ಬುಡುಬುಡಿಕ್ಯಾ

ಓಂ ದೇವದೇವರ ದೇವರ ಮಗನ
ದೇವಲೋಕದ ಬುಡುಬುಡಿಕ್ಯಾ ನಾ
ಭಾವಶುದ್ದವಾಗಿ ಕೇಳಿರಿ ಸುಮ್ಮನ
ದೇವಲೋಕದ ಸತ್ವಾಧೀನ                 ||೧||

ಪಡುವಣ ದಿಕ್ಕಿನ ಬುಡುಬುಡಿಕ್ಯಾ ನಾ
ಮೂಡಣ ದೇಶವ ನೋಡುತ ಬಂದೆ
ಬೇಡಿ ಬೇಡಿದ್ದನು ಹೇಳುವ ಕೇಳೆ
ರೂಢಿಯೊಳಗೆ ನಾ ನುಡಿಯುಪವೆ ತಾಯಿ  ||೨||

ದೇಹದ ಮಮ೯ವನೆಲ್ಲವ ಬಲ್ಲೆ
ಕಾಯದೊಳಗೆ ಒಂದು ದೇವರುಂಟು
ಮೋಹ ಮಾಯಗಳು ತೊಲಗಲು ತಾಯಿ
ಶ್ರೇಯಸ ಸಾಧನ ತಿಳಿವದು ಕೇಳೆ           ||೩||

ಹತ್ತು ಮಂದಿ ದಿಕ್‍ಪಾಲಕರಮ್ಮ
ಹಂತೇಲೆ ಇರುವರು ನೋಡಮ್ಮ
ಚಿತ್ತಶುದ್ಧವಾಗಿ ಕೇಳವ್ವ ತಂಗಿ
ಸತ್ಯವಾಗಿ ನಾ ನುಡಿಯುವೆ ತಾಯಿ        ||೪||

ಸ್ಥೂಲ ಸೂಕ್ಷ್ಮ ಕಾರಣ ದೇಹ
ಮೂಲ ಪ್ರಣಮವು ನಿನದವ್ವ ಮಗಳೆ
ಮೂಲೋಂಕಾರದ ನೆಲೆಯನು ತಿಳಿಯೆ
ಕೀಲ ತಿಳಿದುಕೂಂಡಿಬೇಕಮ್ಮ              ||೫||

ಉಪಾಯ ನಿನಗೊಂದು ಹೇಳುವೆನಮ್ಮ
ಜಪ ಶಪದಾಚಾರ ಸಾಧಿಸಲಮ್ಮ
ಭಕ್ತಿ ಮೆಚ್ಚಲು ಶಿಶುನಾಳೇಶ
ಮುಕ್ತಿಯ ಸಂಪದ ಕೊಡುವನು ಈಶ      ||೬||

ಜಾಗ್ರ ಸುಷುಪ್ತಿ ಸ್ವಪ್ನದೊಳಗೆ
ಶಿಘ್ರದಿಂದ ಶಿವಾ ಇರುತಾನ ತಂಗಿ
ಜಾಗ್ರತಿಯಿಂದ ತಿಳಕೋಳವ್ವ
ಮಹಾಜ್ಞಾನಿ ಗುರು ಬಂದಿರುವನನು        ||೭||

ತೈಲವಿಲ್ಲದೊಂದು ಜ್ಯೋತಿಯು ಉಂಟು
ತೆಲಿಯೊಳಗೆ ತಾ ಬೆಳಗುತದವ್ವಾ
ನಯನ ಹಿಡಿದು ನೀ ನೋಡದ್ವ ತಂಗಿ
ಚೈಲಿಗ ಬಯಲಾಗಿ ಹೋಯಿತು ಮಗಳೆ    ||೮||

ಸಾಂಖ್ಯ ತಾರಕಾ ಮನಸುಗಳು ಕೂಡಿ
ಬಹು ಕಿಂಕರ ವೃತ್ತಿಯೊಳು ಇರಬೇಕಮ್ಮ
ಆಹಂಕಾರ ಗುಣಗಳು ಆಳಿಬೇಕಮ್ಮ
ಶಂಕರ ಮಗಳು ನೀನಾಗಿರಬೇಕಮ್ಮ        ||೯||

ಕಲ್ಯಾಣದಲಿ ಹುಟ್ಟಿದ ಮಗಳೆ
ಕಲ್ಲದೇವರನು ಕಟ್ಟುತ ಬಂದಿ
ಎಲ್ಲ ಶಾಸ್ರವ ಕಟ್ಟಿಡು ತಂಗಿ
ಆಲ್ಲಮದೇದರ ದೇವರ ಮಗ ನಾನು       ||೧೦||

ಆಕಾಶದೊಳು ಇದ್ದೆನು ತಂಗಿ
ಯಶದೆಸೆಗ ನಿಂತಿಹ ತಾಯಿ
ನೂಕ್ಯಾಡಿದರೆ ದಿನವಿಲ್ಲವ್ವಾ
ಯಾಕಬೇಕು ಸಂಸಾರ ತಾಯಿ                ||೧೧||        

ಎಡಮುರಿ ಶಾಸ್ರವ ತಂದೇನಿ ಮಗಳ
ಡೃಢದಿಂದ ಲಾಲಿಸಿ ಕೇಳವ್ವ ತಂಗಿ
ಸೆಡಗರದೊಡಯ ಕೊಡು ಬಂದಿಹನು
ಮೃಡನ ಮಗನು ನಾನು ಬುಡುಬುಡಿಕ್ಯಾನು  ||೧೨||

ಬ್ರಹ್ಮ ವಿಷ್ಣು ರುದ್ರ ಸದಾಶಿವರ
ಮಮ೯ವ ನಾ ಹೇಳುವೆನಮ್ಮ
ಕರ್ಮದೇಹಗಳು ಆಮರೇ ತಾಯಿ
ಧಮ೯ದ ಮರ್ಮವ ಆರಿಯರು ಮಗಳೆ        ||೧೩||

ಮರಣದ ಬಾಗಿಲ ತರದಿಹ ಮಗಳೆ
ಪ್ರಮಾಣ ಇತ್ತೋ ನಿನಗವ್ವ ತಾಯಿ
ಪರಕಾಯ ಇದನೆಳೆದೊಯ್ಯುವರು ತಾಯಿ
ತಿರಗಿ ತಿರಗಿ ನೀ ಬರಬೇಕಮ್ಮ                 ||೧೪||

ಹದಿಮೂರು ಮುತ್ತು ನಿನ್ನೊಳಗವ್ವ
ಆದರೊಳಗೊಂದು ರತ್ನ ಇರುವುದದ್ವ
ಕದಲದೆ ಮನದೊಳು ನೋಡವ್ವ ತಂಗಿ
ಚದುರತನದಿ ನೀ ಧರಿಸವ್ವ ತಾಯಿ           ||೧೫||

ಯಾವ ದೇವರು ದೇವರಲ್ಲ
ವಾಯುದೇವನೇ ದೇವನಮ್ಮ
ಜೀವ ಆದರೊಳು ಇರುವದು ತಂಗಿ
ಸಾವು ಇಲ್ಲದೊಂದು ಗಿಡ ಉಂಟಮ್ಮ      ||೧೬||

ಹುಟ್ಟು ಮಾಗ೯ದಲಿ ಹೋಗುವಿ ತಂಗಿ
ಹುಟ್ಟಿನ ಗಿಡದಲಿ ಮಲಗುವಿ ಮಗಳೆ
ಬೆಟ್ಟದ ಎಲೆ ಆರಿಸಿ ತರಬೇಕಮ್ಮ
ಮುಟ್ಟಿದ ಲಿಂಗಕೆ ನೀಡಬೇಕಮ್ಮ            ||೧೭||

ಲೋಕದಂಥ ಬುಡುಬುಡಿಕ್ಯಾನಲ್ಲ
ಏಕಾಂಗಿ ನಾ ಬುಡುಬುಡಿಕ್ಯಾ ನಾ
ಜೋಕಿಲೆ ತಿಳಿಸಿ ಕೊಡುವೆನು ಬಾರವ್ವ
ಮೂಕಳಗಿ ನೀನಿರಬೇಕಮ್ಮ                   ||೧೮|| 

ತಂದಿಲೆ ಹತ್ತು ತಾಯಿಲೆ ಹನ್ನೊಂದು
ಬಂಧು ಬಳಗ ಮತ್ತಿಪ್ಪತ್ತೊಂದು
ಸಂದೇಹವಿಲ್ಲದೆ ಕೊಡಲಿಕೆ ಬಂದೇನಿ
ಕಂದುಗೊರಳಿನ ಕರುಣವೇ ತಾಯಿ           ||೧೯||

ನೂರೊಂದು ಸ್ಥಳದವ ಬಂದೇನಿ ಮಗಳೆ
ಮೂರು ಲಿಂಗದ ನೆಲಿಯೇನು ಬಲ್ಲೆ
ಮೀರಿದುನ್ಮನಿ ಇರಬೇಕಮ್ಮ
ಸೂಯ೯ ಚಂದ್ರರ ಹಾದದಿಯ ಹಿಡಿದು      ||೨೦||

ಸಾಧುರ ಸಂಗವ ಮಾಡಬೇಕು ಮಗಳೆ
ದೇವಪ್ರಪಂಚ ಹಿಡಿಬೇಕು ತಂಗಿ
ನಾದ ಬ್ರಹ್ಮವ ಕೂಡಬೇಕಮ್ಮ
ಸಾಧಿಸಿ ಕೂಡಿಕೋ ಸಾಂಬನ ತಾಯಿ         ||೨೧||

ಜೀವಪ್ರಪಂಚ ಬಿಡಬೇಕು ಮಗಳೆ
ದೇವಪ್ರಪಂಚ ಹಿಡೀಬೇಕು ತಂಗಿ
ಸಾವಪ್ರಪಂಚ ಸಡಿಲೀತಮ್ಮ
ಭಾವಪ್ರಪಂಚ ದೃಢವಿರಲೆಮ್ಮ              ||೨೨||

ಸಿದ್ಧಾರೂಢನ ಮಗನವ್ವ
ನಿದ್ರೆಗೆ  ಸಾಕ್ಷ್ಯಾಗಿರುವೆನು ತಾಯಿ
ಚಿದ್‍ರೂಪನ ಸಂದನ ಹೇಳಲಿಕ್ಕೆ ಬಂದೇನಿ
ತದ್‍ರೂಪಳು ನೀನಾಗಿರಬೇಕವ್ವ            ||೨೩||

ವಿರಾಟ ಸ್ವರಾಟ ವೀರಾಟ ಕೂಡಿ
ಭರಾಟೆಲಿಂದ ಬಂದೇನಿ ಮಗಳ
ನರರಾಟಿಕೆನೆಲ್ಲ  ಮುರಿಲಿಕೆ ತಂಗಿ
ಮರುಳಾಟಿಕೆನೆಲ್ಲ ಮರೀಬೇಕಮ್ಮ          ||೨೪||

ಸ್ರ ದಳ ಕಮಲದೊಳು ಶಿವನು ತಾನು
ಹಾರೈಸಿರುವನು ನೋಡವ್ವ ಮಗಳೆ
ಕಾಶಿ ರಾಮೇಶ್ವರನಲ್ಲಿರುವನು
ಮೀಸಲದಡಗಿ ನೀನುಣಬೇಕಮ್ಮ             ||೨೫||

ಷಣ್ಮುಖ ಪಾಷಾಣ ಮಾಡಬೇಕು ಮಗಳೆ
ಷಣ್ಮುಖಾದ್ರಿಗಳ ಹಿಡಿಬೇಕು ತಂಗಿ
ಕಣ್ಣು ಮೂಗು ಕಿವಿ ಮುಚ್ಚಿರಬೇಕಮ್ಮ
ಷಣ್ಮುಖಿಚಾರಿಸಿ ನೋಡಬೇಕಮ್ಮ           ||೨೬||

ಪಂಚಯೋಗ ಮಾಡಬೇಕು ಮಗಳ
ಪಂಚಲಕ್ಷಣದಿ ನಡಿಬೇಕಮ್ಮ
ಪಂಚಮುದ್ರಿಯ ಬಲಿಬೇಕಮ್ಮ
ಪಂಚಾಕ್ಷರಿ ನುಡಿಬೇಕು ತಾಯಿ                ||೨೭||

ಆಷ್ಟಾಂಗಯೋಗ ಮಾಡಬೇಕು ಮಗಳ
ಆಷ್ಟಸಿದ್ಧಿ ಪಡಿಬೇಕು ತಂಗಿ
ಆಷ್ಟಮೂರುತಿ ಆಗಿರಬೇಕಮ್ಮ
ಆಷ್ಟೈಶ್ವರ್ಯದೊಳು ಕೂಡಬೇಕು ತಾಯಿ   ||೨೮||

ತಾರಕ ಮಂತ್ರ ಹೇಳುವೆ ಮಗಳೆ
ಸಾರಿದ ಸವಾ೯ತ್ಮನು ತಾಯಿ ಬೇರಿಲ್ಲವ್ವ
ಪರಮಾನ್  ಪರ ಆನಂದಕೆ
ನೀ ಮೀರಿದ ಮಗಳೆ                             ||೨೯||    

ದರ್ಪಣಮುಖ ಸ್ವರೂಪದಿ ನೋಡವ್ವ
ಕಪ್ಪುಗೊರಳಿನಲ್ಲಿರುವನು ತಂಗಿ
ಸಪ೯ಭೂಷಣನ ಕೂಡಬೇಕವ್ವ
ಕರ್ಪೂರದಾರತಿ ಬೆಳಗವ್ವ ಮಗಳೆ             ||೩೦||

ಸ್ವಗ೯ದ ಹಾದಿ ಬೇಡಬೇಕು ಮಗಳೆ
ಭಾಗ೯ವದೇವನ ನೆನಿಬೇಕುಕಂ ತಂಗಿ
ನಿಗು೯ಣ ಸಮಾಧಿ ಮಾಡಬೇಕವ್ವ
ದುರಗವ್ವನ ಗುಡಿಗೆ ಹೋಗಬೇಕು ಮಗಳೆ   ||೩೧||

ತಿರುಗುತಲೈವತ್ತೆರಡಕ್ಷರ ತಾಯಿ
ಬರಿವರು ಬ್ರಹ್ಮಾಡದ ಜನರವ್ವ
ಕರಿವರು ನಾಮರೂಪದೊಳು ತಂಗಿ
ಪರಿ ಪರಿ ಷಟ್‍ಕಮ೯ಸ್ಥರು ತಾಯಿ           ||೩೨||

ಸತ್ಯ ಎಂಬುದು ಇರುವದು ಮಗಳೆ
ಚಿತ್ತ ಎಂಬುದು ಆರುವಿದೆ ತಂಗಿ
ಮತ್ತಾನಂದದಿ ಬಹುಸುಖವವ್ವಾ
ನಿತ್ಯಪೂಣ೯ಂಭರಿತಯ್ಯನ ಮಗಳೆ           ||೩೩||

ಭವ ಭವದಲಿ ತಿರುಗುತ ಬಂದೇನಿ
ಭವಣಿಯಿತ್ತಲವ್ವ ನಿನಗವ್ವ ಮಗಳೆ
ಶುಭಮೂತ೯ದಲಿ ಬಂದಿಹೆ ತಾಯಿ
ಆಯನ ತೋ‌ಆರಿಸಿ ಕೊಡುವೆನು ಬಾರೆ         ||೩೪||

ಕೋಟಿ ಎಲವು ನಿನಗುಂಟವ್ವ ಮಗಳೆ
ನಾಟಕ ಒಂದು ತರಬೇಡದ್ವ ತಂಗಿ
ಚಾಟ ವಿದ್ಯ ನಾ ಹೇಳುವವನಲ್ಲ
ಕೂಟಸ್ಥ ಬ್ರಹ್ಮದೊಳು ಏಕ್ಯಾ ಐಕಾಗಮ್ಮ   ||೩೫||

ಕಾಲಜ್ಞಾನದ ಪುರುಷನು ನಾನು
ಮೇಲುಜ್ಞಾನವನು ಹೇಳಲು ಬಂದೆ
ಕಾಲ ಸೂಚನೆಗಳು ಬಂದಾವಮ್ಮಾ
ಹಾಲುಹಕ್ಕಿ ಒಂದು ನುಡಿತೈತಿ ತಾಯಿ          ||೩೬||

ಹಸಿ ಹುಸಿ ಮಾತುಗಳ ಆಡಬೇಡಮ್ಮ
ದಶದಿಕ್ಕು ಹಸನುಮಾಡುತ ಬಂದಿಹನೇ
ಕುಶಲಗಾರ ಕುಂಪನಿಯರಮ್ಮ
ವಾಸುದೇವನ ಆವತಾರ ಜನಿಸಿದರಮ್ಮ
ಹುಶ್ಶಾರಿಕಿರಲಿ ಮನದೊಳು ತಾಯಿ             || ೩೭||

ಒಳಹೊರದಾರಿ ಸುಳಿವ ಸೂಕ್ಷ್ಮದಾರಿ
ಪರಿಮಾದಲಿ ಮಾಡುವನಮ್ಮಾ
ದೋರಿಗಳನೆಲ್ಲಾ ಮುರಿವನು ತಂಗಿ
ಪರಮಪುರುಷ ಪರಂಗಿಯವರು                  ||೩೮||

ಉತ್ತರ ದಿಕ್ಕಿನ ಸತ್ಯವಂತರು
ಮರ್ತ್ಯಕೆ ದಾಳಿ ತರುವರು ತಂಗಿ
ಎತ್ತ ಹೋದರೂ ಬಿಡುವಿಲ್ಲವ್ವಾ
ಮುತ್ತಗಿಹಾಕುತ ಬರುವರು ತಾಯಿ              ||೩೯||

ಕೈಲಾಸ ಹಾಳ್‍ಬಿದ್ದು ಹೋದೀತು ತಾಯಿ
ಭೂ ಕೈಲಾಸಾಯಿತು ಮಗಳೆ
ಬಾಲಚನ್ನಬಸವಣ್ಣವರಿಗ ಪಟೃ
ದೇವದುಗ೯ದಲಿ ಕಟ್ಟುವರಮ್ಮ                  ||೪೦||

ಗುರುಪುತ್ರಾಂಶ ಹೋಳಿಗಳನೆಲ್ಲ
ದೊರಕಿಸಿಕೊಂಡಬೇಕು ಭೂದೇವಿ ತಾಯಿ
ಸ್ಥಿರಕಾಯವನು ಮಾಡುತ
ತಿರಕರ ಆಳಿಕ ಆಳಿವರು ತಂಗಿ                      ||೪೧||

ಬುಡುಬುಡಿಕ್ಯಾನ ಮಾತು ಬುಡತನ ಸುಳ್ಳು
ಬುಡನೋಡ ಕೊಡನೋಡ ಬಧ್ರನೀಗೊಳ್ಳೆ
ಹಿಡಕೊಡುವೆನು ಬಿಡಬೇಡ ಮಗಳ
ಕಡಿವೆನು ಕಮ೯ದ ನೋವನು ತಾಯಿ             ||೪೨||

ಸಾಮದೇವವ ನೋಡಬೇಕು ಮಗಳೆ
ರಾಮನಾಮವ ನೆನಿಬೇಕು ತಂಗಿ
ತಾಮಸ ಗುಣಗಳು ಆಳಿಬೇಕಮ್ಮ
ಪ್ರೇಮಾಬ್ಧಿಬಾಲೆನೊಡಗೂಡುವೆನು ತಾಯೆ     ||೪೩||

ಆರಿತುಕೋ ಶಿಶುನಾಳಧೀಶನಿಂದಲಿ
ವರವನು ಹೊಂದಿ ಬಂದಿಹೆನಮ್ಮ
ಮರುಳಮಾಡುವದೊಂದು ಪುರವುಂಟು
ದೊರಕಿಸಿಕೊಡುವೆ ನಿಜಸುಖ ತಾಯಿ              ||೪೪||

ಶರೀಫಸಾಹೇಬ ಬುಡುಬುಡುಕ್ಯಾನ
ಗುರುವಿನ ವರವಿಲೆ ನುಡಿಯುಪವೆ ಇದನ
ಪರಶಿವ ಬಸವನು ಬರುವನು ಮಗಳೆ
ಶ್ವರಿತದಿ ಗುರುವಿನ ಆರಿತುಕೋ ತಾಯಿ          ||೪೫||

ದೇವದೇವರ ದೇವರ ಮಗನ
ದೇವಲೋಕದ ಬುಡುಬುಡಿಕ್ಯಾನ
ದೇವಗೋವಿಂದನ ಭಕ್ತಾನಮ್ಮ
ಸಂತರಸೇವಿಗೆ ನಿಂತಿಹನಮ್ಮ
ಓಂ ಜಯ ಜಯವಾಗಲೆಮ್ಮ                       ||೪೬|| 
                       * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್ 

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ