ಅಲ್ಲೀಕೇರಿಗೆ ಹೋಗೋನು ಬರ್ತೀರೇನ್ರೇ

ಅಲ್ಲೀಕೇರಿಗೆ ಹೋಗೋನು ಬರ್ತೀರೇನ್ರೇ ನೀವು
ಒಲ್ಲದಿದ್ದರೆ ಇಲ್ಲೆ ಇರತೀರೇನ್ರೇ                                                                             ||ಪ||

ಕಲ್ಲೌ ಮಲ್ಲೌ ಕೂಡಿಕೊಂಡು ದೀವಳಿಗೆ ಹಬ್ಬದಲ್ಲಿ
ಉಲ್ಲಾಸದಿಂದ ಅಲ್ಲಮಪ್ರಭುವಿನ ಮರೆತೀರೇನ್ರೇ ಇಲ್ಲೇ ಇರತೀರೇನ್ರೇ                          ||ಅ.ಪ.||

ಮಡಿಯನುಟ್ಟು ಮೀಸಲದಡಗಿ ಮಾಡಬೇಕ್ರೇ ಅದಕೆ
ತಡವು ಆದರೆ ನಿಮ್ಮ ಗೊಡವಿ ನಮಗೆ ಯಾಕ್ರೇ
ಹುರಕ್ಕಿ ಹೋಳಿಗೆ ಹೂರಣಕಡಬು
ಕಡಲಿ ಪಚ್ಚಡಿ ಕಟ್ಟಿನಾಂಬ್ರಾ
ಚಟಗಿ ಮುಚ್ಚಳ ಬಾನದ ಗಡಗಿ ಹೆಡಗಿ ಜೋಕ್ರೆ ನೀವು
ದೇವರ ಗುಡಿಗೆ ದೃಡದಿ ಹೋಗಿ ಧೂಪ ಹಾಕ್ರೇ                                                           ||೧||

ಊರ ಹೊರಗಿನ ಸಾರಿ ಮೀರಿದ ಸ್ಥಳವ ನೋಡ್ರೆ ಅದಕ
ಸೇರದಿದ್ದರ ನಿಮ್ಮ ಸ್ನೇಹ ನನಗೆ ಬ್ಯಾಡ್ರೇ
ಮೂರು ಗಿರಿಯ ಮರೆಯಲ್ಲಿರುವ
ನೀರು ತರುವ ಕೆರೆಯ ಬದಿಗೆ
ಜಾರುತರದ ಬುರುಜಿನೊಳು ಬಾಜಾರ್ ಹೂಡ್ರೆ ಮುಂದೆ
ಪಾರುಗಾಣುವಂಥ ಸುಸ್ರಿ ತಂದು ಇಡ್ರೇ                                                                   ||೨||

ವಸುಧೆಯೊಳು ಶಿಶುನಾಳಧೀಶನ ಹೆಸರು ಹೇಳ್ರೇ ಹೇಸಿ
ವ್ಯಸನಿಕರಾದವರೆಲ್ಲ ಇದಕ ಬರಲೇ ಬೇಡ್ರೇ
ಕುಶಲದಿಂದ ಕೋಲ ಪಿಡಿದು
ಹಸನಾಗಿ ಪದ ನುಡಿದು
ರಸಿಕರಾದವರೆಲ್ಲ ನೀವು ಕೂತು ಕೇಳ್ರೇ ತುಸು
ಕಸರು ಇದ್ದರೆ ಇಲ್ಲಿ ಅದನ್ ತಿದ್ದಿ ಹೇಳ್ರೇ                                                                  ||೩||
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ