ಅಪ್ಪಯ್ಯನವರ ಪಾದ ಕಂಡೆ

ಅಪ್ಪಯ್ಯನವರ ಪಾದ ಕಂಡೆ ಸ್ವಾಮಿ
ಗುಡಿಪುರ ಗ್ರಾಮದೊಳೇರಿಸಿ ಜಂಡೇ                ||ಪ||

ಉಕ್ಕುತಿಹ ಆನಂದ ಭರದಿ
ಸಕ್ಕರೆಯನೋದಕಿಯ ಮಾಡಿ
ಓಂಕಾರ ಪ್ರಣಮವ ನೋಡಿ
ಬಹುಕಾಲ ಭಕ್ತರ ಕೂಡಿ
ಬಸವಾದಿ ಪ್ರಮಥರು ಹಾಡಿ                            ||೧||

ಅಂಬರಪುರವಿಂಬುಮಾಡಿ
ಸಾಂಬನೂರವಿಲೆ ಬೆಳಿಸ್ಯಾರೊ ಸಾಮಗ್ರಿಗೂಡಿ
ಶಂಭು ಶರಣರು ಸವಿದಾಡಿ
ಹತ್ತುವರ್ಷ ಆದ ಮೇಲೆ
ಸತ್ಯ ಮೆರೆವದು ಮಹಾತ್ಮರಲ್ಲೆ
ಗೊತ್ತುಹಿಡಿ ಗೋವಿಂದರಾಜನ
ಪ್ರಣಮ ಪಂಚಾಕ್ಷರ ಧ್ಯಾನಿಸಿ ನುಡಿ
ಪರಮಾರಾಧ್ಯ ಪಂಚಾಚಾರ್ಯರು ಕೂಡಿ ಆಡವನು ಆಡಿ
ಪರಮೇಶ್ವರ ಪಾರ್ವತಿ ಹಾಡಿ                        ||೨||

ಪರಲೋಕದವರೆಲ್ಲ ಕೂಡಿ
ಪಂಚಾಗ್ನಿಮಠದೊಳು ಅಡಿಗೆಯ ಮಾಡಿ
ಅನ್ನ ಪ್ರಸಾದವ ನೀಡಿ
ಚೆನ್ನಬಸವೇಶ್ವರರು ಬರುತಿರೆ ಪ್ರಮಥ ಗಣಂಗಳು ಕೂಡಿ
ಕಲ್ಯಾಣಪುರವನು ಮಾಡಿ
ಹರ ಶರಣರ ಲೀಲಾಮೃತ ಪಾಡಿ
ಕಲಿ ಕರ್ಮ ವಿಕಾರಿಗೆ ಜಾಡಿ
ಶಿಶುನಾಳ ಗ್ರಾಮಕ ಕೂಡಿ
ಉಳಿದವರು ಗುರುಪಾದ ಕೂಡಿ                   ||೩||
    *    *    *    *
-ಶಿಶುನಾಳ ಶರೀಫ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ