ಸರಿಗಾಣೆನು ಧರಣಿಯೊಳಗಮ್ಮ

ಸರಿಗಾಣೆನು ಧರಣಿಯೊಳಗಮ್ಮ ಕರುಣೆ ಎಲ್ಲಮ್ಮ        ||ಪ||

ಏನು ಹೇಳಲಿ ನಿನ್ನ ಕೌತುಕವ ನೀನಾದಿಯಲ್ಲಿ ತುಂಬಿ ತುಳುಕಿದಿ
    ಏಕೆಂಬ ಭಾವ                                                ||ಅ.ಪ.||


ಪ್ರಥಮ ಕೃತಯುಗದಲ್ಲಿ ಪರಶಿವಗೆ ಸತಿಯಾಗಿ ನೀನು
    ನಿತ್ಯ ಮೆರೆದೆ ರಜತಗಿರಿಯೊಳಗೆ
ಕೃತಕ ಮದುಕೈಟಭರ ಪ್ರಾಣ ಹತವ ಮಾಡಿದಿ ಯುದ್ಧ ಮುಖದಲಿ
ಹಿತವು ತೋರಿದಿ ಸುರರ ಸಮೂಹಕೆ ಪ್ರತಿಯು ಉಂಟೆ
    ನಿನ್ನ ಮಹಾತ್ಮೆಗೆ?                                                ||೧||

ತ್ರೇತಾಯುಗದಲ್ಲಿ ಭೂಮಿಯೊಳು ಜನಿಸಿ ರಾಘವನ ಸ್ತ್ರೀಯೆನಿಸಿ
ಕೋತಿ ಬಳಗವ ಕೂಡಿಕೊಂಡು ಸೇತುಬಂಧನ ಕಟ್ಟಿ ಕಲಹದಿ
ಪಾತಕಿ ರಾವಣನ ಕುಲವನು ನಾಶಮಾಡಿಸಿದೆಲ್ಲ ತತ್ವದಿ    ||೨||

ದ್ವಾಪರ ಯುಗದಲ್ಲಿ ದೃಪದನಿಗೆ ನೀ ಪುತ್ರಿಯಾಗಿ
    ಪತ್ನಿಯಾದೆ ಪಂಚಪಾಂಡವರಿಗೆ
ಪಾಪಿ ಕೌರವ ಕರ್ಣ ದುಶ್ಯಾಸನರು ತಾಪಕೊಡಲು ನಿನ್ನ ಜನ್ಮಕೆ
ಕೋಪ ಜ್ವಾಲೆಯ ತಾಳಿ ನರಕದ ಕೂಪದೊಳು
    ಕುರುಕುಲವ ಕೆಡುಹಿದಿ                                            ||೩||

ಕಲಿಯುಗದೊಳಗಾದಿ ಎಲ್ಲಮ್ಮ ಸುಲಲಿತದಿ
    ಜಮದಗ್ನಿ ಋಷಿಗೆ ಭಾರ್ಯಳಾದೆಮ್ಮ
ಕಲಹಕಾರಿ ಕಾರ್ತಿವೀರ್ಯನ ತಲೆಯ ಕೊಯ್ಸಿಬಿಟ್ಟಿಯಮ್ಮ
ಖಲಿಂದರ ಶಿಶುನಾಳಧೀಶಗ ಒಲಿದು ಪ್ರಿಯ ಮಾತೆಯಾದೆ
    ಸರಿಗಾಣೆ ಧರಣಿಯೊಳಗಮ್ಮ                                   ||೪||

    *    *    *    *
-ಶಿಶುನಾಳ ಶರೀಫ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ