಹಸ್ತ ಹಿರಿಯ ದೇವರೊಳು
ನಿರುತ ಬೇಡಿ ಕಾಡುತಿಹುದು ಖೋಡಿ ಮನ ||೨||
ವಾಹನ ಬೇಡಲು ಮತ್ತೇನು
ಆದಿ ಅನಾದಿ ಮುದಿಎತ್ತು ತಾನು
ಆವ ಆಶೆಯಿರುವದು ಇನ್ನು
ದೇವ ಭವದ ಪಾಶಹರಿ ನೀನು
ಕಾವ ಕರುಣಿ ಶಿಶುನಾಳಧೀಶ
ಮುಕ್ತಿಯೊಂದು ಕೊಡು ಪರಮೇಶ ||೩||
* * * *
-ಶಿಶುನಾಳ ಶರೀಫ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ