ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ
ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ                   ||ಪ||

ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ
ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ    ||ಅ.ಪ.||

ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ
ಬೇವನುಡಿಸಿ ಮೋಜ ನೋಡಿದಿ
ತಾಳ ಜಾಗುಟೆ ಗೆಜ್ಜೆ ನುಡಿಸಿ
ಕಾಲೊಳು ಕಂಚಿನ ಕೊಳಾ ಹಾಕಿ ಕುಣಿಸ್ಯಾಡಿದಿ
ಮ್ಯಾಳಗೊಂಡು ಭಿಕ್ಷೆ ಬೇಡಿಸಿದಿ
ಜೋಲಿಗೆ ಹಾಕಿ ಜೋಗವ್ವೆಂದು ಜನಕ ಕಾಡಿದಿ
ಕಳ್ಳ ಸುಳ್ಳರಿಗೊಲಿದಿ ಕಾಲ ಕರ್ಮವ ಗೆಲಿದಿ
ಭಲೆರೆ ಭಲೆರೆ ಏಳುಕೊಳ್ಳನಾಳುವ ಶರಣೆ          ||೧||

ಬಲ್ಲಿದವರನೆಲ್ಲ ಹಿಡಿದು ಬೆನ್ನಿಲೆ ಸೀಲಿ
ಬಾಯಿಗೆ ಬೀಗ ಜಡಿದು
ಸಲ್ಲು ಸಲ್ಲಿಗೊಮ್ಮೆ ನುಡಿದು
ಉಧೋ ಎಂಬುದೊಳ್ಳೆದವ್ವ ನಿನ್ನ ಬಿರುದು
ಚಲ್ವ ಹೆಂಗಸರ ಶೀರಿ ಸೆಳೆದು
ಚಲ್ಲಣ ತೊಡಿಸಿ ಬುಲ್ಲಿ ತುಂಬಾ ಅರ್ಲ ಜಡಿದು
ಕೋಲುದೀವಟಿಗಿ ಬತ್ತಿ ಮೇಲೆ ಜಗವ ಹೊತ್ತಿ
ಭೂಲೋಕದೊಳು ನಿನ್ನ ಜಾಲಕಿನ್ನೆಣೆಯುಂಟೆ?    ||೨||

ಮಂಡಲದೊಳು ಮಾಯಕಾರ್ತಿ ಜಮದಗ್ನಿಮುನಿಯ
ಚಂಡಕೊರಸಿದ ಮಾಯಕಾರ್ತಿ
ದಂಡು ತಂದು ಗಿರಿಗೆ ಮುತ್ತಿದಿ ಮುನಿಗಳ ಗವಿಗೆ
ಗುಂಡ ಬಡಿದು ಗುಮರಿ ಹಾಕಿದಿ
ಮಿಂಡೇರಂತೆ ನೀರ ತರತಿ ಮಳಲಿನ ಕೊಡಕೆ
ದುಂಡ ಹಾವಿನ ಸಿಂಬಿ ಸುತ್ತಿದಿ
ಗಂಡ-ಹೆಂಡಿರ ಬಿಡಿಸಿ ಭಂಡಾರ ಚೀಲವ ಹೊರಿಸಿ
ರಂಡೀಹುಣ್ಣಿವೆಗಳಿದು ರಾಜಮುತ್ತೈದಿಯಾದೆವ್ವ    ||೩||

ಚಿಕ್ಕ ಮಲಕಿನ ದುರದುಂಡಿ ನೀ ಎಂಥಾಕೆವ್ವಾ
ಚಿಕ್ಕ ಮಗನೊಳು ಕಲಹಗೊಂಡಿ
ಎಕ್ಕಯ್ಯನ ಪ್ರಾಣಗೊಂಡಿ
ಕಕ್ಕಯ್ಯ ಶರಣರಿಗೊಪ್ಪುವಂಥ ರಾಜಮಿಂಡಿ
ಸೊಕ್ಕಿದ ಜನರ ಮನಸ ಕಂಡಿ
ಕಾರಿಕ ಕಾಯಿಕ್ಕಿ ಕರ್ಪುರ ಕಾಣಿಕಗೊಂಡಿ
ದಿಕ್ಕಿನೋಳ್ ಶಿಶುನಾಳ ಮುಕ್ಕಣ್ನನೊಳುಕೂಡಿ
ಅಕ್ಕರದಲಿ ಗುರುನಾಥ ಗೋವಿಂದಗೊಲಿದಿ        ||೪||

    *    *    *    *
-ಶಿಶುನಾಳ ಶರೀಫ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ